Saturday, January 21, 2017

ಇನ್ನಷ್ಟು ಖಾಝಿಗಳು, ಉಸ್ತಾದರು ವಿಶ್ವಾಸಾರ್ಹತೆಯನ್ನು ಕಳಕೊಳ್ಳುವ ಮೊದಲು...


1. ಬಿಳಿ ಟೊಪ್ಪಿಯನ್ನು ಧರಿಸಿರುವ, ಎದೆಯ ಎಡ ಮತ್ತು ಬಲಭಾಗಕ್ಕೆ ಭಾರತದ ಧ್ವಜವನ್ನು ಒತ್ತಿ ಇಟ್ಟಿರುವ ಮತ್ತು ತನ್ನೆರಡೂ ಕೆನ್ನೆಗಳಲ್ಲಿ ಭಾರತೀಯ ಧ್ವಜವನ್ನು ಅಚ್ಚು ಹಾಕಿಸಿಕೊಂಡು ಮುಗುಳುನಗುತ್ತಾ ನಿಂತಿರುವ ಮುಸ್ಲಿಮ್ ಹುಡುಗನ ಚಿತ್ರ.
2. ವಿವಿಧ ಸಿಹಿ ತಿನಿಸುಗಳನ್ನು ಒಂದೇ ಬಟ್ಟಲಲ್ಲಿಟ್ಟು ತೆಗೆದಿರುವ ಚಿತ್ರ.
3. ಹಲವು ಕೈಗಳುಳ್ಳ ಮತ್ತು ಆ ಕೈಗಳೆಲ್ಲವೂ ಭಾರತದ ಧ್ವಜವನ್ನು ಎತ್ತಿ ಹಿಡಿದಿರುವ ದುರ್ಗಾದೇವಿಯ ಪರಿಕಲ್ಪನೆಯ ನೃತ್ಯದ ಚಿತ್ರ.
4. ತಾಜ್‍ಮಹಲ್ 5. ಎರಡು ಹುಲಿಗಳು
6. ಮೆರವಣಿಗೆಯಲ್ಲಿ ಸಾಗುತ್ತಿರುವ ಭಾರೀ ಗಾತ್ರದ ಗಣೇಶ ವಿಗ್ರಹದ ಚಿತ್ರ.
7. ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಿರುವ ಸೇನೆಯ ಚಿತ್ರ ಮತ್ತು
8. ಶ್ರೀಕೃಷ್ಣ ವೇಷಧಾರಿ ಮಗುವನ್ನು ಎತ್ತಿಕೊಂಡು ಸಾಗುವ ಹಿರಿಯ ವ್ಯಕ್ತಿಯ ಜೊತೆ ಆತನ ಮಗಳಂತೆ ಕಾಣುವ ಬುರ್ಖಾಧಾರಿ ಮಹಿಳೆ ನಡೆಯುತ್ತಿರುವ ಚಿತ್ರ..
         ಇದು ಮುಸ್ಲಿಮ್ ರಾಷ್ಟ್ರೀಯ ಮಂಚ್ (MRM) ಎಂಬ ಸಂಘಟನೆಯ ಫೇಸ್‍ಬುಕ್ ಪ್ರೊಫೈಲ್ ಚಿತ್ರ. ಈ ಮಂಚ್‍ಗೂ ಆರೆಸ್ಸೆಸ್‍ಗೂ ನಡುವೆ ಇರುವ ಸಂಬಂಧ ಯಾವ ಬಗೆಯದು ಎಂಬುದನ್ನು ಏಕ್ ನಯೀ ರಾಹ್ (ಒಂದು ಹೊಸ ದಾರಿ) ಎಂಬ ಹೆಸರಲ್ಲಿರುವ ಮಂಚ್‍ನ ವೆಬ್‍ಸೈಟೇ ಹೇಳುತ್ತದೆ. ರಾಷ್ಟ್ರೀಯವಾದಿ ಮುಸ್ಲಿಮರ ಒಂದು ಗುಂಪು ಮತ್ತು ಆರೆಸ್ಸೆಸ್‍ನ ನಾಯಕರು 2002 ಡಿಸೆಂಬರ್ 24ರಂದು ದೆಹಲಿಯಲ್ಲಿ ಒಟ್ಟು ಸೇರಿದರು. ಈದ್ ಮಿಲನ್‍ನ ಸಂದರ್ಭದಲ್ಲಿ ನಡೆದ ಈ ಸಭೆಯಲ್ಲಿ ಮುಸ್ಲಿಮ್ ರಾಷ್ಟ್ರೀಯ ಮಂಚ್ ಅನ್ನು ಸ್ಥಾಪಿಸಲಾಯಿತು ಎಂದು ಅದು ಹೇಳುತ್ತದೆ. ಇದನ್ನು ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
       ಕಳೆದ ವಾರ ಜನವರಿ 9ರಂದು ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲಿನ ಸಭಾಂಗಣದಲ್ಲಿ ಅಂತರ್ ಧರ್ಮೀಯ ಬುದ್ಧಿಜೀವಿಗಳ ಸಭೆ (Inter Religion intellectuals meet) ನಡೆಯಿತು. ಈ ಸಭೆಯಲ್ಲಿ ದಕ್ಷಿಣ ಕನ್ನಡದ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಭಾಗವಹಿಸಿದರು. ಉಡುಪಿಯ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಬಿಷಪ್ ಅಲೋಶಿಯಸ್ ಪೌಲ್ ಡಿ’ಸೋಜ ಅವರೂ ಭಾಗವಹಿಸಿದರು. ಆರೆಸ್ಸೆಸ್‍ನ ಉನ್ನತ ನಾಯಕರಾದ ಇಂದ್ರೇಶ್ ಕುಮಾರ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಈ ಸಭೆಯ ಆಯೋಜನೆಯನ್ನುRights, Awareness and Knowledge Society (RANKS) ಎಂಬುದು ವಹಿಸಿಕೊಂಡಿದ್ದು, ‘ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಒಗ್ಗಟ್ಟು ಸಭೆಯ ಉದ್ದೇಶವಾಗಿದೆ’ ಎಂದು ಬ್ಯಾನರ್‍ನಲ್ಲಿ ಹೇಳಲಾಗಿತ್ತು. ಸಭೆಗೆ ಸಂಬಂಧಿಸಿ ಮುದ್ರಿಸಲಾದ ಆಮಂತ್ರಣ ಪತ್ರಿಕೆಯಲ್ಲೂ ಇದನ್ನೇ ನಮೂದಿಸಲಾಗಿತ್ತು. ಅಲ್ಲದೇ, ಸಭೆಯಲ್ಲಿ ಭಾಗವಹಿಸುವ ಬುದ್ಧಿಜೀವಿ ಅತಿಥಿಗಳ ಭಾವಚಿತ್ರವನ್ನೂ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಅದರಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಭಾವಚಿತ್ರವೂ ಇತ್ತು. ಆದರೆ ಈ ಭಾವಚಿತ್ರದ ಅಡಿಯಲ್ಲಿ ಶೇಖ್ ಅಬೂಬಕರ್ ಬಿನ್ ಅಹ್ಮದ್ ಎಂದು ಬರೆಯಲಾಗಿತ್ತು. ಬಹುಶಃ, ಮಂಗಳೂರಿಗೆ ಅಪರಿಚಿತವಾಗಿರುವ ಒಂದು ಸಂಸ್ಥೆಯು (RANKS) ಕಾರ್ಯಕ್ರಮವನ್ನು ಆಯೋಜಿಸಿದೆ ಎಂಬುದನ್ನು ಬಿಟ್ಟರೆ, ಉಳಿದಂತೆ ಈ ಸಭೆಯ ಬಗ್ಗೆ ಅನುಮಾನ ಪಡುವುದಕ್ಕೆ ಯಾವ ಬಾಹ್ಯ ಕುರುಹುಗಳೂ ಇರಲಿಲ್ಲ. ಅಲ್ಲದೇ, ಇಡೀ ಕಾರ್ಯಕ್ರಮದ ಹೊಣೆಯನ್ನು ಪೊಲೀಸ್ ಇಲಾಖೆಯೇ ವಹಿಸಿಕೊಂಡಂತೆ ಕಾಣುತ್ತಿತ್ತು. ಅತಿಥಿಗಳನ್ನು ಆಹ್ವಾನಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ಪೋಲೀಸ್ ಇಲಾಖೆಯೇ. ಕಮೀಷನರ್‍ರಿಂದ ಹಿಡಿದು ಇತರ ವಿವಿಧ ಉನ್ನತ ಪೋಲೀಸ್ ಅಧಿಕಾರಿಗಳು ಸ್ವತಃ ಈ ಸಭೆಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅತಿಥಿಗಳನ್ನು ಖುದ್ದು ಆಹ್ವಾನಿಸಿದರು. ಒಂದು ರೀತಿಯಲ್ಲಿ, ಸಭೆಯ ಆಮಂತ್ರಣವನ್ನು ಸ್ವೀಕರಿಸುವುದಕ್ಕೆ ಮತ್ತು ಸಂಘಟಕರ ಹಿನ್ನೆಲೆಯನ್ನು ಕೆದಕದೇ ಒಪ್ಪಿಕೊಳ್ಳುವುದಕ್ಕೆ ಈ ಬೆಳವಣಿಗೆಗಳು ಧಾರಾಳ ಸಾಕು.


  ಆದರೆ, RANKS ಎಂಬ ಅಪರಿಚಿತ ಹೆಸರಿನಲ್ಲಿ ಈ ಕಾರ್ಯ ಕ್ರಮವನ್ನು ನಿಜಕ್ಕೂ ಆಯೋಜಿಸಿದ್ದು ಮುಸ್ಲಿಮ್ ರಾಷ್ಟ್ರೀಯ ಮಂಚ್ ಎಂಬ RSS ಅಂಗಸಂಸ್ಥೆ ಎಂಬುದಾಗಿ ಅತಿಥಿ ಭಾಷಣ ದಲ್ಲಿ ಆಲ್ ಇಂಡಿಯಾ ಇಮಾಮ್ ಆರ್ಗನೈಝೇಶನ್‍ನ ಮುಖ್ಯಸ್ಥರಾದ ಡಾ| ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಹೆಮ್ಮೆಯಿಂದ ಘೋಷಿಸಿದರು. ಇವರು ಮಂಚ್‍ನ ಕಾರ್ಯಕ್ರಮಗಳಲ್ಲಿ ಈ ಹಿಂದೆಯೂ ಭಾಗವಹಿಸಿದವರಾಗಿದ್ದರು. ಅಲ್ಲಿಗೆ ಎಲ್ಲ ರಹಸ್ಯಗಳೂ ಬಯಲಾದುವು. ಮುಸ್ಲಿಮ್ ರಾಷ್ಟ್ರೀಯ ಮಂಚ್ ಅನ್ನು ಸ್ಥಾಪಿಸಿದ್ದು ಆರೆಸ್ಸೆಸ್‍ನ ಸರ್‍ಸಂಘ ಚಾಲಕರಾಗಿದ್ದ ಕೆ.ಎಸ್. ಸುದರ್ಶನ್. ಅದರ ಮಾರ್ಗದರ್ಶಕರಾಗಿ ಕಾರ್ಯನಿರ್ವ ಹಿಸುತ್ತಿರುವುದು ಆರೆಸ್ಸೆಸ್‍ನ ಉನ್ನತ ನಾಯಕರಾದ ಇಂದ್ರೇಶ್ ಕುಮಾರ್. ಈ ಮಂಚ್‍ನ ರಾಷ್ಟ್ರೀಯ ಸಂಚಾಲಕರಾಗಿರುವವರು ಮುಹಮ್ಮದ್ ಅಫ್ಝಲ್ ಎಂಬ ವ್ಯಕ್ತಿ. ಸಹಜವಾಗಿ, ಈ ಸಭೆಯು ಮುಸ್ಲಿಮ್ ಸಮುದಾಯದೊಳಗೆ ಪರ-ವಿರುದ್ಧ ಚರ್ಚೆಗೆ ವೇದಿಕೆ ಯನ್ನು ಒದಗಿಸಿದುವು. ಮಂಗಳೂರಿನ ಖಾಝಿಯವರು ಸಭೆಯಲ್ಲಿ ಭಾಗವಹಿಸಿದ್ದು, ಒತ್ತಾಯಪೂರ್ವಕವಾಗಿ ಅವರ ಕೈಯಲ್ಲಿ ದೀಪ ಹೊತ್ತಿಸಿದ್ದು ಮತ್ತು ಅವರು ಭಾಷಣ ಮಾಡಿದ್ದು.. ಎಲ್ಲವೂ ತೀವ್ರ ಚರ್ಚೆಗೆ ಒಳಗಾದುವು. ಖಾಝಿಯವರ ಅನುಯಾಯಿಗಳಲ್ಲೇ ಭಿನ್ನಾಭಿಪ್ರಾಯ ಮೂಡಿದುವು. ಖಾಝಿಯವರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಸಂದರ್ಭಗಳೂ ಎದುರಾದುವು. ಹಾಗಂತ, ಇಂಥ ಸನ್ನಿವೇಶ ಸೃಷ್ಟಿಯಾದುದು ಇದು ಮೊದಲ ಸಲವೇನೂ ಅಲ್ಲ. ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಸಂಘಟನೆಯು ಮದ್ರಸದ ಕುರಿತಂತೆ ಮಂಗಳೂರಿನ ಪುರಭವನದಲ್ಲಿ ವರ್ಷದ ಹಿಂದೆ ಆಯೋಜಿಸಿದ್ದ ಸಭೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಮತ್ತು ಅಪದ್ಧ ಮಾತುಗಳನ್ನಾಡಿದ್ದೂ ಸಮುದಾಯದೊಳಗೆ ಚರ್ಚೆಗೆ ಒಳಗಾಗಿತ್ತು. ಅನುಯಾಯಿಗಳ ನಡುವೆ ಆಗಲೂ ಭಿನ್ನಾಭಿಪ್ರಾಯಗಳು ಮೂಡಿದ್ದುವು. ನಾಯಕತ್ವದ ವಿಶ್ವಾಸಾರ್ಹತೆಯೂ ಪ್ರಶ್ನೆಗೀಡಾಗಿದ್ದುವು. ಹಾಗೆಯೇ ಬಿಜೆಪಿ ಪ್ರಾಯೋಜಿತ ಸೂಫಿ ಸಮ್ಮೇಳನದಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಭಾಗವಹಿಸಿದಾಗಲೂ ಸಮುದಾಯ ಬಹುತೇಕ ಎರಡು ಪಂಗಡಗಳಾಗಿ ವಿಭಜಿಸಿದ್ದುವು. ಈ ಎಲ್ಲ ಸಂದರ್ಭದಲ್ಲೂ ಅತ್ಯಂತ ಹೆಚ್ಚು ಹಾನಿಯಾದುದು ನಾಯಕತ್ವದ ವಿಶ್ವಾಸಾರ್ಹತೆಯ ಮೇಲೆ. ಅನುಯಾಯಿಗಳ ಪರಸ್ಪರ ಸಂಬಂಧ ಮತ್ತು ಒಗ್ಗಟ್ಟಿನ ಮೇಲೆ. ಅಂದಹಾಗೆ,
      ಸಾಹಿತಿ ಗಿರೀಶ್ ಕಾರ್ನಾಡ್‍ರ ತುಘಲಕ್ ನಾಟಕದಲ್ಲಿ ಒಂದು ಸನ್ನಿವೇಶ ಇದೆ.
ತುಘಲಕ್‍ನ ಆಡಳಿತವನ್ನು ಓರ್ವ ಮೌಲಾನಾ ಪ್ರಶ್ನಿಸತೊಡಗುತ್ತಾರೆ. ತುಘಲಕ್‍ನ ಅಸಾಮರ್ಥ್ಯ ಮತ್ತು ಜನವಿರೋಧಿ ನಿಲು ವನ್ನು ಮೌಲಾನಾ ಒಂದೊಂದಾಗಿ ಸಾರ್ವಜನಿಕರ ಮುಂದಿಡುತ್ತಾರೆ. ಜನರು ಮೌಲಾನಾರತ್ತ ಆಕರ್ಷಿತರಾಗುತ್ತಾರೆ. ಅವರ ಭಾಷಣವನ್ನು ಆಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರತೊಡಗುತ್ತಾರೆ. ತುಘಲಕ್‍ನಿಗೆ ಭಯವಾಗತೊಡಗುತ್ತದೆ. ಮೌಲಾನಾ ತನ್ನನ್ನು ಎಲ್ಲಿ ಉಚ್ಛಾಟಿಸಿ ಬಿಡುತ್ತಾರೋ ಎಂಬ ಭಯ ಆತನನ್ನು ಕಾಡ ತೊಡಗುತ್ತದೆ. ಅಲ್ಲದೇ, ಆತನ ಭಾಷಣಕ್ಕೆ ನರಪಿಳ್ಳೆಯೂ ಸೇರದಂಥ ವಾತಾವರಣ ಸೃಷ್ಟಿಯಾಗತೊಡಗುತ್ತದೆ. ಆಗ ತುಘಲಕ್ ಒಂದು ಉಪಾಯ ಹೂಡುತ್ತಾನೆ. ತನ್ನ ವತಿಯಿಂದಲೇ ಮೌಲಾನಾರ ಭಾಷಣವನ್ನು ಏರ್ಪಡಿಸುತ್ತಾನೆ. ಭಾಷಣ ಮೌಲಾನರದ್ದು. ಪ್ರಾಯೋಜಕತ್ವ ತುಘಲಕ್‍ನದ್ದು. ಈ ಭಾಷಣ ಕಾರ್ಯಕ್ರಮದ ಬಗ್ಗೆ ತುಘಲಕ್‍ನ ವತಿಯಿಂದಲೇ ಪ್ರಚಾರ ನಡೆಯುತ್ತದೆ. ಜನರು ಗೊಂದಲಕ್ಕೆ ಸಿಲುಕುತ್ತಾರೆ. ಆವರೆಗೆ ಮೌಲಾನರ ಮೇಲೆ ಅಪಾರ ವಿಶ್ವಾಸವನ್ನು ತಾಳಿದ್ದ ಜನರೇ ಅವರ ಮೇಲೆ ಅನುಮಾನ ಪಡತೊಡಗುತ್ತಾರೆ. ತನ್ನ ಪ್ರಬಲ ಟೀಕಾಕಾರನನ್ನೇ ತುಘಲಕ್ ಭಾಷಣಕ್ಕೆ ಆಹ್ವಾನಿಸುವುದೆಂದರೆ, ಅವರಿಬ್ಬರ ನಡುವೆ ಏನೋ ಒಳ ಒಪ್ಪಂದಗಳು ನಡೆದಿರಬೇಕು ಎಂದು ಆಡಿಕೊಳ್ಳತೊಡಗುತ್ತಾರೆ. ಮಾತ್ರವಲ್ಲ, ಮೌಲಾನರ ಆ ವರೆಗಿನ ಭಾಷಣದ ಪ್ರಾಮಾಣಿಕತೆಯನ್ನೇ ಅನುಮಾನಿಸತೊಡಗುತ್ತಾರೆ. ಕೊನೆಗೆ ನಿಗದಿತ ದಿನದಂದು ಮೌಲಾನಾ ಸಭೆಗೆ ತೆರಳುತ್ತಾರೆ. ತುಘಲಕ್‍ನ ಸಭೆಯಲ್ಲೇ ತುಘಲಕ್‍ನನ್ನು ಮತ್ತು ಈತನ ಜನವಿರೋಧಿ ನೀತಿಯನ್ನು ಖಂಡಿಸುವ ಉಮೇದಿನಿಂದ ವೇದಿಕೆ ಹತ್ತುತ್ತಾರೆ. ಆದರೆ ಸಭೆಯಲ್ಲಿ ಒಂದೇ ಒಂದು ನರಪಿಳ್ಳೆಯೂ ಇರುವುದಿಲ್ಲ. ಹೀಗೆ ಮೌಲಾನರ ವಿಶ್ವಾಸಾರ್ಹತೆಯನ್ನು ಅತ್ಯಂತ ಜಾಣತನದಿಂದ ತುಘಲಕ್ ಮುಗಿಸಿಬಿಟ್ಟಿರುತ್ತಾನೆ.

     ಬಹುಶಃ, ಮುಸ್ಲಿಮ್ ಸಮುದಾಯದ ನಾಯಕರ ವಿಶ್ವಾಸಾರ್ಹತೆಯನ್ನು ಪ್ರಶ್ನೆಗೀಡು ಮಾಡುವುದು, ಅನುಯಾಯಿಗಳ ನಡುವೆ ಗೊಂದಲವನ್ನು ಸೃಷ್ಟಿಸುವುದು ಮತ್ತು ರೋಸಿ ಹೋದ ಗುಂಪುಗಳನ್ನು ಹುಟ್ಟು ಹಾಕಿ ತನ್ನತ್ತ ಸೆಳೆದುಕೊಳ್ಳುವುದು ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಸಂಚು ಆಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ.
      2016 ಮಾರ್ಚ್ 12ರಂದು ನಾಗ್ಪುರದಲ್ಲಿ ಒಂದು ಪತ್ರಿಕಾಗೋಷ್ಠಿ ನಡೆಯಿತು. ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ನಾಗಪುರದ ಸಂಚಾಲಕ ರಿಯಾಝ್ ಖಾನ್ ಮತ್ತು ಮುಸ್ಲಿಮ್ ರಾಷ್ಟ್ರೀಯ ಮಹಿಳಾ ಮಂಚ್‍ನ ನಾಗಪುರದ ಅಧ್ಯಕ್ಷೆ ಇಕ್ರಾ ಖಾನ್ ಜಂಟಿಯಾಗಿ ಈ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ತಾವು ಮತ್ತು ಸುಮಾರು 200ರಷ್ಟು ಮುಸ್ಲಿಮ್ ಕಾರ್ಯಕರ್ತರು ಮಂಚ್‍ನಿಂದ ಹೊರಬಂದಿರುವುದಾಗಿ ಘೋಷಿಸಿದರು. ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಭರವಸೆಯನ್ನಿತ್ತು ತಮ್ಮನ್ನು ಸೇರಿಸಿಕೊಂಡ ಮಂಚ್, ತನ್ನ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದರು. ಮುಸ್ಲಿಮ್ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಕಳೆದ ಎರಡು ವರ್ಷಗಳಲ್ಲಿ ತಮ್ಮನ್ನು ಹಲವು ಬಾರಿ ಬಲವಂತಪಡಿಸಲಾಯಿತೆಂದೂ ಅವರು ಹೇಳಿಕೊಂಡರು. ರಾಮನವಮಿಯಂದು ರಾಮನನ್ನು ಪೂಜಿಸುವಂತೆ, ಗೋವನ್ನು ಗೋಮಾತಾ ಎಂದು ಸಂಬೋಧಿಸುವಂತೆ ಮತ್ತು ಸೂರ್ಯ ನಮಸ್ಕಾರ ಮಾಡುವಂತೆ ನಮಗೆ ಆದೇಶಿಸಲಾಯಿತು ಎಂದವರು ಆರೋಪಿಸಿದರು. ಅಷ್ಟಕ್ಕೂ,
       ಅಮರನಾಥ ಯಾತ್ರಾರ್ಥಿಗಳಿಗೆ ಭೂಮಿ ನೀಡುವಂತೆ ಒತ್ತಾ ಯಿಸಿ 2008 ಆಗಸ್ಟ್ ನಲ್ಲಿ ಪೈಗಾಮ್ ಎ ಅಮನ್ (ಶಾಂತಿಯ ಸಂದೇಶ) ಎಂಬ ಹೆಸರಲ್ಲಿ ದೆಹಲಿಯ ಕೆಂಪು ಕೋಟೆಯಿಂದ ಕಾಶ್ಮೀರಕ್ಕೆ ಯಾತ್ರೆ ಸಂಘಟಿಸಿದ್ದು ಇದೇ ಮುಸ್ಲಿಮ್ ರಾಷ್ಟ್ರೀಯ ಮಂಚ್. ಈ ಯಾತ್ರೆಗೆ ನೇತೃತ್ವ ನೀಡಿದ್ದು ಜಾರ್ಖಂಡ್‍ನ ಶಾಹಿ ಇಮಾಮ್ ಮೌಲಾನಾ ಹಿಝ್ಬ್ ರಹ್ಮಾನ್ ಮೇಥಿ. ಈ ಯಾತ್ರಾ ತಂಡವು ಅಮರನಾಥ ಸಂಘರ್ಷ್ ಸಮಿತಿಯ ಜೊತೆ ಜಮ್ಮುವಿನಲ್ಲಿ ಸಭೆ ನಡೆಸಿತು. ಭಯೋತ್ಪಾದನೆಯನ್ನು ಖಂಡಿಸಿ 2009 ನವೆಂಬರ್‍ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ತಿರಂಗಾ ಯಾತ್ರೆ ಕೈಗೊಂಡಿತು. ಕಾಶ್ಮೀರಕ್ಕೆ ನೀಡಲಾಗಿರುವ 370ನೇ ವಿಶೇಷಾಧಿಕಾರವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ 2012 ಸಪ್ಟೆಂಬರ್‍ನಲ್ಲಿ ಮಂಚ್ ಸಹಿ ಸಂಗ್ರಹವನ್ನು ಆಯೋಜಿಸಿತು. 2014ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರ ಪರ ವ್ಯಾಪಕ ಪ್ರಚಾರದಲ್ಲಿ ಪಾಲುಗೊಂಡಿತು. ಚುನಾವಣೆಗೆ ಮೊದಲು 50 ಮಿಲಿಯನ್ ಮುಸ್ಲಿಮರನ್ನು ತಲುಪುವ ಗುರಿಯೊಂದಿಗೆ ಅದು ಸಕ್ರಿಯವಾಯಿತು. 2015ರಲ್ಲಿ ‘ಯೋಗ ಮತ್ತು ಇಸ್ಲಾಮ್’ ಎಂಬ ಕೃತಿಯನ್ನು ಮುಸ್ಲಿಮ್ ರಾಷ್ಟ್ರೀಯ ಮಂಚ್ ಬಿಡುಗಡೆಗೊಳಿಸಿತು. ‘ನಮಾಝ್ ಯೋಗದ ಒಂದು ಭಾಗವಾಗಿದೆ’ ಎಂದೂ ಅದು ಹೇಳಿಕೊಂಡಿತು. ಬಹುಸಂಖ್ಯಾತ ಮುಸ್ಲಿಮರು ವಾಸವಿರುವ ಸ್ಥಳಗಳಲ್ಲಿ ಹಂಚಲಿಕ್ಕೆಂದೇ ‘ಗಾಯ್ ಔರ್ ಇಸ್ಲಾಮ್’ ಎಂಬ ಕೃತಿಯನ್ನು ಹೊರತಂದಿತು. ಗೋಹತ್ಯೆಯ ವಿರುದ್ಧ ಮುಸ್ಲಿಮ್ ವಿದ್ವಾಂಸರಿಂದ ಬರೆಸಲಾದ ಲೇಖನಗಳ ಸಂಗ್ರಹ ಇದು. 2015 ಸಪ್ಟೆಂಬರ್ 12ರಂದು ಹರ್ಯಾಣದ ಮೇವಾತ್‍ನಲ್ಲಿ ಪ್ರಥಮ ಮುಸ್ಲಿಮ್ ಗೋಪಾಲಕ್ ಸಮ್ಮೇಳನವನ್ನು ಆಯೋಜಿಸಿತು. ಮುಖ್ಯಮಂತ್ರಿ ಮನೋಹರ್‍ಲಾಲ್ ಖಟ್ಟರ್ ಈ ಸಭೆಯಲ್ಲಿ ಭಾಗವಹಿಸಿದರು. ಗೋಪಾಲನೆ ಮಾಡಿದ 74 ಮುಸ್ಲಿಮರನ್ನು ಈ ಸಭೆಯಲ್ಲಿ ಗೌರವಿಸಲಾಯಿತು. ಕಳೆದ ಈದ್ ನ ಸಮಯದಲ್ಲಿ (2016 ಸಪ್ಟೆಂಬರ್) ಅದು ಒಂದು ವಿಶಿಷ್ಟ ಬಲಿದಾನ ಕ್ರಮವನ್ನು ಸಮಾಜಕ್ಕೆ ಪರಿಚಯಿಸಿತು. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಈ ಬಲಿದಾನ ಕಾರ್ಯಕ್ರಮದಲ್ಲಿ ಆಡಿನ ಚಿತ್ರವಿರುವ 25 ಕಿಲೋ ಭಾರದ ಕೇಕ್ ಅನ್ನು ಕತ್ತರಿಸಲಾಯಿತು. ಇದನ್ನು ನಿರ್ವಹಿಸಿದ್ದು ಮುಸ್ಲಿಂ ರಾಷ್ಟ್ರೀಯ ಮಂಚ್ ಸದಸ್ಯ ಸಯ್ಯದ್ ಹಸನ್ ಕೌಸರ್. ಮಂಚ್ ನ ವಲಯ ಸಂಚಾಲಕ ರಯೀಸ್ ಖಾನ್ ಉಪಸ್ಥಿತರಿದ್ದರು. ಪ್ರಾಣಿಹಿಂಸೆಯನ್ನು ತಡೆಯುವುದಕ್ಕೆ ಈ ಕ್ರಮ ಅತ್ಯಂತ ಯೋಗ್ಯವಾದುದು ಎಂದು ಅವರು ಸಮರ್ಥಿಸಿಕೊಂಡರು. ಅದೇವೇಳೆ, ದಾರುಲ್ ಉಲೂಮ್ ದೇವ್ ಬಂದ್ ಈ ಬಲಿದಾನ ಕ್ರಮವನ್ನು ಖಂಡಿಸಿತು. ಅದನ್ನು ಅನಿಸ್ಲಾಮಿಕ ಎಂದು ಕರೆಯಿತು. ಒಂದೇ ದೇಶ, ಒಂದೇ ಕಾನೂನು ಎಂಬ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ 2016 ಡಿಸೆಂಬರ್‍ನಲ್ಲಿ ಮಂಚ್ ಘೋಷಿಸಿತು. ತ್ರಿವಳಿ ತಲಾಕನ್ನು ವಿರೋಧಿಸಿ ರಾಷ್ಟ್ರಾದ್ಯಂತ ಚಳವಳಿ ಹಮ್ಮಿಕೊಳ್ಳುವುದಾಗಿಯೂ ಆರೆಸ್ಸೆಸ್ ನ ಇಂದ್ರೇಶ್ ಕುಮಾರ್ ಅವರು ಮುಖ್ಯ ಮಾರ್ಗದರ್ಶಕರಾಗಿ ಚಳವಳಿ ಉದ್ದಕ್ಕೂ ಭಾಗವಹಿಸುವುದಾಗಿಯೂ ಅದು 2016 ಡಿಸಂಬರ್ ನಲ್ಲಿ ಘೋಷಿಸಿತು. ಒಂದು ರೀತಿಯಲ್ಲಿ, ಮುಸ್ಲಿಮ್ ರಾಷ್ಟ್ರೀಯ ಮಂಚ್ ಎಂಬುದು ಆರೆಸ್ಸೆಸ್‍ಗೆ ಅತೀವ ನಿಷ್ಠೆಯನ್ನು ಮತ್ತು ಅತೀವ ಶರಣು ನೀತಿಯನ್ನು ತೋರ್ಪಡಿಸುವ ಸಂಘಟನೆ. ಅದಕ್ಕೆ ತನ್ನದೇ ಆದ ನಿಲುವು ಇಲ್ಲ. ಧ್ವನಿಯೂ ಇಲ್ಲ. ಆರೆಸ್ಸೆಸ್ ಏನನ್ನು ಆಕ್ಷೇಪಿಸುತ್ತದೋ ಅದನ್ನು ಮಾತ್ರ ಅದು ಕಾರ್ಯರೂಪಕ್ಕೆ ತರುತ್ತದೆ. ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಯಾವ ಚಟುವಟಿಕೆಯನ್ನೂ ಅದು ಕೈಗೊಳ್ಳುವುದಿಲ್ಲ. ಗುಜರಾತ್ ಹತ್ಯಾಕಾಂಡದ ಬಗ್ಗೆ ಅದರ ನಿಲುವು ಮೌನ. ಮಕ್ಕಾ ಮಸ್ಜಿದ್, ಅಜ್ಮೀರ್, ಮಾಲೆಗಾಂವ್, ನಾಂದೇಡ್ ಸ್ಫೋಟದಲ್ಲಿ ಸಂಘಪರಿವಾರದ ಪಾತ್ರದ ಬಗ್ಗೆ ಅದು ಮಾತಾಡುವುದಿಲ್ಲ. ಮುಸ್ಲಿಮ್ ಯುವಕರು ತಪ್ಪಾಗಿ ಜೈಲು ಪಾಲಾದುದಕ್ಕೆ ಅದು ವಿಷಾದ ವ್ಯಕ್ತಪಡಿಸುತ್ತಿಲ್ಲ ಮತ್ತು ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತಿಲ್ಲ. ಮುಸ್ಲಿಮರಿಗೆ ಉದ್ಯೋಗ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸುವ ಆರೆಸ್ಸೆಸ್ ನೀತಿಯನ್ನು ಅದು ಪ್ರಶ್ನಿಸುತ್ತಿಲ್ಲ. ಅಲ್ಪಸಂಖ್ಯಾತರಿಗೆ ಮೀಸಲಾತಿ ಇರುವ ಪ್ರದೇಶಗಳ ಹೊರಗೆ ಮುಸ್ಲಿಮರಿಗೆ ಬಿಜೆಪಿಯು ಚುನಾವಣಾ ಟಿಕೆಟ್ ನೀಡ ಬೇಕೆಂದು ಅದು ಒತ್ತಾಯಿಸುತ್ತಿಲ್ಲ. ಅದರ ಕಾರ್ಯಕ್ರಮ, ಹೇಳಿಕೆ ಗಳು ಮತ್ತು ಯೋಜನೆಗಳು ಆರೆಸ್ಸೆಸ್ ಹಿತಾಸಕ್ತಿಗೆ ಪೂರಕವೇ ಹೊರತು ಮುಸ್ಲಿಮ್ ಹಿತಾಸಕ್ತಿಗೆ ಖಂಡಿತ ಅಲ್ಲ. ಅಖಂಡ ಭಾರತ ಆರೆಸ್ಸೆಸ್‍ನ ಗುರಿ. ಮಂಚ್‍ನದ್ದೂ ಅದೇ ಗುರಿ. ಗೋರಕ್ಷಣೆ ಆರೆಸ್ಸೆಸ್‍ನ ಕಾರ್ಯನೀತಿ. ಮಂಚ್‍ನದ್ದೂ ಅದುವೇ. ಆರೆಸ್ಸೆಸ್ ಯೋಗದ ಪರ. ಮಂಚೂ ಅದರ ಪರ. 370ನೇ ವಿಧಿಯನ್ನು ರದ್ದುಪಡಿಸಬೇಕೆಂಬುದು ಆರಸ್ಸೆಸ್‍ನ ಒತ್ತಾಯ. ಮಂಚ್‍ನ ಬೇಡಿಕೆಯೂ ಅದುವೇ. ಮೀಸಲಾತಿಯನ್ನು ಆರೆಸ್ಸೆಸ್ ಬೆಂಬಲಿಸುತ್ತಿಲ್ಲ. ಮಂಚೂ ಬೆಂಬಲಿಸುತ್ತಿಲ್ಲ ಅಥವಾ ಆರೆಸ್ಸೆಸ್‍ನ ಕಾರ್ಯಯೋಜನೆ ಏನಿದೆಯೋ ಅದನ್ನು ಮುಸ್ಲಿಮರಿಗೆ ಒಪ್ಪಿಸಿ ಬೆಂಬಲಿಸುವಂತೆ ನೋಡಿ ಕೊಳ್ಳುವ ಹೊಣೆಗಾರಿಕೆಯಷ್ಟೇ ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಮೇಲಿದೆ. ಆದ್ದರಿಂದಲೇ ಅದು ಆಯೋಜಿಸುವ ಸಭೆಯು ಮುಸ್ಲಿಮ ರೊಳಗೆ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಮುಸ್ಲಿಮ್ ನಾಯಕತ್ವದ ವಿಶ್ವಾ ಸಾರ್ಹತೆಯನ್ನು ಪ್ರಶ್ನೆಗೀಡು ಮಾಡುತ್ತಿದೆ. ಅಷ್ಟಕ್ಕೂ,       
       ಖಾಝಿಯವರು ದೀಪ ಹೊತ್ತಿಸಿದ್ದು ಸರಿಯೇ, ಅಬೂಬಕರ್ ಮುಸ್ಲಿಯಾರರು ಸೂಫಿ ಸಮ್ಮೇಳನದಲ್ಲಿ ಭಾಗವಹಿಸಿದ್ದು ಸರಿಯೇ.. ಎಂಬ ಚರ್ಚೆ ನಡೆಯುತ್ತಿರುವಷ್ಟು ದಿನ ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಉದ್ದೇಶ ಈಡೇರುತ್ತಿದೆಯೆಂದೇ ಅರ್ಥ. ಯಾವಾಗ ಈ ಚರ್ಚೆಯಿಂದ ಮುಸ್ಲಿಮ್ ಸಮುದಾಯ ಹೊರಬರುತ್ತದೋ ಮತ್ತು ಮಂಚ್‍ನ ಉದ್ದೇಶ, ಬೇನಾಮಿ ಹೆಸರಲ್ಲಿ ಅದು ಏರ್ಪಡಿಸುವ ಕಾರ್ಯಕ್ರಮಗಳ ಬಗ್ಗೆ ಎಚ್ಚರ ಮತ್ತು ಸಮುದಾಯದಲ್ಲಿ ಮಂಚ್‍ನ ನಿಜರೂಪವನ್ನು ಪ್ರಸ್ತುತಪಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಯಾವಾಗ ಹಮ್ಮಿಕೊಳ್ಳುತ್ತದೋ ಅಂದಿನಿಂದ ಅದರ ಸೋಲು ಪ್ರಾರಂಭವಾಗುತ್ತದೆ. ಇಲ್ಲದಿದ್ದರೆ, ವಿಶ್ವಾಸಾರ್ಹತೆ ಯನ್ನು ಕಳಕೊಳ್ಳುವ ಇನ್ನಷ್ಟು ಖಾಝಿಗಳು, ಉಲೆಮಾಗಳು, ನಾಯಕರ ದಂಡಷ್ಟೇ ಸೃಷ್ಟಿಯಾಗಬಹುದು.


Friday, January 13, 2017

ಗಾಂಧೀಜಿಯ ‘ಬಟ್ಟೆ’ಯಿಂದ ಇಂದಿನ ‘ಮನಸ್ಥಿತಿ’ ವರೆಗೆ

1. ಮದ್ಯ
2. ಬಟ್ಟೆ
3. ಮನಸ್ಥಿತಿ
        ಹೊಸ ವರ್ಷಾಚರಣೆಯ ವೇಳೆ ಮಹಿಳೆಯರ ಮೇಲೆ ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ನಡೆದ ಚರ್ಚೆಗಳಲ್ಲಿ ಈ ಮೇಲಿನ ಮೂರು ಕಾರಣಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಈ ಮೂರು ಕಾರಣಗಳ ವಿಶೇಷತೆ ಏನೆಂದರೆ, ‘ಪುರುಷ ಮನಸ್ಥಿತಿ’ಯನ್ನೇ ಪ್ರಮುಖ ಮತ್ತು ಏಕೈಕ ಕಾರಣವಾಗಿ ಮಂಡಿಸುವವರು ‘ಮದ್ಯ’ವನ್ನು ಕಾರಣವಾಗಿ ಒಪ್ಪುತ್ತಿಲ್ಲ. ಮದ್ಯವನ್ನು ಕಾರಣವಾಗಿ ಕಂಡುಕೊಂಡವರು ‘ಪುರುಷ ಮನಸ್ಥಿತಿ’ಗೆ ನಗಣ್ಯ ಮಹತ್ವವನ್ನಷ್ಟೇ ಕೊಡುತ್ತಾರೆ. ಆದರೆ, ಈ ಎರಡೂ ನಿಲುವಿನ ಮಂದಿ ಮಹಿಳಾ ದೌರ್ಜನ್ಯಕ್ಕೆ ‘ಬಟ್ಟೆ’ಯನ್ನು ಕಾರಣವಾಗಿ ಬಹುತೇಕ ಬಾರಿ ಒಪ್ಪುತ್ತಿಲ್ಲ. ಮಾತ್ರವಲ್ಲ, ಆ ವಾದವನ್ನು ಖಂಡಿಸುತ್ತಾರೆ. ಅದೇ ವೇಳೆ, ಬಟ್ಟೆಯನ್ನು ಕಾರಣವಾಗಿ ಪ್ರಸ್ತುತ ಪಡಿಸುವವರು, ಉಳಿದ ಎರಡೂ ಕಾರಣಗಳನ್ನು ಸಮ್ಮತಿಸುತ್ತಾರೆ. ಬಹುಶಃ, ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಈ ಎಲ್ಲ ಆಯಾಮಗಳಿರುವುದರಿಂದಲೋ ಏನೋ ಹೆಣ್ಣು ಒಂದೊಮ್ಮೆ ಆ ಘಟನೆಯನ್ನು ಮರೆತರೂ (ಸುಲಭ ಅಲ್ಲ) ಪುರುಷ ವಲಯದಲ್ಲಿ ಅದು ಧಾರಾವಾಹಿಯಂತೆ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ನಿಜಕ್ಕೂ, ಲೈಂಗಿಕ ದೌರ್ಜನ್ಯಕ್ಕೆ ಇದಮಿತ್ಥಂ ಅನ್ನುವ ಕಾರಣ ಇರಲೇಬೇಕೇ? ಒಂದಕ್ಕಿಂತ ಹೆಚ್ಚು ಕಾರಣಗಳು ಇರಬಾರದೇ? ‘ಇಷ್ಟೇ ಕಾರಣಗಳು’ ಎಂದು ನಾವು ಪಟ್ಟಿ ಮಾಡಿದ ಬಳಿಕವೂ ನಮ್ಮ ಪಟ್ಟಿಯೊಳಗೆ ಸಿಗದೇ ಇರುವ ಕಾರಣಗಳೂ ಇರಬಹುದಲ್ಲವೇ? 80 ವರ್ಷದ ಅಜ್ಜಿಯ ಗುದದ್ವಾರಕ್ಕೆ ಬಾಟಲಿಯನ್ನು ತುರುಕಿ (ಕಳೆದ ವಾರ ಗುಜರಾತ್‍ನಲ್ಲಿ ನಡೆದದ್ದು) ಅತ್ಯಾಚಾರ ನಡೆಸಿದವರ ಮನಸ್ಥಿತಿ ಯಾವುದು? ಇದು ಪುರುಷ ಮನಸ್ಥಿತಿಯೇ, ಮೃಗೀಯ ಮನಸ್ಥಿತಿಯೇ, ವಿಕ್ಷಿಪ್ತವೇ, ವಿಕೃತವೇ? ಹಾಗಂತ, ಮಹಿಳೆಯರಲ್ಲಿ ಈ ಮನಸ್ಥಿತಿಯೇ ಇಲ್ಲವೇ? ಪ್ರೇಮಿಗಾಗಿ ತನ್ನ ಪತಿಯನ್ನೇ ಕೊಲ್ಲುವ ಅಥವಾ ಕೊಲ್ಲಿಸುವ (ಉದಾ: ಉಡುಪಿ ಶೆಟ್ಟಿ ಹತ್ಯೆ ಪ್ರಕರಣ) ಕ್ರೌರ್ಯಕ್ಕೆ ಏನೆಂದು ನಾಮಕರಣ ಮಾಡಬಹುದು? ಮಹಿಳಾ ಮನಸ್ಥಿತಿ ಎಂದೇ? ಈ ಮನಸ್ಥಿತಿಗಳ ಹುಟ್ಟು ಎಲ್ಲಿ? ಪೋಷಕರು ಯಾರು? ಈ ಮನಸ್ಥಿತಿಗೆ ಧೈರ್ಯವನ್ನು ತುಂಬುವುದು ಯಾವುದು? ಪ್ರಚೋದನೆ ಎಲ್ಲಿಂದ ಸಿಗುತ್ತದೆ?
         ಇಲ್ಲಿ ಎರಡು ಸಂಗತಿಗಳನ್ನು ಉದಾಹರಿಸಬಹುದು. ಒಂದು,
1939 ಜನವರಿಯಲ್ಲಿ ಕೋಲ್ಕತ್ತಾದ 11 ಹೆಣ್ಣು ಮಕ್ಕಳು ಮಹಾತ್ಮಾ ಗಾಂಧೀಜಿಯವರನ್ನು ತರಾಟೆಗೆತ್ತಿಕೊಂಡು ಬರೆದ ಪತ್ರ. ಅದನ್ನು ಖ್ಯಾತ ಬರಹಗಾರ ರಾಮಚಂದ್ರ ಗುಹಾ ಅವರು ಕಳೆದವಾರ ಉಲ್ಲೇಖಿಸಿದ್ದರು. ತನಗೆ ಮತ್ತು ಗೆಳತಿಯರಿಗೆ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಪಂಜಾಬ್‍ನ ಓರ್ವ ಕಾಲೇಜು ವಿದ್ಯಾರ್ಥಿನಿ ಗಾಂಧೀಜಿಯವರಲ್ಲಿ ಪತ್ರದ ಮೂಲಕ ದೂರಿಕೊಂಡಿದ್ದಳು. ಮಾತ್ರವಲ್ಲ, ‘ನಿಮ್ಮ ಅಹಿಂಸಾ ತತ್ವದ ಮೂಲಕ ಇದನ್ನು ಎದುರಿಸುವುದು ಹೇಗೆ ಮತ್ತು ಸ್ವಯಂ ರಕ್ಷಿಸಿ ಕೊಳ್ಳುವುದು ಹೇಗೆ’ ಎಂದೂ ಪ್ರಶ್ನಿಸಿದ್ದಳು. ಅದಕ್ಕೆ ಗಾಂಧೀಜಿಯವರು ತಮ್ಮ ಹರಿಜನ ಪತ್ರಿಕೆಯ 1938 ಡಿ. 31ರ ಸಂಚಿಕೆ ಯಲ್ಲಿ ಹೀಗೆ ಉತ್ತರ ಕೊಟ್ಟಿದ್ದರು- ‘ಗಂಡಸರು ಮಾಡುವ ಎಲ್ಲ ಅಸಭ್ಯ ವರ್ತನೆಗೆ ಅರ್ಧ ಡಜನ್‍ನಷ್ಟು ರೋಮಿಯೋಗಳಿಗೆ ಜೂಲಿಯಟ್ ಆಗಲು ಆಧುನಿಕ ಹುಡುಗಿ ಬಯಸಿರುವುದು ಕಾರಣ ಎಂಬ ಭೀತಿ ನನ್ನಲ್ಲಿದೆ.. ಆಧುನಿಕ ಹುಡುಗಿಯ ದಿರಿಸು ಆಕೆಯನ್ನು ಗಾಳಿ, ಮಳೆ ಮತ್ತು ಬಿಸಿಲಿನಿಂದ ರಕ್ಷಿಸುವುದಿಲ್ಲ. ಆದರೆ ಇತರರ ಗಮನ ಆಕೆಯೆಡೆಗೆ ಹರಿಯುವಂತೆ ಮಾಡುತ್ತದೆ. ತನ್ನನ್ನು ಅಸಾಮಾನ್ಯ ಎಂದು ಬಿಂಬಿಸುವ ಮತ್ತು ಹಾಗೆ ಕಾಣಿಸಿಕೊಳ್ಳುವ ಮೂಲಕ ನಿಸರ್ಗವನ್ನು ಮೀರಲು ಆಕೆ ಯತ್ನಿಸುತ್ತಾಳೆ. ಅಹಿಂಸೆಯ ದಾರಿ ಇಂತಹ ಹುಡುಗಿಯರಿಗಲ್ಲ..’
         ಕೋಲ್ಕತ್ತಾದ 11 ಯುವತಿಯರು ಗಾಂಧೀಜಿಯವರನ್ನು ತರಾಟೆಗೆತ್ತಿಕೊಂಡದ್ದು ಈ ಉತ್ತರಕ್ಕಾಗಿಯೇ. ಇನ್ನೊಂದು ಸಂಗತಿ ಏನೆಂದರೆ,
       2014 ಮಾರ್ಚ್ 5ರಂದು ಬಿಬಿಸಿ ನ್ಯೂಸ್ ವೆಬ್‍ನಲ್ಲಿ ಬೆಥನಿ ಬೆಲ್ ಎಂಬವರು ಹಂಚಿಕೊಂಡ ಸರ್ವೇ ಒಂದರ ವಿವರ. ಯುರೋಪಿಯನ್ ಯೂನಿಯನ್‍ನ ರಾಷ್ಟ್ರಗಳಲ್ಲಿ ಲೈಂಗಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರ ಸುತ್ತ ನಡೆಸಲಾದ ಸರ್ವೇ ಇದು. ಈವರೆಗೆ ನಡೆಸಲಾದ ಸರ್ವೇಗಳಲ್ಲೇ  ಅತಿ ದೊಡ್ಡ ಸರ್ವೇ ಎಂದೂ ಇದನ್ನು ಹೇಳಲಾಗುತ್ತಿದೆ. 42 ಸಾವಿರ ಮಹಿಳೆಯರನ್ನು ಈ ಸರ್ವೇಗಾಗಿ ಸಂದರ್ಶನ ನಡೆಸಲಾಗಿದೆ. ಸುಮಾರು 62 ಮಿಲಿಯನ್ ಮಹಿಳೆಯರನ್ನು ಪ್ರತಿನಿಧಿ ಸುವ ಸರ್ವೇ ಆಗಿಯೂ ಇದು ಗುರುತಿಗೀಡಾಗಿದೆ. ‘ಮೂಲಭೂತ ಹಕ್ಕಿಗಾಗಿರುವ ಯುರೋಪಿಯನ್ ಯೂನಿಯನ್ ಏಜೆನ್ಸಿ’ ಎಂಬ ಸಂಸ್ಥೆಯ ಮೂಲಕ ನಡೆಸಲಾದ ಸರ್ವೇಯ ಪ್ರಕಾರ 15ರ ಹರೆಯದ ಬಳಿಕ ಪ್ರತಿ ಮೂವರಲ್ಲಿ ಓರ್ವ ಹೆಣ್ಣು ಲೈಂಗಿಕ ಅಥವಾ ದೈಹಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾಳೆ. ಇದೇ ಪ್ರಾಯದ ಪ್ರತಿ 10ರಲ್ಲಿ ಓರ್ವ ಹೆಣ್ಣು ನೇರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಪ್ರತಿ 20ರಲ್ಲಿ ಓರ್ವಳು ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಈ ಪಟ್ಟಿಯಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ರಾಷ್ಟ್ರವೆಂದರೆ ಡೆನ್ಮಾಕ್ -52%. ಬಳಿಕ ಫಿನ್‍ಲ್ಯಾಂಡ್ - 47%. ಸ್ವೀಡನ್‍ನಲ್ಲಿ 46% ಮತ್ತು ಬ್ರಿಟನ್ ಹಾಗೂ ಫ್ರಾನ್ಸ್ ನಲ್ಲಿ 44%ದಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಈ ದೌರ್ಜನ್ಯಗಳ ಹಿಂದೆ ಮದ್ಯಪಾನಕ್ಕೆ ಮುಂಚೂಣಿ ಪಾತ್ರ ಇದೆ ಎಂದು ಸರ್ವೇ ಕಂಡುಕೊಂಡಿದೆ. ವಿಶೇಷ ಏನೆಂದರೆ, ಈ ರಾಷ್ಟ್ರಗಳು ಪ್ರಗತಿಪರ ಮತ್ತು ಮುಂದುವರಿದ ನಾಗರಿಕ ಸಮಾಜವಾಗಿ ಗುರುತಿಸಿಕೊಂಡಿವೆ. ಆದ್ದರಿಂದಲೇ, ಒಂದಷ್ಟು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಮಹಿಳಾ ಹಕ್ಕು, ಸಮಾನತೆ, ಸ್ವಾತಂತ್ರ್ಯ ಮುಂತಾದುವುಗಳ ಬಗ್ಗೆ ಅತ್ಯಂತ ಆಧುನಿಕ ದೃಷ್ಟಿಕೋನಗಳನ್ನು ಹೊಂದಿರುವ ಈ ರಾಷ್ಟ್ರಗಳಲ್ಲೂ ಮಹಿಳೆ ಯಾಕೆ ಸುರಕ್ಷಿತಳಲ್ಲ? ಇದಕ್ಕೆ ಯಾರು ಕಾರಣ, ಏನು ಕಾರಣ? ಪುರುಷ ಮನಸ್ಥಿತಿಯೇ? ಅತ್ಯಂತ ಆಧುನಿಕ ರಾಷ್ಟ್ರಗಳಲ್ಲೂ ಭಾರೀ ಪ್ರಮಾಣದಲ್ಲಿ ಈ ಮನಸ್ಥಿತಿ ಇದೆಯೇ? ಪ್ರಗತಿಪರ ನಿಲುವುಗಳಿಗೆ ಈ ಹೆಣ್ಣು ವಿರೋಧಿ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಾಗುತ್ತಿಲ್ಲವೇ ಅಥವಾ ಈ ದೃಷ್ಟಿಕೋನಗಳೇ ಹೆಣ್ಣು ವಿರೋಧಿ ಮನಸ್ಥಿತಿಯನ್ನು ಪೋಷಿಸುತ್ತಿವೆಯೇ? ಮುಂದುವರಿದ ನಾಗರಿಕ ಸಮಾಜವಾಗಿದ್ದೂ ಮಹಿಳೆಯರಿಗೆ ಸಂಬಂಧಿಸಿ ಇದೇ ಸಮಾಜ ಅತ್ಯಂತ ಅನಾಗರಿಕವಾಗುವುದನ್ನು ಹೇಗೆ ವಿಶ್ಲೇಷಿಸಬಹುದು? ಪ್ರಗತಿಪರ ದೃಷ್ಟಿಕೋನಗಳ ವೈಫಲ್ಯವೆಂದೋ? ಅದು ಅಪ್ರಾಯೋಗಿಕವೆಂದೋ ಅಥವಾ ವಾಸ್ತವ ವಿರೋಧಿಯೆಂದೋ? ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಗಾಂಧೀಜಿಯವರು ಬಟ್ಟೆಯನ್ನು ಬೊಟ್ಟು ಮಾಡಿದ್ದರು. ಆದರೆ ಮದ್ಯವನ್ನು ಉಲ್ಲೇಖಿಸಿರಲಿಲ್ಲ. ಯುರೋಪಿಯನ್ ಯೂನಿಯನ್‍ನಲ್ಲಿ ನಡೆದ ಸರ್ವೇಯಲ್ಲಿ ಮದ್ಯವನ್ನೇ ಪ್ರಮುಖ ಕಾರಣವಾಗಿ ಕಂಡುಕೊಳ್ಳಲಾಗಿದೆ. ಗಾಂಧೀಜಿಯವರ ಬಟ್ಟೆಯಿಂದ ಈ 2017ರ ಬೆಂಗಳೂರು ಘಟನೆಯ ಮಧ್ಯೆ ಸುಮಾರು 80 ವರ್ಷಗಳೇ ಕಳೆದುಹೋಗಿವೆ. ಈ ಮಧ್ಯೆ ನಾಗರಿಕ ಮತ್ತು ಅನಾಗರಿಕತೆಯ ಮೇಲೆ ಹಲವು ಪ್ರೌಢ ಚರ್ಚೆಗಳು ನಡೆದಿವೆ. ಅಸಂಖ್ಯ ಪ್ರಬಂಧಗಳು ಮಂಡನೆಯಾಗಿವೆ. ಅನಾಗರಿಕವೆಂದು ಹೇಳಿಕೊಂಡು ಅನೇಕಾರು ಆಚರಣೆ ಗಳನ್ನು ಕೈಬಿಡಲಾಗಿದೆ. ಗಾಂಧೀಜಿಯವರ ಕಾಲದಲ್ಲಿ ಸಿನಿಮಾ-ಧಾರಾವಾಹಿಗಳ ಪ್ರಭಾವ ತೀರಾ ತೀರಾ ಕಮ್ಮಿಯಿತ್ತು. ಹೆಣ್ಣನ್ನು ಭೋಗದ
     .
ವಸ್ತುವಿನಂತೆ ಬಿಂಬಿಸುವ ಸರಕುಗಳು ವಿರಳಾತಿ ವಿರಳವಾಗಿದ್ದುವು. ಆದರೂ ಓರ್ವ ಹೆಣ್ಣು ಮಗಳು ತಾನು ಅಸುರಕ್ಷಿತ ಎಂದು ಗಾಂಧೀಜಿಯವರಿಗೆ ಪತ್ರ ಬರೆದಳು. ಆ ಪತ್ರದ 80ನೇ ವಾರ್ಷಿಕವನ್ನು ಆಚರಿಸಬೇಕಾದ ಇಂದಿನ ಸಮಾಜವಂತೂ ಅತ್ಯಂತ ಮುಂದುವರಿದಿದೆ. ಹೆಣ್ಣನ್ನು ಹೇಗೆ ಗೌರವಿಸಬೇಕು, ಆಕೆಯ ಸಾಮರ್ಥ್ಯ ಯಾಕೆ ಗಂಡಿಗಿಂತ ಕಿರಿದಲ್ಲ ಎಂಬುದರಿಂದ ಹಿಡಿದು ಆಕೆಯ ಪ್ರತಿಭೆ, ಆಕೆಯ ಬಗೆಗಿರಬೇಕಾದ ಧೋರಣೆ, ಆಕೆಯ ಸ್ವಾತಂತ್ರ್ಯ ಎಲ್ಲವುಗಳ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿಗಳು ಹರಿದು ಬರುತ್ತಿರುವ ಕಾಲ ಇದು. ಗಾಂಧೀಜಿಯವರ ಕಾಲಕ್ಕೆ ಹೋಲಿಸಿ ಹೇಳುವುದಾದರೆ ಹೆಣ್ಣು ಈ ಕಾಲದಲ್ಲಿ ಅತ್ಯಂತ ಸುರಕ್ಷಿತಳು ಆಗಿರಬೇಕಿತ್ತು. ಆದರೆ, ವರ್ಷ ಕಳೆದಂತೆ ಹೆಣ್ಣು ಹೆಚ್ಚೆಚ್ಚು ಅಸುರಕ್ಷಿತ ಆಗುತ್ತಿದ್ದಾಳೆ. ನಾಗರಿಕವಾಗಿ ಅತ್ಯಂತ ಮುಂದುವರಿದ ರಾಷ್ಟ್ರಗಳಲ್ಲೇ ಹೆಣ್ಣು ಹೆಚ್ಚು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಮಾತ್ರವಲ್ಲ, ಇದಕ್ಕಿರುವ ಕಾರಣಗಳಲ್ಲೂ ಅಭೂತಪೂರ್ವವೆನ್ನಬಹುದಾದ ವ್ಯತ್ಯಾಸಗಳೂ ಕಾಣಿಸುತ್ತಿಲ್ಲ. ಬಟ್ಟೆ, ಮದ್ಯ, ಮನಸ್ಥಿತಿ.. ಇತ್ಯಾದಿ ಇತ್ಯಾದಿಗಳ ಸುತ್ತವೇ ಅವು ಈಗಲೂ ಗಿರಕಿ ಹೊಡೆಯುತ್ತಿವೆ. ಗಾಂಧೀಜಿಯ ಕಾಲದಿಂದ ಹಿಡಿದು ಇಂದಿನ ವರೆಗೆ ಈ 80 ವರ್ಷಗಳಲ್ಲಿ ಹೆಣ್ಣಿನ ಅಸುರಕ್ಷಿತತೆಯಲ್ಲಿ ವೃದ್ಧಿಯಾಗುತ್ತಾ ಹೋಗಲು ಏನೇನು ಕಾರಣಗಳಿವೆ? ಕಾರಣಗಳನ್ನು ಪತ್ತೆ ಹಚ್ಚುವಲ್ಲಿ ನಾವು ವಿಫಲವಾದವೇ ಅಥವಾ ನಮ್ಮ ಪೂರ್ವಗ್ರಹ ಅಥವಾ ಹಿಪಾಕ್ರಸಿ ಅಂಥದ್ದೊಂದು ತಪ್ಪನ್ನು ನಮ್ಮಿಂದ ಮಾಡಿಸಿತೇ? ಎಂತೆಂಥ ರೋಗಗಳಿಗೆ ಮದ್ದು ಕಂಡುಹಿಡಿದಿರುವ ಜಗತ್ತು ಈ ಕಾಯಿಲೆಗೆ ಮದ್ದು ಹುಡುಕಲು ವಿಫಲವಾದದ್ದೇಕೆ?
       ಬಹುಶಃ, ನಮ್ಮ ದೃಷ್ಟಿಕೋನಗಳ ಒಂದಷ್ಟು ಹಠಗಳು ಹೆಣ್ಣನ್ನು ಅಸುರಕ್ಷಿತಗೊಳಿಸುವಲ್ಲಿ ತನ್ನ ಕೊಡುಗೆಯನ್ನು ನೀಡಿವೆ ಯೇನೋ ಎಂದೆನಿಸುತ್ತದೆ. ನಿಜವಾಗಿ, ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ‘ಇದುವೇ ಅಂತಿಮ ಕಾರಣ’ ಎಂಬ ರೀತಿಯಲ್ಲಿ ಷರಾ ಬರೆದು ಬಿಡುವ ಹಾಗಿಲ್ಲ. ಸಂದರ್ಭ, ಸನ್ನಿವೇಶ, ವಾತಾವರಣ, ಪ್ರದೇಶ.. ಇತ್ಯಾದಿಗಳಿಗೆ ಸಂಬಂಧಿಸಿ ಕಾರಣಗಳು ತರಹೇವಾರಿ ಇರಬಹುದು. ಒಂದು ಕಡೆ ಮದ್ಯ ಆಗಿರಬಹುದು. ಒಂದು ಕಡೆ ಬಟ್ಟೆಯೂ ಆಗಿರಬಹುದು. ಒಂದು ಕಡೆ ಮನ ಸ್ಥಿತಿಯೂ ಆಗಿರಬಹುದು ಅಥವಾ ಈ ಮೂರನ್ನೂ ಹೊರತು ಪಡಿಸಿದ ಇತರ ಕಾರಣಗಳೂ ಇರಬಹುದು. ದೌರ್ಜನ್ಯ ನಡೆಸುವ ವ್ಯಕ್ತಿ ಯಾವ ಪರಿಸರದಲ್ಲಿ, ಯಾವ ಮನೆತನದಲ್ಲಿ, ಯಾವ ಸಾಂಸ್ಕೃತಿಕ ಹಿನ್ನೆಲೆಯಲ್ಲಿ, ಯಾವ ವಿಚಾರಧಾರೆಯಲ್ಲಿ.. ಬೆಳೆದಿದ್ದಾನೆ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ. ಒಂದು ಸಿನಿಮಾವನ್ನು ವೀಕ್ಷಿಸುವ ನೂರು ಮಂದಿಯ ಮೇಲೆ ಅದು ನೂರು ರೀತಿಯಲ್ಲಿ ಪರಿಣಾಮವನ್ನು ಬೀರಬಲ್ಲುದು. ವ್ಯಕ್ತಿಯ ಮನಸ್ಥಿತಿ ತನ್ನಷ್ಟಕ್ಕೇ ರೂಪು ಪಡೆಯುವುದಿಲ್ಲ. ಓದು, ವೀಕ್ಷಣೆ, ಚರ್ಚೆ, ಮಾತುಕತೆ, ಹವ್ಯಾಸ.. ಇತ್ಯಾದಿಗಳ ಒಂದು ಸಂಗ್ರಹ ರೂಪ ಅದು. ಕೆಟ್ಟ ಸಾಹಿತ್ಯವನ್ನು ಓದಿದರೆ ಅಥವಾ ಕೆಟ್ಟ ಬೈಗುಳವನ್ನೇ ದಿನಾ ಆಲಿಸುವ ಪರಿಸರದಲ್ಲಿ ಓರ್ವ ಬೆಳೆದಿದ್ದರೆ, ಅದು ಆತ/ಕೆ/ಯ ಮನಸ್ಥಿತಿಯಾಗಿ ಬೆಳೆಯತೊಡಗುತ್ತದೆ. ಈ ಮನಸ್ಥಿತಿ ಸಾಮಾನ್ಯ ಸಂದರ್ಭದಲ್ಲಿ ಸಂಪೂರ್ಣವಾಗಿ ಗೋಚರಿಸಬೇಕೆಂದಿಲ್ಲ. ಅದಕ್ಕೆ ಧೈರ್ಯದ ಬೆಂಬಲ ಬೇಕಾಗುತ್ತದೆ. ಬಹುತೇಕ ಬಾರಿ ಇಂಥ ಧೈರ್ಯವನ್ನು ಕೊಡುವುದು ಮದ್ಯ. ಅದು ಚಿತ್ತ ಚಾಂಚಲ್ಯಕ್ಕೆ ಒಳಪಡಿಸುತ್ತದೆ. ಯುರೋಪಿಯನ್ ಯೂನಿಯನ್‍ನಲ್ಲಿ ನಡೆಸಲಾದ ಸರ್ವೇಯ ಫಲಿತಾಂಶ ಹೇಳುವುದೂ ಇದನ್ನೇ. ‘ತಾನು ಮದ್ಯದ ಪ್ರಭಾವದಿಂದಾಗಿ ಹೆಜ್ಜೆ ತಪ್ಪಿದೆ’ ಎಂದು ತೆಹಲ್ಕಾದ ತರುಣ್ ತೇಜ್‍ಪಾಲ್ ಹೇಳಿರುವುದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ನಿರ್ಭಯ ಪ್ರಕರಣದಲ್ಲೂ ಇದು ಸಾಬೀತಾಗಿದೆ. ಹಾಗಂತ, ಮದ್ಯವೊಂದೇ ಮಹಿಳಾ ದೌರ್ಜನ್ಯಕ್ಕೆ ಕಾರಣ ಎಂದಲ್ಲ. ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಕಾರಣಗಳ ಪಟ್ಟಿ ಬೇರೆ ಬೇರೆ ಇರಬಹುದು. ಸಮಾಜದ ತೀರಾ ಮೇಲುಸ್ತರದಲ್ಲಿ ಒಂದು ಜೀವನ ಕ್ರಮ ಇದೆ. ಅದು ಸಾಮಾನ್ಯವಾಗಿ ಟಿ.ವಿ., ಸಿನೆಮಾಗಳಲ್ಲಿ ವ್ಯಕ್ತವಾಗುತ್ತಿರುತ್ತವೆ. ಅಲ್ಲಿ ಎಲ್ಲವೂ ಮುಕ್ತ ಮುಕ್ತ. ಅಲ್ಲಿ ಪ್ರೇಮ ಅಂಕುರಿಸುತ್ತದೆ. ಒಪ್ಪಿತ ಸಂಬಂಧ ಇರುತ್ತದೆ. ಗಂಡು-ಹೆಣ್ಣು ಕಟ್ಟುಪಾಡುಗಳ ಹಂಗಿಲ್ಲದೇ ಬದುಕುತ್ತಿರುತ್ತಾರೆ. ಅದೇ ವೇಳೆ, ಸಮಾಜದ ತೀರಾ ತಳಸ್ತರದ ಮಂದಿಯ ಮಟ್ಟಿಗೆ ಅದು ಕೈಗೆಟುಕದ ಬದುಕು. ಪ್ರೇಮಿಸುವುದಕ್ಕೆ ಗಂಡಿಗೆ ಹೆಣ್ಣು ಮತ್ತು ಹೆಣ್ಣಿಗೆ ಗಂಡು ಸಿಗದಷ್ಟು ಬಂಜರು ಪ್ರದೇಶ. ಮೇಲುಸ್ತರದ ಮಂದಿಯಷ್ಟು ಚೆನ್ನಾಗಿ ಮಾತನಾಡಲಾಗದ, ಡ್ರೆಸ್ ಧರಿಸಲಾಗದ, ಪಾಶ್ ಆಗಿರಲಾಗದ ಜನವರ್ಗ ಇದು. ಇವರಲ್ಲಿ ಎಲ್ಲರೂ ಮೇಲುಸ್ತರದ ಈ ಮಂದಿಯ ಜೀವನಕ್ರಮವನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತಾರೆಂದು ಹೇಳಲಾಗದು. ಅದು ನಕಾರಾತ್ಮಕ ಮನಸ್ಥಿತಿಯ ಕಡೆಗೆ ದೂಡುವುದಕ್ಕೂ ಅವಕಾಶ ಇದೆ. ಮೇಲುಸ್ತರದವರ ಜೀವನಸೌಖ್ಯ ತಮಗೆ ಸಹಜವಾಗಿ ಲಭ್ಯವಾಗದಿರುವುದು ಅದನ್ನು ಬಲವಂತದಿಂದ ತಮ್ಮದಾಗಿಸಿಕೊಳ್ಳಲು ಪ್ರಚೋದನೆ ನೀಡುವುದಕ್ಕೂ ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಅವರಿಗೆ ಮದ್ಯ ನೆರವಾಗಬಹುದು. ಅದೇ ವೇಳೆ, ಪಿಂಕ್ ಸಿನಿಮಾದಂತೆ ಹೆಣ್ಣಿನ ನಗು ವನ್ನೇ ‘ಆಹ್ವಾನ’ ಎಂದು ಅಂದುಕೊಳ್ಳುವವರಿರಬಹುದು. ಆಕೆಯ ಹಾವ-ಭಾವ, ಮಾತು, ಬಟ್ಟೆ.. ಎಲ್ಲದರಲ್ಲೂ ಲೈಂಗಿಕ ಆಹ್ವಾನವನ್ನು ಕಾಣುವವರಿರಬಹುದು. ಹಾಗಂತ, ಇವೆಲ್ಲವನ್ನೂ ಹೆಣ್ಣಿನಿಂದ ರದ್ದುಗೊಳಿಸುವುದು ಇದಕ್ಕೆ ಪರಿಹಾರ ಖಂಡಿತ ಅಲ್ಲ, ಆಗಬಾರದು ಕೂಡ.
     ಲೈಂಗಿಕ ದೌರ್ಜನ್ಯದ ಮನಸ್ಥಿತಿ ಪುರುಷರಲ್ಲಿ ಎಲ್ಲಿ, ಹೇಗೆ, ಯಾವ ಮೂಲದಿಂದ ಹುಟ್ಟಿಕೊಳ್ಳುತ್ತದೆ ಮತ್ತು ಹೇಗೆ ಕಾರ್ಯ ರೂಪಕ್ಕೆ ಬರುತ್ತದೆ ಎಂಬುದನ್ನು ಯಾವುದೇ ಪೂರ್ವಗ್ರಹಕ್ಕೆ ಒಳಗಾಗದೇ ವಿಶ್ಲೇಷಿಸುವುದಕ್ಕೆ ಮುಂದಾದರೆ ಹೆಣ್ಣು ಈಗಿನ ಸ್ಥಿತಿಗಿಂತ ಮುಂದೆ ಖಂಡಿತ ಹೆಚ್ಚು ಸುರಕ್ಷಿತ ಆಗಬಲ್ಲಳು.
   

Friday, January 6, 2017

ಉರಿಯುತ್ತಿರುವ ಬೆಂಕಿಗೆ ಹಾರುವ ಅನುಯಾಯಿ

      ಹಿಟ್ಲರನ ಆಡಳಿತದ ಸಮಯದಲ್ಲಿ 6 ಮಿಲಿಯನ್ ಯಹೂದಿಯರ ಹತ್ಯಾಕಾಂಡಕ್ಕೆ ನೇತೃತ್ವ ನೀಡಿದವನೆಂದು ಹೇಳಲಾದ ಸೇನಾ ಮುಖ್ಯಸ್ಥ ಅಡಾಲ್ಫ್ ಇಕ್‍ಮ್ಯಾನ್‍ನನ್ನು ಇಸ್ರೇಲ್‍ನ ರಮ್ಲ ಜೈಲಿನಲ್ಲಿ 1962 ಮೇ 30ರಂದು ಗಲ್ಲಿಗೇರಿಸಿದುದು ವಿವಿಧ ಕಾರಣಗಳಿಗಾಗಿ ಜಾಗತಿಕ ಸುದ್ದಿಗೀಡಾಯಿತು. ಇಕ್‍ಮ್ಯಾನ್ ನನ್ನು ಎದುರಿಟ್ಟುಕೊಂಡು ಚರ್ಚೆ, ವಿಶ್ಲೇಷಣೆ, ಸಂಶೋಧನೆಗಳು ನಡೆದುವು. ದ್ವಿತೀಯ ವಿಶ್ವಯುದ್ಧ ಕೊನೆಗೊಂಡಂತೆಯೇ ಇಕ್‍ಮ್ಯಾನ್ ಅಮೇರಿಕನ್ ಸೇನೆಯ ವಶವಾದನು. ಆದರೆ ಅಮೇರಿಕನ್ ಸೇನೆಗೆ ಇಕ್‍ಮ್ಯಾನ್‍ನ ಪರಿಚಯ ಇರಲಿಲ್ಲ. ಅವರಿಗೆ ಗೊತ್ತಾಗುವ ಮೊದಲೇ ಬಂಧನದಿಂದ ತಪ್ಪಿಸಿಕೊಂಡನು. ಓಟ್ಟೋ ಹೆನಿಂಗರ್ ಎಂಬ ನಕಲಿ ವಿಳಾಸದೊಂದಿಗೆ ಆಸ್ಟ್ರಿಯಾದಲ್ಲಿ ಬದುಕಿದನು. ಬಳಿಕ ಇಟಲಿಗೆ ತೆರಳಿದನು. ಬಳಿಕ ಅರ್ಜೆಂಟೀನಾಕ್ಕೆ ವಲಸೆ ಹೋದನು. ನಕಲಿ ಪಾಸ್‍ಪೋರ್ಟ್, ನಕಲಿ ದಾಖಲೆಗಳ ಮೂಲಕ ಅರ್ಜೆಂಟೀನಾದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಿದನು. ಕುಟುಂಬವನ್ನೂ ಕರೆಸಿಕೊಂಡನು. ಅರ್ಜೆಂಟೀನಾ ಕಮ್ಯುನಿಸ್ಟ್ ರಾಷ್ಟ್ರವಾಗಿರುವುದು ಆತ ಅಲ್ಲಿಗೆ ವಲಸೆ ಹೋಗುವುದಕ್ಕೆ ಒಂದು ಕಾರಣವೂ ಆಗಿತ್ತು. ಆದರೆ ಎಲ್ಲೂ ಆತ ತನ್ನ ನಿಜನಾಮವನ್ನು ಬಹಿರಂಗಪಡಿಸಿರಲಿಲ್ಲ. ಹೀಗೆ 1950ರಿಂದ 60ರ ವರೆಗೆ ಸುಮಾರು 10 ವರ್ಷಗಳ ಕಾಲ ಬದುಕಿದ ಆತನನ್ನು 1960 ಮೇಯಲ್ಲಿ ಇಸ್ರೇಲ್‍ನ ಗುಪ್ತಚರ ಸಂಸ್ಥೆ ಮೊಸಾದ್ ಅರ್ಜೆಂಟೀನಾದಲ್ಲೇ ಬಂಧಿಸಿತು. ಅದೂ ರಹಸ್ಯವಾಗಿ. ಇಸ್ರೇಲಿ ನಿಯೋಗವನ್ನು ಅರ್ಜೆಂಟೀನಾಕ್ಕೆ ತಲುಪಿಸಲು ಆಗಮಿಸಿದ ವಿಮಾನದಲ್ಲಿ ಇಕ್‍ಮ್ಯಾನ್‍ನನ್ನು ರವಾನಿಸಲಾಯಿತು. ಅದೂ ರಹಸ್ಯವಾಗಿಯೇ. 1960 ಮೇ 22ರಂದು ಇಸ್ರೇಲ್‍ನ ಅಧ್ಯಕ್ಷ  ಬೆನ್ ಗುರಿಯನ್‍ರು ಈ ವಿಷಯವನ್ನು ಇಸ್ರೇಲಿ ಪಾರ್ಲಿಮೆಂಟ್‍ನಲ್ಲಿ ಘೋಷಿಸಿದರು. ಅಲ್ಲಿ ವರೆಗೆ ಅರ್ಜೆಂಟೀನಕ್ಕಾಗಲಿ ವಿಶ್ವಕ್ಕಾಗಲಿ ಈ ಇಡೀ ಬಂಧನ ಪ್ರಕ್ರಿಯೆಯ ಯಾವ ಅಂಶವೂ ಗೊತ್ತಿರಲಿಲ್ಲ. ಆದ್ದರಿಂದಲೇ ಅರ್ಜೆಂಟೀನಾ ಈ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿತು. ತನ್ನ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪವೆಂದು ವಿಶ್ವಸಂಸ್ಥೆಗೆ ದೂರು ನೀಡಿತು. ವಿಶ್ವಸಂಸ್ಥೆಯೂ ಅದನ್ನು ಅನುಮೋದಿಸಿತು. ಕೊನೆಗೆ ಇಸ್ರೇಲ್ ಮತ್ತು ಅರ್ಜೆಂಟೀನಾಗಳು ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಿಕೊಂಡದ್ದು ಒಂದು ಮಗ್ಗುಲಾದರೆ ಇನ್ನೊಂದು, 1960 ಮೇಯಿಂದ 1962 ಮೇ ವರೆಗೆ ನಡೆದ ವಿಚಾರಣೆ. ಜಾಗತಿಕವಾಗಿಯೇ ಅತ್ಯಂತ ಕುತೂಹಲಭರಿತ ವಿಚಾರಣಾ ಪ್ರಕ್ರಿಯೆಯಾಗಿತ್ತು ಅದು. ಪ್ರತಿದಿನ ವಿಚಾರಣೆ ನಡೆಯಿತು. ಮಾತ್ರವಲ್ಲ, ವಿಚಾರಣೆಯನ್ನು ಮುಕ್ತವಾಗಿಯೇ ನಡೆಸಲಾಯಿತು. ಆ ಇಡೀ ವಿಚಾರಣಾ ಪ್ರಕ್ರಿಯೆಯಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸಿದ್ದ ಹನ್ನಾ ಅರೆಂಟ್ ಎಂಬವರು ಅಂತಿಮವಾಗಿ ಹೇಳಿದ್ದು, ‘ಆತನದ್ದು ಸಾಮಾನ್ಯ ಕೆಡುಕು’ (The banality of Evil) ಎಂದಾಗಿತ್ತು. ಅಸಂಖ್ಯಾತ ಮಂದಿಯನ್ನು ತೀವ್ರವಾಗಿ ಕಾಡಿದ ಪದಪ್ರಯೋಗ ಇದು. ಮಿಲಿಯನ್ ಮಂದಿಯನ್ನು ಕೊಂದ ಕೃತ್ಯವು ಸಾಮಾನ್ಯ ಕೆಡುಕು ಹೇಗಾಗುತ್ತದೆ ಮತ್ತು ಯಾಕಾಗುತ್ತದೆ? ಅಲ್ಲದೇ, 3500ರಷ್ಟು ಪುಟಗಳಲ್ಲಿ ಸಂಗ್ರಹಿಸಿಡಲಾದ ವಿಚಾರಣಾ ಪ್ರಕ್ರಿಯೆಯ ವಿವರಗಳಲ್ಲಿ ಎಲ್ಲೂ ಇಕ್‍ಮ್ಯಾನ್ ಅಮಾಯಕ ಎಂದು ಹೇಳಿಲ್ಲ. ಸ್ವತಃ ಆತನೇ ತಾನು ಈ ಕ್ರೌರ್ಯದ ನೇತೃತ್ವವನ್ನು ವಹಿಸಿಕೊಂಡಿದ್ದೆ ಎಂದೇ ಹೇಳಿದ್ದಾನೆ. 15 ವರ್ಷಗಳ ಕಾಲ ತನ್ನ ನಿಜ ನಾಮವನ್ನು ಅಡ ಗಿಸಿಯೂ ಬದುಕಿದ್ದಾನೆ. ಹೀಗಿದ್ದೂ, ಅದನ್ನು ಸಾಮಾನ್ಯ ಕೆಡುಕು ಎಂದು ಹನ್ನಾ ಹೆಸರಿಸಲು ಕಾರಣವೇನು? ಹೀಗಿರುತ್ತಲೇ,
        1974ರಲ್ಲಿObedience to Authority (ಪ್ರಭುತ್ವಕ್ಕೆ ವಿಧೇಯತೆ) ಎಂಬ ಕೃತಿ ಬಿಡುಗಡೆಯಾಗುತ್ತದೆ. ಬಹುಶಃ ಇದು ಇಕ್‍ಮ್ಯಾನ್ ಮತ್ತು ಹನ್ನಾ ಅವರಿಬ್ಬರನ್ನು ಎದುರಿಟ್ಟುಕೊಂಡು ಬರೆಯಲಾದ ಪುಸ್ತಕವೇ ಎಂದು ಅನುಮಾನಿಸುವಷ್ಟರ ಮಟ್ಟಿಗೆ ಈ ಕೃತಿ ಚರ್ಚಿತವಾಗುತ್ತದೆ. ಆ ಕಾಲದಲ್ಲಿ ಬೆಸ್ಟ್ ಸೆಲ್ಲರ್ (ಹೆಚ್ಚು ಮಾರಾಟವಾದ) ಆದ ಕೃತಿ ಇದು.    
       ಅಮೇರಿಕದ ಯೇಲೆ ವಿಶ್ವವಿದ್ಯಾನಿಲಯದ ಮನಶಾಸ್ತ್ರಜ್ಞ ಸ್ಟಾನ್ಲಿ ಮಿಲ್‍ಗ್ರಾಮ್ ಎಂಬವರು ಅಂದಿನ ದಿನಪತ್ರಿಕೆಗಳಲ್ಲಿ ಒಂದು ಜಾಹೀರಾತನ್ನು ಪ್ರಕಟಿಸುತ್ತಾರೆ. 1962-63ರಲ್ಲಿ ನಡೆದ ಘಟನೆ ಇದು. ‘ತನ್ನ ಅಧ್ಯಯನದ ಮೇಲೆ ಪ್ರಯೋಗ ನಡೆಸುವುದಕ್ಕಾಗಿ ಸ್ವಯಂ ಸೇವಕರು ಬೇಕಾಗಿದ್ದಾರೆ..’ ಎಂಬುದೇ ಆ ಜಾಹೀರಾತು. ಆ ಜಾಹೀರಾತಿಗೆ ಸ್ಪಂದಿಸಿ ಹಲವು ಮಂದಿ ಹೆಸರು ನಮೂದಿಸುತ್ತಾರೆ. ಹೀಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಿಂದ ಅವರು ಇಬ್ಬರನ್ನು ತನ್ನ ಮೊದಲ ಪ್ರಯೋಗಕ್ಕಾಗಿ ಆಯ್ಕೆ ಮಾಡುತ್ತಾರೆ. ಇಬ್ಬರಿಗೆ ಎರಡು ಪ್ರತ್ಯೇಕ ಕೊಠಡಿಗಳು. ಇಬ್ಬರಲ್ಲಿ ಒಬ್ಬನಿಗೆ ಶಿಕ್ಷಕ ಮತ್ತು ಇನ್ನೊಬ್ಬನಿಗೆ ವಿದ್ಯಾರ್ಥಿ ಎಂದು ನಾಮಕರಣ ಮಾಡುತ್ತಾರೆ. ಶಿಕ್ಷಕ ಆ ಇಡೀ ಪ್ರಯೋಗದ ಕಾರ್ಯನಿರ್ವಾಹಕನೆಂದೂ ಹೇಳಲಾಗುತ್ತದೆ. ವಿದ್ಯಾರ್ಥಿಯನ್ನು ಕೊಠಡಿಯಲ್ಲಿ ಕೂರಿಸಿ ಆತನ ಕೈಗೆ ವಿದ್ಯುತ್ ವಯರುಗಳನ್ನು ಜೋಡಿಸುತ್ತಾರೆ. ಆತನಿಗೆ ಬರಹದ ಪ್ರತಿಯೊಂದನ್ನೂ ನೀಡುತ್ತಾರೆ. ಆತ ಅದನ್ನು ಕಲಿಯಬೇಕು. ಇನ್ನೊಂದು ಕೊಠಡಿಯಲ್ಲಿ ಶಿಕ್ಷಕನನ್ನು ಕೂರಿಸುತ್ತಾರೆ. 15ರಿಂದ 450 ವೋಲ್ಟ್ ವರೆಗೆ ವಿದ್ಯುತ್ ಶಾಕ್ ಕೊಡಬಲ್ಲ 30 ಸ್ವಿಚ್‍ಗಳುಳ್ಳ ಕೊಠಡಿ ಅದು. ಈ ಇಡೀ ಪ್ರಯೋಗದ ಕಾರ್ಯ ನಿರ್ವಾಹಕ ನೀನು ಎಂಬುದನ್ನು ಮತ್ತೊಮ್ಮೆ ಆತನಿಗೆ ಮಿಲ್‍ಗ್ರಾಮ್ ನೆನಪಿಸುತ್ತಾರೆ. ಈ ವ್ಯಕ್ತಿಯ ಹೊಣೆಗಾರಿಕೆ ಏನೆಂದರೆ, ವಿದ್ಯುತ್ ಇನ್ನೊಂದು ಕೋಣೆಯಲ್ಲಿರುವ ವಿದ್ಯಾರ್ಥಿಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ತಪ್ಪು ಉತ್ತರಕ್ಕೆ ಶಾಕ್ ಕೊಡುವುದು. 15 ವೋಲ್ಟ್ ನಿಂದ ಆರಂಭವಾಗುವ ವಿದ್ಯುತ್‍ನ ಪ್ರಮಾಣ ಅಧಿಕವಾಗುತ್ತಾ ಕೊನೆಗೆ 450 ವೋಲ್ಟ್ ಗೆ ತಲುಪುತ್ತದೆ. ಇನ್ನೊಂದು ಕೊಠಡಿಯಲ್ಲಿರುವ ವಿದ್ಯಾರ್ಥಿಯ ಕೈಗೆ ವಿದ್ಯುತ್ ವಯರುಗಳನ್ನು ಚುಚ್ಚಲಾಗಿದ್ದು, ನೀವು ಸ್ವಿಚ್ ಹಾಕುತ್ತಾ ಹೋದಂತೆ ಆತನ ಉತ್ತರದಲ್ಲಿ ಆಗುವ ವ್ಯತ್ಯಾಸವನ್ನು ನೀವು ಗಮನಿಸಿ ದಾಖಲಿಸಬೇಕು ಎಂದು ಶಿಕ್ಷಕನಿಗೆ ಹೇಳಲಾಗುತ್ತದೆ. ಆ ವಿದ್ಯಾರ್ಥಿ ತಪ್ಪು ಉತ್ತರ ಕೊಟ್ಟಾಗಲೆಲ್ಲ ಶಾಕ್‍ನ ತೀವ್ರತೆ ಯನ್ನು ಅಧಿಕಗೊಳಿಸುತ್ತಾ ಹೋಗುವ ಕ್ರಿಯೆ ಇದು. ಶಿಕ್ಷಕ ಆ ಕ್ರಿಯೆಯಲ್ಲಿ ತಲ್ಲೀನನಾಗುತ್ತಾನೆ. ವಿದ್ಯಾರ್ಥಿ ತಪ್ಪು ಉತ್ತರ ಕೊಡುವಾಗ ಶಾಕ್‍ನ ಪ್ರಮಾಣವನ್ನು ಈತ ಹೆಚ್ಚಿಸುತ್ತಾನೆ. ಕುತೂಹಲದ ಸಂಗತಿ ಏನೆಂದರೆ, ವಿದ್ಯಾರ್ಥಿಯ ಕೈಗೆ ಜೋಡಿಸಲಾದ ವಯರುಗಳಲ್ಲಿ ವಿದ್ಯುತ್ ಹರಿಯುತ್ತಲೇ ಇರಲಿಲ್ಲ. ಅದು ವಿದ್ಯಾರ್ಥಿಗೂ ಗೊತ್ತು. ಆತನಿಗೆ ಮೊದಲೇ ಆ ಬಗ್ಗೆ ಹೇಳಲಾಗಿತ್ತು. ಶಿಕ್ಷಕ ವಿದ್ಯುತ್ ಶಾಕ್ ಕೊಡುವಾಗಲೆಲ್ಲ ತಪ್ಪು ಉತ್ತರ ನೀಡಬೇಕೆಂದೂ ಹೇಳಲಾಗಿತ್ತು. ಶಿಕ್ಷಕನಿಗೆ ಮಾತ್ರ ಇದು ಗೊತ್ತಿರಲಿಲ್ಲ. ಇಂಥ ಪ್ರಯೋಗಕ್ಕೆ ಅನೇಕರನ್ನು ಒಡ್ಡಿದ ಬಳಿಕ ಮಿಲ್ ಗ್ರಾಮ್ ‘ಒಬಿಡಿಯನ್ಸ್ ಟು ಅಥೋರಿಟಿ’ ಎಂಬ ವಿಶ್ಲೇಷಣಾತ್ಮಕ ಕೃತಿ ಬರೆಯುತ್ತಾರೆ. ಅವರ ಪ್ರಕಾರ, ಒಂದು ಆದೇಶ ಎಂಬ ನೆಲೆಯಲ್ಲಿ ಶಿಕ್ಷಕನು ತನ್ನ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ಕೊಟ್ಟುದುದನ್ನು ಮೇಲ್ನೋಟಕ್ಕೆ ಸಮರ್ಥಿಸಿಕೊಳ್ಳಬಹುದು. ಆದರೆ ಸಾಮಾನ್ಯ ಪ್ರಜ್ಞೆ ಇರುವವರು ಶಾಕ್ ಕೊಡಲು ಒಪ್ಪಲಾರರು. ಇದೊಂದು ಪ್ರಯೋಗ ಎಂದು ಹೇಳಿದರೂ ತನ್ನೆದುರಿನ ಇನ್ನೋರ್ವ ಮನುಷ್ಯನಿಗೆ ವಿದ್ಯುತ್ ಹರಿಸುವುದಕ್ಕೆ ಒಪ್ಪಿಕೊಳ್ಳುವುದು ಅಸಾಧ್ಯ. ಇದು ಕಾಮನ್‍ಸೆನ್ಸ್. ವಿದ್ಯುತ್ ಶಾಕ್ ತಗುಲಿದ ವ್ಯಕ್ತಿ ಚೀರುತ್ತಿದ್ದರೂ ಮತ್ತೆ ಮತ್ತೆ ಶಾಕ್ ಕೊಡಲು ಓರ್ವ ಸೈಕೋ ಪಾತ್‍ಗೆ ಮಾತ್ರ ಸಾಧ್ಯ. ಹಾಗಂತ, ಮಿಲ್‍ಗ್ರಾಮ್‍ರ ಪ್ರಯೋಗದಲ್ಲಿ ಭಾಗವಹಿಸಿದವರಲ್ಲಿ ಪ್ರತಿ ಮೂರರಲ್ಲಿ ಇಬ್ಬರು ವ್ಯಕ್ತಿಗಳೂ (65%) 450 ವೋಲ್ಟ್ ನಷ್ಟು ಅಪಾಯಕಾರಿ ಪ್ರಮಾಣದಲ್ಲಿ ತನ್ನ ವಿದ್ಯಾರ್ಥಿಗೆ ಶಾಕ್ ಕೊಟ್ಟಿದ್ದರು ಎಂಬುದೇ ಇಲ್ಲಿನ ಅಚ್ಚರಿ. 300 ವೋಲ್ಟ್ ಗಿಂತ ಕಡಿಮೆ ಶಾಕ್ ಕೊಟ್ಟವರು ಯಾರೂ ಇರಲಿಲ್ಲ. ನಿಜವಾಗಿ, ನಮ್ಮ ಮನೆಯಲ್ಲಿ ನಾವು ಉಪಯೋಗಿಸುವ ವಿದ್ಯುತ್‍ನ ಪ್ರಮಾಣ 220 ವೋಲ್ಟ್ ಎಂಬುದನ್ನು ಪರಿಗಣಿಸುವಾಗ, ಈ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮೇಲೆ ಯಾವ ಮಟ್ಟದಲ್ಲಿ ವಿದ್ಯುತ್ ಪ್ರವಹಿಸಿದರು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಲು ಕಾರಣವೇನು? ಮಿಲ್‍ಗ್ರಾಮ್ ಈ ಎಲ್ಲ ಪ್ರಯೋಗಗಳಿಂದ ಕಂಡುಕೊಂಡದ್ದೇನೆಂದರೆ, ಅಧಿಕಾರಸ್ಥರ ಆದೇಶಗಳನ್ನು ವಿಧೇಯವಾಗಿ ಪಾಲಿಸುವುದೇ ಇದಕ್ಕೆ ಕಾರಣ. ವಿದ್ಯುತ್ ಶಾಕ್ ಹೆಚ್ಚಿಸುವುದರಿಂದ ವಿದ್ಯಾರ್ಥಿಗೆ ಆಗುವ ಅಪಾಯದ ಬಗ್ಗೆ ಶಿಕ್ಷಕರಿಗೆ ಗೊತ್ತಿಲ್ಲ ಎಂದಲ್ಲ. ಆದರೆ ಅದೊಂದು ಆದೇಶ. ಮರುಮಾತಿಲ್ಲದೇ ಅದಕ್ಕೆ ವಿಧೇಯವಾಗಿರುವುದು ತನ್ನ ಕರ್ತವ್ಯ ಎಂದು ಆತ ಭಾವಿಸುತ್ತಾನೆ. ಇದೇ ಪ್ರಯೋಗವನ್ನು ಮಿಲ್‍ಗ್ರಾಮ್‍ರು ಜರ್ಮನಿ ಯಲ್ಲೂ ನಡೆಸಿದರು. ಅಲ್ಲಿಯ ಫಲಿತಾಂಶ ಇದಕ್ಕಿಂತಲೂ ಆಘಾತಕಾರಿಯಾಗಿತ್ತು. ವಿದ್ಯಾರ್ಥಿಗಳ ಮೇಲೆ 450 ವೋಲ್ಟ್ ವಿದ್ಯುತ್ ಹರಿಸಿದ ಶಿಕ್ಷಕರ ಪ್ರಮಾಣ 85% ಇತ್ತು.     
     ಮಾನವರಲ್ಲಿ ಎರಡು ಬಗೆಯ ವರ್ತನಾ ಸ್ವಭಾವವಿದೆ ಎಂಬುದು Obedience to  Authority ಕೃತಿಯ ಬಹು ಮುಖ್ಯ ಅಂಶ. ಅದರಲ್ಲಿ ಒಂದು ಸ್ವಾಯತ್ತ ಗುಣವಾದರೆ ಇನ್ನೊಂದು ಪ್ರತಿನಿಧಿ ಗುಣ. ಓರ್ವ ವ್ಯಕ್ತಿ ಸ್ವಾಯತ್ತ ಗುಣವನ್ನು ಹೊಂದಿದರೆ ಕೊನೆಗೆ ಆತ ಸರ್ವಾಧಿಕಾರಿಯಾಗಿ ಬದಲಾಗಬಹುದು. ಸಕಲ ಅಧಿಕಾರವೂ ತನ್ನ ನಿಯಂತ್ರಣದಲ್ಲಿದೆ ಅಥವಾ ತಾನು ಯಾರಿಗೂ ಭಯಪಡಬೇಕಾಗಿಲ್ಲ ಎಂಬ ಹಂತಕ್ಕೆ ಆತ ತಲುಪಿದರೆ ಆತ ನಿರಂಕುಶನಾಗಿ ಬದಲಾಗಬಹುದು. ಇನ್ನೊಂದು, ಪ್ರತಿನಿಧಿ ಗುಣ. ಇದರ ವ್ಯಾಪ್ತಿಯೊಳಗೆ ಕಂಪೆನಿ ಮ್ಯಾನೇಜರ್, ಸೇನಾ ಮುಖ್ಯಸ್ಥ ಮತ್ತು ಇದು ಮುಂದುವರಿದೂ ವರಿದೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನವರೆಗೂ ಬರಬಹುದು. ಆತ ಮೇಲಿನವರಿಗೆ ವಿಧೇಯನಾಗಿರುವುದಷ್ಟೇ ತನ್ನ ಕರ್ತವ್ಯ ಎಂದು ಅಂದುಕೊಳ್ಳುತ್ತಾನೆ. ಕಾಮನ್‍ಸೆನ್ಸ್ ಅನ್ನು ಉಪಯೋಗಿಸದೇ ಮೇಲಿನವರ ಆದೇಶ ಬಂದರೆ ಯಾವುದೇ ಕ್ರೌರ್ಯಕ್ಕೂ ಆತ/ಕೆ ಮುಂದಾಗಬಲ್ಲ. ಹಿಟ್ಲರ್ ಮತ್ತು ಇಕ್‍ಮ್ಯಾನ್‍ರನ್ನು ಈ ಎರಡೂ
    

ಗುಣಸ್ವಭಾವಕ್ಕೆ ಉದಾಹರಣೆಗಳಾಗಿ ಕೊಡಬಹುದು. ಹಾಗಂತ, ಇವರಿಬ್ಬರೇ ಈ ಉದಾಹರಣೆಗಳ ಆದಿ ಮತ್ತು ಅಂತ್ಯ ಅಲ್ಲ. ನಮ್ಮ ನಡುವೆ ನಡೆದ ಹತ್ತಾರು ಹತ್ಯಾಕಾಂಡ, ಹಿಂಸೆ, ಕ್ರೌರ್ಯಗಳ ಜೊತೆಗೆಲ್ಲ ಇಂಥವರು ಇದ್ದೇ  ಇದ್ದಾರೆ. ಅಖ್ಲಾಕ್ ಎಂಬ ಓರ್ವ ವ್ಯಕ್ತಿಯನ್ನು ನೂರಾರು ಮಂದಿಯ ಗುಂಪೊಂದು ಕಲ್ಲಿನಿಂದ ಜಜ್ಜಿ ಜಜ್ಜಿ ಹತ್ಯೆ ಮಾಡುವ ಸನ್ನಿವೇಶವನ್ನೊಮ್ಮೆ ಗಮನಿಸಿ. ಗುಜರಾತ್‍ನಲ್ಲಿ, ನೆಲ್ಲಿಯಲ್ಲಿ, ಮುಝಫ್ಫರ್ ನಗರ್, ಅಸ್ಸಾಂ, ಬಿಹಾರ್, ಕರ್ನಾಟಕದ ಕಂಬಾಲಪಲ್ಲಿಯ ಹತ್ಯಾಕಾಂಡ ಗಳನ್ನು ಅಧ್ಯಯನಕ್ಕೆ ಒಳಪಡಿಸಿಕೊಳ್ಳಿ. ಮನುಷ್ಯರನ್ನು ಮನುಷ್ಯರೇ ಈ ಮಟ್ಟದಲ್ಲಿ ಹತ್ಯೆ ಮಾಡಿರುವುದರ ಹಿಂದೆ ಯಾವುದರ ಪ್ರಚೋದನೆಯಿದೆ? ಇಲ್ಲಿ ಮಿಲ್‍ಗ್ರಾಮ್‍ರ ಪಾತ್ರವನ್ನು (ಆದೇಶಗಾರನ ಪಾತ್ರ) ವಹಿಸಿದವರು ಇದ್ದಿರಲಾರರೇ? ಅವರ ಆದೇಶಕ್ಕೆ ವಿಧೇಯವಾಗಿರುವುದು ತಮ್ಮ ಕರ್ತವ್ಯ ಎಂದು ಈ ಕೊಲೆಗಾರರ ಗುಂಪು ಭಾವಿಸಿರಬಹುದೇ? ಶಿಕ್ಷಕ ಹೇಗೆ ವಿದ್ಯುತ್ ಶಾಕ್ ಕೊಡುವ ಆದೇಶವನ್ನು ವಿಧೇಯವಾಗಿ ಪಾಲಿಸಿದನೋ ಅದೇ ರೀತಿಯಲ್ಲಿ ಈ ಹತ್ಯಾಕಾಂಡಗಳಲ್ಲಿ ಭಾಗಿಯಾದವರು ತಮ್ಮ ಮೇಲಿನವರ ಆದೇಶಕ್ಕೆ ವಿಧೇಯರಾದ ಪ್ರತಿನಿಧಿಗಳೇ? ಅವರಲ್ಲಿ ಪಾಪಪ್ರಜ್ಞೆ ಮತ್ತು ‘ಕೊಲೆ ನಡೆಸುವುದು ತಪ್ಪು’ ಎಂಬ ಕಾಮನ್‍ಸೆನ್ಸ್ ಹುಟ್ಟದೇ ಇರಲು ಈ ವಿಧೇಯತೆಯೇ ಕಾರಣವಾಗಿರಬಹುದೇ? ಇಕ್‍ಮ್ಯಾನ್ ತನ್ನ ವಿಚಾರಣೆಯ ಉದ್ದಕ್ಕೂ ಹೇಳಿದ್ದು ಇದೇ ಮಾತನ್ನು. ತಾನು ಮೇಲಿನವರ ಆದೇಶಕ್ಕೆ ವಿಧೇಯನಾಗಿರಬೇಕಾದ ನೌಕರನಾಗಿದ್ದೆ ಎಂದು ಆತ ಸಮರ್ಥಿಸಿಕೊಂಡಿದ್ದ. ನನ್ನಿಂದ ಏನೆಲ್ಲ ನಡೆಯಿತೋ ಅವೆಲ್ಲಕ್ಕೂ ಮೇಲಿನವರು ಹೊಣೆಗಾರರೇ ಹೊರತು ತಾನಲ್ಲ ಎಂದೂ ವಾದಿಸಿದ್ದ. ಜರ್ಮನಿಯಲ್ಲಿ ಮತ್ತು ಅದರ ಅಧೀನದಲ್ಲಿದ್ದ ಆಸ್ಟ್ರಿಯಾ, ಪೊಲಾಂಡ್ ಮುಂತಾದ ರಾಷ್ಟ್ರಗಳಲ್ಲಿ ಇಮಿಗ್ರೇಶನ್ ಕಚೇರಿಯನ್ನು ತೆರೆದು, ಆ ಮೂಲಕ ಯಹೂದಿಯರನ್ನು ಗಡೀಪಾರುಗೊಳಿಸಿ ಒಂದೇ ಕಡೆ ಸೇರಿಸಿದ್ದು ಮತ್ತು ಆಹಾರ, ನೀರು ಕೊಡದೇ ಗ್ಯಾಸ್ ಹಾಯಿಸಿ ಸಾಯಿಸಿದ ವ್ಯಕ್ತಿಯ ವಿಚಾರಣೆಯನ್ನು ವೀಕ್ಷಿಸಿದ ಹನ್ನಾ ಆರೆಂಟ್ ಕೊನೆಗೆ ಆತನದ್ದು ‘ಸಾಮಾನ್ಯ ಕೆಡುಕು’ ಎಂದು ಹೇಳಿದುದಕ್ಕೆ ಆತನ ಈ ವಿಧೇಯತಾ ಭಾವವೇ ಕಾರಣ. ಬಹುಶಃ,
     ನಮ್ಮಲ್ಲಿ ಆಗಾಗ ನಡೆಯುತ್ತಿರುವ ಕೋಮುಗಲಭೆ, ಹತ್ಯಾಕಾಂಡ, ಹಿಂಸಾಚಾರ, ಸೇನೆ-ಪೊಲೀಸ್ ದೌರ್ಜನ್ಯ ಗಳು.. ಇಂಥ ವಿಧೇಯತೆಗಳ ಫಲಿತಾಂಶವಾಗಿರಬಹುದೆಂದೇ ಅನಿಸುತ್ತದೆ. ಆದ್ದರಿಂದಲೇ ಪ್ರವಾದಿಯವರು(ಸ) ವಿಧೇಯತೆಯು ಶರ್ತಬದ್ಧವಾಗಿರಬೇಕೆಂದು ಹೇಳಿರುವುದು. ವಿಧೇಯತೆಯು ಸತ್ಯ ಮತ್ತು ನ್ಯಾಯಕ್ಕೆ ಬದ್ಧವಾಗಿರಬೇಕೆಂದು ಹೇಳಿರುವುದು. ಉರಿಯುತ್ತಿರುವ ಬೆಂಕಿಗೆ ಹಾರಬೇಕೆಂದು ನಾಯಕ (ಖಲೀಫ, ಪ್ರಧಾನಿ, ಸಂಘಟನೆಯ ನೇತಾರ ಇತ್ಯಾದಿ) ಆದೇಶಿಸಿದರೆ ಅದಕ್ಕೆ ವಿಧೇಯವಾಗಬಾರದೆಂದು ಅವರು ತನ್ನ ಅನುಯಾಯಿಗಳಿಗೆ ಕರೆ ಕೊಟ್ಟಿರುವುದರಲ್ಲಿ ಈ ಎಲ್ಲ ಅಪಾಯಗಳ ಮುನ್ಸೂಚನೆಯನ್ನು ಕಾಣಬಹುದಾಗಿದೆ.