Tuesday, July 31, 2012

ಹಾಗಂತ ಎಲ್ಲರಿಗೂ ಶಿರಿನ್ ಆಗಲು ಸಾಧ್ಯವಿಲ್ಲವಲ್ಲ?

  ಶಿರಿನ್
ಈ ಜಗತ್ತಿನಲ್ಲಿ ಮಹಿಳಾ ಸಮಾನತೆಯ ಬಗ್ಗೆ ಮಾತಾಡುವ, ಮಹಿಳೆ ಹಾಗೆ, ಹೀಗೆ, ದೇವತೆ ಎಂದೆಲ್ಲಾ ಅಪಾರ ಕಕ್ಕುಲಾತಿ ತೋರುವವರನ್ನೆಲ್ಲಾ ಒಂದೇ ಏಟಿಗೆ ನಂಬಬೇಡಿ. ಅವರು ಫೆಮಿನಿಸ್ಟ್ ಗಳೋ  ಅಥವಾ ಸಿನಿಮಾ ನಿರ್ದೇಶಕರು, ಹೋರಾಟಗಾರರೋ ಯಾರೇ ಆಗಿರಬಹುದು. ಅವರಲ್ಲಿ ಹೆಚ್ಚಿನವರು ಹೆಣ್ಣಿನ ಮುಖ, ಮೂಗು, ತುಟಿ, ಕಣ್ಣು, ಬಾಯಿ, ಕೆನ್ನೆ, ಕೂದಲು, ಕಾಲು, ಕೈ..ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಯೇ ಹೆಣ್ಣಿನ ಪರ ಅಥವಾ ವಿರುದ್ಧ ನಿಲ್ಲುತ್ತಾರೆಂಬುದನ್ನು ದಯವಿಟ್ಟು ನಂಬಿ. ಆಧುನಿಕ ಮನುಷ್ಯರಲ್ಲಿ ಹೆಚ್ಚಿನವರು ಇಷ್ಟಪಡುವುದು ಹೆಣ್ಣು ಎಂಬ ಜೀವಿಯನ್ನಲ್ಲ, ಅವಳ ಸೌಂದರ್ಯವನ್ನು. ನಾನು ಇಷ್ಟು ಒತ್ತು ಕೊಟ್ಟು ಹೇಳಲು ಕಾರಣ ಏನೆಂದರೆ, ಅದು ನನ್ನ ಮುಖ. 14 ವರ್ಷಗಳ ಹಿಂದೆ ನನ್ನ ಗೆಳೆಯರ ಬಳಗದಲ್ಲಿದ್ದವರು ಮತ್ತು ನನ್ನಲ್ಲಿ ಮಾತಾಡಲು ಆಸಕ್ತಿ ತೋರುತ್ತಿದ್ದವರಲ್ಲಿ ಹೆಚ್ಚಿನವರು ಇವತ್ತು ನನ್ನ ಜೊತೆಗಿಲ್ಲ. ಯಾವಾಗ ನನ್ನ ಮುಖಕ್ಕೆ ಆಸಿಡ್ ದಾಳಿಯಾಯಿತೋ ಆಗಿನಿಂದಲೇ ಅವರೆಲ್ಲರ ನಿಜ ಬಣ್ಣವೂ ಬಯಲಾಯಿತು..
         1998 ಮೇ 28ರಂದು ಆಸಿಡ್ ದಾಳಿಗೆ ಒಳಗಾದ ಶಿರಿನ್ ಜುವಾಲೆಯ ಅನುಭವಗಳನ್ನು ಓದುವಾಗ ಹೃದಯ ಭಾರವಾಗುತ್ತದೆ. ಕಣ್ಣು ಒದ್ದೆಯಾಗುತ್ತದೆ..
          ಒಂದು ದಿನ ನೀವು ಅನಿರೀಕ್ಷಿತವಾಗಿ ಆಸಿಡ್ ದಾಳಿಗೊಳಗಾಗುತ್ತೀರಿ ಮತ್ತು ಮುಖ ವಿಕಾರವಾಗಿ ಬಿಡುತ್ತದೆ ಎಂದಿಟ್ಟುಕೊಳ್ಳಿ. ಆ ಬಳಿಕವೂ ನೀವು ಈ ಹಿಂದಿನಂತೆಯೇ ಮದುವೆಗೋ ಮುಂಜಿಗೋ ಸಲೀಸಾಗಿ ಹೋಗಿ ಬಿಡಬಹುದೆಂದು ಅಂದುಕೊಂಡಿದ್ದೀರಾ? ನಿಮ್ಮ ಗೆಳತಿಯರು ಹತ್ತಿರ ಕುಳ್ಳಿರಿಸಬಹುದು, ಪಾರ್ಟಿಗೋ ಶಾಪಿಂಗ್ ಗೋ  ಅಥವಾ ಇನ್ನಾವುದೇ ಕಾರ್ಯಕ್ರಮಕ್ಕೆ ಹೋಗುವಾಗ, `ಬಾರೇ ಹೋಗೋಣ' ಎಂದು ಜೊತೆಗೆ ಕರಕೊಳ್ಳಬಹುದೆಂದು ನಂಬಿದ್ದೀರಾ? ನಿಮ್ಮ ಉಪಸ್ಥಿತಿ ಅವರಿಗೆ ಕಿರಿಕ್ ಅನ್ನಿಸದೆಂದು ಭಾವಿಸಿದ್ದೀರಾ? ನಿಜವಾಗಿ, ಒಂದು ಮುಖದ ಬೆಲೆ ಗೊತ್ತಾಗುವುದು ಅದು ವಿಕಾರಗೊಂಡಾಗಲೇ. ನಿಮ್ಮನ್ನು ವ್ಯಂಗ್ಯದ ಮಾತುಗಳು ಚುಚ್ಚುತ್ತವೆ. ತಮಾಷೆಗಳು ಕೇಳಿ ಬರುತ್ತವೆ. ಎಲ್ಲಿಗೆ ಹೋಗುವುದಿದ್ದರೂ ನಿಮ್ಮನ್ನು ಜೊತೆಗೂಡಿಸಿಕೊಂಡು ಹೋಗುತ್ತಿದ್ದವರೇ ನಿಮ್ಮಿಂದ ತಪ್ಪಿಸಿಕೊಂಡು ಹೋಗಲು ಶ್ರಮ ಪಡುತ್ತಾರೆ. ಪಾರ್ಟಿಗೆ ನೀವು ಹೋದರೆ ಪಾರ್ಟಿಯ ಸೌಂದರ್ಯ ಹಾಳಾಗುತ್ತದೆ ಎಂದು ಭಾವಿಸುತ್ತಾರೆ. ಬೇಡ, ಎಲ್ಲದಕ್ಕೂ ಅವರನ್ನೇ ಅಪರಾಧಿಗಳು ಎಂದು ಹೇಗೆ ಹೇಳುವುದು? ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ, ವಿಚಾರ ವಿನಿಮಯ ನಡೆಸುವುದಕ್ಕೆ, ತಿನ್ನಲು, ಕುಡಿಯಲು, ನೋಡಲು, ಉಸಿರಾಡಲು.. ಎಲ್ಲದಕ್ಕೂ ಮುಖ ಮುಖ್ಯವೇ ಅಲ್ಲವೇ? ಮುಖವನ್ನು ನೋಡಿ ನಾವು ವ್ಯಕ್ತಿಯನ್ನು ಅಳೆಯುತ್ತೇವಲ್ಲ. ಮುಖದಿಂದ ಸೌಂದರ್ಯವನ್ನು ಲೆಕ್ಕ ಹಾಕುತ್ತೇವಲ್ಲ. ಮುಖದ ಸೌಂದರ್ಯಕ್ಕಾಗಿ ಎಷ್ಟೆಲ್ಲ ಕಾಸ್ಮೆಟಿಕ್ಸ್ ಗಳನ್ನು  ಬಳಸುತ್ತೇವೆ?  ಮುಗುಳುನಗುವನ್ನು ಸದಾ  ತುಟಿಯಲ್ಲಿಟ್ಟು ಬದುಕುವುದಕ್ಕೆ ಎಷ್ಟೊಂದು ಶ್ರಮ ಪಡುತ್ತೇವೆ? ದೇಹದ ಇತರೆಲ್ಲ ಭಾಗಗಳು ಮುಚ್ಚಿರುವಾಗಲೂ ತೆರೆದಿರುವ ಭಾಗವೆಂದರೆ ಮುಖವೊಂದೇ ಅಲ್ಲವೇ? ಆ ಮುಖದಲ್ಲಿರುವ ಕಣ್ಣಿಗೆ ಸಾವಿರಾರು ಮಂದಿಯ ಭಾವನೆಗಳನ್ನು ಮೀಟುವ ಸಾಮರ್ಥ್ಯ  ಇರುತ್ತದಲ್ಲ. ಮೂಗು, ಕೆನ್ನೆ, ಹುಬ್ಬು, ತುಟಿಗಳ ಸುತ್ತ ಈ ಜಗತ್ತಿನಲ್ಲಿ ಎಷ್ಟೊಂದು ಕವನಗಳು ರಚನೆಯಾಗಿಲ್ಲ? ಎಷ್ಟು ಮಂದಿ ಅವುಗಳಿಗೆ ಮರುಳಾಗಿಲ್ಲ? ಆದರೆ, ಆ ಮುಖವೇ ವಿಕಾರವಾಗಿ ಬಿಟ್ಟರೆ, ನೋಡಲು ಭೀತಿ ಹುಟ್ಟಿಸುವಂತಿದ್ದರೆ.. ಮುಖ ಬದುಕಿನ ಎಷ್ಟೊಂದು ಅಮೂಲ್ಯ ಭಾಗ ಅಂತ ಗೊತ್ತಾಗುವುದು ಆಗಲೇ..
          ಶಿರಿನ್ ಜುವಾಲೆ ತನ್ನಂತರಂಗವನ್ನು ನಿವೇದಿಸಿಕೊಳ್ಳುತ್ತಾ ಹೋಗುತ್ತಾಳೆ. -My  Husband Changed  My Life  Forever -  ನನ್ನ ಗಂಡ ನನ್ನ ಬದುಕನ್ನು ಸಂಪೂರ್ಣವಾಗಿ ಬದಲಿಸಿದ - ಎಂಬ ಶೀರ್ಷಿಕೆಯಲ್ಲಿ ಬ್ಲಾಗಿನಲ್ಲಿ ಬರೆಯುತ್ತಾ ಹತ್ತಿರವಾಗುತ್ತಾಳೆ..
           ಬಾಲಿವುಡ್ ಇರುವ, ನಟಿಯರೆಲ್ಲಾ ಸುದ್ದಿ ಮಾಡುತ್ತಿರುವ, ಕಾಸ್ಮೆಟಿಕ್ಸ್ ಗಳು  ಅತ್ಯಂತ ಹೆಚ್ಚು ಮಾರಾಟವಾಗುವ, ಸೌಂದರ್ಯದ ಬಗ್ಗೆ ಧಾರಾಳ ಚರ್ಚೆ-ಸಂವಾದಗಳು ನಡೆಯುತ್ತಿರುವ ಮುಂಬೈಯ ಹುಡುಗಿ ನಾನು. ಮದುವೆಯಾದ 2 ತಿಂಗಳೊಳಗೇ ನಾನು ವಿಚ್ಛೇದನಕ್ಕೆ ಬೇಡಿಕೆಯಿಟ್ಟೆ. ಗಂಡನೊಂದಿಗೆ ಸಂಸಾರ ಸಾಗಿಸುವುದು ಸಾಧ್ಯವಿಲ್ಲ ಅಂತ ಹೇಳಿದೆ. ಮನೆಯವರು ಒಪ್ಪಲಿಲ್ಲ. 2 ತಿಂಗಳೊಳಗೇ ದಾಂಪತ್ಯ ಸಂಬಂಧವನ್ನು ಅಳೆಯಲಾಗುತ್ತಾ? ತುಸು ಸಹನೆ ವಹಿಸು. ಕ್ಷಮಿಸುವ ಗುಣ ರೂಢಿಸಿಕೊ. 6 ತಿಂಗಳೋ ಒಂದು ವರ್ಷವೋ ಕಾದು ನೋಡಿದ ಬಳಿಕ ತೀರ್ಮಾನಿಸುವ. ಮದುವೆಯೆಂದರೇನು ಮಕ್ಕಳಾಟಿಕೆಯಾ.. ಅಂತ ಅವರೆಲ್ಲ ಗದರಿಸಿದರು. ನಾನು ಒಪ್ಪಿಕೊಂಡು ಗಂಡನ ಮನೆಗೆ ನಡೆದೆ. ಹೀಗೆ ಬದುಕು ಸಾಗುತ್ತಿದ್ದಾಗಲೇ ಒಂದು ದಿನ ಮಾಸಗಾವಿಯ ನಮ್ಮ ಫ್ಲಾಟಿನ ಕೆಳಗೆ ನನ್ನ ಗಂಡ ನನ್ನ ಮುಖದ ಮೇಲೆ ಆಸಿಡ್ ಎರಚಿದ. ಎರಚಿದ್ದು ಆಸಿಡ್ ಎಂದು ಗೊತ್ತಾದ ಕೂಡಲೇ ನಾನು ಬಾತ್ ರೂಮ್ ಗೆ  ಓಡಿ ಪೈಪ್ ತಿರುಗಿಸಿದೆ. ಬಹುಶಃ ಆವತ್ತು ನಾನು ಹಾಗೆ ಮಾಡದಿರುತ್ತಿದ್ದರೆ, ಇವನ್ನೆಲ್ಲಾ ಹೇಳಿಕೊಳ್ಳುವುದಕ್ಕೆ ಇವತ್ತು  ನಾನೇ ಇರುತ್ತಿರಲಿಲ್ಲವೇನೋ? ಹೊಗೆಯ ಮಧ್ಯೆ ಬಿಕ್ಕಳಿಸುವ ನನ್ನನ್ನು ನೋಡಿ ತಾಯಿ ದಿಗ್ಭ್ರಮೆಗೊಂಡರು. ನನ್ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮುಖವೆಲ್ಲ ಬೊಬ್ಬೆಯೆದ್ದಿದ್ದುವು. 4 ವರ್ಷಗಳಲ್ಲಿ 16 ಆಪರೇಶನ್ ಗಳಿಗೆ  ಒಳಗಾದೆ. ಒಂದು ಅಮೇರಿಕದಲ್ಲಿ. ನನ್ನ ಗಂಡ ಎಷ್ಟು ಬುದ್ಧಿವಂತ ಅಂದರೆ ಆಸಿಡ್ ಎರಚಿದ ಅದೇ ದಿನ ಆತ ವಿದೇಶಕ್ಕೆ ಹಾರಿ ಹೋಗಿದ್ದ. ಇವೆಲ್ಲ ನಡೆದು 12 ವರ್ಷಗಳಾದುವು. ಆದರೆ ಆತನನ್ನು ಶಿಕ್ಷಿಸುವುದಕ್ಕೆ ನಮ್ಮ ವ್ಯವಸ್ಥೆಗೆ ಈವರೆಗೂ ಸಾಧ್ಯವಾಗಿಲ್ಲ.
           ನನಗೆ ಗೊತ್ತು, ನಾನು ವಿಚ್ಛೇದನ ಕೋರಿದುದಕ್ಕೆ ಗಂಡ ಕೊಟ್ಟ ಉಡುಗೊರೆ ಇದೆಂದು. ಆದರೆ ನಾನು ಈ ಸಮಾಜದಿಂದ       ವಿಚ್ಛೇದನ ಕೋರಿಲ್ಲವಲ್ಲ. 2 ತಿಂಗಳು ಆಸ್ಪತ್ರೆಯಲ್ಲಿರುವ ವರೆಗೆ ನನಗೆ ನನ್ನ ಮುಖ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ. ಯಾವಾಗ ಮನೆಗೆ ಕಾಲಿಟ್ಟೆನೋ ನನ್ನ ಮುಖವನ್ನು (ನನ್ನನ್ನಲ್ಲ) ನೋಡುವುದಕ್ಕೆ ಹಲವು ಭಾಗಗಳಿಂದ ಜನ ಬರತೊಡಗಿದರು. ನನ್ನನ್ನು ನೋಡಿದ್ದೇ ತಡ ಕೆಲವರು ಮುಖ ಮುಚ್ಚಿದರು. ಕೆಲವರು ಬಾಯಗಲಿಸಿದರು. ಭೀತಿ, ಅಚ್ಚರಿ ವ್ಯಕ್ತಪಡಿಸಿದರು.. ತನ್ನ ಭಾವೀ ಬದುಕು ಈ ಸಮಾಜದಲ್ಲಿ ಎಷ್ಟು ಕಷ್ಟ ಅಂತ ಅನ್ನಿಸತೊಡಗಿದ್ದೇ ಆಗ. ನನ್ನನ್ನು ನೋಡಲು ಬಂದವರಲ್ಲಿ ಹೆಚ್ಚಿನವರು ಕನ್ನಡಿ ನೋಡುವಂತೆ ಮತ್ತೆ ಮತ್ತೆ ನನ್ನ ಮುಖವನ್ನು ನೋಡುವಾಗ ಆಗುತ್ತಿದ್ದ ಸಂಕಟ ಪದಗಳಿಗೆ ನಿಲುಕದ್ದು. ನನ್ನೊಳಗಿನ ಮುಜುಗರವೇ 2 ವರ್ಷಗಳ ವರೆಗೆ ನನ್ನನ್ನು ಮನೆಯೊಳಗೇ ಕೂಡಿ ಹಾಕಿತು. ಆದರೆ ಎಷ್ಟೂಂತ ಮನೆಯೊಳಗಿರುವುದು? ಎಂದಾದರೂ ಒಂದು ದಿನ ಹೊರಬರಲೇ ಬೇಕಲ್ಲವೇ? ಹೊರ ಬಂದೆ. ಯಾರೊಂದಿಗಾದರೂ ಮಾತಾಡುವಾಗ ಅವರ ಕಣ್ಣನ್ನು ದೃಷ್ಟಿಸದೇ ಮಾತಾಡುವ ವಿಧಾನವನ್ನು ಕಲಿತುಕೊಂಡೆ. ಹೀಗೆ ಮಾಡುವುದರಿಂದ ಎದುರಿನವರ ಮುಖದಲ್ಲಿ ಆಗುವ ಭಾವನೆಗಳು ನನಗೆ ಕಾಣಿಸುವುದಿಲ್ಲವಲ್ಲ. ನಿಜವಾಗಿ ನನಗೆ ಆಸಿಡ್ ಎರಚಿದ್ದು ಗಂಡ ಅಷ್ಟೇ ಅಲ್ಲ, ಈ ಜಗತ್ತು ಕೂಡಾ. ಸುಂದರಿಯರನ್ನು ಮಾತ್ರ ಈ ಜಗತ್ತು ಪ್ರೀತಿಸುತ್ತದೆ ಎಂಬ ಕರಾಳ ಸತ್ಯವನ್ನು ನನಗೆ ಕಲಿಸಿದ್ದು ಕೂಡ ಆಸಿಡೇ. ಒಂದು ವೇಳೆ ನನ್ನ ತಾಯಿ ಮತ್ತು ಅಣ್ಣ ನನ್ನ ಬೆನ್ನಿಗೆ ನಿಲ್ಲದಿರುತ್ತಿದ್ದರೆ ಶಿರಿನ್ ಜುವಾಲೆ ಇಷ್ಟು ಖಚಿತವಾಗಿ ಮಾತಾಡುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಈ ಜಗತ್ತಿನ ಮಂದಿ ಹೆಣ್ಣನ್ನು ಯಾವ ಕಾರಣಕ್ಕಾಗಿಯೇ ಪ್ರೀತಿಸಲಿ, ನನ್ನ ತಾಯಿ ಮತ್ತು ಅಣ್ಣ ಪ್ರೀತಿಸುತ್ತಿದ್ದುದು ನನ್ನ ಮುಖವನ್ನಲ್ಲ, ನನ್ನನ್ನು ಎಂದು ಅನಿಸಿದಾಗಲೆಲ್ಲಾ ಕಣ್ಣೀರು ಹರಿಯುತ್ತಿತ್ತು. ಮುಖ ವಿಕಾರವಾದ ಬಳಿಕ ಹಿಂದಿಗಿಂತಲೂ ಹೆಚ್ಚು ಪ್ರೀತಿಸಿದ ಅವರನ್ನು ನೋಡುತ್ತಾ ಕಣ್ಣು ಒದ್ದೆಯಾಗುತ್ತಿತ್ತು. ಇವರಿಗಾಗಿಯಾದರೂ ಈ ಸಮಾಜದಲ್ಲಿ ಎಲ್ಲರಂತೆಯೇ ಬದುಕಬೇಕೆಂದು ತೀರ್ಮಾನಿಸಿದೆ. ನನ್ನ ಗಂಡ ನನಗೆ ಆಸಿಡ್ ಎರಚಿದುದರ ಉದ್ದೇಶ, ನಾನು ವಿಕಾರ ಮುಖದೊಂದಿಗೆ ಶಾಶ್ವತವಾಗಿ ಮೂಲೆ ಸೇರಬೇಕೆಂದೇ ತಾನೇ? ನನ್ನ ಈ ಮುಖವನ್ನು ಈ ಸಮಾಜಕ್ಕೆ ತೋರಿಸುವ ಮೂಲಕ ಗಂಡನನ್ನು ಸೋಲಿಸಬೇಕು ಎಂದು ನಿರ್ಧರಿಸಿದೆ. ಶಿಕ್ಷಣವನ್ನು ಮುಂದುವರಿಸಲು ತೀರ್ಮಾನಿಸಿದೆ. ಆದರೆ ಮುಂಬೈಯ ಶಿಕ್ಷಣ ಸಂಸ್ಥೆಯೊಂದು ನನಗೆ ಪ್ರವೇಶವನ್ನೇ ಕೊಡಲಿಲ್ಲ. ಮೆಕ್ಡೊನಾಲ್ಡ್ ತನ್ನ ಆವರಣದಿಂದಲೇ ನನ್ನನ್ನು ಹೊರಹಾಕಿತು. ಈ ಎಲ್ಲ ಪ್ರಕರಣಗಳು ನನ್ನಲ್ಲಿ ಇನ್ನಷ್ಟು ಉತ್ಸಾಹವನ್ನೇ ತುಂಬಿದುವು. ಆಸ್ಪತ್ರೆಯ ಆರಂಭದ ಎರಡು ತಿಂಗಳಲ್ಲಿ ಪ್ರತಿದಿನವೂ ನನ್ನ ಗಾಯಗಳಿಗೆ ದ್ರವ ಪದಾರ್ಥ (Fluid) ಸವರುತ್ತಿರುವಾಗ ಆಗುತ್ತಿದ್ದ ಉರಿಯ ಎದುರು ಇಂಥ ಗಾಯಗಳೆಲ್ಲ ಏನು ಮಹಾ ಅಂದುಕೊಂಡೆ. ದಾದಿಯರು ದಿನಾ ಗಾಯಗಳನ್ನು ಡ್ರೆಸ್ಸಿಂಗ್ ಮಾಡುವಾಗ ಆಗುತ್ತಿದ್ದ ನೋವಿನ ಮುಂದೆ ಇವು ಏನೇನೂ ಅಲ್ಲ ಅಂಥ ತಳ್ಳಿ ಹಾಕಿದೆ. `ಮ್ಯಾನೇಜ್ಮೆಂಟ್ ಆಫ್ ವೆಲಂಟರಿ ಆರ್ಗನೈಝೇಶನ್' ಎಂಬ ವಿಷಯದ ಮೇಲೆ ಮುಂಬೈಯಲ್ಲಿ ಡಿಪ್ಲೋಮಾ ಮಾಡಿದೆ. ಲಂಡನ್ನಿನ ವೇಲ್ಸ್ ಯುನಿವರ್ಸಿಟಿಯಿಂದ, `ಡೆವಲಪ್ಮೆಂಟ್ ಅಂಡ್ ಹ್ಯೂಮನ್ ಸೈನ್ಸ್' ಎಂಬ ವಿಷಯದ ಮೇಲೆ ಪದವಿ ಪಡೆದೆ. ಅಮೇರಿಕದಲ್ಲಿ ನಡೆದ ವರ್ಲ್ಡ್  ಬ್ಯಾನ್ಸ್ ಕಾಂಗ್ರೆಸ್ ನಲ್ಲಿ  ಏಷ್ಯಾದ ಪ್ರತಿನಿಧಿಯಾಗಿ ಭಾಗವಹಿಸಿ ಮಾತಾಡಿದೆ. ನನ್ನ ಗಂಡ ನನ್ನ ಮುಖ ಇನ್ನಾರಿಗೂ ಸಿಗದಿರಲಿ ಎಂದು ಭಾವಿಸಿದ್ದ. ವಿಕಾರ ಮುಖದೊಂದಿಗೆ ಮನೆಯೊಳಗಿರಲಿ ಅಂತ ಅಂದುಕೊಂಡಿದ್ದ. ಆದರೆ ನಾನು ಎಲ್ಲೆಲ್ಲಿಗೆ ಹೋಗುತ್ತಿದ್ದೆನೋ ಅಲ್ಲೆಲ್ಲಾ ಚರ್ಚೆಗೊಳಗಾಗುತ್ತಿದ್ದುದು ನನ್ನ ಮುಖವಲ್ಲ, ನನ್ನ ಗಂಡನ ಮುಖ. ಆತನ ಕ್ರೂರ ಮನಸ್ಸು. ನನಗೆ ಆಸಿಡ್ ಎರಚುವ ಮೂಲಕ ಆತ ನನ್ನನ್ನಲ್ಲ, ಆತನನ್ನೇ ಅಡಗಿಸಿಕೊಳ್ಳಬೇಕಾಯಿತು..
         ನಿಜವಾಗಿ, ನಾನು ಈ ಪ್ರಕರಣದ ಮೂಲಕ ದೇವನನ್ನು ಅರಿತುಕೊಂಡೆ. ನನ್ನಲ್ಲಿ ಏನು ಇದೆ ಮತ್ತು ಏನೆಲ್ಲ ಇತ್ತು ಅನ್ನುವುದನ್ನು ತಿಳಿದುಕೊಂಡದ್ದು ಈ ಘಟನೆಯ ಮೂಲಕವೇ. ನನ್ನ ಮುಖ ಮತ್ತು ಆ ಮುಖಾಂತರ ನನ್ನ ಸೌಂದರ್ಯವೂ ನಷ್ಟವಾದಾಗ, ಇವುಗಳಾಚೆಗಿನ ಸತ್ಯಗಳನ್ನು ನಾನು ತಿಳಿದುಕೊಂಡೆ. ನಿಜವಾಗಿ, ಇದು ನನ್ನ ಬದುಕಿನ ಅತ್ಯಂತ ಪ್ರಮುಖವಾದ ಅರಿವು ಎಂದೇ ನನ್ನ ಭಾವನೆ. ನಾನೆಂದೂ ಅಲ್ಲಾಹನಲ್ಲಿ ವಿಶ್ವಾಸ ಇಟ್ಟವಳು. ಅವನ ತೀರ್ಮಾನವೇ ಅತ್ಯಂತ ಸರಿಯಾದದ್ದು ಮತ್ತು ಪರಿಣಾಮಕಾರಿಯಾದದ್ದು ಎಂದು ಬಲವಾಗಿ ನಂಬಿದವಳು. ಅದು ಇವತ್ತಲ್ಲದಿದ್ದರೆ ನಾಳೆ ಬಂದೇ ಬರುತ್ತದೆ. ಈ ವಿಶ್ವಾಸವೇ ನನ್ನನ್ನು ಬದುಕುವಂತೆ ಮಾಡಿದೆ..
ಆಸಿಡ್ ಗಿಂತ ಮೊದಲು

        ಶಿರಿನ್ ಹೇಳುತ್ತಾ ಹೋಗುವಾಗ ಪತ್ರಕರ್ತೆ ಶ್ರೀಲತಾ ಮಾತು ಬಾರದೇ ಮೌನವಾಗುತ್ತಾರೆ..
    ಶಿರಿನ್ ಇವತ್ತು 4 ಮಕ್ಕಳ ತಾಯಿ. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ರಝಾ ಖಾನ್ ನನ್ನು  ಆಕೆ ಮರು ಮದುವೆಯಾಗಿದ್ದಾಳೆ. ಅಲ್ಲದೆ ಫಲಶ್ ಎಂಬ ಸ್ವಯಂ ಸೇವಾ ಸಂಘಟನೆಯೊಂದನ್ನು ನಡೆಸುತ್ತಲೂ ಇದ್ದಾಳೆ. ಮುಂಬೈಯಲ್ಲಿ ಇಂಥ ಪ್ರಕರಣಗಳು ಘಟಿಸಿದಾಗಲೆಲ್ಲ ಫಲಶ್ ಅಲ್ಲಿಗೆ ಧಾವಿಸುತ್ತದೆ. ಅವರಲ್ಲಿ ಆತ್ಮವಿಶ್ವಾಸ ತುಂಬುವ, ಅವರಿಗೆ ನೆರವು ನೀಡುವ ಕೆಲಸವನ್ನೂ ಮಾಡುತ್ತಿದೆ. ಅಂದಹಾಗೆ, ಕಳೆದ ವಾರ ಟಿ.ವಿ.ಯಲ್ಲಿ ಆಸಿಡ್  ಘಟನೆಯೊಂದರ ವರದಿ ಭಿತ್ತರವಾಗಿತ್ತು. ಫೇಸ್ ಬುಕ್ ನಲ್ಲಿ  ಧಾರಾಳ ಕಮೆಂಟ್ ಗಳೂ  ಬಂದಿದ್ದುವು. ಯಾಕೋ ಮನಸ್ಸು ಆರ್ದ್ರವಾಯಿತು.

12 comments:

  1. Very Very Touchy and Inspiring one.. Thanks a lot for sharing .....

    ReplyDelete
  2. so good one of the best write up i have read

    ReplyDelete
  3. ನಿಜ ಎಲ್ಲರೂ ಶಿರಿನಿ ಥರಾ ಆಗಲು ಸ್ಸಾಧ್ಯವಿಲ್ಲ
    ಆದರೆ ಬದುಕು ಬವಣೆ ಅನ್ನೋದು ಇಂಥ ಒಂದು ಹೋರಾಟ ಮನೋಭಾವವನ್ನ ಸೃಷ್ಟಿಸಿಬಿಡುತ್ತದೆ. ತನ್ನ ಹೋರಾಟ ಯಾರೊಂದಿಗೆ ಎಂದು ಅರಿವಾಗುವ ಮುನ್ನವೇ ಆ ಬವಣೆಗೆ ಸಿಕ್ಕಾಕೆ/ತ ಒಂದು ಅಪೂರ್ವ ಸಾಹಸಿಯಾಗಿ ಹೊರಹೊಮ್ಮಿರುತ್ತಾಳೆ/ನೆ.

    ReplyDelete
  4. ಮನಸ್ಸು ಆರ್ದ್ರ ವಾಯಿತು .ಆಸಿಡ್ ಎರಚುವುದು ಎಷ್ಟು ಸುಲಭ ..ಕ್ರೂರಿಗಳಿಗೆ ಶಿಕ್ಷೆ ಇಲ್ಲವೇ ? ಶೀರಿನ್ ಅಂತ ಹೆಣ್ಣುಮಗಳು ತುಳಿಯಲ್ಪಡುವ ಎಲ್ಲಾ ಹೆಣ್ಣುಮಕ್ಕಳಿಗೆ ಆದರ್ಶ ...ಕಲಿಯುವುದು ಇನ್ನೂ ಬೇಕಾದಷ್ಟಿದೆ .

    ReplyDelete
  5. Inspiring and touching.
    Thanks for the writeup
    Swarna

    ReplyDelete
  6. heart touching...nija ...ellarU SHIRIN thara aagalu sadhyaanaa.>?

    ReplyDelete
  7. I liked and admire her positive attitude towards the life. Nice inspiration....Hats off and good luck to her.

    ReplyDelete
  8. ಮನಸ್ಸು ಆರ್ದ್ರ ವಾಯಿತು .. hats off to her achievement

    ReplyDelete
  9. Fight on...we are all with you...beauty comes from within...
    VK

    ReplyDelete