Monday, July 23, 2012

ಈ ಎರಡು ಸಂಗತಿಗಳನ್ನು ಜೊತೆಗಿಟ್ಟು ನೋಡಿ,ಏನನಿಸುತ್ತದೆ?

ಅವರಿಬ್ಬರ ಮಧ್ಯೆ ಹೀಗೆ ವಾದ-ಪ್ರತಿವಾದ ನಡೆಯುತ್ತದೆ..
ಅ) ಮನುಷ್ಯನಿಗೆ ಸಾಷ್ಟಾಂಗವೆರಗು
ಇ) ಸಾಧ್ಯವಿಲ್ಲ
ಅ) ಯಾಕೆ?
ಇ) ನನ್ನ ಹುಟ್ಟಿನ ಎದುರು ಮನುಷ್ಯನ ಹುಟ್ಟು ಏನೇನೂ ಅಲ್ಲ. ಆತ ನನಗಿಂತ ಕೆಳಮಟ್ಟದವ
ಅ) ಹಾಗಾದರೆ ನೀನಿಲ್ಲಿಂದ ತೊಲಗು. ಆದೇಶ ಪಾಲಿಸದವನಿಗೆ ಇಲ್ಲಿ ಜಾಗವಿಲ್ಲ.
ಇ) ನಿನ್ನ ಪ್ರತಿಷ್ಠೆಯ ಆಣೆ. ನಾನು ಇಲ್ಲಿಂದ ಹೋದ ಬಳಿಕ ಎಲ್ಲ ಮನುಷ್ಯರನ್ನೂ ಖಂಡಿತವಾಗಿಯೂ ದಾರಿಗೆಡಿಸಿ ಬಿಡುವೆನು.
ಅ) ಸಾಧ್ಯವಿಲ್ಲ. ನನ್ನ ನಿಷ್ಠಾವಂತ ದಾಸರನ್ನು ದಾರಿಗೆಡಿಸಲು ನಿನ್ನಿಂದ ಆಗಲ್ಲ..
ಮೊರಿಟೋನಿಯಾದ ಗುಲಾಮ
ಸೃಷ್ಟಿಕರ್ತ (ಅಲ್ಲಾಹ್) ಮತ್ತು ಇಬ್ಲೀಸನ (setan) ಮಧ್ಯೆ ನಡೆದ ಈ ಮಾತುಕತೆಯನ್ನು ಪವಿತ್ರ ಕುರ್ಆನ್ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ (15:42, 17:65, 38:83) ಉಲ್ಲೇಖಿಸಿರುವುದಕ್ಕೆ ಕಾರಣ ಏನಿರಬಹುದು? ಇಬ್ಲೀಸ್, 'ಶಪಿತ' ಆಗುವುದೇ ಈ ಮಾತುಕತೆಯ ಬಳಿಕ. ಆ ಮಾತುಕತೆಯ ವರೆಗೂ ಸೃಷ್ಟಿಕರ್ತನ ಪರಮನಿಷ್ಠನಾಗಿ ಇಬ್ಲೀಸ್ ಗುರುತಿಸಿಕೊಂಡಿದ್ದ. ಹೀಗಿರುವಾಗ ಆತನ ಒಂದೇ ಒಂದು ಅಪರಾಧಕ್ಕೆ ನರಕ ಶಿಕ್ಷೆಯನ್ನು ಮತ್ತು ಶಾಶ್ವತ ಶಾಪವನ್ನು ಸೃಷ್ಟಿಕರ್ತನು ವಿಧಿಸಿರುವುದರಲ್ಲಿ ಏನು ಪಾಠವಿದೆ? ಇದಕ್ಕೆ ಪವಿತ್ರ ಕುರ್ಆನ್ ನಲ್ಲಿ  ಹೆಚ್ಚು ಒತ್ತು ಕೊಟ್ಟಿರುವುದರ ಔಚಿತ್ಯವೇನು?
1. ಜನಾಂಗೀಯ ವಾದ
2. ಅಸೂಯೆ
3. ಅಹಂಕಾರ
ಬೆಂಕಿಯಿಂದ ಸೃಷ್ಟಿಸಲ್ಪಟ್ಟ ತಾನು ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಪ್ರಥಮ ಮನುಷ್ಯ ಆದಮನಿಗಿಂತ(ಅ) ಶ್ರೇಷ್ಠ (38:76) ಎಂಬ ಇಬ್ಲೀಸ್ ನ  ವಾದದಲ್ಲಿ ಜನಾಂಗೀಯ ಕೊಳಕು ಇದೆ. ಹುಟ್ಟಿನ ಮೂಲವನ್ನು ಶ್ರೇಷ್ಠತೆಗೆ ಮಾನದಂಡವಾಗಿಸಬೇಕೆಂದು ಆತ ವಾದಿಸುವಾಗ, ಅಲ್ಲಾಹನು ಒಳಿತು (49:13) ಮಾತ್ರ ಮಾನದಂಡ ಅನ್ನುತ್ತಾನೆ. ಆದರೆ ಇಬ್ಲೀಸ್ ಒಪ್ಪುವುದಿಲ್ಲ. ಒಪ್ಪದವನು ನರಕಕ್ಕೆ ಎಂದು ಅಲ್ಲಾಹನು ಹೇಳುತ್ತಾನೆ. ಮನುಷ್ಯರನ್ನು ಜನಾಂಗೀಯ ಆಧಾರದಲ್ಲಿ ಶ್ರೇಷ್ಠರು, ಕನಿಷ್ಠರು ಎಂದು ವಿಂಗಡಿಸುವುದು ನರಕ ಶಿಕ್ಷೆಗೆ ಅರ್ಹ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದು ಪವಿತ್ರ ಕುರ್ಆನ್ ಮಾತ್ರ. 14ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ರ (ಸ) ಮೂಲಕ ಸಾರಲಾದ ಸಮಾನತೆಯ ಈ ಸಂದೇಶ ಎಷ್ಟು ಪ್ರಭಾವಶಾಲಿಯಾಯಿತೆಂದರೆ, ಕಪ್ಪು ಚರ್ಮದ ಬಿಲಾಲ್ ರು  ಪ್ರವಾದಿಯನ್ನು(ಸ) ಅಪ್ಪಿಕೊಳ್ಳುವಷ್ಟು. ಸಮಾನತೆಯ ಈ ಕಲ್ಪನೆಯನ್ನು ಪವಿತ್ರ ಕುರ್ಆನ್ ಸ್ವರ್ಗಕ್ಕೆ ಒಂದು ಮಾನದಂಡವಾಗಿ ಪರಿಗಣಿಸಿತು. ಇದಕ್ಕೆ ಇನ್ನೊಂದು ಕಾರಣವೂ ಇದೆ. ಯಾವಾಗ ಜನಾಂಗೀಯ ಕಲ್ಪನೆಗೆ ಒತ್ತು ಸಿಗುತ್ತದೋ ಆಗೆಲ್ಲಾ ಜನರು ಗುಲಾಮರಾಗಿ, ಉಂಡ ಎಲೆಯಲ್ಲಿ ಉರುಳುವವರಾಗಿ, ಅಸ್ಪøಶ್ಯರಾಗಿ ವಿಂಗಡನೆಗೊಳ್ಳುವುದಕ್ಕೆ ಅವಕಾಶವಾಗುತ್ತದೆ. ಪೇಜಾವರ ಸ್ವಾಮೀಜಿಗಳ ನೇತೃತ್ವದಲ್ಲಿ ಹಲವಾರು ಸಭೆಗಳನ್ನು ನಡೆಸಿಯೂ ಮಡೆ ಸ್ನಾನವನ್ನು ನಿಷೇಧಿಸಲು ಸಾಧ್ಯವಾಗದಿರುವುದೇ ಇದಕ್ಕೆ ಅತಿ ದೊಡ್ಡ ಪುರಾವೆ. ಆ ಮನಃಸ್ಥಿತಿ ಎಷ್ಟು ಭೀಕರ ಅಂದರೆ, ಮಂದಿರ, ಶಾಲೆ, ಆಸ್ಪತ್ರೆ, ಸಾರ್ವಜನಿಕ ಬಾವಿ, ಮದುವೆ.. ಎಲ್ಲದರಿಂದಲೂ ಅದು ಮನುಷ್ಯರನ್ನು ಪ್ರತ್ಯೇಕಿಸುತ್ತದೆ. ಅಷ್ಟೇ ಅಲ್ಲ, ಮನುಷ್ಯನೇ ಮನುಷ್ಯನ ದಾಸನಾಗಿ ಬಿಡುವುದಕ್ಕೆ, ಶ್ರೇಷ್ಠನು ಹೇಳಿದ ಪ್ರತಿಯೊಂದು ಅಪ್ಪಣೆಯನ್ನೂ ಸರಿ-ತಪ್ಪು ಯೋಚಿಸದೇ ಮಾಡುವುದಕ್ಕೆ ನಿರ್ಬಂಧಿಸುತ್ತದೆ. ಒಂದು ವೇಳೆ ವಿಕಿಪೀಡಿಯಾ ಅಥವಾ ಇನ್ನಾವುದಾದರೂ ಸೈಟನ್ನು ಇಂಟರ್ನೆಟ್ಟಲ್ಲಿ ತೆರೆದು ನೋಡಿದರೆ ಪುರಾತನ ಕಾಲದಲ್ಲಿ ಕಪ್ಪು ಮನುಷ್ಯರು ಗುಲಾಮರಾಗಿ ಜಗತ್ತಿನಾದ್ಯಂತದ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವುದರ ವಿವರ ಸಿಗಬಹುದು. 14ರಿಂದ 19ನೇ ಶತಮಾನದ ಮಧ್ಯೆ 12 ಮಿಲಿಯನ್ ಕಪ್ಪು ಮನುಷ್ಯರು ಆಫ್ರಿಕಾದಿಂದ ಅಮೇರಿಕಕ್ಕೆ ಗುಲಾಮರಾಗಿ ಬಂದಿದ್ದರೆ ಅದರ ಹಿಂದೆ ಜನಾಂಗೀಯತೆಗೆ ದೊಡ್ಡ ಪಾತ್ರ ಇದೆ. ಆದ್ದರಿಂದಲೇ, ಗುಲಾಮತನವನ್ನು ಪೋಷಿಸಿದ್ದಕ್ಕಾಗಿ 2008 ಜುಲೈ 30ರಂದು ಅಮೇರಿಕ ಬಹಿರಂಗವಾಗಿ ಜಗತ್ತಿನ ಕ್ಷಮೆ ಯಾಚಿಸಿದ್ದು. ಹಾಗಂತ ಅಮೇರಿಕದಿಂದ ಇವತ್ತು ಜನಾಂಗೀಯತೆ ಸಂಪೂರ್ಣ ನಿರ್ನಾಮವಾಗಿದೆಯೇ? ಅತ್ಯಂತ ಆಧುನಿಕ ಶಿಕ್ಷಣ ಪಡೆದ, ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ವ್ಯಕ್ತಿಗಳ ಒಳಗೂ ಜನಾಂಗೀಯ ಶ್ರೇಷ್ಠತೆ ಸುಪ್ತವಾಗಿರುವುದೇನು ಸುಳ್ಳೇ? 1936ರಲ್ಲಿ ಜರ್ಮನಿಯಲ್ಲಿ ನಡೆದ 11ನೇ ಒಲಿಂಪಿಕ್ಸ್ ನಲ್ಲಿ  ಭಾಗವಹಿಸದಂತೆ ಕರಿಯರಿಗೆ ಹಿಟ್ಲರ್ ನಿಷೇಧ ಹೇರಿದ್ದು ಕೂಡ ಆರ್ಯ ಶ್ರೇಷ್ಠ ಅನ್ನುವ ಜನಾಂಗೀಯ ಕಲ್ಪನೆಯಿಂದಲೇ ತಾನೇ?
ನಿಜವಾಗಿ, ಮನುಷ್ಯರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ ಎಂದು ಪವಿತ್ರ ಕುರ್ಆನ್ ಹೇಳುವ ಮೂಲಕ (38:71) ಮಣ್ಣಿಗೂ ಮನುಷ್ಯನಿಗೂ ಸಂಬಂಧವನ್ನು ಕಲ್ಪಿಸುತ್ತದೆ. ಮಣ್ಣು ಮನುಷ್ಯನದ್ದು. ಆದ್ದರಿಂದಲೇ ಮಣ್ಣಿನಲ್ಲಿರುವ ಗಿಡ, ಮರ, ಪ್ರಾಣಿ, ನೀರು, ಖನಿಜ, ಬಂಗಾರ, ತೈಲ.. ಎಲ್ಲವುಗಳೊಂದಿಗೂ ಮನುಷ್ಯನಿಗೆ ಹೊಣೆಗಾರಿಕೆಯಿರುತ್ತದೆ. ಮಣ್ಣಿನ ಮೇಲಾಗುವ ಸರ್ವ ಅನ್ಯಾಯಗಳನ್ನೂ ಪ್ರತಿಭಟಿಸುವುದಕ್ಕೆ ಮನುಷ್ಯನನ್ನು ಪ್ರಚೋದಿಸಬೇಕಾದದ್ದೂ ಈ ಸಂಬಂಧಗಳೇ. ಬಹುರಾಷ್ಟ್ರೀಯ ಕಂಪೆನಿಯೊಂದು ಇಲ್ಲಿನ ಫಲವತ್ತಾದ ಭೂಮಿಯನ್ನು ಕಬಳಿಸುವಾಗ, ನೀರನ್ನು ಮಲಿನಗೊಳಿಸುವಾಗ, ವಾತಾವರಣವನ್ನು ಕೆಡಿಸುವಾಗ, ಭೂಮಿಯ ಮೇಲೆ ಅನ್ಯಾಯ ನಡೆಯುವಾಗ.. ಆ ಬಗ್ಗೆ ಧ್ವನಿಯೆತ್ತಬೇಕಾದದ್ದು ಮನುಷ್ಯನ ಹೊಣೆಗಾರಿಕೆ. ಯಾಕೆಂದರೆ ಆ ಮಣ್ಣೇ ಮನುಷ್ಯನ ರಚನೆಯಲ್ಲಿ ಪಾತ್ರ ವಹಿಸಿದ್ದು. ಆ ಮಣ್ಣು ಮಲಿನಗೊಳ್ಳುವುದೆಂದರೆ ಮನುಷ್ಯ ಮಲಿನಗೊಂಡಂತೆ. ಇಷ್ಟಕ್ಕೂ ಮನುಷ್ಯರನ್ನು ಯಾರದ್ದೋ ತಲೆ, ಮೂಗು, ಕೈ, ಕಾಲುಗಳಿಂದ ಸೃಷ್ಟಿಸಲಾಗಿದೆ ಎಂಬ ಕಾನ್ಸೆಪ್ಟ್ ಮತ್ತು ಮನುಷ್ಯರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ ಎಂಬ ಕಾನ್ಸೆಪ್ಟನ್ನು ಪರಸ್ಪರ ಎದುರಿಟ್ಟು ಆಲೋಚಿಸಿ. ಒಂದು, ಮನುಷ್ಯನನ್ನು ಹುಟ್ಟಿನ ಆಧಾರದಲ್ಲಿ ವಿಂಗಡಿಸುತ್ತಾ ಹೋದರೆ ಇನ್ನೊಂದು ಆತನನ್ನು ಜೋಡಿಸುತ್ತಾ ಹೋಗುತ್ತದಲ್ಲವೇ?
ಇವಿಷ್ಟೇ ಅಲ್ಲ,
ಸ್ವರ್ಗದಿಂದ ಇಬ್ಲೀಸನ ಉಚ್ಛಾಟನೆಗೆ ಅಸೂಯೆ ಮತ್ತು ಅಹಂಕಾರ ಎಂಬ ಇನ್ನೆರಡು ಸ್ವಭಾವಗಳಿಗೂ ಪಾತ್ರ ಇದೆ. ತನಗಿಂತ ಕಿರಿಯವ ಸ್ಥಾನಮಾನದಲ್ಲಿ ಮೇಲೆ ಹೋಗುವುದನ್ನು ಆತ ಇಷ್ಟಪಡಲಿಲ್ಲ. ಇನ್ನೊಂದು, ತಾನೇ ಸರಿ ಅನ್ನುವ ಅಹಂಕಾರ. ಒಂದು ರೀತಿಯಲ್ಲಿ ಈ ಎರಡೂ ಗುಣಗಳು ಸಮಾಜದಲ್ಲಿ ಇವತ್ತು ಧಾರಾಳ ಇದೆ. ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಒಬ್ಬನ ಕಾಲೆಳೆಯುವ ಸಂಸ್ಕøತಿ ಅತ್ಯಂತ ಬಲಿಷ್ಠವಾಗಿಯೇ ಇದೆ. ವ್ಯಕ್ತಿಯೋರ್ವ ಉನ್ನತ ಸ್ಥಾನಕ್ಕೆ ಹೋಗುವುದನ್ನು ಸಹಿಸದೆ ಕಿವಿಯೂದುವ, ಮೇಲಧಿಕಾರಿಗಳಲ್ಲಿ ಸುಳ್ಳು ದೂರುಗಳನ್ನು ಸಲ್ಲಿಸುವ ಪ್ರಕರಣಗಳು ಅಸಂಖ್ಯ ನಡೆಯುತ್ತಿರುತ್ತವೆ. ಸುಳ್ಳು ಆರೋಪಗಳು ಮತ್ತು ಅದನ್ನು ಸಾಬೀತುಪಡಿಸುವುದಕ್ಕಾಗಿ ನಕಲಿ ದಾಖಲೆಗಳನ್ನು ತಯಾರಿಸುವುದೂ ಇದೆ. ಪಕ್ಕದ ಮನೆಯವ ಖರೀದಿಸಿದ ಬೈಕ್ ನಿಂದ  ಯಾವ ತೊಂದರೆ ಇಲ್ಲದಿದ್ದರೂ ಕಳವಳಗೊಳ್ಳುವ ಎಷ್ಟು ಮಂದಿ ನಮ್ಮ ಮಧ್ಯೆ ಇಲ್ಲ? ಪಕ್ಕದ ಮನೆಯ ಪತಿ-ಪತ್ನಿ ಸದಾ ಖುಷಿಯಾಗಿರುವುದು, ಒಮ್ಮೆಯೂ ಅವರ ಮನೆಯಿಂದ ಜಗಳ ಕೇಳಿಸದೇ ಇರುವುದಕ್ಕೆ ಕಸಿವಿಸಿಗೊಳ್ಳುವವರಿಲ್ಲವೇ? ಪಕ್ಕದ ಮನೆಗೆ ಫ್ರಿಡ್ಜು, ವಾಷಿಂಗ್ ಮೆಷೀನು , ಟಿ.ವಿ. ಅಥವಾ ಇನ್ನೇನೋ ಬಂದರೆ ಸಂಕಟ ಪಡುವವರ ಸಂಖ್ಯೆ ಎಷ್ಟಿಲ್ಲ? ಅದರಿಂದ ಅವರಿಗೇನೂ ತೊಂದರೆ ಆಗದಿದ್ದರೂ ಏನೋ ಆದಂಥ ಅನುಭವ..
      ಒಂದು ರೀತಿಯಲ್ಲಿ ಅಲ್ಲಾಹನ ಜೊತೆ ಇಬ್ಲೀಸ್ ಮಾಡಿದ್ದು ಪಂಥಾಹ್ವಾನ. ನಾನು ನನ್ನ ಈ ಸ್ವಭಾವಗಳಿಂದ ನಿನ್ನ ಮಣ್ಣಿನ ಮಕ್ಕಳನ್ನು ಕೆಡಿಸುತ್ತೇನೆ ಎಂದಾತ ವಾದಿಸಿದ. ಎಲ್ಲರನ್ನೂ ಸಾಧ್ಯವಿಲ್ಲ ಎಂದು ಅಲ್ಲಾಹನು ಮರುತ್ತರಿಸಿದ. ಗುಲಾಮತನವನ್ನು ಪೋಷಿಸಿ, ಶ್ರೇಣೀಕೃತ ಸಮಾಜವನ್ನು ರಚಿಸಿ, ಮಣ್ಣು, ನೀರು, ವಾತಾವರಣವನ್ನು ಮಲಿನಗೊಳಿಸಿ, ಅಸೂಯೆ, ಅಹಂಕಾರಗಳ ಮೂಟೆಯನ್ನೇ ತಯಾರು ಗೊಳಿಸಿ.. ಇಬ್ಲೀಸ್ ತನ್ನ ಸಾಮರ್ಥ್ಯವನ್ನು  ಪ್ರದರ್ಶಿಸುತ್ತಲೇ ಇದ್ದಾನೆ. ಮಾತ್ರವಲ್ಲ, ಈ ಮೂಲಕ ಸೃಷ್ಟಿಕರ್ತನ ನಿಷ್ಥ  ದಾಸರಿಗೆ ಸವಾಲು ಒಡ್ಡುತ್ತಲೇ ಇದ್ದಾನೆ. ನಿಜವಾಗಿ, ಈ ಸವಾಲನ್ನು ಅತ್ಯಂತ ಸ್ಫೂರ್ತಿಯುತವಾಗಿ ಎದುರಿಸುವುದಕ್ಕೆ ತರಬೇತಿ ಕೊಡುವುದೇ ರಮಝಾನ್ ನ  ಉಪವಾಸ. ಇದು ಮನುಷ್ಯನನ್ನು ಇಬ್ಲೀಸನ ದಾಸ್ಯತ್ವದಿಂದ ಸೃಷ್ಟಿಕರ್ತನ ದಾಸ್ಯತ್ವಕ್ಕೆ ವರ್ಗಾವಣೆಗೊಳಿಸುವಂಥದ್ದು. ಅಂದಹಾಗೆ, ಸೃಷ್ಟಿಕರ್ತ ಮತ್ತು ಇಬ್ಲೀಸನ ಮಧ್ಯೆ ನಡೆದ ವಾದ-ಪ್ರತಿವಾದವನ್ನು ಪವಿತ್ರ ಕುರ್ಆನ್ ಎತ್ತಿ ಹೇಳಿದ್ದು, ಮನುಷ್ಯ ಇಬ್ಲೀಸನ ದಾರಿಯನ್ನು ಅನುಸರಿಸಬೇಕೆಂದು ಅಲ್ಲವಲ್ಲ. ಯಾರಲ್ಲಿ ಇಬ್ಲೀಸನ ಗುಣ ಇದೆಯೋ ಅವರು ತಿದ್ದಿಕೊಳ್ಳುವುದಕ್ಕೆ ಸೃಷ್ಟಿಕರ್ತನು ರಮಝಾನನ್ನು ಅತ್ಯಂತ ಸೂಕ್ತ ಸಂದರ್ಭವಾಗಿ ಪರಿಗಣಿಸಿದ್ದಾನೆ. ಇಬ್ಲೀಸ್ ನ  ಸ್ವಭಾವವು ಸಾಮಾಜಿಕವಾಗಿ ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ವಿವರಿಸುವುದಕ್ಕೆ ಘಟನೆಗಳನ್ನು ಉಲ್ಲೇಖಿಸುವ ಅಗತ್ಯವೇ ಇಲ್ಲ. ಆದ್ದರಿಂದ ರಮಝಾನ್ ಎಂಬುದು ಮನುಷ್ಯನನ್ನು ಇಬ್ಲೀಸನ ಪ್ರಭಾವದಿಂದ ಬಿಡಿಸುವ ಪ್ರಭಾವಶಾಲಿ ಆಯುಧವಾಗಿದೆ. ಈ ಆಯುಧವನ್ನು ಎತ್ತಿಕೊಂಡು ಸ್ವಯಂ ಸುಧಾರಿಸಲು ಮತ್ತು ಆ ಮುಖಾಂತರ ಸೃಷ್ಟಿಕರ್ತನ ನಿಷ್ಠ ದಾಸರಲ್ಲಿ ಸೇರಿಕೊಳ್ಳಲು ಪ್ರಯತ್ನಿಸಬೇಕು. ನಿಜವಾಗಿ ರಮಝಾನನ್ನು ಸದುಪಯೋಗಪಡಿಸುವುದೆಂದರೆ ಇಬ್ಲೀಸನ್ನು ಸೋಲಿಸುವುದೆಂದರ್ಥ.
       ನಾವು ಸೋಲಬಾರದೆಂಬುದೇ ರಮಝಾನ್ ನ  ಕಳಕಳಿ.

No comments:

Post a Comment