Saturday, August 18, 2012

ಅವರು ನಿರಾಶ್ರಿತರು,ಇವರು ಮಾತ್ರ ಅಕ್ರಮ ವಲಸಿಗರೇ?

2012 ಜುಲೈ 6
      ಅಸ್ಸಾಮ್‍ನ ಕೊಕ್ರಾಜಾರ್ ಜಿಲ್ಲೆಯಲ್ಲಿ ಶಂಕಿತ ಬೋಡೋಗಳು ಇಬ್ಬರು ಮುಸ್ಲಿಮರನ್ನು ಗುಂಡಿಟ್ಟು ಕೊಲ್ಲುತ್ತಾರಲ್ಲದೇ ಮೂವರನ್ನು ಗಾಯಗೊಳಿಸುತ್ತಾರೆ.
ಜುಲೈ 19
       ಆಲ್ ಅಸ್ಸಾಮ್ ಮೈನಾರಿಟಿ ಸ್ಟೂಡೆಂಟ್ಸ್ ಯೂನಿಯನ್‍ನ (AAMSU) ಇಬ್ಬರು ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಲಾಗುತ್ತದೆ.
ಜುಲೈ 20
         ಬೋಡೋ ಲಿಬರೇಶನ್ ಟೈಗರ್ಸ್ ನ  (BLT - ಇದು ಮಾಜಿ ಉಗ್ರವಾದಿ ಗುಂಪು) ನಾಲ್ವರು ಕಾರ್ಯಕರ್ತರು ಸಂಜೆ ಎರಡು ಬೈಕುಗಳನ್ನೇರಿ ಮುಸ್ಲಿಮರು ಅಧಿಕವಿರುವ ಜಾಯ್‍ಪುರಿಗೆ ಬರುತ್ತಾರೆ. ರಮಝಾನ್‍ನ ಆರಂಭದ ದಿನವಾದ್ದರಿಂದ ಮುಸ್ಲಿಮರು ನಮಾಝ್‍ಗಾಗಿ ಒಟ್ಟುಗೂಡಿದ್ದರು. ಮುಸ್ಲಿಮರ ಗುಂಪನ್ನು ಕಂಡು ಹೆದರಿದ  BLT  ಕಾರ್ಯಕರ್ತರು, ತಮ್ಮ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದು, ಅದಾಗಲೇ ಬಂದೂಕುಧಾರಿಗಳ ದಾಳಿಗೆ ಒಳಗಾಗಿದ್ದ ಮುಸ್ಲಿಮರಲ್ಲಿ ಆತಂಕ ಮೂಡಿಸುತ್ತದೆ. ತಮ್ಮ ಮೇಲೆ ಆಕ್ರಮಣ ನಡೆಸಲು ಬೋಡೋಗಳು ಬಂದಿದ್ದಾರೆಂದು ತಿಳಿದು ಯುವಕರನ್ನು ಥಳಿಸುತ್ತಾರೆ. ಮಾತ್ರವಲ್ಲ, ನಾಲ್ವರು ಯುವಕರೂ ಸಾವಿಗೀಡಾಗುತ್ತಾರೆ.
ಜುಲೈ 21
          ಸಾವಿಗೀಡಾದ ನಾಲ್ವರು ಯುವಕರನ್ನೂ ಮೆರವಣಿಗೆಯಲ್ಲಿ ಜಾಯ್‍ಪುರಿಯಿಂದ ಕೊಕ್ರಾಜಾರ್‍ಗೆ ತರಲಾಗುತ್ತದೆ. ಸ್ಥಳೀಯ ಟಿ.ವಿ. ಚಾನೆಲ್‍ಗಳೆಲ್ಲಾ ಘಟನೆಯನ್ನು ಲೈವ್ ಆಗಿ ತೋರಿಸುತ್ತದಲ್ಲದೇ ಇಡೀ ಘಟನೆಯನ್ನು ಮುಸ್ಲಿಮ್ ವರ್ಸಸ್ ಬೋಡೋಗಳು ಎಂಬ ಧಾಟಿಯಲ್ಲಿ ಸುದ್ದಿ ಬಿತ್ತರಿಸುತ್ತವೆ. ಚಾವಡಿ ಚರ್ಚೆಗಳನ್ನು ನಡೆಸುತ್ತವೆ. ಗೋಧ್ರಾದಲ್ಲಿ ಸಾವಿಗೀಡಾದ ಕರಸೇವಕರನ್ನು ಅಹ್ಮದಾಬಾದ್‍ಗೆ ಮೆರವಣಿಗೆಯಲ್ಲಿ ತಂದಂತೆ ಈ ಪ್ರಕರಣವನ್ನೂ ಬಿಂಬಿಸಲಾಗುತ್ತದೆ. ಅವತ್ತಿನಿಂದಲೇ ಗಲಭೆ ಪ್ರಾರಂಭವಾಗುತ್ತದೆ.
       ಅಷ್ಟಕ್ಕೂ, ಅಸ್ಸಾಮನ್ನು 50:50 ಆಗಿ ವಿಭಜಿಸಿ (Divide  Assam - 50:50) ಎಂಬ ಬೇಡಿಕೆಯೊಂದಿಗೆ 23 ವರ್ಷಗಳ ಕಾಲ ಸಶಸ್ತ್ರ ಹೋರಾಟ ನಡೆಸಿದವರು ಯಾರು, ಮುಸ್ಲಿಮರೇ? 1993,  96 ಮತ್ತು 98ರಲ್ಲಿ ಬೋಡೋ ಪ್ರದೇಶದಿಂದ ಸಾವಿರಾರು ಬಂಗಾಳಿ ಹಿಂದೂಗಳು ಮತ್ತು ಆದಿವಾಸಿಗಳನ್ನು ಹೊರದಬ್ಬಲಾಯಿತಲ್ಲ, ಅವರೇನು ಬಂಗ್ಲಾದೇಶಿ ನುಸುಳುಕೋರರಾಗಿದ್ದರೆ? ಈಗಿನ ಗಲಭೆಯನ್ನು ಸ್ವದೇಶಿ ಮತ್ತು ವಿದೇಶಿ ಎಂದು ವಿಭಜಿಸುವವರಿಗೆ ಬೋಡೋಗಳ ಬಗ್ಗೆ, ಅಲ್ಲಿನ ಪರಿಸ್ಥಿತಿಯ ಬಗ್ಗೆ ಎಷ್ಟು ಗೊತ್ತಿದೆ? ಟಿ.ವಿ.ಗಳಲ್ಲಿ ಚರ್ಚಿಸುವ ಮತ್ತು ಪತ್ರಿಕೆಗಳಲ್ಲಿ ಅಂಕಣ ಬರೆಯುವವರೆಲ್ಲಾ ಇಡೀ ಪ್ರಕರಣಕ್ಕೆ ಕೋಮು ಬಣ್ಣವನ್ನು ಹಚ್ಚುತ್ತಿರುವುದು ಎಷ್ಟು ಸರಿ?
         ಪ್ರತ್ಯೇಕ ಬೋಡೋ ರಾಜ್ಯವನ್ನು ಆಗ್ರಹಿಸಿ ಬುಡಕಟ್ಟು ಜನಾಂಗವಾದ ಬೋಡೋಗಳು 1982ರಲ್ಲಿ ಚಳವಳಿ ಪ್ರಾರಂಭಿಸುತ್ತಾರೆ. 1987 ಮಾರ್ಚ್ 2ರಂದು ಬೋಡೋ ಲಿಬರೇಶನ್ ಟೈಗರ್ಸ್ (BLT) ಎಂಬ ಉಗ್ರವಾದಿ ತಂಡವನ್ನು ಕಟ್ಟಿ, ಹಿಂಸೆ, ದೌರ್ಜನ್ಯ, ಕೊಲೆಗಳನ್ನು ನಡೆಸಲು ಪ್ರಾರಂಭಿಸುತ್ತಾರೆ. ಬಂದೂಕು ಸಿಡಿಯಲಾರಂಭಿಸುತ್ತದೆ. ಕೇಂದ್ರ ಸರಕಾರ ಮತ್ತು ಉಗ್ರವಾದಿಗಳ ಮಧ್ಯೆ ಒಂದಕ್ಕಿಂತ ಹೆಚ್ಚು ಬಾರಿ ಮಾತುಕತೆಗಳು ನಡೆಯುತ್ತವೆ. ಕೊನೆಗೆ, ಪ್ರತ್ಯೇಕ ರಾಜ್ಯದ ಬದಲು ಸ್ವಯಂ ಆಡಳಿತ ನಡೆಸಲು ಅವಕಾಶ ಇರುವ ಬೋಡೋ ಸ್ವಾಯತ್ತ ಮಂಡಳಿ (Bodo Territorial Autonomous District - BTAD )ಯ ರಚನೆಗೆ ಉಗ್ರರು ಒಪ್ಪಿಕೊಳ್ಳುತ್ತಾರಲ್ಲದೆ 2003ರಲ್ಲಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಹೀಗೆ, ಅಸ್ಸಾಮ್‍ನ 27 ಜಿಲ್ಲೆಗಳಲ್ಲಿ 4 ಜಿಲ್ಲೆಗಳನ್ನು ಒಳಗೊಂಡ ಬೋಡೋ ಸ್ವಾಯತ್ತ ಮಂಡಳಿಯನ್ನು (BTAD) ರಚಿಸಿ ಕೇಂದ್ರ ಸರಕಾರ ಕೈತೊಳೆದುಕೊಳ್ಳುತ್ತದೆ.
ಕೊಕ್ರಾಜಾರ್
ಬಕ್ಸಾ
ಚಿರಾಗ್
ಉದಲ್‍ಗುರಿ
        ಬಿಜೆಪಿ ಆಟ ಆಡಿದ್ದೇ ಇಲ್ಲಿ. ಈ ಮೇಲಿನ ನಾಲ್ಕು ಜಿಲ್ಲೆಗಳಲ್ಲಿ ಬೋಡೋಗಳ ಸಂಖ್ಯೆ ಬರೇ 29%. ಉಳಿದಂತೆ ಮುಸ್ಲಿಮರು, ಆದಿವಾಸಿಗಳು, ಕಾಚ್-ರಾಜ್‍ಬೊಂಗಿಸ್‍ನಂಥ ಇತರರು 71% ಇದ್ದಾರೆ. ಹೀಗಿರುತ್ತಾ ಮುಸ್ಲಿಮರೇ ಅಧಿಕ ಇರುವ ಪ್ರದೇಶಗಳನ್ನು ಬೋಡೋ ಸ್ವಾಯತ್ತ ಮಂಡಳಿಯ (BTAD) ವ್ಯಾಪ್ತಿಗೆ ಒಳಪಡಿಸಿದ್ದೇಕೆ? ಬೋಡೋಗಳನ್ನು ಬೋಡೋಗಳೇ ಆಳಲಿ, ಆದರೆ ಮುಸ್ಲಿಮರನ್ನು ಮತ್ತು ಇತರರನ್ನು ಅವರ ಜೊತೆ ಸೇರಿಸಿರುವುದರ ಹಿಂದಿನ ಉದ್ದೇಶ ಏನಿತ್ತು? ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಕನಿಷ್ಠ ಮಾತು ಕತೆಯಲ್ಲೂ ಸೇರಿಸದೆ ಏಕಾಏಕಿ ಅವರ ಪ್ರದೇಶವನ್ನು ಬೋಡೋಗಳೊಂದಿಗೆ ಸೇರಿಸಿದ್ದನ್ನು ಪ್ರಾಮಾಣಿಕ ಅಂತ ಹೇಗೆ ಕರೆಯುವುದು? ಆದ್ದರಿಂದಲೇ ಆ ವ್ಯಾಪ್ತಿಯಲ್ಲಿ ಬರುವ ಆದಿವಾಸಿಗಳು, ಬಂಗಾಳಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟು ಸೇರಿ ತಮ್ಮನ್ನು ಬೋಡೋಲ್ಯಾಂಡ್‍ನಿಂದ ಪ್ರತ್ಯೇಕಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಬೋಡೋಗಳು 50%ಕ್ಕಿಂತ ಕಡಿಮೆ ಇರುವ ಪ್ರದೇಶಗಳನ್ನು ಬೋಡೋ ಲ್ಯಾಂಡ್‍ಗೆ ಸೇರಿಸಬೇಡಿ ಎಂದು ಅವರು ಒತ್ತಾಯಿಸಿದ್ದರು. ಇದಕ್ಕೆ ಕಾರಣವೂ ಇತ್ತು. ಬೋಡೋಲ್ಯಾಂಡನ್ನು ಆಳುತ್ತಿರುವುದು ಬೋಡೋ ಪೀಪಲ್ಸ್ ಫ್ರಂಟ್ (BPF) ಅನ್ನುವ ರಾಜಕೀಯ ಪಕ್ಷ. 12 ಶಾಸಕರಿರುವ ಈ ಪಕ್ಷ ಅಸ್ಸಾಮ್‍ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಿದೆ. ಒಂದು ರೀತಿಯಲ್ಲಿ ಕಾನೂನು ಮತ್ತು ಜಾರಿಯ ಅಧಿಕಾರ ಇರುವುದೇ ಬೋಡೋಗಳ ಕೈಯಲ್ಲಿ. ಹೀಗಿರುತ್ತಾ, ಮುಸ್ಲಿಮರನ್ನು ಅಪರಾಧಿಗಳೆಂಬಂತೆ ಬಿಂಬಿಸುವುದಕ್ಕೆ ಅಡ್ಡಿಯಾದರೂ ಏನಿದೆ? ನಿಜವಾಗಿ ಅಕ್ರಮ ವಲಸಿಗರು ಎಂಬ ಪದಗುಚ್ಚವನ್ನು ಹರಿಯಬಿಟ್ಟಿದ್ದೇ BTAD ಯ ಮುಖ್ಯಸ್ಥ ಹಂಗ್ರಾಮ್ ಮೊಹಿಲಾರಿ. ಕೇಂದ್ರದೊಂದಿಗೆ 1993ರಲ್ಲಿ ನಡೆದ ಒಪ್ಪಂದದ ಬಳಿಕ ಬೋಡೋ ಲಿಬರೇಶನ್ ಟೈಗರ್ಸ್ (BLT) ಸಂಘಟನೆ ವಿಸರ್ಜನೆಗೊಂಡಿದ್ದರೂ ಅದರ ಕಾರ್ಯಕರ್ತರು ಬಂದೂಕನ್ನು ಸರಕಾರಕ್ಕೆ ಇನ್ನೂ ಸಂಪೂರ್ಣವಾಗಿ ಒಪ್ಪಿಸಿಲ್ಲ. ಬೋಡೋಯೇತರರನ್ನು ಸುಲಿಯಲು, ಹಫ್ತಾ ವಸೂಲು ಮಾಡಲು, ದೌರ್ಜನ್ಯಕ್ಕೊಳಪಡಿಸಲು ಇವರು ತಮ್ಮ ಉಗ್ರವಾದಿ ಇಮೇಜನ್ನು ಬಳಸಿಕೊಳ್ಳುತ್ತಲೂ ಇದ್ದಾರೆ. ಹೀಗಿದ್ದೂ ಇವೆಲ್ಲವನ್ನು ಬಚ್ಚಿಟ್ಟುಕೊಂಡು, ಕೇವಲ ಅಕ್ರಮ ವಲಸೆ ಅನ್ನುವ ಬೆತ್ತವನ್ನು ಮಾಧ್ಯಮಗಳು ಝಳಪಿಸುತ್ತಿರುವುದೇಕೆ? ಬಂಗಾಳಿ ಹಿಂದೂಗಳನ್ನು ಮತ್ತು ಆದಿವಾಸಿಗಳನ್ನು 1993, 96 ಮತ್ತು 98ರಲ್ಲಿ ಹೊರದಬ್ಬಲಾದಾಗ ಬಾಯಿ ಮುಚ್ಚಿಕೊಂಡಿದ್ದ ABVP ಮತ್ತು ಬಿಜೆಪಿಗಳು, ಈಗ ಅಕ್ರಮ ವಲಸೆಯ ಗಿಣಿಪಾಠ ಒಪ್ಪಿಸು ತ್ತಿರುವುದೇಕೆ?
ನಿಜವಾಗಿ, ಬೋಡೋ ಲ್ಯಾಂಡ್ ಸ್ಥಾಪನೆಯಾದ ದಿನದಿಂದಲೇ ತಮ್ಮ ಪ್ರದೇಶದಲ್ಲಿ ಜನಸಂಖ್ಯೆಯನ್ನು ವೃದ್ಧಿಸಲು ಬೋಡೋಗಳು ಯೋಜನೆ ಹಾಕಿಕೊಂಡಿದ್ದರು. ಅದರಂತೆ ಬೋಡೋಯೇತರರನ್ನು ಬೋಡೋಲ್ಯಾಂಡ್‍ನಿಂದ ಹೊರದಬ್ಬಿ ಬೋಡೋಗಳನ್ನು ಬಹುಸಂಖ್ಯಾತ ಗೊಳಿಸುವುದಕ್ಕೆ ಮುಂದಾದರು. 1994, 96 ಮತ್ತು 98ರಲ್ಲಿ ಬೃಹತ್ ಸಂಖ್ಯೆಯಲ್ಲಿ ಬಂಗಾಳಿ ಹಿಂದೂಗಳನ್ನು ಬೋಡೋ ಪ್ರದೇಶದಿಂದ ಹೊರದಬ್ಬಿದರು. 1993ರಲ್ಲಿ ಮುಸ್ಲಿಮರ ವಿರುದ್ಧವೂ ಇಂಥದ್ದೇ ದಾಳಿ ನಡೆಯಿತು. 2008ರಲ್ಲಿ ದರಾಂಗ್  ಮತ್ತು ಉದಲ್‍ಗುರಿ ಪ್ರದೇಶಗಳ ಮುಸ್ಲಿಮರನ್ನು ಸಾಮೂಹಿಕವಾಗಿ ಒಕ್ಕಲೆಬ್ಬಿಸಲಾಯಿತು. ಸಾವಿರಾರು ಮಂದಿ ನಿರಾಶ್ರಿತರಾದರು. ಆದರೆ ಹೀಗೆ ಹೊರದಬ್ಬಲ್ಪಟ್ಟವರು ಈಗಲೂ ನಿರಾಶ್ರಿತ ಶಿಬಿರಗಳಲ್ಲೇ ಇದ್ದಾರೆ ಅನ್ನುವುದನ್ನು ಯಾವ ದೇಶ ಭಕ್ತರೂ  ಹೇಳುತ್ತಲೇ ಇಲ್ಲ.
         ಅಂದಹಾಗೆ, ಅಸ್ಸಾಮ್‍ಗೆ ವಲಸೆ ಬಂದವರು ಮುಸ್ಲಿಮರು ಮಾತ್ರವಾ?
     ದೇಶ ವಿಭಜನೆಯಾಗುವುದಕ್ಕಿಂತ ಮೊದಲೇ ಬಂಗಾಲದಿಂದ ಅಸ್ಸಾಮ್‍ಗೆ ಸಾಮೂಹಿಕ ವಲಸೆ ನಡೆದಿತ್ತು. Grow More Food  (ಹೆಚ್ಚು ಉತ್ಪನ್ನಗಳನ್ನು ಬೆಳೆಸಿ) ಎಂಬ ಬ್ರಿಟಿಷ್ ಸರಕಾರದ ಯೋಜನೆಯ ಪ್ರಕಾರ ಅವರೆಲ್ಲಾ ವಲಸೆ ಬಂದಿದ್ದರು. ಚಾ ತೋಟದಲ್ಲಿ ಕೆಲಸ ಮಾಡಲು ಬಿಹಾರದ ಆದಿವಾಸಿಗಳನ್ನು ಬ್ರಿಟಿಷರು ಅಸ್ಸಾಮ್‍ಗೆ ಕರೆ ತಂದಂತೆಯೇ ಬಂಗಾಳಿ ಮಾತಾಡುವ ಮುಸ್ಲಿಮರು ದೇಶ ವಿಭಜನೆಗಿಂತ ಮೊದಲು ತಮ್ಮದೇ ದೇಶದ ಇನ್ನೊಂದು ರಾಜ್ಯಕ್ಕೆ ಕೂಲಿಯಾಳುಗಳಾಗಿ ಬಂದರು. ಅವರಲ್ಲಿ ಹಿಂದೂಗಳೂ ಇದ್ದರು. ತಲೆಮಾರುಗಳಿಂದ ಅವರು ಇವತ್ತು ಅಸ್ಸಾಮಿನಲ್ಲಿದ್ದಾರೆ. ಅವರ ಭಾಷೆ ಅಸ್ಸಾಮಿ. ಸಂಸ್ಕøತಿ ಅಸ್ಸಾಮಿ. ಆದರೆ ಬೋಡೋಗಳು ಮತ್ತು ಬಿಜೆಪಿ ಇವನ್ನೆಲ್ಲಾ ಅಡಗಿಸಿಟ್ಟು, ಲುಂಗಿ ಸುತ್ತುವ, ಬಂಗಾಳಿ ಭಾಷೆ ಗೊತ್ತಿರುವ ಪ್ರತಿಯೊಬ್ಬರನ್ನೂ ಅಕ್ರಮ ವಲಸಿಗ ಅನ್ನುತ್ತಿವೆ. ಅಷ್ಟಕ್ಕೂ, 1971ರ ಜನಗಣತಿಯಂತೆ ಕೊಕ್ರಾಜಾರ್‍ನಲ್ಲಿ 17% ಮುಸ್ಲಿಮರಿದ್ದರು. 81ರಲ್ಲಿ ಜನಗಣತಿಯೇ ನಡೆದಿಲ್ಲ. 91ರಲ್ಲಿ ಅವರ ಸಂಖ್ಯೆ 19.3 ಕ್ಕೇರಿತು. ಆದರೆ 2001-11ರಲ್ಲಿ ಅದು 20.4%ಕ್ಕೆ ತಲುಪಿತು. 2001ರ ಅವಧಿಯಲ್ಲಿ ಕೊಕ್ರಾಜಾರ್‍ನಲ್ಲಿ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ಬರೇ 5.19%. ಒಂದು ವೇಳೆ 1991-2001ರ ಅವಧಿಯಲ್ಲಿ ಅಸ್ಸಾಮ್‍ನಲ್ಲಾದ ಒಟ್ಟು ಜನಸಂಖ್ಯಾ ಬೆಳವಣಿಗೆಗೆ ಇದನ್ನು ಹೋಲಿಸಿದರೆ ಜನಸಂಖ್ಯೆಯಲ್ಲಿ 9% ಇಳಿಕೆಯಾದಂತಾಗುತ್ತದೆ. (ದಿ ಹಿಂದೂ: ಆಗಸ್ಟ್ 8, 2012) ಇದು ಸೂಚಿಸುವುದಾದರೂ ಏನನ್ನು? ಬೋಡೋಗಳು ಹೇಳುವಂತೆ ಕೊಕ್ರಾಜಾರ್‍ಗೆ ಅಕ್ರಮ ವಲಸಿಗರು ನುಸುಳಿದ್ದಾರೆಂದರೆ, ಈ ಇಳಿಕೆ ಹೇಗಾಯಿತು? ಬಂದವರೆಲ್ಲಾ ಎಲ್ಲಿಗೆ ಹೋದರು? ಹೀಗಿರುವಾಗ ಮುಸ್ಲಿಮರನ್ನು ವ್ಯವಸ್ಥಿತವಾಗಿ ಮನೆಗಳಿಂದ ಹೊರಕ್ಕಟ್ಟಿ, ಅವರ ಮನೆಗಳಿಗೆ ಬೆಂಕಿಕೊಟ್ಟು, ದಾಖಲೆಗಳನ್ನು ನಾಶ ಮಾಡುವ ಮತ್ತು ಬಳಿಕ ಅಕ್ರಮ ವಲಸಿಗರು ಎಂಬ ಮುದ್ರೆಯೊತ್ತುವ ಷಡ್ಯಂತ್ರ ಇದೇಕೆ ಆಗಿರಬಾರದು? ಹೀಗಿದ್ದರೂ ಮಾಧ್ಯಮಗಳೇಕೆ ಅಸ್ಸಾಮ್ ಮುಸ್ಲಿಮರ ಬಗ್ಗೆ ಅಧ್ಯಯನ ನಡೆಸುತ್ತಿಲ್ಲ? `ಅಸ್ಸಾಮಿನಲ್ಲಿ ಲಕ್ಷಾಂತರ ವಲಸಿಗರನ್ನು ಅನುಮಾನಿತ ಮತದಾರರ (Doutful Voters ) ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅವರನ್ನೆಲ್ಲಾ ಗಡೀಪಾರು ಮಾಡಬೇಕೆಂದು' ಕಳೆದ ಲೋಕಸಭೆಯಲ್ಲಿ ಅಡ್ವಾಣಿ ಹೇಳುವಾಗ ಅವರಲ್ಲಿ 4 ಲಕ್ಷ ಹಿಂದೂಗಳಿದ್ದಾರೆಂಬುದನ್ನು ಯಾವ ಪತ್ರಿಕೆ, ಟಿ.ವಿಯಾದರೂ ಬಹಿರಂಗಪಡಿಸಿತ್ತೇ? 1960ರಲ್ಲಿ ಪೂರ್ವ ಪಾಕಿಸ್ತಾನದಿಂದ ಅಸ್ಸಾಮ್‍ಗೆ ಬಂದ ಇವರನ್ನು ಬಿಜೆಪಿ ನಿರಾಶ್ರಿತರೆಂದು  ಕರೆಯುತ್ತಿದೆ . ಅವರೀಗಲೂ ಅನುಮಾನಿತರ ಪಟ್ಟಿಯಲ್ಲಿದ್ದು, ಮತದಾನಕ್ಕೆ ಅವಕಾಶ ಇಲ್ಲದಿದ್ದರೂ ಅವನ್ನೆಲ್ಲಾ ಮುಚ್ಚಿಟ್ಟು, `ಅಕ್ರಮ ವಲಸಿಗರು' ಎಂದು ಮುಸ್ಲಿಮರನ್ನೇ ಗುರಿ ಮಾಡುತ್ತಿದೆ.  ಯಾಕೆ ಈ ದ್ವಂದ್ವ?  ಅನುಮಾನಿತ ಮತದಾರರು ಮುಸ್ಲಿಮರೆಂದಾದರೆ ಅವರು ಅಕ್ರಮ ವಲಸಿಗರಾಗುವುದೂ ಹಿಂದೂಗಳಾದರೆ ನಿರಾಶ್ರಿತರಾಗುವುದೂ ಏಕೆ? ಈ ಇಬ್ಬಗೆಯ ನೀತಿಗೆ ಏನೆನ್ನಬೇಕು?
         `ಅಕ್ರಮ ವಲಸಿಗರು' ಅನ್ನುವ ಸಂಘ ಪ್ರಣೀತ ಪದಗುಚ್ಚವನ್ನು ತುಟಿಯಲ್ಲಿಟ್ಟು, ಅವಕಾಶ ಸಿಕ್ಕಾಗಲೆಲ್ಲಾ ಅಸ್ಸಾಮ್ ಮುಸ್ಲಿಮರ ಮೇಲೆ ಉಗುಳುವ ಮಂದಿಗೆ ಬಹುಶಃ ಈ ಸತ್ಯ ಗೊತ್ತಿಲ್ಲ ಅಥವಾ ಗೊತ್ತಿದ್ದರೂ ಹೇಳುತ್ತಿಲ್ಲ, ಅಷ್ಟೇ.

2 comments:

 1. ಅಸ್ಸಾಂ ಗಲಭೆ ಕುರಿತು ದಿನವಹಿ ನೋಟವನ್ನು ನಿಮ್ಮ ಈ ಲೇಖನದಿಂದ ತಿಳಿದು ಬರುತ್ತದೆ. ನಿಜಕ್ಕೂ ಆಸ್ಸಮ್ ನಲ್ಲಿ ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಅಲ್ಲದೆ ಮಾಧ್ಯಮಗಳು ಜನರ ಕಣ್ಣಿಗೆ ಎಣ್ಣೆಬಿಡುವಂತಹ ಕೆಲಸ ಮಾಡುತ್ತಿವೆ. ಕೇವಲ ಫೇಸ್‌ಬುಕ್ಕಲ್ಲಿ ಮಾತ್ರ ಆಸ್ಸಾಮ್ ಗಲಭೆ ಕುರಿತ ಕೆಲವು ಮಾಹಿತಿ ಲಭ್ಯವಾದವು.
  ತಮ್ಮ ಈ ಮಾಹಿತಿಪೂರ್ಣ ಲೇಖನದಿಂದಾಗಿ ಆಸ್ಸಾಂ ವಸ್ತು ಸ್ಥಿತಿ ನಮ್ಮ ಕಣ್ಣಮುಂದೆ ಬಂದಿದೆ. ನಿಜವಾಗಿ ಅಲ್ಲಿ ಮುಸ್ಲಿಮರದ್ದೆ ತಪ್ಪು ಎನ್ನುವ ಭಾವನೆ ನಮ್ಮಲ್ಲಿ ಸಾಮಾನ್ಯ ಜನರಲ್ಲಿ ಮೂಡುತ್ತಿದೆ. ಆದರೆ ನಿಮ್ಮ ಲೇಖನ ಓದಿದ ಮೇಲೆ ಜನರಿಗೆ ವಸ್ತುಸ್ಥಿತಿಯ ಅರಿವಗುತ್ತದೆ.
  ವಸ್ತುತಃ ಇಂತಹ ಗಲಭೆಗಳಿಂದಾಗಿ ಯಾರಿಗೆ ತಾನೆ ಪ್ರಯೋಜನ ಉಂಟು? ನಮ್ಮ ದೇಶದ ಅಭಿವೃದ್ಧಿಯನ್ನು ಬುಡಮೇಲು ಮಾಡುವ ಇಂತಹ ಗಲಭೆಗಳಿಂದ ನಾವು ದೂರ ಉಳಿಯಬೆಕಾಗಿದೆ. ಆಸ್ಸಾಮ ಗಲಭೆಯ ನಂತರ ಸುಳ್ಳು ಎಸ್ಸೆಮ್ಸ್ ಹಾವಳಿಯಿಂದಾಗಿ ಎಷ್ಟೋ ಜನರಿಗೆ ತಪ್ಪು ಕಲ್ಪನೆಗಳು ಮೂಡಿವೆ. ಇಂತಹ ಸಂದೇಶ ರವಾನಿಸುತ್ತಿರುವವರು ಮುಸ್ಲಿಮರೇ ಎಂದು ಒಂದು ಕೋಮು ಭಾವಿಸಿದರೆ ಮುಸ್ಲಿಮರು ಇದು ಹಿಂದುಗಳ ಕೃತ್ಯ ಎಂದು ತಿಳಿದಿದೆ. ಇದರಿಂದ ಪರಸ್ಪರ ಅಪನಂಬಿಕೆಗಳು ಹುಟ್ಟಿ ಅಶಾಂತಿಯ ವಾತವರಣ ಸೃಷ್ಟಿಯಾಗುತ್ತದೆ.
  ಒಂದೆಡೆ ಆರ್.ಎಸ್.ಎಸ್ಸಿಗರು ತಮ್ಮನ್ನು ಮಹಾನ್ ದೇಶಭಕ್ತರು, ಹಿಂದುಗಳ ರಕ್ಷಕರು ಎಂದು ಬಿಂಬಿಸುತ್ತ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಲಾಠಿ ಬೀಸುತ್ತ ಭಯೋತ್ಪಾದನೆಗಿಳಿದಿರುವುದು ಈ ದೇಶ ಇನ್ನು ಆಂತರಿಕ ಭಯೋತ್ಪಾದಕರಿಂದ ಮುಕ್ತವಾಗಿಲ್ಲ ಎನ್ನುವುದು ತೋರಿಸುತ್ತದೆ.

  ReplyDelete
 2. This comment has been removed by the author.

  ReplyDelete