Tuesday, August 27, 2019

45 ಕೆಜಿ ತೂಗುವ ಫಕೀರನ ಹತ್ಯೆಗೆ ಏನು ಕಾರಣ ಕಾಂಗ್ರೆಸ್ಸಿಗರೇ?



1. 1938-1939
2. 1947 ಮೇ 31
ಈ ಎರಡೂ ಇಸವಿಗಳನ್ನು ಇಂದಿನ ಕಾಂಗ್ರೆಸ್ ಪಕ್ಷ ಮತ್ತೆ ನೆನಪಿಸಿಕೊಳ್ಳಬೇಕಾದುದು ಬಹಳ ಅಗತ್ಯ. 1938-39ರಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಸವಾಲನ್ನು ಎದುರಿಸಲು ಸಿದ್ಧವಾಯಿತು. ಪ್ರಜಾತಂತ್ರ ವ್ಯವಸ್ಥೆಯನ್ನು ಪ್ರತಿಪಾದಿಸುವುದು ಬೇರೆ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ತನ್ನನ್ನು ಅರ್ಪಿಸಿಕೊಳ್ಳುವುದು ಬೇರೆ. ಪ್ರತಿ ಪಾದಿಸುವಾಗ ಸವಾಲುಗಳು ಕಡಿಮೆ. ಚತುರ ಮಾತುಗಾರ ಪ್ರಜಾತಂತ್ರ ವ್ಯವಸ್ಥೆಯನ್ನು ಬಂಗಾರದ ಕಲಶದಲ್ಲಿ ಇಟ್ಟುಕೊಡಬಲ್ಲ. ಅದನ್ನು ಅವನು ಪರಿಹಾರವಾಗಿ ಮತ್ತು ಪರಮ ಪವಿತ್ರವಾಗಿ ವ್ಯಾಖ್ಯಾನಿಸಬಲ್ಲ. ಪ್ರಜಾತಂತ್ರ ವ್ಯವಸ್ಥೆ ಮತ್ತು ಪ್ರಜಾತಂತ್ರ ರಹಿತ ವ್ಯವಸ್ಥೆಗಳೆರಡನ್ನೂ ಮುಖಾಮುಖಿಗೊಳಿಸಿ, ಬೀಜ ಸೀಳಿ, ಎರಡ ರಲ್ಲಿ ಒಂದನ್ನು ಬಿಳಿಯಾಗಿಯೂ ಇನ್ನೊಂದನ್ನು ಕಪ್ಪಾಗಿಯೂ ಪರಿವರ್ತಿಸಬಲ್ಲ. ಹೀಗೆ ಮಾಡುವುದಕ್ಕೆ ಆ ಕ್ಷಣದಲ್ಲಿ ಆತನಿಗೆ ಅಗತ್ಯವಿರುವುದು ಎರಡೇ ಎರಡು ವಸ್ತುಗಳು.
1. ಮೈಕ್.
2. ನಾಲಗೆ.
ಆದರೆ, ಪ್ರಜಾತಂತ್ರ ವ್ಯವಸ್ಥೆಗೆ ವ್ಯಕ್ತಿಯೋ ಸಂಘಟನೆಯೋ ಪಕ್ಷವೋ ತನ್ನನ್ನು ಅರ್ಪಿಸಿಕೊಳ್ಳುವಾಗ ಈ ಮಾತುಗಾರಿಕೆಯೇ ಸವಾಲಾಗಿ ಎದುರು ನಿಲ್ಲುತ್ತದೆ. ಮೈಕ್‍ನಲ್ಲಿ ಪ್ರತಿಪಾದಿಸಿದ ಎಲ್ಲವೂ ಪ್ರಾಯೋಗಿಕವಾಗಿಯೂ ಸಾಧ್ಯ ಎಂದು ತೋರಿಸಿಕೊಡ ಬೇಕಾದ ಸವಾಲು ಎದುರಾಗುತ್ತದೆ. ಸಾಮಾನ್ಯವಾಗಿ, ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಯಾವುದೇ ರಾಜಕೀಯ ಪಕ್ಷ ದಾರಿ ಬದಲಿಸಿಕೊಳ್ಳುವುದು ಇಲ್ಲೇ. 1938-39ರ ಇಸವಿ ಮುಖ್ಯ ವಾಗುವುದು ಈ ಕಾರಣಕ್ಕಾಗಿಯೇ. ಪ್ರಜಾತಂತ್ರ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿತು. ಪಕ್ಷದ ಅಧ್ಯಕ್ಷ ಹುದ್ದೆಯನ್ನು ಮತದಾನದ ಮೂಲಕ ತುಂಬಿಕೊಳ್ಳಲು ನಿರ್ಧರಿಸಿತು. ಪಕ್ಷದಲ್ಲಿರುವ ಪ್ರಭಾವಿ ನಾಯಕರ ಮಟ್ಟಿಗೆ ಹೇಳುವುದಾದರೆ, ಇಂಥದ್ದೊಂದು  ನಿರ್ಧಾರ ಸುಲಭದಲ್ಲಿ ಜೀರ್ಣಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ. ಯಾಕೆಂದರೆ, ಮತದಾನವಾದರೆ ಯಾರು ಬೇಕಾದರೂ ಆಯ್ಕೆಯಾಗುವುದಕ್ಕೆ ಬಾಗಿಲು ತೆರೆದಂತಾಗುತ್ತದೆ. ಹೊಸಬರೂ ಆಯ್ಕೆಯಾಗಬಹುದು. ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರು ಪರಾಜಯ ಹೊಂದಬಹುದು. ಇಂಥ ಸಾಧ್ಯಾಸಾಧ್ಯತೆಯ ನಡುವೆಯೂ ಮಹಾತ್ಮ ಗಾಂಧಿಯವರು ಅಧ್ಯಕ್ಷ ಹುದ್ದೆಯನ್ನು ಮುಕ್ತವಾಗಿಟ್ಟರು. ಒಂದುಕಡೆ, ನೇತಾಜಿ ಸುಭಾಶ್ ಚಂದ್ರ ಬೋಸ್‍ರು ಸ್ಪರ್ಧೆಗೆ ಇಳಿದರೆ ಇನ್ನೊಂದು ಕಡೆ ಸ್ವತಃ ಗಾಂಧೀಜಿಯವರೇ ಪಟ್ಟಾಭಿ ಸೀತಾರಾಮಯ್ಯರನ್ನು ಕಣಕ್ಕಿಳಿಸಿದರು. ಗಾಂಧೀಜಿಯವರ ಪ್ರಭಾವ, ಅವರ ವ್ಯಕ್ತಿತ್ವಕ್ಕೆ ಇದ್ದ ಖದರು, ರಾಷ್ಟ್ರವ್ಯಾಪಿಯಾಗಿ ಅವರಿಗಿದ್ದ ಜನಮನ್ನಣೆಯನ್ನು ಪರಿಗಣಿಸಿದರೆ ಪಟ್ಟಾಭಿ ಸೀತಾರಾಮಯ್ಯರ ಗೆಲುವು ಶತಸಿದ್ಧವಾಗಿತ್ತು. ಆದರೆ ನಿರೀಕ್ಷೆ ಹುಸಿಯಾಯಿತು. ನೇತಾಜಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಇದೊಂದು ಅಭೂತಪೂರ್ವ ಬೆಳವಣಿಗೆ. ಚುನಾವಣೆಯ ಮೂಲಕ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ ಗಾಂಧೀಜಿ ತೋರಿದ ಧೈರ್ಯ ಮತ್ತು ಗಾಂಧೀಜಿ ಸೂಚಿಸಿದ ಅಭ್ಯರ್ಥಿಯನ್ನು ತಿರಸ್ಕರಿಸಿ ಯುವ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ ಕಾಂಗ್ರೆಸಿಗರು- ಇವೆರಡೂ ಮಹತ್ವಪೂರ್ಣವಾದುದು. ಇನ್ನೊಂದು, ಚಕ್ರಯ್ಯ.
1947 ಮೇ 31ರಂದು ಮಹಾತ್ಮಾ ಗಾಂಧೀಜಿಯವರು ಚಕ್ರಯ್ಯನ ಬಗ್ಗೆ ಬಹಿರಂಗವಾಗಿ ಮಾತಾಡಿದ್ದರು. ಚಕ್ರಯ್ಯ ಕಾಂಗ್ರೆಸ್‍ನ ಯುವ ಮುಂದಾಳು. ಆಂಧ್ರಪ್ರದೇಶದ ದಲಿತ ಸಮು ದಾಯದ ವ್ಯಕ್ತಿ. ಧೈರ್ಯ, ಹೊಸ ಚಿಂತನೆ, ಖಚಿತ ನಿಲುವು ಗಳುಳ್ಳ ವ್ಯಕ್ತಿಯೆಂಬ ನೆಲೆಯಲ್ಲಿ ಗಾಂಧೀಜಿ ಅವರನ್ನು ಗುರುತಿಸಿದ್ದರು. ಆದರೆ, ಅವರ ಆರೋಗ್ಯ ಹದಗೆಡುತ್ತಾ ಇತ್ತು. ಗಾಂಧೀಜಿಯವರಿಗೂ ಅವರ ಆರೋಗ್ಯದ ಬಗ್ಗೆ ಆತಂಕವಿತ್ತು. ಅವರು ಹೇಳಿದ್ದು ಹೀಗೆ,
“ಭಾರತವು ತನ್ನ ಪ್ರಥಮ ರಾಷ್ಟ್ರಾಧ್ಯP್ಷÀನನ್ನು ಚುನಾಯಿಸುವ ಸಂದರ್ಭ ಹತ್ತಿರ ಬರುತ್ತಿದೆ. ಒಂದುವೇಳೆ, ಆ ಸಂದರ್ಭದಲ್ಲಿ ಚಕ್ರಯ್ಯ ಜೀವಂತವಾಗಿದ್ದರೆ ರಾಷ್ಟ್ರಾಧ್ಯP್ಷÀ ಹುz್ದÉಗೆ ನಾನು ಚಕ್ರಯ್ಯನ ಹೆಸರನ್ನು ಸೂಚಿಸುವೆ.”
ಈಗಿನ ಕಾಂಗ್ರೆಸ್‍ನ ಮುಂದೆ ಈಗ ಎರಡು ಆಯ್ಕೆಗಳಿವೆ.
1. ಚಕ್ರಯ್ಯನಂಥ ವ್ಯಕ್ತಿಯನ್ನು ಗುರುತಿಸುವುದು ಮತ್ತು ಅಧ್ಯಕ್ಷ  ಹುದ್ದೆಯನ್ನು ವಹಿಸಿಕೊಡುವುದು.
2. 1938-39ರಲ್ಲಿ ಮಾಡಿದಂತೆ ಅಧ್ಯP್ಷÀ ಹುz್ದÉಯನ್ನು ಚುನಾವಣೆಯ ಮೂಲಕ ತುಂಬಿಕೊಳ್ಳುವುದು.
2019 ಜುಲೈ 4ರಂದು ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ  ಹುದ್ದೆಗೆ ಅಧಿಕೃತವಾಗಿ ರಾಜೀನಾಮೆಯನ್ನು ನೀಡಿ ದರು. ಕಾಂಗ್ರೆಸ್ ಪಕ್ಷದ ಮಟ್ಟಿಗೆ ಇದೊಂದು ಐತಿಹಾಸಿಕ ದಿನಾಂಕ. ಕಾಂಗ್ರೆಸ್ ಪಕ್ಷದ ಮೇಲೆ ನೆಹರೂ-ಗಾಂಧಿಯನ್ ಕುಟುಂಬದ 4 ತಲೆಮಾರುಗಳ ಆಧಿಪತ್ಯ ಈ ಮೂಲಕ ತಾರ್ಕಿಕ ಅಂತ್ಯವನ್ನು ಕಂಡಂತಾಗಿದೆ. ನೆಹರೂ, ಇಂದಿರಾ, ರಾಜೀವ್ ಮತ್ತು ರಾಹುಲ್- ಈ ನಾಲ್ವರೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ, ಚಿಂತಿಸಿದ್ದಾರೆ, ತಂತ್ರಗಾರಿಕೆ ಹೆಣೆದಿದ್ದಾರೆ, ಮುಂದೆ ನಿಂತು ಹೋರಾಡಿದ್ದಾರೆ, ನಿದ್ದೆ  ಕಳೆದಿದ್ದಾರೆ ಮತ್ತು ಜೀವವನ್ನೂ ಕೊಟ್ಟಿದ್ದಾರೆ. ಕುಟುಂಬ ರಾಜಕಾರಣ ಎಂಬ ವ್ಯಂಗ್ಯನುಡಿಯ ಆಚೆಗೆ ಕಾಂಗ್ರೆಸ್ ಪಕ್ಷವನ್ನು ಪ್ರಬಲ ರಾಜಕೀಯ ಪP್ಷÀವಾಗಿ ಕಟ್ಟುವಲ್ಲಿ ಮತ್ತು ಅನೇಕಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಅವರ ಪಾತ್ರ ಮತ್ತು ಶ್ರಮ ಬಹಳ ದೊಡ್ಡದು. ಬಹುಶಃ, ಪಕ್ಷದ ಅಧ್ಯಕ್ಷನಾಗಿದ್ದುಕೊಂಡು ಅತ್ಯಂತ ಹೆಚ್ಚು ಸವಾಲು ಗಳನ್ನು ಎದುರಿಸಿದ್ದು ರಾಹುಲ್ ಗಾಂಧಿ. ಇಂದಿರಾ ಗಾಂಧಿಯವರಿಗೆ ತಂದೆ ನೆಹರೂರವರ ನೆರಳಿನಾಶ್ರಯವಿತ್ತು. ಪ್ರಧಾನಿಯಾಗಿ ನೆಹರೂ ಗಳಿಸಿರುವ ಜನಮನ್ನಣೆ, ಅವರಿಗಿದ್ದ ಗೌರವ, ಸ್ವಾತಂತ್ರ್ಯ ಹೋರಾಟಗಾರನೆಂಬ ನೆಲೆಯಲ್ಲಿ ಸಹಜವಾಗಿಯೇ ದಕ್ಕಿದ್ದ ಜನ ಪ್ರಿಯತೆಗಳು ಇಂದಿರಾರನ್ನೂ ಕಾಪಾಡಿದುವು. ನೆಹರೂರಿಂದ ಪಡೆದ ರಾಜಕೀಯ ಪಟ್ಟಗಳೂ ಅವರ ಪ್ರಯೋಜನಕ್ಕೆ ಬಂದಿದ್ದುವು. ಇಂದಿರಾರಿಗೆ ಹೋಲಿಸಿದರೆ ರಾಜೀವ್ ಅನನುಭವಿ. ಇಂದಿರೆಯ ಮಗ ಅನ್ನುವುದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯ ನಾಯಕನಾಗಿ ಗುರುತಿಸಿಕೊಳ್ಳುವುದಕ್ಕೆ ವಿಶೇಷ ಅರ್ಹತೆಯೇನೂ ಅವರಿಗಿರಲಿಲ್ಲ. ಆದರೆ, ಇಂದಿರಾ ಗಾಂಧಿಯವರ ಹತ್ಯೆ ಮತ್ತು ಆ ಹತ್ಯೆಯು ಈ ದೇಶದಾದ್ಯಂತ ಸೃಷ್ಟಿಸಿದ ಅನು ಕಂಪದ ವಾತಾವರಣವು ರಾಜೀವ್‍ರನ್ನು ಸುಲಭದಲ್ಲಿ ನಾಯಕ ನನ್ನಾಗಿ ರೂಪಿಸಿತು. ದೇಶವು ಅವರನ್ನು ಪ್ರಧಾನಿಯನ್ನಾಗಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕನಾಗಿ ಒಪ್ಪಿಕೊಂಡಿತು. ಆದರೆ, ರಾಹುಲ್ ಗಾಂಧಿಯ ಮಟ್ಟಿಗೆ ಈ ಯಾವ ಅನುಕೂಲತೆಗಳೂ ಇಲ್ಲ. ನೆಹರೂ, ಇಂದಿರಾ, ರಾಜೀವ್‍ರ ಕಾಲದ ರಾಜಕೀಯ ಸ್ಥಿತಿ-ಗತಿಗೆ ಹೋಲಿಸಿದರೆ ರಾಹುಲ್ ಕಾಲದ ರಾಜಕೀಯ-ಸಾಮಾಜಿಕ ಸ್ಥಿತಿಗತಿಗಳು ಅತ್ಯಂತ ಭಿನ್ನ. ಬಿಜೆಪಿ ಅತ್ಯಂತ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆದು ನಿಂತ ಕಾಲ. ನರೇಂದ್ರ ಮೋದಿ ಯಂಥ ಮಾತಿನ ಮಲ್ಲ ಅವರ ಎದುರಿದ್ದರು. ಇನ್ನೊಂದು ಕಡೆ, ಸೈದ್ಧಾಂತಿಕವಾಗಿ ಗಟ್ಟಿತನವಿಲ್ಲದ ಮತ್ತು ವೈಚಾರಿಕವಾಗಿ ದಿವಾಳಿಯಾದ ಜನರ ಗುಂಪಾಗಿ ಕಾಂಗ್ರೆಸ್ ಪಕ್ಷ ಪರಿವರ್ತಿತವಾಗಿತ್ತು. ಆದ್ದರಿಂದ ನೆಹರೂ, ಇಂದಿರಾ, ರಾಜೀವ್‍ರ ಕಾಲದ ಕಾಂಗ್ರೆಸ್‍ಗೆ ರಾಹುಲ್ ಕಾಲದ ಕಾಂಗ್ರೆಸನ್ನು ಹೋಲಿಸುವುದು ಸೂಕ್ತವಾಗುವುದಿಲ್ಲ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಪP್ಷÀದ ಮುಂಚೂಣಿಗೆ ಬರುವಾಗ ಕಾಂಗ್ರೆಸ್ ಎಷ್ಟು ಸೈದ್ಧಾಂತಿಕ ಅಧಃ ಪತನಕ್ಕೆ ತಲುಪಿತ್ತೆಂದರೆ, ಅದರ ಹೆಸರನ್ನು ಬಿಜೆಪಿಯೆಂದು ಬದಲಿಸಿದರೆ ದೊಡ್ಡ ವ್ಯತ್ಯಾಸ ಆಗಲಾರದು ಎಂದು ಹೇಳುವಂತಾಗಿತ್ತು. ಈಗಂತೂ ಈ ‘ಸೈದ್ಧಾಂತಿಕ ಭ್ರಷ್ಟಾಚಾರ’ದ ಸ್ಥಿತಿ ತೀವ್ರವಾಗಿಯೇ ಇದೆ. ಕಾಂಗ್ರೆಸ್‍ಗೂ ಬಿಜೆಪಿಗೂ ನಡುವೆ ವ್ಯತ್ಯಾಸ ಏನು ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರ ಸುಲಭವಿತ್ತು. ಬಿಜೆಪಿ ನಾಯಕರ ಭಾಷೆ ಕಾಂಗ್ರೆಸ್ ನಾಯಕರದ್ದಾಗಿರಲಿಲ್ಲ. ದೇಶ, ಭಾಷೆ, ಧರ್ಮ, ಜಾತಿ, ದೇಶಪ್ರೇಮ, ಧರ್ಮಪ್ರೇಮ ಇತ್ಯಾದಿ ಇತ್ಯಾದಿ ವಿಷಯಗಳಲ್ಲಿ ಬಿಜೆಪಿಯ ನಿಲುವಿಗೂ ಕಾಂಗ್ರೆಸ್‍ನ ನಿಲುವಿಗೂ ತಕ್ಷಣಕ್ಕೆ ಗುರು ತಿಸಿ ಬಿಡುವಷ್ಟು ವ್ಯತ್ಯಾಸಗಳಿದ್ದುವು. ಕೋಮುವಾದಕ್ಕೆ ಬಿಜೆಪಿ ಕೊಡುವ ಅರ್ಥ ಬೇರೆ, ಕಾಂಗ್ರೆಸ್ ಕೊಡುವ ಅರ್ಥ ಬೇರೆ. ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಕ್ಖ್ ಸಹಿತ ಎಲ್ಲ ಧರ್ಮೀಯರ ಭಾರತೀಯತೆಯ ಬಗ್ಗೆ ಮತ್ತು ಅವರ ಐಡೆಂಟಿಟಿಯ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಎರಡು ರೀತಿಯ ಅಭಿಪ್ರಾಯ ಗಳನ್ನು ಹೊಂದಿದ್ದವು. ಆದರೆ ರಾಹುಲ್ ಕೈಗೆ ಕಾಂಗ್ರೆಸ್ ಸಿಗುವಾಗ ಅಥವಾ ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಪ್ರವೇಶವಾಗುವಾಗ ಬಹುತೇಕ ಕಾಂಗ್ರೆಸ್ ಈ ಅನನ್ಯತೆಯನ್ನು ಕಳೆದುಕೊಂಡಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಜನಪ್ರತಿನಿಧಿಯೊಬ್ಬ ಯಾವ ಅಂಜಿಕೆ ಮತ್ತು ಸೈದ್ಧಾಂತಿಕ ತಾಕಲಾಟವಿಲ್ಲದೇ ಬಿಜೆಪಿ ಸೇರ ಬಹುದಾದ ವಾತಾವರಣ ನಿರ್ಮಾಣವಾಗಿತ್ತು. ರಾಹುಲ್ ನಿರ್ಗ ಮನದ ಈ ವೇಳೆಯಲ್ಲಂತೂ ಇದು ಉಚ್ಛ್ರಾಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಹೆಸರಿನಲ್ಲಿ ಬೇರೆ ಬೇರೆಯಾಗಿರುವ ಮತ್ತು ವೈಚಾರಿಕವಾಗಿ ಒಂದೇ ಸಿದ್ಧಾಂತವನ್ನು ಪ್ರತಿಪಾದಿಸುವ ದಾರುಣ ಸ್ಥಿತಿಗೆ ತಲುಪಿಬಿಟ್ಟಿರುವಂತೆ ಕಾಣುತ್ತಿದೆ.
ಯಾವುದೇ ಪಕ್ಷದ ಹುಟ್ಟಿಗೆ ಮೂಲ ಆಧಾರ- ಸಿದ್ಧಾಂತ. ಗಾಂಧಿಯನ್ ಥಾಟ್ಸ್, ಸಾವರ್ಕರ್ ಥಾಟ್ಸ್, ಕಾರ್ಲ್‍ಮಾರ್ಕ್ಸ್  ಥಾಟ್ಸ್- ಇತ್ಯಾದಿಗಳು ಸಮಾನ ಅಲ್ಲ, ಏಕವೂ ಅಲ್ಲ. ಗಾಂಧಿಯನ್ ಥಾಟ್ಸ್ ನೊಂದಿಗೆ ಸಾವರ್ಕರ್ ಥಾಟ್ಸ್ ಹೊಂದಿಕೊಳ್ಳುವುದಿಲ್ಲ. ಸಾವರ್ಕರ್ ಥಾಟ್ಸ್ ಅನ್ನು ಕಾರ್ಲ್‍ಮಾರ್ಕ್ಸ್  ಥಾಟ್ಸ್ ಒಪ್ಪುವುದಿಲ್ಲ. ಕಾಂಗ್ರೆಸ್‍ನ ಹುಟ್ಟಿಗೂ ಬಿಜೆಪಿಯ ಹುಟ್ಟಿಗೂ ಇರುವ ಕಾರಣಗಳು ಏನೆಂದರೆ, ಗಾಂಧಿ ಮತ್ತು ಸಾವರ್ಕರ್. ಇವರಿಬ್ಬರೂ ಎರಡು ಬಿಂದುಗಳು. ಕಾಂಗ್ರೆಸ್ ಈ ದೇಶದ ವೈವಿಧ್ಯ ಸಂಸ್ಕೃತಿಯನ್ನು ಮತ್ತು ಧಾರ್ಮಿಕ ಐಡೆಂಟಿಟಿಯನ್ನು ಗೌರವಿಸಿ ಕಾಪಾಡುವ ಗುಣದ ನಾಮಪದವಾದರೆ, ಬಿಜೆಪಿ ಬಹುತೇಕ ಈ ಗುಣದ ವಿರುದ್ಧ ಪದವಾಗಿ ಆರಂಭ ಕಾಲದಿಂದಲೂ ಗುರುತಿಸಿಕೊಳ್ಳುತ್ತಲೇ ಬಂದಿದೆ. ಗಾಂಧೀಜಿಗೆ ಗೋಡ್ಸೆ ಗುಂಡಿಕ್ಕುವುದಕ್ಕೆ ಅವರ ಬರಿಮೈ ಕಾರಣವಾಗಿರಲಿಲ್ಲ. ಸೈದ್ಧಾಂತಿಕ ವ್ಯತ್ಯಾಸದ ಹೊರತಾಗಿ 45 ಕೆಜಿ ತೂಗುವ ಆ ಫಕೀರನನ್ನು ಹತ್ಯೆಗೈಯುವುದಕ್ಕೆ ಗೋಡ್ಸೆಗೆ ಇನ್ನಾವ ಕಾರಣವೂ ಇರಲಿಲ್ಲ. ಗಾಂಧೀಜಿ ಪ್ರತಿಪಾದಿಸುವ ಸಿದ್ಧಾಂತ ಮತ್ತು ಗೋಡ್ಸೆಯ ಸಿದ್ಧಾಂತದ ನಡುವೆ ಎಷ್ಟು ತೀವ್ರವಾದ ವ್ಯತ್ಯಾಸ ಇದೆ ಅನ್ನುವುದನ್ನು ಆ ಗುಂಡು ಸೂಚಿಸುತ್ತದೆ. ಗಾಂಧೀಜಿ ಪ್ರತಿಪಾದಿಸುವ ಸಿದ್ಧಾಂತವು ಗುಂಡಿಕ್ಕಿ ಹತ್ಯೆಗೈಯ ಬೇಕಾದುದು ಎಂಬುದಾಗಿ ಗೋಡ್ಸೆ ಪ್ರತಿನಿಧಿಸುವ ಸಿದ್ಧಾಂತವು ಭಾವಿಸುತ್ತದೆ. ಹೀಗಿರುವಾಗ, ಗಾಂಧೀಜಿ ಪ್ರಣೀತ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾದವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಯಾದವ ಆ ಬಳಿಕ ಯಾವ ಮುಜುಗರವೂ ಇಲ್ಲದೇ ಗೋಡ್ಸೆಯನ್ನು ಮೆಚ್ಚಿ ಕೊಳ್ಳುವ ಅಥವಾ ಸಮರ್ಥಿಸಿಕೊಳ್ಳುವ ಪಕ್ಷವನ್ನು ಸೇರಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ಹಾಗೆ ಸೇರಿಕೊಂಡವರನ್ನು ಏನೆಂದು ಕರೆಯ ಬಹುದು? ಸಿದ್ಧಾಂತ ಬದ್ಧತೆಯೇ ಪಕ್ಷ ಸೇರ್ಪಡೆಗೆ ಮತ್ತು ಚುನಾವಣಾ ಅಭ್ಯರ್ಥಿತನಕ್ಕೆ ಅರ್ಹತೆಯಾಗಿ ಮಾರ್ಪಡುವುದು ಯಾವಾಗ? ಅಂದಹಾಗೆ,
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಚಕ್ರಯ್ಯನಂಥ ಸಿದ್ಧಾಂತಬದ್ಧ ವ್ಯಕ್ತಿಯನ್ನು ಗುರುತಿಸುವುದು ಮತ್ತು ಧೈರ್ಯದಿಂದ ಘೋಷಿಸುವುದಕ್ಕೆ ಗಾಂಧೀಜಿಯಂಥ ಪ್ರಭಾವಿ ವ್ಯಕ್ತಿ ಈಗ ಕಾಂಗ್ರೆಸ್‍ನಲ್ಲಿಲ್ಲ. ಆದ್ದರಿಂದ, ಸುಭಾಷ್ ಚಂದ್ರ ಬೋಸ್‍ರ ಅನಿರೀಕ್ಷಿತ ಗೆಲುವಿಗೆ ಸಾಕ್ಷಿಯಾದ ಮುಕ್ತ ಚುನಾವಣಾ ವಿಧಾನವನ್ನು ಕಾಂಗ್ರೆಸ್ ಅಳವಡಿಸಿಕೊಳ್ಳಬೇಕು. ಸಿದ್ಧಾಂತಕ್ಕೆ ಬದ್ಧವಾದ ಮತ್ತು ಯಾವ ಸಂದರ್ಭದಲ್ಲೂ ಸಿದ್ಧಾಂತವನ್ನು ಎತ್ತಿ ಹಿಡಿಯುವ ವ್ಯಕ್ತಿ ಕಾಂಗ್ರೆಸ್‍ನ ಅಧ್ಯP್ಷÀರಾಗಲಿ. ಆ ಮೂಲಕ ಶತಮಾನ ಹಳೆಯದಾದ ಪಕ್ಷವನ್ನು ಸಾವಿನಿಂದ ರಕ್ಷಿಸಲಿ.

Wednesday, July 24, 2019

ಗೆಳೆಯನ ಮೋಬ್ ಲಿಂಚಿಂಗ್ ಆಕ್ರೋಶದ ಒಳ-ಹೊರಗೆ



ಮೊನ್ನೆ ಗೆಳೆಯ ಒಂದು ಬಗೆಯ ಅಸಹನೆ, ಸಿಟ್ಟಿನಿಂದ ಹೇಳಿದ,
“ಇವರನ್ನೆಲ್ಲ ಹಿಡಿದು ಥಳಿಸ್ಬೇಕು. ಗುಂಪು ದಾಳಿ (Mob lynching) ಅನ್ತೇವಲ್ಲ, ಅದು. ಥಳಿತ ಎಷ್ಟು ತೀವ್ರವಾಗಿರಬೇಕು ಅಂದರೆ, ಇನ್ನೊಮ್ಮೆ ಇವರು ರೆಸಾರ್ಟ್ ರಾಜಕಾರಣ ಮಾಡ ಬಾರದು. ಮತದಾರರನ್ನು ಅವಮಾನಿಸುವ ರೀತಿಯಲ್ಲಿ  ರಾಜೀನಾಮೆ ಕೊಡಬಾರದು. ಇನ್ನೊಂದು ಪಕ್ಷ ಸೇರಬಾರದು..”
ಕೇವಲ ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತ್ರ ವ್ಯಕ್ತವಾದ ಸಿಟ್ಟು ಇದಲ್ಲ. ರಾಜಕಾರಣಿ ಕರ್ನಾಟಕದಲ್ಲಿ ಮಾತ್ರ ಇರುವುದಲ್ಲವಲ್ಲ. ಈ ದೇಶದ ಹಣೆಬರಹ ಅವಲಂಬಿಸಿರುವುದೇ ರಾಜಕಾರಣಿ ಎಂಬ  ಬಹುವೇಷಧಾರಿ ಪ್ರಾಣಿಯ ಕೈಯಲ್ಲಿ. ಕರ್ನಾಟಕದ 13 ಮಂದಿ ಜನಪ್ರತಿನಿಧಿಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಯ ಹೊಟೇಲ್‍ಗೆ ವಾಸ ಬದಲಿಸಿದ ಆಸುಪಾಸಿನಲ್ಲೇ  ತೆಲಂಗಾಣ ಮತ್ತು ಗೋವಾ ದಲ್ಲೂ ಇದೇ ಬಗೆಯ ಅಚ್ಚರಿಗಳು  ನಡೆದುವು. ತೆಲಂಗಾಣದ 18 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಟಿ.ಆರ್.ಎಸ್. ಪಕ್ಷವನ್ನು ಸೇರಿಕೊಂಡರು. ಗೋವಾದ 15 ಮಂದಿ ಕಾಂಗ್ರೆಸ್ ಶಾಸಕರಲ್ಲಿ 10 ಮಂದಿ ಬಿಜೆಪಿಗೆ ಸೇರ್ಪಡೆಗೊಂಡರು. ಪ್ರಶ್ನೆ ಇರುವುದೂ ಇಲ್ಲೇ. ಓರ್ವ  ವ್ಯಕ್ತಿ, ತನ್ನ ಏಕಮಾತ್ರ ಮತದಿಂದ ಶಾಸಕನಾಗಿ ಆಯ್ಕೆಯಾಗಲಾರ. ಆತನಿಗಿರುವುದು ಜುಜುಬಿ ಒಂದೇ ಒಂದು ಓಟು. ಆದ್ದರಿಂದ ಆತ ಶಾಸಕನಾಗಿ ಆಯ್ಕೆ ಯಾಗುವುದು ಮತ್ತು ಆಗದೇ ಇರುವುದು- ಇವೆರಡೂ ಆತನ ಕ್ಷೇತ್ರದ ಮತದಾರರನ್ನು  ಅವಲಂಬಿಸಿರುತ್ತದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡರಿಂದ ಎರಡೂವರೆ ಲಕ್ಷ ಮತದಾರರಿರುತ್ತಾರೆ. ಇವರು ಅತ್ಯಂತ ಹೆಚ್ಚು ಮತವನ್ನು ಯಾವ ಅಭ್ಯರ್ಥಿಗೆ ನೀಡಿರುತ್ತಾರೋ ಅವರು ಜನಪ್ರತಿನಿಧಿಯಾಗಿ ಆಯ್ಕೆಯಾಗುತ್ತಾರೆ. ಆ ಬಳಿಕ  ಜನರಿಗೆ ಆತ/ಕೆ ಉತ್ತರದಾಯಿ. ಪ್ರಜಾತಂತ್ರದ ಸರಳ ವ್ಯಾಖ್ಯಾನ ಇದು. ಆದರೆ, ಇಷ್ಟಕ್ಕೇ ಈ ವ್ಯಾಖ್ಯಾನ ಮುಗಿಯುವುದಿಲ್ಲ. ಪ್ರಜಾತಂತ್ರದಲ್ಲಿ ಇದರಾಚೆಗೆ ಕೆಲವು ಸತ್ಯಗಳಿವೆ. ಈ ಪ್ರಜಾತಂತ್ರದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಓರ್ವ ಅಭ್ಯರ್ಥಿ  ಜಯಶಾಲಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರ- ‘ಸಾಧ್ಯವಿದೆ’ ಎಂಬುದು ನಿಜವೇ ಆದರೂ ಹಾಗೆ ಹೇಳುವಾಗ ತುಟಿ ಒಂದಿಷ್ಟು ಅದುರುತ್ತದೆ ಅನ್ನುವುದೂ ಅಷ್ಟೇ ನಿಜ. ಯಾಕೆಂದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳೇ  ನಿರ್ಣಾಯಕ. ಅವು ಒಂದು ರೀತಿಯಲ್ಲಿ ಆಲದ ಮರದಂತೆ. ವಿಶಾಲವಾಗಿ ಚಾಚಿಕೊಳ್ಳುವ ಸಾಮರ್ಥ್ಯ ಆಲದ ಮರಗಳಿವೆ. ಮಾತ್ರವಲ್ಲ, ತನ್ನ ಅಡಿಯಲ್ಲಿ ಇತರ ಗಿಡ ಮರಗಳು ಬೆಳೆಯದಂತೆ ತಡೆಯುವ ತಾಕತ್ತೂ ಅವುಗಳಿಗಿವೆ. ಆದ್ದರಿಂದ,  ವ್ಯಕ್ತಿಯೋರ್ವ ಪಕ್ಷೇತರನಾಗಿ ಸ್ಪರ್ಧಿಸು ವುದೆಂದರೆ, ಆ ಆಲದ ಮರವನ್ನು ಎದುರು ಹಾಕಿಕೊಂಡಂತೆ. ಅದರ ಬುಡದಲ್ಲಿ ಚಿಗುರಿಕೊಳ್ಳುವುದು ಸುಲಭದ ಸಾಹಸ ಅಲ್ಲ. ಹಣದ ಹೊರತಾದ ಹಲವಾರು ಅಗತ್ಯಗಳು ಮತ್ತು ಅನೇಕಾರು ಅರ್ಹತೆಗಳು  ಆತನಲ್ಲಿರಬೇಕಾಗುತ್ತದೆ. ಮಾತ್ರವಲ್ಲ, ಇವೆಲ್ಲ ಇದ್ದೂ ಸೋಲಾಗುವ ಸಾಧ್ಯತೆಯೇ ಹೆಚ್ಚು. ಈ ದೇಶದ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಪಕ್ಷೇತರರ ಸಂಖ್ಯೆ ಜುಜುಬಿಯಾಗಿರುವುದೇ ಇದಕ್ಕೆ ಉತ್ತಮ ಪುರಾವೆ. ಈ ದೇಶದ ಯಾವ ರಾಜ್ಯ ವ ನ್ನೂ ಪಕ್ಷೇತರರು ಆಳುತ್ತಿಲ್ಲ. ಪಕ್ಷೇತರರು ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಬಹುಮತ ಪಡೆದದ್ದಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಚುನಾವಣೆಯಲ್ಲಿ ಓರ್ವ ಅಭ್ಯರ್ಥಿಯ ಗೆಲುವಿಗೂ ಆತನ ಸ್ಪರ್ಧಾ ರೀತಿಗೂ ಸಂಬಂಧವಿರುತ್ತದೆ.  ಯಾವುದಾದರೊಂದು ರಾಜಕೀಯ ಪಕ್ಷದ ಅಭ್ಯರ್ಥಿಯಾಗಿದ್ದು ಕೊಂಡು ಸ್ಪರ್ಧಿಸುವುದು ಪಕ್ಷೇತರನಾಗಿ ಸ್ಪರ್ಧಿಸುವುದಕ್ಕಿಂತ ಹೆಚ್ಚು ಸುರಕ್ಷಿತ. ಅದರಲ್ಲೂ ಬಲಾಢ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗೆಲುವಿನ  ದೃಷ್ಟಿಯಿಂದ ಇನ್ನೂ ಸುರಕ್ಷಿತ. ಅಂದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ಮತವೇ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಎಂದು ಹೇಳಬಹುದು. ಆದರೆ, ಇದು ಮೇಲು ಮೇಲಿನ ವ್ಯಾಖ್ಯಾನ ಅಷ್ಟೇ. ಈ ವ್ಯಾಖ್ಯಾನದ ಒಳಗಡೆ ಕತ್ತಲೆಯಿದೆ.  ಒಂದುವೇಳೆ, ಈ ಬಗೆಯ ವ್ಯಾಖ್ಯಾನವೇ ಪರಮ ಸತ್ಯ ಎಂದಾಗಿರುತ್ತಿದ್ದರೆ ಪಕ್ಷೇತರ ಅಭ್ಯರ್ಥಿಗಳ ಗೆಲುವು ಯಾಕೆ ಕಠಿಣ ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಈ ವ್ಯವಸ್ಥೆಯಲ್ಲಿ ಜನರ ಮತ ನಿರ್ಣಾಯ ಕವೇ ಆಗಿರಬಹುದು. ಆದರೆ ಜನರ ಮತವನ್ನು  ನಿರ್ದಿಷ್ಟ ಚೌಕಟ್ಟಿನೊಳಗಡೆ ಕೇಂದ್ರೀಕರಿಸುವಲ್ಲಿ ಮತ್ತು ಪಕ್ಷೇತರ ಇತ್ಯಾದಿಗಳಿಗೆ ಚದುರಿ ಹೋಗದಂತೆ ತಡೆಯುವಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ರಾಜಕೀಯ ಪಕ್ಷಗಳೆಂದರೆ, ಮೇಜು-ಕುರ್ಚಿಗಳಲ್ಲವಲ್ಲ. ಅದೊಂದು  ಜನರ ಗುಂಪು. ತಮ್ಮವರ ಗೆಲುವಿಗೆ ಸಂಘಟಿತವಾಗಿ ಪ್ರಯತ್ನಿಸುವುದೇ ಈ ಗುಂಪಿನ ಗುರಿ. ಪಕ್ಷೇತರ ಅಭ್ಯರ್ಥಿಯ ಪಾಲಿಗೆ ಇಂಥ ಸಂಘಟಿತ ವ್ಯವಸ್ಥೆ ಇರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಎದುರು ಪಕ್ಷೇತರ ಅಭ್ಯರ್ಥಿ  ಯಾಕೆ ವಿಫಲವಾಗುತ್ತಾನೆ ಅನ್ನುವುದಕ್ಕೆ ಉತ್ತರ ಇಲ್ಲೆಲ್ಲೋ  ಇದೆ. ಮತದಾರರೂ ಅಷ್ಟೇ. ಪಕ್ಷೇತರ ಅಭ್ಯರ್ಥಿಗಿಂತ ರಾಜಕೀಯ ಪಕ್ಷಗಳ ಮೂಲಕ ಸ್ಪರ್ಧಿಸುವ ಅಭ್ಯರ್ಥಿಯ ಮೇಲೆಯೇ ಹೆಚ್ಚು ವಿಶ್ವಾಸ ತಾಳುತ್ತಾರೆ. ಆದ್ದರಿಂದ ಓರ್ವ ವ್ಯಕ್ತಿ ಒಂದು  ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದೆಂದರೆ, ಅದು ಬಲುದೊಡ್ಡ ಜವಾಬ್ದಾರಿ. ಪಕ್ಷೇತರನಾಗಿ ಸ್ಪರ್ಧಿಸಿದರೆ ಲಭ್ಯವಾಗದ ಗೆಲುವನ್ನು ರಾಜಕೀಯ ಪಕ್ಷದ ಮೂಲಕ ಸ್ಪರ್ಧಿಸು ವಾಗ  ಲಭ್ಯವಾಗಿಸುತ್ತದೆ. ಜನರು ಆತನಿಗೆ ಮತ ಹಾಕುವುದಕ್ಕಿಂತ ಆತ ಪ್ರತಿನಿಧಿಸುವ ಬಿಜೆಪಿಗೋ ಕಾಂಗ್ರೆಸ್ಸಿಗೋ ಮತ ಹಾಕುತ್ತಾರೆ. ಆ ಮತ ಆತನನ್ನು ಗೆಲ್ಲಿಸುತ್ತದೆ. ಇಲ್ಲಿ ಆತನ ವೈಯಕ್ತಿಕ ವರ್ಚಸ್ಸಿಗಿಂತ ಹೆಚ್ಚು ಆತ ಪ್ರತಿನಿಧಿಸುವ ಪಕ್ಷ ಮತ್ತು ಪಕ್ಷದ  ಮೇಲೆ ವಿಶ್ವಾಸ ತಾಳಿರುವ ಮತದಾರರು ಮುಖ್ಯವಾಗುತ್ತಾರೆ. ಕರ್ನಾಟಕದ ರೆಸಾರ್ಟ್ ರಾಜಕೀಯ ಮತ್ತು ತೆಲಂಗಾಣ ಹಾಗೂ ಗೋವಾದ ಪಕ್ಷಾಂತರ ರಾಜಕೀಯ ಪ್ರಶ್ನಾರ್ಹವಾಗುವುದು ಈ ಕಾರಣದಿಂದಲೇ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ  ಸ್ಪರ್ಧಿಸಿ ಆಯ್ಕೆಯಾದ 12 ಮಂದಿ ಶಾಸಕರು ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್.)ಯನ್ನು ಸೇರಿಕೊಂಡಿರುವುದು ಪ್ರಜಾತಾಂತ್ರಿಕವಾಗಿ ಎಷ್ಟು ಸರಿ? ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯ ವೇಳೆ ಈ ಅಭ್ಯರ್ಥಿಗಳು ಇಂಥದ್ದೊಂದು   ಸುಳಿವನ್ನು ಮತದಾರರಿಗೆ ನೀಡಿದ್ದರೆ? ತಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರೂ ಸಂದರ್ಭ ಬಂದಾಗ ಟಿ.ಆರ್.ಎಸ್. ಸೇರಿಕೊಳ್ಳುವೆವು ಎಂದು ಮತದಾರರಿಗೆ ಮಾತು ಕೊಟ್ಟಿದ್ದರೆ? ಬಿಜೆಪಿಗೆ ಸೇರ್ಪಡೆಗೊಂಡ ಗೋವಾದ 10 ಮಂದಿ ಕಾಂಗ್ರೆಸ್  ಶಾಸಕರಿಗೂ ಇವೇ ಪ್ರಶ್ನೆಗಳು ಅನ್ವಯಿಸುತ್ತವೆ. ಪ್ರಜಾತಂತ್ರ ಅಂದರೆ ಮೋಸ ಎಂದು ಅರ್ಥವಲ್ಲವಲ್ಲ. ಪ್ರಜೆಗಳೇ ಆರಿಸುವ ಅಭ್ಯರ್ಥಿ ಎಂಬ ನೆಲೆಯಲ್ಲಿ ಪ್ರತಿ ಪ್ರತಿನಿಧಿಯೂ ಮತದಾರರಿಗೆ ಉತ್ತರದಾಯಿಯಾಗಿರುತ್ತಾನೆ. ಒಂದುವೇಳೆ, ಸ್ಪರ್ಧೆಯ  ಸಂದರ್ಭದಲ್ಲೇ  ತನ್ನ ಪಕ್ಷಾಂತರದ ಬಗ್ಗೆ, ಅತೃಪ್ತಿ ಹೊಂದಿ ರಾಜೀನಾಮೆ ನೀಡುವುದರ ಬಗ್ಗೆ, ಬಂಡಾಯ ಏಳುವುದರ ಬಗ್ಗೆ ಮತದಾರರೊಂದಿಗೆ ಹೇಳಿಕೊಂಡಿರುತ್ತಿದ್ದರೆ ಒಂದು ಹಂತದವರೆಗೆ ಇಂಥ ಪಕ್ಷಾಂತರ ಮತ್ತು ಅತೃಪ್ತಿ ರಾಜೀನಾಮೆಯ ನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ, ಯಾವ ಅಭ್ಯರ್ಥಿಯೂ ಇಂಥದ್ದೊಂದು  ಸಣ್ಣ ಸೂಚನೆಯನ್ನೂ ಚುನಾ ವಣೆಯ ಸಂದರ್ಭದಲ್ಲಿ ಮತದಾರರೊಂದಿಗೆ ಹಂಚಿಕೊಂಡಿರುವುದಿಲ್ಲ. ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದೇ ಚುನಾವಣಾ  ಭಾಷಣವನ್ನು ಆರಂಭಿಸಿರುತ್ತಾನೆ. ಜನರು ಈತನಿಗೆ ಮತ ಚಲಾಯಿಸುವುದಕ್ಕೂ ಈ ನಿಷ್ಠಾವಂತಿಕೆಗೆ ಪಾತ್ರ ಇರುತ್ತದೆ. ಸ್ಪರ್ಧೆಯ ಸಂದರ್ಭದಲ್ಲೇ  ಮುಂದೊಂದು ದಿನ ತಾನು ಇನ್ನೊಂದು ಪಕ್ಷಕ್ಕೆ ಪಕ್ಷಾಂತರವಾಗಬಹುದು ಅಥವಾ ಅತೃಪ್ತಿ ಯಿಂದ  ರಾಜೀನಾಮೆ ಕೊಟ್ಟು ರೆಸಾರ್ಟಲ್ಲಿ ತಂಗಬಹುದು ಎಂದು ಹೇಳಿರುತ್ತಿದ್ದರೆ ಆತ ತಕ್ಷಣ ತನ್ನ ಅಭ್ಯರ್ಥಿತನವನ್ನು ಕಳಕೊಳ್ಳುತ್ತಿದ್ದ. ಅಂದರೆ, ಆತನ ಗೆಲುವಿನಲ್ಲಿ ಪಕ್ಷನಿಷ್ಠೆಗೆ ಪ್ರಮುಖ ಪಾತ್ರ ಇರುತ್ತದೆ. ಆತ ಯಾವ ಪಕ್ಷದಿಂದ ಸ್ಪರ್ಧಿಸಿರುತ್ತಾನೋ  ಅದರಲ್ಲೇ  ಉಳಿಯುತ್ತಾನೆ ಅನ್ನುವ ವಿಶ್ವಾಸದಿಂದ ಜನರು ಮತ ಚಲಾಯಿಸಿರುತ್ತಾರೆ. ಹೀಗಿರುವಾಗ, ಪಕ್ಷಾಂತರ ಎಂಬುದು ಜನರಿಗೆ ಮಾಡುವ ಮೋಸ ಅಲ್ಲದೇ ಇನ್ನೇನು? ಯಾವುದೇ ಜನಪ್ರತಿನಿಧಿಗೆ ತನ್ನ ಪಕ್ಷದ ಮೇಲೆ ಅತೃಪ್ತಿ ಉಂಟಾಗಿದ್ದರೆ ಆತ  ಕ್ಷೇತ್ರದ ಮತದಾರರೊಂದಿಗೆ ಸಮಾ ಲೋಚಿಸಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕೇ ಹೊರತು ರೆಸಾರ್ಟಲ್ಲಿ ಉಳಿಯುವುದಲ್ಲ. ಅಷ್ಟಕ್ಕೂ, ಈ ರಾಜೀನಾಮೆ ಕೊಟ್ಟು ರೆಸಾರ್ಟಲ್ಲಿ ಉಳಿದಿರುವ ಶಾಸಕರ ಅತೃಪ್ತಿ ಯಾವ ವಿಷಯದಲ್ಲಿ? ಕ್ಷೇತ್ರದ  ಅಭಿವೃದ್ಧಿಯ ವಿಷಯದಲ್ಲಿಯೇ? ತನ್ನ ಕ್ಷೇತ್ರಕ್ಕೆ ಅನುದಾನ ಪಡಕೊಳ್ಳುವ ವಿಷಯದಲ್ಲೇ? ಸರಕಾರದ ಮೇಲೆಯೇ? ಪಕ್ಷದ ಕಾರ್ಯ ನಿರ್ವಹಣೆಯ ಕುರಿತೇ? ಅತೃಪ್ತಿಗೆ ಇವುಗಳಲ್ಲಿ ಯಾವುದೇ ಕಾರಣ ಆಗಿದ್ದರೂ ಅದಕ್ಕೆ ಪರಿಹಾರ ಯಾವುದು?  ಮುಂಬೈಯ ಹೊಟೇಲಲ್ಲಿ ತಂಗುವುದು ಯಾರ ಹಿತಕ್ಕಾಗಿ? ಅಂದಹಾಗೆ,
ಅರಬ್ ರಾಷ್ಟ್ರಗಳಲ್ಲಿ ಅಥವಾ ಸರ್ವಾಧಿಕಾರಿಗಳ ಹಿಡಿತದಲ್ಲಿರುವ ರಾಷ್ಟ್ರಗಳಲ್ಲಿ ಇವತ್ತು ಪ್ರಜಾತಂತ್ರದ ಕೂಗು ಎಷ್ಟು ದೊಡ್ಡ ಮಟ್ಟದಲ್ಲಿ ಕೇಳುತ್ತಿದೆಯೆಂದರೆ, ಪ್ರಜಾತಂತ್ರ ಎಂಬುದು ಸರ್ವರೋಗ ನಿವಾರಕ ಎಂದು ಯಾರೇ ಆಗಲಿ ಅಂದುಕೊಳ್ಳಬೇಕು.  ಈ ಕೂಗಿಗೆ ಆ ಜನರು ತೆರುತ್ತಿರುವ ದಂಡವಂತೂ ಅತ್ಯಂತ ಆಘಾತಕಾರಿಯಾದುದು. ಪ್ರಜಾತಂತ್ರ ಇರುವ ರಾಷ್ಟ್ರಗಳಿಗೆ ಓಡಿ ಬರುತ್ತಿರುವ ಅವರಲ್ಲಿ ಅಸಂಖ್ಯ ಮಂದಿ ನೀರಿನಲ್ಲಿ ಮುಳುಗಿಯೋ ಮರಳುಗಾಡಿನಲ್ಲಿ ಹೂತೋ ಗಡಿಯ ಬಾಗಿಲುಗಳು  ತೆರೆಯದೆಯೋ ಸಾವಿಗೀಡಾಗುತ್ತಿದ್ದಾರೆ. ಆದರೂ ಅವರ ಪ್ರಜಾತಂತ್ರ ಪರ ಕೂಗು ನಿಂತಿಲ್ಲ. ಚೀನಾದ ತಿಯೆನ್ಮಾನ್ ಚೌಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಜಾತಂತ್ರವನ್ನು ಆಗ್ರಹಿಸಿ 1989ರಲ್ಲಿ ಬಿಡಾರ ಹೂಡಿದರು. ಅವರನ್ನೆಲ್ಲ ಚೀನಾದ ಸರಕಾರ  ಸೇನಾ ಟ್ಯಾಂಕರ್‍ಗಳನ್ನು ಹರಿಸಿ ಕೊಂದು ಹಾಕಿತು. ಆದರೂ ಅಲ್ಲಿನ ಜನರ ಪ್ರಜಾತಂತ್ರ ಪರ ಬಯಕೆ ಕೊನೆಗೊಂಡಿಲ್ಲ. ಸುಡಾನ್‍ನ ಜನರು ಈಗ ಬೀದಿಯಲ್ಲಿದ್ದಾರೆ. ಅವರಿಗೂ ಸರ್ವಾಧಿಕಾರದಿಂದ ಮುಕ್ತಿ ಸಿಗಬೇಕೆಂಬ ಹಠ; ಪ್ರಜಾತಂತ್ರ  ಬರಬೇಕೆಂಬ ಆಸೆ. ಇದೇವೇಳೆ, ಪ್ರಜಾತಂತ್ರ ಅನ್ನುವ ಪರಿಕಲ್ಪನೆ ಎಷ್ಟು ಯಶಸ್ವಿ ಅನ್ನುವ ಪ್ರಶ್ನೆಯನ್ನು ಭಾರತೀಯ ಪ್ರಜಾತಂತ್ರವಂತೂ ಖಂಡಿತ ಎತ್ತುತ್ತಿದೆ. ಜನಪ್ರತಿನಿಧಿಯ ಮೇಲೆ ಜನರಿಗೆ ನಿಯಂತ್ರಣವೇ ಇಲ್ಲದ ವ್ಯವಸ್ಥೆಯೊಂದು ಸರ್ವಾಧಿಕಾರಿ  ವ್ಯವಸ್ಥೆಗಿಂತ ಎಷ್ಟು ಭಿನ್ನ ಮತ್ತು ಹೇಗೆಲ್ಲ ಭಿನ್ನ ಅನ್ನುವ ಚರ್ಚೆಯೊಂದಕ್ಕೆ ಭಾರತೀಯ ಪ್ರಜಾತಂತ್ರ ತೆರೆದುಕೊಳ್ಳ ಬೇಕಾದ ಜರೂರತ್ತು ಇವತ್ತಿನದು. ಅತ್ಯಂತ ಬಲಾಢ್ಯ ರಾಜಕೀಯ ಪಕ್ಷವು ತೀರಾ ಅಯೋಗ್ಯ ವ್ಯಕ್ತಿಯನ್ನೂ ಅಭ್ಯರ್ಥಿಯನ್ನಾಗಿ ಚುನಾವಣಾ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಹೋಗಬಹುದಾದ ಸ್ಥಿತಿ ಭಾರತೀಯ ಪ್ರಜಾತಂತ್ರದಲ್ಲಿ ನಿರ್ಮಾಣವಾಗಿರುವುದು ಹೇಗೆ? ಈ ಸ್ಥಿತಿಗೆ ಪರ್ಯಾಯ ಏನು? ನಾವೀಗ ಒಪ್ಪಿಕೊಂಡಿರುವ ಪ್ರಜಾತಂತ್ರ ವ್ಯವಸ್ಥೆಯೇ ಅಂತಿಮವೇ? ಇದರಾಚೆಗೆ  ಪರ್ಯಾಯ ವ್ಯವಸ್ಥೆಯೊಂದನ್ನು ಕನಸಬಹುದೇ? ಈಗಿನ ವ್ಯವಸ್ಥೆಯಲ್ಲಿ  ಯಾವೆಲ್ಲ ಮಾರ್ಪಾಡುಗಳನ್ನು ತರಬಹುದು? ಪ್ರಜಾತಂತ್ರ ವ್ಯವಸ್ಥೆಯನ್ನು ಜನರ ನಿಜವಾದ ಪ್ರಾತಿನಿಧಿಕ ವ್ಯವಸ್ಥೆಯನ್ನಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳು  ಯಾವುವು? ಹಾಗಂತ,
ಅತೃಪ್ತಿಯ ಹೆಸರಲ್ಲಿ ರಾಜೀನಾಮೆ ಕೊಟ್ಟು ಮುಂಬೈಯ ಹೊಟೇಲಲ್ಲಿ ತಂಗಿರುವ ಶಾಸಕರ ಮೇಲೆ ಮೋಬ್ ಲಿಂಚಿಂಗ್ (ಗುಂಪು ಥಳಿತ) ನಡೆಯಬೇಕು ಎಂದ ಗೆಳೆಯನ ಆಕ್ರೋಶದಲ್ಲಿ ಒರಟುತನವಿದ್ದರೂ ಮತ್ತು ಅದು ಕಾನೂನುಬಾಹಿರ  ಬಯಕೆಯೇ ಆಗಿದ್ದರೂ ಆ ಆಕ್ರೋಶಕ್ಕೆ ಈಗಿನ ರಾಜಕೀಯವೇ ಮೂಲ ಕಾರಣ ಅನ್ನುವುದನ್ನು ನಿರಾಕರಿಸುವ ಹಾಗಿಲ್ಲ.

Tuesday, July 16, 2019

ಬುರ್ಖಾ, ಸೀರೆ, ಸಲ್ವಾರ್ ಏನೇ ತೊಟ್ಟಿದ್ದರೂ ಆಕೆ ಬರೇ ಹೆಣ್ಣು



ದಕ್ಷಿಣ ಕನ್ನಡ ಜಿಯ ಪುತ್ತೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿಯೋರ್ವಳ ಸಾಮೂಹಿಕ ಅತ್ಯಾಚಾರವು ಕೆಲವು ಮೂಲಭೂತ ಪ್ರಶ್ನೆಗಳನ್ನು ಹುಟ್ಟು ಹಾಕಿದೆ:
1. ಈ ಕ್ರೌರ್ಯವು ಒಂದು ದಿನದ ಸೆನ್ಸೇಶನಲ್ ಸುದ್ದಿಯಾಗಿ ಆ ಬಳಿಕ ಠುಸ್ಸಾದುದು ಏಕೆ? ಇದರ ಹಿಂದಿರುವ ಲೆಕ್ಕಾಚಾರವೇನು?
2. ಅತ್ಯಾಚಾರಕ್ಕೊಳಗಾದ ಯುವತಿ ದಲಿತ ಸಮುದಾಯದವ ಳಾಗಿದ್ದೂ ದಲಿತ ಸಂಘಟನೆಗಳಿಂದ ಈ ಬಗ್ಗೆ ದೊಡ್ಡ ದನಿಯಲ್ಲಿ ಪ್ರತಿಭಟನೆ ವ್ಯಕ್ತವಾಗದಿರುವುದಕ್ಕೆ ಕಾರಣಗಳೇನು? ಕನಿಷ್ಠ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಲಿತ ಸಂಘಟನೆಗಳು ಬೀದಿಯಲ್ಲಿರಬೇಕಾದ ಈ ಹೊತ್ತು, ಯಾಕೆ ಅವು ಮನೆಯಲ್ಲಿವೆ?
3. ಪುತ್ತೂರಿನ ಶಾಸಕರು ಬಿಜೆಪಿಯವರು. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರೇ ಇದ್ದಾರೆ. ಇಲ್ಲಿನ ಸಂಸದರೂ ಬಿಜೆಪಿಯವರೇ. ಪಕ್ಕದ ಉಡುಪಿಯ ಸಂಸದರಾಗಿರುವವರೂ ಬಿಜೆಪಿಯವರೇ-  ಶೋಭಾ ಕರಂದ್ಲಾಜೆ. ಹೀಗೆಲ್ಲಾ  ಇದ್ದೂ ಬಿಜೆಪಿ ಈ ಅತ್ಯಾಚಾರದ ವಿರುದ್ಧ ಪ್ರತಿಭಟನೆ, ರಾಲಿ, ಧರಣಿ ಇತ್ಯಾದಿಗಳನ್ನು ಹಮ್ಮಿಕೊಳ್ಳದಿರುವುದೇಕೆ?
ಹೀಗೆಲ್ಲಾ  ಪ್ರಶ್ನಿಸುವುದಕ್ಕೆ ಕಾರಣಗಳಿವೆ.
ಅತ್ಯಾಚಾರ ಈ ದೇಶಕ್ಕೆ ಹೊಸತಲ್ಲ. ಈ ರಾಜ್ಯಕ್ಕೂ ಹೊಸತಲ್ಲ. ಆದರೆ, ಹೆಣ್ಣು ಮಗಳೊಬ್ಬಳನ್ನು ನಾಲ್ವರು ಸಾಮೂಹಿಕವಾಗಿ ಅತ್ಯಾಚಾರಗೈಯುವುದು, ಅದನ್ನು ಚಿತ್ರೀಕರಿಸುವುದು ಮತ್ತು ಆ ವೀಡಿಯೋವನ್ನು ಸಾರ್ವಜನಿಕವಾಗಿ ಹಂಚುವುದು  ಹೊಸತು. ಅತ್ಯಾಚಾರವನ್ನು ಚಿತ್ರೀಕರಿಸಿ ತಮ್ಮ ಮೊಬೈಲ್‍ನಲ್ಲಿ ಕಾಪಿಟ್ಟುಕೊಳ್ಳುವ ಮನಸ್ಥಿತಿ ಸಹಜವಾದುದಲ್ಲ. ಅದು, ಆ ಅತ್ಯಾಚಾರದ ಬಳಿಕವೂ ಆ ಅತ್ಯಾಚಾರವನ್ನು ಮತ್ತೆ ಮತ್ತೆ ಅನು ಭವಿಸುವ ದುಷ್ಟತನವನ್ನು ಸೂಚಿಸುತ್ತದೆ. ಅಲ್ಲದೇ,  ಅತ್ಯಾಚಾರಕ್ಕೊಳಗಾದ ಯುವತಿಯನ್ನು ಬೆದರಿಸಿ ಮತ್ತೆ ಮತ್ತೆ ಅತ್ಯಾಚಾರಕ್ಕೆ ಒಗ್ಗುವಂತೆ ಮಾಡುವ ಕಟುಕತನವೂ ಅದರಲ್ಲಿದೆ. ಈ ಮನಸ್ಥಿತಿ ಅತ್ಯಾಚಾರಕ್ಕಿಂತ ಹೇಯವಾದುದು ಮತ್ತು ಆ ಅತ್ಯಾಚಾರಿಗಳು ಕ್ರಿಮಿನಲ್ ಮನಸ್ಥಿತಿಯವರು ಎಂಬುದನ್ನು  ಸಾಬೀತುಪಡಿಸು ವಂಥದ್ದು. ದೆಹಲಿಯ ನಿರ್ಭಯ ಪ್ರಕರಣವು ರಾಷ್ಟ್ರೀಯ ಸಂಚಲನ ಸೃಷ್ಟಿಸಿದುದಕ್ಕೆ ಇದ್ದ ಹಲವು ಕಾರಣಗಳಲ್ಲಿ ಒಂದು ಏನೆಂದರೆ, ಅದು ಒಳಗೊಂಡಿದ್ದ ಪೈಶಾಚಿಕತೆ. ಅದು ಅತ್ಯಾಚಾರ ವಷ್ಟೇ ಆಗಿರಲಿಲ್ಲ. ಅತ್ಯಾಚಾರಿಗಳು ಯಾವ  ಮನಸ್ಥಿತಿಯವರು ಮತ್ತು ಆ ಮನಸ್ಥಿತಿ ಈ ಜಗತ್ತಿನ ಪಾಲಿಗೆ ಎಷ್ಟು ಅಪಾಯಕಾರಿ ಅನ್ನುವುದನ್ನು ಸ್ಪಷ್ಟಪಡಿಸುವ ಸನ್ನಿವೇಶವೂ ಆಗಿತ್ತು. ಅವರು ನಿರ್ಭಯಳ ದೇಹವನ್ನು ಇಂಚಿಂಚೂ ತಿವಿದರು. ಚಿತ್ರಹಿಂಸೆ ಕೊಟ್ಟರು. ರಕ್ತದಿಂದ ತೋಯುತ್ತಿದ್ದ  ಜೀವವನ್ನು ರಸ್ತೆಗೆಸೆದರು. ಇದರಲ್ಲಿ ಎರಡು ಮನಸ್ಥಿತಿಯ ಪರಿಚಯವಾಗುತ್ತದೆ.
1. ಹೆಣ್ಣನ್ನು ಭೋಗ ವಸ್ತು ಮತ್ತು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಳ್ಳಬಹುದಾದ ವಸ್ತು ಎಂಬಂತೆ ಪರಿಗಣಿಸುವುದು.
2. ತಮ್ಮ ಇಚ್ಛೆಯನ್ನು ತಿರಸ್ಕರಿಸುವ ಹೆಣ್ಣನ್ನು ಮೃಗಗಳಂತೆ ಹಂಚಿ ತಿನ್ನುವುದು.
ಪುತ್ತೂರಿನ ಪ್ರಕರಣಕ್ಕೂ ನಿರ್ಭಯ ಪ್ರಕರಣಕ್ಕೂ ನಡುವೆ ಇರುವ ಸಾಮ್ಯತೆ ಏನೆಂದರೆ, ಎರಡೂ ಕಡೆಯೂ ಸಾಮೂಹಿಕ ಅತ್ಯಾಚಾರ ನಡೆದಿದೆ. ಆದರೆ ನಿರ್ಭಯ ಪ್ರಕರಣದಲ್ಲಿ ಚಿತ್ರೀಕರಣ ನಡೆದಿರಲಿಲ್ಲ. ಪುತ್ತೂರಿನ ಪ್ರಕರಣದಲ್ಲಿ ಅತ್ಯಾಚಾರದ ಜೊತೆ ಚಿತ್ರೀಕರಣವೂ ನಡೆದಿದೆ. ನಿರ್ಭಯಳ ಮೇಲೆ ಅತ್ಯಾಚಾರದ ಜೊತೆ ದೈಹಿಕ ಹಿಂಸೆಯನ್ನೂ ಎಸಗಲಾಗಿತ್ತು. ಪುತ್ತೂರಿನ ಅತ್ಯಾಚಾರವು ಈ ದೈಹಿಕ ಹಿಂಸೆಯಿಂದ ಹೊರತಾಗಿದೆ. ನಿಜವಾಗಿ, ಇಲ್ಲಿರುವ ವ್ಯತ್ಯಾಸ ತೆಳುವಾದುದು. ದೈಹಿಕ ಹಿಂಸೆಯು  ಒಂದು ಬಾರಿ ನೋವನ್ನು ಕೊಟ್ಟರೆ, ಅತ್ಯಾಚಾರದ ವೀಡಿಯೋವು ಅಸಂಖ್ಯ ಬಾರಿ ನೋವನ್ನು ಕೊಡುತ್ತಲೇ ಇರುತ್ತದೆ. ಪರಿಣಾಮದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಸಂಗತಿಯಿದು. ನಿರ್ಭಯಳ ವಿಷಯದಲ್ಲಿ ಆಯುಧಗಳು ಬಳಕೆಯಾಗಿದ್ದರೆ,  ಇಲ್ಲಿ ಕ್ಯಾಮರಾ ಬಳಕೆಯಾಗಿದೆ. ಇದರಾಚೆಗೆ ನೋಡುವುದಾದರೆ ಎರಡೂ ಹಿಂಸೆಯೇ. ಆದರೂ ರಾಷ್ಟ್ರಮಟ್ಟದಲ್ಲಿ ಬಿಡಿ, ರಾಜ್ಯಮಟ್ಟದಲ್ಲಾದರೂ ತೀವ್ರ ಪ್ರತಿಭಟನೆ, ಕ್ಯಾಂಡಲ್ ಲೈಟ್ ನಡಿಗೆ, ಧರಣಿ, ಮನವಿ ಸಲ್ಲಿಕೆ ಇತ್ಯಾದಿ ಇತ್ಯಾದಿಗಳು ಭಾರೀ  ಮಟ್ಟದಲ್ಲಿ ಕಾಣಿಸಿಕೊಳ್ಳದಿರಲು ಕಾರಣವೇನು? ಜಾತಿಯೇ? ನಿರ್ಭಯ ಮೇಲ್ಜಾತಿಯ ಹೆಣ್ಣು ಮಗಳು ಮತ್ತು ಪುತ್ತೂರಿನ ಸಂತ್ರಸ್ತೆ ದಲಿತ ಹೆಣ್ಣು ಮಗಳು ಎಂಬುದು ಇದಕ್ಕಿರುವ ಕಾರಣವೇ? ಅತ್ಯಾಚಾರದ ಆರೋಪ ಹೊತ್ತ ಯುವಕರು ಬಿಜೆಪಿಯ  ಬೆಂಬಲಿಗರು ಎಂಬುದೂ ಇನ್ನೊಂದು ಕಾರಣವೇ? ಹಾಗಿದ್ದರೆ, ದಲಿತ ಸಂಘಟನೆಗಳನ್ನು ಮೌನವಾಗಿಸಿದ್ದು ಯಾವುದು? ಇದಕ್ಕೂ ರಾಜಕೀಯ ಆಯಾಮವಿದೆಯೇ?
2012ರಲ್ಲಿ ಪ್ರಧಾನಿಯಾಗಿದ್ದುದು ಮನ್‍ಮೋಹನ್ ಸಿಂಗ್. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಆಗ ಅಧಿಕಾರದಲ್ಲಿತ್ತು. ಹಾಗಿದ್ದೂ, ನಿರ್ಭಯಳಿಗಾಗಿ ದೇಶವನ್ನೇ ಒಂದಾಗಿಸಲು ಮತ್ತು ಬೀದಿಗಿಳಿಯುವಂತೆ ಮಾಡಲು ಬಿಜೆಪಿ ಯಶಸ್ವಿಯಾಗಿತ್ತು.  ಅಂದಮೇಲೆ, ಪುತ್ತೂರಿನ ಘಟನೆಯನ್ನು ನಾಗರಿಕ ಆಕ್ರೋಶವಾಗಿ ಪರಿವರ್ತಿಸುವುದು ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಕಷ್ಟವೇ ಅಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಹಿಂದೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ  ಚಳವಳಿಯ ಪಾಲು ಇರುವಂತೆಯೇ ನಿರ್ಭಯ ಪ್ರಕರಣದಲ್ಲಿ ಬಿಜೆಪಿ ಹುಟ್ಟು ಹಾಕಿದ ಸಾರ್ವಜನಿಕ ಆಕ್ರೋಶಕ್ಕೂ ಪಾಲು ಇದೆ. ಒಂದು ಭೀಕರ ಅತ್ಯಾಚಾರವನ್ನು ಹೇಗೆ ರಾಷ್ಟ್ರೀಯ ಇಶ್ಶೂ ಆಗಿ ಬದಲಾಯಿಸಬಹುದು ಎಂಬುದನ್ನು ಅತ್ಯಂತ  ಪರಿಣಾಮಕಾರಿ ಯಾಗಿ ಬಿಜೆಪಿ ಅಂದು ತೋರಿಸಿಕೊಟ್ಟಿತ್ತು. ಶಾಲಾ ಮಕ್ಕಳನ್ನು ಅದು ಬೀದಿಗಿಳಿಸಿತ್ತು. ಸರಕಾರಿ ನೌಕರರು, ಮಹಿಳಾ ಸಂಘಟನೆಗಳು, ಸರಕಾರೇತರ ಸಂಸ್ಥೆಗಳು ಇತ್ಯಾದಿ ಎಲ್ಲರೂ ಎಲ್ಲವೂ ಒಂದು ಯುದ್ಧದಲ್ಲಿ ಪಾಲ್ಗೊಳ್ಳುವ  ರೀತಿಯಲ್ಲಿ ಅಂದು ಪ್ರತಿಭಟಿಸಿದ್ದರೆ, ಅದನ್ನು ಪ್ರಚೋದಿಸಿದ್ದು ಬಿಜೆಪಿಯೇ. ಹೀಗಿರುವಾಗ, ಬಿಜೆಪಿಯ ಈಗಿನ ಮೌನವನ್ನು ಅನುಮಾನಿಸುವುದು ಯಾವ ರೀತಿಯಲ್ಲೂ ಅಪರಾಧವಾಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇದೆ.  ಈ ಸರಕಾರವನ್ನು ಉರುಳಿಸಿ ಯಡಿಯೂರಪ್ಪರ ನೇತೃತ್ವದಲ್ಲಿ ಸರಕಾರವನ್ನು ರಚಿಸಬೇಕೆಂಬುದು ಬಿಜೆಪಿಯ ಬಯಕೆ. ಬಹುಮತ ಇಲ್ಲದೆಯೂ ಈ ಮೊದಲು ಸರಕಾರ ರಚಿಸಿದ್ದು ಈ ಬಯಕೆಗೆ ಪುರಾವೆಯಾದರೆ, ಆ ಬಳಿಕದ ಹಲವು ಆಪರೇಶನ್  ಕಮಲ ಪ್ರಯತ್ನಗಳು ಇದಕ್ಕೆ ಇನ್ನಷ್ಟು ಪುರಾವೆಗಳಾಗಿವೆ. ಇಷ್ಟಿದ್ದೂ ಬಿಜೆಪಿಯೇಕೆ ಮೌನ ವ್ರತದಲ್ಲಿದೆ? ಮನ್‍ಮೋಹನ್ ಸಿಂಗ್ ಸರಕಾರವನ್ನು ಅಲುಗಾಡಿಸಲು ಮತ್ತು ಯುಪಿಎ ಸರಕಾರದ ವಿರುದ್ಧ ಜನಾಕ್ರೋಶವನ್ನು ಪ್ರಚೋದಿಸಲು ನಿರ್ಭಯ  ಪ್ರಕರಣವನ್ನು ಬಳಸಿಕೊಂಡಿದ್ದ ಬಿಜೆಪಿಯು ಕನಿಷ್ಠ ಕುಮಾರಸ್ವಾಮಿ ಸರಕಾರದ ಪತನಕ್ಕೆ ವೇದಿಕೆಯಾಗಿ ಪುತ್ತೂರು ಘಟನೆಯನ್ನು ಉಪಯೋಗಿಸದಿರಲು ಕಾರಣವೇನು? ಯಾವ ಲೆಕ್ಕಾಚಾರ ಹೀಗೆ ಮಾಡದಿರಲು ಬಿಜೆಪಿಗೆ ತಡೆಯಾಗಿದೆ? ಜಾತಿ  ಲೆಕ್ಕಾಚಾರವೇ? ಆರೋಪಿಗಳು ತಮ್ಮ ಬೆಂಬಲಿಗರು ಎಂಬ ಲೆಕ್ಕಾಚಾರವೇ? ಅಥವಾ ನಿರ್ಭಯ ಪ್ರಕರಣವನ್ನು ರಾಷ್ಟ್ರಮಟ್ಟದ ಚಳವಳಿಯಾಗಿ ಮಾರ್ಪಡಿಸುವುದಕ್ಕೆ ಆಕೆಯ ಮೇಲ್ಜಾತಿ ಕಾರಣವಾಗಿತ್ತೇ? ಪುತ್ತೂರಿನ ಸಂತ್ರಸ್ತ ವಿದ್ಯಾರ್ಥಿನಿ  ಕೆಳಜಾತಿಯವಳಾಗಿರುವುದು ಬಿಜೆಪಿಯ ನಿರಾಸಕ್ತಿಗೆ ಕಾರಣವೇ?
ಅತ್ಯಾಚಾರಕ್ಕೆ ಜಾತಿ-ಧರ್ಮಗಳ ಹಂಗಿಲ್ಲ. ಮೇಲ್ಜಾತಿ ಯುವ ತಿಯ ಮೇಲೆ ನಡೆಯುವ ಅತ್ಯಾಚಾರ ಅಕ್ಷಮ್ಯವೂ ಕೆಳಜಾತಿ ಯುವತಿಯ ಮೇಲೆ ನಡೆಯುವ ಅತ್ಯಾಚಾರ ಕ್ಷಮ್ಯವೂ ಆಗುವುದಕ್ಕೆ ಸಾಧ್ಯವೂ ಇಲ್ಲ. ಅತ್ಯಾಚಾರದ ನೋವು, ಸಂಕಟ,  ಅವಮಾನ, ಭಯಾನಕತೆ ಎಲ್ಲವೂ ಎಲ್ಲ ಜಾತಿಯ ಹೆಣ್ಣು ಮಕ್ಕಳ ಪಾಲಿಗೂ ಸಮಾನ. ಪುತ್ತೂರಿನ ಸಂತ್ರಸ್ತೆ ಮತ್ತು ದೆಹಲಿಯ ನಿರ್ಭಯ ನಮ್ಮ ಪಾಲಿಗೆ ಮುಖ್ಯವಾಗಬೇಕಾದುದು ಈ ಹಿನ್ನೆಲೆಯಲ್ಲಿ. ಅವರಿಬ್ಬರೂ ಹೆಣ್ಣು ಮಕ್ಕಳು. ಬರೇ ಹೆಣ್ಣು  ಮಕ್ಕಳು. ಮೇಲ್ಜಾತಿ ಮತ್ತು ಕೆಳಜಾತಿ ಎಂಬುದು ಅತ್ಯಾ   ಚಾರಕ್ಕೆ ಸಂಬಂಧಿಸಿ ನಗಣ್ಯ. ದುರಂತ ಏನೆಂದರೆ, ನಿರ್ಭಯ ಪ್ರಕರಣದಲ್ಲಿ ಜಾತಿಯನ್ನೂ ಮೀರಿದ ಮತ್ತು ಪಕ್ಷವನ್ನೂ ಲೆಕ್ಕಿಸದ ಏಕೀಕೃತ ದನಿಯೊಂದು ರಾಷ್ಟ್ರದಾದ್ಯಂತ ಮೊಳಗಿದ್ದರೆ,  ಪುತ್ತೂರು ಪ್ರಕರಣಕ್ಕೆ ಅದರ ಒಂದಂಶ ಮಹತ್ವವೂ ಲಭ್ಯವಾಗಿಲ್ಲ. ಟಿ.ವಿ. ಮಾಧ್ಯಮವು ಅದನ್ನು ಒಂದು ದಿನದ ಬ್ರೇಕಿಂಗ್ ನ್ಯೂಸ್ ಆಗಿಸಿ ಚಪ್ಪರಿಸಿ ಕೈ ತೊಳೆದುಕೊಂಡಿತೇ ಹೊರತು ಈ ಪ್ರಕರಣಕ್ಕೆ ಚಳವಳಿಯ ಸ್ವರೂಪವನ್ನು ಕೊಡುವ ಪ್ರಮುಖ  ಜವಾಬ್ದಾರಿ ಯಿಂದ ಹಿಂಜರಿಯಿತು. ವಿರೋಧ ಪಕ್ಷವಾದ ಬಿಜೆಪಿಯ ಮೌನವನ್ನು ಪರಿಣಾಮಕಾರಿಯಾಗಿ ಪ್ರಶ್ನಿಸುವಲ್ಲೂ ಅವು ಜಾಣತನ ತೋರಿತು. ಬಿಜೆಪಿಯಂತೂ ಮಾತನ್ನೇ ಮರೆತು ಮೌನವಾಯಿತು. ನಿಜವಾಗಿ, ಯಾವುದೇ ಕ್ರೌರ್ಯದ ಇತಿ  ಮತ್ತು ಮಿತಿ ಇದು. ಬಿಜೆಪಿಯ ಯಾವುದೇ ಪ್ರತಿಭಟನೆಯಲ್ಲಿ ಹೊರಗೆ ಕಾಣುವುದಕ್ಕಿಂತ ಬೇರೆಯದೇ ಆದ ಲೆಕ್ಕಾಚಾರ ಇರುತ್ತದೆ ಅನ್ನುವ ಆರೋಪಕ್ಕೆ ಬಲ ನೀಡಿದ ಘಟನೆ ಇದು. ಅತ್ಯಾಚಾರವು ಬಿಜೆಪಿಯ ಪಾಲಿಗೆ ಕ್ರೌರ್ಯ ಮತ್ತು ಪ್ರತಿಭಟ ನಾರ್ಹ ಕೃತ್ಯವಾಗಬೇಕಿದ್ದರೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಜಾತಿ ಮತ್ತು ಅತ್ಯಾಚಾರಿಗಳ ಧರ್ಮ ಮುಖ್ಯ ವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಮುನ್ನೆಲೆಗೆ ತಂದ ಕೃತ್ಯವೂ ಇದುವೇ. ಒಂದುವೇಳೆ, ಅಲ್ಲಿನ  ಆರೋಪಿಗಳ ಧರ್ಮ ಬೇರೆಯಾಗಿರುತ್ತಿದ್ದರೆ ಬಿಜೆಪಿಯ ನಿಲುವು ಏನಿರುತ್ತಿತ್ತು ಅನ್ನುವ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ನಿಜವಾಗಿ, ಈ ಪ್ರಶ್ನೆ ಅಪ್ರಸ್ತುತ ಅಲ್ಲ, ಅಕಾರಣವೂ ಅಲ್ಲ. ಇಂಥ ಪ್ರಶ್ನೆಯ ಹುಟ್ಟಿಗೆ ಬಿಜೆಪಿಯ ಈ ಹಿಂದಿನ ನಿಲುವುಗಳೇ  ಮುಖ್ಯ ಆಧಾರ. ಪುತ್ತೂರಿನ ಸಂತ್ರಸ್ತೆಯು ಈ ಪ್ರಶ್ನೆಯನ್ನು ಮತ್ತೊಮ್ಮೆ ಪ್ರಸ್ತುತಗೊಳಿಸಿದ್ದಾಳೆ ಅಷ್ಟೇ. ಅಂದಹಾಗೆ,
ಅತ್ಯಾಚಾರದಂಥ ಅತಿಹೀನ ಮತ್ತು ಅತಿ ಅಪಾಯಕಾರಿ ಕ್ರೌರ್ಯವೂ ಜಾತಿ-ಧರ್ಮಗಳ ಕನ್ನಡಕದಲ್ಲಿ ಪರಿಶೀಲನೆಗೆ ಒಳಗಾಗುವುದು ಮತ್ತು ಅವುಗಳ ಆಧಾರದಲ್ಲೇ  ಅದು ಪ್ರಶ್ನಾರ್ಹವೋ ಕ್ಷಮ್ಯವೋ ಎಂದು ನಿರ್ಧರಿಸಲ್ಪಡುವುದು ಅತ್ಯಂತ  ಆಘಾತಕಾರಿ ಬೆಳವಣಿಗೆ. ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಬರೇ ಹೆಣ್ಣು ಮಾತ್ರ ಆಗಿರುತ್ತಾಳೆ. ಬರೇ ಹೆಣ್ಣು. ಆ ಸಂದರ್ಭದಲ್ಲಿ ಆಕೆ ಬುರ್ಖಾ, ಸಲ್ವಾರ್, ಸೀರೆ, ಲಂಗ-ಧಾವಣಿ ಏನನ್ನೂ ಧರಿಸಿರಬಹುದು. ಅದು ಅತ್ಯಾಚಾರಕ್ಕೆ ಕಾರಣ ಅಲ್ಲ. ಆಕೆ  ಹೆಣ್ಣಾಗಿರುವುದೇ ಅತ್ಯಾಚಾರಕ್ಕೆ ಕಾರಣ. ಬಟ್ಟೆ ಸೆಕೆಂಡರಿ. ಆದರೆ ಅತ್ಯಾಚಾರಿ ಗಂಡು ಬರೇ ಗಂಡಷ್ಟೇ ಆಗಿರಬೇಕಿಲ್ಲ. ಆತ ಮತಾಂಧ ಗಂಡೂ ಆಗಿರಬಲ್ಲ. ಮೃಗೀಯ ಗಂಡೂ ಆಗಿರಬಲ್ಲ. ಪರಮತ ದ್ವೇಷ ವನ್ನು ಮನತುಂಬಾ ತುಂಬಿಕೊಂಡ  ಗಂಡೂ ಆಗಿರಬಲ್ಲ. ಮತ್ಸರಿ, ಪ್ರೇಮ ವಂಚಿತ, ವಿಕೃತ ಕಾಮಿ ಏನೇನೋ ಆಗಿರಬಲ್ಲ. ಅತ್ಯಾಚಾರಿ ಗಂಡಿನ ಮನಸ್ಥಿತಿಯನ್ನು ಹೊಂದಿಕೊಂಡು ಅತ್ಯಾಚಾರ ಕ್ಕೊಳಗಾಗುವ ಹೆಣ್ಣಿನ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಆಕೆ ಒಂದೋ  ನಿರ್ಭಯಳಂತೆ ಮೃಗೀಯ ಹಿಂಸೆಗೆ ತುತ್ತಾಗುವಳು ಅಥವಾ ಪುತ್ತೂರಿನ ಸಂತ್ರಸ್ತೆಯಂತಾಗುವಳು. ಇಲ್ಲವೇ ಇವೆರಡೂ ಆಗದೇ ಒಳಗೊಳಗೇ ಕುದಿಯುತ್ತಾ, ಸಾಯುತ್ತಾ ಬದುಕುತ್ತಿರುವ ಅಸಂಖ್ಯ ಯುವತಿಯರಂತಾಗುವಳು. ಈ ಸ್ಥಿತಿಗಳೆಲ್ಲವೂ  ಅತ್ಯಾಚಾರಿ ಯನ್ನು ಹೊಂದಿಕೊಂಡಿದೆ. ಆದ್ದರಿಂದಲೇ, ಅತ್ಯಾಚಾರ ಪ್ರಕರಣವನ್ನು ಜಾತಿ-ಧರ್ಮದ ಲೆಕ್ಕಾಚಾರಕ್ಕಿಂತ ಹೊರಗಿಟ್ಟು ನೋಡಬೇಕಾಗಿದೆ. ಇಲ್ಲಿ ಹೆಣ್ಣೇ ಸಂತ್ರಸ್ತೆ. ಬರೇ ಹೆಣ್ಣು. ಆಕೆ ತೊಟ್ಟಿರುವ ಉಡುಪು ಮತ್ತು ಪ್ರತಿನಿಧಿಸುವ ಧರ್ಮ  ಮುಖ್ಯವೇ ಅಲ್ಲ.
ಪುತ್ತೂರಿನ ಪ್ರಕರಣ ಮುಖ್ಯವಾಗುವುದು ಈ ಕಾರಣದಿಂದ. ಆಕೆ ಹೆಣ್ಣು. ಬರೇ ಹೆಣ್ಣು. ಅಷ್ಟೇ.

Thursday, July 11, 2019

ಬುರ್ಖಾ ನಿಷೇಧಿಸಬೇಕು ಎಂಬ ಆಗ್ರಹದ ಹಿಂದೆ-ಮುಂದೆ



ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಸರಿಸುಮಾರು ಒಂದು ತಿಂಗಳ ಬಳಿಕ ಸುಪ್ರೀಮ್ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಾಂಡೇಯ ಕಾಟ್ಜು ಅವರ ಬರಹವೊಂದು ದಿ ಹಿಂದೂ ಪತ್ರಿಕೆಯಲ್ಲಿ (ಜೂನ್ 27, 2019)  ಪ್ರಕಟವಾಗಿದೆ. ಅದರಲ್ಲಿ ಮುಸ್ಲಿಮರಿಗೆ ಸಂಬಂಧಿಸಿ ಮೂರು ಸಲಹೆಗಳಿವೆ.
1. ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಮತ್ತು ಶರಿಯಾ ನಿಯಮಗಳು ರದ್ದುಗೊಳ್ಳಬೇಕು.
2. ಬುರ್ಖಾಕ್ಕೆ ನಿಷೇಧ ಹೇರಬೇಕು. ಬುರ್ಖಾ ಧರಿಸುವ ಮಹಿಳೆಯರಿಗೆ ಭಾರೀ ಮೊತ್ತದ ದಂಡ ವಿಧಿಸಬೇಕು. ಬುರ್ಖಾವು ಮಹಿಳೆಯರ ಆಯ್ಕೆಯ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿದೆಯಾದರೂ ಅದು ನಕಾರಾತ್ಮಕ ಸ್ವಾತಂತ್ರ್ಯ.
3. ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡನ್ನು (AIMPLB ) ರದ್ದುಪಡಿಸಬೇಕು.
ಈ ಬರಹಕ್ಕಿಂತ ಎರಡು ತಿಂಗಳ ಮೊದಲು- ಎಪ್ರಿಲ್‍ನಲ್ಲಿ - ಕೇಂದ್ರದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋವು (NCRB) 2016ರ ವರದಿಯನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ Prisoners statistics India (ಭಾರತದಲ್ಲಿರುವ  ಕೈದಿಗಳ ಅಂಕಿ ಅಂಶ) ಎಂಬ ಹೆಸರಲ್ಲಿ ಅಂಕಿ ಅಂಶಗಳೂ ಇದ್ದುವು. ಚುನಾವಣೆಯ ಸಂದರ್ಭದಲ್ಲಿ ಈ ವರದಿಯನ್ನು ಬಿಡುಗಡೆ ಗೊಳಿಸಲಾದ ಕಾರಣದಿಂದಲೋ ಏನೋ ಈ ವರದಿ ಹೆಚ್ಚು ಚರ್ಚೆಗೆ ಒಳಗಾಗಲಿಲ್ಲ. 2017 ಮತ್ತು 18ರ ವರದಿ  ಎಲ್ಲಿದೆ ಮತ್ತು ಯಾಕೆ ಅದನ್ನು ಬಿಡುಗಡೆಗೊಳಿಸಿಲ್ಲ ಅನ್ನುವ ಪ್ರಶ್ನೆಯೂ ದೊಡ್ಡ ಮಟ್ಟದಲ್ಲಿ ಕೇಳಿಸಿಕೊಂಡಿಲ್ಲ. ಈ ವರದಿಯಲ್ಲಿರುವ ಅಚ್ಚರಿ ಏನೆಂದರೆ, ಕೈದಿಗಳ ಜಾತೀವಾರು ಮತ್ತು ಧರ್ಮವಾರು ಲೆಕ್ಕಾಚಾರವನ್ನೇ ಉಲ್ಲೇಖಿಸದಿರುವುದು. ಜೈಲಿನಲ್ಲಿರುವ ಕೈದಿಗಳಲ್ಲಿ ಯಾವ ಜಾತಿ, ಜನಾಂಗ, ಪಂಗಡದವರು ಎಷ್ಟಿದ್ದಾರೆ ಮತ್ತು ಯಾವ ಧರ್ಮದವರು ಎಷ್ಟೆಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಈ ಹಿಂದಿನ ಎಲ್ಲ ವರದಿಗಳೂ ಸ್ಪಷ್ಟಪಡಿಸುತ್ತಿದ್ದುವು. ಭಾರತ ದಂತಹ ಬಹುಧರ್ಮೀಯ ಮತ್ತು  ಬಹು ಜಾತೀಯ ದೇಶದಲ್ಲಿ ಇಂಥದ್ದೊಂದು  ವಿಂಗಡನೆಯಾಧಾರಿತ ವರದಿ ಯಾಕೆ ಮುಖ್ಯ ವಾಗುತ್ತದೆ ಎಂದರೆ, ಅದರಿಂದಾಗಿ ಸಾಮಾಜಿಕ ನ್ಯಾಯದ ಸ್ಥಿತಿ-ಗತಿ ಅರ್ಥ ವಾಗುತ್ತಿತ್ತು. ನಮ್ಮ ಪೊಲೀಸ್ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಮತ್ತು  ಜಾತಿ-ಧರ್ಮಗಳ ಪಕ್ಷಪಾತದಿಂದ ಅವೆಷ್ಟು ಮುಕ್ತವಾಗಿವೆ ಎಂಬುದಕ್ಕೂ ಅವು ಉತ್ತರ ನೀಡುತ್ತಿತ್ತು. ಬಡವರು, ಅಲ್ಪಸಂಖ್ಯಾತರು, ದಲಿತ-ದುರ್ಬಲ ವರ್ಗದವರ ಮೇಲೆ ಪೊಲೀಸರು ಕಾನೂನು ಪ್ರಯೋಗಿಸುವಷ್ಟು ಸಲೀಸಾಗಿ ಶ್ರೀಮಂತರು ಮತ್ತು  ಮೇಲ್ಜಾತಿಯವರ ಮೇಲೆ ಕಾನೂನು ಪ್ರಯೋಗಿಸುವುದಿಲ್ಲ ಅನ್ನುವ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕೂ ಇಂಥ ವರದಿಗಳಿಂದ ಅನುಕೂಲವಿತ್ತು.
ಭಾರತದ ನ್ಯಾಯಾಂಗ ಪ್ರಕ್ರಿಯೆಯು ಉಳ್ಳವರಿಗೂ ಇಲ್ಲ ದವರಿಗೂ ಏಕರೂಪದಲ್ಲಿ ದಕ್ಕುತ್ತಿಲ್ಲ. ಉಳ್ಳವರಿಗೆ ನ್ಯಾಯಾಂಗ ವ್ಯವಸ್ಥೆಯನ್ನು ದಾರಿ ತಪ್ಪಿಸುವ ಇಂಚಿಂಚು ಮಾಹಿತಿಗಳೂ ಗೊತ್ತಿರುತ್ತವೆ. ದುಬಾರಿ ವಕೀಲರನ್ನು ನೇಮಿಸಿಕೊಳ್ಳುವ  ಸಾಮಥ್ರ್ಯವೂ ಇರುತ್ತದೆ. ಕೆಳ ಕೋರ್ಟಿನ ತೀರ್ಪಿನ ವಿರುದ್ಧ ಹೈಕೋರ್ಟ್‍ಗೆ ಹೋಗುವುದು ಮತ್ತು ತಮ್ಮ ಪರ ಮಾಧ್ಯಮ ಗಳಲ್ಲಿ ವರದಿ ಪ್ರಕಟವಾಗುವಂತೆ ಮತ್ತು ಆ ಮೂಲಕ ಸಾರ್ವಜನಿಕರ ಭಾವನೆಗಳನ್ನು ತಮ್ಮ ಪರ ಒಲಿಯುವಂತೆ  ಮಾಡಿಕೊಳ್ಳುವ ಪ್ರಾಬಲ್ಯವೂ ಅವರಲ್ಲಿರುತ್ತದೆ. ಆದರೆ, ಈ ಯಾವ ಸವಲತ್ತುಗಳೂ ಇಲ್ಲದೇ ಇರುವುದು- ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗದವರಿಗೆ ಮತ್ತು ಅವರಲ್ಲಿ ಪೊಲೀಸ್ ವ್ಯವಸ್ಥೆಯ ದಾಹವನ್ನು  ತಣಿಸುವ ಬಲ ಇರುವುದಿಲ್ಲ. ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ಸಮರ್ಥ ವಕೀಲರ ನೇಮಕವೇ ಅವರಿಗೆ ತ್ರಾಸದಾಯಕ. 2015ರ ವರದಿಯಂತೆ, ವಿಚಾರಣಾಧೀನ ಕೈದಿಗಳ ಪೈಕಿ 55% ಮಂದಿ ಮುಸ್ಲಿಮ್, ದಲಿತ ಮತ್ತು  ಆದಿವಾಸಿ ಪಂಗಡಗಳಿಗೆ ಸೇರಿದವರಿದ್ದರು. ವಿಚಾರಣಾಧೀನ ಕೈದಿಗಳು ಎಂದರೆ- ಆರೋಪ ಹೊರಿಸಲ್ಪಟ್ಟವರು ಮತ್ತು ಅಪರಾಧ ಸಾಬೀತಾಗಿಲ್ಲದವರು. ಈ ವರದಿ ಕೆಲವು ಆಘಾತಕಾರಿ ಸತ್ಯಗಳನ್ನು ಹೇಳುತ್ತದೆ. ಕೆಲವು ಪ್ರಶ್ನೆಗಳನ್ನೂ ಹುಟ್ಟು  ಹಾಕುತ್ತವೆ. ವಿಚಾರಣಾಧೀನ ಕೈದಿಗಳಲ್ಲಿ ಯಾಕೆ ಮುಸ್ಲಿಮರು, ದಲಿತರು, ಪರಿಶಿಷ್ಟ ಜಾತಿ-ಪಂಗಡ ಮತ್ತು ಆದಿವಾಸಿ ವರ್ಗಕ್ಕೆ ಸೇರಿದ ವರೇ ಹೆಚ್ಚಿದ್ದಾರೆ? ಅವರು ಹುಟ್ಟು ಅಪರಾಧಿಗಳೇ? ಅವರ ಡಿಎನ್‍ಎಯೇ ಹಾಗೆಯೇ? ಅಥವಾ ಪೊಲೀಸ್  ವ್ಯವಸ್ಥೆಯಲ್ಲಿರುವ ಪಕ್ಷಪಾತಿ ಮನೋಭಾವವು ಇವರನ್ನು ಕೈದಿಗಳಾಗಿ ಮಾರ್ಪಡಿ ಸುತ್ತಿದೆಯೇ? ಭಾರತೀಯ ಪೆÇಲೀಸ್ ಠಾಣೆಗಳು ಪರಮ ಜಾತ್ಯತೀತ ಸ್ಥಳಗಳಾಗಿ ಉಳಿದಿಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ  ಪ್ರಬಲವಾಗಿ ಎರಗುವ ಇಲ್ಲಿನ ಕಾಯ್ದೆಗಳು ಇತರರ ಮೇಲೆ ಅಷ್ಟೇ ನಯವಾಗಿಯೂ ನಡೆದುಕೊಳ್ಳುತ್ತವೆ ಎಂಬುದೂ ಗೊತ್ತು. ಭಾರತೀಯ ದಂಡಸಂಹಿತೆ ಸೆಕ್ಷನ್ 436A ಪ್ರಕಾರ, ವಿಚಾರಣಾಧೀನ ಕೈದಿಗಳ ಮೇಲೆ ಇರುವ ಆರೋಪ ಸಾಬೀತಾದರೆ  ಎಷ್ಟು ವರ್ಷ ಜೈಲಲ್ಲಿರಬೇಕಾಗುತ್ತದೋ ಅದರ ಅರ್ಧದಷ್ಟು ಅವಧಿಯನ್ನು ಅವರು ವಿಚಾರಣಾಧೀನ ಕೈದಿಯಾಗಿ ಕಳೆದಿದ್ದರೆ ವೈಯಕ್ತಿಕ ಬಾಂಡ್‍ನ ಮೂಲಕ ಅವರನ್ನು ಬಿಡುಗಡೆಗೊಳಿಸ ಬಹುದು. ವಿಷಾದ ಏನೆಂದರೆ, ಜೈಲಿನ ಅಧಿಕಾರಿಗಳಿಗೂ ಈ  ಕುರಿತಂತೆ ಹೆಚ್ಚಿನ ತಿಳುವಳಿಕೆ ಇಲ್ಲ. ಇದರಿಂದಾಗಿ ವಿಚಾರಣಾ ಧೀನ ಕೈದಿಗಳ ಪೈಕಿ ದೊಡ್ಡದೊಂದು ಸಂಖ್ಯೆ ಬಿಡುಗಡೆಗೆ ಅರ್ಹರಿದ್ದೂ ಬಿಡುಗಡೆಗೊಂಡಿಲ್ಲ.
2016ರ ವರದಿಯಂತೆ 4,33,033 ಮಂದಿ ಕೈದಿಗಳು ಜೈಲಲ್ಲಿದ್ದಾರೆ. ಅವರಲ್ಲಿ 68% ಮಂದಿ ವಿಚಾರಣಾಧೀನ ಕೈದಿಗಳು. ಹಾಗೆಯೇ ಪ್ರತಿಬಂಧಕ ಬಂಧನ ಕಾನೂನಿನ ಪ್ರಕಾರ ವಿನಾ ಕಾರಣ ಬಂಧಿಸಿ ಜೈಲಲ್ಲಿಡುವ ಕ್ರಮವೂ ಈ ದೇಶದಲ್ಲಿದೆ. ಈ  ಕಾನೂನು ಜಮ್ಮು ಕಾಶ್ಮೀರ ಸಹಿತ ಕೆಲವು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಜಮ್ಮು ಕಾಶ್ಮೀರದಲ್ಲಿ ಈ ಕಾಯ್ದೆಯ ಪ್ರಕಾರ, 2015ರಲ್ಲಿ 90 ಮಂದಿಯನ್ನು ಬಂಧಿಸಿ ಜೈಲಲ್ಲಿಡಲಾಗಿದ್ದರೆ, 2016ರ ವರದಿಯಲ್ಲಿ ಇಂಥ ಬಂಧನಗಳ ಸಂಖ್ಯೆ 431ಕ್ಕೆ ಹೆಚ್ಚಿದೆ. ಈ  ಕಾನೂನಿನ ಪ್ರಕಾರ ಯಾವುದೇ ವಿಚಾರಣೆ ನಡೆಸದೇ, ಯಾವುದೇ ಆರೋಪ ಹೊರಿಸದೇ ಮತ್ತು ಯಾವುದೇ ನ್ಯಾಯಿಕ ಪ್ರಕ್ರಿಯೆಗೆ ಒಳಪಡದೆಯೇ ಅನಿರ್ದಿಷ್ಟಾವಧಿಗೆ ಜೈಲಲ್ಲಿಡಬಹುದು. 2015 ಮತ್ತು 2016ರ ವರದಿಯನ್ನು ಹೋಲಿಸಿ ನೋಡಿದರೆ  ಕೈದಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯಲ್ಲೂ ತೀವ್ರ ಮಟ್ಟದ ಏರಿಕೆಯಾಗಿದೆ. 2015ರಲ್ಲಿ ಒಟ್ಟು 115 ಮಂದಿ ಕೈದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2016ರಲ್ಲಿ ಆತ್ಮಹತ್ಯೆಯ ಸಂಖ್ಯೆ 231ಕ್ಕೆ ಏರಿದೆ. ಕೈದಿಗಳಲ್ಲಿ ಮಾನಸಿಕ ಅಸ್ವಸ್ಥರ  ಸಂಖ್ಯೆಯಂತೂ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದೆ. 2016ರ ವರದಿಯಂತೆ, 6013 ಮಂದಿ ಕೈದಿಗಳು ಮಾನಸಿಕ ಅಸ್ವಸ್ಥರಾಗಿ ಜೈಲಲ್ಲಿದ್ದಾರೆ. ಈ ಕುರಿತಾದ ಕುತೂಹಲಕಾರಿ ಅಂಕಿ ಅಂಶ ಏನೆಂದರೆ, ಪ್ರತಿ 21,550 ಕೈದಿಗಳಿಗೆ ಓರ್ವ  ಮಾನಸಿಕ ಆರೋಗ್ಯ ತಜ್ಞನನ್ನು ಸರಕಾರ ನೇಮಿಸಿರುವುದು. ಅದರಲ್ಲೂ ಕೈದಿಗಳ ಮಾನಸಿಕ ಆರೋಗ್ಯವನ್ನು ತಪಾಸಿಸುವುದಕ್ಕೆಂದು ಕೇವಲ 6 ರಾಜ್ಯಗಳು ಮಾತ್ರ ತಜ್ಞರನ್ನು ನೇಮಿಸಿವೆ. ಮಾನ ಸಿಕ ಅಸ್ವಸ್ಥ ಕೈದಿಗಳು ಅತ್ಯಂತ ಹೆಚ್ಚಿರುವ ಉತ್ತರ  ಪ್ರದೇಶ, ಒಡಿಸ್ಸಾ, ಮಧ್ಯಪ್ರದೇಶದ ಜೈಲುಗಳಲ್ಲಿ ಒಬ್ಬನೇ ಒಬ್ಬ ಮಾನಸಿಕ ಆರೋಗ್ಯ ತಜ್ಞರಿಲ್ಲ.
ಕೈದಿಗಳು ಎಂದ ತಕ್ಷಣ ನಾವು ಅವರನ್ನು ಸಾರಾಸಗಟು ಅಪರಾಧಿಗಳು, ಶಿಕ್ಷೆಗೆ ಅರ್ಹರಾದವರು, ಜೈಲಲ್ಲೇ ಕೊಳೆಯಬೇಕಾದವರು ಎಂದು ತೀರ್ಮಾನಿಸಿಬಿಡುವ ಹಾಗಿಲ್ಲ. ಭಾರತೀಯ ಸಾಮಾಜಿಕ ಜೀವನ ವ್ಯವಸ್ಥೆಯಲ್ಲಿ ಜಾತಿ ಹೇಗೆ ಬಹುಮುಖ್ಯ  ಅಂಗವೋ, ಧಾರ್ಮಿಕ ಪಕ್ಷಪಾತವೂ ಅಷ್ಟೇ ಪ್ರಾಮುಖ್ಯವಾದುದು. ದಲಿತರು, ಆದಿವಾಸಿಗಳು, ದುರ್ಬಲ ವರ್ಗದವರು ಮತ್ತು ಮುಸ್ಲಿಮರಿಗೆ ಇಲ್ಲಿನ ಪೊಲೀಸ್ ಠಾಣೆಗಳ ಗೇಟು ಸುಲಭವಾಗಿ ತೆರೆಯುವುದಿಲ್ಲ. ಒಂದುವೇಳೆ ತೆರೆದರೂ ಅವು ನಯವಾಗಿ  ತೆರೆದುಕೊಳ್ಳುವುದಿಲ್ಲ. ಬಡವರು ಮತ್ತು ದುರ್ಬಲರ ವಿಷಯದಲ್ಲಿ ಅತ್ಯಂತ ಕ್ರೂರಿಯಾಗುವ ಅನೇಕ ಠಾಣೆಗಳು ಅವೇ ಮಾದರಿ ಯನ್ನು ಮೇಲ್ಜಾತಿಗಳು ಮತ್ತು ಶ್ರೀಮಂತರ ವಿಷಯದಲ್ಲಿ ಅಳವಡಿಸುವುದಿಲ್ಲ. ಕೋಟಿಗಟ್ಟಲೆ ಹಣ ಸಾಲ ಪಡೆದು  ಮರಳಿಸದವರು ಮತ್ತು ಕೆಲವು ಸಾವಿರ ಸಾಲ ಪಡೆದು ಮರಳಿಸದವರು ಈ ಇಬ್ಬರನ್ನೂ ನಮ್ಮ ಬ್ಯಾಂಕುಗಳು ಹೇಗೆ ನಡೆಸಿಕೊಳ್ಳುತ್ತವೆ ಅನ್ನುವುದನ್ನೊಮ್ಮೆ ಪರಿಶೀಲಿಸಿ ನೋಡಿಕೊಳ್ಳಿ. ಕೋಟಿಗಟ್ಟಲೆ ಸಾಲ ಪಡೆದವನಿಗೆ ಬ್ಯಾಂಕಿನಲ್ಲಿ ಭಾರೀ ಗೌರವ  ಸಿಗುತ್ತದೆ. ಆತ ಹಣ ಮರಳಿಸುವುದಕ್ಕೆ ವಿಳಂಬ ಮಾಡಿದರೂ ಸಹಿಸಿಕೊಳ್ಳಲಾಗುತ್ತದೆ. ಆದರೆ ಇದೇ ಸ್ವೀಕೃತಿ ಬಡ ರೈತನ ಪಾಲಿಗೆ ಲಭ್ಯವಾಗುವುದಿಲ್ಲ. ಸಾಲ ಮರುಪಾವತಿಸುವ ದಿನಾಂಕದಲ್ಲಿ ತುಸು ಏರು-ಪೇರಾದರೂ ಬ್ಯಾಂಕುಗಳಿಗೆ ಆತನ ಮೇಲೆ  ಸಿಟ್ಟು ಬರುತ್ತದೆ. ಶ್ರೀಮಂತರ ಎದುರು ಕುಂಯ್‍ಗುಡುವ ಅವೇ ಕಾನೂನುಗಳು ಬಡವನ ಮುಂದೆ ಉಗುರು-ಹಲ್ಲುಗಳನ್ನು ಬಿಡಿಸಿ ಕೊಂಡು ಭಯಾನಕ ರೂಪ ಪಡೆಯುತ್ತವೆ. ನಮ್ಮ ಪೊಲೀಸ್ ಠಾಣೆಗಳೂ ಬಹುತೇಕ ಹೀಗೆಯೇ. ಅವು ಮೇಲ್ಜಾತಿ  ಮತ್ತು ಶ್ರೀಮಂತರ ಮುಂದೆ ಎಷ್ಟು ನಯ-ವಿನಯದಿಂದ ಬಾಗಿ ಕೊಂಡಿರುತ್ತದೋ ಅಷ್ಟೇ ಅವಿನಯ ಮತ್ತು ಅಹಮಿಕೆಯೊಂದಿಗೆ ಬಡವರ ಮುಂದೆ ಎದೆಯುಬ್ಬಿಸಿ ನಿಲ್ಲುತ್ತದೆ. ಆದ್ದರಿಂದ ಬಡವರು, ಮುಸ್ಲಿಮರು, ದಲಿತ-ಆದಿವಾಸಿ ಜನಾಂಗಗಳು  ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರುವುದು ಸುಲಭ.  ಆದರೆ ಇಷ್ಟೇ ಅನಾಯಾಸವಾಗಿ ಮೇಲ್ಜಾತಿ ಮತ್ತು ಶ್ರೀಮಂತ ವರ್ಗ ಜೈಲು ಪಾಲಾಗಲು ಸಾಧ್ಯ ಇಲ್ಲ. ವಿಚಾರಣಾಧೀನ ಕೈದಿಗಳ ಪೈಕಿ ಅತ್ಯಧಿಕ ಮಂದಿ ಅಲ್ಪಸಂಖ್ಯಾತ ಮತ್ತು  ದಲಿತ ವರ್ಗದವರೇ ಯಾಕಿದ್ದಾರೆ ಎಂಬ ಪ್ರಶ್ನೆಗೆ ಉತ್ತರವೂ ಇಲ್ಲೆಲ್ಲೋ ಇದೆ. ಅಂದಹಾಗೆ,
ಕೈದಿಗಳ ಜಾತೀವಾರು ಮತ್ತು ಧರ್ಮವಾರು ವಿವರಗಳನ್ನು ಸರಕಾರದಿಂದ ಅಡಗಿಸಬಹುದೇ ಹೊರತು ವಾಸ್ತವ ಸಂಗತಿಯನ್ನಲ್ಲ. ವಿಚಾರಣಾಧೀನ ಕೈದಿಗಳಾಗಿ ದಲಿತರು ಮತ್ತು ಅಲ್ಪಸಂಖ್ಯಾತ ವರ್ಗಗಳೇ ಯಾಕಿವೆ ಎಂಬ ಪ್ರಶ್ನೆಗೆ ಹೀಗೆ  ಅಡಗಿಸುವುದು ಉತ್ತರವೂ ಅಲ್ಲ. ಇದಕ್ಕೆ ಸಾಮಾಜಿಕ ಮತ್ತು ರಾಜಕೀಯವಾದ ಕಾರಣಗಳಿವೆ. ಮುಸ್ಲಿಮರು ಮತ್ತು ದಲಿತರನ್ನು ನಮ್ಮನ್ನಾಳುವ ವ್ಯವಸ್ಥೆ ಯಾವತ್ತೂ ಗೌರವದಿಂದ ನೋಡಿಲ್ಲ. ಒಂದು ಬಗೆಯ ಪಕ್ಷಪಾತಿತನ ಮತ್ತು ನಗಣ್ಯ ಭಾವವನ್ನು  ಅದು ಪ್ರದರ್ಶಿಸುತ್ತಲೇ ಬಂದಿವೆ. ಈ ಮನೋಭಾವಕ್ಕೆ ಚಿಕಿತ್ಸೆ ನೀಡುವುದರ ಹೊರತು ಈ ಸ್ಥಿತಿಯ ಬದಲಾವಣೆ ಸಾಧ್ಯವಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ವರದಿಯಿಂದ ಕೈದಿಗಳ ಜಾತೀವಾರು, ಧರ್ಮವಾರು ಮಾಹಿತಿಯನ್ನು  ಅಡಗಿಸುವುದು ಹೇಗೆ ಸಮಸ್ಯೆಗೆ ಪರಿಹಾರ ಅಲ್ಲವೋ ಹಾಗೆಯೇ ಸಮಾನ ನಾಗರಿಕ ಸಂಹಿತೆಯ ಜಾರಿ, ಬುರ್ಖಾ ಮತ್ತು ಂIಒPಐಃಗಳ ನಿಷೇಧವೂ ಮುಸ್ಲಿಮರ ಸಮಸ್ಯೆಗೆ ಪರಿಹಾರ ಅಲ್ಲ. ಇವೆರಡೂ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳಿಂದ  ಸಾರ್ವಜನಿಕ ಗಮನವನ್ನು ಬೇರೆಡೆಗೆ ಸರಿಸುವ ವಾದಗಳಷ್ಟೇ. ಮುಸ್ಲಿಮರು ಭಾರತದಲ್ಲಿ ಎದುರಿಸುತ್ತಿರುವ ಸಮಸ್ಯೆ ಗಳ ಆಳ-ಅಗಲ ಮತ್ತು ಅದಕ್ಕಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಮಗ್ಗುಲುಗಳ ತಿಳುವಳಿಕೆ ಇಲ್ಲದವರು ಮಾತ್ರ ಕಾಟ್ಜು  ಅವರಂತೆ ವಾದಿಸುತ್ತಾರೆ. ಅವರ ಮೇಲೆ ಅಪಾರ ಗೌರವವನ್ನಿಟ್ಟು ಕೊಂಡೇ ಈ ಮಾತನ್ನು ಹೇಳಬೇಕಾಗುತ್ತದೆ.

Thursday, June 27, 2019

ಕತ್ತಲ ಕೋಣೆಯಲ್ಲಿ ಕೂಡಿಟ್ಟು ಸಾಯಿಸಬೇಕಾದ ಯಾವ ಅಪರಾಧವನ್ನು ಅವರು ಮಾಡಿದ್ದರು?




ಏ.ಕೆ. ಕುಕ್ಕಿಲ

ಸೂಕ್ತ ಚಿಕಿತ್ಸೆಯನ್ನೂ ಕೊಡಿಸದೆಯೇ, ಕುಟುಂಬ ಸದಸ್ಯರ ಭೇಟಿಗೆ ಅವಕಾಶವನ್ನೂ ನೀಡದೆಯೇ ಮತ್ತು ಆರೋಪದ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಸಾಂವಿಧಾನಿಕ ಏರ್ಪಾಟು ಮಾಡದೆಯೇ, ಅತಿಕ್ರೂರ ಕ್ರಿಮಿನಲ್‍ಗಳನ್ನು ಕೂಡಿಡುವ ಏಕಾಂತ  ಕೋಣೆಯಲ್ಲಿ ಇರಿಸಿ, ಪ್ರತಿದಿನವೂ ಸಾಯುವಂತೆ ಮಾಡಬೇಕಾದ ಯಾವ ಅಪರಾಧವನ್ನು ಮುಹಮ್ಮದ್ ಮುರ್ಸಿ ಮಾಡಿದ್ದರು?
ಮುರ್ಸಿ ವಿರೋಧಿಗಳಲ್ಲೂ ಈ ಬಗೆಯ ಪ್ರಶ್ನೆಯಿದೆ. ಮುರ್ಸಿಯವರನ್ನು ಅಧ್ಯಕ್ಷೀಯ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು 2013 ಜುಲೈ 3 ರಂದು ಆಗಿನ ರಕ್ಷಣಾ ಸಚಿವ ಅಬ್ದುಲ್ ಫತ್ತಾಹ್ ಅಲ್ ಸೀಸಿ ಘೋಷಿಸಿದಾಗ ಅದನ್ನು  ಬೆಂಬಲಿಸಿದ್ದ ವಿಶ್ವ ವಿಖ್ಯಾತ ಅಲ್ ಅಝ್ಹರ್ ವಿಶ್ವವಿದ್ಯಾಲಯದ ಶೈಖುಲ್ ಅಝ್ಹರ್ ಅಹ್ಮದ್ ಅಲ್ ತಯ್ಯಬ್, ಕಾಪ್ಟಿಕ್ ಚರ್ಚ್‍ನ ಪೋಪ್ ಎರಡನೇ ತವಾಬ್ರೋಸ್ ಮತ್ತು ಮುಖ್ಯ ವಿರೋಧ ಪಕ್ಷವಾದ ನ್ಯಾಶನಲ್ ಸಾಲ್ವೇಶನ್ ಫ್ರಂಟ್ ಹಾಗೂ ಅಲ್ ನೂರ್  ಪಕ್ಷಗಳಲ್ಲೂ ಈ ಪ್ರಶ್ನೆಯಿರಬಹುದು. ಮುರ್ಸಿಯವರ ಆಡಳಿತವನ್ನು ವಿಫಲ ಎಂದು ಘೋಷಿಸುವುದು ಬೇರೆ, ಅವರನ್ನು ಅಪರಾಧಿ ಎಂದು ಘೋಷಿಸುವುದು ಬೇರೆ. ಈಜಿಪ್ಟ್ ನಲ್ಲಿ 2011ರಲ್ಲಿ ಕಾಣಿಸಿಕೊಂಡ ಕ್ರಾಂತಿಯ ಮೂಲ ಬೇಡಿಕೆಗಳಾದ  ಆಹಾರ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಮುರ್ಸಿ ವಿಫಲರಾದರು ಎಂದು ಈಜಿಪ್ಟಿಯನ್ನರಿಗೆ ಅನಿಸಿದ್ದರೆ ಅದನ್ನು ಅಪರಾಧ ಅನ್ನುವಂತಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುರ್ಸಿ ಸಹಿತ ಪ್ರತಿಯೊಬ್ಬರೂ ಟೀಕೆಗೆ ಅರ್ಹರು.  ಮುರ್ಸಿ ಅಧಿಕಾರದಿಂದ ಕೆಳಗಿಳಿಯಬೇಕು ಮತ್ತು ಹೊಸ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ 22 ಮಿಲಿಯನ್ ಸಹಿ ಸಂಗ್ರಹದ ಗುರಿಯೊಂದಿಗೆ 2013 ಎಪ್ರಿಲ್‍ನಲ್ಲಿ ಈಜಿಪ್ಟ್ ನಲ್ಲಿ ತಮರೋದ್ (ಬಂಡಾಯ) ಎಂಬ ಹೆಸರಲ್ಲಿ ಪ್ರಾರಂಭವಾದ  ಚಳವಳಿಯೂ ಅಪರಾಧವಲ್ಲ. ಆದರೆ, ಈ ಚಳವಳಿಯ ಹಿಂದೆ ಸೇನೆ ಮತ್ತು ಹುಸ್ನಿ ಮುಬಾರಕ್‍ರ ಬೆಂಬಲಿಗರಿದ್ದರು ಎಂಬುದನ್ನು ಮಾತ್ರ ಇದೇ ಸ್ಫೂರ್ತಿಯಿಂದ ಸ್ವೀಕರಿಸಲು ಸಾಧ್ಯವಿಲ್ಲ. ಈ ಚಳವಳಿಯನ್ನು ಯಶಸ್ವಿಗೊಳಿಸುವುದಕ್ಕಾಗಿ ರಕ್ಷಣಾ  ಸಚಿವಾಲಯ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಯಿಂದ ಭಾರೀ ಪ್ರಮಾಣದಲ್ಲಿ ಹಣವನ್ನು ಡ್ರಾ ಮಾಡಲಾಗಿದೆ ಎಂಬ ಸುದ್ದಿಯನ್ನೂ ಸಹಜವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಸೋರಿಕೆಯಾದ ಮಿಲಿಟರಿ ಅಧಿಕಾರಿಗಳ ನಡುವಿನ ಮಾತುಕತೆಯೇ ಇದನ್ನು  ಸ್ಪಷ್ಟಪಡಿಸಿತ್ತು. 2012 ಜೂನ್ 30ರಂದು ಈಜಿಪ್ಟ್ ನ ಅಧ್ಯಕ್ಷರಾಗಿ ಆಯ್ಕೆಯಾಗಿ ಜುಲೈ 3, 2013ರಲ್ಲಿ ಪದಚ್ಯುತಗೊಳ್ಳುವ ಈ 366 ದಿನಗಳ ನಡುವೆ ಮುರ್ಸಿಯವರ ವಿರುದ್ಧ ಚಳವಳಿ, ಪ್ರತಿಭಟನೆ, ಹೋರಾಟಗಳೆಲ್ಲ ನಡೆದುದು ಮತ್ತು ಅವರನ್ನು  ಕತ್ತಲ ಕೋಣೆಗೆ ತಳ್ಳಿದುದೆಲ್ಲ ಸಹಜವೇ? 1952ರ ಜಮಾಲ್ ಅಬ್ದುಲ್ ನಾಸರ್ ರಿಂದ ತೊಡಗಿ ಹುಸ್ನಿ ಮುಬಾರಕ್‍ರ ವರೆಗೆ ಈ ದೀರ್ಘ 60 ವರ್ಷಗಳ ಸರ್ವಾಧಿಕಾರವನ್ನು ಸಹಿಸಿಕೊಂಡ ಜನರಿಗೆ ಮತ್ತು ಅವರಾರನ್ನೂ ಕತ್ತಲ ಕೋಣೆಗೆ  ತಳ್ಳದ  ವ್ಯವಸ್ಥೆಗೆ ಮುರ್ಸಿಯನ್ನು ಬರೇ 365 ದಿನಗಳಷ್ಟು ದಿನ ಒಪ್ಪಿಕೊಳ್ಳಲೂ ಸಾಧ್ಯವಾಗದೇ ಹೋದುದುಕ್ಕೆ ಅವರು ಕಾರಣರೋ ಅಥವಾ ಈ ಹಿಂದಿನ 60 ವರ್ಷಗಳ ವರೆಗೆ ಅಧಿಕಾರದ ರುಚಿಯನ್ನು ಅನುಭವಿಸಿದ ಅಧಿಕಾರಿಗಳು ಮತ್ತು ಸೇನೆಯ ಸಂಚು   ಕಾರಣವೋ?
ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದ ಇಸ್ರೇಲ್ ಮತ್ತು ಗಾಝಾದ ಹಮಾಸ್‍ನ ನಡುವೆ 2012 ನವೆಂಬರ್ 20ರಂದು ಶಾಂತಿ ಸಂಧಾನವನ್ನು ಏರ್ಪಡಿಸಿ ಘರ್ಷಣೆ ಕೊನೆಗೊಳಿಸಲು ಯಶಸ್ವಿಯಾದ ಮರುದಿನವೇ ಮುರ್ಸಿಯವರು ಅತ್ಯಂತ ಸವಾಲಿನ  ನಿರ್ಧಾರವನ್ನು ಕೈಗೊಂಡರು. ನಿಜವಾಗಿ, 2012 ಜೂನ್ 30ರಂದು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ- ಮುಬಾರಕ್ ಕಾಲದ  ಆಡಳಿತ ವ್ಯವಸ್ಥೆ, ಅವೇ ಅಧಿಕಾರಿಗಳು, ಅದೇ ನ್ಯಾಯಾಂಗ ವ್ಯವಸ್ಥೆ ಮತ್ತು ಅದೇ ಮಿಲಿಟರಿ ಮನೋಭಾವ. ಇನ್ನೊಂದು ಸಮಸ್ಯೆ ಏನೆಂದರೆ, ಸಂವಿಧಾನ. ಹಾಲಿ ಸಂವಿಧಾನವನ್ನು ಮಿಲಿಟರಿಯು 2011ರಲ್ಲೇ ಅನೂರ್ಜಿತಗೊಳಿಸಿತ್ತು. ಆದ್ದರಿಂದ  ಕ್ರಾಂತಿಯ ಬೇಡಿಕೆಯನ್ನು ಪೂರೈಸಬೇಕಾದರೆ ಮತ್ತು ತನ್ನ ಕನಸಿನ ಈಜಿಪ್ಟನ್ನು ಸಾಕಾರಗೊಳಿಸಬೇಕಾದರೆ ಒಂದೆರಡು ಧೈರ್ಯದ ನಿರ್ಧಾರವನ್ನು ಮುರ್ಸಿ ಕೈಗೊಳ್ಳಲೇ ಬೇಕಾಗಿತ್ತು. ಅಲ್ಲದೆ, 2012 ಜೂನ್‍ನಲ್ಲಿ ಹಳೆ ಪಾರ್ಲಿಮೆಂಟೂ ವಿಸರ್ಜ ನೆಗೊಂಡಿತ್ತು. ಹೊಸ ಪಾರ್ಲಿಮೆಂಟ್‍ಗೆ ಚುನಾವಣೆ ನಡೆಯಬೇಕಾದರೆ 1971ರಲ್ಲಿ ಅನ್ವರ್ ಸಾದಾತ್ ಪರಿಚಯಿಸಿದ್ದ ಮತ್ತು ಒಂದಷ್ಟು ತಿದ್ದುಪಡಿ ಗಳೊಂದಿಗೆ 2011ರ ವರೆಗೂ ಅಸ್ತಿತ್ವ ಉಳಿಸಿಕೊಂಡಿದ್ದ ಸಂವಿಧಾನಕ್ಕೆ ಸಮಗ್ರ ತಿದ್ದುಪಡಿಗಳನ್ನು  ಮಾಡಬೇಕಿತ್ತು. ಆದ್ದರಿಂದ, ಮುಬಾರಕ್ ಕಾಲದ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ಅವರು ಅಧ್ಯಕ್ಷೀಯ ಶಾಸನವನ್ನು (ಸುಗ್ರೀವಾಜ್ಞೆ) ಘೋಷಿಸಿದರು. ಅದೇವೇಳೆ, ಸಂವಿಧಾನದ ತಿದ್ದುಪಡಿಗೆ ತಂಡವನ್ನೂ ರಚಿಸಿದ್ದರು. ಆದರೆ, ಅವರು ಹೊರಡಿಸಿದ  ಸುಗ್ರೀವಾಜ್ಞೆಯು ಮರುದಿನದಿಂದಲೇ ಚರ್ಚೆಗೆ ಒಳಗಾಯಿತು. ವಿವಾದಿತ ಅನಿಸಿಕೊಂಡಿತು. ನ್ಯಾಯಾಂಗ ಪ್ರಕ್ರಿಯೆ ಮತ್ತು ಇನ್ನಿತರ ಕಾನೂನುಗಳ ವ್ಯಾಪ್ತಿಯಿಂದ ಅಧ್ಯಕ್ಷರನ್ನು ಹೊರಗಿಡುವ ಮತ್ತು ಅಧ್ಯಕ್ಷರಿಗೆ ಪರಮಾಧಿಕಾರವನ್ನು ಒದಗಿಸುವ ಈ  ಸುಗ್ರೀವಾಜ್ಞೆಯನ್ನು  ಸದ್ಯದ ಪರಿಸ್ಥಿತಿಯ ಅಗತ್ಯ ಎಂದು ಮುರ್ಸಿ ಸಮರ್ಥಿಸಿಕೊಂಡರಾದರೂ ವಿರೋಧಿಗಳು ಒಪ್ಪಿಕೊಳ್ಳಲಿಲ್ಲ. ಮುರ್ಸಿಯನ್ನು ‘ಆಧುನಿಕ ಫರೋವ’ ಎಂದು ನೋಬೆಲ್ ವಿಜೇತ ಅಲ್ ಬರಾದಿ ಟೀಕಿಸಿದರು. ಇದು ವಿರೋಧದ ಬೆಂಕಿಗೆ  ತುಪ್ಪ ಸುರಿದಂತಾಯಿತು. ಸಂದರ್ಭಕ್ಕಾಗಿ ಕಾದು ಕುಳಿತಿದ್ದ ಮಿಲಿಟರಿ ವ್ಯವಸ್ಥೆ ಚುರುಕಾಯಿತು. ಮುರ್ಸಿಯವರು ಅಧಿಕಾರ ವಹಿಸಿ ಕೊಂಡಾಗ ರಕ್ಷಣಾ ಸಚಿವರಾಗಿದ್ದುದು ಫೀಲ್ಡ್ ಮಾರ್ಶಲ್ ಮುರಾದ್ ಹಸನ್ ತಂತಾವಿ. ಈಜಿಪ್ಟ್ ನಲ್ಲಿ ಮಿಲಿಟರಿ  ಮುಖ್ಯಸ್ಥನೇ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಮುರ್ಸಿಯವರು ತಂತಾವಿಯ ಬದಲು ಅಬ್ದುಲ್ ಫತ್ತಾಹ್ ಅಲ್ ಸೀಸಿ ಅವರನ್ನು ಹೊಸ ರಕ್ಷಣಾ ಸಚಿವರಾಗಿ ನೇಮಿಸಿದರು. ಅಚ್ಚರಿ ಏನೆಂದರೆ, ಈ ಸುಗ್ರೀವಾಜ್ಞೆಯ ಬಳಿಕ  ಹುಟ್ಟಿಕೊಂಡ ತಮರೋದ್ ಚಳವಳಿ, ಮುರ್ಸಿಯನ್ನು ಪದಚ್ಯುತಗೊಳಿಸಬೇಕೆಂದು ಆಗ್ರಹಿಸಿ ತಹ್ರೀರ್ ಚೌಕದಲ್ಲಿ ನಡೆಸಲಾದ ಬೃಹತ್ ಪ್ರತಿಭಟನೆ, ಅಧ್ಯಕ್ಷರ ಅರಮನೆಯ ಮುಂದೆ ನಡೆದ ಪ್ರತಿಭಟನೆ ಮತ್ತು ಮುಸ್ಲಿಮ್ ಬ್ರದರ್ ಹುಡ್‍ನ ಮುಖ್ಯ  ಕಚೇರಿಯ ಮೇಲೆ ನಡೆದ ದಾಳಿ ಮತ್ತು ಅಂತಿಮವಾಗಿ ಮುರ್ಸಿ ಪದಚ್ಯುತಿ.. ಈ ಎಲ್ಲದರ ಹಿಂದೆಯೂ ಕೆಲಸ ಮಾಡಿದ್ದು ಇದೇ ಅಬ್ದುಲ್ ಫತ್ತಾಹ್ ಅಲ್ ಸೀಸಿ.
2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುರ್ಸಿಯವರು ಜಯ  ಗಳಿಸಿದ್ದುದು ಸಣ್ಣ ಅಂತರದಿಂದಾಗಿತ್ತು. ಅವರ ವಿರುದ್ಧ ಸ್ಪರ್ಧಿಸಿದ್ದು- ಹುಸ್ನಿ ಮುಬಾರಕ್‍ರ ಆಪ್ತರೆಂದು ಗುರುತಿಸಿಕೊಂಡಿದ್ದ ಅಹ್ಮದ್ ಶಫೀಕ್. ಹುಸ್ನಿ ಮುಬಾರಕ್‍ರ ಸರ್ವಾಧಿಕಾರ ಕೊನೆಗೊಳ್ಳಬೇಕೆಂದು ತಹ್ರೀರ್ ಚೌಕದಲ್ಲಿ ಆಹೋರಾತ್ರಿ  ಪ್ರತಿಭಟಿಸಿದ್ದ ಅದೇ ಮಂದಿ ಅಹ್ಮದ್ ಶಫೀಕ್‍ರಿಗೆ 49.3% ಮತ ಚಲಾಯಿಸಿದ್ದರು. ಮುರ್ಸಿಗೆ 51.7%.. ಈ ಸಣ್ಣ ಅಂತರವೇ ಈಜಿಪ್ಟಿಯನ್ನರ ಮಾನಸಿಕ ಸ್ಥಿತಿಯನ್ನು ಹೇಳುತ್ತದೆ. ಮುರ್ಸಿಯವರ ವಿರುದ್ಧ 49.3% ಮಂದಿ ಮತ ಹಾಕಿರುವುದರಿಂದ  ಅಧ್ಯಕ್ಷೀಯ ಸುಗ್ರೀವಾಜ್ಞೆಯನ್ನು ಎತ್ತಿಕೊಂಡು ಮುರ್ಸಿ ವಿರೋಧಿ ಚಳವಳಿಯೊಂದನ್ನು ತೀವ್ರಗೊಳಿಸುವುದು ಮಿಲಿಟರಿ ವ್ಯವಸ್ಥೆಗೆ ಸವಾಲಿನದ್ದೇನೂ ಆಗಿರಲಿಲ್ಲ. 2013 ಜೂನ್ 30ರೊಳಗೆ ಮುರ್ಸಿ ವಿರುದ್ಧ 22 ಮಿಲಿಯನ್ ಸಹಿ ಸಂಗ್ರಹ ಮತ್ತು  ಜೂನ್ 30ರಂದು ಬೃಹತ್ ಪ್ರತಿಭಟನೆ ಹಮ್ಮಿ ಕೊಳ್ಳುವ ತಮರೋದ್ ಚಳವಳಿಯು ಇದೇ ಮಿಲಿಟರಿಯ ಕೂಸು. ಹಾಗಂತ, ಅಧ್ಯಕ್ಷರಿಗೆ ಪರಮಾಧಿಕಾರವನ್ನು ಒದಗಿಸುವ ಸುಗ್ರೀವಾಜ್ಞೆಯನ್ನು ಹೊರಡಿಸುವ ಬದಲು ಒಂದಷ್ಟು ಕಾಯಬಹುದಾಗಿತ್ತು  ಎಂಬ ವಾದವಿದ್ದರೂ ಸುಗ್ರೀವಾಜ್ಞೆಯು ಅವರ ಅನಿ ವಾರ್ಯತೆಗಳಲ್ಲಿ ಒಂದಾಗಿತ್ತು ಎಂಬ ವಾದಕ್ಕೂ ಮಹತ್ವ ಇದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಮುಬಾರಕ್ ಆಡಳಿತವು ನೇಮಕ ಗೊಳಿಸಿದ್ದ ಪ್ರಾಸಿಕ್ಯೂಟರನ್ನು ವಜಾಗೊಳಿಸಿ 2012, ನವೆಂಬರ್ ನಲ್ಲಿ  ತಲತ್ ಇಬ್ರಾಹೀಮ್ ಅಬ್ದುಲ್ಲರನ್ನು ಇದೇ ಸುಗ್ರೀವಾಜ್ಞೆಯನ್ನು ಬಳಸಿ ಮುರ್ಸಿ ನೇಮಕಗೊಳಿಸಿದರು. ಇದನ್ನು ನ್ಯಾಯಾಂಗ ಸ್ವಾತಂತ್ರ್ಯಕ್ಕಾದ ಧಕ್ಕೆ ಎಂದು ಕರೆಯಲಾಯಿತಲ್ಲದೆ ಇದರ ವಿರುದ್ಧ ಜನರನ್ನು ಪ್ರಚೋದಿಸಲಾಯಿತು. ಇತರ  ನ್ಯಾಯಾಲಯಗಳ ಪ್ರಾಸಿಕ್ಯೂಟರ್ ಗಳಿಂದಲೂ ವಿರೋಧ ವ್ಯಕ್ತವಾಯಿತು. ಮುಬಾರಕ್ ರನ್ನು ಬೆಂಬಲಿಸುವವರ ಹಿಡಿತ ವ್ಯವಸ್ಥೆಯ ಮೇಲೆ ಎಷ್ಟು ಬಲವಾಗಿತ್ತೆಂದರೆ, ತಲತ್ ಅಬ್ದುಲ್ಲ ಡಿಸೆಂಬರ್ ನಲ್ಲಿ ರಾಜೀನಾಮೆ ಕೊಟ್ಟರು. ಮುಬಾರಕ್ ವಿರುದ್ಧದ  ಪ್ರತಿಭಟನೆಯನ್ನು ಮಿಲಿಟರಿ ಬಲ ಪ್ರಯೋಗಿಸಿ ದಮನಿಸಿದ್ದನ್ನು, ಸುಮಾರು 800 ಮಂದಿಯ ಹತ್ಯೆ ನಡೆಸಿದ್ದನ್ನು, ಮುಬಾರಕ್‍ರ ಭ್ರಷ್ಟಾಚಾರ, ಅವರ ಅಧಿಕಾರಿಗಳ ಅವ್ಯವಹಾರ.. ಮುಂತಾದುವುಗಳನ್ನು ತನಿಖಿಸುವುದಕ್ಕಾಗಿಯೂ ಮುರ್ಸಿಗೆ ಈ  ಸುಗ್ರೀವಾಜ್ಞೆ ಅಗತ್ಯವಾಗಿತ್ತು. ಅವರು ತನಿಖೆಗೂ ಆದೇಶಿಸಿದರು. ಆದರೆ ವ್ಯವಸ್ಥೆಯ ಒಳಗೆ ಮತ್ತು ಹೊರಗಿನ ಒತ್ತಡವನ್ನು ತಾಳಲಾರದೆ ಅವರು ಎರಡೇ ತಿಂಗಳೊಳಗೆ ಈ ಸುಗ್ರೀವಾಜ್ಞೆಯನ್ನು ಹಿಂಪಡೆದರು. ಹಾಗಂತ, ಈ ಬೆಳವಣಿಗೆಯ ಬಳಿಕವೂ  ತಮರೋದ್ ಚಳವಳಿ ಮತ್ತು ಸಾರ್ವಜನಿಕ ಪ್ರತಿಭಟನೆ ನಿಲ್ಲಲಿಲ್ಲ. ಅಧ್ಯಕ್ಷ  ಹುದ್ದೆಗೆ ಮರು ಚುನಾವಣೆ ನಡೆಯಬೇಕೆಂಬ ಪ್ರಮುಖ ಬೇಡಿಕೆಗೆ ಇನ್ನಷ್ಟು ಬೇಡಿಕೆಗಳನ್ನು ಸೇರಿಸಿ ತಮರೋದ್ ಚಳವಳಿ ಮುಂದುವರಿಯಿತು.
ಅಮೇರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ 1982ರಲ್ಲಿ ಪಿಹೆಚ್‍ಡಿ ಪದವಿ ಪಡೆದ ಮತ್ತು ಅಮೇರಿಕದ ನಾರ್ಥರಿಡ್ಜ್ ನ ಕಾಲ್‍ಸ್ಟೇಟ್ ವಿವಿಯಲ್ಲಿ 3 ವರ್ಷಗಳ ವರೆಗೆ ಸಹಾಯಕ ಪ್ರೊಫೆಸರ್ ಆಗಿ ದುಡಿದ ಮುಹಮ್ಮದ್ ಮುರ್ಸಿ  ಯವರಲ್ಲಿ ರಾಜಕೀಯ ಅನುಭವ ಕಡಿಮೆಯಾಗಿದ್ದರೂ ಅವರಲ್ಲಿರುವ ಪ್ರಜಾಸತ್ತಾತ್ಮಕ ಗುಣವು ಈಜಿಪ್ಟ್ ನಲ್ಲಿ ಈ ಮೊದಲೇ ಪ್ರಶಂಸೆಗೆ ಒಳಗಾಗಿತ್ತು. ಉನ್ನತ ಶಿಕ್ಷಣ ಪಡೆದಿರುವ ಮತ್ತು ಅಮೇರಿಕದಂತಹ ರಾಷ್ಟ್ರವೊಂದರಲ್ಲಿ ಆರ್ಥಿಕ, ಸಾಮಾಜಿಕ,  ಶೈಕ್ಷಣಿಕ ವಾತಾವರಣವನ್ನು ಸ್ವತಃ ಕಂಡುಂಡ ವ್ಯಕ್ತಿ ಎಂಬ ನೆಲೆಯಲ್ಲಿ ಅವರಿಗೆ ವಿಶೇಷ ಗೌರವವೂ ಲಭ್ಯವಾಗಿತ್ತು. ಅವರೆಷ್ಟು ಪ್ರಾಮಾಣಿಕ ಮತ್ತು ಸರ್ವಾಧಿಕಾರ ವಿರೋಧಿ ಎಂಬುದಕ್ಕೆ ಅವರ ಅವಧಿಯಲ್ಲಿ ರಚಿಸಲಾದ ಸಂವಿಧಾನವೇ ಪರಮ  ಪುರಾವೆ. ಈಜಿಪ್ಟನ್ನು ಆಳಿದ ಅಬ್ದುನ್ನಾಸಿರ್, ಅನ್ವರ್ ಸಾದಾತ್ ಮತ್ತು ಹುಸ್ನಿ ಮುಬಾರಕ್‍ರ ಸರ್ವಾಧಿಕಾರದ ಕಾಲದಲ್ಲಿ ಅಧ್ಯಕ್ಷೀಯ ಹುದ್ದೆಯ ಅವಧಿ 6 ವರ್ಷಗಳಾಗಿತ್ತು. ಅಲ್ಲದೇ, ಓರ್ವ ಅಧ್ಯಕ್ಷ ಎಷ್ಟು ಬಾರಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಿತ್ತು. ಅಲ್ಲದೇ, 2005ರ ವರೆಗೂ ಏಕವ್ಯಕ್ತಿ ಚುನಾವಣೆ ಎಂಬ ಪ್ರಹಸನ ಈಜಿಪ್ಟ್ ನಲ್ಲಿ ಜಾರಿಯಲ್ಲಿತ್ತು. ತನ್ನ 6 ವರ್ಷಗಳ ಅವಧಿ ಮುಗಿದ ಕೂಡಲೇ ಹುಸ್ನಿ ಮುಬಾರಕ್ ಪುನಃ ಚುನಾವಣೆಗೆ ನಿಲ್ಲುತ್ತಿದ್ದರು ಮತ್ತು ಅವರ ವಿರುದ್ಧ ಇನ್ನಾರೂ  ಸ್ಪರ್ಧಿಸುವಂತಿರಲಿಲ್ಲ. ಅಮೇರಿಕ ಸಹಿತ ಯುರೋಪಿಯನ್ ರಾಷ್ಟ್ರಗಳ ಒತ್ತಡದ ಮೇರೆಗೆ 2005ರಲ್ಲಿ ಬಹು ಅಭ್ಯರ್ಥಿಗಳ ಸ್ಪರ್ಧೆಗೆ ಮುಬಾರಕ್ ಒಪ್ಪಿಕೊಂಡರು. 2005ರಲ್ಲಿ ಮತದಾನವಾದದ್ದು ಬರೇ 23%. ಅದರಲ್ಲಿ ಮುಬಾರಕ್‍ ಗೆ ಲಭ್ಯವಾದದ್ದು  88.5%. ಆದರೆ ಮುಹಮ್ಮದ್ ಮುರ್ಸಿಯವರು ಈ ಸಂವಿಧಾನಕ್ಕೆ ಆಮೂಲಾಗ್ರ ಬದಲಾವಣೆಯನ್ನು ತಂದರು. ಅಧ್ಯಕ್ಷರ ಅಧಿಕಾರಾವಧಿಯನ್ನು 6 ವರ್ಷಗಳಿಂದ 4 ವರ್ಷಗಳಿಗೆ ಕಡಿತಗೊಳಿಸಿದರು. ಎರಡು ಅವಧಿಗೆ ಮಾತ್ರ ಓರ್ವರು ಅಧ್ಯಕ್ಷ ರಾಗಿ  ಅಧಿಕಾರ ಚಲಾಯಿಸಬಹುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ನಿಯಮವನ್ನು ಸೇರ್ಪಡೆಗೊಳಿಸಿದರು. ಮುರ್ಸಿಯವರಲ್ಲಿ ಸರ್ವಾಧಿಕಾರದ ಗುಣವಿರುತ್ತಿದ್ದರೆ ಈ ಬದಲಾವಣೆ ಸಾಧ್ಯವೇ ಇರಲಿಲ್ಲ. ಅಷ್ಟಕ್ಕೂ,
ಅಧಿಕಾರ ವಹಿಸಿಕೊಂಡ ಕೂಡಲೇ ಅಮೇರಿಕ ಅಥವಾ ಯುರೋಪ್ ರಾಷ್ಟ್ರಗಳಿಗೆ ಭೇಟಿ ನೀಡುವ ಬದಲು ಅವರು ಅರಬ್ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಲು ಯತ್ನಿಸಿದರು. ಸೌದಿ ಅರೇಬಿಯಾ, ಚೀನಾ, ಇರಾನ್‍ಗೆ ಭೇಟಿ  ನೀಡಿದರು. ಕತರ್ ನ ಅಮೀರ್ ಈಜಿಪ್ಟ್ ಗೆ ಭೇಟಿಕೊಟ್ಟರು. 1979ರ ಬಳಿಕ ಇರಾನ್‍ನೊಂದಿಗೆ ಕಡಿದುಕೊಂಡಿದ್ದ ರಾಜತಾಂತ್ರಿಕ ಸಂಬಂಧವನ್ನು ಮುರ್ಸಿ ಪುನರ್ ಸ್ಥಾಪಿಸಿದರು. ಇತಿಯೋಪಿಯಾದಲ್ಲಿ ನಡೆದ ಆಫ್ರಿಕನ್ ಯೂನಿಯನ್ ಸಭೆಯಲ್ಲಿ  ಭಾಗವಹಿಸಿದರು. 1995ರ ಬಳಿಕ ಆಫ್ರಿಕನ್ ಯೂನಿಯನ್ ಸಭೆಯಲ್ಲಿ ಈಜಿಪ್ಟ್ ನ ಅಧ್ಯಕ್ಷರು ಭಾಗವಹಿಸಿದ್ದು ಅದೇ ಮೊದಲು. ಅದೇವೇಳೆ, ಸಿರಿಯಾದಲ್ಲಿ ನಡೆಯುತ್ತಿದ್ದ ನರಹತ್ಯೆಗಾಗಿ ಬಶ್ಶಾರುಲ್ ಅಸದ್‍ರನ್ನು ಅವರು ಟೀಕಿಸಿದರು. 2013, ಜೂನ್‍ನಲ್ಲಿ  ಸಿರಿಯಾದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡರು. ವಿಚಿತ್ರ ಏನೆಂದರೆ, ಇಷ್ಟೆಲ್ಲ ನಡೆದೂ ಈಜಿಪ್ಟಿಯನ್ನರು ಮುರ್ಸಿ ವಿರುದ್ಧ ಚಳವಳಿ ನಡೆಸಿದ್ದು. ಈ ಚಳವಳಿಯಿಂದಾಗಿ ಕೈರೋ, ಪೋರ್ಟ್ ಝೈದ್, ಸುಯೇಝï ಮತ್ತು  ಇಸ್ಲಾಮಿಯಾದಲ್ಲಿ ಹಿಂಸೆ, ಸಾವು-ನೋವುಗಳಾದುವು. ಒಂದು ತಿಂಗಳು ರಾಷ್ಟ್ರೀಯ ತುರ್ತುಸ್ಥಿತಿಯನ್ನು ಘೋಷಿಸಬೇಕಾಯಿತು. ವಿರೋಧ ಪಕ್ಷವಾದ ನ್ಯಾಶನಲ್ ಸಾಲ್ವೇಶನ್ ಫ್ರಂಟ್, ಅಲ್ ನೂರ್ ಪಕ್ಷಗಳು ಪ್ರತಿಭಟನಾಕಾರರ ಧ್ವನಿಯಲ್ಲಿ  ಮಾತಾಡಿದುವು. ನಿಜವಾಗಿ, ಯಾವಾಗ ಮುರ್ಸಿಯವರು ಸುಗ್ರೀವಾಜ್ಞೆಯನ್ನು ಹೊರಡಿಸಿದರೋ ಆವಾಗಲೇ ಸೀಸಿ ನೇತೃತ್ವದ ಮಿಲಿಟರಿ ಪಡೆಗೆ ಸರಕಾರದ ನೀತಿಯಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಸಂದರ್ಭ ಸೃಷ್ಟಿಯಾಗತೊಡಗಿತು. ಅದು ಈಜಿಪ್ಟಿಯನ್ನರ ಹಿತಚಿಂತಕನ ವೇಷ ಹಾಕಿಕೊಂಡಿತು. ಕೊನೆಗೆ ಜುಲೈ 1ರಂದು ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 48 ಗಂಟೆಗಳ ಸಮಯವನ್ನು ಸೇನಾ ಕಮಾಂಡರ್ ಎಂಬ ನೆಲೆಯಲ್ಲಿ ಸೀಸಿ ನಿಗದಿಪಡಿಸಿದರು. ಜುಲೈ 3,  2013ರಂದು ಮುರ್ಸಿಯವರನ್ನು ಅವರು ಪದಚ್ಯುತಗೊಳಿಸಿದರು. ಆದರೆ, ಇದನ್ನು ಖಂಡಿಸಿ ಈಜಿಪ್ಟ್ ನಾದ್ಯಂತ ಮುಸ್ಲಿಮ್ ಬ್ರದರ್ ಹುಡ್‍ನ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಬಲಪ್ರಯೋಗದ ಮೂಲಕ ಇವೆಲ್ಲವನ್ನೂ ದಮನಿಸಿದ ಸೀಸಿ,  ಸಾವಿರಾರು ಮಂದಿಯ ಹತ್ಯೆ ನಡೆಸಿದರು. ಇದರಲ್ಲಿ ಒಂದೇ ಬಾರಿಗೆ ನಡೆಸಲಾದ 900ರಷ್ಟು ಮಂದಿಯ ಹತ್ಯೆಯೂ ಸೇರಿದೆ. ಆದ್ದರಿಂದಲೇ, ಮತ್ತೆ ಅದೇ ಪ್ರಶ್ನೆಯನ್ನು ಕೇಳಬೇಕಾಗಿದೆ,
ಕತ್ತಲ ಕೋಣೆಯಲ್ಲಿ ಕೂಡಿಟ್ಟು ಸಾಯಿಸಬೇಕಾದಂತಹ ಯಾವ ಅಪರಾಧವನ್ನು ಮುರ್ಸಿ ಎಸಗಿದ್ದರು?

ಆ ನ್ಯಾಯಾಧೀಶ ಸೇದುವ ಸಿಗರೇಟು ಅದು ಎಷ್ಟನೆಯದ್ದೋ?



Censorship through Noice
Censorship through Silence

    ಮಾಧ್ಯಮ ಜಗತ್ತನ್ನು ವ್ಯಾಖ್ಯಾನಿಸುವುದಕ್ಕೆ ಖ್ಯಾತ ತತ್ವಜ್ಞಾನಿ ಮತ್ತು ಕಾದಂಬರಿಕಾರ ಅಂಬಟೊಕ್ ಇಕೋ ಬಳಸಿದ ಎರಡು ಪದಪುಂಜಗಳು ಇವು. ಗದ್ದಲದ ಮೂಲಕ (Censorship through Noice) ಮತ್ತು ಮೌನದ ಮೂಲಕ  (Censorship through Silence) ಮಾಧ್ಯಮಗಳು ಹೇಗೆ ಸುದ್ದಿ ಸೆನ್ಸಾರ್ ನಡೆಸುತ್ತವೆ ಅನ್ನುವುದನ್ನು ದಶಕದ ಹಿಂದೆ ಅವರು ವಿವರಿಸಿದ್ದರು. ಇದನ್ನು ಎರಡು ಉದಾಹರಣೆಗಳ ಮೂಲಕ ನಾವಿಲ್ಲಿ ಅರ್ಥ ಮಾಡಿಕೊಳ್ಳಬಹುದು.
1. ಲಂಚ ಪ್ರಕರಣಕ್ಕೆ ಸಂಬಂಧಿಸಿ 2009ರಲ್ಲಿ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ವಿರುದ್ಧ ರೈಮಂಡೋ ಮೆಸಿಯಾನೋ ಅನ್ನುವ ನ್ಯಾಯಾಧೀಶ ತೀರ್ಪು ನೀಡುತ್ತಾರೆ. ಪ್ರಧಾನಿ ಬೆರ್ಲುಸ್ಕೋನಿಯವರು ಲಂಚ ಪ್ರಕರಣದಲ್ಲಿ ತಪ್ಪಿತಸ್ಥ  ಅನ್ನುವುದು ಸಣ್ಣ ಸುದ್ದಿಯಲ್ಲ. ಇಡೀ ಇಟಲಿಯನ್ನೇ ದಂಗು ಬಡಿಸಬಹುದಾದ ಮತ್ತು ಬೆರ್ಲುಸ್ಕೋನಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಕುತ್ತು ತರಬಹುದಾದ ಎಲ್ಲ ಸಾಮರ್ಥ್ಯವೂ ಆ ತೀರ್ಪಿಗಿತ್ತು. ನ್ಯಾಯಾಧೀಶ ರೈಮಂಡೋ ಮೆಸಿಯಾನೋ ಅವರ  ಧೈರ್ಯ, ಪ್ರಾಮಾಣಿಕತೆ ಮತ್ತು ನಿಷ್ಠುರ ಧೋರಣೆಗಳು ಸಾರ್ವಜನಿಕ ಚರ್ಚೆಗೊಳಗಾಗುವ ಎಲ್ಲ ಸಾಧ್ಯತೆಗಳೂ ಕಂಡು ಬಂದುವು. ಹೀಗಾಗುವುದೆಂದರೆ, ಪರೋಕ್ಷವಾಗಿ ಬೆರ್ಲುಸ್ಕೋನಿ ಬೆತ್ತಲಾಗುವುದು ಎಂದೇ ಅರ್ಥ. ಈ ತೀರ್ಪನ್ನು ಎತ್ತಿಕೊಂಡು  ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಬೆರ್ಲುಸ್ಕೋನಿಯನ್ನು ಹಣಿಯುವುದು ಶತಸಿದ್ಧವಾಗಿತ್ತು. ಇನ್ನೇನು ಬೆರ್ಲುಸ್ಕೋನಿ ಯುಗ ಮುಗಿಯಿತು ಅನ್ನುವಾಗ ಇಟಲಿಯ ಪ್ರಸಿದ್ಧ ‘Canale  5’ ಎಂಬ ಟಿ.ವಿ. ಚಾನೆಲ್‍ನಲ್ಲಿ ವೀಡಿಯೋವೊಂದು ಪ್ರಸಾರ  ವಾಯಿತು. ಇಟಲಿಯ ಮಟ್ಟಿಗೆ ಅತ್ಯಂತ ಹೆಚ್ಚು ವೀಕ್ಷಕರಿರುವ ಚಾನೆಲ್ ಇದು. ನ್ಯಾಯಾಧೀಶ ರೈಮಂಡೋ ಮೆಸಿಯಾನೋ ಅವರಿಗೆ ಸಂಬಂಧಿಸಿದ ವೀಡಿಯೋ. ಈ ನ್ಯಾಯಾಧೀಶರು ರಸ್ತೆಯಲ್ಲಿ ನಡೆಯುವುದು, ನಡೆಯುತ್ತಾ ಸಿಗರೇಟು  ಸೇದುವುದು, ಕ್ಷೌರದಂಗಡಿಗೆ ಹೋಗುವುದು ಮತ್ತು ಗಡ್ಡ ಬೋಳಿಸುವುದು ಇತ್ಯಾದಿ ಖಾಸಗಿ ವಿಷಯಗಳು ಆ ವೀಡಿಯೋದಲ್ಲಿದ್ದುವು. ಆ ವೀಡಿಯೋ ಪ್ರಸಾರದ ನಡುನಡುವೆ ಆ್ಯಂಕರ್ ಅದಕ್ಕೊಂದು ವ್ಯಾಖ್ಯಾನವನ್ನು ನೀಡುತ್ತಲೇ ಹೋದ:
‘ವೀಕ್ಷಕರೇ, ಈ ನ್ಯಾಯಾಧೀಶರಿಗೆ ಇನ್ನೊಂದು ಗುಪ್ತ ಮುಖವೂ ಇದೆ. ಇವರು ಸೇದುವ ಈ ಸಿಗರೇಟು ಎಷ್ಟನೆಯ ದಾಗಿರಬಹುದು? ಇವರು ಧರಿಸಿರುವ ಕಾಲು ಚೀಲವನ್ನೊಮ್ಮೆ ನೋಡಿ. ಎಂಥ ಸಾಕ್ಸು? ವಿಚಿತ್ರ ಅನಿಸಲ್ವೆ? ಇವರೊಬ್ಬ  ಶೋಕಿಮ್ಯಾನ್. ಇವರಿಗೆ ಶಾಂತಿ-ನೆಮ್ಮದಿ ಸಿಗುವುದು ಕ್ಷೌರದಂಗಡಿಯಲ್ಲಿ ಮಾತ್ರ...’ ಹೀಗೆ ಸಾಗಿತ್ತು ಆತನ ಒಕ್ಕಣೆ.
ಇಟಲಿಯ ನಾಗರಿಕರಲ್ಲಿ ಈ ವೀಡಿಯೋ ವಿಚಿತ್ರ ಕುತೂಹಲವನ್ನು ಹುಟ್ಟು ಹಾಕಿತು. ಅವರಿಗೆ ಆ ಬಗೆಯ ಸುದ್ದಿ ಹೊಸತು. ನ್ಯಾಯಾಧೀಶರ ಖಾಸಗಿ ವಿವರಣೆಗಳನ್ನು ಸೆರೆ ಹಿಡಿದು ಹಾಗೆ ರಸವತ್ತಾಗಿ ಪ್ರಸಾರ ಮಾಡಿದ ಮೊದಲ ಘಟನೆ ಎಂಬ  ನೆಲೆ ಯಲ್ಲಿ ಇಟಲಿಯನ್ನರನ್ನು ಅದು ಸೆಳೆಯಿತು. ಅವರ ಸಿಗರೇಟು ಚರ್ಚೆಗೊಳಗಾಯಿತು. ಸಾಕ್ಸು ಮಾತಿಗೆ ವಸ್ತುವಾಯಿತು. ಅವರ ಇನ್ನಿತರ ಖಾಸಗಿ ಪ್ರಸಂಗಗಳ ಬಗ್ಗೆ ಸಾಮಾನ್ಯ ಜನರಲ್ಲಿ ಕುತೂಹಲ ಹೆಚ್ಚಿತು. ಜನರು ನ್ಯಾಯಾಧೀಶರ ಬಗ್ಗೆ  ವಿಧವಿಧವಾಗಿ ಮಾತಾಡತೊಡಗಿದರು. ಎಲ್ಲಿಯವರೆಗೆಂದರೆ, ಪ್ರತಿಪಕ್ಷಗಳೇ ಅದರ ವಿರುದ್ಧ ಮಾತಾಡಬೇಕಾಯಿತು. ನ್ಯಾಯಾಧೀಶರು ಆ ವೀಡಿಯೋ ಪ್ರಸಾರವನ್ನು ಖಂಡಿಸಿದರು. ಪ್ರತಿಪಕ್ಷಗಳೂ ಖಂಡಿಸಿದುವು. ತಮಾಷೆ ಏನೆಂದರೆ, ಈ ಖಂಡನೆಯೇ  ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಯಿತು. ಗದ್ದಲದ ನಡುವೆ ಬೆರ್ಲುಸ್ಕೋನಿಯ ಲಂಚ ಪ್ರಕರಣ ಮರೆಗೆ ಸರಿಯಿತು.
2. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ.ಯ ಭರ್ಜರಿ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಲದ ಸದಸ್ಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನೆರೆಕರೆ ದೇಶದ ಮುಖಂಡರು ಅದರಲ್ಲಿ ಭಾಗವಹಿಸಿದರು.  ಈ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಗಮನ ಸೆಳೆದವರಲ್ಲಿ ಒಬ್ಬರು- ಒಡಿಸ್ಸಾದ 64 ವರ್ಷದ ಪ್ರತಾಪ್ ಚಂದ್ರ ಸಾರಂಗಿ. ಬಿಳಿ ಕುರ್ತಾ ಮತ್ತು ಬಾಚದ ಕೂದಲಿನೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅವರನ್ನು ಉಳಿದ ಸಂಸದರು ಮತ್ತು  ಅತಿಥಿಗಳು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು. ಟೈಮ್ಸ್ ನೌ ಚಾನೆಲ್‍ನ ವೆಬ್‍ಸೈಟ್‍ನಲ್ಲಿ ಅವರ ಬಗ್ಗೆ ಬರಹ ಪ್ರಕಟವಾಗಿತ್ತು. ಅವರು ಸಂಚಾರಕ್ಕೆ ಸೈಕಲನ್ನು ಉಪಯೋಗಿಸುವುದು, ಸಂಸ್ಕೃತ  ಭಾಷೆಯಲ್ಲಿ ಸಂವಹನ ನಡೆಸುವುದು ಹಾಗೂ  ವೇಷ ಭೂಷಣ ಮತ್ತು ಸಂಪತ್ತಿನಲ್ಲೂ ಸರಳವಾಗಿರುವುದನ್ನು ಆ ಬರಹದಲ್ಲಿ ವಿಶೇಷ ಒತ್ತು ಕೊಟ್ಟು ಹೇಳಲಾಗಿತ್ತು. ಅವರಲ್ಲಿ ಬರೇ 13 ಲಕ್ಷ  ರೂಪಾಯಿಯಷ್ಟೇ ಇದೆ ಅನ್ನುವುದನ್ನು ಗಮನ ಸೆಳೆಯುವ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಅವರು  ದೆಹಲಿಯಲ್ಲಿ ಸೈಕಲ್ ಮೂಲಕ ಸಂಚರಿಸುವುದನ್ನು ನೀವು ನೋಡಿದರೆ ಅಚ್ಚರಿಗೆ ಒಳಗಾಗುವಿರಿ ಎಂದೂ ಹೇಳಲಾಗಿತ್ತು.’
ಹಾಗಂತ, ಈ ವಿವರಣೆಗಳೆಲ್ಲ ಸುಳ್ಳು ಎಂದಲ್ಲ, ನಿಜವೇ. ಮಾತ್ರವಲ್ಲ, ಅವರ ಸರಳತನ, ಕನಿಷ್ಠ ಆದಾಯ, ಸೈಕಲ್ ಸವಾರಿ, ಬಿಳಿ ಕುರ್ತಾ-ಪೈಜಾಮ, ಸಂಸ್ಕೃತ ಭಾಷೆಯಲ್ಲಿ ಸಂವಹನ ಇತ್ಯಾದಿ ಇತ್ಯಾದಿಗಳ ಬಗ್ಗೆ ಸುದ್ದಿ ತಯಾರಿಸುವುದು ಅಪರಾಧವೂ ಅಲ್ಲ. ಆದರೆ, ಈ ಸುದ್ದಿ ತಯಾರಿಸುವ ಭರಾಟೆಯಲ್ಲಿ ಸುದ್ದಿಯಾಗಲೇಬೇಕಾದ ಪ್ರಮುಖ ವಿಷಯಗಳನ್ನು ಅಡಗಿಸಬಾರದಲ್ಲ. ಸಾರಂಗಿಯ ವಿಷಯದಲ್ಲಿ ಟೈಮ್ಸ್ ನೌ ಎಂದಲ್ಲ, ಹಲವು ರಾಷ್ಟ್ರಮಟ್ಟದ ಪತ್ರಿಕೆಗಳು ಮತ್ತು ಚಾನೆಲ್‍ಗಳು  ದಂಗುಬಡಿಸುವ ಸತ್ಯವನ್ನು ಮುಚ್ಚಿಟ್ಟವು ಅಥವಾ ಮರೆತಂತೆ ನಟಿಸಿದುವು. 1999ರಲ್ಲಿ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೈನ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ಕೊಂದ ಪ್ರಕರಣ ಒಡಿಸ್ಸಾದಲ್ಲಿ ನಡೆದಿತ್ತು. ಜೀಪಿನಲ್ಲಿ ಮಲಗಿದ್ದ ಈ ಮೂವರನ್ನೂ ಬೆಂಕಿ  ಹಚ್ಚಿ ಸಾಯಿಸಲಾಗಿತ್ತು. ಈ ಕೃತ್ಯದ ಹೊಣೆಯನ್ನು ಬಜರಂಗ ದಳದ ಮೇಲೆ ಹೊರಿಸಲಾಗಿತ್ತು. ದಾರಾಸಿಂಗ್ ಅನ್ನುವ ವ್ಯಕ್ತಿಯನ್ನು ಕೃತ್ಯದ ರೂವಾರಿಯೆಂದು ನ್ಯಾಯಾಲಯ ಘೋಷಿಸಿದ್ದು ಮತ್ತು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದೂ ನಡೆಯಿತು.  ಈ ಕೃತ್ಯದ ಸಮಯದಲ್ಲಿ ಬಜರಂಗದಳದ ಸ್ಥಾನೀಯ ಸಂಚಾಲಕರಾಗಿದ್ದುದು ಇದೇ ಸಾರಂಗಿ. 2007ರಲ್ಲಿ ಒಡಿಸ್ಸಾ ವಿಧಾನಸಭೆಯ ಮೇಲೆ ದಾಳಿ ನಡೆಸಿದ ಗುಂಪಿಗೆ ನೇತೃತ್ವ ನೀಡಿದ ಆರೋಪವೂ ಸಾರಂಗಿಯ ಮೇಲಿದೆ. ಸದ್ಯ ಅವರ ಮೇಲೆ 7  ಕ್ರಿಮಿನಲ್ ಕೇಸುಗಳಿವೆ. ಧರ್ಮಗಳ ನಡುವೆ ದ್ವೇಷ ಹರಡಿದ್ದು, ಶಾಂತಿ ಸುವ್ಯವಸ್ಥೆಯನ್ನು ಕೆಡಿಸಿದ್ದು ಇತ್ಯಾದಿ ಆರೋಪಗಳೂ ಇದರಲ್ಲಿ ಸೇರಿವೆ. ಅಂದಹಾಗೆ, ಸಾರಂಗಿಯವರು ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ನಿಜ.  ಆದರೆ, ಅವರನ್ನು ಕೇಂದ್ರೀಕರಿಸಿ ಸುದ್ದಿ ತಯಾರಿಸುವಾಗ ಅವರ ಸುತ್ತ ಹರಡಿಕೊಂಡಿರುವ ಈ ಕತ್ತಲ ಸ್ಥಿತಿಯನ್ನೂ ಪರಿಗಣಿಸಬೇಕಲ್ಲ. ಸುದ್ದಿಯು ಸುದ್ದಿ ತಯಾರಕನ ಮನಸ್ಥಿತಿಯಂತೆ ಅಥವಾ ಸುದ್ದಿ  ಸಂಸ್ಥೆಯ ಬಯಕೆಯಂತೆ ರಚಿತವಾಗಬಾರದಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸದೇ ತಯಾರಿಸುವ ಸುದ್ದಿಯನ್ನು ರದ್ದಿ ಎಂದಲ್ಲದೇ ಇನ್ನೇನೆಂದೂ ಕರೆಯಬೇಕು? ಅಂದಹಾಗೆ,
ಗಂಭೀರ ವಿಷಯವೊಂದು ಚರ್ಚೆಗೆ ಒಳಗಾಗುತ್ತದೆ ಎಂಬ ಸನ್ನಿವೇಶ ನಿರ್ಮಾಣಗೊಂಡಾಗ ಅಗಂಭೀರ ವಿಷಯವನ್ನು ಮುನ್ನೆಲೆಗೆ ತಂದು, ಅದರ ಸುತ್ತ ಗದ್ದಲವನ್ನು ಎಬ್ಬಿಸಿ, ಗಂಭೀರ ವಿಷಯವನ್ನು ಮರೆಗೆ ಸರಿಸುವ ಮಾಧ್ಯಮ ನೀತಿಗೆ  (Censorship through Noice) ಇಟಲಿಯ ಬೆರ್ಲುಸ್ಕೋನಿ ಪ್ರಕರಣ ಒಂದು ಉದಾಹರಣೆ ಅಷ್ಟೇ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮಲ್ಲೂ ಈ ಬಗೆಯ ಗದ್ದಲದ ಪತ್ರಿಕೋದ್ಯಮ ಹೆಜ್ಜೆ ಹೆಜ್ಜೆಗೂ ಕಾಣಸಿಕ್ಕಿತು. ಝೀ ನ್ಯೂಸ್,  ಟೈಮ್ಸ್ ನೌ, ಎ.ಬಿ.ಪಿ. ನ್ಯೂಸ್, ನ್ಯೂಸ್ ನೇಷನ್ ಇತ್ಯಾದಿ ಟಿ.ವಿ. ಚಾನೆಲ್‍ಗಳು ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನ ಪ್ರಸಾರ ಮಾಡಿದುವು. ವಿಶೇಷ ಏನೆಂದರೆ, ಈ ಸಂದರ್ಶನವು ಬಹುತೇಕ  ರಾಜಕೀಯ ರಹಿತ ವಿಷಯಗಳ ಮೇಲೆ ನಡೆದಿತ್ತು. ಪ್ರಧಾನಿಯವರ ಆಹಾರ ಕ್ರಮಗಳ ಕುರಿತು, ಅವರ ವಸ್ತ್ರ ವಿನ್ಯಾಸದ ಕುರಿತು, ಬಾಲ್ಯದ ಕುರಿತು, ಆ ಬಾಲ್ಯದಲ್ಲಿ ತಿಂದ ಹಣ್ಣುಗಳ ಕುರಿತು... ಹೀಗೆ ಸಾಗಿತ್ತು ಸಂದರ್ಶನ. ನಿಜವಾಗಿ, ಚುನಾವಣೆ  ನಡೆಯುವುದು ಮತ್ತು ನಡೆಯಬೇಕಾಗಿರುವುದು ಜನರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ. ಚುನಾವಣೆಯೆಂಬುದೇ ಪಕ್ಕಾ ರಾಜಕೀಯ. ರಾಜಕೀಯ ರಹಿತ ಚುನಾವಣೆ ಎಂಬುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಧ್ಯವೂ ಇಲ್ಲ. ಇಂಥ ಸ್ಥಿತಿಯಲ್ಲಿ  ಮುಖ್ಯ ವಾಹಿನಿಯ ಟಿ.ವಿ. ಚಾನೆಲ್‍ಗಳು ರಾಜಕೀಯ ರಹಿತ ಸಂದರ್ಶನ ನಡೆಸುವುದೆಂದರೆ, ಅದರಿಂದ ನಾಗರಿಕರಿಗಾಗುವ ಪ್ರಯೋಜನಗಳೇನು? ಪ್ರಧಾನಿಯವರ ಉಡುಪು ವಿನ್ಯಾಸ ಮತ್ತು ಆಹಾರ ಕ್ರಮಗಳನ್ನು ಅರಿತುಕೊಳ್ಳುವುದು ಚುನಾವಣೆಯ  ಸಮಯದಲ್ಲಿ ಯಾಕೆ ಮುಖ್ಯವಾಗಬೇಕು? ಅವರ ಬಾಲ್ಯ, ಯೌವನ, ಸಾಹಿತ್ಯಾಭಿರುಚಿ, ಹವ್ಯಾಸಗಳು ಮುಂತಾದ ಖಾಸಗಿ ವಿಚಾರಗಳು- ಯಾರಿಗೆ ಓಟು ಹಾಕಬೇಕು ಎಂದು ಮತದಾರ ತೀರ್ಮಾನಿಸುವುದಕ್ಕೆ ಮಾನದಂಡಗಳೇ? ಜನರ ಮತವನ್ನು  ಇಂಥವು ನಿರ್ಧರಿಸಬೇಕೇ? ರಫೇಲ್ ವ್ಯವಹಾರದಲ್ಲಾಗಿರಬಹುದಾದ ಭ್ರಷ್ಟಾಚಾರದ ಬಗ್ಗೆ ನಾಗರಿಕರಲ್ಲಿ ಕುತೂಹಲ ಸೃಷ್ಟಿಯಾಗುವ ಸಮಯದಲ್ಲೇ  ನಕ್ಸಲ್ ಬೆದರಿಕೆಯ ಕುರಿತೋ ಕ್ಯಾಂಪಸ್ ರಾಜಕೀಯದ ಕುರಿತೋ ಅಥವಾ ಕಾಶ್ಮೀರ ಮತ್ತು  ಪಾಕಿಸ್ತಾನದ ಕುರಿತೋ ಗದ್ದಲ ಎಬ್ಬಿಸುವುದು ಯಾವ ಬಗೆಯ ಮಾಧ್ಯಮ ನೀತಿ? ಬಹು ಮಹತ್ವಪೂರ್ಣವಾದ ವಿಷಯವೊಂದು ಗಂಭೀರ ಸಂವಾದವನ್ನು ಬಯಸುತ್ತಿರುವ ಸಮಯದಲ್ಲೇ  ಆ ಬಗ್ಗೆ ಮೌನ ವಹಿಸುವುದು ಮತ್ತು ಮಹತ್ವ  ಪೂರ್ಣವಲ್ಲದ ವಿಷಯವನ್ನು ಮುನ್ನೆಲೆಗೆ ತಂದು ಚರ್ಚೆ ಹುಟ್ಟು ಹಾಕುವುದು (Censorship through Silence) ಯಾಕಾಗಿ? ಕನ್ನಡದ ಪ್ರಮುಖ ಟಿ.ವಿ. ಚಾನೆಲ್‍ಗಳೂ ಈ ಆರೋಪದಿಂದ ಹೊರಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿಶೇಷ ಒಲವು ವ್ಯಕ್ತಪಡಿಸಿದ್ದ ಇವು, ರಾಜ್ಯದ ಮೈತ್ರಿ ಸರಕಾರದ ಬಗ್ಗೆ ಉತ್ಪ್ರೇಕ್ಷಿತ ಮತ್ತು ಅತಿ ವೈಭವೀಕರಣದ ಸುದ್ದಿಗಳನ್ನು ಪ್ರಸಾರ ಮಾಡಿದುವು.  ಕಳೆದ ವಿಧಾನಸಭಾ ಚುನಾವಣೆಯಲ್ಲಂತೂ  ಸಿದ್ದರಾಮಯ್ಯನವರ ಊಟದ ಮೆನುವನ್ನೂ ಭೂಕಂಪದ ರೀತಿಯಲ್ಲಿ ಉತ್ಪ್ರೇಕ್ಷಿತ ವ್ಯಾಖ್ಯಾನಕ್ಕೆ ಒಳಪಡಿಸಿದ್ದುವು.
ಭಾರತದಲ್ಲಿ ಸದ್ಯ 1.2 ಲಕ್ಷ ಮುದ್ರಣ ಪ್ರಕಾಶನಾಲಯಗಳಿವೆ. 550 ಎಫ್.ಎಂ. ರೇಡಿಯೋ ಸ್ಟೇಷನ್‍ಗಳು ಮತ್ತು 880ರಷ್ಟು ಸೆಟ್‍ಲೈಟ್ ಟಿ.ವಿ. ಚಾನೆಲ್‍ಗಳಿವೆ. ಇವುಗಳಲ್ಲಿ ನ್ಯೂಸ್ ಚಾನೆಲ್ ಗಳ ಸಂಖ್ಯೆಯೇ 380. ವಿಷಾದ ಏನೆಂದರೆ, ಇಲ್ಲಿ  ತಯಾರಾಗುವ ಸುದ್ದಿಗಳೆಲ್ಲ ಬಹಳ ವಸ್ತುನಿಷ್ಠ, ಪ್ರಾಮಾಣಿಕ, ಬಹುತ್ವಪರ ಮತ್ತು ನ್ಯಾಯಪರ ಎಂದು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ರಿಪೋರ್ಟರ್ಸ್ ವಿದೌಟ್ ಬೋರ್ಡರ್ಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ದೆಹಲಿಯ  ಡಿಜಿಟಲ್ ಇಂಡಿಯಾ ಕಂಪೆನಿಯಾದ DataLEADS  ತನ್ನ ಸಮೀಕ್ಷೆ ಮತ್ತು ಸಂಶೋಧನೆಗಳ ಮೂಲಕ ಹೇಳುತ್ತಿದೆ. ರೇಡಿಯೋ ಸುದ್ದಿಗಳಲ್ಲಿ ಸರಕಾರದ ಪ್ರಭಾವ ದಟ್ಟವಾಗಿದ್ದರೆ, ಟಿ.ವಿ. ಚಾನೆಲ್‍ಗಳ ಮೇಲೆ ರಾಜಕೀಯ ಮಹತ್ವಾಕಾಂಕ್ಷೆ ಇರುವ  ವ್ಯಕ್ತಿಗಳ ಪ್ರಭಾವ ತೀವ್ರವಾಗಿಯೇ ಇದೆ. ಹೆಚ್ಚಿನ ಚಾನೆಲ್‍ಗಳು ಇಂಥ ವ್ಯಕ್ತಿಗಳ ನಿಯಂತ್ರಣದಲ್ಲಿವೆ ಅಥವಾ ಅವರೇ ಅದರ ಮಾಲಿಕರಾಗಿರುತ್ತಾರೆ. ಅನೇಕ ಬಾರಿ ಅವರ ಮೂಗಿನ ನೇರಕ್ಕೇ ಸುದ್ದಿ ತಯಾರಾಗಬೇಕಾಗುತ್ತದೆ. ಏಕ ವ್ಯಕ್ತಿ ಕೇಂದ್ರಿತ ಚಾ ನೆಲ್‍ಗಳೂ ಇವೆ. ಅವರ ಇಚ್ಛೆಯಂತೆ ಸುದ್ದಿ ತಯಾರಿ ನಡೆಯುತ್ತಿರುತ್ತದೆ. ಯಾವ ವಿಷಯದ ಬಗ್ಗೆ ಮೌನವಾಗಬೇಕು ಮತ್ತು ಯಾವ ವಿಷಯವನ್ನು ಚರ್ಚೆಗೆತ್ತಿಕೊಳ್ಳಬೇಕು ಎಂಬುದನ್ನೆಲ್ಲ ಅವರೇ ನಿರ್ಧರಿಸುತ್ತಾರೆ. ಅವರ ಹಿತಾಸಕ್ತಿಯೇನು ಅದುವೇ  ಆಯ್ಕೆಯ ಮಾನದಂಡ. ಲಂಚ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಘೋಷಿಸಲಾದ ಬೆರ್ಲುಸ್ಕೋನಿಯ ಬದಲು ಆ ತೀರ್ಪನ್ನು ಪ್ರಕಟಿಸಿದ ರೈಮಂಡೋ ಮೆಸಿಯಾನೋ ಬಗ್ಗೆ ಇಟಲಿಯ ‘Canale  5’ ಚಾನೆಲ್ ಸುದ್ದಿ ಪ್ರಸಾರ ಮಾಡಿರುವುದಕ್ಕೆ  ಮಾಧ್ಯಮ ಜಗತ್ತಿನಲ್ಲಿರುವ ಈ ಸ್ಥಿತಿಯೇ ಕಾರಣ. ‘Canale  5’ ಎಂಬ ಟಿ.ವಿ. ಚಾನೆಲ್‍ನ ಮಾಲಿಕ ಸ್ವತಃ ಬೆರ್ಲುಸ್ಕೋನಿ. ಬ್ರಿಟನ್ನಿನ ಮಾಧ್ಯಮ ಜಗತ್ತಿನಲ್ಲಿ ರೂಪಕ್ ಮರ್ಡೋಕ್ ಹೇಗೆಯೋ, ಜರ್ಮನಿಯಲ್ಲಿ ಬೆರ್ಟಲ್ಸ್ ಮನ್ ಮತ್ತು ಕಿರ್ಚ್  ಹೇಗೆಯೋ, ಫ್ರಾನ್ಸ್ ನಲ್ಲಿ ವಿವೆಂಡಿ ಹೇಗೆಯೋ ಹಾಗೆಯೇ ಇಟಲಿಯಲ್ಲಿ ಬೆರ್ಲುಸ್ಕೋನಿ. ‘Canale 5’ ಅಲ್ಲದೇ Italia 1 ಮತ್ತು Rate 4 ಎಂಬ ಇನ್ನೆರಡು ರಾಷ್ಟ್ರೀಯ ಟಿ.ವಿ. ಚಾನೆಲ್‍ಗಳ ಮಾಲಿಕರೂ ಬೆರ್ಲುಸ್ಕೋನಿಯೆ. ಇಟಲಿಯ  ಅತಿದೊಡ್ಡ ಮೊಂಡಡೋರಿ ಎಂಬ ಪ್ರಕಾಶನಾಲಯದ ಮಾಲಿಕರೂ ಬೆರ್ಲುಸ್ಕೋನಿಯೇ. ಅಂದಹಾಗೆ,
ಬೆರ್ಲುಸ್ಕೋನಿಯಂಥ ಮಾಲಿಕರು ಮತ್ತು ‘Canale  5’ನಂಥ ಚಾನೆಲ್‍ಗಳು ನಮ್ಮಲ್ಲೂ ಧಾರಾಳ ಇವೆ. ಆದ್ದರಿಂದಲೇ ಆತಂಕ.

Thursday, June 20, 2019

ನರೇಂದ್ರ ಮೋದಿ ಗೆದ್ದರಲ್ಲ, ಹೇಗೆ?



ಏ.ಕೆ. ಕುಕ್ಕಿಲ

1. ನಿರುದ್ಯೋಗ
2. ಕೃಷಿ ಬಿಕ್ಕಟ್ಟು
3. ಬೆಲೆ ಹೆಚ್ಚಳ
ಈ ಮೂರನ್ನೂ ನಗಣ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಧ್ಯವಾದದ್ದು ಹೇಗೆ? ಕೃಷಿ ಬಿಕ್ಕಟ್ಟು, ಬೆಲೆ ಹೆಚ್ಚಳ ಮತ್ತು ನಿರುದ್ಯೋಗ ಇವು ಮೂರೂ ಮಧ್ಯಮ, ಮೇಲ್ಮಧ್ಯಮ ಮತ್ತು ತಳ ಸಮುದಾಯಕ್ಕೆ ಸಂಬಂಧಿಸಿದ ಸಂಕಟ ಗಳು.  ಈ ದೇಶದಲ್ಲಿ ಯಾರು ಪ್ರಧಾನಿಯಾಗಬೇಕು, ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ತೀರ್ಮಾನಿಸುವ ಸಾಮಥ್ರ್ಯ ಈ ಬೃಹತ್ ಸಮೂಹದ ಕೈಯಲ್ಲಿದೆ. ಹೀಗಿದ್ದೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋ ದಿಯವರ ಮೇಲೆ ಈ ಸಮೂಹ ವಿಶ್ವಾಸ ತಾಳಿದುದು ಯಾವ ಕಾರಣದಿಂದ? ತನ್ನ ಚುನಾವಣಾ ಭಾಷಣದಲ್ಲಿ ನರೇಂದ್ರ ಮೋದಿಯವರು ಈ ಮೇಲಿನ ಮೂರೂ ವಿಷಯಗಳ ಮೇಲೆ ಮಾತಾಡಿದ್ದು ಬಹಳ ಬಹಳ ಕಡಿಮೆ. ತಮ್ಮ ಅಷ್ಟೂ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ನೋಟು ನಿಷೇಧ ಎಂಬ ಪದವನ್ನು ಉಲ್ಲೇಖಿಸಿದ್ದು ಬರೇ ಎರಡು ಬಾರಿ. ಹೀಗಿದ್ದೂ ಅವರು ಗೆದ್ದರಲ್ಲ, ಹೇಗೆ?
1. ನರೇಂದ್ರ ಮೋದಿಯವರಿಗೆ ಸರಿಸಮಾನವಾದ ನಾಯಕನನ್ನು ತೋರಿಸಲು ವಿರೋಧ ಪಕ್ಷಗಳು ವಿಫಲವಾದುದು ಇದಕ್ಕಿರುವ ಮೊದಲ ಕಾರಣ. ವಿರೋಧ ಪಕ್ಷಗಳು ಎಷ್ಟು ಚೆಲ್ಲಾಪಿಲ್ಲಿಯಾಗಿದ್ದುವು ಅಂದರೆ ಅಲ್ಲಿ ಪ್ರತಿಯೊಬ್ಬರೂ ಪ್ರಧಾನಿ  ಅಭ್ಯರ್ಥಿಯಾಗಿಯೇ ಬಿಂಬಿಸಿಕೊಂಡರು. ಡಿ.ಎಂ.ಕೆ. ಪಕ್ಷವನ್ನು ಬಿಟ್ಟರೆ ಉಳಿದಂತೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳುವುದಕ್ಕೆ ಇತರ ಪಕ್ಷಗಳು ಹಿಂಜರಿದುವು. ಮಾಯಾವತಿ, ಮಮತಾ ಬ್ಯಾನರ್ಜಿ, ದೇವೇಗೌಡ, ಶರದ್  ಪವಾರ್ ಮುಂತಾದವರ ಹೆಸರುಗಳನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಧ್ಯಮಗಳು ತೇಲಿಸಿ ಬಿಟ್ಟವು. ಅಲ್ಲದೇ, ಈ ನಾಯಕರೂ ಅದನ್ನು ಒಳಗೊಳಗೇ ಆನಂದಿಸಿದರು. ಇದಕ್ಕೆ ವಿರುದ್ಧವಾಗಿ ನರೇಂದ್ರ ಮೋದಿಯವರು ತನ್ನನ್ನು ಬಲಿಷ್ಠ ನಾಯಕ  ಎಂದು ಘೋಷಿಸಿಕೊಂಡರು. ಇದಕ್ಕೆ ಪುರಾವೆಯಾಗಿ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್‍ನ ಮೇಲೆ ನಡೆಸಲಾದ ವಾಯುದಾಳಿಯನ್ನು ಜನರ ಮುಂದಿಟ್ಟರು. ಇದರ ಜೊತೆಗೇ ಉರಿ ದಾಳಿಗೆ ಪ್ರತೀಕಾರವಾಗಿ 2016 ಸೆಪ್ಟೆಂಬರ್‍ನಲ್ಲಿ  ನಡೆಸಲಾದ ಸರ್ಜಿಕಲ್ ದಾಳಿಯನ್ನೂ ಜನರೊಂದಿಗೆ ಹಂಚಿಕೊಂಡರು. ‘ಘರ್‍ಮೆ ಗುಸ್‍ಕರ್ ಮಾರೂಂಗಾ’ ಮತ್ತು ‘ಗೋಲಿ ಕೆ ಜವಾಬ್ ಗೋಲಾ ಸೆ ದಿಯಾ ಜಾಯೆಗಾ’ ಎಂಬ ನುಡಿಗಟ್ಟುಗಳನ್ನು ಜನರ ಬಾಯಿಗಿಟ್ಟರು. ಅಗತ್ಯ ಬಿದ್ದರೆ  ಅಣುಬಾಂಬನ್ನೂ ಪ್ರಯೋಗಿಸುವೆ ಎಂಬ ಆವೇಶ ತೋರ್ಪಡಿಸಿದರು. ನಿಜವಾಗಿ, ಚರ್ಚೆಯಾಗಬೇಕಿ ದ್ದುದು ಪುಲ್ವಾಮ ದಾಳಿಯ ಬಗ್ಗೆ. ನರೇಂದ್ರ ಮೋದಿಯವರು ಬಲಿಷ್ಠ ನಾಯಕನೇ ಆಗಿದ್ದಿದ್ದರೆ ಪುಲ್ವಾಮದಲ್ಲಿ 40 ಯೋಧರ ಹತ್ಯೆ ಹೇಗಾಯಿತು  ಎಂಬ ಪ್ರಶ್ನೆ ಮುನ್ನೆಲೆಗೆ ಬರಬೇಕಾದುದು ಸಹಜ. ರಾಷ್ಟ್ರೀಯ ಭದ್ರತೆ ಮತ್ತು ಬಲಿಷ್ಠ ನಾಯಕತ್ವ ಎಂಬುದು ತೋಳ್ಬಲದ ಪ್ರದರ್ಶನವಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವುದಕ್ಕೆ ಪುಲ್ವಾಮ ಮುಖ್ಯವಾಗಿತ್ತು. ಆದರೆ, ಅಂಥ ಪ್ರಶ್ನೆ ಯನ್ನು  ಎತ್ತುವ ಸಂದರ್ಭವನ್ನೇ ಅವರು ವಿರೋಧ ಪಕ್ಷಗಳಿಗೆ ನೀಡಲಿಲ್ಲ. ಚೌಕಿದಾರ್‍ನಿಂದ ಅವರು ಬಾಲಾಕೋಟ್‍ಗೆ ನೆಗೆದರು. ರಫೇಲ್‍ನ ಬಗ್ಗೆ ಪ್ರಶ್ನಿಸುವಾಗ ರಾಜೀವ್ ಗಾಂಧಿಯನ್ನು ಮುನ್ನೆಲೆಗೆ ತಂದರು. ತನ್ನ ವಿರುದ್ಧ ವಿರೋಧ ಪಕ್ಷಗಳು ಮಾಡಿರುವ  ಟೀಕೆಯನ್ನೇ ಭಾಷಣವನ್ನಾಗಿ ಮಾಡಿದರು. ಇದನ್ನು ಹೆಕ್ಕಿಹೆಕ್ಕಿ ಉತ್ತರಿಸಬೇಕಾದರೆ ವಿರೋಧಿ ಕೂಟದಲ್ಲಿ ಬಲಿಷ್ಠ ಮತ್ತು ಸರ್ವಾಂಗೀಕೃತ ನಾಯಕರಿರಬೇಕು. ತಾನು ಎಲ್ಲರ ಒಪ್ಪಿಗೆಯ ನಾಯಕ ಹೌದೋ ಅಲ್ಲವೋ ಎಂಬ ಸಂದೇಹ ರಾಹುಲ್  ಗಾಂಧಿಗೆ ಆರಂಭದಿಂದಲೂ ಇತ್ತು. ಬಲಿಷ್ಠ ನಾಯಕತ್ವ ಎಂಬ ಮೋದಿಯವರ ಮಾತಿಗೆ ಪ್ರತಿಯಾಗಿ ಅವರು ಏನನ್ನೂ ಹೇಳದೆಯೇ ಇಶ್ಶೂ ಬದಲಿಸಲು ನೋಡಿದರು. ಮೋದಿಯವರಿಗೆ ಪ್ರತಿ ಏಟು ಕೊಡುವ ಬದಲು ರಕ್ಷಣಾತ್ಮಕವಾಗಿ  ಮಾತಾಡಿದರು. ಎಲ್ಲಿಯವರೆಗೆಂದರೆ ‘ಸರ್ಜಿಕಲ್ ಸ್ಟ್ರೈಕ್ ನಾವು ಮಾಡಿದ್ದೀವಿ’ ಎಂದು ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ಅವರ ಧ್ವನಿ ಕ್ಷೀಣವಾಯಿತು. ಒಂದುರೀತಿಯಲ್ಲಿ, ಪುಲ್ವಾಮದ ಬಳಿಕ ಬೆಳವಣಿಗೆಗಳನ್ನು ಬಳಸಿಕೊಂಡು ನರೇಂದ್ರ ಮೋ ದಿಯವರು ಈ ದೇಶಕ್ಕೆ ಬಲಿಷ್ಠ ನಾಯಕನ ಅಗತ್ಯವಿದೆ ಮತ್ತು ಆ ಬಲಿಷ್ಠ ನಾನೇ ಎಂದು ಮತದಾರರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿರುವಂತೆಯೇ ರಾಹುಲ್ ಮತ್ತು ವಿರೋಧ ಪಕ್ಷಗಳು ಅದಕ್ಕೆ ಎದುರೇಟು ನೀಡಲು ಮತ್ತು ಪ್ರತಿ ನಾಯಕ ನನ್ನು ಸೃಷ್ಟಿಸಲು ವಿಫಲವಾದುವು. ನಿಜವಾಗಿ, ಈ ವಿಷಯದಲ್ಲಿ ಮೋದಿ ಒಂಟಿಯಲ್ಲ. ಕಳೆದ 5-6 ವರ್ಷಗಳಲ್ಲಿ ವಿಶ್ವದಾದ್ಯಂತ ನಡೆಯುತ್ತಿರುವ ಬೆಳವಣಿಗೆ ಇದು. ಅಮೇರಿಕ, ರಷ್ಯಾ, ಬ್ರೆಝಿಲ್, ಫಿಲಿಪ್ಪೀನ್ಸ್, ಹಂಗರಿ, ಪೋಲ್ಯಾಂಡ್ ಮುಂತಾದ  ರಾಷ್ಟ್ರಗಳಲ್ಲಿ ‘ಬಲಿಷ್ಠ ನಾಯಕ’ ಎಂಬುದು ಒಂದು ಮಂತ್ರವಾಗಿ ಬಿಟ್ಟಿದೆ. ಇವರ ಕಾರ್ಯಶೈಲಿ ಹೇಗಿದೆ ಎಂದರೆ, ನಿಯಮಬದ್ಧ ಸಂಸ್ಥೆಗಳನ್ನು ನಿರ್ಲಕ್ಷಿಸುತ್ತಾರೆ. ಸಿದ್ಧ ಮಾದರಿಯನ್ನು ವ್ಯಂಗ್ಯ ಮಾಡುತ್ತಾರೆ. ಇತರರ ಮೇಲೆ ಭ್ರಷ್ಟಾಚಾರದ ಆರೋಪ  ಹೊರಿಸುತ್ತಾರೆ. ಪ್ರಜಾತಂತ್ರ ಆಡಳಿತ ವಿಧಾನವನ್ನು ಅಸಹನೆಯಿಂದ ನೋಡುತ್ತಾರೆ. ಮೋದಿಯವರ ಈ ಪ್ರಚಾರ ಶೈಲಿ ಜನರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂಬುದಕ್ಕೆ ‘ದಿ ಹಿಂದೂ-ಸಿಎಸ್‍ಡಿಎಸ್ ಲೋಕನೀತಿ’ ನಡೆಸಿರುವ ಸಮೀಕ್ಷೆಯೇ  ಸಾಕ್ಷಿ. ಮೋದಿಯವರಿಗೆ ಮತ ಹಾಕಿದ ಯುವ ಮತದಾರರ ಪೈಕಿ ಪ್ರತಿ ಮೂವರಲ್ಲಿ ಒಬ್ಬರು ಪ್ರಧಾನಿ ಅಭ್ಯರ್ಥಿಯೇ ಮುಖ್ಯ ವಿಷಯ ಎಂದು ಅಭಿಪ್ರಾಯಪಟ್ಟರು. ಹಾಗೆಯೇ, ಮೋದಿ ಪ್ರಧಾನಿ ಅಭ್ಯರ್ಥಿ ಅಲ್ಲದಿರುತ್ತಿದ್ದರೆ ನಾವು ಬೇರೆ ಪಕ್ಷಗಳಿಗೆ  ಮತ ಹಾಕುತ್ತಿದ್ದೆವು ಎಂದು ಯುವ ಮತದಾರ ರಲ್ಲಿ 33% ಮಂದಿ ಹೇಳಿಕೊಂಡರು. ಹರ್ಯಾಣ, ರಾಜಸ್ತಾನ, ಉತ್ತರಾಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದ ಯುವ ಸಮೂಹದಲ್ಲಿ ಮೋದಿಯವರ ಜನಪ್ರಿಯತೆಯು ರಾಷ್ಟ್ರೀಯ  ಸರಾಸರಿಗಿಂತ ಅಧಿಕವಿದೆ ಅನ್ನುವುದು ಇಲ್ಲಿ ಉಲ್ಲೇಖನೀಯ.
2. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಪ್ರದರ್ಶಿಸಿದ ಒಗ್ಗಟ್ಟನ್ನು ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪ್ರದರ್ಶಿಸಲೇ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೇಜ್ರಿವಾಲ್,  ಸೀತಾರಾಮ್ ಯೆಚೂರಿ, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಮಾಯಾವತಿ ಮುಂತಾದವರು ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದು ಆ ವೇದಿಕೆಗಷ್ಟೇ ಸೀಮಿತವಾಯಿತು. ಕಾಂಗ್ರೆಸನ್ನು ಕೈಬಿಟ್ಟು ಎಸ್‍ಪಿ-ಬಿಎಸ್‍ಪಿಗಳು  ಮೈತ್ರಿ ಮಾಡಿಕೊಂಡವು. ಅದೇವೇಳೆ, ಪಶ್ಚಿಮ ಬಂಗಾಲದಲ್ಲಿ ತೃಣಮೂಲ, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್‍ಗಳು ಮುಖ ತಿರುಗಿಸಿ ಕೊಂಡು ನಿಂತವು. ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಹಾಗೂ ಬಿಎಸ್‍ಪಿ ಮೈತ್ರಿ ಮಾಡಿಕೊಳ್ಳಲಿಲ್ಲ.  ಕೇಜ್ರಿವಾಲ್‍ರ ಎಎಪಿಗೂ ಕಾಂಗ್ರೆಸ್‍ಗೂ ನಡುವೆ ಹೊಂದಾಣಿಕೆಯಾಗಲಿಲ್ಲ. ಕಾಂಗ್ರೆಸ್ ಮತ್ತು ಎನ್‍ಸಿಪಿ ರಾಷ್ಟ್ರಮಟ್ಟದಲ್ಲಿ ಮೈತ್ರಿ ಪಕ್ಷಗಳಾಗಿದ್ದರೂ ಗುಜರಾತ್‍ನಲ್ಲಿ ಪರಸ್ಪರ ವಿರುದ್ಧ ಸ್ಪರ್ಧಿಸಿದುವು. ವಿರೋಧ ಪಕ್ಷಗಳ ನಡುವಿನ ಈ ಅನೈಕ್ಯವನ್ನು ಮೋದಿಯವರು ಪರಿಣಾಮ ಕಾರಿಯಾಗಿ ವ್ಯಂಗ್ಯಕ್ಕೆ ಗುರಿಪಡಿಸಿದರು. ಮಹಾ ಕಲಬೆರಕೆ ಮೈತ್ರಿಕೂಟ ಎಂದು ಜರೆದರು.
3. ಬಿಜೆಪಿಯ- ಬಹುಸಂಖ್ಯಾತ ಧ್ರುವೀಕರಣ ರಾಜಕಾರಣಕ್ಕೆ ಪ್ರತಿಯಾಗಿ ರಾಷ್ಟ್ರೀಯ ಪಕ್ಷವೆಂಬ ನೆಲೆಯಲ್ಲಿ ಕಾಂಗ್ರೆಸ್ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸದೇ ಇದ್ದುದೂ ಮೋದಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು.  ರಾಹುಲ್ ಗಾಂಧಿಯವರು ಕೇರಳದ ವಯನಾಡ್‍ನಲ್ಲಿ ಸ್ಪರ್ಧಿಸುವು ದನ್ನು ನರೇಂದ್ರ ಮೋದಿಯವರು ಪ್ರಶ್ನಿಸಿದ ರೀತಿ ಧ್ರುವೀಕರಣ ರಾಜಕೀಯಕ್ಕೆ ಸ್ಪಷ್ಟ ಉದಾಹರಣೆಯಾಗಿತ್ತು. ಬಹುಸಂಖ್ಯಾತರಿರುವ ಅಮೇಥಿಯಿಂದ ಅಲ್ಪಸಂಖ್ಯಾತರಿರುವ ವಯ ನಾಡ್‍ಗೆ ರಾಹುಲ್ ಗಾಂಧಿ ಪಲಾಯನ ಮಾಡಿದರು ಎಂದವರು ಕುಟುಕಿದರು. ಕುಂಭಮೇಳದ ಸಮಯದಲ್ಲಿ ಮೋದಿಯವರು ಸಂಗಮ ಸ್ಥಳವಾದ ಪ್ರಯಾಗ್‍ರಾಜ್‍ನಲ್ಲಿ ಮಿಂದರು. ವಾರಣಾಸಿಯ ಗಂಗಾನದಿಯಲ್ಲಿ ಮತ್ತೆಮತ್ತೆ ಆರತಿ ಎತ್ತಿದರು.  ನಾಮಪತ್ರ ಸಲ್ಲಿಸುವುದಕ್ಕಿಂತ ಹಿಂದಿನ ದಿನವೂ ಅವರು ಆರತಿ ಎತ್ತಿದರು. ಮೇ 18ರ ಕೊನೆ ಹಂತದ ಮತದಾನಕ್ಕಿಂತ ಒಂದುದಿನ ಮೊದಲು ಕೇದಾರನಾಥ ಗುಹೆಯಲ್ಲಿ ಕೇಸರಿ ಬಟ್ಟೆಯುಟ್ಟುಕೊಂಡು ಧ್ಯಾನ ನಿರತರಾದರು. ಅದನ್ನು ಈ ದೇಶದ  ಮುಖ್ಯ ವಾಹಿನಿಯ ಮಾಧ್ಯಮಗಳು ಲಕ್ಷಾಂತರ ಮನೆಗಳಿಗೆ ನೇರವಾಗಿ ದಾಟಿಸಿದುವು. ಬಿಜೆಪಿಯ ಯುವ ಮೋರ್ಚಾವು ‘ಮೋದಿ ಯುವ ಶಕ್ತಿ’ ಎಂಬ ಅಭಿಯಾನವನ್ನು ದೇಶದಾದ್ಯಂತ ನಡೆಸಿತು. ನಿಜವಾಗಿ, ಯುವ ಮತದಾರರ ಮೇಲೆ  ಬಿಜೆಪಿಯು 2017ರಲ್ಲೇ  ಒಂದು ಕಣ್ಣಿಟ್ಟಿತ್ತು. 2017 ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮೋದಿಯವರು ಯುವ ಸಮೂಹದ ಭಾವನೆಗಳಿಗೆ ಲಗ್ಗೆ ಹಾಕಿದ್ದರು. ‘ಈ ಶತಮಾನದ ಆರಂಭದಲ್ಲಿ ಜನಿಸಿದ ಯುವ ಸಮೂಹವೇ, ನೀವು 18  ವರ್ಷಕ್ಕೆ ಕಾಲಿಡುತ್ತಿದ್ದೀರಿ. ನೀವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ. ಭಾರತದ ಭವಿಷ್ಯ ಬರೆಯುವ ನಿಮಗೆ ಸ್ವಾಗತ’ ಎಂದು ಅವರ ಮನ ಗೆಲ್ಲಲು ಯತ್ನಿಸಿದ್ದರು. ಅಂದಹಾಗೆ, ಬಹುಸಂಖ್ಯಾತರನ್ನು ಧ್ರುವೀಕರಿಸುವ ಬಿಜೆಪಿಯ  ತಂತ್ರ ಎಷ್ಟು ಯಶಸ್ವಿಯಾಗಿದೆ ಅನ್ನುವುದಕ್ಕೆ ಹಿಂದೂ ಬಾಹುಳ್ಯವಿರುವ ಜಮ್ಮು ಮತ್ತು ಮುಸ್ಲಿಮ್ ಬಾಹುಳ್ಯವಿರುವ ಕಾಶ್ಮೀರವೇ ಸಾಕ್ಷಿ. ಜಮ್ಮು, ಉದಮ್‍ಪುರ ಮತ್ತು ಲಡಾಕ್ ಈ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಶಾಲಿಯಾದರೆ  ಶ್ರೀನಗರ, ಬಾರಮುಲ್ಲ ಮತ್ತು ಅನಂತನಾಗ್ ಕ್ಷೇತ್ರಗಳಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಜಯಗಳಿಸಿತು. ಬಿಜೆಪಿಯ ಈ ಧ್ರುವೀಕರಣ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅತ್ಯಂತ ಹತಾಶ ನಿಲುವನ್ನು ಪ್ರದರ್ಶಿಸಿತು. ಕಳೆದ ಐದು ವರ್ಷಗಳಲ್ಲಿ ಬಿಜೆಪಿಯು  ಸೆಕ್ಯುಲರಿಸಂ ಅನ್ನು ಬದಿಗೆ ತಳ್ಳಿದ್ದರೂ ಕಾಂಗ್ರೆಸ್ ಆ ಬಗ್ಗೆ ಭಾರತೀಯರನ್ನು ಎಚ್ಚರಿಸುವ ಮತ್ತು ಸೆಕ್ಯುಲರ್ ರಾಷ್ಟ್ರೀಯತೆಯ ಅಗತ್ಯವನ್ನು ಎತ್ತಿಹಿಡಿಯುವ ಗಂಭೀರ ಪ್ರಯತ್ನ ನಡೆಸಲೇ ಇಲ್ಲ. ಸೆಕ್ಯುಲರಿಸಂ ನಿಂದ ಅಲ್ಪಸಂಖ್ಯಾತರವರೆಗೆ ಅದು ಒಂದು  ರೀತಿಯ ಮೌನವನ್ನು ಪಾಲಿಸುತ್ತಾ ಬಂತು. ಕಾಂಗ್ರೆಸ್‍ನ ಏಳಿಗೆಯ ದೃಷ್ಟಿಯಿಂದ ಈ ಎರಡೂ ವಿಷಯಗಳಲ್ಲಿ ಸ್ಪಷ್ಟ ಧೋರಣೆಯನ್ನು ತಳೆಯಬೇಕಾದುದು ಬಹುಮುಖ್ಯವಾಗಿತ್ತು. ರಾಹುಲ್ ಗಾಂಧಿಯವರು ಮಂದಿರಗಳಿಗೆ ಪದೇ ಪದೇ ಭೇಟಿ  ಕೊಟ್ಟರಾದರೂ ಹಿಂದುತ್ವ ಮತ್ತು ಹಿಂದೂಯಿಸಂನ ನಡುವಿನ ಅಂತರ ಮತ್ತು ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ಹೇಳುವಲ್ಲಿ ವಿಫಲರಾದರು ಅಥವಾ ಅವರ ಪಕ್ಷ ಅವರ ನಡವಳಿಕೆಯನ್ನು ಮೌನದಿಂದ ವೀಕ್ಷಿಸುವುದರ ಹೊರತಾಗಿ ಏನನ್ನೂ  ಮಾಡಲಿಲ್ಲ. ಇದೂ ಜನರ ಮೇಲೆ ಪರಿಣಾಮ ಬೀರಿತು. ಬಿಜೆಪಿ ಪ್ರತಿಪಾದಿಸುವ ಹಿಂದುತ್ವವೇ ನಿಜವಾದ ಹಿಂದೂಯಿಸಂ ಎಂದು ಜನರು ನಂಬಿದರು ಮತ್ತು ಈ ವಿಷಯದಲ್ಲಿ ಹೆಚ್ಚು ಬದ್ಧತೆ ವ್ಯಕ್ತಪಡಿಸುತ್ತಿರುವ ಬಿಜೆಪಿಯ ಮೇಲೆ ವಿಶ್ವಾಸ ವ್ಯಕ್ತ ಪಡಿಸಿದರು. ಅಲ್ಲದೇ, ಕಾಂಗ್ರೆಸ್ ತನ್ನ ಕಾರ್ಯಕರ್ತರ ಪಡೆಯನ್ನು ಕಟ್ಟುವಲ್ಲಿ ಮತ್ತು ಸಂಯೋಜಿಸುವಲ್ಲಿ ತೀವ್ರ ಹಿನ್ನಡೆ ಅನುಭವಿಸಿತು. 2004ರಿಂದ 2014ರ ನಡುವೆ ಈ ವಿಷಯದಲ್ಲಿ ಗಾಢ ನಿರ್ಲಕ್ಷ್ಯ  ತೋರಲಾಯಿತು. ಇದಕ್ಕೆ ಹೋಲಿಸಿದರೆ,  ಬಿಜೆಪಿ ಬಹಳ ಮುಂದಿತ್ತು. ತನ್ನ ಪರಿವಾರ ಸಂಘಟನೆಗಳ ಮೂಲಕ ಹಳ್ಳಿ, ಗ್ರಾಮ ಮತ್ತು ಪಟ್ಟಣಗಳಲ್ಲಿ ಕಾರ್ಯಕರ್ತರ ಪಡೆಯನ್ನು ಯಶಸ್ವಿಯಾಗಿ ಅದು ಕಟ್ಟಿಕೊಂಡಿತು. ಧಾರ್ಮಿಕ ಕ್ಷೇತ್ರಗಳನ್ನು ಬಿಜೆಪಿಯು ಇದಕ್ಕಾಗಿ ಬಳಸಿಕೊಂಡಿತು. ಇದರ  ಜೊತೆಗೇ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಪ್ರಸ್ತುತಪಡಿಸಿದ NYAY (ನ್ಯಾಯ್) ಯೋಜನೆಯು ಜನರಿಗೆ ತಲುಪುವಲ್ಲಿ ವಿಫಲವಾಯಿತು. 20% ಬಡಕುಟುಂಬಗಳಿಗೆ ಪ್ರತಿ ತಿಂಗಳು 6000 ರೂಪಾಯಿಯಂತೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ಈ  ಯೋಜನೆಯು ವಿಶಿಷ್ಟವಾಗಿದ್ದರೂ ಅದನ್ನು ಚುನಾವಣೆಯ ಕೊನೆಕ್ಷಣದಲ್ಲಿ ಘೋಷಿಸಿದುದು ಕಾಂಗ್ರೆಸ್‍ಗೆ ಮುಳುವಾಯಿತು. ಪ್ರಿಯಾಂಕಾ ಗಾಂಧಿಯನ್ನು ಅಖಾಡಕ್ಕೆ ತಂದುದೂ ಕೊನೆಕ್ಷಣದಲ್ಲಿ.
4. ಬಿಜೆಪಿಗೂ ಮಹಿಳೆಯರಿಗೂ ಈವರೆಗೆ ಸಂಬಂಧ ಅಷ್ಟಕ್ಕಷ್ಟೇ ಇತ್ತು. ಆದರೆ ಈ ಬಾರಿ ದೊಡ್ಡ ಮಟ್ಟದಲ್ಲಿ ಮಹಿಳೆಯರು ಅದರಲ್ಲೂ ಯುವತಿಯರು ಬಿಜೆಪಿಯನ್ನು ಬೆಂಬಲಿಸಿದರು. ಈ ಬಾರಿ 66.79% ಪುರುಷರು ಮತ ಚಲಾಯಿಸಿದ್ದರೆ  66.68% ಮಹಿಳೆಯರು ಮತ ಚಲಾಯಿಸಿದ್ದರು. ಪುರುಷರಿಗೆ ಸರಿಸಮಾನವಾಗಿ ಚಲಾಯಿಸಲಾದ ಈ ಮತವೂ ಫಲಿತಾಂಶದ ನಿರ್ಣಯದಲ್ಲಿ ಮುಖ್ಯ ಪಾತ್ರ ನಿರ್ವಹಿಸಿತು. ಉಜ್ವಲ್ ಯೋಜನೆಯ ಅಡಿಯಲ್ಲಿ ಮನೆಮನೆಗೆ ಉಚಿತ ಗ್ಯಾಸ್ ಸಿ ಲಿಂಡರ್ ಹಂಚಿದ್ದು ಮತ್ತು ಸ್ವಚ್ಛ ಭಾರತ್ ಮಿಶನ್ ಗ್ರಾಮೀಣ್ ಯೋಜನೆಯಡಿಯಲ್ಲಿ ಶೌಚಾಲಯ ಕಟ್ಟಿಸಿಕೊಟ್ಟದ್ದು ಬಿಜೆಪಿಯನ್ನು ಮಹಿಳೆಯರಿಗೆ ಹತ್ತಿರಗೊಳಿಸಿತು. ಜೊತೆಗೇ ಅಬ್ಬರದ ಪ್ರಚಾರ ಮತ್ತು ಪ್ರತಿ ಯೋಜನೆಗೂ ನೀಡಲಾದ ಜಾಣತನದ ಹೆಸರುಗಳೂ ಬಿಜೆಪಿ ಗೆಲುವಿನಲ್ಲಿ ತಮ್ಮದೇ ಪಾತ್ರವನ್ನು ವಹಿಸಿದವು. 2014ರ ಲೋಕಸಭಾ ಚುನಾವಣೆ ಯಲ್ಲಿ 5 ಸಾವಿರ ಕೋಟಿ ರೂಪಾಯಿಯನ್ನು ಜಾಹೀರಾತಿಗೆ ಖರ್ಚು ಮಾಡಿದ್ದ ಬಿಜೆಪಿಯು 2018ರಲ್ಲಿ 5 ರಾಜ್ಯಗಳ ಚುನಾವಣೆಗಾಗಿ  ಓeಣಜಿಟix, ಅoಟgಚಿಣe ಮತ್ತು ಡೆಟಾಲ್‍ಗಳು ಟಿ.ವಿ. ಜಾಹೀರಾತಿಗೆ ವ್ಯಯಿಸಿದ ಹಣಕ್ಕಿಂತ ಹೆಚ್ಚು ಖರ್ಚು ಮಾಡಿತು. ಜೊತೆಗೇ ಮುಖ್ಯವಾಹಿನಿಯ ಮಾಧ್ಯಮಗಳು ಬಿಜೆಪಿಯ ಐಟಿ ಸೆಲ್‍ನಂತೆ ಕಾರ್ಯನಿರ್ವಹಿಸಿದುವು. ಮೋದಿಯವರ  ಫೋಟೋ ಗಳು ಎಲ್ಲೆಡೆಯೂ ಕಾಣುವಂತೆ ನೇತು ಹಾಕುವ ತಂತ್ರವೂ ಯಶಸ್ವಿಯಾಯಿತು. ಕಚೇರಿಗಳಲ್ಲಿ, ಪೆಟ್ರೋಲ್ ಪಂಪ್, ಕ್ಯಾಲೆಂಡರ್, ವಿಮಾನ ನಿಲ್ದಾಣದ ಬಿಲ್ ಬೋರ್ಡ್‍ನಲ್ಲಿ, ರೈಲ್ವೇ ಮತ್ತು ಬಸ್ ನಿಲ್ದಾಣಗಳಲ್ಲಿ ಹೀಗೆ ಎಲ್ಲೆಲ್ಲೂ ಮೋದಿಯವರು ಕಾಣಿಸಿಕೊಂಡರು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನಾ, ಪ್ರಧಾನಮಂತ್ರಿ ಆವಾಸ್ ಯೋಜನಾ, ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನಾ, ಪ್ರಧಾನಮಂತ್ರಿ ಜನಧನ್ ಯೋಜನಾ, ಪ್ರಧಾನಮಂತ್ರಿ ಉಜ್ವಲ್ ಯೋಜನಾ, ಪ್ರಧಾ ನಮಂತ್ರಿ ಗ್ರಾಮ ಸಡಕ್ ಯೋಜನಾ.. ಮುಂತಾಗಿ ಪ್ರತಿಯೊಂದರಲ್ಲೂ ಪ್ರಧಾನಿಯನ್ನು ಸ್ಮರಿಸುವ ತಂತ್ರ ಹೆಣೆಯಲಾಯಿತು. ಇದರ ಜೊತೆಗೇ ವಿರೋಧ ಪಕ್ಷಗಳ ನಕಾರಾತ್ಮಕ ಪ್ರಚಾರ ತಂತ್ರವೂ ಬಿಜೆಪಿಯ ಕೈ ಹಿಡಿಯಿತು. ಮೋದಿಯನ್ನೇ  ಹಣಿಯಲು ಕಾದು ಕುಳಿತಂತೆ ವರ್ತಿಸಿದ ಮತ್ತು ಸ್ಪಷ್ಟ ಎಜೆಂಡಾ ಇಲ್ಲದೇ ಅಖಾಡಕ್ಕಿಳಿದ ವಿರೋಧ ಪಕ್ಷಗಳನ್ನು ಮತದಾರರು ದ್ವೇಷಿಸತೊಡಗಿದರು. ಹಿಂದುಳಿದ ಜಾತಿ, ವರ್ಗಗಳು ಮತ್ತು ದಲಿತ ಸಮೂಹವೂ ಸೇರಿದಂತೆ ಎಲ್ಲವನ್ನೂ ಒಂದೇ  ಕೊಡೆಯೊಳಗೆ ಸೇರಿಸುವುದು ಬಿಜೆಪಿಯ ಗುರಿಯಾಗಿತ್ತು. ಅದು ಈ ಬಾರಿ ಬಹುತೇಕ ಈಡೇರಿದೆ. ಜಾತಿರಹಿತ ಸಮೂಹವನ್ನು ಕಟ್ಟಿಕೊಂಡು ಅಧಿಕಾರದಲ್ಲಿ ಉಳಿಯುವ ಶ್ರಮವಂತೂ ಈಗ ಯಶಸ್ವಿಯಾಗಿದೆ. 18ರಿಂದ 22 ವರ್ಷದೊಳಗಿನ  ಮತದಾರರ ಪೈಕಿ 41% ಮಂದಿ ಬಿಜೆಪಿಯನ್ನು ಈ ಬಾರಿ ಬೆಂಬಲಿಸಿದ್ದಾರೆ. ಇಲ್ಲಿ ಮುಖ್ಯವಾಗುವುದು ಈ ಮತದಾರರ ವಯಸ್ಸು. ಕಿರಿ ವಯಸ್ಸಿನ ಇವರನ್ನು ದೀರ್ಘ ಅವಧಿವರೆಗೆ ಬೆಂಬಲಿಗರಾಗಿ ಉಳಿಸಿಕೊಳ್ಳುವ ತಂತ್ರವನ್ನು ಬಿಜೆಪಿ ಖಂಡಿತ  ಹೆಣೆಯಲಿದೆ. ಬಹುಸಂಖ್ಯಾತರನ್ನು ಧ್ರುವೀಕರಿಸಿ ಬಿಸಿರಕ್ತದ ಈ ಯುವಸಮೂಹವನ್ನು ತನ್ನ ಜೊತೆಯೇ ಇಟ್ಟುಕೊಳ್ಳುವ ಶ್ರಮವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ನಡೆಸಲಿದೆ.

ಆದ್ದರಿಂದ ಪಾಕಿಸ್ತಾನ ಮತ್ತು ಮುಸ್ಲಿಮರು ಮುಂದಿನ ದಿನಗಳಲ್ಲಿ ಸಾಕಷ್ಟು ಬೈಗುಳವನ್ನು ತಿನ್ನಬೇಕಾದೀತು.