Monday, June 17, 2013

ಸ್ನೋಡೆನ್, ಮಾನ್ನಿಂಗ್ ರಿಗಿರುವ ಧೈರ್ಯವೂ ಈ ಜಾಲತಾಣಗಳಿಗೇಕಿಲ್ಲ?

ಮೈಕ್ರೋಸಾಫ್ಟ್
ಯಾಹೂ
ಗೂಗಲ್
ಫೇಸ್‍ಬುಕ್
ಸ್ಕೈಪ್
ಯೂಟ್ಯೂಬ್..
   ಇವುಗಳೆಲ್ಲ ಏನು, ಇವುಗಳ ಬಳಕೆದಾರರು ಯಾರು ಎಂಬುದೆಲ್ಲ ಎಲ್ಲರಿಗೂ ಗೊತ್ತು. ಫೇಸ್‍ಬುಕ್‍ನಲ್ಲಿ ಗೆಳಯರಾಗದ, ಯೂಟ್ಯೂಬನ್ನು ವೀಕ್ಷಿಸದ, ಸ್ಕೈಪ್‍ನಲ್ಲಿ ಮಾತಾಡದ ಮಂದಿಯೇ ಇಲ್ಲ ಅನ್ನುವಷ್ಟು ಇವು ಜನಪ್ರಿಯವಾಗಿವೆ. ಇವತ್ತಿನ ದಿನಗಳಲ್ಲಿ ಪತ್ರಿಕೆಗಳು, ಟಿ.ವಿ. ಚಾನೆಲ್‍ಗಳಿಗೆ ಅವುಗಳದ್ದೇ ಆದ ಮಿತಿಯಿದೆ. ಬರಹವೊಂದು ಪತ್ರಿಕೆಯಲ್ಲಿ ಪ್ರಕಟವಾಗಬೇಕಾದರೆ; ವಸ್ತು, ವ್ಯಾಕರಣ, ವಾಕ್ಯ ರಚನೆ, ಪದಗಳ ಸಂಖ್ಯೆ... ಎಲ್ಲವೂ ಪರಿಗಣನೆಗೆ ಬರುತ್ತದೆ. ಅಲ್ಲದೆ, ಪತ್ರಿಕೆಗಳಿಗೆ ಅವುಗಳದ್ದೇ ಆದ ನೀತಿ-ನಿಯಮ, ಧೋರಣೆಗಳೂ ಇರುತ್ತವೆ. ಆದ್ದರಿಂದ, ಒಂದು ಬರಹ ಎಷ್ಟೇ ಉತ್ತಮವಾಗಿದ್ದರೂ ಎಲ್ಲ ಪತ್ರಿಕೆಗಳೂ ಅದನ್ನು ಪ್ರಕಟಿಸುವ ಉಮೇದು ತೋರಿಸಬೇಕೆಂದಿಲ್ಲ. ಇನ್ನು ಪ್ರಕಟಿಸಿದರೂ, ಸಂಪೂರ್ಣ ಬರಹವನ್ನು ಹಾಗೆಯೇ ಪ್ರಕಟಿಸಬೇಕೆಂದಿಲ್ಲ. ಪರಿಣತ ಬರಹಗಾರರಿಗೆ ಮಾತ್ರ ಪತ್ರಿಕೆಗಳಲ್ಲಿ ಸ್ಪೇಸ್ ಸಿಗುತ್ತದೆ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಹುಟ್ಟಿಕೊಂಡಿರುವುದು ಇಂಥ ಕಾರಣಗಳಿಂದಲೇ. ಬಹುಶಃ, ಸಾಮಾಜಿಕ ಜಾಲ ತಾಣಗಳು ಜನರ ಮಧ್ಯೆ ಅತಿವೇಗವಾಗಿ ಜನಪ್ರಿಯಗೊಂಡಿರುವುದಕ್ಕೆ ಪತ್ರಿಕೆಗಳಿಗಿರುವ ಇಂಥ ಮಿತಿಗಳೇ ಕಾರಣವಾಗಿರಬಹುದು. ಅಷ್ಟಕ್ಕೂ, ಕ್ರಿಕೆಟನ್ನು ಪ್ರೀತಿಸುವ ಸಾಮಾನ್ಯ ವ್ಯಕ್ತಿಯೊಬ್ಬ ಸ್ಟಾಟ್ ಫಿಕ್ಸಿಂಗ್‍ನ ಬಗ್ಗೆ ನಾಲ್ಕು ಗೆರೆಗಳನ್ನು ಗೀಚಿದರೆ, ಯಾವ ಪತ್ರಿಕೆ ತಾನೇ ಪ್ರಕಟಿಸಬಲ್ಲದು? ಹೀಗಿರುವಾಗ, ಜಿಯಾ ಖಾನ್‍ಳ ಆತ್ಮಹತ್ಯೆಯ ಬಗ್ಗೆ, ಸಿದ್ಧರಾಮಯ್ಯರ ಮದ್ಯ ನೀತಿಯ ಕುರಿತು, ಮಳೆಗಾಲಕ್ಕೆ ತಯಾರಿ ನಡೆಸದ ಸ್ಥಳೀಯಾಡಳಿತಗಳ ಬಗ್ಗೆ... ಸಾಮಾನ್ಯನೊಬ್ಬ ತನ್ನ ಭಾವನೆಗಳನ್ನು ಸಾರ್ವಜನಿಕರಿಗೆ ಹೇಗೆ ಮುಟ್ಟಿಸಬೇಕು? ಅದಕ್ಕಿರುವ ಮಾಧ್ಯಮವಾದರೂ ಯಾವುದು? ಬರೆಯುವ ಪರಿಣತಿ ಮತ್ತು ಪದಸಂಗ್ರಹಗಳಿಲ್ಲದ ವ್ಯಕ್ತಿಯಲ್ಲೂ ಅಭಿಪ್ರಾಯಗಳಿರುತ್ತವಲ್ಲವೇ? ಅದನ್ನು ತಮ್ಮದೇ ಭಾಷೆಯಲ್ಲಿ ತಮಗೆ ತಿಳಿದಂತೆ ವ್ಯಕ್ತಪಡಿಸುವುದಕ್ಕೆ ಮತ್ತು ಸಾರ್ವಜನಿಕರಿಗೆ ತಲುಪುವಂತೆ ಮಾಡುವುದಕ್ಕೆ ಏನಿವೆ ಸೌಲಭ್ಯಗಳು? ಇಂಥ ಹುಡುಕಾಟಗಳಿಗೆ ಉತ್ತರವಾದದ್ದೇ ಸಾಮಾಜಿಕ ಜಾಲತಾಣಗಳು. ನಿಮಗೆ ಅನಿಸಿದ್ದನ್ನು ವಾಕ್ಯ, ವ್ಯಾಕರಣ, ಪದಗಳ ಸಂಖ್ಯೆಯ ಚಿಂತೆಯಿಲ್ಲದೇ ವ್ಯಕ್ತಪಡಿಸುವುದಕ್ಕೆ ಫೇಸ್‍ಬುಕ್, ಟ್ವೀಟರ್‍ನಂಥ ತಾಣಗಳು ಧಾರಾಳ ಅವಕಾಶ ಒದಗಿಸಿದುವು. ಗೆಳೆತನಕ್ಕೆ ವೇದಿಕೆ ಒದಗಿಸಿದುವು. ಅಲ್ಲದೇ, Your preivecy our priority - ‘ನಿಮ್ಮ ಖಾಸಗಿತನವೇ ನಮ್ಮ ಆದ್ಯತೆ..’ ಎಂಬ ಸ್ಲೋಗನನ್ನು ತೇಲಿಬಿಟ್ಟು, ಬಳಕೆದಾರರ ಖಾಸಗಿತನವನ್ನು ರಕ್ಷಿಸುವುದಾಗಿ ಘೋಷಿಸಿದುವು. ನಿಜವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಜನರು ನಂಬಿಕೆ ಇಡುವುದಕ್ಕೆ ಇರುವ ಹಲವು ಕಾರಣಗಳಲ್ಲಿ ಈ ಪ್ರೈವೇಸಿಯೂ ಒಂದು. ತನ್ನ Updateಗಳು, ಗೆಳೆಯರೊಂದಿಗಿನ ಮಾತುಕತೆಗಳು, ತನ್ನ ದೂರವಾಣಿ ಸಂಖ್ಯೆ, ಈಮೇಲ್ ಐಡಿ.. ಎಲ್ಲವೂ ತಾನಿಚ್ಛಿಸಿದವರಿಗೆ ಮಾತ್ರ ತಲುಪುವಂಥ ವ್ಯವಸ್ಥೆಯೊಂದನ್ನು ಇವು ಮಾಡಿಟ್ಟಿವೆ ಅನ್ನುವ ಭರವಸೆ ಬಳಕೆದಾರರನ್ನು ಆಕರ್ಷಿಸಿತು. ಆದ್ದರಿಂದಲೇ, ನನ್ನ ಮಿತ್ರನೊಬ್ಬ ನನ್ನೊಂದಿಗೆ ಮಾಡಿದ ಚಾಟಿಂಗು ನನಗೂ ಮತ್ತು ಅವನಿಗಲ್ಲದೇ ಇನ್ನಾರಿಗೂ ಗೊತ್ತಾಗಲು ಸಾಧ್ಯವಿಲ್ಲ ಅನ್ನುವ ನಂಬಿಕೆಯು ಎಲ್ಲ ಬಳಕೆದಾರರಲ್ಲೂ ಇತ್ತು. ಈ ಆಧಾರದಲ್ಲೇ ಅತ್ಯಂತ ಖಾಸಗಿಯಾದ ಈಮೇಲ್‍ಗಳು, ಚಾಟಿಂಗ್‍ಗಳು ಈ ಜಾಲತಾಣಗಳ ಮೂಲಕ ಹರಿದಾಡುತ್ತಿದ್ದುದು. ಆದರೆ,
Your privacy our priorityಯನ್ನು ಯಾವ ಜಾಲತಾಣಗಳೂ ಪಾಲಿಸಿಯೇ ಇಲ್ಲ.
   ತನ್ನೆಲ್ಲ ಬಳಕೆದಾರರ ಖಾಸಗಿ ವಿವರಗಳನ್ನು 2007 ಸೆಪ್ಟೆಂಬರ್ 11ರಿಂದಲೇ ಮೈಕ್ರೋಸಾಫ್ಟ್ ಅಮೆರಿಕಕ್ಕೆ ಒದಗಿಸುತ್ತಿದೆ. 2008 ಮಾರ್ಚ್ 12ರಿಂದ ಯಾಹೂ,  2009 ಜನವರಿ 14ರಿಂದ ಗೂಗಲ್,  2010 ಸೆಪ್ಟೆಂಬರ್ 24ರಿಂದ ಯೂಟ್ಯೂಬ್,  2011 ಮಾರ್ಚ್ 31ರಿಂದ ಎಬಿಎಲ್,  2009 ಡಿಸೆಂಬರ್ 7ರಿಂದ ಪಾಲ್‍ಟಾಕ್,  2012 ಅಕ್ಟೋಬರ್‍ ನಿಂದ  ಆಪಲ್,  2009 ಜನವರಿ 3ರಿಂದ ಸ್ಕೈಪ್,  2009 ಜನವರಿ 3ರಿಂದ ಫೇಸ್‍ಬುಕ್... ಎಲ್ಲವೂ ತಮ್ಮ ಬಳಕೆದಾರರ ಖಾಸಗಿ ವಿವರಗಳನ್ನು ಅಮೆರಿಕದ ಬೇಹುಗಾರಿಕಾ ಜಾಲವಾದ PRISM ಗೆ ನೀಡುತ್ತಲೇ ಬಂದಿವೆ. ಕಳೆದ ವಾರ ಲಂಡನ್ನಿನ ದಿ ಗಾರ್ಡಿಯನ್ ಮತ್ತು ಅಮೆರಿಕದ ದಿ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಗಳು ಸರಣಿ ಬರಹಗಳ ಮೂಲಕ ಈ ವಿಷಯವನ್ನು ಬಹಿರಂಗಕ್ಕೆ ತರುವವರೆಗೆ ಅಮೆರಿಕವಾಗಲಿ, ಈ ಜಾಲತಾಣಗಳಾಗಲಿ ಇದನ್ನು ಹೇಳಿಕೊಂಡೇ ಇರಲಿಲ್ಲ. ಅಂದಹಾಗೆ, 2007ರಿಂದಲೇ ಜಗತ್ತಿನೆಲ್ಲರ ಖಾಸಗಿ ವಿಚಾರಗಳನ್ನು ಕದ್ದು ನೋಡುತ್ತಿದ್ದ ಅಮೆರಿಕ ಮತ್ತು ಅದಕ್ಕೆ ಅವಕಾಶ ಒದಗಿಸಿ ಕೊಟ್ಟ ಈ ಜಾಲತಾಣಗಳು, ಹೇಗೆ ಇವತ್ತು ತಮ್ಮನ್ನು ಸಮರ್ಥಿಸಿಕೊಳ್ಳಬಲ್ಲುದು? ಬಳಕೆದಾರರಿಗೆ ಮಾಡಿದ ಈ ದ್ರೋಹಕ್ಕೆ ಜಾಲತಾಣಗಳು ಯಾವ ಪರಿಹಾರವನ್ನು ಕೊಡುತ್ತವೆ? ಖಾಸಗಿತನ ಯಾರದ್ದೇ ಆದರೂ ಖಾಸಗಿಯೇ ಅಲ್ಲವೇ? ಅದನ್ನು ಗೋಪ್ಯ ವಾಗಿಡಲು ಸಾಧ್ಯವಿಲ್ಲ ಎಂದಾದರೆ, ಆ ಬಗ್ಗೆ ಬಳಕೆದಾರರಿಗೆ ತಿಳಿಸಬೇಕು. ಅದು ಬಿಟ್ಟು ಬಳಕೆದಾರರ ಚಟುವಟಿಕೆಗಳ ಪ್ರತಿ ವಿವರವನ್ನೂ ಅಮೆರಿಕಕ್ಕೆ ಒದಗಿಸಿಕೊಟ್ಟು, Your privacy our priority  ಎಂದು ಹೇಳಿಕೊಂಡಿದ್ದಾದರೂ ಏಕೆ? ಒಂದು ವೇಳೆ, ಎಡ್ವರ್ಡ್ ಸ್ನೋಡೆನ್ ಎನ್ನುವ 29 ವರ್ಷದ ಮಾಜಿ PRISM ನ ಅಧಿಕಾರಿ 2013 ಮೇ 20ರಂದು ಈ ಇಡೀ ಪ್ರಕರಣವನ್ನು ಬಹಿರಂಗಪಡಿಸದಿರುತ್ತಿದ್ದರೆ ಅಮೆರಿಕದ ಈ ಕಳ್ಳ ಮುಖದ ದರ್ಶನವಾಗುತ್ತಿತ್ತೇ? ಫೇಸ್‍ಬುಕ್‍ಗಳ ದ್ರೋಹ ಗೊತ್ತಾಗುತ್ತಿತ್ತೇ?
   ನಿಜವಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದ್ದೂ, ತನ್ನ ದೇಶದ ಇನ್ನೊಂದು ಮುಖವನ್ನು ಬಹಿರಂಗಕ್ಕೆ ತರುವ ಧೈರ್ಯ ತೋರಿದ್ದು ಸ್ನೋಡೆನ್ ಒಬ್ಬರೇ ಅಲ್ಲ..
   1971 ಜೂನ್ 13ರಂದು ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ವಿಯೆಟ್ನಾಂ ಯುದ್ಧಕ್ಕೆ ಸಂಬಂಧಿಸಿದ ರಹಸ್ಯ ರಕ್ಷಣಾ ದಾಖಲೆಗಳು ‘ಪೆಂಟಗನ್ ಪೇಪರ್’ ಎಂಬ ಹೆಸರಲ್ಲಿ ಪ್ರಕಟವಾಗ ತೊಡಗಿದುವು. 15 ದಿನಗಳಾಗುತ್ತಲೇ ನಿಕ್ಸನ್ ಸರಕಾರ ಕೋರ್ಟು ಮುಖಾಂತರ ಪ್ರಕಟಣೆಗೆ ತಡೆ ಒಡ್ಡಿತು. ಎರಡು ದಿನಗಳ ಬಳಿಕ ವಾಷಿಂಗ್ಟನ್ ಪೋಸ್ಟ್ ಮತ್ತು ಇತರ 17 ಪತ್ರಿಕೆಗಳು `ಪೆಂಟಗನ್ ಪೇಪರ್'ನ ವಿವರಗಳನ್ನು ಪ್ರಕಟಿಸ ತೊಡಗಿದುವು. ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕದಲ್ಲಿ  ಸ್ವಾರ್ಥ ಹಿತಾಸಕ್ತಿ, ಗೆಲ್ಲಲು ಸಾಧ್ಯವಿಲ್ಲವೆಂದು ಸರಕಾರಕ್ಕೆ ಗೊತ್ತಿದ್ದೂ ವರ್ಷಗಟ್ಟಲೆ ಯುದ್ಧವನ್ನು ಮುಂದುವರಿಸಿದ್ದು, ಸಾರ್ವಜನಿಕರನ್ನು ವಂಚಿಸಿದ್ದು... ಎಲ್ಲವೂ ಬಹಿರಂಗಕ್ಕೆ ಬರ ತೊಡಗಿದುವು. ಅಮೆರಿಕನ್ ಆಡಳಿತದ ಕೆಲವು ಮಂದಿಯ ಸ್ವಾರ್ಥಕ್ಕಾಗಿ ವಿಯೆಟ್ನಾಂ ಯುದ್ಧ ನಡೆಯುತ್ತಿದೆ ಅನ್ನುವುದು ಗೊತ್ತಾಗುತ್ತಿರುವಂತೆ ಸಾರ್ವಜನಿಕ ಆಕ್ರೋಶಗಳು ಬಿರುಸುಗೊಂಡುವು. ಒಂದು ರೀತಿಯಲ್ಲಿ, ಆ ಮೊದಲೇ ಯುದ್ಧ ವಿರೋಧಿ ರಾಲಿಗಳು ಅಮೆರಿಕಾದ ಅಲ್ಲಲ್ಲಿ ಜರುಗುತ್ತಿದ್ದುವು. ಅದಕ್ಕೆ ಇಂಬು ಕೊಡುವ ರೂಪದಲ್ಲಿದ್ದ ಈ ದಾಖಲೆಗಳನ್ನು ಬಹಿರಂಗಗೊಳಿಸಿದ್ದಕ್ಕಾಗಿ ಡೇನಿಯಲ್ ಎಲ್ಸ್ ಬರ್ಗ್ ರನ್ನು ರಾಜದ್ರೋಹದ ಆರೋಪ ಹೊರಿಸಿ ಸರಕಾರ ಬಂಧಿಸಿತು. ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯಾಗಿದ್ದ ಇವರು, ಸಾರ್ವಜನಿಕರನ್ನು ವಂಚಿಸಿ ನಡೆಸಲಾಗುತ್ತಿದ್ದ ಆ ಯುದ್ಧದ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದರು. ಎರಡು ವರ್ಷ ವಿಯೆಟ್ನಾಂನಲ್ಲಿದ್ದು ಯುದ್ಧವನ್ನು ಹತ್ತಿರದಿಂದ ನೋಡಿದ್ದುದು ಅವರನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಕವಿ ಗ್ಯಾರಿ ಸ್ನೈಡರ್ ಮತ್ತು  ರಾಂಡಿ  ಕೇಲರ್‍ರ ಜೊತೆ ಸಮಾಲೋಚಿಸಿ ಯುದ್ಧದ ವಿರುದ್ಧ ನಿಲ್ಲುವ ದೃಢ ನಿರ್ಧಾರ ಮಾಡಿದರು. ಯುದ್ಧ ವಿರೋಧಿ ರಾಲಿಗಳನ್ನು ಸಂಘಟಿಸಿದರು. 2003ರಲ್ಲಿ ಇರಾಕ್‍ನ ವಿರುದ್ಧ ಬುಶ್ ಯುದ್ಧ ಘೋಷಿಸಿದಾಗ, ಅದನ್ನು ಮೊಟ್ಟ ಮೊದಲು ಪ್ರಶ್ನಿಸಿದ್ದು ಎಲ್ಸ್ ಬರ್ಗ್ ರೇ. ಅಹ್ಮದಿ ನೆಜಾದ್‍ರ ವಿರುದ್ಧ ಇರಾನ್‍ನಲ್ಲಿ ಸರಕಾರಿ ವಿರೋಧಿ ದಂಗೆಗೆ ಅಮೆರಿಕ ಸ್ಪಾನ್ಸಾರ್ ಮಾಡುತ್ತಿರುವ ವಿವರವನ್ನು ಸೈಮಕ್ ಹಾರ್ಶ್ ಎಂಬ ಪತ್ರಕರ್ತ 2006ರ ಸೆಪ್ಟಂಬರ್‍ನಲ್ಲಿ ದಾಖಲೆ ಸಹಿತ ಬಹಿರಂಗಪಡಿಸಲು ಕಾರಣವೂ ಈ  ಎಲ್ಸ್ ಬರ್ಗ್ ರೇ. ಅಂದಹಾಗೆ, ಅಮೆರಿಕದ ಅನ್ಯಾಯವನ್ನು ಪ್ರತಿಭಟಿಸಿದವರ ಈ ಪಟ್ಟಿಯಲ್ಲಿ ಎಲ್ಸ್ ಬರ್ಗ್  ಒಂಟಿಯಲ್ಲ. 2010 ಮೇಯಲ್ಲಿ ಬ್ರಾಡ್ಲಿ ಮ್ಯಾನ್ನಿಂಗ್ ಎಂಬ ಯೋಧನನ್ನು ಬಗ್ದಾದ್‍ನಲ್ಲಿ ಅಮೆರಿಕ ಬಂಧಿಸಿದಾಗ, ವಿಕ್‍ಲೀಕ್ಸ್ ಮುಖಾಂತರ ಅಮೇರಿಕದ ಕರಾಳ ಮುಖವನ್ನು ಬಹಿರಂಗ ಪಡಿಸಿದ ವ್ಯಕ್ತಿ ಯಾರೆಂಬುದು ಜಗತ್ತಿಗೆ ಗೊತ್ತಾಯಿತು. ಆತನ ವಿರುದ್ಧ ಅಮೆರಿಕ 22 ಪ್ರಕರಣಗಳನ್ನು ದಾಖಲಿಸಿತು. ಬಗ್ದಾದ್‍ನಲ್ಲಿ ನೆರೆದ ಒಂದು ಗುಂಪಿನ ಮೇಲೆ 2007 ಜುಲೈ 12ರಂದು ಅಮೆರಿಕಾದ ಹೆಲಿಕಾಪ್ಟರ್ ಬಾಂಬ್ ಸುರಿಸಿದ್ದು ಮತ್ತು ರಾಯಿಟರ್ಸ್ ಸಂಸ್ಥೆಯ ಪತ್ರಕರ್ತರೂ ಸೇರಿ ಅನೇಕ ಮಂದಿ ಸಾವಿಗೀಡಾದದ್ದು ಮ್ಯಾನ್ನಿಂಗ್‍ನನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ರಕ್ಷಣೆಗೆ ಬಂದ ಅಂಬುಲೆನ್ಸ್ ನ ಮೇಲೂ ಹೆಲಿಕಾಪ್ಟರ್‍ನಿಂದ ಗುಂಡಿನ ಸುರಿಮಳೆಯಾಗಿತ್ತು. ಅಲ್ಲದೇ 2009 ಮೇ 4ರಂದು ಅಫಘನ್ನಿನ ಗ್ರನಾಯಿ ಯಲ್ಲಿ ಅಮೆರಿಕ ಸುರಿಸಿದ ಬಾಂಬಿಗೆ 85 ಮಂದಿ ಅಮಾಯಕ ನಾಗರಿಕರು ಬಲಿಯಾಗಿದ್ದರು. ಮ್ಯಾನ್ನಿಂಗ್ ಇವುಗಳಿಗೆ ಸಂಬಂಧಿಸಿದ ವೀಡಿಯೋ ಮತ್ತು ಇರಾಕ್, ಅಫಘಾನ್ ಯುದ್ಧಕ್ಕೆ ಸಂಬಂಧಿಸಿದ 7 ಲಕ್ಷದಷ್ಟು ಸೇನಾ ಮಾಹಿತಿ, ವರದಿಗಳನ್ನು ವಿಕಿಲೀಕ್ಸ್ ನ ಅಸಾಂಜೆಗೆ ಕಳುಹಿಸಿಕೊಟ್ಟರು.
   ಒಂದು ರೀತಿಯಲ್ಲಿ, 6x12 ಅಡಿ ಇರುವ, ಕಿಟಕಿ ಇಲ್ಲದ ಜೈಲಿನ ಒಂಟಿ ಕೋಣೆಯಲ್ಲಿ ಸದ್ಯ ಜೀವಾವಧಿ ಶಿಕ್ಷೆಯ ಸಾಧ್ಯತೆಯೊಂದಿಗೆ ಬದುಕುತ್ತಿರುವ ಮ್ಯಾನ್ನಿಂಗ್‍ನ ಬಗ್ಗೆ ಸ್ನೋಡೆನ್‍ಗೆ ಗೊತ್ತಿಲ್ಲ ಎಂದಲ್ಲ. ರಕ್ಷಣಾ ಗುತ್ತಿಗೆಯನ್ನು ವಹಿಸಿಕೊಳ್ಳುವ Booz Allen Hamilton ಎಂಬ ಸಂಸ್ಥೆಯ ಉದ್ಯೋಗವನ್ನು ನಿಷ್ಠೆಯಿಂದ ಮಾಡುತ್ತಾ, ಎಲ್ಲರಂತೆ ಬದುಕುವ ಸಕಲ ಅವಕಾಶಗಳೂ ಸ್ನೋಡೆನ್‍ಗೂ ಇತ್ತು. ಅಲ್ಲದೇ, ಈಗ ಆತ ತಂಗಿರುವ ಹಾಂಕಾಂಗ್ ಎಂದಲ್ಲ, ಜಗತ್ತಿನ ಎಲ್ಲಿದ್ದರೂ ವಶಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ  ಇರುವ ಅಮೆರಿಕವನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂಬುದೂ ಸ್ನೋಡೆನ್‍ಗೆ ಗೊತ್ತಿರಲೇಬೇಕು. ಆದರೂ ಅಮೆರಿಕದಲ್ಲಿ  ಎಲ್ಸ್ ಬರ್ಗ್ ಗಳು, ಮ್ಯಾನ್ನಿಂಗ್‍ಗಳು, ಸ್ನೋಡೆನ್‍ಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮನ್ನು ಸಕಲ ಅಪಾಯಗಳಿಗೂ ಒಡ್ಡಿಕೊಂಡು ದೊಡ್ಡಣ್ಣನಿಗೆ ಸಡ್ಡು ಹೊಡೆಯುತ್ತಾರೆ. ಆದರೂ, ಒಂಟಿ ವ್ಯಕ್ತಿಗಳಿಗಿರುವ ಈ ಧೈರ್ಯ, ಗೂಗಲ್, ಮೈಕ್ರೋಸಾಫ್ಟ್ ನಂಥ ದೈತ್ಯ ಸಂಸ್ಥೆಗಳಿಗಿಲ್ಲ ಎಂದರೆ ಏನೆನ್ನಬೇಕು? ಅಮೆರಿಕ ಕೇಳಿಕೊಂಡ ಕೂಡಲೇ ತನ್ನೆಲ್ಲಾ ಗ್ರಾಹಕರ ಚಟುವಟಿಕೆಗಳನ್ನು ಕದ್ದು ನೋಡುವುದಕ್ಕೆ ಅವಕಾಶ ಒದಗಿಸುವುದೆಂದರೇನು? ಬಳಕೆದಾರರಿಗಾದ ಮೋಸ, ವಿಶ್ವಾಸದ್ರೋಹಕ್ಕೆ ಈ ಸಂಸ್ಥೆಗಳು ಏನುತ್ತರ ಕೊಡುತ್ತವೆ?
   ಕನಿಷ್ಠ, Your privacy our priority, Privacy Setting  ಮುಂತಾದ ಪದಗುಚ್ಛಗಳನ್ನಾದರೂ ಈ ಜಾಲತಾಣಗಳು ತಮ್ಮ ಖಾತೆಯಿಂದ ಕಳಚಿಡಲಿ.


Thursday, June 13, 2013

ಭಯೋತ್ಪಾದಕನ ಅಪ್ಪ ನಾನಲ್ಲ ಎಂದು ಸಾಬೀತುಪಡಿಸಬೇಕಿತ್ತು, ಅಷ್ಟೇ

ಗೋಪಿನಾಥ್ ಪಿಳ್ಳೆ
   “ಈ ಕೇಸಿನಲ್ಲಿ ಕಕ್ಷಿಯಾಗಿ ಸೇರಿಕೋ ಎಂದು ನಾನು ನನ್ನ ಮಗಳಲ್ಲಿ ವಿನಂತಿಸಿದೆ. ಮಗಳು ಸಾಜಿದ ಬಿಕ್ಕಿಬಿಕ್ಕಿ ಅತ್ತಳು. ಇಲ್ಲ ಮಾವ, ದಯವಿಟ್ಟು ಕ್ಷಮಿಸಿ. ಅವರನ್ನು ಸಹಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಮಾವ. ದಯವಿಟ್ಟು...’ ಮಗಳ ಕಣ್ಣೀರಿಗೆ ನಾನು ಕರಗಿ ಬಿಟ್ಟೆ. ಅಷ್ಟಕ್ಕೂ, ಆಕೆಯ ಸ್ಥಾನದಲ್ಲಿ ನಾನಿರುತ್ತಿದ್ದರೆ, ಇದಕ್ಕಿಂತ ಭಿನ್ನವಾಗಿ ಮಾತಾಡುತ್ತಿದ್ದೆನೇ? ಓರ್ವ ಹೆಣ್ಣಾಗಿ ಆಕೆ ಅನುಭವಿಸಿದ ಕಿರುಕುಳಗಳು ಅಂಥ ಮಾತನ್ನಲ್ಲದೇ ಇನ್ನೇನನ್ನು ತಾನೇ ಹೇಳಿಸೀತು? ಇನ್ನೂ ಒಂದು ವರ್ಷ ತುಂಬದ ಪುಟ್ಟ ಮೂಸಾನನ್ನು ಕಂಕುಳಲ್ಲಿ ಇಟ್ಟುಕೊಂಡು ಆಕೆ ಎಷ್ಟು ಬಾರಿ ಗುಜರಾತ್‍ನ ಕ್ರೈಂ ಬ್ರಾಂಚ್ ಪೊಲೀಸ್ ಕಚೇರಿಯ ಮೆಟ್ಟಿಲು ತುಳಿದಿದ್ದಳೋ? ಕಚೇರಿಯ ಹೊರಗೆ ಆಕೆ ಎಷ್ಟೋ ಬಾರಿ ನೆಲದಲ್ಲಿ ಕೂತಿದ್ದಾಳೆ. ಕುಡಿಯಲು ನೀರು ಕೇಳಿದಾಗ ಅವಾಚ್ಯ ಪದಗಳಿಂದ ಪೊಲೀಸರು ಬೈದಿದ್ದರು. ವೇಶ್ಯೆ ಎಂದು ಹಂಗಿಸಿದ್ದರು. ಕೊಡಬಾರದ ಹಿಂಸೆ ಕೊಟ್ಟಿದ್ದರು. ಪುಣೆಯಲ್ಲಿದ್ದ ಆಕೆಯ ಫ್ಲ್ಯಾಟ್‍ಗೆ ನುಗ್ಗಿ ನನ್ನ ಮಗ ದುಬೈಯಿಂದ ತಂದಿದ್ದ ಸೂಟ್ ಕೇಸ್ ಸಹಿತ ವಸ್ತುಗಳನ್ನೆಲ್ಲಾ ನಾಶ ಮಾಡಿ, ಮಕ್ಕಳ ಜನನ ಪ್ರಮಾಣ ಪತ್ರ ಮತ್ತು ರೇಶನ್ ಕಾರ್ಡನ್ನೂ ಕೊಂಡೊಯ್ದಿದ್ದ  ಪೊಲೀಸರು ಆಕೆಯ ಎದೆಯಲ್ಲಿ ಭೀತಿಯನ್ನು ಸೃಷ್ಟಿಸಿದ್ದರೆ ಅದರಲ್ಲಿ ಆಕೆಯದ್ದೇನು ತಪ್ಪಿದೆ..
   ಗೋಪಿನಾಥ ಪಿಳ್ಳೆ ಅಂತರಂಗವನ್ನು ತೆರೆದಿಡುತ್ತಾ ಹೋಗುತ್ತಾರೆ..
2004 ಜೂನ್ 15-16ರಂದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯೊಂದು ಪ್ರಕಟವಾಗಿತ್ತು. ಹೆಚ್ಚಿನೆಲ್ಲಾ ಪತ್ರಿಕೆಗಳೂ ಮುಖಪುಟದಲ್ಲೇ ಪೋಟೋವನ್ನು ಪ್ರಕಟಿಸಿದ್ದುವು. ಒಂದು ಹಸಿರು ಟಾಟಾ ಇಂಡಿಕಾ ಕಾರು. ಅದರ ಬಳಿ ಸಾಲಾಗಿ ಮಲಗಿಸಿರುವ 4 ಮೃತ ದೇಹಗಳು. ಆ ಮೃತದೇಹಗಳ ಪಕ್ಕವೇ 4  A.  K . 47 ರೈಫಲ್‍ಗಳು. ಅಲ್ಲದೇ ಗುಜರಾತ್ ಕ್ರೈಂ ಬ್ರಾಂಚ್‍ನ ಮುಖ್ಯಸ್ಥ ವಂಜಾರ ಸಹಿತ ಮತ್ತಿತರ ಅಧಿಕಾರಿಗಳು. 18 ವರ್ಷದ ಇಶ್ರತ್ ಜಹಾಂ, ಅಮ್ಜದಲಿ ಅಕ್ಬರಲಿ ರಾಣಾ, ಅಬ್ದುಲ್ ಗನಿ ಮತ್ತು ಜಾವೇದ್ ಯಾನೆ ಪ್ರಾಣೇಶ್ ಕುಮಾರ್ ಪಿಳ್ಳೆ... ಎಂಬ ಈ ನಾಲ್ಕು ಮಂದಿಯನ್ನು ಬೆಳಗ್ಗಿನ ಜಾವಾ ಎನ್‍ಕೌಂಟರ್‍ನಲ್ಲಿ ಕೊಲೆ ಮಾಡಿ ಮೋದಿಯನ್ನು ಸಂಭಾವ್ಯ ಹತ್ಯೆಯಿಂದ ಪಾರು ಮಾಡಿರುವುದಾಗಿ ವಂಜಾರ ಹೇಳಿಕೊಂಡರು. ಈ ನಾಲ್ವರೂ ಲಷ್ಕರೆ ತ್ವಯ್ಯಿಬದ ಕಾರ್ಯಕರ್ತರು ಅಂದರು. ಮೋದಿಯವರ ಅಹ್ಮದಾಬಾದ್‍ನ ಕಚೇರಿಗಿಂತ 40 ಕಿಲೋ ಮೀಟರ್ ದೂರದ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಎನ್‍ಕೌಂಟರ್ ಮಾಡಿರುವುದಕ್ಕಾಗಿ ವಂಜಾರ ತಂಡವನ್ನು ಮಾಧ್ಯಮಗಳು ಹೊಗಳಿದುವು. ಅವರ ಬುದ್ಧಿವಂತಿಕೆ, ಚಾಣಾಕ್ಷತೆಯನ್ನು ಕೊಂಡಾಡಿದುವು. ಆ,  ಜಾವೇದ್ ಯಾನೆ ಪ್ರಾಣೇಶ್ ಪಿಳ್ಳೆಯ ತಂದೆಯೇ ಗೋಪಿನಾಥ್ ಪಿಳ್ಳೆ. ಈ ಘಟನೆಗಿಂತ ಎರಡು ವರ್ಷಗಳ ಮೊದಲಷ್ಟೇ ಹೃದಯದ ಬೈಪಾಸ್ ಚಿಕಿತ್ಸೆಗೆ ಒಳಗಾಗಿದ್ದ ಮತ್ತು ಕೇಂದ್ರ ಸರಕಾರದ ಹೆವಿ ಎಲೆಕ್ಟ್ರಿಕಲ್ಸ್‍ನಲ್ಲಿ ಸೂಪರ್‍ವೈಸರ್ ಆಗಿ ನಿವೃತ್ತರಾಗಿದ್ದ ಗೋಪಿನಾಥರು ತಾನೋರ್ವ ಭಯೋತ್ಪಾದಕನ ತಂದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವೇ ಇರಲಿಲ್ಲ. ನಾನು ನನ್ನ ಮಗನಿಗೆ ಕಲಿಸಿರುವುದು ಒಳಿತುಗಳನ್ನು ಮಾತ್ರ. ಆತ ಉಗ್ರವಾದಿಯಾಗುವುದು ಸಾಧ್ಯವೇ ಇಲ್ಲ. ಆದ್ದರಿಂದ ವಂಜಾರನನ್ನು ನಾನು ನಂಬುವುದಿಲ್ಲ. ನನಗೆ ನ್ಯಾಯ ಕೊಡಿ ಎಂದು ರಾಷ್ಟ್ರಪತಿ ಸಹಿತ ಎಲ್ಲರಲ್ಲೂ ಕೋರಿಕೊಂಡರು. ಉತ್ತರ ಸಿಗದೇ ಹೋದಾಗ ಸುಪ್ರೀಮ್ ಕೋರ್ಟನ್ನು ಸಂಪರ್ಕಿಸಿದರು. ಅಂತಿಮವಾಗಿ ಕೇಸು ಗುಜರಾತ್ ಹೈಕೋರ್ಟಿಗೆ ವರ್ಗಾವಣೆಯಾಯಿತು. ಘಟನೆಯ ತನಿಖೆಗಾಗಿ ಮೆಟ್ರೋಪಾಲಿಟನ್ ಮ್ಯಾಜಿ ಸ್ಟ್ರೇಟ್ ಎಸ್.ಪಿ. ತಮಂಗಿಯವರನ್ನು ಹೈಕೋರ್ಟು ನೇಮಿಸಿತು. ಅವರು ಸಲ್ಲಿಸಿದ 241 ಪುಟಗಳ ವರದಿಯು ಎಷ್ಟು ಭಯಾನಕ ಅಂಶಗಳನ್ನು ಒಳಗೊಂಡಿತ್ತೆಂದರೆ, ವಂಜಾರರಂಥ ಅಧಿಕಾರಿಗಳು ಹೇಗೆ ಇಡೀ ವ್ಯವಸ್ಥೆಯನ್ನೇ ಕುಲಗೆಡಿಸಿ ಬಿಡಬಲ್ಲರು ಎಂಬುದನ್ನು ವಿವರಿಸಿತು. ಆ ಎನ್‍ಕೌಂಟರೇ ನಕಲಿ ಎಂದಿತು. 4 ಮಂದಿಯನ್ನು ಕೂರಿಸಿ ಹತ್ತಿರದಿಂದ ಗುಂಡಿಟ್ಟು ಕೊಲ್ಲಲಾಗಿದೆ ಎಂದು ತಮಂಗಿಯವರು ಹೇಳಿದರಲ್ಲದೇ ಇದಕ್ಕೆ ಪುರಾವೆಯಾಗಿ ಪೋಸ್ಟ್ ಮಾರ್ಟಮ್ ವರದಿಯನ್ನು ದಾಖಲಿಸಿದರು. ಒಂದು ರೀತಿಯಲ್ಲಿ 2002ರಿಂದ 2007ರ ಮಧ್ಯೆ 21 ಮಂದಿಯನ್ನು ಎನ್‍ಕೌಂಟರ್ ಮಾಡಿ ಕೊಂದಿದ್ದ ವಂಜಾರ ತಂಡದ 'ದೇಶಭಕ್ತಿ' ಕವಚವನ್ನು ಮೊತ್ತಮೊದಲ ಬಾರಿ ಅಧಿಕೃತವಾಗಿ ಕಳಚಿ ಹಾಕಿದ್ದು ಈ ತಮಂಗಿಯವರೇ. ಆದ್ದರಿಂದಲೇ ತಮಂಗಿಯವರನ್ನು ಗೋಪಿನಾಥ ಪಿಳ್ಳೆಯವರು ಸಂಬೋಧಿಸುವುದು ‘ಈಶ್ವರ’ ಎಂದೇ. ಒಂದು ವೇಳೆ ಪಿಳ್ಳೆಯವರು ಕೋರ್ಟು ಮೆಟ್ಟಲೇರುವ ಸಾಹಸವನ್ನು ಮಾಡದೇ ಇರುತ್ತಿದ್ದರೆ ಅವರೀಗಲೂ ಭಯೋತ್ಪಾದಕನ ತಂದೆಯಾಗಿಯೇ ಗುರುತಿಸಿಕೊಳ್ಳುತ್ತಿದ್ದರೇನೋ?
   ‘..ನನ್ನ ಮಗ ಪ್ರಾಣೇಶ ನನ್ನ ಮನೆಗೆ ಕೊನೆಯ ಬಾರಿ ಬಂದದ್ದು 2004  ಮೇ 30ರಂದು. ಮಕ್ಕಳಾದ ಅಬೂಬಕರ್, ಮೂಸಾ, ಝೈನಬ ಮತ್ತು ಪತ್ನಿ ಸಾಜಿದಾಳ ಜೊತೆ ಬಂದಿದ್ದ ಆತ ಒಂದು ವಾರ ಇದ್ದು ಪುಣೆಯಲ್ಲಿರುವ ತನ್ನ ಮನೆಗೆ ವಾಪಸಾಗಿದ್ದ. ನನಗಿರುವುದು ಇಬ್ಬರು ಗಂಡು ಮಕ್ಕಳೇ. ಪ್ರಾಣೇಶ ಮತ್ತು ಅರವಿಂದ. ನನ್ನ ಮಕ್ಕಳಿಬ್ಬರನ್ನೂ ಪೂರ್ಣ ಸ್ವಾತಂತ್ರ್ಯ ಕೊಟ್ಟು ಬೆಳೆಸಿದೆ. ನಾನು ನಿವೃತ್ತಿಯಾಗುವ ಸಮಯದಲ್ಲಿ ಪ್ರಾಣೇಶನಿಗೆ ದುಬೈಯಲ್ಲಿ ಒಳ್ಳೆಯ ನೌಕರಿ ದೊರಕಿತ್ತು. ಈ ಮಧ್ಯೆ ಆತ ಸಾಜಿದಾಳನ್ನು ಪ್ರೀತಿಸಿ ಮದುವೆಯಾದ. ಆದರೆ ಒಂದೆರಡು ವರ್ಷಗಳ ವರೆಗೆ ಅದನ್ನು ಮುಚ್ಚಿಟ್ಟಿದ್ದ. ಅಪ್ಪ ಎಲ್ಲಿ ಬೈಯ್ದು ಬಿಡುತ್ತಾರೋ ಅನ್ನುವ ಭೀತಿ. ನಾನು ಪ್ರಾಣೇಶನನ್ನು ಹತ್ತಿರ ಕೂರಿಸಿ ಎಲ್ಲವನ್ನೂ ಕೇಳಿಸಿಕೊಂಡೆ. ಆತ ಜಾವೇದ್ ಆದ ಕತೆಯನ್ನು ನನ್ನೊಂದಿಗೆ ಹಂಚಿಕೊಂಡ. ನಾನು ಆತನನ್ನು ಅಭಿನಂದಿಸಿದೆ. ಹೆಣ್ಣು ಮಗಳಿಲ್ಲದ ನಾನು ಸಾಜಿದಳನ್ನು ನನ್ನ ಮಗಳಾಗಿ ಸ್ವೀಕರಿಸಿದೆ. ನನ್ನ ಮಗ ಎಲ್ಲಿದ್ದರೂ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದ. ಒಂದು ವಾರ ಇಲ್ಲಿದ್ದು ಪುಣೆಗೆ ವಾಪಸಾದ ಆತ, ಅಲ್ಲಿಂದ ಸಾಜಿದಾಳ ಅಕ್ಕ ವಾಸವಿರುವ ಅಹ್ಮದ್ ನಗರಕ್ಕೆ ಕುಟುಂಬ ಸಮೇತ ಹೋದ. ಅಲ್ಲಿ ಮುಂಜಿನ ಮದುವೆಯಿತ್ತು. ಪತ್ನಿ ಮತ್ತು ಮಕ್ಕಳನ್ನು ಅಲ್ಲಿ ಇಳಿಸಿ ಕಾರಿನಲ್ಲಿ ಅಹ್ಮದ್ ನಗರವಾಗಿ ಹಿಂತಿರುಗುವಾಗ ಪೊಲೀಸರಂತೆ ಕಾಣುವ ಇಬ್ಬರು ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಕೆಳಗಿಳಿದ ಈತನನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಹೋದರು. ಇದಾಗಿ ಐದು ದಿನಗಳ ಬಳಿಕ ಅವನ ಸಹಿತ 4 ಮಂದಿಯ ಮೃತ ದೇಹವನ್ನು ವಂಜಾರ ಪ್ರದರ್ಶಿಸಿದರು.
   ಎನ್‍ಕೌಂಟರ್‍ನ ಬಳಿಕ ವಂಜಾರರ ತಂಡ ಸಾಕಷ್ಟು ಸುಳ್ಳುಗಳನ್ನು ಹೇಳಿದೆ. ಪ್ರಾಣೇಶ್‍ನಿಂದ ಉರುಟು ಧಾನ್ಯದ ರೂಪದಲ್ಲಿ ತಯಾರಿಸಿದ ಸಿಡಿ ಮದ್ದುಗಳನ್ನು (ದಾನೆದಾಲ್ ಬಾರಿದ್) ವಶ ಪಡಿಸಿಕೊಳ್ಳಲಾಗಿದೆ ಎಂಬುದೂ ಅದರಲ್ಲಿ ಒಂದು. ನಿಜವೇನು ಗೊತ್ತೇ? ಜೂನ್‍ನಲ್ಲಿ ಆತ ನನ್ನ ಮನೆಯಿಂದ ಕುಟುಂಬ ಸಮೇತ ಕಾರಿನಲ್ಲಿ ಹೊರಟು ಹೋಗುವಾಗ 4 ಕೆ.ಜಿ. ಕರಿಮೆಣಸನ್ನು ಕೊಂಡೊಯ್ದಿದ್ದ. ದಾನೆದಾಲ್ ಬಾರಿದ್ ಎಂದು ವಂಜಾರ ಹೇಳಿದ್ದು ಇದನ್ನೇ. ಅಲ್ಲದೇ ಇಶ್ರತ್‍ಳನ್ನು ಪ್ರಾಣೇಶ್‍ನ ಪ್ರೇಯಸಿ ಎಂದೂ ವಂಜಾರ ಹೇಳಿದ್ದ. ಅವರ ನಡುವೆ 10 ವರ್ಷಗಳ ಪ್ರೇಮವಿತ್ತಂತೆ. ನಿಜವಾಗಿ, ಎನ್‍ಕೌಂಟರ್‍ಗೀಡಾಗುವಾಗ ಇಶ್ರತ್‍ಳ ವಯಸ್ಸು ಕೇವಲ 18. ಹಾಗಾದರೆ, ವಂಜಾರರ ಊರಿನಲ್ಲಿ ಮಕ್ಕಳು 8 ವರ್ಷಗಳಿರುವಾಗಲೇ ಪ್ರೇಮಿಸಲು ಪ್ರಾರಂಭಿಸುತ್ತಾರಾ? ಸುಳ್ಳು ಹೇಳುವುದಕ್ಕೂ ಒಂದು ಇತಿ-ಮಿತಿ ಬೇಡವೇ? ಪುಣೆಯಲ್ಲಿಯ ನನ್ನ ಮಗನ ಒಂದು ಸಂಸ್ಥೆಯಲ್ಲಿ ಇಶ್ರತ್‍ಳ ತಂದೆ ಕೆಲಸ ಮಾಡುತ್ತಿದ್ದರು. ಒಂದು ದಿನ ಆಯ ತಪ್ಪಿ ಬಿದ್ದ ಅವರಿಗೆ ಗಂಭೀರ ಏಟಾಯಿತು. ತನ್ನ ಕುಟುಂಬದ ಹೊಣೆಯನ್ನು ನೋಡಿ ಕೊಳ್ಳುವಂತೆ ಪ್ರಾಣೇಶ್‍ನಲ್ಲಿ ಸಾಯುವುದಕ್ಕಿಂತ ಮೊದಲು ಅವರು ವಿನಂತಿಸಿದ್ದರು. ಆ ಕಾರಣದಿಂದಾಗಿ ಟ್ರಾವೆಲ್ ಏಜೆನ್ಸಿಯೊಂದನ್ನು ಪ್ರಾರಂಭಿಸಿ ಅದರಲ್ಲಿ ಇಶ್ರತ್‍ಳನ್ನು ನೇಮಿಸಿದ್ದ. ವಂಜಾರ ತಿರುಚಿದ್ದು ಈ ಪರೋಪಕಾರವನ್ನೇ. ಮೂಲಗಳನ್ನು ಆಧರಿಸಿ ಮಾಧ್ಯಮಗಳಲ್ಲಿ ಬರುತ್ತಿದ್ದ ಸುದ್ದಿ ಮತ್ತು ಗುಜರಾತ್ ಪೊಲೀಸರು ನನ್ನೊಂದಿಗೆ ವರ್ತಿಸುತ್ತಿದ್ದ ರೀತಿ, ಈ ಪ್ರಾಯದಲ್ಲೂ ನನ್ನನ್ನು ಕುದಿಯುವಂತೆ ಮಾಡಿತು. ನನ್ನ ಮಗ ಭಯೋತ್ಪಾದಕನಲ್ಲ ಅನ್ನುವುದು ನನಗೆ ನೂರು ಶೇಕಡಾ ಗೊತ್ತು. ಆದರೆ ಅದನ್ನು ಸಾಬೀತುಪಡಿಸಬೇಕಲ್ಲ. ಗುಜರಾತ್ ಪೊಲೀಸರಂತೂ ನಿರಂತರ ಫೋನ್ ಮುಖಾಂತರ ಪೀಡಿಸುತ್ತಿದ್ದರು. ನನ್ನ ಮಗಳಂತಿರುವ ಸಾಜಿದಳನ್ನಂತೂ ಅವರು ಇಂಚಿಂಚಾಗಿ ಕೊಲ್ಲುತ್ತಿದ್ದರು. ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಲೇಬೇಕೆಂದು ತೀರ್ಮಾನಿಸಿಯೇ ನಾನು ಅಂತಿಮವಾಗಿ ಸುಪ್ರೀಮ್ ಕೋರ್ಟಿನ ಮೆಟ್ಟಲೇರಿದೆ. ಈ ಸಂದರ್ಭದಲ್ಲಿಯೇ ನಾನು ಸಾಜಿದಾಳನ್ನು ದೂರುದಾರಳಾಗಿ ಕೇಸಿನಲ್ಲಿ ಸೇರಿಕೊಳ್ಳುವಂತೆ ವಿನಂತಿಸಿದ್ದು. ಗಂಡನನ್ನು ಕಳಕೊಂಡ ನೋವಿನ ಜೊತೆಗೇ ಪೊಲೀಸರು ಇಂಚಿಂಚಾಗಿ ಕೊಲ್ಲುತ್ತಿರುವ ಅನುಭವಗಳನ್ನು ಹೊಂದಿರುವ ಆ ಮಗಳು, 'ಬೇಡ ಮಾವ' ಎಂದು ಅತ್ತಿದ್ದು ನನ್ನನ್ನು ಕಣ್ಣೀರಾಗಿಸಿತು. ಈ ಮಗಳಿಗಾಗಿಯಾದರೂ ಆ ಕ್ರೂರಿಗಳ ವಿರುದ್ಧ ಹೋರಾಡಲೇಬೇಕು ಎಂದು ತೀರ್ಮಾನಿಸುವಂತೆ ಮಾಡಿತು. ಇಷ್ಟಕ್ಕೂ, ನನ್ನ ಹೋರಾಟದ ಹಾದಿಯೇನೂ ಸುಗಮವಾಗಿರಲಿಲ್ಲ. ನಾನು ವಿಚಾರಣೆಗೆಂದು 18 ಬಾರಿ ಗುಜರಾತ್‍ಗೆ ಪ್ರಯಾಣಿಸಿದೆ. ನನಗೆ ಕೋರ್ಟ್‍ಗೆ ಹಾಜರಾಗಿ ಎಂದು ಗುಜರಾತ್‍ನಿಂದ ಅಂಚೆ ಮೂಲಕ ಸಮನ್ಸ್ ಬರುತ್ತಿದ್ದುದೇ ಎರಡ್ಮೂರು ದಿನಗಳ ಮೊದಲು. ಹೀಗಿರುವಾಗ ರೈಲಿನ ತತ್ಕಾಲ್‍ನಲ್ಲೂ ಟಿಕೇಟು ಸಿಗುತ್ತಿರಲಿಲ್ಲ. ಆದರೂ ನನ್ನ ಮಗ, ಮಗಳಿಗಾಗಿ ನಾನು ಹೋಗಲೇ ಬೇಕಾಗಿತ್ತು. 4 ಬಾರಿ ನಾನು ವಿಮಾನದಲ್ಲಿ ಗುಜರಾತ್‍ಗೆ ಹೋದೆ. ಹಾಗಂತ ನಾನೇನೂ ಯುವಕ ಅಲ್ಲವಲ್ಲ.
   ಗೋಪಿನಾಥ್ ನಿಟ್ಟುಸಿರಿಡುತ್ತಾರೆ..
ಸಾಜಿದಾ ನನ್ನ ಮಗಳು. ಆದ್ದರಿಂದಲೇ ನನ್ನ ಆಸ್ತಿಯನ್ನು ಮಾರಿ ನನ್ನ ಮೂರು ಮೊಮ್ಮಕ್ಕಳಿಗಾಗಿ ಪುಣೆಯಲ್ಲಿ 3 ಫ್ಲಾಟ್‍ಗಳನ್ನು ಖರೀದಿಸಿಕೊಟ್ಟಿದ್ದೇನೆ. ಆದರೆ ಗುಜರಾತ್‍ನ ಅಧಿಕಾರಿಗಳು ಎಷ್ಟು ಸತಾಯಿಸಿದರೆಂದರೆ ಮಗನ ಮರಣ ಪತ್ರಕ್ಕಾಗಿ 6 ವರ್ಷಗಳ ವರೆಗೆ ಅಲೆದಾಡಿಸಿದರು. ಆದರೂ ಕೊಡಲಿಲ್ಲ. ಕೊನೆಗೆ ಪೋಸ್ಟ್ ಮಾರ್ಟಂ ವರದಿಯನ್ನು ಪುರಾವೆಯಾಗಿ ಮಂಡಿಸಿ, ಫ್ಲ್ಯಾಟುಗಳನ್ನು ರಿಜಿಸ್ಟ್ರೇಶನ್ ಮಾಡಿಸಿದೆ. ನಿಜವಾಗಿ, ನನ್ನ ಮಗನನ್ನು ಕೊಲ್ಲುವ ಮೂಲಕ ಹೀರೋ ಆಗಿ ಮೆರೆಯಬಹುದು ಎಂದು ವಂಜಾರ ಭಾವಿಸಿರಬಹುದು. ಲಷ್ಕರೆ ತ್ವಯ್ಯಿಬದವರನ್ನು ಕೊಲ್ಲುವುದೆಂದರೆ ಸಣ್ಣ ಸಂಗತಿ ಅಲ್ಲವಲ್ಲ. ಓರ್ವ ಭಯೋತ್ಪಾದಕನ ತಂದೆಯಾಗಿ ಕದ್ದು ಮುಚ್ಚಿ ಮನೆಯೊಳಗಿರುವಂತೆ ಮಾಡಲು, ಭಯೋತ್ಪಾದಕನ ಪತ್ನಿಯೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡು ಯಾರಿಗೂ ಕಾಣದಂತೆ ಕಣ್ಣೀರಿನೊಂದಿಗೆ ಕಳೆದು ಹೋಗಲು ಮತ್ತು ದೇಶದ್ರೋಹಿ ಇಮೇಜಿನೊಂದಿಗೆ ಇಶ್ರತ್‍ಳ ಕುಟುಂಬ ಬದುಕುವಂತೆ ಮಾಡಲು ವಂಜಾರ ತಂಡಕ್ಕೆ ಒಂದು ಹಂತದ ವರೆಗೆ ಸಾಧ್ಯವಾಯಿತು. ಆದರೆ ಅಂತಿಮವಾಗಿ ವಂಜಾರ ಮತ್ತು ಅವರ ತಂಡವೇ ಈ ಎಲ್ಲ ಹಣೆಪಟ್ಟಿಯೊಂದಿಗೆ ಜೈಲಿನಲ್ಲಿ ಈಗ ಕೊಳೆಯುತ್ತಿದೆ. ಗುಜರಾತ್‍ನ ಸೆಂಟ್ರಲ್ ಜೈಲಿನಲ್ಲಿ 2007ರಿಂದ ವಂಜಾರ ವಿವಿಧ ಆರೋಪಗಳನ್ನು ಹೊತ್ತುಕೊಂಡು ಮುಖ ಮುಚ್ಚಿ ಬದುಕುತ್ತಿದ್ದಾರೆ. ಇದಕ್ಕಿಂತಲೂ ವಿಶೇಷ ಏನು ಗೊತ್ತೇ, 2007ರಿಂದ ಈ ವರೆಗೂ ಗುಜರಾತ್‍ನಲ್ಲಿ ಒಂದೇ ಒಂದು ಎನ್‍ಕೌಂಟರ್ ಆಗಿಲ್ಲ. ಪ್ರಾಣೇಶನ ಸಾವು ಎನ್‍ಕೌಂಟರ್‍ಗಳೆಂಬ ಕಗ್ಗೊಲೆಗಳ ಅಂತ್ಯಕ್ಕೇ ಕಾರಣವಾಯಿತು. ನಾನೀಗ ನಿರಾಳ ವ್ಯಕ್ತಿ. ಎಲ್ಲೆಡೆಗೂ ತಲೆ ಎತ್ತಿ ಆತ್ಮವಿಶ್ವಾಸದಿಂದ ನಡೆಯಬಲ್ಲೆ. ಆದರೆ ವಂಜಾರ ಜೈಲಿನ ಒಳಗಷ್ಟೇ ಅಷ್ಟಿಷ್ಟು ನಡೆಯಬಲ್ಲ. ಅದೂ ಮುಖ ಮುಚ್ಚಿಕೊಂಡು...  
  
ಪತ್ರಕರ್ತ ಮಿತ್ರನಲ್ಲಿ ಹೇಳುತ್ತಾ ಗೋಪಿನಾಥರು ನಿರಾಳವಾಗುತ್ತಾರೆ. ಬಹುಶಃ ಎಲ್ಲ ಮಕ್ಕಳೂ, ತಮಗೆ ಇಂಥ ಅಪ್ಪ ಬೇಕು ಎಂದು ಬಯಸುವಷ್ಟು ಹತ್ತಿರವಾಗುತ್ತಾರೆ.

Monday, June 3, 2013

'ಪದ್ಮಭೂಷಣ'ವನ್ನೇ ಜೋಕರ್ ಆಗಿಸಿದವರು, ಇನ್ನು ಈ ಹೋರಾಟಗಾರರನ್ನು ಬಿಡುತ್ತಾರಾ?

ಕುಡಂಕುಲಂ ಪ್ರತಿಭಟನೆ
1. ನರ್ಮದಾ ಬಚಾವೋ ಆಂದೋಲನ್
2. ಫೋಸ್ಕೊ ಪ್ರತಿರೋಧ್ ಸಂಗ್ರಾಮ್ ಸಮಿತಿ
3. ಪೀಪಲ್ಸ್ ಮೂವ್‍ಮೆಂಟ್ ಅಗೈನ್‍ಸ್ಟ್ ಕುಡಂಕುಲಮ್ ನ್ಯೂಕ್ಲಿಯರ್ ಪ್ರೊಜೆಕ್ಟ್
4. ಜೈತಾಪುರ್ ಜನಹಿತ್ ಸೇವಾ ಸಮಿತಿ
5. ಮಂಗಳೂರು ಕರಾವಳಿ ಜನಾಭಿವೃದ್ಧಿ ವೇದಿಕೆ
   ಇವೆಲ್ಲ ಇವತ್ತು ಏನಾಗಿವೆ? ಎಷ್ಟಂಶ ಜೀವಂತವಿವೆ? ಸರಕಾರದ ಜನವಿರೋಧಿ ಯೋಜನೆಗಳನ್ನು ಪ್ರತಿಭಟಿಸುವುದಕ್ಕೆಂದು ಹುಟ್ಟಿಕೊಂಡ ಈ ಸಂಘಟನೆಗಳೆಲ್ಲ ಉದ್ದೇಶಿತ ಗುರಿಯನ್ನು ಮುಟ್ಟದೇ ಇರುವುದಕ್ಕೆ ಏನು, ಯಾರು ಕಾರಣ? ಜನರೇ, ನಾಯಕರೇ, ಸರಕಾರವೇ ಅಥವಾ ಕಾರ್ಪೋರೇಟ್ ಸಂಸ್ಥೆಗಳೇ? ಒಂದು ಕಡೆ, ಜನರು ಹೆಚ್ಚೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಪ್ರತಿಯೊಂದನ್ನೂ ಸಂದೇಹದ ದೃಷ್ಟಿಯಲ್ಲಿ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರ ಯಾವ ಯೋಜನೆಯನ್ನು ಘೋಷಿಸಿದರೂ ತಕ್ಷಣಕ್ಕೆ ಒಪ್ಪಿಕೊಳ್ಳದೇ ಇರುವ, ಸಂದೇಹಿಸುವ ಮನಃಸ್ಥಿತಿ ವ್ಯಾಪಕವಾಗುತ್ತಿದೆ. ಹೀಗಿರುವಾಗ, ಪ್ರತಿಭಟನೆಗಳನ್ನು ಅಸಹಜ ಅನ್ನುವಂತಿಲ್ಲ. ಗುಟ್ಕಾ ನಿಷೇಧವನ್ನು ಅಡಕೆ ಬೆಳೆಗಾರರು ಅನುಮಾನದಿಂದ ನೋಡುತ್ತಿರುವುದು ಈ ಕಾರಣದಿಂದಲೇ. ಆದರೆ, ಈ ಮನಃಸ್ಥಿತಿ ಅಂತಿಮವಾಗಿ ಪ್ರತಿಭಟನಾ ಚಳವಳಿಗಳ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆಯೇ? ಪ್ರತಿಭಟನೆಗಳನ್ನೇ ಅನುಮಾನಿಸುತ್ತಾ, ಅದರ ನಾಯಕರ ಪ್ರಾಮಾಣಿಕತೆಯನ್ನು, ಬದ್ಧತೆಯನ್ನೇ ಸಂದೇಹಿಸುತ್ತಾ ತಿರುಗುವವರ ಹುಟ್ಟಿಗೆ ಇಂಥ ಮನಸ್ಥಿತಿಗಳು ಕಾರಣವಾಗುತ್ತಿದೆಯೇ?
   2005 ಜೂನ್‍ನಲ್ಲಿ ಕೊರಿಯಾದ ಫೋಸ್ಕೊ ಕಂಪೆನಿಯು ಬೃಹತ್ ಸ್ಟೀಲ್ ಉದ್ದಿಮೆಯನ್ನು ಸ್ಥಾಪಿಸುವ ಕುರಿತಂತೆ ಒಡಿಸ್ಸಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಕಂಪೆನಿಯ ಆಡಳಿತ ನಿರ್ದೇಶಕ ಯಂಗ್ ವೋನ್ ಯೂನ್‍ರು ಇಡೀ ಉದ್ದಿಮೆಯ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್‍ರಿಗೆ ಮಾಹಿತಿ ನೀಡುತ್ತಾರೆ. ಒಟ್ಟು 8500 ಎಕ್ರೆಯಷ್ಟು ವಿಸ್ತಾರ ಭೂಮಿಯಲ್ಲಿ ಸ್ಟೀಲ್ ಪ್ಲಾಂಟ್, ಇನ್‍ಫ್ರಾಸ್ಟ್ರಕ್ಚರ್, ಮೈನಿಂಗ್‍ಗಳು ನಡೆಯುವ ನೀಲನಕ್ಷೆಯನ್ನು ಮುಂದಿಡುತ್ತಾರೆ. ಅಪಾರ ಖನಿಜ ಮತ್ತು ಅರಣ್ಯ ಸಂಪತ್ತು ಇರುವ ಒಡಿಸ್ಸಾದಲ್ಲಿ ಈ ಒಪ್ಪಂದ ಕಿಚ್ಚು ಹಚ್ಚುತ್ತದೆ. ಪ್ರತಿಭಟನೆಯ ಕಾವು ಎಷ್ಟು ಜೋರಾಗಿತ್ತೆಂದರೆ, ಪರಿಸರ ಮತ್ತು ಅರಣ್ಯ ಇಲಾಖೆಯು 2008ರಲ್ಲಿ ತನಿಖೆಗೆ ಆದೇಶಿಸುತ್ತದೆ. ಈ ಕಾರಣದಿಂದಲೇ ಎನ್.ಸಿ. ಸಕ್ಸೇನಾ ನೇತೃತ್ವದ 19 ಮಂದಿಯ ತಂಡ ಅಲ್ಲಿಗೆ ಭೇಟಿ ಕೊಡುತ್ತಲ್ಲದೇ ಫೋಸ್ಕೊದ ವಿರುದ್ಧ ಅಸಮಾಧಾನ ಸೂಚಿಸುತ್ತದೆ. ಉದ್ದಿಮೆಗೆ ನೀಡಲಾಗಿರುವ ಅರಣ್ಯ ಪ್ರದೇಶಗಳು ನಾಜೂಕಿನವು ಮತ್ತು ಕಾಪಾಡಿಕೊಳ್ಳಲೇಬೇಕಾದಂಥವು ಅನ್ನುತ್ತದೆ. ಈ ವರದಿಯನ್ನು ಪರಿಗಣಿಸಿ ಪರಿಸರ ಇಲಾಖೆಯು ಅರಣ್ಯ ಭೂಮಿಯ ವರ್ಗಾವಣೆಗೆ ತಡೆ ವಿಧಿಸುತ್ತದೆ. ಒಂದು ರೀತಿಯಲ್ಲಿ ಫೋಸ್ಕೋ ವಿರೋಧಿ ಚಳವಳಿಗೆ ಭಾರೀ ಉತ್ತೇಜನ ಕೊಟ್ಟ ಸಂದರ್ಭವಿದು. ಬಳಿಕ ಸರಕಾರವು ಮೀನಾ ಗುಪ್ತಾ ನೇತೃತ್ವದ 4 ಮಂದಿಯ ಸಮಿತಿಯನ್ನು ರಚಿಸುತ್ತದೆ. 2010 ಅಕ್ಟೋಬರ್‍ನಲ್ಲಿ ಅದು ಸಲ್ಲಿಸಿದ ವರದಿ ಎಷ್ಟು ಭಿನ್ನವಾಗಿತ್ತೆಂದರೆ, ಸಂಪೂರ್ಣ ಉದ್ದಿಮೆಯನ್ನು ಪರಿಸರ ಸಹ್ಯ ಅನ್ನುತ್ತದೆ. ರಾಜ್ಯ ಹೈಕೋರ್ಟೂ ಯೋಜನೆಯ ಪರ ನಿಲ್ಲುತ್ತದೆ. ಪ್ರತಿಭಟನಾಕಾರರ ಸಂಖ್ಯೆಯಲ್ಲಿ ದಿನೇ ದಿನೇ ಕುಸಿತವಾಗತೊಡಗುತ್ತದೆ. ಆರಂಭದಲ್ಲಿ 8 ಜಿಲ್ಲೆಗಳಿಗೆ ವ್ಯಾಪಿಸಿಕೊಂಡಿದ್ದ ಪ್ರತಿಭಟನೆ ಕ್ರಮೇಣ ಯೋಜನೆಯಿಂದ ಸಂಪೂರ್ಣ ಕಣ್ಮರೆಯಾಗಲಿರುವ ಗಡಕುಜಂಗ್ ಮತ್ತು ಧಿಂಕಿಯಾ ಗ್ರಾಮಗಳಿಗೆ ಮಾತ್ರ ಸೀಮಿತಗೊಳ್ಳುತ್ತದೆ. ಸಂತ್ರಸ್ತರು ಸರಕಾರದ ಪರಿಹಾರವನ್ನು ಪಡಕೊಂಡು ಸುಮ್ಮನಾಗತೊಡಗುತ್ತಾರೆ. ಈ ಮಧ್ಯೆ 2011 ಜೂನ್ 14ರಂದು ಧಿಂಕಿಯಾ ಗ್ರಾಮವನ್ನು ಫೋಸ್ಕೋಗೆ ಹಸ್ತಾಂತರಿಸುವ ಉಪಕ್ರಮಕ್ಕೆ ನವೀನ್ ಪಟ್ನಾಯಕ್ ಚಾಲನೆ ಕೊಡುತ್ತಾರೆ. ಅಲ್ಲದೇ ಫೋಸ್ಕೋ ಪ್ರತಿರೋಧ್ ಸಂಗ್ರಾಮ್ ಸಮಿತಿಯನ್ನು ಹುಟ್ಟು ಹಾಕಿ ಅದಕ್ಕೆ ನೇತೃತ್ವ ಕೊಟ್ಟಿದ್ದ ಅಭಯ್ ಸಾಹುರನ್ನು ವರದಕ್ಷಿಣೆ, ಕೊಲೆ ಸಹಿತ ಕೆಲವು ಕ್ರಿಮಿನಲ್ ಆರೋಪಗಳನ್ನು ಹೊರಿಸಿ ಬಂಧಿಸಲಾಗುತ್ತದೆ. ಫೋಸ್ಕೋವನ್ನು ವಿರೋಧಿಸುವವರಂತೆ ಬೆಂಬಲಿಸುವ ಆದಿವಾಸಿಗಳ ಗುಂಪೂ ಹುಟ್ಟಿಕೊಳ್ಳುತ್ತದೆ. ನಿಧಾನವಾಗಿ ಫೋಸ್ಕೋ ಪ್ರಬಲವಾಗುತ್ತಾ, ಪ್ರತಿಭಟನೆಗಳು ಕ್ಷೀಣವಾಗುತ್ತಾ ಸಾಗುತ್ತವೆ..
   ಇಷ್ಟಕ್ಕೂ, ತನಗೆ ಎದುರಾಗಬಹುದಾದ ಅಡೆ-ತಡೆಗಳ ಬಗ್ಗೆ ಯಾವುದೇ ಕಂಪೆನಿ ಮೊದಲೇ ಲೆಕ್ಕ ಹಾಕದೇ ಇರುತ್ತದೆಯೇ? ಅದನ್ನು ಎದುರಿಸುವುದಕ್ಕೆ ತಂತ್ರಗಳನ್ನು ಹೆಣಿಯದಿರುತ್ತದೆಯೇ? ತಮಿಳ್ನಾಡಿನ ತಿರುನೇಲ್ವಲಿ ಜಿಲ್ಲೆಯಲ್ಲಿ ಸ್ಥಾಪನೆಗೊಂಡಿರುವ ಕುಡಂಕುಲಮ್ ಅಣು ವಿದ್ಯುತ್ ಯೋಜನೆಗೆ 1988ರಲ್ಲೇ ರಾಜೀವ್ ಗಾಂಧಿ ಮತ್ತು ಅಂದಿನ ರಷ್ಯಾದ ಅಧ್ಯಕ್ಷ  ಮಿಖಾಯಿಲ್ ಗೋರ್ಬಚೇವ್‍ರು ಸಹಿ ಹಾಕಿದ್ದರು. ಆದರೆ ಆ ಬಳಿಕ ರಷ್ಯಾ ಹೋಳಾದದ್ದು ಮತ್ತು ಅಮೇರಿಕದ ವಿರೋಧದಿಂದಾಗಿ ಯೋಜನೆ ತಡವಾಗಿ 2001ರಲ್ಲಿ ಆರಂಭಗೊಂಡಿತು. ಇಷ್ಟಿದ್ದೂ, ಇಡೀ ಯೋಜನೆಯು ಜನರ ಗಮನಕ್ಕೆ ಬಂದದ್ದು ಎರಡ್ಮೂರು ವರ್ಷಗಳ ಹಿಂದೆ. ಅಣು ರಿಯಾಕ್ಟರ್‍ನ 30 ಕಿಲೋ ಮೀಟರ್ ಸುತ್ತ ಮುತ್ತ ವಾಸಿಸುತ್ತಿರುವ ಒಂದು ಮಿಲಿಯನ್ ಮಂದಿಯ ಆರೋಗ್ಯವು ಗಂಭೀರ ಚರ್ಚೆಗೆ ಒಳಪಟ್ಟದ್ದೂ ಇತ್ತೀಚೆಗೆ. ಯೋಜನೆಯ ನಕ್ಷೆಯನ್ನು ರೂಪಿಸಿದ್ದ (ಡಿಸೈನರ್) ಸೆರ್ಗೆಯಿ  ರಿಸೋವ್‍ರು 2011ರಲ್ಲಿ ವಿಮಾನಾಪಘಾತದಲ್ಲಿ ಸಾವಿಗೀಡಾಗದೇ ಇರುತ್ತಿದ್ದರೆ ಯೋಜನೆ ಈಗಿನಷ್ಟೂ ಪ್ರಚಾರಕ್ಕೆ ಬರುತ್ತಿರಲಿಲ್ಲವೋ ಏನೋ. ಅಲ್ಲದೇ ಸುನಾಮಿಯಿಂದಾಗಿ ಜಪಾನ್‍ನಲ್ಲಿ ನಡೆದ ಅಣು ದುರಂತ ಮತ್ತು ತನ್ನ 17 ಅಣು ರಿಯಾಕ್ಟರುಗಳನ್ನು ಮುಚ್ಚಲು ಜರ್ಮನಿ ತೀರ್ಮಾನಿಸಿರದಿರುತ್ತಿದ್ದರೆ ಕುಡಂಕುಲಮ್‍ನ ಪೀಪಲ್ಸ್ ಮೂವ್‍ಮೆಂಟ್‍ಗೆ ಈಗಿನಷ್ಟು ಜನಬೆಂಬಲ ಸಿಗುವುದಕ್ಕೂ ಸಾಧ್ಯವಿರಲಿಲ್ಲ. ನಿಜವಾಗಿ, 1988ರಿಂದ 2001ರ ವರೆಗಿನ ಈ 13 ವರ್ಷಗಳ ಅವಧಿಯಲ್ಲಿ ಅಣು ವಿದ್ಯುತ್ ಸಂಸ್ಥೆಯು ಸುಮ್ಮನಿತ್ತು ಎಂದು ಹೇಳುವಂತಿಲ್ಲ. ಅದು ಇಡೀ ಯೋಜನೆಗೆ ಎದುರಾಗಬಹುದಾದ ಪ್ರತಿರೋಧ ಮತ್ತು ಸವಾಲುಗಳನ್ನು ನಿರ್ವ ಹಿಸುವುದಕ್ಕೆ ತಕ್ಕ ಏರ್ಪಾಟು ಮಾಡಿಕೊಂಡಿರಬಹುದು. ಜನರಿಗೆ ಗೊತ್ತಾಗದಂತೆ, ಗೊತ್ತಾದರೂ ವಿದ್ಯುತ್ ಕೊರತೆಯನ್ನು ಮುಂದಿಟ್ಟು ಸಮರ್ಥಿಸಿಕೊಳ್ಳುವಂತೆ ಮಾಡುವುದಕ್ಕೆ ಸಕಲ ಏರ್ಪಾಟುಗಳನ್ನೂ ಮಾಡಿರಬಹುದು. ಯೋಜನೆಗೆ ಪೂರಕವಾದ ಮಾಹಿತಿಗಳು ಮಾಧ್ಯಮಗಳಲ್ಲೂ ಬರುವಂತೆ ನೋಡಿಕೊಳ್ಳಲು ತಂಡ ರಚಿಸಿರಬಹುದು. ಹಾಗಂತ ಇವೆಲ್ಲ ಅವಕಾಶಗಳು ಪ್ರತಿಭಟನಾಕಾರರಿಗೆ ಎಲ್ಲಿರುತ್ತದೆ ಹೇಳಿ? ಅವರಿಗೆ ಯೋಜನೆಯ ಬಗ್ಗೆ ಗೊತ್ತಾಗುವಾಗಲೇ ಅಥವಾ ಜನರನ್ನು ಸಂಘಟಿಸುವಾಗಲೇ ವಿದ್ಯುತ್ ಕಂಪೆನಿಯ ಅರ್ಧ ಕೆಲಸ ಮುಗಿದಿರುತ್ತದೆ. ಆ ಕೆಲಸವನ್ನೇ ತೋರಿಸಿ ಯೋಜನೆಯನ್ನು ಮುಂದುವರಿಸುವುದಕ್ಕೆ ಅದು ಕೋರ್ಟು, ಸರಕಾರದೊಂದಿಗೆ ಅನುಮತಿ ಕೇಳುತ್ತದೆ. ಸರಕಾರವಂತೂ ಒಂದೆರಡು ಆಯೋಗಗಳನ್ನು ರಚಿಸಿ ಅದೂ-ಇದೂ ಮಾತಾಡಿ, ಕೆಲವು ಷರತ್ತುಗಳನ್ನು ವಿಧಿಸಿದಂತೆ ಮಾಡಿ ಯೋಜನೆ ಮುಂದುವರಿಸುವುದಕ್ಕೆ ಅನುಮತಿ ಕೊಡುತ್ತದೆ. ಮತ್ತೂ ಪ್ರತಿಭಟಿಸಿದರೆ ಕೇಸು ದಾಖಲಾಗುತ್ತದೆ. ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆ, ಮಹಾರಾಷ್ಟ್ರದ ಜೈತಾಪುರ್ ಅಣು ವಿದ್ಯುತ್ ಅಥವಾ ಸರ್ದಾರ್ ಸರೋವರ್ ಯೋಜನೆಗಳ ವಿರುದ್ಧ ಎದ್ದ ಪ್ರತಿಭಟನೆಗಳೆಲ್ಲ ನಿಧಾನವಾಗಿ ಸಾಗಿ ಬಂದದ್ದು ಇದೇ ರೀತಿಯಲ್ಲಿ. 1979ರ ಸರ್ದಾರ್ ಸರೋವರ್ ಯೋಜನೆಯ ವಿರುದ್ಧ ಮೇಧಾ ಪಾಟ್ಕರ್‍ ನೇತೃತ್ವದಲ್ಲಿ ನರ್ಮದಾ ಬಚಾವೋ ಆಂದೋಲನ್ ಹುಟ್ಟಿಕೊಂಡದ್ದೇ 10 ವರ್ಷಗಳ ಬಳಿಕ, 1989ರಲ್ಲಿ. ನಿಜವಾಗಿ, ವ್ಯವಸ್ಥೆಯು ಜನರನ್ನು ಬಹುತೇಕ ಬಾರಿ ಕತ್ತಲಲ್ಲಿರಿಸಿಯೇ ಜನವಿರೋಧಿ ಯೋಜನೆಗಳಿಗೆ ಚಾಲನೆ ಕೊಡುತ್ತದೆ. ಅದು ಜನರ ಗಮನಕ್ಕೆ ಬಂದು ಪ್ರತಿಭಟನೆಗೆ ಮುಂದಾಗುವಾಗ ಯೋಜನೆಯ ದೊಡ್ಡದೊಂದು ಭಾಗ ಪೂರ್ಣವಾಗಿರುತ್ತದೆ. ಇಂಥ ಹೊತ್ತಲ್ಲಿ, ಪ್ರತಿಭಟನಾಕಾರರು ಮಾಡುವುದಾದರೂ ಏನನ್ನು? ಕೆಲಸಕ್ಕೆ ರಜೆ ಹಾಕಿ ಎಷ್ಟು ದಿನಾಂತ ಅವರು ಪ್ರತಿಭಟಿಸಿಯಾರು? ಪ್ರತಿಭಟನೆಯಿಂದಲೋ, ಕೋರ್ಟು ಕಲಾಪದಿಂದಾಗಿಯೋ ಯೋಜನೆ ಮುಂದೂಡಲ್ಪಟ್ಟರೆ ಸರಕಾರಿ ಸಬ್ಸಿಡಿ ಅಥವಾ ಇನ್ನೇನೋ ಒಳವ್ಯವಹಾರದ ಮೂಲಕ ಕಂಪೆನಿಗಳು ಬದುಕಬಹುದು. ಹಾಗಂತ ಪ್ರತಿಭಟನಾಕಾರರಿಗೆ ಸರಕಾರ ಊಟ ಕೊಡುವುದಿಲ್ಲವಲ್ಲ?
   ಅಷ್ಟಕ್ಕೂ, ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನೇ ಎತ್ತಿಕೊಳ್ಳಿ.
ಇತ್ತೀಚೆಗೆ ಇಂಡಿಯಾ ಟುಡೇ ಪತ್ರಿಕೆ ಬಿಡುಗಡೆಗೊಳಿಸಿದ ಭಾರತದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅಣ್ಣಾ ಹಜಾರೆಯ ಹೆಸರೇ ಇಲ್ಲ. 2012ರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ವ್ಯಕ್ತಿ, ಕೇವಲ 12 ತಿಂಗಳೊಳಗೆ ಕಾಣೆಯಾಗಿರುವುದಕ್ಕೆ ಏನು ಕಾರಣ? ತನ್ನ ಗ್ರಾಮವಾದ ರಾಲೇಗಾಂವ್ ಸಿದ್ದಿಯನ್ನು ಮದ್ಯ, ತಂಬಾಕು ರಹಿತವಾಗಿಸಿರುವ; ಬಡವರಿಗಾಗಿ ಬ್ಯಾಂಕು, ನೀರಾವರಿ ಯೋಜನೆ ಸಹಿತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿ ಗ್ರಾಮವನ್ನು ಸೃಷ್ಟಿಸಿರುವ ಮತ್ತು ಅದಕ್ಕಾಗಿಯೇ 1992ರಲ್ಲಿ ಪದ್ಮಭೂಷಣ್ ಪ್ರಶಸ್ತಿಯನ್ನು ಪಡಕೊಂಡ ಅಣ್ಣಾ ಹಜಾರೆ, ಅನನುಭವಿಯೇನಲ್ಲ. ಆದರೆ ರಾಷ್ಟ್ರಮಟ್ಟದಲ್ಲಿ ಅವರು ಹುಟ್ಟು ಹಾಕಿದ ಚಳವಳಿ ಅಷ್ಟು ಬೇಗ ಕಾವು ಕಳಕೊಂಡಿತೇಕೆ? ರಾಮಲೀಲಾ ಮೈದಾನದಲ್ಲಿ 24 ಗಂಟೆ ಟೆಂಟು ಹಾಕಿ ಕುಳಿತುಕೊಂಡಿದ್ದ ಮಾಧ್ಯಮಗಳು ಕವರೇಜ್‍ನ ನೆಪದಲ್ಲಿ ಚಳವಳಿಯನ್ನೇ ಕೊಂದವೇ? ಅವುಗಳೊಂದಿಗೆ ವ್ಯವಸ್ಥೆಯೂ ಕೈ ಜೋಡಿಸಿತೇ? ಅಲ್ಲದೇ, ಅಣ್ಣಾ ಚಳವಳಿಯನ್ನು ಪ್ರಸಾರ ಮಾಡುವಾಗ 2ಜಿ ಹಗರಣದಲ್ಲಿ ಹೆಸರು ಕೆಡಿಸಿಕೊಂಡಿದ್ದ ಕಂಪೆನಿಗಳ ಜಾಹೀರಾತುಗಳನ್ನು ಟಿ.ವಿ. ಚಾನೆಲ್‍ಗಳು ಬಳಸಿಕೊಳ್ಳುತ್ತಿದ್ದುದರ ಉದ್ದೇಶವೇನು? ಅಣ್ಣಾ ಹಜಾರೆಯನ್ನು ಕೆಲವರು ತಮ್ಮ ನಿಗೂಢ ಉದ್ದೇಶಕ್ಕಾಗಿ ಬಳಸಿಕೊಂಡರೇ? ಅವರಿಂದ ಸಂವಿಧಾನಕ್ಕೆ ಅನುಗುಣವಲ್ಲದ ಹೇಳಿಕೆಗಳನ್ನು ಹೊರಡಿಸಿ ಜೋಕರ್ ಆಗಿಸಿದರೇ? ‘ಬದುಕಿನಲ್ಲಿ ವೈಫಲ್ಯವನ್ನೇ ಕಾಣದ ವ್ಯಕ್ತಿ’ ಎಂದು ಕಿರಣ್ ಬೇಡಿಯಿಂದ ಹೊಗಳಿಸಿಕೊಂಡ ಅಣ್ಣಾ, ಏಳೆಂಟು ತಿಂಗಳೊಳಗೆ ಕುರುಹೂ ಇಲ್ಲದಷ್ಟೂ ಅಪರಿಚಿತರಾಗಿ ಹೋದರೇಕೆ? ಅವರು ಹುಟ್ಟು ಹಾಕಿದ, 'ಎರಡನೇ ಸ್ವಾತಂತ್ರ್ಯ ಸಂಗ್ರಾಮ' ನಿರೀಕ್ಷಿತ ಪರಿಣಾಮ ಬೀರದಿರಲು ಏನು ಕಾರಣ, ಯಾರು ಕಾರಣ, ಯಾವುದು ಕಾರಣ? ಒಂದು ಜನಪರ ಧ್ವನಿಯನ್ನು ಮಟ್ಟ ಹಾಕುವುದಕ್ಕೆ ವ್ಯವಸ್ಥೆ, ಮಾಧ್ಯಮಗಳು, ಕಾರ್ಪೋರೇಟ್ ಸಂಸ್ಥೆಗಳು ಜೊತೆಯಾಗಿ ಶ್ರಮಿಸಿದರೆ ಏನಾಗಬಹುದು ಎಂಬುದಕ್ಕೆ ಅಣ್ಣಾ ಮತ್ತು ಅವರ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಉದಾಹರಣೆಯಾಗಿ ಯಾಕೆ ಎತ್ತಿಕೊಳ್ಳಬಾರದು? ಅಂದಹಾಗೆ, ಅಣ್ಣಾ ಹಜಾರೆಯವರು ಮಾಧ್ಯಮಗಳಲ್ಲಿ ಈಗ ತಿಂಗಳಿಗೊಮ್ಮೆಯಾದರೂ ಕಾಣಿಸಿ
ಕೊಳ್ಳುತ್ತಿಲ್ಲವಲ್ಲ, ಯಾಕೆ? ಅವರನ್ನು ವ್ಯವಸ್ಥಿತವಾಗಿ ಮುಗಿಸಲಾಯಿತೇ?
  
ಅಣ್ಣಾ ಹಜಾರೆ 
ಜನವಿರೋಧಿ ಯೋಜನೆಗಳ ವಿರುದ್ಧ ಹುಟ್ಟಿಕೊಂಡ ಚಳವಳಿಗಳೆಲ್ಲ ಧ್ವನಿ ಕಳಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಂಥದ್ದೊಂದು ಅನುಮಾನ ಕಾಡುವುದರಲ್ಲಿ ಅಚ್ಚರಿಯೇನೂ ಇಲ್ಲ.

Monday, May 27, 2013

ಹಾಗಾದರೆ, ಅವರೆಲ್ಲ ಸ್ವಾತಂತ್ರ್ಯದಿಂದ ಬಂಧನದ ಕಡೆಗೆ ಸಾಗಿದರೆಂದು ಹೇಳುತ್ತೀರಾ?

ಇವಾನ್ ರಿಡ್ಲಿ
   “ಯಹೂದಿ ಧರ್ಮದ ಹಳೆ ಒಡಂಬಡಿಕೆ ಮತ್ತು ಕ್ರೈಸ್ತ ಧರ್ಮದ ಬೈಬಲ್‍ನಲ್ಲಿ ಮಹಿಳೆಯರ ಮೇಲೆ ಹೇರಲಾಗಿರುವ ನಿಯಂತ್ರಣಗಳಿಗೆ ಹೋಲಿಸಿದರೆ ಕುರ್‍ಆನನ್ನು ಅಪರಾಧಿಯಾಗಿ ನೋಡಬೇಕಾದ ಅಗತ್ಯವೇನೂ ಇಲ್ಲ. ಈ ವಿಷಯದಲ್ಲಿ ಮೊದಲೆರಡು ಸ್ಥಾನಗಳು ಈ ಧರ್ಮಗಳಿಗೇ ಸಲ್ಲಬೇಕು. ಅಲ್ಲದೇ ಪರ್ದಾವನ್ನು (ಮೈ ಮುಚ್ಚುವ ಉಡುಪು) ಈ ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ್ದು ಕುರ್‍ಆನ್ ಅಲ್ಲ. ಅದು ಪುರಾತನ ಸಂಸ್ಕ್ರಿತಿಯ ಭಾಗವೇ ಆಗಿತ್ತು. ಕುರ್‍ಆನ್ ಅದಕ್ಕೆ ಮಾನ್ಯತೆಯನ್ನಷ್ಟೇ ಕೊಟ್ಟಿದೆ.."
   ಹಾಗಂತ 90ರ ದಶಕದ ಆರಂಭದಲ್ಲಿ ಈಜಿಪ್ಟ್ ನ ಪ್ರಸಿದ್ಧ ಮಹಿಳಾವಾದಿ (Feminist) ಡಾ| ನವಲ್ ಸದಾವಿ ಅಭಿಪ್ರಾಯ ಪಟ್ಟದ್ದು ಮಹಿಳಾ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದುವು. ಪಾಶ್ಚಾತ್ಯ ರಾಷ್ಟ್ರಗಳ ಮಹಿಳಾ ವಾದಿಗಳು ಈ ಅಭಿಪ್ರಾಯದ ಸುತ್ತ ಸಾಕಷ್ಟು ಚರ್ಚಿಸಿದರು. ಸಭೆಗಳು ನಡೆದುವು. ವಿಚಾರಗೋಷ್ಠಿಗಳು ಏರ್ಪಟ್ಟುವು. ಇಷ್ಟಕ್ಕೂ, ಸದಾವಿಯ ನಿಲುವಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಗಲು ಕಾರಣ ಏನೆಂದರೆ, ಆಕೆಗೆ ಈಜಿಪ್ಟ್ ನಲ್ಲಿ ಮಾತ್ರವಲ್ಲ ಜಾಗತಿಕವಾಗಿಯೇ ಒಂದು ಬಗೆಯ ವರ್ಚಸ್ಸು ಇತ್ತು. ಮುಸ್ಲಿಮರೇ ಹೆಚ್ಚಿರುವ ಈಜಿಪ್ಟ್ ನಲ್ಲಿ ಕುರ್‍ಆನನ್ನು ವಿಮರ್ಶಿಸುತ್ತಾ, ಮಹಿಳಾ ವಾದವನ್ನು ಪ್ರತಿಪಾದಿಸುತ್ತಾ ಇದ್ದುದು ಆಕೆಯನ್ನು ಪ್ರಸಿದ್ಧಿಗೆ ಒಯ್ದಿತ್ತು. ಆದ್ದರಿಂದಲೇ, ‘ಮಹಿಳೆ ಮತ್ತು ಸಾಮರ್ಥ್ಯ’ ಎಂಬ ವಿಷಯದಲ್ಲಿ ಕೆನಡದ ಟೊರೊಂಟೋದಲ್ಲಿ ವಿಚಾರಗೋಷ್ಠಿ ನಡೆಯಿತು. 'ವಿಶ್ವ ತಾಯಂದಿರ ವೇದಿಕೆ' ಎಂಬ ಸಂಘಟನೆಯ ಅಧ್ಯಕ್ಷೆ ಬರ್ನಿಸ್ ಡುಬೋಯಿಸ್ ಮತ್ತು ಇಸ್ರೇಲಿನ ಮಹಿಳಾ ಹೋರಾಟಗಾರ್ತಿ ಅಲೀಸ್ ಶೆಲ್ವಿಯವರು ಈ ವಿಚಾರಗೋಷ್ಠಿಯಲ್ಲಿ ಸದಾವಿಯ ಹೇಳಿಕೆಯನ್ನು ಬಲವಾಗಿ ಖಂಡಿಸಿದರು. ವಿಚಾರಗೋಷ್ಠಿಯಲ್ಲಿ ಗದ್ದಲ, ಗೊಂದಲವೇ ಉಂಟಾಯಿತು. ಮಾತ್ರವಲ್ಲ, ಅಲ್ಲಿ ನಡೆದ ಒಟ್ಟು ಚರ್ಚೆಯ ಸುತ್ತ ಗ್ಯಾನೆ ಡೈಯರ್ ಎಂಬವರು, ‘Islam is not alone in patriarchal doctrines’ ಎಂಬ ಶೀರ್ಷಿಕೆಯಲ್ಲಿ 1990 ಜುಲೈ 3ರಂದು ಟೊರೊಂಟೊ ಸ್ಟಾರ್ ನ್ಯೂಸ್ ಪತ್ರಿಕೆಯಲ್ಲಿ ಲೇಖನ ಬರೆದರು. ಇದಾಗಿ 23 ವರ್ಷಗಳ ಬಳಿಕ ಮೊನ್ನೆ 2013  ಮೇ 24ರಂದು ದಿ ಹಿಂದೂ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಿದೆ. ‘ನಿರ್ವಾತದಲ್ಲಿ ಅಲ್ಲಾಹನನ್ನು ಹುಡುಕುತ್ತಾ..’ (Seeking Allah in the Midlands) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ಲೇಖನದ ಬೈಲೈನ್ ಹೀಗಿತ್ತು-
Of the thousands of white Britons embracing Islam every year, most are thought to be professionally successful, independent- minded women, says study  - ‘ಬ್ರಿಟನ್ನಿನಲ್ಲಿ ಪ್ರತಿ ವರ್ಷ ಸಾವಿರಾರು ಬಿಳಿಯರು ಇಸ್ಲಾಮ್ ಸ್ವೀಕರಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಒಳ್ಳೆಯ ಉದ್ಯೋಗ- ದುಡ್ಡು ಇರುವ, ಸ್ವತಂತ್ರ ಮನೋಸ್ಥಿತಿಯ ಮಹಿಳೆಯರಾಗಿದ್ದಾರೆ’..
  ಲಾರೆನ್ ಬೂತ್
  ಇವಾನ್ ರಿಡ್ಲಿ
  ಅನಿಸಾ ಅಟ್‍ಕಿನ್ಸನ್
  ಕ್ರಿಸ್ಟಿಯಾನಾ ಬೇಕರ್
  ಕ್ಯಾರೋಲಿನ್ ಬೇಟ್
‘ಇಸ್ಲಾಮ್ ಸ್ವೀಕರಿಸಿದವರ ವೃತ್ತಾಂತಗಳು’ (Narratives of conversion to Islam) ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಇಸ್ಲಾಮಿಕ್ ಸ್ಟಡೀಸ್ (CIS) ಮತ್ತು ಲೀಸೆಸ್ಟರ್ ಮೂಲದ ನ್ಯೂ ಮುಸ್ಲಿಮ್ಸ್ ಪ್ರೊಜೆಕ್ಟ್ ಎಂಬ ಸಂಸ್ಥೆಗಳು ಹೊರತಂದ 129 ಪುಟಗಳ ವರದಿಯಲ್ಲಿ ಈ ಮೇಲಿನವರ ಸಹಿತ ಹತ್ತಾರು ಮಂದಿಯ ಅನುಭವ ಕಥನಗಳಿವೆ. ಅಂದಹಾಗೆ, ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್‍ನ ಸೊಸೆ ಲಾರೆನ್ ಬೂತ್, ಅಫಘಾನ್ ಯುದ್ಧದ ಸಂದರ್ಭದಲ್ಲಿ ಮಾರುವೇಷದಲ್ಲಿ ತೆರಳಿ ಯುದ್ಧದ ಪ್ರತ್ಯಕ್ಷ  ವರದಿಯನ್ನು ಮಾಡಲು ಪ್ರಯತ್ನಿಸಿ ಸುದ್ದಿಗೀಡಾದ ಪತ್ರಕರ್ತೆ ಇವಾನ್ ರಿಡ್ಲಿ, MTV  ಉದ್ಘೋಷಕಿ ಕ್ರಿಸ್ಟಿಯಾನಾ ಬೇಕರ್.. ಇವರೆಲ್ಲ ಆಮಿಷಕ್ಕೆ ಒಳಗಾಗುವ ದುರ್ಬಲ ಮಹಿಳೆಯರೇನೂ ಅಲ್ಲವಲ್ಲ. ಅವರಲ್ಲಿ ಪ್ರತಿಭೆ ಇದೆ. ಉದ್ಯೋಗ ಇದೆ, ದುಡ್ಡೂ ಇದೆ. ಇಷ್ಟಿದ್ದೂ ಅವರೆಲ್ಲ ಇಸ್ಲಾಮನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಏನು ಕಾರಣ? ‘ಬ್ರಿಟನ್‍ನಲ್ಲಿ ಪ್ರತಿವರ್ಷ 50 ಸಾವಿರದಷ್ಟು ಮಂದಿ ಇಸ್ಲಾಮ್ ಸ್ವೀಕರಿಸುತ್ತಿದ್ದು, ಅವರಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ..’ ಎನ್ನುತ್ತದೆ 129 ಪುಟಗಳ ಆ ವರದಿ. ಒಂದು ಕಡೆ ಇಸ್ಲಾಮನ್ನು ಭಯೋತ್ಪಾದನೆಯ ಧರ್ಮವೆಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ, ಮಹಿಳೆಯರಿಗೆ ಕಟು ನಿಯಂತ್ರಣಗಳನ್ನು ಹೇರಿರುವ ಶೋಷಣೆಯ ಧರ್ಮ ಎಂದೂ  ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿನಿಮಾಗಳು, ವ್ಯಂಗ್ಯಚಿತ್ರಗಳು, ಬರಹಗಳೂ ಪ್ರಕಟವಾಗುತ್ತಿವೆ. 2011 ಎಪ್ರಿಲ್‍ನಲ್ಲಿ ಫ್ರಾನ್ಸ್, ಜುಲೈಯಲ್ಲಿ ಬೆಲ್ಜಿಯಂ, ಸೆಪ್ಟೆಂಬರ್‍ನಲ್ಲಿ ನೆದರ್ಲ್ಯಂಡ್ ಗಳು ಬುರ್ಖಾ-ನಿಖಾಬ್‍ಗೆ (ಮುಖ ಪರದೆ) ನಿಷೇಧ ಹೇರಿದುವು. ಅದಕ್ಕೆ ಸಮಾನತೆ, ಐಡೆಂಟಿಟಿಯ ಕಾರಣಗಳನ್ನೂ ಕೊಟ್ಟುವು. ನಿಖಾಬ್ ಸಹಿತವಾದ ಬುರ್ಖಾವನ್ನು ನಿಷೇಧಿಸುವ ಬಗ್ಗೆ 2011 ಆಗಷ್ಟ್ ನಲ್ಲಿ ಇಟಲಿ ಪಾರ್ಲಿಮೆಂಟಲ್ಲಿ ಮಸೂದೆ ಅಂಗೀಕಾರಗೊಂಡಿತು. ಒಂದು ಧರ್ಮದ ಬಗ್ಗೆ; ಅದರ ಆಚಾರ, ಸಂಸ್ಕ್ರಿತಿ, ವೇಷ-ಭೂಷಣಗಳ ಬಗ್ಗೆ ಇಷ್ಟೊಂದು ಪ್ರಮಾಣದಲ್ಲಿ ನಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದ್ದರೂ ಜನರು ಈ ಧರ್ಮದ ಕಡೆಗೆ ಆಕರ್ಷಿತರಾಗುತ್ತಿರುವುದೇಕೆ? ಅದರಲ್ಲೂ ಮಹಿಳೆಯರೇ ಮುಂದಿರಲು ಕಾರಣವೇನು? ಇಸ್ಲಾಮ್ ಸ್ವೀಕರಿಸಿದ ಬ್ರಿಟನ್ನಿಗರಲ್ಲಿ ಹೆಚ್ಚಿನವರೂ, ‘ಅಪಪ್ರಚಾರಗಳೇ ತಮ್ಮನ್ನು ಇಸ್ಲಾಮ್‍ನೆಡೆಗೆ ಆಕರ್ಷಿಸಿತು, ಕುರ್‍ಆನ್ ಮತ್ತು ಇಸ್ಲಾಮೀ  ಸಾಹಿತ್ಯವನ್ನು ಅಧ್ಯಯನ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಂಡೆವು..’ ಎಂದಿದ್ದಾರಲ್ಲ, ಏನಿದರ ಅರ್ಥ? ಹಾಗಾದರೆ, ಇಸ್ಲಾಮಿನ ವಿರುದ್ಧ ಪ್ರಚಲಿತವಿರುವ ಆರೋಪಗಳ ಕುರಿತಂತೆ ಏನೆನ್ನಬೇಕು? ಅಧ್ಯಯನ ನಡೆಸದವರು ದುರುದ್ದೇಶದಿಂದ ಹಬ್ಬಿಸಿರುವ ಸುಳ್ಳುಗಳು ಎಂದೇ ಅಲ್ಲವೇ? ನಿಜವಾಗಿ, ಇಸ್ಲಾಮ್ ಒಪ್ಪದ ಆದರೆ ಪಾಶ್ಚಾತ್ಯ ಜಗತ್ತು ಸ್ವಾತಂತ್ರ್ಯ, ಸಮಾನತೆಯ ಹೆಸರಲ್ಲಿ ಬಲವಾಗಿ ಪ್ರತಿಪಾದಿಸುವ ಅನೇಕಾರು ಸೌಲಭ್ಯಗಳು ಬ್ರಿಟನ್ನಿನಲ್ಲಿವೆ. ಅಲ್ಲಿ ಲಿವಿಂಗ್ ಟುಗೆದರ್ ಇದೆ. ಹೆಣ್ಣು-ಗಂಡು ಮುಕ್ತವಾಗಿ ಬೆರೆಯುವುದಕ್ಕೆ ಸ್ವಾತಂತ್ರ್ಯ ಇದೆ. ಡ್ರೆಸ್ ಕೋಡ್ ಇಲ್ಲ. ಸಲಿಂಗ ವಿವಾಹಕ್ಕೆ ಬಹುತೇಕ ಅನುಮತಿ ಇದೆ. ಮದ್ಯ ಇದೆ, ಬಡ್ಡಿ ಇದೆ.. ಒಂದು ವೇಳೆ ಮನುಷ್ಯರ ನೆಮ್ಮದಿಗೆ, ಸಂತಸದ ಬದುಕಿಗೆ ಇವು ಅತಿ ಅಗತ್ಯ ಮತ್ತು ಇದನ್ನು ನಿಷೇಧಿಸುವುದು ಮಾನವ ಹಕ್ಕಿನ ಉಲ್ಲಂಘನೆ ಎಂದು ವಾದಿಸುವುದಾದರೆ, ಬ್ರಿಟನ್ನಿನ ಮಂದಿ ಈ ಪ್ರಮಾಣದಲ್ಲಿ ಇಸ್ಲಾಮ್ ಸ್ವೀಕರಿಸುತ್ತಿರುವುದನ್ನು ನಾವು ಹೇಗೆ ವಿಶ್ಲೇಷಿಸಬೇಕು? ಸ್ವಾತಂತ್ರ್ಯದಿಂದ ಬಂಧನದ ಕಡೆಗೆ ಎಂದೇ? ಸಮಾನತೆಯಿಂದ ಅಸಮಾನತೆಯ ಕಡೆಗೆ, ಮುಕ್ತತೆಯಿಂದ ಶೋಷಣೆಯ ಕಡೆಗೆ ಎಂದೇ? ಅಷ್ಟಕ್ಕೂ ಈ ಬೆಳವಣಿಗೆ, ಇದರ ಇನ್ನೊಂದು ಮಗ್ಗುಲನ್ನು ಚರ್ಚಿಸುವುದಕ್ಕೆ ಯಾಕೆ ನಮಗೆ ಪ್ರೇರಕ ಆಗಬಾರದು? ಸದ್ಯ ಜಾಗತಿಕವಾಗಿ ಪ್ರಚಲಿತದಲ್ಲಿರುವ ಸ್ವಾತಂತ್ರ್ಯ, ಸಮಾನತೆಗೂ, ಇಸ್ಲಾಮ್ ನಿರ್ವಚಿಸುವ ಸ್ವಾತಂತ್ರ್ಯ, ಸಮಾನತೆಗೂ ನಡುವೆ ಇರುವ ಅಂತರದ ಬಗ್ಗೆ ನಾವು ಪ್ರಾಮಾಣಿಕವಾಗಿ ಚರ್ಚಿಸಿದರೇನು? ಯಾರೇ ಆಗಲಿ, ಸ್ವಾತಂತ್ರ್ಯದಿಂದ ಬಂಧನ ಕಡೆಗೆ ಪಯಣ ಬೆಳೆಸಿಯಾರೆ? ಮುಕ್ತತೆಯಿಂದ ಶೋಷಣೆಯ ಕಡೆಗೆ ಸಾಗಿಯಾರೇ? ಖುಷಿಯನ್ನು ಕೈಬಿಟ್ಟು ಸಂಕಟವನ್ನು ಆಯ್ಕೆ ಮಾಡಿಕೊಂಡಾರೇ? ಇಲ್ಲ ಎಂದಾದರೆ, ನಾವು ಇಸ್ಲಾಮಿನ ಕುರಿತಂತೆ ಅಂದುಕೊಂಡಿರುವ ನಿಲುವುಗಳೇ ಏಕೆ ತಪ್ಪಾಗಿರಬಾರದು? ಅದರ ಸಮಾನತೆ, ಮಹಿಳಾ ಹಕ್ಕುಗಳು, ತಲಾಕ್, ಬಹುಪತ್ನಿತ್ವ, ಜಿಹಾದ್‍ಗಳ ಬಗ್ಗೆ ನಮ್ಮ ನಿಲುವುಗಳೇಕೆ ಪೂರ್ವಾಗ್ರಹ ಪೀಡಿತವಾಗಿರಬಾರದು?
   ಇಸ್ಲಾಮ್ ಬಹುಪತ್ನಿತ್ವಕ್ಕೆ ಚಾಲನೆ ಕೊಟ್ಟಿದೆಯೆಂಬ ದೊಡ್ಡದೊಂದು ಸುಳ್ಳು ಸಮಾಜದಲ್ಲಿದೆ. ನಿಜವಾಗಿ, ಪ್ರವಾದಿ ಮುಹಮ್ಮದರು(ಸ) ಬದುಕಿದ್ದ ಕಾಲದಲ್ಲಿ ಪುರುಷರು ಧಾರಾಳ ಪತ್ನಿಯರನ್ನು ಹೊಂದಬಹುದಾಗಿತ್ತು. ಅದಕ್ಕೆ ಮಿತಿಯಿರಲಿಲ್ಲ. ಬೇಕಾದಾಗ ವಿಚ್ಛೇದನವನ್ನೂ ಕೊಡಬಹುದಿತ್ತು. ಆದ್ದರಿಂದಲೇ ಇದಕ್ಕೆ ನಿಯಂತ್ರಣವನ್ನು ವಿಧಿಸಲು ಸೂಕ್ತ ಸಂಧರ್ಭಕ್ಕಾಗಿ ಪ್ರವಾದಿಯವರು  ಕಾಯುತ್ತಿದ್ದರು.  ಇದೇ ಸಂದರ್ಭದಲ್ಲಿ ಉಹುದ್ ಎಂಬಲ್ಲಿ ಪ್ರವಾದಿ(ಸ) ಮತ್ತು ಅವರ ವಿರೋಧಿಗಳ ಮಧ್ಯೆ ಕಾಳಗ ನಡೆಯುತ್ತದೆ. ಅದರಲ್ಲಿ ಸಾಕಷ್ಟು ಮುಸ್ಲಿಮ್ ಪುರುಷರು ಮೃತಪಡುತ್ತಾರೆ. ಈ ಹಂತದಲ್ಲಿ, ಪತ್ನಿಯರ ಸಂಖ್ಯೆಗೆ ಮಿತಿಯನ್ನು ಹೇರುವ ಕುರ್‍ಆನಿನ   ಆದೇಶ ಹೊರಬೀಳುತ್ತದೆ. ಅದಕ್ಕೆ ಇನ್ನೊಂದು ಕಾರಣವೂ ಇದೆ. ಯುದ್ಧ ಕಾಲದಲ್ಲಿ ಪುರುಷರು ಸಾವಿಗೀಡಾಗುವುದರಿಂದ ಸಮಾಜದಲ್ಲಿ ವಿಧವೆಯರು ಮತ್ತು ಅನಾಥ ಮಕ್ಕಳ ದೊಡ್ಡದೊಂದು ಗುಂಪೇ ಸೃಷ್ಟಿಯಾಗುತ್ತದೆ. ಅಫಘಾನ್ ಯುದ್ಧ ದಲ್ಲಿ ಸಾವಿಗೀಡಾದ ಸುಮಾರು 1 ಮಿಲಿಯನ್ ಮಂದಿಯಿಂದಾಗಿ ಉದ್ಭವವಾಗಿರಬಹುದಾದ ಸಾಮಾಜಿಕ ಸ್ಥಿತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ. ವಿಧವೆಯರು, ಮಕ್ಕಳಿಗೆ ಏನು ವ್ಯವಸ್ಥೆಯಿದೆ? ಅವರ ಪೋಷಣೆಯ ಹೊಣೆಯನ್ನು ಯಾರು ವಹಿಸಿಕೊಳ್ಳಬೇಕು? ಕುರ್‍ಆನ್ ಬಹುಪತ್ನಿತ್ವಕ್ಕೆ ಅನುಮತಿ ಕೊಟ್ಟಿರುವುದು ಇಂಥ ಅನಿವಾರ್ಯ ಸಂದರ್ಭಗಳಲ್ಲಿ. ಇಲ್ಲದಿದ್ದರೆ 20 ಪುರುಷರಿಗೆ 80 ಮಹಿಳೆಯರು ಇರಬೇಕಿತ್ತಲ್ಲವೇ? ಆದರೆ, ಬಹುಪತ್ನಿತ್ವವನ್ನು ಟೀಕಿಸುವವರು ಈ ಅನಿವಾರ್ಯ ಸಂದರ್ಭವನ್ನು ಉಲ್ಲೇಖಿಸುವುದೇ ಇಲ್ಲ. ಮಾತ್ರವಲ್ಲ, ತಮ್ಮ ಪರಿಸರದಲ್ಲಿ ಎಷ್ಟು ಮುಸ್ಲಿಮರು ಬಹುಪತ್ನಿತ್ವವನ್ನು ಹೊಂದಿದ್ದಾರೆ ಎಂದು ಹೇಳುತ್ತಲೂ ಇಲ್ಲ. ಹೀಗಿರುವಾಗ, ಬ್ರಿಟನ್ನಿನ ಮಹಿಳೆಯರಿಗೆ ಈ ಸತ್ಯ ಅರ್ಥ ವಾದುದರಿಂದಲೇ ಅವರು ಇಸ್ಲಾಮ್ ಸ್ವೀಕರಿಸಿರಬಹುದು ಎಂದರೆ ಏನು ತಪ್ಪಿದೆ?
   ಪ್ರಥಮ ಮಾನವರಾದ ಆದಮ್ ಮತ್ತು ಹವ್ವಾರು (ಆಡಮ್ ಮತ್ತು ಈವ್) ದೇವನು ನಿಷೇಧಿಸಿದ ಹಣ್ಣನ್ನು ತಿಂದು ನಿಯಮ ಉಲ್ಲಂಘಿಸಿದ ಬಗ್ಗೆ ಕುರ್‍ಆನ್‍ನಲ್ಲಿ ಉಲ್ಲೇಖ ಇದೆ. (7: 19-27) ಇಬ್ಬರೂ ಅವಿಧೇಯತೆ ತೋರಿದರು, ಇಬ್ಬರೂ ಕ್ಷಮೆ ಯಾಚಿಸಿದರು ಮತ್ತು ಇಬ್ಬರನ್ನೂ ಕ್ಷಮಿಸಲಾಯಿತು ಎಂದು ಕುರ್‍ಆನ್ ಹೇಳಿದೆಯೇ ಹೊರತು ಆದಮರು ಹಣ್ಣು ತಿಂದದ್ದಕ್ಕಾಗಿ ಹವ್ವಾರನ್ನು ದೂಷಿಸಲಾಗಿಲ್ಲ. ಹೆಣ್ಣಿನಿಂದಾಗಿ ಆದಮರು ಕಾನೂನು ಉಲ್ಲಂಘಿಸಿದರು ಎಂದೂ ಹೇಳಲಿಲ್ಲ. ಒಂದು ರೀತಿಯಲ್ಲಿ, ಇಸ್ಲಾಮ್ ಹೆಣ್ಣು-ಗಂಡನ್ನು ಸಮಾನ ಭಾವದಿಂದ ನೋಡುತ್ತದೆ (49: 13) ಮತ್ತು ಸಮಾನ ಕ್ರಿಯೆಗೆ ಸಮಾನ ಪ್ರತಿಫಲವನ್ನೂ ನೀಡುತ್ತದೆ (3: 195, 4: 124). ಪುರುಷ ಮಾಡಿದ ಕೆಲಸಕ್ಕೆ ಹೆಚ್ಚು ಪ್ರತಿಫಲ ಎಂದು ಇಸ್ಲಾಮ್ ಎಲ್ಲೂ ಹೇಳಿಲ್ಲ. ಮಾತ್ರವಲ್ಲ, ಹೆಣ್ಣಿನ ಸೇವೆ ಮಾಡಿದರೆ ಸ್ವರ್ಗ, ತಂದೆಯೋರ್ವ ತನ್ನ ಹೆಣ್ಣು ಮಕ್ಕಳನ್ನು ಚೆನ್ನಾಗಿ ಪೋಷಿಸಿ ಬೆಳೆಸಿದರೆ ಸ್ವರ್ಗ.. ಎಂದು ವಿಶೇಷವಾಗಿ ಎತ್ತಿ ಹೇಳಿದೆ. ಈ ಸೌಲಭ್ಯ ಗಂಡು ಮಕ್ಕಳ ತಂದೆಗಿಲ್ಲ. ಹೆಣ್ಣು (ಭ್ರೂಣ) ಹತ್ಯೆಯನ್ನು ಕ್ರೂರ ಅಪರಾಧವೆಂದು ಸಾರಿದ್ದು ಪವಿತ್ರ ಕುರ್‍ಆನೇ (81: 9-10). ಇಷ್ಟಕ್ಕೂ ತಲಾಕ್, ತಲಾಕ್, ತಲಾಕ್ ಎಂದು ಮೂರು ಬಾರಿ ಹೇಳಿದರೆ ವಿಚ್ಛೇದನವಾಗುತ್ತೆಂದು ಕುರ್‍ಆನ್ ಹೇಳಿಯೇ ಇಲ್ಲ. (2: 229) ಅದು ತಲಾಕ್‍ಗೆ ಮೂರ್ನಾಲ್ಕು ಹಂತಗಳನ್ನು ನಿಗದಿಪಡಿಸಿದೆ. ಇನ್ನು, ಒಂದು ವೇಳೆ ವಿಚ್ಛೇದನವೇ ಮಾರ್ಗ ಎಂದಾದರೆ ಪತ್ನಿಗೆ ಒಂದು ಮೊತ್ತವನ್ನು ಪತಿ ಕೊಡಬೇಕೆಂದೂ ಮತ್ತು ಆಕೆಯ ಪೋಷಣೆಯ ಹೊಣೆಯನ್ನು ತಂದೆ-ಸಹೋದರರು ವಹಿಸಿಕೊಳ್ಳಬೇಕೆಂದೂ ಅದು ಆದೇಶಿಸಿದೆ. ಆ ಮೊತ್ತದಿಂದ ಆಕೆ ವ್ಯವಹಾರ ನಡೆಸಬಹುದು. ಉದ್ದಿಮೆಗಳಲ್ಲಿ ಹೂಡಿಕೆ ಮಾಡಬಹುದು. ಮಾಸಾಶನವೆಂಬ ಭಿಕ್ಷೆಗಿಂತ ಒಂದೇ ಸಂದರ್ಭದಲ್ಲಿ ಒಂದು ಮೊತ್ತವನ್ನು ಕೊಟ್ಟು ಆಕೆಯನ್ನು ಸ್ವಾವಲಂಬಿಯಾಗಿಸುವುದು ಇಸ್ಲಾಮಿನ ನಿಲುವಾಗಿದೆ. ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ನಿರ್ದಿಷ್ಟ ಉಡುಗೊರೆಯನ್ನು ವರ ಕಡ್ಡಾಯವಾಗಿ ಕೊಡಲೇಬೇಕೆಂದು ಕುರ್‍ಆನ್ ಪ್ರತಿಪಾದಿಸುತ್ತದೆ (4: 4). ಆ ಉಡುಗೊರೆ ಆಕೆಯದ್ದೇ. ಒಂದು ವೇಳೆ ವರ 5 ಲಕ್ಷ  ರೂಪಾಯಿ ಕೊಟ್ಟನೆಂದರೆ ಅದನ್ನು ವ್ಯವಹಾರದಲ್ಲಿ ತೊಡಗಿಸುವ ಮತ್ತು ಅದರಿಂದ ಬರುವ ಚಿಕ್ಕಾಸನ್ನೂ ಪತಿಗೆ ಕೊಡದಿರುವ ಹಕ್ಕು ಆಕೆಗಿದೆ. ಹೆಣ್ಣಿಗೆ  ಆಸ್ತಿಯ ಹಕ್ಕನ್ನು ಒದಗಿಸುವ, Married Women property Act   ಎಂಬ ಕಾನೂನು ಬ್ರಿಟನ್ನಿನಲ್ಲಿ ಜಾರಿಗೆ ಬಂದದ್ದೇ 1860ರಲ್ಲಿ. ಇದಕ್ಕಿಂತ 1300 ವರ್ಷಗಳ ಹಿಂದೆಯೇ ಪವಿತ್ರ ಕುರ್‍ಆನ್ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಕೊಟ್ಟಿದೆ (4: 32). ಅಂದಹಾಗೆ, ಸೌಂದರ್ಯ ಪ್ರದರ್ಶನವು ಲೈಂಗಿಕ ದೌರ್ಜನ್ಯಕ್ಕೆ, ಮಹಿಳಾ ಶೋಷಣೆಗೆ, ಪ್ರತಿಭೆಗಿಂತ ಮೈಮಾಟವನ್ನೇ ಆಯ್ಕೆಯ ಮಾನದಂಡವಾಗಿಸುವುದಕ್ಕೆ ಕಾರಣವಾಗ ಬಲ್ಲುದು ಎಂದು ಇಸ್ಲಾಮ್ ವಾದಿಸುವುದನ್ನು ತಪ್ಪು ಎಂದು ಸಮರ್ಥಿಸುವುದಕ್ಕೆ ಆಧುನಿಕ ಜಗತ್ತಿನ ಸ್ವಾತಂತ್ರ್ಯ ಪ್ರತಿಪಾದಕರಲ್ಲಿ ಏನು ಆಧಾರವಿದೆ? ಸೌಂದರ್ಯ ಪ್ರದರ್ಶಿಸಬೇಡಿ (33: 59) ಎಂದು ಇಸ್ಲಾಮ್ ಪ್ರತಿಪಾದಿಸಿದ್ದು ಹೆಣ್ಣಿನ ಮೇಲಿನ ದ್ವೇಷದಿಂದಲ್ಲ, ಪ್ರೀತಿಯಿಂದ. ಹಾಗಂತ, ಸದ್ಯ ಕಾಣಿಸುತ್ತಿರುವ ಕಪ್ಪು ಬುರ್ಖಾ ಎಂಬ ಉಡುಪನ್ನು ಕುರ್‍ಆನ್ ಪ್ರಸ್ತುತಪಡಿಸಿಯೇ ಇಲ್ಲ. ಸೌಂದರ್ಯ ಪ್ರದರ್ಶನವಾಗದಂತೆ ಉಡುಪು ಧರಿಸಿ ಎಂದಷ್ಟೇ ಅದು ಕರೆಕೊಟ್ಟಿದೆ. ಈ ಕರೆ ಯಾಕೆ ಮಹಿಳಾ ಶೋಷಕ ಆಗಬೇಕು? ರಕ್ಷಕ ಯಾಕಾಗಬಾರದು?  ಪ್ರದರ್ಶಿಸುವುದನ್ನು ಸ್ವಾತಂತ್ರ್ಯ, ಮುಚ್ಚುವುದನ್ನು ಶೋಷಣೆ ಅನ್ನುವುದೇಕೆ? ಅದಕ್ಕಿರುವ ಮಾನದಂಡವಾದರೂ ಏನು? ಪುರುಷನಿಗೆ ಪುರುಷನದ್ದೇ ಆದ ಕ್ಷೇತ್ರ ಇರುವಂತೆಯೇ ಮಹಿಳೆಗೆ ಮಹಿಳೆಯದ್ದೇ ಆದ ಕ್ಷೇತ್ರ ಇರಬಾರದೆಂದಿದೆಯೇ? ಸಮಾನತೆ ಮತ್ತು ಗೌರವ ಈ ಎರಡರಲ್ಲಿ ಹೆಣ್ಣಿಗೆ ಸುರಕ್ಷಿತತೆ ಒದಗಿಸುವ ವಿಚಾರ ಯಾವುದು? ಗೌರವ ಕೊಡದೇ ಸಮಾನತೆಯ ಬಗ್ಗೆ ಮಾತಾಡುವುದು ಎಷ್ಟು ಸರಿ? ಹೆಣ್ಣಿಗೆ ಈ ಸಮಾಜದಲ್ಲಿ ಸಿಗಲೇಬೇಕಾದ ಗೌರವವನ್ನು ಸಮಾನತೆ, ಸ್ವಾತಂತ್ರ್ಯದ ಹೆಸರಲ್ಲಿ ಕಿತ್ತುಕೊಳ್ಳುತ್ತಿರುವ ಆಧುನಿಕ ಶೋಷಕರ ಬಗ್ಗೆ ನಾವೇಕೆ ಆಲೋಚಿಸುತ್ತಿಲ್ಲ? ಹೆಣ್ಣಿನ ಹಕ್ಕು, ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಆಧುನಿಕ ಜಗತ್ತು ಮಾರುಕಟ್ಟೆಯ ಉದ್ದೇಶದಿಂದಲೇ ತಿರುಚಿದೆ ಎಂದೂ ವಾದಿಸಬಹುದಲ್ಲವೇ? ಅಷ್ಟಕ್ಕೂ, ಹೆಣ್ಣು ಎದುರುಗೊಂಡಾಗ ಕಣ್ಣು ಕೆಳಗಾಗಿಸಿ ಗೌರವ ಸೂಚಿಸಿ (30:31) ಎಂದು ಪವಿತ್ರ ಕುರ್‍ಆನ್ ಪುರುಷರಿಗೆ ಆದೇಶಿಸಿರುವುದನ್ನು ಯಾರಾದರೂ ಚರ್ಚೆಗೆ ಎತ್ತಿಕೊಂಡಿದ್ದಾರೆಯೇ? ಗೌರವ ಸೂಚಿಸುವಷ್ಟು ಉನ್ನತ ವ್ಯಕ್ತಿತ್ವ ಹೆಣ್ಣಿನದ್ದಾದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾದೀತು ಎಂದಲ್ಲವೇ ಇದರರ್ಥ?
   ವಿವಿಯನ್ ಮಲೋನ್ ಜೋನ್ಸ್ ಮತ್ತು ಜೇಮ್ಸ್ ಹೂಡ್ ಎಂಬಿಬ್ಬರು ಕಪ್ಪು ವಿದ್ಯಾರ್ಥಿಗಳು ಅಲಬಾಮ ವಿಶ್ವವಿದ್ಯಾಲಯ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ 1962ರಲ್ಲಿ ಅಮೇರಿಕದ ಅಲಬಾಮ ರಾಜ್ಯದ ರಾಜ್ಯಪಾಲ ಜಾರ್ಜ್ ವಾಲ್ಲೇಸ್‍ರು ವಿಶ್ವ ವಿದ್ಯಾಲಯದ
ಜಾರ್ಜ್ ವಾಲ್ಲೇಸ್
ಬಾಗಿಲಲ್ಲಿ ನಿಂತಂತೆ ಇವತ್ತು ಕೆಲವರು ಈ ದೇಶದ ವಿವಿಧ ಶಾಲೆಗಳ ಎದುರು ನಿಂತು ಸ್ಕಾರ್ಫ್ ಧರಿಸಿದ ಹೆಣ್ಣು ಮಕ್ಕಳನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ರಿಡ್ಲಿ, ಬೂತ್, ಬೇಟ್‍ರು ಈ ಸುದ್ದಿಯನ್ನು ಆಲಿಸಿದರೆ ನಗಬಹುದೇನೋ?

Tuesday, May 21, 2013

ಕಸಾಯಿಖಾನೆಗಳನ್ನು ಮುಚ್ಚುವ ಅವಕಾಶವಿದ್ದೂ ಯಾಕೆ ಮೌನ ವಹಿಸಿದಿರಿ, ಹೇಳಿ?

   ಗೋಹತ್ಯೆಗೆ ಸಂಬಂಧಿಸಿ 1959 ಮತ್ತು 1961ರ ಮಧ್ಯೆ ಸುಪ್ರೀಮ್ ಕೋರ್ಟ್‍ ನ  ಮುಂದೆ ಮೂರು ಪ್ರಕರಣಗಳು ದಾಖಲಾಗಿದ್ದುವು. ಮುಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ ಸರಕಾರ; ಹಶ್ಮತುಲ್ಲಾ ಮತ್ತು ಮಧ್ಯಪ್ರದೇಶ ಸರಕಾರ; ಅಬ್ದುಲ್ ಹಕೀಮ್ ಮತ್ತು ಬಿಹಾರ ಸರಕಾರಗಳ ನಡುವಿನ ವ್ಯಾಜ್ಯವನ್ನು ವಿಚಾರಣೆಗೆ ಒಳಪಡಿಸುತ್ತಾ ಸುಪ್ರೀಮ್ ಕೋರ್ಟ್ ಅಂತಿಮವಾಗಿ ತೀರ್ಪು ಕೊಟ್ಟದ್ದು ಹೀಗೆ:
A total ban (on Cattle Slaughter) was not permisseble if, Under economic conditions, keeping useless bull or bullock be a burden on the society and therefore not in the public interest -  ಸಮಾಜದ ಮೇಲೆ ಹೊರೆಯಾಗಬಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನೂ ಪ್ರತಿನಿಧಿಸದ ನಿರುಪಯುಕ್ತ ಜಾನುವಾರುಗಳಿರುವಲ್ಲಿ, ಜಾನುವಾರು ಹತ್ಯೆಗೆ ಸಂಪೂರ್ಣ ನಿಷೇಧ ವಿಧಿಸುವುದು ಅನುವದನೀಯವಲ್ಲ.’ (ವಿಕಿಪೀಡಿಯಾ)
   ನಿಜವಾಗಿ, ಕರ್ನಾಟಕದಲ್ಲಿ ಈ ಮೊದಲೇ ಜಾರಿಯಲ್ಲಿದ್ದ 'ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964'ರ ಬದಲು ರಾಜ್ಯ ಬಿಜೆಪಿ ಸರಕಾರವು ಜಾರಿಗೆ ತರಲು ಹೊರಟಿದ್ದ, ‘ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2010’ರಲ್ಲಿ ಇದ್ದದ್ದು ಈ ಗೊಂದಲಗಳೇ. ಒಂದು ಹಸು ಗರಿಷ್ಠ ಅಂದರೆ 14 ವರ್ಷಗಳ ವರೆಗೆ ಹಾಲು ಕೊಡುತ್ತದೆ. ಹಸು ಎಂದಲ್ಲ, ಎಮ್ಮೆ, ಕೋಣ, ಎತ್ತು, ಗೂಳಿಗಳೆಲ್ಲ ಉಪಯೋಗಕ್ಕೆ ಬರುವುದು 14-15 ವರ್ಷಗಳ ವರೆಗೆ ಮಾತ್ರ. ಹಾಗಂತ, ಆ ಬಳಿಕ ಅವು ತಕ್ಷಣ ಸಾಯುತ್ತವೆ ಎಂದಲ್ಲ. ಇನ್ನೂ 10 ವರ್ಷಗಳ ವರೆಗೆ ಬದುಕುವ ಸಾಮರ್ಥ್ಯ  ಅವುಗಳಲ್ಲಿರುತ್ತವೆ. ಆದರೆ ಹಾಲು ಕೊಡದ, ಉಳುಮೆಗೆ ಬಾರದ ಈ ಅಯೋಗ್ಯ ಜಾನುವಾರುಗಳನ್ನು ಸಾಕುವ ಸಾಮರ್ಥ್ಯ  ಎಷ್ಟು ರೈತರಲ್ಲಿದೆ? ಅವುಗಳಿಗೆ ಮೇವು, ಹಿಂಡಿಗಳನ್ನು ಒದಗಿಸುವುದಕ್ಕೆ ವರಮಾನ ಬೇಕಲ್ಲವೇ? ಉಳುಮೆಗೆ ಯೋಗ್ಯವಲ್ಲದ ಎತ್ತು ಕನಿಷ್ಠವೆಂದರೆ, 20ರಿಂದ 30 ಸಾವಿರದಷ್ಟು ಬೆಲೆ ಬಾಳುತ್ತದೆ. ಈ ಎತ್ತನ್ನು ಮಾರದೇ ಓರ್ವ ರೈತ ಉಳುಮೆಗೆ ಯೋಗ್ಯವಾದ ಬೇರೆ ಎತ್ತನ್ನು ಖರೀದಿಸುವುದಾದರೂ ಹೇಗೆ? ಖರೀದಿಸದಿದ್ದರೆ ಉಳುಮೆಗೆ ಏನು ಮಾಡಬೇಕು? ನಿಜವಾಗಿ, ಇದು ಕೇವಲ ಎತ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹಸು, ಎಮ್ಮೆಗಳ ಸುತ್ತಲೂ ಇರುವುದು ಈ ಲೆಕ್ಕಾಚಾರವೇ. ಓರ್ವರು ಹಸುವನ್ನು ಸಾಕುವುದೇ ಹಾಲಿನ ಉದ್ದೇಶದಿಂದ. ಹಾಲಿಗಿರುವ ಮಾರುಕಟ್ಟೆ, ಸರಕಾರಿ ಸಬ್ಸಿಡಿ, ವರಮಾನಗಳೆಲ್ಲ ಓರ್ವರನ್ನು ಹಸು ಸಾಕುವಂತೆ ಪ್ರೇರೇಪಿಸುತ್ತಿದೆಯೇ ಹೊರತು ಬರೇ 'ಶ್ರದ್ಧೆ'ಯಲ್ಲ. ಕೇವಲ 'ಶ್ರದ್ಧೆ'ಗಾಗಿ ಮಾತ್ರ ಹಸುವನ್ನು ಸಾಕುವವರು ಅದನ್ನು ಮಾರುವುದು ಬಿಡಿ, ಅದರ ಹಾಲಿನಿಂದ ವ್ಯಾಪಾರ ಮಾಡಿ ದುಡ್ಡು ಗಳಿಸುವ ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, 'ಶ್ರದ್ಧಾಬಿಂದು' ವೊಂದು ತನ್ನ ಗೌರವವನ್ನು ಕಳಕೊಳ್ಳುವುದೇ ವ್ಯಾಪಾರೀಕರಣ ಗೊಂಡಾಗ. ಯಾವಾಗ ಹಾಲು ಲಾಭದಾಯಕ ಉದ್ಯಮ ಅನ್ನಿಸಿ ಕೊಂಡಿತೋ ಆಗಲೇ ಹಸು 'ಶ್ರದ್ಧಾಬಿಂದು'ವಿನಿಂದ ಹೊರಬಂದು ಲಾಭ-ನಷ್ಟದ ಪ್ರಾಣಿಯಾಗಿ ಬಿಟ್ಟಿತು. ಹಾಲು ಕೊಡದ ಹಸುವನ್ನು ಸಾಕುವುದು ನಷ್ಟದ ವ್ಯಾಪಾರವೆಂದು ಪರಿಗಣಿಸಲಾಯಿತು. ಅಂದ ಹಾಗೆ, 1964ರ ಗೋಹತ್ಯಾ ತಡೆ ಕಾಯ್ದೆಯನ್ನು ಊರ್ಜಿತದಲ್ಲಿರಿಸಲು ತೀರ್ಮಾನಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರ ನಿಲುವನ್ನು ಪ್ರಶ್ನಿಸುತ್ತಿರುವವರಲ್ಲಿ ಎಷ್ಟು ಮಂದಿ ಇವತ್ತು ಗೋವನ್ನು ಬರೇ ಶ್ರದ್ಧೆಗಾಗಿ ಸಾಕುತ್ತಿದ್ದಾರೆ? ಅವರ ಮನೆಗಳಲ್ಲಿ ಎಷ್ಟು ಹಾಲು ಕೊಡದ ಹಸುಗಳಿವೆ? ಎಷ್ಟು ಗಂಡು ಕರು ಮತ್ತು ಎತ್ತುಗಳಿವೆ? ಹಸು ಒಂದು ದಿನ ತುಸು ಕಡಿಮೆ ಹಾಲು ಕೊಟ್ಟರೂ ನೆತ್ತಿಯಲ್ಲಿ ನೆರಿಗೆಗಳು ಮೂಡುವ ಈ ದಿನಗಳಲ್ಲಿ ಹಾಲೇ ಕೊಡದ ಹಸುವನ್ನು ಅದು ಸಾಯುವವರೆಗೂ ಸಾಕಬೇಕೆಂದು ಬಯಸುತ್ತಾರಲ್ಲ, ಅದು ಎಷ್ಟು ಪ್ರಾಯೋಗಿಕ? ಹಾಲು ಕೊಡದ ಹಸುವನ್ನು ಮಾರಿ ಇನ್ನಷ್ಟು ಕರುಗಳನ್ನೋ ಹಸುಗಳನ್ನೋ ಖರೀದಿಸಿದರೆ ಮಾತ್ರವೇ ಓರ್ವನಿಗೆ ತನ್ನ ಉದ್ದಿಮೆಯನ್ನು ವಿಸ್ತರಿಸಲು ಸಾಧ್ಯ ಅಲ್ಲವೇ? ಗೊಡ್ಡು ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಾ ಹೋದರೆ ಸಾಕುವುದು ಹೇಗೆ, ಯಾವ ವರಮಾನದಿಂದ? ಅಷ್ಟಕ್ಕೂ, ಹಸುವನ್ನು ಬರೇ ಶ್ರದ್ಧಾಬಿಂದುವಾಗಿ ಮಾತ್ರ ಸಮಾಜ ಕಾಣುತ್ತದೆಂದಾದರೆ ಕೊಟ್ಟಿಗೆಯಲ್ಲಿ ಕೇವಲ ಹೆಣ್ಣು ಕರುಗಳಷ್ಟೇ ಕಾಣುತ್ತಿರುವುದೇಕೆ? ಗಂಡು ಕರುಗಳೆಲ್ಲ ಏನಾಗುತ್ತವೆ? ಹಾಲು ಕುಡಿಯುವುದನ್ನು ನಿಲ್ಲಿಸಿದ ಕೂಡಲೇ ಅದರ ಪೋಷಕರು ಅದನ್ನು ಮಾರುತ್ತಿದ್ದಾರೆ ಎಂದಲ್ಲವೇ ಇದರರ್ಥ? ಈ ಮಾರಾಟವಾದರೂ ಯಾಕಾಗಿ, ಯಾವ ಉದ್ದೇಶದಿಂದ? ಗಂಡು ಕರುವನ್ನು ಸಾಕಿದರೆ ಲಾಭ ಇಲ್ಲ ಎಂಬುದನ್ನು ಬಿಟ್ಟರೆ ಇದಕ್ಕೆ ಬೇರೆ ಯಾವ ಕಾರಣ ಇದೆ? ಹೀಗಿರುವಾಗ,
   '.. ಗೋವು, ಕರು, ಗೂಳಿ, ಎತ್ತು, ಎಮ್ಮೆ, ಕೋಣ.. ಸಹಿತ ಜಾನುವಾರು ಪಟ್ಟಿಯಲ್ಲಿ ಬರುವ ಪ್ರಾಣಿಯನ್ನು ಹತ್ಯೆ ಮಾಡುವುದು 1 ಲಕ್ಷ  ರೂಪಾಯಿ ದಂಡ ಮತ್ತು 7 ವರ್ಷ ಜೈಲು ಶಿಕ್ಷೆಗೆ ಅರ್ಹವಾಗಬಹುದಾದಷ್ಟು ಭೀಕರ ಅಪರಾಧವಾಗುತ್ತದೆ..' ಎಂಬ ಕಾನೂನನ್ನು ಜಾರಿ ಮಾಡಲು ಹೊರಟಿದ್ದ ಬಿಜೆಪಿ ಸರಕಾರದ ಮಸೂದೆಯನ್ನು ರದ್ದುಪಡಿಸದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಇನ್ನೇನು ಮಾಡಬೇಕಿತ್ತು?  ‘.. 12 ವರ್ಷಕ್ಕಿಂತ ಮೇಲ್ಪಟ್ಟ ನಿರುಪಯುಕ್ತ ಜಾನುವಾರುಗಳ ಹತ್ಯೆಗೆ ಸಮ್ಮತಿ ನೀಡುವ..’ 1964ರ ಮಸೂದೆಯನ್ನು ಊರ್ಜಿತಗೊಳಿಸದೇ ಅವರಿಗೆ ಬೇರೆ ಯಾವ ದಾರಿಯಿತ್ತು?
 ಗುಜರಾತ್
 ಮಧ್ಯಪ್ರದೇಶ
 ಹಿಮಾಚಲ ಪ್ರದೇಶ
   ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲೂ ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಇಲ್ಲ. ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ. ಉಳಿದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಸದ್ಯ ಇರುವಂಥ ಕಾನೂನಷ್ಟೇ ಇದೆ. ಗುಜರಾತ್‍ನಲ್ಲಿ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದದ್ದೇ  2011ರಲ್ಲಿ. ಇದರ ಆಸು-ಪಾಸಿನಲ್ಲೇ ಉಳಿದೆರಡು ರಾಜ್ಯಗಳಲ್ಲೂ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ, 'ಮಧ್ಯ ಪ್ರದೇಶದ ಸದ್ಯದ ಸ್ಥಿತಿ ಹೇಗಿದೆಯೆಂದರೆ, ಹಾಲು ಕೊಡದ, ಉಳುಮೆಗೆ ಬಾರದ ಹಸು, ಎತ್ತುಗಳ ಸಹಿತ ದಾರಾಳ ಜಾನು ವಾರುಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..' ಎಂದು ಅನುಷಾ ನಾರಾಯಣ್ ದಿ ಹಿಂದೂವಿನಲ್ಲಿ ಇತ್ತೀಚೆಗೆ (5-5-2013) ಬರೆದಿದ್ದರು. ನಿಜವಾಗಿ, ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷಿದ್ಧಗೊಳಿಸ ಬೇಕಾದರೆ ನಿರುಪಯುಕ್ತ ಜಾನುವಾರುಗಳಿಗೆ ಏನಾದರೂ ವ್ಯವಸ್ಥೆ ಆಗಬೇಕಲ್ಲವೇ? ಒಂದು ರೀತಿಯಲ್ಲಿ, ಇಂಥ ಜಾನುವಾರುಗಳನ್ನು ಪೋಷಕರು ಮಾರಾಟ ಮಾಡದಿರಬೇಕಾದರೆ ಅಥವಾ ರಸ್ತೆಗೆ ಬಿಡಬಾರದೆಂದಾದರೆ ಅವುಗಳನ್ನು ಸೂಕ್ತ ಬೆಲೆ ಕೊಟ್ಟು ಖರೀದಿಸುವ ವ್ಯವಸ್ಥೆ ಸರಕಾರದಿಂದಲೇ ಆಗಬೇಕು. ಗೋಶಾಲೆ, ಮೇವು, ಹಿಂಡಿ..ಗಳ ಸಹಿತ ದೊಡ್ಡದೊಂದು ಬಜೆಟ್ ತಯಾರಾಗಬೇಕು. ಆದರೆ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ತರಲು ಹೊರಟ ಬಿಜೆಪಿ ಸರಕಾರ ಇಂಥದ್ದೊಂದು ಯೋಜನೆಯನ್ನು ತಯಾರಿಸಿರುವ ಬಗ್ಗೆ ಎಲ್ಲಾದರೂ ಹೇಳಿಕೊಂಡದ್ದು ನಿಮಗೆ ಗೊತ್ತೇ? ಇಲ್ಲವಲ್ಲ. ಹಾಗಾದರೆ, ಅದರ ಪೋಷಕರೇ ಅದನ್ನು ಸಾಕಬೇಕು ಎಂದಲ್ಲವೇ ಇದರರ್ಥ? ಇದು ಎಷ್ಟು ಪ್ರಾಯೋಗಿಕ? ಬಿಜೆಪಿ ಯಾರನ್ನು ಮೊರ್ಖರನ್ನಾಗಿಸಲು ಹೊರಟಿದೆ? ಮುಂದೊಂದು ದಿನ, ಜಾನುವಾರುಗಳನ್ನು ರಸ್ತೆಗೆ ಅಟ್ಟಿದ ಆರೋಪ ಹೊರಿಸಿ ಅದರ ಪೋಷಕರನ್ನೇ ಜೈಲಿಗಟ್ಟುವ ಪ್ರಯತ್ನಕ್ಕೂ ಅದು ಮುಂದಾಗಲಾರದು  ಎಂದು ಯಾವ ಆಧಾರದಿಂದ ಹೇಳಬಲ್ಲಿರಿ? ಅಲ್ಲದೇ, 1998ರಲ್ಲಿ ಬಿಜೆಪಿಯ ವಾಜಪೇಯಿ ಯವರೇ ಪ್ರಧಾನಿಯಾಗಿದ್ದರಲ್ಲ, ಆಗ ಈ ದೇಶದಲ್ಲಿರುವ 3500ರಷ್ಟು ಕಸಾಯಿಖಾನೆಗಳನ್ನು ಮುಚ್ಚಿಸಲು ಅವರು ಯಾವ ಕ್ರಮ ಕೈಗೊಂಡಿದ್ದರು? ಕನಿಷ್ಠ ಕಸಾಯಿಖಾನೆಗಳಿಗೆ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸುತ್ತಿದ್ದರೂ (ದಿ ಹಿಂದೂ, ಮೇ 5, 2013 ) ಹೆಚ್ಚಿನವು ಬಾಗಿಲು ಮುಚ್ಚುತ್ತಿರಲಿಲ್ಲವೇ? ಆದರೆ, ಯಾಕೆ ಹೀಗಾಯಿತೆಂಬುದು ಬಿಜೆಪಿಗರಿಗೆ ಚೆನ್ನಾಗಿ ಗೊತ್ತು. ಇದೊಂದು ಲಾಭದಾಯಕ ಉದ್ಯಮ. ಆದ್ದರಿಂದಲೇ ಸಬ್ಸಿಡಿ ಕೊಟ್ಟು ಅದನ್ನು ಉತ್ತೇಜಿಸಲೇಬೇಕಾಗಿದೆ. ಈ ದೇಶದ ದೊಡ್ಡ ಆದಾಯ ಮೂಲವೇ ಮಾಂಸ. ಕಳೆದ ವರ್ಷ 16,80,000 ಮೆಟ್ರಿಕ್ ಟನ್‍ಗಳಷ್ಟು ಮಾಂಸವನ್ನು ರಫ್ತು ಮಾಡಿರುವ ಭಾರತ, ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರೆಝಿಲ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿವೆ. 2013ರಲ್ಲಿ ಈ ರಫ್ತಿನ ಪ್ರಮಾಣವನ್ನು 29%ಕ್ಕೆ ಹೆಚ್ಚಿಸಬೇಕೆಂಬ ಗುರಿಯನ್ನೂ ಸರಕಾರ ಇಟ್ಟುಕೊಂಡಿದೆ. ಅಷ್ಟಕ್ಕೂ, 1988ರಿಂದ ವಿಶ್ವದಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ, 2016-17ನೇ ವರ್ಷದ ಅವಧಿಯಲ್ಲಿ 150 ಮಿಲಿಯನ್ ಟನ್‍ಗಳಷ್ಟು ಹಾಲಿನ ಗುರಿಯನ್ನು ಹೊಂದಿದ್ದು, ಮೇವಿಗಾಗಿ 2,242 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವ ಮತ್ತು ಮಿಲಿಯಾಂತರ ಜಾನುವಾರಗಳ ಸೃಷ್ಟಿಗೆ ಯೋಜನೆ ರೂಪುಗೊಂಡಿರುವ ದೇಶವೊಂದರಲ್ಲಿ, ರಾಜಕೀಯ ಲಾಭಕ್ಕಾಗಿ ಜಾನುವಾರುಗಳನ್ನು ಕಟಕಟೆಗೆ ತರುವುದು ಎಷ್ಟು ಸರಿ?
    ನಿಜವಾಗಿ, ಹಸು ಸಹಿತ ಒಟ್ಟು ಜಾನುವಾರುಗಳು ಉಪಯುಕ್ತ ಮತ್ತು ನಿರುಪಯುಕ್ತಗೊಳ್ಳುತ್ತಾ, ಸಮಾಜದ ಭಾಗವಾಗಿ ಅನಾದಿ ಕಾಲದಿಂದಲೂ ಬದುಕುತ್ತಲೇ ಇವೆ. ಅವು ಹಾಲೂ ಕೊಟ್ಟಿವೆ. ಆಹಾರವಾಗಿಯೂ ಬಳಕೆಯಾಗಿವೆ. ವಸಿಷ್ಠ ಮಹರ್ಷಿಗೆ ಕರುವಿನ ಮಾಂಸವನ್ನು ಆಹಾರವಾಗಿ ಕೊಟ್ಟ ಚರಿತ್ರೆಯು ಸಂಸ್ಕ್ರುತ ಮಹಾಕವಿ ಭವಭೂತಿ ಬರೆದ ಉತ್ತರ ರಾಮ ಚರಿತದಲ್ಲಿದೆ. (ಅನು: ಎಸ್.ವಿ. ಪರಮೇಶ್ವರ ಭಟ್ಟ- ಪು 309, 310) ಹೀಗಿದ್ದೂ, ‘ಗೋಹತ್ಯೆಯನ್ನು ಪ್ರಾರಂಭಿಸಿದ್ದು ಮುಸ್ಲಿಮರು, ಅವರ ಬಾಯಿ ಚಪಲಕ್ಕೆ ನಮ್ಮ ಶ್ರದ್ಧಾಬಿಂದುವಿನ ಹತ್ಯೆಯಾಗುತ್ತಿದೆ..’ ಎಂಬ ಸುಳ್ಳನ್ನು ಬಿಜೆಪಿಯ ಕಾರ್ಯಕರ್ತರು ದೇಶದಾದ್ಯಂತ ಹಬ್ಬಿಸುತ್ತಿದ್ದಾರೆ. ಒಂದು ವೇಳೆ, ಮುಸ್ಲಿಮರಿಂದಲೇ ಗೋಹತ್ಯೆಯ ಪ್ರಾರಂಭವಾಯಿತು ಎಂದಾದರೆ ಅದನ್ನು ತಿನ್ನಬೇಕಾದದ್ದು ಯಾರು, ಮುಸ್ಲಿಮರು ಮಾತ್ರ ತಾನೇ? ಆದರೆ ಪರಿಸ್ಥಿತಿ ಹಾಗಿದೆಯೇ? ಇವತ್ತು ಈ ದೇಶದಲ್ಲಿ ಗೋಮಾಂಸದ ದೊಡ್ಡ ಗಿರಾಕಿಗಳು ಬಹುಸಂಖ್ಯಾತರೇ ಎಂಬುದನ್ನು ಯಾರು ಅಲ್ಲಗಳೆಯುತ್ತಾರೆ? ಕೇರಳ ಸಹಿತ ಅನೇಕ ರಾಜ್ಯಗಳ ಹಿಂದೂ ಬಾಂಧವರ ಹೊಟೇಲುಗಳಲ್ಲಿ ಇವತ್ತು ಗೋಮಾಂಸ ಲಭ್ಯವಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಅನಾದಿ ಕಾಲದಿಂದಲೂ ಅದು ಜನರ ಆಹಾರವಾಗಿಲ್ಲದಿರುತ್ತಿದ್ದರೆ ಇದು ಸಾಧ್ಯವಿತ್ತೇ? ಅಷ್ಟಕ್ಕೂ, ಮುಸ್ಲಿಮರು ಗೋಮಾಂಸ ಸೇವಿಸುವುದು ಹಿಂದೂಗಳ ಶ್ರದ್ಧಾಬಿಂದುವಿಗೆ ಅಗೌರವ ತೋರಿಸಬೇಕು ಎಂದು ಖಂಡಿತ ಅಲ್ಲ. ಅದನ್ನು ಸೇವಿಸದಿದ್ದರೆ ಅವರ ವಿಶ್ವಾಸಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಸರಕಾರವೇ ನಡೆಸುತ್ತಿರುವ ಕಸಾಯಿಖಾನೆಗಳಲ್ಲಿ ಮಾಂಸ ಲಭ್ಯವಾಗುತ್ತಿರುವುದರಿಂದಲೇ ಅವರು ಅದನ್ನು ಸೇವಿಸುತ್ತಿರುವುದು. ಹಾಸ್ಯಾಸ್ಪದ ಏನೆಂದರೆ, ಬಿಜೆಪಿಯ ಗೋಹತ್ಯಾ ನಿಷೇಧ ಮಸೂದೆಯನ್ನು ಹಿಂದೂ ಪರ ಮತ್ತು ಮುಸ್ಲಿಮ್ ವಿರೋಧಿಯೆಂಬಂತೆ ಅದರ ಕಾರ್ಯಕರ್ತರು ಬಿಂಬಿಸುತ್ತಿದ್ದಾರೆ. ನಿಜವಾಗಿ, ಅದು ಮುಸ್ಲಿಮ್ ವಿರೋಧಿಯಲ್ಲ, ಹಿಂದೂ ವಿರೋಧಿ. ಒಂದು ರೀತಿಯಲ್ಲಿ, ಗೋವಿಗೆ ಬಿಜೆಪಿ ಕೊಡುತ್ತಿರುವ ವ್ಯಾಖ್ಯಾನವನ್ನು ಈ ದೇಶದ ಜನಸಾಮಾನ್ಯರು ಖಂಡಿತ ಕೊಡುತ್ತಿಲ್ಲ. ಅವರು ಅದನ್ನು ಗೌರವಿಸುವಂತೆಯೇ ಆಹಾರ ಕ್ರಮಗಳ ಒಂದು ಭಾಗವಾಗಿಯೂ ಪರಿಗಣಿಸಿದ್ದಾರೆ. ನಿರುಪಯುಕ್ತ ಜಾನುವಾರುಗಳನ್ನು ಮಾರುವುದಕ್ಕೂ ಆಹಾರವಾಗಿ ಬಳಕೆ ಮಾಡುವುದಕ್ಕೂ ಮತ್ತು ಗೌರವಿಸುವುದಕ್ಕೂ ಅವರು ಸಂಬಂಧವನ್ನು ಕಲ್ಪಿಸುತ್ತಿಲ್ಲ. ಅವೆಲ್ಲವನ್ನೂ ಅವರು ಭಿನ್ನಭಿನ್ನವಾಗಿಯೇ ಪರಿಗಣಿಸುತ್ತಿದ್ದಾರೆ. ಅಷ್ಟಕ್ಕೂ,
   ಗೋವಿನ ಸಹಜ ಗರ್ಭಧಾರಣೆಯ ಹಕ್ಕನ್ನು ಕಸಿದು ಇಂಜಕ್ಷನ್ ಮುಖಾಂತರ ಕೃತಕ ಗರ್ಭಧಾರಣೆ ಮಾಡಿಸಿ ವರ್ಷದುದ್ದಕ್ಕೂ ಹಾಲು ಪಡೆಯಲು ಪ್ರಯತ್ನಿಸುವ ಮತ್ತು ಗೋವನ್ನು ಅಪ್ಪಟ ವ್ಯಾಪಾರದ ಪ್ರಾಣಿಯಾಗಿ ಮಾರ್ಪಡಿಸಿರುವ ಇಂದಿನ ಆಧುನಿಕ ಭಾರತೀಯರ ಬಗ್ಗೆ, ಅವರಿಂದಾಗಿ ಗೋವಿಗಾಗುತ್ತಿರುವ ಹಿಂಸೆಯ ಬಗ್ಗೆ ಏನೊಂದೂ ಹೇಳದೇ, ಬರೇ `ಹತ್ಯೆಯ’ ಬಗ್ಗೆ ಮಾತ್ರ ಮಾತಾಡಿದರೆ ಈ ಬಿಜೆಪಿಯನ್ನು ಯಾರು ನಂಬುತ್ತಾರೆ,  ಹೇಳಿ?

Monday, May 13, 2013

ಆ ಯುವಕ ಕಪಾಳಮೋಕ್ಷ ಮಾಡಿದ್ದನಲ್ಲ, ನೆನಪಿದೆಯೇ ಶೆಟ್ಟರೆ?

https://mail-attachment.googleusercontent.com/attachment/?ui=2&ik=6079291e4d&view=att&th=13e9d973884f395f&attid=0.1&disp=inline&realattid=f_hgnjxndz0&safe=1&zw&saduie=AG9B_P9AdjG_6F_C-d01hjtY4eU8&sadet=1368449737401&sads=MD_g-j028X0Cd5ERihWzTFo6h3Y   ‘ಬಿ.ಎ. ಬಸವರಾಜ್, ವಿಜಯ್ ಕಾಶಪ್ಪನವರ್, ಡಿ.ಕೆ. ಶಿವಕುಮಾರ್, ಅನಿಲ್ ಲಾಡ್, ಮುನಿರತ್ನ.. ಇವರೆಲ್ಲ ಬಿಜೆಪಿಯವರಾ? ಭ್ರಷ್ಟಾಚಾರದ ವಿರುದ್ಧ ರಾಜ್ಯದ ಮಂದಿ ಮತ ಹಾಕಿದ್ದಾರೆ ಎಂದಾದರೆ ಇವರೇಕೆ ಗೆದ್ದು ಬಂದರು? ಇವರೇನು ಸಾಚಾಗಳೇ? ಭಾರತೀಯ ಅಪರಾಧ ಸಂಹಿತೆಯ (ಐ.ಪಿ.ಸಿ.) ಅಡಿಯಲ್ಲಿ ಬಸವರಾಜ್‍ರ ಮೇಲೆ 11 ಪ್ರಕರಣಗಳು ದಾಖಲಾಗಿವೆ. ಕಾಶಪ್ಪನವರ್‍ರ ಮೇಲೆ 5 ಪ್ರಕರಣಗಳಿವೆ. ಡಿ.ಕೆ. ಶಿವಕುಮಾರ್‍ರ ಆಸ್ತಿ ಕಳೆದ 5 ವರ್ಷಗಳಲ್ಲಿ 176 ಕೋಟಿಗೇರಿದೆ. ಗಣಿ ದನಿ ಅನಿಲ್ ಲಾಡ್‍ರ ಮೇಲೆ 86 ಎಕರೆ ಅರಣ್ಯ ಅಕ್ರಮ ಸ್ವಾಧೀನದ ಕೇಸು ಇದೆ. ಇವೆಲ್ಲ ಏನು, ಶಿಷ್ಟಾಚಾರವೇ? ಹೀಗಿದ್ದೂ ಇವರ ನ್ನೆಲ್ಲ 9, 16, 31, 19 ಸಾವಿರ ಮತಗಳ ಅಂತರದಿಂದ ಜನರು ಗೆಲ್ಲಿಸಿದ್ದೇಕೆ? ಕಾಂಗ್ರೆಸಿಗರೆಂದೇ? ನಿಜವಾಗಿ, ಇದು ಕಾಂಗ್ರೆಸ್ಸಿನ ಗೆಲುವಲ್ಲ. ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶವೂ ಅಲ್ಲ. ಯಡಿಯೂರಪ್ಪರ ಕೆಜೆಪಿ ಇಲ್ಲದೇ ಇರುತ್ತಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯುತ್ತಿತ್ತು..’ ಎಂದೆಲ್ಲ ಬಿಜೆಪಿಯ ಕೆಲವು ಅತೃಪ್ತ ಆತ್ಮಗಳು ಇವತ್ತು ಸಮರ್ಥಿಸಿಕೊಳ್ಳುತ್ತಿವೆ. ಅಷ್ಟಕ್ಕೂ ಯಡಿಯೂರಪ್ಪರೇನು ಕಾಂಗ್ರೆಸ್‍ನಿಂದ ಮುಖ್ಯಮಂತ್ರಿಯಾಗಿದ್ದರೇ? ಬಿಜೆಪಿಯಿಂದ ಸಿಡಿದು ಕೆಜೆಪಿ ಕಟ್ಟುವುದಕ್ಕೆ ಭ್ರಷ್ಟಾಚಾರ ಆರೋಪಗಳ ಹೊರತು ಅವರಿಗೆ ಬೇರೆ ಯಾವುದು ಕಾರಣ ಆಗಿತ್ತು? 2008ರಲ್ಲಿ ಇದೇ ಯಡಿಯೂರಪ್ಪರ ಬಿಜೆಪಿಯು ರಾಜ್ಯ ಜನತೆಯೊಂದಿಗೆ ಮತ ಯಾಚಿಸಿದ್ದು ಯಾವುದನ್ನು ಮುಂದಿಟ್ಟುಕೊಂಡು ಎಂಬುದನ್ನೊಮ್ಮೆ ನೆನಪಿಸಿಕೊಳ್ಳಿ. ಭ್ರಷ್ಟಾಚಾರ, ನೈತಿಕ ಪೊಲೀಸ್‍ಗಿರಿ, ಕೋಮುವಾದ, ಧಾರ್ಮಿಕ ತಾರತಮ್ಯಗಳನ್ನು ತನ್ನ ಚುನಾವಣಾ ಅಜೆಂಡಾವಾಗಿ ಯಡಿಯೂರಪ್ಪರು ಬಿಂಬಿಸಿದ್ದರೇ? ಇಲ್ಲವಲ್ಲ. ಕುಮಾರ ಸ್ವಾಮಿಯ ವಚನಭ್ರಷ್ಟತನವನ್ನು, ಗೋವಿನ ಹಾಡನ್ನು ಅವರು ಅಜೆಂಡಾವಾಗಿಸಿದ್ದರು. ಗೋವಿನಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದಾಗಿ ವಚನ ಕೊಟ್ಟಿದ್ದರು. ಬಿಜೆಪಿ ರೈತರ ಪಕ್ಷ  ಅಂದರು. ಆದರೆ ಬಳಿಕ ಬಿಜೆಪಿ ಗುರುತಿಸಿಕೊಂಡದ್ದಾದರೂ ಯಾವ ಮುಖದೊಂದಿಗೆ? ಗೊಬ್ಬರ ಕೇಳಿದ ರೈತರಿಗೆ ಗುಂಡು ಹಾರಿಸಿದಲ್ಲಿಂದ ತೊಡಗಿ ಹೋಮ್‍ಸ್ಟೇ ದಾಳಿಯ ವರೆಗೆ ಬರೀ ವಿಕಾರ ಮುಖವನ್ನೇ ಅಲ್ಲವೇ? ಇವನ್ನೆಲ್ಲ ಅಡಗಿಸಿಟ್ಟು ಕೇವಲ ಕೆಜೆಪಿಯನ್ನು ಭೂತವಾಗಿ ನೋಡುವುದು ಎಷ್ಟು ಸೂಕ್ತ, ಸಮಂಜಸ?
ಮಿಸ್ಟರ್ ಗೋಲ್ಡನ್ ಸ್ಪೂನ್
ಇಟಲಿ ಮೇಡಮ್
50 ಕೋಟಿಯ ಗರ್ಲ್ ಫ್ರೆಂಡ್..
   ಎಂಬೆಲ್ಲ ಅಸಭ್ಯ ಪದಗಳನ್ನು ಬಳಸಿ ಭಾಷಣ ಮಾಡುವ ಮೋದಿ, ರಾಜ್ಯದ 3 ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಎಪ್ರಿಲ್ 28ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡರು ಬಿಜೆಪಿಯೇ ಹೇಳಿಕೊಂಡಿತ್ತು. ಆದಿತ್ಯವಾರದಂದು ಅದೂ ಸಂಜೆಯ ಸಮಯದಲ್ಲಿ ಬೆಂಗಳೂರಿಗರನ್ನು ಲಕ್ಷಾಂತರ ಸಂಖ್ಯೆಯನ್ನು ಸೆಳೆಯುವ ಸಾಮರ್ಥ್ಯ  ಇರುವುದು ಮೋದಿಗೆ ಮಾತ್ರ ಎಂದೂ ಕೆಲವು ಮಾಧ್ಯಮಗಳು ಬರೆದುವು. ಸೋನಿಯಾ ಗಾಂಧಿ ಮತ್ತು ಅವರ ‘ಬಸ್-ಬಿರಿಯಾನಿ’ ಬೆಂಬಲಿಗರು ಇದರಿಂದ ಪಾಠ ಕಲಿಯಲಿ ಎಂದು ಕೆಲವರು ಟ್ವೀಟ್ ಮಾಡಿದರು. ಮೋದಿಯನ್ನು ವಾಜಪೇಯಿಗೆ, ವಲ್ಲಭಭಾಯಿಗೆ ಹೋಲಿಸಿ ಸಂತಸಪಟ್ಟರು.IRCC (Industrial Reseach and Consultancy Centre); ಗುಜರಾತ್‍ನ ಚುನಾವಣಾ ರಾಲಿಗಳು; ಇಂಡಿಯಾ ಟುಡೇ ಪತ್ರಿಕೆಯ ಸಮಾರಂಭ; FICCI (Federation of Indian Chambers of Commerce and Industry) ಮತ್ತು ಈಗ ಬೆಂಗಳೂರು.. ಎಲ್ಲೆಡೆಯೂ ಜನಸ್ತೋಮವೇ ಜನಸ್ತೋಮ. ಅವರ ಭಾಷಣಕ್ಕೆ ಇನ್ನಾರೂ ಸಾಟಿಯಿಲ್ಲ ಎಂದು ಬಿಜೆಪಿಗರು ಸಂಭ್ರಮಪಟ್ಟರು. ಸದ್ಯದ ಬಿಜೆಪಿ ವಿರೋಧಿ ಅಲೆಯು ಮೋದಿಯ ಪ್ರವಾಸದಿಂದಾಗಿ ಸರಿದು ಬಿಡಬಹುದು ಅನ್ನುವ ಪ್ರಚಾರವೂ ನಡೆಯಿತು. ಇದಕ್ಕೆ ಪೂರಕವಾಗಿ ಮೋದಿಯೂ ಸ್ಪಂದಿಸಿದರು. ರಾಹುಲ್ ಗಾಂಧಿಯನ್ನು ಮಿಸ್ಟರ್ ಗೋಲ್ಡನ್ ಸ್ಪೂನ್ ಎಂದು ಕರೆದು ಚಪ್ಪಾಳೆ ಗಿಟ್ಟಿಸಿಕೊಂಡರು. ಕಳೆದ ಅಕ್ಟೋಬರ್‍ನಲ್ಲಿ ನಡೆದ ಗುಜರಾತ್ ಚುನಾವಣೆಯ ವೇಳೆ ಇದೇ ಮೋದಿ, 'ಬೆಹೆನ್ ಸೋನಿಯಾ ಬೆನ್,  I bet you have lost mental balance - ಸೋನಿಯಾ ಗಾಂಧಿಯವರೇ, ನೀವು ಮಾನಸಿಕ ಸ್ಥಿಮಿತವನ್ನು ಕಳಕೊಂಡಿದ್ದೀರಿ - ಎಂದಿದ್ದರು. ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಸಚಿವ ಶಶಿ ತರೂರ್ ರನ್ನು ಉದ್ದೇಶಿಸಿ, ‘ತರೂರ್‍ರು ಸುನಂದಾ ಪುಷ್ಕರ್ ಎಂಬ 50 ಕೋಟಿ ರೂಪಾಯಿಯ ಗರ್ಲ್ ಫ್ರೆಂಡನ್ನು ಹೊಂದಿದ್ದಾರೆ..’ ಎಂದು ಲೇವಡಿ ಮಾಡಿದ್ದರು. ನಿಜವಾಗಿ, ಶಶಿ ತರೂರ್‍ಗೂ ಹಿಮಾಚಲ ಪ್ರದೇಶದ ಚುನಾವಣೆಗೂ ಯಾವ ಸಂಬಂಧವೂ ಇರಲಿಲ್ಲ. ಶಶಿ ತರೂರ್ ಅಲ್ಲಿಗೆ ಪ್ರಚಾರಕ್ಕೂ ಹೋಗಿರಲಿಲ್ಲ. ಆದ್ದರಿಂದಲೇ, ಮೋದಿಯ ಅಸಭ್ಯ ಮಾತಿಗೆ ರಾಷ್ಟ್ರಮಟ್ಟದಲ್ಲೇ ಟೀಕೆ ವ್ಯಕ್ತವಾಯಿತು. ಮೋದಿಗಿಂತ ಸುಮಾರು 20 ವರ್ಷ ಕಿರಿಯವನಾಗಿರುವ ರಾಹುಲ್ ಗಾಂಧಿಯ ಭಾಷೆ, ಪದ ಬಳಕೆ, ಮಾತಿನ ಧಾಟಿ, ಆಂಗಿಕ ಹಾವಭಾವಗಳು ಈ ದೇಶಕ್ಕೆ ಆದರ್ಶಪ್ರಾಯ ಅನ್ನಲಾಯಿತು. ಅಂದಹಾಗೆ, ಗುಜರಾತ್‍ನಲ್ಲಿ ಪ್ರಯೋಗಿಸಿ ಯಶಸ್ವಿಯಾಗಿರುವ ಅಸಭ್ಯ ಭಾಷೆ, ಪದ ಬಳಕೆಯನ್ನು ದೇಶದ ಉದ್ದಗಲಕ್ಕೂ ಮೋದಿ ಕೊಂಡೊಯ್ಯುತ್ತಿರುವುದು ಏನನ್ನು ಸೂಚಿಸುತ್ತದೆ? 2002ರ ಹತ್ಯಾಕಾಂಡಕ್ಕೆ ಅವರ ಅಸಭ್ಯ ಆಲೋಚನೆ ಮತ್ತು ಅಸಭ್ಯ ಹೋಲಿಕೆಗಳೇ ಕಾರಣವಾಗಿತ್ತು. ಆ ಬಗ್ಗೆ ಅವರಲ್ಲಿ ಇನ್ನೂ ಪಶ್ಚಾತ್ತಾಪ ಮೂಡಿಲ್ಲ ಎಂದಲ್ಲವೇ ಇದರರ್ಥ? ಮಾತ್ರವಲ್ಲ, ಈ ದೇಶದಲ್ಲಿ ಇಂಥ ಆಲೋಚನಗಳಿಂದ ಮಾತ್ರ ಅಧಿಕಾರ ಗಿಟ್ಟಿಸಲು ಸಾಧ್ಯ ಎಂದು ಅವರು ನಂಬಿರುವುದಕ್ಕೆ ಪುರಾವೆಯಲ್ಲವೇ ಇದು? ಆದರೆ ಹಿಮಾಚಲ ಪ್ರದೇಶದ ಮತದಾರರು ಮೋದಿಯನ್ನು ಅವರ ಕೆಳದರ್ಜೆಯ ಭಾಷೆಯ ಸಮೇತ ಹೊರಕ್ಕಟ್ಟಿದರು. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‍ನ ಕೈ ಹಿಡಿದರು. ಆ ಬಳಿಕ ಮೋದಿ ಬಂದದ್ದು ನೇರ ಕರ್ನಾಟಕಕ್ಕೆ. 37 ವಿಧಾನ ಸಭಾ ಸ್ಥಾನಗಳನ್ನು ಹೊಂದಿರುವ ಬೆಂಗಳೂರು, ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲಿ ಭಾಷಣ ಮಾಡಿದರು. ಇದೀಗ ಈ 37ರಲ್ಲಿ ಜುಜುಬಿ ಸ್ಥಾನಗಳಷ್ಟೇ ಬಿಜೆಪಿಗೆ ದಕ್ಕಿವೆ. ಏನಿದರ ಅರ್ಥ? ಮೋದಿ ಗುಜರಾತ್‍ಗಿಂತ ಹೊರಗೆ ಅಸ್ಪೃಶ್ಯ ಎಂದಲ್ಲವೇ? ಮೋದಿಯನ್ನು ಅವರ ಈಗಿನ ವೇಷದಲ್ಲಿ ಈ ದೇಶದ ಮಂದಿ ಪ್ರಧಾನಿಯಾಗಿ ಒಪ್ಪಿಕೊಳ್ಳುವುದಿಲ್ಲ ಅನ್ನುವುದಕ್ಕೆ ಬೇರೆ ಯಾವ ಪುರಾವೆ ಬೇಕು? ರಾಹುಲ್ ಗಾಂಧಿಯ ಸಭ್ಯತನದ ಎದುರು ಮೋದಿಯ ಅಸಭ್ಯತನ ತೀವ್ರ ವೈಫಲ್ಯ ಹೊಂದಿರುವುದಕ್ಕೆ ಈ ಚುನಾವಣೆಯನ್ನು ಯಾಕೆ ಆಧಾರವಾಗಿ ಪರಿಗಣಿಸಬಾರದು?
   ಹಾಗಂತ ಈ ಒಂದೇ ಕಾರಣಕ್ಕೆ ಮೋದಿ ಕನ್ನಡಿಗರಿಂದ ತಿರಸ್ಕøತರಾದರು ಎಂದಲ್ಲ..
2012 ಜುಲೈ 20ರಂದು ಅಮೇರಿಕದ ಅರೋರದಲ್ಲಿರುವ ಸಿನಿಮಾ ಥಿಯೇಟರ್‍ನಲ್ಲಿ 25 ವರ್ಷದ ಜೇಮ್ಸ್ ಹೋಲ್‍ಮ್ಸ್ ಎಂಬ ಯುವಕ ಮನ ಬಂದಂತೆ ಗುಂಡು ಹಾರಿಸುತ್ತಾನೆ. 12 ಮಂದಿ ಸಾವಿಗೀಡಾಗಿ 58 ಮಂದಿ ಗಾಯಗೊಳ್ಳುತ್ತಾರೆ. 2012 ಡಿಸೆಂಬರ್ 14ರಂದು ಕನೆಕ್ಟಿಕಟ್‍ನಲ್ಲಿರುವ ಪ್ರಾಥಮಿಕ ಶಾಲೆಗೆ ನುಗ್ಗಿದ ಆಡಮ್ಸ್ ಲ್ಯಾನ್ಸಾ, 20 ಪುಟ್ಟ ಮಕ್ಕಳ ಸಹಿತ 26 ಮಂದಿಯನ್ನು ಗುಂಡು ಹಾರಿಸಿ ಕೊಲ್ಲುತ್ತಾನೆ. 2012 ಆಗಸ್ಟ್ 5ರಂದು 41 ವರ್ಷದ ವಾಡೆ ಮೈಕೆಲ್ ಪೇಜ್ ಎಂಬಾತ ಓಕ್ರೀಕ್‍ನಲ್ಲಿರುವ ಸಿಕ್ಖ್ ಮಂದಿರಕ್ಕೆ ದಾಳಿಯಿಟ್ಟು 6 ಮಂದಿಯನ್ನು ಕೊಂದು 4 ಮಂದಿಯನ್ನು ಗಾಯಗೊಳಿಸುತ್ತಾನೆ. ಅಮೇರಿಕದಲ್ಲಿ ಪ್ರತಿ ವರ್ಷ 30 ಸಾವಿರ ಮಂದಿ ಕೇವಲ ಬಂದೂಕು ಸಂಸ್ಕ್ರಿತಿಗೇ ಬಲಿಯಾಗುತ್ತಿದ್ದಾರೆ. ಅದರಲ್ಲೂ ಕಳೆದ 4 ತಿಂಗಳುಗಳಲ್ಲಿ 3,531 ಮಂದಿ ಬಂದೂಕಿಗೆ ಬಲಿಯಾಗಿದ್ದಾರೆ. ಇದು 9/11 ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆಗಿಂತಲೂ ಹೆಚ್ಚು (ದಿ ಹಿಂದು, 2013 ಮೇ 3). ಆದರೂ ಅಮೇರಿಕ ಇವನ್ನೆಲ್ಲ ಮಾನಸಿಕ ಅಸ್ವಸ್ಥತೆಗೆ ಒಳಗಾದ ಯುವಕರ ಕೃತ್ಯ ಎಂದು ವ್ಯಾಖ್ಯಾನಿಸಿದೆಯೇ ಹೊರತು ಭಯೋತ್ಪಾದನಾ ಕೃತ್ಯವೆಂದಲ್ಲ. ಯುವಕರು ಗನ್ ಖರೀದಿಸುವಾಗ ಅವರ ಹಿನ್ನೆಲೆಯನ್ನು ತನಿಖಿಸಬೇಕು ಎಂಬ ಮಸೂದೆಗೆ ಅಮೇರಿಕದ ಪಾರ್ಲಿಮೆಂಟಲ್ಲಿ ಮೊನ್ನೆ ಮೊನ್ನೆ ಸೋಲಾದದ್ದು ಇದೇ ಕಾರಣದಿಂದ. ಆದರೆ ಕಳೆದ ಎಪ್ರಿಲ್ 15ರಂದು ಬಾಸ್ಟನ್ ಮ್ಯಾರಥಾನ್‍ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವುದು ಇಂಥದ್ದೇ ಇಬ್ಬರು ಯುವಕರಾಗಿದ್ದರೂ ಅವರು ಚೆಚೆನ್ ಮೂಲದವರೆಂದು ಗೊತ್ತಾದ ಕೂಡಲೇ ಅಮೇರಿಕ ಇಡೀ ಕೃತ್ಯವನ್ನು ಭಯೋತ್ಪಾದನಾ ಕೃತ್ಯ ಎಂದಿತು. ಅವರು ಈ ಮೊದಲು ತಮ್ಮ ದೇಶವಾದ ಚೆಚೆನ್‍ಗೆ ಭೇಟಿ ಕೊಟ್ಟದ್ದನ್ನೇ ಇದಕ್ಕೆ ಪುರಾವೆಯಾಗಿ ಬಳಸಿಕೊಂಡಿತು. ಅಷ್ಟಕ್ಕೂ ಬಂದೂಕು ಸಿಡಿಸುವವರು ಮಾನಸಿಕ ಅಸ್ವಸ್ಥರು ಮತ್ತು ಬಾಂಬ್ ಸಿಡಿಸುವವರು ಭಯೋತ್ಪಾದಕರು ಅನ್ನುವುದು ಎಷ್ಟು ಸಮರ್ಥನೀಯ? ಹಾಗೆ ಬೇರ್ಪಡಿಸಿ ನೋಡುವುದಕ್ಕೆ ಯಾವುದು ಮಾನದಂಡ? ಮುಸ್ಲಿಮ್ ಹೆಸರೇ, ನಮಾಝೇ, ಮೂಲ ದೇಶವೇ? ಅಮೇರಿಕದ ಗನ್ ಕಲ್ಚರ್‍ನಿಂದ ಪ್ರಭಾವಿತರಾಗಿ ಈ ಯುವಕರು ಬಾಂಬ್ ಇಡಬಾರದೆಂದಿದೆಯೇ? ಸಾಮಾಜಿಕ ಅಸ್ಪೃಶ್ಯತೆ, ಮಾನಸಿಕ ಸಮಸ್ಯೆ ಅಥವಾ ರಾಜಕೀಯೇತರ ಕಾರಣಗಳು ಅವರ ಬಾಂಬ್‍ನ ಹಿಂದಿರಬಾರದೇಕೆ? ಅಲ್ಲದೇ ಬಾಂಬ್ ಭಯೋತ್ಪಾದನೆಯ ವಿರುದ್ಧ ಗಂಭೀರವಾಗುವ ಅಮೇರಿಕ ಬಂದೂಕು ಭಯೋತ್ಪಾದನೆಯ ಕುರಿತಂತೆ ಯಾಕೆ ಮೃದುವಾಗಿದೆ? ಏನಿದರ ಮರ್ಮ? ಮುಸ್ಲಿಮ್ ರಾಷ್ಟ್ರಗಳ ಮೇಲೆ ಏರಿ ಹೋಗುವುದಕ್ಕಾಗಿ ಅಮೇರಿಕ ಈ ಭಯೋತ್ಪಾದನಾ ಗುಮ್ಮವನ್ನು ಬಳಸುತ್ತಿದೆಯೇ? ಯಾಕೆ ಈ ದ್ವಂದ್ವ..’ ಎಂದೆಲ್ಲಾ 2013 ಮೇ 3ರಂದು ದಿ ಹಿಂದೂವಿನಲ್ಲಿ ನಾರಾಯಣ್ ಲಕ್ಷ್ಮಣ್ ಎಂಬ ಹಿರಿಯ ಬರಹಗಾರರು ಪ್ರಶ್ನಿಸಿದ್ದರು.
   ಭಾರತವನ್ನು ಮಾತೆ ಅನ್ನುವ; ಸಂಸ್ಕ್ರಿತಿ, ಅಸ್ಮಿತೆಯ ಬಗ್ಗೆ ಬಾಯಿ ತುಂಬಾ ಮಾತಾಡುವ ಮೋದಿ ಪ್ರದರ್ಶಿಸುತ್ತಿರುವುದೂ ಈ ದ್ವಂದ್ವವನ್ನೇ ಅಲ್ಲವೇ? ಇಲ್ಲದಿದ್ದರೆ, ಪಕ್ಷಕ್ಕಿಂತ ದೇಶ ದೊಡ್ಡದು ಅನ್ನುವ ಮೋದಿ, ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಭ್ರಷ್ಟಾಚಾರವನ್ನೇಕೆ ಪ್ರಸ್ತಾಪಿಸುತ್ತಿಲ್ಲ? ಬಿಜೆಪಿ ದೇಶಕ್ಕಿಂತ ದೊಡ್ಡದೇ ಅಥವಾ, ಕಾಂಗ್ರೆಸ್ ಭ್ರಷ್ಟಾಚಾರ ಎಸಗಿದರೆ ತಪ್ಪು, ಬಿಜೆಪಿಯಾದರೆ ಸರಿ ಎಂಬ ನಿಲುವೇ? ಇಂಥ ದ್ವಂದ್ವವನ್ನು ಇಟ್ಟುಕೊಂಡ ವ್ಯಕ್ತಿ ಈ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯು ತ್ತೇನೆಂದು ಹೇಳುತ್ತಾರಲ್ಲ, ಯಾವ ಅಭಿವೃದ್ಧಿ? ಯಾರ ಅಭಿವೃದ್ಧಿ? ನಾಳೆ; ಮುಸ್ಲಿಮರಿಗೆ ಒಂದು ನೀತಿ, ಹಿಂದೂಗಳಿಗೆ ಇನ್ನೊಂದು ನೀತಿ ಎಂಬ ಮಾದರಿಯನ್ನು ಅವರು ಜಾರಿ ಮಾಡಿದರೆ? ಈಗಾಗಲೇ ಗುಜರಾತ್‍ನಲ್ಲಿ ಅವರು 'ಮಾದರಿ'ಯಾಗಿ ಒಪ್ಪಿಕೊಂಡಿರುವುದು ಇಂಥ ನಿಲುವನ್ನೇ ತಾನೇ? ಬಹುಶಃ ಇಂಥ ದ್ವಂದ್ವ ನಿಲುವನ್ನು ಪರಿಗಣಿಸಿಯೇ ರಾಜ್ಯದ ಮಂದಿ ಮೋದಿ ವಿರುದ್ಧ ಓಟು ಹಾಕಿರಬಾರದೇಕೆ?
   ಅಷ್ಟಕ್ಕೂ, ಬಿಜೆಪಿಯ ಕೋಮುವಾದದ ವಿರುದ್ಧ ಜನರು ಸಿಡಿದೆದ್ದಿದ್ದಾರೆ ಅನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಫಲಿತಾಂಶವೇ ಪುರಾವೆ.
   ಊರಿನ ಹತ್ತು ಮಂದಿಗೂ ಪರಿಚಯ ಇಲ್ಲದ ನಳಿನ್ ಕುಮಾರ್ ಕಟೀಲ್ ಎಂಬವರನ್ನು ಜನಾರ್ಧನ ಪೂಜಾರಿ ವಿರುದ್ಧ ನಿಲ್ಲಿಸಿ ಸಂಸತ್ತಿಗೆ ಕಳುಹಿಸಿದ್ದು ಇಲ್ಲಿನ ಸಂಘಪರಿವಾರ. ನಿಜವಾಗಿ, ಈ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇಶ್ಶೂವೇ ಅಲ್ಲ. ಎಲ್ಲ ಇಶ್ಶೂವನ್ನೂ ತಿಂದು ಮುಗಿಸುವಷ್ಟು ಪ್ರಮಾಣದಲ್ಲಿ ಪರಿವಾರ ಇಲ್ಲಿ ಕೋಮುವಾದವನ್ನು ಬೆಳೆಸಿಬಿಟ್ಟಿದೆ. ಈ ಬಾರಿ ಮಟಂದೂರು ಮತ್ತು ರಾಜೇಶ್ ನೈಕ್ ಎಂಬಿಬ್ಬರು ಅಪರಿಚಿತರನ್ನು ಸಂಘಪರಿವಾರವೇ ಅಭ್ಯರ್ಥಿಯಾಗಿ ನಿಲ್ಲಿಸಿತ್ತು. ‘ಇವರು ಯಾರು, ಇವರ ಯೋಗ್ಯತೆ ಏನು ಎಂದೆಲ್ಲ ಪ್ರಶ್ನಿಸಬಾರದು. ಸಂಘ ನಿಲ್ಲಿಸಿದೆ, ಆದ್ದರಿಂದ ಓಟು ಹಾಕಬೇಕು..’ ಎಂಬ ಗುಲಾಮ ಮನಸ್ಥಿತಿಯನ್ನು ಜಿಲ್ಲೆಯಲ್ಲಿ ಸಂಘಪರಿವಾರ ಈ ಮೊದಲು ಬೆಳೆಸಿತ್ತು. ಆದರೆ ಈ ಬಾರಿ ಮತದಾರರು ಅದನ್ನು ಪ್ರಶ್ನಿಸಿದ್ದಾರೆ. ಒಂದು ರೀತಿಯಲ್ಲಿ, ಕರಾವಳಿಯಲ್ಲಿ ಬಿಜೆಪಿಯ ಓಟ್ ಬ್ಯಾಂಕೇ ದನ, ನೈತಿಕ ಪೊಲೀಸ್‍ಗಿರಿಗಳು. ಆದರೆ 2012ರಲ್ಲಿ ನಡೆದ ಹೋಮ್‍ಸ್ಟೇ ದಾಳಿಯು ಕರಾವಳಿಯಲ್ಲಿ ಹೊಸ ಬಗೆಯ ಆಲೋಚನೆಗೆ ದಾರಿ ಮಾಡಿಕೊಟ್ಟಿತು. ದಾಳಿಯ ಆರೋಪದಲ್ಲಿ ಬಂಧಿತರಾದ ಬಿಲ್ಲವ, ಮುಗೇರ ಯುವಕರು ಇನ್ನೂ ಜೈಲಲ್ಲೇ ಇದ್ದಾರೆ. ಈ ಹಿಂದೆ ದನ, ನೈತಿಕತೆಯ ಹೆಸರಲ್ಲಿ ಮುಸ್ಲಿಮ್ ಯುವಕರ ಮೇಲೆ ದಾಳಿ ಮಾಡಿದವರು ಈಗಲೂ ಕೋರ್ಟಿಗೆ ಅಲೆಯುತ್ತಿದ್ದಾರೆ. ಬಹುಶಃ ಸಂಘದ ಹಿಡಿತದಿಂದ ಹೊರಬಂದು ಸ್ವತಂತ್ರವಾಗಿ ಆಲೋಚಿಸಲು ಈ ಭಾಗದ ಜನರನ್ನು ಇದುವೇ ಪ್ರೇರೇಪಿಸಿರಬೇಕು. ಇಲ್ಲದಿದ್ದರೆ, ಜಿಲ್ಲೆಯ 60 ಸಾವಿರದಷ್ಟು ಹೊಸ ಮತದಾರರು ಬಹುತೇಕ ಬಿಜೆಪಿಗೆ ವಿರುದ್ಧವಾಗಿ ಈ ಬಾರಿ ಮತ ಚಲಾಯಿಸಲು ಸಾಧ್ಯವಿತ್ತೇ? ಕಳೆದೆರಡು ದಶಕಗಳಲ್ಲಿ ಇದೇ ಮೊದಲ ಬಾರಿ ಯುವಕರು ಈ ಮಟ್ಟದಲ್ಲಿ ಬಿಜೆಪಿಯನ್ನು ತಿರಸ್ಕರಿಸಲು ಬೇರೆ ಯಾವ ಕಾರಣವಿದೆ? ಮುಸ್ಲಿಮ್ ಮತಗಳು ಕೆಲವು ಮುಸ್ಲಿಮ್ ಅಭ್ಯರ್ಥಿಗಳಲ್ಲಿ ಈ ಬಾರಿ ಈ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲೇ  ಹಂಚಿಹೋಗಿದೆ. ಹಾಗಿದ್ದೂ ಯು.ಟಿ. ಕಾದರ್, ರಮಾನಾಥ ರೈ, ಶಕುಂತಲಾ ಶೆಟ್ಟಿಯೆಲ್ಲಾ  ಈ ಹಿಂದಿಗಿಂತ ಮೂರ್ನಾಲ್ಕು ಪಟ್ಟು ಅಧಿಕ ಅಂತರದಲ್ಲಿ ಗೆದ್ದಿರುವುದು ಏನನ್ನು ಸೂಚಿಸುತ್ತದೆ? ಬಿಜೆಪಿಯನ್ನು ಅದರ ಬೆಂಬಲಿಗರೇ ಕೈ ಬಿಟ್ಟಿದ್ದಾರೆ ಎಂಬುದನ್ನಲ್ಲವೇ? ಬಿಜೆಪಿಯಿಂದ ಎಲೆಕ್ಟ್ರಿಕ್ ಕಂಭವನ್ನು ನಿಲ್ಲಿಸಿದರೂ ಗೆಲುವು ಗ್ಯಾರಂಟಿ ಎಂಬಂತಿದ್ದ ಕರಾವಳಿ ಪ್ರದೇಶದಲ್ಲಿ ಬಿಜೆಪಿ ನೆಲಕಚ್ಚಿದ್ದು ಯಡಿಯೂರಪ್ಪರಿಂದ ಖಂಡಿತ ಅಲ್ಲ. ಕಾಂಗ್ರೆಸ್‍ನಿಂದಲೂ ಅಲ್ಲ. ಹಾಗಾದರೆ ಯಾರಿಂದ? ಸಂಘಪರಿವಾರದಿಂದಲೇ, ಅದರ ನೈತಿಕ ಪೊಲೀಸ್‍ಗಿರಿಯಿಂದಲೇ, ಕೋಮು ಅಜೆಂಡಾದಿಂದಲೇ?
   ಹೋಮ್‍ಸ್ಟೇ ದಾಳಿಯ ವೇಳೆ ಯುವಕನೋರ್ವ ಹೆಣ್ಣು ಮಗಳಿಗೆ ಕಪಾಲಮೋಕ್ಷ  ಮಾಡುವ ದೃಶ್ಯ ಎಲ್ಲ ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಇದೀಗ ರಾಜ್ಯದ ಮಂದಿ ಅದನ್ನು ಬಡ್ಡಿ ಸಮೇತ  ತೀರಿಸಿದ್ದಾರೆ.
ನೆನಪಿರಲಿ ಸಿದ್ಧರಾಮಯ್ಯರೇ...

Tuesday, April 30, 2013

A ಗ್ರೇಡ್ ಪಡೆದೂ ಏಟು ತಿಂದ ಮಗಳನ್ನು ನೆನೆದು..

   “...ನನ್ನನ್ನು ಯಾವಾಗಲೂ ಕಾಡುವ ಹುಡುಗ ಆತ. ಹುಡುಗ ಅನ್ನುವುದಕ್ಕಿಂತ ಮಗು ಅನ್ನಬಹುದೇನೋ? ಇಷ್ಟಕ್ಕೂ, 8 ವರ್ಷ ಪ್ರಾಯಕ್ಕೆ ಹುಡುಗ ಎಂಬ ಪದ ಬಳಕೆಯು ಭಾರ ಆಗಬಹುದಲ್ಲವೇ? ನನ್ನ ವೃತ್ತಿ ಬದುಕಿನಲ್ಲಿ ಅಂಥದ್ದೊಂದು ವಿದ್ಯಾರ್ಥಿಯನ್ನು ನಾನು ಕಂಡೇ ಇಲ್ಲ. ಆತನ ಮುಖದಲ್ಲಿ ನಗುವನ್ನು ಪತ್ತೆ ಹಚ್ಚಲು ನನಗೆ ಈ ವರೆಗೂ ಸಾಧ್ಯವಾಗಿಲ್ಲ. ನಗುವೇ ಇಲ್ಲದ ಮಗು ಆತ. ಬೆಳಗ್ಗೆ ಬಂದು ಕ್ಲಾಸಲ್ಲಿ ಕೂತರೆ ಸಂಜೆ ಮನೆಗೆ ಹೋಗುವ ವರೆಗೂ ಮುಖ ಬಿಗಿದುಕೊಂಡೇ ಇರುತ್ತಿದ್ದ. ಭಯ, ನಿರಾಶೆ, ನಿರ್ವಿಕಾರ ತುಂಬಿದ ಮುಖ. ಬಿಸಿಲಿನಲ್ಲಿ ಆಟ ಆಡಿದ ಕಾರಣದಿಂದಾಗಿ ಮುಖ ಕೆಂಪು ಕೆಂಪಾಗಿದ್ದರೂ ತುಟಿಗಳನ್ನು ಕಚ್ಚಿ ಹಿಡಿದೇ ಕ್ಲಾಸಲ್ಲಿ ಕೂರುತ್ತಿದ್ದ. 8 ವರ್ಷದ ಮಕ್ಕಳೆಲ್ಲಾ ಹೀಗಿರುತ್ತಾರಾ? ನಗು, ಹರಟೆ, ತಮಾಷೆ, ಜಗಳಗಳೆಲ್ಲ ಆ ಪ್ರಾಯದಲ್ಲಿ ಸಾಮಾನ್ಯ ತಾನೇ? ಹೀಗಿರುವಾಗ, ಈ ಮಗು ಮಾತ್ರ ನಗುವುದನ್ನೇ ಮರೆತಂತೆ, ತುಟಿ ಬಿಗಿ ಹಿಡಿದು ಪಾಠ ಕೇಳುವುದನ್ನು ನಾನು ಗಮನಿಸುತ್ತಲೇ ಇದ್ದೆ. ಹಾಗಂತ, ನನ್ನ ಜೊತೆ ಕ್ಲಾಸಿನಲ್ಲಿ ಮುಕ್ತವಾಗಿ ಬೆರೆಯದಂತೆ ಮಕ್ಕಳನ್ನು ನಾನು ನಿರ್ಬಂಧಿಸಿಟ್ಟಿದ್ದೇನೆ ಎಂದಲ್ಲ. ನನ್ನ ಸೀರೆಯ ಸೆರಗು ಹಿಡಿದು ಮಕ್ಕಳು ಆಡುವಷ್ಟು ನಾನು ಕ್ಲಾಸಿನಲ್ಲಿ ಮಗುವಾಗುತ್ತಿದ್ದೆ. ಮಕ್ಕಳ ನಗು, ಹರಟೆ, ಮುದ್ದು ಮಾತುಗಳನ್ನೆಲ್ಲ ಅನುಭವಿಸುವ ಮನಸ್ಸನ್ನೂ ಹೊಂದಿದ್ದೆ. ಆದರೂ ನಾನು ಈ ಮಗುವಿನ ಮನಸ್ಸಿನೊಳಗೆ ಇಣುಕಿ ನೋಡುವ ಪ್ರಯತ್ನವನ್ನು ಮಾಡಿಯೇ ಇಲ್ಲ. ಬಹುಶಃ ನನ್ನ ಅಸಡ್ಡೆಯೋ, ಕೆಲಸದ ಒತ್ತಡವೋ ಅಥವಾ ಇನ್ನೇನೋ ಕಾರಣಗಳನ್ನು ಕೊಟ್ಟರೂ ಅದು ಸಮರ್ಥನೆ ಆಗದು ಎಂಬುದು ನನಗೆ ಗೊತ್ತು. ಆ ಮಗುವಿನ ಮಟ್ಟಿಗೆ ನಾನು ತಪ್ಪು ಮಾಡಿದೆನೋ ಎಂಬೊಂದು ಅಳುಕು ಈಗಲೂ ನನ್ನನ್ನು ಕಾಡುತ್ತಿದೆ. ಆ ಮಗುವಿಗೆ ಹೋಲಿಸಿದರೆ ಆತನ ಅಣ್ಣ ತುಂಬಾ ಹುಷಾರು. ಪ್ರತಿದಿನ ತಾಯಿಯೊಂದಿಗೆ ಬರುವ ಈತ ಮಾತ್ರ ಹೀಗೆ..
   ಪ್ರಾಥಮಿಕ ಶಾಲೆಯ ಅಧ್ಯಾಪಕಿ ಮಿಣಿ ಹೇಳುತ್ತಾ ಹೋಗುತ್ತಾರೆ..
ಮಕ್ಕಳು ಅಧ್ಯಾಪಕರನ್ನು ಅತ್ಯಂತ ಹೆಚ್ಚು ಹಚ್ಚಿಕೊಳ್ಳುವುದು ಯಾವಾಗ ಗೊತ್ತೇ? ಪ್ರೈಮರಿಯಲ್ಲಿ. ತಾಯಿಯ ಮಡಿಲಿನಿಂದ ಆಗಷ್ಟೇ ಎದ್ದು ಬರುವ ಮಕ್ಕಳಿಗೆ ಅಧ್ಯಾಪಕಿಯು ತಾಯಿಯಂತೆ ಕಾಣುವುದರಲ್ಲಿ ಅಚ್ಚರಿಯೇನೂ ಅಲ್ಲ. ಆ ವರೆಗೆ ಮಕ್ಕಳು ಮನೆಯಲ್ಲಿ ತಾಯಿಯೊಂದಿಗೇ ಬೆಳೆದಿರುತ್ತಾರೆ. ಇದೀಗ ಬೆಳಗ್ಗಿನಿಂದ ಸಂಜೆಯ ತನಕ ತಾಯಿಯಿಂದ ಬೇರ್ಪಟ್ಟು ಬದುಕುವ ಸಂದರ್ಭ ಬಂದಾಗ ಮಗು ಆ ವಾತಾವರಣಕ್ಕೆ ಹೊಂದಿಕೊಳ್ಳಲು ಚಡಪಡಿಸುತ್ತದೆ. ತಾಯಿ ಸಿಗದೇ ಹೋದಾಗ ಅದು ಅಧ್ಯಾಪಕಿಯಲ್ಲಿ ಆ ತಾಯಿಯನ್ನು ಹುಡುಕತೊಡಗುತ್ತದೆ. ಅಧ್ಯಾಪಕಿಯು ತಾಯಿಯಂತೆಯೇ ಪ್ರೀತಿ, ಕಕ್ಕುಲತೆ, ಅಲಿಂಗನ ಮಾಡಬೇಕೆಂದು ಅದು ಬಯಸುತ್ತದೆ. ಅಂದಹಾಗೆ, ಅಧ್ಯಾಪಕಿ ಹತ್ತಿರ ಕರೆದರೆ, ಮಗು ದೂರ ನಿಲ್ಲುವುದು ಕಡಿಮೆ. ಅಧ್ಯಾಪಕಿಗೆ ಚಾಚಿಕೊಂಡೋ ಅವರ ಮೇಲೆ ಭಾರ ಹಾಕಿಯೋ ಅವು ನಿಲ್ಲುತ್ತವೆ. ಯಾಕೆ ಹೀಗೆ ಎಂದರೆ, ತಾಯಿಯೊಂದಿಗಿನ ವರ್ತನೆಯ ಗುಂಗಿನಿಂದ ಅದು ಹೊರಬಂದಿರುವುದಿಲ್ಲ. ಶಾಲೆಯಲ್ಲೂ ಅದಕ್ಕೆ ಓರ್ವ ತಾಯಿ ಬೇಕು ಅಥವಾ ಹಾಗೆ ಪ್ರೀತಿಸುವ ಅಧ್ಯಾಪಕಿ ಬೇಕು. ಆದರೆ ಮಗು ಬೆಳೆಯುತ್ತಾ ಹೋದಂತೆ ಅಧ್ಯಾಪಕರೊಂದಿಗೆ ಅಂತರವೂ ಹೆಚ್ಚುತ್ತಾ ಹೋಗುತ್ತದೆ. ಅಧ್ಯಾಪಕಿ ಮತ್ತು ತಾಯಿಯ ನಡುವಿನ ಅಂತರ, ಸಂಬಂಧಗಳಲ್ಲಿನ ವ್ಯತ್ಯಾಸಗಳನ್ನು ಮಗು ತಿಳಿಯುತ್ತಾ, ಪಾಲಿಸುತ್ತಾ ಬೆಳೆಯುತ್ತದೆ.
   ‘..ನಾನು ಪ್ರಸವ ರಜೆಯನ್ನು ಪಡಕೊಂಡು ಶಾಲೆಯಿಂದ ಹೊರಬಂದೆ. ಮೆಟ್ಟಿಲು ಇಳಿಯುವಾಗ ಮನಸ್ಸು ಭಾರವಾಗುತ್ತಿತ್ತು. ನನ್ನ ಜಾಗಕ್ಕೆ ತಾತ್ಕಾಲಿಕವಾಗಿ ಇನ್ನೋರ್ವ ಅಧ್ಯಾಪಕರನ್ನು ನೇಮಿಸಲಾಗಿತ್ತು. ನಾನು ನನ್ನ ಮಗುವಿನೊಂದಿಗೆ ಮಗುವಾದೆ. 6 ತಿಂಗಳು ಹೇಗೆ ಕಳೆಯಿತೆಂಬುದೇ ಗೊತ್ತಾಗಲಿಲ್ಲ. ಮತ್ತೆ ಕೆಲಸಕ್ಕೆ ಸೇರಿಕೊಂಡೆ. ಸ್ಟಾಫ್ ರೂಮ್‍ಗೆ ಹೋಗುವಾಗ ಅಲ್ಲಿಂದ  ಜೋರಾದ ನಗು ಕೇಳಿ ಬರುತ್ತಿತ್ತು. ನಡುನಡುವೆ ಆ ಮಗುವಿನ ಹೆಸರೂ. ನಾನು ಕುತೂಹಲಗೊಂಡೆ. ಆ ನಗದ ಮಗುವಿನ ಬಗ್ಗೆ ಮಾಹಿತಿಗಳನ್ನು ಕೇಳಿದೆ. ಮಗು ತಲೆ ಸುತ್ತು, ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿರುವ ಸಂಗತಿಯನ್ನು ಸಹ ಅಧ್ಯಾಪಕಿ ನನಗೆ ವಿವರಿಸಿದರು. ಕ್ಲಾಸಿನಲ್ಲಿ ಇರುವಾಗಲೇ ಎಷ್ಟೋ ಬಾರಿ ತಲೆ ಸುತ್ತು ಬಂದು, ವಾಂತಿ ಮಾಡಿಕೊಂಡ ಕತೆ. ಹೆತ್ತವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿದ ಕತೆ. ಹಲವು ವೈದ್ಯರುಗಳಿಗೆ ತೋರಿಸಿದರೂ ರೋಗ ಏನೆಂದೇ ಗೊತ್ತಾಗದೇ, ಅನಾರೋಗ್ಯ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗದೇ ಪರೀಕ್ಷೆಗಳು, ಸ್ಕ್ಯಾನಿಂಗ್‍ಗಳ ವರದಿಗಳೊಂದಿಗೆ ಕ್ಲಿನಿಕ್‍ಗಳಿಗೆ ಅಲೆದಾಡಿದ ಅಪ್ಪನ ಕತೆ. ಮಗುವಿನಿಂದಾಗಿ ದುಡಿಯಲೂ ಆಗದೇ ಒದ್ದಾಡುವ ಹೆತ್ತವರ ಕತೆ. ಕೊನೆಗೆ, ಯಾವ ರೋಗ ಲಕ್ಷಣಗಳೂ ಕಾಣಿಸದಾದಾಗ ಮಾನಸಿಕ ತಜ್ಞ(ಸೈಕ್ರಿಯಾಟ್ರಿಸ್ಟ್)ರಿಗೆ ತೋರಿಸುವಂತೆ ವೈದ್ಯರು ಸಲಹೆ ಮಾಡಿದ್ದು, ಆ ಮಗು ಮತ್ತು ಹೆತ್ತವರೊಂದಿಗೆ ಮಾನಸಿಕ ತಜ್ಞರು ದೀರ್ಘ ಸಮಯ ಮಾತಾಡಿದ್ದು ಹಾಗೂ, ‘ಈ ಮಗುವಿನ ಟೀಚರ್ ಮರಳಿ ಶಾಲೆಗೆ ಬಂದ ಬಳಿಕವೂ ಈ ರೋಗ ಕಾಣಿಸಿಕೊಂಡರೆ ನನ್ನ ಬಳಿಗೆ ಬನ್ನಿ..' ಎಂದು ಅವರು ಹೇಳಿ ಕಳುಹಿಸಿದ್ದು.. ಎಲ್ಲವನ್ನೂ ಸಹ ಅಧ್ಯಾಪಕರು ನನಗೆ ವಿವರಿಸಿದರು. ಮರುದಿನ ನಾನು ಶಾಲೆಗೆ ಹೋದಾಗ ಆ ತಾಯಿ ಭಾರೀ ನಿರೀಕ್ಷೆಯೊಂದಿಗೆ ನನ್ನನ್ನು ಕಾದು ನಿಂತಿದ್ದರು. ಆಕೆಗೆ ಹೇಳಿಕೊಳ್ಳುವುದಕ್ಕೆ ಧಾರಾಳ ವಿಷಯಗಳಿದ್ದುವು. ಆಕೆಯ ಜೊತೆಗಿದ್ದ ಮಗನಾದರೋ ಈ ಹಿಂದಿನಂತೆಯೇ ಬಿಗಿದ ಮುಖದೊಂದಿಗೆ ತಣ್ಣಗೆ ಇದ್ದ. ನಾನು ಇಲ್ಲದಿದ್ದ ಸಂದರ್ಭದಲ್ಲಿ ಅನುಭವಿಸಿದ ತೊಂದರೆಗಳನ್ನು ಆ ತಾಯಿ ಪಟ್ಟಿ ಮಾಡಿ ಹೇಳತೊಡಗಿದರು. ಮಗುವಿನ ರೋಗಕ್ಕಾಗಿ ಕಣ್ಣೀರಾದರು. ಇನ್ನೂ ಈ ರೋಗ ಹೀಗೆಯೇ ಮುಂದುವರಿದರೆ ಇಲ್ಲಿಂದ TC  ಪಡಕೊಂಡು ಬೇರೆ ಸ್ಕೂಲಿಗೆ ಹೋಗುವುದು ಇಲ್ಲವೇ ಒಳ್ಳೆಯ ಆಸ್ಪತ್ರೆಯಲ್ಲಿ ತಪಾಸಿಸಿ ಚಿಕಿತ್ಸೆ ನಡೆಸುವುದು.. ಇವೆರಡೇ ನನ್ನ ಮುಂದಿರುವ ಆಯ್ಕೆಗಳು ಎಂದು ಅವರು ಕಣ್ಣೀರು ತುಂಬಿ ಹೇಳಿದರು. ನಾನೂ ಒಮ್ಮೆ ಬೆವೆತು ಹೋದೆ. ಯಾಕೆ ಹೀಗೆ, ಏನಾಗಿರಬಹುದು ಎಂಬುದು ನನ್ನ ಅಂದಾಜಿಗೂ ಹೊಳೆಯಲಿಲ್ಲ. ಆದರೂ ಧೈರ್ಯ ತಂದುಕೊಂಡೆ. ‘ಇರಲಿ ಏನೂ ಆಗಲ್ಲ. ನೀವು ಹೋಗಿ..' ಎಂದು ಬೆನ್ನು ತಟ್ಟಿ ಅವರನ್ನು ಬೀಳ್ಕೊಟ್ಟೆ. ಕ್ಲಾಸಿಗೆ ಹೋದೆ. ನಂಬಲಾಗಲಿಲ್ಲ. ಆತ ಆ ಹಳೆಯ ಮಗುವೇ. ಆವತ್ತು ಮಾತ್ರವಲ್ಲ, ಉಳಿದ ಎಲ್ಲ ದಿನಗಳಲ್ಲೂ ಆತ ಯಾವ ರೋಗ ಲಕ್ಷಣಗಳೂ ಇಲ್ಲದೇ ಈ ಹಿಂದಿನಂತೆಯೇ ಕಾಣಿಸಿಕೊಂಡ. ವಾಂತಿಯೂ ಇಲ್ಲ. ತಲೆ ಸುತ್ತೂ ಇಲ್ಲ..
   ಈ ಘಟನೆ ನಡೆದು 5 ವರ್ಷಗಳೇ ಕಳೆದಿವೆ. ನಾನೀಗ ಆ ಸ್ಕೂಲಿನಲ್ಲೂ ಇಲ್ಲ. ಬೇರೆಡೆ ವರ್ಗವಾಗಿ ಹೋಗಿದ್ದೇನೆ. ಆದರೆ ಅಧ್ಯಾಪಕ ವೃತ್ತಿಯಲ್ಲಿ ಒಂದು ಪಾಠವಾಗಿ ಈಗಲೂ ಅದು ನನ್ನ ಮನಸ್ಸಿನಲ್ಲಿದೆ. ಒಂದು ಪ್ರೈಮರಿ ಸ್ಕೂಲಿನ ಮಗುವಿಗೆ ಅಧ್ಯಾಪಕಿ ಯಾರಾಗಿರಬೇಕು ಎಂಬ ಪಾಠ. ಆದರೂ ಈ ಸಂದರ್ಭದಲ್ಲಿ ನನ್ನ ಹೃದಯ ಭಾರವಾಗುತ್ತದೆ. ಕಣ್ಣು ತುಂಬುತ್ತದೆ. ಯಾಕೆಂದರೆ, ಆ ಮಗು ನನ್ನಲ್ಲಿ ಇಟ್ಟಿದ್ದ ವಿಶ್ವಾಸ ಮತ್ತು ಪ್ರೀತಿಯನ್ನು ಅಷ್ಟೇ ತೀವ್ರತೆಯಿಂದ ಮರಳಿಸಿಕೊಡಲು ನನ್ನಿಂದ ಸಾಧ್ಯವಾಗಿಲ್ಲ ಎಂಬುದಕ್ಕಾಗಿ. ನೀನು ಒಳ್ಳೆಯ ವಿದ್ಯಾರ್ಥಿ ಮಗು ಎಂದು ತಲೆ ನೇವರಿಸಿ
ಹೇಳುವ ಪ್ರಯತ್ನ ಮಾಡಿಲ್ಲ ಎಂಬುದಕ್ಕಾಗಿ..'
   ಕೇರಳದ ಮಿಣಿ ಎಂಬ ಈ ಅಧ್ಯಾಪಕಿಯು ಕಳೆದವಾರ ಬಿಚ್ಚಿಟ್ಟ ಈ  ಸಂಗತಿಗಳನ್ನು ಓದುತ್ತಾ ಹೋದಂತೆ ಮಿತ್ರ ರಾಘವೇಂದ್ರ ಹೆಬ್ಬಾರ್ ನೆನಪಾದರು. ತಮ್ಮ ಪಕ್ಕದ ಮನೆಯಲ್ಲಿ ನಡೆದ ಘಟನೆಯನ್ನು ಅವರು ಎಪ್ರಿಲ್ 11ರಂದು ಹೀಗೆ ಹಂಚಿಕೊಂಡಿದ್ದರು.
   49, 48, 47, 48, 46, 48.. ಇಷ್ಟು ಅಂಕಗಳನ್ನು ಪಡೆದ 4ನೇ ತರಗತಿಯ ಮಗಳಿಗೆ ಅಪ್ಪ ಬೆಲ್ಟ್ ನಿಂದ ಹೊಡೆಯುತ್ತಿದ್ದರು. ಆಕೆ ಜೋರಾಗಿ ಅಳುತ್ತಿದ್ದಳು. ಹಾಗಂತ ಈ ಮಗು ಇಷ್ಟು ಅಂಕಗಳನ್ನು ಪಡೆದದ್ದು ಒಟ್ಟು 100 ಮಾರ್ಕ್ಸ್ ನ ಪ್ರಶ್ನೆಪತ್ರಿಕೆಯಲ್ಲಿ ಎಂದು ಭಾವಿಸಬೇಡಿ. 50 ಅಂಕಗಳ ಒಟ್ಟು 6 ಪ್ರಶ್ನೆ ಪತ್ರಿಕೆಗಳಲ್ಲಿ ಆ ಮಗು ಪಡೆದ ಅಂಕಗಳವು. ಒಟ್ಟು 300ರಲ್ಲಿ 286 ಅಂಕ ಗಳನ್ನು ಪಡೆದ ಬಳಿಕವೂ ಮಗುವಿಗೆ ಏಟು ತಪ್ಪಲಿಲ್ಲ. 5 ವಿಷಯಗಳಲ್ಲಿA  ಮತ್ತು ಒಂದರಲ್ಲಿA+ ಗ್ರೇಡನ್ನು ಆ ಮಗು ಪಡೆದಿತ್ತು. ಇಷ್ಟಿದ್ದೂ ಏಟು ಯಾಕೆಂದರೆ, ಎಲ್ಲ ವಿಷಯಗಳಲ್ಲೂA+ ಬರಲೇಬೇಕೆಂದು ಅವಳ ಹೆತ್ತವರು ತಾಕೀತು ಮಾಡಿದ್ದರು. ಸಂಜೆ ತನ್ನ ಕೈ ಮತ್ತು ಕಾಲಿಗಾದ ಗಾಯವನ್ನು ಮಗು ತೋರಿಸಿದಾಗ ಮಿತ್ರ ಹೆಬ್ಬಾರರು ಕಂಗಾಲಾದರು..’
   ಮಕ್ಕಳನ್ನು ಮಕ್ಕಳಾಗಿ ಅನುಭವಿಸುವುದಕ್ಕೆ, ಅವರನ್ನು ಅವರ ಮಾರ್ಕು, ಸೌಂದರ್ಯ, ಜಾಣತನ, ಚುರುಕುತನಗಳ ಹೊರತಾದ ಕಾರಣಕ್ಕಾಗಿಯೂ ಪ್ರೀತಿಸುವುದಕ್ಕೆ ಹೆತ್ತವರು, ಅಧ್ಯಾಪಕರು ಅಥವಾ ಒಟ್ಟು ಸಮಾಜ ವಿಫಲವಾಗುತ್ತಲೇ ಇವೆ ಎಂಬುದನ್ನು ಇಂಥ ಹತ್ತು-ಹಲವು ಘಟನೆಗಳು ನಿತ್ಯ ಸಾಬೀತುಪಡಿಸುತ್ತಲೇ ಇವೆ. ದುರಂತ ಏನೆಂದರೆ, ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಮಕ್ಕಳಾಗಿ ಬೆಳೆಯುವುದಕ್ಕೆ ಅನೇಕ ಹೆತ್ತವರು ಅವಕಾಶವನ್ನೇ ಕೊಡುತ್ತಿಲ್ಲ ಎಂಬುದು. ತಮ್ಮ ಮಕ್ಕಳನ್ನು ಅಂಕದ ಕೋಳಿಯಂತೆ ಸ್ಪರ್ಧೆಗೆ ಸಜ್ಜುಗೊಳಿಸುವಲ್ಲಿ ಹೆಚ್ಚಿನೆಲ್ಲ ಪಾಲಕರು ಬ್ಯುಝಿಯಾಗಿ ಬಿಟ್ಟಿದ್ದಾರೆ. ತಾರೆ ಝಮೀನ್ ಪರ್, ವೇಕ್ ಅಪ್ ಸಿದ್‍ನಂಥ ಚಿತ್ರಗಳು, ಟೋಟೊ ಚಾನ್‍ನಂಥ ಕಾದಂಬರಿಗಳು ಈ ಮನಸ್ಥಿತಿಯನ್ನು ಬದಲಿಸಲು ಶ್ರಮಿಸಿವೆಯಾದರೂ ಅವುಗಳ ಪರಿಣಾಮ ಒಂದು ಹಂತದ ವರೆಗಷ್ಟೇ ಆಗಿವೆ. ಹೆಚ್ಚು ಅಂಕ ಯಾರು ಪಡೆಯುತ್ತಾರೋ ಅವರೇ ಅತ್ಯಂತ ಪ್ರತಿಭಾವಂತರು ಎಂಬ ನಂಬುಗೆ ಈಗಲೂ ಹೆಚ್ಚಿನ ಎಲ್ಲ ಪಾಲಕರಲ್ಲೂ ಇವೆ. ಸಮಾಜದ ನಿಲುವೂ ಬಹುತೇಕ ಹೀಗೆಯೇ. ಹಾಗಂತ ಎಲ್ಲ ಮಕ್ಕಳಿಗೂA+ ಗ್ರೇಡನ್ನೇ ಪಡೆಯಲು ಸಾಧ್ಯವಿದೆಯೇ? ಎಲ್ಲ ಮಕ್ಕಳೂ ಅತಿ ಬುದ್ಧಿವಂತರೂ ಜಾಣರೂ ಚುರುಕಿನವರೂ ಆಗಿರುತ್ತಾರಾ? ಪ್ರತಿಯೊಂದು ಮಗುವಿಗೂ ಅದರದ್ದೇ ಆದ ಇತಿ-ಮಿತಿಗಳೂ ಸಾಮರ್ಥ್ಯ -ಅಸಾಮರ್ಥ್ಯಗಳೂ ಇರುತ್ತವಲ್ಲವೇ? ಮಗುವಿನ ಸಾಮರ್ಥ್ಯ, ಒಲವುಗಳನ್ನು ನೋಡಿಕೊಂಡು ಅದಕ್ಕೆ ಪೂರಕವಾಗಿ ಕಾರ್ಯ ಯೋಜನೆಯನ್ನು ರೂಪಿಸಲು ಹೆತ್ತವರು ಮತ್ತು ಶಿಕ್ಷಕರು ಯಾಕೆ ಪದೇಪದೇ ವಿಫಲವಾಗುತ್ತಿದ್ದಾರೆ? ಕಲಿಕೆಯನ್ನೇಕೆ ನಾವು ‘ಕಷ್ಟ'ವಾಗಿ ಮಾರ್ಪಡಿಸಿ ಬಿಟ್ಟಿದ್ದೇವೆ? ಅದನ್ನು ಅನುಭವಿಸುತ್ತಾ, ಆಟದಂತೆ ಪ್ರೀತಿಸುತ್ತಾ ಬೆಳೆಯುವ ಒಂದು ವಾತಾವರಣವನ್ನು ನಾವೇಕೆ ತಯಾರಿಸುತ್ತಿಲ್ಲ? ಮಕ್ಕಳ ಆಸಕ್ತಿ, ನಿಲುವು, ಮಾತುಗಳೆಲ್ಲ ದೊಡ್ಡವರ ಆಸಕ್ತಿ, ಮಾತುಗಳಂತೆ ಇರಬೇಕೆಂದಿಲ್ಲವಲ್ಲ. ಮಕ್ಕಳು ಮಕ್ಕಳಂತಾಡದೆ ದೊಡ್ಡವರಂತಾಡಬೇಕೆಂದು ನಾವು ಬಯಸುವುದಾದರೂ ಏಕೆ? ಅವರ ಬಾಲ್ಯವನ್ನು ನಮ್ಮ ಉದ್ದೇಶದ ಈಡೇರಿಕೆಗಾಗಿ ಕಸಿಯುತ್ತೇವಲ್ಲ, ಸರಿಯೇ? ನ್ಯಾಯವೇ?
   ತನ್ನ ತರ್ಲೆ ಬುದ್ಧಿಗಾಗಿ ಒಂದನೇ ಕ್ಲಾಸಿನಿಂದ ಉಚ್ಛಾಟನೆಗೊಂಡ ಟೋಟೋಚಾನ್‍ನನ್ನು ಅದ್ಭುತ ವ್ಯಕ್ತಿಯಾಗಿ ಬೆಳೆಸುವ ಸಸುಕು ಕೊಬೆಯಾಚಿ ಎಂಬ ಮುಖ್ಯೋಪಾಧ್ಯಾಯಿನಿ, ನಗದ ಮಗುವನ್ನು ಅಪಾರವಾಗಿ ಪ್ರೀತಿಸಿದ ಅನಾಮಧೇಯ ಹೆತ್ತವರು ಮತ್ತು ಮಿಣಿ ಎಂಬ ಆ ಟೀಚರ್.. ಇಂಥವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾದರೆ ಅದೆಷ್ಟು ಚೆನ್ನ, ಅಲ್ಲವೇ?