Monday, May 27, 2013

ಹಾಗಾದರೆ, ಅವರೆಲ್ಲ ಸ್ವಾತಂತ್ರ್ಯದಿಂದ ಬಂಧನದ ಕಡೆಗೆ ಸಾಗಿದರೆಂದು ಹೇಳುತ್ತೀರಾ?

ಇವಾನ್ ರಿಡ್ಲಿ
   “ಯಹೂದಿ ಧರ್ಮದ ಹಳೆ ಒಡಂಬಡಿಕೆ ಮತ್ತು ಕ್ರೈಸ್ತ ಧರ್ಮದ ಬೈಬಲ್‍ನಲ್ಲಿ ಮಹಿಳೆಯರ ಮೇಲೆ ಹೇರಲಾಗಿರುವ ನಿಯಂತ್ರಣಗಳಿಗೆ ಹೋಲಿಸಿದರೆ ಕುರ್‍ಆನನ್ನು ಅಪರಾಧಿಯಾಗಿ ನೋಡಬೇಕಾದ ಅಗತ್ಯವೇನೂ ಇಲ್ಲ. ಈ ವಿಷಯದಲ್ಲಿ ಮೊದಲೆರಡು ಸ್ಥಾನಗಳು ಈ ಧರ್ಮಗಳಿಗೇ ಸಲ್ಲಬೇಕು. ಅಲ್ಲದೇ ಪರ್ದಾವನ್ನು (ಮೈ ಮುಚ್ಚುವ ಉಡುಪು) ಈ ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ್ದು ಕುರ್‍ಆನ್ ಅಲ್ಲ. ಅದು ಪುರಾತನ ಸಂಸ್ಕ್ರಿತಿಯ ಭಾಗವೇ ಆಗಿತ್ತು. ಕುರ್‍ಆನ್ ಅದಕ್ಕೆ ಮಾನ್ಯತೆಯನ್ನಷ್ಟೇ ಕೊಟ್ಟಿದೆ.."
   ಹಾಗಂತ 90ರ ದಶಕದ ಆರಂಭದಲ್ಲಿ ಈಜಿಪ್ಟ್ ನ ಪ್ರಸಿದ್ಧ ಮಹಿಳಾವಾದಿ (Feminist) ಡಾ| ನವಲ್ ಸದಾವಿ ಅಭಿಪ್ರಾಯ ಪಟ್ಟದ್ದು ಮಹಿಳಾ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದುವು. ಪಾಶ್ಚಾತ್ಯ ರಾಷ್ಟ್ರಗಳ ಮಹಿಳಾ ವಾದಿಗಳು ಈ ಅಭಿಪ್ರಾಯದ ಸುತ್ತ ಸಾಕಷ್ಟು ಚರ್ಚಿಸಿದರು. ಸಭೆಗಳು ನಡೆದುವು. ವಿಚಾರಗೋಷ್ಠಿಗಳು ಏರ್ಪಟ್ಟುವು. ಇಷ್ಟಕ್ಕೂ, ಸದಾವಿಯ ನಿಲುವಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಗಲು ಕಾರಣ ಏನೆಂದರೆ, ಆಕೆಗೆ ಈಜಿಪ್ಟ್ ನಲ್ಲಿ ಮಾತ್ರವಲ್ಲ ಜಾಗತಿಕವಾಗಿಯೇ ಒಂದು ಬಗೆಯ ವರ್ಚಸ್ಸು ಇತ್ತು. ಮುಸ್ಲಿಮರೇ ಹೆಚ್ಚಿರುವ ಈಜಿಪ್ಟ್ ನಲ್ಲಿ ಕುರ್‍ಆನನ್ನು ವಿಮರ್ಶಿಸುತ್ತಾ, ಮಹಿಳಾ ವಾದವನ್ನು ಪ್ರತಿಪಾದಿಸುತ್ತಾ ಇದ್ದುದು ಆಕೆಯನ್ನು ಪ್ರಸಿದ್ಧಿಗೆ ಒಯ್ದಿತ್ತು. ಆದ್ದರಿಂದಲೇ, ‘ಮಹಿಳೆ ಮತ್ತು ಸಾಮರ್ಥ್ಯ’ ಎಂಬ ವಿಷಯದಲ್ಲಿ ಕೆನಡದ ಟೊರೊಂಟೋದಲ್ಲಿ ವಿಚಾರಗೋಷ್ಠಿ ನಡೆಯಿತು. 'ವಿಶ್ವ ತಾಯಂದಿರ ವೇದಿಕೆ' ಎಂಬ ಸಂಘಟನೆಯ ಅಧ್ಯಕ್ಷೆ ಬರ್ನಿಸ್ ಡುಬೋಯಿಸ್ ಮತ್ತು ಇಸ್ರೇಲಿನ ಮಹಿಳಾ ಹೋರಾಟಗಾರ್ತಿ ಅಲೀಸ್ ಶೆಲ್ವಿಯವರು ಈ ವಿಚಾರಗೋಷ್ಠಿಯಲ್ಲಿ ಸದಾವಿಯ ಹೇಳಿಕೆಯನ್ನು ಬಲವಾಗಿ ಖಂಡಿಸಿದರು. ವಿಚಾರಗೋಷ್ಠಿಯಲ್ಲಿ ಗದ್ದಲ, ಗೊಂದಲವೇ ಉಂಟಾಯಿತು. ಮಾತ್ರವಲ್ಲ, ಅಲ್ಲಿ ನಡೆದ ಒಟ್ಟು ಚರ್ಚೆಯ ಸುತ್ತ ಗ್ಯಾನೆ ಡೈಯರ್ ಎಂಬವರು, ‘Islam is not alone in patriarchal doctrines’ ಎಂಬ ಶೀರ್ಷಿಕೆಯಲ್ಲಿ 1990 ಜುಲೈ 3ರಂದು ಟೊರೊಂಟೊ ಸ್ಟಾರ್ ನ್ಯೂಸ್ ಪತ್ರಿಕೆಯಲ್ಲಿ ಲೇಖನ ಬರೆದರು. ಇದಾಗಿ 23 ವರ್ಷಗಳ ಬಳಿಕ ಮೊನ್ನೆ 2013  ಮೇ 24ರಂದು ದಿ ಹಿಂದೂ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಿದೆ. ‘ನಿರ್ವಾತದಲ್ಲಿ ಅಲ್ಲಾಹನನ್ನು ಹುಡುಕುತ್ತಾ..’ (Seeking Allah in the Midlands) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ಲೇಖನದ ಬೈಲೈನ್ ಹೀಗಿತ್ತು-
Of the thousands of white Britons embracing Islam every year, most are thought to be professionally successful, independent- minded women, says study  - ‘ಬ್ರಿಟನ್ನಿನಲ್ಲಿ ಪ್ರತಿ ವರ್ಷ ಸಾವಿರಾರು ಬಿಳಿಯರು ಇಸ್ಲಾಮ್ ಸ್ವೀಕರಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಒಳ್ಳೆಯ ಉದ್ಯೋಗ- ದುಡ್ಡು ಇರುವ, ಸ್ವತಂತ್ರ ಮನೋಸ್ಥಿತಿಯ ಮಹಿಳೆಯರಾಗಿದ್ದಾರೆ’..
  ಲಾರೆನ್ ಬೂತ್
  ಇವಾನ್ ರಿಡ್ಲಿ
  ಅನಿಸಾ ಅಟ್‍ಕಿನ್ಸನ್
  ಕ್ರಿಸ್ಟಿಯಾನಾ ಬೇಕರ್
  ಕ್ಯಾರೋಲಿನ್ ಬೇಟ್
‘ಇಸ್ಲಾಮ್ ಸ್ವೀಕರಿಸಿದವರ ವೃತ್ತಾಂತಗಳು’ (Narratives of conversion to Islam) ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಇಸ್ಲಾಮಿಕ್ ಸ್ಟಡೀಸ್ (CIS) ಮತ್ತು ಲೀಸೆಸ್ಟರ್ ಮೂಲದ ನ್ಯೂ ಮುಸ್ಲಿಮ್ಸ್ ಪ್ರೊಜೆಕ್ಟ್ ಎಂಬ ಸಂಸ್ಥೆಗಳು ಹೊರತಂದ 129 ಪುಟಗಳ ವರದಿಯಲ್ಲಿ ಈ ಮೇಲಿನವರ ಸಹಿತ ಹತ್ತಾರು ಮಂದಿಯ ಅನುಭವ ಕಥನಗಳಿವೆ. ಅಂದಹಾಗೆ, ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್‍ನ ಸೊಸೆ ಲಾರೆನ್ ಬೂತ್, ಅಫಘಾನ್ ಯುದ್ಧದ ಸಂದರ್ಭದಲ್ಲಿ ಮಾರುವೇಷದಲ್ಲಿ ತೆರಳಿ ಯುದ್ಧದ ಪ್ರತ್ಯಕ್ಷ  ವರದಿಯನ್ನು ಮಾಡಲು ಪ್ರಯತ್ನಿಸಿ ಸುದ್ದಿಗೀಡಾದ ಪತ್ರಕರ್ತೆ ಇವಾನ್ ರಿಡ್ಲಿ, MTV  ಉದ್ಘೋಷಕಿ ಕ್ರಿಸ್ಟಿಯಾನಾ ಬೇಕರ್.. ಇವರೆಲ್ಲ ಆಮಿಷಕ್ಕೆ ಒಳಗಾಗುವ ದುರ್ಬಲ ಮಹಿಳೆಯರೇನೂ ಅಲ್ಲವಲ್ಲ. ಅವರಲ್ಲಿ ಪ್ರತಿಭೆ ಇದೆ. ಉದ್ಯೋಗ ಇದೆ, ದುಡ್ಡೂ ಇದೆ. ಇಷ್ಟಿದ್ದೂ ಅವರೆಲ್ಲ ಇಸ್ಲಾಮನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಏನು ಕಾರಣ? ‘ಬ್ರಿಟನ್‍ನಲ್ಲಿ ಪ್ರತಿವರ್ಷ 50 ಸಾವಿರದಷ್ಟು ಮಂದಿ ಇಸ್ಲಾಮ್ ಸ್ವೀಕರಿಸುತ್ತಿದ್ದು, ಅವರಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ..’ ಎನ್ನುತ್ತದೆ 129 ಪುಟಗಳ ಆ ವರದಿ. ಒಂದು ಕಡೆ ಇಸ್ಲಾಮನ್ನು ಭಯೋತ್ಪಾದನೆಯ ಧರ್ಮವೆಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ, ಮಹಿಳೆಯರಿಗೆ ಕಟು ನಿಯಂತ್ರಣಗಳನ್ನು ಹೇರಿರುವ ಶೋಷಣೆಯ ಧರ್ಮ ಎಂದೂ  ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿನಿಮಾಗಳು, ವ್ಯಂಗ್ಯಚಿತ್ರಗಳು, ಬರಹಗಳೂ ಪ್ರಕಟವಾಗುತ್ತಿವೆ. 2011 ಎಪ್ರಿಲ್‍ನಲ್ಲಿ ಫ್ರಾನ್ಸ್, ಜುಲೈಯಲ್ಲಿ ಬೆಲ್ಜಿಯಂ, ಸೆಪ್ಟೆಂಬರ್‍ನಲ್ಲಿ ನೆದರ್ಲ್ಯಂಡ್ ಗಳು ಬುರ್ಖಾ-ನಿಖಾಬ್‍ಗೆ (ಮುಖ ಪರದೆ) ನಿಷೇಧ ಹೇರಿದುವು. ಅದಕ್ಕೆ ಸಮಾನತೆ, ಐಡೆಂಟಿಟಿಯ ಕಾರಣಗಳನ್ನೂ ಕೊಟ್ಟುವು. ನಿಖಾಬ್ ಸಹಿತವಾದ ಬುರ್ಖಾವನ್ನು ನಿಷೇಧಿಸುವ ಬಗ್ಗೆ 2011 ಆಗಷ್ಟ್ ನಲ್ಲಿ ಇಟಲಿ ಪಾರ್ಲಿಮೆಂಟಲ್ಲಿ ಮಸೂದೆ ಅಂಗೀಕಾರಗೊಂಡಿತು. ಒಂದು ಧರ್ಮದ ಬಗ್ಗೆ; ಅದರ ಆಚಾರ, ಸಂಸ್ಕ್ರಿತಿ, ವೇಷ-ಭೂಷಣಗಳ ಬಗ್ಗೆ ಇಷ್ಟೊಂದು ಪ್ರಮಾಣದಲ್ಲಿ ನಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದ್ದರೂ ಜನರು ಈ ಧರ್ಮದ ಕಡೆಗೆ ಆಕರ್ಷಿತರಾಗುತ್ತಿರುವುದೇಕೆ? ಅದರಲ್ಲೂ ಮಹಿಳೆಯರೇ ಮುಂದಿರಲು ಕಾರಣವೇನು? ಇಸ್ಲಾಮ್ ಸ್ವೀಕರಿಸಿದ ಬ್ರಿಟನ್ನಿಗರಲ್ಲಿ ಹೆಚ್ಚಿನವರೂ, ‘ಅಪಪ್ರಚಾರಗಳೇ ತಮ್ಮನ್ನು ಇಸ್ಲಾಮ್‍ನೆಡೆಗೆ ಆಕರ್ಷಿಸಿತು, ಕುರ್‍ಆನ್ ಮತ್ತು ಇಸ್ಲಾಮೀ  ಸಾಹಿತ್ಯವನ್ನು ಅಧ್ಯಯನ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಂಡೆವು..’ ಎಂದಿದ್ದಾರಲ್ಲ, ಏನಿದರ ಅರ್ಥ? ಹಾಗಾದರೆ, ಇಸ್ಲಾಮಿನ ವಿರುದ್ಧ ಪ್ರಚಲಿತವಿರುವ ಆರೋಪಗಳ ಕುರಿತಂತೆ ಏನೆನ್ನಬೇಕು? ಅಧ್ಯಯನ ನಡೆಸದವರು ದುರುದ್ದೇಶದಿಂದ ಹಬ್ಬಿಸಿರುವ ಸುಳ್ಳುಗಳು ಎಂದೇ ಅಲ್ಲವೇ? ನಿಜವಾಗಿ, ಇಸ್ಲಾಮ್ ಒಪ್ಪದ ಆದರೆ ಪಾಶ್ಚಾತ್ಯ ಜಗತ್ತು ಸ್ವಾತಂತ್ರ್ಯ, ಸಮಾನತೆಯ ಹೆಸರಲ್ಲಿ ಬಲವಾಗಿ ಪ್ರತಿಪಾದಿಸುವ ಅನೇಕಾರು ಸೌಲಭ್ಯಗಳು ಬ್ರಿಟನ್ನಿನಲ್ಲಿವೆ. ಅಲ್ಲಿ ಲಿವಿಂಗ್ ಟುಗೆದರ್ ಇದೆ. ಹೆಣ್ಣು-ಗಂಡು ಮುಕ್ತವಾಗಿ ಬೆರೆಯುವುದಕ್ಕೆ ಸ್ವಾತಂತ್ರ್ಯ ಇದೆ. ಡ್ರೆಸ್ ಕೋಡ್ ಇಲ್ಲ. ಸಲಿಂಗ ವಿವಾಹಕ್ಕೆ ಬಹುತೇಕ ಅನುಮತಿ ಇದೆ. ಮದ್ಯ ಇದೆ, ಬಡ್ಡಿ ಇದೆ.. ಒಂದು ವೇಳೆ ಮನುಷ್ಯರ ನೆಮ್ಮದಿಗೆ, ಸಂತಸದ ಬದುಕಿಗೆ ಇವು ಅತಿ ಅಗತ್ಯ ಮತ್ತು ಇದನ್ನು ನಿಷೇಧಿಸುವುದು ಮಾನವ ಹಕ್ಕಿನ ಉಲ್ಲಂಘನೆ ಎಂದು ವಾದಿಸುವುದಾದರೆ, ಬ್ರಿಟನ್ನಿನ ಮಂದಿ ಈ ಪ್ರಮಾಣದಲ್ಲಿ ಇಸ್ಲಾಮ್ ಸ್ವೀಕರಿಸುತ್ತಿರುವುದನ್ನು ನಾವು ಹೇಗೆ ವಿಶ್ಲೇಷಿಸಬೇಕು? ಸ್ವಾತಂತ್ರ್ಯದಿಂದ ಬಂಧನದ ಕಡೆಗೆ ಎಂದೇ? ಸಮಾನತೆಯಿಂದ ಅಸಮಾನತೆಯ ಕಡೆಗೆ, ಮುಕ್ತತೆಯಿಂದ ಶೋಷಣೆಯ ಕಡೆಗೆ ಎಂದೇ? ಅಷ್ಟಕ್ಕೂ ಈ ಬೆಳವಣಿಗೆ, ಇದರ ಇನ್ನೊಂದು ಮಗ್ಗುಲನ್ನು ಚರ್ಚಿಸುವುದಕ್ಕೆ ಯಾಕೆ ನಮಗೆ ಪ್ರೇರಕ ಆಗಬಾರದು? ಸದ್ಯ ಜಾಗತಿಕವಾಗಿ ಪ್ರಚಲಿತದಲ್ಲಿರುವ ಸ್ವಾತಂತ್ರ್ಯ, ಸಮಾನತೆಗೂ, ಇಸ್ಲಾಮ್ ನಿರ್ವಚಿಸುವ ಸ್ವಾತಂತ್ರ್ಯ, ಸಮಾನತೆಗೂ ನಡುವೆ ಇರುವ ಅಂತರದ ಬಗ್ಗೆ ನಾವು ಪ್ರಾಮಾಣಿಕವಾಗಿ ಚರ್ಚಿಸಿದರೇನು? ಯಾರೇ ಆಗಲಿ, ಸ್ವಾತಂತ್ರ್ಯದಿಂದ ಬಂಧನ ಕಡೆಗೆ ಪಯಣ ಬೆಳೆಸಿಯಾರೆ? ಮುಕ್ತತೆಯಿಂದ ಶೋಷಣೆಯ ಕಡೆಗೆ ಸಾಗಿಯಾರೇ? ಖುಷಿಯನ್ನು ಕೈಬಿಟ್ಟು ಸಂಕಟವನ್ನು ಆಯ್ಕೆ ಮಾಡಿಕೊಂಡಾರೇ? ಇಲ್ಲ ಎಂದಾದರೆ, ನಾವು ಇಸ್ಲಾಮಿನ ಕುರಿತಂತೆ ಅಂದುಕೊಂಡಿರುವ ನಿಲುವುಗಳೇ ಏಕೆ ತಪ್ಪಾಗಿರಬಾರದು? ಅದರ ಸಮಾನತೆ, ಮಹಿಳಾ ಹಕ್ಕುಗಳು, ತಲಾಕ್, ಬಹುಪತ್ನಿತ್ವ, ಜಿಹಾದ್‍ಗಳ ಬಗ್ಗೆ ನಮ್ಮ ನಿಲುವುಗಳೇಕೆ ಪೂರ್ವಾಗ್ರಹ ಪೀಡಿತವಾಗಿರಬಾರದು?
   ಇಸ್ಲಾಮ್ ಬಹುಪತ್ನಿತ್ವಕ್ಕೆ ಚಾಲನೆ ಕೊಟ್ಟಿದೆಯೆಂಬ ದೊಡ್ಡದೊಂದು ಸುಳ್ಳು ಸಮಾಜದಲ್ಲಿದೆ. ನಿಜವಾಗಿ, ಪ್ರವಾದಿ ಮುಹಮ್ಮದರು(ಸ) ಬದುಕಿದ್ದ ಕಾಲದಲ್ಲಿ ಪುರುಷರು ಧಾರಾಳ ಪತ್ನಿಯರನ್ನು ಹೊಂದಬಹುದಾಗಿತ್ತು. ಅದಕ್ಕೆ ಮಿತಿಯಿರಲಿಲ್ಲ. ಬೇಕಾದಾಗ ವಿಚ್ಛೇದನವನ್ನೂ ಕೊಡಬಹುದಿತ್ತು. ಆದ್ದರಿಂದಲೇ ಇದಕ್ಕೆ ನಿಯಂತ್ರಣವನ್ನು ವಿಧಿಸಲು ಸೂಕ್ತ ಸಂಧರ್ಭಕ್ಕಾಗಿ ಪ್ರವಾದಿಯವರು  ಕಾಯುತ್ತಿದ್ದರು.  ಇದೇ ಸಂದರ್ಭದಲ್ಲಿ ಉಹುದ್ ಎಂಬಲ್ಲಿ ಪ್ರವಾದಿ(ಸ) ಮತ್ತು ಅವರ ವಿರೋಧಿಗಳ ಮಧ್ಯೆ ಕಾಳಗ ನಡೆಯುತ್ತದೆ. ಅದರಲ್ಲಿ ಸಾಕಷ್ಟು ಮುಸ್ಲಿಮ್ ಪುರುಷರು ಮೃತಪಡುತ್ತಾರೆ. ಈ ಹಂತದಲ್ಲಿ, ಪತ್ನಿಯರ ಸಂಖ್ಯೆಗೆ ಮಿತಿಯನ್ನು ಹೇರುವ ಕುರ್‍ಆನಿನ   ಆದೇಶ ಹೊರಬೀಳುತ್ತದೆ. ಅದಕ್ಕೆ ಇನ್ನೊಂದು ಕಾರಣವೂ ಇದೆ. ಯುದ್ಧ ಕಾಲದಲ್ಲಿ ಪುರುಷರು ಸಾವಿಗೀಡಾಗುವುದರಿಂದ ಸಮಾಜದಲ್ಲಿ ವಿಧವೆಯರು ಮತ್ತು ಅನಾಥ ಮಕ್ಕಳ ದೊಡ್ಡದೊಂದು ಗುಂಪೇ ಸೃಷ್ಟಿಯಾಗುತ್ತದೆ. ಅಫಘಾನ್ ಯುದ್ಧ ದಲ್ಲಿ ಸಾವಿಗೀಡಾದ ಸುಮಾರು 1 ಮಿಲಿಯನ್ ಮಂದಿಯಿಂದಾಗಿ ಉದ್ಭವವಾಗಿರಬಹುದಾದ ಸಾಮಾಜಿಕ ಸ್ಥಿತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ. ವಿಧವೆಯರು, ಮಕ್ಕಳಿಗೆ ಏನು ವ್ಯವಸ್ಥೆಯಿದೆ? ಅವರ ಪೋಷಣೆಯ ಹೊಣೆಯನ್ನು ಯಾರು ವಹಿಸಿಕೊಳ್ಳಬೇಕು? ಕುರ್‍ಆನ್ ಬಹುಪತ್ನಿತ್ವಕ್ಕೆ ಅನುಮತಿ ಕೊಟ್ಟಿರುವುದು ಇಂಥ ಅನಿವಾರ್ಯ ಸಂದರ್ಭಗಳಲ್ಲಿ. ಇಲ್ಲದಿದ್ದರೆ 20 ಪುರುಷರಿಗೆ 80 ಮಹಿಳೆಯರು ಇರಬೇಕಿತ್ತಲ್ಲವೇ? ಆದರೆ, ಬಹುಪತ್ನಿತ್ವವನ್ನು ಟೀಕಿಸುವವರು ಈ ಅನಿವಾರ್ಯ ಸಂದರ್ಭವನ್ನು ಉಲ್ಲೇಖಿಸುವುದೇ ಇಲ್ಲ. ಮಾತ್ರವಲ್ಲ, ತಮ್ಮ ಪರಿಸರದಲ್ಲಿ ಎಷ್ಟು ಮುಸ್ಲಿಮರು ಬಹುಪತ್ನಿತ್ವವನ್ನು ಹೊಂದಿದ್ದಾರೆ ಎಂದು ಹೇಳುತ್ತಲೂ ಇಲ್ಲ. ಹೀಗಿರುವಾಗ, ಬ್ರಿಟನ್ನಿನ ಮಹಿಳೆಯರಿಗೆ ಈ ಸತ್ಯ ಅರ್ಥ ವಾದುದರಿಂದಲೇ ಅವರು ಇಸ್ಲಾಮ್ ಸ್ವೀಕರಿಸಿರಬಹುದು ಎಂದರೆ ಏನು ತಪ್ಪಿದೆ?
   ಪ್ರಥಮ ಮಾನವರಾದ ಆದಮ್ ಮತ್ತು ಹವ್ವಾರು (ಆಡಮ್ ಮತ್ತು ಈವ್) ದೇವನು ನಿಷೇಧಿಸಿದ ಹಣ್ಣನ್ನು ತಿಂದು ನಿಯಮ ಉಲ್ಲಂಘಿಸಿದ ಬಗ್ಗೆ ಕುರ್‍ಆನ್‍ನಲ್ಲಿ ಉಲ್ಲೇಖ ಇದೆ. (7: 19-27) ಇಬ್ಬರೂ ಅವಿಧೇಯತೆ ತೋರಿದರು, ಇಬ್ಬರೂ ಕ್ಷಮೆ ಯಾಚಿಸಿದರು ಮತ್ತು ಇಬ್ಬರನ್ನೂ ಕ್ಷಮಿಸಲಾಯಿತು ಎಂದು ಕುರ್‍ಆನ್ ಹೇಳಿದೆಯೇ ಹೊರತು ಆದಮರು ಹಣ್ಣು ತಿಂದದ್ದಕ್ಕಾಗಿ ಹವ್ವಾರನ್ನು ದೂಷಿಸಲಾಗಿಲ್ಲ. ಹೆಣ್ಣಿನಿಂದಾಗಿ ಆದಮರು ಕಾನೂನು ಉಲ್ಲಂಘಿಸಿದರು ಎಂದೂ ಹೇಳಲಿಲ್ಲ. ಒಂದು ರೀತಿಯಲ್ಲಿ, ಇಸ್ಲಾಮ್ ಹೆಣ್ಣು-ಗಂಡನ್ನು ಸಮಾನ ಭಾವದಿಂದ ನೋಡುತ್ತದೆ (49: 13) ಮತ್ತು ಸಮಾನ ಕ್ರಿಯೆಗೆ ಸಮಾನ ಪ್ರತಿಫಲವನ್ನೂ ನೀಡುತ್ತದೆ (3: 195, 4: 124). ಪುರುಷ ಮಾಡಿದ ಕೆಲಸಕ್ಕೆ ಹೆಚ್ಚು ಪ್ರತಿಫಲ ಎಂದು ಇಸ್ಲಾಮ್ ಎಲ್ಲೂ ಹೇಳಿಲ್ಲ. ಮಾತ್ರವಲ್ಲ, ಹೆಣ್ಣಿನ ಸೇವೆ ಮಾಡಿದರೆ ಸ್ವರ್ಗ, ತಂದೆಯೋರ್ವ ತನ್ನ ಹೆಣ್ಣು ಮಕ್ಕಳನ್ನು ಚೆನ್ನಾಗಿ ಪೋಷಿಸಿ ಬೆಳೆಸಿದರೆ ಸ್ವರ್ಗ.. ಎಂದು ವಿಶೇಷವಾಗಿ ಎತ್ತಿ ಹೇಳಿದೆ. ಈ ಸೌಲಭ್ಯ ಗಂಡು ಮಕ್ಕಳ ತಂದೆಗಿಲ್ಲ. ಹೆಣ್ಣು (ಭ್ರೂಣ) ಹತ್ಯೆಯನ್ನು ಕ್ರೂರ ಅಪರಾಧವೆಂದು ಸಾರಿದ್ದು ಪವಿತ್ರ ಕುರ್‍ಆನೇ (81: 9-10). ಇಷ್ಟಕ್ಕೂ ತಲಾಕ್, ತಲಾಕ್, ತಲಾಕ್ ಎಂದು ಮೂರು ಬಾರಿ ಹೇಳಿದರೆ ವಿಚ್ಛೇದನವಾಗುತ್ತೆಂದು ಕುರ್‍ಆನ್ ಹೇಳಿಯೇ ಇಲ್ಲ. (2: 229) ಅದು ತಲಾಕ್‍ಗೆ ಮೂರ್ನಾಲ್ಕು ಹಂತಗಳನ್ನು ನಿಗದಿಪಡಿಸಿದೆ. ಇನ್ನು, ಒಂದು ವೇಳೆ ವಿಚ್ಛೇದನವೇ ಮಾರ್ಗ ಎಂದಾದರೆ ಪತ್ನಿಗೆ ಒಂದು ಮೊತ್ತವನ್ನು ಪತಿ ಕೊಡಬೇಕೆಂದೂ ಮತ್ತು ಆಕೆಯ ಪೋಷಣೆಯ ಹೊಣೆಯನ್ನು ತಂದೆ-ಸಹೋದರರು ವಹಿಸಿಕೊಳ್ಳಬೇಕೆಂದೂ ಅದು ಆದೇಶಿಸಿದೆ. ಆ ಮೊತ್ತದಿಂದ ಆಕೆ ವ್ಯವಹಾರ ನಡೆಸಬಹುದು. ಉದ್ದಿಮೆಗಳಲ್ಲಿ ಹೂಡಿಕೆ ಮಾಡಬಹುದು. ಮಾಸಾಶನವೆಂಬ ಭಿಕ್ಷೆಗಿಂತ ಒಂದೇ ಸಂದರ್ಭದಲ್ಲಿ ಒಂದು ಮೊತ್ತವನ್ನು ಕೊಟ್ಟು ಆಕೆಯನ್ನು ಸ್ವಾವಲಂಬಿಯಾಗಿಸುವುದು ಇಸ್ಲಾಮಿನ ನಿಲುವಾಗಿದೆ. ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ನಿರ್ದಿಷ್ಟ ಉಡುಗೊರೆಯನ್ನು ವರ ಕಡ್ಡಾಯವಾಗಿ ಕೊಡಲೇಬೇಕೆಂದು ಕುರ್‍ಆನ್ ಪ್ರತಿಪಾದಿಸುತ್ತದೆ (4: 4). ಆ ಉಡುಗೊರೆ ಆಕೆಯದ್ದೇ. ಒಂದು ವೇಳೆ ವರ 5 ಲಕ್ಷ  ರೂಪಾಯಿ ಕೊಟ್ಟನೆಂದರೆ ಅದನ್ನು ವ್ಯವಹಾರದಲ್ಲಿ ತೊಡಗಿಸುವ ಮತ್ತು ಅದರಿಂದ ಬರುವ ಚಿಕ್ಕಾಸನ್ನೂ ಪತಿಗೆ ಕೊಡದಿರುವ ಹಕ್ಕು ಆಕೆಗಿದೆ. ಹೆಣ್ಣಿಗೆ  ಆಸ್ತಿಯ ಹಕ್ಕನ್ನು ಒದಗಿಸುವ, Married Women property Act   ಎಂಬ ಕಾನೂನು ಬ್ರಿಟನ್ನಿನಲ್ಲಿ ಜಾರಿಗೆ ಬಂದದ್ದೇ 1860ರಲ್ಲಿ. ಇದಕ್ಕಿಂತ 1300 ವರ್ಷಗಳ ಹಿಂದೆಯೇ ಪವಿತ್ರ ಕುರ್‍ಆನ್ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಕೊಟ್ಟಿದೆ (4: 32). ಅಂದಹಾಗೆ, ಸೌಂದರ್ಯ ಪ್ರದರ್ಶನವು ಲೈಂಗಿಕ ದೌರ್ಜನ್ಯಕ್ಕೆ, ಮಹಿಳಾ ಶೋಷಣೆಗೆ, ಪ್ರತಿಭೆಗಿಂತ ಮೈಮಾಟವನ್ನೇ ಆಯ್ಕೆಯ ಮಾನದಂಡವಾಗಿಸುವುದಕ್ಕೆ ಕಾರಣವಾಗ ಬಲ್ಲುದು ಎಂದು ಇಸ್ಲಾಮ್ ವಾದಿಸುವುದನ್ನು ತಪ್ಪು ಎಂದು ಸಮರ್ಥಿಸುವುದಕ್ಕೆ ಆಧುನಿಕ ಜಗತ್ತಿನ ಸ್ವಾತಂತ್ರ್ಯ ಪ್ರತಿಪಾದಕರಲ್ಲಿ ಏನು ಆಧಾರವಿದೆ? ಸೌಂದರ್ಯ ಪ್ರದರ್ಶಿಸಬೇಡಿ (33: 59) ಎಂದು ಇಸ್ಲಾಮ್ ಪ್ರತಿಪಾದಿಸಿದ್ದು ಹೆಣ್ಣಿನ ಮೇಲಿನ ದ್ವೇಷದಿಂದಲ್ಲ, ಪ್ರೀತಿಯಿಂದ. ಹಾಗಂತ, ಸದ್ಯ ಕಾಣಿಸುತ್ತಿರುವ ಕಪ್ಪು ಬುರ್ಖಾ ಎಂಬ ಉಡುಪನ್ನು ಕುರ್‍ಆನ್ ಪ್ರಸ್ತುತಪಡಿಸಿಯೇ ಇಲ್ಲ. ಸೌಂದರ್ಯ ಪ್ರದರ್ಶನವಾಗದಂತೆ ಉಡುಪು ಧರಿಸಿ ಎಂದಷ್ಟೇ ಅದು ಕರೆಕೊಟ್ಟಿದೆ. ಈ ಕರೆ ಯಾಕೆ ಮಹಿಳಾ ಶೋಷಕ ಆಗಬೇಕು? ರಕ್ಷಕ ಯಾಕಾಗಬಾರದು?  ಪ್ರದರ್ಶಿಸುವುದನ್ನು ಸ್ವಾತಂತ್ರ್ಯ, ಮುಚ್ಚುವುದನ್ನು ಶೋಷಣೆ ಅನ್ನುವುದೇಕೆ? ಅದಕ್ಕಿರುವ ಮಾನದಂಡವಾದರೂ ಏನು? ಪುರುಷನಿಗೆ ಪುರುಷನದ್ದೇ ಆದ ಕ್ಷೇತ್ರ ಇರುವಂತೆಯೇ ಮಹಿಳೆಗೆ ಮಹಿಳೆಯದ್ದೇ ಆದ ಕ್ಷೇತ್ರ ಇರಬಾರದೆಂದಿದೆಯೇ? ಸಮಾನತೆ ಮತ್ತು ಗೌರವ ಈ ಎರಡರಲ್ಲಿ ಹೆಣ್ಣಿಗೆ ಸುರಕ್ಷಿತತೆ ಒದಗಿಸುವ ವಿಚಾರ ಯಾವುದು? ಗೌರವ ಕೊಡದೇ ಸಮಾನತೆಯ ಬಗ್ಗೆ ಮಾತಾಡುವುದು ಎಷ್ಟು ಸರಿ? ಹೆಣ್ಣಿಗೆ ಈ ಸಮಾಜದಲ್ಲಿ ಸಿಗಲೇಬೇಕಾದ ಗೌರವವನ್ನು ಸಮಾನತೆ, ಸ್ವಾತಂತ್ರ್ಯದ ಹೆಸರಲ್ಲಿ ಕಿತ್ತುಕೊಳ್ಳುತ್ತಿರುವ ಆಧುನಿಕ ಶೋಷಕರ ಬಗ್ಗೆ ನಾವೇಕೆ ಆಲೋಚಿಸುತ್ತಿಲ್ಲ? ಹೆಣ್ಣಿನ ಹಕ್ಕು, ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಆಧುನಿಕ ಜಗತ್ತು ಮಾರುಕಟ್ಟೆಯ ಉದ್ದೇಶದಿಂದಲೇ ತಿರುಚಿದೆ ಎಂದೂ ವಾದಿಸಬಹುದಲ್ಲವೇ? ಅಷ್ಟಕ್ಕೂ, ಹೆಣ್ಣು ಎದುರುಗೊಂಡಾಗ ಕಣ್ಣು ಕೆಳಗಾಗಿಸಿ ಗೌರವ ಸೂಚಿಸಿ (30:31) ಎಂದು ಪವಿತ್ರ ಕುರ್‍ಆನ್ ಪುರುಷರಿಗೆ ಆದೇಶಿಸಿರುವುದನ್ನು ಯಾರಾದರೂ ಚರ್ಚೆಗೆ ಎತ್ತಿಕೊಂಡಿದ್ದಾರೆಯೇ? ಗೌರವ ಸೂಚಿಸುವಷ್ಟು ಉನ್ನತ ವ್ಯಕ್ತಿತ್ವ ಹೆಣ್ಣಿನದ್ದಾದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾದೀತು ಎಂದಲ್ಲವೇ ಇದರರ್ಥ?
   ವಿವಿಯನ್ ಮಲೋನ್ ಜೋನ್ಸ್ ಮತ್ತು ಜೇಮ್ಸ್ ಹೂಡ್ ಎಂಬಿಬ್ಬರು ಕಪ್ಪು ವಿದ್ಯಾರ್ಥಿಗಳು ಅಲಬಾಮ ವಿಶ್ವವಿದ್ಯಾಲಯ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ 1962ರಲ್ಲಿ ಅಮೇರಿಕದ ಅಲಬಾಮ ರಾಜ್ಯದ ರಾಜ್ಯಪಾಲ ಜಾರ್ಜ್ ವಾಲ್ಲೇಸ್‍ರು ವಿಶ್ವ ವಿದ್ಯಾಲಯದ
ಜಾರ್ಜ್ ವಾಲ್ಲೇಸ್
ಬಾಗಿಲಲ್ಲಿ ನಿಂತಂತೆ ಇವತ್ತು ಕೆಲವರು ಈ ದೇಶದ ವಿವಿಧ ಶಾಲೆಗಳ ಎದುರು ನಿಂತು ಸ್ಕಾರ್ಫ್ ಧರಿಸಿದ ಹೆಣ್ಣು ಮಕ್ಕಳನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ರಿಡ್ಲಿ, ಬೂತ್, ಬೇಟ್‍ರು ಈ ಸುದ್ದಿಯನ್ನು ಆಲಿಸಿದರೆ ನಗಬಹುದೇನೋ?

2 comments:

  1. > ಬ್ರಿಟನ್ನಿನ ಮಂದಿ ಈ ಪ್ರಮಾಣದಲ್ಲಿ ಇಸ್ಲಾಮ್ ಸ್ವೀಕರಿಸುತ್ತಿರುವುದನ್ನು ನಾವು ಹೇಗೆ ವಿಶ್ಲೇಷಿಸಬೇಕು?
    ಬಹುಮಂದಿ ಒಂದು ಮಾರ್ಗವನ್ನು ಸ್ವೀಕರಿಸಿದ್ದಾರೆ ಎಂದ ಮಾತ್ರಕ್ಕೆ ಆ ಮಾರ್ಗವು ಸರಿಯಿರಲೇಬೇಕೆಂದೇನೂ ಇಲ್ಲ. "Herd Mentality" ಕೂಡಾ ಇರಬಹುದು.
    ಕಮ್ಯುನಿಸಂ ಉಚ್ರಾಯ ಸ್ಥಿತಿಯಲ್ಲಿದ್ದಾಗ ಜಗತ್ತಿನ ಅನೇಕ ದೇಶಗಳು ಕಮ್ಯುನಿಸಂ ಸ್ವೀಕರಿಸಿದವು. ನಮ್ಮ ದೇಶದಲ್ಲೂ ಅನೇಕ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು ಕಮ್ಯುನಿಸಂನತ್ತ ಆಕರ್ಷಿತರಾದರು.
    ಹಾಗೆಂದ ಮಾತ್ರಕ್ಕೆ ಕಮ್ಯುನಿಸಂ ಅತ್ಯುತ್ತಮ ದಾರಿ ನೀಡಿತು ಅಂದೇನೂ ಅಲ್ಲವಲ್ಲ?
    ಪ್ರಾಯಶಃ ಕ್ಯಾಪಿಟಲಿಸಂ ಇಂದ ಬೇಸೆತ್ತಿದ್ದ ಜಗತ್ತು ಕಮ್ಯುನಿಸಂ ಎಡೆಗೆ ಆಕರ್ಷಿತವಾಗಿತ್ತಷ್ಟೇ.
    ಆದರೆ, ಕ್ಯಾಪಿಟಲಿಸಂ ಗಿಂತ ಕಮ್ಯುನಿಸಂ ಹೆಚ್ಚು ಭಯಂಕರ ಎಂದು ತಿಳಿದ ನಂತರ ಭ್ರಮನಿರಸನಗೊಂಡ ಪ್ರಪಂಚ ಕಮ್ಯುನಿಸಂ ತಿರಸ್ಕರಿಸಲಾರಂಭಿಸಿತು.

    ಹೆಚ್ಚು ಜನ ಸ್ವೀಕರಿಸಿದ್ದಾರೆನ್ನುವುದು ಒಂದು ಸಿದ್ಧಾಂತವು ಸರಿಯಾಗಿದೆ ಎನ್ನುವುದಕ್ಕೆ ಆಧಾರವಾಗಲಾರದು.
    ಹಾಗೆ ನೋಡಿದರೆ, ಸತ್ಯಕ್ಕೆ ಬಹುಮತದ ಬೆಂಬಲವೇನೂ ಬೇಕಾಗಿಲ್ಲ. ಸತ್ಯವು ತನ್ನದೇ ನೆಲೆಯನ್ನು ಹೊಂದಿರುತ್ತದೆ. ಒಬ್ಬನೇ ಒಬ್ಬನ ಬೆಂಬಲವಿಲ್ಲದಿದ್ದರೂ ಸತ್ಯವು ಸತ್ಯವೇ.

    ಹೀಗಾಗಿ ಇಸ್ಲಾಮಿನ ಸಮರ್ಥನೆಗಾಗಿ ನೀವು "ಬಹುಮತ"ದ ವಾದವನ್ನು ಆಯ್ದುಕೊಳ್ಳುವ ಅವಶ್ಯಕತೆಯಿಲ್ಲ.
    "ಬಹುಮತ"ವಿದ್ದ ಮಾತ್ರಕ್ಕೆ ಅದು ಸತ್ಯವಾಗಿರಬೇಕೆಂದೇನೂ ಇಲ್ಲ.


    > ಯಾರೇ ಆಗಲಿ, ಸ್ವಾತಂತ್ರ್ಯದಿಂದ ಬಂಧನ ಕಡೆಗೆ ಪಯಣ ಬೆಳೆಸಿಯಾರೆ?
    > ಮುಕ್ತತೆಯಿಂದ ಶೋಷಣೆಯ ಕಡೆಗೆ ಸಾಗಿಯಾರೇ? ಖುಷಿಯನ್ನು ಕೈಬಿಟ್ಟು ಸಂಕಟವನ್ನು ಆಯ್ಕೆ ಮಾಡಿಕೊಂಡಾರೇ?
    ನಾನು ಆಗಲೇ ಕಮ್ಯುನಿಸಂನ ಉದಾಹರಣೆ ನೀಡಿದೆ.
    ಕಮ್ಯುನಿಸಂ ಆಯ್ದುಕೊಂಡದ್ದು ಮುಕ್ತತೆಯಿಂದ ಶೋಷಣೆಯೆಡೆಗೆ ಇಟ್ಟ ಹೆಜ್ಜೆಯೇ ಆಗಿತ್ತು.
    ಜಗತ್ತಿನ ಅನೇಕ ರಾಷ್ಟ್ರಗಳು ಆ ದಾರಿಯನ್ನು ಹಿಡಿದದ್ದು ಇತಿಹಾಸ.


    > ಇಸ್ಲಾಮ್ ಬಹುಪತ್ನಿತ್ವಕ್ಕೆ ಚಾಲನೆ ಕೊಟ್ಟಿದೆಯೆಂಬ ದೊಡ್ಡದೊಂದು ಸುಳ್ಳು ಸಮಾಜದಲ್ಲಿದೆ
    > ತಮ್ಮ ಪರಿಸರದಲ್ಲಿ ಎಷ್ಟು ಮುಸ್ಲಿಮರು ಬಹುಪತ್ನಿತ್ವವನ್ನು ಹೊಂದಿದ್ದಾರೆ ಎಂದು ಹೇಳುತ್ತಲೂ ಇಲ್ಲ.
    ನಮ್ಮ ಪರಿಸರದಲ್ಲಿ ಬಹುಪತ್ನಿಯರನ್ನು ಹೊಂದಿರುವ ಅನೇಕ ಮುಸಲ್ಮಾನರನ್ನು ನಾವು ನೋಡುತ್ತಿದ್ದೇವಲ್ಲ.
    ಬಹುಪತ್ನಿಯರನ್ನು ಹೊಂದಿದ ಹಿಂದುಗಳೂ ಅನೇಕರಿದ್ದಾರೆ. ಆದರೆ, ಅದು ಅಕ್ರಮ ಮತ್ತು ಅದಕ್ಕೆ ಕಾನೂನಿನಡಿ ಶಿಕ್ಷೆಯಿದೆ.
    ಆದರೆ, ಬಹುಪತ್ನಿಯರನ್ನು ಹೊಂದುವುದು ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅಪರಾಧವಲ್ಲ.


    > ಸದ್ಯ ಕಾಣಿಸುತ್ತಿರುವ ಕಪ್ಪು ಬುರ್ಖಾ ಎಂಬ ಉಡುಪನ್ನು ಕುರ್‍ಆನ್ ಪ್ರಸ್ತುತಪಡಿಸಿಯೇ ಇಲ್ಲ.
    ಹಾಗಿದ್ದರೆ, ಕಪ್ಪು ಬುರ್ಖಾಗೆ ಮುಸ್ಲಿಮರು ಅಷ್ಟೊಂದು ಅಂಟಿಕೊಂಡಿರುವುದೇಕೆ.
    ಎಷ್ಟರಮಟ್ಟಿಗೆಂದರೆ, ಅನೇಕ ಊರುಗಳಲ್ಲಿ ಕಪ್ಪು ಬುರ್ಖಾ ಧರಿಸಿಲೇಬೇಕೆಂದು ಮೌಲ್ವಿಗಳಿಂದ ಒತ್ತಾಯವೂ ಇದೆ (ನಾನು ಇದನ್ನು ಭಟ್ಕಳದಲ್ಲಿದ್ದಾಗ ಸ್ವತಃ ನೋಡಿರುವೆನು).



    > ಒಂದು ವೇಳೆ ವಿಚ್ಛೇದನವೇ ಮಾರ್ಗ ಎಂದಾದರೆ ಪತ್ನಿಗೆ ಒಂದು ಮೊತ್ತವನ್ನು ಪತಿ ಕೊಡಬೇಕೆಂದೂ
    > ಮತ್ತು ಆಕೆಯ ಪೋಷಣೆಯ ಹೊಣೆಯನ್ನು ತಂದೆ-ಸಹೋದರರು ವಹಿಸಿಕೊಳ್ಳಬೇಕೆಂದೂ ಅದು ಆದೇಶಿಸಿದೆ
    ಹಾಗಿದ್ದರೆ, ೧೯೮೦ರ ದಶಕದಲ್ಲಿ ಸುಪ್ರಸಿದ್ದವಾದ ಶಾಬಾನೂ ಪ್ರಕರಣದಲ್ಲಿ ದೇಶಾದ್ಯಂತ ಮುಸಲ್ಮಾನರು ವಿರೋಧಿಸಿದ್ದೇಕೆ?


    > ಅಷ್ಟಕ್ಕೂ, ಹೆಣ್ಣು ಎದುರುಗೊಂಡಾಗ ಕಣ್ಣು ಕೆಳಗಾಗಿಸಿ ಗೌರವ ಸೂಚಿಸಿ (30:31)
    > ಎಂದು ಪವಿತ್ರ ಕುರ್‍ಆನ್ ಪುರುಷರಿಗೆ ಆದೇಶಿಸಿರುವುದನ್ನು ಯಾರಾದರೂ ಚರ್ಚೆಗೆ ಎತ್ತಿಕೊಂಡಿದ್ದಾರೆಯೇ?
    ಆದರೆ, ಆ ರೀತಿಯ ವರ್ತನೆಯನ್ನು ಮುಸಲ್ಮಾನರಲ್ಲಿ ಕಂಡಿಲ್ಲವಲ್ಲ?
    ಅಂದರೆ ಮುಸಲ್ಮಾನರು ಖುರಾನಿನ ಅಣತಿಯಂತೆ ನಡೆಯುತ್ತಿಲ್ಲ ಎಂದೇನು?


    > ಹೆಣ್ಣಿಗೆ ಈ ಸಮಾಜದಲ್ಲಿ ಸಿಗಲೇಬೇಕಾದ ಗೌರವವನ್ನು ಸಮಾನತೆ,
    > ಸ್ವಾತಂತ್ರ್ಯದ ಹೆಸರಲ್ಲಿ ಕಿತ್ತುಕೊಳ್ಳುತ್ತಿರುವ ಆಧುನಿಕ ಶೋಷಕರ ಬಗ್ಗೆ ನಾವೇಕೆ ಆಲೋಚಿಸುತ್ತಿಲ್ಲ?
    > ಹೆಣ್ಣಿನ ಹಕ್ಕು, ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಆಧುನಿಕ ಜಗತ್ತು ಮಾರುಕಟ್ಟೆಯ
    > ಉದ್ದೇಶದಿಂದಲೇ ತಿರುಚಿದೆ ಎಂದೂ ವಾದಿಸಬಹುದಲ್ಲವೇ?
    ಖಂಡಿತ. ಹೆಣ್ಣನ್ನು Commodity ಆಗಿ ಕಾಣುವವರೆಗೂ ಶೋಷಣೆ ಇದ್ದೇ ಇರುತ್ತದೆ.

    ReplyDelete
  2. I think, one more pseudo secularist has emerged successfully, who are best at presenting the half truth in the best possible way to prove their illogical arguments!!!
    Now, i'll not make mistake asking your opinion about "Forced conversion of religion" by many ppl which is sponsored by an Italian citizen, controlling India..

    ReplyDelete