Monday, June 17, 2013

ಸ್ನೋಡೆನ್, ಮಾನ್ನಿಂಗ್ ರಿಗಿರುವ ಧೈರ್ಯವೂ ಈ ಜಾಲತಾಣಗಳಿಗೇಕಿಲ್ಲ?

ಮೈಕ್ರೋಸಾಫ್ಟ್
ಯಾಹೂ
ಗೂಗಲ್
ಫೇಸ್‍ಬುಕ್
ಸ್ಕೈಪ್
ಯೂಟ್ಯೂಬ್..
   ಇವುಗಳೆಲ್ಲ ಏನು, ಇವುಗಳ ಬಳಕೆದಾರರು ಯಾರು ಎಂಬುದೆಲ್ಲ ಎಲ್ಲರಿಗೂ ಗೊತ್ತು. ಫೇಸ್‍ಬುಕ್‍ನಲ್ಲಿ ಗೆಳಯರಾಗದ, ಯೂಟ್ಯೂಬನ್ನು ವೀಕ್ಷಿಸದ, ಸ್ಕೈಪ್‍ನಲ್ಲಿ ಮಾತಾಡದ ಮಂದಿಯೇ ಇಲ್ಲ ಅನ್ನುವಷ್ಟು ಇವು ಜನಪ್ರಿಯವಾಗಿವೆ. ಇವತ್ತಿನ ದಿನಗಳಲ್ಲಿ ಪತ್ರಿಕೆಗಳು, ಟಿ.ವಿ. ಚಾನೆಲ್‍ಗಳಿಗೆ ಅವುಗಳದ್ದೇ ಆದ ಮಿತಿಯಿದೆ. ಬರಹವೊಂದು ಪತ್ರಿಕೆಯಲ್ಲಿ ಪ್ರಕಟವಾಗಬೇಕಾದರೆ; ವಸ್ತು, ವ್ಯಾಕರಣ, ವಾಕ್ಯ ರಚನೆ, ಪದಗಳ ಸಂಖ್ಯೆ... ಎಲ್ಲವೂ ಪರಿಗಣನೆಗೆ ಬರುತ್ತದೆ. ಅಲ್ಲದೆ, ಪತ್ರಿಕೆಗಳಿಗೆ ಅವುಗಳದ್ದೇ ಆದ ನೀತಿ-ನಿಯಮ, ಧೋರಣೆಗಳೂ ಇರುತ್ತವೆ. ಆದ್ದರಿಂದ, ಒಂದು ಬರಹ ಎಷ್ಟೇ ಉತ್ತಮವಾಗಿದ್ದರೂ ಎಲ್ಲ ಪತ್ರಿಕೆಗಳೂ ಅದನ್ನು ಪ್ರಕಟಿಸುವ ಉಮೇದು ತೋರಿಸಬೇಕೆಂದಿಲ್ಲ. ಇನ್ನು ಪ್ರಕಟಿಸಿದರೂ, ಸಂಪೂರ್ಣ ಬರಹವನ್ನು ಹಾಗೆಯೇ ಪ್ರಕಟಿಸಬೇಕೆಂದಿಲ್ಲ. ಪರಿಣತ ಬರಹಗಾರರಿಗೆ ಮಾತ್ರ ಪತ್ರಿಕೆಗಳಲ್ಲಿ ಸ್ಪೇಸ್ ಸಿಗುತ್ತದೆ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಹುಟ್ಟಿಕೊಂಡಿರುವುದು ಇಂಥ ಕಾರಣಗಳಿಂದಲೇ. ಬಹುಶಃ, ಸಾಮಾಜಿಕ ಜಾಲ ತಾಣಗಳು ಜನರ ಮಧ್ಯೆ ಅತಿವೇಗವಾಗಿ ಜನಪ್ರಿಯಗೊಂಡಿರುವುದಕ್ಕೆ ಪತ್ರಿಕೆಗಳಿಗಿರುವ ಇಂಥ ಮಿತಿಗಳೇ ಕಾರಣವಾಗಿರಬಹುದು. ಅಷ್ಟಕ್ಕೂ, ಕ್ರಿಕೆಟನ್ನು ಪ್ರೀತಿಸುವ ಸಾಮಾನ್ಯ ವ್ಯಕ್ತಿಯೊಬ್ಬ ಸ್ಟಾಟ್ ಫಿಕ್ಸಿಂಗ್‍ನ ಬಗ್ಗೆ ನಾಲ್ಕು ಗೆರೆಗಳನ್ನು ಗೀಚಿದರೆ, ಯಾವ ಪತ್ರಿಕೆ ತಾನೇ ಪ್ರಕಟಿಸಬಲ್ಲದು? ಹೀಗಿರುವಾಗ, ಜಿಯಾ ಖಾನ್‍ಳ ಆತ್ಮಹತ್ಯೆಯ ಬಗ್ಗೆ, ಸಿದ್ಧರಾಮಯ್ಯರ ಮದ್ಯ ನೀತಿಯ ಕುರಿತು, ಮಳೆಗಾಲಕ್ಕೆ ತಯಾರಿ ನಡೆಸದ ಸ್ಥಳೀಯಾಡಳಿತಗಳ ಬಗ್ಗೆ... ಸಾಮಾನ್ಯನೊಬ್ಬ ತನ್ನ ಭಾವನೆಗಳನ್ನು ಸಾರ್ವಜನಿಕರಿಗೆ ಹೇಗೆ ಮುಟ್ಟಿಸಬೇಕು? ಅದಕ್ಕಿರುವ ಮಾಧ್ಯಮವಾದರೂ ಯಾವುದು? ಬರೆಯುವ ಪರಿಣತಿ ಮತ್ತು ಪದಸಂಗ್ರಹಗಳಿಲ್ಲದ ವ್ಯಕ್ತಿಯಲ್ಲೂ ಅಭಿಪ್ರಾಯಗಳಿರುತ್ತವಲ್ಲವೇ? ಅದನ್ನು ತಮ್ಮದೇ ಭಾಷೆಯಲ್ಲಿ ತಮಗೆ ತಿಳಿದಂತೆ ವ್ಯಕ್ತಪಡಿಸುವುದಕ್ಕೆ ಮತ್ತು ಸಾರ್ವಜನಿಕರಿಗೆ ತಲುಪುವಂತೆ ಮಾಡುವುದಕ್ಕೆ ಏನಿವೆ ಸೌಲಭ್ಯಗಳು? ಇಂಥ ಹುಡುಕಾಟಗಳಿಗೆ ಉತ್ತರವಾದದ್ದೇ ಸಾಮಾಜಿಕ ಜಾಲತಾಣಗಳು. ನಿಮಗೆ ಅನಿಸಿದ್ದನ್ನು ವಾಕ್ಯ, ವ್ಯಾಕರಣ, ಪದಗಳ ಸಂಖ್ಯೆಯ ಚಿಂತೆಯಿಲ್ಲದೇ ವ್ಯಕ್ತಪಡಿಸುವುದಕ್ಕೆ ಫೇಸ್‍ಬುಕ್, ಟ್ವೀಟರ್‍ನಂಥ ತಾಣಗಳು ಧಾರಾಳ ಅವಕಾಶ ಒದಗಿಸಿದುವು. ಗೆಳೆತನಕ್ಕೆ ವೇದಿಕೆ ಒದಗಿಸಿದುವು. ಅಲ್ಲದೇ, Your preivecy our priority - ‘ನಿಮ್ಮ ಖಾಸಗಿತನವೇ ನಮ್ಮ ಆದ್ಯತೆ..’ ಎಂಬ ಸ್ಲೋಗನನ್ನು ತೇಲಿಬಿಟ್ಟು, ಬಳಕೆದಾರರ ಖಾಸಗಿತನವನ್ನು ರಕ್ಷಿಸುವುದಾಗಿ ಘೋಷಿಸಿದುವು. ನಿಜವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಜನರು ನಂಬಿಕೆ ಇಡುವುದಕ್ಕೆ ಇರುವ ಹಲವು ಕಾರಣಗಳಲ್ಲಿ ಈ ಪ್ರೈವೇಸಿಯೂ ಒಂದು. ತನ್ನ Updateಗಳು, ಗೆಳೆಯರೊಂದಿಗಿನ ಮಾತುಕತೆಗಳು, ತನ್ನ ದೂರವಾಣಿ ಸಂಖ್ಯೆ, ಈಮೇಲ್ ಐಡಿ.. ಎಲ್ಲವೂ ತಾನಿಚ್ಛಿಸಿದವರಿಗೆ ಮಾತ್ರ ತಲುಪುವಂಥ ವ್ಯವಸ್ಥೆಯೊಂದನ್ನು ಇವು ಮಾಡಿಟ್ಟಿವೆ ಅನ್ನುವ ಭರವಸೆ ಬಳಕೆದಾರರನ್ನು ಆಕರ್ಷಿಸಿತು. ಆದ್ದರಿಂದಲೇ, ನನ್ನ ಮಿತ್ರನೊಬ್ಬ ನನ್ನೊಂದಿಗೆ ಮಾಡಿದ ಚಾಟಿಂಗು ನನಗೂ ಮತ್ತು ಅವನಿಗಲ್ಲದೇ ಇನ್ನಾರಿಗೂ ಗೊತ್ತಾಗಲು ಸಾಧ್ಯವಿಲ್ಲ ಅನ್ನುವ ನಂಬಿಕೆಯು ಎಲ್ಲ ಬಳಕೆದಾರರಲ್ಲೂ ಇತ್ತು. ಈ ಆಧಾರದಲ್ಲೇ ಅತ್ಯಂತ ಖಾಸಗಿಯಾದ ಈಮೇಲ್‍ಗಳು, ಚಾಟಿಂಗ್‍ಗಳು ಈ ಜಾಲತಾಣಗಳ ಮೂಲಕ ಹರಿದಾಡುತ್ತಿದ್ದುದು. ಆದರೆ,
Your privacy our priorityಯನ್ನು ಯಾವ ಜಾಲತಾಣಗಳೂ ಪಾಲಿಸಿಯೇ ಇಲ್ಲ.
   ತನ್ನೆಲ್ಲ ಬಳಕೆದಾರರ ಖಾಸಗಿ ವಿವರಗಳನ್ನು 2007 ಸೆಪ್ಟೆಂಬರ್ 11ರಿಂದಲೇ ಮೈಕ್ರೋಸಾಫ್ಟ್ ಅಮೆರಿಕಕ್ಕೆ ಒದಗಿಸುತ್ತಿದೆ. 2008 ಮಾರ್ಚ್ 12ರಿಂದ ಯಾಹೂ,  2009 ಜನವರಿ 14ರಿಂದ ಗೂಗಲ್,  2010 ಸೆಪ್ಟೆಂಬರ್ 24ರಿಂದ ಯೂಟ್ಯೂಬ್,  2011 ಮಾರ್ಚ್ 31ರಿಂದ ಎಬಿಎಲ್,  2009 ಡಿಸೆಂಬರ್ 7ರಿಂದ ಪಾಲ್‍ಟಾಕ್,  2012 ಅಕ್ಟೋಬರ್‍ ನಿಂದ  ಆಪಲ್,  2009 ಜನವರಿ 3ರಿಂದ ಸ್ಕೈಪ್,  2009 ಜನವರಿ 3ರಿಂದ ಫೇಸ್‍ಬುಕ್... ಎಲ್ಲವೂ ತಮ್ಮ ಬಳಕೆದಾರರ ಖಾಸಗಿ ವಿವರಗಳನ್ನು ಅಮೆರಿಕದ ಬೇಹುಗಾರಿಕಾ ಜಾಲವಾದ PRISM ಗೆ ನೀಡುತ್ತಲೇ ಬಂದಿವೆ. ಕಳೆದ ವಾರ ಲಂಡನ್ನಿನ ದಿ ಗಾರ್ಡಿಯನ್ ಮತ್ತು ಅಮೆರಿಕದ ದಿ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಗಳು ಸರಣಿ ಬರಹಗಳ ಮೂಲಕ ಈ ವಿಷಯವನ್ನು ಬಹಿರಂಗಕ್ಕೆ ತರುವವರೆಗೆ ಅಮೆರಿಕವಾಗಲಿ, ಈ ಜಾಲತಾಣಗಳಾಗಲಿ ಇದನ್ನು ಹೇಳಿಕೊಂಡೇ ಇರಲಿಲ್ಲ. ಅಂದಹಾಗೆ, 2007ರಿಂದಲೇ ಜಗತ್ತಿನೆಲ್ಲರ ಖಾಸಗಿ ವಿಚಾರಗಳನ್ನು ಕದ್ದು ನೋಡುತ್ತಿದ್ದ ಅಮೆರಿಕ ಮತ್ತು ಅದಕ್ಕೆ ಅವಕಾಶ ಒದಗಿಸಿ ಕೊಟ್ಟ ಈ ಜಾಲತಾಣಗಳು, ಹೇಗೆ ಇವತ್ತು ತಮ್ಮನ್ನು ಸಮರ್ಥಿಸಿಕೊಳ್ಳಬಲ್ಲುದು? ಬಳಕೆದಾರರಿಗೆ ಮಾಡಿದ ಈ ದ್ರೋಹಕ್ಕೆ ಜಾಲತಾಣಗಳು ಯಾವ ಪರಿಹಾರವನ್ನು ಕೊಡುತ್ತವೆ? ಖಾಸಗಿತನ ಯಾರದ್ದೇ ಆದರೂ ಖಾಸಗಿಯೇ ಅಲ್ಲವೇ? ಅದನ್ನು ಗೋಪ್ಯ ವಾಗಿಡಲು ಸಾಧ್ಯವಿಲ್ಲ ಎಂದಾದರೆ, ಆ ಬಗ್ಗೆ ಬಳಕೆದಾರರಿಗೆ ತಿಳಿಸಬೇಕು. ಅದು ಬಿಟ್ಟು ಬಳಕೆದಾರರ ಚಟುವಟಿಕೆಗಳ ಪ್ರತಿ ವಿವರವನ್ನೂ ಅಮೆರಿಕಕ್ಕೆ ಒದಗಿಸಿಕೊಟ್ಟು, Your privacy our priority  ಎಂದು ಹೇಳಿಕೊಂಡಿದ್ದಾದರೂ ಏಕೆ? ಒಂದು ವೇಳೆ, ಎಡ್ವರ್ಡ್ ಸ್ನೋಡೆನ್ ಎನ್ನುವ 29 ವರ್ಷದ ಮಾಜಿ PRISM ನ ಅಧಿಕಾರಿ 2013 ಮೇ 20ರಂದು ಈ ಇಡೀ ಪ್ರಕರಣವನ್ನು ಬಹಿರಂಗಪಡಿಸದಿರುತ್ತಿದ್ದರೆ ಅಮೆರಿಕದ ಈ ಕಳ್ಳ ಮುಖದ ದರ್ಶನವಾಗುತ್ತಿತ್ತೇ? ಫೇಸ್‍ಬುಕ್‍ಗಳ ದ್ರೋಹ ಗೊತ್ತಾಗುತ್ತಿತ್ತೇ?
   ನಿಜವಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದ್ದೂ, ತನ್ನ ದೇಶದ ಇನ್ನೊಂದು ಮುಖವನ್ನು ಬಹಿರಂಗಕ್ಕೆ ತರುವ ಧೈರ್ಯ ತೋರಿದ್ದು ಸ್ನೋಡೆನ್ ಒಬ್ಬರೇ ಅಲ್ಲ..
   1971 ಜೂನ್ 13ರಂದು ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ವಿಯೆಟ್ನಾಂ ಯುದ್ಧಕ್ಕೆ ಸಂಬಂಧಿಸಿದ ರಹಸ್ಯ ರಕ್ಷಣಾ ದಾಖಲೆಗಳು ‘ಪೆಂಟಗನ್ ಪೇಪರ್’ ಎಂಬ ಹೆಸರಲ್ಲಿ ಪ್ರಕಟವಾಗ ತೊಡಗಿದುವು. 15 ದಿನಗಳಾಗುತ್ತಲೇ ನಿಕ್ಸನ್ ಸರಕಾರ ಕೋರ್ಟು ಮುಖಾಂತರ ಪ್ರಕಟಣೆಗೆ ತಡೆ ಒಡ್ಡಿತು. ಎರಡು ದಿನಗಳ ಬಳಿಕ ವಾಷಿಂಗ್ಟನ್ ಪೋಸ್ಟ್ ಮತ್ತು ಇತರ 17 ಪತ್ರಿಕೆಗಳು `ಪೆಂಟಗನ್ ಪೇಪರ್'ನ ವಿವರಗಳನ್ನು ಪ್ರಕಟಿಸ ತೊಡಗಿದುವು. ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕದಲ್ಲಿ  ಸ್ವಾರ್ಥ ಹಿತಾಸಕ್ತಿ, ಗೆಲ್ಲಲು ಸಾಧ್ಯವಿಲ್ಲವೆಂದು ಸರಕಾರಕ್ಕೆ ಗೊತ್ತಿದ್ದೂ ವರ್ಷಗಟ್ಟಲೆ ಯುದ್ಧವನ್ನು ಮುಂದುವರಿಸಿದ್ದು, ಸಾರ್ವಜನಿಕರನ್ನು ವಂಚಿಸಿದ್ದು... ಎಲ್ಲವೂ ಬಹಿರಂಗಕ್ಕೆ ಬರ ತೊಡಗಿದುವು. ಅಮೆರಿಕನ್ ಆಡಳಿತದ ಕೆಲವು ಮಂದಿಯ ಸ್ವಾರ್ಥಕ್ಕಾಗಿ ವಿಯೆಟ್ನಾಂ ಯುದ್ಧ ನಡೆಯುತ್ತಿದೆ ಅನ್ನುವುದು ಗೊತ್ತಾಗುತ್ತಿರುವಂತೆ ಸಾರ್ವಜನಿಕ ಆಕ್ರೋಶಗಳು ಬಿರುಸುಗೊಂಡುವು. ಒಂದು ರೀತಿಯಲ್ಲಿ, ಆ ಮೊದಲೇ ಯುದ್ಧ ವಿರೋಧಿ ರಾಲಿಗಳು ಅಮೆರಿಕಾದ ಅಲ್ಲಲ್ಲಿ ಜರುಗುತ್ತಿದ್ದುವು. ಅದಕ್ಕೆ ಇಂಬು ಕೊಡುವ ರೂಪದಲ್ಲಿದ್ದ ಈ ದಾಖಲೆಗಳನ್ನು ಬಹಿರಂಗಗೊಳಿಸಿದ್ದಕ್ಕಾಗಿ ಡೇನಿಯಲ್ ಎಲ್ಸ್ ಬರ್ಗ್ ರನ್ನು ರಾಜದ್ರೋಹದ ಆರೋಪ ಹೊರಿಸಿ ಸರಕಾರ ಬಂಧಿಸಿತು. ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯಾಗಿದ್ದ ಇವರು, ಸಾರ್ವಜನಿಕರನ್ನು ವಂಚಿಸಿ ನಡೆಸಲಾಗುತ್ತಿದ್ದ ಆ ಯುದ್ಧದ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದರು. ಎರಡು ವರ್ಷ ವಿಯೆಟ್ನಾಂನಲ್ಲಿದ್ದು ಯುದ್ಧವನ್ನು ಹತ್ತಿರದಿಂದ ನೋಡಿದ್ದುದು ಅವರನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಕವಿ ಗ್ಯಾರಿ ಸ್ನೈಡರ್ ಮತ್ತು  ರಾಂಡಿ  ಕೇಲರ್‍ರ ಜೊತೆ ಸಮಾಲೋಚಿಸಿ ಯುದ್ಧದ ವಿರುದ್ಧ ನಿಲ್ಲುವ ದೃಢ ನಿರ್ಧಾರ ಮಾಡಿದರು. ಯುದ್ಧ ವಿರೋಧಿ ರಾಲಿಗಳನ್ನು ಸಂಘಟಿಸಿದರು. 2003ರಲ್ಲಿ ಇರಾಕ್‍ನ ವಿರುದ್ಧ ಬುಶ್ ಯುದ್ಧ ಘೋಷಿಸಿದಾಗ, ಅದನ್ನು ಮೊಟ್ಟ ಮೊದಲು ಪ್ರಶ್ನಿಸಿದ್ದು ಎಲ್ಸ್ ಬರ್ಗ್ ರೇ. ಅಹ್ಮದಿ ನೆಜಾದ್‍ರ ವಿರುದ್ಧ ಇರಾನ್‍ನಲ್ಲಿ ಸರಕಾರಿ ವಿರೋಧಿ ದಂಗೆಗೆ ಅಮೆರಿಕ ಸ್ಪಾನ್ಸಾರ್ ಮಾಡುತ್ತಿರುವ ವಿವರವನ್ನು ಸೈಮಕ್ ಹಾರ್ಶ್ ಎಂಬ ಪತ್ರಕರ್ತ 2006ರ ಸೆಪ್ಟಂಬರ್‍ನಲ್ಲಿ ದಾಖಲೆ ಸಹಿತ ಬಹಿರಂಗಪಡಿಸಲು ಕಾರಣವೂ ಈ  ಎಲ್ಸ್ ಬರ್ಗ್ ರೇ. ಅಂದಹಾಗೆ, ಅಮೆರಿಕದ ಅನ್ಯಾಯವನ್ನು ಪ್ರತಿಭಟಿಸಿದವರ ಈ ಪಟ್ಟಿಯಲ್ಲಿ ಎಲ್ಸ್ ಬರ್ಗ್  ಒಂಟಿಯಲ್ಲ. 2010 ಮೇಯಲ್ಲಿ ಬ್ರಾಡ್ಲಿ ಮ್ಯಾನ್ನಿಂಗ್ ಎಂಬ ಯೋಧನನ್ನು ಬಗ್ದಾದ್‍ನಲ್ಲಿ ಅಮೆರಿಕ ಬಂಧಿಸಿದಾಗ, ವಿಕ್‍ಲೀಕ್ಸ್ ಮುಖಾಂತರ ಅಮೇರಿಕದ ಕರಾಳ ಮುಖವನ್ನು ಬಹಿರಂಗ ಪಡಿಸಿದ ವ್ಯಕ್ತಿ ಯಾರೆಂಬುದು ಜಗತ್ತಿಗೆ ಗೊತ್ತಾಯಿತು. ಆತನ ವಿರುದ್ಧ ಅಮೆರಿಕ 22 ಪ್ರಕರಣಗಳನ್ನು ದಾಖಲಿಸಿತು. ಬಗ್ದಾದ್‍ನಲ್ಲಿ ನೆರೆದ ಒಂದು ಗುಂಪಿನ ಮೇಲೆ 2007 ಜುಲೈ 12ರಂದು ಅಮೆರಿಕಾದ ಹೆಲಿಕಾಪ್ಟರ್ ಬಾಂಬ್ ಸುರಿಸಿದ್ದು ಮತ್ತು ರಾಯಿಟರ್ಸ್ ಸಂಸ್ಥೆಯ ಪತ್ರಕರ್ತರೂ ಸೇರಿ ಅನೇಕ ಮಂದಿ ಸಾವಿಗೀಡಾದದ್ದು ಮ್ಯಾನ್ನಿಂಗ್‍ನನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ರಕ್ಷಣೆಗೆ ಬಂದ ಅಂಬುಲೆನ್ಸ್ ನ ಮೇಲೂ ಹೆಲಿಕಾಪ್ಟರ್‍ನಿಂದ ಗುಂಡಿನ ಸುರಿಮಳೆಯಾಗಿತ್ತು. ಅಲ್ಲದೇ 2009 ಮೇ 4ರಂದು ಅಫಘನ್ನಿನ ಗ್ರನಾಯಿ ಯಲ್ಲಿ ಅಮೆರಿಕ ಸುರಿಸಿದ ಬಾಂಬಿಗೆ 85 ಮಂದಿ ಅಮಾಯಕ ನಾಗರಿಕರು ಬಲಿಯಾಗಿದ್ದರು. ಮ್ಯಾನ್ನಿಂಗ್ ಇವುಗಳಿಗೆ ಸಂಬಂಧಿಸಿದ ವೀಡಿಯೋ ಮತ್ತು ಇರಾಕ್, ಅಫಘಾನ್ ಯುದ್ಧಕ್ಕೆ ಸಂಬಂಧಿಸಿದ 7 ಲಕ್ಷದಷ್ಟು ಸೇನಾ ಮಾಹಿತಿ, ವರದಿಗಳನ್ನು ವಿಕಿಲೀಕ್ಸ್ ನ ಅಸಾಂಜೆಗೆ ಕಳುಹಿಸಿಕೊಟ್ಟರು.
   ಒಂದು ರೀತಿಯಲ್ಲಿ, 6x12 ಅಡಿ ಇರುವ, ಕಿಟಕಿ ಇಲ್ಲದ ಜೈಲಿನ ಒಂಟಿ ಕೋಣೆಯಲ್ಲಿ ಸದ್ಯ ಜೀವಾವಧಿ ಶಿಕ್ಷೆಯ ಸಾಧ್ಯತೆಯೊಂದಿಗೆ ಬದುಕುತ್ತಿರುವ ಮ್ಯಾನ್ನಿಂಗ್‍ನ ಬಗ್ಗೆ ಸ್ನೋಡೆನ್‍ಗೆ ಗೊತ್ತಿಲ್ಲ ಎಂದಲ್ಲ. ರಕ್ಷಣಾ ಗುತ್ತಿಗೆಯನ್ನು ವಹಿಸಿಕೊಳ್ಳುವ Booz Allen Hamilton ಎಂಬ ಸಂಸ್ಥೆಯ ಉದ್ಯೋಗವನ್ನು ನಿಷ್ಠೆಯಿಂದ ಮಾಡುತ್ತಾ, ಎಲ್ಲರಂತೆ ಬದುಕುವ ಸಕಲ ಅವಕಾಶಗಳೂ ಸ್ನೋಡೆನ್‍ಗೂ ಇತ್ತು. ಅಲ್ಲದೇ, ಈಗ ಆತ ತಂಗಿರುವ ಹಾಂಕಾಂಗ್ ಎಂದಲ್ಲ, ಜಗತ್ತಿನ ಎಲ್ಲಿದ್ದರೂ ವಶಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ  ಇರುವ ಅಮೆರಿಕವನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂಬುದೂ ಸ್ನೋಡೆನ್‍ಗೆ ಗೊತ್ತಿರಲೇಬೇಕು. ಆದರೂ ಅಮೆರಿಕದಲ್ಲಿ  ಎಲ್ಸ್ ಬರ್ಗ್ ಗಳು, ಮ್ಯಾನ್ನಿಂಗ್‍ಗಳು, ಸ್ನೋಡೆನ್‍ಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮನ್ನು ಸಕಲ ಅಪಾಯಗಳಿಗೂ ಒಡ್ಡಿಕೊಂಡು ದೊಡ್ಡಣ್ಣನಿಗೆ ಸಡ್ಡು ಹೊಡೆಯುತ್ತಾರೆ. ಆದರೂ, ಒಂಟಿ ವ್ಯಕ್ತಿಗಳಿಗಿರುವ ಈ ಧೈರ್ಯ, ಗೂಗಲ್, ಮೈಕ್ರೋಸಾಫ್ಟ್ ನಂಥ ದೈತ್ಯ ಸಂಸ್ಥೆಗಳಿಗಿಲ್ಲ ಎಂದರೆ ಏನೆನ್ನಬೇಕು? ಅಮೆರಿಕ ಕೇಳಿಕೊಂಡ ಕೂಡಲೇ ತನ್ನೆಲ್ಲಾ ಗ್ರಾಹಕರ ಚಟುವಟಿಕೆಗಳನ್ನು ಕದ್ದು ನೋಡುವುದಕ್ಕೆ ಅವಕಾಶ ಒದಗಿಸುವುದೆಂದರೇನು? ಬಳಕೆದಾರರಿಗಾದ ಮೋಸ, ವಿಶ್ವಾಸದ್ರೋಹಕ್ಕೆ ಈ ಸಂಸ್ಥೆಗಳು ಏನುತ್ತರ ಕೊಡುತ್ತವೆ?
   ಕನಿಷ್ಠ, Your privacy our priority, Privacy Setting  ಮುಂತಾದ ಪದಗುಚ್ಛಗಳನ್ನಾದರೂ ಈ ಜಾಲತಾಣಗಳು ತಮ್ಮ ಖಾತೆಯಿಂದ ಕಳಚಿಡಲಿ.


No comments:

Post a Comment