Wednesday, July 10, 2013

30 ವರ್ಷಗಳ ದರೋಡೆಯನ್ನು ಒಂದೇ ವರ್ಷದಲ್ಲಿ ತುಂಬಿ ಅಂದರೆ ಹೇಗೆ?

ಬಸೀಮ್ ಯೂಸುಫ್
ಸೌದಿ ಅರೇಬಿಯಾ, ಜರ್ಮನಿ, ಪಾಕಿಸ್ತಾನ, ಭಾರತ, ಸುಡಾನ್, ಬ್ರೆಝಿಲ್..
   ಈಜಿಪ್ಟ್ ನ ಪದಚ್ಯುತ ಅಧ್ಯಕ್ಷ  ಮುಹಮ್ಮದ್ ಮುರ್ಸಿಯವರು 2013 ಜನವರಿ 15ರಿಂದ ಮೇ 8ರ ನಡುವೆ ಈ ಎಲ್ಲ ರಾಷ್ಟ್ರಗಳಿಗೆ ಭೇಟಿ ನೀಡಿದರು. ಮೇ 8ರಂದು ಬ್ರೆಝಿಲ್‍ನ ಅಧ್ಯಕ್ಷೆ ಡೆಲ್ಮಾ ರುಸ್ಸೆಫ್‍ರೊಂದಿಗೆ ಆರ್ಥಿಕ, ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚಿಸಿದರು. ಬ್ರೆಝಿಲ್‍ನ ಉದ್ಯಮಿಗಳು ಮತ್ತು ಹೂಡಿಕೆದಾರರ ಸಭೆಯನ್ನು ಕರೆದು ಈಜಿಪ್ಟ್ ನಲ್ಲಿ ಬಂಡವಾಳ ಹೂಡುವಂತೆ ಆಹ್ವಾನಿಸಿದರು. ಈಜಿಪ್ಟ್ ಮತ್ತು ಸುಡಾನನ್ನು ಜೋಡಿಸುವಂಥ ರಸ್ತೆ ನಿರ್ಮಾಣದ ಬಗ್ಗೆ ಎಪ್ರಿಲ್ 5ರಂದು ಸುಡಾನ್‍ನ ಅಧ್ಯಕ್ಷ ಉಮರುಲ್ ಬಶೀರ್‍ರೊಂದಿಗೆ ಮಾತುಕತೆ ನಡೆಸಿದರು. ಎರಡೂ ರಾಷ್ಟ್ರಗಳು ಜಂಟಿಯಾಗಿ ಕೈಗಾರಿಕಾ ವಲಯವನ್ನು ಸ್ಥಾಪಿಸುವುದಾಗಿ ಘೋಷಿಸಿಕೊಂಡವು. ಮಾರ್ಚ್ 18ರಿಂದ 20ರ ವರೆಗೆ ಭಾರತಕ್ಕೆ ಭೇಟಿ ನೀಡಿದ ಮುರ್ಸಿಯವರು, 'ಇಂಡಿಯನ್-ಈಜಿಪ್ಟಿಯನ್ ಎಕನಾಮಿಕ್ ಫಾರಮ್'ನ ಸಭೆಯಲ್ಲಿ ಭಾಗವಹಿಸಿ ಮಾತಾಡಿದರು. 2012ರಲ್ಲಿ ಈಜಿಪ್ಟ್ ನಲ್ಲಿ ಹೂಡಿರುವ 300 ಮಿಲಿಯನ್ ಡಾಲರ್ ಬಂಡವಾಳವನ್ನು 2.5 ಬಿಲಿಯನ್ ಡಾಲರ್‍ಗೆ ಏರಿಸುವುದಕ್ಕೆ ಭಾರತವು ಒಪ್ಪಿಕೊಂಡಿತು. ಟಾಟಾ ಸಂಸ್ಥೆಯೊಂದಿಗೂ ಅವರು ಮಾತುಕತೆ ನಡೆಸಿದರು. ಜರ್ಮನಿಯ ಅಧ್ಯಕ್ಷೆ ಏಂಜೆಲೋ ಮಾರ್ಕೆಲ್‍ರನ್ನು ಜನವರಿ 30ರಂದು ಭೇಟಿಯಾಗಿ, ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯ ಸುತ್ತ ವಿಸ್ತೃತವಾಗಿ ಮಾತಾಡಿದರು. ಜನವರಿ 20ರಂದು ಸೌದಿಯ ದೊರೆ ಅಬ್ದುಲ್ಲ ಬಿನ್ ಅಬ್ದುಲ್ ಅಝೀಝ್‍ರನ್ನು ಸಂಧಿಸಿದರು. ಉಭಯ ದೇಶಗಳ ನಡುವಿನ ಸಹಕಾರ, ಗಲ್ಫ್ ರಾಷ್ಟ್ರಗಳ ಸ್ಥಿತಿ-ಗತಿ, ಸಿರಿಯ ಬಿಕ್ಕಟ್ಟು.. ಎಲ್ಲದರ ಬಗ್ಗೆಯೂ ಮುಕ್ತವಾಗಿ ಮಾತಾಡಿದರು. ಉಭಯ ದೇಶಗಳ ಮಧ್ಯೆ ಸೇತುವೆ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದರು..
ಅಲ್ಲದೇ
   ಕತರ್‍ನ ಪ್ರಧಾನಿ ಶೈಕ್ ಹಮದ್ ಬಿನ್ ಜಾಸಿಮ್ ಬಿನ್ ಗಬ್ರ್ ಅಲ್ ಥಾನಿ, ಐಎಂಎಫ್‍ನ (International Monitory Fund) ಮಧ್ಯೇಶ್ಯಾದ ನಿರ್ದೇಶಕ ಮಸೂದ್ ಅಹ್ಮದ್, ಫೆಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ  ಮಹಮೂದ್ ಅಬ್ಬಾಸ್, ಅಮೇರಿಕನ್ ನಿಯೋಗದ ಮುಖ್ಯಸ್ಥ ಜಾನ್ ಮೆಕೇನ್, ಮಲೇಶ್ಯಾದ ಪ್ರಧಾನಿ ಮುಹಮ್ಮದ್ ನಜೀಬ್ ತುನ್ ರಝಾಕ್, ಲಿಬಿಯದ ಪ್ರಧಾನಿ ಅಲಿ ಝಿದಾನ್, ನಾರ್ವೆಯ ವಿದೇಶಾಂಗ ಸಚಿವ ಎಸ್ಪೆನ್ ಬರ್ತ್ ಐಡೆ, ಯುರೋಪಿಯನ್ ಯೂನಿಯನ್‍ನ ನಿಯೋಗದ ಮುಖ್ಯಸ್ಥೆ ಕ್ಯಾಥರಿನ್ ಆಸ್ಟೆನ್.. ಈ ಎಲ್ಲ ನಾಯಕರೂ 2013 ಜನವರಿ 8ರಿಂದ ಜೂನ್ 19ರ ಮಧ್ಯೆ ಈಜಿಪ್ಟ್ ಗೆ ಭೇಟಿ ನೀಡಿದರು. ಹೂಡಿಕೆ, ಸಹಕಾರಗಳ ಬಗ್ಗೆ ಚರ್ಚಿಸಿದರು. ಕತರ್ ಅಂತೂ ಈಗಿರುವ 2.5 ಬಿಲಿಯನ್ ಡಾಲರ್ ನೆರವಿನ ಪ್ರಮಾಣವನ್ನು 5 ಬಿಲಿಯನ್ ಡಾಲರ್‍ಗೆ ಏರಿಸುವುದಾಗಿಯೂ 18 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತು. ಇವಲ್ಲದೇ, ಈಜಿಪ್ಟ್ ನ ಸಚಿವ ಮಟ್ಟದ ನಿಯೋಗಗಳು ಹಲವಾರು ರಾಷ್ಟ್ರಗಳಿಗೆ ಆಗಾಗ ಭೇಟಿ ನೀಡಿದುವು. ಅಮೇರಿಕಕ್ಕೆ ಭೇಟಿ ನೀಡುವಂತೆ ಮುರ್ಸಿಯವರನ್ನು ಒಬಾಮ 2013 ಜನವರಿ 26ರಂದು ದೂರವಾಣಿ ಮೂಲಕ ಆಹ್ವಾನಿಸಿದರು. 2012 ಜೂನ್ ತಿಂಗಳಲ್ಲಿ ಮುರ್ಸಿ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವು ದಿನಗಳಲ್ಲೇ ಇಸ್ರೇಲ್ ಮತ್ತು ಗಾಝಾದ ಮಧ್ಯೆ ಸಂಘರ್ಷ ತಲೆದೋರಿತು. ಮುರ್ಸಿ ಮಧ್ಯಸ್ಥಿಕೆ ವಹಿಸಿದರು. ಉಭಯತ್ರರಿಗೂ ಒಪ್ಪಿಗೆಯಾಗುವ ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಿ ಬಿಕ್ಕಟ್ಟನ್ನು ಬಗೆಹರಿಸಿದರು. ಅನನುಭವಿ ನಾಯಕನೊಬ್ಬನ ಈ ಯಶಸ್ಸನ್ನು ಜಾಗತಿಕವಾಗಿಯೇ ಕೊಂಡಾಡಲಾಯಿತು. ಗಲ್ಫ್ ವಲಯದಲ್ಲಿ ಮುರ್ಸಿ ಪ್ರಭಾವಿ ಮತ್ತು ಚತುರ ನಾಯಕರಾಗಿ ಬೆಳೆದು ಬರುತ್ತಿದ್ದಾರೆಂದು ಮಾಧ್ಯಮಗಳು ಷರಾ ಬರೆದುವು. ಜಗತ್ತಿನ ಪ್ರಮುಖ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳು ಮುರ್ಸಿಯವರ ಸಂದರ್ಶನ ನಡೆಸಿದುವು. ಇವೆಲ್ಲ ಏನು? ಕೇವಲ ಒಂದು ವರ್ಷದ ಅವಧಿಯೊಳಗೆ ಮುರ್ಸಿ ಪ್ರದರ್ಶಿಸಿದ ಈ ಕ್ರಿಯಾಶೀಲತೆಯನ್ನು ಜಗತ್ತಿನ ಬೇರೆ ಯಾವ ದೇಶದ ಅಧ್ಯಕ್ಷರು ಪ್ರದರ್ಶಿಸಿದ್ದಾರೆ? ಇಷ್ಟಿದ್ದೂ, ಅವರನ್ನು ‘ನಾಲಾಯಕ್ಕು’, ‘ಅನರ್ಹ ಮುಂದಾಳು’ ಎಂದೆಲ್ಲಾ ಸೇನೆ ಮತ್ತು ಪ್ರತಿಭಟನಾಕಾರರು ಕರೆದರಲ್ಲ, ಎಷ್ಟು ಸರಿ? ಈಜಿಪ್ಟ್ ನಲ್ಲಿ ಸದ್ಯ ಕಾಣಿಸಿಕೊಂಡಿರುವ ಬೆಲೆಯೇರಿಕೆ, ವಿದ್ಯುತ್ ಮತ್ತು ತೈಲದ ಕೊರತೆ, ಆರ್ಥಿಕ ಕುಸಿತಗಳೆಲ್ಲ ದಿಢೀರ್ ಬೆಳವಣಿಗೆಯೇನಲ್ಲ. ಕಳೆದ 30 ವರ್ಷಗಳಿಂದ ಮುಬಾರಕ್ ಮತ್ತು ಅವರ ಸರ್ವಾಧಿಕಾರಿ ತಂಡವು ನಡೆಸಿದ ದುರಾಡಳಿತದ ಫಲಿತಾಂಶವಿದು. ಕೇವಲ ಒಂದು ವರ್ಷದ ಅವಧಿಯೊಳಗೆ ಇವೆಲ್ಲವನ್ನೂ ಸರಿಪಡಿಸಲು ಮುರ್ಸಿ ಬಿಡಿ, ಯಾವ ರಾಂಬೋಗೂ ಸಾಧ್ಯವಿಲ್ಲ. ಇದು ಸೇನಾ ಮುಖ್ಯಸ್ಥ ಅಲ್ ಸಿಸಿಗೂ ಗೊತ್ತು. ಮುಹಮ್ಮದ್ ಅಲ್ ಬರಾದಿಗೂ ಗೊತ್ತು. ವಿಪಕ್ಷ  ನಾಯಕರಾದ ಅಮನ್ ನೂರ್, ಹಮ್ದೀನ್ ಸಬಾಹಿ, ಅಮ್ರ್ ಮೂಸಾರಿಗೂ ಗೊತ್ತು. ಹೀಗಿರುವಾಗ, ಮುರ್ಸಿಯನ್ನು ಉಚ್ಛಾಟಿಸುವಂತೆ ಒತ್ತಾಯಿಸಿ ತಹ್ರೀರ್ ಚೌಕದಲ್ಲಿ ಸೇರಿರುವ ಪ್ರತಿಭಟನಾಕಾರರ ಉದ್ದೇಶ ಶುದ್ಧಿಯ ಬಗ್ಗೆ ಅನುಮಾನ ಬರುವುದಿಲ್ಲವೇ? ನಿಜವಾಗಿ, ಮುಬಾರಕ್‍ರ ಕಾಲದಲ್ಲಿ IMF(ಅಂತಾರಾಷ್ಟ್ರೀಯ ಹಣಕಾಸು ನಿಧಿ)ನಿಂದ ಸಾಲ ಪಡೆಯುವುದು ತೀರಾ ಸುಲಭವಾಗಿತ್ತು. ಆದರೆ, ಅದೇIMF  ಮುರ್ಸಿಯವರಿಗೆ 4.8 ಬಿಲಿಯನ್ ಡಾಲರ್ ಸಾಲ ಕೊಡಲು ತಿಂಗಳುಗಟ್ಟಲೆ ಕಾಯಿಸಿತು. ವಿವಿಧ ರೀತಿಯ ಷರತ್ತು, ನೆಪಗಳನ್ನು ಮುಂದೊಡ್ಡಿತು. 2011ರ ಕ್ರಾಂತಿಯ ವೇಳೆ 800 ಮಂದಿ ಪ್ರತಿಭಟನಾಕಾರರನ್ನು ಹತ್ಯೆಗೈದ ಅಧಿಕಾರಿಗಳಲ್ಲಿ ಒಬ್ಬರಿಗೂ ಈ ವರೆಗೆ ಶಿಕ್ಷೆಯಾಗಿಲ್ಲ ಎಂಬ ಪ್ರಚಾರವು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡತೊಡಗಿತು. ಜಿಡಿಪಿ ಶೇ. 2ಕ್ಕೆ ಕುಸಿದಿರುವುದು, ನಿರುದ್ಯೋಗ ಪ್ರಮಾಣ ಶೇ. 13ಕ್ಕೆ ಏರಿರುವುದು.. ಎಲ್ಲವೂ ಸಾರ್ವಜನಿಕ ಚರ್ಚೆಯಾಗುವಂತೆ ನೋಡಿಕೊಳ್ಳಲಾಯಿತು. ಜೊತೆಗೇ, ಮುಸ್ಲಿಮ್ ಬ್ರದರ್‍ಹುಡ್‍ನ ಇಸ್ಲಾಮೀ  ಅಜೆಂಡಾವನ್ನು ಮುರ್ಸಿ ಜಾರಿಗೊಳಿಸುತ್ತಿದ್ದಾರೆ ಎಂಬ ಹುಯಿಲನ್ನೂ ಎಬ್ಬಿಸಲಾಯಿತು. ನಿಜವಾಗಿ, ಮುರ್ಸಿ ಅಧ್ಯಕ್ಷರಾಗಿದ್ದರೂ ಅವರ ಸುತ್ತ-ಮುತ್ತ, ಅಧಿಕಾರ ಕೇಂದ್ರಗಳಲ್ಲಿ, ನ್ಯಾಯಾಲಯಗಳಲ್ಲಿ ಇದ್ದದ್ದು ಮುಬಾರಕ್‍ರ ಬಂಟರೇ. ಸರಕಾರಿ ಮತ್ತು ಮಾಧ್ಯಮ ಕಚೇರಿಗಳಲ್ಲಿ ಮುಬಾರಕ್‍ರ ಹಿತೈಷಿಗಳು ಧಾರಾಳ ಇದ್ದರು. ಮುರ್ಸಿ ನೇಮಿಸುವ ಪ್ರತಿ ಅಧಿಕಾರಿಯ ಮೂಲವನ್ನೂ ಮಾಧ್ಯಮಗಳು ಸಂಶೋಧಿಸಿ ಪ್ರಕಟಿಸುತ್ತಿದ್ದುವು. ಅವರಿಗೂ ಬ್ರದರ್‍ಹುಡ್‍ಗೂ ದೂರದ ಸಂಬಂಧವೇನಾದರೂ ಇವೆಯೇ ಎಂದು ತನಿಖಿಸುತ್ತಿದ್ದುವು. ಒಂದು ರೀತಿಯಲ್ಲಿ, ಮುಬಾರಕ್ ಹೋಗಿದ್ದರೂ ಅವರ 'ಹವಾ' ಹೋಗಿರಲಿಲ್ಲ. 30 ವರ್ಷಗಳಿಂದ ಅವರು ಶಾಲೆ, ಕಾಲೇಜು ಸಹಿತ ಎಲ್ಲ ಕ್ಷೇತ್ರಗಳಲ್ಲೂ ಸೃಷ್ಟಿ ಮಾಡಿದ್ದ 'ಸೆಕ್ಯುಲರಿಸಂ'ನ  ವಾತಾವರಣವು ಅವರ ಜೊತೆಗೆ ಹೋಗುವುದಕ್ಕೆ ಸಿದ್ಧವೂ ಇರಲಿಲ್ಲ. ಆದ್ದರಿಂದಲೇ, ಅಧ್ಯಕ್ಷೀಯ ಚುನಾವಣೆಯಲ್ಲಿ ಮುರ್ಸಿ ಶೇ. 52 ಮತಗಳನ್ನು ಪಡೆದಾಗ ವಾಯುದಳದ ಮಾಜಿ ಕಮಾಂಡರ್ ಮತ್ತು ಮುಬಾರಕ್‍ರ ಬೆಂಬಲಿಗರಾಗಿದ್ದ ಶಫೀಕ್ ಅಹ್ಮದ್‍ರು ಶೇ. 48 ಮತಗಳನ್ನು ಪಡೆದದ್ದು. ಇಲ್ಲದಿದ್ದರೆ, ಅಧ್ಯಕ್ಷರಾಗಿ ಆಯ್ಕೆಯಾದ ಕೇವಲ 5 ತಿಂಗಳುಗಳೊಳಗೆ ಮುರ್ಸಿ ವಿರುದ್ಧ ಪ್ರತಿಭಟನೆಗಳು ಕಾಣಿಸಿಕೊಂಡಿರುವುದಕ್ಕೆ ಮುಬಾರಕ್ ಗುಂಪಿನ ಷಡ್ಯಂತ್ರದ ಹೊರತು ಬೇರೆ ಯಾವ ಕಾರಣವಿದೆ? ತಹ್ರೀರ್ ಚೌಕದಲ್ಲಿ ಡಿಸೆಂಬರ್‍ನಲ್ಲಿಯೇ ಕೆಲವು ಯುವಕರು ಪ್ರತಿದಿನ ಮುರ್ಸಿ ವಿರುದ್ಧ ಘೋಷಣೆ ಕೂಗಿ ಹೊರಟು ಹೋಗುತ್ತಿದ್ದುದು ಏನನ್ನು ಸೂಚಿಸುತ್ತದೆ? ಕೇವಲ 5 ತಿಂಗಳೊಳಗೆ ಓರ್ವ ಅಧ್ಯಕ್ಷನ ಕಾರ್ಯಕ್ಷಮತೆಯನ್ನು ಅಂದಾಜಿಸುವುದಕ್ಕೆ ಸಾಧ್ಯವೇ? ಯುವಕರ ಆ ಘೋಷಣೆಗಳೇ ಬಳಿಕ ಪ್ರತಿಭಟನೆಯಾಗಿ ಬದಲಾದದ್ದು. ತಹ್ರೀರ್ ಚೌಕದಲ್ಲಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಿದಂತೆಯೇ ಈಜಿಪ್ಟ್ ನ ದೊಡ್ಡ ಆದಾಯ ಮೂಲವಾದ ಪ್ರವಾಸೋದ್ಯಮದಲ್ಲೂ ಇಳಿಮುಖವಾಯಿತು. ವಿದೇಶಿ ಯಾತ್ರಿಕರು ಈಜಿಪ್ಟ್ ಪ್ರವಾಸವನ್ನು ಮುಂದೂಡತೊಡಗಿದರು. ಬಹುಶಃ ಮುರ್ಸಿ ಅಧಿಕಾರ ವಹಿಸಿದ ಕ್ಷಣದಿಂದಲೇ ಅವರ ವರ್ಚಸ್ಸನ್ನು ಕಳೆಗುಂದಿಸುವ ಮತ್ತು ಅವರನ್ನು ಪದಚ್ಯುತಗೊಳಿಸುವ ಷಡ್ಯಂತ್ರವೊಂದನ್ನು 'ಮುಬಾರಕ್ ತಂಡವು' ಹೆಣೆದಿರಲೇಬೇಕು. ಮುರ್ಸಿ ಪದಚ್ಯುತಗೊಂಡ ಎರಡು ದಿನಗಳ ಬಳಿಕ ಜುಲೈ 4ರಂದು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ವಿಪಕ್ಷ  ನಾಯಕ ಬರಾದಿಯವರ ಸಂದರ್ಶನ ಪ್ರಕಟಿಸಿತ್ತು. ಅದರಲ್ಲಿ,
Baradei said that, he had worked hard to convince western powers of what he called necessity of forcibly ousting President Morsi .'- ಮುರ್ಸಿಯನ್ನು ಬಲವಂತ ದಿಂದ ಪದಚ್ಯುತಗೊಳಿಸುವುದಕ್ಕಿರುವ ಅನಿವಾರ್ಯ ಕಾರಣಗಳನ್ನು ಪಶ್ಚಿಮದ ಬಲಾಢ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿಸಿದ್ದೇನೆ'- ಎಂದು ಅವರು ಹೇಳಿರುವುದಾಗಿ ಅದು ಪ್ರಕಟಿಸಿತ್ತು. ಬ್ರದರ್‍ಹುಡ್‍ನ ನಾಯಕರನ್ನು ಬಂಧಿಸುತ್ತಿರುವುದನ್ನೂ ಸಂದರ್ಶನದಲ್ಲಿ ಅವರು ಸಮರ್ಥಿಸಿದ್ದರು. ವಿಶ್ವಸಂಸ್ಥೆಯ ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ  ಮತ್ತು ನೋಬೆಲ್ ಪ್ರಶಸ್ತಿ ವಿಜೇತರಾಗಿರುವ ಅಲ್ ಬರಾದಿಯವರು ಸೇನೆಯ ರಾಯಭಾರಿಯಂತೆ ನಡೆದುಕೊಂಡಿರುವುದನ್ನು ತಕ್ಷಣದ ಬೆಳವಣಿಗೆಯಾಗಿ ಪರಿಗಣಿಸಲು ಖಂಡಿತ ಸಾಧ್ಯವಿಲ್ಲ. ಪಶ್ಚಿಮ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಇರುವ ಬರಾದಿಯನ್ನು ಸೇನೆ ಈ ಮೊದಲೇ ಆ ಕೆಲಸಕ್ಕೆ ನೇಮಿಸಿರಬೇಕು. ಪ್ರಜಾತಂತ್ರ ಸರಕಾರವನ್ನು ಉರುಳಿಸಿದ ಅಪಖ್ಯಾತಿ ಬರದಂತೆ ನೋಡಿಕೊಳ್ಳುವ ಸರ್ವ ಮುನ್ನೆಚ್ಚರಿಕೆಯನ್ನೂ ಅದು ಮಾಡಿಕೊಂಡಿತ್ತು. ಅದಕ್ಕೆ ಪೂರಕವಾಗಿ ತಹ್ರೀರ್ ಚೌಕವನ್ನೂ ಬಸೀಮ್ ಯೂಸುಫ್‍ರಂಥವರನ್ನೂ ಅದು ಬಳಸಿಕೊಂಡಿತು.
   2012 ನವೆಂಬರ್ 23ರ ಬಳಿಕ ಈಜಿಪ್ಟ್ ನ CBC ಟಿ.ವಿ. ಚಾನೆಲ್‍ನಲ್ಲಿ ಬಸೀಮ್ ಯೂಸುಫ್‍ರ ವಿಡಂಬನೆ ಕಾರ್ಯಕ್ರಮ ಪ್ರಸಾರವಾಗತೊಡಗಿತು. ಅಮೇರಿಕದಲ್ಲಿ ಜಾನ್ ಸ್ಟೀವರ್ಟ್ ನಡೆಸಿ ಕೊಂಡು ಬರುತ್ತಿರುವ ದಿ ಡೈಲಿ ಶೋ ಕಾರ್ಯಕ್ರಮದಿಂದ ಪ್ರಭಾವಿತರಾಗಿ ಬಸೀಮ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. 3 ಕಾರ್ಯಕ್ರಮಗಳು ಪ್ರಸಾರವಾದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾದುವು. ಅವರ ವಿಡಂಬನೆಯ ಶೈಲಿಯನ್ನು ಅಸಂಖ್ಯ ಮಂದಿ ಪ್ರಶ್ನಿಸತೊಡಗಿದರು. ಟೈಮ್ಸ್ ಮ್ಯಾಗಸಿನ್‍ನ 2013ರ ವಿಶ್ವದ ಪ್ರಭಾವಿ 100 ಮಂದಿಯಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದ ಬಸೀಮ್‍ರ ವಿರುದ್ಧ ಮುರ್ಸಿಯವರ ಕಚೇರಿಯು ಮೊಕದ್ದಮೆಯನ್ನು ಹೂಡಿತು. ಅವರ ಕಾರ್ಯಕ್ರಮಗಳು ಸಾರ್ವಜನಿಕ ಶಾಂತಿಯನ್ನು ಕದಡುವ, ಆಡಳಿತ ಯಂತ್ರವನ್ನು ಕೆಟ್ಟದಾಗಿ ಬಿಂಬಿಸುವ ಮತ್ತು ಭದ್ರತೆಗೆ ತೊಡಕಾಗುವ ರೀತಿಯಲ್ಲಿವೆ..’ ಎಂದು ದೂರಿನಲ್ಲಿ ಆರೋಪಿಸಲಾಯಿತು. ‘ಇಸ್ಲಾಮ್ ಮತ್ತು ಅಧ್ಯಕ್ಷ ಮುರ್ಸಿಯವರನ್ನು ಬಸೀಮ್ ಅವಮಾನಿಸಿದ್ದಾರೆ’ ಎಂಬ ಆರೋಪದಲ್ಲಿ 2013 ಮಾರ್ಚ್ 30ರಂದು ಬಂಧನ ವಾರೆಂಟ್ ಹೊರಡಿಸಲಾಯಿತು. ಬಸೀಮ್ ಆ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡರೂ ಈ ಎಲ್ಲ ಬೆಳವಣಿಗೆಗಳನ್ನು ಮುರ್ಸಿ ವಿರೋಧಿಗಳು ಅತ್ಯಂತ ಜಾಣತನದಿಂದ ಬಳಸಿಕೊಂಡರು. ಮುರ್ಸಿಯವರು ವ್ಯಕ್ತಿ ಸ್ವಾತಂತ್ರ್ಯವನ್ನು ಹರಣಗೊಳಿಸುತ್ತಿದ್ದಾರೆ, ಸರ್ವಾಧಿಕಾರಿಯಾಗುತ್ತಿದ್ದಾರೆ.. ಎಂಬುದಾಗಿ ಅವರು ಪ್ರಚಾರ ಮಾಡಿದರು. ಜಾನ್ ಸ್ಟೀವರ್ಟ್ ಕೂಡ ಬಸೀಮ್‍ಗೆ ಬೆಂಬಲ ಸಾರಿದರು. ಮುರ್ಸಿ ವಿರುದ್ಧ ಘೋಷಣೆ ಕೂಗುವುದಕ್ಕೆ ಇಂಥ ಪ್ರಕರಣಗಳು ಮತ್ತು ಅದರ ಸುತ್ತ ಹುಟ್ಟು ಹಾಕಲಾದ ಸುಳ್ಳುಗಳು ಪ್ರಮುಖ ಪಾತ್ರ ವಹಿಸಿದುವು. ಅಂದಹಾಗೆ, ಅಮೇರಿಕದೊಂದಿಗೆ ಮುನಿಸಿಕೊಂಡಿರುವ ಅಫಘಾನ್, ಲಿಬಿಯ, ನೈಜೀರಿಯ, ಇಥಿಯೋಪಿಯ, ಮಾಲಿ.. ಮುಂತಾದ ರಾಷ್ಟ್ರಗಳಲ್ಲಿರುವ 'ಇಸ್ಲಾಮಿಸ್ಟ್'ಗಳನ್ನು ಪ್ರಜಾತಂತ್ರದೆಡೆಗೆ ಕರೆಯುತ್ತಿರುವ ಅಮೇರಿಕವು ಯಾಕೆ ಈಜಿಪ್ಟ್ ನ ಪ್ರಜಾತಂತ್ರ ಪತನದ ಬಗ್ಗೆ ಸ್ಪಷ್ಟ ದನಿಯಲ್ಲಿ ಮಾತಾಡುತ್ತಿಲ್ಲ? ಪ್ರತಿವರ್ಷ ತನ್ನಿಂದ 1.3 ಬಿಲಿಯನ್ ಡಾಲರನ್ನು ನೆರವಿನ ರೂಪದಲ್ಲಿ ಪಡಕೊಳ್ಳುತ್ತಿರುವ ಈಜಿಪ್ಟ್ ಸೇನೆಯ ಬಗ್ಗೆ ಅದರ ನಿಲುವೇನು?
ಅಷ್ಟಕ್ಕೂ,
   ಮುರ್ಸಿಯವರನ್ನು ಪದಚ್ಯುತಗೊಳಿಸಿದ ಸೇನೆಯನ್ನು ಅಭಿನಂದಿಸಿ ಸಂದೇಶ ಕಳುಹಿಸಿದ ರಾಷ್ಟ್ರಗಳಲ್ಲಿ ಯುಎಇ ಮತ್ತು ಸೌದಿ ಮೊದಲಿಗರೆಂದ ಮೇಲೆ ಅಮೇರಿಕವನ್ನೋ ಇಸ್ರೇಲನ್ನೋ ದೂರಿ ಏನು ಪ್ರಯೋಜನವಿದೆ, ಅಲ್ಲವೇ?

No comments:

Post a Comment