Tuesday, September 4, 2018

ತಯಾರಿಸಬೇಕಿರುವುದು ಅಣುಬಾಂಬ್ ಅಲ್ಲ..


1. ಅಹ್ಮದ್ ಹಸ್ಸನ್ ಝವಾಯಿಲ್
2. ಅಝೀಝï ಸಾಂಕರ್
3. ಮುಹಮ್ಮದ್ ಅಬ್ದುಸ್ಸಲಾಮ್
ವೈಜ್ಞಾನಿಕ ಸಂಶೋಧನೆಗಾಗಿ ಈ ವರೆಗೆ ನೀಡಲಾದ ಒಟ್ಟು ನೋಬೆಲ್ ಪ್ರಶಸ್ತಿಗಳಲ್ಲಿ ಮುಸ್ಲಿಮರನ್ನು ಹುಡುಕಿದಾಗ ಸಿಕ್ಕ ಹೆಸರುಗಳಿವು. ಈ ಗೋಲದಲ್ಲಿ ಸುಮಾರು 52 ಮುಸ್ಲಿಮ್ ರಾಷ್ಟ್ರಗಳಿವೆ. ಅಲ್ಲದೇ ಈ ರಾಷ್ಟ್ರಗಳ ಹೊರಗಡೆಯೂ ಧಾರಾಳ ಮುಸ್ಲಿಮರಿದ್ದಾರೆ. ಬಹುತೇಕ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಮುಸ್ಲಿಮ್ ಜನಸಂಖ್ಯೆಯಿದೆ. ಇಷ್ಟೆಲ್ಲ ಇದ್ದೂ ನೋಬೆಲ್ ಪುರ ಸ್ಕøತರ ಪಟ್ಟಿಯಲ್ಲಿ ಮುಸ್ಲಿಮ್ ಹೆಸರು ಶೂನ್ಯ ಅನ್ನುವಷ್ಟು ಕಡಿಮೆ ಇರುವುದು ಏಕೆ? ಈಜಿಪ್ಟ್ ಮೂಲದ ಅಮೇರಿಕನ್ ಪ್ರಜೆ ಅಹ್ಮದ್ ಹಸ್ಸನ್ ಝವಾಯಿಲ್‍ರು 1991ರಲ್ಲಿ ನೋಬೆಲ್ ಪುರಸ್ಕøತ ರಾದರು. ಭೌತಶಾಸ್ತ್ರಕ್ಕೆ ಸಂಬಂಧಿಸಿ ಅವರು ನಡೆಸಿದ ವೈಜ್ಞಾನಿಕ ಸಂಶೋಧನೆಗಾಗಿ ಸಿಕ್ಕ ಪುರಸ್ಕಾರ ಇದು. ವಿಷಾದ ಏನೆಂದರೆ, ಭೌತಶಾಸ್ತ್ರ ವಿಭಾಗದಲ್ಲಿ ಈವರೆಗೆ ನೋಬೆಲ್ ಪುರಸ್ಕಾರ ಪಡೆದ ಏಕೈಕ ಮುಸ್ಲಿಮ್ ವ್ಯಕ್ತಿ ಇವರು. ಈಜಿಪ್ಟ್ ಮೂಲದ ಅಮೇರಿಕನ್ ಪ್ರಜೆ ಅಝೀಝï ಸಾಂಕರ್ ಅವರು ರಸಾಯನಶಾಸ್ತ್ರ ವಿಭಾಗದ ಸಾಧನೆಗಾಗಿ 2015ರಲ್ಲಿ ನೋಬೆಲ್ ಪುರಸ್ಕಾರವನ್ನು ಇನ್ನಿಬ್ಬರು ವಿಜ್ಞಾನಿಗಳೊಂದಿಗೆ ಹಂಚಿಕೊಂಡರು. ಟರ್ಕಿ ಮೂಲದ ಮುಹಮ್ಮದ್ ಅಬ್ದುಸ್ಸಲಾಮ್ ಅವರೂ ರಸಾಯನಶಾಸ್ತ್ರ ವಿಭಾಗದಲ್ಲಿ ಮಾಡಿದ ಸಾಧನೆಗಾಗಿ 1979ರಲ್ಲಿ ನೋಬೆಲ್ ಪಾರಿತೋಷಕ ಪಡೆದುಕೊಂಡರು. ಇಷ್ಟೇ. ಇಲ್ಲಿಗೆ ಈ ಪಟ್ಟಿ ಮುಗಿಯುತ್ತದೆ. ಯಾಕೆ ಹೀಗೆ? ಎಡವಟ್ಟು ಸಂಭವಿಸಿದ್ದು ಎಲ್ಲಿ? ಮುಸ್ಲಿಮ್ ಸಮುದಾಯ ಆಗಾಗ ಇತಿಹಾಸವನ್ನು ಸ್ಮರಿಸಿಕೊಳ್ಳುವುದಿದೆ. ಇತಿಹಾಸದಲ್ಲಿ ಆಗಿ ಹೋದ ಮುಸ್ಲಿಮ್ ವಿಜ್ಞಾನಿಗಳನ್ನು ಸ್ಮರಿಸಿಕೊಂಡು ಹೆಮ್ಮೆ ಪಡುವುದೂ ಇದೆ. ಒಪ್ಪೋಣ. ಆದರೆ ಇತಿಹಾಸವೆಂಬುದು ಅಮಲು ಆಗಬಾರ ದಲ್ಲ. ‘ಫಾದರ್ ಆಫ್ ಇಂಡೋಲಜಿ’ ಎಂದೇ ಗುರುತಿಸಿಕೊಂಡಿದ್ದ ಅಲ್ ಬರೂನಿ, ಪ್ಲೇಟೋ-ಅರಿಸ್ಟಾಟಲ್‍ರ ಸಂಶೋಧನೆಯನ್ನು ಇನ್ನಷ್ಟು ವಿಸ್ತರಿಸಿ ಹೊಸ ಹೊಳಹನ್ನು ತೆರೆದಿಟ್ಟ ಅಬುಲ್ ನಸ್ರ್ ಅಲ್ ಫರಾಬಿ, ಅಲ್ ಕಿಂದಿ, ಅಲ್ ಬತಾನಿ, ತತ್ವಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ ಇಬ್ನುಸೀನಾ, ಇಬ್ನು ಬತೂನ್, ಇಬ್ನು ರುಶ್ದ್, ಇಬ್ನು ಹೈತಂ, ಅಲ್ ಬೈತಾರ್, ಉಮರ್ ಖಯ್ಯೂಂ.. ಮುಂತಾದ ಅನೇಕ ಮುಸ್ಲಿಮ್ ವಿಜ್ಞಾನಿಗಳು ಇವತ್ತು ಚಾರಿತ್ರಿಕ ಗುರುತನ್ನು ಬಿಟ್ಟು ಹೋಗಿದ್ದಾರೆ. ತತ್ವಶಾಸ್ತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟವರ ಹೆಸರೂ ಇವತ್ತು ಸ್ಮರಣೆಗೆ ಒಳಗಾಗುತ್ತಿದೆ. ಒಂದು ವೇಳೆ, ಈ ವಿಜ್ಞಾನಿಗಳ ಕಾಲದಲ್ಲಿ ನೋಬೆಲ್ ಪಾರಿತೋಷಕ ಇದ್ದಿದ್ದರೆ, ಇವರಲ್ಲಿ ಹಲವರು ನೋಬೆಲ್ ಪುರಸ್ಕಾರಕ್ಕೆ ಒಳಗಾಗುತ್ತಿದ್ದರು ಎಂದೇ ಅನಿಸುತ್ತದೆ. ಆದರೆ ಇತಿಹಾಸವೆಂಬುದು ಇತಿಹಾಸವೇ. ಅದು ವರ್ತಮಾನವಾಗುವುದಿಲ್ಲ. ಇತಿಹಾಸದ ಸಾಧನೆಗಳನ್ನು ವರ್ತಮಾನದ ವಾಸ್ತವವಾಗಿ ಪರಿವರ್ತಿಸಬೇಕಾದರೆ ಅದಕ್ಕೆ ಕೆಲವು ಯೋಜನೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಚಿಂತನ-ಮಂಥನದ ಅಗತ್ಯವಿರುತ್ತದೆ. ಬಂಡವಾಳ ಹೂಡಿಕೆಗೆ ತಯಾರಾಗ ಬೇಕಾಗುತ್ತದೆ. ಇದು ಅಸಾಧ್ಯದ ಮಾತಲ್ಲ. ವಿಜ್ಞಾನಿಗಳು ಮತ್ತು ಸಂಶೋಧಕರನ್ನು ತಯಾರುಗೊಳಿಸುವುದು ಒಂದು ಸವಾಲೇ ಹೊರತು ನೆವರ್ ಎಂದು ಹೇಳಿಬಿಡಬಹುದಾದ ಒಂದಲ್ಲ. ಒಂದು ವೇಳೆ, ವಿಜ್ಞಾನಿಗಳನ್ನು ತಯಾರಿಸುವುದು ಅಸಾಧ್ಯ ಎಂದಾಗಿರುತ್ತಿದ್ದರೆ ಜಗತ್ತಿನ ಜನಸಂಖ್ಯೆಯಲ್ಲಿ ಕೇವಲ 0.2% ಇರುವ ಯಹೂದಿ ಸಮುದಾಯಕ್ಕೆ ಅದು ಅಸಾಧ್ಯವಾಗಬೇಕಿತ್ತು. ಐತಿಹಾಸಿಕ ದಾಖಲೆಗಳ ಆಧಾರದಲ್ಲಿ ಹೇಳುವುದಾದರೆ, ಅತ್ಯಂತ ಹೆಚ್ಚು ದೌರ್ಜನ್ಯಗಳನ್ನು ಅನುಭವಿಸಿದ ಸಮುದಾಯ ಅದು. ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯವನ್ನು ಕಳಕೊಂಡು ಜೀವಭಯ ದಿಂದ ಬದುಕಿದ ಸಮುದಾಯವಾಗಿ ಅದು ಗುರುತಿಸಿಕೊಳ್ಳುತ್ತದೆ. ಯಹೂದಿ ಎಂಬ ಐಡೆಂಟಿಟಿಯೇ ಅಪರಾಧವಾಗಿ ಮತ್ತು ಆ ಕಾರಣಕ್ಕಾಗಿಯೇ ಹತ್ಯೆಗೀಡಾದ ಲಕ್ಷಾಂತರ ಮಂದಿಯ ಬಗ್ಗೆ ಈಗಲೂ ಜಗತ್ತು ಸ್ಮರಿಸುತ್ತದೆ. ಇಂಥದ್ದೊಂದು ಹಿನ್ನಡೆ ಯನ್ನು ಅನುಭವಿಸಿದ ಹೊರತಾಗಿಯೂ ಇವತ್ತು ಯಹೂದಿ ಸಮು ದಾಯ ಎಲ್ಲಿದೆ ಎಂದು ನೋಡಿದರೆ ಅಚ್ಚರಿ ಯಾಗುತ್ತದೆ. ಈವರೆಗೆ ನೀಡಲಾಗಿರುವ ಒಟ್ಟು 892 ನೋಬೆಲ್ ಬಹುಮಾನ ಗಳಲ್ಲಿ 201 ಬಹುಮಾನವನ್ನು ಯಹೂದಿಯರೇ ಪಡೆದುಕೊಂಡಿದ್ದಾರೆ. ವಿಶ್ವದ ಜನಸಂಖ್ಯೆಯಲ್ಲಿ ಯಹೂದಿ ಸಮುದಾಯದ ಪಾಲು ಬರೇ 0.2% ಇದ್ದರೂ ನೋಬೆಲ್ ಪಡಕೊಳ್ಳುವಲ್ಲಿ ಅವರ ಪಾಲು 23 ಶೇಕಡ. ಇದು ಹೇಗೆ ಸಾಧ್ಯವಾಯಿತು? 2013, 14, 15, 16, 17.. ಈ ಎಲ್ಲ ವರ್ಷಗಳಲ್ಲೂ ನೋಬೆಲ್ ಪುರಸ್ಕಾರ ಪಡೆದವರಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಯಹೂದಿಯರು ಇದ್ದರು. ಪ್ರತಿವರ್ಷ ಸುಮಾರು 10ರಷ್ಟು ನೋಬೆಲ್ ಬಹುಮಾನವನ್ನು ನೀಡಲಾಗುತ್ತದೆ. ಸಾಹಿತ್ಯ, ಶಾಂತಿ, ವೈದ್ಯಕೀಯ, ಖಗೋಳ, ರಸಾಯನ ಶಾಸ್ತ್ರ, ಭೌತ, ಜೀವಶಾಸ್ತ್ರ.. ಇತ್ಯಾದಿ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದವರನ್ನು ನೋಬೆಲ್‍ನ ಮೂಲಕ ಗೌರವಿಸಲಾಗುತ್ತದೆ. 201 ನೋಬೆಲ್ ಬಹುಮಾನವನ್ನು ಪಡೆದುಕೊಂಡಿರುವ ಯಹೂದಿ ಸಮುದಾಯಕ್ಕೆ ಹೋಲಿಸಿ ದರೆ ಮುಸ್ಲಿಮ್ ಸಮುದಾಯ ಪಡೆದು ಕೊಂಡಿರುವ ಒಟ್ಟು ನೋಬೆಲ್‍ಗಳ ಸಂಖ್ಯೆ ಬರೇ 12. ಇದರಲ್ಲಿ 7 ನೋಬೆಲ್ ಶಾಂತಿ ಪುರಸ್ಕಾರವಾದರೆ, 2 ಸಾಹಿತ್ಯ ಪುರಸ್ಕಾರ. ವೈಜ್ಞಾನಿಕ ಸಂಶೋಧನೆಗಾಗಿ 3. ಇವು ಸಾಕೇ? ಒಂದು ಕಾಲದಲ್ಲಿ ವಿಜ್ಞಾನಿಗಳ ಪಡೆ ಯನ್ನೇ ಜಗತ್ತಿಗೆ ಕೊಟ್ಟ ಸಮುದಾಯ ವೊಂದು ಇವತ್ತು ವಿಜ್ಞಾನಿಗಳ ಬರ ವನ್ನು ಅನುಭವಿಸುತ್ತಿರುವು ದಕ್ಕೆ ಏನು ಕಾರಣ? ಮುಸ್ಲಿಮ್ ಸಮುದಾಯದಲ್ಲಿ ದಿಢೀರನೇ ಈ ಕೊರತೆ ಕಾಣಿಸಿ ಕೊಂಡದ್ದು ಯಾಕಾಗಿ? ಸದ್ಯ ಜೋರ್ಡಾನ್ ಮೂಲದ ಅಮೇರಿಕನ್ ವಿಜ್ಞಾನಿ ಉಮರ್ ಯಾಗ್ನಿ, ಇರಾನ್ ಮೂಲದ ಅಮೇರಿಕನ್ ಸಂಶೋಧಕ ಮೆಹ್ರಾನ್ ಕರ್‍ದಾರ್, ಕ್ವಾಂಟಂ ಫಿಸಿಕ್ಸ್ ಮತ್ತು ಸ್ಟೆತೋಸ್ಕೋಪಿ ಕ್ಷೇತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿರುವ ಹಾಗೂ 1959ರಲ್ಲಿ ಗ್ಯಾಸ್ ಲೇಸರ್ ಅನ್ನು ಸಂಶೋಧಿಸಿರುವ ಇರಾನ್-ಅಮೇರಿಕನ್ ಸಂಶೋಧಕ ಅಲಿ ಜವಾನ್, ರಸಾಯನಶಾಸ್ತ್ರ ತಜ್ಞರಾಗಿ ರುವ ಈಜಿಪ್ಟ್ ಮೂಲದ ಅಮೇರಿಕನ್ ಪ್ರಜೆ ಮುಸ್ತಫಾ ಅಲ್ ಸಈದ್ ಮತ್ತು ಪಾಕಿಸ್ತಾನದ ಅಣು ವಿಜ್ಞಾನಿ ಎ.ಕ್ಯೂ. ಖಾನ್ ಮುಂತಾದವರು ಇವತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಮುಸ್ಲಿಮ್ ಪ್ರತಿನಿಧಿಗಳಾಗಿ ಗುರುತಿಸಿಕೊಂಡಿದ್ದಾರೆ. ಹಾಗಂತ, ನೋಬೆಲ್ ಪಡೆದವರು ಮಾತ್ರ ಶ್ರೇಷ್ಠ ವಿಜ್ಞಾನಿಗಳು ಎಂದಲ್ಲ. ನೋಬೆಲ್ ಒಂದೇ ವಿಜ್ಞಾನಿಗಳ ಸಾಮರ್ಥ್ಯವನ್ನು ಅಳೆಯುವ ಮಾನ ದಂಡವೂ ಅಲ್ಲ. ಕಳೆದವಾರ ನಿಧನ ರಾದ ಶ್ರೇಷ್ಠ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರಿಗೇ ನೋಬೆಲ್ ಸಿಕ್ಕಿಲ್ಲ. ಆದರೂ ನೋಬೆಲ್ ಪುರಸ್ಕಾರ ವೆಂಬುದು ಅತಿದೊಡ್ಡ ಗೌರವ. ನೋಬೆಲ್ ಪುರಸ್ಕಾರದ ಆಯ್ಕೆಗೆ ಅದರದ್ದೇ  ಆದ ಮಾನದಂಡಗಳಿವೆ. ಸ್ಟೀಫನ್ ಹಾಕಿಂಗ್‍ರಿಗೆ ಸಿಕ್ಕಿಲ್ಲ ಅನ್ನುವುದೇ ಅಲ್ಲಿಯ ಆಯ್ಕೆ ಪ್ರಕ್ರಿಯೆ ಎಷ್ಟು ಕಠಿಣವಾಗಿದೆ ಎಂಬುದನ್ನು ಸೂಚಿಸುತ್ತದೆ.
     ವಿಜ್ಞಾನಿಗಳ ವಿಶೇಷತೆ ಏನೆಂದರೆ, ಅವರ ಕೊಡುಗೆ ಒಂದು ಸಮುದಾ ಯಕ್ಕೆ ಸೀಮಿತವಾಗಿರುವುದಿಲ್ಲ ಎಂಬುದು. ವಿಜ್ಞಾನಿಯೋರ್ವರು ಯಾವ ಸಮುದಾಯದೊಂದಿಗೆ ಗುರುತಿಸಿಕೊಂಡಿರಲಿ, ಆದರೆ ಅವರ ಸಂಶೋಧನೆಯ ಫಲವನ್ನು ಇಡೀ ಮಾನವಕುಲವೇ ಅನುಭವಿಸುತ್ತದೆ. ವಿಮಾನವನ್ನು ಮೊಟ್ಟಮೊದಲು ಕಂಡು ಹುಡು ಕಿದ್ದು ಕ್ರೈಸ್ತ ಸಮುದಾಯದ ರೈಟ್ ಸಹೋದರರು. ಆದರೆ ಇವತ್ತು ವಿಮಾನದ ಪ್ರಯೋಜನವನ್ನು ಎಲ್ಲ ಸಮುದಾಯದವರೂ ಪಡೆಯುತ್ತಿದ್ದಾರೆ. ಅದು ಇವತ್ತು ಜಗತ್ತಿನ ಅನಿವಾರ್ಯ ಸಂಪರ್ಕ ಸಾಧನವಾಗಿ ಗುರುತಿಸಿ ಕೊಂಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಅಪೂರ್ವ ಸಂಶೋಧನಗೆಳು ಇವತ್ತು ಜಗತ್ತಿನ ಎಲ್ಲ ಸಮುದಾಯಗಳನ್ನು ನೆಮ್ಮದಿಯಿಂದ ಇಟ್ಟಿವೆ. ನಿಜವಾಗಿ, ಆರ್ಥಿಕವಾಗಿ ಎಷ್ಟೇ ಬಲಾಢ್ಯ ವಾಗಿದ್ದರೂ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರದಿದ್ದರೆ ಇವತ್ತಿನ ಜಗತ್ತಿ ನಲ್ಲಿ ಸ್ವಾಭಿಮಾನದಿಂದ ಬದುಕುವುದಕ್ಕೆ ಸಾಧ್ಯವೇ ಇಲ್ಲ. ಇಸ್ರೇಲ್ ಜಗತ್ತಿನ ಅತೀ ಸಣ್ಣ ರಾಷ್ಟ್ರಗಳಲ್ಲಿ ಒಂದು. ಅತೀ ಕಡಿಮೆ ಜನಸಂಖ್ಯೆಯಿರುವ ಸಮುದಾಯ ಯಹೂದಿಯರದು. ಆದರೂ ಇಸ್ರೇಲ್‍ನ ಬಳಿ ಅಣ್ವಸ್ತ್ರ ಇದೆ. ಭಾರತದಂತಹ ಬೃಹತ್ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರುವಷ್ಟು ತಾಂತ್ರಿಕ ಪ್ರಗತಿಯನ್ನು ಹೊಂದಿದೆ. ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಸಣ್ಣ ಸಮುದಾಯವೊಂದು ವೈಜ್ಞಾನಿಕ ವಾಗಿ ಪ್ರಗತಿಯನ್ನು ಹೊಂದಿದರೆ ಎಷ್ಟೇ ದೊಡ್ಡ ರಾಷ್ಟ್ರಗಳ ಮೇಲೆ ಮತ್ತು ಸಮು ದಾಯಗಳ ಮೇಲೆ ಪ್ರಾಬಲ್ಯ ಸ್ಥಾಪಿಸಬಹುದು ಎನ್ನುವುದಕ್ಕೆ ಉದಾಹರಣೆ ಇದು. ಅಂದಹಾಗೆ, ಇಸ್ರೇಲ್‍ನ ಪಾಲಿಗೆ ಇಂಥದ್ದೊಂದು ಸಾಧನೆ ಸುಲಭವಾಗಿ ರಾತ್ರಿ-ಹಗಲಾಗು ವಾಗ ದಕ್ಕಿದೆಯೆಂದು ನಾವು ಭಾವಿಸ ಬೇಕಿಲ್ಲ. ಅದೊಂದು ದೀರ್ಘ ದೃಷ್ಟಿಯ ಫಲಿತಾಂಶ. ಆ ಸಮುದಾಯದ ದೂರ ದೃಷ್ಟಿಯ ಯೋಜನೆಗಳು ಅದರ ಸ್ಥಾನವನ್ನು ಇವತ್ತು ಈ ಮಟ್ಟದಲ್ಲಿ ತಂದು ನಿಲ್ಲಿಸಿದೆ. ಅದು ತನಗೆ ಬಿದ್ದ ಏಟನ್ನೂ ರಚನಾತ್ಮಕ ನೆಲೆಯಲ್ಲಿ ಸ್ವೀಕರಿಸಿತು. ಏಟಿಗೆ ತಕ್ಪಣ ಪ್ರತಿ ಏಟನ್ನು ನೀಡುವ ಬದಲು ಅದು ದೀರ್ಘಕಾಲೀನ ಯೋಜನೆಯನ್ನು ಸಿದ್ಧಪಡಿಸಿತು. ಇವತ್ತು ಅದರಲ್ಲಿ ಅದು ಯಶಸ್ಸನ್ನೂ ಕಾಣುತ್ತಿದೆ. ಅದಕ್ಕಾಗಿ ಅದನ್ನು ಅಭಿನಂದಿಸಲೇಬೇಕು. ಜೊತೆ ಜೊತೆಗೇ ಇವತ್ತು ಮುಸ್ಲಿಮ್ ಜಗತ್ತು ಅಂಥದ್ದೊಂದು ಯಶಸ್ಸನ್ನು ತನ್ನದಾಗಿಸಿಕೊಳ್ಳಲು ಯೋಜನೆಗಳನ್ನು ಹಾಕಿ ಕೊಳ್ಳಲೇಬೇಕು. ಮುಸ್ಲಿಮ್ ಜಗತ್ತು ಬಹಳ ವಿಶಾಲವಾದುದು. ಈ ಜಗತ್ತಿನ ಕೆಲವು ರಾಷ್ಟ್ರಗಳು ಎಷ್ಟು ಸಿರಿವಂತಿಕೆ ಯನ್ನು ಹೊಂದಿವೆಯೆಂದರೆ, ಇಸ್ರೇಲ್ ನಂಥ ರಾಷ್ಟ್ರವನ್ನೇ ಖರೀದಿಸುವಷ್ಟು ಹಣವಂತವಾಗಿದೆ. ಸದ್ಯ ಈ ಶ್ರೀಮಂತಿಕೆಯು ವೈಜ್ಞಾನಿಕ ಕ್ಷೇತ್ರದ ಬಂಡವಾಳ ಹೂಡಿಕೆಯಾಗಿ ಮಾರ್ಪಾಟುಗೊಳ್ಳಬೇಕು. ಸಂಶೋಧನಾ ಮೆದುಳನ್ನು ಹೊಂದಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಪೋಷಿಸುವ ಕೆಲಸ ನಡೆಯಬೇಕು. ಮುಸ್ಲಿಮ್ ಸಮುದಾಯ ದಾನ ನೀಡುವುದರಲ್ಲಿ ಬಹಳ ಮುಂದು. ಮಾತ್ರವಲ್ಲ, ಮಸೀದಿ, ಅನಾಥಾಶ್ರಮ, ಸಾಮಾಜಿಕ ಕಲ್ಯಾಣಗಳಿಗಾಗಿ ಈ ಮೊತ್ತದ ಒಂದು ಬಹುಮುಖ್ಯ ಭಾಗವನ್ನು ಖರ್ಚು ಮಾಡಲಾಗುತ್ತಿದೆ. ಸದ್ಯ ಈ ಮೊತ್ತದ ಒಂದು ಬಹು ಮುಖ್ಯ ಭಾಗವನ್ನು ವೈಜ್ಞಾನಿಕ ಮನೋ ಭಾವವುಳ್ಳ ಯುವ ಪೀಳಿಗೆಯನ್ನು ಪತ್ತೆಹಚ್ಚಲು ಮತ್ತು ಅವರ ಮೇಲೆ ಖರ್ಚು ಮಾಡಲು ತೆಗೆದಿಡಬೇಕು. ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಾದರೂ ಸುಸಜ್ಜಿತ ಲೈಬ್ರರಿಯನ್ನು ಸ್ಥಾಪಿಸುವತ್ತ ಗಮನ ಹರಿಸಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳ ಸಹಿತ ಎಲ್ಲವೂ ಅಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಯುವ ತಲೆಮಾರಿಗೆ ಸ್ಟೀಫನ್ ಹಾಕಿಂಗ್ ರಂಥ ಶ್ರೇಷ್ಠ ವಿಜ್ಞಾನಿಗಳ ಪುಸ್ತಕಗಳ ಮೇಲೆ ಆಸಕ್ತಿ ಹುಟ್ಟಿಸಬೇಕು. ಒಂದು ಕಾಲದಲ್ಲಿ ಮುಸ್ಲಿಮ್ ಸಮುದಾಯ ಶೈಕ್ಪಣಿಕವಾಗಿ ತೀರಾ ಹಿಂದುಳಿದಿತ್ತು. ಇವತ್ತು ಸ್ಥಿತಿ ಬದಲಾಗುತ್ತಿದೆ. ಇದೀಗ ಮುಸ್ಲಿಮ್ ಸಮುದಾಯ ಇನ್ನೊಂದು ಹೆಜ್ಜೆ ಮುಂದಿಡಬೇಕು. ಅದು ವಿಜ್ಞಾನಿಗಳ ತಯಾರಿಗಾಗಿ. ಇದು ಅಸಾಧ್ಯವೇನೂ ಅಲ್ಲ.
     ಮಾನವ ಕುಲವನ್ನು ನಾಶ ಮಾಡುವ ಅಣುಬಾಂಬ್ ತಯಾರಿಗಿಂತ ಸ್ಟೀಫನ್ ಹಾಕಿಂಗ್‍ರನ್ನು ತಯಾರಿಸುವ ಅಗತ್ಯ ಮುಸ್ಲಿಮ್ ಜಗತ್ತಿಗೆ ಬಹಳ ಇದೆ.

ಕಾರಣ ಒಂದೇ, ಪ್ರಭುತ್ವ ಮಾತ್ರ ಬೇರೆ



ಕಾರ್ಲ್‍ಮಾರ್ಕ್ಸ್ ನ ‘ದಾಸ್ ಕ್ಯಾಪಿಟಲ್’ ಕೃತಿಯನ್ನು ತೀವ್ರವಾಗಿ ಹಚ್ಚಿಕೊಂಡಿದ್ದರೂ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದ, ರಷ್ಯಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವವು ಜಾರಿಗೆ ತಂದ ‘ಬಲವಂತದ ಉತ್ಪಾದನೆ’ಯನ್ನು ತಪ್ಪು ಅನ್ನುತ್ತಿದ್ದ ಮತ್ತು ಹಾಗಿದ್ದೂ ಇಟಲಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯನ್ನೇ ಸ್ಥಾಪಿಸಿದ್ದ 35ರ ಹರೆಯದ ತರುಣ ರಾಜಕಾರಣಿ ಮತ್ತು ತತ್ವಜ್ಞಾನಿ ಆ್ಯಂಟನಿಯೋ ಗ್ರಾಮ್ಸ್ ಸ್ಕಿಯನ್ನು ಇಟಲಿಯ ಮುಸೋಲಿನಿ ಪ್ರಭುತ್ವವು 1926 ನವೆಂಬರ್ 9ರಂದು ಬಂಧಿಸಿತು. ಆ ತರುಣ ಪ್ರಾಯದಲ್ಲೇ  ಇಟಲಿಯಲ್ಲೂ ಹೊರಗೂ ಗ್ರಾಮ್ಸ್ ಸ್ಕಿ ಪ್ರಸಿದ್ಧಿಯನ್ನು ಪಡೆದಿದ್ದ. ಬ್ಲ್ಯಾಕ್ ಶರ್ಟ್ಸ್  ಎಂಬ ಹೆಸರಿನ ಮುಸೋಲಿನಿಯ ಅಂಧಭಕ್ತ ಪಟಾಲಂನ ವಿರುದ್ಧ ಜನ ಚಳವಳಿಯನ್ನು ಹುಟ್ಟುಹಾಕಿದ್ದ. ಮುಸೋಲಿನಿ ಪ್ರಣೀತ ಫ್ಯಾಸಿಸಂನ ಅಪಾಯವನ್ನು ಎತ್ತಿ ಹೇಳುತ್ತಲೇ ಮಾರ್ಕ್ಸ್  ಸಿದ್ಧಾಂತದ ಸುಧಾರಿತ ಮುಖವಾಗಿ ಜನರಿಗೆ ಹತ್ತಿರವಾಗುತ್ತಿದ್ದ. ಈ ಭಿನ್ನ ಧ್ವನಿಯನ್ನು ಹತ್ತಿಕ್ಕದಿದ್ದರೆ ತನ್ನ ಪ್ರಭುತ್ವಕ್ಕೆ ಅಪಾಯವಿದೆ ಎಂದರಿತ ಮುಸೋಲಿನಿ ಅದಕ್ಕಾಗಿ ತಂತ್ರವೊಂದನ್ನು ಹೆಣೆದ. ‘ಮುಸೋಲಿನಿಯ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ’ ಎಂಬ ಪುಕಾರನ್ನು ಹಬ್ಬಿಸಲಾಯಿತಲ್ಲದೇ ಅದನ್ನು ಮಟ್ಟ ಹಾಕುವುದಕ್ಕೆಂದು ಕೆಲವು ತುರ್ತು ಕಾನೂನುಗಳನ್ನು ಜಾರಿ ಮಾಡಲಾಯಿತು. ಆ ಕಾನೂನಿನ ಆಧಾರದಲ್ಲಿಯೇ ಗ್ರಾಮ್ಸ್ ಸ್ಕಿಯನ್ನು ಬಂಧಿಸಲಾಯಿತು. ಗ್ರಾಮ್ಸ್ ಸ್ಕಿಯನ್ನು ಕೋರ್ಟಿಗೆ ಹಾಜರುಪಡಿಸಿದಾಗ ನ್ಯಾಯಾಧೀಶರೊಂದಿಗೆ ಸರಕಾರಿ ಪ್ರಾಸಿಕ್ಯೂಟರ್ ಹೀಗೆ ಹೇಳಿದ್ದರು,

“ಈ ಮೆದುಳು ಮುಂದಿನ 20 ವರ್ಷಗಳ ವರೆಗೆ ಕೆಲಸ ಮಾಡದಂತೆ ನಾವು ತಡೆಯಲೇಬೇಕು.”
ಬಂಧನದಲ್ಲಿದ್ದ ಗ್ರಾಮ್ಸ್ ಸ್ಕಿಯೊಂದಿಗೆ ಮುಸೋಲಿನಿ ಹೀಗೆ ಪ್ರಶ್ನಿಸಿರುವುದಾಗಿ ಇತಿಹಾಸದಲ್ಲಿ ದಾಖಲಾಗಿದೆ,
“ಕಾರ್ಲ್ ಮಾರ್ಕ್ಸ್  ಹೇಳಿರುವಂತೆ, ಪಶ್ಚಿಮದ ಬಂಡವಾಳಶಾಹಿ ಜಗತ್ತಿನಲ್ಲಿ ಯಾಕೆ ಕ್ರಾಂತಿ ಸಂಭವಿಸಲಿಲ್ಲ ಮತ್ತು ಅರೆಫ್ಯೂಡಲ್ (ಊಳಿಗಮಾನ್ಯ) ವ್ಯವಸ್ಥೆಯಿದ್ದ ರಷ್ಯಾದಲ್ಲಿ ಆ ಕ್ರಾಂತಿ ಯಾವ ಕಾರಣಕ್ಕಾಗಿ ಸಂಭವಿಸಿತು?”
ಗ್ರಾಮ್ಸ್ ಸ್ಕಿ ಹೀಗೆ ಉತ್ತರ ಕೊಟ್ಟಿದ್ದ,
“ಪ್ರಭುತ್ವವೊಂದು ನೇರವಾಗಿ ಮತ್ತು ನಿರ್ಲಜ್ಜವಾಗಿ ಜನರ ಮೇಲೆ ಶಕ್ತಿ ಪ್ರಯೋಗಿಸಿದಾಗ ಕ್ರಾಂತಿ ಸಂಭವಿಸುತ್ತದೆ. ರಷ್ಯಾದ ಕಮ್ಯುನಿಸ್ಟ್ ಕ್ರಾಂತಿಗೆ ಪ್ರಭುತ್ವದ ಈ ನೀತಿಯೇ ಕಾರಣ. ಆದರೆ, ಜನರ ಮೇಲೆ ಇಂಥ ನೇರ ಶಕ್ತಿ ಪ್ರಯೋಗವು ನಾಗರಿಕ ಆಡಳಿತವಿರುವ ಪಶ್ಚಿಮದ ರಾಷ್ಟ್ರಗಳಲ್ಲಿ ನಡೆದಿಲ್ಲ. ಇಲ್ಲಿ ಪ್ರತಿಭಟನೆಗೆ ಅವಕಾಶ ಇರುವುದೇ ಕ್ರಾಂತಿಯನ್ನು ತಡೆದವು. ಪ್ರತಿಭಟನೆಗಳು ಕ್ರಾಂತಿಯ ಅಗತ್ಯವಿಲ್ಲದಂತೆ ಮಾಡಿದುವು.”

ನಿಜವಾಗಿ, ಆಗಸ್ಟ್ 28ರಂದು ಈ ದೇಶದಲ್ಲಿ ಏನು ನಡೆಯಿತೋ ಅದು ಹೆಚ್ಚೂ ಕಡಿಮೆ ಮುಸೋಲಿನಿ ಕಾಲದ ಕಾರ್ಬನ್ ಕಾಪಿಯಂತೆಯೇ ಇದೆ. ಮುಸೋಲಿನಿಯ ಹತ್ಯಾಯತ್ನದ ಆರೋಪವನ್ನು ಹೊರಿಸಿ ಗ್ರಾಮ್ಸ್ ಸ್ಕಿಯನ್ನು ಬಂಧಿಸಿದಂತೆಯೇ ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ಹೆಣೆದಿರುವರೆಂಬ ಆರೋಪದಲ್ಲಿ ಮಾನವ ಹಕ್ಕು ಹೋರಾಟಗಾರರಾದ ಸುಧಾ ಭಾರದ್ವಾಜ್, ವರವರ ರಾವ್, ವರ್ನನ್ ಗೋನ್ಸಾಲ್ವೆಸ್, ಅರುಣ್ ಫೆರೇರಾ ಮತ್ತು ಗೌತಮ್ ನವ್ಲಾಖಾರನ್ನು ಆಗಸ್ಟ್ 28ರಂದು ಬಂಧಿಸಲಾಗಿದೆ. ಆದರೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಇನ್ನೂ ಬೆಲೆ ಇರುವುದರಿಂದ ಗ್ರಾಮ್ಸ್‍ಸ್ಕಿಯಂತೆ ಇವರನ್ನು ಜೈಲಿಗಟ್ಟಲು ಪ್ರಭುತ್ವಕ್ಕೆ ಸಾಧ್ಯವಾಗಿಲ್ಲ. ಮಾತ್ರವಲ್ಲ, ಈ ಹೋರಾಟಗಾರರ ಬಗ್ಗೆ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಗಾಂಧಿಯವರು ಕೇವಲವಾಗಿ ಮಾತಾಡಿದಾಗ ಸುಪ್ರೀಮ್ ಕೋರ್ಟು ತಡೆಯಿತು. ತರಾಟೆಗೆತ್ತಿಕೊಂಡಿತು. ಎಲ್ಲಿಯ ವರೆಗೆಂದರೆ ತುಷಾರ್ ಗಾಂಧಿ ಎಲ್ಲರ ಮುಂದೆಯೇ ಕ್ಷಮೆ ಯಾಚಿಸಿದರು. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬಯಸುವ ಮತ್ತು ಅದನ್ನು ಮಾರಕವಾಗಿ ಕಾಣುವ ಪ್ರಭುತ್ವಕ್ಕೂ ಕೋರ್ಟು ಚುಚ್ಚಿತು. ಮುಸೋಲಿನಿಯ ಪ್ರಭುತ್ವಕ್ಕೂ ನರೇಂದ್ರ ಮೋದಿಯವರ ಆಡಳಿತಕ್ಕೂ ನಡುವೆ ಇರುವ ವ್ಯತ್ಯಾಸ ಇದು. ಮುಸೋಲಿನಿಯ ಕಾಲದಲ್ಲಿ ಇಡೀ ವ್ಯವಸ್ಥೆ ಎಷ್ಟು ಭ್ರಷ್ಟವಾಗಿತ್ತೆಂದರೆ, ಆ ಪ್ರಭುತ್ವ ಹೇಳುವುದನ್ನೇ ನ್ಯಾಯಾಂಗವೂ ಹೇಳುತ್ತಿತ್ತು. ಮುಸೋಲಿನಿಯ ಪ್ರಾಸಿಕ್ಯೂಟರ್ ಬಯಸಿದಂತೆಯೇ ಗ್ರಾಮ್ಸ್ ಸ್ಕಿಗೆ 20 ವರ್ಷಗಳ ಶಿಕ್ಷೆಯಾಯಿತು. ಇನ್ನೂ ತರುಣರಾಗಿದ್ದರೂ ಹಲವು ಬಗೆಯ ರೋಗಗಳಿಗೆ ತುತ್ತಾಗಿ ಆತ ಜೈಲಿನಲ್ಲೇ  ಮೃತಪಟ್ಟ. ಆದರೆ, ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಇನ್ನೂ ಸಾಧ್ಯವಾಗಿಲ್ಲವಾದುದರಿಂದ ಇಲ್ಲಿನ ಪ್ರಭುತ್ವ ಬಯಸಿದಂತೆ ಎಲ್ಲವೂ ನಡೆಯುತ್ತಿಲ್ಲ. ಹಾಗಂತ,


ಮಾನವ ಹಕ್ಕು ಸಂಘಟನೆಗಳು, ಜನ ಚಳವಳಿಗಳು ಮತ್ತು ನಾಗರಿಕ ಹಕ್ಕು ಹೋರಾಟಗಾರರೆಲ್ಲ ಈ 2014ರ ಬಳಿಕ ದಿಢೀರ್ ಆಗಿ ಪ್ರತ್ಯಕ್ಷಗೊಂಡವರೇನಲ್ಲ. ಇಂದಿರಾಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಬಳಿಕದ ಬೆಳವಣಿಗೆ ಇದು. ಮಾನವ ಹಕ್ಕುಗಳಿಗೆ ಯಾವ ಬೆಲೆಯನ್ನೂ ಕೊಡದೇ ಇಂದಿರಾ ಸರಕಾರ ಜನರನ್ನು ಬಂಧಿಸಲು ತೊಡಗಿದಾಗ ಹಕ್ಕು ಸಂರಕ್ಷಣೆಯ ಅನಿವಾರ್ಯತೆ ತಲೆದೋರಿತು. ಸಾಂವಿಧಾನಿಕವಾಗಿ ಪಡೆದುಕೊಂಡ ಹಕ್ಕುಗಳನ್ನು ಪ್ರಭುತ್ವವೊಂದು ಕಾಲ ಕಸವಾಗಿಸಿದುದಕ್ಕೆ ಪ್ರತಿಭಟನೆಯಾಗಿ ಹುಟ್ಟಿಕೊಂಡದ್ದೇ ಮಾನವ ಹಕ್ಕು ಸಂಘಟನೆಗಳು ಮತ್ತು ಹೋರಾಟಗಾರರು. ಅಂದಹಾಗೆ, ಮಾನವ ಹಕ್ಕು ಸಂಘಟನೆಗಳೇ ಇಲ್ಲದ ಮತ್ತು ಹಕ್ಕುಗಳ ಬಗ್ಗೆ ಮಾತಾಡುವವರೇ ನಾಸ್ತಿಯಾಗಿರುವ ನಿರ್ವಾತ ಸ್ಥಿತಿಯಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಂಡು ಒಂದು ಕ್ಷಣ ಇದ್ದು ನೋಡಿ. ಸಿಕ್ಖ್ ಹತ್ಯಾಕಾಂಡ, ಗುಜರಾತ್ ಹತ್ಯಾಕಾಂಡ, ಸಾವಿರಾರು ಎನ್‍ಕೌಂಟರ್ ಗಳು, ಕಸ್ಟಡಿ ಸಾವು, ಲಿಂಚಿಂಗ್ ಇತ್ಯಾದಿ ಇತ್ಯಾದಿಗಳ ಕತೆ ಏನಾಗುತ್ತಿತ್ತು? ಈಶಾನ್ಯ ಭಾರತದಲ್ಲಿ ಸೇನೆ ನಡೆಸಿರುವ ಎನ್‍ಕೌಂಟರ್ ಗಳ ಬಗ್ಗೆ ತನಿಖೆ ನಡೆಸುವಂತೆ ಮತ್ತು ಎಫ್‍ಐಆರ್ ದಾಖಲಿಸುವಂತೆ ಸುಪ್ರೀಮ್ ಕೋರ್ಟು ಆದೇಶಿಸಿರುವುದಕ್ಕೆ ಮೂಲ ಕಾರಣವಾಗಿರುವುದು ಇಲ್ಲಿನ ಮಾನವ ಹಕ್ಕು ಸಂಘಟನೆಗಳು. ಯೋಗಿ ಆದಿತ್ಯನಾಥ್‍ರ ಉತ್ತರ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್ ಗಳ ಸತ್ಯಾಸತ್ಯತೆಯನ್ನು ಮಾನವ ಹಕ್ಕು ಸಂಘಟನೆಗಳು ಸಂಶೋಧನೆಗೆ ಒಳಪಡಿಸಿ ಇತ್ತೀಚೆಗಷ್ಟೇ ವರದಿಯನ್ನು ಬಿಡುಗಡೆಗೊಳಿಸಿದುವು. ಉನ್ನಾವೋದ ಅತ್ಯಾಚಾರ ಪ್ರಕರಣವಾಗಲಿ, ಉನಾ ದೌರ್ಜನ್ಯ ಅಥವಾ ಕಥುವಾ ಪ್ರಕರಣವಾಗಲಿ - ಪ್ರಭುತ್ವದ ಶಾಮೀಲಾತಿ ಇರುವ ಇಂಥ ಸಾವಿರಾರು ಘಟನೆಗಳು ಈ ದೇಶದ ಗಮನ ಸೆಳೆದಿದ್ದರೆ ಮತ್ತು ಪ್ರಭುತ್ವಕ್ಕೇ ಮುಖಭಂಗವಾಗುವಂಥ ಸತ್ಯಗಳು ಬಹಿರಂಗಗೊಂಡಿದ್ದರೆ ಅದರ ಹಿಂದೆ ಮಾನವ ಹಕ್ಕು ಸಂಘಟನೆಗಳು ಮತ್ತು ಹೋರಾಟಗಾರರ ಬೆವರಿದೆ. ಧ್ವನಿಯಿದೆ. ಇವರ ಹೊರತು ಗುಜರಾತ್ ಹತ್ಯಾಕಾಂಡವನ್ನು ಗ್ರಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಒಂದುವೇಳೆ, ಗುಜರಾತ್ ಹತ್ಯಾಕಾಂಡದ ವೇಳೆ ಮಾನವ ಹಕ್ಕು ಸಂಘಟನೆಗಳು ಮತ್ತು ಜನಪರ ಚಿಂತಕರು ನಿಷ್ಕ್ರಿಯರಾಗಿರುತ್ತಿದ್ದರೆ ಕ್ರೌರ್ಯವೊಂದು ಖಂಡಿತಕ್ಕೂ ಸಂಪೂರ್ಣವಾಗಿ ಮುಚ್ಚಿ ಹೋಗುತ್ತಿತ್ತು. ಅಷ್ಟಕ್ಕೂ,

10 ವರ್ಷಗಳ ಹಿಂದೆ ಪ್ರಥಮ ಯು.ಪಿ.ಎ. ಆಡಳಿತದ ಅವಧಿ ಯಲ್ಲಿ ಈ ದೇಶದಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನೊಮ್ಮೆ ಗಮನಿಸಿ.
1. ಆಹಾರದ ಹಕ್ಕು
2. ಉದ್ಯೋಗದ ಹಕ್ಕು
3. ಶಿP್ಷÀಣದ ಹಕ್ಕು
4. ಮಾಹಿತಿ ಹಕ್ಕು
5. ಭೂ ಒಡೆತನ ಹಕ್ಕು
ಇತ್ಯಾದಿ ಇತ್ಯಾದಿಗಳು. ಇವತ್ತೂ ಅದೇ ಸಂವಿಧಾನವಿದೆ. ಅದೇ ನ್ಯಾಯಾಂಗವಿದೆ. ಅದೇ ರಾಷ್ಟ್ರಧ್ವಜ, ಅದೇ ರಾಷ್ಟ್ರಗೀತೆ, ಅದೇ ಭಾರತ, ಅದೇ ಪ್ರಜಾತಂತ್ರ, ಅದೇ ಇತಿಹಾಸ, ಅವೇ ಸ್ಮಾರಕಗಳು, ಅವೇ ವಿಶ್ವವಿದ್ಯಾಲಯಗಳು, ಅವೇ ಕಾಡುಗಳು, ಅವೇ ನದಿಗಳು. ಆದರೆ ಇವತ್ತಿನ ಚರ್ಚಾ ವಿಷಯಗಳೇ ಬೇರೆ. ಲಿಂಚಿಂಗ್ ಹಕ್ಕು, ಭಾರತೀಯ ಮುಸ್ಲಿಮರಲ್ಲಿ ಇರಬೇಕಾದ ಅರ್ಹತೆಗಳು, ಪ್ರವಾಹಕ್ಕೆ ಗೋಮಾಂಸ ಸೇವನೆ ಎಷ್ಟು ಶೇಕಡಾ ಕಾರಣ, ವಿಶ್ವವಿದ್ಯಾಲಯದಲ್ಲಿ ನಕ್ಸಲ್‍ವಾದಿಗಳು, ಕಾಶ್ಮೀರದ ಪ್ರತ್ಯೇಕ ಸ್ಥಾನಮಾನ, ಪ್ರಬಲ ನಾಯಕರಾರು- ನೆಹರೋ ಪಟೇಲರೋ, ರಾಷ್ಟ್ರವಾದ.. ಮತ್ತು ಇಂಥ ಇನ್ನೂ ಅನೇಕ ವಿಷಯಗಳೇ ಪುನರಾವರ್ತನೆಗೊಂಡು ಮತ್ತೆ ಮತ್ತೆ ಚರ್ಚೆಯ ಮುನ್ನೆಲೆಗೆ ಬರುತ್ತಿದೆ. ಹಾಗಂತ, 10 ವರ್ಷಗಳ ಹಿಂದೆ ಯಾವುದೆಲ್ಲ ಚರ್ಚೆಯಲ್ಲಿದ್ದುವೋ ಅವೇ ಇವತ್ತೂ ಚರ್ಚೆಯಲ್ಲಿರಬೇಕು ಎಂದಲ್ಲ. ಇರಬಾರದು ಎಂದೂ ಅಲ್ಲ. ಆ ಸಮಸ್ಯೆಗಳು 10 ವರ್ಷಗಳ ಬಳಿಕವೂ ಹಾಗೆಯೇ ಉಳಿದುಕೊಂಡಿದ್ದರೆ ಅದು ಸಹಜ ಆಯ್ಕೆ ಮತ್ತು ಅದಕ್ಕಾಗಿ ಮನ್‍ಮೋಹನ್ ಸಿಂಗ್ ಸರಕಾರವನ್ನು ತರಾಟೆಗೆತ್ತಿಕೊಳ್ಳುವ ಸಕಲ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದೆ. ಆದರೆ, ಈಗಿನ ಪ್ರಭುತ್ವ ಅವುಗಳ ಮೇಲೆ ಅಥವಾ ಅಂಥ ಗಂಭೀರ ವಿಷಯಗಳ ಮೇಲೆ ಚರ್ಚೆ ನಡೆಸುವುದನ್ನೇ ಇಷ್ಟಪಡುತ್ತಿಲ್ಲ. ಮಾತ್ರವಲ್ಲ, ಚರ್ಚೆಗೆ ಅಂಥದ್ದೊಂದು ವೇದಿಕೆ ನಿರ್ಮಾಣವಾಗದಂತೆ ತಡೆಯಲು ಸಕಲವನ್ನೂ ಮಾಡುತ್ತಿದೆ. ಬಡವರಲ್ಲಿ ಆಹಾರದ ಭದ್ರತೆಯನ್ನು ಒದಗಿಸಿದ ನರೇಗಾವನ್ನು ಈಗಿನ ಪ್ರಭುತ್ವ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಮತ್ತು ಆಧಾರ್ ಕಾರ್ಡ್‍ನ ವಿಷಯದಲ್ಲಿ ತೆಗೆದುಕೊಂಡಿರುವ ಗೊಂದಲಪೂರ್ಣ ನಿಲುವಿನಿಂದಾಗಿ ಪಡಿತರವೂ ದಕ್ಕದಂತಾಗಿದೆ. ಉದ್ಯೋಗ ಕ್ಷೇತ್ರ ವಂತೂ ನೋಟು ಅಮಾನ್ಯೀಕರಣದ ಹೊಡೆತದಿಂದ ಇನ್ನೂ ಮೇಲೆದ್ದಿಲ್ಲ. ಮಾಹಿತಿ ಹಕ್ಕಿನಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪದೇ ಪದೇ ತಿರಸ್ಕರಿಸಲಾಗುತ್ತಿದೆ. ಅಭಿಪ್ರಾಯ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಆದರೆ ಇವು ಯಾವುವೂ ಚರ್ಚೆಯಾಗದಂತೆ ನೋಡಿಕೊಳ್ಳುವುದಕ್ಕೆ ಅಗಂಭೀರವಾದ ವಿಷಯಗಳನ್ನು ತೇಲಿ ಬಿಡಲಾಗುತ್ತಿದೆ. ಬಹುಶಃ ಉದ್ದೇಶಪೂರ್ವಕವಾಗಿ ಹುಟ್ಟು ಹಾಕಲಾಗು ತ್ತಿದೆಯೋ ಎಂಬ ಅನುಮಾನವೂ ಕಾಡುತ್ತಿದೆ. ಈ ದೇಶದ ಶೇ. 90ರಷ್ಟು ಮಂದಿಯ ಪಾಲಿಗೆ ಇಶ್ಯೂವೇ ಅಲ್ಲದ ಮತ್ತು ಅವರ ಸಮಸ್ಯೆಗಳಿಗೆ ಯಾವ ರೀತಿಯಲ್ಲೂ ಸಂಬಂಧಿಸದ ವಿಷಯಗಳು ಗಂಭೀರ ವಿಷಯಗಳೆಂಬಂತೆ ಚರ್ಚೆಗೊಳಗಾಗುತ್ತಿದೆ. ಪ್ರಭುತ್ವವನ್ನು ಪ್ರತಿನಿಧಿಸುವ ವಿವಿಧ ಮುಖಂಡರು ಇಂಥ ವಿಷಯಗಳ ಮೇಲೆ ಪ್ರತಿಕ್ರಿಯೆ ನೀಡುತ್ತಾರೆ. ಟಿ.ವಿ. ಡಿಬೆಟ್‍ಗಳೂ ನಡೆಯುತ್ತವೆ. ಮೋದಿಯವರ ಹತ್ಯಾ ಸಂಚು ಕೂಡಾ ಇದರಲ್ಲಿ ಒಂದು. ಗಂಭೀರ ಸಮಸ್ಯೆಗಳು ಚರ್ಚೆಯಾಗದಂತೆ ತಡೆಯುವುದಕ್ಕಾಗಿ ಆಕರ್ಷಕ ಸುದ್ದಿಗಳನ್ನು ಸೃಷ್ಟಿಸಲಾಗುತ್ತಿದೆಯೇ? ಅರ್ಬನ್ ನಕ್ಸಲ್ ಅನ್ನುವ ಪದಪುಂಜವೂ ಇವರದೇ ಲ್ಯಾಬ್‍ನಲ್ಲಿ ಹುಟ್ಟಿಕೊಂಡ ಪದವೇ? ಈ ಮೊದಲೆಂದೂ ಬಳಕೆಗೆ ಬಾರದ ಈ ಪದಪುಂಜ ಹೇಗೆ ಸೃಷ್ಟಿಯಾಯಿತು?

ಪ್ರಭುತ್ವವನ್ನು ಪ್ರಶ್ನಿಸುವುದಕ್ಕೆ ಅವಕಾಶ ಇಲ್ಲದ ಕಡೆ ಕ್ರಾಂತಿ ಸಂಭವಿಸುತ್ತದೆ ಎಂದು ಮುಸೋಲಿನಿಗೆ ಆಂಟನಿಯೋ ಗ್ರಾಮ್ಸ್ ಸ್ಕಿ ವಿವರಿಸಿದ್ದ. 1975ರಲ್ಲಿ ಇಂದಿರಾ ಗಾಂಧಿಯವರು  ಪ್ರಶ್ನೆಯ ದಮನಕ್ಕೆ ಮುಂದಾಗಿ ಆ ಬಳಿಕ ಅದರ ಪರಿಣಾಮವನ್ನು ಅನುಭವಿಸಿದ್ದರು. ಇದೀಗ ಕೇಂದ್ರ ಸರಕಾರ ಪ್ರಶ್ನೆಯ ವಿರುದ್ಧ ಸಮರ ಸಾರಿದೆ. ಬಹುಶಃ ಮುಂದಿನ ಲೋಕಸಭಾ ಚುನಾವಣೆ ಇದಕ್ಕೆ ಉತ್ತರ ಹೇಳುತ್ತೋ ಏನೋ?

ಗ್ರಾಮ್‍ಸ್ಕಿಯ ಮಾತು ನಿಜವಾಗುತ್ತೋ ಏನೋ?

Tuesday, April 10, 2018

ಆ ಲಾಭಕ್ಕಾಗಿ ಅಭಿನಂದಿಸಬೇಕೋ ವಿಷಾದಿಸಬೇಕೋ?

      ಹೆಸರು ಪ್ರೀತ. ಕೇರಳದ ಕೊಚ್ಚಿ ಸಮೀಪದ ಎಡವಳ್ಳಿಯ ಈಕೆ ಅಪ್ಪಟ ಗೃಹಣಿ. ಕಳೆದ ವರ್ಷ ತನ್ನ ಮನೆಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕೂರುವವರೆಗೂ ಆಕೆ ಇತರೆಲ್ಲ ಗೃಹಿಣಿಯರಂತೆ ಗುರುತು ಕಳೆದು ಹೋದ ಹೆಣ್ಣು. ಆದರೆ ಯಾವಾಗ ಆಕೆ ತನ್ನ ಮನೆಯ ಮುಂದೆ ಪ್ರತಿಭಟನಾರ್ಥ ಕುಳಿತುಕೊಂಡಳೋ ನಿಧಾನಕ್ಕೆ ಆಕೆಗೊಂದು ಗುರುತು ಬಂತು. ಅದಕ್ಕಿಂತ ಮುಖ್ಯವಾಗಿ, ನಮ್ಮ ಅರ್ಥ ವ್ಯವಸ್ಥೆಯ ಸರಿ-ತಪ್ಪುಗಳ ಬಗ್ಗೆ ಪುಟ್ಟ ಪುಟ್ಟ ಚರ್ಚೆಗೆ ಅದು ವೇದಿಕೆಯನ್ನೂ ಒದಗಿಸಿತು. ನಿಧಾನಕ್ಕೆ ಆಕೆ ಚರ್ಚಾವಸ್ತುವಾಗಿ ಬೆಳೆಯತೊಡಗಿದಳು. ಸ್ವಯಂ ಸೇವಾ ಸಂಸ್ಥೆಗಳ ಗಮನ ಸೆಳೆಯತೊಡಗಿದಳು. ಅಪ್ಪಟ ಗೃಹಿಣಿ ಯೋರ್ವಳು ವ್ಯವಸ್ಥೆಯ ತಪ್ಪುಗಳನ್ನು ಎತ್ತಿಕೊಂಡು ಪ್ರತಿಭಟನೆ ಗಿಳಿಯುವುದು ಹಲವರಲ್ಲಿ ಅಚ್ಚರಿ ಮೂಡಿಸಿತು. ಅವರೆಲ್ಲ ಆಕೆಯ ಜೊತೆ ನಿಲ್ಲತೊಡಗಿದರು. ಎಡವಳ್ಳಿಯ ಪ್ರೀತ ಮಾಧ್ಯಮಗಳ ಗಮನವನ್ನೂ ಸೆಳೆದಳು. ಆದರೆ, ಯಾವಾಗ ಆಕೆ ತನ್ನ ಪ್ರತಿ ಭಟನೆಯನ್ನು ಮನೆಯ ಎದುರಿನಿಂದ ಹೆಚ್‍ಡಿಎಫ್‍ಸಿ ಬ್ಯಾಂಕ್‍ನೆ ದುರಿಗೆ ವರ್ಗಾಯಿಸಿದಳೋ, ವ್ಯವಸ್ಥೆ ಬೆದರಿತು. ಆಕೆಯ ಬೇಡಿಕೆಗೆ ಸ್ಪಂದಿಸಿತು. ಕೊನೆಗೆ 2018 ಮಾರ್ಚ್ 7ರಂದು ಆಕೆ ಪ್ರತಿಭಟನೆಯನ್ನು ಕೊನೆಗೊಳಿಸಿದಳು.
ಪ್ರೀತಳ ಕತೆ 1994ರಿಂದ ಪ್ರಾರಂಭವಾಗುತ್ತದೆ.
    ಆಕೆಯ ಕುಟುಂಬ ಸಂಬಂಧಿಕನಾದ ಶಾಜನ್ ಕಣ್ಣಿಪುರತ್ತ್ ಎಂಬವ ‘ಬಸ್‍ಗಳ ಬಾಡಿ ಕಟ್ಟುವ ವರ್ಕ್‍ಶಾಪ್’ ಪ್ರಾರಂಭಿಸು ವುದಕ್ಕಾಗಿ ಪ್ರೀತಳ ಕುಟುಂಬದಿಂದ ನೆರವು ಯಾಚಿಸುತ್ತಾನೆ. ಬ್ಯಾಂಕ್‍ನಿಂದ ಎರಡು ಲಕ್ಷ ರೂಪಾಯಿ ಸಾಲ ಪಡಕೊಳ್ಳುವುದಕ್ಕೆ ಜಾಮೀನು ನಿಲ್ಲಬೇಕೆಂದು ಕೋರಿಕೊಳ್ಳುತ್ತಾನೆ. ಪ್ರೀತ ಮತ್ತು ಆಕೆಯ ಪತಿ ಒಪ್ಪಿಕೊಳ್ಳುತ್ತಾರೆ. 22 1/2 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದ ಅವರು ಜಾಗದ ಪಟ್ಟೆಯನ್ನು ಜಾಮೀನಾಗಿ ಬ್ಯಾಂಕ್‍ನಲ್ಲಿ ಅಡವು ಇಡುತ್ತಾರೆ. ಪ್ರೀತಳ ಸಮಸ್ಯೆ ಆರಂಭವಾಗುವುದೇ ಇಲ್ಲಿಂದ. 1997ರಲ್ಲಿ ಶಾಜನ್ ತನ್ನ ವರ್ಕ್‍ಶಾಪನ್ನು ಮುಚ್ಚುತ್ತಾರೆ. ಅಲ್ಲದೇ, ಇವರು ಸಾಲ ಪಡೆದ ಲಾರ್ಡ್ ಕೃಷ್ಣ ಬ್ಯಾಂಕ್ ನಷ್ಟವನ್ನನುಭವಿಸಿ ಪಂಜಾಬ್ ಸಂಚುರಿಯನ್ ಬ್ಯಾಂಕ್‍ನಲ್ಲಿ ವಿಲೀನವಾಗುತ್ತದೆ. ಬಳಿಕ, ಅದು ಹೆಚ್‍ಡಿಎಫ್‍ಸಿ ಬ್ಯಾಂಕ್‍ನೊಂದಿಗೆ ವಿಲೀನಗೊಳ್ಳುತ್ತದೆ. ವಿಶೇಷ ಏನೆಂದರೆ, ಈ ಬೆಳವಣಿಗೆಗಳಾವುವೂ ಸಾಲದ ಮೇಲಿನ ಬಡ್ಡಿಯ ಏರುಗತಿಯನ್ನು ತಡೆಯುವುದಿಲ್ಲ. ಬಡ್ಡಿ-ಚಕ್ರ ಬಡ್ಡಿಗಳಿಂದ ಕಂಗೆಟ್ಟ ಪ್ರೀತಳ ಕುಟುಂಬವು ಒಂದು ಲಕ್ಪ ರೂಪಾಯಿ ಪಾವತಿ ಸಲು ಹೋದಾಗ ಬ್ಯಾಂಕ್ ನಿರಾಕರಿಸುತ್ತದೆ. ಬಡ್ಡಿಯ ಮೊತ್ತವನ್ನು ದ್ವಿಗುಣಗೊಳಿಸಿ ಬೆದರಿಸುತ್ತದೆ. ಇದರ ನಡುವೆ ವರ್ಕ್‍ಶಾಪ್ ಆರಂಭಿಸಿದ ಸಂಬಂಧಿಕನೇ ಅನುಮಾನಾಸ್ಪದವಾಗಿ ವರ್ತಿಸುತ್ತಾನೆ. ಬಡ್ಡಿಯ ವಿಷಯದಲ್ಲಿ ಬ್ಯಾಂಕ್‍ನ ವಿರುದ್ಧ ಕೇಸ್ ಹಾಕಿದ್ದೇನೆ ಎಂದು ನಂಬಿಸುತ್ತಾನೆ. ಪ್ರೀತಳ ಕುಟುಂಬ ಮನೆ ಜಪ್ತಿಯ ಭೀತಿಯಿಂದ ಒಂದಷ್ಟು ಮೊತ್ತವನ್ನು ಸಂಗ್ರಹಿಸಿಕೊಂಡು ಬ್ಯಾಂಕನ್ನು ಸಮೀಪಿಸಿದಾಗ ಆಘಾತಗೊಳ್ಳಬಹುದಾದ ಲೆಕ್ಕಾಚಾರವೊಂದನ್ನು ಬ್ಯಾಂಕ್ ಮುಂದಿಡುತ್ತದೆ. ಸಾಲ ಪಡೆದಿರುವುದು 2 ಲಕ್ಪ ರೂಪಾಯಿ. ಅದೂ ಇವರಲ್ಲ. ಇವರ ಸಂಬಂಧಿಕ. ಇಡೀ ಪ್ರಕ್ರಿಯೆಯಲ್ಲಿ ಇವರು ನೆರವುದಾರರೇ ಹೊರತು ಫಲಾನುಭವಿಗಳಲ್ಲ. ಆದರೆ ಸಮಸ್ಯೆ ಎದುರಿಸುತ್ತಿರುವುದು ಇವರು. ಅಲ್ಲದೇ 2 ಲಕ್ಪ ರೂಪಾಯಿ ಪಾವತಿಸಿ ಮನೆ ಉಳಿಸಿಕೊಳ್ಳೋಣವೆಂದರೆ, ಬ್ಯಾಂಕ್ 37 ಲಕ್ಪ ರೂಪಾಯಿಯನ್ನು ಪಾವತಿಸುವಂತೆ ಆಗ್ರಹಿಸುತ್ತದೆ. 2 ಲಕ್ಪ ರೂಪಾಯಿಗೆ ಬಡ್ಡಿ ಸೇರ್ಪಡೆಗೊಂಡು ಆದ ವೃದ್ಧಿ ಇದು. ಪ್ರೀತಳ ಕುಟುಂಬ ಕಂಗಾಲಾಗುತ್ತದೆ. ಈ ನಡುವೆ 2010ರಲ್ಲಿ ಮನೆ ಜಪ್ತಿಯ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಡೆಬಿಟ್ ರಿಕವರಿ ಟ್ರಿಬ್ಯೂನ್(DRT)ನ ಆದೇಶದಂತೆ ಗ್ರಾಮಾಧಿಕಾರಿಯ ಮೂಲಕ ಜಪ್ತಿ ಮಾಡಿಕೊಳ್ಳಬೇಕಾದ ಜಾಗದ ಪರಿಶೀಲನೆ ನಡೆಯುತ್ತದೆ. ಪ್ರೀತಳ ಕುಟುಂಬ ವಿವಿಧ ರೀತಿಯಲ್ಲಿ ಬ್ಯಾಂಕ್ ಅಧಿಕಾರಿಗಳ ಮನವೊಲಿಸಲು ಯತ್ನಿಸುತ್ತಾರೆ. 2 ಲಕ್ಪ ರೂಪಾಯಿ ಸಾಲವು 37 ಲಕ್ಪವಾಗಿ ಬೆಳೆದುದನ್ನು ಅವರಿಂದ ಅರಗಿಸಿಕೊಳ್ಳಲು ಸಾಧ್ಯ ವಾಗಿರಲಿಲ್ಲ. ಈ ಅಸಾಧಾರಣ ಬೆಳವಣಿಗೆಯನ್ನು ಅವರು ಮತ್ತೆ ಮತ್ತೆ ಪ್ರಶ್ನಿಸುತ್ತಾರೆ. ಗ್ರಾಮೀಣ ಪ್ರದೇಶದವರಾದ ಆ ಕುಟುಂಬಕ್ಕೆ ಕಾನೂನುಗಳ ಬಗ್ಗೆ ಭಾರೀ ತಿಳುವಳಿಕೆಯೇನೂ ಇರಲಿಲ್ಲ. 1990ರ ದಶಕದಲ್ಲಿ ಅರ್ಥ ಮಂತ್ರಿ ಮನ್‍ಮೋಹನ್ ಸಿಂಗ್ ತಂದ ಸುಧಾರಣಾ ಪ್ರಕ್ರಿಯೆಗಳು ಮತ್ತು ಅದರ ಭಾಗವಾಗಿ ರಚನೆಯಾದ ಹಲವು ಕಾನೂನುಗಳು ಎಷ್ಟು ಅಪಾಯಕಾರಿ ಎಂಬುದು ಅವರಿಗೆ ಗೊತ್ತಿರಲಿಲ್ಲ. ಇದರ ಜೊತೆಗೇ ಮನ್‍ಮೋಹನ್ ಪ್ರಣೀತ ಉದಾರೀಕರಣ ನೀತಿಯು ಆರ್ಥಿಕತೆಯ ನೈತಿಕ ಪರದೆಯನ್ನು ತೀರಾ ತೆಳುವಾಗಿಸಿ ಬಿಟ್ಟಿತ್ತು. ಬ್ಯಾಂಕುಗಳ ಮತ್ತು ರಿಯಲ್ ಎಸ್ಟೇಟ್ ಕುಳಗಳ ನಡುವೆ ಅನಧಿಕೃತ ಸಂಬಂಧವನ್ನು ಅದು ಕುದುರಿಸಿತ್ತು. ಬ್ಯಾಂಕ್ ಮ್ಯಾನೇಜರ್, ಎಸ್ಟೇಟ್ ಮಾಫಿಯಾ ಮತ್ತು ಆಖಖಿ ಅಧಿಕಾರಿಗಳು ಜೊತೆಗೂಡಿಕೊಂಡು ಸಾಲಗಾರರನ್ನು ದೋಚುವ ಹೊಸ ಹೊಸ ವಿಧಾನಗಳು ಆರ್ಥಿಕ ಉದಾರೀಕರಣದ ಬಳಿಕ ಆವಿಷ್ಕಾರಗೊಂಡವು. ಪ್ರೀತಳ ಕುಟುಂಬಕ್ಕೆ ಇವಾವುದರ ಅರಿವಿರಲಿಲ್ಲ. ಪಡೆಯದ ಸಾಲವನ್ನು ತಾವು ತೀರಿಸಬೇಕೆಂಬುದೇ ಆ ಕುಟುಂಬಕ್ಕೆ ಜೀರ್ಣಿಸಿಕೊಳ್ಳಲಾಗದ ಸಂಗತಿಯಾಗಿತ್ತು. ಆದರೆ ಜಾಮೀನು ನಿಂತ ಕಾರಣ ಅದು ಅನಿವಾರ್ಯ ಎಂಬುದನ್ನು ಅದು ಒಪ್ಪಿಕೊಂಡಿತು. ಮಾತ್ರವಲ್ಲ, ಹೆಚ್ಚುವರಿ ಒಂದು ಲP್ಷÀ ಬಡ್ಡಿ ಪಾವತಿಸುವುದಕ್ಕೂ ಅದು ಸಿದ್ಧವಾಗಿತ್ತು. ಆದರೆ 2 ಲಕ್ಪ ರೂಪಾಯಿಯು 37 ಲಕ್ಪ ರೂಪಾಯಿಯಾಗಿ ಬೆಳೆದಿದೆ ಎಂಬುದನ್ನು ಹೇಗೆ ಆಲೋಚಿಸಿದರೂ ಒಪ್ಪಿಕೊಳ್ಳುವುದಕ್ಕೆ ಆ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ 2014ರಲ್ಲಿ ಆಖಖಿ ಅಧಿಕಾರಿಗಳು ಪ್ರೀತಳ 21/2 ಕೋಟಿ ಬೆಲೆಯ ಜಾಗಕ್ಕೆ 37 ಲಕ್ಪ ರೂಪಾಯಿ ಬೆಲೆ ನಿರ್ಣಯಿಸಿ ಆನ್‍ಲೈನ್‍ನಲ್ಲಿ ಏಲಂಗೆ ಇಟ್ಟರು. ಜಾಗದ ವ್ಯವಹಾರದಲ್ಲಿ (ರಿಯಲ್ ಎಸ್ಟೇಟ್) ತೊಡಗಿಸಿಕೊಂಡಿರುವ ಸಂಸ್ಥೆಯೊಂದು ಅದನ್ನು 37 ಲಕ್ಪದ 80 ಸಾವಿರ ರೂಪಾಯಿಗೆ ಖರೀದಿಸಿತು. ಆ ಬಳಿಕ ಜಪ್ತಿ ನಡೆಯಿತು. ಈ ಆಘಾತವನ್ನು ತಾಳಲಾರದೇ ಪ್ರೀತಳ ಅತ್ತೆ ಕಮಲಾಕ್ಷಿ ಹೃದಯಾಘಾತದಿಂದ ನಿಧನರಾದರು.
     ಇಲ್ಲಿ ಪ್ರೀತಳಿಗೆ ಅರ್ಥವಾಗದ ಕಾರ್ಪೋರೇಟ್ ಒಳವ್ಯವಹಾರ ವೊಂದಿದೆ. ಬ್ಯಾಂಕ್‍ಗಳು, DRT ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳ ನಡುವೆ ಸಂಬಂಧವಿರುತ್ತದೆ. ಇಂಥ ಸಾಲಗಳ ಬಗ್ಗೆ ಈ ಮಂದಿ ಹದ್ದುಗಣ್ಣಿನಿಂದ ಪರಿಶೀಲನೆ ನಡೆಸುತ್ತಿರುತ್ತಾರೆ. ಸಾಲ ಸಂದಾಯದಲ್ಲಿ ಏರಿಳಿತವಾಗತೊಡಗಿದರೆ ಅದನ್ನು ಹೇಗಾದರೂ ಮಾಡಿ ಏಲಂ ಆಗುವಂತೆ ನೋಡಿಕೊಳ್ಳುವುದು ಮತ್ತು ಈ ರಿಯಲ್ ಎಸ್ಟೇಟ್ ಕುಳಗಳು ಅದನ್ನು ಖರೀದಿಸಿ ದ್ವಿಗುಣ ಬೆಲೆಗೆ ಮಾರಾಟ ಮಾಡುವ ಸಂಚುಗಳು ನಡೆಯುತ್ತಿರುತ್ತವೆ. ಸಾಲಗಾರ ಅಸಲು ಸಂದಾಯ ಮಾಡುವುದಕ್ಕೆ ಏಗುತ್ತಿರುವಾಗ ಇತ್ತ ಏರುತ್ತಿರುವ ಬಡ್ಡಿ ಆತನನ್ನು ಕಂಗಾಲು ಮಾಡಿರುತ್ತದೆ. ಕೊನೆಗೆ ಅಸಲನ್ನು ಬಿಟ್ಟು ಬಡ್ಡಿಯನ್ನು ಮಾತ್ರ ಕಟ್ಟುವ ಸ್ಥಿತಿಗೆ ತಲುಪುತ್ತಾನೆ. ಒಂದು ಬಾರಿ ಬಡ್ಡಿ ಕಟ್ಟುವಲ್ಲಿ ತಡವಾದರೆ ಮುಂದಿನ ಬಾರಿ ಬಡ್ಡಿಯಲ್ಲೂ ಏರಿಕೆಯಾಗುತ್ತದೆ. ಆತ ದುಡಿದೂ ದುಡಿದೂ ಹಣ ಕಟ್ಟುವುದು ಮತ್ತು ಒಂದು ದಿನ ಬ್ಯಾಂಕ್ ಹಿಡಿತದಿಂದ ಪಾರಾಗಬಹುದು ಎಂಬ ನಿರೀಕ್ಷೆಯಲ್ಲಿರುವುದು ನಡೆಯುತ್ತಲೇ ಇರುತ್ತದೆ. ಈ ನಿರೀಕ್ಷೆ ಕ್ರಮೇಣ ನಿರಾಶೆಯಾಗಿ ಮಾರ್ಪಡತೊಡಗಿದಾಗ ಆತ್ಮಹತ್ಯೆಯಂಥ ಅಪಾಯಕಾರಿ ನಿರ್ಧಾರಗಳು ಅನಿವಾರ್ಯವಾಗುತ್ತವೆ. ಆದರೆ ಪ್ರೀತಳು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಅನ್ನುವುದಷ್ಟೇ ಖುಷಿಯ ಸಂಗತಿ. ಆಕೆ ಈ ಇಡೀ ಬಡ್ಡಿ ವ್ಯವಸ್ಥೆಯನ್ನು ಪ್ರತಿಭಟಿಸಿದಳು. ಈ ವ್ಯವಸ್ಥೆಯೊಳಗಡೆ ಇರುವ ಆರ್ಥಿಕ ಅಪರಾಧವನ್ನು ಪ್ರಶ್ನಿಸಲು ನಿರ್ಧರಿಸಿದಳು. ನೆರವಿನ ಸೋಗು ಹಾಕಿ ಜನರನ್ನು ದೋಚುವ ಆರ್ಥಿಕ ನೀತಿಯ ವಿರುದ್ಧ ತಿರುಗಿ ನಿಂತಳು. 2 ಲಕ್ಪ ಸಾಲಕ್ಕಾಗಿ 2 1/2 ಕೋಟಿ ರೂಪಾಯಿ ಬೆಲೆಯ ಮನೆ ಮತ್ತಿತರವುಗಳನ್ನು ಜಪ್ತಿ ಮಾಡಿರುವುದು ಅನೈತಿಕ ಎಂದು ಸಾರಿದಳು.
    ಬ್ಯಾಂಕ್ ಎಂಬುದು ಸಮಾಜದ ಅಗತ್ಯ. ಉಳ್ಳವರಿಂದ ಹಣವನ್ನು ಪಡೆದು ಇಲ್ಲದವರಿಗೆ ದಾಟಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಯಾವ ದೃಷ್ಟಿ ಯಲ್ಲಿ ನೋಡಿದರೂ ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಸಮಾಜವೆಂದರೆ, ಶ್ರೀಮಂತರು ಮತ್ತು ಬಡವರಿರುವ ಒಂದು ಒಕ್ಕೂಟ. ಈ ಒಕ್ಕೂಟದಲ್ಲಿ ಪರಸ್ಪರರು ನೆರವಾಗುವ ಮನಸ್ಥಿತಿಯನ್ನು ಹೊಂದದ ಹೊರತು ನೆಮ್ಮದಿ ಸಾಧ್ಯವಿಲ್ಲ. ಬ್ಯಾಂಕ್ ಎಂಬುದು ಈ ನೆಮ್ಮದಿಯನ್ನು ಹುಟ್ಟು ಹಾಕುವ ಮಧ್ಯವರ್ತಿಯಾಗಿ ಕೆಲಸ ಮಾಡಬೇಕು. ಇಲ್ಲದವರನ್ನು ಉಳ್ಳವರನ್ನಾಗಿ ಮಾಡುವ ಒಂದು ಸಂಸ್ಥೆ ಎಂಬ ನೆಲೆಯಲ್ಲಿ ಬ್ಯಾಂಕ್ ಗುರುತಿಸಿಕೊಳ್ಳಬೇಕು. ದುರಂತ ಏನೆಂದರೆ, ಪ್ರಸಕ್ತ ಪರಿಸ್ಥಿತಿ ಹಾಗಿಲ್ಲ. ಬ್ಯಾಂಕ್‍ಗಳು ಇಲ್ಲದವರನ್ನು ದೋಚುವ ಮತ್ತು ಉಳ್ಳವರನ್ನು ಸಾಕುವ ವಿಚಿತ್ರ ಪಾತ್ರವನ್ನು ನಿರ್ವಹಿಸುತ್ತಿವೆ. 2 ಲಕ್ಷ ರೂಪಾಯಿಗಾಗಿ 2 ಕೋಟಿ ರೂಪಾಯಿಯ ಆಸ್ತಿ ಜಪ್ತಿ ಮಾಡುವಷ್ಟು ಬಲಶಾಲಿಯಾದ ಬ್ಯಾಂಕುಗಳು 2 ಲಕ್ಷ  ಕೋಟಿ ಸಾಲ ಪಡೆದವರನ್ನು ಕೆಂಪು ಹಾಸು ಹಾಕಿ ಸ್ವಾಗತಿಸುತ್ತದೆ. ಇದಕ್ಕಿಂತಲೂ ಮುಖ್ಯವಾಗಿ, ಕೋಟಿ ಕೋಟಿ ಲೆಕ್ಕದಲ್ಲಿ ಸಾಲ ಪಡಕೊಳ್ಳುವ ಶ್ರೀಮಂತ ವರ್ಗಕ್ಕೆ ಜುಜುಬಿ ಬಡ್ಡಿ ನಿಗದಿಪಡಿಸುವ ಮತ್ತು ಕೊನೆಗೆ ವಸೂಲಾಗದ ಸಾಲ ಎಂಬ ಪಟ್ಟಿಯಲ್ಲಿ ಸೇರಿಸಿ ಸಾಲ ಮನ್ನಾ ಮಾಡುವ ಬ್ಯಾಂಕುಗಳೇ, ಬಡವರು ಪಡಕೊಳ್ಳುವ ಜುಜುಬಿ ಸಾಲಕ್ಕೆ 14-18% ಬಡ್ಡಿಯನ್ನು ವಿಧಿಸುತ್ತವೆ. ನಿಜಕ್ಕೂ, ಬ್ಯಾಂಕುಗಳು ಇಲ್ಲದದವರಿಗೆ ನೆರವಾಗುವ ಸಂಸ್ಥೆಗಳು ಎಂದಾದರೆ, ಬಡ್ಡಿ ರಹಿತವಾದ ಸಾಲವ್ಯವಸ್ಥೆಯ ಬಗ್ಗೆ ಯಾಕಾಗಿ ಆಲೋಚಿಸುತ್ತಿಲ್ಲ? ಯಾರಿಗೇ ಆಗಲಿ ಸಾಲ ಕೊಡುವಾಗ ಬ್ಯಾಂಕುಗಳು ಶ್ಯೂರಿಟಿಯನ್ನು ಅಪೇಕ್ಷಿಸುತ್ತದೆ. ಇದು ಸಹಜ ಮತ್ತು ಅಗತ್ಯ ನಿಯಮ. ಆ ಬಳಿಕ ಪಡೆದ ಸಾಲಕ್ಕೆ ಬಡ್ಡಿ ವಿಧಿಸುವುದೆಂದರೆ ಸಾಲಗಾರನ ಮೇಲೆ ಹೆಚ್ಚುವರಿ ಒತ್ತಡ ಹಾಕಿದಂತೆ. ಮುಖ್ಯವಾಗಿ, ಬಡವರ್ಗ ಇದರಿಂದ ತೀವ್ರವಾಗಿ ಸಂಕಟಪಡುತ್ತದೆ. ಸಾಲ ಮತ್ತು ಅದರ ಮೇಲೆ ವೃದ್ಧಿಯಾಗುತ್ತಿರುವ ಬಡ್ಡಿಯನ್ನು ನಿಭಾಯಿಸುವುದು ಅವರ ಪಾಲಿಗೆ ಕಠಿಣವಾಗುತ್ತಾ ಹೋಗುತ್ತದೆ. ರೈತರ ಸಾಲು ಸಾಲು ಆತ್ಮಹತ್ಯೆಗಳ ಹಿಂದೆ ಇಂಥ ಬಡ್ಡಿ ವ್ಯವಸ್ಥೆಯ ಪಾಲು ದೊಡ್ಡದಿದೆ ಎಂದು ಹಲವು ಸಮೀಕ್ಷೆಗಳೂ ಹೇಳಿವೆ. ಆದ್ದ ರಿಂದ, ಬಡ್ಡಿರಹಿತ ಸಾಲ ವ್ಯವಸ್ಥೆಯನ್ನು ಸರಕಾರವೇಕೆ ಪರಿಚಯಿಸಬಾರದು? ಬಡ್ಡಿಯ ಹಣದಿಂದ ಬ್ಯಾಂಕನ್ನು ನಿರ್ವಹಿ ಸುವ ಬದಲು ಪರ್ಯಾಯ ದಾರಿಗಳನ್ನೇಕೆ ಕಂಡುಕೊಳ್ಳ ಬಾರದು? ಬ್ಯಾಂಕ್‍ನಲ್ಲಿ ಹೂಡಿಕೆಯಾಗುವ ಬೃಹತ್ ಡಿಪಾ ಸಿಟ್‍ಗಳನ್ನು ಇತರ ಲಾಭದಾಯಕ ಉದ್ದಿಮೆಯಲ್ಲೋ ಇನ್ನಾವುದಾದರೂ ವ್ಯಾಪಾರದಲ್ಲೋ ತೊಡಗಿಸಿ ಬರುವ ಆದಾಯ  ದಿಂದ ಬ್ಯಾಂಕ್ ನಿರ್ವಹಣೆ ಸಾಧ್ಯವೇ ಎಂದು ಯಾಕೆ ಯೋಚಿಸಬಾರದು? ಅಂದಹಾಗೆ,
ಪ್ರತಿವರ್ಷ ವಿವಿಧ ಬ್ಯಾಂಕ್‍ಗಳು ತಮಗಾದ ಲಾಭದ ಪಟ್ಟಿಯನ್ನು ಬಿಡುಗಡೆಗೊಳಿಸುವುದಿದೆ. ನಿಜ ಏನೆಂದರೆ, ಆ ಲಾಭದ ಹಿಂದೆ ಪ್ರೀತಳಂಥ ಅಸಹಾಯಕರ ಕಣ್ಣೀರಿದೆ. ಅವರಿಂದ ಕಸಿದುಕೊಂಡ ಬಡ್ಡಿಯೇ ಈ ಲಾಭ. ನೀವೇ ಹೇಳಿ, ಈ ಲಾಭಕ್ಕಾಗಿ ನಾವು ಬ್ಯಾಂಕ್‍ಗಳನ್ನು ಅಭಿನಂದಿಸಬೇಕೋ ವಿಷಾದಿಸಬೇಕೋ?



Wednesday, March 21, 2018

ಸಿಂಧುವಾದ ಮದುವೆಯಲ್ಲಿ ಕೆಲವು ಅಸಿಂಧು ಪ್ರಶ್ನೆಗಳು..

ಮೂರು ಕಾರಣಗಳಿಗಾಗಿ ಒಂದು ವಿವಾಹವನ್ನು ನ್ಯಾಯಾಲಯ ರದ್ದುಗೊಳಿಸಬಹುದು.
1. ವಿವಾಹಿತರಲ್ಲಿ ಹೆಣ್ಣು ಅಥವಾ ಗಂಡು ಅಪ್ರಾಪ್ತ ವಯಸ್ಸಿನವರಾಗಿದ್ದರೆ ಆ ಮದುವೆಯನ್ನು ರದ್ದುಗೊಳಿಸುವ ಹಕ್ಕು ನ್ಯಾಯಾಲಯಕ್ಕಿದೆ. ಆ ವಿವಾಹದ ಕ್ರಮಬದ್ಧತೆಯನ್ನು ಪ್ರಶ್ನಿಸಿ ಹೆತ್ತವರು ಅಥವಾ ಪೋಷಕರು ನ್ಯಾಯಾಲಯವನ್ನು ಸಮೀಪಿಸಿದರೆ ಅದನ್ನು ಗಂಭೀರವಾಗಿ ಕೋರ್ಟು ಪರಿಗಣಿಸಬಹುದು.
2. ವಿವಾಹಿತರಾದ ಇಬ್ಬರಲ್ಲಿ ಒಬ್ಬರು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಆ ವಿವಾಹವನ್ನು ಅನೂರ್ಜಿತಗೊಳಿಸ ಬೇಕೆಂದು ಸಂಬಂಧಪಟ್ಟವರು ಕೋರ್ಟ್‍ಗೆ ಮನವಿ ಮಾಡಿದರೆ ಅದನ್ನು ಮಾನ್ಯ ಮಾಡುವ ಅವಕಾಶ ನ್ಯಾಯಾಲಯಕ್ಕಿದೆ.
3. ವಿವಾಹಿತರಲ್ಲಿ ಓರ್ವರು ಆ ಮೊದಲೇ ಮದುವೆ ಯಾಗಿರುವುದು ಮತ್ತು ಕಾನೂನು ಪ್ರಕಾರ ಆ ಮದುವೆ ಯಿಂದ ವಿಚ್ಛೇದನ ಪಡಕೊಳ್ಳದಿರುವುದು ಅಥವಾ ಒಂದ ಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಲು ಕಾನೂನಾತ್ಮಕ ವಾಗಿ ಅವಕಾಶ ಇಲ್ಲದ ¸ ಸಮುದಾಯದವರಾಗಿರುವುದು. ಇಂಥ ಸ್ಥಿತಿಯಲ್ಲಿ ಮದುವೆಯ ರದ್ಧತಿಯನ್ನು ಕೋರಿ ನ್ಯಾಯಾಲಯವನ್ನು ಸಮೀಪಿಸಿದರೆ ಅದು ಮಾನ್ಯವಾಗುವು ದಕ್ಕೆ ಅವಕಾಶ ಇದೆ.
     ಆದರೆ ಕೇರಳದ ಹಾದಿಯ, ಈ ಮೇಲಿನ ಮೂರೂ ಕಾರಣಗಳಲ್ಲೂ ಸುಲಭವಾಗಿ ತೇರ್ಗಡೆ ಹೊಂದುತ್ತಾರೆ. ಆಕೆ ಅಪ್ರಾಪ್ತೆಯಲ್ಲ. 2016 ಡಿಸೆಂಬರ್‍ನಲ್ಲಿ ಕೇರಳ ಹೈಕೋರ್ಟ್‍ನ ನ್ಯಾಯಾಧೀಶರಾದ ಕೆ. ಸುರೇಂದ್ರ ಮೋಹನ್ ಮತ್ತು ಕೆ. ಅಬ್ರಹಾಂ ಅವರು ಹಾದಿಯ-ಶಫಿನ್ ಜಹಾನ್ ವಿವಾಹವನ್ನು ರದ್ದುಗೊಳಿಸುವಾಗ ಹಾದಿಯಾರಿಗೆ 23 ವರ್ಷ ಮತ್ತು ಶಫಿನ್‍ಗೆ 27 ವರ್ಷ. ಆದ್ದರಿಂದ, ಅವರ ವಿವಾಹ ರದ್ದುಗೊಳಿಸುವಂತಿಲ್ಲ. ಹಾದಿಯಾರ ತಂದೆ ಅಶೋಕನ್ ಮಾಡಿಕೊಂಡ ಮನವಿಯನ್ನು ಪುರಸ್ಕರಿಸ ಬೇಕಾದ ಅಗತ್ಯವೂ ಇರಲಿಲ್ಲ. ಅಲ್ಲದೇ, ವಿವಾಹ ರದ್ಧತಿ ಕೋರಿ ಆರಂಭದಲ್ಲಿ ಅಶೋಕನ್ ಅರ್ಜಿ ಸಲ್ಲಿಸಿಯೇ ಇರಲಿಲ್ಲ. ಮಗಳನ್ನು ಪತ್ತೆ ಹಚ್ಚಿ ಕೊಡಬೇಕೆಂದು ಕೋರಿ ಹೇಬಿಯ ಸ್ ಕಾರ್ಪಸ್ ಅರ್ಜಿಯನ್ನಷ್ಟೇ ಸಲ್ಲಿಸಿದ್ದರು.

ಎರಡನೇ ಮತ್ತು ಮೂರನೇ ಕಾರಣಗಳೂ ಹಾದಿಯಾಳ ಮದುವೆಯನ್ನು ರದ್ದುಗೊಳಿಸುವುದಕ್ಕೆ ಯಾವ ನೆಲೆಯಲ್ಲೂ ಆಧಾರವಾಗುವುದಿಲ್ಲ. ಹಾದಿಯ ಇತರೆಲ್ಲರಂತೆ ಸಹಜವಾಗಿರುವ ಯುವತಿ. ಮಾನಸಿಕವಾಗಿ ಸಮರ್ಥೆ. ವಿದ್ಯಾರ್ಥಿನಿ. ನ್ಯಾಯಾಲಯ ಕೇಳಿದ ಪ್ರತಿ ಪ್ರಶ್ನೆಗಳಿಗೂ ಅತ್ಯಂತ ಸಮಯೋಚಿತ ಉತ್ತರಗಳನ್ನೇ ನೀಡಿದ್ದರು. ವಿವಾಹವನ್ನು ರದ್ದುಗೊಳಿಸುವುದಕ್ಕೆ ಪೂರಕವಾಗುವ ಯಾವ ಮಾನಸಿಕ ದೌರ್ಬಲ್ಯವನ್ನು ವ ಆಕೆ ಪ್ರದರ್ಶಿಸಿಲ್ಲ ಅಥವಾ ಆಕೆಯ ತಂದೆ ಅಶೋಕನ್ ಆ ಕುರಿತಾದ ವೈದ್ಯಕೀಯ ದಾಖಲೆ ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇನ್ನು, ಮೂರನೇ ಕಾರಣ ವಂತೂ ಇವರಿಬ್ಬರಿಗೆ ಹೊಂದಿಕೆಯಾಗುವುದೇ ಇಲ್ಲ. ಯಾಕೆಂದರೆ, ಶಫಿನ್‍ಗೆ ಈ ಮೊದಲು ವಿವಾಹವಾಗಿಲ್ಲ ಅಥವಾ ಆ ಬಗ್ಗೆ ಯಾವ ದೂರನ್ನೂ ಯಾರೂ ಕೋರ್ಟಿಗೆ ಸಲ್ಲಿಸಿಲ್ಲ. ಹಾದಿಯಾಳಿಗೆ ಆ ಬಗ್ಗೆ ದೂರುಗಳಿಲ್ಲ. ಅಶೋಕನ್‍ಗೂ ಇಲ್ಲ. ಆದ್ದರಿಂದ ಈ ಮೂರೂ ಕಾರಣಗಳಲ್ಲಿ ಹಾದಿಯಾ-ಶಫಿನ್ ವಿವಾಹವನ್ನು ರದ್ದುಗೊಳಿಸುವುದಕ್ಕೆ ಏನೇನೂ ಇಲ್ಲ. ಆದ್ದರಿಂದಲೇ, 2016 ಡಿಸೆಂಬರ್‍ನಲ್ಲಿ ಈ ಮದುವೆಯನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ಕೊಟ್ಟ ಕಾರಣಗಳು ಬೇರೆಯದೇ ಆಗಿದ್ದುವು.
1. ಮತಾಂತರ ಕುರಿತಾದ ಸಂದೇಹ
2. ಶಫಿನ್ ಜಹಾನ್ ಹಿನ್ನೆಲೆಯ ಬಗ್ಗೆ ಪ್ರಶ್ನೆಗಳು
3. ತಂದೆ ಅಥವಾ ಪೋಷಕರ ಅನುಪಸ್ಥಿತಿಯಲ್ಲಿ ವಿವಾಹ ನಡೆದಿರುವುದು.
4. ಹಾದಿಯಾರ ಉತ್ತಮ ಭವಿಷ್ಯದ ದೃಷ್ಟಿಯಿಂದ ನಿರ್ಧಾರ ತಳೆಯುವುದು.
ನಿಜವಾಗಿ ಈ ನಾಲ್ಕೂ ಕಾರಣಗಳು ಒಂದು ವಿವಾಹವನ್ನು ರದ್ದುಪಡಿಸುವುದಕ್ಕೆ ಕಾರಣವೇ ಆಗುವುದಿಲ್ಲ. ಮದುವೆಯಾಗಿರುವ ಇಬ್ಬರೂ ಪ್ರೌಢರಾಗಿದ್ದರೆ, ಮಾನಸಿಕ ಸಮಸ್ಯೆ ಇಲ್ಲದಿದ್ದರೆ ಮತ್ತು ಆ ಮೊದಲೇ ಮದುವೆಯಾಗಿದ್ದು ಅದನ್ನು ಅಡಗಿಸಿಟ್ಟಿದ್ದರಷ್ಟೇ ವಿವಾಹ ರದ್ಧತಿಗೆ ಕೋರ್ಟು ಆದೇಶ ನೀಡಬಹುದು. ಶಫಿನ್ ಜಹಾನ್‍ನ ಹಿನ್ನೆಲೆ ಏನು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಗಳಿವೆಯೇ, ಭಯೋತ್ಪಾದಕ ಚಟುವಟಿಕೆಯಲ್ಲಿ ಅವರು ತೊಡಗಿಸಿ ಕೊಂಡಿದ್ದಾರೆಯೇ, ಹಾದಿಯಾಳನ್ನು ವಿದೇಶಕ್ಕೆ ಸಾಗಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆಯೇ ಇತ್ಯಾದಿಗಳಿಗೂ ಮದುವೆಗೂ ಸಂಬಂಧ ಕಲ್ಪಿಸುವುದಕ್ಕೆ ಸಾಧ್ಯವೇ ಇಲ್ಲ. ವಿವಾಹವು ಊರ್ಜಿತ-ಅನೂರ್ಜಿತಗೊಳ್ಳುವುದು ವಿವಾಹಕ್ಕೆ ಸಂ ಬಂಧಿಸಿದ ಕಾನೂನು ಕಟ್ಟಲೆಗಳ ಆಧಾರದಲ್ಲಿ ಮಾತ್ರ. ಹಾದಿಯಾಳಂತೂ ತಾನು ಮತಾಂತರವಾಗಿರುವ ಬಗ್ಗೆ ಪೆÇಲೀಸರ ಮುಂದೆ ವಿವರವಾಗಿ ಹೇಳಿಕೊಂಡಿದ್ದರು. ಅಲ್ಲದೇ, ಹೈಕೋರ್ಟ್‍ಗೆ ಹಾಜರುಪಡಿಸುವ ವೇಳೆ, ಮಾಧ್ಯಮದವರನ್ನು ಕೂಗಿ ಕರೆದು, ‘ನಾನು ಮುಸ್ಲಿಮ್. ನನ್ನನ್ನು ಯಾರೂ ಬಲವಂತದಿಂದ ಮತಾಂತರಿಸಿಲ್ಲ. ನನ್ನ ಪತಿ ಶಫಿನ್ ಜಹಾನ್..’ ಎಂದು ಕೂಗಿ ಹೇಳಿದ್ದರು.
ತಮಿಳುನಾಡಿನ ¸ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಿನ ವಿವರಗಳನ್ನು ಆಕೆ ಕೋರ್ಟ್ ಮುಂದೆ ಮಂಡಿಸಿದ್ದರು. ಕಾಲೇಜಿನ ಹತ್ತಿರವೇ ಇರುವ ಬಾಡಿಗೆ ಮನೆಯೊಂದರಲ್ಲಿ ಇತರ ನಾಲ್ವರು ವಿದ್ಯಾರ್ಥಿನಿಯರೊಂದಿಗೆಬದುಕುತ್ತಿದ್ದಗ ಫಸೀನ ಮತ್ತು ಜಸೀನ ಎಂಬಿಬ್ಬರ ಬದುಕು ತನ್ನನ್ನು ಆಕರ್ಷಿಸಿದ್ದು ಮತ್ತು ಅವರ ನಮಾಝïನಿಂದ ಪ್ರಭಾವಿತವಾದದ್ದು, ಬಳಿಕ ಇಸ್ಲಾಮ್‍ಗೆ ಸಂಬಂಧಿಸಿದ ವಿವಿಧ ಪುಸ್ತಕ ಮತ್ತು ವೀಡಿಯೋಗಳನ್ನು ವೀಕ್ಷಿಸತೊಡಗಿದ್ದು ಇತ್ಯಾದಿಗಳೆಲ್ಲವನ್ನೂ ಆಕೆ ಕೋರ್ಟ್ ಮುಂದೆ ಯಾವ ಅಳೂಕೂ ಇಲ್ಲದೇ ವಿವರಿಸಿದ್ದರು. ಜೊತೆಗೇ, 2015ರಲ್ಲಿ ತನ್ನ ದೊಡ್ಡಪ್ಪ ಮೃತಪಟ್ಟಾಗ ಮನೆಯಲ್ಲಿ ನಡೆದ ಪ್ರಸಂಗವನ್ನೂ ಕೋರ್ಟ್‍ನ ಮುಂದೆ ಬಿಚ್ಚಿಟ್ಟಿದ್ದರು. ದೊಡ್ಡಪ್ಪರ ಸದ್ಗತಿಗಾಗಿ ಮನೆಯಲ್ಲಿ ಹಮ್ಮಿಕೊಂಡ 40 ದಿನಗಳ ಪೂಜಾ ಕಾರ್ಯದಲ್ಲಿ ಭಾಗವಹಿಸಲು ತಾನು ನಿರಾಕರಿಸಿದ್ದು ಮತ್ತು ಆ ವೇಳೆ ತಂದೆ ಅಶೋಕನ್‍ರಿಗೆ ತಾನು ಮುಸ್ಲಿಮ್ ಆಗಿರುವುದನ್ನು ತಿಳಿಸಿರುವುದನ್ನೂ ಆಕೆ ವಿವರಿಸಿದ್ದರು. ಬಹುಶಃ, ಬಲವಂತದ ಮತಾಂತರವಾಗಿದ್ದರೆ ಹಾದಿಯಾ ಇಷ್ಟೊಂದು ತೀವ್ರವಾಗಿ ಆಚಾರ-ವಿಚಾರಗಳನ್ನು – ಅದೂ ಮನೆಯಲ್ಲಿ – ಪಾಲಿಸುವುದಕ್ಕೆ ಮುಂದಾಗುತ್ತಲೇ ಇರಲಿಲ್ಲ. ಆಕೆಯ ಮನಪರಿವರ್ತನೆ ಗೆಳತಿಯರ ನಡುವಿನ ಸಂಬಂಧದಿಂದ ಆಗಿತ್ತೇ ಹೊರತು ಆ ಸಮಯದಲ್ಲಿ ಅವರ ಬದುಕಿನಲ್ಲಿ ಶಫಿನ್ ಜಹಾನ್‍ರ ಪ್ರವೇಶ ಆಗಿರಲೂ ಇಲ್ಲ. ತನ್ನ ಮತಾಂತರದ ಕುರಿತಂತೆ ಆಕೆ ಕೋರ್ಟ್‍ಗೆ ಅಫಿದಾವಿತನ್ನೂ ಸಲ್ಲಿಸಿದ್ದರು. ಆದ್ದರಿಂದ ಬಲವಂತದ ಮತಾಂತರ ಎಂಬ ಸಂದೇಹ ಪಡುವುದಕ್ಕೆ ಕಾರಣಗಳೇ ಇದ್ದಿರಲಿಲ್ಲ. ಇನ್ನು, ಬಲವಂತದಿಂದ ಮತಾಂತವಾಗಿದ್ದರೂ ಮದುವೆಯನ್ನು ರದ್ದು ಪಡಿಸುವುದಕ್ಕೆ ಅದು ಕಾರಣ ಆಗುವುದಕ್ಕೂ ಸಾಧ್ಯವಿರಲಿಲ್ಲ. ಪ್ರೌಢ ಹೆಣ್ಣು-ಗಂಡುಗಳಿಬ್ಬರು ಹೆತ್ತವರ ಉಪಸ್ಥಿತಿ ಇದ್ದರೂ ಇಲ್ಲದಿದ್ದರೂ ವಿವಾಹ ಮಾಡಿಕೊಳ್ಳಬಹುದು. ಅದು ವೈಯಕ್ತಿಕ ಸ್ವಾತಂತ್ರ್ಯದ ಪರಿಧಿಯೊಳಗೆ ಬರುವುದರಿಂದ ಅದು ಪ್ರಶ್ನಾರ್ಹ ವಾಗುವುದಿಲ್ಲ. ಆದರೂ ಕೇರಳ ಹೈಕೋರ್ಟ್ ಈ ಮದುವೆಯನ್ನು ರದ್ದುಪಡಿಸುತ್ತಾ ಹೀಗೆ ಸಮಜಾಯಿಷಿಕೆ ನೀಡಿತು-ಹಾದಿಯಾ ಪ್ರಬುದ್ಧಳಾಗಿರಬಹುದು. ಆದರೆ 20ರ ಹರೆಯ ವೆಂಬುದು ಚಂಚಲವಾದುದು. ಹೆತ್ತವರಿಗೆ ಆಕೆಯ ಸುರಕ್ಷಿತತೆಯ ಬಗ್ಗೆ ಸಂಶಯವಿದೆ. ಭಾರತೀಯ ಸಂಸ್ಕøತಿಯ ಪ್ರಕಾರ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಹೆತ್ತವರಿಗಿದೆ…’

ನಿಜವಾಗಿ, ನ್ಯಾಯಾಂಗವೆಂಬುದು ಕಾನೂನು ಆಧಾರಿತ ವಾಗಿ ತೀರ್ಪು ನೀಡುವ ಸಂಸ್ಥೆಯೇ ಹೊರತು ಭಾವನೆಯ ಆಧಾರದಲ್ಲಲ್ಲ. ತೀರ್ಪಿನ ಜೊತೆ ಭಾವನೆ ಬೆರೆತು ಹೋದರೆ ಅದು ಮಾಡಬಾರದ ಹಾನಿಯನ್ನು ಮಾಡಿ ಬಿಡಬಲ್ಲುದು. ಈ ತೀರ್ಪಿನ ಕುರಿತಂತೆ ಲಭ್ಯವಾದ ಪ್ರತಿಕ್ರಿಯೆಗಳಲ್ಲಿ ಈ ಭಾವನಾತ್ಮಕ ಅಂಶವೂ ಮುಖ್ಯವಾಗಿತ್ತು. ಆದ್ದರಿಂದಲೇ ಈ ತೀರ್ಪಿನ ವಿರುದ್ಧ ಶಫಿನ್ ಜಹಾನ್ 2017ರಲ್ಲಿ ¸ ಸುಪ್ರೀಮ್ ಕೋರ್ಟ್‍ನ ಬಾಗಿಲು ತಟ್ಟಿದರು. ವಿಶೇಷ ಏನೆಂದರೆ, ಸುಪ್ರೀಮ್ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಚಂದ್ರಚೂಡ್ ಅವರು ಮದುವೆ ರದ್ಧತಿಯ ಮೇಲೆ ತೀರ್ಪು ನೀಡುವ ಬದಲು ಕೇರಳದ ಮತಾಂತರ ಪ್ರಕರಣಗಳ ಕುರಿತು ತನಿಖಿಸುವಂತೆ ರಾಷ್ಟ್ರೀಯ ತನಿಖಾ ದಳ(ಓIಂ)ಕ್ಕೆ ಆದೇಶಿಸಿದರು. ಅಂದಹಾಗೆ, ಕೋರ್ಟಿನ ಮುಂದೆ ಇದ್ದುದು ಪ್ರೌಢ ವ್ಯಕ್ತಿಗಳ ನಡುವಿನ ಮದುವೆಯನ್ನು ಅನೂರ್ಜಿತ ಗೊಳಿಸಿದ್ದು ಸರಿಯೇ ಎಂಬ ಪ್ರಶ್ನೆಯಾಗಿತ್ತು. ಅವರಿಬ್ಬರ ಹಿನ್ನೆಲೆ-ಮುನ್ನೆಲೆ ಏನಿದ್ದರೂ ಅದನ್ನು ಇದಕ್ಕೆ ತಳುಕು ಹಾಕಬೇಕಾಗಿರಲಿಲ್ಲ. ಅದು ಬೇರೆಯದೇ ಆದ ತನಿಖೆಗೆ ಅರ್ಹವಾದದ್ದು. ಅದನ್ನು ಮದುವೆಯ ಸಿಂಧುತ್ವಕ್ಕೆ ಜೋಡಿಸುವುದು ಅಪಾಯಕಾರಿ ಮಾದರಿಯೊಂದಕ್ಕೆ ಆರಂಭ ಕೊಟ್ಟಂತೆ. ಆದ್ದರಿಂದ ಈ ಆದೇಶವು ಅಚ್ಚರಿಯ ಬೆಳವಣಿಗೆಯೂ ಆಗಿತ್ತು. ಆದರೆ ಬಳಿಕ ¸ ಸುಪ್ರೀಮ್ ಕೋರ್ಟ್ ಇಡೀ ಪ್ರಕರಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿತು. ಹಾದಿಯಾಳನ್ನು ಕೋರ್ಟಿಗೆ ಹಾಜರುಪಡಿಸುವಂತೆ ಆದೇಶಿಸಿತು. ಹಾದಿಯಾಳ ಮಾತನ್ನು ಆಲಿಸಿದ ಮುಖ್ಯ ನ್ಯಾಯಾಧೀಶರಿಗೆ ಪ್ರಕರಣದ ಆಳ-ಅಗಲ ಮನವರಿಕೆಯಾಯಿತು. ತಂದೆಯ ಸುಪರ್ದಿಯಿಂದ ಹಾದಿಯಾಳನ್ನು ಹೊರತಂದು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಿಗೆ ಆಕೆಯ ಹೊಣೆಯನ್ನು ವಹಿಸಿತು. ಇದೀಗ ಆ ಮದುವೆಯನ್ನು ಸಿಂಧುಗೊಳಿಸಿ ಪ್ರಕರಣಕ್ಕೆ ಒಂದು ಹಂತದ ತೆರೆಯನ್ನೆಳೆದಿದೆ.
      ನಿಜವಾಗಿ, ಕೋರ್ಟಿನ ಹೊರಗಡೆಯ ಗದ್ದಲಗಳು ಕೋರ್ಟ್‍ನ ಒಳಗಡೆಯ ವಾತಾವರಣದ ಮೇಲೆ ಎಷ್ಟು ಪ್ರಭಾವವನ್ನು ಬೀರುತ್ತದೆ ಎಂಬುದಕ್ಕೆ ಹಾದಿಯಾ-ಶಫಿನ್ ವಿವಾಹ ಪ್ರಕರಣ ಒಂದು ಅತ್ಯುತ್ತಮ ಉದಾಹರಣೆ. ಲವ್ ಜಿಹಾದ್, ಭಯೋತ್ಪಾದನೆ, ಮತಾಂತರ, ಸಿರಿಯಕ್ಕೆ ಹೆಣ್ಣು ಮಕ್ಕಳ ಸಾಗಾಟ.. ಇತ್ಯಾದಿ ಚರ್ಚೆಗಳು ಕೇರಳ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಬಹು ಜೋರಾಗಿ ನಡೆಯುತ್ತಿದ್ದ ಸಮಯದಲ್ಲೇ ಹಾದಿಯಾ ಪ್ರಕರಣ ಕೋರ್ಟ್ ಮೆಟ್ಟಲನ್ನೇರಿತ್ತು. ಲವ್‍ಜಿಹಾದ್ ಬಗ್ಗೆ ಒಂದು ಬಗೆಯ ಕಲ್ಪಿತ ಮತ್ತು ಪ್ರಚೋದನಕಾರಿ ಸುಳ್ಳುಗಳು ಎಗ್ಗಿಲ್ಲದೆ ಹರಿದಾಡುತ್ತಿದ್ದ ಸಮಯವದು. ಬಹುಶಃ, ಈ ವಾತಾವರಣದ ಪ್ರಭಾವ ನ್ಯಾಯಾಧೀಶರ ಮೇಲೂ ಆಗಿರಬಹುದೇ ಎಂಬ ಅನುಮಾನ ಹಾದಿಯ ಪ್ರಕರಣದಿಂದ ಹಲವು ಬಾರಿ ಕಾಡಿದೆ. ಮಾಧ್ಯಮ ಚರ್ಚೆಯ ಪ್ರಭಾವವು ನ್ಯಾಯಾಲಯಗಳ ಮೇಲೂ ಬೀರುತ್ತದೆಯೇ? ಅಲ್ಲಿನ ವಿಚಾರಣೆ-ತೀರ್ಪುಗಳಲ್ಲಿ ಮಾಧ್ಯಮ ಚರ್ಚೆಯು ಪಾತ್ರ ವಹಿಸುತ್ತವೆಯೇ? ನ್ಯಾಯಾಧೀಶರೂ ಮನುಷ್ಯರೇ ತಾನೇ. ಪತ್ನಿ-ಮಕ್ಕಳಿರುವ ಮತ್ತು ಮಾಧ್ಯಮ ಸುದ್ದಿ ಯನ್ನೂ, ವರದಿ-ಚರ್ಚೆಯನ್ನೂ ವೀಕ್ಷಿಸಿಯೇ ಇರುವ ಅವರ ತೀರ್ಪುಗಳುನ್ನು ಕೆಲವೊಮ್ಮೆ ಅವು ನಿಯಂತ್ರಿಸಬಹುದೇ?    
      ಹಾದಿಯಾ-ಶಫಿನ್ ಪ್ರಕರಣದ ಮೂಲಕ ಮುಂಚೂಣಿಗೆ ಬಂದಿರುವ ಈ ಪ್ರಶ್ನೆ ಅಸಂಗತವಲ್ಲ.

ಶ್ರೇಯಸಾಗರ್ ಬಿಟ್ಟು ಹೋದ ಪ್ರಶ್ನೆ..

      ಸುಖ ಮರಣಕ್ಕೆ (Euthanasia) ನಿಷೇಧ ಇರುವ ಮತ್ತು ಆತ್ಮಹತ್ಯೆಯು ಅಪರಾಧವಾಗಿರುವ ದೇಶವೊಂದರಲ್ಲಿ ಜೈನ ಧರ್ಮೀಯರ ಸಲ್ಲೇಖನಾ ವ್ರತದ ಸ್ಥಾನಮಾನವೇನು? ಅದು ಎಷ್ಟು ಸಂವಿಧಾನ ಬದ್ಧ? ಸಾವನ್ನು ಆಗ್ರಹಿಸಿ ವ್ಯಕ್ತಿಯೋರ್ವ ಅನ್ನಾಹಾರ ಮತ್ತು ನೀರು ತ್ಯಜಿಸುವುದನ್ನು ಹಾಗೂ ಸಾವಿಗೆ ತುತ್ತಾಗುವುದನ್ನು ಧಾರ್ಮಿಕ ಕ್ರಿಯೆ ಎಂಬ ಕಾರಣಕ್ಕಾಗಿ ಅನುಮತಿಸಬಹುದೇ? ಸಂವಿಧಾನ ಕೊಡ ಮಾಡಿರುವ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯಗಳಡಿಯಲ್ಲಿ ಈ ಕ್ರಿಯೆ ಒಳಪಡುತ್ತದೆಯೇ ಅಥವಾ ಭಾರತೀಯ ದಂಡಸಂಹಿತೆ 306ರ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ಎಂಬ ಪರಿಧಿಯೊಳಗೆ ಸೇರಿಕೊಳ್ಳುತ್ತದೆಯೇ? ಆತ್ಮಹತ್ಯೆ ಮತ್ತು ಸಲ್ಲೇಖನಾ ಎರಡೂ ಸಮಾನವೇ? ಪಕ್ಕಾ ಧಾರ್ಮಿಕ ಕ್ರಿಯೆಯೊಂದನ್ನು ಆತ್ಮಹತ್ಯೆಯೊಂದಿಗೆ ಜೋಡಿಸಿ ನೋಡುವುದು ಎಷ್ಟು ಸರಿ?..
    ಈ ಬಗೆಯ ಜಿಜ್ಞಾಸೆಯೊಂದು 2006 ಸೆಪ್ಟೆಂಬರ್‍ನಲ್ಲಿ ಈ ದೇಶದಲ್ಲಿ ಕೆಲವರಲ್ಲಿ ಕಾಣಿಸಿಕೊಂಡಿತು. ಇದಕ್ಕೆ ಕಾರಣ 61 ವರ್ಷದ ವಿಮಲಾ ದೇವಿ ಭನ್ಸಾಲಿ ಎಂಬ ಮಹಿಳೆ. ಜೈನ ಧರ್ಮೀಯರು ಅಧಿಕ ಸಂಖ್ಯೆಯಲ್ಲಿರುವ ರಾಜ್ಯ ರಾಜಸ್ತಾನ. ಈ ದೇಶದ ಜನಸಂಖ್ಯೆಯಲ್ಲಿ ಜೈನ ಧರ್ಮೀಯರು ಕೇವಲ 0.4%ರಷ್ಟಿರುವರಾದರೂ ಆರ್ಥಿಕವಾಗಿ ಅವರು ತುಂಬಾ ಬಲಾಢ್ಯರು. ರಾಜಸ್ತಾನದ ಉನ್ನತ ಸರಕಾರಿ ಅಧಿಕಾರಿಗಳಲ್ಲಿ ಜೈನರೇ ಹೆಚ್ಚಿದ್ದಾರೆ. ವಿಮಲಾದೇವಿ ರಾಜಸ್ತಾನದವರು. ಜೈನ ಧರ್ಮಾನು ಯಾಯಿ. ಲಿವರ್ ಮತ್ತು ಬ್ರೈನ್ ಕ್ಯಾನ್ಸರ್‍ ಗೆ  ತುತ್ತಾಗಿರುವುದು ಖಚಿತವಾದ ಬಳಿಕ ಆಕೆ 2006 ಸೆಪ್ಟೆಂಬರ್‍ನಲ್ಲಿ ಸಲ್ಲೇಖನಾ ವ್ರತ ಕೈಗೊಂಡರು. ಸಾವನ್ನು ಆಗ್ರಹಿಸಿಕೊಂಡು ಮಾಡುವ ಉಪವಾಸ ಇದು. ಆರಂಭದಲ್ಲಿ ಅನ್ನಾಹಾರವನ್ನು ತ್ಯಜಿಸುವುದು ಮತ್ತು ಕೊನೆಗೆ ನೀರನ್ನೂ ತ್ಯಜಿಸುತ್ತಾ ಸಾವಿಗೀಡಾಗುವುದು. ಜೈನ ಧರ್ಮೀಯರಲ್ಲಿ ಸಲ್ಲೇಖನಾ ವ್ರತ ಸಹಜವಾಗಿದ್ದರೂ ವಿಮಲಾ ದೇವಿ ಭನ್ಸಾಲಿಯ ನಿರ್ಧಾರವು ಅಸಹಜವಾದ ಜಿಜ್ಞಾಸೆಯೊಂದಕ್ಕೆ ಚಾಲನೆಯನ್ನು ನೀಡಿತು. ನಿಖಿಲ್ ಸೋನಿ ಎಂಬ ನ್ಯಾಯವಾದಿಯೋರ್ವರು ಈ ಸಲ್ಲೇಖನಾ ವ್ರತದ ವಿರುದ್ಧ ರಾಜಸ್ತಾನದ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿ ಮೊಕದ್ದಮೆ ದಾಖಲಿಸಿದರು. ವಿಮಲಾದೇವಿಯ ಸಲ್ಲೇಖನಾ ವ್ರತಕ್ಕೆ ತಡೆ ನೀಡಬೇಕೆಂದು ಅವರು ಆಗ್ರಹಿಸಿದರು. ಸಲ್ಲೇಖನಾ ವ್ರತವನ್ನು ಆತ್ಮಹತ್ಯೆಗೆ ಸಮಾನ ಎಂದು ಕರೆದರು. ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಸ್ವೀಕರಿಸಿತು. ಇದು ಜೈನ ಸಮುದಾಯವನ್ನು ಕೆರಳಿಸಿತು. ಸಲ್ಲೇಖನಾ ವ್ರತವು ಪುನರ್‍ಜನ್ಮದ ಸರಣಿಯಿಂದ ಮುಕ್ತಗೊಳ್ಳುವ ಒಂದು ಧಾರ್ಮಿಕ ವಿಧಿ ಎಂದು ಅದು ವ್ಯಾಖ್ಯಾನಿಸಿತು. ಧಾರ್ಮಿಕ ಹಕ್ಕುಗಳನ್ನು ಸಂರಕ್ಷಿಸುವ ಸಂವಿಧಾನದ 21ನೇ ವಿಧಿಯ ಪ್ರಕಾರ ಈ ಆಚರಣೆಯನ್ನು ಜೈನ ಸಮುದಾಯ ಸಮರ್ಥಿಸಿಕೊಂಡಿತಲ್ಲದೇ ಕೋರ್ಟ್‍ನ ಮಧ್ಯ ಪ್ರವೇಶವನ್ನು ಪ್ರಶ್ನಿಸಿತು. ಜೈನರಲ್ಲಿ ಶ್ವೇತಾಂಬರ ಎಂಬೊಂದು ಪಂಥ ಇದೆ. ಆ ಪಂಥದವರು ಸಲ್ಲೇಖನಾ ವ್ರತದಲ್ಲಿ ನಂಬಿಕೆ ಇಟ್ಟಿದ್ದಾರೆ. ಕೆಟ್ಟ ಕರ್ಮಗಳಿಂದ ಆತ್ಮವನ್ನು ಮುಕ್ತಗೊಳಿಸುವ ಉದ್ದೇಶ ಅದರ ಹಿಂದಿದೆ. ಆಚಾರ್ಯ ವಿನೋಬಾ ಭಾವೆಯವರು ಸಲ್ಲೇಖನಾ ವ್ರತದ ಮೂಲಕ ಬದುಕು ಕೊನೆಗೊಳಿಸಿದ್ದಾರೆ ಎಂದು ಜೈನ ಧರ್ಮೀಯರು ವಾದಿಸುತ್ತಾರೆ. ಸಲ್ಲೇಖನಾ ವ್ರತದ ಮೂಲಕವೇ ಬಾಹುಬಲಿಯು ಈ ಜಗತ್ತಿನಿಂದ ನಿರ್ಗಮಿಸಿದ್ದಾರೆ ಎಂಬುದೂ ಅವರ ನಂಬಿಕೆ. ಆದರೆ ನಿಖಿಲ್ ಸೋನಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಈ ನಂಬಿಕೆಯ ಬುನಾದಿಯನ್ನೇ ಪ್ರಶ್ನಿಸುವಂತೆ ಮಾಡಿತು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನದ ನಡುವಿನ ಸಂಘರ್ಷವಾಗಿಯೂ ಅದು ಪರಿಗಣಿತವಾಯಿತು. ಸಲ್ಲೇಖನಾ ವ್ರತವನ್ನು ಅನೇಕರು ಆತ್ಮಹತ್ಯೆ ಎಂದು ಕರೆದರು. ಮಾತ್ರವಲ್ಲ, ನಿಖಿಲ ಸೋನಿಯ ಮೊಕದ್ದಮೆಯು ವಿಮಲಾ ದೇವಿ ಭನ್ಸಾಲಿಯಂತೆ ಸಲ್ಲೇಖನಾ ವ್ರತದಲ್ಲಿರುವ ಇನ್ನಷ್ಟು ಪ್ರಕರಣಗಳ ಬಹಿರಂಗಕ್ಕೂ ಕಾರಣವಾಯಿತು. 93 ವರ್ಷದ ಕೈಲಾ ದೇವಿ ಹಿರಾವತ್ ಎಂಬ ವಯೋವೃದ್ಧ ಮಹಿಳೆ ಆ ಸಮಯದಲ್ಲಿ ಹೆಚ್ಚು ಸುದ್ದಿಗೆ ಗ್ರಾಸವಾದರು. ಆರೋಗ್ಯಪೂರ್ಣವಾಗಿದ್ದ ಅವರು ಸಲ್ಲೇಖನಾ ವ್ರತ ಕೈಗೊಂಡಿದ್ದರು. ಅವರ ಸುತ್ತಮುತ್ತ ಮಂತ್ರ ಪಠಣಗಳು ನಡೆಯುತ್ತಿದ್ದುವು. ಜನರ ಭೇಟಿ, ಭಕ್ತಿ ಪ್ರದರ್ಶನಗಳೂ ನಡೆಯುತ್ತಿದ್ದುವು. ಪ್ರಕರಣ ನ್ಯಾಯಾಲಯ ದಲ್ಲಿದ್ದುದರಿಂದ ಇಂಥ ಸಲ್ಲೇಖನದ ಒಂದೊಂದೇ ಘಟನೆಗಳು ಅಲ್ಲಿ-ಇಲ್ಲಿ ಸುದ್ದಿಗೆ ಬರತೊಡಗಿದುವು. ಕ್ಯಾನ್ಸರ್ ಪೀಡಿತ 46 ವರ್ಷದ ಮಹಿಳೆ, ಗ್ಯಾಂಗ್ರೀನ್‍ನಿಂದ ಬಳಲುತ್ತಿದ್ದ 75 ವರ್ಷದ ಮಹಿಳೆ, ಕ್ಯಾನ್ಸರ್ ಪೀಡಿತ 46 ವರ್ಷದ ಕಮಲಾದೇವಿ ಮೆಹ್ತಾ, 94 ವರ್ಷದ ಮಹಿಳೆ.. ಹೀಗೆ ಸಲ್ಲೇಖನಾ ವ್ರತ ಕೈಗೊಂಡಿರುವ ಸರಣಿ ಸುದ್ದಿಗಳು ಬಹಿರಂಗಕ್ಕೆ ಬರತೊಡಗಿದುವು. ಸಲ್ಲೇಖನಾ ವ್ರತ ಕೈಗೊಳ್ಳುವ ವ್ಯಕ್ತಿ ಕುಟುಂಬದ ಮತ್ತು ಧಾರ್ಮಿಕ ಗುರುವಿನ ಸಮ್ಮತಿಯನ್ನು ಪಡೆದಿರಬೇಕು. ಸಾಮಾನ್ಯವಾಗಿ, ಕಾಯಿಲೆ ಪೀಡಿತರೇ ಇಂಥದ್ದೊಂದು  ಸಾಹಸಕ್ಕೆ ಕೈ ಹಾಕುತ್ತಾರೆ. ಅಲ್ಲದೇ, ಸಲ್ಲೇಖನಾ ವ್ರತ ಕೈಗೊಂಡು ಯಾರು ಸಾವಿಗೀಡಾಗುತ್ತಾರೋ ಅವರನ್ನು ಕೊಂಡಾಡಲಾಗುತ್ತದೆ. ಸಾವಿನ ಮನೆ ದುಃಖದ ಬದಲು ಸಂಭ್ರಮದಲ್ಲಿರುತ್ತದೆ. ಸಾವಿಗೆ ಸಂತೋಷ ವ್ಯಕ್ತಪಡಿಸಿ ಜಾಹೀರಾತು ನೀಡುವ ಕ್ರಮವೂ ಇದೆ. ಪ್ರತಿವರ್ಷ ಸುಮಾರು 200ರಷ್ಟು ಮಂದಿ ಹೀಗೆ ಸಲ್ಲೇಖನಾ ವ್ರತ ಕೈಗೊಂಡು ಬದುಕು ಕೊನೆಗೊಳಿಸುತ್ತಾರೆ ಎಂದು ಹೇಳಲಾಗುತ್ತದೆ. ಹೀಗಿರುತ್ತಾ,
ಸಲ್ಲೇಖನಾ ವ್ರತ ಕಾನೂನು ಬಾಹಿರ ಎಂದು 2015 ಆಗಸ್ಟ್ 10ರಂದು ರಾಜಸ್ತಾನ ಹೈಕೋರ್ಟು ಸಾರಿತಲ್ಲದೇ ಅದಕ್ಕೆ ನಿಷೇಧ ವಿಧಿಸಿ ಆದೇಶ ಹೊರಡಿಸಿತು.
ಜೈನ ಸಮುದಾಯದ ಮಟ್ಟಿಗೆ ಇದು ಅತ್ಯಂತ ಆಘಾತಕಾರಿ ತೀರ್ಪು. ಈ ತೀರ್ಪಿನ ವಿರುದ್ಧ ‘ಅಖಿಲ ಭಾರತ ವಕಶಿಯಾ ದಿಗಂಬರ್ ಜೈನ್ ಪರಿಷತ್’ ಎಂಬ ಸಂಘಟನೆ ಸುಪ್ರೀಮ್ ಕೋರ್ಟ್‍ನಲ್ಲಿ ದೂರು ದಾಖಲಿಸಿತು. ಈ ದೂರನ್ನು ವಿಚಾರಣೆಗೆ ಪರಿಗಣಿಸಿದ ಮುಖ್ಯ ನ್ಯಾಯಾಧೀಶ ಎಚ್.ಎಲ್. ದತ್ತ್ ಅವರಿದ್ದ ನ್ಯಾಯಪೀಠವು ರಾಜಸ್ತಾನ ಹೈಕೋರ್ಟಿನ ತೀರ್ಪಿಗೆ ತಡೆ ವಿಧಿಸಿ 2015 ಆಗಸ್ಟ್ 31ರಂದು ಆದೇಶ ಹೊರಡಿಸಿತು. ಹಾಗಂತ,
ಈ ಎಲ್ಲವನ್ನೂ ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ಮುಕ್ತಾಯ ಕಂಡ ಮಹಾ ಮಸ್ತಕಾಭಿಷೇಕಕ್ಕಿಂತ ಎರಡು ದಿನಗಳ ಮೊದಲು ಮಹಾರಾಜ್ ಶ್ರೇಯಸಾಗರ್ ಎಂಬ ಸಾಧುವೊಬ್ಬರು ಸಾವಿಗೀಡಾದರು. ಮಧ್ಯ ಪ್ರದೇಶದ ಪನ್ನಾ ಜಿ¯್ಲÉಯವರಾದ ಇವರು ಮಸ್ತಕಾಭಿಷೇಕಕ್ಕಿಂತ ವಾರಗಳ ಮೊದಲು ಸಲ್ಲೇಖನಾ ವ್ರತ ಕೈಗೊಂಡಿದ್ದರು. ಅವರ ಸುತ್ತ ನೂರಾರು ಜೈನ ಸಾಧು ಮತ್ತು ಸಾಧ್ವಿಗಳು ಮಂತ್ರ ಪಠಣಗೈದುದು ಮತ್ತು ಅದೇ ಸ್ಥಿತಿಯಲ್ಲಿ ಅವರು ಸಾವಿಗೀಡಾದ ಸುದ್ದಿಗಳೂ ಪ್ರಕಟವಾದುವು. 2016 ಅಕ್ಟೋಬರ್ ನಲ್ಲಿ ಆಂಧ್ರಪ್ರದೇಶ ದಲ್ಲಿ ಆರಾಧನಾ ಎಂಬ 13 ವರ್ಷದ ಬಾಲೆ ಸಾವಿಗೀಡಾಗಿದ್ದಳು. ಪವಿತ್ರ ಚೌಮಾಸದಲ್ಲಿ 68 ದಿನಗಳ ಕಾಲ ಉಪವಾಸವಿದ್ದ ಆಕೆ ಅಂತಿಮವಾಗಿ ಸಾವಿಗೀಡಾದಳು. ಆಕೆಯನ್ನು ಬಾಲ ತಪಸ್ವಿ ಎಂದು ಕರೆಯಲಾಯಿತು. ಶವ ಮೆರವಣಿಗೆಯನ್ನು ಶೋಭಾ ಯಾತ್ರೆಯಾಗಿ ಗೌರವಿಸಲಾಯಿತು. ಈ ಉಪವಾಸದ ಅವಧಿಯಲ್ಲಿ ಅನೇಕರು ಈ ಬಾಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸ್ಥಳೀಯ ಪತ್ರಿಕೆಗಳಲ್ಲಿ ಆಕೆಯನ್ನು ಕೊಂಡಾಡಿ ಜಾಹೀರಾತುಗಳೂ ಪ್ರಕಟವಾಗಿದ್ದುವು. ಅಷ್ಟಕ್ಕೂ,
   ಜೈನ ಧರ್ಮದ ಅವಿಭಾಜ್ಯ ಅಂಗವೆಂಬ ನೆಲೆಯಲ್ಲಿ ಸಲ್ಲೇಖನಾ ವ್ರತವನ್ನು ಗೌರವಿಸಲೇಬೇಕು. ಹಾಗಂತ, ಅದರರ್ಥ ಅದು ವಿಮರ್ಶಾತೀತ ಎಂದಲ್ಲ. ಈ ದೇಶದಲ್ಲಿರುವ ವಿವಿಧ ಧರ್ಮಗಳಲ್ಲಿ ಮೋಕ್ಷದ ವಿವಿಧ ಕಲ್ಪನೆಗಳಿವೆ. ಆದರೆ ಸಲ್ಲೇಖನಾ ವ್ರತ ಅವೆಲ್ಲವುಗಳಿಗಿಂತ ತೀರಾ ಭಿನ್ನವಾಗಿದೆ. ಹೀಗಿದ್ದೂ, ದೇಹವನ್ನು ದಂಡಿಸಿಕೊಂಡು ಮೋಕ್ಷ ಹೊಂದುವ ಈ ಪರಿಕಲ್ಪನೆಯು ಈ ದೇಶದಲ್ಲಿ ದೊಡ್ಡಮಟ್ಟದ ಬೌದ್ಧಿಕ ಜಿಜ್ಞಾಸೆಗೆ ಒಳಗಾಗದಿರಲು ಕಾರಣವೇನು? ತ್ರಿವಳಿ ತಲಾಕ್‍ನ ಹೆಸರಲ್ಲಿ ಈ ದೇಶದಲ್ಲಿ ನಡೆದ ಚರ್ಚೆ-ಕುಚರ್ಚೆ-ವ್ಯಂಗ್ಯ, ಅವಹೇಳನಗಳನ್ನು ಎದುರಿಟ್ಟುಕೊಂಡು ನೋಡಿದರೆ, ಸಲ್ಲೇಖನಾ ವ್ರತದ ಬಗ್ಗೆ ಗಾಢ ಮೌನವೊಂದು ಎದ್ದು ಕಾಣುತ್ತದೆ. 13ರ ಬಾಲೆ ಉಪವಾಸವಿದ್ದು ಸಾವಿ ಗೀಡಾದಾಗಲಾದರೂ ಈ ಕುರಿತಾದ ಮೌನವು ಮುರಿಯು ತ್ತದೆ ಎಂದು ಭಾವಿಸಲಾಗಿತ್ತು. ಆದರೆ ತ್ರಿವಳಿ ತಲಾಕ್‍ನ ಸುತ್ತ ನಡೆದ ಚರ್ಚೆಯ 0.0001%ವೂ ಈ ಬಾಲೆಯ ಉಪವಾಸದ ಸುತ್ತ ಚರ್ಚೆಯಾಗಲಿಲ್ಲ. ಹಾಗಂತ, ಸಲ್ಲೇಖನಾ ತಪ್ಪು ಎಂಬುದು ಇಲ್ಲಿನ ವಾದ ಅಲ್ಲ. ಅದೊಂದು ಧಾರ್ಮಿಕ ಕ್ರಿಯೆ. ಆ ಕ್ರಿಯೆಯನ್ನು ನಡೆಸುವವರಿಗೆ ಅವರದ್ದೇ ಆದ ಸಮರ್ಥನೆಗಳಿವೆ. 2 ಸಾವಿರ ವರ್ಷಗಳಿಗಿಂತ ಹಳೆಯದಾದ ಇತಿಹಾಸವೊಂದು ಸಲ್ಲೇಖನಾ ವ್ರತಕ್ಕಿದೆ ಎಂದು ಹೇಳಲಾಗುತ್ತದೆ. ಹಾಗಂತ, ಸಲ್ಲೇಖನದ ಕುರಿತಂತೆ ಮೌನವಾಗಿರಬೇಕೆಂಬುದು ಇದರ ಅರ್ಥವಲ್ಲವಲ್ಲ. ಷರತ್ತಿಗೊಳಪಟ್ಟ ಬಹುಪತ್ನಿತ್ವಕ್ಕೆ ಇಸ್ಲಾಮ್ ಅನುಮತಿಸಿರುವುದನ್ನು ಪ್ರಶ್ನಿಸಿ ನಡೆಸಲಾದ ಚರ್ಚೆಗಳು ಈ ದೇಶದಲ್ಲಿ ಎಷ್ಟು ನಡೆದಿಲ್ಲ? ಆ ಬಗ್ಗೆ ಎಷ್ಟು ವಿಮರ್ಶಾತ್ಮಕ ಲೇಖನಗಳು ಪ್ರಕಟವಾಗಿಲ್ಲ? ತ್ರಿವಳಿ ತಲಾಕನ್ನು ಪ್ರಶ್ನಿಸುವ ಭರದಲ್ಲಿ ಒಟ್ಟು ತಲಾಕ್ ಪದ್ಧತಿಯನ್ನೇ ಮತ್ತು ಅದರ ನೆಪದಲ್ಲಿ ಇಡೀ ಪವಿತ್ರ ಕುರ್‍ಆನನ್ನೇ ಕಟಕಟೆಯಲ್ಲಿ ನಿಲ್ಲಿಸಲಾದ ಸನ್ನಿವೇಶಗಳು ಎಷ್ಟು ಬಾರಿ ನಡೆದಿಲ್ಲ? ಅದಾನ್‍ನ ಬಗ್ಗೆ ವಾರಗಟ್ಟಲೆ ಚರ್ಚೆ ನಡೆದಿರುವುದು ಇದೇ ದೇಶದಲ್ಲಿ. ಬುರ್ಖಾದ ಬಗ್ಗೆ ಚರ್ಚೆ ಇನ್ನೂ ಮುಕ್ತಾಯವನ್ನು ಕಂಡಿಲ್ಲ. ಮುಸ್ಲಿಮರ ಆಹಾರ, ಆರಾಧನೆ, ಉಡುಪು, ಧರ್ಮಗ್ರಂಥ.. ಎಲ್ಲವೂ ಚರ್ಚಾರ್ಹ ಎನಿಸುವುದು ಮತ್ತು ಸಲ್ಲೇಖನಾ ವ್ರತ, ವೃಂದಾವನದ ವಿಧವೆಯರು ಇತ್ಯಾದಿಗಳು ಗಾಢ ನಿರ್ಲP್ಷÀ್ಯಕ್ಕೆ ಒಳಗಾಗುವುದೆಲ್ಲ ಯಾಕೆ? ಹುಟ್ಟು ಮತ್ತು ಹುಟ್ಟಿನ ಉದ್ದೇಶ; ಸಾವು ಮತ್ತು ಸಾವಿನ ಬಳಿಕದ ಬದುಕಿನ ಬಗ್ಗೆ ವಿವಿಧ ಧರ್ಮಗಳಲ್ಲಿ ಇರುವ ವೈವಿಧ್ಯಮಯ ಪರಿಕಲ್ಪನೆಗಳ ಕುರಿತಂತೆ ಬೆಳಕು ಚೆಲ್ಲುವುದಕ್ಕೆ ಯಾರೂ ಸಲ್ಲೇಖನಾ ವ್ರತವನ್ನು ನೆಪವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಈವರೆಗೂ ನಡೆಸಿಲ್ಲ. ದೇಹವನ್ನು ದಂಡಿಸುವ ಕ್ರಮ ಬಹುತೇಕ ಎಲ್ಲ ಧರ್ಮಗಳಲ್ಲೂ ಇದೆ. ಆದರೆ ದೇಹವನ್ನು ದಂಡಿಸುತ್ತಾ, ಸಾಯಿಸುವ ವಿಧಾನವಿರುವುದು ಜೈನ ಧರ್ಮದಲ್ಲಿ ಮಾತ್ರ. ಅದರಲ್ಲೂ ಕಾಯಿಲೆಪೀಡಿತರು ಮತ್ತು ವಯೋವೃದ್ಧರೇ ಈ ಕ್ರಮಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಆದರೆ ಆಂಧ್ರಪ್ರದೇಶದ ಆರಾಧನಾ ಇದಕ್ಕೆ ಅಪವಾದವಾಗಿ ನಿಲ್ಲುತ್ತಾಳೆ. ವಿವಿಧ ಧರ್ಮಗಳಲ್ಲಿರುವ ಮೋಕ್ಷದ ಪರಿಕಲ್ಪನೆಯ ಸುತ್ತ ಗಂಭೀರ ಚರ್ಚೆಯೊಂದಕ್ಕೆ ಅಡಿಪಾಯ ಹಾಕಬೇಕಾದ ಸಲ್ಲೇಖನಾ ವ್ರತವು ಯಾವ ಸಂಚಲನವನ್ನೂ ಸೃಷ್ಟಿಸದೇ ತಣ್ಣಗಿರುವುದು ಆಶ್ಚರ್ಯವನ್ನು ಹುಟ್ಟಿಸುತ್ತದೆ. ನಿಜಕ್ಕೂ ಮೋಕ್ಷ ಅಂದರೆ ಏನು, ಅದನ್ನು ಗಳಿಸಿಕೊಳ್ಳುವ ವಿಧಾನ ಹೇಗೆ, ದೇಹವನ್ನು ದಂಡಿಸುವುದು ಮೋಕ್ಷ ಹೊಂದುವ ಸರಿಯಾದ ವಿಧಾನವೇ? ಕೆಟ್ಟ ಕರ್ಮಗಳಿಂದ ಆತ್ಮವನ್ನು ಶುದ್ಧಗೊಳಿಸುವುದಕ್ಕೆ ಸಲ್ಲೇಖನಾ ವ್ರತವೊಂದೇ ಪರಿಹಾರವೇ? ಪುನರ್‍ಜನ್ಮದ ಸರಣಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹೀಗೆ ಮಾಡಬೇಕೇ?
ಮಹಾರಾಜ ಶ್ರೇಯಸಾಗರ್ ಅವರ ಸಲ್ಲೇಖನಾ ವ್ರತವು ನನ್ನನ್ನು ಇಂಥದ್ದೊಂದು  ಜಿಜ್ಞಾಸೆಗೆ ಪ್ರೇರೇಪಿಸಿತು.

Thursday, March 1, 2018

ಅದು ಅನುಯಾಯಿಯ ತಪ್ಪೆಂದಾದರೆ ಇದೇಕೆ ಸಿದ್ಧಾಂತದ ತಪ್ಪಾಗಬೇಕು?

      ಪವಿತ್ರ ಕುರ್‍ಆನಿನ ಬಹುತೇಕ ಕೊನೆಯ ಭಾಗದಲ್ಲಿ ಒಂದು ಅಧ್ಯಾಯವಿದೆ. ಅದು ಗುರುತಿಸಿಕೊಳ್ಳುವುದು ಅಲ್ ಕಾಫಿರೂನ್ ಎಂಬ ಹೆಸರಲ್ಲಿ. ಪ್ರವಾದಿ ಮುಹಮ್ಮದರು(ಸ) ಆ ವಚನವನ್ನು ತನ್ನ ಸಮಾಜದೊಂದಿಗೆ ಹಂಚಿಕೊಳ್ಳುತ್ತಾರೆ. ಅದನ್ನು ಹಂಚಿಕೊಳ್ಳು ವುದಕ್ಕೆ ಒಂದು ಕಾರಣವೂ ಇದೆ. ಅವರು ಏಕಾಏಕಿ ಆ ವಚನವನ್ನು ಜನರ ಮುಂದಿಡಲಿಲ್ಲ. ಅದಕ್ಕಿಂತ ಮೊದಲು ಅನೇಕಾರು ಬಾರಿ ಅವರು ಮತ್ತು ಅವರ ಸಮಾಜ ಮುಖಾಮುಖಿಯಾಗಿದೆ. ಪರಸ್ಪರ ಮಾತುಕತೆಗಳು ನಡೆದಿವೆ. ಆ ಎಲ್ಲ ಸಂದರ್ಭಗಳಲ್ಲಿ ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಆ ಜನರ ಮುಂದಿಟ್ಟಿದ್ದಾರೆ. ಚರ್ಚೆ-ಸಂವಾದ, ಸ್ವೀಕಾರ-ತಿರಸ್ಕಾರ ಎಲ್ಲವೂ ನಡೆಯುತ್ತಿದ್ದ ಸನ್ನಿವೇಶ. ಪ್ರವಾದಿ ಮುಹಮ್ಮದ್ ಆ ಸಮಾಜಕ್ಕೆ ಅಪರಿಚಿತ ಆಗಿರಲಿಲ್ಲ. ತನ್ನ ವಿಚಾರಧಾರೆಯ ಕಾರಣಕ್ಕಾಗಿ ಅದಾಗಲೇ ವಿರೋಧಿಗಳನ್ನೂ ಅನುಯಾಯಿಗಳನ್ನೂ ಅವರು ಗಿಟ್ಟಿಸಿಕೊಂಡಿದ್ದರು. ಇಂಥ ಸನ್ನಿವೇಶದಲ್ಲಿ ಅವರು ಮೇಲೆ ಉಲ್ಲೇಖಿಸಿದ ವಚನವನ್ನು ಹಂಚಿಕೊಳ್ಳುತ್ತಾರೆ. ಅದು ಹೀಗಿದೆ:
ಓ ನಿಷೇಧಿಸುವವರೇ,
ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ. ನೀವು ಆರಾಧಿಸಿದವುಗಳ ಆರಾಧನೆಯನ್ನು ನಾನೂ ಮಾಡುವವನಲ್ಲ. ನಾನು ಆರಾಧಿಸುವವನನ್ನು ನೀವೂ ಆರಾಧಿಸುವವರಲ್ಲ. ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ. (109: 1-6)
ಇಲ್ಲಿ ಇನ್ನೊಂದು ವಚನವನ್ನೂ ಉಲ್ಲೇಖಿಸಬಹುದು. ಅದು ಪವಿತ್ರ ಕುರ್‍ಆನಿನ ಆರಂಭದ ಭಾಗದಲ್ಲಿದೆ. ಈ ವಚನ ಇರುವ ಅಧ್ಯಾಯವು ಅಲ್ ಬಕರ ಎಂಬ ಹೆಸರಲ್ಲಿ ಗುರುತಿಸಿಕೊಂಡಿದೆ. ಅದು ಹೀಗಿದೆ:
ಧರ್ಮದಲ್ಲಿ ಬಲಾತ್ಕಾರವಿಲ್ಲ. (2:256)
      ಅಲ್ ಕಾಫಿರೂನ್ ಮತ್ತು ಅಲ್‍ಬಕರ ಅಧ್ಯಾಯಗಳ ಈ ವಚನಗಳನ್ನು ನಿಮ್ಮ ಎದುರು ಹರಡಿಕೊಂಡು ಒಮ್ಮೆ ಆಲೋಚಿಸಿ. ಏನನಿಸುತ್ತದೆ? ಮಾನವನ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಯ್ಕೆ ಸ್ವಾತಂತ್ರ್ಯವನ್ನು ಇಷ್ಟೊಂದು ಚೆನ್ನಾಗಿ ಇನ್ನಾವ ಸಿದ್ಧಾಂತವೂ ಹೇಳಿರಲಾರದೇನೋ ಎಂದು ಅಂದುಕೊಳ್ಳುವಷ್ಟು ಈ ವಚನಗಳು ಚೇತೋಹಾರಿಯಾಗಿವೆ. ‘ನನ್ನ ಧರ್ಮ ನನಗೆ ಮತ್ತು ನಿಮ್ಮ ಧರ್ಮ ನಿಮಗೆ’ ಎಂದು ಮಾತ್ರವಲ್ಲ, ‘ಈ ವಿಷಯದಲ್ಲಿ ಬಲವಂತವಿಲ್ಲ’ ಎಂಬ ತಾಕೀತನ್ನೂ ಈ ವಚನಗಳು ಕೊಡುತ್ತವೆ. ಈ ವಚನಗಳ ಆಧಾರದಲ್ಲಿ ಒಂದಷ್ಟು ವಿಸ್ತಾರವಾಗಿ ಆಲೋಚಿಸುವುದಾದರೆ, ‘ನಾನು ತಿನ್ನುವವುಗಳನ್ನು ನೀವು ತಿನ್ನಬೇಕೆಂದಿಲ್ಲ, ನಾನು ಆಡುವ ಭಾಷೆಯನ್ನು ನೀವು ಆಡಬೇಕೆಂದಿಲ್ಲ, ನನ್ನ ವಿಚಾರಧಾರೆಯಂತೆ ನಿಮ್ಮ ವಿಚಾರಧಾರೆ ಇರಬೇಕೆಂದಿಲ್ಲ, ನನ್ನ ನಿಲುವಿನಂತೆ ನಿಮ್ಮ ನಿಲುವು ಇರಬೇಕೆಂದಿಲ್ಲ, ನನ್ನ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ನಿಲುವುಗಳಂತೆ ನಿಮ್ಮದು ಇರಬೇಕೆಂದಿಲ್ಲ..’ ಇತ್ಯಾದಿಗಳಾಗಿಯೂ ಮುಂದುವರಿಸಬಹುದು. ಇವತ್ತಿನ ಜಗತ್ತಿನಲ್ಲಿ ಈ ಬಗೆಯ ಆಲೋಚನೆಗಳನ್ನು ಪ್ರಗತಿಪರ ಅಥವಾ ಸೆಕ್ಯುಲರ್ ಆಲೋಚನೆಗಳಾಗಿ ಗುರುತಿಸಲಾಗುತ್ತದೆ. ಪ್ರಜಾತಂತ್ರದ ಮೂಲಗುಣವಾಗಿ ಇವನ್ನು ಪರಿಗಣಿಸಲಾಗುತ್ತದೆ. ಅದೇ ವೇಳೆ ಪವಿತ್ರ ಕುರ್‍ಆನನ್ನು ಈ ಗುಣಗಳ ವೈರಿಯೆಂಬಂತೆ ಅನೇಕ ಬಾರಿ ಅನೇಕರು ವ್ಯಾಖ್ಯಾನಿಸಿದ್ದೂ ಇದೆ. ಇದಕ್ಕಿರುವ ಎರಡು ಕಾರಣಗಳಲ್ಲಿ ಒಂದು-
ಅದರ ಅನುಯಾಯಿಗಳೆಂದು ಗುರುತಿಸಿಕೊಂಡವರ ತಪ್ಪುಗಳು.
ಇನ್ನೊಂದು- ಕುರ್‍ಆನನ್ನು ಅತೀವ ಪೂರ್ವಗ್ರಹದಿಂದ ಓದಿರುವುದು.
    ಪವಿತ್ರ ಕುರ್‍ಆನ್‍ನ ಸೆಕ್ಯುಲರ್ ಗುಣಕ್ಕೆ ಆಧಾರವಾಗಿ ಇನ್ನೊಂದು ವಚನವನ್ನೂ ಉಲ್ಲೇಖಿಸಬಹುದು. ಅದು ಹೀಗಿದೆ:
‘ಓ ಜನರೇ, ನಿಮ್ಮನ್ನು ಓರ್ವ ಸ್ತ್ರೀ ಮತ್ತು ಪುರುಷನಿಂದ ಸೃಷ್ಟಿಸಲಾಗಿದೆ.’ (49:13)
     ಸೆಕ್ಯುಲರ್ ಪ್ರಜಾತಂತ್ರದ ಅತಿದೊಡ್ಡ ಪ್ರತಿಪಾದನೆ ಏನೆಂದರೆ, ಸರ್ವರನ್ನೂ ಸಮಾನವಾಗಿ ಕಾಣಬೇಕು ಎನ್ನುವುದು. ಶ್ರೀಮಂತ, ಬಡವ; ಮೇಲು ಜಾತಿ-ಕೀಳು ಜಾತಿ; ಶ್ರೇಷ್ಠ ಧರ್ಮ-ಕನಿಷ್ಠ ಧರ್ಮ; ಹೆಣ್ಣು ಶ್ರೇಷ್ಠ-ಗಂಡು ಕನಿಷ್ಠ, ಮಾಲಿಕ-ಗುಲಾಮ.. ಈ ಬಗೆಯ ವಿಭಜನೆಗಳಿಲ್ಲದೆಯೇ ಸರ್ವರನ್ನೂ ಏಕ ಮಾನದಂಡದಲ್ಲಿ ಅಳೆಯಬೇಕು ಅನ್ನುವುದು. ದುರಂತ ಏನೆಂದರೆ, ಸೆಕ್ಯುಲರ್ ಪ್ರಜಾತಂತ್ರಕ್ಕೆ ಅತ್ಯುತ್ತಮ ಮಾದರಿ ಎಂದು ಹೇಳಲಾಗುವ ರಾಷ್ಟ್ರಗಳಲ್ಲೂ ಈ ಬಗೆಯ ವಾತಾವರಣವನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಅಮೇರಿಕವೂ ಇದರಲ್ಲಿ ಒಂದು. ಭಾರತವೂ ಒಂದು. ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಎಲ್ಲ ಮಾನವರ ಡಿಎನ್‍ಎಯಲ್ಲಿ ಶೇ. 98ರಷ್ಟು ಅಂಶಗಳೂ ಸಮಾನ ವಾಗಿವೆ. ಬ್ರಾಹ್ಮಣ ಮತ್ತು ಬಿಲ್ಲವ, ಕರಿಯ ಮತ್ತು ಬಿಳಿಯ, ಆಫ್ರಿಕದವಳು ಮತ್ತು ಜಪಾನಿನವಳು, ಉಗಾಂಡದವರು ಮತ್ತು ಮ್ಯಾನ್ಮಾರ್‍ನವರು.. ಇವರೆಲ್ಲರ ಭಾಷೆ, ಭಾವನೆ, ಸಂಸ್ಕೃತಿ, ಪರಂಪರೆ, ಬಣ್ಣ, ಆಕಾರ, ಗಾತ್ರ.. ಇತ್ಯಾದಿಗಳಲ್ಲೆಲ್ಲ ಬಾಹ್ಯನೋಟಕ್ಕೆ ವ್ಯತ್ಯಾಸಗಳಿರಬಹುದಾದರೂ ಆಂತರಿಕವಾಗಿ ಎಲ್ಲರೂ ಸಮಾನ ಡಿಎನ್‍ಎ ಅಂಶಗಳನ್ನು ಹೊಂದಿದವರಾಗಿದ್ದಾರೆ. ಅವರ ನಡುವೆ ಅಂತರಗಳಿಲ್ಲ. ಭೇದ-ಭಾವಗಳಿಲ್ಲ. ಉದ್ಯೋಗ, ಅಭಿರುಚಿ, ಆರ್ಥಿಕ ಬಲಗಳಲ್ಲಿ ಇರಬಹುದಾದ ವ್ಯತ್ಯಾಸಗಳು ಒಬ್ಬನನ್ನು ಶ್ರೇಷ್ಠ ಮತ್ತು ಇನ್ನೋರ್ವರನ್ನು ಕನಿಷ್ಠ ಮಾಡುವುದೂ ಇಲ್ಲ. ಸೆಕ್ಯುಲರ್ ಪ್ರಜಾತಂತ್ರ ಇವನ್ನೆಲ್ಲ ತನ್ನ ಹೆಚ್ಚುಗಾರಿಕೆಯಾಗಿ ಮತ್ತು ತನ್ನ ಅಸ್ತಿತ್ವಕ್ಕೆ ಸಕಾರಣವಾಗಿ ಮುಂದಿಡುತ್ತಾ ಬಂದಿದೆ. ಹಾಗಂತ, ಈ ಇವನ್ನೆಲ್ಲ ಇಷ್ಟೇ ಚೆನ್ನಾಗಿ ಪ್ರಯೋಗಕ್ಕೆ ತರಲು ಈ ಪ್ರಜಾ ತಂತ್ರ ಎಲ್ಲೂ ಯಶಸ್ವಿಯಾಗಿಲ್ಲ ಎಂಬುದೂ ಅಷ್ಟೇ ಸತ್ಯ. ವಿಷಾದ ಏನೆಂದರೆ, ಪವಿತ್ರ ಕುರ್‍ಆನಿಗೆ ಸಂಬಂಧಿಸಿ ಈ ಬಗೆಯ ಅವಲೋಕನ ನಡೆಯುವುದು ತೀರಾ ಕಡಿಮೆ. ಪ್ರವಾದಿ ಮುಹಮ್ಮದ್(ಸ) ಪವಿತ್ರ ಕುರ್‍ಆನಿನ ಪಡಿಯಚ್ಚು. ಅವರಷ್ಟು ಚೆನ್ನಾಗಿ ಪವಿತ್ರ ಕುರ್‍ಆನನ್ನು ಪ್ರತಿನಿಧಿಸಿದವರು ಯಾರೂ ಇಲ್ಲ ಅನ್ನುವಷ್ಟು ಅವರು ಕುರ್‍ಆನ್‍ನ ಮಾದರಿ. ಅವರು ಈ ಕುರ್‍ಆನ್‍ನ ಆಧಾರದಲ್ಲಿ ಒಂದು ಸಾಮಾಜಿಕ ವಾತಾವರಣವನ್ನು ಬೆಳೆಸಿದರು. ಒಂದು ಸಮ ಸಮಾಜವನ್ನು ಕಟ್ಟಿದರು. ಈ 21ನೇ ಶತಮಾನಕ್ಕೆ ಹೋಲಿಸಿದರೆ ಅವರು ಬದುಕಿದ 6-7ನೇ ಶತ ಮಾನ ವೈಜ್ಞಾನಿಕವಾಗಿ ಇನ್ನೂ ಮಗುವಷ್ಟೇ ಆಗಿತ್ತು. ತಾಂತ್ರಿಕ ವಾಗಿಯೂ ಮಗುವೇ. ಅಂದು ಮಂಗಳ ಗ್ರಹಕ್ಕೆ ಯಾರೂ ಹೋಗಿರಲಿಲ್ಲ. ಮೊಬೈಲ್ ತಂತ್ರಜ್ಞಾನದ ಆವಿಷ್ಕಾರ ಆಗಿರಲಿಲ್ಲ. ವಾಹನಗಳ ಕಲ್ಪನೆ ಇರಲಿಲ್ಲ. ಈ ಜಗತ್ತನ್ನೇ ಹಳ್ಳಿಯನ್ನಾಗಿಸಿ ಬಿಟ್ಟ ಇವತ್ತಿನ ಬಹುತೇಕ ಯಾವ ತಾಂತ್ರಿಕ ಕೌಶಲ್ಯಗಳೂ ಲಭ್ಯವಿಲ್ಲದ ಕಾಲದಲ್ಲಿ ಅವರು ಬದುಕಿ ಮರೆಯಾದರು. ಆದ್ದ ರಿಂದ ಆಫ್ರಿಕಾದ ಕರಿಯ ವ್ಯಕ್ತಿಯನ್ನು ಉನ್ನತ ವಂಶದ ಅರಬ್ ವ್ಯಕ್ತಿ ತಾರತಮ್ಯದಿಂದ ನೋಡುವುದು ಮಾನವ ಹಕ್ಕು ಉಲ್ಲಂಘನೆಯ ಪಟ್ಟಿಯಲ್ಲಿ ಸೇರುವುದಕ್ಕೆ ಅಂದಿನ ವಾತಾವರಣದಲ್ಲಿ ಸಾಧ್ಯವೇ ಇರಲಿಲ್ಲ. ಶತಮಾನಗಳಿಂದ ದಲಿತರು ಹೇಗೆ ತಮ್ಮ ಮೇಲಿನ ದೌರ್ಜನ್ಯವನ್ನು ಸಹಜವಾಗಿ ಸ್ವೀಕರಿಸಿ ಒಪ್ಪಿಕೊಂಡು ಬಂದರೋ ಅದೇ ಮಾನಸಿಕತೆಯೊಂದು ಅರಬ್ ರಾಷ್ಟ್ರಗಳಲ್ಲೂ ಇರುವುದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವೂ ಇಲ್ಲ. ಬಲಾಢ್ಯನೋರ್ವ ದುರ್ಬಲನ ಮೇಲೆ ಹಕ್ಕು ಸ್ಥಾಪಿಸುವುದು ಅನಾದಿ ಕಾಲದಿಂದಲೂ ಪರಂಪರೆ ಯಾಗಿಯೇ ಬೆಳೆದು ಬಂದಿದೆ. ತಪ್ಪು ಎಂದು ಅಂದುಕೊಳ್ಳಲಾಗದಷ್ಟು ಅದು ಜನಜೀವನದಲ್ಲಿ ಹಾಸುಹೊಕ್ಕಾಗಿಯೂ ಇದೆ. ಇಂಥ ಸ್ಥಿತಿಯಲ್ಲಿ ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಜನರ ಮುಂದಿಡುತ್ತಾರೆ. ‘ಮಾನವರೆಲ್ಲ ಸಮಾನರು’ ಎಂದು ಅವರು ಘೋಷಿಸಿದ್ದು ಮಾನವರು ಎಲ್ಲೆಡೆ ಅಸಮಾನರಾಗಿ ಬದುಕುತ್ತಿದ್ದ ಸಂದರ್ಭದಲ್ಲಿ. ‘ನನ್ನ ಧರ್ಮ ನನಗೆ ನಿಮ್ಮ ಧರ್ಮ ನಿಮಗೆ’ ಎಂದು ಅವರು ಘೋಷಿಸಿದ್ದು ‘ನನ್ನ ಧರ್ಮವೇ ನಿನ್ನ ಧರ್ಮವಾಗಬೇಕು’ ಎಂದು ಬಲಾಢ್ಯರು ಹೇರುತ್ತಿದ್ದ ಸಮಯದಲ್ಲಿ. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ಎಂದವರು ಹೇಳಿದ್ದು ಬಲವಂತದಿಂದ ತಮ್ಮ ಧರ್ಮವನ್ನು ಇತರರ ಮೇಲೆ ಹೇರುತ್ತಿದ್ದ ಸನ್ನಿವೇಶದಲ್ಲಿ. ಸೆಕ್ಯುಲರ್ ಪ್ರಜಾತಂತ್ರದ ಅತಿ ಅಮೂಲ್ಯ ಅಡಿಪಾಯಗಳಾದ ಈ ಮೂರು ನಿಯಮಗಳನ್ನು ಪ್ರವಾದಿ ಮುಹಮ್ಮದರು(ಸ) ತನ್ನ ಆಡಳಿತದ ನಿಯಮಗಳಾಗಿ ಅಳವಡಿಸಿಕೊಂಡರು. ಮಾತ್ರವಲ್ಲ, ಅದನ್ನು ಎಷ್ಟು ನಾಜೂಕಾಗಿ ಜಾರಿಗೆ ತಂದರು ಎಂದರೆ, ಗುಲಾಮನಾಗಿ ಮಾರುಕಟ್ಟೆಯಲ್ಲಿ ಬಿಕರಿಯಾಗಿದ್ದ ಕರಿಯ ವ್ಯಕ್ತಿಯೂ ಅತ್ಯಂತ ಗೌರವಾರ್ಹ ವ್ಯಕ್ತಿಯಾಗಿ ಗುರುತಿಸಿಕೊಂಡರು. ಈ ಕುರಿತಂತೆ ಉದಾಹರಣೆಗಳು ನೂರಾರು ಇವೆ. ಹಾಗಂತ, ಪ್ರವಾದಿ ಮುಹಮ್ಮದರ ಅನುಯಾಯಿ ಎಂದು ಗುರುತಿಸಿಕೊಂಡವರೆಲ್ಲ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಇದೇ ಸೆಕ್ಯುಲರ್ ಗುಣವನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ ಎಂದಲ್ಲ. ಕೆಲವೊಮ್ಮೆ ಅವರು ಈ ಸೆಕ್ಯುಲರ್ ಸಿದ್ಧಾಂತದ ತಪ್ಪು ಮಾದರಿಯಾಗಿ ಬಿಡುವುದಿದೆ. ಅತಿ ಕೆಟ್ಟದಾಗಿ ಅದನ್ನು ಪ್ರತಿನಿಧಿಸುವುದೂ ಇದೆ. ಹಾಗಂತ, ಇದು ಪ್ರವಾದಿ ಮುಹಮ್ಮದರ ಅನುಯಾಯಿಗಳಲ್ಲಿ ಮಾತ್ರ ಕಂಡುಬರುವ ಕೊರತೆಗಳಲ್ಲವಲ್ಲ. ಮಾರ್ಕ್ಸ್  ಸಿದ್ಧಾಂತವನ್ನು ಅಪ್ಪಿ ಒಪ್ಪಿಕೊಂಡವರಲ್ಲೂ ಈ ಬಗೆಯ ವೈಫಲ್ಯಗಳಿವೆ. ಬುದ್ಧನನ್ನು ಪ್ರೀತಿಸುವವರಲ್ಲೂ ಮಹಾವೀರನನ್ನು ಅನುಸರಿಸುವವರಲ್ಲೂ ವೈದಿಕ ವಿಚಾರಧಾರೆಯ ಅನುಯಾಯಿಗಳಲ್ಲೂ ಈ ಬಗೆಯ ತಪ್ಪುಗಳಿವೆ. ಹೆಚ್ಚೇಕೆ ಭಾರತೀಯ ಸಂವಿಧಾನವನ್ನು ಅನುಸರಿಸುವುದಾಗಿ ಶಾಸನ ಸಭೆಗಳಲ್ಲಿ ಪ್ರತಿಜ್ಞೆ ಮಾಡುವವರೇ ಈ ಸಂವಿಧಾನದ ಎದೆಗೆ ತುಳಿಯುವವರಂತೆ ಮಾತಾಡುತ್ತಾರೆ. ಸಂವಿಧಾನದ ಆಶಯಗಳಿಗೆ ಸಂಪೂರ್ಣ ತದ್ವಿ ರುದ್ಧವಾಗಿ ಬದುಕುತ್ತಾರೆ. ಆದರೆ ಈ ಎಲ್ಲ ಸಂದರ್ಭಗಳಲ್ಲಿ ನಡೆಯುವ ಚರ್ಚೆಗಳು ವೈಯಕ್ತಿಕವಾಗಿರುತ್ತವೆಯೇ ಹೊರತು ಸೈದ್ಧಾಂತಿಕವಾಗಿ ಅಲ್ಲ. ಭಾರತೀಯ ಸಂವಿಧಾನವನ್ನು ಒಪ್ಪಿಕೊಂಡು ಬದುಕುತ್ತಿರುವ ವ್ಯಕ್ತಿ ಅದಕ್ಕೆ ಅಪಚಾರವೆಂಬಂತೆ ವರ್ತಿಸಿದಾಗ ನಾವು ಸಂವಿಧಾವನ್ನು ಕಟಕಟೆಯಲ್ಲಿ ನಿಲ್ಲಿಸುವುದೇ ಇಲ್ಲ. ಬುದ್ಧನ ಅನುಯಾಯಿಗಳು ಬುದ್ಧಿಸಂಗೆ ವಿರುದ್ಧವಾಗಿ ನಡಕೊಂಡಾಗ ಬುದ್ಧಿಸಮ್ಮೇ ಇದಕ್ಕೆ ಕಾರಣ ಎಂದು ನಾವು ಹೇಳುವುದಿಲ್ಲ. ಮಾವೋ ಮತ್ತು ಲೆನಿನ್ ಅಥವಾ ಇನ್ನಾವುದೇ ಸಿದ್ಧಾಂತದ ಅನುಯಾಯಿಗಳ ಅಪದ್ಧಗಳನ್ನು ಅವರವರ ವೈಯಕ್ತಿಕ ಅಕೌಂಟಿಗೆ ಹಾಕುತ್ತೇವೆಯೇ ಹೊರತು ಮಾವೋ, ಲೆನಿನ್‍ರ ಅಕೌಂಟಿಗಲ್ಲ. ನಿಜವಾಗಿ, ಸೆಕ್ಯುಲರ್ ಪ್ರಜಾತಂತ್ರದ ಗುಣವೇ ಇದು. ದುರಂತ ಏನೆಂದರೆ, ಪ್ರವಾದಿ ಮುಹಮ್ಮದ್ ಅನುಯಾಯಿಗಳು ಇಂಥದ್ದೇ  ತಪ್ಪುಗಳನ್ನು ಮಾಡಿದರೆ ಅದನ್ನು ಆ ಅನುಯಾಯಿಗಳ ಖಾತೆಯ ಬದಲು ನೇರ ಪ್ರವಾದಿ ಮತ್ತು ಕುರ್‍ಆನ್‍ನ ಖಾತೆಗೆ ಸೇರಿಸಿ ಬಿಡಲಾಗುತ್ತದೆ. ಆ ಸಮಯದಲ್ಲಿ ಪವಿತ್ರ ಕುರ್‍ಆನಿನ ಯಾವ ಸೆಕ್ಯುಲರ್ ವಚನಗಳೂ ಮತ್ತು ಪ್ರವಾದಿ ಮುಹಮ್ಮದರ ಯಾವ ಸಮಾನತೆಯ ಪಾಠಗಳೂ ಉಲ್ಲೇಖಕ್ಕೆ ಒಳಗಾಗುವುದೇ ಇಲ್ಲ. ಲೆನಿನ್ ಅನುಯಾಯಿ ತಪ್ಪು ಮಾಡಬಲ್ಲನಾದರೆ ಪ್ರವಾದಿ ಮುಹಮ್ಮದ್‍ರ ಅನುಯಾಯಿ ಯಾಕೆ ತಪ್ಪು ಮಾಡಲಾರ ಎಂಬ ಪ್ರಶ್ನೆ ಉದ್ಭವವಾಗುವುದೇ ಇಲ್ಲ. ಬುದ್ಧನ ಅನುಯಾಯಿ, ಅಂಬೇಡ್ಕರ್ ಸಂವಿಧಾನದ ಅನುಯಾಯಿ, ವೇದೋಪನಿಷತ್ತುಗಳ ಅನುಯಾಯಿ, ಮಾರ್ಕ್ಸ್ ನ ಅನುಯಾಯಿ, ಬೈಬಲ್‍ನ ಅನುಯಾಯಿ, ಹಳೆ ಒಡಂಬಡಿಕೆಯ ಅನುಯಾಯಿ.. ಎಲ್ಲರೂ ತಪ್ಪು ಮಾಡಬಹುದು ಮತ್ತು ಅದರ ದೋಷ ಅದನ್ನು ಮಾಡಿದವರ ಖಾತೆಗೇ ಸೇರ್ಪಡೆಗೊಳ್ಳುತ್ತದೆ ಎಂದಾದರೆ ಪವಿತ್ರ ಕುರ್‍ಆನಿನ ಅನುಯಾಯಿ ಮಾತ್ರ ತಪ್ಪು ಮಾಡಬಾರದು ಎಂದೇಕೆ ಬಯಸಬೇಕು? ಅವರು ಹಾಗೆ ಮಾಡಿದರೆ ಅದರ ದೋಷ ಪವಿತ್ರ ಕುರ್‍ಆನಿನ ಖಾತೆಗೇ ಸೇರ್ಪಡೆಗೊಳ್ಳಬೇಕು ಎಂಬ ರೀತಿಯಲ್ಲೇಕೆ ಪ್ರತಿಕ್ರಿಯೆ ವ್ಯಕ್ತವಾಗಬೇಕು? ಇದು ಮುಗ್ಧತನವೋ ಜಾಣತನವೋ?
      ಉತ್ತರ ಎಲ್ಲರಿಗೂ ಗೊತ್ತಿದೆ.

Tuesday, February 13, 2018

ಅವರ ಅಗತ್ಯ ಊಟ-ತಿಂಡಿಗಳಷ್ಟೇ ಅಲ್ಲವಲ್ಲ..

     " 70 ವರ್ಷದ ಸೂರ್ಯ ನಾರಾಯಣ್‍ರು ಮರು ಮದುವೆಯಾಗಲು ಬಯಸಿದರು. ಪತ್ನಿ ಆ ಮೊದಲೇ ನಿಧನರಾಗಿದ್ದರು. ಮಕ್ಕಳಿಗೂ ಮದುವೆಯಾಗಿದೆ. ಅವರಿಗೆ ಮೊಮ್ಮಕ್ಕಳೂ ಆಗಿವೆ. ದೂರಸಂಪರ್ಕ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ನಾರಾಯಣ್‍ರನ್ನು ಒಂಟಿ ಬದುಕು ತೀವ್ರವಾಗಿ ಕಾಡುತ್ತಿತ್ತು. ಎಲ್ಲರೂ ಅವರವರ ಬದುಕನ್ನು ಬದುಕುತ್ತಿರುವಾಗ ತಾನು ಒಂಟಿಯಾಗಿ ಎಷ್ಟರ ವರೆಗೆ ಇರಬಲ್ಲೆ  ಎಂಬ ಪ್ರಶ್ನೆ ಅವರನ್ನು ಇರಿಯತೊಡಗಿತು. ಒಡನಾಟಕ್ಕೆ ಓರ್ವರು ಬೇಕು ಅಂತ ಅನಿಸಿತು. ಅವರು ತಮ್ಮ ಮನದಿಂಗಿತವನ್ನು ಮಕ್ಕಳ ಮುಂದೆ ಹಂಚಿಕೊಂಡರು. ಆದರೆ ಮಕ್ಕಳು ಆಶ್ಚರ್ಯ ವ್ಯಕ್ತಪಡಿಸಿದರು. ಈ ವಯಸ್ಸಲ್ಲಿ ಮದುವೆಯೇ ಎಂದು ಆಘಾತಗೊಂಡವರಂತೆ ಪ್ರಶ್ನಿಸಿದರು. ಪ್ರಾಯವಾದವರು ಸಾವನ್ನು ನಿರೀಕ್ಷಿಸುತ್ತಾ ಬದುಕುವುದು ಬಿಟ್ಟು ಮದುವೆಯೇಕೆ ಎಂಬ ಧಾಟಿ ಅವರದಾಗಿತ್ತು. ಆದರೆ ಸೂರ್ಯ ನಾರಾಯಣ್‍ರು ಚೆನ್ನೈನಲ್ಲಿರುವ ವಸಂತಂ ಮರುಮದುವೆ ಸೇವಾ ಸಂಸ್ಥೆಯಲ್ಲಿ ತನ್ನ ಹೆಸರು ನೋಂದಾಯಿಸಿದರು. 60 ವರ್ಷದ ಬಾನುಮತಿ ಎಂಬವರನ್ನು ವರಿಸಲು ತೀರ್ಮಾನಿಸಿದರು. ಹರೆಯ ದಾಟಿ ವೃದ್ಧಾಪ್ಯದಲ್ಲಿರುವ ಈ ಇಬ್ಬರ ಮದುವೆ ಚೆನ್ನೈಯಲ್ಲಿ ನಡೆದಾಗ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಹುತೇಕರೂ ಇರಲಿಲ್ಲ. ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳ ಗೈರುಹಾಜರಿಯಿತ್ತು. ಅವರೆಲ್ಲ ಸೂರ್ಯನಾರಾಯಣ್‍ರನ್ನು ಅಪರಾಧಿಯಂತೆ ಕಂಡರು. ಪರಿಸರದ ಮಂದಿಯೂ ಅವರನ್ನು ಸ್ವಾಗತಿಸಲಿಲ್ಲ..
ಹಾಗಂತ, ಜನವರಿ 14ರಂದು ಪ್ರಕಟವಾದ ದಿ ಹಿಂದೂ ಪತ್ರಿಕೆಯಲ್ಲಿ ಝುಬೇದಾ ಹಮೀದ್ ಬರೆದಿದ್ದರು.
      ಸಾಮಾನ್ಯವಾಗಿ, ಮದುವೆ ಎಂಬುದಕ್ಕೆ ಹರೆಯದ ಗಂಡು ಮತ್ತು ಹರೆಯದ ಹೆಣ್ಣು ಜೊತೆಯಾಗುವುದು ಎಂಬರ್ಥವಷ್ಟೇ ಇದೆ ಅಥವಾ ಸಮಾಜ ಮದುವೆಯನ್ನು ಈ ಅರ್ಥಕ್ಕೆ ಸೀಮಿತ ಗೊಳಿಸಿಯೇ ನೋಡುತ್ತಿದೆ. ಮದುವೆಯಾದ ಬಳಿಕ ಪತಿಯನ್ನೋ ಪತ್ನಿಯನ್ನೋ ಕಳಕೊಂಡವರಿಗೆ ಮರು ಮದುವೆಯಾಗಬೇಕಾದ ಅಗತ್ಯವನ್ನು ಹೆಚ್ಚಿನ ಬಾರಿ ಉದಾಸೀನವಾಗಿ ಕಾಣಲಾಗುತ್ತದೆ. ಚಿಕ್ಕ ಮಕ್ಕಳಿರುವ ವಿದುರನೋ ವಿಧವೆಯೋ ಮರು ಮದುವೆಯ ಬಗ್ಗೆ ಆಸಕ್ತಿ ತೋರಿದರೆ ಸಮಾಜ ಒಂದು ಹಂತದ ವರೆಗೆ ಸಹಿಸಿಕೊಳ್ಳಬಹುದು. ಆದರೆ ಮಧ್ಯ ವಯಸ್ಸನ್ನು ದಾಟಿದ ವಿದುರ ಅಥವಾ ವಿಧವೆ ಮರು ಮದುವೆಯ ಬಗ್ಗೆ ಆಲೋಚಿಸು ವುದನ್ನೇ ಸಮಾಜ ತಮಾಷೆಗೆ ಗುರಿಪಡಿಸುವುದಿದೆ. ‘ಹೋಗುವ ಪ್ರಾಯದಲ್ಲಿ ಮದುವೆಯೇಕೆ’ ಎಂಬೊಂದು ವ್ಯಂಗ್ಯ ಪ್ರತಿಕ್ರಿಯೆ ಸಾಮಾನ್ಯವಾಗಿ ಕೇಳಿ ಬರುವುದಿದೆ. ನಿಜವಾಗಿ ವೈಧವ್ಯ ಅಥವಾ ವಿದುರತನವು ಯಾರಾದರೂ ಕೇಳಿ ಪಡಕೊಳ್ಳುವುದಲ್ಲ. ಅದನ್ನು ಯಾರೂ ಬಯಸುವುದೂ ಇಲ್ಲ. ಯಾವುದೋ ಒಂದು ಸನ್ನಿವೇಶದಲ್ಲಿ ಹೆಣ್ಣು ವಿಧವೆಯಾಗುತ್ತಾಳೆ. ಗಂಡು ವಿದುರನಾಗುತ್ತಾನೆ. ಆದರೆ ಬದುಕು ಆ ಬಳಿಕವೂ ಇರುತ್ತದೆ. ಆ ಬದುಕನ್ನು ಒಡನಾಡಿಯಿಲ್ಲದೇ ಕಳೆಯಬೇಕೆಂದು ತೀರ್ಮಾನಿಸುವುದಕ್ಕೆ ಸಮಾಜ ಯಾರು? ಯಾಕೆ ಅವರು ಮರು ಮದುವೆ ಆಗಬಾರದು? ಇಂಥದ್ದೊಂದು  ಪ್ರಶ್ನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ  ರಾಜಾರಾಂ ಮೋಹನ್ ರಾಯ್ ಎತ್ತಿದ್ದರು. ಆಗ ಈ ದೇಶದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿ ಅಷ್ಟು ಕ್ರೂರ ಇತ್ತು. ವಿಧವೆ ಅಪಶಕುನವಾಗಿ ಗುರುತಿಸಿಕೊಂಡಿದ್ದಳು. ಆಕೆಯನ್ನು ಭೇಟಿಯಾದವರು ಆ ದಿನ ಅಪಶಕುನದಲ್ಲೇ ಕಳೆಯುತ್ತಾರೆ ಎಂಬ ಅಭಿಪ್ರಾಯ ಇತ್ತು. ವಿಧವೆ ಅಮಂಗಲೆ, ಮಂಗಳ ಕಾರ್ಯಗಳಲ್ಲಿ ಆಕೆ ಭಾಗವಹಿಸಬಾರದು ಎಂದೆಲ್ಲಾ  ಸಮಾಜ ಕಟ್ಟುಪಾಡುಗಳನ್ನು ವಿಧಿಸಿತ್ತು. ಉತ್ತರ ಪ್ರದೇಶದ ವೃಂದಾವನದಲ್ಲಿ ವಿಧವೆಯರ ದೊಡ್ಡ ಗುಂಪೇ ಇದೆ. 20 ಸಾವಿರಕ್ಕಿಂತಲೂ ಅಧಿಕ ವಿಧವೆಯರು ಅಲ್ಲಿ ಭಿಕ್ಷೆ ಬೇಡುತ್ತಲೋ ಭಜನೆಯಲ್ಲಿ ತೊಡಗಿಕೊಂಡೋ ಸಾವನ್ನು ನಿರೀಕ್ಷಿಸುತ್ತಾ ಬದುಕುತ್ತಿದ್ದಾರೆ.
ಒಂದು ರೀತಿಯಲ್ಲಿ, ಬದುಕಿನ ಸಂಧ್ಯಾಕಾಲವೆಂಬುದು ಅತ್ಯಂತ ಬೆಲೆಯುಳ್ಳದ್ದು. ಆ ವಯಸ್ಸು ಒಡನಾಡಿಯನ್ನು ಬಯಸುತ್ತದೆ. ಹದಿಹರೆಯದಲ್ಲಿರುವ ಹುರುಪು, ಎದೆಗಾರಿಕೆ, ಆರೋಗ್ಯಗಳೆಲ್ಲ ಆ ವಯಸ್ಸಿನಲ್ಲಿ ಮಂದವಾಗಿರುತ್ತದೆ. ಅವಲಂಬನೆಗೆ ಓರ್ವರು ಇರಲೇಬೇಕಾದ ಅಗತ್ಯವೊಂದು ಕಾಣಿಸುವ ಸಂದರ್ಭ ವದು. ಸೂರ್ಯ ನಾರಾಯಣ್‍ರನ್ನು ವರಿಸಲು ಒಪ್ಪಿಕೊಂಡ ಬಾನುಮತಿ ಅವಿವಾಹಿತರು. ಹರೆಯದಲ್ಲಿ ಮದುವೆ ಪ್ರಸ್ತಾಪಗಳು ಬಂದಿದ್ದರೂ ಅವರು ನಿರಾಕರಿಸಿದ್ದರು. ಮದುವೆಯ ಬಗ್ಗೆ ಉಡಾಫೆಯ ಭಾವನೆಯೊಂದು ಅವರಲ್ಲಿತ್ತು. ಮದುವೆ ಬೇಡ ಎಂದು ತೀರ್ಮಾನಿಸುವುದಕ್ಕೆ ಆ ಸಮಯದಲ್ಲಿ ಅವರೊಂದಿಗೆ ವಯಸ್ಸಿತ್ತು. ಉದ್ಯೋಗ ಇತ್ತು. ಯಾರನ್ನೂ ಅವಲಂಬಿಸದೆಯೇ ಬದುಕಬಲ್ಲೆ ಎಂಬ ಧೈರ್ಯ ಇತ್ತು. ಬದುಕಿನ ಅತಿದೊಡ್ಡ ಸಂಪತ್ತು ಏನೆಂದರೆ, ವಯಸ್ಸು ಮತ್ತು ಆರೋಗ್ಯ. ಬಾಲ್ಯ ಕಾಲದಲ್ಲಿ ನಾವು ಇನ್ನೊಬ್ಬರನ್ನು ಅವಲಂಬಿಸಿರುತ್ತೇವೆ. ಸ್ವತಃ ತೀರ್ಮಾನ ಕೈಗೊಳ್ಳುವ ಸಾಮಥ್ರ್ಯ ನಮ್ಮಲ್ಲಿರುವುದಿಲ್ಲ. ನಮಗೆ ಆ ಸ್ವಾತಂತ್ರ್ಯವೂ ಇರುವುದಿಲ್ಲ. ಬಾಲ್ಯವು ಕಳೆದು ಯೌವನಕ್ಕೆ ಪ್ರವೇಶಿಸುವಾಗ ಹಲವು ರೀತಿಯ ಪ್ರಶ್ನೆ ಮತ್ತು ಪ್ರಯೋಗಗಳಿಗೆ ನಮ್ಮನ್ನು ಒಡ್ಡಿಕೊಳ್ಳಲು ಪ್ರಾರಂಭಿಸುತ್ತೇವೆ. ಹಲವು ವಿಧದ ಆಲೋಚನೆಗಳನ್ನು ಮಾಡುತ್ತಾ ಮತ್ತು ಪ್ರಯೋಗಕ್ಕೆ ತರಲು ಭಯಪಡುತ್ತಾ ಒದ್ದಾಡುತ್ತೇವೆ. ವಿದ್ಯಾಭ್ಯಾಸ ಮತ್ತಿತರ ಚಟುವಟಿಕೆ ಗಳೊಂದಿಗೆ ಬದುಕು ಸಾಗುತ್ತದೆ. ಮನೆಯವರನ್ನು ಸಾಕಬೇಕಾದ ಒತ್ತಡ ಇರುವುದಿಲ್ಲ. ಕಲಿಕೆ, ಕ್ರೀಡೆ, ಹರಟೆ ಇತ್ಯಾದಿಗಳೊಂದಿಗೆ ಕಳೆಯುತ್ತಾ ಯೌವನದ ಪ್ರಬುದ್ಧ ಹಂತಕ್ಕೆ ತಲುಪುತ್ತದೆ. ಶಿಕ್ಷಣ ಮುಗಿದು ದುಡಿಮೆ ಪ್ರಾರಂಭವಾಗುತ್ತದೆ. ಈ ಪ್ರಾಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳೇ ಬಹುತೇಕ ಬಾರಿ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಮದುವೆ ಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸುವ ವಯಸ್ಸದು. ಬಾನುಮತಿ ಮದುವೆ ಬೇಡ ಎಂದು ತೀರ್ಮಾನಿಸಿದ್ದು ಈ ವಯಸ್ಸಿನಲ್ಲೇ. ಹಾಗೆ ತೀರ್ಮಾನಿಸಿ ವೃದ್ಧಾಪ್ಯಕ್ಕೆ ತಲುಪಿದ ಬಳಿಕ ಯಾಕೋ ಆ ತೀರ್ಮಾನ ತಪ್ಪು ಎಂದು ಅವರಿಗೆ ಅನಿಸಿತು. ಆರೋಗ್ಯ ಮತ್ತು ವಯಸ್ಸು ಎರಡೂ ಇರುವ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅವೆರಡೂ ಕೈ ತಪ್ಪಿ ಹೋಗುತ್ತಿರುವ ಹಂತದಲ್ಲಿ ಬದಲಿಸುವುದಕ್ಕೆ ಅವರು ಮುಂದಾದರು. ಅದರ ಫಲಿತಾಂಶವೇ ಸೂರ್ಯನಾರಾಯಣ್‍ರನ್ನು ವಿವಾಹವಾದದ್ದು.
     60 ವರ್ಷವನ್ನು ದಾಟಿದ 10 ಕೋಟಿ 38 ಲಕ್ಷ ಮಂದಿ ಈ ದೇಶದಲ್ಲಿದ್ದಾರೆ ಎಂದು 2011ರ ಜನಗಣತಿಯ ವಿವರಗಳು ಸ್ಪಷ್ಟಪಡಿಸುತ್ತವೆ. ವಿಷಾದ ಏನೆಂದರೆ, ಇವರಲ್ಲಿ ಹೆಚ್ಚಿನವರೂ ಒಂಟಿಯಾಗಿದ್ದಾರೆ ಎಂಬುದು. ಒಂದೋ ಅವರು ವಿಚ್ಛೇದಿತರು ಅಥವಾ ಪತ್ನಿಯನ್ನೋ ಪತಿಯನ್ನೋ ಕಳಕೊಂಡವರು. ವೃದ್ಧರು ಎಂಬ ಪಟ್ಟಿಯಲ್ಲಿ ಸುಲಭವಾಗಿ ಸೇರಿಕೊಳ್ಳುವ ಇವರ ಬಗ್ಗೆ ಸಾಮಾಜಿಕ ಮನಸ್ಥಿತಿ ಯಾವ ಬಗೆಯದು ಅನ್ನುವುದಕ್ಕೆ ಸೂರ್ಯ ನಾರಾಯಣ್ ಒಂದು ಉದಾಹರಣೆ ಅಷ್ಟೇ. ಜಂಟಿಯಾಗಿ ಬದುಕುತ್ತಿದ್ದವರು ಒಂದು ದಿನ ಒಂಟಿಯಾಗುವುದೇ ಬಹುದೊಡ್ಡ ಆಘಾತ. ವೃದ್ಧಾಪ್ಯದಲ್ಲಿ ಈ ಆಘಾತದ ಪ್ರಮಾಣ ಇನ್ನೂ ಹೆಚ್ಚು. ಆ ಪ್ರಾಯದಲ್ಲಿ ಮಕ್ಕಳು ದೊಡ್ಡವರಾಗಿರುತ್ತಾರಲ್ಲದೇ ತಮ್ಮದೇ ಗೂಡುಗಳನ್ನು ಕಟ್ಟಿಕೊಂಡಿರುತ್ತಾರೆ. ಪತಿ-ಪತ್ನಿ-ಮಕ್ಕಳು ಎಂದು ಮುಂತಾಗಿ ಅವರು ಹೊಸ ಜಗತ್ತನ್ನು ಪ್ರವೇಶಿಸಿರುತ್ತಾರೆ. ಇಂಥ ಸ್ಥಿತಿಯಲ್ಲಿ ತನ್ನವರು ಯಾರೂ ಇಲ್ಲ ಅನ್ನುವ ಭಾವವೊಂದು ಹಿರಿಯರನ್ನು ನಿಧಾನಕ್ಕೆ ಆವರಿಸಿಕೊಳ್ಳತೊಡಗುತ್ತದೆ. ಸಮಯಕ್ಕೆ ಸರಿಯಾಗಿ ಊಟ-ತಿಂಡಿಯೊಂದೇ ಮನುಷ್ಯರ ಅಗತ್ಯ ಅಲ್ಲವಲ್ಲ. ಅದು ಹೊಟ್ಟೆಯ ಹಸಿವನ್ನಷ್ಟೇ ತಣಿಸುತ್ತದೆ. ಆದರೆ ಮಾನವ ಶರೀರದಲ್ಲಿ ಹೊಟ್ಟೆ ಮಾತ್ರ ಇರುವುದಲ್ಲ. ಭಾವನೆಗಳ ಗುಚ್ಛವೇ ಶರೀರ. ವೃದ್ಧಾಪ್ಯದಲ್ಲಿ ಚಟುವಟಿಕೆಗಳು ಕಡಿಮೆಯಾಗುತ್ತದೆ. ಯೌವನದಲ್ಲಾದರೆ ಕಚೇರಿ, ಮನೆ, ಮಡದಿ, ಮಕ್ಕಳು ಎಂದೆಲ್ಲಾ ಕಳೆದು ಹೋಗುತ್ತದಲ್ಲದೇ ಕೆಲವೊಮ್ಮೆ ಮನೆ-ಮಂದಿಯೊಂದಿಗೆ ಹಂಚಿಕೊಳ್ಳುವುದಕ್ಕೆ ಸಮಯವೇ ಇರುವುದಿಲ್ಲ. ಆದ್ದರಿಂದ ಆ ಪ್ರಾಯದಲ್ಲಿ ಒಂಟಿತನ ಕಾಡುವುದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಆದರೆ ವೃದ್ಧಾಪ್ಯ ಹಾಗಲ್ಲ. ಅದು ಹಳತನ್ನು ಮೆಲುಕು ಹಾಕುವ ಮತ್ತು ಹಳತಿನಂತೆ ಬದುಕಲು ಬಿಡದ ಪ್ರಾಯ. ದಂಪತಿಗಳು ಹೆಚ್ಚಿನ ಸಮಯವನ್ನು ಜೊತೆಯಾಗಿ ಕಳೆಯುವುದು ಈ ಪ್ರಾಯದಲ್ಲೇ.   ಪರಸ್ಪರ ಅವಲಂಬನೆ ಎಷ್ಟು ಅಗತ್ಯ ಮತ್ತು ಅನಿವಾರ್ಯ ಎಂಬುದನ್ನು ಅವರಿಬ್ಬರಿಗೆ ಮನವರಿಕೆ ಮಾಡಿಕೊಡುವುದೂ ಈ ಪ್ರಾಯವೇ. ಒಂದು ವೇಳೆ, ಮಕ್ಕಳು ಮತ್ತು ಮೊಮ್ಮಕ್ಕಳು ಜೊತೆ ಇಲ್ಲದಿದ್ದರೂ ಅವರು ಅದನ್ನು ಎದುರಿಸಲು ಜೊತೆಯಾಗಿ ಸಿದ್ಧವಾಗುತ್ತಾರೆ. ಪರಸ್ಪರ ಅವಲಂಬಿತರಾಗಿದ್ದುಕೊಂಡು ಮಕ್ಕಳ ಕೊರತೆ ಕಾಡದಂತೆ ನೋಡಿಕೊಳ್ಳುತ್ತಾರೆ. ಆದರೆ, ಈ ಇಬ್ಬರಲ್ಲಿ ಒಬ್ಬರು ಕಳೆದು ಹೋದರೆ ಅವರ ಬದುಕೇ ಅಸ್ತವ್ಯಸ್ತವಾಗುತ್ತದೆ. ಏಕಾಂಗಿತನ ಕಾಡತೊಡಗುತ್ತದೆ. ಒಮ್ಮೆಲೇ ದೇಹ ವೃದ್ಧಾಪ್ಯಕ್ಕೆ ತಲುಪಿದಂಥ ಚಹರೆಯನ್ನು ಹೊಂದುತ್ತದೆ. ದುರಂತ ಏನೆಂದರೆ, ಇಂಥ ಸಮಯದಲ್ಲಿ ಮಕ್ಕಳು ಊಟ-ತಿಂಡಿಯ ಬಗ್ಗೆ ಕಾಳಜಿ ವಹಿಸುತ್ತಾರೆಯೇ ಹೊರತು ಅವರ ಭಾವನಾತ್ಮಕ ಜಗತ್ತಿಗೆ ಪ್ರವೇಶಿಸುವ ಪ್ರಯತ್ನ ನಡೆಸುವುದಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೆಂದರೆ, ಅವರ ಯೋಗಕ್ಷೇಮ ವಿಚಾರಿಸುತ್ತಾ, ಊಟ-ತಿಂಡಿ ಕೊಡುತ್ತಿರುವುದು ಎಂಬ ಭಾವನೆಯೇ ಬಹುತೇಕರದು. ನಿಜವಾಗಿ, ಆ ಪ್ರಾಯ ಒಡನಾಡಿಯನ್ನು ಬಯಸುತ್ತದೆ. ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ತಕ್ಕುದಾದ ಒಡನಾಡಿ. ಅಂದಹಾಗೆ, ಪ್ರತಿಯೊಬ್ಬರಿಗೂ ಖಾಸಗಿತನವೆಂಬುದಿದೆ. ಒಡನಾಡಿಯಷ್ಟು ಚೆನ್ನಾಗಿ ಬೇರೆ ಯಾರೂ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾರರು. ಆದರೆ ಹಿರಿಯರಿಗೆ ಒಡನಾಡಿಯನ್ನು ಒದಗಿ ಸುವ ಕುರಿತಂತೆ ಸಾಮಾಜಿಕವಾಗಿ ಚರ್ಚೆಗಳು ನಡೆಯುವುದು ತೀರಾ ತೀರಾ ಕಡಿಮೆ. ಅವರಲ್ಲಿ ಆ ಬಗ್ಗೆ ವಿಚಾರಿಸುವ ಪ್ರಯತ್ನಗಳೂ ನಡೆಯುವುದಿಲ್ಲ. ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಇರುವ ಏರ್ಪಾಟುಗಳಂತೆ ಈ ಹಿರಿಯರ ಅಹವಾಲನ್ನು ಆಲಿಸಿ ಒಡನಾಡಿಯನ್ನು ಒದಗಿಸುವ ಕುರಿತಂತೆ ಆಲೋಚನೆಗಳೇ ನಡೆಯುವುದಿಲ್ಲ. ಹಿರಿಯರನ್ನು ವಧು-ವರರಾಗಿಸುವ ಏರ್ಪಾಡುಗಳೇ ನಡೆಯುವುದಿಲ್ಲ. ಅವರಿಗಾಗಿ ಮೆಟ್ರಿಮೋನಿಯಲ್ (ವೈವಾಹಿಕ) ಸಂಸ್ಥೆಗಳೂ ವಿರಳಾತಿವಿರಳ. ಅವರಿಗೆ ಸಂಗಾತಿಯನ್ನು ಒದಗಿಸುವುದನ್ನು ಬಿಟ್ಟು ಉಳಿದೆಲ್ಲವುಗಳ ಬಗ್ಗೆ ಸಮಾಜ ಧಾರಾಳವಾಗಿ ಚರ್ಚಿಸುತ್ತದೆ.
     ವೃದ್ಧಾಪ್ಯವೆಂಬುದು ಅವಲಂಬನೆಯ ಪ್ರಾಯ. ಅವಲಂಬಿತರಲ್ಲಿ ಓರ್ವರು ಕಳೆದು ಹೋದರೆ ಇನ್ನೋರ್ವರು ಸ್ವತಃ ಕಳೆದುಹೋದವ ರಂತೆ ಚಡಪಡಿಸುತ್ತಾರೆ. ಅಂಥ ಸ್ಥಿತಿಯನ್ನು ಎದುರಿಸುವುದಕ್ಕೆ ಅವರಿಗೆ ಊಟ-ತಿಂಡಿಗಳಷ್ಟೇ ಸಾಕಾಗುವುದಿಲ್ಲ. ಸಂಗಾತಿಯ ಅಗತ್ಯವೂ ಇರುತ್ತದೆ. ಅದನ್ನು ಒದಗಿಸುವ ಸಮಯ ಪ್ರಜ್ಞೆಯನ್ನು ಮಕ್ಕಳು, ಸಮಾಜ ತೋರಬೇಕು. ಇಂಥವರಿಗಾಗಿ ಮೆಟ್ರಿಮೋನಿಯಲ್ ಸಂಸ್ಥೆಗಳನ್ನೂ ಪ್ರಾರಂಭಿಸಬೇಕು. ಪ್ರವಾದಿ ಮುಹಮ್ಮದ್(ಸ)ರಂತೂ ಮರು ಮದುವೆಗೆ ಅತೀ ಹೆಚ್ಚು ಪ್ರಾಶಸ್ತ್ಯವನ್ನು ನೀಡಿದ್ದಾರೆ. ಸಮಾಜದ ಹೊಣೆಗಾರಿಕೆಯ ಪಟ್ಟಿಯಲ್ಲಿ ಮರು ಮದುವೆಯನ್ನೂ
ಸೇರಿಸಿದ್ದಾರೆ. ಅವರು ಮದುವೆಯಾಗಿರುವುದೇ ವಿಧವೆಯನ್ನು. ಮೂರು ಮಕ್ಕಳ ತಾಯಿಯಾದ ಖದೀಜಾ ಎಂಬ 40 ರ ಹರೆಯದ ವಿಧವೆಯನ್ನು ತಮ್ಮ 25ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಅಂದಹಾಗೆ, ಮಧ್ಯ ವಯಸ್ಸನ್ನು ದಾಟಿದವರ ಮರು ಮದುವೆಯ ತಮಾಷೆಯ ವಸ್ತುವಲ್ಲ. ಅದು ಪ್ರಕೃತಿ ಸಹಜ.
        ಸೂರ್ಯ ನಾರಾಯಣ್ ಮತ್ತು ಬಾನುಮತಿ ಈ ಸಹಜತೆಯನ್ನು ನೆನಪಿಸಿದ್ದಾರೆ ಅಷ್ಟೇ.
ಮಕ್ಕಳು ಓದಲೇಬೇಕಾದ ಲೇಖನ