Wednesday, September 27, 2023

ಮಕ್ಕಳನ್ನು ಹೊರಗೆ ನಿಲ್ಲಿಸುವ ಮಸೀದಿ ಬೋರ್ಡುಗಳು





ಜನರೇಶನ್ ಗ್ಯಾಪ್

ಮೊನ್ನೆ ಸಂಜೆ ಕಚೇಯಿಂದ ಹೊರಡುವಾಗ ಆ ವಿದ್ಯಾರ್ಥಿ ಯುವಕ ಹತ್ತಿರ ಬಂದ. ಗೆಳೆಯನ ಮಗ. ಬೈಕ್‌ನಲ್ಲಿ ನಾನೂ  ಬರಬಹುದಾ ಎಂದು ವಿನಯದಿಂದ ಪ್ರಶ್ನಿಸಿದ. ಹತ್ತಿಸಿಕೊಂಡೆ. ಏನು ಸ್ಟಡೀ ಮಾಡ್ತಾ ಇರುವಿ ಎಂದು ಪ್ರಶ್ನಿಸಿದೆ. ಆರ್ಟಿಫಿಶಿಯಲ್  ಇಂಟೆಲಿಜೆನ್ಸ್ ಅಂದ. ನನ್ನಲ್ಲಿ ಕುತೂಹಲ. ಆತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತಾಗಿ ಹಲವು ಸಂಗತಿಗಳನ್ನು ಹಂಚಿಕೊಂಡ.  ಮುಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗಿರುವ ಅವಕಾಶ, ಭವಿಷ್ಯ ಮತ್ತು ಭಾರತಕ್ಕಿಂತ ವಿದೇಶದಲ್ಲಿ ಇದಕ್ಕಿರಬಹುದಾದ  ಅಪಾರ ಸಾಧ್ಯತೆಗಳ ಕುರಿತಾಗಿ ಅಭಿಪ್ರಾಯಗಳನ್ನು ಹಂಚುತ್ತಾ ಹೋದ. ಆತನ ಮಾತುಗಳನ್ನು ಆಲಿಸುತ್ತಾ ಹೋದಾಗಲೆಲ್ಲ ನಾನು ಈ  ವಿಷಯದಲ್ಲಿ ಒಂದನೇ ತರಗತಿ ಎಂಬುದೂ ಗೊತ್ತಾಯಿತು. ಈ ನಡುವೆ ಆತ ಹೇಳಿದ ಮಾತೊಂದು ನನ್ನನ್ನು ಬಹಳವೇ ಕಾಡಿತು-  ‘ತನಗೆ ಡಿಸೈನಿಂಗ್ ಫೀಲ್ಡ್ ಇಷ್ಟ ಮತ್ತು ಆ ಕಾರಣದಿಂದ ಇನ್‌ಸ್ಟಾಗ್ರಾಂನಲ್ಲಿ ಇಂಥವುಗಳನ್ನೇ ವೀಕ್ಷಿಸಿ ಡೌನ್‌ಲೋಡ್ ಮಾಡಿಕೊಳ್ಳುವೆ,  ಸಮಯ ಸಿಕ್ಕಾಗ ಅವನ್ನು ವೀಕ್ಷಿಸುವೆ’ ಎಂದೂ ಹೇಳಿದ. ನಿಜವಾಗಿ,

ಇನ್‌ಸ್ಟಾಗ್ರಾಂ ವೀಕ್ಷಿಸುವುದೆಂದರೆ ಚಿತ್ರವಿಚಿತ್ರ ಹಾಡು, ಹಾವಭಾವ, ಡ್ಯಾನ್ಸ್ ಗಳನ್ನು ವೀಕ್ಷಿಸುವುದೆಂದೇ ಹೆಚ್ಚಿನ ಹೆತ್ತವರು ಭಾವಿಸಿದ್ದಾರೆ.  ಆದ್ದರಿಂದ ಇನ್‌ಸ್ಟಾಗ್ರಾಂ ವೀಕ್ಷಿಸದಂತೆ ಮಕ್ಕಳ ಮೇಲೆ ನಿಯಂತ್ರಣ ಹೇರುವುದೂ ಇದೆ. ಇದು ಸಂಪೂರ್ಣ ತಪ್ಪು ಎಂದಲ್ಲ. ಆದರೆ, ಇ ನ್‌ಸ್ಟಾಗ್ರಾಂ ಅನ್ನು ಒಂದು ಮಗು ಹೇಗೆ ತನಗೆ ಪೂರಕವಾಗಿ ಬಳಸಿಕೊಳ್ಳಬಹುದು ಮತ್ತು ಕಲಿಕೆ, ಪ್ರತಿಭಾ ಪೋಷಣೆಗೆ ಪೂರಕವಾದ  ಏನೆಲ್ಲಾ ಅದರಲ್ಲಿದೆ ಎಂಬ ಬಗ್ಗೆ ಹೆತ್ತವರಲ್ಲಿ ಮಾಹಿತಿಗಳ ಕೊರತೆ ಇರುತ್ತದೆ. ಇದಕ್ಕೆ ಕಾರಣ ಜನರೇಶನ್ ಗ್ಯಾಪ್. ಟೆಕ್ನಾಲಜಿಯ ಈ  ಕಾಲದಲ್ಲಿ ನಾಲ್ಕೈದು  ವರ್ಷ ಪ್ರಾಯ ಅಂತರವಿರುವವರಲ್ಲೇ  ತಾಂತ್ರಿಕವಾಗಿ ಅಗಾಧ ಅಂತರ ಎದ್ದು ಕಾಣುತ್ತದೆ. ಕ್ಷಣಕ್ಷಣಕ್ಕೂ ಹೊಸ  ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿರುವಾಗ ತಲೆಮಾರುಗಳ ನಡುವೆ ಬಹಳ ಬೇಗನೇ ಅಂತರ ಉಂಟಾಗುತ್ತಿರುತ್ತದೆ. ಆರ್ಟಿಫಿಶಿಯಲ್  ಇಂಟೆಲಿ ಜೆನ್ಸ್ ನ  ಬಗ್ಗೆ ಇವತ್ತು ಯುವಸಮೂಹಕ್ಕೆ ಗೊತ್ತಿರುವ ಒಂದು ಶೇಕಡಾ ಮಾಹಿತಿ ಕೂಡ ಅವರ ಹೆತ್ತವರಿಗಿರುವುದಿಲ್ಲ. ಇಂಥ  ಉದಾಹರಣೆಗಳು ಸಾಕಷ್ಟು ಇವೆ.
ಸಮಸ್ಯೆ ಏನೆಂದರೆ,

ತಮಗೆ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಂಡು ಗೊತ್ತು ಮಾಡಿಕೊಳ್ಳಲು ಪ್ರಯತ್ನಿಸುವುದು ಬೇರೆ, ತಮಗೆ ಗೊತ್ತಿಲ್ಲ ಅನ್ನುವುದನ್ನೇ  ಅವಮಾನ ಎಂದು ಭಾವಿಸಿ ಮಕ್ಕಳನ್ನೇ ಗದರಿಸುತ್ತಾ ಅವರ ಪ್ರತಿ ನಡೆಯನ್ನೂ ವಿರೋಧಿಸುತ್ತಾ ಅವರ ಮಾತನ್ನು ತುಂಡರಿಸುತ್ತಾ  ವರ್ತಿಸುವುದು ಬೇರೆ. ಅನೇಕ ಹೆತ್ತವರು ಮಕ್ಕಳ ಮೇಲೆ ಹೀಗೆ ನಿಷ್ಠುರವಾಗಿ ವರ್ತಿಸುವುದಿದೆ. ಹೆತ್ತವರಿಗೆ ಗೊತ್ತು ಮಾಡುವ ಮಕ್ಕಳ  ಪ್ರಯತ್ನವನ್ನು ಉದ್ಧಟತನವೆಂಬಂತೆ  ಕಂಡು ಬಾಯಿ ಮುಚ್ಚಿಸುವ ಹೆತ್ತವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ನಿಜವಾಗಿ,

ಜನರೇಶನ್ ಗ್ಯಾಪ್‌ನ ಪರಿಣಾಮವಿದು.

ಇದಕ್ಕೆ ಪರಿಹಾರ ಏನು? ಮಕ್ಕಳ ಜೊತೆ ಹೆಚ್ಚೆಚ್ಚು ಒಡನಾಡುವುದು ಮತ್ತು ಅವರೊಂದಿಗೆ ತಮಾಷೆ, ಖುಷಿಯ ಕ್ಷಣ ಗಳನ್ನು  ಹಂಚಿಕೊಂಡು  ಮಾಹಿತಿ ವಿನಿಮಯವಾಗುವಂತೆ ನೋಡಿಕೊಳ್ಳುವುದು ಇದಕ್ಕಿರುವ ಹಲವು ಪರಿಹಾರಗಳಲ್ಲಿ ಒಂದು. ಮಕ್ಕಳೊಂದಿಗೆ  ಅಂತರ ಹೆಚ್ಚಾದಂತೆಲ್ಲಾ ಮಾಹಿತಿಗಳ ವಿನಿಮಯವೂ ಕಡಿಮೆಯಾಗುತ್ತದೆ. ಜೊತೆಗೇ ಮಕ್ಕಳ ಮೇಲೆ ಅನಗತ್ಯ ಸಂದೇಹಗಳಿಗೂ ಆಸ್ಪದ  ಕೊಡುತ್ತದೆ. ಮಗನೋ ಮಗಳೋ ಇನ್‌ಸ್ಟಾಗ್ರಾಂ ವೀಕ್ಷಿಸುತ್ತಿದ್ದರೆ ಹೆತ್ತವರಿಗೆ ಸಣ್ಣ ಸಂದೇಹ ಮತ್ತು ಕಳವಳ. ಅದರಲ್ಲಿ ಬರೇ ಬೇಡದ್ದೇ   ಇದೆ ಎಂಬ ಪೂರ್ವಾಗ್ರಹವೇ ಈ ಸಂದೇಹ ಮತ್ತು ಅಸಹನೆಗೆ ಕಾರಣ. ಒಂದುವೇಳೆ, ಆ ಬಗ್ಗೆ ಮಕ್ಕಳ ಜೊತೆಗೇ ಕುಳಿತು  ತಿಳಿದುಕೊಳ್ಳುವ ಪ್ರಯತ್ನ ಸಾಗಿದರೆ ಸಾಕಷ್ಟು ಸಂದೇಹಗಳು ನಿವಾರಣೆಯಾಗಬಹುದು. ಸದ್ಯದ ದಿನಗಳಲ್ಲಿ ಮಕ್ಕಳನ್ನು ಹೆಚ್ಚೆಚ್ಚು ಆಪ್ತವಾಗಿಸಿಕೊಳ್ಳಬೇಕಾದ ಅಗತ್ಯ ಸಾಕಷ್ಟಿದೆ. ಈ ವಿಷಯಗಳಲ್ಲಿ ಪ್ರವಾದಿ(ಸ) ಅತ್ಯಂತ ಪರಮೋಚ್ಛ ಮಾದರಿ. ಅವರು ಪುಟ್ಟ ಮಕ್ಕಳಿಂದ  ಹಿಡಿದು ಹದಿಹರೆಯದವರ ಜೊತೆಗೂ ಒಡನಾಡಿದ ಅನೇಕ ವರದಿಗಳು ಸಾಕಷ್ಟು ಹದೀಸ್ ಗ್ರಂಥಗಳಲ್ಲಿವೆ. ಹದಿಹರೆಯದವರನ್ನಾಗಲಿ  ಮಕ್ಕಳನ್ನಾಗಲಿ ಅವರು ಕರ್ಕಶವಾಗಿ ನಡೆಸಿಕೊಂಡದ್ದು ಇಲ್ಲವೇ ಇಲ್ಲ. ಎಲ್ಲಿಯವರೆಗೆಂದರೆ,

ಫಜ್ಲ್  ಬಿನ್ ಅಬ್ಬಾಸ್ ಎಂಬ ಹದಿಹರೆಯದ ಯುವಕ ಪ್ರವಾದಿಯವರ ಜೊತೆ ಪ್ರಯಾಣದಲ್ಲಿದ್ದರು. ಹೀಗೆ ಸಾಗುವಾಗ  ಯುವತಿಯೋರ್ವಳು ಎದುರಾದಳು. ಫಜ್ಲ್ ಗೆ    ದೃಷ್ಟಿ ಕಳಚಲಾಗಲಿಲ್ಲ. ಪ್ರವಾದಿ(ಸ) ಯುವಕ ಫಜ್ಲ್  ರ ಗಲ್ಲವನ್ನು ಹಿಡಿದು ಮುಖವನ್ನು ಇನ್ನೊಂದು ಕಡೆಗೆ ತಿರುಗಿಸಿದರು. ಆದರೆ, ಪ್ರವಾದಿ(ಸ) ಫಜ್ಲ್  ರನ್ನು ಹೀಯಾಳಿಸಿದ್ದಾಗಲಿ, ಬೈದದ್ದಾಗಲಿ, ಮನಸ್ಸಿಗೆ ನೋವಾಗುವಂಥ ಒಂದೇ ಒಂದು ಮಾತನ್ನು ಆಡಿದ್ದಾಗಲಿ ಇಲ್ಲವೇ ಇಲ್ಲ. ಯಾಕೆಂದರೆ, ಹದಿಹರೆಯದವರ ಭಾವನೆಗಳ ಬಗ್ಗೆ ಪ್ರವಾದಿಯವ ರಿಗೆ (ಸ) ಅರಿವಿತ್ತು. ಆ ಪ್ರಾಯದವರೊಂದಿಗೆ ಹೇಗೆ ನಡಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆಯಿತ್ತು. ಫಜ್ಲ್  ರ ಪ್ರಾಯದಲ್ಲಿ ನಿಂತು  ಯೋಚಿಸುವ ಸಾಮರ್ಥ್ಯ ಪ್ರವಾದಿಯವರಿಗೆ ಇದ್ದಿದ್ದರಿಂದಲೇ ಗಲ್ಲವನ್ನು ಹಿಡಿದು ಪ್ರೀತಿಯಿಂದ ಮುಖ ತಿರುಗಿಸುವ ಮೂಲಕ ತಿದ್ದಿದರು. ನಿಜವಾಗಿ,

ಮುಕ್ತ ಸ್ವಾತಂತ್ರ‍್ಯದ ಈ ಆಧುನಿಕ ಕಾಲದಲ್ಲಿ ಹದಿಹರೆಯದವರನ್ನು ತಿದ್ದಲು ಹೊರಡುವವರಲ್ಲಿ ಇರಬೇಕಾದ ಎಚ್ಚರಿಕೆಗಳಿವು. ಬೆರಳ  ತುದಿಯಲ್ಲಿ ಜಗತ್ತನ್ನೇ ನೋಡಲು ಸಾಧ್ಯವಿರುವ ಈ ಕಾಲದಲ್ಲಿ ಹೆತ್ತವರು ತಮ್ಮ ಹದಿಹರೆಯದ ಮಕ್ಕಳ ವಿಷಯದಲ್ಲೂ ಪ್ರವಾದಿಯ  ಪ್ರೀತಿ ಮತ್ತು ಜಾಣ್ಮೆಯನ್ನು ಪ್ರದರ್ಶಿಸಬೇಕಿದೆ. ಕಾಲದ ಬದಲಾವಣೆಯನ್ನು ಲೆಕ್ಕಿಸದೇ ಮಕ್ಕಳ ಜೊತೆ ವರ್ತಿಸುವುದರಿಂದ ಲಾಭಕ್ಕಿಂತ  ನಷ್ಟವೇ ಹೆಚ್ಚಾಗಬಹುದು.

ಇಮಾಮ್ ಬುಖಾರಿ ಉಲ್ಲೇಖಿಸಿರುವ ವಚನ ಹೀಗಿದೆ:

ಉಮರ್ ಬಿನ್ ಅಬೀಸಲಮ ಅವರು ಮಗುವಾಗಿದ್ದಾಗಿನ ಘಟನೆ. ಚಿಕ್ಕ ಪ್ರಾಯದ ಉಮರ್ ಪ್ರವಾದಿ(ಸ)ರ ಜೊತೆ ಊಟಕ್ಕೆ ಕುಳಿತ.  ಬಟ್ಟಲಿನ ಉದ್ದಕ್ಕೂ ಬೆರಳಾಡಿಸಿ ಮತ್ತು ಕೈ ತಾಗಿಸಿ ತಿನ್ನತೊಡಗಿದ. ಪ್ರವಾದಿ(ಸ) ಬಾಲಕ ಉಮರ್‌ನನ್ನು ತಿದ್ದಿದರು. ತಿನ್ನುವ ಮೊದಲು  ಬಿಸ್ಮಿ ಹೇಳಬೇಕು ಎಂದು ಹೇಳಿಕೊಟ್ಟರು. ಆ ಬಳಿಕ ಬಲಗೈಯಿಂದ ತಿನ್ನಬೇಕು ಎಂದು ಮೈದಡವಿ ಹೇಳಿ ದರು. ಮಾತ್ರವಲ್ಲ, ಬಟ್ಟಲಿನ  ಉದ್ದಕ್ಕೂ ಕೈಹಾಕಿ ತಿನ್ನಬಾರದು, ನಿನ್ನ ಹತ್ತಿರದಿಂದ ತಿನ್ನಬೇಕು ಎಂದೂ ಹೇಳಿಕೊಟ್ಟರು.
ಪ್ರವಾದಿ(ಸ) ಹೇಳಿದ ರೀತಿ ತನ್ನ ಮೇಲೆ ಎಂಥ ಪರಿಣಾಮ ಬೀರಿತೆಂದರೆ, ಆ ಬಳಿಕ ಜೀವಮಾನದಲ್ಲಿ ಒಮ್ಮೆಯೂ ಈ ಉಪ ದೇಶವನ್ನು ನಾನು ಉಲ್ಲಂಘಿಸಿಲ್ಲ ಎಂದು ಉಮರ್ ಬಿನ್ ಅಬೀ ಸಲಮ ಹೇಳಿರುವುದಾಗಿ ಬುಖಾರಿ ಗ್ರಂಥದಲ್ಲಿ ನಮೂದಿಸಲಾಗಿದೆ.

ಇದೊಂದೇ ಅಲ್ಲ,

ಪ್ರವಾದಿ(ಸ) ಮಕ್ಕಳನ್ನು ಅತಿಯಾಗಿ ಹಚ್ಚಿಕೊಳ್ಳುತ್ತಿದ್ದರು. ತನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆಗೆ ಮಾತ್ರವೇ ಅಲ್ಲ, ಎಲ್ಲ ಮಕ್ಕಳನ್ನೂ  ಪ್ರೀತಿಯಿಂದ ಮಾತನಾಡಿಸುವುದು ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡುವುದು ಅವರ ರೀತಿಯಾಗಿತ್ತು. ಒಂದು  ಬಾರಿ ಹೀಗಾಯಿತು,

ಅವರು ಸಾಮೂಹಿಕ ನಮಾಝï‌ನ ನೇತೃತ್ವ ವಹಿಸಿದ್ದರು. ಸುಜೂದ್ ತುಂಬಾ ದೀರ್ಘವಾಯಿತು. ಎಷ್ಟೆಂದರೆ, ನಮಾಜ್  ನಲ್ಲಿದ್ದ  ಎಲ್ಲರ ಅನುಭವಕ್ಕೂ ಬರುವಷ್ಟು. ಆದ್ದರಿಂದಲೇ ನಮಾಜ್  ಮುಗಿದ ಬಳಿಕ ಪ್ರವಾದಿಯವರನ್ನು ಆ ಬಗ್ಗೆ ಅವರೆಲ್ಲ ಪ್ರಶ್ನಿಸಿದರು. ಆಗ  ಪ್ರವಾದಿ(ಸ) ಹೇಳಿದರು,

‘ನಾನು ಸುಜೂದ್‌ನಲ್ಲಿದ್ದಾಗ ನನ್ನ ಬೆನ್ನ ಮೇಲೆ ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್ ಹತ್ತಿದರು. ಆದ್ದರಿಂದ ಅವರು ಇಳಿಯು  ವವರೆಗೆ ನಾನು ಕಾದೆ. ಆದ್ದರಿಂದ ಸುಜೂದ್ ದೀರ್ಘವಾಯಿತು.’ ಇದೊಂದೇ ಅಲ್ಲ, ನಮಾಜ್ನ  ವೇಳೆ ಮತ್ತು ಮಿಂಬರ್‌ನಲ್ಲಿದ್ದ  ಸಮಯದಲ್ಲೂ ಪ್ರವಾದಿ ಮಕ್ಕಳನ್ನು ಪ್ರೀತಿಸಿದ್ದರು ಎಂಬುದಾಗಿ ಇಮಾಮ್ ಅಹ್ಮದ್ ಮತ್ತು ನಸಾಈ ಉಲ್ಲೇಖಿಸಿರುವ ಹದೀಸ್ ಗಳ ಲ್ಲಿದೆ. ಅಂದಹಾಗೆ,

ಪ್ರವಾದಿಯ ಈ ಉದಾಹರಣೆಯನ್ನು ಇಂದಿನ ಕಾಲದ ಮಸೀದಿಗಳಿಗೆ ಅನ್ವಯಿಸಿ ನೋಡಿ. 7 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಮಸೀ ದಿಗೆ ಕರೆತರಬೇಡಿ ಎಂಬ ಬೋರ್ಡು ತೂಗು ಹಾಕಲಾದ ಮಸೀದಿಗಳು ಅಸಂಖ್ಯ ಇವೆ. ಹಾಗಂತ, ಇಂಥ ಬೋರ್ಡ್ ಗೆ  ಅದರದ್ದೇ   ಆದ ಕಾರಣಗಳು ಇರಬಹುದು. ಆದರೆ ಹೆತ್ತವರನ್ನು ಅನುಸರಿಸಿಕೊಂಡು ಬೆಳೆಯಬೇಕಾದ ಮತ್ತು ನಮಾಜ್ ನ   ಚೈತನ್ಯವನ್ನು ತನ್ನೊಳಗೆ ಇಳಿಸಿಕೊಳ್ಳಬೇಕಾದ ಮಕ್ಕಳನ್ನು ಹೀಗೆ ಮಸೀದಿಯಿಂದ ಹೊರಗಿರಿಸುವ ಬದಲು ಮಸೀದಿಗೆ ತಾಗಿಕೊಂಡೇ ಕಿಡ್ಸ್ ರೂಮನ್ನು  ನಿರ್ಮಿಸಿದರೆ ಎಷ್ಟು ಚೆನ್ನಾದೀತು? ಹಾಗೆ ಮಾಡಿದರೆ ಆಡುತ್ತಲೇ ನಮಾಝನ್ನು ಜೀರ್ಣಿಸಿಕೊಳ್ಳುವ ಅವಕಾಶವೊಂದು ಮಕ್ಕಳಿಗೆ  ಸಿಕ್ಕಂತಾಗದೇ? ಮಕ್ಕಳು ನೋಡಿ ಕಲಿಯುವುದೇ ಹೆಚ್ಚು. ಮಸೀದಿಯಲ್ಲಿ ನಮಾಝಿಗರನ್ನು ನೋಡುತ್ತಾ ಬೆಳೆಯುವ ಮಗು ಮಸೀದಿಗೆ  ಹತ್ತಿರವಾಗುತ್ತದೆ. ಆರಂಭದಲ್ಲಿ ಸಣ್ಣ-ಪುಟ್ಟ ಕೀಟಲೆ, ಆಟ, ಶಬ್ದ ಇದ್ದದ್ದೇ . ನಿಧಾನಕ್ಕೆ ಅದು ಸರಿ ಹೋಗುತ್ತದೆ. ಆದರೆ ಇವತ್ತಿನ ದಿನಗಳಲ್ಲಿ ನಮಾಝಿಗರು ಮಕ್ಕಳ ಈ ತುಂಟಾಟವನ್ನು ಮಹಾನ್ ಅಪರಾಧವೆಂಬಂತೆ  ಕಾಣುವುದಿದೆ. ನಮಾಜ್  ಮುಗಿದ ಕೂಡಲೇ ಆ  ಮಕ್ಕಳನ್ನು ನೂರು ಕಣ್ಣುಗಳು ಸುಡುವಂತೆ ತಿರುಗಿ ನೋಡುವುದಿದೆ. ಮಕ್ಕಳನ್ನು ಹತ್ತಿರ ಕರೆದು ಮೈದಡವಿ ಪ್ರೀತಿಯಿಂದ ಮತ್ತೆ ಮತ್ತೆ  ಹೇಳುವ ಸಹನೆ ಇವತ್ತಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ, ಹಿರಿಯರು ಮಕ್ಕಳ ಬಗ್ಗೆ ಮಗುವಾಗಿ ಆಲೋಚಿಸದೇ  ಇರುವುದು.

ಒಮ್ಮೆ ಪ್ರವಾದಿಯವರು(ಸ) ಹಸನ್ ಮತ್ತು ಹುಸೈನ್ ಜೊತೆ ಆಡುತ್ತಿದ್ದ ವೇಳೆ ಅಲ್ಲಿಗೆ ಮುಆವಿಯಾ ಬಂದರು. ಅವರು ಆಟವನ್ನು  ನೋಡತೊಡಗಿದರು. ಆಗ ಪ್ರವಾದಿ(ಸ) ಹೇಳಿದರು,

ಯಾರಿಗಾದರೂ ಮಕ್ಕಳಿದ್ದರೆ ಅವರು ಮಕ್ಕಳ ಜೊತೆ ಮಗುವಾಗಲಿ. ಇನ್ನೊಂದು ಘಟನೆ,

ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್‌ರನ್ನು ಬೆನ್ನ ಮೇಲೆ ಕೂರಿಸಿ ಪ್ರವಾದಿ(ಸ) ಆಟವಾಡುತ್ತಿದ್ದಾಗ ಉಮರ್ ಬಿನ್ ಖತ್ತಾಬ್(ರ)  ಅಲ್ಲಿಗೆ ಬಂದರು. ‘ಎಷ್ಟು ಒಳ್ಳೆಯ ಕುದುರೆ ನಿಮ್ದು’ ಎಂದು ಮಕ್ಕಳನ್ನು ನೋಡಿ ನಗುತ್ತಾ ಹೇಳಿದರು. ಆಗ ಪ್ರವಾದಿ(ಸ), ‘ಇವರಿಬ್ಬರೂ  ಒಳ್ಳೆಯ ಕುದುರೆ ಸವಾರರು’ ಎಂದರು ಎಂಬುದಾಗಿ ಇಬ್ನು ಕಸೀರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಗಳು ಫಾತಿಮಾ(ರ)ರನ್ನು ಪ್ರವಾದಿ ತನ್ನ ಕರುಳಿನ ತುಂಡು ಎಂದು ಹೇಳಿದ್ದರು. ಫಾತಿಮಾ ಹತ್ತಿರ ಬಂದಾಗ ಎದ್ದು ನಿಂತು ಅವರನ್ನು  ಆಲಿಂಗಿಸಿ ಚುಂಬಿಸಿ ತನ್ನ ಬಳಿ ಕುಳ್ಳಿರಿಸುತ್ತಿದ್ದರು. ಒಮ್ಮೆ ಫಾತಿಮಾ ಪುಟ್ಟ ದೂರಿನೊಂದಿಗೆ ಪ್ರವಾದಿ(ಸ)ರ ಬಳಿಗೆ ಬಂದರು. ಪತಿ ಅಲಿಯವರ(ರ) ಮನೆಯಲ್ಲಿ ಕೆಲಸದಾಳು ಇಲ್ಲದೇ ಇರುವುದರಿಂದ ತನಗಾಗುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡರು. ಪ್ರವಾದಿ(ಸ)  ಫಾತಿಮಾರನ್ನು ಹತ್ತಿರ ಕುಳ್ಳಿರಿಸಿದರು. ಸಹನೆಯ ಉಪದೇಶ ಮಾಡಿದರು. ಆಯಾಸದ ವೇಳೆ ಹೇಳುವುದಕ್ಕೆಂದು ಕೆಲವು ಸ್ವಸ್ತಿ ವಚ ನಗಳನ್ನು ಹೇಳಿಕೊಟ್ಟರು. ಅಂದಹಾಗೆ,

ಹದಿಹರೆಯದ ಮತ್ತು ಚಿಕ್ಕ ಪ್ರಾಯದ ಮಕ್ಕಳ ಮಾತುಗಳನ್ನು ಅವರ ಮಟ್ಟಕ್ಕೆ ಇಳಿದು ಕೇಳುವ ಮತ್ತು ಆಲೋಚಿಸುವ ಸಹನೆ  ಪ್ರದರ್ಶಿಸುವುದು ಇಂದಿನ ಹೆತ್ತವರ ಪಾಲಿಗೆ ಬಹಳ ಅಗತ್ಯ. ಮಕ್ಕಳು, ಹದಿಹರೆಯದವರು ಮತ್ತು ದೊಡ್ಡವರ ಜೊತೆ ಪ್ರವಾದಿ(ಸ)  ಏಕಪ್ರಕಾರವಾಗಿ ನಡಕೊಂಡದ್ದೇ  ಇಲ್ಲ. ಹದಿಹರೆಯದ ಸಹಜ ಆಕರ್ಷಣೆಗೆ ಅವರು ಪ್ರತಿಕ್ರಿಯಿಸಿದ ರೀತಿ ಮತ್ತು ಮಕ್ಕಳ ಜೊತೆ  ಮಗುವಾಗುತ್ತಿದ್ದ ರೀತಿಯೇ ಅವರು ಕಾಲ ಮತ್ತು ಪ್ರಾಯವನ್ನು ಹೇಗೆ ಓದುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಜನರೇಶನ್ ಗ್ಯಾ ಪ್‌ಗೆ ಅವರಲ್ಲಿ ಅವಕಾಶವೇ ಇರಲಿಲ್ಲ. ಆ ಕಾಲದ ಜನರೇಶನ್‌ನ ಭಾವನೆಯನ್ನು ಅವರು ಓದಬಲ್ಲವರಾಗಿದ್ದರು. ಅಳಿಯನಾದ ಅಲಿಯವರನ್ನು(ರ) ತರಾಟೆಗೆತ್ತಿಕೊಳ್ಳುವ ಬದಲು ತಾನು ಅತಿಯಾಗಿ ಪ್ರೀತಿಸುವ ಮಗಳಿಗೆ ಅವರು ಉಪದೇಶ ನೀಡಿದ್ದೇ  ಸಂದರ್ಭ  ಮತ್ತು ಸನ್ನಿವೇಶವನ್ನು ಅವರು ಹೇಗೆ ತಿಳಿದುಕೊಳ್ಳುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಈಗಿನ ಅಗತ್ಯ ಇದು. ಟೆಕ್ನಾಲಜಿಯ ಈ  ಕಾಲದಲ್ಲಿ ಜನರೇಶನ್ ಗ್ಯಾಪ್ ಆಗದಂತೆ ಹೆತ್ತವರು ಜಾಗರೂಕತೆಯನ್ನು ಪಾಲಿಸಬೇಕು.

No comments:

Post a Comment