Thursday, September 14, 2023

ಇಸ್ಲಾಮೋಫೋಬಿಯಾದ ಫಲಿತಾಂಶವೇ ಈ ಹೇಮಾ, ರೇವತಿ, ತ್ಯಾಗಿ?




ನಾಲ್ಕು ಘಟನೆಗಳು

1. ತಮಿಳುನಾಡಿನ ತಿರುವಣ್ಣಮಲೈ ನಗರದ ಸೋಮಸಿಪಾಡಿ ಗ್ರಾಮದ ಅಣ್ಣಾಮಲೈ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಹಿಂದಿ ಪರೀಕ್ಷೆ ನಡೆಯುತ್ತಿತ್ತು. 27 ವರ್ಷದ ಶಬಾನಾ ಪರೀಕ್ಷೆಗೆ ಹಾಜರಾದರು. ದಕ್ಷಿಣ್ ಭಾರತ್ ಹಿಂದಿ ಪ್ರಚಾರ್ ಸಭಾ ಏರ್ಪಡಿಸಿದ್ದ  ಈ ಪರೀಕ್ಷೆಗೆ 540 ಮಂದಿ ಹಾಜರಾಗಿದ್ದರು. ಇವರಲ್ಲಿ ಶಬಾನಾ ಏಕೈಕ ಹಿಜಾಬ್‌ಧಾರಿ ಮಹಿಳೆ. ಇವರು ಕ್ವಾಲಿಫೈಡ್ ಅರೆಬಿಕ್ ಟೀಚರ್.  ಖಾಸಗಿ ಶಾಲೆಯೊಂದರಲ್ಲಿ ಈ ಶಬಾನಾ ಅರೆಬಿಕ್ ಟೀಚರ್ ಆಗಿಯೂ ಕೆಲಸ ಮಾಡುತ್ತಿದ್ದರು. ಪರೀಕ್ಷೆ ಬರೆಯುತ್ತಾ 15 ನಿಮಿಷಗಳು  ಕಳೆದಿರಬಹುದು. ಪರೀಕ್ಷಾ ಹಾಲ್‌ನ ಮೇಲ್ನೋಟ ವಹಿಸಿಕೊಂಡಿದ್ದ ರೇವತಿ ಟೀಚರ್ ಅವರ ಬಳಿಗೆ ಬಂದು ಹಿಜಾಬ್‌ಗೆ ಆಕ್ಷೇಪ ವ್ಯಕ್ತ ಪಡಿಸಿದರು. ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರಿ ಎಂದು ಆದೇಶಿಸಿದರು. ಶಬಾನಾ ಒಪ್ಪಲಿಲ್ಲ. ತಮಿಳುನಾಡಿನ ಯಾವುದೇ ಶಾಲೆಯಲ್ಲಾಗಲಿ  ಪರೀಕ್ಷಾ ಹಾಲ್‌ನಲ್ಲಾಗಲಿ ಹಿಜಾಬ್‌ಗೆ ನಿಷೇಧ ಇರಲಿಲ್ಲ. ಶಬಾನಾ ವಾದಿಸಿದರು. ಬಳಿಕ ಶಾಲಾ ಪ್ರಾಂಶುಪಾಲ ಸಂತೋಷ್ ಕುಮಾರ್  ಅವರ ಪ್ರವೇಶವಾಯಿತು. ಒಂದೋ ಹಿಜಾಬ್ ಇಲ್ಲವೇ ಪರೀಕ್ಷೆ ಎರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವ ಅವಕಾಶ ಇದೆ ಎಂದು  ಅವರು ಷರಾ ಬರೆದರು. ಶಬಾನಾ ಒಪ್ಪಲಿಲ್ಲ. ತಾನು ಅರೆಬಿಕ್ ಟೀಚರ್ ಆಗಿದ್ದು, ಹಿಜಾಬ್ ಕಳಚುವುದರಿಂದ ತನ್ನ ಮಕ್ಕಳಿಗೆ ಕೆಟ್ಟ  ಸಂದೇಶ ರವಾನೆಯಾಗುತ್ತದೆ ಎಂದರೂ ಅವರು ಕೇಳಲಿಲ್ಲ. ಶಾಲಾ ಕರೆಸ್ಟಾಂಡೆಂಟ್  ಆಗಮಿಸಿ ಆಕೆಯ ಪ್ಯಾಡ್ ಅನ್ನು ಕಿತ್ತುಕೊಂಡರು.  ಮಾತ್ರವಲ್ಲ, ಸ್ವಇಚ್ಛೆಯಿಂದ ಪರೀಕ್ಷಾ ಹಾಲ್‌ನಿಂದ ತೆರಳುತ್ತಿರುವುದಾಗಿ ಬರಹದ ಮೂಲಕ ಬರೆದುಕೊಡು ಎಂದೂ ಆಗ್ರಹಿಸಿದರು.  ಶಬಾನಾ ಈ ಎಲ್ಲ ಸಂಗತಿಯನ್ನು ಜಿಲ್ಲಾಧಿಕಾರಿ ಮುರುಗೇಶ್ ಅವರ ಗಮನಕ್ಕೆ ತಂದರು. ಶಿಕ್ಷಣ ಸಚಿವ ಅಸ್‌ಬಿಲ್ ಮಹೇಶ್  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಶಬಾನಾರಿಗೆ ಮರಳಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಯಿತು. ಆದರೆ, ಘಟ ನೆಯಿಂದ ತಾನು ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇನೆ ಎಂದ ಶಬಾನಾ ಆ ಹೊತ್ತಿನಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ನೊಂದು  ನುಡಿದರು. ಇದು 2023, ಆಗಸ್ಟ್ 22ರಂದು ನಡೆದ ಘಟನೆ.

2. ದೆಹಲಿಯ ಕೈಲಾಶ್ ನಗರದ ಸರಕಾರಿ ಪ್ರೌಢಶಾಲೆಯ ಟೀಚರ್ ಹೇಮಾ ಗುಲಾಟಿ 9ನೇ ತರಗತಿಗೆ ಪಾಠ ಮಾಡುತ್ತಿದ್ದರು.  ಚಂದ್ರಯಾನವು ಚಂದ್ರನಿಗೆ ಮುತ್ತಿಕ್ಕುವುದಕ್ಕೆ ಗಂಟೆಗಳಷ್ಟೇ ಬಾಕಿಯಿತ್ತು. ದೆಹಲಿ ಸರಕಾರ ಹೊಸದಾಗಿ ಅಳವಡಿಸಿರುವ ದೇಶಭಕ್ತಿ ಪಾಠ ಪುಸ್ತಕವನ್ನು ಬೋಧಿಸುತ್ತಿರುವ ವೇಳೆ ಮುಸ್ಲಿಮರು ಮತ್ತು ಇಸ್ಲಾಮ್‌ನ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದರು. ‘ಮುಸ್ಲಿಮರು  ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಯಾವ ಪಾತ್ರವನ್ನೂ ನಿಭಾಯಿಸಿಲ್ಲ, ನೀವು ಪ್ರಾಣಿಗಳನ್ನು ಹತ್ಯೆ ಮಾಡು ತ್ತೀರಿ’ ಮತ್ತು ಅದರ  ಮಾಂಸವನ್ನು ತಿನ್ನುತ್ತೀರಿ. ನೀವು ಕರುಣೆ ಇಲ್ಲದವರು, ನೀವು ಪಾಕಿಸ್ತಾನಕ್ಕೆ ಹೋಗಿ... ಎಂದು 52 ವಿದ್ಯಾರ್ಥಿಗಳ ಮುಂದೆ ಆಕೆ  ಹೇಳಿದರು. ಹಾಗಂತ, ಆಕೆ ಹೀಗೆ ಮಾತನಾಡುತ್ತಿರುವುದು ಅದು ಮೊದಲ ಬಾರಿ ಆಗಿರಲಿಲ್ಲ. ತರಗತಿಯಲ್ಲಿರುವ 9 ಮುಸ್ಲಿಮ್  ವಿದ್ಯಾರ್ಥಿಗಳು ಈ ಬಾರಿ ಆಕ್ಷೇಪಿಸಿದರು. ಇದೇವೇಳೆ, ಕೆಲವು ವಿದ್ಯಾರ್ಥಿಗಳು ಆಕೆಯ ಮಾತಿಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.  ಇದಾದ ಬಳಿಕ ಮಕ್ಕಳ ಹೆತ್ತವರು ಈ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾದರು ಮತ್ತು ಹೇಮಾ ಗುಲಾಟಿ ತಪ್ಪೊಪ್ಪಿಕೊಂಡು ಕ್ಷಮೆ  ಯಾಚಿಸಿದರು. ಇದು ನಡೆದಿರುವುದು ಆಗಸ್ಟ್ 23ರಂದು.

3. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನ ಖುಬ್ಬೂಪುರ್ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್ ಕೂಡ ಇಂಥದ್ದೇ  ಮುಸ್ಲಿಮ್ ದ್ವೇಷದ  ಕಾರಣಕ್ಕಾಗಿ ಸುದ್ದಿಗೀಡಾಯಿತು. ಒಂದರಿಂದ  5ನೇ ತರಗತಿಯವರೆಗೆ ಕಲಿಸಲಾಗುವ ಈ ಖಾಸಗಿ ಶಾಲೆಯಲ್ಲಿ ಒಟ್ಟು 52  ವಿದ್ಯಾರ್ಥಿಗಳಿದ್ದಾರೆ. ಎರಡನೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿಯ ಕೆನ್ನೆಗೆ ಉಳಿದ ವಿದ್ಯಾರ್ಥಿಗಳಿಂದ ಟೀಚರ್ ತೃಪ್ತ ತ್ಯಾಗಿ  ಬಾರಿಸುತ್ತಾರೆ. ಮಾತ್ರವಲ್ಲ, ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಎರಡನೇ ತರಗತಿಯ ಆ ವಿದ್ಯಾರ್ಥಿ ಅಳುತ್ತಾ ಕರಿ  ಹಲಗೆಯ ಬಳಿ ನಿಂತಿರುವುದು ಮತ್ತು ಸಹಪಾಠಿಗಳು ಒಬ್ಬೊಬ್ಬರಾಗಿ ಬಂದು ಆತನ ಕೆನ್ನೆಗೆ ಬಾರಿಸುವುದು ವೀಡಿಯೋದಲ್ಲಿದೆ.  ಆಕೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ರಾಜಿ ಪಂಚಾತಿಕೆಯಲ್ಲಿ ಮುಗಿಸುವುದಕ್ಕೆ ಹೆತ್ತವರ ಮೇಲೆ ಒತ್ತಡಗಳೂ  ಬಂದಿವೆ. ಇದು ಆಗಸ್ಟ್ 22ರ ಘಟನೆ.

4. ಜನವರಿ 22, 2022ರಂದು ನಮ್ಮದೇ ರಾಜ್ಯದಲ್ಲಿ ಹಿಜಾಬ್ ವಿವಾದ ಶುರುವಾಯಿತು. ಎರಡ್ಮೂರು ತಿಂಗಳ ಕಾಲ ವಿದ್ಯಾರ್ಥಿ ನಿಯರನ್ನು ಇನ್ನಿಲ್ಲದಂತೆ ಕಾಡಿದ ಈ ವಿವಾದದಿಂದಾಗಿ 1010 ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ವಿಧಾನಸಭೆಗೆ ಸರಕಾರವೇ  ತಿಳಿಸಿರುವ ಮಾಹಿತಿ ಹೇಳುತ್ತದೆ.

ಹಾಗಂತ, ಇವೆಲ್ಲ ಒಂದು ಬೆಳಗಾತ ದಿಢೀರನೇ ಉಂಟಾದ ಬೆಳವಣಿಗೆ ಎಂದು ಅನಿಸುತ್ತಿಲ್ಲ.

ಜನರ ಮನಸ್ಸಿನಲ್ಲಿ ಇಸ್ಲಾಮೋಫೋಬಿಕ್ ಅಥವಾ ಇಸ್ಲಾಮ್‌ನ ಬಗೆಗಿನ ಭೀತಿಯ ಭಾವವನ್ನು ಸೃಷ್ಟಿಸುವ ಪ್ರಯತ್ನ ಬಹಳ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಸಿನಿಮಾ, ನಾಟಕ, ಯಕ್ಷಗಾನ, ಕತೆ, ಕಾದಂಬರಿಗಳ ಮೂಲಕ ಈ ದ್ವೇಷದ ಇಂಜಕ್ಷನ್ ಅನ್ನು ಜನರಿಗೆ ಚುಚ್ಚುತ್ತಲೇ ಬರಲಾಗಿದೆ. ಇತ್ತೀಚಿನ ದಶಕದಲ್ಲಿ ಈ ದ್ವೇಷ ಪ್ರಚಾರದ ನೊಗವನ್ನು ಟಿ.ವಿ. ಚಾನೆಲ್‌ಗಳು ವಹಿಸಿ ಕೊಂಡ ಬಳಿಕ  ಹೆಚ್ಚು ತೀವ್ರ ರೂಪದ ಫಲಿತಾಂಶ ವ್ಯಕ್ತವಾಗುತ್ತಿದೆ.

ಮುಸ್ಲಿಮರನ್ನು ಲುಚ್ಚರಂತೆ, ಹೆಣ್ಣುಬಾಕರು, ಸರ್ವಾಧಿಕಾರಿಗಳು, ಮಹಿಳಾ ದೌರ್ಜನ್ಯಕೋರರು, ದರೋಡೆಕೋರರು, ಬಹುಪತ್ನಿ  ವಲ್ಲಭರು ಮತ್ತು ಇನ್ನಿತರ ಅತಿಕೆಟ್ಟ ವ್ಯಕ್ತಿತ್ವಗಳಂತೆ ಬಿಂಬಿಸಲು ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳ ನಡುವೆ ಈಗಲೂ ಪೈಪೋಟಿಯೇ  ಇದೆ. 2012ರಲ್ಲಿ ಡಿಕ್ಟೇಟರ್ ಎಂಬ ಹಾಲಿವುಡ್ ಸಿನಿಮಾ ಬಿಡುಗಡೆಯಾಯಿತು. ಸಹಜವಾಗಿ ಇದರಲ್ಲಿ ಡಿಕ್ಟೇಟರ್ (ಸರ್ವಾಧಿಕಾರಿ)  ಮುಸ್ಲಿಮ್. ಯಾವುದೇ ಕಾರಣಕ್ಕೂ ಪ್ರಜಾತಂತ್ರ ತಳವೂರದಂತೆ ಮಾಡುವುದೇ ಆತನ ಕೆಲಸ. ಅದಕ್ಕಾಗಿ ಅತಿ ಕ್ರೂರಿಯಾಗಿ ಆತ  ಬದಲಾಗುತ್ತಾನೆ. ಹಾಗಂತ, 2012ರಲ್ಲಿ ಸಿನಿಮಾ ತಯಾರು ಮಾಡುವಾಗ ಮತ್ತು ಅದಕ್ಕಿಂತ ಮೊದಲೂ ಈ ಜಗತ್ತಿನಲ್ಲಿ ಮುಸ್ಲಿಮರಲ್ಲದ  ಸರ್ವಾಧಿಕಾರಿಗಳು ಸಾಕಷ್ಟು ಇದ್ದರು. ಜನರೊಂದಿಗೆ ಅತ್ಯಂತ ನಿರ್ದಯಿಯಾಗಿ ನಡಕೊಂಡವರೂ ಇದ್ದರು. ಈಗಲೂ ಇದ್ದಾರೆ. 2022  ಆಗಸ್ಟ್ 5ರಂದು ಅನ್ನು ಕಪೂರ್ ನಾಯಕತ್ವದ ‘ಹಮ್ ದೋ ಹಮಾರೆ ಬಾರಾ’ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು.  ಅದರಲ್ಲಿ ಅನ್ನು ಕಪೂರ್ ಮುಸ್ಲಿಮ್ ಕುಟುಂಬದ ಯಜಮಾನನ ಪಾತ್ರ ಧಾರಿಯಾಗಿ ಕಾಣಿಸಿದ್ದರೆ ಸುತ್ತ-ಮುತ್ತ 11 ಮಕ್ಕಳಿದ್ದರು. ಅಲ್ಲದೇ  12ನೇ ಪ್ರಸವಕ್ಕೆ ಸಿದ್ಧವಾದ ಪತ್ನಿಯೂ ಜೊತೆಗಿದ್ದರು. 2023ರಲ್ಲಿ ಈ ಸಿನಿಮಾ ಬಿಡುಗಡೆಯೂ ಆಯಿತು. ಅಂದಹಾಗೆ, 

ಈ ಸಿನಿಮಾ  ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿತೋ ಸೋತಿತೋ ಎಂಬುದಕ್ಕಿಂತ  ಹೆಚ್ಚಾಗಿ ಈ ಸಿನಿಮಾ ವೀಕ್ಷಿಸಿದವರ ಮೇಲೆ ಈ ಚಿತ್ರಕತೆ ಎಂಥ ಪರಿಣಾಮ  ಬೀರಿರಬಹುದು ಎಂಬುದೇ ಮುಖ್ಯ. ಮುಸ್ಲಿಮ್ ಸಮುದಾಯ ಮಕ್ಕಳನ್ನು ತಯಾರಿಸುವ ಕಾರ್ಖಾನೆಗಳಿದ್ದಂತೆ ಎಂಬ ಸಂದೇಶವನ್ನು  ಈ ಸಿನಿಮಾ ಬಿತ್ತುವುದಂತೂ ಖಂಡಿತ. ಹಾಗಂತ, ಈ ದೇಶದ ಜನಗಣತಿ ವಿವರಗಳು ಈ ಸಂದೇಶವನ್ನು ಪುರಸ್ಕರಿಸುತ್ತದೆಯೇ? ಇಲ್ಲ.  ಸ್ವಾತಂತ್ರ‍್ಯಾ ನಂತರ ನಡೆದ ಮೊದಲ ಜನಗಣತಿಯ ಪ್ರಕಾರ ಮುಸ್ಲಿಮರ ಫಲವತ್ತತೆಯ ಪ್ರಮಾಣ ಹಿಂದೂಗಳಿಗಿಂತ  ಹೆಚ್ಚಿತ್ತು. ಆದರೆ  2011ರ ಜನಗಣತಿಯ ಪ್ರಕಾರ, ಮುಸ್ಲಿಮರ ಫಲವತ್ತತೆಯ ಪ್ರಮಾಣ ಹಿಂದೂಗಳಿಗಿಂತಲೂ ವೇಗವಾಗಿ ಕುಸಿಯುತ್ತಿದೆ. ಹಿಂದುಳಿದ  ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಮರ ಫಲವತ್ತತೆಯ ಪ್ರಮಾಣ ಸಮಾನವಾಗಿ ಹೆಚ್ಚಿದ್ದರೆ, ನಗರ ಪ್ರದೇಶಗಳಲ್ಲಿ ಮುಸ್ಲಿಮರ ಫಲವತ್ತತೆಯ  ಪ್ರಮಾಣ ವೇಗವಾಗಿ ಕುಸಿಯುತ್ತಿದೆ. ಆದ್ದರಿಂದಲೇ, ಹಮ್ ದೋ ಹಮಾರೆ ಬಾರಾ ಸಿನಿಮಾ ಪೋಸ್ಟರ್‌ಗೆ ಪತ್ರಕರ್ತೆ ರಾಣಾ  ಅಯ್ಯೂಬ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಹಾಗೆ,

‘ಇಮ್ಯಾಜಿನಿಂಗ್  ಇಂಡಿಯನ್ ಮುಸ್ಲಿಮ್ಸ್: ಲುಕಿಂಗ್ ಥ್ರೂ ದಿ ಲೆನ್ಸ್ ಆಫ್ ಬಾಲಿವುಡ್’- ಎಂಬ ಸಂಶೋಧನಾ ಪ್ರಬಂಧದಲ್ಲಿ  ಮುಸ್ಲಿಮ್ ದ್ವೇಷಕ್ಕೆ ಬಾಲಿವುಡ್ ಸಿನಿಮಾಗಳ ಕೊಡುಗೆಯನ್ನು ಮೊಯಿದುಲ್ ಇಸ್ಲಾಮ್ ಬಿಡಿಬಿಡಿಯಾಗಿ ವಿವರಿಸಿದ್ದಾರೆ. ಹೆಚ್ಚಿನೆಲ್ಲ ಸಿನಿಮಾಗಳಲ್ಲಿ ಮುಸ್ಲಿಮರು ಒಂದೋ ಖಳರು ಅಥವಾ ಖೂಳರು ಅಥವಾ ಹೆಣ್ಣು ಬಾಕರು. ಮುಸ್ಲಿಮ್ ಪಾತ್ರವನ್ನು ನೆಗೆಟಿವ್ ಆಗಿ  ಬಿಂಬಿಸುವುದು ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾ ನಿರ್ದೇಶಕರ ಮಾಮೂಲು ನೀತಿ. ಇನ್ನೊಂದು, ಐತಿಹಾಸಿಕ ಘಟನೆಗಳನ್ನು  ಹಿಂದೂ-ಮುಸ್ಲಿಮ್ ಆಗಿ ಚಿತ್ರೀಕರಿಸುವುದು. ಉದಾಹರಣೆಗೆ, ತಾನಾಜಿ ಸಿನಿಮಾ. 1670ರಲ್ಲಿ ಕೊಂಡಾಣದಲ್ಲಿ ಔರಂಗಝೇಬ್ ಮತ್ತು  ತಾನಾಜಿ ನಡುವೆ ನಡೆದ ಯುದ್ಧವನ್ನು ಯುದ್ಧವಾಗಿ ಬಿಂಬಿಸದೇ ಹಿಂದೂ-ಮುಸ್ಲಿಮ್ ನೆರಳಿನೊಂದಿಗೆ ಇದು ಕಟ್ಟಿಕೊಡುತ್ತದೆ.  ಅಲ್ಲಾವುದ್ದೀನ್ ಖಿಲ್ಜಿಯು ಚಿತ್ತೂರು ಮೇಲೆ ದಾಳಿ ಮಾಡಿ ಪದ್ಮಾವತಿಯ ಗಂಡ ರತನ್‌ಸಿಂಗ್‌ರನ್ನು ಕೊಂದ ಘಟನೆಯನ್ನು ನಿರ್ದೇಶಕ  ಸಂಜಯ್ ಲೀಲಾ ಬನ್ಸಾಲಿಯು
ಹಿಂದೂ-ಮುಸ್ಲಿಮ್ ರೀತಿಯಲ್ಲೇ  ಬಿಂಬಿಸಿದ್ದಾರೆ. ‘ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ’ದ ನಾಲ್ಕು ಮಂದಿ ಮಹಿಳೆಯರಲ್ಲಿ ಇಬ್ಬರು  ಮುಸ್ಲಿಮ್ ಪಾತ್ರಧಾರಿಗಳು. ಸ್ವಾತಂತ್ರ‍್ಯ ಹುಡುಕಾಟದ ಈ ಪಾತ್ರಗಳು ಪರೋಕ್ಷವಾಗಿ ಮುಸ್ಲಿಮ್ ಮಹಿಳೆಯರಿಗೆ ಸೀಮಿತ ಸ್ವಾತಂತ್ರ‍್ಯದ  ಸಂದೇಶವನ್ನು ರವಾನಿಸುತ್ತದೆ. ಇದರಾಚೆಗೆ ಸಂಜಯ್ ಪೂರಣ್ ಸಿಂಗ್ ನಿರ್ದೇಶನದ ‘72 ಹೂರೈನ್’ ಎಂಬ ಸಿನಿಮಾ ಏನು ಹೇಳಲಿದೆ ಎಂಬುದಕ್ಕೆ ವಿಶೇಷ ಸಂಶೋಧನೆಯೇನೂ ಬೇಕಾಗಿಲ್ಲ. ಇದರ ಜೊತೆಗೆ, ‘ದಿ ಕಾಶ್ಮೀರಿ ಫೈಲ್ಸ್’ ಮಾಡಿರುವ ಅನಾಹುತವನ್ನೂ  ಪರಿಗಣಿಸಬೇಕು. ಸಿನಿಮಾ ವೀಕ್ಷಿಸಿ ಹೊರ ಬಂದವರು ಮುಸ್ಲಿಮ್ ದ್ವೇಷದ ಮಾತುಗಳನ್ನು ಮಾಧ್ಯಮಗಳ ಮುಂದೆ  ಬಹಿರಂಗವಾಗಿಯೇ ಆಡಿರುವುದನ್ನು ಈ ದೇಶ ಕಂಡಿದೆ. ಹಿಂದೂಗಳ ವಿರುದ್ಧ ಮುಸ್ಲಿಮರು ಕ್ರೌರ್ಯ ಎಸಗಿದ್ದಾರೆ ಅನ್ನುವ ಬಲವಾದ  ಸಂದೇಶವನ್ನು ಈ ಸಿನಿಮಾ ದೇಶದುದ್ದಕ್ಕೂ ರವಾನಿಸಿದೆ ಮತ್ತು ಕಾಶ್ಮೀರಿ ಮುಸ್ಲಿಮರು ಪಂಡಿತರಿಗೆ ಆಶ್ರಯ ಕೊಟ್ಟ ಮತ್ತು ಅವರನ್ನು  ರಕ್ಷಿಸಿದುದಕ್ಕಾಗಿ ತಮ್ಮ ಜೀವಕ್ಕೇ ಅಪಾಯ ತಂದು ಕೊಂಡ ಸತ್ಯಗಳನ್ನು ಈ ಸಿನಿಮಾದಲ್ಲಿ ಮರೆಮಾಚಲಾಗಿದೆ. ಅಲ್ಲದೇ,  ಹಿಂದೂಗಳಿಗಿಂತ  ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿ ಕಾಶ್ಮೀರದಲ್ಲಿ ಮುಸ್ಲಿಮರು ಉಗ್ರವಾದಕ್ಕೆ ಬಲಿಯಾಗಿರುವುದನ್ನೂ  ಅಡಗಿಸಿಡಲಾಗಿದೆ. ಹಾಗೆಯೇ ಕೇರಳ ಸ್ಟೋರಿ ಸಿನಿಮಾ ಮಾಡಿರುವುದೂ ಇಂಥದ್ದೇ  ಅನಾಹುತವನ್ನು. ಒಂದುರೀತಿಯಲ್ಲಿ,

ಸಿನಿಮಾಗಳು ಒಂದುಕಡೆ ಇಸ್ಲಾಮೋಫೋಬಿಯಾವನ್ನು ಹರಡಲು ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವಾಗಲೇ, ಹಿಂದಿ ಮತ್ತು  ಇಂಗ್ಲಿಷ್ ಟಿ.ವಿ. ಚಾನೆಲ್‌ಗಳು ಇದಕ್ಕಿಂತ ನೇರವಾಗಿ ಮತ್ತು ಯಾವ ಮುಜುಗರವೂ ಇಲ್ಲದೇ ಇಸ್ಲಾಮೋಫೋಬಿಯಾವನ್ನು  ಹರಡತೊಡಗಿದುವು. ಒಂದು ಸಿನಿಮಾ ತಯಾರಾಗಿ ಬಿಡುಗಡೆಗೊಳ್ಳುವುದಕ್ಕೆ ವರ್ಷಗಳು ಬೇಕಾಗುತ್ತವೆ. ಆದರೆ, ಈ ಟಿ.ವಿ. ಚಾ ನೆಲ್‌ಗಳು ಪ್ರತಿದಿನವೂ ಏನಾದರೊಂದು ನೆಪದಲ್ಲಿ ಮುಸ್ಲಿಮರನ್ನು ಖಳರಂತೆ ಬಿಂಬಿಸಲು ಪ್ರಾರಂಭಿಸಿದುವು. ಪಾಕಿಸ್ತಾನದಲ್ಲಿ ನಡೆದ  ಯಕಶ್ಚಿತ್ ದರೋಡೆಯನ್ನೂ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡಿ, ಆ ಮುಖಾಂತರ ಭಾರತೀಯ ಮುಸ್ಲಿಮರನ್ನು ಕಟಕಟೆ ಯಲ್ಲಿ  ನಿಲ್ಲಿಸುವಷ್ಟರ ಮಟ್ಟಿಗೆ ಈ ಚಾನೆಲ್‌ಗಳು ಬುದ್ಧಿಭ್ರಮಣೆಗೆ ಒಳಗಾದುವು. ಇಂಥವು ನಿರಂತರ ನಡೆಯತೊಡಗಿದಾಗ ಅದರ ಫಲಿತಾಂಶ  ನಾಗರಿಕ ಸಮಾಜದಲ್ಲಿ ವ್ಯಕ್ತವಾಗಲೇಬೇಕು. ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾ, ಟ್ವಿಟರ್‌ಗಳಲ್ಲಂತೂ ದ್ವೇಷಪ್ರಚಾರಕ್ಕೆ ನಿಯಂತ್ರಣವೇ  ಇಲ್ಲದಂತಾಗಿದೆ. ಹೀಗಿರುತ್ತಾ, ತೃಪ್ತ ತ್ಯಾಗಿ, ಹೇಮಾ ಗುಲಾಟಿ ಅಥವಾ ರೇವತಿ ಮೇಡಂ ಇವುಗಳಿಂದ ಪ್ರಭಾವಿತರಾಗಿರಲಾರರು ಎಂದು  ಹೇಳುವುದು ಹೇಗೆ? ಅಷ್ಟಕ್ಕೂ,

ತೃಪ್ತ ತ್ಯಾಗಿ, ಹೇಮಾ ಗುಲಾಟಿ ಮತ್ತು ರೇವತಿ- ಮೂವರೂ ಮಹಿಳೆಯರೇ. ಮುಸ್ಲಿಮ್ ವಿರೋಧಿ ದ್ವೇಷ ಪ್ರಚಾರವು ಮಹಿಳೆ ಯರ  ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ ಅನ್ನುವುದರ ಸೂಚನೆಯೇ ಇದು? ತಾಯಿ ಹೃದಯದಲ್ಲಿ ದ್ವೇಷ ತುಂಬಿಕೊಳ್ಳುವುದು ಆಘಾತಕಾರಿ.

No comments:

Post a Comment