ಒಂದು ದಿನ ತಂದೆಯ ಜೊತೆ ಮಗಳು ತನ್ನ ದುಃಖಮಯ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾಳೆ. ಇದರಿಂದ ತಾನು ಹೊರಬರಲು ಏನು ಮಾಡಬೇಕು ಎಂದು ಪ್ರಶ್ನಿಸುತ್ತಾಳೆ. ತನ್ನ ಸುತ್ತ ಅನೇಕಾರು ಸಮಸ್ಯೆಗಳಿವೆ. ಸಮಸ್ಯೆಗಳು ಹೇಗೆ ತನ್ನನ್ನು ಮುತ್ತಿಕೊಂಡಿವೆಯೆಂದರೆ, ಒಂದನ್ನು ಬಿಡಿಸಿದರೆ ಇನ್ನೊಂದು ಎದುರಾಗುತ್ತದೆ. ಸುಖ ಎಂಬುದೇ ನಾಪತ್ತೆಯಾಗಿದೆ. ತಾನು ಈ ಸಮಸ್ಯೆಗಳ ಸುಳಿಯಿಂದ ಹೊರಬಂದು ಸುಖಮಯ ಬದುಕನ್ನು ಕಂಡುಕೊಳ್ಳಲು ಏನು ಮಾಡಬೇಕು ಎಂದು ಕೇಳಿಕೊಳ್ಳುತ್ತಾಳೆ.
ಮಗಳ ಮಾತುಗಳನ್ನೆಲ್ಲ ಅಪ್ಪ ತದೇಕಚಿತ್ತದಿಂದ ಆಲಿಸುತ್ತಾನೆ. ಬಳಿಕ ಆಕೆಯ ಕೈ ಹಿಡಿದು ಅಡುಗೆ ಕೋಣೆಗೆ ಪ್ರವೇಶಿಸುತ್ತಾನೆ. ಮಗಳಲ್ಲಿ ಅಚ್ಚರಿ.
ಆತ ಮೂರು ಕುಡಿಕೆಯನ್ನು ಎತ್ತಿಕೊಳ್ಳುತ್ತಾನೆ. ಅವುಗಳಲ್ಲಿ ನೀರು ತುಂಬಿಸುತ್ತಾನೆ ಮತ್ತು ಮೂರನ್ನೂ ಬೇರೆ ಬೇರೆಯಾಗಿ ಒಲೆಯ ಮೇಲಿಟ್ಟು ಬೆಂಕಿ ಕಾಯಿಸುತ್ತಾನೆ. ಯಾವಾಗ ಕುಡಿಕೆಯಲ್ಲಿರುವ ನೀರು ಕುದಿಯಲು ಪ್ರಾರಂಭಿಸಿತೋ ಆಗ ಆತ ಒಂದು ಕುಡಿಕೆಗೆ ಬಟಾಟೆಯನ್ನು ಹಾಕುತ್ತಾನೆ. ಇನ್ನೊಂದಕ್ಕೆ ಮೊಟ್ಟೆ ಮತ್ತು ಮತ್ತೊಂದಕ್ಕೆ ಕಾಫಿ ಬೀಜವನ್ನು ಹಾಕುತ್ತಾನೆ. ಇದಾದ ಬಳಿಕ ಆತ ಮೌನವಾಗಿ ಕುಳಿತುಕೊಳ್ಳುತ್ತಾನೆ. ಮಗಳಲ್ಲಿ ಕಸಿವಿಸಿ ಪ್ರಾರಂಭವಾಗುತ್ತದೆ. ಕುಡಿಕೆಗೆ ನೀರು ತುಂಬಿಸುವಲ್ಲಿಂದ ಹಿಡಿದು ಈವರೆಗೆ ಅಪ್ಪ ಒಂದೇ ಒಂದು ಶಬ್ದವನ್ನೂ ಮಾತಾಡಿಲ್ಲ. ಈಗ ನೋಡಿದರೆ ಸುಮ್ಮನೆ ಕುಳಿತು ಕೊಂಡಿದ್ದಾರೆ. ತಾನು ಸಮಸ್ಯೆಗೆ ಪರಿಹಾರವನ್ನು ಕೋರಿ ಅಪ್ಪನ ಬಳಿ ಬಂದರೆ ಈಗ ಅಪ್ಪನೇ ಒಂದು ಸಮಸ್ಯೆಯಾಗಿ ಬಿಟ್ಟಿದ್ದಾರೆ ಎಂದು ಚಡಪಡಿಸತೊಡಗುತ್ತಾಳೆ. ಆಕೆ ಅಪ್ಪನ ಗಮನ ಸೆಳೆಯಲು ಎರಡ್ಮೂರು ಸಲ ಪ್ರಯತ್ನಿಸಿದಳಾದರೂ ಅಪ್ಪ ಮಿಸುಕಾಡದ್ದನ್ನು ಕಂಡು ತಾನೂ ಮೌನಕ್ಕೆ ಜಾರುತ್ತಾಳೆ. ಹೀಗೆ ಸುಮಾರು 20 ನಿಮಿಷಗಳು ಕಳೆಯುತ್ತವೆ. ಅಪ್ಪ ಕುಳಿತಲ್ಲಿಂದ ಎದ್ದು ನಿಲ್ಲುತ್ತಾನೆ ಮತ್ತು ಆ ಕುಡಿಕೆಯಲ್ಲಿದ್ದ ಬಟಾಟೆ, ಮೊಟ್ಟೆ ಮತ್ತು ಕಾಫಿಯನ್ನು ಮೂರು ಬೇರೆ ಬೇರೆ ಬಟ್ಟಲಿನಲ್ಲಿ ಇಡುತ್ತಾನೆ. ಬಳಿಕ ಮಗಳೊಂದಿಗೆ ಪ್ರಶ್ನಿಸುತ್ತಾನೆ:
ನೀನೀಗ ಏನನ್ನು ನೋಡುತ್ತಿರುವಿ?
ಬಟಾಟೆ, ಮೊಟ್ಟೆ ಮತ್ತು ಕಾಫಿ- ಆಕೆ ಉತ್ತರಿಸುತ್ತಾಳೆ.
ಆತ ಮತ್ತೆ ಹೇಳುತ್ತಾನೆ: ಹಾಗಲ್ಲ ಮಗಳೇ, ಹತ್ತಿರದಿಂದ ನೋಡು ಮತ್ತು ಬಟಾಟೆಯನ್ನು ಸ್ಪರ್ಶಿಸು ಎನ್ನುತ್ತಾನೆ. ಆಕೆ ಹಾಗೆಯೇ ಮಾಡುತ್ತಾಳೆ ಮತ್ತು ಬಟಾಟೆ ಮೃದುವಾಗಿರುವುದು ಅನುಭವಕ್ಕೆ ಬರುತ್ತದೆ. ಬಳಿಕ ಮೊಟ್ಟೆಯನ್ನು ಒಡೆಯುವಂತೆ ಮತ್ತು ಕಾಫಿಯನ್ನು ಹೀರುವಂತೆ ಮಗಳೊಂದಿಗೆ ಹೇಳುತ್ತಾನೆ. ಆಕೆ ಹಾಗೆಯೇ ಮಾಡುತ್ತಾಳೆ. ಆದರೂ ಆಕೆಗೆ ಇದೆಲ್ಲ ಯಾಕೆ ಎಂದು ಅರ್ಥವಾಗಿರುವುದಿಲ್ಲ. ಆಕೆ ಅಚ್ಚರಿಯೊಂದಿಗೆ ಪ್ರಶ್ನಿಸುತ್ತಾಳೆ:
ಅಪ್ಪಾ, ಇವೆಲ್ಲ ಏನು? ಏನಿದರ ತಾತ್ಪರ್ಯ?
ಅಪ್ಪ ವಿವರಿಸುತ್ತಾನೆ:
ಬಟಾಟೆ, ಮೊಟ್ಟೆ ಮತ್ತು ಕಾಫಿ ಬೀಜ- ಇವು ಮೂರೂ ಒಂದೇ ರೀತಿಯ ಶಿಕ್ಷೆಗೆ ಒಳಪಟ್ಟರೂ ಅವುಗಳ ಪ್ರತಿಕ್ರಿಯೆ ಮಾತ್ರ ಒಂದೇ ರೀತಿಯಾಗಿಲ್ಲ. ಕುದಿಯುವ ನೀರಿಗೆ ಹಾಕುವ ಮೊದಲು ಬಟಾಟೆ ಗಡುಸಾಗಿತ್ತು. ಆದರೆ, ಕುದಿದ ಬಳಿಕ ಮೃದುವಾಯಿತು. ಆದರೆ ತನ್ನ ಗಟ್ಟಿತನವನ್ನು ಅದು ಸಂಪೂರ್ಣ ಕಳಕೊಳ್ಳಲಿಲ್ಲ. ಮೊಟ್ಟೆಯನ್ನು ನೋಡು. ಅದರ ಒಳಗಿನ ಪದಾರ್ಥಗಳನ್ನು ರಕ್ಷಿಸುವುದಕ್ಕೆ ಹೊರಗೆ ಅತಿ ಮೃದುವಾದ ಕವಚವೊಂದು ಇತ್ತು. ಅದು ಅತೀ ಸಣ್ಣ ದಾಳಿಯನ್ನೂ ತಡೆಯಲಾರದಷ್ಟು ದುರ್ಬಲವೂ ಆಗಿತ್ತು. ಕುದಿಯುವ ನೀರಿಗೆ ಹಾಕುವ ಮೊದಲಿನ ಸ್ಥಿತಿ ಇದು. ಈಗ ಹೇಗಿದೆ? ಅದೇ ದುರ್ಬಲ ಕವಚ ಸಬಲವಾಗಿದೆ. ಹಿಂದಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ಹೊರಬಂದಿದೆ. ಹಾಗೆಯೇ, ಬಿಸಿನೀರಿಗೆ ಹಾಕುವ ಮೊದಲು ಕಾಫಿ ಬೀಜ ಅನನ್ಯವಾಗಿತ್ತು. ಆದರೆ, ಈಗ ಅದರ ಸ್ವರೂಪವೇ ಬದಲಾಗಿದೆ. ಇನ್ನು, ಆಯ್ಕೆ ನಿನ್ನ ಕೈಯಲ್ಲಿದೆ. ಸಮಸ್ಯೆ ನಿನ್ನ ಬಾಗಿಲನ್ನು ತಟ್ಟಿದಾಗ ನೀನು ಹೇಗೆ ಪ್ರತಿಕ್ರಿಯಿಸುತ್ತೀ? ಬಟಾಟೆಯಂತೆ, ಮೊಟ್ಟೆಯಂತೆ ಅಥವಾ ಕಾಫಿ ಬೀಜದಂತೆ? ಸಮಸ್ಯೆ ಎಂಬುದು ಅಪರಿಚಿತವಾದ ಒಂದಲ್ಲ. ಅದು ಸದಾ ನಮ್ಮ ಜೊತೆ ಅಥವಾ ಆಸು-ಪಾಸು ಸುತ್ತುತ್ತಲೇ ಇರುತ್ತದೆ. ನಮ್ಮ ಸಮಸ್ಯೆಗಳು ಸಾಮಾನ್ಯವಾಗಿ ಬಟಾಟೆ, ಮೊಟ್ಟೆ ಅಥವಾ ಕಾಫಿ ಬೀಜದಂತೆಯೇ ಇದೆ. ಕೆಲವು ನಮ್ಮನ್ನು ದುರ್ಬಲವಾಗಿಸುತ್ತದೆ. ಕೆಲವು ಕಠಿಣ ಹೃದಯಿಗಳನ್ನಾಗಿಸುತ್ತದೆ ಮತ್ತು ಇನ್ನೂ ಹಲವು ನಮ್ಮನ್ನು ಶಕ್ತಿಶಾಲಿಯನ್ನಾಗಿಸುತ್ತದೆ. ಸಕಾರಾತ್ಮಕ ಚಿಂತನೆಯ ಹೊರತು ಇನ್ನಾವುದರಲ್ಲೂ ಆನಂದವಿಲ್ಲ...’
ಅಪ್ಪ ಮಗಳ ಮುಖ ನೋಡುತ್ತಾನೆ. ಆಕೆ ಆಲಂಗಿಸುತ್ತಾಳೆ.
ಪವಿತ್ರ ಕುರ್ ಆನಿನ 65ನೇ ಅಧ್ಯಾಯವಾದ ಅತ್ತಲಾಕ್‍ನ 2ನೇ ವಚನದಲ್ಲಿ ಹೀಗೊಂದು ವಾಕ್ಯವಿದೆ, ‘ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೊಂದು ದಾರಿಯನ್ನು ತೆರೆಯುವನು’. ಇದೊಂದು ಭರವಸೆಯ ವಾಕ್ಯ. ಸಕಾರಾತ್ಮಕವಾಗಿ ಆಲೋಚಿಸುವುದಕ್ಕೆ ಪ್ರೇರೇಪಿಸುವ ವಾಕ್ಯ. ಈ ವಾಕ್ಯಕ್ಕಿಂತ ಮೊದಲು ತಲಾಕ್‍ನ ರೀತಿ-ನೀತಿಗಳ ಬಗ್ಗೆ ವಿವರಿಸಲಾಗಿದೆ. “ಒಂದೋ ಪತ್ನಿಯನ್ನು ನಿಮ್ಮ ಜೊತೆ ಇರಿಸಿಕೊಳ್ಳಿ ಅಥವಾ ಉತ್ತಮ ರೀತಿಯಲ್ಲಿ ಅವರಿಗೆ ವಿಚ್ಛೇದನವನ್ನು ನೀಡಿ. ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರು ಸಾಕ್ಷಿಗಳನ್ನು ಇದಕ್ಕೆ ಸಾಕ್ಷಿಗಳನ್ನಾಗಿ ಮಾಡಿಕೊಳ್ಳಿ...” ಎಂದೆಲ್ಲಾ ಆದೇಶಿಸಿದ ಬಳಿಕ ಮೇಲಿನ ಭರವಸೆಯ ವಾಕ್ಯದೊಂದಿಗೆ ವಚನವನ್ನು ಕೊನೆಗೊಳಿಸಲಾಗಿದೆ. ಅಂದರೆ, ವಿಚ್ಛೇದನ ಎಂಬುದು ಧರಾಶಾಹಿಯಾಗಿ ಬಿಡಬೇಕಾದ ಒಂದಲ್ಲ. ಬದುಕಿನಲ್ಲಿ ಮುಂದೇನೂ ಇಲ್ಲ ಎಂದೋ ಎಲ್ಲವೂ ಕೊನೆಗೊಂಡಿತು ಎಂದೋ ಹತಾಶರಾಗಬೇಕಾದ ಸಂದರ್ಭವೂ ಅಲ್ಲ. ನೀವು ಸಕಾರಾತ್ಮಕವಾಗಿರಿ. ಒಂದು ಬಾಗಿಲು ಮುಚ್ಚುವಾಗ ದೇವನು ಇನ್ನೊಂದು ಬಾಗಿಲನ್ನು ತೆರೆಯುತ್ತಾನೆ ಎಂದು ಆ ವಚನದ ಕೊನೆಯಲ್ಲಿ ಭರವಸೆ ತುಂಬಲಾಗಿದೆ.
ತನ್ನ ವಿರೋಧಿಗಳ ಕಿರುಕುಳವನ್ನು ತಡೆಯಲಾರದೆ ಪ್ರವಾದಿ ಮುಹಮ್ಮದ್(ಸ) ಮಕ್ಕಾದಿಂದ ಮದೀನಾಕ್ಕೆ ವಲಸೆ ಹೊರಡುತ್ತಾರೆ. ಅವರ ಜೊತೆಗೆ ಗೆಳೆಯ ಅಬೂಬಕರ್(ರ) ಕೂಡ ಇರುತ್ತಾರೆ. ಈ ವಾರ್ತೆ ವಿರೋಧಿಗಳಿಗೆ ತಲುಪುತ್ತದೆ. ಅವರು ಇವರಿಬ್ಬರನ್ನೂ ಬೆನ್ನಟ್ಟಿ ಬರುತ್ತಾರೆ. ಪ್ರವಾದಿ ಮುಹಮ್ಮದ್(ಸ) ಮತ್ತು ಅಬೂಬಕರ್ ಅವರು ಮಕ್ಕಾದಲ್ಲೇ ಇರುವ ಸೌರ್ ಎಂಬ ಹೆಸರಿನ ಗುಹೆಯೊಳಗೆ ಅಡಗಿ ಕುಳಿತುಕೊಳ್ಳುತ್ತಾರೆ. ಇದು ನಿರಂತರ ಮೂರು ದಿನಗಳ ಕಾಲ ನಡೆಯುತ್ತದೆ. ಈ ನಡುವೆ ವಿರೋಧಿಗಳು ಈ ಗುಹೆಯ ಹೊರಗಡೆ ಅಡ್ಡಾಡುತ್ತಿರುವ ಕಾಲ ಸಪ್ಪಳ ಒಳಗಿರುವ ಅಬೂಬಕರ್ ರಿಗೆ ಕೇಳಿಸುತ್ತದೆ. ಅವರು ಕಳವಳಗೊಳ್ಳುತ್ತಾರೆ. ಒಂದುವೇಳೆ, ಅವರು ಗುಹೆಯೊಳಗೆ ಇಣುಕಿ ನೋಡಿದರೆ ನಮ್ಮಿಬ್ಬರನ್ನೂ ಕಂಡಾರು ಅನ್ನುವ ಆತಂಕ ಅವರನ್ನು ಕಾಡುತ್ತದೆ. ಆ ಆತಂಕವನ್ನು ಅವರು ಪ್ರವಾದಿಯವರ ಜೊತೆ ಹಂಚಿಕೊಳ್ಳುತ್ತಾರೆ. ಆಗ ಪ್ರವಾದಿ ಹೇಳುವ ಮಾತೊಂದು ಇತಿಹಾಸದಲ್ಲಿ ಹೀಗೆ ದಾಖಲಾಗಿದೆ,
ನಮ್ಮ ಜೊತೆ ಅಲ್ಲಾಹನಿದ್ದಾನೆ.
ಎಲ್ಲವೂ ಕೊನೆಗೊಂಡಿತು ಅನ್ನುವ ಕಟ್ಟಕಡೆಯ ಸ್ಥಿತಿಯಲ್ಲೂ ಸಕಾರಾತ್ಮಕವಾಗಿ ಆಲೋಚಿಸುವುದೇ ಯಶಸ್ಸಿನ ಸಿದ್ಧಸೂತ್ರ. ಪವಿತ್ರ ಕುರ್ ಆನಿನ 94ನೇ ಅಧ್ಯಾಯವಾದ ಅಲಮ್ ನಶ್‍ರಹ್‍ನ 5 ಮತ್ತು 6ನೇ ವಚನಗಳಲ್ಲಿ ಒಂದೇ ಮಾತನ್ನು ಎರಡು ಬಾರಿ ಹೇಳಲಾಗಿದೆ. 5ನೇ ವಚನದಲ್ಲಿ, ‘ಜಟಿಲತೆಯ ಜೊತೆಗೆ ವೈಶಾಲ್ಯತೆಯೂ ಇದೆ’ ಎಂದು ಹೇಳಲಾಗಿದ್ದರೆ 6ನೇ ವಚನದಲ್ಲಿ, ‘ಖಂಡಿತವಾಗಿಯೂ’ ಎಂಬ ಶಬ್ದವನ್ನು ಸೇರಿಸಿ 'ಜಟಿಲತೆಯೊಂದಿಗೆ ವೈಶಾಲ್ಯತೆಯೂ ಇದೆ’ ಎಂದು ಮತ್ತೆ ಹೇಳಲಾಗಿದೆ. ಆದರೆ ಹೀಗೆ ಹೇಳುವುದಕ್ಕಿಂತ ಮೊದಲಿನ 1ರಿಂದ 4ರ ವರೆಗಿನ ವಚನಗಳು ಪ್ರವಾದಿ ಅನುಭವಿಸುತ್ತಿದ್ದ ಮಾನಸಿಕ ತಳಮಳ, ಸವಾಲು, ಸಂಕಷ್ಟಗಳನ್ನು ಉಲ್ಲೇಖಿಸುತ್ತದೆ. ತನ್ನ ವಿಚಾರಧಾರೆಯನ್ನು ಜನರೊಂದಿಗೆ ಹಂಚಿಕೊಳ್ಳುವ ಆರಂಭಿಕ ಹಂತದಲ್ಲಿ ಪ್ರವಾದಿ(ಸ) ಸವಾಲುಗಳನ್ನು ಸಹಜವಾಗಿಯೇ ಎದುರಿಸಿದ್ದರು. ಅದು ಅವರನ್ನು ಚಿಂತೆಗೂ ಒಳಪಡಿಸಿತ್ತು. ಅವರು ಪ್ರತಿಪಾದಿಸುತ್ತಿದ್ದ ವಿಚಾರಧಾರೆ ಅಂದಿನ ಮಕ್ಕಾದ ಸಾಮಾಜಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ನೂತನವಾಗಿತ್ತು. ಜನರು ಆವರೆಗೆ ಯಾವುದನ್ನು ಧರ್ಮ ಅಂದುಕೊಂಡಿದ್ದರೋ ಅದರ ಸರಿ-ತಪ್ಪುಗಳನ್ನು ಪ್ರವಾದಿಯವರು ಮಂಡಿಸುತ್ತಿದ್ದ ವಿಚಾರಧಾರೆ ವಿಶ್ಲೇಷಣೆಗೆ ಒಳಪಡಿಸುತ್ತಿತ್ತು. ಇದರಿಂದಾಗಿ ಅವರು ಕೆರಳುವುದು ಸಹಜವೂ ಆಗಿತ್ತು. ಪ್ರವಾದಿಯವರ ಪಾಲಿಗೆ ಇದು ಅತ್ಯಂತ ಸವಾಲಿನ ಸಂದರ್ಭ. ಒಂದುಕಡೆ, ತಾನು ಬೆಳೆದು ಬಂದಿರುವ ಸಮಾಜದಲ್ಲಿ ಬೇರು ಬಿಟ್ಟಿರುವ ಅನಾಚಾರ, ಕಂದಾಚಾರ, ಅತಿಕೆಟ್ಟ ಆಚರಣೆಗಳು ಮತ್ತು ಇ ನ್ನೊಂದು ಕಡೆ, ಇವನ್ನೆಲ್ಲ ತಿದ್ದಿ-ನೇರ್ಪುಗೊಳಿಸುವುದು ಹೇಗೆ ಅನ್ನುವ ತಾಕಲಾಟ- ಈ ಎರಡರ ನಡುವೆ ಪ್ರವಾದಿ(ಸ) ಬೆಂದು ಹೋಗಿದ್ದರು. ಹೀಗಿರುತ್ತಾ, ಈ ಎಲ್ಲವುಗಳನ್ನು ದಾಟಿ ನೀವು ಹೇಗೆ ಹೊರಬಂದಿರಿ ಎಂಬುದನ್ನು ಪವಿತ್ರ ಕುರ್ ಆನ್‍ನ ಈ ವಚನಗಳು ನೆನಪಿಸುತ್ತಲೇ ಜಟಿಲತೆಯೊಂದಿಗೆ ವಿಶಾಲತೆಯೂ ಇದೆ ಎಂಬ ಭರವಸೆಯ ನುಡಿಗಳನ್ನು ಹೇಳಲಾಗಿದೆ. ಸವಾಲು ಎಂಬುದು ಸ್ಥಿರವಲ್ಲ. ನಾವು ಅದನ್ನು ಹೇಗೆ ಎದುರಿಸುತ್ತೇವೆ ಎಂಬುದರ ಆಧಾರದಲ್ಲಿ ಅದು ಸ್ಥಾವರವೋ ಜಂಗಮವೋ ಆಗುತ್ತದೆ. ಸವಾಲನ್ನು ಮೆಟ್ಟಿ ನಿಲ್ಲಬಲ್ಲೆ ಎಂಬ ಸಕಾರಾತ್ಮಕ ಮನೋಭಾವವು ನಿಮ್ಮನ್ನು ಗೆಲುವಿನ ಬಾಗಿಲಿನೆಡೆಗೆ ತಂದು ನಿಲ್ಲಿಸುತ್ತದೆ. ಒಂದಷ್ಟು ಶ್ರಮ ಮತ್ತು ಧೈರ್ಯದೊಂದಿಗೆ ಮುನ್ನುಗ್ಗಿದರೆ ಬಾಗಿಲನ್ನು ತೆರೆದು ಒಳಪ್ರವೇಶಿಸಬಹುದು.
ಮಕ್ಕಾದಲ್ಲಿ ಪ್ರವಾದಿ ವಿರೋಧಿ ಚಳವಳಿ ಅತ್ಯಂತ ತಾರಕ ಸ್ಥಿತಿಗೆ ತಲುಪಿದಾಗ ಮತ್ತು ಅವರ ಕುಟುಂಬದ ಅತ್ಯಂತ ಆಪ್ತರೇ ಅವರ ವಿರುದ್ಧ ದ್ವೇಷ ಪ್ರಚಾರಕ್ಕೆ ಇಳಿದಾಗ ಅವರ ಮುಂದೆ ಎರಡು ಆಯ್ಕೆಗಳಿದ್ದುವು. 1. ತನ್ನ ವಿಚಾರಧಾರೆಯ ಪ್ರಚಾರವನ್ನು ಸ್ಥಗಿತಗೊಳಿಸುವುದು. 2. ಪ್ರತಿರೋಧವನ್ನು ಸಕಾರಾತ್ಮಕವಾಗಿ ಎದುರಿಸುವುದು.
ಪ್ರವಾದಿ(ಸ) ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಅವರು ತನ್ನ ವಿಚಾರಧಾರೆಯ ಪ್ರಚಾರವನ್ನು ಸ್ಥಗಿತಗೊಳಿಸುವುದರ ಬದಲು ತನ್ನ ವಿಚಾರಧಾರೆಯನ್ನು ಒಪ್ಪಿಕೊಂಡವರಿಗೆ ಆಶ್ರಯ ಕೊಡುವ ಇನ್ನಾವುದಾದರೋ ಪ್ರದೇಶಗಳಿವೆಯೋ ಎಂದು ಹುಡುಕಾಡತೊಡಗಿದರು. ತನ್ನ ಮತ್ತು ತನ್ನನ್ನು ಒಪ್ಪಿಕೊಂಡ ಅನುಯಾಯಿಗಳ ಸುರಕ್ಷಿತತೆಯನ್ನು ಖಚಿತಪಡಿಸಿಕೊಳ್ಳುವುದೂ ಅವರ ಹೊಣೆಗಾರಿಕೆಯಾಗಿತ್ತು. ಅವರು ಆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಇತಿಯೋಪಿಯಾದ ರಾಜ ನಜ್ಜಾಷಿ ಎಂಬವರ ಪರಮತ ಸಹಿಷ್ಣು ಮನೋಭಾವವನ್ನು ತಿಳಿದುಕೊಂಡು ಅಲ್ಲಿಗೆ ತನ್ನ ಅ ನುಯಾಯಿಗಳನ್ನು ಕಳುಹಿಸಿಕೊಟ್ಟರು. ಆ ಮೂಲಕ ಅತಿ ಸಂಕಷ್ಟದ ಸಂದರ್ಭದಲ್ಲೂ ನಿರಾಶರಾಗದೇ ಅದರಿಂದ ಪಾರಾಗುವ ದಾರಿಗಳನ್ನು ಕಂಡುಕೊಂಡರು. ಅದು ಅಲ್ಲಿಗೇ ನಿಲ್ಲಲಿಲ್ಲ. ತನ್ನ ವಿಚಾರಧಾರೆಯನ್ನು ಮಂಡಿಸುವುದಕ್ಕಾಗಿ ಸುರಕ್ಷಿತ ಪ್ರದೇಶಗಳ ಹುಡುಕಾಟವನ್ನು ಅವರು ನಿರಂತರ ಜಾರಿಯಲ್ಲಿರಿಸಿದರು. ವಿರೋಧಿಗಳ ದಾಳಿಗೆ ತನ್ನ ಅನುಯಾಯಿಗಳು ತುತ್ತಾಗಬಾರದೆಂಬ ನೆಲೆಯಲ್ಲೂ ಈ ಹುಡುಕಾಟ ಮುಖ್ಯವಾಗಿತ್ತು. ಕೊನೆಗೆ ಅವರು ಮದೀನಾವನ್ನು ಆಯ್ಕೆ ಮಾಡಿಕೊಂಡರು. ತನ್ನ ಅನುಯಾಯಿಗಳನ್ನು ಮದೀನಾಕ್ಕೆ ರವಾನಿಸಿದರು. ಸಿಕ್ಕುಗಳನ್ನು ಕಂಡು ಕೈ ಚೆಲ್ಲುವುದಕ್ಕಿಂತ ಅವನ್ನು ಬಿಡಿಸಿ ದಾರಿಯನ್ನು ಕಂಡುಕೊಳ್ಳುವುದು ಪ್ರವಾದಿಯವರ ಮಾದರಿಯಾಗಿತ್ತು. ಪವಿತ್ರ ಕುರ್‍ಆನ್‍ನಲ್ಲಿ ನರಕದ ಬಗ್ಗೆ ಎಲ್ಲೆಲ್ಲಾ ಉಲ್ಲೇಖಿಸಲಾಗಿದೆಯೋ ಬಹುತೇಕ ಅಲ್ಲೆಲ್ಲ ಸ್ವರ್ಗದ ಸುವಾರ್ತೆಯನ್ನೂ ನೀಡಲಾಗಿದೆ. ಶಿಕ್ಷೆಯ ಬಗ್ಗೆ ಹೇಳುವಲ್ಲೆಲ್ಲ ತೌಬಾದ ಬಗ್ಗೆಯೂ ಹೇಳಲಾಗಿದೆ. ನಕಾರಾತ್ಮಕ ಸಂದೇಶ ಎಂದೂ ರವಾನೆಯಾಗಬಾರದೆಂಬ ಗರಿಷ್ಠ ಎಚ್ಚರಿಕೆಯನ್ನು ಪವಿತ್ರ ಕುರ್ ಆನ್ ಉದ್ದಕ್ಕೂ ವಹಿಸಿಕೊಂಡಿರುವುದು ನಮಗೆ ಕುರ್ ಆನ್‍ನ ತುಂಬಾ ಕಾಣಸಿಗುತ್ತದೆ. ಅಲ್ಲಾಹನು ಹೀಗೆ ಹೇಳಿದ್ದಾನೆಂದು ಪ್ರವಾದಿ(ಸ) ಹೇಳಿದ್ದಾರೆ,
ಮಾನವನು ನನ್ನನ್ನು ಸ್ಮರಿಸಿದರೆ ನಾನೂ ಸ್ಮರಿಸುವೆ. ಆತ ನನ್ನನ್ನು ಸಭೆಯಲ್ಲಿ ಸ್ಮರಿಸಿದರೆ ಅದಕ್ಕಿಂತಲೂ ದೊಡ್ಡ ಸಭೆಯಲ್ಲಿ ನಾನು ಆತನನ್ನು ಸ್ಮರಿಸುವೆ. ಆತ ನಡೆದುಕೊಂಡು ನನ್ನ ಬಳಿ ಬಂದರೆ ನಾನು ಓಡಿಕೊಂಡು ಆತನ ಬಳಿಗೆ ಬರುವೆ.’
ಬೆಳಿಗ್ಗೆ ಪತ್ರಿಕೆಯನ್ನು ತೆರೆದು ನೋಡಿದರೆ ಹತ್ಯೆ, ಆತ್ಮಹತ್ಯೆ, ಉದ್ಯೋಗ ನಷ್ಟ, ಕೊರೋನಾ, ಆರ್ಥಿಕ ಹಿಂಜರಿತ, ಘರ್ಷಣೆ, ವಿಚ್ಛೇದನ, ಹಿಂಸೆ, ಅಪಘಾತ ಇತ್ಯಾದಿಗಳೇ ನಮ್ಮನ್ನು ಎದುರುಗೊಳ್ಳುತ್ತವೆ. ಟಿ.ವಿ. ವೀಕ್ಷಿಸಿದರೂ ಸುಖ ಇಲ್ಲ. ಸಾಮಾಜಿಕ ಜಾಲತಾಣಗಳಂತೂ ಸುಳ್ಳು ಮತ್ತು ಸತ್ಯವನ್ನು ಬೆರಕೆ ಮಾಡಿಕೊಂಡು ಓದುಗರನ್ನು ಗೊಂದಲಕ್ಕೆ ಸಿಲುಕಿಸುತ್ತಿವೆ. ಇಂಥ ಹೊತ್ತಲ್ಲಿ ಅನಿಶ್ಚಿತತೆ ಕಾಡುವುದು ಸಹಜ. ಆದರೆ ಇದನ್ನು ಮೀರಿ ನಿಲ್ಲುವುದರಲ್ಲಿ ಬದುಕಿದೆ. ವ್ಯಕ್ತಿ, ಸಮುದಾಯ ಅಥವಾ ದೇಶದ ಯಶಸ್ಸಿನ ಹಿಂದೆ ಭರವಸೆ ಮತ್ತು ಸಕಾರಾತ್ಮಕ ಚಿಂತನೆಗೆ ಬಹುಮುಖ್ಯ ಪಾತ್ರ ಇದೆ. ನಮ್ಮ ಸೋಲು ಮತ್ತು ಗೆಲುವು ಇನ್ನಾರಲ್ಲೂ ಇಲ್ಲ. ಅದು ನಮ್ಮಲ್ಲೇ ಇದೆ. ಅಂದಹಾಗೆ,
ವಿಷಮ ಪರಿಸ್ಥಿತಿಗೆ ಬಟಾಟೆ, ಮೊಟ್ಟೆ ಮತ್ತು ಕಾಫಿ ಬೀಜ ಹೇಗೆ ಪ್ರತಿಕ್ರಿಯಿಸಿದುವೋ ಅದುವೇ ಬದುಕು.
No comments:
Post a Comment