Wednesday, January 9, 2019

ಶಬರಿಮಲೆ, ಮುಟ್ಟು ಮತ್ತು ಮಹಿಳೆ




ಪ್ರಶ್ನೆ: ಮುಟ್ಟಾಗುವುದು (ರಜಸ್ವಲೆ) ಯಾಕಪ್ಪ? ಏನಿದರ ಮರ್ಮ?
ಉತ್ತರ: ಮುಟ್ಟು ಎಂಬುದು ಪ್ರಕೃತಿದತ್ತವಾದ ಪ್ರಕ್ರಿಯೆ ಮಗಳೇ. ಮುಟ್ಟಿನ ಮೂಲಕ ಹೊರ ಹೋಗುವ ರಕ್ತ ಆರೋಗ್ಯ ಪೂರ್ಣವಾದುದು.  ಗರ್ಭಧಾರಣೆಗೆ ದೇಹವನ್ನು ಸಜ್ಜುಗೊಳಿಸುವ ಒಂದು ಕ್ರಿಯೆಯ ಭಾಗ ಇದು. ಮುಟ್ಟಿನ ಮೂಲಕ ದೇವನು ಗರ್ಭಧಾರಣೆಯ ¸ ಸಾಮರ್ಥ್ಯವನ್ನು ಸೂಚ್ಯವಾಗಿ ನೀಡುತ್ತಿರುತ್ತಾನೆ. ಗರ್ಭಾಶಯವು ಈ ರಕ್ತದೊಂದಿಗೆ ಗರ್ಭಧಾರಣೆಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತದೆ ಮತ್ತು  ಯಾವಾಗ ಗರ್ಭಧಾರಣೆ ಆಗುವುದಿಲ್ಲವೋ ಆಗ ಈ ರಕ್ತವು ಗರ್ಭಾಶಯದಿಂದ ಯೋನಿನಾಳದ ಮೂಲಕ ಹೊರ ಹೋಗುತ್ತದೆ...
ಸಿರಿಯದ ಫತೆ ಅಹ್ಮದ್ ಶಫಿ ಎಂಬ ಅಪ್ಪ ತನ್ನ ಮಗಳ ಪ್ರಶ್ನೆಗೆ ಕೊಟ್ಟ ಈ ಉತ್ತರ ಶಬರಿಮಲೆ ವಿವಾದದ ಈ ಸಂದರ್ಭದಲ್ಲಿ ಹೆಚ್ಚು  ಪ್ರಸ್ತುತ ಅನಿಸುತ್ತದೆ. ನಿಜವಾಗಿ, ಮುಟ್ಟು ಅನ್ನುವುದು ಈ 21ನೇ ಶತಮಾನದಲ್ಲಿ ಮಾತ್ರ ಪ್ರಶ್ನಾರ್ಹವೆನಿಸಿಕೊಂಡಿರುವುದಲ್ಲ. ಅನಾದಿ  ಕಾಲದಿಂದಲೇ ಮುಟ್ಟು ಒಂದು ಸಾಮಾಜಿಕ ಕೌತುಕ. ಪ್ರವಾದಿ ಮುಹಮ್ಮದ್‍ರಲ್ಲಿಯೂ ಜನರು ಮುಟ್ಟಿನ ಬಗ್ಗೆ ಪ್ರಶ್ನಿಸಿದ್ದರು ಎಂದು ಪವಿತ್ರ  ಕುರ್‍ಆನ್ (2: 222) ಹೇಳುತ್ತದೆ. ಪ್ರವಾದಿಯವರ ಕಾಲದಲ್ಲಿ ಸಂಪ್ರದಾಯವಾದಿ ಯಹೂದಿಯರು ಮುಟ್ಟನ್ನು ಅಪವಿತ್ರವಾಗಿ ಮತ್ತು  ಪರಮ ಅಶುದ್ಧವಾಗಿ ಪರಿಗಣಿಸಿದ್ದರು. ಮುಟ್ಟಾದ ಪತ್ನಿಯ ಹತ್ತಿರವೂ ಅಂದಿನ ಪತಿ ಹೋಗುತ್ತಿರಲಿಲ್ಲ. ಅವರ ಜೊತೆ ಉಣ್ಣುತ್ತಿರಲಿಲ್ಲ.  ಕುಡಿಯುತ್ತಿರಲಿಲ್ಲ. ಮಾತ್ರ ವಲ್ಲ, ಮುಟ್ಟಿನ ಅವಧಿ ಮುಗಿಯುವವರೆಗೆ ಹೆಣ್ಣು ಮನೆಯಲ್ಲಿ ಇರುತ್ತಿರಲಿಲ್ಲ. ಹಾಗಂತ, ಯಹೂದಿಯರಿಗೆ ¸ ಸಂಬಂಧಿಸಿ ಮಾತ್ರ ಹೀಗೆ ಹೇಳಬೇಕಿಲ್ಲ. ಜಗತ್ತಿನ ಬೇರೆ ಬೇರೆ ಸಮುದಾಯಗಳಲ್ಲಿ ಮುಟ್ಟು ಒಂದು ಮಹಾ ಅಪರಾಧ. ಹೆಣ್ಣು ರಜಸ್ವಲೆಯಾಗುವುದನ್ನು ಸಮಾಜ ಸಹಜವಾಗಿ ಸ್ವೀಕರಿಸುವುದಕ್ಕೆ ಮುಂದಾಗಿದ್ದೇ ಇಲ್ಲ. ಅಸ್ಸಾಮ್‍ನಲ್ಲಿ ಕಾಮುಖ್ಯ ದೇವಿಯ ದೇವಾಲಯವಿದೆ.  ಪ್ರತಿವರ್ಷ ಇಲ್ಲಿ ಅಂಬುಬಚಿ ಹಬ್ಬ ನಡೆಯುತ್ತದೆ. ಈ ಹಬ್ಬದ ಸಮಯದಲ್ಲಿ ಮೂರು ದಿನಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತದೆ.  ಯಾಕೆಂದರೆ, ಆ ಸಮಯದಲ್ಲಿ ಕಾಮುಖ್ಯ ದೇವಿಗೆ ಮುಟ್ಟಾಗುತ್ತದೆ ಅನ್ನುವ ನಂಬಿಕೆ. ಕರಾವಳಿ ಭಾಗದ ತುಳುನಾಡಿನಲ್ಲಿ ಕೆಡ್ಡಸ ಹಬ್ಬ  ಆಚರಣೆಯಲ್ಲಿದೆ. ಜನವರಿ ಮತ್ತು ಫೆಬ್ರವರಿಯ ನಡುವೆ ನಡೆಯುವ ಈ ಆಚರಣೆಯಲ್ಲಿ ಭೂಮಿತಾಯಿಗೆ ಮುಟ್ಟಾಗುವ ನಂಬಿಕೆಯಿದೆ.  ಆದ್ದರಿಂದ ಮೂರು ದಿನಗಳ ಕಾಲ ಕೃಷಿ ಕೆಲಸಕ್ಕೆ ವಿರಾಮ ನೀಡುವ ಸಂಪ್ರದಾಯವಿದೆ. ಒಡಿಸ್ಸಾದಲ್ಲಿ ರೈತರು ಮುಟ್ಟಿನ ಹಬ್ಬ (ರಾಜಪರ್ವ)ವನ್ನು ಆಚರಿಸುತ್ತಾರೆ. ಭೂಮಿ ದೇವಿಗೆ ವಿರಾಮ ಕೊಡುವ ಹಬ್ಬ. ಒಂದು ರೀತಿಯಲ್ಲಿ ಕೆಡ್ಡಸವನ್ನೇ ಹೋಲುವ ಹಬ್ಬ. ಇದಿಷ್ಟೇ ಅಲ್ಲ.
‘ಮುಟ್ಟಿನ ಕಾಲಾವಧಿ ಮುಗಿದ ಬಳಿಕ ಮಹಿಳೆಯರು ಅಡುಗೆ ಕೆಲಸ ಮಾಡಲಿ’ ಎಂದು ಹಿಂದೂ ಧರ್ಮಗ್ರಂಥದ ಅಂಗಿರಸ ಸ್ಮೃತಿಯ 37 ನೇ ವಚನದಲ್ಲಿ ಹೇಳಲಾಗಿದೆ. ‘ಮುಟ್ಟಿನ ಮಹಿಳೆ ಮನೆಗೆಲಸದಲ್ಲಿ ಭಾಗಿಯಾಗಬಾರದು, ಓಟದಂತಹ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳಬಾರದು’ ಎಂಬ ಆದೇಶ ಹಿಂದೂ ಧರ್ಮ ಸೂತ್ರದ 5.6ನೇ ವಚನದಲ್ಲಿದೆ. ‘ಮುಟ್ಟಿನ ಮಹಿಳೆ ಕಬ್ಬಿಣದ ಪಾತ್ರೆಯಲ್ಲಿ ನೀರು ಕುಡಿಯಬಾರದು’ ಎಂದು ಬೃಹದಾಕಾರಣ್ಯ ಉಪನಿಷತ್‍ನ 6.4.13ರಲ್ಲಿ ಹೇಳಲಾಗಿದೆ. ಯಜುರ್ವೇದದ ತೈತೀರಿಯ ಸಂಹಿತೆಯಂತೂ (2.5.1)  ‘ಮುಟ್ಟಾದ ಮಹಿಳೆ ಅಡುಗೆ ಮಾಡಬಾರದು ಮತ್ತು ಲೈಂಗಿಕ ಸಂಬಂಧದಲ್ಲಿ ಏರ್ಪಡಬಾರದು’ ಎಂದು ನಿರ್ದೇಶನ ನೀಡಿದೆ. ಇನ್ನು,  ಆಫ್ರಿಕನ್ ಸಮುದಾಯಗಳಲ್ಲಂತೂ ಮುಟ್ಟಿನ ವಿಧಿಗಳು ವಿಚಿತ್ರ ಮತ್ತು ವಿಪರೀತ. ಸೈಬೀರಿಯನ್ ವಲಯದ ಬುಡಕಟ್ಟುಗಳಾದ ಕಾಮ್ಚಾಚಕ್,  ಯುಕಾಗಿರ್, ಕೋರ್ಯಾಕ್, ಸೊಮಾಯೆಡ್ಸ್ ಇತ್ಯಾದಿಗಳಲ್ಲಿ ಮುಟ್ಟಿನ ಕುರಿತಂತೆ ಬೇರೆ ಬೇರೆ ರೀತಿಯ ರಿವಾಜುಗಳಿವೆ. ಪರಂಪರಾಗತವಾಗಿ  ಬಂದಿರುವ ಈ ರಿವಾಜುಗಳನ್ನು ಅತ್ಯಂತ ಶ್ರದ್ಧೆಯಿಂದ ಅವು ಪಾಲಿಸುತ್ತಲೂ ಬಂದಿವೆ. ಯುಕಾಗಿರ್ ಸಮುದಾಯದ ಮಹಿಳೆಗಿರುವ ನೀತಿ -ನಿಯಮಗಳು ಸೊಮಾಯೆಡ್ಸ್ ಸಮುದಾಯದ ಮಹಿಳೆಗಿಲ್ಲ. ಯುಕಾಗಿರ್ ಸಮುದಾಯದ ಮುಖ್ಯ ಕಸುಬೇ ಮೀನುಗಾರಿಕೆ. ಆದ್ದರಿಂದ ಈ  ಸಮುದಾಯದ ಮಹಿಳೆ ಮುಟ್ಟಾದರೆ ಆಕೆ ಮೀನುಗಾರಿಕೆಗೆ ಬಳಸುವ ಉಪಕರಣಗಳನ್ನು ಮತ್ತು ಬೇಟೆಗೆ ಉಪಯೋಗಿಸುವ ಅಸ್ತ್ರಗಳನ್ನು  ಮುಟ್ಟುವಂತಿಲ್ಲ. ಮುಟ್ಟಿದರೆ ಅದು ಅಶುದ್ಧವಾಗುತ್ತದೆ. ಹಾಗೂ ಅಶುದ್ಧವಾದರೆ ಆ ದಿನದ ಆದಾಯಕ್ಕೆ ಅದರಿಂದ ಪೆಟ್ಟು ಬೀಳುತ್ತದೆ. ¸ಸೊಮಾಯೆಡ್ಸ್ ಗಳಲ್ಲಿ ಮುಟ್ಟಾದವಳು ಕೂದಲು ಬಿಡಬೇಕು. ಮನೆಯೊಳಗೆ ಪ್ರವೇಶವಿಲ್ಲ. ಸೈಬೀರಿಯದ ಈ ಸಮುದಾಯ ಗಳಲ್ಲದೇ, ಆಫ್ರಿಕನ್  ಬುಡಕಟ್ಟುಗಳಾದ ಬುಶ್‍ಮೆನ್, ಬಕಾಲಿಗೋ, ಬೈಯಿಲಾ, ಅಕಿಕುಯು ಇತ್ಯಾದಿಗಳಲ್ಲೂ ಇದೇ ರೀತಿಯ ಆಚರಣೆಯಿದೆ ಎಂದು ಹೇಲಾಗುತ್ತಿದೆ. ಅಷ್ಟಕ್ಕೂ,
ಪ್ರವಾದಿ ಮುಹಮ್ಮದರೂ ಮುಟ್ಟಿನ ಕುರಿತಾದ ಸವಾಲುಗಳನ್ನು ಎದುರಿಸಿದರು. ಸಾಮಾಜಿಕವಾಗಿ ಆಚರಣೆಯಲ್ಲಿದ್ದ ಪದ್ಧತಿಗಳ ವೈರುಧ್ಯಗಳನ್ನೂ ನೋಡಿದರು. ಅಲ್ಲದೇ, ಹೆಣ್ಣನ್ನು ಜೀವಂತವಾಗಿ ಹೂಳುತ್ತಿದ್ದ ಸಮಾಜದಲ್ಲಿ ಮುಟ್ಟು ಗೌರವಾರ್ಹವಾಗುವುದಕ್ಕೆ ಸಾಧ್ಯವೂ ಇರಲಿಲ್ಲ.  ಒಂದು ಕಡೆ ಹೆಣ್ಣೆಂಬ ಕೀಳರಿಮೆ, ಇನ್ನೊಂದೆಡೆ ರಜಸ್ವಲೆ- ಇವೆರಡೂ ಸೇರಿ ಹೆಣ್ಣನ್ನು ಅಸ್ಪೃಶ್ಯ ಗೊಳಿಸಿದ್ದುವು. ಹೀಗಿರುತ್ತಾ, ಪ್ರವಾದಿ  ಹೆಣ್ಣನ್ನು ಗಂಡಿನ ಜೊತೆ ಗಿಟ್ಟು ನೋಡಿದರು. (ಪವಿತ್ರ ಕುರ್‍ಆನ್ 3:195) ಅವರ ಪತ್ನಿ ಉಮ್ಮು ಸಲಮ ಹೇಳುತ್ತಾರೆ,
ನಾನು ಪ್ರವಾದಿ ಜೊತೆ ಮಲಗಿದ್ದೆ. ನನಗೆ ರಜಸ್ವಲೆಯಾಯಿತು. ನಾನು ಎದ್ದೆ ಮತ್ತು ರಕ್ತ ಹರಡದಂತೆ ಬಟ್ಟೆ ಕಟ್ಟಿಕೊಂಡೆ. ಪ್ರವಾದಿ ಕೇಳಿದ್ರು, ಏನು ಮುಟ್ಟಾಯ್ತೆ? ಹೌದೆಂದೆ. ಅವರು ಮತ್ತೆ ನನ್ನಲ್ಲಿ ತನ್ನ ಪಕ್ಕ ಮಲಗುವಂತೆ ಕೇಳಿಕೊಂಡರು. (ಪ್ರವಾದಿಯವರ ವಚನಗಳ ಸಂಗ್ರಹವಾದ ಬುಖಾರಿ ಗ್ರಂಥದಲ್ಲಿ). ಪ್ರವಾದಿ ಪತ್ನಿ ಆಯಿಷಾ ಹೇಳುತ್ತಾರೆ,
ಮುಟ್ಟಿನ ಅವಧಿಯಲ್ಲಿ ನಾನು ನೀರು ಕುಡಿದ ಬಳಿಕ ಅದೇ ಪಾತ್ರೆಯನ್ನು ಪ್ರವಾದಿಯವರಿಗೆ ನೀಡುತ್ತಿದ್ದೆ. ನಾನು ಎಲ್ಲಿ ಬಾಯಿ ಇಟ್ಟಿದ್ದೆನೋ  ಅಲ್ಲಿಗೇ ಬಾಯಿ ಇರಿಸಿ ಪ್ರವಾದಿಯವರು ಅದರಿಂದ ನೀರು ಕುಡಿಯುತ್ತಿದ್ದರು. ಮಾತ್ರವಲ್ಲ, ನನ್ನ ಮುಟ್ಟಿನ ಅವಧಿಯಲ್ಲಿ ಪ್ರವಾದಿಯವರು  ನನಗೆ ಒರಗಿ ಕುಳಿತುಕೊಳ್ಳುತ್ತಿದ್ದರು ಮತ್ತು ಪವಿತ್ರ ಕುರ್‍ಆನನ್ನು ಓದುತ್ತಿದ್ದರು (ಪ್ರವಾದಿಯವರ ವಚನಗಳ ಸಂಗ್ರಹವಾದ ಬುಖಾರಿ  ಗ್ರಂಥದಲ್ಲಿ). ಆಯಿಶಾ ಹೇಳುತ್ತಾರೆ,
ಒಂದು ದಿನ ಪ್ರವಾದಿಯವರು ನಮಾಝಿನ ಚಾಪೆಯನ್ನು ಎತ್ತಿಡು ಎಂದು ನನ್ನಲ್ಲಿ ವಿನಂತಿಸಿದರು. ನಾನು ಮುಟ್ಟಾಗಿದ್ದೇನೆ ಎಂದೆ. ನಿನ್ನ  ಮುಟ್ಟು ನಿನ್ನ ಕೈಯಲ್ಲಿಲ್ಲ ಎಂದರು. (ಪ್ರವಾದಿಯವರ ವಚನಗಳ ಸಂಗ್ರಹ ಗ್ರಂಥವಾದ ಮುಸ್ಲಿಮ್‍ನಲ್ಲಿ). ಪ್ರವಾದಿ ಪತ್ನಿ ಮೈಮೂನ ಹೇಳುತ್ತಾರೆ,
ನಾನು ರಜಸ್ವಲೆಯಾಗಿದ್ದೆ. ಪ್ರವಾದಿಯವರು ನಮಾಝï ಮಾಡುತ್ತಿದ್ದಾಗ ಅವರ ನಮಾಝಿನ ಚಾಪೆಗೆ ತಾಗಿಕೊಂಡೇ ನಾನು ಮಲಗಿರುತ್ತಿದ್ದೆ.  ಅವರು ನಮಾಝï ಮಾಡುವಾಗ ಅವರ ವಸ್ತ್ರ ನನ್ನನ್ನು ಸ್ಪರ್ಶಿಸುತ್ತಿತ್ತು.
ನಿಜವಾಗಿ, ರಜಸ್ವಲೆಯಾಗುವುದೆಂದರೆ, ದೈಹಿಕ ಸ್ಥಿತಿಯಲ್ಲಿ ಏರುಪೇರು ಉಂಟಾಗುವುದು ಎಂದರ್ಥ. ಓರ್ವ ಹೆಣ್ಣು ಮಗಳು ತಿಂಗಳ¸ ಸುಮಾರು 30 ದಿನಗಳ ವರೆಗೆ ಗಂಡಿನಂತೆಯೇ ಸಹಜ ವಾಗಿ ಇರುತ್ತಾಳೆ. ಊಟ, ತಿಂಡಿ, ನಿದಿರೆ, ಮಾತುಕತೆ ಎಲ್ಲವೂ ಸಹಜವಾಗಿಯೇ  ಇರುತ್ತದೆ. ಆದರೆ, ತಿಂಗಳಲ್ಲಿ ಒಂದು ದಿನ ಈ ಸಹಜ ಕ್ರಿಯೆಗೆ ಅಸಹಜವಾದ ತಡೆಯೊಂದು ಏರ್ಪಡುತ್ತದೆ. ಆಕೆ ಗಂಡಿಗಿಂತ ಭಿನ್ನವಾದ  ದೈಹಿಕ-ಮಾನಸಿಕ ಸ್ಥಿತಿಯೊಂದಕ್ಕೆ ತಲುಪಿ ಬಿಡುತ್ತಾಳೆ. ದಿಢೀರನೆ ದೈಹಿಕ ಲಕ್ಷಣಗಳಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಸಿಟ್ಟು, ಸೆಡವು, ಅಸಹನೆ, ನೋವು ಮುಂತಾದುವು ಸೇರಿಕೊಂಡ ಅಸಾಮಾನ್ಯ ದೇಹಭಾಷೆಯಲ್ಲಿ ಆಕೆ ಮಾತಾಡುತ್ತಾಳೆ. ಇಲ್ಲಿ ಬಹುಮುಖ್ಯವಾಗಿರುವ ಅಂಶ  ಏನೆಂದರೆ, ಗಂಡು ಇದಕ್ಕೆ ಪ್ರತಿಕ್ರಿಯಿಸುವ ರೀತಿ. ಆತ ಎಲ್ಲಿಯವರೆಗೆ ಈ ಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವುದಿಲ್ಲವೋ ಅಲ್ಲಿಯವರೆಗೆ  ಅದೊಂದು ಅಸಹಜ ಕ್ರಿಯೆ. ತೀರಾ ಸಾಮಾನ್ಯವಾಗಿದ್ದವಳು ದಿಢೀರನೆ ಅಸಾಮಾನ್ಯಳಾಗಿ ಮತ್ತು ಮಾಮೂಲಿನಂತಿರದ ವರ್ತನೆಯನ್ನು  ತೋರುವವಳಾಗಿ ಕಂಡುಬಂದಾಗ ಪುರುಷ ವರ್ಗ ದಂಗಾಗುವುದು ಸಹಜ. ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತಾಗದೇ  ಹೋದಾಗ ಜನರು ತಮಗೆ ತೋಚಿದಂತೆ ನಿಯಮಗಳನ್ನು ಮತ್ತು ವ್ಯಾಖ್ಯಾನ ಗಳನ್ನು ಮಾಡುತ್ತಾ ಹೋದರು. ಹೆಣ್ಣು ಬಲಿಪಶುವಾಗುತ್ತಲೂ ಹೋದಳು. ಆದ್ದರಿಂದಲೇ,
ಪ್ರವಾದಿ ಮುಹಮ್ಮದರು ಮುಟ್ಟಿಗೆ ಸಂಬಂಧಿಸಿ ಅತ್ಯಂತ ಪ್ರಾಯೋಗಿಕ ನಿಯಮಗಳನ್ನು ಜನರ ಮುಂದಿಟ್ಟರು. ನಮಾಝï ಮಾಡುವುದಕ್ಕೆ  ಅವರು ಪುರುಷ ಮತ್ತು ಮಹಿಳೆಗೆ ಒಂದೇ ನಿಯಮವನ್ನು ರೂಪಿಸಿದರು. ಅಂಗ ಸ್ನಾನವನ್ನು ಮಾಡದ ಹೆಣ್ಣಿಗೂ ಗಂಡಿಗೂ ನಮಾಝೇ  ಇಲ್ಲ ಎಂದರು. ಒಂದುವೇಳೆ ಅಂಗಸ್ನಾನಕ್ಕೆ ನೀರು ಸಿಗದಿದ್ದರೆ ಮಣ್ಣಿನ ಮೂಲಕವಾದರೂ ಅಂಗಸ್ನಾನದ ಸಾಂಕೇತಿಕ ಕ್ರಿಯೆ ನಡೆಸಬೇಕು  ಎಂದು ಹೇಳಿದರು. ಇದೊಂದು ರೀತಿಯ ಶುದ್ಧಗೊಳ್ಳುವ ಕ್ರಿಯೆ. ಹೆಣ್ಣಾಗಲಿ ಗಂಡಾಗಲಿ ಅಂಗಸ್ನಾನವೆಂಬ ಹೆಸರಿನಲ್ಲಿ ಮಾನಸಿಕ ಶುದ್ಧತೆಯ ಕ್ರಿಯೆಯಲ್ಲಿ ಭಾಗಿಯಾದ ಬಳಿಕವೇ ನಮಾಝïಗೆ ಪ್ರವೇಶಿಬೇಕು. ಇನ್ನು, ಪುರುಷ ಮಸೀದಿಯನ್ನೇ ನಮಾಝïಗಾಗಿ ನೆಚ್ಚಿಕೊಳ್ಳಬೇಕು. ಆದರೆ ಮಹಿಳೆಗೆ ಅಂಥದ್ದೊಂದು ತಾಕೀತಿಲ್ಲ. ಆಕೆಯ ಪಾಲಿಗೆ ಮಸೀದಿಗಿಂತ ಮನೆಯಲ್ಲಿ ಮಾಡುವ ನಮಾಝïಗೇ ಹೆಚ್ಚು  ಪ್ರಾಮುಖ್ಯತೆ. ಆದರೆ ಮಸೀದಿಯ ಬಾಗಿಲು ಆಕೆಗೆ ಸದಾ ಮುಕ್ತವಾಗಿರಬೇಕು ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಮಸೀದಿಯ  ಮುಖ್ಯ ಉದ್ದೇಶವೇ ನಮಾಝï. ಆದರೆ ಆ ನಮಾಝನ್ನು ಮಸೀದಿಗಿಂತ ಮನೆಯಲ್ಲಿಯೇ ನಿರ್ವಹಿಸುವುದು ಹೆಣ್ಣಿಗೆ ಉತ್ತಮ ಅಂದ  ಮೇಲೆ ಆಕೆಯ ಮಸೀದಿ ಪ್ರವೇಶ ಎಂಬುದು ಒಂದು ಆಯ್ಕೆಯಾಗುತ್ತದೆಯೇ ಹೊರತು ಅನಿವಾರ್ಯ ವಾಗುವುದಿಲ್ಲ. ಮಕ್ಕಾದ ಮಸ್ಜಿದುಲ್  ಹರಾಮ್ ಎಂಬ ಇಸ್ಲಾಮಿನ ಅತಿಪ್ರಮುಖ ಮಸೀದಿಯಲ್ಲಿ ಹೆಣ್ಣೂ ಗಂಡೂ ಏಕಕಾಲದಲ್ಲಿ ಮಸೀದಿ ಪ್ರವೇಶಿಸುವುದೂ ನಮಾಝï ನಿ ರ್ವಹಿಸುವುದೂ ಇವತ್ತಿಗೂ ಯಾವ ಅಡತಡೆಯೂ ಇಲ್ಲದೇ ನಡೆಯುತ್ತಿದೆ. ಮದೀನಾದಲ್ಲಿರುವ ಮಸ್ಜಿದುನ್ನಬವಿ ಎಂಬ ಪ್ರಮುಖ  ಮಸೀದಿಯಲ್ಲಂತೂ ಬಾಬುನ್ನಿಸಾ (ಮಹಿಳೆಯರ ಬಾಗಿಲು) ಎಂಬ ಹೆಸರಿನಲ್ಲಿ ಪ್ರತ್ಯೇಕ ಬಾಗಿಲೇ ಇದೆ. ಜಗತ್ತಿನ ಯಾವ ಮಸೀದಿಯೂ  ಮಹಿಳೆಯ ಪಾಲಿಗೆ ಬಾಗಿಲು ಮುಚ್ಚಲು ಅವಕಾಶವೇ ಇಲ್ಲ. ಇನ್ನು,
ಮುಟ್ಟಾದ ಸಂದರ್ಭದಲ್ಲಿ ಹೆಣ್ಣಿಗೆ ನಮಾಝೂ ಇಲ್ಲ, ಉಪವಾಸವೂ ಇಲ್ಲ. ಮುಟ್ಟಲ್ಲದ ದಿನಗಳಲ್ಲಿ ನಿರ್ವಹಿಸುತ್ತಿದ್ದ ಆರಾಧನಾ ಕರ್ಮಗಳಲ್ಲಿ ಅನೇಕ ಕರ್ಮಗಳಿಗೆ ಮುಟ್ಟಿನ ಅವಧಿಯಲ್ಲಿ ರಿಯಾಯಿತಿಯನ್ನು ನೀಡಲಾಗಿದೆ. ಮುಟ್ಟಿನ ಸಮಯದಲ್ಲಿ ನಮಾಝೇ ಇಲ್ಲ ಅಂದಮೇಲೆ  ಮಸೀದಿ ಪ್ರವೇಶಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಸೀದಿ ಇರು ವುದೇ ನಮಾಝïಗೆ. ನಮಾಝೇ ಮಾಡದವರು ಮಸೀದಿಗೆ ಪ್ರವೇಶಿಸಿ  ಮಾಡುವುದಾದರೂ ಏನು? ನಿಜವಾಗಿ, ಶಬರಿಮಲೆ ವಿವಾದ ಮುಟ್ಟಿನದ್ದಲ್ಲ. ಮುಟ್ಟಿನ ಕಾರಣಕ್ಕಾಗಿಯೇ ಹೆಣ್ಣನ್ನು ಶಬರಿಮಲೆ ಯಿಂದ  ದೂರ ಇಡುವುದಾದರೆ ಮುಟ್ಟಿನ ಅವಧಿ ಕಳೆದ ಬಳಿಕ ಆಕೆಯನ್ನು ದೇವಾಲಯದೊಳಗೆ ಸೇರಿಸಿಕೊಳ್ಳ ಬಹುದಿತ್ತು. ಮುಟ್ಟಿಲ್ಲದ ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂಬ ನಿಯಮ ಜಾರಿಗೊಳಿಸಿದರೆ ಇಡೀ ವಿವಾದ ತಣ್ಣಗಾಗಬಹುದಿತ್ತು. ಆದರೆ, ಶಬರಿಮಲೆ  ವಿವಾದ ಮುಟ್ಟಿನದ್ದಲ್ಲ. ಅದಕ್ಕೆ ಬೇರೆಯದೇ ಆದ ಕಾರಣಗಳಿರಬಹುದು. ಆದರೆ ಈ ಕಾರಣಗಳ ಕುರಿತು ತಳಸ್ಪರ್ಶಿ ಅಧ್ಯಯನ ನಡೆಸುವ  ಪ್ರಯತ್ನಗಳು ನಡೆದಿರುವುದು ಕಡಿಮೆ ಎಂದೇ ಹೇಳಬಹುದು. ಸದ್ಯದ ಅಗತ್ಯ ಅದು. ಈ ಕುರಿತಂತೆ ಹೆಚ್ಚೆಚ್ಚು ಚರ್ಚೆ ಮತ್ತು ಜಾಗೃತಿಗಳಾಗುತ್ತಾ ಹೋದಂತೆ ಮುಚ್ಚಿದ ಬಾಗಿಲುಗಳೂ ಮಹಿಳೆಗೆ ತೆರೆಯುತ್ತಾ ಹೋಗಬಹುದು. ಹಾಗಂತ,
ಮಧ್ಯರಾತ್ರಿ ಪೊಲೀಸ್ ಬೆಂಗಾವಲಿನಲ್ಲಿ ಮಹಿಳೆ ದೇವಾಲಯ ಪ್ರವೇಶಿಸುವುದು ಈ ಸಮಸ್ಯೆಗೆ ಪರಿಹಾರ ಅಲ್ಲ. ಅಂಥ ಪ್ರವೇಶದಲ್ಲಿ ಭಕ್ತಿ  ಇರುವುದಕ್ಕೆ ಸಾಧ್ಯವೂ ಇಲ್ಲ. ಮಸೀದಿಯಾಗಲಿ, ದೇವಾಲಯವಾಗಲಿ ಭಕ್ತಿ ಅರ್ಪಣೆಯ ತಾಣಗಳೇ ಹೊರತು ಜಿದ್ದಾಜಿದ್ದಿನ ಕೇಂದ್ರಗಳಲ್ಲವಲ್ಲ. ಅಲ್ಲದೇ, ಹೆಣ್ಣಿನ ಪ್ರವೇಶದಿಂದ ಒಂದು ಭಕ್ತಿ ಕೇಂದ್ರ ಮಲಿನವಾಗುವುದೂ ಇಲ್ಲ ಮತ್ತು ಜಿದ್ದಿನಿಂದ ಪ್ರವೇಶಿಸಿದ ತಕ್ಷಣ ಮಹಿಳೆ  ವಿಮೋಚನೆಗೊಳ್ಳುವುದೂ ಇಲ್ಲ. ಸಿರಿಯಾದ ಆ ಅಪ್ಪನಂತೆ ಮುಟ್ಟನ್ನು ಅತ್ಯಂತ ತಣ್ಣಗೆ ಮತ್ತು ವಿವೇಕದಿಂದ ಅರ್ಥೈಸುವ ಮತ್ತು ತಿಳಿ ಹೇಳುವ ಸಂದರ್ಭಗಳು ಇವತ್ತು ಹೆಚ್ಚೆಚ್ಚು ನಿರ್ಮಾಣವಾಗಬೇಕು. ನಿಜ,
ಮುಟ್ಟು ಪ್ರಕೃತಿ ಸಹಜ ಕ್ರಿಯೆ. ಅದು ಅಪವಿತ್ರವಲ್ಲ.

No comments:

Post a Comment