Tuesday, January 15, 2019

ಮೇಲ್ಜಾತಿ ಮೀಸಲಾತಿಯ ಒಳ-ಹೊರಗೆ



ಮಂಡಲ್ ಆಯೋಗ
ಕೇಳ್ಕರ್ ಆಯೋಗ
ಹಿಂದುಳಿದ ಜಾತಿಗಳ ರಾಷ್ಟ್ರೀಯ ಆಯೋಗ
ಸಾಚಾರ್ ಸಮಿತಿ
ರಂಗನಾಥ್ ಮಿಶ್ರ ಆಯೋಗ
ಸುಧೀರ್ ಆಯೋಗ
ಮತ್ತು ಇಂಥ ಇನ್ನಿತರ ಆಯೋಗಗಳನ್ನು ಸ್ವತಂತ್ರ ಭಾರತದಲ್ಲಿ ರಚಿಸಲಾಗಿರುವುದು ಯಾಕೆ ಗೊತ್ತೇ? ಅನುಸೂಚಿತ ಜಾತಿ (SC), ಅನುಸೂಚಿತ ವರ್ಗ (ST) ಮತ್ತು ಇತರೇ ಹಿಂದುಳಿದ ಜಾತಿ (OBC)ಗಳ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಲು ಮತ್ತು ಅವರ ಸಬಲೀಕರಣಕ್ಕಾಗಿ ಶಿಫಾರಸ್ಸುಗಳನ್ನು ಪಡೆದುಕೊಳ್ಳಲು. ಇವರು ಸಬಲರಲ್ಲ ಅನ್ನುವುದು ಈ ದೇಶದ ಆಡಳಿತಗಾರರಿಗೆ ಮೊದಲೇ ಗೊತ್ತಿತ್ತು. ಅದು  ಐತಿಹಾಸಿಕ ಸತ್ಯ. ಈ ದೇಶದ ಮೇಲ್ಜಾತಿಯ ಮಂದಿ ಇಲ್ಲಿನ ಮೂಲ ನಿವಾಸಿಗಳಾದ ಮಾದಿಗ, ಹೊಲೆಯ, ಬೇಡರು, ಹಕ್ಕಿಪಿಕ್ಕಿ, ಕುರುಬ,  ಮಲೆಕುಡಿಯ, ಕೊರಗ, ಕಾಡುಕುರುಬ, ಬೆಸ್ತ, ಅಗಸ, ಕುಂಬಾರ, ತಿಗಳ, ಮಡಿವಾಳ, ಅಕ್ಕಸಾಲಿಗ ಮುಂತಾದ ಹೆಸರಲ್ಲಿ ಗುರುತಿಸಿಕೊಳ್ಳುವ  ನಮ್ಮ ಬಾಲ್ಯದ ಸಮು ದಾಯಗಳೂ ಸೇರಿದಂತೆ ಸುಮಾರು 1000ಕ್ಕಿಂತಲೂ ಅಧಿಕ ಸಮುದಾಯಗಳನ್ನು ಬಹು ಹಿಂದಿನ ಕಾಲದಿಂದಲೇ  ತೀರಾ ಅಸ್ಪೃಶ್ಯವಾಗಿ ಕಾಣುತ್ತಾ ಬಂದಿದೆ ಅನ್ನುವುದು ಆಧಾರಗಳ ಅಗತ್ಯ ವಿಲ್ಲದಷ್ಟು ಸ್ಪಷ್ಟ. ಗವರ್ನ್‍ಮೆಂಟ್ ಆಫ್ ಇಂಡಿಯಾ ಆ್ಯಕ್ಟ್  ಎಂಬ ಕಾಯ್ದೆಯ ಮೂಲಕ ಬ್ರಿಟಿಷ್ ಸರಕಾರವು ದಲಿತರಿಗಾಗಿ 1919ರಲ್ಲೇ ಮೀಸಲಾತಿಯನ್ನು ಜಾರಿಗೆ ತಂದಿತ್ತು. 1932ರಲ್ಲಂತೂ  ದೊಡ್ಡದೊಂದು ಸಂಘರ್ಷವೇ ನಡೆಯಿತು. ಆಗ ಬ್ರಿಟಿಷ್ ಪ್ರಧಾನಿ ಯಾಗಿದ್ದುದು ರಾಮ್ಸೆ ಮೆಕ್ ಡೊನಾಲ್ಡ್. ಅವರು ದಲಿತ ಸಮು  ದಾಯಕ್ಕೆ ಮೀಸಲಾತಿಯ ಪ್ರಸ್ತಾಪವನ್ನು ಗಾಂಧೀಜಿಯ ಮುಂದಿಟ್ಟರು. ದಲಿತರು ಮಾತ್ರ ಓಟು ಹಾಕಬಹುದಾದ ಕ್ಷೇತ್ರಗಳನ್ನು ಗುರುತಿಸಿ  ಅಲ್ಲಿಂದ ದಲಿತ ಪ್ರತಿನಿಧಿಗಳನ್ನು ಶಾಸನ ಸಭೆಗಳಿಗೆ ಆಯ್ಕೆ ಮಾಡುವುದು ಮತ್ತು ಅದೇವೇಳೆ, ಉಳಿದ ಕಡೆಯೂ ದಲಿತರಿಗೆ ಸ್ಪರ್ಧಿಸುವ  ಮತ್ತು ಓಟು ಹಾಕುವ ಅವಕಾಶವನ್ನೂ ನೀಡುವುದು ಅವರ ಉದ್ದೇಶವಾಗಿತ್ತು. ಇದರ ಜೊತೆಗೇ ಅವರು ‘ಕೋಮು ಪುರಸ್ಕಾರ’ ಅನ್ನುವ  ಇನ್ನೊಂದು ಪ್ರಸ್ತಾಪವನ್ನೂ ಮುಂದಿಟ್ಟರು. ಅದರಂತೆ ಮುಸ್ಲಿಮ್, ಸಿಕ್ಖ್, ಭಾರತೀಯ ಕ್ರೈಸ್ತರು, ಆಂಗ್ಲೋ ಇಂಡಿಯನ್ಸ್ ಮತ್ತು ಯುರೋಪಿ  ಯನ್ನರಿಗೆ ಶಾಸನ ಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯವನ್ನು ಕಲ್ಪಿಸುವುದು. ಅಂಬೇಡ್ಕರ್ ಅವರಿಗೆ ರಾಮ್ಸೆ ಅವರ ಈ ಪ್ರಸ್ತಾಪ ಹಿಡಿಸಿತು.  ಅವರು ಬೆಂಬಲಿಸಿದರು. ಆದರೆ ಗಾಂಧೀಜಿ ತೀವ್ರ ವಾಗಿ ವಿರೋಧಿಸಿದರು. ಸತ್ಯಾಗ್ರಹ ಕೈಗೊಂಡರು. ಕೊನೆಗೆ ಪೂನಾ ಒಪ್ಪಂದ ಎಂಬ  ಹೆಸರಲ್ಲಿ ಗುರುತಿಸಿಕೊಂಡಿರುವ ಒಡಂಬಡಿಕೆಯಲ್ಲಿ ದಲಿತರಿಗೆ ಮೀಸಲು ಕ್ಷೇತ್ರವನ್ನು ನೀಡುವುದಕ್ಕೆ ತೀರ್ಮಾನಿಸಲಾಯಿತು. ಅಂದಹಾಗೆ,
ದಟ್ಟ ದಾರಿದ್ರ್ಯದಿಂದ ಬಳಲುತ್ತಿದ್ದ ಮತ್ತು ತುಳಿತಕ್ಕೊಳಗಾದ ಸಮುದಾಯವನ್ನು ಮೇಲೆತ್ತುವ ದಾರಿಯಲ್ಲಿ ಎದುರಾದ ಸವಾಲು ಇದೊಂದೇ  ಅಲ್ಲ, ಸ್ವಾತಂತ್ರ್ಯಾ ನಂತರ ಇಂಥ ಅನೇಕ ಸವಾಲು ಗಳು ಎದುರಾದುವು. 1979 ಜನವರಿ 6ರಂದು ಆಗಿನ ಕೇಂದ್ರ ಸರಕಾರವು ಬಿ.ಪಿ.  ಮಂಡಲ್ ಅವರಲ್ಲಿ ದಲಿತ ಸಮುದಾಯದ ಮೇಲೆ ಅಧ್ಯಯನ ನಡೆಸಿ ವರದಿ ಒಪ್ಪಿಸಲು ಕೇಳಿಕೊಂಡಿತು. ಆ ವರದಿಯ ಆಧಾರದಲ್ಲಿ  ಪ್ರಧಾನಿ ವಿ.ಪಿ. ಸಿಂಗ್ ಅವರು 1989ರಲ್ಲಿ ದಲಿತ ಸಮುದಾಯಕ್ಕೆ ಮೀಸಲು ನೀತಿಯನ್ನು ಜಾರಿ ಗೊಳಿಸಿದರು. ಇದರ ವಿರುದ್ಧ ಉತ್ತರ ಭಾರತದಲ್ಲಿ ಬಹುದೊಡ್ಡ ಪ್ರತಿಭಟನೆ ನಡೆಯಿತು. ವಿದ್ಯಾರ್ಥಿಗಳು ಬೀದಿಗಿಳಿದರು. ದೆಹಲಿಯ ದೇಶ್‍ಬಂಧು ಕಾಲೇಜಿನ ವಿದ್ಯಾರ್ಥಿ ರಾಜೀವ್  ಗೋಸ್ವಾಮಿ ಎನ್ನುವವ 1990 ಸೆಪ್ಟೆಂಬರ್ 19ರಂದು ಮೈಗೆ ಬೆಂಕಿ ಹಚ್ಚಿ ಕೊಂಡು ಆತ್ಮಹತ್ಯೆಗೆ ಯತ್ನಿಸಿದ. ಇದು ಪ್ರತಿಭಟನೆಗೆ ಕಿಚ್ಚು  ಹಚ್ಚಿತು. ದಲಿತರಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದ ಮಂಡಲ್ ವರದಿಯನ್ನು ಜಾರಿಗೊಳಿಸಬಾರದು ಎಂಬುದು ಪ್ರತಿಭಟನಾಕಾರರ  ಒಟ್ಟಾರೆ ಧ್ವನಿಯಾಗಿತ್ತು. ಮೇಲ್ಜಾತಿಗಳು ಈ ಧ್ವನಿಯ ಹಿಂದಿದ್ದುವು. ಸುಮಾರು, 200ರಷ್ಟು ವಿದ್ಯಾರ್ಥಿಗಳು ಮೈಗೆ ಬೆಂಕಿ ಹಚ್ಚಿಕೊಂಡರು. ಇದರಲ್ಲಿ ಸುರೀಂದರ್ ಸಿಂಗ್ ಚೌಹಾಣ್ ಅನ್ನುವ ವಿದ್ಯಾರ್ಥಿ 1990 ಸೆಪ್ಟೆಂಬರ್  24ರಂದು ಸಾವಿಗೀಡಾದ. ದಲಿತರಿಗೆ ಮೀಸಲಾತಿ ಕೊಡುವ ದಾರಿಯಲ್ಲಿ ಎದುರಾದ ಸವಾಲುಗಳ ಸ್ಯಾಂಪಲ್ ಇವು. ಆಯೋಗಗಳನ್ನು  ರಚಿಸುವಂತೆ ಸರಕಾರವನ್ನು ಒತ್ತಾಯಿಸುವುದು, ಬಳಿಕ ಆಯೋಗದ ವರದಿಯನ್ನು ಜಾರಿ ಮಾಡುವಂತೆ ಪ್ರತಿ ಭಟಿಸುವುದು, ವಿರೋಧಿಗಳಿಂದ ಏಟು ತಿನ್ನುವುದು, ಲಾಠಿ ಚಾರ್ಜ್, ಬಂಧನ ಕೇಸುಗಳನ್ನು ಮೈಮೇಲೆ ಎಳೆದುಕೊಳ್ಳುವುದು ಇತ್ಯಾದಿ ಇತ್ಯಾದಿಗಳನ್ನು ದಲಿತರು  ಎದುರಿಸಿದ ಬಳಿಕವೇ ಇಲ್ಲಿ ಮೀಸಲಾತಿ ಜಾರಿಗೊಂಡಿದೆ. ಆದರೆ, ಅಚ್ಚರಿ ಏನೆಂದರೆ, ಕಳೆದ ವಾರ ಕೇಂದ್ರ ಸರಕಾರ ಘೋಷಿಸಿದ ಮೇಲ್ಜಾತಿ ಮೀಸಲಾತಿಗೆ ಇಂಥದ್ದೊಂದು ಪ್ರಕ್ರಿಯೆಯೇ ನಡೆದಿಲ್ಲ. ಯಾವ ಆಯೋಗಗಳೂ ರಚನೆಯಾಗಿಲ್ಲ. ವರದಿ ಮಂಡನೆಯಾಗಿಲ್ಲ. ದಲಿತ ಸಮೂಹದಂತೆ ಮೇಲ್ಜಾತಿ ಸಮೂಹದ ಮೇಲೆ ಆದ ದೌರ್ಜನ್ಯಗಳ ಪಟ್ಟಿ ತಯಾರಿಸಲಾಗಿಲ್ಲ. ಮುಖ್ಯವಾಗಿ, ದಲಿತ ಮೀಸಲಾತಿಗೆ  ಆಧಾರವಾಗಿ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಳಸಿ ಕೊಳ್ಳಲಾಗಿತ್ತು. ದಲಿತರ ಮನೆಯಲ್ಲಿ ಶಿಶು ಮರಣದ  ಅನುಪಾತ, ಪ್ರಸವ ಮರಣದ ಅನುಪಾತ, ಮನೆಯಲ್ಲೇ ಆದ ಪ್ರಸವ, ಆದಾಯ ಇತ್ಯಾದಿ ಇತ್ಯಾದಿಗಳನ್ನು ಪರಿಗಣಿಸಿ ಮೀಸಲಾತಿಗೆ ಈ ಸಮುದಾಯ ಅರ್ಹವೋ ಅನರ್ಹವೋ ಎಂದು ತೀರ್ಮಾನಿಸಲಾಗುತ್ತದೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಾನಮಾನಗಳು ಮೀಸಲಾತಿಯ ಸಮಯದಲ್ಲಿ ಬಹಳ ಮಹತ್ವ ಪಡೆಯುತ್ತವೆ. ಇದಕ್ಕೆ ಬಹುಮುಖ್ಯವಾದ ಕಾರಣವೊಂದಿದೆ. ಅದೇನೆಂದರೆ,
ಬ್ರಾಹ್ಮಣನ ಬಡತನ ಮತ್ತು ದಲಿತನ ಬಡತನ ಇವೆರಡೂ ಸಮಾನವಲ್ಲ. ಒಂದು ದಿನದಲ್ಲಿ ಬ್ರಾಹ್ಮಣ ಗಳಿಸುವುದು 100 ರೂಪಾಯಿ. ಆತ ನಿಗೆ ಹೆಂಡತಿ, ಒಂದು ಗಂಡು ಮತ್ತು ಮೂರು ಮಕ್ಕಳಿವೆ ಎಂದಿಟ್ಟುಕೊಳ್ಳಿ. ಸೋಗೆ ಮಾಡಿನ ಗುಡಿಸಲು ಮನೆ. ನೀರಿಗೆ ಊರ ಬಾವಿಯನ್ನು ಆತ ಆಶ್ರಯಿಸಿದ್ದೇನೆ. ವಿದ್ಯುತ್ ಸಂಪರ್ಕ ಇಲ್ಲ. ಕೂಲಿ ಕೆಲಸ ಇತ್ಯಾದಿ ಇತ್ಯಾದಿ. ಅದೇವೇಳೆ, ದಲಿತನ ಬದುಕೂ ಇದೇ  ರೀತಿಯಲ್ಲಿದೆ ಎಂದಿಟ್ಟುಕೊಳ್ಳಿ. ಆತನೂ ಕೂಲಿ ಕೆಲಸಗಾರ. ಪತ್ನಿ, ಒಂದು ಗಂಡು, ಮೂರು ಹೆಣ್ಣು ಮಕ್ಕಳು. ವಿದ್ಯುತ್ ಸಂಪರ್ಕ ಇಲ್ಲದ,  ಊರ ಬಾವಿಯಿಂದ ನೀರು ತರಬೇಕಾದ ಸ್ಥಿತಿ. ಆದರೂ,
ಇವರಿಬ್ಬರೂ ಸಮಾನವಲ್ಲ. ಇವರ ಬಡತನವೂ ಸಮಾನ ಅಲ್ಲ. ಬ್ರಾಹ್ಮಣನನ್ನು ಈ ದೇಶ ಆದರಿಸುತ್ತದೆ. ಆತನನ್ನು ಪಕ್ಕದ ಮನೆಯವರು,  ಹೊಟೇಲಿನವರು, ಅಂಗಡಿಯವರು ಕರೆದು ಮಾತಾಡಿಸುತ್ತಾರೆ. ಚಾ, ಊಟ ಕೊಡುತ್ತಾರೆ. ಕ್ಷೇಮ ಸಮಾಚಾರ ವಿಚಾರಿಸುತ್ತಾರೆ. ಮನೆಯೊಳಗೆ ಕರೆದು ಕೂರಿಸುತ್ತಾರೆ. ಆದರೆ ಬಡ ದಲಿತನ ಮಟ್ಟಿಗೂ ಈ ಆದರಗಳಾವುವೂ ಸಾಧ್ಯವಾಗುವುದಿಲ್ಲ. ಆತನಿಗೆ ಹಸಿವಾದರೂ ಪಕ್ಕದ  ಮನೆಯೇ ಬಾಗಿಲು ಮುಚ್ಚುವ ಸ್ಥಿತಿಯಿದೆ. ಮನೆಯೊಳಗೆ ಕರೆದು ಕೂರಿಸುವವರಿಲ್ಲ. ಅಂಗಡಿ, ಹೊಟೇಲುಗಳಲ್ಲಿ ಆದರ, ಗೌರವ  ಸಿಗುವುದಿಲ್ಲ. ಒಂದು ರೀತಿ ಯಲ್ಲಿ ಇಬ್ಬರದೂ ಬಡತನವೇ ಆದರೂ ಅವರಿಬ್ಬರೂ ಆ ಬಡತನವನ್ನು ಅನುಭವಿಸುವ ರೀತಿ ಮಾತ್ರ ಬೇರೆ  ಬೇರೆ. ಇದಕ್ಕೆ ಕಾರಣವೇನೆಂದರೆ, ಅವರ ಹುಟ್ಟು. ಬಡ ಬ್ರಾಹ್ಮಣ ಬಡತನ ಎಂಬ ಏಕೈಕ ಸಮಸ್ಯೆಯನ್ನು ಎದುರಿಸುವಾಗ ಬಡ ದಲಿತ  ಬಡತನ ಮತ್ತು ಸಾಮಾಜಿಕ ಅಸಮಾನತೆಯೆಂಬ ಎರಡು ಸಮಸ್ಯೆಯನ್ನು ಎದುರಿಸುತ್ತಿರುತ್ತಾನೆ. ಆರ್ಥಿಕ ಆಧಾರಿತ ಮೀಸಲಾತಿ ಪ್ರಶ್ನಾರ್ಹವಾಗುವುದು ಇಲ್ಲಿ. ಬರೇ ಆರ್ಥಿಕತೆಯನ್ನು ಆಧಾರ ವಾಗಿಟ್ಟುಕೊಂಡು ಮೀಸಲು ನೀತಿಯನ್ನು ಸಿದ್ಧಪಡಿಸುವುದರಿಂದ ಮೇಲ್ಜಾತಿ ¸ ಸಮುದಾಯಕ್ಕೆ ಅಪಾರ ಪ್ರಯೋಜನವಾಗಬಹುದು. ಅದೇವೇಳೆ, ದಲಿತ ಸಮುದಾಯ ಮತ್ತೆ ಹಳೆಕಾಲದ ಸ್ಥಿತಿಗೆ ಮರಳಬಹುದು. ಸಂವಿಧಾನ ನಿರ್ಮಾತೃಗಳು ಈ ಸಮಸ್ಯೆಯನ್ನು ಆರಂಭದಲ್ಲೇ  ಗುರುತಿಸಿದ್ದರು. ದಲಿತ ಸಮುದಾಯ ಎದುರಿಸು ತ್ತಿರುವುದು ಬ ಡತನವೊಂದಷ್ಟೇ ಅಲ್ಲ, ಸಾಮಾಜಿಕ ಬಡತನವನ್ನೂ ಎದುರಿಸುತ್ತಿದೆ ಅನ್ನುವುದು ಅವರಿಗೆ ಗೊತ್ತಿತ್ತು. ಈ ಕಾರಣಕ್ಕಾಗಿಯೇ ಮೀಸಲಾತಿಗೆ  ಮಾನದಂಡವಾಗಿ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿ-ಗತಿಯನ್ನು ಪರಿಗಣಿಸುವುದಕ್ಕೆ ಅದು ಒಲವು ವ್ಯಕ್ತಪಡಿಸಿತ್ತು. 1991 ಸೆಪ್ಟೆಂ ಬರ್ 25ರಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಮೇಲ್ಜಾತಿಗೆ ಆರ್ಥಿಕ ಆಧಾರದಲ್ಲಿ 10% ಮೀಸಲಾತಿ ಘೋಷಿಸಿದಾಗ ಅಥವಾ  ಮನಮೋಹನ್ ಸಿಂಗ್ ಸರಕಾರವು 2014ರಲ್ಲಿ ಜಾಟ್ ಸಮುದಾಯಕ್ಕೆ ಮೀಸಲಾತಿಯನ್ನು ಘೋಷಿಸಿದಾಗ ಅದನ್ನು ಸುಪ್ರೀಮ್ ಕೋರ್ಟು  ತಿರಸ್ಕರಿಸಿದ್ದು ಈ ಕಾರಣಕ್ಕಾಗಿಯೇ. ಮೀಸಲಾತಿಯ ಮಾನದಂಡವನ್ನು ಕೋರ್ಟು ಪ್ರಶ್ನಿಸಿತ್ತು. ಬ್ರಾಹ್ಮಣರಲ್ಲಿರುವ ಬಡವರ ಸಂಖ್ಯೆ, ಅವರ  ಸ್ಥಿತಿಗತಿ, ಆದಾಯ, ಮನೆ ನಿರ್ವಹಣೆ ಇತ್ಯಾದಿ ಯಾವುದರ ಸಮೀಕ್ಷೆಯನ್ನೂ ನಡೆಸದೆಯೇ ಬರೇ ಮೀಸಲು ಘೋಷಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ ಎಂಬ ಧಾಟಿಯಲ್ಲಿ ಸುಪ್ರೀಮ್ ಕೋರ್ಟು ಮಾತಾಡಿತ್ತು.
ಮೀಸಲಾತಿ ಎಂಬುದು ಭಿಕ್ಷೆ ಅಲ್ಲ. ತಲೆತಲಾಂತರಗಳಿಂದ ಒಂದು ಸಮುದಾಯವನ್ನು ತುಳಿದು, ಧಿಕ್ಕರಿಸಿ, ಅವಮಾನಿತವಾಗಿ  ನಡೆಸಿಕೊಂಡು ಬಂದುದಕ್ಕೆ ಸಮಾಜ ಮಾಡುವ ಸಾರ್ವಜನಿಕ ಕ್ಷಮಾಪಣೆ ಅಥವಾ ಆತ್ಮನಿರೀಕ್ಷಣೆ. ಈ ಮೀಸಲಾತಿಯ ಅವಧಿ ಎಲ್ಲಿಯವರೆಗೆ ಎಂದು ಪ್ರಶ್ನಿಸುವವರಿದ್ದಾರೆ. ಅದಕ್ಕಿರುವ ಉತ್ತರ ಏನೆಂದರೆ, ಓರ್ವ ದಲಿತನನ್ನು ಮೇಲ್ಜಾತಿಯವನಂತೆ ಯಾವಾಗ ಈ ಸಮಾಜ  ಸ್ವೀಕರಿಸುತ್ತದೋ ಅಲ್ಲಿಯವರೆಗೆ. ಸ್ವಾತಂತ್ರ್ಯ ಲಭ್ಯವಾಗಿ ಬರೇ 7 ದಶಕಗಳಷ್ಟೇ ಆಗಿವೆ. ಸಾವಿರಾರು ವರ್ಷಗಳ ಇತಿಹಾಸವಿರುವ  ದಮನಕಾರಿ ಮನೋಭಾವದಿಂದ ಮೇಲ್ಜಾತಿ ಸಮುದಾಯ ವೊಂದಕ್ಕೆ ಹೊರತರಲು ಈ 7 ದಶಕಗಳು ಸಾಕಾಗಲಾರದು ಅನ್ನುವುದಕ್ಕೆ  ಪ್ರತಿದಿನ ಪುರಾವೆಗಳು ಸಿಗುತ್ತಲೇ ಇವೆ. ತಮಾಷೆ ಏನೆಂದರೆ, ಮೋದಿ ಸರಕಾರ ಘೋಷಿಸಿರುವ ಆರ್ಥಿಕ ಮೀಸಲಾತಿಯ ಮಾನದಂಡ. 8  ಲಕ್ಷ ರೂಪಾಯಿ ವಾರ್ಷಿಕ ಆದಾಯವಿರುವ, 5 ಎಕರೆ ಭೂಮಿಯಿರುವ ಮತ್ತು 1 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮನೆ ಇರುವವರು  ಮೇಲ್ಜಾತಿ ಮೀಸಲಾತಿಗೆ ಅರ್ಹರು ಎಂದು ಸರಕಾರ ಹೇಳಿದೆ. ಇದೇವೇಳೆ, ಓರ್ವ ದಲಿತನ ಖಾತೆಯಲ್ಲಿ 3 ಲಕ್ಷ ರೂಪಾಯಿ ಇದ್ದರೆ ಆತ  ಕಡ್ಡಾಯವಾಗಿ ತೆರಿಗೆ ಕಟ್ಟಬೇಕಾಗುತ್ತದೆ. ಮುಸ್ಲಿಮನ ಆದಾಯ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಆತನಿಗೆ ಸ್ಕಾಲರ್‍ಶಿಪ್ ಸಿಗುವುದಿಲ್ಲ.  ಒಂದು ರೀತಿಯಲ್ಲಿ, ಬ್ಯಾಂಕ್ ಖಾತೆಯಲ್ಲಿ 3 ಲಕ್ಷ ರೂಪಾಯಿ ಇದ್ದವ ಅಥವಾ ಆದಾಯ ಇರುವವ ಕೇಂದ್ರ ಸರಕಾರದ ಸಾಮಾಜಿಕ  ಮಾನದಂಡದಂತೆ ಶ್ರೀಮಂತ. ಆತನಿಗೆ ಕೊಡುವುದಕ್ಕಿಂತ ಆತನಿಂದ ಪಡೆಯುವುದೇ ಸರಿ ಎಂದು ಸರಕಾರ ಹೇಳುತ್ತಿದೆ. ಅದೇವೇಳೆ,  ಮೇಲ್ಜಾತಿ ಸಮುದಾಯದಲ್ಲಿ 5 ಎಕರೆ ಭೂಮಿ ಇದ್ದರೂ ಬಡವ, 8 ಲಕ್ಷ ರೂಪಾಯಿ ಆದಾಯವಿದ್ದರೂ ಬಡವ, ಸಾವಿರ ಚದರ ಅಡಿ  ವಿಸ್ತಾರದಲ್ಲಿ ಮನೆ ಹೊಂದಿದ್ದರೂ ಬಡವ. ಇದೊಂದು ಬಗೆಯಲ್ಲಿ ದ್ವಂದ್ವ. ನಿಜವಾಗಿ, ಈ ದ್ವಂದ್ವಕ್ಕೆ ಕಾರಣ ಏನೆಂದರೆ, ಈ ಮೀಸಲಾತಿಯ ಉದ್ದೇಶ ಮೇಲ್ಜಾತಿಯನ್ನು ಸಂತೃಪ್ತಿಪಡಿಸುವುದೇ ಹೊರತು ಸಬಲೀಕರಣಗೊಳಿಸುವುದಲ್ಲ ಎಂಬುದು. ಮುಖ್ಯವಾಗಿ ಉತ್ತರ ಭಾರತದ ಮೇಲ್ಜಾತಿ ಸಮೂಹವನ್ನು ಗುರಿಯಾಗಿಸಿಕೊಂಡೇ ಈ ಮೀಸಲು ನಿಯಮವನ್ನು ಜಾರಿಗೆ ತರಲಾಗಿದೆ. ಅಲ್ಲಿ ಮರಾಠರು,  ಪಾಟೀದಾರರು, ಗುಜ್ಜಾರರು, ಕಾಪುಗಳೆಲ್ಲ ದೊಡ್ಡ ದೊಡ್ಡ ಜಮೀನ್ದಾರರು. ಶ್ರೀಮಂತ ರೈತರು. ಅವರಿಗೆ 1 ಲಕ್ಷ ರೂಪಾಯಿಯನ್ನು ಮೀಸಲು  ಮಾನದಂಡವಾಗಿ ನಿಗದಿಪಡಿಸಿದರೆ ಅವರು ನಕ್ಕಾರು. ನಮ್ಮನ್ನು ದಲಿತರಿಗೆ ಸಮಾನಗೊಳಿಸಿದ್ದೇಕೆ ಎಂದು ಕೆರಳಿಯಾರು. ಅದರಿಂದಾಗಿಯೇ  ದಲಿತರಿಗಿಂತ ಭಿನ್ನವಾದ ಮತ್ತು ಅವರಿಗೆ ಸರಿ ಹೊಂದದ ಆರ್ಥಿಕ ಮಾನದಂಡವನ್ನು ಮೇಲ್ಜಾತಿ ಮೀಸಲಿಗೆ ಸರಕಾರ ನಿಗದಿಪಡಿಸಿರಬ ಹುದು. ಅಂದಹಾಗೆ,
ಮೇಲ್ಜಾತಿಯಲ್ಲಿರುವ ಬಡವರ ಬಗ್ಗೆ, ಅವರ ಸ್ಥಿತಿಗತಿಯ ಬಗ್ಗೆ ಮತ್ತು ಮೀಸಲಾತಿಗೆ ಅವರಿಗಿರುವ ಅರ್ಹತೆಯ ಬಗ್ಗೆ ಯಾವ ಸಮೀಕ್ಷೆಯನ್ನೂ ನಡೆಸದೆಯೇ ಅವರಿಗೆ ಮೀಸಲಾತಿ ಘೋಷಿಸುವುದನ್ನು ಸುಪ್ರೀಮ್ ಕೋರ್ಟು ಒಪ್ಪಲ್ಲ ಅನ್ನುವುದು ಮೋದಿಗೂ ಗೊತ್ತು.  ಜೇಟ್ಲಿಗೂ ಗೊತ್ತು. ಮಾತ್ರವಲ್ಲ, ಮಾಸ್ಟರ್ ಸ್ಟ್ರೋಕ್ ಎಂಬ ನಾಮಕರಣದಲ್ಲಿ ಬ್ಯಾಂಡು ವಾದ್ಯದೊಂದಿಗೆ ಮೋದಿ ಜಪ ಮಾಡುತ್ತಿರುವ  ಮಾಧ್ಯಮ ವೃಂದಕ್ಕೂ ಗೊತ್ತು. ಇದೊಂದು ಪೊಲಿಟಿಕಲ್ ಜುಮ್ಲಾ. ಅಷ್ಟೇ.

No comments:

Post a Comment