Monday, September 1, 2014

ವೃದ್ಧಾಶ್ರಮದಿಂದ ಗ್ರೇಸಿ ಮಾರ್ಟಿಸ್ ಬರೆದ ಪತ್ರ






 
   Every morning
   He helps her get up
   Get ready for a day
   That she may not remember tomorrow
   ........ 
ಗ್ರೇಸಿ ಮಾರ್ಟಿಸ್ ಬರೆದ ಪತ್ರದ ಒಂದು ಭಾಗ
   ಹೀಗೆ ಆರಂಭವಾಗಿ ನಾಲ್ಕೈದು ಚರಣಗಳಲ್ಲಿ ಕೊನೆಗೊಳ್ಳುವ ಕವನವು 2006 ಫೆಬ್ರವರಿಯಲ್ಲಿ ಪ್ರಕಟವಾದಾಗ ಕೇಟ್ ಕಾರ್ಟ್ ರೈಟ್‍ರನ್ನು ಸಾಕಷ್ಟು ಮಂದಿ ಅಭಿನಂದಿಸಿದ್ದರು. ನೆನಪು ಶಕ್ತಿಯನ್ನು ಕಳಕೊಂಡ ತಾಯಿಯನ್ನು ಎದುರಿಟ್ಟುಕೊಂಡು ಕೇಟ್ ಕಾರ್ಟ್‍ರೈಟ್‍ರು ರಚಿಸಿದ್ದ ಈ ಕವನಕ್ಕೆ ಧಾರಾಳ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದುವು. "ಪ್ರತಿ ಬೆಳಗುಗಳಲಿ| ಅವ ಮಾಡುವವನು ಸಹಾಯ ಅವಳಿಗೆ| ಎದ್ದೇಳಲು| ದಿನದಾರಂಭಕ್ಕೆ ಸಿದ್ಧಗೊಳ್ಳಲು| ಆದರವಳು ಅದನ್ನು ನಾಳೆ ನೆನಪಿಸಲಾರಳು| ಅದುವೇ ಅವನ ಅಳಲು.." ಎಂಬ ಸಾಲುಗಳಲ್ಲಿರುವ ಭಾವುಕತೆಯನ್ನು ಕೊಂಡಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಈ ಹಾಡನ್ನು ಹಂಚಿಕೊಂಡರು. ಅದು ಒಳಗೊಂಡಿರುವ ಭಾವುಕತೆಗಾಗಿ ಇಷ್ಟಪಟ್ಟರು. ತಮ್ಮ ಮನೆ ಮತ್ತು ಪರಿಸರಗಳಲ್ಲಿ ಹಿರಿಯರ ಸ್ಥಿತಿ-ಗತಿಗಳ ಕುರಿತಂತೆ ಈ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದುವು. ಹಿರಿಯರನ್ನು ವೃದ್ಧಾ ಶ್ರಮಗಳಿಗೆ ಅಟ್ಟುವ ಬಗ್ಗೆ, ಅದರ ಅಗತ್ಯ-ಅನಗತ್ಯಗಳ ಕುರಿತಂತೆ ವಾಗ್ವಾದಗಳೂ ನಡೆದುವು. ಆಧುನಿಕ ಜೀವನ ಕ್ರಮಗಳ ಪ್ರಭಾವವನ್ನು ಕೆಲವರು ಅದಕ್ಕೆ ಕಾರಣವಾಗಿ ಮುಂದಿಟ್ಟರು. ಕೆಲವರು ತಿರಸ್ಕರಿಸಿದರು. ಧರ್ಮವನ್ನು ಪರಿಹಾರವಾಗಿ ಮುಂದಿಟ್ಟವರು ಕೆಲವರಾದರೆ, ವೃದ್ಧಾಶ್ರಮಗಳನ್ನೇ ಅನಿವಾರ್ಯವಾಗಿ ಕಂಡವರು ಕೆಲವರು. ಹೀಗೆ ಕೇಟ್‍ರ ಕೆಲವು ಸಾಲುಗಳು ಒಂದು ಗಂಭೀರ ಚರ್ಚೆಯನ್ನೇ ಹುಟ್ಟು ಹಾಕುವಲ್ಲಿ ಸಫಲವಾಗಿದ್ದುವು.
   ವಯಸ್ಸಾಗುವುದು ಪ್ರಕೃತಿ ಸಹಜ ಬೆಳವಣಿಗೆ. ಹುಟ್ಟುವ ಮಗುವಿನಿಂದಲೇ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಇದು ಅರಿವಿಗೆ ಬರುವುದು ವಯಸ್ಸಾದಾಗಲೇ. ಹೆಚ್ಚಿನ ವೇಳೆ ಹಿರಿಯರು ಹಿರಿತನಕ್ಕೆ ಸಜ್ಜುಗೊಂಡಿರುವುದೇ ಇಲ್ಲ. ಮುಪ್ಪನ್ನು ಎದುರಿಸುವ ಕುರಿತು, ಆ ಸಂದರ್ಭದಲ್ಲಿ ತನ್ನ ವರ್ತನೆ, ನಿರೀಕ್ಷೆ, ಸಹನೆ.. ಮುಂತಾದುವುಗಳ ಕುರಿತು ಮಾನಸಿಕ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ತನ್ನ ಬಿಸಿನೆಸ್‍ನಲ್ಲಿ ವೈಫಲ್ಯ ಉಂಟಾದರೆ ಏನು ಮಾಡಬೇಕು ಎಂದು ಆಲೋಚಿಸುವ ಮತ್ತು ವ್ಯಾಪಾರದ ಹಿತ ಕಾಪಾಡುವಲ್ಲಿ ವಿವಿಧ ತಂತ್ರಗಳನ್ನು ಹೆಣೆಯುವ ಮಂದಿ ಧಾರಾಳ ಇದ್ದಾರೆ. ಕಚೇರಿಗೆ ಎರಡು ದಿನ ರಜೆ ಹಾಕಬೇಕೆಂದು ಬಯಸುವ ನೌಕರ, ಅದಕ್ಕಾಗಿ ತಯಾರಿ ನಡೆಸುತ್ತಾನೆ. ಹಾಗಂತ ಇಂಥ ಮುನ್ನೆಚ್ಚರಿಕೆಗಳು ಕೇವಲ ಬ್ಯುಸಿನೆಸ್‍ಗೋ ಕಚೇರಿ ನೌಕರಿಗೋ ಸೀಮಿತವೂ ಅಲ್ಲ. ಎಲ್ಲ ಕ್ಷೇತ್ರಗಳಲ್ಲೂ ಇಂಥದ್ದೊಂದು ತಯಾರಿಯನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಹಾಗಂತ,  ವೃದ್ಧಾಪ್ಯವು ಇವುಗಳಂತೆ ಅಲ್ಲ ಎಂದು ವಾದಿಸಬಹುದಾದರೂ ಅದೂ ಒಂದು ತಯಾರಿಗರ್ಹವಾದ ಸ್ಥಿತಿಯೇ. ವೃದ್ಧಾಪ್ಯವನ್ನು ನಿರ್ಲಕ್ಷಿಸಿ ಬದುಕುವುದರಿಂದ ಅದೇನೂ ನಮ್ಮಿಂದ ದೂರ ಹೋಗುವುದಿಲ್ಲ. ನಿಜವಾಗಿ, ನಮ್ಮ ದೈಹಿಕ-ಮಾನಸಿಕ ಆರೋಗ್ಯವು ನಾವು ವೃದ್ಧಾಪ್ಯವನ್ನು ಹೇಗೆ ನೋಡುತ್ತಿದ್ದೇವೆ ಎಂಬುದನ್ನು ಆಧರಿಸಿಕೊಂಡಿರುತ್ತದೆ. ಅನಾರೋಗ್ಯಕ್ಕೂ ನಮ್ಮ ಮನಸ್ಥಿತಿಗೂ ಹತ್ತಿರದ ನಂಟಿದೆ. ವೃದ್ಧಾಪ್ಯದ ಕುರುಹುಗಳಿಗೂ ನಮ್ಮ ಆಲೋಚನೆಗಳಿಗೂ ನಿಕಟ ಸಂಬಂಧವಿದೆ. ಅನೇಕರನ್ನು ವೃದ್ಧಾಪ್ಯ ಕಾಡುವುದು  ವಯಸ್ಸಿನಿಂದಲ್ಲ, ಮನಸ್ಥಿತಿಯಿಂದ.
   ಯುರೋಪಿಯನ್ ರಾಷ್ಟ್ರಗಳಲ್ಲಿ ವೃದ್ಧಾಪ್ಯದ ಸುತ್ತ ಹತ್ತು-ಹಲವು ಪ್ರಬಂಧಗಳು, ಸರ್ವೇಗಳು ನಡೆದಿವೆ. ವೃದ್ಧಾಪ್ಯವನ್ನೇ ಮುಂದೂಡಬಹುದಾದ ಸಂಶೋಧನೆಗಳಲ್ಲಿ ವಿಜ್ಞಾನಿಗಳು ತೊಡಗಿಸಿಕೊಂಡಿರುವ ಸುದ್ದಿಗಳೂ ಬರುತ್ತಿವೆ. ಯುರೋಪ್‍ನಲ್ಲಿರುವ ವೃದ್ಧಾಶ್ರಮಗಳಿಗೆ ಹೋಲಿಸಿದರೆ, ಭಾರತದಲ್ಲಿರುವ ವೃದ್ಧಾಶ್ರಮಗಳ ಸಂಖ್ಯೆ ಏನೇನೂ ಅಲ್ಲ. ಆದರೂ ವೃದ್ಧಾಶ್ರಮಗಳ ಕುರಿತಂತೆ ಗಂಭೀರ ಚರ್ಚೆ ನಡೆಯಲೇಬೇಕಾಗಿದೆ. ‘ಏಜಿಂಗ್, ಇಂಟರ್ ಜನರೇಶನಲ್ ರಿಲೇಶನ್ಸ್, ಕೇರ್ ಸಿಸ್ಟಮ್ಸ್ ಆ್ಯಂಡ್ ಕ್ವಾಲಿಟಿ ಆಫ್ ಲೈಫ್' ಎಂಬ ಹೆಸರಲ್ಲಿ 2003ರಲ್ಲಿ ನಾರ್ವೆಯಲ್ಲಿ ಪ್ರಬಂಧವೊಂದು ಮಂಡನೆಯಾಗಿತ್ತು. ಜರ್ಮನಿ, ಇಸ್ರೇಲ್, ಸ್ಪೈನ್, ನಾರ್ವೆ ಮತ್ತು ಬ್ರಿಟನ್‍ಗಳು ಧನಸಹಾಯ ನೀಡಿ ರಚಿಸಲಾದ ಸರ್ವೇ ಆಧಾರಿತ ಈ ಪ್ರಬಂಧವು ವೃದ್ಧರ ಹತ್ತು-ಹಲವು ಸಮಸ್ಯೆಗಳನ್ನು ಸಮಾಜದ ಮುಂದಿಟ್ಟಿತು. ಮುಖ್ಯವಾಗಿ ಯುರೋಪಿನಲ್ಲಿ ವೃದ್ಧರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಆಳ ಅಧ್ಯಯನ ನಡೆಸಿದ ಪ್ರಬಂಧವಾಗಿತ್ತದು. ಅದೇ ರೀತಿಯಲ್ಲಿ, ಜಾಸ್ಮೀನ್ ರಾಕ್‍ವೆಲ್ ಎಂಬವರು ಬ್ರಿಟಿಷ್ ಕೊಲಂಬಿಯಾ ಯುನಿವರ್ಸಿಟಿಗಾಗಿ, "ರಿಲೇಶನ್‍ಶಿಪ್ ಆ್ಯಸ್ ರೆಮೆಡಿ: ವಿೂಟಿಂಗ್ ದಿ ಸೋಶಿಯಲ್ ಆ್ಯಂಡ್ ಇಮೋಶನಲ್ ನೀಡ್ಸ್ ಆಫ್ ಎಲ್ಡರ್ಸ್ ಲಿವಿಂಗ್ ಇನ್ ರೆಸಿಡೆನ್ಸಿಯಲ್ ಕೇರ್" ಎಂಬ ಅಧ್ಯಯನಾತ್ಮಕ ಪ್ರಬಂಧವನ್ನು ರಚಿಸಿದ್ದರು. ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ‘ವೃದ್ಧಾಪ್ಯ' ಹಲವು ರೀತಿಯಲ್ಲಿ ಸದಾ ಚರ್ಚೆಯಲ್ಲಿರುವ ಸಂಗತಿ. ಹಾಂಕಾಂಗ್, ಚೀನಾ ಅಥವಾ ದಕ್ಷಿಣೇಶ್ಯದ ರಾಷ್ಟ್ರಗಳಲ್ಲಿ ವೃದ್ಧರ ಸ್ಥಿತಿ-ಗತಿಯನ್ನು ಯುರೋಪಿಯನ್ ರಾಷ್ಟ್ರಗಳ ವೃದ್ಧರ ಸ್ಥಿತಿ-ಗತಿಗಳೊಂದಿಗೆ ಹೋಲಿಸಿಕೊಂಡು ನಡೆಸಲಾದ ಸರ್ವೇಗಳೂ ಧಾರಾಳ ಇವೆ. ಏಶ್ಯನ್ ರಾಷ್ಟ್ರಗಳಲ್ಲಿ ಹೊಸ ತಲೆಮಾರು ಹಿರಿಯರಿಂದ ಭಾವನಾತ್ಮಕವಾಗಿ ದೂರ ಸರಿಯುತ್ತಿರುವ ಬಗ್ಗೆ ಮತ್ತು ಆರ್ಥಿಕ ನೆರವು ಮಾತ್ರವೇ ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತಿರುವ ಬಗ್ಗೆ ಸಾಕಷ್ಟು ವಿವರಗಳೂ ವ್ಯಕ್ತಗೊಂಡಿವೆ. ಅಷ್ಟಕ್ಕೂ, ಇಂಥದ್ದೊಂದು ವಾತಾವರಣ ನಿರ್ಮಾಣಗೊಂಡಿರುವುದಕ್ಕೆ ಮತ್ತು ಅದರ ವ್ಯಾಪ್ತಿ ದಿನೇ ದಿನೇ ವಿಸ್ತಾರಗೊಳ್ಳುತ್ತಿರುವುದಕ್ಕೆ ಕಾರಣಗಳೇನು? ಆಧುನಿಕ ಜೀವನ ಕ್ರಮಗಳೇ? ಶೈಕ್ಷಣಿಕ ಬೆಳವಣಿಗೆಯೇ? ಜೀವನಾನುಕೂಲತೆಗಳೇ? ತಥಾಕಥಿತ ಅಭಿವೃದ್ಧಿಗಳೇ? ಟಿ.ವಿ., ಕಂಪ್ಯೂಟರ್, ಮೊಬೈಲ್‍ಗಳೇ? ಇಂದಿನ ತಲೆಮಾರು ಪ್ರತಿದಿನವೂ ಹೊಸ ಹೊಸ ತಂತ್ರಜ್ಞಾನಗಳನ್ನುಪರಿಚಯಿಸಿಕೊಳ್ಳುತ್ತಿವೆ. ಅತ್ಯಂತ ವೇಗವಾಗಿ Update  ಆಗುತ್ತಿವೆ. ಹಾಗೆಯೇ ಅವು ಮನೆಯ ಹಿರಿಯರು Updateಗೊಂಡಿರಬೇಕೆಂದೂ ಬಯಸುತ್ತಿವೆ. ಮೊಬೈಲನ್ನು ಕೇವಲ ಕರೆ ಮಾಡುವುದಕ್ಕಷ್ಟೇ ಬಳಸುವ ಹಿರಿಯರಿಗೂ ವಿವಿಧ ಆ್ಯಪ್‍ಗಳಿಗಾಗಿ ಬಳಸುವ ಹೊಸ ತಲೆಮಾರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ತಮ್ಮ ಭಾಷೆ, ಹವ್ಯಾಸ, ವೇಗಗಳಿಗೆ ಹಿರಿಯರು ಹೊಂದಿಕೊಳ್ಳಲಾರರು ಎಂಬುದು ಗೊತ್ತಾಗುತ್ತಲೇ ಮಕ್ಕಳು ಹಿರಿಯರಿಂದ ದೂರ ಸರಿದು ಉಪಕರಣಗಳಿಗೆ ಹತ್ತಿರ ವಾಗುತ್ತಿರಬಹುದೇ? ಟಿ.ವಿ. ಕಾರ್ಟೂನ್‍ಗಳಲ್ಲಿ ಅಥವಾ ವಿವಿಧ ಕಾರ್ಯಕ್ರಮಗಳಲ್ಲಿ ಸಿಗುವ ಆನಂದವನ್ನೇ ಹಿರಿಯರ ಒಡನಾಟದಲ್ಲೂ ಯುವ ತಲೆಮಾರು ನಿರೀಕ್ಷಿಸುತ್ತಿರಬಹುದೇ? ನಿಜವಾಗಿ, ಹಿರಿಯರೆಂಬುದು ಒಂದು ಅದ್ಭುತ ಮಾಹಿತಿಕೋಶ. ಅವರಲ್ಲಿ ಕತೆ, ಕವನ, ಹಾಸ್ಯ, ತಮಾಷೆ, ಒಗಟು.. ಎಲ್ಲವೂ ಇರುತ್ತವೆ. ಆದರೆ ಇವನ್ನು ಆಸ್ವಾದಿಸುವುದಕ್ಕೂ ಬರಬೇಕಲ್ಲವೇ? ಟಿ.ವಿ., ಮೊಬೈಲ್‍ಗಳಲ್ಲಿ ಅಥವಾ ಗೆಳೆಯರ ಜೊತೆಗಿನ ಒಡನಾಟದಲ್ಲಿ ಸಿಗುವ ಖುಷಿಯನ್ನು ಹಿರಿಯರಲ್ಲಿ ಹುಡುಕುತ್ತಾ ಅದು ಸಿಗದಾಗ ದೂರ ಸರಿಯುವ ಆಧುನಿಕ ಪೀಳಿಗೆಯಿಂದಾಗಿ ಹಿರಿಯರು ಒಂಟಿತನ ಅನುಭವಿಸುತ್ತಾರೆ. ಅಷ್ಟಕ್ಕೂ, ಹಿರಿಯರೊಂದಿಗೆ ಬೆರೆಯುವ ಕಲೆಯನ್ನು ಮಕ್ಕಳಿಗೆ ನಾವೆಷ್ಟು ಹೇಳಿಕೊಡುತ್ತಿದ್ದೇವೆ? ಅದರ ಸುಖವನ್ನು ಎಷ್ಟು ಮನವರಿಕೆ ಮಾಡಿಕೊಡುತ್ತಿದ್ದೇವೆ? ಮಗನೂ ಸೊಸೆಯೂ ನೌಕರಿ ಮಾಡುತ್ತಿರುವ ಮನೆಯಲ್ಲಿ ಹಿರಿಯರು ಹೆಚ್ಚು ಆಶ್ರಯಿಸುವುದು ಮೊಮ್ಮಕ್ಕಳನ್ನು. ಮೊಮ್ಮಕ್ಕಳೂ ತುಟ್ಟಿಯಾದರೆ ಆ ಬಳಿಕ ಹಿರಿಯರು ಹತಾಶರಾಗುತ್ತಾರೆ. ಆರೋಗ್ಯ ಹದಗೆಡತೊಡಗುತ್ತದೆ. ಅತ್ತ ನೌಕರಿಯನ್ನೂ ಬಿಡಲಾಗದ ಇತ್ತ ಹೆತ್ತವರನ್ನೂ ಸರಿಯಾಗಿ ನೋಡಲಾಗದ ಅನೇಕ ಮಕ್ಕಳು ಅಂತಿಮವಾಗಿ ವೃದ್ಧಾಶ್ರಮಗಳನ್ನು ಸಂಪರ್ಕಿಸುತ್ತಾರೆ. ಹೀಗೆ  ಬದುಕಿನ ವಾಸ್ತವಗಳಿಗೆ ಬೆನ್ನು ಹಾಕಿ ಬದುಕತೊಡಗುತ್ತಾರೆ. ನಿಜವಾಗಿ, ಹಿರಿಯರಿಗೆ ಭಾವನಾತ್ಮಕ ಆರೈಕೆಯ ಅಗತ್ಯವಿರುತ್ತದೆ. ಅದನ್ನು ವೃದ್ಧಾಶ್ರಮಗಳು ಕೊಡಲಾರವು. ವೃದ್ಧಾಶ್ರಮಗಳಲ್ಲಿರುವವರೆಲ್ಲ ವೃದ್ಧರೇ. ಅದರಲ್ಲೂ ವಿವಿಧ ಕಾಯಿಲೆಗಳನ್ನು ಅಂಟಿಸಿಕೊಂಡು ಸಂಕಟಪಡುವವರೇ ಹೆಚ್ಚು. ಆದ್ದರಿಂದಲೇ, ಅಲ್ಲಿ ನಡೆಯಬಹುದಾದ ಮಾತುಕತೆಗಳು ಕೂಡ ಬಹುತೇಕ ಕಣ್ಣೀರಿನದ್ದೇ ಆಗಿರುತ್ತವೆ. ಮಗ, ಮಗಳು, ಸೊಸೆ, ಕುಟುಂಬಿಕರು ನಡೆಸಿದ ದೌರ್ಜನ್ಯಗಳು ಮತ್ತೆ ಮತ್ತೆ ಅವರ ಮಾತುಕತೆಗಳಲ್ಲಿ ಪ್ರಸ್ತಾಪಗೊಳ್ಳುತ್ತಿರುವುದಕ್ಕೆ ಅವಕಾಶವಿದೆ. ಅಂತಿಮವಾಗಿ ಹೃದಯ ಭಾರಗೊಳ್ಳುವುದಕ್ಕೂ ಕಣ್ಣೀರಿಗೂ ಅದು ಕಾರಣವಾಗಬಹುದು. ಆದರೆ ಮನೆಯ ವಾತಾವರಣ ಹಾಗಲ್ಲ. ಅಲ್ಲಿ ಹಿರಿಯರ ಮುಂದೆ ಮಗ, ಸೊಸೆ, ಮೊಮ್ಮಕ್ಕಳು, ಮಗಳ ಮಕ್ಕಳು, ಕುಟುಂಬಿಕರಿರುತ್ತಾರೆ. ಅಲ್ಲೊಂದು ಜೀವಕಳೆಯಿರುತ್ತದೆ. ಅಲ್ಲಿ ನಡೆಯಬಹುದಾದ ಮಾತು ಕತೆಗಳು ವೃದ್ಧರ ನಡುವೆ ನಡೆಯುವ ಮಾತುಕತೆಗಳಂತಿರುವುದಿಲ್ಲ. ಮೊಮ್ಮಕ್ಕಳ ನಗು ವೃದ್ಧರ ಮನಸ್ಸನ್ನು ಅರಳಿಸುತ್ತದೆ. ತನ್ನ ಮಗನೋ ಮಗಳೋ ಬಾಲ್ಯದಲ್ಲಿ ನಡೆಸುತ್ತಿದ್ದ ತುಂಟಾಟಗಳು ಮೊಮ್ಮಕ್ಕಳ ಮೂಲಕ ಅವರ ನೆನಪಿಗೆ ಬರುತ್ತವೆ. ತನ್ನ ಊರುಗೋಲನ್ನು ಮೊಮ್ಮಗು ಊರಿಕೊಂಡು ತಮಾಷೆ ಮಾಡುವಾಗ ಹಿರಿಯರೂ ಆನಂದಪಡುತ್ತಾರೆ. ವೃದ್ಧಾಶ್ರಮಗಳಲ್ಲಿ ಇಂಥದ್ದೊಂದು ವಾತಾವರಣಕ್ಕೆ ಅವಕಾಶವೇ ಇಲ್ಲ.
   ಅಂದಹಾಗೆ, ಶೈಕ್ಷಣಿಕ ಪ್ರಗತಿಯು ಕೌಟುಂಬಿಕ ನೆಮ್ಮದಿಗೆ ಕನ್ನ ಕೊರೆಯುತ್ತಿದೆಯೇ ಎಂಬುದರ ಸುತ್ತ ಗಂಭೀರ ಅವಲೋಕನವೊಂದು ನಡೆಯಬೇಕಾಗಿದೆ. ಇಂದಿನ ಜೀವನ ಕ್ರಮಗಳು ದಶಕಗಳ ಹಿಂದಿನಂತಿಲ್ಲ. ಮನೆಯ ಪ್ರತಿ ಸದಸ್ಯರಲ್ಲೂ ಅವರದೇ ಆದ ಉದ್ದೇಶಗಳಿವೆ. ಕಲಿಕೆ ಮತ್ತು ಉದ್ಯೋಗ ಪಡೆಯುವಲ್ಲಿ ಹೆಣ್ಣು-ಗಂಡು ಇಬ್ಬರಲ್ಲೂ ಪೈಪೋಟಿಯಿದೆ. ಇವತ್ತು ಗಂಡಿನಂತೆ ಹೆಣ್ಣೂ ಉದ್ಯೋಗಸ್ಥೆಯೇ.  ಬಹುಶಃ ಇಂಥ  ವಾತಾವರಣವು ಅಂತಿಮವಾಗಿ ಹಿರಿಯರನ್ನು ಒಂಟಿಯಾಗಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಒಂದು ಕಡೆ, ‘ಬಳಸಿ ಬಿಸಾಕು' ಎಂಬ ಸಂಸ್ಕøತಿ ಮನೆಯ ಜಗಲಿಗಷ್ಟೇ ಅಲ್ಲ, ಅಡುಗೆ ಕೋಣೆಯನ್ನೂ ಆವರಿಸಿಬಿಟ್ಟಿದೆ. ಬಂಡವಾಳಶಾಹಿತ್ವವು ಸ್ವಕೇಂದ್ರಿತ ಜೀವನ ಮೌಲ್ಯಗಳನ್ನು ಅತ್ಯಂತ ಯಶಸ್ವಿಯಾಗಿ ಪ್ರತಿ ಮನೆ-ಮನಗಳಲ್ಲೂ ಬಿತ್ತುತ್ತಿದೆ. ಇವತ್ತಿನ ಜಗತ್ತಿನಲ್ಲಿ ‘ಹಳತಿಗೆ' ಭಾರೀ ಬೆಲೆಯೇನೂ ಇಲ್ಲ. ಮೊಬೈಲ್, ಶೂಸ್, ವಾಹನ, ಟಿ.ವಿ., ಆಭರಣಗಳು.. ಎಲ್ಲವೂ ವರ್ಷ ಕಳೆಯುವ ಮೊದಲೇ ಹಳತಾಗುತ್ತವೆ. ಹಳತಾದುದನ್ನು ತ್ಯಜಿಸಿ ಹೊಸದನ್ನು ಖರೀದಿಸುವಂತೆ ಮಾರುಕಟ್ಟೆಗಳು ಮತ್ತು ಅಲ್ಲಿನ ಉತ್ಪನ್ನಗಳು ಪ್ರಚೋದಿಸುತ್ತವೆ. ಹೀಗೆ ವರ್ಷವಾಗುತ್ತಲೇ ಹೊಸ ಮೊಬೈಲು, ವಾಹನ, ಆಭರಣಗಳು ಯುವ ತಲೆಮಾರಿನ ಕೈಯಲ್ಲಿ ಪ್ರತ್ಯಕ್ಷಗೊಳ್ಳುತ್ತಲೇ ಇರುತ್ತವೆ. ಆ ಪಟ್ಟಿಗೆ ಇವತ್ತು ಹಿರಿಯರೂ ಸೇರಿಕೊಳ್ಳುತ್ತಿದ್ದಾರೆಯೇ? ಹಳತಾದವರನ್ನು ಆಶ್ರಮಕ್ಕೆ ಅಟ್ಟಿ ಹೊಸತಿನೊಂದಿಗೆ ಬದುಕುವುದು ಸಹಜ ಅನ್ನಿಸಿಕೊಳ್ಳುತ್ತಿದೆಯೇ? ಹಳತು ಮತ್ತು ಹೊಸತು ಎಂಬ ಎರಡು ಧ್ರುವಗಳಿಗೆ ಹಿರಿಯರು ಮತ್ತು ಕಿರಿಯರನ್ನು ಸೇರಿಸಿಬಿಟ್ಟಿರುವುದು ಯಾವುದು? ನಮ್ಮ ಶೈಕ್ಷಣಿಕ ಪ್ರಗತಿಯೇ? ಜೀವನ ವಿಧಾನಗಳೇ? ಮೌಲ್ಯಗಳ ನಿರ್ಲಕ್ಷ್ಯವೇ? ಬಂಡವಾಳಶಾಹಿತ್ವವೇ?
   ಉಡುಪಿ ಜಿಲ್ಲೆಯ ವೃದ್ಧಾಶ್ರಮದಲ್ಲಿರುವ ಗ್ರೇಸಿ ಮಾರ್ಟಿಸ್ ಅನ್ನುವ ತಾಯಿ ಕಳೆದವಾರ ನನಗೆ  ಬರೆದ ಪತ್ರವನ್ನು ಓದುತ್ತಾ ಇವೆಲ್ಲ ನೆನಪಾದುವು.

No comments:

Post a Comment