Tuesday, June 5, 2012

ಹೇಳಲೇಬೇಕಾಗಿತ್ತು, ಕೊನೆಗೂ ಅವರು ಹೇಳಿಬಿಟ್ಟರು..

Why have i been silent, silent for so long?
Our generals have gamed it out
Confident the west will servive
We people have not even been considered
What is dis right to preventive war?
A war that could erase the Iranian people
Dominated by its neigh bour pulsing with
righteousness smug in the fact that it is they not Iran
Who have the bomb
Why have i so far avoided to identify Isreal by its name?
Isreal and its ever increasing nuclear arsenal
Beyond reproach, Uncontrolled,Uninspected
We all know these things
Yet we all remain silent, fearful ofbeing labelled
Anti semitic
Hateful
Worse
........
ನಾನೇಕೆ ಮೌನವಾಗಿದ್ದೆ, ದೀರ್ಘ ಮೌನ?
ನಮ್ಮ ಸೇನಾ ನಾಯಕರು ಆಟವಾಡಿದ್ದರು
ಪಶ್ಚಿಮವು ಬದುಕುಳಿಯಲಿದೆಯೆಂಬ ವಿಶ್ವಾಸವಿದೆ
ನಾವು ಪರಿಗಣಿಸಲ್ಪಟ್ಟಿರಲೇ ಇಲ್ಲ
ಏನಿದು, ಪ್ರತಿರೋಧ ಯುದ್ಧ ಎಂಬ ಹಕ್ಕು?
ಇರಾನಿಯರನ್ನು ಅಳಿಸುವ ಯುದ್ಧ
....

ಹೀಗೆ ಸಾಗುವ 69 ಗೆರೆಗಳುಳ್ಳ ದೀರ್ಘ ಕವನವೊಂದು 2012 ಎಪ್ರಿಲ್ 4ರಂದು ಜರ್ಮನಿಯ ಸುಡಸ್ಚೆ ಝೈತುಂಗ್                    (suddeutsche zeitung), ಇಟಲಿಯ ಲಾ ರಿಪಬ್ಲಿಕಾ ಮತ್ತು ಎಲ್ ಪೈಸ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. what must be said - `ಹೇಳಲೇಬೇಕಾದದ್ದು ಏನು?' ಎಂಬ ಶೀರ್ಷಿಕೆಯ ಈ ಕವನವನ್ನು ಬರೆದದ್ದು ಖ್ಯಾತ ಜರ್ಮನ್ ಸಾಹಿತಿ, 1999ರ ಸಾಹಿತ್ಯಿಕ ನೋಬೆಲ್ ಪ್ರಶಸ್ತಿ ವಿಜೇತ ಗುಂಥರ್ ಗ್ರಾಸ್. ಇದರ ಮರುದಿನವೇ ಕವನದ ವಿರುದ್ಧ ಇಸ್ರೇಲ್ ತನ್ನ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ. ಗ್ರಾಸ್ ರನ್ನು  ಖಂಡಿಸುವ, ಅವರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವ ಲೇಖನಗಳು ಇಸ್ರೇಲಿ ದೈನಿಕ `ಹಾರೆಟ್ಸ್'ನಲ್ಲಿ ಪ್ರಕಟವಾಗುತ್ತವೆ. ಇಸ್ರೇಲಿನ ಆಂತರಿಕ ಸಚಿವ ಎಲಿ ಇಶಾಈ, ವಿದೇಶಾಂಗ ಸಚಿವ ಅವಿಗ್ರೋರ್ ಲೈಬ್ಮಾನ್, ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್ ಗೆ  ಇಸ್ರೇಲಿನ ರಾಯಭಾರಿಯಾಗಿದ್ದ ಲಿವಿ ಪ್ರೇಮರ್, ಇಸ್ರೇಲ್ ಪ್ರಧಾನ ಮಂತ್ರಿ ನೇತನ್ಯಾಹು .. ಎಲ್ಲರೂ ಗ್ರಾಸ್ ರನ್ನು  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವರದು ನಾಝಿ ಮನಸ್ಥಿತಿ ಅನ್ನುತ್ತಾರೆ. ಅವರ ನೋಬೆಲ್ ಪ್ರಶಸ್ತಿಯನ್ನು ಹಿಂಪಡೆಯುವಂತೆ ಸ್ವೀಡನ್ನಿನ ನೋಬೆಲ್ ಸಮಿತಿಗೆ ಮನವಿ ಮಾಡುತ್ತಾರೆ. ಗ್ರಾಸ್ ರ  ಇಸ್ರೇಲ್ ಪ್ರವೇಶಕ್ಕೆ ನಿಷೇಧವನ್ನು ಹೇರಿ ಎಪ್ರಿಲ್ 8ರಂದು ಎಲಿ ಇಶಾಈ ಆದೇಶ ಹೊರಡಿಸುತ್ತಾರೆ..
            ಅಷ್ಟಕ್ಕೂ ಗುಂಥರ್ ಗ್ರಾಸ್ ಮಾಡಿದ ಅಪರಾಧವಾದರೂ ಏನು? ಶಾಲೋ ಇಸ್ರಾಯೇಲ್ (ಇಸ್ರೇಲ್ ಗೆ  ಶಾಂತಿಯಿರಲಿ) ಎಂಬ ಘೋಷಣೆಯೊಂದಿಗೇ ಯಾವತ್ತೂ ತನ್ನ ಭಾಷಣವನ್ನು ಕೊನೆಗೊಳಿಸುವ, ಇಸ್ರೇಲ್ ನ  ಅಸ್ತಿತ್ವವನ್ನು ಸದಾ ಬೆಂಬಲಿಸುವ 84 ವರ್ಷದ ಈ ಸಾಹಿತಿಯ ಮೇಲೆ ಇಸ್ರೇಲ್ ಈ ಪರಿ ಮುಗಿ ಬಿದ್ದದ್ದಾದರೂ ಯಾಕೆ?
            17ನೇ ವಯಸ್ಸಿನಲ್ಲಿ ಹಿಟ್ಲರ್ ನ  ವಫನ್ ಎಸ್.ಎಸ್. ಎಂಬ ಸೇನಾ ವಿಭಾಗದಲ್ಲಿ ಬಲವಂತದಿಂದ ಸೇರ್ಪಡೆಗೊಂಡಂದಿನಿಂದಲೂ ಗುಂಥರ್ ಗ್ರಾಸ್ ಯಹೂದಿಗಳ ಪರವಾಗಿಯೇ ಧ್ವನಿಯೆತ್ತಿದವರು. ಇಸ್ರೇಲ್ ನ  ಅಸ್ತಿತ್ವಕ್ಕಾಗಿ ವಾದಿಸಿದವರು. 1967 ಮತ್ತು 71ರಲ್ಲಿ ಅವರು ಇಸ್ರೇಲ್ ಗೆ  ಭೇಟಿ ಕೊಟ್ಟಿದ್ದರು. ಇಸ್ರೇಲ್ ನ  ಅಂದಿನ ಅಧ್ಯಕ್ಷರಾಗಿದ್ದ ಲೆವಿ ಎಶ್ಕೋ ಮತ್ತು ಪ್ರಧಾನಿ ಗೋಲ್ಡ್ ಮೀರ್ ರು   ಇವರನ್ನು ಸ್ವಯಂ ಸ್ವಾಗತಿಸಿದ್ದರಲ್ಲದೇ, ಗೋಲ್ಡ್ ಮೀರ್ ರ  ವಿನಂತಿಯಂತೆ ಅವರ ಪೋಟೋವನ್ನು ಬಿಡಿಸಿ ಗ್ರಾಸ್ ಅರ್ಪಿಸಿದ್ದರು. ಅರಬ್ ರಾಷ್ಟ್ರಗಳಿಗೆ ನೀಡುತ್ತಿರುವ ಎಲ್ಲಾ ಬಗೆಯ ನೆರವುಗಳನ್ನೂ ರದ್ದುಪಡಿಸಬೇಕೆಂದು 1967ರ ಅರಬ್-ಇಸ್ರೇಲ್ ಯುದ್ಧದ ಬಳಿಕ ದಕ್ಷಿಣ ಜರ್ಮನಿಯೊಂದಿಗೆ ಗ್ರಾಸ್ ಆಗ್ರಹಿಸಿದ್ದರು. ಇಸ್ರೇಲನ್ನು ನೆರೆ ರಾಷ್ಟ್ರವಾಗಿ ಕಾಣಬೇಕೆಂದೂ ಇಸ್ರೇಲ್ ಮೇಲಿನ ಯಾವುದೇ ಬಗೆಯ ಆಕ್ರಮಣವನ್ನೂ ಜರ್ಮನಿಯ ಮೇಲಿನ ಆಕ್ರಮಣವಾಗಿ ಪರಿಗಣಿಸಬೇಕೆಂದೂ ಅವರು ಕರೆ ಕೊಡುತ್ತಿದ್ದರು. 3 ಸಂಪುಟಗಳಲ್ಲಿ ಬಂದಿರುವ ಅವರ ಭಾಷಣ ಸಂಗ್ರಹದಲ್ಲಿ ಎಲ್ಲೇ ಆಗಲಿ ಅರಬ್ ರಾಷ್ಟ್ರಗಳ ಉಲ್ಲೇಖವೇ ಇಲ್ಲ. ಒಂದು ರೀತಿಯಲ್ಲಿ ಹಿಟ್ಲರ್ ನ  ಕ್ರೌರ್ಯಕ್ಕೆ, 6 ಮಿಲಿಯನ್ ಯಹೂದಿಗಳ ನರಹತ್ಯೆಯನ್ನು ಸಂಕೇತಿಸುವ ಹಾಲೋಕಾಸ್ಟ್ ಗೆ  ತಾನು ಮತ್ತು ತನ್ನ ಜರ್ಮನಿ ಕಾರಣವೆಂಬ ಅಪರಾಧಿ ಮನೋಭಾವ ಅವರ ಮಾತಿನಲ್ಲಿ ಯಾವಾಗಲೂ ಇಣುಕುತ್ತಿರುತ್ತದೆ. ಇಷ್ಟಿದ್ದೂ ಇಸ್ರೇಲ್ ಅವರ ವಿರುದ್ಧ ಸಿಟ್ಟಾಗಿದ್ದರೆ ಅದಕ್ಕೆ ಕಾರಣ,
             ವಾಟ್ ಮಸ್ಟ್ ಬಿ ಸೆಡ್
ಇಸ್ರೇಲನ್ನು, ಅದರ ದುರಹಂಕಾರಿ ನೀತಿಯನ್ನು, ಇಸ್ರೇಲನ್ನು ಕುರುಡಾಗಿ ಪ್ರೀತಿಸುವ ಜರ್ಮನಿಯನ್ನು ಗ್ರಾಸ್ ಕವನದುದ್ದಕ್ಕೂ ಪ್ರಶ್ನಿಸುತ್ತಾರೆ. 'ನಾನು ಈ ವರೆಗೂ ಯಾಕೆ ಮೌನವಾಗಿದ್ದೆನೆಂದರೆ, ನಾಝಿ ಕ್ರೌರ್ಯ ನಡೆಸಿದ್ದು ನನ್ನ ದೇಶ ಅನ್ನುವ ಅಪರಾಧಿ ಪ್ರಜ್ಞೆ ಯಿಂದ' ಅನ್ನುತ್ತಾರೆ. ಅಣ್ವಸ್ತ್ರ ಹೊಂದಿರುವ ಇಸ್ರೇಲ್, ಇರಾನನ್ನು ಅಪಾಯಕಾರಿ ಅನ್ನುತ್ತಿರುವ ಬಗ್ಗೆ, ಅದನ್ನು ಬೆಂಬಲಿಸುವ ಪಶ್ಚಿಮದ ಕಾಪಟ್ಯದ ಬಗ್ಗೆ, ಇಸ್ರೇಲಿನ ಅನ್ಯಾಯವನ್ನು ಎತ್ತಿ ಹೇಳಿದಾಗಲೆಲ್ಲಾ ಅದನ್ನು ಆಂಟಿ ಸೆಮಿಟಿಕ್ ಎಂದು ಮುದ್ರೆಯೊತ್ತಿ ಬೆದರಿಸುವ ಬಗ್ಗೆ ಕವನದಲ್ಲಿ ಉಲ್ಲೇಖಿಸುತ್ತಾರೆ. ಜಾಗತಿಕ ಶಾಂತಿಗೆ ಇರಾನಲ್ಲ, ಇಸ್ರೇಲ್ ಅಪಾಯಕಾರಿ ಅನ್ನುತ್ತಾರೆ. ಅಣ್ವಸ್ತ್ರವನ್ನು ಕೊಂಡೊಯ್ಯಬಲ್ಲ ಮೂರು ಡಾಲ್ಪಿನ್ ಸಬ್ ಮೆರಿನ್ ಗಳನ್ನು ಇಸ್ರೇಲ್ ಗೆ  ಜರ್ಮನಿ ಮಾರಿರುವುದನ್ನೂ ಇನ್ನೂ ಆರು ಸಬ್ ಮೆರಿನ್ ಗಳ ಮಾರಾಟಕ್ಕೆ ಒಪ್ಪಂದ ಮಾಡಿ ಕೊಂಡಿರುವುದನ್ನೂ ಟೀಕಿಸುತ್ತಾರೆ. ಇಸ್ರೇಲ್ ಮತ್ತು ಇರಾನ್ ಎರಡೂ ಅಂತಾರಾಷ್ಟ್ರೀಯ ಅಣು ತಪಾಸಣೆಗೆ ಒಳಗಾದರೆ ಮಾತ್ರ ಜಾಗತಿಕ ಶಾಂತಿ ಸಾಧ್ಯ ಅನ್ನುತ್ತಾರೆ...
          ನಿಜವಾಗಿ ಇಸ್ರೇಲ್ ಭಯಪಟ್ಟದ್ದು ಗುಂಥರ್ ಗ್ರಾಸ್ ರ  ಬರೇ ಈ 69 ಗೆರೆಗಳಿಗಲ್ಲ. ಇಸ್ರೇಲ್ ನ  ಕ್ರೌರ್ಯವನ್ನು, ಫೆಲೆಸ್ತೀನಿಯರ ವಿರುದ್ಧ ಅದು ನಡೆಸುತ್ತಿರುವ ದಬ್ಬಾಳಿಕೆಯನ್ನು, ಫೆಲೆಸ್ತೀನಿಯರ ಭೂಮಿಯಲ್ಲಿ ಅಕ್ರಮವಾಗಿ ಯಹೂದಿಯರಿಗೆ ಮನೆ ನಿರ್ಮಿಸಿ ಕೊಡುತ್ತಿರುವುದನ್ನು ಗುಂಥರ್ ಗ್ರಾಸ್ ಗಿಂತ ತೀಕ್ಷ್ಣವಾಗಿ, ಕಟು ಶಬ್ದಗಳಲ್ಲಿ ಖಂಡಿಸಿ ಸಾಕಷ್ಟು ಮಂದಿ ಲೇಖನ ಬರೆದಿದ್ದಾರೆ. ಭಾಷಣ ಮಾಡಿದ್ದಾರೆ. ಆದರೆ ಇಸ್ರೇಲ್ ಅವೆಲ್ಲಕ್ಕೂ ಈ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸಿಯೇ ಇಲ್ಲ. ಯಾಕೆಂದರೆ, ಅವೆಲ್ಲ ಪ್ರಕಟವಾದದ್ದು ಜರ್ಮನಿಯ ಹೊರಗೆ. ಇಸ್ರೇಲ್ ಗೆ  ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಬೆಂಬಲಿಗರಿರುವುದು ಜರ್ಮನಿಯಲ್ಲಿ. ಇಸ್ರೇಲನ್ನು ಟೀಕಿಸಿ, ಅದರ ಅಸ್ತಿತ್ವವನ್ನು ಪ್ರಶ್ನಿಸಿ ಲೇಖನ ಬರೆಯುವುದಕ್ಕೆ ಜರ್ಮನಿಯಲ್ಲಿ ಒಂದು ಹಂತದ ವರೆಗೆ ಅಲಿಖಿತ ನಿಷೇಧವಿದೆ. ಇಸ್ರೇಲ್ ನ  ಅಸ್ತಿತ್ವವನ್ನು ಪ್ರಶ್ನಿಸುವ ಲೇಖನವನ್ನು ಬರೆಯಬಾರದು ಎಂಬ ಮುಚ್ಚಳಿಕೆಯನ್ನು ಪಡೆದು ಕೊಂಡೇ ಜರ್ಮನಿಯ ಪತ್ರಿಕೆಗಳು ಪತ್ರಕರ್ತರನ್ನು ನೇಮಿಸಿಕೊಳ್ಳುತ್ತವೆ ಎಂದು ಖ್ಯಾತ ಪತ್ರಕರ್ತ ಗಿಡೆನ್ ಲೆವಿ ಹೇಳುತ್ತಾರೆ. ಇಸ್ರೇಲನ್ನು ಕೊಂಚ ಟೀಕಿಸಿ ಬರೆದ ಲೇಖನವನ್ನು ಅವರು ಜರ್ಮನಿಯ die welt  ಎಂಬ ಪತ್ರಿಕೆಗೆ ಕಳುಹಿಸಿಕೊಟ್ಟ ಬಳಿಕ ಅವರನ್ನು ಆ ಪತ್ರಿಕೆಯು ಕಪ್ಪು ಪಟ್ಟಿಯಲ್ಲಿ ಸೇರಿಸಿರುವುದನ್ನೂ ಅವರು ಉಲ್ಲೇಖಿಸುತ್ತಾರೆ. ಇಂಥ ರಾಷ್ಟ್ರವೊಂದರಲ್ಲಿ ಗುಂಥರ್ ಗ್ರಾಸ್ ರ  ಕವನ ಪ್ರಕಟವಾಗುವುದನ್ನು ಇಸ್ರೇಲ್ ಸಹಿಸಿಕೊಳ್ಳುವುದಾದರೂ ಹೇಗೆ?
          ಆದರೆ ಯಾವುದು ನಡೆಯಬಾರದು ಅಂತ ಇಸ್ರೇಲ್ ಬಯಸಿತ್ತೋ ಅದುವೇ ನಡೆದು ಹೋಯಿತು. ಗುಂಥರ್ ಗ್ರಾಸ್ ರ  69 ಗೆರೆಗಳ ಸುತ್ತ ಜರ್ಮನಿ ಮತ್ತು ಜರ್ಮನಿಯ ಹೊರಗೆ ಧಾರಾಳ ಚರ್ಚೆಗಳು ನಡೆದುವು. ಜಾಕೊಬ್ ಅಗಸ್ಟಿನ್, ಗಿಡೆನ್ ಲೆವಿ ಮುಂತಾದ ಖ್ಯಾತ ಲೇಖಕರು, why we need an open debate on isreal - ಇಸ್ರೇಲ್ ನ  ಕುರಿತಂತೆ ಯಾಕೆ ಮುಕ್ತ ಚರ್ಚೆಯ ಅಗತ್ಯವಿದೆ - ಎಂಬ ಬಗ್ಗೆ ಮಾಧ್ಯಮಗಳಲ್ಲಿ ಲೇಖನ ಬರೆದರು. ಸಾರ್ವಜನಿಕ ಚರ್ಚೆಯೊಂದನ್ನು ಹುಟ್ಟು ಹಾಕಿ, ಜರ್ಮನಿಯರ ಮನಸಾಕ್ಷಿಯನ್ನು ಚುಚ್ಚಿದರು. ಆ ಕುರಿತಂತೆ ನೂರಾರು ಪ್ರತಿಕ್ರಿಯೆಗಳು ಹರಿದು ಬಂದುವು. ಜೋಸ್ ಡೆ ಸರಮಾಗೋ ಅನ್ನುವ ಖ್ಯಾತ ಲೇಖಕರೊಬ್ಬರು ಈ ಹಿಂದೆ ಇಸ್ರೇಲ್ ಆಕ್ರಮಿತ ಫೆಲೆಸ್ತೀನಿಗೆ ಭೇಟಿ ಕೊಟ್ಟದ್ದು ಮತ್ತು ಆ ಪ್ರದೇಶವನ್ನು ಹಿಟ್ಲರ್ ನ  ಮೈನ್ ಕೆಂಫ್ ಗೆ  ಹೋಲಿಸಿದ್ದು, ಯಹೂದಿಯರು ತಮ್ಮ ಅಪ್ಪಂದಿರು, ತಾತ, ಮುತ್ತಾತಂದಿರ ಸಂಕಟದಿಂದ ಪಾಠ ಕಲಿತಿಲ್ಲ ಅಂದದ್ದನ್ನೆಲ್ಲಾ ಜನರು ನೆನಪಿಸಿಕೊಂಡರು. ಓಸ್ಲೋ ಒಪ್ಪಂದಕ್ಕೆ ಇಸ್ರೇಲ್ ಬದ್ಧ ಆಗಲಿ, ಆಕ್ರಮಿತ ಪ್ರದೇಶದಲ್ಲಿ ಮನೆ ನಿರ್ಮಾಣ ನಿಲ್ಲಿಸಲಿ ಅಂದರು.
       ಇಸ್ರೇಲ್ ನ  ಬೆದರಿಕೆಗೆ ಗುಂಥರ್ ಗ್ರಾಸ್ ಕೂಡಾ ಸುಮ್ಮನಾಗಲಿಲ್ಲ. ಎಪ್ರಿಲ್ 6ರಂದು ಡೇಲ್ ಸ್ಪೀಗಲ್ ಪತ್ರಿಕೆಯ ಆನ್ ಲೈನ್ ಸಂಚಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಇನ್ನಷ್ಟು ಖಾರವಾಗಿಯೇ ಮಾತಾಡಿದರು..
        `ನಾನು ವಿಮರ್ಶಿಸುತ್ತಿರುವುದು ಇಸ್ರೇಲನ್ನಲ್ಲ, ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರನ್ನು. ಹಾಗೆಯೇ ಹಾಲೋಕಾಸ್ಟನ್ನು ನಿಷೇಧಿಸುವ ಅಹ್ಮದಿ ನೆಜಾದರನ್ನು ನಾನು ಬೆಂಬಲಿಸಲಾರೆ. ಆದರೆ, ಫೆಲೆಸ್ತೀನಿಯರಿಂದ ಭೂಮಿಯನ್ನು ವಶಪಡಿಸಿ ಯಹೂದಿಗಳಿಗೆ ಮನೆ ನಿರ್ಮಿಸಿ ಕೊಡುವುದು ಯಾವ ನ್ಯಾಯ? ವಿಶ್ವಸಂಸ್ಥೆಯ ಅಷ್ಟೂ ನಿಯಮಗಳನ್ನು ಇಸ್ರೇಲ್ ತುಚ್ಛೀಕರಿಸುತ್ತಿರುವುದೇಕೆ? ಇರಾನಿನಲ್ಲಿ ಅಣ್ವಸ್ತ್ರಗಳೇ ಇಲ್ಲ, ಆದರೂ ಅದರ ವಿರುದ್ಧ ನಿರ್ಬಂಧ ಹೇರುವ ಮತ್ತು ಅಣ್ವಸ್ತ್ರಗಳಿರುವ ಇಸ್ರೇಲ್ ನ  ಬಗ್ಗೆ ಮೌನವಾಗುವ ಪಾಶ್ಚಾತ್ಯರು ಯಾರನ್ನು ಮೂರ್ಖರಾಗಿಸುತ್ತಿದ್ದಾರೆ? ಇಂಥ ಹಿಪಾಕ್ರಸಿಯೇಕೆ..' 69 ಗೆರೆಗಳಿಗಿಂತ ಜೋರಾಗಿತ್ತು ಗುಂಥರ್ ಗ್ರಾಸ್ ರ  ಮಾತು..
            ಸದ್ಯ ಗುಂಥರ್ ಗ್ರಾಸ್ ರ , `ವಾಟ್ ಮಸ್ಟ್ ಬಿ ಸೆಡ್' ಎಂಬ ಕವನ ಮತ್ತು ಅದರ ಸುತ್ತ ಎದ್ದ ವಿವಾದ ತಣ್ಣಗಾಗಿದ್ದರೂ ಆ ಬಗ್ಗೆ ವ್ಯಕ್ತವಾದ ವಿಚಾರಗಳು ಹಳತಾಗಿಲ್ಲ. ವಿಕಿಪೀಡಿಯಾದಲ್ಲಿ, ಇನ್ನಿತರ ಸೈಟ್  ಗಳಲ್ಲೂ  ಆ ಬಗ್ಗೆ ಧಾರಾಳ ವಿವರಗಳಿವೆ. ಏನೇ ಆಗಲಿ, ಒಂದೊಳ್ಳೆಯ ಚರ್ಚೆಗೆ ಚಾಲನೆ ಕೊಟ್ಟರಲ್ಲ, ಅದಕ್ಕಾಗಿ ಗ್ರಾಸ್ ಗೆ  ಅಭಿನಂದನೆ ಸಲ್ಲಿಸಲೇಬೇಕು.

No comments:

Post a Comment