‘ರಾಜ್ಯದಲ್ಲಿ 2 ಲಕ್ಷ ಎಕ್ರೆಗಿಂತಲೂ ಅಧಿಕ ವಕ್ಫ್ ಭೂಮಿಯಿದೆ’ ಎಂದು ಬಿಜೆಪಿ ಮುಖಂಡರಾಗಿದ್ದ ಅನ್ವರ್ ಮಾಣಿಪ್ಪಾಡಿ ಈ ಹಿಂದೆ ಹೇಳಿದ್ದರು. ಈ ಕುರಿತಂತೆ ಅಧ್ಯಯನ ನಡೆಸಿ ಯಡಿಯೂರಪ್ಪ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು. ಈ ವರ ದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಸರಕಾರ ಹಿಂದೇಟು ಹಾಕಿದಾಗ ಪ್ರಕರಣವನ್ನು ಸುಪ್ರೀಮ್ ಕೋರ್ಟ್ ವರೆಗೂ ಕೊಂಡೊಯ್ಯಲಾಗಿತ್ತು. ಮಾತ್ರವಲ್ಲ, ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸುಪ್ರೀಮ್ ಕೋರ್ಟೇ ಸರಕಾರಕ್ಕೆ ನಿರ್ದೇ ಶನ ನೀಡಿತ್ತು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಯಡಿಯೂರಪ್ಪ ಸರಕಾರವು ಸದನದಲ್ಲಿ ಮಂಡಿಸಿದಂತೆ ನಟಿಸಿ ಕೋರ್ಟ್ ನಿಂದೆ ಕ್ರಮದಿಂದ ತಪ್ಪಿಸಿಕೊಂಡಿತ್ತು.
ಅನ್ವರ್ ಮಾಣಿಪ್ಪಾಡಿ ವರದಿಯ ಮುಖ್ಯ ಭಾಗ ಏನೆಂದರೆ, ಈ ಎರಡು ಲಕ್ಷ ಎಕ್ರೆ ಭೂಮಿಯಲ್ಲಿ ಬಹುಪಾಲನ್ನು ರಾಜಕಾರಣಿಗಳು ಮತ್ತು ಇನ್ನಿತರರು ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನುವುದು. ಆ ಮೂಲಕ ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಾಗಿದ್ದ ಕೋಟ್ಯಂತರ ರೂಪಾಯಿ ಆದಾಯವು ನಷ್ಟವಾಗಿದೆ ಅನ್ನುವುದು. ಸದ್ಯ,
ರಾಜ್ಯ ವಕ್ಫ್ ಇಲಾಖೆಯ ಅಧೀನದಲ್ಲಿರುವುದು ಕೇವಲ 23 ಸಾವಿರ ಎಕ್ರೆ ಭೂಮಿ ಮಾತ್ರ. ಅಂದರೆ, ಅನ್ವರ್ ಮಾಣಿಪ್ಪಾಡಿ ವರದಿಯ ಆಧಾರದಲ್ಲಿ ಹೇಳುವುದಾದರೆ, 10ರಲ್ಲಿ ಒಂದು ಭಾಗ ಮಾತ್ರ ವಕ್ಫ್ ಇಲಾಖೆಯ ಅಧೀನದಲ್ಲಿದೆ. ಹಾಗಿದ್ದರೆ, ಉಳಿದ ಈ 9 ಭಾಗವನ್ನು ವಕ್ಫ್ ಇಲಾಖೆಯ ಅಧೀನಕ್ಕೆ ಒಳಪಡಿಸುವುದು ಹೇಗೆ ಎಂಬ ಪ್ರಶ್ನೆಯ ಜೊತೆಗೇ ಈಗ ವಕ್ಫ್ ನದ್ದೆಂದು ಹೇಳಲಾಗುವ ಭೂಮಿಯ ದಾಖಲಾತಿ ಹೇಗಿದೆ, ಇದರ ಕಡತವೂ ಸರಿಯಾಗಿದೆಯೇ, ಅವುಗಳಲ್ಲೂ ಒತ್ತುವಾರಿಯಾಗಿವೆಯೇ, ಬೇರೆಯವರು ಅದನ್ನು ಅನುಭವಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇದರ ಜೊತೆಗೇ,
ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಕ್ಕೂ ಹೊರಟಿದೆ. ಅದು ಒಂದುವೇಳೆ ಪ್ರಸ್ತಾವಿತ ರೂ ಪದಲ್ಲಿ ಜಾರಿಗೊಂಡರೆ, ದಾಖಲೆ ಇಲ್ಲದ ವಕ್ಫ್ ಆಸ್ತಿಗಳು ಕೈಬಿಟ್ಟು ಹೋಗಲಿವೆ ಎಂದೂ ಹೇಳಲಾಗುತ್ತಿದೆ. ಆದ್ದರಿಂದ ಎಲ್ಲ ವಕ್ಫ್ ಆಸ್ತಿಗಳಿಗೆ ದಾಖಲೆ ಪತ್ರ ಮಾಡಿಟ್ಟುಕೊಳ್ಳಬೇಕು ಎಂದು ವಕ್ಫ್ ಸಚಿವಾಲಯ ನಿರ್ಧರಿಸಿದೆ. ವಕ್ಫ್ ದಾಖಲೆಗಳನ್ನು ಸರಿಮಾಡಿಸಿಟ್ಟುಕೊಳ್ಳಿ ಎಂದು ಸರಕಾರವೇ ಸೂಚಿಸಿರಲೂಬಹುದು. ಈ ಕಾರಣಗಳಿಂದ ವಕ್ಫ್ ಸಚಿವಾಲಯ ಚುರುಕಾಯಿತು. ವಕ್ಫ್ ಆಸ್ತಿಗಳು ಒತ್ತುವರಿಯಾಗಿರುವುದಾಗಿ ಎಲ್ಲೆಲ್ಲಾ ದೂರುಗಳು ಕೇಳಿ ಬಂದಿವೆಯೋ ಅಲ್ಲೆಲ್ಲಾ ವಕ್ಫ್ ಅದಾಲತ್ ನಡೆಸಲು ವಕ್ಫ್ ಇಲಾಖೆ ಮುಂದಾಯಿತು. ಇದರ ಭಾಗವಾಗಿ ಬಿಜಾಪುರದಲ್ಲಿ ವಕ್ಫ್ ಅದಾಲತ್ ನಡೆಯಿತು. 1974ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಬಿಜಾಪುರದಲ್ಲಿ 14,201 ಎಕ್ರೆ, 32 ಗುಂಟೆ ವಕ್ಫ್ ಭೂಮಿಯಿದೆ. ಆದರೆ, ಈಗ ಬಿಜಾಪುರಕ್ಕೆ ಸಂಬAಧಿಸಿ ವಕ್ಫ್ ಅಧೀನದಲ್ಲಿರುವುದು ಬರೇ 773 ಎಕ್ರೆ ಭೂಮಿ ಮಾತ್ರ. ಹಾಗಿದ್ದರೆ, ಉಳಿದ ಭೂಮಿ ಏ ನಾಯಿತು ಎಂಬ ಪ್ರಶ್ನೆ ಸಹಜ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಚುರುಕಾಗಿದೆ. ಪಹಣಿ ಪತ್ರದಲ್ಲಿರುವ ಸಂಖ್ಯೆ 9 ಮತ್ತು 11ನ್ನು ತಪಾಸಣೆಗೆ ಒಳಪಡಿಸಿದೆ. ಪಹಣಿ ಸಂಖ್ಯೆ 9ರಲ್ಲಿ ಮಾಲಿಕನ ಹೆಸರಿದ್ದು 11ರಲ್ಲಿ ವಕ್ಫ್ ಎಂದು ನಮೂ ದಿಸಲಾಗಿರುವ ಆಸ್ತಿಗಳ ಮಾಲಿಕರಿಗೆ ನೋಟೀಸು ಜಾರಿಗೊಳಿಸಿದೆ. ನಿಮ್ಮ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂ ದಿಸಲಾಗಿದ್ದು, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಈ ಆಸ್ತಿ ನಿಮ್ಮದೆಂದು ದೃಢೀಕರಿಸಿಕೊಳ್ಳಿ ಎಂಬುದು ಈ ನೋಟೀಸಿನ ಅರ್ಥ. ಹಾಗಂತ, ಇಂಥ ನೋಟೀಸನ್ನು ಎಲ್ಲರಿಗೂ ಕಳುಹಿಸಲಾಗಿಲ್ಲ. ಯಾರ ಪಹಣಿ ಪತ್ರದಲ್ಲಿ ವಕ್ಫ್ ಎಂದು ನಮೂದಾಗಿದೆಯೋ ಅವರಿಗೆ ಮಾತ್ರ ಕಳುಹಿಸಲಾಗಿದೆ.
ಇದರ ಹಿಂದೆ ಒಂದು ಕತೆಯಿದೆ.
ಭಾರತದಲ್ಲಿ ವಕ್ಫ್ ಕಾಯ್ದೆ ಸ್ವಾತಂತ್ರ‍್ಯ ಪೂರ್ವದಲ್ಲೇ ಅಸ್ತಿತ್ವದಲ್ಲಿತ್ತು. 1923ರಲ್ಲಿ ಬ್ರಿಟಿಷರು ಅದನ್ನು ಮಾನ್ಯ ಮಾಡಿದ್ದರು. ಸರಳವಾಗಿ ಹೇಳುವುದಾದರೆ, ವಕ್ಫ್ನ ಅರ್ಥ ದೇವನಿಗೆ ಅರ್ಪಿಸುವುದು ಎಂದಾಗಿದೆ. ಇದು ಮುಸ್ಲಿಮ್ ಸಮುದಾಯದಲ್ಲಿ ಅನೂಚಾನೂಚವಾಗಿ ನಡೆದುಕೊಂಡು ಬಂದ ಒಂದು ಧಾರ್ಮಿಕ ಪ್ರಕ್ರಿಯೆ. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲೇ ಭೂಮಿಯನ್ನು ವಕ್ಫ್ ಮಾಡುವ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಮುಸ್ಲಿಮ್ ಸಮುದಾಯದ ಶ್ರೀಮಂತರು ಮಾತ್ರವಲ್ಲ, ಸಾಮಾನ್ಯ ಜನರೂ ತಮ್ಮಲ್ಲಿನ ಸ್ಥಿರ ಮತ್ತು ಚರ ಆಸ್ತಿಯನ್ನು ವಕ್ಫ್ ಮಾಡುತ್ತಲೇ ಬಂದಿದ್ದಾರೆ. ಹೀಗೆ ವಕ್ಫ್ ಮಾಡಿದ ಭೂಮಿಯಲ್ಲಿ ಮಸೀದಿ ನಿರ್ಮಾಣ, ಮದ್ರಸ ನಿರ್ಮಾಣ, ಅನಾಥಾಲಯ ನಿರ್ಮಾಣಗಳನ್ನು ಮಾಡಲಾಗುತ್ತದೆ. ಕಬರಸ್ತಾ ನಕ್ಕೆ ಬಳಕೆ ಮಾಡಲಾಗುತ್ತದೆ. ಮಸೀದಿ, ಮದ್ರಸಗಳಿಗೆ ಆದಾಯ ಮೂಲವಾಗಿ ವಾಣಿಜ್ಯ ಕಟ್ಟಡಗಳನ್ನು ಕಟ್ಟುವುದಕ್ಕೆ, ಕೃಷಿ ಕಾರ್ಯಗಳಿಗೆ ಬಳಸುವುದಕ್ಕೂ ಉಪಯೋಗಿಸಲಾಗುತ್ತದೆ. ಅಂದಹಾಗೆ,
ಮಸೀದಿ ಮತ್ತು ಮದ್ರಸಾಗಳಲ್ಲಿ ಮೌಲ್ವಿಗಳಿರುತ್ತಾರೆ, ಸಹಾಯಕರಿರುತ್ತಾರೆ, ಶಿಕ್ಷಕರಿರುತ್ತಾರೆ, ಸಿಬಂದಿಗಳಿರುತ್ತಾರೆ. ಅವರಿಗೆ ವೇತನ ನೀಡಬೇಕಾಗುತ್ತದೆ. ಹಾಗೆಯೇ, ಮಸೀದಿಗೆ ಬೇಕಾದ ಉಪಕರಣಗಳು, ವಿದ್ಯುತ್ ಬಿಲ್‌ಗಳು ಸಹಿತ ಇನ್ನಿತರ ಅ ನೇಕ ಖರ್ಚು ವೆಚ್ಚಗಳಿರುತ್ತವೆ. ಅವುಗಳಿಗೂ ಹಣ ಬೇಕಾಗುತ್ತದೆ. ಈ ಎಲ್ಲಕ್ಕೂ ಆದಾಯವಾಗಿ ವಕ್ಫ್ ಭೂಮಿಯನ್ನು ಬಳಸುವ ಕ್ರಮ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಹೀಗೆ ತಮ್ಮಲ್ಲಿರುವ ಭೂಮಿಯನ್ನು ವಕ್ಫ್ ಮಾಡುವುದು ಬಹಳ ಪುಣ್ಯದಾಯಕ ಎಂದು ಇಸ್ಲಾಮ್ ಕಲಿಸುತ್ತದೆ. ಹೀಗೆ ವಕ್ಫ್ ಮಾಡುವ ವ್ಯಕ್ತಿಗೆ ಜೀವಂತ ಇರುವಾಗಲೂ ಮತ್ತು ಮೃತಪಟ್ಟ ಬಳಿಕವೂ ಪುಣ್ಯಗಳು ಸದಾ ಲಭಿಸುತ್ತಿರುತ್ತವೆ ಎಂದೂ ಇಸ್ಲಾಮ್ ಹೇಳುತ್ತದೆ. ಮುಸ್ಲಿಮರು ಮರಣಾನಂತರದ ಜೀವನಕ್ಕೆ ಅಪಾರ ಪ್ರಾಶಸ್ತ್ಯ ನೀಡುತ್ತಾರಾದ್ದರಿಂದ ಸ್ಥಿತಿವಂತರಲ್ಲದವರೂ ವಕ್ಫ್ ಮಾಡುವ ವಿಷಯದಲ್ಲಿ ಸಾಕಷ್ಟು ಉದಾರಿಗಳಾಗಿರುತ್ತಾರೆ. ತಮ್ಮಲ್ಲಿನ ಸಣ್ಣದೊಂದು ಅಂಶವನ್ನಾದರೂ ವಕ್ಫ್ ಮಾಡುವುದನ್ನು ಬಹಳವೇ ಇಷ್ಟಪಡುತ್ತಾರೆ. ಈ ಕಾರಣದಿಂದಲೇ,
ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಅಪಾರ ಪ್ರಮಾಣದ ವಕ್ಫ್ ಭೂಮಿ ಇದೆ. ಈ ವಕ್ಫ್ ಭೂಮಿಯಲ್ಲಿ ಸರಕಾರದ್ದು ಒಂದಿಂಚು ಭೂಮಿಯೂ ಇಲ್ಲ. ಸರಕಾರ ಕಬರಸ್ತಾನಗಳಿಗೆ ಭೂಮಿ ನೀಡಿದ್ದಿದೆ. ಅದು ಮುಸ್ಲಿಮರಿಗೆ ಮಾತ್ರ ಅಲ್ಲ, ಹಿಂದೂಗಳಿಗೂ ಕ್ರೈಸ್ತರಿಗೂ ನೀಡಿದೆ. ಸಮಸ್ಯೆ ಏನೆಂದರೆ,
ಮುಸ್ಲಿಮ್ ಸಮುದಾಯದ ವ್ಯಕ್ತಿಗಳು ತಮ್ಮಲ್ಲಿನ ಭೂಮಿಯನ್ನು ಹೀಗೆ ವಕ್ಫ್ ಮಾಡುತ್ತಾ ಹೋದರಾದರೂ ಅದರ ನೋಂದಣಿ ವಿಷಯದಲ್ಲಿ ಗಾಢ ನಿರ್ಲಕ್ಷ್ಯ ತೋರಿದರು. ಇನ್ನು, ನೋಂದಣಿಯಾಗಿ ಪಹಣಿ ಪತ್ರವಾದ ಭೂಮಿಯನ್ನು ಸುರಕ್ಷಿತವಾಗಿರಿಸಿಕೊಳ್ಳುವಲ್ಲೂ ವಕ್ಫ್ ಇಲಾಖೆ ವಿಫಲವಾಯಿತು. ಒಂದುಕಡೆ, ತನ್ನ ಭೂಮಿಯನ್ನು ದೇವನಿಗೆ ಅರ್ಪಿಸಿದ್ದೇನೆ ಎಂದು ಘೋಷಿಸುವಲ್ಲಿಗೆ ತನ್ನ ಜವಾಬ್ದಾರಿ ಮುಗಿಯಿತೆಂದು ವ್ಯಕ್ತಿ ಅಂದುಕೊಳ್ಳುವುದು ನಡೆದರೆ, ಇಂಥ ಭೂಮಿಯನ್ನು ರಕ್ಷಿಸಿ ಸಮುದಾಯಕ್ಕೆ ನೆರವಾಗಬೇಕಾಗಿದ್ದ ವಕ್ಫ್ ಇಲಾಖೆಯ ವ್ಯಕ್ತಿಗಳೇ ಅವುಗಳನ್ನು ಮಾರಾಟ ಮಾಡುವುದೂ ನಡೆಯಿತು. ವಕ್ಫ್ ಕಾಯ್ದೆಯನ್ವಯ ನೋಂದಾಯಿತವಾಗದ ಭೂಮಿ ಬಿಡಿ, ನೋಂದಾಯಿತವಾಗಿರುವ ಸಾವಿರಾರು ಎಕ್ರೆ ಭೂಮಿಯೂ ಹೀಗೆ ಯಾರ‍್ಯಾರದ್ದೋ ಪಾಲಾಯಿತು. ಇದು ಸಮಸ್ಯೆ ಒಂದು ಮುಖವಾದರೆ ಇನ್ನೊಂದು, ಸಂದರ್ಭಾ ನುಸಾರ ಸರಕಾರವೇ ತಂದಿರುವ ಕಾನೂನುಗಳು. ಅದರಲ್ಲಿ ಭೂಸುಧಾರಣಾ ಕಾಯ್ದೆಯೂ ಒಂದು.
1961ರಲ್ಲಿ ಈ ಭೂಸುಧಾರಣಾ ಕಾಯ್ದೆಯನ್ನು ರೂಪಿಸಲಾಯಿತಲ್ಲದೇ, 1965ರಲ್ಲಿ ಜಾರಿಗೊಳಿಸಲಾಯಿತು. 1974 ಮತ್ತು 2020ರಲ್ಲಿ ಈ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಯಿತು. 1964ರಲ್ಲಿ ಭೂ ಒತ್ತುವರಿ ಕಾಯ್ದೆಯನ್ನು ಜಾರಿಗೆ ತರಲಾಯಿತು ಮತ್ತು 1991ರಲ್ಲಿ ಇದಕ್ಕೆ ತಿದ್ದುಪಡಿಗಳನ್ನು ತಂದು ಮರುಜಾರಿಗೊಳಿಸಲಾಯಿತು. ಇನ್ನೊಂದು, ಇನಾಮ್ ರದ್ದಿಯಾತಿ ಕಾಯ್ದೆ. 1954ರಲ್ಲಿ ಜಾರಿಗೊಂಡ ಈ ಕಾಯ್ದೆಗೆ 2021ರಲ್ಲಿ ತಿದ್ದುಪಡಿಯನ್ನು ಮಾಡಲಾಯಿತು. ಭೂಸುಧಾರಣಾ ಕಾಯ್ದೆಯ ಮುಖ್ಯ ಉದ್ದೇಶ ಏನಾಗಿತ್ತೆಂದರೆ,
ಕೃಷಿ ಜಮೀನಿನಲ್ಲಿ ಉಳುಮೆ ಮಾಡಿದ ರೈತನಿಗೆ ಅದರ ಮಾಲಕತ್ವವನ್ನು ನೀಡುವುದು. ಭೂ ಒತ್ತುವರಿ ಕಾಯ್ದೆಯ ಉದ್ದೇಶವೂ ಇದಕ್ಕಿಂತ ಭಿನ್ನವಲ್ಲ. ಭೂಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಾ ಬಂದಿರುವ ರೈತರಿಗೆ ಆ ಒತ್ತುವರಿಯನ್ನು ಸಕ್ರಮಗೊಳಿಸಿ ಅದರ ಒಡೆತನವನ್ನು ಅವರಿಗೆ ಒಪ್ಪಿಸುವುದು. ಇನಾಮ್ ರದ್ದಿಯಾತಿ ಕಾಯ್ದೆಯೂ ಹೆಚ್ಚು ಕಮ್ಮಿ ಇವೇ ಉದ್ದೇಶವನ್ನೇ ಹೊಂದಿದೆ. ಇನಾಮ್ ಅಥವಾ ಉಡುಗೊರೆಯಾಗಿ ಸಿಕ್ಕ ಭೂಮಿಗಿದ್ದ ರಕ್ಷಣೆಯನ್ನು ರದ್ದು ಮಾಡುವುದು ಇದರ ಉದ್ದೇಶ. ಹೀಗೆ ಈ ಕಾಯ್ದೆಗಳಿಂದಾಗಿ ಸಾವಿರಾರು ಎಕ್ರೆ ಭೂಮಿ ವಕ್ಫ್ ಇಲಾಖೆಯ ಕೈತಪ್ಪಿ ಹೋಗಿದೆ. ಕೇವಲ ಭೂಸುಧಾರಣಾ ಕಾಯ್ದೆಯ ಅನ್ವಯ ರಾಜ್ಯ ಸರಕಾರ 1183 ಎಕ್ರೆ ವಕ್ಫ್ ಭೂಮಿಯನ್ನು ಇತರರಿಗೆ ನೀಡಿರುವುದು ಅ ಧಿಕೃತವಾಗಿ ದಾಖಲಾಗಿದೆ. ಹೀಗೆ ಭೂಮಿ ಪಡಕೊಂಡವರಲ್ಲಿ ಹಿಂದೂಗಳೂ ಇದ್ದಾರೆ. ಮುಸ್ಲಿಮರೂ ಇದ್ದಾರೆ. ಇನಾಮ್ ರದ್ದಿಯಾತಿ ಕಾಯ್ದೆಯ ಮೂಲಕ 1459 ಎಕ್ರೆಗಿಂತಲೂ ಅಧಿಕ ವಕ್ಫ್ ಭೂಮಿಯನ್ನು ಸರಕಾರ ಇತರರಿಗೆ ಹಂಚಿಕೆ ಮಾಡಿದೆ. ಭೂಒತ್ತುವರಿ ಕಾಯ್ದೆಯನ್ನು ತಂದು 133 ಎಕ್ರೆ ವಕ್ಫ್ ಭೂಮಿಯನ್ನು ಸರಕಾರ ಹಂಚಿಕೆ ಮಾಡಿದೆ. ಇದು ಕೇವಲ ನಮ್ಮ ರಾಜ್ಯದ ಲೆಕ್ಕಾಚಾರ ಮಾತ್ರ. ಆದರೆ, ಇಂಥ ಕಾಯ್ದೆಗಳು ದೇಶದಾದ್ಯಂತ ಜಾರಿಯಾಗಿವೆ. ಹಾಗಿದ್ದರೆ ಎಷ್ಟು ದೊಡ್ಡಮಟ್ಟದಲ್ಲಿ ವಕ್ಫ್ ಆಸ್ತಿ ಪರರ ಪಾಲಾಗಿರಬಹುದು ಎಂಬುದನ್ನೊಮ್ಮೆ ಊಹಿಸಿ. ಆದರೆ,
ಇಲ್ಲಿಗೇ ಎಲ್ಲವೂ ಮುಗಿಯಲಿಲ್ಲ.
ವಕ್ಫ್ ಆಸ್ತಿಗೆ ಸಂಬಂಧಿಸಿ 1998ರಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶ ವಿ.ಎನ್. ಖರೆ ಅವರು ಐತಿಹಾಸಿಕ ತೀರ್ಪು ನೀಡಿದರು. ಒಮ್ಮೆ ವಕ್ಫ್ ಎಂದು ನೋಂದಾಯಿತಗೊಂಡ ಆಸ್ತಿ ಎಂದೆಂದೂ ವಕ್ಫ್ ಆಸ್ತಿಯಾಗಿಯೇ ಇರುತ್ತದೆ ಎಂದು ಆ ತೀರ್ಪಿನಲ್ಲಿ ಹೇಳಲಾಗಿದೆ. Once a Waqf is always a Waqf ಎಂಬ ಖರೆ ಅವರ ತೀರ್ಪಿನ ವಾಕ್ಯವು ಆ ಬಳಿಕ ಜನಜನಿತವಾಗುವಷ್ಟು ಪ್ರಸಿದ್ಧವೂ ಆಯಿತು. ಆಂಧ್ರಪ್ರದೇಶದ ವಕ್ಫ್ ಬೋರ್ಡ್ ಮತ್ತು ಸೈಯದ್ ಅಲಿ ಮತ್ತಿತರರ ಪ್ರಕರಣದ ವಿಚಾರಣೆಯ ಬಳಿಕ ಸುಪ್ರೀಮ್ ಕೋರ್ಟು ಈ ತೀರ್ಪು ನೀಡಿತ್ತು. ಇನಾಮ್ ರದ್ದಿಯಾತಿ ಕಾಯ್ದೆಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿತ್ತು ಎಂಬ ಹಿನ್ನೆಲೆಯಲ್ಲಿ ಈ ತೀರ್ಪಿಗೆ ಬಹಳ ಮಹತ್ವವಿದೆ. ವಕ್ಫ್ ಭೂಮಿಯಲ್ಲಿ ಯಾವುದೇ ಕಾಯ್ದೆಯ ಮೂಲಕ ಪರಭಾರೆ ಮಾಡುವುದಕ್ಕೆ ಯಾವುದೇ ಸರಕಾರಕ್ಕೂ ಅಧಿಕಾರ ಇಲ್ಲ ಎಂದು ಈ ತೀರ್ಪು ಹೇಳುತ್ತದೆ. ವಕ್ಫ್ ನ ಆಸ್ತಿಯು ಸದಾ ವಕ್ಫ್ ಆಸ್ತಿಯಾಗಿಯೇ ಇರುತ್ತದೆ ಎಂಬುದು ಭೂಸುಧಾರಣೆ ಕಾಯ್ದೆ, ಇನಾಮ್ ರದ್ದಿಯಾತಿ ಕಾಯ್ದೆ, ಭೂ ಒತ್ತುವರಿ ಕಾಯ್ದೆಗಳ ಮೂಲಕ ಸರಕಾರ ನೀಡಿರುವ ವಕ್ಫ್ನ ಎಲ್ಲ ಆಸ್ತಿಗಳೂ ವಕ್ಫ್ ನದ್ದೇ ಆಗಿ ಉಳಿಯಲಿದೆ ಎಂಬುದನ್ನೇ ಹೇಳುತ್ತದೆ. ಆ ಕಾರಣದಿಂದಲೂ ಪಹಣಿ ಪತ್ರ ಸಂಖ್ಯೆ 11ರಲ್ಲಿ ವಕ್ಫ್ ಆಸ್ತಿ ಎಂದು ಉಳಿದುಕೊಂಡಿರುವುದಕ್ಕೆ ಅವಕಾಶ ಇದೆ. ಈಗಿನ ಪ್ರಶ್ನೆ ಏನೆಂದರೆ,
ಹಲವು ದಶಕಗಳಿಂದ ಇಂಥ ಭೂಮಿಯಲ್ಲಿ ಅಸಂಖ್ಯ ಮಂದಿ ವಾಸಿಸುತ್ತಿದ್ದಾರೆ. ಅದರಲ್ಲಿ ಅವರು ಮನೆ ಕಟ್ಟಿಕೊಂಡಿರಬಹುದು, ಕೃಷಿ ಕಾರ್ಯ ಮಾಡುತ್ತಿರಬಹುದು, ಉದ್ಯಮಗಳನ್ನು ಸ್ಥಾಪಿಸಿರಬಹುದು, ಮಂದಿರವನ್ನೇ ಕಟ್ಟಿಕೊಂಡಿರಲೂ ಬಹುದು. Once a Waqf is always a Waqf ಎಂಬ ಸುಪ್ರೀಮ್ ಕೋರ್ಟಿನ ತೀರ್ಪನ್ನು ತೋರಿಸಿ ಇವರೆಲ್ಲರನ್ನೂ ಈಗ ಒಕ್ಕಲೆಬ್ಬಿಸಬೇಕಾ? ಅವರಿಂದ ಭೂಮಿಯನ್ನು ವಕ್ಫ್ ಇಲಾಖೆ ವಶಪಡಿಸಿಕೊಳ್ಳಬೇಕಾ? ಇವರಿಗೆ ಅಥವಾ ಇವರ ಹಿರಿಯರಿಗೆ ಒಂದೋ ಈ ಭೂಮಿಯನ್ನು ಸರಕಾರ ಕೊಟ್ಟಿರಬಹುದು ಅಥವಾ ವಕ್ಫ್ ಇಲಾಖೆಯನ್ನು ದುರುಪಯೋಗಪಡಿಸಿ ಅಲ್ಲಿನ ಅಧಿಕಾರಿಗಳೇ ಮಾರಿರಬಹುದು. ಇವು ಏನಿದ್ದರೂ ಇವು ಇವರಿಗೆ ಸಂಬಂಧಿಸಿದ್ದಲ್ಲ. ಸರಕಾರ ಮತ್ತು ಮುಸ್ಲಿಮ್ ವ್ಯಕ್ತಿಗಳು ಮಾಡಿರುವ ತಪ್ಪಿಗೆ ಇವರನ್ನು ಹೊಣೆ ಮಾಡುವುದೇ ಸರಿಯೇ? ಒಂದುವೇಳೆ, ಹೀಗೆ ವಕ್ಫ್ ಭೂಮಿಯ ಮರುವಶ ಅಭಿಯಾನ ನಡೆಸುವುದಾದರೆ ಅದು ಒಟ್ಟು ಸಮಾಜದ ಮೇಲೆ ಬೀರುವ ಪರಿಣಾಮ ಏನು? ಹೀಗೆ ಮಾಡುವುದು ಪ್ರಾಯೋಗಿಕವೇ? ಆಂತರಿಕ ಸಂಘರ್ಷವೊAದಕ್ಕೆ ಮತ್ತು ಈಗಾಗಲೇ ಇರುವ ಮುಸ್ಲಿಮ್ ದ್ವೇಷದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಲು ಇದು ಕೋಮುವಾದಿಗಳಿಗೆ ಸುಲಭ ಅವಕಾಶ ಆಗಲಾರದೇ? ಇದರ ಬದಲು ಈಗ ಇರುವ ವಕ್ಫ್ ಆಸ್ತಿಯನ್ನಾದರೂ ಸುರಕ್ಷಿತವಾಗಿ ಉಳಿಸಿಕೊಳ್ಳುವುದಕ್ಕೆ ಮತ್ತು ಸಮುದಾಯಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಕಾರ್ಯಯೋಜನೆ ರೂಪಿಸುವುದು ಉತ್ತಮವೇ?
ವಕ್ಫ್ ಇಲಾಖೆಯ ಮುಖ್ಯಸ್ಥರು, ಸಮುದಾಯದ ನಾಯಕರು, ಉಲೆಮಾಗಳು, ಸಂಘಟನೆಗಳು ಜೊತೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ.