Monday, November 25, 2024

ಹೈದರಾಬಾದ್: ಸಮಾವೇಶದ ಯಶಸ್ಸಿಗೆ ಕಾರಣವಾದ 7 ಅಂಶಗಳು






1. ನೀರು
2. ಶೌಚಾಲಯ
3. ಮೊಬೈಲ್ ಚಾರ್ಜಿಂಗ್
4. ಆಹಾರ ವೈವಿಧ್ಯತೆ
5. ಸಭಾಂಗಣ
6. ಆರೋಗ್ಯ ವ್ಯವಸ್ಥೆ
7. ನಿರ್ವಹಣಾ ತಂಡ
ಸಾವಿರಾರು ಮಂದಿಯನ್ನು ಸೇರಿಸಿ ಮೂರ‍್ನಾಲ್ಕು ದಿನಗಳ ಕಾಲ ನಡೆಸುವ ಯಾವುದೇ ಸಮಾವೇಶದ ಯಶಸ್ಸು ಈ ಮೇಲಿನ 7 ವಿಷಯಗಳನ್ನು ಅವಲಂಬಿ ಸಿರುತ್ತದೆ. ಹತ್ತಿಪ್ಪತ್ತು ಮಂದಿ ಒಂದು ಕಡೆ ಸೇರಿ ಮೂರ‍್ನಾಲ್ಕು ದಿನಗಳ ಕಾಲ ಸಭೆ  ನಡೆಸುವಾಗ ಎದುರಾಗುವ ಸವಾಲುಗಳಿಗೂ 20ರಿಂದ 25 ಸಾವಿರ ಮಂದಿ ಒಂದು ಕಡೆ ಸೇರಿ ಇಂಥದ್ದೇ  ಸಭೆ  ನಡೆಸುವಾಗ ಎದುರಾಗುವ ಸವಾಲುಗಳಿಗೂ ಭೂಮಿ-ಆಕಾಶದಷ್ಟು ಅಂತರವಿರುತ್ತದೆ. ಈ ದೇಶದಲ್ಲಿ 28 ರಾಜ್ಯಗಳು ಮತ್ತು  8 ಕೇಂದ್ರಾಡಳಿತ ಪ್ರದೇಶಗಳಿವೆ. ಭಾಷೆಗಳಾದರೋ ನೂರಾರು. ಕರ್ನಾಟಕದ ಕರಾವಳಿ ಭಾಗದ ಜನರು ಆಡುವ ಮನೆಭಾಷೆ ಬೆಂಗಳೂರಿಗರಿಗೆ ಅರ್ಥವೇ ಆಗುವುದಿಲ್ಲ. ಇದು ಒಂದು ರಾಜ್ಯದ ಒಳಗಿನ ಸ್ಥಿತಿ. ಹೀಗಿರುವಾಗ, 28 ರಾಜ್ಯಗಳಲ್ಲಿ  ಅಸ್ತಿತ್ವದಲ್ಲಿರಬಹುದಾದ ಭಾಷಾ ವೈವಿಧ್ಯತೆ ಹೇಗಿರಬಹುದು? ನಾಗಾಲ್ಯಾಂಡ್, ಒಡಿಸ್ಸಾ, ಜಾರ್ಖಂಡ್, ತ್ರಿಪುರ, ಮಣಿಪುರದಂಥ ರಾಜ್ಯಗಳಿಂದ ಬಂದವರು ಮತ್ತು ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಗಳಿಂದ ಬಂದವರು ಪರಸ್ಪರ  ಒಂದೇ ಚಪ್ಪರದಡಿಯಲ್ಲಿ ಎದುರು-ಬದುರಾದಾಗ ಏನೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು? ನಿಜವಾಗಿ,

ಈ ಡಿಜಿಟಲ್ ಯುಗದಲ್ಲಿ ಸಾವಿರಾರು ಮಂದಿಯನ್ನು ಒಂದೇ ಕಡೆ ಸೇರಿಸಿ ಮರ‍್ನಾಲ್ಕು ದಿನಗಳ ಕಾಲ ಸಭೆ ನಡೆಸುವ  ಅಗತ್ಯ ಏನಿದೆ ಎಂಬ ಪ್ರಶ್ನೆಯನ್ನು ಕೆಲವರು ಎಸೆದು ಬಿಡುವುದಿದೆ. ತಂತ್ರಜ್ಞಾನದ ಈ ಯುಗದಲ್ಲಿ ಓಬಿರಾಯನ ಕಾಲದ  ಸಂಪ್ರದಾಯಕ್ಕೆ ಇನ್ನೂ ಜೋತು ಬೀಳುವುದೇಕೆ ಎಂದೂ ಪ್ರಶ್ನಿಸುವವರಿದ್ದಾರೆ. ಹೀಗೆ ಸಭೆ ಸೇರುವುದರಿಂದ ಸಮಯ  ಹಾಳಾಗುತ್ತದೆ, ದುಬಾರಿ ಖರ್ಚಾಗುತ್ತದೆ, ನೀರು ಪೋಲಾಗುತ್ತದೆ ಎಂದು ಹೇಳುವವರಿದ್ದಾರೆ ಮತ್ತು ಆನ್‌ಲೈನ್ ಮೂಲಕ  ಇಂಥ ಸಭೆಗಳನ್ನು ನಡೆಸುವುದೇ ಬುದ್ಧಿವಂತಿಕೆ ಎಂಬ ಉಪದೇಶ ನೀಡುವವರೂ ಇದ್ದಾರೆ. ಆದರೆ,

ಇದೊಂದು ರಮ್ಯ ವಾದವೇ ಹೊರತು ಆಫ್‌ಲೈನ್ ಸಭೆಗೂ ಆನ್‌ಲೈನ್ ಸಭೆಗೂ ನಡುವೆ ಹತ್ತಾರು ವ್ಯತ್ಯಾಸಗಳಿವೆ.  ಸಾವಿರಾರು ಮಂದಿ ಒಂದು ಕಡೆ ಸೇರುವುದೆಂದರೆ ಅದು ಬರೇ ಭೌತಿಕ ಸಮಾಗಮವಷ್ಟೇ ಆಗಿರುವುದಿಲ್ಲ. ಅಲ್ಲೊಂದು   ಭಾವನಾತ್ಮಕ ಸಂಬಂಧ ಏರ್ಪಡುತ್ತದೆ. ಒಡಿಸ್ಸಾದ ಓರ್ವ ವ್ಯಕ್ತಿ ದಕ್ಷಿಣ ಭಾರತದ ಇನ್ನೊಂದು ಮೂಲೆಯ ವ್ಯಕ್ತಿಯೊಂದಿಗೆ  ಸಂಭಾಷಣೆ ನಡೆಸುತ್ತಾರೆ. ಭಾಷಾ ವೈವಿಧ್ಯತೆಗಳು ಅವರ ನಡುವೆ ಹಂಚಿಕೆಯಾಗುತ್ತದೆ. ಬದುಕು, ಭಾವ, ಕೌಟುಂಬಿಕ  ಸಂಗತಿಗಳು, ಉದ್ಯೋಗ, ಆರೋಗ್ಯ ಇತ್ಯಾದಿಗಳು ಪ್ರಸ್ತಾಪಕ್ಕೆ ಬರುತ್ತವೆ. ಆ ಇಬ್ಬರಲ್ಲಿ ಒಬ್ಬರು ಒಳ್ಳೆಯ ವ್ಯಾ ಪಾರಿಯಾಗಿರಬಹುದು, ಶಿಕ್ಷಕ/ಕಿಯಾಗಿರಬಹುದು, ಕಂಪೆನಿಯ ಒಡೆಯರಾಗಿರಬಹುದು, ವೈದ್ಯರೋ ಇಂಜಿನಿಯರೋ  ದಾದಿಯೋ ರಿಕ್ಷಾ ಚಾಲಕರೋ ಇನ್ನೇನೋ ಆಗಿರಬಹುದು. ಅದೇವೇಳೆ, ಇನ್ನೊಬ್ಬರು ಧಾರ್ಮಿಕ ವಿದ್ವಾಂಸರೋ ವಿದೇಶಿ  ಉದ್ಯೋಗಿಯೋ ಸಂಶೋಧನಾ ವಿದ್ಯಾರ್ಥಿಯೋ ಹೋರಾಟಗಾರರೋ ರಾಜಕಾರಣಿಯೋ ಕೂಲಿ ಕಾರ್ಮಿಕರೋ  ಅಥವಾ ರೈತರೋ ಇನ್ನೇನೋ ಆಗಿರಬಹುದು. ಇಂಥ ಭಿನ್ನ ಭಿನ್ನ ಅಭಿರುಚಿಯುಳ್ಳವರು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ  ದುಡಿಯುತ್ತಿರುವವರು ಪರಸ್ಪರ ಒಂದೇ ಕಡೆ ಸೇರಿ ಅಭಿಪ್ರಾಯ ವಿನಿಮಯ ಮಾಡುವುದೆಂದರೆ ಅದು ಹತ್ತು ಹಲವು  ಸಾಧ್ಯತೆಗಳನ್ನು ತೆರೆದಿಡುತ್ತದೆ. ರೈತರಿಗೆ ಆ ಭೇಟಿಯಿಂದ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಐಡಿಯಾ  ಸಿಗಬಹುದು. ರಿಕ್ಷಾ ಚಾಲಕ ತನ್ನ ಮಗನಿಗೆ ವಿದೇಶದಲ್ಲಿ ಉದ್ಯೋಗ ಪಡೆದುಕೊಳ್ಳುವಂತೆ ಮಾಡುವುದಕ್ಕೆ ಸೂಕ್ತ  ಮಾರ್ಗದರ್ಶನ ಸಿಗಬಹುದು. ವಿದ್ವಾಂಸರ ಬೋಧನೆಯಿಂದ ವ್ಯಾಪಾರಿಗೆ ತನ್ನ ವ್ಯಾಪಾರದಲ್ಲಿ ಇನ್ನಷ್ಟು ಸೂಕ್ಷ್ಮತೆಯನ್ನು  ಪಾಲಿಸಲು ನೆರವಾಗಬಹುದು. ಅಂದರೆ,

ಜನರು ಭೌತಿಕವಾಗಿ ಒಂದು ಕಡೆ ಸೇರುವುದೆಂದರೆ, ಅಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಷ್ಟೇ ಆಗಿರುವು  ದಿಲ್ಲ. ಅಲ್ಲೊಂದು  ಸಂವಹನ ಏರ್ಪಡುತ್ತದೆ, ಸಂಬಂಧ ಸೃಷ್ಟಿಯಾಗುತ್ತದೆ. ಸಭೆ ಮುಗಿದು ಊರಿಗೆ ಹಿಂತಿರುಗಿದ ಬಳಿಕವೂ  ಸಂಪರ್ಕದಲ್ಲಿರುವುದಕ್ಕೆ ಬೇಕಾದ ಸನ್ನಿವೇಶ ನಿರ್ಮಾಣ ವಾಗುತ್ತದೆ. ಆದರೆ, ಇಂಥ ಯಾವ ಸಾಧ್ಯತೆಗಳೂ ಆನ್‌ಲೈನ್  ಸಭೆಯಿಂದ ಸಾಧ್ಯವಿಲ್ಲ. ಅಂದಹಾಗೆ,

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ನೀರು, ಆಹಾರ ಮತ್ತು ಶೌಚಾಲಯ ಮುಖ್ಯವಾಗುತ್ತದೆ. ಸಾವಿರಾರು ಮಂದಿ ಸೇರಿ  ಮೂರ‍್ನಾಲ್ಕು ದಿನಗಳ ಕಾಲ ತಂಗುವ ಸಮಾವೇಶಗಳಲ್ಲಂತೂ ಇವು ಸಮಾವೇಶದ ಯಶಸ್ಸನ್ನು ನಿರ್ಧರಿಸುವಷ್ಟು  ಆದ್ಯತೆಯನ್ನು ಪಡೆಯುತ್ತದೆ. ಈ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಆಹಾರ ಕ್ರಮಗಳಿವೆ. ಕರಾವಳಿಯ ಇಡ್ಲಿ-ಸಾಂಬಾರ್,  ಕುಚಲಕ್ಕಿ ಊಟ, ನೀರ್‌ದೋಸೆಗಳು ಮಧ್ಯಪ್ರದೇಶ, ಹರ್ಯಾಣ, ಪಂಜಾಬಿ ನಾಗರಿಕರ ಆಹಾರ ಕ್ರಮಗಳಲ್ಲ. ಅಲ್ಲಿನವರ  ಆಹಾರ ವಿಧಾನವು ಕೇರಳ, ತಮಿಳುನಾಡಿನವರ ಆಹಾರ ಕ್ರಮದಂತೆಯೂ ಅಲ್ಲ. ಒಂದೊಂದು ರಾಜ್ಯದ ಒಂದೊಂದು  ಜಿಲ್ಲೆಯಲ್ಲೇ  ಒಂದೊಂದು ರೀತಿಯ ಖಾದ್ಯಗಳಿವೆ, ಉಪಾಹಾರಗಳಿವೆ. ಆದ್ದರಿಂದ ಈ ಎಲ್ಲ ರಾಜ್ಯಗಳ ಮಂದಿ ಒಂದೇ  ಕಡೆ ಸಾವಿರಾರು ಸಂಖ್ಯೆಯಲ್ಲಿ ಸೇರುವಾಗ ಅವರೆಲ್ಲರ ಆಹಾರ ವೈವಿಧ್ಯತೆಯನ್ನು ನಿರಾಕರಿಸಿ ಒಂದೇ ಆಹಾರವನ್ನು  ಬಡಿಸುವುದು ಆರೋಗ್ಯ ಸಮಸ್ಯೆಗೂ ಕಾರಣವಾಗ ಬಹುದು. ಹಾಗೇನಾದರೂ ಆದರೆ, ಕಾರ್ಯಕ್ರಮದ ಮೇಲೆ ಗಮನ  ಕೊಡುವುದಕ್ಕಿಂತ ಆರೋಗ್ಯದ ಬಗ್ಗೆಯೇ ತಲೆ ಕೆಡಿಸಿಕೊಳ್ಳಬೇಕಾದ ಜರೂರತ್ತು ಸೇರಿದವರಿಗೆ ಎದುರಾಗಬಹುದು. ಇದು  ಅಲ್ಲಿ ಸೇರುವಿಕೆಯ ಉದ್ದೇಶವನ್ನೇ ಹಾಳು ಮಾಡಬಹುದು. ಹಾಗಂತ,

ಇಂಥ ಬೃಹತ್ ಜನಸಂಖ್ಯೆಯ ಆಹಾರ ವೈವಿಧ್ಯತೆಯನ್ನು ಗಮನಿಸಿ ಪ್ರತಿಯೊಬ್ಬರಿಗೂ ಪ್ರತ್ಯಪ್ರತ್ಯೇಕ ಆಹಾರ  ತಯಾರಿಕೆಯೂ ಪ್ರಾಯೋಗಿಕವಲ್ಲ. ಇಂಥ ಸಂದರ್ಭಗಳಲ್ಲಿ ಆಹಾರ ಕ್ರಮಗಳಲ್ಲಿ ಬಹುತೇಕ ಸಾಮ್ಯತೆಯಿರುವ ರಾಜ್ಯಗಳ  ಪಟ್ಟಿ ಮಾಡಿ, ಅಂಥ ರಾಜ್ಯಗಳಿಂದ ಬಂದವರಿಗೆ ಒಂದೇ ಕಡೆ ಊಟ ತಯಾರಿಸಿ ಬಡಿಸುವಂಥ ಪ್ರಯೋಗಕ್ಕೆ  ಕೈಹಾಕಬೇಕಾಗುತ್ತದೆ. ಇದಕ್ಕಾಗಿ ಹತ್ತಾರು ಕಿಚನ್‌ಗಳನ್ನು ಪ್ರತ್ಯಪ್ರತ್ಯೇಕ ನಿರ್ಮಿಸಬೇಕಾಗುತ್ತದೆ. ಹೀಗೆ ಗುಂಪುಗಳಾಗಿ  ವಿಭಜಿಸಲ್ಪಟ್ಟ ರಾಜ್ಯಗಳ ಜನರನ್ನು ಒಂದೇ ಕಡೆ ಸೇರುವಂಥ ಟೆಂಟ್‌ಗಳನ್ನು ನಿರ್ಮಿಸಬೇಕಾಗುತ್ತದೆ. ಬಾಹ್ಯ ನೋಟಕ್ಕೆ  ಇವೆಲ್ಲವನ್ನೂ ಹೇಳುವುದು ಸುಲಭವಾದರೂ ಪ್ರಾಯೋಗಿಕವಾಗಿ ಇದು ಸವಾಲಿನ ಕೆಲಸ. ಆದರೆ, ಈ ಸವಾಲನ್ನು  ಎದುರಿಸುವಲ್ಲಿ ಯಶಸ್ವಿಯಾದರೆ ಅದು ಇಡೀ ಸಮಾವೇಶವನ್ನೇ ಯಶಸ್ವಿಗೊಳಿಸಿದಂತೆ. ಯಾಕೆಂದರೆ, ಇಷ್ಟದ ಆಹಾರವೇ  ಹೊಟ್ಟೆ ಸೇರುವುದರಿಂದ ಮಾನಸಿಕವಾಗಿ ವ್ಯಕ್ತಿ ನಿರಾಳವಾಗುತ್ತಾರೆ. ಆಹಾರದ ಬಗ್ಗೆ ಆಲೋಚಿಸದೇ ಕಾರ್ಯಕ್ರಮದ  ಕಡೆಗೆ ಗಮನ ಹರಿಸುತ್ತಾರೆ.

ಯಾವಾಗ ದೇಹಕ್ಕೆ ಒಗ್ಗುವ ಆಹಾರ ಲಭಿಸುತ್ತದೋ ಅದು ಇನ್ನೆರಡು ಬೇಡಿಕೆಗಳನ್ನೂ ಮುಂದಿಡುತ್ತದೆ. ಅದುವೇ ನೀರು  ಮತ್ತು ಶೌಚಾಲಯ. ಇಂಥ ಸಮಾ ವೇಶಗಳಲ್ಲಿ ನೀರಿನ ಕೊರತೆ ಎದುರಾದರೆ ಮತ್ತು ಶೌಚಾಲಯ ಅಸಮರ್ಪಕವಾಗಿದ್ದರೆ  ಅದು ಸೇರಿದವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥ ರನ್ನಾಗಿಸುತ್ತದೆ. ಕಾರ್ಯಕ್ರಮದ ಮೇಲೆ ಇರಬೇಕಾದ  ಗಮನವು ಅಸಮರ್ಪಕ ಶೌಚ ವ್ಯವಸ್ಥೆಯಿಂದಾಗಿ ವಿಚಲಿತಗೊಳ್ಳುತ್ತದೆ. ಇದರ ಜೊತೆಗೇ,
ಸಮಾವೇಶದ ಯಶಸ್ಸಿನಲ್ಲಿ ಪಾಲುದಾರವಾಗಿರುವ ಇನ್ನೆರಡು ಅಂಶಗಳೆಂದರೆ, ಆರೋಗ್ಯ ವ್ಯವಸ್ಥೆ ಮತ್ತು ನಿರ್ವಹಣಾ  ತಂಡ. 

ಸಾವಿರಾರು ಮಂದಿ ಒಂದುಕಡೆ ಸೇರುವುದೆಂದರೆ, ವೈವಿಧ್ಯಮಯ ಆಚಾರ-ವಿಚಾರ, ಸಂಸ್ಕೃತಿ, ಭಾಷೆ, ದೃಷ್ಟಿಕೋನ,  ಸಂಪ್ರದಾಯಗಳು ಒಂದೇ ಕಡೆ ಸಮಾಗಮವಾಗುವುದು ಎಂದೇ ಅರ್ಥ. ಕೇರಳದವರು ಯಾವುದನ್ನು ಶಿಸ್ತು ಎಂದು  ಅಂದುಕೊಳ್ಳುತ್ತಾರೋ ಅದನ್ನೇ ಬಿಹಾರದವರು ನಗಣ್ಯ ಸಂಗತಿಯಾಗಿ ಪರಿಗಣಿಸಬಹುದು. ಪಶ್ಚಿಮ ಬಂಗಾಳದವರು  ಯಾವುದಕ್ಕೆ ಮಹತ್ವ ನೀಡುತ್ತಾರೋ ಪುದುಚೇರಿಯವರು ಅದಕ್ಕೆ ಮಹತ್ವವನ್ನೇ ಕಲ್ಪಿಸದಿರಬಹುದು. ಇಂಥ ಸಮಾವೇಶದಲ್ಲಿ  ಸೇರುವವರಲ್ಲಿ ಒರಟರು, ಅಪಾರ ಸಂಯಮಿಗಳು, ತಿಂಡಿಪೋಕರು, ನಿಧಾನಿಗಳು, ತಕ್ಷಣ ಸಿಟ್ಟು ಬರುವವರು, ಸದಾ  ನೆಗೆಟಿವ್‌ಗಳನ್ನೇ ಉಣ್ಣುವವರು... ಮುಂತಾಗಿ ಅನೇಕ ರೀತಿಯ ಜನರಿರಬಹುದು. ವೈಚಾರಿಕವಾಗಿ ಇವರಲ್ಲಿ ಎಷ್ಟೇ ಏಕತೆ  ಇದ್ದರೂ ಸಂಸ್ಕೃತಿ, ಆಚಾರ, ವರ್ತನೆಗಳಲ್ಲಿ ವ್ಯತ್ಯಾಸಗಳು ಇದ್ದೇ  ಇರುತ್ತವೆ. ಇಂಥವರನ್ನೆಲ್ಲಾ ಒಂದೇ ನಿಯಮದಡಿಗೆ  ತರುವುದು ಸುಲಭವಲ್ಲ. ಇದಕ್ಕೆ ಬಲಿಷ್ಠ ಸ್ವಯಂಸೇವಕರ ಅಗತ್ಯವಿರುತ್ತದೆ. ಎಲ್ಲರನ್ನೂ ಒಂದೇ ನಿಯಮದಡಿಗೆ ತಂದು,  ಇಡೀ ಸಮಾವೇಶವನ್ನು ಶಿಸ್ತು ಬದ್ಧವಾಗಿ ಕೊಂಡೊಯ್ಯಬೇಕಾದ ಇವರು ತಮ್ಮ ಹೊಣೆಗಾರಿಕೆಯಲ್ಲಿ ಅಲ್ಪವೇ  ವಿಫಲವಾದರೂ ಒಟ್ಟು ಸಮಾವೇಶವನ್ನೇ ಅದು ಹಾಳು ಮಾಡಿಬಿಡುತ್ತದೆ. ಇದರ ಜೊತೆಜೊತೆಗೇ ಓದಿಕೊಳ್ಳಬೇಕಾದ ಇನ್ನೊಂದು ಸಂಗತಿಯೆಂದರೆ, ಆರೋಗ್ಯ ವ್ಯವಸ್ಥೆ.

ಇಂಥ ಸಮಾವೇಶಗಳಲ್ಲಿ ಭಾಗಿಯಾಗುವವರಲ್ಲಿ ಹಲವು ರೀತಿಯ ಜನರಿರುತ್ತಾರೆ. ಪೂರ್ಣ ಪ್ರಮಾಣದ ಆರೋಗ್ಯ ಹೊಂದಿದವರು ಒಂದು ವಿಭಾಗವಾದರೆ, ಸಮಾವೇಶದ ಮೇಲಿನ ಆಕರ್ಷಣೆಯಿಂದ ತಮ್ಮ ಅನಾರೋಗ್ಯವನ್ನೂ ಕಡೆಗಣಿಸಿ ಸೇರುವಂಥವರು ಇನ್ನೊಂದು ವಿಭಾಗವಾಗಿರುತ್ತಾರೆ. ಇಂಥವರ ಆರೋಗ್ಯವು ಸಮಾವೇಶದಲ್ಲಿ ಕೈ ಕೊಡುವ ಸಾಧ್ಯತೆ ಇರುತ್ತದೆ.  ತೀವ್ರವಾಗಿ ಅಸ್ವಸ್ಥರಾಗುವವರು ಮತ್ತು ಭಾಗಶಃ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಈಡಾಗುವವರೂ ಇರಬಹುದು.  ಇಂಥ ಸನ್ನಿವೇಶವನ್ನು ಮುಂಚಿತವಾಗಿ ಅರಿತುಕೊಂಡು ಅದಕ್ಕೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳದಿದ್ದರೆ ಅಂಥವರ ಅನಾ  ರೋಗ್ಯವೇ ಒಟ್ಟು ಸಮಾವೇಶದ ವೈಫಲ್ಯಕ್ಕೆ ಕಾರಣವಾಗಬಲ್ಲುದು. ಹಾಗಂತ,

ಇಲ್ಲಿ ಪ್ರಸ್ತಾಪಿಸಲೇಬೇಕಾದ ಇನ್ನೆರಡು ಸಂಗತಿಗಳೆಂದರೆ, ಸಮಾವೇಶದ ಉದ್ದೇಶ, ಗುರಿ, ಮಹತ್ವವನ್ನು ಸ್ಪಷ್ಟಪಡಿಸಬೇಕಾದ  ವೇದಿಕೆಯನ್ನು ಹೇಗೆ ರೂಪಿಸಲಾಗಿದೆ ಮತ್ತು ಸಭಾಂಗಣವನ್ನು ಹೇಗೆ ರಚಿಸಲಾಗಿದೆ ಎಂಬುದು. ಯಾವುದೇ ಸಮಾವೇಶದ ಯಶಸ್ಸು ಜನರ ಸಂಖ್ಯೆಯನ್ನು ಹೊಂದಿಕೊಂಡಿರುವುದಿಲ್ಲ. ಬದಲು ಸಭಿಕ ಸ್ನೇಹಿ ಸಭಾಂಗಣ, ವೇದಿಕೆ ಮತ್ತು ವೇದಿಕೆಯಲ್ಲಿ ಮಂಡಿಸಲಾಗುವ ವಿಚಾರಗಳನ್ನು ಹೊಂದಿಕೊಂಡಿರುತ್ತದೆ. ವೇದಿಕೆ ಮತ್ತು ಸಭಾಂಗಣ ಎಷ್ಟೇ ಅದ್ಭುತವಾಗಿರಲಿ,  ವೇದಿಕೆಯಲ್ಲಿ ಮಂಡಿಸಲಾಗುವ ವಿಚಾರಗಳು ಕಾಲ, ದೇಶ ಮತ್ತು ಪರಿಸ್ಥಿತಿಗೆ ಮುಖಾಮುಖಿಯಾಗುವಂತಿಲ್ಲದಿದ್ದರೆ ಮತ್ತು  ಕಾಲಬಾಹಿರ ಸರಕುಗಳೇ ವಿಚಾರಗಳಾದರೆ, ಅದರಿಂದ ಪ್ರಯೋಜನವೇನೂ ಆಗದು. ಹಾಗೆಯೇ, ವೇದಿಕೆಯಲ್ಲಿ  ಮಂಡಿಸಲಾಗುವ ವಿಚಾರಗಳು ಎಷ್ಟೇ ಪರಿಣಾಮಕಾರಿಯಾಗಿರಲಿ ಸಭಿಕಸ್ನೇಹಿ ವಾತಾವರಣದ ಸಭಾಂಗಣ  ನಿರ್ಮಾಣವಾಗಿಲ್ಲದಿದ್ದರೆ ಅದೂ ಫಲಿತಾಂಶದ ದೃಷ್ಟಿಯಿಂದ ಶೂನ್ಯ ಎನ್ನಬಹುದು. ಇದರ ಜೊತೆಗೇ,

ಎಲ್ಲರ ಬದುಕಿನ ಅನಿವಾರ್ಯ ಸಂಗಾತಿಯಾಗಿರುವ ಮೊಬೈಲ್ ಬಗ್ಗೆಯೂ ಆಧುನಿಕ ಸಮಾವೇಶಗಳಲ್ಲಿ ಗಮನ  ಹರಿಸಬೇಕಾಗುತ್ತದೆ. ಸಾಮಾನ್ಯವಾಗಿ, ಬೃಹತ್ ಸಮಾವೇಶಗಳಲ್ಲಿ ಮೊಬೈಲ್ ಚಾರ್ಜಿಂಗ್‌ಗೆ ಬೇಕಾದ ವ್ಯವಸ್ಥೆ ಮಾಡುವುದು  ಕಡಿಮೆ. ಒಂದುವೇಳೆ ಮಾಡಿದರೂ ಸರ್ವರಿಗೂ ತೃಪ್ತಿಕರವಾದ ಮತ್ತು ಎಟಕುವ ರೀತಿಯಲ್ಲಿ ಚಾರ್ಜಿಂಗ್ ಸೌಲಭ್ಯ  ಒದಗಿಸುವುದು ಬಹುತೇಕ ಶೂನ್ಯ. ಇವತ್ತಿನ ದಿನಗಳಲ್ಲಿ ಊಟ, ಶೌಚದಷ್ಟೇ ಮೊಬೈಲ್ ಬಳಕೆಯೂ ಬದುಕಿನ  ಭಾಗವಾಗಿದೆ. ಮೂರ‍್ನಾಲ್ಕು ದಿನಗಳ ಕಾಲ ನಡೆಯುವ ಸಮಾವೇಶಗಳಲ್ಲಂತೂ ಮೊಬೈಲ್ ಬಳಕೆ ಧಾರಾಳ ನಡೆಯುತ್ತದೆ.  ಕುಟುಂಬದವರನ್ನು ಸಂಪರ್ಕಿಸುವುದರಿಂದ  ಹಿಡಿದು ಮಾಹಿತಿ-ಸುದ್ದಿ-ವಿಶ್ಲೇಷಣೆಗಳ ವರೆಗೆ ಎಲ್ಲದಕ್ಕೂ ಮೊಬೈಲ್  ಅವಲಂಬನೆ ಅನಿವಾರ್ಯವೂ ಆಗಿದೆ. ಇಂಥ ಸಂದರ್ಭಗಳಲ್ಲಿ ಚಾರ್ಜಿಂಗ್‌ಗೆ ಸಮರ್ಪಕ ಸೌಲಭ್ಯ ಇಲ್ಲದೇ ಹೋದರೆ  ಅದು ಸೇರಿದವರ ಆಸಕ್ತಿಯ ಮೇಲೆ ಅಡ್ಡಪರಿಣಾಮ ಬೀರಬಲ್ಲುದು. ಅಂದಹಾಗೆ,

ಹೈದರಾಬಾದ್‌ನಲ್ಲಿ ಮೂರು ದಿನಗಳ ಕಾಲ ನಡೆದ ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯರ ಅಖಿಲ ಭಾರತ ಸಮಾವೇಶವು  ಅಭೂತಪೂರ್ವ ಯಶಸ್ಸು ಕಂಡಿದ್ದರೆ ಅದಕ್ಕೆ ಈ ಮೇಲಿನ 7 ವಿಷಯಗಳಿಗೆ ಕಾರ್ಯಕ್ರಮ ಆಯೋಜಕರು ನೀಡಿದ  ಮಹತ್ವವೇ ಕಾರಣ ಎಂದೇ ಅನಿಸುತ್ತದೆ.

No comments:

Post a Comment