Saturday, April 1, 2017

ಬಾಬರಿ: ಮಾತುಕತೆಯ ಆಚೆ..

      ಬಾಬರಿ ಮಸೀದಿಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್‍ನ ಮುಂದೆ ಎರಡು ಪ್ರಮುಖ ಪ್ರಶ್ನೆಗಳಿವೆ.
1. ಬಾಬರಿ ಮಸೀದಿ ಇರುವ ಜಾಗದ ಒಡೆತನ ಯಾರದು?
2. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿ ಗುರುತಿಸಿಕೊಂಡವರನ್ನು ಅಲಹಾಬಾದ್ ಹೈಕೋರ್ಟ್ ದೋಷಮುಕ್ತ ಗೊಳಿಸಿದ್ದು ಸರಿಯೋ ತಪ್ಪೋ?
      ವಿಶೇಷ ಏನೆಂದರೆ, ಈ ಎರಡು ಪ್ರಶ್ನೆಗಳಿಗೂ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯಂ ಸ್ವಾಮಿ ಅವರಿಗೂ ಯಾವ ಸಂಬಂಧವೂ ಇಲ್ಲ. ಬಾಬರಿ ಮಸೀದಿಯ ಒಡೆತನಕ್ಕೆ ಸಂಬಂಧಿಸಿ 1959-61ರ ಮಧ್ಯೆ ಅಲಹಾಬಾದ್ ಹೈಕೋರ್ಟ್‍ನಲ್ಲಿ ಮೂರು ದೂರುಗಳು ದಾಖಲಾದುವು. ಹಿಂದೂ ಮಹಾಸಭಾದ ಅಂಗ ಸಂಸ್ಥೆಯಾದ ಅಖಿಲ ಭಾರತ ರಾಮಾಯಣ ಮಹಾಸಭಾವು 1949 ಡಿಸೆಂಬರ್‍ನಲ್ಲಿ ಅಯೋಧ್ಯೆಯಲ್ಲಿ ಸತತ 9 ದಿನಗಳ ಕಾಲ ರಾಮಚರಿತ ಮಾನಸದ ಪಠಣ ಕಾರ್ಯಕ್ರಮವನ್ನು ಏರ್ಪಡಿಸಿತು. ಇದರಲ್ಲಿ ಗೋರಖ್‍ನಾಥ್ ಮಠ ಮತ್ತು ಸಂತ ದಿಗ್ವಿಜಯ್‍ನಾಥ್‍ರು ಸೇರಿಕೊಂಡರು. 9ನೇ ದಿನವಾದ ಡಿ.22ರಂದು ರಾತ್ರಿ ಬಾಬರಿ ಮಸೀದಿಯ ಒಳಗಡೆ ರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಮಾತ್ರವಲ್ಲ, ಪವಾಡಸದೃಶವಾಗಿ ಆ ವಿಗ್ರಹವು ಮಸೀದಿ ಒಳಗಡೆ ಪ್ರತ್ಯಕ್ಷವಾಗಿದೆ ಎಂಬ ವದಂತಿಯನ್ನೂ ಹಬ್ಬಿಸಲಾಯಿತು. ಪ್ರಧಾನಿ ನೆಹರೂರವರು ಈ ಘಟನೆಗೆ ತಮ್ಮ ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿದರು. ರಾಮನ ವಿಗ್ರಹವನ್ನು ಮಸೀದಿಯಿಂದ ತೆರವುಗೊಳಿಸುವಂತೆ ಅಯೋಧ್ಯೆಯ ಅಧಿಕಾರಿ ಕೆ.ಕೆ.ಕೆ. ನಾಯರ್ ಅವರಿಗೆ ಆದೇಶಿಸಿದರು. ಆದರೆ ನಾಯರ್ ನಿರಾಕರಿಸಿದರು. ಅವರು ಹಿಂದೂ ಮಹಾಸಭಾದ ನಿಷ್ಠಾವಂತ ಅನುಯಾಯಿಯಾಗಿರುವುದು ಇದಕ್ಕೆ ಕಾರಣವಾಗಿತ್ತು. ಆ ಬಳಿಕ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯಿತು. ಅವರು ಜನ ಸಂಘವನ್ನು ಸೇರಿಕೊಂಡರು. ಮಸೀದಿಯೊಳಗೆ ವಿಗ್ರಹ ಪ್ರತಿಷ್ಠಾಪನೆ ಯಿಂದಾಗಿ ಸಂಘರ್ಷದ ಸ್ಥಿತಿ ನಿರ್ಮಾಣವಾಯಿತು. ಮಸೀದಿಗೆ ಬೀಗ ಜಡಿಯಲಾಯಿತು. ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರ ಲಾಯಿತು. ಬಳಿಕ ಪ್ರತಿದಿನ ರಾಮನಿಗೆ ಪೂಜೆ ಸಲ್ಲಿಸಲು ಪೂಜಾರಿಗೆ ಅನುಮತಿಯನ್ನು ನೀಡಲಾಯಿತು. ಹೀಗೆ ಮಸೀದಿಯು ಅನಧಿಕೃತವಾಗಿ ದೇವಾಲಯವಾಗಿ ಪರಿವರ್ತಿತವಾಯಿತು. ಈ ಸಂದರ್ಭದಲ್ಲಿ ಮುಹಮ್ಮದ್ ಹಾಶಿಂ ಅನ್ಸಾರಿ (ಈಗ ಅವರಿಲ್ಲ, ನಿಧನರಾಗಿದ್ದಾರೆ)ಯವರೂ ಸೇರಿದಂತೆ 6 ಮಂದಿಯ ತಂಡ ಸುನ್ನಿ ವಕ್ಫ್ ಮಂಡಳಿಯ ಹೆಸರಲ್ಲಿ ಅಲಹಾಬಾದ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತು. ಬಾಬರಿ ಮಸೀದಿಯು ಸುನ್ನಿ ವಕ್ಫ್ ಬೋರ್ಡ್‍ಗೆ ಸಂಬಂಧಿಸಿದ್ದಾಗಿದ್ದು ಅದನ್ನು ಮರಳಿ ತಮಗೆ ಒಪ್ಪಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಬಳಿಕ ನಿರ್ಮೋಹಿ ಅಖಾಡ ಈ ವಿವಾದದಲ್ಲಿ ಕಕ್ಷಿಯಾಗಿ ಸೇರಿಕೊಂಡಿತು. ಆ ಬಳಿಕ ಹಿಂದೂ ಮಹಾಸಭಾವು ಇನ್ನೊಂದು ಕಕ್ಷಿಯಾಗಿ ಈ ವಿವಾದದೊಳಗೆ ಪ್ರವೇಶಿಸಿತು. ನಿಜವಾಗಿ, ಇಲ್ಲಿರುವುದು ಎರಡು ವಿಭಾಗಗಳೇ ಹೊರತು ಮೂರಲ್ಲ. ಹಿಂದೂ ಮಹಾಸಭಾ ಮತ್ತು ನಿರ್ಮೋಹಿ ಅಖಾಡಗಳು ಎರಡಾಗಿ ಈ ಪ್ರಕರಣದಲ್ಲಿ ಸೇರಿಕೊಂಡಿದ್ದರೂ ಅವು ಆಂತರಿಕ ವಾಗಿ ಒಂದೇ. ಅವೆರಡರ ವಾದವೂ ಬಹುತೇಕ ಒಂದೇ. ರಾಮನಿಗೆ ಸಂಬಂಧಿಸಿ ಅವರೆಡರ ವಿಚಾರಧಾರೆಯಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ. ಆದ್ದರಿಂದಲೇ, 2010 ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿಗೆ ಹೆಚ್ಚಿನ ಮಂದಿ ಅಚ್ಚರಿ ವ್ಯಕ್ತಪಡಿಸಿದ್ದು. ನ್ಯಾಯಾಧೀಶರುಗಳಾದ ಸುಧೀರ್ ಅಗರ್‍ವಾಲ್, ಎಸ್.ಯು. ಖಾನ್ ಮತ್ತು ಡಿ.ವಿ. ಶರ್ಮ ಅವರನ್ನೊಳಗೊಂಡ ಅಲಹಾಬಾದ್ ಹೈಕೋರ್ಟ್‍ನ ಲಕ್ನೋ ಪೀಠವು ಬಾಬರಿ ಮಸೀದಿ ಇರುವ ವಿವಾದಿತ 2.77 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ವಿಭಜಿಸಿ, ಒಂದನ್ನು ನಿರ್ಮೋಹಿ ಅಖಾಡಕ್ಕೆ, ಇನ್ನೊಂದನ್ನು ಸುನ್ನಿ ವಕ್ಫ್ ಮಂಡಳಿಗೆ ಮತ್ತು ಇನ್ನೊಂದು ಭಾಗವನ್ನು ಹಿಂದೂ ಮಹಾಸಭಾಕ್ಕೆ ಹಂಚುವ ತೀರ್ಪು ಪ್ರಕಟಿಸಿತು. ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿ ಇದೊಂದು ಅಚ್ಚರಿಯ ತೀರ್ಪು. ಭಾರತದ ಯಾವುದೇ ಸಿವಿಲ್ ನ್ಯಾಯಾಲಯವು ಇಬ್ಬರು ಕಕ್ಷಿದಾರರ ವ್ಯಾಜ್ಯವನ್ನು ಈ ರೀತಿಯಾಗಿ ಬಗೆಹರಿಸಿದ್ದು ಈವರೆಗೂ ನಡೆದಿಲ್ಲ. ಇಬ್ಬರ ನಡುವೆ ಭೂಮಿಯ ಒಡೆತನಕ್ಕೆ ಸಂಬಂಧಿಸಿ ವಿವಾದ ಇದ್ದರೆ ಇಬ್ಬರಲ್ಲಿ ಒಬ್ಬರಿಗೆ ಭೂಮಿಯ ಒಡೆತನ ಸಿಗಬೇಕೇ ಹೊರತು ಇಬ್ಬರಿಗೂ ಸಮಾನವಾಗಿ ಸಿಗುವುದು ವಿವೇಚನೆಗೆ ನಿಲುಕದ ವಿಚಾರ. ಸಹಜವಾಗಿಯೇ ಮೂವರು ಕಕ್ಷಿದಾರರೂ ಈ ತೀರ್ಪನ್ನು ವಿರೋಧಿಸಿದರು. ಇದರ ವಿರುದ್ಧ ಸುಪ್ರೀಮ್ ಕೋರ್ಟಿಗೆ ಮನವಿ ಸಲ್ಲಿಸಿದರು. ಇಲ್ಲೊಂದು ಘಟನೆ ನಡೆದಿತ್ತು. ಅಲಹಾಬಾದ್ ಹೈಕೋರ್ಟ್‍ನ ಲಕ್ನೋ ಪೀಠವು ಈ ತೀರ್ಪನ್ನು ನೀಡುವುದಕ್ಕಿಂತ ಒಂದು ವಾರ ಮೊದಲು ಹೈಕೋರ್ಟ್‍ನ ನ್ಯಾಯಾಧೀಶರೊಬ್ಬರು ಸುಪ್ರೀಮ್ ಕೋರ್ಟ್‍ನ ಬಾಗಿಲು ಬಡಿದಿದ್ದರು. ಹೈಕೋರ್ಟ್‍ನ ಪೀಠವು ತೀರ್ಪು ಕೊಡುವುದನ್ನು ತಡೆ ಹಿಡಿಯಬೇಕೆಂದು ಅವರು ಸುಪ್ರೀಮ್ ಕೋರ್ಟ್‍ನೊಂದಿಗೆ ವಿನಂತಿಸಿದ್ದರಲ್ಲದೇ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಲು ಸಲಹೆ ನೀಡುವಂತೆ ಕೋರಿಕೊಂಡಿದ್ದರು. ಆಗ ಈ ನಡೆಯನ್ನು ಪ್ರಶ್ನಿಸಿದ್ದೇ ಸುನ್ನಿ ವಕ್ಫ್ ಬೋರ್ಡ್‍ನ ಝಫರ್‍ಯಾಬ್ ಜೀಲಾನಿಯವರು. ಇದು ವಿವಾದ ಬಗೆ ಹರಿಯದಂತೆ ತಡೆಯುವ ಯತ್ನ ಎಂದವರು ಟೀಕಿಸಿದ್ದರು. ಬಳಿಕ ಸುಪ್ರೀಮ್ ಕೋರ್ಟು ಈ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿತಲ್ಲದೇ ತೀರ್ಪು ನೀಡುವಂತೆ ಅಲಹಾಬಾದ್ ಹೈಕೋರ್ಟ್‍ಗೆ ಸೂಚಿಸಿತ್ತು.
      ಇಲ್ಲಿ ಉದ್ಭವವಾಗುವ ಪ್ರಶ್ನೆ ಏನೆಂದರೆ, 2010 ಸೆಪ್ಟೆಂಬರ್‍ನಲ್ಲಿ ತಿರಸ್ಕರಿಸಿದ ಮಾತುಕತೆಯ ಪ್ರಸ್ತಾಪವನ್ನು ಈಗ ಸುಪ್ರೀಮ್ ಕೋರ್ಟ್ ಹೇಗೆ ಪರಿಹಾರ ಮಾರ್ಗವಾಗಿ ಸ್ವೀಕರಿಸಿತು ಎಂಬುದು. ಅಲ್ಲದೇ, ಸುಪ್ರೀಮ್ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ಕೇಹರ್ ಅವರ ಮುಂದೆ ಬಾಬರಿ ಮಸೀದಿಯ ಒಡೆತನಕ್ಕೆ ಸಂಬಂಧಿಸಿದ ವಿವಾದ ಇಲ್ಲ ಮತ್ತು ಅವರೀಗ ಮಾತುಕತೆಯ ಸಲಹೆ ಕೊಟ್ಟಿರುವುದು ಆ ವಿವಾದದ ಮೇಲಿನ ವಿಚಾರಣೆಯ ವೇಳೆಯೂ ಅಲ್ಲ. ಸುಬ್ರಹ್ಮಣ್ಯಂ ಸ್ವಾಮಿಯವರು 2016ರಲ್ಲಿ ಮುಖ್ಯ ನ್ಯಾಯಾಧೀಶರ ಎದುರು ಒಂದು ಮನವಿ ಮಾಡಿಕೊಂಡಿದ್ದರು. ಅಯೋಧ್ಯೆಯ ಹೊರಗಿನ ಸರಯೂ ನದಿ ತಟದಲ್ಲಿ ಮಸೀದಿ ನಿರ್ಮಿಸಿಕೊಳ್ಳಲು ಮತ್ತು ಬಾಬರಿ ಮಸೀದಿ ಇರುವ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸಲು ತಾವು ನಿರ್ದೇಶನ ನೀಡಬೇಕೆಂದು ಆ ಮನವಿಯಲ್ಲಿ ಅವರು ಕೋರಿಕೊಂಡಿದ್ದರು. ಆಗ ಸುಪ್ರೀಮ್ ಕೋರ್ಟ್ ಸುಬ್ರಹ್ಮಣ್ಯಂ ಸ್ವಾಮಿಯವರಲ್ಲಿ, ‘ನೀವು ಅಲಹಾಬಾದ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸದೇ ಇಲ್ಲಿಗೆ ಯಾಕೆ ಬಂದಿರಿ’ ಎಂದು ಪ್ರಶ್ನಿಸಿತ್ತು. ಇದೀಗ ಅದೇ ಅರ್ಜಿಯನ್ನು ಪರಿಗಣಿಸಿ ಮುಖ್ಯ ನ್ಯಾಯಾಧೀಶರು ಮಾತುಕತೆಯ ಸಲಹೆಯನ್ನಿಟ್ಟಿದ್ದಾರೆರೆ. ಮಾತ್ರವಲ್ಲ, ಮಧ್ಯಸ್ಥಿಕೆ ವಹಿಸಲೂ ಸಿದ್ಧ ಎಂದೂ ಹೇಳಿದ್ದಾರೆ. ಹೀಗೆ ಹೇಳುವಾಗ, ಎದುರು ಪಕ್ಷದವರ ಅಭಿಪ್ರಾಯ ಏನಿರಬಹುದು ಎಂಬುದನ್ನು ಅರಿತುಕೊಳ್ಳುವ ಉಮೇದನ್ನು ಅವರು ತೋರಿಲ್ಲ. ಮಾತು ಕತೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿಕೊಂಡು ಮಾರ್ಚ್ 31ರೊಳಗೆ ಕೋರ್ಟಿಗೆ ಬರುವಂತೆ ಅವರು ಸ್ವಾಮಿಗೆ ಆದೇಶಿಸಿದ್ದಾರೆ. ಈ ಸಲಹೆಗಿಂತ ಕೆಲವು ದಿನಗಳ ಮೊದಲು ದೆಹಲಿ ಯೂನಿವರ್ಸಿಟಿಯಲ್ಲಿ ಒಂದು ಸೆಮಿನಾರ್ ನಡೆದಿತ್ತು. ಅದರಲ್ಲಿ ಸುಬ್ರಹ್ಮಣ್ಯಂ ಸ್ವಾಮಿಯವರು ಬಾಬರಿ ವಿವಾದವನ್ನು ಪ್ರಸ್ತಾಪಿಸಿದ್ದರು. ‘ಸುಪ್ರೀಮ್ ಕೋರ್ಟ್‍ನಿಂದ ತಮಗೆ ಅನುಕೂಲಕರ ವಾದ ನಿಲುವು ಶೀಘ್ರ ಪ್ರಕಟವಾಗುತ್ತದೆ..’ ಎಂದು ಅವರು ಬಹಿರಂಗವಾಗಿಯೇ ಅಲ್ಲಿ ಹೇಳಿದ್ದರು. ಅಂದಹಾಗೆ, ಓರ್ವ ರಾಜಕಾರಣಿಯಾಗಿ ಮತ್ತು ವಕೀಲರಾಗಿ ಸಾರ್ವಜನಿಕ ಕುತೂಹಲವನ್ನು ಹುಟ್ಟು ಹಾಕುವ ಶ್ರಮ ಅದಾಗಿರಲೂ ಬಹುದು. ಆದರೆ ಅದರ ಬೆನ್ನಿಗೇ ‘ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿ’ ಎಂಬ ಮುಖ್ಯ ನ್ಯಾಯಾಧೀಶರ ಸಲಹೆ ಮತ್ತು ಅವರ ಅತಿ ಉಮೇದು ಅನುಮಾನಕ್ಕಂತೂ ಅವಕಾಶ ಮಾಡಿಕೊಡುತ್ತದೆ. ಇದರ ಜೊತೆಗೇ ಇನ್ನೊಂದು ಅಂಶವನ್ನೂ ಇಲ್ಲಿ ಪರಿಗಣಿಸಬೇಕಾಗುತ್ತದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದ ಮೇಲಿನ ವಿಚಾರಣೆಯನ್ನು ಸುಪ್ರೀಮ್ ಕೋರ್ಟು ಬಿಗಿಗೊಳಿಸಿದೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಟಿಯಾರ್, ಕಲ್ಯಾಣ್ ಸಿಂಗ್ ಸೇರಿದಂತೆ ಬಿಜೆಪಿಯ ಪ್ರಮುಖ 13 ನಾಯಕರ ವಿರುದ್ಧ ಲಕ್ನೋದ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದಲ್ಲಿ ಈ ಹಿಂದೆ ಸಿಬಿಐಯು ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಇವರ ಮೇಲೆ ಅದು ಒಳಸಂಚು ಆರೋಪವನ್ನು ಹೊರಿಸಿತ್ತು. 1997 ಸೆಪ್ಟೆಂಬರ್ 9ರಂದು ಸೆಶನ್ಸ್ ನ್ಯಾಯಾಧೀಶರಾದ ಜಗದೀಶ್ ಪ್ರಸಾದ್ ಶ್ರೀವಾಸ್ತವ್ ಅವರು ಈ ಪ್ರಕರಣದ ಬಗ್ಗೆ ತಮ್ಮ ತೀರ್ಪನ್ನೂ ಕೊಟ್ಟಿದ್ದರು. ‘ಆರೋಪಿಗಳು ಒಳಸಂಚಿನಲ್ಲಿ ಭಾಗಿಯಾಗಿರುವುದನ್ನು ಮತ್ತು 1990ರ ಆರಂಭದಿಂದ 1992 ಡಿ. 6ರ ವರೆಗಿನ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಸಂಚಿನ ಸಭೆ ನಡೆಸಿರುವುದನ್ನು’ ಅವರು ಪ್ರಸ್ತಾಪಿಸಿದ್ದರು. ಆದರೆ ಈ ಅಭಿಪ್ರಾಯವನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿತ್ತು. ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಇದರ ವಿರುದ್ಧ ಹಾಜಿ ಮೆಹಬೂಬ್ ಅಹ್ಮದ್ ಮತ್ತು ಸಿಬಿಐಯು ಸುಪ್ರೀಮ್ ಕೋರ್ಟ್‍ನ ಮೊರೆ ಹೋಗಿತ್ತು. ಮುಖ್ಯ ನ್ಯಾಯಾಧೀಶ ಕೇಹರ್ ಅವರು ಸುಬ್ರಹ್ಮಣ್ಯಂ ಸ್ವಾಮಿಯವರ ಮನವಿಗೆ ಸ್ಪಂದಿಸಿ ಮಾತುಕತೆಯ ಸಲಹೆ ನೀಡುವುದಕ್ಕಿಂತ ಒಂದು ವಾರ ಮೊದಲು ಸುಪ್ರೀಮ್ ಕೋರ್ಟ್ ಈ ಧ್ವಂಸ ಪ್ರಕರಣವನ್ನು ವಿಚಾರಣೆಗೆತ್ತಿ ಕೊಂಡಿತ್ತಲ್ಲದೇ, ಆರೋಪಿಗಳ ವಿರುದ್ಧ ಕ್ರಿಮಿನಲ್ ಒಳಸಂಚಿನ ಕುರಿತಂತೆ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸುವಂತೆ ಸಿಬಿಐಗೆ ಆದೇಶಿಸುವ ಒಲವನ್ನೂ ವ್ಯಕ್ತಪಡಿಸಿತ್ತು.
      ಒಂದು ಕಡೆ ಬಾಬರಿ ಮಸೀದಿಯನ್ನು ರಾಜಕೀಯಕ್ಕೆ ಬಳಸಿದ, ಅದರ ಹೆಸರಲ್ಲಿ ರಥಯಾತ್ರೆ ನಡೆಸಿದ ಮತ್ತು ಮಸೀದಿಯನ್ನು ಧ್ವಂಸಗೊಳಿಸಿದ ಆರೋಪ ಹೊತ್ತಿರುವ ಪಕ್ಷವು ಕೇಂದ್ರದಲ್ಲಿ ಮತ್ತು ಬಾಬರಿ ಮಸೀದಿ ಇರುವ ಉತ್ತರ ಪ್ರದೇಶ ದಲ್ಲಿ ಅಧಿಕಾರದಲ್ಲಿದೆ. ಇನ್ನೊಂದು ಕಡೆ, ಅದೇ ಪಕ್ಷದ ಹಿರಿಯ ನಾಯಕರು ಮಸೀದಿ ಧ್ವಂಸದ ಕಾರಣಕ್ಕಾಗಿ ಕಾನೂನಿನ ಬಲೆ ಯೊಳಗೆ ಸಿಲುಕುವ ಸಾಧ್ಯತೆಗಳೂ ಹೆಚ್ಚಾಗುತ್ತಿವೆ. ಇಂಥ ಸ್ಥಿತಿ ಯಲ್ಲಿ, ಮುಖ್ಯ ನ್ಯಾಯಾಧೀಶರ ಬಾಯಿಯಿಂದ ಹೊರಬಿದ್ದ ಮಾತುಕತೆ ಎಂಬ ಸಲಹೆಯಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿ ಗರು ನೆಮ್ಮದಿ ಕಂಡಿರುವುದನ್ನು ಅಸಹಜವೆನ್ನುವಂತಿಲ್ಲ. ಇದರಲ್ಲಿ ಬಿಜೆಪಿಗೆ ಅನುಕೂಲಕರವಾದ ಇನ್ನೊಂದು ಅಂಶವೂ ಇದೆ. ತಾವು ಈ ವಿವಾದವನ್ನು ಬಗೆಹರಿಸುವುದಕ್ಕೆ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದೇವೆ ಎಂಬ ಸಂದೇಶವನ್ನು ಈ ಮೂಲಕ ಜನರಿಗೆ ತಲುಪಿಸಿದಂತೆಯೂ ಆಗುತ್ತದೆ. ಒಂದು ವೇಳೆ ಸುನ್ನಿ ವಕ್ಫ್ ಮಂಡಳಿ ಮಾತುಕತೆಗೆ ಸಿದ್ಧವಾದರೆ, ಅದು ಇನ್ನೊಂದು ಸಾಧ್ಯ ತೆಗೂ ಬಾಗಿಲು ತೆರೆಯಬಹುದು. ಮುಸ್ಲಿಮ್ ಸಮುದಾಯದೊಳಗೆ ಭಿನ್ನಮತ ತಲೆದೋರಬಹುದು. ವಿವಿಧ ಅಭಿಪ್ರಾಯಗಳು ಸಾರ್ವ ಜನಿಕವಾಗಿ ಸುದ್ದಿ ಮಾಡಬಹುದು. ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಮರೆಯಲ್ಲಿ ನಿಂತು ಅವಕಾಶವಾದಿಗಳು ವಿವಿಧ ಬಾಣಗಳನ್ನು ಹೂಡಬಹುದು. ಸುನ್ನಿ ವಕ್ಫ್ ಮಂಡಳಿಯೊಳಗೆ ಭಿನ್ನಮತ ತಲೆದೋರುವುದಕ್ಕೂ ಕಾರಣವಾಗಬಹುದು. ಅಲ್ಲದೇ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ದಲ್ಲಿರುವುದರಿಂದ ಒತ್ತಡ ತಂತ್ರಗಳೂ ನಡೆಯಬಹುದು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತೀರಾ ದುರ್ಬಲವಾಗಿರುವ ಹಾಗೂ ಪೋಪ್ ರಂತೆ ಏಕ ನಾಯಕತ್ವವನ್ನು ಹೊಂದಿಲ್ಲದ ಸಮುದಾಯವೊಂದನ್ನು ಮಾತುಕತೆಯ ಹೆಸರಲ್ಲಿ ಚೆಲ್ಲಾಪಿಲ್ಲಿಗೊಳಿಸುವುದು ಕಷ್ಟಕರವೇನೂ ಅಲ್ಲ. ಬಹುಶಃ, ಬಿಜೆಪಿ ಮತ್ತು ಸಂಘಪರಿವಾರಗಳು ಮಾತುಕತೆಯ ಪರ ಒಲವು ವ್ಯಕ್ತಪಡಿಸಿರುವುದರ ಹಿಂದೆ ಈ ತಂತ್ರಗಾರಿಕೆಯೂ ಇದ್ದಿರಬಹುದು ಎನಿಸುತ್ತದೆ. ಇನ್ನೊಂದು ಸಾಧ್ಯತೆ ಏನೆಂದರೆ, ಬಾಬರಿ ಮಸೀದಿ ಇರುವ ಭೂಮಿಯ ಒಡೆತನವು ಮುಸ್ಲಿಮರ ಕೈವಶವಾಗುವ ಭೀತಿ ಅವರನ್ನು ಕಾಡಿರುವುದು ಮತ್ತು ಪ್ರಮುಖ ನಾಯಕರು ತಪ್ಪಿತಸ್ಥರಾಗುವ ಅನುಮಾನ ಅವರನ್ನು ಆವರಿಸಿರುವುದು. ಮಾತುಕತೆಯ ಮೂಲಕ ಈ ವಿವಾದ ಬಗೆಹರಿದರೆ ಈ ಎರಡೂ ಅಪಾಯಗಳಿಂದ ತಪ್ಪಿಸಿ ಕೊಳ್ಳಬಹುದು ಎಂಬ ದೂರದೃಷ್ಟಿ ಅವರದ್ದಾಗಿರಲೂ ಬಹುದು ಅಥವಾ ಮಾತುಕತೆಯ ಹೆಸರಲ್ಲಿ ಪ್ರಕರಣವನ್ನು ಇನ್ನಷ್ಟು ಕಾಲ ಜೀವಂತ ಇರಿಸುವ ಸಂಚೂ ಇರಬಹುದು.    
       ಬಾಬರಿ ಮಸೀದಿ ಇರುವ ಜಾಗ ಯಾರ ಒಡೆತನಕ್ಕೆ ಸೇರಬೇಕು ಎಂಬುದು ಸುಪ್ರೀಮ್ ಕೋರ್ಟ್‍ನ ಮುಂದೆ ಸದ್ಯ ಇರುವ ಮುಖ್ಯ ಪ್ರಶ್ನೆ. ಈ ಪ್ರಶ್ನೆ ಅಲಹಾಬಾದ್ ಹೈಕೋರ್ಟ್‍ನ ಎದುರೂ ಇತ್ತು. ಅದು ಕೊಟ್ಟ ತೀರ್ಪನ್ನು ಮೂವರು ಕಕ್ಷಿದಾರರೂ ಒಪ್ಪಿಕೊಂಡಿಲ್ಲ. ವಿವಾದಿತ ಜಾಗದಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನು ಭೂಮಿಯ ಒಡೆತನ ಯಾರಿಗೆ ಸೇರಬೇಕು ಎಂಬುದು ನಿರ್ಧರಿಸುತ್ತದೆ. ಸುಬ್ರಹ್ಮಣ್ಯಂ ಸ್ವಾಮಿಯವರು ಮಸೀದಿ ಅಲ್ಲಿ ಇರಲೇಬಾರದು ಎಂದು ವಾದಿಸುತ್ತಾರೆ. ಇದು ಮಾತುಕತೆಗೆ ಪೂರ್ವಭಾವಿಯಾಗಿ ಅವರು ಒಡ್ಡುವ ಸ್ಪಷ್ಟ ಷರತ್ತು. ಮಾತುಕತೆಗೆ ಮುಸ್ಲಿಮರು ಒಪ್ಪದೇ ಇದ್ದರೆ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಲಭ್ಯವಾಗುವ ವರೆಗೆ ಕಾದು ಬಳಿಕ ಶಾಬಾನು ಪ್ರಕರಣದಲ್ಲಿ ರಾಜೀವ್ ಗಾಂಧಿ ಮಾಡಿದಂತೆ ಮಸೂದೆಯೊಂದನ್ನು ಪಾಸು ಮಾಡಿ ಮಂದಿರ ಕಟ್ಟುವುದಾಗಿ ಅವರು ಧಮ್ಕಿ ಹಾಕುತ್ತಾರೆ. 2024ರ ಒಳಗೆ ಅಯೋಧ್ಯಾ, ಮಥುರಾ, ಕಾಶಿಗಳು ಮುಸ್ಲಿಮರಿಂದ ಮುಕ್ತವಾಗಲಿವೆ ಎಂದೂ ಬೆದರಿಸುತ್ತಾರೆ. ಇವೆಲ್ಲ ಏನು? ಮಾತುಕತೆಗೆ ರಂಗ ಸಜ್ಜುಗೊಳಿಸುವುದು ಹೀಗೆಯೇ? ಬೆದರಿಸಿ, ಒತ್ತಡಕ್ಕೊಳಪಡಿಸಿ ತಮಗೆ ಬೇಕಾದ ಪರಿಹಾರವನ್ನು ಪಡೆಯಬಲ್ಲೆವು ಎಂಬ ದಾರ್ಷ್ಟ್ಯತನವಲ್ಲವೇ ಇದು? ಸುಬ್ರಹ್ಮಣ್ಯಂ ಸ್ವಾಮಿಯವರ ಮಾತು, ಹಾವ-ಭಾವವೇ ಅವರು ಮತ್ತು ಅವರ ಪಕ್ಷವು ಚಪ್ಪಾಳೆ ತಟ್ಟಿ ಸ್ವಾಗತಿಸಿರುವ ಮಾತುಕತೆ ಎಂಬ ಪರಿಹಾರ ಮಾರ್ಗವು ಎಷ್ಟು ಅಪಾಯಕಾರಿ ಎಂಬುದನ್ನು ಸೂಚಿಸುತ್ತದೆ. ಇದಕ್ಕಿಂತ ಕೋರ್ಟೇ ಹೆಚ್ಚು ನಂಬಿಗಸ್ಥ.
       ಅದುವೇ ತೀರ್ಪು ಕೊಡಲಿ.

No comments:

Post a Comment