Thursday, March 8, 2012

ಸೋತು ಗೆದ್ದ ಇರಾನಿ ಆಟಗಾರ್ತಿಯರು


‘ವಿಶ್ವಕಪ್ ಮಹಿಳಾ ಕಬಡ್ಡಿ ಪಂದ್ಯಾಟದ ಫೈನಲ್ ನಲ್ಲಿ ಭಾರತದೆದುರು ಸೋತ ಇರಾನಿಯರು’ ಅನ್ನುವ ಅರ್ಥದ ಶೀರ್ಷಿಕೆಯಲ್ಲಿ ಎಲ್ಲ ಕನ್ನಡ ಪತ್ರಿಕೆಗಳೂ ಮಾರ್ಚ್ 5ರಂದು ಸುದ್ದಿ ಬರೆದಿವೆ. ಭಾರತೀಯ ತಂಡ ವಿಜಯೋತ್ಸವ ಆಚರಿಸುವ ಫೋಟೋವನ್ನೂ ಪ್ರಕಟಿಸಿವೆ. ಆದರೆ ಪ್ರಜಾವಾಣಿ ಪತ್ರಿಕೆ ಮಾತ್ರ, ಇರಾನಿ ಮಹಿಳೆಯರು ಕಬಡ್ಡಿ ಆಡುವ, ಭಾರತ ತಂಡದ ನಾಯಕಿ ಮಮತಾ ಪೂಜಾರಿಯನ್ನು ಹಿಡಿಯಲು ಯತ್ನಿಸುವ ಫೋಟೋವನ್ನು ಮುದ್ರಿಸಿ ಭಿನ್ನವಾಗಿ ಕಾಣಿಸಿಕೊಂಡಿದೆ. ನಿಜವಾಗಿ ಸುದ್ದಿಗಿಂತ ಹೆಚ್ಚು ಆಸಕ್ತಿ ಹುಟ್ಟಿಸುವುದು ಆ ಫೋಟೋ . ಮಮತಾ ಪೂಜಾರಿ ಚಡ್ಡಿ ಮತ್ತು ಬನಿಯನ್ನು ಧರಿಸಿದ್ದರೆ, ಇರಾನಿಯರು ಅಡಿಯಿಂದ ಮುಡಿಯವರೆಗೆ ಮೈ ಮುಚ್ಚುವ ಉಡುಪು ಧರಿಸಿದ್ದರು. ಒಂದು ವೇಳೆ ಪ್ರಜಾವಾಣಿಯಲ್ಲಿ ಆ ಫೋಟೋ ಪ್ರಕಟವಾಗದೇ ಇರುತ್ತಿದ್ದರೆ, ಭಾರತೀಯರಂತೆ ಇರಾನಿ ಮಹಿಳೆಯರು ಕೂಡಾ ಚಡ್ಡಿ, ಬನಿಯನ್ನು ಧರಿಸಿ ಕಬಡ್ಡಿ ಆಡಿರ ಬಹುದು ಎಂದು ಓದುಗರು ಅಂದುಕೊಳ್ಳುವ ಸಾಧ್ಯತೆ ಇತ್ತು. ಹೀಗಿರುವಾಗ, ಆಟ ಆಕರ್ಷಕಗೊಳ್ಳಬೇಕಾದ್ದು ಉಡುಪಿನಿಂದಲ್ಲ, ಆಟದಿಂದ ಎಂದು ತಮ್ಮ ಉಡುಪಿನ ಮೂಲಕ ಸಾರಿದ ಇರಾನಿ ಆಟಗಾರರ ಸಂದೇಶವನ್ನು ಕನ್ನಡ ಓದುಗರಿಗೆ ಮುಟ್ಟಿಸಿದ ಪ್ರಜಾವಾಣಿಗೆ ಅಭಿನಂದನೆಗಳನ್ನು ಹೇಳಬೇಕು.
ಇವತ್ತು ಆಟಕ್ಕೂ ಉಡುಪಿಗೂ ಬಹಳ ಹತ್ತಿರದ ನಂಟಿದೆ. ಟೆನ್ನಿಸ್, ಬ್ಯಾಡ್ಮಿಂಟನ್, ಸ್ಕೇಟಿಂಗ್, ಜಿಮ್ನಾಸ್ಟಿಕ್, ವೇಟ್ ಲಿಫ್ಟಿಂಗ್, ವಾಲಿಬಾಲ್, ಬಾಕ್ಸಿಂಗ್.. ಮುಂತಾದ ಆಟಗಳನ್ನು ಪುರುಷರೂ ಆಡುತ್ತಾರೆ, ಮಹಿಳೆಯರೂ ಆಡುತ್ತಾರೆ. ಆದರೆ ಆಟ, ಅದರ ನಿಯಮ ಒಂದೇ ಬಗೆಯದ್ದಾದರೂ ಉಡುಪಿನಲ್ಲಿ ಮಾತ್ರ ಇವರಿಬ್ಬರ ಮಧ್ಯೆ ವ್ಯತ್ಯಾಸ ಇರುತ್ತದೆ. ಮೊಣಕೈ ವರೆಗೆ ಬರುವ ಟೀಶರ್ಟು ಮತ್ತು ವೊಣಕಾಲು ವರೆಗಿನ ಉದ್ದದ ಚಡ್ಡಿಯನ್ನು ಧರಿಸಿ ರೋಜರ್ ಫೆಡರರ್ ಟೆನ್ನಿಸ್ ಆಡುವಾಗ, ಸೆರೆನಾ ವಿಲಿಯಮ್್ಸ ಅದರ ಅರ್ಧ ದಷ್ಟು ಬಟ್ಟೆಯನ್ನೂ ಧರಿಸುವುದಿಲ್ಲ. ನೂರು ಮೀಟರ್ ಓಟದಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಉಸೇನ್ ಬೋಲ್ಟ್ ನ ಉಡುಪಿಗೂ ಅದೇ ವಿಭಾಗದಲ್ಲಿ ಓಡುವ ಮಹಿಳೆಯರ ಉಡುಪಿಗೂ ಭಾರೀ ಅಂತರವಿರುತ್ತದೆ. ಮೊಣಕಾಲನ್ನು ಮುಚ್ಚುವಷ್ಟು ಉದ್ದದ ಡ್ರೆಸ್ಸು ಧರಿಸಿ ಓಡುವ ಉಸೇನ್ ಬೋಲ್ಟ್, ಆ ಉಡುಪನ್ನೆಂದೂ ತನ್ನ ಸಾಧನೆಗೆ ಅಡ್ಡಿ ಅಂತ ಹೇಳಿಕೊಂಡಿಲ್ಲ. ಹೀಗಿರುವಾಗ ಮಹಿಳೆಯ ಓಟಕ್ಕೆ, ಆಕೆಯ ಸಾಧನೆಗೆ ಮಾತ್ರ ಉಡುಪು ಅಡ್ಡ ಬರುವುದಾದರೂ ಯಾತಕ್ಕೆ? ಮಹಿಳಾ ಆಟಗಾರ್ತಿಯರು ಸ್ಕರ್ಟ್ ಧರಿಸಿ ಬ್ಯಾಡ್ಮಿಂಟನ್ ಆಡಬೇಕೆಂದು ವರ್ಷಗಳ ಹಿಂದೆ ವಿಶ್ವ ಬ್ಯಾಡ್ಮಿಂಟನ್ ಮಂಡಳಿ ನಿಯಮ ರೂಪಿಸಿತ್ತು. ಪ್ರೇಕ್ಷಕರನ್ನು ಆಕರ್ಷಿಸಬೇಕಾದರೆ ಈ ಬದಲಾವಣೆ ಅನಿವಾರ್ಯ ಅಂತಲೂ ಅದು ಸಮರ್ಥಿಸಿಕೊಂಡಿತ್ತು. ಅದರ ವಿರುದ್ಧ ಅಪಸ್ವರ ಎದ್ದ ಬಳಿಕ ನಿಯಮದ ಜಾರಿಯನ್ನು ಮುಂದೂಡಿತು. ಬಹುಶಃ ಇವತ್ತು ಮಹಿಳೆಯರಿಗೆ ಸಂಬಂಧಿಸಿ ಯಾವ ಆಟ ಕೂಡ ಸಭ್ಯ ಉಡುಪಿನೊಂದಿಗೆ ನಡೆಯುವುದೇ ಇಲ್ಲ. ಕನಿಷ್ಠ, ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಸಾರ್ವಜನಿಕವಾಗಿ ಹಾಕುವಷ್ಟಾದರೂ ಪ್ರಮಾಣದ ಉಡುಪನ್ನು ಆಟದ ಅಂಗಣದಲ್ಲಿ ಹಾಕುವುದಕ್ಕೆ ಆಧುನಿಕ ಕ್ರೀಡೆಗಳು ಅಸಹ್ಯ ಪಡುತ್ತಿವೆ. ನಿಜವಾಗಿ ಮನೆ, ಕಚೇರಿಯಲ್ಲಿ ಹೆಣ್ಣನ್ನು, ಆಕೆಯ ಡ್ರೆಸ್ಸನ್ನು ನೋಡುವ ಕಣ್ಣುಗಳು ಕೆಲವು ನೂರು ಸಂಖ್ಯೆಯಲ್ಲಷ್ಟೇ ಇವೆ. ಆದರೆ ಅಂಗಣದಲ್ಲಿ ಹಾಗಲ್ಲ. ಅಲ್ಲಿ ಹತ್ತಾರು ಕ್ಯಾಮರಾಗಳು ಆಟಗಾರರನ್ನು ತುಂಬಿಕೊಳ್ಳಲು ಸಜ್ಜಾಗಿರುತ್ತವೆ. ಕೋಟ್ಯಂತರ ಮಂದಿಗೆ ಅದನ್ನು ಟಿ.ವಿ.ಗಳ ಮೂಲಕ ತೋರಿಸಲಾಗುತ್ತದೆ. ಹೀಗಿರುವಾಗ ಪರಿಚಿತರಾದ ಮನೆ ಮಂದಿಯ ಮಧ್ಯೆಯೇ ಹಾಕಲು ಇಷ್ಟಪಡದ ಉಡುಪನ್ನು ಮನೆಯ ಹೊರಗೆ, ಅಪರಿಚಿತರ ಎದುರು ಹಾಕಿ ಆಡುವುದು ಯಾಕೆ ಆಧುನಿಕತೆ ಅನ್ನಿಸಿಕೊಳ್ಳಬೇಕು? ಆಧುನಿಕತೆಯ ಹೆಸರಲ್ಲಿ ಹೆಣ್ಣನ್ನು ನಗ್ನಗೊಳಿಸುವ, ಆ ಮೂಲಕ ಯಾರದ್ದೋ ಕಂಪೆನಿಯ ಮಾಲುಗಳನ್ನು, ಅವರ ಬ್ಯಾಂಕ್ ಅಕೌಂಟನ್ನು ಹೆಚ್ಚಿಸುವ ಷಡ್ಯಂತ್ರ ಇದು ಎಂದು ಯಾಕೆ ಅಂದುಕೊಳ್ಳಬಾರದು?
ಪ್ರತಿಯೊಂದು ಆಟಕ್ಕೂ ಅದರದ್ದೇ ಆದ ಚೆಲುವು ಇದೆ. ಆ ಚೆಲುವನ್ನು ಅನುಭವಿಸಲು ಪ್ರಾಮಾಣಿಕವಾದ ಮನಸ್ಸು ಇಲ್ಲದಿದ್ದರೆ ಅದು ಅವರವರ ದೌರ್ಬಲ್ಯವೇ ಹೊರತು ಆಟದ್ದಲ್ಲ. ಮೈ ಪೂರ್ತಿ ಬಟ್ಟೆ ಧರಿಸಿ ಕಬಡ್ಡಿ ಆಡಿದ ಇರಾನಿ ಮಹಿಳೆಯರು ಆಟದ ನಿಯಮ ರೂಪಿಸುವ ಪುರುಷ ಜಗತ್ತಿಗೆ ಮಾರ್ಮಿಕ ಸಂದೇಶವೊಂದನ್ನು ರವಾನಿಸಿದ್ದಾರೆ. ನಿಮ್ಮ ಅಭಿರುಚಿಯನ್ನು ಒಂದಿಷ್ಟು ಬದಲಾಯಿಸಿದರೆ, ಪೂರ್ಣ ಪ್ರಮಾಣದಲ್ಲಿ ಉಡುಪು ಧರಿಸಿ ಆಡುವ ಕಬಡ್ಡಿ ಕೂಡ ಆಕರ್ಷಕಗೊಳ್ಳಬಹುದು ಮತ್ತು ಫೈನಲ್ ಗೂ ಏರಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಇಷ್ಟಕ್ಕೂ ಇರಾನಿಯರು ನೇರವಾಗಿ ಫೈನಲ್ ಗೆ ತಲುಪಿದ್ದಲ್ಲ. ಸೆಮಿಫೈನಲ್ ನಲ್ಲಿ ಥಾಯ್ಲೆಂಡನ್ನು ಭಾರೀ ಅಂತರದಲ್ಲಿ ಸೋಲಿಸಿದ್ದಾರೆ. ಒಂದು ವೇಳೆ ಕನಿಷ್ಠ ಬಟ್ಟೆ ತೊಡುವುದು ಆಟಕ್ಕೆ ಅನುಕೂಲ ಎಂದಾಗಿರುತ್ತಿದ್ದರೆ ಥೈಲೆಂಡ್ ನ ಆಟಗಾರರು ಗೆಲ್ಲಬೇಕಿತ್ತು. ಇನ್ನು, ಫೈನಲ್ ನಲ್ಲಿ ಇರಾನಿಯರು ಎಷ್ಟು ಪ್ರಬುದ್ಧ ಆಟ ಆಡಿದರೆಂದರೆ ಕೇವಲ 6 ಅಂಕಗಳಿಂದ ಸೋಲೊಪ್ಪಿಕೊಂಡರು. ನಿಜವಾಗಿ ಇಲ್ಲಿ ಸೋಲು ಮತ್ತು ಗೆಲುವು ಮುಖ್ಯ ಅಲ್ಲ. ಒಂದು ಆಟವನ್ನು ಅಸಹ್ಯಗೊಳಿಸಿದ ಪುರುಷ ಜಗತ್ತನ್ನು ಇರಾನಿ ಆಟಗಾರ್ತಿಯರು ಕಬಡ್ಡಿ ಅಂಗಣದಲ್ಲಿ ನಿಂತು ಪ್ರಶ್ನಿಸಿದ್ದಾರೆ. ಕಬಡ್ಡಿಯಲ್ಲಿ ಅವರು ಪಡೆಯುತ್ತಿದ್ದ ಪ್ರತಿಯೊಂದು ಅಂಕ ಕೂಡ ಹೆಣ್ಣನ್ನು ನಗ್ನಗೊಳಿಸಿದ, ನಗ್ನಗೊಂಡರಷ್ಟೆ ಆಟ ಆಕರ್ಷಕವಾಗುತ್ತದೆ ಅಂತ ಪ್ರಚಾರ ಮಾಡಿದ್ದ ಪುರುಷರಿಗೆ ನೀಡುವ ಬಹುದೊಡ್ಡ ಏಟಾಗಿತ್ತು. ಹೀಗೆ 19 ಏಟು(ಅಂಕ)ಗಳನ್ನು ಕೊಟ್ಟೇ ಇರಾನಿ ಮಹಿಳೆಯರು ಅಂಗಣದಿಂದ ಹೊರಬಂದಿದ್ದಾರೆ. ಆದ್ದರಿಂದ ಅವರ ಸೋಲನ್ನು ಸೋಲು ಅನ್ನಬೇಕಿಲ್ಲ. ಅದು ನಗ್ನತೆಯನ್ನು ಇಷ್ಟಪಡುವ ಆಧುನಿಕ ಮನುಷ್ಯರ ಮೇಲಿನ ವಿಜಯ. ಅವರ ಪ್ರತಿಯೊಂದು ಅಂಕಕ್ಕೂ ಬೀಳುತ್ತಿದ್ದ ಚಪ್ಪಾಳೆಯನ್ನು ನಾವು ಬರೇ ಎರಡು ಕೈಗಳು ಎಬ್ಬಿಸಿದ ಸಪ್ಪಳ ಎಂಬ ಸೀಮಿತ ಅರ್ಥದಲ್ಲಿ ವ್ಯಾಖ್ಯಾನಿಸಬೇಕಿಲ್ಲ. ಅದು ಇರಾನಿನ ಸಂಸ್ಕøತಿಗೆ ಸಿಕ್ಕ ಚಪ್ಪಾಳೆ. ಇರಾನ್ ಪ್ರತಿಪಾದಿಸುತ್ತಿರುವ ಇಸ್ಲಾಮೀ ಮೌಲ್ಯಗಳಿಗೆ ಸಿಕ್ಕ ಗೌರವ. ಈ ಗೌರವದ ಮುಂದೆ ವಿಶ್ವಕಪ್ ನಿಜವಾಗಿಯೂ ಸಣ್ಣದು. ಸೋಲಿನಲ್ಲೂ ಮೌಲ್ಯವೊಂದನ್ನು ಗೆಲ್ಲಿಸಿದ, ದೇಹವನ್ನು ಪ್ರದರ್ಶಿಸದೆಯೇ ಆಟ ಆಡಬಹುದೆಂದು ಪ್ರತಿಪಾದಿಸಿದ ಈ ಆಟಗಾರ್ತಿಯರು ಸೋತು ಗೆದ್ದಿದ್ದಾರೆ. ಅವರು ಅಭಿನಂದನೆಗೆ ಅರ್ಹರು .

1 comment: