ಕಳೆದವಾರ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಬರಹಗಳ ಪೈಕಿ ಎರಡು ನನ್ನ ಗಮನ ಸೆಳೆದವು. ಅದರಲ್ಲಿ ಒಂದು ಗೆಳೆಯ ಶಶಿಧರ್ ಹೆಮ್ಮಾಡಿಯವರದ್ದು-
1. ಸೀತಾರಾಮ ಎಂಬ ಧಾರಾವಾಹಿ ಒಂದಿದೆ. ಅದರಲ್ಲೊಂದು ಪುಟ್ಟ ಮಗು ಇದೆ. ಆ ಕಾರಣಕ್ಕೆ ನನ್ನ ಮಕ್ಕಳು ಅದನ್ನು ನೋಡಲು ಶುರು ಮಾಡಿದರು. ನಮ್ಮ ಮನೆಯಲ್ಲಿ ನೋಡುವ ಏಕೈಕ ಸೀರಿಯಲ್ ಇದು ಮಾತ್ರ. ಈ ಸೀರಿಯಲ್‌ನಲ್ಲಿ ಸಿಹಿ ಎಂಬ ಮಗುವನ್ನು ಮೂರು ಬಾರಿ ಈಗಾಗಲೇ ಕಿಡ್ನ್ಯಾಪ್ ಮಾಡಲಾಗಿತ್ತು. ಈಗ ಆ ಮಗುವನ್ನು ಸಾಯಿಸಲಾಗಿದೆ. ಹೀಗೆ ಆ ಮಗುವನ್ನು ಸಾಯಿಸುವ ಷಡ್ಯಂತ್ರ ಮಾಡಿರುವುದು ಮಗುವಿನ ದೊಡ್ಡಮ್ಮ. ಈಕೆ ಈಗಾಗಲೇ ತನ್ನ ಗಂಡನ ಅಣ್ಣ ಮತ್ತು ಅತ್ತಿಗೆಯನ್ನು ಮರ್ಡರ್ ಮಾಡಿಸಿದವಳು. ಅದೇ ಅಣ್ಣ-ಅತ್ತಿಗೆಯ ಮಗು ವನ್ನು ಆಕ್ಸಿಡೆಂಟ್ ಮಾಡಿಸಿ ಕೊಲೆ ಮಾಡಲಿಕ್ಕೆ ಪ್ರಯತ್ನ ಪಟ್ಟಳು. ಈಗ ತನ್ನ ಕುಟುಂಬದಲ್ಲೇ ಆಸ್ತಿ ಇತ್ಯಾದಿಗಾಗಿ ಈಕೆ ಈ ಮುದ್ದು ಮಗುವನ್ನು ರೌಡಿಗಳಿಂದ ಕೊಲೆ ಮಾಡಿಸಿದ್ದಾಳೆ. ನಾನು ಕೇಳುವುದು, ಇಂತಹ ಸೀರಿಯಲ್‌ಗಳ ಮೂಲಕ ನಾವು ನಮ್ಮ ಕನ್ನಡ ಜನತೆಗೆ ಏನು ಸಂದೇಶ ಕೊಡುತ್ತಿದ್ದೇವೆ? ಕೊಲೆ ಅಷ್ಟು ಸುಲಭವೇ? ನಮ್ಮ ಸುತ್ತ-ಮುತ್ತಲಿರುವ ಸ್ತ್ರೀಯರು 99% ಯಾರೂ ಹೀಗೆ ಇಲ್ಲ. ಹಾಗಿದ್ರೆ, ಸೀರಿಯಲ್ ಸ್ತ್ರೀ ಪಾತ್ರಗಳು ಮಾತ್ರ ಹೀಗೇಕೆ? ಓರ್ವ ಪುಟ್ಟ ಬಾಲಕಿಯನ್ನು ಅದೇ ಮನೆಯ ಹೆಂಗಸು ಕೊಲೆ ಮಾಡಿಸುತ್ತಾಳೆಯೇ? ಈ ದರಿದ್ರ ಪಾತ್ರ ನಿರ್ವಹಿಸುತ್ತಿರುವುದು ಕನ್ನಡದ ಮಹಾನ್ ನಟ ಲೋಕೇಶ್‌ರ ಮಗಳು. ಎಂತಹ ದುರಂತ?
ನಿನ್ನೆ ನನ್ನ ಹೆಂಡತಿ ಇದನ್ನೇ ಕೇಳುತ್ತಿದ್ದಳು, ನಮ್ಮ ಸೀರಿಯಲ್‌ಗಳು ಯಾಕೆ ಹೀಗೆ? ಹೆಣ್ಣಿನ ಶೋಷಣೆ, ಸಮಸ್ಯೆ, ಕೌಟುಂಬಿಕ ಬದುಕು, ಅವಳ ಜಂಜಾಟ, ಸಹನೆ ಇವೆಲ್ಲದರ ಬಗ್ಗೆ ಏನನ್ನೂ ತೋರಿಸದೇ ಯಾಕೆ ಹೆಣ್ಣು ಇಷ್ಟು ಕ್ರೂರಿ ಎಂಬಂತೆ ಬಿಂಬಿಸಲಾಗುತ್ತಿದೆ?
ಇನ್ನೊಂದು, ಉಪನ್ಯಾಸಕಿ ದೀಪಾ ಹಿರೇಗುತ್ತಿ ಅವರದು. ವಾರದ ಹಿಂದೆ ಬಿಡುಗಡೆಯಾದ ಲಕ್ಕಿ ಭಾಸ್ಕರ್ ಎಂಬ ಸಿನಿಮಾವನ್ನು ವಿಮರ್ಶಿಸುತ್ತಾ ಸಿನಿಮಾಗಳು ಕೊಡಬೇಕಾದ ಸಂದೇಶ ಮತ್ತು ಕೊಡುತ್ತಿರುವ ಸಂದೇಶಗಳ ಬಗ್ಗೆ ಬರೆದಿದ್ದಾರೆ. ಅದನ್ನು ಸಂಕ್ಷಿಪ್ತವಾಗಿ ಹೀಗೆ ಓದಬಹುದು-
‘ಲಕ್ಕಿ ಭಾಸ್ಕರ್ ಸಿನಿಮಾ ನೋಡಿದೆ. ತೊಂಬತ್ತರ ದಶಕದ ಸಾಧಾರಣ ಬ್ಯಾಂಕ್ ಉದ್ಯೋಗಿಯೊಬ್ಬ ಬ್ಯಾಂಕ್‌ನ ಹಣವನ್ನು ವ್ಯವಹಾರಕ್ಕೆ ಬಳಸಿಕೊಂಡು ಶ್ರೀಮಂತನಾಗುವ ಕತೆ. ಚಿತ್ರ ಎಲ್ಲೂ ಬೋರ್ ಆಗಲ್ಲ. ಆದರೆ, ಈ ಸಿನಿಮಾ ನೋಡುವಾಗ ಒಳಗೊಳಗೇ ಕಿರಿಕಿರಿಯಾಗುತ್ತಿತ್ತು. ಇದು ಸೂಕ್ಷ್ಮವಾಗಿ ಹಲವಾರು ನೆಗೆಟಿವ್ ಸಂಗತಿಗಳನ್ನು ಹೇಳುತ್ತೆ. ಒಂದೇ ಒಂದು ಉದಾ ಹರಣೆ ಏನೆಂದರೆ, ಭಾಸ್ಕರ್‌ನ ಮಗ ಶಾಲೆಯಲ್ಲಿ ಚಾಕಲೇಟ್ ಕದ್ದ ಹುಡುಗನ ಪರವಾಗಿ ಸಾಕ್ಷಿ ಹೇಳಿ ಅದನ್ನು ಮನೆಗೆ ಬಂದು ಸಮರ್ಥಿಸಿಕೊಂಡದ್ದು. ಅದರಿಂದ ಅಪ್ಪ ಸ್ಫೂರ್ತಿ ಪಡೆದದ್ದು. ಆಗಲೇ ಹಿಂಸೆಯಾಗಿಬಿಟ್ಟಿತು. ಅಷ್ಟೇ ಅಲ್ಲ, ಕೊನೇಲಿ ಹೇಳೋ ಹಾಗೆ, “ಎಷ್ಟು ಚೆನ್ನಾಗಿ ಆಡಿದೆ ಅನ್ನೋದು ಮುಖ್ಯ ಅಲ್ಲ, ಯಾವಾಗ ನಿಲ್ಲಿಸಿದೆ ಅನ್ನೋದು ಮುಖ್ಯ.” ಇದನ್ನು ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಅರ್ಥ ಮಾಡಿ ಕೊಂಡು ಬಿಟ್ಟರೆ... ಹಾ.
ಈ ಸಿನಿಮಾದಿಂದ ಹುಡುಗು ಬುದ್ಧಿಯವರು ಯಾರೂ ಸ್ಫೂರ್ತಿ ಪಡೆಯಬೇಡಿ. ಇಷ್ಟು ಸುಲಭವಾ ದುಡ್ಡು ಮಾಡೋದು, ಅದೂ ಕೋಟಿ ಕೋಟಿ ಅಂತ ಯಾಮಾರಬೇಡಿ...’ ಅಂದಹಾಗೆ,
ಈ ಎರಡೂ ಬರಹಗಳು ಒಂದು ಸತ್ಯವನ್ನು ಹೇಳುತ್ತದೆ. ಮೌಲ್ಯಗಳನ್ನು ಕಾಲ ಕಸದಂತೆ ಕಾಣುವುದು ಮತ್ತು ಭ್ರಮೆಯನ್ನೇ ಸತ್ಯವೆಂದು ಬಿಂಬಿಸುವುದು ಫ್ಯಾಶನ್ ಆಗುತ್ತಿದೆ. ಸೀತಾರಾಮ ಧಾರಾವಾಹಿಯ ಕತೆಯನ್ನು ಎತ್ತಿಕೊಂಡು ಶಶಿಧರ್ ಕೆಲವು ಪ್ರಶ್ನೆ ಗಳನ್ನು ಎತ್ತಿದ್ದಾರೆ. ಸಿಹಿ ಅನ್ನುವ ಮೂರು ವರ್ಷದ ಮಗುವನ್ನು ಹತ್ಯೆಗೈಯುವ ದೊಡ್ಡಮ್ಮನಂಥ ಸ್ತ್ರೀಯರು ನಮ್ಮ ಸುತ್ತ-ಮುತ್ತಲೆಲ್ಲ ಇಲ್ಲವಲ್ಲ, ಮತ್ತೇಕೆ ಇಂಥ ಹಿಂಸಕ ಧಾರಾವಾಹಿಗಳನ್ನು ತಯಾರಿಸಲಾಗುತ್ತಿದೆ, 99% ಮಹಿಳೆಯರೂ ಹಾಗಿಲ್ಲವೆಂದ ಮೇಲೆ ಪದೇ ಪದೇ ಮಹಿಳೆಯರನ್ನು ಕ್ರೂರಿಗಳಂತೆ, ಹಿಂಸಕರಂತೆ ಬಿಂಬಿಸುವ ಧಾರಾವಾಹಿಗಳೇ ಯಾಕೆ ಪ್ರಸಾರವಾಗುತ್ತಿವೆ ಎಂದು ಅವರು ಪ್ರಶ್ನಿಸಿದ್ದಾರೆ. ನಿಜವಾಗಿ,
ಈ ಪ್ರಶ್ನೆ ಕೇವಲ ಈ ಧಾರಾವಾಹಿಗೆ ಸಂಬಂಧಿಸಿ ಮಾತ್ರ ಪ್ರಸ್ತುತವಾಗುವುದಲ್ಲ. ಈ ದೇಶದ ಸದ್ಯದ ಪರಿಸ್ಥಿತಿಯನ್ನೇ ನೋಡಿ. ಮುಸ್ಲಿಮ್ ದ್ವೇಷ ಉಚ್ಛ್ರಾಯ ಸ್ಥಿತಿಯಲ್ಲಿದೆ. ‘ಮುಸ್ಲಿಮರೆಂದರೆ ಹಾಗೆ, ಮುಸ್ಲಿಮರೆಂದರೆ ಹೀಗೆ, ಅವರಿಗೆ ನಾಲ್ಕು ನಾಲ್ಕು ಪತ್ನಿಯರಿದ್ದಾರೆ, ಹತ್ತು-ಹದಿನೈದು ಮಕ್ಕಳಿದ್ದಾರೆ, ತಲಾಕ್ ತಲಾಕ್ ತಲಾಕ್ ನಿರಂತರವಾಗಿ ನಡೆಯುತ್ತಿದ್ದು, ಮಹಿಳೆಯರು ಅತಂತ್ರರಾಗಿದ್ದಾರೆ, ಮುಸಲ್ಮಾನರು ಲವ್ ಜಿಹಾದ್ ನಡೆಸುತ್ತಾರೆ, ಲ್ಯಾಂಡ್ ಜಿಹಾದ್ ಎಂಬುದೂ ಇದೆ, ಅವರು ಮತಾಂತರ ಮಾಡುತ್ತಾರೆ, ನಮ್ಮ ನಿಮ್ಮ ಎಲ್ಲ ಜಾಗಗಳನ್ನೂ ವಕ್ಫ್ನ ಹೆಸರಲ್ಲಿ ಕಬಳಿಸುತ್ತಾರೆ, ಅವರ ಸಂಖ್ಯೆ ಹೆಚ್ಚಾದರೆ ಹಿಂದೂಗಳಿಗೆ ಉಳಿ ಗಾಲವಿಲ್ಲ, ಅವರಿಗೆ ಮನೆ ಕೊಡಬಾರದು, ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸಬಾರದು, ಅವರನ್ನು ಮನೆಗೆ ಕರೆಸಿಕೊಳ್ಳಬಾರದು... ಹೀಗೆ ದಿನನಿತ್ಯ ಭಾಷಣಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಮಾತುಗಳು-ಅಭಿಪ್ರಾಯಗಳು ಹರಿದು ಬರುತ್ತಲೇ ಇವೆ. ಹಾಗಂತ,
ಇಂಥ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡುವವರಲ್ಲಿ ಮತ್ತು ಭಾಷಣ ಮಾಡುವವರಲ್ಲಿ- ಅಲ್ಲ, ನಾಲ್ವರು ಬಿಡಿ, ಇಬ್ಬರು ಪತ್ನಿಯರನ್ನು ಹೊಂದಿದ ಓರ್ವ ಮುಸ್ಲಿಮ್ ವ್ಯಕ್ತಿ ನಿಮ್ಮ ಅಕ್ಕ ಪಕ್ಕದಲ್ಲಿ ಅಥವಾ ನಿಮ್ಮ ಪರಿಸರದಲ್ಲಿ ಇದ್ದಾರಾ ಎಂದು ಪ್ರಶ್ನಿಸಿ ನೋಡಿ. ಅವರಿಗೆ ಗೊತ್ತೇ ಇರುವುದಿಲ್ಲ. ಅವರು ದೂರದ ಇನ್ನೆಲ್ಲಿಗೋ ಬೆರಳು ತೋರಿಸುತ್ತಾರೆ. ತಮಗೆ ಗೊತ್ತೇ ಇಲ್ಲದ ಮತ್ತು ಕಂಡೇ ಇಲ್ಲದ ಊರುಗಳಲ್ಲಿ ಹಾಗೆ ಇದೆ ಎಂಬಂತೆ ಆಡಿಕೊಳ್ಳುತ್ತಾರೆ. ಇನ್ನು, ಅವರು ತೋರಿಸಿದ ಆ ಪ್ರದೇಶದಲ್ಲಿ ಹೀಗೆ ಕೇಳಿದರೆ ಸಿಗುವ ಉತ್ತರವೂ ಭಿನ್ನ ಅಲ್ಲ. ಅವರೂ ಅಂಥ ದ್ವಿಪತ್ನಿ ವಲ್ಲಭರನ್ನು ನೋಡಿರುವುದಿಲ್ಲ. ನಮ್ಮಲ್ಲಿ ಇಲ್ಲದಿದ್ದರೇನಂತೆ, ಬೇರೆಲ್ಲೋ ಇದೆ, ಮುಸ್ಲಿಮರೆಂದರೆ ಹಾಗೆಯೇ ಎಂಬಂತೆ ತಪ್ಪಿಸಿಕೊಳ್ಳುತ್ತಾರೆ.
ಇದು ಕೇವಲ ಮದುವೆಗೆ ಸಂಬಂಧಿಸಿ ಮಾತ್ರ ಇರುವ ಸಮಸ್ಯೆ ಅಲ್ಲ. ಹತ್ತು-ಹತ್ತು ಮಕ್ಕಳಿರುವ ಮುಸ್ಲಿಮ್ ಕುಟುಂಬಗಳು ನಿಮ್ಮ ಪರಿಸರದಲ್ಲಿ ಇದ್ದಾವಾ ಎಂದು ಕೇಳಿದರೆ, ಇಲ್ಲ ಅನ್ನುವುದೇ ಅವರ ಉತ್ತರವಾಗಿರುತ್ತದೆ. ಮತ್ತೆ ಯಾಕೆ ಇಂಥ ಸುಳ್ಳುಗಳನ್ನು ಹಂಚಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರೆ, ಬೇರೆ ಕಡೆ ಇದೆ ಎಂಬಂತೆ ಸಮರ್ಥಿಸಿಕೊಳ್ಳುತ್ತಾರೆ. ನಿಜವಾಗಿ,
ಸಮಾಜದಲ್ಲಿ ಯಾವುದು ಇಲ್ಲವೋ ಅದನ್ನೇ ಇದೆ ಎಂದು ಪದೇ ಪದೇ ಬಿಂಬಿಸುವುದು ಮತ್ತು ಜನರು ನಂಬುವಂಥ ವಾತಾವರಣವನ್ನು ಉಂಟು ಮಾಡುವುದು ಇವತ್ತಿನ ಅಪಾಯಕಾರಿ ವಿದ್ಯಮಾನವಾಗಿದೆ. ಇಂಥ ಭ್ರಮೆಗಳನ್ನು ಜನರ ಬಳಿಗೆ ತಲುಪಿಸುವುದಕ್ಕೆ ವಾಟ್ಸಪ್-ಫೇಸ್‌ಬುಕ್‌ಗಳು ದೊಡ್ಡ ಪಾತ್ರವನ್ನು ನಿಭಾಯಿಸುತ್ತಲೂ ಇವೆ. ಎಲ್ಲೋ ಒಂದು ಕಡೆ ನಡೆದ ಒಂಟಿ ಘಟನೆಯನ್ನು ಶರವೇಗದಲ್ಲಿ ಇನ್ನೊಂದು ಮನೆಗೆ ತಲುಪಿಸುವ ಸಾಮರ್ಥ್ಯ ಈಗಿನ ತಂತ್ರಜ್ಞಾನಕ್ಕಿದೆ. ಜಾರ್ಖಂಡ್‌ನ ಯಾವುದೋ ಮೂಲೆಯಲ್ಲಿನ ಹಿಂದೂ ಹೆಣ್ಣು ಮಗಳನ್ನು ಮುಸ್ಲಿಮ್ ಯುವಕ ನೋರ್ವ ಪ್ರೀತಿಸಿ ಮದುವೆಯಾಗುವುದು ಇವತ್ತಿನ ದಿನಗಳಲ್ಲಿ ಆ ಊರಿನ ವಿಷಯವಷ್ಟೇ ಆಗುತ್ತಿಲ್ಲ ಮತ್ತು ಮದುವೆ ಎಂಬ ಮೂರಕ್ಷರಗಳಿಗೆ ಸೀಮಿತವಾಗುವ ಪ್ರಸಂಗವಾಗಿಯೂ ಅದು ಗುರುತಿಸಿಕೊಳ್ಳುತ್ತಿಲ್ಲ. ಜಾರ್ಖಂಡ್‌ನಿಂದ ಕರ್ನಾಟಕದ ಹಳ್ಳಿಯೊಂದಕ್ಕೆ ಆ ‘ಮದುವೆ’ ಸುದ್ದಿ ತಲುಪುವಾಗ ನೂರಾರು ರೆಕ್ಕೆ-ಪುಕ್ಕಗಳನ್ನು ಸೇರಿಸಿಕೊಂಡಿರುತ್ತದೆ. ಸಿನಿಮಾ ಕತೆಗಳಿಗಿಂತಲೂ ಭೀಕರವಾಗಿ ಮತ್ತು ರಮ್ಯವಾಗಿ ಆ ಮದುವೆಯ ಸುತ್ತ ಕತೆಯನ್ನು ಕಟ್ಟಿ ಹಂಚಲಾಗುತ್ತದೆ. ಆ ಮದುವೆ ಪ್ರಕರಣವನ್ನು ಇಟ್ಟುಕೊಂಡು ದೇಶದಾದ್ಯಂತ ಅಸಂಖ್ಯ ಕಡೆಗಳಲ್ಲಿ ‘ಲವ್ ಜಿಹಾದ್’ ಭಾಷಣ ಮಾಡಲಾಗುತ್ತದೆ. ದೇಶದ ವಿವಿಧ ಭಾಷೆಗಳಲ್ಲಿ ಅಸಂಖ್ಯ ಬರಹಗಳು ಪ್ರಕಟವಾಗುತ್ತವೆ. ಪತ್ರಿಕೆಗಳಲ್ಲಿ ಒಂದು ರೀತಿಯಲ್ಲಿ ಅದು ವಿಶ್ಲೇಷಣೆಗೆ ಒಳಪಟ್ಟರೆ ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್ ನಲ್ಲಿ ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತದೆ. ಆ ಬಳಿಕ ಡಿಜಿಟಲ್ ಮೀಡಿಯಾಗಳ ಸರದಿ. ಟಿವಿ ಚಾನೆಲ್‌ಗಳಿಗೂ ಬ್ರೇಕಿಂಗ್ ನ್ಯೂಸ್. ಕೆಲವೊಮ್ಮೆ ಪ್ರೈಮ್ ಟೈಮ್ ಸಂವಾದಕ್ಕೂ ಅದು ವಸ್ತುವಾಗುತ್ತದೆ. ರಾಜಕಾರಣಿಯೂ ತನ್ನ ಭಾಷಣದ ವಸ್ತುವಾಗಿ ಅದನ್ನು ಉಲ್ಲೇಖಿಸುತ್ತಾರೆ. ಹೀಗೆ,
ದೇಶದ ಯಾವುದೋ ಒಂದು ಮೂಲೆಯಲ್ಲಿ ನಡೆದ ಒಂಟಿ ಮದುವೆಯೊಂದು 80 ಕೋಟಿ ಹಿಂದೂಗಳ ಅಸ್ಮಿತೆಯ ಪ್ರಶ್ನೆಯಾಗಿ, ಅವರ ಅಸ್ತಿತ್ವಕ್ಕೆ ಅಪಾಯ ಎದುರಾದ ಘಟನೆಯಾಗಿ ಮತ್ತು 20 ಕೋಟಿ ಮುಸ್ಲಿಮರ ಸಂಚಿನ ಪ್ರಕರಣವಾಗಿ ಅದು ದೇಶದಾದ್ಯಂತ ಹಂಚಿಕೆಯಾಗುತ್ತದೆ. ಆ ಒಂದೇ ಒಂದು ಮದುವೆ ಪ್ರಕರಣವು ಮುಸ್ಲಿಮ್ ಸಮುದಾಯವನ್ನು ಹಿಂದೂ ವಿರೋಧಿಯಾಗಿ ಮತ್ತು ಸಂಚು ನಡೆಸುವ ಸಮುದಾಯವಾಗಿ ಮಾರ್ಪಡಿಸಿಬಿಡುತ್ತದೆ. ಹಾಗಂತ,
ಇಂಥ ಮದುವೆ ಮುಸ್ಲಿಮರಲ್ಲಿ ಮಾತ್ರವೇ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ, ಅಲ್ಲ ಅನ್ನುವುದೇ ಉತ್ತರ. ಮುಸ್ಲಿಮ್ ಯುವತಿಯನ್ನು ಹಿಂದೂ ಯುವಕ ವರಿಸುವ ಪ್ರಕರಣಗಳೂ ಆಗಾಗ ನಡೆಯುತ್ತಿರುತ್ತವೆ. ಆದರೆ, ಅಂಥವುಗಳನ್ನು ಸಹಜ ಎಂಬಂತೆ ಸ್ವೀಕರಿಸುವ ಅದೇ ಮಂದಿ ತದ್ವಿರುದ್ಧ ಬೆಳವಣಿಗೆಯನ್ನು ಮಾತ್ರ ಅಪಾಯಕಾರಿಯೆಂಬಂತೆ ನೋಡುತ್ತಾರೆ. ಇದಕ್ಕೆ ಕಾರಣ, ‘ಮುಸ್ಲಿಮ್ ಮದುವೆ’ಯ ಸುತ್ತ ಕಟ್ಟಲಾಗುತ್ತಿರುವ ಭಯಾನಕ ಕತೆಗಳು. ಇಂಥ ಭ್ರಮಾತ್ಮಕ ಕತೆಗಳನ್ನು ಕಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚುವುದಕ್ಕೆ ಬಹುಶಃ ತಜ್ಞ ತಂಡಗಳೇ ಇರುವಂತಿದೆ. ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ಪ್ರಕರಣಕ್ಕೂ ಧಾರ್ಮಿಕ ತಿರುವು ಕೊಟ್ಟು ಮುಸ್ಲಿಮರನ್ನು ದೇಶದ್ರೋಹಿಗಳಂತೆ, ಹಿಂದೂ ವಿರೋಧಿಗಳಂತೆ ಮತ್ತು ಹಿಂಸಕರಂತೆ ಬಿಂಬಿಸುವುದೇ ಇವರ ಪೂರ್ಣಕಾಲಿಕ ಉದ್ಯೋಗ ಆಗಿರುವಂತಿದೆ. ಇದರ ಜೊತೆಗೇ,
ಲಕ್ಕಿ ಭಾಸ್ಕರ್ ಸಿನಿಮಾ ಕತೆಯನ್ನೂ ಇಟ್ಟು ನೋಡಬಹುದು. ಕಳ್ಳತನವನ್ನೇ ಮೌಲ್ಯ ಎಂದು ಬಿಂಬಿಸುವ ಈ ಸಿನಿಮಾ ಸಾರುವ ಸಂದೇಶ ಅತ್ಯಂತ ನಕಾರಾತ್ಮಕವಾದುದು. ಮೋಸ ಮಾಡಿ ಶ್ರೀಮಂತನಾಗುವುದನ್ನೇ ಯಶಸ್ಸು ಎಂದು ಬಿಂಬಿಸಿ ಈ ಸಿನಿಮಾ ಕೊನೆಗೊಳ್ಳುತ್ತದೆ ಎಂಬುದೇ ಈ ಸಿನಿಮಾದ ದೌರ್ಬಲ್ಯ ಎಂದು ದೀಪಾ ಹಿರೇಗುತ್ತಿ ಬರೆದಿದ್ದಾರೆ. ಆದರೆ, ಈ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರಂತೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿ ಸಿನಿಮಾ ಆಗಿ ಇದು ಗುರುತಿಸಿಕೊಂಡಿದೆಯಂತೆ. ನಕಾರಾತ್ಮಕ ಸಂದೇಶವನ್ನು ಸಾರುವ ಮತ್ತು ಯುವ ತಲೆಮಾರಿನಲ್ಲಿ ಮೋಸವನ್ನೇ ಯಶಸ್ಸಿನ ದಾರಿಯಾಗಿ ಬಿಂಬಿಸುವ ಸಿನಿಮಾವೊಂದು ಜನಪ್ರಿಯ ಅನ್ನಿಸಿಕೊಂಡದ್ದು ಏಕೆ? ಯುವತಲೆಮಾರಿಗೆ ಈ ಸಿನಿಮಾದಿಂದ ಸಿಗುವ ಪಾಠವೇನು? ಮೈಮುರಿದು ದುಡಿಯುವುದಕ್ಕಿಂತ ಮೋಸದ ದಾರಿಯಲ್ಲಿ ಹಣ ಮಾಡುವುದೇ ಲೇಸು ಎಂಬ ಸಂದೇಶ ಸಾರುವುದು ಯಾಕೆ ಜನಪ್ರಿಯ ಆಗಬೇಕು? ನಿಜವಾಗಿ,
ಸೀತಾರಾಮ ಎಂಬ ಧಾರಾವಾಹಿ ಮತ್ತು ಲಕ್ಕಿ ಭಾಸ್ಕರ್ ಎಂಬ ಸಿನಿಮಾಗಳೆರಡೂ ಸದ್ಯದ ಭಾರತದ ಸ್ಥಿತಿಯನ್ನು ಹೇಳುತ್ತದೆ. ಸುಳ್ಳುಗಳು ಹೇಗೆ ಜನರ ಭಾವ ಪ್ರಪಂಚಕ್ಕೆ ನುಗ್ಗಿ, ಅವರನ್ನು ಭ್ರಮೆಯಲ್ಲಿ ತೇಲುವಂತೆ ಮಾಡಿ, ಸುಳ್ಳುಗಳನ್ನೇ ಸತ್ಯವೆಂದು ಅವರು ಪಟ್ಟು ಹಿಡಿದು ವಾದಿಸುವಂತೆ ಮಾಡಬಹುದು ಎಂಬುದನ್ನೂ ಹೇಳುತ್ತದೆ. ಅಂದಹಾಗೆ, ಮುಸ್ಲಿಮ್ ದ್ವೇಷಕ್ಕೆ ಕಾರಣವಾಗಿರುವುದೂ ಇಂಥದ್ದೇ ಭ್ರಮಾತ್ಮಕ ಕತೆಗಳೇ.