
1950-60ರ ದಶಕದಲ್ಲಿ ಪ್ರತ್ಯೇಕ ತಮಿಳು ರಾಷ್ಟ್ರದ ಕೂಗು ಎದ್ದಿತ್ತು. ಡಿ.ಎಂ.ಕೆ. ತನ್ನ ಅಜೆಂಡಾದಲ್ಲಿ ಅದನ್ನು ಸೇರಿಸಿಯೂ ಇತ್ತು. ಮಾತ್ರವಲ್ಲ, ಮುಖ್ಯಮಂತ್ರಿ ಅಣ್ಣಾದುರೈಯವರು ಪ್ರತ್ಯೇಕ ತಮಿಳು ರಾಷ್ಟ್ರದ ಪರ ದೆಹಲಿಯಲ್ಲಿ ಮಾತಾಡಿದ್ದರು. ಅದರ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಯೂ ವ್ಯಕ್ತವಾಯಿತು. ಆದರೆ ಪ್ರಧಾನಿ ನೆಹರೂ ಅವರು ಅಣ್ಣಾದುರೈ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ‘ಅವರ ವಾಕ್ ಸ್ವಾತಂತ್ರ್ಯವನ್ನು ಗೌರವಿಸೋಣ’ ಎಂದಷ್ಟೇ ಹೇಳಿದ್ದರು. 1960ರಲ್ಲಿ ಡಿ.ಎಂ.ಕೆ. ಪಕ್ಷವು ತನ್ನ ಅಜೆಂಡಾದಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನೇ ಕಿತ್ತು ಹಾಕಿತು. ವಿಯೆಟ್ನಾಂ ವಿರುದ್ಧ ಅಮೇರಿಕವು ಸಾರಿದ ಯುದ್ಧವು ಅಮೇರಿಕದಲ್ಲಿ ಪರ-ವಿರೋಧಿಗಳನ್ನು ಹುಟ್ಟು ಹಾಕಿತ್ತು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಮೇರಿಕದ ಧ್ವಜವನ್ನೇ ಸುಟ್ಟು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. 2003ರಲ್ಲಂತೂ ಅಮೇರಿಕದಲ್ಲಿ ತೀವ್ರ ಪ್ರತಿಭಟನೆ ಗಳು ಕಾಣಿಸಿಕೊಂಡವು. ಬರ್ಕ್ಲಿಯಿಂದ ಬ್ರೋನ್ವರೆಗೆ ‘ಇರಾಕ್ ಯುದ್ಧ ವಿರೋಧಿ’ ಪ್ರತಿಭಟನೆಗಳು ಕಾಣಿಸಿಕೊಂಡವು. ಆದರೆ ಈ ಯಾವ ಪ್ರಕರಣದಲ್ಲೂ ಯಾರ ಮೇಲೂ ಅಮೇರಿಕ ದೇಶದ್ರೋಹಿ ಪ್ರಕರಣವನ್ನು ದಾಖಲಿಸಲಿಲ್ಲ. ಅಷ್ಟಕ್ಕೂ, ದೇಶದ್ರೋಹದ ಮಾನದಂಡ ಏನೆಲ್ಲ? ಯಾವ ಕಾರಣಕ್ಕಾಗಿ ಓರ್ವನನ್ನು, ಒಂದು ಗುಂಪನ್ನು, ಒಂದು ಸಂಘಟನೆಯನ್ನು ದೇಶದ್ರೋಹಿಯೆಂದು ಕರೆಯಬಹುದು? ಪಾಕಿಸ್ತಾನ್ ಜಿಂದಾಬಾದ್ ಎಂದು ಕರೆಯುವುದು ದೇಶದ್ರೋಹವಾಗುತ್ತದೆಂದಾದರೆ, ಗಣರಾಜ್ಯವನ್ನು ‘ಕರಾಳ ದಿನ’ವನ್ನಾಗಿ ಆಚರಿಸುವುದಕ್ಕೆ ಏನೆಂದು ಹೆಸರು? ಭಾರತೀಯ ಸಂವಿಧಾನದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರನ್ನು ಏನೆಂದು ಕರೆಯಬೇಕು? ಗಾಂಧೀಜಿಯವರ ಹತ್ಯೆಗೆ ಸಿಹಿ ಹಂಚುವುದು ಯಾವ ಕೆಟಗರಿಯಲ್ಲಿ ಬರುತ್ತದೆ? ನಾಥೂರಾಂ ಗೋಡ್ಸೆಯನ್ನು ಮಹಾನ್ ದೇಶಭಕ್ತನೆಂದು ಕರೆದು ಆತನ ಪುತ್ಥಳಿ ಯನ್ನು ಸ್ಥಾಪಿಸುವುದಾಗಿ ಘೋಷಿಸಿರುವುದಕ್ಕೆ ABVP ಮತ್ತು BJPಯ ನಿಲುವೇನು? ಅಖಿಲ ಭಾರತ ಹಿಂದೂ ಮಹಾಸಭಾವು ಇವೆಲ್ಲವನ್ನು ಮಾಡಿದ್ದರೂ ಮತ್ತು ಮತ್ತೆ ಮತ್ತೆ ಮಾಡುತ್ತಿದ್ದರೂ ABVPಯ ಗುಪ್ತಚರರು ಯಾಕೆ ಈ ಬಗ್ಗೆ ಬಂಡಾರು ದತ್ತಾತ್ರೇಯರಿಗೋ ಮಹೇಶ್ ಗಿರಿಗೋ ದೂರು ಕೊಟ್ಟಿಲ್ಲ? ರಾಜನಾಥ್ ಸಿಂಗ್ರವರು ಯಾಕೆ ಇದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವನ್ನು ಶಂಕಿಸಿಲ್ಲ? ಸಾಕ್ಷಿ ಮಹಾರಾಜ್, ಪ್ರಾಚಿ, ಕಿರಣ್ ರಿಜುಜು, ಸ್ಮೃತಿ ಇರಾನಿ, ಒ.ಪಿ. ಶರ್ಮಾ ಮತ್ತಿತರರು ಯಾಕೆ ಈ ಬಗ್ಗೆ ಒಂದೂ ಮಾತಾಡಿಲ್ಲ? ದೇಶಪ್ರೇಮವೆಂಬುದು ಇಷ್ಟೊಂದು ವೈರುಧ್ಯಗಳ ಹೆಸರೇ? ಅದರಲ್ಲೂ ವಿಧಗಳಿವೆಯೇ? ನಿಜವಾಗಿ, ಪಾಕ್ನ ಪರವೋ ಬಾಂಗ್ಲಾ, ಲಂಕಾ, ಅಮೇರಿಕದ ಪರವೋ ಘೋಷಣೆ ಕೂಗುವುದರಿಂದ ಆಗುವಂಥದ್ದೇನೂ ಇಲ್ಲ. ಅಂಥ ಘೋಷಣೆಗಳಿಂದ ಈ ದೇಶದಲ್ಲಿ ಹಿಂಸಾಚಾರ ಆಗುವುದೂ ಇಲ್ಲ. ಹಾಗಂತ ನಾನದನ್ನು ಸಮರ್ಥಿಸುತ್ತಿಲ್ಲ. ಈ ದೇಶದಲ್ಲಿ ನಿಂತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಬೇಕಾದ ಯಾವ ಅಗತ್ಯವೂ ಯಾರಿಗೂ ಇಲ್ಲ. ಆದರೆ, ಈ ಘೋಷಣೆ ಬೀರುವ ಪರಿಣಾಮವು ‘ದಲಿತರನ್ನು ನಾಯಿಗಳು’ ಅನ್ನುವುದಕ್ಕಿಂತಲೂ ದೊಡ್ಡದೇ? ಹತ್ಯಾಕಾಂಡಕ್ಕೆ ನೇತೃತ್ವ ಕೊಡುವುದಕ್ಕಿಂತಲೂ ದೊಡ್ಡದೇ? ಗುಜರಾತ್ನಲ್ಲಿ ಸಾವಿರಕ್ಕಿಂತಲೂ ಅಧಿಕ ಮಂದಿಯನ್ನು ಹತ್ಯೆಗೈಯಲಾದ ಕೃತ್ಯವು ಪಾಕಿಸ್ತಾನ್ ಜಿಂದಾಬಾದ್ನ ಎದುರು ತೃಣ ಸಮಾನವೇ? ಮುಝಫ್ಫರ್ ನಗರ್ ಹತ್ಯಾಕಾಂಡವನ್ನು ‘ಪಾಕಿಸ್ತಾನ್ ಜಿಂದಾಬಾದ್’ನೆದುರು ಮುಖಾಮುಖಿಯಾಗಿಸಿದರೆ, ಹತ್ಯಾಕಾಂಡ ಹಗುರವೂ ಜಿಂದಾಬಾದ್ ಭಾರವೂ ಆಗಿಬಿಡುವುದೇ? ದಾದ್ರಿಯಲ್ಲಿ ಥಳಿಸಿ ಕೊಲ್ಲಲಾಯಿತಲ್ಲ, ಹರ್ಯಾಣದಲ್ಲಿ ದಲಿತರನ್ನು ಬೆಂಕಿ ಕೊಟ್ಟು ಸುಟ್ಟು ಹಾಕಲಾಯಿತಲ್ಲ, ಇನ್ನೆಲ್ಲೋ ದೇವಸ್ಥಾನ ಪ್ರವೇಶಿಸಿದುದಕ್ಕಾಗಿ ಹತ್ಯೆ ನಡೆಸಲಾಯಿತಲ್ಲ.. ಇವೆಲ್ಲ ‘ಪಾಕಿಸ್ತಾನ್ ಜಿಂದಾಬಾದ್’ನ ಮುಂದೆ ಜುಜುಬಿಯೇ? ಅಲ್ಲ ಎಂದಾದರೆ, ಇವರನ್ನೇಕೆ ನ್ಯಾಯಾಲಯದ ಆವರಣದಲ್ಲಿ ಥಳಿಸಲಾಗಿಲ್ಲ? ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿಲ್ಲ? ರಾಜನಾಥ್ ಸಿಂಗ್ರಿಂದ ಹಿಡಿದು ಅಮಿತ್ ಶಾರ ವರೆಗೆ ಯಾಕೆ ಯಾರೂ ಇವರನ್ನು ದೇಶದ್ರೋಹಿಗಳೆಂದು ಕರೆದಿಲ್ಲ?
ನಿಜವಾಗಿ, ವೇಮುಲ, ಕನ್ಹಯ್ಯ ಅಥವಾ ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ರಿಚಾ ಸಿಂಗ್ ಮುಂತಾದವರೆಲ್ಲ ಹಿಂದುಳಿದ ವರ್ಗದಿಂದ ಬಂದವರು. ಅವರ ಭಾಷೆ, ಆಹಾರ, ಆಲೋಚನೆ, ಮಾತುಗಾರಿಕೆ ಯಾವುವೂ ಇವತ್ತು ರಾಷ್ಟ್ರೀಯತೆಯ ಡಂಗುರ ಬಾರಿಸುವವರಿಗೆ ಜೀರ್ಣವಾಗುವಂಥದ್ದಲ್ಲ. ಯಾಕೆಂದರೆ, ಈ ಸ್ವಘೋಷಿತ ರಾಷ್ಟ್ರ ಪ್ರೇಮಿಗಳ ರಾಷ್ಟ್ರೀಯತೆ ನಿಂತಿರುವುದೇ ವೇಮುಲನಂಥವರ ಸಂಕಟಗಳ ಮೇಲೆ. ಕನ್ಹಯ್ಯ, ವೇಮುಲ, ರಿಚಾರು ಪ್ರತಿನಿಧಿಸುವ ಸಮುದಾಯದ ಮಂದಿ ತಲೆತಲಾಂತರಗಳಿಂದ ಇವರಿಂದ ಅವಮಾನ ಅನುಭವಿಸಿದ್ದಾರೆ. ಅಸಮಾನತೆಯ ನೋವನ್ನು ಉಂಡಿದ್ದಾರೆ. ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮನುಷ್ಯರೆಂಬ ಪರಿಗಣನೆಗೂ ಒಳಗಾಗದೇ ಜೀತದಾಳುಗಳಂತೆ ಹೊಲಗಳಲ್ಲಿ ದುಡಿದಿದ್ದಾರೆ. ಕನ್ಹಯ್ಯ ಮತ್ತು ವೇಮುಲರ ಮಾತುಗಳಲ್ಲಿ ಕಾಣಿಸುವ ಆಕ್ರೋಶದ ಹಿಂದೆ ಈ ಕಾರಣಗಳನ್ನೂ ಹುಡುಕಬೇಕಾಗಿದೆ. ಆದರೆ ರಾಷ್ಟ್ರೀಯತೆ, ರಾಷ್ಟ್ರ ಪ್ರೇಮ, ರಾಷ್ಟ್ರದ್ರೋಹ ಎಂದೆಲ್ಲಾ ಹೇಳುವ ಮಂದಿಗೆ ಈ ದಮನಿತರ ಭಾಷೆ ಕರ್ಕಶವಾಗಿ ಕೇಳಿಸುತ್ತಿದೆ. ಅವರ ಆಲೋಚನೆಗಳು ದೇಶದ್ರೋಹಿಯಂತೆ ಗೋಚರಿಸುತ್ತದೆ. ತಮ್ಮ ಹಿಂಸಾತ್ಮಕ ಇತಿಹಾಸ ವನ್ನು ಅವರು ತೆರೆಯುತ್ತಿರುವರೆಂಬ ಭಯ ಆಗುತ್ತಿದೆ. ಆದ್ದರಿಂದಲೇ, ‘ಸಕಲ ರೋಗ ನಿವಾರಕ’ವಾಗಿ ಅವರು ರಾಷ್ಟ್ರೀಯತೆ ಎಂಬ ಅಸ್ತ್ರವನ್ನು ಎತ್ತಿಕೊಂಡಿದ್ದಾರೆ. ರಾಷ್ಟ್ರೀಯತೆಯು ಎಲ್ಲ ಜಾತಿ, ಜನಾಂಗ, ಭಾಷೆ, ಧರ್ಮಕ್ಕಿಂತ ಮೇಲು ಎಂದು ಹೇಳುತ್ತಿದ್ದಾರೆ. ಜಾತಿ-ಜನಾಂಗದ ಹೆಸರಲ್ಲಿ ಇವತ್ತು ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವುದು ಮತ್ತು ಪೂರ್ವ ಇತಿಹಾಸದ ಬರ್ಬರತೆಗಳನ್ನು ನೆನಪಿಸುವುದು ರಾಷ್ಟ್ರೀಯತೆಗೆ ವಿರುದ್ಧ ಎಂದು ನಂಬಿಸುತ್ತಿದ್ದಾರೆ. ಅಷ್ಟಕ್ಕೂ, ಈ ರಾಷ್ಟ್ರೀಯತೆಯು ಭಾರತೀಯ ಸಂವಿಧಾನದಿಂದ ಆಯ್ದುಕೊಂಡದ್ದಲ್ಲ. ಈ ರಾಷ್ಟ್ರೀಯತೆಯ ಚೌಕಟ್ಟಿಗೆ ಸಂವಿಧಾನ ಮಾರ್ಗದರ್ಶಿಯೂ ಅಲ್ಲ. ಈ ರಾಷ್ಟ್ರೀಯತೆಯು ಹೊರಗೆ ತೀರಾ ಸಾಧುವಾಗಿ ಕಂಡರೂ ಒಳಗೆ ಒಂದೇ ಧರ್ಮ, ಒಂದೇ ಸಂಸ್ಕೃತಿ, ಒಂದೇ ಆಹಾರ ಕ್ರಮ, ಒಂದೇ ಭಾಷೆ.. ಮುಂತಾದ ಭೂಯಿಷ್ಟ ವಿಷಯಗಳಿಂದ ತುಂಬಿಕೊಂಡಿದೆ. ಆದ್ದರಿಂದಲೇ, ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವಾಗ ಕೆರಳುವ ಈ ರಾಷ್ಟ್ರೀಯತೆ, ‘ಏಕ್ ಧಕ್ಕಾ ಔರ್ ದೋ’ ಎಂದು ಹೇಳುವಾಗ ಸಂಭ್ರಮಿಸುತ್ತದೆ. ಸಂವಿಧಾನ ದಿನವನ್ನು ಕರಾಳ ದಿನವಾಗಿ ಆಚರಿಸುವಾಗ ಈ ರಾಷ್ಟ್ರೀಯತೆಗೆ ಮಾತೇ ಬರುವುದಿಲ್ಲ. ಕೊಂದವರು ಮತ್ತು ಕೊಲೆಗೀಡಾಗುವವರ ಧರ್ಮವನ್ನು ನೋಡಿ ಈ ರಾಷ್ಟ್ರೀಯತೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ. ಅಂದಹಾಗೆ, ಹೈದರಾಬಾದ್ ಮತ್ತು JNU ಪ್ರಕರಣದಿಂದ ಆಗಿರುವ ಒಂದೇ ಒಂದು ಲಾಭ ಎಂದರೆ, ಈ ತಥಾಕಥಿತ ರಾಷ್ಟ್ರೀಯವಾದಿಗಳ ರಾಷ್ಟ್ರೀಯತೆಯು ಎಷ್ಟು ಬೋಗಸ್ ಎಂಬುದು ಬಹಿರಂಗವಾದದ್ದು. ಈ ರಾಷ್ಟ್ರೀಯತೆಯು ಸಂಪೂರ್ಣವಾಗಿ ಭ್ರಮೆ, ಭಾವನೆ ಮತ್ತು ಪ್ರತಿಶತಃ ನೂರರಷ್ಟು ಜನಾಂಗೀಯತೆಯಿಂದ ತುಂಬಿರುವಂಥದ್ದು. ಇದು ವಾಸ್ತವಕ್ಕೆ ಮುಖಾಮುಖಿಯಾಗದ ಬರೇ ಒಂದು ಆವೇಶ. ಈ ರಾಷ್ಟ್ರೀಯತೆಯ ಎದುರು ವೇಮುಲ ಮತ್ತು ಕನ್ಹಯ್ಯ ರಾಷ್ಟ್ರ ದ್ರೋಹಿಗಳಾಗದೇ ಇರುವುದಕ್ಕೆ ಸಾಧ್ಯವೇ ಇರಲಿಲ್ಲ. ಬಹುಶಃ,
ಖ್ಯಾತ ಪತ್ರಕರ್ತ ರಾಜ್ದೀಪ್ ಸರ್ದೇಸಾೈಯವರು ‘ನಾನೂ ದೇಶದ್ರೋಹಿ’ ಎಂದಿರುವುದು ಈ ಗೂಂಡಾ ರಾಷ್ಟ್ರೀಯತೆಗೆ ಚೆನ್ನಾಗಿಯೇ ಒಪ್ಪುತ್ತದೆ.