Friday, August 18, 2023

ಗ್ಯಾನ್‌ವಾಪಿ ಸರ್ವೇ ಯಾರ ಅಗತ್ಯ?



ಶಿವಮಂದಿರವನ್ನು ಒಡೆದು 1669ರಲ್ಲಿ ಔರಂಗಝೇಬ್ ಕಟ್ಟಿರುವನೆಂದು ಹೇಳಲಾಗುವ ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯ  ಸರ್ವೇ ನಡೆದಿದೆ. ಪೂರ್ವದಲ್ಲಿ ಅದು ಏನಾಗಿತ್ತು, ಮಂದಿರದ ಕುರುಹುಗಳು ಅಲ್ಲಿ ಇದೆಯೇ ಎಂಬುದು ಸರ್ವೇಯ ಪ್ರಧಾನ ಗುರಿ.  ನಿಜಕ್ಕೂ, ಇಂಥ ಹುಡುಕಾಟ ಯಾರ ಅಗತ್ಯ? ಈ ಸರ್ವೇಯ ಫಲಿತಾಂಶದಿಂದ  ಸಂತಸಪಡುವವರು ಯಾರು- ರಾಜಕಾರಣಿಗಳೋ  ನಾಗರಿಕರೋ?

1669ಕ್ಕಿಂತಲೂ ಪೂರ್ವದಲ್ಲಿ ಅದು ಶಿವ ಮಂದಿರವಾಗಿತ್ತೋ ಇಲ್ಲವೋ; ಆದರೆ, ಅದಕ್ಕೂ ಈಗ ಆ ಮಸೀದಿಯಲ್ಲಿ ನಮಾಝï  ಮಾಡುತ್ತಿರುವವರಿಗೂ ಯಾವ ಸಂಬಂಧವೂ ಇಲ್ಲ.

ಒಂದುವೇಳೆ, 1669ರಲ್ಲಿ ಮಂದಿರವನ್ನು ಒಡೆದೇ ಈ ಮಸೀದಿಯನ್ನು ಕಟ್ಟಲಾಗಿದೆ ಎಂದು ವಾದಿಸಿದರೂ ಈಗ ಆ ಘಟನೆಗೆ 400  ವರ್ಷಗಳೇ ಕಳೆದಿವೆ. ರಾಜರುಗಳ ಕಾಲ ಕಳೆದು ಪ್ರಜೆಗಳ ಕಾಲ ಬಂದಿದೆ. ರಾಜರುಗಳ ಕಾಲದಲ್ಲಿ ಏನೇನು ಅನಾಹುತಗಳು ನಡೆದಿವೆ  ಎಂಬುದನ್ನು ಈ ಪ್ರಜೆಗಳ ಕಾಲದಲ್ಲಿ ಸಂಶೋಧನೆ ಮಾಡಿ ಸರಿಪಡಿಸುವುದು ಅಗತ್ಯವೇ? ಹಾಗೆ ಸರಿಪಡಿಸಲು ಹೊರಟರೆ ಈ ಮಣ್ಣಿನಲ್ಲಿ ಸರ್ವೇ ನಡೆಸಬೇಕಾದ ಪುರಾತನ ಕಟ್ಟಡಗಳು, ಮಂದಿರಗಳು, ಗುರುದ್ವಾರಗಳು ಎಷ್ಟಿದ್ದೀತು? ದೇಶ ವಿಭಜನೆಯ ವೇಳೆ ಪಂಜಾಬ್,  ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ 50 ಸಾವಿರ ಮಸೀದಿಗಳನ್ನು ಒಂದೋ ಧ್ವಂಸ ಮಾಡಲಾಗಿದೆ ಅಥವಾ ಮಂದಿರವೋ  ಅಥವಾ ಗುರುದ್ವಾರವೋ ಆಗಿ ಬದಲಾಯಿಸಲಾಗಿದೆ. ಇವುಗಳನ್ನು ಮತ್ತೆ ಮುಸ್ಲಿಮರಿಗೆ ಮರಳಿಸಬೇಕು ಎಂದು ಆಗ್ರಹಿಸಿದರೆ ಅದು  ಸಾರ್ವಜನಿಕವಾಗಿ ಬೀರುವ ಪರಿಣಾಮಗಳು ಏನೇನು?

ಒಂದುಕಾಲದಲ್ಲಿ ಇಂದಿನ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವಿಸ್ತಾರ ಭೂಭಾಗದಲ್ಲಿ ಜೈನ ಧರ್ಮವು ಸೊಂಪಾಗಿ ಬೆಳೆದಿತ್ತು. ಕ್ರಿಸ್ತ ಪೂರ್ವದಲ್ಲಿ ಹುಟ್ಟಿ ಈ ಮಣ್ಣಿನಲ್ಲಿ ಅಪಾರ ಜನಾಕರ್ಷಣೆಯನ್ನು ಪಡೆದು ಕ್ರಿಸ್ತಶಕ 13ನೇ ಶತಮಾನದವರೆಗೆ ದೊಡ್ಡಮಟ್ಟದ ಸಂಚಲನೆಯನ್ನು ಸೃಷ್ಟಿಸಿದ ಧರ್ಮ ಇದು. ತೆಲಂಗಾಣದ ಕಾಕತಿಯಾಗಳು ಮತ್ತು ಆಂಧ್ರದ ವೆಂಕಿ ಚಾಲುಕ್ಯರು ಜೈನ ಧರ್ಮದ ಅನುಯಾಯಿಗಳಾಗಿದ್ದರು. ಜೈನರ ಮೊದಲ ತೀರ್ಥಂಕರ ಮತ್ತು ಜೈನಧರ್ಮದ ಸ್ಥಾಪಕ ರಿಶಭನ ಮಗ ಬಾಹುಬಲಿಯ ರಾಜಧಾನಿ  ಪೊಡಾಣ್ ಆಗಿತ್ತು. ಇವತ್ತು ಅದು ನಿಝಾಮಾಬಾದ್‌ನ ಹತ್ತಿರದ ಪ್ರದೇಶವಾಗಿ ಗುರುತಿಸಿ ಕೊಂಡಿದೆ. ಆದರೆ ಕ್ರಿ.ಶ. 13ನೇ ಶತಮಾ ನದವರೆಗೆ ಈ ಭಾಗದಲ್ಲಿ ಅತ್ಯಂತ ಉಜ್ವಲವಾಗಿದ್ದ ಜೈನ ಧರ್ಮವು ಇವತ್ತು ಈ ಭಾಗದಲ್ಲಿ ಹುಡುಕಿದರೂ ಸಿಗದಷ್ಟು ಅಪರೂಪವಾಗಿದೆ.  ಈ ಎರಡೂ ರಾಜ್ಯಗಳಲ್ಲಿ ಇವತ್ತು ಕೇವಲ 42 ಜೈನ ಸ್ಮಾರಕಗಳಷ್ಟೇ ಉಳಿದುಕೊಂಡಿವೆ. ಪ್ರಸಿದ್ಧ ಹಿಂದೂ ಮಂದಿರಗಳಾದ  ವೇಮುಲವಾಡ, ಲಸರ್‌ನ ಪ್ರಸಿದ್ಧ ಸರಸ್ವತಿ ಮಂದಿರ ಮತ್ತು ಪದ್ಮಾಕ್ಷಿ ಮಂದಿರಗಳು ಒಂದು ಕಾಲದಲ್ಲಿ ಜೈನಬಸದಿಗಳಾಗಿದ್ದುವು ಎಂದು  ಹೇಳಲಾಗುತ್ತಿದೆ. 13ನೇ ಶತಮಾನದಲ್ಲಿ ವೀರಶೈವ ಚಿಂತನೆಯು ಅತ್ಯಂತ ಆಕ್ರಮಣಕಾರಿಯಾಗಿ ಈ ಭಾಗದಲ್ಲಿ ಪ್ರಚಾರ  ಪಡೆಯುವುದರೊಂದಿಗೆ ಜೈನ ಧರ್ಮದ ಅವನತಿಯ ಆರಂಭವಾಯಿತು. ಅದರ ಜೊತೆಗೆ ಬಸದಿಗಳು, ಸ್ಮಾರಕಗಳು ಕೂಡ  ಬದಲಾದುವು. ಅಂದಹಾಗೆ,

ಒಂದು  ಕಾಲದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಈ ಮಣ್ಣಿನಲ್ಲಿ ಎಷ್ಟು ಸಮೃದ್ಧವಾಗಿ ಬೆಳೆದಿದ್ದುವು ಎಂದರೆ, ಅದು ರಾಜ ಧರ್ಮವೇ  ಆಗಿತ್ತು. ಈ ಎರಡು ಧರ್ಮಗಳಲ್ಲಿ ಹಲವು ರಾಜವಂಶಗಳೇ ಆಗಿಹೋಗಿವೆ. ಸಾಮ್ರಾಟ ಅಶೋಕ ಅವರಲ್ಲಿ ಒಬ್ಬ.  ಇಷ್ಟೊಂದು  ಭವ್ಯ ಇತಿಹಾಸವನ್ನು ಹೊಂದಿರುವ ಈ ಎರಡೂ ಧರ್ಮಗಳ ಕುರುಹುಗಳೂ ಅಷ್ಟೇ ಸಮೃದ್ಧವಾಗಿರ ಬೇಕಾದುದು ಅಗತ್ಯ. ಆದರೆ,  ಜೈನ ಬಸದಿ ಮತ್ತು ಬೌದ್ಧ ಸ್ತೂಪಗಳು ಬಹುತೇಕ ಈ ದೇಶದಿಂದ ಕಾಣೆಯಾಗಿವೆ. ಹಾಗಿದ್ದರೆ ಅವು ಎಲ್ಲಿವೆ? ಏನಾಗಿವೆ? ಅವು  ಸಹಜವಾಗಿ ಧ್ವಂಸಗೊಂಡಿವೆಯೋ ಅಥವಾ ಮಂದಿರವಾಗಿ ಪರಿವರ್ತನೆಯಾಗಿವೆಯೋ?
ಹಾಗಂತ, ಇಂಥದ್ದೊಂದು  ಪ್ರಶ್ನೆಯನ್ನು ಇಟ್ಟುಕೊಂಡು ಭೂಮಿಯನ್ನು ಅಗೆಯಲು ಹೊರಟರೆ ಅದರಿಂದ ಈ ಸಮಾಜಕ್ಕಾಗುವ  ಲಾಭವೇನು?

ಅಷ್ಟಕ್ಕೂ, ಇತಿಹಾಸ ಏಕಮುಖವಾಗಿಲ್ಲ.

ಇಲ್ಲಿ, ಮಂದಿರವನ್ನು ಒಡೆದ ಮುಸ್ಲಿಮ್ ರಾಜನಷ್ಟೇ ಇರುವುದಲ್ಲ, ಹಿಂದೂ ರಾಜನೂ ಇದ್ದಾನೆ. ಮಂದಿರಕ್ಕೆ ಭೂದಾನ ಮಾಡಿದ  ಮುಸ್ಲಿಮ್ ದೊರೆ ಇರುವಂತೆಯೇ ಮಂದಿರವನ್ನೇ ಒಡೆದು ವಿಗ್ರಹ ದೋಚಿದ ಹಿಂದೂ ರಾಜನೂ ಇದ್ದಾನೆ. ಮುಸ್ಲಿಮ್ ರಾಜನನ್ನು  ಸೋಲಿಸುವುದಕ್ಕಾಗಿ ಹಿಂದೂ ರಾಜನೊಂದಿಗೆ ಕೈಜೋಡಿಸಿದ ಮುಸ್ಲಿಮ್ ದೊರೆಗಳೂ ಇದ್ದಾರೆ. ಟಿಪ್ಪು ಸುಲ್ತಾನ್‌ನನ್ನು ಬ್ರಿಟಿಷರು  ಮಣಿಸಿದ್ದೇ  ನಿಜಾಮರ ಸಹಕಾರದಿಂದ. ಕ್ರೂರಿ, ವಿಗ್ರಹಭಂಜಕ, ಮತಾಂತರಿ ಎಂದೆಲ್ಲಾ ದೂಷಣೆಗೆ ಒಳಗಾಗಿರುವ ಔರಂಗಝೇಬನು  ಮಂದಿರಗಳಿಗೆ ಕಾವಲಾಗಿದ್ದ ಮತ್ತು ಹಿಂದೂ ಸಂತರನ್ನು ಗೌರವಿಸಿದ್ದ ಎಂಬ ದಾಖಲೆಯೂ ಇದೆ. 1669ರಲ್ಲಿ ಬನಾರಸ್‌ನ ಆತನ ಅ ಧಿಕಾರಿಗಳು ಹೊರಡಿಸಿದ ರಾಜಾದೇಶ ಹೀಗಿವೆ:

‘ಬನಾರಸ್‌ನ ಆಸುಪಾಸಿನಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯವಾಗಿದೆ, ಅದರಲ್ಲೂ ಮಂದಿರದಲ್ಲಿ ಪೂಜಾ ಕೈಂಕರ್ಯದಲ್ಲಿ
ತೊಡಗಿರುವ ಬ್ರಾಹ್ಮಣರ ಮೇಲೆ ಅನ್ಯಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮಂದಿರ ಕಾಯುವ ಹೊಣೆಗಾರಿಕೆಯಿಂದ ಈ  ಬ್ರಾಹ್ಮಣರನ್ನು ಹೊರಹಾಕುವುದು ಈ ದೌರ್ಜನ್ಯಕೋರರ ಉದ್ದೇಶವಾಗಿದೆ. ಇದು ಅಸಾಧುವಾದುದು. ಆದ್ದರಿಂದ ಈ ಪತ್ರ ತಲುಪಿದ  ತಕ್ಷಣ ಯಾರೂ ನ್ಯಾಯಬಾಹಿರವಾಗಿ ನಡಕೊಳ್ಳದಂತೆ ಮತ್ತು ಬ್ರಾಹ್ಮಣ ಪೂಜಾರಿಗಳ ಕರ್ತವ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು  ಮತ್ತು ಮಂದಿರದ ಪಾವಿತ್ರ‍್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು..’ ಅಂದಹಾಗೆ,

ಮಂದಿರಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ಕಾಶ್ಮೀರದ ರಾಜ ಸುಲ್ತಾನ್ ಸಿಕಂದರ್ (1489-1517) ಕೈಗೊಂಡಾಗ ಅದನ್ನು  ಕಾಶ್ಮೀರದ ಮುಂಚೂಣಿ ಸೂಫಿಗಳಾದ ಹಝ್ರತ್ ನೂರುದ್ದೀನ್ ನೂರಾನಿಯವರು ತೀವ್ರವಾಗಿ ಪ್ರತಿಭಟಿಸಿದ್ದೂ ಇತಿಹಾಸದಲ್ಲಿದೆ.  ‘ಇಸ್ಲಾಮ್‌ನಲ್ಲಿ ಈ ದಾಳಿಗೆ ಅವಕಾಶ ಇಲ್ಲ’ ಎಂದು ಅವರು ಘಂಟಾಘೋಷವಾಗಿ ಹೇಳಿದ್ದನ್ನು ಇತರ ಉಲೆಮಾಗಳೂ ಬೆಂಬಲಿಸಿದರು.  ನಿಜವಾಗಿ, ಈ ಮಣ್ಣಿನ ಯಾವುದೇ ಮಂದಿರವನ್ನು ಮುಸ್ಲಿಮ್ ನಾಗರಿಕರು ಧ್ವಂಸಗೊಳಿಸಿದ ಇತಿಹಾಸ ಇಲ್ಲವೇ ಇಲ್ಲ. ಮಂದಿರವನ್ನೋ ಬಸದಿ,  ಸ್ತೂಪವನ್ನೋ ಧ್ವಂಸಗೊಳಿಸುವ ಕೃತ್ಯವು ರಾಜರುಗಳಿಂದ ರಾಜರುಗಳಿಗಾಗಿ ನಡೆಯುತ್ತಿತ್ತೇ ಹೊರತು ಅದಕ್ಕೂ ನಾಗರಿಕರಿಗೂ  ಸಂಬಂಧವೇ ಇರಲಿಲ್ಲ. ಆದ್ದರಿಂದಲೇ, ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಯಾಕೆ ಹೀಗೆ? ರಾಜರುಗಳು ಮಾತ್ರ ಧರ್ಮಶ್ರದ್ಧೆಯುಳ್ಳವರಾಗಿದ್ದರೆ ಅಥವಾ ಧರ್ಮಶ್ರದ್ಧೆಗೂ ಈ ಧ್ವಂಸ ಕೃತ್ಯಕ್ಕೂ ಸಂಬಂಧ  ಇರಲಿಲ್ಲವೇ? ಒಂದು ಮಂದಿರವನ್ನು ಧ್ವಂಸಗೊಳಿಸಿದ ಅದೇ ರಾಜ  ಇನ್ನೊಂದು ಕಡೆ ಮಂದಿರವನ್ನು ಕಟ್ಟಿಸಿದ ಮತ್ತು ಮಂದಿರಕ್ಕೆ ಭೂದಾನ ಮಾಡಿದ ದಾಖಲೆಗಳೂ ಇತಿಹಾಸದಲ್ಲಿ ವಿಫುಲವಾಗಿ ಇವೆ.  ಔರಂಗಝೇಬನೂ ಇವರಲ್ಲಿ ಒಬ್ಬ. ಟಿಪ್ಪು ಸುಲ್ತಾನನ ಮೇಲೆ ದೇಗುಲ ಭಂಜನೆಯ ಆರೋಪವಷ್ಟೇ ಇರುವುದಲ್ಲ, ದೇಗುಲಕ್ಕೆ  ಭೂಮಿಯನ್ನು ಉಂಬಳಿಯಾಗಿ ಕೊಟ್ಟ, ಮಂದಿರಕ್ಕೆ ಕಾವಲು ನಿಂತ ಮತ್ತು ಮಂದಿರ ನಿರ್ಮಿಸಿದ ಶ್ಲಾಘನೆಯೂ ಇದೆ. ಆದ್ದರಿಂದ,  ರಾಜರುಗಳ ಕ್ರಮವನ್ನು ಧರ್ಮದ ಕನ್ನಡಕದಿಂದ ನೋಡುವುದಕ್ಕಿಂತ ರಾಜಕೀಯ ಕನ್ನಡಕದಿಂದ ನೋಡುವುದೇ  ಹೆಚ್ಚು ಸೂಕ್ತ ಎಂದು  ಅನಿಸುತ್ತದೆ. ಧ್ವಂಸಗೊಂಡ  ಅಥವಾ ದರೋಡೆಗೊಂಡ ಹೆಚ್ಚಿನ ಮಂದಿರಗಳನ್ನು ಪರಿಶೀಲಿಸಿದರೆ, ಅಚ್ಚರಿಯ ಫಲಿತಾಂಶವೊಂದು   ಸಿಗುತ್ತದೆ. ಅರಮನೆಯ ಮಂದಿರವಾಗಿ ಗುರುತಿಸಿಕೊಂಡವುಗಳೇ ಇವುಗಳಲ್ಲಿ ಹೆಚ್ಚಿವೆ. ಇದಕ್ಕೆ ಈ ಮಂದಿರಗಳಲ್ಲಿ ಅಪಾರವಾದ  ವಜ್ರ-ವೈಢೂರ್ಯಗಳಿರುವುದು ಒಂದು ಕಾರಣವಾದರೆ, ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಅವು ಗುರುತಿಸಿಕೊಂಡಿರುವುದು  ಕೂಡ ಇನ್ನೊಂದು ಕಾರಣವಾಗಿದೆ. ಗೆದ್ದ ರಾಜ ಸೋತ ರಾಜನ ರಾಜಧಾನಿಯಲ್ಲಿರುವ ಧಾರ್ಮಿಕ ಕ್ಷೇತ್ರವನ್ನು ಲೂಟಿಗೈದು ತಮ್ಮ  ಪರಾಕ್ರಮದ ಸಂದೇಶವನ್ನು ಜನರಿಗೆ ತಲುಪಿಸುವ ಗುರಿಯೂ ಇದರ ಹಿಂದಿರುತ್ತದೆ. ಆದ್ದರಿಂದಲೇ, ಹಿಂದೂ-ಮುಸ್ಲಿಮ್ ಎಂಬ ಭೇದ  ಇಲ್ಲದೇ ರಾಜರುಗಳು ಇಂಥ ಲೂಟಿಯಲ್ಲಿ ಭಾಗಿಯಾಗಿದ್ದಾರೆ.

ಕೆಲವು ಉದಾಹರಣೆಗಳು ಹೀಗಿವೆ;

1. 7ನೇ ಶತಮಾನದಲ್ಲಿ ಪಲ್ಲವ ರಾಜ ಒಂದನೇ ನರಸಿಂಹ ವರ್ಮನ್ ಎಂಬವ ಚಾಲುಕ್ಯರ ಮೇಲೆ ವಿಜಯ ಸಾಧಿಸಿದ ಬಳಿಕ  ರಾಜಧಾನಿ ವಾತಾಪಿಯ ಮಂದಿರದ ಮೇಲೆ ದಾಳಿ ಮಾಡಿದ. ಅಲ್ಲಿದ್ದ ಗಣೇಶ ವಿಗ್ರಹವನ್ನು ಎತ್ತಿಕೊಂಡು ಹೋದ.

2. ತನ್ನ ಶತ್ರು ರಾಜ ಕಾಶ್ಮೀರದ ಲಲಿತಾದಿತ್ಯನ ವಿರುದ್ಧ ಸೇಡು ತೀರಿಸಿಕೊಳ್ಳುವ ಭಾಗವಾಗಿ ಬಂಗಾಳದ ಹಿಂದೂ ಸೇನೆಯು ವಿಷ್ಣುವಿನ  ವಿಗ್ರಹವನ್ನು ಧ್ವಂಸಗೊಳಿಸಿತು. ಇದು ನಡೆದುದು 8ನೇ ಶತಮಾನದಲ್ಲಿ.

3. 10ನೇ ಶತಮಾನದಲ್ಲಿ ಹಿಂದೂ ರಾಜ ಹರಂಬಪಾಲ ಮತ್ತು ಕೋಗ್ರಾದ ಹಿಂದೂ ರಾಜನ ನಡುವೆ ಯುದ್ಧ ನಡೆಯಿತು. ಇದರಲ್ಲಿ  ಕೋಗ್ರಾದ ರಾಜ ಸೋಲೊಪ್ಪಿಕೊಂಡ. ಆ ಬಳಿಕ ಅರಮನೆಯ ವಿಷ್ಣು ಮಂದಿರವನ್ನು ಲೂಟಿ ಮಾಡಲಾಯಿತು. ಬಂಗಾರದ  ವಿಗ್ರಹಗಳನ್ನು ದರೋಡೆ ಮಾಡಿ ಕೊಂಡೊಯ್ಯಲಾಯಿತು.

4. ತನ್ನ ಶತ್ರುಗಳಾದ ಚಾಲಕ್ಯ ಪಾಲ ಮತ್ತು ಕಳಿಂಗರ ವಿರುದ್ಧ ಚೋಳ ದೊರೆ ಒಂದನೇ ರಾಜೇಂದ್ರ ಯುದ್ಧ ಹೂಡಿದ. ಗೆದ್ದ. ಬಳಿಕ  ಶತ್ರು ರಾಜರ ಮಂದಿರಗಳಿಂದ  ತಂದ ವಿಗ್ರಹಗಳಿಗೆ ತನ್ನ ನಾಡಿನಲ್ಲಿ ಪ್ರತಿಷ್ಠಾಪನಾ ಕಾರ್ಯ ಮಾಡಿದ.

5. 16ನೇ ಶತಮಾನದಲ್ಲಿ ವಿಜಯನಗರದ ದೊರೆ ಕೃಷ್ಟದೇವರಾಯ ಉದಯಗಿರಿಯ ಮೇಲೆ ದಾಳಿ ಮಾಡಿ ಕೃಷ್ಣ ವಿಗ್ರಹವನ್ನು  ಎತ್ತಿಕೊಂಡು ಬಂದ. ಪಂದಾರ್‌ಪುರ್ ಮಂದಿರದಿಂದ  ವಿಠ್ಠಲ ವಿಗ್ರಹವನ್ನೂ ಲೂಟಿ ಮಾಡಿ ತಂದ.

6. 10ನೇ ಶತಮಾನದಲ್ಲಿ ರಾಷ್ಟ್ರ ಕೂಟರ ದೊರೆ ಮೂರನೇ ಇಂದ್ರನು ತನ್ನ ಶತ್ರುವಾದ ಹಿಂದೂ ರಾಜನನ್ನು ಮಣಿಸಿದ ಬಳಿಕ ಕಲ್ಪದಲ್ಲಿರುವ ಕಲಪ್ರಿಯ ಮಂದಿರವನ್ನು ಧ್ವಂಸ ಮಾಡಿದ. ತಮಿಳು ಭಾಗದಲ್ಲಿ ಅನೇಕ ಮಂದಿರಗಳನ್ನು ಒಡಿಸ್ಸಾ ಸೂರ್ಯವಂಶ  ಗಜಪತಿ ಸಾಮ್ರಾಜ್ಯದ ಸ್ಥಾಪಕ ಕಪಿಲೇಂದ್ರ ಧ್ವಂಸ ಮಾಡಿದ. ಹಾಗೆಯೇ  ಗೋಲ್ಕೊಂಡಾ ಸುಲ್ತಾನರ ಸೇನಾಧಿ ಪತಿಯಾಗಿದ್ದ ಮರಾಠಿ  ಬ್ರಾಹ್ಮಣ ಮುರಹರಿ ರಾವ್ ಎಂಬವ ಕೃಷ್ಣಾ ನದಿ ಪ್ರದೇಶವನ್ನು ಸುಲ್ತಾನರ ಅಧೀನಕ್ಕೆ ತಂದ ಬಳಿಕ ಅಹೋಬಿಮ್ ಮಂದಿರದ ಮೇಲೆ  ದಾಳಿ ಮಾಡಿ ಅಲ್ಲಿನ ವಿಗ್ರಹ ವನ್ನು ಸುಲ್ತಾನರಿಗೆ ಪಾರಿತೋಷಕವಾಗಿ ಸಮರ್ಪಿಸಿದ ಎಂಬ ಇತಿಹಾಸವೂ ಇದೆ. ಈ ಬಗ್ಗೆ,  sanctified vandalism as a political tool  ಎಂಬ ಶೀರ್ಷಿಕೆಯಲ್ಲಿ ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ  ಬರಹದಲ್ಲಿ ಇನ್ನಷ್ಟು ವಿವರಗಳೂ ಇವೆ.

ನಿಜವಾಗಿ, ಯಾವುದೋ ಒಂದು ಕಾಲದಲ್ಲಿ ಮಂದಿರವೊಂದು  ಮಸೀದಿಯಾಗಿ ಮಾರ್ಪಟ್ಟಿದ್ದರೆ ಅಥವಾ ಬಸದಿಯೋ ಸ್ತೂಪವೋ  ಮಂದಿರವಾಗಿ ಬದಲಾಗಿದ್ದರೆ ಅದಕ್ಕೆ ಧಾರ್ಮಿಕ ಉದ್ದೇಶಕ್ಕಿಂತ ರಾಜಕೀಯ ಉದ್ದೇಶಗಳೇ ಮುಖ್ಯವಾಗಿದ್ದುವು. ರಾಜ ಧರ್ಮಭೀರುವಾಗಿರುವುದು ಕಡಿಮೆ. ಧರ್ಮಭೀರುವಾಗಿರುವ ರಾಜ ಇನ್ನೊಂದು ಧರ್ಮ ಸಂಕೇತಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ  ಕಡಿಮೆ. ಅದರಲ್ಲೂ ಮುಸ್ಲಿಮ್ ದೊರೆಗಳಂತೂ ಧರ್ಮದ ಕಾರಣಕ್ಕಾಗಿ ಮಂದಿರಗಳ ಮೇಲೆ ದಾಳಿ ಮಾಡುವುದು ಮತ್ತೂ ಕಡಿಮೆ.  ಯಾಕೆಂದರೆ, ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರದಲ್ಲಿರಬೇಕಾದುದು ತನ್ನ ಅಸ್ತಿತ್ವ ಉಳಿವಿನ  ದೃಷ್ಟಿಯಿಂದ ಅವರಿಗೆ ಬಹಳ ಮುಖ್ಯ. ಆದರೆ ಗೆದ್ದ ರಾಜ ಸೋತ ರಾಜನ ರಾಜಧಾನಿಯ ಮಂದಿರವನ್ನು ಲೂಟಿ ಮಾಡುವುದು ಆ  ಕಾಲದ ಸಂಪ್ರದಾಯವೇ ಆಗಿರಬೇಕು. ಸಂಪತ್ತನ್ನು ದೋಚುವುದೇ ಅದರ ಮುಖ್ಯ ಗುರಿಯಾಗಿರಬೇಕು. ಇದು ನಾಗರಿಕರಿಗೂ ಚೆನ್ನಾಗಿ  ಗೊತ್ತಿರಬೇಕು. ಆದ್ದರಿಂದಲೇ, ಯಾವುದೇ ರಾಜನ ಮಂದಿರ ದರೋಡೆಗೆ ನಾಗರಿಕರಿಂದ ಪ್ರತಿರೋಧ ವ್ಯಕ್ತವಾದ ಉದಾಹರಣೆ ಇಲ್ಲವೇ  ಇಲ್ಲ. ಆದರೆ, ಮಸೀದಿಗಳಲ್ಲಿ ಸಂಪತ್ತನ್ನು ಕಾಪಿಡುವ ಪದ್ಧತಿ ಇಲ್ಲದೇ ಇರುವುದರಿಂದ ಅವು ದಾಳಿಗಳಿಂದ ಸುರಕ್ಷಿತವಾಗಿರುವ  ಸಾಧ್ಯತೆಯೂ ಇದೆ. ಅಂದಹಾಗೆ,

ಗ್ಯಾನ್‌ವಾಪಿ ವಿವಾದದ ಹಿಂದಿರುವುದೂ ರಾಜಕೀಯ ಹಿತಾಸಕ್ತಿಯೇ ಹೊರತು ಇನ್ನೇನಲ್ಲ.

Thursday, August 10, 2023

ಮಣಿಪುರಿ ಮುಸ್ಲಿಮರು: ಇತಿಹಾಸ, ವರ್ತಮಾನ ಮತ್ತು ಪ್ರವಾದಿಯ(ಸ) ಆ ಸಂಗಾತಿ


ಏ.ಕೆ. ಕುಕ್ಕಿಲ

1. ಮಣಿಪುರದಲ್ಲಿ ಮುಸ್ಲಿಮರಿದ್ದಾರಾ?
2. ಅವರಿಗೂ ಮಣಿಪುರಿಗಳಿಗೂ ನಡುವೆ ಸಂಬಂಧ  ಹೇಗಿದೆ?

ಮಣಿಪುರ ಹಿಂಸಾಚಾರ ಚರ್ಚೆಯ ನಡುವೆ ಅತೀ ಹೆಚ್ಚು ಕೇಳಿ ಬಂದ ಪ್ರಶ್ನೆಗಳಲ್ಲಿ ಇವುಗಳೂ ಸೇರಿವೆ.

1993 ಮೇ 3. ಮಣಿಪುರದ ಮುಸ್ಲಿಮರ ಪಾಲಿಗೆ ಕರಾಳ ದಿನ. ಇವತ್ತಿಗೂ ಮಣಿಪುರದ ಮುಸ್ಲಿಮರು ಮೇ 3ನ್ನು ಕಪ್ಪು ದಿನವಾಗಿ  ಪರಿಗಣಿಸುತ್ತಾರೆ. ಪಂಗಾಲ್ ಹತ್ಯಾಕಾಂಡ ನಡೆದ ದಿನ ಇದು. ಪಂಗಾಲ್ ಎಂಬುದು ಮುಸ್ಲಿಮರನ್ನು ಮೇತಿ ಭಾಷೆಯಲ್ಲಿ ಸಂಬೋಧಿಸುವ ಹೆಸರು. ಮೇತಿ ಪಂಗಾಲ್ ಎಂದು ಇರುವಂತೆಯೇ ಮೇತಿ ಹಿಂದೂ, ಮೇತಿ ಕ್ರೈಸ್ತ ಎಂದೂ ಇದೆ. ಮೇತಿ ಹಿಂದೂ ಮತ್ತು  ಮೇತಿ ಪಂಗಾಲ್ ಅಥವಾ ಮುಸ್ಲಿಮರ ನಡುವಿನ ಈ ಘರ್ಷಣೆಯಲ್ಲಿ 100 ಮಂದಿಯ ಹತ್ಯೆಯಾಗಿದೆ ಎಂಬುದು ಸರಕಾರದ  ಲೆಕ್ಕಾಚಾರ. ಸರಕಾರೇತರ ಸಂಸ್ಥೆಗಳ ಪ್ರಕಾರ 140ರಷ್ಟು ಮಂದಿಯ ಹತ್ಯೆಯಾಗಿದೆ. ಮುಸ್ಲಿಮರೇ ಪ್ರಯಾಣಿಸುತ್ತಿದ್ದ ಬಸ್ಸಿಗೆ ಬೆಂಕಿ  ಕೊಡಲಾಗಿದೆ. ಭೂವಿವಾದ ಈ ಮುಸ್ಲಿಮ್ ಹತ್ಯಾಕಾಂಡಕ್ಕೆ ಕಾರಣವೆಂದು ಹೇಳಲಾಗುತ್ತಿದ್ದರೂ ಇನ್ನೂ ಹಲವು ಕಾರಣಗಳನ್ನು ಮುಂದಿಡಲಾಗುತ್ತಿದೆ. ಮುಖ್ಯವಾಗಿ, ಮೇತಿ ಹಿಂದೂ ಪ್ರತ್ಯೇಕತಾವಾದಿಗಳು ಮುಸ್ಲಿಮರಿಂದ ಬಲವಂತದಿಂದ ಹಣ ಸಂಗ್ರಹಕ್ಕೆ ಇಳಿದುದು  ಮತ್ತು ಅವರಲ್ಲಿ ಓರ್ವನನ್ನು ಮುಸ್ಲಿಮರು ಹತ್ಯೆಗೈದುದು ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.

ಸಾಮಾನ್ಯವಾಗಿ, ಮಣಿಪುರದ ಮುಸ್ಲಿಮರ ಇತಿಹಾಸವನ್ನು 1604ರಿಂದ ಲೆಕ್ಕ ಹಾಕಲಾಗುತ್ತದೆ. ಮಣಿಪುರವನ್ನು ಆಳುತ್ತಿದ್ದ ಖಾಗೆಂಬ  ಎಂಬ ರಾಜನ ಜೊತೆ ಆತನ ಸಹೋದರ ಸೆನೆಂಗ್ ಬಾನಿಗೆ ಭಿನ್ನಾಭಿಪ್ರಾಯ ತಲೆದೋರುತ್ತದೆ. ಆದ್ದರಿಂದ ತನ್ನ ಸಹೋದರನನ್ನು  ಮಣಿಸುವುದಕ್ಕಾಗಿ ಸೈನಿಕ ನೆರವು ನೀಡುವಂತೆ ಕಚಾರಿ ರಾಜ ದಿಮ್‌ಶಾ ಪ್ರಸಾಪಿಲ್‌ಗೆ ಈ ಸೆನೆಂಗ್‌ಬಾ ಮನವಿ ಮಾಡುತ್ತಾನೆ. ಆದರೆ  ಖಾಗೆಂಬಾನ ಸಾಮರ್ಥ್ಯ ಗೊತ್ತಿದ್ದ ದಿಮ್‌ಶಾ, ತಾನೋರ್ವನೇ ದಂಡೆತ್ತಿ ಹೋದರೆ ಗೆಲುವು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾನೆ  ಮತ್ತು ತರಫ್ ಪ್ರದೇಶದ ರಾಜ ಮುಹಮ್ಮದ್ ನಝೀರ್‌ನನ್ನು ನೆರವಾಗುವಂತೆ ಕೋರುತ್ತಾನೆ. ಹೀಗೆ ನಝೀರ್ ತನ್ನ ಸಹೋದರ  ಮುಹಮ್ಮದ್ ಸಾನಿಯ ನೇತೃತ್ವದಲ್ಲಿ ಸೇನಾಪಡೆಯನ್ನು ಕಳುಹಿಸಿಕೊಡುತ್ತಾನೆ. ಆದರೆ,

ಈ ಸೇನೆಗೆ ರಾಜ ಖಾಗೆಂಬಾ ಪಡೆಯನ್ನು ಸೋಲಿಸಲು ಸಾಧ್ಯವಾಗುವುದಿಲ್ಲ ಮತ್ತು ಮುಹಮ್ಮದ್ ಸಾನಿ ಮತ್ತು 1000 ಸೈನಿಕರನ್ನು  ಬಂಧಿಸಲಾಗುತ್ತದೆ. ಬಳಿಕ ಮಣಿಪುರದಲ್ಲೇ  ಉಳಕೊಳ್ಳಲು ಈ ಸೈನಿಕರಿಗೆ ರಾಜ ಖಾಗೆಂಬಾ ಅನುಮತಿಯನ್ನು ನೀಡುತ್ತಾನೆ. ಈ ನಡುವೆ  ಬರ್ಮಾದ ರಾಜ ಮಣಿಪುರದ ಮೇಲೆ ದಾಳಿ ಮಾಡುತ್ತಾನೆ. ಆಗ ರಾಜ ಖಾಗೆಂಬಾ ಈ 1000 ಸೈನಿಕರಲ್ಲಿ ನೆರವಾಗುವಂತೆ  ವಿನಂತಿಸುತ್ತಾನೆ. ಹೀಗೆ ಮೇತಿ ಸೇನೆಯ ಜೊತೆ ಸೇರಿ ಬರ್ಮಾ ಸೇನೆಯ ವಿರುದ್ಧ ಈ 1000 ಸೈನಿಕರು ಹೋರಾಡಿ ಜಯ ತಂದು  ಕೊಡುತ್ತಾರೆ. ಈ ಗೆಲುವು ರಾಜನಲ್ಲಿ ಅಪಾರ ಸಂತಸವನ್ನು ತರುತ್ತದೆ ಮತ್ತು ಈ 1000 ಸೈನಿಕರನ್ನು ಪಂಗಾಲ್ ಎಂದು ಕರೆಯುತ್ತಾನೆ.  ಪಂಗಾಲ್ ಎಂದರೆ ಮೇತಿ ಭಾಷೆಯಲ್ಲಿ ಶಕ್ತಿ ಎಂದೂ ಅರ್ಥವಿದೆ. ಮಾತ್ರವಲ್ಲ, ಆವರೆಗೆ ಬರೇ ಉಳಕೊಳ್ಳುವುದಕ್ಕಷ್ಟೇ ಸ್ವಾತಂತ್ರ‍್ಯವನ್ನು  ಪಡೆದಿದ್ದ ಈ ಪಂಗಾಲ್‌ಗಳಿಗೆ ಮೇತಿ ಹಿಂದೂಗಳನ್ನು ಮದುವೆಯಾಗುವ ಮತ್ತು ಭೂಮಿ ಹೊಂದುವ ಸ್ವಾತಂತ್ರ‍್ಯವನ್ನೂ ನೀಡುತ್ತಾನೆ.  ಹೀಗೆ ಪಂಗಾಲ್‌ಗಳು ಅಥವಾ ಮುಸ್ಲಿಮರು ಮಣಿಪುರದ ಭಾಗವಾಗುತ್ತಾರೆ ಎಂಬ ವರದಿಯೂ ಇದೆ. ಹಾಗೆಯೇ,

ಮೊಘಲ್ ದೊರೆ ಔರಂಗಝೇಬ್‌ ನಿಂದ  ತಪ್ಪಿಸಿಕೊಂಡು ಬಂದಿದ್ದ ಶಾ ಶುಜಾ ಎಂಬವನು ಇದೇ ಮಣಿಪುರದಲ್ಲಿ ಆಶ್ರಯ ಪಡೆದಿದ್ದ  ಎಂಬ ವಿವರವೂ ಇದೆ. ಔರಂಗಝೇಬನ ಸಹೋದರ ಈ ಶಾ ಶುಜಾ. ಈತ ಮೊದಲು ಬರ್ಮಾದ ಅರ್ಕಾನ್‌ಗೆ ಬಂದ. ಆದರೆ  ಬರ್ಮಾದ ರಾಜ ಈತನಿಗೆ ಆಶ್ರಯ ಕೊಡಲು ವಿಫಲವಾದಾಗ ತ್ರಿಪುರ ಪ್ರವೇಶಿಸಿದ. ಆದರೆ ಆತನನ್ನು ಒಪ್ಪಿಸುವಂತೆ ತ್ರಿಪುರ ರಾಜನ  ಮೇಲೆ ಔರಂಗಝೇಬ್ ಒತ್ತಡ ಹಾಕಿದುದನ್ನು ಅರಿತುಕೊಂಡ ಶಾ ಶುಜ ಅಂತಿಮವಾಗಿ ಮಣಿಪುರದಲ್ಲಿ ಆಶ್ರಯ ಪಡೆದ ಎಂದೂ  ಹೇಳಲಾಗುತ್ತಿದೆ. ಹಾಗಂತ, ಶಾ ಶುಜಾ ಒಬ್ಬನೇ ಇಲ್ಲಿಗೆ ಬಂದಿರಲಿಲ್ಲ. ಆತನ ಜೊತೆ ಕುಟುಂಬ-ಪರಿವಾರವೂ ಇತ್ತು. ಇವರನ್ನೆಲ್ಲ  ಮಂಗಲ್ಸ್ ಅಥವಾ ಮಂಗ್‌ಕೋನ್ ಎಂದು ಕರೆಯಲಾಗುತ್ತಿತ್ತು ಮತ್ತು ಇವರ ಪೀಳಿಗೆ ಮಕಕ್ ಮಯೂಮ್ ವಂಶವಾಗಿ ಬೆಳೆಯಿತು.  ಮಣಿಪುರ ರಾಜನ ಆಸ್ಥಾನದಲ್ಲಿ ಇವರಿಗೆ ಮಂಗಲ್ ಸಂಗ್ಲೇನ್ ಎಂಬ ಹೆಸರಿನಲ್ಲಿ ಪ್ರತ್ಯೇಕ ಕಚೇರಿಯೂ ಇತ್ತು ಎಂದೂ  ಹೇಳಲಾಗುತ್ತಿದೆ.

ಆದರೆ,

2011 ಮೇ 17ರಂದು ಮಣಿಪುರ ರಾಜಧಾನಿ ಇಂಫಾಲ್‌ನ ಕ್ಲಾಸಿಕ್ ಹೊಟೇಲ್ ಸಭಾಂಗಣದಲ್ಲಿ ಬಿಡುಗಡೆಯಾದ ‘ಮಣಿಪುರಿ  ಮುಸ್ಲಿಮ್ಸ್: ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್ಸ್ 615-2000’ ಎಂಬ ಕೃತಿಯು ಈ ಮೇಲಿನ ವಿವರಗಳಿಗಿಂತ ಪೂರ್ವದಲ್ಲಿ ನಡೆದ  ಬೆಳವಣಿಗೆಯನ್ನು ಅತ್ಯಂತ ಅಧಿಕಾರಯುತವಾಗಿ ಮತ್ತು ದಾಖಲೆಗಳ ಸಹಿತ ವಿವರಿಸುತ್ತದೆ.

ನಿಜವಾಗಿ, ಇಸ್ಲಾಮ್ ಮಣಿಪುರಕ್ಕೆ ಬಂದಿರುವುದು 1600ರಲ್ಲಲ್ಲ. ಅದಕ್ಕಿಂತ ಸಾವಿರ ವರ್ಷಗಳ ಹಿಂದೆ 615ರಲ್ಲಿ ಎಂಬುದನ್ನು ಈ ಕೃತಿ  ವಿವರವಾಗಿ ಮುಂದಿಡುತ್ತದೆ. ಮಣಿಪುರದಲ್ಲಿ ಅರಿಬಮ್ ಎಂಬ ಮುಸ್ಲಿಮ್ ಮನೆತನ ಇದೆ. ಇದನ್ನು ಸೆಗಾಯ್  ಎಂದೂ ಕರೆಯುತ್ತಾರೆ. ಈ  ಮನೆತನದ ಜೈವಿಕ ವಂಶಾವಳಿಯು ಪ್ರವಾದಿ(ಸ) ಚಿಕ್ಕಪ್ಪ ಹಂಝ(ರ) ಮತ್ತು ಸಅದ್ ಬಿನ್ ಅಬೀ ವಕ್ಕಾಸ್‌ರಲ್ಲಿಗೆ (ರ) ಹೋಗಿ ತಲುಪುತ್ತದೆ.  ಅರಿಬಮ್ ಎಂಬುದು ಅರಿಬಾಅï ಎಂಬ ಮೂಲ ಅರೇಬಿಕ್ ಪದದ ಅಪಭ್ರಂಶ ಪದ. ಶುದ್ಧ ಅರಬಿಗಳು ಎಂದು ಇದರರ್ಥ ಎಂದು  ಈ ಕೃತಿಯಲ್ಲಿ ಫಾರೂಖ್ ಅಹ್ಮದ್ ವಿವರಿಸುತ್ತಾರೆ.

ಪ್ರವಾದಿ ಚಿಕ್ಕಪ್ಪ ಹಂಝ ಅವರು ಇಸವಿ 610ರಲ್ಲಿ ಮಣಿಪುರ ಪ್ರವೇಶಿಸುತ್ತಾರೆ. ಆದರೆ ಸಅದ್ ಬಿನ್ ಅಬೀ ವಕ್ಕಾಸ್‌ರು ಹಂಝರ  ಜೊತೆ ಬಂದಿರುವುದಿಲ್ಲ. ಇಸವಿ 615ರಲ್ಲಿ ಮೂವರು ಸಂಗಾತಿಗಳೊಂದಿಗೆ ಸಅದ್ ಬಿನ್ ಅಬೀ ವಕ್ಕಾಸ್‌ರು ಚೀನಾದತ್ತ ಮುಖ ಮಾಡಿ  ಅಬಿಸೀನಿಯಾದಿಂದ ಹೊರಡುತ್ತಾರೆ ಮತ್ತು ಈಗಿನ ಬಾಂಗ್ಲಾದ ಚಿತ್ತಗಾಂಗ್ ಮೂಲಕ ಮಣಿಪುರ ಪ್ರವೇಶಿಸುತ್ತಾರೆ. ಹಾಗೆಯೇ ಇನ್ನೊಂದು ಭೇಟಿಯೂ  ಮಣಿಪುರಕ್ಕೆ ನಡೆಯುತ್ತದೆ. ಅದು ಇಸ್ಲಾಮಿನ ನಾಲ್ಕನೇ ಖಲೀಫಾ ಅಲಿಯವರ ಎರಡನೇ ಪತ್ನಿ ಕೌಲ ಬಿಂತಿ  ಜಾಫರ್ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವರಾದ ಮುಹಮ್ಮದ್ ಹನೀಫಾ ಅವರ ಭೇಟಿ. ಇಸವಿ 680ರಲ್ಲಿ ಇವರು ಮಣಿಪುರಕ್ಕೆ  ಬರುತ್ತಾರೆ. ಖಿಲಾಫತ್‌ನ ವಿಷಯದಲ್ಲಿ ನಡೆದ ವಿವಾದದ ಬಳಿಕ ಅವರು ಒಂದು ಗುಂಪಿನೊಂದಿಗೆ ಮ್ಯಾನ್ಮಾರ್‌ನ ರಾಕೈನ್ ಬಂದು  ನೆಲೆಸುತ್ತಾರೆ ಮತ್ತು ಆ ಬಳಿಕ ಮಣಿಪುರಕ್ಕೆ ಭೇಟಿ ಕೊಡುತ್ತಾರೆ ಎಂದೂ ಹೇಳಲಾಗುತ್ತಿದೆ.

ಅದೇವೇಳೆ,

7ನೇ ಶತಮಾನದಲ್ಲಿ ಮಣಿಪುರವನ್ನು ಆಳುತ್ತಿದ್ದ ಸಫಾಂಗ್ಬಾ ರಾಜನ ಕಾಲದಲ್ಲಿ ಮುಸ್ಲಿಮ್ ಸಂತನೋರ್ವ ಭಾಷಣ ಮಾಡಿರು ವುದಾಗಿ  ಸ್ಥಳೀಯ ಭಾಷೆಯಲ್ಲಿ ಬರೆಯಲ್ಪಟ್ಟಿರುವ ದಾಖಲೆಯೂ ಇದೆ. ಈ ರಾಜ ಇಸವಿ 624ರ ವರೆಗೆ ರಾಜ್ಯಭಾರ ಮಾಡಿರು ವುದರಿಂದ ಆ  ಸಂತ ಒಂದೋ ಹಂಝ(ರ) ಅಥವಾ ಸಅದ್ ಬಿನ್ ಅಬೀ ವಕ್ಕಾಸ್ ಎಂಬ ಅಭಿಪ್ರಾಯವೂ ಇದೆ. ಆದರೆ ಹಂಝ ಅವರು ಮಣಿ ಪುರದಲ್ಲೇ  ನೆಲೆಸುವುದಿಲ್ಲ. ಅವರು ಮರಳಿ ಮದೀನಾಕ್ಕೆ ಹೋಗುತ್ತಾರಲ್ಲದೇ, ಇಸವಿ 625ರಲ್ಲಿ ಉಹುದ್ ಕಾಳಗದಲ್ಲಿ  ಹುತಾತ್ಮರಾಗುತ್ತಾರೆ. ಒಂದುವೇಳೆ,

ಆ ಭಾಷಣ ಮಾಡಿದ ಸಂತ ಹಂಝ ಅಲ್ಲದೇ ಇದ್ದರೆ ಸಅದ್ ಬಿನ್ ಅಬೀ ವಕ್ಕಾಸ್ ಆಗಿರುವ ಸಾಧ್ಯತೆಯೂ ಇದೆ. ಯಾಕೆಂದರೆ,  ಸಅದ್ ಬಿನ್ ಅಬೀ ವಕ್ಕಾಸ್‌ರು ಬೇ ಆಫ್ ಬೆಂಗಾಲ್ ಅಥವಾ ಸಮುದ್ರ ಮಾರ್ಗ ಮೂಲಕ ಇಸವಿ 615ರಲ್ಲಿ ಮಣಿಪುರಕ್ಕೆ ಬಂದಿದ್ದಾರೆ.  ಹೀಗೆ ಬಂದ ಅವರು ಕೂಡಾ ಅಲ್ಲೇ  ನೆಲೆ ನಿಲ್ಲಲಿಲ್ಲ. ಮರಳಿ ಅರಬ್ ದೇಶಕ್ಕೆ ಹೊರಟು ಹೋದವರು ಬರೋಬ್ಬರಿ 27 ವರ್ಷಗಳ  ಬಳಿಕ ಮತ್ತೆ ಚೀನಾ ಕರಾವಳಿ ಪ್ರದೇಶಕ್ಕೆ ಮರಳಿ ಬರುತ್ತಾರೆ ಮತ್ತು ಹೀಗೆ ಬರುವಾಗ ಅವರು ಕುರ್‌ಆನ್ ಪ್ರತಿಯನ್ನೂ ತರುತ್ತಾರೆ.  ಚೀನಿ ಮುಸ್ಲಿಮರು ಅಥವಾ ಹುಯಿ ಮುಸ್ಲಿಮರ ಪ್ರಕಾರ ಸಅದ್ ಬಿನ್ ಅಬೀ ವಕ್ಕಾಸ್ ಅಲ್ಲೇ  ನಿಧನರಾಗಿದ್ದು ಅವರ ಸಮಾಧಿಯೂ  ಅಲ್ಲೇ  ಇದೆ. ಆದರೆ, ಈ ಬಗ್ಗೆ ಸ್ಪಷ್ಟತೆಯಿಲ್ಲ ಎಂದೂ ಹೇಳಲಾಗುತ್ತದೆ. ಅದು ಸಅದ್ ಬಿನ್ ಅಬೀ ವಕ್ಕಾಸ್ ಅವರ ಪುತ್ರನ ಸಮಾಧಿಯಾಗಿದ್ದು, ಅವರು ಅಲ್ಲೇ  ಮದುವೆಯಾಗಿ ಅಲ್ಲೇ  ನಿಧನರಾಗಿದ್ದಾರೆ ಎಂಬ ಮಾಹಿತಿಯನ್ನೂ ಪುಸ್ತಕ ನೀಡುತ್ತದೆ. ಈ ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಮಣಿಪುರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹಲೀಮ್ ಚೌಧರಿ ಮುಖ್ಯ ಅತಿಥಿಯಾಗಿದ್ದರು ಮತ್ತು ಮಿಲ್ಲಿ  ಗಝೆಟ್‌ನ ಸಂಪಾದಕ ಡಾ| ಝಫರುಲ್ ಇಸ್ಲಾಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಅಂದಹಾಗೆ,

2011ರ ಜನಗಣತಿ ಪ್ರಕಾರ, ಮಣಿಪುರದಲ್ಲಿ 2,39,886 ಮುಸ್ಲಿಮರಿದ್ದಾರೆ. 2011ರ ಬಳಿಕ ಜನಗಣತಿ ನಡೆಯದೇ ಇರುವು ದರಿಂದ,  ಪ್ರಸಕ್ತ ವಿವರಗಳು ಲಭ್ಯವಿಲ್ಲ. ಇದು ಮಣಿಪುರದ ಒಟ್ಟು ಜನಸಂಖ್ಯೆಯ ಕೇವಲ 8.4% ಮಾತ್ರ. ಹೆಚ್ಚಿನ ಮುಸ್ಲಿಮರು ಇಂಫಾಲ್ ಮತ್ತು  ತೌಬಾಲ್‌ನಲ್ಲಿ ವಾಸಿಸುತ್ತಿದ್ದಾರೆ. ಹಾಗೆಯೇ, ಮಣಿಪುರಿ ಮುಸ್ಲಿಮರು ಅಸ್ಸಾಮ್‌ನ ಕಚಾರ್ ಮತ್ತು ಹೊಬಾಯ್, ತ್ರಿಪುರಾದ ಕೊಮಾಲ್ ಪುರ್‌ನಲ್ಲೂ ವಾಸವಿದ್ದಾರೆ. 1815ರಲ್ಲಿ ಬರ್ಮಾದ ರಾಜನು ಮಣಿಪುರದ ಮೇಲೆ ದಾಳಿ ಮಾಡಿದ್ದು, ಆಗ ತಪ್ಪಿಸಿಕೊಂಡು ಹೋದ  ಮುಸ್ಲಿಮರು ಈ ಎರಡು ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ ಎಂಬ ಮಾಹಿತಿಗಳೂ ಸಿಗುತ್ತವೆ.

ಮಣಿಪುರಿ ಮುಸ್ಲಿಮ್ ಪುರುಷರು ಸಾಂಪ್ರದಾಯಿಕವಾಗಿ ಲುಂಗಿ ಮತ್ತು ಪೈಜಾಮ ಧರಿಸುತ್ತಾರೆ. ಮಹಿಳೆಯರು ಸಲ್ವಾರ್ ಕಮೀಝï  ಮತ್ತು ಫಾನೆಕ್ ಧರಿಸುತ್ತಾರೆ. ಹಾಗಂತ, ಮೇತಿ ಪಂಗಲ್ ಎಂಬ ಹೆಸರಲ್ಲಿ ಮುಸ್ಲಿಮರು ಒಂದು ಸಮುದಾಯವಾಗಿ  ಗುರುತಿಸಿಕೊಳ್ಳುತ್ತಿದ್ದರೂ ಇವರೆಲ್ಲ ಆಂತರಿಕವಾಗಿ ಬೇರೆ ಬೇರೆ ಮನೆತನದೊಂದಿಗೆ ಜೋಡಿಕೊಂಡಿದ್ದಾರೆ. ಆದರೆ,
ದೇಶದ ಸದ್ಯದ ದ್ವೇಷ ರಾಜಕಾರಣದ ಪ್ರಭಾವದಿಂದ ಮಣಿಪುರ ಮುಸ್ಲಿಮರೂ ಹೊರತಾಗಿಲ್ಲ. ಇಸ್ಲಾಮೋಫೋಬಿಯಾದ ಪ್ರಭಾವ  ಇಲ್ಲೂ ಇದೆ. ಮುಸ್ಲಿಮರನ್ನು ಕಳ್ಳರು, ಮಾದಕ ವಸ್ತು ಸಾಗಾಟಗಾರರು, ಸಮಾಜ ವಿರೋಧಿಗಳು ಎಂದು ಮುಂತಾಗಿ ಬಿಂಬಿಸುವ  ಶ್ರಮಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಮುಹಮ್ಮದ್ ಫಾರೂಕ್ ಖಾನ್ ಎಂಬ ವ್ಯಕ್ತಿಯನ್ನು  ಸಾರ್ವಜನಿಕವಾಗಿ ಥಳಿಸಿರುವ ವೀಡಿಯೋ 2018ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತ ಸ್ಕೂಟರ್ ಕದ್ದಿದ್ದಾನೆ  ಎಂಬ ಆರೋಪದಲ್ಲಿ ಈ ಕೃತ್ಯ ಎಸಗಲಾಗಿತ್ತು. ಆದರೆ, ಬಳಿಕ ಆತ ಕಳ್ಳನಲ್ಲ, ತಪ್ಪಾಗಿ ಆತನನ್ನು ಲಿಂಚಿಂಗ್  ಮಾಡಲಾಗಿದೆ ಎಂಬುದು  ಬಹಿರಂಗವಾಯಿತು. 2017ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಮುಸ್ಲಿಮರ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವ  ಮತ್ತು ವ್ಯವಸ್ಥಿತವಾಗಿ ಅಂಚಿಗೆ ತಳ್ಳುವ ಪ್ರಯತ್ನಗಳು ನಡೆಯುತ್ತಲೇ ಇದ್ದುವು. ಸರಕಾರಿ ಸಂಸ್ಥೆಗಳಲ್ಲಿ ಮತ್ತು ಶಾಸನ ಸಭೆಗಳಲ್ಲಿ  ಮುಸ್ಲಿಮರಿಗೆ ಅತ್ಯಂತ ಕಡಿಮೆ ಪ್ರಾತಿ ನಿಧ್ಯವಷ್ಟೇ ಇದೆ. ಸರ್ವ ಶಿಕ್ಷಣ್ ಅಭಿಯಾನ್ ಯೋಜನೆಯಡಿ ಕಸ್ತೂರ್ಬಾ ಗಾಂಧಿ ಬಾಲಿಕಾ  ವಿದ್ಯಾಲಯಗಳಲ್ಲಿ ಹೆಚ್ಚಿನವುಗಳನ್ನು ಮೇತಿ ಹಿಂದೂ ಸಮುದಾಯಗಳು ಇರುವ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪವೂ  ಇದೆ. 2018ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವಂತೂ ಮುಸ್ಲಿಮ್ ವಿರೋಧಿ ಪ್ರಚಾರಗಳ ಸಂಖ್ಯೆಯಲ್ಲಿ ಭಾರೀ  ಹೆಚ್ಚಳವಾಗುತ್ತಿದೆ. 2018ರಲ್ಲಿ ರಚಿಸಲಾದ ‘ಪ್ರೊಟೆಕ್ಷನ್ ಆಫ್ ಮಣಿಪುರ್ ಪೀಪಲ್’ ಮಸೂದೆಯ ಕರಡು ರಚನಾ ಸಮಿತಿಯಲ್ಲಿ  ಮುಸ್ಲಿಮರಿಗೆ ಪ್ರಾತಿನಿಧ್ಯವನ್ನೇ ನಿರಾಕರಿಸಲಾಗಿತ್ತು. ಮೇತಿ ಮುಸ್ಲಿಮರು ರೋಹಿಂಗ್ಯನ್ನರಿಗೆ ಆಶ್ರಯ ಕೊಡುತ್ತಿದ್ದಾರೆ ಎಂಬ ಸುಳ್ಳು ಸು ದ್ದಿಯನ್ನು ಅತ್ಯಂತ ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಅಷ್ಟಕ್ಕೂ,

‘ಮಣಿಪುರ ಹಿಂಸೆಯ ಗುರಿ ಕ್ರೈರಾಗಿರಲಿಲ್ಲ, ಮುಸ್ಲಿಮರಾಗಿದ್ದರು. ಆದರೆ, ಕೊನೆಹಂತದಲ್ಲಿ ಇದರಲ್ಲಿ ಕೆಲವು ಬದಲಾವಣೆಗಳನ್ನು  ತರಲಾಯಿತು ಮತ್ತು ಕ್ರೈಸ್ತರನ್ನು ಗುರಿ ಮಾಡಲಾಯಿತು. ಭೂಮಿ ವಶಪಡಿಸಿಕೊಳ್ಳುವ ಉದ್ದೇಶವೇ ಈ ಹಿಂಸಾಚಾರದ ಹಿಂದಿತ್ತು.  ಮಣಿಪುರ ಇತಿಹಾಸದಲ್ಲಿ ಎಂದೂ ಮೇತಿ ಹಿಂದೂಗಳು ಮತ್ತು ಕುಕಿಗಳ ನಡುವೆ ಘರ್ಷಣೆ ನಡೆದೇ ಇಲ್ಲ..’ ಎಂದು ಕಳೆದವಾರ  ಮಣಿಪುರಕ್ಕೆ ಭೇಟಿ ನೀಡಿ ಮರಳಿದ ಫಾದರ್ ಜಾನ್ಸನ್ ಹೇಳಿರುವುದೇ ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಅಚ್ಚರಿ ಏನೆಂದರೆ,


1993 ಮೇ 3ರಂದು ಪಂಗಾಲ್ ಹತ್ಯಾಕಾಂಡ ನಡೆದಿತ್ತು. ಇದೀಗ 2023 ಮೇ 3ರಂದು ಮಣಿಪುರ ಮತ್ತೆ ಉರಿದಿದೆ. ಇದು  ಕಾಕತಾಳೀಯವೋ ಅಥವಾ ಯೋಜನಾಬದ್ಧವೋ?

Wednesday, August 2, 2023

ಹಿಂಸಾಚಾರದಲ್ಲಿ ಹೆಣ್ಣೇಕೆ ಬೆತ್ತಲಾಗಬೇಕು?





‘My children would ask me, why go to court - Recalls Muzaffar Nagar Riots Gang Rape victim of her decade long ordeal- ನೀನೇಕೆ ಕೋರ್ಟಿಗೆ ಹೋಗುತ್ತಿ ಅಮ್ಮ ಎಂದು ನ ನ್ನ ಮಕ್ಕಳು ಕೇಳುತ್ತಾರೆ...:  ಹತ್ತು ವರ್ಷಗಳ ದೀರ್ಘ ಕಾನೂನು ಹೋರಾಟವನ್ನು ನೆನಪಿಸಿಕೊಂಡ ಮುಝಫ್ಫರ್ ನಗರ್ ಗ್ಯಾಂಗ್ ರೇಪ್‌ನ ಸಂತ್ರಸ್ತೆ...  ಎಂಬ ತಲೆಬರಹದೊಂದಿಗೆ 2023 ಮೇ 18ರ ಔಟ್‌ಲುಕ್ ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತ್ತು.

ಅದಕ್ಕೆ ಕಾರಣವೂ ಇತ್ತು


ಹಿಂದೂ ಮತ್ತು ಮುಸ್ಲಿಮ್ ಯುವಕರಿಬ್ಬರ ನಡುವೆ ನಡೆದ ಬೈಕ್ ಅಪಘಾತವೊಂದು 42 ಮುಸ್ಲಿಮ್ ಮತ್ತು 20 ಹಿಂದೂಗಳ ಹತ್ಯೆಗೆ,  93 ಮಂದಿಯ ಗಾಯಕ್ಕೆ ಮತ್ತು 50 ಸಾವಿರಕ್ಕಿಂತಲೂ ಅಧಿಕ ಮಂದಿ ಊರು ತೊರೆದು ಪಲಾಯನ (ಬಹುತೇಕ ಎಲ್ಲರೂ  ಮುಸ್ಲಿಮರೇ) ಮಾಡುವುದಕ್ಕೆ ಕಾರಣವಾದ ಬೃಹತ್ ಹಿಂಸಾಚಾರಕ್ಕೆ ಕಾರಣವಾಯಿತು. 2013 ಆಗಸ್ಟ್ ಕೊನೆಯಲ್ಲಿ ಆರಂಭವಾದ  ಹಿಂಸಾಚಾರವು ಸೆಪ್ಟೆಂಬರ್ ನಲ್ಲಿ ಕೊನೆಗೊಂಡಿತು. ಹಸ್ತಲಾಘವ ಮಾಡಿ ನಕ್ಕು ಮುಗಿಸಿ ಬಿಡಬಹುದಾಗಿದ್ದ ಅಪಘಾತ ಪ್ರಕರಣವು  ಪ್ರತಿಷ್ಠೆಯಾಗಿ ಮಾರ್ಪಟ್ಟು, ಯುವತಿಗೆ ಕಿರುಕುಳ ಎಂಬ ವದಂತಿಯೊಂದಿಗೆ ಊರೆಲ್ಲಾ ಸುತ್ತಾಡಿತು. ಆ ಬಳಿಕ ಅಪಘಾತದಲ್ಲಿ  ಭಾಗಿಯಾದ ಮುಸ್ಲಿಂ ಯುವಕ ಮತ್ತು ಕಿರುಕುಳವನ್ನು ಪ್ರಶ್ನಿಸಲು ಹೋದವರೆಂದು ಹೇಳಲಾದ ಹಿಂದೂ  ಯುವಕರ ಹತ್ಯೆಯೂ ನಡೆಯಿತು. ಆದರೆ ಈ  ಹತ್ಯೆಗೆ ಸಂಬಂಧಿಸಿದಂತೆ  ದಾಖಲಾದ ಎಫ್‌ಐಆರ್‌ನಲ್ಲಿ ಕಿರುಕುಳದ ಉಲ್ಲೇಖವೇ ಇಲ್ಲ ಎಂದೂ ವರದಿಯಿದೆ. ಅಂತೂ ಪುಟ್ಟ ಜಗಳ  ಮತ್ತು ವದಂತಿಯೊಂದರ ಮೇಲೆ ಹುಟ್ಟಿಕೊಂಡ ಕೋಮು ಬೆಂಕಿ ಉತ್ತರ ಪ್ರದೇಶದ ಮುಝಫ್ಫರ್ ನಗರ್ ಉದ್ದಕ್ಕೂ ಕಾಡ್ಗಿಚ್ಚಿನಂತೆ  ಹರಡಿತು. ಈ ಬೆಂಕಿಯಲ್ಲಿ ನೊಂದು ಬೆಂದ ಓರ್ವ ಮುಸ್ಲಿಮ್ ಮಹಿಳೆಯ ಒಡಲ ಧ್ವನಿಯೇ ಈ ಮೇಲಿನ ಔಟ್ ಲುಕ್ ಪತ್ರಿಕೆಯ  ಶೀರ್ಷಿಕೆ. 


‘ಹಿಂದೂ ಯುವಕರ ಹತ್ಯೆ ನಡೆಸಿದ ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಿ’..  ಎಂದು ಲೌಡ್ ಸ್ಪೀಕರ್‌ನಲ್ಲಿ ಕರೆ ಕೇಳಿಸಿತು. 2013 ಸೆ ಪ್ಟೆಂಬರ್ 7ರ ಘಟನೆ ಇದು. ನನ್ನ ಪತಿ ಟೈಲರ್. ನಮಗೆ ಆಗ 5 ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಮರುದಿನ  ಸೆಪ್ಟೆಂಬರ್ 8ರಂದು ನನ್ನ ದೊಡ್ಡ ಮಗನಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಮಗನನ್ನು ಪತಿ ವೈದ್ಯರಲ್ಲಿಗೆ ಕೊಂಡು ಹೋದರು. ಇದಾಗಿ  ಒಂದು ಗಂಟೆಯೊಳಗೆ ಎಲ್ಲೆಲ್ಲೂ ಭಯವೇ ತುಂಬಿಕೊಳ್ಳತೊಡಗಿತು. ಹತ್ತಿರದ ಮಸೀದಿಯಲ್ಲಿ ಮುಸ್ಲಿಮ್ ವ್ಯಕ್ತಿಯ ಹತ್ಯೆಯಾಗಿದೆ ಎಂಬ  ಸುದ್ದಿ ಕೇಳಿ ಬಂತು. ಹಿಂಸೆ ಭುಗಿಲೆದ್ದಿರುವುದರಿಂದ ಶಮ್ಲಿ ಗ್ರಾಮಕ್ಕೆ ಪಲಾಯನ ಮಾಡು ವಂತೆ ಅಕ್ಕಪಕ್ಕದವರು ಸಲಹೆ ನೀಡಿದರು.  ಅವರ ಜೊತೆ ನಾನೂ ಹೊರಟೆ. ಶಮ್ಲಿಯಲ್ಲಿ ನನ್ನ ಸಂಬಂಧಿಕರೂ ಇದ್ದರು. ಕಬ್ಬಿನ ತೋಟದ ನಡುವೆ ನಾವೆಲ್ಲ ಭಯದಿಂದ  ಹೊರಟೆವು. ನನ್ನ ಜೊತೆ ಮಗನಿದ್ದ. ಕಬ್ಬಿನ ಗಿಡದ ಕತ್ತಿಯಲಗಿನಂಥ ಎಲೆಗಳು ಮಗನ ಮೈಗೆ ತಾಕುತ್ತಿದ್ದುದರಿಂದ ಆತ ಕಿರುಚುತ್ತಿದ್ದ.  ನನಗೆ ಆ ದಾರಿ ಹೊಸತು. ಆ ಕಬ್ಬಿನ ತೋಟದಲ್ಲಿ ನಾನೆಂದೂ ಈ ಮೊದಲು ನಡೆದಿರಲಿಲ್ಲ. ನಾನು ಗುಂಪಿನಿಂದ  ಹಿಂದೆ ಬಿದ್ದೆ. ಹೀಗೆ  2 ಕಿ.ಮೀಟರ್ ನಡೆದು ಮುಖ್ಯ ರಸ್ತೆಗೆ ಬಂದೆ. ಶಮ್ಲಿಗೆ ಹೋಗಲು ವಾಹನ ಸಿಗುತ್ತದೋ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ,

  ನನ್ನನ್ನು ಮಹೇಶ್ ವೀರ್, ಸಿಕಂದರ್ ಮತ್ತು ಕುಲ್ದೀಪ್ ಎಂಬ ಪರಿಚಿತರೇ ಆದ ಯುವಕರು ಹಿಡಿದರು. ಇವರೆಷ್ಟು ಪರಿ ಚಿತರೆಂದರೆ, ನನ್ನ ಗಂಡನ ಟೈಲರ್ ಶಾಪ್‌ಗೆ ಹೋಗುತ್ತಿದ್ದವರು  ಇವರು. ನನ್ನ ಮನೆಗೆ ಅನುಮತಿಯನ್ನೇ ಕೇಳದೇ ಪ್ರವೇಶಿಸುವಷ್ಟು ಸಲುಗೆಯಿಂದ ಇದ್ದವರು. ಅವರ ಕೈಯಲ್ಲಿ ಆಯುಧವಿತ್ತು. ಪಕ್ಕದ  ಕಬ್ಬಿನ ತೋಟಕ್ಕೆ ಎಳೆದುಕೊಂಡು ಹೋದ ಅವರು ನನ್ನ ಮಗುವಿನ ಕತ್ತಿಗೆ ತಲವಾರು ಇಟ್ಟು ಬೆದರಿಸಿದರು. ನನ್ನ ಮೇಲೆ ಅತ್ಯಾಚಾರ  ನಡೆಸಿದರು. ಇವೆಲ್ಲ ಫಗುನಾ ಎಂಬ ಪ್ರದೇಶದಲ್ಲಿ ನಡೆದಿತ್ತು..’

2023 ಮೇಯಲ್ಲಿ ಮುಝಫ್ಫರ್ ನಗರ್ ಜಿಲ್ಲಾ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ವೀರ್ ಮತ್ತು ಸಿಕಂದರ್  ಎಂಬಿಬ್ಬರಿಗೆ 20 ವರ್ಷಗಳ ಶಿಕ್ಷೆ ವಿಧಿಸಿದ ಬಳಿಕ ಈ ಮಹಿಳೆಯನ್ನು ಭೇಟಿಯಾಗಿ ಔಟ್‌ಲುಕ್, ದಿ ಕ್ವಿಂಟ್ ಸಹಿತ ವಿವಿಧ ಪತ್ರಿಕೆಗಳು  ಮಾಡಿದ ವರದಿಯ ಸಂಕ್ಷಿಪ್ತ ರೂಪ ಈ ಮೇಲಿನ ಹೇಳಿಕೆ. ಇನ್ನೋರ್ವ ಆರೋಪಿ ಕುಲ್ದೀಪ್ ವಿಚಾರಣಾ ಹಂತದಲ್ಲೇ  ಮೃತಪಟ್ಟಿದ್ದ. ಔಟ್‌ಲುಕ್ ಈಕೆಗೆ  ಶಮಾ ಎಂದು ಹೆಸರಿಟ್ಟಿದೆ. ಆದರೆ, ಇದು ನಿಜನಾಮವಲ್ಲ. ಹಾಗಂತ, ಈ ನ್ಯಾಯ ಪ್ರಕ್ರಿಯೆ ಸುಗಮವಾಗಿರಲಿಲ್ಲ. ಖ್ಯಾತ ನ್ಯಾಯವಾದಿ ವೃಂದಾ ಗ್ರೋವರ್ ಅವರ ಬಲ ಇಲ್ಲದೇ ಇರುತ್ತಿದ್ದರೆ ಅಪರಾಧಿಗಳಿಗೆ  ಈ ಶಿಕ್ಷೆ ಸಿಗುತ್ತಿತ್ತೋ, ಗೊತ್ತಿಲ್ಲ. ಪೊಲೀಸ್ ಠಾಣೆಯಲ್ಲಿ ತಣ್ಣಗೆ ಮಲಗಿದ್ದ ಈ ಪ್ರಕರಣಕ್ಕೆ ಜೀವ ತುಂಬಿದ್ದು ವೃಂದಾ ಗ್ರೋವರ್. ಅವರು  ಸುಪ್ರೀಮ್ ಕೋರ್ಟಿಗೆ ಹೋಗಿ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದರು. ಅಷ್ಟಕ್ಕೂ,

ಮುಝಫ್ಫರ್ ನಗರ್ ಹಿಂಸಾಚಾರದಲ್ಲಿ ನಡೆದ ಏಕೈಕ ಅತ್ಯಾಚಾರ ಪ್ರಕರಣವೇನೂ ಇದಾಗಿರಲಿಲ್ಲ. ಈ ಶಮಾಳೂ ಸೇರಿ ಒಟ್ಟು 7  ಮಂದಿಯ ಮೇಲಿನ ಅತ್ಯಾಚಾರ ಬೆಳಕಿಗೆ ಬಂದಿತ್ತು. ಇದರಲ್ಲಿ 6 ಮಂದಿ ಪೊಲೀಸರಿಗೆ ದೂರು ನೀಡಿದರು. ಓರ್ವಳಂತೂ ದೂರು  ನೀಡುವುದಕ್ಕೂ ಹೋಗಿರಲಿಲ್ಲ. ಬೆದರಿಕೆ ಮತ್ತು ಹಣದ ಆಮಿಷದೊಂದಿಗೆ ಆಕೆಯನ್ನು ತಡೆಯಲಾಯಿತು ಎಂಬ ಆರೋಪವೂ ಇದೆ.  ಈ 6 ಮಂದಿಯ ದೂರಿನ ಮೇಲೆ ಎಫ್‌ಐಆರ್ ದಾಖಲಾಯಿತಾದರೂ ಕೋರ್ಟು ವಿಚಾರಣೆಯ ವೇಳೆ ಇವರಲ್ಲಿ ಶಮಾಳನ್ನು ಬಿಟ್ಟು  ಉಳಿದ 5 ಮಂದಿ ಸಂತ್ರಸ್ತರೂ ಹೇಳಿಕೆ ಬದಲಿಸಿದರು. ‘ನಮ್ಮ ಮೇಲೆ ಅತ್ಯಾಚಾರವೇ ನಡೆದಿಲ್ಲ’ ಎಂದು ನ್ಯಾಯಾಧೀಶರ ಮುಂದೆ  ಹೇಳಿಕೊಂಡರು. ಇದರಿಂದಾಗಿ 22 ಮಂದಿ ಅತ್ಯಾಚಾರಿ ಆರೋಪಿಗಳು ಬಚಾವಾದರು. ಅಂದಹಾಗೆ,


ಹೇಳಿಕೆ ಬದಲಿಸಿದ ಆ ಸಂತ್ರಸ್ತ ಮಹಿಳೆಯರ ಮೇಲೆ ತಕ್ಷಣಕ್ಕೆ ನಮ್ಮಲ್ಲಿ ಅಸಮಾಧಾನ ಮೂಡಬಹುದು. ತಮ್ಮ ಮೇಲೆ ಕ್ರೌರ್ಯವೆಸಗಿದ  ಅಪರಾಧಿಗಳನ್ನು ದಂಡಿಸುವ ಅವಕಾಶವನ್ನು ಅವರೇಕೆ ಕಳೆದುಕೊಂಡರು ಎಂಬ ಪ್ರಶ್ನೆಯೂ ಇರಬಹುದು. ಆದರೆ ಕೋಮು  ಹಿಂಸಾಚಾರದಲ್ಲಿ ನಡೆಯುವ ಅತ್ಯಾಚಾರಕ್ಕೂ ಸಹಜ ಸಂದರ್ಭದಲ್ಲಿ ನಡೆಯುವ ಅತ್ಯಾಚಾರಕ್ಕೂ ಬಹಳ ವ್ಯತ್ಯಾಸ ಇರುತ್ತದೆ.  ಹಿಂಸಾಚಾರದ ಅತ್ಯಾಚಾರ ಅತ್ಯಂತ ಸುರಕ್ಷಿತ. ಹಿಂಸಾಚಾರದಲ್ಲಿ ತೊಡಗಿದ ಸಮಾಜವೇ ಇಂಥ ಅತ್ಯಾಚಾರಿಗಳ ಪರ ನಿಲ್ಲುತ್ತದೆ. ಅವರ  ರಕ್ಷಣೆಗಾಗಿ ವಿವಿಧ ರೀತಿಯ ತಂತ್ರಗಳನ್ನು ಹೆಣೆಯುತ್ತದೆ. ಅದರಲ್ಲಿ ಜೀವ ಬೆದರಿಕೆ, ಬಹಿಷ್ಕಾರದ ಕರೆ, ಹಣದ ಆಮಿಷ ಇತ್ಯಾದಿಗಳೂ  ಸೇರಿರುತ್ತವೆ. ಪಲಾಯನ ಮಾಡಿರುವ ಸಂತ್ರಸ್ತೆ ಮತ್ತು ಅವರ ಕುಟುಂಬ ಸುರಕ್ಷಿತವಾಗಿ ಊರಿಗೆ ಮರಳಬೇಕಾದರೆ ‘ಕೇಸು’  ಹಿಂತೆಗೆದುಕೊಳ್ಳಬೇಕು ಎಂಬ ಷರತ್ತನ್ನು ಸಮಾಜ ವಿಧಿಸುತ್ತದೆ. ಈ ಐವರು ಮಹಿಳೆಯರ ಪ್ರಕರಣದಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿದೆ.


ಹಿಂಸಾಚಾರದ ವೇಳೆ ಫಗುನಾ ಗ್ರಾಮದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಈ ಐವರು ಮಹಿಳೆಯರು 22 ಮಂದಿಯ  ವಿರುದ್ಧ ದೂರು ಕೊಟ್ಟಿದ್ದರು. ಎಫ್‌ಐಆರ್ ದಾಖಲಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಈ ನಡುವೆ, 2014 ಜೂನ್‌ನಲ್ಲಿ ಧೋಲೆರಾ  ಎಂಬ ಗ್ರಾಮದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವುದಾಗಿ ಪ್ರಕರಣ ದಾಖಲಾಯಿತು. 10 ಮಂದಿ ಮುಸ್ಲಿಮರನ್ನು  ಆರೋಪಿಗಳೆಂದು ಹೆಸರಿಸಲಾಯಿತು. ಈ ಫಗುನಾ ಮತ್ತು ಧೋಲೆರಾ ಗ್ರಾಮಗಳು 20 ಕಿ.ಮೀಟರ್ ಅಂತರದಲ್ಲಿವೆ. ಈ ಘಟನೆ  ನಡೆದದ್ದೇ ತಡ, ಅತ್ಯಾಚಾರ ಪ್ರಕರಣಗಳಲ್ಲಿ ಮಹತ್ತರ ಬದಲಾವಣೆಗಳಾದುವು. ಪ್ರಕರಣಗಳನ್ನು ಹಿಂಪಡೆದು ರಾಜಿಯಲ್ಲಿ ಮುಗಿಸುವ  ಪ್ರಸ್ತಾಪಗಳಾದುವು. ಸಂತ್ರಸ್ತರಿಗೆ ಹಣವನ್ನು ನೀಡಲಾಗಿದೆ ಎಂಬ ವರದಿಯೂ ಇದೆ. ಈ ರಾಜಿ ಪಂಚಾತಿಕೆಯ ಹಿನ್ನೆಲೆಯಲ್ಲಿ ಹಿಂದೂ  ಮಹಿಳೆ ಮತ್ತು ಈ 5 ಮಂದಿ ಮುಸ್ಲಿಮ್ ಮಹಿಳೆಯರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ಬದಲಿಸಿದರು. ಆ ಮೂಲಕ ಒಟ್ಟು  32 ಮಂದಿ ಅಪರಾಧಿಗಳು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಂಡರು. ಆದರೆ ಶಮಾ ಮಾತ್ರ ಯಾವ ಆಮಿಷಕ್ಕೂ, ರಾಜಿಗೂ  ತಯಾರಾಗಲಿಲ್ಲ. ಈ ಎಲ್ಲ ವಿವರವನ್ನು ‘Muzaffar Nagar riots: The deal that saved 32 alleged rapists’- ಮುಝಫ್ಫರ್ ನಗರ್ ಹಿಂಸಾಚಾರ: 32 ಮಂದಿ ಅತ್ಯಾಚಾರ ಆರೋಪಿಗಳನ್ನು ಬಚಾವ್ ಮಾಡಿದ ಒಪ್ಪಂದ- ಎಂಬ  ಶೀರ್ಷಿಕೆಯಲ್ಲಿ ಐಶ್ವರ್ಯ ಅಯ್ಯರ್ ಎಂಬ ಪತ್ರಕರ್ತೆ 2019 ಆಗಸ್ಟ್ 27ರಂದು ದಿ ಕ್ವಿಂಟ್ ವೆಬ್ ಪತ್ರಿಕೆಯಲ್ಲಿ ಬರೆದ ವರದಿಯಲ್ಲಿ  ನೀಡಲಾಗಿದೆ.

ಆದರೆ, ಶಮಾಳ ಪರಿಸ್ಥಿತಿ ಇಷ್ಟು ಸಹಜವಲ್ಲ.


ರಾಜಿಗೆ ಒಪ್ಪಿಕೊಳ್ಳದ ಆಕೆ ನಿರಂತರ ಬೆದರಿಕೆಯನ್ನೂ ಎದುರಿಸಿದಳು. ಊರನ್ನೂ ತೊರೆದಳು. ಇನ್ನೊಂದು ಕಡೆ, ಶಮ್ಲಿ ಗ್ರಾಮದಲ್ಲಿ  NGO  ಕಟ್ಟಿಕೊಟ್ಟ ಒಂದು ಕೋಣೆಯ ಪುಟ್ಟ ಮನೆಯಲ್ಲಿ ವಾಸವಿರುವ ಆಕೆಯನ್ನು ಅಕ್ಕಪಕ್ಕದವರೇ ಅಸ್ಪೃಶ್ಯಳಂತೆ ನೋಡತೊಡಗಿದರು.  ಆಕೆಯಿಂದ ಅಂತರ ಕಾಯ್ದುಕೊಂಡರು. ತಮ್ಮ ಮನೆಯ ಮಕ್ಕಳು ಆಕೆಯ ಮನೆಗೆ ಹೋಗದಂತೆ ತಡೆದರು. ತಾನು ಅತ್ಯಾಚಾರ ಸಂತ್ರಸ್ತೆ  ಎಂದು ಗೊತ್ತಾದ ಬಳಿಕ ಆದ ಬದಲಾವಣೆ ಇದು ಎಂದಾಕೆ ಹೇಳಿರುವುದನ್ನು ಔಟ್‌ಲುಕ್ ಪತ್ರಿಕೆಯ ವರದಿಯಲ್ಲಿ ಕಾಣಬಹುದು. ಆಕೆ  ಹೇಳಿರುವ ಇದಕ್ಕಿಂತಲೂ ದಾರುಣ ಸಂಗತಿಯೆಂದರೆ, ಆಕೆಯ ಮಕ್ಕಳ ಪ್ರಶ್ನೆ. ಪದೇ ಪದೇ ಯಾಕಮ್ಮ ಕೋರ್ಟಿಗೆ ಹೋಗುತ್ತಿ ಎಂದು  ಮಕ್ಕಳು ಪ್ರಶ್ನಿಸುತ್ತಾರೆ. ‘ಹಿಂಸಾಚಾರ ನಡೆದಿತ್ತಲ್ಲ, ಆಗ ನಮ್ಮ ಮನೆಗೆ ಬೆಂಕಿ ಕೊಡಲಾಗಿತ್ತು, ದರೋಡೆ ಮಾಡಲಾಗಿತ್ತು. ಆದ್ದರಿಂದ ನಮ್ಮ  ಭೂಮಿ ಇತರರ ಪಾಲಾಗಿದೆ. ಅದನ್ನು ಮರಳಿ ಪಡೆಯುವುದಕ್ಕಾಗಿ ಕೋರ್ಟಿಗೆ ಹೋಗುತ್ತಿದ್ದೇನೆ..’ ಎಂದು ಹೇಳುತ್ತಿದ್ದುದಾಗಿ ಶಮಾ  ಹೇಳಿರುವುದೂ ವರದಿಯಲ್ಲಿದೆ. ನಿಜವಾಗಿ,


ಅತ್ಯಾಚಾರ ಎಂಬುದು ಹೆಣ್ಣಿನ ಪಾಲಿಗೆ ಎರಡು ಅಲುಗಿನ ಕತ್ತಿ. ಒಂದು- ಅತ್ಯಾಚಾರವೆಂಬ ಇರಿತವಾದರೆ, ಇನ್ನೊಂದು-  ಅತ್ಯಾಚಾರಕ್ಕೀಡಾದವಳು ಎಂಬ ವಕ್ರ ದೃಷ್ಟಿಯ ಇರಿತ. ಇವೆರಡನ್ನೂ ಓರ್ವ ಸಂತ್ರಸ್ತ ಮಹಿಳೆ ಜೀವನದುದ್ದಕ್ಕೂ ಹೊತ್ತುಕೊಂಡೇ  ಬದುಕಬೇಕು. ಹಿಂಸಾಚಾರಕ್ಕೆ ಕಾರಣಗಳೇನೇ ಇರಲಿ, ಅಂತಿಮವಾಗಿ ಅದರ ನೋವುಣ್ಣುವುದು ಹೆಣ್ಣೇ. ಬೈಕ್ ಅಪಘಾತದಿಂದ ಹುಟ್ಟಿಕೊಂಡ ಮುಝಫ್ಫರ್ ನಗರ್ ಹಿಂಸೆ, ಮೀಸಲಾತಿ ನೆಪದಲ್ಲಿ ಸ್ಫೋಟಗೊಂಡ ಮಣಿಪುರ ಹಿಂಸೆ ಅಥವಾ ರೈಲಿಗೆ ಬೆಂಕಿ ಕೊಟ್ಟ ನೆಪದಲ್ಲಿ  ಭುಗಿಲೆದ್ದ ಗುಜರಾತ್ ಹಿಂಸಾಚಾರ- ಈ ಮೂರಕ್ಕೂ ಕಾರಣಕರ್ತರು ಪುರುಷರೇ. ಆದರೆ, ಅತ್ಯಂತ ಹೀನಾಯ ಕ್ರೌರ್ಯಕ್ಕೆ ತುತ್ತಾದದ್ದು  ಮಾತ್ರ ಮಹಿಳೆಯರು. 2016ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ವರದಿಗಳನ್ನು ಅಧ್ಯಯನ ನಡೆಸಿದರೂ ಲಭ್ಯವಾಗುವುದು  ಇದೇ ಫಲಿತಾಂಶ. ಈ ಕುರಿತಂತೆ ಆಸ್ಟ್ರೆಲಿಯಾ, ಕೆನಡ, ನಾರ್ವೆ, ಫಿಲಿಪ್ಪೀನ್ಸ್, ಬಾಂಗ್ಲಾದೇಶವನ್ನೊಳಗೊAಡ ತಜ್ಞರು ಮತ್ತು ಸಂಶೋಧಕರ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ‘Forced migration of Rohingya: The untold experiencde’- ಎಂಬ ಹೆಸರಲ್ಲಿ 2018 ಆಗಸ್ಟ್ ನಲ್ಲಿ  ಈ ಸಮಿತಿ ವರದಿಯನ್ನೂ ನೀಡಿತ್ತು. ಆ ವರದಿ ಎಷ್ಟು ಆಘಾತಕಾರಿಯಾಗಿತ್ತೆಂದರೆ, ಯಾವುದೇ ಮಹಿಳೆ ತಾನೇಕೆ ಮಹಿಳೆಯಾಗಿ ಹುಟ್ಟಿದೆ ಎಂದು ಪ್ರಶ್ನಿಸುವಷ್ಟು ಭೀಕರವಾಗಿತ್ತು. 18 ಸಾವಿರ  ರೋಹಿಂಗ್ಯ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ ನಡೆದಿದೆ ಎಂಬುದಾಗಿ ಆ ವರದಿಯಲ್ಲಿ  ಹೇಳಲಾಗಿತ್ತು. ಇದಲ್ಲದೇ, ದಿ ಇಂಡಿಪೆಂಡೆಂಟ್  ಪತ್ರಿಕೆಯು, 'Burmese military guilty of widespread rape of Rohingyan Muslims’- ಎಂಬ ಶೀರ್ಷಿಕೆಯಲ್ಲಿ 2017 ನವೆಂಬರ್ 16ರಂದು ಹೃದಯ ಕಲಕುವ ವರದಿಯನ್ನೂ ಪ್ರಕಟಿಸಿತ್ತು.  15 ವರ್ಷದ ಬಾಲಕಿಯನ್ನು 10 ಮಂದಿ ಮ್ಯಾನ್ಮಾರ್ ಸೈನಿಕರು ಅತ್ಯಾಚಾರ ಮಾಡಿರುವ ಹೃದಯ ವಿದ್ರಾವಕ ಕ್ರೌರ್ಯ.

ಬಹುಶಃ

ಹೆಣ್ಣಿನ ದೇಹವನ್ನು ಬಲವಂತದಿಂದ  ಅನುಭವಿಸಬಯಸುವ ಪುರುಷರೇ ಈ ‘ಹಿಂಸಾಚಾರ’ ಎಂಬ ಕಾನ್ಸೆಪ್ಟನ್ನು ಸೃಷ್ಟಿ ಮಾಡಿರಬೇಕು.  ಸಹಜ ಸಂದರ್ಭದಲ್ಲಿ ಅತ್ಯಾಚಾರ ಮಾಡಲು ಹಿಂಜರಿಯುವ ಪುರುಷ ಹಿಂಸಾಚಾರದ ವೇಳೆ ಅತ್ಯಾಚಾರವನ್ನು ಸಹಜಗೊಳಿಸುತ್ತಾನೆ.  ಹೆಣ್ಣನ್ನು ಹುಡುಕಿ ಹುಡುಕಿ ಕ್ರೌರ್ಯವೆಸಗುತ್ತಾನೆ. ಆಕೆಯ ದೇಹವನ್ನು ಬೆತ್ತಲೆಗೊಳಿಸುತ್ತಾನೆ. ಇಂಚಿಂಚೂ  ಇರಿಯುತ್ತಾನೆ. ಸಾಯಿಸುತ್ತಾನೆ  ಮತ್ತು ಯಾವ ಪಾಪಭಾರವೂ ಇಲ್ಲದೇ ಸಮಾಜದ ಭಾಗವಾಗಿ ಬದುಕುತ್ತಾನೆ. ಅಷ್ಟಕ್ಕೂ,

ಕೋಮು ಹಿಂಸಾಚಾರವೆಂಬುದು ಎರಡೂ ಧರ್ಮಾನುಯಾಯಿಗಳ ನಡುವಿನ ದ್ವೇಷ ಸಾಧನೆಯೇ ಆಗಿರುತ್ತಿದ್ದರೆ, ಹೆಣ್ಣೇಕೆ  ಅತ್ಯಾಚಾರಕ್ಕೆ ಒಳಗಾಗಬೇಕು? ಘರ್ಷಣೆಯ ಭಾಗವಾಗದೇ ತಮ್ಮ ಪಾಡಿಗಿರುವ ಹೆಣ್ಣೇಕೆ ಬೆತ್ತಲೆಯಾಗಬೇಕು? ಅವಳು ಮಾಡಿರುವ  ಅಪರಾಧವೇನು?