Tuesday, October 27, 2015

ಇಂಥ ಸ್ಥಿತಿಯಲ್ಲಿ ಚರ್ಚೆಗೊಳಗಾಗಬೇಕಾದ್ದು ಗೋವೋ ಅಲ್ಲ ಹೆಣ್ಣೋ?

      ಅವರು ಆಲಿಸುತ್ತಿದ್ದರು, ಆತ ಹೇಳುತ್ತಿದ್ದ..      “ನನಗೋರ್ವ ಮಗಳಿದ್ದಳು. ನನ್ನ ಪತ್ನಿ ಆ ಮಗುವನ್ನು ಬೆಳೆಸಿದ್ದೇ ನೆರೆಕರೆ ಮತ್ತು ಸಮಾಜದಿಂದ ಅಡಗಿಸಿ. ಆಕೆ ಆ ಮಗುವನ್ನು ತುಂಬಾ ಪ್ರೀತಿಸುತ್ತಿದ್ದಳು. ‘ಹೆಣ್ಣು ಮಗು ಕುಲಕ್ಕೆ ಕಳಂಕ’ ಎಂದು ನಂಬಿದ್ದ ಸಮಾಜದಲ್ಲಿ ಹೆಣ್ಣು ಮಗುವನ್ನು ಹೆರುವುದು ಮತ್ತು ಬೆಳೆಸುವುದು ಸಣ್ಣ ಸಾಹಸ ಆಗಿರಲಿಲ್ಲ. ನನ್ನ ಪತ್ನಿ ಆ ಸಾಹಸಕ್ಕೆ ಕೈ ಹಾಕಿದ್ದಳು. ಪರಿಸರದ ಕುಹಕವನ್ನು ಸಹಿಸಿಕೊಂಡು ಮಗುವನ್ನು ಪ್ರೀತಿಸಿದ್ದಳು. ಹೆಣ್ಣು ಮಗುವನ್ನು ಹುಟ್ಟಿದ ಕೂಡಲೇ ಹೂಳುವ ಸಂಪ್ರದಾಯವೊಂದು ನಮ್ಮ ಸಮಾಜದಲ್ಲಿತ್ತಲ್ಲವೇ? ಅದಕ್ಕೆ ಕಾರಣವೂ ಇತ್ತು. ಒಂದು: ಬಡತನ. ಉಣ್ಣುವವರ ಸಂಖ್ಯೆಯನ್ನು ಕಡಿಮೆಗೊಳಿಸಲೇಬೇಕಿತ್ತು. ಎರಡನೆಯದಾಗಿ, ಬುಡಕಟ್ಟು ಜನಾಂಗಗಳಾದ ನಮ್ಮ ನಡುವೆ ಸದಾ ಯುದ್ಧದಂತಹ ಘರ್ಷಣೆಗಳು ನಡೆಯುತ್ತಿದ್ದವು. ಆದ್ದರಿಂದ ಗಂಡು ಮಕ್ಕಳ ಅಗತ್ಯ ಧಾರಾಳವಿತ್ತು. ಮೂರನೆಯದಾಗಿ, ಹೀಗೆ ನಡೆಯುವ ಯುದ್ಧಗಳಲ್ಲಿ ಸೋಲುವ ಗುಂಪಿನ ಸಂಪತ್ತುಗಳನ್ನಷ್ಟೇ ದೋಚುತ್ತಿದ್ದುದಲ್ಲ, ಅವರ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನೂ ಸೆರೆ ಹಿಡಿದು ದಾಸಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಇದು ನಮ್ಮ ಪಾಲಿಗೆ ಸಹಿಸಲಸಾಧ್ಯ ಅವಮಾನವಾಗಿತ್ತು. ನಾನಾದರೋ ವ್ಯಾಪಾರದ ಉದ್ದೇಶದಿಂದ ತಿಂಗಳುಗಟ್ಟಲೆ ಪರ ಊರಿಗೆ ಹೋಗುತ್ತಿದ್ದೆ. ಹೀಗೆ ಒಂದು ದಿನ ಮರಳಿ ಬಂದಾಗ ಪರಿಸರದಿಂದ ಕುಹಕದ ಮಾತುಗಳು ಕೇಳಿ ಬಂದುವು. ನನ್ನ ಮನೆಯಲ್ಲಿ ಹೆಣ್ಣು ಮಗು ಬೆಳೆಯುತ್ತಿರುವುದನ್ನು ಬೊಟ್ಟು ಮಾಡಿ ನಿಂದಿಸಲಾಯಿತು. ತಮಾಷೆ ಮಾಡಲಾಯಿತು. ಕೊನೆಗೆ ಹೆಣ್ಣಿನ ಅಪ್ಪ ಎಂಬ ಕಳಂಕದಿಂದ ಶಾಶ್ವತವಾಗಿ ಮುಕ್ತಿ ಪಡೆಯಬೇಕೆಂದು ನಾನು ನಿರ್ಧರಿಸಿದೆ. ಒಂದು ದಿನ ನನ್ನ ಮಗುವನ್ನು ಪೇಟೆಗೆ ಕರೆದುಕೊಂಡು ಹೋಗುವುದಾಗಿ ಪತ್ನಿಯೊಂದಿಗೆ ಹೇಳಿದೆ. ಆಕೆ ಮಗುವಿಗೆ ಬಟ್ಟೆ ತೊಡಿಸಿದಳು. ಮಗುವಂತೂ ತುಂಬಾ ಖುಷಿಯಿಂದ ನನ್ನೊಂದಿಗೆ ಹೊರಟು ನಿಂತಿತು. ಅಪ್ಪನೊಂದಿಗೆ ಮೊದಲ ಬಾರಿ ಪೇಟೆ ನೋಡುವ ಧಾವಂತವೊಂದು ಮಗುವಿನ ಮುಖದಲ್ಲಿತ್ತು. ನಾನು ಮಗುವಿನ ಕೈ ಹಿಡಿದುಕೊಂಡು ಹೊರಟೆ. ಜೊತೆಗೇ ಕೈಯಲ್ಲೊಂದು ಗುದ್ದಲಿಯನ್ನೂ ಹಿಡಿದುಕೊಂಡೆ. ತಲುಪಿದ್ದಾದರೋ ಒಂದು ಬೋರು ಗುಡ್ಡೆಗೆ. ಮಗುವಿಗಂತೂ ನನ್ನ ಜೊತೆ ಅತ್ಯಂತ ಹೃದ್ಯ ಒಡನಾಟವಿತ್ತು. ನನ್ನನ್ನು ಮಗು ತೀವ್ರವಾಗಿ ಹಚ್ಚಿಕೊಂಡಿತ್ತು. ಆದ್ದರಿಂದಲೇ, ಮಗು ದಾರಿಯುದ್ದಕ್ಕೂ ನನ್ನೊಂದಿಗೆ ಮಾತಾಡುತ್ತಲೇ ಸಾಗಿತ್ತು. ನಾನು ಗುಡ್ಡಕ್ಕೆ ತಲುಪಿದ್ದೇ ತಡ, ಗುಂಡಿ ತೋಡಲು ಪ್ರಾರಂಭಿಸಿದೆ. ಮಗು ಆಗಾಗ ನನ್ನ ಉದ್ದೇಶದ ಬಗ್ಗೆ ಪ್ರಶ್ನಿಸುತ್ತಿತ್ತು. ನನ್ನ ಬಟ್ಟೆಯ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೈಯಾರೆ ಸರಿಸುತ್ತಿತ್ತು. ಕೊನೆಗೆ ನಾನು ಗುಂಡಿ ಅಗೆಯುವುದನ್ನು ನಿಲ್ಲಿಸಿ ಮಗುವನ್ನು ಗುಂಡಿಯೊಳಕ್ಕೆ ಎಸೆದೆ. ಅದನ್ನು ನಿರೀಕ್ಷಿಸದಿದ್ದ ಮಗು ಅಪ್ಪಾ.. ಅಪ್ಪಾ.. ಎಂದು ಕೂಗಾಡಿತು. ನಾನು ಒಂದು ಭಾರ ಕಲ್ಲನ್ನು ಎತ್ತಿ ಮಗುವಿನ ಮೇಲೆ ಹಾಕಿದೆ..”   
      ಆಲಿಸುತ್ತಿದ್ದ ಪ್ರವಾದಿ ಮುಹಮ್ಮದ್‍ರ ಕಣ್ಣಾಲಿಗಳು ತುಂಬಿಕೊಂಡಿದ್ದವು. ಮಗುವನ್ನು ಸ್ಮರಿಸಿ ಅವರು ದುಃಖಿಸಿದರು. 'ಹೆಣ್ಣು ಮಗುವನ್ನು ಸಾಕಿ, ಸಂಸ್ಕಾರಯುತವಾಗಿ ಬೆಳೆಸುವ ಹೆತ್ತವರಿಗೆ ಸ್ವರ್ಗವಿದೆ' ಎಂಬ ಆಶ್ವಾಸನೆ ಕೊಟ್ಟರು. 'ಯಾರಾದರೂ ಹೆಣ್ಣು ಮಗುವನ್ನು ಕೊಂದರೆ, ಪುನರುತ್ಥಾನ ದಿನದಂದು ಆ ಮಗುವಿನಲ್ಲೇ ‘ನಿನ್ನನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಮಗು' (ಪವಿತ್ರ ಕುರ್‍ಆನ್ 81:9) ಎಂದು ಪ್ರಶ್ನಿಸಿ ದುಷ್ಟ ಹೆತ್ತವರನ್ನು ಶಿಕ್ಷಿಸಲಾಗುತ್ತದೆ' ಎಂದು ಸಮಾಜವನ್ನು ಎಚ್ಚರಿಸಿದರು. ತಾಯಿಯ ಪಾದದಡಿ ಸ್ವರ್ಗವಿದೆ ಎಂದರು. ಎಷ್ಟೇ ದೊಡ್ಡ ಧರ್ಮಭಕ್ತನಾದರೂ ತಾಯಿಯ ವಿರೋಧ ಕಟ್ಟಿ ಕೊಂಡಿದ್ದರೆ ಸ್ವರ್ಗ ಪ್ರವೇಶಿಸಲಾರ ಎಂದು ಉಪದೇಶಿಸಿ ಸಮಾಜದಲ್ಲಿ ಹೆಣ್ಣಿನ ಸ್ಥಾನವನ್ನು ಉನ್ನತ ಗೊಳಿಸಿದರು. ಹೆಣ್ಣಿಗೆ ಆಸ್ತಿಯಲ್ಲಿ ಪಾಲು (ಪವಿತ್ರ ಕುರ್‍ಆನ್ 4: 11-12) ನೀಡಿದರು. ವಿವಾಹ ಧನವನ್ನು ನೀಡಿ ಹೆಣ್ಣನ್ನು ವರಿಸಬೇಕೆಂದು (ಪವಿತ್ರ ಕುರ್‍ಆನ್ 4:4) ಗಂಡಿಗೆ ಆದೇಶಿಸಿದರು. ಮುಟ್ಟು ಅಮಂಗಲವಲ್ಲ, ಪ್ರಕೃತಿ ಸಹಜ ಕ್ರಿಯೆ ಎಂದು ಸಾರಿದರು. ದುರಂತ ಏನೆಂದರೆ, ಇವತ್ತು ಹೆಣ್ಣು ಸಂತಾನವನ್ನು ಎಷ್ಟು ನಾಜೂಕಾಗಿ ಹತ್ಯೆ ಮಾಡಲಾಗುತ್ತಿದೆಯೆಂದರೆ, ಇಂಥದ್ದೊಂದು ಭಾವುಕ ಘಟನೆ ಹುಟ್ಟಿಕೊಳ್ಳುವುದಕ್ಕೆ ಅವಕಾಶವನ್ನೇ ನೀಡಲಾಗುತ್ತಿಲ್ಲ. ಮಗು ಮಾತಾಡುವುದಕ್ಕಿಂತ ಮೊದಲೇ, ಹೊಟ್ಟೆಯಲ್ಲೇ ತಣ್ಣಗೇ ಸಾಯಿಸಿ ಬಿಡುವ ತಂತ್ರಜ್ಞಾನವು ನಮ್ಮಲ್ಲಿದೆ. ಇತ್ತೀಚೆಗೆ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ 2011ರ ಜನಗಣತಿಯ ವಿವರಗಳು ಹೇಳುವುದು ಇದನ್ನೇ. ಆದರೆ ಇಲ್ಲಿ ಚರ್ಚೆ ನಡೆದದ್ದೇ ಬೇರೆ. ಜನಗಣತಿಯ ವಿವರವನ್ನು ಇಲ್ಲಿನ ಕೆಲವು ಮಾಧ್ಯಮಗಳು ಮತ್ತು ಬಲಪಂಥೀಯ ವಿಚಾರಧಾರೆಯ ಪಕ್ಷ -ಪರಿವಾರಗಳು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದುವು. ಹಿಂದೂಗಳ ಜನಸಂಖ್ಯೆ ಕುಸಿಯುತ್ತಿದೆಯೆಂದೂ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಏರುಗತಿ ಕಾಣುತ್ತಿದೆಯೆಂದೂ ಹೇಳಲಾಯಿತಲ್ಲದೇ ಅಲ್ಪಸಂಖ್ಯಾತ ಎಂಬ ಪದದೊಳಗೆ ಬರುವ ಜೈನ, ಬೌದ್ಧ, ಕ್ರೈಸ್ತ, ಫಾರ್ಸಿ ಸಹಿತ ಎಲ್ಲ ಗುಂಪುಗಳನ್ನೂ ಕಡೆಗಣಿಸಿ ಅಲ್ಪಸಂಖ್ಯಾತವೆಂದರೆ ‘ಮುಸ್ಲಿಮ್' ಎಂದು ವ್ಯಾಖ್ಯಾನಿಸಿ ಭಯ ಹುಟ್ಟಿಸಲಾಯಿತು. ನಿಜವಾಗಿ 2001ರಿಂದ 2011ರ ವರೆಗಿನ 10 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆಯ ದರ 5% ಕುಸಿತ ಕಂಡಿದ್ದರೆ ಹಿಂದೂಗಳ ಜನಸಂಖ್ಯಾ ಬೆಳವಣಿಗೆ 3%ವಷ್ಟೇ ಕುಸಿತ ಕಂಡಿದೆ. ಈ ಸತ್ಯ ಎಲ್ಲೂ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚೆಯಾಗಲೇ ಇಲ್ಲ. ಅಷ್ಟಕ್ಕೂ, ಜನಗಣತಿ ಎಂಬುದು ಹಿಂದೂಗಳೆಷ್ಟು ಮುಸ್ಲಿಮರೆಷ್ಟು ಎಂಬುದನ್ನು ಲೆಕ್ಕ ಹಾಕುವುದಕ್ಕಾಗಿ ಮಾಡುವ ಕಸರತ್ತಲ್ಲ. ಅದು ಒಂದು ಜನತೆ ಮತ್ತು ಸಮಾಜಕ್ಕೆ ಸಂಬಂಧಿಸಿ ಲಕ್ಷಾಂತರ ಕಾರ್ಯಕರ್ತರು ಹತ್ತಾರು ವಿವರಗಳನ್ನು ಕಲೆ ಹಾಕುವ ದಾಖಲೆ ಪತ್ರ. ಈ ದಾಖಲೆ ಪತ್ರ ಹಿಂದೂ-ಮುಸ್ಲಿಮರ ಜನಸಂಖ್ಯೆಯ ವಿವರವನ್ನಷ್ಟೇ ನೀಡುವುದಲ್ಲ. ಕುಸಿಯುತ್ತಿರುವ ಲಿಂಗಾನುಪಾತದ ಭೀಕರ ಚಿತ್ರಣವನ್ನೂ ದೇಶದ ಮುಂದಿಟ್ಟಿದೆ. ಆದರೂ, ಜನಸಂಖ್ಯೆಯ ಹೆಸರಲ್ಲಿ ಮುಸ್ಲಿಮರನ್ನು ಟೀಕಿಸಿದ ಯಾವ ಬಲಪಂಥೀಯ ಪಕ್ಷಗಳೂ ಕುಸಿಯುತ್ತಿರುವ ಹೆಣ್ಣು ಶಿಶುಗಳ ಅನುಪಾತದ ಬಗ್ಗೆ ಏನನ್ನೂ ಹೇಳದಿರುವುದಕ್ಕೆ ಏನೆನ್ನಬೇಕು? ದಲಿತರು ಮತ್ತು ಆದಿವಾಸಿಗಳನ್ನು ಹೊರತುಪಡಿಸಿದ ಹಿಂದೂ ಸಮುದಾಯದಲ್ಲಿ ಹೆಣ್ಣು ಶಿಶುಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಆಗುತ್ತಿದೆಯೆಂದು ಜನಗಣತಿ ವಿವರಗಳು ಬಹಿರಂಗಪಡಿಸಿದುವು. ವಿಶೇಷ ಏನೆಂದರೆ, ಆರ್ಥಿಕವಾಗಿ ಅತ್ಯಂತ ಮುಂದುವರಿದ ಪಂಜಾಬ್ ಮತ್ತು ಹರ್ಯಾಣಗಳು ಅತೀ ಕಡಿಮೆ ಲಿಂಗಾನುಪಾತ ದಾಖಲಿಸಿದುವು. 2011ರ ಜನಗಣತಿ ವರದಿಯಲ್ಲಿ ದೇಶದ ಒಟ್ಟು ಲಿಂಗಾನುಪಾತ ದರ 1000 ಪುರುಷರಿಗೆ 940 ಮಹಿಳೆಯರಾದರೆ, ಹರ್ಯಾಣದಲ್ಲಿ ಇದು 1000 ಪುರುಷರಿಗೆ 830 ಮಹಿಳೆಯರು. ಪಂಜಾಬ್‍ನಲ್ಲಂತೂ 846 ಮಹಿಳೆಯರು. 2001ರಲ್ಲಿ ದೇಶದಲ್ಲಿ ಒಟ್ಟು ಲಿಂಗಾನುಪಾತ ದರ 1000 ಪುರುಷರಿಗೆ 933 ಮಹಿಳೆಯರಿದ್ದರು. ಒಂದು ವೇಳೆ, ಮುಸ್ಲಿಮರನ್ನು ಮಾತ್ರ ಇಲ್ಲಿ ಪ್ರತ್ಯೇಕಿಸಿ ನೋಡುವುದಾದರೆ 2001ರಲ್ಲಿ 1000 ಮುಸ್ಲಿಮ್ ಪುರುಷರಿಗೆ 936 ಮಹಿಳೆಯರಿದ್ದರು. ಇದೇ ಸಂದರ್ಭದಲ್ಲಿ ಹಿಂದೂ ಮಹಿಳೆಯರ ಅನುಪಾತ 931. 2011ರಲ್ಲಿ ಮುಸ್ಲಿಮರಲ್ಲಿ ಲಿಂಗಾನುಪಾತ ದರ 1000 ಪುರುಷರಿಗೆ 951 ಮಹಿಳೆಯರಾದರೆ ಹಿಂದೂಗಳಲ್ಲಿ ಇದು 939. ಹಾಗಂತ, ಇಡೀ ದೇಶದಲ್ಲಿ 6 ವರ್ಷಕ್ಕಿಂತ ಕೆಳಗಿನ ಮಕ್ಕಳ ಬಗ್ಗೆ ಹೇಳುವುದಾದರೆ, 2001ರಲ್ಲಿ 1000 ಗಂಡು ಮಕ್ಕಳಿಗೆ 927 ಹೆಣ್ಣು ಮಕ್ಕಳಿದ್ದರೆ 2011ರಲ್ಲಿ ಅದು 914ಕ್ಕೆ ಕುಸಿದಿದೆ. ಅಷ್ಟಕ್ಕೂ, 2001ರಿಂದ 2011ರ ಮಧ್ಯೆ ಈ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೇಂದ್ರಿತ ಬೆಳವಣಿಗೆಗಳು ನಡೆದಿವೆ. ಮೊಬೈಲ್‍ನಲ್ಲಿ, ವಾಹನಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಶೈಕ್ಷಣಿಕವಾಗಿಯೂ ದೇಶ ಬೆಳೆದಿದೆ. ತಂತ್ರಜ್ಞಾನದ ಬಳಕೆಯಲ್ಲಿ ಸಾಕಷ್ಟು ಏರುಗತಿ ಕಂಡುಬಂದಿದೆ. 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಗೆದ್ದದ್ದೂ ಭಾರತವೇ. ಅಲ್ಲದೇ 1961ರಲ್ಲಿಯೇ ವರದಕ್ಷಿಣೆ ವಿರೋಧಿ ಕಾಯ್ದೆಯನ್ನು ಈ ದೇಶದಲ್ಲಿ ಜಾರಿಗೊಳಿಸಲಾಗಿದೆ. 1994ರಲ್ಲಿ ಲಿಂಗಪತ್ತೆ ಪರೀಕ್ಷೆಯನ್ನು ನಿಷೇಧಿಸಲಾಗಿದೆ. ಅಲ್ಟ್ರಾ ಸೋನೋಗ್ರಾಫಿ ಯಂತ್ರಗಳು ಕಡ್ಡಾಯವಾಗಿ ನೋಂದಣಿಗೊಳ್ಳ ಬೇಕೆಂದು ಕಾನೂನು ರೂಪಿಸಲಾಗಿದೆ. ಇಷ್ಟೆಲ್ಲಾ ಇದ್ದೂ ಹೆಣ್ಣು ಶಿಶುವನ್ನು ಪ್ರೀತಿಸದಂಥ ಮನಸ್ಥಿತಿಯೊಂದು ಇಲ್ಲಿ ಉಳಿದುಕೊಂಡಿರುವುದಕ್ಕೆ ಕಾರಣಗಳೇನು? ಅದರಲ್ಲೂ ಆರ್ಥಿಕವಾಗಿ ಮುಂದುವರಿದ ರಾಜ್ಯಗಳಲ್ಲೇ ಹೆಣ್ಣು ಶಿಶು ಕಣ್ಮರೆಯಾಗುತ್ತಿರುವುದನ್ನು ಏನೆಂದು ವಿಶ್ಲೇಷಿಸಬಹುದು? ಹೆಣ್ಣು-ಗಂಡು ಅನುಪಾತನದಲ್ಲಿ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಮ್, ದಲಿತ, ಆದಿವಾಸಿಗಳಲ್ಲಿ ಇರುವ ಸಮತೋಲನವು ಹಿಂದೂ ಸಮುದಾಯದಲ್ಲಿ ಇಲ್ಲ ಎಂಬುದನ್ನು ಜನಗಣತಿ ವರದಿಯೇ ಹೇಳಿರುವಾಗ, ಆ ಬಗ್ಗೆ ಅದರ ವಕ್ತಾರರು ಮಾತಾಡುತ್ತಿಲ್ಲವೇಕೆ? ಹರ್ಯಾಣ, ರಾಜಸ್ತಾನ, ಪಂಜಾಬ್, ಗುಜರಾತ್, ಉತ್ತರ ಪ್ರದೇಶದಂಥ ರಾಜ್ಯಗಳ ಕೆಲವೊಂದು ಗ್ರಾಮಗಳಲ್ಲಿ ವರ್ಷಗಳಿಂದ ಹೆಣ್ಣು ಮಕ್ಕಳೇ ಜನಿಸಿಲ್ಲ ಎಂದು ಹೇಳುವಷ್ಟು ಅಪರೂಪವಾಗಿ ಹೆಣ್ಣು ಶಿಶುಗಳು ನೋಂದಣಿಯಾಗಿವೆ ಎಂದು ಹೇಳಿರುವ ವರದಿಯನ್ನು ಎತ್ತಿಕೊಂಡು ಅವು ಚರ್ಚಿಸಿಲ್ಲವೇಕೆ? ಆಸ್ತಿಯಲ್ಲಿ ಪಾಲು ಕೊಡಬೇಕಾದೀತೆಂದೋ ವರದಕ್ಷಿಣೆ ನೀಡಬೇಕಾದೀತೆಂದೋ ಭಯಪಟ್ಟು ಮಾಡಲಾಗುವ ಈ ಹತ್ಯಾ ಸರಣಿಯ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನಗಳು ಈ ವರೆಗೂ ನಡೆದಿಲ್ಲವೇಕೆ? ಈ ಹತ್ಯೆಗಿರುವ ಸಾಂಸ್ಕೃತಿಕ, ಸೈದ್ಧಾಂತಿಕ ಹಿನ್ನೆಲೆಗಳನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಿಲ್ಲವೇಕೆ?
      ಜನಗಣತಿ ವರದಿಯನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ ಚರ್ಚೆಗೊಳಪಡಿಸಿರುವುದರ ಹಿಂದೆ ಲಿಂಗಾನುಪಾತ ಕುಸಿತವು ಚರ್ಚೆಗೊಳಗಾಗದಂತೆ ತಡೆಯುವ ಹುನ್ನಾರವೊಂದು ಇದ್ದಂತೆ ತೋರುತ್ತಿದೆ. ಹೆಣ್ಣು ಶಿಶು ಹತ್ಯೆಯ ಕುರಿತಂತೆ ಗಂಭೀರ ಚರ್ಚೆಯೊಂದಕ್ಕೆ ದೇಶ ತೆರೆದುಕೊಂಡದ್ದೇ ಆದರೆ ಅದು ಪಡಕೊಳ್ಳುವ ತಿರುವು ಹಲವು ರೀತಿಯದ್ದು. ಆ ಚರ್ಚೆ ಕೇವಲ ಅಂಕಿ-ಸಂಖ್ಯೆಗಳಲ್ಲಿ ಕಳೆದು ಹೋಗುವುದಕ್ಕೆ ಸಾಧ್ಯವಿರಲಿಲ್ಲ. ಮನುಸ್ಮೃತಿಯಿಂದ ಹಿಡಿದು ಸತಿಪದ್ಧತಿಯ ವರೆಗೆ ಅಥವಾ ಪುರಾತನ ಇತಿಹಾಸದ ಮಹಿಳಾ ಶೋಷಣೆಯಿಂದ ಹಿಡಿದು ದೇವದಾಸಿ ಪದ್ಧತಿಯ ವರೆಗೆ ಪ್ರತಿಯೊಂದೂ ವಿಶ್ಲೇಷಣೆಗೆ ಒಳಪಡುವ ಸಾಧ್ಯತೆ ಇತ್ತು. ಹಾಗೊಂದು ವೇಳೆ ಚರ್ಚೆ ಆಗಿದ್ದೇ ಆದಲ್ಲಿ ಜನಗಣತಿ ವರದಿಯನ್ನು ಬಿಡುಗಡೆ ಗೊಳಿಸಿದ ಪಕ್ಷಕ್ಕೆ ಅದರಿಂದ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಯಾವ ಲಾಭವೂ ಇರಲಿಲ್ಲ. ನಿಜವಾಗಿ, ಜನಗಣತಿ ವರದಿಯನ್ನು ಬಿಡುಗಡೆಗೊಳಿಸುವುದರ ಹಿಂದೆ ಇದ್ದ ಉದ್ದೇಶವೇ ಹಿಂದೂ-ಮುಸ್ಲಿಮ್ ಜನಸಂಖ್ಯೆ ಚರ್ಚೆಗೊಳ್ಳಬೇಕೆಂಬುದು. ಮುಸ್ಲಿಮರ ಜನಸಂಖ್ಯೆ ಏರುಗತಿಯಲ್ಲಿದೆ ಎಂಬ ಸುದ್ದಿಯನ್ನು ಹಬ್ಬಿಸಿ ಧಾರ್ಮಿಕ ಧ್ರುವೀಕರಣ ನಡೆಸಬೇಕೆಂಬುದು. ಅಷ್ಟಕ್ಕೂ,
       ಹೆಣ್ಣು ಮಕ್ಕಳನ್ನು ಪ್ರೀತಿಸದ ಮತ್ತು ಅವರನ್ನು ಹೊಟ್ಟೆಯಲ್ಲೇ ಸಾಯಿಸುವ ಅಪಾಯಕಾರಿ ಮನಸ್ಥಿತಿಯು ವ್ಯಾಪಕವಾಗಿರುವ ದೇಶವೊಂದರಲ್ಲಿ ಚರ್ಚೆಗೊಳಗಾಗಬೇಕಾದದ್ದು ಗೋವುಗಳೋ, ಹೆಣ್ಣು ಮಕ್ಕಳೋ? 1000 ಗಂಡು ಮಕ್ಕಳಿಗೆ 830 ಹೆಣ್ಣು ಮಕ್ಕಳನ್ನು ಹೊಂದಿರುವ ರಾಜ್ಯವು ಯಾವ ವಿಷಯಕ್ಕಾಗಿ ಸುದ್ದಿಗೊಳಗಾಗಬೇಕು, ದಲಿತರ ಹತ್ಯೆಗೋ ಅಥವಾ ಹೆಣ್ಣು ಶಿಶು ಹತ್ಯೆ ವಿರೋಧಿ ಚಳವಳಿಗೋ? 1000 ಗಂಡು ಮಕ್ಕಳಿಗೆ 914 ಹೆಣ್ಣು ಮಕ್ಕಳಿರುವ ದೇಶಕ್ಕೆ ಯಾವುದರ ತುರ್ತು ಅಗತ್ಯ ಇದೆ, ಗೋವೋ, ಹೆಣ್ಣೋ?
       ಕಣ್ಣೀರಾದ ಪ್ರವಾದಿ ನೆನಪಾಗುತ್ತಾರೆ..



Tuesday, October 20, 2015

ಪ್ರಭುತ್ವದ ವರ್ತನೆ, ಸಾಹಿತಿಗಳ ಪ್ರತಿಭಟನೆ ಮತ್ತು ಟೀಕೆ

ಮಂಗಲೇಶ್ ದರ್ಬಾಲ್
ರಾಜೇಶ್ ಜೋಶಿ
ವರ್ಯಮ್ ಸಿಂಗ್ ಸಂಧು
ಜಸ್ವಿಂದರ್
      ಇವರಿಗೆಲ್ಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿರುವುದು ಯಾರ ಅವಧಿಯಲ್ಲಿ? ನಯನತಾರ ಸೆಹಗಲ್-ನೆಹರೂರ ಮೊಮ್ಮಗಳು, ಅಶೋಕ್ ವಾಜಪೇಯಿ- ಕಾಂಗ್ರೆಸ್ ಏಜೆಂಟ್, ಚಂಪಾ- ಎಡಪಂಥೀಯವಾದಿ, ರಹಮತ್ ತರೀಕೆರೆ- ಪ್ರಗತಿ ಪರ, ಮತ್ತೊಬ್ಬರು- ಮೋದಿ ವಿರೋಧಿ.. ಹೀಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮರಳಿಸುತ್ತಿರುವ ಸಾಹಿತಿಗಳನ್ನು ಪಟ್ಟಿ ಮಾಡಿ ಟೀಕಿಸುತ್ತಿರುವ ಮಂದಿ ಹೇಳುತ್ತಿರುವುದೆಲ್ಲ ನಿಜವೇ? ಈಗಾಗಲೇ ಪ್ರಶಸ್ತಿ ಮರಳಿಸಿರುವ ಸುಮಾರು ನೂರರಷ್ಟು ಸಾಹಿತಿಗಳಲ್ಲಿ ಯಾರೊಬ್ಬರಿಗೂ ನೈತಿಕತೆಯೇ ಇಲ್ಲವೇ? ಸಾರಾ ಜೋಸೆಫ್, ಸಚ್ಚಿದಾನಾಂದನ್, ಉದಯ ಪ್ರಕಾಶ್, ಕುಂವೀ.. ಎಲ್ಲರೂ ಕಾಂಗ್ರೆಸ್ಸಿಗರೇ ಅಥವಾ ಎಡಪಂಥೀಯರೇ? ಪ್ರಶಸ್ತಿ ವಾಪಸು ನಿರ್ಧಾರವನ್ನು ಸಲ್ಮಾನ್ ರುಶ್ದಿ ಬೆಂಬಲಿಸಿದ್ದಾರಲ್ಲ, ಅವರು ಯಾರ ಏಜೆಂಟ್? ‘ಭಾರತ ತಾಲಿಬಾನೀಕರಣಗೊಳ್ಳುತ್ತಿದೆ’ ಎಂದು ಮೋದಿ ಸರಕಾರದ ಧೋರಣೆಯನ್ನು ತಸ್ಲೀಮಾ ನಸ್ರೀನ್ ಟೀಕಿಸಿರುವುದು ಯಾರ ಪ್ರಚೋದನೆಯಿಂದ? ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಅಸೂಯೆಯೇ ಕಾರಣವೇ ಅಥವಾ ಇನ್ನಿತರ ಗಂಭೀರ ಕಾರಣಗಳೇನಾದರೂ ಇವೆಯೇ? ಹಾಗಂತ, ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮೊದಲು ಈ ದೇಶದಲ್ಲಿ ಅಹಿತಕರ ಘಟನೆಗಳೇ ನಡೆದಿಲ್ಲ ಎಂದು ಯಾರೂ ಹೇಳುತ್ತಿಲ್ಲ. 1919ರ ಜಲಿಯನ್‍ವಾಲಾ ಬಾಗ್‍ನಿಂದ 2015ರ ದಾದ್ರಿಯ ಅಖ್ಲಾಕ್‍ನ ವರೆಗೆ, 1984 ಸಿಕ್ಖ್ ಹತ್ಯಾಕಾಂಡದಿಂದ ಹಿಡಿದು 2002ರ ಗುಜರಾತ್ ಹತ್ಯಾಕಾಂಡದ ವರೆಗೆ ಈ ದೇಶದಲ್ಲಿ ಕ್ರೌರ್ಯಗಳು ಧಾರಾಳ ನಡೆದಿವೆ. ಇವನ್ನು ಖಂಡಿಸಿ ಆಯಾ ಸಂದರ್ಭಗಳಲ್ಲಿ ಪ್ರತಿಭಟನೆಗಳೂ ವ್ಯಕ್ತವಾಗಿವೆ. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವನ್ನು ಖಂಡಿಸಿ ಗಾಂಧೀಜಿಯವರು ತಮಗೆ ದೊರಕಿದ್ದ ಕೈಸರ್ ಎ ಹಿಂದ್ ಮತ್ತು ಇನ್ನೆರಡು ಪ್ರಶಸ್ತಿಗಳನ್ನು ಬ್ರಿಟಿಷ್ ಸರಕಾರಕ್ಕೆ ಮರಳಿಸಿದ್ದರು. ರವೀಂದ್ರನಾಥ್ ಟಾಗೂರರು ನೈಟ್‍ಹುಡ್ ಪದವಿಯನ್ನೇ ವಾಪಸು ಕೊಟ್ಟಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಶಿವರಾಮ ಕಾರಂತರು ತಮಗೆ ಸಂದಿರುವ ಪ್ರಶಸ್ತಿಯನ್ನು ಮರಳಿಸಿದ್ದರು. ಇಂದಿರಾ ಗಾಂಧಿಯವರ ಸ್ವರ್ಣ ಮಂದಿರ ಕಾರ್ಯಾಚರಣೆಯನ್ನು (ಆಪರೇಶನ್ ಬ್ಲೂ ಸ್ಟಾರ್) ಪ್ರತಿಭಟಿಸಿ 1984ರಲ್ಲಿ ಖುಷ್ವಂತ್ ಸಿಂಗ್‍ರು ಪದ್ಮಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು. ಇದಾಗಿ ಸುಮಾರು 3 ದಶಕಗಳ ಬಳಿಕ ಇದೀಗ ಸಾಹಿತಿಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಇಲ್ಲಿ ಗಮನಾರ್ಹ ಅಂಶವೊಂದಿದೆ. ಅಹಿತಕರ ಘಟನೆಗಳಿಗೆ ಪ್ರಭುತ್ವವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಯಾವಾಗಲೂ ಮಹತ್ವ ಇರುತ್ತದೆ. ಬಿಜೆಪಿಯ ಸಂಸದರಾದ ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಗಿರಿರಾಜ್ ಸಿಂಗ್, ನಿರಂಜನ್ ಜ್ಯೋತಿ,ಸಂಗೀತ್ ಸೋಮ್..  ಮುಂತಾದವರ ಮಾತುಗಳು ಹೇಗಿವೆ? ದಾದ್ರಿ ಘಟನೆಯ ಬಗ್ಗೆ ಬಿಜೆಪಿಯ ಸಂಸದರು ಮತ್ತು ಶಾಸಕರ ಪ್ರತಿಕ್ರಿಯೆಗಳು ಹೇಗಿದ್ದುವು? ಅಹಿತಕರ ಘಟನೆಗಳು ನಡೆಯುವುದು ಬೇರೆ, ಅದನ್ನು ಸಮರ್ಥಿಸುವಂಥ ಪ್ರತಿಕ್ರಿಯೆಗಳನ್ನು ಕೊಡುವುದು ಬೇರೆ. ಬಿಜೆಪಿಗೂ ಇತರ ಆಡಳಿತ ಪಕ್ಷಗಳಿಗೂ ನಡುವೆ ಇರುವ ದೊಡ್ಡ ವ್ಯತ್ಯಾಸ ಇದು. ಆದ್ದರಿಂದಲೇ, ‘ಇತರ ಪಕ್ಷಗಳ ಆಡಳಿತದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಿಲ್ಲವೇ, ಆವಾಗೇಕೆ ಈ ರೀತಿಯಲ್ಲಿ ಪ್ರಶಸ್ತಿಯನ್ನು ಹಿಂತಿರುಗಿಸಿಲ್ಲ’ ಎಂಬ ಪ್ರಶ್ನೆಗೆ, ‘ಆ ಸಂದರ್ಭದಲ್ಲಿ ಆಡಳಿತ ಪಕ್ಷ ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಹೇಗಿದ್ದುವು..’ ಎಂಬ ಮರು ಪ್ರಶ್ನೆಯೂ ಅಷ್ಟೇ ತೀವ್ರತೆಯಿಂದ ಕೇಳಬೇಕಾಗುತ್ತದೆ. ಯೋಗ, ಮಾಂಸಾಹಾರ, ದಾದ್ರಿ ಅಥವಾ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಬಿಜೆಪಿಯಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು ಎಷ್ಟು ಪ್ರಚೋದನಾತ್ಮಕವಾಗಿವೆಯೆಂದರೆ, ಆಡಳಿತ ಪಕ್ಷವಾಗಿ ಗುರುತಿಸಿಕೊಳ್ಳುವುದಕ್ಕೆ ಅದು ಅನರ್ಹ ಎಂದು ಸಾರುವಷ್ಟು. ತನ್ನ ನಿಲುವನ್ನು ಒಪ್ಪದವರನ್ನು ಪಾಕಿಸ್ತಾನಕ್ಕೋ ಅರಬಿ ಸಮುದ್ರಕ್ಕೋ ಕಳುಹಿಸುವ ಮಾತನ್ನು ಅದರ ಸಂಸದರೇ ವ್ಯಕ್ತಪಡಿಸುತ್ತಿದ್ದಾರೆ. ಆಡಳಿತ ಪಕ್ಷವೊಂದು ನಿರ್ದಿಷ್ಟ ಧರ್ಮದ ಅಥವಾ ನಿರ್ದಿಷ್ಟ ಸಿದ್ಧಾಂತದ ಪರವಾಗಿಯಷ್ಟೇ ಮಾತಾಡುವಾಗ, ಅದರ ಅಪಾಯವನ್ನು ಸಾಹಿತ್ಯ ವಲಯ ಗುರುತಿಸಿ, ಪ್ರತಿಭಟಿಸುವುದು ಯಾಕೆ ತಪ್ಪಾಗಬೇಕು? ಸಿಕ್ಖ್ ಹತ್ಯಾಕಾಂಡ, ತುರ್ತು ಪರಿಸ್ಥಿತಿ, ಭಾಗಲ್ಪುರ, ಮುಂಬೈ ಗಲಭೆಗಳ ಸಂದರ್ಭದಲ್ಲಿ ಸಾಹಿತಿಗಳು ಈ ರೀತಿಯಾಗಿ ಪ್ರಶಸ್ತಿ ಹಿಂತಿರುಗಿಸಿಲ್ಲ ಎಂಬುದು, ಈಗ ಹಿಂತಿರುಗಿಸಬಾರದು ಎಂಬುದಕ್ಕೆ ಮಾನದಂಡ ಆಗುತ್ತದೆಯೇ ಮತ್ತು ಆಗಬೇಕೇ? ಈ ಹಿಂದೆ ಮಾಡಿಲ್ಲದ ಯಾವುದನ್ನೂ ಇನ್ನು ಮುಂದೆಯೂ ಮಾಡಬಾರದೇ? ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಸ್ವಚ್ಛ ಭಾರತ ಅಭಿಯಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ನರೇಂದ್ರ ಮೋದಿಯವರನ್ನು ಟೀಕಿಸಬಹುದೇ? ಮೋದಿಯವರು ವಿದೇಶ ಪ್ರಯಾಣ ಮಾಡಿದಷ್ಟು ವಾಜಪೇಯಿಯವರು ಮಾಡಿಲ್ಲ ಎಂಬುದು ಟೀಕೆಗೆ ಅರ್ಹ ವಿಷಯವೇ? ಮೋದಿಯವರ ಮನ್‍ಕೀ ಬಾತನ್ನು ಈ ಮಾನದಂಡದ ಆಧಾರದಲ್ಲಿ ವಿಶ್ಲೇಷಿಸುವುದಾದರೆ ಏನೆಂದು ಕರೆಯಬೇಕು? ವಾಜಪೇಯಿಯವರು ಮಾಡದೇ ಇರುವುದನ್ನು ಮೋದಿಯವರೇಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಹೇಗಾದೀತು? ಸಾಹಿತಿಗಳು ಈ ಸಮಾಜದ ಭಾಗ ಎಂದು ನಾವು ಒಪ್ಪುವುದಾದರೆ, ಈ ಸಮಾಜದ ತಲ್ಲಣಗಳಿಗೆ ಅವರು ಧ್ವನಿಯಾಗಬಾರದು ಎಂದು ವಾದಿಸುವುದು ಇಬ್ಬಂದಿತನವಾಗುತ್ತದೆ. ಸಮಾಜದ ಆಗು-ಹೋಗುಗಳ ಬಗ್ಗೆ ಜನಸಾಮಾನ್ಯರಿಗಿಂತ ಮುಂಚಿತವಾಗಿ ಅರಿತುಕೊಳ್ಳುವ ಸಾಮರ್ಥ್ಯ ಸಾಹಿತ್ಯ ವಲಯಕ್ಕಿದೆ. ಕಳೆದು ಒಂದು ವರ್ಷದಲ್ಲಿ ನರೇಂದ್ರ ಮೋದಿ ಸರಕಾರ ಸಾಗುತ್ತಿರುವ ದಿಕ್ಕನ್ನು ಪರಿಶೀಲಿಸಿದರೆ, ಸಾಹಿತ್ಯ ವಲಯದಿಂದ ವ್ಯಕ್ತವಾಗಿರುವ ಸಿಟ್ಟು ಆತುರದ್ದು ಎಂದು ಅನ್ನಿಸುತ್ತಿಲ್ಲ. ಪಕ್ಷಪಾತಿಯಾಗಿಯೂ ಕಾಣಿಸುತ್ತಿಲ್ಲ. ನಿರ್ದಿಷ್ಟ ಅಜೆಂಡಾವೊಂದನ್ನು ಆತುರಾತುರವಾಗಿ ಜಾರಿಗೊಳಿಸುವ ತುರ್ತೊಂದು ಈ ಸರಕಾರದಲ್ಲಿ ಕಾಣಿಸುತ್ತಿದೆ. ಈ ಅಜೆಂಡಾ ಎಷ್ಟು ಸಂವಿಧಾನಬದ್ಧ ಮತ್ತು ದೇಶದ ವೈವಿಧ್ಯತೆಗೆ ಎಷ್ಟು ಪೂರಕ ಎಂಬ ಪ್ರಶ್ನೆ ಹಲವಾರು ಬಾರಿ ಎದ್ದಿದೆ. ದಾದ್ರಿ ಪ್ರಕರಣಕ್ಕೆ ಈ ಸರಕಾರದ ಸಂಸದರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಈ ಪ್ರಶ್ನೆಯನ್ನು ಇನ್ನಷ್ಟು ಬಲಗೊಳಿಸಿದೆ. ಅಷ್ಟಕ್ಕೂ, ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹತ್ಯೆಯಷ್ಟೇ ಸಾಹಿತಿಗಳ ಪ್ರಶಸ್ತಿ ವಾಪಸಾತಿಗೆ ಕಾರಣ ಎಂದು ಯಾವ ಸಾಹಿತಿಯೂ ಹೇಳಿಲ್ಲ. ಸಾಹಿತಿಗಳ ಜೀವದಷ್ಟೇ ಸಾಹಿತ್ಯದ ಓದುಗರು ಮತ್ತು ಓದುಗರಲ್ಲದ ಜನಸಾಮಾನ್ಯರ ಜೀವವೂ ಅಷ್ಟೇ ಮುಖ್ಯ. ಆದ್ದರಿಂದಲೇ ಸಾಹಿತಿಗಳು ದಾದ್ರಿ ಘಟನೆ ಮತ್ತು ಹೆಚ್ಚುತ್ತಿರುವ ಅಸಹಿಷ್ಣು ವಾತಾವರಣವನ್ನು ಪ್ರಶಸ್ತಿ ವಾಪಸಿಗೆ ಕಾರಣವಾಗಿ ಮುಂದಿಟ್ಟಿದ್ದಾರೆ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಹಿಂದಿನ ಹಿಂಸಾಕೃತ್ಯಗಳನ್ನು ಎತ್ತಿ ತೋರಿಸಿ ಸಾಹಿತಿಗಳ ನೈತಿಕ ಮಟ್ಟವನ್ನು ಪ್ರಶ್ನಿಸುತ್ತಿದ್ದಾರೆ. ಹಾಗಂತ, ಈ ಹಿಂದಿನ ಸರಕಾರದ ಮಂತ್ರಿಗಳು ಅಂಥ ಕೃತ್ಯಗಳನ್ನು ಸಮರ್ಥಿಸುವ ಧಾಟಿಯಲ್ಲಿ ಮಾತಾಡಿದ್ದರೆ ಎಂಬ ಬಹುಮುಖ್ಯ ಪ್ರಶ್ನೆಯನ್ನು ಅವರು ಜಾಣತನದಿಂದ ಅಡಗಿಸುತ್ತಿದ್ದಾರೆ. ಅಂದಹಾಗೆ,
        1968ರಲ್ಲಿ ಮೆಕ್ಸಿಕೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು.
        1968 ಅಕ್ಟೋಬರ್ 16ರಂದು ಬೆಳಿಗ್ಗೆ ಅಮೇರಿಕದ ಕರಿವರ್ಣದ ಓಟಗಾರ ಟೋಮಿ ಸ್ಮಿತ್‍ರು 200 ವಿೂಟರ್ ಓಟವನ್ನು 19.83 ಸೆಕೆಂಡ್‍ಗಳಲ್ಲಿ ಕ್ರಮಿಸಿ ವಿಶ್ವದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಬಿಳಿಯ ಓಟಗಾರ ಪೀಟರ್ ನಾರ್ಮನ್ ದ್ವಿತೀಯ ಮತ್ತು ಅಮೇರಿಕದ ಇನ್ನೋರ್ವ ಕರಿವರ್ಣದ ಓಟಗಾರ ಜಾನ್ ಕಾರ್ಲೋಸ್ ತೃತೀಯ ಸ್ಥಾನ ಪಡೆದರು. ಬಳಿಕ ಪ್ರಶಸ್ತಿ ಪಡೆಯುವ ವೇಳೆ ಟೋಮಿ ಸ್ಮಿತ್ ಮತ್ತು ಜಾನ್ ಕಾರ್ಲೋಸ್‍ರು ಕಪ್ಪು ಗ್ಲೌಸ್ ಧರಿಸಿದ್ದ ಕೈಯನ್ನು ಎತ್ತಿ ಹಿಡಿದರು. ಮಾತ್ರವಲ್ಲ, ಪದಕ ವಿತರಣೆಯ ಸಂದರ್ಭದಲ್ಲಿ ರಾಷ್ಟ್ರಪತಾಕೆಯನ್ನು ನೋಡುವ ಬದಲು ನೆಲದತ್ತ ದೃಷ್ಟಿ ನೆಟ್ಟರು. ಒಲಿಂಪಿಕ್ಸ್ ಇತಿಹಾಸದಲ್ಲಿ 'ಬ್ಲ್ಯಾಕ್ ಪವರ್ ಸೆಲ್ಯೂಟ್' ಎಂದೇ ಪ್ರಸಿದ್ಧವಾದ ಘಟನೆ ಇದು. ಪದಕ ಪಡೆಯಲು ಬರುವಾಗ ಅವರಿಬ್ಬರೂ ಶೂ ಕಳಚಿ ಕೇವಲ ಕಪ್ಪು ಸಾಕ್ಸ್ ನಲ್ಲಿ ವೇದಿಕೆಯೇರಿದ್ದರು. ಅಮೇರಿಕದ ಕರಿವರ್ಣೀಯರ ಬಡತನವನ್ನು ಜಗತ್ತಿಗೆ ತಿಳಿಸುವುದಕ್ಕಾಗಿ ಅವರು ಆ ರೀತಿ ವರ್ತಿಸಿದ್ದರು. ಕರಿವರ್ಣೀಯರ ಸ್ವಾಭಿಮಾನದ ಸಂಕೇತವಾಗಿ ತನ್ನ ಕುತ್ತಿಗೆಗೆ ಟೋಮಿ ಸ್ಮಿತ್ ಕಪ್ಪು ಪಟ್ಟಿಯನ್ನು ಧರಿಸಿದ್ದರೆ, ಕಾರ್ಲೋಸ್‍ರಂತೂ ಕರಿವರ್ಣದ ಕಾರ್ಮಿಕರಿಗೆ ನೈತಿಕ ಬೆಂಬಲ ಸಾರುವುದಕ್ಕಾಗಿ ಮತ್ತು ಅವರ ಮೇಲಿನ ದೌರ್ಜನ್ಯವನ್ನು ಖಂಡಿಸುವುದಕ್ಕಾಗಿ ತನ್ನ ಟ್ರ್ಯಾಕ್ ಸ್ಯೂಟ್‍ನ ಝಿಪ್ ಹಾಕದೇ ವೇದಿಕೆಯೇರಿದ್ದರು. ನಾರ್ಮನ್‍ರು ಆಸ್ಟ್ರೇಲಿಯಾ ಸರಕಾರದ ಬಿಳಿಯ ಪರ ಧೋರಣೆಯನ್ನು ಖಂಡಿಸುವ ವ್ಯಕ್ತಿಯಾಗಿದ್ದರು. ಆದ್ದರಿಂದ ಆ ಮೂವರು ಅಥ್ಲೀಟ್‍ಗಳೂ ಮಾನವ ಹಕ್ಕನ್ನು ಪ್ರತಿಪಾದಿಸುವ ಬ್ಯಾಡ್ಜ್ ಅನ್ನು ತಮ್ಮ ಉಡುಪಿನಲ್ಲಿ ಧರಿಸಿಕೊಂಡಿದ್ದರು. ವಿಶೇಷ ಏನೆಂದರೆ, ಸ್ಮಿತ್ ಮತ್ತು ಕಾರ್ಲೋಸ್‍ರು ಒಲಿಂಪಿಕ್ಸ್ ಗಾಗಿ ಅಮೇರಿಕದಿಂದ ಹೊರಡುವಾಗಲೇ ಕರಿವರ್ಣೀಯರ ವಿರುದ್ಧದ ದೌರ್ಜನ್ಯವನ್ನು ಖಂಡಿಸುವುಕ್ಕಾಗಿ ಒಲಿಂಪಿಕ್ಸ್ ವೇದಿಕೆಯನ್ನು ಬಳಸಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಕಪ್ಪು ಗ್ಲೌಸ್ ಧರಿಸಿ ಕೈ ಎತ್ತಬೇಕೆಂದು ತೀರ್ಮಾನಿಸಿದ್ದರು. ಆದರೆ ಕಾರ್ಲೋಸ್‍ರು ಗ್ಲೌಸ್ ಕೊಂಡೊಯ್ಯಲು ಮರೆತರು. ಆದ್ದರಿಂದ ಸ್ಮಿತ್‍ರ ಎಡಗೈಯ ಗ್ಲೌಸ್ ಅನ್ನು ಕಾರ್ಲೋಸ್‍ರು ಧರಿಸಿ ಎಡಗೈ ಎತ್ತುವಾಗ ಸ್ಮಿತ್ ಬಲಗೈ ಎತ್ತಿದರು. ಆ ಇಡೀ ಘಟನೆ ಮರುದಿನ ಜಾಗತಿಕ ಸುದ್ದಿಯಾಯಿತು. ಮಾಧ್ಯಮಗಳ ಮುಖಪುಟದಲ್ಲಿ ಆ ಪದಕ ಪ್ರಧಾನ ಸಮಾರಂಭ ವಿಸ್ತೃತ ಸುದ್ದಿ ಸಹಿತ ಪ್ರಕಟವಾಯಿತು. ಕರಿವರ್ಣೀಯರು ಸಾಂಪ್ರದಾಯಿಕವಾಗಿ ಮಾಡುವ ಸೆಲ್ಯೂಟನ್ನು ಪದಕ ಸ್ವೀಕರಿಸುವ ಸಂದರ್ಭದಲ್ಲಿ ಮಾಡಿದುದಕ್ಕಾಗಿ ಈ ಇಬ್ಬರನ್ನು ಪ್ರೇಕ್ಷಕರು ಗೇಲಿ ಮಾಡಿದರು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮತಿಯ (IOC) ಅಧ್ಯಕ್ಷ ಅವೇರಿ ಬುಂಡೇಜ್‍ರು ಈ ಇಬ್ಬರ ವರ್ತನೆಯನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿದರು. ಅಮೇರಿಕವು ಕೂಡಲೇ ಒಲಿಂಪಿಕ್ಸ್ ತಂಡದಿಂದ ಅವರನ್ನು ಕಿತ್ತು ಹಾಕಬೇಕೆಂದು ಆಗ್ರಹಿಸಿದರು. ಅಮೇರಿಕ ಒಪ್ಪಿಕೊಳ್ಳದಿದ್ದಾಗ ಇಡೀ ಅಥ್ಲೀಟ್ ತಂಡವನ್ನೇ ನಿಷೇಧಿಸುವುದಾಗಿ ಬೆದರಿಸಿದರು. ಕೊನೆಗೆ ಅವರಿಬ್ಬರನ್ನೂ ಅಮೇರಿಕನ್ ಅಥ್ಲೀಟ್ ತಂಡದಿಂದ ಹೊರಹಾಕಲಾಯಿತು. ಅಮೇರಿಕದಲ್ಲಂತೂ ಅವರ ವಿರುದ್ಧ ತೀವ್ರ ಟೀಕೆ-ನಿಂದನೆಗಳು ವ್ಯಕ್ತವಾದುವು. Time ಮ್ಯಾಗಸಿನ್ ಕೂಡ ಇವರಿಬ್ಬರನ್ನು ಖಳನಾಯಕರಂತೆ ಚಿತ್ರಿಸಿತು. ಅವರ ಕುಟುಂಬಕ್ಕೆ ಕೊಲೆ ಬೆದರಿಕೆಯ ಕರೆಗಳು ಬಂದುವು. ಹೀಗೆ ಕರಿವರ್ಣೀಯರ ಮೇಲಿನ ದೌರ್ಜನ್ಯ ಪ್ರಶ್ನಿಸಿದ್ದಕ್ಕಾಗಿ ಮತ್ತು ಸಮಾನ ಮಾನವ ಹಕ್ಕುಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಅವರಿಬ್ಬರಿಗೆ ಅಘೋಷಿತ ಬಹಿಷ್ಕಾರವನ್ನು ಹೇರಲಾಯಿತು. ಆಸ್ಟ್ರೇಲಿಯಾದ ನಾರ್ಮನ್ ಅಂತೂ ಕೇವಲ ಬ್ಯಾಡ್ಜ್ ಧರಿಸಿದ್ದಕ್ಕಾಗಿ ಆಸ್ಟ್ರೇಲಿಯನ್ ಆಡಳಿತದಿಂದ ತೀವ್ರ ಅವಕೃಪೆಗೆ ಒಳಗಾದರು. 1972 ಒಲಿಂಪಿಕ್ಸ್ ಗಾಗಿ ನಡೆಸಲಾದ ಆಯ್ಕೆ ಪರೀಕ್ಷೆಗಳಲ್ಲಿ 13 ಬಾರಿ ತೇರ್ಗಡೆಯಾದರೂ ಅವರನ್ನು ಕಡೆಗಣಿಸಲಾಯಿತು. ತನ್ನ ಸೈಲೆಂಟ್ ಗೆಸ್ಚರ್ ಎಂಬ ಜೀವನ ಚರಿತ್ರೆಯಲ್ಲಿ ಟೋಮಿ ಸ್ಮಿತ್‍ರು ಆ ದಿನಗಳ ತಲ್ಲಣಗಳನ್ನು ಬಿಡಿಬಿಡಿಯಾಗಿ ತೆರೆದಿಟ್ಟಿದ್ದಾರೆ. ರಾಜಕೀಯ ಕ್ರೌರ್ಯವನ್ನು ಓರ್ವ ಆಟಗಾರ ಪ್ರಶ್ನಿಸಿದರೆ ಆಗಬಹುದಾದ ಅನಾಹುತಗಳ ಚಿತ್ರಣವನ್ನು ಅವರ ಜೀವನ ಚರಿತ್ರೆ ನಮ್ಮ ಮುಂದಿಡುತ್ತದೆ. ಹಾಗಂತ, ಆ ಘಟನೆಯನ್ನು ನಾವು ಅಮೇರಿಕಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಭಾರತದ ಇಂದಿನ ಸ್ಥಿತಿಯೂ ಇದುವೇ. ಕ್ರೀಡಾಪಟುಗಳು ಕ್ರೀಡೆಯ ಬಗ್ಗೆ ಮಾತ್ರ ಮಾತಾಡಬೇಕು, ಸಾಹಿತಿಗಳು ಸಾಹಿತ್ಯ ಬಗ್ಗೆ, ನ್ಯಾಯವಾದಿಗಳು ನ್ಯಾಯದ ಬಗ್ಗೆ, ಮುಸ್ಲಿಮರು ಮುಸ್ಲಿಮರ ಬಗ್ಗೆ, ಬಿಜೆಪಿಗರು ಮೋದಿಯ ಬಗ್ಗೆ.. ಮಾತ್ರ ಮಾತಾಡಬೇಕೆಂದು ಬಿಜೆಪಿ ಮತ್ತು ಅದರ ಬೆಂಬಲಿಗರು ಇವತ್ತು ಬಯಸುತ್ತಿದ್ದಾರೆ. ಆದ್ದರಿಂದಲೇ ಪ್ರಶಸ್ತಿ ವಾಪಸಾತಿಯು ರಾಜಕೀಯ ಪ್ರೇರಿತ ಎಂದು ಟೀಕಿಸುತ್ತಿದ್ದಾರೆ. ಅಲ್ಲದೇ, ಪ್ರಶಸ್ತಿ ಮರಳಿಸಿದ ಸಾಹಿತಿಗಳು ಬಿಜೆಪಿಯ ವಿರೋಧಿಗಳು ಎಂಬ ಹಸಿ ಸುಳ್ಳನ್ನು ಹರಡುತ್ತಿದ್ದಾರೆ. ಅಷ್ಟಕ್ಕೂ,
      ಸಾಹಿತ್ಯ ಪ್ರಶಸ್ತಿಯನ್ನು ಹಿಂತಿರುಗಿಸಿದ ಮಂಗಲೇಶ್ ದರ್ಬಾಲ್, ರಾಜೇಶ್ ಜೋಷಿ, ವರ್ಯಮ್ ಸಿಂಗ್ ಸಂಧು ಮತ್ತು ಜಸ್ವಿಂದರ್‍ರು ವಾಜಪೇಯಿ ಮತ್ತು ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದಿದ್ದರು ಎಂಬ ಸತ್ಯವನ್ನು ಈ ಮಂದಿ ಎಲ್ಲೂ ಉಲ್ಲೇಖಿಸುತ್ತಲೇ ಇಲ್ಲ..

Tuesday, October 13, 2015

ಕಲ್ಲಂಗಡಿ ಹಣ್ಣುಗಳಲ್ಲಿ ಕಲ್ಲುಗಳಿಲ್ಲ...

ಮೂರು ಆಯ್ಕೆಗಳಿವೆ
     1. ಒಂದು ಗ್ರಾಮದಲ್ಲಿ 300ರಷ್ಟು ಗೋವುಗಳಿವೆಯೆಂದಾದರೆ ಅಷ್ಟೇ ಸಂಖ್ಯೆಯಲ್ಲಿ ಅಥವಾ ಅದರ ಆಸುಪಾಸಿನಲ್ಲಿ ಎತ್ತುಗಳೂ ಇರಬೇಕಾಗುತ್ತದೆ. ಇವುಗಳಲ್ಲಿ ಹಾಲು ಕೊಡದ (ಗೊಡ್ಡು) ಹಸುಗಳು ಮತ್ತು ಮುದಿ ಎತ್ತುಗಳೂ ಇರಬಹುದು. ಗೋವೇನೂ ಜೀವನಪೂರ್ತಿ ಹಾಲು ಕೊಡುವುದಿಲ್ಲವಲ್ಲ. ಎತ್ತುಗಳೂ ಅಷ್ಟೇ, ಜೀವನಪೂರ್ತಿ ದುಡಿಯುವುದಿಲ್ಲ. ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕ ಸುಮಾರು 10 ವರ್ಷಗಳ ತನಕ ಗೋವು ಬದುಕಿರುತ್ತದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಹೀಗೆ ಸೃಷ್ಟಿಯಾಗುವ ಮುದಿ ಆಕಳು ಮತ್ತು ಎತ್ತುಗಳ ಸಂಖ್ಯೆಗೆ ತಕ್ಕಂತೆ ಗೋಶಾಲೆಗಳ ನಿರ್ಮಾಣವಾಗಬೇಕು. ಪ್ರತಿ ಹಳ್ಳಿ, ಗ್ರಾಮ, ಪಟ್ಟಣಗಳಲ್ಲಿ ಇಂಥ ಗೋಶಾಲೆಗಳು ಧಾರಾಳ ಸಂಖ್ಯೆಯಲ್ಲಿ ತಲೆ ಎತ್ತಬೇಕು. ಅವುಗಳಿಗೆ ಹುಲ್ಲು, ಹಿಂಡಿ, ನೀರು ಮತ್ತಿತರ ಸಕಲ ಸೌಲಭ್ಯಗಳೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅವುಗಳೆಲ್ಲವೂ ಮುದಿ ಪ್ರಾಯಕ್ಕೆ ತಲುಪಿರುವುದರಿಂದಾಗಿ ಆರೋಗ್ಯ ಸಮಸ್ಯೆಯೂ ಆಗಾಗ ಕಾಡುತ್ತಿರಬಹುದು. ಸೂಕ್ತ ವೈದ್ಯರು ಗಳನ್ನು ತಪಾಸಣೆಗಾಗಿ ನೇಮಿಸಬೇಕು. ಅವುಗಳ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾಗಿ ಕೆಲಸಗಾರರ ನೇಮಕವಾಗಬೇಕು. ಸಹಜ ಸಾವಿಗೆ ಒಳಗಾಗುವ ಹಸು-ಎತ್ತುಗಳ ದಫನ ಕ್ರಿಯೆಗೆ ವ್ಯವಸ್ಥೆಯಾಗಬೇಕು. ಮಾತ್ರವಲ್ಲ, ಈ ಎಲ್ಲವನ್ನೂ ನಿಭಾಯಿಸುವುದಕ್ಕಾಗಿ ದೊಡ್ಡ ಮಟ್ಟದ ಹಣಕಾಸಿನ ಏರ್ಪಾಟೂ ಆಗಬೇಕು. ಅಲ್ಲದೇ, ಇವೆಲ್ಲದರ ಹೊರತಾಗಿಯೂ ಗೋ ಶಾಲೆಯ ಪೋಷಕರು ಯಾವ ಆದಾಯವನ್ನು ಬಯಸಬಾರದು.
    2.  ಗೋವನ್ನು ಪವಿತ್ರವೆಂದು ಸಾರಬೇಕಲ್ಲದೇ ಅದನ್ನು ಆಹಾರವಾಗಿ ಬಳಕೆ ಮಾಡುವುದನ್ನು ಖಂಡಿಸಬೇಕು. ಅದು ಭಾವನಾತ್ಮಕ ಪ್ರಾಣಿಯಾಗಬೇಕು. ಕಸಾಯಿಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಬೇಕು. ಮುದಿ ಆಕಳು ಮತ್ತು ಎತ್ತನ್ನು ಕಸಾಯಿಖಾನೆಗೆ ಮಾರದಂತೆ ರೈತರನ್ನು ಬೆದರಿಸಬೇಕು. ಇದರ ಹೊರತಾಗಿಯೂ ಯಾರಾದರೂ ಗೋಮಾಂಸ ಸೇವಿಸಿದರೆ ಅಥವಾ ಮುದಿ ಎತ್ತು-ಗೋವಿನ ಮಾರಾಟ-ಸಾಗಾಟದಲ್ಲಿ ತೊಡಗಿದರೆ ಅವರನ್ನು ಥಳಿಸಬೇಕು. ಮಾತ್ರವಲ್ಲ, ಆ ಥಳಿತವನ್ನು ಗೋರಕ್ಷಣೆಯ ಹೆಸರಲ್ಲಿ ಸಮರ್ಥಿಸಿಕೊಳ್ಳಬೇಕು. ಹಾಗಂತ, ಮುದಿ ಎತ್ತು ಮತ್ತು ಗೋವುಗಳ ಬಗ್ಗೆ ಹಾಗೂ ಅವುಗಳ ಸಾಕಾಣಿಕೆಯ ಬಗ್ಗೆ   ಥಳಿಸಿದವರು ಮಾತಾಡಬೇಕಿಲ್ಲ. ಅವುಗಳನ್ನು ಅವರು ಖರೀದಿಸಬೇಕಿಲ್ಲ. ಅವುಗಳಿಂದ ರೈತನಿಗೆ ಆಗುವ ಆರ್ಥಿಕ ಹೊರೆಯ ಬಗ್ಗೆ ಅವರು ಉತ್ತರಿಸಬೇಕಿಲ್ಲ. ಬೀದಿಯಲ್ಲಿ ತಿರುಗಾಡುತ್ತಲೋ ಪ್ಲಾಸ್ಟಿಕ್ಕೋ ಇನ್ನೇನನ್ನೋ ತಿನ್ನುತ್ತಲೋ ಸರಿಯಾದ ಆರೈಕೆಯೂ ಇಲ್ಲದೇ ಅವು ಸಾವಿಗೀಡಾದರೆ ಅವರು ಅದರ ಹೊಣೆಗಾರರೂ ಆಗಬೇಕಿಲ್ಲ. 
     3.  ರೈತರ ಗದ್ದೆಯ ಪಕ್ಕವೇ ಕಸಾಯಿಖಾನೆಯನ್ನು ನಿರ್ಮಿಸುವುದು. ಸರಕಾರದ ಪರವಾನಿಗೆಯನ್ನು ಪಡೆದು ತಮ್ಮ ಮುದಿ ಎತ್ತು-ಗೋವುಗಳನ್ನು ರೈತರೇ ವಧಿಸುವಂತೆ ನೋಡಿಕೊಳ್ಳುವುದು. ಯಾವುದೇ ಕಾನೂನುಬಾಹಿರ ವಧೆ ನಡೆಯದಂತೆ ಜಾಗರೂಕತೆ ಪಾಲಿಸುವುದು.
     ಈ ಮೂರು ಆಯ್ಕೆಗಳಲ್ಲಿ ಆಯ್ಕೆ ಸಂಖ್ಯೆ 1 ಅತ್ಯಂತ ತುಟ್ಟಿಯಾದುದು. ತಾಲೂಕಿಗೊಂದು ಗೋಶಾಲೆಗಳೂ ಇಲ್ಲದ ಇಂದಿನ ದಿನಗಳಲ್ಲಿ ಪ್ರತಿ ತಾಲೂಕುಗಳಲ್ಲಿ ಹತ್ತಾರು ಗೋಶಾಲೆಗಳನ್ನು ತೆರೆಯುವುದು ಮತ್ತು ದೊಡ್ಡ ಮಟ್ಟದ ಖರ್ಚು-ವೆಚ್ಚಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಇವತ್ತಿನ ಸ್ಥಿತಿ ಹೇಗಿದೆಯೆಂದರೆ, ಅಲ್ಲೊಂದು ಇಲ್ಲೊಂದು ಇರುವ ಗೋಶಾಲೆಗಳೇ ಸರಿಯಾಗಿ ಉಸಿರಾಡುತ್ತಿಲ್ಲ. ಆದ್ದರಿಂದ ಇವುಗಳಿಗೆ ಇನ್ನಷ್ಟು ಸಂಖ್ಯೆಯಲ್ಲಿ ಗೋಶಾಲೆಗಳು ಸೇರ್ಪಡೆಯಾದರೆ, ಗೋಶಾಲೆಗಳೇ ಸುದ್ದಿಯಾದಾವು. ಇನ್ನು, ಆಯ್ಕೆ 3ರಲ್ಲೂ ಒಂದು ಪ್ರಮುಖ ಸಮಸ್ಯೆ ಇದೆ. ಅದರಲ್ಲಿ ‘ವಧೆ’ ನಡೆಯುತ್ತದೆ. ವಧಿಸುವುದು ರೈತನೇ ಆದರೂ ಎತ್ತು ಮತ್ತು ಗೋವು ವಧೆಗೆ ಒಳಗಾಗುವುದರಿಂದ ಈ ಆಯ್ಕೆಯೂ ಸೂಕ್ತವಲ್ಲ. ಹೀಗಿರುವಾಗ ಅತ್ಯಂತ ಸುಲಭ ಮತ್ತು ರಿಸ್ಕ್ ರಹಿತ ಆಯ್ಕೆಯೆಂದರೆ ಸಂಖ್ಯೆ  2. ಈ ಆಯ್ಕೆಯಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತದೆ. ಸಾರ್ವಜನಿಕವಾಗಿ ಸದಾ ಸುದ್ದಿಯಲ್ಲಿರುವುದಕ್ಕೆ ಅವಕಾಶವಿರುತ್ತದೆ. ಭಾವನೆಗಳ ಹೆಸರಲ್ಲಿ ಸಮಾಜವನ್ನು ಕಟ್ಟಿಹಾಕಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಮಾಜವನ್ನು ಗೋಮಾಂಸ ಭಕ್ಷಕರು ಮತ್ತು ರಕ್ಷಕರು ಎಂದು ಪ್ರತ್ಯೇಕಿಸುವುದಕ್ಕೆ ಅವಕಾಶ ಲಭಿಸುತ್ತದೆ. ಗೋಶಾಲೆಯನ್ನು ನಿರ್ಮಿಸುವುದೋ, ಮುದಿ ಗೋವು-ಎತ್ತುಗಳನ್ನು ರೈತರಿಂದ ಖರೀದಿಸುವುದೋ, ಗೋಶಾಲೆಗಳ ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಗಳನ್ನು ಏರ್ಪಾಡು ಮಾಡುವುದೋ.. ಯಾವುದರ ಹೊಣೆಯನ್ನೂ ವಹಿಸಿಕೊಳ್ಳದೆಯೇ ಗೋರಕ್ಷಕರಾಗಿ ಮತ್ತು ಆ ಮೂಲಕ ಧಾರ್ಮಿಕ ಕರ್ತವ್ಯವೊಂದನ್ನು ನಿಭಾಯಿಸಿದವರಾಗಿ ಗುರುತಿಸಿ ಕೊಳ್ಳುವುದಕ್ಕೂ ಸಂದರ್ಭ ಒದಗುತ್ತದೆ. ಉತ್ತರ ಪ್ರದೇಶದ ಅಖ್ಲಾಕ್‍ನನ್ನು ಕೊಂದದ್ದು ಈ ಆಯ್ಕೆ ಸಂಖ್ಯೆ 2ರ ಆಧಾರದಲ್ಲೇ. ದೇಶದಲ್ಲಿ ನಡೆಯುತ್ತಿರುವ ಗೋ ಸಂಬಂಧಿ ಹೇಳಿಕೆ, ಘೋಷಣೆ, ದಾಳಿ, ಥಳಿತಗಳೆಲ್ಲ ಈ 2ನ್ನೇ ಆಧಾರವಾಗಿ ನೆಚ್ಚಿಕೊಂಡಿದೆ. ನಿಜವಾಗಿ, ಗೋವುಗಳು ವಧಾ ಗೃಹಕ್ಕೆ ತಲುಪಬಾರದು ಎಂದಾದರೆ, ಆಯ್ಕೆ ಸಂಖ್ಯೆ 1ನ್ನು ಎತ್ತಿಕೊಳ್ಳಬೇಕಾಗಿದೆ. ಅದರಲ್ಲಿ ಗೋವಿನ ಮಾಲಕರಿಗೆ ಭದ್ರತೆಯಿದೆ. ಮುದಿ ಗೋವುಗಳನ್ನು ಖರೀದಿಸುವ ವ್ಯವಸ್ಥೆಯೊಂದು ಜಾರಿಯಲ್ಲಿರುವಾಗ ಗೋವಿನ ಮಾಲಕ ಕಸಾಯಿಗಳತ್ತ ನೋಡಬೇಕಾದ ಅಗತ್ಯ ಇರುವುದಿಲ್ಲ. ಹೈನುದ್ಯಮ ನಡೆಸುತ್ತಿರುವ ವ್ಯಕ್ತಿಯೋರ್ವ ತನ್ನ ಹಟ್ಟಿಯಲ್ಲಿರುವ ಗಂಡು ಕರುವನ್ನು ಕಸಾಯಿಗಳಿಗೆ ಮಾರುವ ಬದಲಾಗಿ ಅದನ್ನು ಗೋರಕ್ಷಕರಿಗೆ ಮಾರುವ ಭರವಸೆಯೊಂದಿಗೆ ಸಾಕಬಲ್ಲ. ಹೀಗಾದಾಗ ಕಸಾಯಿಖಾನೆಗಳು ಪರವಾನಿಗೆ ಇದ್ದರೂ `ಮಾಲು’ ಇಲ್ಲದೇ ಭಣಗುಟ್ಟುವ ಸಂದರ್ಭ ಎದುರಾಗ ಬಹುದು. ಸಾರ್ವಜನಿಕರು ಕಸಾಯಿಖಾನೆಗಳಿಗಿಂತ ಗೋರಕ್ಷಕರನ್ನು ಮೆಚ್ಚಿಕೊಳ್ಳುವುದಕ್ಕೂ ಕಾರಣವಾಗಬಹುದು. ಆದರೆ, ಸದ್ಯದ ಗೋರಕ್ಷಣಾ ಚಳವಳಿ ಎಷ್ಟು ಅಪ್ರಾಯೋಗಿಕವಾಗಿದೆಯೆಂದರೆ, ಅದು ಮಾಲಕ ಸ್ನೇಹಿಯೂ ಅಲ್ಲ, ಗೋ ಸ್ನೇಹಿಯೂ ಅಲ್ಲ. ಅದು ಇವೆರಡರ ಹೊರತಾದ ಇನ್ನಾ ವುದೋ ಗುರಿಯನ್ನು ಹೊಂದಿರುವಂತೆ ಕಾಣಿಸುತ್ತಿದೆ. ಗಾಂಧಿ ಪೀಸ್ ಫೌಂಡೇಶನ್‍ನ ಸ್ಟಪನ್ ಜೋಶಿ ತನ್ನ Why is the cow a political animal? (ಗೋವು ಏಕೆ ರಾಜಕೀಯ ಪ್ರಾಣಿ) ಎಂಬ ತಮ್ಮ ದೀರ್ಘ ಬರಹದಲ್ಲಿ ಹೇಳಿಕೊಂಡಿರುವಂತೆ, ‘ಧರ್ಮಕ್ಕೂ ಇವತ್ತಿನ ಗೋ ಚಳವಳಿಗೂ ಸಂಬಂಧ ಇಲ್ಲವೇ ಇಲ್ಲ. ಇವತ್ತಿನ ಗೋ ಚಳವಳಿ ಸಂಪೂರ್ಣ ರಾಜಕೀಯ ಪ್ರೇರಿತ. ಅದರ ಮುಂದೆ ಒಂದು ಅಜೆಂಡಾ ಇದೆ. ಆ ಅಜೆಂಡಾ ರಾಜಕೀಯ ಅಧಿಕಾರವನ್ನು ಪಡೆಯುವ ಆಕಾಂಕ್ಷೆಯದ್ದು...’
    ನಿಜವಾಗಿ, ಅಖ್ಲಾಕ್‍ನನ್ನು ಮಾಂಸದ ತುಂಡಿಗಾಗಿ ಕೊಂದಿಲ್ಲ. ಗೋಮಾಂಸ ಸೇವನೆಗೆ ನಿಷೇಧವೇ ಇಲ್ಲದ ರಾಜ್ಯದಲ್ಲಿ ಓರ್ವನ ಮನೆಯಲ್ಲಿ ಗೋಮಾಂಸವಿರುವುದಕ್ಕಾಗಿ ದಾಳಿ ನಡೆಯುತ್ತದೆ ಅನ್ನುವುದನ್ನು ಹೇಗೆ ಒಪ್ಪಲು ಸಾಧ್ಯ? ಗೋಹತ್ಯಾ ನಿಷೇಧಕ್ಕಾಗಿ ಒತ್ತಾಯಿಸುತ್ತಿರುವ ಮತ್ತು ಅಖ್ಲಾಕ್‍ನ ಹತ್ಯೆಯನ್ನು ಗೋವಿನ ಹೆಸರಲ್ಲಿ ಭಾಗಶಃ ಸಮರ್ಥಿಸಿರುವ ಸಂಗೀತ್ ಸೋಮ್ ಎಂಬ ಬಿಜೆಪಿಯ ಶಾಸಕ ಸ್ವತಃ ಅಲ್ ದುವಾ ಎಂಬ ಗೋಮಾಂಸ ರಫ್ತು ಕಾರ್ಖಾನೆಯ ನಿರ್ದೇಶಕರಾಗಿದ್ದಾರೆ ಎಂಬುದನ್ನು ಇದರ ಜೊತೆಗಿಟ್ಟು ನೋಡಿದರೆ ಇದು ಇನ್ನೂ ಹೆಚ್ಚು ಸ್ಪಷ್ಟಗೊಳ್ಳುತ್ತದೆ. ಮೈಸೂರ್ ಪಾಕ್‍ನಲ್ಲಿ ಮೈಸೂರು ಇಲ್ಲದಿರುವಂತೆಯೇ ಅಥವಾ ಕಲ್ಲಂಗಡಿ ಹಣ್ಣುಗಳಲ್ಲಿ ಕಲ್ಲುಗಳಿಲ್ಲದಿರುವಂತೆಯೇ ಗೋರಕ್ಷಣಾ ಚಳವಳಿಗಳಲ್ಲಿ ಗೋವುಗಳಿಲ್ಲ. ಅವು ಗೋವುಗಳಿಗಾಗಿ ನಡೆಯುತ್ತಿರುವ ಹೋರಾಟಗಳೂ ಅಲ್ಲ. ಗೋಶಾಲೆಗಳನ್ನು ನಿರ್ಮಿಸದೆಯೇ, ಮುದಿ ಗೋವುಗಳನ್ನು ಖರೀದಿಸುವುದಕ್ಕೆ ವ್ಯವಸ್ಥಿತವಾದ ನೀಲ ನಕಾಶೆಯನ್ನು ರಚಿಸದೆಯೇ, ಪ್ರತಿ ಹಳ್ಳಿ, ಗ್ರಾಮ, ಪಟ್ಟಣಗಳಲ್ಲಿ ಗೋ ಸರ್ವೇ ನಡೆಸದೆಯೇ ಮತ್ತು ಗೋ ಮಾಲಕಸ್ನೇಹಿ ಯೋಜನೆಯೊಂದನ್ನು ಸಮಾಜದ ಮುಂದಿಡದೆಯೇ ಗೋ ಹತ್ಯೆಯನ್ನು ನಿಷೇಧಿಸಿ ಎಂದು ಆಗ್ರಹಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಹೇಗೆ? ಅಖ್ಲಾಕ್‍ನನ್ನು ಹತ್ಯೆ ನಡೆಸುವುದಕ್ಕಿಂತ ಮೊದಲು ವಾಟ್ಸಪ್‍ನಲ್ಲಿ ದಾದ್ರಿಯ ಆಸುಪಾಸಿನಲ್ಲಿ ವೀಡಿಯೋವೊಂದು ಪ್ರಸಾರವಾಗಿತ್ತು. ವ್ಯಕ್ತಿಯೋರ್ವ ಗೋಹತ್ಯೆ ನಡೆಸುತ್ತಿರುವ ವೀಡಿಯೋ ಅದು. ವಂದನಾ ರಾಣಾ ಎಂಬ ಯುವತಿ (ಅಖ್ಲಾಕ್‍ನನ್ನು ಹತ್ಯೆಗೈದ ಆರೋಪಿ ವಿಶಾಲ್ ರಾಣಾನ ಸಹೋದರಿ ಈಕೆ. ಇವರಿಬ್ಬರೂ ಸ್ಥಳೀಯ ಬಿಜೆಪಿ ಕಾರ್ಯಕರ್ತ ಸಂಜಯ್ ರಾಣಾನ ಮಕ್ಕಳು) ಇದನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾಳೆ. ಮುಝಫ್ಫರ್ ನಗರ್ ಕೋಮು ಹಿಂಸಾಚಾರಕ್ಕಿಂತಲೂ ಮೊದಲು ಇಂಥದ್ದೇ ವೀಡಿಯೋ ವಾಟ್ಸಾಪ್‍ನಲ್ಲಿ ಪ್ರಸಾರವಾಗಿತ್ತು. ಗುಂಪೊಂದು ಇಬ್ಬರು ಯುವಕರನ್ನು ಥಳಿಸಿ ಕೊಲ್ಲುವ ವೀಡಿಯೋ. ಅದನ್ನು ಬಿಜೆಪಿಯ ಶಾಸಕರೇ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದರು. ಈ ಎರಡೂ ಹಿಂಸಾ ಪ್ರಕರಣಗಳಲ್ಲಿ ಬಿಜೆಪಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಿದೆ. ಹಾಗಾದರೆ ಅಂಥದ್ದೊಂದು ವೀಡಿಯೋ ಹುಟ್ಟಿಕೊಂಡದ್ದು ಹೇಗೆ? ಅದನ್ನು ಚಿತ್ರೀಕರಿಸಿದ್ದು ಎಲ್ಲಿ ಮತ್ತು ಯಾರು? ಒಂದು ವೀಡಿಯೋಕ್ಕೆ ಪ್ರಚೋದನೆಗೊಳ್ಳುವಂತಹ ಕಾರ್ಯಕರ್ತ ಪಡೆಯನ್ನು ತಯಾರಿಸಲು ಎಷ್ಟು ಸಮಯ ತಗಲಿದೆ? ಅಂಥದ್ದೊಂದು ತರಬೇತಿಯನ್ನು ಯಾರು ಕೊಟ್ಟಿದ್ದಾರೆ? ಯಾವಾಗ ಮತ್ತು ಎಷ್ಟು ಸಮಯದಿಂದ ಇಂಥ ತರಬೇತಿಗಳು ನಡೆಯುತ್ತಿವೆ? ಸಣ್ಣದೊಂದು ವೀಡಿಯೋಗೆ ಇದ್ದಕ್ಕಿದ್ದಂತೆ ಕಾನೂನು, ನ್ಯಾಯ, ಸತ್ಯ, ಮನುಷ್ಯತ್ವ.. ಮುಂತಾದ ಮೌಲ್ಯಗಳನ್ನೆಲ್ಲ ನಿರ್ಲಕ್ಷಿಸಿ ಕೊಲೆಗೆ ಸಿದ್ಧವಾಗುವ ಗುಂಪೊಂದನ್ನು ಸೇರಿಸಲು ಸಾಧ್ಯವೇ? ಅದರ ಹಿಂದೆ ತಕ್ಷಣದ ಪ್ರಚೋದನೆಯ ಹೊರತಾದ ಇನ್ನಾವುದೂ ಇಲ್ಲವೇ? ಅಖ್ಲಾಕ್‍ನ ಹತ್ಯೆಗೆ ನಿಜವಾಗಿಯೂ ಕಾರಣವಾಗಿರುವುದು ಗೋವೋ ಅಥವಾ ರಾಜಕೀಯವೋ? ಅಂದಹಾಗೆ, ಗೋವುಗಳ ರಕ್ಷಣೆಗೆ ಯಾವೊಂದು ಯೋಜನೆಯನ್ನೂ ರೂಪಿಸದೆಯೇ ಅಖ್ಲಾಕ್‍ನನ್ನೋ ಇನ್ನಾರನ್ನೋ ಕೊಲ್ಲುವುದು ಗೋವುಗಳ ರಕ್ಷಣೆಯಲ್ಲಿ ಪರಿಣಾಮವನ್ನು ಬೀರಬಹುದೇ? ನಿಜವಾಗಿ, ಗೋವಿನ ಹೆಸರಲ್ಲಿ ನಡೆಯುವ ಪ್ರತಿ ಹಲ್ಲೆ ಮತ್ತು ಹತ್ಯೆಯಲ್ಲೂ ಸಮಾಜದಲ್ಲೊಂದು ಧ್ರುವೀಕರಣ ನಡೆಯುತ್ತದೆ. ಹಿಂದೂ-ಮುಸ್ಲಿಮರ ನಡುವೆ ಅನುಮಾನಗಳ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ. ಯಾವಾಗ ಕೋಮು ಸಂಘರ್ಷ ನಡೆಯುತ್ತದೋ ಎಂಬ ಭೀತಿಯೊಂದು ಸಮಾಜವನ್ನು ಕಾಡತೊಡಗುತ್ತದೆ. ಇದರ ಜೊತೆ ಜೊತೆಗೇ ಬಿಜೆಪಿಗೆ ಬೀಳುವ ಓಟಿನ ಅನುಪಾತದಲ್ಲಿ ವೃದ್ಧಿಯಾಗುತ್ತಲೂ ಇರುತ್ತದೆ. ಹಾಗಂತ, ಈ ಥಳಿತ, ಹತ್ಯೆಯ ಹೊರತಾಗಿ ಗೋವುಗಳ ರಕ್ಷಣೆಗಾಗಿ ಬಿಜೆಪಿಯಿಂದ ಯಾವುದಾದರೂ ದೀರ್ಘಾವಧಿ ಕಾರ್ಯಯೋಜನೆ ರಚನೆಗೊಂಡದ್ದು ಈ ವರೆಗೂ ನಡೆದಿಲ್ಲ. ರಾಜಕೀಯವಾಗಿ ಸದಾ ಸುದ್ದಿಯಲ್ಲಿರುವುದಕ್ಕೆ ಅದು ಗೋವನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವಂತೆ ಅನ್ನಿಸುತ್ತದೆ. ಅಷ್ಟಕ್ಕೂ,
    ಅಖ್ಲಾಕ್‍ನ ಹತ್ಯೆಗೆ ಕಾರಣವಾದ ವೀಡಿಯೋದ ಮೂಲವನ್ನು ಪತ್ತೆ ಹಚ್ಚುವ ಬದಲು ಫ್ರೀಜರ್‍ನಲ್ಲಿದ್ದ ಮಾಂಸವನ್ನು ಫಾರೆನ್ಸಿಕ್ ಪರೀಕ್ಷೆಗೆ ಒಪ್ಪಿಸಿದ ಅಖಿಲೇಶ್ ಯಾದವ್‍ರನ್ನು ಏನೆಂದು ಕರೆಯಬೇಕು?