Monday, December 26, 2016

ನೀನಾರಿಗಾದೆ ಮಾನವಾ.. ನಿನಗಾರು ಇಲ್ಲಿ ಹೇಳೂ...

ಅಂದು ರಮಝಾನ್ ದಿನ
ಆಸ್ಪತ್ರೆ ಮಂಚದಲ್ಲಿದ್ದೆ
ಕೋಣೆ ತುಂಬಾ ಗದ್ದಲ
ತುಂಬಿದ್ದಾರೆ ಜನ
ಕಾಯುತ್ತಿದ್ದಾರೆ ನನ್ನಂತಿಮ ಕ್ಷಣ

ನಾನು ಸಂಪೂರ್ಣ ಕೃಶನಾಗಿದ್ದೆ
ಚಿತ್ರ-ವಿಚಿತ್ರ ಚಿಕಿತ್ಸೆಗೆ ಒಳಗಾಗಿದ್ದೆ
ನನ್ನ ಚೇತರಿಕೆ ಅಸಾಧ್ಯವೆಂಬ ಭಾವನೆ ವೈದ್ಯರಿಗೆ
ನನ್ನಾತ್ಮ ಗಟ್ಟಿಯಿತ್ತು ಬದುಕಿದೆ.

ಮರಣದ ಬಗ್ಗೆ ಭಯವಿರಲಿಲ್ಲ
ಪ್ರಿಯತಮೆಯೊಂದಿಗೆ ವಸಿಯ್ಯತ್ ಮಾಡಿದ್ದೆ
ಆಕೆಯ ಬದುಕು, ಮಕ್ಕಳ ಭವಿಷ್ಯ ಚಿತ್ರಿಸಿದ್ದೆ

ಮತ್ತೆ ವರುಷ ಉರುಳಿದೆ
ದಾಸನ ಕರುಣೆ ಮರಳಿದೆ
ಅಂತಿಮ ಸಂಕಲ್ಪ ದೇವ ವಿಧಿ
ಆರೋಗ್ಯವಲ್ಲವೇ ದಾಸನ ನಿಧಿ
       ಹೀಗೆ ತನ್ನಂತರಂಗವನ್ನು 2015ರ ಜುಲೈ 28 ರಂದು (ಸಂಪುಟ 38, ಸಂಚಿಕೆ 21) ಬಿಡುಗಡೆಗೊಂಡ ಸನ್ಮಾರ್ಗದಲ್ಲಿ ಬಿಚ್ಚಿಟ್ಟಿದ್ದ ಇಷ್ಟದ ಗೆಳೆಯ ಅಹ್ಮದ್ ಅನ್ವರ್ ಇದೀಗ ಇಹಲೋಕ ಜೀವನಕ್ಕೆ ವಿದಾಯ ಕೋರಿದ್ದಾರೆ. ಡಿ. 11 ರಂದು ಬೆಳಿಗ್ಗೆ ಅವರ ನಿಧನ ವಾರ್ತೆಯನ್ನು ಕೇಳಿ ನಾನು ತಳಮಳಗೊಂಡೆ. ಇದಕ್ಕಿಂತ ಎರಡು ದಿನಗಳ ಹಿಂದಷ್ಟೇ (ಡಿ. 9) ನನ್ನ ಮಾವ (ಪತ್ನಿಯ ತಂದೆ) ನಿಧನರಾಗಿದ್ದರು. ಎರಡು ದಿನಗಳ ಅಂತರದಲ್ಲಿ ನಡೆದ ಈ ಎರಡು ಘಟನೆಗಳು ನನ್ನನ್ನು ತೀವ್ರವಾಗಿಯೇ ಕಾಡಿದುವು. ನೋಯಿಸಿದುವು. ಸಾವಿಗೆ ವಿಶೇಷ ಸಾಮರ್ಥ್ಯವಿದೆ. ಅದು ಎಂಥ ಗಟ್ಟಿ ಗುಂಡಿಗೆಯನ್ನೂ ಕರಗಿಸಿ ಬಿಡುತ್ತದೆ. ಅನ್ವರ್ ಅವರ ಸಾವಿನ ಸುದ್ದಿಯನ್ನು ತಕ್ಷಣಕ್ಕೆ ಜೀರ್ಣಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಕುಟುಂಬ ವರ್ಗಕ್ಕೆ ಕರೆ ಮಾಡಿ ಖಚಿತಪಡಿಸಿಕೊಂಡೆ. ಹಾಗಂತ ಸಾವು ಅನಿರೀಕ್ಷಿತವಾಗಿತ್ತು ಎಂದಲ್ಲ. ಅನಿರೀಕ್ಷಿತ ಸಾವು ಎಂಬುದು ಇಲ್ಲವೇ ಇಲ್ಲ. ಸಾವು ಎಲ್ಲರಿಗೂ ನಿರೀಕ್ಷಿತ. ಆದರೆ ಕೆಲವೊಮ್ಮೆ ಅದು ಅಪ್ಪಳಿಸುವ ರೀತಿ ನಮ್ಮನ್ನು ಹಾಗೆ ಭ್ರಮಿಸಿಕೊಳ್ಳುವಂತೆ ಮಾಡುತ್ತದೆ. ಮರಣಕ್ಕೆ ಅನ್ವರ್ ಭಯಪಟ್ಟಿರಲಿಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಸಾವು-ಬದುಕಿನ ಹೋರಾಟವನ್ನು ನಡೆಸಿದ ವ್ಯಕ್ತಿಯೋರ್ವ ಮರಣವನ್ನು ಭಯಾನಕವಾಗಿ ಪರಿಗಣಿಸುವುದಕ್ಕೆ ಸಾಧ್ಯವೂ ಇರಲಿಲ್ಲ. ಅನ್ವರ್ ಹಲವು ಬಾರಿ ಬದುಕು ಮತ್ತು ಶಾಶ್ವತ ಬದುಕಿನ ಬಗ್ಗೆ ನನ್ನೊಂದಿಗೆ ಮಾತಾಡಿದ್ದರು. ಮರಣದ ಬಗ್ಗೆ ಮಾತಾಡುತ್ತಲೇ ಬದುಕಿ ಉಳಿಯುವ ಬಗ್ಗೆ ಅತೀವ ಆತ್ಮವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದರು. ನಾನು ಪ್ರತಿ ಭೇಟಿಯ ಸಂದರ್ಭದಲ್ಲೂ, ‘ಹೇಗಿದ್ದೀರಿ’ ಎಂದು ಪ್ರಶ್ನಿಸುತ್ತಿದ್ದೆ. ನನಗೆ ಸಂಬಂಧಿಸಿ ಅದೊಂದು ಸಹಜ ಕ್ರಿಯೆ. ಮೊದಲು ಸಲಾಮ್ ಹೇಳುವುದು, ಬಳಿಕ ಹೇಗಿದ್ದೀರಿ ಎಂದು ಪ್ರಶ್ನಿಸುವುದು. ಆದರೆ ನನ್ನ ಸಲಾಮನ್ನು ಮತ್ತು ಬಳಿಕದ ಪ್ರಶ್ನೆಯನ್ನು ಸ್ವೀಕರಿಸಬೇಕಾದ ಅನ್ವರ್ ನನ್ನ ಪ್ರತಿ ಭೇಟಿಯ ಸಂದರ್ಭದಲ್ಲೂ ಭಿನ್ನ ಭಿನ್ನ ಆರೋಗ್ಯ ಸ್ಥಿತಿಯಲ್ಲಿರುತ್ತಿದ್ದರು. ಒಮ್ಮೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಇನ್ನೊಮ್ಮೆ ನಿತ್ರಾಣರಾಗಿರುತ್ತಿದ್ದರು. ಇನ್ನೊಮ್ಮೆ ವಾಂತಿಯಲ್ಲಿರುತ್ತಿದ್ದರು. ಆಸ್ಪತ್ರೆಯ ಮಂಚದಲ್ಲಿ ಗ್ಲುಕೋಸ್ ಮತ್ತಿತರವುಗಳನ್ನು ಚುಚ್ಚಿಸಿಕೊಂಡು ಮಾತೂ ಆಡದಷ್ಟು ಸಂಕಟದಲ್ಲಿರುತ್ತಿದ್ದರು. ಆದರೆ ಪ್ರತಿ ಸಂದರ್ಭದಲ್ಲೂ ಅವರು ನನಗೆ ಉತ್ತರಿಸುತ್ತಿದ್ದುದು ಸಕಾರಾತ್ಮಕವಾಗಿಯೇ. ಅಲ್ ಹಮ್ದುಲಿಲ್ಲಾಹ್ ಎಂಬ ಉತ್ತರವನ್ನು ಪಡೆಯದ ಒಂದೇ ಒಂದು ಭೇಟಿ ನನ್ನ ಮತ್ತು ಅವರ ನಡುವೆ ನಡೆದಿಲ್ಲ. ಆರೋಗ್ಯದ ಪ್ರತಿ ಏರುಪೇರನ್ನೂ ಅವರು ಸಕಾರಾತ್ಮಕವಾಗಿಯೇ ಸ್ವೀಕರಿಸಿದ್ದರು. ಹಾಗಂತ, ಕ್ಯಾನ್ಸರ್‍ನ ಜೊತೆ ಕಳೆದ 5 ವರ್ಷಗಳಿಂದ ಸೆಣಸುತ್ತಿರುವ ವ್ಯಕ್ತಿ ಎಂಬ ನೆಲೆಯಲ್ಲಿ, ಅವರಿಗೆ ಇದು ಸುಲಭ ಆಗಿರಲಿಲ್ಲ. ಇದನ್ನು ಅವರು ಹೇಳಿಕೊಂಡೂ ಇದ್ದರು. ಆದರೆ ಓರ್ವ ಸತ್ಯವಿಶ್ವಾಸಿಯು ಸಹನೆಗೆಡಬಾರದು ಎಂದೂ ಹೇಳುತ್ತಿದ್ದರು. ಜೊತೆಗೆ ಕಾನ್ಸರ್‍ನ ಯಾತನಾಮಯ ನೋವಿನ ಬಗೆಗೂ ಹೇಳಿಕೊಳ್ಳುತ್ತಿದ್ದರು. ನಾನು ಕಳೆದ ಸುಮಾರು ಮೂರೂವರೆ ವರ್ಷಗಳಿಂದ ಪ್ರತಿವಾರ ಅವರನ್ನು ಭೇಟಿಯಾಗಿದ್ದೇನೆ. ಈ ಭೇಟಿ ಒಂದು ರೀತಿಯಲ್ಲಿ ನಮ್ಮಿಬ್ಬರಿಗೂ ಚಟದಂತೆ ಅಭ್ಯಾಸವಾಗಿತ್ತು. ನನ್ನ ದಿನಚರಿಯ ವೇಳಾಪಟ್ಟಿಯಲ್ಲಿ ಅದಕ್ಕೆಂದೇ ಸಮಯವನ್ನು ನಿಗದಿಪಡಿಸಿದ್ದೆ. ನಿಗದಿತ ದಿನ ಭೇಟಿಯಾಗದಿದ್ದರೆ ಅವರು ಕರೆ ಮಾಡುತ್ತಿದ್ದರು. ನಾನು ಕೊನೆಯದಾಗಿ ಭೇಟಿಯಾದದ್ದು ನಿಧನಕ್ಕಿಂತ ನಾಲ್ಕು ದಿನಗಳ ಮೊದಲು. ಇದೇ ಡಿ. 23ರಂದು ಬಿಡುಗಡೆ ಯಾಗಲಿರುವ `ಪಯಣಿಗನ ಪದ್ಯಗಳು' ಎಂಬ ಕವನ ಸಂಕಲನದ ಮುದ್ರಣ ತಯಾರಿ ಎಲ್ಲಿಯವರೆಗೆ ಮುಟ್ಟಿದೆಯೆಂದು ಆವತ್ತು ಅವರು ವಿಚಾರಿಸಿದ್ದರು. ಮಾತ್ರವಲ್ಲ, ತಾನು ಹಾಸಿಗೆಗೆ ಸೀಮಿತವಾಗಿರುವುದರಿಂದ ಬಿಡುಗಡೆಯ ಸಮಯದಲ್ಲಿ ತನ್ನ ಮಾತುಗಳನ್ನು ಓದಿ ಹೇಳಬೇಕೆಂದು ಹೇಳಿ ಬರೆದುಕೊಳ್ಳುವಂತೆ ನನ್ನಲ್ಲಿ ವಿನಂತಿಸಿದ್ದರು. ನಾನು ಈಗ ಬೇಡ ಎಂದಿದ್ದೆ. ಬಿಡುಗಡೆಗೆ ಇನ್ನೂ 15 ದಿನಗಳಿರುವುದರಿಂದ ಮುಂದಿನ ವಾರದ ಭೇಟಿಯ ಸಂದರ್ಭದಲ್ಲಿ ಬರೆಯೋಣ ಎಂದಿದ್ದೆ. ಆದರೆ ಅವರು ಈಗಲೇ ಬರೀಬೇಕು ಎಂದು ಒತ್ತಾಯಿಸಿ ಬರೆಸಿದ್ದರು. ಈ ಹೇಳಿಕೆಯ ಉದ್ದಕ್ಕೂ ಅವರು ಹೇಳಿಕೊಂಡದ್ದು ಕ್ಯಾನ್ಸರ್‍ನ ಬಗ್ಗೆ ಮತ್ತು ಅದರ ಯಾತನೆಯ ಬಗ್ಗೆ. ತನ್ನ ಪತ್ನಿಯ ಸೇವೆಯನ್ನು ಸ್ಮರಿಸುತ್ತಾ ಅವರು ಆ ಸಂದರ್ಭದಲ್ಲಿ ಕಣ್ಣೀರಾಗಿದ್ದರು. ಹಾಗಂತ ಈ ಕಣ್ಣೀರು ಅದು ಮೊದಲ ಬಾರಿಯೇನೂ ಅಲ್ಲ. ಪತ್ನಿಯ ಸೇವೆಯನ್ನು ನೆನಪಿಸಿಕೊಂಡು ಅವರು ಹಲವು ಬಾರಿ ನನ್ನೊಂದಿಗೆ ಕಣ್ಣೀರಿಳಿಸಿದ್ದಿದೆ. ಭಾವುಕರಾದದ್ದಿದೆ. ಪತ್ನಿಗಾಗಿ ಪ್ರಾರ್ಥಿಸಿದ್ದಿದೆ. ಇಂಥ ಪತ್ನಿಯನ್ನು ಪಡೆದುದು ತನ್ನ ಭಾಗ್ಯವೆಂದು ಹೇಳಿದ್ದೂ ಇದೆ. ಅನ್ವರ್ ಅವರು ಜಮಾಅತೆ ಇಸ್ಲಾಮೀ ಹಿಂದ್‍ನ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದರು. ತಾನು ಚೇತರಿಕೆ ಹೊಂದಿದರೆ ಹೆಚ್ಚಿನ ಸಮಯವನ್ನು ಜಮಾಅತ್‍ಗಾಗಿ ಮೀಸಲಿಡುವು ದಾಗಿಯೂ ಹೇಳಿಕೊಂಡಿದ್ದರು. ಜಮಾಅತ್‍ನ ಯಾವುದೇ ಕಾರ್ಯಕ್ರಮಕ್ಕೂ ಛಾಯಾಚಿತ್ರ ಗ್ರಾಹಕರಾಗಿದ್ದವರು ಅವರೇ. ನಿಜವಾಗಿ, ಪೋಟೋಗ್ರಫಿಯಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತೀರಾ ಶೂನ್ಯ ಅನ್ನುವ ಸಮಯದಲ್ಲಿ ಅನ್ವರ್ ಕ್ಯಾಮರಾವನ್ನು ಕೈಗೆತ್ತಿಕೊಂಡಿದ್ದರು. ಅವರ ವಿಶೇಷತೆ           ಏನೆಂದರೆ, ಅವರು ಬರೇ ಪೋಟೋಗ್ರಾಫರ್ ಆಗಿರಲಿಲ್ಲ. ಸಾಮಾಜಿಕ ಬದ್ಧತೆಯನ್ನು ಜರ್ನಲಿಸಂನೊಂದಿಗೆ ಬೆರೆಸಿ ಹಂಚಿದ ಪತ್ರಕರ್ತರವರು. ಕೋಮುಗಲಭೆಯ ಸಮಯದಲ್ಲಿ ಅವರು ಹಗಲಿರುಲು ಕ್ಯಾಮರಾದೊಂದಿಗೆ ಓಡಾಡಿದ್ದಿದೆ. ಪೋಟೋ ಕ್ಲಿಕ್ಕಿಸುವುದರ ಜೊತೆಗೆ ಸಂತ್ರಸ್ತರಿಗೆ ನೆರವಾಗುವುದನ್ನು ಅವರು ಬದುಕಿನ ಕರ್ತವ್ಯವಾಗಿ ಮಾಡುತ್ತಲೇ ಬಂದಿದ್ದಾರೆ. ಅವರೊಳಗೆ ಓರ್ವ ಸಮಾಜ ಪ್ರೇಮಿ ಮತ್ತು ಸಮುದಾಯ ಪ್ರೇಮಿ ಇದ್ದ. ಅವರಿಬ್ಬರನ್ನೂ ಜೊತೆ ಜೊತೆಯಾಗಿಸಿಕೊಂಡು ಅವರು ಬದುಕುತ್ತಿದ್ದರು.
      `ಜನರಿಗೆ ಮಾರ್ಗದರ್ಶನ ಮಾಡದ, ಮಂದಿರ ಏತಕೆ, ಮಸೀದಿ ಏತಕೆ, ಜಗದ್ಗುರುಗಳೇತಕೆ, ಧರ್ಮ ಬೀರುಗಳೇತಕೆ-'
ಎಂದವರು ಕವನವೊಂದರಲ್ಲಿ ಪ್ರಶ್ನಿಸಿದ್ದಿದೆ. ಅವರು ಸಬಲೀಕರಣಗೊಂಡ ಮುಸ್ಲಿಮ್ ಸಮುದಾಯದ ಬಗ್ಗೆ ಮತ್ತು ಸೌಹಾರ್ದ ಸಮಾಜದ ಬಗ್ಗೆ ಬಹು ನಿರೀಕ್ಷೆಯನ್ನು ಹೊಂದಿದ್ದರು. ಆ ಬಗ್ಗೆ ತಮ್ಮ ಕವನ ಮತ್ತು ಲೇಖನಗಳಲ್ಲಿ ಚರ್ಚಿಸುತ್ತಿದ್ದರು. ಕ್ಯಾನ್ಸರ್‍ಗೆ ತುತ್ತಾಗಿ ಹಾಸಿಗೆಗೆ ಸೀಮಿತವಾದ ಬಳಿಕವೂ ಅವರು ತಮ್ಮ ನಿರೀಕ್ಷೆ ಮತ್ತು ಆತ್ಮವಿಶ್ವಾಸವನ್ನು ಕಳಕೊಂಡಿರಲಿಲ್ಲ. ನನ್ನ ಪ್ರತಿವಾರದ ಭೇಟಿಯ ವೇಳೆ ಅವರು ಸನ್ಮಾರ್ಗದಲ್ಲಿ ಏನೇನು ವಿಷಯ ಚರ್ಚಿಸಲಾಗಿದೆ ಎಂದು ಪ್ರಶ್ನಿಸುತ್ತಿದ್ದರು. ನಾನು ಶೀರ್ಷಿಕೆಯನ್ನು ಓದಿ ಹೇಳುತ್ತಿದ್ದೆ. ದಿನದ ಬೆಳವಣಿಗೆಗಳ ಬಗ್ಗೆ ಅಪ್‍ಡೆಟ್ ಆಗಿರಲು ಯತ್ನಿಸುತ್ತಿದ್ದರು. ಸನ್ಮಾರ್ಗದ ವಿಶೇಷಾಂಕಕ್ಕಾಗಿ ಅವರು ನನ್ನನ್ನು ಪಕ್ಕದಲ್ಲಿ ಕೂರಿಸಿ ಕವನ ಹೇಳಿದ್ದಿದೆ. ನಾನು ಬರೆದು ಕೊಂಡದ್ದೂ ಇದ್ದೆ. ನಾವಿಬ್ಬರೂ ಪೆಂಗ್ ಶುಲಿನ್‍ನ ಬಗ್ಗೆ, ಲಿಸಾರೇ ಬಗ್ಗೆ, ಯುವರಾಜ್ ಸಿಂಗ್‍ರ ಬಗ್ಗೆ ಚರ್ಚಿಸಿದ್ದೇವೆ. ಕ್ಯಾನ್ಸರ್ ಅನ್ನು ಅವರು ಎದುರಿಸಿದ ಅನುಭವಗಳನ್ನು ಹಂಚಿ ಕೊಂಡಿದ್ದೇವೆ. ಅನ್ವರ್ ಅವರು ನಕಾರಾತ್ಮಕವಾಗಿ ಮಾತಾಡಿದ್ದು ತೀರಾ ತೀರಾ ಕಡಿಮೆ. ತನಗೆ ಗೊತ್ತಿರುವ ವ್ಯಕ್ತಿಯೊಬ್ಬರ ಬಗ್ಗೆ ಅವರು ನನ್ನೊಂದಿಗೆ ಹೇಳಿಕೊಂಡಿದ್ದರು. ರೋಗಪೀಡಿತರಾದ ಆ ವ್ಯಕ್ತಿ 80 ಕೆ.ಜಿ.ಯಿಂದ 13 ಕೆ.ಜಿ.ಗೆ ಕುಸಿದದ್ದು ಮತ್ತು ಹಾಸಿಗೆಗೆ ಸೀಮಿತವಾದದ್ದು, ಕೊನೆಗೆ ಫಿಸಿಯೋಥೆರಪಿಯಿಂದಾಗಿ ಗುಣಮುಖ ರಾಗಿ ಪುನಃ 50 ಕೆ.ಜಿ.ಗಿಂತ ಮೇಲೇರಿದ್ದನ್ನು ಸ್ಮರಿಸಿಕೊಂಡಿದ್ದರು. ಅವರಲ್ಲಿ ಕ್ಯಾನ್ಸರನ್ನು ಗೆಲ್ಲುವ ಆತ್ಮವಿಶ್ವಾಸವಿತ್ತು ಅಥವಾ ಆ ಆತ್ಮಾವಿಶ್ವಾಸವೇ ಅವರನ್ನು ಕಳೆದ 5 ವರ್ಷಗಳ ವರೆಗೆ ಜೀವಂತವಾಗಿರಿಸಿತ್ತು ಎಂದೂ ಹೇಳಬಹುದು. ಈ ಸ್ಥಿತಿಯಲ್ಲೂ ಅವರು ತನ್ನ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸುವ ಆಸಕ್ತಿ ತೋರಿದರು. ತನ್ನ ಕವನಗಳನ್ನು ಸಂಗ್ರಹಿಸಿ ಕೃತಿ ರೂಪದಲ್ಲಿ ತರುವುದಕ್ಕೆ ಮುಂದಾದರು. ಒಂದು ಕಡೆ ದೈಹಿಕ ಅಸಾಮರ್ಥ್ಯ, ಇನ್ನೊಂದು ಕಡೆ ಅಪಾರ ಜೀವನ ಪ್ರೇಮ.. ಇವೆರಡನ್ನೂ ಜೊತೆಯಾಗಿರಿಸಿಕೊಂಡು ಬದುಕಿದವರೇ ಅಹ್ಮದ್ ಅನ್ವರ್. ಸಾಮಾನ್ಯವಾಗಿ, ಕಾಯಿಲೆ ಎಂಬುದು ನಮ್ಮಿಂದ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ಬದುಕಿನ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತೀವ್ರ ನಿರಾಶರಾಗುವಂತೆ ಮಾಡುತ್ತದೆ. ಅದರಲ್ಲೂ ಕ್ಯಾನ್ಸರ್ ಎಂಬುದು ಅನೇಕ ಬಾರಿ ಸಾವನ್ನು ಖಚಿತಪಡಿಸಿಕೊಂಡು ಬರುವ ಅತಿಥಿ. ಆದ್ದರಿಂದಲೇ ಅನ್ವರ್ ಅವರ ಜೀವನ ಪ್ರೇಮ ಮುಖ್ಯವೆನಿಸುತ್ತದೆ. ಅವರಲ್ಲೊಂದು ಹವ್ಯಾಸವಿತ್ತು. ಅದು ಹಾಡುಗಾರಿಕೆ. ‘ಹೇ ದೇವಾ ನೀನೊಡೆಯನು, ಮಹಾ ಮಹಿಮನೂ..’ ಎಂಬ ಕವನವನ್ನು (ದಿ. ಅಬ್ದುಲ್ ಗಪ್ಫಾರ್ ಸುಳ್ಯ ವಿರಚಿತ) ಅವರು ಇಷ್ಟಪಟ್ಟು ಹಾಡುತ್ತಿದ್ದರು. ಕವಿಗೋಷ್ಠಿಗಿಂತ ಮೊದಲು ಸ್ತುತಿಗೀತೆ ಎಂಬ ನೆಲೆಯಲ್ಲಿ ಅವರು ಹಾಡುತ್ತಿದ್ದುದೇ ಈ ಕವನವನ್ನು. ನನ್ನ ಕಚೇರಿಗೆ ಬಂದರೆಂದರೆ ಅವರ ಗಝಲ್‍ಗಾರಿಕೆ ಆರಂಭವಾಗುತ್ತಿತ್ತು. ಅವರು ನನ್ನ ಕೊಠಡಿಗೆ ಬಂದು ಹಾಡಲು ತೊಡಗುತ್ತಿದ್ದರು. ಒಂದರ್ಧ ಗಂಟೆ ನಮ್ಮಿಬ್ಬರ ಗಾಯನಗೋಷ್ಠಿ ನಡೆಯುತ್ತಿತ್ತು. ಹಳೆ ಗಝಲ್‍ಗಳನ್ನು ಅವರು ಹಾಡಿ ನನಗೆ ಕೇಳಿಸುತ್ತಿದ್ದರು. ಅವರದೇ ಹೊಸ ಹಾಡುಗಳಿಗೆ ರಾಗ ಹಾಕಿ ಹಾಡುತ್ತಿದ್ದರು. `ನೀನಾರಿಗಾದೆ ಮಾನವಾ... ನಿನಗಾರು ಇಲ್ಲಿ ಹೇಳು...' ಎಂಬ ಜನಪ್ರಿಯ ಹಾಡು ಇವರದೇ. ಅವರು ಲೌಕಿಕ ಮತ್ತು ಆಧ್ಯಾತ್ಮಿಕವನ್ನು ಸರಿಸಮಾನರಾಗಿ ಅನುಭವಿಸಿ ಬದುಕಿದರು, ಬರೆದರು.
     ಈ ಐಹಿಕ ಜೀವನ / ಯಾರಿಗ್ಗೊತ್ತು ಎಷ್ಟು ದಿನ / ಲೋಕ ಗಳಿಸುವ ತವಕದಿ / ಎಷ್ಟೋ ಜನ ಮರೆತೇ ಬಿಟ್ಟಿದ್ದಾರೆ / ಮಹಾ ದೇವನ.
       ಹೀಗೆ ಹಾಡಿ ಹೊರಟುಹೋದ ಅಹ್ಮದ್ ಅನ್ವರ್ ಅವರನ್ನು ಆ ಮಹಾದೇವನು ಅನುಗ್ರಹಿಸಲಿ.

Monday, December 19, 2016

ನಮ್ಮ ನಡುವಿನ ಪೌಲ್ ಹಾರ್ನರ್‍ಗಳ ಬಗ್ಗೆ..

      ಡೊನಾಲ್ಡ್ ಟ್ರಂಪ್ ಅಮೇರಿಕದ ಅಧ್ಯಕ್ಷರಾಗಿ ಚುನಾಯಿತರಾದ ಸಂದರ್ಭ. ಫಲಿತಾಂಶವನ್ನು ಜೀರ್ಣಿಸಿಕೊಳ್ಳಲಾಗದೇ ಹಿಲರಿ ಅವಾಕ್ಕಾಗಿದ್ದರು. ಟ್ರಂಪ್ ಕೂಡಾ ಅಚ್ಚರಿಯಲ್ಲಿದ್ದರು. ಪ್ರಮುಖ ಪತ್ರಿಕೆಗಳಂತೂ ಟ್ರಂಪ್ ಗೆಲುವನ್ನು ಹೇಳಲು ಸೂಕ್ತ ಪದಗಳ ತಲಾಶೆಯಲ್ಲಿದ್ದುವು. ಇದೇ ವೇಳೆ ಅಮೇರಿಕದ ವಿವಿಧ ಕಡೆ ಪ್ರತಿಭಟನೆಗಳು ಎದ್ದುವು. ಒಂದು ರೀತಿಯಲ್ಲಿ ಟ್ರಂಪ್ ಗೆಲುವು ಎಷ್ಟು ಅನಿರೀಕ್ಷಿತವೋ ಪ್ರತಿಭಟನೆಗಳೂ ಅಷ್ಟೇ ಅನಿರೀಕ್ಷಿತ. ಇದೇ ವೇಳೆ, ಪ್ರತಿಭಟನಾಕಾರರು ಬಾಡಿಗೆ ಜನರೆಂದೂ ಅವರಿಗೆ ಅಮೇರಿಕದ ಕೋಟ್ಯಾಧಿಪತಿ ಜಾರ್ಜ್ ಸೊರೊಸಾನ್ ಹಣ ಒದಗಿಸಿದ್ದಾರೆಂದೂ ಸುದ್ದಿ ಪ್ರಕಟವಾಯಿತು. ಒಂದು ಬಗೆಯ ಅನುಮಾನ ಸಾರ್ವಜನಿಕರಲ್ಲೂ ಮೂಡಿತು. ಪ್ರತಿಯೊಬ್ಬರಿಗೂ 3500 ಡಾಲರ್ ಪಾವತಿಸಲಾಗುತ್ತಿದೆ ಎಂದೂ ಆ ಸುದ್ದಿಯಲ್ಲಿತ್ತು. ನವೆಂಬರ್ 9ರಂದು ಎರಿಕ್ ಟಕ್ಕರ್ ಎಂಬವರು ತಮ್ಮ ಟ್ವೀಟರ್ ಅಕೌಂಟ್‍ನಲ್ಲಿ ಒಂದೆರಡು ಫೋಟೋ ಪ್ರಕಟಿಸಿದರು. ಒಕ್ಕಣೆಯನ್ನೂ ಬರೆದರು. ಟೆಕ್ಸಾಸ್‍ನ ಓಸ್ಟನ್‍ನಲ್ಲಿ ಸಾಗುತ್ತಿರುವ ಬಸ್ಸುಗಳ ಫೋಟೋ ಅದು. ಬಸ್ಸುಗಳ ತುಂಬಾ ಜನರೂ ಇದ್ದರು. ಟ್ರಂಪ್ ವಿರೋಧಿ ಪ್ರತಿಭಟನೆಗೆ ಬಾಡಿಗೆ ಜನರನ್ನು ಬಸ್ಸುಗಳಲ್ಲಿ ತುಂಬಿಸಿ ಕರೆತರಲಾಗುತ್ತಿದೆ ಎಂಬ ಒಕ್ಕಣೆಯನ್ನೂ ಬರೆದರು.
      ಅಂದಹಾಗೆ, ಓಸ್ಟನ್‍ನಲ್ಲಿ ಟ್ರಂಪ್ ವಿರೋಧಿ ಪ್ರತಿಭಟನೆಯಾದದ್ದು ನಿಜ. ಆದರೆ ಆ ಬಸ್ಸಿಗೂ ಆ ಪ್ರತಿಭಟನೆಗೂ ಯಾವ ಸಂಬಂಧವೂ ಇರಲಿಲ್ಲ. ಒಂದು ಸಾಫ್ಟ್ ವೇರ್ ಕಂಪೆನಿಯ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ಬರುತ್ತಿರುವ ಪ್ರತಿನಿಧಿಗಳಾಗಿದ್ದರು ಅವರು. ಟ್ವೀಟರ್‍ನಲ್ಲಿ ಟಕ್ಕರ್ ಅವರನ್ನು ಫಾಲೋ ಮಾಡುತ್ತಿರುವವರಲ್ಲಿ ಓರ್ವ ಆ ಫೋಟೋ ಮತ್ತು ಒಕ್ಕಣೆಯನ್ನು ರೆಡಿಟ್ ಜಾಲತಾಣದಲ್ಲಿ ಹಾಗೆಯೇ ಫೋಸ್ಟ್ ಮಾಡಿದ. ಜೊತೆಗೇ ‘ಬಾಡಿಗೆ ಪ್ರತಿಭಟನಾಕಾರರನ್ನು ಸಾಗಿಸುತ್ತಿರುವ ಬಸ್ಸುಗಳು..’ ಎಂಬ ಪ್ರತಿಕ್ರಿಯೆಯನ್ನೂ ದಾಖಲಿಸಿದ. ಇದು ಫೇಸ್ ಬುಕ್‍ಗೆ ವರ್ಗಾವಣೆಯಾಯಿತು. ನವೆಂಬರ್ 10ರಂದು ಆನ್‍ಲೈನ್ ಮಾಧ್ಯಮಗಳು ಅದನ್ನು ಅದೇ ರೀತಿಯಲ್ಲಿ ಪ್ರಕಟಿಸಿದುವು. ಈ ಸುದ್ದಿಯ ಪ್ರಸಾರ ಎಷ್ಟು ತ್ವರಿತಗತಿಯಲ್ಲಿ ಸಾಗಿತೆಂದರೆ ಫೇಸ್ ಬುಕ್‍ನ ಕೇವಲ ಒಂದೇ ಒಂದು ಅಕೌಂಟ್‍ನಲ್ಲಿ 3 ಲಕ್ಷಕ್ಕಿಂತ ಅಧಿಕ ಮಂದಿ ಶೇರ್ ಮಾಡಿಕೊಂಡರು. ತಕ್ಷಣ ಟ್ರಂಪ್ ಚುರುಕಾದರು. ಅವರ ಅಕೌಂಟ್‍ನ ಮೂಲಕ 1.60 ಕೋಟಿ ಮಂದಿಗೆ ತಲುಪಿತು. ಅದನ್ನು ಅಸಂಖ್ಯ ಮಂದಿ ಮತ್ತೆ ಶೇರ್ ಮಾಡಿಕೊಂಡರು. ಹೀಗೆ, ಟಕ್ಕರ್ ಅವರ ಸುಳ್ಳು ಸುದ್ದಿಯು ಎರಡೇ ಎರಡು ದಿನಗಳಲ್ಲಿ ಒಂದೂವರೆ ಕೋಟಿಗಿಂತಲೂ ಅಧಿಕ ಮಂದಿಗೆ ವಿಶ್ವಾಸಾರ್ಹ ಸುದ್ದಿಯಾಗಿ ರವಾನೆಯಾಯಿತು.
Post Truth
ಅಂದಹಾಗೆ, ಇತ್ತೀಚೆಗೆ ಆಕ್ಸ್ ಫರ್ಡ್ ಡಿಕ್ಷನರಿಯು Post Truth (ಸತ್ಯಾನಂತರ)ನ್ನು 2016ರ ಹೊಸ ಪದವಾಗಿ ಸ್ವೀಕರಿಸಿ ಕೊಂಡಿರುವುದರ ಹಿಂದೆ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೆ ದೊಡ್ಡ ಪಾತ್ರ ಇದೆ. ಅಮೇರಿಕದ ಚುನಾವಣೆಯಲ್ಲಿ ಟ್ರಂಪ್ ಜಯ ಸಾಧಿಸುತ್ತಾರೆಂದು ಮುಖ್ಯವಾಹಿನಿಯ ಯಾವ ಮಾಧ್ಯಮಗಳೂ ಕಣಿ ಹೇಳಿರಲಿಲ್ಲ. ಎಲ್ಲರ ಚುನಾವಣಾ ಪೂರ್ವ ಸಮೀಕ್ಷೆ ಗಳೂ ಹಿಲರಿಯನ್ನೇ ಗೆಲ್ಲಿಸಿದ್ದುವು. ನ್ಯೂಯಾರ್ಕ್ ಟೈಮ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್ ನಂತಹ ಪ್ರಮುಖ ಪತ್ರಿಕೆಗಳೂ ಹಿಲರಿ ಪರ ಬಹಿರಂಗ ಪ್ರಚಾರದಲ್ಲಿ ತೊಡಗಿದ್ದುವು. ಅದರಲ್ಲೂ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಂತೂ ಒಂದೇ ತಿಂಗಳೊಳಗೆ ಟ್ರಂಪ್ ವಿರುದ್ಧ 7 ಸಂಪಾದಕೀಯಗಳನ್ನು ಬರೆದಿತ್ತು. ಇಷ್ಟಿದ್ದೂ ಟ್ರಂಪ್ ವಿಜಯಿಯಾದದ್ದು ಹೇಗೆ? ಈ ಪ್ರಶ್ನೆ ಜಾಗತಿಕ ಮಟ್ಟದಲ್ಲಿ ಅಸಂಖ್ಯ ಬಾರಿ ಪ್ರತಿಧ್ವನಿಸಿದೆ. ಅಮೇರಿಕದ ಬಸ್‍ಫೀಡ್ ಎಂಬ ಸಂಸ್ಥೆ ಈ ಕುರಿತಂತೆ ಅನ್ವೇಷಣೆ ನಡೆಸಿತು. ಅಮೇರಿಕದಲ್ಲಿ ಮತದಾನ ನಡೆದ ದಿನದ ವರೆಗೆ ಪ್ರಕಟವಾದ ಸುದ್ದಿಗಳು ಮತ್ತು ಲೇಖನಗಳ ಬಗ್ಗೆ ಅದು ಸತ್ಯಾನ್ವೇಷಣೆಗೆ ಮುಂದಾಯಿತು. ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾದ ಸರಿ ಸುದ್ದಿಗಳಲ್ಲಿ 20 ಸುದ್ದಿಗಳನ್ನು ಮತ್ತು ಸುಳ್ಳು ಸುದ್ದಿಗಳೆಂದು ಸ್ಪಷ್ಟವಾದವುಗಳಲ್ಲಿ 20 ಸುದ್ದಿಗಳನ್ನು ಅದು ಪರಿಶೀಲನೆಗೆ ಆಯ್ಕೆ ಮಾಡಿಕೊಂಡಿತು. ಈ 40 ಸುದ್ದಿಗಳಿಗೆ ಫೇಸ್‍ಬುಕ್‍ನಂಥ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಪ್ರತಿಕ್ರಿಯೆ ಲಭ್ಯವಾಗಿದೆ ಎಂಬುದನ್ನೂ ವಿಶ್ಲೇಷಿಸಿತು. ವಿಶೇಷ ಏನೆಂದರೆ, 20 ಸರಿ ಸುದ್ದಿಗಳಿಗೆ ಸಿಕ್ಕ ಲೈಕ್, ಕಾಮೆಂಟ್ ಮತ್ತು  ಶೇರ್‍ಗಳಿಗೆ ಹೋಲಿಸಿದರೆ 20 ಸುಳ್ಳು ಸುದ್ದಿಗಳಿಗೆ ಎಷ್ಟೋ ಪಟ್ಟು ಅಧಿಕ ಲೈಕು, ಕಾಮೆಂಟು ಮತ್ತು ಶೇರ್‍ಗಳು ಲಭ್ಯವಾಗಿದ್ದುವು.
1. ಚುನಾವಣಾ ಫಲಿತಾಂಶವನ್ನು ಬರಾಕ್ ಒಬಾಮ ಅಸಿಂಧುಗೊಳಿಸಲಿದ್ದಾರೆ.
2. ಕ್ರೀಡಾ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಹಾಡನ್ನು ನಿಷೇಧಿಸಲಾಗುತ್ತದೆ.
3. ಅಮೇರಿಕವು ಎರಡೂವರೆ ಲಕ್ಷ ಸಿರಿಯನ್ ನಿರಾಶ್ರಿತರನ್ನು ಸ್ವಾಗತಿಸಲು ತೀರ್ಮಾನಿಸಿದೆ.
4. ಹಿಲರಿ ಕ್ಲಿಂಟನ್ ವಿರುದ್ಧ ಈ-ಮೇಲ್‍ಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ತನಿಖೆ ನಡೆಸುತ್ತಿದ್ದ FBIಯ ಅಧಿಕಾರಿಯ ಹತ್ಯೆ ನಡೆಸಲಾಗಿದೆ..
ಸುಳ್ಳು ಸುದ್ದಿಗಳ ಕೆಲವು ಸ್ಯಾಂಪಲ್‍ಗಳಿವು. ವಿಚಿತ್ರ ಏನೆಂದರೆ, ಇಂಥ ಸುದ್ದಿಗಳು ಪ್ರಕಟವಾಗಿರುವುದು ಫೇಸ್‍ಬುಕ್, ಟ್ವೀಟರ್‍ಗಳಂಥ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವೇ ಅಲ್ಲ. ವಾಷಿಂಗ್ಟನ್ ಪೋಸ್ಟ್ ನಂಥ ಪ್ರಮುಖ ಪತ್ರಿಕೆಗಳೂ ಈ ಖೆಡ್ಡಾದೊಳಕ್ಕೆ ಬಿದ್ದುವು. ಮಾತ್ರವಲ್ಲ, ಬಳಿಕ ಅವು ಈ ಸುದ್ದಿಗಳ ಮೂಲವನ್ನು ಮತ್ತು ಅದರ ಉದ್ದೇಶವನ್ನು ಪತ್ತೆ ಹಚ್ಚಬೇಕಾದ ಒತ್ತಡಕ್ಕೂ ಒಳಗಾದುವು. ಕಳೆದ ನವೆಂಬರ್ 17ರಂದು, Facebook fake news writer: I think Donald Trump is in the  White House because of me’. (ಟ್ರಂಪ್ ಅಧ್ಯಕ್ಷರಾಗಿರುವುದು ನನ್ನಿಂದಾಗಿ ಎಂದ ಸುಳ್ಳುಸುದ್ದಿ ಬರಹಗಾರ) ಎಂಬ ಶೀರ್ಷಿಕೆಯಲ್ಲಿ ಅದು ಪೌಲ್ ಹಾರ್ನರ್ ಎಂಬ 38 ವರ್ಷದ ವ್ಯಕ್ತಿಯ ಸಂದರ್ಶನವನ್ನು ಪ್ರಕಟಿಸಿತು. ಹೆಚ್ಚಿನ ಸುಳ್ಸುದ್ದಿಗಳ ಜನಕ ಈತನಾಗಿದ್ದರೂ ಈತ ಟ್ರಂಪ್‍ರ ಬೆಂಬಲಿಗನೇನೂ ಆಗಿರಲಿಲ್ಲ. ‘ಟ್ರಂಪ್ ವಿರೋಧಿ ಪ್ರತಿಭಟನಾಕಾರರಲ್ಲಿ ಪ್ರತಿಯೋರ್ವರಿಗೆ 3500 ಡಾಲರ್ ಪಾವತಿಸಲಾಗುತ್ತಿದೆ’ ಎಂಬ ಸುಳ್ಳನ್ನು ಪ್ರಕಟಿಸಿದ ಬಳಿಕ ಆತ ಅದೇ ಪ್ರತಿಭಟನೆಯಲ್ಲಿ ಭಾಗವಹಿಸಿಯೂ ಇದ್ದ. ಆದರೂ ಆತ ಟ್ರಂಪ್ ರನ್ನೇ ಯಾಕೆ ಆಯ್ಕೆ ಮಾಡಿಕೊಂಡನೆಂದರೆ, ಅವರ ವಿಲಕ್ಷಣ ವ್ಯಕ್ತಿತ್ವಕ್ಕಾಗಿ. ಟ್ರಂಪ್ ಹೇಳಿರುವುದರಲ್ಲಿ 70% ಹೇಳಿಕೆಗಳೂ ಸುಳ್ಳು ಎಂಬುದಾಗಿ Politifact ಎಂಬ ಸಂಸ್ಥೆ ಸತ್ಯಾನ್ವೇಷಣೆ ನಡೆಸಿ ಬಹಿರಂಗಪಡಿಸಿತು. ಸಾರ್ವಜನಿಕವಾಗಿ ಟ್ರಂಪ್‍ರ ಬಗ್ಗೆ ಕುತೂಹಲವಿದೆ ಎಂಬುದನ್ನು ಪೌಲ್ ಹಾರ್ನರ್ ಅರಿತುಕೊಂಡಿದ್ದ. ಸುದ್ದಿ ತಯಾರಿಸಿ ಪ್ರಸಾರ ಮಾಡುವುದರಿಂದ ದುಡ್ಡು ಸಂಪಾದಿಸಿಕೊಳ್ಳಬಹುದು ಎಂಬುದನ್ನೂ ಖಾತರಿಪಡಿಸಿಕೊಂಡಿದ್ದ. ಹಾಗಂತ, ಸುಳ್ಸುದ್ದಿ ಸೃಷ್ಟಿಸುವವರಲ್ಲಿ ಪೌಲ್ ಹಾರ್ನರ್ ಒಂಟಿಯಲ್ಲ. ನವೆಂಬರ್ 25ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ‘Inside a fake news sausage factory: This is all about income’ (ನಕಲಿ ಸುದ್ದಿ: ಎಲ್ಲವೂ ಆದಾಯಕ್ಕಾಗಿ) ಎಂಬ ಶೀರ್ಷಿಕೆಯಲ್ಲಿ ಸಂದರ್ಶನಾಧಾರಿತ ಬರಹವನ್ನು ಪ್ರಕಟಿಸಿತು. ಜಾರ್ಜಿಯನ್ ಮೂಲದ ಬೆಕಾ ಲ್ಯಾಡ್ಸಾಬಿಡ್ಸ್ ಎಂಬ ವ್ಯಕ್ತಿ ಇದರ ಮುಖ್ಯ ಪಾತ್ರಧಾರಿಯಾಗಿದ್ದ. ಒಂದು ಆಕರ್ಷಕ ಸುದ್ದಿಯನ್ನು ತನ್ನ ವೆಬ್‍ಸೈಟ್‍ನಲ್ಲಿ ಹಾಕಿದಾಗ ಜನರು ಕುತೂಹಲಗೊಳ್ಳುತ್ತಾರೆ. ಹಾಗೆ ಸುದ್ದಿಯನ್ನು ಓದುತ್ತಾ ಓದುಗರು ಒಂದೋ ಅದರಲ್ಲಿರುವ ಜಾಹೀರಾತನ್ನು ನೋಡುತ್ತಾರೆ ಅಥವಾ ಕ್ಲಿಕ್ ಮಾಡುತ್ತಾರೆ. ಅದು ಆದಾಯವನ್ನು ತಂದುಕೊಡುತ್ತದೆ. ಬೆಕಾನಿಗೆ ಇತ್ತೀಚೆಗೆ ಹೆಚ್ಚು ಆದಾಯವನ್ನು ತಂದು ಕೊಟ್ಟ ಸುಳ್ಳು ಲೇಖನ ಯಾವುದೆಂದರೆ ‘ಮೆಕ್ಸಿಕೋದ ಗಡಿಯನ್ನು ಅಮೇರಿಕ ಮುಚ್ಚುತ್ತದೆ’ ಎಂಬುದು. ಗೂಗಲ್ ನಿಂದ ಹೆಚ್ಚಿನ ವರಮಾನ ಬರುತ್ತದೆ ಎಂದೂ ಬೇಕಾ ಹೇಳಿದ. ಹಾಗಂತ, ಎಲ್ಲರೂ ಬೆಕಾ ಅಲ್ಲ. ಕೆಲವರಿಗೆ ಅದೊಂದು ತಮಾಷೆ. ಇನ್ನೂ ಕೆಲವರಿಗೆ ತಮ್ಮ ನಾಯಕರ ಮೇಲಿರುವ ಅಪಾರ ಪ್ರೀತಿ-ಭಕ್ತಿ. ನರೇಂದ್ರ ಮೋದಿಯವರ ಸುತ್ತ ಅವರ ಬೆಂಬಲಿಗ ಗಣ ಹುಟ್ಟು ಹಾಕುತ್ತಿರುವ ಭ್ರಮೆಗಳನ್ನೊಮ್ಮೆ ಊಹಿಸಿ. ನೋಟು ಅಮಾನ್ಯತೆಗಾಗಿ ಸಂಭ್ರಮಿಸಿದ್ದನ್ನು ಎತ್ತಿಕೊಳ್ಳಿ. ನರೇಂದ್ರ ಮೋದಿಯವರ ಪ್ರತಿ ವೈಫಲ್ಯವನ್ನೂ ಸಾಧನೆಯೆಂಬಂತೆ ಜೋರು ದನಿಯಲ್ಲಿ ಆಚರಿಸುತ್ತಿರುವುದನ್ನು ವಿಶ್ಲೇಷಿಸಿ. ತೀರ್ಥಹಳ್ಳಿಯ ನಂದಿತಾ ಪ್ರಕರಣದಲ್ಲಿ ಈ ಮಂದಿ ಹಬ್ಬಿಸಿದ ಸುಳ್ಸುದ್ದಿ ಎಂತಹದ್ದು? ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹರೀಶ್ ಪೂಜಾರಿಯ ಹತ್ಯೆಯ ಹಿನ್ನೆಲೆಯಲ್ಲಿ ಹುಟ್ಟು ಹಾಕಲಾದ ಸುಳ್ಸುದ್ದಿ ಹೇಗಿತ್ತು? ಮುಝಫ್ಫರ್ ನಗರ್ ಹಿಂಸಾಚಾರಕ್ಕಿಂತ ಮೊದಲು ಬಿಜೆಪಿ ಶಾಸಕ ಸಂಗೀತ್ ಸೋಮ್ ತೇಲಿ ಬಿಟ್ಟ ನಕಲಿ ವೀಡಿಯೋದ ಅಸಲಿಯತ್ತು ಏನಾಗಿತ್ತು? ಅಷ್ಟಕ್ಕೂ, ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿಯವರು ಹೇಳುತ್ತಿದ್ದ ಮಾತುಗಳು ಹೇಗಿದ್ದುವು? ಅವರು ಪಾಕಿಸ್ತಾನವನ್ನು ಗುರಿಯಾಗಿಸಿದ್ದರೆ ಟ್ರಂಪ್ ಚೀನಾವನ್ನು ಗುರಿಯಾಗಿಸಿದರು. ವಿದೇಶದಲ್ಲಿರುವ ಕಪ್ಪು ಹಣವನ್ನು 100 ದಿನಗಳೊಳಗಾಗಿ ತರುವೆನೆಂದು ಮೋದಿಯವರು ಘೋಷಿಸಿದರೆ ಟ್ರಂಪ್ ವಿದೇಶಿಗರ ಪಾಲಾಗಿರುವ ಉದ್ಯೋಗಗಳನ್ನು ಕಸಿದು ದೇಶೀಯರಿಗೆ ಒದಗಿಸುವುದಾಗಿ ಘೋಷಿಸಿದರು. ಟ್ರಂಪ್ ಮತ್ತು ಮೋದಿ ಇಬ್ಬರ ಗುರಿಯೂ ನೇರವಾಗಿಯೋ ಪರೋಕ್ಷವಾಗಿಯೋ ಮುಸ್ಲಿಮರೇ. ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಎಂಬ ಡಯಲಾಗನ್ನು ನರೇಂದ್ರ ಮೋದಿಯವರು ಹೊಡೆದರೆ, ‘ಮೇಕ್ ಅಮೇರಿಕ ಗ್ರೇಟ್ ಅಗೈನ್’ ಎಂದು ಟ್ರಂಪ್ ಘೋಷಿಸಿದರು. ಟ್ರಂಪ್‍ರ ಈ ಘೋಷಣೆಯು ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ‘ವರ್ಡ್ ಆಫ್ ದಿ ಇಯರ್ 2016’ (ವರ್ಷದ ಘೋಷಣೆ) ಆಗಿ ಆಯ್ಕೆಯಾಯಿತು. ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದದ್ದೂ ಅನಿರೀಕ್ಷಿತವಾಗಿ. ನರೇಂದ್ರ ಮೋದಿಯವರು ನೋಟು ರದ್ದತಿಗೊಳಿಸಿದ್ದೂ ಅನಿರೀಕ್ಷಿತವಾಗಿ. ಇಬ್ಬರ ಹಾವಭಾವ-ವಿಚಾರಧಾರೆ-ಮಾತಿನ ಧಾಟಿಯಲ್ಲಿ ಸಾಕಷ್ಟು ಸಾಮ್ಯತೆಯಿದೆ. ಇಬ್ಬರ ಗೆಲುವಿನಲ್ಲೂ ನಕಲಿ ಸುದ್ದಿ ಮತ್ತು ಭ್ರಮೆಗಳಿಗೆ ಪಾತ್ರವಿದೆ. ಪೌಲ್ ಹಾರ್ನರ್ ನಂಥ ನೂರಾರು ಮಂದಿ ಇವತ್ತು ನರೇಂದ್ರ ಮೋದಿಯವರನ್ನು ಬಿಲ್ಡಪ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಪತ್ರಿಕೆ, ಸೋಶಿಯಲ್ ಮೀಡಿಯಾಗಳು ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಈ ಮಂದಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಮೇರಿಕದ ಪ್ರಮುಖ ಮಾಧ್ಯಮಗಳೂ ಯಾಮಾರಿದಂತೆಯೇ ಭಾರತೀಯ ಮಾಧ್ಯಮಗಳೂ ಸುಳ್ಸುದ್ದಿಯ ಖೆಡ್ಡಾಕ್ಕೆ ಬೀಳುತ್ತಿವೆ. ಸುದ್ದಿಯ ಮೂಲವನ್ನು ಪತ್ತೆಹಚ್ಚಿ, ನಿಕಷಕ್ಕೆ ಒಡ್ಡಿ ಪ್ರಕಟಿಸುವಷ್ಟು ಸಹನೆಯನ್ನು ಅನೇಕ ಬಾರಿ ಅವು ಪ್ರದರ್ಶಿಸುತ್ತಲೇ ಇಲ್ಲ. ಪೌಲ್ ಹಾರ್ನರ್ ಅಂಥವರು ಮೇಲುಗೈ ಪಡೆಯುವುದೇ ಇಂಥ ಸನ್ನಿವೇಶದಲ್ಲಿ. ಆತ ತಾನು ಸೃಷ್ಟಿಸಿದ ಸುಳ್ಸುದ್ದಿಯನ್ನು ಹೇಗೆ ಪ್ರಸಾರ ಮಾಡು ತ್ತಿದ್ದ ಅಂದರೆ, ಪ್ರಮುಖ ಮಾಧ್ಯಮಗಳ ಇಂಟರ್‍ನೆಟ್ ವಿಳಾಸದಂತೆ ತೋರಬಹುದಾದ ವಿಳಾಸವನ್ನು (URL) ಬಳಸುತ್ತಿದ್ದ. ಬಳಿಕ ಫೇಸ್‍ಬುಕ್‍ಗೆ ಪೋಸ್ಟ್ ಮಾಡುತ್ತಿದ್ದ. ಟ್ರಂಪ್ ಬೆಂಬಲಿಗರಂತೂ ಹಿಂದು-ಮುಂದು ನೋಡದೇ ಅದನ್ನು ಶೇರ್ ಮಾಡುತ್ತಿದ್ದರು. ‘ಎರಡೂವರೆ ಲಕ್ಷ ಸಿರಿಯನ್ ನಿರಾಶ್ರಿತರಿಗೆ ಅಮೇರಿಕದಲ್ಲಿ ನೆಲೆ ಒದಗಿಸಲಾಗುತ್ತಿದೆ..’ ಎಂಬ ಸುಳ್ಸುದ್ದಿಯು ಫಾಕ್ಸ್ ನ್ಯೂಸ್ ಚಾನೆಲ್‍ನಲ್ಲಿ ಪ್ರಮುಖ ಸುದ್ದಿಯಾಗಿ ಪ್ರಸಾರವಾಗಿತ್ತು. ಆ ಬಗ್ಗೆ ಅದು ಸಂವಾದವನ್ನೂ ಏರ್ಪಡಿಸಿತ್ತು. ಟ್ರಂಪ್ ವಿರೋಧಿ ಪ್ರತಿಭಟನಾಕಾರರಿಗೆ 3500 ಡಾಲರ್ ನೀಡಲಾಗುತ್ತದೆ ಎಂಬ ಪೌಲ್‍ರ ಸುಳ್ಸುದ್ದಿಯನ್ನು ಟ್ರಂಪ್‍ರ ಮಗ ಎರಿಕ್ ಮತ್ತು ಪ್ರಚಾರ ಮ್ಯಾನೇಜರ್ ಅವರೇ ಶೇರ್ ಮಾಡಿದ್ದರು. ಅಷ್ಟಕ್ಕೂ,
    ಭಾರತದಲ್ಲಿ ಎಷ್ಟು ಪೌಲ್ ಹಾರ್ನರ್‍ಗಳಿದ್ದಾರೋ..



Tuesday, December 13, 2016

ಪ್ರಧಾನಿಯವರೇ, ರೂ. 2000 ದ ನೋಟನ್ನೇಕೆ ಮುದ್ರಿಸಿದಿರಿ?

       ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ಧತಿ ಮಾಡುವುದಕ್ಕಿಂತ ಮೊದಲು ಈ ದೇಶದಲ್ಲಿ 500 ಮತ್ತು 1000 ಮುಖಬೆಲೆಯ 2100 ಕೋಟಿ ರೂಪಾಯಿ ನೋಟುಗಳಿದ್ದುವು. ಅದೇ ವೇಳೆ, ಈ ದೇಶದಲ್ಲಿರುವ ಒಟ್ಟು ನೋಟು ಮುದ್ರಣಾಲಯ ಗಳು ತಿಂಗಳಿಗೆ ಗರಿಷ್ಠ 300 ಕೋಟಿ ರೂಪಾಯಿಯನ್ನಷ್ಟೇ ಮುದ್ರಣ ಮಾಡಬಹುದಾಗಿತ್ತು. ಈ ಲೆಕ್ಕಾಚಾರದಂತೆ, ಅಮಾನ್ಯ ಗೊಳ್ಳುವ 2100 ಕೋಟಿ ರೂಪಾಯಿಯಷ್ಟು ಹೊಸ ನೋಟುಗಳನ್ನು ಮುದ್ರಣ ಮಾಡಬೇಕಾದರೆ ಕನಿಷ್ಠ 7 ತಿಂಗಳುಗಳಾದರೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮುಂದೆ ಎರಡು ಆಯ್ಕೆಗಳಿದ್ದುವು. ಒಂದು- ಹಳೆ ನೋಟುಗಳ ಬದಲಿಗೆ ಹೊಸ ಮಾದರಿಯ ಅಷ್ಟೇ ನೋಟುಗಳನ್ನು ಮುದ್ರಿಸುವುದು. ಈ ನೋಟುಗಳ ಮುದ್ರಣ ಪೂರ್ಣವಾಗುವವರೆಗೆ ಅಂದರೆ 7 ತಿಂಗಳ ವರೆಗೆ ಸಕಲ ಗೌಪ್ಯತೆಯನ್ನೂ ಕಾಪಾಡುವುದು. ಇನ್ನೊಂದು- ಸಾವಿರ ಮುಖಬೆಲೆಯ ನೋಟಿನ ಬದಲು ದುಪ್ಪಟ್ಟು ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು. ಉದಾಹರಣೆ 2000 ಮುಖಬೆಲೆಯ ನೋಟುಗಳು. ಹೀಗೆ ಮಾಡುವುದರಿಂದ ನೋಟು ಮುದ್ರಣಕ್ಕಿರುವ ಅವಧಿಯು ಕಡಿಮೆಯಾಗುತ್ತದೆ. ಆದರೆ ಇದು ಕೊಡುವ ಸಂದೇಶ ಏನೆಂದರೆ, ಸರಕಾರ ಯಾವುದೋ ತುರ್ತಿನಲ್ಲಿದೆ ಎಂಬುದನ್ನು. ಆ ತುರ್ತು ಯಾವುದು? ಮೂಲ ನೋಟುಗಳಷ್ಟೇ ಹೊಸ ನೋಟುಗಳನ್ನು ಮುದ್ರಿಸಲೂ ಸಮಯವಿಲ್ಲದಷ್ಟು ದಿಢೀರ್ ತುರ್ತುಸ್ಥಿತಿ ನಿರ್ಮಾಣವಾಗಿರುವುದು ಹೇಗೆ, ಯಾಕೆ ಮತ್ತು ಎಲ್ಲಿ? ಇದೇ ವೇಳೆ, ಮೂಲ ನೋಟುಗಳಿಗೆ ಬದಲಿಯಾಗಿ ಹೊಸ ನೋಟುಗಳನ್ನು ಮುದ್ರಿಸುವುದಕ್ಕಿರುವ ಕಾರಣಗಳೂ ಇಲ್ಲಿ ಮುಖ್ಯವಾಗುತ್ತವೆ. ಹೊಸ ನೋಟುಗಳ ಮುದ್ರಣಕ್ಕೆ ಕೇಂದ್ರ ಸರಕಾರ ಕೊಟ್ಟಿರುವ ಎರಡು ಪ್ರಮುಖ ಕಾರಣಗಳಲ್ಲಿ ಒಂದು ನಕಲಿ ನೋಟು. ಪಾಕಿಸ್ತಾನದಲ್ಲಿ ನಕಲಿ ನೋಟು ಮುದ್ರಣ ಕೇಂದ್ರಗಳಿವೆ ಮತ್ತು ಆ ನೋಟುಗಳನ್ನು ಭಾರತದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಲು ಬಳಸಲಾಗುತ್ತಿದೆ ಎಂಬುದು ಸರಕಾರದ ಸಮರ್ಥನೆಯಾಗಿತ್ತು. ಹಾಗಾದರೆ ರೂ. 2000 ಮುಖಬೆಲೆಯ ನೋಟುಗಳನ್ನು ಯಾಕೆ ಚಲಾವಣೆಗೆ ತರಲಾಯಿತು? ನೋಟುಗಳ ಮುಖಬೆಲೆ ಹೆಚ್ಚಾದಷ್ಟೂ ನಕಲಿ ನೋಟು ತಯಾರಕರಿಗೆ ಲಾಭವಾಗುತ್ತದೆ. ರೂ. 1000 ಮುಖಬೆಲೆಯ ಎರಡು ನೋಟು ಮುದ್ರಣ ಮಾಡುವಲ್ಲಿ ಅವರು ರೂ. 2000 ಮುಖಬೆಲೆಯ ಒಂದೇ ನೋಟನ್ನು ಮುದ್ರಣ ಮಾಡಿದರೆ ಸಾಕಾಗುತ್ತದೆ. ಇದು ಎಲ್ಲರಿಗೂ ಗೊತ್ತು. ಹೀಗಿರುವಾಗ, ಕೇಂದ್ರ ಸರಕಾರ ಒಂದು ಕಡೆ ನಕಲಿ ನೋಟಿನ ಹಾವಳಿಯನ್ನು ತಡೆಯುತ್ತೇನೆಂದು ಹೇಳುತ್ತಾ ಇನ್ನೊಂದು ಕಡೆ ಪಾಕಿಸ್ತಾನದ ನಕಲಿ ನೋಟು ತಯಾರಕರಿಗೆ ಲಾಭವಾಗಬಹುದಾದ ನಿರ್ಧಾರವನ್ನು ಕೈಗೊಂಡದ್ದೇಕೆ? ನಿಜವಾಗಿ, ಕೇಂದ್ರ ಸರಕಾರದ ಉದ್ದೇಶ ಶುದ್ಧಿ ಪ್ರಶ್ನೆಗೀಡಾಗುವುದೇ ಇಲ್ಲಿ. ಅದು ನೋಟು ರದ್ಧತಿಗೆ ಕೊಟ್ಟಿರುವ ಕಾರಣಗಳನ್ನು ರೂ. 2000 ನೋಟುಗಳು ಖಂಡಿತ ಸಂದೇಹಾಸ್ಪದವಾಗಿಸುತ್ತವೆ. ಬಹುಶಃ, ನರೇಂದ್ರ ಮೋದಿಯವರು ನಿಜಕ್ಕೂ ಕಾಳಧನ ಮತ್ತು ನಕಲಿ ನೋಟಿನ ಹಾವಳಿಯನ್ನು ತಡೆಯುವ ಏಕೈಕ ಸದುದ್ದೇಶದಿಂದಲೇ ನೋಟು ರದ್ಧತಿ ನಿರ್ಧಾರ ಕೈಗೊಳ್ಳುವುದಾದರೆ, ಅದಕ್ಕೆ ನಿಖರವಾದ ಪೂರ್ವ ತಯಾರಿಯನ್ನು ಖಂಡಿತ ಮಾಡಿಕೊಳ್ಳುತ್ತಿದ್ದರು. ಬೇಕಾದರೆ ರೂ. 1000 ಮುಖ ಬೆಲೆಯ ನೋಟನ್ನು ರದ್ದುಗೊಳಿಸುವುದು ಕೂಡ ನಕಲಿ ನೋಟಿನ ಹಾವಳಿಯನ್ನು ತಡೆಯುವುದಕ್ಕೆ ಪೂರಕವಾಗುತ್ತಿತ್ತು. ನೋಟಿನ ಮುಖಬೆಲೆ ಕಡಿಮೆಯಾದಷ್ಟೂ ನಕಲಿ ನೋಟು ತಯಾರಕರಿಗೆ ಸಮಸ್ಯೆ ಜಾಸ್ತಿಯಾಗುತ್ತದೆ. ಮೋದಿಯವರ ಉದ್ದೇಶ ನಿಜವೇ ಆಗಿರುತ್ತಿದ್ದರೆ, ಈಗ ಚಲಾವಣೆಯಲ್ಲಿರುವ ಎಲ್ಲಾ ನೋಟುಗಳಿಗೆ ಬದಲಿಯಾಗಿ ಹೊಸ ನೋಟುಗಳನ್ನು ಸಂಪೂರ್ಣವಾಗಿ ಮುದ್ರಿಸುವವರೆಗೆ ಕಾಯಬೇಕಿತ್ತು. ನೋಟು ರದ್ಧತಿ ಜಾರಿಗೊಂಡ ಕೂಡಲೇ ಪರ್ಯಾಯ ನೋಟುಗಳನ್ನು ಜನರಿಗೆ ಒದಗಿಸುವುದಕ್ಕೆ ಸಾಕಾಗುವಷ್ಟು ನೋಟುಗಳ ಮುದ್ರಣ ನಡೆದಿರಬೇಕಿತ್ತು. ಎಟಿಎಂ ವ್ಯವಸ್ಥೆಯನ್ನು ಸಜ್ಜುಗೊಳಿಸಿ ಇಡಬಹುದಿತ್ತು ಅಥವಾ ಹೀಗೆ ಮಾಡುವುದು ಗೌಪ್ಯತೆಯ ದೃಷ್ಟಿಯಿಂದ ಅಪಾಯಕಾರಿ ಎಂದಾದರೆ ನೋಟು ರದ್ಧತಿಗೊಂಡ ಮರುದಿನವೇ ದೇಶದಾದ್ಯಂತ ಎಟಿಎಂಗಳ ಮರು ಜೋಡಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಇಲ್ಲಿರುವ ಇನ್ನೊಂದು ಪ್ರಶ್ನೆಯೇನೆಂದರೆ, ನವೆಂಬರ್ ತಿಂಗಳಲ್ಲೇ ನೋಟು ರದ್ಧತಿ ಮಾಡಬೇಕೆಂಬ ನಿಯಮವೇನೂ ಇತ್ತೇ? ಎಲ್ಲ ತಯಾರಿ ಮತ್ತು ಗೌಪ್ಯತೆಯೊಂದಿಗೆ ಮುಂದಿನ ವರ್ಷವೂ ನೋಟು ರದ್ಧತಿಯನ್ನು ಮಾಡಬಹುದಿತ್ತಲ್ಲ. ನಿಜವಾಗಿ, ಅಸಲು ವಿಷಯ ಬಹಿರಂಗವಾಗುವುದೇ ಇಲ್ಲಿ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಳಧನ ಮತ್ತು ನಕಲಿ ನೋಟಿಗಿಂತ 2017ರ ಆರಂಭದಲ್ಲಿ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳು ಮುಖ್ಯವಾಗಿದ್ದುವು. ವಿಶೇಷವಾಗಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಗೆಲ್ಲಲೇ ಬೇಕಾದ ಒತ್ತಡವೊಂದು ಅವರ ಎದುರಿತ್ತು. ಹಾಗಂತ, ಸಾಧನೆಯನ್ನೇ ಎದುರಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಎಂದರೆ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳಬಹುದಾದ ಸಾಧನೆಯೇನೂ ಅವರ ಜೊತೆಯಿರಲಿಲ್ಲ. ಕಳೆದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಗಳಲ್ಲಿ ರಾಮಮಂದಿರವೂ ಒಂದಾಗಿತ್ತು. ರಾಮಮಂದಿರ ನಿರ್ಮಾಣಕ್ಕಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಟ್ಟಿಗೆಗಳನ್ನು ತಂದಿರಿಸಿ ಎರಡೂವರೆ ದಶಕಗಳೇ ಕಳೆದಿವೆ. ರಾಮಮಂದಿರವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ ಬಳಿಕ ಬಿಜೆಪಿ ನೇತೃತ್ವದ ಎನ್‍ಡಿಎ ಈ ಮೊದಲೂ ಅಧಿಕಾರಕ್ಕೆ ಬಂದಿತ್ತು. ಆದರೆ ಭರವಸೆಯನ್ನು ಈಡೇರಿಸಿರಲಿಲ್ಲ. ಹಾಗಂತ, ಆಗ ಬಹುಮತವಿರಲಿಲ್ಲ ಎಂಬ ಸಬೂಬಾದರೂ ಇತ್ತು. ಈಗ ಅಂಥ ಸಬೂಬನ್ನೂ ಕೊಡುವಂತಿಲ್ಲ. ಪಾರ್ಲಿಮೆಂಟ್‍ನಲ್ಲಿ ವಿಶೇಷ ಮಸೂದೆಯೊಂದನ್ನು ಪಾಸು ಮಾಡಿಕೊಂಡು ಮಂದಿರ ನಿರ್ಮಿಸಬಹುದಲ್ಲವೇ ಎಂದು ಬಿಜೆಪಿಯ ಬೆಂಬಲಿಗರು ಪ್ರಶ್ನಿಸುತ್ತಿರುವುದನ್ನು ನರೇಂದ್ರ ಮೋದಿ ಬಲ್ಲರು. ಎರಡನೆಯದಾಗಿ, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಪ್ರತಿಯೋರ್ವನ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವೆನೆಂದು ಮೋದಿಯವರು ಎರಡೂವರೆ ವರ್ಷಗಳ ಹಿಂದೆ ಭಾರತೀಯರಿಗೆ ಭರವಸೆ ನೀಡಿದ್ದರು. ಕಳೆದ ಚುನಾವಣೆಯಲ್ಲಿ ಪಾರ್ಲಿಮೆಂಟ್‍ನಲ್ಲಿ ಬಹುಮತ ಪಡೆದಿರುವುದಕ್ಕೆ ಕಾಳಧನದ ಬಗ್ಗೆ ಅವರು ನೀಡಿದ ಭರವಸೆಯೂ ಒಂದು ಕಾರಣವಾಗಿತ್ತು. ಆದರೆ, ನರೇಂದ್ರ ಮೋದಿಯವರಿಗೆ ಕೊಟ್ಟ ಮಾತನ್ನು ಉಳಿಸಲಾಗಲಿಲ್ಲ ಎಂದು ಮಾತ್ರವಲ್ಲ ದೊಡ್ಡ ದೊಡ್ಡ ಕಾಳಧನಿಕರನ್ನು ಕನಿಷ್ಠ ಭಾರತದಿಂದ ಹೊರಹೋಗದಂತೆ ತಡೆಯಲೂ ಸಾಧ್ಯವಾಗಲಿಲ್ಲ. ಲಲಿತ್ ಮೋದಿ, ವಿಜಯ್ ಮಲ್ಯರು ಈ ಸರಕಾರದ ಮುಂದಿನಿಂದಲೇ ಹೊರದೇಶಕ್ಕೆ ಎದ್ದು ಹೋದರು. ಈ ಮಧ್ಯೆ ಸ್ವಿಸ್ ಬ್ಯಾಂಕ್, ಮಾರಿಷಸ್, ಸಿಂಗಾಪುರ್ ಸಹಿತ ವಿವಿಧ ಬ್ಯಾಂಕ್‍ಗಳಲ್ಲಿರುವ ಕಪ್ಪು ಹಣದ ವಿವರಗಳು ಆಗಾಗ ಮಾಧ್ಯಮಗಳಲ್ಲಿ ಪ್ರಕಟವೂ ಆದುವು. ಪನಾಮಾ ಪೇಪರ್ ಮೂಲಕವೂ ಕಾಳಧನಿಕರು ಬಹಿರಂಗಕ್ಕೆ ಬಂದರು. ಆದರೆ ಹದಿನೈದು ಲಕ್ಷ ಬಿಡಿ, ಹದಿನೈದು ಪೈಸೆಯನ್ನು ಕೂಡ ವಿದೇಶದಿಂದ ಭಾರತಕ್ಕೆ ತರಲು ಅವರಿಂದ ಸಾಧ್ಯವಾಗಲಿಲ್ಲ. ಇದರ ಬದಲು ಕಾಳಧನಿಕರು ಎಂಬ ಅಪವಾದವನ್ನು ಹೊತ್ತಿರುವ ಅಂಬಾನಿ, ಅದಾನಿಗಳೊಂದಿಗೆ ಸಲುಗೆಯ ಸಂಬಂಧವನ್ನಿರಿಸಿಕೊಂಡು ವೈಯಕ್ತಿಕ ವರ್ಚಸ್ಸಿಗೂ ಧಕ್ಕೆ ತಂದುಕೊಂಡರು. ಚುನಾವಣೆಗೆ ಮೊದಲು ಪಾಕಿಸ್ತಾನದ ಬಗ್ಗೆ ನರೇಂದ್ರ ಮೋದಿಯವರ ಮಾತುಗಳು ಎಷ್ಟು ಕಠಿಣವಾಗಿತ್ತೋ ಪ್ರಧಾನಿಯಾದ ಬಳಿಕ ಅವು ತೀರಾ ಮೃದುವಾದಂತೆ ಕಂಡವು. ಪಾಕ್‍ಗೆ ದಿಢೀರ್ ಭೇಟಿ ಕೊಟ್ಟು ನವಾಝï ಶರೀಫ್‍ರನ್ನು ಸಂದರ್ಶಿಸಿದ್ದು, ಅವರ ತಾಯಿಗೆ ಉಡುಗೊರೆ ಕೊಟ್ಟದ್ದು.. ಒಂದು ಹಂತದ ವರೆಗೆ ಅವರ ಕಠಿಣ ವರ್ಚಸ್ಸನ್ನು ತೆಳ್ಳಗಾಗಿಸಿದುವು. ದಾವೂದ್ ಇಬ್ರಾಹೀಮ್‍ನನ್ನು ಭಾರತಕ್ಕೆ ಕರೆ ತರುವ ಬಗ್ಗೆ ಹುಟ್ಟಿಸಿದ್ದ ಭರವಸೆಗಳೂ ಹುಸಿಯಾದುವು. ಕಳೆದ ಎರಡೂವರೆ ವರ್ಷಗಳಲ್ಲಿ ವಿದೇಶ ಯಾತ್ರೆಯ ಹೊರತಾಗಿ ಸಾಧನೆಯ ಕಾರಣಕ್ಕಾಗಿ ನರೇಂದ್ರ ಮೋದಿಯವರು ಗುರುತಿಸಿಕೊಂಡಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಮಾತಿನಲ್ಲಿ ಅರಮನೆಯನ್ನು ಕಟ್ಟಿದರೇ ಹೊರತು ನಿರ್ಮಾಣಾತ್ಮಕ ಸಾಧನೆಯ ದೃಷ್ಟಿಯಿಂದ ಅವರು ವಿಫಲ ಪ್ರಧಾನಿ. ಈ ಮಧ್ಯೆ ದಲಿತರ ಮೇಲಿನ ಹಲ್ಲೆ ಮತ್ತು ದೌರ್ಜನ್ಯಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾದುವು. ‘ಉನಾ ಚಳವಳಿ’ ನಡೆಯಿತು. ಮುಸ್ಲಿಮರ ಮೇಲಿನ ದೌರ್ಜನ್ಯಗಳಲ್ಲೂ ಹೆಚ್ಚಳವಾಯಿತು. ಪಟೇಲ್ ಮೀಸಲಾತಿ ಹೋರಾಟ, ಜಾಟ್ ಮೀಸಲಾತಿ ಹೋರಾಟ, ಮರಾಠಾ ಚಳವಳಿ.. ಹೀಗೆ ಒಂದೊಂದು ಸಮುದಾಯವೇ ಬೀದಿಗೆ ಇಳಿದು ಭಾರೀ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದೂ ನಡೆಯಿತು. ಆದ್ದರಿಂದ ಬಿಜೆಪಿಯು ಈಗಿರುವ ಮುಖವನ್ನೇ ಹೊತ್ತುಕೊಂಡು ಉತ್ತರ ಪ್ರದೇಶಕ್ಕೆ ಹೋಗುವುದು ಒಂದು ರೀತಿಯಲ್ಲಿ ಜೂಜೇ ಆಗುತ್ತಿತ್ತು. ಅಲ್ಲದೇ ಉತ್ತರ ಪ್ರದೇಶದಲ್ಲಿ ದಲಿತ-ಹಿಂದುಳಿದ ಮತಗಳೇ ನಿರ್ಣಾಯಕ. ಉನಾ ಘಟನೆಯು ದಲಿತ ಮತ್ತು ಹಿಂದುಳಿದ ವರ್ಗದಲ್ಲಿ ತೀವ್ರ ಅಸಂತೃಪ್ತಿಯನ್ನು ಹುಟ್ಟಿಸಿತ್ತು. ದಲಿತರ ಮೇಲೆ ದೌರ್ಜನ್ಯ ಎಸಗುವವರು ಬಿಜೆಪಿ ಬೆಂಬಲಿಗರು ಎಂಬ ಭಾವನೆ ಬಹುತೇಕ ಸಾಮಾನ್ಯವಾಗಿತ್ತು. ಇವು ಮತ್ತು ಇಂಥ ಬಿಜೆಪಿ ವಿರೋಧಿ ವಾತಾವರಣದ ಹಿನ್ನೆಲೆಯಲ್ಲಿ ದಿಢೀರ್ ಆದ ಏನಾದರೊಂದು ಕ್ರಮವನ್ನು ನರೇಂದ್ರ ಮೋದಿಯವರು ಕೈಗೊಳ್ಳಲೇಬೇಕಿತ್ತು. ಈಗಿನ ರೀತಿಯಲ್ಲೇ ಉತ್ತರ ಪ್ರದೇಶಕ್ಕೆ ಹೋದರೆ ಮಾಯಾವತಿ, ಮುಲಾಯಂ ಸಿಂಗ್, ಕಾಂಗ್ರೆಸ್ ಮತ್ತು ಲಾಲೂ, ನಿತೀಶ್ ಮತ್ತಿತರರ ಎದುರು ಪರಾಭವ ಹೊಂದುವ ಎಲ್ಲ ಸಾಧ್ಯತೆಗಳೂ ಇದ್ದವು. ಈ ಕಾರಣದಿಂದಲೇ ನರೇಂದ್ರ ಮೋದಿಯವರು ದಿಢೀರ್ ಆಗಿ ನೋಟು ರದ್ಧತಿಯನ್ನು ಘೋಷಿಸಿದ್ದಾರೆ. ಈ ದಿಢೀರ್ ಘೋಷಣೆಯಿಂದಾಗಿ ಆಗಬಹುದಾದ ಹಣದ ಕೊರತೆಯನ್ನು ನಿಭಾಯಿಸುವುದಕ್ಕಾಗಿ ರೂ. 2000 ಮುಖಬೆಲೆಯ ನೋಟಿನ ಮುದ್ರಣಕ್ಕೆ ಕೈ ಹಾಕಿದ್ದಾರೆ. ಹೀಗೆ ಮಾಡುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಗಂಭೀರ ವಿಶ್ಲೇಷಣೆ ನಡೆಸದಷ್ಟೂ ಪರಿಸ್ಥಿತಿ ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. ಒಂದು ವೇಳೆ, ಸಮಸ್ಯೆ ಎದುರಾದರೆ ಅದನ್ನು ಕಪ್ಪು ಹಣದ ವಿರುದ್ಧದ ಸಮರದ ಹೆಸರಲ್ಲಿ ಮತ್ತು ದೇಶಪ್ರೇಮದ ಹೆಸರಲ್ಲಿ ಸಮರ್ಥಿಸಿಕೊಳ್ಳಬಹುದೆಂದು ಅವರು ತೀರ್ಮಾನಿಸಿರಬೇಕು. ಆದ್ದ ರಿಂದಲೇ “ನನ್ನನ್ನು ಸುಟ್ಟರೂ ನಾನು ಹಿಂದಡಿ ಇಡಲಾರೆ..” ಎಂಬ ಭಾವನಾತ್ಮಕ ಮಾತುಗಳ ಮೊರೆ ಹೋಗಿರುವುದು. ಅಷ್ಟಕ್ಕೂ, ಪಾರ್ಲಿಮೆಂಟ್‍ನಲ್ಲಿ ಬಹುಮತ ಇರುವ ಪಕ್ಷದ ನಾಯಕರಾಗಿ ಮತ್ತು ಪಕ್ಷಕ್ಕಿಂತ ಮಿಗಿಲಾದ ವರ್ಚಸ್ಸನ್ನು ಹೊಂದಿರುವ ವ್ಯಕ್ತಿಯಾಗಿ ಮೋದಿಯವರನ್ನು ಸುಡುವವರು ಯಾರು? ಬಿರುಬಿಸಿಲಿಗೆ ಅನ್ನ ನೀರಿಲ್ಲದೆ ಬ್ಯಾಂಕ್‍ನ ಮುಂದೆ ಸರತಿಯಲ್ಲಿ ನಿಂತು ಕಾಯುತ್ತಿರುವ ಬಡವರೇ? ಕೂಲಿ ಕಾರ್ಮಿಕರೇ? ಪ್ಲಂಬರ್, ಪೈಂಟರ್, ಕಸ ಗುಡಿಸುವವರು, ಬೀದಿ ಬದಿ ವ್ಯಾಪಾರಿಗಳೇ? ನಿಜವಾಗಿ,
       ಮೋದಿಯವರ ರಾಜಕೀಯ ಉದ್ದೇಶದ ತೀರ್ಮಾನವು ಇವರೆಲ್ಲರನ್ನೂ ಸುಡುತ್ತಿದೆ.

Sunday, December 4, 2016

ಒಂದೇ ವೇದಿಕೆಯಲ್ಲಿ ಒಟ್ಟಾದವರು ಇಳಿದು ಹೋದ ಬಳಿಕ..

         ಶಾಬಾನು
         ಶಾಯರಾ ಬಾನು
        ಭಾರತೀಯ ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳನ್ನು ಮೊಟ್ಟ ಮೊದಲು ಒಂದೇ ವೇದಿಕೆಗೆ ಸೇರಿಸಿದ್ದು ಬಹುಶಃ ಶಾಬಾನು ಎಂಬ ಮಹಿಳೆ. ಆಕೆಯ ಪತಿ ಮುಹಮ್ಮದ್ ಅಹ್ಮದ್ ಖಾನ್ ಎಂಬವರು ಮಧ್ಯಪ್ರದೇಶದಲ್ಲಿ ನ್ಯಾಯ ವಾದಿಯಾಗಿದ್ದರು. ಅವರು ಇನ್ನೊಂದು ಮದುವೆಯೂ ಆದರು. ಇಬ್ಬರು ಪತ್ನಿಯರೊಂದಿಗೆ ವರ್ಷಗಳ ವರೆಗೆ ಸಂಸಾರವನ್ನೂ ನಡೆಸಿದರು. ಆದರೆ, 1978ರಲ್ಲಿ ಶಾಬಾನುಗೆ ತಲಾಕ್ ಹೇಳಿದರು. ಹೀಗೆ ತಲಾಕ್ ಹೇಳುವಾಗ ಪ್ರತಿ ತಿಂಗಳು 200 ರೂಪಾಯಿ ಮಾಸಾಶನ ನೀಡುವುದಾಗಿಯೂ ಭರವಸೆ ನೀಡಿದ್ದರು. ಆದರೆ ಮಾತಿಗೆ ತಪ್ಪಿದರು. ಇದನ್ನು ಪ್ರಶ್ನಿಸಿ ಶಾಬಾನು ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಕೋರ್ಟ್‍ನ ತೀರ್ಪು ಮುಸ್ಲಿಮ್ ಸಮುದಾಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಯಿತು. ಮುಸ್ಲಿಮರ ವೈಯಕ್ತಿಕ ನಿಯಮದಲ್ಲಿ ಸುಪ್ರೀಮ್ ಕೋರ್ಟ್ ಮಧ್ಯ ಪ್ರವೇಶಿಸಿದ್ದು ತಪ್ಪು ಎಂಬ ಅಭಿಪ್ರಾಯ ಬಲವಾಗಿ ಕೇಳಿ ಬಂತು. ಈ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಿಕೊಂಡು ಪ್ರತಿಭಟಿಸಲು ತೀರ್ಮಾನಿಸಿದುವು. ಅದರ ಬಳಿಕ ಮುಸ್ಲಿಮ್ ಸಮುದಾಯದ ಬೇರೆ ಬೇರೆ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಈ 2016ರ ಕೊನೆಯಲ್ಲಿ. ಅದಕ್ಕೆ ಕಾರಣ ಛತ್ತೀಸ್‍ಗಢದ ಶಾಯರಾ ಬಾನು ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ. ಶಾಯರಾ ಬಾನು ತನಗೆ ನೀಡಲಾದ ವಿಚ್ಛೇದನವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಕೋರ್ಟು ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೋರಿ ನೋಟೀಸನ್ನೂ ಜಾರಿ ಮಾಡಿತು. ಸಮಾನ ನಾಗರಿಕ ಸಂಹಿತೆಯ ಕುರಿತು ಚರ್ಚೆಯನ್ನೂ ಹುಟ್ಟು ಹಾಕಿತು. ಕೇಂದ್ರ ಸರಕಾರದ ಕಾನೂನು ಆಯೋಗವು ಈ ಕುರಿತಾಗಿ 16 ಪ್ರಶ್ನೆಗಳನ್ನೂ ಬಿಡುಗಡೆಗೊಳಿಸಿತು. ಈ ಎಲ್ಲ ಚಟುವಟಿಕೆಗಳು ಮುಸ್ಲಿಮ್ ಸಮುದಾಯದಲ್ಲಿ ಮತ್ತೆ ತಲ್ಲಣವನ್ನು ಸೃಷ್ಟಿಸಿದೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಿದ್ದ ಸಂಘಟನೆಗಳೆಲ್ಲ ಒಟ್ಟಾಗಿವೆ. ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಕಳೆದವಾರ (ನ. 22) ಬೃಹತ್ ಶರೀಯತ್ ಸಂರಕ್ಷಣಾ ಸಭೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದರು. 30ಕ್ಕಿಂತಲೂ ಅಧಿಕ ಸಂಘಟನೆಗಳ ನಾಯಕರು ವೇದಿಕೆಯಲ್ಲಿ ಒಟ್ಟಾದರು. ವಿಶೇಷ ಏನೆಂದರೆ, ಸಭಿಕರಿಂದ ಅತ್ಯಂತ ಹೆಚ್ಚು ಬಾರಿ ಅಲ್ಲಾಹು ಅಕ್ಬರ್ ಎಂಬ ಘೋಷವಾಕ್ಯ ಕೇಳಿಬಂದದ್ದು ಮತ್ತು ಭಾವುಕವಾಗಿ ಪ್ರತಿಕ್ರಿಯಿಸಿದ್ದು ವೇದಿಕೆಯಿಂದ ಐಕ್ಯತೆಯ ಮಾತುಗಳು ಮೊಳಗುತ್ತಿದ್ದಾಗ. ವೇದಿಕೆಯಲ್ಲಿರುವ ನಾಯಕರು ಐಕ್ಯತೆಯ ಅಗತ್ಯದ ಬಗ್ಗೆ ಹೇಳಿದಾಗಲೆಲ್ಲ ಸಭಿಕರು ಅಪಾರ ಹರ್ಷದಿಂದ ಸ್ವಾಗತಿಸಿದರು. ಇಲ್ಲಿರುವ ಪ್ರಶ್ನೆ ಏನೆಂದರೆ, ಸಭಿಕರ ಈ ಪ್ರತಿಕ್ರಿಯೆಯಲ್ಲಿರುವ ಒಳಾರ್ಥವನ್ನು ವೇದಿಕೆಯಲ್ಲಿರುವ ನಾಯಕರು ಎಷ್ಟಂಶ ಅರ್ಥ ಮಾಡಿಕೊಂಡಿದ್ದಾರೆ  ಮತ್ತು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು. ಮಂಗಳೂರಿನ ಕಾರ್ಯಕ್ರಮ ಮುಗಿದಿದೆ. ವೇದಿಕೆಯಲ್ಲಿದ್ದ ನಾಯಕರೆಲ್ಲ ವೇದಿಕೆಯಿಂದಿಳಿದು ತಂತಮ್ಮ ಸಂಘಟನೆ ಗಳಿಗೆ ಮರಳಿದ್ದಾರೆ. ನಿಜವಾಗಿ, ವೇದಿಕೆಯಲ್ಲಿ ಒಟ್ಟಾದುದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಇರುವುದು ಮುಂದಿನ ದಿನಗಳಲ್ಲಿ. ಈ ಐಕ್ಯತೆಗೆ ಭಂಗ ಬರದಂತೆ ನೋಡಿ ಕೊಳ್ಳುವುದು ಹೇಗೆ? ಈ ಒಗ್ಗಟ್ಟನ್ನು ಕಾಪಾಡಿಕೊಳ್ಳುವುದು ಹೇಗೆ? ಒಗ್ಗಟ್ಟು ಮುರಿಯದಂಥ ಯಾವೆಲ್ಲ ಧೋರಣೆಗಳನ್ನು ಸಂಘಟನೆಗಳು ಕೈಗೊಳ್ಳಬಹುದು? ಒಗ್ಗಟ್ಟು ಮುರಿಯಬಹುದಾದಂಥ ವಿಷಯಗಳು ಯಾವುವು? ಅವುಗಳ ಬಗ್ಗೆ ಇನ್ನು ಮುಂದಕ್ಕೆ ಯಾವ ನೀತಿಯನ್ನು ಅಳವಡಿಸಿಕೊಳ್ಳಬಹುದು?
     ವೇದಿಕೆಯಿಂದ ಕೆಳಗಿಳಿದ ಸಂಘಟನೆಗಳ ನಾಯಕರು ಆತ್ಮಾವ ಲೋಕನ ನಡೆಸಬೇಕಾದ ಸಂದರ್ಭವಿದು.
        ಮುಸ್ಲಿಮ್ ಸಮುದಾಯಕ್ಕೆ ಸಂಘಟನೆಗಳಿಂದ ತೊಂದರೆ ಆಗಿಲ್ಲ. ಆದರೆ ಅವುಗಳು ತಮ್ಮ ವಿಚಾರವನ್ನು ವ್ಯಕ್ತಪಡಿಸುವ ರೀತಿಯಿಂದ ಸಾಕಷ್ಟು ತೊಂದರೆಗಳಾಗಿವೆ. ಅಂದಹಾಗೆ, ಎಲ್ಲ ಸಂಘಟನೆಗಳಲ್ಲೂ ಒಂದು ಸಮಾನ ಅಂಶ ಇದೆ. ಅದೇನೆಂದರೆ, ಮುಸ್ಲಿಮ್ ಸಮುದಾಯವನ್ನು ಧಾರ್ಮಿಕವಾಗಿ ಹೆಚ್ಚು ಪ್ರಜ್ಞಾವಂತಗೊಳಿಸುವುದು. ಒಂದಕ್ಕಿಂತ ಹೆಚ್ಚು ಸಂಘಟನೆಗಳು ಕೇವಲ ಈ ಏಕ ಅಜೆಂಡಾವನ್ನೇ ಪ್ರಮುಖ ಗುರಿಯಾಗಿಸಿಕೊಂಡು ಕಾರ್ಯಪ್ರವೃತ್ತವಾಗಿವೆ. ಅದರ ಜೊತೆಗೇ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿಯೂ ಅಭಿವೃದ್ಧಿಯತ್ತ ಸಾಗಿಸುವ ಮತ್ತು ಸಮಾಜದಲ್ಲಿ ಸೌಹಾರ್ದ ವಾತಾವರಣವನ್ನು ಉಳಿಸುವ ಉದ್ದೇಶದೊಂದಿಗೆ ಕಾರ್ಯ ಪ್ರವೃತ್ತವಾದ ಸಂಘಟನೆಯೂ ಇದೆ. ಇನ್ನು, ಯಾವುದಾದರೊಂದು ನಿಶ್ಚಿತ ಕ್ಷೇತ್ರಕ್ಕೆ ಮಾತ್ರ ಗಮನವನ್ನು ಕೇಂದ್ರೀಕರಿಸಿಕೊಂಡು ಚಟುವಟಿಕೆಯಲ್ಲಿರುವ ಸಂಘಟನೆಗಳೂ ಇವೆ. ಉದಾ: ಶಿಕ್ಷಣ, ಆರೋಗ್ಯ, ಸೇವೆ ಇತ್ಯಾದಿ ಇತ್ಯಾದಿ. ಅಂತೂ ಎಲ್ಲ ಸಂಘಟನೆಗಳ ಮುಖ್ಯ ಗುರಿ ಸಮುದಾಯ, ಸಮುದಾಯದ ಅಭಿವೃದ್ಧಿ ಮತ್ತು ದೇಶದ ಜನರಿಗೆ ಇಸ್ಲಾಮಿನ ನಿಜವಾದ ಮುಖವನ್ನು ಪರಿಚಯಿಸುವುದು ಮತ್ತು ಶಾಂತಿಪೂರ್ಣ ಭಾರತವನ್ನು ಕಟ್ಟುವುದೇ ಆಗಿದೆ. ಪ್ರಶ್ನೆ ಇರುವುದೂ ಇಲ್ಲೇ. ಉತ್ತರ-ದಕ್ಷಿಣ ಎಂದು ಮುಖ ತಿರುಗಿಸಬಹು ದಾದಂತಹ ಮೂಲಭೂತ ವ್ಯತ್ಯಾಸಗಳು ಸಂಘಟನೆಗಳ ನಡುವೆ ಇಲ್ಲದೇ ಇರುವಾಗ ಕನಿಷ್ಠ ತಂತಮ್ಮ ಸಂಘಟನೆಗಳಲ್ಲಿ ಇದ್ದುಕೊಂಡೇ ಮತ್ತು ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಉಳಿಸಿಕೊಂಡೇ ಸಮುದಾಯದ ಅಭಿವೃದ್ಧಿಗಾಗಿ ಒಂದೇ ವೇದಿಕೆ  ಯಲ್ಲಿ ಒಟ್ಟು ಸೇರುವುದಕ್ಕೆ ಯಾಕೆ ಕಷ್ಟವಾಗುತ್ತಿದೆ? 1985ರ ಬಳಿಕ ಮುಸ್ಲಿಮ್ ಸಮುದಾಯದ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಮತ್ತು ಒಂದೇ ದನಿಯಲ್ಲಿ ಮಾತಾಡಿದ್ದು ಬಹುಶಃ ಇದೇ ಮೊದಲು. ಹಾಗಂತ, ಕಳೆದ 31 ವರ್ಷಗಳಲ್ಲಿ ಇಂಥ ಒಟ್ಟು ಸೇರುವಿಕೆಯನ್ನು ಅನಿವಾರ್ಯಗೊಳಿಸುವ ಯಾವ ಸಮಸ್ಯೆಗಳೂ ಇರಲಿಲ್ಲವಾ ಅಥವಾ ವೈಚಾರಿಕ ಭಿನ್ನಾಭಿಪ್ರಾಯಗಳು ಸಮುದಾಯದ ಅಗತ್ಯವನ್ನೂ ತಳ್ಳಿ ಹಾಕುವಷ್ಟು ಪ್ರಾಮುಖ್ಯತೆಯನ್ನು ಪಡೆದುವಾ? 1985ರ ಬಳಿಕ ಈ 31 ವರ್ಷಗಳಲ್ಲಿ ಮುಸ್ಲಿಮ್ ಸಮುದಾಯದ ಆಂತರಿಕ ಅಭಿವೃದ್ಧಿ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ಏನೆಲ್ಲ ಮತ್ತು ಎಷ್ಟೆಲ್ಲ ಬದಲಾವಣೆಗಳಾಗಿವೆ? ತಲಾಕನ್ನೇ ಎತ್ತಿಕೊಳ್ಳಿ. ಇವತ್ತು ಶಾಯರಾ ಬಾನು ಸುಪ್ರೀಮ್ ಕೋರ್ಟ್‍ಗೆ ಹೋಗಿದ್ದೂ ಇದನ್ನೇ ಎತ್ತಿಕೊಂಡು. ಸಮಾನ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಗೆ ಕಾರಣವಾಗಿದ್ದೂ ಇದೇ ತಲಾಕ್. 1985ರಲ್ಲಿ ಶಾಬಾನುಗೆ ಮಾಸಾಶನ ನೀಡುವ ಬಗ್ಗೆ ಕೋರ್ಟ್‍ನ ನಿಲುವನ್ನು ಪ್ರತಿಭಟಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಂಘಟನೆಗಳು ಆ ಬಳಿಕ ತಂತಮ್ಮ ವಲಯದಲ್ಲಿ ಈ ಕುರಿತಂತೆ ಯಾವ ರೀತಿಯ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ? ಸಮುದಾಯದಲ್ಲಿ ಹೇಗೆ ಜಾಗೃತಿಯನ್ನು ಮೂಡಿಸಿವೆ? ನಿಜವಾಗಿ, ಸಮುದಾಯದ
ದೊಡ್ಡ ಆಸ್ತಿಯೆಂದರೆ ಮಸೀದಿಗಳು. ಮಸೀದಿಗಳಿಗೆ ದೊಡ್ಡದೊಂದು ಗೌರವವನ್ನು ಈ ಸಮುದಾಯ ಕೊಟ್ಟಿದೆ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಬೇರೆ ಬೇರೆ ಸಂಘಟನೆಗಳ ಚಟುವಟಿಕೆಗಳು ನಡೆಯುತ್ತಿರಬಹುದು. ಹಾಗೆಯೇ ಮಸೀದಿ ಆಡಳಿತ ಕಮಿಟಿಯಲ್ಲಿ ಯಾವುದಾದರೊಂದು ಸಂಘಟನೆಗೆ ಪ್ರಾಬಲ್ಯವೂ ಇರಬಹುದು. ಇದು ತಪ್ಪು ಎಂದಲ್ಲ. ಆದರೆ ತನ್ನ ವ್ಯಾಪ್ತಿಯಲ್ಲಿ ಚಟುವಟಿಕೆಯಲ್ಲಿರುವ ವಿವಿಧ ಸಂಘಟನೆಗಳನ್ನು ಒಂದೇ ವೇದಿಕೆಗೆ ಕರೆತಂದು ಅವುಗಳಿಂದ ಸಮುದಾಯದ ಆಮೂಲಾಗ್ರ ಸುಧಾರಣೆಗಾಗಿ ಕೊಡುಗೆಯನ್ನು ನೀಡುವಂತೆ ಮಾಡಲು ಸಾಧ್ಯವಿದೆಯಲ್ಲವೇ? ಒಂದೊಂದು ಸಂಘಟನೆಗೆ ಒಂದೊಂದು ಕ್ಷೇತ್ರದ ಹೊಣೆಗಾರಿಕೆಯನ್ನು ಕೊಟ್ಟು ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸುವುದು ಅಸಾಧ್ಯವೇ? ಇವತ್ತು ಸಮುದಾಯ ಆರ್ಥಿಕವಾಗಿ ಮಾತ್ರ ಅಭಿವೃದ್ಧಿ ಹೊಂದಬೇಕಾದುದಲ್ಲ. ವೈಚಾರಿಕವಾಗಿಯೂ ಧಾರ್ಮಿಕವಾಗಿಯೂ ಅಭಿವೃದ್ಧಿಯನ್ನು ಕಾಣಬೇಕಾಗಿದೆ. ಉದಾಹರಣೆಗೆ ಈಗಿನ ಬಹುಚರ್ಚಿತ ತಲಾಕನ್ನೇ ಎತ್ತಿಕೊಳ್ಳಿ. ಇದಕ್ಕೆ ಸುವ್ಯವಸ್ಥಿತವಾದ ಮತ್ತು ಸರ್ವಸಮ್ಮತ ನೀತಿಯೊಂದನ್ನು ಅಳವಡಿಸಿಕೊಳ್ಳಲು ಸಮುದಾಯಕ್ಕೆ ಸಾಧ್ಯ ವಿಲ್ಲವೇ? ನಿಕಾಹ್ ನಡೆಯುವುದು ಎಲ್ಲರ ಎದುರು. ಅದು ಮಸೀದಿಯಲ್ಲಾಗಿರಬಹುದು ಅಥವಾ ಹಾಲ್, ಮನೆ.. ಇತ್ಯಾದಿಗಳಲ್ಲಾಗಿರಬಹುದು. ನಿಕಾಹ್‍ಗೆ ಅನೇಕ ಮಂದಿ ಸಾಕ್ಷ್ಯ ವಹಿಸುತ್ತಾರೆ. ತಲಾಕ್‍ಗೂ ಇಂಥದ್ದೊಂದು ಸುವ್ಯವಸ್ಥಿತ ವಾತಾವರಣ ನಿರ್ಮಿಸಿದರೆ ಹೇಗೆ? ತಲಾಕ್‍ನ ದುರುಪಯೋಗವನ್ನು ತಡೆಯುವುದಕ್ಕಾಗಿ ‘ತಲಾಕ್ ಮಸೀದಿಯಲ್ಲೇ ಆಗಬೇಕು’ ಎಂಬ ನಿಯಮವನ್ನು ಜಾರಿಗೊಳಿಸಬಹುದಲ್ಲವೇ? ಮುಖ್ಯವಾಗಿ ಯಾವ ಪ್ರದೇಶದಲ್ಲಿ ತಲಾಕ್‍ನ ದುರುಪಯೋಗ ಹೆಚ್ಚಿರುತ್ತದೋ ಆಯಾ ಪ್ರದೇಶದ ಮಸೀದಿ ವ್ಯಾಪ್ತಿಯಲ್ಲಿ ಇಂಥದ್ದೊಂದು ನೀತಿಯನ್ನು ಜಾರಿಗೊಳಿಸುವ ಶ್ರಮ ನಡೆಯುತ್ತಿದ್ದರೆ ಸಮುದಾಯವು ಪ್ರಶ್ನಾರ್ಹವಾಗುವುದರಿಂದ ತಡೆಯಬಹುದಿತ್ತಲ್ಲವೇ?
    ಹಾಗಂತ, ತಲಾಕ್ ಒಂದೇ ಮುಸ್ಲಿಮ್ ಸಮುದಾಯದೊಳಗೆ ದುರುಪಯೋಗಗೊಳ್ಳುತ್ತಿರುವುದಲ್ಲ. ಸಮುದಾಯದ ಯೌವನವೂ ದುರುಪಯೋಗವಾಗುತ್ತಿದೆ. ಯುವಕರು ತಪ್ಪು ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ವರದಕ್ಷಿಣೆಯಿದೆ. ಬಹುಪತ್ನಿತ್ವದ ದುರುಪಯೋಗವೂ ನಡೆಯುತ್ತಿದೆ. ಮದುವೆಗೆ ಸಂಬಂಧಿಸಿ ಹೆಣ್ಣು ಮತ್ತು ಗಂಡಿನ ಆಯ್ಕೆ ಪ್ರಕ್ರಿಯೆಯಲ್ಲಿ ಶರೀಅತ್‍ಗೆ ವಿರುದ್ಧವಾದ ಧೋರಣೆಗಳು ಚಾಲ್ತಿಯಲ್ಲಿವೆ. ಝಕಾತ್‍ಗೆ ಸಂಬಂಧಿಸಿ ಶರೀಅತನ್ನು ಅನುಸರಿಸುವವರ ಸಂಖ್ಯೆ ಬಹಳ ಕಡಿಮೆ. ಸಮುದಾಯದ ವ್ಯಾಪಾರ ಎಷ್ಟು ಧಾರ್ಮಿಕವಾಗಿದೆ ಎಂದು ಪ್ರಶ್ನಿಸಿದರೆ, ತೃಪ್ತಿದಾಯಕ ಉತ್ತರ ಲಭ್ಯವಾಗುತ್ತಿಲ್ಲ. ಶರೀಅತ್ ಅನ್ನು ಖಂಡಿಸುವ ಅನೇಕಾರು ಕಾರ್ಯಚಟುವಟಿಕೆಗಳಲ್ಲಿ ಸಮುದಾಯದ ಮಂದಿ ಬಹಿರಂಗವಾಗಿಯೇ ಭಾಗಿಯಾಗಿದ್ದಾರೆ. ಒಂದು ರೀತಿಯಲ್ಲಿ, ಶರೀಅತನ್ನು ಪ್ರಶ್ನಿಸುತ್ತಿರುವುದು ಸುಪ್ರೀಮ್ ಕೋರ್ಟೋ, ನರೇಂದ್ರ ಮೋದಿಯವರೋ ಮಾತ್ರ ಅಲ್ಲ; ಇಸ್ಲಾಮ್‍ನಲ್ಲಿ ಭಾರೀ ನಿಷ್ಠೆಯನ್ನು ಸಂದರ್ಭಾನುಸಾರ ವ್ಯಕ್ತಪಡಿಸುವ ಮುಸ್ಲಿಮ್ ಸಮುದಾಯದ ಪ್ರತಿನಿಧಿಗಳೇ ತಮ್ಮ ವರ್ತನೆಗಳ ಮೂಲಕ ಶರೀಅತನ್ನು ಆಗಾಗ ಪ್ರಶ್ನಿಸುತ್ತಿದ್ದಾರೆ. ಅವರ ನಡೆ, ನುಡಿ, ಮದುವೆ, ವ್ಯವಹಾರ, ಜೀವನ ಕ್ರಮ, ಗಳಿಕೆ, ಉಳಿಕೆ, ಖರ್ಚು.. ಎಲ್ಲದರಲ್ಲೂ ಶರೀಅತ್‍ಗೆ ವಿರುದ್ಧವಾದ ಸಾಕಷ್ಟು ಅಂಶಗಳಿವೆ. ಇದನ್ನು ಸರಿಪಡಿಸುವ ಬಗ್ಗೆ ಕಾಳಜಿ ತೋರದೆ, ಬರೇ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದರಿಂದ ಭವಿಷ್ಯವೇನೂ ಉಜ್ವಲವಾಗಲ್ಲ. ನಾಳೆ ಮುಸ್ಲಿಮ್ ಸಮುದಾಯದ ಇನ್ನಾರೋ ವ್ಯಕ್ತಿ ಇನ್ನಾವುದೋ ಕಾರಣವನ್ನು ಮುಂದಿಟ್ಟುಕೊಂಡು ಕೋರ್ಟ್ ಬಾಗಿಲನ್ನು ತಟ್ಟಬಹುದು. ತನ್ನ ಈ ಸಮಸ್ಯೆಗೆ ಶರೀಅತ್ತೇ ಕಾರಣ ಎಂದೂ ಹೇಳಬಹುದು. ಆದ್ದರಿಂದ, ಒಂದೇ ವೇದಿಕೆಯಲ್ಲಿ ಒಟ್ಟು ಸೇರುವುದರಿಂದ ಸಮುದಾಯದ ಸಂಘಟನೆಗಳ ಹೊಣೆಗಾರಿಕೆ ಮುಗಿಯುವುದಿಲ್ಲ. ನಿಜವಾಗಿ, ಹೊಣೆಗಾರಿಕೆ ಆರಂಭವಾಗುವುದೇ ಇಲ್ಲಿಂದ. ವೇದಿಕೆಯಿಂದ ಇಳಿದು ಹೋದ ಬಳಿಕ ತಂತಮ್ಮ ಮಸೀದಿಯಲ್ಲಿ ಹೀಗೆ ಭಿನ್ನ ಸಂಘಟನೆಗಳಲ್ಲಿದ್ದುಕೊಂಡೇ ಒಟ್ಟು ಸೇರಲು ಮತ್ತು ಮಸೀದಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಪಟ್ಟಿ ಮಾಡಲು ಇದು ಪ್ರೇರಣೆಯನ್ನು ಒದಗಿಸಬೇಕು. ಸಂಘಟನಾ ಭಿನ್ನಾಭಿಪ್ರಾಯವನ್ನು ಮರೆತು ಸಮುದಾಯದ ಆಮೂಲಾಗ್ರ ಸುಧಾರಣೆಯ ದೃಷ್ಟಿಯಿಂದ ಕಾರ್ಯಪ್ರವೃತ್ತವಾಗಲು ಮುಂದಾಗಬೇಕು. ಯಾವ್ಯಾವ ಸಂಘಟನೆಯಿಂದ ಯಾವ್ಯಾವ ಕೊಡುಗೆಯನ್ನು ನೀಡಲು ಸಾಧ್ಯವೋ ಅವೆಲ್ಲವನ್ನೂ ಪಡಕೊಳ್ಳುವಂತಹ ಚಾತುರ್ಯವನ್ನು ಎಲ್ಲರೂ ಪ್ರದರ್ಶಿಸಬೇಕು. ಅಗತ್ಯ ಬಿದ್ದರೆ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ವೇದಿಕೆಯನ್ನು ರಚಿಸಿ ಆ ಮೂಲಕ ಕಾರ್ಯಪ್ರವೃತ್ತವಾದರೂ ಆಗಬಹುದು. ಹೀಗೆ ಪ್ರತಿ ಮಸೀದಿಯ ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳ ಸಮಸ್ಯೆಗೂ ಕಿವಿಯಾಗುವಂತಹ ಮತ್ತು ಶರೀಅತ್ ಪ್ರಕಾರವೇ ಪ್ರತಿ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು. ತಲಾಕ್ ಆಗಲಿ, ಖುಲಾ, ಬಹುಪತ್ನಿತ್ವವೇ ಆಗಲಿ ಯಾವುದೂ ಕದ್ದು ಮುಚ್ಚಿ ನಡೆಯದಂತೆ ನೋಡಿಕೊಳ್ಳುವ ವ್ಯವಸ್ಥೆ ಮಸೀದಿಯ ವತಿಯಿಂದಲೇ ನಡೆಯಬೇಕು. ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳು ಬಹು ಚರ್ಚಿತವಾಗಿರುವ ಇಂದಿನ ದಿನಗಳಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದುದು ಅತೀ ಅಗತ್ಯ. ಮುಖ್ಯವಾಗಿ ಧಾರ್ಮಿಕ ವಿಷಯದಲ್ಲಿ ಈ ಎಚ್ಚರ ಇನ್ನೂ ಅಗತ್ಯ. ಶರೀಅತ್ ತನ್ನ ನಿಜವಾದ ಅರ್ಥದಲ್ಲಿ, ನಿಜ ಸ್ಫೂರ್ತಿಯೊಂದಿಗೆ ಪಾಲನೆಯಾಗುವುದಾದರೆ ಯಾವ ಹೆಣ್ಣೂ ಗಂಡೂ ಕೋರ್ಟು ಮೆಟ್ಟಲು ಹತ್ತಲಾರರು. ಇವತ್ತು ಇದಕ್ಕೆ ವ್ಯತಿರಿಕ್ತವಾದುದು ನಡೆಯುತ್ತಿದ್ದರೆ, ಅದರಲ್ಲಿ ಮಸೀದಿ ಹೊಣೆಗಾರರ ಮತ್ತು ಸಂಘಟನೆಗಳ ಪಾತ್ರ ಖಂಡಿತ ಇದೆ. ವೇದಿಕೆಯಲ್ಲಿ ಒಟ್ಟು ಸೇರುವುದು ಮಾತ್ರ ಇದಕ್ಕೆ ಪರಿಹಾರ ಅಲ್ಲ. ವೇದಿಕೆಯಿಂದ ಇಳಿದ ಬಳಿಕದ ನಿಲುವು ಮತ್ತು ಕಾರ್ಯ ಚಟುವಟಿಕೆಗಳೇ ಇದರಲ್ಲಿ ನಿರ್ಣಾಯಕ. ಕಳೆದ 31 ವರ್ಷಗಳ ಬಳಿಕ ಇದೇ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಂಘಟನೆಗಳೆಲ್ಲ ತಮ್ಮ ಐಕ್ಯವನ್ನು ಸಮುದಾಯದ ಸುಧಾರಣೆಯಲ್ಲೂ ಮುಂದುವರಿಸಿದರೆ ಮತ್ತು ಸಮುದಾಯ ಸುಧಾರಣೆಯೆಂಬ ಬಹುಮುಖ್ಯ ಹೊಣೆಗಾರಿಕೆಯ ಮುಂದೆ ಭಿನ್ನಾಭಿಪ್ರಾಯಗಳನ್ನು ತೃಣವಾಗಿ ಕಾಣುವುದಾದರೆ ಇದು ಅಸಾಧ್ಯವಲ್ಲ. ಅಂದಹಾಗೆ,
       ಶಾಬಾನು ಮತ್ತು ಶಾಯರಾ ಬಾನುರನ್ನು ವಿಮರ್ಶಿಸುವುದೇ ಸಮುದಾಯದ ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಆಗಬಾರದು ಕೂಡಾ.