Saturday, November 19, 2016

ಗೌಡ್ರು, ಶೆಟ್ರು, ಸಾಬರ ಅಂಗಡಿಗೆ ಬೀಗ ಹಾಕಿಸುವ ತಂತ್ರವೇ ನೋಟು ರದ್ಧತಿ?

      2005ರಲ್ಲಿ: ‘ಮಿಶನ್ ಇಂಡಿಯಾಸ್ ಇಕನಾಮಿಕ್ ರಿಜುವೆನೇಶನ್’ (ನಮ್ಮ ಗುರಿ ಭಾರತದ ಆರ್ಥಿಕ ಪುನರ್‍ಸ್ಥಾಪನೆ) ಎಂಬ ಹೆಸರಲ್ಲಿ  ಅರ್ಥಕ್ರಾಂತಿ ಎಂಬ ಕೃತಿ ಬಿಡುಗಡೆಗೊಳ್ಳುತ್ತದೆ. ‘ಅರ್ಥಕ್ರಾಂತಿ ಪ್ರತಿಷ್ಠಾನ್’ ಎಂಬ ಗುರುತಿನ ಅಡಿಯಲ್ಲಿ ಕೆಲವರು ಸೇರಿಕೊಂಡು ರಚಿಸಿದ ಕೃತಿ ಇದು. ಈ ಕೃತಿಯನ್ನು ಪ್ರಮುಖ ರಾಜಕೀಯ ಪಕ್ಷಗಳಿಗೆ, ಚಿಂತಕರಿಗೆ ಮತ್ತು ರಾಷ್ಟ್ರಪತಿಗಳಿಗೂ ಸಲ್ಲಿಸಲಾಗಿದೆ. ಅಗತ್ಯ ಬಿದ್ದರೆ ಸಂಪರ್ಕಿಸುವುದಕ್ಕೆಂದು ವಿವಿಧ ನಗರಗಳಲ್ಲಿರುವ ಅದರ ಪ್ರತಿನಿಧಿಗಳ ಹೆಸರು ಮತ್ತು ವಿಳಾಸವನ್ನು ಕೃತಿಯಲ್ಲಿ ನೀಡಲಾಗಿದೆ. ವರ್ಷದ ಹಿಂದೆ ಸನ್ಮಾರ್ಗ ಕಚೇರಿಗೂ ಈ ಕೃತಿಯನ್ನು ತಲುಪಿಸಲಾಗಿತ್ತು. ಈ ಕೃತಿ ಮುಖ್ಯವಾಗಿ ಅರ್ಥವ್ಯವಸ್ಥೆಗೆ ಹೊಸತನವನ್ನು ಕೊಡುವ ಬಗ್ಗೆ ಮಾತಾಡುತ್ತದೆ. ನಗದು ರಹಿತ ವ್ಯವಹಾರವನ್ನು ಪ್ರತಿಪಾದಿಸುತ್ತದೆ. ಎಲ್ಲ ವ್ಯವಹಾರಗಳೂ ಬ್ಯಾಂಕ್‍ನ ಮೂಲಕವೇ ನಡೆಯಬೇಕಾದ ಅಗತ್ಯತೆಯನ್ನೂ, ಅದರಿಂದಾಗಿ ಆಗಬಹುದಾದ ಬದಲಾವಣೆಯನ್ನೂ ಅದು ವಿಶ್ಲೇಷಿಸುತ್ತದೆ. ಅದರಲ್ಲಿ ಉಲ್ಲೇಖಿಸಲಾಗಿರುವ 2013-14ರ ವಿವರದಂತೆ, ‘ದೇಶದಲ್ಲಿ 1000 ರೂಪಾಯಿಯ 39% ನೋಟುಗಳು ಚಲಾವಣೆಯಲ್ಲಿವೆ. 500 ರೂಪಾಯಿಯ 45% ನೋಟುಗಳು ಚಲಾವಣೆಯಲ್ಲಿವೆ. ರೂಪಾಯಿ 100ರ ನೋಟಿನ ಚಲಾವಣೆ ಬರೇ 11%. ಒಟ್ಟಿನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್... ಮುಂತಾದುವುಗಳನ್ನು ಬಳಕೆ ಮಾಡದೆ ನಗದು ರೂಪದಲ್ಲಿ ಹಣ ಚಲಾವಣೆಯಲ್ಲಿರುವುದೇ ದೇಶದ ಅರ್ಥವ್ಯವಸ್ಥೆ ಕುಸಿದಿರುವುದಕ್ಕೆ ಮೂಲ ಕಾರಣ ಎಂಬುದಾಗಿ ಅದು ನೇರವಾಗಿಯೋ ಪರೋಕ್ಷವಾಗಿಯೋ ಪ್ರತಿಪಾದಿಸುತ್ತದೆ. ಈ ಕೃತಿ ರಚನೆಯ ತಂಡದಲ್ಲಿದ್ದವರಲ್ಲಿ ಓರ್ವರೇ ಅನಿಲ್ ಬೋಕಿಲ್. ಹಳೆ ನೋಟುಗಳ ಚಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ ಹಿಂತೆಗೆದುಕೊಂಡುದುದರ ಹಿಂದೆ ಇವರ ಸಲಹೆ ಇದೆ ಎಂದು ಹೇಳಲಾಗುತ್ತಿದೆ. ತಿಂಗಳುಗಳ ಹಿಂದೆ ಪ್ರಧಾನಿಯವರು ಇವರನ್ನು ಕರೆಸಿಕೊಂಡು ಸುದೀರ್ಘವಾಗಿ ಚರ್ಚಿಸಿದ್ದರು ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ, ಪ್ರಧಾನಿಯವರ ಈ ದಿಢೀರ್ ಕ್ರಮವು ನಕಲಿ ನೋಟು, ಕಪ್ಪು ಹಣ, ಭಯೋತ್ಪಾದಕರ ಹುಟ್ಟಡಗಿಸುವ ಪಣ.. ಮುಂತಾದ ಘೋಷಿತ ಉದ್ದೇಶಗಳ ಪ್ರಾಮಾಣಿಕತೆಯನ್ನು ಪ್ರಶ್ನಾರ್ಹಗೊಳಿಸುತ್ತದೆ. ನಿಜಕ್ಕೂ, ಹಳೆ ನೋಟುಗಳನ್ನು ರದ್ದುಪಡಿಸುವುದರ ಹಿಂದೆ ಇರುವ ಉದ್ದೇಶ ಕಪ್ಪು ಹಣದ ನಿಯಂತ್ರಣವೇ, ನಕಲಿ ನೋಟುಗಳ ನಿರ್ಮೂಲನವೇ ಅಥವಾ ನಗದು ರಹಿತ ವ್ಯವಸ್ಥೆಯೊಂದನ್ನು ಹುಟ್ಟು ಹಾಕುವ ಮೂಲಕ ಕಾರ್ಪೋರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವುದೇ? ಯಾಕೆಂದರೆ, ಕಪ್ಪು ಹಣವನ್ನು ತಡೆಯುವ ಕಾರಣಕ್ಕಾಗಿ ಜಗತ್ತಿನ ಯಾವ ರಾಷ್ಟ್ರಗಳೂ ಹಳೆ ನೋಟುಗಳನ್ನು ರದ್ದುಗೊಳಿಸಿದ್ದಿಲ್ಲ. ನೋಟುಗಳ ಆಧುನಿಕೀಕರಣ ಮತ್ತು ಹಣದುಬ್ಬರವನ್ನು ತಡೆಯುವ ಉದ್ದೇಶದಿಂದಲೇ ನೋಟು ರದ್ದತಿಗಳು ನಡೆದಿವೆ. ಇದಕ್ಕಿರುವ ಕಾರಣವೇನೆಂದರೆ, ಕಪ್ಪು ಹಣ ಎಂಬುದು ನೋಟಿನ ರೂಪದಲ್ಲಿ ಮಾತ್ರ ಇರುವುದಲ್ಲ ಅಥವಾ ನೋಟಿನ ರೂಪದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಚಲಾವಣೆಯಲ್ಲಿರುತ್ತದೆ. ಹೆಚ್ಚಿನ ಬೇನಾಮಿ ದುಡ್ಡುಗಳೆಲ್ಲ ಬಂಗಾರ, ಜಮೀನು ಮತ್ತಿತರ ಸಂಪತ್ತಿನ ರೂಪಕ್ಕೆ ಪರಿವರ್ತನೆಗೊಂಡೇ ಅಸ್ತಿತ್ವದಲ್ಲಿರುತ್ತದೆ. ಸ್ಟಾಕ್ ಎಕ್ಸ್ ಚೇಂಜ್‍ನಲ್ಲೂ ಅದು ಚಲಾವಣೆಯಲ್ಲಿರುತ್ತದೆ. ಒಂದು ರೀತಿಯಲ್ಲಿ, ಕಪ್ಪು ಹಣವನ್ನು ನಿಖರವಾಗಿ ಅಂದಾಜಿಸುವುದಕ್ಕೆ ಯಾವುದೇ ವೈಜ್ಞಾನಿಕ ವ್ಯವಸ್ಥೆಯಿಲ್ಲ. 2009ರಲ್ಲಿ ಲೋಕಸಭಾ ಚುನಾವಣೆಯ ವೇಳೆ ಅಡ್ವಾಣಿಯವರು ಮತ್ತು 2014ರಲ್ಲಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆಗಳೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣವನ್ನು ತಾನು ಭಾರತಕ್ಕೆ ತರುತ್ತೇನೆಂದು ಅಡ್ವಾಣಿಯವರು ಹೇಳಿದ್ದರು. ಭಾರತದ ಒಟ್ಟು 6 ಲಕ್ಷದಷ್ಟು ಗ್ರಾಮಗಳಲ್ಲಿ ಪ್ರತಿ ಗ್ರಾಮವೂ 4 ಕೋಟಿಯಷ್ಟು ಹಣವನ್ನು ಪಡೆಯಲಿದೆ ಎಂದೂ ಅವರು ಘೋಷಿಸಿದ್ದರು. 2014ರಲ್ಲಿ ನರೇಂದ್ರ ಮೋದಿಯವರೂ ಸ್ವಿಸ್ ಬ್ಯಾಂಕ್‍ನ ಕಪ್ಪು ಹಣವನ್ನು ಚುನಾವಣಾ ಭಾಷಣದಲ್ಲಿ ಉಲ್ಲೇಖಿಸಿದ್ದರು. ತಾನು ಪ್ರಧಾನಿಯಾದರೆ 100 ದಿನಗಳಲ್ಲಿ ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಯನ್ನು ಜಮಾ ಮಾಡುವುದಾಗಿಯೂ ಘೋಷಿಸಿದ್ದರು. ಅವರ ಹೇಳಿಕೆಯ ಪ್ರಕಾರವೇ ಲೆಕ್ಕ ಹಾಕುವುದಾದರೆ, ಸ್ವಿಸ್ ಬ್ಯಾಂಕ್‍ನಲ್ಲಿ 1800 ಲಕ್ಷ ಕೋಟಿ ರೂಪಾಯಿ ಇರಬೇಕಾಗುತ್ತದೆ. ಇದು ದೇಶದ ಜಿಡಿಪಿಯ 150% ಆಗುತ್ತದೆ. ಅದೇ ವೇಳೆ, 2006-07ರಿಂದ 2011-12ರ ವರೆಗೆ ದೇಶದ ಆದಾಯ ತೆರಿಗೆ ಇಲಾಖೆಯು ನಡೆಸಿದ ದಾಳಿಯ ವಿವರಗಳನ್ನು ವಿಶ್ಲೇಷಿಸಿದರೆ, ಕಪ್ಪು ಹಣದಲ್ಲಿ ನೋಟಿನ ಪ್ರಮಾಣ ಎಷ್ಟು ನಗಣ್ಯ ಎಂಬುದೂ ಗೊತ್ತಾಗುತ್ತದೆ. ಆದಾಯ ಇಲಾಖೆ ವಶಪಡಿಸಿಕೊಂಡ ಒಟ್ಟು ಮೊತ್ತದಲ್ಲಿ ನೋಟಿನ ರೂಪದಲ್ಲಿದ್ದ ಕಪ್ಪು ಹಣ ಬರೇ 5%. ಉಳಿದೆಲ್ಲವೂ ಸಂಪತ್ತಿನ ರೂಪಕ್ಕೆ ಪರಿವರ್ತನೆಗೊಂಡವುಗಳೇ ಆಗಿದ್ದುವು. ಹೀಗಿರುತ್ತಾ, ನಕಲಿ ನೋಟು ಮತ್ತು ಕಪ್ಪು ಹಣದ ಕಾರಣವನ್ನು ಕೊಟ್ಟು ಕೇಂದ್ರ ಸರಕಾರ ಹಳೆ ನೋಟುಗಳನ್ನು ರದ್ದುಗೊಳಿಸಿರುವುದನ್ನು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಎಂದು ಕರೆಯಬಹುದು? ಸರಕಾರದ ಅಧಿಕೃತ ವರದಿಯ ಪ್ರಕಾರವೇ, ಒಟ್ಟು 500 ರೂಪಾಯಿ ನೋಟುಗಳಲ್ಲಿ 0.00025% ನೋಟುಗಳಷ್ಟೇ ನಕಲಿಯಾಗಿವೆ. ಈ ಅಲ್ಪ ಪ್ರಮಾಣದ ನಕಲಿತನವನ್ನು ತಡೆಗಟ್ಟುವುದಕ್ಕೆ 120 ಕೋಟಿ ಜನರನ್ನು ಬ್ಯಾಂಕ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಿಸಬೇಕೇ? ಅಲ್ಲದೆ, ಈಗ ಬಿಡುಗಡೆಗೊಳಿಸಿರುವ ರೂ. 2000 ಮತ್ತು 500 ರೂಪಾಯಿಗಳನ್ನು ನಕಲಿ ಮಾಡಲು ಅವಕಾಶ ಇದ್ದೇ ಇದೆಯಲ್ಲವೇ? ಇದಕ್ಕಿಂತ, ಸ್ವಿಸ್ ಬ್ಯಾಂಕ್‍ನಲ್ಲಿರುವ 1800 ಲಕ್ಷ ಕೋಟಿ ರೂಪಾಯಿಯನ್ನು ಭಾರತಕ್ಕೆ ತರುವುದು ಉತ್ತಮವಾಗಿತ್ತಲ್ಲವೇ? 100 ದಿನಗಳ ವಾಯಿದೆ ಕಳೆದು 100 ವಾರಗಳಾದ ಬಳಿಕವೂ ಪ್ರಧಾನಿಯವರು ತನ್ನ ವಾಗ್ದಾನವನ್ನು ಈಡೇರಿಸದೇ ಇರುವುದರ ಹಿನ್ನೆಲೆಯೇನು? ಅವರೇಕೆ ಆ ಬಗ್ಗೆ ಮಾತಾಡುತ್ತಿಲ್ಲ?    
ಅನಿಲ್ ಬೋಕಿಲ್
      ನಿಜವಾಗಿ, ನೋಟು ರದ್ಧತಿಯ ಹಿನ್ನೆಲೆಯನ್ನು ತಪಾಸಿಸಿಕೊಂಡು ಹೋದರೆ ಅನಿಲ್ ಬೋಕಿಲ್ ಅವರ ‘ನಗದು ರಹಿತ’ ಸಿದ್ಧಾಂತವನ್ನು ಜಾರಿಗೊಳಿಸುವುದೇ ಇದರ ಪರಮ ಗುರಿ ಎಂದೇ ಅನಿಸುತ್ತದೆ. ಸರಕಾರ ಈಗಾಗಲೇ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ 100% ವಿದೇಶಿ ನೇರ ಹೂಡಿಕೆಗೆ (FDI) ಅನುಮತಿಯನ್ನು ನೀಡಿದೆ. ಇಲ್ಲಿನ ಸಮಸ್ಯೆ ಏನೆಂದರೆ, ಈ ದೇಶದಲ್ಲಿ ಬಹುತೇಕ ವ್ಯಾಪಾರ-ವಹಿವಾಟುಗಳು ನಗದು ರೂಪದಲ್ಲಿಯೇ ನಡೆಯುತ್ತವೆ. ಶೆಟ್ರು, ಭಟ್ರು, ಸಾಬ್ರು...ಗಳ ಅಂಗಡಿಗಳಿಗೇ ಇಲ್ಲಿ ಗ್ರಾಹಕರು ಹೆಚ್ಚು. ಸಣ್ಣ ವ್ಯಾಪಾರ, ಬೀದಿಬದಿ ವ್ಯಾಪಾರಗಳೇ ಇವತ್ತಿಗೂ ಈ ದೇಶದಲ್ಲಿ ಪ್ರಾಬಲ್ಯವನ್ನು ಪಡೆದುಕೊಂಡಿವೆ. ಈ ಪ್ರಾಬಲ್ಯವನ್ನು ಹತ್ತಿಕ್ಕದಿದ್ದರೆ ವಿದೇಶಿ ನೇರ ಹೂಡಿಕೆಯಿಂದ ತಲೆಯೆತ್ತಲಿರುವ ಬೃಹತ್ ಮಳಿಗೆಗಳು ಬಾಗಿಲು ಮುಚ್ಚಬೇಕಾಗುತ್ತದೆ. ಶೆಟ್ರ ಅಂಗಡಿಯಿಂದ ರಿಲಯನ್ಸ್ ಫ್ರೆಶ್‍ಗೆ, ಸಾಬರ ಭಂಡಸಾಲೆಯಿಂದ ವಾಲ್‍ಮಾರ್ಟ್‍ಗೆ ಅಥವಾ ಬಿಗ್‍ಬಝಾರ್‍ಗೆ ಗ್ರಾಹಕರನ್ನು ತಿರುಗಿಸಬೇಕಾಗುತ್ತದೆ. ಹಾಗಂತ, ತೀರಾ ಕಾರಣವಿಲ್ಲದೇ ಸಾಮಾನ್ಯ ಗ್ರಾಹಕ ಬಿಗ್ ಬಝಾರ್‍ನ ಮೆಟ್ಟಿಲು ಹತ್ತುತ್ತಾನೆ/ಳೆ ಎಂದು ಹೇಳಲು ಸಾಧ್ಯವಿಲ್ಲ. ರಿಲಯನ್ಸ್ ಫ್ರೆಶ್‍ಗೂ, ಭಟ್ರು, ಸಾಬರ  ಕಿರಾಣಿ ಅಂಗಡಿಗೂ ಅನೇಕ ವಿಷಯಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಕಾರ್ಪೊರೇಟ್ ಸಂಸ್ಥೆಗಳ ಬೃಹತ್ ಮಳಿಗೆಗಳು ಗಾತ್ರದಲ್ಲಿ ದೊಡ್ಡದಿರುತ್ತದೆ. ಶಿಸ್ತು ಇರುತ್ತದೆ. ಆಯ್ಕೆಯಲ್ಲಿ ಅಪರಿಮಿತ ಅವಕಾಶ ಇರುತ್ತದೆ. ಶೆಟ್ರ ಅಂಗಡಿಯಲ್ಲಾದರೆ, ಶಿಸ್ತು ಕಡಿಮೆ. ಗಾತ್ರ ಚಿಕ್ಕದು. ವಸ್ತುಗಳ ಪ್ರದರ್ಶನವೂ ನಡೆಯುವುದಿಲ್ಲ. ಆದರೆ ಅಲ್ಲಿ ಮನುಷ್ಯನ ಬಹುಮುಖ್ಯ ಬೇಡಿಕೆಯಾದ `ಮಾತು’ ಇರುತ್ತದೆ. ಸಾಲದ ವ್ಯವಹಾರ ಇರುತ್ತದೆ. ಜೇಬು ಖಾಲಿ ಇದ್ದರೂ ಮನೆಗೆ ಅಕ್ಕಿ ಒಯ್ಯುವ ಭರವಸೆ ಇರುತ್ತದೆ. ಬೃಹತ್ ಮಳಿಗೆಗಳಲ್ಲಿ ಇವೆರಡೂ ಶೂನ್ಯ. ಅಲ್ಲಿ ಮಾತುಕತೆಯೂ ಇಲ್ಲ. ಸಾಲದ ವಹಿವಾಟೂ ಇಲ್ಲ. ನಗದು ರೂಪದ ವ್ಯವಹಾರಕ್ಕಿಂತ ಕಾರ್ಡ್ ರೂಪದ ವ್ಯವಹಾರಕ್ಕೇ ಆದ್ಯತೆ. ಭಾರತದ ಬಹುಸಂಖ್ಯಾತ ಗ್ರಾಹಕರು ಈ ರೂಪದ ವ್ಯವಹಾರಕ್ಕೆ ಇನ್ನೂ ಒಗ್ಗಿಕೊಂಡಿಲ್ಲ. ಆದ್ದರಿಂದ ನೋಟು ರದ್ಧತಿ ಎಂಬುದು ಸಾಮಾನ್ಯ ಭಾರತೀಯರನ್ನು ಕಾರ್ಪೋರೇಟ್ ಮಳಿಗೆಗಳ ಗ್ರಾಹಕರಾಗಿ ಬದಲಿಸಿ ಬಿಡುವುದಕ್ಕೆ ನರೇಂದ್ರ ಮೋದಿಯವರು ಹೆಣೆದ ತಂತ್ರದಂತೆ ಕಾಣಿಸುತ್ತದೆ. ಮೊದಲು ಭಾರತೀಯರನ್ನು ನಗದುರಹಿತಗೊಳಿಸಬೇಕು. ಪ್ರತಿಯೊಬ್ಬರನ್ನೂ ಬ್ಯಾಂಕ್ ಅವಲಂಬಿತರನ್ನಾಗಿ ಮಾಡಬೇಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಎಂಬ ಪದಗಳು ಅವರ ಬಾಯಲ್ಲಿ ಸಾಮಾನ್ಯವಾಗಿಸಬೇಕು. ಜೇಬಲ್ಲಿ ದುಡ್ಡಿನ ಬದಲು ಕಾರ್ಡ್‍ಗಳನ್ನು ಇಟ್ಟುಕೊಂಡು ಮನೆಯಿಂದ ಹೊರಡುವ ಸಂಪ್ರದಾಯವನ್ನು ಬೆಳೆಸಬೇಕು. ಹೀಗಾದರೆ, ಶೆಟ್ರ ಅಂಗಡಿಯ ಗ್ರಾಹಕ ಅಂಬಾನಿಯ ಗ್ರಾಹಕನಾಗಿ ಬದಲಾಗುತ್ತಾನೆ/ಳೆ. ಊರಿನ ಕಿರಾಣಿ ಅಂಗಡಿಯಿಂದ ಬಿಗ್‍ಬಝಾರ್‍ಗೆ ಗ್ರಾಹಕ ತನ್ನ ನಿಷ್ಠೆ ಬದಲಿಸುತ್ತಾನೆ/ಳೆ. ಈ ದೂರಗಾಮಿ ಉದ್ದೇಶವನ್ನು ಇಟ್ಟುಕೊಂಡೇ ನೋಟು ರದ್ಧತಿ ಎಂಬ ಜೂಜಿಗೆ ಸರಕಾರ ಪ್ರಯತ್ನಿಸಿದಂತಿದೆ. ಅನಿಲ್ ಬೋಕಿಲ್ ಅವರ ಅರ್ಥಕ್ರಾಂತಿಯ ಆಂತರಿಕ ಉದ್ದೇಶವೂ ಇದುವೇ. ಎಲ್ಲವೂ ಬ್ಯಾಂಕ್ ಮೂಲಕವೇ ನಡೆಯಬೇಕು. ಹಾಗೆ ಆಗಬೇಕೆಂದಾದರೆ, ಜನರನ್ನು ಬ್ಯಾಂಕ್‍ನತ್ತ ಆಹ್ವಾನಿಸಬೇಕು. ಅದಕ್ಕಾಗಿ ಬ್ಯಾಂಕ್ ಖಾತೆ ಇಲ್ಲದೆಯೇ ಅರಾಮವಾಗಿ ಬದುಕುವ ಮತ್ತು ಬ್ಯಾಂಕ್ ಖಾತೆ ಇದ್ದೂ ನಗದಿನಲ್ಲೇ ವ್ಯವಹಾರ ನಡೆಸುವ ಬಹುಸಂಖ್ಯಾತ ಜನರ ಮೇಲೆ ಒತ್ತಡ ಹೇರಬೇಕು. ನೋಟು ರದ್ಧತಿಯೊಂದೇ ಅದಕ್ಕಿರುವ ಪರಿಹಾರ. ಇದರಿಂದಾಗಿ ಪ್ರತಿಯೋರ್ವ ಭಾರತೀಯ ಬ್ಯಾಂಕ್ ಖಾತೆ ತೆರೆಯಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ/ಳೆ. ಇದೇ ವೇಳೆ, ಇದರಿಂದಾಗುವ ತೊಂದರೆಯಿಂದಾಗಿ ಆತ/ಕೆ, ಸರಕಾರದ ಟೀಕಾಕಾರನಾಗಿ  ಬದಲಾಗುವುದಕ್ಕೂ ಅವಕಾಶ ಇದೆ. ಇದನ್ನು ತಪ್ಪಿಸಬೇಕಾದರೆ, ನವಿರಾದ ಸುಳ್ಳೊಂದನ್ನು ಇದರೊಂದಿಗೆ ಸೇರಿಸಿ ಬಿಡಬೇಕಾಗುತ್ತದೆ. ಅದರ ಭಾಗವೇ ಕಪ್ಪು ಹಣದ ಮಾತು ಮತ್ತು ಪಾಕಿಸ್ತಾನದಲ್ಲಿ  ನಕಲಿ ನೋಟು ತಯಾರಾಗುತ್ತಿದೆ ಎಂಬ ಸಮರ್ಥನೆ. ಈ ಕಾರಣದಲ್ಲಿ ದೇಶಪ್ರೇಮವೂ ಇದೆ, ಕಪ್ಪು ಹಣದ ನಿರ್ಮೂಲನೆಯ ಬಗ್ಗೆ ಸರಕಾರದ ಬದ್ಧತೆಯೂ ಇದೆ. ಹೀಗೆ ಹೇಳಿದರೆ, ನೋಟು ಬದಲಾವಣೆಗಾಗಿ ಬ್ಯಾಂಕ್‍ನ ಎದುರು ಕಾದು ಕಾದು ಬಿಸಿಲಿಗೆ ಬಾಡುವ ಬಡ ಭಾರತೀಯನೂ, ‘ತಾನೆಲ್ಲಿ ದೇಶದ್ರೋಹಿಯಾಗುವೆನೋ’ ಎಂದು ನಗುನಗುತ್ತಲೇ ಎಲ್ಲವನ್ನೂ ಸಹಿಸುತ್ತಾನೆ. ‘ಯೋಧರು ದೇಶಕ್ಕಾಗಿ ಗಡಿಯಲ್ಲಿ ಜೀವವನ್ನೇ ಕೊಡುವಾಗ, ಈ ಕಷ್ಟವೇನು ಮಹಾ..’ ಎಂಬ ನಕಲಿ ದೇಶ ಪ್ರೇಮವನ್ನೂ ಪ್ರದರ್ಶಿಸುತ್ತಾನೆ.     
        ಸದ್ಯ ಆಗಿರುವುದೂ ಇದುವೇ...

Friday, November 4, 2016

ಬಹುಪತ್ನಿತ್ವ: ವಾದಗಳ ಆಚೆ..

        ಮಕ್ಕಾದ ವರ್ತಕರಾಗಿದ್ದ ಮುಹಮ್ಮದ್ ಎಂಬ ವ್ಯಕ್ತಿ ಪ್ರವಾದಿ ಮುಹಮ್ಮದ್(ಸ) ಆದದ್ದು 40ನೇ ಪ್ರಾಯದಲ್ಲಿ. ಆ ಬಳಿಕ ಅವರು ಬರೇ 23 ವರ್ಷಗಳ ಹೃಸ್ವ ಜೀವನವನ್ನಷ್ಟೇ ನಡೆಸುತ್ತಾರೆ. 63ನೇ ಪ್ರಾಯದಲ್ಲಿ ನಿಧನರಾಗುತ್ತಾರೆ. ಮುಹಮ್ಮದ್‍ರು ಪ್ರವಾದಿ ಮುಹಮ್ಮದ್(ಸ) ಆದ ಬಳಿಕ, ತವರು ನೆಲ ಮಕ್ಕಾದಲ್ಲಿ 13 ವರ್ಷಗಳ ವರೆಗೆ ಬದುಕುತ್ತಾರೆ. ಈ ಜೀವನದ ಉದ್ದಕ್ಕೂ ಅವರು ಜನರೊಂದಿಗೆ ಸಂವಹನದಲ್ಲಿ ನಿರತರಾಗುತ್ತಾರೆ. ತನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ದೇವನಿಂದ ಪಡೆದುಕೊಳ್ಳುತ್ತಿದ್ದ ಸೂಚನೆಗಳನ್ನು ಅವರು ಜನರಿಗೆ ತಲುಪಿಸುತ್ತಾರೆ. ಹೀಗೆ 13 ವರ್ಷಗಳು ಕಳೆದ ಬಳಿಕ ಅವರು ಮಕ್ಕಾದಿಂದ ಸುಮಾರು 450 ಕಿ.ಮೀಟರ್ ದೂರದ ಮದೀನಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ಅವರು ಹತ್ತು ವರ್ಷಗಳ ಕಾಲ ಜೀವಿಸುತ್ತಾರೆ. ಹೀಗೆ 40ರಿಂದ 63ರ ವರೆಗಿನ ಈ 23 ವರ್ಷಗಳ ಪ್ರವಾದಿತ್ವದ ಅವಧಿಯಲ್ಲಿ ಅವರು ದೇವನಿಂದ ಏನೆಲ್ಲ ಸೂಚನೆಗಳನ್ನು ಪಡೆದರೋ ಅವುಗಳ ಸಂಗ್ರಹಿತ ಗ್ರಂಥ ರೂಪವೇ ಪವಿತ್ರ ಕುರ್‍ಆನ್. ಈ ಕುರ್‍ಆನ್‍ನಲ್ಲಿ 114 ಅಧ್ಯಾಯಗಳಿವೆ. ಈ ಅಧ್ಯಾಯಗಳ ಪೈಕಿ ಏಕೈಕ ಅಧ್ಯಾಯದಲ್ಲಿ ಏಕೈಕ ಬಾರಿ ಉಲ್ಲೇಖವಾಗಿರುವ ದೇವ ಸೂಕ್ತವೇ ಈಗ ತೀವ್ರ ಚರ್ಚೆಗೆ ಗುರಿಯಾಗಿರುವ ಬಹುಪತ್ನಿತ್ವಕ್ಕೆ ಸಂಬಂಧಿಸಿದ ಸೂಕ್ತ. ಆದರೆ ಈ ಸೂಕ್ತದಲ್ಲಿ ಮತ್ತು ಈ ಸೂಕ್ತದ ಮೊದಲು ಹಾಗೂ ನಂತರದ ಸೂಕ್ತಗಳಲ್ಲಿ ಬಹುಪತ್ನಿತ್ವಕ್ಕಿರುವ ಕಾರಣಗಳು, ಷರತ್ತುಗಳು ಮತ್ತು ಸನ್ನಿವೇಶಗಳನ್ನೂ ಹೇಳಲಾಗಿದೆ. ಬಹುಪತ್ನಿತ್ವದ ಸೂಕ್ತ ಹೀಗಿದೆ:
        “ಅನಾಥರೊಂದಿಗೆ ನ್ಯಾಯಯುತವಾಗಿ ನಡಕೊಳ್ಳಲು ಸಾಧ್ಯವಾಗದೆಂಬ ಆಶಂಕೆ ನಿಮಗೆ ಉಂಟಾದರೆ ಸ್ತ್ರೀಯರಲ್ಲಿ ಇಬ್ಬರನ್ನೋ ಮೂವರನ್ನೋ ನಾಲ್ವರನ್ನೋ ವಿವಾಹ ಮಾಡಿಕೊಳ್ಳಿರಿ. ಆದರೆ ಅವರೊಂದಿಗೆ ನ್ಯಾಯ ಪಾಲಿಸಲು ಅಸಾಧ್ಯ ಎಂಬ ಆಶಂಕೆ ನಿಮಗಿದ್ದರೆ ಓರ್ವ ಸ್ತ್ರೀಯನ್ನು ಮಾತ್ರ ವಿವಾಹವಾಗಿರಿ.” (ಅಧ್ಯಾಯ 4, ಸೂಕ್ತ 3)
 ಈ ಸೂಕ್ತಕ್ಕಿಂತ ಮೊದಲಿನ ಸೂಕ್ತ ಹೀಗಿದೆ:
       “ಅನಾಥರ ಸೊತ್ತುಗಳನ್ನು ಅವರಿಗೆ ಹಿಂತಿರುಗಿಸಿರಿ. ಒಳ್ಳೆಯ ಸೊತ್ತಿನ ಸ್ಥಾನದಲ್ಲಿ ಕೆಟ್ಟದ್ದನ್ನು ಬದಲಿಸಬೇಡಿರಿ. ಅವರ ಸೊತ್ತನ್ನು ನಿಮ್ಮದರೊಂದಿಗೆ ಸೇರಿಸಿ ಕಬಳಿಸಲೂ ಬೇಡಿರಿ. ಇದು ಅತ್ಯಂತ ಘೋರ ಪಾತಕ.” (ಅಧ್ಯಾಯ 4, ಸೂಕ್ತ 2)
ವಿಶೇಷ ಏನೆಂದರೆ, ಈ ಎರಡೂ ಸೂಕ್ತಗಳಲ್ಲಿ ಒತ್ತು ಕೊಡಲಾಗಿರುವುದು ಬಹುಪತ್ನಿತ್ವಕ್ಕೆ ಅಲ್ಲ. ಅನಾಥರ ಸಂರಕ್ಷಣೆಗೆ, ವಿಧವೆಯರ ಸಾಮಾಜಿಕ ಭದ್ರತೆಗೆ. ಅನಾಥರ ಸೊತ್ತನ್ನು ಕಬಳಿಸುವುದು ಮತ್ತು ಅವರ ದೌರ್ಬಲ್ಯವನ್ನು ಬಳಸಿಕೊಂಡು ವಂಚಿಸುವುದನ್ನು ಪ್ರಬಲವಾಗಿ ಈ ಸೂಕ್ತಗಳಲ್ಲಿ ವಿರೋಧಿಸಲಾಗಿದೆ. ಇವಲ್ಲದೇ ಇದೇ ಅಧ್ಯಾಯದ 127ನೇ ಸೂಕ್ತದಲ್ಲೂ ಅನಾಥರ ಜೊತೆ ನ್ಯಾಯಯುತವಾಗಿ ನಡಕೊಳ್ಳಬೇಕೆಂದು ಆಜ್ಞಾಪಿಸಲಾಗಿದೆ. ಅಂದಹಾಗೆ, ಈ ಮೂರೂ ಸೂಕ್ತಗಳಿಗೆ ಒಂದು ಕೇಂದ್ರಬಿಂದುವಿದೆ. ಅದುವೇ ಅನಾಥರು ಮತ್ತು ವಿಧವೆಯರು. ಇವರನ್ನು ಸಂರಕ್ಷಿಸುವ ವಿಧಾನ ಹೇಗೆ ಮತ್ತು ಆ ಸಂದರ್ಭದಲ್ಲಿ ಅನ್ಯಾಯವಾಗದಂತೆ ಪಾಲಿಸಬೇಕಾದ ಎಚ್ಚರಿಕೆಗಳು ಯಾವುವು ಎಂಬುದನ್ನು ಹೇಳುವುದೇ ಈ ಸೂಕ್ತಗಳ ಮುಖ್ಯ ಗುರಿ. ಅವರನ್ನು ನಿಮ್ಮ ಸಂರಕ್ಷಣೆಯ ವಲಯದೊಳಗೆ ಸೇರಿಸಿಕೊಳ್ಳಬೇಕು. ಅವರಿಗೆ ಸಾಮಾಜಿಕ, ಆರ್ಥಿಕ ಮತ್ತು ದೈಹಿಕ ಭದ್ರತೆಯನ್ನು ಒದಗಿಸಬೇಕು. ತಾವು ಸಮಾಜದಲ್ಲಿ ಸುರಕ್ಷಿತರು ಎಂಬ ಭಾವನೆ ಅವರಲ್ಲಿ ಉಂಟಾಗಬೇಕು. ಒಂದು ವೇಳೆ, ನಿಮ್ಮ ಸಂರಕ್ಷಣೆಯ ವೃತ್ತದೊಳಗೆ ಬರುವ ಅನಾಥರು ಮತ್ತು ಅವರ ವಿಧವೆ ತಾಯಂದಿರೊಂದಿಗೆ ‘ನ್ಯಾಯಯುತವಾಗಿ’ ನಡಕೊಳ್ಳಲು ಅಸಾಧ್ಯವೆಂದು ತೋರುವುದಾದರೆ, ಅವರನ್ನು ನಿಮ್ಮ ಕೌಟುಂಬಿಕ ಸದಸ್ಯರಾಗಿ ಸ್ವೀಕರಿಸಿಕೊಳ್ಳಬೇಕು. ಇಲ್ಲೊಂದು  ಡೆಫಿನೇಷನ್ನಿನ ಅಗತ್ಯ ಇದೆ.ನ್ಯಾಯ ಅಂದರೆ ಏನು, ಅದರ ಸ್ವರೂಪ ಹೇಗೆ, ಯಾವೆಲ್ಲ ವಿಷಯಗಳನ್ನು ನ್ಯಾಯ ಎಂಬ ಪದ ಒಳಗೊಂಡಿದೆ ಎಂಬುದನ್ನು ಓದುಗ ಸ್ವಯಂ ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ನಿಜವಾಗಿ, ಪವಿತ್ರ ಕುರ್‍ಆನಿನ 114 ಅಧ್ಯಾಯಗಳಲ್ಲಿ ನೀವು ಯಾವ ಅಧ್ಯಾಯವನ್ನೇ ಎತ್ತಿಕೊಳ್ಳಿ. ವೈವಾಹಿಕ ಸಂಬಂಧವನ್ನು ಅತ್ಯಂತ ಪಾವನ, ಗೌರವಾರ್ಹ, ಅಮೂಲ್ಯವಾಗಿಯೇ ಅದು ಪರಿಗಣಿಸಿದ್ದನ್ನು ಕಂಡುಕೊಳ್ಳಬಹುದು. ಪತಿ ಮತ್ತು ಪತ್ನಿಗೆ ಅದು ಜೋಡಿ ಎಂಬ ಏಕವಚನವನ್ನು (7:189) ಪ್ರಯೋಗಿಸಿದೆ. ಅವರಿಬ್ಬರನ್ನೂ ಒಂದೇ ಜೀವದಿಂದ ಸೃಷ್ಟಿಸಲಾಗಿದೆ (7:189) ಎಂದೂ ಅದು ಅಭಿಮಾನ ವ್ಯಕ್ತಪಡಿಸಿದೆ. ಅವರಿಬ್ಬರೂ ‘ಜೋಡಿ’ಯಾಗುವುದರಿಂದಾಗಿ ಪರಸ್ಪರ ಮನಶ್ಯಾoತಿ ಮತ್ತು ನೆಮ್ಮದಿಯನ್ನು ಹೊಂದಬಲ್ಲರು (7:189) ಎಂದೂ ಹೇಳಿದೆ. ಒಂದು ರೀತಿಯಲ್ಲಿ, ಹೆಣ್ಣು-ಗಂಡಿನ ಸ್ಥಾನಮಾನವನ್ನು ಸಮಾನ ನೆಲೆಯಲ್ಲಿ ಪ್ರಸ್ತುತಪಡಿಸುವ ಸೂಕ್ತ ಗಳಿವು. ದಂಪತಿಗಳನ್ನು ಪರಸ್ಪರರ ಪಾಲಿಗೆ ಪೋಷಾಕು ಎಂದು ಹೇಳಿದ್ದೂ ಪವಿತ್ರ ಕುರ್‍ಆನೇ. ಅದು ದಾಂಪತ್ಯ ಸಂಬಂಧವನ್ನು ಭಾವನಾತ್ಮಕ ಸಂಬಂಧವಾಗಿ ವ್ಯಾಖ್ಯಾನಿಸುತ್ತದೆ. ಪೋಷಾಕು ಎಂಬ ಪದ ಧ್ವನಿಸುವ ಅರ್ಥ ಎಷ್ಟು ಆತ್ಮೀಯ ನೆಲೆಗಟ್ಟಿನದ್ದು ಎಂಬುದೂ ಇಲ್ಲಿ ವಿಶ್ಲೇಷಣೆಗೆ ಅರ್ಹವಾದುದು. ಆದ್ದರಿಂದ, ಸಹಜ ಸಂದರ್ಭಗಳಲ್ಲಿ ಈ ಜೋಡಿ, ‘ಜೋಡಿಗಳು’ ಆಗುವುದಕ್ಕೆ ಸಾಧ್ಯವಿಲ್ಲ. ಅಸಹಜ ಸಂದರ್ಭಗಳನ್ನು ಗುರಿಯಾಗಿಟ್ಟುಕೊಂಡೇ ‘ಬಹುಪತ್ನಿತ್ವ’ವನ್ನು  ಉಲ್ಲೇಖಿಸಲಾಗಿದೆ.  ನಿಜವಾಗಿ, ಓರ್ವ ಹೆಣ್ಣು ತನಗೆ ಸವತಿಯಾಗಿ ಇನ್ನೋರ್ವಳು ಬರುವುದನ್ನು ಮುಕ್ತವಾಗಿ ಸ್ವಾಗತಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ. ಪತಿಯು ಸಂಪೂರ್ಣವಾಗಿ ತನಗೋರ್ವಳಿಗೇ ಸೇರಬೇಕೆಂದು ಪತ್ನಿ ಬಯಸುತ್ತಾಳೆ. ಪತ್ನಿಯು ತನಗೋರ್ವನಿಗೇ ಸೇರಬೇಕೆಂದು ಪತಿಯೂ ಬಯಸುತ್ತಾನೆ. ಈ ಬಗೆಯ ಆತ್ಮೀಯತೆ ಅವರೊಳಗೆ ಇರುವಾಗಲೇ ಪರಸ್ಪರ ಪೋಷಾಕಿನಂಥ ಬದುಕು ಸಾಧ್ಯವಾಗುವುದು. ದಾಂಪತ್ಯದಲ್ಲಿ ಮನಶ್ಶಾಂತಿ ಲಭ್ಯವಾಗುವುದು. ಆದ್ದರಿಂದ, ಇಂಥ ದಾಂಪತ್ಯ ಸಂಬಂಧದಲ್ಲಿ ಬಿರುಕು ಮೂಡಿಸಬಹುದಾದ ಬಹುಪತ್ನಿತ್ವವನ್ನು ಸಹಜವಾಗಿ ಪ್ರಸ್ತುತಪಡಿಸುವುದು ಪವಿತ್ರ ಕುರ್‍ಆನಿನ ಉದ್ದೇಶವಾಗಿರಲು ಸಾಧ್ಯವೇ ಇಲ್ಲ. ಮದುವೆಯನ್ನು ಇಸ್ಲಾಮ್ ವಿಶ್ವಾಸದ ಅರ್ಧಭಾಗವಾಗಿ ಗುರುತಿಸಿದೆ. ಪತ್ನಿಯ ಪಾಲಿಗೆ ಯಾರು ಉತ್ತಮನೋ ಆತನೇ ಉತ್ತಮ ವ್ಯಕ್ತಿಯೆಂದೂ ಅದು ಘೋಷಿಸಿದೆ. ಮಾತ್ರವಲ್ಲ ಪತ್ನಿಯೊಂದಿಗೆ ಅತ್ಯಂತ ಮೃದುವಾಗಿ ವರ್ತಿಸಬೇಕೆಂದೂ ಅದು ನಿರ್ದೇಶಿಸಿದೆ. ಬಹುಶಃ ಬಹುಪತ್ನಿತ್ವ ಎಂಬುದು ಒಂದು ರೀತಿಯಲ್ಲಿ ಈ ಎಲ್ಲಕ್ಕೂ ಸವಾಲೆಸೆಯುವಂಥದ್ದು. ಆದ್ದರಿಂದಲೇ ಅತ್ಯಂತ ಅಸಹಜವಾಗಿರುವ ಸಂದರ್ಭಕ್ಕಷ್ಟೇ ಪವಿತ್ರ ಕುರ್ ಆನಿನ ಆ ಸೂಕ್ತ ಹೊಂದಿಕೊಳ್ಳುತ್ತದೆ. ಯುದ್ಧ,  ಹಿಂಸೆ ಅಥವಾ ಇನ್ನಿತರ ಕಾರಣಗಳಿಂದಾಗಿ  ವಿಧವೆಯರು ಮತ್ತು ಅನಾಥರು ಸೃಷ್ಟಿಯಾದಾಗ ಒಂದು ಆಯ್ಕೆಯಾಗಿ ಬಹುಪತ್ನಿತ್ವ ಪ್ರಸ್ತುತವಾಗುತ್ತದೇ ಹೊರತು ಬಹುಪತ್ನಿ ವಲ್ಲಭರ ನಿರ್ಮಾಣಕ್ಕಾಗಿ ಅಲ್ಲ. ಇಂಥ  ಬಹುಪತ್ನಿತ್ವದಲ್ಲಿ ಆಶ್ರಯ ಮತ್ತು ಜೀವನ ಭದ್ರತೆಯೇ ಮುಖ್ಯವಾಗಿರುತ್ತದೆ. ಲೈಂಗಿಕತೆ ಅಲ್ಲ. ಈ ಸನ್ನಿವೇಶಕ್ಕಿಂತ ಹೊರತಾದ ಪ್ರತಿ ಬಹುಪತ್ನಿತ್ವವೂ ಖಂಡಿತ ಪ್ರಶ್ನಾರ್ಹ.          
          ಅಷ್ಟಕ್ಕೂ, ಪ್ರವಾದಿ ಮುಹಮ್ಮದರು(ಸ) ಮಕ್ಕಾದಿಂದ ಮದೀನಕ್ಕೆ ತೆರಳಿ 5 ವರ್ಷಗಳಾದ ಬಳಿಕ ಈ ಬಹುಪತ್ನಿತ್ವದ ದೇವವಾಣಿ ಅವತೀರ್ಣವಾಗಿದೆ. ಅಂದರೆ ಪ್ರವಾದಿತ್ವದ 18 ವರ್ಷಗಳು ಕಳೆದ ಬಳಿಕ. ಈ ನಡುವೆ ಬದ್ರ್ ಮತ್ತು ಉಹುದ್ ಎಂಬ ಪ್ರದೇಶಗಳಲ್ಲಿ ಪ್ರವಾದಿ(ಸ) ಮತ್ತು ಅವರ ವಿರೋಧಿಗಳ ನಡುವೆ ಹೋರಾಟಗಳು ನಡೆದಿವೆ. ಸಾವು-ನೋವುಗಳಾಗಿವೆ. ಅನೇಕ ವಿಧವೆಯರು ಮತ್ತು ಮಕ್ಕಳ ಸೃಷ್ಟಿಯಾಗಿದೆ. ಒಂದು ವೇಳೆ, ಇಸ್ಲಾಮ್‍ನಲ್ಲಿ ಬಹುಪತ್ನಿತ್ವವು ಸಹಜ ಮತ್ತು ಸಾಮಾನ್ಯವಾಗಿರು ತ್ತಿದ್ದರೆ, ಆ ಬಹುಪತ್ನಿತ್ವವನ್ನು ಹೇಳುವುದಕ್ಕಾಗಿ 18 ವರ್ಷಗಳಷ್ಟು ದೀರ್ಘ ಅವಧಿಯನ್ನು ಕಾಯಬೇಕಿತ್ತೇ? ಅಂದರೆ, ಅಸಹಜ ಸನ್ನಿವೇಶ ನಿರ್ಮಾಣವಾದಾಗ ಸಾಮಾಜಿಕ ಸಮತೋಲನವನ್ನು ಕಾಪಾಡುವುದಕ್ಕಾಗಿ ಪ್ರಸ್ತುತಪಡಿಸಲಾದ ಆಯ್ಕೆ ಇದು. ಅದು ಬೇಕಾಬಿಟ್ಟಿ ಮದುವೆಯಾಗುವುದಕ್ಕಿರುವ ಪರವಾನಿಗೆ ಅಲ್ಲ. ಒಂದು ವೇಳೆ, ಬಹುಪತ್ನಿತ್ವವು ಮುಸ್ಲಿಮ್ ಸಮಾಜದಲ್ಲಿ ಮುಕ್ತ ಆಯ್ಕೆಯಾಗಿರುತ್ತಿದ್ದರೆ ಮತ್ತು ಷರತ್ತುಗಳು ಅನ್ವಯಗೊಳ್ಳದಿರುತ್ತಿದ್ದರೆ, ಇವತ್ತಿನ ಸಾಮಾಜಿಕ ಪರಿಸ್ಥಿತಿ ಹೇಗಿರಬೇಕಿತ್ತು? ಮುಸ್ಲಿಮರಲ್ಲಿ ಬಹುಪತ್ನಿವಲ್ಲಭರು ಎಷ್ಟಿರುತ್ತಿದ್ದರು? ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 2006ರಲ್ಲಿ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಹಿಂದೂಗಳಲ್ಲಿ ಬಹುಪತ್ನಿತ್ವವು ಶೇ. 1.77 ಇದ್ದರೆ ಮುಸ್ಲಿಮರಲ್ಲಿ ಶೇ. 2.55ರಷ್ಟು ಇದೆ. 1974ರಲ್ಲಿ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಮುಸ್ಲಿಮರಲ್ಲಿ 5.6% ಬಹುಪತ್ನಿತ್ವ ರೂಢಿಯಲ್ಲಿದ್ದರೆ, ಹಿಂದೂಗಳಲ್ಲಿ 5.8% ಇದೆ. 2011ರಲ್ಲಿ ಬಿಡುಗಡೆಗೊಳಿಸಲಾದ ಜನಗಣತಿ ವರದಿಯ ಚಾರ್ಟ್ ಅ-3ರ ವಿವರವಂತೂ ಇನ್ನಷ್ಟು ಕುತೂಹಲಕಾರಿ. ಹಿಂದೂಗಳಲ್ಲಿ ವಿವಾಹಿತ ಮಹಿಳೆಯರ ಸಂಖ್ಯೆ ವಿವಾಹಿತ ಪುರುಷರಿಗಿಂತ ಹೆಚ್ಚು ಎಂಬುದೇ ಆ ವಿವರವಾಗಿತ್ತು. ನಿಖರವಾಗಿ ಹೇಳಬೇಕೆಂದರೆ, ಒಟ್ಟು 47,13,97,900 ಮಂದಿ ವಿವಾಹಿತರಲ್ಲಿ 23,35,20,803 ಪುರುಷರಿದ್ದರೆ, 23,78,77,097 ಮಹಿಳೆಯರಿದ್ದಾರೆ. ಅಂದರೆ ವಿವಾಹಿತ ಪುರುಷರಿಗಿಂತ 43,36,294 ಮಂದಿ ವಿವಾಹಿತ ಮಹಿಳೆಯರು ಹೆಚ್ಚಿದ್ದಾರೆ. ಇದನ್ನು ಹಿಂದೂ ಸಮುದಾಯದಲ್ಲಿರುವ ಬಹುಪತ್ನಿತ್ವದ ಭಾಗವಾಗಿ ನೋಡಲಾಗಿದೆ. ಹಾಗಂತ, ಹಿಂದೂ ಮ್ಯಾರೇಜ್ ಆ್ಯಕ್ಟ್ ನ ಪ್ರಕಾರ ಬಹುಪತ್ನಿತ್ವವು ಶಿಕ್ಷಾರ್ಹ ಅಪರಾಧ. ಎರಡನೇ ಪತ್ನಿಗೆ ಕಾನೂನು ಪ್ರಕಾರ ಯಾವ ಅಧಿಕೃತತೆಯೂ ಇಲ್ಲ. ಮೊದಲ ಪತ್ನಿ ದೂರು ಕೊಟ್ಟರೆ ಪತಿ ಶಿಕ್ಷೆಗೆ ಗುರಿಯಾಗುವುದಕ್ಕೂ ಅವಕಾಶ ಇದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಯಾವುದೇ ದೂರು ದಾಖಲಾಗುವುದಿಲ್ಲ. ಆದ್ದರಿಂದ, ಬಹುಪತ್ನಿತ್ವವು ಸರಕಾರಿ ವರದಿಗಳಲ್ಲಿ ನಮೂದಾಗು ವುದಿಲ್ಲ. ಹೀಗೆ ವಿವಾಹವಾದ ಮಹಿಳೆ ವಿವಾಹಿತೆ ಎಂದು ಗುರುತಿಸುತ್ತಾಳೆಯೇ ಹೊರತು ಇಂಥವರನ್ನು ವಿವಾಹವಾಗಿದ್ದೇನೆ ಎಂಬುದನ್ನು ಗೌಪ್ಯವಾಗಿಡುತ್ತಾಳೆ. ಮುಸ್ಲಿಮರಿಗೆ ಸಂಬಂಧಿಸಿ ಹೇಳುವುದಾದರೆ, ಮುಸ್ಲಿಮ್ ಪರ್ಸನಲ್ ಲಾದ ಪ್ರಕಾರ ಬಹು ಪತ್ನಿತ್ವಕ್ಕೆ ಅಧಿಕೃತವಾಗಿಯೇ ಅನುಮತಿ ಇದೆ. ಆದರೂ ಬಹುಪತ್ನಿತ್ವಕ್ಕೆ ನಿಷೇಧ ಇರುವ ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಬಹುಪತ್ನಿತ್ವ ಅತ್ಯಂತ ಕಡಿಮೆ ಎಂದೇ ಹೇಳಬಹುದು.
       After Nearly Years of War: Too Many Widows ಎಂಬ ಹೆಸರಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು 2011 ನವೆಂಬರ್ 24ರಂದು ವರದಿಯೊಂದನ್ನು ಪ್ರಕಟಿಸಿತ್ತು. ಇರಾಕ್‍ಗೆ ಸಂಬಂಧಿಸಿ ಅಲ್ಲಿನ ಯೋಜನಾ ಆಯೋಗವು ಬಿಡುಗಡೆಗೊಳಿಸಿದ ವರದಿಯಾಗಿತ್ತದು. ಆ ವರದಿಯ ಪ್ರಕಾರ, ಇರಾಕ್‍ನಲ್ಲಿ ಸುಮಾರು 10 ಲಕ್ಷ  ವಿಧವೆಯರಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಅಥವಾ ಅದಕ್ಕಿಂತಲೂ ತುಸು ಹೆಚ್ಚೇ ಅನಾಥ ಮಕ್ಕಳಿದ್ದಾರೆ. ಈ ಸುದ್ದಿಯ ಮೇಲೆ ಆ್ಯಂಡ್ರ್ಯೂ ಕ್ರಾಮರ್ ಎಂಬ ಪತ್ರಕರ್ತ ವಿಸ್ತೃತ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ ನಲ್ಲಿ ನೀಡಿದ್ದರು. ಅವರು ಅನೇಕ ವಿಧವೆಯರನ್ನು ಭೇಟಿಯಾಗಿದ್ದರು. ಈ ವಿಧವೆಯರು ಇನ್ನೊಂದು ಮದುವೆಯಾಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಅನಾಥ ಮಕ್ಕಳಿಗೆ ಸಂರಕ್ಷಕರ ಅಗತ್ಯವನ್ನು ಹೇಳಿಕೊಂಡಿದ್ದರು. 2008ರಲ್ಲಿ ಅಮೇರಿಕದ ಅಧ್ಯಕ್ಷ ಜಾರ್ಜ್ ಬುಶ್‍ರಿಗೆ ಶೂ ಎಸೆದ ಇರಾಕಿ ಪತ್ರಕರ್ತ ಮುಂತಝಿರ್ ಝೈದಿ ಕೂಡ ಇದೇ ಸಮಸ್ಯೆಯನ್ನು ಹೇಳಿಕೊಂಡಿದ್ದರು. ವಿಧವೆಯರು ಮತ್ತು ಅನಾಥ ಮಕ್ಕಳ ಅಸಹಾಯಕ ಸ್ಥಿತಿಯು ತನ್ನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿತು ಎಂದೂ ಅವರು ಕೂಗಿ ಹೇಳಿದ್ದರು. ವಿಶ್ವಸಂಸ್ಥೆಯು 2006ರಲ್ಲಿ ಬಿಡುಗಡೆಗೊಳಿಸಿದ ವರದಿಯನ್ನು ಒಪ್ಪುವುದಾದರೆ ಇರಾಕ್‍ನಲ್ಲಿ ಪ್ರತಿದಿನ 100 ಮಂದಿ ಮಹಿಳೆಯರು ವಿಧವೆಯಾಗುತ್ತಿದ್ದರು. ಹಿಂಸೆ ತನ್ನ ಚರಮ ಸೀಮೆಗೆ ತಲುಪಿದ್ದ ಸಂದರ್ಭ ಅದು. ಅಲ್ಲದೇ 1980ರಲ್ಲಿ ಇರಾನ್‍ನೊಂದಿಗೆ ನಡೆದ ಯುದ್ಧದಿಂದಾಗಿಯೂ ಇರಾಕ್‍ನಲ್ಲಿ ದೊಡ್ಡದೊಂದು ವಿಧವಾ ಗುಂಪು ನಿರ್ಮಾಣವಾಗಿತ್ತು. ನಿಜವಾಗಿ, ಯುದ್ಧ-ಹಿಂಸೆ ಮುಂತಾದುವುಗಳಲ್ಲಿ ಹೆಚ್ಚಿನ ಜೀವಹಾನಿಯಾಗುವುದು ಯುವಕರು ಮತ್ತು ಮಧ್ಯ ವಯಸ್ಕರಿಗೆ. ಆದ್ದರಿಂದಲೇ, ವಿಧವೆಯರಲ್ಲಿ ಬಹುಸಂಖ್ಯಾತರೂ ಯೌವನ ದಾಟದ ಯುವತಿಯರೇ ಆಗಿರುತ್ತಾರೆ. ಅವರು ಜೀವನ ಭದ್ರತೆಗಾಗಿ ಇನ್ನೊಂದು ಮದುವೆಗೆ ಮುಂದಾಗುತ್ತಾರೆ. ನ್ಯೂಯಾರ್ಕ್ ಟೈಮ್ಸ್ ನ ವರದಿ ಹೇಳಿದ್ದೂ ಇದನ್ನೇ. ಆದರೆ, ಇಂದಿನ ಭಾರತೀಯ ಪರಿಸ್ಥಿತಿಯಲ್ಲಿ ಇಂಥ ವಿಧವೆಯರನ್ನು ಮತ್ತು ಅವರು ಎದುರಿಸುವ ಸಾಮಾಜಿಕ ಅಭದ್ರತೆಯ ತೀವ್ರತೆಯನ್ನು ಗ್ರಹಿಸುವುದು ಅಷ್ಟು ಸುಲಭ ಅಲ್ಲ. ಆದ್ದರಿಂದಲೇ, ಬಹುಪತ್ನಿತ್ವವನ್ನು ಮಹಿಳಾ ವಿರೋಧಿಯಂತೆ ಮತ್ತು ಅನಾಗರಿಕವೆಂಬಂತೆ ಇಲ್ಲಿ ಚಿತ್ರಿಸಲಾಗುತ್ತದೆ. ಅದರ ಸಾರಾಸಗಟು ನಿಷೇಧಕ್ಕೆ ಒತ್ತಾಯಿಸಲಾಗುತ್ತದೆ. ಹಾಗಂತ, ಬಹುಪತ್ನಿತ್ವವು ಮುಸ್ಲಿಮರಲ್ಲಿ ದುರುಪಯೋಗಕ್ಕೆ ಒಳಗಾಗಿಲ್ಲ ಎಂದಲ್ಲ. ಆಗಿದೆ. ಜೊತೆಗೇ ಸದುಪಯೋಗವೂ ಆಗಿದೆ. ವಿಧವೆಯರು ಮತ್ತು ವಿಚ್ಛೇದಿತೆಯರಿಗೆ ಹೊಸ ಬದುಕು ಕೊಡುವುದಕ್ಕೂ ಬಳಕೆಯಾಗಿದೆ. . ಹೀಗಿರುತ್ತಾ,  ದುರುಪಯೋಗವನ್ನು ತಡೆಯುವುದಕ್ಕೆ ಬಹುಪತ್ನಿತ್ವವನ್ನೇ ರದ್ದುಗೊಳಿಸುವುದು ಯಾಕೆ  ಪರಿಹಾರ ಆಗಬೇಕು? ಅಷ್ಟಕ್ಕೂ,
         ಬಹುಪತ್ನಿತ್ವವು ಮಹಿಳಾ ವಿರೋಧಿಯೇ ಎಂದು ಇರಾಕ್, ಸಿರಿಯ, ಯಮನ್‍ನ ವಿಧವೆಯರಲ್ಲಿ ಅಥವಾ ಮರು ಮದುವೆಯನ್ನು ನಿರೀಕ್ಷಿಸುತ್ತಾ ಕಾಯುತ್ತಿರುವ ನಮ್ಮ ಸಮಾಜದ  ವಿಧವೆಯರಲ್ಲಿ ಪ್ರಶ್ನಿಸಿದರೆ ಅವರ ಉತ್ತರ ಏನಾಗಿರಬಹುದು?