Monday, April 16, 2012

ಇಷ್ಟಿದ್ದೂ ಹೆಣ್ಣನ್ನು ನಾವು ಬೆಲೆರಹಿತ ಅನ್ನುತ್ತೇವಲ್ಲ,ಛೆ

2010 ಅಕ್ಟೋಬರ್ 15ರಂದು ಅಮೇರಿಕದ ವರ್ಜೀನಿಯಾದಲ್ಲಿರುವ ರಾಷ್ಟ್ರೀಯ ಶವಾಗಾರದಲ್ಲಿ ತನ್ನ ಗಂಡ ಟೋಡಿ ವೇವರ್ ನ ಶವಸಂಸ್ಕಾರ ನಡೆಸಿ ಎಮ್ಮಾ ವೇವರ್ ಮನೆಗೆ ಬರುತ್ತಾಳೆ. ಮನಸ್ಸನ್ನಿಡೀ ಟೋಡಿ ಆವರಿಸಿರುತ್ತಾನೆ. ಎಷ್ಟೇ ಅದುಮಿಟ್ಟರೂ ಕಣ್ಣು ತುಂಬಿಕೊಳ್ಳ ತೊಡಗುತ್ತದೆ. ಅಮೇರಿಕನ್ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದ ಟೋಡಿ, 2010 ಜೂನಿನಲ್ಲಿ ಅಫಘಾನಿಸ್ತಾನಕ್ಕೆ ಎರಡನೇ ಬಾರಿ ಪ್ರಯಾಣ ಬೆಳೆಸಿದ್ದ. ಅಫಘಾನ್ ಎಂಬುದು ಯಾವ ಸಂದರ್ಭದಲ್ಲೂ ಸಾವನ್ನು ಕರುಣಿಸುವ ಪ್ರದೇಶ ಅನ್ನುವುದು ಟೋಡಿಗೆ ಚೆನ್ನಾಗಿಯೇ ಗೊತ್ತಿತ್ತು. ಆದ್ದರಿಂದಲೇ ಅಫಘಾನ್ ಗೆ ಹೊರಡುವಾಗ ಭಾವುಕನಾಗಿದ್ದ. 9 ತಿಂಗಳ ತನ್ನ ಮಗಳು ಕಿಲ್ಲೆಯನ್ನು ಮುದ್ದಿಸಿದ್ದ. ಎಮ್ಮಾಳನ್ನು ಆಲಿಂಗಿಸಿದ್ದ. ಹಾಗೆ ಅಫಘಾನ್ ಹೋದ ಆತ ಬರೇ 3 ತಿಂಗಳೊಳಗೆ, 2010 ಸೆಪ್ಟಂಬರ್ ನಲ್ಲಿ ರಸ್ತೆ ಬದಿಯ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದ..
ಎಮ್ಮಾ ಒದ್ದೆ ಕಣ್ಣನ್ನು ಉಜ್ಜಿಕೊಂಡು ಗಂಡನ ಲಾಪ್ಟಾಪ್ ನ್ನು ಎತ್ತಿಕೊಳ್ಳುತ್ತಾಳೆ. ತನ್ನ ನೋವನ್ನು, ವಿಷಾದವನ್ನು ಮರೆಸುವ ಏನನ್ನಾದರೂ ತನ್ನ ಗಂಡ ಅದರಲ್ಲಿ ಇಟ್ಟಿರಬಹುದೇ ಅಂಥ ಹುಡುಕುತ್ತಾಳೆ. ಲಾಪ್ಟಾಪ್ ನ ಡೆಸ್ಕ್ ಟಾಪ್ ನಲ್ಲಿ ಎರಡು ಪತ್ರಗಳು ಕಾಣಿಸುತ್ತವೆ. ಒಂದು, ‘ಪ್ರೀತಿಯ ಎಮ್ಮಾಳಿಗೆ’ ಅನ್ನುವ ಹೆಸರಲ್ಲಿ. ಇನ್ನೊಂದು, ‘ಮುದ್ದಿನ ಮಗಳಿಗೆ’ ಎಂಬ ಹೆಸರಲ್ಲಿ. ಆಕೆ ಮಗಳ ಪತ್ರವನ್ನು ಓದತೊಡಗುತ್ತಾಳೆ..
ಮುದ್ದಿನ ಮಗಳೇ..
ನಿನಗೆ ನನ್ನ ನೆನಪು ಇರುವ ಸಾಧ್ಯತೆ ಕಡಿಮೆ. ನಿನಗೆ 9 ತಿಂಗಳು ತುಂಬಿದ್ದಾಗಲೇ ನಾನು ಅಫಘಾನ್ ಅನ್ನುವ ಯುದ್ಧ ಭೂಮಿಗೆ ಹೋಗಬೇಕಾಯಿತು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮಗು. ಎಳವೆಯಲ್ಲೇ ನನ್ನನ್ನು ಕೈಬಿಟ್ಟು ಹೋದ ಅಪರಾಧಿ ಈ ಅಪ್ಪ ಅಂತ ಎಂದೂ ನೆನಪಿಸದಿರು ಕಿಲ್ಲೆ. ನಿನಗೆ ಗೊತ್ತಾ, ನಿನ್ನನ್ನು ಬಿಟ್ಟು ಹೋಗುವುದಕ್ಕೆ, ನಿನ್ನ ಕೆಲವಾರು ಫೋಟೋಗಳೊಂದಿಗೆ ಯುದ್ಧ ಭೂಮಿಗೆ ತೆರಳುವುದಕ್ಕೆ ನಾನು ತುಂಬ ಸಂಕಟಪಟ್ಟಿದ್ದೆ. ನಾನು ನನ್ನ ಬದುಕಿನಲ್ಲೇ ಅತ್ಯಂತ ನೋವು ಅನುಭವಿಸಿದ ಘಟನೆಗಳಲ್ಲಿ ನಿನ್ನನ್ನು ಅಗಲಿದ ಸಂದರ್ಭವೂ ಒಂದು. ಈ ಪ್ರಾಯದಲ್ಲಿ ಓರ್ವ ಅಪ್ಪನ ಸಂಕಟ ನಿನಗೆ ಅರ್ಥವಾಗಲ್ಲ ಅನ್ನುವುದೂ ನನಗೆ ಗೊತ್ತು. ಆದರೆ ನೀನು ಬೆಳೆದು ದೊಡ್ಡವಳಾದಾಗ, ಖಂಡಿತ ನಿನಗೆ ಮನವರಿಕೆಯಾಗಬಹುದು. ನೀನು ನನ್ನ ಬದುಕಿನ ಸಂತೋಷ ಆಗಿರುವೆ ಮಗು. ನನ್ನ ಬದುಕಿನ ಅತ್ಯಂತ ಸಂತಸದ, ಖುಷಿಯ ಸಂಗತಿ ಯಾವುದೆಂದರೆ, ಅದು ನೀನು ಈ ಭೂಮಿಗೆ ಬಂದ ದಿನ. ನೀನು ನನ್ನನ್ನು ಅಪ್ಪ ಅಂತ ಕರೆದು, ಮಡಿಲಲ್ಲಿ ಕುಳಿತು, ಕಿಸೆಗೆ ಕೈ ಹಾಕಿ, ಕೆನ್ನೆಗೊಂದು ಪಪ್ಪಿ ಕೊಟ್ಟು, ಕೂಗಿ, ಅತ್ತು, ನಕ್ಕು, ತೆವಲುತ್ತಾ, ಬೀಳುತ್ತಾ, ಏಳುತ್ತಾ, ಸಿಟ್ಟಾಗುತ್ತಾ.. ಇವೆಲ್ಲವನ್ನೂ ಓರ್ವ ಅಪ್ಪನಾಗಿ ಅನುಭವಿಸುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಅನ್ನುವ ನೋವು ನನ್ನಲ್ಲಿದೆ. ಆದರೇನು ಮಾಡಲಿ, ದಿನಾ ಲ್ಯಾಪ್ಟಾಪನ್ನು ತೆರೆದು ನಿನ್ನನ್ನು ನೋಡುತ್ತೇನೆ. ನೀನು ನಗುವುದನ್ನು ನೋಡುವಾಗ ಹೃದಯ ತುಂಬುತ್ತದೆ. ಓರ್ವ ಯೋಧನ ಹೃದಯವನ್ನು ಮೃದು ಮಾಡುವ ಸಾಮರ್ಥ್ಯ ಒಂದು ಮಗುವಿಗೆ ಇದೆ ಅಂದರೆ ನೀನು ನಂಬುತ್ತೀಯಾ ?
ನಿನಗೆ ಗೊತ್ತಾ..
ನೀನು ಹುಟ್ಟುವ ವರೆಗೆ ನನ್ನ ಬದುಕು ಸಂಪೂರ್ಣ ಆಗಿರಲಿಲ್ಲ. ಯಾವಾಗ ನೀನು ಭೂಮಿಗೆ ಬಂದೆಯೋ ಅಂದೇ ನಾನು ಸಂಪೂರ್ಣ ಮಾನವನಾದೆ . ನಿನ್ನನ್ನು ನೋಡುತ್ತಾ, ನನ್ನ ಬದುಕು, ಅದರ ಮಹತ್ವ, ಗುರಿಗಳು ಸ್ಪಷ್ಟವಾಗತೊಡಗಿದವು. ಅಪ್ಪ ಅನ್ನುವ ಖುಷಿಯ ಜೊತೆಗೇ ನೀನು ಬೆಳೆಯುವುದನ್ನು, ನಿನ್ನ ತುಂಟತನವನ್ನು, ಕೊಂಡಾಟವನ್ನು, ಹುಡುಗಿತನವನ್ನು ನೋಡಲು, ಅನುಭವಿಸಲು ಸಾಧ್ಯವಾಗುತ್ತಿಲ್ಲವಲ್ಲ ಅನ್ನುವ ವಿಷಾದವೂ ನನ್ನೊಳಗಿದೆ. ನಿನ್ನ ಜೊತೆಗೆ ನಾನಿರುತ್ತಿದ್ದರೆ.. ಅಂತ ದಿನಾ ಆಸೆಯಾಗುತ್ತದೆ. ಮಗು, ನೀನು ದುಃಖಿಸಬಾರದು. ನಿನ್ನ ಅಪ್ಪ ನಿನ್ನಿಂದ ದೂರದಲ್ಲೇನೂ ಇಲ್ಲ. ಆತ ಸ್ವರ್ಗದಲ್ಲಿ ದಿನಾ ನಿನ್ನನ್ನು ನೋಡುತ್ತಾ, ನಿನ್ನ ಬೆಳವಣಿಗೆಯನ್ನು ಅನುಭವಿಸುತ್ತಾ ಇದ್ದಾನೆ ಅನ್ನುವ ಪ್ರಜ್ಞೆಯೊಂದಿಗೆ ನೀನು ಬದುಕಬೇಕು. ನೀನೆಂದೂ ಕಣ್ಣೀರು ಹಾಕಬಾರದು. ಯಾಕೆ ಗೊತ್ತಾ, ನೀನು ಅತ್ತರೆ, ನಿನ್ನ ಕಣ್ಣಂಚು ಒದ್ದೆಯಾದರೆ, ಅದು ನಿನ್ನದು ಮಾತ್ರ ಅಲ್ಲ, ನನ್ನ ಕಣ್ಣಂಚೂ ಒದ್ದೆಯಾಗುತ್ತದೆ. ನೀನು ಸದಾ ನಗುತ್ತಿದ್ದರೆ, ನಾನೂ ನಗುತ್ತಿರುವೆ. ಎಲ್ಲಿ ಪ್ರಾಮಿಸ್ ಮಾಡು..
ಕಿಲ್ಲೆ, ನೀನು ಅದೃಷ್ಟವಂತೆ. ಯಾಕೆಂದರೆ, ನಿನಗೆ ಜಗತ್ತಿನಲ್ಲೇ ಓರ್ವ ಅತ್ಯುತ್ತಮ ತಾಯಿ ಸಿಕ್ಕಿದ್ದಾಳೆ. ಎಮ್ಮಾ ನಿನ್ನನ್ನು ಚೆನ್ನಾಗಿ ನೋಡುತ್ತಾಳೆ ಅನ್ನುವ ಸಂಪೂರ್ಣ ಭರವಸೆ ನನಗಿದೆ. ಅಂಥ ಅಮ್ಮನಿಗೆ ನೀನು ಎಂದೂ ನೋವು ಕೊಡಬಾರದು. ಆಕೆಯ ಕಣ್ಣಲ್ಲಿ ಕಣ್ಣೀರು ತರಿಸಬಾರದು. ಆಕೆಗೆ ಅಗತ್ಯ ಬಿದ್ದಾಗಲೆಲ್ಲಾ ನೆರವಿಗೆ ಧಾವಿಸಬೇಕು. ಆಕೆಯ ಆದೇಶವನ್ನು ಪಾಲಿಸಬೇಕು..
ಮಗು..
ನಿನ್ನ ರಾತ್ರಿಯ ಪ್ರಾರ್ಥನೆಯಲ್ಲಿ ಈ ಅಪ್ಪನನ್ನು ನೆನಪಿಸಿಕೊಳ್ಳಬೇಕು. ನನಗಾಗಿ ಪ್ರಾರ್ಥಿಸಬೇಕು . ನಿನಗೆ ಸಿಗುವ ಅನುಗ್ರಹಗಳಿಗೆ ಎಂದೂ ಕ್ರಿತಜ್ಞಲಾಗಿರಬೇಕು. ಈ ಅಪ್ಪನನ್ನು ನಾನು ನೋಡಿಯೇ ಇಲ್ಲ ಎಂದೋ ಅಥವಾ ಆತ ನನಗಾಗಿ ಸಮಯವನ್ನೇ ಕೊಟ್ಟಿಲ್ಲ ಎಂದೋ ಸಿಟ್ಟಾಗಿ ನನ್ನನ್ನು ಮರೆಯಲ್ಲ ತಾನೇ. ನಾನು ಸೇನೆಯಲ್ಲಿ ಇಲ್ಲದೇ ಇರುತ್ತಿದ್ದರೆ ನನ್ನ ಕಿಲ್ಲೆಯ ಜೊತೆಯೇ ಇರುತ್ತಿದ್ದೆ. ಕಿಲ್ಲೆಗೆ ನನ್ನೆಲ್ಲಾ ಪ್ರೀತಿಯನ್ನು ಧಾರೆಯೆರೆಯುತ್ತಿದ್ದೆ. ಪೇಟೆ ಸುತ್ತಿಸುತ್ತಿದ್ದೆ.. ಆದರೆ ನನ್ನ ಉದ್ಯೋಗ ಅದಕ್ಕೆಲ್ಲಾ ಅನುಮತಿಸುತ್ತಿಲ್ಲ ಮಗು. ಇವತ್ತು ಅಫಘಾನಿಗಾದರೆ, ನಾಳೆ ಇನ್ನೆಲ್ಲಿಗೋ ಹೋಗಬೇಕು. ಹಾಗಂತ ಹೋಗದೇ ಇರಲು ಆಗುತ್ತಾ? ಕರ್ತವ್ಯ ನಿಷ್ಠೆ ಇರಬೇಕಲ್ಲವೇ? ದೊಡ್ಡವಳಾದಾಗ ನಿನಗೂ ಇದು ಅರ್ಥವಾಗುತ್ತೆ ..
ಮಗು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ಬೆಳೆದು ದೊಡ್ಡವಳಾಗಿ ಸ್ಕೂಲಿಗೆ ಹೋಗುತ್ತೀಯಲ್ಲ, ಚೆನ್ನಾಗಿ ಓದಬೇಕು. ತಾಯಿಗೆ ಕಷ್ಟ ಕೊಡಬಾರದು. ಈ ಜಗತ್ತನ್ನು, ಇಲ್ಲಿಯ ಜನರನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು. ಜನರ ಅಗತ್ಯಕ್ಕೆ ಸ್ಪಂದಿಸುವ, ಅವರ ಪ್ರೀತಿಯನ್ನು ಸಂಪಾದಿಸುವ ಹೆಣ್ಣಾಗಿ ಮಾರ್ಪಡಬೇಕು . ನೀನು ಯಾವತ್ತೂ ಸ್ಪೆಶಲ್ ಆಗಿರಬೇಕೆಂದೇ ನನ್ನ ಆಸೆ. ಯಾವಾಗಲೂ ಚೆನ್ನಾಗಿರು, ನಗುನಗುತ್ತಾ ಇರು. ಇತರರನ್ನು ನಿನ್ನ ನಗು, ಸಂತಸದ ಜೊತೆಯಲ್ಲೇ ಕೊಂಡೊಯ್ಯು. ಜನರ ಪಾಲಿಗೆ ಇಷ್ಟದ ಹೆಣ್ಣು ಆಗುವ ಜೊತೆಗೇ ಜಗತ್ತು ನಿನಗೆ ಇಷ್ಟದ ತಾಣವಾಗುವಂತೆ ಬದುಕು. ನಿನ್ನ ಚಟುವಟಿಕೆ ಯಾವಾಗಲೂ ಮನುಷ್ಯ ಪ್ರೇಮದ್ದಾಗಿರಲಿ.
ಮಗು, ಒಂದು ವಿಷಯವನ್ನು ಯಾವಾಗಲೂ ನೆನಪಿಟ್ಟು ಕೊಂಡಿರಬೇಕು..
ಯಾವುದೇ ಒಂದು ಸಂಗತಿ ನೀನು ನಿರೀಕ್ಷಿಸಿದಂತೆ ಆಗದೇ ಇರಬಹುದು. ನಿನ್ನ ಅಭಿಪ್ರಾಯಕ್ಕೆ ಭಿನ್ನವಾಗಿ ಅದು ಘಟಿಸಿ ಬಿಡಲೂ ಬಹುದು . ಚಿಂತಿಸಬೇಡ. ಯಾಕೆಂದರೆ ನಿನಗೆ ಏನು ಬೇಕು, ಯಾವುದು ಉತ್ತಮ ಅಂತ ನಿನಗಿಂತ ಚೆನ್ನಾಗಿ ದೇವನಿಗೆ ಗೊತ್ತು. ಆತನ ಮೇಲೆ ಭಾರ ಇಟ್ಟುಕೊಂಡು ಬದುಕು. ಎಲ್ಲವೂ ಚೆನ್ನಾಗಿಯೇ ಸಾಗುತ್ತದೆ. ಬದುಕಿನಲ್ಲಿ ಎಂದೂ ನಿರಾಶೆಗೆ ಒಳಗಾಗದಿರು ಪುಟ್ಟಿ . ಒಂದು ಬಾಗಿಲು ಮುಚ್ಚಿದರೆ, ಇನ್ನಷ್ಟು ಬಾಗಿಲುಗಳು ತೆರೆದಿರುತ್ತವೆ ಅನ್ನುವ ಬಲವಾದ ಆಶಾವಾದದೊಂದಿಗೆ ಜೀವಿಸು. ಯಾಕೆಂದರೆ ನಿನ್ನ ಅಪ್ಪ ಹಾಗೆ.
ಕೊನೆಯದಾಗಿ,
ತನಗಾಗಿ ಅತ್ಯಂತ ಮಹತ್ವದ, ಸುಂದರವಾದ ಭವಿಷ್ಯವೊಂದು ಕಾದಿದೆ ಅನ್ನುವ ವಿಶ್ವಾಸವನ್ನು ಸದಾ ಜೊತೆಗಿಟ್ಟುಕೋ. ಖಂಡಿತ ನಿನಗೆ ಅಂಥದ್ದೇ ಬದುಕು ಸಿಗುತ್ತದೆ. ಖುಷಿಯಾಗಿರು. ತಮಾಷೆ ಆಡುತ್ತಲಿರು. ನಿನ್ನ ತಂದೆ ನಿನ್ನ ಬಗ್ಗೆ ಯಾವಾಗಲೂ ಹೆಮ್ಮೆ ಪಡುವಂಥ ವರ್ತನೆಯನ್ನೇ ತೋರು. ಈ ಅಪ್ಪ ನಿನ್ನನ್ನು ಎಂದೂ ಪ್ರೀತಿಸುತ್ತಾನೆ..
ಇತೀ ನಿನ್ನ ಅಪ್ಪ
ಟೋಡಿ
ಲ್ಯಾಪ್ಟಾಪನ್ನು ಕೆಳಗಿಟ್ಟು ಮಗಳು ಕಿಲ್ಲೆಯನ್ನು ಎಮ್ಮಾ ಬಿಗಿದಪ್ಪಿ ಕೊಳ್ಳುತ್ತಾಳೆ. ಕಣ್ಣು ಒದ್ದೆಯಾಗುತ್ತದೆ..
ಒಂದು ವೇಳೆ ಅಮ್ಮಿ ಒಲಿವರ್ ಅನ್ನುವ ಲೇಖಕರು 2011 ಜೂನ್ 1ರಂದು ಟೋಡಿಯ ಈ ಎರಡು ಪತ್ರಗಳು ಮತ್ತು ಆ ಘಟನೆಯನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸದಿರುತ್ತಿದ್ದರೆ ಇದು ಜಗತ್ತಿಗೆ ಗೊತ್ತಾಗುವ ಸಾಧ್ಯತೆಯೇ ಇರಲಿಲ್ಲ.
ಹೆಣ್ಣು ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಟೋಡಿಯಂಥವರು ಈ ಜಗತ್ತಿನಲ್ಲಿ ಕೋಟ್ಯಂತರ ಇದ್ದಾರೆ. ಹಾಗೆಯೇ ಹೆಣ್ಣು ಮಗುವನ್ನು ದ್ವೇಷಿಸುವ ಉಮ್ಮರ್ ಫಾರೂಕ್ ನಂಥವರ ಸಂಖ್ಯೆಯೂ ಅಸಂಖ್ಯ ಇದೆ. ನಿಜವಾಗಿ ಹೆಣ್ಣು ಮಗುವೊಂದು ಮನೆಯಲ್ಲಿದ್ದರೆ, ಆ ಮನೆಯ ಖುಷಿಯೇ ಬೇರೆ. ಗಂಡು ಮಗುವಿಗಿಂತ ಬೇಗ ಅದು ಎಲ್ಲರನ್ನೂ ಆಕರ್ಷಿಸುತ್ತದೆ . ಗಂಡು ಮಗುವಿನಲ್ಲಿಲ್ಲದ ಒಂದು ಬಗೆಯ ಕೊಂಡಾಟ, ತುಂಟತನ, ಲಜ್ಜೆ ಅದರಲ್ಲಿರುತ್ತದೆ. ಗಂಡು ಮಗು ಬೆಳೆದಂತೆಲ್ಲಾ ಅಡುಗೆ ಮನೆಯಿಂದ, ಅಪ್ಪನಿಂದ, ಅಮ್ಮನಿಂದ ನಿಧಾನವಾಗಿ ಅಂತರವನ್ನು ಕಾಯ್ದಿಟ್ಟುಕೊಳ್ಳತೊಡಗಿದರೆ, ಹೆಣ್ಣು ಅದಕ್ಕಿಂತ ಭಿನ್ನವಾಗಿ ಹೆಚ್ಚೆಚ್ಚು ಹತ್ತಿರವಾಗುತ್ತಾ ಹೋಗುತ್ತದೆ. ಅಪ್ಪ ಕಚೇರಿಯಿಂದ ಬಂದರೆ ಮಗ ಕುಡಿಯಲು ನೀರು ತಂದು ಕೊಡುವುದಿಲ್ಲ. ಚಾ ಬೇಕಾ ಅಂತ ಕೇಳುವುದಿಲ್ಲ. ಸ್ನಾನ ಮಾಡುತ್ತೀರಾ ಪಪ್ಪಾ ಅಂತ ಪ್ರಶ್ನಿಸುವುದಿಲ್ಲ. ಆದರೆ ಮಗಳು ಅವೆಲ್ಲವನ್ನೂ ಮಾಡುತ್ತಾಳೆ. ಅಪ್ಪನ ಆದೇಶವನ್ನೋ ಮಾತನ್ನೋ ನಿರೀಕ್ಷಿಸುತ್ತಾ ಎದುರಲ್ಲೇ ನಿಲ್ಲುತ್ತಾಳೆ. ಅಪ್ಪ ಸಿಟ್ಟಾಗಿ ಏನಾದರೂ ಅಂದುಬಿಟ್ಟರೆ ಮೌನವಾಗುತ್ತಾಳೆ. ಬಳಿಕ ತಾನೇ ಮುಂದಾಗಿ ಮಾತು ಪ್ರಾರಂಭಿಸುತ್ತಾಳೆ. ಮಗ ಹಾಗಲ್ಲ, ಅಪ್ಪ ಸಿಟ್ಟಾದರೆ ಆತನೂ ಒಂದು ಬಗೆಯ ನಕಾರಾತ್ಮಕ ವರ್ತನೆಯನ್ನು ತೋರುತ್ತಾನೆ. ಅಸಹನೆ ವ್ಯಕ್ತಪಡಿಸುತ್ತಾನೆ. ಬಿಡುಬೀಸಾಗಿ ಮನೆಯಿಂದ ಹೊರಟು, ಗೆಳೆಯರೊಂದಿಗೆ ಹರಟೆ ಕೊಚ್ಚಿಯೋ ಆಡಿಯೋ ಮರಳಿ ಬರುತ್ತಾನೆ. ಆಗಲೂ ಆತನನ್ನು ಉಪಚರಿಸುವುದಕ್ಕೆ, ಅಪ್ಪ ಹೇಗಿದ್ದಾರೆ, ಎಲ್ಲಿದ್ದಾರೆ ಅನ್ನುವ ಸೂಚನೆಯನ್ನು ಕೊಟ್ಟು ಹಿಂದಿನ ಬಾಗಿಲಿನಿಂದ ಮನೆಯೊಳಗೆ ಸೇರಿಸುವುದು ತಂಗಿಯೇ. ಸ್ನಾನ ಮಾಡುವುದಕ್ಕೆ ಅಣ್ಣನಿಗೆ ಆಕೆ ಬಿಸಿ ನೀರನ್ನು ಸಿದ್ಧ ಮಾಡುತ್ತಾಳೆ. ಚಾ ಕೊಡುತ್ತಾಳೆ. ಬೆಳಿಗ್ಗೆ ನೀಟಾಗಿ ಡ್ರೆಸ್ಸು ತೊಟ್ಟು ಡೈನಿಂಗ್ ಟೇಬಲ್ ನ ಮುಂದೆ ಕೂರುವ ಅಣ್ಣ, ಅಪ್ಪ; ಉಪಾಹಾರ 5 ನಿಮಿಷ ತಡವಾದರೂ ಸಿಡಿಮಿಡಿಗೊಳ್ಳುತ್ತಾರೆ. 5 ನಿಮಿಷದಲ್ಲಿ ಹತ್ತು ಬಾರಿ ವಾಚು ನೋಡುತ್ತಾರೆ. ಅವರ ಮಾತಿನ ದಾಟಿ ಹೇಗಿರುತ್ತದೆಂದರೆ, ಬೆಳಿಗ್ಗೆ ತನ್ನಷ್ಟಕ್ಕೇ ಉಪಹಾರ ಸಿದ್ಧವಾಗುತ್ತದೇನೋ ಎಂಬ ರೀತಿಯಲ್ಲಿ. ಅದೇ ವೇಳೆ, ಕಚೇರಿಗೆ ಹೋಗುವ ಮಹಿಳೆಗೆ ಹೀಗೆ ಡೈನಿಂಗ್ ಟೇಬಲ್ ನ ಮುಂದೆ ಕೂರುವ, ಆದೇಶ ಕೊಡುವ, ವಾಚು ನೋಡುವ ಅವಕಾಶವೇ ಇರುವುದಿಲ್ಲ. ಯಾಕೆಂದರೆ ಆಕೆಯೇ ಅಡುಗೆ ಮಾಡಬೇಕು. ಹೀಗಿರುವಾಗ ಆಕೆ ಸಿಟ್ಟಾಗುವುದಾದರೂ ಯಾರ ಮೇಲೆ ?ಇಷ್ಟಕ್ಕೂ ಮುಂಜಾನೆ ಎದ್ದು ಅಡುಗೆ ಮನೆಗೆ ಹೋಗುವ ಮಗಳ ಜೊತೆ ಮಗನನ್ನೂ ಎಬ್ಬಿಸಿ, ಅಡುಗೆ ಮನೆಗೆ ಕಳುಹಿಸುವ ಪರಿಪಾಠ ಎಷ್ಟು ಮನೆಗಳಲ್ಲಿದೆ ? ಎಷ್ಟು ಗಂಡು ಮಕ್ಕಳು ಅಡುಗೆ ಮನೆಯಲ್ಲಿ, ಕಸ ಗುಡಿಸುವಲ್ಲಿ ತಾಯಿಗೆ, ತಂಗಿಗೆ ನೆರವಾಗುತ್ತಾರೆ? ಮಗಳು ಅಡುಗೆ ಮನೆಯಲ್ಲಿದ್ದರೆ, ಮಗ ಚಾಪೆಯಲ್ಲಿರುತ್ತಾನೆ. ಕಚೇರಿಗೋ ಕಾಲೇಜಿಗೋ ಸಮಯವಾಯಿತೆಂದು ಅಡುಗೆ ಮನೆಯಿಂದ ಬಂದು ಅಣ್ಣನನ್ನು ಎಬ್ಬಿಸುವ ಜವಾಬ್ದಾರಿಯೂ ತಂಗಿಯ ಮೇಲೆಯೇ. ಅಣ್ಣ-ತಂಗಿಯರಿಬ್ಬರೂ ಜೊತೆಯಾಗಿ ಟಿ.ವಿ. ವೀಕ್ಷಿಸುತ್ತಿದ್ದರೂ ತಾಯಿಯಿಂದಲೋ ತಂದೆಯಿಂದಲೋ ಆಗಾಗ ಕರೆ ಬರುವುದು ತಂಗಿಗೇ ಹೊರತು ಅಣ್ಣನಿಗಲ್ಲ. ಒಂದು ರೀತಿಯಲ್ಲಿ ಸಂತಸದಲ್ಲೂ, ದುಃಖದಲ್ಲೂ ಸಹನೆಯನ್ನು ಕಾಯ್ದುಕೊಳ್ಳುವುದು, ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಳ್ಳುವುದಕ್ಕಾಗಿ ಹೆಣಗುವುದು ಹೆಣ್ಣೇ. ಇಷ್ಟಿದ್ದೂ ಹೆಣ್ಣನ್ನು, ಅನಗತ್ಯ, ಸಮಾಜಕ್ಕೆ ಭಾರ, ಬೆಲೆರಹಿತ ಎಂದೆಲ್ಲಾ ಪುರುಷ ಜಗತ್ತು ಮೂದಲಿಸುತ್ತದಲ್ಲ, ಛೆ!
ಹೆಣ್ಣು ಮಗು ಎಂಬ ಏಕೈಕ ಕಾರಣಕ್ಕಾಗಿ ಉಮ್ಮರ್ ಫಾರೂಖ್ ಅನ್ನುವ ದುಷ್ಟ ಅಪ್ಪನ ಕೈಯಿಂದಲೇ ಗೋಡೆಗೆ ಅಪ್ಪಳಿಸಿಕೊಂಡು ಕಳೆದ ವಾರ ಸಾವಿಗೀಡಾದ ಬೆಂಗಳೂರಿನ 3 ತಿಂಗಳ ಬಾಲೆ ಅಫ್ರೀನಳನ್ನು ನೋಡುವಾಗ ಮನಸು ಭಾರವಾಗುತ್ತದೆ. ಹತ್ಯೆಗೀಡಾದ ಪ್ರತಿ ಹೆಣ್ಣು ಮಗುವನ್ನೂ ಜೀವಂತವಾಗಿ ಎಬ್ಬಿಸಿ, “ನಿನ್ನನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಮಗು” (82: 8-9) ಎಂದು ಸೃಷ್ಟಿಕತ್ರನು ನಾಳೆ ಪರಲೋಕದಲ್ಲಿ ಪ್ರಶ್ನಿಸುತ್ತಾನೆ ಎಂಬ ಪವಿತ್ರ ಕುರ್ಆನಿನ ವಚನ ನೆನಪಾಗುತ್ತದೆ.

Tuesday, April 3, 2012

ಶಾಸ್ತ್ರಿ ಅವರ ಭಯೋತ್ಪಾದನೆಯೂ ಜಮಾಅತೆ ಇಸ್ಲಾಮಿಯೂ

ಇವರಿಗೆ,
ವೈಸ್ ಛಾನ್ಸೆಲರ್
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ
ವಿದ್ಯಾ ಸಂಗಮ
ಬೆಳಗಾವಿ
1. ‘ಭಯೋತ್ಪಾದಕತೆ ಎಂಬ ಪಿಡುಗು’ ಮತ್ತು ‘ಜಾಗತಿಕ ಭಯೋತ್ಪಾದನೆ- ಹೊಸ ಸವಾಲುಗಳು’ ಎಂಬೆರಡು ಪುಸ್ತಕಗಳನ್ನು ವಿಧ್ಯಾರ್ಥಿಗಳಿಗೆ ಕಲಿಸುವುದರ ಹಿಂದಿರುವ ನೈತಿಕತೆ ಏನು? ಅವರ ವ್ಯಕ್ತಿತ್ವ ಕಟ್ಟುವಲ್ಲಿ ಇದು ಹೇಗೆ ಸಹಾಯಕವಾಗುವುದು?
2. ಪು ಸ್ತಕದ 43ನೇ ಪುಟದಲ್ಲಿ, ಔರಂಗಜೇಬನು ತನ್ನ ಆಡಳಿತಾವಧಿಯಲ್ಲಿ ಅನ್ಯ ಧರ್ಮೀಯರ ಧಾರ್ಮಿಕ ಸ್ತಳಗಳನ್ನು ನಾಶಪಡಿಸಿದನು ಎಂದಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳು ಹಾಗೂ ಪುರಾವೆಗಳನ್ನು ಒದಗಿಸುವಿರಾ?
3. ಪುಸ್ತಕದ 44ನೇ ಪುಟದಲ್ಲಿ, ವಿವಿಧ ಸಂಘಟನೆಗಳನ್ನು ಹೆಸರಿಸಿದ್ದು, ಅವುಗಳು ಭಯೋತ್ಪಾದನೆಗೆ ಕಾರಣ ಎಂದು ಹೇಳಲಾಗಿದೆ. ಕೇಂದ್ರ ಅಥವಾ ರಾಜ್ಯ ಸರಕಾರಗಳ ಗೃಹ ಖಾತೆಗಳಿಂದ ಪ್ರಕಟಗೊಂಡ, ಭಯೋತ್ಪಾದನೆಗೆ ಕಾರಣವಾದ ಸಂಘಸಂಸ್ಥೆಗಳಲ್ಲಿ ಇವು ಸೇರಿವೆಯೇ?
4. ಪುಸ್ತಕದ 51ನೇ ಪುಟದಲ್ಲಿ, ಲೇಖಕರು ‘ಜಿಯಾಉದ್ದೀನ್ ಸರ್ದಾರ್ ’ರನ್ನು ಉಲ್ಲೇಖಿಸುತ್ತಾ, ‘ಇಸ್ಲಾಮ್ ಎಂಬುದು ನಿಜವಾಗಿಯೂ ಒಂದು ಧರ್ಮವೇ ಅಲ್ಲ’ ಎಂದು ಹೇಳಿರುವರು. ಲೇಖಕರ ಬಳಿ ಜಿಯಾಉದ್ದೀನ್ ಸರ್ದಾರ್ ರು ಇಸ್ಲಾಮ್ ಧರ್ಮದ ‘ಅಧಿಕೃತ ಅಧಿಕಾರದ ಹಕ್ಕು’ ಹೊಂದಿದ ವ್ಯಕ್ತಿ ಅನ್ನುವುದಕ್ಕೆ ಇರುವ ಆಧಾರ ಪ್ರಮಾಣಗಳನ್ನು ಒದಗಿಸಲು ಕೋರಲಾಗಿದೆ..’

ಹಾಗಂತ ಮಿತ್ರರೂ ವೃತ್ತಿಯಲ್ಲಿ ಇಂಜಿನಿಯರೂ ಆಗಿರುವ ಗುಲ್ಬಗ್ರಾದ ಅಬ್ದುಲ್ ಕಾದರ್ ಅವರು ಮಾರ್ಚ್ 23 - 2012ರಂದು ಮಾಹಿತಿ ಹಕ್ಕು ಕಾಯಿದೆಯನ್ವಯ (RTI) ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಸ್ಪಷ್ಟೀಕರಣ ಕೋರಿ ಪತ್ರ ಬರೆದಿದ್ದಾರೆ. ಅದಕ್ಕೆ ಕಾರಣವೂ ಇದೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಸಾಹಿತ್ಯ ಸಂವಾದ- 2 ಎಂಬ ಕನ್ನಡ ಭಾಷಾ ಪಠ್ಯವನ್ನು ರಚಿಸಿದೆ. ಎರಡನೇ ಸೆಮಿಸ್ಟರ್ ನ ಬಿ.ಎ.| ಬಿ .ಎಸ್.ಡಬ್ಲ್ಯೂ. ತರಗತಿಗಳಿಗೆ ಬೋಧಿಸಲು ರಚಿಸಲಾಗಿರುವ ಈ ಪಾಠವನ್ನು ಡಾ| ಸಿ.ಕೆ. ನಾವಲಗಿ ಸಂಪಾದಿಸಿದ್ದಾರೆ. ದುರಂತ ಏನೆಂದರೆ, ಪಠ್ಯ ಪುಸ್ತಕವೊಂದನ್ನು ರಚಿಸುವಾಗ ಏನೆಲ್ಲ ಎಚ್ಚರಿಕೆಗಳನ್ನು ವಹಿಸಬೇಕಿತ್ತೋ ಅವೆಲ್ಲವನ್ನೂ ಬಹುತೇಕ ನಿರ್ಲಕ್ಷಿಸಲಾಗಿದೆ . ಚೆನ್ನಮ್ಮ ವಿಶ್ವವಿದ್ಯಾಲಯದ ಅಧೀನದಲ್ಲಿ ಸುಮಾರು 150 ಕಾಲೇಜುಗಳಾದರೂ ಬರುತ್ತದೆ. ಹಾಗಾಗಿ ಸಾವಿರಾರು ವಿಧ್ಯಾರ್ಥಿಗಳು ಈ ಪಠ್ಯವನ್ನು ಅಧ್ಯಯನ ನಡೆಸುತ್ತಾರೆ. ಹೀಗಿರುವಾಗ, ಯಾವುದೋ ಸಂದರ್ಭದಲ್ಲಿ ಪ್ರಕಟವಾದ ಬಿಡಿ ಬರಹವೊಂದನ್ನು ( ಪುಟ- 45) ಮಕ್ಕಳಿಗೆ ಬೋಧಿಸಲು ಮುಂದಾಗುವುದರ ಔಚಿತ್ಯವಾದರೂ ಏನು? ‘ಭಯೋತ್ಪಾದಕತೆ ಎಂಬ ಪಿಡುಗು’ ಅನ್ನುವ ಲೇಖನವನ್ನು ಎಲ್.ಎಸ್. ಶಾಸ್ತ್ರಿ ಎಂಬವರು ಬರೆದದ್ದು ಯಾವುದೋ ಒಂದು ಸಂದರ್ಭದಲ್ಲಿ . ತನ್ನ ಲೇಖನ ಪಠ್ಯಪುಸ್ತಕವಾಗಿ ಬಳಕೆಯಾಗಬಹುದು ಅನ್ನುವ ನಿರೀಕ್ಷೆ ಆ ಸಂದರ್ಭದಲ್ಲಿ ಅವರಿಗೆ ಇದ್ದಿರುವ ಸಾಧ್ಯತೆ ಕೂಡ ಇಲ್ಲ. ಹೀಗಿರುವಾಗ ಭಯೋತ್ಪಾದಕತೆ ಎಂಬ ಜಟಿಲ ಸಮಸ್ಯೆಯನ್ನು ಆಳವಾಗಿ ಅಧ್ಯಯನ ನಡೆಸದ, ಸಮಗ್ರವಾಗಿ ಚರ್ಚಿಸದ ಎಳಸು ಲೇಖನವೊಂದನ್ನು ವಿಧ್ಯಾರ್ಥಿಗಳಿಗೆ ಬೋಧಿಸುವುದು ಎಷ್ಟು ಸರಿ? ಇಷ್ಟಕ್ಕೂ, ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗುವ ಲೇಖನವು ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನದಂತೆ ಅಲ್ಲವಲ್ಲ. ಅದಕ್ಕೆ ಅದರದ್ದೇ ಆದ ಸೀಮಿತತೆ ಇದೆ. ಚೌಕಟ್ಟು ಇದೆ. ಪತ್ರಿಕೆಯನ್ನು ಖರೀದಿಸಿದವರೆಲ್ಲ ಅದರಲ್ಲಿ ಪ್ರಕಟವಾದ ಎಲ್ಲ ಲೇಖನವನ್ನು ಓದಿರಬೇಕೆಂದೂ ಇಲ್ಲ. ಆದರೆ ಪಠ್ಯಪುಸ್ತಕ ಹಾಗಾ? ಅದನ್ನು ಆಳವಾಗಿ ಅಧ್ಯಯನ ನಡೆಸಬೇಕಾದ, ಪರೀಕ್ಷೆಯಲ್ಲಿ ಉತ್ತರಿಸಬೇಕಾದ ಅನಿವಾರ್ಯತೆ ವಿಧ್ಯಾರ್ಥಿಗಳಿಗೆ ಇದೆಯಲ್ಲವೇ ? ಯುವ ಸಮೂಹದ ಮೆದುಳಿಗೆ ಇಂಥ ತೀರಾ ಅವಸರದ, ಸಮಗ್ರತೆಯಿಲ್ಲದ, ಜಾಳುಜಾಳಾದ ವಿಚಾರವನ್ನು ತುಂಬುವುದರ ಅಡ್ಡ ಪರಿಣಾಮದ ಬಗ್ಗೆ ಪಠ್ಯ ಪುಸ್ತಕ ರಚನಾ ಮಂಡಳಿ ಯಾಕೆ ಆಲೋಚಿಸಿಲ್ಲ? ಭಯೋತ್ಪಾದನೆ ಎಂಬುದು ಸ್ಥಾವರವಲ್ಲ, ದಿನೇ ದಿನೇ ತನ್ನ ರೂಪ, ಬಣ್ಣ, ವ್ಯಾಖ್ಯಾನವನ್ನು ಬದಲಿಸುತ್ತಿರುವ ಜಂಗಮ ಅನ್ನುವುದು ಡಾ| ನಾವಲಗಿ ಅವರಿಗೆ ಗೊತ್ತಿಲ್ಲವೇ?

ಭಯೋತ್ಪಾದಕತೆ ಎಂಬ ಪಿಡುಗು ಅನ್ನುವ ಪಾಠದ ಪುಟ 44ರಲ್ಲಿರುವ ಈ ಪ್ಯಾರಾವನ್ನೇ ನೋಡಿ
“ವಿಶ್ವವ್ಯಾಪ್ತಿಯಾಗಿರುವ ಭಯೋತ್ಪಾದನೆಗೆ ಕಾರಣವಾಗಿರುವ ಹಲವು ಉಗ್ರಗಾಮಿ ಸಂಘಟನೆಗಳು ಇಂದು ಸಕ್ರಿಯವಾಗಿವೆ. ಎಲ್.ಟಿ.ಟಿ.ಇ. ಮತ್ತಿತರ ಉಗ್ರವಾದಿ ಸಂಘಟನೆಗಳು, ಮಾವೋವಾದಿಗಳು, ಹಮಾಸ್ ಆತಂಕವಾದಿಗಳು, ಪಾಪ್ಯುಲರ್ ಫ್ರಂಟ್ ಫಾರ್ ಲಿಬರೇಶನ್ ಆಫ್ ಪ್ಯಾಲಿಸ್ಟೀನ್, ಚೀನಾ ಪರವಾದ ನ್ಯಾಶನಲ್ ಸೋಸಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್, ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ದ ಅಸ್ಸಾಮ್, ಅಸ್ಸಾಮ್ ಪೀಪಲ್ಸ್ ಲಿಬರೇಶನ್ ಆರ್ಮಿ , ಬೋಡೋ ವಿದ್ರೋಹಿಗಳು, ತಾಲಿಬಾನ್ ಗಳು , ಜಮಾತೆ ಇಸ್ಲಾಂ, ಹರ್ಕತುಲ್ ಮುಜಾಹಿದೀನ್, ಸಿಫಾಯಿ ಸಭಾ, ಜಾಮಿಯತ್-ಇ-ಇಸ್ಲಾಮಿ, ಮೆಹಾಬಿ ತೋಯಿಬಾ, ಜೈಸ್ ಮುಹಮ್ಮದ್, ಜಮಾತ್ ಅಹ್ಲೆ ಸುನ್ನತ್, ಲಷ್ಕರೆ ತೋಯಿಬಾ- ಹೀಗೆ ಹಲವಾರು ಸಂಘಟನೆಗಳನ್ನು ಉದಾಹರಿಸಬಹುದಾಗಿದೆ..”

ನಿಜವಾಗಿ ಹಮಾಸನ್ನು ಭಯೋತ್ಪಾದಕ ಅಂತ ಕರೆಯುತ್ತಿರುವುದು ಅಮೇರಿಕ ಮತ್ತು ಇಸ್ರೇಲ್ ಮಾತ್ರ. ಅದಕ್ಕೆ ಅವುಗಳದ್ದೇ ಆದ ಹಿತಾಸಕ್ತಿಯಿದೆ. ಹಮಾಸ್ ಜಗತ್ತಿನ ಇತರ ಯಾವ ಭಾಗದಲ್ಲೂ ದಾಳಿ ನಡೆಸಿಲ್ಲ, ಬಾಂಬ್ ಸ್ಫೋಟಿಸಿಲ್ಲ. ಇಸ್ರೇಲಿನ ಹೊರತು ಇನ್ನಾರ ಮೇಲೂ ಕಲ್ಲೆಸೆದಿಲ್ಲ. ಬ್ರಿಟಿಷರ ವಿರುದ್ಧ ಗಾಂಧೀಜಿಯ ನೇತೃತ್ವದಲ್ಲೋ ಅಥವಾ ಇನ್ನಿತರರ ನಾಯಕತ್ವದಲ್ಲೋ ನಡೆದ ಹೋರಾಟವನ್ನು ಸ್ವಾತಂತ್ರ್ಯ ಹೋರಾಟ ಅನ್ನುವುದಾದರೆ, ಫೆಲೆಸ್ತೀನಿನ ದೊಡ್ಡದೊಂದು ಭೂಭಾಗವನ್ನು ಆಕ್ರಮಿಸಿ, ಜಗತ್ತಿನೆಲ್ಲೆಡೆಯಿಂದ ಯಹೂದಿಗಳನ್ನು ಅಲ್ಲಿ ತಂದು ಕೂರಿಸಿರುವ ಮತ್ತು ಫೆಲೆಸ್ತೀನಿಗರಿಗೆ ಕನಿಷ್ಠ ಒಂದು ರಾಜ್ಯದ ಸ್ಥಾನಮಾನವನ್ನೂ ನಿರಾಕರಿಸಿ ದೌಜ್ರನ್ಯ ವೆಸಗುತ್ತಿರುವ ಇಸ್ರೇಲಿನ ವಿರುದ್ಧ ನಡೆಸುತ್ತಿರುವ ಹಮಾಸ್ ನ ಹೋರಾಟವನ್ನು ಯಾಕೆ ಸ್ವಾತಂತ್ರ್ಯ ಹೋರಾಟ ಅನ್ನಬಾರದು? ಅದನ್ನು ಭಯೋತ್ಪಾದನೆ ಎಂದು ಶಾಸ್ತ್ರಿ ಕರೆದಿರುವುದು ಯಾವ ಆಧಾರದಲ್ಲಿ? ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡ ಕಾಂಗ್ರೆಸ್ ಇವತ್ತು ಈ ದೇಶವನ್ನು ಆಳುತ್ತಿದೆ. ಚುನಾವಣೆಯಲ್ಲಿ ಭಾಗವಹಿಸುತ್ತಿದೆ. ಫೆಲೆಸ್ತೀನಿನಲ್ಲಿ ಹಮಾಸ್ ಮಾಡುತ್ತಿರುವುದೂ ಇದನ್ನೇ. ಫೆಲೆಸ್ತೀನಿಗರು ಬಹುಮತದಿಂದ ಹಮಾಸನ್ನು ಅಧಿಕಾರಕ್ಕೆ ತಂದಿದ್ದಾರೆ. ಇವೆಲ್ಲ ಏನು? ಭಯೋತ್ಪಾದನೆಗೂ-ಪ್ರತಿರೋಧಕ್ಕೂ, ಸ್ವಾತಂತ್ರ್ಯ ಹೋರಾಟಕ್ಕೂ-ಆತಂಕವಾದಕ್ಕೂ ನಡುವೆ ಇರುವ ವ್ಯತ್ಯಾಸ ಒಂದು ವೇಳೆ ಶಾಸ್ತ್ರಿಯವರಿಗೆ ಗೊತ್ತಿಲ್ಲದೇ ಇರಬಹುದು. ಹಾಗಂತ ಪಠ್ಯ ಪುಸ್ತಕ ರಚನಾ ಮಂಡಳಿಗೂ ಗೊತ್ತಿಲ್ಲವೇ? ಒಂದು ಕಾಲದಲ್ಲಿ ನೆಲ್ಸನ್ ಮಂಡೇಲಾರನ್ನು ಮತ್ತು ಮೆನಾಮ್ ಬೆಗಿನ್ ರನ್ನು ಪಾಶ್ಚಾತ್ಯ ರಾಷ್ಟ್ರಗಳು ಭಯೋತ್ಪಾದಕ ಅಂದಿದ್ದುವು. ಆದರೆ ಇವತ್ತು ಅವೇ ರಾಷ್ಟ್ರಗಳು ಇವರನ್ನು ಜನನಾಯಕರು ಅನ್ನುತ್ತಿವೆ. ಇವೆಲ್ಲ ಶಾಸ್ತ್ರಿಯವರಿಗೆ ಗೊತ್ತಿಲ್ಲ ಅನ್ನಬೇಕಾ ಅಥವಾ ಹಮಾಸನ್ನು ಭಯೋತ್ಪಾದಕ ಪಟ್ಟಿಯಿಂದ ಅಮೇರಿಕ ಹೊರಗಿಟ್ಟರೆ ಮಾತ್ರ ತಾನು ಹೊರಗಿಡುವುದು ಅನ್ನುವುದು ಅವರ ವಾದವೇ?
ಇಷ್ಟೇ ಅಲ್ಲ,
ಜಮಾಅತೆ ಇಸ್ಲಾಮ್ ಕೂಡ ಶಾಸ್ತ್ರಿಯವರ ಭಯೋತ್ಪಾದಕರ ಪಟ್ಟಿಯಲ್ಲಿದೆ. ವಿಚಿತ್ರ ಏನೆಂದರೆ, ಯಾವ ದೇಶದ ಜಮಾಅತೆ ಇಸ್ಲಾಮ್ ಅನ್ನುವುದನ್ನು ಅವರು ಉಲ್ಲೇಖಿಸಿಲ್ಲ. ಇದನ್ನು ಉದ್ದೇಶಪೂರ್ವಕವಲ್ಲದ ತಪ್ಪು ಅಂತಲೇ ಇಟ್ಟುಕೊಳ್ಳೋಣ. ಆದರೆ ಜಗತ್ತಿನ ಯಾವ ದೇಶದಲ್ಲಿ ಜಮಾಅತೆ ಇಸ್ಲಾಮನ್ನು ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದಾದರೂ ಲೇಖಕರು ಹೇಳಬೇಡವೇ? ತಾಲಿಬಾನ್ ಮತ್ತು ಹರ್ಕತುಲ್ ಮುಜಾಹಿದೀನ್ ನ ಮಧ್ಯೆ ಜಮಾಅತೆ ಇಸ್ಲಾಮಿನ ಹೆಸರನ್ನು ಬರೆದಿರುವುದರಿಂದ, ಅದು ಪಾಕಿಸ್ತಾನದ ಜಮಾಅತೆ ಇಸ್ಲಾಮಿಯದ್ದಾಗಿರಬಹುದು ಎಂದೇ ಅಂದುಕೊಳ್ಳೋಣ. ಆದರೆ ಪಾಕಿಸ್ತಾನದ ಜಮಾಅತೆ ಇಸ್ಲಾಮಿಯು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಅದರ ಅಭ್ಯರ್ಥಿಗಳು ಪಾರ್ಲಿಮೆಂಟ್ ಪ್ರವೇಶಿಸಿದ್ದಾರೆ. ಅದನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸುವುದು ಬಿಡಿ, ಕನಿಷ್ಠ ಅಲ್ಲಿ ನಿಷೇಧ ಕೂಡ ವಿಧಿಸಲಾಗಿಲ್ಲ. ಇಷ್ಟು ಸ್ಪಷ್ಟವಾಗಿರುವ ಸಂಗತಿ ಶಾಸ್ತ್ರಿಯವರಿಗೇಕೆ ಗೊತ್ತಾಗಿಲ್ಲ? ಇನ್ನು, ಭಾರತ, ಲಂಕಾ, ಬಾಂಗ್ಲಾದಲ್ಲೂ ಜಮಾಅತೆ ಇಸ್ಲಾಮಿ ಅಸ್ತಿತ್ವದಲ್ಲಿದೆ. ಆಯಾ ದೇಶಕ್ಕೆ ಅನುಗುಣವಾಗಿ ಅವುಗಳು ಸ್ವತಂತ್ರ ಕಾರ್ಯವಿಧಾನವನ್ನೂ ರೂಪಿಸಿಕೊಂಡಿವೆ. ಮಾತ್ರವಲ್ಲ, ಭಾರತದ ಜಮಾಅತೆ ಇಸ್ಲಾಮಿಗೂ ಜಗತ್ತಿನ ಇತರ ದೇಶಗಳಲ್ಲಿರುವ ಜಮಾಅತೆ ಇಸ್ಲಾಮಿಗೂ ಧೋರಣೆ, ಚಟುವಟಿಕೆ, ಕಾರ್ಯವಿಧಾನದಲ್ಲಿ ಯಾವ ಸಂಬಂಧವೂ ಇಲ್ಲ. ಇವೆಲ್ಲ ಶಾಸ್ತ್ರಿಯವರಿಗೆ ಗೊತ್ತೇ? ಅಂದ ಹಾಗೆ, ಭಯೋತ್ಪಾದಕರ ಪಟ್ಟಿಯಲ್ಲಿ ಜಮಾಅತೆ ಇಸ್ಲಾಮಿನ ಹೆಸರನ್ನು ಓದುವ ಕಾಲೇಜು ವಿದ್ಯಾರ್ಥಿಯೊಬ್ಬ ಅದು ಭಾರತದ ಜಮಾಅತೆ ಇಸ್ಲಾಮಿ ಎಂದು ಅಂದುಕೊಳ್ಳುವ ಸಾಧ್ಯತೆಯೂ ಇದೆಯಲ್ಲವೇ? ಈ ದೇಶದಲ್ಲಿ ಕಳೆದ 64 ವರ್ಷಗಳಿಂದ ಸಕ್ರಿಯವಾಗಿರುವ, ಸಾವಿರಾರು ಸಾಹಿತ್ಯ ಕೃತಿಗಳ ಮುಖಾಂತರ ತಾನು ಏನು, ತನ್ನ ಉದ್ದೇಶ ಯಾವುದು ಎಂಬುದನ್ನು ಬಹಿರಂಗವಾಗಿ ಹೇಳುತ್ತಿರುವ, ಅಸಂಖ್ಯ ವಿಚಾರಗೋಷ್ಠಿ, ಚಿಂತನಗೋಷ್ಠಿ, ಸೇವಾ ಕಾರ್ಯಗಲ ಮುಖಾಂತರ ದೇಶ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ಜಮಾಅತೆ ಇಸ್ಲಾಮೀ ಹಿಂದ್ ನ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ನಿಲುವನ್ನು ತುಂಬುವುದು ಎಷ್ಟು ಸರಿ?
ಒಂದು ವೇಳೆ ಶಾಸ್ತ್ರಿಯವರು, ‘ಇನ್ಸೈಡ್ ಟೆರರಿಸಮ್’ ಅನ್ನುವ ಬ್ರೂಸ್ ಹಾಫ್ಮನ್ ರ ಕೃತಿಯನ್ನು ಓದಿದ್ದರೆ ಅಥವಾ ಅಲೆಕ್ಸ ಸ್ಕಿಮಿದ್ ರ , ‘ಪೊಲಿಟಿಕಲ್ ಟೆರರಿಸಮ್: ಎ ರಿಸರ್ಚ್ ಗೈಡ್’ ಅನ್ನುವ ಪುಸ್ತಕವನ್ನು ಅಧ್ಯಯನ ನಡೆಸಿದ್ದರೆ, ಭಯೋತ್ಪಾದನೆಯ ಕುರಿತಂತೆ ಇಷ್ಟೊಂದು ಹಗುರವಾಗಿ ಬರೆಯುತ್ತಿರಲಿಲ್ಲ.
ಕಾರ್ತನ್ ಮಾಕ್ಸ್ಟೇಟ್
ವಾಲ್ಟರ್ ಲಾಕ್ವೇರ್
ಡೇವಿಡ್ ರಾಡಿನ್
ಮೈಕೆಲ್ ವಾಲ್ಝರ್
ಬ್ರಿಯಾನ್ ಜೆನ್ಕಿನ್ ಸ್ಸ್
ಮಾರ್ಟಿನ್ ರುಡ್ನರ್..
ಮತ್ತು ಇಂಥ ಅನೇಕ ರಾಜಕೀಯ, ಸಾಮಾಜಿಕ ವಿಶ್ಲೇಷಕರು ಭಯೋತ್ಪಾದನೆಗೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಆದರೆ ಯಾರಿಗೂ ಕೂಡ ಇದಮಿಥ್ಥಂ ಅನ್ನುವ ವ್ಯಾಖ್ಯಾನ ಬರೆಯಲು ಈವರೆಗೂ ಸಾಧ್ಯವಾಗಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ, ದೇಶದಿಂದ ದೇಶಕ್ಕೆ, ಪ್ರಭುತ್ವದಿಂದ ಪ್ರಭುತ್ವಕ್ಕೆ ಭಿನ್ನಭಿನ್ನ ವ್ಯಾಖ್ಯಾನಗಳೊಂದಿಗೆ ಅದು ಇವತ್ತು ಪ್ರಚಲಿತದಲ್ಲಿದೆ. ರಶ್ಯದ ವಿರುದ್ಧ ಹೋರಾಡುತ್ತಿದ್ದ ಅಫಘಾನಿನ ಮುಜಾಹಿದೀನ್ಗಳನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು 1985ರಲ್ಲಿ ಅಮೇರಿಕದ ಅಧ್ಯಕ್ಷ ರೋನಾಲ್ಡ್ ರೇಗನ್ ಕರೆದಿದ್ದರು. ಇದಾಗಿ 20 ವರ್ಷಗಳ ಬಳಿಕ ಅಫಘಾನಿನ ಹೊಸ ತಲೆಮಾರು ವಿದೇಶಿ ಹಸ್ತಕ್ಷೇಪದ ವಿರುದ್ಧ ನಿಂತಾಗ ಅವರನ್ನು ಜಾರ್ಜ್ ಡಬ್ಲ್ಯು. ಬುಶ್ ಭಯೋತ್ಪಾದಕರು ಎಂದು ಕರೆದರು. ದ್ವಿತೀಯ ವಿಶ್ವ ಯುದ್ಧದ ವೇಳೆ ಮಲೇಶ್ಯನ್ನರ ಜಪಾನ್ ವಿರೋಧಿ ಸೇನೆಯು ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಮಲೇಶ್ಯನ್ ಕ್ರಾಂತಿಯ ವೇಳೆ ಇದೇ ಸೇನೆಯ ಸದಸ್ಯರನ್ನು ಬ್ರಿಟನ್ ಭಯೋತ್ಪಾದಕರೆಂದು ಕರೆಯಿತು. ಇದಕ್ಕೆ ಇತ್ತೀಚಿನ ಉದಾಹರಣೆ ಅಂದರೆ ವಿಕಿಲೀಕ್ಸ್ ನ ಜ್ಯೂಲಿಯನ್ ಅಸಾಂಜ್. ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಸಾರಾ ಪೌಲಿನ್ ಮತ್ತು ಜೋಯ್ ಬಿಡೆನ್ ರು ಅಸಾಂಜ್ ರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ನಿಜವಾಗಿ ಒಂದು ರಾಷ್ಟ್ರದಲ್ಲಿ ಭಯೋತ್ಪಾದಕ ಅನ್ನಿಸಿಕೊಂಡವರು ಇನ್ನೊಂದು ರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ವಿಮೋಚಕರು, ಕ್ರಾಂತಿಕಾರಿಗಳು, ದೇಶಪ್ರೇಮಿಗಳು ಎಂದೆಲ್ಲಾ ಗುರುತಿಸಿಕೊಳ್ಳುತ್ತಾರೆ. ಹೀಗಿರುವಾಗ ಮುಸ್ಲಿಮ್ ಬ್ರದರ್ಹುಡ್ ನ ಬಗ್ಗೆ, ತಾಲಿಬಾನ್ ಸಂಸ್ಕøತಿಯ ಬಗ್ಗೆ, ಫೆಲೆಸ್ತೀನ್ ಹೋರಾಟದ ಬಗ್ಗೆ.. ಏಕಮುಖವಾಗಿ ಬರೆಯುವುದು ಮತ್ತು ಅದನ್ನೇ ಅಂತಿಮ ಸತ್ಯ ಎಂಬ ರೀತಿಯಲ್ಲಿ ವಿದ್ಯಾರ್ಥ್ರಿಗಳಿಗೆ ಬೋಧಿಸುವುದು ಯಾಕೆ ಸಮರ್ಥನೀಯ ಅನ್ನಿಸಿಕೊಳ್ಳಬೇಕು?
ನಿಜವಾಗಿ, ಈ ದೇಶಕ್ಕೆ ಇವತ್ತು ಧರ್ಮದ ಬಗ್ಗೆ, ಜಾಗತಿಕ ವಿದ್ಯಮಾನಗಳ ಬಗ್ಗೆ, ಕೆಡುಕುಗಳ ಬಗ್ಗೆ ಖಚಿತ ಮತ್ತು ಆರೋಗ್ಯಪೂರ್ಣ ನಿಲುವುಗಳನ್ನು ಹೊಂದಿರುವ ಯುವ ಸಮೂಹದ ಅಗತ್ಯ ಇದೆ. ಅರ್ಧ ಸತ್ಯ ಇಲ್ಲವೇ ಪೂರ್ಣ ಸುಳ್ಳುಗಳನ್ನು ಅಥವಾ ಏಕಮುಖ ವಿಚಾರಗಳನ್ನು ಅವರಲ್ಲಿ ತುಂಬುವುದು ಅವರ ಆರೋಗ್ಯವನ್ನು ಮಾತ್ರವಲ್ಲ, ಈ ದೇಶದ ಆರೋಗ್ಯವನ್ನೂ ಹದಗೆಡಿಸಬಹುದು. ಆದ್ದರಿಂದಲೇ ಅಬ್ದುಲ್ ಕಾದರ್ ಅವರು ಎತ್ತಿರುವ ಪ್ರಶ್ನೆ ಅತ್ಯಂತ ಸಕಾಲಿಕ ಮತ್ತು ಸಮಯೋಚಿತವಾದದ್ದು. ಅಸ್ತಿತ್ವಕ್ಕೆ ಬಂದು ಒಂದು ವರ್ಷವಷ್ಟೇ ಆಗಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಈ ಕುರಿತಂತೆ ಗಂಭೀರವಾಗಿ ಆಲೋಚಿಸಬೇಕು. ಅಸಮರ್ಪಕ ಮತ್ತು ಅಸಮಗ್ರ ಪಾಠಗಳನ್ನು ಪುಸ್ತಕದಿಂದ ಕೈ ಬಿಡುವುದಕ್ಕೆ ಮುಂದಾಗಬೇಕು.
ಯಾಕೆಂದರೆ
ಇದು ಎಲ್.ಎಸ್. ಶಾಸ್ತ್ರಿ ಅಥವಾ ಡಾ| ಬಸವರಾಜ ಸಬರದ ಎಂಬ ಇಬ್ಬರು ಬರಹಗಾರರ ಪ್ರಶ್ನೆಯಲ್ಲ. ಒಂದು ದೊಡ್ಡ ಯುವ ಸಮೂಹದ ಪ್ರಶ್ನೆ. ಅಸಮರ್ಪಕ ಮತ್ತು ಅವಾಸ್ತವಿಕ ವಿಚಾರಗಳೊಂದಿಗೆ ಈ ಮಕ್ಕಳು ಬೆಳೆಯದಂತೆ ನೋಡಿಕೊಳ್ಳಬೇಕಾದುದು ನಮ್ಮೆಲ್ಲರ ಕತ್ರವ್ಯ.