Friday, October 28, 2016

ದೇಶ ಕಾಯುವವ ಹುತಾತ್ಮನಾಗುವುದಾದರೆ ದೇಶ ಸ್ವಚ್ಛಗೊಳಿಸುವವ ಯಾಕಾಗಲಾರ?

         ಸೇನೆಯು ದೇಶದ ಇತರೆಲ್ಲವುಗಳಿಗಿಂತ ಮಿಗಿಲೇ? ಅದು ಪ್ರಶ್ನಾತೀತವೇ? ಸೇನೆಯ ಕಾರ್ಯ ನಿರ್ವಹಣೆಯ ಮೇಲೆ ಪ್ರಶ್ನೆಗಳನ್ನೆತ್ತುವುದು ದೇಶದ್ರೋಹವಾಗುವುದೇ? ಹುತಾತ್ಮತೆ ಎಂಬ ಗೌರವಕ್ಕೆ ಯಾರೆಲ್ಲ ಅರ್ಹರಾಗಬೇಕು? ಅದು ಸೇನಾ ಯೋಧರಿಗೆ ಮಾತ್ರ ಲಭ್ಯವಾಗುವ ಗೌರವವೇ? ಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು, ಸತ್ತ ಪ್ರಾಣಿಯನ್ನು ವಿಲೇವಾರಿ ಮಾಡುವವರೆಲ್ಲ ಈ ಗೌರವಕ್ಕೆ ಅನರ್ಹರೇ?
     ಸರ್ಜಿಕಲ್ ಸ್ಟ್ರೈಕ್‍ನ ಹವಾ ತಣ್ಣಗಾಗಿರುವ ಈ ಹೊತ್ತಿನಲ್ಲಿ ನಮ್ಮ ಪ್ರಜಾತಂತ್ರ ಮತ್ತು ಅದರ ಭಾಗವಾಗಿರುವ ಮಿಲಿಟರಿ ವ್ಯವಸ್ಥೆಯನ್ನು ವಿಮರ್ಶೆಗೊಳಪಡಿಸುವುದು ಅತ್ಯಂತ ಸೂಕ್ತ ಅನ್ನಿಸುತ್ತದೆ. ಉರಿ ದಾಳಿ ಮತ್ತು ಅದಕ್ಕೆ ಉತ್ತರವಾಗಿ ನಡೆಸ ಲಾದ ಸರ್ಜಿಕಲ್ ಸ್ಟ್ರೈಕ್‍ನ ಸಂದರ್ಭದಲ್ಲಿ ಇಂಥದ್ದೊಂದು ವಿಮರ್ಶೆಗೆ ಇದ್ದ ಸ್ಪೇಸ್ ತೀರಾ ಸಣ್ಣದಾಗಿತ್ತು. ಅಲ್ಲೊಂದು ಭಾವೋದ್ವೇಗವಿತ್ತು. ದೇಶದಾದ್ಯಂತ ಯುದ್ಧೋನ್ಮಾದದ ವಾತಾವರಣ ವನ್ನು ಹುಟ್ಟು ಹಾಕಲಾಗಿತ್ತು. ಇಂಡಿಯಾ ಟಿ.ವಿ.ಯ ನಿರೂಪಕ ಸ್ವತಃ ಯೋಧರ ಉಡುಪನ್ನು ಧರಿಸಿ ನಿರೂಪಣೆ ಮಾಡಿದ್ದರು. ನ್ಯೂಸ್ ಎಕ್ಸ್ ಚಾನೆಲ್ ಅಂತೂ, ‘ತಾನಿನ್ನು ಪಾಕಿಸ್ತಾನವನ್ನು ಪಾಕಿಸ್ತಾನ ಎಂಬ ಭಯೋತ್ಪಾದಕ ರಾಷ್ಟ್ರ’ ಎಂದು ಕರೆಯುವುದಾಗಿ ಘೋಷಿಸಿತು. ಪಾಕ್ ಕಲಾವಿದರು ದೇಶ ಬಿಟ್ಟು ಹೊರ ಹೋಗಬೇಕೆಂದು ಟೈಮ್ಸ್ ನೌ ಆಗ್ರಹಿಸಿತು. ಎಲ್ಲಿಯ ವರೆಗೆಂದರೆ, ಕೇಂದ್ರದ ಮಾಜಿ ಗೃಹಸಚಿವ ಪಿ. ಚಿದಂಬರಂ ಅವರ ಜೊತೆ ಬರ್ಖಾದತ್ ನಡೆಸಿದ ಸಂದರ್ಶನವನ್ನು ಪ್ರಸಾರ ಮಾಡದೇ ಇರಲು ಎನ್‍ಡಿಟಿವಿ ನಿರ್ಧರಿಸಿತು. ‘ಯೋಧರ ರಕ್ತದಿಂದ ಲಾಭ ಎತ್ತಲು ಪ್ರಧಾನಿ ನರೇಂದ್ರ ಮೋದಿಯವರು ಶ್ರಮಿಸುತ್ತಿದ್ದಾರೆ..’ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೂ ಅದು ಕತ್ತರಿ ಪ್ರಯೋಗಿಸಿತು. ಒಂದು ರೀತಿಯಲ್ಲಿ, ಸರಕಾರ ಮತ್ತು ಮಾಧ್ಯಮ ಒಟ್ಟು ಸೇರಿ ದೇಶದಲ್ಲಿ ಸಮೂಹ ಸನ್ನಿಯೊಂದನ್ನು ನಿರ್ಮಿಸಿದ್ದುವು. ಪಾಕಿಸ್ತಾನಿಯರನ್ನು ತೆಗಳುವುದು ಮತ್ತು ಭಾರತೀಯ ಮಿಲಿಟರಿ ಯನ್ನು ಹೊಗಳುವುದು - ಇದರಾಚೆಗೆ ಮೂರನೇ ಧ್ವನಿಯೊಂದಕ್ಕೆ ಆಸ್ಪದವೇ ಇಲ್ಲವೆಂಬ ದಾಷ್ಟ್ರ್ಯವನ್ನು ಪ್ರದರ್ಶಿಸಿದುವು. ಚಿತ್ರನಟಿ ರಮ್ಯ, ಕರಣ್ ಜೋಹರ್, ಕೇಜ್ರಿವಾಲ್, ಅರುಣ್ ಶೌರಿ..ಗಳೆಲ್ಲ ದೇಶದ್ರೋಹಿಗಳಂತೆ ಚಿತ್ರಿತವಾದದ್ದು ಈ ಕಾರಣದಿಂದಲೇ. ಹಾಗಂತ, ಸೇನೆಯ ತ್ಯಾಗ ಮತ್ತು ಪರಿಶ್ರಮಗಳನ್ನು ಕೀಳಂದಾಜಿಸು ವುದು ಇಲ್ಲಿನ ಉದ್ದೇಶವಲ್ಲ. ಯೋಧರು ಗೌರವಾರ್ಹರು. ಅಪಾಯಕಾರಿ ಸಂದರ್ಭಗಳಿಗೆ ಸದಾ ಮುಖಾಮುಖಿಯಾಗಿದ್ದು ಕೊಂಡು ಬದುಕುವವರು. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೇನೆಯ ಸ್ಥಾನ-ಮಾನ ಏನು? ಸೇನಾ ಕಾರ್ಯಾಚರಣೆಯನ್ನು ‘ಪ್ರಶ್ನಾತೀತ’ವೆಂಬ ಭಾಷೆಯಲ್ಲಿ ವ್ಯಾಖ್ಯಾನಿಸುವುದರಿಂದ ಆಗುವ ತೊಂದರೆಗಳೇನು? ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಪಾಕಿಸ್ತಾನ. ಇವತ್ತು ಅಲ್ಲಿನ ಸೇನೆ ಪ್ರಜಾತಂತ್ರಕ್ಕೆ ಪರ್ಯಾಯವಾಗಿ ಗುರುತಿಸಿಕೊಂಡಿದೆ. ಅಲ್ಲಿ ಮಿಲಿಟರಿ ಹೇಳಿಯೇ ಕೊನೆಯ ಮಾತು. ಪ್ರಜಾತಂತ್ರದ ದನಿ ಎಷ್ಟು ದುರ್ಬಲ ಎಂಬುದನ್ನು ಪಾಕಿಸ್ತಾನ ಅನೇಕ ಬಾರಿ ಜಗತ್ತಿಗೆ ಮನದಟ್ಟು ಮಾಡಿಕೊಟ್ಟಿದೆ. ಕಾರ್ಗಿಲ್ ಪ್ರಕರಣ ಅದಕ್ಕೆ ಇತ್ತೀಚಿನ ಉದಾಹರಣೆ. ಸೇನೆಯನ್ನು ಪ್ರಶ್ನಾತೀತವಾಗಿ ಮತ್ತು ಅದರ ಕಾರ್ಯಾಚರಣೆಯನ್ನು ವೈಭವೀಕೃತವಾಗಿ ಬಿಂಬಿಸುವುದರಿಂದ ಸಮಾಜದ ದೇಹಭಾಷೆಯಲ್ಲಿ ಇದಮಿತ್ಥಂ ಎಂಬ ನಿಲುವು ರೂಪು ಪಡೆಯುವುದಕ್ಕೆ ಅವಕಾಶ ವಿರುತ್ತದೆ. ಸಮಾಜವೊಂದು ಮಿಲಿಟರೀಕರಣಗೊಳ್ಳುವುದೆಂದರೆ ಹೀಗೆ. ನಿಧಾನಕ್ಕೆ ಜನರು ಮಿಲಿಟರಿ ಭಾಷೆಯಲ್ಲಿ ಮಾತಾಡುತ್ತಾರೆ. ಯೋಧರ ತ್ಯಾಗ-ಬಲಿದಾನಗಳು ಅಗತ್ಯಕ್ಕಿಂತ ಹೆಚ್ಚು ಚರ್ಚೆಗೊಳ ಗಾಗುತ್ತವೆ. ಸೇನೆಯಿಂದಲೇ ನಾವು ಎಂಬ ಹವಾ ಎಲ್ಲೆಡೆ ಧ್ವನಿಸತೊಡಗುತ್ತದೆ. ನಿಜವಾಗಿ, ಉರಿ ಮತ್ತು ಸರ್ಜಿಕಲ್ ಸ್ಟ್ರೈಕ್‍ನ ಸಂದರ್ಭದಲ್ಲಿ ದೇಶದ ಹೆಚ್ಚಿನ ಮಾಧ್ಯಮಗಳ ವರ್ತನೆ ಬಹುತೇಕ ಈ ಧಾಟಿಯಲ್ಲೇ ಇದ್ದುವು. ಹುತಾತ್ಮ ಯೋಧರ ಹೆತ್ತವರನ್ನು ಸ್ಟುಡಿಯೋದಲ್ಲಿ ಕೂರಿಸಿ ಅವು ಚರ್ಚಿಸಿದುವು. ಕಲಾವಿದರನ್ನು ಹೊಣೆಗೇಡಿಗಳಾಗಿ ತೋರಿಸಿದುವು. ಕುಕ್ಕರುಗಾಲಿನಲ್ಲೋ ತೆವಳಿ ಕೊಂಡೋ ಕರ್ತವ್ಯನಿರತರಾದ ಯೋಧರನ್ನು ತೋರಿಸುತ್ತಾ, ಭಿನ್ನ ಧ್ವನಿಗಳ ದೇಶನಿಷ್ಠೆಯನ್ನು ಪ್ರಶ್ನಿಸಿದುವು. ಅಷ್ಟಕ್ಕೂ, ದೇಶ ಸೇವೆ, ದೇಶ ರಕ್ಷಣೆ ಎಂಬ ಗೌರವಗಳೆಲ್ಲ ಕೇವಲ ಯೋಧರಿಗೆ ಮಾತ್ರ ಮೀಸಲಾದುದೇ? ಯೋಧರು ದೇಶರಕ್ಷಣೆಯಲ್ಲಿ ನಿರತರಾಗಿರುವಾಗ ದೇಶ ಸ್ವಚ್ಛತೆಯಲ್ಲಿ ಕೋಟ್ಯಂತರ ಕಾರ್ಮಿಕರು ನಿರತರಾಗಿರುವರಲ್ಲ, ಅವರಿಗೇಕೆ ಈ ಗೌರವಾದರಗಳನ್ನು ನಾವು ಅರ್ಪಿಸುತ್ತಿಲ್ಲ? ಕೇವಲ ದೆಹಲಿಯೊಂದರಲ್ಲೇ ಒಂದೂವರೆ ಲಕ್ಷ ಮ್ಯಾನ್‍ಹೋಲ್‍ಗಳಿವೆ. ಈ ಮ್ಯಾನ್‍ಹೋಲ್‍ಗಳಿಗೆ ಇಳಿದು ಮಲ-ಮೂತ್ರವನ್ನು ಮೈಪೂರ್ತಿ ಅಂಟಿಸಿಕೊಂಡು ಚರಂಡಿ ಸ್ವಚ್ಛ ಮಾಡುವವರು ಬಹುತೇಕ ದಲಿತ-ದಮನಿತ ವರ್ಗದವರು. ಗಡಿಯಲ್ಲಿ ಯೋಧರು ನಿದ್ದೆಗೆಟ್ಟು ಕಾಯುವುದರಿಂದ ನಾವು ಆರಾಮವಾಗಿ ನಿದ್ದೆ ಮಾಡುತ್ತೇವೆ... ಎಂದೆಲ್ಲ ಭಾವುಕಗೊಳಿಸುವವರು ಯಾಕೆ ದಲಿತರು ಮಲ ಎತ್ತುವುದರಿಂದಾಗಿ ನಾವು ಆರಾಮವಾಗಿ ಬದುಕುತ್ತಿದ್ದೇವೆ... ಎಂದು ಹೆಮ್ಮೆಪಟ್ಟುಕೊಳ್ಳುವುದಿಲ್ಲ? ಈ ದೇಶದಲ್ಲಿ ಪ್ರತಿದಿನ 2ರಿಂದ 3 ಮಂದಿ ಮ್ಯಾನ್‍ಹೋಲ್‍ನೊಳಗೆ ಉಸಿರುಗಟ್ಟಿ ಸಾಯುತ್ತಿದ್ದಾರೆ ಎಂದು ಅಧಿಕೃತ ವರದಿಗಳೇ ಹೇಳುತ್ತವೆ. ಮಲ ಎತ್ತುವವರಲ್ಲಿ ಪ್ರತಿ ವರ್ಷ 22,327 ಮಂದಿ ಸಾಯುತ್ತಾರೆ ಎಂದು ದಿ ಹಿಂದೂ ಪತ್ರಿಕೆ (2014 ಎಪ್ರಿಲ್) ವರದಿ ಮಾಡಿದೆ. ಯಾಕೆ ಈ ಸಾವನ್ನು ಹುತಾತ್ಮಗೊಳಿಸಲು ನಮ್ಮ ಮಾಧ್ಯಮಗಳಿಗೆ ಸಾಧ್ಯವಾಗುವುದಿಲ್ಲ? ದೇಶ ಕಾಯುವವ ಹುತಾತ್ಮನಾಗುವುದಾದರೆ ದೇಶ ಸ್ವಚ್ಛಗೊಳಿಸುವವ ಏನು? ಆತನೇಕೆ ಹುತಾತ್ಮನಲ್ಲ? ಅದರಲ್ಲೂ ಯೋಧರಿಗೆ ಹೋಲಿಸಿದರೆ ಈ ಬಡಪಾಯಿಗಳ ಬದುಕು ಅತ್ಯಂತ ಘೋರ. ಈ ಕೆಲಸದಲ್ಲಿ ಸುರಕ್ಷತತೆಗೆ ಅತ್ಯಂತ ಕನಿಷ್ಠ ಗಮನವನ್ನು ಕೊಡಲಾಗುತ್ತದೆ. ಕಾರ್ಮಿಕರು ವಿವಿಧ ರೋಗಗಳನ್ನು ತಗುಲಿಸಿಕೊಂಡು ಒದ್ದಾಡುತ್ತಾರೆ. ಸಾಮಾಜಿಕ ಮಾನ್ಯತೆಯಿಂದಲೂ ಅವರು ವಂಚಿತರಾಗುತ್ತಾರೆ. ದೇಶವನ್ನು ವಾಸಯೋಗ್ಯಗೊಳಿಸುವಲ್ಲಿ ತಮ್ಮ ಬದುಕನ್ನೇ ತೇಯುವ ಈ ವರ್ಗದ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಮಾತಾಡದೇ ಇರುವುದಕ್ಕೆ ಕಾರಣವೇನು? ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ ಸಾವಿಗೀಡಾಗುವ ಕಾರ್ಮಿಕನ ಶವವನ್ನು ಮೆರವಣಿಗೆಯಲ್ಲಿ ಸಾಗಿಸಿದ ಒಂದೇ ಒಂದು ಉದಾಹರಣೆಯಾದರೂ ಈ ದೇಶ ದಲ್ಲಿದೆಯೇ? ಅಂಥ ಕಾರ್ಮಿಕನ ಹೆತ್ತವರನ್ನು ಟಿ.ವಿ. ಸ್ಟುಡಿಯೋದಲ್ಲಿ ಕೂರಿಸಿ ಚರ್ಚಿಸಲಾಗಿದೆಯೇ? ಈ ಕಾರ್ಮಿಕರ ವೇಷದಂತೆ ಯಾವುದಾದರೂ ಟಿ.ವಿ. ನಿರೂಪಕ ತನ್ನ ಉಡುಪನ್ನು ಬದಲಿಸಿ ಕೊಂಡದ್ದಿದೆಯೇ? ಅವರನ್ನು ಹುತಾತ್ಮರೆಂದು ಕರೆದದ್ದಿದೆಯೇ? ತೆವಳಿಕೊಂಡು ಸಾಗುವ ಯೋಧನಂತೆಯೇ ಮ್ಯಾನ್‍ಹೋಲ್‍ನಿಂದ ದುರ್ನಾತ ಬೀರುತ್ತಾ ಹೊರಬರುವ ಕಾರ್ಮಿಕನನ್ನು ತೋರಿಸಿ ‘ಇವರಿಗೆ ನಮ್ಮ ಸಲಾಂ’ ಎಂದು ಹೇಳಿದ್ದಿದೆಯೇ?
       1999ರಲ್ಲಿ ಕಾರ್ಗಿಲ್ ಯುದ್ಧ ನಡೆಯಿತು. ಸುಮಾರು 527 ಮಂದಿ ಭಾರತೀಯ ಯೋಧರು ಸಾವಿಗೀಡಾದರು. ಇಷ್ಟು ಯೋಧರ ಸಾವಿಗೆ ಮಿಲಿಟರೀಕರಣಗೊಂಡ ಪಾಕಿಸ್ತಾನ ಕಾರಣ ಎಂಬುದು ಸ್ಪಷ್ಟ. ಸೇನೆಯು ಪ್ರಶ್ನಾತೀತ ಸ್ಥಾನಕ್ಕೆ ತಲುಪಿಬಿಟ್ಟಾಗ ಆಗಬಹುದಾದ ಅಪಾಯ ಇದು. ಆಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಝ ಶರೀಫ್‍ರಿಗೆ ಈ ಕಾರ್ಯಾಚರಣೆಯ ಸುಳಿವೇ ಇರಲಿಲ್ಲ ಎಂದು ಹೇಳಲಾಗುತ್ತದೆ. ಸೇನೆಯ ಮುಖ್ಯಸ್ಥರಾಗಿದ್ದ ಮುಶರ್ರಫ್‍ರವರೇ ಇಡೀ ಕಾರ್ಯಾಚರಣೆಯ ಸ್ವರೂಪವನ್ನು ನಿರ್ಧರಿಸಿದ್ದರು. ನಿಜವಾಗಿ, ಪಾಕ್ ಸೇನೆಯ ಈ ಅನಗತ್ಯ ಯುದ್ಧವನ್ನು ಅಲ್ಲಿನ ಜನರು ಪ್ರಶ್ನಿಸಿರಲಿಲ್ಲ. ಯಾಕೆಂದರೆ, ಒಂದು ಹಂತದ ವರೆಗೆ ಪಾಕ್ ಸಮಾಜ ಮಿಲಿಟರೀಕರಣಗೊಂಡಿದೆ. ಅಲ್ಲಿ ಮಿಲಿಟರಿಯ ಬಗ್ಗೆ ಅನಗತ್ಯ ಉನ್ಮಾದ ಮತ್ತು ಭ್ರಮೆಗಳಿವೆ. ಒಂದು ವೇಳೆ, ಅಮೇರಿಕ ಮತ್ತು ಬ್ರಿಟನ್‍ಗಳಲ್ಲಿ ಸೇನೆಯ ಬಗ್ಗೆ ಇಂಥz್ದÉೂಂದು ಪ್ರಶ್ನಾತೀತ ಮನೋಭಾವ ಇರುತ್ತಿದ್ದರೆ ನಮಗೆ ಇರಾಕ್‍ನ ಅಬೂಗುರೈಬ್ ಜೈಲಿನಲ್ಲಾದ ಕ್ರೌರ್ಯ ಮತ್ತು ಲೈಂಗಿಕ ಹಿಂಸೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತೇ? ಗ್ವಾಂಟನಾಮೋದ ಶಿಕ್ಷೆ ಹೊರಜಗತ್ತಿಗೆ ತಿಳಿಯುತ್ತಿತ್ತೇ? ನಿಜವಾಗಿ, ಅಬೂಗುರೈಬ್‍ನಲ್ಲಿ ಅಥವಾ ಗ್ವಾಂಟನಾಮೋದಲ್ಲಿ ಹಿಂಸಿಸಿದವರು ಸರ್ವಾಧಿಕಾರಿ ರಾಷ್ಟ್ರದ ಅನಾಗರಿಕ ಯೋಧರಾಗಿರಲಿಲ್ಲ. ಮಾನವ ಹಕ್ಕುಗಳಿಗೆ ಅತೀ ಹೆಚ್ಚು ಗೌರವವನ್ನು ಕೊಡುವ ರಾಷ್ಟ್ರಗಳ ಯೋಧರಾಗಿದ್ದರು. ಆದರೂ ಇಂಥ ರಾಷ್ಟ್ರಗಳ ಯೋಧರಿಂದ ಅತೀ ಹೀನ ಮಾನವ ಹಕ್ಕು ದೌರ್ಜನ್ಯಗಳು ನಡೆದುವು ಮತ್ತು ಅವು ಪ್ರಶ್ನೆಗೂ ಒಳಪಟ್ಟುವು. ಅಮೇರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ತಮ್ಮ ಯೋಧರನ್ನು ಪ್ರಶ್ನಾತೀತ ದೇಶರಕ್ಷಕರು ಎಂದು ಸಮರ್ಥಿಸುತ್ತಿದ್ದರೆ ಇವೆಲ್ಲ ಬೆಳಕಿಗೆ ಬರುತ್ತಿತ್ತೇ? ಅವರಿಗೆ ಶಿಕ್ಷೆಯಾಗುತ್ತಿತ್ತೇ? ಆದ್ದರಿಂದಲೇ, ಪ್ರಜಾತಂತ್ರ ರಾಷ್ಟ್ರದಲ್ಲಿ ಯಾರೂ ಪ್ರಶ್ನಾತೀತರಾಗಬಾರದು ಎಂದು ಒತ್ತಾಯಿಸುವುದು. ಕಾರ್ಗಿಲ್ ಸಮರದಲ್ಲಿ ಸಾವಿಗೀಡಾದ ಯೋಧರನ್ನು ಹುತಾತ್ಮರಾಗಿ ಇಲ್ಲಿ ಗೌರವಿಸಲಾಯಿತು. ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಯಿತು. ಆದರೆ, ಇದಾಗಿ ಎರಡು ವರ್ಷಗಳ ಬಳಿಕ ನಡೆದ ಆಪರೇಶನ್ ಪರಾಕ್ರಮ್‍ನಲ್ಲಿ 798 ಮಂದಿ ಯೋಧರು ಸಾವಿ ಗೀಡಾದರು. ಈ ಸಾವು ಯುದ್ಧದಿಂದ ಸಂಭವಿಸಿದ್ದಲ್ಲ. ಪಾರ್ಲಿ ಮೆಂಟ್‍ನ ಮೇಲೆ ನಡೆದ ಆಕ್ರಮಣದ ಬಳಿಕ ವಾಜಪೇಯಿ ನೇತೃತ್ವದ ಸರಕಾರವು ಭಾರತ-ಪಾಕ್ ಗಡಿಯುದ್ದಕ್ಕೂ ಆಪರೇಶನ್ ಪರಾಕ್ರಮ್ ಎಂಬ ಹೆಸರಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿತು. ಅದನ್ನು ಅತ್ಯಂತ ಕಠಿಣ ಮತ್ತು ತಪ್ಪಾದ ಕಾರ್ಯಾಚರಣೆ ಎಂದು ಹೇಳಲಾಗುತ್ತದೆ. ವರ್ಷದ ವರೆಗೆ ನಡೆದ ಈ ಕಾರ್ಯಾ ಚರಣೆಯಲ್ಲಿ ಯೋಧರು ಅಪಘಾತ, ಮದ್ದುಗುಂಡುಗಳನ್ನು ಹುದು ಗಿಸಿಡುವಲ್ಲಿ ಆದ ವೈಫಲ್ಯ, ದುರ್ಬಲ ಶಸ್ತ್ರಾಸ್ತ್ರಗಳು ಇತ್ಯಾದಿ ಇತ್ಯಾದಿಗಳಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟರು. ಆದರೆ ಈ ಯೋಧರಿಗೆ ಹುತಾತ್ಮತೆಯ ಪಟ್ಟ ಸಿಗಲಿಲ್ಲ. ಮೆರವಣಿಗೆಯ ಭಾಗ್ಯವೂ ಸಿಗಲಿಲ್ಲ. ಯುದ್ಧವಲ್ಲದ ಈ ಕಾರ್ಯಾಚರಣೆಯಲ್ಲಿ ಕಾರ್ಗಿಲ್ ಯುದ್ಧಕ್ಕಿಂತ ಹೆಚ್ಚು ಯೋಧರು ಸಾವಿಗೀಡಾದರೂ ಕಾರ್ಗಿಲ್ ಯಾಕೆ ವೈಭವೀಕರಣಗೊಂಡಿತು? ಆಪರೇಶನ್ ಪರಾ ಕ್ರಮ್‍ನ ಯೋಧರು ಯಾಕೆ ಅವಗಣನೆಗೆ ಗುರಿಯಾದರು? ವ್ಯವಸ್ಥೆಯ ತಪ್ಪುಗಳು ಬಹಿರಂಗಕ್ಕೆ ಬರಬಾರದೆಂಬ ನೆಲೆಯಲ್ಲಿ  ಆಪರೇಶನ್ ಪರಾಕ್ರಮ್‍ನ ಸಾವುಗಳನ್ನು ಮುಚ್ಚಿಡಲಾಯಿತೇ? ಅಂದರೆ, ಯೋಧರನ್ನು ಹುತಾತ್ಮಗೊಳಿಸುವುದೂ ಗೊಳಿಸದಿರುವುದೂ ಎರಡೂ ವ್ಯವಸ್ಥೆಯ ಅಣತಿಯಂತೆ ನಡೆಯುತ್ತಿದೆ ಎಂದೇ ಇದರರ್ಥವಲ್ಲವೇ? ಮಾಧ್ಯಮಗಳೇಕೆ ಈ ಬಗ್ಗೆ ಧ್ವನಿ ಎತ್ತಲಿಲ್ಲ? ಬಹುಶಃ, ಸೇನೆಯು ಪ್ರಶ್ನಾತೀತ ಎಂಬ ಮನೋಭಾವ ಹೀಗೆ ಮಾಡಿರಬಹುದೇ? ಈ ನಿಲುವನ್ನೇ ವ್ಯವಸ್ಥೆ ದುರುಪಯೋಗಪಡಿಸಿಕೊಂಡಿತೇ?
       ಅಂದಹಾಗೆ, ದೇಶ ಕಾಯುವುದೊಂದೇ ದೇಶಸೇವೆಯ ಕೆಲಸವಲ್ಲ ಅಥವಾ ಚರಂಡಿ ಸ್ವಚ್ಛ ಮಾಡುವುದೇ ಸರ್ವೋಚ್ಚವಲ್ಲ. ಯಾವ ಕೆಲಸವನ್ನೂ ಶ್ರೇಷ್ಠ-ಕನಿಷ್ಠ ಎಂದು ವಿಭಜಿಸಬೇಕಾಗಿಲ್ಲ. ಎಲ್ಲವೂ ಆಯಾ ಕ್ಷೇತ್ರದಲ್ಲಿ ಶ್ರೇಷ್ಠವೇ. ಎಲ್ಲ ಕರ್ತವ್ಯನಿರತ ಸಾವುಗಳೂ ಆಯಾ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಾಮುಖ್ಯವೇ. ಯೋಧರು ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕರ್ತವ್ಯನಿರತ ರಾಗುತ್ತಾರೆ ಎಂಬ ಕಾರಣಕ್ಕಾಗಿ ಅವರು ಪ್ರಶ್ನಾತೀತರಾಗಬಾರದು. ಬರಿದೇ ವೈಭವೀಕರಣಕ್ಕೂ ಒಳಗಾಗಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಶ್ನಾರ್ಹರು ಮತ್ತು ಎಲ್ಲರೂ ಸಮಾನರು. ಇಲ್ಲದಿದ್ದರೆ ಭಾರತವೂ ಪಾಕಿಸ್ತಾನವಾದೀತು.

Friday, October 21, 2016

ಮುಸ್ಲಿಮರನ್ನೇ ಪ್ರಣಾಳಿಕೆಯಾಗಿ ಮಾಡಿಕೊಂಡಿರುವವರ ಬಗ್ಗೆ..

         ಭಾರತೀಯ ಜನತಾ ಪಕ್ಷವು 2014ರಲ್ಲಿ ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆಯ ಕೆಲವು ಮುಖ್ಯ ಅಂಶಗಳು ಹೀಗಿವೆ.
1.    ಕಪ್ಪು ಹಣವನ್ನು ಮರಳಿ ತರುವುದು.
2.    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸುವುದು.
3.    ಪರಿಚ್ಛೇದ 370ನ್ನು ರದ್ದುಪಡಿಸುವುದು.
4.    ಬೆಲೆ ಸ್ಥಿರತೆಗೆ ಫಂಡ್ ತಯಾರಿಸುವುದು.
5.    ರಾಷ್ಟ್ರೀಯ ಏಕ ಕೃಷಿ ಮಾರುಕಟ್ಟೆ6.    ರೈತ ಪರ ಯೋಜನೆ
7.    ಸ್ವಉದ್ಯೋಗಕ್ಕೆ ಉತ್ತೇಜನ
8.    ಭ್ರಷ್ಟಾಚಾರಕ್ಕೆ ತಡೆ
ಇವು ಮತ್ತು ಇಂಥ ಇನ್ನಷ್ಟು ಭರವಸೆಗಳುಳ್ಳ ಪ್ರಣಾಳಿಕೆಯನ್ನು ಮುಂದಿಟ್ಟು ಬಿಜೆಪಿ 2014ರ ಲೋಕಸಭಾ ಚುನಾವಣೆಯನ್ನು ಎದುರಿಸಿತು. ಗೆಲುವು ದಾಖಲಿಸಿತು. ಮಾತ್ರವಲ್ಲ, ಇವತ್ತು ಆ ಗೆಲುವಿಗೆ ಸುಮಾರು ಎರಡೂವರೆ ವರ್ಷಗಳು ಸಂದುವು. ಈ ಎರಡೂವರೆ ವರ್ಷಗಳಲ್ಲಿ ಅದರ ಪ್ರಣಾಳಿಕೆಯ ವಿಷಯಗಳು ಎಷ್ಟಂಶ ಚರ್ಚೆಗೆ ಒಳಗಾಗಿವೆ? ಟಿ.ವಿ. ಚಾನೆಲ್‍ಗಳ ಪ್ರೈಮ್ ಟೈಮ್‍ನಲ್ಲಿ ಮತ್ತು ಪತ್ರಿಕೆಗಳ ಸಂಪಾದಕೀಯ ಪುಟದಲ್ಲಿ ಕಪ್ಪು ಹಣದ ಚರ್ಚೆ ಹೇಗೆ ನಡೆದಿದೆ? 100 ದಿನಗಳಲ್ಲಿ ಕಪ್ಪು ಹಣವನ್ನು ಮರಳಿಸುತ್ತೇನೆ ಅಂದ ಪ್ರಧಾನಿಯವರ ಮಾತಿಗೆ 1000 ದಿನಗಳು ತುಂಬುತ್ತಿದ್ದರೂ ಅದೊಂದು ಗಂಭೀರ ಇಶ್ಯೂ ಆಗುವ ಸಾಮರ್ಥ್ಯವನ್ನು ಈವರೆಗೂ ಪಡಕೊಂಡಿಲ್ಲವಲ್ಲ, ಏಕೆ? ರಾಮಮಂದಿರ ನಿರ್ಮಾಣದ ವಿಷಯ ಎಲ್ಲಿಯ ವರೆಗೆ ಮುಟ್ಟಿದೆ? ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ಬಿಜೆಪಿಯ ಯಾವೊಬ್ಬ ಹೊಣೆಗಾರ ವ್ಯಕ್ತಿಯೂ ರಾಮಮಂದಿರ ಎಂಬ ಪದವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸದೇ ಇರುವುದರ ಹಿನ್ನೆಲೆ ಏನು? ಆಹಾರ ವಸ್ತುಗಳ ಬೆಲೆಯಲ್ಲಿ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ ಫಂಡ್ ತಯಾರಿಸುತ್ತೇವೆಂದು ಹೇಳಿ ಎರಡೂವರೆ ವರ್ಷಗಳಾದುವಲ್ಲ, ಏನಾಯ್ತು ಸ್ವಾಮಿ ಎಂದು ಯಾಕೆ ಯಾರೂ ಪ್ರಶ್ನಿಸುತ್ತಿಲ್ಲ? ಎಲ್ಲಿದೆ ಫಂಡ್, ಎಲ್ಲಿದೆ ಸ್ಥಿರತೆ ಎಂದು ಪ್ರಶ್ನಿಸಬಹುದಲ್ಲ? ಯಾಕೆ ಸುಳ್ಳು ಭರವಸೆಯನ್ನು ಕೊಡುತ್ತೀರಿ ಎಂದು ತಕರಾರು ತೆಗೆಯಬಹುದಲ್ಲ? ರಾಷ್ಟ್ರೀಯ ಏಕ ಕೃಷಿ ಮಾರುಕಟ್ಟೆ ಎಂಬುದು ಯಾವ ದೇಶದಲ್ಲಿ ಜಾರಿಯಾಗಿದೆ ಎಂದು ಹೇಳುವಿರಾ? ಕೃಷಿ ಭೂಮಿಯನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರುತ್ತಿರುವ ನೀತಿಯನ್ನೇ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ರೈತಪರ ಯೋಜನೆ ಎಂದು ಹೇಳಿರಬಹುದೇ? ಅಲ್ಲ ಎಂದಾದರೆ, ಈ ಎರಡೂವರೆ ವರ್ಷಗಳಲ್ಲಿ ಜಾರಿಗೊಂಡ ರೈತಪರ ಯೋಜನೆಗಳು ಏನೆಲ್ಲ? ಸ್ಕಿಲ್ ಇಂಡಿಯಾ ಎಂಬ ಘೋಷಣೆಯ ಹೊರತಾಗಿ ಉದ್ಯೋಗ ರಂಗದಲ್ಲಿ ಆಗಿರುವ ಬದಲಾವಣೆಗಳು ಏನೇನು? ಸ್ವ ಉದ್ಯೋಗ ಕ್ಷೇತ್ರ 2014ಕ್ಕಿಂತ ಹಿಂದೆ ಮತ್ತು ಈಗ ಹೇಗಿದೆ?
        ಪ್ರಶ್ನೆಗಳು ಇನ್ನೂ ಇವೆ. ಅದೇ ವೇಳೆ, ಈ ಎರಡೂವರೆ ವರ್ಷ ಗಳ ಅವಧಿಯಲ್ಲಿ ಗಂಭೀರ ಚರ್ಚೆಗೆ ಒಳಗಾದ ವಿಷಯಗಳನ್ನೊಮ್ಮೆ ಅವಲೋಕಿಸಿ. ಗೋವು, ಪಾಕಿಸ್ತಾನ, ಝಾಕಿರ್ ನಾೈಕ್, ಮತಾಂತರ, ಬಿರಿಯಾಣಿ, ಸೂರ್ಯ ನಮಸ್ಕಾರ, ಭಯೋತ್ಪಾದನೆ, ಕಾಶ್ಮೀರ, ಯೋಗ, ವಿದೇಶ ಪ್ರವಾಸ, ಬುರ್ಖಾ, ತಲಾಕ್, ಕೋಮುಗಲಭೆ, ತೈಲ ಬೆಲೆ, ಸರ್ಜಿಕಲ್ ಸ್ಟ್ರೈಕ್ .. ಇತ್ಯಾದಿ ಇತ್ಯಾದಿ.
     ಆದ್ದರಿಂದಲೇ ಕೆಲವು ಅನುಮಾನಗಳೂ ಹುಟ್ಟಿಕೊಳ್ಳುತ್ತವೆ. ಪ್ರಣಾಳಿಕೆಯ ವಿಷಯಗಳ ಮೇಲೆ ಜನರ ಗಮನ ಹರಿಯದಂತೆ ತಡೆಯುವ ಹುನ್ನಾರವೊಂದು ನಡೆದಿದೆಯೇ? ಅದರ ಭಾಗವೇ ಈ ಚರ್ಚೆಗಳೆಲ್ಲ? ಬಿಜೆಪಿಯ ಪ್ರಣಾಳಿಕೆಯ ಆದ್ಯತಾ ಪಟ್ಟಿಯಲ್ಲಿ ಗೋವು ಇಲ್ಲದಿದ್ದರೂ ಸರಿಸುಮಾರು ಈ ಎರಡೂವರೆ ವರ್ಷಗಳುದ್ದಕ್ಕೂ ಗೋವು ಸದಾ ಚರ್ಚಾ ವಸ್ತುವಾದುದಕ್ಕೆ ಕಾರಣ ಏನು? ವಿದೇಶಕ್ಕೆ ಗೋಮಾಂಸವನ್ನು ರಫ್ತು ಮಾಡುತ್ತಲೇ ಮತ್ತು ರಫ್ತಿನ ಪ್ರಮಾಣವನ್ನು ಏರಿಸುತ್ತಲೇ ದೇಶದೊಳಗೆ ಮಾಂಸ ಸೇವನೆ ಮತ್ತು ಸಾಗಾಟದ ಹೆಸರಲ್ಲಿ ಭಾವೋದ್ರೇಕದ ಹೇಳಿಕೆಗಳು, ಹಲ್ಲೆಗಳು, ಹತ್ಯೆಗಳು ನಡೆಯುತ್ತಿರುವುದರ ಹಿನ್ನೆಲೆ ಯಾವುದು? ಇವೆಲ್ಲ ಅನಿರೀಕ್ಷಿತ ಮತ್ತು ಅನಿರ್ಧರಿತ ವಿದ್ಯಮಾನಗಳೋ ಅಥವಾ ಪೂರ್ವನಿರ್ಧರಿತ ತಂತ್ರಗಳೋ? ಈ ಎರಡೂವರೆ ವರ್ಷಗಳ ಬಹುತೇಕ ಅವಧಿ ಕಳೆದುಹೋಗಿರುವುದೇ ಮುಸ್ಲಿಮ್ ಸಂಬಂಧಿ ಇಶ್ಯೂಗಳ ಮೇಲೆ. ಇದೀಗ ತಲಾಕ್ ಮತ್ತು ಸಮಾನ ನಾಗರಿಕ ಸಂಹಿತೆಗಳು ಚರ್ಚಾ ವ್ಯಾಪ್ತಿಗೆ ಬಂದಿವೆ. ತಲಾಕ್‍ನ ಬಗ್ಗೆ ಚರ್ಚೆ ಮಾಡುವಾಗಲೆಲ್ಲ 2011ರ ಜನಗಣತಿಯ ವರದಿಯನ್ನು ಚರ್ಚಾಪಟುಗಳು ಪುರಾವೆಯಾಗಿ ಮುಂದಿಡುವುದಿದೆ. ಅದೂ ಅದರ ಅರ್ಧ ಭಾಗವನ್ನು ಮಾತ್ರ. 2011ರ ಜನಗಣತಿ ವರದಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2015ರ ಆಗಸ್ಟ್ ನಲ್ಲಿ ಬಿಡುಗಡೆಗೊಳಿಸಿತು. ಇದಾದ ಒಂದು ವಾರದ ಬಳಿಕ ಉತ್ತರ ಪ್ರದೇಶದ ಸಾಯಿರಾ ಬಾನು ಎಂಬ ಮಹಿಳೆ ತ್ರಿವಳಿ ತಲಾಕನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ಗೆ ಹೋದರು. ಇದು ತಲಾಕ್ ಪದ್ಧತಿಯನ್ನು ಮಹಿಳಾ ವಿರೋಧಿ ಎಂಬಂತೆ ವ್ಯಾಖ್ಯಾನಿಸುವುದಕ್ಕೆ ಕಾರಣವೂ ಆಯಿತು. ಈ ವ್ಯಾಖ್ಯಾನಕ್ಕೆ ಪೂರಕವಾಗಿ ಅನೇಕರು 2011ರ ಜನಗಣತಿ ವರದಿಯ ಅರ್ಧ ಭಾಗವನ್ನು ಉಲ್ಲೇಖಿಸುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ, ಪ್ರತಿ ಸಾವಿರ ಮುಸ್ಲಿಮ್ ಮಹಿಳೆಯರಲ್ಲಿ 5.63 ಮಂದಿ ವಿಚ್ಛೇದಿತೆಯರಾಗಿದ್ದಾರೆ. 2001ರಲ್ಲಿ ಈ ಅನುಪಾತ ಸಾವಿರಕ್ಕೆ 5.3 ಇತ್ತು. ಅದೇವೇಳೆ, 2011ರ ಜನಗಣತಿಯಂತೆ ಹಿಂದೂಗಳಲ್ಲಿ ಪ್ರತೀ ಸಾವಿರಕ್ಕೆ 1.8 ಮಂದಿ ಮಹಿಳೆಯರು ವಿಚ್ಛೇದನ ಪಡೆದು ಕೊಂಡಿದ್ದಾರೆ. ಈ ಅಂಕಿ-ಸಂಖ್ಯೆಗಳನ್ನು ಪರಸ್ಪರ ಹೋಲಿಸಿದರೆ (5.63 ಮತ್ತು 1.8) ಮುಸ್ಲಿಮರಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚು ಇದೆ ಎಂದು ವಾದಿಸುವುದಕ್ಕೆ ಕಷ್ಟವೇನೂ ಇಲ್ಲ. ನಿಜ ಏನೆಂದರೆ, ಹಿಂದೂ ಸಮುದಾಯದಲ್ಲಿ ವಿಚ್ಛೇದನದ ಅನುಪಾತ 1.8 ಇರುವಾಗ ಪತಿಯಿಂದ ಪ್ರತ್ಯೇಕವಾಗಿ ಬದುಕುವ ಮಹಿಳೆಯರ ಸಂಖ್ಯೆ ಸಾವಿರಕ್ಕೆ 5.5ರಷ್ಟು ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪತ್ನಿ ಜಶೋದಾ ಬೆನ್ ಅವರೇ ಇದಕ್ಕೆ ಅತ್ಯುತ್ತಮ ಉದಾಹರಣೆ. ನರೇಂದ್ರ ಮೋದಿಯವರ ಪತ್ನಿಯಾಗಿದ್ದರೂ ಜಶೋದಾ ಬೆನ್ ಇವತ್ತು ಒಂಟಿ. ಅವರ ನಡುವೆ ಯಾವ ಸಂಬಂಧವೂ ಇಲ್ಲ. ಪತಿ ಮತ್ತು ಪತ್ನಿ ಎಂಬ ನೆಲೆಯಲ್ಲಿ ಇರಬೇಕಾದ ಯಾವ ಸಂಬಂಧವೂ ಹೀಗೆ ಪ್ರತ್ಯೇಕವಾಗಿ ಬದುಕುವವರ ನಡುವೆ ಇರುವುದಿಲ್ಲ. ಮತ್ತೇಕೆ ಅವರು ವಿಚ್ಛೇದನ ತೆಗೆದುಕೊಳ್ಳುತ್ತಿಲ್ಲ ಎಂದರೆ, ಕುಟುಂಬ ನ್ಯಾಯಾಲಯಗಳಲ್ಲಿ ಪ್ರಕರಣ ನಿರೀಕ್ಷೆಗೆ ತಕ್ಕಂತೆ ಇತ್ಯರ್ಥವಾಗುತ್ತಿಲ್ಲ. ಅಸಂಖ್ಯ ವಿಚ್ಛೇದನ ಕೇಸುಗಳು ಇವತ್ತು ಕುಟುಂಬ ನ್ಯಾಯಾಲಯಗಳಲ್ಲಿ ಧೂಳು ಹಿಡಿದು ಕೂತಿವೆ. ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತಾ, ಲಕ್ನೋ ಮುಂತಾದ ನಗರಗಳಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಎಷ್ಟಿದೆಯೆಂದರೆ, ಅರ್ಜಿ ಸಲ್ಲಿಸಿದವರ ಯೌವನ ಕಳೆದು ಮುಪ್ಪಾದರೂ ಇತ್ಯರ್ಥವಾಗದು ಅನ್ನುವಷ್ಟು. ಕಳೆದ 5 ವರ್ಷಗಳಲ್ಲಿ ವಿಚ್ಛೇದನಕ್ಕಾಗಿ ಸಲ್ಲಿಸಲಾದ ಅರ್ಜಿಗಳಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ. 5 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರ ಪ್ರಾಯ ಮತ್ತು ಈಗ ಸಲ್ಲಿಸುವವರ ಪ್ರಾಯಗಳ ನಡುವಿನ ಅಂತರವೂ ಕುಸಿಯುತ್ತಿದೆ. 5 ವರ್ಷಗಳ ಹಿಂದೆ 25ರಿಂದ 35 ವರ್ಷಗಳ ಒಳಗಿನ 70% ಮಹಿಳೆಯರು ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿದ್ದರು. ಇದೀಗ 85% ಮಹಿಳೆಯರು ಮದುವೆಯಾಗಿ ಕೇವಲ 3 ವರ್ಷಗಳೊಳಗೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿಶೇಷ ಏನೆಂದರೆ, ತಲಾಕನ್ನು ಪ್ರಶ್ನಿಸುವವರು, ವಿಚ್ಛೇದನಕ್ಕೆ ಅರ್ಜಿ ಹಾಕದೇ ಜಶೋದಾ ಬೆನ್‍ರಂತೆ ಪ್ರತ್ಯೇಕವಾಗಿ ಬದುಕುವವರನ್ನು ವಿಚ್ಛೇದಿತರ ಸಂಖ್ಯೆಯೊಂದಿಗೆ ಸೇರಿಸುವುದನ್ನು ಜಾಣತನದಿಂದ ತಪ್ಪಿಸಿಕೊಳ್ಳುತ್ತಾರೆ. ನಿಜವಾಗಿ, ವಿಚ್ಛೇದನ ಪ್ರಕ್ರಿಯೆ ದೀರ್ಘವಾಗಿರುವುದರಿಂದಾಗಿ ಪ್ರತ್ಯೇಕ ವಾಸವನ್ನು ಮಹಿಳೆಯರು ಆಯ್ದುಕೊಂಡಿರುವರೇ ಹೊರತು ದಾಂಪತ್ಯ ಸಂಬಂಧವನ್ನು ಉಳಿಸಿಕೊಂಡು ಹೋಗುವುದಕ್ಕಲ್ಲ. ಆದ್ದರಿಂದ ಹಿಂದೂ ಸಮುದಾಯದಲ್ಲಿರುವ ವಿಚ್ಛೇದಿತೆಯರು ಮತ್ತು ಪ್ರತ್ಯೇಕವಾಗಿ ವಾಸಿಸುವವರ ಸಂಖ್ಯೆಯನ್ನು ಒಟ್ಟು ಸೇರಿಸಬೇಕಾಗುತ್ತದೆ. ಅದು ಒಟ್ಟು ಸೇರಿದರೆ 1.8+5.5=7.3 ಆಗುತ್ತದೆ. 2001ರಲ್ಲಿ ಹೀಗೆ ಪ್ರತ್ಯೇಕವಾಗಿ ಬದುಕುವುದನ್ನು ಆಯ್ಕೆ ಮಾಡಿಕೊಂಡ ಹಿಂದೂ ಮಹಿಳೆಯರ ಅನುಪಾತ ಸಾವಿರಕ್ಕೆ 4.7 ಇದ್ದರೆ 2011ಕ್ಕಾಗುವಾಗ ಇದು 5.5ಕ್ಕೆ ಹೆಚ್ಚಳವಾಯಿತೆಂಬುದನ್ನೂ ಇಲ್ಲಿ ಗಮನಿಸಬೇಕು. ಇನ್ನು, ಈ ಅಂಕಿ-ಸಂಖ್ಯೆಗಳು ಸರಕಾರದ ಜನಗಣತಿ ಲೆಕ್ಕಕ್ಕೆ ಸಿಕ್ಕಂತವು. ಸಿಗದೇ ಇರುವ ಇಂಥ ಪ್ರಕರಣಗಳನ್ನೂ ಸೇರಿಸಿದರೆ ಇಂಥ ಅಂಕಿ-ಸಂಖ್ಯೆಗಳಲ್ಲಿ ದೊಡ್ಡ ವ್ಯತ್ಯಾಸ ಉಂಟಾಗಬಹುದು. ಅಲ್ಲದೇ, ಪ್ರತ್ಯೇಕವಾಗಿ ಬದುಕುವುದನ್ನು ಹೆಚ್ಚಿನ ಮಹಿಳೆಯರು ಬಹಿರಂಗಪಡಿಸುವುದೂ ಇಲ್ಲ. ನಿಜವಾಗಿ, ತ್ರಿವಳಿ ತಲಾಕ್ ವ್ಯಾಪಕ ಮಟ್ಟದಲ್ಲಿ ಜಾರಿಯಲ್ಲಿದೆಯೆಂದು ಬಿಂಬಿಸುವವರನ್ನು ಪ್ರಶ್ನಿಸುವ ವಿವರಗಳಿವು. ಒಂದು ವೇಳೆ, ತ್ರಿವಳಿ ತಲಾಕ್‍ನಿಂದ ಮುಸ್ಲಿಮ್ ಸಮುದಾಯದಲ್ಲಿ ಭಾರೀ ವಿಚ್ಛೇದನ ಪ್ರಕರಣಗಳಾಗುತ್ತಿವೆ ಎಂಬ ವಾದ ನಿಜ ಎಂದಾಗಿರುತ್ತಿದ್ದರೆ, ವಿಚ್ಛೇದನ ಪ್ರಕರಣಗಳಲ್ಲಿ ಹಿಂದೂ ಸಮುದಾಯವನ್ನು ಮೀರಿಸುವ ರೀತಿಯಲ್ಲಿ ಏರಿಕೆ ಕಾಣಬೇಕಿತ್ತು. ಅದಾಗಿಲ್ಲ ಎಂಬುದೇ ಅದರ ಪಾಲನೆ ತೀರಾ ತೀರಾ ಕಡಿಮೆ ಪ್ರಮಾಣದಲ್ಲಿದೆ  ಎಂಬುದಕ್ಕೆ ಪುರಾವೆಯಾಗಿದೆ. ಹಾಗಂತ, ತ್ರಿವಳಿ ತಲಾಕ್ ಬೇಕು ಅಥವಾ ಅದುವೇ ಸರಿ ಎಂಬುದು ಇಲ್ಲಿನ ವಾದವಲ್ಲ. ಒಂದೇ ಉಸಿರಿಗೆ ತಕ್ಷಣದ ಪ್ರತಿಕ್ರಿಯೆಯಾಗಿ ಹೇಳಿಬಿಡುವ ತ್ರಿವಳಿ ತಲಾಕ್ ಅನ್ನು ಪವಿತ್ರ ಕುರ್‍ಆನ್ ಪ್ರಸ್ತುತಪಡಿಸಿಲ್ಲ. ತಲಾಕ್ ಎಂಬುದು ಒಂದು ಪ್ರಕ್ರಿಯೆಯ ಭಾಗ. ಅದರಲ್ಲಿ ವಿಚಾರಣೆ, ಆಪ್ತ ಸಮಾಲೋಚನೆ, ಸಮಯಾವಕಾಶ ಎಲ್ಲವೂ ಇದೆ. ಮುಸ್ಲಿಮ್ ಸಮುದಾಯದಲ್ಲಿ ಈ ವಿಧಾನವನ್ನು ಬಿಟ್ಟು ತ್ರಿವಳಿ ತಲಾಕ್ ಹೇಳುವ ಪ್ರಕರಣಗಳು ಹತ್ತು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಇವತ್ತು ಇಲ್ಲ ಅನ್ನುವಷ್ಟು ಕಡಿಮೆ. ಹೀಗಿದ್ದೂ, ತಲಾಕ್ ದೇಶದ ಮುಖ್ಯ ಇಶ್ಯೂ ಆಗುವುದರ ಹಿನ್ನೆಲೆ ಏನು? ಅಲ್ಲದೇ, ಇಸ್ರೇಲ್, ಫಿಲಿಪ್ಪೀನ್ಸ್, ಮಲೇಶ್ಯಾ, ಸಿಂಗಾಪುರ, ಶ್ರೀಲಂಕಾ, ಬ್ರಿಟನ್‍ಗಳಲ್ಲಿ ವೈಯಕ್ತಿಕ ನಿಯಮಗಳಿಗೆ ಅನುಮತಿ ಇರುವಾಗ, ಕೇಂದ್ರ ಸರಕಾರವು (ಕಾನೂನು ಆಯೋಗವು) ಸಮಾನ ನಾಗರಿಕ ಸಂಹಿತೆಯ ಕುರಿತು ಪ್ರಶ್ನಾವಳಿಯನ್ನು ಬಿಡುಗಡೆಗೊಳಿಸಿರುವುದರ ಉದ್ದೇಶ ಏನು? ತಲಾಕ್, ಸಮಾನ ನಾಗರಿಕ ಸಂಹಿತೆಯಂತಹ  ಚರ್ಚೆಯನ್ನು ಒಂದಷ್ಟು ಸಮಯ ಚಾಲ್ತಿಯಲ್ಲಿರಿಸಿ ಪ್ರಣಾಳಿಕೆಯತ್ತ ಜನರ ಗಮನಹರಿಯದಂತೆ ತಡೆಯುವುದಕ್ಕಾಗಿಯೇ? ಮುಸ್ಲಿಮರನ್ನು ಗುರಿಯಾಗಿಸಿದಷ್ಟೂ ಹಿಂದೂ ಧ್ರುವೀ ಕರಣ ನಡೆಯುತ್ತದೆ. ಈ ಹಿಂದೆ ಕಾಂಗ್ರೆಸ್ ಸರಕಾರವು ಸಾಚಾರ್ ಆಯೋಗ, ರಂಗನಾಥ್ ಆಯೋಗ, ಆ ಆಯೋಗ, ಈ ಆಯೋಗ ಎಂದು ಮುಸ್ಲಿಮರನ್ನು ಆಟವಾಡಿಸಿತು. ಇದೀಗ ಬಿಜೆಪಿಯು ಅದೇ ಆಟವನ್ನು ಇನ್ನೊಂದು ರೀತಿಯಲ್ಲಿ ಹೆಚ್ಚು ಕ್ರೂರವಾಗಿ ಆಡುತ್ತಿದೆ. ಈ ಆಟಕ್ಕೆ ಎರಡೂ ಪಕ್ಷಗಳು ನೀಡಿರುವ ಹೆಸರು ಮುಸ್ಲಿಮ್ ಸಬಲೀಕರಣ. ಆದರೆ ನಿಜಕ್ಕೂ ಇದು ಸಬಲೀಕರಣವೇ? ಅಲ್ಲ, ದುರ್ಬಲೀಕರಣ ಮತ್ತು ಯೋಜಿತ ದಮನವೇ?
        ಸಾಯಿರಾ ಬಾನು ಪ್ರಕರಣದ ನೆಪದಲ್ಲಿ ತ್ರಿವಳಿ ತಲಾಕನ್ನು ಜಜ್ಜಿ ಜಜ್ಜಿ ವಿರೂಪಗೊಳಿಸಿರುವವರಿಗೆ, ಅತ್ತ ತಲಾಕನ್ನೂ ಪಡೆಯದೇ ಇತ್ತ ಪತಿಯ ಸ್ವೀಕಾರಕ್ಕೂ ಒಳಗಾಗದೇ ಗುಜರಾತ್‍ನ ಎಲ್ಲೋ ಮೂಲೆಯಲ್ಲಿ ನಿಟ್ಟುಸಿರು ಬಿಡುತ್ತಿರುವ ಜಶೋದಾ ಬೆನ್ ಕಾಣುತ್ತಿಲ್ಲವಲ್ಲ, ಅವರನ್ನು ಕ್ರೌರ್ಯಮುಕ್ತಗೊಳಿಸಲು ಕಾನೂನು ರಚಿಸಬೇಕೆಂದು ವಾದಿಸುತ್ತಿಲ್ಲವಲ್ಲ, ಇದುವೇ ಅರ್ಥವಾಗುತ್ತಿಲ್ಲ!


Thursday, October 13, 2016

ಸರ್ಜಿಕಲ್ ಸ್ಟ್ರೈಕ್ ಹೇಳಿಕೊಟ್ಟ ಜರ್ನಲಿಸಂ ಪಾಠ

       ಟೈಮ್ಸ್ ನೌ ಚಾನೆಲ್‍ನಲ್ಲಿ ಅಕ್ಟೋಬರ್ 3ರಂದು ಪ್ರಸಾರವಾದ ನ್ಯೂಸ್ ಹವರ್ (News Hour) ಕಾರ್ಯಕ್ರಮದಿಂದ ಹಿಂದಿ ಸಿನಿಮಾ ನಟಿ ಮಿತಾ ವಶಿಷ್ಟ್ ಮಧ್ಯದಲ್ಲೇ ಎದ್ದು ಹೋದರು. ‘ಪಾಕ್ ಕಲಾವಿದರನ್ನು ಬಹಿಷ್ಕರಿಸಬೇಕು #PakArtistBanned’.. ಎಂಬ ಆಗ್ರಹದೊಂದಿಗೆ ನಡೆದ ಕಾರ್ಯಕ್ರಮ ಅದು. ತನ್ನ ವಾದವನ್ನು ಸಮರ್ಥಿಸುವುದಕ್ಕಾಗಿ ನಿರೂಪಕ ಅರ್ನಾಬ್ ಗೋಸ್ವಾಮಿ ಸಕಲ ಕೌಶಲ್ಯವನ್ನೂ ಪ್ರಯೋಗಿಸುತ್ತಿದ್ದರು. ಅರ್ನಾಬ್ ವಾದವನ್ನು ಮಿತಾ ವಶಿಷ್ಟ್ ತಿರಸ್ಕರಿಸಿದರು. ಪಾಕ್ ಕಲಾವಿದರನ್ನು ಬಹಿಷ್ಕರಿಸುವುದಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದರು. ಕಲಾವಿದರು ಟೆರರಿಸ್ಟ್ ಗಳಲ್ಲ ಎಂದು ವಾದಿಸಿದರು. ಅವರ ಮಾತುಗಳು ಪ್ರಬುದ್ಧವಾಗಿದ್ದುವು. ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಅವರು ಕಾರ್ಗಿಲ್ ಅನ್ನು ಉಲ್ಲೇಖಿಸಿದರು. ಹುತಾತ್ಮ ಯೋಧ ಬಾತ್ರಾರನ್ನು ಪ್ರಸ್ತಾಪಿಸಿದರು. ಅವರ ಮಾತು ಎಷ್ಟು ನಿರರ್ಗಳವಾಗಿತ್ತು ಅಂದರೆ, ಅರ್ನಾಬ್ ಮಧ್ಯದಲ್ಲೇ ಅವರ ಮಾತನ್ನು ತುಂಡರಿಸಿದರು. ಇದನ್ನು ಪ್ರತಿಭಟಿಸಿ ಆಕೆ ಸ್ಟುಡಿಯೋ ದಿಂದ ಎದ್ದು ಹೊರ ನಡೆದರು. ಇಂಥದ್ದೇ ಇನ್ನೊಂದು ಪ್ರಕರಣ ಸೆ. 30ರಂದು ಜನಶ್ರೀ ಚಾನೆಲ್‍ನಲ್ಲಿ ನಡೆಯಿತು. ಹಿರಿಯ ಬಹುಭಾಷಾ ನಟ ಪ್ರಕಾಶ್ ರೈ ಅವರ ‘ಇದೊಳ್ಳೆ ರಾಮಾಯಣ’ ಎಂಬ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿರೂಪಕಿ ತುಸು ವಿಷಯಾಂತರ ಮಾಡಿ, ‘ಕಾವೇರಿ ವಿವಾದದ ಕುರಿತಂತೆ ಅವರ ಅಭಿಪ್ರಾಯವನ್ನು ಕೇಳಿದರು. `ಕಾವೇರಿ ಜಲಯುದ್ಧದ ಬಗ್ಗೆ ಏನು ಹೇಳುತ್ತೀರಿ? ಸುಪ್ರೀಮ್ ಕೋರ್ಟ್‍ನ ಆದೇಶ ತಪ್ಪಾ? ಕರ್ನಾಟಕ ಮತ್ತು ತಮಿಳ್ನಾಡುಗಳಲ್ಲಿ ಯಾವ ರಾಜ್ಯ ಹಠಮಾರಿಯಂತೆ ಕಾಣಿಸುತ್ತೆ...' ಎಂದೆಲ್ಲ ನಿರೂಪಕಿ ಪ್ರಶ್ನಿಸಿದರು. ಪ್ರಕಾಶ್ ರೈ ಈ ವಿಷಯಾಂತರವನ್ನು ಬಲವಾಗಿ ಖಂಡಿಸಿದರು. ಕಾಂಟ್ರವರ್ಸಿ ಬೇಕಾ ನಿಮ್ಗೆ ಎಂದು ಸಿಟ್ಟಾದರು. ಕಾಮನ್‍ಸೆನ್ಸ್ ಇಲ್ಲದೇ ಪ್ರಶ್ನಿಸ್ಬಾರ್ದು ಎಂದು ಆಕ್ರೋಶ ವ್ಯಕ್ತಪಡಿಸಿ ಮಧ್ಯದಲ್ಲೇ ಎದ್ದು ಹೋದರು.
      ಈ ಎರಡೂ ಘಟನೆಗಳು ಬಹುಮುಖ್ಯವಾದ ಪ್ರಶ್ನೆಯೊಂದನ್ನು ನಮ್ಮ ಮುಂದಿಡುತ್ತದೆ. ಮಾಧ್ಯಮಗಳ ಬಗ್ಗೆ ಕೇವಲತನ ಅಥವಾ ನಿರ್ಲಕ್ಷ್ಯಭಾವದ ನಿಲುವುಗಳು ಬಲ ಪಡೆಯುತ್ತಿವೆಯೇ? `ಟಿವಿ ಚಾನೆಲ್‍ಗಳೆಂದರೆ ಇಷ್ಟೇ..' ಎಂಬ ಉಡಾಫೆತನ ಹೆಚ್ಚಾಗುತ್ತಿವೆಯೇ? ಚಾನೆಲ್‍ಗಳನ್ನು, ಅವುಗಳ ಸುದ್ದಿ ಸ್ಫೋಟವನ್ನು ಮತ್ತು ಅವು ಏರ್ಪಡಿಸುವ ಚರ್ಚೆಯನ್ನು ಅಪ್ರಾಮುಖ್ಯಗೊಳಿಸುವಂತಹ ಮಾತುಗಳು ಸಮಾಜವನ್ನು ಪ್ರಭಾವಿತಗೊಳಿಸುತ್ತಿವೆಯೇ? ಹಾಗಂತ ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ಪ್ರಕರಣ ಕೇವಲ ವಾರಗಳ ಹಿಂದಿನ ಎರಡು ಉದಾಹರಣೆಗಳು ಮಾತ್ರ. ಇವೆರಡರ ಹಿಂದೆ ಇಂಥ ಹತ್ತಾರು ಘಟನೆಗಳು ನಡೆದಿವೆ. ಇತ್ತಿತ್ತಲಾಗಿ ಇವುಗಳ ಸಂಖ್ಯೆ ಹೆಚ್ಚಾಗುತ್ತಲೂ ಇವೆ. ಇದಕ್ಕೆ ಏನು ಕಾರಣ? ಯಾರು ಕಾರಣ? ನಿರೂಪಕರೇ, ಅತಿಥಿಗಳೇ ಅಥವಾ ಟಿವಿ ಚಾನೆಲ್‍ಗಳ ಮೇಲಿನ ವಿಶ್ವಾಸದ ಕುಸಿತವೇ? ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್, ವಾಟ್ಸ್ ಅಪ್‍ಗಳು ಈ ಪ್ರಕ್ರಿಯೆಯಲ್ಲಿ ಯಾವ ಪಾತ್ರ ವಹಿಸಿವೆ? ಅಷ್ಟಕ್ಕೂ,
        ಈ ಎರಡು ಘಟನೆಗಳನ್ನು ಉಲ್ಲೇಖಿಸುವುದಕ್ಕೆ ಇನ್ನೊಂದು ಕಾರಣವೂ ಇದೆ.
       ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಸರ್ಜಿಕಲ್ (ಸೀಮಿತ) ದಾಳಿ ನಡೆಸಿದ್ದು ಈ ಕಾರಣಗಳಲ್ಲಿ ಒಂದಾದರೆ ಇನ್ನೊಂದು ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾರ ಅನಾರೋಗ್ಯ. ಮಾಧ್ಯಮಗಳು ಈ ಎರಡೂ ಸಂದರ್ಭಗಳನ್ನು ಹೇಗೆ ನಿಭಾಯಿಸಿದುವು? ಈ ಎರಡರಲ್ಲೂ ಸೂಕ್ಷ್ಮವಾದ ಹಲವಾರು ಅಂಶಗಳಿವೆ. ವದಂತಿಗಳು ಮತ್ತು ಊಹೆಗಳು ಅತೀ ಹೆಚ್ಚು ಕಾರುಬಾರು ನಡೆಸುವ ಸಂದರ್ಭ ಇದು. ಓರ್ವ ಪತ್ರಕರ್ತನಿ/ಳಿ/ಗೆ ಮತ್ತು ಪತ್ರಿಕೆಯ ನಿರ್ಣಾಯಕ ಸ್ಥಾನದಲ್ಲಿರುವವರಿಗೆ ಅತ್ಯಂತ ಸವಾಲಿನ ಸಮಯವೂ  ಹೌದು. ಯಾವುದೇ ಸುದ್ದಿಯು ಪುರಾವೆಯನ್ನು ಬಯಸುತ್ತದೆ. ಮೂಲ ಎಷ್ಟೇ ವಿಶ್ವಾಸಾರ್ಹ ಆಗಿದ್ದರೂ ಖಚಿತವಾಗಿ ಹೇಳುವುದಕ್ಕೆ ಪುರಾವೆಯ ಅಗತ್ಯ ಇದ್ದೇ ಇದೆ. ಸರ್ಜಿಕಲ್ ದಾಳಿ ಮತ್ತು ಜಯಲಲಿತಾರ ಆರೋಗ್ಯಕ್ಕೆ ಸಂಬಂಧಿಸಿ ಸುದ್ದಿ ತಯಾರಿಯ ವೇಳೆ ಈ ಬೇಡಿಕೆಯನ್ನು ಪೂರೈಸಲಾಗಿದೆಯೇ? ನಿಜವಾಗಿ, ಸರ್ಜಿಕಲ್ ದಾಳಿಯ ಬಗ್ಗೆ ಕನ್ನಡದ ವಿವಿಧ ಪತ್ರಿಕೆಗಳು, ‘ಸಿಡಿದೆದ್ದ ಭಾರತ’, ‘ಉರಿದೆದ್ದ ಭಾರತ ಪ್ರತಿಘಾತ’, ‘ಭಾರತದ ಎದಿರೇಟಿಗೆ ಉರಿದ ಪಾಕ್’, ‘ಪಾಕ್‍ಗೆ ನುಗ್ಗಿ ದಾಳಿ: ಸೇನೆ’, ‘ಪಾಕ್‍ಗೆ ನುಗ್ಗಿ ಉಗ್ರ ಸಂಹಾರ’.. ಎಂಬೆಲ್ಲ ಶೀರ್ಷಿಕೆಗಳೊಂದಿಗೆ ಸೆ. 30ರಂದು ಸುದ್ದಿ ಬರೆದಿವೆ. ಉರಿ ಘಟನೆಯ ನೋವು ದೇಶದಲ್ಲಿ ಹಸಿರಾಗಿದ್ದುದರಿಂದ ಇಂಥ ಶೀರ್ಷಿಕೆಗಳ ಔಚಿತ್ಯವನ್ನು ಒಂದು ಹಂತದ ವರೆಗೆ ಒಪ್ಪಿಕೊಳ್ಳೋಣ. ಆದರೆ ಈ ಶೀರ್ಷಿಕೆಗಳ ಕೆಳಗಡೆ ಕೊಟ್ಟಿರುವ ಉಪಶೀರ್ಷಿಕೆಗಳು ಮತ್ತು ಸಂಪಾದಕೀಯಗಳಲ್ಲಿ ಬಳಸಲಾದ ಪದಗಳಲ್ಲೆಲ್ಲ ಎಷ್ಟಂಶ ಎಚ್ಚರಿಕೆಯನ್ನು ಪಾಲಿಸಲಾಗಿದೆ? ‘ಸರ್ಜಿಕಲ್ ಸ್ಟ್ರೈಕ್’ ಎಂಬುದು ಯಾವ ಪತ್ರಕರ್ತರ ಪಾಲಿಗೂ ಪುರಾವೆ ಸಮೇತ ಸಾಬೀತಾದ ವಿಷಯ ಅಲ್ಲ. ಅದು ಸೇನೆ ಮತ್ತು ಸರಕಾರದ ಹೇಳಿಕೆ. ಹಾಗಂತ, ಸರ್ಜಿಕಲ್ ದಾಳಿ ನಡೆದಿಲ್ಲ ಎಂಬುದು ಇಲ್ಲಿನ ವಾದ ಅಲ್ಲ. ಸೇನೆಯ ಮೇಲೆ ಶಂಕೆಯೇ ಎಂಬ ಪ್ರಶ್ನೆಯನ್ನು ಎತ್ತಬೇಕಾಗಿಯೂ ಇಲ್ಲ. ಇಲ್ಲಿ, ‘ಸರ್ಜಿಕಲ್ ದಾಳಿ ನಡೆದಿದೆ ಮತ್ತು ಅದಕ್ಕೆ ಸುಮಾರು 40ರಷ್ಟು ಉಗ್ರರು ಬಲಿಯಾಗಿದ್ದಾರೆ’ ಎಂದು ಓರ್ವ ಪತ್ರಕರ್ತನಿಗೆ ಅಥವಾ ಸುದ್ದಿಮನೆಗೆ ಒಪ್ಪಿಕೊಳ್ಳಲು ಇರುವ ಏಕೈಕ ಮೂಲ ಸೇನೆ ಮತ್ತು ಸರಕಾರ ಮಾತ್ರ. ಆದ್ದರಿಂದ ಅದು ದೃಢೀಕರಣಗೊಳ್ಳುವ ವರೆಗೆ ಅದು ಒಂದು ಹೇಳಿಕೆಯಾಗಿ ಪರಿಗಣಿತವಾಗಬೇಕೇ ಹೊರತು ಪುರಾವೆ ಸಮೇತ ಸಾಬೀತಾದ ಸುದ್ದಿಯ ರೂಪದಲ್ಲಿ ಅಲ್ಲ. ಪುರಾವೆ ಎಲ್ಲಿಯ ವರೆಗೆ ಲಭ್ಯವಾಗುವುದಿಲ್ಲವೋ ಅಲ್ಲಿಯ ವರೆಗೆ ಅದು ಹೇಳಿಕೆ. ಆ ಹೇಳಿಕೆಯನ್ನು ಒಪ್ಪುವ, ಒಪ್ಪದಿರುವ, ಅನುಮಾನಿಸುವ ಮತ್ತು ಅನುಮಾನಿಸದಿರುವ ಅವಕಾಶ ಎಲ್ಲರಿಗೂ ಇದೆ. ಸಾಮಾನ್ಯವಾಗಿ, ಒಂದು ಹೇಳಿಕೆಯ ದೌರ್ಬಲ್ಯ ಏನೆಂದರೆ, ಇವತ್ತಿನ ಹೇಳಿಕೆ ನಾಳೆಯ ದಿನ ಅದೇ ತಾಜಾತನವನ್ನು ಉಳಿಸಿ ಕೊಳ್ಳಬೇಕೆಂದಿಲ್ಲ. ಆ ಹೇಳಿಕೆಗೆ ನಾಳೆ ಒಂದಷ್ಟು ಸೇರ್ಪಡೆ ಆಗಬಹುದು ಅಥವಾ ಹೇಳಿಕೆಯ ಒಂದಷ್ಟು ಭಾಗ ನಿರಾಕರಣೆಗೂ ಒಳಪಡಬಹುದು. ಸಂಪೂರ್ಣ ನಿರಾಕರಣೆಗೆ ಒಳಗಾಗುವ ಹೇಳಿಕೆಗಳೂ ಧಾರಾಳ ಇವೆ. ಸೇನೆಯ ವತಿಯಿಂದಲೇ ಇಂಥ ಎಡವಟ್ಟುಗಳು ನಡೆದ ಸಂದರ್ಭಗಳೂ ಇವೆ. ಕಾಶ್ಮೀರದಲ್ಲಿ, ಮಣಿಪುರ, ನಾಗಾಲ್ಯಾಂಡ್‍ಗಳಲ್ಲಿ ಸೇನೆಯೇ ಕಟಕಟೆಯಲ್ಲಿ ನಿಂತಿ ರುವುದಕ್ಕೆ ಅನೇಕಾರು ಉದಾಹರಣೆಗಳಿವೆ. ಹಾಗಂತ, ಸರ್ಜಿಕಲ್ ದಾಳಿ ಸುಳ್ಳು ಎಂಬುದು ಇದರರ್ಥವಲ್ಲ. ಸೇನೆ ಸತ್ಯವನ್ನೇ ಹೇಳಿರಬಹುದು. ಆದರೆ ಪುರಾವೆ ಸಿಗುವವರೆಗೆ ಓರ್ವ ಪತ್ರಕರ್ತ ಆ ಹೇಳಿಕೆಯ ಮೇಲೆ ಶಂಕೆಯ ಒಂದು ಕಣ್ಣಿಟ್ಟಿರಲೇಬೇಕಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಭಾರತೀಯ ಸೇನೆ, ದೇಶಪ್ರೇಮ, ಪಾಪಿ ಪಾಕಿಸ್ತಾನ, ರಾಷ್ಟ್ರೀಯ ಹಿತಾಸಕ್ತಿ, ದೇಶ ರಕ್ಷಣೆ.. ಮುಂತಾದುವುಗಳು ಸುದ್ದಿ ತಯಾರಿ ಮತ್ತು ವಿಶ್ಲೇಷಣೆಯ ಮೇಲೆ ಅಡ್ಡ ಪರಿಣಾಮ ಬೀರುವಂತಿಲ್ಲ. ಪುರಾವೆ ಸಿಗುವವರೆಗೆ ಅಥವಾ ಕನಿಷ್ಠ ಹೇಳಿಕೆಯನ್ನು ಸಾಬೀತುಪಡಿಸುವಂತಹ ವಾತಾವರಣ ಸೃಷ್ಟಿಯಾಗುವ ವರೆಗೆ ಸುದ್ದಿಮನೆಯಲ್ಲ್ಲೂ ಪತ್ರಕರ್ತರಲ್ಲೂ ಶಂಕೆ ಇರಬೇಕಾದುದು ಜರ್ನಲಿಸಂನ ಅತೀ ಪ್ರಬಲ ಬೇಡಿಕೆ. ಹಾಗಂತ, ಈ ಶಂಕೆಯನ್ನು ಕೇವಲ ಸೆ. 29ರಂದು ನಡೆದ ಸರ್ಜಿಕಲ್ ದಾಳಿಗೆ ಸಂಬಂಧಿಸಿ ಮಾತ್ರ ಹೇಳುತ್ತಿಲ್ಲ. ಭಯೋತ್ಪಾದನೆ ಮತ್ತಿತರ ಆರೋಪದಲ್ಲಿ ಬಂಧನಕ್ಕೀಡಾಗುವವರ ಕುರಿತೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಬಂಧಿಸಿದವರ ಹೇಳಿಕೆಗಳೇ ಪುರಾವೆ ಆಗಿರುತ್ತಿದ್ದರೆ ಈ ದೇಶದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಜೈಲಿನಿಂದ ಹೊರಬರುವುದಕ್ಕೆ ಸಾಧ್ಯವಿರಲಿಲ್ಲ. ದುರಂತ ಏನೆಂದರೆ, ಹೆಚ್ಚಿನ ಬಾರಿ ಹೇಳಿಕೆಗಳು ಪುರಾವೆಗಳನ್ನು ಒದಗಿಸುವುದಿಲ್ಲ. ಕೆಲವೊಮ್ಮೆ ಪುರಾವೆಗಳು ಹೇಳಿಕೆಗಳನ್ನೇ ದೃಢೀಕರಿಸುವುದಿಲ್ಲ. ಆದರೆ ಇವತ್ತು ಸುದ್ದಿ ಮಾಧ್ಯಮಗಳು ಪೈಪೋಟಿಯ ಸಮಸ್ಯೆಯನ್ನು ಎದುರಿಸುತ್ತಿವೆ. ಮುದ್ರಣ ಮಾಧ್ಯಮಕ್ಕಿಂತಲೂ ದೃಶ್ಯ ಮಾಧ್ಯಮದಲ್ಲಿ ಈ ಪೈಪೋಟಿ ಮಿತಿ ಮೀರಿದೆ. ಸೆನ್ಸೇಷನಲ್ ಸುದ್ದಿಯನ್ನು ತಯಾರಿಸಲೇಬೇಕಾದ ಒತ್ತಡವನ್ನು ಪ್ರತಿ ಚಾನೆಲೂ ಎದುರಿಸುತ್ತಿದೆ. ಒಂದು ಹೇಳಿಕೆ, ಒಂದು ಬಂಧನ, ಒಂದು ಪ್ರೀತಿ, ಒಂದು ನಗು, ಒಂದು ಅಫೇರ್, ಒಂದು ವದಂತಿ.. ಎಲ್ಲವೂ ಸ್ಟೋರಿ ಗಳಾಗಬೇಕಾದ ಅನಿವಾರ್ಯತೆಯೊಂದಿಗೆ ಚಾನೆಲ್‍ಗಳು ದಿನದೂಡುತ್ತಿವೆ. ಪುರಾವೆಗಳ ವರೆಗೆ ಕಾದು ಸ್ಟೋರಿ ಮಾಡಬಹುದಾದ ಸಹನೆ ಬಹುತೇಕ ಯಾವ ಸುದ್ದಿಮನೆಗೂ ಇಲ್ಲ.
      ಸೆ. 30ರಂದು ಎಲ್ಲ ಪತ್ರಿಕೆಗಳೂ ಸರ್ಜಿಕಲ್ ದಾಳಿಯ ಬಗ್ಗೆ ಮುಖಪುಟದಲ್ಲಿ ಸುದ್ದಿಯನ್ನೂ ಒಳಪುಟದಲ್ಲಿ ಸಂಪಾದಕೀಯ ವನ್ನೂ ಬರೆದುವು. ಮುಖಪುಟದ ಸುದ್ದಿಯ ಕೊನೆಯಲ್ಲಿ ‘ಸೇನೆ ಹೇಳಿದೆ’ ಎಂಬ ವಾಕ್ಯ ಇದ್ದರೂ ಸಂಪಾದಕೀಯದಲ್ಲಿ ಆ ಎಚ್ಚರಿಕೆ ಬಹುತೇಕ ಯಾವ ಪತ್ರಿಕೆಯಲ್ಲೂ ಕಾಣಿಸಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಎಂಬುದು ಸ್ಪಷ್ಟವಾಗಿ ಸೇನೆಯ ಹೇಳಿಕೆಯಾಗಿರುವುದರಿಂದ ಆ ಪದವನ್ನು ಸಂಪಾದಕೀಯದಲ್ಲಿ ಬಳಸುವಾಗ ಹೇಳಿಕೆಯೆಂಬ ನೆಲೆಯಲ್ಲಿ ಉದ್ಧರಣಾ ಚಿಹ್ನೆ (“”) ಹಾಕುವುದು ಪ್ರಾಯೋಗಿಕವಾಗಿ ಹೆಚ್ಚು ಸರಿ. ಯಾಕೆಂದರೆ, ಸಂಪಾದಕೀಯ ಬರೆಯುವಾಗ ಸಂಪಾದಕ ಅದನ್ನು ಪುರಾವೆ ಸಮೇತ ಖಚಿತ ಪಡಿಸಿಕೊಂಡಿರಲಿಲ್ಲ. ಒಂದು ಹೇಳಿಕೆಯಾಚೆಗೆ ಆ ದಾಳಿ ಸೀಮಿತವೋ ಅಸೀಮಿತವೋ ಎಂಬುದು ಸ್ಪಷ್ಟವಿರಲಿಲ್ಲ. ಆದರೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆಲ್ಲ ಬಹುತೇಕ ವಾಚಾಳಿಯಾದುವು. ದೇಶದ ಹಿತಾಸಕ್ತಿ, ದೇಶರಕ್ಷಣೆ, ಭಯೋತ್ಪಾದನಾ ವಿರೋಧಿ ಆಕ್ರಮಣ, ಸೇನೆಯ ಸಾಮರ್ಥ್ಯ.. ಇತ್ಯಾದಿ ಭಾವನಾತ್ಮಕ ಪದ ಪ್ರಯೋಗಗಳ ಮೂಲಕ ಇಂಥ ಮೌಲಿಕ ಪ್ರಶ್ನೆಗಳನ್ನು ಅವು ತಡೆದು ನಿಲ್ಲಿಸಿದುವು. ಸೆ. 30ರಿಂದ ಈ ವರೆಗೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ಮತ್ತು ಪ್ರಸಾರವಾದ ಸರ್ಜಿಕಲ್ ಸ್ಟ್ರೈಕ್ ಸಂಬಂಧಿ ವಿಷಯಗಳನ್ನು ವಿಶ್ಲೇಷಣೆಗೆ ಒಳ ಪಡಿಸಿದರೆ ಯಾವುದು ಜರ್ನಲಿಸಂ ಮತ್ತು ಯಾವುದು ಅಲ್ಲ ಎಂದು ವಿಶ್ಲೇಷಿಸುವುದಕ್ಕೆ ಧಾರಾಳ ಸರಕುಗಳು ಸಿಕ್ಕೀತು. ಬೇಕಿದ್ದರೆ ಜಯಲಲಿತಾರ ಅನಾರೋಗ್ಯವನ್ನೂ ಈ ವಿಶ್ಲೇಷಣೆಯ ಪಟ್ಟಿಗೆ ಸೇರಿಸಿಕೊಳ್ಳಬಹುದು. ಅವರ ಕಾಯಿಲೆಯ ಕುರಿತಂತೆ ಮಾಧ್ಯಮ ಗಳಲ್ಲಿ ಹರಿದಾಡಿದ ಸುದ್ದಿಗಳಿಗೆ ಲೆಕ್ಕ ಮಿತಿಯಿಲ್ಲ. ಟಿ.ವಿ. ಚಾನೆಲ್‍ಗಳಲ್ಲಂತೂ ವದಂತಿಗಳು ಮತ್ತು ಊಹೆಗಳನ್ನೇ ಮೂಟೆಯಾಗಿಸಿ ‘ಅಮ್ಮ’ನನ್ನು ವೀಕ್ಷಕರ ಮುಂದಿಡಲಾಯಿತು. ಬಹುಶಃ, ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ಅವರು ಸ್ಟುಡಿಯೋದಿಂದ ಎದ್ದು ಹೋದುದರ ಹಿಂದೆ ಜರ್ನಲಿಸಂನ ಮೂಲಭೂತ ಬೇಡಿಕೆಗಳನ್ನು ಹೀಗೆ ನಿರ್ಲಕ್ಷಿಸಿರುವುದಕ್ಕೂ ಪಾತ್ರ ಇರಬಹುದು. ಮಾಧ್ಯಮಗಳು ಪುರಾವೆಗಳನ್ನು ಕಡೆಗಣಿಸಿದಷ್ಟೂ ಮತ್ತು ವೀಕ್ಷಕರು ಹಾಗೂ ಓದುಗರ ತಕ್ಷಣದ ಭಾವನೆಯನ್ನು ಎನ್‍ಕ್ಯಾಶ್ ಮಾಡುವ ಮಟ್ಟಕ್ಕೆ ಇಳಿದಷ್ಟೂ ಮಾಧ್ಯಮ ವಿಶ್ವಾಸಾರ್ಹತೆಯ ಮಟ್ಟದಲ್ಲೂ
ಇಳಿಮುಖವಾಗುತ್ತಲೇ ಹೋಗುತ್ತದೆ. ಟಿ.ವಿ. ಚಾನೆಲ್‍ಗಳನ್ನು ಸದ್ಯ ಕಾಡುತ್ತಿರುವ ಕಾಯಿಲೆ ಇದು. ವಿಶ್ವಾಸಾರ್ಹತೆಯ ಮಟ್ಟ ಕುಸಿಯು ವುದೆಂದರೆ, ವೀಕ್ಷಕರ ಪಾಲಿಗೆ ಕೇವಲವಾಗುವುದು ಎಂದರ್ಥ. ‘ಟಿ.ಆರ್.ಪಿ.ಗಾಗಿ ಯಾವ ಮಟ್ಟಕ್ಕೂ ಇಳಿಯುತ್ತಾರೆ..’ ಎಂಬ ಮಾತು ಜನಪ್ರಿಯವಾದಷ್ಟೂ ಟಿ.ವಿ. ಚಾನೆಲ್‍ಗಳ ವಿಶ್ವಾಸಾರ್ಹತೆ ಕುಸಿಯುತ್ತಾ ಹೋಗುತ್ತದೆ. ಅದರ ಪರಿಣಾಮವಾಗಿ ಉಡಾಫೆ, ನಿರ್ಲಕ್ಷ್ಯತನದ ಮಾತುಗಳು ಮೇಲುಗೈ ಪಡೆಯುತ್ತವೆ. ಬಹುಶಃ,
       ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ರು ಮಾಧ್ಯಮ ಗಮನವನ್ನು ಆ ಕಡೆ ಸೆಳೆದಿದ್ದಾರೆ ಎಂದೇ ಅನಿಸುತ್ತದೆ.

Thursday, October 6, 2016

ಯುದ್ಧದ ಇನ್ನೊಂದು ಮುಖ ಕಾಂಗ್ ಕೂ ರಿ

        ಸಂಪೂರ್ಣ ಬೆತ್ತಲಾಗಿರುವ ಸ್ಥಿತಿಯಲ್ಲಿ ಗೋಡೆಗೆ ಅಂಟಿ ಕೂತು, ಭೀತಿಯಿಂದ ನಡುಗುತ್ತಿದ್ದ ಆ ಬಾಲಕನನ್ನು ಕಂಡು 7ನೇ ರೆಜಿಮೆಂಟ್‍ನ ಯೋಧರು ಅಕ್ಷರಶಃ ಕಲ್ಲಾಗಿದ್ದರು.
     /ಅದು 1950. ದ್ವಿತೀಯ ವಿಶ್ವ ಯುದ್ಧದ ಕರಾಳ ನೆನಪುಗಳು ಜಗತ್ತನ್ನು ಆಳುತ್ತಿದ್ದ ಸಮಯ. ಯುದ್ಧ ಎಷ್ಟು ಅಪಾಯಕಾರಿ ಎಂಬುದಕ್ಕೆ ಜಪಾನ್ ಮಾತ್ರ ಅಲ್ಲ, ಜಗತ್ತಿನ ಇತರ ಭಾಗಗಳೂ ಸಾಕ್ಷ್ಯ ಹೇಳುತ್ತಿದ್ದುವು. ಹಿರೋಶಿಮಾ ಮತ್ತು ನಾಗಸಾಕಿಯಂತೂ ಯುದ್ಧವಿರೋಧಿ ಘೋಷಣೆಗಳಿಗೆ ಅನ್ವರ್ಥವಾಗುವಂತೆ ಸತ್ತು ಮಲಗಿದ್ದುವು. ಸಾವಿರಾರು ವರ್ಷಗಳ ಹಿಂದಿನ ರಾಜರುಗಳ ನಡುವಿನ ಯುದ್ಧದ ವಿವರಗಳನ್ನು ಪಠ್ಯಪುಸ್ತಕಗಳಲ್ಲಿ ಓದುವುದಕ್ಕೂ ವಾಸ್ತವವಾಗಿ ಅನುಭವಿಸುವುದಕ್ಕೂ ನಡುವೆ ಇರುವ ಅಗಾಧ ಅಂತರವು ಜಗತ್ತನ್ನು ಬೆಚ್ಚಿ ಬೀಳಿಸಿತು. ಪಠ್ಯಪುಸ್ತಕಗಳಲ್ಲಿ ನಾವು ಓದುವ ಯುದ್ಧೋತಿಹಾಸದಲ್ಲಿ ಕಪ್ಪು ಮತ್ತು ಬಿಳುಪು ಎಂಬೆರಡು ಭಾಗಗಳಷ್ಟೇ ಇರುತ್ತವೆ. ಗೆದ್ದವರನ್ನು ಅಭಿಮಾನದಿಂದ ಮತ್ತು ಸೋತವರನ್ನು ಅನುಕಂಪದಿಂದ ನೋಡುವುದರ ಹೊರತು ಯುದ್ಧ ಸೃಷ್ಟಿ ಮಾಡಬಹುದಾದ ಆಘಾತಗಳ ಬಗ್ಗೆ ಅವಲೋಕನ ನಡೆಯುವುದು ಕಡಿಮೆ. ಅನಾಥ ಮಕ್ಕಳು, ವಿಧವೆಯರು, ವಿಧುರರು, ಅಂಗವಿಕಲರು, ನಾಶ-ನಷ್ಟಗಳು.. ಇವು ಯಾವುದೇ ಯುದ್ಧದ ಸಹಜ ಫಲಿತಾಂಶಗಳು. ಸೋತವರಲ್ಲೂ ಗೆದ್ದವರಲ್ಲೂ ತುಸು ವ್ಯತ್ಯಾಸದೊಂದಿಗೆ ಈ ಸಂಕಟಗಳು ಇದ್ದೇ ಇರುತ್ತವೆ. ರಾಜರುಗಳ ಕಾಲದ ಯುದ್ಧಕ್ಕೂ ಇಂದಿನ ತಂತ್ರಜ್ಞಾನಾಧಾರಿತ ಯುದ್ಧಕ್ಕೂ ನಡುವೆ ಇರುವ ದೊಡ್ಡ ವ್ಯತ್ಯಾಸ ಏನೆಂದರೆ, ತಂತ್ರಜ್ಞಾನಾಧಾರಿತ ಯುದ್ಧವು ಬಹುತೇಕ ಜನರನ್ನೇ ಗುರಿಪಡಿಸಿದರೆ ರಾಜರ ಕಾಲದ ಯುದ್ಧದಲ್ಲಿ ಸೈನಿಕರೇ ಗುರಿಯಾಗಿರುತ್ತಿದ್ದರು. ಇಲ್ಲಿ ಆಕಾಶ ಮಾರ್ಗ ಬಳಕೆಯಾಗುತ್ತಿರಲಿಲ್ಲ. ಆದ್ದರಿಂದ ಬಾಂಬೂ ಇರಲಿಲ್ಲ. ಏನಿದ್ದರೂ ನೆಲದ ಮೂಲಕವೇ ಕಾದಾಟ. ಈ ಕಾದಾಟ ಶೈಲಿಯು ನಾಗರಿಕರ ಪ್ರಾಣಕ್ಕೆ ಸಂಬಂಧಿಸಿ ಹೆಚ್ಚು ಸುರಕ್ಷಿತ ವಿಧಾನವಾಗಿತ್ತು. ಆದರೆ ತಂತ್ರಜ್ಞಾನ ಈ ಸುರಕ್ಷಿತ ಕಲ್ಪನೆಯನ್ನೇ ಉಡಾಯಿಸಿಬಿಟ್ಟಿತು. ನಾಗರಿಕರು ಮತ್ತು ಸೈನಿಕರು ಎಂಬ ವಿಭಜನೆಯೇ ಗೊತ್ತಿಲ್ಲದ ಬಾಂಬುಗಳು ನಾಶವನ್ನೇ ಗುರಿಯಾಗಿಸಿಕೊಂಡವು. ಹಿರೋಶಿಮಾ ಮತ್ತು ನಾಗಸಾಕಿ ಅದರ ಸಾರ್ವಕಾಲಿಕ ಸಂಕೇತವಾಗಿ ಜಗತ್ತಿನ ಎದುರು ನಿಂತವು. ಇಂಥ ಸ್ಥಿತಿಯಲ್ಲಿ, ಇನ್ನೊಂದು ವಿಶ್ವಯುದ್ಧವನ್ನು ತಾಳಿಕೊಳ್ಳುವ ಸಾಮರ್ಥ್ಯ ಯಾವ ರಾಷ್ಟ್ರಕ್ಕೂ ಇರಲಿಲ್ಲ. ಆದ್ದರಿಂದಲೇ, 1951ರಲ್ಲಿ ಪ್ರಾರಂಭವಾದ ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯಗಳ ನಡುವಿನ ಕಾದಾಟವು ಅಮೇರಿಕ ಮತ್ತು ರಷ್ಯಾಗಳ ನಡುವಿನ ಪರೋಕ್ಷ  ಯುದ್ಧವಾಗಿದ್ದರೂ ಅದು ಆ ವಲಯವನ್ನು ಮೀರಿ ಜಾಗತಿಕ ಯುದ್ಧ ಸ್ವರೂಪವನ್ನು ಪಡೆದುಕೊಳ್ಳಲಿಲ್ಲ.
1945ರಲ್ಲಿ ದ್ವಿತೀಯ ವಿಶ್ವಯುದ್ಧ ಕೊನೆಗೊಂಡಾಗ ಜಪಾನ್‍ನ ವಸಾಹತು ಆಗಿದ್ದ ಕೊರಿಯವು ಉತ್ತರ ಮತ್ತು ದಕ್ಷಿಣ ಕೊರಿಯಗಳಾಗಿ ವಿಭಜನೆಗೊಂಡಿತ್ತು. ಜಪಾನ್ ಶರಣಾಗುವಾಗ ಕೊರಿಯದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ರಷ್ಯಾ ಮತ್ತು ಅಮೇರಿಕಗಳು ಪಾರಮ್ಯ ಸ್ಥಾಪಿಸಿದ್ದುವು. ಈ ಪಾರಮ್ಯವು ಕೊರಿಯವನ್ನು ಉತ್ತರ ಮತ್ತು ದಕ್ಷಿಣ ಕೊರಿಯವಾಗಿ ವಿಭಜಿಸಲು ಕಾರಣವಾಯಿತು. ಉತ್ತರ ಕೊರಿಯದಲ್ಲಿ ರಷ್ಯನ್ ಪ್ರಭಾವಿತ ಕಮ್ಯುನಿಸ್ಟ್ ಆಡಳಿತ ಸ್ಥಾಪನೆಯಾಯಿತು. ದಕ್ಷಿಣ ಕೊರಿಯವು ಅಮೇರಿಕನ್ ಪ್ರಭಾವಿತ ಆಡಳಿತ ಶೈಲಿಯನ್ನು ನೆಚ್ಚಿಕೊಂಡಿತು. ಆದರೆ ಈ ವಿಭಜನೆಯಾಗಿ ಆರೇ ವರ್ಷಗಳೊಳಗೆ ಅಂದರೆ 1950 ಜೂನ್ 25ರಂದು ಉತ್ತರ ಕೊರಿಯವು ದಿಢೀರ್ ಆಗಿ ದಕ್ಷಿಣ ಕೊರಿಯದ ವಿರುದ್ಧ ದಂಡೆತ್ತಿ ಹೋಯಿತು. ನಿಜವಾಗಿ, ಕೊರಿಯ ಎಂಬುದು ದ್ವಿತೀಯ ವಿಶ್ವಯುದ್ಧದ ವರೆಗೆ ಒಂದೇ ಆಗಿತ್ತು. ಅಲ್ಲಿ ವಿಭಜನೆ ಇರಲಿಲ್ಲ. ದ್ವಿತೀಯ ವಿಶ್ವಯುದ್ಧದ ಬಳಿಕ ವಿಭಜನೆ ನಡೆಯಿತಾದರೂ ಅದು ಶಾಶ್ವತ ಕ್ರಮವೆಂಬ ನೆಲೆಯಲ್ಲಿ ಆಗಿಯೂ ಇರಲಿಲ್ಲ. ಜರ್ಮನಿ ಹೇಗೆ ಪೂರ್ವ ಮತ್ತು ಪಶ್ಚಿಮ ಜರ್ಮನಿಯಾಗಿ ತಾತ್ಕಾಲಿಕವಾಗಿ ವಿಭಜನೆಗೊಂಡಿತ್ತೋ ಹಾಗೆ. ಆದರೆ, ರಾಜಕೀಯ ಉದ್ದೇಶಗಳಿಗಾಗಿ ಇವುಗಳ ನಡುವೆ ಪರಸ್ಪರ ಅನುಮಾನ, ದ್ವೇಷ, ಅಸೂಯೆ ವದಂತಿಗಳನ್ನು ಹುಟ್ಟು ಹಾಕಲಾಯಿತು. ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವಿನ ಘರ್ಷಣೆಗೆ ಈ ಹಿನ್ನೆಲೆಯೂ ಇದೆ. ಉತ್ತರ ಕೊರಿಯದ ಸೇನೆಯು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ಗೆ ಧಾವಿಸಿ ಬರುತ್ತಿರುವುದನ್ನು ಕಂಡು ಅಮೇರಿಕಕ್ಕೆ ಮಧ್ಯ ಪ್ರವೇಶಿಸಲೇಬೇಕಾದ ಅನಿವಾರ್ಯತೆ ಎದುರಾಯಿತು. ದಕ್ಷಿಣ ಕೊರಿಯಕ್ಕೆ ಸೇನಾ ನೆರವು ನೀಡುವ ಬಗ್ಗೆ ಅದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮಸೂದೆಯೊಂದನ್ನು ಮಂಡಿಸಿತು. ವಿಶೇಷ ಏನೆಂದರೆ, ಈ ಮಸೂದೆಯನ್ನು ವೀಟೋ ಚಲಾಯಿಸುವ ಮೂಲಕ ತಡೆಯುವ ಎಲ್ಲ ಅವಕಾಶವೂ ರಶ್ಯಾಕ್ಕಿತ್ತು. ಆದರೆ ಭದ್ರತಾ ಸಮಿತಿಯ ಸಭೆಯನ್ನೇ ಬಹಿಷ್ಕರಿಸುವ ಮೂಲಕ ರಷ್ಯಾ ಈ ಅವಕಾಶವನ್ನು ಕೈಯಾರೆ ಕಳೆದುಕೊಂಡಿತು. ಅಮೇರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರು ಈ ಮಸೂದೆ ಯನ್ನು ಬಳಸಿಕೊಂಡು ಕೊರಿಯದ ನೆರವಿಗೆ ಭೂ, ಜಲ ಮತ್ತು ವಾಯು ಸೇನೆಯನ್ನು ತಕ್ಷಣ ರವಾನಿಸಿದರು. ಹೀಗೆ ಅಮೇರಿಕದ ನೇರ ಮಧ್ಯ ಪ್ರವೇಶದಿಂದಾಗಿ ವಲಯದ ಒಟ್ಟು ವಾತಾವರಣವೇ ಬದಲಾಯಿತು. ಉತ್ತರ ಕೊರಿಯವು ಸೇನೆಯನ್ನು ಹಿಂದಕ್ಕೆ ಕರೆಸಿ ಕೊಂಡಿತು. ಅಮೇರಿಕನ್ ನೇತೃತ್ವದ ಸೇನೆಯು ಉತ್ತರ ಕೊರಿಯದ ಒಳಗೂ ನುಗ್ಗಿತು. ಇದರಿಂದ ಅತ್ಯಂತ ಹೆಚ್ಚು ಆತಂಕಕ್ಕೆ ಒಳಗಾದದ್ದು ನೆರೆಯ ಕಮ್ಯುನಿಸ್ಟ್ ಚೀನಾ. ಅದೂ ಈ ಕಾದಾಟದಲ್ಲಿ ಮಧ್ಯಪ್ರವೇಶಿಸಿತು. ಹೀಗೆ 3 ವರ್ಷಗಳ ವರೆಗೆ ನಡೆದ ಈ ಯುದ್ಧವು ಕೊನೆಗೆ 1953ರಲ್ಲಿ ಅಮೇರಿಕ ಮತ್ತು ಉತ್ತರ ಕೊರಿಯಗಳ ನಡುವೆ ಒಪ್ಪಂದ ಏರ್ಪಟ್ಟು ಮುಕ್ತಾಯವನ್ನು ಕಂಡಿತು. ಈ ಮೂಲಕ ಎರಡೂ ಕೊರಿಯಗಳು ವೈರಿಗಳಂತೆ ಎರಡು ರಾಷ್ಟ್ರಗಳಾಗಿ ಶಾಶ್ವತ ವಿಭಜನೆಗೆ ಪಕ್ಕಾದವು. ಆದರೆ ಈ ಯುದ್ಧದಾಚೆಗೆ ಇಡೀ ಕೊರಿಯವನ್ನು ಮಾತ್ರವಲ್ಲ, ಜಗತ್ತನ್ನೇ ಕಾಡಿದ್ದು ಆ 5 ವರ್ಷದ ಬಾಲಕ ಕಾಂಗ್ ಕೂ ರಿ.
      ಆಗ ಯುದ್ಧ ಪ್ರಾರಂಭವಾಗಿ ಒಂದು ವರ್ಷವಷ್ಟೇ ಆಗಿತ್ತು. ಅದು 1951. ಧ್ವಂಸಗೊಂಡ ಕಟ್ಟಡಗಳು ಮತ್ತು ಮನೆಗಳ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿತ್ತು. ಇಂಥ ಸನ್ನಿವೇಶದಲ್ಲಿ ರಕ್ಷಣಾ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿರುವುದು ವಾಡಿಕೆ. ದಕ್ಷಿಣ ಕೊರಿಯದ ರಾಜಧಾನಿ ಸಿಯೋಲ್‍ನ ಉತ್ತರ ಭಾಗದಲ್ಲಿ ಅಮೇರಿಕನ್ ಸೇನೆಯ 7ನೇ ರೆಜಿಮೆಂಟ್‍ನ ಯೋಧರು ಇಂಥದ್ದೊಂದು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ಪ್ರದೇಶದಲ್ಲಿ ಚೀನಾ ಬೆಂಬಲಿತ ಸೇನೆ ಮತ್ತು ಅಮೇರಿಕನ್ ಸೇನೆಯ ಮಧ್ಯೆ ಅದಾಗಲೇ ಕಾದಾಟ ನಡೆದಿತ್ತು. ಹೀಗೆ ಬದುಕುಳಿದವರನ್ನು ಹುಡುಕುತ್ತಾ ಯೋಧರು ಸಾಗುವಾಗ ಒಂದು ಮನೆಯಿಂದ ಅಸಾಧ್ಯ ಗಬ್ಬುವಾಸನೆ ಎದುರಾಯಿತು. ಆ ವಾಸನೆಯು ಎಷ್ಟು ಅಸಹ್ಯವಾಗಿತ್ತೆಂದರೆ ಆ ಮನೆಯಲ್ಲಿ ಹುಡುಕಾಟ ನಡೆಸುವುದಕ್ಕೆ ಎಲ್ಲ ಯೋಧರೂ ಬಹುತೇಕ ಹಿಂದಡಿಯಿಟ್ಟರು. ಹೀಗೆ ಅಲ್ಲಿಂದ ಹೊರಟು ಹೋಗಲು ಸಿದ್ಧರಾದವರಲ್ಲಿ ಓರ್ವ ಯೋಧ ಮನಸು ಬದಲಾಯಿಸಿ ಆ ಮನೆ ಪ್ರವೇಶಿಸಲು ಮುಂದಾದರು. ಆಗ ಕಂಡದ್ದೇ 5ರ ಹರೆಯದ ಕಾಂಗ್ ಕೂ ರಿ. ಆತನ ಪಕ್ಕ ಕೊಳೆತು ಹೋದ ತಾಯಿಯ ಶವ ಇತ್ತು. ಯೋಧನನ್ನು ಕಂಡದ್ದೇ ತಡ ಆ ಬಾಲಕನ ಕಣ್ಣಿನಿಂದ ದರದರನೆ ಕಣ್ಣೀರು ಹರಿಯಿತು. ಹಸಿವಿನಿಂದ ಕಂಗಾಲಾಗಿದ್ದ ಕಾಂಗ್ ಕೂ ರಿ ಬರೇ ನೋಡುತ್ತಿದ್ದ. ಮಾತಾಡುತ್ತಿರಲಿಲ್ಲ. ಆತನನ್ನು ರಕ್ಷಿಸಿದ ಯೋಧರು ಬಟ್ಟೆ ತೊಡಿಸಿದರು. ಮಕ್ಕಳ ಅನಾಥಾಶ್ರಮಕ್ಕೆ ಸೇರಿಸಿದರು. ವಿಶೇಷ ಏನೆಂದರೆ, ತಿಂಗಳುಗಳು ಉರುಳಿದರೂ ಆತನಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲ. ಬರೇ ಮೌನ. ಮಾತೂ ಇಲ್ಲ. ಇಡೀ ಅನಾಥಾಶ್ರಮದಲ್ಲಿ ಕಾಂಗ್ ಕೂ ರಿ ಒಂದು ಒಗಟಾಗಿದ್ದ. ಒಂಟಿಯಾಗಿ ಕೂರುವ ಆ ಬಾಲಕನ ಬಗ್ಗೆ ಎಲ್ಲರಲ್ಲೂ ಆತಂಕ ಮತ್ತು ಅನುಕಂಪ ಇತ್ತು. ಈ ಬಾಲಕನ ಬಗ್ಗೆ ಅತ್ಯಂತ ಆಸಕ್ತಿ ತಳೆದವರು ಅಮೇರಿಕದ ಲೈಫ್ ಮ್ಯಾಗಸಿನ್‍ನ ಛಾಯಾಗ್ರಾಹಕ ಮೈಕೆಲ್ ರೋಜರ್ ಎಂಬವರು. ಅವರು ಆಗಾಗ ಈ ಅನಾಥಾಶ್ರಮಕ್ಕೆ ಭೇಟಿ ಕೊಡುತ್ತಿದ್ದರು. ಕಾಂಗ್ ಕೂ ರಿಯ ಚಲನ-ವಲನಗಳ ಬಗ್ಗೆ ಗಮನವಿಟ್ಟಿದ್ದರು. ತಿಂಗಳುಗಳ ಬಳಿಕ ಒಂದು ದಿನ ಇಡೀ ಅನಾಥಾಶ್ರಮದಲ್ಲಿ ಸಂತಸದ ಕಳೆ ಮೂಡಿತು. ಅದಕ್ಕೆ ಕಾರಣ ಏನೆಂದರೆ, ಕಾಂಗ್ ಕೂ ರಿ
ಮಾತಾಡಿದ್ದು. ಅನಾಥಾಶ್ರಮದ ಶಿನ್‍ಸಂಗ್ ಎಂಬ ಹುಡುಗಿ ಆತನನ್ನು ಮಾತಾಡಿಸುವಲ್ಲಿ ಯಶಸ್ವಿಯಾಗಿದ್ದಳು. ‘ಈ ಜಗತ್ತಿನಲ್ಲಿ ನೀನು ಏನನ್ನು ಹೆಚ್ಚು ಇಷ್ಟಪಡುತ್ತೀ..’ ಎಂದು ಆಕೆ ಕೇಳಿದಳು. ತುಸು ಹೊತ್ತು ಮೌನವನ್ನೇ ಪಾಲಿಸಿದ ಕಾಂಗ್ ಕೂ ರಿ ಬಳಿಕ ‘ಜೀಪ್‍ನಲ್ಲಿ ಆಡುವ ಮತ್ತು ಅದನ್ನು ಚಲಾಯಿಸುವ ಆಸೆ ಇದೆ’ ಎಂದು ಮೊದಲ ಬಾರಿ ಬಾಯಿ ತೆರೆದಿದ್ದ. ‘ಅದನ್ನು ನಿನಗೆ ಒದಗಿಸೋಣ. ಆದರೆ ಅದಕ್ಕಿಂತ ಮೊದಲು ನೀನು ಒಮ್ಮೆ ನಗಬೇಕು...'ಎಂದು ಆಕೆ ಷರತ್ತು ಹಾಕಿದಳು. ಆಗ ಕಾಂಗ್ ಕೂ ರಿ ಸಣ್ಣಗೆ ನಗು ಸೂಸಿದ. ಯೋಧರ ಕೈಗೆ ಸಿಕ್ಕ ಬಳಿಕ ಆತ ನಕ್ಕದ್ದು ಅದೇ ಮೊದಲು. ಆ ಕ್ಷಣವನ್ನು ಮೈಕೆಲ್ ರೋಜರ್ ತನ್ನ ಕ್ಯಾಮರಾದಲ್ಲಿ ಚಿತ್ರೀಕರಿಸಿಕೊಂಡರು. ಮಾತ್ರವಲ್ಲ, 1951 ಜುಲೈಯಲ್ಲಿ ‘The Little boy who wouldn't smile’ ಎಂಬ ಶೀರ್ಷಿಕೆಯಲ್ಲಿ ಲೈಫ್ ಮ್ಯಾಗಸಿನ್‍ನಲ್ಲಿ ಚಿತ್ರ ಸಮೇತ ಲೇಖವೊಂದನ್ನು ಬರೆದರು. ಆ ಚಿತ್ರ ಮತ್ತು ಲೇಖನ ಜಾಗತಿಕ ಸಂಚಲನಕ್ಕೆ ಕಾರಣವಾಯಿತು. ಯುದ್ಧವು ಮಕ್ಕಳ ಮೇಲೆ ಬೀರುವ ಆಘಾತಗಳ ಬಗ್ಗೆ ಚರ್ಚೆಯೊಂದನ್ನು ಹುಟ್ಟುಹಾಕಿತು.       
         “ನೀವು ಯುದ್ಧ ಸುದ್ದಿಗಳನ್ನು ನಿಮ್ಮ ಪಾನೀಯಗಳ ಮಧ್ಯೆಯೋ ಗೆಳೆಯರ ನಡುವೆ ಕುಶಲೋಪರಿಯ ನಡುವೆಯೋ ಪ್ರಸ್ತಾಪಿಸಿ ಏನೂ ಆಗಿಲ್ಲವೆಂಬಂತೆ ಸಹಜವಾಗಿಯೇ ಬೇರೆ ವಿಷಯಗಳೆಡೆಗೆ ಹೊರಳಬಲ್ಲಿರಿ. ನಿಮಗದರ ತೀವ್ರತೆ ತಟ್ಟುವ ಸಾಧ್ಯತೆ ಕಡಿಮೆ. ಆದರೆ ಯುದ್ಧ ಹಾಗಲ್ಲ. ಯುದ್ಧದಿಂದ ಸೃಷ್ಟಿಯಾದ ಈ ಅನಾಥ ಮಕ್ಕಳಿಗೆ ಯುದ್ಧದ ಹೊರತು ಇನ್ನಾವುದರ ನೆನಪೂ ಇಲ್ಲ. ತಮ್ಮ ಕಣ್ಣೆದುರೇ ತಂದೆ, ತಾಯಿ, ಅಕ್ಕ-ತಂಗಿಯರ ಸಾವನ್ನು ಕಂಡು ಅವು ಮಾತಾಡಲಾರದಷ್ಟು ಮತ್ತು ಆಹಾರವನ್ನೂ ಸೇವಿಸಲಾರದಷ್ಟು ದಿಗ್ಮೂಢವಾಗಿವೆ. ಆ ದೃಶ್ಯ ಮಕ್ಕಳನ್ನು ಪ್ರತಿಕ್ಷಣ ಕುಕ್ಕಿ ಕುಕ್ಕಿ ಅಧೀರಗೊಳಿಸುತ್ತಿವೆ. ಪ್ಲೀಸ್ ಮಕ್ಕಳಿಗೇನಾದರೂ ಸಹಾಯ ಮಾಡಿ..” ಎಂದು ಮೈಕೆಲ್ ರೋಜರ್ ಪತ್ರಿಕೆಯ ಮೂಲಕ ಕೇಳಿಕೊಂಡರು. ತಮ್ಮ ಗೆಳೆಯರು, ಸಂಪರ್ಕದಲ್ಲಿರುವವರೊಂದಿಗೆ ವಿನಂತಿಸಿದರು. ಒಂದು ರೀತಿಯಲ್ಲಿ, ಕೊರಿಯನ್ ಯುದ್ಧದ ಇನ್ನೊಂದು ಮುಖ ಕಾಂಗ್ ಕೂ ರಿ. 3 ವರ್ಷಗಳ ತನಕ ನಡೆದ ಯುದ್ಧವನ್ನು 3 ಸಾವಿರ ವರ್ಷ ಕಳೆದರೂ ನೆನಪಿಸುವ ಮುಖ. ಯುದ್ಧ ಯಾಕೆ ಬೇಡ ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳುವ ಮುಖ.
     ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ವಿರುದ್ಧ ನಡೆಸಿದ ಸರ್ಜಿಕಲ್ ಕಾರ್ಯಾಚರಣೆಯ ಬಳಿಕ ಅವರ ಬೆಂಬಲಿಗರು ಹಾಗೂ ಮಾಧ್ಯಮದ ಒಂದು ವರ್ಗದಲ್ಲಿ ಕಾಣಿಸುತ್ತಿರುವ ಯುದ್ಧೋನ್ಮಾದ ಮತ್ತು ರಣೋತ್ಸವವನ್ನು ನೋಡುವಾಗ ಇವೆಲ್ಲವನ್ನೂ ಹಂಚಿಕೊಳ್ಳಬೇಕೆನಿಸಿತು.