Saturday, October 21, 2017

ದಡ್ಡುಗಟ್ಟಿದ ಮನಸ್ಸಿನ ಸಂಕೇತವೇ ಆ ಫಾರ್ವರ್ಡ್?

      ಹೆಚ್ಚಿನೆಲ್ಲ ಪತ್ರಿಕೆಗಳು ಪ್ರಕಟಿಸಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪೈಪೋಟಿಯಿಂದ ಹಂಚಿಕೆಯಾದ ವೀಡಿಯೋವೊಂದನ್ನು ವೀಕ್ಷಿಸಿದೆ. ಪಶ್ಚಿಮ ಬಂಗಾಲದ ಬಿಜೆಪಿ ನಾಯಕ ದಿಲೀಪ್ ಘೋಷ್‍ರನ್ನು ಹಿಗ್ಗಾ-ಮುಗ್ಗಾ ಥಳಿಸುವ ವೀಡಿಯೋ ಅದು. ಗುಂಪೊಂದು ಈ ನಾಯಕನನ್ನು ಅಟ್ಟಾ ಡಿಸಿಕೊಂಡು ಹೊಡೆಯುತ್ತದೆ. ಒದೆಯುತ್ತದೆ. ಥಳಿಸುತ್ತದೆ. ಮುಷ್ಠಿಯಿಂದ ಗುದ್ದುತ್ತದೆ. ಗುಂಪಿನ ನಡುವೆ ಅಸಹಾಯಕನಾದ ದಿಲೀಪ್ ಘೋಷ್‍ರು ಕುಸಿದು ಬೀಳುತ್ತಾರೆ. ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸುತ್ತಾರೆ. ಇಲಿಯೊಂದು ಬೆಕ್ಕಿನ ಕೈಗೆ ಸಿಕ್ಕರೆ ಹೇಗೆ ಚಡಪಡಿಸಬಹುದೋ ಅಂಥದ್ದೊಂದು ಸನ್ನಿವೇಶ ಅಲ್ಲಿ ನಿರ್ಮಾಣವಾಗುತ್ತದೆ. ಸಿನಿಮಾ ಶೈಲಿಯಲ್ಲಿ ಓಡಿ ಬಂದು ಜಂಪ್ ಮಾಡಿ ಒದೆಯುವ ಘಟನೆಯೂ ನಡೆಯುತ್ತದೆ. ಒಂದು ವೇಳೆ, ಈ ವೀಡಿಯೋವನ್ನು ದಿಲೀಪ್ ಘೋಷ್‍ರ ಮಕ್ಕಳು, ಪತ್ನಿ, ತಾಯಿ, ತಂದೆ ನೋಡಿದರೆ ಏನನಿಸಬಹುದು? ಅವರ ಪ್ರತಿಕ್ರಿಯೆ ಹೇಗಿರಬಹುದು? ಅಪ್ಪ ನಡುಬೀದಿಯಲ್ಲಿ ಯಾರದೋ ಕೈಯಲ್ಲಿ ಥಳಿಸಿಕೊಳ್ಳುವುದನ್ನು ಮಕ್ಕಳಿಂದ ಸಹಿಸಿಕೊಳ್ಳಲು ಸಾಧ್ಯವೇ? ಒಂದು ಕುಟುಂಬದ ಸದಸ್ಯ ಅವಮಾನಿತ ಆಗುವುದೆಂದರೆ, ಅದು ಆತನೊಬ್ಬನ ಅವಮಾನವಷ್ಟೇ ಆಗುವು ದಲ್ಲ. ಆತನೊಂದಿಗೆ ಸಂಬಂಧ ಇರುವ ಎಲ್ಲರ ಅವಮಾನ ವಾಗಿಯೂ ಪರಿವರ್ತಿತವಾಗುತ್ತದೆ. ಅಪ್ಪ ಸದಾ ಮಕ್ಕಳ ಪಾಲಿಗೆ ಗೌರವಾನ್ವಿತ ವ್ಯಕ್ತಿತ್ವ. ಆ ವ್ಯಕ್ತಿತ್ವವನ್ನು ಹಾಗೆ ನೋಡು ವುದೇ ಮಕ್ಕಳ ಪಾಲಿನ ಹೆಮ್ಮೆ. ತುಂಬಿದ ಸಭೆಯಲ್ಲಿ ಮಕ್ಕಳು ಹೊಗಳಿಕೆಗೋ ಬಹುಮಾನಕ್ಕೋ ಅರ್ಹವಾಗುವುದು ಅಪ್ಪನ ಪಾಲಿಗೆ ಹೇಗೆ ಹೆಮ್ಮೆಯ ಸಂಗತಿಯೋ ಅಪ್ಪ ಹಾಗೆ ಗುರು ತಿಸಿಕೊಳ್ಳುವುದು ಮಕ್ಕಳ ಪಾಲಿಗೂ ಹೆಮ್ಮೆ. ಆದ್ದರಿಂದಲೋ ಏನೋ ಇಬ್ಬರ ನಡುವೆ ಜಗಳ ನಡೆಯುವ ಸಂದರ್ಭದಲ್ಲಿ ವಿನಿಮಯವಾಗುವ ಕೆಟ್ಟ ಬೈಗುಳಗಳು ಹೆತ್ತವರನ್ನೇ ಕೇಂದ್ರೀಕರಿಸಿರುತ್ತವೆ. ‘ನನ್ನನ್ನು ಏನು ಬೇಕಾದರೂ ಅನ್ನು, ಆದರೆ ಹೆತ್ತವ ರನ್ನು ಏನಾದರೂ ಅಂದರೆ ಸುಮ್ಮನಿರಲ್ಲ’ ಎಂಬ ಮಾತು ಸಾಮಾನ್ಯವಾಗಿ ಸಿನಿಮಾಗಳಲ್ಲೂ ಅದರ ಹೊರಗೂ ಕೇಳಿ ಬರುವುದಿದೆ. ಇಂಥದ್ದೊಂದು ಗೌರವಾನ್ವಿತ ವ್ಯಕ್ತಿತ್ವ ನಡುಬೀದಿಯಲ್ಲಿ ಅವಮಾನಕ್ಕೊಳಗಾಗುವುದನ್ನು ಯಾವ ಮಗು ತಾನೇ ಸಹಿಸಿಕೊಂಡೀತು? ಈ ಪ್ರಶ್ನೆ ಕೇವಲ ದಿಲೀಪ್ ಘೋಷ್‍ರಿಗೆ ಸಂಬಂಧಿಸಿ ಮಾತ್ರ ಕೇಳಬೇಕಾದುದಲ್ಲ. ಹೀಗೆ ಎಲ್ಲರೆದುರೇ ಅವಮಾನಿತರಾದ ಮತ್ತು ಅವಮಾನಿತರಾಗುತ್ತಲೇ ಸಾವಿಗೀಡಾದ ಹಲವರ ಪಟ್ಟಿ ನಮ್ಮೆಲ್ಲರ ಮುಂದಿದೆ. ಹೈನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಹರ್ಯಾಣದ ಪೆಹ್ಲೂಖಾನ್ ಎಂಬ 50ರ ಆಸುಪಾಸಿನ ವ್ಯಕ್ತಿ ಗುಂಪಿನಿಂದ ಥಳಿತಕ್ಕೊಳಗಾಗಿ ಅಸಹಾಯಕರಾಗಿ ಬೀದಿಯಲ್ಲಿ ಬೀಳುವ ವೀಡಿಯೋವನ್ನು ಬಹುತೇಕರು ವೀಕ್ಷಿಸಿರಬಹುದು. ಅಖ್ಲಾಕ್ ಎಂಬ ವೃದ್ಧನನ್ನು ಉತ್ತರ ಪ್ರದೇಶದಲ್ಲಿ ಗುಂಪೊಂದು ಥಳಿಸಿ ಕೊಲ್ಲುವ ವೀಡಿಯೋವೂ ಬಹುತೇಕ ವೈರಲ್ ಆಗಿತ್ತು. ಇಂಥದ್ದು ಅನೇಕ ಇವೆ. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ ನಡೆದ ಹಲವು ಥಳಿತದ ವೀಡಿಯೋಗಳು ಅನೇಕರ ಮೊಬೈಲ್ ಗ್ಯಾಲರಿಯಲ್ಲಿ ಈಗಲೂ ಇದ್ದಿರಬಹುದು. ಗೂಗಲ್‍ನಿಂದ ಹೆಕ್ಕಿ ಈಗಲೂ ಇಂಥವುಗಳನ್ನು ರವಾನಿಸುವವರೂ ಇದ್ದಾರೆ. ದಿಲೀಪ್ ಘೋಷ್‍ರನ್ನು ಥಳಿಸುವ ವೀಡಿಯೋವು ನಾನಿರುವ ಅನೇಕಾರು ವಾಟ್ಸಾಪ್ ಗ್ರೂಪ್‍ಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಪವಾಗುತ್ತಿರುವುದನ್ನು ನೋಡಿ ನೋಡಿ ನಾನು ಒಂದು ರೀತಿಯಲ್ಲಿ ಕಂಗಾಲಾದೆ. ನನ್ನನ್ನು ಮತ್ತೆ ಮತ್ತೆ ಪ್ರಶ್ನೆಗಳು ಕಾಡಿದುವು. ಓರ್ವ ಗೌರವಾನ್ವಿತ ವ್ಯಕ್ತಿ ನಡು ಬೀದಿಯಲ್ಲಿ ಥಳಿತಕ್ಕೊಳಗಾಗುವುದು ಯಾವ ಕೆಟಗರಿಯಲ್ಲಿ ಬರುತ್ತದೆ? ಮನೋರಂಜನೆ, ಅಪರಾಧ, ಹಂಚಿಕೊಳ್ಳಬಾರದ, ವೀಕ್ಷಿಸಬಾರದ.. ಇವುಗಳಲ್ಲಿ ಯಾವ ಕೆಟಗರಿ? ಇದು ಎಲ್ಲರೂ ವೀಕ್ಷಿಸಬೇಕಾದ ಮತ್ತು ಒಬ್ಬರಿಂದೊಬ್ಬರಿಗೆ ಹಂಚಿಕೆ ಮಾಡಬೇಕಾದ ವೀಡಿಯೋ ಹೌದೇ? ಇದನ್ನು ವೀಕ್ಷಿಸಿದ ಬಳಿಕ ವೀಕ್ಪಕನ ಮನಸ್ಸಿನಲ್ಲಿ ಉದ್ಭವವಾಗುವ ಭಾವ ಯಾವುದು? ತೃಪ್ತಿಯೇ, ಅತೃಪ್ತಿಯೇ, ಖುಷಿಯೇ, ಸಿಟ್ಟೇ, ನೋವೇ? ಹಾಗಂತ, ದಿಲೀಪ್ ಘೋಷ್‍ರು ನಾಗರಿಕ ಜಗತ್ತಿನಲ್ಲಿ ಬದುಕದ ಮತ್ತು ಕಾಡಿನಲ್ಲೋ ಇನ್ನೆಲ್ಲೋ  ಭೂಗತರಾಗಿ ಬದುಕುವ ವೀರಪ್ಪನ್ನೋ ದಾವೂದ್ ಇಬ್ರಾಹೀಮೋ ಏನೂ ಅಲ್ಲ. ಅವರ ವಿಚಾರಧಾರೆ, ಚಟುವಟಿಕೆ, ರಾಜಕೀಯ ಕಾರ್ಯ ವಿಧಾನಗಳ ಮೇಲೆ ಅನೇಕರಿಗೆ ಅಸಮಾಧಾನ ಇರಬಹುದು. ಇದು ಅಸಹಜ ಅಲ್ಲ. ಪ್ರಜಾ ತಂತ್ರ ರಾಷ್ಟ್ರವೊಂದರಲ್ಲಿ ಪ್ರತಿಯೊಬ್ಬರಿಗೂ ಭಿನ್ನ ವಿಚಾರಧಾರೆ ಯನ್ನು ಹೊಂದುವ, ವ್ಯಕ್ತಪಡಿಸುವ ಮತ್ತು ಅದರಂತೆ ಬದು ಕುವ ಪೂರ್ಣ ಸ್ವಾತಂತ್ರ್ಯ ಇದೆ. ಅದು ಸಂವಿಧಾನ ವಿರೋಧಿಯಾಗಬಾರದು ಎಂಬುದಷ್ಟೇ ಇಲ್ಲಿರುವ ಷರತ್ತು. ದಿಲೀಪ್ ಘೋಷ್‍ರ ವಿಚಾರಧಾರೆಯನ್ನು ಮತ್ತು ಅವರು ಗುರುತಿಸಿಕೊಂಡಿರುವ ಬಿಜೆಪಿಯನ್ನು ಪ್ರಶ್ನಿಸುವುದಕ್ಕೆ ಈ ದೇಶದಲ್ಲಿ ಅನೇಕರು ಸಂವಿಧಾನಬದ್ಧ ದಾರಿಗಳಿವೆ. ವೇದಿಕೆಗಳಿವೆ.
      ಪಶ್ಚಿಮ ಬಂಗಾಲದ ಡಾರ್ಜಿಲಿಂಗ್‍ನಲ್ಲಿ ಗೋರ್ಖಾಲ್ಯಾಂಡ್ ಜನಮುಕ್ತಿ ಮೋರ್ಚಾವು (GJM) ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಸೆ. 26ರಂದು ಕೈ ಬಿಟ್ಟಿತ್ತು. ಸತತ 104 ದಿನಗಳ ವರೆಗೆ ಸಾಗಿದ ಈ ಪ್ರತಿಭಟನೆಯಿಂದ ಉಎಒ ಹಿಂದೆ ಸರಿಯಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮನವಿ ಕಾರಣ ವಾಗಿತ್ತು. ಪಶ್ಚಿಮ ಬಂಗಾಲದಲ್ಲಿ ಬೇರು ಬಿಡಲು ವಿವಿಧ ಕಸರತ್ತುಗಳನ್ನು ನಡೆಸುತ್ತಿರುವ ಬಿಜೆಪಿಯು ಈ ಬೆಳವಣಿಗೆಯನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಲು ತೀರ್ಮಾನಿಸಿತು. ದಿಲೀಪ್ ಘೋಷ್ ನೇತೃತ್ವದ ಒಂದು ನಿಯೋಗವು GJM ಗುಂಪಿನೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಅಕ್ಟೋಬರ್ 4ರಂದು ದಾರ್ಜಿಲಿಂಗ್‍ಗೆ ಭೇಟಿ ಕೊಟ್ಟಿತು. ದಾರ್ಜಿಲಿಂಗ್‍ನ ಚೌಕ್ ಬಝಾರ್‍ನಲ್ಲಿ GJM ಬೆಂಬಲಿಗರೊಂದಿಗೆ ಬಿಜೆಪಿ ರಾಲಿ ನಡೆಸಿತು. ಮಾತ್ರವಲ್ಲ, ಗೋರ್ಖಾ ದುಃಖ್ ನಿವಾರಕ್ ಸಭಾಂಗಣದಲ್ಲಿ ‘ವಿಜಯ ಸಮ್ಮಿಲನ ಸಭೆ’ಯನ್ನು ಏರ್ಪಡಿಸಿತು. ಈ ಸಮಯದಲ್ಲಿ GJM ಅನ್ನು ವಿರೋಧಿಸುವ ಗುಂಪೊಂದು ಈ ಸಭೆಗೆ ಅಡ್ಡಿಪಡಿಸಿದೆ. ಕಾರ್ಯಕ್ರಮವನ್ನೇ ರದ್ದುಗೊಳಿಸಬೇಕಾದಷ್ಟು ಪ್ರಬಲವಾಗಿ ವಿರೋಧಿ ಗುಂಪು ಪ್ರತಿಭಟನೆ ನಡೆಸಿದೆ. ಸಭಾಂಗಣದಿಂದ ಹೊರಬಂದ ದಿಲೀಪ್ ಘೋಷ್‍ರನ್ನು ಗುಂಪು ಥಳಿಸಿದೆ. ಹಾಗಂತ, ನಾವು ಈ ಚರ್ಚೆಯನ್ನು ದಿಲೀಪ್ ಘೋಷ್‍ರಿಂದ ಆರಂಭಿಸಿ ಅವರಲ್ಲಿಗೇ ಕೊನೆ ಗೊಳಿಸಬೇಕಾದ ಅಗತ್ಯ ಇಲ್ಲ. ರಾಜಸ್ತಾನದಿಂದ ತನ್ನ ಮನೆಗೆ ಆಕಳುಗಳನ್ನು ಕೊಂಡೊಯ್ಯುತ್ತಿದ್ದ ಹೈನು ಕೃಷಿಕ ಪೆಹ್ಲೂಖಾನ್ ರನ್ನೂ ದಿಲೀಪ್ ಘೋಷ್‍ರ ಸ್ಥಾನದಲ್ಲಿ ಇರಿಸಿ ನೋಡಬಹುದು. ದಿಲೀಪ್ ಘೋಷ್‍ರಿಗೆ ದಾರ್ಜಿಲಿಂಗ್‍ನಲ್ಲಿ ಸಭೆ ನಡೆಸುವ ಮತ್ತು ತನ್ನ ವಿಚಾರವನ್ನು ಹೇಳಿಕೊಳ್ಳುವ ಸ್ವಾತಂತ್ರ್ಯ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಮತ್ತು ಅರ್ಹತೆ ಪೆಹ್ಲೂಖಾನ್‍ಗೂ ಇತ್ತು. ಅವರು ಕಾನೂನುಬದ್ಧವಾಗಿಯೇ ಆಕಳನ್ನು ಸಾಗಿಸುತ್ತಿದ್ದರು. ಥಳಿಸಲು ಬಂದ ಗುಂಪಿಗೆ ಅಧಿಕೃತ ದಾಖಲೆಗಳನ್ನು ತೋರಿಸಿಯೂ ಇದ್ದರು. ನನಗೆ ದಿಲೀಪ್ ಘೋಷ್‍ರ ವೀಡಿಯೋವನ್ನು ನೋಡನೋಡುತ್ತಾ ಪೆಹ್ಲೂಖಾನ್‍ರ ವೀಡಿಯೋ ನೆನಪಿಗೆ ಬಂತು. ಇಬ್ಬರೂ ಅಸಹಾಯಕರು. ಕಾನೂನಿನ ಪ್ರಕಾರ ಯಾವ ಅಪರಾಧವನ್ನು ಮಾಡಿರದೇ ಇದ್ದರೂ ಇಬ್ಬರೂ ನಡುಬೀದಿಯಲ್ಲಿ ಅವಮಾನಕ್ಕೆ ಒಳಗಾದರು. ಇಲ್ಲಿ ಎರಡು ಪ್ರಮುಖ ವಿಷಯಗಳಿವೆ.
1. ಈ ವೀಡಿಯೋವನ್ನು ಇತರರಿಗೆ ಹಂಚುವ ಗುಂಪು
2. ಇದನ್ನು ಅನುಭವಿಸುವ ಗುಂಪು
     ಪೆಹ್ಲೂಖಾನ್‍ರ ಥಳಿತ ಮತ್ತು ಹತ್ಯೆಗೆ ಸಂಬಂಧಿಸಿ ವ್ಯಕ್ತವಾದ ಪ್ರತಿಕ್ರಿಯೆಗಳಲ್ಲಿ ಎರಡು ರೀತಿಯದ್ದಿದ್ದುವು. ಒಂದು- ಥಳಿತವನ್ನು ಪರೋಕ್ಷವಾಗಿ ಸಮರ್ಥಿಸುವ ಧಾಟಿಯದ್ದಾದರೆ ಇನ್ನೊಂದು ಖಂಡಿಸುವ ಧಾಟಿಯವು. ಪೆಹ್ಲೂಖಾನ್‍ರನ್ನು ದನಕಳ್ಳ ಎಂದು ಸುಳ್ಳು ಸುಳ್ಳೇ ಕರೆದು, ದೇಶದಲ್ಲಿ ಪ್ರತಿದಿನ ಕಳ್ಳತನವಾಗುತ್ತಿರುವ ಗೋಸಂಕುಲಗಳ ಪಟ್ಟಿ ಮಾಡಿ, ಕಸಾಯಿ ಖಾನೆಗಳ ಸಂಖ್ಯೆಯಲ್ಲಿ ವಿವರಿಸಿ, ಕೊನೆಗೆ ಅತ್ತ ಖಂಡನೆಯನ್ನೂ ವ್ಯಕ್ತಪಡಿಸದೇ ಇತ್ತ ಥಳಿತವನ್ನೂ ಹೊಗಳದೇ ಗೋಹತ್ಯೆ ನಿಷೇ ಧಕ್ಕೆ ಕರೆಕೊಡುವ ರೀತಿಯಲ್ಲಿ ಒಂದು ವರ್ಗದ ಪ್ರತಿಕ್ರಿಯೆ ಬಹುತೇಕ ಮುಕ್ತಾಯಗೊಂಡಿತ್ತು. ಅಂಥ ಪ್ರತಿಕ್ರಿಯೆಗಳನ್ನು ಗಮನವಿಟ್ಟು ಓದಿದರೆ ಪೆಹ್ಲೂಖಾನ್‍ರದ್ದೇ ತಪ್ಪು ಎಂದು ಅಂತಿಮ ನಿರ್ಧಾರಕ್ಕೆ ಯಾರೇ ಆಗಲಿ ಬರುವ ಸಾಧ್ಯತೆಯೇ ಹೆಚ್ಚು. ಅದೇ ವೇಳೆ, ಇದೇ ಮಂದಿ ಇವತ್ತು ದಿಲೀಪ್ ಘೋಷ್‍ರ ಮೇಲಿನ ಹಲ್ಲೆಗೆ ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆಯನ್ನು ನೋಡಿದರೆ ದಿಗಿಲಾಗುತ್ತದೆ. ಅವರ ಪ್ರತಿಕ್ರಿಯೆಯಲ್ಲಿ ನೇರ ಖಂಡನೆಯಿದೆ. ಆಕ್ರೋಶ ಇದೆ. ಮಮತಾ ಬ್ಯಾನರ್ಜಿಯವರೇ ಇದಕ್ಕೆ ಹೊಣೆ ಎಂಬ ಸಿಟ್ಟು ಇದೆ. ದಿಲೀಪ್ ಘೋಷ್‍ರ ಹಕ್ಕು, ಸ್ವಾತಂತ್ರ್ಯ, ಘನತೆಯನ್ನು ಎತ್ತಿ ಹಿಡಿಯುವ ಮಾತುಗಳಿವೆ. ಅದೇವೇಳೆ, ಪೆಹ್ಲೂಖಾನ್‍ರ ಮೇಲಿನ ಹಲ್ಲೆಯನ್ನು ಕಟು ಭಾಷೆಯಲ್ಲಿ ಖಂಡಿಸಿದ, ಅವರ ಹೈನುಗಾರಿಕಾ ಮೂಲವನ್ನು ಉಲ್ಲೇಖಿಸಿ ಸಮರ್ಥಿಸಿದ ಮತ್ತು ಅವರ ಘನತೆ, ಗೌರವ, ಸ್ವಾತಂತ್ರ್ಯದ ಬಗ್ಗೆ ಬಲವಾಗಿ ವಾದಿಸಿದವರಲ್ಲಿ ಅನೇಕರು ಇವತ್ತು ದಿಲೀಪ್ ಘೋಷ್‍ರ ಮೇಲಾದ ಹಲ್ಲೆಗೆ ಅತ್ಯಂತ ಮೃದುವಾಗಿ ಮತ್ತು ಅಡ್ಡಗೋಡೆಯ ಮೇಲೆ ದೀಪ ಇಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಳಗೊಳಗೇ ಸಂತಸ ಪಡುವ ರೀತಿಯಲ್ಲಿರುವ ಪ್ರತಿಕ್ರಿಯೆಗಳೂ ಇವೆ. ಇದರ ಜೊತೆಗೇ ನನ್ನನ್ನು ಕಾಡಿದ ಇನ್ನೊಂದು ಅಂಶವೆಂದರೆ, ಯಾವ ಭಾವ-ವಿಕಾರವೂ ಇಲ್ಲದೇ ಇಂಥ ವೀಡಿಯೋಗಳನ್ನು ಹಂಚುವವರ ಮನಸ್ಥಿತಿ. ವೀಡಿಯೋದಲ್ಲಿ ವೀಕ್ಷಿಸುತ್ತಿರುವುದು ಕ್ರೌರ್ಯ, ಅವ ಮಾನವನ್ನು. ಇದನ್ನು ಇನ್ನೊಬ್ಬರಿಗೆ ಓರ್ವ ವ್ಯಕ್ತಿ ಯಾವೆಲ್ಲ ಕಾರಣಗಳಿಗಾಗಿ ಫಾರ್ವರ್ಡ್ ಮಾಡಬಹುದು? ಇನ್ನೊಬ್ಬ ರೊಂದಿಗೆ ಹಂಚಿಕೊಳ್ಳಬೇಕೆಂದು ಅಥವಾ ಇತರರು ವೀಕ್ಷಿಸ ಬೇಕೆಂದು ಆತ ಯಾವ ಉದ್ದೇಶದಿಂದ ಬಯಸಿರಬಹುದು? ಅದನ್ನು ನೋಡಿ ಆತ ಸಂತಸ ಪಟ್ಟಿರಬಹುದೇ, ದುಃಖಿಸಿರ ಬಹುದೇ, ಕಾನೂನು ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವುದು ಆತನ ಉದ್ದೇಶವೇ, ವೀಕ್ಷಿಸುವ ಸಂದರ್ಭದಲ್ಲಿ ವೀಡಿಯೋದಲ್ಲಿರುವ ವ್ಯಕ್ತಿಯ ಮಕ್ಕಳು, ಪತ್ನಿ, ಹೆತ್ತವರು, ಸಂಬಂಧಿಕರ ನೆನಪು ಸುಳಿದಿರಬಹುದೇ? ಅಥವಾ
ಹಾಗೆ ಫಾರ್ವರ್ಡ್ ಮಾಡುವುದಕ್ಕೆ ವೀಡಿಯೋದಲ್ಲಿರುವ ವ್ಯಕ್ತಿಯ ಧರ್ಮ, ರಾಜಕೀಯ ವಿಚಾರಧಾರೆ, ವೈಯಕ್ತಿಕ ದ್ವೇಷ, ಸ್ವಾರ್ಥ.. ಇತ್ಯಾದಿ ಇತ್ಯಾದಿಗಳು ಕಾರಣವೇ? ನಿಜವಾಗಿ,
     ಆತ್ಮಹತ್ಯೆ, ಹತ್ಯೆ, ಅಪಘಾತ, ಹಿಂಸಾಚಾರ, ಥಳಿತ.. ಮುಂತಾದುವುಗಳ ವೀಡಿಯೋಗಳನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಾರೆ ಮತ್ತು ಫಾರ್ವರ್ಡ್ ಮಾಡುತ್ತಿದ್ದಾರೆ ಎಂಬುದೇ ಅಪಾಯದ ಸೂಚನೆ. ಯಾವುದೇ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾ ಹೋದಂತೆ ಅದು ಕ್ರಮೇಣ ತಪ್ಪುಗಳ ಪಟ್ಟಿಯಿಂದಲೇ ಹೊರಬಿದ್ದು ಸಹಜವಾಗಿ ಕಾಣಿಸತೊಡಗುತ್ತದೆ. ಹುಲಿಯ ವೇಷ ತೊಟ್ಟು ಪುಟ್ಟ ಮಕ್ಕಳ ಎದುರು ನಿಂತರೆ ಆರಂಭದಲ್ಲಿ ಅವು ಬೆದರುತ್ತವೆ. ಕಿರುಚಲೂ ಬಹುದು. ಆದರೆ ಮತ್ತೆ ಮತ್ತೆ ಇದನ್ನು ಪುನರಾವರ್ತಿಸಿದರೆ ಅವು ಆ ಹುಲಿಯನ್ನು ಸಹಜವಾಗಿ ಸ್ವೀಕರಿಸುತ್ತದೆ. ಬಹುಶಃ ನಮ್ಮ ಸಮಾಜ ಹಿಂಸೆ, ಕ್ರೌರ್ಯ, ಕಾನೂನು ಉಲ್ಲಂಘನೆಗೆ ಹೊಂದಿಕೊಳ್ಳುವ ಹಂತಕ್ಕೆ ತಲುಪುತ್ತಿದೆಯೇನೋ ಎಂದು ಭಯವಾಗುತ್ತಿದೆ. ಕ್ರೌರ್ಯದ ವೀಡಿಯೋವನ್ನು ನಿರ್ಲಿಪ್ತವಾಗಿ ವೀಕ್ಷಿಸುವ ಮತ್ತು ಪೂರ್ವಾಪರ ಯೋಚಿಸದೆಯೇ ಫಾರ್ವರ್ಡ್ ಮಾಡುವ ಸ್ಥಿತಿ ನಿಧಾನಕ್ಕೆ ನಿರ್ಮಾಣವಾಗುತ್ತಿರುವಂತೆ ಅನಿಸುತ್ತಿದೆ. ಇದು ಹಿಂಸೆಗೆ ಹೊಂದಿಕೊಳ್ಳುವುದರ ಸೂಚನೆ. ಹಿಂಸೆಯನ್ನು ವೀಕ್ಷಿಸಿ ವೀಕ್ಷಿಸಿ ಮನಸ್ಸು ದಡ್ಡುಗಟ್ಟುತ್ತಿರುವುದರ ಸಂಕೇತ. ಪೆಹ್ಲೂಖಾನ್ ಮತ್ತು ದಿಲೀಪ್ ಘೋಷ್ ಪ್ರಕರಣವು ನಮ್ಮೊಳಗನ್ನು ಅವಲೋಕಿಸಿಕೊಳ್ಳುವುದಕ್ಕೆ ಒಂದೊಳ್ಳೆಯ ಸಂದರ್ಭ.

ರೋಹಿಂಗ್ಯ: ಇತಿಹಾಸ ಮತ್ತು ವರ್ತಮಾನ

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ ಕಾರವು ಮ್ಯಾನ್ಮಾರ್ ಆಡಳಿತದ ಪರ ನಿಂತಿರುವುದನ್ನು ಪ್ರಶ್ನಿಸಿ ದಿ ಹಿಂದೂ ಪತ್ರಿಕೆಯು ಸೆ. 22 ರಂದು ‘Dancing with Suu Kyi’ (ಸೂಕಿಯ ಜೊತೆ ನೃತ್ಯ) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಲೇಖನಕ್ಕಿಂತ ಮೂರು ದಿನಗಳ ಮೊದಲು ಮ್ಯಾನ್ಮಾರ್‍ನ ನಾಯಕಿ ಅಂಗ್ ಸಾನ್ ಸೂಕಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಆ ಭಾಷಣದಲ್ಲಿ ಜಗತ್ತು ಅಚ್ಚರಿಪಡಬಹುದಾದ ಪ್ರಸ್ತಾಪಗಳು ಇಲ್ಲದಿದ್ದರೂ ಆ ಭಾಷಣ ಜಾಗತಿಕವಾಗಿ ಚರ್ಚೆಗೆ ಒಳಗಾಯಿತು. ಕಾರಣ ಏನೆಂದರೆ, ಅವರು ತಮ್ಮ ಭಾಷಣದಲ್ಲಿ ಎಲ್ಲೂ ರೋಹಿಂಗ್ಯನ್ ಮುಸ್ಲಿಮರು ಎಂಬ ಪದವನ್ನು ಬಳಸಿಯೇ ಇರಲಿಲ್ಲ. ಈ ಬಗ್ಗೆ ಅವರನ್ನು ಮಾಧ್ಯಮದ ಮಂದಿ ಪ್ರಶ್ನಿಸಿದಾಗಲೂ ಅವರು ತಾನು ಹಾಗೆ ಸಂಬೋಧಿಸುವುದಿಲ್ಲ ಎಂದು ಸಮರ್ಥಿಸಿಕೊಂಡರು. ನಿಜವಾಗಿ, ಇದುವೇ ಸೂಕಿ. ಬೌದ್ಧ ತೀವ್ರವಾದಿ ಸಂಘಟನೆಗಳಾದ 969 ಮೂವ್‍ಮೆಂಟ್, ಮಾ ಬಾ ತಾ ಮುಂತಾದುವುಗಳೊಂದಿಗೆ ಅವರು ಸಹಮತ ಹೊಂದಿರುವರೋ ಇಲ್ಲವೋ, ಆದರೆ ಅವುಗಳಿಗೆ ಎದುರಾಡಬಾರದ ಅನಿವಾರ್ಯತೆಯಲ್ಲಂತೂ ಇದ್ದಾರೆ. 2013ರಲ್ಲಿ ಬಿಬಿಸಿಯು ಅವರ ಸಂದರ್ಶನ ನಡೆಸಿತ್ತು. ಸಂದರ್ಶನ ನಡೆಸಿದವರು ಬಿಬಿಸಿಯ ಮಿಶಲ್ ಹುಸೈನ್. ವಿಶೇಷ ಏನೆಂದರೆ, ಆ ಸಂದರ್ಶನ ಪ್ರಸಿದ್ಧವಾದದ್ದು ಸಂದರ್ಶನದ ಬಳಿಕ ಅವರು ಪೀಟರ್ ಪ್ಲೆಫಂ ಎಂಬವರ ಜೊತೆ ಹಂಚಿಕೊಂಡ ಅನುಭವದಿಂದಾಗಿ. ‘ಓರ್ವ ಮುಸ್ಲಿಮ್ ವ್ಯಕ್ತಿ ತನ್ನ ಸಂದರ್ಶನ ನಡೆಸುವುದಾಗಿ ಮುಂಚಿತವಾಗಿ ತನಗೆ ಯಾರೂ ಮಾಹಿತಿ ನೀಡಲಿಲ್ಲ’ವೆಂದು ಅವರು ಪೀಟರ್ ಜೊತೆ ದೂರಿಕೊಂಡಿದ್ದರು. ಸಂದರ್ಶನ ನಡೆಸಿ ದವನ ಧರ್ಮ ಸೂಕಿಗೆ ಯಾಕೆ ಮುಖ್ಯವಾಯಿತೆಂಬುದು ಆಗ ತೀವ್ರ ಚರ್ಚೆಗೆ ಒಳಗಾಗಿತ್ತು. 2015ರಲ್ಲಿ ಬರ್ಮಾದಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೂಕಿಯ NLD  ಪಕ್ಷವು ಬಹುಮತ ಪಡೆಯಿತು. ಆದರೆ ಅವರ ಪಕ್ಷವು ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟು ನೀಡಿರಲಿಲ್ಲ. ಅಂದಹಾಗೆ, ಬೌದ್ಧ ತೀವ್ರವಾದಿ ಗುಂಪುಗಳು ರೋಹಿಂಗ್ಯ ಎಂಬ ನಾಮಸೂಚಕವನ್ನು ಪ್ರಯೋಗಿಸುವುದೇ ಇಲ್ಲ. ಅವು ರೋಹಿಂಗ್ಯನ್ ಮುಸ್ಲಿಮರನ್ನು ಬಂಗಾಳಿ ಮುಸ್ಲಿಮರು ಎಂದೇ ಕರೆಯುತ್ತವೆ. 2016 ಎಪ್ರಿಲ್‍ನಲ್ಲಿ ಮ್ಯಾನ್ಮಾರ್‍ನ ಅಮೇರಿಕನ್ ರಾಯಭಾರ ಕಚೇರಿಯ ಎದುರು ವಿವಿಧ ಬೌದ್ಧ ಸಂಘಟನೆಗಳಿಗೆ ಸೇರಿದ 300ಕ್ಕೂ ಅಧಿಕ ಯುವಕರು ಮತ್ತು ಬೌದ್ಧ ಬಿಕ್ಷುಗಳು ಪ್ರತಿಭಟನೆ ನಡೆಸಿದರು. ರಾಯಭಾರ ಕಚೇರಿಯು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ರೋಹಿಂಗ್ಯ ಎಂಬ ಪದ ಬಳಸಿದ್ದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರೋಹಿಂಗ್ಯ ಮುಸ್ಲಿಮರು ಪ್ರಯಾಣಿಸುತ್ತಿದ್ದ ದೋಣಿಯು ಮುಳುಗಿ 9 ಮಕ್ಕಳೂ ಸೇರಿದಂತೆ 22 ಮಂದಿ ಸಾವಿಗೀಡಾದುದಕ್ಕೆ ಸಂತಾಪ ಸೂಚಿಸಿ ಹೊರಡಿಸಿದ ಪ್ರಕಟಣೆ ಅದಾಗಿತ್ತೇ ಹೊರತು ರೋಹಿಂಗ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ನಿರ್ಮೂಲನಕ್ಕೆ ಸಂಬಂಧಿಸಿದ ಪ್ರಕಟಣೆ ಅದಾಗಿರಲಿಲ್ಲ. ರೋಹಿಂಗ್ಯ ಎಂಬ ಪ್ರದೇಶ ಮ್ಯಾನ್ಮಾರ್‍ನಲ್ಲಿ ಇಲ್ಲ ಎಂದು ಪ್ರತಿ ಭಟನಾಕಾರರು ವಾದಿಸಿದರು. ಮ್ಯಾನ್ಮಾರ್ ಸರಕಾರವು ಅಂಗೀ ಕರಿಸಿಲ್ಲದ ಪದ ಪ್ರಯೋಗದೊಂದಿಗೆ ಒಂದು ಪ್ರದೇಶದ ಮಂದಿ ಯನ್ನು ಗುರುತಿಸುವ ಮೂಲಕ ಅಮೇರಿಕವು ಅಂತಾರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿದೆ ಎಂದವರು ಆರೋ ಪಿಸಿದರು. ಅಮೇರಿಕಕ್ಕೆ ರೋಹಿಂಗ್ಯನ್ನರಲ್ಲಿ ಪ್ರೀತಿ ಇದೆಯೆಂದಾದರೆ ಅವರನ್ನು ಅಮೇರಿಕವೇ ಇಟ್ಟುಕೊಳ್ಳಲಿ ಎಂದವರು ಆಗ್ರಹಿಸಿ ದರು. ಆ ಇಡೀ ಪ್ರತಿಭಟನೆಯ ನೇತೃತ್ವವನ್ನು ಮಾ ಬಾ ತಾ ಎಂಬ ಬೌದ್ಧ ತೀವ್ರವಾದಿ ಸಂಘಟನೆಯು ವಹಿಸಿಕೊಂಡಿತ್ತು. ಒಂದು ರೀತಿಯಲ್ಲಿ, ರೋಹಿಂಗ್ಯ ಎಂಬೊಂದು ಜನಸಮೂಹ ಇದೆ ಎಂಬುದನ್ನೇ ಒಪ್ಪಲು ಸಿದ್ಧವಿಲ್ಲದ ತೀವ್ರ ರಾಷ್ಟ್ರೀಯ ವಾದಿಗಳ ಜೊತೆ ಜಗತ್ತು ಇವತ್ತು ಮಾತಾಡಬೇಕಿದೆ.
      ಸೂಕಿ ಅಧಿಕಾರಕ್ಕೆ ಬಂದದ್ದೇ 2015ರಲ್ಲಿ. ಆದರೆ, ಬೌದ್ಧ ರಾಷ್ಟ್ರೀಯವಾದಿಗಳು ದಶಕಗಳ ಮೊದಲೇ ಮ್ಯಾನ್ಮಾರ್‍ನಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದ್ದರು. ಖುದ್ದು ಮಿಲಿಟರಿ ಸರಕಾರವೇ ಈ ರಾಷ್ಟ್ರೀಯವಾದವನ್ನು ಪೋಷಿಸುತ್ತಲೂ ಬಂದಿತ್ತು. ‘ಇಸ್ಲಾಮ್ ಬರ್ಮಾದಲ್ಲಿ ವ್ಯಾಪಿಸಿದರೆ ಏನಾಗಬಹುದು..’ ಎಂಬ ಶೀರ್ಷಿಕೆಯ ಕಿರುಹೊತ್ತಗೆಗಳನ್ನು ಮಿಲಿಟರಿ ಸರಕಾರದ ಮೌನ ಸಮ್ಮತಿಯೊಂದಿಗೆ ಹಂಚಲಾಗಿತ್ತು. ಭವಿಷ್ಯದಲ್ಲಿ ಮ್ಯಾನ್ಮಾರ್‍ನಲ್ಲಿ ಬೌದ್ಧರು ಅಲ್ಪಸಂಖ್ಯಾತರಾಗುವರೆಂದೂ ಬಾಂಗ್ಲಾ, ಮಲೇಶ್ಯ, ಇಂಡೋನೇಶ್ಯಾಗಳು ಮ್ಯಾನ್ಮಾರನ್ನು ವಶಪಡಿಸಲಿವೆಯೆಂದೂ ಮಾ ಬಾ ತಾ ಎಂಬ ಸಂಘಟನೆ ಬಹಿರಂಗವಾಗಿ ಪ್ರಚಾರ ಮಾಡುತ್ತಿದೆ. ಮದ್ರಸಗಳ ಹೊರತಾಗಿ ಬೇರೆ ಯಾವುದೇ ಮಾದರಿಯ ಶಿP್ಷÀಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಅನುಮತಿ ನಿರಾಕರಿಸಲಾಗುತ್ತಿರುವುದಕ್ಕೂ ಈ ತೀವ್ರವಾದಿ ಪ್ರಚಾರವೇ ಕಾರಣ. ಮುಖ್ಯವಾಗಿ, ಮುಸ್ಲಿಮರನ್ನೇ ಗುರಿಯಾಗಿಸಿ 2015ರಲ್ಲಿ ‘ಜನಾಂಗ-ಧರ್ಮ ಸಂರಕ್ಷಣಾ ನಿಯಮ’ ಎಂಬ ಕಾನೂನನ್ನು ಜಾರಿಗೆ ತರಲು ಮಿಲಿಟರಿ ಜನರಲ್ ತೇನ್‍ಸೇನ್‍ರ ಮೇಲೆ ತೀವ್ರವಾದಿ ಬೌದ್ಧ ಸಂಘಟನೆಗಳು ಒತ್ತಡ ಹೇರಿ ಯಶಸ್ವಿಯಾದುವು. ಹಾಗೆಯೇ ‘ಪ್ರಸವದ ನಡುವೆ ಕಡ್ಡಾಯ ವಿರಾಮ ಇರಬೇಕು, ಏಕಪತ್ನಿತ್ವ, ಬೌದ್ಧರಲ್ಲದ ಪುರುಷರನ್ನು ವಿವಾಹವಾಗಬಯಸುವ ಬೌದ್ಧ ಮಹಿಳೆಯರು ಮುಂಚಿತವಾಗಿ ನೋಂದಣಿ ಮಾಡುವುದು, ಮತಾಂತರ ನಿಯಂತ್ರಣ ಕಾಯ್ದೆ..’ ಮುಂತಾದುವುಗಳನ್ನು ಜಾರಿಗೆ ತರಲು ಅವು ಒತ್ತಡ ಹೇರಿದುವು. ಹಾಗಂತ, ಮ್ಯಾನ್ಮಾರ್‍ನಲ್ಲಿ ಮುಸ್ಲಿಮರ ಜನಸಂಖ್ಯೆ ಬರೇ 2.3%. ಕ್ರೈಸ್ತರು 6.3% ಮತ್ತು ಬೌದ್ಧರು 89.8% ಇz್ದÁರೆ. ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿರು ವುದು ರಾಖೈನ್ ರಾಜ್ಯದಲ್ಲಿ. ಇಲ್ಲಿನ ಒಟ್ಟು 30 ಲಕ್ಪ ಜನಸಂಖ್ಯೆ ಯಲ್ಲಿ 13 ಲಕ್ಷ ಮಂದಿ ರೋಹಿಂಗ್ಯನ್ನರ ಮುಸ್ಲಿಮರು. ನಿಜವಾಗಿ, ರಾಖೈನ್ ರಾಜ್ಯದ ಮೂಲ ಹೆಸರು ಅರಖಾನ್. ಮುಸ್ಲಿಮ್ ಬಾಹುಳ್ಯದ ರಾಜ್ಯ ಇದಾಗಿತ್ತು. 1989ರಲ್ಲಿAdaption of Expression Lawದ ಪ್ರಕಾರ ಅರಖಾನ್ ಹೆಸರನ್ನು ರಾಖೈನ್ ಆಗಿ ಬದಲಾಯಿಸಲಾಯಿತಲ್ಲದೇ ಬೌದ್ಧ ಪ್ರಾಬಲ್ಯವುಳ್ಳ ರಾಜ್ಯವಾಗಿ ಮರು ರೂಪಿಸಲಾಯಿತು. 2012ರಲ್ಲಿ ಇಲ್ಲಿ ನಡೆದ ಜನಾಂಗೀಯ ಹತ್ಯಾಕಾಂಡದಲ್ಲಿ ಸಂತ್ರಸ್ತರಾದ 1 ಲಕ್ಷದ 40 ಸಾವಿರ ಮಂದಿ ಇಲ್ಲಿ ನಿರಾಶ್ರಿತರಾಗಿ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅಂದಹಾಗೆ, 1982ರಲ್ಲಿ ಮಿಲಿಟರಿ ಸರಕಾರವು ಜಾರಿಗೆ ತಂದ ಪೌರತ್ವ ಕಾಯ್ದೆಯಲ್ಲಿ ದೇಶದ ನಾಗರಿಕರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. 1. ಪೂರ್ಣ ನಾಗರಿಕರು, 2. ಸಹ ನಾಗರಿಕರು, 3. ಸಹಜ ನಾಗರಿಕರು ಮತ್ತು 4. ವಿದೇಶಿ ನಾಗರಿಕರು. ಇವರಲ್ಲಿ ರೋಹಿಂಗ್ಯನ್ನರು ವಿದೇಶಿ ವರ್ಗದಲ್ಲಿ ಸ್ಥಾನ ಪಡೆದುಕೊಂಡರು. ಆ ಮೂಲಕ ಅವರನ್ನು ಮ್ಯಾನ್ಮಾರ್‍ನ ಪೌರತ್ವದಿಂದ ಹೊರಗಿಡಲಾಯಿತು. 1970ರಲ್ಲೇ  ಜನರಲ್ ನೆವಿಯವರ ಆಡಳಿತ ಕಾಲದಲ್ಲಿ ರೋಹಿಂಗ್ಯನ್ನ ರನ್ನು ಹೊರಗಿನವರಾಗಿ ನೋಡುವ ಪ್ರಯತ್ನಗಳು ಪ್ರಾರಂಭವಾದುವು. 1982ರಲ್ಲಿ ಬರ್ಮೀಸ್ ಪೌರತ್ವ ನಿಯಮ ಜಾರಿಗೆ ಬಂತು. 2012ರಲ್ಲಿ ರೋಹಿಂಗ್ಯ ನ್ನರಿಗಾಗಿ ‘ವೈಟ್ ಕಾರ್ಡ್’ ಗುರುತು ಚೀಟಿಯನ್ನು ಜಾರಿಗೆ ತರುವ ಮೂಲಕ ಪೌರತ್ವ ನೀಡುವ ಸೂಚನೆ ನೀಡಲಾಯಿತಾದರೂ 2015ರಲ್ಲಿ ವೈಟ್ ಕಾರ್ಡನ್ನೇ ರದ್ದುಪಡಿಸುವುದರೊಂದಿಗೆ ಪೌರತ್ವ ನಿಷೇಧ ನಿಯಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಯಿತು. ನಿಜವಾಗಿ, ಮ್ಯಾನ್ಮಾರ್‍ನಲ್ಲಿ ಇಸ್ಲಾಮ್‍ಗೆ ಬಹಳ ದೀರ್ಘ ಇತಿಹಾಸವಿದೆ.
        8ನೇ ಶತಮಾನದಲ್ಲಿ ಅರಬ್-ಪರ್ಶಿಯನ್ ವ್ಯಾಪಾರಿಗಳ ಮೂಲಕ ಮ್ಯಾನ್ಮಾರ್‍ಗೆ ಇಸ್ಲಾಮ್ ತಲುಪಿತ್ತು ಎಂದು ಹೇಳಲಾಗುತ್ತದೆ. 1430ರಿಂದ 1785ರ ವರೆಗೆ ಮರೋಕು ಎಂಬ ರಾಜವಂಶವು ಆಡಳಿತ ನಡೆಸಿತ್ತು. ಈ ಆಡಳಿತ ವಂಶದ ಸ್ಥಾಪಕನಾಗಿ ಸುಲೈಮಾನ್ ಷಾ ಎಂದು ಗುರುತಿಸಿ ಕೊಂಡಿರುವ ಮಿನ್‍ಸೋ ಮೂನ್ ಎಂಬವನಾಗಿದ್ದ. 17ನೇ ಶತಮಾನದ ವರೆಗೆ ಆಡಳಿತ ನಡೆಸಿದ ಈ ರಾಜವಂಶದ ಮೇಲೆ ಅರಕಾನ್ ಬೌದ್ಧ ರಾಜವಂಶವು ದಾಳಿ ನಡೆಸಿ ಸೋಲಿಸಿತು. ಆ ಪ್ರದೇಶದಿಂದ ಮುಸ್ಲಿಮರು ಮತ್ತು ಹಿಂದೂಗಳು ಜೀವ ಭಯದಿಂದ ಪಲಾಯನ ಮಾಡಿದರು. ಬೌದ್ದೇತರ ಎಲ್ಲ ಆರಾಧನಾಲಯಗಳನ್ನೂ ಅರಕಾನ್ ಆಡಳಿತವು ಧ್ವಂಸಗೊಳಿಸಿತು. ಇದಾಗಿ ಒಂದು ಶತಮಾನದ ಬಳಿಕ 1824ರಲ್ಲಿ ಬ್ರಿಟಿಷರು ಮ್ಯಾನ್ಮಾರ್ ಮೇಲೆ ದಾಳಿ ನಡೆಸಿದರು. ಅಲ್ಲಿನ ಕೃಷಿ ಕೆಲಸಗಳಿಗಾಗಿ ಅವರು ಬಂಗಾಳಿ ಮುಸ್ಲಿಮ ರನ್ನು ಕರೆ ತಂದರು. ಇವರ ಜೊತೆಗೇ ಈ ಹಿಂದೆ ಪಲಾಯಗೈದವರ ತಲೆಮಾರುಗಳೂ ಅರಕಾನ್‍ಗೆ ಬಂದವು. ದುರಂತ ಏನೆಂದರೆ, ಮ್ಯಾನ್ಮಾರ್‍ನ ಬೌದ್ಧ ತೀವ್ರವಾದಿಗಳು ಮುಸ್ಲಿಮ್ ಇತಿಹಾಸವನ್ನು ಪ್ರಾರಂಭಿಸುವುದೇ ಇಲ್ಲಿಂದ. ಅಲ್ಲದೇ ರೋಹಿಂಗ್ಯನ್ನರು ವಾಸವಾಗಿರುವುದು ರಾಖೈನ್ ರಾಜ್ಯದ ಪಶ್ಚಿಮ ಸಮುದ್ರ ತೀರದ ಬಳಿ. ಇದು ತೈಲ ಸಮೃದ್ಧ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. ಮಾತ್ರವಲ್ಲ, ಈ ಪ್ರದೇಶವು ಬಾಂಗ್ಲಾದೇಶಕ್ಕೆ ತಾಗಿಕೊಂಡೂ ಇದೆ. ಬಾಂಗ್ಲಾ ದೇಶದ ಚಿತ್ತಗಾಂಗ್‍ನ ಭಾಷೆಗೆ ಸಾಮಿಪ್ಯವುಳ್ಳ ಬಂಗಾಳಿ ಭಾಷೆಯನ್ನು ಹೆಚ್ಚಿನ ರೋಹಿಂಗ್ಯನ್ನರು ಆಡುತ್ತಾರೆ. ಶುದ್ಧ ಬರ್ಮೀಸ್ ಭಾಷೆ ಆಡುವ ರೋಹಿಂಗ್ಯನ್ನರೂ ರಾಖೈನ್‍ನ ಪೂರ್ವ ಭಾಗದಲ್ಲಿ ದ್ದಾರೆ. ದೇಹ ರಚನೆಯಲ್ಲೂ ರೋಹಿಂಗ್ಯನ್ನರು ಬಂಗಾಳಿಯರನ್ನೇ ಹೋಲುತ್ತಾರೆ. ಈ ಸಾಮ್ಯತೆಯೇ ಬೌದ್ಧ ಸಂಘಟನೆಗಳ ಆರೋಪಕ್ಕೆ ಇನ್ನೊಂದು ಆಧಾರ. 1430ರ ಮರೋಕು ರಾಜವಂಶದ ಪ್ರಜೆಗಳು ಇವರು ಎಂದು ಇತಿ ಹಾಸ ಉಲ್ಲೇಖಿಸುತ್ತದಾದರೂ ಇವರಿಗೆ ಬ್ರಿಟಿಷ್ ಇತಿಹಾಸದ ಕಾಲವನ್ನಷ್ಟೇ ಬೌದ್ಧ ತೀವ್ರವಾದಿಗಳು ಮತ್ತು ಈ ಹಿಂದಿನ ಮಿಲಿಟರಿ ಸರಕಾರವು ಒಪ್ಪಿಕೊಳ್ಳುತ್ತಿದೆ. ಬ್ರಿಟಿಷರು ತಮ್ಮ ಜೊತೆ ಕರೆ ತಂದ ಬಂಗಾಳಿ ಮತ್ತು ಮರೋಕು ರಾಜವಂಶದ ಹೊಸ ತಲೆಮಾರಿಗೆ ಅರಕಾನ್ ರಾಜ್ಯದಲ್ಲಿ 99 ವರ್ಷಗಳ ಅವಧಿಗೆ ಭೂಮಿಯನ್ನು ವಿತರಿಸಿತ್ತು. ಒಂದು ರೀತಿಯಲ್ಲಿ, ಅದು ಮರೋಕು ರಾಜವಂಶ ಕಾಲದ ಪ್ರಜೆಗಳ ಜಾಗ. ಅರಕಾನನ್ನು ಬೌದ್ಧ ರಾಜವಂಶವು ವಶಪಡಿಸಿಕೊಳ್ಳುವ ಮೂಲಕ ಅದು ಅವರಿಂದ ಕೈ ತಪ್ಪಿ ಹೋಗಿತ್ತು. ಬ್ರಿಟಿಷರು ಹೀಗೆ ಭೂಮಿ ಹಂಚಿದ್ದೂ ಮತ್ತು ಕೃಷಿ ಕಾರ್ಯಗಳಲ್ಲಿ ಮುಸ್ಲಿಮರನ್ನು ಬಳಸಿಕೊಂಡಿರುವುದರ ಫಲಿತಾಂಶವು ಇವತ್ತು ಮ್ಯಾನ್ಮಾರ್‍ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಇಲ್ಲಿನ ಮುಸ್ಲಿಮರು ತೀರಾ ಬಡವರೇನೂ ಅಲ್ಲ. ಸ್ಥಿತಿ ವಂತರಾಗಿಯೇ ಗುರುತಿಸಿಕೊಂಡಿದ್ದಾರೆ. 1940ರಲ್ಲಿ ಮುಜಾಹಿದ್‍ಗಳೆಂದು ಗುರುತಿಸಿಕೊಂಡ ಸಶಸ್ತ್ರ ಗುಂಪೊಂದು ಅರಕಾನ್ ಅನ್ನು ಪಾಕ್‍ನ ಜೊತೆ ಸೇರಿಸುವ ಉದ್ದೇಶದೊಂದಿಗೆ ಹೋರಾಟ ನಡೆಸಿತ್ತು. ಜಿನ್ನಾರೊಂದಿಗೆ ಮಾತುಕತೆಯನ್ನೂ ನಡೆಸ ಲಾಗಿತ್ತು. ಆಗ ಜನರಲ್ ಅನ್ ಸಾನ್‍ರು ಸ್ವತಂತ್ರ ಬರ್ಮಾದಲ್ಲಿ ಇವರಿಗೆ ಸಂರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಮುಸ್ಲಿಮರು ಬ್ರಿಟಿಷರನ್ನು ಬೆಂಬಲಿಸಿದರು. ಬೌದ್ಧರ ಅರಕಾನ್ ನ್ಯಾಷನಲ್ ಆರ್ಮಿ ಮತ್ತು ಬರ್ಮೀಸ್ ಇಂಡಿಪೆಂಡೆನ್ಸ್ ಆರ್ಮಿಗಳು ಜಪಾನನ್ನು ಬೆಂಬಲಿಸಿದುವು. 1948ರಲ್ಲಿ ಬರ್ಮಾವು ಸ್ವತಂತ್ರವಾಯಿತು. ಅಂದಿನಿಂದಲೇ ರೋಹಿಂಗ್ಯನ್ನರನ್ನು ಪ್ರಜೆಗಳೆಂದು ಒಪ್ಪಿಕೊಳ್ಳುವುದಕ್ಕೆ ಆಡಳಿತ ನಿರಾಕರಿಸತೊಡಗಿತು.
ಬಹುಶಃ ರೋಹಿಂಗ್ಯನ್ ಹತ್ಯಾಕಾಂಡಕ್ಕೆ ಇರುವ ಇನ್ನೊಂದು ಆಯಾಮ ಆರ್ಥಿಕತೆಯದ್ದು.
      ಮ್ಯಾನ್ಮಾರ್‍ನ ರಾಖೈನ್ ಪ್ರದೇಶದಿಂದ ಆರಂಭವಾಗಿ ರೋಹಿಂಗ್ಯನ್ ಪ್ರದೇಶದಲ್ಲಿ ಕೊನೆಗೊಳ್ಳುವ ಕ್ಯೋಕ್‍ಫೂ ರಸ್ತೆ ನಿರ್ಮಾಣವನ್ನು ಚೀನಾ ತ್ವರಿತಗೊಳಿಸಿದ ಸಮಯದಲ್ಲೇ (2012) ರೋಹಿಂಗ್ಯದಲ್ಲಿ ಮೊದಲ ಜನಾಂಗೀಯ ಹತ್ಯಾಕಾಂಡ ಆರಂಭವಾಗಿದ್ದು. ಈ ರಸ್ತೆ ಚೀನಾದ ಪಾಲಿಗೆ ಬಹು ಅಮೂಲ್ಯವಾದುದು. ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಈ ರಸ್ತೆ ನೆರವಾಗುವುದರಿಂದ ಚೀನಾ ಭಾರೀ ಪ್ರಮಾಣದಲ್ಲಿ ಇಲ್ಲಿ ಹೂಡಿಕೆ ಮಾಡಿತ್ತು. ಇದನ್ನು ವಿಫಲಗೊಳಿಸುವ ಉದ್ದೇಶದಿಂದಲೇ ಅಮೇರಿಕ ಚುರುಕಾಯಿತು. 2012ರಲ್ಲಿ ಒಬಾಮ ಎರಡು ಬಾರಿ ಮ್ಯಾನ್ಮಾರ್‍ಗೆ ಭೇಟಿ ಕೊಟ್ಟಿರುವುದೇ ಇದಕ್ಕೆ ಸಾಕ್ಷಿ. ಇದೇ ಸಮಯದಲ್ಲಿ ರೋಹಿಂಗ್ಯ ಹತ್ಯಾಕಾಂಡವೂ ನಡೆದು ಕಾಮಗಾರಿ ಸ್ಥಗಿತಗೊಂಡಿತು. ಅಮೇರಿಕವು ಸೂಕಿ ಮತ್ತು ಮಿಲಿಟರಿ ಜನರಲ್ ತೇನ್‍ಸೇನ್‍ರನ್ನೂ ತನ್ನಲ್ಲಿಗೆ ಕರೆಸಿಕೊಂಡಿತ್ತು. ಹೀಗೆ ಸ್ಥಗಿತಗೊಂಡಿದ್ದ ಕಾಮ ಗಾರಿಯು 5 ವರ್ಷಗಳ ಬಳಿಕ ಪುನಃ ಪ್ರಾರಂಭಗೊಂಡಿತು. ಇದಕ್ಕಾಗಿ ಚೀನಾ-ಮ್ಯಾನ್ಮಾರ್ ಒಪ್ಪಂದ ಮಾಡಿಕೊಂಡವು. ಒಬಾಮರಂತೆ ಟ್ರಂಪ್‍ರಿಗೆ ಮ್ಯಾನ್ಮಾರನ್ನು ಒಲಿಸಿಕೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಚೀನಾವು ಹತ್ತಿರದ ಎಲ್ಲ ದೇಶಗಳ ಒಲವನ್ನೂ ಗಿಟ್ಟಿಸಿಕೊಂಡಿದೆ. ಈ ನಡುವೆ ಸೂ ಕಿ ಎರಡು ಬಾರಿ ಚೀನಾಕ್ಕೆ ಭೇಟಿ ನೀಡಿದರು. ಹೀಗೆ ರಾಜತಾಂತ್ರಿಕ ಸಮರದಲ್ಲಿ ಅಮೇರಿಕಕ್ಕೆ ತೀವ್ರ ಹಿನ್ನಡೆಯಾಯಿತು. ಈ ನಡುವೆ ಚೀನಾ-ಮ್ಯಾನ್ಮಾರ್ ಪೈಪ್‍ಲೈನ್ ಕಾಮಗಾರಿಯು ಸಂಪೂರ್ಣವಾಯಿತಲ್ಲದೇ ಚೀನಾದ ಬಲುವಾನ್ ಪ್ರದೇಶಕ್ಕೆ ಪ್ರತಿದಿನ 2,60,000 ಬ್ಯಾರಲ್ ತೈಲ ಸಾಗಿಸುವುದಕ್ಕೆ ಬೇಕಾದ ಎಲ್ಲ ಏರ್ಪಾಡುಗಳು ಮುಗಿದಿವೆ. ಈ ಸಂದರ್ಭದಲ್ಲೇ  ಮತ್ತೆ ರೋಹಿಂಗ್ಯ ನರಮೇಧ ಕಾಣಿಸಿಕೊಂಡಿದೆ. ಇದರಲ್ಲಿ ಅಮೇರಿಕದ ಪಾತ್ರವನ್ನು ಶಂಕಿಸುವಂತೆಯೇ ಸ್ವತಃ ಚೀನಾವೇ ತನ್ನ ಪೈಪ್‍ಲೈನ್ ಯೋಜನೆಯ ಕಡೆಗೆ ಜನರ ಗಮನ ಹರಿಯದಂತೆ ಮಾಡುವುದಕ್ಕಾಗಿ ಇಂಥದ್ದೊಂದು ಹತ್ಯಾಕಾಂಡಕ್ಕೆ ಕುಮ್ಮಕ್ಕು ನೀಡಿರಬಹುದೇ ಎಂದೂ ಅನುಮಾನಿಸಬಹುದಾಗಿದೆ. ಹಾಗಂತ,
     ರೋಹಿಂಗ್ಯನ್ ಮುಸ್ಲಿಮರು ತಮ್ಮ ಹಕ್ಕುಗಳ ಬಗ್ಗೆ ಪ್ರಜ್ಞೆಯಿಲ್ಲದವರೋ ಅಥವಾ ಹೋರಾಟ ನಡೆಸದವರೋ ಅಲ್ಲ. ರಾಖೈನ್ ರಾಜ್ಯದ 30 ಲಕ್ಷ ಮಂದಿಯಲ್ಲಿ 13 ಲಕ್ಷದಷ್ಟಿರುವ ರೋಹಿಂಗ್ಯನ್ನರು ರೋಹಿಂಗ್ಯ ಸಾಲಿಡಾರಿಟಿ ಆರ್ಗನೈಝೇಶನ್ (RSA) ಮತ್ತು ಅರಕಾನ್ ಇಸ್ಲಾಮಿಕ್ ಫ್ರಂಟ್ (ARIF) ಸ್ಥಾಪಿಸಿದ್ದರು. 1998ರಲ್ಲಿ ಇವೆರಡನ್ನೂ ಒಟ್ಟುಗೂಡಿಸಿ ಅರಕಾನ್-ರೋಹಿಂಗ್ಯ ನ್ಯಾಶನಲ್ ಆರ್ಗನೈಝೇಶನ್ (ARNA) ಅನ್ನು ರಚಿಸಿದರು ಮತ್ತು ಅದರ ಹೋರಾಟ ವಿಭಾಗವಾಗಿ ರೋಹಿಂಗ್ಯ ನ್ಯಾಶನಲ್ ಆರ್ಮಿ (RNA)ಯನ್ನು ಕಟ್ಟಿದರು. ಈಗ ಮ್ಯಾನ್ಮಾರ್ ಸೇನೆಯ ಜೊತೆ ಹೋರಾಟದಲ್ಲಿ ನಿರತವಾಗಿರುವ ಗುಂಪಿನ ಹೆಸರು ಅರಕಾನ್-ರೋಹಿಂಗ್ಯ ಸಾಲ್ವೇಶನ್ ಆರ್ಮಿ (ARSA).
     ಒಂದು ಕಡೆ, ಬೌದ್ಧ ರಾಷ್ಟ್ರೀಯವಾದಿಗಳು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಸೇನೆಯಿದ್ದರೆ ಇನ್ನೊಂದು ಕಡೆ ಪೌರತ್ವವೇ ನಿರಾಕರಿಸಲ್ಪಟ್ಟು ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿರುವ ರೋಹಿಂಗ್ಯನ್ನರು. ಮಗದೊಂದೆಡೆ ಅಮೇರಿಕ ಮತ್ತು ಚೀನಾದ ಆರ್ಥಿಕ ಹಿತಾಸಕ್ತಿಗಳು. ಬಹುಶಃ, ರೋಹಿಂಗ್ಯ ಹತ್ಯಾಕಾಂಡದ ಹಿಂದೆ ಬರೇ ಪೌರತ್ವಕ್ಕಿಂತ ಹೊರತಾದ ಆರ್ಥಿಕ ಮತ್ತು ರಾಜಕೀಯ ಕಾರಣಗಳಿವೆ. ಸೇನೆಯ ಮೇಲೆ ಅರಕಾನ್-ರೋಹಿಂಗ್ಯ ಸಾಲ್ವೇಶನ್ ಆರ್ಮಿ (ARSA) ದಾಳಿಯೆಸಗಿದುದೇ ಈ ಹತ್ಯಾಕಾಂಡಕ್ಕೆ ಕಾರಣ ಎಂಬುದು ಬರೇ ನೆಪ ಮಾತ್ರ. ಅದಕ್ಕಿಂತ ಮೊದಲೇ,
         ಅತ್ಯಂತ ಯೋಜಿತವಾಗಿ ಈ ಹತ್ಯಾಕಾಂಡದ ನಕ್ಷೆಯನ್ನು ರೂಪಿಸಲಾಗಿತ್ತು ಎಂದೇ ಅನಿಸುತ್ತದೆ.

Wednesday, September 27, 2017

ಗೌರಿಯನ್ನು ಕೊಂದ ವಾದ ಯಾವುದು?

      ಗೌರಿ ಲಂಕೇಶ್ - ಸರ್ವ ದೌರ್ಬಲ್ಯಗಳಿಂದಲೂ ಮುಕ್ತವಾದ, ಯಾವ ವಿವಾದಗಳಿಗೂ ಒಳಗಾಗದ ಸಾಧು ಹೆಣ್ಣು ಮಗಳೇನಲ್ಲ. ಇಂಥದ್ದೊಂದು ವರ್ಚಸ್ಸನ್ನು ಅವರು ಬಯಸಿರುವ ಸಾಧ್ಯತೆಯೂ ಇಲ್ಲ. ಗಾಂಧೀಜಿಯವರ ಜೊತೆ ಅವರ ಸಮಕಾಲೀನರಾದ ಹಲವು ನಾಯಕರಿಗೆ ವೈಚಾರಿಕ ಭಿನ್ನಾಭಿಪ್ರಾಯವಿತ್ತು. ದಲಿತರಿಗೆ ಅವರು ಬಳಸಿದ ‘ಹರಿಜನ’ ಎಂಬ ಪದ ಕಾನೂನುಬಾಹಿರ ಆಗುವಷ್ಟು ಅವರು ಈ ನೆಲದಲ್ಲಿ ಪ್ರಶ್ನೆಗೆ ಒಳಗಾಗಿದ್ದಾರೆ. ಅಂಬೇಡ್ಕರ್‍ವಾದಿಗಳಿಗೆ ಅವರ ಜೊತೆ ಇವತ್ತಿಗೂ ಕೂಡ ತೀರದ ಮುನಿಸಿದೆ. ಬಲಪಂಥೀಯರಿಗೂ ಅವರ ವಿಚಾರಧಾರೆಯ ಮೇಲೆ ತಕರಾರಿದೆ. ಇವರಷ್ಟೇ ಅಲ್ಲ ಬುದ್ಧ, ಬಸವ, ನಾರಾಯಣ ಗುರು  ಎಲ್ಲರೂ ಪ್ರಶ್ನೆಗೆ ಒಳಗಾಗುತ್ತಲೇ ಈ ಮಣ್ಣಿನಲ್ಲಿ ಸ್ವೀಕೃತರಾದವರು. ಹೀಗಿರುವಾಗ, ಗೌರಿಯ ನಿಲುವು ಸರ್ವ ಮಾನ್ಯವಾಗುವುದು, ಪ್ರಶ್ನೆಗಳಿಗೆ ಆಸ್ಪದವನ್ನೇ ಒದಗಿಸದಷ್ಟು ಸಾರ್ವಕಾಲಿಕವಾಗುವುದು ಸಾಧ್ಯವೇ ಇಲ್ಲ. ಅವರು ಆಡಿರಬಹುದಾದ ಮಾತು, ಬರೆದ ಬರಹ, ತೊಡಗಿಸಿಕೊಂಡ ಚಳವಳಿ.. ಇತ್ಯಾದಿಗಳ ಕುರಿತಂತೆಅವರನ್ನು ಮೆಚ್ಚಿಕೊಳ್ಳುವವರಲ್ಲೂ ತಕರಾರು ಇರಬಹುದು. ಇರುವುದೇ ಒಳ್ಳೆಯದು. ತಕರಾರು ರಹಿತ ಬೆಂಬಲ ಎಂಬುದು ಅನೇಕ ಬಾರಿ ಅಂಧ ಅಭಿಮಾನಿಗಳಾಗಿಸಿ ಬಿಡುತ್ತದೆ. ಸದ್ಯ ನರೇಂದ್ರ ಮೋದಿಯವರು ಇಂಥದ್ದೊಂದು ಹಂತಕ್ಕೆ ತಲುಪಿ ಬಿಟ್ಟಿದ್ದಾರೆ. ಗೌರಿಯವರು ಈ ಅಪಾಯದಿಂದ ಸ್ವತಃ ತನ್ನನ್ನು ಪಾರಾಗಿಸಿಕೊಂಡಿದ್ದರು. ತನ್ನನ್ನು ಮೆಚ್ಚಿಕೊಳ್ಳುವ ಗುಂಪಿನಲ್ಲೂ ಸಾತ್ವಿಕ ತಕರಾರಿಗೆ ಜಾಗ ಮೀಸಲಿಟ್ಟಿದ್ದರು. ಇವತ್ತು ಗೌರಿಯವರ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ, ಚರ್ಚೆ, ಸಮಾಲೋಚನೆಗಳಲ್ಲಿ ಭಾಗವಹಿಸುತ್ತಿರುವವರೆಲ್ಲ ‘ನೂರು ಶೇಕಡ’ ಗೌರಿಯನ್ನು ಒಪ್ಪಿಕೊಂಡವರೇನಲ್ಲ. ಅವರು ತಮ್ಮ ಭಾಷಣ, ಬರಹದಲ್ಲಿ ಬಳಸಿದ ಕೆಲವೊಂದು ಪದಪ್ರಯೋಗಗಳನ್ನು ಮೆಚ್ಚಿ ಕೊಳ್ಳದವರೂ ಇವರಲ್ಲಿದ್ದಾರೆ. ಆದರೆ, ಗೌರಿ ಹತ್ಯೆಯ ನಂತರ ದೇಶದಾದ್ಯಂತ ಎದ್ದಿರುವ ಪ್ರತಿಭಟನೆಯ ಅಲೆ ಒಂದು ಮುಖ್ಯ ಸಂದೇಶವನ್ನು ಸಾರುತ್ತದೆ. ಅವರು ಈ ದೇಶದ ಅಗತ್ಯವಾಗಿದ್ದರು. ಅವರ ವಿಚಾರದಲ್ಲಿ ಸುಖವನ್ನು ಕಾಣುವ ಜನಸಮೂಹ ಈ ದೇಶದಲ್ಲಿತ್ತು. ಆದ್ದರಿಂದಲೇ ಅವರ ಹತ್ಯೆ ಯನ್ನು ಸೌಖ್ಯಭಾವದ ಹತ್ಯೆ ಎಂದೂ ಪರಿಗಣಿಸಬಹುದು. ಗೌರಿ ಅಸಂಖ್ಯ ಮಂದಿಗೆ ನೆಮ್ಮದಿ, ನಿರೀಕ್ಷೆ ಮತ್ತು ಧೈರ್ಯ ಆಗಿದ್ದರು. ಅಂದಹಾಗೆ, ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಮತ್ತು 2005ರಲ್ಲಿ ಪೊಲೀಸ್ ಎನ್‍ಕೌಂಟರ್‍ಗೆ ಬಲಿಯಾದ ಸಾಕೇತ್ ರಾಜನ್ ಜೊತೆಗೆ ಅವರಿಗಿದ್ದ ಗೆಳೆತನವನ್ನು ನಾವು ಏಕಮುಖವಾಗಿ ಚರ್ಚಿಸಬೇಕಿಲ್ಲ. ವೈಚಾರಿಕವಾಗಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು ಅನ್ನುವುದಕ್ಕೆ ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಗೌರಿ ತೋರಿದ ಮುತುವರ್ಜಿಯೇ ಪಕ್ಕಾ ಉದಾಹರಣೆ. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಸೇರಿದಂತೆ ಒಂದು ಡಝನ್‍ನಷ್ಟು ಮಂದಿಯನ್ನು ಅವರು ಕಾಡಿನಿಂದ ನಾಡಿಗೆ ತಂದರು. ಅದೇವೇಳೆ, ಸಾಕೇತ್ ರಾಜನ್ ಈ ಬೆಳವಣಿಗೆಯ ಪರ ಇರದಿದ್ದರೂ ಅವನ ಜೊತೆ ಗೆಳೆತನ ವನ್ನು ಇಟ್ಟುಕೊಂಡರು. ಎಲ್ಲಿಯವರೆಗೆಂದರೆ, ಆತನ ಎನ್ ಕೌಂಟರ್ ಅನ್ನು ಪ್ರತಿಭಟಿಸಿ, ಆತನ ಅಸ್ಥಿಯನ್ನು ಹಿಡಿದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ವೈಚಾರಿಕವಾಗಿ ಒಂದೇ ಬಿಂದುವಿನಲ್ಲಿ ನಿಲ್ಲದ ವ್ಯಕ್ತಿಗಳಿಬ್ಬರು ಮನುಷ್ಯರಾಗಿ ಒಂದಾಗಬಹು ದಾದ ಸಾಧ್ಯತೆಗಳೆಡೆಗೆ ಗೌರಿ ಹೀಗೆ ಸೂಚನೆ ಕೊಟ್ಟರೇನೋ ಎಂದು ಅನಿಸುತ್ತದೆ. ಇದರರ್ಥ ಬಸ್ಸು, ರೈಲು, ಮಸೀದಿ ಮಂದಿರಗಳಲ್ಲಿ ಬಾಂಬಿಟ್ಟು ಸ್ಫೋಟಿಸುವವರ ಜೊತೆ ವೈಚಾರಿಕ ಅಸಮ್ಮತಿಯೊಂದಿಗೆ ಮನುಷ್ಯರೆಂಬ ನೆಲೆಯಲ್ಲಿ ಒಂದಾಗಬಹುದು ಎಂದು ಅಲ್ಲ. ಗೌರಿ ಎಲ್ಲೂ ಬಾಂಬ್ ಸ್ಫೋಟ ಮತ್ತು ಹತ್ಯಾ ಕಾಂಡದ ಭಯೋತ್ಪಾದನೆಯೊಂದಿಗೆ ಈ ಮಟ್ಟದ ಸಹೃದಯತೆ ಯನ್ನು ತೋರಿಲ್ಲ. ಪಶ್ಚಿಮ ಘಟ್ಟದ ನಕ್ಸಲ್ ಚಟುವಟಿಕೆಯ ಬಗ್ಗೆ ಅವರಲ್ಲಿ ಆಳ ತಿಳುವಳಿಕೆಯಿತ್ತು. ಇವತ್ತು ಗೌರಿ ಹತ್ಯೆ ಯನ್ನು ನಕ್ಸಲ್‍ರ ತಲೆಗೆ ಕಟ್ಟುವಲ್ಲಿ ಅತ್ಯುತ್ಸಾಹ ತೋರುತ್ತಿರುವವರು ನಿಜವಾಗಿ ಗೌರಿಯನ್ನು ಓದಿಲ್ಲ ಎಂದೇ ಹೇಳಬೇಕು. ಗೌರಿಯೊಳಗೆ ನಕ್ಸಲಿಸಂ ಇತ್ತು. ಆದರೆ ಅದು ಕಾಡಿನಲ್ಲಿ ಅವಿತು ಕುಳಿತು, ಶಸ್ತ್ರ ಎತ್ತಿ ಮಾಡುವ ನಕ್ಸಲಿಸಂ ಆಗಿರಲಿಲ್ಲ. ಅವರು ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆ ಇರಿಸಿದ್ದರು. ಸಾಕೇತ್ ರಾಜನ್ ಮತ್ತು ಆತನ ತಂಡ ಪಶ್ಚಿಮ ಘಟ್ಟದ ಕಾಡಿನಲ್ಲಿ ಬಂದೂಕು ಎತ್ತಿಕೊಂಡು ಮಾಡುತ್ತಿರುವ ಅದೇ ಉದ್ದೇಶದ ಹೋರಾಟವನ್ನು ಬಂದೂಕಿಲ್ಲದೇ ಮತ್ತು ನಾಗರಿಕರ ನಡುವೆಯೇ ಇದ್ದುಕೊಂಡು ನಾಡಿನಲ್ಲಿಯೇ ಮಾಡಬಹುದು ಎಂಬುದು ಅವರ ನಿಲುವಾಗಿತ್ತು. ಆದ್ದರಿಂದಲೇ, ‘ಶಾಂತಿಗಾಗಿ ನಾಗರಿಕ ವೇದಿಕೆ ಹುಟ್ಟಿಕೊಂಡಿತು’ ಎಂಬುದು ನನ್ನ ನಂಬಿಕೆ. ವ್ಯಂಗ್ಯ ಏನೆಂದರೆ, ನಕ್ಸಲರನ್ನು ಕಾಡಿನಿಂದ ನಾಡಿಗೆ ತರುವ ಗೌರಿಯವರ ಪ್ರಯತ್ನವನ್ನು ಅಣಕದ ಭಾಷೆಯಲ್ಲಿ ವ್ಯಾಖ್ಯಾನಿಸಿದವರೇ ಅಥವಾ ಅವರೊಂದಿಗೆ ಸಹಮತ ಹೊಂದಿರುವವರೇ ಇವತ್ತು ಗೌರಿ ಹತ್ಯೆಗೆ ಸಂಭ್ರಮಿಸುತ್ತಿದ್ದಾರೆ ಮತ್ತು ಅಡ್ಡಗೋಡೆಯಲ್ಲಿ ದೀಪ ಇಟ್ಟ ಹಾಗೆ ಪ್ರತಿಕ್ರಿಯಿಸುತ್ತಿದ್ದಾರೆ. ಗೌರಿ ಹತ್ಯೆಗೆ ಬಲಪಂಥೀಯ ವಿಚಾರಧಾರೆ ಕಾರಣ ಎಂದು ಹೇಳುವುದನ್ನು ತನಿಖೆಗೆ ಮೊದಲೇ ತೀರ್ಪು ಎಂದು ಈ ಗುಂಪು ಖಂಡಿಸುತ್ತಲೇ ನಕ್ಸಲೀಯರು ಈ ಹತ್ಯೆ ನಡೆಸಿರಬಹುದು ಎಂದೂ ಹೇಳುತ್ತಿದೆ. ಒಂದನ್ನು ತಪ್ಪು ಅನ್ನುತ್ತಾ ಇನ್ನೊಂದು ತಪ್ಪನ್ನು ಮಾಡುವ ಈ ದ್ವಂದ್ವವನ್ನು ಏನೆಂದು ಪರಿಗಣಿಸಬೇಕು? ನಕ್ಸಲ್ ಚಟುವಟಿಕೆಯನ್ನು ದಮನಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿವೆ. ಯೋಧರು, ಪೊಲೀಸರ ಬಲಿದಾನ ಆಗುತ್ತಿದೆ. ನಕ್ಸಲ್ ಪ್ರದೇಶಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವುದಕ್ಕೂ ಅಡಚಣೆಗಳು ಉಂಟಾಗುತ್ತಿವೆ. ಗೌರಿ ಮುಖ್ಯವಾಗುವುದು ಇಲ್ಲೇ.  ಪಶ್ಚಿಮ ಘಟ್ಟದಲ್ಲಿ ಇವತ್ತು ನಕ್ಸಲ್ ಚಟುವಟಿಕೆ ತೀರಾ ತೀರಾ ಕುಗ್ಗಿರು ವುದರಲ್ಲಿ ಗೌರಿಯ ಪಾತ್ರ ಬಹಳ ದೊಡ್ಡದು. ಶ್ರೀ ಶ್ರೀ ರವಿಶಂಕರ್ ಅವರು ಕೊಲಂಬಿಯದ ಭಯೋತ್ಪಾದಕ ಗುಂಪಿನ ಜೊತೆ (FARC) ಮಾತುಕತೆ ನಡೆಸುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರೇ ಗೌರಿಯ ಮಾತುಕತೆಯನ್ನು ಅಣಕಿಸುವುದರಲ್ಲಿ ಏನು ತರ್ಕ ಇದೆ?
      ಬಲಪಂಥೀಯ, ನಡುಪಂಥೀಯ ಮತ್ತು ಎಡಪಂಥೀಯ ಎಂದು ನಮ್ಮ ನಡುವೆ ಇರುವ ವಿಚಾರಧಾರೆಯನ್ನು ಬೇರ್ಪಡಿಸಿ ನೋಡಿದರೆ ಗೌರಿ ಎಡಪಂಥೀಯ ಬಿಂದುವಿನಲ್ಲಿ ನಿಲ್ಲುತ್ತಾರೆ ಅನ್ನುವುದು ನಿಜ. ಹಾಗಂತ, ಎಡಪಂಥವನ್ನೇ ಅವರು ಶಾಶ್ವತ ಠಿಕಾಣಿಯನ್ನಾಗಿ ಮಾಡಿಕೊಂಡೂ ಇರಲಿಲ್ಲ. ಸಂದರ್ಭ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ ಅವರು ಈ ಬೇಲಿಯನ್ನು ಜಿಗಿದದ್ದೂ ಇದೆ. ಅಪ್ಪ ಲಂಕೇಶ್‍ರ ‘ಸದಾ ವಿರೋಧ ಪಕ್ಷ’ ಎಂಬ ನೀತಿಯನ್ನು ಅವರು ಅಪ್ಪಿಕೊಂಡೂ ಇರಲಿಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಲಂಕೇಶ್‍ರ ಕಾಲಘಟ್ಟ ಮತ್ತು ಗೌರಿಯವರ ಕಾಲಘಟ್ಟವೂ ಇದಕ್ಕೆ ಒಂದು ಕಾರಣ ಆಗಿರಬಹುದು. ಬಲಪಂಥೀಯ ವಿಚಾರಧಾರೆಯು ಪ್ರಾಬಲ್ಯ ಪಡೆದಿರುವುದೂ ಇದಕ್ಕೆ ಕಾರಣವಾಗಿರಬಹುದು. ಅಷ್ಟಕ್ಕೂ, ಯಾರೇ ಆಗಲಿ ನಿರ್ದಿಷ್ಟ ವಿಚಾರಧಾರೆಯನ್ನು ಹೊಂದುವುದು ತಪ್ಪೇ? ಎಡಪಂಥ ಅಥವಾ ಬಲಪಂಥ ಅಥವಾ ನಡುಪಂಥ ಇವುಗಳಲ್ಲಿ ಯಾವುದಾದರೂ ಒಂದು ಮಾತ್ರವೇ ಇರಬೇಕು ಎಂಬ ವಾದ ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು? ಜರ್ಮನಿ, ರಷ್ಯಾ, ಇಟಲಿಗಳೆಲ್ಲ ಏನಾದುವು? ಏಕಪಂಥವನ್ನು ಒಪ್ಪಿಕೊಂಡ ಮತ್ತು ಅನೇಕ ಪಂಥಗಳನ್ನು ಸಹಿಸದ ಆಡಳಿತ ವ್ಯವಸ್ಥೆಗಳೆಲ್ಲ ಹೇಗೆ ನಾಮಾವಶೇಷವಾದುವು ಅನ್ನುವುದನ್ನು ಇತಿಹಾಸ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿರುವುದರ ಹೊರತಾಗಿಯೂ ಗೌರಿಯನ್ನು ಅದೇ ತೀವ್ರವಾದ ಬಲಿ ಪಡೆಯಿತೇ? ಎಡಪಂಥ ಮತ್ತು ಬಲಪಂಥ ಪರಸ್ಪರ ಸಂವಾದಿಸಲಾರದಂಥ ಸ್ಥಿತಿಗೆ ತಲುಪಿರುವುದೇಕೆ? ಎಡಪಂಥವನ್ನು ಒಂದು ವಿಚಾರಧಾರೆಯಾಗಿ ಒಪ್ಪಿಕೊಳ್ಳುವಾಗ ಬಲಪಂಥವನ್ನೂ ಹಾಗೆ ಒಪ್ಪಿಕೊಳ್ಳಬೇಕು. ಯಾವಾಗ ಒಂದು ಪಂಥವು ಇನ್ನೊಂದು ಪಂಥವನ್ನು ಮುಖಾ ಮುಖಿಯಾಗುವುದಕ್ಕೆ ನಿರಾಕರಿಸುತ್ತದೋ ಆಗ ಪಂಥವು ವರ್ಗವಾಗಿ ಮತ್ತು ಭಿನ್ನಾಭಿಪ್ರಾಯವು ಧರ್ಮವಾಗಿ ಮಾರ್ಪಡುವುದಕ್ಕೆ ದಾರಿ ತೆರೆದುಕೊಳ್ಳುತ್ತದೆ. ಬಲಪಂಥದಲ್ಲೂ ಎಡಪಂಥದಲ್ಲೂ ಮತ್ತು ನಡುಪಂಥದಲ್ಲೂ ಇರುವವರೆಲ್ಲ ಮನುಷ್ಯರೇ. ಪಂಥಗಳು ಹುಟ್ಟಿಕೊಂಡಿರುವುದು ವಿಚಾರಗಳ ಕಾರಣಗಳಿಂದಲೇ ಹೊರತು ಮನುಷ್ಯರಾಗಿರುವ ಕಾರಣದಿಂದಲ್ಲ. ಎಡಪಂಥದಲ್ಲಿ ಹಿಂದೂಗಳಿರುವಂತೆಯೇ ಬಲಪಂಥದಲ್ಲೂ ಹಿಂದೂಗಳೇ ಇದ್ದಾರೆ. ಕ್ರೈಸ್ತರು, ಮುಸ್ಲಿಮರೂ ಇವುಗಳಲ್ಲಿ ಹಂಚಿ ಹೋಗಿದ್ದಾರೆ. ನಡುಪಂಥದಲ್ಲೂ ಹಿಂದೂ-ಮುಸ್ಲಿಮ್ ಮತ್ತು ಧರ್ಮದೊಂದಿಗೆ ಗುರುತಿಸಿಕೊಳ್ಳದವರಿದ್ದಾರೆ. ಬಲಪಂಥ ಎಂಬುದು ಹಿಂದೂಗಳಿಗೆ ಮೀಸಲಾಗಿಲ್ಲ. ಎಡಪಂಥ ಅನ್ನುವುದೂ ನಾಸ್ತಿಕರಿಗೆ ಮೀಸಲಾಗಿಯೂ ಇಲ್ಲ. ಒಂದು ಪಂಥಕ್ಕೆ ಓರ್ವರು ಆಕರ್ಷಿತರಾಗುವುದಕ್ಕೆ ಓದು, ಹಿನ್ನೆಲೆ, ಸನ್ನಿವೇಶ, ಸಂದರ್ಭಗಳು ಕಾರಣವೇ ಹೊರತು ಇನ್ನಾವುದೂ ಅಲ್ಲ. ಹೀಗಿರುತ್ತಾ, ಪಂಥಗಳ ನಡುವಿನ ಭಿನ್ನಾಭಿಪ್ರಾಯವು ಹತ್ಯೆಯ ವರೆಗೆ ತಲುಪುವುದೇಕೆ? ಗೌರಿಯವರನ್ನು ಅಂತ್ಯಸಂಸ್ಕಾರಗೊಳಿಸಿರುವುದು ವೀರಶೈವ ಸಂಪ್ರದಾಯದಂತೆ. ಗೌರಿಗೂ ಒಂದು ಧರ್ಮ ಇತ್ತು. ಆ ಧರ್ಮವನ್ನು ಅವರು ಹೇಗೆ ಪರಿಭಾವಿಸಿದ್ದರೋ ಹಾಗೇ ಅದನ್ನು ಪಾಲಿಸಿದರು. ಕೊಂದವನ ಧರ್ಮ ಯಾವುದು ಎಂಬುದು ಈವರೆಗೆ ಗೊತ್ತಿಲ್ಲ. ಆತನಿಗೂ ಒಂದು ಧರ್ಮ ಇದ್ದೀತು. ಅದು ಗೌರಿಯದ್ದೇ  ಧರ್ಮ ಆಗಿರಲೂ ಬಹುದು. ವೈಚಾರಿಕ ಭಿನ್ನಾಭಿಪ್ರಾಯದ ಹೊರಗೆ ಮನುಷ್ಯರಾಗಿ ನಾವು ಒಂದುಗೂಡುವ ಬಿಂದು ಇದು. ಎಡಪಂಥದ ಬಂದೂಕಿಗೆ ಬಲಿಯಾಗುವುದೂ ಮನುಷ್ಯರೇ. ಬಲಪಂಥದ ಬಂದೂಕಿಗೆ ಬಲಿಯಾಗುವುದೂ ಮನುಷ್ಯರೇ. ಮನುಷ್ಯರನ್ನು ಸಾಯಿಸಿ ಒಂದು ಪಂಥವನ್ನು ಬೆಳೆಸಬಹುದು ಎಂದು ಆ ಹಂತಕನಿಗೆ ಯಾರು ಹೇಳಿಕೊಟ್ಟರೋ?
       ಯಾವುದೇ ಪಂಥವು ಸಮಾಜ ಮತ್ತು ದೇಶದ ಹಿತಕ್ಕೆ ಪೂರಕವೋ ಮಾರಕವೋ ಎಂಬುದು ಗೊತ್ತಾಗುವುದು ಪಂಥಗಳ ನಡುವೆ ಸಂವಾದ ಏರ್ಪಡಬಹುದಾದ ವಾತಾವರಣ ನಿರ್ಮಾಣವಾದಾಗ. ಒಂದು ಪಂಥ ಅಂಥ ಸಂವಾದವನ್ನೇ ಇಷ್ಟಪಡುವುದಿಲ್ಲ ಎಂದಾದರೆ, ಆ ಪಂಥ ದುರ್ಬಲವಾಗಿದೆ ಎಂದರ್ಥ. ಸಂವಾದಕ್ಕೆ ತೆರೆದುಕೊಳ್ಳುವುದೆಂದರೆ, ಪ್ರಶ್ನೆಗಳಿಗೆ ತೆರೆದುಕೊಳ್ಳುವುದು. ಸವಾಲುಗಳನ್ನು ಸ್ವೀಕರಿಸುವುದು. ಈ ಸ್ಥಿತಿಗೆ ಪಂಥಗಳು ತೆರೆದುಕೊಂಡಾಗ ಭಯ ಹೊರಟು ಹೋಗು ತ್ತದೆ. ನಾಗರಿಕ ಸಮಾಜವು ಇನ್ನಷ್ಟು ಪ್ರಬುದ್ಧವಾಗಿ ಬೆಳೆಯುವುದಕ್ಕೆ ಅವಕಾಶ ನಿರ್ಮಾಣವಾಗುತ್ತದೆ. ಸದ್ಯದ ಬೆಳವಣಿಗೆಗಳನ್ನು ನೋಡುವಾಗ, ಇಂಥದ್ದೊಂದು  ವಾತಾವರಣಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿವೆಯೇನೋ ಎಂದನಿಸುತ್ತಿದೆ. ಓರ್ವರ ವಿಚಾರಧಾರೆಯನ್ನು ಪ್ರತಿ ವಿಚಾರಧಾರೆಯೊಂದಿಗೆ ಎದುರಿಸುವ ಮತ್ತು ಗಟ್ಟಿ ಆಧಾರಗಳೊಂದಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ದಾರಿಯು ಮುಚ್ಚಿ ಹೋಗುತ್ತಿರುವಂತೆ ಕಾಣಿಸುತ್ತಿದೆ. ‘ತನ್ನ ವಿಚಾರಧಾರೆಗೆ ಅನ್ಯವಾದುದೆಲ್ಲವೂ ಹತ್ಯೆಗೆ ಅರ್ಹವಾದುದು’ ಎಂಬ ತೀವ್ರವಾದವನ್ನು ಪಂಥಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಬೆಳೆಸುತ್ತಿವೆಯೇನೋ ಎಂದು ಭಯವಾಗುತ್ತಿದೆ. ಸದ್ಯ ನಮ್ಮ ನಡುವಿನ ತುರ್ತು ಅಗತ್ಯ ಏನೆಂದರೆ, ಪಂಥಗಳು ಹತ್ಯೆಗೆ ಸ್ಕೆಚ್ ಹಾಕುವ ಸುಪಾರಿ ಗುಂಪುಗಳಾಗಿ ಬದಲಾಗುವುದನ್ನು ತಡೆಯುವುದು. ವೈಚಾರಿಕ ಭಿನ್ನಾಭಿಪ್ರಾಯವನ್ನು ವೈಚಾರಿಕ ಭಿನ್ನಾಭಿಪ್ರಾಯವಾಗಿಯೇ ಪರಿಗಣಿಸುವಂತಹ ವಾತಾವರಣವನ್ನು ನಿರ್ಮಿಸುವುದು. ಎಡಪಂಥ, ಬಲಪಂಥ ಮತ್ತು ನಡುಪಂಥಗಳು ಪರಸ್ಪರ ಮುಖಾಮುಖಿಯಾಗಬಹುದಾದ ಮತ್ತು ಮಾತಿನ ಅಬ್ಬರವಿಲ್ಲದೇ ಮಾತುಕತೆ ನಡೆಸಬಹುದಾದ ಸನ್ನಿವೇಶವನ್ನು ಉಂಟು ಮಾಡುವುದು. ಮಾತ್ರವಲ್ಲ, ಹತ್ಯೆಗೆ ಪ್ರೇರೇಪಿಸುವ ವಾದವನ್ನು ನಿಷ್ಕ್ರಿಯಗೊಳಿಸುವುದು.
     ಗೌರಿಯನ್ನು ಕೊಂದವರು ಯಾರು ಮತ್ತು ಅವರ ವಾದವೇನು ಎಂಬುದು ಸ್ಪಷ್ಟವಾಗಿಲ್ಲದ ಈ ಹೊತ್ತಿನಲ್ಲಿ ಇನ್ನೇನೂ ಹೊಳೆಯುತ್ತಿಲ್ಲ.

Wednesday, September 6, 2017

ತ್ರಿವಳಿ ತಲಾಕ್: ಸಮಾನ ನಾಗರಿಕ ಸಂಹಿತೆಯ ಸೋಲು

    
ತ್ರಿವಳಿ ತಲಾಕ್‍ನ ಬಗ್ಗೆ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪನ್ನು ಎತ್ತಿಕೊಂಡು ಸದ್ಯ ಎರಡು ಸುಳ್ಳುಗಳನ್ನು ತೇಲಿಸಿ ಬಿಡಲಾಗಿದೆ.
1. ಈ ತೀರ್ಪಿಗೆ ಮುಸ್ಲಿಮ್ ಸಮುದಾಯದ ಒಳಗಿನ ಸಂತ್ರಸ್ತ ಮಹಿಳೆಯರ ಹೋರಾಟವೇ ಮುಖ್ಯ ಕಾರಣ. ಶಾಯರಾ ಬಾನು ಇದಕ್ಕೆ ನೇತೃತ್ವ ನೀಡಿದ್ದಾಳೆ.
2. ಶರೀಅತ್‍ನ ಮೇಲೆ ಸುಪ್ರೀಮ್ ಕೋರ್ಟ್ ಹಸ್ತಕ್ಷೇಪ ನಡೆಸಿದೆ.
      ನಿಜವಾಗಿ ಇವೆರಡೂ ಸುಳ್ಳೇ. ತ್ರಿವಳಿ ತಲಾಕ್‍ನ ಬಗ್ಗೆ ಸುಪ್ರೀಮ್ ಕೋರ್ಟ್ ಈ ಹಿಂದೆ ಒಂದಕ್ಕಿಂತ ಹೆಚ್ಚು ಬಾರಿ ಮಾತಾಡಿದೆ. ದಗ್ಡು ಪಠಾಣ್ ಮತ್ತು ರಹೀಂಬಿ ಪ್ರಕರಣದಲ್ಲಿ ಬಾಂಬೇ ಹೈಕೋರ್ಟ್‍ನ ಔರಂಗಾಬಾದ್ ಪೀಠದ ನ್ಯಾಯಮೂರ್ತಿ ಮರ್ಲಪಲ್ಲೆಯವರು ತ್ರಿವಳಿ ತಲಾಕ್‍ನ ಬಗ್ಗೆ ಚರ್ಚಿಸಿದ್ದರು. ಅದಕ್ಕೆ ತಮ್ಮ ವಿರೋಧವನ್ನೂ ವ್ಯಕ್ತಪಡಿಸಿದ್ದರು. 2002ರ ಶಮೀಮ್ ಅರಾ ಪ್ರಕರಣದಲ್ಲೂ ಇದು ಪುನರಾವರ್ತನೆಯಾಯಿತು. ನ್ಯಾಯಮೂರ್ತಿ ಆರ್.ಸಿ. ಲಹೋಟಿಯವರು ತ್ರಿವಳಿ ತಲಾಕ್‍ಗೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನೊಂದು, 1995ರಲ್ಲಿ ನಡೆದ ಸರಳಾ ಮುದ್ಗಳ್ ಪ್ರಕರಣ. ಈ ಸಂದರ್ಭದಲ್ಲಂತೂ ನ್ಯಾಯಾಧೀಶರು ಒಂದು ಹೆಜ್ಜೆ ಮುಂದೆ ಹೋಗಿ, ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವನ್ನು ಒತ್ತಿ ಹೇಳಿದ್ದರು. ಆದರೆ 2015 ಅಕ್ಟೋಬರ್ 16ರಂದು ಸುಪ್ರೀಮ್ ಕೋರ್ಟಿನ ದ್ವಿಸದಸ್ಯ ಪೀಠ ತಳೆದ ನಿಲುವು ಇವೆಲ್ಲಕ್ಕಿಂತಲೂ ಹೆಚ್ಚು ಪ್ರಭಾವಶಾಲಿಯಾಗಿತ್ತು. ಪ್ರಕಾಶ್ ಮತ್ತು ಪುಲ್ವತಿ ಎಂಬವರ ನಡುವಿನ ಆಸ್ತಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರಾದ ಆದರ್ಶ್ ಕುಮಾರ್ ಗೋಯಲ್ ಮತ್ತು ಅನಿಲ್ ಆರ್. ದವೆಯವರು ತೀರ್ಪು ನೀಡುವ ಸಂದರ್ಭದಲ್ಲಿ ತಲಾಕ್‍ನ ಬಗ್ಗೆಯೂ ಪ್ರಸ್ತಾಪಿಸಿದರು. ಸಂವಿಧಾನದ 14, 15 ಮತ್ತು 21ನೇ ನಿರ್ದೇಶನಗಳನ್ನು ತ್ರಿವಳಿ ತಲಾಕ್ ಉಲ್ಲಂಘಿಸುತ್ತದೆ ಎಂದವರು ಹೇಳಿದ್ದು ಮಾತ್ರವಲ್ಲ, ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಬಹುದು ಹಾಗೂ ಈ ಶೋಷಣೆಯ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಮ್ ಕೋರ್ಟಿನಿಂದ ಪ್ರತ್ಯೇಕ ವಿಭಾಗವನ್ನು ರಚಿಸಬಹುದು ಎಂಬ ಸಲಹೆಯನ್ನೂ ನೀಡಿದರು. ಈ ಬೆಳವಣಿಗೆಯ 6 ತಿಂಗಳ ಬಳಿಕ 2016 ಎಪ್ರಿಲ್‍ನಲ್ಲಿ ಶಾಯರಾ ಬಾನು ಸುಪ್ರೀಮ್ ಕೋರ್ಟ್‍ನಲ್ಲಿ ಮೊಕದ್ದಮೆ ದಾಖಲಿಸಿದಳು. ಇದಕ್ಕೆ ಬೆಂಗಾವಲಾಗಿ ನಿಂತದ್ದು ಬಿಜೆಪಿಯ ಅಂಗಸಂಸ್ಥೆಯಾದ ರಾಷ್ಟ್ರೀಯ ಮುಸ್ಲಿಮ್ ಮಹಿಳಾ ಮಂಚ್. ಶಾಯರಾ ಬಾನು ಪ್ರಕರಣ ದಾಖಲಿಸಿದ ಬಳಿಕ ಇನ್ನೂ ನಾಲ್ವರು ಸಂತ್ರಸ್ತ ಮುಸ್ಲಿಮ್ ಮಹಿಳೆಯರು ಕೇಸು ದಾಖಲಿಸುವಂತೆ ಮಾಡಲು ಮುಸ್ಲಿಮ್ ರಾಷ್ಟ್ರೀಯ ಮಂಚ್ ಯಶಸ್ವಿಯಾಯಿತು. ಇಲ್ಲಿ ಬಾಹ್ಯನೋಟಕ್ಕೆ ಶಾಯರಾ ಬಾನು ಇದ್ದರೂ ಹಿನ್ನೆಲೆಯಲ್ಲಿದ್ದುದು ಬಿಜೆಪಿ ಮತ್ತು ಸಂಘಪರಿವಾರ. 2015 ಅಕ್ಟೋಬರ್‍ನಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನ ಅಧ್ಯಯನ ನಡೆಸಿದ ಬಿಜೆಪಿ ಮತ್ತು ಸಂಘಪರಿವಾರವು ಸಂತ್ರಸ್ತ ಮುಸ್ಲಿಮ್ ಮಹಿಳೆಯರನ್ನು ಹುಡುಕತೊಡಗಿತು. ರಾಷ್ಟ್ರೀಯ ಮುಸ್ಲಿಮ್ ಮಂಚ್‍ನ ಮೂಲಕ ನಡೆದ ಈ ಹುಡುಕಾಟದಲ್ಲಿ ಸಿಕ್ಕಿದ್ದೇ  ಶಾಯರಾ ಬಾನು. ನಿಜವಾಗಿ, ಬಿಜೆಪಿಯ ಒಳ ಉದ್ದೇಶ ಬೇರೆಯೇ ಇತ್ತು. ತ್ರಿವಳಿ ತಲಾಕ್‍ನ ವಿಚಾರಣೆಯ ವೇಳೆ 1931ರ ಶರಿಯಾ ಆ್ಯಕ್ಟ್ ನ ಮೇಲೆ ಸುಪ್ರೀಮ್ ಕೋರ್ಟು ಹಸ್ತಕ್ಷೇಪ ನಡೆಸಬಹುದು ಎಂದು ಅದು ಭಾವಿಸಿತ್ತು. ಸೆಕ್ಯುಲರ್ ಸಂವಿಧಾನವಿರುವ ಭಾರತಕ್ಕೆ ಸಮಾನ ನಾಗರಿಕ ಸಂಹಿತೆಯೇ ಸೂಕ್ತ ಎಂಬ ನಿಲುವನ್ನು ಮತ್ತು ವೈಯಕ್ತಿಕ ನಿಯಮಗಳನ್ನು ಅನೂರ್ಜಿತಗೊಳಿಸುವ ಇಚ್ಛೆಯನ್ನು ಅದು ಸುಪ್ರೀಮ್ ಕೋರ್ಟ್‍ನಿಂದ ನಿರೀಕ್ಷಿಸಿತ್ತು. 1995ರ ಸರಳಾ ಮುದ್ಗಳ್ ಪ್ರಕರಣದಲ್ಲಿ ನ್ಯಾಯಾಲಯದ ಪರಾಮರ್ಶೆಯೂ ಇಂಥದ್ದೊಂದು ನಿರೀಕ್ಷೆಗೆ ಇನ್ನೊಂದು ಕಾರಣವಾಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಾಧೀಶರಾದ ಅಬ್ದುಲ್ ನಝೀರ್, ಆರ್.ಎಫ್. ನಾರಿಮನ್, ಕುರಿಯನ್ ಜೋಸೆಫ್ ಮತ್ತು ಯು.ಯು. ಲಲಿತ್‍ರು ಈ ವಿಷಯವನ್ನು ಇದೀಗ ಹೊಸತೊಂದು ಮಜಲಿಗೆ ತಂದು ಮುಟ್ಟಿಸಿದ್ದಾರೆ. ಸಂವಿಧಾನದ 25ನೇ ಪರಿಚ್ಛೇದವು ಕೊಡಮಾಡಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ನಿಯಮಗಳ ಪಾಲನಾ ಸ್ವಾತಂತ್ರ್ಯದ ಬಗ್ಗೆ ಇವರು ವ್ಯಕ್ತಪಡಿಸಿರುವ ಅಭಿಪ್ರಾಯ ಐತಿಹಾಸಿಕವಾದುದು. ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಮತ್ತು 1937ರ ಶರೀಅತ್ ಕಾಯಿದೆಯನ್ನು ಅನೂರ್ಜಿತಗೊಳಿಸುವಂತೆ ಐದು ಧರ್ಮಗಳನ್ನು ಪ್ರತಿನಿಧಿಸುವ ಈ ಐವರು ನ್ಯಾಯಾಧೀಶರ ಪೀಠ ಆದೇಶಿಸುತ್ತದೆ ಎಂದು ಕಾದವರ ಪಾಲಿಗೆ ಈ ಪೀಠದ ತೀರ್ಪು ಬಲುದೊಡ್ಡ ಹಿನ್ನಡೆ. ನಿಜವಾಗಿ, ಈ ವರ್ತಮಾನ ಕಾಲದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯು ಅಲ್ಪಸಂಖ್ಯಾತ ಸಮುದಾಯದಲ್ಲಿ ಒಂದು ಬಗೆಯ ಅಸ್ತಿತ್ವ ನಾಶದ ಭೀತಿಯನ್ನು ಹುಟ್ಟು ಹಾಕಿತ್ತು. ಬಹುತ್ವವನ್ನು ವಿರೋಧಿಸುವ ಮಂದಿಯ ಕೈಗೆ ಅಧಿಕಾರ ಸಿಕ್ಕಿರುವುದರಿಂದ ಅಸ್ಮಿತೆ ಕಳಕೊಳ್ಳುವ ಭಯವು ಅಲ್ಪಸಂಖ್ಯಾತರು ಮತ್ತು ದಲಿತ-ದಮನಿತ ಸಮುದಾಯದಲ್ಲಿ ಸಹಜವಾಗಿ ಹರಳು ಗಟ್ಟಕೊಡಗಿತ್ತು. ಒಂದು ರೀತಿಯಲ್ಲಿ, ಶಾಯರಾ ಬಾನು ಈ ಭಯವನ್ನು ಹೋಗಲಾಡಿಸುವಲ್ಲಿ ಇದೀಗ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾಳೆ. ಮುಖ್ಯ ನ್ಯಾಯಮೂರ್ತಿ ಖೇಹರ್ ಅವರು ಇಡೀ ಪ್ರಕರಣಕ್ಕೆ ಕೊಟ್ಟಿರುವ ವ್ಯಾಖ್ಯಾನ ಅತಿ ಮಹತ್ವಪೂರ್ಣವಾದುದು. ‘ತ್ರಿವಳಿ ತಲಾಕ್ ಧಾರ್ಮಿಕ ಆಚರಣೆಯಾಗಿದೆ ಮತ್ತು ಅದು ಸಂವಿಧಾನದ 25ನೇ ಪರಿಚ್ಛೇದವು ನೀಡುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಯೊಳಗೆ ಬರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು. ಬಹುಮತದ ತೀರ್ಪಿನಲ್ಲಿ ತ್ರಿವಳಿ ತಲಾಕನ್ನು ಅಮಾನ್ಯ ಮಾಡಲಾಗಿದೆಯೇ ಹೊರತು ಶರೀಅತ್ ಕಾಯ್ದೆಯನ್ನಲ್ಲ. ವಿಶೇಷ ಏನೆಂದರೆ, 375 ಪುಟಗಳಷ್ಟು ದೀರ್ಘವಿರುವ ತೀರ್ಪಿನಲ್ಲಿ ಹನಫಿ ವಿದ್ವಾಂಸ ಅಶ್ರಫಲಿ ಥಾನವಿಯವರನ್ನು ಸ್ಮರಿಸಲಾಗಿದೆ. 1939ರಲ್ಲಿ ವಿವಾಹ ಕಾಯ್ದೆಯ ರಚನೆಯಲ್ಲಿ ಅವರ ಪಾತ್ರವನ್ನು ಗೌರವದಿಂದ ಕಾಣಲಾಗಿದೆ. ತ್ರಿವಳಿ ತಲಾಕ್ ಯಾಕೆ ಶರೀಅತ್‍ನ ಭಾಗವಲ್ಲ ಎಂಬುದಕ್ಕೆ ಸಾಕಷ್ಟು ಆಧಾರಗಳನ್ನು ಕೊಡಲಾಗಿದೆ. ಪವಿತ್ರ ಕುರ್‍ಆನಿನ ಸೂಕ್ತಗಳು, ಹದೀಸ್ ಮತ್ತು ಫಿಕ್ಹ್ ಗ್ರಂಥಗಳಿಂದ ಪುರಾವೆಗಳನ್ನು ನೀಡಲಾಗಿದೆ. ಈ ತೀರ್ಪಿನಲ್ಲಿ ಎಲ್ಲೂ ಸಂವಿಧಾನದ 25ನೇ ಪರಿಚ್ಛೇದ ಕೊಡಮಾಡುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅದರ ವ್ಯಾಪ್ತಿಯೊಳಗೆ ಬರುವ ವೈಯಕ್ತಿಕ ನಿಯಮಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ. ಇವುಗಳ ಮೇಲೆ ಹಸ್ತಕ್ಷೇಪವನ್ನೂ ನಡೆಸಲಾಗಿಲ್ಲ. ಶರೀಅತ್‍ನಲ್ಲಿ ಇಲ್ಲದ ಮತ್ತು ಅದರ ಉದ್ದೇಶವನ್ನು ಈಡೇರಿಸದ ತ್ರಿವಳಿ ತಲಾಕ್‍ನ ಬಗ್ಗೆ ಮಾತ್ರ ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಒಂದು ರೀತಿ ಯಲ್ಲಿ ಮುಸ್ಲಿಮ್ ಸಮುದಾಯವನ್ನು ನಿಜ ಶರೀಅತ್‍ನಡೆಗೆ ಸಾಗುವಂತೆ ಕರೆಕೊಟ್ಟಿರುವ ತೀರ್ಪು ಇದು. ಸಮಾನ ನಾಗರಿಕ ಸಂಹಿತೆಯ ಕಡೆಗೆ ಗಮನ ಹರಿಸುವಂತೆ ಕೋರ್ಟ್ ಸೂಚಿಸಬಹುದು ಎಂದು ನಿರೀಕ್ಷಿಸಿದವರ ಮಟ್ಟಿಗೆ ಇದು ಬಲು ದೊಡ್ಡ ಸೋಲು.
     ವಿಶೇಷ ಏನೆಂದರೆ, ತ್ರಿವಳಿ ತಲಾಕ್ ವಿಷಯದಲ್ಲಿ ಬಿಜೆಪಿ ಮುಂಚೂಣಿಯಲ್ಲಿ ನಿಂತು ಮಾತಾಡಿತು. ಕೇಂದ್ರ ಕಾನೂನು ಆಯೋಗದ ಮೂಲಕ ಅದು 16 ಪ್ರಶ್ನಾವಳಿಯನ್ನು ಬಿಡುಗಡೆ ಗೊಳಿಸಿತು. ಈ 16 ಪ್ರಶ್ನೆಗಳಲ್ಲಿ 80% ಪ್ರಶ್ನೆಗಳೂ ಮುಸ್ಲಿಮರಿಗೆ ಸಂಬಂಧಿಸಿದ್ದಾಗಿದ್ದುವು. 80% ಜನಸಂಖ್ಯೆಯಿರುವ ಹಿಂದೂ ಸಮುದಾಯದಲ್ಲಿ ಧಾರ್ಮಿಕವಾಗಿ 20% ಸಮಸ್ಯೆಗಳಿರುವಾಗ 16% ಇರುವ ಮುಸ್ಲಿಮ್ ಸಮುದಾಯದಲ್ಲಿ 80% ಧಾರ್ಮಿಕ ಅನಿಷ್ಠ ಸಂಪ್ರದಾಯಗಳಿವೆ ಎಂದು ಬಿಂಬಿಸುವುದಕ್ಕೂ ಅದು ಶ್ರಮಿಸಿತು. ಮುಸ್ಲಿಮ್ ಸಮುದಾಯದ ವಿಮೋಚಕನ ಪಾತ್ರದಲ್ಲಿ ತನ್ನನ್ನು ಪ್ರಸ್ತುತಪಡಿಸುವುದಕ್ಕೆ ಅದು ಮುಂದಾಯಿತು. ತ್ರಿವಳಿ ತಲಾಕ್ ಪ್ರಕರಣದಲ್ಲಿ ಉದ್ದಕ್ಕೂ ಅದು ಮಾತಾಡಿದ್ದು ಇದೇ ಭಾಷೆಯಲ್ಲಿ. ಭಾರತಕ್ಕೆ ಬಂದ ಬ್ರಿಟಿಷರು ಈ ಹಿಂದೆ ಇದೇ ತಂತ್ರವನ್ನು ಅನುಸರಿಸಿದ್ದರು. ಅವರು ಸತಿ ಸಹಗಮನ ಪದ್ಧತಿಯ ವಿರುದ್ಧ ಕಾನೂನು ಜಾರಿಗೊಳಿಸಿದರು. ಅದು ಮಹಿಳಾ ಶೋಷಣೆಯ ವಿರುದ್ಧದ ನಡೆಯಾಗಿ ಅಂದು ವ್ಯಾಪಕ ಪ್ರಚಾರ ಪಡೆಯಿತು. ಇಲ್ಲೊಂದು ಕುತೂಹಲಕಾರಿ ವಿಷಯವಿದೆ. ಮಹಿಳೆಯರನ್ನು ಶೋಷಿಸುತ್ತಿದ್ದವರು ಯಾರೆಂದರೆ, ಹಿಂದೂ ಪುರುಷರು. ಶೋಷಣೆಗೆ ಒಳಗಾಗುತ್ತಿರುವವರಾದರೋ ಹಿಂದೂ ಮಹಿಳೆಯರು. ಹಿಂದೂ ಪುರುಷರ ಶೋಷಣೆಯಿಂದ ಹಿಂದೂ ಮಹಿಳೆಯರನ್ನು ಬ್ರಿಟಿಷರು ಪಾರು ಮಾಡಿದರು ಎಂಬ ಸಂದೇಶ ವನ್ನು ಸಮಾಜಕ್ಕೆ ತಲುಪಿಸುವಲ್ಲಿ ‘ಸತಿ ನಿಷೇಧ ಕಾನೂನು’ ಯಶಸ್ವಿಯಾಯಿತು. ಇದನ್ನೇ ಖ್ಯಾತ ಮಹಿಳಾವಾದಿ ಲೇಖಕಿ ಕಲ್ಕತ್ತಾದ ಗಾಯತ್ರಿ ಚಕ್ರವರ್ತಿ ಪ್ರಶ್ನಿಸಿದ್ದರು. ‘ಕಂದು ಬಣ್ಣದ ಪುರುಷರಿಂದ ಕಂದು ಬಣ್ಣದ ಮಹಿಳೆಯರನ್ನು ಬಿಳಿಯ ಪುರುಷರು ರಕ್ಷಿಸುತ್ತಿದ್ದಾರೆ’ ಎಂದು ತನ್ನ Can the subaltern speak ಎಂಬ ಕೃತಿಯಲ್ಲಿ ವಿಶ್ಲೇಷಿಸಿದ್ದರು. ಅದರರ್ಥ ಕಾನೂನು ತಪ್ಪು ಎಂದಲ್ಲ. ಅದನ್ನು ರಚಿಸಿದವರು ಆಳದಲ್ಲಿ ಯಾವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ಚರ್ಚೆಗೊಡ್ಡುವುದಾಗಿತ್ತು. ಬ್ರಿಟಿಷರ ಬಗ್ಗೆ ಹಿಂದೂ ಸಮುದಾಯದ ಮಹಿಳೆಯರಲ್ಲಿ ಒಲವು ಮೂಡಿಸುವ ಮತ್ತು ವಿಮೋಚಕರಂತೆ ಭಾವಿಸುವುದಕ್ಕೆ ಪ್ರೇರೇಪಿಸುವ ನಡೆ ಅದಾಗಿತ್ತು ಎಂಬುದು ಗಾಯತ್ರಿ ಚಕ್ರವರ್ತಿಯವರ ನಿಲುವಾಗಿತ್ತು. ಸದ್ಯ ತ್ರಿವಳಿ ತಲಾಕ್‍ನ ವಿಷಯದಲ್ಲಿ ಬಿಜೆಪಿಯ ಹಾವ-ಭಾವ, ದೇಹ ಭಾಷೆ, ಹೇಳಿಕೆಗಳಲ್ಲಿ ಇವೇ ಅಂಶಗಳು ಗೋಚರಿಸುತ್ತಿವೆ. ‘ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕಲ್ಲ’ ಎಂಬ ಬಿಜೆಪಿಯ ವಾದವನ್ನು ತಿರಸ್ಕರಿಸಿದ ಸುಪ್ರೀಮ್ ಕೋರ್ಟ್‍ನ ಮಹತ್ವಪೂರ್ಣ ತೀರ್ಪು ಬಂದು 3 ದಿನಗಳಾದರೂ ಈವರೆಗೂ (ಈ ಲೇಖನ ಬರೆದ ದಿನದ ವರೆಗೆ) ಪ್ರತಿಕ್ರಿಯಿಸದ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್ ತೀರ್ಪಿಗೆ ಅದೇ ದಿನ ‘Judgement of the Hon ble SC on Triple Talaq is historic. It grants equality to Muslim women and is a powerful measure for women empowerment ’ ಎಂದು ಟ್ವೀಟ್ ಮಾಡಿದುದರ ಅರ್ಥ ಏನು? ನಿಜಕ್ಕೂ ಮುಸ್ಲಿಮ್ ಮಹಿಳೆಯರು ಶೋಷಣೆಯಿಂದ ಮುಕ್ತವಾಗುವುದು ಮತ್ತು ಸಬಲಗೊಳ್ಳುವುದು ಮೋದಿಯವರ ಇಚ್ಛೆಯೇ ಅಥವಾ ಕಂದುಬಣ್ಣದ ಮುಸ್ಲಿಮ್ ಪುರುಷರಿಂದ ಕಂದು ಬಣ್ಣದ ಮುಸ್ಲಿಮ್ ಮಹಿಳೆಯರನ್ನು ರಕ್ಷಿಸಿದ ವಿಮೋಚಕನ ಪಾತ್ರಧಾರಿಯಾಗುವುದು ಅವರ ಉದ್ದೇಶವೇ? ಒಂದು ವೇಳೆ ಈ ಟ್ವೀಟ್ ಪ್ರಾಮಾಣಿಕವೇ ಆಗಿರುತ್ತಿದ್ದರೆ, ಅವರು ಮಾತಾಡಬೇಕೆಂದು ಮುಸ್ಲಿಮ್ ಸಮುದಾಯದ ಮಹಿಳೆಯರು ಬಯಸಿರುವ ಅದೆಷ್ಟೋ ಸಂದರ್ಭಗಳಲ್ಲಿ ಅವರೇಕೆ ಮೌನವಾಗಿದ್ದರು? ಶೋಷಣೆ ಎಂಬುದು ತ್ರಿವಳಿ ತಲಾಕ್‍ಗೆ ಸಂಬಂಧಿಸಿದ್ದು ಮಾತ್ರ ಅಲ್ಲವಲ್ಲ. ಇದೇ ಮುಸ್ಲಿಮ್ ಸಮುದಾಯದ ಸಾವಿರಾರು ಮಹಿಳೆಯರು ಅತ್ಯಾಚಾರ, ಹತ್ಯೆ, ಹಲ್ಲೆ, ಕ್ರೌರ್ಯಕ್ಕೆ ತುತ್ತಾದಾಗ ಮಾತಾಡಲೇಬೇಕಿದ್ದ ನರೇಂದ್ರ ಮೋದಿಯವರು ಮೌನವಾಗಿದ್ದರಲ್ಲ, ಯಾಕೆ? ಬಿಲ್ಕೀಸ್ ಬಾನು, ಝಕಿಯಾ ಜಾಫ್ರಿ ಮತ್ತು 2002ರ ಗುಜರಾತ್ ಹತ್ಯಾಕಾಂಡದ ನೂರಾರು ಸಂತ್ರಸ್ತೆಯರ ಬಗ್ಗೆ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರ ನಿಲುವು ಏನು? ಶಾಯರಾ ಬಾನುಗೆ ಬೆಂಗಾವಲಾಗಿ ನಿಂತಂತೆ ಬಿಲ್ಕೀಸ್ ಬಾನುಗೆ ಮತ್ತು ಝಕಿಯಾ ಜಾಫ್ರಿಗೆ ರಾಷ್ಟ್ರೀಯ ಮುಸ್ಲಿಮ್ ಮಹಿಳಾ ಮಂಚ್ ಬೆಂಗಾವಲಾಗಿ ನಿಲ್ಲಬಹುದಿತ್ತಲ್ಲವೇ? ಬಿಲ್ಕೀಸ್ ಬಾನು ಜೀವಭಯದಿಂದ ಪದೇ ಪದೇ ವಾಸ ಬದಲಿಸದಂತೆ ಕಾವಲು ನಿಲ್ಲಬಹುದಿತ್ತಲ್ಲವೇ? ಗುಜರಾತ್ ಹತ್ಯಾಕಾಂಡದ ಸಂತ್ರಸ್ತರು ವಾಸ ಮಾಡುತ್ತಿರುವ ನಿರಾಶ್ರಿತ ಶಿಬಿರಗಳನ್ನು ‘ಮಕ್ಕಳನ್ನು ಹುಟ್ಟಿಸುವ ಕಾರ್ಖಾನೆಗಳು’ ಎಂದವರು ಮತ್ತು ‘ಹಮ್ ಪಾಂಚ್  ಹಮಾರೆ ಪಚ್ಚೀಸ್’ ಎಂದು ತಮಾಷೆ ಮಾಡಿದವರು ಇವತ್ತು ತ್ರಿವಳಿ ತಲಾಕ್ ಕುರಿತಾದ ತೀರ್ಪನ್ನು ಐತಿಹಾಸಿಕವೆಂದು ಬಣ್ಣಿಸುವುದು ಮತ್ತು ಮುಸ್ಲಿಮ್ ಮಹಿಳಾ ಸಬಲೀಕರಣದ ಭಾಗವಾಗಿ ಕಾಣುವುದು ಯಾವ ಬಗೆಯ ಕಾಳಜಿ? ಗುಜರಾತ್, ಭಾಗಲ್ಪುರ, ಮುಝಫ್ಫರ್ ನಗರ್ ಮತ್ತಿತರ ಕಡೆ ಅತ್ಯಂತ ಯೋಜಿತವಾಗಿ ಮುಸ್ಲಿಮ್ ಮಹಿಳೆಯರ ಮಾನಭಂಗ, ಹತ್ಯೆ, ಶೋಷಣೆ ನಡೆಸಿದವರಿಗೂ ಬಿಜೆಪಿಗೂ ನಡುವೆ ಇರುವ ನಂಟಿನ ಬಗ್ಗೆ ಟ್ವೀಟ್ ಬಿಡಿ ಕನಿಷ್ಠ ಪಶ್ಚಾತ್ತಾಪ ಭಾವವನ್ನಾದರೂ ಪ್ರಧಾನಿಯವರು ಪ್ರಕಟಿಸಿರುವರೇ?
ಈಗಿನ ಬಿಜೆಪಿಯ ವಿಚಾರಧಾರೆಯನ್ನು ಪ್ರತಿನಿಧಿಸುವ ವರ್ಗವು 1940-50ರಲ್ಲಿ ಹಿಂದೂ ಕೋಡ್ ಬಿಲ್ (HCB) ಅನ್ನು ಪ್ರಬಲವಾಗಿ ವಿರೋಧಿಸಿತ್ತು. ಹಿಂದೂ ಸಮುದಾಯಕ್ಕೆ ಸಂಬಂಧಿಸಿ ಕಾನೂನು ಸುಧಾರಣೆ ಮಾಡುವುದನ್ನು ಗೋಲ್ವಾಲ್ಕರ್, ಹಿಂದೂ ಮಹಾಸಭಾ, ಭಾರತೀಯ ಜನಸಂಘ, ರಾಮರಾಜ್ಯ ಪರಿಷತ್ ಮತ್ತು ಈ ವಿಚಾರಧಾರೆಯನ್ನು ಪ್ರತಿನಿಧಿಸುವ ಮಂದಿ ಪಾರ್ಲಿಮೆಂಟ್‍ನಲ್ಲಿ ವಿರೋಧಿಸಿದ್ದರು. ಹಿಂದೂ ಲಾ ಸಮಿತಿಯ ಸಲಹೆಗಳ ಬಗ್ಗೆ ಅಖಿಲ ಭಾರತ ಹಿಂದೂ ಮಹಾಸಭಾದ ನಾಯಕರಾದ ಎಸ್.ಸಿ. ಚಟರ್ಜಿ ಮತ್ತು ಅಖಿಲ ಭಾರತ ಹಿಂದೂ ಮಹಿಳಾ ಸಭಾದ ಪ್ರಧಾನ ಕಾರ್ಯದರ್ಶಿ ಜಾನಕಿ ಭಾೈ ಜೋಶಿಯವರು ಗವರ್ನರ್ ಜನರಲ್ ಆಗಿದ್ದ ಲಿನ್‍ಲಿತ್‍ಗೋ ಮತ್ತು ವೈಸ್‍ರಾಯ್ ಆಗಿದ್ದ ವಾವೆಲ್‍ಗೆ ಪತ್ರ ಬರೆದಿದ್ದರು. 1949-50ರಲ್ಲಿ ಅಖಿಲ ಭಾರತ ಹಿಂದೂ ಮಹಿಳಾ ಸಭಾದ ಸದಸ್ಯೆಯರು ಪ್ರಸ್ತಾವಿತ ಹಿಂದೂ ಕೋಡ್ ಬಿಲ್ ವಿರುದ್ಧ ಚಟರ್ಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಅಂದಹಾಗೆ,
ಮುಸ್ಲಿಮ್ ಪುರುಷರ ಶೋಷಣೆಯಿಂದ ಮುಸ್ಲಿಮ್ ಮಹಿಳೆಯರನ್ನು ರಕ್ಷಿಸಿದ ಭಾವದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರಿಗೆ ಇವೆಲ್ಲ ಗೊತ್ತಿರಬಹುದೆಂದು ನಂಬುತ್ತೇನೆ. 

Thursday, August 31, 2017

ಉಸ್ತಾದ್, ಪ್ರಿನ್ಸ್, ಜೈ, ಬಿಟ್ಟು ಮತ್ತು ...

       ಹುಲಿಗಳಲ್ಲಿ ಸೆಲೆಬ್ರಿಟಿ ಹುಲಿಗಳು ಯಾಕಿವೆ? ಯಾವ ಕಾರಣಕ್ಕಾಗಿ ಒಂದು ಹುಲಿ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುತ್ತದೆ? ಅದಕ್ಕೆ ಮಾನದಂಡಗಳಿವೆಯೇ? ಅದು ಪ್ರತಿಭೆ ಆಧಾರಿತವೇ, ಆಕಾರ ಆಧಾರಿತವೇ ಅಥವಾ ಇನ್ನಾವುದಾದರೂ ವಿಶೇಷತೆ ಒಂದು ಹುಲಿಯನ್ನು ಸೆಲೆಬ್ರಿಟಿಗೊಳಿಸುವುದರಲ್ಲಿದೆಯೇ? ರಾಜಸ್ಥಾನದ ರಾಂತಂಬೋರೆ ರಾಷ್ಟ್ರೀಯ ರಕ್ಷಿತಾರಣ್ಯದ ಉಸ್ತಾದ್ ಅಥವಾ ಮಚಲಿ ಎಂಬ ಹುಲಿ, ಕರ್ನಾಟಕದ ಬಂಡೀಪುರ ರಾಷ್ಟ್ರೀಯ ರಕ್ಷಿತಾರಣ್ಯದ ಪ್ರಿನ್ಸ್ ಎಂಬ ಹುಲಿ, ಮಹಾರಾಷ್ಟ್ರದ ಚಂದ್ರಾಪುರದ ರಕ್ಷಿತಾರಣ್ಯದ ಜೈ ಮತ್ತು ಬಿಟ್ಟು ಎಂಬ ಹುಲಿಗಳು ಇಂಥ ಪ್ರಶ್ನೆಗಳನ್ನು ಆಗಾಗ ಹುಟ್ಟು ಹಾಕುತ್ತಲೇ ಇರುತ್ತವೆ. ಈ ಹಿಂದೆ ಒಮ್ಮೆ ಉಸ್ತಾದ್ ಹುಲಿಯು ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾಗಿತ್ತು. ಚಂದ್ರಾಪುರ್ ಅರಣ್ಯದಿಂದ ಜೈ ಹುಲಿಯು ಕಾಣೆಯಾಗಿದೆ ಎಂಬ ಸುದ್ದಿಯೂ ಮಾಧ್ಯಮಗಳ ಮುಖಪುಟದಲ್ಲಿ ಜಾಗ ಪಡೆಯುವಷ್ಟು ಪ್ರಾಮುಖ್ಯತೆಯನ್ನು ಪಡೆಯಿತು. ಈ ದೇಶದ ರಕ್ಷಿತಾರಣ್ಯಗಳಲ್ಲಿ ನೂರಾರು ಹುಲಿಗಳಿವೆ. ಈ ಹುಲಿಗಳ ನಡುವೆ ಪ್ರಣಯ, ಜಗಳ, ಸಾವು, ಅನಾರೋಗ್ಯ.. ಎಲ್ಲವೂ ನಡೆಯುತ್ತಲೂ ಇರುತ್ತವೆ. ಆದರೆ ಇವುಗಳಲ್ಲಿ ನಾಲ್ಕೈದು ಹುಲಿಗಳನ್ನು ಆಯ್ದು, ಅವುಗಳಿಗೆ ಪ್ರತ್ಯೇಕ ಹೆಸರು ಕೊಟ್ಟು, ಅವುಗಳ ಬಗ್ಗೆ ವಿಶೇಷ ಗಮನ ಹರಿಯುವಂತೆ ಮಾಡುವುದು ಯಾತಕ್ಕಾಗಿ? ಅದರ ಉz್ದÉೀಶವೇನು? ಬಹುಶಃ, ಜನರನ್ನು ಈ ರಕ್ಷಿತಾರಣ್ಯಗಳ ಕಡೆಗೆ ಆಕರ್ಷಿಸಲು ಮತ್ತು ಅವರಲ್ಲಿ ಈ ಹುಲಿಗಳ ಬಗ್ಗೆ ಕುತೂಹಲವನ್ನು ಹುಟ್ಟಿಸುವುದರ ಹೊರತಾಗಿ ಇದಕ್ಕೆ ಬೇರೆ ಕಾರಣಗಳಿರುವ ಸಾಧ್ಯತೆಯಿಲ್ಲ. ಬಹುಶಃ, ಉಸ್ತಾದ್ ನಂಥ ಹುಲಿಗಳು ನಮ್ಮ ದೇಶದ ರಕ್ಷಿತಾರಣ್ಯಗಳಲ್ಲಿ ಅನೇಕ ಇರಬಹುದು ಮತ್ತು ಅವುಗಳಲ್ಲಿ ಉಸ್ತಾದ್‍ಗಿಂತಲೂ ಗಟ್ಟಿಮುಟ್ಟಾದ ಹಾಗೂ ಚೆಲುವಾದ ಹುಲಿಗಳೂ ಇರಬಹುದು. ಮುಂದೊಂದು ದಿನ ಇವುಗಳಲ್ಲಿ ಒಂದು ಹುಲಿಗೆ ಕುತೂಹಲಕಾರಿ ಕತೆಯೊಂದಿಗೆ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುವ ಭಾಗ್ಯವೂ ಸಿಗಬಹುದು. ಆದಾಯ ಹೆಚ್ಚಿಸಿಕೊಳ್ಳುವ ತಂತ್ರ ಇದು. ಜನರನ್ನು ಸೆಳೆಯುವ ಬುದ್ಧಿವಂತಿಕೆಯೂ ಇದರ ಹಿಂದಿದೆ. ಹಾಗಂತ, ಒಂದು ಸರಕಾರವೇ ಇಂಥ ತಂತ್ರವನ್ನು ತನ್ನ ಕಾರ್ಯನೀತಿಯಾಗಿ ಅಳ ವಡಿಸಿಕೊಂಡರೆ ಹೇಗಾಗಬಹುದು? ಕಳೆದ ಮೂರು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಡವಳಿಕೆಗಳು, ವಿದೇಶಾಂಗ ನೀತಿಗಳು, ಉಡುಗೊರೆಗಳು ಮತ್ತು ಕಾರ್ಯಕ್ರಮ ಆಯೋಜನೆಗಳು ಹುಲಿಗಳ ಸೆಲೆಬ್ರಿಟಿ ತಂತ್ರವನ್ನು ನೆನಪಿಸುವಂತಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೇಪಾಳಕ್ಕೆ ಭೇಟಿ ಕೊಟ್ಟರು. ಪ್ರಸಿದ್ಧ ಪಶುಪತಿನಾಥ ದೇವಾಲಯವನ್ನು ಸಂದರ್ಶಿಸಿದರು. ಈ ಸಂದರ್ಶನದ ವೇಳೆ ನರೇಂದ್ರ ಮೋದಿಯವರು ಕೇಸರಿ ಶಾಲು, ರುದ್ರಾಕ್ಷಿ ಮಾಲೆ ಮತ್ತು ಹಣೆಗೆ ಗಂಧವನ್ನು ಹಚ್ಚಿಕೊಂಡಿದ್ದರು. ಇದರಲ್ಲಿ ತಪ್ಪು ಖಂಡಿತ ಇಲ್ಲ. ಇದು ಅವರವರ ಸ್ವಾತಂತ್ರ್ಯ. ಇದೇ ವೇಳೆ, ಸೆಕ್ಯುಲರ್ ಭಾರತದ ಪ್ರಧಾನಿಯೋರ್ವರು ಭಾರತದ ಕೆಲವು ನಿರ್ದಿಷ್ಟ ಸಂಘಟನೆಗಳಲ್ಲಿ ಮಾತ್ರ ಕಡ್ಡಾಯದಂತೆ ಪಾಲಿಸಲಾಗುತ್ತಿರುವ ‘ಕೇಸರಿ ಶಾಲು, ಗಂಧ ಮತ್ತು ರುದ್ರಾಕ್ಷಿ ಮಾಲೆ’ ಧಾರಣೆಯಲ್ಲಿ ಕಾಣಿಸಿಕೊಳ್ಳುವುದನ್ನು ತೀರಾ ಸಹಜವಾಗಿ ಕಾಣಬಹುದೇ? ಅದರ ಹಿಂದೆ ಅಸಹಜವಾದುದು ಇರಲಾರದೇ? ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸುತ್ತಿರುವ ಅದೇ ಧರ್ಮವನ್ನು ಅನುಸರಿಸುವವರು ಕಾಂಗ್ರೆಸ್, ಕಮ್ಯುನಿಸ್ಟ್, ಆಪ್, ತೃಣಮೂಲ, ಜನತಾದಳಗಳು, ತೆಲುಗುದೇಶಂ, ಟಿ.ಆರ್.ಎಸ್., ಸಮಾಜವಾದಿ.. ಸಹಿತ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರೆಲ್ಲ ದೇವಾಲಯ ಪ್ರವೇಶದ ವೇಳೆ ಇದೇ ಉಡುಪು ನೀತಿಯನ್ನು ಅನುಸರಿಸುವುದು ಕಡಿಮೆ. ಮೋದಿಯವರ ಉಡುಗೆ ಪ್ರಾಮುಖ್ಯತೆ ಪಡೆಯುವುದೇ ಇಲ್ಲಿ. ಅವರು ಸೆಕ್ಯುಲರ್ ಭಾರತದಲ್ಲಿರುವ ನಿರ್ದಿಷ್ಟ ಧಾರ್ಮಿಕ ಸಂಘ ಟನೆಗಳನ್ನು ತನ್ನ ಉಡುಗೆಯಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ ಆ ಸಂಘಟನೆಗಳನ್ನು ಮತ್ತು ಅವು ಪ್ರತಿಪಾದಿಸುವ ವಿಚಾರ ಧಾರೆಗಳನ್ನು ನೇಪಾಳಿಗರಲ್ಲಿ ಜನಪ್ರಿಯಗೊಳಿಸುವ ಉದ್ದೇಶ ಇದೆ. ನಿರ್ದಿಷ್ಟ ವಿಚಾರಧಾರೆಗೆ ಓರ್ವ ಪ್ರಧಾನಿ ರಾಯಭಾರಿ ಯಾಗುವ ತಂತ್ರ ಇದು. ಸೆಕ್ಯುಲರ್ ಸಂವಿಧಾನವನ್ನು ತನ್ನ ನಡೆ-ನುಡಿಯಲ್ಲಿ ಪ್ರತಿನಿಧಿಸಬೇಕಾದ ಪ್ರಧಾನಿಯೋರ್ವರು ಆ ಸಂವಿಧಾನಕ್ಕೆ ತೀರಾ ವಿರುದ್ಧವಾದ ವಿಚಾರಧಾರೆಯನ್ನು ಹೇಗೆ ನಾಜೂಕಾಗಿ ಪ್ರಚಾರ ಮಾಡಿದರು ಅನ್ನುವುದಕ್ಕೆ ಸಾಕ್ಷಿ ಇದು. ಇದಕ್ಕೆ ಇನ್ನೊಂದು ಉದಾಹರಣೆ ಅಬುಧಾಬಿ ಭೇಟಿ. 2015ರಲ್ಲಿ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಯುಎಇ ಸರಕಾರವು ಮಹತ್ವದ ಘೋಷಣೆಯೊಂದನ್ನು ಹೊರಡಿಸಿತು. ಅಬುಧಾಬಿಯಲ್ಲಿ ದೇವಾಲಯ ವೊಂದನ್ನು ನಿರ್ಮಿಸುವುದಕ್ಕೆ ಜಾಗ  ಮಂಜೂರು ಮಾಡಲಾಗಿರುವ ಘೋಷಣೆ ಅದು. ಈ ಘೋಷಣೆಗೆ ಕೇಂದ್ರ ವಿದೇಶಾಂಗ ಸಚಿವಾಲಯವು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ:
“ಭಾರತೀಯ ಸಮುದಾಯದ ದೀರ್ಘಕಾಲದ ಕಾಯುವಿಕೆ ಕೊನೆಗೊಂಡಿದೆ. ಪ್ರಧಾನಿ ಮೋದಿಯವರ ಯುಎಇ ಭೇಟಿಯ ವೇಳೆ ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಲು ಯುಎಇ ಸರಕಾರ ನಿರ್ಧರಿಸಿದೆ.”
ಪ್ರಧಾನಿ ನರೇಂದ್ರ ಮೋದಿಯವರು ಹೀಗೆ ಟ್ವೀಟ್ ಮಾಡಿದರು:
“ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಿದ ಯುಎಇ ಆಡಳಿತಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದು ಮಹತ್ದದ  ಹೆಜ್ಜೆ.”
      ನಿಜಕ್ಕೂ ಇದು ಮಹತ್ವದ ಹೆಜ್ಜೆಯೇ? ದೇವಾಲಯವನ್ನೋ ಮಸೀದಿಯನ್ನೋ ಅಥವಾ ಚರ್ಚನ್ನೋ ನಿರ್ಮಿಸಿ ಕೊಡುವುದು ಓರ್ವ ಪ್ರಧಾನಿಯ ವಿದೇಶ ಭೇಟಿಯ ಪ್ರಮುಖ ಗುರಿಯೇ? ಅಥವಾ ಒಂದು ಮುಸ್ಲಿಮ್ ರಾಷ್ಟ್ರದಲ್ಲೂ ಮಂದಿರ ನಿರ್ಮಿಸಿದ ವರ್ಚಸ್ಸನ್ನು ಪಡಕೊಳ್ಳುವ ತಂತ್ರದ ಭಾಗವೇ ಈ ಟ್ವೀಟ್? ನಿಜವಾಗಿ ಯಾವುದೇ ದೇಶದ ಆಡಳಿತ ಪ್ರಮುಖರೊಬ್ಬರು ಇನ್ನೊಂದು ದೇಶಕ್ಕೆ ಭೇಟಿ ಕೊಟ್ಟು ಅಲ್ಲಿ ಚರ್ಚನ್ನೋ ಮಸೀದಿ ಯನ್ನೋ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳು ವುದು ಭೇಟಿಯ ಪ್ರಮುಖ ಗುರಿಯಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಯುಎಇಯಲ್ಲಿ ಭಾರತೀಯ ವಲಸಿಗ ಕುಟುಂಬಗಳು ಧಾರಾಳ ಇವೆ. ಅವರಿಗೆ ಅವರದ್ದೇ  ಆದ ಸಾಕಷ್ಟು ಸಮಸ್ಯೆಗಳೂ ಇವೆ. ಉದ್ಯೋಗ ಭದ್ರತೆ ಮತ್ತು ಸುರಕ್ಷಿತತೆ ಇವುಗಳಲ್ಲಿ ಪ್ರಮುಖವಾದುದು. ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಮೂಲವಾಗಿರುವ ಇವರ ಬಗ್ಗೆ ಯಾವ ಮಹತ್ವಪೂರ್ಣ ಒಪ್ಪಂದವನ್ನೂ ಘೋಷಿಸದೆಯೇ ಮಂದಿರವನ್ನು ಸಾಧನೆಯಾಗಿ ಬಿಂಬಿಸಿಕೊಳ್ಳುವುದೆಂದರೇನು? ಒಂದು ವೇಳೆ ಮೋದಿಯವರ ಸ್ಥಾನದಲ್ಲಿ ಓರ್ವ ಮುಸ್ಲಿಮ್ ಇರುತ್ತಿದ್ದರೆ ಮತ್ತು ಅವರು ಜಪಾನಿಗೋ ನಾರ್ವೆಗೋ ಭೇಟಿ ನೀಡಿ ‘ಮಸೀದಿ ನಿರ್ಮಾಣ’ವನ್ನು ಭೇಟಿಯ ಪ್ರಮುಖ ಸಾಧನೆಯಾಗಿ ಟ್ವೀಟ್ ಮಾಡಿರುತ್ತಿದ್ದರೆ ಅದಕ್ಕೆ ಲಭ್ಯವಾಗುವ ಪ್ರತಿಕ್ರಿಯೆಗಳು ಹೇಗಿರುತ್ತಿತ್ತು? ಬಹುಶಃ, ಈ ದೇಶದಲ್ಲಿ ಮಂದಿರ ನಿರ್ಮಾಣದ ಗುರಿಯೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವೊಂದರ ಪ್ರತಿನಿಧಿಯಾದ ಮೋದಿಯವರು ಮುಸ್ಲಿಮ್ ರಾಷ್ಟ್ರದಲ್ಲೂ ಮಂದಿರ ನಿರ್ಮಿಸುವಷ್ಟು ಕಾಳಜಿ ಉಳ್ಳವರು ಎಂದು ಸಾರುವುದೇ ಈ ಟ್ವೀಟ್‍ನ ಉದ್ದೇಶ. ಆ ಮೂಲಕ ಬೆಂಬಲಿಗರಲ್ಲಿ ತನ್ನ ಇಮೇಜನ್ನು ಹೆಚ್ಚಿಸಿಕೊಳ್ಳುವ ಶ್ರಮವೂ ಇದರ ಹಿಂದಿದೆ.
ಯಾವುದೇ ರಾಷ್ಟ್ರದ ಆಡಳಿತ ಪ್ರಮುಖರ ವಿದೇಶ ಭೇಟಿ ಮಹತ್ವಪೂರ್ಣವಾಗಬೇಕಾದುದು ಅಲ್ಲಿ ನಡೆಯುವ ಒಪ್ಪಂದಗಳು ಮತ್ತು ಹೇಳಿಕೆಗಳಿಗಾಗಿ ಮಾತ್ರ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಸೌದಿ ಭೇಟಿ ಇದಕ್ಕೊಂದು ಉದಾಹರಣೆ. ಅವರ ಭೇಟಿಯ ಬಳಿಕ ನಾಲ್ಕು ಗಲ್ಫ್ ರಾಷ್ಟ್ರಗಳು ತಮ್ಮ ಬಹುಕಾಲದ ಮಿತ್ರ ಮತ್ತು ತಮ್ಮ ಗಡಿಯನ್ನೇ ಹಂಚಿಕೊಳ್ಳುವ ಕತರ್ ಮೇಲೆ ದಿಗ್ಬಂಧನ ಹೇರಿದುವು. ಆ ದಿಗ್ಬಂಧನದ ಸರಿ-ತಪ್ಪುಗಳೇನೇ ಇರಲಿ, ಒಂದು ಭೇಟಿಯ ಸ್ಪಷ್ಟ ಫಲಿತಾಂಶವಾಗಿ ಆ ಬೆಳವಣಿಗೆಯನ್ನು ಎತ್ತಿಕೊಳ್ಳಬಹುದಾಗಿದೆ. ವಿಶೇಷ ಏನೆಂದರೆ, ಇವತ್ತು ಮೋದಿಯವರ ವಿದೇಶ ಭೇಟಿಯು ಫಲಿತಾಂಶದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆಯುವುದರ ಬದಲು ಅವರು ಧರಿಸಿದ ಉಡುಪು, ಆಲಿಂಗನ, ಉಡುಗೊರೆಗಳ ಕಾರಣಕ್ಕಾಗಿಯೇ ಚರ್ಚಿತವಾಗುತ್ತಿವೆ. ಅವರ ಜಪಾನ್ ಭೇಟಿಯ ವೇಳೆ ರಾಜ ಅಕಿಹಿಟೋ ಅವರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದುದನ್ನು ಭಾರತೀಯ ಮಾಧ್ಯಮಗಳು ವಿಶೇಷ ಕಾಳಜಿ ವಹಿಸಿ ಚರ್ಚಿಸಿದುವು. ಅಲ್ಲದೇ ಜಪಾನ್ ಪ್ರಧಾನಿ ಶಿನೊಝೊ ಅಬೆಯವರಿಗೂ ಭಗವದ್ಗೀತೆ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಉಡುಗೊರೆಯಾಗಿ ನೀಡಿದುದೂ ಚರ್ಚೆಗೊಳಗಾಯಿತು. ‘ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬೇಕು’ ಎಂದು 2014ರಲ್ಲಿ ಸುಶ್ಮಾ ಸ್ವರಾಜ್ ಆಗ್ರಹಿಸಿದುದೂ ಈ ಸಂದರ್ಭದಲ್ಲಿ ಪ್ರಚಾರ ಪಡೆಯಿತು. ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್‍ಗೂ ಪ್ರಧಾನಿ ಮೋದಿಯವರು ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು. ನಿಜವಾಗಿ, ಭಗವದ್ಗೀತೆ ಭಾರತದ ಸಂವಿಧಾನ ಅಲ್ಲ. ಹೀಗಿದ್ದೂ ಭಾರತದ ಪ್ರಧಾನಿಯೋರ್ವರು ಉಡುಗೊರೆಯಾಗಿ ಸಂವಿಧಾನವನ್ನೋ ಅಥವಾ ತಾಜ್‍ಮಹಲ್ ಮತ್ತಿತರ
ವಾಸ್ತುಶಿಲ್ಪಗಳ ಪ್ರತಿಕೃತಿಗಳನ್ನೋ ನೀಡುವುದರ ಬದಲು ಭಗವದ್ಗೀತೆಯನ್ನೇ ಉಡುಗೊರೆಯಾಗಿ ಆಯ್ದುಕೊಂಡದ್ದೇಕೆ? ಬಹುಶಃ, ಇದೊಂದು ಅಳೆದೂ ತೂಗಿ ಮಾಡಲಾದ ಆಯ್ಕೆ. ಸೆಕ್ಯುಲರ್ ಭಾರತದ ಪ್ರಧಾನಿಯಾಗಿದ್ದೂ ಮೋದಿಯವರು ಹೇಗೆ ಭಗವದ್ಗೀತೆಯನ್ನು ಪ್ರಚಾರಪಡಿಸುತ್ತಿದ್ದಾರೆ ಎಂಬುದನ್ನು ಅತ್ಯಂತ ಬುದ್ಧಿವಂತಿಕೆಯಿಂದ ಸಾರುವ ತಂತ್ರ ಇದು. ಮೋದಿಯವರ ಬೆಂಬಲಿಗರ ಬೆಂಬಲವನ್ನು ತಾಜಾ ಆಗಿ ಇಟ್ಟುಕೊಳ್ಳುವುದಕ್ಕೆ ಇದು ತೀರಾ ಅಗತ್ಯ. 2016ರಲ್ಲಿ ನರೇಂದ್ರ ಮೋದಿ ಸರಕಾರವು ಜಾರಿಗೆ ತಂದ ಪೌರತ್ವ ಕಾಯ್ದೆಯಲ್ಲೂ ಇದನ್ನು ಗುರುತಿಸಬಹುದು. ಅಫಘಾನ್, ಪಾಕ್ ಮತ್ತು ಬಾಂಗ್ಲಾ ದೇಶದಿಂದ ಭಾರತಕ್ಕೆ ವಲಸೆ ಬರುವ ಹಿಂದೂ, ಕ್ರೈಸ್ತ, ಸಿಕ್ಖ್, ಫಾರ್ಸಿಗಳನ್ನು ಕಾನೂನುಬಾಹಿರ ವಲಸಿಗರೆಂದು ಪರಿಗಣಿಸಲಾಗದು ಎಂದು ಈ ಕಾಯ್ದೆ ಹೇಳುತ್ತದೆ. ಆದರೆ ಈ ಪಟ್ಟಿಯಲ್ಲಿ ಮುಸ್ಲಿಮರ ಪ್ರಸ್ತಾಪವೇ ಇಲ್ಲ. ಅಂದರೆ, ಈ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಮುಸ್ಲಿಮ್ ವಲಸಿಗರನ್ನು ಕಾನೂನುಬಾಹಿರವಾಗಿಯೇ ಪರಿಗಣಿಸಲಾಗುತ್ತದೆ ಎಂದರ್ಥ. ನಿಜವಾಗಿ, ಭಾರತದ ಗಡಿಯಲ್ಲಿ ಅತ್ಯಂತ ಹೆಚ್ಚು ನಿರಾಶ್ರಿತರಾಗಿರುವವರೆಂದರೆ ಹಿಂದೂಗಳು ಮತ್ತು ಮುಸ್ಲಿಮರು. ಇಲ್ಲೂ ಮೋದಿಯವರ ಬೆಂಬಲಿಗ ವರ್ಗದ ‘ಮುಸ್ಲಿಮ್ ವಿರೋಧಿ’ ಭಾವನೆಯನ್ನು ತಣಿಸುವ ಶ್ರಮ ನಡೆದಿರುವುದು ಅತ್ಯಂತ ಸ್ಪಷ್ಟ. ತನ್ನ ಬೆಂಬಲಿಗರ ಬೆಂಬಲವನ್ನು ತಾಜಾ ಆಗಿ ಇಟ್ಟುಕೊಳ್ಳುವುದಕ್ಕೆ ಮಂದಿರ, ಭಗವದ್ಗೀತೆ, ದೇವಾಲಯ ಭೇಟಿ, ಮುಸ್ಲಿಮ್ ವಿರೋಧಿ ನೀತಿಗಳಿಂದ ಸಾಧ್ಯವಿದೆ ಎಂದು ಮೋದಿ ಮತ್ತು ಅವರ ಚಿಂತಕ ಛಾವಡಿ ತಿಳಿದುಕೊಂಡಿದೆ. ಒಂದು ರೀತಿಯಲ್ಲಿ, ಇಂಥ ನಿಲುವುಗಳೇ ಈ ಸರಕಾರದ ವರ್ಚಸ್ಸಿನ ಉಳಿವಿನಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ. ಉಸ್ತಾದ್, ಪ್ರಿನ್ಸ್, ಜೈ ಮತ್ತು ಬಿಟ್ಟು ಹುಲಿಗಳಂತೆ ಈ ಸರಕಾರದ ಪಾಲಿಗೆ ಈ ವಿಷಯಗಳೇ ಸೆಲೆಬ್ರಿಟಿಗಳು. ಇವನ್ನು ಆಗಾಗ ಚರ್ಚೆಗೊಳಗಾಗುವಂತೆ ನೋಡಿಕೊಂಡು ಸರಕಾರದ ವರ್ಚಸ್ಸನ್ನು ತಾಜಾ ಆಗಿ ಉಳಿಸಿಕೊಳ್ಳುವ ಶ್ರಮ ನಡೆಯುತ್ತಿದೆ.

Saturday, August 5, 2017

ಪಾತ್ರಕ್ಕೆ ತಕ್ಕ ಉಡುಪು ಯಾಕೆ ಹೆಣ್ಣಿಗೆ ಮಾತ್ರ?

      ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ, ಪ್ರತಿಭೆ.. ಮುಂತಾದು ವುಗಳನ್ನು ಅತ್ಯಂತ ಹೆಚ್ಚು ಚರ್ಚೆಗೆ ಎತ್ತಿಕೊಳ್ಳುವುದು ಸಿನಿಮಾ ಕ್ಷೇತ್ರ. ಅಲ್ಲಿಂದ ಬಿಡುಗಡೆಯಾಗುವ ಸಿನಿಮಾಗಳಲ್ಲಿ ಪುರುಷರನ್ನು ಸದೆಬಡಿಯುವ ಪಾತ್ರದಲ್ಲಿ ಮಹಿಳೆ ಮಿಂಚುತ್ತಾಳೆ. ಪುರುಷ ನಿಗಿಂತಲೂ ಹೆಚ್ಚು ಐಕ್ಯೂ ಇರುವವಳಾಗಿ ಗುರುತಿಸಿಕೊಳ್ಳುತ್ತಾಳೆ. ಅದ್ಭುತ ತಾಯಿಯಾಗಿ, ಪ್ರೇಮಿಯಾಗಿ, ಸಹನಾಮಯಿಯಾಗಿ, ಬುದ್ಧಿವಂತಳಾಗಿ, ಪ್ರತಿಭಟನಾ ಗುಣವುಳ್ಳವಳಾಗಿ, ಸಮಾನತೆಯ ಪ್ರತಿಪಾದಕಳಾಗಿ.. ಹೀಗೆ ಎಲ್ಲ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಾಳೆ. ಇದೊಂದು ಮುಖ. ಈ ಸುಂದರ ಮುಖದಿಂದ ಆಕರ್ಷಿತರಾಗಿ ಧಾರಾಳ ಮಹಿಳೆಯರು ಈ ಕ್ಷೇತ್ರದಲ್ಲಿ ತಮ್ಮನ್ನು ಪರೀಕ್ಷೆಗೊಡ್ಡಲು ಸಿದ್ಧರಾಗುತ್ತಿದ್ದಾರೆ. ಅಲ್ಲಿ ಸಮಾನತೆಯಿದೆ, ಲಿಂಗ ಬೇಧ ಇಲ್ಲ, ಸುರಕ್ಷಿತತೆಯಿದೆ.. ಇತ್ಯಾದಿ ಇತ್ಯಾದಿ ನಂಬಿಕೆಗಳೂ ಅವರಲ್ಲಿವೆ. ಅದೇ ವೇಳೆ, ಇದಕ್ಕೆ ಇನ್ನೊಂದು ಮುಖವೂ ಇದೆ. ಕೇರಳದ ನಟಿಯರು ಕಳೆದವಾರ ಈ ಕರಾಳ ಮುಖವನ್ನು ಸಾರ್ವಜನಿಕರ ಮುಂದೆ ತೆರೆದಿಟ್ಟರು. Womens collective in Cinema ಎಂಬ ಹೆಸರಲ್ಲಿ ಒಂದು ನಿಯೋಗವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿಗೆ ಒಯ್ದರು. ಮಂಜು ವಾರಿಯರ್, ಬೀನಾ ಮೋಳ್, ರೀಮಾ ಕಲ್ಲಿಂಗಲ್, ಪಾರ್ವತಿ, ಅಂಜಲಿ ಮೆನನ್ ಮುಂತಾದ ಪ್ರಮುಖ ನಟಿಯರು ಆ ನಿಯೋಗದಲ್ಲಿದ್ದರು. ಅವರ ಬೇಡಿಕೆ ಏನೆಂದರೆ, ಸಿನಿಮಾ ಇಂಡಸ್ಟ್ರಿಯಲ್ಲಿ ತಮಗೆ ಸುರಕ್ಷಿತತೆಯನ್ನು ಒದಗಿಸ ಬೇಕು ಎಂಬುದು. ಎಲ್ಲಿ ಮಹಿಳಾ ಸುರಕ್ಷಿತತೆಯ ಬಗ್ಗೆ ಸಾಲು ಸಾಲು ಸಿನಿಮಾಗಳು, ಡಯಲಾಗ್‍ಗಳು ಸೃಷ್ಟಿಯಾಗುತ್ತೋ ಅಲ್ಲೇ  ಮಹಿಳೆ ಅಸುರಕ್ಷಿತಳಾಗಿದ್ದಾಳೆ ಎಂಬುದು. ಅಷ್ಟಕ್ಕೂ, ಈ ಅಸುರಕ್ಷಿತತೆಯ ಭಯ ಇವರನ್ನು ಕಾಡುತ್ತಿರುವುದು ಪ್ರಾಣಿಗಳಿಂದಲ್ಲ, ಪುರುಷರಿಂದ. ಹೆಣ್ಣನ್ನು ಅತ್ಯಾಚಾರಿಗಳಿಂದ, ದರೋಡೆಕೋರರಿಂದ, ಚುಡಾವಣೆದಾರರಿಂದ, ಮಾನವ ಕಳ್ಳ ಸಾಗಾಟಗಾರರಿಂದ.. ಅಮೋಘವಾಗಿ ರಕ್ಷಿಸುವ ಪಾತ್ರದಲ್ಲಿ ಮಿಂಚುತ್ತಿರುವ ಹೀರೋ ಗಳಿಂದ. ಅಂಥ ಚಿತ್ರಕತೆಯನ್ನು ರಚಿಸಿದ ಪುರುಷನಿಂದ. ನಿರ್ದೇಶಕನಿಂದ. ಸಹನಟರಿಂದ. ತಂತ್ರಜ್ಞರಿಂದ. ಈ ಬೆಳವಣಿಗೆ ಗಿಂತ ಕೆಲವು ಸಮಯ ಮೊದಲು ತಮಿಳುನಾಡಿನ ಪ್ರಮುಖ ನಟ ಶರತ್ ಕುಮಾರ್‍ರ ಮಗಳು ವರಲಕ್ಷ್ಮಿ ಒಂದು ಟ್ವೀಟ್ ಮಾಡಿದರು. ಆಕೆಯೂ ಓರ್ವ ಪ್ರಮುಖ ನಟಿ. ಕೇರಳದ  ಪ್ರಸಿದ್ಧ ನಟಿಯನ್ನು ಚಲಿಸುತ್ತಿರುವ ಆಡಿ ಕಾರಿನಲ್ಲಿ ಗಂಟೆಗಳ ವರೆಗೆ ಲೈಂಗಿಕವಾಗಿ ಹಿಂಸಿಸಿದ ಪ್ರಕರಣದ ಬಳಿಕ ಮಾಡಿದ ಟ್ವೀಟ್ ಇದು.
‘ತಮಿಳು ಟಿ.ವಿ. ಚಾನೆಲ್‍ನ ಮುಖ್ಯಸ್ಥನ ಜೊತೆ ಸೀರಿಯಲ್‍ಗೆ ಸಂಬಂಧಿಸಿ ಸಭೆ ನಡೆಸಿದೆ. ಬಳಿಕ ಆತ ಲೈಂಗಿಕವಾಗಿ ಸಹಕರಿಸುವಂತೆ ಕೋರಿದ..’ ಈ ಟ್ವೀಟ್‍ಗೆ ಅನೇಕ ಮಂದಿ ಆಘಾತ ವ್ಯಕ್ತಪಡಿಸಿದರು.
      2015ರಲ್ಲಿ ಲಂಡನ್ನಿನ ಗಾರ್ಡಿಯನ್ ಪತ್ರಿಕೆಯು ಒಂದು ಸಮೀಕ್ಷೆ ಆಧಾರಿತ ಅಭಿಪ್ರಾಯವನ್ನು ಮಂಡಿಸಿತ್ತು. ಸಿನಿಮಾ ಮತ್ತು ಟಿ.ವಿ. ಇಂಡಸ್ಟ್ರಿಯಲ್‍ನ ಶೇ. 99 ಮಂದಿ ಮಹಿಳೆಯರಿಗೂ ಸೆಕ್ಸಿಸಂನ ಅನುಭವ ಆಗಿದೆ ಎಂದು ಅದರಲ್ಲಿ ಹೇಳಲಾಗಿತ್ತು. ಮಹಿಳೆಯನ್ನು ವಸ್ತುವಾಗಿ ನೋಡಬಾರದೆಂದು ಹೇಳಿಕೊಡುವ ಕ್ಷೇತ್ರದಲ್ಲೇ  ಯಾಕೆ ಹೆಣ್ಣು ಮತ್ತೆ ಮತ್ತೆ ವಸ್ತುವಾಗುತ್ತಿದ್ದಾಳೆ? ಈ ದೇಶದ ಯಾವನಾದರೂ ಓರ್ವ ಪ್ರಸಿದ್ಧ ನಟ ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ಶೋಷಣೆಗೆ ಒಳಗಾದದ್ದು ನಡೆದಿದೆಯೇ? ಲೈಂಗಿಕ ಶೋಷಣೆ ಬಿಡಿ, ಕನಿಷ್ಠ ಆತನ ಎದುರು ದನಿಯೇರಿಸಿ ಮಾತನಾಡಿದ ಪ್ರಕರಣಗಳಿವೆಯೇ? ಪಕ್ಕಾ ದರೋಡೆಕೋರರೂ ಆತನನ್ನು ಮುಟ್ಟುವ ಧೈರ್ಯ ಮಾಡಿದ್ದಿದೆಯೇ? ಮತ್ತೇಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಏನೇನೂ ಅಲ್ಲದ ವ್ಯಕ್ತಿಗಳು ಓರ್ವ ಪ್ರಸಿದ್ಧ ನಟಿಯ ಮೇಲೆ ಲೈಂಗಿಕ ಶೋಷಣೆ ನಡೆಸುವ ಪ್ರಕರಣ ನಡೆಯುತ್ತದೆ? ಅದೂ ಚಲಿಸುವ ಕಾರಿನಲ್ಲಿ. ಈ ದೇಶದ ಎಲ್ಲೋ ಮೂಲೆಯಲ್ಲಿ ಯಾವುದೋ ಅಪರಿಚಿತ ಹೆಣ್ಣು ಮಗಳ ಮೇಲೆ ನಡೆಯಬಹುದಾದಂಥ ರೀತಿಯ ಹಿಂಸೆಗೆ ಓರ್ವ ನಟಿ ಒಳ ಗಾಗುತ್ತಾಳೆ ಮತ್ತು ಆ ಹಿಂಸೆಯಲ್ಲಿ ಆಕೆಯ ಸಿನಿಮಾ ಇಂಡಸ್ಟ್ರಿಯ ಒಳಗಿನ ವ್ಯಕ್ತಿಗಳೇ ಪಾಲುಗೊಳ್ಳುತ್ತಾರೆ ಅನ್ನುವುದು ಏನನ್ನು ಸೂಚಿಸುತ್ತದೆ? ಸಿನಿಮಾ ಇಂಡಸ್ಟ್ರಿಯೂ ಹೆಣ್ಣನ್ನು ವಸ್ತುವಾಗಿ ಮತ್ತು ಅಗ್ಗವಾಗಿ ನೋಡುತ್ತಿದೆ ಎಂದಲ್ಲವೇ? ಅಷ್ಟಕ್ಕೂ, ಕೇರಳದ ನಟಿಯನ್ನು ಲೈಂಗಿಕವಾಗಿಯೇ ಯಾಕೆ ಶೋಷಿಸಬೇಕಿತ್ತು? ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇರೆ ದಾರಿಗಳೂ ಇತ್ತಲ್ಲವೇ? ಈ ಇಂಡಸ್ಟ್ರಿಯಲ್ಲಿ ನಟರ ಜೊತೆಯಲ್ಲೂ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲವೇ? ಆಗೆಲ್ಲ ಅವರನ್ನು ಹೀಗೆ ಲೈಂಗಿಕವಾಗಿ ಶೋಷಣೆಗೆ ಒಳಪಡಿಸಲಾಗುತ್ತಿದೆಯೇ?
    ಲೈಂಗಿಕ ಶೋಷಣೆ ಎಂಬುದು ಹೆಣ್ಣನ್ನು ಶರಣುಗೊಳಿಸುವುದಕ್ಕೆ ಪುರುಷ ಸಮಾಜ ಸಾಮಾನ್ಯವಾಗಿ ಬಳಸುತ್ತಿರುವ ಅಸ್ತ್ರ. ಭಾರತದ ಉದ್ದಗಲಕ್ಕೂ ಇದರ ಪ್ರಯೋಗ ನಡೆಯುತ್ತಲೇ ಇದೆ. ತನ್ನನ್ನು ಪ್ರೀತಿಸದ ಹೆಣ್ಣನ್ನು ಪುರುಷ ಲೈಂಗಿಕ ದೌರ್ಜನ್ಯದ ಮೂಲಕ ಪ್ರತೀಕಾರ ತೀರಿಸುವುದಿದೆ. ತನಗೆ ಎದುರಾಡಿದ ಉದ್ಯೋಗಸ್ಥೆಯ ಮೇಲೆ ಮ್ಯಾನೇಜರ್ ಲೈಂಗಿಕ ದೌರ್ಜನ್ಯ ಎಸಗುವುದಿದೆ. ಪುರುಷರ ವಿರುದ್ಧ ದನಿಯೆತ್ತಿದವಳನ್ನು ಇದೇ ವಿಧಾನ ಬಳಸಿ ಪಳಗಿಸುವುದಿದೆ. ಈ ದೇಶದ ಸಾಮಾನ್ಯ ಹೆಣ್ಣು ಮತ್ತು ಗಂಡಿನ ನಡುವಿನ ಜಗಳ-ಭಿನ್ನಾಭಿಪ್ರಾಯಗಳು ಬಹುತೇಕ ಬಾರಿ ಅಂತ್ಯ ಕಾಣುವುದೇ ಲೈಂಗಿಕ ಶೋಷಣೆಯ ಮೂಲಕ. ಹೆಣ್ಣನ್ನು ಅವಮಾನಿಸುವುದಕ್ಕೆ ಪುರುಷ ಸಮಾಜ ಲೈಂಗಿಕ ಹಿಂಸೆಯನ್ನು ಒಂದು ಆಯುಧವಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಪ್ರಶ್ನಿಸುತ್ತಾ ಮತ್ತು ಹೆಣ್ಣನ್ನು ಲೈಂಗಿಕ ವಸ್ತುವಾಗಿ ನೋಡಬಾರದೆನ್ನುತ್ತಾ ಸಾಗುತ್ತಿರುವ ಕ್ಷೇತ್ರವೇ ಸಿನಿಮಾ ರಂಗ. ಆದರೆ ಆ ಕ್ಷೇತ್ರದ ಪ್ರತಿಪಾದನೆಗೂ ಅದು ಹೆಣ್ಣನ್ನು ನೋಡುವ ವಿಧಾನಕ್ಕೂ ತಾಳಮೇಳವಿಲ್ಲವೆಂದರೆ ಹೇಗೆ? ಆ ಕ್ಷೇತ್ರವೂ ಹೆಣ್ಣನ್ನು ಪಳಗಿಸುವುದಕ್ಕೆ ಲೈಂಗಿಕ ಶೋಷಣೆಯನ್ನೇ ಪರಿಣಾಮಕಾರಿ ಅಸ್ತ್ರವಾಗಿ ಪರಿಗಣಿಸಿದರೆ ಹೇಗೆ? ಹಾಗಂತ, ಅಲ್ಲಿಯ ವೇತನಾ ಕ್ರಮಗಳು ಹೇಗಿವೆ? ಸ್ತ್ರೀ-ಪುರುಷ ಸಮಾ ನತೆಯನ್ನು ಇಲ್ಲಿ ಪಾಲಿಸಲಾಗುತ್ತಿದೆಯೇ? ಹೀರೋಗೆ ಕೊಡುವಷ್ಟೇ ವೇತನವನ್ನು ಹೀರೋಯಿನ್‍ಗೂ ಕೊಡಲಾಗುತ್ತಿದೆಯೇ? ಸಿನಿಮಾ ಅಂದರೆ ಹೀರೋ ಮತ್ತು ಹೀರೋಯಿನ್ ಮಾತ್ರ ಅಲ್ಲ. ನೂರಾರು ಕಾರ್ಮಿಕರನ್ನೊಳಗೊಂಡ ವಿಶಾಲ ಕ್ಷೇತ್ರ ಅದು. ಅಲ್ಲಿ ಕಾರ್ಮಿಕರಾಗಿರುವ ಹೆಣ್ಣು ಮತ್ತು ಗಂಡಿನ ಸ್ಥಿತಿ-ಗತಿಗಳು ಹೇಗಿವೆ? ಕಾರ್ಮಿಕ ಕಾನೂನುಗಳು ಈ ಕ್ಷೇತ್ರಕ್ಕೆ ಅನ್ವಯ ವಾಗುತ್ತಿವೆಯೇ? ವಾರಗಳ ಹಿಂದೆ ಸಂಜನಾ ಎಂಬ ಕನ್ನಡ ನಟಿಯ ಬಗ್ಗೆ ಟಿ.ವಿ. ಮಾಧ್ಯಮಗಳು ಸಾಕಷ್ಟು ಹೊತ್ತು ಚರ್ಚಿಸಿದುವು. ಆಕೆಯ ನಗ್ನ ದೃಶ್ಯದ ವೀಡಿಯೋ ಸೋರಿಕೆ ಯಾಗಿರುವುದನ್ನೂ ಸೋರಿಕೆಗಿರಬಹುದಾದ ಕಾರಣಗಳ ಸಾಧ್ಯಾ ಸಾಧ್ಯತೆಗಳನ್ನೂ ಚರ್ಚಿಸಿದುವು. ದುರಂತ ಏನೆಂದರೆ, ಯಾರೂ ಕೂಡ ನಟಿಯದ್ದೇ  ನಗ್ನ ವೀಡಿಯೋ ಯಾಕೆ ಸೋರಿಕೆಯಾಗಬೇಕು ಎಂದು ಪ್ರಶ್ನಿಸಲಿಲ್ಲ. ನಗ್ನತೆ ಎಂಬುದು ಹೆಣ್ಣಿಗೆ ಸಂಬಂಧಿಸಿ ಮಾತ್ರ ಇರುವ ವಿಶೇಷತೆ ಏನಲ್ಲ. ಪುರುಷನೂ ನಗ್ನನಾಗಬಲ್ಲ. ಆದರೆ ವಿವಾದಾತ್ಮಕ ಸೋರಿಕೆಗಳೆಲ್ಲ ಹೆಣ್ಣನ್ನೇ ಯಾಕೆ ಸುತ್ತಿ ಕೊಂಡಿರುತ್ತವೆ? ಚಿತ್ರ ಬಿಡುಗಡೆಯ ಮೊದಲು ಹೆಣ್ಣಿನ ದೇಹ ವನ್ನು ಕೇಂದ್ರೀಕರಿಸಿ ವೀಡಿಯೋವನ್ನೋ ಚಿತ್ರವನ್ನೋ ಯಾಕೆ ಸೋರಿಕೆಯೋ ಬಿಡುಗಡೆಯೋ ಮಾಡಲಾಗುತ್ತದೆ? ಒಂದು ಕಡೆ ಹೆಣ್ಣು ಬರೇ ದೇಹವಲ್ಲ ಎಂದು ಹೇಳುತ್ತಲೇ ಇನ್ನೊಂದು ಕಡೆ ಬರೇ ದೇಹವನ್ನೇ ಮುಖ್ಯವಾಗಿಸಿಕೊಂಡು ಸಿನಿಮಾ ತಯಾರಾಗುವುದು ಮತ್ತು ಅದೇ ದೇಹದ ಮೂಲಕ ಸಮಾನತೆ, ಹಕ್ಕು, ಸ್ವಾತಂತ್ರ್ಯಗಳ ಡಯಲಾಗ್‍ಗಳನ್ನು ಹೇಳಿಸುವುದರ ಅರ್ಥ ಏನು? ಇದರ ಹಿಂದೆ ಯಾರಿದ್ದಾರೆ? ಪುರುಷರೇ? ಇಂಥವು ಗಳನ್ನು ಮಹಿಳಾ ವಿರೋಧಿ ಎಂದು ಬಹಿರಂಗವಾಗಿ ಹೇಳುವ ನಟಿಯರು ಯಾಕೆ ಕಾಣಿಸುತ್ತಿಲ್ಲ? ಸಿನಿಮಾ ರಂಗದಲ್ಲೂ ಶೋಷಣೆ ಇದೆಯೇ? ಪುರುಷನ ಅಣತಿಯಂತೆ ಹೆಣ್ಣು ಕೆಲಸ ಮಾಡಬೇಕಿದೆಯೇ? ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯದ ಡಯಲಾಗ್‍ಗಳನ್ನು ಹೇಳುತ್ತಾ ಆ ಡಯಲಾಗ್‍ಗಳಿಗೆ ವಿರುದ್ಧವಾಗಿ ಬದುಕಬೇಕಾದ ಕ್ಷೇತ್ರವಾಗಿದೆಯೇ ಸಿನಿಮಾ ಕ್ಷೇತ್ರ? ಇಲ್ಲಿ ಇನ್ನೂ ಒಂದು ಪ್ರಶ್ನೆಯನ್ನು ಎತ್ತಬಹುದು. ಈ ಕ್ಷೇತ್ರಕ್ಕೆ ಹೊಸದಾಗಿ ಬರುವ ನಟಿಯರು ಮತ್ತು ಈಗಾಗಲೇ ತಳವೂರಿರುವ ನಟಿಯರು ಕೂಡ ಆಗಾಗ ಮಾಧ್ಯಮಗಳ ಮುಂದೆ ‘ಪಾತ್ರದ ಬೇಡಿಕೆಯನ್ನು ಅನುಸರಿಸಿ ಉಡುಪು ತೊಡಲು ಸಿದ್ಧ’ ಎಂದು ಹೇಳಿಕೊಳ್ಳುವುದಿದೆ. ಹಾಗಂದರೇನು? ಇದು ಇವರ ಮಾತೋ ಅಥವಾ ಈ ಇಂಡಸ್ಟ್ರೀ ಹೇಳಿಸುವ ಮಾತೋ? ಅಭಿನಯಕ್ಕಿಂತ ತೊಡುವ ಉಡುಪೇ ಯಾಕೆ ಮುಖ್ಯವಾಗಬೇಕು? ಯಾಕೆ ಯಾವ ನಟರೂ ಇಂಥ ಹೇಳಿಕೆಗಳನ್ನು ಕೊಡುವುದಿಲ್ಲ? ‘ಪಾತ್ರಕ್ಕೆ ತಕ್ಕಂತೆ ಉಡುಪು’ ಎಂಬುದು ಬರೇ ಹೆಣ್ಣಿಗೆ ಸಂಬಂಧಿಸಿ ಮಾತ್ರ ಇರುವ ನಿಯಮ ಅಲ್ಲವಲ್ಲ. ಪುರುಷನೂ ಪಾತ್ರಕ್ಕೆ ತಕ್ಕಂತೆ ಉಡುಪು ತೊಡಬೇಕಲ್ಲವೇ? ಮತ್ತೇಕೆ ನಟಿಯರೇ ಪಾತ್ರಕ್ಕೆ ತಕ್ಕಂತೆ ಉಡುಪು ಎಂಬ ಡಯಲಾಗ್‍ಗಳನ್ನು ಉದುರಿಸುತ್ತಾರೆ? ಈ ಕ್ಷೇತ್ರದಲ್ಲಿ ಪಾತ್ರಕ್ಕೆ ತಕ್ಕುದಲ್ಲದ ಉಡುಪನ್ನು ನಟಿಯರ ಮೇಲೆ ಹೇರುತ್ತಾರಾ? ಯಾರು ಅವರು? ಪುರುಷರೇ? ಮಹಿಳೆಯರೇ? ಈ ಕ್ಷೇತ್ರದಲ್ಲಿ ನಟರಿಗಿರುವ ಸ್ವಾತಂತ್ರ್ಯ ನಟಿಯರಿಗಿಲ್ಲವೇ? ನಟರ ಆಯ್ಕೆಗೆ ಪ್ರತಿಭೆ ಆಧಾರವಾಗುವಾಗ ನಟಿಯರ ಆಯ್ಕೆಗೆ ಪ್ರತಿಭೆಯ ಜೊತೆಗೇ ಇತರವುಗಳೂ ಆಧಾರವಾಗುತ್ತದೆಯೇ? ಇದು ಈ ಕ್ಷೇತ್ರ ಪ್ರತಿಪಾದಿಸುವ ಸ್ತ್ರೀ-ಪುರುಷ ಸಮಾನತೆಯ ಚೌಕಟ್ಟಿನೊಳಗಡೆ ಬರುತ್ತದೆಯೇ? ಸಿನಿಮಾ ಜಗತ್ತಿನ ಹೊರಗಡೆ ಸಂಭವಿಸುವ ಮಹಿಳಾ ಶೋಷಣೆಯ ಕುರಿತು ಆಗಾಗ ದಿಗ್ಭ್ರಮೆ ವ್ಯಕ್ತಪಡಿಸುವ ಸಿನಿಮಾ ಕ್ಷೇತ್ರದ ದಿಗ್ಗಜರು ಯಾಕೆ ಒಳಗಿನ ಈ ತೂತುಗಳ ಬಗ್ಗೆ ಯಾವ ದಿಗ್ಭ್ರಮೆಯನ್ನೂ ವ್ಯಕ್ತಪಡಿಸುವುದಿಲ್ಲ?
      ಮಹಿಳಾ ಸಮಾನತೆ, ಸಮಾನ ಪ್ರಾತಿನಿಧ್ಯ, ಸಮಾನ ಸ್ವಾತಂತ್ರ್ಯ.. ಇತ್ಯಾದಿಗಳೆಲ್ಲ ಪುರುಷ ತನ್ನ ಅನುಕೂಲಕ್ಕಾಗಿ ಹುಟ್ಟು ಹಾಕಿರುವ ಪದಪುಂಜಗಳೇನೋ ಅನ್ನುವ ಅನುಮಾನಕ್ಕೆ ಇವು ಮತ್ತು ಇಂಥ ಇನ್ನಿತರ ಸಂಗತಿಗಳು ಪುಷ್ಠಿಯನ್ನು ನೀಡುತ್ತಲೇ ಇವೆ. ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಇಂದಿಗೆ 21 ವರ್ಷಗಳೇ ಸಂದಿವೆ. 1996 ಸೆ. 12ರಂದು ಮಹಿಳೆಯರಿಗೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ 33% ಮೀಸಲಾತಿ ನೀಡುವ ಮಸೂದೆಯನ್ನು ಮೊದಲ ಬಾರಿ ಮಂಡಿಸಲಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲೇ ಸೇರಿಸಿಕೊಂಡ ವಿಷಯ ಇದು. ಆದರೆ ರಾತೋರಾತ್ರಿ ನೋಟು ಅಮಾನ್ಯಗೊಳಿಸಿದ ಬಿಜೆಪಿಗೆ, ಪಾರ್ಲಿಮೆಂಟನ್ನು ವಿಶ್ವಾಸಕ್ಕೆ ಪಡೆದುಕೊಂಡು ಜಿಎಸ್‍ಟಿಯನ್ನು ಜಾರಿಗೊಳಿಸಿದ ಬಿಜೆಪಿಗೆ, ‘ಜಾನುವಾರು ಮಾರಾಟ ಕಾಯ್ದೆ’ಯನ್ನು ತರಾತುರಿಯಿಂದ ಜಾರಿಗೊಳಿಸುವ ಉಮೇದು ವ್ಯಕ್ತಪಡಿಸಿದ ಬಿಜೆಪಿಗೆ ಸ್ವತಃ ಪ್ರಣಾಳಿಕೆಯಲ್ಲೇ  ಭರವಸೆ ನೀಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಕಾನೂನಾಗಿಸುವುದಕ್ಕೆ ಈ ವರೆಗೂ ಸಾಧ್ಯವಾಗಿಲ್ಲ. ಪ್ರಣಾಳಿಕೆಯಲ್ಲೇ ಇಲ್ಲದ ನೋಟು ಅಮಾನ್ಯ ಎಂಬ ಅತಿ ಧೈರ್ಯದ ನಿರ್ಧಾರ ತಳೆದ ಬಿಜೆಪಿಯು ಯಾಕೆ 2 ದಶಕಗಳಿಂದ ಕಾಯುತ್ತಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಕಾನೂನಾಗಿಸುವ ಧೈರ್ಯ ತೋರಿಸುತ್ತಿಲ್ಲ? ಇಲ್ಲಿನ ಪ್ರಶ್ನೆ ಧೈರ್ಯದ್ದೋ ಅಥವಾ ಪುರುಷಾಧಿಪತ್ಯಕ್ಕೆ ಹೊಡೆತ ಬೀಳುತ್ತದೆ ಎಂಬ ಭಯದ್ದೋ? ಇಲ್ಲೂ ಮತ್ತದೇ ಶೋಷಣಾತ್ಮಕ ಮನಸ್ಥಿತಿಯೇ ಎದ್ದು ಕಾಣುತ್ತದೆ. ಭಾರತೀಯ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಬಹುತೇಕ ಪುರುಷರಷ್ಟೇ ಇದೆ. ಇದರ ಆಧಾರದಲ್ಲಿ ಹೇಳುವುದಾದರೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ ಅರ್ಧಕ್ಕರ್ಧ ಮಂದಿ ಮಹಿಳೆಯರಿರಬೇಕಿತ್ತು. ಆದರೆ, ಸದ್ಯ ಭಾರತದ ಪಾರ್ಲಿಮೆಂಟ್‍ನಲ್ಲಿ ಮಹಿಳೆಯರ ಸಂಖ್ಯೆ 12%. ಒಂದು ವೇಳೆ 33% ಮೀಸಲಾತಿಯು ಜಾರಿಯಾದರೆ ಕರ್ನಾಟಕದ ವಿಧಾನ ಸಭೆಯಲ್ಲಿ 84 ಶಾಸಕಿಯರಿರಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ನಿಜವಾಗಿ, ಮಹಿಳಾ ಜನಸಂಖ್ಯೆಗೆ ಸಂಬಂಧಿಸಿ ಹೇಳುವುದಾದರೆ ಈ ಸಂಖ್ಯೆಯೂ ಕನಿಷ್ಠವೇ. ಗಂಡಿಗೆ ಹೆಣ್ಣು ಸಮಾನ ಎಂದು ಪ್ರತಿಪಾದಿಸುವ ವ್ಯವಸ್ಥೆಯಲ್ಲಿ ಆ ಸಮಾನತೆಯ ಸಣ್ಣ ಮಾದರಿಯನ್ನೂ ಪ್ರಾಯೋಗಿಕವಾಗಿ ಪ್ರಸ್ತುತಪಡಿಸುವುದು ಅಸಾಧ್ಯವಾಗುತ್ತಿರುವುದೇಕೆ? ಅದೇ ವೇಳೆ, ಮಹಿಳಾ ಸಮಾನತೆ, ಸ್ವಾತಂತ್ರ್ಯ, ಹಕ್ಕು ಗಳನ್ನು ಅತ್ಯಂತ ಪ್ರಬಲವಾಗಿ ಮಂಡಿಸುವ ಸಿನಿಮಾ ಕ್ಷೇತ್ರದಲ್ಲಿ ಹೆಣ್ಣು ದನಿ ರಹಿತಳಾಗಿ ಮತ್ತು ದೇಹ ಕೇಂದ್ರಿತ ವಸ್ತುವಾಗಿ ಪರಿಗಣನೆಗೆ ಒಳಗಾಗುತ್ತಿರುವುದೇಕೆ? ಇದರ ಅರ್ಥವೇನು? ಸದ್ಯ ಪ್ರತಿಪಾದಿಸಲಾಗು ತ್ತಿರುವ ರೀತಿಯ ಮಹಿಳಾ ಸಮಾನತೆಯು ಪ್ರಾಯೋಗಿಕವಾಗಿ ಅಸಾಧ್ಯವೇ? ಇದು ಸಿನಿಮಾಗಳಿಗೆ, ಭಾಷಣಗಳಿಗೆ ಮತ್ತು ಬರಹಗಳಿಗೆ ಮಾತ್ರ ಒಗ್ಗುವ ಮತ್ತು ಬದುಕಿ ತೋರಿಸಲು ಅಸಾಧ್ಯವಾದ ಚಿಂತನೆಯೇ?


Thursday, July 27, 2017

ತಿಯೋಡರ್ ಶಾನಿನ್ ಭಾರತದಲ್ಲಿರುತ್ತಿದ್ದರೆ ಕೃತಿಯ ಹೆಸರು ಏನಿರುತ್ತಿತ್ತು?

      ಖ್ಯಾತ ಪ್ರೊಫೆಸರ್ ತಿಯೋಡರ್ ಶಾನಿನ್ ಅವರ ‘ರೈತರು ಮತ್ತು ರೈತ ಸಮಾಜಗಳು’ (Peasant and peasant societies) ಎಂಬ ಕೃತಿಯ ಬಗ್ಗೆ ಅರಿತುಕೊಳ್ಳುವ ಸಂದರ್ಭ ಸಿಕ್ಕಿತು. ಈ ಕೃತಿಯ ಮೇಲೆ ನಡೆದ ಚರ್ಚೆ, ವಿಮರ್ಶೆ ಮತ್ತು ರೈತ ಸಮುದಾಯದ ಬಗ್ಗೆ ಕೃತಿಕಾರನ ಆಳ ಅಧ್ಯಯನವು ಯಾರನ್ನೇ ಆಗಲಿ ಪ್ರಭಾವಿತಗೊಳಿಸಬಲ್ಲಷ್ಟು ಪ್ರಾಮುಖ್ಯವಾದವು. ಈ ಕೃತಿಗೆ ಎರಡು ದಶಕಗಳಿಗಿಂತ ಹೆಚ್ಚು ಪ್ರಾಯವಾಗಿದೆ ಮತ್ತು ‘ರಶ್ಯನ್ ಕ್ರಾಂತಿಯಲ್ಲಿ ರೈತರ ಪಾತ್ರ’ ಎಂಬ ವಿಷಯದ ಮೇಲೆ ನಡೆಸಿದ ಅಧ್ಯಯನವು ಈ ಕೃತಿ ರಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂಬ ಎರಡು ಕೊರತೆಗಳನ್ನು ಬಿಟ್ಟರೆ ಇದು ಒಂದು ಬಹು ಪ್ರಭಾವಿ ಕೃತಿ. ವಿಶೇಷ ಏನೆಂದರೆ, ಈ ಕೃತಿಯ ಬಗ್ಗೆ ಓದುತ್ತಾ ಹೋದಂತೆ ಭಾರತದಲ್ಲಿ ಇತ್ತೀಚೆಗೆ ದುರಂತಮಯವಾಗಿ ಅಂತ್ಯ ಕಂಡ ಎರಡು ರೈತ ಪ್ರತಿಭಟನೆಗಳು ಕಣ್ಣ ಮುಂದೆ ತೇಲಿ ಬಂದುವು.
1. ದೆಹಲಿಯ ಜಂತರ್-ಮಂತರ್‍ನಲ್ಲಿ ತಮಿಳುನಾಡು ರೈತರು ನಡೆಸಿದ ಪ್ರತಿಭಟನೆ.
2. ಮಧ್ಯಪ್ರದೇಶದ ಮಂಡಸೂರ್‍ನಲ್ಲಿ ನಡೆದ ರೈತ ಪ್ರತಿಭಟನೆ.
ತಮಿಳುನಾಡಿನ ಸುಮಾರು 100ಕ್ಕಿಂತಲೂ ಅಧಿಕ ರೈತರು 42 ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಜಂತರ್ ಮಂತರ್ ಅನ್ನು ಈ ರೈತರು ಯಾಕೆ ಆಯ್ಕೆ ಮಾಡಿಕೊಂಡರೆಂದರೆ, ಅವರ ಬೇಡಿಕೆ ತಮಿಳುನಾಡು ಸರಕಾರದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಕೇಂದ್ರ ಸರಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಅವರು ಪ್ರತಿಭಟನೆಗೆ ಗಾಂಧಿ ಮಾರ್ಗವನ್ನು ಆಶ್ರಯಿಸಿದರು. ರೈತರೆಂದರೆ ಗ್ರಾಮೀಣ ಭಾರತದಲ್ಲಿ ಬದುಕುವ ಜನಸಮೂಹ. ಮಣ್ಣು, ಕೆಸರು, ನೀರು ಮುಂತಾದುವುಗಳ ಜೊತೆಗೇ ಹೆಚ್ಚು ಬೆರೆತು ಗೊತ್ತಿರುವ ಮತ್ತು ಪೇಟೆಯ ಥಳಕನ್ನು ಅಂಜಿಕೆಯಿಂದ ನೋಡುವ ಜನರು ಇವರು. ಆದ್ದರಿಂದ ಜಂತರ್ ಮಂತರ್ ಅನ್ನುವುದು ಅವರ ಪಾಲಿಗೆ ತೀರಾ ಹೊಸತು. ದುಡಿಯುವ ವರ್ಗವು, ಪಟ್ಟಣದ ಒಂದು ಕಡೆ ದುಡಿಯದೇ ವಾರಗಟ್ಟಲೆ ಕಳೆಯುವುದೇ ಒಂದು ಹಿಂಸೆ. ಇದು ಅವರ ಪ್ರತಿಭಟನೆಯಲ್ಲೂ ವ್ಯಕ್ತವಾಯಿತು. ಕೇಂದ್ರ ಸರಕಾರ ಈ ಪ್ರತಿಭಟನೆಯನ್ನು ನಿರ್ಲಕ್ಷಿಸ ತೊಡಗಿದಾಗ ಅವರು ಪ್ರತಿಭಟನೆಯ ವಿಧಾನವನ್ನು ಬದಲಿಸಿದರು. ಸ್ವತಃ ತಮ್ಮ ಮೂತ್ರವನ್ನೇ ಕುಡಿಯುವ ಆಘಾತಕಾರಿ ಪ್ರಯೋಗಕ್ಕೆ ಇಳಿದರು. ಪ್ರಧಾನಿ ನಿವಾಸದೆದುರು ಬೆತ್ತಲೆಯಾಗಿ ಓಡಿದರು. ಕಳೆದ ವರ್ಷದ ಅಕ್ಟೋಬರ್‍ನಿಂದ ಆತ್ಮಹತ್ಯೆ ಮಾಡಿಕೊಂಡ ತಮ್ಮ ಪ್ರೀತಿ ಪಾತ್ರ ರೈತರ ಡಮ್ಮಿ ತಲೆಬುರುಡೆಯನ್ನು ಪ್ರದರ್ಶಿಸಿದರು. ರಸ್ತೆಯಲ್ಲಿ ಉಂಡರು. ಇಲಿ ಮತ್ತು ಸತ್ತ ಹಾವನ್ನು ಬಾಯಲ್ಲಿ ಕಚ್ಚಿ ಹಿಡಿದರು. ಹುಚ್ಚರಂತೆ ವೇಷ ತೊಟ್ಟರು.. ಹಾಗಂತ, ಅವರ ಬೇಡಿಕೆಯು ಕೇಂದ್ರ ಸರಕಾರವು ಪುಟ್ಟದೊಂದು ಸಾಂತ್ವನ ಒದಗಿಸದಷ್ಟು ಮತ್ತು ಪ್ರಧಾನಿ ಮೋದಿಯವರ ಮನ್ ಕಿ ಬಾತ್‍ನಲ್ಲಿ ಪ್ರಸ್ತಾಪಿಸಲ್ಪಡದಷ್ಟು ದೇಶದ್ರೋಹಿ ಆಗಿರಲಿಲ್ಲ.
1. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು.
2. ಸೂಕ್ತ ಬರ ಪರಿಹಾರವನ್ನು ಘೋಷಿಸಬೇಕು.
3. ಕಾವೇರಿ ಮ್ಯಾನೇಜ್‍ಮೆಂಟ್ ಬೋರ್ಡ್ ನಿಗದಿಪಡಿಸಿದ ನೀರನ್ನು ಅಡೆತಡೆಯಿಲ್ಲದೇ ಒದಗಿಸಬೇಕು.
ತಕ್ಷಣಕ್ಕೆ ಒಪ್ಪಿ ಬಿಡುವಂತಹ ಸುಲಭದ ಬೇಡಿಕೆ ಇವು ಅಲ್ಲವಾದರೂ ಪ್ರತಿಕ್ರಿಯೆಗೆ ಅನರ್ಹವಾದಂತಹವುಗಳೇ ಇವು? 42 ದಿನಗಳ ಕಾಲ ಗಾಂಧಿ ಮಾದರಿಯಲ್ಲಿ ಪ್ರತಿಭಟಿಸಿದ ರೈತ ಗುಂಪು ಕೊನೆಗೆ ನಿರಾಶೆಯಿಂದ ಗದ್ದೆಗೆ ಮರಳಿರುವುದು ಏನನ್ನು ಸೂಚಿಸುತ್ತದೆ? ಭಾರತವನ್ನು ಕೃಷಿ ಪ್ರಧಾನ ದೇಶ ಎಂದು ವ್ಯಾಖ್ಯಾನಿಸುವ ಸರಕಾರದ ನೀತಿಗಳು ಎಷ್ಟಂಶ ಕೃಷಿಗೆ ಪೂರಕವಾಗಿವೆ? ಕೃಷಿಯನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡಲು ರಾಜಕೀಯ ಅರ್ಥ ತಜ್ಞರು ಎಲ್ಲಿಯವರೆಗೆ ಯಶಸ್ವಿಯಾಗಿದ್ದಾರೆ? ಗೋವನ್ನು ನಕಲಿ ಗೋರಕ್ಷಕರು ನೋಡುವ ರೀತಿಯಲ್ಲೇ  ಸರಕಾರಗಳು ಕೃಷಿಯನ್ನು ನೋಡುತ್ತಿವೆಯೇ? ಕೃಷಿಯನ್ನು ಪೂಜನೀಯ ಸ್ಥಾನದಲ್ಲಿಟ್ಟು, ರೈತರಿಗೆ ಗುಂಡು ಹೊಡೆಯುವುದು ಕೂಡ ಸಮರ್ಥನೀಯವಾಗುತ್ತಿರುವುದು ಯಾವ ಕಾರಣದಿಂದ? ಜಂತರ್ ಮಂತರ್‍ನ ಬಳಿಕ ನಡೆದ ಮಧ್ಯಪ್ರದೇಶದ ಮಂಡಸೂರ್ ಪ್ರತಿಭಟನೆಯು ಇಂಥ ಪ್ರಶ್ನೆಗಳಿಗೆ ಮತ್ತೊಮ್ಮೆ ಚರ್ಚಾ ವೇದಿಕೆಯನ್ನು ಒದಗಿಸಿದೆ. ನಿಜವಾಗಿ, ಜಂತರ್ ಮಂತರ್‍ಗೆ ಹೋಲಿಸಿದರೆ ಮಂಡಸೂರ್ ಪ್ರತಿಭಟನೆ ಸಂಪೂರ್ಣ ಭಿನ್ನ. ಅಲ್ಲಿ ಹಿಂಸಾಚಾರ ನಡೆದಿದೆ. ಬೆಂಕಿ ಹಚ್ಚಲಾದ ಘಟನೆಗಳು ನಡೆದಿವೆ. ಪೊಲೀಸರ ಗುಂಡಿಗೆ 7ರಷ್ಟು ರೈತರು ಸಾವಿಗೀಡಾಗಿದ್ದಾರೆ. ಜಂತರ್ ಮಂತರ್‍ನ ಗಾಂಧಿ ಮಾದರಿಯ ಪ್ರತಿಭಟನೆಯು ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮವನ್ನು ಬೀರದೇ ನಿರಾಶಾದಾಯಕವಾಗಿ ಕೊನೆಗೊಂಡ ಬಳಿಕ ನಡೆದ ಪ್ರತಿಭಟನೆ ಇದು ಎಂಬ ನೆಲೆಯಲ್ಲಿ ಈ ಪ್ರತಿಭಟನೆ ಮತ್ತು ಅಲ್ಲಿಯ ಹಿಂಸಾಚಾರ ಮುಖ್ಯವಾಗುತ್ತದೆ. ಮಂಡಸೂರ್‍ನಲ್ಲಿ ಸೇರಿದ ರೈತರ ಎದುರು ಜಂತರ್ ಮಂತರ್ ವಿಫಲ ಪ್ರತಿಭಟನಾ ಮಾದರಿಯಿತ್ತು. ಅದೇ ಮಾದರಿಯನ್ನು ಆಯ್ಕೆ ಮಾಡಿಕೊಂಡರೆ ವ್ಯವಸ್ಥೆಯ ದಪ್ಪ ಚರ್ಮಕ್ಕೆ ನಾಟದು ಎಂದು ಅವರು ಭಾವಿಸಿದ್ದರೆ, ಅದರ ಸಂಪೂರ್ಣ ಹೊಣೆಯನ್ನು ಅವರ ಮೇಲೆ ಹೊರಿಸಬೇಕಿಲ್ಲ. ವಿಶೇಷ ಏನೆಂದರೆ, ಕೇಂದ್ರ ಸರಕಾರಕ್ಕೆ ರೈತರು, ಕಾರ್ಮಿಕರು, ಸಂಘಟನೆಗಳು, ಹಕ್ಕು ಕಾರ್ಯಕರ್ತರು, ಭಯೋತ್ಪಾದಕರು.. ಮುಂತಾದುವುಗಳ ವ್ಯತ್ಯಾಸವೇ ಗೊತ್ತಿಲ್ಲ ಅನ್ನುವುದನ್ನು ಮಂಡಸೂರ್ ಎತ್ತಿ ತೋರಿಸಿತು. ರೈತ ಪ್ರತಿಭಟನೆಯನ್ನು ಅದು ನೋಡಿದ್ದು ಕಾನೂನು ಮತ್ತು ಸುವ್ಯವಸ್ಥೆ ಎಂಬ ಕಣ್ಣಿನಿಂದಲೇ. ಆಂತರಿಕ ಭದ್ರತೆಗೆ ರೈತ ಪ್ರತಿ ಭಟನೆಯಿಂದ ಅಪಾಯವಿದೆ ಎಂಬಂತೆ ಅದು ವ್ಯಾಖ್ಯಾನಿಸಿತು. ಈ ಪ್ರತಿಭಟನೆಯ ಹಿಂದೆ ದಂಗೆಕೋರ ಶಕ್ತಿಗಳ, ದೇಶದ್ರೋಹಿಗಳ ಕೈವಾಡ ಇರುವ ಸಾಧ್ಯತೆ ಇದೆ.. ಎಂಬಂತಹ ಅನುಮಾನಗಳನ್ನು ಅದು ಬಿತ್ತುವ ಪ್ರಯತ್ನ ಮಾಡಿತು. ನಿಜವಾಗಿ, ರೈತರು ಪ್ರತಿ ಭಟನೆಯಲ್ಲಿ ಭಾಗವಹಿಸುವುದು ಸಾಮಾನ್ಯವಾಗಿ ಬೆಳೆಗೆ ಸಂಬಂದಿಸಿ ಮಾತ್ರ. ಅತಿವೃಷ್ಟಿ, ಅನಾವೃಷ್ಟಿ, ರಸಗೊಬ್ಬರ, ನೀರು.. ಇತ್ಯಾದಿಗಳ ಬಗ್ಗೆ ದೂರಿಕೊಂಡು ವರ್ಷದಲ್ಲಿ ಅಪರೂಪವಾಗಿ ಅವರು ಬೀದಿಗೆ ಬರುತ್ತಾರೆ. ಇವರು ಭಯೋತ್ಪಾದಕರಲ್ಲ ಅಥವಾ ಇತರ ಪ್ರತಿಭಟನಾಕಾರರಂತೆ ಇವರನ್ನು ಪರಿಗಣಿಸಬೇಕಿಲ್ಲ. ಅವರಿಗೆ ಹೇಳಿಕೊಳ್ಳಲು ಬಿಡಬೇಕು. ಜನಪ್ರತಿನಿಧಿಗಳು ಅವರನ್ನು ಆಲಿಸಬೇಕು. ಅದರ ಜೊತೆ ಜೊತೆಗೇ ಕೃಷಿ ಸಮಸ್ಯೆಯನ್ನು ಅರಿತುಕೊಳ್ಳುವ ಮತ್ತು ಕೃಷಿಗೆ ಸಂಬಂಧಿಸಿದ ಜ್ಞಾನ ಪಡೆದುಕೊಳ್ಳುವ ಮನಸ್ಸೂ ಹೊಂದಿರಬೇಕು. ಕೃಷಿಯನ್ನು ಸಮಸ್ಯೆಯಾಗಿ ಕಾಣುವುದಕ್ಕಿಂತ ಅದನ್ನು ಜೀವನ ಮಾರ್ಗವಾಗಿ ಪರಿಗಣಿಸುವ ಪ್ರಬುದ್ಧತೆ ಬರಬೇಕು. ದುರಂತ ಏನೆಂದರೆ, ಕೃಷಿ ಪ್ರದೇಶದಿಂದ ಆಯ್ಕೆಯಾಗುವ ಜನಪ್ರತಿನಿಧಿಗೂ ಕೃಷಿಯೊಂದಿಗೆ ಸಂಬಂಧ ಇರುವುದು ತೀರಾ ತೆಳು ಮಟ್ಟದಲ್ಲಿ. ನಗರದಲ್ಲಿ ಬೆಳೆದ ವ್ಯಕ್ತಿ ಅಥವಾ ಗದ್ದೆಗೆ ಇಳಿಯಲು ಹೇಸಿಗೆ ಪಡುವ ವ್ಯಕ್ತಿ ಈ ದೇಶದ ಕಾನೂನು ನಿರ್ಮಾತೃ ಆಗುತ್ತಾನೆ. ಕೃಷಿಕರನ್ನು ಆಳುತ್ತಾನೆ. ಬಜೆಟ್ ಮಂಡಿಸುತ್ತಾನೆ. ಕೃಷಿಗೆ ಸಂಬಂಧಿಸಿ ಹಲವಾರು ಸಮಿತಿಗಳು ನೀಡಿರುವ ಅನೇಕ ವರದಿಗಳ ಬಗ್ಗೆ ಏನೇನೂ ಗೊತ್ತಿಲ್ಲದವರೇ ನಮ್ಮ ಶಾಸನ ಸಭೆಗಳಲ್ಲಿ ಹೆಚ್ಚಿದ್ದಾರೆ. ಎಂ.ಎಸ್. ಸ್ವಾಮಿನಾಥನ್ ಅವರು ರೈತ ಸಾವನ್ನು ತಡೆಗಟ್ಟುವುದಕ್ಕೆ ಹಲವು ಮಾರ್ಗಗಳನ್ನು ಸೂಚಿಸಿದ್ದಾರೆ. ‘ರೈತನು ಗದ್ದೆಗೆ ಹೂಡುವ ಬೆಲೆಯ ಅರ್ಧದಷ್ಟು ಬೆಂಬಲ ಬೆಲೆಯನ್ನು ಆತನ ಫಸಲಿಗೆ ನೀಡಬೇಕೆಂಬುದು’ ಅವರು ನೀಡಿರುವ ವರದಿಯ ಪ್ರಮುಖ ಅಂಶ. ಮಂಡಸೂರ್ ಪ್ರತಿಭಟನೆಗೆ ಸಂಬಂಧಿಸಿ ಈ ವರದಿ ಅತಿ ಉಪಯುಕ್ತವಾದುದು. ಆದರೆ, ಶಿವರಾಜ್ ಸಿಂಗ್ ಚೌಹಾಣ್‍ರು ಇಡೀ ಪ್ರತಿಭಟನೆಯನ್ನು ಜೋಕ್ ಆಗಿ ಪರಿವರ್ತಿಸಿದರು. ರೈತ ಪ್ರತಿಭಟನೆಗೆ ವಿರುದ್ಧವಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಕುಳಿತರು. ಅಷ್ಟೇ ಶೀಘ್ರವಾಗಿ ಲಿಂಬೆ ಜ್ಯೂಸ್ ಕುಡಿದು ಸತ್ಯಾಗ್ರಹದಿಂದ ಮುಕ್ತವಾದರು. ಒಂದು ಕಡೆ ಪ್ರತಿಭಟನಾಕಾರರ ಮೇಲೆ ಗುಂಡೆಸೆಯುತ್ತಲೇ ಇನ್ನೊಂದು ಕಡೆ ತಾನು ಗಾಂಧಿ ಮಾರ್ಗದಲ್ಲಿದ್ದೇನೆ ಎಂದು ಸಾರುವ ಬುದ್ಧಿವಂತಿಕೆ ಇದು. ಏಕಕಾಲದಲ್ಲಿ ರೈತರನ್ನು ವಿಲನ್‍ಗಳಾಗಿಯೂ ತಾನು ಮತ್ತು ತನ್ನ ಸರಕಾರವನ್ನು ಹೀರೋ ಆಗಿಯೂ ಬಿಂಬಿಸಿಕೊಂಡ ಕ್ಷಣ ಇದು. ಮಾಧ್ಯಮಗಳೂ ಚೌಹಾಣ್‍ರ ಬಲೆಯೊಳಗೆ ಬಿದ್ದುವು. ರೈತರನ್ನು ಗೂಂಡಾಗಳಂತೆ ಮತ್ತು ಆಂತರಿಕ ಸುರಕ್ಷತೆಗೆ ಅಪಾಯಕಾರಿಗಳಂತೆ ಪರೋಕ್ಷವಾಗಿ ಅವು ಸಾರಿದುವು. ರೈತರನ್ನು ಭೇಟಿಯಾಗಲು ಹೋದವರನ್ನು ಸರಕಾರ ಅರ್ಧದಲ್ಲೇ  ತಡೆಯಿತು. ಅದಕ್ಕೆ ಕಾನೂನು ಸುವ್ಯವಸ್ಥೆಯ ಸಬೂಬು ನೀಡ ಲಾಯಿತು. ಒಟ್ಟಿನಲ್ಲಿ ರೈತರನ್ನು ಸಮಾಜದಿಂದ ಪ್ರತ್ಯೇಕಗೊಳಿಸಿ, ಉದ್ರಿಕ್ತವಾಗಬಹುದಾದ ಎಲ್ಲ ಮಾರ್ಗವನ್ನೂ ಮುಕ್ತಗೊಳಿಸಿ, ಕೊನೆಗೆ ಸದೆಬಡಿಯುವ ತಂತ್ರವನ್ನು ಅತ್ಯಂತ ಯಶಸ್ವಿಯಾಗಿ ಮಾಡಿ ಮುಗಿಸಲಾಯಿತು. ಮುಖ್ಯವಾಗಿ, ರೈತರಿಗೆ ರಾಜಕೀಯದ ಒಳ-ಸುಳಿಗಳು ಗೊತ್ತಿಲ್ಲ. ಗದ್ದೆಯಲ್ಲಿ ಅವರು ತಮ್ಮ ಹಣವನ್ನು ಹೂಡುತ್ತಾರೆ. ಅದಕ್ಕಾಗಿ ಬ್ಯಾಂಕುಗಳಿಂದಲೋ ಕೈಗಡವಾಗಿಯೋ ಸಾಲವನ್ನು ಪಡೆಯುತ್ತಾರೆ. ಫಸಲು ನಿರೀಕ್ಷಿಸುತ್ತಾರೆ. ಅವರ ಬಹುತೇಕ ಗಮನ ಗದ್ದೆ-ಫಸಲು, ಬ್ಯಾಂಕುಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಎಲ್ಲವೂ ಕೈಕೊಟ್ಟಿತು ಅನ್ನುವಾಗ ಬೀದಿಗಿಳಿಯುತ್ತಾರೆ. ಮಂಡಸೂರ್‍ನ ರೈತರ ಪ್ರತಿಭಟನೆಗೆ ಮುಖ್ಯ ಕಾರಣ, ಅತಿವೃಷ್ಟಿ. ಗದ್ದೆಗೆ ಎಷ್ಟು ಹೂಡಿಕೆ ಮಾಡಿದ್ದಾರೋ ಆ ಮೊತ್ತವೂ ಲಭ್ಯವಾಗದಷ್ಟು ಬೆಲೆ ಪಾತಾಳಕ್ಕೆ ಕುಸಿದಿತ್ತು. ಅಲ್ಲದೇ ನೋಟು ಅಮಾನ್ಯವು ರೈತರ ಸಮಸ್ಯೆಗಳಿಗೆ ಉಪ್ಪು-ಖಾರವನ್ನು ಹಚ್ಚಿತ್ತು. ಆದರೆ ಕೇಂದ್ರ ಸರಕಾರವು ಒಟ್ಟು ಬೆಳವಣಿಗೆಯನ್ನು ‘ಭಯೋ ತ್ಪಾದನೆ’ಯ ಕಣ್ಣಲ್ಲಿ ಅಳೆಯುವುದರೊಂದಿಗೆ ಇಡೀ ಸನ್ನಿವೇಶವೇ ಬದಲಾಯಿತು. ರೈತರೆಲ್ಲ ಆಂತರಿಕ ಸುರಕ್ಷತೆಗೆ ಅಪಾಯಕಾರಿಗಳಾಗಿ ಕಂಡುಬಂದರು. ಗುಂಡು ಹಾರಿಸಿದ್ದನ್ನೂ ಸಮರ್ಥಿಸಿಕೊಳ್ಳಲಾಯಿತು. ಇಡೀ ಪ್ರಕರಣವನ್ನು ನಿಭಾಯಿಸುವಲ್ಲಿ ಚೌಹಾಣ್ ಸಂಪೂರ್ಣ ವಿಫಲರಾದರೂ ಅವರ ಸತ್ಯಾಗ್ರಹವೇ ರೈತ ಪ್ರತಿಭಟನೆಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ರಾಜಕಾರಣಿಯೋರ್ವ ರೈತನನ್ನು ಯಾವ ಆಯುಧವೂ ಇಲ್ಲದೇ ಹೇಗೆ ಸೋಲಿಸಬಲ್ಲ ಎಂಬುದಕ್ಕೆ ದೃಷ್ಟಾಂತ ಇದು. ಜಂತರ್ ಮಂತರ್‍ನಲ್ಲಿ ರೈತರನ್ನು ನಿರ್ಲಕ್ಷಿಸುವ ಮೂಲಕ ಕೇಂದ್ರ ಸರಕಾರವು ದಮನಿಸಿದರೆ, ಮಂಡಸೂರ್‍ನ ರೈತರ ಮೇಲೆ ಬಲಪ್ರಯೋಗಿಸುವ ಮೂಲಕ ಅಲ್ಲಿನ ರಾಜ್ಯ ಸರಕಾರ ದಮನಿಸಿತು. ಈ ದಮನವು ಸಾರ್ವ ಜನಿಕ ಚರ್ಚೆಗೆ ಒಳಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಸತ್ಯಾಗ್ರಹದ ನಾಟಕವೂ ನಡೆಯಿತು. ರೈತರು ರಾಜಕೀಯದಲ್ಲಿ ಪಳಗಿಲ್ಲ ವಾದುದರಿಂದ ಜಂತರ್ ಮಂತರ್ ಮತ್ತು ಮಂಡಸೂರ್ ಎರಡೂ ಕಡೆ ತೀವ್ರ ವೈಫಲ್ಯ ಅನುಭವಿಸಿದರು.
     ಈ ದೇಶದಲ್ಲಿ 40 ಸಾವಿರದಷ್ಟು ವೈವಿಧ್ಯಮಯ ಭತ್ತದ ತಳಿಗಳಿವೆ ಎಂದು ಹೇಳಲಾಗುತ್ತದೆ. ಎಲ್ಲ ಮಣ್ಣಲ್ಲೂ ಎಲ್ಲ ತಳಿಗಳೂ ಹುಲಸಾದ ಫಸಲನ್ನು ಕೊಡಲಾರವು. ಅದಕ್ಕೆ ಮಣ್ಣು ಮ್ಯಾನೇಜ್‍ಮೆಂಟ್‍ನ ಅರಿವು ಇರಬೇಕು. ಕಾಲ-ವಾತಾವರಣಕ್ಕೆ ಸಂಬಂಧಿಸಿ ಬೆಳೆಯಲ್ಲಿ ವೈವಿಧ್ಯತೆಯನ್ನು ತರುವ ಅರಿವು ರೈತ ನಿಗಿರಬೇಕು. ವೈಜ್ಞಾನಿಕ ಕೃಷಿ ಪದ್ಧತಿಯ ಜ್ಞಾನ ಇರಬೇಕು. ಬೆಳೆದ ಫಸಲಿಗೆ ಸೂಕ್ತ ಮಾರುಕಟ್ಟೆ ದರವೂ ದೊರಕಬೇಕು. ಆದರೆ ಕೃಷಿಯನ್ನು ಅಧ್ಯಯನ ನಡೆಸದ ಜನಪ್ರತಿನಿಧಿಗಳು ಮತ್ತು ಕೃಷಿ ಭೂಮಿಯನ್ನು ನಕಲಿ ಗೋರಕ್ಷಕರಂತೆ ನೋಡುವ ಆಡಳಿತಗಾರರು ದೇಶದಲ್ಲಿದ್ದಾರೆ. ಅವರಿಗೆ ರೈತರೂ ಒಂದೇ. ಉಗ್ರರೂ ಒಂದೇ. ದಮನಿಸುವುದೇ ಅವರ ಧರ್ಮ.
ಒಂದು ವೇಳೆ
   ತಿಯೋಡರ್ ಶಾನಿನ್ ಭಾರತದ ಈಗಿನ ರೈತರ ಬಗ್ಗೆ ಬರೆಯುತ್ತಿದ್ದರೆ ಆ ಕೃತಿಗೆ ‘ರೈತರು ಮತ್ತು ರೈತ ಸಮಾಜಗಳು’ ಎಂಬುದರ ಬದಲು ‘ರೈತರು ಮತ್ತು ಭಯೋತ್ಪಾದಕ ಸರಕಾರಗಳು’ ಎಂಬ ಶೀರ್ಷಿಕೆಯನ್ನು ಕೊಡುತ್ತಿದ್ದರೇನೋ.. 

Wednesday, July 19, 2017

ಮಾಂಸ ವಿರೋಧಿ ಧರ್ಮದಲ್ಲಿ ಮಾಂಸಾಹಾರಿಗಳೇ ಬಹುಸಂಖ್ಯಾತರಾಗಿರುವುದೇಕೆ?

 
   ಎರಡು ಪ್ರಶ್ನೆಗಳು ಇತ್ತೀಚಿನ ದಿನಗಳಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡತೊಡಗಿದೆ.
1. ಮಾಂಸ ಮತ್ತು ಗೋಮಾಂಸ ಸೇವನೆಯನ್ನು ಹಿಂದೂ ಧರ್ಮವು ನಿಷೇಧಿಸಿದೆಯೇ?
2. ಹಿಂದೂ ಧರ್ಮಕ್ಕೆ ಪುರಾತನ ಇತಿಹಾಸ ಇದ್ದೂ ದೇಶದಾದ್ಯಂತ ಬಹುದೊಡ್ಡ ಸಂಖ್ಯೆಯ ಹಿಂದೂಗಳು ಈಗಲೂ ಮಾಂಸಾಹಾರ ಸೇವಕರಾಗಿರುವುದಕ್ಕೆ ಕಾರಣಗಳೇನು?
    ಈ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿವೆ. ಒಂದೋ, ಹಿಂದೂ ಧರ್ಮವು ಮಾಂಸ ಮತ್ತು ಗೋಮಾಂಸ ಸೇವನೆಯ ವಿರೋಧಿಯಲ್ಲ ಅಥವಾ ಇವತ್ತು ನಾವು ಯಾರನ್ನೆಲ್ಲ ಹಿಂದೂಗಳು ಎಂದು ಕರೆಯುತ್ತೇವೋ ಅವರೆಲ್ಲ ಮೂಲತಃ ಹಿಂದೂಗಳಲ್ಲ. ಅವರ ಧರ್ಮ ಬೇರೆ. ಅವರ ಆಚಾರ-ವಿಚಾರ ಬೇರೆ. ಅವರ ಸಂಸ್ಕೃತಿ ಬೇರೆ. ಅವರ ಕೌಟುಂಬಿಕ ವಿಧಾನಗಳು ಬೇರೆ. ಅವರ ಆಹಾರ ಕ್ರಮ ಬೇರೆ. ಅವರ ಆರಾಧನಾ ವಿಧಾನ ಬೇರೆ. ಅವರ ದೈವಿಕ ನಂಬಿಕೆಗಳು ಬೇರೆ. ಹೀಗೆ ಅನೇಕಾರು ‘ಬೇರೆ’ಗಳುಳ್ಳ ಬಹುದೊಡ್ಡ ಜನಸಮೂಹವನ್ನು ಹಿಂದೂ ಧರ್ಮದ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ನಂಬಬೇಕಾಗುತ್ತದೆ. ಹಿಂದೂ ಧರ್ಮಕ್ಕೆ ಕ್ರಿಸ್ತಪೂರ್ವ 5000ಕ್ಕಿಂತ ಅಧಿಕ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಆ ಕಾಲದಿಂದಲೇ ಗೋಮಾಂಸ ಸೇವನೆಯನ್ನು ಹಿಂದೂ ಧರ್ಮವು ಪಾಪಕರವೆಂದು ಬೋಧಿಸುತ್ತಾ ಬಂದಿದೆ ಎಂದೂ ವಾದಿಸಲಾಗುತ್ತದೆ. ನಾಲ್ಕು ವೇದಗಳು, ಪುರಾಣಗಳು, ಭಗವದ್ಗೀತೆ.. ಎಲ್ಲವನ್ನೂ ಗೋಮಾಂಸ ಸೇವನೆಯ ವಿರೋಧಕ್ಕೆ ಆಧಾರವಾಗಿ ಆಧುನಿಕ ಗೋರಕ್ಷಕರು ನೀಡುತ್ತಾ ಬಂದಿದ್ದಾರೆ. ಇದು ನಿಜವೇ ಆಗಿದ್ದರೆ ಯಾಕೆ ಗೋಮಾಂಸ ಸೇವಕರಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಹಿಂದೂ ಧರ್ಮಾನುಯಾಯಿಗಳು ಈಗಲೂ ಇದ್ದಾರೆ? ಹಿಂದೂ ಧರ್ಮದ ಇಷ್ಟು ದೀರ್ಘ ಇತಿಹಾಸವೂ ಅವರನ್ನು ಈವರೆಗೂ ಬದಲಿಸದಿರಲು ಕಾರಣವೇನು? ನಿಜವಾಗಿ ಯಾವುದೇ ಒಂದು ಧರ್ಮದ ಮೂಲಭೂತ ನಿಯಮಗಳು ಸಾರಾಸಗಟು ಅವಜ್ಞೆಗೆ ಒಳಗಾಗಲು ಸಾಧ್ಯವೇ ಇಲ್ಲ. ಉಲ್ಲಂಘನೆಯ ಅಲ್ಲೊಂದು ಇಲ್ಲೊಂದು ಪ್ರಕರಣಗಳು ನಡೆಯಬಹುದು. ಮಾತ್ರವಲ್ಲ, ಯಾರಾದರೂ ಈ ಉಲ್ಲಂಘನೆಯನ್ನು ಪ್ರಶ್ನಿಸುತ್ತಾರೋ ಅನ್ನುವ ಭಯವೂ ಆ ಉಲ್ಲಂಘಕರಲ್ಲಿ ಇದ್ದೇ ಇರುತ್ತದೆ. ಮೂರ್ತಿ ಪೂಜೆ ಹಿಂದೂ ಧರ್ಮದ ಮತಾಚಾರ್ಯರ ಪ್ರಕಾರ ಮೂಲಭೂತ ನಿಯಮ. ವೇದಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಉಲ್ಲೇಖಗಳಿವೆ ಎಂಬ ವಾದವೇನೇ ಇರಲಿ, ಹಿಂದೂ ಧರ್ಮದ ಆಧುನಿಕ ಗುರುಗಳು ಮೂರ್ತಿಪೂಜೆಯನ್ನು ಹಿಂದೂ ಧರ್ಮದ ಪ್ರಮುಖ ಆರಾಧನಾ ವಿಧಾನವಾಗಿ ಪರಿಗಣಿಸಿದ್ದಾರೆ. ಹಾಗಂತ ಮೂರ್ತಿಪೂಜೆಯನ್ನು ಮಾಡದವರೂ ಇರಬಹುದು. ಮೂರ್ತಿಪೂಜೆಯ ಸಿಂಧುತ್ವವನ್ನೇ ಪ್ರಶ್ನಿಸುವವರೂ ಇರಬಹುದು. ಆದರೆ ಇವರೆಂದೂ ಮೂರ್ತಿಯನ್ನು ಬಹಿರಂಗವಾಗಿ ಒಡೆದು ಹಾಕುವುದಾಗಲಿ, ಒಡೆಯುವವರನ್ನು ಬಹಿರಂಗವಾಗಿ ಬೆಂಬಲಿಸುವುದಾಗಲಿ ಎಲ್ಲೂ ಮಾಡಿಲ್ಲ. ಇದು ಹಿಂದೂ ಧರ್ಮದಲ್ಲಿ ಮೂರ್ತಿಪೂಜೆಗಿರುವ ಐತಿಹಾಸಿಕ ಪರಂಪರೆಯನ್ನು ಒತ್ತಿ ಹೇಳುತ್ತದೆ. ವಿಗ್ರಹಕ್ಕೆ ಹಾಲು ಬೇಕೋ, ನೈವೇದ್ಯ ಅರ್ಪಿಸಬೇಕೋ, ಎಳನೀರಿನಿಂದ ಶುದ್ಧಗೊಳಿಸ ಬೇಕೋ.. ಇತ್ಯಾದಿ ಪ್ರಶ್ನೆಗಳೆಲ್ಲದರಲ್ಲೂ ಒಂದು ಒಳ ಸತ್ಯವಿದೆ. ಈ ಪ್ರಶ್ನೆಗಳು ಮೂರ್ತಿಪೂಜೆಯನ್ನು ಪ್ರಶ್ನಿಸುವುದಿಲ್ಲ. ಅದರ ಆರಾಧನಾ ವಿಧಾನವನ್ನಷ್ಟೇ ಪ್ರಶ್ನಿಸುತ್ತದೆ. ಒಂದು ವೇಳೆ, ಗೋಮಾಂಸ ಸೇವನೆಯ ವಿಷಯದಲ್ಲಿ ಹಿಂದೂ ಧರ್ಮವು ಇಷ್ಟೊಂದು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿರುತ್ತಿದ್ದರೆ ಹಿಂದೂ ಧರ್ಮದ ಅನುಯಾಯಿಗಳು ಗೋಮಾಂಸ ಸೇವನೆಯನ್ನು ತಮ್ಮ ಆಹಾರ ಕ್ರಮವಾಗಿ ಪಾಲಿಸುತ್ತಿರಲು ಹೇಗೆ ಸಾಧ್ಯ? ಇದು ಒಂದೋ ಅವರು ಹಿಂದೂಗಳಲ್ಲ ಎಂಬುದಕ್ಕೆ ಸಾಕ್ಷ್ಯ ವಹಿಸುತ್ತದೆ ಅಥವಾ ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷಿದ್ಧವಲ್ಲ ಎಂದು ಸಾರಿದಂತಾಗುತ್ತದೆ.
     ಒಂದು ರೀತಿಯಲ್ಲಿ, ಹಿಂದೂ ಧರ್ಮದ ನಿಜವಾದ ಪ್ರತಿ ನಿಧಿಗಳು ಯಾರು ಮತ್ತು ಅದಕ್ಕೆ ಬಲವಂತವಾಗಿ ಸೇರ್ಪಡೆಗೊಂಡ ವರು ಯಾರು ಅನ್ನುವುದನ್ನು ಪತ್ತೆ ಹಚ್ಚುವುದಕ್ಕೆ ಗೋವು ಒಂದು ಪರಿಣಾಮಕಾರಿ ಭೂತಗನ್ನಡಿ ಎಂದೂ ಹೇಳಬಹುದು. ಗೋಮಾಂಸ ಸೇವನೆ ಪಾಪಕಾರ್ಯ ಎಂದು ಹೇಳುತ್ತಿರುವುದು ಬ್ರಾಹ್ಮಣ ಸಮೂಹ. ಅದು ಮಾಂಸಾಹಾರವನ್ನೇ ಒಪ್ಪುವುದಿಲ್ಲ. ಇದು ತಪ್ಪು ಎಂದಲ್ಲ. ಆದರೆ ಇದೇ ಸಂದರ್ಭದಲ್ಲಿ ಈ ಬ್ರಾಹ್ಮಣ ಸಮೂಹಕ್ಕಿಂತ ಎಷ್ಟೋ ಪಟ್ಟು ಅಧಿಕ ಸಂಖ್ಯೆಯ ಮಂದಿ ಗೋಮಾಂಸವನ್ನು ಸೇವಿಸುತ್ತಾರೆ. ಮಾಂಸಾಹಾರವನ್ನೂ ಸೇವಿಸುತ್ತಾರೆ. ಅವರೆಲ್ಲರ ಹೆಸರೂ ಹಿಂದೂ ಧರ್ಮದ ಪಟ್ಟಿ ಯಲ್ಲಿದೆ. ಈ ದೇಶದಲ್ಲಿ 80 ಕೋಟಿಗಿಂತ ಅಧಿಕ ಹಿಂದೂ ಧರ್ಮೀಯರಿದ್ದಾರೆ ಎಂದು ಲೆಕ್ಕ ಹಾಕುವಾಗ ಅವರಲ್ಲಿ ಮಾಂಸಾಹಾರಿಗಳು ಮತ್ತು ಗೋಮಾಂಸ ಸೇವಕರೇ ಅಧಿಕವಿದ್ದಾರೆ ಎಂಬುದು ಬಹಿರಂಗ ರಹಸ್ಯ. ಈ ವೈರುಧ್ಯವೇಕೆ? ಇದು ಕೊಡುವ ಸೂಚನೆಯೇನು? ಒಂದೋ ಬ್ರಾಹ್ಮಣರು ನಿಜವಾದ ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತಿಲ್ಲ ಅಥವಾ ಗೋಮಾಂಸ ಮತ್ತು ಮಾಂಸಾಹಾರವನ್ನು ಸೇವಿಸುವ ಈ ದೇಶದ ಬಹುದೊಡ್ಡ ಜನಸಮುದಾಯವನ್ನು ಅಕ್ರಮವಾಗಿ ಹಿಂದೂ ಧರ್ಮದ ಪಟ್ಟಿ ಯಲ್ಲಿಟ್ಟು ಲೆಕ್ಕ ಹಾಕಲಾಗುತ್ತಿದೆ ಎಂಬುದನ್ನೇ ಅಲ್ಲವೇ? ಅಲ್ಲದೇ ಮಾಂಸಾಹಾರವೇ ನಿಷಿದ್ಧವಾಗಿರುವ ಧರ್ಮವೊಂದರಲ್ಲಿ ಮಾಂಸಾಹಾರ ಸೇವಿಸುವ ಅನುಯಾಯಿಗಳ ಸಂಖ್ಯೆಯೇ ಹೆಚ್ಚಿರುವುದಕ್ಕೆ ಸಾಧ್ಯವೇ ಇಲ್ಲ. ಪ್ರಶ್ನೆಗಳು ಹುಟ್ಟಿಕೊಳ್ಳುವುದೂ ಇಲ್ಲೇ. ಈ ದೇಶದ ಮೂಲ ನಿವಾಸಿಗಳು ಯಾರು? ಅವರ ಧರ್ಮ ಯಾವುದಾಗಿತ್ತು? ಆ ಧರ್ಮದ ಆಹಾರ ಕ್ರಮಗಳಿಗೂ ಇವತ್ತು ಹಿಂದೂ ಧರ್ಮದ ಅಧಿಕೃತ ಪ್ರತಿನಿಧಿಗಳೆಂದು ಹೇಳುವವರ ಆಹಾರ ಕ್ರಮಗಳಿಗೂ ನಡುವೆ ತಾಳಮೇಳವಿದೆಯೇ? ಅವರ ಉಡುಪಿನ ಶೈಲಿ ಹೇಗಿತ್ತು? ಅವರ ಭಾಷೆ ಯಾವುದಾಗಿತ್ತು? ಆರಾಧನಾ ವಿಧಾನಗಳು ಹೇಗಿದ್ದುವು? ಬಹುಶಃ ಆರ್ಯರು ಈ ದೇಶಕ್ಕೆ ದಂಡೆತ್ತಿ ಬಂದರು ಎಂಬ ವಾದ ಬಲ ಪಡೆಯುವುದೂ ಇಲ್ಲೇ. ಈ ದೇಶದ ಮೂಲ ನಿವಾಸಿಗಳ ಧರ್ಮ ಮಾಂಸಾಹಾರ ರಹಿತ ಹಿಂದೂ ಧರ್ಮವಾಗಿರುವ ಸಾಧ್ಯತೆ ತೀರಾ ತೀರಾ ತೀರಾ ಕಡಿಮೆ. ಆರ್ಯರು ಕ್ರಮೇಣ ಈ ಉಪಭೂಖಂಡಕ್ಕೆ ಕಾಲಿಡುವ ಸಮಯದಲ್ಲಿ ಇಲ್ಲಿನ ಮೂಲ ನಿವಾಸಿಗಳು ಮಾಂಸಾಹಾರಿಗಳಾಗಿದ್ದರು. ವಿವಿಧ ಬುಡಕಟ್ಟುಗಳಾಗಿ ಬದುಕುತ್ತಿರುವ ಸಮೂಹವೊಂದರ ಮಧ್ಯೆ ಆರ್ಯರು ಪ್ರಾಬಲ್ಯ ಸ್ಥಾಪಿಸಿದರು. ಆರಂಭದಲ್ಲಿ ಈ ಬುಡಕಟ್ಟುಗಳ ಮನ ಗೆಲ್ಲಲಿಕ್ಕಾದರೂ ಆರ್ಯರು ಮಾಂಸಾಹಾರಿಗಳಾಗಿರಬೇಕಾದ ಅನಿವಾರ್ಯತೆಯೇ ಹೆಚ್ಚು. ಅಲ್ಲದೇ ಪುರಾತನ ಕಾಲದಲ್ಲಿ ಬರೇ ಹಣ್ಣು-ಹಂಪಲುಗಳನ್ನು ಮತ್ತು ಸಸ್ಯಾಹಾರವನ್ನು ಮಾತ್ರ ಸೇವಿಸಿಕೊಂಡು ಬದುಕಬಹುದಾದ ವಾತಾವರಣ ಇತ್ತು ಎಂದು ಹೇಳುವ ಹಾಗಿಲ್ಲ. ಕೃಷಿ ಕ್ರಾಂತಿ ನಡೆಯದ ಕಾಲ ಅದು. ಇವತ್ತಿನಂತೆ ಫಸಲು ಕೈಕೊಟ್ಟರೆ, ಅನಾವೃಷ್ಟಿಯಾದರೆ, ಪ್ರತಿಭಟನೆ ಮಾಡಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾದ ವ್ಯವಸ್ಥಿತ ಸರಕಾರಿ ವ್ಯವಸ್ಥೆಯೂ ಅಂದಿನದಲ್ಲ. ಇವತ್ತಿನಂತೆ ಮಾಧ್ಯಮ ಸೌಲಭ್ಯವೂ ಆ ಕಾಲದ ಜನಸಮೂಹಕ್ಕೆ ಲಭ್ಯವಿದ್ದಿರಲಿಲ್ಲ. ಆದ್ದರಿಂದ ಯಾವ ಪ್ರದೇಶದಲ್ಲಿ ಯಾರು ವಾಸಿಸುತ್ತಾರೋ ಅವರಿಗೆ ಅಲ್ಲಿ ಲಭ್ಯವಿರುವುದೇ ಆಹಾರ. ಅದುವೇ ಅವರ ಧರ್ಮ. ಭಾರತಕ್ಕೆ ಆಗಮಿಸಿದ ಆರ್ಯರು ಇದಕ್ಕಿಂತ ಹೊರತಾಗಿ ಬದುಕಿದರು ಎಂದು ನಂಬುವುದಕ್ಕೆ ಸಾಧ್ಯವಿಲ್ಲ. ಮಾಂಸಾಹಾರವಾಗಲಿ ಸಸ್ಯಾಹಾರವಾಗಲಿ ಲಭ್ಯತೆಯನ್ನು ಹೊಂದಿಕೊಂಡು ಸರಿ-ತಪ್ಪು ಅನ್ನಿಸಿಕೊಳ್ಳುತ್ತದೆ. ಪುರಾತನ ಕಾಲದಲ್ಲಿ ಭಾರತೀಯ ಉಪಭೂಖಂಡದಲ್ಲಿ ಎಲ್ಲೆಡೆಯೂ ಸಸ್ಯಾಹಾರ ವಿಫುಲವಾಗಿತ್ತು ಮತ್ತು ಮಾಂಸಾಹಾರವನ್ನು ಸೇವಿಸದೆಯೇ ಈ ಖಂಡದ ಪ್ರತಿ ತಗ್ಗು-ದಿಣ್ಣೆಗಳಲ್ಲೂ ಬದುಕಬಹುದಾದಂತಹ ಸ್ಥಿತಿಯಿತ್ತು ಎಂದು ವಾದಿಸುವುದು ಹಠಮಾರಿತನವಾಗಬಹುದೇ ಹೊರತು ಅದು ವಾಸ್ತವವನ್ನು ಪ್ರತಿನಿಧಿಸಲಾರದು. ಈ ಉಪಭೂಖಂಡದಲ್ಲಿ ಮಾಂಸಾಹಾರಿಗಳೇ ಅಧಿಕ ಇದ್ದರು. ವಿವಿಧ ಬುಡಕಟ್ಟುಗಳಾಗಿ ಅವರು ಗುರುತಿಸಿಕೊಂಡಿದ್ದರು. ಅದುವೇ ಅವರ ಧರ್ಮ, ಸಂಸ್ಕೃತಿ. ಅವರಿಗೆ ಅವರದೇ ಆದ ರೀತಿಯ ಆರಾಧನಾ ವಿಧಾನಗಳಿದ್ದುವು. ಕಲ್ಲುರ್ಟಿ, ಪಂಜುರ್ಲಿ, ಬಬ್ಬರ್ಯೆ, ಪಿಲಿ ಚಾಮುಂಡಿ, ಕೊಡಮಂತಾಯ.. ಮುಂತಾದ ಹೆಸರಿನ ನೂರಾರು ಆರಾಧ್ಯರು ಗಳನ್ನು ಇವತ್ತಿಗೂ ವಿವಿಧ ಬುಡಕಟ್ಟುಗಳು ಆರಾಧಿಸುತ್ತಿರುವುದು ಇದನ್ನೇ ಸೂಚಿಸುತ್ತದೆ. ಇಲ್ಲಿ ಕೋಲ ನಡೆಯುತ್ತದೆ. ಇಲ್ಲಿನ ಆರಾಧನಾ ಪದ್ಧತಿಯ ವಿಧಾನವೇ ಬೇರೆ. ಮೈಯಲ್ಲಿ ದೆವ್ವ ಬರುವ ವಿಶಿಷ್ಟ ಸಂಪ್ರದಾಯ ಇಲ್ಲಿದೆ. ಕೋಳಿ-ಕುರಿ-ಆಡು ಮತ್ತು ಜಾನುವಾರುಗಳನ್ನು ಬಲಿ ಕೊಡುವ ಪದ್ಧತಿಯೂ ಇಲ್ಲಿದೆ. ಇಲ್ಲಿ ಆರಾಧನಾ ಪದ್ಧತಿಯನ್ನು ನೆರವೇರಿಸಿ ಕೊಡುವ ವ್ಯಕ್ತಿಯ ವೇಷ ವಿಧಾನವು ಬ್ರಾಹ್ಮಣ ಸಮೂಹದ ಪುರೋಹಿತರ ವೇಷ ವಿಧಾನಕ್ಕೆ ಯಾವ ರೀತಿಯಲ್ಲೂ ಹೋಲಿಕೆಯಾಗುವುದಿಲ್ಲ. ಇವರ ನಡುವೆ ಹೆಸರಿನಲ್ಲೂ ಉತ್ತರ-ದಕ್ಷಿಣ ಅನ್ನುವಷ್ಟು ವ್ಯತ್ಯಾಸ ಇದೆ. ಸಾಮಾನ್ಯವಾಗಿ, ಒಂದು ಧರ್ಮದ ಅನುಯಾಯಿಗಳನ್ನು ಅವರ ಹೆಸರಿನ ಮೂಲಕ ಗುರುತಿಸಲಾಗುತ್ತದೆ. ಮುಸ್ಲಿಮ್, ಕ್ರೈಸ್ತ, ಯಹೂದಿ, ಸಿಕ್ಖ್.. ಮುಂತಾದ ಧರ್ಮದ ಅನುಯಾಯಿಗಳನ್ನು ಗುರುತಿಸುವುದಕ್ಕೆ ಬಹಳ ಸಾಹಸ ಪಡಬೇಕಾದ ಅಗತ್ಯ ಇಲ್ಲ. ಬೇರೆ ಬೇರೆ ದೇಶಗಳಲ್ಲಿರುವ ಈ ಧರ್ಮದ ಅನುಯಾಯಿಗಳ ಹೆಸರಿನಲ್ಲಿ ಸಣ್ಣ ವ್ಯತ್ಯಾಸ ಕಂಡು ಬಂದರೂ ಅವರನ್ನು ಗುರುತಿಸಲು ಅಸಾಧ್ಯವಾಗುವಷ್ಟು ಈ ವ್ಯತ್ಯಾಸ ದೊಡ್ಡದಿರುವುದಿಲ್ಲ. ಆದರೆ ಭಾರತದಲ್ಲೇ ಇರುವ ಹಿಂದೂ ಧರ್ಮದ ಅನುಯಾಯಿಗಳ ಹೆಸರನ್ನೊಮ್ಮೆ ಪರಿಶೀಲಿಸಿ. ಅವೆಲ್ಲ ತೀರಾ ತೀರಾ ಭಿನ್ನ. ಬಹುಶಃ, ಇವತ್ತು ಹಿಂದೂ ಧರ್ಮದ ಅನುಯಾಯಿಗಳಾಗಿ ಯಾರೆಲ್ಲ ಗುರುತಿಸಿಕೊಂಡಿದ್ದಾರೋ ಅಥವಾ ಆ ಪಟ್ಟಿಯಲ್ಲಿ ಯಾರನ್ನೆಲ್ಲ ಸೇರ್ಪಡೆಗೊಳಿಸಲಾಗಿದೆಯೋ ಅವರೆಲ್ಲ ಮೂಲತಃ ಹಿಂದೂಗಳಲ್ಲ. ಈಗಲೂ ಅಲ್ಲ. ಅವರವರಿಗೆ ಅವರದೇ ಆದ ಬುಡಕಟ್ಟು ಧರ್ಮ ಇದೆ. ಅವರದೇ ಆದ ಆಹಾರ ಕ್ರಮ ಇದೆ. ಸಾಂಸ್ಕ್ರಿತಿಕ ಹಿನ್ನೆಲೆ ಇದೆ. ಆದರೆ ಅವರ ಮೇಲೆ ಬಲವಂತದಿಂದ ಹಿಂದೂ ಧರ್ಮವನ್ನು ಹೇರಲಾಗಿದೆ ಅಥವಾ ತಮ್ಮದೇ ವಿವಿಧ ಕಾರಣಗಳಿಗಾಗಿ ಅವರು ಈ ಧರ್ಮದ ಐಡೆಂಟಿಟಿಯನ್ನು ಸ್ವೀಕರಿಸಿಕೊಂಡಿದ್ದಾರೆ. ಆದರೆ ಇವರು ಅವರಾಗಿಲ್ಲ. ಯಾಕೆಂದರೆ ಇವರ ಧರ್ಮ ಅದಲ್ಲ. ಆದ್ದರಿಂದಲೇ ಇವರು ಮಾಂಸಾಹಾರ ಸೇವಿಸುತ್ತಾರೆ. ಇಂಥವರ ಸಂಖ್ಯೆಯೇ ಈ ದೇಶದಲ್ಲಿ ಬಹುಸಂಖ್ಯಾತವಾಗಿರುವುದರಿಂದಲೇ ಮಾಂಸಾಹಾರ ಸೇವಿಸದವರ ಸಂಖ್ಯೆ ಕಡಿಮೆಯೂ ಮಾಂಸಾಹಾರಿಗಳ ಸಂಖ್ಯೆ ಅಧಿಕವೂ ಆಗಿರುವುದು. ಒಂದು ವೇಳೆ ಗೋಮಾಂಸ ಮತ್ತು ಮಾಂಸಾಹಾರ ಸೇವನೆ ನಿಷೇಧವು ಹಿಂದೂ ಧರ್ಮದ ಮೂಲಭೂತ ನಿಯಮವಾಗಿ ಇರುತ್ತಿದ್ದರೆ ಆ ಧರ್ಮದಲ್ಲಿ ಕನಿಷ್ಠ ಬಹುಸಂಖ್ಯಾತ ಅನುಯಾಯಿಗಳು ಸಸ್ಯಾಹಾರಿಗಳಾಗಿರಬೇಕಿತ್ತು. ಇಸ್ಲಾಮ್‍ನಲ್ಲಿ ಮದ್ಯಪಾನ ನಿಷಿದ್ಧ. ಅದು ಅದರ ಮೂಲಭೂತ ಬೇಡಿಕೆ. ಇವತ್ತಿಗೂ ಇಸ್ಲಾಮಿನ ಬಹುಸಂಖ್ಯಾತ ಅನುಯಾಯಿಗಳು ಮದ್ಯ ಸೇವಿಸುವುದಿಲ್ಲ. ಬಾರ್ ನಡೆಸುವುದಿಲ್ಲ. ಮದ್ಯಪಾನ ಮಾಡುವ ಮುಸ್ಲಿಮರು ಅಲ್ಲೊಂದು ಇಲ್ಲೊಂದು ಸಿಗಬಹುದಾದರೂ ಮುಸ್ಲಿಮ್ ಸಮುದಾಯ ಈಗಲೂ ಅದನ್ನು ಅತ್ಯಂತ ಪ್ರಬಲ ಕೆಡುಕಾಗಿ ಪರಿಗಣಿಸುತ್ತದೆ. ಮುಸ್ಲಿಮ್ ಮದ್ಯಪಾನಿಯೂ ಕದ್ದು ಮುಚ್ಚಿಯೇ ಅದನ್ನು ಸೇವಿಸುತ್ತಾನೆ. ಉಪವಾಸ ಇಸ್ಲಾಮ್‍ನ ಮೂಲಭೂತ ಬೇಡಿಕೆ. ಇವತ್ತಿಗೂ ಬಹುಸಂಖ್ಯಾತ ಮುಸ್ಲಿಮರು ಅದನ್ನು ನಿಷ್ಠೆಯಿಂದ ಪಾಲಿಸುತ್ತಾರೆ. ಇದಕ್ಕೆ ಅಲ್ಲೊಂ ದು ಇಲ್ಲೊಂದು ಅಪವಾದಗಳಿರ ಬಹುದು. ಆದರೆ ಉಪವಾಸದ ಸಿಂಧುತ್ವವನ್ನು ಪ್ರಶ್ನಿಸುವ ಮತ್ತು ಉಪವಾಸದ ಸಮಯದಲ್ಲಿ ಬಹಿರಂಗವಾಗಿ ತಿನ್ನುವ ಪ್ರಕರಣಗಳು ನಡೆಯುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆದರೆ ಮಾಂಸಾಹಾರ ಮತ್ತು ಗೋಮಾಂಸ ಸೇವನೆಗೆ ಸಂಬಂಧಿಸಿ ಹಿಂದೂ ಧರ್ಮದಲ್ಲಿ ಅದು ಸಂಪೂರ್ಣ ತದ್ವಿರುದ್ಧ.
ಯಾಕೆ ಹೀಗೆ? ಇದು ರವಾನಿಸುವ ಸಂದೇಶವೇನು?Thursday, July 6, 2017

ಪ್ರತಿದಿನವೂ ಈದ್ - ಯಾರಿಗೆ, ಹೇಗೆ?

1. ಮನಸ್ಸು
2. ಹೃದಯ
3. ಹೊಟ್ಟೆ
4. ಲೈಂಗಿಕತೆ
ಕ್ರಮಸಂಖ್ಯೆ 1 ಮತ್ತು 2ರಲ್ಲಿ ಲೋಪ ಸಂಭವಿಸಿದರೆ, ಉಪವಾಸ ವ್ರತ ಕೆಡುವುದಿಲ್ಲ. ಆದರೆ ಉಪವಾಸಿಗರಿಗೆ ಸಿಗುವ ಪುರಸ್ಕಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಕ್ರಮಸಂಖ್ಯೆ 3 ಮತ್ತು 4 ಹಾಗಲ್ಲ. ಇದರಲ್ಲಿ ತಪ್ಪುಗಳು ಸಂಭವಿಸಿದರೆ ಉಪವಾಸವೇ ಕೆಡುತ್ತದೆ. ಉದ್ದೇಶಪೂರ್ವಕವಾಗಿ ಏನನ್ನಾದರೂ ತಿಂದರೆ ಅಥವಾ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾದರೆ ಅವರ ಉಪವಾಸ ಮುರಿಯುತ್ತದೆ. ನಿಜವಾಗಿ ರಮಝಾನ್ ತಿಂಗಳ ಉಪವಾಸದ ಪ್ರಮುಖ 4 ಮೈಲುಗಲ್ಲುಗಳಿವು. ಈ 4 ಮೈಲುಗಲ್ಲುಗಳನ್ನು ಷರತ್ತಿಗೆ ಒಳಪಟ್ಟು ದಾಟಲು ಯಾರು ಯಶಸ್ವಿಯಾಗುತ್ತಾರೋ ಅವರೇ ನಿಜವಾದ ಉಪವಾಸಿಗರು. ಬಾಹ್ಯ ನೋಟಕ್ಕೆ ಉಪವಾಸ ಭಾರೀ ಕಷ್ಟದ್ದೇನೂ ಅಲ್ಲ. ಕಚೇರಿಗಳಲ್ಲಿ ಕೆಲಸ ಮಾಡುವವರು ಮತ್ತು ದೈಹಿಕ ಶ್ರಮದ ಅಗತ್ಯವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ಉಪವಾಸ ವ್ರತ ತೀರಾ ಸಲೀಸು. ಶ್ರಮಿಕ ವರ್ಗವನ್ನು ಬಿಟ್ಟರೆ ಉಳಿದಂತೆ ಉಪವಾಸ ವ್ರತದಲ್ಲಿ ತೊಡಗಿಸಿಕೊಂಡವರಲ್ಲಿ ಹೆಚ್ಚಿನವರೂ ಸಹಜವಾಗಿಯೇ ಇರುತ್ತಾರೆ. ಭಾರತದಲ್ಲಿ ಸುಮಾರು 14 ಗಂಟೆಗಳ ಕಾಲ ಉಪವಾಸದ ಅವಧಿಯಿದ್ದರೆ ಗ್ರೀನ್‍ಲ್ಯಾಂಡ್ ದೇಶದ ಕೆಲವು ಪ್ರದೇಶಗಳಲ್ಲಿ 21 ಗಂಟೆ 12 ನಿಮಿಷಗಳಷ್ಟು ದೀರ್ಘಕಾಲ ಉಪವಾಸ ಇರಬೇಕಾಗುತ್ತದೆ. ಐಲ್ಯಾಂಡ್‍ನಲ್ಲಿ 21 ಗಂಟೆಗಳ ಕಾಲ ಉಪವಾಸ ಇರಬೇಕಾಗುತ್ತದೆ. ಫಿನ್ಲೆಂಡ್‍ನಲ್ಲಿ ಸುಮಾರು 20 ಗಂಟೆಗಳ ಅವಧಿ ಯಿದ್ದರೆ ನಾರ್ವೆಯಲ್ಲಿ 19 ಗಂಟೆ 48 ನಿಮಿಷಗಳ ಕಾಲ ಉಪವಾಸ ಇರಬೇಕಾಗುತ್ತದೆ. ನಾರ್ವೆಯ ಬಹುತೇಕ ಪ್ರದೇಶಗಳಲ್ಲಿ ದಿನದ ಮುಕ್ತಾಯ ಮತ್ತು ಬೆಳಗಿನ ಆರಂಭದ ಬಗ್ಗೆ ಯಾವುದೇ ಸೂಚನೆಗಳು ಸಿಗುವುದಿಲ್ಲ. ಜೂನ್ ಮತ್ತು ಜುಲೈ ತಿಂಗಳಲ್ಲಿ ಇಂಥ ಸಂದಿಗ್ಧತೆ ಎದುರಾಗುತ್ತದೆ. ಮಧ್ಯರಾತ್ರಿಯೇ ಸೂರ್ಯ ಉದಯಿಸುವ ಪ್ರಸಂಗ ನಡೆಯುತ್ತದೆ. ಆದ್ದರಿಂದ ಇಂಥ ಪ್ರದೇಶಗಳ ಮಂದಿ ಒಂದೋ ಮಕ್ಕಾದ ಸಮಯಕ್ಕೆ ಅಥವಾ ಹತ್ತಿರದ ರಾಷ್ಟ್ರಗಳ ಸಮಯಕ್ಕೆ ಹೊಂದಿಕೊಂಡು ವ್ರತಾಚರಣೆಯಲ್ಲಿ ತೊಡಗುತ್ತಾರೆ. ಭಾರತದ ಶ್ರಮಿಕ ವರ್ಗಕ್ಕೆ ಹೋಲಿಸಿದರೆ, ಗ್ರೀನ್‍ಲ್ಯಾಂಡ್‍ನ ಶ್ರಮಿಕ ವರ್ಗದ ಉಪವಾಸ ವ್ರತ ದೀರ್ಘ ಅವಧಿಯಿದ್ದು. ಆದರೂ ಮೇಲಿನ 4 ವಿಷಯಗಳಿಗೆ ಸಂಬಂಧಿಸಿ ಉಪವಾಸಿಗ ಷರತ್ತನ್ನು ಪಾಲಿಸದಿದ್ದರೆ ಆ ದೀರ್ಘಾವಧಿಯೂ ವ್ಯರ್ಥವಾಗುತ್ತದೆ. ‘ಯಾರು ಉಪವಾಸವಿದ್ದೂ ಸುಳ್ಳು ಮತ್ತು ಕೆಟ್ಟ ಕೃತ್ಯಗಳಿಂದ ದೂರ ನಿಲ್ಲುವುದಿಲ್ಲವೋ ಅವರು ಅನ್ನ-ಪಾನೀಯವನ್ನು ತ್ಯಜಿಸಬೇಕಾದ ಯಾವ ಅಗತ್ಯವೂ ಇಲ್ಲ’ ಎಂಬ ಪ್ರಸಿದ್ಧ ಪ್ರವಾದಿ ವಚನವೊಂದಿದೆ. ಈ ವಚನ ಮೇಲಿನ 4 ವಿಷಯಗಳನ್ನೂ ಒಳಗೊಳ್ಳುತ್ತದೆ.
     ನಿಜವಾಗಿ ಮನಸ್ಸು ಮತ್ತು ಹೃದಯ ಅತ್ಯಂತ ಹೆಚ್ಚು ಬಳಕೆಗಾಗಿ ಒಳಗಾಗುವ ಪದಪುಂಜಗಳು. ಸಾಹಿತ್ಯ ಕ್ಷೇತ್ರವಂತೂ ಈ ಪದಗಳ ಹೊರತಾಗಿ ಇಲ್ಲವೇ ಇಲ್ಲ ಎಂದು ಹೇಳಬಹುದು. ಹೃದಯವನ್ನು ಕೇಂದ್ರೀಕರಿಸಿ ಕವನಗಳು, ಕತೆಗಳು, ಚಿತ್ರಕತೆಗಳು, ಕಾದಂಬರಿ, ನಾಟಕ, ಪ್ರಬಂಧ, ಲಲಿತ ಪ್ರಬಂಧಗಳು, ಸಿನಿಮಾ, ಕವಿಗೋಷ್ಠಿಗಳು ಇತ್ಯಾದಿ ಕೋಟ್ಯಾಂತರ ಪ್ರಮಾಣದಲ್ಲಿ ನಡೆದಿವೆ. ಮನಸ್ಸುಗಳಲ್ಲಿ ಮೃದು ಮನಸು, ಹದ ಮನಸ್ಸು, ಕಠೋರ ಮನಸ್ಸು, ವಂಚಕ ಮನಸ್ಸು, ಕೀಚಕ ಮನಸ್ಸು, ಉಗ್ರ ಮನಸ್ಸು, ಇರಿವ ಮನಸ್ಸು, ಶುದ್ಧ ಮನಸ್ಸು... ಹೀಗೆ ನೂರಾರು ಇವೆ. ಮನುಷ್ಯನ ವರ್ತನೆಗೂ ಮನಸ್ಸಿಗೂ ಸಂಬಂಧ ಇದೆ. ಮನುಷ್ಯನ ಮಾತಿಗೂ ಹೃದಯಕ್ಕೂ ಸಂಬಂಧ ಇದೆ. ಹೃದಯ ಗೆಲ್ಲುವುದು, ಹೃದಯವಂತಿಕೆ, ಮನಸೂರೆಗೊಳ್ಳುವುದು, ಹೃದ್ಯಮಾತು, ಹೃದಯ ಕದಿಯುವುದು... ಹೀಗೆಲ್ಲ ಹೇಳುವುದಿದೆ. ಹರೆಯದಲ್ಲಿ ಹೃದಯಕ್ಕೆ ಮೊದಲು ಸ್ಥಾನ. ವ್ಯವಹಾರಗಳಲ್ಲಿ ಮನಸಿನದ್ದೇ ಪಾರುಪತ್ಯ. ಜಗತ್ತು ಬಹುತೇಕ ಈ ಎರಡರ ಮೇಲೆ ನಿಂತಿದೆ. ನೀವು ಹೇಗೆ ಮಾತಾಡುತ್ತೀರಿ ಅನ್ನುವುದು ಇದರಲ್ಲಿ ಮೊದಲಿನದಾದರೆ, ನೀವು ಎಷ್ಟು ಪರಿಶುದ್ಧರು ಅನ್ನುವುದು ಎರಡನೆಯದು. ಓರ್ವ ವ್ಯಾಪಾರಿ ಮೆದುಳಿನಿಂದಲೂ ಮಾತಾಡಬಹುದು, ಹೃದಯದಿಂದಲೂ ಮಾತಾಡಬಹುದು. ಹೃದಯದಿಂದ ಆಡುವ ಮಾತು ಪ್ರಾಮಾಣಿಕ ವಾಗಿರುತ್ತದೆ ಮತ್ತು ಅದು ಇನ್ನೊಬ್ಬರ ಹೃದಯಕ್ಕೆ ತಟ್ಟುತ್ತದೆ. ಮಾತು ಎಷ್ಟು ಪ್ರಬಲ ಅಂದರೆ ಅದು ಸಂಬಂಧಗಳನ್ನು ಕೆಡಿಸು ತ್ತದೆ. ಸಂಗಾತಿಯನ್ನು ದೂರ ಮಾಡುತ್ತದೆ. ಅಪರಾಧ ಕೃತ್ಯಗಳಿಗೆ ಪ್ರೇರಕವಾಗುತ್ತದೆ. ಕಣ್ಣೀರಿಗೂ, ದ್ವೇಷಕ್ಕೂ ಕಾರಣವಾಗುತ್ತದೆ. ಅನೇಕ ಬಾರಿ ಮಾತು ಮರುಳುಗೊಳಿಸುತ್ತದೆ. ವಂಚಿಸುತ್ತದೆ. ಅಪರಿಚಿತ ವ್ಯಕ್ತಿಯೊಬ್ಬರು ನಮ್ಮನ್ನು ಭೇಟಿಯಾಗುತ್ತಾರೆ. ಮಾತಿನ ಮೂಲಕ ನಮ್ಮನ್ನು ಪ್ರಭಾವಿತಗೊಳಿಸುತ್ತಾರೆ. ಅವರ ಮೇಲೆ ನಾವು ವಿಶ್ವಾಸವಿಡುವುದಕ್ಕೆ ಅವರ ಮಾತುಗಳ ಹೊರತು ಇನ್ನಾ ವುದೂ ಇರುವುದಿಲ್ಲ. ತನ್ನ ಪರ್ಸು ಕಳೆದುಹೋಗಿದೆ, ತನ್ನನ್ನು ಮನೆಯವರು ಹೊರಕ್ಕಟ್ಟಿದ್ದಾರೆ, ತನ್ನ ಮನೆ-ಮಾರು ಬಿದ್ದು ಹೋಗಿದೆ, ಊರಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ... ಮುಂತಾದ ಕಾರಣ ಗಳನ್ನು ಹೇಳುತ್ತಾ ಸಂಕಷ್ಟ ತೋಡಿಕೊಳ್ಳುವ ವ್ಯಕ್ತಿಗೆ- ಅದಕ್ಕೆ ಪುರಾವೆಗಳಿಲ್ಲದಿದ್ದರೂ- ಮಾತಿನ ವೈಖರಿಗೆ ಪ್ರಭಾವಿತಗೊಂಡು ನಾವು ನೆರವಾಗುವುದಿದೆ. ಆತ ಸುಳ್ಳುಗಾರ ಎಂದು ಇನ್ನಾರೋ ನಮ್ಮ ಗಮನಕ್ಕೆ ತಂದಾಗ ನಾವು ವಿಚಲಿತರಾಗುತ್ತೇವೆ. ಮೋಸದ ಅನುಭವವಾಗುತ್ತದೆ. ಪ್ರವಾದಿ ವಚನದ ಮಹತ್ವ ಸ್ಪಷ್ಟವಾಗುವುದು ಇಲ್ಲೇ. ಅಂದಹಾಗೆ,
     ಹೊಟ್ಟೆ ಮತ್ತು ಲೈಂಗಿಕತೆಗೂ ಹತ್ತಿರದ ಸಂಬಂಧ ಇದೆ. ಹೊಟ್ಟೆ ಖಾಲಿ ಇರುವಾತ ಲೈಂಗಿಕ ಚಟುವಟಿಕೆಯಲ್ಲಿ ಪಾಲುಗೊಳ್ಳುವುದು ತೀರಾ ತೀರಾ ಕಡಿಮೆ. ಹೊಟ್ಟೆ ತುಂಬಿದ ಕೂಡಲೇ ಹೊಟ್ಟೆಯ ಹೊರತಾದ ಇತರ ವಿಷಯಗಳು ಮುನ್ನಲೆಗೆ ಬರುತ್ತವೆ. ಇದು ಹಸಿವಾಗುವ ವರೆಗೆ ಮಾತ್ರ. ಹಸಿವು ಪ್ರಾರಂಭವಾದ ತಕ್ಷಣ ಉಳಿದ ವಿಷಯಗಳೆಲ್ಲ ಹಿನ್ನೆಲೆಗೆ ಸರಿದು ಹೊಟ್ಟೆ ತುಂಬಿಸುವುದು ಮುಖ್ಯ ವಿಷಯವಾಗಿ ಬಿಡುತ್ತದೆ. ಪ್ರಯಾಣದಲ್ಲಿದ್ದರೂ, ಆಟದಲ್ಲಿದ್ದರೂ, ಭಾಷಣವನ್ನು ಆಲಿಸುತ್ತಿದ್ದರೂ, ಶ್ರಮದ ದುಡಿಮೆಯಲ್ಲಿದ್ದರೂ ಹಸಿವು ಕಾಣಿಸಿಕೊಂಡಾಕ್ಷಣ ಅವುಗಳಿಂದ ಕಳಚಿಕೊಂಡು ಹೊಟ್ಟೆ ತುಂಬಿಸಲು ಮುಂದಾಗುವುದು ಸಹಜವಾಗಿರುತ್ತದೆ. ನಿಜವಾಗಿ ಉಪವಾಸ ವ್ರತ ಎಂಬುದು ಬಾಹ್ಯ ನೋಟಕ್ಕೆ ಹೊಟ್ಟೆಗೆ ಸಂಬಂಧಿಸಿದ್ದು. ಏನನ್ನೂ ತಿನ್ನದೇ ಮತ್ತು ಕುಡಿಯದೇ ಇರುವುದೇ ಉಪವಾಸ ಎಂಬುದು ಸ್ಪಷ್ಟ. ಹೊಟ್ಟೆ ಖಾಲಿಯಿದ್ದಾಗ ಲೈಂಗಿಕ ಬಯಕೆಗಳು ಕಡಿಮೆಯಾಗಿರುತ್ತದೆ ಎಂಬುದು ಸ್ಪಷ್ಟವಿದ್ದೂ ಲೈಂಗಿಕ ಸಂಬಂಧವು ಉಪವಾಸವನ್ನು ಕೆಡಿಸುತ್ತದೆ ಎಂಬ ವಿಶೇಷ ಉಲ್ಲೇಖವನ್ನು ಮಾಡಿರುವುದಕ್ಕೆ ಕಾರಣವೇನು? ಬಹುಶಃ ಸ್ವಶಿಸ್ತು ಎಂಬ ಮೂಲಭೂತ ಉದ್ದೇಶವೊಂದು ಇದರ ಹಿಂದಿದೆ ಎಂದೇ ಹೇಳಬೇಕಾಗುತ್ತದೆ. ಲೈಂಗಿಕತೆ ಎಂಬುದು ಜೀವಾಸ್ತಿತ್ವದ ಬಹುದೊಡ್ಡ ಬೇಡಿಕೆ. ಅದೇ ವೇಳೆ ಈ ಕ್ಷೇತ್ರದಲ್ಲಾಗುವ ಅಶಿಸ್ತು ಬಹುದೊಡ್ಡ ಅರಾಜಕತೆಗೂ ಹತ್ಯೆ-ಹಗೆತನಗಳಿಗೂ ಕಾರಣವಾಗುತ್ತದೆ. ಉಪವಾಸಕ್ಕೆ ಆರಂಭ ಮತ್ತು ಅಂತ್ಯ ಇದೆ. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸದಲ್ಲಿ ಕಳೆಯುವ ವ್ಯಕ್ತಿ ಆ ಬಳಿಕ ಮೊದಲಿನಂತಾಗುತ್ತಾನೆ. ಹೊಟ್ಟೆ ತುಂಬುತ್ತದೆ. ಹೀಗೆ ಒಂದು ತಿಂಗಳ ವರಗೆ ಹೊಟ್ಟೆ ಒಂದು ಶಿಸ್ತಿಗೆ ಒಳಪಡುತ್ತದೆ. ದೇಹದ ಒಳಗಿನ ಎಂಜಿನ್‍ಗಳಿಗೆ ಆ ಮೂಲಕ ವಿರಾಮವೂ ಸಿಗುತ್ತದೆ. ಆಹಾರವನ್ನು ಹೊಟ್ಟೆಯೊಳಗೆ ಕಳುಹಿಸುವ, ಜೀರ್ಣಿಸುವ ಮತ್ತು ಸಂಸ್ಕರಣೆಗೊಳಿಸುವ ಎಲ್ಲ ಅಂಗಾಂಗಗಳಿಗೂ ಸುಮಾರು 15 ಗಂಟೆಗಳ ವಿರಾಮದ ಅವಧಿ ಬಹಳ ಉಪಯುಕ್ತ. ಅದೇವೇಳೆ, ಲೈಂಗಿಕವಾಗಿ ಯಾವ ನಿಯಂತ್ರವೂ ಇಲ್ಲದೆ ಇದ್ದರೆ ಮತ್ತು ಲೈಂಗಿಕ ವಿರಾಮ ಎಂಬ ಮನಸ್ಥಿತಿಗೆ ಅವನು/ಳು ಪಕ್ಕಾಗದೆ ಹೋದರೆ ಅದು ಉಪವಾಸ ನಂತರದ ದಿನಗಳಲ್ಲಿ ಶಿಸ್ತು ಉಲ್ಲಂಘನೆಗೆ ಕಾರಣವಾಗಲೂ ಬಹುದು. ನಿಯಂತ್ರಣ ಎಂಬುದು ಸುಲಭವಾಗಿ ಯಾರಿಗೂ ದಕ್ಕುವುದಿಲ್ಲ. ವಾಹನವು ನಿಯಂತ್ರಣ ತಪ್ಪುವುದಿದೆ. ವ್ಯಕ್ತಿಯು ನಿಯಂತ್ರಣ ಮೀರುವುದಿದೆ. ಆಟಗಾರ, ಉದ್ಯೋಗಿ, ಮ್ಯಾನೇ ಜರ್, ರಾಜಕಾರಣಿ, ದೇಶಗಳು, ಸಂಘಟನೆಗಳು, ದಂಪತಿಗಳು... ಹೀಗೆ ನಿಯಂತ್ರಣ ಮೀರುವ ಸಂದರ್ಭಗಳು ಮತ್ತು ಅದರಿಂದಾಗಿ ಉಂಟಾಗುವ ಅನಾಹುತಗಳು ಪ್ರತಿನಿತ್ಯವೆಂಬಂತೆ ನಡೆಯುತ್ತಲೇ ಇವೆ. ವಾಹನವು ನಿಯಂತ್ರಣ ಕಳಕೊಂಡಾಗ ಅಪಘಾತವಾಗುತ್ತದೆ. ಸಾವೂ ಸಂಭವಿಸುತ್ತದೆ. ವ್ಯಕ್ತಿಯು ನಿಯಂತ್ರಣ ಕಳಕೊಂಡರೆ ಮಾಡಬಾರದ್ದನ್ನು ಮಾಡುತ್ತಾನೆ. ಆಡಬಾರದ್ದನ್ನು ಆಡುತ್ತಾನೆ. ನೋಡಬಾರದ್ದನ್ನು ನೋಡುತ್ತಾನೆ. ಇದರ ಪರಿಣಾಮ ಆತನ ಮೇಲಷ್ಟೇ ಆಗುವುದಲ್ಲ. ಸಮಾ ಜದ ಮೇಲೂ ಕುಟುಂಬದ ಮೇಲೂ ಆಗುತ್ತದೆ. ಪತಿ-ಪತ್ನಿಯರಲ್ಲಿ ಒಬ್ಬರು ಅಥವಾ ಇಬ್ಬರು ನಿಯಂತ್ರಣ ಕಳ ಕೊಂಡರೂ ಪರಿಣಾಮ ಇಬ್ಬರ ಮೇಲೆ ಮಾತ್ರ ಅಲ್ಲ, ಮಕ್ಕಳಿದ್ದರೆ ಮಕ್ಕಳ ಮೇಲೂ, ಅವರಿಬ್ಬರ ಕುಟುಂಬಗಳ ಮೇಲೂ ಮತ್ತು ಸಮಾಜದ ಮೇಲೂ ಆಗುತ್ತದೆ. ಅವರ ನಿಯಂತ್ರಣ ರಹಿತ ಬದುಕಿನಿಂದಾಗಿ ವಿಚ್ಛೇದನ ಏರ್ಪಡಬಹುದು. ಮಕ್ಕಳಿಗೆ ಅನಾಥತೆಯ ಅನುಭವವಾಗಬಹುದು. ಅವರ ಕುಟುಂಬಿ ಕರಿಗೆ ಮರು ಮದುವೆ ಮಾಡಿಸುವ, ಮಕ್ಕಳಿಗೆ ಅನಾಥತೆಯ ಅನುಭವವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎದುರಾಗ ಬಹುದು. ಆಟಗಾರ ನಿಯಂತ್ರಣ ತಪ್ಪಿ ವರ್ತಿಸಿದರೆ ಇನ್ನೋರ್ವ ಆಟಗಾರನ ಜೀವಕ್ಕೇ ಅಪಾಯವಾಗಬಹುದು. ಸಂಘಟನೆಗಳು ನಿಯಂತ್ರಣ ಕಳಕೊಂಡು ಬಿಟ್ಟರೆ, ಸಾಮಾಜಿಕ ಬಿಕ್ಕಟ್ಟುಗಳು ಎದು ರಾಗಬಹುದು. ಅವು ಹುಟ್ಟಿಕೊಂಡ ಉದ್ದೇಶ ಏನಿದೆಯೋ ಅವನ್ನು ಮರೆತು ಪರಸ್ಪರ ತಪ್ಪುಗಳನ್ನು ಹುಡುಕುವುದನ್ನೇ ಪೂರ್ಣಕಾಲಿಕ ಉದ್ದೇಶವಾಗಿ ಅವು ಆರಿಸಿಕೊಳ್ಳಲೂಬಹುದು. ಹಾಗಂತ ದೇಶಗಳು ನಿಯಂತ್ರಣ ಕಳಕೊಂಡರೆ ಏನಾಗುತ್ತದೆ ಎಂದು ಹೇಳಬೇಕಾದ ಅಗತ್ಯವೇ ಇಲ್ಲ. ನೂರಾರು ಜೀವಗಳು ಕ್ಷಣ ಮಾತ್ರದಲ್ಲಿ ದಿವಂಗತರ ಪಟ್ಟಿಯಲ್ಲಿ ಸೇರುವುದಕ್ಕೆ ಅದು ಕಾರಣವಾಗುತ್ತದೆ. ಆದ್ದರಿಂದಲೇ ಉಪವಾಸ ವ್ರತ ಎಂಬುದು ಬಾಹ್ಯ ನೋಟಕ್ಕೆ ಹೊಟ್ಟೆಯನ್ನು ಕೇಂದ್ರೀಕರಿಸಿಕೊಂಡು ಮಾಡ ಲಾಗುವ ಆಚರಣಾ ವಿಧಾನವಾಗಿ ಕಂಡರೂ ಅದು ಅಷ್ಟೇ ಅಲ್ಲ ಮತ್ತು ಅಷ್ಟಾಗುವುದು ಉಪವಾಸ ವ್ರತವೂ ಅಲ್ಲ. ಮನಸ್ಸು, ಹೃದಯ ಮತ್ತು ಲೈಂಗಿಕ ಭಾವನೆ... ಇವುಗಳೂ ಉಪವಾಸಿ ಯಾಗಿರುತ್ತಾ ಹೊಟ್ಟೆಯ ಜೊತೆಗೆ ಸೇರಿಕೊಳ್ಳಬೇಕು. ಆಗಲೇ ಉಪವಾಸ ವ್ರತ ಪರಿಪೂರ್ಣವಾಗುತ್ತದೆ. ಇವತ್ತಿನ ಮೊಬೈಲ್ ಯುಗದಲ್ಲಿ ಹೊಟ್ಟೆಯ ಉಪವಾಸ ಕಷ್ಟ ಅಲ್ಲ. ಆದರೆ ಉಳಿದ ಮೂರು ವಿಷಯಗಳಿಗೆ ಸಂಬಂಧಿಸಿದ ಉಪವಾಸ ಖಂಡಿತ ಕಷ್ಟ. ಒಂದು ತಿಂಗಳ ವರೆಗೆ ಮನಸ್ಸು, ಹೃದಯ ಮತ್ತು ಲೈಂಗಿಕ ಭಾವನೆಗಳಿಗೆ ನಿಯಂತ್ರಣವನ್ನು ಕಲಿಸುವುದು ಮತ್ತು ಶಿಸ್ತು ಬದ್ಧ ಬದುಕಿಗೆ ಪಕ್ಕಾಗುವುದು ಒಂದು ಪ್ರಬಲ ಸವಾಲು. ಈ ಸವಾಲನ್ನು ಜಯಿಸಿದವರಿಗೆ ಈದ್ ಒಂದು ಅದ್ಭುತ ಅನುಭವ. ಉಪವಾಸ ವ್ರತದಿಂದ ಮುಕ್ತವಾಗಿಯೂ ಅವರು ಸ್ವ ನಿಯಂತ್ರಣದ ಭಾವದಲ್ಲಿರುತ್ತಾರೆ. ಆಡಬಾರದ್ದನ್ನು ಆಡುವುದಿಲ್ಲ. ಮಾಡಬಾರದ್ದನ್ನು ಮಾಡುವುದಿಲ್ಲ. ಹೊಟ್ಟೆ ತುಂಬಿದ್ದರೂ ಹೊಟ್ಟೆ ಖಾಲಿಯಾಗಿದ್ದಾಗಿನ ಸ್ವಶಿಸ್ತು ಅವರಲ್ಲಿರುತ್ತದೆ. ಅಂಥವರಿಗೆ ಪ್ರತಿದಿನವೂ ಈದ್. ಇದುವೇ ಈದ್.

Tuesday, June 13, 2017

ರಾತ್ರಿ ಬಿಡಿ, ಹಗಲಲ್ಲಾದರೂ ಸಜ್ಜಾಗಬಾರದೇ?

   ಉಚಿತವಾಗಿ ಸಿಗುವ ಎಲ್ಲದರ ಬಗ್ಗೆಯೂ ಸಮಾಜದಲ್ಲಿ ಒಂದು ಬಗೆಯ ನಿರ್ಲಕ್ಷ್ಯ ಇರುತ್ತದೆ. ನೀರು ಆ ಪಟ್ಟಿಯಲ್ಲಿ
ಸೇರುವಂಥದ್ದು. ನೀರನ್ನು ಬಾಟಲಿಯಲ್ಲಿ ತುಂಬಿಸಿ ಮಾರುವ ಸಣ್ಣ ಮತ್ತು ದೊಡ್ಡದಾದ ಕಂಪೆನಿಗಳು ಅಸಂಖ್ಯ ಇವೆ. ಆದರೆ ಈ ಯಾವ ಕಂಪೆನಿಗಳೂ ನೀರನ್ನು ಸ್ವತಃ ಉತ್ಪಾದಿಸಿ ಮಾರುವುದಿಲ್ಲ. ಯಾವ ಕಂಪೆನಿಯೂ ನೀರನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಬೆಳೆದಿದ್ದರೂ ಮತ್ತು ಮಂಗಳ ಗ್ರಹದಲ್ಲಿ ವರ್ಷಗಟ್ಟಲೆ ಉಳಿದುಕೊಂಡು ನೀರಿದೆಯೋ ಎಂದು ಸಂಶೋಧನೆ ನಡೆಸುವ ಸಾಮರ್ಥ್ಯ ಬಂದಿದ್ದರೂ ಒಂದು ಹನಿ ನೀರನ್ನು ಉತ್ಪಾದಿಸುವ ಶಕ್ತಿ ವಿಜ್ಞಾನಕ್ಕಿನ್ನೂ ದಕ್ಕಿಲ್ಲ. ಒಂದೊಮ್ಮೆ ಮಾನವನು ಮಂಗಳ ಗ್ರಹದಲ್ಲಿ ಬದುಕಲು ತೀರ್ಮಾನಿಸಿದನೆಂದಾದರೆ, ಅದಕ್ಕಾಗಿ ಆಮ್ಲಜನಕವನ್ನು ಕೃತಕವಾಗಿ ತಯಾರಿಸಬಹುದು. ಆದರೆ ನೀರನ್ನು ಪ್ರಯೋಗಾಲಯದಲ್ಲಿ ತಯಾರಿಸಲು ಸಾಧ್ಯವಿಲ್ಲವಲ್ಲ. ಆದ್ದರಿಂದ ಮಂಗಳ ಗ್ರಹದಲ್ಲಿ ಜೀವಿಸಬಹುದೇ ಎಂಬುದು ಅಲ್ಲಿ ನೀರು ಲಭ್ಯವಿದೆಯೇ ಎಂಬುದನ್ನು ಹೊಂದಿಕೊಂಡಿದೆ. ನಮ್ಮ ನಡುವೆ ಬಾಟಲಿಯಲ್ಲಿ ನೀರು ತುಂಬುವ ಕಂಪೆನಿಗಳು ಜಾಸ್ತಿಯಾಗುತ್ತಾ ಹೋದಷ್ಟು ಭೂಮಿಯಲ್ಲಿರುವ ನೀರು ಬಸಿಯುತ್ತಾ ಹೋಗುತ್ತದೆ. ಪ್ರಕೃತಿ ಅಥವಾ ದೇವನು ನಿಯಮಿತವಾಗಿ ಮಳೆ ಸುರಿಸುತ್ತಾನೆ. ಭೂಮಿಯ ಒಡಲು ತುಂಬುತ್ತದೆ. ನಮ್ಮ ದಾಹ ಇಂಗುತ್ತದೆ. ಇಂಥದ್ದೊಂದು ಪ್ರಕ್ರಿಯೆಯಲ್ಲಿ ಸದ್ಯ ಜಗತ್ತು ಬದುಕುತ್ತಿದೆ. ವಿಶೇಷ ಏನೆಂದರೆ, ನೀರು ಮಾನವ ನಿರ್ಮಿತ ಅಲ್ಲ ಎಂಬುದನ್ನು ಮತ್ತು ಅದು ಪ್ರಕೃತಿಯ ಅತ್ಯಮೂಲ್ಯ ಕೊಡುಗೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ‘ನೀವು ಸಮುದ್ರದಲ್ಲಿದ್ದರೂ ನೀರನ್ನು ಪೋಲು ಮಾಡಬಾರದು..’ ಎಂದು ಪ್ರವಾದಿ ಮುಹಮ್ಮದ್ ಹೇಳಿದ್ದಾರೆ. ಎಲ್ಲ ಧರ್ಮಾನುಯಾಯಿಗಳೂ ನೀರಿನ ಅವಲಂಬಿತರು. ನೀರಾದರೋ ದೇವನ ಕೊಡುಗೆ ಎಂದು ಅವರೆಲ್ಲರೂ ಒಪ್ಪುತ್ತಾರೆ. ಆದರೂ ನೀರಿನ ಸಂರಕ್ಷಣೆ ಎಂಬುದು ಯಾಕೆ ಧಾರ್ಮಿಕ ಕರ್ತವ್ಯವಾಗಿ ನಮ್ಮ ನಡುವೆ ಪ್ರಚಲಿತವಾಗಿಲ್ಲ? ಈ ದೇಶದಲ್ಲಿರುವಷ್ಟು ಧಾರ್ಮಿಕ ಸಂಘಟನೆಗಳು ಬಹುಶಃ ಜಗತ್ತಿನಲ್ಲಿ ಎಲ್ಲೂ ಇಲ್ಲ. ಹಿಂದೂ-ಮುಸ್ಲಿಮ್-ಕ್ರೈಸ್ತ-ಬೌದ್ಧ-ಸಿಖ್ಖ್... ಹೀಗೆ ಎಲ್ಲರಿಗೂ ಈ ಮಾತು ಅನ್ವಯ. ಹಾಗಿದ್ದ ಮೇಲೂ ಕನಿಷ್ಠ ಈ ಬಿರು ಬೇಸಿಗೆಯಲ್ಲಾದರೂ ಪ್ರಮುಖ ಧಾರ್ಮಿಕ ಸಂಘಟನೆಗಳು ಜಲ ಜಾಗೃತಿ ಅಭಿಯಾನವನ್ನು ಕೈಗೊಳ್ಳುತ್ತಿಲ್ಲವಲ್ಲ ಯಾಕೆ? ಪ್ರತಿದಿನ ನಾವು ಪತ್ರಿಕೆ, ಟಿ.ವಿ.ಗಳಲ್ಲಿ ಧಾರ್ಮಿಕ ಸಭೆಗಳ ಸುದ್ದಿಗಳನ್ನು ಓದುತ್ತಲೂ ಆಲಿಸುತ್ತಲೂ ಇರುತ್ತೇವೆ. ಧರ್ಮ ಜಾಗೃತಿಯ ಹೆಸರಲ್ಲಿ ನಡೆಯುವ ಚಟುವಟಿಕೆಗಳ ವಿವರಗಳನ್ನು ಆಲಿಸುತ್ತಿರುತ್ತೇವೆ. ಧರ್ಮದ ಅವಹೇಳನ, ಧರ್ಮ ರಕ್ಷಣೆ... ಇತ್ಯಾದಿಗಳ ಹೆಸರಲ್ಲಿ ಜಗಳವಾಗುವುದು, ಹಲ್ಲೆ ಹತ್ಯೆಗಳವರೆಗೂ ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ನೋಡುತ್ತಿರುತ್ತೇವೆ. ಆದರೆ ಎಲ್ಲೂ ನೀರಿನ ಸಂರಕ್ಷಣೆಯ ಹೆಸರಲ್ಲಿ, ನೀರು ಪೋಲು ಮಾಡಿದ ಕಾರಣದ ನೆಪದಲ್ಲಿ ಹಲ್ಲೆಗಳಾದುದನ್ನು ನೋಡಿದ್ದೇವೆಯೇ? ಯಾಕೆ ನೀರು ನಮ್ಮ ಧರ್ಮದ ಭಾಗವಾಗಿಲ್ಲ? ಧರ್ಮ ರಕ್ಷಣೆಯ ಭಾಗವಾಗಿ ನೀರನ್ನು ನಾವು ಪರಿಗಣಿಸದೇ ಇರುವುದಕ್ಕೆ ಕಾರಣಗಳೇನು? ನೀರು ಮುಕ್ತವಾದ ಇಗರ್ಜಿಗಳು, ದೇವಸ್ಥಾನಗಳು, ಮಠಗಳು, ಮಸೀದಿಗಳು ಎಲ್ಲೂ ಇಲ್ಲ. ನೀರಿಲ್ಲದೇ ಮಸೀದಿಗಳೇ ಇಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ದೇವಸ್ಥಾನಗಳು ನದಿ ತಟದಲ್ಲೋ, ವಿಸ್ತಾರ ಕೊಳಗಳ ಬಳಿಯೋ ನಿರ್ಮಿಸಲ್ಪಟ್ಟಿವೆ. ಧಾರ್ಮಿಕ ಚಟುವಟಿಕೆಗಳು ನೀರನ್ನು ಅವಲಂಬಿಸಿಕೊಂಡಿವೆ ಎಂಬುದಕ್ಕೆ ಇದು ಅತ್ಯುತ್ತಮ ಪುರಾವೆ. ಇಷ್ಟಿದ್ದೂ ಇಂಥ ಮಸೀದಿ-ದೇವಸ್ಥಾನಗಳಿಂದ ಯಾಕೆ ಜಲ ಜಾಗೃತಿ ಅಭಿಯಾನಗಳು ಪ್ರಾರಂಭವಾಗುತ್ತಿಲ್ಲ? ಇಲ್ಲಿರುವ ವಿವಿಧ ಧರ್ಮಗಳು ಮತ್ತು ನೂರಾರು ಸಂಘಟನೆಗಳು ಒಟ್ಟಾಗಿ ಮನೆ ಮನೆ ಜಾಗೃತಿ ಕಾರ್ಯಕ್ರಮಗಳನ್ನು ಯಾಕೆ ಹಮ್ಮಿಕೊಳ್ಳುತ್ತಿಲ್ಲ? ನೀರು ಎಂಬುದು ಯಾವುದೇ ಒಂದು ಧರ್ಮದ ಚಿಹ್ನೆಯನ್ನೋ ಬಣ್ಣವನ್ನೋ ಅಂಟಿಸಿಕೊಂಡು ಬರದ ಅಪ್ಪಟ ದೇವ ಪ್ರತಿನಿಧಿ. ದೇವನಿಗೆ ಹೇಗೆ ನಾವು ನಿರ್ದಿಷ್ಟ ಬಣ್ಣ, ಆಕಾರ, ಭಾಷೆ, ಜಾತಿ, ವೇಷವನ್ನು ತೋಡಿಸಲಾರವೋ ಹಾಗೆಯೇ ನೀರೂ. ಅದು ಸರ್ವವ್ಯಾಪಿ. ದೇವನು ಹೇಗೆ ಯಾರ ಅವಲಂಬಿತನೂ ಅಲ್ಲವೋ ಮತ್ತು ಎಲ್ಲ ಮನುಷ್ಯರೂ ಅವನ ಅವಲಂಬಿತರೋ ಹಾಗೆಯೇ ನೀರೂ ಕೂಡ. ಅದೂ ಯಾರನ್ನೂ ಅವಲಂಬಿಸಿಕೊಂಡಿಲ್ಲ. ಆದರೆ ಜನರೆಲ್ಲ ಅದನ್ನು ಅವಲಂಬಿಸಿಕೊಂಡಿದ್ದಾರೆ. ಹೀಗಿದ್ದೂ ಧರ್ಮದ ಹೆಸರಲ್ಲಿ ಹುಟ್ಟಿಕೊಂಡ ಯಾವ ಪ್ರಮುಖ ಸಂಘಟನೆಗಳೂ ಜಲ ಜಾಗೃತಿಯನ್ನು ಗಂಭೀರವಾಗಿ ಪರಿಗಣಿಸಿರುವುದನ್ನು ನಾವು ಕಾಣುತ್ತಿಲ್ಲ. ಒಂದುವೇಳೆ ಎಲ್ಲ ಸಂಘಟನೆಗಳು ಒಟ್ಟು ಸೇರಿಕೊಂಡು ನೀರಿನ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾದರೆ, ಯಾವ ‘ಎತ್ತಿನ ಹೊಳೆ’ಯೂ ಇಲ್ಲಿ ಅಗತ್ಯವಿರಲಾರದು.
     ಇಂದಿನ ದಿನಗಳ ಬಹುದೊಡ್ಡ ಅಗತ್ಯ ಏನೆಂದರೆ, ನೀರನ್ನು ಧರ್ಮದ ಭಾಗವಾಗಿ ಕಾಣುವುದು. ಹೊಸ ತಲೆಮಾರಿಗೆ ನೀರಿನ ಸಂರಕ್ಷಣೆಯ ಅಗತ್ಯಗಳನ್ನು ಹೇಳಿಕೊಡುವುದು. ನೀರಲ್ಲಿ ದೇವನನ್ನು ಕಾಣು ಎಂದು ಕಲಿಸಿಕೊಡುವುದು. ನೀರು ಧಾರಾಳವಾಗಿ ಲಭ್ಯವಿರುವ ಪ್ರದೇಶದ ಮಂದಿಯೂ ನೀರಿನ ಬರ ಅನುಭವಿಸುತ್ತಿರುವ ಪ್ರದೇಶದ ಮಂದಿಯೂ ನೀರನ್ನು ಮಿತವಾಗಿಯೇ ಮತ್ತು ಪೋಲಾಗದಂತೆಯೇ ಬಳಸಬೇಕಾದ ಅಗತ್ಯ ಇದೆ. ಅದು ಧಾರ್ಮಿಕ ಆದೇಶ. ಸದ್ಯ ನಾವು ಈ ಆದೇಶವನ್ನು ಉಲ್ಲಂಘಿಸಿ ಬದುಕುತ್ತಿರುವುದರಿಂದಲೇ ನೀರಿನ ಲಭ್ಯತೆಯಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಸದ್ಯ ನಮ್ಮ ನಮ್ಮ ಪ್ರದೇಶದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮಳೆ ನೀರನ್ನು ಇಂಗಿಸುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಬೇಕು. ಇದೇನೂ ಕಷ್ಟದ್ದಲ್ಲ. ಎಲ್ಲ ದೇವಸ್ಥಾನ, ಮಠ, ಗುಡಿ, ಮಸೀದಿ, ಚರ್ಚ್‍ಗಳು ಮನಸ್ಸು ಮಾಡಿದರೆ ಇದು ತೀರಾ ತೀರಾ ಸುಲಭ. ತಂತಮ್ಮ ವ್ಯಾಪ್ತಿಯಲ್ಲಿರುವ ಮನೆಗೆ- ಆಯಾ ಸಮುದಾಯದ ಜನರ ಗುಂಪಾದರೂ ಸರಿ-ಭೇಟಿ ಕೊಟ್ಟು ನೀರಿನ ಮಿತವ್ಯಯದ ಅಗತ್ಯವನ್ನು ಹೇಳಬೇಕು. ಜೊತೆಗೇ ನೀರಿಂಗಿಸುವ ಬಗೆಗೂ ತರಬೇತಿಯನ್ನು ನೀಡಬೇಕು. ಬೋರ್‍ವೆಲ್‍ಗಳ ಸುತ್ತ ಗುಂಡಿಕೊರೆದು ನೀರಿಂಗಿಸಲು ಒತ್ತಾಯಿಸಬೇಕು. ನಮ್ಮಲ್ಲಿ ಸಾಕಷ್ಟು ಪಾಳುಬಿದ್ದ ಬೋರ್‍ವೆಲ್‍ಗಳಿವೆ. ನೀರು ಬತ್ತಿಹೋದ ಕಾರಣಕ್ಕಾಗಿ ನಿರ್ಲಕ್ಷ್ಯಕ್ಕೊಳಗಾಗಿ ಹೂಳು ತುಂಬಿಕೊಂಡ ಬಾವಿ, ಕೆರೆಗಳಿವೆ. ಇವುಗಳ ಹೂಳು ಎತ್ತುವ ಬಗ್ಗೆ ಪ್ರಯತ್ನಗಳಾಗಬೇಕು. ಪಾಳು ಬೋರ್‍ವೆಲ್‍ಗಳ ಸುತ್ತ ನೀರಿಂಗಿಸುವಿಕೆಗೆ ವ್ಯವಸ್ಥೆ ಮಾಡಬೇಕು. ಸಾಧ್ಯವಾದರೆ ಸಂಘಟನೆಗಳ ಮಂದಿ ಸ್ವತಃ ಇಂಥದ್ದನ್ನು ಮಾಡಬಹುದು. ಹಾಗೆಯೇ ಪ್ರತಿದಿನ ನೀರು ಪೋಲಾಗುವ ಸಂದರ್ಭಗಳನ್ನು ಪಟ್ಟಿ ಮಾಡಿ ವಿವರಿಸಬೇಕು. ನಳ್ಳಿಯನ್ನು ತೆರೆದಿಟ್ಟು ಬ್ರಶ್ ಮಾಡುವುದೂ ಇದರಲ್ಲಿ ಒಂದು. ಶವರ್‍ನ ಬದಲು ಬಕೆಟ್‍ನಲ್ಲಿ ನೀರು ತುಂಬಿಸಿ ಸ್ನಾನ ಮಾಡುವಂತೆ ವಿನಂತಿಸುವುದೂ ಇನ್ನೊಂದು. ಧರ್ಮದ ಚಟುವಟಿಕೆಗಾಗಿ ಅರ್ಧರಾತ್ರಿಯಲ್ಲೂ ಎದ್ದು ಹೋಗುವಷ್ಟು ಧಾರ್ಮಿಕ ಕಳಕಳಿಯಿರುವವರಿರುವ ಈ ದೇಶದಲ್ಲಿ ಧರ್ಮದ್ದೇ ಭಾಗವಾದ ನೀರಿನ ಸಂರಕ್ಷಣೆಗಾಗಿ ಕನಿಷ್ಠ ಹಗಲಲ್ಲಾದರೂ ಎದ್ದು ನಿಂತರೆ, ಅದಕ್ಕಿಂತ ದೊಡ್ಡದಾದ ಧರ್ಮ ಸೇವೆ ಇನ್ನಾವುದೂ ಇರಲಾರದು.


ಉಮರ್ ಗೆ ಕಲ್ಲೆಸೆದು ತಪ್ಪಿಸಿಕೊಂಡವರ ಬಗ್ಗೆ..


        ಇಂಡಿಯಾ ಟುಡೇ, ಸಿಎನ್‍ಎನ್-ನ್ಯೂಸ್ 18, ಡಿಎನ್‍ಎ, ಝೀ ನ್ಯೂಸ್.. ಮುಂತಾದ ಈ ದೇಶದ ಪ್ರಮುಖ ಸುದ್ದಿ ಚಾನೆಲ್‍ಗಳು ಮೇ 11ರಂದು ಒಂದು ಬ್ರೇಂಕಿಂಗ್ ನ್ಯೂಸನ್ನು ಪ್ರಸಾರ ಮಾಡಿದುವು. ಮರುದಿನ ಈ ದೇಶದ ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಿಕೆಗಳು ಈ ಬ್ರೇಕಿಂಗ್ ನ್ಯೂಸನ್ನು ಮಹತ್ವಪೂರ್ಣ ಸುದ್ದಿಯಾಗಿ ಪ್ರಕಟಿಸಿದುವು. ಸುದ್ದಿ ಹೀಗಿತ್ತು-
ಉಮರ್ ಫಯಾಝರ ಅಂತ್ಯಸಂಸ್ಕಾರದಲ್ಲೂ ಕಲ್ಲೆಸೆತ.
ಇಂಡಿಯಾ ಟುಡೇ ಚಾನೆಲ್ ಹೀಗೆ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಿತು-
- Stone pelting during Lt Ummer Fayaz's funeral
- Youths resort to stone pelting in Kulgam
- Clashes erupt between stone pelters, police

   ಸಾಮಾಜಿಕ ಜಾಲತಾಣಗಳಲ್ಲಂತೂ ಈ ಕಲ್ಲೆಸೆತದ ಸುದ್ದಿಗೆ ಆಕ್ರೋಶಿತ ಪ್ರತಿಕ್ರಿಯೆಗಳು ವ್ಯಕ್ತವಾದುವು. ಕಾಶ್ಮೀರಿಗಳು ಎಷ್ಟು ಶೇಕಡಾ ದೇಶದ್ರೋಹಿಗಳು ಎಂಬುದಕ್ಕೆ ಈ ಕಲ್ಲೆಸೆತವನ್ನು ಪುರಾವೆಯಾಗಿ ಅನೇಕರು ಬಳಸಿಕೊಂಡರು. ಪ್ರಾದೇಶಿಕ ಪತ್ರಿಕೆಗಳಲ್ಲಿ ಈ ಕಲ್ಲೆಸೆತವನ್ನು ಕೇಂದ್ರೀಕರಿಸಿಯೇ ಅಂಕಣಗಳು ಪ್ರಕಟವಾದುವು. ರಾಜಕಾರಣಿಗಳು ಮತ್ತು ಪತ್ರಕರ್ತರು ತಂತಮ್ಮ ನೆಲೆಯಲ್ಲಿ ಈ ಸುದ್ದಿಗೆ ಉಪ್ಪು-ಖಾರ ಸೇರಿಸಿದರು. ಆದರೆ ನಿಜಕ್ಕೂ ಇಂಥದ್ದೊಂದು ಕಲ್ಲೆಸೆತದ ಘಟನೆ ನಡೆದಿದೆಯೇ, ಈ ಸುದ್ದಿಯ ಮೂಲ ಯಾವುದು.. ಎಂಬುದನ್ನು ಸ್ಪಷ್ಟಪಡಿಸಿ ಕೊಳ್ಳುವ ಗೋಜಿಗೇ ಈ ಸುದ್ದಿ ಸ್ಫೋಟಕರಲ್ಲಿ ಯಾರೂ ಹೋಗಿರಲೇ ಇಲ್ಲ. ಒಂದು ವೇಳೆ ಎನ್‍ಡಿಟಿವಿಯ ವರದಿಗಾರ ನಾಸಿರ್ ಮಸೂದಿ ಟ್ವೀಟ್ ಮಾಡದೇ ಇರುತ್ತಿದ್ದರೆ ಮತ್ತು ಕುಲ್ ಗಾಂವ್ ಎಸ್.ಪಿ. (ಸುಪರಿಂಟೆಂಡೆಂಟ್ ಆಫ್ ಪೊಲೀಸ್) ಶ್ರೀಧರ್ ಪಾಟೀಲ್ ನಿಜ ಹೇಳದಿರುತ್ತಿದ್ದರೆ ಈ ಸುದ್ದಿಯ ಇನ್ನೊಂದು ಮುಖ ಜನರಿಗೆ ಗೊತ್ತಾಗುವ ಸಾಧ್ಯತೆಯೂ ಇರಲಿಲ್ಲ.
     ಕಾಶ್ಮೀರದ ಕುಲ್‍ಗಾಂವ್‍ನ ನಿವಾಸಿಯಾಗಿದ್ದ 23 ವರ್ಷದ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಝ ತನ್ನ ಕುಟುಂಬದ ಮದುವೆ ಕಾರ್ಯಕ್ರಮಕ್ಕೆಂದು ಶೋಪಿಯಾನಕ್ಕೆ ಬಂದಿದ್ದರು. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಲ್ಲದೇ ಹತ್ಯೆ ನಡೆಸಿದರು. ಹುಟ್ಟೂರು ಕುಲ್‍ಗಾಂವ್‍ನಲ್ಲಿ ಮೃತದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು. ವಿಶೇಷ ಏನೆಂದರೆ, ಎನ್‍ಡಿಟಿವಿಯ ನಾಸಿರ್ ಮಸೂದಿಯನ್ನು ಹೊರತುಪಡಿಸಿ ರಾಷ್ಟ್ರೀಯ ಮಾಧ್ಯಮಗಳನ್ನು ಪ್ರತಿನಿಧಿಸುವ ಯಾವ ಪತ್ರಕರ್ತರೂ ಕುಲ್‍ಗಾಂವ್‍ನಲ್ಲಿ ಇರಲಿಲ್ಲ. ಅವರೆಲ್ಲ ಶ್ರೀನಗರದಲ್ಲಿದ್ದುಕೊಂಡೇ ಸುದ್ದಿ ಸಂಗ್ರಹ ಮತ್ತು ರವಾನೆಯಲ್ಲಿ ತೊಡಗಿದ್ದರು. ಕಲ್ಲೆಸೆತದ ಬ್ರೇಕಿಂಗ್ ನ್ಯೂಸ್ ಹುಟ್ಟಿದ್ದೂ ಶ್ರೀನಗರದಲ್ಲೇ. ಇದು ಗೊತ್ತಾದದ್ದೇ  ತಡ, ಎನ್‍ಡಿಟಿವಿಯ ನಾಸಿರ್ ಮಸೂದಿ (@nazir_masoodi) ಹೀಗೆ ಟ್ವೀಟ್ ಮಾಡಿದರು-
Reports of stone throwing at the body of Lt Ummar Fayaz are baseless. I was there in Kulgam. Spoke to people. There is sense of loss and disbelief – ಮೇ 10
(ಉಮರ್ ಫಯಾಝರ ಮೃತದೇಹದ ಮೇಲೆ ಕಲ್ಲೆಸೆಯಲಾಗಿದೆ ಎಂಬ ವರದಿಗಳು ಆಧಾರರಹಿತ. ನಾನು ಅಲ್ಲಿದ್ದೆ ಮತ್ತು ಜನರೊಂದಿಗೆ ಮಾತಾಡಿರುವೆ.) ಆ ಬಳಿಕ ನ್ಯೂಸ್ ಲಾಂಡ್ರಿ ವೆಬ್ ಪತ್ರಿಕೆಯೊಂದಿಗೆ ಮಸೂದಿ ವಿವರವಾಗಿ ಮಾತಾಡಿದರು. ಅಲ್ಲದೇ ಕುಲ್‍ಗಾಂವ್‍ನ ಎಸ್‍ಪಿ ಶ್ರೀಧರ್ ಪಾಟೀಲ್ ಕೂಡ ಕಲ್ಲೆಸೆತದ ಸುದ್ದಿಯನ್ನು ನಿರಾಕರಿಸಿದರು: I was there at the procession and the salutation which was given at his village. It went on very peaceful (ಮೃತದೇಹದ ಮೆರವಣಿಗೆ ಮತ್ತು ಸೇನಾ ಗೌರವ ನೀಡುವ ವೇಳೆ ನಾನು ಅಲ್ಲಿದ್ದೆ. ಅದು ಶಾಂತಿಯುತವಾಗಿ ನೆರವೇರಿತು.) ಎಂದು ನೇರವಾಗಿಯೇ ಹೇಳಿದರು. ಇದಾದ ಬಳಿಕ ಇಂಡಿಯಾ ಟುಡೇ ಚಾನೆಲ್ ತನ್ನ ವೆಬ್‍ಸೈಟ್‍ನಿಂದ ‘ಕಲ್ಲೆಸೆತ’ದ ಅಷ್ಟೂ ಸುದ್ದಿಗಳನ್ನು ಅಳಿಸಿ ಹಾಕಿತು. ಆದರೆ ಪ್ರಾದೇಶಿಕ ಪತ್ರಿಕೆಗಳು ಬಿಡಿ, ರಾಷ್ಟ್ರೀಯ ಪತ್ರಿಕೆಗಳೂ ಈ ಸತ್ಯ ಸುದ್ದಿಯನ್ನು ಜನರಿಗೆ ತಲುಪಿಸಲು ನಿರಾಸಕ್ತಿ ತೋರಿದುವು. ದುರಂತ ಏನೆಂದರೆ, ನಾಲ್ಕು ತಿಂಗಳುಗಳ ಹಿಂದೆ ಹಿಝ್ಬುಲ್ ಮುಜಾಹಿದೀನ್‍ನ ನಾಯಕ ಎಂದು ಹೇಳಲಾಗುತ್ತಿರುವ ಬುರ್ಹಾನ್ ವಾನಿಯ ಅಂತ್ಯ ಸಂಸ್ಕಾರದ ವೇಳೆ ಲಕ್ಷದಷ್ಟು ಕಾಶ್ಮೀರಿಗಳು ಸೇರಿರುವುದನ್ನು ಪ್ರಶ್ನಿಸಿದ್ದ ಮತ್ತು ಅವರನ್ನೆಲ್ಲ ದೇಶದ್ರೋಹಿಗಳ ಪಟ್ಟಿಯಲ್ಲಿಟ್ಟು ವಿಶ್ಲೇಷಿಸಿದ್ದ ಮಾಧ್ಯಮಗಳು, ಉಮರ್ ಫಯಾಝïರ ಅಂತ್ಯಸಂಸ್ಕಾರದ ವೇಳೆ ಸೇರಿದ ಜನಸ್ತೋಮವನ್ನು ಲೆಕ್ಕ ಹಾಕುವುದಕ್ಕೆ ಮುಂದಾಗಲೇ ಇಲ್ಲ. ಆ ಜನಸ್ತೋಮವನ್ನು ಎತ್ತಿ ಕೊಂಡು, ನೋಡಿ - ಕಾಶ್ಮೀರದಲ್ಲಿ ಎಷ್ಟು ದೇಶಪ್ರೇಮಿಗಳಿದ್ದಾರೆ ಎಂದು ಹೇಳುವ ಸಾಹಸ ಮಾಡಲೇ ಇಲ್ಲ. ಸುಳ್ಳು ಸುದ್ದಿಯನ್ನು ಸಿಹಿಯಂತೆ ಹಂಚುವ ಮತ್ತು ಹಂಚಲೇಬೇಕಾದ ಸತ್ಯ ಸುದ್ದಿಯನ್ನು ಅವಗಣಿಸುವ ಈ ದ್ವಂದ್ವಕ್ಕೆ ಏನೆನ್ನಬೇಕು? ಇದು ಉದ್ದೇಶಪೂರ್ವಕವೋ ಅಥವಾ ಪ್ರಮಾದವೋ?
ಇದೇ ಮೇ 13-14ರ ನಡುವೆ @beingSandeep  ಅನ್ನುವ ಹೆಸರಿನ ಟ್ವೀಟರ್ ಬಳಕೆದಾರ ಒಂದು ಫೋಟೊವನ್ನು ಹಂಚಿ ಕೊಂಡ. ಎನ್‍ಡಿಟಿವಿಯ ಮಾಜಿ ಮುಖ್ಯ ಸಂಪಾದಕಿ ಬರ್ಖಾದತ್ ಅವರು ಓರ್ವ ಯುವ ಕಾಶ್ಮೀರಿಯ ಸ್ಕೂಟರ್‍ನ ಹಿಂಬದಿ ಸವಾರಳಾಗಿ ಸಾಗುತ್ತಿರುವ ದೃಶ್ಯ. ಆತ ಆ ದೃಶ್ಯದ ಜೊತೆಗೇ ಒಂದು ಪ್ರಶ್ನೆಯನ್ನೂ ಮುಂದಿಟ್ಟ - ‘ಹಿಝ್ಬುಲ್ ಮುಜಾಹಿದೀನ್‍ನ ಕಮಾಂಡರ್ ಝಾಕಿರ್ ಮೂಸಾನ ಜೊತೆ ನೀವಿರುವುದು ನಿಜವೇ? ಭಯೋತ್ಪಾದಕರ ಜೊತೆ ನಿಮಗೇನು ವ್ಯವಹಾರ?’ (Is it true @BDUTT that you were seen with Hizbul mujahidin commander Zakir Musa? What have you got to do with terrorists?) ನಿಜವಾಗಿ ಇಂಥದ್ದೊಂದು  ಪ್ರಶ್ನೆ ಹುಟ್ಟಿಕೊಂಡದ್ದು 2017ರ ಮೇನಲ್ಲಿ ಅಲ್ಲ. 2016 ಆಗಸ್ಟ್ ನಲ್ಲೇ  ಕೆಲವು ಬಲಪಂಥೀಯ ವೆಬ್ ಪತ್ರಿಕೆಗಳು ಇಂಥದ್ದೊಂದು ಅನು ಮಾನವನ್ನು ಹುಟ್ಟು ಹಾಕಿದ್ದುವು. 2016 ಆಗಸ್ಟ್ 18ರಂದು ಸ್ವತಃ ಬರ್ಖಾದತ್ ಅವರೇ ಆ ಪೋಟೋವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. 2016 ಜುಲೈಯಲ್ಲಿ ಪೋಲೀಸರು ಬುರ್ಹಾನ್ ವಾನಿಯನ್ನು ಹತ್ಯೆ ನಡೆಸಿದ ಬಳಿಕ ಕಾಶ್ಮೀರ ಉದ್ವಿಘ್ನ ಸ್ಥಿತಿಯಲ್ಲಿತ್ತು. ಅಂದಿನಿಂದ ಆರಂಭವಾದ ಕಲ್ಲು ತೂರಾಟದ ಪ್ರಕರಣಗಳು ಇಂದಿಗೂ ನಿಂತಿಲ್ಲ. ಬರ್ಖಾ ದತ್ತ್ ಅವರು 2016 ಆಗಸ್ಟ್‍ನಲ್ಲಿ ಕಾಶ್ಮೀರಕ್ಕೆ ತೆರಳಿದರು. ಅಲ್ಲಿನ ಉದ್ವಿಘ್ನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ವರದಿ ಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ಕಾಶ್ಮೀರದಲ್ಲಿ ಪ್ರಯಾಣ ಸುಲಭವಾಗಿರಲಿಲ್ಲ. ವಾಹನಗಳಿಲ್ಲ. ಕರ್ಫ್ಯೂ, ಇಂಟರ್‍ನೆಟ್ ಸೇವೆಗಳ ರದ್ದು, ರಸ್ತೆಗಿಳಿಯದ ಜನರ ಮಧ್ಯೆ ಬರ್ಖಾ ಸಾಗಬೇಕಿತ್ತು. ಆ ಸಂದರ್ಭದಲ್ಲಿ ಅವರು ಓರ್ವ ಸ್ಕೂಟರ್ ಸವಾರನ ಹಿಂಬದಿ ಕೂತು ಪ್ರಯಾಣಿಸಿದರು ಮತ್ತು ಚಿತ್ರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹೀಗೆ ಹಂಚಿಕೊಂಡರು-
For Kashmir curfew days and car drivers refuse to go further - a scooty and a kind young man to the rescue in Budgam - ಆಗಸ್ಟ್ 18, 2016.
ಬರ್ಖಾ ದತ್ ಅವರ ಈ ಟ್ವೀಟ್‍ಗಿಂತ ಒಂದು ದಿನ ಮೊದಲು ಝಾಕಿರ್ ಮೂಸಾನನ್ನು ಹೊಸ ಕಮಾಂಡರ್ ಆಗಿ ನೇಮಿಸಿರುವುದಾಗಿ ಹಿಝ್ಬುಲ್ ಮುಜಾಹಿದೀನ್ ಘೋಷಿಸಿತ್ತು. ಆತನ ಚಿತ್ರವನ್ನು ಇಂಟಿಯಾ ಟುಡೇ ಸೇರಿದಂತೆ ವಿವಿಧ ಟಿ.ವಿ. ಚಾನೆಲ್‍ಗಳು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದುವು. ಆಗಸ್ಟ್ 17ರಂದು ಹಿಝ್ಬುಲ್ ಮುಜಾಹಿದೀನ್‍ನ ಹೊಸ ಕಮಾಂಡರ್ ಆಗಿ ನೇಮಕಗೊಂಡವ ಆಗಸ್ಟ್ 18ರಂದು ರಸ್ತೆಯಲ್ಲಿ ಬರ್ಖಾ ದತ್‍ರನ್ನು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ರಾಜಾರೋಷವಾಗಿ ಸಾಗಲು ಸಾಧ್ಯವೇ? ಹಿಝ್ಬುಲ್ ಮುಜಾಹಿದೀನ್ ಅಂದರೆ, ನಮ್ಮ ಸಶಸ್ತ್ರ ದಳದ ಅಂಗಸಂಸ್ಥೆಯೇನೂ ಅಲ್ಲವಲ್ಲ. ಭಯೋತ್ಪಾದಕ ಸಂಘಟನೆಯೆಂದು ಭಾರತ ಸರಕಾರ ಘೋಷಿಸಿರುವ ಹಿಝ್ಬುಲ್ ಮುಜಾಹಿದೀನ್‍ನ ಕಮಾಂಡರ್ ಓರ್ವ ಬರ್ಖಾ ದತ್‍ಗೆ ಸಿಗುವುದು ಮತ್ತು ಆತ ಅವರನ್ನು ಎಲ್ಲೆಡೆ ಸುತ್ತಾಡಿಸುವುದು ಅಸಾಧ್ಯ ಎಂಬುದು ಎಂಥ ಮುಟ್ಠಾಳರಿಗೂ ಗೊತ್ತಾಗಬಹುದಾದ ಸಂಗತಿಯೇ ಆಗಿದ್ದರೂ ಈ 2017ರಲ್ಲಿ ಮತ್ತೆ ಆ ಪೋಟೋವನ್ನು ಅದರ ಜೊತೆಗೇ ಅನುಮಾನಗಳನ್ನೂ ಮುನ್ನೆಲೆಗೆ ತರಲು ಕಾರಣವೇನು? ಈ ಸ್ಕೂಟರ್ ಪ್ರಕರಣದ ಬಗ್ಗೆ Alt News ನ ಪ್ರತೀಕ್ ಸಿನ್ಹ ಅವರು ತನಿಖೆಗಿಳಿದರು ಮತ್ತು Did Hizbul Mujahideen commander give Burkha Dutt a scooter ride or has the right wing been caught lying again ? ಎಂಬ ಶೀರ್ಷಿಕೆಯಲ್ಲಿ ತಾನು ಕಂಡುಕೊಂಡ ಸತ್ಯಗಳನ್ನೂ ಬಹಿರಂಗಪಡಿಸಿದರು. ನಕಲಿ ಸುದ್ದಿಗಳನ್ನು ಉತ್ಪಾದಿಸಿ ಹಂಚುವ ಹಲವು ಬಲಪಂಥೀಯ ವೆಬ್ ಪತ್ರಿಕೆಗಳನ್ನು ಅವರು ಪತ್ತೆ ಹಚ್ಚಿದರು. ಇತ್ತೀಚೆಗೆ ಸಾಹಿತಿ ಅರುಂಧತಿ ರಾಯ್ ಅವರ ಸುತ್ತ ಹುಟ್ಟಿಕೊಂಡ ವಿವಾದದ ಮೂಲವೂ Postcard.news  ಎಂಬ ಬಲಪಂಥೀಯ ವೆಬ್ ಪತ್ರಿಕೆಯೇ ಆಗಿದೆ. ‘ಕಾಶ್ಮೀರದಲ್ಲಿ ಈಗಿರುವ 7 ಲಕ್ಷ ಯೋಧರ ಸಂಖ್ಯೆಯನ್ನು 70 ಲಕ್ಷಕ್ಕೆ ಏರಿಸಿ ದರೂ ಭಾರತದ ಉದ್ದೇಶ ಸಫಲವಾಗದು..’ ಎಂದು ಟೈಮ್ಸ್ ಆಫ್ ಪಾಕಿಸ್ತಾನ್ ಎಂಬ ಪಾಕಿಸ್ತಾನಿ ಪತ್ರಿಕೆಗೆ ಇದೇ ಮೇ 7ರಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಸಂದರ್ಶನದಲ್ಲಿ ಅರುಂಧತಿ ರಾಯ್ ಹೇಳಿರುವರೆಂದು ಪೋಸ್ಟ್ ಕಾರ್ಡ್ ನ್ಯೂಸ್, ಸತ್ಯವಿಜಯ್ ಡಾಟ್ ಕಾಮ್, ಇಂಡಿಯನ್ ವಾಯ್ಸ್ ಡಾಟ್ ಕಾಮ್ ಮುಂತಾದುವುಗಳು ಹೇಳಿಕೊಂಡಿದ್ದುವು. ಈ ಹೇಳಿಕೆಗೆ ಸಿನಿಮಾ ನಟ ಪರೇಶ್ ರಾವಲ್ ಅವರು ಸಿಟ್ಟಾಗಿ - ‘ಕಾಶ್ಮೀರದಲ್ಲಿ ಸೇನಾ ಜೀಪ್‍ಗೆ ಅರುಂಧತಿಯವರನ್ನು ಕಟ್ಟಬೇಕೆಂದು’ ಟ್ವೀಟ್ ಮಾಡಿದರು. ಸಿಎನ್‍ಎನ್ ನ್ಯೂಸ್ 18 ಟಿ.ವಿ. ಚಾನೆಲ್‍ನ ಭೂಪೇಂದ್ರ ಚೌಬೆಯವರು - ಪರೇಶ್ ರಾವಲ್‍ರ ಹೇಳಿಕೆಯನ್ನು ಟೀಕಿಸಿದರು. ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಯಂತೂ –one book winner wonder like Arundhati Roy .. ಎಂದು ತಮಾಷೆ ಮಾಡಿದರು. ಕೊನೆಗೆ Times of pakistan ಅನ್ನುವ ಪತ್ರಿಕೆಯೇ ಪಾಕಿಸ್ತಾನದಲ್ಲಿಲ್ಲ ಎಂಬುದು ಬಹಿರಂಗವಾಯಿತು. ಅದೊಂದು ವೆಬ್ ಪತ್ರಿಕೆ. ಅರುಂಧತಿ ಅಂಥದ್ದೊಂದು ಸಂದರ್ಶನವನ್ನು ಯಾರಿಗೂ ಕೊಟ್ಟೇ ಇಲ್ಲ. ಆದರೂ ನಕಲಿ ಸುದ್ದಿಯೊಂದು ಎಷ್ಟು ದೊಡ್ಡ ಸಂಚಲನವನ್ನು ಹುಟ್ಟು ಹಾಕಿತೆಂದರೆ, ಹಲವು ಪ್ರಮುಖ ಅಸಲಿ ತಲೆಗಳು ಆ ಬಗ್ಗೆ ಪ್ರತಿಕ್ರಿಯಿಸಿದುವು. ನೀಡದೇ ಇರುವ ಹೇಳಿಕೆಯನ್ನು ನೀಡಿರಬಹುದು ಎಂದು ಜನರು ಅನುಮಾನಿಸುವ ವಾತಾವರಣವನ್ನು ಹುಟ್ಟು ಹಾಕಿದುವು. ಅರುಂಧತಿ ರಾಯ್ ಅವರ ಈ ಹಿಂದಿನ ಬಿಚ್ಚು ಮಾತುಗಳಿಗೆ ಈ ಹೇಳಿಕೆಯನ್ನು ತಳುಕು ಹಾಕುವ ಸನ್ನಿವೇಶಗಳೂ ಸೃಷ್ಟಿಯಾದುವು. ಬಲಪಂಥೀಯ ವಿಚಾರಧಾರೆಯನ್ನು ಪ್ರಶ್ನಿಸುವ ವ್ಯಕ್ತಿಗಳನ್ನು ಅತ್ಯಂತ ಯೋಜಿತವಾಗಿ ಮಟ್ಟ ಹಾಕುವ ಶ್ರಮದಲ್ಲಿ ಹಿಂದುತ್ವ ಡಾಟ್ ಇನ್ಫೊ, ನ್ಯೂಸ್ ಸ್ಟೆಂಡ್ ಡಾಟ್ ನ್ಯೂಸ್, ಲಾಜಿಕಲ್ ಭಾರತ್ ಡಾಟ್ ಕಾಮ್, ಹಿಂದೂಯಿಸಂ ನೌ ಡಾಟ್ ಆರ್ಗ್, ಇಂಡಿಯಾ ರೈಸಿಂಗ್ ಡಾಟ್ ಕಾಮ್, ಅಲ್ಟಾ ದಿನ್ ಡಾಟ್ ಕಾಮ್‍ನಂಥ ಕೆಲವು ವೆಬ್ ಪತ್ರಿಕೆಗಳು ನಿರತವಾಗಿರುವುದರ ಫಲಿತಾಂಶವೇ ಈ ಕಲ್ಲೆಸೆತ, ಬರ್ಖಾದತ್, ಅರುಂಧತಿ ರಾಯ್ ಮುಂತಾದ ನಕಲಿ ಸುದ್ದಿಗಳು. ಪ್ರತೀಕ್ ಸಿನ್ಹ ಈ ಕುರಿತಂತೆ ಅಧ್ಯಯನ ನಡೆಸಿದರು. ‘ಭ್ರಷ್ಟಾಚಾರ ಪ್ರಕರಣದಲ್ಲಿ ಎನ್‍ಡಿಟಿವಿಯ ರವೀಶ್ ಕುಮಾರ್‍ರ ಸಹೋದರಿ ಬಂಧನಕ್ಕೊಳಗಾಗಿದ್ದಾರೆ, ಝೀ ನ್ಯೂಸ್‍ನ ರೋಹಿತ್ ಸರ್ಧಾನರ ವಿರುದ್ಧ ಕೆಲವರು ಫತ್ವಾ ಹೊರಡಿಸಿದ್ದಾರೆ, ಪಶ್ಚಿಮ ಬಂಗಾಳದಲ್ಲಿ ಹಿಂದೂ ಯುವಕನಿಗೆ ಮುಸ್ಲಿಮರಿಂದ ಚಿತ್ರಹಿಂಸೆ ನಡೆದಿದೆ.. ಮುಂತಾದುವುಗಳು ಹಿಂದುತ್ವ ಡಾಟ್ ಇನ್ಫೋನಲ್ಲಿ ಇತ್ತೀಚೆಗೆ ಬಂದಿರುವ ಸುದ್ದಿಗಳು. ಇವೆಲ್ಲವೂ ನಕಲಿಯೇ. ಆದರೆ ಈ ಸುದ್ದಿಯ ನಕಲಿತನ ಗೊತ್ತಾಗುವುದಕ್ಕಿಂತ ಮೊದಲು ಅಸಂಖ್ಯ ಮಂದಿಗೆ ಟ್ವೀಟರ್, ವಾಟ್ಸಾಪ್ ಮತ್ತು ಫೇಸ್‍ಬುಕ್, ಇನ್‍ಸ್ಟಾಗ್ರಾಮ್‍ಗಳ ಮೂಲಕ ತಲುಪಿರುತ್ತದೆ. ಪತ್ರಿಕೆ ಮತ್ತು ಟಿವಿ ಚಾನೆಲ್‍ಗಳ ಮೂಲಕವೂ ಅವು ಪ್ರಸಾರ ಭಾಗ್ಯವನ್ನು ಕಂಡಿರುತ್ತವೆ. ಇಷ್ಟೆಲ್ಲ ಆದ ಬಳಿಕ ಒಂದು ದಿನ ಈ ಸುದ್ದಿಗಳು ನಕಲಿ ಎಂದು ಗೊತ್ತಾದರೂ ಅದನ್ನು ಹಂಚಿಕೊಳ್ಳುವುದಕ್ಕೆ ಅನೇಕ ಬಾರಿ ಈ ಮೊದಲು ಸುದ್ದಿ ಪ್ರಕಟಿಸಿದ ಮಾಧ್ಯಮಗಳೇ ತಯಾರಿರುವುದಿಲ್ಲ. ‘ಉಮರ್ ಫಯಾಜ್ ರ ಕಲ್ಲೆಸೆತ’ ಪ್ರಕರಣವು ಇದಕ್ಕೆ ಇತ್ತೀಚಿನ ಉದಾಹರಣೆ.
ಈ ಸುಳ್ಳುಗಾರರನ್ನು ಸೋಲಿಸುವುದು ಹೇಗೆ?

Tuesday, May 30, 2017

ಬಿಲ್ಕೀಸ್, ನಿರ್ಭಯರ ನಡುವೆ..

      1. ಜಸ್ವಂತ್ ಭಾಯಿ ನೈ, ಗೋವಿಂಗ್ ಭಾಯಿ ನೈ, ಶೈಲೇಶ್ ಭಟ್, ರಾಧೇಶ್ಯಾಂ ಶಾ, ಬಿಪಿನ್ ಚಂದ್ರ ಜೋಷಿ, ಕೇಸರ್ ಭಾಯಿ ವೊಹಾನಿಯಾ, ಪ್ರದೀಪ್ ಮೋರ್ಧಿಯಾ, ಬರ್‍ಭಾಯಿ ವೊಹಾನಿಯ, ರಾಜುಭಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನ.
      2. ಅಕ್ಷಯ್, ಪವನ್, ವಿನಯ್ ಶರ್ಮ ಮತ್ತು ಮುಖೇಶ್.
      ಸಂಖ್ಯೆ ಒಂದು - ಗುಜರಾತ್‍ನ ಬಿಲ್ಕೀಸ್ ಬಾನು ಪ್ರಕರಣದಲ್ಲಿ ಮುಂಬೈ ಹೈಕೋರ್ಟ್‍ನಿಂದ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳ ಹೆಸರುಗಳಾದರೆ ಸಂಖ್ಯೆ ಎರಡು - ದೆಹಲಿಯ ನಿರ್ಭಯ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್‍ನಿಂದ ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಗಳ ಹೆಸರುಗಳಾಗಿವೆ.
ಈ ಎರಡೂ ಪ್ರಕರಣಗಳಲ್ಲಿ ಹೋಲಿಕೆಗಳು ಕಡಿಮೆ. 2002 ಮಾರ್ಚ್‍ನಲ್ಲಿ ಬಿಲ್ಕೀಸ್ ಬಾನು ಪ್ರಕರಣ ನಡೆದಿದ್ದರೆ, 2012 ಡಿಸೆಂಬರ್‍ನಲ್ಲಿ ನಿರ್ಭಯ ಪ್ರಕರಣ ನಡೆದಿದೆ. ಸರಿಸುಮಾರು 10 ವರ್ಷಗಳ ವ್ಯತ್ಯಾಸ. ಬಿಲ್ಕೀಸ್ ಈಗಲೂ ಬದುಕುಳಿದಿದ್ದಾಳೆ. ವಿಶೇಷ ಏನೆಂದರೆ, ನಿರ್ಭಯ ಪ್ರಕರಣಕ್ಕೆ ನಮ್ಮ ನ್ಯಾಯಾಂಗವು ಅಭೂತಪೂರ್ವವಾಗಿ ಸ್ಪಂದಿಸಿದೆ. ಕೇವಲ 5 ವರ್ಷಗಳೊಳಗೆ ಈ ಪ್ರಕರಣ ಹೈಕೋರ್ಟ್‍ನಿಂದ ಸುಪ್ರೀಮ್ ಕೋರ್ಟ್‍ನ ವರೆಗೆ ಚಲಿಸಿ ಅಂತಿಮ ತೀರ್ಪು ಪ್ರಕಟವಾಗಿದೆ. ಅದೇ ವೇಳೆ, ಬಿಲ್ಕೀಸ್ ಬಾನು ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್ ತೀರ್ಪು ನೀಡಿದೆ. ಅದೂ ಘಟನೆ ನಡೆದು ದೀರ್ಘ 15 ವರ್ಷಗಳ ಬಳಿಕ. ಇನ್ನು, ವಾದಿ ಅಥವಾ ಪ್ರತಿವಾದಿಗಳಲ್ಲಿ ಯಾರಾದರೂ ಸುಪ್ರೀಮ್ ಕೋರ್ಟ್‍ಗೆ ಮನವಿ ಸಲ್ಲಿಸಿದರೆ ಪ್ರಕರಣದ ಅಂತಿಮ ತೀರ್ಪು ಹೊರಬೀಳಲು ಇನ್ನಷ್ಟು ಸಮಯ ಕಾಯ ಬೇಕಾದೀತು. ಅಷ್ಟಕ್ಕೂ,
      ನಿರ್ಭಯಾಳಿಗೆ ಅತ್ಯಾಚಾರಿಗಳ ಪರಿಚಯ ಇರಲಿಲ್ಲ. ಬಸ್‍ನಲ್ಲಿ ಅತ್ಯಾಚಾರ ನಡೆಸಲಾಗಿತ್ತು. ಅತ್ಯಾಚಾರಿಗಳು ಕುಡಿತದ ಅಮಲಿನಲ್ಲಿದ್ದರು. ಅತ್ಯಾಚಾರಿಗಳ ಮಾತುಗಾರಿಕೆ, ಹಾವ-ಭಾವಗಳಲ್ಲಿ ಅವರು ಅನಕ್ಷರಸ್ಥರಂತೆ ಕಂಡು ಬರುತ್ತಿದ್ದರು ಎಂದು ನಿರ್ಭಯಳೇ ಹೇಳಿದ್ದಾಳೆ. ಈ ಪ್ರಕರಣ ನಡೆದಿರುವುದು ರಾತ್ರಿಯಲ್ಲಿ. ಅದೇ ವೇಳೆ ಬಿಲ್ಕೀಸ್ ಬಾನುಳ ಮೇಲೆ ಅತ್ಯಾಚಾರ ನಡೆಸಿದವರು ಅಪರಿಚಿತರಾಗಿರಲಿಲ್ಲ. ಗೋಧ್ರೋತ್ತರ ಹತ್ಯಾಕಾಂಡದ ಸಮಯದಲ್ಲಿ ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಒಂದು ಟ್ರಕ್‍ನಲ್ಲಿ ಬಿಲ್ಕೀಸ್ ಮತ್ತು ಆಕೆಯ ಕುಟುಂಬದ 17 ಮಂದಿ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿದ್ದ ಸಮಯದಲ್ಲಿ ಈ ಮೇಲೆ ಉಲ್ಲೇಖಿಸಲಾದ ಮಂದಿ ಮಾರ್ಗ ಮಧ್ಯದಲ್ಲಿ ಟ್ರಕ್ ತಡೆದಿದ್ದರು. 11 ಮಂದಿಯನ್ನು ಸಾಯಿಸಿದ್ದರು. ಆಗ ಬಿಲ್ಕೀಸ್‍ಗೆ 19 ವರ್ಷ. 5 ತಿಂಗಳ ಗರ್ಭಿಣಿ. ಕೈಯಲ್ಲಿ 3 ವರ್ಷ ಪ್ರಾಯದ ಮಗಳು ಸಾಲೆಹ್ ಇದ್ದಳು. ಹಲ್ಲೆಕೋರರು ಆಕೆಯ ಕೈಯಿಂದ ಮಗಳನ್ನು ಕಿತ್ತು ಎಸೆದರು. ಮಗು ಬಂಡೆಗೆ ಅಪ್ಪಳಿಸಿತು. ಬಿಲ್ಕೀಸ್‍ಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಆಕೆಯ ಕಣ್ಣೆದುರೇ ತಂಗಿ ಮತ್ತು ತಾಯಿಯ ಮೇಲೆ ಅತ್ಯಾಚಾರ ಎಸಗಿ ಸಾಯಿಸಲಾಯಿತು. ಈಕೆ ಸತ್ತಿದ್ದಾಳೆಂದು ಅವರು ಬಿಟ್ಟು ಹೋದರು. ಪ್ರಜ್ಞೆ ಬಂದಾಗ ಮೈಯಲ್ಲಿ ಬಟ್ಟೆ ಇರಲಿಲ್ಲ. ಒಂದೂವರೆ ದಿನಗಳ ಕಾಲ ಗುಡ್ಡದಲ್ಲಿ ಆಹಾರ-ಪಾನೀಯಗಳಿಲ್ಲದೇ ಅಡಗಿ ಕುಳಿತು ಬಳಿಕ ಬುಡಕಟ್ಟು ಕಾಲನಿಗೆ ತೆರಳಿ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಆಕೆ ಬದುಕುಳಿದಳು. ಇಲ್ಲಿನ ಪ್ರಮುಖ ಅಂಶ ಏನೆಂದರೆ, ಹತ್ಯೆ ಮತ್ತು ಅತ್ಯಾಚಾರ ನಡೆಸಿದ ಮಂದಿ ಆಕೆಯ ಪರಿಚಿತ ವಲಯದವರೇ ಆಗಿದ್ದರು. ಹಲವು ವರ್ಷಗಳಿಂದ ಅವರು ಆಕೆಯ ಮನೆಯಿಂದ ಹಾಲು ಖರೀದಿಸಿ ಕೊಂಡೊಯ್ಯುತ್ತಿದ್ದ ಯುವಕರಾಗಿದ್ದರು. ಆದ್ದರಿಂದ ಅತ್ಯಾಚಾರ ನಡೆಸಿದವರು ಮತ್ತು ಹತ್ಯೆ ನಡೆಸಿದವರ ಗುರುತಿನ ಬಗ್ಗೆ ಆಕೆಯಲ್ಲಿ ಯಾವ ಗೊಂದಲವೂ ಇರಲಿಲ್ಲ. ಅತ್ಯಾಚಾರ ನಡೆಸಿದ ಜಸ್ವಂತ್ ಭಾಯಿ ನೈ, ಗೋವಿಂದ್ ಭಾಯಿ ನೈ ಮತ್ತು ರಾಧೇ ಶ್ಯಾಂ ಶಾರನ್ನು ನೇಣಿಗೇರಿಸಬೇಕೆಂದು ಸಿಬಿಐಯೂ ಒತ್ತಾಯಿಸಿತ್ತು. ಆದರೆ ಇದೀಗ ಹೈಕೋರ್ಟ್ ಎಲ್ಲ 11 ಆರೋಪಿಗಳಿಗೂ ಜೀವಾವಧಿ ಶಿಕ್ಷೆಯನ್ನಷ್ಟೇ ವಿಧಿಸಿದೆ. ಅದೇ ವೇಳೆ, ನಿರ್ಭಯ ಪ್ರಕರಣದ ಆರೋಪಿಗಳಿಗೆ ಸುಪ್ರೀಮ್ ಕೋರ್ಟು ಮರಣ ದಂಡನೆಯನ್ನು ವಿಧಿಸಿದೆ. ಇಲ್ಲೊಂದು ಪ್ರಶ್ನೆಯಿದೆ.
ಸಾಮೂಹಿಕ ಹಲ್ಲೆ, ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ ಮುಂತಾದುವುಗಳು ಅಸಾಮೂಹಿಕ ಹಲ್ಲೆ, ಹತ್ಯೆ, ಅತ್ಯಾಚಾರಗಳ ಎದುರು ಕಡಿಮೆ ಮಹತ್ವವನ್ನು ಪಡಕೊಳ್ಳುತ್ತ ದೆಯೇ? ಗುಂಪು ಹಲ್ಲೆ, ಗುಂಪುರಹಿತ ಹಲ್ಲೆಗಿಂತ ಕಡಿಮೆ ಮಹತ್ವದ್ದೇ? ಏಕ ವ್ಯಕ್ತಿ ನಡೆಸುವ ಅತ್ಯಾಚಾರಕ್ಕೂ ಗುಂಪು ನಡೆಸುವ ಅತ್ಯಾಚಾರಕ್ಕೂ ನಡುವೆ ವ್ಯತ್ಯಾಸಗಳನ್ನು ಕಲ್ಪಿಸಬೇಕೇ? ಆ ವ್ಯತ್ಯಾಸ ಯಾವ ತರದ್ದು? ಒಂದು ಗಂಭೀರ ಮತ್ತು ಇನ್ನೊಂದು ಸಾಮಾನ್ಯ ಎಂಬ ರೀತಿಯದ್ದೇ? ಬಿಲ್ಕೀಸ್ ಮತ್ತು ನಿರ್ಭಯ ಪ್ರಕರಣಗಳು ಈ ಪ್ರಶ್ನೆಗಳಿಗಾಗಿ ನಮ್ಮ ನಡುವೆ ಚರ್ಚೆಗೊಳಗಾಗಬೇಕು. ಬಿಲ್ಕೀಸ್‍ಳ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ಕೋರ್ಟು ಒಪ್ಪಿಕೊಂಡಿದೆ. ಮಾತ್ರವಲ್ಲ, ವರದಿಯನ್ನು ತಿರುಚಿದ ಆರೋಪದಲ್ಲಿ ಇಬ್ಬರು ವೈದ್ಯರನ್ನೇ ತಪ್ಪಿತಸ್ಥರೆಂದು ಘೋಷಿಸಿದೆ. ಪೊಲೀಸರನ್ನೂ ಶಿಕ್ಷೆಗೊಳಪಡಿಸಿದೆ. ಬಿಲ್ಕೀಸ್‍ಳ 3 ವರ್ಷದ ಮಗಳೂ ಸಹಿತ ಹಲವರ ಹತ್ಯೆಯನ್ನು ಅದು ಒಪ್ಪಿಕೊಂಡಿದೆ. ಆಕೆಯ ತಂಗಿ ಮತ್ತು ತಾಯಿಯ ಮೇಲೂ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಆದರೂ ಮರಣ ದಂಡನೆ ಶಿಕ್ಷೆಗೆ ಅರ್ಹ ಪ್ರಕರಣವಾಗಿ ಇದನ್ನು ಕೋರ್ಟು ಪರಿಗಣಿಸಿಲ್ಲ. ಅದೇ ವೇಳೆ, ನಿರ್ಭಯ ಪ್ರಕರಣದಲ್ಲಿ ಅದು ಮರಣ ದಂಡನೆಯನ್ನು ಎತ್ತಿ ಹಿಡಿದಿದೆ. ಇದಕ್ಕೆ ಕಾರಣವೇನು? ನಿರ್ಭಯ ಪ್ರಕರಣಕ್ಕೆ ಸಿಕ್ಕ ರಾಷ್ಟ್ರೀಯ ಮಹತ್ವವು ತೀರ್ಪಿನ ಮೇಲೆ ಪ್ರಭಾವ ಬೀರಿರಬಹುದೇ? ನಿಜವಾಗಿ, ಗುಂಪು ದಾಳಿ ಅನ್ನುವುದು ಈ ದೇಶದಲ್ಲಿ ಇತ್ತಿತ್ತಲಾಗಿ ಒಂದು ಟ್ರೆಂಡ್ ಆಗಿ ಚಾಲ್ತಿಯಲ್ಲಿದೆ. ದಾದ್ರಿಯಲ್ಲಿ ಅಖ್ಲಾಕ್‍ರನ್ನು ಕೊಂದದ್ದು ಗುಂಪು. ಮುಝಪ್ಫರ್ ನಗರ್‍ನಲ್ಲಿ ಹತ್ಯೆ-ಅತ್ಯಾಚಾರ ನಡೆಸಿದ್ದೂ ಗುಂಪು. ರಾಜಸ್ಥಾನದಲ್ಲಿ ಪೆಹ್ಲುಖಾನ್‍ರನ್ನು ಕೊಲೆಗೈದದ್ದೂ ಗುಂಪು. ಉಡುಪಿಯ ಕೆಂಜಾರಿನಲ್ಲಿ ಪ್ರವೀಣ್ ಪೂಜಾರಿಯನ್ನು ಥಳಿಸಿ ಕೊಂದುದೂ ಗುಂಪು. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ, ಅಕ್ರಮ ಗೋಸಾಗಾಟದ ಹೆಸರಲ್ಲಿ, ಮತಾಂತರದ ಹೆಸರಲ್ಲಿ.. ಹೀಗೆ ಎಲ್ಲ ಸಂದರ್ಭಗಳಲ್ಲೂ ಇವತ್ತು ಗುಂಪುಗಳೇ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತಿದೆ. ನಿರ್ಭಯ ಮತ್ತು ಬಿಲ್ಕೀಸ್ ಪ್ರಕರಣಕ್ಕೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಇದು. ನಿರ್ಭಯದಂಥ ಪ್ರಕರಣ ಧರ್ಮಾಧಾರಿತ ಅಲ್ಲ. ನಿರ್ಭಯಳಿಗೂ ಆಕೆಯನ್ನು ಅತ್ಯಾಚಾರ ನಡೆಸಿದವರಿಗೂ ನಡುವೆ ಹೆಣ್ಣು-ಗಂಡು ಎಂಬ ವ್ಯತ್ಯಾಸದ ಹೊರತು ಇನ್ನಾವ ಪ್ರಮುಖ ವ್ಯತ್ಯಾಸವೂ ಇರಲಿಲ್ಲ. ಕುಡಿತದ ಅಮಲಿನಲ್ಲಿದ್ದ ಅವರಿಗೆ ನಿರ್ಭಯಳೂ ಒಂದೇ ಇನ್ನಾವುದಾದರು ಹೆಣ್ಣೂ ಒಂದೇ. ಅವರಿಗೆ ಹೆಣ್ಣಷ್ಟೇ ಬೇಕಿತ್ತು. ಆದರೆ ಬಿಲ್ಕೀಸ್ ಪ್ರಕರಣ ಹಾಗಲ್ಲ. ಅತ್ಯಾಚಾರಿಗಳು ಒಂದು ಧರ್ಮದವರಾದರೆ, ಅತ್ಯಾಚಾರಕ್ಕೆ ಮತ್ತು ಹತ್ಯೆಗೆ ಒಳಗಾದವರು ಇನ್ನೊಂದು ಧರ್ಮದವರು. ಹಾಗಂತ, ಈ ವ್ಯತ್ಯಾಸ ಕಾಕತಾಳೀಯವೇನೂ ಆಗಿರಲಿಲ್ಲ. ಈ ವ್ಯತ್ಯಾಸವನ್ನು ಗೊತ್ತಿದ್ದೇ ಮಾಡಲಾಗಿತ್ತು. ಈ ಗುಂಪಿನ ಉದ್ದೇಶ ಯಾರನ್ನಾದರೂ ಅತ್ಯಾಚಾರ ಮಾಡುವುದು ಮತ್ತು ಹತ್ಯೆ ನಡೆಸುವುದು ಆಗಿರಲಿಲ್ಲ. ನಿರ್ದಿಷ್ಟ ಧರ್ಮದವರೇ ಅವರ ಗುರಿಯಾಗಿದ್ದರು. ನಿರ್ಭಯ ಪ್ರಕರಣದ ಅಪರಾಧಿಗಳು ಮತ್ತು ಬಿಲ್ಕೀಸ್ ಪ್ರಕರಣದ ಅಪರಾಧಿಗಳು ಮುಖಾಮುಖಿಯಾಗುವುದು ಇಲ್ಲೇ. ಬರೇ ಅತ್ಯಾಚಾರಕ್ಕೂ ನಿರ್ದಿಷ್ಟ ಧರ್ಮದವರನ್ನೇ ಆಯ್ಕೆ ಮಾಡಿ ಮಾಡುವ ಅತ್ಯಾಚಾರಕ್ಕೂ ನಡುವೆ ಯಾವುದು ಹೆಚ್ಚು ಅಪಾಯಕಾರಿ? ಒಂದರಲ್ಲಿ ಅತ್ಯಾಚಾರದ ವಾಂಛೆಯಷ್ಟೇ ಇದ್ದರೆ ಇನ್ನೊಂದರಲ್ಲಿ ಅತ್ಯಾಚಾರದ ಜೊತೆಗೇ ಧಾರ್ಮಿಕ ಅಸಹಿಷ್ಣುತೆ ಮತ್ತು ಜನಾಂಗೀಯ ಮೇಲ್ಮೈ ಯಿದೆ. ತನ್ನ ಕೃತ್ಯದ ಬಗ್ಗೆ ಸ್ಪಷ್ಟ ಅರಿವು ಇದ್ದವರೇ ಈ ಕ್ರೌರ್ಯದಲ್ಲಿ ಪಾಲುಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಬಿಲ್ಕೀಸ್ ಪ್ರಕರಣವು ನಿರ್ಭಯ ಪ್ರಕರಣದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಗಂಭೀರವಾದುದು. ಇಲ್ಲಿ ಅತ್ಯಾಚಾರ ಮತ್ತು ಹತ್ಯೆಯಷ್ಟೇ ನಡೆದಿರುವುದಲ್ಲ. ಅಲ್ಲೊಂದು ಮೇಲುತನದ ಅಹಂ ಇದೆ. ಕ್ರೌರ್ಯವೆಸಗುವುದಕ್ಕೆ ಹೆಣ್ಣಿನ ಮೇಲಿನ ದೈಹಿಕ ಆಸೆಗಿಂತಲೂ ಅಪಮಾನಗೊಳಿಸುವ ಕ್ರೂರತನ ಇದೆ. ವಿಷಾದ ಏನೆಂದರೆ, ಇಷ್ಟೆಲ್ಲ ಇದ್ದೂ ನಿರ್ಭಯರು ಇಲ್ಲಿ ಪದೇ ಪದೇ ಗೆಲ್ಲುತ್ತಾರೆ. ಬಿಲ್ಕೀಸ್‍ರು ಮತ್ತೆ ಮತ್ತೆ ಸೋಲುತ್ತಾರೆ. ಯಾಕೆ ಹೀಗೆ? ಗುಂಪು ದಾಳಿ ಇದಕ್ಕೆ ಕಾರಣವೇ? ಎಣಿಕೆಯ ಕೆಲವರು ಅಪರಾಧ ಕೃತ್ಯದಲ್ಲಿ ಪಾಲುಗೊಳ್ಳುವುದಕ್ಕೂ ಅನೇಕ ಮಂದಿಯ ಗುಂಪೊಂದು ಅಪರಾಧ ಕೃತ್ಯದಲ್ಲಿ ಪಾಲುಗೊಳ್ಳುವುದಕ್ಕೂ ವ್ಯತ್ಯಾಸಗಳಿವೆಯೇ? ಅಂಥ ಪ್ರಕರಣಗಳು ನ್ಯಾಯಾಲಯಗಳಲ್ಲಿ ನಿಲ್ಲುವುದಿಲ್ಲವೇ? ಗುಂಪು ದಾಳಿ ಎಂಬುದು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ಅಡ್ಡದಾರಿಯೇ? ನಿರ್ಭಯ ಪ್ರಕರಣದಲ್ಲಿ ಭಾಗಿಯಾದುದು ಅನೇಕ ಮಂದಿಯ ಗುಂಪಲ್ಲ. 6 ಮಂದಿಯ ಸಣ್ಣ ತಂಡ. ಆ ಕಾರಣದಿಂದಾಗಿಯೇ ಅದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿ ಪರಿಗಣಿತವಾಯಿತೇ? ಶೀಘ್ರ ತೀರ್ಪು ನೀಡುವುದಕ್ಕೂ ಇದುವೇ ಕಾರಣವೇ? ಅನೇಕ ಮಂದಿಯ ಗುಂಪು ಕ್ರೌರ್ಯದಲ್ಲಿ ಭಾಗಿಯಾದರೆ ಆರೋಪಿಗಳನ್ನು ನಿರ್ದಿಷ್ಟವಾಗಿ ಗುರುತಿಸುವುದಕ್ಕೆ ಕಷ್ಟವೇ? ಎಫ್‍ಐಆರ್ ದಾಖಲಿಸುವಾಗ ಪೊಲೀಸರು ಎಡವುದಕ್ಕೂ ಅವಕಾಶವಿರುತ್ತದೆಯೇ? ಕಾನೂನುಭಂಜಕ ಗುಂಪುಗಳು ಇಂಥ ದೌರ್ಬಲ್ಯಗಳ ಲಾಭ ಪಡೆಯುತ್ತಿದ್ದಾರೆಯೇ ಅಥವಾ ಗುಂಪು ದಾಳಿಯನ್ನು ಸಮರ್ಪಕವಾಗಿ ನಿಭಾಯಿಸುವ ಕಾನೂನುಗಳಿದ್ದೂ ಅದರ ಸರಿಯಾದ ಜಾರಿ ಆಗುತ್ತಿಲ್ಲ ಎಂಬುದು ಕಾರಣವೇ? ಬಿಲ್ಕೀಸ್ ಬಾನು ಪ್ರಕರಣವು 15 ವರ್ಷಗಳ ಬಳಿಕವೂ ತಾರ್ಕಿಕ ಅಂತ್ಯ ಕಾಣದಿರಲು ಕಾರಣವೇನು? ಅಹ್ಮದಾಬಾದ್‍ನ ಹಳ್ಳಿಯ ಓರ್ವ ಸಾಮಾನ್ಯ ಮಹಿಳೆ ಇಷ್ಟೊಂದು ದೀರ್ಘ ಅವಧಿಯನ್ನು ತಾಳಿಕೊಳ್ಳಲು ಸಮರ್ಥಳೇ? ಅಂದಹಾಗೆ, ಈ ಪ್ರಕರಣವು ಹೈಕೋರ್ಟ್ ಹಂತವನ್ನಷ್ಟೇ ಮುಗಿಸಿದೆ. ಇನ್ನಷ್ಟೇ ಸುಪ್ರೀಮ್ ಕೋರ್ಟ್‍ನ ವಿಚಾರಣೆ ಆರಂಭವಾಗಬೇಕಿದೆ. ಈ ಪ್ರಕರಣ ಇಷ್ಟು ವಿಳಂಬವಾಗುವುದಕ್ಕೆ ಏನು ಕಾರಣ? ನಿರ್ಭಯ ಪ್ರಕರಣವು ಇಷ್ಟು ಶೀಘ್ರವಾಗಿ ಅಂತ್ಯ ಕಂಡದ್ದು ಹೇಗೆ? ಗುಂಪು ನಡೆಸುವ ಹತ್ಯೆ ಮತ್ತು ಅತ್ಯಾಚಾರಗಳ ಬಗ್ಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯು ನಿಧಾನಗತಿಯನ್ನು ಅನುಸರಿಸುತ್ತಿದೆಯೇ? ಗುಂಪು ನಡೆಸುವ ಕ್ರೌರ್ಯ ಎಷ್ಟೇ ಭೀಕರವಾಗಿರಲಿ ಅದು ಅಪರೂಪದಲ್ಲಿ ಅಪರೂಪ ಪ್ರಕರಣವಾಗುವುದಕ್ಕೆ ಅವಕಾಶ ಇಲ್ಲವೇ? ಸದ್ಯ ದೇಶದಲ್ಲಿ ನಡೆಯುತ್ತಿರುವ ಗುಂಪು ದಾಳಿಗಳಿಗೆ ಇಂಥದ್ದೊಂದು ಲೆಕ್ಕಾಚಾರದ ಬಲವೂ ಇದ್ದಿರಬಹುದೇ? ಅನೇಕ ಮಂದಿಯ ಗುಂಪು ಥಳಿಸಿದರೂ ಕೊಂದರೂ ಅತ್ಯಾಚಾರ ನಡೆಸಿದರೂ ಅದು ಶೀಘ್ರವಾಗಿ ಇತ್ಯರ್ಥವಾಗಲ್ಲ ಮತ್ತು ನಿರ್ಭಯ ಪ್ರಕರಣದಂತೆ ಅಪರೂಪದಲ್ಲಿ ಅಪರೂಪದ ಪ್ರಕರಣವಾಗಲ್ಲ ಎಂಬ ನಂಬಿಕೆ ಇದಕ್ಕೆ ಕಾರಣವಾಗಿರಬಹುದೇ? ಅಷ್ಟಕ್ಕೂ, ಕಾನೂನನ್ನು ಕೈಗೆತ್ತಿಕೊಳ್ಳುವ ಗುಂಪುಗಳಿಗೆ ಕಠಿಣ ಸಂದೇಶ ಕೊಡುವಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಯಾಕೆ ಮತ್ತೆ ಮತ್ತೆ ವಿಫಲವಾಗುತ್ತಿದೆ? ಬಿಲ್ಕೀಸ್ ಬಾನು ಪ್ರಕರಣ ಈ ವಿಫಲತೆಗೆ ಮತ್ತೊಂದು ಪುರಾವೆ ಯಾಕಾಗಬಾರದು?
      ಬಿಲ್ಕೀಸ್ ಮತ್ತು ನಿರ್ಭಯ ಪ್ರಕರಣಗಳ ಮಧ್ಯೆ ವ್ಯತ್ಯಾಸಗಳೆಷ್ಟೇ ಇರಲಿ, ‘ನ್ಯಾಯ ಯಾಕೆ ಹೀಗೆ’ ಎಂಬ ಪ್ರಶ್ನೆಯನ್ನಂತೂ ಇದು ಖಂಡಿತ ಹುಟ್ಟುಹಾಕಿದೆ.

ಮೋಗ್ಲಿ ಗರ್ಲ್ ಮತ್ತು ಮಾಧ್ಯಮ

ಮೋಗ್ಲಿ ಗರ್ಲ್
ಲಕ್ಷಣಗಳು
1. ಪ್ರಾಣಿಗಳಂತೆ ಕೈ-ಕಾಲು ಬಳಸಿ ನಾಲ್ಕು ಕಾಲಿನ ನಡಿಗೆ
2. ಆಹಾರ ಸೇವನೆಗೆ ಕೈ ಬಳಸಲ್ಲ, ನೇರವಾಗಿ ಬಾಯಿಯಿಂದ.
3. ಉದ್ದುದ್ದ ಉಗುರು. ಸಿಕ್ಕುಗಟ್ಟಿದ ಕೂದಲು.
4. ಮೈಮೇಲೆ ಪ್ರಾಣಿಗಳು ಪರಚಿದ ಗಾಯಗಳು.
5. ಮಾತಾಡುವುದಿಲ್ಲ, ಚೀರುತ್ತಾಳೆ.
6. ಪತ್ತೆಯಾಗುವಾಗ ಬೆತ್ತಲೆಯಾಗಿದ್ದಳು..
ಎಪ್ರಿಲ್ 6 ಅಥವಾ 7ರಂದು ಪ್ರಕಟವಾದ ಈ ದೇಶದ ಬಹುತೇಕ ಎಲ್ಲ ಪತ್ರಿಕೆಗಳೂ ಒಂದು ಅಚ್ಚರಿಯ ಸುದ್ದಿಯನ್ನು ಪ್ರಕಟಿಸಿದ್ದುವು. ಈ ಸುದ್ದಿಯು ಮಾಧ್ಯಮಗಳನ್ನು ಎಷ್ಟು ಕುತೂಹಲಕ್ಕೆ ತಳ್ಳಿದ್ದುವೆಂದರೆ, ಬಹುತೇಕ ಎಲ್ಲವೂ ಇದನ್ನು ಮುಖ್ಯ ಸುದ್ದಿಯಾಗಿಯೇ ಪ್ರಕಟಿಸಿದ್ದುವು. ಉತ್ತರ ಪ್ರದೇಶದ ಕಟರ್ನಿಘಾಟ್ ರಕ್ಷಿತಾರಣ್ಯದಲ್ಲಿ ಮಂಗಗಳೊಂದಿಗೆ ವಾಸಿಸುತ್ತಿದ್ದ 8 ವರ್ಷದ ಹೆಣ್ಣು ಮಗುವನ್ನು ಪತ್ತೆ ಹಚ್ಚಲಾಗಿದೆ ಎಂಬುದೇ ಈ ಸುದ್ದಿ. ಸುದ್ದಿಗಳ ಒಟ್ಟು ಸ್ವರೂಪ ಹೀಗಿದೆ..
     ರಕ್ಷಿತಾರಣ್ಯದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಯಾದವ್‍ರ ಕಣ್ಣಿಗೆ ಅಚಾನಕ್ಕಾಗಿ ಬಿದ್ದ ಈ ಮಗುವನ್ನು ರಕ್ಷಿಸಲು ಅವರು ಬಹಳವೇ ಶ್ರಮ ಪಟ್ಟರು. ಅವರ ಮೇಲೆ ಮಂಗಗಳು ದಾಳಿ ಮಾಡಿದುವು. ತಮ್ಮ ಮಗುವಿನಂತೆ ಅವು ಈ ಮಗುವನ್ನು ಬಾಹುಗಳಲ್ಲಿ ಪಡಕೊಂಡವು. ಆದರೂ ಮಾನವ ಬಲಪ್ರಯೋಗದ ಎದುರು ಮಂಗಗಳು ಅಸಹಾಯಕ ವಾದುವು. ಸಾಕಷ್ಟು ಕಾದಾಟ ನಡೆಸಿದ ಬಳಿಕ ಮಗು ಇನ್ಸ್‍ಪೆಕ್ಟರ್ ಅವರ ವಶವಾಯಿತು. ಅವರು ಮಗುವನ್ನು ನೋಡಿದ್ದು ಮಂಗಗಳ ಜೊತೆ ಮರದಲ್ಲಿ. ಮಗು ವಿವಸ್ತ್ರ ವಾಗಿತ್ತು. ಮಂಗಗಳಂತೆ ಚೀರುವುದನ್ನು ಬಿಟ್ಟರೆ ಬೇರೆ ಮಾತು ಅದಕ್ಕೆ ಬರುತ್ತಿರಲಿಲ್ಲ. ಮನುಷ್ಯರನ್ನು ಕಂಡರೆ ಅದು ಭಯದಿಂದ  ದೂರ ಓಡುತ್ತಿತ್ತು.
    ಹಿಂದಿ ದಿನಪತ್ರಿಕೆಯೊಂದು ಮೊಟ್ಟಮೊದಲು ಈ ಮಗು ವಿನ ಕತೆ ಬರೆದು ‘ಮೋಗ್ಲಿ ಗರ್ಲ್’ ಎಂದು ಹೆಸರು ಕೊಟ್ಟಿತು. ಮೋಗ್ಲಿ ಗರ್ಲ್ ಎಂಬುದು ಖ್ಯಾತ ಕತೆಗಾರ ರುಡ್‍ಯಾರ್ಡ್ ಕಿಪ್ಲಿಂಗ್ ಅವರ ದಿ ಜಂಗಲ್ ಬುಕ್ ಎಂಬ ಕಥಾಸಂಕಲನದ ಒಂದು ಪಾತ್ರ. ಇದೊಂದು ಕಾಲ್ಪನಿಕ ಕಥಾ ಸರಣಿ. ಟಿವಿ ಯಲ್ಲಿ ಧಾರಾವಾಹಿಯಾಗಿ ಅಪಾರ ಜನಪ್ರೀತಿಯನ್ನು ಗಳಿಸಿದ ಕಥೆ ಇದು. ಮನುಷ್ಯರ ಸಂಪರ್ಕ ಇಲ್ಲದೇ ಪ್ರಾಣಿಗಳ    ಜೊತೆಗೆ ಕಾಡಿನಲ್ಲೇ  ಬದುಕುವ ‘ಮೋಗ್ಲಿ’ ಎಂಬ ಈ ಮಗು ಧಾರಾವಾಹಿಯಾಗಿ ಮಕ್ಕಳಿಗೆ ತುಂಬ ಇಷ್ಟ. ವಿಶೇಷ ಏನೆಂದರೆ, ಉತ್ತರ ಪ್ರದೇಶದಲ್ಲಿ ಪತ್ತೆಯಾದ ಈ ಮಗುವಿನ ಸುದ್ದಿಯನ್ನು ಪ್ರಕಟಿಸಿದ ಎಲ್ಲ ಪತ್ರಿಕೆಗಳೂ ದಿ ಜಂಗಲ್ ಬುಕ್‍ನ ಪ್ರಸ್ತಾಪ ಮಾಡಿವೆ. ಅದೇ ವೇಳೆ, ಇನ್ನೊಂದು ಹಿಂದಿ ಪತ್ರಿಕೆಯು ಈ ಮಗುವನ್ನು ವನದೇವಿ ಎಂದು ಕರೆಯಿತು. ಜನರು ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರತೊಡಗಿದರು. ಕಾಲು ಮುಟ್ಟಿದರು. ಹಣ ನೀಡತೊಡಗಿದರು. ಕೊನೆಗೆ ಆಸ್ಪತ್ರೆಯ ಆಡಳಿತ ಮಂಡಳಿಯು ಜನರ ಸಂದಣಿಯನ್ನು ನಿಭಾಯಿಸುವುದಕ್ಕಾಗಿ ಕಾವಲುಗಾರರನ್ನು ನೇಮಿಸಿತು. ಹಾಗಂತ,
ಈ ಮಗು ನಿಜಕ್ಕೂ ಮೋಗ್ಲಿಯೇ? ವಾನರ ಜೊತೆಗೆ ಮರಗಳಲ್ಲಿ ಬದುಕುತ್ತಿದ್ದುದು ನಿಜವೇ? ಆಕೆಯನ್ನು ಪತ್ತೆ ಹಚ್ಚಿದ್ದು ಯಾರು, ಎಷ್ಟು ಸಮಯಗಳ ಹಿಂದೆ.. ಇತ್ಯಾದಿ ಓದುಗರ ಮನದಲ್ಲಿ ಹುಟ್ಟಿದ ಪ್ರಶ್ನೆಗಳಿಗೆ ಎಪ್ರಿಲ್ 7ರ ಬಳಿಕದ ಯಾವ ಮಾಧ್ಯಮಗಳೂ ಉತ್ತರವನ್ನು ನೀಡಲಿಲ್ಲ. ಆದರೆ ಕುತೂಹಲಭರಿತ ಕೆಲವರು ಆ ಇಡೀ ಪ್ರಕರಣದ ಹಿಂದಿ    ರುವ ರಹಸ್ಯವನ್ನು ಹುಡುಕಲು ಹೊರಟಾಗ ಪತ್ತೆಯಾದ ವಿವರಗಳೇ ಬೇರೆ.
ರುಡ್‍ಯಾರ್ಡ್ ಕಿಪ್ಲಿಂಗ್ ಅವರ ದಿ ಜಂಗಲ್ ಬುಕ್‍ನ ಮೋಗ್ಲಿಗೂ ಈ ಮಗುವಿಗೂ ಯಾವ ಸಾಮ್ಯತೆಗಳೂ ಇಲ್ಲ. ಈಕೆ ಪತ್ತೆಯಾದದ್ದು ಕಾಡಿನಲ್ಲಲ್ಲ, ಪೊಲೀಸ್ ಔಟ್‍ ಪೋಸ್ಟಿನೆದುರು. ಅದೂ ಜನವರಿ 24ರಂದು. ಪೊಲೀಸ್ ಹೆಲ್ಪ್ ಲೈನ್ ದೂರವಾಣಿ ಸಂಖ್ಯೆ 100ಕ್ಕೆ ಬಂದ ಕರೆಯನ್ನಾಧರಿಸಿ ಮೋತಿ ಪುರದ ಹೆಡ್‍ಕಾನ್‍ಸ್ಟೇಬಲ್ ಸರ್ವಜೀತ್ ಯಾದವ್ ಮತ್ತು ಇಬ್ಬರು ಪೊಲೀಸರು ಈ ಮಗುವನ್ನು ಪತ್ತೆ ಹಚ್ಚಿದರು. ಮಗು ಬೆತ್ತಲೆಯಾಗಿಯೇನೂ ಇರಲಿಲ್ಲ. ಚಡ್ಡಿ ಮತ್ತು ಫ್ರಾಕನ್ನು ತೊಟ್ಟಿತ್ತು. ತೀರಾ ಬಳಲಿದ್ದ ಮತ್ತು ರಸ್ತೆಯಂಚಿನಲ್ಲಿ ಕುಳಿತಿದ್ದ ಮಗು. ಯಾವ ಮಂಗಗಳೂ ಮಗುವಿನ ಬಳಿ ಇರಲಿಲ್ಲ. ಆಕೆ ಪತ್ತೆಯಾದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಜನವಾಸ ಶೂನ್ಯ ಅನ್ನುವಷ್ಟು ಕಡಿಮೆಯಿತ್ತು. ಆಕೆಯನ್ನು ಬಹ್ರೈಕ್‍ನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಹೆಚ್ಚೆಂದರೆ ಆಕೆ 24 ಗಂಟೆಯಷ್ಟು ಹೊತ್ತು ರಸ್ತೆಯಂಚಿನಲ್ಲಿ ಇದ್ದಿರಬಹುದು ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ| ಡಿ.ಕೆ. ಸಿಂಗ್ ಮತ್ತು ಕೆ.ಕೆ. ವರ್ಮಾ ಹೇಳಿದರು. ಇದೇ ಎಪ್ರಿಲ್‍ನಲ್ಲಿ ಆ ಮಗುವನ್ನು ಲಕ್ನೋದ ಮಾನಸಿಕ ಆಸ್ಪತ್ರೆಗೆ ಸೇರಿಸಲಾಯಿತು. ಬಹುಶಃ ಹೆತ್ತವರು ಈ ಮಗುವನ್ನು ರಸ್ತೆಯಂಚಿನಲ್ಲಿ ತೊರೆದು ಹೋಗಿರಬೇಕು. ಒಂದೋ ಮಗು ಕಿವುಡಿ ಮತ್ತು ಮೂಗಿ ಎಂಬ ಕಾರಣಕ್ಕೆ ಅಥವಾ ಮಾನಸಿಕ ಅಸ್ವಸ್ಥತೆಯ ಕಾರಣಕ್ಕೆ ಅಥವಾ ಹೆಣ್ಣು ಮಗು ಎಂಬ ಕಾರಣಕ್ಕಾಗಿ ಅವರು ಮಗುವನ್ನು ತ್ಯಜಿಸಿರಬಹುದು. ಜಂಗಲ್ ಬುಕ್‍ನ ಮೋಗ್ಲಿಗೆ ಈ ಮಗುವನ್ನು ಹೋಲಿಸಿರುವುದಕ್ಕೆ ವೈದ್ಯರು ಅಚ್ಚರಿಪಟ್ಟರು. ಜಂಗಲ್ ಬುಕ್ ಓದಿರಬಹುದಾದ ಪೊಲೀಸರು ಮತ್ತು ಪತ್ರಕರ್ತರು ಸೇರಿಕೊಂಡು ಈ ಮಗುವನ್ನು ಮೋಗ್ಲಿ ಗರ್ಲ್ ಮಾಡಿರಬೇಕು ಅನ್ನುವುದು ದಿನಗಳೆದಂತೆ ಸ್ಪಷ್ಟವಾಗುತ್ತಾ ಹೋಯಿತು. ವಿಶೇಷ ಏನೆಂದರೆ, ವನದೇವಿಯಾಗಿ ಈ ಮಗುವನ್ನು ಹಿಂದಿ ಪತ್ರಿಕೆಯೊಂದು ಚಿತ್ರಿಸಿದ ಬಳಿಕ ಆಸ್ಪತ್ರೆಯಲ್ಲೂ ವಿವಿಧ ಕತೆಗಳು ಹರಿದಾಡತೊಡಗಿದುವು. ಆಸ್ಪತ್ರೆಯ ಕಿಚನ್‍ಗೆ ನಿತ್ಯ ಮಂಗಗಳು ಬರುತ್ತಿತ್ತು. ಆದರೆ ಆ ಮಂಗಗಳು ಈ ಮಗುವನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರುತ್ತಿವೆ ಎಂದು ವದಂತಿಗಳು ಹಬ್ಬಿಕೊಂಡವು. ಹಾಗಂತ,
ನಾಡಿನಲ್ಲಿರುವ ಮನುಷ್ಯರು ಕಾಡಿನಲ್ಲಿ ಬದುಕಿಯೇ ಇಲ್ಲ ಎಂದಲ್ಲ.
ಮರಿಯಾನ ಚಾಪ್‍ಮನ್ ಎಂಬ ಕೊಲಂಬಿಯಾದ ಮಹಿಳೆ ತನ್ನ 4ನೇ ವರ್ಷದಲ್ಲೇ ಕಾಡು ಪಾಲಾಗಿದ್ದಳು. ಮಕ್ಕಳ ಅಪಹರಣಕಾರರು ಆಕೆಯನ್ನು ಅಪಹರಿಸಿ ಕಾಡಿನಲ್ಲಿ ಅಡಗಿಸಿಟ್ಟಿ ದ್ದರು. ಬಳಿಕ ಆಕೆಯನ್ನು ವೇಶ್ಯಾವಾಟಿಕೆಯ ಅಡ್ಡೆಗೆ ಮಾರಿ ದರು. ಅಲ್ಲಿಂದ ಆಕೆ ತಪ್ಪಿಸಿಕೊಂಡ ಬಳಿಕ ತನ್ನ ಇಡೀ ಬದುಕನ್ನು ಹೇಳಿಕೊಂಡರು. ಕಮಲ ಮತ್ತು ಅಮಲ ಎಂಬ 3 ಮತ್ತು 5 ವರ್ಷದ ಮಕ್ಕಳಿಬ್ಬರನ್ನು ಕಾಡಿನಿಂದ ರಕ್ಷಣೆ ಮಾಡಿದ ಕುತೂಹಲಕಾರಿ ಘಟನೆಯು 1920ರಲ್ಲಿ ಭಾರತದಲ್ಲೇ ನಡೆದಿತ್ತು. ಆದರೆ ಆ ಬಳಿಕ ಈ ಎರಡೂ ಮಕ್ಕಳು ಸಾವಿಗೀಡಾದುವು. ಫಿಜಿ ರಾಷ್ಟ್ರದ ಸುಜಿತ್ ಕುಮಾರ್ ಎಂಬವನನ್ನು ಆತನ ಅಜ್ಜ ವರ್ಷಗಳ ತನಕ ಕೋಳಿಗೂಡಿನಲ್ಲಿಟ್ಟು ಬೆಳೆಸಿದ್ದರು. ತಾಯಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ತಂದೆಯು ಈತನನ್ನು ತ್ಯಜಿಸಿದ್ದರು. ಎಲಿಝಬೆತ್ ಕ್ಲೇಟನ್ ಎಂಬವರು ಆತನನ್ನು ರಕ್ಷಿಸಿದರೂ ಮಾನಸಿಕ ಅಸ್ವಸ್ಥತೆಯು ವಿಪರೀತ ಹಂತಕ್ಕೆ ತಲುಪಿ ಆತ ಸಾವಿಗೀಡಾಗಿದ್ದ. ಉಕ್ರೈನ್‍ನ ಜಾಕ್ಸನ್ ಮಲಯ ಎಂಬ ಮಗುವನ್ನು ನಾಯಿಗೂಡಿನಿಂದ 1991ರಲ್ಲಿ ರಕ್ಷಿಸಲಾಯಿತು. 6 ವರ್ಷಗಳ ವರೆಗೆ ಆಕೆ ನಾಯಿಗೂಡಿನಲ್ಲಿ ಬದುಕಿದ್ದಳು. ಆದರೆ ಈ ಯಾರೂ ಕೂಡ ನಾಯಿಗಳಂತಾದುದೋ ಕೋಳಿ ಯಂತಾದುದೋ ಎಲ್ಲೂ ನಡೆದಿಲ್ಲ. ಉತ್ತರ ಪ್ರದೇಶದಲ್ಲಿ ಪತ್ತೆಯಾದ ಮತ್ತು ಮೋಗ್ಲಿ ಗರ್ಲ್ ಎಂದು ಸುದ್ದಿಯಾದ ಈ ಮಗುವಿಗೆ ಮಾನಸಿಕ ಅಸ್ವಸ್ಥತೆ ಇದೆ. ಜೊತೆಗೇ ಬಾಯಿ ಬರುತ್ತಿಲ್ಲ. ಈ ಎರಡು ಲಕ್ಷಣಗಳ ಹೊರತಾದ ಪ್ರಾಣಿ ಲಕ್ಷಣವೊಂದೂ ಈ ಮಗುವಿನಲ್ಲಿಲ್ಲ. ಇರಲಿ, ಮಾಧ್ಯಮಗಳು ಆರಂಭದಲ್ಲಿ ರೋಚಕ ಸುದ್ದಿಯನ್ನು ಕೊಡಲು ಪ್ರಯತ್ನಿಸಿತೆಂದೇ ಇಟ್ಟುಕೊಳ್ಳೋಣ. ಆದರೆ ಬಳಿಕ ಬಹಿರಂಗವಾದ ಸತ್ಯ ಸುದ್ದಿ ಯನ್ನೂ ಅಷ್ಟೇ ಮಹತ್ವ ಕೊಟ್ಟು ಪ್ರಕಟಿಸಬೇಕಿತ್ತಲ್ಲವೇ? ಸುಳ್ಳು ಸುದ್ದಿಯನ್ನು ಓದುಗರಿಗೆ ನೀಡಿದ ಮಾಧ್ಯಮಗಳ ಮೇಲೆ ಇಂಥದ್ದೊಂದು ಹೊಣೆಗಾರಿಕೆ ಇತ್ತಲ್ಲವೇ? ಯಾಕೆ ಅವು ನಿಜ ಸುದ್ದಿಯನ್ನು ನಿರ್ಲಕ್ಷಿಸಿದುವು? ಹೆಣ್ಣು ಮಗು, ಮಾನಸಿಕ ಅಸ್ವಸ್ಥೆ, ತ್ಯಜಿಸಿ ಹೋದ ಮಗು.. ಮುಂತಾದುವುಗಳಲ್ಲಿ ಮೋಗ್ಲಿ ಗರ್ಲ್‍ನ ರೋಚಕತೆ ಇಲ್ಲ ಎಂಬುದು ಈ ನಿರ್ಲಕ್ಷ್ಯಕ್ಕೆ ಕಾರಣವೇ? ಸದ್ಯ ಮಾಧ್ಯಮಗಳು ರೋಚಕ ಸುದ್ದಿಗಳನ್ನು ಇಷ್ಟಪಡುತ್ತವೆ. ಘಟನೆಯೊಂದರ ಬಗ್ಗೆ ಕಪ್ಪು-ಬಿಳುಪು ವರದಿಯು ಓದುಗ ರನ್ನು ಆಕರ್ಷಿಸುವುದಿಲ್ಲ ಎಂಬ ಭಾವನೆ ಸುದ್ದಿ ಮನೆಯಲ್ಲಿದೆ. ಘಟನೆಗೆ ಉಪ್ಪು-ಖಾರವನ್ನು ಸೇರಿಸಿ ಸುದ್ದಿ ಸ್ವರೂಪವನ್ನು ಕೊಟ್ಟರೆ ಅದು ಓದುಗರ ಗಮನ ಸೆಳೆಯುತ್ತದೆ. ನಿಜವಾಗಿ, ಸುದ್ದಿಯನ್ನು ಒಂದಷ್ಟು ಊಹೆ, ಕಾಲ್ಪನಿಕತೆಯೊಂದಿಗೆ ತಯಾರಿಸುವುದೂ ಒಂದು ಬಗೆಯ ಕಲೆ. ಎಲ್ಲ ಪತ್ರಕರ್ತರಿಗೂ ಅದು ಸಿದ್ದಿಸಬೇಕೆಂದಿಲ್ಲ. ಆದರೆ ಅದರಿಂದಾಗಿ ಆಗುವ ಅನಾಹುತ ಏನೆಂದರೆ, ಸತ್ಯವು ಸತ್ತು ಹೋಗಿ ಊಹೆಯೇ ಜನರಲ್ಲಿ ಸತ್ಯವಾಗಿ ಬಿಡುತ್ತದೆ. ಒಂದು ಹತ್ಯಾ ಪ್ರಕರಣವನ್ನೇ ಎತ್ತಿಕೊಳ್ಳಿ. ಈ ಘಟನೆಯನ್ನು ಒಂದಕ್ಕಿಂತ ಹೆಚ್ಚು ವಿಧದಲ್ಲಿ ವರದಿ ಮಾಡುವುದಕ್ಕೆ ಅವಕಾಶ ಇದೆ. ಒಂದು- ನೇರಾತಿನೇರವಾಗಿ ಕಂಡದ್ದನ್ನು ಕಂಡಹಾಗೆ ಸುದ್ದಿ ತಯಾರಿಸುವುದು ಮತ್ತು ಸುದ್ದಿಯಲ್ಲಿ ಯಾವ ಊಹೆ, ಕಲ್ಪನೆಗಳಿಗೆ ಅವಕಾಶವನ್ನು ನೀಡದೇ ಇರುವುದು. ಇನ್ನೊಂದು- ಘಟನೆಗೆ ಸುದ್ದಿ ಸ್ವರೂಪವನ್ನು ಕೊಡುವಾಗ, ನಿರ್ದಿಷ್ಟ ಸಂಘಟನೆಗಳನ್ನೋ ವ್ಯಕ್ತಿಗಳನ್ನೋ ಇಲಾಖೆಗಳನ್ನೋ ಅನುಮಾನಿಸುವ ರೂಪದಲ್ಲಿ ಬರೆಯುವುದು. ಯಾವ ಆಧಾರವೂ ಇಲ್ಲದೇ ಆದರೆ ಇಂಥವರೇ ಆರೋಪಿಗಳು ಆಗಿರಬಹುದೆಂದು ಓದುಗರು ಅಂದುಕೊಳ್ಳುವ ರೀತಿಯಲ್ಲಿ ಸುದ್ದಿಯನ್ನು ತಯಾರಿಸುವುದು. ಇದು ಸುದ್ದಿ ತಯಾರಿಸುವವರ ಮನಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. ಭಯೋತ್ಪಾದನೆಗೆ ಸಂಬಂಧಿಸಿದ ಸುದ್ದಿಗಳು ಈ ದೇಶದಲ್ಲಿ ಬಹುತೇಕ ಪ್ರಕಟ ವಾದದ್ದು ಈ ರೀತಿಯಲ್ಲಿಯೇ. ಉತ್ತರ ಪ್ರದೇಶದಲ್ಲಿ ಪತ್ತೆಯಾದ ಮಾನಸಿಕ ಅಸ್ವಸ್ಥ ಮಗುವನ್ನು ಮೋಗ್ಲಿ ಗರ್ಲ್ ಮಾಡಿದುದರಲ್ಲೂ ಇದು ಸ್ಪಷ್ಟವಾಗುತ್ತದೆ. ಮಾನಸಿಕ ಅಸ್ವಸ್ಥತೆ ಇರುವವರಲ್ಲಿ ಹುಚ್ಚಾಟಗಳು ಸಹಜ. ಅವರ ಹಾವ-ಭಾವ-ನೋಟ-ದೇಹ ಭಾಷೆ ಎಲ್ಲವೂ ಅಸಹಜ ರೀತಿಯಲ್ಲಿರುತ್ತವೆ. ಇದೇನೂ ಹೊಸ ವಿಷಯವಲ್ಲ. ಆದರೆ ಈ ಮಗುವಿನ ಬಗ್ಗೆ ಪೊಲೀಸರೊಬ್ಬರು ರಚಿಸಿದ ಅರೆ-ಬರೆ ಅಂತೆಕಂತೆಗಳಿಗೆ ಜಂಗಲ್ ಬುಕ್‍ನ ಮೋಗ್ಲಿ ಯನ್ನು ಅಂಟಿಸಿ ಹಿಂದೆ-ಮುಂದೆ ನೋಡದೇ ಸುದ್ದಿಯ ಸ್ವರೂಪವನ್ನು ಕೊಡುವ ಜರೂರತ್ತು ಮಾಧ್ಯಮ ಮಂದಿಗೆ ಏನಿತ್ತು? ಯಾವ ಆಧಾರವೂ ಇಲ್ಲದೇ ಕನಿಷ್ಠ ವೈದ್ಯರ ಹೇಳಿಕೆಯನ್ನೂ ಪಡೆಯದೇ ಸುದ್ದಿ ರಚಿಸುವುದು ಎಷ್ಟು ಸರಿ? ಓದುಗರಿಗೆ ಇದು ರವಾನಿಸುವ ಸಂದೇಶ ಏನು?
ಇವತ್ತು ಸುದ್ದಿ-ಮಾಧ್ಯಮಗಳ ದೊಡ್ಡ ದೌರ್ಬಲ್ಯವೇ ಸುದ್ದಿ ಸ್ಪಷ್ಟತೆಗೆ ಮಹತ್ವ ಕೊಡದೇ ಇರುವುದು. ‘ಮೋಗ್ಲಿ ಗರ್ಲ್’ ಇದಕ್ಕೆ ಇನ್ನೊಂದು ಪುರಾವೆ ಅಷ್ಟೇ.