Monday, November 17, 2014

ಹೊಟ್ಟೆ ತುಂಬಿಸುವ ಬದಲು ಹೊಟ್ಟೆ ಸೀಳುವುದನ್ನೇ ಪರಿಹಾರ ಅನ್ನುತ್ತೇವಲ್ಲ..

   ಸಂತಾನಹರಣ ಚಿಕಿತ್ಸೆಯಲ್ಲಿ ವ್ಯಾಸೆಕ್ಟಮಿ ಮತ್ತು ಟ್ಯುಬೆಕ್ಟಮಿ ಎಂಬ ಎರಡು ವಿಧಾನಗಳಿವೆ. ವ್ಯಾಸೆಕ್ಟಮಿ ಪುರುಷರಿಗೆ ಸಂಬಂಧಿಸಿದ್ದಾದರೆ ಟ್ಯುಬೆಕ್ಟಮಿ ಮಹಿಳೆಯರಿಗೆ ಸಂಬಂಧಿಸಿದ್ದು. ಇದರಲ್ಲಿ ಪುರುಷರ ಸಂತಾನಹರಣ ಚಿಕಿತ್ಸೆಯು ತೀರಾ ಸರಳ, ಸುಲಭ ಮತ್ತು ಕಡಿಮೆ ಅವಧಿಯದ್ದು. ಇದಕ್ಕೆ 5 ನಿಮಿಷಗಳಷ್ಟೇ ಸಾಕಾಗುತ್ತದೆ. ಮಾತ್ರವಲ್ಲ, ಎರಡು ಗಂಟೆಗಳ ವಿರಾಮದಲ್ಲಿ ಎಲ್ಲವೂ ಕೊನೆಗೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ ಟ್ಯುಬೆಕ್ಟಮಿ ಸರಳವಲ್ಲ. ಕೆಲವೊಮ್ಮೆ ಮಹಿಳೆಯರು 8 ದಿನಗಳ ವರೆಗೂ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ತುಸು ದೀರ್ಘ ಅವಧಿಯ ವಿರಾಮ ಬೇಕಾಗುತ್ತದೆ. ಅಲ್ಲದೇ ಪುಟ್ಟ ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಯೂ ಇರುತ್ತದೆ. ಇಷ್ಟಿದ್ದೂ, ಸಂತಾನಹರಣ ಚಿಕಿತ್ಸೆಗೆ ಮಹಿಳೆಯರೇ ಯಾಕೆ ಒಳಗಾಗುತ್ತಿದ್ದಾರೆ? 2012ರಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾದವರ ಸಂಖ್ಯೆ 46 ಲಕ್ಷ. ಆದರೆ ಇದರಲ್ಲಿ ಪುರುಷರ ಅನುಪಾತ ಒಂದು ಶೇಕಡಾಕ್ಕಿಂತಲೂ ಕಡಿಮೆ. 2012-13ರಲ್ಲಿ 0.85% ಪುರುಷರು ಮಾತ್ರ ವ್ಯಾಸೆಕ್ಟಮಿ ಮಾಡಿಸಿಕೊಂಡಿದ್ದಾರೆ. 2013-14ರಲ್ಲಂತೂ ಈ ಅನುಪಾತ 0.44%ಕ್ಕೆ ಕುಸಿದಿದೆ (ದಿ ಹಿಂದೂ 2014 ನವಂಬರ್ 13 ). ಅಂದರೆ ಸಂತಾನಹರಣ ಚಿಕಿತ್ಸೆಗೆ ಒಳಗಾಗುವವರಲ್ಲಿ ಶೇ. 99ಕ್ಕಿಂತಲೂ ಅಧಿಕ ಮಂದಿ ಮಹಿಳೆಯರೇ. ಯಾಕೆ ಹೀಗೆ? ಒಂದು ಕಡೆ ಹೆಣ್ಣು ಗರ್ಭಧರಿಸಬೇಕು, 9 ತಿಂಗಳ ವರೆಗೆ ದೈಹಿಕವಾಗಿ ವಿವಿಧ ಏರಿಳಿತಗಳನ್ನು ಅನುಭವಿಸಬೇಕು, ಕೊನೆಗೆ ಸಂತಾನ ಹರಣ ಚಿಕಿತ್ಸೆಗೂ ಆಕೆಯದೇ ದೇಹ ಬೇಕು. ಅದೇ ವೇಳೆ ಪುರುಷ ಗರ್ಭಧರಿಸುವುದಿಲ್ಲ ಎಂದು ಮಾತ್ರವಲ್ಲ, ತನ್ನ ದೇಹವನ್ನು ವ್ಯಾಸೆಕ್ಟಮಿಗೆ ಒಡ್ಡುವುದೂ ಇಲ್ಲ. ಇಲ್ಲೂ ಒಂದು ಕುತೂಹಲದ ಸಂಗತಿಯಿದೆ. ಸಂತಾನ ಹರಣ ಚಿಕಿತ್ಸೆಗೆ ಒಳಗಾಗುವ ಬಡತನ ರೇಖೆಗಿಂತ ಕೆಳಗಿನ (BPL) ಮಹಿಳೆಯರಿಗೆ ಸರಕಾರವು 600 ರೂಪಾಯಿಯನ್ನು ಪ್ರೋತ್ಸಾಹ ಧನವಾಗಿ ನೀಡುತ್ತದೆ. ಬಡತನ ರೇಖೆಗಿಂತ ಮೇಲಿನ (APL) ಮಹಿಳೆಯರಿಗೆ 250 ರೂಪಾಯಿಯನ್ನು ನೀಡುತ್ತದೆ. ಅದೇ ವೇಳೆ ಇಂಥ ಚಿಕಿತ್ಸೆಗೆ ಒಳಗಾಗುವ ಪುರುಷರಿಗೆ BPL, APL ಎಂದು ನೋಡದೆಯೇ ಸರಕಾರ 1,100 ರೂಪಾಯಿಯನ್ನು ನೀಡುತ್ತದೆ (ದಿ ಹಿಂದೂ 2014 ನವಂಬರ್ 13 ). ಯಾಕೆ ಈ ಅಸಮಾನತೆ, ಲಿಂಗ ತಾರತಮ್ಯ? ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆಗಳ ಬಗ್ಗೆ ಧಾರಾಳ ಮಾತುಗಳು ಕೇಳಿ ಬರುತ್ತಿರುವ ಈ ದಿನಗಳಲ್ಲೂ ಪುರುಷರಿಗೆ 1,100 ರೂಪಾಯಿ ಮತ್ತು ಮಹಿಳೆಯರಿಗೆ 600 ರೂಪಾಯಿ ಎಂದು ನಿಗದಿಪಡಿಸಿರುವ ಔಚಿತ್ಯವೇಕೆ ಪ್ರಶ್ನೆಗೀಡಾಗುತ್ತಿಲ್ಲ? ಸಂತಾನ ಹರಣ ಚಿಕಿತ್ಸೆಯಲ್ಲಿ ಲಿಂಗ ಸಮಾನತೆಗಾಗಿ ಎಲ್ಲೂ ಒತ್ತಾಯಗಳು ಕೇಳಿ ಬರುತ್ತಿಲ್ಲವೇಕೆ? ‘ಮಹಿಳೆಯರು ಸಂತಾನಹರಣ ಚಿಕಿತ್ಸೆಗೆ ಒಳಗಾಗುವುದೇ ಬೇಡ, ಗರ್ಭಧರಿಸುವುದರಿಂದ ವಿನಾಯಿತಿ ಪಡೆದಿರುವ ಪುರುಷರೇ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲಿ’ ಎಂಬ ಕೂಗೇಕೆ ಮೊಳಗುತ್ತಿಲ್ಲ? ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವವರು ಗ್ರಾವಿೂಣ ಪ್ರದೇಶದ ಇಂಗ್ಲಿಷು, ಆಧುನಿಕತೆ, ಥಳಕು-ಬಳಕು ಗೊತ್ತಿಲ್ಲದ ಬಡ ಮಹಿಳೆಯರು ಎಂಬುದೇ ಈ ಮೌನಕ್ಕೆ ಕಾರಣವೇ ಅಥವಾ ಇದರ ಹಿಂದೆ ಇನ್ನೇನಾದರೂ ಉದ್ದೇಶಗಳಿವೆಯೇ? ಒಂದೋ ಸಂತಾನಹರಣ ಚಿಕಿತ್ಸೆಯೇ ರದ್ದುಗೊಳ್ಳಬೇಕು ಅಥವಾ ಇದರಲ್ಲಿ ಲಿಂಗ ಸಮಾನತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಒತ್ತಾಯಗಳು ಛತ್ತೀಸ್‍ಗಢದ ಸಾಮೂಹಿಕ ಹತ್ಯೆಯ ಬಳಿಕವೂ ಈವರೆಗೂ ಕೇಳಿ ಬಂದಿಲ್ಲವಲ್ಲ, ಯಾಕಾಗಿ? ಲಿಂಗ ಸಮಾನತೆಯ ಕೂಗುಗಳೂ ಸೆಲೆಕ್ಟಿವ್ ಆಗುತ್ತಿವೆಯೇ? ಹೆಣ್ಣು-ಗಂಡಿನ ನಡುವೆ ಶಿಕ್ಷಣ, ಉದ್ಯೋಗ, ಆಡಳಿತ ಸಹಿತ ಯಾವುದರಲ್ಲೂ ಲಿಂಗ ತಾರತಮ್ಯ ಸಲ್ಲದು ಎಂಬ ವಾದಗಳೆಲ್ಲವೂ ದಶಕಗಳಿಂದ ಜೀವಂತವಿರುವ ಈ ತಾರತಮ್ಯವನ್ನು ನಿರ್ಲಕ್ಷಿಸಿರುವುದೇಕೆ? ಅಲ್ಲದೇ, 2003ರಿಂದ 12ರ ನಡುವೆ ಸಂತಾನಹರಣ ಚಿಕಿತ್ಸೆಗೊಳಗಾದವರಲ್ಲಿ 1,434 ಮಂದಿ ಸಾವಿಗೀಡಾಗಿದ್ದಾರೆ. ಆದ್ದರಿಂದಲೇ ಸಂತಾನಹರಣ ಚಿಕಿತ್ಸೆ ಎಷ್ಟು ಸುರಕ್ಷಿತ ಎಂಬುದು ಚರ್ಚಾರ್ಹವೆನಿಸುವುದು. ಆದರೆ ಈ ಬಗ್ಗೆ ಎಲ್ಲೂ ಚರ್ಚೆಗಳೇ ಆಗುತ್ತಿಲ್ಲ. ವರ್ಷಂಪ್ರತಿ ಲಕ್ಷಾಂತರ ಮಂದಿಯನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಮತ್ತು ಇವರಲ್ಲಿ ದೊಡ್ಡದೊಂದು ಸಂಖ್ಯೆಯನ್ನು ಬಲವಂತ, ಆಮಿಷಗಳಿಂದ ಚಿಕಿತ್ಸಾ ಕೊಠಡಿಗೆ ಕರೆ ತರಲಾಗುತ್ತದೆ ಎಂಬುದು ಗೊತ್ತಿದ್ದೂ ಅದು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣವಾಗಿ ಈಗಲೂ ಗುರುತಿಸಿಕೊಳ್ಳುತ್ತಿಲ್ಲ. ಬಿಹಾರದ ಅರಾರಿಯ ಜಿಲ್ಲೆಯ ಶಾಲಾ ಕಟ್ಟಡದಲ್ಲಿ ಎರಡು ಗಂಟೆಯೊಳಗೆ 53 ಮಂದಿಯ ಸಂತಾನ ಹರಣ ಚಿಕಿತ್ಸೆ ನಡೆಸಿದ ಬಗ್ಗೆ ಮತ್ತು ಅವರನ್ನು ನೆಲದಲ್ಲಿ ಮಲಗಿಸಿದುದರ ಬಗ್ಗೆ 2012 ಎಪ್ರಿಲ್‍ನಲ್ಲಿ ಸುಪ್ರೀಮ್ ಕೋರ್ಟಿಗೆ ದೂರನ್ನು ಸಲ್ಲಿಸಲಾಗಿತ್ತು. ಆ ಚಿಕಿತ್ಸೆಯ ಕುರಿತಂತೆ ವೀಡಿಯೋಗಳೂ ಬಿಡುಗಡೆಯಾಗಿದ್ದುವು. ಆ 53 ಮಂದಿ ಮಹಿಳೆಯರನ್ನು ಬೆದರಿಕೆ ಹಾಕಿ ಬಲವಂತದಿಂದ ಶಾಲಾ ಕಟ್ಟಡದೊಳಕ್ಕೆ ಕರೆ ತರಲಾಗಿತ್ತು ಮತ್ತು ಟಾರ್ಚ್‍ಲೈಟ್ ಮೂಲಕ ಚಿಕಿತ್ಸೆ ನಡೆಸಲಾಗಿತ್ತು ಎಂದು ದೇವಿಕಾ ಬಿಸ್ವಾಸ್ ಎಂಬವರು ಕೋರ್ಟಿನಲ್ಲಿ ಹೇಳಿಕೆಯಿತ್ತಿದ್ದರು. ಈ ಬಗ್ಗೆ ಎರಡು ತಿಂಗಳ ಒಳಗೆ ಉತ್ತರಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಮ್ ಕೋರ್ಟ್ ಆದೇಶವನ್ನೂ ನೀಡಿತ್ತು. ಸಂತಾನಹರಣ ಚಿಕಿತ್ಸೆಗೆ ಒಳಗಾಗದಿದ್ದರೆ ರೇಶನ್ ಕಾರ್ಡ್ ಸಹಿತ ಸರಕಾರಿ ಸೌಲಭ್ಯಗಳನ್ನು ರದ್ದುಪಡಿಸಲಾಗುತ್ತದೆ ಎಂದು ಉತ್ತರ ಭಾರತದಲ್ಲಿ ಮುಖ್ಯವಾಗಿ ಆದಿವಾಸಿ, ಬುಡಕಟ್ಟು ಜನಾಂಗಗಳ ಮಹಿಳೆಯರನ್ನು ಬೆದರಿಸಲಾಗುತ್ತದೆ ಎಂಬ ವರದಿಗಳೂ ಈ ಹಿಂದೆ ಬಂದಿದ್ದುವು. ಕಾರ್, ಫ್ರೀಜರ್‍ಗಳ ಆಮಿಷ ಒಡ್ಡಿದ ಪ್ರಕರಣಗಳೂ ಧಾರಾಳ ಇವೆ. ಮಾತ್ರವಲ್ಲ, ಒಂದು ವರ್ಷದಲ್ಲಿ ಇಷ್ಟು ಸಂಖ್ಯೆಯ ಸಂತಾನ ಹರಣ ಚಿಕಿತ್ಸೆ ನಡೆಸಬೇಕು ಎಂಬ ಗುರಿಯನ್ನು ಆರೋಗ್ಯ ಅಧಿಕಾರಿಗಳಿಗೆ ನಿಗದಿಪಡಿಸಲಾಗುತ್ತದೆ ಮತ್ತು ಗುರಿ ಮುಟ್ಟದಿದ್ದರೆ ಸಂಬಳ ಕಡಿತಗೊಳಿಸುವ ಬೆದರಿಕೆಯನ್ನೂ ಹಾಕಲಾಗುತ್ತದೆ ಎಂದು 2013 ಜೂನ್ 20ರಂದು ಆ್ಯಂಡ್ರ್ಯೂ ಮೆಕ್‍ಸ್ಕಿಲ್ ಎಂಬವರು, ‘ಇನ್‍ಸೈಡ್ ಇಂಡಿಯಾಸ್ ಸ್ಟಿರಿಲೈಸೇಶನ್ ಕ್ಯಾಂಪ್’ ಎಂಬ ಲೇಖನದಲ್ಲಿ ಗುಜರಾತನ್ನು ಉಲ್ಲೇಖಿಸಿ ಬರೆದಿದ್ದರು. ಆದರೆ ಇಂಥ ಪ್ರಕರಣಗಳು ಮಾಧ್ಯಮಗಳಲ್ಲಿ ಗಂಭೀರ ಚರ್ಚೆ, ಅಧ್ಯಯನಕ್ಕೆ ಒಳಪಟ್ಟೇ ಇಲ್ಲ. ಕಾರಣವೇನು? ಈ ಚಿಕಿತ್ಸೆಗೆ ಒಳಗಾಗುವವರಲ್ಲಿ ಬಡವರೇ ಹೆಚ್ಚಿರುವುದರಿಂದ ಈ ಎಲ್ಲ ವಿಷಯಗಳು ಚರ್ಚೆಗೆ ಬಂದಿಲ್ಲವೋ ಅಥವಾ ಆ ಬಗ್ಗೆ ಚರ್ಚಿಸದಂತೆ ತಡೆಯುವ ವ್ಯವಸ್ಥಿತ ಹುನ್ನಾರ ಇದೆಯೋ? ಬಡವರ ಮಕ್ಕಳನ್ನು ಆಮಿಷವೊಡ್ಡಿ ಬಾವಿಗೆ ದೂಡುವ ವ್ಯವಸ್ಥಿತ ವಿಧಾನವಾಗಿರ ಬಹುದೇ ಈ ಸಂತಾನಹರಣ ಚಿಕಿತ್ಸೆ?
   ಜನಸಂಖ್ಯಾ ಸ್ಫೋಟ ಎಂಬ ಭೀತಿಕಾರಕ ಪದ ಸೃಷ್ಟಿಯಾದದ್ದು ಬಹುತೇಕ 19ನೇ ಶತಮಾನದಲ್ಲಿ. ಜನಸಂಖ್ಯೆಯ ಹೆಚ್ಚಳದಿಂದಾಗುವ ತೊಂದರೆಗಳ ಬಗ್ಗೆ ಬರಹ, ಡಾಕ್ಯುಮೆಂಟರಿಗಳು 1960ರಲ್ಲಿ ಬರತೊಡಗಿದುವು. ಮುಖ್ಯವಾಗಿ ಆಹಾರದ ಕೊರತೆಯು ಈ ಜಗತ್ತನ್ನು ತೀವ್ರವಾಗಿ ಕಾಡಲಿದೆ ಎಂಬ ಪ್ರಚಾರವನ್ನು ನಡೆಸಲಾಯಿತು. ಈ ವಾದಕ್ಕೆ ರೆವರೆಂಡ್ ಥಾಮಸ್ ಮುಲ್ತಸ್ ಎಂಬವರ ಚಿಂತನೆಗಳನ್ನೇ ಪ್ರಮುಖ ಆಧಾರವಾಗಿ ಬಳಸಿಕೊಳ್ಳಲಾಗಿತ್ತು. ಜನಸಂಖ್ಯೆಯನ್ನು ಅಪಾಯವಾಗಿ ಚಿತ್ರಿಸುವ ಚಿಂತನೆಗಳಿಗೆ ಇವತ್ತಿಗೂ ಆಧಾರ ಥಾಮಸ್‍ರ ಅಭಿಪ್ರಾಯಗಳೇ. ‘ಜನನ ಪ್ರಮಾಣವು ಆಹಾರ ಉತ್ಪಾದನಾ ಪ್ರಮಾಣಕ್ಕಿಂತ ಅಧಿಕವಾಗಿದೆ’ ಎಂದು ಥಾಮಸ್ ಹೇಳಿದ್ದ. ಆದರೆ ಹಸಿರು ಕ್ರಾಂತಿಯು ಥಾಮಸ್‍ರ ಅಭಿಪ್ರಾಯವನ್ನು ಸುಳ್ಳಾಗಿಸಿದಾಗ (ಆಹಾರ ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾದಾಗ) ಪಾಶ್ಚಾತ್ಯ ಜಗತ್ತು ಹೊಸ ಭೀತಿಯನ್ನು ಅದಕ್ಕೆ ಸೇರಿಸಿದುವು. ಅಧಿಕ ಜನಸಂಖ್ಯೆಯು ಪರಿಸರ ಅಸಮತೋಲನೆ, ಅಭಿವೃದ್ಧಿ ಕುಸಿತ ಮತ್ತು ರಾಜಕೀಯ ಅನಿಶ್ಚಿತತೆಗೆ ಕಾರಣವಾಗಬಲ್ಲುದು ಎಂದು ಅವು ಅಭಿಪ್ರಾಯಪಟ್ಟವು. ಇದಕ್ಕೆ ಪೂರಕವಾಗಿ ಅಮೇರಿಕ, ಬ್ರಿಟನ್, ಜಪಾನ್, ಸ್ವೀಡನ್‍ಗಳು ಜನಸಂಖ್ಯಾ ನಿಯಂತ್ರಣಕ್ಕಾಗಿ ತೃತೀಯ ರಾಷ್ಟ್ರಗಳಿಗೆ ನೆರವನ್ನು ನೀಡತೊಡಗಿದುವು. ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮತ್ತು ಅಮೇರಿಕದ ಫೋರ್ಡ್, ರಾಕ್‍ಫೆಲ್ಲರ್ ಫೌಂಡೇಶನ್‍ಗಳು ಸಂತಾನ ನಿಯಂತ್ರಣದ ಅಗತ್ಯ, ಅನಿವಾರ್ಯತೆಗಳ ಬಗ್ಗೆ ಭಾಷಣ ಬಿಗಿಯತೊಡಗಿದುವು. ಅಮೇರಿಕದ ಜೀವಶಾಸ್ತ್ರಜ್ಞ ಪೌಲ್ ಎಹ್‍ರಿಚ್‍ರು ‘ಪಾಪ್ಯುಲೇಶನ್ ಬಾಂಬ್' ಎಂಬ ಬಹು ಪ್ರಸಿದ್ಧ ಕೃತಿಯನ್ನು 1968ರಲ್ಲಿ ಬರೆದರು.ಜನಸಂಖ್ಯೆಯ ಹೆಚ್ಚಳವು ಸಂಪತ್ತಿನ ಸವೆತಕ್ಕೆ ಮತ್ತು ಕ್ಯಾಪಿಟಾಲಿಸಮ್ ನ ಅಸ್ತಿತ್ವಕ್ಕೆ ಮಾರಕವಾಗಬಹುದು ಎಂಬುದು ಪಾಶ್ಚಾತ್ಯರ ಭಯವಾಗಿತ್ತು. ಹೀಗೆ ಜನಸಂಖ್ಯಾ ನಿಯಂತ್ರಣಕ್ಕಾಗಿ ತೃತೀಯ ರಾಷ್ಟ್ರಗಳ ಮೇಲೆ ಪಾಶ್ಚಾತ್ಯ ಜಗತ್ತಿನ ಒತ್ತಡಗಳು ಹೆಚ್ಚುತ್ತಾ ಇದ್ದ ಸಂದರ್ಭದಲ್ಲೇ ಭಾರತದಲ್ಲಿ ತುರ್ತು ಸ್ಥಿತಿ ಘೋಷಣೆಯಾದದ್ದು. ಬಹುಶಃ ಈ ತುರ್ತುಸ್ಥಿತಿಗೂ ಪಾಶ್ಚಾತ್ಯ ಜಗತ್ತಿನ ಒತ್ತಡಗಳಿಗೂ ಪರಸ್ಪರ ಸಂಬಂಧ ಇರಬಹುದೇ ಎಂಬ ಅನುಮಾನ ಈಗಲೂ ಇದೆ. 1975-77ರ ತುರ್ತುಸ್ಥಿತಿಯ ಕಾಲದಲ್ಲಿ ಇಂದಿರಾಗಾಂಧಿ ಮತ್ತು ಮಗ ಸಂಜಯ್ ಗಾಂಧಿಯವರು ಅತ್ಯಂತ ಮುತುವರ್ಜಿಯಿಂದ ಜಾರಿಗೆ ತಂದದ್ದು ಸಂತಾನ ನಿಯಂತ್ರಣ ಕಾನೂನನ್ನು. ಮುಖ್ಯವಾಗಿ ಪುರುಷರನ್ನು ಬೀದಿಯಿಂದ ಬಲವಂತದಿಂದ ಎತ್ತಿಕೊಂಡು ಹೋಗಿ ವ್ಯಾಸೆಕ್ಟಮಿಗೆ ಗುರಿಪಡಿಸಲಾಯಿತು. ತುರ್ತು ಸ್ಥಿತಿಯ ಎರಡು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಮಂದಿಯ ಮೇಲೆ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಭಾರತದ ಈ ದಿಟ್ಟ ಕ್ರಮಕ್ಕಾಗಿ ವಿಶ್ವಬ್ಯಾಂಕ್‍ನ ಅಧ್ಯಕ್ಷ ರಾಬರ್ಟ್ ಮೆಕ್‍ನಾಮರ್ ಅವರು ಇಂದಿರಾ ಗಾಂಧಿಯವರನ್ನು ಅಭಿನಂದಿಸಿದ್ದರು.
   "ತುರ್ತುಸ್ಥಿತಿಯ ಸಂದರ್ಭದಲ್ಲಿ ಜಾರಿಗೊಳಿಸಲಾದ ಅತಿ ಅಪಾಯಕಾರಿ ಪ್ರಯೋಗಗಳಲ್ಲಿ ಬಲವಂತದ ಸಂತಾನ ಹರಣ ಚಿಕಿತ್ಸೆಯೂ ಒಂದು. ಜನಸಂಖ್ಯೆಯು ನಿಯಂತ್ರಣ ವಿೂರಿ ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಇಂಟರ್‍ನ್ಯಾಶನಲ್ ಮಾನಿಟರಿ ಫಂಡ್ (IMF) ಹಾಗೂ ವಿಶ್ವಬ್ಯಾಂಕ್‍ಗಳು ಭಾರತವನ್ನು ಆಗಾಗ ಎಚ್ಚರಿಸುತ್ತಲೇ ಇತ್ತು. ಆದರೆ ಭಾರತದ ರಾಜಕೀಯ ವಾತಾ ವರಣದಲ್ಲಿ ಜನನ ನಿಯಂತ್ರಣ ಕಾನೂನನ್ನು ಜಾರಿಗೊಳಿಸುವುದು ಸುಲಭದ್ದಾಗಿರಲಿಲ್ಲ. ಹಾಗೊಂದು ವೇಳೆ ಜಾರಿಗೊಳಿಸಲು ಪ್ರಯತ್ನಿಸಿರುತ್ತಿದ್ದರೆ ಅಧಿಕಾರಕ್ಕೆ ಕುತ್ತು ಬರುವ ಸಾಧ್ಯತೆಯೂ ಇತ್ತು. ಹೀಗಿರುತ್ತಾ ತುರ್ತುಸ್ಥಿತಿ ಘೋಷಣೆಯಾದಾಗ IMF ಮತ್ತು ವಿಶ್ವಬ್ಯಾಂಕ್‍ಗಳು ಚುರುಕಾದುವು. ತನ್ನ ಬೇಡಿಕೆಯನ್ನು ಜಾರಿಗೊಳಿಸುವಂತೆ ಅವು ಇಂದಿರಾರ ಮೇಲೆ ಒತ್ತಡ ಹೇರಿದುವು. ಪಶ್ಚಿಮದ ಧನಿಕರನ್ನು ತೃಪ್ತಿಪಡಿಸುವುದಕ್ಕಾಗಿ ಇಂದಿರಾ ಮತ್ತು ಸಂಜಯ್ ಗಾಂಧಿಯವರು ಆ ಸಂದರ್ಭವನ್ನು ಬಳಸಿಕೊಂಡರು" ಎಂದು ‘ದಿ ಸಂಜಯ್ ಸ್ಟೋರಿ’ ಎಂಬ ವಿನೋದ್ ಮೆಹ್ತಾರ ಕೃತಿಯನ್ನು ವಿಮರ್ಶಿಸುತ್ತಾ ಡೇವಿಡ್ ಫ್ರಮ್ ಬರೆದಿದ್ದಾರೆ.
   ನಿಜವಾಗಿ, ಜನಸಂಖ್ಯೆಗೂ ಜನರ ಸಾಕ್ಷರತೆ, ಆರ್ಥಿಕ ಸ್ಥಿತಿಗೂ ಹತ್ತಿರದ ನಂಟಿದೆ. ಅತ್ಯಂತ ಹೆಚ್ಚು ಸಾಕ್ಷರರಿರುವ ಕೇರಳದಲ್ಲಿ ಅತಿ ಕಡಿಮೆ ಜನನ ಅನುಪಾತವಿದೆ. ಒಂದು ವೇಳೆ ಈ ಸತ್ಯವನ್ನು ನಮ್ಮನ್ನಾಳುವವರು ಒಪ್ಪಿಕೊಂಡರೆ ಸಂತಾನ ನಿಯಂತ್ರಣ ಚಿಕಿತ್ಸೆಗೆ ಬದಲಿ ದಾರಿಯೊಂದು ಅವರೆದುರು ತೆರೆದುಕೊಳ್ಳುತ್ತದೆ. ಜನರಿಗೆ ಶಿಕ್ಷಣವನ್ನು ಮತ್ತು ಆರ್ಥಿಕವಾಗಿ ಚೇತರಿಕೆಯನ್ನು ಕೊಡಲು ಆಡಳಿತಗಾರರು ಶಕ್ತವಾದರೆ ಆ ಬಳಿಕ ಅಲ್ಲಿ ಸಂತಾನ ನಿಯಂತ್ರಣ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ದುರಂತ ಏನೆಂದರೆ, ನಮ್ಮ ಸರಕಾರಗಳು ಬಡವರಿಗೆ ಹೊಟ್ಟೆ ತುಂಬುವಷ್ಟು ಊಟ ಕೊಡುವುದಿಲ್ಲ. ಅಕ್ಷರ ಕಲಿಕೆಗೆ ಏರ್ಪಾಡು ಮಾಡುವುದಿಲ್ಲ. ಅದರ ಬದಲು ಬಡವರ ಹೊಟ್ಟೆಯಲ್ಲಿರುವ ಮಕ್ಕಳನ್ನು ಬಲವಂತದಿಂದ ಕಸಿಯಲು ಪ್ರಯತ್ನಿಸುತ್ತದೆ. ನಿಜವಾಗಿ ಇದು ಜನರಿಗೆ ವ್ಯವಸ್ಥೆ ಮಾಡುವ ಕಡು ದ್ರೋಹ. ಯಾಕೆಂದರೆ, ಮೂಲಭೂತ ಅಗತ್ಯಗಳಾದ ಅಕ್ಷರ, ಆಹಾರ, ಆರೋಗ್ಯವನ್ನು ನೀಡುವ ಹೊಣೆಗಾರಿಕೆ ಸರಕಾರದ್ದು. ಆ ಹೊಣೆಗಾರಿಕೆಯಲ್ಲಿ ಸರಕಾರ ವೈಫಲ್ಯ ಕಂಡಾಗ ಅದರ ಅಡ್ಡ ಪರಿಣಾಮಗಳು ಸಮಾಜದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಆ ಅಡ್ಡ ಪರಿಣಾಮಗಳಿಗೆ ಹೊಟ್ಟೆ ಸೀಳುವುದು ಪರಿಹಾರ ಅಲ್ಲ. ಅದು ಕ್ರೌರ್ಯ. ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ಅಸಮರ್ಥವಾದ ಸರಕಾರವೊಂದರಿಂದ ಮಾತ್ರ ಇಂಥ ಕ್ರೌರ್ಯಗಳನ್ನು ಪರಿಹಾರವಾಗಿ ಸೂಚಿಸಲು ಸಾಧ್ಯ. ಸಂತಾನ ನಿಯಂತ್ರಣ ಚಿಕಿತ್ಸೆ ಎಂಬುದು ವ್ಯವಸ್ಥೆಯ ಅಸಮರ್ಥತೆಗೆ ಹುಟ್ಟಿಕೊಂಡ ಕೂಸೇ ಹೊರತು ಅದು ಪರಿಹಾರ ಅಲ್ಲ. ಇದನ್ನು ಪರಿಹಾರವಾಗಿ ಪರಿಗಣಿಸಿದ್ದಕ್ಕಾಗಿ ಚೀನಾ ಇವತ್ತು ಪಶ್ಚಾತ್ತಾಪ ಪಡುತ್ತಿದೆ. ಜನರ ಜೀವನ ಮಟ್ಟವನ್ನು ಸುಧಾರಿಸುವ ಬದಲು ಜನರ ಹೊಟ್ಟೆ ಸೀಳುವುದನ್ನೇ ಪರಿಹಾರವೆಂದು ಹೇಳಿಕೊಟ್ಟ ಪಾಶ್ಚಾತ್ಯ ಚಿಂತನೆಗಳನ್ನು ಒಪ್ಪಿಕೊಂಡದ್ದಕ್ಕಾಗಿ ಅದು ಇವತ್ತು ಭಾರೀ ಬೆಲೆ ತೆರುತ್ತಿದೆ. ಆದರೂ ಭಾರತದಲ್ಲಿ ಈ ಕುರಿತಂತೆ ಬಲವಾದ ಜಾಗೃತಿ ಕಾರ್ಯಕ್ರಮಗಳೇನೂ ನಡೆಯುತ್ತಿಲ್ಲ. ಸಂತಾನವನ್ನೇ ಅಪಾಯಕಾರಿಯೆಂದು ಬಿಂಬಿಸುವ ಪ್ರಯತ್ನದಲ್ಲಿ ಇವತ್ತೂ ವ್ಯವಸ್ಥೆ ತಲ್ಲೀನವಾಗಿದೆ. ಇದನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸಬೇಕಾದ ಮಾಧ್ಯಮಗಳು ಅನುಮಾನ ಮೂಡಿಸುವ ರೀತಿಯಲ್ಲಿ ಮೌನವಾಗಿವೆ. ಜಾಗತಿಕವಾಗಿ ನಡೆಯುವ ಒಟ್ಟು ಸಂತಾನ ನಿಯಂತ್ರಣ ಚಿಕಿತ್ಸೆಯಲ್ಲಿ ಶೇ. 37ರಷ್ಟು ಚಿಕಿತ್ಸೆಗಳು ಭಾರತದಲ್ಲೇ ನಡೆಯುತ್ತಿದ್ದರೂ ಮತ್ತು ಈ ಚಿಕಿತ್ಸೆಗೆ ಒಳಗಾಗುವವರಲ್ಲಿ 99%ಕ್ಕಿಂತಲೂ ಅಧಿಕ ಮಂದಿ ಮಹಿಳೆಯರೇ ಆಗಿದ್ದರೂ ಈ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಲಿಂಗ ತಾರತಮ್ಯದ ಮಾತಾಡುತ್ತಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಹೆಸರಲ್ಲಿ ಪ್ರತಿಭಟನೆಗಳೂ ಕಾಣಿಸಿಕೊಳ್ಳುತ್ತಿಲ್ಲ.
  ಯಾಕೆ ಹೀಗೆ?

Monday, November 10, 2014

ನಂದಿತಾ ಸಾವಿನಲ್ಲಿ ‘ಅತ್ಯಾಚಾರ’ಕ್ಕೊಳಗಾದ ಮಾಧ್ಯಮ ಧರ್ಮ


    ಒಂದು ಘಟನೆಯ ಸುತ್ತ ಸುದ್ದಿ ತಯಾರಿಸುವಾಗ ಓರ್ವ ಪತ್ರಕರ್ತನ/ಳಲ್ಲಿ ಇರಲೇಬೇಕಾದ ಎಚ್ಚರಿಕೆಗಳು ಏನೆಲ್ಲ? ಪ್ರತಿ ಘಟನೆಗೂ ಒಂದಕ್ಕಿಂತ ಹೆಚ್ಚು ಆಯಾಮಗಳಿರುತ್ತವೆ. ಹತ್ತಾರು ತಿರುವುಗಳಿರುತ್ತವೆ. ಈ ಆಯಾಮ ಮತ್ತು ತಿರುವುಗಳನ್ನು ಗಮನದಲ್ಲಿಟ್ಟುಕೊಂಡೇ ಪತ್ರಕರ್ತ ಘಟನಾ ಸ್ಥಳಕ್ಕೆ ತಲುಪಬೇಕು. ಹಾಗಂತ, ಘಟನಾ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಒಂದೇ ಬಗೆಯ ವಾತಾವರಣ ಇರಬೇಕೆಂದೇನೂ ಇಲ್ಲ. ಸ್ಥಳೀಯರ ಅಭಿಪ್ರಾಯದಲ್ಲಿ ವ್ಯತ್ಯಾಸ ಇರಬಹುದು. ಹೇಳುವ ಶೈಲಿ, ಮಂಡಿಸುವ ವಾದ, ಹಾವಭಾವಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಇರಬಹುದು. ಇವರಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವರು, ಸಂತ್ರಸ್ತರೊಂದಿಗೆ ಕೌಟುಂಬಿಕ ಸಂಬಂಧ ಹೊಂದಿದವರು, ಮನಸ್ತಾಪ ಇರುವವರು, ನಿಷ್ಪಕ್ಷ  ನಿಲುವಿನವರು, ಸ್ವಾರ್ಥಿಗಳು.. ಎಲ್ಲರೂ ಇರಬಹುದು. ಅವರೆಲ್ಲರ ಅಭಿಪ್ರಾಯಗಳನ್ನು ಸುದ್ದಿಯ ರೂಪಕ್ಕೆ ಇಳಿಸುವ ಮೊದಲು ಈ ಅರಿವು ಸದಾ ಜೊತೆಗಿರಬೇಕು. ಅಲ್ಲದೇ, ಘಟನಾ ಸ್ಥಳದಲ್ಲೂ ಸೂಕ್ಷ್ಮ ಕುರುಹುಗಳಿರುತ್ತವೆ. ಈ ಕುರುಹುಗಳಿಗೂ ತಾನು ದಾಖಲಿಸಿಕೊಂಡ ಅಭಿಪ್ರಾಯಗಳಿಗೂ ತಾಳೆ ಹಾಕಿ ನೋಡುವ ಮತ್ತು ಅದರ ಆಧಾರದಲ್ಲಿ ಘಟನೆಯನ್ನು ವಿಶ್ಲೇಷಿಸುವ ತಾಳ್ಮೆಯೂ ಇರಬೇಕು. ದುರಂತ ಏನೆಂದರೆ, ಹೆಚ್ಚಿನ ಬಾರಿ ಹೀಗೆಲ್ಲ ನಡೆಯುವುದೇ ಇಲ್ಲ. ಘಟನಾ ಸ್ಥಳವನ್ನು ಪರಿಶೀಲಿಸದೆಯೇ ಮತ್ತು ಘಟನೆಯ ಒಳ-ಹೊರಗನ್ನು ಅಭ್ಯಸಿಸದೆಯೇ ನಿರ್ದಿಷ್ಟ ಮೂಲವೊಂದರ ಮಾಹಿತಿಯನ್ನಷ್ಟೇ ಆಧರಿಸಿಕೊಂಡು ಸುದ್ದಿಯನ್ನು ಕೆಲವೊಮ್ಮೆ ಹೆಣೆಯಲಾಗುತ್ತದೆ. ಕನಿಷ್ಠ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಮಾಹಿತಿಯನ್ನು ತರಿಸಿ ಸುದ್ದಿಗೆ ನಿಖರತೆಯನ್ನು ಕೊಡುವ ಪ್ರಯತ್ನಗಳೂ ನಡೆಯುವುದಿಲ್ಲ. ಭಯೋತ್ಪಾದನಾ ಪ್ರಕರಣಗಳ ಕುರಿತಾದ ವರದಿಗಳಲ್ಲಿ ಇಂಥ ಏಕಮುಖ ನಿಲುವುಗಳು ಪತ್ರಿಕೆಗಳಲ್ಲಿ ಹಲವು ಬಾರಿ ವ್ಯಕ್ತವಾಗಿವೆ. ಮದ್ರಸಗಳೂ ಇಂಥ ವರದಿ ಗಾರಿಕೆಯಿಂದ ಸಂತ್ರಸ್ತಗೊಂಡಿವೆ. ಇದೀಗ ನಂದಿತಾ ಪ್ರಕರಣ. ಅಕ್ಟೋಬರ್ 30ರಂದು ಮೃತಪಟ್ಟ ಬಾಲಕಿ ನಂದಿತಾಳ ಕುರಿತಂತೆ ನವೆಂಬರ್ 2ರಿಂದ ಕನ್ನಡ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗತೊಡ ಗಿವೆ. ಈ ಸುದ್ದಿ ಮತ್ತು ಅದಕ್ಕೆ ಕೊಡುತ್ತಿರುವ ಶೀರ್ಷಿಕೆಗಳನ್ನು ಓದುವಾಗ ಕೆಲವೊಮ್ಮೆ ದಿಗಿಲಾಗುತ್ತದೆ. ಕೆಲವೊಮ್ಮೆ ಆತಂಕ, ವಿಷಾದವೂ ಉಂಟಾಗುತ್ತದೆ. ನಂದಿತಾಳ ಹೆತ್ತವರ ಕಣ್ಣೀರು, ಆಕ್ರೋಶ ಸಹಜವಾದುದು. ಆದರೆ ಪತ್ರಿಕೆಯೊಂದಕ್ಕೆ ಅದರಾಚೆಗೂ ಕೆಲವು ಜವಾಬ್ದಾರಿಗಳಿವೆ. ಇನ್ನೂ ಖಚಿತವಾಗದ ಘಟನೆಯೊಂದರ ಮೇಲೆ ಶೀರ್ಷಿಕೆ ಕಟ್ಟುವಾಗ ಮತ್ತು ಸುದ್ದಿ ಹೆಣೆಯುವಾಗ ಅನುಮಾನಿತ ಪ್ರಜ್ಞೆಯೊಂದು ಇರಲೇಬೇಕಾಗುತ್ತದೆ. ಈ ಮಾಹಿತಿಯೇ ಅಂತಿಮ ಅಲ್ಲ ಅನ್ನುವ ಸೂಚನೆಯೊಂದು ಸುದ್ದಿಯಲ್ಲಿ ಅಲ್ಲಲ್ಲಿ ಇಣುಕಬೇಕಾಗುತ್ತದೆ. ಯಾಕೆಂದರೆ, ಪತ್ರಿಕೆಯೆಂಬುದು ಕಾಗದಗಳ ರಾಶಿಯಲ್ಲ. ಅದು ಸಮಾಜದಲ್ಲಿ ಅಭಿಪ್ರಾಯವನ್ನು ರೂಪಿಸುತ್ತದೆ. ಸಮಾಜದ ಶಾಂತಿ-ಅಶಾಂತಿಯಲ್ಲಿ ಅದಕ್ಕೂ ಒಂದು ಪಾತ್ರವಿರುತ್ತದೆ. ಈ ಕಾರಣದಿಂದಲೇ ನ. 2ರಂದು ಪ್ರಕಟವಾದ ಪತ್ರಿಕಾ ವರದಿಗಳನ್ನು ಪರಿಶೀಲಿಸಬೇಕಾಗುತ್ತದೆ.
   1. ವಿಜಯವಾಣಿ
ಮುಖಪುಟ ಸುದ್ದಿ - ಶೀರ್ಷಿಕೆ: ವಿಷ ಕುಡಿಸಿ ಬಾಲಕಿ ಹತ್ಯೆ
“...ಪುಂಡರ ಗುಂಪೊಂದು ವಿಷ ಕುಡಿಸಿದ ಪರಿಣಾಮ ಶಾಲಾ ಬಾಲಕಿ ಮೃತಪಟ್ಟಿದ್ದು ತೀರ್ಥಹಳ್ಳಿ ಉದ್ವಿಗ್ನಗೊಂಡಿದೆ.. ಅಕ್ಟೋಬರ್ 29 ಬೆಳಿಗ್ಗೆ ಶಾಲೆಗೆ ತೆರಳಲೆಂದು ನಂದಿತಾ ಬಸ್ ನಿಲ್ದಾಣದಲ್ಲಿದ್ದಾಗ ಪರಿಚಿತನೊಬ್ಬ ಕಾರಿನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ತೀರ್ಥಹಳ್ಳಿಯಲ್ಲಿ ಅದೇ ಕಾರಿಗೆ ಮತ್ತಿಬ್ಬರು ವ್ಯಕ್ತಿಗಳು ಹತ್ತಿದ್ದಾರೆ. ಬಳಿಕ ಆಕೆಯನ್ನು ಪಟ್ಟಣದ ಹೊರವಲಯದ ಆನಂದಗಿರಿ ಬೆಟ್ಟಕ್ಕೆ ಕರೆದುಕೊಂಡು ಹೋದ ಯುವಕರು ಆಕೆಗೆ ಮತ್ತು ಬರುವ ಪಾನೀಯ ಕುಡಿಸಿ ಬಾಯಿಗೆ ಬಟ್ಟೆ ತುರುಕಿ ಕಾಲ್ಕಿತ್ತಿದ್ದಾರೆ. ಸೊಪ್ಪು ತರಲೆಂದು ಬೆಟ್ಟಕ್ಕೆ ಹೋದ ಮಹಿಳೆಯರು ನಂದಿತಾಳನ್ನು ರಕ್ಷಿಸಿ ಪಾಲಕರಿಗೆ ಮಾಹಿತಿ ನೀಡಿ ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
   2. ವಿಜಯ ಕರ್ನಾಟಕ
ಮುಖಪುಟ ಸುದ್ದಿ-ಶೀರ್ಷಿಕೆ: ಅಪಹರಣ, ಅತ್ಯಾಚಾರ - ಶಾಲಾ ಬಾಲಕಿ ಸಾವು
ತೀರ್ಥಹಳ್ಳಿ: ...ಇಲ್ಲಿನ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಳೇಬೈಲು ಗ್ರಾಮದ ಬಾಲಕಿಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿ ಬಲವಂತವಾಗಿ ಪ್ರಜ್ಞೆ ತಪ್ಪುವ ಔಷಧಿ ಕುಡಿಸಿದ್ದಾರೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಅ. 29ರಂದು ಬೆಳಿಗ್ಗೆ 9:30ರ ಸುಮಾರಿಗೆ ಶಾಲೆಯ ಬಳಿ ಕೆಂಪು ಬಣ್ಣದ ಕಾರಿನಲ್ಲಿ ಬಂದ ಮೂವರು ಯುವಕರ ಗುಂಪು, ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಿತ್ತು.
   3. ಉದಯವಾಣಿ
ಒಳಪುಟ ಸುದ್ದಿ - ಶೀರ್ಷಿಕೆ: ಬಾಲಕಿ ಸಾವಿಗೆ ಭುಗಿಲೆದ್ದ ಆಕ್ರೋಶ: ತೀರ್ಥಹಳ್ಳಿ ಉದ್ವಿಗ್ನ
..ತೀರ್ಥಹಳ್ಳಿ ಸವಿೂಪದ ಬಾಳೇ ಬೈಲು ನಿವಾಸಿಯೋರ್ವರ ಪುತ್ರಿ ಅಕ್ಟೋಬರ್ 29ರಂದು ಬೆಳಿಗ್ಗೆ ಬಸ್‍ಗಾಗಿ ನಿಲ್ದಾಣದಲ್ಲಿ ಕಾಯುತ್ತಿ ದ್ದಳು. ಸುಮಾರು 9;30ರ ವೇಳೆಗೆ ಕಾರೊಂದರಲ್ಲಿ ಬಂದ ನಾಲ್ವರು ಯುವಕರು ಆಕೆಯನ್ನು ಪುಸಲಾಯಿಸಿ ಶಾಲೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡರು. ಬಳಿಕ ಆಕೆಗೆ ಸಾಫ್ಟ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿ ಒಂದು ಕಿ.ವಿೂ. ದೂರದ ತುಂಗಾ ಕಾಲೇಜಿನ ಕ್ಯಾಂಪಸ್ ಸವಿೂಪವಿರುವ ಆನಂದಗಿರಿ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದರು. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡ ಆಕೆಯನ್ನು ರಸ್ತೆ ಬದಿಗೆ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
   4. ಹೊಸದಿಗಂತ
ಮುಖಪುಟ ಸುದ್ದಿ - ಶೀರ್ಷಿಕೆ: ತೀರ್ಥಹಳ್ಳಿಯಲ್ಲಿ ಪೈಶಾಚಿಕ ಕೃತ್ಯ ಬೆಳಕಿಗೆ, ಅತ್ಯಾಚಾರಕ್ಕೆ ಯತ್ನ: ಬಾಲಕಿ ದುರ್ಮರಣ
   ..ದಿನಸಿ ವ್ಯಾಪಾರಿ ಬಾಳೇಬೈಲಿನ ಕೃಷ್ಣಪ್ಪ ಎಂಬವರ ಪುತ್ರಿ ಯಾಗಿದ್ದ ನಂದಿತಾ, ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಅ. 29ರಂದು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಆಕೆಗೆ ಪರಿಚಯವಿದ್ದ ಒಂದು ಕೋಮಿಗೆ ಸೇರಿದ ನಾಲ್ವರು ಯುವಕರು ಆಕೆಯನ್ನು ಬಲಾತ್ಕಾರವಾಗಿ ಕಾರಿನಲ್ಲಿ ಹೊತ್ತೊಯ್ದಿದ್ದಾರೆ. ನಂತರ ಆನಂದಗಿರಿ ನೆಡುತೋಪಿನಲ್ಲಿ ಮತ್ತು ಬರುವ ಮಾದಕ ಪಾನೀಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರಬಹುದೆಂದು ಶಂಕಿಸಲಾಗಿದೆ.. ಆನಂದಗಿರಿ ಗುಡ್ಡದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಲು ಹೋಗಿದ್ದ ಮಹಿಳೆಯರು ಈಕೆ ನೆಡುತೋಪಿನಲ್ಲಿ ಅನಾಥವಾಗಿ ಮೂರ್ಛೆ ತಪ್ಪಿ ಬಿದ್ದಿರುವುದನ್ನು ನೋಡಿ ನಂದಿತಾಳ ಪೋಷಕರಿಗೆ ವಿಷಯ ತಿಳಿಸಿದ್ದಾರೆ.
   5. ವಾರ್ತಾಭಾರತಿ
ಒಳಪುಟ ಸುದ್ದಿ - ಶೀರ್ಷಿಕೆ: ವಿದ್ಯಾರ್ಥಿನಿ ನಿಗೂಢ ಸಾವು
   ನಂದಿತಾ ಅಕ್ಟೋಬರ್ 29ರಂದು ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗುವ ಸಮಯದಲ್ಲಿ ಬೇರೆ ಕೋಮಿನ ಯುವಕನ ಜೊತೆಗೆ ಮಾತನಾಡಿದ್ದು, ಇದನ್ನು ಸ್ಥಳೀಯರು ನೋಡಿ ಆಕೆಯ ಮನೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಮನೆಯವರ ಬೈಗುಳಕ್ಕೆ ಅಂಜಿ ಬಾಲಕಿ ಇಂದು ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಒಂದು ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಆಕೆಯನ್ನು ಅ. 29ರಂದು ನಾಲ್ವರು ಯುವಕರು ಅಪಹರಿಸಿದ್ದು, ಮತ್ತು ಬರುವ ಔಷಧಿ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಸ್ಥಳೀಯರು ಆಗಮಿಸಿದಾಗ ಓಡಿ ಹೋಗಿದ್ದಾರೆ. ಆಕೆಯನ್ನು ಮನೆಗೆ ತಲುಪಿಸಿದ್ದಾರೆ. ನ. 1ರಂದು ಆಕೆ ಮೃತಪಟ್ಟಿದ್ದಾಳೆ ಎಂದು ಸಂಘಪರಿವಾರದ ಸಂಘಟನೆಗಳು ಆರೋಪಿಸುತ್ತಿವೆ. ಕಳೆದೆರಡು ದಿನಗಳಿಂದ ಮೌನವಾಗಿದ್ದ ಆಕೆಯ ಪೋಷಕರು ನಾಲ್ವರು ಯುವಕರ ವಿರುದ್ಧ ಅತ್ಯಾಚಾರ ಯತ್ನ ಮತ್ತು ಕೊಲೆಯತ್ನ ದೂರು ದಾಖಲಿಸಿದ್ದಾರೆ. ಒಂದು ಮೂಲದ ಪ್ರಕಾರ, ನಾಲ್ವರು ಯುವಕರು ಬಾಲಕಿಯನ್ನು ಪುಸಲಾಯಿಸಿ ಒಂದು ಕಿ.ವಿೂ. ದೂರದ ತುಂಗಾ ಕಾಲೇಜಿನ ಕ್ಯಾಂಪಸ್ ಸವಿೂಪವಿರುವ ಆನಂದಗಿರಿ ಗುಡ್ಡಕ್ಕೆ ಕರೆದೊಯ್ದು ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರ ನಡೆಸಲು ಯತ್ನಿಸಿದರೆನ್ನಲಾಗಿದ್ದು ಬಾಲಕಿಯ ಕಿರುಚಾಟದಿಂದ ಸ್ಥಳೀಯರು ಆಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾದರೆಂದು ಹೇಳಲಾಗಿದೆ. ಆದರೆ ಸತ್ಯವೇನು ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
   6. ಪ್ರಜಾವಾಣಿ
ಮುಖಪುಟ ಸುದ್ದಿ: ಶೀರ್ಷಿಕೆ - ವಿದ್ಯಾರ್ಥಿನಿ ಸಾವು: ತೀರ್ಥಹಳ್ಳಿಯಲ್ಲಿ ಗಲಾಟೆ
  ..ಅ. 29ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ನಂದಿತಾಳನ್ನು 4 ಮಂದಿ ಯುವಕರ ಗುಂಪು ಕಾರಿನಲ್ಲಿ ಅಪಹರಿಸಿತ್ತು. ತದ ನಂತರ ಪಟ್ಟಣದ ತುಂಗಾ ಬೆಟ್ಟದಲ್ಲಿ ವಿದ್ಯಾರ್ಥಿನಿಯನ್ನು ಬಿಟ್ಟು ಹೋಗಿತ್ತು. ಹೊಟ್ಟೆ ಮತ್ತು ತಲೆನೋವು ತಾಳಲಾರದೆ ಬಳಲಿದ್ದ ಬಾಲಕಿಯನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಳು.
  7. ಕನ್ನಡ ಪ್ರಭ
ಒಳಪುಟ ಸುದ್ದಿ - ಶೀರ್ಷಿಕೆ: ಅತ್ಯಾಚಾರಕ್ಕೊಳಗಾದ ತೀರ್ಥಹಳ್ಳಿ ಬಾಲಕಿ ಸಾವು
   ..ಬಾಲಕಿಯ ತಂದೆ ಕೃಷ್ಣಪ್ಪ ಹೇಳುವಂತೆ, ಗುರುವಾರ ಶಾಲೆಯಿಂದ ಮರಳುತ್ತಿದ್ದ 8ನೇ ತರಗತಿಯ ಈ ಮುಗ್ಧ ಬಾಲಕಿಯನ್ನು ಪರಿಚಯದ ಹುಡುಗನೊಬ್ಬ ಓಮ್ನಿ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಕಾರಿನಲ್ಲಿದ್ದ ಇತರ ಇಬ್ಬರು ಆಕೆಯ ನೀರಿನ ಬಾಟಲಿಗೆ ಯಾವುದೋ ವಸ್ತುವನ್ನು ಬೆರೆಸಿ ಆಕೆಗೆ ಕುಡಿಸಿದ್ದಾರೆ. ಪ್ರಜ್ಞೆ ತಪ್ಪಿದ ಆಕೆಯ ಜೊತೆಗೆ ಈ ಮೂರು ಮಂದಿ ಯುವಕರು ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಸುಮಾರು ಒಂದು ಗಂಟೆಯ ನಂತರ ಓಮ್ನಿಯಿಂದ ಬಾಲಕಿಯನ್ನು ರಸ್ತೆ ಪಕ್ಕಕ್ಕೆ ದೂಡಿ ಹೋಗಿದ್ದಾರೆ. ಆಕೆಯನ್ನು ನೋಡಿದ ಯಾರೋ ಆಕೆಯ ಗುರುತಿನ ಚೀಟಿಯಲ್ಲಿದ್ದ ಮೊಬೈಲ್ ನಂಬರ್‍ಗೆ ಕರೆ ಮಾಡಿ ತಿಳಿಸಿದ್ದಾರೆ. ಆಕೆಯನ್ನು ಮನೆಗೆ ಕೊಂಡುಹೋದ ಮೇಲೆ ಆಕೆಗೆ ಪ್ರಜ್ಞೆ ಬಂದಿದ್ದು ವಿಪರೀತ ವಾಂತಿ ಮಾಡಿದ್ದಾಳೆ..”
    ಒಂದೇ ಘಟನೆ, ಒಂದೇ ದಿನ ಬೇರೆ ಬೇರೆ ಪತ್ರಿಕೆಗಳನ್ನು ಚಿತ್ರಿತವಾದ ರೀತಿ ಇದು. ಯಾಕೆ ಹೀಗೆ? ಸುದ್ದಿಗಳಲ್ಲಿ ಈ ಮಟ್ಟದ ವೈರುಧ್ಯಗಳೇಕಿವೆ? ನಿಜವಾಗಿ, ಇಂಥ ಘಟನೆಗಳಿಗೆ ಯಾವಾಗಲೂ ಒಂದಕ್ಕಿಂತ ಹೆಚ್ಚು ಮುಖಗಳಿರುತ್ತವೆ. ವಾರ್ತಾಭಾರತಿಯನ್ನು ಬಿಟ್ಟು ಉಳಿದ ಯಾವ ಪತ್ರಿಕೆಗಳೂ ಆ ಕುರಿತಂತೆ ಆಸಕ್ತಿಯನ್ನೇ ತೋರಿಲ್ಲ. ಕನಿಷ್ಠ ಪ್ರಜಾವಾಣಿ ತೋರಿದ ಸಂಯಮವನ್ನೂ ಅವು ಪ್ರದರ್ಶಿಸಿಲ್ಲ. ಅದರ ಬದಲು ಅವೆಲ್ಲ ಅತ್ಯಾಚಾರವನ್ನು ಸಾಬೀತುಪಡಿಸಲು ಜಿದ್ದಿಗೆ ಬಿದ್ದಂತೆ ವರ್ತಿಸಿದುವು. ಮಾನ, ಘನತೆ, ಗೌರವಗಳೆಲ್ಲ ಮೃತದೇಹಕ್ಕೂ ಇರುತ್ತದೆ ಮತ್ತು ಅದನ್ನು ಗೌರವಿಸ ಬೇಕಾಗಿದೆ ಎಂಬುದನ್ನು ಮರೆತಂತೆ ಬರೆದುವು. ಅಂದಹಾಗೆ,  ಬಾಲಕಿ ನಂದಿತಾ ಪ್ರಕರಣಕ್ಕೆ ಎರಡು ವಾರಗಳು ಸಂದ ಈ ಸಂದರ್ಭದಲ್ಲಿ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಏನನಿಸುತ್ತದೆ? ಮಗಳ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಸ್ವತಃ ತಂದೆ ಕೃಷ್ಣಪ್ಪರೇ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ. ಅವರ ಮಾತು - ವರ್ತನೆಗಳಲ್ಲಿ ಅಸಹಜತೆ ವ್ಯಕ್ತವಾಗುತ್ತಿದೆ. ಘಟನೆಗೆ ಬೇರೆಯದೇ ಆದ ಆಯಾಮಗಳಿರಬಹುದು ಎಂದು ಶಂಕಿಸುವುದಕ್ಕೆ ಪೂರಕವಾದ ಅಂಶಗಳು ಗೋಚರಿಸುತ್ತಿವೆ. ಆದರೆ ನವಂಬರ್ 2ರಿಂದ ಬಹುತೇಕ ಒಂದು ವಾರಗಳ ಕಾಲ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ಇಂಥದ್ದೊಂದು ಸುಳಿವನ್ನೇ ಕೊಡದಷ್ಟು ಏಕಮುಖವಾಗಿದ್ದುವು. ಘಟನೆಗೆ ಇನ್ನೊಂದು ಮುಖವಿರಬಹುದೇ ಎಂಬ ಶಂಕೆಗೆ ಆಸ್ಪದವೇ ಇಲ್ಲದಂತೆ ವರ್ತಿಸಿದುವು. ಈ ಬೇಜವಾಬ್ದಾರಿ ವರ್ತನೆಯೇ ತೀರ್ಥಹಳ್ಳಿಯನ್ನು ಉರಿಸಿದ್ದು ಅಥವಾ ಉರಿಸಲು ಬಯಸಿದವರಿಗೆ ನೆರವಾದದ್ದು. ಅಷ್ಟಕ್ಕೂ,
   ರೋಚಕತೆ, ಸುದ್ದಿವೈಭವ, ಊಹೆ, ಅತಿರೇಕಗಳ ಹಂಗಿಲ್ಲದೇ ಒಂದು ಸುದ್ದಿಯನ್ನು ಕೇವಲ ಸುದ್ದಿಯಾಗಿಯಷ್ಟೇ ಓದುಗನಿಗೆ ಕಟ್ಟಿಕೊಡಬೇಕಾದುದು ಪತ್ರಿಕಾ ಧರ್ಮ ಎಂದಾದರೆ ಆ ಧರ್ಮ ಇವತ್ತು ಎಲ್ಲಿದೆ, ಎಷ್ಟರ ಮಟ್ಟಿಗೆ ಜೀವಂತವಾಗಿದೆ ಮತ್ತು ಯಾರೆಲ್ಲ ಅದನ್ನು ಅನುಸರಿಸುತ್ತಿದ್ದಾರೆ?

Tuesday, November 4, 2014

 ಓಡುವ ಪಟೇಲರನ್ನು ನೋಡುತ್ತಾ ಕಸಗುಡಿಸಿ ಕಳೆದು ಹೋಗುವ ಗಾಂಧಿ

     ಮಹಾತ್ಮಾ ಗಾಂಧಿ
  ಸರ್ದಾರ್ ಪಟೇಲ್
  ಪ್ರಧಾನಿ ನರೇಂದ್ರ ಮೋದಿಯವರು ಈ ಎರಡು ಹೆಸರುಗಳನ್ನು ಬಾರಿಬಾರಿಗೂ ಸ್ಮರಿಸುತ್ತಿದ್ದಾರೆ. ಓರ್ವರನ್ನು ರನ್ ಫಾರ್ ಯುನಿಟಿಗೂ (ಏಕತೆಗಾಗಿ ಓಟ) ಇನ್ನೋರ್ವರನ್ನು ಸ್ವಚ್ಛ ಭಾರತಕ್ಕೂ ಬಳಸಿಕೊಂಡಿದ್ದಾರೆ. ‘ಸರ್ದಾರ್ ಇಲ್ಲದ ಗಾಂಧಿ ಅಪೂರ್ಣ’ ಎಂಬೊಂದು ಆಕರ್ಷಕ ನುಡಿಗಟ್ಟನ್ನೂ ಉದುರಿಸಿದ್ದಾರೆ. ಹೀಗೆ ‘ಗಾಂಧಿಯನ್ನು ಪೂರ್ಣಗೊಳಿಸುವ ಪಟೇಲರಿಗಾಗಿ’ ನರ್ಮದಾ ನದಿ ಕಣಿವೆಯಲ್ಲಿ 600 ವಿೂಟರ್ ಎತ್ತರದ ಪ್ರತಿಮೆ ನಿರ್ಮಾಣವಾಗುತ್ತಿದೆ. ಸಿಟಿಝನ್ ಫಾರ್ ಅಕೌಂಟೇಬಲ್ ಗವರ್ನ್‍ಮೆಂಟ್ ಎಂಬ ಸರಕಾರೇತರ ಸಂಸ್ಥೆಯೊಂದು ಈ ಪ್ರತಿಮೆಗಾಗಿ ಅಭಿಯಾನ ನಡೆಸುತ್ತಿದೆ. ಮನೆ ಮನೆಗೆ ಭೇಟಿ ಕೊಡುತ್ತಿದೆ. ರಾಮಮಂದಿರಕ್ಕೆ ಇಟ್ಟಿಗೆಯನ್ನು ಸಂಗ್ರಹಿಸಿದಂತೆ ಪಟೇಲ್ ಪ್ರತಿಮೆಗೆ ಪ್ರತಿಯೋರ್ವರಿಂದಲೂ ದುಡ್ಡು, ಉಕ್ಕಿನ ಸಂಗ್ರಹವಾಗುತ್ತಿದೆ. ಅದಕ್ಕೆಂದೇ www.statueofunity ಎಂಬ ವೆಬ್‍ಸೈಟ್ ಪ್ರಾರಂಭಿಸಲಾಗಿದ್ದು, 2500 ಕೋಟಿ ರೂಪಾಯಿಯ ಆ ಯೋಜನೆಯ ಬಗ್ಗೆ ಅದರಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ವಿಶ್ವದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಇದಾಗಲಿದ್ದು, ನ್ಯೂಯಾರ್ಕ್‍ನ ಲಿಬರ್ಟಿ ಪ್ರತಿಮೆಗಿಂತ ಎರಡು ಪಟ್ಟು ಮತ್ತು ಬ್ರೆಜಿಲ್‍ನ ರಿಯೋ ಡಿ ಜನಿರೋದಲ್ಲಿರುವ ಕ್ರಿಸ್ಟ್ ದಿ ರಿಡೀಮರ್‍ಗಿಂತ ನಾಲ್ಕು ಪಟ್ಟು ಹೆಚ್ಚು ಎತ್ತರವಿದೆ ಎಂದು ಹೇಳಲಾಗುತ್ತಿದೆ. ಮೋದಿಯವರ ನೇತೃತ್ವದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರಾಷ್ಟ್ರೀಯ ಏಕ್ತಾ ಟ್ರಸ್ಟನ್ನೂ ಇದಕ್ಕಾಗಿ ರಚಿಸಲಾಗಿದೆ. ಸಂದರ್ಶಕರ ಕೊಠಡಿ, ಅಮ್ಯೂಸ್‍ಮೆಂಟ್ ಪಾರ್ಕ್, ವಿಶಾಲ ಸಭಾಂಗಣ, ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿರುವ ಪಟೇಲ್‍ರ ಈ ಪ್ರತಿಮೆ ಯೋಜನೆಯನ್ನು ಸ್ವಚ್ಛ ಭಾರತದ ಗಾಂಧೀಜಿಗೆ ಒಮ್ಮೆ ಹೋಲಿಸಿ ನೋಡಿ. ಯಾರು ಪೂರ್ಣವಾಗುತ್ತಿದ್ದಾರೆ? ಗಾಂಧಿಯೋ ಪಟೇಲರೋ? ಸ್ವಚ್ಛ ಭಾರತ್ ಅಭಿಯಾನವನ್ನು ಘೋಷಿಸುವ ಸಂದರ್ಭದಲ್ಲೂ ತೀವ್ರ ಬಲಪಂಥೀಯ ವ್ಯಕ್ತಿತ್ವಗಳಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ್ ಮತ್ತು ಮದನ್ ಮೋಹನ್ ಮಾಳವಿಯರನ್ನು ಮೋದಿಯವರು ಸ್ಮರಿಸಿ ಕೊಂಡಿದ್ದರು. ಗಾಂಧಿ ಎಂಬುದು ಮೋದಿ ಮತ್ತು ಅವರ ಪರಿವಾರಕ್ಕೆ ಎಂದೂ ಜೀರ್ಣಿಸಲಾಗದ ವ್ಯಕ್ತಿತ್ವ. ಗಾಂಧಿಯವರ ಅಭಿವೃದ್ಧಿ ಚಿಂತನೆಗೂ ಮೋದಿಯವರ ಅಭಿವೃದ್ಧಿ ಚಿಂತನೆಗೂ ತದ್ವಿರುದ್ಧ ಎನ್ನಬಹುದಾದಷ್ಟು ವ್ಯತ್ಯಾಸಗಳಿವೆ. ದೇಶಪ್ರೇಮ, ರಾಷ್ಟ್ರೀಯ ಭದ್ರತೆ, ಕೈಗಾರಿಕಾ ನೀತಿ, ಅರ್ಥವ್ಯವಸ್ಥೆ ಮತ್ತು ಜಾತ್ಯತೀತತೆ.. ಎಲ್ಲದರ ವಿಷಯದಲ್ಲೂ ಗಾಂಧಿ ಮತ್ತು ಮೋದಿಯವರು ಉತ್ತರ-ದಕ್ಷಿಣ. ಆದ್ದರಿಂದಲೇ, ಪ್ರಧಾನಿಯಾಗುವವರೆಗೆ ಗಾಂಧಿಯನ್ನು ಹೊರಗಿಟ್ಟೇ ಮೋದಿ ಮಾತಾಡುತ್ತಿದ್ದರು. ಗಾಂಧಿ ಎಂಬೊಂದು ವ್ಯಕ್ತಿತ್ವವು ಈ ದೇಶವನ್ನು ಮತ್ತು ಇಲ್ಲಿಯ ನಾಗರಿಕರನ್ನು ತೀವ್ರವಾಗಿ ಪ್ರಭಾವಿತಗೊಳಿಸಿದೆ ಎಂಬ ಸತ್ಯವನ್ನು ಅಲ್ಲಗಳೆಯುವ ರೀತಿಯಲ್ಲಿ ಅವರು ವರ್ತಿಸಿದ್ದರು. ಪಟೇಲ್‍ರು ಗುಜರಾತ್‍ನವರಾದಂತೆಯೇ ಗಾಂಧಿ ಕೂಡ ಗುಜರಾತ್‍ನವರೇ. ಪಟೇಲ್‍ರಿಗೆ ಪ್ರತಿಮೆ ನಿರ್ಮಾಣ ಮಾಡುವುದಕ್ಕಿಂತ ಮೊದಲೇ ಗುಜರಾತ್‍ನಲ್ಲಿ ಅವರನ್ನು ಗೌರವಾರ್ಹ ವ್ಯಕ್ತಿತ್ವವಾಗಿ ಗುರುತಿಸಲಾಗಿತ್ತು. ಸರ್ದಾರ್ ಸರೋವರ್ ಅಣೆಕಟ್ಟು, ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ, ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸರ್ದಾರ್ ಪಟೇಲ್ ಯುನಿವರ್ಸಿಟಿ ಮುಂತಾದ ರೂಪದಲ್ಲಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗಿತ್ತು. ಆದ್ದರಿಂದ, “ಕಾಂಗ್ರೆಸ್ ಸರಕಾರ ಪಟೇಲ್‍ರನ್ನು ನಿರ್ಲಕ್ಷಿಸಿದುದರಿಂದ ಪ್ರತಿಮೆ ನಿರ್ಮಿಸಬೇಕಾಯಿತು” ಎಂಬ ಮೋದಿವಾದ ಸುಳ್ಳು ಮತ್ತು ಅತಾರ್ಕಿಕವಾದುದು. ಒಂದು ರೀತಿಯಲ್ಲಿ, ಗುಜರಾತ್‍ನವರಾಗಿಯೂ ಗುಜರಾತ್‍ನಲ್ಲಿ ಕಳೆದು ಹೋಗಿರುವುದು ಗಾಂಧಿಯೇ. ಅವರನ್ನು ಸಬರಮತಿಯ ಆಶ್ರಮಕ್ಕೆ ಸೀಮಿತಗೊಳಿಸಿ ಬಿಡಲಾಗಿದೆ. ಧರಣಿ, ಸತ್ಯಾಗ್ರಹ, ಹಿಂದೂ-ಮುಸ್ಲಿಮ್ ಏಕತೆ ಮುಂತಾದುವುಗಳೆಲ್ಲ ನೆಲೆ ಕಳೆದುಕೊಂಡಿರುವುದೂ ಗುಜರಾತ್‍ನಲ್ಲಿಯೇ. ನಿಜವಾಗಿ, ಗುಜರಾತ್‍ನಲ್ಲಿ ಪ್ರತಿಮೆ ನಿರ್ಮಾಣ ವಾಗಲೇಬೇಕಿದ್ದರೆ (ಪ್ರತಿಮೆ ನಿರ್ಮಾಣವೇ ತಪ್ಪು) ಅದು ಗಾಂಧಿಯದ್ದಾಗಿರಬೇಕಿತ್ತು. ಆದರೆ ಗಾಂಧಿಯನ್ನು ಕಸ ಗುಡಿಸುವುದಕ್ಕೆ, ಡ್ರೈನೇಜ್ ಸ್ವಚ್ಛಗೊಳಿಸುವುದಕ್ಕೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳ ಮಟ್ಟಕ್ಕೆ ಇಳಿಸಿಬಿಟ್ಟು ಪಟೇಲ್‍ರನ್ನು  ಪ್ರತಿಮೆಯಲ್ಲಿ ಮೋದಿ ಎತ್ತಿ ನಿಲ್ಲಿಸಿದ್ದಾರೆ. ಈ ಮೂಲಕ ಗಾಂಧಿಯನ್ನು ರಾಜಕೀಯ ರಹಿತ ವ್ಯಕ್ತಿತ್ವವಾಗಿ ಕಟ್ಟಿಕೊಡುವ ಸಂಚು ಎದ್ದು ಕಾಣುತ್ತಿದೆ. ರಾಜಕೀಯವಾಗಿ ಗಾಂಧಿ ಎಲ್ಲಿಯವರೆಗೆ ಪ್ರಸ್ತುತವಾಗಿರುತ್ತಾರೋ ಅಲ್ಲಿಯ ವರೆಗೆ ಮೋದಿ ಮತ್ತು ಅವರ ಪರಿವಾರದ ಚಿಂತನೆಗಳಿಗೆ ಸವಾಲು ಎದುರಾಗುತ್ತಲೇ ಇರುತ್ತದೆ. 1948ರಲ್ಲಿ ಗಾಂಧಿಗೆ ಗುಂಡಿಟ್ಟ ಗೋಡ್ಸೆ ಇವತ್ತು ಕೂಡಾ ಬಹು ಚರ್ಚಿತ ವ್ಯಕ್ತಿಯಾಗಿ ಜೀವಂತ ಇದ್ದಾನೆ. ಗಾಂಧಿ ಈ ದೇಶದಲ್ಲಿ ಚರ್ಚೆಗೆ ಒಳಗಾಗುವುದು ಇತರ ನಾಯಕರಂತೆ ಪುಣ್ಯ ತಿಥಿಯಂದೋ ಹುಟ್ಟು ಹಬ್ಬದಂದೋ ಅಥವಾ ಕೆಲವು ನಿರ್ದಿಷ್ಟ ದಿನಗಳಂದೋ ಅಲ್ಲ. ಈ ದೇಶದ ಆಡಳಿತವು ತೆಗೆದುಕೊಳ್ಳುವ ಬಹುತೇಕ ಪ್ರತಿ ನಿರ್ಧಾರದ ಸಂದರ್ಭದಲ್ಲೂ ಅವರು ಒಂದಲ್ಲ ಒಂದು ರೀತಿಯಲ್ಲಿ ಉಲ್ಲೇಖಗೊಳ್ಳುತ್ತಾರೆ. ಅವರ ಆಲೋಚನೆಗಳನ್ನು ಮತ್ತು ಪ್ರಸ್ತುತ ಆಡಳಿತದ  ಆಲೋಚನೆಗಳನ್ನು ಪರಸ್ಪರ ಹೋಲಿಸಿ ನೋಡಲಾಗುತ್ತದೆ. ಒಂದು ವೇಳೆ, ಗಾಂಧಿಯವರದು ಸ್ವಚ್ಛತೆ, ಸಮಾಜಸೇವಾ ಕಾರ್ಯಗಳು ಅಥವಾ ಸರಳ ಜೀವನ ಮುಂತಾದ ತೀರಾ ರಾಜಕೀಯ ರಹಿತ ವ್ಯಕ್ತಿತ್ವವಾಗಿರುತ್ತಿದ್ದರೆ ಈ 6 ದಶಕಗಳ ಬಳಿಕವೂ ಗೋಡ್ಸೆಯ ಗುಂಡು ಚರ್ಚಾರ್ಹ ಎನಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಗಾಂಧಿ ಯಾವಾಗಲೋ ಓರ್ವ ಸಮಾಜ ಸೇವಕರಾಗಿ ಕಾಣೆಯಾಗುತ್ತಿದ್ದರು. ಬಹುಶಃ ಗಾಂಧಿಗಿರುವ ಈ ವಿಶೇಷತೆಯೇ ಅವರನ್ನು ಅತ್ತ ಒಪ್ಪಿಕೊಳ್ಳಲೂ ಆಗದ ಇತ್ತ ತಿರಸ್ಕರಿಸಲೂ ಆಗದ ಸಂದಿಗ್ಧತೆಗೆ ಮೋದಿ ಮತ್ತು ಪರಿವಾರವನ್ನು ನೂಕಿಬಿಟ್ಟಿದೆ. ಈ ಹಿನ್ನೆಲೆಯಿಂದಾಗಿಯೇ ಮೋದಿಯವರು ಗಾಂಧಿಯನ್ನು ಸ್ವಚ್ಛ ಭಾರತಕ್ಕೆ ಜೋಡಿಸಿರಬೇಕು. ಓರ್ವ ಸೋಶಿಯಲ್ ವರ್ಕರ್ ಎಂಬಂತೆ ಗಾಂಧಿಯನ್ನು ಬೀದಿಬದಿಯಲ್ಲಿ ಕಸಗುಡಿಸಲು ನಿಲ್ಲಿಸುತ್ತಲೇ ಪಟೇಲ್‍ರನ್ನು ಪ್ರತಿಮೆಯ ಮೂಲಕ ರಾಜಕೀಯ ವ್ಯಕ್ತಿತ್ವವಾಗಿ ಕಟ್ಟಿಕೊಡುವುದು ಮೋದಿಯವರ ಇಂಗಿತವಾದಂತಿದೆ. ಸ್ವಚ್ಛ ಭಾರತದ ಗಾಂಧಿಯ ಎದುರು ಪ್ರತಿಮೆಯ ಪಟೇಲರನ್ನು ನಿಲ್ಲಿಸುವಾಗ ಗೆಲ್ಲುವುದು ಪಟೇಲರೇ. ಪ್ರತಿಮೆ ಸ್ಥಾಯಿಯಾದುದು. ಅದು ಅನಂತ ಕಾಲದ ವರೆಗೆ ಇರಬಲ್ಲುದು. ಆದರೆ ಸ್ವಚ್ಛ ಭಾರತಕ್ಕೆ ಸೀಮಿತತೆ ಮತ್ತು ಕಾಲಮಿತಿ ಎರಡೂ ಇದೆ. ಅದೊಂದು ಯೋಜನೆ. ಆ ಯೋಜನೆಯ ಮೂಲಕ ಗಾಂಧಿ ಚರ್ಚೆಗೀಡಾಗುವುದು ನೈರ್ಮಲ್ಯದ ಸುತ್ತ ಮಾತ್ರ. ಆ ಚರ್ಚೆ ಎಂದೂ ಗಾಂಧಿಯವರ ರಾಜಕೀಯ ಆಲೋಚನೆಗಳ ಕಡೆಗೆ ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಮೆಗಾದರೋ ಉಕ್ಕಿನ ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವವು ಬಲಾಢ್ಯತೆ, ಶ್ರೇಷ್ಠತೆ ಮುಂತಾದ ಗುಣಗಳನ್ನೇ ಧ್ವನಿಸುತ್ತದೆ. ಬಹುಶಃ ಸ್ವಚ್ಛ ಭಾರತ ಮತ್ತು ಪ್ರತಿಮೆ ನಿರ್ಮಾಣದ ಮೂಲಕ ಗಾಂಧಿಯನ್ನು ರಾಜಕೀಯ ರಹಿತಗೊಳಿಸಿ ಪಟೇಲರನ್ನು ಮೋದಿ ಬ್ರಾಂಡಿನ ಹೊಸ ರಾಜಕೀಯ ಪ್ರತಿರೂಪವಾಗಿ ಕಟ್ಟಿಕೊಡುವ ಪ್ರಯತ್ನ ಸಾಗುತ್ತಿರುವಂತೆ ಕಾಣುತ್ತಿದೆ.
 ನಿಜವಾಗಿ, ಗಾಂಧಿ ಮತ್ತು ಪಟೇಲ್ ಇಬ್ಬರೂ ಕಾಂಗ್ರೆಸಿಗರೇ.  ಅವರಿಬ್ಬರ ಐಡಿಯಾಲಜಿಯೂ ಕಾಂಗ್ರೆಸನ್ನು ಬೆಳೆಸಿದೆ ಮತ್ತು ಬಲಿಷ್ಠಗೊಳಿಸಿದೆ. ತನ್ನ ಬದುಕಿನುದ್ದಕ್ಕೂ ಕಾಂಗ್ರೆಸಿನವರಾಗಿದ್ದುಕೊಂಡೇ ಬದುಕಿದ್ದು ಮತ್ತು ಕಾಂಗ್ರೆಸ್ ಅನ್ನು  ಸಮರ್ಥಿಸಿಕೊಂಡವರಾಗಿದ್ದರು ಪಟೇಲರು. ಆದರೆ ಮೋದಿ ಮತ್ತು ಅವರ ಬೆಂಬಲಿಗರು ಈ ಸತ್ಯವನ್ನು ಎಲ್ಲೂ ಹೇಳದೆಯೇ ಅವರನ್ನು ತಮ್ಮವರೆಂದೂ ಅವರ ಐಡಿಯಾಲಜಿಯು ತಮ್ಮದೆಂದೂ ಬಿಂಬಿಸುವ ಯತ್ನದಲ್ಲಿದ್ದಾರೆ. ಪಟೇಲರ ಐಡಿಯಾಲಜಿ ಕಾಂಗ್ರೆಸ್‍ನ ಐಡಿಯಾಲಜಿಯಾಗಿತ್ತು. ಗಾಂಧಿ, ನೆಹರೂರಂತೆಯೇ ದ್ವೇಷ ರಾಜಕೀಯವನ್ನು ಇಷ್ಟಪಡದವರು ಪಟೇಲರು. ಆದ್ದರಿಂದಲೇ, 1949ರಲ್ಲಿ ಬಾಬರಿ ಮಸೀದಿಯ ಮೇಲೆ ದಾಳಿ ಮಾಡಲಾದ ಮತ್ತು ಅಲ್ಲಿದ್ದ ಮೌಲ್ವಿಯನ್ನು ಓಡಿಸಿ ಅದರೊಳಗೆ ರಾಮ ವಿಗ್ರಹ ಪ್ರತಿಷ್ಠಾಪಿಸಲಾದ ಘಟನೆಯ ವಿರುದ್ಧ ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. “ವಿವಾದವನ್ನು ಬಲವಂತದಿಂದ ಬಗೆಹರಿಸುವುದಕ್ಕೆ ಸಾಧ್ಯವಿಲ್ಲ, ನೀವಿದಕ್ಕೆ ಆಸ್ಪದ ಕೊಡಬೇಡಿ” ಎಂದು ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಜಿ.ಬಿ. ಪಂತ್‍ರಿಗೆ ಅವರು ಖಾರ ಪತ್ರವನ್ನು ಬರೆದಿದ್ದರು. ಗಾಂಧಿ ಹತ್ಯೆಯ ತರುವಾಯ ಆರೆಸ್ಸೆಸ್‍ಗೆ ನಿಷೇಧ ವಿಧಿಸಿದ್ದೂ ಪಟೇಲರೇ. ನಿಷೇಧವನ್ನು ಹಿಂತೆಗೆದುಕೊಳ್ಳುವುದಕ್ಕೆ, “ಸಾಮಾಜಿಕ ಸಂಘಟನೆಯಾಗಿ ಚಟುವಟಿಕೆಯಲ್ಲಿರುತ್ತೇವೆ, ರಾಜಕೀಯ ಪ್ರವೇಶಿಸುವುದಿಲ್ಲ” ಎಂಬ ಮುಚ್ಚಳಿಕೆಯನ್ನು ಷರತ್ತು ಆಗಿ ಮುಂದಿಟ್ಟವರೂ ಪಟೇಲರೇ. ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಆಗಿನ ಆರೆಸ್ಸೆಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಖಾರ ಪತ್ರವನ್ನು ಬರೆದವರೂ ಅವರೇ. ‘ಇಂಡಿಯಾ ವಿನ್ಸ್ ಫ್ರೀಡಮ್' ಎಂಬ ಕೃತಿಯಲ್ಲಿ ಮೌಲಾನಾ ಅಬ್ದುಲ್ ಕಲಾಮ್ ಆಝಾದ್‍ರು ಭಾರತ ವಿಭಜನೆಗೊಂಡ ಬಗ್ಗೆ ಮತ್ತು ಆ ಸಮಯದಲ್ಲಿ ಪಟೇಲರ ದೃಷ್ಟಿಕೋನದ ಬಗ್ಗೆ ಬರೆದಿದ್ದಾರೆ. ನೆಹರೂ ಅವರಿಗಿಂತ 6 ತಿಂಗಳು ಮೊದಲೇ ವಿಭಜನೆಯನ್ನು ಅನಿವಾರ್ಯ ಎಂದು ಒಪ್ಪಿಕೊಂಡವರು ಪಟೇಲರಾಗಿದ್ದರು. ಅವರು 1946 ಡಿಸೆಂಬರ್‍ನಲ್ಲಿಯೇ ವಿಭಜನೆಯ ಪರ ನಿಲುವನ್ನು ಹೊಂದಿದ್ದರು. ಕೊನೆ ಕ್ಷಣದ ವರೆಗೆ ದೇಶ ವಿಭಜನೆಗೆ ವಿರುದ್ಧವಾಗಿದ್ದ ಆಝಾದ್‍ರಿಗೆ ಅತ್ಯಂತ ಆಘಾತ ಮತ್ತು ಅಚ್ಚರಿಯಾದದ್ದು ಪಟೇಲರ ಈ ನಿಲುವೇ ಆಗಿತ್ತು. ಅವರು ಪಟೇಲರ ಈ ನಿಲುವಿನ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. “ನಾವು ಇಷ್ಟಪಡುತ್ತೇವೋ ಇಲ್ಲವೋ ಆದರೆ ಭಾರತದಲ್ಲಿ ಎರಡು ದೇಶಗಳಿವೆ” ಎಂಬ ಪಟೇಲರ ಪತ್ರವನ್ನು ಓದಿ ನಾನು ದುಃಖಿತನಾದೆ ಎಂದು ಆಝಾದ್‍ರು ಇಂಡಿಯಾ ವಿನ್ಸ್ ಫ್ರೀಡಮ್‍ನಲ್ಲಿ ಸ್ಮರಿಸಿಕೊಂಡಿದ್ದಾರೆ. ಇಂಥ ಪಟೇಲರನ್ನು ಮೋದಿಯವರು ಇವತ್ತು ತಮ್ಮವರೆಂದು ಹೇಳಿಕೊಳ್ಳುತ್ತಿದ್ದಾರೆ. ಪಟೇಲರು ಕಾಂಗ್ರೆಸ್‍ನೊಳಗಿದ್ದೂ ಕಾಂಗ್ರೆಸ್ ಅಲ್ಲದ ವ್ಯಕ್ತಿಯಾಗಿದ್ದರು ಎಂದು ಪರೋಕ್ಷವಾಗಿ ಬಿಂಬಿಸುವ ಪ್ರಯತ್ನವೊಂದು ರನ್ ಫಾರ್ ಯುನಿಟಿ ಮತ್ತು ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರ ಮಾತು-ಕೃತಿಯಲ್ಲಿದೆ. ನಿಜವಾಗಿ, ಪಟೇಲ್ ಇಲ್ಲದ ಕಾಂಗ್ರೆಸ್ ಹೇಗೆ ಅಪೂರ್ಣವೋ ಗಾಂಧಿ ಇಲ್ಲದ ಭಾರತೀಯ ರಾಜಕೀಯವೂ ಅಷ್ಟೇ ಅಪೂರ್ಣ. ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರದ ನೆಹರೂ, ಆಝಾದ್, ಪಟೇಲ್, ಗಾಂಧಿ ಮುಂತಾದವರ ಕಾಲದ ಕಾಂಗ್ರೆಸ್ ಎಂದೂ ಒಂದು ಪಕ್ಷವಾಗಿರಲಿಲ್ಲ. ಅದೊಂದು
ತತ್ವ-ಸಿದ್ಧಾಂತಗಳುಳ್ಳ ಮನೆಯಾಗಿತ್ತು. ಅಲ್ಲಿ ಪಟೇಲರಿಗೂ, ನೆಹರೂರಿಗೂ ಆಝಾದ್‍ರಿಗೂ ಗಾಂಧೀಜಿಗೂ ಭಿನ್ನ ಭಿನ್ನ ಅಭಿಪ್ರಾಯಗಳಿದ್ದುವು. ಸರಿ ತಪ್ಪುಗಳ ಬಗ್ಗೆ ತಕರಾರುಗಳಿದ್ದುವು. ಆದರೆ ಅವರೆಂದೂ ಜನಾಂಗ ದ್ವೇಷಿಗಳೋ ಧಾರ್ಮಿಕ ಅಸಹಿಷ್ಣುಗಳೋ ಆಗಿರಲಿಲ್ಲ. ಭಾರತ ವಿಭಜನೆಯಾಗುವುದನ್ನು ಒಪ್ಪುವವರು ಮತ್ತು ಒಪ್ಪದವರು, ಪಾಕಿಸ್ತಾನಕ್ಕೆ ಪರಿಹಾರವಾಗಿ 50 ಕೋಟಿ ರೂಪಾಯಿ ಕೊಡಬೇಕೆನ್ನುವ ಗಾಂಧಿ ಅಭಿಪ್ರಾಯವನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರು ಅವರಲ್ಲಿ ಇದ್ದರೂ ಅದನ್ನು ಸೈದ್ಧಾಂತಿಕ ಭಿನ್ನಾಭಿಪ್ರಾಯವಾಗಿಯೇ ಅವರು ಪರಿಗಣಿಸಿದ್ದರು. ಆದರೆ ಇವತ್ತು ಮೋದಿ ಮತ್ತು ಅವರ ಪರಿವಾರವು ಕಾಂಗ್ರೆಸ್ ಮನೆಯಿಂದ ಪಟೇಲ್‍ರನ್ನು ಅಪಹರಿಸಿ ತಂದು ಅವರಿಗೆ ತನ್ನ ಬಣ್ಣ ವನ್ನು ಬಳಿಯುವ ಪ್ರಯತ್ನ ಮಾಡುತ್ತಿದೆ. ‘ಉಕ್ಕಿನ ಮನುಷ್ಯ’, ‘ದೇಶ ವಿಭಜನೆಯ ವಿರೋಧಿ’, ‘ದೇಶವನ್ನು ಒಗ್ಗೂಡಿಸಿದ ವ್ಯಕ್ತಿ’.. ಎಂಬೆಲ್ಲ ಬಿರುದುಗಳನ್ನು ನೀಡಿ ಮೆರವಣಿಗೆ ಮಾಡುತ್ತಿದೆ. ಅವರ ಪ್ರತಿಮೆಯನ್ನು ಕೆತ್ತುವ ಉತ್ಸಾಹದಲ್ಲಿದೆ. ಇದು ಹೇಗಿದೆಯೆಂದರೆ, ವಾಜಪೇಯಿಯವರನ್ನು ತಮ್ಮವರೆಂದು ಕರೆದು ಕಾಂಗ್ರೆಸಿಗರು ಪ್ರತಿಮೆ ನಿರ್ಮಿಸಿದಂತೆ. ಅವರ ಐಡಿಯಾಲಜಿಯನ್ನು ತಮ್ಮ ಐಡಿಯಾಲಜಿ ಎಂದು ಹೇಳಿಕೊಂಡಂತೆ. ನಿಜ ಏನೆಂದರೆ, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮವರೆಂದು ಹೇಳಿಕೊಳ್ಳಬಹುದಾದ ಯಾರೊಬ್ಬರೂ ಮೋದಿ ಮತ್ತು ಅವರ ಪರಿವಾರಕ್ಕಿಲ್ಲ. ಇರುವವರೆಲ್ಲ ಕಾಂಗ್ರೆಸಿಗರೇ. ಈ ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಅವರು ಪಟೇಲರನ್ನು ಹೆಕ್ಕಿಕೊಂಡಿದ್ದಾರೆ. ಮಾತ್ರವಲ್ಲ, ಅವರಿಗೆ ಬಂಡಾಯ ಕಾಂಗ್ರೆಸಿಗನ ವೇಷ ತೊಡಿಸಿ ‘ಅವರ ಆಲೋಚನೆಗಳೇ ನಮ್ಮವು' ಎಂಬ ಸುಳ್ಳನ್ನು ಹರಡುತ್ತಿದ್ದಾರೆ. ಇದೀಗ ಅವರಿಗೆ ಗಾಂಧಿ ಇಲ್ಲದ ಪಟೇಲ್ ಪರಿಣಾಮಕಾರಿಯಲ್ಲ ಎಂಬುದು ಮನವರಿಕೆಯಾಗಿರಬೇಕು. ಈ ಕಾರಣದಿಂದಲೇ ರಾಜಕೀಯ ರಹಿತ ಸಾಧು ಗಾಂಧಿಯನ್ನು ಅವರು ಸ್ವಚ್ಛ ಭಾರತದ ನೆಪದಲ್ಲಿ ದೇಶಕ್ಕೆ ಪರಿಚಯಿಸಿದ್ದಾರೆ. ಈ ಮೂಲಕ ಗಾಂಧಿ ಮತ್ತು ಪಟೇಲರನ್ನು ಒಟ್ಟಿಗೇ ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಒಂದು ಕಡೆ ಪ್ರಬಲ ವ್ಯಕ್ತಿತ್ವವಾಗಿ ಪಟೇಲ್‍ರು ಮತ್ತು ಇನ್ನೊಂದು ಕಡೆ ಸಾಧು ವ್ಯಕ್ತಿತ್ವವಾಗಿ ಗಾಂಧಿ - ಹೀಗೆ ಇವರಿಬ್ಬರನ್ನು ಬಳಸಿಕೊಂಡು ಮೋದಿಯವರು ತಮ್ಮ ರಾಜಕೀಯ ಆಟವನ್ನು ಆಡುತ್ತಿದ್ದಾರೆ. ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರು ಇಂದಿನ ಮಾತು ಮುಂದಿನ ದಿನಗಳಲ್ಲಿ, ‘ಗಾಂಧಿ ಇಲ್ಲದ ಪಟೇಲ್ ಅಪೂರ್ಣ’ ಎಂದಾಗಿ ಕೊನೆಗೆ, ಗಾಂಧಿ ಅಪೂರ್ಣವಾಗಿಯೂ ಪಟೇಲ್ ಪೂರ್ಣವಾಗಿಯೂ ವ್ಯಾಖ್ಯಾನಕ್ಕೀಡಾಗಬಹುದು. ಅಂತಿಮವಾಗಿ ಗೋಡ್ಸೆಯೇ ವಿಜೃಂಭಿಸಲೂ ಬಹುದು.