Tuesday, May 30, 2017

ಬಿಲ್ಕೀಸ್, ನಿರ್ಭಯರ ನಡುವೆ..

      1. ಜಸ್ವಂತ್ ಭಾಯಿ ನೈ, ಗೋವಿಂಗ್ ಭಾಯಿ ನೈ, ಶೈಲೇಶ್ ಭಟ್, ರಾಧೇಶ್ಯಾಂ ಶಾ, ಬಿಪಿನ್ ಚಂದ್ರ ಜೋಷಿ, ಕೇಸರ್ ಭಾಯಿ ವೊಹಾನಿಯಾ, ಪ್ರದೀಪ್ ಮೋರ್ಧಿಯಾ, ಬರ್‍ಭಾಯಿ ವೊಹಾನಿಯ, ರಾಜುಭಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನ.
      2. ಅಕ್ಷಯ್, ಪವನ್, ವಿನಯ್ ಶರ್ಮ ಮತ್ತು ಮುಖೇಶ್.
      ಸಂಖ್ಯೆ ಒಂದು - ಗುಜರಾತ್‍ನ ಬಿಲ್ಕೀಸ್ ಬಾನು ಪ್ರಕರಣದಲ್ಲಿ ಮುಂಬೈ ಹೈಕೋರ್ಟ್‍ನಿಂದ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳ ಹೆಸರುಗಳಾದರೆ ಸಂಖ್ಯೆ ಎರಡು - ದೆಹಲಿಯ ನಿರ್ಭಯ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್‍ನಿಂದ ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಗಳ ಹೆಸರುಗಳಾಗಿವೆ.
ಈ ಎರಡೂ ಪ್ರಕರಣಗಳಲ್ಲಿ ಹೋಲಿಕೆಗಳು ಕಡಿಮೆ. 2002 ಮಾರ್ಚ್‍ನಲ್ಲಿ ಬಿಲ್ಕೀಸ್ ಬಾನು ಪ್ರಕರಣ ನಡೆದಿದ್ದರೆ, 2012 ಡಿಸೆಂಬರ್‍ನಲ್ಲಿ ನಿರ್ಭಯ ಪ್ರಕರಣ ನಡೆದಿದೆ. ಸರಿಸುಮಾರು 10 ವರ್ಷಗಳ ವ್ಯತ್ಯಾಸ. ಬಿಲ್ಕೀಸ್ ಈಗಲೂ ಬದುಕುಳಿದಿದ್ದಾಳೆ. ವಿಶೇಷ ಏನೆಂದರೆ, ನಿರ್ಭಯ ಪ್ರಕರಣಕ್ಕೆ ನಮ್ಮ ನ್ಯಾಯಾಂಗವು ಅಭೂತಪೂರ್ವವಾಗಿ ಸ್ಪಂದಿಸಿದೆ. ಕೇವಲ 5 ವರ್ಷಗಳೊಳಗೆ ಈ ಪ್ರಕರಣ ಹೈಕೋರ್ಟ್‍ನಿಂದ ಸುಪ್ರೀಮ್ ಕೋರ್ಟ್‍ನ ವರೆಗೆ ಚಲಿಸಿ ಅಂತಿಮ ತೀರ್ಪು ಪ್ರಕಟವಾಗಿದೆ. ಅದೇ ವೇಳೆ, ಬಿಲ್ಕೀಸ್ ಬಾನು ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್ ತೀರ್ಪು ನೀಡಿದೆ. ಅದೂ ಘಟನೆ ನಡೆದು ದೀರ್ಘ 15 ವರ್ಷಗಳ ಬಳಿಕ. ಇನ್ನು, ವಾದಿ ಅಥವಾ ಪ್ರತಿವಾದಿಗಳಲ್ಲಿ ಯಾರಾದರೂ ಸುಪ್ರೀಮ್ ಕೋರ್ಟ್‍ಗೆ ಮನವಿ ಸಲ್ಲಿಸಿದರೆ ಪ್ರಕರಣದ ಅಂತಿಮ ತೀರ್ಪು ಹೊರಬೀಳಲು ಇನ್ನಷ್ಟು ಸಮಯ ಕಾಯ ಬೇಕಾದೀತು. ಅಷ್ಟಕ್ಕೂ,
      ನಿರ್ಭಯಾಳಿಗೆ ಅತ್ಯಾಚಾರಿಗಳ ಪರಿಚಯ ಇರಲಿಲ್ಲ. ಬಸ್‍ನಲ್ಲಿ ಅತ್ಯಾಚಾರ ನಡೆಸಲಾಗಿತ್ತು. ಅತ್ಯಾಚಾರಿಗಳು ಕುಡಿತದ ಅಮಲಿನಲ್ಲಿದ್ದರು. ಅತ್ಯಾಚಾರಿಗಳ ಮಾತುಗಾರಿಕೆ, ಹಾವ-ಭಾವಗಳಲ್ಲಿ ಅವರು ಅನಕ್ಷರಸ್ಥರಂತೆ ಕಂಡು ಬರುತ್ತಿದ್ದರು ಎಂದು ನಿರ್ಭಯಳೇ ಹೇಳಿದ್ದಾಳೆ. ಈ ಪ್ರಕರಣ ನಡೆದಿರುವುದು ರಾತ್ರಿಯಲ್ಲಿ. ಅದೇ ವೇಳೆ ಬಿಲ್ಕೀಸ್ ಬಾನುಳ ಮೇಲೆ ಅತ್ಯಾಚಾರ ನಡೆಸಿದವರು ಅಪರಿಚಿತರಾಗಿರಲಿಲ್ಲ. ಗೋಧ್ರೋತ್ತರ ಹತ್ಯಾಕಾಂಡದ ಸಮಯದಲ್ಲಿ ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಒಂದು ಟ್ರಕ್‍ನಲ್ಲಿ ಬಿಲ್ಕೀಸ್ ಮತ್ತು ಆಕೆಯ ಕುಟುಂಬದ 17 ಮಂದಿ ಸುರಕ್ಷಿತ ಪ್ರದೇಶಕ್ಕೆ ತೆರಳುತ್ತಿದ್ದ ಸಮಯದಲ್ಲಿ ಈ ಮೇಲೆ ಉಲ್ಲೇಖಿಸಲಾದ ಮಂದಿ ಮಾರ್ಗ ಮಧ್ಯದಲ್ಲಿ ಟ್ರಕ್ ತಡೆದಿದ್ದರು. 11 ಮಂದಿಯನ್ನು ಸಾಯಿಸಿದ್ದರು. ಆಗ ಬಿಲ್ಕೀಸ್‍ಗೆ 19 ವರ್ಷ. 5 ತಿಂಗಳ ಗರ್ಭಿಣಿ. ಕೈಯಲ್ಲಿ 3 ವರ್ಷ ಪ್ರಾಯದ ಮಗಳು ಸಾಲೆಹ್ ಇದ್ದಳು. ಹಲ್ಲೆಕೋರರು ಆಕೆಯ ಕೈಯಿಂದ ಮಗಳನ್ನು ಕಿತ್ತು ಎಸೆದರು. ಮಗು ಬಂಡೆಗೆ ಅಪ್ಪಳಿಸಿತು. ಬಿಲ್ಕೀಸ್‍ಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಆಕೆಯ ಕಣ್ಣೆದುರೇ ತಂಗಿ ಮತ್ತು ತಾಯಿಯ ಮೇಲೆ ಅತ್ಯಾಚಾರ ಎಸಗಿ ಸಾಯಿಸಲಾಯಿತು. ಈಕೆ ಸತ್ತಿದ್ದಾಳೆಂದು ಅವರು ಬಿಟ್ಟು ಹೋದರು. ಪ್ರಜ್ಞೆ ಬಂದಾಗ ಮೈಯಲ್ಲಿ ಬಟ್ಟೆ ಇರಲಿಲ್ಲ. ಒಂದೂವರೆ ದಿನಗಳ ಕಾಲ ಗುಡ್ಡದಲ್ಲಿ ಆಹಾರ-ಪಾನೀಯಗಳಿಲ್ಲದೇ ಅಡಗಿ ಕುಳಿತು ಬಳಿಕ ಬುಡಕಟ್ಟು ಕಾಲನಿಗೆ ತೆರಳಿ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಆಕೆ ಬದುಕುಳಿದಳು. ಇಲ್ಲಿನ ಪ್ರಮುಖ ಅಂಶ ಏನೆಂದರೆ, ಹತ್ಯೆ ಮತ್ತು ಅತ್ಯಾಚಾರ ನಡೆಸಿದ ಮಂದಿ ಆಕೆಯ ಪರಿಚಿತ ವಲಯದವರೇ ಆಗಿದ್ದರು. ಹಲವು ವರ್ಷಗಳಿಂದ ಅವರು ಆಕೆಯ ಮನೆಯಿಂದ ಹಾಲು ಖರೀದಿಸಿ ಕೊಂಡೊಯ್ಯುತ್ತಿದ್ದ ಯುವಕರಾಗಿದ್ದರು. ಆದ್ದರಿಂದ ಅತ್ಯಾಚಾರ ನಡೆಸಿದವರು ಮತ್ತು ಹತ್ಯೆ ನಡೆಸಿದವರ ಗುರುತಿನ ಬಗ್ಗೆ ಆಕೆಯಲ್ಲಿ ಯಾವ ಗೊಂದಲವೂ ಇರಲಿಲ್ಲ. ಅತ್ಯಾಚಾರ ನಡೆಸಿದ ಜಸ್ವಂತ್ ಭಾಯಿ ನೈ, ಗೋವಿಂದ್ ಭಾಯಿ ನೈ ಮತ್ತು ರಾಧೇ ಶ್ಯಾಂ ಶಾರನ್ನು ನೇಣಿಗೇರಿಸಬೇಕೆಂದು ಸಿಬಿಐಯೂ ಒತ್ತಾಯಿಸಿತ್ತು. ಆದರೆ ಇದೀಗ ಹೈಕೋರ್ಟ್ ಎಲ್ಲ 11 ಆರೋಪಿಗಳಿಗೂ ಜೀವಾವಧಿ ಶಿಕ್ಷೆಯನ್ನಷ್ಟೇ ವಿಧಿಸಿದೆ. ಅದೇ ವೇಳೆ, ನಿರ್ಭಯ ಪ್ರಕರಣದ ಆರೋಪಿಗಳಿಗೆ ಸುಪ್ರೀಮ್ ಕೋರ್ಟು ಮರಣ ದಂಡನೆಯನ್ನು ವಿಧಿಸಿದೆ. ಇಲ್ಲೊಂದು ಪ್ರಶ್ನೆಯಿದೆ.
ಸಾಮೂಹಿಕ ಹಲ್ಲೆ, ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ ಮುಂತಾದುವುಗಳು ಅಸಾಮೂಹಿಕ ಹಲ್ಲೆ, ಹತ್ಯೆ, ಅತ್ಯಾಚಾರಗಳ ಎದುರು ಕಡಿಮೆ ಮಹತ್ವವನ್ನು ಪಡಕೊಳ್ಳುತ್ತ ದೆಯೇ? ಗುಂಪು ಹಲ್ಲೆ, ಗುಂಪುರಹಿತ ಹಲ್ಲೆಗಿಂತ ಕಡಿಮೆ ಮಹತ್ವದ್ದೇ? ಏಕ ವ್ಯಕ್ತಿ ನಡೆಸುವ ಅತ್ಯಾಚಾರಕ್ಕೂ ಗುಂಪು ನಡೆಸುವ ಅತ್ಯಾಚಾರಕ್ಕೂ ನಡುವೆ ವ್ಯತ್ಯಾಸಗಳನ್ನು ಕಲ್ಪಿಸಬೇಕೇ? ಆ ವ್ಯತ್ಯಾಸ ಯಾವ ತರದ್ದು? ಒಂದು ಗಂಭೀರ ಮತ್ತು ಇನ್ನೊಂದು ಸಾಮಾನ್ಯ ಎಂಬ ರೀತಿಯದ್ದೇ? ಬಿಲ್ಕೀಸ್ ಮತ್ತು ನಿರ್ಭಯ ಪ್ರಕರಣಗಳು ಈ ಪ್ರಶ್ನೆಗಳಿಗಾಗಿ ನಮ್ಮ ನಡುವೆ ಚರ್ಚೆಗೊಳಗಾಗಬೇಕು. ಬಿಲ್ಕೀಸ್‍ಳ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ಕೋರ್ಟು ಒಪ್ಪಿಕೊಂಡಿದೆ. ಮಾತ್ರವಲ್ಲ, ವರದಿಯನ್ನು ತಿರುಚಿದ ಆರೋಪದಲ್ಲಿ ಇಬ್ಬರು ವೈದ್ಯರನ್ನೇ ತಪ್ಪಿತಸ್ಥರೆಂದು ಘೋಷಿಸಿದೆ. ಪೊಲೀಸರನ್ನೂ ಶಿಕ್ಷೆಗೊಳಪಡಿಸಿದೆ. ಬಿಲ್ಕೀಸ್‍ಳ 3 ವರ್ಷದ ಮಗಳೂ ಸಹಿತ ಹಲವರ ಹತ್ಯೆಯನ್ನು ಅದು ಒಪ್ಪಿಕೊಂಡಿದೆ. ಆಕೆಯ ತಂಗಿ ಮತ್ತು ತಾಯಿಯ ಮೇಲೂ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಆದರೂ ಮರಣ ದಂಡನೆ ಶಿಕ್ಷೆಗೆ ಅರ್ಹ ಪ್ರಕರಣವಾಗಿ ಇದನ್ನು ಕೋರ್ಟು ಪರಿಗಣಿಸಿಲ್ಲ. ಅದೇ ವೇಳೆ, ನಿರ್ಭಯ ಪ್ರಕರಣದಲ್ಲಿ ಅದು ಮರಣ ದಂಡನೆಯನ್ನು ಎತ್ತಿ ಹಿಡಿದಿದೆ. ಇದಕ್ಕೆ ಕಾರಣವೇನು? ನಿರ್ಭಯ ಪ್ರಕರಣಕ್ಕೆ ಸಿಕ್ಕ ರಾಷ್ಟ್ರೀಯ ಮಹತ್ವವು ತೀರ್ಪಿನ ಮೇಲೆ ಪ್ರಭಾವ ಬೀರಿರಬಹುದೇ? ನಿಜವಾಗಿ, ಗುಂಪು ದಾಳಿ ಅನ್ನುವುದು ಈ ದೇಶದಲ್ಲಿ ಇತ್ತಿತ್ತಲಾಗಿ ಒಂದು ಟ್ರೆಂಡ್ ಆಗಿ ಚಾಲ್ತಿಯಲ್ಲಿದೆ. ದಾದ್ರಿಯಲ್ಲಿ ಅಖ್ಲಾಕ್‍ರನ್ನು ಕೊಂದದ್ದು ಗುಂಪು. ಮುಝಪ್ಫರ್ ನಗರ್‍ನಲ್ಲಿ ಹತ್ಯೆ-ಅತ್ಯಾಚಾರ ನಡೆಸಿದ್ದೂ ಗುಂಪು. ರಾಜಸ್ಥಾನದಲ್ಲಿ ಪೆಹ್ಲುಖಾನ್‍ರನ್ನು ಕೊಲೆಗೈದದ್ದೂ ಗುಂಪು. ಉಡುಪಿಯ ಕೆಂಜಾರಿನಲ್ಲಿ ಪ್ರವೀಣ್ ಪೂಜಾರಿಯನ್ನು ಥಳಿಸಿ ಕೊಂದುದೂ ಗುಂಪು. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ, ಅಕ್ರಮ ಗೋಸಾಗಾಟದ ಹೆಸರಲ್ಲಿ, ಮತಾಂತರದ ಹೆಸರಲ್ಲಿ.. ಹೀಗೆ ಎಲ್ಲ ಸಂದರ್ಭಗಳಲ್ಲೂ ಇವತ್ತು ಗುಂಪುಗಳೇ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತಿದೆ. ನಿರ್ಭಯ ಮತ್ತು ಬಿಲ್ಕೀಸ್ ಪ್ರಕರಣಕ್ಕೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಇದು. ನಿರ್ಭಯದಂಥ ಪ್ರಕರಣ ಧರ್ಮಾಧಾರಿತ ಅಲ್ಲ. ನಿರ್ಭಯಳಿಗೂ ಆಕೆಯನ್ನು ಅತ್ಯಾಚಾರ ನಡೆಸಿದವರಿಗೂ ನಡುವೆ ಹೆಣ್ಣು-ಗಂಡು ಎಂಬ ವ್ಯತ್ಯಾಸದ ಹೊರತು ಇನ್ನಾವ ಪ್ರಮುಖ ವ್ಯತ್ಯಾಸವೂ ಇರಲಿಲ್ಲ. ಕುಡಿತದ ಅಮಲಿನಲ್ಲಿದ್ದ ಅವರಿಗೆ ನಿರ್ಭಯಳೂ ಒಂದೇ ಇನ್ನಾವುದಾದರು ಹೆಣ್ಣೂ ಒಂದೇ. ಅವರಿಗೆ ಹೆಣ್ಣಷ್ಟೇ ಬೇಕಿತ್ತು. ಆದರೆ ಬಿಲ್ಕೀಸ್ ಪ್ರಕರಣ ಹಾಗಲ್ಲ. ಅತ್ಯಾಚಾರಿಗಳು ಒಂದು ಧರ್ಮದವರಾದರೆ, ಅತ್ಯಾಚಾರಕ್ಕೆ ಮತ್ತು ಹತ್ಯೆಗೆ ಒಳಗಾದವರು ಇನ್ನೊಂದು ಧರ್ಮದವರು. ಹಾಗಂತ, ಈ ವ್ಯತ್ಯಾಸ ಕಾಕತಾಳೀಯವೇನೂ ಆಗಿರಲಿಲ್ಲ. ಈ ವ್ಯತ್ಯಾಸವನ್ನು ಗೊತ್ತಿದ್ದೇ ಮಾಡಲಾಗಿತ್ತು. ಈ ಗುಂಪಿನ ಉದ್ದೇಶ ಯಾರನ್ನಾದರೂ ಅತ್ಯಾಚಾರ ಮಾಡುವುದು ಮತ್ತು ಹತ್ಯೆ ನಡೆಸುವುದು ಆಗಿರಲಿಲ್ಲ. ನಿರ್ದಿಷ್ಟ ಧರ್ಮದವರೇ ಅವರ ಗುರಿಯಾಗಿದ್ದರು. ನಿರ್ಭಯ ಪ್ರಕರಣದ ಅಪರಾಧಿಗಳು ಮತ್ತು ಬಿಲ್ಕೀಸ್ ಪ್ರಕರಣದ ಅಪರಾಧಿಗಳು ಮುಖಾಮುಖಿಯಾಗುವುದು ಇಲ್ಲೇ. ಬರೇ ಅತ್ಯಾಚಾರಕ್ಕೂ ನಿರ್ದಿಷ್ಟ ಧರ್ಮದವರನ್ನೇ ಆಯ್ಕೆ ಮಾಡಿ ಮಾಡುವ ಅತ್ಯಾಚಾರಕ್ಕೂ ನಡುವೆ ಯಾವುದು ಹೆಚ್ಚು ಅಪಾಯಕಾರಿ? ಒಂದರಲ್ಲಿ ಅತ್ಯಾಚಾರದ ವಾಂಛೆಯಷ್ಟೇ ಇದ್ದರೆ ಇನ್ನೊಂದರಲ್ಲಿ ಅತ್ಯಾಚಾರದ ಜೊತೆಗೇ ಧಾರ್ಮಿಕ ಅಸಹಿಷ್ಣುತೆ ಮತ್ತು ಜನಾಂಗೀಯ ಮೇಲ್ಮೈ ಯಿದೆ. ತನ್ನ ಕೃತ್ಯದ ಬಗ್ಗೆ ಸ್ಪಷ್ಟ ಅರಿವು ಇದ್ದವರೇ ಈ ಕ್ರೌರ್ಯದಲ್ಲಿ ಪಾಲುಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಬಿಲ್ಕೀಸ್ ಪ್ರಕರಣವು ನಿರ್ಭಯ ಪ್ರಕರಣದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಗಂಭೀರವಾದುದು. ಇಲ್ಲಿ ಅತ್ಯಾಚಾರ ಮತ್ತು ಹತ್ಯೆಯಷ್ಟೇ ನಡೆದಿರುವುದಲ್ಲ. ಅಲ್ಲೊಂದು ಮೇಲುತನದ ಅಹಂ ಇದೆ. ಕ್ರೌರ್ಯವೆಸಗುವುದಕ್ಕೆ ಹೆಣ್ಣಿನ ಮೇಲಿನ ದೈಹಿಕ ಆಸೆಗಿಂತಲೂ ಅಪಮಾನಗೊಳಿಸುವ ಕ್ರೂರತನ ಇದೆ. ವಿಷಾದ ಏನೆಂದರೆ, ಇಷ್ಟೆಲ್ಲ ಇದ್ದೂ ನಿರ್ಭಯರು ಇಲ್ಲಿ ಪದೇ ಪದೇ ಗೆಲ್ಲುತ್ತಾರೆ. ಬಿಲ್ಕೀಸ್‍ರು ಮತ್ತೆ ಮತ್ತೆ ಸೋಲುತ್ತಾರೆ. ಯಾಕೆ ಹೀಗೆ? ಗುಂಪು ದಾಳಿ ಇದಕ್ಕೆ ಕಾರಣವೇ? ಎಣಿಕೆಯ ಕೆಲವರು ಅಪರಾಧ ಕೃತ್ಯದಲ್ಲಿ ಪಾಲುಗೊಳ್ಳುವುದಕ್ಕೂ ಅನೇಕ ಮಂದಿಯ ಗುಂಪೊಂದು ಅಪರಾಧ ಕೃತ್ಯದಲ್ಲಿ ಪಾಲುಗೊಳ್ಳುವುದಕ್ಕೂ ವ್ಯತ್ಯಾಸಗಳಿವೆಯೇ? ಅಂಥ ಪ್ರಕರಣಗಳು ನ್ಯಾಯಾಲಯಗಳಲ್ಲಿ ನಿಲ್ಲುವುದಿಲ್ಲವೇ? ಗುಂಪು ದಾಳಿ ಎಂಬುದು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ಅಡ್ಡದಾರಿಯೇ? ನಿರ್ಭಯ ಪ್ರಕರಣದಲ್ಲಿ ಭಾಗಿಯಾದುದು ಅನೇಕ ಮಂದಿಯ ಗುಂಪಲ್ಲ. 6 ಮಂದಿಯ ಸಣ್ಣ ತಂಡ. ಆ ಕಾರಣದಿಂದಾಗಿಯೇ ಅದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿ ಪರಿಗಣಿತವಾಯಿತೇ? ಶೀಘ್ರ ತೀರ್ಪು ನೀಡುವುದಕ್ಕೂ ಇದುವೇ ಕಾರಣವೇ? ಅನೇಕ ಮಂದಿಯ ಗುಂಪು ಕ್ರೌರ್ಯದಲ್ಲಿ ಭಾಗಿಯಾದರೆ ಆರೋಪಿಗಳನ್ನು ನಿರ್ದಿಷ್ಟವಾಗಿ ಗುರುತಿಸುವುದಕ್ಕೆ ಕಷ್ಟವೇ? ಎಫ್‍ಐಆರ್ ದಾಖಲಿಸುವಾಗ ಪೊಲೀಸರು ಎಡವುದಕ್ಕೂ ಅವಕಾಶವಿರುತ್ತದೆಯೇ? ಕಾನೂನುಭಂಜಕ ಗುಂಪುಗಳು ಇಂಥ ದೌರ್ಬಲ್ಯಗಳ ಲಾಭ ಪಡೆಯುತ್ತಿದ್ದಾರೆಯೇ ಅಥವಾ ಗುಂಪು ದಾಳಿಯನ್ನು ಸಮರ್ಪಕವಾಗಿ ನಿಭಾಯಿಸುವ ಕಾನೂನುಗಳಿದ್ದೂ ಅದರ ಸರಿಯಾದ ಜಾರಿ ಆಗುತ್ತಿಲ್ಲ ಎಂಬುದು ಕಾರಣವೇ? ಬಿಲ್ಕೀಸ್ ಬಾನು ಪ್ರಕರಣವು 15 ವರ್ಷಗಳ ಬಳಿಕವೂ ತಾರ್ಕಿಕ ಅಂತ್ಯ ಕಾಣದಿರಲು ಕಾರಣವೇನು? ಅಹ್ಮದಾಬಾದ್‍ನ ಹಳ್ಳಿಯ ಓರ್ವ ಸಾಮಾನ್ಯ ಮಹಿಳೆ ಇಷ್ಟೊಂದು ದೀರ್ಘ ಅವಧಿಯನ್ನು ತಾಳಿಕೊಳ್ಳಲು ಸಮರ್ಥಳೇ? ಅಂದಹಾಗೆ, ಈ ಪ್ರಕರಣವು ಹೈಕೋರ್ಟ್ ಹಂತವನ್ನಷ್ಟೇ ಮುಗಿಸಿದೆ. ಇನ್ನಷ್ಟೇ ಸುಪ್ರೀಮ್ ಕೋರ್ಟ್‍ನ ವಿಚಾರಣೆ ಆರಂಭವಾಗಬೇಕಿದೆ. ಈ ಪ್ರಕರಣ ಇಷ್ಟು ವಿಳಂಬವಾಗುವುದಕ್ಕೆ ಏನು ಕಾರಣ? ನಿರ್ಭಯ ಪ್ರಕರಣವು ಇಷ್ಟು ಶೀಘ್ರವಾಗಿ ಅಂತ್ಯ ಕಂಡದ್ದು ಹೇಗೆ? ಗುಂಪು ನಡೆಸುವ ಹತ್ಯೆ ಮತ್ತು ಅತ್ಯಾಚಾರಗಳ ಬಗ್ಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯು ನಿಧಾನಗತಿಯನ್ನು ಅನುಸರಿಸುತ್ತಿದೆಯೇ? ಗುಂಪು ನಡೆಸುವ ಕ್ರೌರ್ಯ ಎಷ್ಟೇ ಭೀಕರವಾಗಿರಲಿ ಅದು ಅಪರೂಪದಲ್ಲಿ ಅಪರೂಪ ಪ್ರಕರಣವಾಗುವುದಕ್ಕೆ ಅವಕಾಶ ಇಲ್ಲವೇ? ಸದ್ಯ ದೇಶದಲ್ಲಿ ನಡೆಯುತ್ತಿರುವ ಗುಂಪು ದಾಳಿಗಳಿಗೆ ಇಂಥದ್ದೊಂದು ಲೆಕ್ಕಾಚಾರದ ಬಲವೂ ಇದ್ದಿರಬಹುದೇ? ಅನೇಕ ಮಂದಿಯ ಗುಂಪು ಥಳಿಸಿದರೂ ಕೊಂದರೂ ಅತ್ಯಾಚಾರ ನಡೆಸಿದರೂ ಅದು ಶೀಘ್ರವಾಗಿ ಇತ್ಯರ್ಥವಾಗಲ್ಲ ಮತ್ತು ನಿರ್ಭಯ ಪ್ರಕರಣದಂತೆ ಅಪರೂಪದಲ್ಲಿ ಅಪರೂಪದ ಪ್ರಕರಣವಾಗಲ್ಲ ಎಂಬ ನಂಬಿಕೆ ಇದಕ್ಕೆ ಕಾರಣವಾಗಿರಬಹುದೇ? ಅಷ್ಟಕ್ಕೂ, ಕಾನೂನನ್ನು ಕೈಗೆತ್ತಿಕೊಳ್ಳುವ ಗುಂಪುಗಳಿಗೆ ಕಠಿಣ ಸಂದೇಶ ಕೊಡುವಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಯಾಕೆ ಮತ್ತೆ ಮತ್ತೆ ವಿಫಲವಾಗುತ್ತಿದೆ? ಬಿಲ್ಕೀಸ್ ಬಾನು ಪ್ರಕರಣ ಈ ವಿಫಲತೆಗೆ ಮತ್ತೊಂದು ಪುರಾವೆ ಯಾಕಾಗಬಾರದು?
      ಬಿಲ್ಕೀಸ್ ಮತ್ತು ನಿರ್ಭಯ ಪ್ರಕರಣಗಳ ಮಧ್ಯೆ ವ್ಯತ್ಯಾಸಗಳೆಷ್ಟೇ ಇರಲಿ, ‘ನ್ಯಾಯ ಯಾಕೆ ಹೀಗೆ’ ಎಂಬ ಪ್ರಶ್ನೆಯನ್ನಂತೂ ಇದು ಖಂಡಿತ ಹುಟ್ಟುಹಾಕಿದೆ.

ಮೋಗ್ಲಿ ಗರ್ಲ್ ಮತ್ತು ಮಾಧ್ಯಮ

ಮೋಗ್ಲಿ ಗರ್ಲ್
ಲಕ್ಷಣಗಳು
1. ಪ್ರಾಣಿಗಳಂತೆ ಕೈ-ಕಾಲು ಬಳಸಿ ನಾಲ್ಕು ಕಾಲಿನ ನಡಿಗೆ
2. ಆಹಾರ ಸೇವನೆಗೆ ಕೈ ಬಳಸಲ್ಲ, ನೇರವಾಗಿ ಬಾಯಿಯಿಂದ.
3. ಉದ್ದುದ್ದ ಉಗುರು. ಸಿಕ್ಕುಗಟ್ಟಿದ ಕೂದಲು.
4. ಮೈಮೇಲೆ ಪ್ರಾಣಿಗಳು ಪರಚಿದ ಗಾಯಗಳು.
5. ಮಾತಾಡುವುದಿಲ್ಲ, ಚೀರುತ್ತಾಳೆ.
6. ಪತ್ತೆಯಾಗುವಾಗ ಬೆತ್ತಲೆಯಾಗಿದ್ದಳು..
ಎಪ್ರಿಲ್ 6 ಅಥವಾ 7ರಂದು ಪ್ರಕಟವಾದ ಈ ದೇಶದ ಬಹುತೇಕ ಎಲ್ಲ ಪತ್ರಿಕೆಗಳೂ ಒಂದು ಅಚ್ಚರಿಯ ಸುದ್ದಿಯನ್ನು ಪ್ರಕಟಿಸಿದ್ದುವು. ಈ ಸುದ್ದಿಯು ಮಾಧ್ಯಮಗಳನ್ನು ಎಷ್ಟು ಕುತೂಹಲಕ್ಕೆ ತಳ್ಳಿದ್ದುವೆಂದರೆ, ಬಹುತೇಕ ಎಲ್ಲವೂ ಇದನ್ನು ಮುಖ್ಯ ಸುದ್ದಿಯಾಗಿಯೇ ಪ್ರಕಟಿಸಿದ್ದುವು. ಉತ್ತರ ಪ್ರದೇಶದ ಕಟರ್ನಿಘಾಟ್ ರಕ್ಷಿತಾರಣ್ಯದಲ್ಲಿ ಮಂಗಗಳೊಂದಿಗೆ ವಾಸಿಸುತ್ತಿದ್ದ 8 ವರ್ಷದ ಹೆಣ್ಣು ಮಗುವನ್ನು ಪತ್ತೆ ಹಚ್ಚಲಾಗಿದೆ ಎಂಬುದೇ ಈ ಸುದ್ದಿ. ಸುದ್ದಿಗಳ ಒಟ್ಟು ಸ್ವರೂಪ ಹೀಗಿದೆ..
     ರಕ್ಷಿತಾರಣ್ಯದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಯಾದವ್‍ರ ಕಣ್ಣಿಗೆ ಅಚಾನಕ್ಕಾಗಿ ಬಿದ್ದ ಈ ಮಗುವನ್ನು ರಕ್ಷಿಸಲು ಅವರು ಬಹಳವೇ ಶ್ರಮ ಪಟ್ಟರು. ಅವರ ಮೇಲೆ ಮಂಗಗಳು ದಾಳಿ ಮಾಡಿದುವು. ತಮ್ಮ ಮಗುವಿನಂತೆ ಅವು ಈ ಮಗುವನ್ನು ಬಾಹುಗಳಲ್ಲಿ ಪಡಕೊಂಡವು. ಆದರೂ ಮಾನವ ಬಲಪ್ರಯೋಗದ ಎದುರು ಮಂಗಗಳು ಅಸಹಾಯಕ ವಾದುವು. ಸಾಕಷ್ಟು ಕಾದಾಟ ನಡೆಸಿದ ಬಳಿಕ ಮಗು ಇನ್ಸ್‍ಪೆಕ್ಟರ್ ಅವರ ವಶವಾಯಿತು. ಅವರು ಮಗುವನ್ನು ನೋಡಿದ್ದು ಮಂಗಗಳ ಜೊತೆ ಮರದಲ್ಲಿ. ಮಗು ವಿವಸ್ತ್ರ ವಾಗಿತ್ತು. ಮಂಗಗಳಂತೆ ಚೀರುವುದನ್ನು ಬಿಟ್ಟರೆ ಬೇರೆ ಮಾತು ಅದಕ್ಕೆ ಬರುತ್ತಿರಲಿಲ್ಲ. ಮನುಷ್ಯರನ್ನು ಕಂಡರೆ ಅದು ಭಯದಿಂದ  ದೂರ ಓಡುತ್ತಿತ್ತು.
    ಹಿಂದಿ ದಿನಪತ್ರಿಕೆಯೊಂದು ಮೊಟ್ಟಮೊದಲು ಈ ಮಗು ವಿನ ಕತೆ ಬರೆದು ‘ಮೋಗ್ಲಿ ಗರ್ಲ್’ ಎಂದು ಹೆಸರು ಕೊಟ್ಟಿತು. ಮೋಗ್ಲಿ ಗರ್ಲ್ ಎಂಬುದು ಖ್ಯಾತ ಕತೆಗಾರ ರುಡ್‍ಯಾರ್ಡ್ ಕಿಪ್ಲಿಂಗ್ ಅವರ ದಿ ಜಂಗಲ್ ಬುಕ್ ಎಂಬ ಕಥಾಸಂಕಲನದ ಒಂದು ಪಾತ್ರ. ಇದೊಂದು ಕಾಲ್ಪನಿಕ ಕಥಾ ಸರಣಿ. ಟಿವಿ ಯಲ್ಲಿ ಧಾರಾವಾಹಿಯಾಗಿ ಅಪಾರ ಜನಪ್ರೀತಿಯನ್ನು ಗಳಿಸಿದ ಕಥೆ ಇದು. ಮನುಷ್ಯರ ಸಂಪರ್ಕ ಇಲ್ಲದೇ ಪ್ರಾಣಿಗಳ    ಜೊತೆಗೆ ಕಾಡಿನಲ್ಲೇ  ಬದುಕುವ ‘ಮೋಗ್ಲಿ’ ಎಂಬ ಈ ಮಗು ಧಾರಾವಾಹಿಯಾಗಿ ಮಕ್ಕಳಿಗೆ ತುಂಬ ಇಷ್ಟ. ವಿಶೇಷ ಏನೆಂದರೆ, ಉತ್ತರ ಪ್ರದೇಶದಲ್ಲಿ ಪತ್ತೆಯಾದ ಈ ಮಗುವಿನ ಸುದ್ದಿಯನ್ನು ಪ್ರಕಟಿಸಿದ ಎಲ್ಲ ಪತ್ರಿಕೆಗಳೂ ದಿ ಜಂಗಲ್ ಬುಕ್‍ನ ಪ್ರಸ್ತಾಪ ಮಾಡಿವೆ. ಅದೇ ವೇಳೆ, ಇನ್ನೊಂದು ಹಿಂದಿ ಪತ್ರಿಕೆಯು ಈ ಮಗುವನ್ನು ವನದೇವಿ ಎಂದು ಕರೆಯಿತು. ಜನರು ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರತೊಡಗಿದರು. ಕಾಲು ಮುಟ್ಟಿದರು. ಹಣ ನೀಡತೊಡಗಿದರು. ಕೊನೆಗೆ ಆಸ್ಪತ್ರೆಯ ಆಡಳಿತ ಮಂಡಳಿಯು ಜನರ ಸಂದಣಿಯನ್ನು ನಿಭಾಯಿಸುವುದಕ್ಕಾಗಿ ಕಾವಲುಗಾರರನ್ನು ನೇಮಿಸಿತು. ಹಾಗಂತ,
ಈ ಮಗು ನಿಜಕ್ಕೂ ಮೋಗ್ಲಿಯೇ? ವಾನರ ಜೊತೆಗೆ ಮರಗಳಲ್ಲಿ ಬದುಕುತ್ತಿದ್ದುದು ನಿಜವೇ? ಆಕೆಯನ್ನು ಪತ್ತೆ ಹಚ್ಚಿದ್ದು ಯಾರು, ಎಷ್ಟು ಸಮಯಗಳ ಹಿಂದೆ.. ಇತ್ಯಾದಿ ಓದುಗರ ಮನದಲ್ಲಿ ಹುಟ್ಟಿದ ಪ್ರಶ್ನೆಗಳಿಗೆ ಎಪ್ರಿಲ್ 7ರ ಬಳಿಕದ ಯಾವ ಮಾಧ್ಯಮಗಳೂ ಉತ್ತರವನ್ನು ನೀಡಲಿಲ್ಲ. ಆದರೆ ಕುತೂಹಲಭರಿತ ಕೆಲವರು ಆ ಇಡೀ ಪ್ರಕರಣದ ಹಿಂದಿ    ರುವ ರಹಸ್ಯವನ್ನು ಹುಡುಕಲು ಹೊರಟಾಗ ಪತ್ತೆಯಾದ ವಿವರಗಳೇ ಬೇರೆ.
ರುಡ್‍ಯಾರ್ಡ್ ಕಿಪ್ಲಿಂಗ್ ಅವರ ದಿ ಜಂಗಲ್ ಬುಕ್‍ನ ಮೋಗ್ಲಿಗೂ ಈ ಮಗುವಿಗೂ ಯಾವ ಸಾಮ್ಯತೆಗಳೂ ಇಲ್ಲ. ಈಕೆ ಪತ್ತೆಯಾದದ್ದು ಕಾಡಿನಲ್ಲಲ್ಲ, ಪೊಲೀಸ್ ಔಟ್‍ ಪೋಸ್ಟಿನೆದುರು. ಅದೂ ಜನವರಿ 24ರಂದು. ಪೊಲೀಸ್ ಹೆಲ್ಪ್ ಲೈನ್ ದೂರವಾಣಿ ಸಂಖ್ಯೆ 100ಕ್ಕೆ ಬಂದ ಕರೆಯನ್ನಾಧರಿಸಿ ಮೋತಿ ಪುರದ ಹೆಡ್‍ಕಾನ್‍ಸ್ಟೇಬಲ್ ಸರ್ವಜೀತ್ ಯಾದವ್ ಮತ್ತು ಇಬ್ಬರು ಪೊಲೀಸರು ಈ ಮಗುವನ್ನು ಪತ್ತೆ ಹಚ್ಚಿದರು. ಮಗು ಬೆತ್ತಲೆಯಾಗಿಯೇನೂ ಇರಲಿಲ್ಲ. ಚಡ್ಡಿ ಮತ್ತು ಫ್ರಾಕನ್ನು ತೊಟ್ಟಿತ್ತು. ತೀರಾ ಬಳಲಿದ್ದ ಮತ್ತು ರಸ್ತೆಯಂಚಿನಲ್ಲಿ ಕುಳಿತಿದ್ದ ಮಗು. ಯಾವ ಮಂಗಗಳೂ ಮಗುವಿನ ಬಳಿ ಇರಲಿಲ್ಲ. ಆಕೆ ಪತ್ತೆಯಾದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಜನವಾಸ ಶೂನ್ಯ ಅನ್ನುವಷ್ಟು ಕಡಿಮೆಯಿತ್ತು. ಆಕೆಯನ್ನು ಬಹ್ರೈಕ್‍ನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಹೆಚ್ಚೆಂದರೆ ಆಕೆ 24 ಗಂಟೆಯಷ್ಟು ಹೊತ್ತು ರಸ್ತೆಯಂಚಿನಲ್ಲಿ ಇದ್ದಿರಬಹುದು ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ| ಡಿ.ಕೆ. ಸಿಂಗ್ ಮತ್ತು ಕೆ.ಕೆ. ವರ್ಮಾ ಹೇಳಿದರು. ಇದೇ ಎಪ್ರಿಲ್‍ನಲ್ಲಿ ಆ ಮಗುವನ್ನು ಲಕ್ನೋದ ಮಾನಸಿಕ ಆಸ್ಪತ್ರೆಗೆ ಸೇರಿಸಲಾಯಿತು. ಬಹುಶಃ ಹೆತ್ತವರು ಈ ಮಗುವನ್ನು ರಸ್ತೆಯಂಚಿನಲ್ಲಿ ತೊರೆದು ಹೋಗಿರಬೇಕು. ಒಂದೋ ಮಗು ಕಿವುಡಿ ಮತ್ತು ಮೂಗಿ ಎಂಬ ಕಾರಣಕ್ಕೆ ಅಥವಾ ಮಾನಸಿಕ ಅಸ್ವಸ್ಥತೆಯ ಕಾರಣಕ್ಕೆ ಅಥವಾ ಹೆಣ್ಣು ಮಗು ಎಂಬ ಕಾರಣಕ್ಕಾಗಿ ಅವರು ಮಗುವನ್ನು ತ್ಯಜಿಸಿರಬಹುದು. ಜಂಗಲ್ ಬುಕ್‍ನ ಮೋಗ್ಲಿಗೆ ಈ ಮಗುವನ್ನು ಹೋಲಿಸಿರುವುದಕ್ಕೆ ವೈದ್ಯರು ಅಚ್ಚರಿಪಟ್ಟರು. ಜಂಗಲ್ ಬುಕ್ ಓದಿರಬಹುದಾದ ಪೊಲೀಸರು ಮತ್ತು ಪತ್ರಕರ್ತರು ಸೇರಿಕೊಂಡು ಈ ಮಗುವನ್ನು ಮೋಗ್ಲಿ ಗರ್ಲ್ ಮಾಡಿರಬೇಕು ಅನ್ನುವುದು ದಿನಗಳೆದಂತೆ ಸ್ಪಷ್ಟವಾಗುತ್ತಾ ಹೋಯಿತು. ವಿಶೇಷ ಏನೆಂದರೆ, ವನದೇವಿಯಾಗಿ ಈ ಮಗುವನ್ನು ಹಿಂದಿ ಪತ್ರಿಕೆಯೊಂದು ಚಿತ್ರಿಸಿದ ಬಳಿಕ ಆಸ್ಪತ್ರೆಯಲ್ಲೂ ವಿವಿಧ ಕತೆಗಳು ಹರಿದಾಡತೊಡಗಿದುವು. ಆಸ್ಪತ್ರೆಯ ಕಿಚನ್‍ಗೆ ನಿತ್ಯ ಮಂಗಗಳು ಬರುತ್ತಿತ್ತು. ಆದರೆ ಆ ಮಂಗಗಳು ಈ ಮಗುವನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರುತ್ತಿವೆ ಎಂದು ವದಂತಿಗಳು ಹಬ್ಬಿಕೊಂಡವು. ಹಾಗಂತ,
ನಾಡಿನಲ್ಲಿರುವ ಮನುಷ್ಯರು ಕಾಡಿನಲ್ಲಿ ಬದುಕಿಯೇ ಇಲ್ಲ ಎಂದಲ್ಲ.
ಮರಿಯಾನ ಚಾಪ್‍ಮನ್ ಎಂಬ ಕೊಲಂಬಿಯಾದ ಮಹಿಳೆ ತನ್ನ 4ನೇ ವರ್ಷದಲ್ಲೇ ಕಾಡು ಪಾಲಾಗಿದ್ದಳು. ಮಕ್ಕಳ ಅಪಹರಣಕಾರರು ಆಕೆಯನ್ನು ಅಪಹರಿಸಿ ಕಾಡಿನಲ್ಲಿ ಅಡಗಿಸಿಟ್ಟಿ ದ್ದರು. ಬಳಿಕ ಆಕೆಯನ್ನು ವೇಶ್ಯಾವಾಟಿಕೆಯ ಅಡ್ಡೆಗೆ ಮಾರಿ ದರು. ಅಲ್ಲಿಂದ ಆಕೆ ತಪ್ಪಿಸಿಕೊಂಡ ಬಳಿಕ ತನ್ನ ಇಡೀ ಬದುಕನ್ನು ಹೇಳಿಕೊಂಡರು. ಕಮಲ ಮತ್ತು ಅಮಲ ಎಂಬ 3 ಮತ್ತು 5 ವರ್ಷದ ಮಕ್ಕಳಿಬ್ಬರನ್ನು ಕಾಡಿನಿಂದ ರಕ್ಷಣೆ ಮಾಡಿದ ಕುತೂಹಲಕಾರಿ ಘಟನೆಯು 1920ರಲ್ಲಿ ಭಾರತದಲ್ಲೇ ನಡೆದಿತ್ತು. ಆದರೆ ಆ ಬಳಿಕ ಈ ಎರಡೂ ಮಕ್ಕಳು ಸಾವಿಗೀಡಾದುವು. ಫಿಜಿ ರಾಷ್ಟ್ರದ ಸುಜಿತ್ ಕುಮಾರ್ ಎಂಬವನನ್ನು ಆತನ ಅಜ್ಜ ವರ್ಷಗಳ ತನಕ ಕೋಳಿಗೂಡಿನಲ್ಲಿಟ್ಟು ಬೆಳೆಸಿದ್ದರು. ತಾಯಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ತಂದೆಯು ಈತನನ್ನು ತ್ಯಜಿಸಿದ್ದರು. ಎಲಿಝಬೆತ್ ಕ್ಲೇಟನ್ ಎಂಬವರು ಆತನನ್ನು ರಕ್ಷಿಸಿದರೂ ಮಾನಸಿಕ ಅಸ್ವಸ್ಥತೆಯು ವಿಪರೀತ ಹಂತಕ್ಕೆ ತಲುಪಿ ಆತ ಸಾವಿಗೀಡಾಗಿದ್ದ. ಉಕ್ರೈನ್‍ನ ಜಾಕ್ಸನ್ ಮಲಯ ಎಂಬ ಮಗುವನ್ನು ನಾಯಿಗೂಡಿನಿಂದ 1991ರಲ್ಲಿ ರಕ್ಷಿಸಲಾಯಿತು. 6 ವರ್ಷಗಳ ವರೆಗೆ ಆಕೆ ನಾಯಿಗೂಡಿನಲ್ಲಿ ಬದುಕಿದ್ದಳು. ಆದರೆ ಈ ಯಾರೂ ಕೂಡ ನಾಯಿಗಳಂತಾದುದೋ ಕೋಳಿ ಯಂತಾದುದೋ ಎಲ್ಲೂ ನಡೆದಿಲ್ಲ. ಉತ್ತರ ಪ್ರದೇಶದಲ್ಲಿ ಪತ್ತೆಯಾದ ಮತ್ತು ಮೋಗ್ಲಿ ಗರ್ಲ್ ಎಂದು ಸುದ್ದಿಯಾದ ಈ ಮಗುವಿಗೆ ಮಾನಸಿಕ ಅಸ್ವಸ್ಥತೆ ಇದೆ. ಜೊತೆಗೇ ಬಾಯಿ ಬರುತ್ತಿಲ್ಲ. ಈ ಎರಡು ಲಕ್ಷಣಗಳ ಹೊರತಾದ ಪ್ರಾಣಿ ಲಕ್ಷಣವೊಂದೂ ಈ ಮಗುವಿನಲ್ಲಿಲ್ಲ. ಇರಲಿ, ಮಾಧ್ಯಮಗಳು ಆರಂಭದಲ್ಲಿ ರೋಚಕ ಸುದ್ದಿಯನ್ನು ಕೊಡಲು ಪ್ರಯತ್ನಿಸಿತೆಂದೇ ಇಟ್ಟುಕೊಳ್ಳೋಣ. ಆದರೆ ಬಳಿಕ ಬಹಿರಂಗವಾದ ಸತ್ಯ ಸುದ್ದಿ ಯನ್ನೂ ಅಷ್ಟೇ ಮಹತ್ವ ಕೊಟ್ಟು ಪ್ರಕಟಿಸಬೇಕಿತ್ತಲ್ಲವೇ? ಸುಳ್ಳು ಸುದ್ದಿಯನ್ನು ಓದುಗರಿಗೆ ನೀಡಿದ ಮಾಧ್ಯಮಗಳ ಮೇಲೆ ಇಂಥದ್ದೊಂದು ಹೊಣೆಗಾರಿಕೆ ಇತ್ತಲ್ಲವೇ? ಯಾಕೆ ಅವು ನಿಜ ಸುದ್ದಿಯನ್ನು ನಿರ್ಲಕ್ಷಿಸಿದುವು? ಹೆಣ್ಣು ಮಗು, ಮಾನಸಿಕ ಅಸ್ವಸ್ಥೆ, ತ್ಯಜಿಸಿ ಹೋದ ಮಗು.. ಮುಂತಾದುವುಗಳಲ್ಲಿ ಮೋಗ್ಲಿ ಗರ್ಲ್‍ನ ರೋಚಕತೆ ಇಲ್ಲ ಎಂಬುದು ಈ ನಿರ್ಲಕ್ಷ್ಯಕ್ಕೆ ಕಾರಣವೇ? ಸದ್ಯ ಮಾಧ್ಯಮಗಳು ರೋಚಕ ಸುದ್ದಿಗಳನ್ನು ಇಷ್ಟಪಡುತ್ತವೆ. ಘಟನೆಯೊಂದರ ಬಗ್ಗೆ ಕಪ್ಪು-ಬಿಳುಪು ವರದಿಯು ಓದುಗ ರನ್ನು ಆಕರ್ಷಿಸುವುದಿಲ್ಲ ಎಂಬ ಭಾವನೆ ಸುದ್ದಿ ಮನೆಯಲ್ಲಿದೆ. ಘಟನೆಗೆ ಉಪ್ಪು-ಖಾರವನ್ನು ಸೇರಿಸಿ ಸುದ್ದಿ ಸ್ವರೂಪವನ್ನು ಕೊಟ್ಟರೆ ಅದು ಓದುಗರ ಗಮನ ಸೆಳೆಯುತ್ತದೆ. ನಿಜವಾಗಿ, ಸುದ್ದಿಯನ್ನು ಒಂದಷ್ಟು ಊಹೆ, ಕಾಲ್ಪನಿಕತೆಯೊಂದಿಗೆ ತಯಾರಿಸುವುದೂ ಒಂದು ಬಗೆಯ ಕಲೆ. ಎಲ್ಲ ಪತ್ರಕರ್ತರಿಗೂ ಅದು ಸಿದ್ದಿಸಬೇಕೆಂದಿಲ್ಲ. ಆದರೆ ಅದರಿಂದಾಗಿ ಆಗುವ ಅನಾಹುತ ಏನೆಂದರೆ, ಸತ್ಯವು ಸತ್ತು ಹೋಗಿ ಊಹೆಯೇ ಜನರಲ್ಲಿ ಸತ್ಯವಾಗಿ ಬಿಡುತ್ತದೆ. ಒಂದು ಹತ್ಯಾ ಪ್ರಕರಣವನ್ನೇ ಎತ್ತಿಕೊಳ್ಳಿ. ಈ ಘಟನೆಯನ್ನು ಒಂದಕ್ಕಿಂತ ಹೆಚ್ಚು ವಿಧದಲ್ಲಿ ವರದಿ ಮಾಡುವುದಕ್ಕೆ ಅವಕಾಶ ಇದೆ. ಒಂದು- ನೇರಾತಿನೇರವಾಗಿ ಕಂಡದ್ದನ್ನು ಕಂಡಹಾಗೆ ಸುದ್ದಿ ತಯಾರಿಸುವುದು ಮತ್ತು ಸುದ್ದಿಯಲ್ಲಿ ಯಾವ ಊಹೆ, ಕಲ್ಪನೆಗಳಿಗೆ ಅವಕಾಶವನ್ನು ನೀಡದೇ ಇರುವುದು. ಇನ್ನೊಂದು- ಘಟನೆಗೆ ಸುದ್ದಿ ಸ್ವರೂಪವನ್ನು ಕೊಡುವಾಗ, ನಿರ್ದಿಷ್ಟ ಸಂಘಟನೆಗಳನ್ನೋ ವ್ಯಕ್ತಿಗಳನ್ನೋ ಇಲಾಖೆಗಳನ್ನೋ ಅನುಮಾನಿಸುವ ರೂಪದಲ್ಲಿ ಬರೆಯುವುದು. ಯಾವ ಆಧಾರವೂ ಇಲ್ಲದೇ ಆದರೆ ಇಂಥವರೇ ಆರೋಪಿಗಳು ಆಗಿರಬಹುದೆಂದು ಓದುಗರು ಅಂದುಕೊಳ್ಳುವ ರೀತಿಯಲ್ಲಿ ಸುದ್ದಿಯನ್ನು ತಯಾರಿಸುವುದು. ಇದು ಸುದ್ದಿ ತಯಾರಿಸುವವರ ಮನಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. ಭಯೋತ್ಪಾದನೆಗೆ ಸಂಬಂಧಿಸಿದ ಸುದ್ದಿಗಳು ಈ ದೇಶದಲ್ಲಿ ಬಹುತೇಕ ಪ್ರಕಟ ವಾದದ್ದು ಈ ರೀತಿಯಲ್ಲಿಯೇ. ಉತ್ತರ ಪ್ರದೇಶದಲ್ಲಿ ಪತ್ತೆಯಾದ ಮಾನಸಿಕ ಅಸ್ವಸ್ಥ ಮಗುವನ್ನು ಮೋಗ್ಲಿ ಗರ್ಲ್ ಮಾಡಿದುದರಲ್ಲೂ ಇದು ಸ್ಪಷ್ಟವಾಗುತ್ತದೆ. ಮಾನಸಿಕ ಅಸ್ವಸ್ಥತೆ ಇರುವವರಲ್ಲಿ ಹುಚ್ಚಾಟಗಳು ಸಹಜ. ಅವರ ಹಾವ-ಭಾವ-ನೋಟ-ದೇಹ ಭಾಷೆ ಎಲ್ಲವೂ ಅಸಹಜ ರೀತಿಯಲ್ಲಿರುತ್ತವೆ. ಇದೇನೂ ಹೊಸ ವಿಷಯವಲ್ಲ. ಆದರೆ ಈ ಮಗುವಿನ ಬಗ್ಗೆ ಪೊಲೀಸರೊಬ್ಬರು ರಚಿಸಿದ ಅರೆ-ಬರೆ ಅಂತೆಕಂತೆಗಳಿಗೆ ಜಂಗಲ್ ಬುಕ್‍ನ ಮೋಗ್ಲಿ ಯನ್ನು ಅಂಟಿಸಿ ಹಿಂದೆ-ಮುಂದೆ ನೋಡದೇ ಸುದ್ದಿಯ ಸ್ವರೂಪವನ್ನು ಕೊಡುವ ಜರೂರತ್ತು ಮಾಧ್ಯಮ ಮಂದಿಗೆ ಏನಿತ್ತು? ಯಾವ ಆಧಾರವೂ ಇಲ್ಲದೇ ಕನಿಷ್ಠ ವೈದ್ಯರ ಹೇಳಿಕೆಯನ್ನೂ ಪಡೆಯದೇ ಸುದ್ದಿ ರಚಿಸುವುದು ಎಷ್ಟು ಸರಿ? ಓದುಗರಿಗೆ ಇದು ರವಾನಿಸುವ ಸಂದೇಶ ಏನು?
ಇವತ್ತು ಸುದ್ದಿ-ಮಾಧ್ಯಮಗಳ ದೊಡ್ಡ ದೌರ್ಬಲ್ಯವೇ ಸುದ್ದಿ ಸ್ಪಷ್ಟತೆಗೆ ಮಹತ್ವ ಕೊಡದೇ ಇರುವುದು. ‘ಮೋಗ್ಲಿ ಗರ್ಲ್’ ಇದಕ್ಕೆ ಇನ್ನೊಂದು ಪುರಾವೆ ಅಷ್ಟೇ.

Thursday, May 4, 2017

ಮಂಗಳಂ ಎತ್ತಿರುವ ಮೀಡಿಯಾ ಎಥಿಕ್ಸ್ ಪ್ರಶ್ನೆ

ಮೀಡಿಯಾ ಎಥಿಕ್ಸ್ ಮತ್ತು ಜರ್ನಲಿಸ್ಟಿಕ್ ಎಥಿಕ್ಸ್ ಅಂದರೆ ಏನು? ಅದರ ಸ್ವರೂಪ ಹೇಗೆ? ಯಾವುದೆಲ್ಲ ಎಥಿಕ್ಸ್, ಯಾವುದೆಲ್ಲ ಅಲ್ಲ? ಓರ್ವ ಪತ್ರಕರ್ತ ಅಥವಾ ಒಂದು ಸುದ್ದಿ ಸಂಸ್ಥೆ ಎಥಿಕ್ಸ್ ಅನ್ನು ಉಲ್ಲಂಘಿಸಿದೆ ಎಂದು ವಾದಿಸುವುದಕ್ಕೆ ಆಧಾರ ಯಾವುದು? ಮಾಧ್ಯಮಗಳು ತಾನು ನಡೆದದ್ದೇ ದಾರಿ ಎಂಬ ರೀತಿಯಲ್ಲಿ ವರ್ತಿಸುತ್ತಿವೆಯೇ? ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಅವು ಪ್ರಸಾರ ಮಾಡುತ್ತಿರುವ ಸುದ್ದಿಗಳು, ವಿಶ್ಲೇಷಣೆಗಳು ಮತ್ತು ವ್ಯಂಗ್ಯಗಳು ನಿಜಕ್ಕೂ ಮಾಧ್ಯಮ ನೀತಿ ಸಂಹಿತೆಯ ಚೌಕಟ್ಟಿನೊಳಗಡೆ ಇವೆಯೇ? ಮಾರ್ಚ್ 26ರಂದು ಕೇರಳದಲ್ಲಿ ಭಾರೀ ಸದ್ದಿನೊಂದಿಗೆ ಆರಂಭವಾದ ಮಂಗಳಂ ಟಿ.ವಿ. ಈ ಬಗೆಯ ಪ್ರಶ್ನೆಗಳಿಗೆ ಮತ್ತೊಮ್ಮೆ ಚಾಲನೆಯನ್ನು ಕೊಟ್ಟಿದೆ.
ಮಾರ್ಚ್ 26ರಂದು ಮಂಗಳಂ ನ್ಯೂಸ್ ಚಾನೆಲ್ ಆರಂಭ ವಾಯಿತು. ಪ್ರಥಮ ವಾರ್ತಾ ಪ್ರಸಾರದಲ್ಲಿಯೇ ಅದು 8 ನಿಮಿಷ ಗಳ ಆಡಿಯೋವನ್ನು ಭಿತ್ತರಿಸಿತು. ಈ ಪ್ರಸಾರದ ಕೆಲವೇ ಗಂಟೆ ಗಳಲ್ಲಿ ಕೇರಳದ ಸಾರಿಗೆ ಸಚಿವ ಶಶೀಂದ್ರನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯಾವುದೇ ಒಂದು ಚಾನೆಲ್‍ನ ಕನಸಿನ ಆರಂಭ ಇದು. ಪ್ರಾರಂಭವಾಗಿ ಕೆಲವೇ ಗಂಟೆಗಳಲ್ಲಿ ಮಂಗಳಂ ಚಾನೆಲ್ ಕೇರಳದಾದ್ಯಂತ ಚರ್ಚೆಯ ವಸ್ತುವಾಯಿತು. ಇದಾಗಿ ನಾಲ್ಕೇ ದಿನಗಳಲ್ಲಿ ಚಾನೆಲ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜಿತ್ ಕುಮಾರ್ ಕ್ಷಮೆ ಯಾಚಿಸಿದರು. ಮಾಧ್ಯಮ ನೀತಿ ಸಂಹಿತೆಗೆ ಆ ಆಡಿಯೋ ತಕ್ಕುದಾಗಿರಲಿಲ್ಲ ಎಂದು ಹೇಳಿಕೊಂಡರು. ಕೆ. ಸಚ್ಚಿದಾನಂದನ್, ಎನ್.ಎಸ್. ಮಾಧವನ್, ಪೌಲ್ ಝಕಾರಿಯ ಮುಂತಾದ ಪ್ರಮುಖ ಸಾಹಿತಿ ಗಳು ಆ ಆಡಿಯೋ ಪ್ರಸಾರವನ್ನು ಖಂಡಿಸಿದರು. ‘ನೆಟ್‍ವರ್ಕ್ ಆಫ್ ವುಮನ್ ಇನ್ ಮೀಡಿಯಾ’ ಎಂಬ ಮಹಿಳಾ ಪತ್ರಕರ್ತರ ಗುಂಪು ಮಂಗಳಂ ಚಾನೆಲ್ ಕಚೇರಿಗೆ ಜಾಥಾ ನಡೆಸಿತು. # WE ARE NOT MANGALAM .#apology not accepted.#proud 2 be a women journalist.. ಹೀಗೆ ಪ್ಲಕಾರ್ಡ್ ಹಿಡಿದು ಮಹಿಳಾ ಪತ್ರಕರ್ತರು ಪ್ರತಿಭಟಿಸಿದರು. ಸರಕಾರ ತನಿಖೆಗೆ ಆದೇಶಿಸಿತು. ಚಾನೆಲ್‍ನ 9 ಮಂದಿ ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಲಾಯಿತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜಿತ್ ಕುಮಾರ್ ಸಹಿತ 5 ಮಂದಿಯ ಬಂಧನವಾಯಿತು. ಇದರ ಜೊತೆಜೊತೆಗೇ ಮಂಗಳಂ ಬೆತ್ತಲೆಯಾಗುತ್ತಲೇ ಹೋಯಿತು.
8 ನಿಮಿಷಗಳ ಆಡಿಯೋದಲ್ಲಿದ್ದುದು ಶಶೀಂದ್ರನ್ ಮತ್ತು ಓರ್ವ ಅಜ್ಞಾತ ಮಹಿಳೆಯ ನಡುವೆ 8 ನಿಮಿಷಗಳ ವರೆಗೆ ನಡೆದ ಮಾತುಕತೆ. ಲೈಂಗಿಕ ಭಾಷೆ ಮತ್ತು ಲೈಂಗಿಕ ಆಸಕ್ತಿಯನ್ನು ಶಶೀಂದ್ರನ್ ವ್ಯಕ್ತಪಡಿಸುವುದು ಆ ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ವಿಶೇಷ ಏನೆಂದರೆ, ಮಹಿಳೆಯರ ಧ್ವನಿಯನ್ನು ಮ್ಯೂಟ್ ಮಾಡಲಾಗಿದೆ. ಶಶೀಂದ್ರನ್‍ರ ಮಾತಿಗೆ ಮಹಿಳೆ ವಿರೋಧ ವ್ಯಕ್ತಪಡಿಸುತ್ತಾಳೋ ಸಮ್ಮತಿಸುತ್ತಾಳೋ ಬೆದರಿಕೆ ಹಾಕುತ್ತಾಳೋ ಎಂಬುದು ಆಡಿಯೋದಲ್ಲಿ ಸ್ಪಷ್ಟವಾಗುವುದಿಲ್ಲ. ಈ ಮಾತುಕತೆ ಎಲ್ಲಿ ನಡೆದಿದೆ ಎಂಬುದೂ ಗೊತ್ತಾಗುವುದಿಲ್ಲ. ಬರೇ ಶಶೀಂದ್ರನ್ ಅವರ ಮಾತುಗಳನ್ನಷ್ಟೇ ಪ್ರಸಾರ ಮಾಡಿ, ‘ಇದು ಶಶೀಂದ್ರನ್ ಅವರ ಲೈಂಗಿಕ ಟೇಪು’ ಎಂದು ಆರಂಭದಲ್ಲಿ ಚಾನೆಲ್ ಹೇಳಿ ಕೊಂಡಿತು. ‘ನೆರವು ಕೋರಿದ ಮಹಿಳೆಯೊಂದಿಗೆ ಶಶೀಂದ್ರನ್ ವರ್ತಿಸಿದ ರೀತಿ ಇದು’ ಎಂದೂ ಅದು ವಿವರಣೆ ನೀಡಿತು. ಅಲ್ಲದೇ, ಈ ಚಾನೆಲ್‍ನ ಒಡೆತನದಲ್ಲಿ ಈ ಮೊದಲೇ ಮಂಗಳಂ ಎಂಬ ಪತ್ರಿಕೆ ಪ್ರಕಟವಾಗುತ್ತಿತ್ತು. ‘ಭ್ರಷ್ಟಾಚಾರ ನಡೆದರೆ ನಮಗೆ ತಿಳಿಸಿ’ ಎಂದು ಅದರಲ್ಲಿ ಒಂದು ದೂರವಾಣಿ ಸಂಖ್ಯೆ ಯನ್ನೂ ನೀಡಲಾಗುತ್ತಿತ್ತು. ಆ ಸಂಖ್ಯೆಗೆ ಕರೆ ಮಾಡಿದ ಮಹಿಳೆ ಯೋರ್ವರು ಈ ಆಡಿಯೋವನ್ನು ನೀಡಿದ್ದಾರೆ ಎಂದೂ ಅದು ಸಮರ್ಥಿಸಿಕೊಂಡಿತು. ಆದರೆ ಮೊದಲ ದಿನದ ಈ ವಿವರಣೆಗಳು ಮರುದಿನದಿಂದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಾ ಹೋದುವು. ಸಂತ್ರಸ್ತ ಮಹಿಳೆ ದೂರು ನೀಡಿದ್ಧರೋ, ನೀಡಿದ್ದರೆ ಯಾವ ಪೊಲೀಸ್ ಠಾಣೆಯಲ್ಲಿ ಎಂಬ ಪ್ರಶ್ನೆ ಎದುರಾಯಿತು. ಚಾನೆಲ್ ಉತ್ತರಿಸಲಿಲ್ಲ. ಸಂತ್ರಸ್ತ ಮಹಿಳೆ ದೂರು ನೀಡಿಲ್ಲ ಎಂದ ಮೇಲೆ ಇಬ್ಬರ ನಡುವೆ ನಡೆದ ಖಾಸಗಿ ಸಂಭಾಷಣೆಯಾಗಿ ಅದು ಗುರುತಿಸಿಕೊಳ್ಳಬೇಕೇ ಹೊರತು ಅದನ್ನು ಸಾರ್ವಜನಿಕರ ಎದುರು ಇಡುವ ಅಗತ್ಯ ಏನಿದೆ, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡವು. ಚಾನೆಲ್ ಮತ್ತೂ ಮೌನ ವಾಯಿತು. ಅನುಮಾನಗಳು ಮತ್ತಷ್ಟು ಹೆಚ್ಚಾದುವು. ಇದು ಹನಿಟ್ರ್ಯಾಪ್ ಎಂಬ ಸಂಶಯ ಬಲವಾಗತೊಡಗಿತು. ಇದಕ್ಕೆ ಪೂರಕವಾಗಿ ಮೂರು ದಿನಗಳ ಬಳಿಕ ಇನ್ನಷ್ಟು ಸತ್ಯ ಸುದ್ದಿಗಳು ಬಹಿರಂಗಕ್ಕೆ ಬಂದುವು. ಮಂಗಳಂ ಚಾನೆಲ್‍ಗೆ ರಾಜಿನಾಮೆ ಇತ್ತ ‘ಅಲ್ ನೀಮಾ ಅಶ್ರಫ್’ ಎಂಬ ಪತ್ರಕರ್ತೆ ಇಡೀ ಘಟನೆಯನ್ನು ಇಂಡಿಯನ್ ಎಕ್ಸ್ ಪ್ರೆಸ್‍ನೊಂದಿಗೆ ಹಂಚಿಕೊಂಡರು.
‘ಪ್ರಾರಂಭದ ದಿನದಂದೇ ಸ್ಫೋಟಕ ಸುದ್ದಿಯೊಂದನ್ನು ಪ್ರಸಾರ ಮಾಡುವುದು ಚಾನೆಲ್‍ನ ಉದ್ದೇಶವಾಗಿತ್ತು. ಅದಕ್ಕಾಗಿ ಈ ಸುದ್ದಿ ಸಂಸ್ಥೆಯು ಓರ್ವ ಪುರುಷ ಮತ್ತು ನಾಲ್ವರು ಮಹಿಳಾ ಪತ್ರಕರ್ತರ ಗುಂಪನ್ನು ರಚಿಸಿತು. ಐವರು ವಿಐಪಿಗಳ ಹೆಸರನ್ನೂ ಅವರ ಮುಂದಿರಿಸಿತು. ಅದರಲ್ಲಿ ಓರ್ವ ಮಹಿಳಾ ವಿಐಪಿಯೂ ಇದ್ದರು. ಶಶೀಂದ್ರನ್‍ರ ಹೆಸರೂ ಇತ್ತು. ಈ ಐವರ ಗುಂಪು ಈ 5 ಮಂದಿ ವಿಐಪಿಗಳನ್ನು ಗುರಿಯಿಟ್ಟುಕೊಂಡು ಕೆಲಸ ಮಾಡಬೇಕು. ಸುದ್ದಿ ಸಂಸ್ಥೆಗೆ ಬೇಕಾಗಿರುವುದು ಎಕ್ಸ್‍ಕ್ಲೂಸಿವ್ ನ್ಯೂಸ್. ಅದಕ್ಕೆ ಯಾವ ವಿಧಾನವನ್ನು ಬೇಕಾದರೂ ಅನುಸರಿಸುವ ಸ್ವಾತಂತ್ರ್ಯವನ್ನು ಸುದ್ದಿ ಸಂಸ್ಥೆಯ ಸಂಪಾದಕರು ಈ ಗುಂಪಿಗೆ ನೀಡಿದರು. ವಿಶೇಷ ಏನೆಂದರೆ, ಈ 5 ಮಂದಿ ಪತ್ರಕರ್ತರು ಪತ್ರಿಕಾ ಜಗತ್ತಿಗೆ ಹೊಸಬರು ಮತ್ತು ಅನನುಭವಿಗಳು. ಹೀಗೆ ಆ ಆಡಿಯೋ ತಯಾರಾಯಿತು. ಶಶೀಂದ್ರನ್‍ರನ್ನು ಹನಿಟ್ರ್ಯಾಪ್ (ಬಲೆಗೆ ಬೀಳಿಸುವ)ಗೆ ಒಳಪಡಿಸಲಾಯಿತು. ನಿಜವಾಗಿ, ಇದು ಸಂತ್ರಸ್ತ ಮಹಿಳೆಯ ಆಡಿಯೋ ಅಲ್ಲ. ಇಲ್ಲಿ ಒಂದು ಹಂತದ ವರೆಗೆ ಶಶೀಂದ್ರನ್ ಅವರೇ ಸಂತ್ರಸ್ತ. ಮೋಹಿನಿಯ ಮೂಲಕ ಅವರನ್ನು ಬಲೆಗೆ ಬೀಳಿಸಲಾಯಿತು. ಖಾಸಗಿಯಾಗಿ ಮತ್ತು ಪರಸ್ಪರ ಯಾವ ಒತ್ತಡಗಳೂ ಇಲ್ಲದೇ ನಡೆದ ಮಾತುಕತೆ ಅದು. ಅಲ್ಲಿ ಹೆಣ್ಣು ಸಂತ್ರಸ್ತೆ ಅಲ್ಲ. ಗಂಡು ಪೀಡಕನೂ ಅಲ್ಲ. ನೀಮಾ ಅಶ್ರಪ್ ಅವರು ಇಡೀ ಪ್ರಕರಣವನ್ನು ಬಹಿರಂಗಗೊಳಿಸುತ್ತಿರು ವಂತೆಯೇ ಅಜಿತ್ ಕುಮಾರ್‍ರು ಪ್ರೈಮ್ ಟೈಮ್‍ನಲ್ಲಿ ಕಾಣಿಸಿಕೊಂಡು ಕ್ಷಮೆ ಯಾಚಿಸಿದರು. ಆ ಆಡಿಯೋವನ್ನು ಪ್ರಸಾರ ಮಾಡಿದ್ದು ತಪ್ಪು ಎಂದು ಹೇಳಿಕೊಂಡರು. ಆದರೆ, ಆ ಕ್ಷಮೆ ಯಾಚನೆಯು ಒಟ್ಟು ಚರ್ಚೆಯನ್ನು ಕೊನೆಗೊಳಿಸುವ ಬದಲು ಮಾಧ್ಯಮ ಎಥಿಕ್ಸ್‍ನ ಬಗ್ಗೆ ಗಂಭೀರ ಚರ್ಚೆಗೆ ನಾಂದಿಯನ್ನು ಹಾಡಿತು. ಮಾಧ್ಯಮಗಳು ಎಷ್ಟರ ವರೆಗೆ ಪರಿಶುದ್ಧ? ಅವುಗಳ ಎಲ್ಲೆ ಎಲ್ಲಿವರೆಗೆ? ತೋಚಿದಂತೆ ಸುದ್ದಿ ರಚಿಸಲು, ಪ್ರಸಾರ ಮಾಡಲು ಮತ್ತು ಸಮರ್ಥಿಸಿಕೊಳ್ಳಲು ಅವು ಶ್ರಮಿಸುತ್ತಿವೆಯೇ? ರಾಜಕಾರಣಿ ಗಳು ಮತ್ತು ಸಾರ್ವಜನಿಕರು ಮಾಧ್ಯಮಗಳಿಗೆ ಭಯ ಪಡುವ ಸ್ಥಿತಿ ಬಂದಿದೆಯೇ? ಪ್ರಶ್ನಿಸಿದರೆ ಟಾರ್ಗೆಟ್ ಮಾಡುತ್ತಾರೆ ಎಂಬ ಭೀತಿ ಇದೆಯೇ? ಇಂಥ ಪತ್ರಿಕೋದ್ಯಮ ಎಷ್ಟು ಸರಿ? ಮಾಧ್ಯಮ ನೀತಿ ಸಂಹಿತೆಯು ಇತರೆಲ್ಲ ಕ್ಷೇತ್ರಗಳಲ್ಲಿರುವ ನೀತಿ ಸಂಹಿತೆ ಯಂತೆಯೇ ಪವಿತ್ರ ಮತ್ತು ಪಾಲನಾರ್ಹ. ಕ್ರಿಕೆಟ್‍ನಲ್ಲಿ ನಿರ್ದಿಷ್ಟ ನಿಯಮ ಸಂಹಿತೆಯಿದೆ. ಆಟಗಾರ ಅದನ್ನು ಪಾಲಿಸಬೇಕು. ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳುವ ಭೀತಿ ಪ್ರತಿ ಕ್ರಿಕೆಟಿಗರಲ್ಲೂ ಇರುತ್ತದೆ. ರಾಜಕಾರಣಿಗಳನ್ನು ಒಂದು ಹಂತದ ವರೆಗೆ ಕಟ್ಟಿ ಹಾಕುವ ಅವಕಾಶ ಇದೆ. ಮಾಧ್ಯಮಗಳೇ ಆ ಕೆಲಸವನ್ನು ನಿರ್ವಹಿಸುತ್ತಲೂ ಇವೆ. ಸರಕಾರಿ ಅಧಿಕಾರಿಗಳು, ಕ್ರಿಮಿನಲ್‍ಗಳು ಸಹಿತ ಎಲ್ಲರೂ ಆಗಾಗ ಇಲ್ಲಿ ತರಾಟೆಗೆ ಒಳಗಾಗುತ್ತಲೂ ಇದ್ದಾರೆ. ಆದರೆ ಇದೇ ರೀತಿಯ ವಾತಾವರಣ ಪತ್ರಕರ್ತರಿಗೆ ಸಂಬಂಧಿಸಿ ಇವೆಯೇ? ಕನ್ನಡದಲ್ಲಿ ಸುಮಾರು 10ರಷ್ಟು ಸುದ್ದಿ ಚಾನೆಲ್‍ಗಳಿವೆ. ಅಷ್ಟೇ ಸಂಖ್ಯೆಯ ದೈನಿಕಗಳಿವೆ. ಇವೆಲ್ಲವುಗಳ ಕಾರ್ಯ ನಿರ್ವಹಣೆ ಹೇಗಿದೆ? ವಾಕ್ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಒಂದು ಚಾನೆಲ್ ಇನ್ನೊಂದು ಚಾನೆಲನ್ನು ವಿಮರ್ಶಿಸುವುದು ನಡೆಯುತ್ತಿದೆಯೇ? ಇಲ್ಲವಲ್ಲ. ಒಂದು ಪತ್ರಿಕೆಯು ಇನ್ನೊಂದು ಪತ್ರಿಕೆಯನ್ನು ವಿಮರ್ಶಿಸುವ ಮತ್ತು ತಪ್ಪುಗಳನ್ನು ಎತ್ತಿ ಹೇಳುವ ಕೆಲಸಗಳು ಆಗುತ್ತಿವೆಯೇ? ಓರ್ವ ರಾಜಕಾರಣಿಯ ಮೇಲೆ ಒಂದು ಚಾನೆಲ್ ಆರೋಪ ಹೊರಿಸುತ್ತದೆ ಅಥವಾ ಓರ್ವ ವ್ಯಕ್ತಿಯ ಬಗ್ಗೆ ಸುದ್ದಿಯನ್ನು ಪ್ರಸಾರ ಮಾಡುತ್ತದೆ ಎಂದಿಟ್ಟು ಕೊಳ್ಳೋಣ. ಆ ಬಗ್ಗೆ ಅವರಿಬ್ಬರಿಗೂ ಅವರದೇ ಆದ ಅಭಿಪ್ರಾಯ ಗಳಿರಬಹುದು. ಆ ಸುದ್ದಿ ಚಾನೆಲ್‍ನ ಬಗ್ಗೆಯೂ ನಿರ್ದಿಷ್ಟ ನಿಲುವುಗಳಿರಬಹುದು. ಅವರು ಇನ್ನೊಂದು ಚಾನೆಲ್‍ನಲ್ಲಿ ಇವು ಗಳನ್ನು ಹೇಳಿಕೊಳ್ಳಲು ಅವಕಾಶವನ್ನು ಕೋರಿದರೆ ಆ ಚಾನೆಲ್ ಅದಕ್ಕೆ ಅವಕಾಶ ನೀಡಬ ಹುದೇ? ಹಾಗಂತ, ಕೇವಲ ಚಾನೆಲ್‍ಗಳಿಗೆ ಮಾತ್ರ ಸಂಬಂಧಿಸಿ ಹೇಳುತ್ತಿಲ್ಲ. ಪತ್ರಿಕೆಗಳಿಗೂ ಇದು ಅನ್ವಯಿಸುತ್ತದೆ. ಒಂದು ಪತ್ರಿಕೆಯಲ್ಲಿ ಅಂಕಣ ಬರೆಯುವ ವ್ಯಕ್ತಿ ಇನ್ನೊಂದು ಪತ್ರಿಕೆಯ ತಪ್ಪುಗಳನ್ನು ಎತ್ತಿ ಹೇಳುವ ಕೆಲಸ ಮಾಡುತ್ತಾರೆಯೇ? ಅದಕ್ಕೆ ಅವಕಾಶವನ್ನು ನೀಡಲಾಗುತ್ತಿದೆಯೇ? ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಮುಂತಾದುವುಗಳೆಲ್ಲ ಸೆಲೆಕ್ಟಿವ್ ಆಗಿ ಚಲಾವಣೆಯಲ್ಲಿರುವಂತೆ ಅನಿಸುತ್ತಿಲ್ಲವೇ? ನಿಜವಾಗಿ, ಒಂದು ಸುದ್ದಿ ಸಂಸ್ಥೆ ಇನ್ನೊಂದು ಸುದ್ದಿ ಸಂಸ್ಥೆಯ ಕಾರ್ಯ ನಿರ್ವಹಣೆಯ ಬಗ್ಗೆ ತಜ್ಞರಿಂದ ಚರ್ಚೆಗಳನ್ನು ಏರ್ಪಡಿಸುವುದಿಲ್ಲ. ಅದರಲ್ಲಿ ಪ್ರಸಾರವಾದ ಕಾರ್ಯಕ್ರಮಗಳ ತಪ್ಪು-ಒಪ್ಪುಗಳನ್ನು ಚರ್ಚಿಸುವುದಿಲ್ಲ. ಒಂದು ಸುದ್ದಿ ಸಂಸ್ಥೆಯಲ್ಲಿ ಕುಳಿತು ಇನ್ನೊಂದು ಸುದ್ದಿ ಸಂಸ್ಥೆಯ ಮೇಲೆ ಆರೋಪ ಹೊರಿಸುವುದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಒಂದು ರೀತಿಯಲ್ಲಿ, ಮಾಧ್ಯಮ ಕ್ಷೇತ್ರವು ತಮ್ಮನ್ನು ವಿಮರ್ಶಾತೀತಗೊಳಿಸುವುದಕ್ಕೆ ಪರಸ್ಪರ ಅಲಿಖಿತ ಒಪ್ಪಂದಗಳನ್ನು ಏರ್ಪಡಿಸಿಕೊಂಡಿವೆಯೇನೋ ಎಂದು ಅಂದು ಕೊಳ್ಳುವಂತಹ ವಾತಾವರಣ ಇದೆ. ಅದೇ ವೇಳೆ, ಉಳಿದವರನ್ನೆಲ್ಲ ಅವು ಬಿಡುಬೀಸಾಗಿ ವಿಮರ್ಶಿಸುತ್ತವೆ. ಅದನ್ನು ಮಾಧ್ಯಮ ಸ್ವಾತಂತ್ರ್ಯ ಎಂಬ ಚಂದದ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಲೂ ಇವೆ. ಯಾರಾದರೂ ಈ ಸ್ವಾತಂತ್ರ್ಯವನ್ನು ಪ್ರಶ್ನಿಸಿದರೆ ಅವು ಒಟ್ಟಾಗಿ ಮುಗಿ ಬೀಳುತ್ತವೆ. ಮಾಧ್ಯಮಗಳ ಕಾರ್ಯನಿರ್ವಹಣೆಯ ಬಗ್ಗೆ ಸಿದ್ದರಾಮಯ್ಯರ ಸರಕಾರವು ಸದನ ಸಮಿತಿಯನ್ನು ರಚಿಸುವ ಉಮೇದು ತೋರಿಸಿದಾಗ ಅವು ವರ್ತಿಸಿದ್ದು ಇದೇ ರೀತಿಯಲ್ಲಿ. ಮಾಧ್ಯಮ ಸಂಸ್ಥೆಗಳು ಪರಸ್ಪರ ವಿಮರ್ಶಾತೀತರಂತೆ ನಡೆದುಕೊಳ್ಳುವುದು ಮತ್ತು ಉಳಿದವರನ್ನೆಲ್ಲ ವಿಮರ್ಶೆಗೊಡ್ಡುವುದು ಯಾವ ಬಗೆಯ ಎಥಿಕ್ಸ್? ಒಂದು ಪತ್ರಿಕೆ ಇನ್ನೊಂದನ್ನು ಮತ್ತು ಒಂದು ಸುದ್ದಿ ಸಂಸ್ಥೆ ಇನ್ನೊಂದನ್ನು ವಿಮರ್ಶೆಗೊಡ್ಡುವುದೇಕೆ ನಡೆಯುತ್ತಿಲ್ಲ? ಅಲ್ಲೇನು ತಪ್ಪುಗಳು ಸಂಭವಿಸುತ್ತಲೇ ಇಲ್ಲವೇ? ಅಲ್ಲಿಯ ಎಕ್ಸ್‍ಕ್ಲೂಸಿವ್ ನ್ಯೂಸ್‍ಗಳು, ಬ್ರೇಕಿಂಗ್ ನ್ಯೂಸ್‍ಗಳು, ಕವರ್ ಸ್ಟೋರಿಗಳು, ಪದ ಬಳಕೆಗಳೆಲ್ಲ ನೂರಕ್ಕೆ ನೂರು ಪರಿ ಪೂರ್ಣವೇ? ಅಲ್ಲಿ ಪೂರ್ವಾಗ್ರಹ ಇಲ್ಲವೇ? ಪಕ್ಷ ಪಾತಿ ನಿಲುವು ಗಳಿಲ್ಲವೇ? ಅನಗತ್ಯ ವೈಭವೀಕರಣಗಳಿಲ್ಲವೇ? ಭ್ರಷ್ಟಾಚಾರವಿಲ್ಲವೇ? ಜಾಹೀರಾತುದಾರರ ಹಿತ ಕಾಯುವ ಸಂದರ್ಭಗಳಿಲ್ಲವೇ? ನಿರ್ದಿಷ್ಟ ವ್ಯಕ್ತಿಗಳನ್ನು, ರಾಜಕಾರಣಿಗಳನ್ನು, ಪಕ್ಷಗಳನ್ನು, ಸಮು ದಾಯವನ್ನು ಓಲೈಸುವ ವಾತಾವರಣಗಳಿಲ್ಲವೇ?
ಪ್ರತಿದಿನ ರಾಜಕಾರಣಿಗಳನ್ನು ಜೋಕರ್‍ಗಳು, ಕಳ್ಳರು, ಧಗಾ ಕೋರರಂತೆ ಬಿಂಬಿಸುವ ಚಾನೆಲ್‍ಗಳು ಮತ್ತು ಪತ್ರಿಕೆಗಳು ಯಾಕೆ ಈ ಬಗ್ಗೆ ಮಾತಾಡುತ್ತಿಲ್ಲ? ಅವೆಷ್ಟು ಸಾಚಾ?