Thursday, August 27, 2015

ಕುರ್‍ಆನ್, ಬೈಬಲ್, ಗೀತೆ, ಗಾಂಧಿ ಮತ್ತು ಮಾವೋವಾದಿ..

ಜೋಳಿ ಚಿರಯತ್
      “ನನ್ನ ಕಂಪ್ಯೂಟರನ್ನು ಅವರು ತೆರೆದರು. ನಾನು ನಿಂತೇ ಇದ್ದೆ. ತೆರೆದ ಕೂಡಲೇ ಕಂಪ್ಯೂಟರ್ ಡೆಸ್ಕ್ ಟಾಪ್(Desktop)ನಲ್ಲಿ
ನನ್ನ ಹೆಸರಿನಲ್ಲಿದ್ದ ಫೋಲ್ಡರ್ ಕಾಣಿಸಿತು. ಅವರ ಮುಖದಲ್ಲಿ ಒಂದು ಬಗೆಯ ಕುತೂಹಲ. ಕ್ಲಿಕ್ ಮಾಡಿದರು.Oppose the worship of the books (ಪುಸ್ತಕ ಪೂಜೆಗೆ ವಿರೋಧ) ಎಂಬ ಶೀರ್ಷಿಕೆಯಲ್ಲಿ ಮಾವೋ ಬರೆದಿರುವ ಲೇಖನ ಅವರ ಕಣ್ಣಿಗೆ ಬಿತ್ತು. ತೆರೆದರು. ನನ್ನತ್ತ ವ್ಯಂಗ್ಯಭರಿತವಾಗಿ ದೃಷ್ಟಿ ಹಾಯಿಸಿದರು. ಏನನ್ನೋ ಪತ್ತೆ ಹಚ್ಚಿದ ಉತ್ಸಾಹದೊಂದಿಗೆ ಅವರು ಪ್ರಶ್ನಿಸಿದರು -
   ‘ಮಾವೋವಾದಿಯಲ್ಲ ಎಂದಲ್ಲವೇ ನೀವು ಈ ವರೆಗೆ ನಮ್ಮೊಂದಿಗೆ ವಾದಿಸಿದ್ದು? ಹಾಗಾದರೆ ಇದೇನು?'
   ನಾನು ಮರು ಪ್ರಶ್ನಿಸಿದೆ, ‘ಏನು?' ಅವರೂ ಬಿಡಲಿಲ್ಲ - ‘ನೀವೇ ಹೇಳಿ?’ ನಾನು ಹೇಳಿದೆ, ‘ಒಂದು ಲೇಖನ’. ಅವರು ಮುಂದುವರಿಸಿದರು, ‘ನೀವಿದನ್ನು ಯಾಕೆ ಓದುತ್ತೀರಿ?’ ನಾನಂದೆ, ‘ಯಾಕೆ, ಓದಬಾರದೇ? ಮಾವೋನ ಕೃತಿಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆಯೇ? ಅಲ್ಲದೇ ಇಂಟರ್‍ನೆಟ್‍ನಲ್ಲಿ ಈ ಲೇಖನ ಎಲ್ಲರಿಗೂ ಲಭ್ಯವಿದೆ. ಇದು ಎಂದಲ್ಲ, ಮಾವೋನ ಧಾರಾಳ ಪುಸ್ತಕಗಳನ್ನು ಇಂಟರ್‍ನೆಟ್‍ನಲ್ಲಿ ಓದಬಹುದು. ಹೀಗಿರುವಾಗ..!’ ನನ್ನ ಈ ಪ್ರಶ್ನೆಗೆ ಅವರು ನೇರ ಉತ್ತರವನ್ನು ನೀಡಲಿಲ್ಲ. ಅದರ ಬದಲು, ‘ನೀವೇಕೆ ಇವೆಲ್ಲವನ್ನೂ ಓದುತ್ತೀರಿ? ಅಲ್ಲದೇ ನೀವು ದಲಿತರ ಸಮಸ್ಯೆಗಳು ಮತ್ತು ಆದಿವಾಸಿಗಳ ಹೋರಾಟಗಳನ್ನು ಬೆಂಬಲಿಸುತ್ತಿದ್ದೀರಿ. ಅವರಿಗೆ ಬೆಂಬಲವಾಗಿ ಚಳವಳಿಯಲ್ಲಿ ಭಾಗವಹಿಸುತ್ತೀರಿ. ಮಾತಾಡುತ್ತೀರಿ. ಇವೆಲ್ಲ ಏನು..’ ಎಂದು ಪ್ರಶ್ನಿಸಿದರು. ಅವರ ಈ ಪ್ರಶ್ನೆಯಲ್ಲಿಯೇ ದಲಿತರು, ಆದಿವಾಸಿಗಳ ಹಕ್ಕುಗಳಿಗಾಗಿ ದನಿಯೆತ್ತುವುದು ಮಾವೋ ವಾದ ಎಂಬ ಸೂಚನೆ ಇತ್ತು. ನನಗದು ಹಿಡಿಸಲಿಲ್ಲ. ಆದಿವಾಸಿಗಳು ದಲಿತರು ಅಥವಾ ಮರ್ದಿತ ಜನಸಮೂಹದ ಹಕ್ಕುಗಳಿಗಾಗಿ ಹೋರಾಡುವುದು ಯಾಕೆ ಮಾವೋವಾದ ಆಗಬೇಕು? ಮನುಷ್ಯರ ಸಂಕಟಗಳನ್ನೂ ನಾವೇಕೆ ಎಡ-ಬಲ, ಆ ವಾದ- ಈ ವಾದ ಎಂದು ವಿಭಜಿಸಬೇಕು? ಈ ವಾದಗಳ ಹೊರತಾಗಿ ಚಳವಳಿಗಳನ್ನು ಕಟ್ಟಲಾಗದೇ, ನೋಡಬಾರದೇ.. ಎಂದೆಲ್ಲಾ ತೋಚಿತು. ನಾನು ಪ್ರತಿಭಟನಾ ದನಿಯಲ್ಲಿ ಹೇಳಿದೆ,
    ಬೀದಿಗಿಳಿದು ಸದಾ ಹೋರಾಟ ನಿರತರಾಗಬೇಕೆಂದು ಮನುಷ್ಯರಾರೂ ಬಯಸುವುದಿಲ್ಲ. ಅದರಲ್ಲಿ ಒಂದು ಬಗೆಯ ರಿಸ್ಕ್ ಇದೆ. ಜೀವ ಭಯ, ಬಂಧನ ಭೀತಿಗಳಿರುತ್ತವೆ. ಆರಾಮ ಜೀವಿಯಾದ ಮನುಷ್ಯ ಇವೆಲ್ಲವನ್ನು ಬರಿದೇ ಬಯಸುತ್ತಾನೆಂದು ಹೇಳುವುದು ತಪ್ಪಾಗುತ್ತದೆ. ಆದ್ದರಿಂದ ಮನುಷ್ಯ ಬೀದಿಗಿಳಿಯುತ್ತಾನೆಂದಾದರೆ ಅದೇಕೆಂದು ನೀವೇಕೆ ಆಲೋಚಿಸುತ್ತಿಲ್ಲ? ಹೋರಾಟಗಾರರಲ್ಲಿ ಪ್ರಶ್ನಿಸುವುದಕ್ಕಿಂತ ಹೋರಾಟಗಳೇಕೆ ರೂಪ ತಾಳುತ್ತವೆ ಎಂದೂ ಆಲೋಚಿಸಬಹುದಲ್ಲವೇ? ಸಮಯವನ್ನು ಕೊಲ್ಲುವುದಕ್ಕಾಗಿ ನಾನು ಹೋರಾಟ ನಿರತಳಾಗಿರುವೆನೆಂಬುದು ನಿಮ್ಮ ಅಭಿಪ್ರಾಯವೇ? ನಾನು ಹೋರಾಡುತ್ತಿರುವುದು ಜನರ ಹಕ್ಕುಗಳಿಗಾಗಿ. ಅದರಲ್ಲಿ ಮಾವೋವಾದವನ್ನೋ ಇನ್ನೇನನ್ನೋ ಹುಡುಕುವುದು ನಿಮ್ಮ ಸಮಸ್ಯೆ. ನಾನು ಅವರ ಹಕ್ಕುಗಳ ಪರ ಯಾವತ್ತೂ ನಿಲ್ಲುವೆ. ನೀವು ನನ್ನನ್ನು ಹೇಗೆ ನೋಡಿದರೂ ಸರಿ. ನೀವು ದಲಿತರು - ಆದಿವಾಸಿಗಳು ಎಂದು ಹೇಳದಿರಲ್ಲ, ಅವರು ಎಲ್ಲ ಕಾಲಗಳಲ್ಲೂ ಅದೇ ಸ್ಥಿತಿಯಲ್ಲಿ ಯಾಕಿದ್ದಾರೆ ಎಂದು ಆಲೋಚಿಸಿದ್ದೀರಾ? ಸ್ವಾತಂತ್ರ್ಯ ಸಿಕ್ಕಿ 68 ವರ್ಷಗಳಾದರೂ ಅವರ ಸ್ಥಿತಿಯಲ್ಲಿ ಸುಧಾರಣೆಯಾಗದೇ ಇರುವುದು ಯಾತಕ್ಕಾಗಿ? ಹೀಗಿರುವಾಗ ಸಮಾಜಕ್ಕೆ ಹೊಣೆಗಾರಿಕೆಗಳಿಲ್ಲವೇ? ಆ ಹೊಣೆಗಾರಿಕೆಯ ಪ್ರಜ್ಞೆಯಿಂದ ಮಾತಾಡುವುದು ಮಾವೋವಾದವೇ... ?’
     2015 ಜನವರಿ 29ರಂದು 6 ಮಂದಿ ಪೊಲೀಸರ ತಂಡ ತನ್ನ ಮನೆಯ ಮೇಲೆ ನಡೆಸಿದ ದಿಢೀರ್ ದಾಳಿ, ಪರಿಶೀಲನೆ, ಪ್ರಶ್ನಾವಳಿಗಳ ಅನುಭವಗಳನ್ನು ಮಾನವ ಹಕ್ಕು ಹೋರಾಟಗಾರ್ತಿ ಜೋಳಿ ಚಿರಯತ್ ಹೀಗೆ ಹೇಳುತ್ತಾ ಹೋಗುತ್ತಾರೆ..
    ಜನವರಿ 29ರಂದು ಸಂಜೆ ಹೊರಗೆ ಹೋಗಿದ್ದ ನಾನು ಮರಳಿ ಬರುವಾಗ ಮನೆಯ ಎದುರು ಪೊಲೀಸರಿದ್ದರು. ಅವರಲ್ಲಿ ಓರ್ವರು ಮಹಿಳಾ ಪೇದೆ. ‘ಮನೆ ಪರಿಶೀಲನೆ ನಡೆಸಬೇಕಿದೆ’ ಎಂದರು. ನಾನು ಒಮ್ಮೆ ಅವಾಕ್ಕಾದೆ. ಪರಿಶೀಲನೆ ನಡೆಸುವಂಥದ್ದು ಮನೆಯೊಳಗೆ ಏನಿದೆ ಅಂದುಕೊಂಡೆ. ಆದರೂ ‘ಸರ್ಚ್ ವಾರಂಟ್ ಇದೆಯಾ’ ಎಂದು ಪ್ರಶ್ನಿಸಿದೆ. ‘ಓಹ್, ಇದು ಮೇಲಿನವರ ನಿರ್ದೇಶನ’ ಎಂದು ಹೇಳುತ್ತಾ ನನ್ನ ಹಿಂದೆಯೇ ಅವರು ಮನೆಯೊಳಗೆ ಸೇರಿಕೊಂಡರು. ಮನೆಯಂತೂ ಅಸ್ತವ್ಯಸ್ತವಾಗಿತ್ತು. ಒಂದಷ್ಟು ಮುಜುಗರವೂ ಆಯಿತು. ಕುಳಿತುಕೊಳ್ಳಿ ಎಂದು ನಾನು ಹೇಳುತ್ತಿರುವಂತೆಯೇ, ‘ಮ್ಯಾಡಂ ನಿಮ್ಮ ಮೊಬೈಲ್ ಒಮ್ಮೆ ಕೊಡಿ’ ಎಂದು ನನ್ನ ಕೈಯಲ್ಲಿದ್ದ ಮೊಬೈಲನ್ನು ಪಡೆದುಕೊಂಡರು. ನನ್ನೊಳಗಿನ ಗೊಂದಲದಿಂದಾಗಿ ಪ್ರತಿಭಟಿಸುವ ಪ್ರಜ್ಞೆಯೂ ಕ್ಷಣ ಸ್ಥಗಿತಗೊಂಡಿತ್ತು. ನಿಜವಾಗಿ, ಅದು ನನ್ನ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಡೆಸಿದ ನೇರ ದಾಳಿ. ‘ಯಾಕೆ ಪೋನ್ ಪಡೆದುಕೊಂಡಿರಿ' ಎಂದು ಪ್ರಶ್ನಿಸಿದೆ. ‘ನೋಡಲು' ಎಂಬ ಸಾಮಾನ್ಯ ಉತ್ತರ. ‘ಅದು ನನ್ನ ವೈಯಕ್ತಿಕ ಪೋನ್. ನಿಮ್ಮ ಕ್ರಮ ಸಾಧುವೇ..’ ಎಂದು ಮರು ಪ್ರಶ್ನಿಸಿದೆ. ಉತ್ತರವಿಲ್ಲ. ಅದರ ಬದಲು ಮೊಬೈಲ್ ಪರಿಶೀಲನೆಯಲ್ಲಿ ಅವರು ಮಗ್ನರಾದರು. ಹೊರಹೋದ ಮತ್ತು ಒಳಬಂದ ಕರೆಗಳನ್ನು ಪರಿಶೀಲಿಸತೊಡಗಿದರು. ನನ್ನ ಕಾಂಟಾಕ್ಟ್ಸ್ ಗಳನ್ನು ತಪಾಸಿಸಿದರು. ಕೆಲವು ನಂಬರ್ ಮತ್ತು ಹೆಸರುಗಳನ್ನು ಬರೆದು ಕೊಂಡರು. ನನ್ನೊಳಗೆ ಸಂಘರ್ಷವೊಂದು ನಡೆಯುತ್ತಿತ್ತು. ನನ್ನ ಬಗ್ಗೆ ಇಂಟೆಲಿಜೆನ್ಸ್ ವಿಭಾಗವು ಏನೆಂದು ವರದಿ ಕೊಟ್ಟಿರಬಹುದು? ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂದಿರಬಹುದೇ? ಮಾವೋವಾದಿ, ಉಗ್ರವಾದಿ.. ಏನಿರಬಹುದು? ಆ ವರದಿಯ ಆಧಾರದಲ್ಲೇ ಈ ಪರಿಶೀಲನೆ ನಡೆಯುತ್ತಿರಬಹುದಲ್ಲವೇ?
     ಓರ್ವ ನನ್ನನ್ನು ಎವೆಯಿಕ್ಕದೇ ನೋಡುತ್ತಿದ್ದ. ಬಹುಶಃ ಆ ತಂಡದ ಮನಃಶಾಸ್ತ್ರಜ್ಞನಿರಬೇಕು. ನನ್ನಲ್ಲಾಗುವ ಭಾವನೆಗಳ ಏರಿಳಿತಗಳನ್ನು ಓದುವ ಪ್ರಯತ್ನ ನಡೆಸುತ್ತಿರಬಹುದು. ನಾನೂ ಆತನನ್ನು ಅದೇ ರೀತಿಯಲ್ಲಿ ನೋಡಿದೆ. ಇದರ ಮಧ್ಯೆಯೇ ಅವರು, ‘ನಿಮಗೆ ಎಷ್ಟು ಮಾವೋವಾದಿಗಳ ಪರಿಚಯ ಇದೆ’ ಎಂದು ಪ್ರಶ್ನಿಸಿದರು. ನನಗೆ ನಗು ಬಂತು. ‘ಯಾರೂ ಕೂಡ ಈ ವರೆಗೆ ನಾನು ಮಾವೋವಾದಿ ಎಂದು ಹೇಳಿಕೊಂಡು ತಮ್ಮನ್ನು ಪರಿಚಯ ಮಾಡಿಕೊಂಡಿಲ್ಲ. ಹಾಗೆಯೇ, ಬಿಜೆಪಿಯೋ ಮಾವೋವಾದಿಯೋ ಕಾಂಗ್ರೆಸ್ಸೋ ಕಮ್ಯುನಿಸ್ಟೋ ಎಂದು ನೋಡಿ ಕೊಂಡು ನಾನು ಗೆಳೆತನವನ್ನೂ ಬೆಳೆಸಿಲ್ಲ. ನನ್ನ ಸಂಪರ್ಕಕ್ಕೆ ಸಿಕ್ಕವರೆಲ್ಲ ಮನುಷ್ಯರು..’ ಎಂದೆ. ಮಾವೋವಾದಿಗಳನ್ನು ಸಂಪರ್ಕಿಸುವುದಕ್ಕಾಗಿಯೇ ವಿೂಸಲಾಗಿರುವ ಮೊಬೈಲ್ ಇದೆಯಾ ಎಂದು ತುಸು ಕುಚೋದ್ಯದಿಂದಲೇ ಪ್ರಶ್ನಿಸಿದರು. ನನ್ನಲ್ಲಿ ಇನ್ನೊಂದು ಮೊಬೈಲ್ ಇತ್ತು. ಅದನ್ನೂ ಕೊಟ್ಟೆ. ಅದರಿಂದಲೂ ಕೆಲವು ನಂಬರ್‍ಗಳನ್ನು ಬರೆದಿಟ್ಟುಕೊಂಡರು. ‘ನಿಮಗೇಕೆ ವೈಫೈ, ಕಂಪ್ಯೂ ಟರ್, ಪ್ರಿಂಟರ್’ ಎಂದೆಲ್ಲಾ ಪ್ರಶ್ನಿಸಿದರು. ಅಸಂಬದ್ಧ ಪ್ರಶ್ನೆ. ಒಂದು ನಗರವೇ ವೈಫೈ ಆಗಲು ತೀರ್ಮಾನಿಸಿರುವಾಗ ನಿಮಗೇಕೆ ವೈಫೈ ಎಂದು ಪ್ರಶ್ನಿಸುವುದಕ್ಕೆ ಏನರ್ಥವಿದೆ? ಪ್ರಿಂಟರ್‍ನ ಬಗ್ಗೆಯೂ ಅನುಮಾನ. ಈ ಮಧ್ಯೆ ನನ್ನ ಫೇಸ್‍ಬುಕ್ ತೆರೆಯುವಂತೆ ಕೇಳಿಕೊಂಡರು. ನನ್ನ ಜಿ ಮೇಲ್ ಅನ್ನು ತೆರೆದರು. ನನ್ನ ಮೊಬೈಲ್, ಕಂಪ್ಯೂಟರ್, ಜಿ ಮೇಲ್, ಫೇಸ್‍ಬುಕ್ ಸಹಿತ ಎಲ್ಲವೂ ಒಂದೊಂದಾಗಿ ಅವರ ಪಾಲಾಗತೊಡಗಿದುವು. ನಾನು ನಿಂತುಕೊಂಡೇ ಇದ್ದುದನ್ನು ನೋಡಿ ಅವರಲ್ಲೊಬ್ಬ ‘ಕುಳಿತುಕೊಳ್ಳಿ' ಎಂದು ಕುರ್ಚಿಯನ್ನು ತೋರಿಸಿದ. ನನ್ನ ಮನೆಯೊಳಗೇ ನಾನು ಅತಿಥಿ. ನನ್ನ ಮನೆ, ನನ್ನ ಈಮೇಲ್, ನನ್ನ ಮೊಬೈಲು, ನನ್ನ, ನನ್ನ.. ಎಲ್ಲವೂ ಅನ್ಯರ ಪಾಲಾದ ಅನುಭವ. ವೈಯಕ್ತಿಕ ಸ್ವಾತಂತ್ರ್ಯ ಅಂದರೇನು? ಖಾಕಿದಾರಿಗಳು ಪ್ರಶ್ನಿಸಿದರೆ ಮುಗಿಯುವ ಈ ಸ್ವಾತಂತ್ರ್ಯಕ್ಕಾಗಿ ಯಾಕೆ ಹೆಮ್ಮೆ ಪಡಬೇಕು? ಟ್ಯೂಶನ್‍ಗೆ ತೆರಳುವಾಗ, ‘ನಾನು ತುಸು ತಡವಾಗಿ ಬರುವೆ' ಎಂದು ಮಗ ಹೇಳಿದ್ದ. ಅವನಾದರೂ ಬಂದು ಕಾಲಿಂಗ್ ಬೆಲ್ ಒತ್ತಬಾರದೇ ಎಂದು ಆಸೆಪಟ್ಟೆ. ಮನೆಯೊಳಗಿನ ವಾತಾವರಣವು ನನ್ನನ್ನು ಕಟ್ಟಿ ಹಾಕಿದಂತಿತ್ತು. ಈ ಮಧ್ಯೆ ಪುಸ್ತಕಗಳಿರುವ ಕಪಾಟನ್ನು ಪರಿಶೀಲಿಸಲು ಓರ್ವರು ಪ್ರಾರಂಭಿಸಿದರು. ಅವರಿಗೆ ಬೇಕಾದ ಪುಸ್ತಕಗಳು ಸಿಕ್ಕದ್ದರಿಂದಲೋ ಏನೋ ಬೇರೆಲ್ಲಾದರೂ ಪುಸ್ತಕಗಳು ಇವೆಯಾ ಎಂದು ಪ್ರಶ್ನಿಸಿದರು. ನನ್ನ ಬೆಡ್‍ರೂಮ್‍ನಲ್ಲಿರುವ ಪುಟ್ಟ ಕಪಾಟನ್ನು ತೋರಿಸಿದೆ. ಬೆಡ್‍ರೂಮ್ ಎಷ್ಟು ಅಸ್ತವ್ಯಸ್ತವಾಗಿತ್ತು ಎಂದರೆ, ನನಗೇ ಅದರೊಳಗೆ ಹೋಗಲು ಮುಜುಗರವಾಯಿತು. ಇದರ ನಡುವೆಯೇ ನನ್ನ ಮೊಬೈಲ್ ವಿವರಗಳನ್ನು ಪರಿಶೀಲಿಸುವ ಮತ್ತು ಪ್ರಶ್ನಿಸುವ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಎಂದೋ ಬಂದ ಸಂದೇಶವನ್ನು ಎತ್ತಿಕೊಂಡು ನನ್ನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಒಂದು ವಿೂಟಿಂಗ್ ನಡೆಯುವ ಬಗ್ಗೆ ಬಂದಿರುವ ಎಸ್.ಎಂ.ಎಸ್. ಅನ್ನು ತೋರಿಸಿ ಆ ಸಭೆಯ ಅಜೆಂಡ ಏನಾಗಿತ್ತು ಎಂದು ಪ್ರಶ್ನಿಸಿದರು. ನಿಜವಾಗಿ, ಆ ಸಭೆಗೆ ನಾನು ಹೋಗಿಯೇ ಇರಲಿಲ್ಲ. ಈ ಮಧ್ಯೆ ನನ್ನ ಬೆಡ್‍ರೂಮ್‍ನಿಂದ ನೋಟೀಸ್‍ಗಳು, ಕಾಗದಗಳು ಹೊರಗೆ ಬರುತ್ತಿದ್ದುವು. ಮಹಿಳಾ ಪೇದೆ ಅವನ್ನೆಲ್ಲಾ ತರುವುದು ಮತ್ತು ಅದನ್ನು ಪರಿಶೀಲಿಸಿ ವಿಭಜಿಸುವುದು ನಡೆಯುತ್ತಲೇ ಇತ್ತು. ನಿಜವಾಗಿ, ಆ ನೋಟೀಸುಗಳಲ್ಲಿ ಏನಿವೆ ಎಂಬುದು ನನಗೂ ಗೊತ್ತಿರಲಿಲ್ಲ. ನಾನು ಕಾರ್ಯಕ್ರಮಗಳಿಗೆ ಹೋದಾಗ ಸಿಕ್ಕ ನೋಟೀಸ್‍ಗಳು ಅವು. ಹೀಗಿರುವಾಗಲೇ ಮಾರ್ಕ್ಸಿಸ್ಟ್ ಸಿದ್ಧಾಂತದ ಪರಿಚಯ (Introduction of Marrkxist Philosophy) ಎಂಬ ಪುಸ್ತಕವನ್ನು ಕಪಾಟಿನಿಂದ ಹೊರತಂದು ನನ್ನ ಎದುರಿಗಿಟ್ಟರು. ‘ಹಾಗಾದರೆ ನೀವು ಇದನ್ನೆಲ್ಲ ಓದುತ್ತೀರಲ್ಲವೇ..' ಎಂದು ವ್ಯಂಗ್ಯಭರಿತವಾಗಿಯೇ ಕೇಳಿದರು. ನಾನು ನಕ್ಕೆ. ನನ್ನ ಕಪಾಟಿನಲ್ಲಿರುವ ಜಲಾಲುದ್ದೀನ್ ರೂಮಿಯವರ ಪುಸ್ತಕವನ್ನು ತೋರಿಸಿ, ‘ಸರ್, ನಾನು ಅದನ್ನೂ ಓದುವೆ' ಎಂದೆ.ಮಾರ್ಕ್ಸಿಸ್ಟ್ ಪುಸ್ತಕವನ್ನು ಕಾಲೇಜಿನಲ್ಲೂ ಓದಿಸಲಾಗುತ್ತದಲ್ಲವೇ? ಅದನ್ನು ನಿಷೇಧಿಸಿರುವಿರಾ ಎಂದು ಮತ್ತೂ ಕೇಳಿದೆ. ಅವರು ಉತ್ತರಿಸಲಿಲ್ಲ. ಅದರ ಬದಲು ಅವರು ಇನ್ನೊಂದು ಕಂಪ್ಯೂಟರ್‍ನತ್ತ ಗಮನ ಹರಿಸಿದರು. ಅದು ಮಗನದ್ದು. ಅದರ ಪಾಸ್‍ವರ್ಡ್ ಕೇಳಿದರು. ಗವರ್ನ್‍ಮೆಂಟ್ ಎಂಬ ಪಾಸ್‍ವರ್ಡ್ ಅನ್ನು ಕೇಳಿ ಅಚ್ಚರಿಪಟ್ಟರು. ‘ಮಗನೂ ಮಾವೋವಾದಿಯೇ’ ಎಂದು ಕೇಳಿದರು. ಜೊತೆಗೇ ಮನೆಯ ಬಾಗಿಲು, ಕಿಟಕಿ, ಅಡುಗೆ ಕೋಣೆ ಸಹಿತ ಎಲ್ಲದರ ಲೆಕ್ಕವನ್ನೂ ಬರೆದಿಟ್ಟುಕೊಂಡರು. ನಕ್ಷೆ ರಚಿಸಿದರು. ಕೊನೆಗೆ ಮನೆಯಿಂದ ಹೊರಡುವಾಗ ನನ್ನತ್ತ ತಿರುಗಿ, ‘ನೀವು ಮಾವೋವಾದಿ ಅಲ್ಲ ತಾನೇ..' ಎಂದು ಈ ಹಿಂದೆ ಕೇಳಿದ್ದನ್ನೇ ಮತ್ತೊಮ್ಮೆ ಕೇಳಿದರು. ನಾನು ನನ್ನ ಕಪಾಟಿನಲ್ಲಿರುವ ಪುಸ್ತಕಗಳ ಕಡೆಗೆ ತೋರಿಸಿ, ‘ಇದರಲ್ಲಿ ಕುರ್‍ಆನ್, ಬೈಬಲ್, ಗೀತೆ, ಗಾಂಧಿ, ಸೂಫಿಸಂ.. ಎಲ್ಲವೂ ಇದೆ. ಆದರೆ ಇದರಲ್ಲಿ ಏನಾದರೂ ಒಂದು ಆಗಿರುವೆಯಾ ಎಂದು ನೀವು ಪ್ರಶ್ನಿಸಿಲ್ಲವೇಕೆ? ಪ್ರಜಾತಂತ್ರದಲ್ಲಿ ಎಲ್ಲರಿಗೂ ಎಲ್ಲವನ್ನೂ ಓದುವ ಸ್ವಾತಂತ್ರ್ಯ ಇರಬೇಕಾಗಿದೆ. ಅದನ್ನೇಕೆ ನೀವು ಅಪರಾಧವಾಗಿ ಕಾಣುತ್ತೀರಿ..’ ಎಂದೆ. ನಕ್ಕರು. ಅವರನ್ನೇ ತುಸು ದೂರದ ವರೆಗೆ ಹಿಂಬಾಲಿಸಿದೆ. ‘ಇನ್ನೊಮ್ಮೆ ಬರುವಾಗ ಮೊದಲೇ ತಿಳಿಸಿ ಬನ್ನಿ’ ಅಂದೆ. ‘ಯಾಕೆ, ದಾಖಲೆ ಗಳನ್ನು ಬೇರೆಡೆಗೆ ಸಾಗಿಸಲಿಕ್ಕಾ’ ಎಂದು ಪ್ರಶ್ನಿಸಿದರು. ‘ಅಲ್ಲ, ಮನೆಯನ್ನು ಓರಣವಾಗಿಟ್ಟು ಸ್ವಾಗತಿಸುವುದಕ್ಕೆ..’ ಎಂದೆ..."
       ಭಾರತೀಯ ಚಲನಚಿತ್ರ ಮಂಡಳಿಯ (FTII) ಅಧ್ಯಕ್ಷರನ್ನಾಗಿ ಗಜೇಂದ್ರ ಚೌಹಾಣ್‍ರ ನೇಮಕವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಕಳೆದ ವಾರ  ಮಧ್ಯರಾತ್ರಿ ಬಂಧಿಸಿ ಕಠಿಣ ಕೇಸು ದಾಖಲಿಸಲಾದ ಘಟನೆಯನ್ನು ನೋಡುತ್ತಾ ಜೋಳಿ ಚಿರಯತ್ ಯಾಕೋ ನೆನಪಾದರು.

Wednesday, August 26, 2015

 ಅತ್ಯಾಚಾರಿಯ ಸುತ್ತ ಹೊಸ ಚರ್ಚೆಯನ್ನು ಹುಟ್ಟು ಹಾಕಿದ ಭ್ರೂಣ

     ಗುಜರಾತ್‍ನ ಸಬರಕಾಂತ್ ಜಿಲ್ಲೆಯ ಪ್ರೌಢಶಾಲೆಯ ಹುಡುಗಿಯೊಬ್ಬಳು ಅತ್ಯಾಚಾರದ ಇನ್ನೊಂದು ಮುಖವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾಳೆ. ಆ ಮುಖ ಅತ್ಯಂತ ಭಾವಾನಾತ್ಮಕವಾದುದು. `ಜೀವಿಸುವ ಹಕ್ಕು' ಎಂಬ ಸಹಜ ಮೌಲ್ಯದ ಅಸ್ತಿತ್ವವನ್ನೇ ಅಲುಗಾಡಿಸುವಂಥದ್ದು. ಇನ್ನಷ್ಟೇ ಕಣ್ಣು ಬಿಡಬೇಕಿರುವ ಮತ್ತು ಈ ಜಗತ್ತಿನಲ್ಲಿ ಬಾಳಿ-ಬದುಕುವುದಕ್ಕೆ ಸಕಲ ಹಕ್ಕುಗಳನ್ನೂ ಹೊಂದಿರುವ ಮಗುವನ್ನು (ಭ್ರೂಣ) ಉಳಿಸಿಕೊಳ್ಳಬೇಕೋ ಅಳಿಸಿಹಾಕಬೇಕೋ ಎಂಬುದಕ್ಕೆ ಸಂಬಂಧಿಸಿದ್ದು. ಸುಪ್ರೀಮ್ ಕೋರ್ಟ್ ಇತ್ತೀಚಿಗೆ  ಈ ಕುರಿತಂತೆ ತೀರ್ಪೊಂದನ್ನು ನೀಡಿದೆ. “ತಾಯಿಯ ಭಾವನೆಯನ್ನು ಗೌರವಿಸುವ ಮೂಲಕ ಮಗುವಿಗೆ (ಭ್ರೂಣ) ಜೀವಿಸುವ ಹಕ್ಕನ್ನು ಅದು ನಿರಾಕರಿಸಿದೆ.” ಕೋರ್ಟ್‍ನ ಈ ತೀರ್ಪನ್ನು ಗೌರವಿಸಲೇಬೇಕಾದ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳುತ್ತಲೇ, ಆ ಹುಡುಗಿಯ ಘಾಸಿಗೊಂಡ ಮನಸ್ಸಿನ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವ ತಾಳ್ಮೆಯನ್ನೂ ನಾವು ಪ್ರದರ್ಶಿಸಬೇಕಿದೆ.
  ಮಲಹೊರುವ ಕಾರ್ಮಿಕನ ಮಗಳಾದ ಈ ಹುಡುಗಿಯ ಮೇಲೆ ವೈದ್ಯನೋರ್ವ ಅತ್ಯಾಚಾರ ಎಸಗಿದ್ದಾನೆ. ಯಾರಲ್ಲೂ ಬಾಯಿ ಬಿಡಬಾರದೆಂದು ಬೆದರಿಸಿದ್ದಾನೆ. 14ರ ಹರೆಯದ ಈ ಹುಡುಗಿ ಅತ್ಯಾಚಾರ ಮತ್ತು ಬೆದರಿಕೆಯೆಂಬ ಎರಡು ಅಲುಗಿನ ಕತ್ತಿಯನ್ನು ಎದುರಿಸಲಾಗದೇ ಮೌನವಾಗುತ್ತದೆ. ತನ್ನ ಮಗುವಿನ ಹೊಟ್ಟೆಯೊಳಗೆ ಭ್ರೂಣವೊಂದು ಬೆಳೆಯುತ್ತಿರುವುದು ಆ ಬಾಲೆಯ ಅಪ್ಪನ ಗಮನಕ್ಕೂ ಬಂದಿರುವುದಿಲ್ಲ. ಅದು ಗೊತ್ತಾಗುವಾಗ 24 ವಾರಗಳೇ (6 ತಿಂಗಳು) ಸಂದಿರುತ್ತವೆ. ಅಪ್ಪ ಗುಜರಾತ್ ಹೈಕೋರ್ಟ್‍ನ ಮೊರೆ ಹೋಗುತ್ತಾನೆ. ಭ್ರೂಣವನ್ನು ತೆಗೆಸುವುದಕ್ಕೆ (ಅಬಾರ್ಷನ್) ಅನುಮತಿ ನೀಡಬೇಕೆಂದು ವಿನಂತಿಸುತ್ತಾನೆ. ಆದರೆ ಕಳೆದ ಜುಲೈ 24ರಂದು ಗುಜರಾತ್ ಹೈಕೋರ್ಟ್ ಆತನ ಮನವಿಯನ್ನು ತಳ್ಳಿ ಹಾಕುತ್ತದೆ. ಗರ್ಭಕ್ಕೆ ಸಂಬಂಧಿಸಿ 1971ರ ವೈದ್ಯಕೀಯ ಕಾಯ್ದೆಯ ಪ್ರಕಾರ, 20 ವಾರಗಳೊಳಗಿನ ಭ್ರೂಣವನ್ನಷ್ಟೇ ಕಿತ್ತು ಹಾಕಲು (ಅಬಾರ್ಷನ್) ಅನುಮತಿ ಇದೆ. ಈ ಅನುಮತಿಯೂ ಬೇಕಾಬಿಟ್ಟಿಯಲ್ಲ. ಗರ್ಭಿಣಿಯ ಆರೋಗ್ಯಕ್ಕೆ ಅಪಾಯವಿರುವುದಾದರೆ ಅಥವಾ ಭ್ರೂಣದ ಬೆಳವಣಿಗೆಯಲ್ಲಿ ತೊಂದರೆಗಳಿದ್ದರೆ ಮಾತ್ರ ಅಬಾರ್ಷನ್ ಮಾಡಬಹುದು. ಆದರೆ, ಈ ಹುಡುಗಿಗೆ ಸಂಬಂಧಿಸಿ ಈ ಯಾವ ತೊಂದರೆಯೂ ಇಲ್ಲ. ಹುಡುಗಿಯೂ ಆರೋಗ್ಯದಿಂದಿದ್ದಾಳೆ. ಭ್ರೂಣವೂ ಆರೋಗ್ಯದಿಂದಿದೆ. ಇಲ್ಲಿನ ಸಮಸ್ಯೆ ಏನೆಂದರೆ, ಹುಡುಗಿಯ ಹೊಟ್ಟೆಯೊಳಗಿನ ಭ್ರೂಣಕ್ಕೆ ಆಕೆ ಹೊಣೆಯಲ್ಲ ಎಂಬುದು. ಅದನ್ನು ಆಕೆ ಇಚ್ಛೆಪಟ್ಟು ಪಡೆದದ್ದಲ್ಲ. ಅದು ಕ್ರೌರ್ಯವೊಂದು ಬಿಟ್ಟುಹೋದ ಕುರುಹು. ಆದರೆ ಪ್ರಶ್ನೆ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಇದರಲ್ಲಿ ಭ್ರೂಣದ ತಪ್ಪು ಏನಿದೆ? ತನ್ನನ್ನು ಬಸಿರಾಗು ಎಂದು ಆ ಭ್ರೂಣ ಕೇಳಿಕೊಂಡಿಲ್ಲ. ತಾಯಿ ಹೇಗೆ ಮುಗ್ಧೆಯೋ ಹಾಗೆಯೇ ಭ್ರೂಣವೂ ಮುಗ್ಧ. ಸಂತ್ರಸ್ತೆಯಷ್ಟೇ ಆ ಭ್ರೂಣವೂ ಪವಿತ್ರ. ಬಸಿರಿಗೆ ಕಾರಣ ಏನೇ ಇರಲಿ ಮತ್ತು ಅದರಿಂದಾಗಿ ಸಂತ್ರಸ್ತೆಗಾಗಿರುವ ಆಘಾತದ ಪ್ರಮಾಣವು ಎಷ್ಟೇ ತೀವ್ರವಾಗಿರಲಿ ಅದಕ್ಕೆ ಭ್ರೂಣವನ್ನು ಹೊಣೆಗಾರವನ್ನಾಗಿ ಮಾಡಲು ಸಾಧ್ಯವಿಲ್ಲವಲ್ಲ.. ಒಂದು ಕಡೆ ಭ್ರೂಣ ಬೇಡ ಅನ್ನುವ ಸಂತ್ರಸ್ತೆ ಮತ್ತು ಇನ್ನೊಂದು ಕಡೆ ಸಂತ್ರಸ್ತೆಯ ಜಗತ್ತನ್ನು ನೋಡುವ ಉತ್ಸಾಹದಿಂದ ಕಣ್ಣು ಮಿಟಕಿಸುತ್ತಿರುವ ಭ್ರೂಣ- ಇವುಗಳ ನಡುವಿನ ಈ ಸಂಘರ್ಷದಲ್ಲಿ ಭ್ರೂಣವೇ ಗುಜರಾತ್ ಹೈಕೋರ್ಟ್‍ನಲ್ಲಿ ಮೇಲುಗೈ ಪಡೆಯಿತು. ನ್ಯಾಯಾಧೀಶರಾದ ಅಭಿಲಾಷಾ ಕುಮಾರಿಯವರು `ಭ್ರೂಣದ ಜೀವಿಸುವ ಹಕ್ಕನ್ನು ನಿರಾಕರಿಸಲಾರೆ...' ಎಂದರು. ಆದರೆ ಹೈಕೋರ್ಟ್‍ನ ಈ ತೀರ್ಪನ್ನು ಅನೂರ್ಜಿತಗೊಳಿಸಿದ ಸುಪ್ರೀಮ್‍ಕೋರ್ಟ್, ಆ ಹುಡುಗಿಯ ಮನವಿಯನ್ನು ಗೌರವಿಸಿತು.
  ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಕವರೇಜ್ ಸಿಗದ ಪ್ರಕರಣ ಇದು. ಪತ್ರಿಕೋದ್ಯಮದ ತುರ್ತಿನಲ್ಲಿ ಅನೇಕ ಬಾರಿ ಸುದ್ದಿಗಳ ಗಂಭೀರತೆಯೇ ಹೊರಟು ಹೋಗುವುದಿದೆ. ಆಳ ವಿಶ್ಲೇಷಣೆಗೆ ಒಳಗಾಗಬೇಕಾದ ಮತ್ತು ಮಹತ್ವಪೂರ್ಣವೆನ್ನಿಸಿಕೊಳ್ಳಬೇಕಾದ ಸುದ್ದಿಗಳು ತೀರಾ ಅಪ್ರಾಮುಖ್ಯತೆಯೊಂದಿಗೆ ಪ್ರಕಟವಾಗಿ ಕಳೆದುಹೋಗುವುದಿದೆ. 14ರ ಹರೆಯದ ಈ ಹುಡುಗಿಯ ಪ್ರಕರಣವೂ ತಲ್ಲಣ ಸೃಷ್ಟಿಸದೇ ಇರುವುದಕ್ಕೆ ಅತ್ಯಾಚಾರ ಪ್ರಕರಣಗಳು ಈ ದೇಶದಲ್ಲಿ ಸಾಮಾನ್ಯವಾಗಿರುವುದು ಕಾರಣವಾಗಿರಲೂಬಹುದು. ನಿಜವಾಗಿ ಅತ್ಯಾಚಾರ, ಗರ್ಭಧಾರಣೆ, ಅಬಾರ್ಷನ್.. ಮುಂತಾದ ಸಹಜ ಪದಗಳಾಚೆಗೆ ನಮ್ಮನ್ನು ಕೊಂಡೊಯ್ಯಬೇಕಾದ ಪ್ರಕರಣ ಇದು. ಓರ್ವ ಹೆಣ್ಣಿನ ಮೇಲೆ ಬಲಾತ್ಕಾರ ಮಾಡುವಲ್ಲಿಗೆ ಗಂಡಿನ ಹೋರಾಟ ಕೊನೆಗೊಳ್ಳುತ್ತದೆ. ಆದರೆ, ಹೆಣ್ಣಿನ ಸಮಸ್ಯೆ ಆರಂಭಗೊಳ್ಳುವುದೇ ಇಲ್ಲಿಂದ. ಅತ್ಯಾಚಾರವು ಗಂಡಿನ ಪಾಲಿಗೆ ಎಷ್ಟು ಇಚ್ಚಿತವೋ ಹೆಣ್ಣಿನ ಪಾಲಿಗೆ ಅಷ್ಟೇ ಅಇಚ್ಚಿತ. ಆಕೆ ಅದನ್ನು ನಿರೀಕ್ಷಿಸಿಲ್ಲವಾದ್ದರಿಂದ ಅದು ಆಘಾತವನ್ನಷ್ಟೇ ಅಲ್ಲ, ದೈಹಿಕ ಮತ್ತು ಮಾನಸಿಕವಾದ ಹಲವಾರು ಏರು-ಪೇರುಗಳಿಗೂ ಕಾರಣವಾಗುತ್ತದೆ. ಮನೆಯಲ್ಲಿ ಹೇಳಬೇಕೋ ಬೇಡವೋ ಅನ್ನುವ ತೊಳಲಾಟ ಒಂದು ಕಡೆಯಾದರೆ, ಹೇಳಿದರೆ ಏನೇನೆಲ್ಲ ಎದುರಿಸಬೇಕಾದೀತು ಎಂಬ ಭಯ ಇನ್ನೊಂದು ಕಡೆ. ಅತ್ಯಾಚಾರಿಯ ಬೆದರಿಕೆ ಮತ್ತೊಂದು ಕಡೆ. ಒಂದು ವೇಳೆ, ಇವೆಲ್ಲವನ್ನೂ ಮೀರಿ ತನ್ನ ಮೇಲಾದ ಕ್ರೌರ್ಯವನ್ನು ದಿಟ್ಟತನದಿಂದ ಬಹಿರಂಗಪಡಿಸಿದರೂ ಸಮಸ್ಯೆ ಅಲ್ಲಿಗೇ ಮುಗಿಯುವುದಿಲ್ಲ. `ಅತ್ಯಾಚಾರಕ್ಕೊಳಗಾದವಳು' ಎಂಬ ಪಟ್ಟಿಯೊಂದು ಆಕೆಯ ಹಣೆಯ ಮೇಲೆ ಸದಾ ತೂಗುತ್ತಿರುತ್ತದೆ. ಮದುವೆಯ ಸಂದರ್ಭದಲ್ಲಿ ಆ ಪಟ್ಟಿ ಸದ್ದು ಮಾಡಬಹುದು. ನೆರೆಕರೆಯಲ್ಲಿ, ಸಮಾಜದಲ್ಲಿ ಆ ಪಟ್ಟಿಗೆ ಇನ್ನಿಲ್ಲದ ಮಹತ್ವ ಸಿಗಬಹುದು. ಅದರ ಜೊತೆಗೇ ಗರ್ಭಧರಿಸುವ ಸಾಧ್ಯತೆಯೂ ಇರುತ್ತದೆ. ಸಂತ್ರಸ್ತತೆಯು ಅತ್ಯಾಚಾರಿಗೋ, ಮನೆಯವರಿಗೋ ಅಥವಾ ಸಮಾಜಕ್ಕೋ ಹೆದರಿ ಎಲ್ಲವನ್ನೂ ಮುಚ್ಚಿಟ್ಟು ಕೂತರೆ ಅಥವಾ ಅತ್ಯಾಚಾರದ ಪರಿಣಾಮದ ಬಗ್ಗೆ ಅರಿವು ಇಲ್ಲದವಳಾಗಿದ್ದರೆ, ಭ್ರೂಣದ ರೂಪದಲ್ಲಿ ಅತ್ಯಾಚಾರ ಮತ್ತೆ ಕಾಡುತ್ತದೆ. ಕೊನೆಗೊಂದು ದಿನ ಅದು ಸಂತ್ರಸ್ತೆಗೆ ಸವಾಲೆಸೆಯುವ ಹಂತಕ್ಕೂ ತಲುಪುತ್ತದೆ. ಒಂದು ರೀತಿಯಲ್ಲಿ, ‘ಅತ್ಯಾಚಾರದ ಸಂತ್ರಸ್ತೆ’ ಎದುರಿಸುವ ಸವಾಲುಗಳ ಹಲವು ಮಜಲುಗಳಿವು. ಆಕೆ ಮೌನವಾದರೂ ಸಮಸ್ಯೆಯೇ, ಮಾತಾಡಿದರೂ ಸಮಸ್ಯೆಯೇ. ವಿಷಾದ ಏನೆಂದರೆ, ಇವತ್ತು ಅತ್ಯಾಚಾರ ಪ್ರಕರಣಗಳು ಸಹಜ `ಪ್ರಕರಣ'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಷ್ಟು ಜುಜುಬಿ ಅನ್ನಿಸಿಕೊಳ್ಳುತ್ತಿರುವುದು. ಸಂತ್ರಸ್ತೆಯ ಭಾವನಾತ್ಮಕ ಜಗತ್ತನ್ನು ಸ್ಪರ್ಶಿಸುವುದಕ್ಕೆ ನಮ್ಮ ಲೇಖನಿ, ಮೈಕುಗಳು ಆಸಕ್ತಿ ತೋರದೇ ಇರುವುದು. ಸುಪ್ರೀಮ್ ಕೋರ್ಟಿನ ತೀರ್ಪನ್ನು ನಮ್ಮ ಮಾಧ್ಯಮ ಜಗತ್ತು ಸ್ವೀಕರಿಸಿರುವ ರೀತಿಯೇ ಇದನ್ನು ಸಮರ್ಥಿಸುತ್ತದೆ.   
   ಅತ್ಯಾಚಾರವೆಂಬುದು ಕ್ರೌರ್ಯವಷ್ಟೇ ಅಲ್ಲ, ಅದು ಒಂದು ನಿಷ್ಪಾಪಿ ಭ್ರೂಣದ ಹುಟ್ಟು ಮತ್ತು ಅದರ ಸಾವನ್ನು ಅನಿವಾರ್ಯಗೊಳಿಸುವ ಪಾತಕ ಕೂಡ. ಒಂದು ವೇಳೆ ಅತ್ಯಾಚಾರಿಯು ಸಂತ್ರಸ್ತೆಯನ್ನು ಕೊಲೆ ಮಾಡದೆ ಬಿಟ್ಟು ಬಿಡಲೂಬಹುದು. ಆದರೆ, ಅತ್ಯಾಚಾರದಿಂದಾಗಿ ಜೀವ ತಳೆಯಬಹುದಾದ ಭ್ರೂಣ(ಮಗು)ವನ್ನು ಸಂತ್ರಸ್ತೆ ಕೊಲ್ಲಲೇಬೇಕಾಗುತ್ತದೆ. ಅದಕ್ಕೆ ಆಕೆ ಹೊಣೆಗಾರಳಲ್ಲ. ಆ ಹತ್ಯೆಯ ಸಂಪೂರ್ಣ ಹೊಣೆಯನ್ನು ಅತ್ಯಾಚಾರಿಯೇ ಹೊರಬೇಕು. ಸುಪ್ರೀಮ್ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಈ ಕುರಿತಂತೆ ಇನ್ನಷ್ಟು ಚರ್ಚೆಯಾಗಬೇಕಿದೆ. ಅತ್ಯಾಚಾರದ ಪರಿಣಾಮಗಳನ್ನು ಆಳ ವಿಶ್ಲೇಷಣೆಗೆ ಒಳಪಡಿಸಬೇಕಿದೆ. ಅತ್ಯಾಚಾರಿಗೆ ಮರಣದಂಡನೆಯೇ ಯಾಕೆ ಸೂಕ್ತ ಎಂಬುದಕ್ಕೆ ಬಲವಾದ ಉತ್ತರವನ್ನು ಪಡೆಯುವುದಕ್ಕಾದರೂ ಇಂಥದ್ದೊಂದು ಮರು ಅವಲೋಕನ ಅನಿವಾರ್ಯ.

Thursday, August 13, 2015

10 ನಿಮಿಷದ ಸ್ಪರ್ಧೆಗಾಗಿ ಎರಡು ವರ್ಷ ತರಬೇತಿ ನಿರತರಾಗುವವರ ಮಧ್ಯೆ..

ಅಲ್‍ಝೈನ್ ತಾರಿಕ್
ಟಾಮ್ ಡಾಲಿ
    ಕಳೆದ ಜುಲೈ 18ರಂದು ಬ್ರಿಟನ್ನಿನ ಪ್ರಸಿದ್ಧ ಪತ್ರಿಕೆ ದಿ ಗಾರ್ಡಿಯನ್‍ನಲ್ಲಿ ಪ್ರಕಟವಾದ ಬರಹವೊಂದು ಓದುಗರ ನಡುವೆ ತೀವ್ರ ಚರ್ಚೆಗೆ ಕಾರಣವಾಯಿತು. ಪರ-ವಿರುದ್ಧ ಅಭಿಪ್ರಾಯಗಳು ಮೂಡಿಬಂದುವು. ಆ ಬರಹಕ್ಕೆ ನೀಡಿದ ಶೀರ್ಷಿಕೆಯನ್ನು ಒಂದು ಗುಂಪು ಬೆಂಬಲಿಸಿದರೆ ಇನ್ನೊಂದು ಗುಂಪು ಅದನ್ನು ವಿರೋಧಿಸಿತು. ಶೀರ್ಷಿಕೆಯು ಓದುಗರನ್ನು ಕೇಂದ್ರೀಕರಿಸಿರಬೇಕೋ ಅಥವಾ ಬರಹವನ್ನು ಕೇಂದ್ರೀಕರಿಸಿರಬೇಕೋ ಎಂಬ ಪ್ರಶ್ನೆಗಳೆದ್ದುವು. ಅಷ್ಟಕ್ಕೂ, Tom Daley: I always knew I was attracted to guys (ನಾನು ಹುಡುಗರಿಗೆ ಆಕರ್ಷಣೀಯವಾಗಿರುವೆನೆಂದು ನನಗೆ ಮೊದಲೇ ಗೊತ್ತಿತ್ತು - ಟಾಮ್ ಡಾಲಿ) ಎಂಬ ಶೀರ್ಷಿಕೆಯಲ್ಲಿ ಬ್ರಿಟನ್ನಿನ ಜನಪ್ರಿಯ ಈಜುಪಟು ಟಾಮ್ ಡಾಲಿಯ ಕುರಿತಂತೆ ಪ್ರಕಟವಾದ ಬರಹವೇ ಈ ಚರ್ಚೆಯ ಕೇಂದ್ರ ಬಿಂದು. ಸುಮಾರು 4 ಸಾವಿರ ಪದಗಳಷ್ಟು ದೀರ್ಘವಾದ ಈ ಬರಹದಲ್ಲಿ ಟಾಮ್ ಡಾಲಿ ಮನಬಿಚ್ಚಿ ಮಾತಾಡಿದ್ದರು. ಗಾರ್ಡಿಯನ್ ಪತ್ರಿಕೆಯು ಅವೆಲ್ಲವನ್ನೂ ಓದುಗರ ಮುಂದೆ ಸೊಗಸಾಗಿ ಮಂಡಿಸಿತ್ತು. ಬೆನ್ ಕ್ವಿಂಟನ್‍ರು ಪೋಟೋಗಳನ್ನು ಕ್ಲಿಕ್ಕಿಸಿದ್ದರು. ಗಾರ್ಡಿಯನ್ ಪತ್ರಿಕೆಯ ಸೈಮನ್ ಹಟ್ಟೆನ್ ಸ್ಟೋನ್‍ರು ಟಾಮ್ ಡಾಲಿಯ ಜೊತೆಗೆ ನಡೆಸಿದ ಈ ಮಾತು ಕತೆಯು ಎಷ್ಟು ಸೊಗಸಾಗಿದೆಯೆಂದರೆ, ಅದು ಒಂದೇ ಬಾರಿಗೆ ಓದಿಸಿ ಬಿಡುತ್ತದೆ. ನಮಗೆ ಗೊತ್ತಿಲ್ಲದ ಅಥವಾ ಗೊತ್ತು ಮಾಡಿಕೊಳ್ಳಲು ಆಸಕ್ತಿ ತೋರದ ಜಗತ್ತೊಂದನ್ನು ಅದು ಪರಿಚಯಿಸುತ್ತದೆ. ಅಂದಹಾಗೆ,
      2013ರಲ್ಲಿ ಯೂಟ್ಯೂಬ್‍ನಲ್ಲಿ ಕಾಣಿಸಿಕೊಂಡ ಟಾಮ್ ಡಾಲಿಯ ವೀಡಿಯೋವು ಅಂದು ಬ್ರಿಟನ್‍ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಅದಕ್ಕೆ ಕಾರಣವೂ ಇದೆ.
      ಟಾಮ್ ಡಾಲಿ ಮೊಟ್ಟಮೊದಲು ಜಗತ್ತಿನ ಗಮನಸೆಳೆದದ್ದು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ. ಆಗ ಟಾಮ್ ಡಾಲಿ 14ರ ಹುಡುಗ. ಬೀಜಿಂಗ್‍ನ ಈಜುಕೊಳವು ಆತನಿಂದಾಗಿ ಅಂದು ಜನಪ್ರಿಯವಾಗಿತ್ತು. ಭಾರೀ ಸಂಖ್ಯೆಯಲ್ಲಿ ವೀಕ್ಷಕರು ಈ ಮರಿ ವಿೂನನ್ನು ನೋಡುವುದಕ್ಕೆ ಕೊಳದ ಸುತ್ತ ಸೇರಿದ್ದರು. ಅದಕ್ಕೆ ತಕ್ಕಂತೆ ಆತ ಪ್ರದರ್ಶನವನ್ನೂ ನೀಡಿದ್ದ. ಡೈವಿಂಗ್ (ತಲೆ ಮೊದ ಲಾಗುವಂತೆ ಮೇಲಿನಿಂದ ಕೆಳಕ್ಕೆ ಧುಮುಕುವುದು) ವಿಭಾಗದಲ್ಲಿ ಆತನ ತಂಡ ಫೈನಲ್ ಹಂತಕ್ಕೆ ಪ್ರವೇಶಿಸಿತ್ತು. ಹಾಗೆ ಫೈನಲ್ ಪ್ರವೇಶಿಸಿದ ಬ್ರಿಟನ್ನಿನ ಅತ್ಯಂತ ಕಿರಿಯ ಸ್ಪರ್ಧಾಳು ಎಂಬ ಗೌರವಕ್ಕೆ ಆತ ಅಂದು ಪಾತ್ರನಾಗಿದ್ದ. ಫೈನಲ್‍ನಲ್ಲಿ ಈ ತಂಡ ಪದಕ ಪಡೆಯದಿದ್ದರೂ ಮತ್ತು ಪದಕ ಕೈ ತಪ್ಪುವುದಕ್ಕೆ ಟಾಮ್ ಡಾಲಿಯ ಕಳಪೆ ಪ್ರದರ್ಶನವೇ ಕಾರಣ ಎಂದು ಸಹ ಈಜುಗಾರ ಬ್ಲೇಕ್ ಆಲ್‍ಡ್ರಿಜ್ ಆರೋಪಿಸಿದರೂ ಜಗತ್ತು ಕಣ್ಣು ನೆಟ್ಟದ್ದು ಈ ಹುಡುಗನ ಮೇಲೆಯೇ. ಮಾಧ್ಯಮಗಳೂ ಈ ಎಳೆ ಹುಡುಗನ ಸುತ್ತ ನೆರೆದವು. ಆತನನ್ನು ಬ್ರಿಟನ್ನಿನ ಭವಿಷ್ಯದ ವಿೂನು ಎಂದು ಕರೆದುವು. ಹಾಗಂತ, 7 ವರ್ಷದ ಪೋರನಿರುವಾಗಲೇ ನೀರಿಗೆ ಡೈವ್ ಮಾಡುತ್ತಿದ್ದ ಮತ್ತು 8 ವರ್ಷ ಪ್ರಾಯದಲ್ಲೇ ಈಜು ಮತ್ತು ಡೈವಿಂಗ್ ತರಬೇತಿಯನ್ನು ಪಡೆಯಲು ಪ್ರಾರಂಭಿಸಿದ್ದ ಟಾಮ್ ಡಾಲಿಯಲ್ಲಿ ಅಸಾಮಾನ್ಯ ಪ್ರತಿಭೆಯಿತ್ತು. 9 ವರ್ಷದವನಾಗಿದ್ದಾಗ ಜೂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಯುರೋಪಿಯನ್ ಚಾಂಪಿಯನ್‍ಶಿಪ್ ಅನ್ನು ಗೆಲ್ಲುವಾಗ ಆತನಿಗೆ ಬರೇ 13 ವರ್ಷ. ಚಿನ್ನದ ಪದಕ ಪಡೆದ ಅತೀ ಕಿರಿಯ ಈಜುಪಟು ಎಂಬ ಗೌರವಕ್ಕೂ ಆತ ಪಾತ್ರನಾಗಿದ್ದ. 15ರ ಹರೆಯದಲ್ಲಿ ಆತ ಬ್ರಿಟನ್ನಿನ ಅತೀ ಕಿರಿಯ ವಿಶ್ವ ಚಾಂಪಿಯನ್ ಆಗಿ ಗುರುತಿಸಿಕೊಂಡ. ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ ಪಡೆಯುವಾಗ ಆತನ ಪ್ರಾಯ ಬರೇ 16 ವರ್ಷ. BBCಯು ಪ್ರತಿ ವರ್ಷ ನೀಡುವ ‘ಯುವ ಕ್ರೀಡಾಳು' ಪ್ರಶಸ್ತಿಯನ್ನು 3 ಬಾರಿ ಪಡಕೊಂಡವನೂ ಈತನೇ. ಇದರ ಬಳಿಕ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಆತ ಕಂಚಿನ ಪದಕ ಪಡೆದ. ಆಗ ಆತನ ವಯಸ್ಸು 18. ಆದರೆ ಈ ಪದಕಗಳ ಹಾದಿ ಆತನ ಪಾಲಿಗೆ ತೀರಾ ಸಲೀಸಾಗಿರಲಿಲ್ಲ. ಎಲೆಕ್ಟ್ರಿಶಿಯನ್ ಆಗಿದ್ದ ಅಪ್ಪ ರಾಬ್‍ರು ಮಗನ ಪ್ರತಿಭೆಯನ್ನು ಕಂಡು ಕೆಲಸವನ್ನು ತ್ಯಜಿಸಿ ಮಗನಿಗೆ ಜೊತೆ ನೀಡಿದ್ದರು. ಆದರೆ ಬ್ರೈನ್ ಕ್ಯಾನ್ಸರ್‍ಗೆ ತುತ್ತಾಗಿ 2011ರಲ್ಲಿ ಅವರು ಸಾವಿಗೀಡಾದಾಗ ಟಾಮ್ ಡಾಲಿ 12ರ ಹುಡುಗ. ಒಂದು ಕಡೆ ಜೊತೆಗಿಲ್ಲದ ಅಪ್ಪ, ಇನ್ನೊಂದು ಕಡೆ ತರಬೇತಿ ಮತ್ತು ಪಂದ್ಯಾಟದ ಹೆಸರಲ್ಲಿ ತಿಂಗಳುಗಟ್ಟಲೆ ಮನೆಯಿಂದ ಹೊರಗಿರಬೇಕಾದ ಅನಿವಾರ್ಯತೆ- ಇವುಗಳಿಂದಾಗಿ ಹುಡುಗ ಟಾಮ್ ಡಾಲಿ ಕುಸಿದು ಹೋಗಿದ್ದ. ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತರಬೇತುದಾರ ಆ್ಯಂಡಿ ಬ್ಯಾಂಕ್ಸ್ ಗೆ ಬೆದರಿಕೆ ಹಾಕುತ್ತಿದ್ದ. ಹೀಗೆ ಬೆಳೆದ ಟಾಮ್ ಡಾಲಿ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದ ಬಳಿಕ ಈಜುಕೊಳದಿಂದ ನಾಪತ್ತೆಯಾದ. ಅಪ್ಪಟ ಪ್ರತಿಭೆಯೊಂದು ದಿಢೀರ್ ಜನಪ್ರಿಯತೆ ಮತ್ತು ಹರೆಯದ ಆಕರ್ಷಣೆಯಿಂದಾಗಿ ಕಳೆದು ಹೋಗುತ್ತಿರುವ ಬಗ್ಗೆ ಅಲ್ಲಲ್ಲಿ ವಿಷಾದ ವ್ಯಕ್ತವಾಗುತ್ತಿತ್ತು. ಈಜುಕೊಳಕ್ಕಿಂತ ಟಿ.ವಿ. ಸ್ಟುಡಿಯೋಗಳು ಮತ್ತು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದನ್ನೇ ಹೆಚ್ಚು ಇಷ್ಟಪಡುತ್ತಿದ್ದ ಹುಡುಗನ ಹುಡುಗಾಟಿಕೆಗೆ ವ್ಯಾಪಕ ಬೇಸರ ವ್ಯಕ್ತವಾಗಿತ್ತು. ಆ ಬಳಿಕ ಕೆಲವು ಸಮಯ ಮಾಧ್ಯಮ ಗಮನದಿಂದ ಹೊರಬಿದ್ದ ಆತ 2013ರಲ್ಲಿ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡ. ತಾನು ಪ್ರೇಮಪಾಶದಲ್ಲಿ ಬಿದ್ದಿದ್ದು; ಥಾಯಿಲೆಂಡ್, ಜಪಾನ್, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾ, ಸ್ಪೈನ್, ಫ್ರಾನ್ಸ್, ಸ್ವಿಝರ್ಲ್ಯಾಂಡ್, ಮೊರಾಕ್ಕೊ, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಹೈಟಿ, ಜಮೈಕಾ, ಫ್ಲೋರಿಡಾ, ಮೆಕ್ಸಿಕೋ.. ಸಹಿತ ವಿವಿಧ ರಾಷ್ಟ್ರಗಳಿಗೆ ವಿಶ್ವ ಪರ್ಯಟನೆ ಮಾಡಿದ್ದು.. ಎಲ್ಲವನ್ನೂ ಹೇಳಿಕೊಂಡ. ಮಾಧ್ಯಮಗಳು ಮತ್ತೆ ಆತನ ಬಗ್ಗೆ ಸುದ್ದಿ ಬರೆಯತೊಡಗಿದುವು.    ಇದೀಗ ಆತ ಮತ್ತೆ ಈಜು ಕೊಳದತ್ತ ಮರಳಿದ್ದಾನೆ. ತಾನು ಹಿಂದಿಗಿಂತ ಪ್ರೌಢನಾಗಿದ್ದೇನೆ ಅನ್ನುತ್ತಿದ್ದಾನೆ. 2016ರ ರಿಯೋ ಒಲಿಂಪಿಕ್ಸ್ ಒಂದೇ ನನ್ನ ಮುಂದಿರುವ ಏಕೈಕ ಗುರಿ ಎಂದೂ ಹೇಳುತ್ತಿದ್ದಾನೆ. ಹಾಗಂತ, ಈ ಗುರಿಯನ್ನು ತಲುಪುವುದಕ್ಕಾಗಿ ಆತ ಪಡುತ್ತಿರುವ ಪರಿಶ್ರಮ ಅಚ್ಚರಿಯನ್ನು ಮೂಡಿಸುತ್ತದೆ.
     ನಿಜವಾಗಿ, ನೀರಿಗೆ ಡೈವ್ ಮಾಡುವುದೆಂದರೆ ಅದೊಂದು ಅಪಾಯಕಾರಿ ಸಾಹಸ. ಗಂಟೆಗೆ ಸುಮಾರು 35 ಮೈಲು ವೇಗದಲ್ಲಿ ಆತ ಈ ಹಿಂದೆ ನೀರಿಗೆ ಧುಮುಕುತ್ತಿದ್ದ. ಪ್ರತಿ ಬಾರಿ ಹಾಗೆ ನೀರಿಗೆ ಧುಮುಕುವಾಗಲೂ ಕಾರು ಢಿಕ್ಕಿ ಹೊಡೆದಂಥ ಅನುಭವವಾಗುತ್ತಿತ್ತಂತೆ. ಡೈವ್ ನೂರು ಶೇಕಡಾ ಯಶಸ್ವಿ ಮತ್ತು ಪರಿಪೂರ್ಣವೇ ಆಗಿರುತ್ತಿದ್ದರೂ ಪ್ರತಿ ಬಾರಿಯೂ ನೋವಾಗುತ್ತಿತ್ತಂತೆ. ಅಭ್ಯಾಸದ ನಿಮಿತ್ತ ಪ್ರತಿ ಬಾರಿ ಡೈವ್ ಮಾಡುವ ಬೋರ್ಡ್‍ಗೆ ಹತ್ತುವಾಗಲೂ ಭಯವಾಗುತ್ತಿತ್ತಂತೆ. ತಾನು ಕೆಲ ಸಮಯ ಈಜು ಕೊಳದಿಂದ ದೂರವಾಗಲು ಈ ಭಯವೂ ಕಾರಣವಾಗಿರಬಹುದು ಎಂಬುದು ಆತನ ನಂಬಿಕೆ. ಇವತ್ತು ಆತ ಅತ್ಯಂತ ಪ್ರೌಢ. ಯಾವ ಭಯವೂ ಇಲ್ಲ. ಬಿಡುವು ರಹಿತ ತರಬೇತಿಯಲ್ಲಿ ಟಾಮ್ ಡಾಲಿ ಮಗ್ನನಾಗಿದ್ದಾನೆ. ಒಂದು ವಾರದಲ್ಲಿ 11 ಅವಧಿಯ (ಸೆಶನ್ಸ್) ಅಭ್ಯಾಸ ಕ್ರಮ. ಪ್ರತಿ ಅವಧಿಯೂ 3ರಿಂದ 4 ಗಂಟೆಯಷ್ಟು ದೀರ್ಘವಿರುತ್ತದೆ. ಮತ್ತೆ ಕಠಿಣವಾದ ಪಥ್ಯಾಹಾರ (Diet). ಮೊಟ್ಟೆಯ ಬಿಳಿ ಭಾಗ, ಪಾಲಕ್ ಸೊಪ್ಪು ಮತ್ತು ಪಾತ್ರೆ ತುಂಬ ಗಂಜಿ ನೀರು - ಇದು ಬೆಳಗ್ಗಿನ ಆಹಾರ. ಕೋಳಿ ಮತ್ತು ದ್ವಿದಳ ಧಾನ್ಯಗಳು ಮಧ್ಯಾಹ್ನದ ಊಟಕ್ಕೆ. ಸಲ್‍ಮೋನ್ ಎಂಬ ವಿೂನು ಅಥವಾ ಚಿಕನ್ ಮತ್ತು ತರಕಾರಿಗಳನ್ನು ರಾತ್ರಿಯ ಊಟವಾಗಿ ಬಡಿಸಲಾಗುತ್ತದೆ. ಪ್ರತಿದಿನವೂ ಇದರದ್ದೇ ಕಾರುಬಾರು. ಅದೇ ಆಹಾರ. ಅದೇ ರುಚಿ. ಅದೇ ಅಭ್ಯಾಸ, ಅದೇ 10 ಗಂಟೆಗಳ ನಿದ್ದೆ. ಇದರ ನಡುವೆ ಭಾರ ಹೆಚ್ಚಾಗದಂತೆ, ಬೊಜ್ಜು ಬಾರದಂತೆ ಜಾಗರೂಕತೆ ಪಾಲಿಸಬೇಕು. ಮದುವೆ, ಮುಂಜಿ, ಸ್ನೇಹ ಕೂಟ ಮುಂತಾದವುಗಳನ್ನೆಲ್ಲ ತ್ಯಾಗ ಮಾಡಿಕೊಂಡು ಬರೇ ಈಜು, ಈಜು, ಈಜು ಎಂದು ಈಜುಕೊಳದತ್ತಲೇ ಸುಳಿದಾಡುತ್ತಿರಬೇಕಾಗುತ್ತದೆ. ಒಂದು ಬಗೆಯ ಜೈಲಿನ ಅನುಭವದೊಂದಿಗೆ ಅಭ್ಯಾಸನಿರತವಾಗಬೇಕಾಗುತ್ತದೆ. ಹಾಗಂತ, ಡೈವಿಂಗ್ ಎಂಬುದು ತೀರಾ ಅಪಾಯರಹಿತವೇನಲ್ಲ. ಟಾಮ್ ಡಾಲಿಯ ತಲೆ ಮುಂಭಾಗದಲ್ಲಿ ಇರುವ ಗಾಯಗಳೇ ಅದು ಎಷ್ಟು ಅಪಾಯಕಾರಿ ಎಂಬುದನ್ನು ಹೇಳುತ್ತದೆ. ಅಷ್ಟಕ್ಕೂ, ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್‍ಗಳೇ ಹೆಚ್ಚಾಗಿ ಸದ್ದು ಮಾಡುವ ಇಂದಿನ ದಿನಗಳಲ್ಲಿ ಕ್ರೀಡಾಕೂಟಗಳು ಮತ್ತು ಅದರ ಅಭ್ಯಾಸ ಕ್ರಮಗಳು ಚರ್ಚೆಗೊಳಗಾಗುವುದು ತೀರಾ ಕಡಿಮೆ. ಒಲಿಂಪಿಕ್ಸ್ ನಡೆಯುವುದೇ 4 ವರ್ಷಗಳಿಗೊಮ್ಮೆ. ಆಗ ಕ್ರೀಡಾಪಟುಗಳ ವಿವಿಧ ಕಸರತ್ತುಗಳನ್ನು ನೋಡಿ ನಾವು ಬೆರಗಾಗುತ್ತೇವೆಯೇ ಹೊರತು ಆ ಕಸರತ್ತುಗಳ ಹಿಂದಿರುವ ದೀರ್ಘ ಶ್ರಮವನ್ನು ಅವಲೋಕಿಸುವುದಕ್ಕೆ ಅವಕಾಶಗಳು ಸಿಗುವುದಿಲ್ಲ. ಟೆನ್ನಿಸೋ ಕ್ರಿಕೆಟ್ಟೋ ನಮ್ಮ ಮುಂದೆ ಸದಾ ಇರುತ್ತದೆ. ಟಿ.ವಿ. ಚಾನೆಲ್ ತಿರುಗಿಸಿದರೆ ಒಂದಲ್ಲ ಒಂದು ಚಾನೆಲ್‍ನಲ್ಲಿ ಅವು ಇದ್ದೇ ಇರುತ್ತದೆ. ಆದರೆ ಲಾಂಗ್ ಜಂಪ್, ಓಟ, ಈಜು, ಮ್ಯಾರಥಾನ್ ಸಹಿತ ಒಂದು ದೊಡ್ಡ ಕ್ರೀಡಾ ಜಗತ್ತು ಬಹುತೇಕ ನಮ್ಮಿಂದ ಸದಾ ಮರೆಯಾಗಿರುತ್ತದೆ. ಅವನ್ನು ಚಾನೆಲ್‍ಗಳು ತೋರಿಸಬೇಕಾದರೆ ಒಲಿಂಪಿಕ್ಸೋ, ಕಾಮನ್‍ವೆಲ್ತೋ ಯುರೋಪಿಯನ್ ಪಂದ್ಯಾವಳಿಗಳೋ ಜರಗಬೇಕು. ಅಲ್ಲದೇ ಆ ಪಂದ್ಯಾವಳಿ ಮುಗಿದ ತಕ್ಷಣ ಟಿ.ವಿ.ಗಳಿಂದ ಅವು ನಾಪತ್ತೆಯಾಗಿ ಮತ್ತೆ ಆ ಜಾಗದಲ್ಲಿ ಅದೇ ಕ್ರಿಕೆಟ್ಟು.. ತುಂಬಿಕೊಳ್ಳುತ್ತದೆ. ಅಂದಹಾಗೆ, ಕ್ರೀಡಾಕೂಟಗಳು ನಾಲ್ಕು ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಜರುಗುವುದಾದರೂ ಸ್ಪರ್ಧಾಳುಗಳು ನೇರವಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವಲ್ಲ. ಅವರ ಅಭ್ಯಾಸ ಪ್ರತಿದಿನವೂ ನಡೆಯುತ್ತಲೇ ಇರುತ್ತದೆ. ಬೆಳಿಗ್ಗೆ, ಸಂಜೆ.. ಎಂದು ಪ್ರತಿದಿನ ಬೆವರು ಹರಿಸುತ್ತಲೇ ಇರುತ್ತಾರೆ. ಅಂಥದ್ದೊಂದು ಕಠಿಣ ಅಭ್ಯಾಸದ ಬಳಿಕ ಒಲಿಂಪಿಕ್ಸ್ ನಲ್ಲಿ ಐದೋ ಹತ್ತೋ ನಿಮಿಷ ಈಜಿ ಬಳಿಕ ಮರೆಯಾಗುತ್ತಾರೆ. ಕೇವಲ 10 ನಿಮಿಷದ ಸ್ಪರ್ಧೆಗಾಗಿ ಎರಡು ವರ್ಷ ತರಬೇತಿ ನಿರತರಾಗುವ ಕ್ರೀಡಾಪಟುವನ್ನೊಮ್ಮೆ ಕಲ್ಪಿಸಿಕೊಳ್ಳಿ. ಅಲ್ಲಿ ಇರಬೇಕಾದ ಮಾನಸಿಕ ದೃಢತೆ, ಸಹನೆ, ಉತ್ಸಾಹ ಯಾವ ರೀತಿಯದ್ದಾಗಿರಬಹುದು? ಪದಕ ಕೈತಪ್ಪುವ ಕ್ರೀಡಾಪಟುವಿನ ಪರಿಸ್ಥಿತಿ ಹೇಗಿರಬಹುದು? ಆತ ಹೇಗೆ ತನ್ನನ್ನು ನಿಯಂತ್ರಿಸಿಕೊಳ್ಳಬಹುದು? ಅಷ್ಟಕ್ಕೂ, ಈ ಬಗೆಯ ಚಿಂತನೆಗೆ ಹಚ್ಚಬಹುದಾದ ಬರಹವೊಂದಕ್ಕೆ Tom Daley: I always knew I was attracted to guys ಎಂಬ ಶೀರ್ಷಿಕೆಯನ್ನು ಕೊಟ್ಟರೆ ಓದುಗರು ಪ್ರಶ್ನಿಸದಿರುತ್ತಾರೆಯೇ? ಇಡೀ ಬರಹದ ಎಲ್ಲೋ ಮಧ್ಯದಲ್ಲಿ ಒಂದು ಕಡೆ, ಮೂರ್ನಾಲ್ಕು ವಾಕ್ಯಗಳಲ್ಲಿ ಬಂದು ಮುಗಿದು ಹೋಗುವ ಅವರ ವೈಯಕ್ತಿಕ ವಿಷಯವನ್ನೇ ಶೀರ್ಷಿಕೆಯಾಗಿ ತಂದರೆ ಓದುಗರು ಕೆರಳದಿರುತ್ತಾರೆಯೇ? ಬರಹವೊಂದಕ್ಕೆ ಕೊಡುವ ಶೀರ್ಷಿಕೆಗೆ ಏನನ್ನು ಮಾನದಂಡವಾಗಿಸುತ್ತೀರಿ ಎಂದು ಪ್ರಶ್ನಿಸದಿರುತ್ತಾರೆಯೇ?
      ರಷ್ಯಾದಲ್ಲಿ ಸದ್ಯ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್ ಶಿಪ್‍ನಲ್ಲಿ ಬಹರೈನ್‍ನ ಅಲ್‍ಝೈನ್ ತಾರಿಕ್ ಎಂಬ 10ರ ಬಾಲೆ ಈಜಿ ಜಾಗತಿಕ ಸುದ್ದಿಯಾಗಿರುವುದನ್ನು ಓದುತ್ತಿರುವಾಗ ಟಾಮ್ ಡಾಲಿ ಮತ್ತು ದಿ ಗಾರ್ಡಿಯನ್ ಪತ್ರಿಕೆಯ ಶೀರ್ಷಿಕೆ ನೆನಪಾದುವು.