Tuesday, April 23, 2024

ಹುಬ್ಬಳ್ಳಿ: ದ್ವೇಷದ ಬಾಯಿಗೆ ಸಕ್ಕರೆ ಹಾಕಿದ ಅಂಜುಮನೆ ಇಸ್ಲಾಮ್



ಏ ಕೆ ಕುಕ್ಕಿಲ 

1. ಮುಸ್ಲಿಮರು ಕೆಟ್ಟವರು
2. ಮುಸ್ಲಿಮರು ಹಂತಕರು

ಇAಥದ್ದೊಂದು  ಪ್ರಚಾರವನ್ನು ನಡೆಸುವ ಉದ್ದೇಶ ನಿಮಗಿದೆಯೆಂದಾದರೆ, 140 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಅವಕಾಶಗಳು ಬೇಕಾದಷ್ಟಿವೆ. ತನ್ನ ಸಂಗಾತಿ ಶ್ರದ್ಧಾಳನ್ನು ತುಂಡು ತುಂಡು ಮಾಡಿ ಫ್ರೀಜರ್‌ನಲ್ಲಿಟ್ಟ ದೆಹಲಿಯ ಅಫ್ತಾಬ್ ಅಮೀನ್ ಪೂನಾವಾಲನಿಂದ ಹಿಡಿದು ನೇಹಾ ಹಿರೇಮಠ್‌ಳನ್ನು ಇರಿದು ಹತ್ಯೆ ಮಾಡಿದ ಹುಬ್ಬಳ್ಳಿಯ ಫಯಾಜ್ ನವರೆಗೆ. ಹಾಗಂತ,

1. ಹಿಂದೂಗಳು ಕೆಟ್ಟವರು
2. ಹಿಂದೂಗಳು ಹಂತಕರು

ಎಂಬೊಂದು  ಪ್ರಚಾರವನ್ನು ನಡೆಸುವ ಉದ್ದೇಶ ನಿಮಗಿದ್ದರೂ ಅವಕ್ಕೂ ಸರಕುಗಳು ಬೇಕಾದಷ್ಟಿವೆ. ಉಡುಪಿಯ ನೇಜಾರಿನ ತಾಯಿ-ಮಗಳನ್ನು ಹತ್ಯೆ ಮಾಡಿದ ಪ್ರವೀಣ್ ಚೌಗಲೆಯಿಂದ ಹಿಡಿದು ಬೆಂಗಳೂರಿನ ಪ್ರದೀಪ್ ವರೆಗೆ. ತಾನು ಪ್ರೀತಿಸುತ್ತಿದ್ದ ರುಕ್ಸಾನ ಎಂಬ ಹೆಣ್ಮಗಳನ್ನೇ ಈತ 2024 ಮಾರ್ಚ್ 31ರಂದು ಕೊಂದು ಸುಟ್ಟು ಹಾಕಿದ್ದ. ಅಂದಹಾಗೆ,

ಮುಸ್ಲಿಮ್ ವ್ಯಕ್ತಿಯ ಅಪರಾಧವನ್ನು ಎತ್ತಿಕೊಂಡು ಇಸ್ಲಾಮನ್ನು ಹಂತಕ ಧರ್ಮ ಎಂದು ಬಿಂಬಿಸುವಾಗ, ಹಿಂದೂ ವ್ಯಕ್ತಿಯ ಅಪರಾಧವನ್ನು ಉಲ್ಲೇಖಿಸಿ ಹಿಂದೂ ಧರ್ಮವನ್ನು ಹಂತಕ ಧರ್ಮ ಎಂದು ಬಿಂಬಿಸುವುದು ಸಹಜ. ಆದರೆ, ಹೀಗೆ ಬಿಂಬಿಸುವ ಎರಡೂ ಗುಂಪಿಗೂ ವಾಸ್ತವ ಏನು ಅನ್ನುವುದು ಗೊತ್ತಿರುತ್ತದೆ. ವ್ಯಕ್ತಿಯ ತಪ್ಪಿಗೆ ಆ ವ್ಯಕ್ತಿಯ ಧರ್ಮವೋ ಸಮುದಾಯವೋ ಹೊಣೆಯಲ್ಲ ಎಂಬುದಕ್ಕೆ ವಿಶೇಷ ಸಂಶೋಧನೆಯ ಅಗತ್ಯವೇನೂ ಇಲ್ಲ. ಪ್ರಜಾತಂತ್ರ ಭಾರತದಲ್ಲಿ ಎಲ್ಲ ಧರ್ಮಗಳ ಅನುಯಾಯಿಗಳೂ ಸಂವಿಧಾನಕ್ಕೆ ಬದ್ಧವಾಗಿ ಬದುಕಬೇಕಾಗುತ್ತದೆ. ಅಲ್ಲದೇ, ಯಾವುದೇ ವ್ಯಕ್ತಿಗೆ ಶಿಕ್ಷೆ ನೀಡುವ ಸ್ವಾತಂತ್ರ‍್ಯವನ್ನು ಸಂವಿಧಾನ ಯಾವುದೇ ಸಮುದಾಯಕ್ಕೂ ಕೊಟ್ಟಿಲ್ಲ. ಯಾವುದೇ ಧರ್ಮಗುರುವಿಗೂ ಕೊಟ್ಟಿಲ್ಲ. ಆದ್ದರಿಂದ ನೇಹಾಳನ್ನು ಹತ್ಯೆಗೈದ ಆರೋಪಿ ಫಯಾಜ್  ನ ಹತ್ಯೆಗೆ ಯಾವುದಾದರೂ ಧರ್ಮಗುರು ಫತ್ವಾ ಹೊರಡಿಸಿದರೆ ಅವರು ಇಲ್ಲಿನ ಕಾನೂನಿನ ಪ್ರಕಾರ ಅಪರಾಧಿಯಾಗುತ್ತಾರೆ. ಧರ್ಮಗುರು ಬಿಡಿ, ಸ್ವತಃ ಫಯಾಜ್ ನ   ತಂದೆಯೇ ಮಗನಿಗೆ ಶಿಕ್ಷೆ ಕೊಡಲು ಹೊರಟರೆ ಅವರೂ ತಪ್ಪಿತಸ್ಥರಾಗುತ್ತಾರೆ. ಇದು ಫಯಾಜ್ ನ ಅಪರಾಧವನ್ನು ಇಸ್ಲಾಮ್‌ನ ಮೇಲೋ ಮುಸ್ಲಿಮರ ಮೇಲೋ ಹೊರಿಸುತ್ತಿರುವ ಗುಂಪಿಗೂ ಗೊತ್ತಿಲ್ಲದ್ದಲ್ಲ. ಮತ್ತೇಕೆ ಈ ಗುಂಪು ಹೀಗೆ ವರ್ತಿಸುತ್ತದೆಂದರೆ, ಅದರ ಹಿಂದೆ ರಾಜಕೀಯ ಕಾರಣಗಳಿವೆ. ಅಂದಹಾಗೆ,

ಒಂದು  ಗುಂಪಿನ ಆರೋಪಕ್ಕೆ ಇನ್ನೊಂದು ಗುಂಪು ಪ್ರತಿ ಆರೋಪವನ್ನು ಮಾಡುವುದು ಆರೋಪದ ತೀವ್ರತೆಯನ್ನು ಕಡಿಮೆಗೊಳಿಸುವುದಕ್ಕೆ ನೆರವಾಗಬಹುದೇ ಹೊರತು ಅಪರಾಧ ಕೃತ್ಯವನ್ನಲ್ಲ. ಅಪರಾಧ ಕೃತ್ಯಗಳನ್ನು ಧರ್ಮಾಧಾರಿತವಾಗಿ ವಿಭಜಿಸಿ ವಿಶ್ಲೇಷಿಸುವುದರಿಂದ ಲಾಭವಾಗುವುದಿದ್ದರೆ ಅದು ಅಪರಾಧಿಗಳಿಗೆ ಮಾತ್ರ. ಒಂದು ಉದಾಹರಣೆ,

ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಆಸಿಫಾ ಎಂಬ 8 ವರ್ಷದ ಬಾಲೆಯ ಶವ 2018, ಜನವರಿ 17ರಂದು ಪತ್ತೆಯಾಯಿತು. ಬುಡಕಟ್ಟು ಸಮುದಾಯದ ಈ ಬಾಲೆ 7 ದಿನಗಳ ವರೆಗೆ ಕಾಣೆಯಾಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರಂಭದಲ್ಲಿ ಅಪ್ರಾಪ್ತ ಯುವಕನನ್ನು ಬಂಧಿಸಿದರು. ಆತ ಹೇಳಿದ ಸತ್ಯ ಮಾತ್ರ ಆಘಾತಕಾರಿಯಾಗಿತ್ತು. ಪೊಲೀಸರು ಆತನ ಹೇಳಿಕೆಯ ಜಾಡು ಹಿಡಿದು ತನಿಖಿಸಿದಾಗ ಪೊಲೀಸರು ಆಘಾತದ ಮೇಲೆ ಆಘಾತವನ್ನು ಅನುಭವಿಸಿದರು. ಈ ಕ್ರೌರ್ಯದಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜೂರಿಯಾ ಮತ್ತು ಪರ್ವೇಶ್ ಕುಮಾರ್ ಅವರ ಪಾತ್ರ ಇತ್ತು. ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳಾದ ತಿಲಕ್ ರಾಜ್ ಮತ್ತು ಅರವಿಂದ್ ದತ್ತಾ ಶ್ರಮಿಸಿದ್ದರು. ಮಾತ್ರವಲ್ಲ, ಸಾಕ್ಷ್ಯ  ನಾಶಕ್ಕಾಗಿ ನೆರವಾಗಿದ್ದರು. ಈ ಕೃತ್ಯದ ಪ್ರಮುಖ ಆರೋಪಿ ಸಂಜಿರಾಮ್ ಮಂದಿರವೊಂದರ ಅರ್ಚಕನಾಗಿದ್ದ. ಈತನ ಮಗ ವಿಶಾಲ್ ಕೂಡಾ ಈ ಕ್ರೌರ್ಯದಲ್ಲಿ ಭಾಗಿಯಾಗಿದ್ದ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ಕಥುವಾದ ಕೆಳಕೋರ್ಟಿನಲ್ಲಿ ನಡೆಯಿತಾದರೂ ಆ ಬಳಿಕ ಸುಪ್ರೀಮ್ ಕೋರ್ಟು ಮಧ್ಯಪ್ರವೇಶಿಸಿ ಪ್ರಕರಣವನ್ನು ಚಂಡೀಗಢಕ್ಕೆ ವರ್ಗಾಯಿಸಿತು. ತ್ವರಿತಗತಿ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆಯಬೇಕೆಂದು ಸುಪ್ರೀಮ್ ಕೋರ್ಟು ಆದೇಶಿಸಿತು. ಅಲ್ಲದೇ, ವಿಚಾರಣಾ ಪ್ರಕ್ರಿಯೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಬೇಕೆಂದು ಕೂಡಾ ಕೋರ್ಟು ಆದೇಶಿಸಿತು. ಈ ನಡುವೆ,

ತಮ್ಮ ಪರವಾಗಿ ವಾದಿಸುತ್ತಿರುವ ದೀಪಿಕಾ ರಾಜವತ್‌ರನ್ನು ತಾವು ಕೈಬಿಟ್ಟಿರುವುದಾಗಿಯೂ ಮತ್ತು ಅವರು ಇನ್ನು ಮುಂದೆ ಆಸಿಫಾ ಪ್ರಕರಣದಲ್ಲಿ ತಮ್ಮನ್ನು ಪ್ರತಿನಿಧಿಸುತ್ತಿಲ್ಲವೆಂದೂ..’ ಆಸಿಫಾಳ ತಂದೆ ಚಂಢೀಗಢ ನ್ಯಾಯಾಲಯಕ್ಕೆ ತಿಳಿಸಿದರು. ‘ಈವರೆಗೆ ನಡೆದ 100ರಷ್ಟು ವಿಚಾರಣಾ ಪ್ರಕ್ರಿಯೆಯಲ್ಲಿ ಇವರು ಕೇವಲ 2 ಬಾರಿ ಮಾತ್ರ ಹಾಜರಾಗಿದ್ದಾರೆ..’ ಎಂದು ಆ ತಂದೆ ಕಾರಣವನ್ನೂ ನೀಡಿದರು. ಕೊನೆಗೆ, 2019 ಜೂನ್ 10ರಂದು ಪ್ರಕರಣದ 7 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿತು. ಮಂದಿರದ ಅರ್ಚಕ ಸಂಜಿರಾಮ್ ಮತ್ತು ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜೂರಿಯ ಮತ್ತು ಪರ್ವೇಶ್ ಕುಮಾರ್‌ರಿಗೆ 25 ವರ್ಷಗಳ ಜೀವಾವಧಿ ಶಿಕ್ಷೆ ಮತ್ತು ತಲಾ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿತು. ಹಾಗೆಯೇ, ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿದ ಅಪರಾಧಕ್ಕಾಗಿ ತಿಲಕ್ ರಾಜ್, ಆನಂದ್ ದತ್ತ ಮತ್ತು ಸುರೇಂದ್ ವರ್ಮಾರಿಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿತು. ಇದೇವೇಳೆ, ಸಂಜಿರಾಮ್‌ನ ಮಗ ವಿಶಾಲ್‌ನನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನ್ಯಾಯಾಲಯ ದೋಷಮುಕ್ತಗೊಳಿಸಿತು. ಸಂಜಿರಾಮ್‌ನ ಸಂಬಂಧಿಕರಾದ ಅಪ್ರಾಪ್ತ ಯುವಕನನ್ನು ಬಾಲಾಪರಾಧ ನ್ಯಾಯಾಲಯದಲ್ಲಿ ವಿಚಾರಣೆಗೆ ಒಪ್ಪಿಸಲಾಯಿತು. ನಿಜವಾಗಿ,

ಇಲ್ಲಿನ ಉದ್ದೇಶ, ಈ ಪ್ರಕರಣವನ್ನು ವಿವರಿಸುವುದಲ್ಲ. ಈ ಅತ್ಯಾಚಾರ ಮತ್ತು ಹತ್ಯೆ ಬಹಿರಂಗವಾಗಿ, ಇಬ್ಬರು ಪೊಲೀಸ್ ಅಧಿಕಾರಿಗಳಾದ ಖಜೂರಿಯಾ ಮತ್ತು ಪರ್ವೇಶ್ ಕುಮಾರ್ ಹಾಗೂ ಸಂಜಿರಾಮ್ ಮತ್ತು ಆತನ ಮಗ ಮತ್ತು ಮೊಮ್ಮಗನನ್ನು ಪೊಲೀಸರು ಬಂಧಿಸಿದ ದಿನಗಳೊಳಗೆ ಜಮ್ಮುವಿನಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಿತು ಎಂಬುದನ್ನು ವಿವರಿಸುವುದೇ ಇದರ ಉದ್ದೇಶ. ಈ ಬಂಧನಗಳು ನಡೆದ ಬೆನ್ನಿಗೇ ಹಿಂದೂ ಏಕ್ತಾ ಮಂಚ್ ಎಂಬ ಸಂಘಟನೆಯನ್ನು ರಚಿಸಲಾಯಿತಲ್ಲದೇ, ಬಂಧಿತರ ಪರ ಬೃಹತ್ ರ‍್ಯಾಲಿ ನಡೆಸಲಾಯಿತು. ಈ ರ‍್ಯಾಲಿಯಲ್ಲಿ ಆಗಿನ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರಕಾರದ ಅರಣ್ಯ ಸಚಿವರಾಗಿದ್ದ ಚೌದರಿ ಲಾಲ್ ಸಿಂಗ್ ಮತ್ತು ಕೈಗಾರಿಕಾ ಸಚಿವ ಚಂದರ್ ಪ್ರಕಾಶ್ ಗಂಗಾ ಭಾಗವಹಿಸಿದರು ಮತ್ತು ಪ್ರಚೋದನಕಾರಿಯಾಗಿ ಭಾಷಣ ಮಾಡಿದರು. ಪೊಲೀಸರನ್ನು ಮತ್ತು ಅಪ್ರಾಪ್ತನನ್ನು ಬಂಧಿಸಿರುವುದಕ್ಕೆ ಕಿಡಿ ಕಾರಿದರು. ಈ ಮೂಲಕ ಆರೋಪಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಭಂಡ ಧೈರ್ಯ, ಹುಚ್ಚು ಆವೇಶವನ್ನು ಮೂಡಿಸಿದರು. ಅಂದಹಾಗೆ,

ಯಾವುದೇ ಕ್ರಿಮಿನಲ್ ಪ್ರಕರಣ ನಡೆದಾಗ ನಾಗರಿಕ ಸಮಾಜ ಮಾಡಬೇಕಾದುದೇನೆಂದರೆ ಕ್ರಿಮಿನಲ್‌ಗಳನ್ನು ಒಂಟಿಯಾಗಿಸುವುದು. ನಿಮಗೆ ನಮ್ಮ ಬೆಂಬಲ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರುವುದು. ಹುಬ್ಬಳ್ಳಿ ಪ್ರಕರಣ ಇದಕ್ಕೊಂದು ಉದಾಹರಣೆ.

ನೇಹಾ ಹಿರೇಮಠಳನ್ನು ಹತ್ಯೆಗೈದುದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ಭಾಗಿಯಾದರು. ಶುಕ್ರವಾರದ ಜುಮಾ ನಮಾಝï‌ನ ಬಳಿಕ ಅಂಜುಮನ್ ಎ ಇಸ್ಲಾಮೀ ಸಂಘಟನೆಯ ಕುಂದಗೋಲ, ಕಲಗಟಗಿ, ಹುಬ್ಬಳ್ಳಿ, ಅಲ್‌ನವಾರ ಮತ್ತು ಧಾರವಾಡ ಘಟಕದ ಅಧ್ಯಕ್ಷರುಗಳು ಹುಬ್ಬಳ್ಳಿ ಪೊಲೀಸ್ ಕಮೀಷನರ್‌ರನ್ನು ಭೇಟಿಯಾಗಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಹಾಗೆಯೇ ಮುಸ್ಲಿಮ್ ಸಮುದಾಯದ ಪರವಾಗಿ ಸಂಘಟನೆಯ ನಾಯಕರು ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಇದರ ಜೊತೆಗೆ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮತ್ತು ಪಕ್ಷಪಾತ ರಹಿತ ತನಿಖೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಘಟನೆಯ ನಾಯಕರು ಪತ್ರ ಬರೆದು ಒತ್ತಾಯಿಸಿದರು. ಇದರಾಚೆಗೆ ಇಡೀ ಕರ್ನಾಟಕಕ್ಕೆ ಸಂಬಂಧಿಸಿ ನೋಡುವುದಾದರೂ ಎಲ್ಲೂ ಮುಸ್ಲಿಮ್ ಸಮುದಾಯದ ಯಾರೂ ಈ ಕ್ರೌರ್ಯದ ಪರ ವಹಿಸಿ ಮಾತನಾಡಲೇ ಇಲ್ಲ. ಕಥುವಾದ ಹಿಂದೂ ಏಕ್ತಾ ಮಂಚ್ ರಚಿಸಿದಂತೆ ಮುಸ್ಲಿಮ್ ಸಮುದಾಯ ಮುಸ್ಲಿಮ್ ಏಕ್ತಾ ಮಂಚ್ ರಚಿಸಲಿಲ್ಲ. ಫಯಾಜ್  ನ ಪರ ರ‍್ಯಾಲಿ ನಡೆಸಲಿಲ್ಲ. ಎಲ್ಲಿಯ ವರೆಗೆಂದರೆ, ಆತನ ತಂದೆಯೇ ಆತನ ಪರ ನಿಲ್ಲಲಿಲ್ಲ. ಅಂದಹಾಗೆ,

140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಅಪರಾಧಗಳನ್ನು ಶೂನ್ಯ ಸಂಖ್ಯೆಗೆ ಇಳಿಸಲು ಸಾಧ್ಯವೇ ಇಲ್ಲ. ಆದರೆ ಅಪರಾಧಿಗಳ ಪರ ವಹಿಸದೇ ಇರುವುದು, ತ್ವರಿತಗತಿಯಲ್ಲಿ ವಿಚಾರಣೆ ನಡೆಸುವುದು ಮತ್ತು ಹಿಂದೂ-ಮುಸ್ಲಿಮ್-ಸಿಕ್ಖ್ ಎಂಬ ಭೇದ ಇಲ್ಲದೇ ಪ್ರತಿ ಮನೆಗಳಲ್ಲೂ ಮಕ್ಕಳಿಗೆ ನೈತಿಕ ಹಾಗೂ ಜೀವನ ಪಾಠಗಳನ್ನು ಹೇಳಿಕೊಡುವುದಕ್ಕೆ ಸಾಧ್ಯವಿದೆ. ಇವು ಅಪರಾಧ ಪ್ರಕರಣಗಳನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಬಹುದು. ಅಷ್ಟಕ್ಕೂ 

ನರ್ಸರಿಯಿಂದ ಡಿಗ್ರಿಯವರೆಗೆ ಮತ್ತು ಬಸ್ಸು, ರೈಲು, ವಿಮಾನ, ಸರಕಾರಿ ಕಚೇರಿಗಳಿಂದ ಹಿಡಿದು ಮೆಡಿಕಲ್, ಇಂಜಿನಿಯರಿಂಗ್  ಕಾಲೇಜು ಮತ್ತು ಕೀಡಾ ಕ್ಷೇತ್ರದ ವರೆಗೆ ಎಲ್ಲೆಲ್ಲೂ ಹೆಣ್ಣು ಮತ್ತು ಗಂಡು ಜೊತೆಯಾಗಿಯೇ ಇರುವ ಸಾಮಾಜಿಕ ವಾತಾವರಣದಲ್ಲಿ ಹಿಂದೂ ಯುವತಿ ಮುಸ್ಲಿಮ್ ಯುವಕನಿಂದ ಅಥವಾ ಮುಸ್ಲಿಮ್ ಯುವತಿ ಹಿಂದೂ ಯುವಕನಿಂದ ಆಕರ್ಷಿತವಾಗುವುದರಲ್ಲಿ ಅಚ್ಚರಿಯೂ ಇಲ್ಲ, ಅದು ಎಂಟನೇ ಅದ್ಭುತವೂ ಅಲ್ಲ. ಹರೆಯದಲ್ಲಿ ಆಕರ್ಷಣೆ ಸಹಜ. ಹೆಣ್ಣು ಮತ್ತು ಗಂಡು ಜೊತೆಯಾಗಿ ಕಲಿಯುವಾಗ, ಅವರು ಉದ್ಯೋಗ ಮಾಡುವಾಗ ಆಕರ್ಷಣೆ ಸಹಜ ಮತ್ತು ಕೆಲವೊಮ್ಮೆ ಪ್ರೇಮಾಂಕರವಾಗುವುದೂ ಸಹಜ. ಹರೆಯದಲ್ಲಾಗುವ ಈ ಬೆಳವಣಿಗೆಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ರಂಪಾಟ ಮಾಡುವುದರಿಂದ ರಾಜಕಾರಣಿಗಳಿಗೆ ಲಾಭವಾಗಬಹುದೇ ಹೊರತು ಇನ್ನೇನೂ ಆಗದು. ಅಂದಹಾಗೆ,

ಹಿಂದೂ  ಮತ್ತು ಮುಸ್ಲಿಮರು ಈ ದೇಶದಲ್ಲಿ ವೈರಿಗಳಂತೆ ಬದುಕುವುದರಿಂದ ಈ ದೇಶದ ಅಭಿವೃದ್ಧಿಗೂ ತೊಡಕು ಮತ್ತು ಈ ಎರಡೂ ಸಮುದಾಯಗಳ ಆರೋಗ್ಯಕ್ಕೂ ಕೇಡು. ಸದ್ಯ ಆಗಬೇಕಿರುವುದು ಏನೆಂದರೆ, ಕ್ರಿಮಿನಲ್ ಕೃತ್ಯಗಳು ಎರಡೂ ಸಮುದಾಯಗಳ ಸಂಬಂಧವನ್ನು ನಿರ್ಧರಿಸುವ ಮಾನದಂಡ ಆಗದಂತೆ ನೋಡಿಕೊಳ್ಳುವುದು ಮತ್ತು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗುವವರನ್ನು ಧರ್ಮ ನೋಡದೇ ಖಂಡಿಸಿ ಅವರಿಂದ ಅಂತರವನ್ನು ಕಾಪಾಡಿಕೊಳ್ಳುವುದು. ಹಾಗೆಯೇ ಪ್ರತಿ ಮನೆಗಳಲ್ಲೂ ಮಕ್ಕಳನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ಬೆಳೆಸುವುದು.

ಪ್ರೀತಿ-ಪ್ರೇಮದ ವಿಷಯದಲ್ಲಿ ಹೆಣ್ಣಿನಷ್ಟು ಸಹನೆ ಗಂಡಿನಲ್ಲಿರುವುದಿಲ್ಲ. ಹೆಣ್ಣು ಹೆಚ್ಚು ಪ್ರಬುದ್ಧತೆಯಿಂದ ನಡಕೊಂಡರೆ ಗಂಡು ಭಾವುಕತೆಗೆ ಹೆಚ್ಚು ಒತ್ತು ನೀಡುತ್ತಾನೆ. ಹೆಣ್ಣಿನಲ್ಲಿ ಪ್ರಾಕ್ಟಿಕಲ್ ಪ್ರಜ್ಞೆ ಹೆಚ್ಚು. ಗಂಡಿನಲ್ಲಿ ಹುಚ್ಚು ಆವೇಶ ಮತ್ತು ಕ್ಷಣದ ಭಾವುಕತೆಗೇ ಹೆಚ್ಚು ಮಾರ್ಕು. ಈ ಎರಡೂ ಭಿನ್ನ ಗುಣಗಳ ಜೀವಗಳು ಪರಸ್ಪರ ಆಕರ್ಷಣೆಗೆ ಒಳಗಾಗುವಾಗ ವ್ಯತಿರಿಕ್ತ ನಡವಳಿಕೆಗಳು ವ್ಯಕ್ತವಾಗುವುದು ಅಸಹಜ ಅಲ್ಲ. ಇಂಥ ಸಂದರ್ಭಗಳಲ್ಲಿ ಯುವಕ-ಯುವತಿಯರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯ ಇರುತ್ತದೆ. ಭಾವನಾತ್ಮಕ ಸನ್ನಿವೇಶಗಳನ್ನು ನಿಭಾಯಿಸುವ ಕಲೆಯನ್ನು ಹರೆಯದ ಮಕ್ಕಳಿಗೆ ಪ್ರತಿ ಮನೆಯಲ್ಲೂ ತಿಳಿಸಿಕೊಡುವ ವ್ಯವಸ್ಥೆ ಆಗಬೇಕಿದೆ. ತನ್ನ ಮಗ ಅಥವಾ ಮಗಳು ಅಂಥವಳಲ್ಲ ಎಂಬ ಭಾವವನ್ನು ಬಿಟ್ಟು, ಪ್ರತಿ ಮಕ್ಕಳಲ್ಲೂ ಹೆಣ್ಣು-ಗಂಡಿನ ನಡುವಿನ ಆಕರ್ಷಣೆ ಮತ್ತು ಅದರಿಂದ ಎದುರಾಗುವ ಸಾಧಕ-ಬಾಧಕಗಳ ಬಗ್ಗೆ ಪೋಷಕರು ವಿವರಿಸಿಕೊಡುವ ಅಗತ್ಯವಿದೆ. ಸಾಮಾನ್ಯವಾಗಿ ಇತರೆಲ್ಲ ವಿಷಯಗಳನ್ನು ಹಂಚಿಕೊಳ್ಳುವ ಮಕ್ಕಳು ಪ್ರೇಮವನ್ನು ಹೆತ್ತವರೊಂದಿಗೆ ಹಂಚಿಕೊಳ್ಳುವುದು ಕಡಿಮೆ. ಆಕರ್ಷಣೆಯು ಪ್ರೇಮವಾಗಿ ಬಲಿತು ಬಲಿಷ್ಠವಾದ ಬಳಿಕ ಬಹುತೇಕ ಪ್ರೇಮ ಪ್ರಕರಣಗಳು ಹೆತ್ತವರ ಗಮನಕ್ಕೆ ಬರುವುದಿದೆ. ಇದು ಆ ಬಳಿಕದ ಹಲವಾರು ಸವಾಲುಗಳಿಗೂ ಕಾರಣವಾಗುತ್ತದೆ. ಆದ್ದರಿಂದ,

ಮಕ್ಕಳೊಂದಿಗೆ ಹೆತ್ತವರು ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸಿಕೊಳ್ಳುವತ್ತ ಗಮನಹರಿಸಬೇಕು. ಪ್ರೇಮವೂ ಸೇರಿದಂತೆ ಪ್ರತಿಯೊಂದನ್ನೂ ಹೆತ್ತವರೊಂದಿಗೆ ಹಂಚಿಕೊಳ್ಳುವುದಕ್ಕೆ ಮಕ್ಕಳು ಮನಸ್ಸು ಮಾಡುವಂಥ ಗೆಳೆತನದ ಸಂಬಂಧವನ್ನು ಬೆಳೆಸಬೇಕು. ಅಗಾಗ್ಗೆ ಮಕ್ಕಳಿಗೆ ಇಂಥ ವಿಷಯಗಳಲ್ಲಿ ಮಾರ್ಗದರ್ಶನ ಮಾಡುತ್ತಿರಬೇಕು. ಎಲ್ಲಾದರೂ ನಡೆದ ಪ್ರಕರಣವನ್ನು ನೆಪ ಮಾಡಿಕೊಂಡು ಮಕ್ಕಳನ್ನು ಹತ್ತಿರ ಕೂರಿಸಿ ತಿಳುವಳಿಕೆ ನೀಡುತ್ತಿರಬೇಕು. ಈ ತರಬೇತಿಯು ಭವಿಷ್ಯದಲ್ಲಿ ಮಕ್ಕಳಿಗೆ ನೆರವಾಗಬಹುದು. ಸಿಟ್ಟಿನ ಭರದಲ್ಲೋ  ಅಥವಾ ನಿರಾಶೆಯ ಸನ್ನಿವೇಶದಲ್ಲೋ  ಹುಚ್ಚು ನಿರ್ಧಾರ ತಾಳದಂತೆ ಅವರನ್ನು ತಡೆಯುವುದಕ್ಕೆ ಹೆತ್ತವರು ಎಂದೋ ನೀಡಿದ ಮಾರ್ಗದರ್ಶನ ಪ್ರಯೋಜನಕ್ಕೆ ಬರಬಹುದು. ಅಂದಹಾಗೆ,

ಹುಬ್ಬಳ್ಳಿ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಮ್ ಸಮುದಾಯ ನಡಕೊಂಡ ರೀತಿ ಅತ್ಯಂತ ಪ್ರಬುದ್ಧವಾದುದು. ‘ನ್ಯಾಯ ನಿನ್ನ ಹೆತ್ತವರ ವಿರುದ್ಧ ಇದ್ದರೆ ನೀನು ನ್ಯಾಯದ ಜೊತೆ ನಿಲ್ಲಬೇಕೇ ಹೊರತು ಹೆತ್ತವರ ಪರ ಅಲ್ಲ..’ ಎಂಬ ಪವಿತ್ರ ಕುರ್‌ಆನಿನ ಧ್ಯೇಯಕ್ಕೆ ಅನ್ವರ್ಥವಾದುದು. ಇದಕ್ಕಾಗಿ ಹುಬ್ಬಳ್ಳಿಯ ಅಂಜುಮನ್-ಎ-ಇಸ್ಲಾಮ್  ಸಂಘಟನೆಯನ್ನು ಅಭಿನಂದಿಸುವೆ.

ಸನ್ಮಾರ್ಗ 

Saturday, April 20, 2024

ಕುರ್ ಆನ್ ನಲ್ಲಿ ಉಪವಾಸದ ವಚನಗಳ ನಡುವೆ ಪ್ರಾರ್ಥನೆಯ ವಚನ ಏಕಿದೆ?






ಪವಿತ್ರ ಕುರ್‌ಆನಿನ 185 ವಚನದಲ್ಲಿ ರಮಝಾನ್ ಮತ್ತು ಉಪವಾಸದ ಬಗ್ಗೆ ಹೇಳಿರುವ ಅಲ್ಲಾಹನು 186ನೇ ವಚನದಲ್ಲಿ ಪ್ರಾರ್ಥನೆಯ ಬಗ್ಗೆ  ಹೇಳಿದ್ದಾನೆ. ಈ ಎರಡೂ ವಚನಗಳು ಹೀಗಿವೆ:

1. ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯ ಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳ ನ್ನೊಳಗೊಂಡಿರುವ `ಕುರ್‌ಆನ್' ಅವತೀರ್ಣಗೊಂಡ ತಿಂಗಳು `ರಮಝಾನ್' ಆಗಿರುತ್ತದೆ. ಆದುದ ರಿಂದ ಯಾವನಾದರೂ ಈ ತಿಂಗಳನ್ನು  ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು. ಯಾವನಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣಿಕನಾಗಿದ್ದರೆ ಆತನು ಇತರ ದಿನಗಳಲ್ಲಿ ಉಪವಾಸ ದಿನಗಳ ಸಂಖ್ಯೆಯನ್ನು ಪೂರ್ತಿಗೊಳಿಸಬೇಕು. ಅಲ್ಲಾಹನು ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ; ನಿಮ್ಮನ್ನು ಕಷ್ಟಕ್ಕೀಡು  ಮಾಡಲು ಇಚ್ಛಿಸುವುದಿಲ್ಲ. ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲು ಅನುಕೂಲವಾಗುವಂತೆಯೂ, ಸನ್ಮಾರ್ಗದರ್ಶನದ ಮೂಲಕ  ನಿಮ್ಮನ್ನು ಪ್ರತಿಷ್ಠಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕೃತಜ್ಞರಾಗಿರಲಿಕ್ಕಾಗಿಯೂ ಈ ವಿಧಾನವನ್ನು ತೋರಿಸಿ  ಕೊಡಲಾಗಿದೆ. (ಅಲ್‌ಬಕರ: 185)

2. ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ, ಪ್ರಾರ್ಥಿಸುವವನು ನನ್ನನ್ನು  ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಯನ್ನು ಆಲಿಸುತ್ತೇನೆಂದೂ ಅದಕ್ಕೆ ಉತ್ತರಿಸುತ್ತೇನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ  ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿರಿಸಲಿ. (ಇದನ್ನು ಅವರಿಗೆ ತಿಳಿಸಿಬಿಡಿರಿ) ಅವರು ಸನ್ಮಾರ್ಗ ಪಡೆಯಲೂಬಹುದು. (ಅಲ್‌ಬಕರ:  186)

ಇದರ ನಂತರದ 187ನೇ ವಚನದಲ್ಲಿ ಅಲ್ಲಾಹನು ಪುನಃ ಉಪವಾಸದಲ್ಲಿ ಏನು ಮಾಡಬಹುದು ಮತ್ತು ಮಾಡಬಾರದು ಎಂಬುದನ್ನು  ಹೇಳಿದ್ದಾನೆ. ಅಂದರೆ ಉಪವಾಸದ ಬಗ್ಗೆ ವಿವರಿಸುತ್ತಾ ಮಧ್ಯದಲ್ಲಿ ತುಂಡರಿಸಿ ಪ್ರಾರ್ಥನೆಯ ಬಗ್ಗೆ ಹೇಳಿ ಪುನಃ ಉಪವಾಸದ ಕುರಿತಾದ  ಮಾರ್ಗದರ್ಶನವನ್ನು ಅಲ್ಲಾಹನು ನೀಡಿದ್ದಾನೆ. ಅಲ್ಲಾಹನು ಹೀಗೇಕೆ ಮಾಡಿದ? 186ನೇ ವಚನದಲ್ಲಿ ಉಪವಾಸ ಅನ್ನುವ ಪದವೇ ಇಲ್ಲ.  ಅದರ ಹಿಂದೆ ಮತ್ತು ಮುಂದಿನ ವಚನಗಳೆರಡೂ ಉಪವಾಸವನ್ನೇ ಕೇಂದ್ರೀಕರಿಸಿವೆ. ಹಾಗಿದ್ದರೆ ಮಧ್ಯದ ವಚನದಲ್ಲಿ ಉಪವಾಸಕ್ಕೆ ಸಂಬಂಧವೇ  ಇಲ್ಲದಂತೆ ಕಾಣುವ ವಚನವೊಂದನ್ನು ಅಲ್ಲಾಹನು ಹೇಳಲು ಕಾರಣವೇನು? ಬಹುಶಃ,

ಪ್ರಾರ್ಥನೆಗೆ ಇಲ್ಲಿರುವ ಮಹತ್ವವನ್ನು ಸಾರುವುದಕ್ಕಾಗಿಯೇ ಉಪವಾಸದ ವಚನಗಳನ್ನು ತುಂಡರಿಸಿಕೊಂಡು ಈ ವಚನ ನಡುವೆ ಬಂದಿರಬೇಕು  ಎಂದೇ ಅನಿಸುತ್ತದೆ. ಈ 186ನೇ ವಚನ ವನ್ನು ನೀವು ಮತ್ತೊಮ್ಮೆ ಗಮನವಿಟ್ಟು ತಾಳ್ಮೆಯಿಂದ ಓದಿ. ‘ನನ್ನ ದಾಸರು’ ಎಂಬ ಪದದಿಂದ ಈ  ವಚನವನ್ನು ಅಲ್ಲಾಹನು ಆರಂಭಿಸಿದ್ದಾನೆ. ನನ್ನ ದಾಸನು ನನ್ನಲ್ಲಿ ಪ್ರಾರ್ಥಿಸಿದರೆ ನಾನು ಉತ್ತರಿಸುತ್ತೇನೆ ಮತ್ತು ಅವರಿಗೆ ತೀರಾ ನಿಕಟನಾಗಿರುತ್ತೇನೆ ಎಂದು ಅಲ್ಲಾಹನು ಹೇಳುತ್ತಾನೆ. ನಿಜವಾಗಿ,

ಪ್ರಾರ್ಥನೆ ಎಂಬುದು ಈ ಜಗತ್ತಿನ ಅತಿದೊಡ್ಡ ಅಯುಧ. ಮನುಷ್ಯ ಸಂತೋಷದಲ್ಲಿದ್ದಾಗಲೂ ದುಃಖದಲ್ಲಿದ್ದಾಗಲೂ ಸಮ ಪ್ರಮಾಣದಲ್ಲಿ  ಬಳಸಬಹುದಾದ ಪ್ರಬಲ ಆಯುಧವೊಂದಿದ್ದರೆ ಅದು ಪ್ರಾರ್ಥನೆ ಮಾತ್ರ. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಒಂದೈದು ನಿಮಿಷ ಧ್ಯಾನಸ್ಥವಾಗಿ  ಪ್ರಾರ್ಥಿಸಿದ ವ್ಯಕ್ತಿ ಆ ಬಳಿಕ ಆ ಸ್ಥಿತಿಯಿಂದ ಹೊರಬಂದಾಗ ಮೊದಲಿನಂತಿರವುದಿಲ್ಲ. ಯಾವುದೋ ಒಂದು ಅವ್ಯಕ್ತ ಶಕ್ತಿ ಅವರೊಳಗೆ  ಸಂಚಯಿಸಿಕೊಂಡಿರುತ್ತದೆ. ಯಾವುದೋ ಬಗೆಯ ಆಶಾವಾದವೊಂದು ಗರಿಗೇರಿರುತ್ತದೆ. ತನ್ನ ಪ್ರಾರ್ಥನೆಯನ್ನು ಆಲಿಸಲು ಒಬ್ಬನಿದ್ದಾನೆ ಮತ್ತು  ಆತ ಪ್ರಾರ್ಥನೆಯ ಬೇಡಿಕೆಯನ್ನು ನೇರವೇರಿಸಲು ಶಕ್ತನಿದ್ದಾನೆ ಎಂದು ಭರವಸೆ ಅತ್ಯಂತ ನಿರಾಶಾದಾಯಕ ಸನ್ನಿವೇಶದಲ್ಲೂ ಶಕ್ತಿಯನ್ನು  ತುಂಬುತ್ತದೆ. ಆದರೆ ಈ ಪ್ರಾರ್ಥನೆಯ ವೇಳೆ ವ್ಯಕ್ತಿ ದಾಸನಾಗಿರಬೇಕು. ಅರ್ಥಾತ್ ದೇವನು ಒಡೆಯ ಎಂಬ ಭಾವ ವ್ಯಕ್ತಿಯೊಳಗೆ  ಶಕ್ತಿಯುತವಾಗಿ ನೆಲೆಸಿರಬೇಕು. ಪ್ರಾರ್ಥನೆಗೆ ಇರುವ ಮೊಟ್ಟಮೊದಲ ಅರ್ಹತೆ ಇದು. ಎರಡನೆಯದ್ದು, ಅಲ್ಲಾಹನು ತನಗೆ ಅತ್ಯಂತ ನಿಕಟ ನಾಗಿದ್ದಾನೆ ಎಂಬ ಬಲವಾದ ನಂಬಿಕೆ. ಪ್ರಾರ್ಥಿಸುವವರಲ್ಲಿ ಈ ಎರಡೂ ಭಾವನೆಗಳು ಜೊತೆಯಾದಾಗ ಆ ಪ್ರಾರ್ಥನೆಗೆ ಉತ್ತರಿಸುವುದಾಗಿ  ಅಲ್ಲಾಹನು ಹೇಳುತ್ತಾನೆ. ಇಲ್ಲಿರುವ ಪ್ರಶ್ನೆಯೇನೆಂದರೆ,

ಪ್ರಾರ್ಥಿಸುವಾಗ ನಾವು ಈ ಎರಡೂ ಭಾವಗಳೊಂದಿಗೆ ಸಜ್ಜಾಗುತ್ತೇವೆಯೋ ಎಂಬುದು. ಕಡ್ಡಾಯ ನಮಾಝï ಮುಗಿದ ಬಳಿಕ ನಾವು  ಮಾಡುವ ಪ್ರಾರ್ಥನೆಗಳ ಸ್ವರೂಪ ಹೇಗಿದೆ? ಅದೊಂದು ಸಾಂಪ್ರದಾಯಿಕ ಕ್ರಿಯೆ ಎಂಬುದರ ಆಚೆಗೆ ದಾಸ ಮತ್ತು ಒಡೆಯನ ನಡುವಿನ  ಸಂಭಾಷಣೆಯಂತೆ  ಪರಿಭಾವಿಸಿಕೊಂಡು ಪ್ರಾರ್ಥಿಸುವವರು ಎಷ್ಟು ಮಂದಿ ಇದ್ದಾರೆ? ಅಲ್ಲಾಹನು ತನ್ನ ನಿಕಟ ಇದ್ದಾನೆ ಎಂದು ಭಾವಿಸಿಕೊಂಡು  ಮಾಡುವ ಪ್ರಾರ್ಥನೆಯ ಸ್ವರೂಪ ಹೇಗಿರಬಹುದು? ಅಂಥ ಭಾವ ನಮ್ಮೊಳಗಿದ್ದರೆ ನಮ್ಮ ದೇಹಭಾಷೆ ಹೇಗಿರಬಹುದು? ಏಕಾಗ್ರತೆ  ಹೇಗಿರಬಹುದು? ಎಷ್ಟು ಹೊತ್ತು ಪ್ರಾರ್ಥಿಸಬಹುದು? ಸುಮ್ಮನೆ ನಾವಿವತ್ತು ಮಾಡುವ ಪ್ರಾರ್ಥನೆಯ ಬಗ್ಗೆ ಆಲೋಚಿಸೋಣ. ನಾವೆಷ್ಟು  ಏಕಾಗ್ರತೆಯಿಂದ ಪ್ರಾರ್ಥಿಸುತ್ತೇವೆ? ದೀನವಾಗಿ ಮತ್ತು ಅಲ್ಲಾಹನು ನಿಕಟವೇ ಇದ್ದಾನೆ ಎಂಬ ಭಾವದಿಂದ ದಿನದಲ್ಲಿ ಬಿಡಿ ವಾರದಲ್ಲಿ ಒಮ್ಮೆಯಾದರೂ ಪ್ರಾರ್ಥಿಸಲು ಸಾಧ್ಯವಾಗುತ್ತಾ? ಹಾಗಂತ, ಪ್ರತಿದಿನ ಪ್ರಾರ್ಥಿಸುವುದಿಲ್ಲ ಎಂದಲ್ಲ. ಪ್ರತಿ ನಮಾಝï‌ನಲ್ಲೂ ನಾವು ಪ್ರಾರ್ಥಿಸುತ್ತೇವೆ.  ಆದರೆ, ಹೀಗೆ ಪ್ರಾರ್ಥಿಸುವಾಗ ನಮ್ಮ ಮನಸ್ಸು ಎಲ್ಲಿರುತ್ತದೆ? ನಮ್ಮ ಕಣ್ಣು, ಕೈ-ಕಾಲುಗಳ ಭಾವನೆಗಳು ಏನಿರುತ್ತವೆ? ನಾಲಗೆಗೂ  ಹೃದಯಕ್ಕೂ ಯಾವ ಸಂಬಂಧ ಇರುತ್ತದೆ? ನಾವು ಎಷ್ಟು ಬಾರಿ ದಾಸರಾಗಿ ಪ್ರಾರ್ಥಿಸಿದ್ದೇವೆ? ಒಡೆಯ ತನ್ನ ಪಕ್ಕವೇ ಇದ್ದಾನೆ ಎಂದು ಭಾವಿಸಿ  ಪ್ರಾರ್ಥಿಸಿದ ಪ್ರಾರ್ಥನೆಗಳು ಎಷ್ಟಿವೆ? ಪ್ರಾರ್ಥನೆಯ ಸಂದರ್ಭದಲ್ಲಿ ನಾವೆಷ್ಟು ಬಾರಿ ಒಡೆಯರಾಗಿಲ್ಲ? ಅಲ್ಲಾಹನು ದಾಸನೇನೋ ಎಂದು  ಭಾವಿಸುವಂತೆ ನಡಕೊಂಡಿಲ್ಲ? ನಿಜವಾಗಿ,

ಉಪವಾಸದ ದಿನಗಳಲ್ಲಿ ಮನುಷ್ಯ ದಾಸನಾಗುವಷ್ಟು ಮತ್ತು ಅಲ್ಲಾಹ್ ಒಡೆಯನಾಗುವಷ್ಟು ಇನ್ನಾವ ತಿಂಗಳಲ್ಲೂ ಆಗಲ್ಲ ಅನಿಸುತ್ತದೆ.  ರಮಝಾನ್‌ನಲ್ಲಿ ಮಾಡುವಷ್ಟು ಪ್ರಾರ್ಥನೆ ಇನ್ನಾವ ತಿಂಗಳಲ್ಲೂ ಮಾಡುವ ಸಾಧ್ಯತೆ ಇಲ್ಲ. ಉಪವಾಸ ಸ್ಥಿತಿಯು ವ್ಯಕ್ತಿಯನ್ನು ಪ್ರಾರ್ಥನೆಗೆ  ಸಜ್ಜುಗೊಳಿಸುವಷ್ಟು ಇನ್ನಾವ ಸ್ಥಿತಿಯೂ ಸಜ್ಜುಗೊಳಿಸುವುದು ಸುಲಭ ಅಲ್ಲ. ಆದ್ದರಿಂದಲೇ, ಅಲ್ಲಾಹನು ಉಪವಾಸದ ವಚನಗಳ ನಡುವೆ  ಪ್ರಾರ್ಥನೆಯ ವಚನವನ್ನೂ ಇಟ್ಟಿರಬೇಕು. ಆದರೆ, ತಂತ್ರಜ್ಞಾನದ ಈ ಉತ್ತುಂಗ ಕಾಲದಲ್ಲಿ ಉಪವಾಸಕ್ಕೂ ಸವಾಲುಗಳು ಎದುರಾಗಿವೆ. ನಾಲ್ಕೈದು  ದಶಕಗಳ ಹಿಂದೆ ಆಗಿದ್ದರೆ ನೋಡಬಾರದ್ದನ್ನು ನೋಡುವುದಕ್ಕೂ ಮತ್ತು ಆಲಿಸಬಾರದ್ದನ್ನು ಆಲಿಸುವುದಕ್ಕೂ ಮಿತಿಗಳಿದ್ದುವು. ಸಿನಿಮಾ  ನೋಡಬೇಕೆಂದರೆ ನಗರದಲ್ಲಿರುವ ಥಿಯೇಟರ್‌ಗೇ ಹೋಗಬೇಕಿತ್ತು. ಆಡಬಾರದ್ದನ್ನು ಆಡಬೇಕೆಂದರೆ ವ್ಯಕ್ತಿಯನ್ನು ಭೇಟಿಯಾಗಬೇಕಿತ್ತು.  ಕೆಡುಕುಗಳೆಂದು ನಾವು ಯಾವುದನ್ನೆಲ್ಲ ಪಟ್ಟಿ ಮಾಡುತ್ತೇವೋ ಅವೆಲ್ಲವೂ ತೀರಾ ಸುಲಭವಾಗಿ ಲಭ್ಯವಾಗದಷ್ಟು ತುಟ್ಟಿಯಾಗಿದ್ದುವು. ಉಪವಾಸದ  ಸಮಯದಲ್ಲಿ ಏನನ್ನಾದರೂ ತಿನ್ನಬೇಕೆಂದರೆ ಹೊಟೇಲಿಗೆ ಹೋಗಿಯೇ ತಿನ್ನಬೇಕಿತ್ತು. ಆದರೆ ಇವತ್ತು ಅಂಥ ಬೇಲಿಗಳೇ ಇಲ್ಲ. ಒಂದು  ಬೆಳಗಾತ ಮೊಬೈಲ್ ಹಿಡಿದು ಕುಳಿತರೆ ಇಫ್ತಾರ್ ವರೆಗೂ ನೋಡುವಷ್ಟು ಮತ್ತು ಆಲಿಸುವಷ್ಟು ವಿಷಯಗಳು ಅದರಲ್ಲಿರುತ್ತವೆ. ನಮ್ಮ ಇಡೀ ದಿನದ ಸಮಯವನ್ನು ಒಂದು ಮೊಬೈಲ್‌ಗೆ ಕಸಿದುಕೊಳ್ಳುವ ಸಾಮರ್ಥ್ಯವಿದೆ. ನಮಾಝï ನಲ್ಲೂ ನಮ್ಮ ಏಕತಾನತೆಯನ್ನು ಮೊಬೈಲ್  ಕಸಿಯುತ್ತದೆ. ಪ್ರಾರ್ಥನೆಯಲ್ಲೂ ಅದು ನಮ್ಮ ಏಕಾಗ್ರತೆಗೆ ಭಂಗ ತರುತ್ತದೆ. ಡ್ರೈವಿಂಗ್‌ನಲ್ಲೂ ನಮ್ಮನ್ನು ಅದು ವಿಚಲಿತಗೊಳಿಸುತ್ತದೆ. ಗಂಭೀರ  ಸಭೆ ನಡೆಯುವಾಗಲೂ ನಮ್ಮನ್ನು ಅದು ಕೆಣಕುತ್ತದೆ. ಎಂಥ ಸಂದರ್ಭಗಳಲ್ಲೂ ಅಚಾನಕ್ಕಾಗಿ ನಮ್ಮ ಕೈ ಮೊಬೈಲ್‌ನತ್ತ ಹೋಗುವಷ್ಟು ಅದು  ಪರಮಾತ್ಮವಾಗಿ ಬಿಟ್ಟಿದೆ. ದಾಸ ಮತ್ತು ಒಡೆಯನ ನಡುವಿನ ಅತ್ಯಂತ ಖಾಸಗಿ ಸಂಭಾಷಣೆಗೂ ಕತ್ತರಿ ಹಾಕುವಷ್ಟು ಬೃಹತ್ತಾಗಿ ಬೆಳೆದಿರುವ ಈ  ಮೊಬೈಲ್ ಹಾವಳಿಯಿಂದ ಮನಸ್ಸನ್ನು ತಡೆದಿಟ್ಟುಕೊಳ್ಳುವುದು ಹೇಗೆ? ನಿಜಕ್ಕೂ,

ಇವತ್ತು ನಾವು ಯಾವುದನ್ನೆಲ್ಲಾ ಅಮಲು ಪದಾರ್ಥಗಳು ಎಂದು ಪಟ್ಟಿ ಮಾಡುತ್ತೇವೆಯೋ ಅವುಗಳಲ್ಲಿ ಮೊದಲ ಸ್ಥಾನ ದಲ್ಲಿಡಬೇಕಾದ ಎಲ್ಲ  ಅರ್ಹತೆ ಮೊಬೈಲ್‌ಗಿದೆ. ಯುವ ಸಮೂಹ ವನ್ನಂತೂ ಅದು ಆವರಿಸಿಬಿಟ್ಟಿದೆ. ಇಂಥ ಸ್ಥಿತಿಯಲ್ಲಿ ಉಪವಾಸಿಗರು ಏಕಾಗ್ರಚಿತ್ತರಾಗುವುದು  ಹಾಗೂ ಒಡೆಯ ಮತ್ತು ದಾಸ ಎಂಬ ಭಾವದೊಂದಿಗೆ ಧ್ಯಾನಸ್ಥ ಸ್ಥಿತಿಗೆ ತಲುಪಿ ಪ್ರಾರ್ಥಿಸುವುದು ಬಹುದೊಡ್ಡ ಸವಾಲು. ಒಂದು ಕ್ಲಿಕ್  ಮಾಡಿದರೆ ನೀವಿರುವಲ್ಲಿಗೇ ನಿಮ್ಮಿಷ್ಟದ ಸ್ವಾದಿಷ್ಟ ಆಹಾರ ತಲುಪಿಸುವ ವ್ಯವಸ್ಥೆ ಇವತ್ತಿನದು. ಹಿಂದಿನಂತೆ  ಹೊಟೇಲಿಗೇ ಹೋಗಿ ತಿನ್ನಬೇಕಾದ  ಮುಜುಗರದ ಸ್ಥಿತಿ ಉಪವಾಸಿಗನಿಗೆ ಇವತ್ತಿಲ್ಲ. ನಿಜವಾಗಿ, ಇದನ್ನು ಸೌಲಭ್ಯ ವಾಗಿಯೂ ನೋಡಬಹುದು ಅಥವಾ ಸವಾಲಾಗಿಯೂ ನೋಡಬಹುದು. ಉಪವಾಸವನ್ನು ಭಂಗಗೊಳಿಸುವ ಎಲ್ಲವೂ ತನ್ನೆದುರು ಸುಲಭವಾಗಿ ಲಭ್ಯವಿದ್ದೂ ತಾನು ಅವುಗಳಿಂದೆಲ್ಲ ದೂರ ನಿಲ್ಲುವು ದಕ್ಕೆ  ಆಂತರಿಕ ಶಕ್ತಿ ಬೇಕು. ಒಂದುರೀತಿಯಲ್ಲಿ ಈ ದಿನಗಳ ಉಪವಾಸ ಈ ಹಿಂದಿನ ತಲೆಮಾರಿನ ಉಪವಾಸಕ್ಕೆ ಹೋಲಿಸಿದರೆ ಹೆಚ್ಚು ಸವಾಲಿನದ್ದು.  ಈ ಹಿಂದಿನ ತಲೆಮಾರಿಗೆ ಲಭ್ಯವಿಲ್ಲದ ಮತ್ತು ಉಪವಾಸ ಭಂಗಗೊಳ್ಳುವ ಅಥವಾ ಅದರ ನಿಜ ಉದ್ದೇಶವನ್ನು ತೆಳ್ಳಗಾಗಿಸುವ ಅನೇಕಾರು  ಸೌಲಭ್ಯಗಳು ಇವತ್ತಿನ ತಲೆಮಾರಿಗೆ ಲಭ್ಯವಾಗಿದೆ. ಈ ಸೌಲಭ್ಯಗಳ ಹೊರತಾಗಿಯೂ ಓರ್ವರು ವಿಚಲಿತರಾಗದೇ ಮತ್ತು ಏಕಾಗ್ರತೆಯನ್ನು  ಕಳಕೊಳ್ಳದೇ ಉಪವಾಸ ವ್ರತ ಆಚರಿಸಲು ಯಶಸ್ವಿಯಾಗುತ್ತಾರೆಂದರೆ ಅದೊಂದು ಸಾಧನೆಯೇ ಸರಿ. ಹಸಿವು ಮತ್ತು ಬಾಯಾರಿಕೆ ಎಂಬ  ಸಾಮಾನ್ಯ ಪರಿಕಲ್ಪನೆಯ ಆಚೆಗೆ ಉಪವಾಸ ಇವತ್ತು ವಿಸ್ತರಿಸಿಕೊಂಡಿದೆ. ಹಸಿವನ್ನಾದರೂ ತಡಕೊಳ್ಳಬಹುದು, ಬಾಯಾರಿಕೆಯನ್ನಾದರೂ  ಸಹಿಸಿಕೊಳ್ಳಬಹುದು, ಆದರೆ, ಈ ಮೊಬೈಲ್‌ನಿಂದ ತಡೆದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೊಂದು ಇವತ್ತು ಮುನ್ನೆಲೆಗೆ ಬಂದಿದೆ. ಅದು  ಯುವಸಮೂಹವೂ ಸೇರಿ ಒಂದಿಡೀ ಸಮೂಹದ ಏಕಾಗ್ರತೆಯನ್ನು ಚೆಲ್ಲಾಪಿಲ್ಲಿಗೊಳಿಸಿದೆ. ವ್ಯಸನದ ಹೊಸ ಮಾದರಿಯನ್ನು ಪರಿಚಯಿಸಿದೆ.  ಇಂಥ ಸಂದರ್ಭದಲ್ಲಿ ಉಪವಾಸದ ಉದ್ದೇಶದೆಡೆಗೆ ನ್ಯಾಯಯುತವಾಗಿ ತಲುಪುವುದು ತೀರಾ ಸುಲಭ ಅಲ್ಲ. ನಿಜವಾಗಿ,

ಉಪವಾಸ ಪ್ರತಿವರ್ಷ ಯಾಕೆ ಅಗತ್ಯ ಎಂಬ ಪ್ರಶ್ನೆಗೆ ಪ್ರತಿವರ್ಷ ಆವಿಷ್ಕಾರಗೊಳ್ಳುವ ಈಗಿನ ಹೊಸ ಹೊಸ ತಂತ್ರಜ್ಞಾನಗಳು ಉತ್ತರವನ್ನು  ಹೇಳುತ್ತವೆ. ಈ ತಂತ್ರಜ್ಞಾನಗಳು ಮನುಷ್ಯರನ್ನು ದಾಸರನ್ನಾಗಿ ಮಾಡುತ್ತಲೂ ಇವೆ. ಅದರ ಆಕರ್ಷಣೆಯಿಂದ ಮನುಷ್ಯ ತಪ್ಪಿಸಿಕೊಳ್ಳಲಾಗದೇ  ಒದ್ದಾಡುತ್ತಿರುತ್ತಾನೆ/ಳೆ. ಇಂಥ ಸಂದರ್ಭದಲ್ಲಿ ಉಪವಾಸ ಮತ್ತೆ ದಾಸ ಮತ್ತು ಒಡೆಯನ ಸಂಬಂಧಗಳನ್ನು ನೆನಪಿಸುತ್ತದೆ. ತಂತ್ರಜ್ಞಾನದ  ದಾಸ್ಯತನದಿಂದ ಅಲ್ಲಾಹನ ದಾಸ್ಯತನದೆಡೆಗೆ ಮರಳಲು ಸಾಧ್ಯವಾ ಎಂದು ಪ್ರಶ್ನಿಸುತ್ತದೆ. ಅವುಗಳ ಗೀಳಿನಿಂದ ಹೊರಬಂದು ಒಡೆಯನಿಗಾಗಿ  ಏಕಾಗ್ರ ಚಿತ್ತನಾಗು ಎಂದು ಕರೆ ಕೊಡುತ್ತದೆ. ಇದೊಂದು ಸವಾಲು. ಯಾಕೆಂದರೆ, ಅಲ್ಲಾಹನು ಭೌತಿಕವಾಗಿ ಉಪವಾಸಿಗನ ಎದುರಿಲ್ಲ. ಆದರೆ  ಆಧುನಿಕ ತಂತ್ರಜ್ಞಾನಗಳು ಮತ್ತು ಅವು ಕೊಡುವ ಅಪರಿಮಿತ ಮನರಂಜನೆಗಳು ಭೌತಿಕವಾಗಿಯೇ ಜೊತೆಗಿವೆ. ಆದ್ದರಿಂದ ಅವುಗಳ ದಾಸ್ಯ ದಿಂದ ಹೊರಬಂದು ನೈಜ ಒಡೆಯನ ದಾಸನಾಗುವುದಕ್ಕೆ ವರ್ಷವರ್ಷವೂ ತರಬೇತಿಯ ಅಗತ್ಯ ಇದೆ. ಹಾಗೆಯೇ, ದಾಸ ಮತ್ತು ಒಡೆಯನ  ನಡುವೆ ನಿಕಟ ಸಂಪರ್ಕವೂ ಬೆಳೆಯಬೇಕಾಗಿದೆ. ಒಡೆಯನನ್ನು ಮರೆತ ದಾಸ ದಾರ ಕಡಿದು ಹೋದ ಗಾಳಿಪಟದಂತೆ. ಬಹುಶಃ,

ಉಪವಾಸದ ವಿವರಣೆಯುಳ್ಳ ವಚನಗಳ ನಡುವೆ ಪ್ರಾರ್ಥನೆಯ ವಚನವನ್ನು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಇದುವೇ ಕಾರಣ  ಇರಬೇಕು.