Wednesday, August 27, 2014

ಬರಹ ಜಗತ್ತಿನ ‘ನೂರ್’

   ಮಲಯಾಳಂ ಸಿನಿಮಾಗಳು ಕನ್ನಡಕ್ಕೆ (ರಿಮೇಕ್) ಬರುತ್ತಿರುವಷ್ಟೇ ವೇಗವಾಗಿ ಮಲಯಾಳಂ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬರುತ್ತಿರುವುದು ಕಡಿಮೆ. ವೈಕಂ ಮುಹಮ್ಮದ್ ಬಶೀರ್, ಎಂ.ಟಿ. ವಾಸುದೇವ ನಾಯರ್, ತಕಳಿ ಶಿವಶಂಕರ್ ಪಿಳ್ಳೆ, ರಾಧಾಕೃಷ್ಣನ್, ಎಂ. ಮುಕುಂದನ್, ಓ.ವಿ. ವಿಜಯನ್, ನಾರಾಯಣ ಮೆನನ್.. ಮುಂತಾದ ಕೆಲವೇ ಸಾಹಿತಿಗಳು ಮತ್ತು ಸಾಹಿತ್ಯಗಳನ್ನು ಹೊರತು ಪಡಿಸಿದರೆ ಉಳಿದಂತೆ ದೊಡ್ಡದೊಂದು ಗುಂಪು ನಮ್ಮ ಪರಿಚಿತ ವಲಯದಿಂದ ಈಗಲೂ ಹೊರಗಿವೆ. ಪಾರ್ವತಿ ಜಿ. ಐತಾಳ್, ಕೆ.ಕೆ. ಗಂಗಾಧರನ್, ಫಕೀರ್ ಮುಹಮ್ಮದ್ ಕಟ್ಪಾಡಿಯಂಥ ಕೆಲವೇ ಮಂದಿ ಮಲಯಾಳಂನ ಕಂಪನ್ನು ಕನ್ನಡಿಗರ ಮನೆಮನೆ ತಲುಪಿಸುವಲ್ಲಿ ದುಡಿದಿದ್ದಾರೆ. ಅಷ್ಟಕ್ಕೂ, ಇದು ಮಲಯಾಳಂ ಸಾಹಿತ್ಯದ ಒಂದು ಮಗ್ಗುಲು ಮಾತ್ರ. ಆ ಸಾಹಿತ್ಯ ಪ್ರಪಂಚಕ್ಕೆ ಇನ್ನೊಂದು ಮಗ್ಗುಲೂ ಇದೆ. ಅದುವೇ ಇಸ್ಲಾವಿೂ ಸಾಹಿತ್ಯ. ಫಕೀರ್ ಮುಹಮ್ಮದ್ ಕಟ್ಪಾಡಿಯಾಗಲಿ, ಗಂಗಾಧರನ್ ಆಗಲಿ ಮುಟ್ಟದ ಈ ಸಾಹಿತ್ಯ ಕ್ಷೇತ್ರ ಎಷ್ಟು ವಿಸ್ತಾರವಾಗಿ ಬೆಳೆದಿದೆಯೆಂದರೆ, ಎಂ.ಟಿ. ವಾಸುದೇವ ನಾಯರ್ ಪ್ರತಿನಿಧಿಸುವ ಸಾಹಿತ್ಯ ಜಗತ್ತಿಗೆ ಪೈಪೋಟಿ ನೀಡುವಷ್ಟು. ಮುಸ್ಲಿಮರ ಕುರಿತಂತೆ ಮುಸ್ಲಿಮೇತರರಲ್ಲಿರುವ ತಪ್ಪು ತಿಳುವಳಿಕೆಗಳು, ಕುರ್‍ಆನಿನ ಕೆಲವಾರು ಪದಪ್ರಯೋಗಗಳ ಬಗೆಗಿನ ಭೀತಿ, ಮುಸ್ಲಿಮರ ವಿವಿಧ ಆಚರಣೆ-ಅನುಷ್ಠಾನಗಳ ಕುರಿತಂತೆ ಗಲಿಬಿಲಿ.. ಮುಂತಾದ ಎಲ್ಲವುಗಳನ್ನೂ ವಸ್ತುವಾಗಿಸಿಕೊಂಡು ಅತ್ಯಂತ ಅಧಿಕಾರಯುತವಾಗಿ ಬರೆಯಲಾದ ಸಾಹಿತ್ಯ ಕೃತಿಗಳು ಈ ಕ್ಷೇತ್ರದಲ್ಲಿ ಪ್ರಕಟವಾಗುತ್ತಿವೆ. ಮಹಿಳೆಯನ್ನು ಮನೆಯೊಳಗೆ, ಶಾಲೆಯಿಂದ ಹೊರಗೆ.. ಇಡುವುದನ್ನೇ ಧಾರ್ಮಿಕತೆ ಎಂದು ತಪ್ಪಾಗಿ ಅಂದುಕೊಂಡಿದ್ದ ಸಮಾಜವನ್ನು ತಿದ್ದುವ ಸಾಹಿತ್ಯಗಳೂ ಪ್ರಕಟವಾಗುತ್ತಿವೆ. ಆದರೆ ಕನ್ನಡ ನಾಡಿನ ಪಾಲಿಗೆ ತೀರಾ ಅಗತ್ಯವಿದ್ದ ಮತ್ತು ಕನ್ನಡಿಗರು ಓದಲೇಬೇಕಾಗಿದ್ದ ಇಂಥ ಅನೇಕಾರು ಸಾಹಿತ್ಯ ಕೃತಿಗಳು ಅನುವಾದಕರ ಕೊರತೆಯಿಂದಲೋ ಅಥವಾ ಇತರೇ ಕಾರಣಗಳಿಂದಲೋ ಕನ್ನಡಿಗರಿಂದ ದೂರವೇ ಉಳಿದಿತ್ತು. ಇಂಥ ಸಂದರ್ಭದಲ್ಲಿ ಅನುವಾದ ಪ್ರಪಂಚಕ್ಕೆ ಕಾಲಿಟ್ಟವರೇ ಪಿ. ನೂರ್(ಪ್ರಕಾಶ) ಮುಹಮ್ಮದ್. 1970ರ ದಶಕದಲ್ಲಿ ಇವರು ಮಲಯಾಳಂನ ಇಸ್ಲಾವಿೂ ಸಾಹಿತ್ಯ ಜಗತ್ತಿನೊಳಗೆ ಪ್ರವೇಶಿಸಿದ ಬಳಿಕ ಮೊನ್ನೆ ಆಗಸ್ಟ್ 19ರಂದು ನಿಧನರಾಗುವ ವರೆಗೂ ಆ ಪ್ರಪಂಚದಲ್ಲಿ ಧಾರಾಳ ಸುತ್ತಾಡಿದರು. ಅಲ್ಲಿ ಬೆಳಕು ಕಾಣುತ್ತಿದ್ದ ಪ್ರತಿ ಕೃತಿಗಳನ್ನೂ ಬಹುತೇಕ ಓದಿದರು. ಕನ್ನಡಿಗರಿಗೆ ಕೊಡಲೆಂದು ತೆಗೆದಿಟ್ಟರು. ಅನುವಾದಿಸಿದರು. ಅನುವಾದದ ಕುರಿತಂತೆ ಅವರಲ್ಲಿ ಎಷ್ಟರ ಮಟ್ಟಿಗೆ ಉತ್ಸಾಹ ಇತ್ತೆಂದರೆ, ಇನ್ನೋರ್ವ ಅನುವಾದಕರ ಬಗ್ಗೆ ಓದುಗರು ಆಲೋಚನೆಯನ್ನೇ ಮಾಡದಷ್ಟು.
   1978 ಎಪ್ರಿಲ್ 23ರಂದು ಪ್ರಾರಂಭವಾದ ಸನ್ಮಾರ್ಗ ವಾರ ಪತ್ರಿಕೆಯ ಸ್ಥಾಪಕ ಸಂಪಾದಕೀಯ ಮಂಡಳಿಯಲ್ಲಿ ಸೇರಿಕೊಳ್ಳುವುದಕ್ಕಿಂತ ಮೊದಲೇ ನೂರ್ ಮುಹಮ್ಮದ್‍ರು ಒಂದೆರಡು ಸಾಹಿತ್ಯ ಕೃತಿಗಳನ್ನು ರಚಿಸಿದ್ದರು. ಅವರು ಪತ್ರಿಕೋದ್ಯಮ ವಿದ್ಯಾರ್ಥಿಯಲ್ಲ. ಬಿ.ಎಸ್ಸಿ. ಪದವೀಧರ. ಅಂದಿನ ಕಾಲದಲ್ಲಿ ಕೆಲಸಗಳು ಹುಡುಕಿಕೊಂಡು ಬರಬಹುದಾಗಿದ್ದ ಭಾರೀ ತೂಕದ ಪದವಿಯೊಂದನ್ನು ಪಡೆದುಕೊಂಡಿದ್ದ ಅವರು, ಸನ್ಮಾರ್ಗ ವಾರಪತ್ರಿಕೆ ಮತ್ತು ಅನುವಾದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದುದಕ್ಕೆ ಕಾರಣ, ಅಂದಿನ ಸಾಮಾಜಿಕ ವಾತಾವರಣ ಎನ್ನಬಹುದು. ಅಂದು, ಇಸ್ಲಾಮ್‍ನ ಬಗ್ಗೆ ಮುಸ್ಲಿಮೇತರರಲ್ಲಿ ಮಾತ್ರ ತಿಳುವಳಿಕೆಯ ಕೊರತೆ ಇದ್ದುದಲ್ಲ, ಸ್ವತಃ ಮುಸ್ಲಿಮರಲ್ಲೇ ಬೆಟ್ಟದಷ್ಟು ಸುಳ್ಳು ನಂಬುಗೆಗಳಿದ್ದುವು. ಅಜ್ಞಾನಜನ್ಯ ಆಚರಣೆಗಳಿದ್ದುವು. ಕಾಫಿರ್ ಎಂಬ ಪದ ಮುಸ್ಲಿಮರಿಗೆ ಗೊತ್ತಿತ್ತೇ ಹೊರತು ಅದನ್ನು ಯಾರ ಮೇಲೆ, ಹೇಗೆ, ಯಾವಾಗ, ಯಾಕೆ ಪ್ರಯೋಗಿಸಬೇಕೆಂಬ ಬಗ್ಗೆ ಏನೇನೂ ತಿಳುವಳಿಕೆ ಇರಲಿಲ್ಲ. ಆದ್ದರಿಂದ ಅದನ್ನು ತಪ್ಪಾಗಿ ಪ್ರಯೋಗಿಸಿ ಮುಸ್ಲಿಮೇತರರಿಂದ ಬೇರ್ಪಟ್ಟು ಕೊಂಡಿದ್ದರು. ಮುಸ್ಲಿಮರ ನಮಾಝ್, ಅವರ ಉಪವಾಸ, ಅವರ ಮಸೀದಿ, ಸಲಾಮ್, ಆರಾಧನೆ.. ಎಲ್ಲವೂ ಮುಸ್ಲಿಮೇತರರ ಪಾಲಿಗೆ ತೀರಾ ಅಪರಿಚಿತ ಮಾತ್ರವಲ್ಲ, ಮುಸ್ಲಿಮೇತರ ಸಮಾಜದಲ್ಲಿ ಈ ಬಗ್ಗೆ ಧಾರಾಳ ಅನುಮಾನಗಳಿದ್ದುವು. ಮುಸ್ಲಿಮ್ ಮಹಿಳಾ ಜಗತ್ತಂತೂ ಇನ್ನಷ್ಟು ಕತ್ತಲೆಯಲ್ಲಿತ್ತು. ತಲಾಕ್‍ನ ಬಗ್ಗೆ, ಪರ್ದಾದ ಬಗ್ಗೆ, ಮಹಿಳಾ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳ ಬಗ್ಗೆ.. ಮುಖ್ಯವಾಹಿನಿಯ ಮಾಧ್ಯಮಗಳಲ್ಲೇ ತೀರಾ ಕಡಿಮೆ ವಿಷಯಗಳು ಬರುತ್ತಿದ್ದ ಸಂದರ್ಭಗಳಾಗಿದ್ದುವು. ಇಂಥ ಹೊತ್ತಲ್ಲಿ ಬಿ.ಎಸ್ಸಿ. ಪದವೀಧರನಾದ ನೂರ್ ಮುಹಮ್ಮದ್‍ರು ಸರಕಾರಿಯೋ ಖಾಸಗಿಯೋ ನೌಕರ ಆಗುವುದಕ್ಕಿಂತ ಜ್ಞಾನ ಕ್ಷೇತ್ರದಲ್ಲಿರುವ ಈ ಕತ್ತಲೆಗೆ ಬೆಳಕು ಚೆಲ್ಲುವ ಲೇಖಕ ಆಗಲು ನಿರ್ಧರಿಸಿದರು. ಅದಕ್ಕಾಗಿ ಸನ್ಮಾರ್ಗ ಪತ್ರಿಕೆಯನ್ನು ದೀವಟಿಕೆಯಾಗಿ ಬಳಸಿಕೊಂಡರು. ಸನ್ಮಾರ್ಗ ಪತ್ರಿಕೆಯ ಆರಂಭದ ಐದು ವರ್ಷಗಳಲ್ಲಿ ಅವರು ಸಂಬಳವನ್ನೇ ಪಡೆದಿರಲಿಲ್ಲ. ಪವಿತ್ರ ಕುರ್‍ಆನಿನ ಮೇಲೆ ಅವರಿಗೆಷ್ಟು ಪ್ರೀತಿಯಿತ್ತು ಮತ್ತು ಸಮಾಜಕ್ಕೆ ಅದನ್ನು ತಲುಪಿಸಬೇಕೆಂಬ ಕಾಳಜಿಯಿತ್ತು ಅಂದರೆ, ಮೊನ್ನೆ ನಿಧನರಾಗುವ ವೇಳೆ ಕುರ್‍ಆನ್ ವ್ಯಾಖ್ಯಾನದ (ತಫ್ಹೀಮುಲ್ ಕುರ್‍ಆನ್) 5ನೇ ಭಾಗದ ಅನುವಾದದಲ್ಲಿದ್ದರು. ಮಂಗಳೂರಿನ ಪ್ರಕಾಶನ ಸಂಸ್ಥೆಯಾದ ಶಾಂತಿ ಪ್ರಕಾಶನಕ್ಕಾಗಿ ಅವರು ಅನುವಾದಿಸಿದ 50 ಕೃತಿಗಳಲ್ಲಿ, 1. ವೇದ ಗ್ರಂಥಗಳಲ್ಲಿ ಪ್ರವಾದಿ ಮುಹಮ್ಮದ್, 2. ಇಸ್ಲಾಮ್ ಸಂಶಯಗಳ ಸುಳಿಯಲ್ಲಿ, 3. ಭಾರತೀಯ ಸಂಸ್ಕ್ರಿತಿಯ ಅಂತರ್ಧಾರೆಗಳು, 4. ಮಹಿಳೆ ಇಸ್ಲಾಮಿನಲ್ಲಿ, 5. ತಲಾಕ್, 6. ಸತ್ಯ ವಿಶ್ವಾಸ ಮುಂತಾದುವುಗಳೂ ಸೇರಿವೆ. ಅವರ ಬರಹವಿಲ್ಲದೇ ಸನ್ಮಾರ್ಗ ಪತ್ರಿಕೆಯ ಒಂದೇ ಒಂದು ಸಂಚಿಕೆ ಕಳೆದ 37 ವರ್ಷಗಳಲ್ಲಿ ಈ ವರೆಗೂ ಪ್ರಕಟವಾಗಿಲ್ಲ ಎಂಬುದೇ ಅವರ ಅಕ್ಷರ ಪ್ರೇಮಕ್ಕೆ ಮತ್ತು ಸಾಮಾಜಿಕ ಬದ್ಧತೆಗೆ ನೀಡಬಹುದಾದ ಬಹುದೊಡ್ಡ ಪುರಾವೆ.
   ಭಾಷೆಯ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದವರು ನೂರ್ ಮುಹಮ್ಮದ್. ಕನ್ನಡ ಭಾಷೆಯಲ್ಲಿ ಅವರಿಗೆಷ್ಟು ಪ್ರಭುತ್ವ ಇತ್ತೋ ಅಷ್ಟೇ ಮಲಯಾಳಂ ಭಾಷೆಯಲ್ಲಿ ಪಾಂಡಿತ್ಯವೂ ಇತ್ತು. ಕನ್ನಡ ಭಾಷೆಯನ್ನು ಅತ್ಯಂತ ಖಚಿತವಾಗಿ ಮತ್ತ ನಿಖರವಾಗಿ ಹೇಗೆ ಬಳಸಬಹುದು ಎಂಬುದಕ್ಕೆ ನೂರ್ ಮುಹಮ್ಮದ್ ಒಂದು ಅತ್ಯುತ್ತಮ ಉದಾಹರಣೆ. ಅವರು ಕನ್ನಡಕ್ಕೆ ಹಲವಾರು ಪದಗಳನ್ನು ಪರಿಚಯಿಸಿದರು. ಮಲಯಾಳಂನ ಪದವೊಂದಕ್ಕೆ ಅಷ್ಟೇ ಚೆಲುವಾದ ಪದವೊಂದು ಅವರ ಜ್ಞಾನಕೋಶದಲ್ಲಿ ಅರಳದೇ ಹೋದರೆ, ಸಂಪಾದಕೀಯ ಮಂಡಳಿಯ ಇತರ ಸಹೋದ್ಯೋಗಿಗಳಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಸನ್ಮಾರ್ಗ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತಪ್ಪು ಪದಗಳನ್ನು ಹೆಕ್ಕಿ, ಎತ್ತಿ ಹೇಳಿ ನಿಖರತೆಗೆ ಮತ್ತು ಸ್ಪಷ್ಟತೆಗೆ ಒತ್ತು ಕೊಡುವಂತೆ ಎಚ್ಚರಿಸುತ್ತಿದ್ದರು. ಅನುವಾದವೆಂಬುದು ಬರೇ ಪದಗಳ ಕನ್ನಡೀಕರಣವಲ್ಲ, ಅಲ್ಲಿ ಭಾವ, ಆವೇಶ, ಸ್ಪಷ್ಟತೆ ಮತ್ತು ಖಚಿತತೆ ಇರಬೇಕು ಅನ್ನುತ್ತಿದ್ದರು. ಯಾವುದೇ ಬರಹವನ್ನು ಅನುವಾದಿಸುವ ಮೊದಲು ಇಡೀ ಬರಹವನ್ನು ಪೂರ್ಣವಾಗಿ ಓದಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಅನುವಾದದ ಸಂದರ್ಭದಲ್ಲಿ ಮೂಲ ಕೃತಿಗೆ ಚ್ಯುತಿ ಬರದಂತೆ, ಅದರ ಸೌಂದರ್ಯಕ್ಕೆ ಹಾನಿ ತಟ್ಟದಂತೆ ಜಾಗರೂಕರಾಗಿರಬೇಕು ಎಂದು ತಿದ್ದುತ್ತಿದ್ದರು. ಅವರ ಅನುವಾದದಲ್ಲಿ ಯಾವಾಗಲೂ ಈ ಶಿಷ್ಟತೆ ಸದಾ ಇರುತ್ತಿದ್ದುವು. ಅನುವಾದ ಕ್ಷೇತ್ರದಲ್ಲಿ ತರಬೇತಿ ಪಡೆದು, ಪದವಿಯ ಮೇಲೆ ಪದವಿ ಪಡೆದು ಬಂದವರನ್ನು ಅಚ್ಚರಿ ಗೊಳಿಸುವಷ್ಟು ಅವರಲ್ಲಿ ಪದ ಸಂಪತ್ತು ಮತ್ತು ಪದ ಸೌಂದರ್ಯವಿತ್ತು. ಅವರು ಅನುವಾದದಲ್ಲಿ ‘ನೂರ್’ತನ(ತಮ್ಮತನ) ವನ್ನು ಸೃಷ್ಟಿಸಿದ್ದರು. ‘ಇದು ನೂರ್ ಮುಹಮ್ಮದ್‍ರ ಅನುವಾದ' ಎಂದು ಹೇಳಬಹುದಾದಷ್ಟು ವಿಶಿಷ್ಟತೆ ಅವರ ಅನುವಾದಕ್ಕಿತ್ತು. ‘ಭಾರತೀಯ ಸಂಸ್ಕøತಿಯ ಅಂತರ್ಧಾರೆಗಳು’ ಎಂಬ ಕೃತಿಯನ್ನು ಬಿಡುಗಡೆಗೊಳಿಸುತ್ತಾ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ  ಡಾ| ಸಿದ್ಧಲಿಂಗಯ್ಯ ಕಳೆದ ವರ್ಷ ಬೆಂಗಳೂರಿನಲ್ಲಿ ‘ನೂರ್’ತನವನ್ನು ಹೀಗೆ ವರ್ಣಿಸಿದ್ದರು,
   “ಇದು ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಲಾದ ಕೃತಿ ಎಂದು ಅನಿಸುತ್ತಲೇ ಇಲ್ಲ. ಕನ್ನಡದಲ್ಲೇ ಸ್ವತಂತ್ರವಾಗಿ ರಚಿತಗೊಂಡ ಕೃತಿಯಂತೆ ಭಾಸವಾಗುತ್ತಿದೆ. ಮಲಯಾಳಂ ಭಾಷೆಯ ಛಾಪು ಇಲ್ಲದ, ಅಚ್ಚ ಕನ್ನಡ ಶೈಲಿಯಲ್ಲಿ ಪ್ರಕಟಗೊಂಡಿರುವ ಕೃತಿ ಇದು” ಎಂದಿದ್ದರು.
   ಅನುವಾದ ಜಗತ್ತು ತೀರಾ ಹಳೆಯದು. ಕ್ರಿಸ್ತಪೂರ್ವ 3-1ನೇ ಶತಮಾನದ ಆರಂಭದಲ್ಲೇ ಯಹೂದಿ ಧರ್ಮಗ್ರಂಥವು ಅಲೆಕ್ಸಾಂಡ್ರಿಯಾದಲ್ಲಿ ಗ್ರೀಕ್ ಭಾಷೆಗೆ ಅನುವಾದಗೊಂಡಿದೆ ಎಂದು ಹೇಳಲಾಗುತ್ತಿದೆ. ಯಹೂದಿಯರಲ್ಲಿ ತಮ್ಮ ಪರಂಪರಾಗತ ಭಾಷೆ ಕಾಣೆಯಾಗುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು. ಆ ನಂತರ ಬೌದ್ಧರು ಮತ್ತು ಅರಬರು ಈ ಅನುವಾದ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟರು. ಬೌದ್ಧರ ತಾಂಗುಟ್ ಸಾಮ್ರಾಜ್ಯವಂತೂ ಈ ಕೆಲಸವನ್ನು ಅತ್ಯಂತ ಮುತುವರ್ಜಿಯಿಂದ ನಡೆಸಿತು. 13ನೇ ಶತಮಾನದಲ್ಲಿ ಅಲ್ಫಾನ್ಸೋ ರಾಜನು ಸ್ಪೇನ್‍ನ ಟೊಲೊಡೋದಲ್ಲಿ ‘ಸ್ಕೂಲ್ ಆಫ್ ಟ್ರಾನ್ಸ್‍ಲೇಶನ್’ ಅನ್ನು ಸ್ಥಾಪಿಸಿದ. ಇದೇ ಸಂದರ್ಭದಲ್ಲಿ ಕಾರ್ಡೋವಾದಲ್ಲಿ ಇಸ್ಲಾವಿೂ ಫಿಲಾಸಫಿಯನ್ನು ಲ್ಯಾಟಿನ್ ಭಾಷೆಗೆ ಅನುವಾದಿಸುವ ಪ್ರಯತ್ನಗಳೂ ನಡೆದುವು. ಇಂಥ ಅನುವಾದಗಳೇ ಯುರೋಪಿನ ವೈಜ್ಞಾನಿಕ ಮತ್ತು ಸಾಂಸ್ಕøತಿಕ ಬೆಳವಣಿಗೆಗೆ ದೇಣಿಗೆಯನ್ನು ನೀಡಿದುವು. 1453ರಲ್ಲೇ ಅನುವಾದದಲ್ಲಿ ಬಳಕೆಯಾಗಬೇಕಾದ ಭಾಷೆ, ಶೈಲಿಗಳ ಬಗ್ಗೆ ಚರ್ಚೆಗಳೆದ್ದಿದ್ದುವು. ಪ್ಲೇಟೋ, ಅರಿಸ್ಟಾಟಲ್‍ರ ಸಾಹಿತ್ಯಿಕ ಭಾಷೆಗೆ ಅನುವಾದಿತ ಭಾಷೆಯಲ್ಲಿ ನ್ಯಾಯ ಕೊಡಬೇಕೆಂಬ ಬಗ್ಗೆ ಓದುಗ ವೃಂದದಿಂದ ಆಗ್ರಹಗಳು ಕೇಳಿಬಂದಿದ್ದುವು. 20ನೇ ಶತಮಾನದಲ್ಲಿ ಬೆಂಜಮಿನ್ ಜ್ಯೂವೆಟ್ ಎಂಬವರು ಪ್ಲೇಟೋರನ್ನು ಸರಳ ಭಾಷೆಯಲ್ಲಿ ಅನುವಾದಿಸಿದರು. ಅವರು ಭಾಷಾ ಶೈಲಿಗಿಂತ ನಿಖರತೆಗೆ ಒತ್ತು ಕೊಟ್ಟರು. ನಿಜವಾಗಿ, ರಶ್ಯನ್ ಮೂಲದ ರೋಮನ್ ಜಾಕೊಬ್ಸ್ ಎಂಬವರು 1959ರಲ್ಲಿ ಮಂಡಿಸಿದ ‘ಆನ್ ಲಿಂಗ್ವಿಸ್ಟಿಕ್ ಆಸ್ಪೆಕ್ಟ್ಸ್ ಆಫ್ ಟ್ರಾನ್ಸ್‍ಲೇಶನ್’ ಎಂಬ ಪ್ರಬಂಧವಾಗಲಿ, ಜೇಮ್ಸ್ ಮೆರಿಲ್‍ರ ‘ಲೋಸ್ಟ್ ಇನ್ ಟ್ರಾನ್ಸ್‍ಲೇಶನ್’ ಎಂಬ ಬರಹವಾಗಲಿ ಅಥವಾ 1997ರಲ್ಲಿ ಡಗ್ಲಾಸ್ ಹೋಪ್‍ಸ್ಟೌಡ್‍ಚರ್ ಅವರು ಬರೆದ ಕೃತಿಯಾಗಲಿ ಎಲ್ಲವೂ ಅನುವಾದದ ಬಗೆಗಿನ ಸಮಸ್ಯೆಗಳ ಕುರಿತೇ ಆಗಿತ್ತು. ಒಂದು ಭಾಷೆಯ ಕೃತಿಯು ಇನ್ನೊಂದು ಭಾಷೆಗೆ ತರ್ಜುಮೆಗೊಳ್ಳುವಾಗ ಮೂಲ ಕೃತಿಗೆ ಸಂಪೂರ್ಣ ನ್ಯಾಯ ಸಲ್ಲಿಸಲು ಸಾಧ್ಯವೇ ಎಂಬ ಚರ್ಚೆ, ಸಂವಾದಗಳು ಅಂದಿನಿಂದ ಇಂದಿನವರೆಗೂ ನಡೆಯುತ್ತಿವೆ. ಇಂಥ ಅನುಮಾನಗಳನ್ನು ಸಮರ್ಥಿಸುವಂತೆ ಅನೇಕಾರು ಬರಹಗಳೂ ಪ್ರಕಟಗೊಂಡಿವೆ. 1143ರಲ್ಲಿ ಪವಿತ್ರ ಕುರ್‍ಆನನ್ನು ರಾಬರ್ಟಸ್ ಕೆಟನ್ಸಿಸ್ ಎಂಬವ ಲ್ಯಾಟಿನ್ ಭಾಷೆಗೆ ಅನುವಾದಿಸಿದ್ದನ್ನು ಸಾಮಾನ್ಯವಾಗಿ ಇದಕ್ಕೆ ಉದಾಹರಣೆಯಾಗಿ ನೀಡಲಾಗುತ್ತದೆ. ಆತ ಅತ್ಯಂತ ತಪ್ಪುತಪ್ಪಾಗಿ ಮತ್ತು ತದ್ವಿರುದ್ಧ ಅರ್ಥ ಬರುವಂತೆ ಕುರ್‍ಆನನ್ನು ಅನುವಾದಿಸಿದ್ದ. ಆ ಅನುವಾದದ ಆಧಾರದಲ್ಲೇ ಯುರೋಪಿಯನ್ ಅನುವಾದಕರು ಪವಿತ್ರ ಕುರ್‍ಆನನ್ನು ಇತರ ಭಾಷೆಗಳಿಗೆ ಅನುವಾದಿಸಿದ್ದೂ ನಡೆಯಿತು. ರೋಮ್‍ನಲ್ಲಿ ಶಿಕ್ಷಕನಾಗಿದ್ದ ಲುಡವಿಕೋ ಮ್ಯಾರ್ರಾಸ್ಸಿ ಕೂಡ ಅವರಲ್ಲಿ ಒಬ್ಬ. ಒಂದು ರೀತಿಯಲ್ಲಿ, ಅನುವಾದಿತ ಕೃತಿಗಳ ಮೇಲೆ ಮತ್ತು ಅವು ಬೀರಬಹುದಾದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಮೇಲೆ ಜಾಗತಿಕ ಸಾಹಿತ್ಯ ಕ್ಷೇತ್ರವು ನಡೆಸಿದ ಚರ್ಚೆಯನ್ನು ಎದುರಿಟ್ಟುಕೊಂಡು ನೋಡಿದರೆ, ನೂರ್ ಮುಹಮ್ಮದ್‍ರು ಆ ಚರ್ಚೆಯ ವ್ಯಾಪ್ತಿಯೊಳಗೆ ಸೇರಿಕೊಳ್ಳಲೇಬೇಕಾದ ಮತ್ತು ಅವರಿಲ್ಲದ ಚರ್ಚೆಯು ಅಪೂರ್ಣ ಅನ್ನಬಹುದಾದ ವ್ಯಕ್ತಿತ್ವವಾಗಿ ಕಾಣಿಸುತ್ತಾರೆ. ಅವರು ಅನುವಾದವನ್ನು ಒಂದು ಧ್ಯಾನವಾಗಿ ಸ್ವೀಕರಿಸಿದವರು. ಅದರಲ್ಲೇ ಆಧ್ಯಾತ್ಮ ಮತ್ತು ತಾಧ್ಯಾತ್ಮವನ್ನು ಕಂಡುಕೊಂಡವರು. ಅದಕ್ಕೊಂದು ನಿಖರತೆ ಮತ್ತು ಖಚಿತತೆಯನ್ನು ದೊರಕಿಸಿಕೊಟ್ಟವರು. ಅನುವಾದವೆಂಬುದು ಭಾಷಾ ಬದಲಾವಣೆಯಲ್ಲ ಎಂಬುದಾಗಿ ಅಧಿಕಾರಯುತವಾಗಿ ಘೋಷಿಸಿದವರು. ಅವರು ಅನುವಾದಕ್ಕಾಗಿ ಅನುವಾದ ಮಾಡುತ್ತಿದ್ದುದಲ್ಲ. ಅದವರ ತತ್ವವಾಗಿತ್ತು. ಸಿದ್ಧಾಂತವಾಗಿತ್ತು. ಜೀವನದ ಗುರಿಯಾಗಿತ್ತು. ಅವರು ಅನುವಾದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಕೃತಿಯು ಆಯಾಕಾಲದ ಸಾಮಾಜಿಕ ಅಗತ್ಯಗಳಾಗಿರುತ್ತಿತ್ತು. ದುಡ್ಡಿಗಾಗಿಯೋ ಪ್ರಶಂಸೆಗಾಗಿಯೋ ಅವರು ಲೇಖನಿ ಎತ್ತಿಕೊಂಡದ್ದೇ ಇಲ್ಲ. ವೇದಿಕೆ ಹತ್ತಿದ್ದಿಲ್ಲ. ಪ್ರಶಸ್ತಿ-ಪುರಸ್ಕಾರಗಳಿಗೆ ಕೊರಳೊಡ್ಡಿದ್ದಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿದಿದ್ದರೂ ಸಾಹಿತ್ಯ ವೇದಿಕೆಯ ಪೋಟೋ ಆಲ್ಬಂಗಳಲ್ಲಿ ಅವರಿಲ್ಲ. ಅವರೇ ಅನುವಾದಿಸಿದ ಕೃತಿಗಳೆಲ್ಲ ವಿವಿಧ ವೇದಿಕೆಗಳಲ್ಲಿ ವಿವಿಧ ಸಾಹಿತಿಗಳ ಕೈಯಲ್ಲಿ ಬಿಡುಗಡೆಗೊಳ್ಳುತ್ತಿರುವಾಗಲೆಲ್ಲಾ ವೇದಿಕೆಯ ಕೆಳಗೆ ಕೂತು ತಣ್ಣಗೆ ಮತ್ತು ಮೌನವಾಗಿ ಅವನ್ನೆಲ್ಲ ಕಣ್ತುಂಬಿಕೊಂಡು ಅಪರಿಚಿತರಂತೆ ಹೊರಟು ಹೋಗುವರು. ‘ತಾನು ಮೃತಪಟ್ಟರೆ ಸಂತಾಪ ಸೂಚಕ ಸಭೆ ನಡೆಸಬಾರದು’ ಎಂದು ಉಯಿಲು ಹೇಳುವಷ್ಟು ಸಾಮಾನ್ಯ ವ್ಯಕ್ತಿತ್ವ ಅವರದು. ಅವರು ಏನೆಲ್ಲ ಬರೆದರೋ ಅವನ್ನೇ ಉಂಡರು, ಬದುಕಿದರು. ಬಿಳಿ ಶರ್ಟು, ಬಿಳಿ ಪಂಚೆ, ಬಿಳಿ ಗಡ್ಡ, ಕನ್ನಡಕ, ಭರವಸೆಯ ಕಣ್ಣು, ಖಚಿತ ಮಾತು.. ಇವೇ ನೂರ್ ಮುಹಮ್ಮದ್. ಅವರೋರ್ವ ಪ್ರಖರ ಸಿದ್ಧಾಂತವಾದಿ. ಬರೆದಂತೆ ಬದುಕಿದರು.
   ಇಂದಿನ ಸಾಹಿತ್ಯಿಕ ಪ್ರಪಂಚದಲ್ಲಿ ಅನುವಾದಕರ ಪಟ್ಟಿ ಬಹಳ ಉದ್ದವಿದೆ. ಆದರೆ, ಇವರಲ್ಲಿ ‘ನೂರ್ ಮುಹಮ್ಮದ್'ರನ್ನು ಹುಡುಕ ಹೊರಟರೆ ವಿಷಾದವೇ ಎದುರಾಗುತ್ತದೆ. ನಿಜವಾಗಿ, ನೂರ್ ಮುಹಮ್ಮದ್‍ರ ವಿಶೇಷತೆಯೇ ಇದು. ಎಲ್ಲರೂ ಅನುವಾದಕರೇ. ಆದರೆ ಎಲ್ಲರೂ ನೂರ್ ಮುಹಮ್ಮದ್ ಅಲ್ಲ. ಆದ್ದರಿಂದಲೇ, ನೂರ್ ಮುಹಮ್ಮದ್‍ರ ಹೆಸರಲ್ಲಿ ರಾಜ್ಯ ಸರಕಾರವು ಅನುವಾದ ಪ್ರಶಸ್ತಿಯೊಂದನ್ನು ಸ್ಥಾಪಿಸುವ ಅಗತ್ಯವಿದೆ. ಇಂಥ ಓರ್ವ ಅನುವಾದಕ ಈ ಜಗತ್ತಿನಲ್ಲಿ ಇದ್ದು ಹೊರಟು ಹೋಗಿದ್ದಾರೆ ಎಂಬುದನ್ನು ಹೊಸ ತಲೆಮಾರಿನ ಅನುವಾದಕರಿಗೆ ಗೊತ್ತು ಮಾಡಬೇಕಾಗಿದೆ. ಪಂಚೆ, ಷರ್ಟು, ಮನಸ್ಸು, ಲೇಖನಿ, ಭಾಷೆ, ಮಾತು.. ಎಲ್ಲವೂ ಯಾವ ಸಂದರ್ಭದಲ್ಲೂ ಬಿಕರಿಗೊಳ್ಳಲು ಸಿದ್ಧವಾಗಿರುವ ಮತ್ತು ಬಿಕರಿಯಾಗುತ್ತಿರುವ ಇಂದಿನ ದಿನಗಳಲ್ಲಿ ‘ಬಿಕರಿಯಾಗದೇ’ ಹೊರಟುಹೋದ ಅವರನ್ನು ಸಾಹಿತ್ಯಿಕ ಜಗತ್ತಿನಲ್ಲಿ ನಾವು ಸದಾ ಉಳಿಸಿಕೊಳ್ಳಬೇಕಾಗಿದೆ. ನೂರ್ ಮುಹಮ್ಮದ್‍ರನ್ನು ಉಳಿಸಿಕೊಳ್ಳುವುದೆಂದರೆ ನಾವು ಮಾರಾಟವಾಗದೇ ಇರುವುದು; ನಮ್ಮ ಲೇಖನಿ ಮತ್ತು ಮನಸ್ಸು ‘ಬಿಕರಿ’ ಪ್ರಪಂಚವನ್ನು ಧಿಕ್ಕರಿಸಿ ಬದುಕುವುದು. ಇದು ಅಸಾಧ್ಯವಲ್ಲ. ಯಾಕೆಂದರೆ, ನೂರ್ ಮುಹಮ್ಮದ್ ಇದನ್ನು ಸಾಧಿಸಿ ತೋರಿಸಿದ್ದಾರೆ. 

Tuesday, August 12, 2014

ಮುಹಮ್ಮದ್ ಮುಸ್ಲಿಯಾರ್ ರ ಮಗಳ ಮದುವೆ

   “ನನ್ನ ಮಗಳಿಗೆ ವಿವಾಹ ನಿಶ್ಚಯ ಆಗಿದೆ ಇವನೇ” - ಕಳೆದವಾರ ಉಭಯ ಕುಶಲೋಪರಿಯ ಮಧ್ಯೆ ಮುಹಮ್ಮದ್
ಮುಸ್ಲಿಯಾರ್ (ಹೆಸರು ಬದಲಿಸಲಾಗಿದೆ) ನನ್ನೊಂದಿಗೆ ಹೇಳಿದರು. ನಾವಿಬ್ಬರೂ ಅಚಾನಕ್ ಆಗಿ ಮಧ್ಯಾಹ್ನ ಹೊಟೇಲಿನಲ್ಲಿ ಭೇಟಿಯಾಗಿದ್ದೆವು. ಸಂಬಂಧದಲ್ಲಿ ಅವರು ನನಗೆ ಮಾವ ಆಗುತ್ತಾರೆ. ಅಭಿನಂದಿಸಿದೆ. ಆದರೆ ನನ್ನ ಅಭಿನಂದನೆಯನ್ನು ಅಷ್ಟೇ ಸ್ಫೂರ್ತಿಯಿಂದ ಸ್ವೀಕರಿಸುವ ಉತ್ಸಾಹ ಅವರಲ್ಲಿ ಕಾಣಿಸಲಿಲ್ಲ. ಖುಷಿ ಮತ್ತು ಬೇಸರ ಎರಡೂ ಬೆರೆತ ಮುಖಭಾವ. ನನ್ನ ಅಚ್ಚರಿಯನ್ನು ಗುರುತಿಸಿದವರಂತೆ, ‘ಇಪ್ಪತ್ತು ಪವನ್ ಕೊಡಬೇಕು ಕಾದರ್' ಅಂದರು. ನಾನು ತುಸು ಪ್ರತಿಭಟನೆಯ ಧನಿಯಲ್ಲಿ ಮಾತಾಡಿದೆ. ‘ಈ ಕಾಲದಲ್ಲಿ ವರದಕ್ಷಿಣೆಯಾ? ಯಾಕೆ ಒಪ್ಪಿಕೊಂಡಿರಿ ನೀವು' ಎಂದೆ. ಅವರು ಹೇಳಿದರು, ‘ಒಪ್ಪಿಕೊಳ್ಳದೇ ಇನ್ನೇನು ಮಾಡಕ್ಕಾಗುತ್ತೆ ಇವನೇ? ಬಡವರ ಮನೆಯ ಮಕ್ಕಳಿಗೆ ಹೆಚ್ಚು ಅವಕಾಶಗಳು ಇಲ್ಲವಲ್ಲ. ಶ್ರೀಮಂತರ ಮಧ್ಯೆ ಇಂಥ ತಾಪತ್ರಯಗಳು ಕಡಿಮೆ. ಅಲ್ಲಿ ಪ್ರತಿಭಟನೆ, ನಿರಾಕರಣೆಗಳಿಗೆ ಅವಕಾಶವೂ ಇರುತ್ತೆ. ಆದರೆ ನಮ್ಮಂಥವರು ಒಪ್ಪಿಕೊಳ್ಳದಿದ್ದರೆ ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕಾಗುತ್ತೆ ನೋಡು. ಹಾಗಂತ, ಜಮಾಅತೆ ಇಸ್ಲಾವಿೂ, ಸಲಫಿಗಳಲ್ಲಿರುವ ಧೈರ್ಯ (ವರದಕ್ಷಿಣೆರಹಿತ ವಿವಾಹವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದು) ನಮ್ಮಲ್ಲಿ ಎಲ್ಲಿದೆ ಹೇಳು?”
   ನಿಜವಾಗಿ, ಈ ವಾರ ವರದಕ್ಷಿಣೆಯ ಕುರಿತಾಗಿ ಲೇಖನ ಬರೆಯಲು ನಾನು ಉದ್ದೇಶಿಸಿಯೇ ಇರಲಿಲ್ಲ. ವರದಕ್ಷಿಣೆಯ ಸುತ್ತ ಈ ಸಮಾಜದಲ್ಲಿ ಈಗಾಗಲೇ ಅನೇಕಾರು ಚರ್ಚೆಗಳಾಗಿವೆ. ಸಭೆ, ವಿಚಾರಗೋಷ್ಠಿ, ಸಂವಾದಗಳು ನಡೆದಿವೆ. ವರದಕ್ಷಿಣೆಯನ್ನು ಖಂಡಿಸಿ ಜಾಥಾಗಳು ನಡೆದಿವೆ. ಮಹರ್ ವ್ಯವಸ್ಥೆಯನ್ನು ಜಾಗೃತಗೊಳಿಸುವ ಕಾರ್ಯಕ್ರಮಗಳೂ ನಡೆದಿವೆ. ‘ಸನ್ಮಾರ್ಗ’ದಲ್ಲೇ ವರದಕ್ಷಿಣೆಯ ಸುತ್ತ ಓದುಗರ ಚರ್ಚೆಯನ್ನು ನಡೆಸಲಾಗಿದೆ. ಅನೇಕಾರು ಬರಹಗಳನ್ನೂ ಪ್ರಕಟಿಸಲಾಗಿದೆ. ಆದರೂ, ಈ ಪಿಡುಗು ಸಮಾಜದಿಂದ ತೊಲಗುತ್ತಿಲ್ಲ ಅಂದರೆ ಏನೆನ್ನಬೇಕು? ಅಂದಹಾಗೆ, ಉಸ್ತಾದರಿಗೂ (ಮುಸ್ಲಿಯಾರ್) ಜನಸಾಮಾನ್ಯರಿಗೂ ನಡುವೆ ಖಂಡಿತ ವ್ಯತ್ಯಾಸ ಇದೆ. ಉಸ್ತಾದರಿಗೆ ಸಮಾಜದಲ್ಲಿ ಒಂದು ಬಗೆಯ ವಿಶೇಷ ಗೌರವವಿದೆ. ಇತರರಿಗೆ ಸಲಾಮ್ ಹೇಳದವರು ಕೂಡ ಉಸ್ತಾದರನ್ನು ಕಂಡ ಕೂಡಲೇ ಸಲಾಮ್ ಹೇಳುತ್ತಾರೆ. ಎದ್ದು ನಿಲ್ಲುತ್ತಾರೆ. ಮುಖಭಾವಗಳು ಬದಲಾಗುತ್ತವೆ. ಇಸ್ಲಾಮಿನ ತಿಳುವಳಿಕೆಯಿರುವ ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡುವವರೆಂಬ ನೆಲೆಯಲ್ಲಿ ಸಮಾಜ ಅವರನ್ನು ಅತ್ಯಂತ ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುತ್ತದೆ. ಆದರೆ ಅಂಥವರಲ್ಲೇ ವರದಕ್ಷಿಣೆಯ ಬೇಡಿಕೆ ಇಡಲಾಗುತ್ತದೆಂದರೆ? ಅವರ ಧಾರ್ಮಿಕ ಜ್ಞಾನ ಮತ್ತು ಸಾಮಾಜಿಕ ಸ್ಥಾನ-ಮಾನವನ್ನು ಓರ್ವ ‘ವರ' ಮಣ್ಣುಪಾಲು
ಮಾಡುತ್ತಾನೆಂದರೆ? ಸಾಮಾಜಿಕ ಅನಿಷ್ಠಗಳ ಬಗ್ಗೆ ಧಾರಾಳ ಮಾತಾಡಿದ ಉಸ್ತಾದರನ್ನೇ ಒಂದು ‘ಅನಿಷ್ಠ’ ಅಸಹಾಯಕ ವಾಗಿಸಿ ಬಿಡುತ್ತದೆಂದರೆ? ಯಾರು ಇದಕ್ಕೆ ಕಾರಣ? ಹೆಣ್ಣಿನ ತಂದೆ ಎನಿಸಿಕೊಳ್ಳುವುದು ಸಾಮಾಜಿಕ ಗೌರವವನ್ನೇ ಕುಗ್ಗಿಸುವಷ್ಟು ಭೀಕರ ಅಪರಾಧವೇ? ಯಾರು ಇಂಥದ್ದೊಂದು ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿಸಿರುವುದು? ಜನಸಾಮಾನ್ಯರೇ, ಶ್ರೀಮಂತರೇ, ಉಸ್ತಾದರೇ, ಕಾಝಿಗಳೇ, ಸಂಘಟನೆಗಳೇ? ಒಂದು ಕಡೆ ಭ್ರೂಣಹತ್ಯೆಯ ವಿರುದ್ಧ ನಮ್ಮ ಮಸೀದಿಯ ಮೈಕುಗಳು ಧಾರಾಳ ಮಾತಾಡುತ್ತವೆ. ಭ್ರೂಣಹತ್ಯೆಗೀಡಾದ ಮಗುವಿನಲ್ಲಿ ನಾಳೆ ಅಲ್ಲಾಹನು ಅದಕ್ಕೆ ಕಾರಣರಾದವರ ಹೆಸರು ಹೇಳಿಸಿ ಶಿಕ್ಷಿಸುತ್ತಾನೆ (ಪವಿತ್ರ ಕುರ್‍ಆನ್: 81:8) ಎಂದು ಬೆದರಿಸಲಾಗುತ್ತದೆ. ಹೆಣ್ಣು ಸಮಾಜಕ್ಕೆ ಎಷ್ಟು ಪ್ರಯೋಜನಕಾರಿ ಎಂಬ ವ್ಯಾಖ್ಯಾನಗಳೂ ನಡೆಯುತ್ತಿವೆ. ಇಬ್ಬರು ಹೆಣ್ಣು ಮಕ್ಕಳನ್ನು ಉತ್ತಮ ಸಂಸ್ಕಾರ ಕೊಟ್ಟು ಬೆಳೆಸಿ, ವಿವಾಹ ಮಾಡಿಸಿಕೊಡುವ ಹೆತ್ತವರಿಗೆ ಸ್ವರ್ಗದ ವಾಗ್ದಾನವಿದೆ ಎಂದು ಹೇಳಲಾಗುತ್ತದೆ. ಪ್ರವಾದಿ ಮುಹಮ್ಮದ್‍ರಿಗೆ(ಸ) ಹೆಣ್ಣು ಮಕ್ಕಳು ಮಾತ್ರವೇ ಇದ್ದುದನ್ನು ನೆನಪಿಸಿ, ಹೆಣ್ಣು ಮಕ್ಕಳಿಗಾಗಿ ಸಂತಸಪಡಿ ಎನ್ನಲಾಗುತ್ತದೆ. ಆದರೆ, ಇನ್ನೊಂದು ಕಡೆ ಹೆಣ್ಣನ್ನು ಹೊರೆ ಎಂದೇ ಪರಿಗಣಿಸಲಾಗುತ್ತಿದೆ. ಹೆಣ್ಣು ಮಗು ಹುಟ್ಟಿದ ಕೂಡಲೇ ಅದರ ಮದುವೆಗಾಗಿ ಹಣ ಸಂಗ್ರಹಿಸತೊಡಗಬೇಕಾದ ಒತ್ತಡವನ್ನು ಹೆತ್ತವರ ಮೇಲೆ ಹೊರಿಸಲಾಗುತ್ತಿದೆ. ಯಾಕೆ ಈ ದ್ವಂದ್ವ? ನಮ್ಮ ಭಾಷಣಗಳಿಗೂ ವರ್ತನೆಗಳಿಗೂ ಯಾಕಿಷ್ಟು ಅಂತರ? ಭಾಷಣಗಳು ಎಷ್ಟು ಕರ್ಣಾನಂದಕರವೋ ಪ್ರಾಯೋಗಿಕವಾಗಿ ಅದು ಅಷ್ಟೇ ಕರ್ಕಶವೆನಿಸಿರುವುದೇಕೆ? ಹೀಗೆ ಭಾಷಣ ಮಾಡುವ ಉಸ್ತಾದರನ್ನೇ ಹೆಣ್ಣು ಬೇಟೆಯಾಡುತ್ತಿರುವುದೇಕೆ? ಹೆಣ್ಣು ಮಕ್ಕಳನ್ನು ಪ್ರೀತಿಸಿದ ಪ್ರವಾದಿಯವರ ಅನುಯಾಯಿಗಳಿಗೆ ಹೆಣ್ಣು ಮಕ್ಕಳು ಭಾರ ಅನಿಸಿರುವುದು ಯಾವುದರ ಸೂಚನೆ? ಇವೆಲ್ಲವನ್ನು ಇಟ್ಟುಕೊಂಡು ನಾವು, ಭ್ರೂಣಹತ್ಯೆ ಮಾಡಬೇಡಿ ಎಂದು ಕರೆ ಕೊಡುತ್ತೇವಲ್ಲ, ಹತ್ಯೆಗೀಡಾದ ಮಗುವಿನಲ್ಲೇ ಈ ಬಗ್ಗೆ ಪ್ರಶ್ನಿಸಿ ಶಿಕ್ಷೆ ನೀಡಲಾಗುತ್ತದೆ ಅನ್ನುತ್ತೇವಲ್ಲ ಮತ್ತು ಜೀವಂತವಾಗಿ ಹೆಣ್ಣು ಮಕ್ಕಳನ್ನು ಹೂಳುತ್ತಿದ್ದ ಅರಬರನ್ನು ಅಜ್ಞಾನಿಗಳು ಎಂದು ಟೀಕಿಸುತ್ತೇವಲ್ಲ, ಎಷ್ಟು ಹಾಸ್ಯಾಸ್ಪದ? ಓರ್ವ ಮಗಳ ವಿವಾಹವೇ ಉಸ್ತಾದರಿಗೆ ಇಷ್ಟು ಭಾರವಾಗಿರುವಾಗ ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿರುವ ಹೆತ್ತವರು ಏನು ಮಾಡಬೇಕು? ಕುರ್‍ಆನಿನ ಸೂಕ್ತಗಳನ್ನೋ ಪ್ರವಾದಿಯ(ಸ) ಮಾತುಗಳನ್ನೋ ಆಚರಣೆಗೆ ತರದ ಸಮಾಜದಲ್ಲಿ ಈ ಹೆತ್ತವರು ಇಸ್ಲಾಮಿನ ಈ ಪಾವನ ಮೌಲ್ಯಗಳಲ್ಲಿ ಎಲ್ಲಿಯವರೆಗೆ ನಂಬಿಕೆ ಇಟ್ಟುಕೊಂಡು ಮುಂದುವರಿಯಬಲ್ಲರು? ಹೆಣ್ಣು ಭ್ರೂಣಹತ್ಯೆ ಮಾಡಬೇಡಿ ಎಂದು ಅವರಲ್ಲಿ ಹೇಳುವುದಕ್ಕೆ ಈ ಸಮಾಜಕ್ಕೆ ಏನು ಅರ್ಹತೆಯಿದೆ? ಒಂದು ವೇಳೆ, ಅವರು ಅಂಥ ಹತ್ಯೆಗೆ ಮುಂದಾದರೆಂದರೆ, ಅದಕ್ಕಾಗಿ ಅಲ್ಲಾಹನು ಅವರನ್ನು ಮಾತ್ರ ಹಿಡಿಯುವನೇ? ಅಂಥ ಪಾಪ ಕೃತ್ಯವನ್ನು ಅವರಿಗೆ ಅನಿವಾರ್ಯಗೊಳಿಸಿದ ನಮ್ಮ-ನಿಮ್ಮನ್ನು ಆತ ತಪ್ಪಿತಸ್ಥರೆಂದು ಪರಿಗಣಿಸಲಾರನೇ?
     ಸಾಮಾನ್ಯವಾಗಿ, ಮುಸ್ಲಿಯಾರ್‍ಗಳಲ್ಲಿ ಹೆಚ್ಚಿನವರೂ ಬಡವರೇ. ಸಾಮಾನ್ಯ ಮಂದಿ ಎದುರಿಸುವ ಸಕಲ ಸಮಸ್ಯೆಗಳನ್ನು ಅವರೂ ಬಹುತೇಕ ಎದುರಿಸುತ್ತಾರೆ. ಅವರ ಮಕ್ಕಳು ಹೋಗುವುದು ಸರಕಾರಿ ಶಾಲೆಗೆ. ಸುಣ್ಣ-ಬಣ್ಣದ ಸಾಮಾನ್ಯ ಮನೆಗಳಲ್ಲಿ ಅವರು ಮತ್ತು ಅವರ ಕುಟುಂಬ ಬದುಕುತ್ತಿರುತ್ತದೆ. ಅವರದ್ದು ಸರಕಾರಿ ಉದ್ಯೋಗ ಅಲ್ಲವಾದ್ದರಿಂದ ಕೈ ತುಂಬ ಸಂಬಳವೂ ಸಿಗುವುದಿಲ್ಲ. ಪತಿಗೆ ಆರ್ಥಿಕವಾಗಿ ನೆರವಾಗುವುದಕ್ಕಾಗಿ ಮನೆಯಲ್ಲಿ ಬೀಡಿಯನ್ನೋ ಇತರ ಆರ್ಥಿಕ ಮೂಲಗಳನ್ನೋ ಪತ್ನಿ ಅವಲಂಬಿಸಿರುತ್ತಾರೆ. ಅಂದಹಾಗೆ, ಮುಸ್ಲಿಯಾರ್‍ಗಳ ಮಕ್ಕಳು ಮುಸ್ಲಿಯಾರ್ ಆಗದೇ ಇರುವುದಕ್ಕೆ ಮುಖ್ಯ ಕಾರಣ ಈ ಆರ್ಥಿಕ ದುಃಸ್ಥಿತಿಯೇ. ಅವರ ಉದ್ಯೋಗ ಸದಾ ಅನಿಶ್ಚಿತವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ, ಸಾಮಾಜಿಕ ಅನಿಷ್ಠಗಳಿಗೆ  ಅಥವಾ ತಪ್ಪು ಆಚರಣೆಗಳಿಗೆ  ಬಹಿರಂಗವಾಗಿ ವಿರೋಧ ವ್ಯಕ್ತಪಡಿಸದಷ್ಟು  ಔದ್ಯೋಗಿಕ ಅಭದ್ರತೆ ಕಾಡುತ್ತಿರುತ್ತದೆ. ಮಸೀದಿ ಆಡಳಿತ ಮಂಡಳಿಯಲ್ಲಿರುವವರಿಗೆ ಅಸಂತೃಪ್ತಿಯಾಗಬಹುದಾದ ಯಾವುದನ್ನೂ ಹೇಳದಂಥ ಮತ್ತು ಸದಾ ಅವರ ತೃಪ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರವಚನ ನೀಡಬೇಕಾದಂಥ ವಾತಾವರಣ ಇರುತ್ತದೆ. ಹೀಗೆ, ‘ರಾಜಿ ಮನಸ್ಥಿತಿ'ಯ ಹೊರತು ಅನ್ಯ ದಾರಿಯಿಲ್ಲದ ಸಂದರ್ಭವೊಂದು ಅನೇಕ ಮುಸ್ಲಿಯಾರ್‍ಗಳನ್ನು ಇವತ್ತು ಕಾಡುತ್ತಿದೆ. ಆದರೂ ಸಮಾಜ ಅವರ ಮೇಲೆ ಹೊರಿಸುತ್ತಿರುವ ಆರೋಪಗಳಿಗೆ  ಈ ಕಾರಣಗಳೆಲ್ಲ ಉತ್ತರವಾಗುವುದಿಲ್ಲ ನಿಜ. ಅನಿಷ್ಠಗಳ ವಿರುದ್ಧ ಜನಜಾಗೃತಿ ಮೂಡಿಸ ಬೇಕಾದ ವರ್ಗವೊಂದು ವೈಯಕ್ತಿಕ ಕಾರಣಗಳಿಗಾಗಿಯೋ ಮುಲಾಜಿಗಾಗಿಯೋ ಆ ಹೊಣೆಗಾರಿಕೆಯಿಂದ ನುಣುಚಿಕೊಂಡರೆ ಅದರ ದುಷ್ಫಲವನ್ನು ಇಡೀ ಸಮಾಜವೇ ಹೊರಬೇಕಾಗುತ್ತದಲ್ಲವೇ? ಅಂಥ ಸಂದರ್ಭಗಳಲ್ಲಿ ಆ ದುಷ್ಫಲ ಸ್ವತಃ ಆ ವರ್ಗವನ್ನೂ ಕಾಡುತ್ತದೆ. ಒಂದು ವೇಳೆ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಇವತ್ತು ಏರ್ಪಡುತ್ತಿರುವ ಪ್ರವಚನ, ವಾದ-ಪ್ರತಿ ವಾದದಂಥ ಕಾರ್ಯಕ್ರಮಗಳ ಅರ್ಧದಷ್ಟನ್ನಾದರೂ ವರದಕ್ಷಿಣೆಯ ವಿರೋಧಕ್ಕಾಗಿ ವಿೂಸಲಿರಿಸುತ್ತಿದ್ದರೆ ಸಮಾಜದ ಪರಿಸ್ಥಿತಿಯೇ ಬೇರೆಯಿರುತ್ತಿತ್ತು. ವರದಕ್ಷಿಣೆಯ ಮದುವೆಯನ್ನು ನಡೆಸಿಕೊಡುವುದಿಲ್ಲವೆಂದು ಪ್ರತಿ ಮಸೀದಿ ಮತ್ತು ಉಸ್ತಾದರು ತೀರ್ಮಾನಿಸುವುದಾದರೆ ಹಾಗೂ ಕಾಝಿಗಳು ಈ ಬಗ್ಗೆ ಫತ್ವಾ ಹೊರಡಿಸುವುದಾದರೆ ಮುಹಮ್ಮದ್ ಮುಸ್ಲಿಯಾರ್‍ರಂಥ ‘ಬಡವರು' ಜಮಾಅತೆ ಇಸ್ಲಾಮಿಯ ಕಡೆಗೋ ಸಲಫಿಗಳ ಕಡೆಗೋ ಮೆಚ್ಚುಗೆಯ ನೋಟ ಬೀರುವುದಕ್ಕೂ ಅವಕಾಶವಿರುತ್ತಿರಲಿಲ್ಲ.
   ಒಂದು ರೀತಿಯಲ್ಲಿ, ಮುಹಮ್ಮದ್ ಮುಸ್ಲಿಯಾರ್‍ರ ಆತಂಕವನ್ನು ನಾವು ಇನ್ನೊಂದು ಕಾರಣಕ್ಕಾಗಿಯೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇವತ್ತು ರೇಶನ್ ಕಾರ್ಡ್ ಮಾಡಿಸಬೇಕೆಂದರೆ ಅದಕ್ಕೆಂದೇ ಒಂದು ವ್ಯವಸ್ಥೆಯಿದೆ. ಇಂತಿಂಥ ಸ್ಥಳಗಳಿಗೆ, ನಿರ್ದಿಷ್ಟ ದಾಖಲಾತಿಗಳೊಂದಿಗೆ ಹೋದರೆ ರೇಶನ್‍ಕಾರ್ಡ್ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಶೀತ-ನೆಗಡಿಯಾದರೆ ಎಲ್ಲಿಗೆ ಹೋಗಬೇಕು ಎಂಬುದು ಸಮಾಜಕ್ಕೆ ಚೆನ್ನಾಗಿ ಗೊತ್ತು. ಇದೊಂದೇ ಅಲ್ಲ; ಡ್ರೈವಿಂಗ್ ಲೈಸೆನ್ಸ್, ಹಾಲು, ತರಕಾರಿ, ಮಾಂಸ.. ಇವೆಲ್ಲಕ್ಕೂ ನಿರ್ದಿಷ್ಟ ಜಾಗಗಳಿವೆ ಮತ್ತು ಅಲ್ಲಿಗೆ ತೆರಳಿದರೆ ಅವನ್ನು ಖರೀದಿಸುವ ಅವಕಾಶಗಳೂ ಮುಕ್ತವಾಗಿರುತ್ತವೆ. ಆದರೆ, ಮದುವೆ ಸಂಬಂಧವನ್ನು ಕುದುರಿಸುವುದಕ್ಕೆ ನಮ್ಮಲ್ಲಿ ಏನು ವ್ಯವಸ್ಥೆಯಿದೆ? ಹೆಣ್ಣು ಅಥವಾ ಗಂಡಿನ ಹೆತ್ತವರು ಯಾರನ್ನು ಸಂಪರ್ಕಿಸಬೇಕು? ಸಿಕ್ಕ-ಸಿಕ್ಕವರಲ್ಲಿ ಮದುವೆ ಸಂಬಂಧಕ್ಕೆ ಮೊರೆ ಇಡುತ್ತಾ, ಎಲ್ಲಾದರೂ ಅಂಥ ಅವಕಾಶಗಳಿವೆಯೇ ಎಂದು ಪತ್ರಿಕೆ ಇನ್ನಿತರ ಕಡೆ ಹುಡುಕುತ್ತಾ, ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಿಕ್ಕವರೊಡನೆ ಗುಟ್ಟಿನಲ್ಲೆಂಬಂತೆ  ಕೇಳಿಕೊಳ್ಳುತ್ತಾ ಬದುಕುವ ಸ್ಥಿತಿಯ ಹೊರತು ಈ ವರೆಗೆ ಇದಕ್ಕೆ ಬೇರೆ ಯಾವ ಪರ್ಯಾಯ ವ್ಯವಸ್ಥೆಯನ್ನು ಮಾಡಲು ನಮಗೆ ಸಾಧ್ಯವಾಗಿದೆ? ಹೆಣ್ಣು ಮತ್ತು ಗಂಡಿನ ವಿವರವುಳ್ಳ ಸಮಗ್ರ ಮ್ಯಾರೇಜ್ ಬ್ಯೂರೋವೊಂದನ್ನು ಸ್ಥಾಪಿಸುವುದು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಈವರೆಗೂ ಸ್ಥಾನ ಪಡೆದಿಲ್ಲವೇಕೆ? ಮದುವೆ ಸಂಬಂಧ ಎಂಬುದು ಗುಟ್ಟಿನಲ್ಲಿ, ಅವರಿವರಲ್ಲಿ ಮುಚ್ಚುಮರೆಯೊಂದಿಗೆ ಹೇಳಿಕೊಳ್ಳಬೇಕಾದ ಸಂಗತಿಯೇ? ತನ್ನ ಹೆಣ್ಣು ಮಗಳು ಮದುವೆ ಪ್ರಾಯಕ್ಕೆ ಬಂದಿರುವಳೆಂಬುದಕ್ಕಾಗಿ ಓರ್ವ ತಂದೆ ಅಥವಾ ತಾಯಿ ಮುಜುಗರ ಪಟ್ಟುಕೊಳ್ಳಬೇಕೇ? ಸೂಕ್ತ ವರ ಅಥವಾ ವಧುವಿಗಾಗಿ ಅವರು ಅವರಿವರಲ್ಲಿ ಬೇಡುತ್ತಿರಬೇಕೇ? ತನಗೆ ಸೂಕ್ತ ವರನನ್ನು ಸ್ವಯಂ ತಾನೇ ಹುಡುಕಿ ನಿರ್ಧರಿಸುವ ಸ್ವಾತಂತ್ರ್ಯ ಮತ್ತು ಅವಕಾಶ ಹೆಣ್ಣಿಗೆ ಇಲ್ಲವೆಂದಾದರೆ ಅದಕ್ಕಾಗಿ ಆಕೆಗೆ ಅತ್ಯಂತ ಪಾರದರ್ಶಕ ವ್ಯವಸ್ಥೆಯೊಂದನ್ನು ಮಾಡಿ ಕೊಡಬೇಕಾದ ಹೊಣೆಗಾರಿಕೆ ಯಾರದು? ನಮ್ಮದಲ್ಲವೇ? ಆ ಹೊಣೆಗಾರಿಕೆಯನ್ನು ನಾವೆಷ್ಟರ ಮಟ್ಟಿಗೆ ನಿಭಾಯಿಸಿದ್ದೇವೆ? ಮುಹಮ್ಮದ್ ಮುಸ್ಲಿಯಾರರ ಭೀತಿ ಕೂಡ ಇದುವೇ. ಮದುವೆ ಸಂಬಂಧ ಕೂಡಿ ಬರುವುದೇ ತುಂಬಾ ಕಷ್ಟದಲ್ಲಿ. ಅದಕ್ಕಾಗಿ ಎಷ್ಟೋ ನಿದ್ದೆಗಳನ್ನು ಕಳೆಯಬೇಕಾಗುತ್ತದೆ.
ಓಡಾಡಬೇಕಾಗುತ್ತದೆ. ಕೆಲವಾರು ನಿರಾಶೆಯ ಉತ್ತರಗಳನ್ನೂ ಆಲಿಸಬೇಕಾಗುತ್ತದೆ. ಹೀಗಿರುವಾಗ, ಕೂಡಿ ಬಂದಿರುವ ಈ ಸಂಬಂಧವನ್ನೇ ವರದಕ್ಷಿಣೆಯ ಕಾರಣಕ್ಕಾಗಿ ತಿರಸ್ಕರಿಸಿ ಬಿಟ್ಟರೆ ಹೊಸ ಸಂಬಂಧವನ್ನು ಹುಡುಕುವುದು ಹೇಗೆ? ಒಂದು ವೇಳೆ ಈ ಅವ್ಯವಸ್ಥಿತ ಮೆಟ್ರಿಮೋನಿಯಲ್ ಜಗತ್ತಿನಲ್ಲಿ ತನ್ನ ಮಗಳು ಒಂಟಿಯಾದರೆ? ಸೂಕ್ತ ವರ ಸಿಗದೇ ಹೋದರೆ?
   ‘ಪ್ಲೀಸ್ ವರದಕ್ಷಿಣೆ ಪಡೆದ ಮದುವೆಯ ಆಮಂತ್ರಣವನ್ನು ನಮಗೆ ನೀಡದಿರಿ. ಅದರಲ್ಲಿ ಹೆಣ್ಣು ಹೆತ್ತವರ ಕಣ್ಣೀರ ಹನಿಗಳಿವೆ' ಎಂಬ ಸ್ಟಿಕ್ಕರ್ ಅನ್ನು ತಯಾರಿಸಿ ಮಿತ್ರ ಸಿದ್ದೀಕ್ ಜಕ್ರಿಬೆಟ್ಟು ಅವರು ವರ್ಷಗಳ ಹಿಂದೆ ಹಲವು ಕಡೆ ಹಂಚಿದ್ದರು. ಇದೀಗ ಅದರ ಪ್ರತ್ಯಕ್ಷ  ಸಂಕೇತವಾಗಿ ಮುಹಮ್ಮದ್ ಮುಸ್ಲಿಯಾರ್ ನಮ್ಮ ಮುಂದಿದ್ದಾರೆ. ಅವರ ನೋವಿಗೆ ಸಾಂತ್ವನ ಹೇಳುತ್ತಲೇ, ವರದಕ್ಷಿಣೆರಹಿತ ಮದುವೆ ವಾತಾವರಣವೊಂದನ್ನು ನಾವೆಲ್ಲ ನಿರ್ಮಿಸಬೇಕಿದೆ.

Monday, August 4, 2014

ಜುಟ್ಟು ಹಿಡಿದು ಅತ್ಯಾಚಾರ ನಡೆಸಬಯಸುವವರ ಸುತ್ತ...

 1991 ಜೂನ್ 9
   “ವೈಟ್ ಈಗಲ್ಸ್ ಪಡೆಯ ಮಿಲಾನ್ ಲುಕಿಕ್ ನಮ್ಮ ಅಪಾರ್ಟ್‍ಮೆಂಟ್‍ಗೆ ಬಂದ. ಡ್ರೀನಾ ನದಿ ಮತ್ತು ಸೆರ್ಬಿಯದ ಗಡಿಗೆ ತಾಗಿಕೊಂಡಂತೆ ಇದ್ದ ನಮ್ಮ ವಿಸ್‍ಗ್ರೇಡ್ ಪಟ್ಟಣವನ್ನು ಅದಾಗಲೇ ವೈಟ್ ಈಗಲ್ಸ್ ಪಡೆ ಸುತ್ತುವರಿದು ವಶಪಡಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಆಲಿಸಿದ್ದೆವು. ನನಗಾಗ 17 ವರ್ಷ. ತಂಗಿ ಎಮಿನಾಳಿಗೆ 15. ಹಾಗಂತ ಲುಕಿಕ್ ನಮಗೆ ಅಪರಿಚಿತ ವ್ಯಕ್ತಿಯೇನೂ ಆಗಿರಲಿಲ್ಲ. ಸ್ಥಳೀಯವಾಗಿ ಆತ ಪರಿಚಿತ ಮತ್ತು ವೈಟ್ ಈಗಲ್ಸ್ ನ ಪ್ರಮುಖ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದ. ಆತ ಮನೆಗೆ ಬಂದವನೇ, ತನ್ನ ಜೊತೆ ಬರುವಂತೆ ನಮ್ಮಿಬ್ಬರಿಗೂ ಆದೇಶಿಸಿದ. ಪೊಲೀಸ್ ಠಾಣೆಯಲ್ಲಿರುವ ಕೆಲವು ಯುವಕರ ಗುರುತು ಪತ್ತೆ ಹಚ್ಚಲು ನಿಮ್ಮ ನೆರವು ಬೇಕಾಗಿದೆಯೆಂದು ಹೇಳಿದ. ಅಮ್ಮ ತಡೆದಳು. ವೈಟ್ ಈಗಲ್ಸ್ ನ ಕಾರ್ಯಕರ್ತರು ಪಟ್ಟಣದಲ್ಲಿ ಅದಾಗಲೇ ಹತ್ಯೆ, ಹಲ್ಲೆಗಳಲ್ಲಿ ನಿರತರಾಗಿರುವ ಬಗ್ಗೆ, ಜನಾಂಗ ನಿರ್ಮೂಲನದ ಉದ್ದೇಶದೊಂದಿಗೆ ಅವರು ಪಟ್ಟಣವನ್ನು ಸುತ್ತುವರಿದಿರುವರೆಂಬ ಬಗ್ಗೆ.. ನಮ್ಮಲ್ಲಿ ಸುದ್ದಿಗಳು ಹಬ್ಬಿದ್ದುವು. ಆದ್ದರಿಂದಲೇ ಒಂದು ಬಗೆಯ ಆತಂಕ, ಅನುಮಾನ ನಮ್ಮ ಅಪಾರ್ಟ್‍ಮೆಂಟನ್ನು ಮಾತ್ರವಲ್ಲ ಇಡೀ ಪಟ್ಟಣವನ್ನೇ ಆವರಿಸಿತ್ತು. ಲುಕಿಕ್, ಜನಾಂಗ ನಿರ್ಮೂಲನದ ಪರ ಇದ್ದ ವ್ಯಕ್ತಿ. ಆದ್ದರಿಂದಲೇ ತಾಯಿ ಆತಂಕಿತರಾಗಿದ್ದರು. ಆದರೆ ಲುಕಿಕ್ ಘರ್ಜಿಸಿದ. ‘ನಾನೇ ಕಾನೂನು, ನಾನೇ ನ್ಯಾಯಾಂಗ’ ಎಂದು ಬೆದರಿಸಿದ. ನಾವಿಬ್ಬರೂ ಆತನ ಜೊತೆ ಕಾರಲ್ಲಿ ಕೂತೆವು. ಆದರೆ ಆತ ಮಾತು ಕೊಟ್ಟಂತೆ ನಮ್ಮನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಿಲ್ಲ. ನೇರ ಎಲಿನಾ ವ್ಲಾಸ್ ಎಂಬ ಹೊಟೇಲಿಗೆ ಕೊಂಡೊಯ್ದ. 20-30 ಕೋಣೆಗಳುಳ್ಳ ದೊಡ್ಡ ಹೊಟೇಲಾಗಿತ್ತದು. ನಾವು ಹೋಗುವಾಗ ಸ್ವಾಗತಕಾರಿಣಿಯರು ತಮಾಷೆ ಮಾಡಿ ನಗುತ್ತಿದ್ದರು. ನನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾದರೆ ತಂಗಿ ಎಮಿನಾಳನ್ನು ಇನ್ನೊಂದು ಕೋಣೆಯಲ್ಲಿ. ಕೆಲವು ಗಂಟೆಗಳ ಬಳಿಕ ಎಮಿನಾ ಅರಚುವ, ಬಿಕ್ಕಳಿಸುವ, ಅಂಗಲಾಚುವ ಶಬ್ದವನ್ನು ಆಲಿಸಿದೆ. ನನ್ನಿಂದ ತಡೆದುಕೊಳ್ಳಲಾಗಲಿಲ್ಲ. ಆಕೆ ನನಗೆ ಚಿಕ್ಕವಳಲ್ಲವೇ? ಆದರೆ ಆ ಬಳಿಕ ಎಂದೂ ನನ್ನ ತಂಗಿಯನ್ನು ನಾನು ನೋಡೇ ಇಲ್ಲ.
    ಸ್ವಲ್ಪ ಸಮಯದ ಬಳಿಕ ಲುಕಿಕ್ ನನ್ನ ಕೋಣೆಗೆ ಬಂದ. ಬಾಗಿಲಿಗೆ ಎದುರಾಗಿ ಟೇಬಲನ್ನು ತಂದಿಟ್ಟ. ಬೆತ್ತಲೆಯಾಗು ಅಂದ. ನಾನು ಹಿಂಜರಿದೆ. ಆತ ಸಿಡುಕಿದ. ನೀನು ಸುರಕ್ಷಿತವಾಗಿ ತೆರಳಬೇಕಾದರೆ ನಾನು ಹೇಳಿದಂತೆ ಕೇಳಬೇಕು ಎಂದು ಬೆದರಿಸಿದ. ಬೆತ್ತಲೆ ಮಾಡಲು ನನಗೆ ಅವಕಾಶ ಮಾಡಿಕೊಡಬೇಡ, ಅದು ತುಂಬಾ ಹಿಂಸಾತ್ಮಕವಾಗಿರುತ್ತದೆ ಎಂದ. ನೀನು ನನ್ನ ಜೊತೆಗಿರುವುದು ನಿನ್ನ ಅದೃಷ್ಟ. ಇಲ್ಲದಿದ್ದರೆ ನಿನ್ನ ಸೊಂಟಕ್ಕೆ ಕಲ್ಲು ಕಟ್ಟಿ ಡ್ರೀನಾ ನದಿಗೆ ಎಸೆಯಲಾಗುತ್ತಿತ್ತು ಎಂದ. ನಾನು ಹೇಳಿದಂತೆ ಕೇಳದಿದ್ದರೆ ಹೊರಗಿನಿಂದ 10 ಯೋಧರನ್ನು ಕರೆಸ ಬೇಕಾಗುತ್ತದೆ ಎಂದೂ ಬೆದರಿಸಿದ. ನಿಜವಾಗಿ, ಇತರರಿಗೆ ಹೋಲಿಸಿದರೆ ನಾನು ಅದೃಷ್ಟವಂತಳಾಗಿದ್ದೆ. ಆತ ನನ್ನನ್ನು ಕೊಲ್ಲಲಿಲ್ಲ. ಒಂದು ದಿನ ನನ್ನನ್ನು ಬಿಟ್ಟು ಬಿಟ್ಟ. ಮನೆಗೆ ಬಂದಾಗ ತಾಯಿ ಮತ್ತೆ ಮತ್ತೆ ಎಮಿನಾಳ ಬಗ್ಗೆ ಪ್ರಶ್ನಿಸಿದರು. ನನ್ನನ್ನು ಸಾಂತ್ವನಿಸಿದರು. ಆದರೂ ನಾನು ನನ್ನ ಮೇಲಾದ ಅತ್ಯಾಚಾರದ ಬಗ್ಗೆ ಹೇಳಲೇ ಇಲ್ಲ. ನನ್ನಂತೆಯೇ ತಂಗಿಯೂ ಶೀಘ್ರ ಬರಬಹುದು ಎಂದು ನಂಬಿಸಿದೆ. ತಂಗಿಯನ್ನು ಹುಡುಕುತ್ತಾ ತಾಯಿ ಪದೇ ಪದೇ ಪೊಲೀಸು ಠಾಣೆಗೆ ಹೋದರು. ಒಂದು ದಿನ ಪೊಲೀಸ್ ಪೇದೆಯೊಬ್ಬ ತಾಯಿಯತ್ತ ಬಂದೂಕು ಎತ್ತಿದ. ಆಗ ಆತನ ಜೊತೆ ಲುಕಿಕ್‍ನೂ ಇದ್ದ. ಲುಕಿಕ್  ಹೇಳಿದನಂತೆ, ‘ಕನಿಷ್ಠ ಓರ್ವ ಮಗಳಾದರೂ ಹಿಂತಿರುಗಿದ್ದಾಳಲ್ಲ, ಇನ್ನೇನು ಬೇಕು ನಿಂಗೆ?’
ಜುಲೈಯಲ್ಲಿ ನಾವು ನಮ್ಮ ಹುಟ್ಟಿದೂರನ್ನು ತೊರೆದೆವು. ತಂಗಿಯನ್ನು ಸ್ಮರಿಸುತ್ತಾ, ಆಕೆ ಎಲ್ಲಾದರೂ ಸುರಕ್ಷಿತಳಾಗಿ ಇರುವಳೆಂಬ ನಿರೀಕ್ಷೆ ಇರಿಸುತ್ತಾ ಅಕ್ಕ ಮಲೀಹಾ ಈ ಮೊದಲೇ ಸೇರಿಕೊಂಡಿದ್ದ ಬೇರೊಂದು ಪಟ್ಟಣವನ್ನು ಸೇರಿಕೊಂಡೆವು. ನಾನು ರಾತ್ರಿ ಎದ್ದು ಚೀರಾಡುತ್ತೇನೆ. ಭಯ-ಭೀತಿಯಿಂದ ಜೋರಾಗಿ ಉಸಿರಾಡುತ್ತೇನೆ. ರಾತ್ರಿ ಎದ್ದು ಕೂರುತ್ತೇನೆ. ಆಗೆಲ್ಲಾ ಅಕ್ಕ ಸಮಾಧಾನಿಸುತ್ತಾಳೆ..”
    ‘ರೇಪ್ಸ್ ಇನ್ ಬೋಸ್ನಿಯಾ: ಎ ಮುಸ್ಲಿಮ್ ಸ್ಕೂಲ್ ಗರ್ಲ್ಸ್ ಅಕೌಂಟ್'' ಎಂಬ ಶೀರ್ಷಿಕೆಯಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 1992 ಡಿಸೆಂಬರ್ 27ರಂದು ಪ್ರಕಟಿಸಿದ ಸಂದರ್ಶನದಲ್ಲಿ ಜಾಸ್ನಾ ಎಂಬ ಯುವತಿ ಹೇಳಿದ ಮಾತುಗಳಿವು. ಈ ಸಂದರ್ಶನದ ಆರಂಭದಲ್ಲಿ ಸುಮಾರು 45 ನಿಮಿಷಗಳ ವರೆಗೆ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಈ ಹುಡುಗಿ ಹೇಳಿಕೊಂಡೇ ಇರಲಿಲ್ಲ. 1991ರಿಂದ 95ರ ನಡುವೆ ಯುಗೋಸ್ಲಾವಿಯಾದಲ್ಲಿ ನಡೆದ ಆಂತರಿಕ ಯುದ್ಧ ಮತ್ತು ಹತ್ಯಾಕಾಂಡಗಳು ಅತ್ಯಂತ ಭೀಕರ ಕ್ರೌರ್ಯಗಳಲ್ಲಿ ಒಂದೆಂದು ಜಾಗತಿಕವಾಗಿಯೇ ಗುರುತಿಸಿಕೊಂಡಿದೆ. ಆ ಬಳಿಕ ಯುಗೋಸ್ಲಾವಿಯಾವು ಬೋಸ್ನಿಯಾ-ಹರ್ಝಗೋವಿನಾ, ಕ್ರೋವೇಶಿಯಾ, ಸೆರ್ಬಿಯ ಮುಂತಾದ ರಾಷ್ಟ್ರಗಳಾಗಿ ವಿಭಜನೆಗೊಂಡಿತು. ಬೋಸ್ನಿಯನ್ನರ ಮೇಲೆ ಸೆರ್ಬಿಯದ ಮಂದಿ ನಡೆಸಿದ ಕ್ರೌರ್ಯಗಳು ಎಷ್ಟು ಭೀಕರವಾಗಿತ್ತು ಅಂದರೆ, 30 ಸಾವಿರದಷ್ಟು ಮಂದಿ ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರು ಎಂದು ಆ ಬಳಿಕದ ವರದಿಗಳೇ ಹೇಳಿದುವು. ಅವರಲ್ಲಿ ಜಾಸ್ನಾ ಕೂಡ ಓರ್ವಳು. ಅತ್ಯಾಚಾರಕ್ಕೀಡಾದವರು ಸಾಮಾಜಿಕ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳಕೊಂಡರು. ಪಾಶ್ಚಾತ್ಯ ಪತ್ರಕರ್ತರು ಮತ್ತು ಟಿ.ವಿ. ಚಾನೆಲ್‍ಗಳು ಬೋಸ್ನಿಯಾದ ಈ ಸಂತ್ರಸ್ತರನ್ನು ಭೇಟಿಯಾದಾಗಲೆಲ್ಲ ಅವರು ಮಾತಾಡಲು ನಿರಾಕರಿಸಿದರು. ಅವರ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸಿದರು. ಪಶ್ಚಿಮವು ತಮಗೆ ನ್ಯಾಯ ಕೊಡುವುದಕ್ಕಲ್ಲ, ಬರೇ ಅನುಭವಿಸಲು ಮತ್ತು ಮನರಂಜನೆಯ ವಿಷಯ ಒದಗಿಸಲಷ್ಟೇ ಆಸಕ್ತವಾಗಿವೆ ಎಂದು ಆರೋಪಿಸಿದರು. ಸೆರ್ಬಿಯವು ಆ ಬಳಿಕ ನಡೆಸಿದ ತನಿಖೆಗಳಲ್ಲಿ ಅತ್ಯಾಚಾರಿಗಳಲ್ಲಿದ್ದ ಭೀಭತ್ಸ ಆಲೋಚನೆಗಳೂ ಬೆಳಕಿಗೆ ಬಂದುವು. ಒಂದು ಸಮುದಾಯವನ್ನು ಅಪಮಾನಗೊಳಿಸುವುದಕ್ಕೆ ಅತ್ಯಾಚಾರವನ್ನು ಒಂದು ಉಪಕರಣವಾಗಿ ಅವರು ಪರಿಗಣಿಸಿದ್ದರು. ದ್ವೇಷದ ಮನಸ್ಥಿತಿಯನ್ನು ಅತ್ಯಾಚಾರಗಳು ತೃಪ್ತಗೊಳಿಸುತ್ತವೆ ಎಂದು ಅತ್ಯಾಚಾರಿಗಳು ಅಭಿಪ್ರಾಯಪಟ್ಟಿದ್ದರು.
   ಅಷ್ಟಕ್ಕೂ, ಇದನ್ನು ಕೇವಲ ಬೋಸ್ನಿಯಾಕ್ಕೆ ಮಾತ್ರ ಸೀಮಿತಗೊಳಿಸಬೇಕಿಲ್ಲ.
ರಾಹುಲ್
ಮೋಹಿತ್
ಸುಧೀರ್
ಅರವಿಂದ್
   ವಾರಗಳ ಹಿಂದೆ ಔಟ್‍ಲುಕ್ ವಾರಪತ್ರಿಕೆಯು ಪ್ರಕಟಿಸಿದ ಮುಝಫ್ಫರ್ ನಗರ್ ಗಲಭೆಯಲ್ಲಿ ಅತ್ಯಾಚಾರಕ್ಕೀಡಾದವರ ಕುರಿತಾದ ತನಿಖಾ ಬರಹದಲ್ಲಿ ಕಾಣಿಸಿಕೊಂಡ ಅತ್ಯಾಚಾರಿಗಳ ಹೆಸರುಗಳಿವು. ಈ ಪಟ್ಟಿಯಲ್ಲಿ ಇನ್ನೂ ಕೆಲವು ಹೆಸರುಗಳಿವೆ. ಅತ್ಯಾಚಾರದ ದೂರನ್ನು ದಾಖಲಿಸಿರುವ 7 ಮಂದಿ ಸಂತ್ರಸ್ತೆಯರ ಒಡಲ ಮಾತನ್ನು ಪತ್ರಕರ್ತೆ ನೇಹಾ ದೀಕ್ಷಿತ್ ಇದರಲ್ಲಿ ದಾಖಲಿಸಿದ್ದಾರೆ. ಈ ಸಂತ್ರಸ್ತೆಯರಿಗೆ ಈ ಮೇಲಿನ ಅತ್ಯಾಚಾರಿಗಳೇನೂ ಅಪರಿಚಿತರಾಗಿರಲಿಲ್ಲ. ಮಿಲಾನ್ ಲುಕಿಕ್‍ನಂತೆ ಒಂದು ಹಂತದ ವರೆಗೆ ಪರಿಚಿತರೇ. ಅವರ ಹೊಲಗಳಲ್ಲಿ ಈ ಸಂತ್ರಸ್ತೆಯರು ದುಡಿದಿದ್ದಾರೆ. ಕೂಲಿ ಕೊಡುವ ಮೊದಲು ಜಿಮಾರ್ ಮತ್ತು ಚಾಮರ್ ಜಾತಿಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಸಾಮಾನ್ಯವಂತೆ. ಈ ಮಹಿಳೆಯರು ಅದಕ್ಕೆ ಒಪ್ಪಿಕೊಳ್ಳದಿದ್ದಾಗ ಕಡಿಮೆ ಕೂಲಿ ಕೊಡಲಾಗುತ್ತಿತ್ತು. ಆ ದ್ವೇಷವನ್ನು ಗಲಭೆಯ ವೇಳೆ ತೀರಿಸಲಾಗಿದೆ ಎಂದು ಸಂತ್ರಸ್ತೆಯರು ಹೇಳಿರುವುದನ್ನು ನೇಹಾ ಬರೆದಿದ್ದಾರೆ. ಈ ಹಿಂದೆ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಗುಜರಾತ್‍ನ ಸೂರತ್‍ನಲ್ಲಿ ನಡೆದ ಗಲಭೆಯ ವೇಳೆ ಸಾಮೂಹಿಕ ಅತ್ಯಾಚಾರ ಮತ್ತು ವೀಡಿಯೋ ಚಿತ್ರೀಕರಣಗಳು ನಡೆದಿದ್ದವು. ಹಾಗಂತ ಅದೇನೂ ಕದ್ದು ಮುಚ್ಚಿ ನಡೆಸಲಾದ ಚಿತ್ರೀಕರಣ ಆಗಿರಲಿಲ್ಲ. ವಿದ್ಯುತ್ ತಂತಿಯನ್ನು ಕಡಿತಗೊಳಿಸಿ ಸುತ್ತ-ಮುತ್ತಲಿನ ಪ್ರದೇಶಗಳನ್ನು ಕತ್ತಲುಮಯಗೊಳಿಸಿದ ಬಳಿಕ ಹೊನಲು ಬೆಳಕಿನಲ್ಲಿ ಸಂಪೂರ್ಣ ಯೋಜಿತವಾಗಿಯೇ ಚಿತ್ರೀಕರಣ ನಡೆಸ ಲಾಗಿತ್ತು ಎಂದು ಆ ನಂತರದ ವರದಿಗಳು ಸ್ಪಷ್ಟಪಡಿಸಿದ್ದುವು. (ಇಂಡಿಯಾ ಯುನೈಟೆಡ್ ಅಗೈನ್‍ಸ್ಟ್ ಫ್ಯಾಸಿಝಂ 2013 ನವೆಂಬರ್ 26). 2002ರ ಗುಜರಾತ್ ಹತ್ಯಾಕಾಂಡದಲ್ಲೂ ಅತ್ಯಾಚಾರವು ಪ್ರಮುಖ ಆಯುಧವಾಗಿ ಬಳಕೆಯಾಗಿತ್ತು. ಸಂತ್ರಸ್ತೆಯರಲ್ಲಿ ಬಿಲ್ಕಿಸ್ ಬಾನೋ ಓರ್ವರಾಗಿದ್ದರು. 2007ರಲ್ಲಿ ಒಡಿಸ್ಸಾದ ಕಂಧಮಲ್‍ನಲ್ಲಿ ನಡೆದ ಕ್ರೈಸ್ತ ವಿರೋಧಿ ಹತ್ಯಾಕಾಂಡದಲ್ಲೂ ಅತ್ಯಾಚಾರ ನಡೆದಿತ್ತು. ಸಿಸ್ಟರ್ ವಿೂನಾರ ಮೇಲಿನ ಅತ್ಯಾಚಾರವು ರಾಷ್ಟ್ರಮಟ್ಟದಲ್ಲೇ  ಸುದ್ದಿಗೀಡಾಗಿತ್ತು. ಕಂಧಮಲ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಗುಜರಾತ್‍ನ ಅತ್ಯಾಚಾರಗಳಿಗೆ ಹೋಲುತ್ತವೆ ಎಂದು ಆ ಸಂದರ್ಭದಲ್ಲಿ ಹರ್ಷಮಂದರ್ ಬರೆದಿದ್ದರು.
   ನಿಜವಾಗಿ, ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಬೋಸ್ನಿಯಾದಿಂದ ಹಿಡಿದು ಮುಝಫ್ಫರ್ ನಗರದವರೆಗೆ ಒಂದು ಸಮಾನತೆಯಿದೆ. ಅದುವೇ ದ್ವೇಷ. ಪುರುಷ ತನ್ನ ದ್ವೇಷವನ್ನು ತೀರಿಸಿಕೊಳ್ಳುವುದಕ್ಕೆ ಹೆಣ್ಣಿನ ದೇಹವನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾನೆ ಅನ್ನುವುದನ್ನು ಇವೆಲ್ಲ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿವೆ. ಹೆಣ್ಣನ್ನು ಅತ್ಯಾಚಾರಕ್ಕೀಡು ಮಾಡುವ ಮೂಲಕ ತಮ್ಮ ದ್ವೇಷವನ್ನು ದಮನಗೊಳಿಸುವ ಮಂದಿ ಪುರುಷ ಸಮಾಜದಲ್ಲಿದ್ದಾರೆ. ಬೆಂಗಳೂರಿನ ವಿಬ್‍ಗಯಾರ್ ಪ್ರಕರಣದಲ್ಲೂ ಇದು ಸ್ಪಷ್ಟವಾಗಿದೆ. 6ರ ಬಾಲೆಯ ಮೇಲಿನ ದ್ವೇಷವೇ ಸಾಮೂಹಿಕ ಅತ್ಯಾಚಾರಕ್ಕೆ ಕಾರಣ ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದುವು. ಆದ್ದರಿಂದಲೇ, ಈ ಮನಸ್ಥಿತಿಯ ಬಗ್ಗೆ ಗಂಭೀರ ಚರ್ಚೆಗಳಾಗಬೇಕಾದ ಅಗತ್ಯವಿದೆ. ಅಂದಹಾಗೆ, ಇಂಥ ಮನಸ್ಥಿತಿ ನಿರ್ದಿಷ್ಟ ಧರ್ಮೀಯರಲ್ಲಿ ಮಾತ್ರ ಇರಬೇಕೆಂದೇನೂ ಇಲ್ಲ. ವಿಬ್‍ಗಯಾರ್‍ನ ಆರೋಪಿಗಳು ಹಿಂದೂಗಳೂ ಅಲ್ಲ. ಅತ್ಯಾಚಾರಿಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸದೇ, ಆ ಮನಸ್ಥಿತಿಯ ಕರಾಳತೆಯ ಸುತ್ತ ಮಾಧ್ಯಮಗಳಲ್ಲಿ ವಿಸ್ತೃತ ಚರ್ಚೆಗಳಾಗಬೇಕಿದೆ. ಒಂದು ಕಡೆ ಅತ್ಯಾಚಾರದ ವಿರುದ್ಧ ಕಾನೂನಿನ ಮೇಲೆ ಕಾನೂನುಗಳು ಜಾರಿಯಾಗುತ್ತಿವೆ. ಗಲ್ಲು ಶಿಕ್ಷೆಯ ಬೇಡಿಕೆಯನ್ನೂ ಮುಂದಿಡಲಾಗುತ್ತಿದೆ. ಆದರೂ ಅತ್ಯಾಚಾರಗಳು ಕಡಿಮೆಯಾಗುತ್ತಿಲ್ಲ. ಯಾಕೆ ಹೀಗೆ? ಇದರ ಹಿಂದೆ ಬರೇ ದೈಹಿಕ ತೃಪ್ತಿಯ ಉದ್ದೇಶವಷ್ಟೇ ಇದೆಯೇ ಅಥವಾ ಕ್ರೌರ್ಯದ ಮನಸ್ಥಿತಿಯೊಂದು ಕೆಲಸ ಮಾಡುತ್ತಿದೆಯೇ? ಹೆಣ್ಣನ್ನು ಗುಲಾಮಳು ಎಂದು ಬಗೆವ, ತನ್ನ ಇಚ್ಛೆಯನ್ನು ಪೂರೈಸಬೇಕಾದವಳು ಎಂದು ನಂಬಿರುವ ಪುರುಷ ಯಜಮಾನಿಕೆಯು ಈ ಭಯರಹಿತ ವಾತಾವರಣಕ್ಕೆ ಕಾರಣವೇ? ಅಂಥ ಮನಸ್ಥಿತಿಯು ಹುಟ್ಟು ಪಡೆಯುವುದು ಎಲ್ಲಿ? ಮನೆಯಲ್ಲೇ? ಶಾಲೆ-ಕಾಲೇಜು, ಉದ್ಯೋಗ ಸ್ಥಳಗಳಲ್ಲೇ? ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಮನಸ್ಥಿತಿಯಿರುವ ಮನೆಯಲ್ಲಿ ಬೆಳೆದವರು ಇಂಥ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಹೆಣ್ಣಿನ ಧ್ವನಿಯನ್ನು ಅಡಗಿಸುವುದಕ್ಕೆ, ಆಕೆಯ ಭಿನ್ನ ಅಭಿಪ್ರಾಯವನ್ನು ಖಂಡಿಸುವುದಕ್ಕೆ, ಆಕೆಯ ಪ್ರತಿಭೆಯನ್ನು ಚಿವುಟುವುದಕ್ಕೆ ಅತ್ಯಾಚಾರಗಳು ಟೂಲ್ ಆಗುತ್ತಿವೆಯೇ? ಈ ಮನಸ್ಥಿತಿಯ ಮಂದಿ ಮನೆಯಲ್ಲಿ ತಮ್ಮ ತಾಯಿ, ಪತ್ನಿ, ತಂಗಿ, ಅಕ್ಕ, ಅತ್ತಿಗೆಯರೊಂದಿಗೆ ಹೇಗೆ ವರ್ತಿಸುತ್ತಾರೆ? ಅವರೆಲ್ಲರೊಂದಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ರೀತಿ ಹೇಗಿವೆ? ಭಾಷೆ ಹೇಗಿದೆ?
    ಪ್ರಭಾ ಎನ್. ಬೆಳವಂಗಳ ಅವರ ಫೇಸ್‍ಬುಕ್ ಬರಹಕ್ಕೆ, ‘ಪ್ರಭಾರ ಜುಟ್ಟು ಹಿಡಿದು ಅತ್ಯಾಚಾರ ನಡೆಸಿದರೆ ಅವರು ಸರಿಯಾಗುತ್ತಾರೆ..' ಎಂಬ ಉತ್ತರವನ್ನು ನೀಡಿದ ವಿ.ಆರ್. ಭಟ್ ಎಂಬವರ ಮನಸ್ಥಿತಿಯ ಸುತ್ತ ಆಲೋಚಿಸುತ್ತಾ ಹೋದಂತೆ ಇವೆಲ್ಲ ನೆನಪಾದುವು.