Tuesday, February 13, 2018

ಅವರ ಅಗತ್ಯ ಊಟ-ತಿಂಡಿಗಳಷ್ಟೇ ಅಲ್ಲವಲ್ಲ..

     " 70 ವರ್ಷದ ಸೂರ್ಯ ನಾರಾಯಣ್‍ರು ಮರು ಮದುವೆಯಾಗಲು ಬಯಸಿದರು. ಪತ್ನಿ ಆ ಮೊದಲೇ ನಿಧನರಾಗಿದ್ದರು. ಮಕ್ಕಳಿಗೂ ಮದುವೆಯಾಗಿದೆ. ಅವರಿಗೆ ಮೊಮ್ಮಕ್ಕಳೂ ಆಗಿವೆ. ದೂರಸಂಪರ್ಕ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ನಾರಾಯಣ್‍ರನ್ನು ಒಂಟಿ ಬದುಕು ತೀವ್ರವಾಗಿ ಕಾಡುತ್ತಿತ್ತು. ಎಲ್ಲರೂ ಅವರವರ ಬದುಕನ್ನು ಬದುಕುತ್ತಿರುವಾಗ ತಾನು ಒಂಟಿಯಾಗಿ ಎಷ್ಟರ ವರೆಗೆ ಇರಬಲ್ಲೆ  ಎಂಬ ಪ್ರಶ್ನೆ ಅವರನ್ನು ಇರಿಯತೊಡಗಿತು. ಒಡನಾಟಕ್ಕೆ ಓರ್ವರು ಬೇಕು ಅಂತ ಅನಿಸಿತು. ಅವರು ತಮ್ಮ ಮನದಿಂಗಿತವನ್ನು ಮಕ್ಕಳ ಮುಂದೆ ಹಂಚಿಕೊಂಡರು. ಆದರೆ ಮಕ್ಕಳು ಆಶ್ಚರ್ಯ ವ್ಯಕ್ತಪಡಿಸಿದರು. ಈ ವಯಸ್ಸಲ್ಲಿ ಮದುವೆಯೇ ಎಂದು ಆಘಾತಗೊಂಡವರಂತೆ ಪ್ರಶ್ನಿಸಿದರು. ಪ್ರಾಯವಾದವರು ಸಾವನ್ನು ನಿರೀಕ್ಷಿಸುತ್ತಾ ಬದುಕುವುದು ಬಿಟ್ಟು ಮದುವೆಯೇಕೆ ಎಂಬ ಧಾಟಿ ಅವರದಾಗಿತ್ತು. ಆದರೆ ಸೂರ್ಯ ನಾರಾಯಣ್‍ರು ಚೆನ್ನೈನಲ್ಲಿರುವ ವಸಂತಂ ಮರುಮದುವೆ ಸೇವಾ ಸಂಸ್ಥೆಯಲ್ಲಿ ತನ್ನ ಹೆಸರು ನೋಂದಾಯಿಸಿದರು. 60 ವರ್ಷದ ಬಾನುಮತಿ ಎಂಬವರನ್ನು ವರಿಸಲು ತೀರ್ಮಾನಿಸಿದರು. ಹರೆಯ ದಾಟಿ ವೃದ್ಧಾಪ್ಯದಲ್ಲಿರುವ ಈ ಇಬ್ಬರ ಮದುವೆ ಚೆನ್ನೈಯಲ್ಲಿ ನಡೆದಾಗ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಹುತೇಕರೂ ಇರಲಿಲ್ಲ. ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳ ಗೈರುಹಾಜರಿಯಿತ್ತು. ಅವರೆಲ್ಲ ಸೂರ್ಯನಾರಾಯಣ್‍ರನ್ನು ಅಪರಾಧಿಯಂತೆ ಕಂಡರು. ಪರಿಸರದ ಮಂದಿಯೂ ಅವರನ್ನು ಸ್ವಾಗತಿಸಲಿಲ್ಲ..
ಹಾಗಂತ, ಜನವರಿ 14ರಂದು ಪ್ರಕಟವಾದ ದಿ ಹಿಂದೂ ಪತ್ರಿಕೆಯಲ್ಲಿ ಝುಬೇದಾ ಹಮೀದ್ ಬರೆದಿದ್ದರು.
      ಸಾಮಾನ್ಯವಾಗಿ, ಮದುವೆ ಎಂಬುದಕ್ಕೆ ಹರೆಯದ ಗಂಡು ಮತ್ತು ಹರೆಯದ ಹೆಣ್ಣು ಜೊತೆಯಾಗುವುದು ಎಂಬರ್ಥವಷ್ಟೇ ಇದೆ ಅಥವಾ ಸಮಾಜ ಮದುವೆಯನ್ನು ಈ ಅರ್ಥಕ್ಕೆ ಸೀಮಿತ ಗೊಳಿಸಿಯೇ ನೋಡುತ್ತಿದೆ. ಮದುವೆಯಾದ ಬಳಿಕ ಪತಿಯನ್ನೋ ಪತ್ನಿಯನ್ನೋ ಕಳಕೊಂಡವರಿಗೆ ಮರು ಮದುವೆಯಾಗಬೇಕಾದ ಅಗತ್ಯವನ್ನು ಹೆಚ್ಚಿನ ಬಾರಿ ಉದಾಸೀನವಾಗಿ ಕಾಣಲಾಗುತ್ತದೆ. ಚಿಕ್ಕ ಮಕ್ಕಳಿರುವ ವಿದುರನೋ ವಿಧವೆಯೋ ಮರು ಮದುವೆಯ ಬಗ್ಗೆ ಆಸಕ್ತಿ ತೋರಿದರೆ ಸಮಾಜ ಒಂದು ಹಂತದ ವರೆಗೆ ಸಹಿಸಿಕೊಳ್ಳಬಹುದು. ಆದರೆ ಮಧ್ಯ ವಯಸ್ಸನ್ನು ದಾಟಿದ ವಿದುರ ಅಥವಾ ವಿಧವೆ ಮರು ಮದುವೆಯ ಬಗ್ಗೆ ಆಲೋಚಿಸು ವುದನ್ನೇ ಸಮಾಜ ತಮಾಷೆಗೆ ಗುರಿಪಡಿಸುವುದಿದೆ. ‘ಹೋಗುವ ಪ್ರಾಯದಲ್ಲಿ ಮದುವೆಯೇಕೆ’ ಎಂಬೊಂದು ವ್ಯಂಗ್ಯ ಪ್ರತಿಕ್ರಿಯೆ ಸಾಮಾನ್ಯವಾಗಿ ಕೇಳಿ ಬರುವುದಿದೆ. ನಿಜವಾಗಿ ವೈಧವ್ಯ ಅಥವಾ ವಿದುರತನವು ಯಾರಾದರೂ ಕೇಳಿ ಪಡಕೊಳ್ಳುವುದಲ್ಲ. ಅದನ್ನು ಯಾರೂ ಬಯಸುವುದೂ ಇಲ್ಲ. ಯಾವುದೋ ಒಂದು ಸನ್ನಿವೇಶದಲ್ಲಿ ಹೆಣ್ಣು ವಿಧವೆಯಾಗುತ್ತಾಳೆ. ಗಂಡು ವಿದುರನಾಗುತ್ತಾನೆ. ಆದರೆ ಬದುಕು ಆ ಬಳಿಕವೂ ಇರುತ್ತದೆ. ಆ ಬದುಕನ್ನು ಒಡನಾಡಿಯಿಲ್ಲದೇ ಕಳೆಯಬೇಕೆಂದು ತೀರ್ಮಾನಿಸುವುದಕ್ಕೆ ಸಮಾಜ ಯಾರು? ಯಾಕೆ ಅವರು ಮರು ಮದುವೆ ಆಗಬಾರದು? ಇಂಥದ್ದೊಂದು  ಪ್ರಶ್ನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ  ರಾಜಾರಾಂ ಮೋಹನ್ ರಾಯ್ ಎತ್ತಿದ್ದರು. ಆಗ ಈ ದೇಶದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿ ಅಷ್ಟು ಕ್ರೂರ ಇತ್ತು. ವಿಧವೆ ಅಪಶಕುನವಾಗಿ ಗುರುತಿಸಿಕೊಂಡಿದ್ದಳು. ಆಕೆಯನ್ನು ಭೇಟಿಯಾದವರು ಆ ದಿನ ಅಪಶಕುನದಲ್ಲೇ ಕಳೆಯುತ್ತಾರೆ ಎಂಬ ಅಭಿಪ್ರಾಯ ಇತ್ತು. ವಿಧವೆ ಅಮಂಗಲೆ, ಮಂಗಳ ಕಾರ್ಯಗಳಲ್ಲಿ ಆಕೆ ಭಾಗವಹಿಸಬಾರದು ಎಂದೆಲ್ಲಾ  ಸಮಾಜ ಕಟ್ಟುಪಾಡುಗಳನ್ನು ವಿಧಿಸಿತ್ತು. ಉತ್ತರ ಪ್ರದೇಶದ ವೃಂದಾವನದಲ್ಲಿ ವಿಧವೆಯರ ದೊಡ್ಡ ಗುಂಪೇ ಇದೆ. 20 ಸಾವಿರಕ್ಕಿಂತಲೂ ಅಧಿಕ ವಿಧವೆಯರು ಅಲ್ಲಿ ಭಿಕ್ಷೆ ಬೇಡುತ್ತಲೋ ಭಜನೆಯಲ್ಲಿ ತೊಡಗಿಕೊಂಡೋ ಸಾವನ್ನು ನಿರೀಕ್ಷಿಸುತ್ತಾ ಬದುಕುತ್ತಿದ್ದಾರೆ.
ಒಂದು ರೀತಿಯಲ್ಲಿ, ಬದುಕಿನ ಸಂಧ್ಯಾಕಾಲವೆಂಬುದು ಅತ್ಯಂತ ಬೆಲೆಯುಳ್ಳದ್ದು. ಆ ವಯಸ್ಸು ಒಡನಾಡಿಯನ್ನು ಬಯಸುತ್ತದೆ. ಹದಿಹರೆಯದಲ್ಲಿರುವ ಹುರುಪು, ಎದೆಗಾರಿಕೆ, ಆರೋಗ್ಯಗಳೆಲ್ಲ ಆ ವಯಸ್ಸಿನಲ್ಲಿ ಮಂದವಾಗಿರುತ್ತದೆ. ಅವಲಂಬನೆಗೆ ಓರ್ವರು ಇರಲೇಬೇಕಾದ ಅಗತ್ಯವೊಂದು ಕಾಣಿಸುವ ಸಂದರ್ಭ ವದು. ಸೂರ್ಯ ನಾರಾಯಣ್‍ರನ್ನು ವರಿಸಲು ಒಪ್ಪಿಕೊಂಡ ಬಾನುಮತಿ ಅವಿವಾಹಿತರು. ಹರೆಯದಲ್ಲಿ ಮದುವೆ ಪ್ರಸ್ತಾಪಗಳು ಬಂದಿದ್ದರೂ ಅವರು ನಿರಾಕರಿಸಿದ್ದರು. ಮದುವೆಯ ಬಗ್ಗೆ ಉಡಾಫೆಯ ಭಾವನೆಯೊಂದು ಅವರಲ್ಲಿತ್ತು. ಮದುವೆ ಬೇಡ ಎಂದು ತೀರ್ಮಾನಿಸುವುದಕ್ಕೆ ಆ ಸಮಯದಲ್ಲಿ ಅವರೊಂದಿಗೆ ವಯಸ್ಸಿತ್ತು. ಉದ್ಯೋಗ ಇತ್ತು. ಯಾರನ್ನೂ ಅವಲಂಬಿಸದೆಯೇ ಬದುಕಬಲ್ಲೆ ಎಂಬ ಧೈರ್ಯ ಇತ್ತು. ಬದುಕಿನ ಅತಿದೊಡ್ಡ ಸಂಪತ್ತು ಏನೆಂದರೆ, ವಯಸ್ಸು ಮತ್ತು ಆರೋಗ್ಯ. ಬಾಲ್ಯ ಕಾಲದಲ್ಲಿ ನಾವು ಇನ್ನೊಬ್ಬರನ್ನು ಅವಲಂಬಿಸಿರುತ್ತೇವೆ. ಸ್ವತಃ ತೀರ್ಮಾನ ಕೈಗೊಳ್ಳುವ ಸಾಮಥ್ರ್ಯ ನಮ್ಮಲ್ಲಿರುವುದಿಲ್ಲ. ನಮಗೆ ಆ ಸ್ವಾತಂತ್ರ್ಯವೂ ಇರುವುದಿಲ್ಲ. ಬಾಲ್ಯವು ಕಳೆದು ಯೌವನಕ್ಕೆ ಪ್ರವೇಶಿಸುವಾಗ ಹಲವು ರೀತಿಯ ಪ್ರಶ್ನೆ ಮತ್ತು ಪ್ರಯೋಗಗಳಿಗೆ ನಮ್ಮನ್ನು ಒಡ್ಡಿಕೊಳ್ಳಲು ಪ್ರಾರಂಭಿಸುತ್ತೇವೆ. ಹಲವು ವಿಧದ ಆಲೋಚನೆಗಳನ್ನು ಮಾಡುತ್ತಾ ಮತ್ತು ಪ್ರಯೋಗಕ್ಕೆ ತರಲು ಭಯಪಡುತ್ತಾ ಒದ್ದಾಡುತ್ತೇವೆ. ವಿದ್ಯಾಭ್ಯಾಸ ಮತ್ತಿತರ ಚಟುವಟಿಕೆ ಗಳೊಂದಿಗೆ ಬದುಕು ಸಾಗುತ್ತದೆ. ಮನೆಯವರನ್ನು ಸಾಕಬೇಕಾದ ಒತ್ತಡ ಇರುವುದಿಲ್ಲ. ಕಲಿಕೆ, ಕ್ರೀಡೆ, ಹರಟೆ ಇತ್ಯಾದಿಗಳೊಂದಿಗೆ ಕಳೆಯುತ್ತಾ ಯೌವನದ ಪ್ರಬುದ್ಧ ಹಂತಕ್ಕೆ ತಲುಪುತ್ತದೆ. ಶಿಕ್ಷಣ ಮುಗಿದು ದುಡಿಮೆ ಪ್ರಾರಂಭವಾಗುತ್ತದೆ. ಈ ಪ್ರಾಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳೇ ಬಹುತೇಕ ಬಾರಿ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಮದುವೆ ಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸುವ ವಯಸ್ಸದು. ಬಾನುಮತಿ ಮದುವೆ ಬೇಡ ಎಂದು ತೀರ್ಮಾನಿಸಿದ್ದು ಈ ವಯಸ್ಸಿನಲ್ಲೇ. ಹಾಗೆ ತೀರ್ಮಾನಿಸಿ ವೃದ್ಧಾಪ್ಯಕ್ಕೆ ತಲುಪಿದ ಬಳಿಕ ಯಾಕೋ ಆ ತೀರ್ಮಾನ ತಪ್ಪು ಎಂದು ಅವರಿಗೆ ಅನಿಸಿತು. ಆರೋಗ್ಯ ಮತ್ತು ವಯಸ್ಸು ಎರಡೂ ಇರುವ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅವೆರಡೂ ಕೈ ತಪ್ಪಿ ಹೋಗುತ್ತಿರುವ ಹಂತದಲ್ಲಿ ಬದಲಿಸುವುದಕ್ಕೆ ಅವರು ಮುಂದಾದರು. ಅದರ ಫಲಿತಾಂಶವೇ ಸೂರ್ಯನಾರಾಯಣ್‍ರನ್ನು ವಿವಾಹವಾದದ್ದು.
     60 ವರ್ಷವನ್ನು ದಾಟಿದ 10 ಕೋಟಿ 38 ಲಕ್ಷ ಮಂದಿ ಈ ದೇಶದಲ್ಲಿದ್ದಾರೆ ಎಂದು 2011ರ ಜನಗಣತಿಯ ವಿವರಗಳು ಸ್ಪಷ್ಟಪಡಿಸುತ್ತವೆ. ವಿಷಾದ ಏನೆಂದರೆ, ಇವರಲ್ಲಿ ಹೆಚ್ಚಿನವರೂ ಒಂಟಿಯಾಗಿದ್ದಾರೆ ಎಂಬುದು. ಒಂದೋ ಅವರು ವಿಚ್ಛೇದಿತರು ಅಥವಾ ಪತ್ನಿಯನ್ನೋ ಪತಿಯನ್ನೋ ಕಳಕೊಂಡವರು. ವೃದ್ಧರು ಎಂಬ ಪಟ್ಟಿಯಲ್ಲಿ ಸುಲಭವಾಗಿ ಸೇರಿಕೊಳ್ಳುವ ಇವರ ಬಗ್ಗೆ ಸಾಮಾಜಿಕ ಮನಸ್ಥಿತಿ ಯಾವ ಬಗೆಯದು ಅನ್ನುವುದಕ್ಕೆ ಸೂರ್ಯ ನಾರಾಯಣ್ ಒಂದು ಉದಾಹರಣೆ ಅಷ್ಟೇ. ಜಂಟಿಯಾಗಿ ಬದುಕುತ್ತಿದ್ದವರು ಒಂದು ದಿನ ಒಂಟಿಯಾಗುವುದೇ ಬಹುದೊಡ್ಡ ಆಘಾತ. ವೃದ್ಧಾಪ್ಯದಲ್ಲಿ ಈ ಆಘಾತದ ಪ್ರಮಾಣ ಇನ್ನೂ ಹೆಚ್ಚು. ಆ ಪ್ರಾಯದಲ್ಲಿ ಮಕ್ಕಳು ದೊಡ್ಡವರಾಗಿರುತ್ತಾರಲ್ಲದೇ ತಮ್ಮದೇ ಗೂಡುಗಳನ್ನು ಕಟ್ಟಿಕೊಂಡಿರುತ್ತಾರೆ. ಪತಿ-ಪತ್ನಿ-ಮಕ್ಕಳು ಎಂದು ಮುಂತಾಗಿ ಅವರು ಹೊಸ ಜಗತ್ತನ್ನು ಪ್ರವೇಶಿಸಿರುತ್ತಾರೆ. ಇಂಥ ಸ್ಥಿತಿಯಲ್ಲಿ ತನ್ನವರು ಯಾರೂ ಇಲ್ಲ ಅನ್ನುವ ಭಾವವೊಂದು ಹಿರಿಯರನ್ನು ನಿಧಾನಕ್ಕೆ ಆವರಿಸಿಕೊಳ್ಳತೊಡಗುತ್ತದೆ. ಸಮಯಕ್ಕೆ ಸರಿಯಾಗಿ ಊಟ-ತಿಂಡಿಯೊಂದೇ ಮನುಷ್ಯರ ಅಗತ್ಯ ಅಲ್ಲವಲ್ಲ. ಅದು ಹೊಟ್ಟೆಯ ಹಸಿವನ್ನಷ್ಟೇ ತಣಿಸುತ್ತದೆ. ಆದರೆ ಮಾನವ ಶರೀರದಲ್ಲಿ ಹೊಟ್ಟೆ ಮಾತ್ರ ಇರುವುದಲ್ಲ. ಭಾವನೆಗಳ ಗುಚ್ಛವೇ ಶರೀರ. ವೃದ್ಧಾಪ್ಯದಲ್ಲಿ ಚಟುವಟಿಕೆಗಳು ಕಡಿಮೆಯಾಗುತ್ತದೆ. ಯೌವನದಲ್ಲಾದರೆ ಕಚೇರಿ, ಮನೆ, ಮಡದಿ, ಮಕ್ಕಳು ಎಂದೆಲ್ಲಾ ಕಳೆದು ಹೋಗುತ್ತದಲ್ಲದೇ ಕೆಲವೊಮ್ಮೆ ಮನೆ-ಮಂದಿಯೊಂದಿಗೆ ಹಂಚಿಕೊಳ್ಳುವುದಕ್ಕೆ ಸಮಯವೇ ಇರುವುದಿಲ್ಲ. ಆದ್ದರಿಂದ ಆ ಪ್ರಾಯದಲ್ಲಿ ಒಂಟಿತನ ಕಾಡುವುದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಆದರೆ ವೃದ್ಧಾಪ್ಯ ಹಾಗಲ್ಲ. ಅದು ಹಳತನ್ನು ಮೆಲುಕು ಹಾಕುವ ಮತ್ತು ಹಳತಿನಂತೆ ಬದುಕಲು ಬಿಡದ ಪ್ರಾಯ. ದಂಪತಿಗಳು ಹೆಚ್ಚಿನ ಸಮಯವನ್ನು ಜೊತೆಯಾಗಿ ಕಳೆಯುವುದು ಈ ಪ್ರಾಯದಲ್ಲೇ.   ಪರಸ್ಪರ ಅವಲಂಬನೆ ಎಷ್ಟು ಅಗತ್ಯ ಮತ್ತು ಅನಿವಾರ್ಯ ಎಂಬುದನ್ನು ಅವರಿಬ್ಬರಿಗೆ ಮನವರಿಕೆ ಮಾಡಿಕೊಡುವುದೂ ಈ ಪ್ರಾಯವೇ. ಒಂದು ವೇಳೆ, ಮಕ್ಕಳು ಮತ್ತು ಮೊಮ್ಮಕ್ಕಳು ಜೊತೆ ಇಲ್ಲದಿದ್ದರೂ ಅವರು ಅದನ್ನು ಎದುರಿಸಲು ಜೊತೆಯಾಗಿ ಸಿದ್ಧವಾಗುತ್ತಾರೆ. ಪರಸ್ಪರ ಅವಲಂಬಿತರಾಗಿದ್ದುಕೊಂಡು ಮಕ್ಕಳ ಕೊರತೆ ಕಾಡದಂತೆ ನೋಡಿಕೊಳ್ಳುತ್ತಾರೆ. ಆದರೆ, ಈ ಇಬ್ಬರಲ್ಲಿ ಒಬ್ಬರು ಕಳೆದು ಹೋದರೆ ಅವರ ಬದುಕೇ ಅಸ್ತವ್ಯಸ್ತವಾಗುತ್ತದೆ. ಏಕಾಂಗಿತನ ಕಾಡತೊಡಗುತ್ತದೆ. ಒಮ್ಮೆಲೇ ದೇಹ ವೃದ್ಧಾಪ್ಯಕ್ಕೆ ತಲುಪಿದಂಥ ಚಹರೆಯನ್ನು ಹೊಂದುತ್ತದೆ. ದುರಂತ ಏನೆಂದರೆ, ಇಂಥ ಸಮಯದಲ್ಲಿ ಮಕ್ಕಳು ಊಟ-ತಿಂಡಿಯ ಬಗ್ಗೆ ಕಾಳಜಿ ವಹಿಸುತ್ತಾರೆಯೇ ಹೊರತು ಅವರ ಭಾವನಾತ್ಮಕ ಜಗತ್ತಿಗೆ ಪ್ರವೇಶಿಸುವ ಪ್ರಯತ್ನ ನಡೆಸುವುದಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೆಂದರೆ, ಅವರ ಯೋಗಕ್ಷೇಮ ವಿಚಾರಿಸುತ್ತಾ, ಊಟ-ತಿಂಡಿ ಕೊಡುತ್ತಿರುವುದು ಎಂಬ ಭಾವನೆಯೇ ಬಹುತೇಕರದು. ನಿಜವಾಗಿ, ಆ ಪ್ರಾಯ ಒಡನಾಡಿಯನ್ನು ಬಯಸುತ್ತದೆ. ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ತಕ್ಕುದಾದ ಒಡನಾಡಿ. ಅಂದಹಾಗೆ, ಪ್ರತಿಯೊಬ್ಬರಿಗೂ ಖಾಸಗಿತನವೆಂಬುದಿದೆ. ಒಡನಾಡಿಯಷ್ಟು ಚೆನ್ನಾಗಿ ಬೇರೆ ಯಾರೂ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾರರು. ಆದರೆ ಹಿರಿಯರಿಗೆ ಒಡನಾಡಿಯನ್ನು ಒದಗಿ ಸುವ ಕುರಿತಂತೆ ಸಾಮಾಜಿಕವಾಗಿ ಚರ್ಚೆಗಳು ನಡೆಯುವುದು ತೀರಾ ತೀರಾ ಕಡಿಮೆ. ಅವರಲ್ಲಿ ಆ ಬಗ್ಗೆ ವಿಚಾರಿಸುವ ಪ್ರಯತ್ನಗಳೂ ನಡೆಯುವುದಿಲ್ಲ. ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಇರುವ ಏರ್ಪಾಟುಗಳಂತೆ ಈ ಹಿರಿಯರ ಅಹವಾಲನ್ನು ಆಲಿಸಿ ಒಡನಾಡಿಯನ್ನು ಒದಗಿಸುವ ಕುರಿತಂತೆ ಆಲೋಚನೆಗಳೇ ನಡೆಯುವುದಿಲ್ಲ. ಹಿರಿಯರನ್ನು ವಧು-ವರರಾಗಿಸುವ ಏರ್ಪಾಡುಗಳೇ ನಡೆಯುವುದಿಲ್ಲ. ಅವರಿಗಾಗಿ ಮೆಟ್ರಿಮೋನಿಯಲ್ (ವೈವಾಹಿಕ) ಸಂಸ್ಥೆಗಳೂ ವಿರಳಾತಿವಿರಳ. ಅವರಿಗೆ ಸಂಗಾತಿಯನ್ನು ಒದಗಿಸುವುದನ್ನು ಬಿಟ್ಟು ಉಳಿದೆಲ್ಲವುಗಳ ಬಗ್ಗೆ ಸಮಾಜ ಧಾರಾಳವಾಗಿ ಚರ್ಚಿಸುತ್ತದೆ.
     ವೃದ್ಧಾಪ್ಯವೆಂಬುದು ಅವಲಂಬನೆಯ ಪ್ರಾಯ. ಅವಲಂಬಿತರಲ್ಲಿ ಓರ್ವರು ಕಳೆದು ಹೋದರೆ ಇನ್ನೋರ್ವರು ಸ್ವತಃ ಕಳೆದುಹೋದವ ರಂತೆ ಚಡಪಡಿಸುತ್ತಾರೆ. ಅಂಥ ಸ್ಥಿತಿಯನ್ನು ಎದುರಿಸುವುದಕ್ಕೆ ಅವರಿಗೆ ಊಟ-ತಿಂಡಿಗಳಷ್ಟೇ ಸಾಕಾಗುವುದಿಲ್ಲ. ಸಂಗಾತಿಯ ಅಗತ್ಯವೂ ಇರುತ್ತದೆ. ಅದನ್ನು ಒದಗಿಸುವ ಸಮಯ ಪ್ರಜ್ಞೆಯನ್ನು ಮಕ್ಕಳು, ಸಮಾಜ ತೋರಬೇಕು. ಇಂಥವರಿಗಾಗಿ ಮೆಟ್ರಿಮೋನಿಯಲ್ ಸಂಸ್ಥೆಗಳನ್ನೂ ಪ್ರಾರಂಭಿಸಬೇಕು. ಪ್ರವಾದಿ ಮುಹಮ್ಮದ್(ಸ)ರಂತೂ ಮರು ಮದುವೆಗೆ ಅತೀ ಹೆಚ್ಚು ಪ್ರಾಶಸ್ತ್ಯವನ್ನು ನೀಡಿದ್ದಾರೆ. ಸಮಾಜದ ಹೊಣೆಗಾರಿಕೆಯ ಪಟ್ಟಿಯಲ್ಲಿ ಮರು ಮದುವೆಯನ್ನೂ
ಸೇರಿಸಿದ್ದಾರೆ. ಅವರು ಮದುವೆಯಾಗಿರುವುದೇ ವಿಧವೆಯನ್ನು. ಮೂರು ಮಕ್ಕಳ ತಾಯಿಯಾದ ಖದೀಜಾ ಎಂಬ 40 ರ ಹರೆಯದ ವಿಧವೆಯನ್ನು ತಮ್ಮ 25ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಅಂದಹಾಗೆ, ಮಧ್ಯ ವಯಸ್ಸನ್ನು ದಾಟಿದವರ ಮರು ಮದುವೆಯ ತಮಾಷೆಯ ವಸ್ತುವಲ್ಲ. ಅದು ಪ್ರಕೃತಿ ಸಹಜ.
        ಸೂರ್ಯ ನಾರಾಯಣ್ ಮತ್ತು ಬಾನುಮತಿ ಈ ಸಹಜತೆಯನ್ನು ನೆನಪಿಸಿದ್ದಾರೆ ಅಷ್ಟೇ.
ಮಕ್ಕಳು ಓದಲೇಬೇಕಾದ ಲೇಖನ