Tuesday, April 22, 2014

ತೆರೆದ ಬಯಲಲ್ಲಾಗಿದ್ದರೆ ಲಿಂಡಾ ಕೂಡ ‘ಕ್ಷಮಿಸಿದ್ದೇನೆ ಹೋಗು' ಅನ್ನುತ್ತಿದ್ದಳೇನೋ!

ಮಕ್ಕಳೊಂದಿಗೆ  ಜೆಮಿ ಪಾಡ್ರನ್
ಅಮೇರಿಕದ ಲಾರಾ ಬ್ಲೂಮೆನ್‍ಫೀಲ್ಡ್ ರ ತಂದೆ 1986ರಲ್ಲಿ ಇಸ್ರೇಲ್‍ಗೆ ಭೇಟಿ ನೀಡುತ್ತಾರೆ. ಅವರೋರ್ವ ಯಹೂದಿ ರಬ್ಬಿ. ಆದರೆ ಇಸ್ರೇಲ್‍ನ ಜೆರುಸಲೇಮ್‍ನಲ್ಲಿ ಅವರ ಮೇಲೆ ಗುಂಡಿನ ದಾಳಿಯಾಗುತ್ತದೆ. ಉಮರ್ ಖಾತಿಬ್ ಎಂಬ ಯುವಕ ಹಾರಿಸಿದ ಗುಂಡು ಅವರ ಕತ್ತಿನ ಭಾಗಕ್ಕೆ ತಾಗಿದರೂ ಅವರು ಪ್ರಾಣಾಪಾಯದಿಂದ ಪಾರಾಗುತ್ತಾರೆ. ಲಿಬಿಯದ ಮೇಲೆ ಅಮೇರಿಕ ನಡೆಸಿದ ಬಾಂಬ್ ದಾಳಿಗೆ ತೀವ್ರ ಕ್ರುದ್ಧನಾಗಿದ್ದ ಖಾತಿಬ್, ಅಮೇರಿಕದ ಈ ರಬ್ಬಿಯನ್ನು ತನ್ನ ಪ್ರತೀಕಾರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ. ಲಾರಾಳ ಮೇಲೆ ಈ ಘಟನೆ ತೀವ್ರ ಪ್ರಭಾವವನ್ನು ಬೀರುತ್ತದೆ. ಲಿಬಿಯದ ಮೇಲಿನ ದಾಳಿಯ ಸಿಟ್ಟನ್ನು ತನ್ನ ತಂದೆಯ ಮೇಲೆ ಓರ್ವ ಯುವಕ ತೀರಿಸುತ್ತಾನೆಂದರೆ, ಆ ಪ್ರತೀಕಾರ ಮನಸ್ಥಿತಿಯ ಒಳ ಮರ್ಮವೇನು, ಅದು ಜನರನ್ನು ಹೇಗೆ ಸಿದ್ಧಗೊಳಿಸುತ್ತದೆ, ಆ ಸಂದರ್ಭದಲ್ಲಿ ಅವರ ಆಲೋಚನೆಗಳು ಹೇಗಿರುತ್ತವೆ.. ಮುಂತಾದ ವಿಷಯಗಳ ಸುತ್ತ ಲಾರಾ ತೀವ್ರ ಆಸಕ್ತಿ ವಹಿಸುತ್ತಾಳೆ. ಅಮೇರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಸೇರಿಕೊಂಡ ಬಳಿಕ ಆಕೆಯಲ್ಲಿ ಕುತೂಹಲ ಇನ್ನಷ್ಟು ಹೆಚ್ಚಾಗುತ್ತದೆ. ತನ್ನ ತಂದೆಗೆ ಗುಂಡಿಕ್ಕಿದ ಯುವಕನನ್ನು ಭೇಟಿಯಾಗಬೇಕೆಂದು ಆಕೆ ತೀರ್ಮಾನಿಸುತ್ತಾಳೆ. ಯುವಕನ ಕುಟುಂಬದೊಂದಿಗೆ ಸಂಪರ್ಕ ಸಾಧಿಸುತ್ತಾಳೆ. ಇಸ್ರೇಲಿ ಜೈಲಿನಲ್ಲಿದ್ದ ಯುವಕನೊಂದಿಗೆ ಕುಟುಂಬದವರ ನೆರವಿನಿಂದ ಪತ್ರ ವ್ಯವಹಾರ ನಡೆಸುತ್ತಾಳೆ. ಆದರೆ ಎಲ್ಲೂ ಆಕೆ ತನ್ನ ನಿಜ ಗುರುತನ್ನು ಆ ಕುಟುಂಬದೊಂದಿಗಾಗಲಿ, ಯುವಕನೊಂದಿಗಾಗಲಿ ಹೇಳಿಕೊಳ್ಳುವುದೇ ಇಲ್ಲ. ಇಸ್ರೇಲ್‍ನ ಅಧ್ಯಕ್ಷ  ಇಝಾಕ್ ರಬಿನ್‍ರನ್ನು ಹತ್ಯೆಗೈದ ಆರೋಪಿಯನ್ನು ಮತ್ತು ಅಲ್ಜೀರಿಯಾದ ಬ್ಲಡ್ ಫ್ಯೂಯೆಡ್ ಕಮಿಟಿಯನ್ನು ಆಕೆ ಭೇಟಿಯಾಗುತ್ತಾಳೆ. ಇರಾನ್ ನ್ಯಾಯಾಲಯದ ಮುಖ್ಯ ನ್ಯಾಯಾ ಧೀಶರು, ಧಾರ್ಮಿಕ ಗುರುಗಳು, ಕ್ರೀಡಾ ಅಭಿಮಾನಿಗಳನ್ನು ಭೇಟಿಯಾಗಿ ಪ್ರತೀಕಾರದ ಸುತ್ತಮುತ್ತ ಚರ್ಚಿಸುತ್ತಾಳೆ. ಬೋಸ್ನಿಯಾ, ಈಜಿಪ್ಟ್, ಸಿಸಿಲಿ.. ಮುಂತಾದ ರಾಷ್ಟ್ರಗಳಿಗೆ ಭೇಟಿ ಕೊಟ್ಟು ಅನುಭವ ಪಡೆಯುತ್ತಾಳೆ. 1998ರಲ್ಲಿ ಖಾತಿಬ್‍ನ ಬಿಡುಗಡೆಯಾಗುತ್ತದೆ. ಆತನನ್ನು ಸಂದರ್ಶಿಸುತ್ತಾಳೆ. ಹೀಗೆ ತಾನು ಸಂಗ್ರಹಿಸಿದ ಒಟ್ಟು ಅನುಭವಗಳನ್ನು ಮುಂದಿಟ್ಟುಕೊಂಡು 2002ರಲ್ಲಿ, ‘ರಿವೆಂಜ್: ಎ ಸ್ಟೋರಿ ಆಫ್ ಹೋಪ್' ಎಂಬ ಕೃತಿಯನ್ನು ಆಕೆ ಬಿಡುಗಡೆಗೊಳಿಸುತ್ತಾಳೆ. ಇಷ್ಟಕ್ಕೂ,
 ಸಮೀರರನ್ನು ಸಂತೈಸುತ್ತಿರುವ ಬಿಲಾಲ್ ನ ತಾಯಿ
    ಕ್ಷಮೆ ಮತ್ತು ಪ್ರತೀಕಾರವನ್ನು ಮುಖ್ಯ ವಸ್ತುವಾಗಿಟ್ಟುಕೊಂಡು ರಚನೆಯಾದ ಕೃತಿಗಳು ಲಾರಾ ಒಬ್ಬರದ್ದೇ ಅಲ್ಲ. ಹಲವಾರು ಇವೆ. ಪ್ರತೀಕಾರದ ಪರವಹಿಸಿ ಮಾತಾಡುವವರಿಗಿಂತ ಎಷ್ಟೋ ಅಧಿಕ ಪ್ರಮಾಣದಲ್ಲಿ ಕ್ಷಮೆಯ ಪರವಹಿಸಿ ಮಾತಾಡುವವರು ಈ ಜಗತ್ತಿನಲ್ಲಿದ್ದಾರೆ. ಕ್ಷಮೆಯ ಮಹತ್ವವನ್ನು ಸಾರುವ ಮೋನಾ ಅಫಿನಿಟೋ ಅವರ, ‘ವೆನ್ ಟು ಫೊರ್‍ಗಿವ್’; ಫೆಡ್ರಿಕ್ ಲುಸ್‍ಕಿನ್ ಅವರ, ‘ಫೊರ್‍ಗಿವ್ ಫಾರ್ ಗುಡ್’; ಜೆಫ್ರಿ ಮುಫೀಯವರ, ‘ಗೆಟ್ಟಿಂಗ್ ಇವನ್: ಫೊರ್‍ಗಿವ್‍ನೆಸ್ ಆಂಡ್ ಇಟ್ಸ್ ಲಿಮಿಟ್ಸ್’; ರಾಬರ್ಟ್ ಎನ್‍ರೈಟ್‍ರ, ‘ಫೊರ್‍ಗಿವ್‍ನೆಸ್ ಈಸ್ ಎ ಚಾೈಸ್: ಎ ಸ್ಟೆಪ್ ಬೈ ಸ್ಟೆಪ್..' ಮುಂತಾದ ಹಲವಾರು ಕೃತಿಗಳು ಪ್ರಕಟವಾಗಿದ್ದರೂ ರಿವೆಂಜ್‍ನ (ಪ್ರತೀಕಾರ) ಅಗತ್ಯವನ್ನು ಸಾರುವ ಕೃತಿಗಳು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ತಂದೆಯ ಮೇಲಿನ ಹಲ್ಲೆಯನ್ನು ಖಂಡಿಸಿ ಒಂದು ಬಗೆಯ ಪ್ರತೀಕಾರ ಭಾವದಿಂದಲೇ ಪ್ರಪಂಚದ ಸುತ್ತಾಟಕ್ಕಿಳಿದ ಲಾರಾ, ಅಂತಿಮವಾಗಿ ಕೃತಿ ಬರೆಯುವ ಹೊತ್ತಿನಲ್ಲಿ ಕ್ಷಮೆಯ ಕಡೆಗೆ ವಾಲಿದ್ದರು. ಕ್ಷಮೆ ಎಂದರೇನು, ಅದನ್ನು ನೀಡುವ ವಿಧಾನ ಹೇಗೆ, ಅದರಿಂದ ಏನು ಪ್ರಯೋಜನ.. ಎಂಬುದನ್ನೆಲ್ಲಾ ವಿವರಿಸುವ ವೆಬ್‍ಸೈಟ್‍ಗಳು ಇವತ್ತು ಧಾರಾಳ ಇವೆ. ಕ್ಷಮೆಯಿಂದಾಗಿ ನಿಮ್ಮ ಮೆದುಳಿನಲ್ಲಾಗುವ ಬದಲಾವಣೆ ಮತ್ತು ಪ್ರತೀಕಾರ ಭಾವದಿಂದ ಆಗುವ ಬದಲಾವಣೆಗಳ ಬಗ್ಗೆ ವಿಸ್ತೃತ ಮಾಹಿತಿಗಳು ಇವತ್ತು ಇಂಟರ್‍ನೆಟ್‍ನಲ್ಲಿ ಸಾಕಷ್ಟಿವೆ. ಆದ್ದರಿಂದಲೇ, ಕಳೆದ ವಾರ ಇರಾನ್ ಜಾಗತಿಕವಾಗಿಯೇ ಸುದ್ದಿಗೀಡಾದದ್ದು. ಓರ್ವ ತಾಯಿಯ ಕ್ಷಮಾಗುಣವು ಇರಾನನ್ನು ಮತ್ತು ಅದರ ಶಿಕ್ಷಾ ಕ್ರಮವನ್ನು ಜಾಗತಿಕವಾಗಿಯೇ ಚರ್ಚೆಗೊಳಪಡಿಸಿದುವು. ತನ್ನ 18ರ ಹರೆಯದ ಮಗನನ್ನು ಇರಿದು ಕೊಂದ ಬಿಲಾಲ್ ಎಂಬ ಯುವಕನನ್ನು ಸವಿೂರ ಅನ್ನುವ ಆ ತಾಯಿ ನೆರೆದ ಸಾವಿರಾರು ಮಂದಿಯ ಎದುರೇ ಕ್ಷಮಿಸಿಬಿಟ್ಟರು. ಆ ಮೂಲಕ ಆತ ನೇಣು ಶಿಕ್ಷೆಯಿಂದ ಪಾರಾಗಿಬಿಟ್ಟ. ಅವರ ಮೂವರು ಮಕ್ಕಳಲ್ಲಿ ಇನ್ನೋರ್ವ ಮಗ ಅಪಘಾತದಲ್ಲಿ ಸಾವಿಗೀಡಾಗಿದ್ದ. ಈಗ ಇರುವುದು ಮಗಳೊಬ್ಬಳೇ. ನಿಜವಾಗಿ, ಒಂದು ಕುಟುಂಬವು ಪ್ರತೀಕಾರ ಕೈಗೊಳ್ಳುವುದಕ್ಕೆ ಇದಕ್ಕಿಂತ ಉತ್ತಮವಾದ ಬೇರೆ ಯಾವ ಕಾರಣವಿದೆ? ಆದರೆ, ನೇಣು ಕುಣಿಕೆಗೆ ತಲೆಯೊಡ್ಡಿದ್ದ ಬಿಲಾಲ್‍ನ ಕೆನ್ನೆಗೊಂದು ಬಾರಿಸಿ ಆ ತಾಯಿ ಬಿಕ್ಕಿ ಬಿಕ್ಕಿ ಅತ್ತಾಗ ನೆರೆದವರು ಭಾವುಕರಾಗಿದ್ದರು. ಸ್ವತಃ ಪೊಲೀಸರ ಕಣ್ಣುಗಳೇ ಹನಿಗೂಡಿದ್ದುವು. ಸವಿೂರಾರನ್ನು ಬಿಲಾಲ್‍ನ ತಾಯಿ ಆಲಿಂಗಿಸಿಕೊಂಡರು. ಆನ್‍ಲೈನ್ ನಲ್ಲಿ ಪ್ರಕಟವಾದ ಆ ಘಟನೆಯ ಹತ್ತು ಹಲವು ದೃಶ್ಯಗಳು ಎಷ್ಟು ಭಾವುಕವಾಗಿತ್ತೆಂದರೆ, ಸಾರ್ವಜನಿಕವಾಗಿ ಗಲ್ಲಿಗೇರಿಸುವುದು ಸರಿಯೋ ತಪ್ಪೋ ಎಂಬುದನ್ನು ಮತ್ತೊಮ್ಮೆ ಅದು ಚರ್ಚಾರ್ಹಗೊಳಿಸಿತು. ಡೈಲಿ ಮೈಲ್, ದಿ ಗಾರ್ಡಿಯನ್, ಬಿಬಿಸಿ, ಸಿ.ಎನ್.ಎನ್ ಡಾಟ್ ಕಾಮ್ ಸಹಿತ ಜಗತ್ತಿನ ಪ್ರಸಿದ್ಧ ಮಾಧ್ಯಮಗಳು ಈ ಕುರಿತಂತೆ ವಿಸ್ತೃತ ವರದಿಯನ್ನು ಒಂದಕ್ಕಿಂತ ಹೆಚ್ಚು ಫೋಟೋಗಳ ಸಮೇತ ಪ್ರಕಟಿಸಿದುವು. ‘ನಾನು ದೇವವಿಶ್ವಾಸಿಯಾಗಿದ್ದೇನೆ ಮತ್ತು ನನ್ನ ಮಗನಿಗೆ ಕ್ಷಮೆಯು ತುಂಬಾ ಇಷ್ಟ..' ಎಂದು ಹೇಳಿದ ಆ ತಾಯಿಯ ಫೋಟೋವನ್ನು ಹೆಚ್ಚಿನೆಲ್ಲ ಪತ್ರಿಕೆಗಳು ಪ್ರಕಟಿಸಿದುವು. ಸಾಮಾನ್ಯವಾಗಿ, ಇರಾನ್ ಚರ್ಚೆಗೀಡಾಗುವುದೇ ನಕಾರಾತ್ಮಕ ಸುದ್ದಿಗಳಿಗಾಗಿ. ಕಲ್ಲೆಸೆದು ಕೊಲ್ಲುವ, ಸಾರ್ವಜನಿಕವಾಗಿ ನೇಣಿಗೇರಿಸುವ ಅಲ್ಲಿನ ಶಿಕ್ಷಾ ಕ್ರಮಗಳನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್‍ರಿಂದ ಹಿಡಿದು ಆಮ್ನೆಸ್ಟಿ ಇಂಟರ್‍ನ್ಯಾಶನಲ್ ವರೆಗೆ ಎಲ್ಲರೂ ಚರ್ಚೆಗೊಳಪಡಿಸುತ್ತಲೇ ಬಂದಿದ್ದಾರೆ. ಸಾರ್ವಜನಿಕರೆದುರು ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವುದು ಕ್ರೂರ ವಿಧಾನ ಎಂಬ ಅಭಿಪ್ರಾಯ ಅಸಂಖ್ಯ ಮಂದಿಯಲ್ಲಿದೆ. ಅಲ್ಲದೇ, ‘ಮರಣ ದಂಡನೆಯೇ ತಪ್ಪು, ಕೊಲ್ಲುವ ಸ್ವಾತಂತ್ರ್ಯ ಯಾರಿಗೂ ಇಲ್ಲ’ ಎಂದು ವಾದಿಸುವವರ ಸಂಖ್ಯೆಯೂ ಬಹಳ ದೊಡ್ಡದಿದೆ. ಆ್ಯಂಟನಿ ಚೆಕಾವ್ ಅವರ ‘ದಿ ಬೆಟ್' ಎಂಬ ಕತೆಯಿಂದ ಪ್ರಭಾವಿತಗೊಂಡು, ಈ ಶಿಕ್ಷಾ ವಿಧಾನವನ್ನೇ ಭಿನ್ನವಾಗಿ ವ್ಯಾಖ್ಯಾನಿಸುವವರೂ ಇದ್ದಾರೆ. ಆದರೆ, ಎಲ್ಲರ ವಾದಗಳಿಗೂ ಒಂದು ಹಂತದ ತಡೆಯನ್ನು ವಿಧಿಸುವಲ್ಲಿ ಇರಾನ್‍ನ ಈ ತಾಯಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕವಾಗಿ ನೇಣಿಗೇರಿಸುವುದನ್ನು ಕ್ರೂರ ಅನ್ನುವವರು ಒಂದು ಕಡೆಯಾದರೆ, ಸಾರ್ವಜನಿಕವಾಗಿ ಸಾರುವ ಕ್ಷಮೆಯ ಸಂದೇಶವು ಅದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಪ್ರಭಾವಶಾಲಿ ಯಾದದ್ದು ಅನ್ನುವವರು ಇನ್ನೊಂದು ಕಡೆ. ಅಂದಹಾಗೆ, ಮುಚ್ಚಿದ ಮನೆಯೊಳಗೆ ಯಾರಿಗೂ ಕಾಣದಂತೆ ಓರ್ವರನ್ನು ಗಲ್ಲಿಗೇರಿಸುವುದು ಸಾರ್ವಜನಿಕರನ್ನು ಎಷ್ಟರ ಮಟ್ಟಿಗೆ ತಟ್ಟಬಹುದು? ಗಲ್ಲು ಶಿಕ್ಷೆ ಎಂಬುದು ಸಾಮಾನ್ಯ ಶಿಕ್ಷೆಯಲ್ಲ. ಅಸಾಮಾನ್ಯ ಕ್ರೌರ್ಯಗಳಿಗಾಗಿ ಮಾತ್ರ ವಿಧಿಸಲಾಗುವ ಗಲ್ಲು ಶಿಕ್ಷೆಯನ್ನು ಎಲ್ಲರಿಂದಲೂ ಮುಚ್ಚಿಡುವುದರಿಂದ ಶಿಕ್ಷೆಯ ಉದ್ದೇಶ ಪೂರ್ತಿಯಾಗಬಲ್ಲುದೇ? ಯಾಕೆಂದರೆ, ಶಿಕ್ಷೆ ನೀಡುವುದು ಕೇವಲ ವ್ಯಕ್ತಿಗೆ ಅಲ್ಲವಲ್ಲ. ಅಲ್ಲಿ ವ್ಯಕ್ತಿ ನಿಮಿತ್ತ ಮಾತ್ರ. ಗಲ್ಲು ಶಿಕ್ಷೆಯ ಮೂಲಕ ಅಂಥ ಕೃತ್ಯಗಳನ್ನು ಎಸಗುವವರಿಗೆ ಅಥವಾ ಅದಕ್ಕಾಗಿ ಸಿದ್ಧತೆ ನಡೆಸುವವರಿಗೆ ಎಚ್ಚರಿಕೆ ನೀಡಲಾಗುತ್ತದಲ್ಲವೇ? ಆ ಎಚ್ಚರಿಕೆಯನ್ನು ತೀರಾ ಖಾಸಗಿಯಾಗಿ ನೀಡುವುದಕ್ಕಿಂತ ಬಹಿರಂಗವಾಗಿ ನೀಡುವುದು ಹೆಚ್ಚು ಪ್ರಭಾವಶಾಲಿಯಲ್ಲವೇ? ಪೊಲೀಸ್ ಠಾಣೆ, ಕೋರ್ಟು, ಜೈಲು, ಶಿಕ್ಷೆ.. ಇವೆಲ್ಲ ಆಟದ ಬಯಲುಗಳು ಅಲ್ಲ ತಾನೇ. ತಪ್ಪು ಮಾಡುವವರಲ್ಲಿ ಭೀತಿ ಮತ್ತು ಪರಿವರ್ತನೆಯ ಮನಸ್ಸನ್ನು ಹುಟ್ಟು ಹಾಕಬೇಕೆಂಬ ಉದ್ದೇಶದಿಂದಲೇ ಇವು ಅಸ್ತಿತ್ವಕ್ಕೆ ಬಂದಿವೆ. ಹೀಗಿರುವಾಗ, ಜನರಲ್ಲಿ ಒಂದು ಹಂತದ ವರೆಗೆ ಭೀತಿಯನ್ನು ಮೂಡಿಸಬಲ್ಲ ತೆರೆದ ಬಯಲಿನ ಗಲ್ಲು ಶಿಕ್ಷೆಯನ್ನು ಕೇವಲ ಕ್ರೂರ ಎಂಬ ಪೂರ್ವ ನಿರ್ಧರಿತ ಚೌಕಟ್ಟಿನೊಳಗೆ ಮಾತ್ರ ಇಟ್ಟು ನೋಡುವುದೇಕೆ? ಅದರಾಚೆಗಿನ ಸಾಧ್ಯತೆಗಳೂ ಇರಬಹುದಲ್ಲವೇ? ಅಲ್ಲದೇ, ಶಿಕ್ಷೆ ಜಾರಿಯಾಗುವ ಹಂತದಲ್ಲಿ ಸವಿೂರರಂಥ ತಾಯಂದಿರು ಕ್ಷಮೆ ನೀಡುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ಅದು ಎಂಥ ಸಂದೇಶವನ್ನು ಸಾರಬಲ್ಲುದು? ಅಪರಾಧಿಯ ಮನಸ್ಥಿತಿಯನ್ನಷ್ಟೇ ಅಲ್ಲ, ವೈರಿಗಳ ಮನಸ್ಸನ್ನೂ ತೇವಗೊಳಿಸುವ ಸಾಮರ್ಥ್ಯ ಅಂಥ ಘಟನೆಗಳಿಗೆ ಇರುತ್ತದಲ್ಲವೇ? ಸಾರ್ವಜನಿಕರ ಮುಂದೆ ನಡೆಯಬಹುದಾದ ಇಂಥ ಘಟನೆಗಳು ಅಪರಾಧಗಳನ್ನು ಕಡಿಮೆಗೊಳಿಸುವುದಕ್ಕೆ ಹೆಚ್ಚು ಉಪಯುಕ್ತವಾಗದೇ.. ಹೀಗೆಲ್ಲಾ ಇಂಟರ್‍ನೆಟ್‍ನಲ್ಲಿ ಅನೇಕರು ವಾದಿಸಿದ್ದಾರೆ.. ಅದೇ ವೇಳೆ ಈ ಅಭಿಪ್ರಾಯವನ್ನು ಖಂಡಿಸಿಯೂ ಬರೆದಿದ್ದಾರೆ.
   ಓ ಕಟುಕನೇ, ನನ್ನ ತಂದೆಯನ್ನು ಯಾಕೆ ಕೊಂದೆ? (ಡಿಯರ್ ಬ್ಯಾಡ್ ಗೈ, ವೈ ಡಿಡ್ ಯು ಕಿಲ್ ಮೈ ಡ್ಯಾಡಿ)
ಹಾಗಂತ, ಇಬ್ಬರು ಮಕ್ಕಳು ಕೋರ್ಟ್‍ನಲ್ಲಿ ಪ್ರಶ್ನಿಸಿದ ಭಾವುಕ ಘಟನೆಯನ್ನು 2014 ಮಾರ್ಚ್ 2ರಂದು ಮಾಧ್ಯಮಗಳು ಪ್ರಕಟಿಸಿದ್ದುವು. ಅಮೇರಿಕದ ಆಸ್ಟಿನ್ ಪಟ್ಟಣದಲ್ಲಿ ಬ್ರೆಂಡನ್ ಡ್ಯಾನಿಯಲ್ ಎಂಬ 20 ವರ್ಷದ ಯುವಕನು  ಜೆಮಿ ಪ್ಯಾಡ್ರನ್ ಎಂಬ ಪೊಲೀಸಧಿಕಾರಿಯನ್ನು 2012 ಎಪ್ರಿಲ್ 12ರಂದು ಗುಂಡಿಕ್ಕಿ ಕೊಲೆಗೈದಿದ್ದ. ಕೋರ್ಟ್‍ನಲ್ಲಿ ಆ ಘಟನೆಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ಯಾಡ್ರನ್‍ರ ಪತ್ನಿ ಅಮಿ 11 ಪುಟಗಳ ದೀರ್ಘ ಪತ್ರವೊಂದನ್ನು ಓದಿದಳು. ಆಕೆಯ 10 ವರ್ಷದ ಅರಿಯಾನ ಮತ್ತು 6 ವರ್ಷದ ಒಲಿವಾ ಎಂಬಿಬ್ಬರು ಮಕ್ಕಳು ಅಪ್ಪನನ್ನು ಸ್ಮರಿಸಿ ಬರೆದ ಪತ್ರವಾಗಿತ್ತದು. 'ನೀನು ನಮ್ಮ ತಂದೆಯನ್ನು ಯಾಕೆ ಕೊಂದೆ, ಅವರು ತುಂಬಾ ಫನ್ನಿ ಆಗಿದ್ರು. ಇಷ್ಟ ಆಗಿದ್ರು. ನೀನು ಈ ಶಿಕ್ಷೆಗೆ ಅರ್ಹನಾಗಿರುವಿ. ನೀನು ಕಂಬಿಗಳ ಹಿಂದೆಯೇ ಬದುಕು. ನೀನೆಷ್ಟು ಮೂರ್ಖ ಕೆಲಸ ಮಾಡಿದೆ ಗೊತ್ತಾ..' ಎಂದೆಲ್ಲಾ ಬರೆದಿದ್ದ ಆ ಪತ್ರ ಕೋರ್ಟಿನಲ್ಲಿದ್ದ ಎಲ್ಲರನ್ನೂ ಕಣ್ತುಂಬಿಸಿತ್ತು. ಕೋರ್ಟು ಬ್ರೆಂಡನ್ ಡ್ಯಾನಿಯಲ್‍ಗೆ ಮರಣದಂಡನೆ ಶಿಕ್ಷೆ ವಿಧಿಸಿದಾಗ ಮೃತ ಜೆಮಿ ಪ್ಯಾಡ್ರನ್‍ನ ಸಹೋದರಿ ಲಿಂಡಾ ಡಯಾನ್‍ಳು ಡ್ಯಾನಿಯಲ್‍ನನ್ನು ಉದ್ದೇಶಿಸಿ, ‘ನೀನು ನರಕಕ್ಕೆ ಹೋಗು’ ಎಂದಿದ್ದಳು.
   ಒಂದು ರೀತಿಯಲ್ಲಿ, ಬಿಲಾಲ್‍ನನ್ನು ಕ್ಷಮಿಸಿದ ಇರಾನ್‍ನ ಆ ತಾಯಿ ಮತ್ತು ಡ್ಯಾನಿಯಲ್‍ನನ್ನು ‘ನರಕಕ್ಕೆ ಹೋಗು’ ಅನ್ನುವ ಮಹಿಳೆ ಇಬ್ಬರೂ ಕ್ಷಮೆ ಮತ್ತು ಪ್ರತೀಕಾರದ ಎರಡು ಮುಖಗಳಾಗಿದ್ದಾರೆ. ಕ್ಷಮೆ ಸುಲಭದ್ದಲ್ಲ. ಅಪರಾಧಿಯನ್ನು ನೋಡುವಾಗ ತಾಯಿಗೆ ತನ್ನ ಕಳೆದು ಹೋದ ಮಗನ ನೆನಪು ಬರುತ್ತದೆ. ಪತ್ನಿಗೆ ಪತಿಯ ನೆನಪು ಕಾಡುತ್ತದೆ. ಮಕ್ಕಳು ಅಪ್ಪನನ್ನು ನೆನಪಿಸಿಕೊಳ್ಳುತ್ತಾರೆ. ಅಂಥ ಸಂದರ್ಭದಲ್ಲಿ ಕ್ಷಮೆಗಿಂತ ಪ್ರತೀಕಾರವೇ ಮೇಲುಗೈ ಪಡೆಯುತ್ತದೆ. ‘ಒಂದು ವೇಳೆ ತಾನು ಕ್ಷಮಿಸಿದರೆ ಅಪರಾಧಿ ಪಾಠ ಕಲಿಯುವುದು ಹೇಗೆ, ಆತ ನನ್ನ ಕ್ಷಮಾಗುಣವನ್ನು ದೌರ್ಬಲ್ಯ ಎಂದು ತಿಳಿದುಕೊಂಡರೆ, ಆತ ಬದಲಾಗದಿದ್ದರೆ, ಅಷ್ಟಕ್ಕೂ ತನ್ನ ಮಗನನ್ನು ಅಥವಾ ಗಂಡನನ್ನು ಕೊಂದವನನ್ನು ನಾನೇಕೆ ಕ್ಷಮಿಸಬೇಕು, ಇಷ್ಟು ವರ್ಷ ಅವರಿಲ್ಲದೇ ತಾನನುಭವಿಸಿದ ದುಃಖಕ್ಕೆ ಅವನಿಗೂ ಶಿಕ್ಷೆಯಾಗಲಿ..' ಎಂಬಂಥ ಆಲೋಚನೆಗಳು ಖಂಡಿತ ಸಂತ್ರಸ್ತರಲ್ಲಿ ಸುಳಿದು ಹೋಗಬಹುದು. ಇವಿದ್ದೂ ಓರ್ವರು ಅಪರಾಧಿಯನ್ನು ಕ್ಷಮಿಸುತ್ತಾರೆಂದರೆ, ಅದು ಅಭೂತಪೂರ್ವವಾದುದು. ಕ್ಷಮೆಯು ಪ್ರತೀಕಾರಕ್ಕಿಂತ ಶ್ರೇಷ್ಠ ಅನ್ನುತ್ತದೆ ಪವಿತ್ರ ಕುರ್‍ಆನ್ (16: 146). ಬಹುಶಃ, ಗಲ್ಲು ಶಿಕ್ಷೆ ಜಾರಿಗೆ ತೆರೆದ ಬಯಲು ಉತ್ತಮವೋ ಅಥವಾ ಮುಚ್ಚಿದ ಕೊಠಡಿ ಉತ್ತಮವೋ ಎಂಬ ಚರ್ಚೆಗೆ ತಾರ್ಕಿಕ ಉತ್ತರ ಸಿಗುವುದೂ ಇಲ್ಲೇ. ತೆರೆದ ಬಯಲಲ್ಲಿ - ಸಾವಿರಾರು ಮಂದಿಯ ಮುಂದೆ ಓರ್ವ ಅಪರಾಧಿ ಅಸಹಾಯಕನಾಗಿ ನೇಣು ಕುಣಿಕೆಗೆ ಕೊರಳೊಡ್ಡಲು ಸಿದ್ಧವಾಗಿರುವ ಸ್ಥಿತಿಯು ಯಾರನ್ನೇ ಆಗಲಿ ಭಾವುಕಗೊಳಿಸದಿರಲು ಸಾಧ್ಯವಿಲ್ಲ. ಯಾಕೆಂದರೆ, ನೆರೆದವರಿಗೆ ಅಲ್ಲಿ ವ್ಯಕ್ತಿ ಕಾಣುತ್ತಾನೆಯೇ ಹೊರತು ಆತನ ಅಪರಾಧ ಅಲ್ಲ. ಜೊತೆಗೇ ಕಣ್ತುಂಬಿಕೊಂಡ ಆತನ ತಾಯಿಯೋ, ಪತ್ನಿಯೋ, ಸಹೋದರನೋ ಅಲ್ಲಿರುತ್ತಾರೆ. ಇಂಥ ಸನ್ನಿವೇಶವು ಸಂತ್ರಸ್ತ ಕುಟುಂಬದ ಮೇಲೂ ಪ್ರಭಾವ ಬೀರಬಲ್ಲುದು. ಆವರೆಗೆ, ‘ಕ್ಷಮಿಸುವುದೇ ಇಲ್ಲ' ಎಂದು ತೀರ್ಮಾನಿಸಿದವರೂ ತೆರೆದ ಬಯಲಿನ ಸ್ಥಿತಿಯನ್ನು ಕಂಡು ನಿಲುವು ಬದಲಿಸುವುದಕ್ಕೆ ಅವಕಾಶವಿದೆ. ನೆರೆದವರ ಹಾವ-ಭಾವ ಸಂತ್ರಸ್ತ ಕುಟುಂಬದ ಮೇಲೆ ಖಂಡಿತ ಪ್ರಭಾವ ಬೀರಬಲ್ಲುದು. ಆದರೆ. ಮುಚ್ಚಿದ ಕೊಠಡಿಯೊಳಗೆ ಗಲ್ಲಿಗೇರಿಸುವ ಸ್ಥಿತಿಯು ಇದಕ್ಕಿಂತ ಖಂಡಿತ ಭಿನ್ನ. ಅಲ್ಲಿ ಇಂಥ ಭಾವುಕ ಸನ್ನಿವೇಶಕ್ಕೆ ಅವಕಾಶವೇ ಇಲ್ಲ. ಆದ್ದರಿಂದಲೇ,
   ‘ನರಕಕ್ಕೆ ಹೋಗು' ಅನ್ನುವ ಲಿಂಡಾ ಡಯಾಸ್ ಮತ್ತು ‘ಕ್ಷಮಿಸಿದ್ದೇನೆ ಹೋಗು' ಅನ್ನುವ ಸವಿೂರಾ ಮುಖ್ಯವಾಗುತ್ತಾರೆ.

Thursday, April 10, 2014

ಗೆಲ್ಲುವ ಸಾಮರ್ಥ್ಯಕ್ಕೆ ಮಾನದಂಡವೇನು ರಾಜನಾಥ್ ಸಿಂಗ್‍ರೇ?

   ಜಾಟರು ಮತ್ತು ರಜಪೂತ್‍ರನ್ನು ಇತರ ಹಿಂದುಳಿದ ಜಾತಿಗಳಲ್ಲಿ (OBC) ಸೇರ್ಪಡೆಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸದ ಅಥವಾ ರಾಜಸ್ಥಾನದ ಗುಜ್ಜರ್‍ಗಳ ವಿೂಸಲಾತಿ ಬೇಡಿಕೆಯ ಪರವಾಗಿರುವ ಬಿಜೆಪಿಯು ಮುಸ್ಲಿಮರ ವಿೂಸಲಾತಿ ಬೇಡಿಕೆಯನ್ನು ಮಾತ್ರ ವಿರೋಧಿಸುತ್ತಿರುವುದೇಕೆ? ಮುಸ್ಲಿಮರ ಸ್ಥಿತಿ-ಗತಿ ದಲಿತರಿಗಿಂತಲೂ ಹೀನಾಯವಾಗಿದೆ ಎಂಬ ಅಧ್ಯಯನಾತ್ಮಕ ವರದಿಯನ್ನು ಕೊಟ್ಟ ‘ಸಾಚಾರ್ ಸಮಿತಿ ವರದಿ'ಯನ್ನು ಬಿಜೆಪಿ ಅಣಕಿಸುತ್ತಿರುವುದೇಕೆ? ಅದನ್ನು ಮುಸ್ಲಿಮ್ ತುಷ್ಟೀಕರಣದ ವರದಿ ಅನ್ನುತ್ತದಲ್ಲ, ಹಾಗಾದರೆ ಜಾಟರು, ಗುಜ್ಜಾರ್‍ಗಳು, ರಜಪೂತರನ್ನೆಲ್ಲ ಓಬಿಸಿಯಲ್ಲಿ ಸೇರ್ಪಡೆಗೊಳಿಸಿರುವುದಕ್ಕೆ ಯಾಕೆ ಅದು ‘ತುಷ್ಟೀಕರಣ' ಪದ ಬಳಸುತ್ತಿಲ್ಲ? ಮುಸ್ಲಿಮರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಕಟವಾಗುವ ಯಾವ ಯೋಜನೆಗಳಿಗೂ ಅದೇಕೆ ತಡೆ ಒಡ್ಡುತ್ತಿದೆ? ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್‍ಶಿಪ್‍ನ ವಿರುದ್ಧ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆ ಹೂಡಿರುವ ಏಕೈಕ ರಾಜ್ಯ ಗುಜರಾತ್. ಒಂದು ಕಡೆ, ‘ಸಬ್‍ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮಂತ್ರವನ್ನು ಜಪಿಸುತ್ತಿರುವ ಮೋದಿ ಇನ್ನೊಂದು ಕಡೆ ಮುಸ್ಲಿಮರ ವಿಕಾಸವನ್ನು ಬಯಸದವರಂತೆ ವರ್ತಿಸುತ್ತಿರುವುದೇಕೆ? ಕಳೆದ ಮಾರ್ಚ್ ನಲ್ಲಿ  ಯೋಗಗುರು ಬಾಬಾ ರಾಮ್‍ದೇವ್ ಏರ್ಪಡಿಸಿದ್ದ ಸಭೆಯಲ್ಲಿ ಮೋದಿ ಭಾಗಿಯಾಗಿದ್ದರು. ಕಾಂಗ್ರೆಸನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದ ರಾಮ್‍ದೇವ್‍ರು ಮೋದಿಯ ಪರ ವಹಿಸಿ ಮಾತಾಡಿದ್ದರು. ಆಗ ಮಾತಾಡದಿದ್ದ ಬಿಜೆಪಿಯು ಈಗ ಸೋನಿಯಾ-ಬುಖಾರಿ ಭೇಟಿಯನ್ನು ಪ್ರಶ್ನಿಸುತ್ತಿದೆಯಲ್ಲ, ಏನಿದರ ಅರ್ಥ? ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಕಾಣುತ್ತಿರುವ ಈ ಮಟ್ಟದ ಗೊಂದಲವು ಉದ್ದೇಶಿತವೋ ಅನುದ್ದೇಶಿತವೋ? ಒಂದು ಕಡೆ ಬಿಜೆಪಿಯ ಅಧ್ಯಕ್ಷ ರಾಜನಾಥ್ ಸಿಂಗ್‍ರು ಮುಸ್ಲಿಮರ ಕ್ಷಮೆ ಯಾಚಿಸುತ್ತಿದ್ದಾರೆ. ಇನ್ನೊಂದು ಕಡೆ, ಮುಸ್ಲಿಮರನ್ನು ಇನ್ನಷ್ಟು ಭಯಪಡಿಸುವ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 17% ಮುಸ್ಲಿಮರಿರುವ ಉತ್ತರ ಪ್ರದೇಶದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಇಡೀ ದೇಶದಲ್ಲಿ ಅದು ಕೇವಲ ಐವರು ಮುಸ್ಲಿಮ್ ಅಭ್ಯರ್ಥಿಗಳಿಗಷ್ಟೇ ಟಿಕೆಟು ನೀಡಿದೆ. ಜಮ್ಮು ಕಾಶ್ಮೀರದ ಶ್ರೀನಗರ, ಬಾರಮುಲ್ಲಾ, ಅನಂತ್‍ನಾಗ್, ಬಿಹಾರ ಮತ್ತು ಲಕ್ಷ ದ್ವೀಪ ಹೀಗೆ ಐದು ಕ್ಷೇತ್ರಗಳಲ್ಲಿ ಅದು ಮುಸ್ಲಿಮರನ್ನು ಕಣಕ್ಕಿಳಿಸಿದೆ. ಇವು ಎಲ್ಲವೂ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳು. ಇಷ್ಟಕ್ಕೂ, ‘ಗೆಲ್ಲುವ ಸಾಮರ್ಥ್ಯ ಇರುವ  ಅಭ್ಯರ್ಥಿಗಳನ್ನಷ್ಟೇ ನಿಲ್ಲಿಸಬೇಕಾಗುತ್ತದೆ’ ಎಂಬ ರಾಜನಾಥ್ ಸಿಂಗ್‍ರ ಮಾತಿನ ಇಂಗಿತವಾದರೂ ಏನು? ಬಿಜೆಪಿಯನ್ನು ಬೆಂಬಲಿಸುವ ಹಿಂದೂಗಳು ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿ ಸುವುದಿಲ್ಲ ಎಂದೇ ಅಲ್ಲವೇ? ಇಂಥದ್ದೊಂದು ವಾತಾವರಣವನ್ನು ಬಿಜೆಪಿ ಯಾಕಾಗಿ ತಯಾರಿಸಿ ಇಟ್ಟಿದೆ? ಅದರ ಬೆಂಬಲಿಗರು ಈ ಮಟ್ಟದಲ್ಲಿ ಮುಸ್ಲಿಮ್ ವಿರೋಧಿ ನೀತಿಯನ್ನು ಬೆಳೆಸಿಕೊಂಡಿರುವುದನ್ನು ಅದೇಕೆ ಪ್ರಶ್ನಿಸುತ್ತಿಲ್ಲ? ನಿಜವಾಗಿ, ಇತರ ಯಾವ ರಾಷ್ಟ್ರೀಯ ಪಕ್ಷಗಳಲ್ಲೂ ಇಂಥ ಕಟು ವಾತಾವರಣ ಇಲ್ಲ. ಅದರ ಬೆಂಬಲಿಗರು ಅಭ್ಯರ್ಥಿಯ ಧರ್ಮವನ್ನೇ ಮತದಾನಕ್ಕೆ ಪ್ರಥಮ ಷರತ್ತಾಗಿ ಮುಂದಿಟ್ಟದ್ದೂ ಇಲ್ಲ. ಆದರೆ ಈ ದೇಶದ ನೇತೃತ್ವವನ್ನು ವಹಿಸಿ ಕೊಳ್ಳುವುದಕ್ಕೆ ಉತ್ಸುಕವಾಗಿರುವ ಬಿಜೆಪಿಯು ಪ್ರಜಾತಂತ್ರಕ್ಕೆ ತೀರಾ ವಿರುದ್ಧವಾದ ಇಂಥದ್ದೊಂದು ಬೆಂಬಲಿಗ ವರ್ಗವನ್ನು ಪೋಷಿಸಿ ಬೆಳೆಸುತ್ತಿರುವುದೇಕೆ? ಉತ್ತರ ಪ್ರದೇಶದ ಮುಝಫ್ಫರ್ ನಗರದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದೇ ಡಾ| ಸಂಜೀವ್ ಬಲಿಯಾನ್. ಈತ ಮುಝಫ್ಫರ್ ನಗರ ಗಲಭೆಯಲ್ಲಿ ಸಕ್ರಿಯವಾಗಿ ಭಾಗಿಯಾದ ಆರೋಪಿ. ಅಲ್ಲದೇ ಕೈರಾನಾ ಮತ್ತು ಬಿಜನೂರ್‍ಗಳಲ್ಲೂ ಮುಝಫ್ಫರ್ ನಗರದ ಗಲಭೆಯಲ್ಲಿ ಭಾಗಿಯಾದ ಆರೋಪಿಗಳಿಗೇ ಟಿಕೆಟ್ ನೀಡಲಾಗಿದೆ. ಏನಿವೆಲ್ಲ? ಮುಸ್ಲಿಮರು ತನ್ನನ್ನು ಬೆಂಬಲಿಸಬೇಕೆಂದು ಬಿಜೆಪಿ ಬಯಸುತ್ತಿದೆಯಲ್ಲ, ಅದಕ್ಕೆ ಏನಿವೆ ಸಮರ್ಥನೆಗಳು?
   ದಲಿತರಿಗೆ ವಿೂಸಲಾತಿ ಒದಗಿಸುವ ಮಂಡಲ್ ವರದಿ ಜಾರಿಯ ವಿರುದ್ಧ 1980ರಲ್ಲಿ ಈ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಪ್ರಾರಂಭಗೊಂಡದ್ದೇ  ಗುಜರಾತ್‍ನಲ್ಲಿ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಈ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಆ ದಿನಗಳಲ್ಲಿ ಬಿಜೆಪಿಯು ದಲಿತರನ್ನು ಅನ್ಯರಂತೆ (Others) ಪರಿಗಣಿಸಿತ್ತು. ‘ವರ್‍ಶಿಪ್ಪಿಂಗ್ ಫಾಲ್ಸ್ ಗಾಡ್' ಎಂಬ ಕೃತಿಯಲ್ಲಿ ಬಿಜೆಪಿಯ ಅರುಣ್ ಶೌರಿಯವರು, ಅಂಬೇಡ್ಕರ್‍ರನ್ನು ಟೀಕಿಸಿದ್ದರು. ‘ದಲಿತರು ಹಿಂದೂ ಧರ್ಮವನ್ನು ಬಿಟ್ಟು ಹೊರ ಬರುವುದೇ ಅಸ್ಪೃಶ್ಯತೆಗೆ ಇರುವ ಮದ್ದು’ ಎಂಬ ಅಂಬೇಡ್ಕರ್‍ರ ಅಭಿಪ್ರಾಯದೊಂದಿಗೆ ಶೌರಿ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಆದರೆ, ದೆಹಲಿ ಗದ್ದುಗೆಯನ್ನು ವಶಪಡಿಸಿಕೊಳ್ಳಬೇಕಾದರೆ ತನ್ನ ‘ದಲಿತ ನೀತಿ'ಯನ್ನು ಬದಲಿಸಿಕೊಳ್ಳುವುದು ಅನಿವಾರ್ಯ ಎಂಬುದು ಬಿಜೆಪಿಗೆ ಕ್ರಮೇಣ ಮನವರಿಕೆ ಆಗತೊಡಗಿತು. ದಲಿತರು ಅತ್ಯಂತ ಹೆಚ್ಚಿರುವ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಒಟ್ಟು 120ರಷ್ಟು ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಹೆಚ್ಚಿನ ಸೀಟುಗಳನ್ನು ಗಳಿಸದ ಹೊರತು ದೆಹಲಿ ದಕ್ಕುವುದಿಲ್ಲ ಎಂಬ ಸತ್ಯವನ್ನು ಅದು ಕಂಡುಕೊಳ್ಳಲಾರಂಭಿಸಿತು. ಅದಕ್ಕಾಗಿ ಅಯೋಧ್ಯಾ ಚಳವಳಿಯನ್ನು ಅದು ಬಳಸಿಕೊಂಡಿತು. ಮಾತ್ರವಲ್ಲ, ದಲಿತರ (Others) ಜಾಗದಲ್ಲಿ ಅದು ಮುಸ್ಲಿಮರನ್ನು ತಂದಿರಿಸಿತು. ಇತರ ಹಿಂದುಳಿತ ವರ್ಗ(OBC)ದ ವಿೂಸಲಾತಿಯು ಹಿಂದೂಗಳಿಗೆ ಮಾತ್ರ ಸೀಮಿತವಾಗಬೇಕಿದ್ದು, ಅದರಲ್ಲಿ ಮುಸ್ಲಿಮರನ್ನು ಸೇರಿಸುವ ಕ್ರಮವನ್ನು ಖಂಡಿಸುವ ಪ್ರಯತ್ನಕ್ಕೆ ಕೈ ಹಾಕಿತು. ದಲಿತರ ವಿೂಸಲಾತಿ ಹಕ್ಕುಗಳನ್ನು ಮುಸ್ಲಿಮರು ಕಬಳಿಸುತ್ತಿದ್ದಾರೆಂಬ ಪುಕಾರು ಹಬ್ಬಿಸಿ, ದಲಿತ ಪ್ರೇಮದ ಹೊಸ ಮುಖವನ್ನು ಪ್ರದರ್ಶಿಸಿತು. ಅದಕ್ಕೆ ಪೂರಕವಾಗಿ ಕಲ್ಯಾಣ್ ಸಿಂಗ್, ಮೋದಿ, ಉಮಾ ಭಾರತಿ, ಬಂಗಾರು ಲಕ್ಷ್ಮಣ್.. ಮುಂತಾದ ಹಿಂದುಳಿದವರನ್ನು ತೋರಿಸಿ ದಲಿತ ವಿರೋಧಿ ಕಳಂಕವನ್ನು ತೊಳೆಯಲು ಯತ್ನಿಸಿತು. ಇದರ ಭಾಗವಾಗಿಯೇ ಮೋದಿಯವರು 2013 ಎಪ್ರಿಲ್‍ನಲ್ಲಿ ಕೇರಳದ ಶಿವಗಿರಿಯಲ್ಲಿರುವ ನಾರಾಯಣ ಗುರು ಮಂದಿರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು. ಅಸ್ಪøಶ್ಯತೆಯನ್ನು ಪ್ರಬಲವಾಗಿ ಖಂಡಿಸಿ ಒಂದು ಪರ್ಯಾಯ ಚಳವಳಿಯನ್ನೇ ಪ್ರಾರಂಭಿಸಿದ್ದ ನಾರಾಯಣ ಗುರು ಕಟ್ಟಿಸಿದ ಮಂದಿರಕ್ಕೆ ‘ಅಸ್ಪøಶ್ಯತೆ'ಯಲ್ಲಿ ಬಲವಾದ ನಂಬಿಕೆಯಿಟ್ಟಿರುವ ಪಕ್ಷವೊಂದರ ನಾಯಕ ಮುಖ್ಯ ಅತಿಥಿಯಾಗುತ್ತಾರೆಂದರೆ, ಅದು ಬಿಜೆಪಿಯ ಮುಖವಾಡದ ಬದುಕಿಗೆ ಹಿಡಿದ ಕನ್ನಡಿ. 2014 ಫೆಬ್ರವರಿಯಲ್ಲಿ ಮೋದಿ ಮತ್ತೆ ಕೇರಳಕ್ಕೆ ಬಂದಿದ್ದರು. ಮಾತ್ರವಲ್ಲ, ‘ಹೊಲೆಯ’ ಎಂಬ ಅತಿ ಹಿಂದುಳಿದ ಜಾತಿಯ ಸಭೆಯಲ್ಲಿ ಭಾಗವಹಿಸಿದ್ದರು. 80ರ ದಶಕದಲ್ಲಿ ವಿೂಸಲಾತಿ ವಿರೋಧಿ ಚಳವಳಿಯನ್ನು ಹಮ್ಮಿಕೊಂಡ ಬಿಜೆಪಿ, 2014ರಲ್ಲಿ ‘ಹೊಲೆಯರ' ಸಭೆಯಲ್ಲಿ ಭಾಗವಹಿಸುವಷ್ಟು ಉದಾರಿಯಾದದ್ದು ಅದರ ಸಮಯ ಸಾಧಕ ರಾಜಕೀಯಕ್ಕೆ ಅತ್ಯುತ್ತಮ ಉದಾಹರಣೆ. ಒಂದು ವೇಳೆ ಅದರ ರಾಜಕೀಯ ಮಹತ್ವಾಕಾಂಕ್ಷೆಯು ದಲಿತರನ್ನು ಹೊರಗಿಟ್ಟರೂ ಸಾಧಿತವಾಗುತ್ತಿದ್ದರೆ, ಇವತ್ತು ಹೊಲೆಯರ ಸಭೆಯಲ್ಲಿ ಭಾಗವಹಿಸುವುದಕ್ಕೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೋರ್ವ ಮುಂದಾಗುತ್ತಲೇ ಇರಲಿಲ್ಲ.
   2013 ಅಕ್ಟೋಬರ್ 13ರಂದು ಚೆನ್ನೈಯ ನಾನಿ ಎಂ. ಪಾಲ್ಖಿವಾಲರ ಸ್ಮರಣಾರ್ಥ ಏರ್ಪಡಿಸಲಾದ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮೋದಿ ಭಾಗಿಯಾಗಿದ್ದರು. India and the World  (ಭಾರತ ಮತ್ತು ವಿಶ್ವ) ಎಂಬ ವಿಷಯದ ಮೇಲೆ ಮಾತಾಡುತ್ತಾ ಅವರು ಹೀಗೆ ಹೇಳಿದ್ದರು:
   ‘ನಾನೊಮ್ಮೆ ರಶ್ಯನ್ ಪ್ರವಾಸದಲ್ಲಿದ್ದೆ. ಆಗ ಅತಿಥಿಗಳಲ್ಲಿ ಟೀ  ಕೇಳಿದೆ. ಅವರಿಗೆ ಅರ್ಥವಾಗಲಿಲ್ಲ. ಆಗ ನಾನು ಚಾಯ್ ಎಂದು ಹೇಳಿದೆ. ತಕ್ಷಣ ಅವರು ಒದಗಿಸಿದರು. ನಮ್ಮ ಹಿರಿಯರು ಈ ಜಗತ್ತಿನೊಂದಿಗೆ ಇಟ್ಟುಕೊಂಡ ಸಂಬಂಧ ಅಂಥದ್ದಾಗಿತ್ತು..' ಎಂದಿದ್ದರು. ಚಾಯ್ ಎಂಬುದು ಈ ದೇಶದ ಸಾಂಸ್ಕøತಿಕ ಪದವಾಗಿದ್ದು ಅದನ್ನು ರಶ್ಯನ್ನರು ಎರವಲು ಪಡಕೊಂಡಿದ್ದಾರೆ ಎಂಬುದು ಮೋದಿಯ ನಿಲುವಾಗಿತ್ತು. ನಿಜವಾಗಿ ಚಾಯ್ ಎಂಬುದು ಭಾರತೀಯ ಪದವಲ್ಲ, ಮಂಡೇರಿಯನ್ ಪದ. Tea ಎಂಬುದು ಕೂಡಾ ಭಾರತೀಯವಲ್ಲ, ಚೀನಾದ್ದು. ಹೀಗೆ ಇತಿಹಾಸವನ್ನು ಹಲವು ಬಾರಿ ತಪ್ಪಾಗಿ ಉಲ್ಲೇಖಿಸಿರುವ ಮೋದಿಯವರಲ್ಲಿ ಉದ್ದಕ್ಕೂ ಕಾಣಿಸುವುದು ಬರೇ ಆವೇಶ, ಆರ್ಭಟ ಮಾತ್ರ. ಕಳೆದ ಫೆ.  22ರಂದು ಅಸ್ಸಾಮ್‍ನ ಸಿಲ್‍ಚೂರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ್ದ ಮೋದಿ, ‘ಬಾಂಗ್ಲಾದಿಂದ ಬರುವ ಹಿಂದೂ ವಲಸಿಗರನ್ನು ರಕ್ಷಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ' ಎಂದಿದ್ದರಲ್ಲದೇ, ಬಾಂಗ್ಲಾದಿಂದ ಬರುವ ‘ಅನ್ಯ ವಲಸಿಗರು' (ಮುಸ್ಲಿಮರು) ಕಾಂಗ್ರೆಸ್‍ನ ಓಟ್‍ಬ್ಯಾಂಕ್ ಷಡ್ಯಂತ್ರದಂತೆ ಬರುತ್ತಿದ್ದಾರೆ ಎಂದಿದ್ದರು (ದಿ ಹಿಂದೂ 2014 ಮಾರ್ಚ್ 19). ಮೋದಿ ಹೋದಲ್ಲೆಲ್ಲ ಮುಸ್ಲಿಮರ ವಿರುದ್ಧ ಒಂದು ಬಗೆಯ ಅಸಹನೆಯನ್ನು ಬಿತ್ತುತ್ತಲೇ ಇದ್ದಾರೆ. ಮುಸ್ಲಿಮರನ್ನು ಅನ್ಯರಂತೆ ಬಿಂಬಿಸುವುದು, ಕುಟುಕುವುದು ಅವರ ಶೈಲಿಯಾಗಿ ಬಿಟ್ಟಿದೆ. ಕಮ್ಯುನಲಿಸಮ್ ಮತ್ತು ಕ್ಯಾಪಿಟಲಿಸಮ್ ಅನ್ನು ಅತ್ಯಂತ ಜಾಣತನದಿಂದ ಮಿಶ್ರ ಮಾಡುವ ಬುದ್ಧಿವಂತಿಕೆಯನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಪಶ್ಚಿಮ ಬಂಗಾಲದಿಂದ ಟಾಟಾ ಕಂಪೆನಿಯ ನ್ಯಾನೋ ಕಾರು ತಯಾರಿಕಾ ಘಟಕವು ಗುಜರಾತ್‍ಗೆ ವರ್ಗಾವಣೆಯಾದಾಗ, ಅವರು ಅದನ್ನು ಶ್ರೀ ಕೃಷ್ಣನಿಗೆ ಹೋಲಿಸಿದ್ದರು. ಶ್ರೀ ಕೃಷ್ಣ ಹುಟ್ಟಿದ್ದು ಉತ್ತರ ಪ್ರದೇಶದ ಮಥುರಾದಲ್ಲಾದರೂ ಬೆಳೆದದ್ದು ಗುಜರಾತ್‍ನ ದ್ವಾರಕದಲ್ಲಿ, ಹಾಗೆಯೇ ನ್ಯಾನೋ ಕೂಡಾ ಎಂದಿದ್ದರು. ಒಂದು ಕಡೆ ಸ್ವದೇಶಿ ರಾಷ್ಟ್ರೀಯತೆಯ ಬಗ್ಗೆ ಭಾವಾವೇಶದ ಮಾತನ್ನಾಡುತ್ತಲೇ ಇನ್ನೊಂದು ಕಡೆ ರಾಜೀವ್ ದೀಕ್ಷಿತ್‍ರ ಸ್ವದೇಶಿ ಜಾಗರಣ್ ಮಂಚ್ ಅನ್ನು ಗುಜರಾತ್‍ನಿಂದಲೇ ಓಡಿಸಿದ್ದರು.
   ಬಿಜೆಪಿ ಇವತ್ತು ಯಾವ ಮುಖವನ್ನು ಪ್ರದರ್ಶಿಸುತ್ತಿದೆಯೋ ಅದೇ ಮುಖವನ್ನು ಮೂರ್ನಾಲ್ಕು ದಶಕಗಳ ಹಿಂದೆ ಅದು ತೀವ್ರವಾಗಿ ದ್ವೇಷಿಸಿತ್ತು. ದಲಿತರನ್ನು ಅನ್ಯರ ಪಟ್ಟಿಯಲ್ಲಿಟ್ಟು ಕಂಡದ್ದು ಅದೇ ಪಕ್ಷ.  ಅಂಬೇಡ್ಕರ್‍ರನ್ನು ಅಸಹನೆಯಿಂದ ನೋಡಿದ್ದೂ ಇದೇ ಪಕ್ಷ.. ದಲಿತರಿಗೆ ವಿೂಸಲಾತಿಯನ್ನು ವಿರೋಧಿಸಿದ್ದೂ ಇದೇ ಪಕ್ಷ.  ಆದರೆ ಇದೀಗ ಅದು ಹೊಲೆಯ, ಮಾದಿಗ, ಗಾಣಿಗ.. ಮುಂತಾದ ಎಲ್ಲರನ್ನೂ ತನ್ನವರೆಂದು ಹೇಳುತ್ತಾ ತಿರುಗಾಡುತ್ತಿದೆ. ಮುಸ್ಲಿಮರಲ್ಲಿ ಕ್ಷಮೆ ಯಾಚಿಸುತ್ತಿದೆ. ಆದರೆ ದಲಿತರಿಗೆ ವಿೂಸಲಾತಿ ಇರುವ ಕ್ಷೇತ್ರಗಳನ್ನು ಹೊರತು ಪಡಿಸಿ ಅದು ಇತರ ಕಡೆ ಈ ಹೊಲೆಯ, ಮಾದಿಗ, ಗಾಣಿಗರಿಗೆ ಟಿಕೆಟ್ ಕೊಡುತ್ತಿಲ್ಲ. ಅವರಿಗೆ ಗೆಲ್ಲುವ ಸಾಮರ್ಥ್ಯ  ಇಲ್ಲ ಎಂಬುದನ್ನು ಅದು ಈಗಾಗಲೇ ತೀರ್ಮಾನಿಸಿ ಬಿಟ್ಟಿದೆ. ಅದರ ಮುಸ್ಲಿಮ್ ಪ್ರೀತಿಯೂ ಇದೇ ರೀತಿ. ಅವರಿಗೂ ಗೆಲ್ಲುವ ಸಾಮರ್ಥ್ಯ  ಇಲ್ಲ. ಅಷ್ಟಕ್ಕೂ, ಈ ಗೆಲ್ಲುವ ಸಾಮರ್ಥ್ಯದ  ಮಾನದಂಡವಾದರೂ ಏನು? ಗೆಲ್ಲುವುದಕ್ಕೆ ಓರ್ವ ಅಭ್ಯರ್ಥಿಯಲ್ಲಿ ಏನೆಲ್ಲ ಅರ್ಹತೆಗಳಿರಬೇಕು? ಬಿಜೆಪಿಗೆ ಮತ ಹಾಕುವವರು ಗಾಣಿಗ, ಹೊಲೆಯ, ಮುಸ್ಲಿಮ್ ಎಂಬುದನ್ನೆಲ್ಲಾ ಅರ್ಹತೆಯ ಪಟ್ಟಿಯಲ್ಲಿಟ್ಟು ಪರೀಕ್ಷಿಸುತ್ತಾರೆಯೇ? ಆ ಪರೀಕ್ಷೆಯಲ್ಲಿ ದಲಿತರು ಮತ್ತು ಮುಸ್ಲಿಮರಾಗಿ ಗುರುತಿಸಿಕೊಳ್ಳುವುದು ಅವರ ತಿರಸ್ಕಾರಕ್ಕೆ ಕಾರಣವಾಗುತ್ತದೆಯೇ? ಹಾಗಾದರೆ ಆ ಮತದಾರರ ಮನಸ್ಥಿತಿಯಾದರೂ ಯಾವ ರೂಪದ್ದು? ಅಂಥದ್ದೊಂದು ಬೃಹತ್ ಸಂಖ್ಯೆಯ ಬೆಂಬಲಿಗರನ್ನು ಹೊಂದಿರುವ ಪಕ್ಷವೊಂದು ಈ ಗಾಣಿಗ, ಹೊಲೆಯ, ಮಾದಿಗರ.. ಕಲ್ಯಾಣಕ್ಕಾಗಿ ಕೆಲಸ ಮಾಡಬಹುದೇ? ಅದಕ್ಕೆ ಈ ಬೆಂಬಲಿಗರ ಗುಂಪು ಅವಕಾಶ ಕೊಡಬಹುದೇ?