Tuesday, January 13, 2015

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಾರ್ಲಿ ಹೆಬ್ಡೊ

   ಫ್ರಾನ್ಸಿನ ಚಾರ್ಲಿ ಹೆಬ್ಡೋ ಪತ್ರಿಕೆಯ ಉದ್ದೇಶ ಶುದ್ಧಿಯನ್ನು 2012 ಸೆಪ್ಟೆಂಬರ್‍ನಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮರ ವಕ್ತಾರರು ಪ್ರಶ್ನಿಸಿದ್ದರು. ಪತ್ರಿಕೆಯ ನಿಲುವು ಪ್ರಚೋದನಕಾರಿಯಾಗಿದೆ ಎಂದಿದ್ದರು. ಫ್ರಾನ್ಸಿನ ವಿದೇಶಾಂಗ ಸಚಿವ ಲಾರೆಂಟ್ ಫ್ಯಾಬಿಸ್‍ರು ಪತ್ರಿಕೆಯ ಪ್ರಾಮಾಣಿಕತೆಯ ಬಗ್ಗೆ ಅನುಮಾನಿಸಿದ್ದರು. 'ಫ್ರಾನ್ಸಿನಲ್ಲಿ Freedom of expression (ಅಭಿವ್ಯಕ್ತಿ ಸ್ವಾತಂತ್ರ್ಯ)ಗೆ ನಿಯಮಗಳಿವೆ, ಅದನ್ನು ಕಡೆಗಣಿಸಬಾರದು' ಎಂದು ಎಚ್ಚರಿಸಿದ್ದರು. ಫ್ರಾನ್ಸ್ ನ ಯಹೂದಿ ಕೌನ್ಸಿಲ್‍ನ ಮುಖ್ಯಸ್ಥ ರಿಚರ್ಡ್ ಪ್ರೆಸ್‍ಕೈಮರ್ ಕೂಡ ಪತ್ರಿಕೆಯ ನಿಲುವನ್ನು ಖಂಡಿಸಿದ್ದರು. 2013 ಜನವರಿಯಲ್ಲಿ ಈ ಪತ್ರಿಕೆಯು ಪ್ರವಾದಿ ಮುಹಮ್ಮದ್ (ಸ)ರ  ಜೀವನವನ್ನು ಬಿಂಬಿಸುವ 65 ಪುಟಗಳ ವಿಡಂಬನೆಯ ಸಂಚಿಕೆಯನ್ನು ಪ್ರಕಟಿಸಿತ್ತು. ಪ್ರವಾದಿಯವರನ್ನು ಅವಮಾನಿಸುವ ಮತ್ತು ಅಪಹಾಸ್ಯ ಮಾಡುವ ಧಾಟಿಯಲ್ಲಿದ್ದ ಆ ಸಂಚಿಕೆಯ ವಿರುದ್ಧ ಫ್ರಾನ್ಸಿನ ಮುಸ್ಲಿಮರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು. ಆ ಸಂಚಿಕೆಯನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದ್ದರು. ‘ಸಿರಿಯನ್ ಅಸೋಸಿಯೇಶನ್ ಫಾರ್ ಲಿಬರ್ಟಿ’ ಎಂಬ ಸಂಘಟನೆಯು, 'ಚಾರ್ಲಿ ಹೆಬ್ಡೋವು ಜನಾಂಗವಾದ ಮತ್ತು ಧಾರ್ಮಿಕ ದ್ವೇಷ ವನ್ನು ಪ್ರಚೋದಿಸುತ್ತದೆ' ಎಂದು ಆರೋಪಿಸಿ ಕೋರ್ಟಿನಲ್ಲಿ ದಾವೆ ಹೂಡಿತ್ತು. ಆದರೆ ಪತ್ರಿಕೆಯ ಸಂಪಾದಕ ಸ್ಟೀಫನ್ ಚಾರ್‍ಬೊನ್ನಿರ್‍ನಿಂದ ಹಿಡಿದು ಕಾರ್ಟೂನಿಸ್ಟ್ ಗಳಾದ ಜಾರ್ಜ್ ವೊಲಿಂಸ್ಕಿ, ಜೀನ್ ಕ್ಯಾಬಟ್, ಅಕಾಕಬು, ಬೆರ್ಬಾರ್ ವೆರ್ಲಕ್‍ರವರೆಗೆ ಎಲ್ಲರೂ ಪತ್ರಿಕೆಯ ಧೋರಣೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮರ್ಥಿಸಿಕೊಂಡರು. ಪ್ರವಾದಿಯವರನ್ನು ಅವಮಾನಿಸುವ ಕಾರ್ಟೂನ್‍ಗಳನ್ನು ಮತ್ತೆ ಮತ್ತೆ ಅವರು ಪ್ರಕಟಿಸಿದರು. 2006ರಲ್ಲಿ ಡೆನ್ಮಾರ್ಕ್‍ನ ಜಿಲ್ಲ್ಯಾಂಡ್ ಪೋಸ್ಟನ್ ಪತ್ರಿಕೆಯು ಪ್ರವಾದಿಯವರನ್ನು ಅಣಕಿಸುವ ಮತ್ತು ನಿಂದಿಸುವ ರೀತಿಯಲ್ಲಿ ಪ್ರಕಟಿಸಿದ್ದ ಕಾರ್ಟೂನನ್ನು ಚಾರ್ಲಿ ಹೆಬ್ಡೋ ಪ್ರಕಟಿಸಿತಲ್ಲದೇ 2011 ನವೆಂಬರ್ 3ರಂದು ಅದನ್ನು ಮರು ಮುದ್ರಿಸಿತು. ಮಾತ್ರವಲ್ಲ, ಚಾರ್ಲಿ ಹೆಬ್ಡೋ ಎಂಬ ಹೆಸರನ್ನು ಚರಿಯಾ ಹೆಬ್ಡೋ (ಶರಿಯಾವನ್ನು ಅಣಕಿಸುತ್ತಾ) ಎಂದು ಬರೆಯಿತು. ಗಡ್ಡ ಧರಿಸಿದ ಮತ್ತು ಪೇಟದಲ್ಲಿ ಬಾಂಬ್ ಇಟ್ಟುಕೊಂಡ ವ್ಯಕ್ತಿಯಾಗಿ ಪ್ರವಾದಿಯವರನ್ನು ಬಿಡಿಸಿದ ಆ ಕಾರ್ಟೂನಿನ ಕೆಳಗೆ, “ನಗುತ್ತಾ ಸಾಯು, ಇಲ್ಲದಿದ್ದರೆ 100 ಏಟುಗಳನ್ನು ತಿನ್ನು” (100 lashes if you're not dying of laughter ) ಎಂಬ ಒಕ್ಕಣೆಯನ್ನೂ ಸೇರಿಸಿತ್ತು. ನಿಜವಾಗಿ, ಚಾರ್ಲಿ ಹೆಬ್ಡೋ ಪತ್ರಿಕೆಯು ಎಷ್ಟು ಉಡಾಫೆಯ ಕಾರ್ಟೂನ್‍ಗಳನ್ನು ಪ್ರಕಟಿಸುತ್ತಿತ್ತೋ ಅದಕ್ಕಿಂತಲೂ ಉಡಾಫೆಯಾಗಿ ಅದರ ಸಂಪಾದಕ ಸ್ಟೀಫನ್ ಚಾರ್‍ಬೊನ್ನಿರ್ ವರ್ತಿಸುತ್ತಿದ್ದರು. “ಮುಹಮ್ಮದ್ ನನಗೆ ಪರಿಶುದ್ಧ ವ್ಯಕ್ತಿ ಅಲ್ಲ” ಎಂದು ಅವರು 2012ರಲ್ಲಿ ಅಸೋಸಿಯೇಟೆಡ್ ಪ್ರೆಸ್‍ಗೆ(AP) ಹೇಳಿಕೆ ಕೊಟ್ಟಿದ್ದರು. “ನಮ್ಮ ಕಾರ್ಟೂನ್‍ಗಳನ್ನು ನೋಡಿ ಮುಸ್ಲಿಮರು ನಗುತ್ತಿಲ್ಲ ಎಂಬುದು ಗೊತ್ತು. ಆದರೆ ಅದಕ್ಕಾಗಿ ನಾನವರನ್ನು ದೂಷಿಸುವುದಿಲ್ಲ. ನಾನು ಫ್ರೆಂಚ್ ಕಾನೂನಿನಂತೆ ಬದುಕುತ್ತಿರುವೆ. ಕುರ್‍ಆನಿನ ಕಾನೂನಿನಂತೆ ಅಲ್ಲ..” ಎಂದೂ ಹೇಳಿದ್ದರು. ಬಹುಶಃ ‘ಚಾರ್ಲಿ ಹೆಬ್ಡೋ: ಡೋಂಟ್ ಬ್ಲೇಮ್ ದಿಸ್ ಬ್ಲಡ್‍ಶೆಡ್ ಆನ್ ಫ್ರಾನ್ಸಸ್ ಮುಸ್ಲಿಮ್ಸ್’(ಚಾರ್ಲಿ ಹೆಬ್ದೋ: ಈ ರಕ್ತದೋಕುಳಿಗೆ ಫ್ರಾನ್ಸ್ ನ ಮುಸ್ಲಿಮರನ್ನು ದೂರಬೇಡಿ) ಎಂದು ಲಂಡನ್ನಿನ ಗಾರ್ಡಿಯನ್ ಪತ್ರಿಕೆಯಲ್ಲಿ ನಬಿಲಾ ರಮ್ದಾನಿ ಬರೆದಿರುವುದಕ್ಕೆ ಅಥವಾ ‘ವೈ ಐ ಆಮ್ ನಾಟ್ ಚಾರ್ಲಿ'( ನಾನೇಕೆ ಚಾರ್ಲಿಯಲ್ಲ) ಎಂದು ಗಯತಿ ಸಿಂಗ್ ಬರೆದಿರುವುದಕ್ಕೆ ಮತ್ತು, 'ಇನ್ ಇಸ್ರೇಲ್ , ಚಾರ್ಲಿ ಹೆಬ್ದೋ ವುಡ್ ನಾಟ್ ಹಾವ್ ಇವನ್ ಹಾಡ್ ದ ರೈಟ್ ಟು ಎಕ್ಸಿಸ್ಟ್'  (ಇಸ್ರೇನಲ್ಲಾಗಿರುತ್ತಿದ್ದರೆ ಚಾರ್ಲಿ ಹೆಬ್ದೋಗೆ  ಅಸ್ತಿತ್ವವೇ  ಇರುತ್ತಿರಲಿಲ್ಲ )  ...  ಎಂದು ಇಸ್ರೇಲ್ ನ ಪ್ರಮುಖ ಪತ್ರಿಕೆ ಹಾರೆಟ್ಜ್ ನಲ್ಲಿ ಇಡೋ ಅಮಿನ್ ಬರೆದಿರುವುದಕ್ಕೆಲ್ಲ ಚಾರ್ಲಿ ಹೆಬ್ಡೋ ಪತ್ರಿಕೆಯ ಈ ಎಲ್ಲ ಅಸಂಬದ್ಧತೆಗಳೇ  ಕಾರಣ ಎನ್ನಬಹುದು.
   ಚಾರ್ಲಿ ಹೆಬ್ಡೋದ ಮೇಲಿನ ದಾಳಿಯಲ್ಲಿ ಅಹ್ಮದ್ ಮೆರಾಬೆಟ್ ಮತ್ತು ಮುಸ್ತಫಾ ಔರಾದ್ ಎಂಬಿಬ್ಬರು ಮುಸ್ಲಿಮರೂ ಸಾವಿಗೀಡಾಗಿದ್ದಾರೆ. ಮೆರಾಬೆಟ್ ಪೊಲೀಸಧಿಕಾರಿಯಾಗಿದ್ದರೆ, ಮುಸ್ತಫಾ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ  ಉದ್ಯೋಗಿಯಾಗಿದ್ದ. ಆದರೆ 12 ಮಂದಿಯನ್ನು ಕೊಂದ ಉಗ್ರರನ್ನು ಮುಂದಿಟ್ಟು ಕೊಂಡು ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವವರು ಮುಸ್ತಫಾನನ್ನು ಎಲ್ಲೂ ಉಲ್ಲೇಖಿಸುತ್ತಲೇ ಇಲ್ಲ. ಪತ್ರಿಕೆಯೊಂದು ಸತತವಾಗಿ ಪ್ರವಾದಿ ನಿಂದನೆಯನ್ನು ಮತ್ತು ಜನಾಂಗೀಯ ದ್ವೇಷವನ್ನು ಕಾರುತ್ತಿದ್ದರೂ ಮುಸ್ಲಿಮನೊಬ್ಬ ಅದರಲ್ಲಿ ಉದ್ಯೋಗಿಯಾಗಿ ಇರಬಲ್ಲ ಎಂಬುದು ಯಾವುದರ ಸೂಚನೆ, ಅಸಹಿಷ್ಣುತೆಯದ್ದೋ ಉದಾರತೆಯದ್ದೋ? ತೀವ್ರವಾದಿಗಳು ಮತ್ತು ಉದಾರವಾದಿಗಳು ಮುಸ್ಲಿಮರಲ್ಲಿ ಮಾತ್ರ ಇರುವುದಲ್ಲ. ತಮ್ಮ ನಿಲುವಿಗೆ ಸರಿ ಹೊಂದದ ವ್ಯಕ್ತಿಗಳನ್ನು ಕೊಲೆಗೈಯುವುದು ಇದು ಮೊದಲ ಸಲವೂ ಅಲ್ಲ. ಎಲಿಯಟ್ ರಾಡ್ಜರ್, ಆ್ಯಂಡರ್ಸ್ ಬ್ರೇವಿಕ್, ಜೇಮ್ಸ್ ಹಾಲ್‍ಮೆಸ್, ವಾಡೆ ಮೈಕೆಲ್ ಪೇಜ್, ಡ್ಯಾರೆನ್ ವಿಲ್ಸನ್, ತಿಮೋತಿ ಮೆಕ್‍ವಿಗ್.. ಇವರೆಲ್ಲ ಯಾರು? ಮುಸ್ಲಿಮರ ಬಗ್ಗೆ ಮೃದು ನಿಲುವನ್ನು ತಳೆದಿರುವರೆಂದು ಆರೋಪಿಸಿ ನಾರ್ವೆಯಲ್ಲಿ ಸುಮಾರು 80 ಮಂದಿ ಎಡಪಂಥೀಯರನ್ನು ಆ್ಯಂಡರ್ಸ್ ಬ್ರೇವಿಕ್ ಕೊಂದನಲ್ಲ, ಅವನನ್ನು ಯಾವ ಧರ್ಮಕ್ಕೆ ಸೇರಿಸೋಣ? ಅವನ ತೀವ್ರವಾದಿ ನಿಲುವಿಗೆ ಯಾವ ಧರ್ಮದ, ಯಾವ ಚಿಂತನೆಗಳು ಕಾರಣ ಎಂದು ಪಟ್ಟಿ ಮಾಡೋಣ? ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿ’ ಎಂಬ ಸಂಘಟನೆಯನ್ನು 1989ರಲ್ಲಿ ಸ್ಥಾಪಿಸಿ ಧಾರ್ಮಿಕ ಮೌಢ್ಯಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ನರೇಂದ್ರ ದಾಬೋಲ್ಕರ್‍ರನ್ನು 2013 ಆಗಸ್ಟ್ 20ರಂದು ಹತ್ಯೆ ಮಾಡಲಾಯಿತಲ್ಲ, ಅದು ಯಾವ ಧರ್ಮದ ತೀವ್ರವಾದ? ಔಟ್‍ಲುಕ್ ವಾರಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದ ಇರ್ಫಾನ್ ಹುಸೈನ್‍ರನ್ನು 1999 ಮಾರ್ಚ್ 8ರಂದು ಹತ್ಯೆ ನಡೆಸಿದ್ದಕ್ಕೆ ಯಾವ ತೀವ್ರವಾದಿ ವಿಚಾರಧಾರೆಗಳು ಕಾರಣ? ಉದಾರವಾದ ಮತ್ತು ತೀವ್ರವಾದವನ್ನು ಅಳೆಯುವುದಕ್ಕೆ ಪಾಶ್ಚಾತ್ಯ ಜಗತ್ತು ಒಂದು ತಕ್ಕಡಿಯನ್ನು ತಯಾರಿಸಿಟ್ಟುಕೊಂಡಿದೆ. ಆ ತಕ್ಕಡಿಯಲ್ಲಿ ಬಿಳಿಯರು ಮತ್ತು ಬಿಳಿಯೇತರರು ಒಂದೇ ರೀತಿಯಲ್ಲಿ ತೂಗುವುದಿಲ್ಲ. ನಾರ್ವೆಯ ಬಿಳಿ ಚರ್ಮದ ಆ್ಯಂಡರ್ಸ್ ಬ್ರೇವಿಕ್ ಓರ್ವ ಸಾಮಾನ್ಯ ಕ್ರಿಮಿನಲ್ ಆರೋಪಿಯಾಗಿ ವಿಚಾರಣೆಯನ್ನು ಎದುರಿಸಿದ. ಅಮೇರಿಕದಲ್ಲಿ ಬಿಳಿಯ ಪೊಲೀಸರು ಮತ್ತು ನ್ಯಾಯಾಲಯವು ಕರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಪ್ರತಿಭಟಿಸಿ ಬೀದಿಗಿಳಿದ ಜನರ ಆಕ್ರೋಶ ಇನ್ನೂ ತಣಿದಿಲ್ಲ. ಎಬೋಲಾದ ಬಗ್ಗೆ ಬಿಳಿ ಜಗತ್ತು ಗಂಭೀರ ಭಾಷೆಯಲ್ಲಿ ಮಾತಾಡತೊಡಗಿದ್ದೇ ಬಿಳಿ ಮನುಷ್ಯ ಅದಕ್ಕೆ ಬಲಿಯಾದ ಬಳಿಕ. ಆದರೆ ಈ ಸಾವಿಗಿಂತ ಮೊದಲು ಆಫ್ರಿಕಾ ಖಂಡದ ಸಾವಿರಾರು ಕಪ್ಪು ಮನುಷ್ಯರು ಯಾರ ಕರುಣೆಗೂ ಪಾತ್ರರಾಗದೇ ಸಾವಿಗೀಡಾಗಿದ್ದರು. ಇರಾಕ್, ಪಾಕ್, ಸಿರಿಯಾ, ಫೆಲೆಸ್ತೀನ್‍ಗಳಲ್ಲಿ ಚಾರ್ಲಿ ಹೆಬ್ಡೋ ಪತ್ರಿಕೆಯಂತೆ ಯಾರನ್ನೂ ನಿಂದಿಸದ, ವಿಡಂಬನಾತ್ಮಕ ಕಾರ್ಟೂನ್ ರಚಿಸದ, ಪ್ರವಾದಿಗೆ 100 ಏಟುಗಳನ್ನು ಕೊಡುವೆ ಎಂದು ಹೇಳದ ಸಾಮಾನ್ಯ ಮಂದಿ ನಿತ್ಯ ಸಾಯುತ್ತಿದ್ದಾರೆ. ಅವರನ್ನು ಸಾಯಿಸುವ ತೀವ್ರವಾದಿಗಳಿಗೆ ಆಯುಧಗಳನ್ನು ಇವೇ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ರಾಷ್ಟ್ರಗಳು ಒದಗಿಸುತ್ತಿವೆ. ಬಿಳಿಯ ಜಗತ್ತಿನ ಹೊರಗೆ ನಡೆಯುವ ಹತ್ಯೆಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ ತೀವ್ರವಾದವನ್ನು ಪೋಷಿಸುತ್ತಲೇ 'ಮುಸ್ಲಿಮರಿಗೆ ನಗಲು ಬರುವುದಿಲ್ಲ, ಅವರಲ್ಲಿ ಉದಾರತನ ಇಲ್ಲ' ಎಂದು ಅವೇ ಮಂದಿ ಆರೋಪಿಸುವುದನ್ನು ಏನೆಂದು ಕರೆಯಬೇಕು?
   ಫ್ರಾನ್ಸ್ ಗೆ ವಸಾಹತುಶಾಹಿತ್ವದ ದೊಡ್ಡ ಇತಿಹಾಸವೇ ಇದೆ. ಅಲ್ಜೀರಿಯಾ, ಲಿಬಿಯಾ ಮುಂತಾದ ಮುಸ್ಲಿಮ್ ರಾಷ್ಟ್ರಗಳನ್ನು ತನ್ನ ವಸಾಹತನ್ನಾಗಿ ಮಾಡಿಕೊಂಡು ಆಳಿದ ಅನುಭವ ಅದಕ್ಕಿದೆ. ಫ್ರಾನ್ಸ್ ನ 66 ಮಿಲಿಯನ್ ಜನಸಂಖ್ಯೆಯಲ್ಲಿ ಇವತ್ತು ಸುಮಾರು 6 ಮಿಲಿಯನ್ ಮುಸ್ಲಿಮರಿದ್ದಾರೆ. ಹೆಚ್ಚಿನ ಮುಸ್ಲಿಮರು ಆಫ್ರಿಕಾ ಸಹಿತ ತನ್ನ ಮಾಜಿ ವಸಾಹತುಗಳಿಂದ ವಲಸೆ ಬಂದವರು. ಇವರನ್ನು ಇವತ್ತು ಫ್ರಾನ್ಸ್ ನಲ್ಲಿ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ. ಜನಾಂಗೀಯ ನಿಂದನೆಗೆ ಗುರಿಪಡಿಸಲಾಗುತ್ತಿದೆ. ತಮ್ಮ ಜನಾಂಗವಾದಿ ನಿಲುವಿಗಾಗಿ ಶಿಕ್ಷೆಗೀಡಾಗಿರುವ ನ್ಯಾಶನಲ್ ಫ್ರಂಟ್ ಪಕ್ಷದ ಸ್ಥಾಪಕ ಜೀನ್ ಮೇರಿ ಲಿಪೆನ್ ಎಂಬವರು ಈ ಪ್ರಚಾರಾಭಿಯಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಮಗಳಾದ ಪಕ್ಷದ ಈಗಿನ ಅಧ್ಯಕ್ಷೆ ಮರೀನೆ ಲಿಪೆನ್‍ರು ಮುಸ್ಲಿಮರನ್ನು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳನ್ನು ಅವಮಾನಿಸುವ ಮಾತುಗಳನ್ನು ನಿರಂತರ ಆಡುತ್ತಿದ್ದಾರೆ. ಫ್ರಾನ್ಸ್ ನ ವಲಸೆ ನಿಯಮವನ್ನು ವಿರೋಧಿಸುತ್ತಾ, ಜನರನ್ನು ಜನಾಂಗೀಯವಾಗಿ ಧ್ರುವೀಕರಿಸುತ್ತಿದ್ದಾರೆ. ಈ ದ್ವೇಷಪೂರಿತ ರಾಜಕಾರಣ ಎಷ್ಟು ಬಲ ಪಡೆದಿದೆಯೆಂದರೆ, ‘ರೋಮಾ ಜಿಪ್ಸಿಗಳು ಫ್ರಾನ್ಸಿನೊಂದಿಗೆ ಬೆರೆಯಲಾಗದ ಜನರಾಗಿದ್ದು, ಅವರನ್ನು ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ ಗಡೀಪಾರು ಮಾಡಬೇಕೆಂದು’ ಇತ್ತೀಚೆಗೆ ಫ್ರಾನ್ಸ್ ನ ಪ್ರಧಾನಿ ಮ್ಯಾನುವೆಲ್ ವಲ್ಲಾಸ್ ಅಭಿಪ್ರಾಯ ಪಟ್ಟಿದ್ದರು. ಈ ಹೇಳಿಕೆಯ ಬಳಿಕ ರೊಮೇನಿಯನ್ನರ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿದ್ದುವು. ಅದರ ಬೆನ್ನಿಗೇ ಬಲಪಂಥೀಯ ಮೇಯರ್ ಓರ್ವರು ತಮ್ಮ ಮುನ್ಸಿಪಲ್ ವ್ಯಾಪ್ತಿಯ ರುದ್ರಭೂಮಿಯಲ್ಲಿ ರೊಮೇನಿಯದ ಮಗುವಿನ ಅಂತ್ಯಸಂಸ್ಕಾರ ನಡೆಸುವುದರಿಂದ ತಡೆದಿದ್ದರು. ಒಂದು ರೀತಿಯಲ್ಲಿ, ಮುಸ್ಲಿಮ್ ದ್ವೇಷವನ್ನು ಬಿತ್ತುವ ಹಾಗೂ ಜನಾಂಗೀಯವಾದಿ ಪೂರ್ವಗ್ರಹಗಳನ್ನು ಹರಡುವ ಪ್ರಯತ್ನಗಳು ಫ್ರಾನ್ಸ್ ನಲ್ಲಿ ತೀವ್ರಗತಿಯಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿಯೇ ಚಾರ್ಲಿ ಹೆಬ್ಡೋದ ಮೇಲೆ ದಾಳಿ ನಡೆದಿದೆ. ಇದನ್ನು ಉದಾರವಾದ ಮತ್ತು ತೀವ್ರವಾದ ಎಂದು ವಿಭಜಿಸಿ ಒಂದನ್ನು ಸರಿ ಮತ್ತು ಇನ್ನೊಂದನ್ನು ತಪ್ಪು ಎಂದು ವ್ಯಾಖ್ಯಾನಿಸುವುದು ಸುಲಭ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪದಪುಂಜವನ್ನು ಬಳಸಿಕೊಂಡು ಚಾರ್ಲಿ ಹೆಬ್ಡೋದ ಪರ ನಿಲ್ಲುವುದು ಕಷ್ಟವೂ ಅಲ್ಲ. ಆದರೆ, ಹೀಗೆ ವಾದಿಸುವವರಲ್ಲೂ ಕೆಲವೊಂದು ಅನುಮಾನಗಳು ಖಂಡಿತ ಇರಬಹುದು. ಚಾರ್ಲಿ ಹೆಬ್ಡೋದ ಕಾರ್ಟೂನ್‍ಗಳು ಬರೇ ಸೃಜನಶೀಲತೆಯ ಉದ್ದೇಶದಿಂದಷ್ಟೇ ಸೃಷ್ಟಿಯಾಗಿವೆಯೇ? ಡೆನ್ಮಾರ್ಕ್‍ನ ಜಿಲ್ಲ್ಯಾಂಡ್ ಪೋಸ್ಟನ್‍ನಲ್ಲಿ ಪ್ರಕಟವಾದ ಪ್ರವಾದಿ ನಿಂದನೆಯ ಕಾರ್ಟೂನನ್ನು 2006ರಲ್ಲಿ ಪ್ರಕಟಿಸಿ ಮತ್ತೆ ಪುನಃ 2011ರಲ್ಲಿ ಪ್ರಕಟಿಸಿದ್ದೇ ಅಲ್ಲದೇ 2012ರಲ್ಲಿ 65 ಪುಟಗಳ ಪ್ರವಾದಿ ಕಾರ್ಟೂನ್‍ಗಳನ್ನು ಪ್ರಕಟಿಸಿರುವುದರಲ್ಲೂ ಬರೇ ಸೃಜನಶೀಲತೆಯ ಉದ್ದೇಶವಷ್ಟೇ ಕಾಣುತ್ತಿದೆಯೇ? ಅದೇಕೆ ಪ್ರವಾದಿಯವರು ಮತ್ತು ಮುಸ್ಲಿಮರೇ ಈ ಪತ್ರಿಕೆಯ ಸೃಜನಶೀಲತೆಗೆ ವಸ್ತುವಾಗಿದ್ದಾರೆ? ಹಾಲೋಕಾಸ್ಟನ್ನು (ಹಿಟ್ಲರ್ ನಡೆಸಿದ ಯಹೂದಿ ಹತ್ಯಾಕಾಂಡ)  ತನ್ನ ಸೃಜನಶೀಲತೆಗೆ ಚಾರ್ಲಿ ಹೆಬ್ಡೋ ಬಳಸಿಕೊಂಡಿತ್ತೇ? ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಪ್ರವಾದಿ ಮತ್ತು ಮುಸ್ಲಿಮರ ವಿಷಯದಲ್ಲಿ ಮಾತ್ರ ಘರ್ಜಿಸುವ ಮತ್ತು ಹಾಲೋಕಾಸ್ಟ್ ಹಾಗೂ ಬಿಳಿ ಜಗತ್ತಿನ ವಿಷಯದಲ್ಲಿ ಕುಂಯ್‍ಗುಡುವಂಥ ವಸ್ತುವೇ? ವಿಡಂಬನೆ, ನಿಂದನೆ, ಅಪಹಾಸ್ಯ, ವ್ಯಂಗ್ಯ ಮುಂತಾದ ಪದಗಳಿಗೆಲ್ಲ ವಿಭಿನ್ನ ಅರ್ಥಗಳಿವೆ ಎಂದಾದರೆ ಮತ್ತೇಕೆ ಚಾರ್ಲಿ ಹೆಬ್ಡೋದ ಅಗ್ಗದ ಪತ್ರಿಕೋದ್ಯಮವು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮರ್ಥನೆ ಗೀಡಾಗುವುದು? ವಿಡಂಬನೆ ಮತ್ತು ನಿಂದನೆಯ ನಡುವೆ ಸ್ಪಷ್ಟ ನೈತಿಕ ಗೆರೆಯನ್ನು ಎಳೆಯಲು ನಾವೆಲ್ಲ ಹಿಂದೇಟು ಹಾಕುತ್ತಿರುವುದು ಯಾರ ಮತ್ತು ಯಾವುದರ ಭಯದಿಂದ! ಅವೆರಡರ ನಡುವೆ ವ್ಯತ್ಯಾಸ ಇವೆಯೇ? ಇದ್ದರೆ ಅವು ಯಾವುವು? ಅಷ್ಟಕ್ಕೂ, ಚಾರ್ಲಿ ಹೆಬ್ಡೋದ ಕಾರ್ಟೂನುಗಳಲ್ಲಿ ಎಷ್ಟು ಕಾರ್ಟೂನ್‍ಗಳು ಕೇವಲ ವಿಡಂಬನೆ ಎಂಬ ವೃತ್ತದೊಳಗೆ ನಿಲ್ಲಬಲ್ಲವು? ವೃತ್ತದಿಂದ ಹೊರಗೆ ಜಿಗಿಯುವ ಮತ್ತು ವೃತ್ತದೊಳಗೇ ಬಾರದವುಗಳಿಗೆ ನಾವು ಏನೆಂದು ಹೆಸರು ಕೊಡಬಲ್ಲೆವು? ನಿಂದನೆ, ವ್ಯಂಗ್ಯ, ಅಪಹಾಸ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು, ಮತ್ತು..
    ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿಯಲ್ಲಿ ನಡೆದ ಹತ್ಯಾ ಕಾಂಡವನ್ನು ಕನ್ನಡ ಅಕ್ಷರ ಮಾಲೆಯಲ್ಲಿ ಬರುವ ಸಕಲ ಕಟು ಪದಗಳನ್ನು ಬಳಸಿ ಖಂಡಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿ-ಮಿತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲೇಬೇಕಾಗಿದೆ.

Monday, January 5, 2015

ಒಂದು ವೇಳೆ ಗೋಡ್ಸೆಯ ಸ್ಥಾನದಲ್ಲಿ ಅಫ್ಝಲ್‍ಗುರು ಇರುತ್ತಿದ್ದರೆ..

   1. ಕುತುಬ್ ಮಿನಾರ್ ಎಂಬ ವಿಷ್ಣುಧ್ವಜ
   2. ಗಾಂಧೀಜಿಯವರ ಹತ್ಯೆ ಮತ್ತು ಆ ಬಳಿಕ
   3. ಮೆ ಇಟ್ ಪ್ಲೀಸ್ ಯುವರ್ ಆನರ್: ದಿ ಅಸಾಸಿನ್ಸ್ ಸ್ಟೇಟ್‍ಮೆಂಟ್ ಇನ್ ಕೋರ್ಟ್
   4. 1986 ಫೆ. 1ರಂದು ಬಾಬರಿ ಮಸೀದಿಯ ಗೇಟಿನ ಬೀಗ ತೆರೆಯಲು ಆದೇಶಿಸಿದ ನ್ಯಾಯಾಧೀಶರ ಕೃತಿ
‘ನೀವು ಓದಲೇಬೇಕಾದ 6 ಹೊಸ ಪುಸ್ತಕಗಳು' ಎಂಬ ಹೆಸರಿನಲ್ಲಿ ಆರೆಸ್ಸೆಸ್‍ನ ಮುಖವಾಣಿ ಆರ್ಗನೈಝರ್ ಪತ್ರಿಕೆಯು 1997 ಅಕ್ಟೋಬರ್ 5ರ ಸಂಚಿಕೆಯಲ್ಲಿ ಪ್ರಕಟಿಸಿದ ಜಾಹೀರಾತಿನಲ್ಲಿದ್ದ ಪುಸ್ತಕಗಳಿವು. ಇವುಗಳಲ್ಲಿ, ‘ಕುತುಬ್ ಮಿನಾರ್ ಎಂಬ ವಿಷ್ಣುಧ್ವಜ’ ಮತ್ತು 'ಗಾಂಧೀಜಿಯವರ ಹತ್ಯೆ ಮತ್ತು ಆ ಬಳಿಕ' ಎಂಬೆರಡು ಕೃತಿಗಳನ್ನು ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಬರೆದಿದ್ದರು. 1948 ಜನವರಿ 30ರಂದು ತನ್ನ ಪಾಯಿಂಟ್ ಬ್ಲಾಂಕ್ ರೇಂಜ್ ಬಂದೂಕಿನಿಂದ ಗಾಂಧೀಜಿಯವರ ಎದೆಗೆ ಮೂರು ಸುತ್ತು ಗುಂಡುಹಾರಿಸಿದ ನಾಥೂರಾಮ್ ಗೋಡ್ಸೆಯ ಆ ಕೃತ್ಯಕ್ಕೆ ಈ 2015ಕ್ಕೆ ಸುಮಾರು 67 ವರ್ಷಗಳು ತಗುಲುತ್ತವೆ. ಕೃತ್ಯ ನಡೆದಾಗ ಈ ದೇಶ ಎಷ್ಟು ಆಕ್ರೋಶಗೊಂಡಿತ್ತೆಂದರೆ, ಆರೆಸ್ಸೆಸ್‍ಗೆ ನಿಷೇಧ ಹೇರಲಾಯಿತು. ಆರೆಸ್ಸೆಸ್‍ನ ಬಗ್ಗೆ ಒಲವು ಹೊಂದಿದ್ದರೆಂದು ಹೇಳಲಾಗುತ್ತಿದ್ದ ಸರ್ದಾರ್ ಪಟೇಲರೇ ಈ ನಿಷೇಧಕ್ಕೆ ಶಿಫಾರಸ್ಸು ಮಾಡಿದ್ದರು. ಮಾತ್ರವಲ್ಲ, ಆ ನಿಷೇಧವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ‘ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು' ಎಂಬ ಷರತ್ತನ್ನು ಒಡ್ಡಿದ್ದರು. ಆರೆಸ್ಸೆಸ್‍ಗೂ ನಾಥೂರಾಮ್ ಗೋಡ್ಸೆಗೂ ನಡುವೆ ಯಾವ ಬಗೆಯ ಸಂಬಂಧ ಇತ್ತು ಎಂಬುದನ್ನು ಸಹೋದರ ಗೋಪಾಲ ಗೋಡ್ಸೆ ಹಲವು ಬಾರಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಗೋಡ್ಸೆಯನ್ನು 1949 ನವೆಂಬರ್ 15ರಂದು ಗಲ್ಲಿಗೇರಿಸಲಾಯಿತು. ಆ ಕಾಲದಲ್ಲಿ ಗೋಡ್ಸೆಯನ್ನು ಹೊಗಳುವುದು ಬಿಡಿ ಆತನ ಹೆಸರೆತ್ತುವುದೇ ದೇಶದ್ರೋಹವೆಂಬಂತಹ ವಾತಾವರಣ ದೇಶದೆಲ್ಲೆಡೆ ಇತ್ತು. ಬ್ರಾಹ್ಮಣನಾಗಿದ್ದ ಆತನನ್ನು ತಮ್ಮ ಜಾತಿಯವನೆಂದು ಹೆಮ್ಮೆ ಪಟ್ಟುಕೊಳ್ಳುವವರೇ ಇರಲಿಲ್ಲ. ಮಹಾರಾಷ್ಟ್ರದ ಪುಣೆಯಲ್ಲಿ ಹುಟ್ಟಿದ್ದ ಆತನ ನೆನಪಲ್ಲಿ ಜಯಂತಿ ಆಚರಿಸಿದ್ದೋ ಪ್ರತಿಮೆ ನಿರ್ಮಾಣ ಮಾಡಿದ್ದೋ ನಡೆಯಲಿಲ್ಲ. ಹೀಗೆ ರಾಷ್ಟ್ರಪಿತ ಗಾಂಧೀಜಿಯನ್ನು ಹತ್ಯೆಗೈದ ದೇಶದ್ರೋಹಿ ಎಂಬ ಐಡೆಂಟಿಟಿಯೊಂದಿಗೆ ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಇದೀಗ ಗುಣಗಾನಕ್ಕೆ ಒಳಗಾಗುತ್ತಿದ್ದಾನೆ. ಕಳೆದ ಡಿಸೆಂಬರ್ ಕೊನೆಯಲ್ಲಿ ಉತ್ತರ ಪ್ರದೇಶದ ವಿೂರತ್‍ನಲ್ಲಿ ಗೋಡ್ಸೆ ದೇವಾಲಯಕ್ಕೆ ಭೂಮಿ ಪೂಜೆ ನಡೆದಿದೆ. ಹಿಂದೂ ಮಹಾಸಭಾ ತಯಾರಿಸಿರುವ ‘ದೇಶಭಕ್ತ ನಾಥೂರಾಮ್ ಗೋಡ್ಸೆ’ ಎಂಬ ಡಾಕ್ಯುಮೆಂಟರಿಯು ಇದೇ ಜನವರಿಯ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಗಾಂಧಿ ಹತ್ಯೆಯಾದ ಜನವರಿ 30ನ್ನು ಶೌರ್ಯ ದಿನವನ್ನಾಗಿ ಆಚರಿಸುವುದಾಗಿ ಮಹಾಸಭಾ ಘೋಷಿಸಿದೆ. ದೇಶದಾದ್ಯಂತ ಆತನ ಪ್ರತಿಮೆ ನಿಲ್ಲಿಸುವ ಬಗ್ಗೆ ಅದು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದೆ. ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್‍ರು ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. 'ಗೋಡ್ಸೆಯು ಗಾಂಧಿಯನ್ನಲ್ಲ ನೆಹರೂರನ್ನು ಹತ್ಯೆ ಮಾಡಬೇಕಿತ್ತು' ಎಂದು ಕೇರಳದ ಸಂಘಪರಿವಾರದ ಮುಖವಾಣಿ ಕೇಸರಿ ಪತ್ರಿಕೆಯಲ್ಲಿ ಬಿಜೆಪಿ ಮುಖಂಡ ಗೋಪಾಲಕೃಷ್ಣನ್ ಈ ಹಿಂದೆ ಆಸೆ ತೋಡಿಕೊಂಡಿದ್ದರು. ಮೊನ್ನೆ ಮೊನ್ನೆ ಟಿ.ವಿ. ಚರ್ಚೆಯಲ್ಲಿ ಭಾಗವಹಿಸಿದ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಚಾರ್ಯ ಮದನ್ ಅವರು ಗಾಂಧಿ ಹತ್ಯೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಒಂದು ಉದ್ದೇಶಕ್ಕಾಗಿ ಹತ್ಯೆ ನಡೆಸುವುದು ಅಪರಾಧ ಆಗುವುದಿಲ್ಲ ಎಂದರು. ದೇಶ ವಿಭಜನೆಯ ಸಂದರ್ಭದಲ್ಲಾದ ಎಲ್ಲ ಹತ್ಯೆಯ ಹೊಣೆಯನ್ನೂ ಗಾಂಧಿಯ ಮೇಲೆ ಹೊರಿಸಿದ ಆತ, ಗಾಂಧಿ 10 ಲಕ್ಷ ಮಂದಿಯ ಕೊಲೆಗಾರ ಎಂದರು. ಗಾಂಧಿಯನ್ನು ವಿಚಾರಣೆಗೆ ಒಳಪಡಿಸುವ ಯಾವುದೇ ಕಾನೂನು ಈ ದೇಶದಲ್ಲಿ ರಚನೆಯಾಗದೇ ಇರುವುದು ದುರದೃಷ್ಟಕರ ಎಂದೂ ಆತ ಹೇಳಿದ. ಅಷ್ಟಕ್ಕೂ, 1948ರಲ್ಲಿ ಅಪ್ಪಟ ದೇಶದ್ರೋಹಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಈ 2015ರಲ್ಲಿ ದೇಶಭಕ್ತನಾಗಿ ಪರಿವರ್ತನೆಗೊಂಡದ್ದು ಹೇಗೆ ಮತ್ತು ಯಾಕೆ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಮತ್ತು ರಾಷ್ಟ್ರಪಿತನನ್ನು ಕೊಲೆಗೈದ ಅಪರಾಧಿಯೊಬ್ಬನ ಮೇಲೆ ಸಂಘಪರಿವಾರಕ್ಕೆ ಈ ಮಟ್ಟದ ಮಮಕಾರ ಯಾಕಾಗಿ? ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವು ದೆಂದರೆ ಜೇನುಗೂಡಿಗೆ ಕೈ ಹಾಕಿದಂತೆ. ನಾಲ್ಕು ದಿಕ್ಕಿನಿಂದಲೂ ಆ ಸಮರ್ಥನೆ ಪ್ರಶ್ನೆಗೀಡಾಗುತ್ತದೆ. ಕೊಲೆಪಾತಕನನ್ನು ವೈಭವೀಕರಣಗೊಳಿಸುವವರು ಟೀಕೆಗೆ ಖಂಡಿತ ಗುರಿಯಾಗುತ್ತಾರೆ. ಇದು ಸಂಘಪರಿವಾರಕ್ಕೆ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದೂ ಅಂಥದ್ದೊಂದು ಧೈರ್ಯ ಪ್ರದರ್ಶಿಸುವುದಕ್ಕೆ ಗೋಡ್ಸೆಯಲ್ಲಿ ಏನಿದೆ?
   ನಿಜವಾಗಿ, ಸಂಘಪರಿವಾರಕ್ಕೆ ಮುಸ್ಲಿಮ್ ವಿರೋಧಿ ವ್ಯಕ್ತಿತ್ವ ವೊಂದರ ಅಗತ್ಯವಿದೆ. ಗಾಂಧೀಜಿಯನ್ನು ಕೊಂದವ ಎಂಬೊಂದು ಪರಿಚಿತ ಮುಖ ಗೋಡ್ಸೆಗೆ ಈಗಾಗಲೇ ಇದೆ. ಈ ಮುಖಕ್ಕೆ ಇನ್ನೊಂದು ಭಾವುಕ ವ್ಯಾಖ್ಯಾನವನ್ನು ಕೊಟ್ಟು ಒಂದು ಕಲ್ಲಿನಿಂದ ಎರಡು ಹಕ್ಕಿಗಳನ್ನು ಉದುರಿಸುವ ಆಲೋಚನೆ ಸಂಘಪರಿವಾರದ್ದು. ಸಾವರ್ಕರ್, ಹೆಡ್ಗೆವಾರ್, ಗೋಲ್ವಲ್ಕರ್‍ಗಳನ್ನು ಈ ಸಮಾಜ ಈ ವರೆಗೂ ತನ್ನೊಳಗೆ ಜೀರ್ಣಿಸಿಕೊಂಡಿಲ್ಲ. ಬಹುಸಂಖ್ಯಾತ ಸಮಾಜ ಅವರನ್ನು ಜಗಲಿಯ ಒಳಗೆ ಬಿಟ್ಟುಕೊಳ್ಳುತ್ತಲೂ ಇಲ್ಲ. ಅವರನ್ನು ಒಂದು ಸಂಘಟನೆಗೆ ಮತ್ತು ನಿರ್ದಿಷ್ಟ ಆಲೋಚನೆಗೆ ಸೀಮಿತಗೊಳಿಸಿ ಅನುಮಾನದಿಂದ ನೋಡುತ್ತಲೂ ಇದೆ. ಇವರಿಗೆ ಹೋಲಿಸಿದರೆ ಗೋಡ್ಸೆ ತುಸು ಭಿನ್ನ. ಆತ ಈ ಎಲ್ಲ ಚೌಕಟ್ಟನ್ನೂ ವಿೂರಿ ಒಂದು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದವ. ಗೋಲ್ವಾಲ್ಕರ್‍ರ ಹೆಸರಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸುವುದಕ್ಕಿಂತ ಗೋಡ್ಸೆಯ ಹೆಸರಿನಲ್ಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ಹೆಚ್ಚು ಕುತೂಹಲವಿರುತ್ತದೆ. ಆ ಕುತೂಹಲಕ್ಕೆ ಪೂರಕವಾಗಿ ಭಾವುಕ ಕತೆಯೊಂದನ್ನು ಆತನ ಸುತ್ತ ಕಟ್ಟುವುದಕ್ಕೂ ಅವಕಾಶ ಇರುತ್ತದೆ. ಗೋಡ್ಸೆಯನ್ನು ವೈಭವೀಕರಿಸುತ್ತಿರುವ ವರ್ಗ ಗಾಂಧೀಜಿಯವರನ್ನು ಸ್ವಾತಂತ್ರ್ಯ ಹೋರಾಟಗಾರನೆಂಬ ನೆಲೆಯಲ್ಲಿ ಗೌರವಿಸುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಅದೇ ಉಸಿರಲ್ಲಿ ಅವರೋರ್ವ ಮುಸ್ಲಿಮ್ ಪರ ಮತ್ತು ಪಾಕಿಸ್ತಾನದ ರಚನೆಗೆ ಸಮ್ಮತಿಸಿದ ವ್ಯಕ್ತಿ ಎಂದೂ ಹೇಳುತ್ತದೆ. ಟರ್ಕಿಯಲ್ಲಿ ಖಲೀಫಾ ಆಡಳಿತ ಉರುಳಿದಾಗ ಇಲ್ಲಿ ಖಿಲಾಫತ್ ಚಳವಳಿಯನ್ನು ಹುಟ್ಟು ಹಾಕಿ ಮುಸ್ಲಿಮರನ್ನು ಬೆಂಬಲಿಸಿದ ವ್ಯಕ್ತಿ ಗಾಂಧೀಜಿ ಅನ್ನುತ್ತದೆ. ದೇಶವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಗಾಂಧೀಜಿ ಕಾರಣ ಎಂಬ ಆರೋಪವನ್ನೂ ಹೊರಿಸುತ್ತದೆ. ಹೀಗೆ ಗಾಂಧೀಜಿಯನ್ನು ಮುಸ್ಲಿಮ್ ಪರವೆಂದೂ ಮತ್ತು ಮುಸ್ಲಿಮರನ್ನು ಹಿಂದೂಗಳ ಕೊಲೆಗಾರರೆಂದೂ ಬಿಂಬಿಸುವ ಎರಡು ಉದ್ದೇಶವನ್ನು ಗೋಡ್ಸೆಯ ವೈಭವೀಕರಣವು ಪೂರ್ತಿಗೊಳಿಸುತ್ತದೆ. ಅಂದಹಾಗೆ, ಮುಸ್ಲಿಮ್ ಪರ ಇರುವವರನ್ನು ಹತ್ಯೆ ನಡೆಸುವುದು ದೇಶದ್ರೋಹವೋ ಅಪರಾಧವೋ ಆಗುವುದಿಲ್ಲ ಎಂಬ ಸಂದೇಶವೊಂದನ್ನು ರವಾನಿಸಲು ಗೋಡ್ಸೆಯಷ್ಟು ಉತ್ತಮ ವ್ಯಕ್ತಿ ಸಂಘಪರಿವಾರಕ್ಕೆ ಬೇರೊಬ್ಬರಿಲ್ಲ. ಗೋಡ್ಸೆ ಸಮರ್ಥನೆಗೀಡಾದಷ್ಟೂ ಗಾಂಧೀಜಿ ಹೆಚ್ಚೆಚ್ಚು ಮುಸ್ಲಿಮ್ ಪ್ರೇಮಿಯಾಗುತ್ತಲೇ ಹೋಗುತ್ತಾರೆ. ಅಲ್ಲದೇ, ಗೋಡ್ಸೆಯ ಪರ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಮತ್ತು ಮುಸ್ಲಿಮರು ಚರ್ಚೆಗೀಡಾಗಲೇ ಬೇಕಾಗುತ್ತದೆ.

ಯಾಕೆಂದರೆ, ಗಾಂಧೀಜಿ ಇಲ್ಲದಿದ್ದರೆ ಗೋಡ್ಸೆಗೆ ವ್ಯಕ್ತಿತ್ವವೇ ಇಲ್ಲ. ಗಾಂಧೀಜಿಯಿಂದಾಗಿಯೇ ಗೋಡ್ಸೆ ಇವತ್ತು ಇತಿಹಾಸದ ಪುಟದಲ್ಲಿದ್ದಾನೆ. ಗಾಂಧೀಜಿಗೆ ಆತ ಗುಂಡಿಕ್ಕದೇ ಇರುತ್ತಿದ್ದರೆ ಮಹಾರಾಷ್ಟ್ರದ ಪುಣೆಯಲ್ಲಿ ‘ಅಗ್ರಣಿ' ಎಂಬ ಪತ್ರಿಕೆಯನ್ನು ನಡೆಸುತ್ತಾ ಆತ ಪರಿವಾರದ ಪ್ರಚಾರಕನಾಗಿ ಎಲ್ಲೋ ಕಳೆದು ಹೋಗುತ್ತಿದ್ದ. ಆದ್ದರಿಂದ, ಗೋಡ್ಸೆಯನ್ನು ವಿವರಿಸಲು ತೊಡಗಿದಂತೆಲ್ಲಾ ಗೋಡ್ಸೆಗಿಂತ ಹೆಚ್ಚು ಗಾಂಧೀಜಿ ಮತ್ತು ಮುಸ್ಲಿಮರು ಪ್ರಸ್ತಾಪವಾಗುತ್ತಲೇ ಇರಬೇಕಾಗುತ್ತದೆ. ಒಂದು ರೀತಿಯಲ್ಲಿ, ಇದು ಸಂಘಪರಿವಾರದ ಬಯಕೆಯೂ ಹೌದು. ಗಾಂಧೀಜಿಯನ್ನು ಈ ದೇಶದ ಗೌರವಾನ್ವಿತರ ಪಟ್ಟಿಯಿಂದ ಕಳಚಬೇಕೆಂಬುದು ಸಂಘದ ಬಹುಕಾಲದ ಕನಸು. ಬಹುಸಂಖ್ಯಾತರು ಅನುಭವಿಸುವ ಸ್ವಾತಂತ್ರ್ಯವನ್ನು ಅಷ್ಟೇ ಸಮಾನವಾಗಿ ಮುಸ್ಲಿಮ್ ಅಲ್ಪಸಂಖ್ಯಾತರು ಅನುಭವಿಸಬಾರದೆಂಬ ಅಜೆಂಡಾವನ್ನೂ ಅದು ಹೊಂದಿದೆ. ಈ ಗುರಿಯನ್ನು ತಲುಪುವುದಕ್ಕೆ ಗೋಡ್ಸೆ ಯಷ್ಟು ಸೂಕ್ತ ವ್ಯಕ್ತಿತ್ವ ಬೇರೆ ಸಿಗಲಾರದು. ಗೋಡ್ಸೆಯ ಬಗ್ಗೆ ಮಾತುಗಳನ್ನು ಆರಂಭಿಸಿ ಗಾಂಧೀಜಿ, ಮುಸ್ಲಿಮರು ಮತ್ತು ದೇಶಭಕ್ತಿಯಲ್ಲಿ ಕೊನೆಗೊಳಿಸುವುದು ಸುಲಭ ಮತ್ತು ಹೆಚ್ಚು ಪ್ರಾಯೋಗಿಕ. ಗೋಡ್ಸೆ ಗುಂಡಿಕ್ಕಿದುದು ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಗಲ್ಲ, ದೇಶ ವಿಭಜಿಸಿದವರನ್ನು ಬೆಂಬಲಿಸಿದ ಗಾಂಧಿಗೆ ಎಂದು ಪರಿವಾರ ಇವತ್ತು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಈ ವಾದಕ್ಕೆ ಹೆಚ್ಚು ಬಲ ಬರುತ್ತದೆ. ಮುಸ್ಲಿಮರ ಪರ ನಿಲ್ಲುವವರನ್ನು ಅಥವಾ ಮುಸ್ಲಿಮರನ್ನು ಹತ್ಯೆ ನಡೆಸುವುದು ಅಪರಾಧ ಆಗುವುದಿಲ್ಲ ಎಂಬ ಸಂದೇಶವನ್ನು ಗೋಡ್ಸೆಯ ಮೂಲಕ ರವಾನಿಸಲು ಸಂಘಪರಿವಾರ ತೀರ್ಮಾನಿಸಿದಂತಿದೆ. ಬಹುಶಃ, ಗೋಡ್ಸೆಯ ಪ್ರತಿಮೆಯನ್ನು ದೇಶದಾದ್ಯಂತ ನಿರ್ಮಿಸಲು ಹೊರಟಿರುವ ಹಿಂದೂ ಮಹಾಸಭಾವನ್ನು ತಡೆಯಬೇಕೆಂದು ಕೋರಿ ಕಾನೂನು ತಜ್ಞ ಮತ್ತು ಮಾನವ ಹಕ್ಕು ಕಾರ್ಯಕರ್ತರಾಗಿರುವ ಶಹ್‍ಝಾದ್‍ರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರಕ್ಕೆ ತೂಕ ಬರುವುದೂ ಈ ಕಾರಣದಿಂದಲೇ. ಅದು ಬರೇ ಪ್ರತಿಮೆಯಲ್ಲ. ಆ ಪ್ರತಿಮೆಗೆ ಮುಸ್ಲಿಮ್ ವಿರೋಧಿಯಾದ ಇಮೇಜು ಇದೆ. ಗೋಡ್ಸೆಯ ಪ್ರತಿಮೆ ಹೆಚ್ಚಾದಷ್ಟೂ ಅಥವಾ ಆತನ ವೈಭವೀಕರಣ ವಿಸ್ತರಿಸಿದಷ್ಟೂ ಮುಸ್ಲಿಮ್ ವಿರೋಧಿ ಭಾವನೆಗಳು ಈ ದೇಶದಲ್ಲಿ ಖಂಡಿತ ಹೆಚ್ಚಾಗುತ್ತದೆ. ಒಂದು ಕಡೆ ಪಾರ್ಲಿಮೆಂಟಿನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ. ಹಾಗಿದ್ದರೂ ಒಬ್ಬನೇ ಒಬ್ಬ ಮುಸ್ಲಿಮ್ ಸಂಸತ್ ಸದಸ್ಯನನ್ನು ಅದು ಹೊಂದಿಲ್ಲ. ದೇಶಾದ್ಯಂತವಿರುವ ಅದರ 1058ರಷ್ಟು ಅಸೆಂಬ್ಲಿ ಸದಸ್ಯರಲ್ಲಿ ಬರೇ 4 ಮಂದಿಯಷ್ಟೇ ಮುಸ್ಲಿಮರಿದ್ದಾರೆ. ದೇಶವನ್ನಾಳುವ ಪ್ರಮುಖ ಪಕ್ಷವೊಂದರಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಇಷ್ಟು ದಯನೀಯ ಸ್ಥಿತಿಯಲ್ಲಿರುವಾಗಲೇ ಗೋಡ್ಸೆ ಮುನ್ನೆಲೆಗೆ ಬಂದಿದ್ದಾನೆ. ಮಾತ್ರವಲ್ಲ, ಮಾತನಾಡಲೇಬೇಕಿದ್ದ ಪ್ರಧಾನಿಯವರು ಮೌನವಾಗಿದ್ದಾರೆ. ಒಂದು ವೇಳೆ, ಪಾರ್ಲಿಮೆಂಟ್ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಗೋಡ್ಸೆಯ ಮಾದರಿಯಲ್ಲಿ ವೈಭವೀಕರಿಸಲು ಯಾವುದಾದರೊಂದು ಸಂಘಟನೆ ಮುಂದಾಗಿರುತ್ತಿದ್ದರೆ ಕೇಂದ್ರ ಸರಕಾರದ ನಿಲುವು ಏನಾಗಿರುತ್ತಿತ್ತು? 1500 ವರ್ಷಗಳ ಇಸ್ಲಾವಿೂ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಮುಸ್ಲಿಮ್ ಬಾಹುಳ್ಯದ ಕಾಶ್ಮೀರವು ಸೆಕ್ಯುಲರ್ ರಾಷ್ಟ್ರವಾದ ಭಾರದೊಂದಿಗೆ 1947ರಲ್ಲಿ ಸೇರಿಕೊಂಡರೂ ಭಾರತವು ಕಾಶ್ಮೀರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದಿರುವುದಕ್ಕೆ; ಪಕ್ಷ
 ಪಾತ, ದೌರ್ಜನ್ಯ ನಡೆಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಫ್ಝಲ್ ಗುರು ಪಾರ್ಲಿಮೆಂಟ್‍ಗೆ ದಾಳಿ ನಡೆಸಿದ್ದಾನೆ ಎಂದು ವಾದಿಸಬಹುದಾದ ಸಂದರ್ಭವನ್ನೊಮ್ಮೆ ಊಹಿಸಿ. ಆತ ದಾಳಿ ಮಾಡಿದ್ದು ಪಾರ್ಲಿಮೆಂಟಿನ ಮೇಲಲ್ಲ, ಅದರೊಳಗೆ ಕುಳಿತಿರುವ ಕಾಶ್ಮೀರಿ ವಿರೋಧಿಗಳನ್ನು ಎಂಬ ಸಮರ್ಥನೆಯನ್ನು ಅವಲೋಕಿಸಿ ನೋಡಿ. ಕೇಂದ್ರ ಸರಕಾರದ ಪ್ರತಿಕ್ರಿಯೆ ಹೇಗಿದ್ದೀತು? ಗೋಡ್ಸೆಯನ್ನು ವೈಭವೀಕರಿಸುತ್ತಿರುವವರು ಏನೆನ್ನಬಹುದು?