Wednesday, December 30, 2015

ರೇಪ್ ಕಲ್ಚರ್ ಮನಸ್ಥಿತಿಗೆ ಕನ್ನಡಿ ಹಿಡಿದ ವಿದ್ಯಾ ದಿನಕರ್

ಪ್ರಭಾ ಬೆಳವಂಗಲ
ಚೇತನಾ ತೀರ್ಥಹಳ್ಳಿ
ವಿದ್ಯಾ ದಿನಕರ್
      ಅತ್ಯಾಚಾರ, ನಿಂದನೆ, ಅಪಹಾಸ್ಯ, ಕೊಲೆ ಬೆದರಿಕೆಗಳೆಲ್ಲ ಹೆಣ್ಣನ್ನೇ ಯಾಕೆ ಹುಡುಕಿಕೊಂಡು ಬರುತ್ತವೆ? ಹೆಣ್ಣು ಎಂಬುದೇ ಇದಕ್ಕೆ ಕಾರಣವೇ ಅಥವಾ ಅದೊಂದು ಮನಸ್ಥಿತಿಯೇ ಅಲ್ಲ ಹೆಣ್ಣಿನ ಬಗೆಗಿರುವ ಕೀಳರಿಮೆಯೇ? ‘ಪ್ರಭಾ ಬೆಳವಂಗಲ ಅವರ ಜುಟ್ಟು ಹಿಡಿದು ಅತ್ಯಾಚಾರ ನಡೆಸಬೇಕು..' ಎಂದು ವಿ.ಆರ್. ಭಟ್ ಎಂಬವ 2014ರಲ್ಲಿ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿದ್ದ. ಆ ಬಗ್ಗೆ ಪ್ರಭಾ ಕೇಸನ್ನೂ ದಾಖಲಿಸಿದ್ದರು. ಹಾಗಂತ, ಪ್ರಭಾರು ತನ್ನ ಫೇಸ್‍ಬುಕ್ ಪುಟದಲ್ಲಿ ಬರೆದ ಬರಹದಲ್ಲಿ, ಓರ್ವ ವ್ಯಕ್ತಿ ಆ ಮಟ್ಟದಲ್ಲಿ ಉದ್ರಿಕ್ತಗೊಳ್ಳುವುದಕ್ಕೆ ಪೂರಕವಾದದ್ದು ಏನೂ ಇರಲಿಲ್ಲ. ಪುರೋಹಿತಶಾಹಿಯ ವಿರುದ್ಧ ಅವರು ಮಾತೆತ್ತಿದ್ದರು. ಪುರೋಹಿತಶಾಹಿಯನ್ನು ಅನುತ್ಪಾದಕ ಅಂದಿದ್ದರು. ಶಾಲಾ ಕಾಲೇಜುಗಳ ಶಂಕುಸ್ಥಾಪನೆಗೆ, ಆಸ್ಪತ್ರೆಗಳ ಉದ್ಘಾಟನೆಗೆ ಪುರೋಹಿತ ಶಾಹಿಯನ್ನು ಆಶ್ರಯಿಸುತ್ತಿರುವ ಸಮಾಜದ ಮನಸ್ಥಿತಿಯನ್ನು ಅವರು ಪ್ರಶ್ನಿಸಿದ್ದರು. ಕ್ಷಿಪಣಿಗಳನ್ನು ಉಡಾಯಿಸುವ ಮೊದಲು, ಮಂತ್ರಿಗಳು ಕುರ್ಚಿ ಏರುವ ಮೊದಲು, ಪ್ರಾಜೆಕ್ಟುಗಳನ್ನು ಆರಂಭಿಸುವ ಮೊದಲು.. ಹೀಗೆ ಪ್ರತಿಯೊಂದೂ ಪೂಜಾ-ಕೈಂಕರ್ಯಗಳ ಮೂಲಕ ನೆರವೇರುತ್ತಿರುವುದಕ್ಕೆ ತಮ್ಮ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದರು. ಅವರು ಬಳಸಿದ ಪದಗಳು ಸಭ್ಯತೆಯ ಮೇರೆಯನ್ನು ವಿೂರಿರಲಿಲ್ಲ. ಓದುಗರನ್ನು ರೊಚ್ಚಿಗೆಬ್ಬಿಸುವ ಧಾಟಿಯಲ್ಲೂ ಇರಲಿಲ್ಲ. ಹಾಗಂತ, ಪುರೋಹಿತಶಾಹಿಯನ್ನು ತರಾಟೆಗೆತ್ತಿಕೊಳ್ಳುವ ಬರಹ ಪ್ರಕಟವಾದದ್ದು ಅದು ಮೊದಲ ಬಾರಿಯೇನೂ ಅಲ್ಲ. ಪ್ರಗತಿಪರ ಪುರುಷ ಬರಹಗಾರರು ಪ್ರಭಾರಿಗಿಂತ ಹೆಚ್ಚು ತೀಕ್ಷ್ಣವಾಗಿ ಮತ್ತು ಕಠಿಣ ಪದಗಳಲ್ಲಿ ಅದಕ್ಕಿಂತ ಹಿಂದೆಯೂ ಆ ಬಳಿಕವೂ ಪುರೋಹಿತಶಾಹಿಯನ್ನು ಟೀಕಿಸಿದ್ದಾರೆ. ಲೇಖನಗಳನ್ನು ಬರೆದಿದ್ದಾರೆ. ಕಾದಂಬರಿಗಳಲ್ಲಿ ಪಾತ್ರವಾಗಿಸಿದ್ದಾರೆ. ಆದರೆ ಅವರಾರ ವಿರುದ್ಧವೂ ಕಾಣಿಸಿಕೊಳ್ಳದ ‘ಉದ್ರಿಕ್ತತೆ’ಯೊಂದು ಪ್ರಭಾರ ವಿರುದ್ಧ ಕಾಣಿಸಿಕೊಂಡಿರುವುದಕ್ಕೆ ‘ಹೆಣ್ಣು' ಎಂಬ ಲಿಂಗಾಧಾರಿತ ವರ್ಗೀಕರಣದ ಹೊರತು ಇನ್ನಾವ ಕಾರಣಗಳು ಕಾಣಿಸುತ್ತಿವೆ? ‘ಪುರೋಹಿತಶಾಹಿ ವ್ಯವಸ್ಥೆ ಗಂಡಿನದ್ದು, ಅದನ್ನು ನಿಯಂತ್ರಿಸಬೇಕಾದದ್ದು ಗಂಡು, ಅದರ ಬಗ್ಗೆ ಮಾತಾಡಬೇಕಾದದ್ದು ಗಂಡು, ಟೀಕೆ-ಟಿಪ್ಪಣಿಗಳ ಅವಕಾಶ ಇರುವುದೂ ಗಂಡಿಗೇ’ ಎಂಬ ‘ಹಮ್ಮೇ’ ಇದರ ಹಿಂದಿರುವಂತೆ ತೋರುತ್ತಿದೆ. ಗಂಡಿನ ಭಾಷೆಯಲ್ಲಿ ಮತ್ತು ಗಂಡು ಎತ್ತಿಕೊಳ್ಳುವ ವಿಷಯದಲ್ಲಿ ಹೆಣ್ಣು ಮಾತಾಡಬಾರದು ಎಂಬ ದರ್ಪ ಇದರಲ್ಲಿ ಎದ್ದು ಕಾಣುತ್ತಿದೆ. ಈ ವಿಷಯದಲ್ಲಿ ಪ್ರಭಾ ಒಂಟಿಯಲ್ಲ. ಚೇತನಾ ಮತ್ತು ವಿದ್ಯಾ ದಿನಕರ್‍ರ ಮೇಲೆ ನಡೆದಿರುವ ವಾಗ್ದಾಳಿ, ಬೆದರಿಕೆ, ಅತ್ಯಾಚಾರದ ಮಾತುಗಳೆಲ್ಲ ಈ ಮನಸ್ಥಿತಿಯ ಪ್ರಾಬಲ್ಯವನ್ನೇ ಪ್ರತಿಬಿಂಬಿಸುತ್ತದೆ. ಗೋಮಾಂಸವನ್ನು ಆಹಾರ ಕ್ರಮವಾಗಿ ಬೆಂಬಲಿಸಿದ್ದು ಚೇತನಾ ಮಾತ್ರ ಅಲ್ಲ, ರಾಜ್ಯದಲ್ಲಿ ಅಸಂಖ್ಯ ಮಂದಿ ಮಾಂಸಾಹಾರದ ಪರವಾಗಿ ಮಾತಾಡಿದ್ದಾರೆ. ಗೋಮಾಂಸ ಸೇವನೆಯ ಹೆಸರಲ್ಲಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ. ಬೆಂಗಳೂರಿನಲ್ಲಂತೂ ಮಾಂಸಾಹಾರವನ್ನು ಬಹಿರಂಗವಾಗಿ ಸೇವಿಸುವ ಕಾರ್ಯಕ್ರಮಗಳೂ ನಡೆದಿವೆ. ಆದರೆ ಚೇತನಾರನ್ನು ಈ ಗುಂಪಿನಿಂದ ವಿಂಗಡಿಸಿ, ಒಂಟಿಯಾಗಿಸಿ ನಿಂದನೆ, ಕೊಲೆ ಬೆದರಿಕೆಗಳಿಗೆ ಈಡಾಗಿಸಿದ್ದು ಯಾಕೆ? ಬೆಂಗಳೂರಿನ ಹನುಮಂತ ನಗರ ಪೊಲೀಸು ಠಾಣೆಯಲ್ಲಿ ಮಧುಸೂದನ ಗೌಡ ಎಂಬವನ ಮೇಲೆ ಚೇತನಾ ದೂರು ದಾಖಲಿಸುವಾಗ ಚೇತನಾರ ಭಾಷೆಯಲ್ಲೇ ಮಾತಾಡಿದ ಮತ್ತು ಅವರಂತೆಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುರುಷರು ಯಾವ ಬೆದರಿಕೆಗೂ ಈಡಾಗದೇ ಉಳಿದರಲ್ಲ, ಏನಿದರ ಅರ್ಥ? ಪ್ರತಿಕ್ರಿಯೆಗಳು ಸೆಲೆಕ್ಟಿವ್ ಆಗುತ್ತಿ ವೆಯೇ? ಲಿಂಗಾಧಾರಿತವಾಗುತ್ತಿವೆಯೇ? ಹೆಣ್ಣಿನ ಕ್ಷೇತ್ರ ಇದಲ್ಲ ಎಂದು ದಬ್ಬುವ ಪ್ರಯತ್ನಗಳು ನಡೆಯುತ್ತಿವೆಯೇ?
         ಇತ್ತೀಚೆಗೆ ಲಂಡನ್ನಿನ ದಿ ಇಂಡಿಪೆಂಡೆಂಟ್ ಪತ್ರಿಕೆಯಲ್ಲಿ ರೇಪ್ ಕಲ್ಚರ್ (ಅತ್ಯಾಚಾರದ ಸಂಸ್ಕೃತಿ)ನ ಬಗ್ಗೆ ಲಾರಿ ಫೆನ್ನಿಯವರು ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದರು.
      1970ರಲ್ಲಿ ಮೊಟ್ಟಮೊದಲು ಚಾಲ್ತಿಗೆ ಬಂದ ‘ರೇಪ್ ಕಲ್ಚರ್' ಎಂಬ ಪದ ಆ ಬಳಿಕ ಅಸಂಖ್ಯ ಬಾರಿ ಬಳಕೆಯಾಗಿದೆ. ಹಾಗಂತ, ಅತ್ಯಾಚಾರ ಎಂಬುದು ಹಾಯ್, ಹಲೋ, ಹೇಗಿದ್ದಿ, ಏನ್ ಸಮಾಚಾರ.. ಎಂದು ಮುಂತಾಗಿ ಹೇಳುವಷ್ಟು ಸಾಮಾನ್ಯ ಪದವಲ್ಲವಲ್ಲ. ಅದೊಂದು ಮನಸ್ಥಿತಿಯ ಪ್ರತೀಕ. ಹೆಣ್ಣನ್ನು ಮಣಿಸುವುದಕ್ಕೆ, ಆಕೆಯಲ್ಲಿ ಭೀತಿಯನ್ನು ತುಂಬುವುದಕ್ಕೆ ಪುರುಷ ಪ್ರಧಾನ ಸಮಾಜ ಬಳಸಬಹುದಾದ ಪರಿಣಾಮಕಾರಿ ಪದ. ಹೆಣ್ಣನ್ನು ಮಣಿಸಬಲ್ಲೆ ಎಂಬ ಅಹಂ ಆ ಪದಪ್ರಯೋಗದ ಹಿಂದಿರುತ್ತದೆ. ಹೆಣ್ಣಿಗೆ ಆಕೆಯ ದುರ್ಬಲತೆಯನ್ನು ಮತ್ತು ದ್ವಿತೀಯ ದರ್ಜೆಯನ್ನು ಸೂಚಿಸುವುದಕ್ಕೂ ಈ ಪದ ಪ್ರಯೋಗವಾಗುತ್ತಿದೆ. ಹೆಣ್ಣು ಎಲ್ಲಿ ನಿಲ್ಲಬೇಕು, ಹೇಗೆ ಮಾತಾಡಬೇಕು, ಯಾಕೆ ಮಾತಾಡಬೇಕು, ಯಾವ ವಿಷಯದಲ್ಲಿ ಮಾತಾಡಬೇಕು, ಎಷ್ಟು ಮಾತಾಡಬೇಕು ಎಂಬುದನ್ನೆಲ್ಲ ಈ ಮನಸ್ಥಿತಿ ಪಟ್ಟಿ ಮಾಡಿರುತ್ತದೆ. ಅದನ್ನು ಉಲ್ಲಂಘಿಸುವವರನ್ನು ಈ ಮನಸ್ಥಿತಿ ಪ್ರತಿಭಟಿಸುತ್ತದೆ. ಪುರುಷ ಅಹಮ್ಮಿನ ‘ಪ್ರತಿಮೆ’ಗಳ ಮೂಲಕ ತಿವಿಯುತ್ತದೆ. ಅತ್ಯಾಚಾರದ ಪದ ಪ್ರಯೋಗವು ಇಂಥ ಮನಸ್ಥಿತಿಯಲ್ಲಿ ಸಾಮಾನ್ಯವಾಗಿರುತ್ತದೆ. ಈ ಬಗ್ಗೆ ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಹಲವಾರು ಅಧ್ಯಯನಗಳು ನಡೆದಿವೆ. ಲಾರಿ ಫೆನ್ನಿ, ಜೆನ್ನಿಫರ್ ಪ್ರೋಝ್‍ನರ್, ಎಮಿಲಿ ಮೆ ಮುಂತಾದವರು ಇಂಥವುಗಳ ಅಧ್ಯಯನ ನಡೆಸಿದ್ದಾರೆ. ಆನ್‍ಲೈನ್ ನಲ್ಲಿ ಅತ್ಯಾಚಾರ, ನಿಂದನೆ, ಕೊಲೆ ಬೆದರಿಕೆ ಒಡ್ಡುವವರನ್ನು ಪರಾಮರ್ಶೆಗೆ ಒಳಪಡಿಸಿದ್ದಾರೆ. ಅನಿತಾ ಸರ್ಕೀಸಿಯನ್ ಎಂಬ ಮಹಿಳಾ ವಾದಿಯ ವಿರುದ್ಧ ಅಂತರ್ಜಾಲದಲ್ಲಿ ಪ್ರಕಟವಾದ ಎಲ್ಲ ನಿಂದನಾತ್ಮಕ ಪ್ರತಿಕ್ರಿಯೆಗಳನ್ನೂ ಹಾಗೆಯೇ ಪ್ರಕಟಿಸಿದ್ದಾರೆ. ಅದು ಅಂತರ್ಜಾಲದಲ್ಲಿ ತೀವ್ರ ಸಂಚಲನೆಯನ್ನು ಸೃಷ್ಟಿಸಿತ್ತು. ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಸಾಮಾಜಿಕವಾಗಿ ಆಕ್ರೋಶಗಳು ವ್ಯಕ್ತವಾಗಿದ್ದುವು. ಬ್ರಿಟನ್ನಿನ ತನಿಖಾ ಸಂಸ್ಥೆ ಎಫ್.ಬಿ.ಐ. ಆ ಕುರಿತಂತೆ ತನಿಖೆಯನ್ನೂ ನಡೆಸಿತ್ತು. ನಿಜವಾಗಿ, ಇಂಥ ರೇಪ್ ಕಲ್ಚರ್ ಅನ್ನು ಇಂಗ್ಲೆಂಡಿಗೋ ಅಮೇರಿಕಕ್ಕೋ ನಾವು ಸೀಮಿತಗೊಳಿಸಿ ನೋಡಬೇಕಿಲ್ಲ. ಅದು ದೇಶ ಮತ್ತು ಕಾಲವನ್ನೂ ವಿೂರಿದ ಒಂದು ಕ್ರೂರ ಮನಸ್ಥಿತಿ. 'ರೇಪ್ಸ್ ಇನ್ ಬೋಸ್ನಿಯಾ: ಎ ಮುಸ್ಲಿಮ್ ಸ್ಕೂಲ್ ಗರ್ಲ್ಸ್ ಅಕೌಂಟ್'' ಎಂಬ ಶೀರ್ಷಿಕೆಯಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 1992 ಡಿಸೆಂಬರ್ 27ರಂದು ಬೋಸ್ನಿಯಾದಲ್ಲಿ ಅತ್ಯಾಚಾರಕ್ಕೊಳಗಾದ ಜಾಸ್ನಾ ಎಂಬ ಯುವತಿಯ ಸಂದರ್ಶನವನ್ನು ಪ್ರಕಟಿಸಿತ್ತು. ಗುಜರಾತ್ ಹತ್ಯಾಕಾಂಡ, ಮುಝಫ್ಫರ್ ನಗರ್ ಗಲಭೆ ಅಥವಾ ಇಂಥ ಇನ್ನಿತರ ಸಂದರ್ಭಗಳಲ್ಲಿ ನಾವು ಈ ಮನಸ್ಥಿತಿಯ ರೌದ್ರಾವತಾರವನ್ನು ನೋಡಿದ್ದೇವೆ. ದಂಗೆಯ ಸಂದರ್ಭದಲ್ಲಿ ಸಾಮೂಹಿಕವಾಗಿ ಕಾಣಿಸಿಕೊಳ್ಳುವ ಈ ಮನಸ್ಥಿತಿ ಸಹಜ ವಾತಾವರಣದಲ್ಲಿ ಬೇರೆಯದೇ ರೂಪದಲ್ಲಿ ಪ್ರತ್ಯಕ್ಷಗೊಳ್ಳುತ್ತದೆ. ವಿದ್ಯಾ ದಿನಕರ್‍ರನ್ನು ಬೆನ್ನಟ್ಟಿಕೊಂಡು ಬಂದಿರುವುದು ಈ ಬಗೆಯದೇ ಮನಸ್ಥಿತಿ. ಇಲ್ಲದಿದ್ದರೆ ದಿಲ್‍ವಾಲೆ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪೊಲೀಸರಿಗೆ ಅವರು ದೂರು ನೀಡಿದುದನ್ನು ಅಪರಾಧವಾಗಿ ಯಾಕೆ ಕಾಣಬೇಕು? ಓರ್ವ ಸಾಮಾನ್ಯ ನಾಗರಿಕ ಮಾಡಬಹುದಾದ ಕೆಲಸವನ್ನಷ್ಟೇ ಅವರು ಮಾಡಿದ್ದಾರೆ. ಕಾನೂನನ್ನು ಗೌರವಿಸುವ ಮತ್ತು ಅದರ ಉಲ್ಲಂಘಕರನ್ನು ತಡೆಯುವ ಹಕ್ಕು ವಿದ್ಯಾ ಎಂದಲ್ಲ ಪ್ರತಿಯೊಬ್ಬರ ಮೇಲೂ ಇದೆ. ವಿದ್ಯಾ ಆ ಹಕ್ಕನ್ನು ಚಲಾಯಿಸಿದ್ದಾರೆ. ಇದರ ಹೊರತಾಗಿ ‘ದಿಲ್‍ವಾಲೆ'ಗೆ ಅಡ್ಡಿಪಡಿಸಿದವರ ವಿರುದ್ಧವಾಗಲಿ, ಅದರ ಹಿಂದಿರಬಹುದಾದ ಶಕ್ತಿಗಳ ವಿರುದ್ಧವಾಗಲಿ ಅವರು ವೈಯಕ್ತಿಕ ಪ್ರತೀಕಾರಕ್ಕೆ ಇಳಿದಿಲ್ಲ. ಅವರನ್ನು ಆನ್‍ಲೈನ್‍ನಲ್ಲಿ ನಿಂದಿಸಿಲ್ಲ. ಜೀವ ಬೆದರಿಕೆ ಹಾಕಿಲ್ಲ. ಮಾನಹಾನಿಕರ ಹೇಳಿಕೆಯನ್ನು ಕೊಟ್ಟಿಲ್ಲ. ಹಾಗಿದ್ದರೂ, ಅವರ ವಿರುದ್ಧ ಅತ್ಯಾಚಾರದ ಬೆದರಿಕೆಗಳೇಕೆ ಬಂದುವು? ವಿದ್ಯಾರು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯನ್ನು ಕಟ್ಟಿಕೊಂಡು ಕಳೆದ ಕೆಲವು ವರ್ಷಗಳಿಂದ ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದಾರೆ. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ (MSEZ) ಯಡಿಯೂರಪ್ಪ ಸರಕಾರವು ಕರಾವಳಿಯ ಸಾವಿರಾರು ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಾಗ ‘ಕೃಷಿ ಭೂಮಿ ಸಂರಕ್ಷÀಣಾ ಸಮಿತಿ’ಯನ್ನು ರಚಿಸಿಕೊಂಡು ಹೋರಾಟದ ಕಣಕ್ಕಿಳಿದವರು ವಿದ್ಯಾ. ಅವರು ವಿಶೇಷ ಆರ್ಥಿಕ ವಲಯಕ್ಕೆ ಸೇರ್ಪಡೆಗೊಳ್ಳುವ ಕೃಷಿ ಭೂಮಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಮನೆಮನೆಗಳಿಗೆ ಭೇಟಿ ನೀಡಿದರು. ಬಜಪೆ, ಪೆರ್ಮುದೆ, ಕಳವಾರು, ಎಕ್ಕಾರು, ಶಿಬರೂರು, ಕುತ್ತೆತ್ತೂರು ಮುಂತಾದ ಪ್ರದೇಶಗಳು ಇವತ್ತು ಭೂಸ್ವಾಧೀನದಿಂದ ತಪ್ಪಿಸಿಕೊಂಡು ಉಳಿದಿದ್ದರೆ ಅದರಲ್ಲಿ ವಿದ್ಯಾರ ಪಾತ್ರ ಬಹಳ ದೊಡ್ಡದು. ಗ್ರೆಗರಿ ಪತ್ರಾವೋ ಎಂಬ ಕೃಷಿಕನನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ತಂದು ನಿಲ್ಲಿಸಿದ್ದು ಇವರ ಛಲಗಾರಿಕೆಯೇ. ಒಂದು ಹಂತದ ವರೆಗೆ ಗ್ರೆಗರಿ ಇಡೀ ಭೂಸ್ವಾಧೀನ ವಿರೋಧಿ ಹೋರಾಟದ ಐಕಾನ್ ಆಗಿ ಮೂಡಿ ಬಂದಿದ್ದರು. ಅವರು ತಮ್ಮ ಮನೆಯ ದನ-ಕರುಗಳು, ಪಾತ್ರೆ-ಪಿಂಗಾಣಿಗಳ ಸಮೇತ ಪ್ರತಿಭಟನೆಗೆ ಇಳಿದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ತನ್ನ ಭೂಮಿಯನ್ನು ಸ್ವಾಧೀನಪಡಿಸದಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಹೂಡಿದ್ದರು. ಈ ಎಲ್ಲದರ ಹಿಂದೆ ವಿದ್ಯಾರ ‘ಕೃಷಿಭೂಮಿ ಸಂರಕ್ಷಣಾ ಸಮಿತಿ’ಯ ಬಹುದೊಡ್ಡ ಪಾತ್ರ ಇದೆ. ‘ಪೇಜಾವರ ಸ್ವಾವಿೂಜಿಗಳನ್ನು ಬಳಸಿಕೊಂಡು ಯಡಿಯೂರಪ್ಪ ಸರಕಾರವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಸಬಹುದು’ ಎಂದು ಆಲೋಚಿಸಿ ಈ ಹೋರಾಟದಲ್ಲಿ ಪೇಜಾವರರು ಸೇರಿಕೊಳ್ಳುವಂತೆ ನೋಡಿಕೊಂಡರು. ಆ ಮೂಲಕ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಹೊಸ ಖದರು, ದಿಕ್ಕನ್ನು ಕೊಟ್ಟರು. ಒಂದು ರೀತಿಯಲ್ಲಿ, ಇದು ಅತ್ಯಂತ ಬುದ್ಧಿವಂತಿಕೆಯ ಹೆಜ್ಜೆಯಾಗಿತ್ತು. ಯಡಿಯೂರಪ್ಪ ಸರಕಾರವನ್ನು ಅದರ ದಾಳದಿಂದಲೇ ಮಣಿಸುವ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿತು. ಭೂಸ್ವಾಧೀನದ ಪಟ್ಟಿಯಿಂದ 2035 ಎಕರೆ ಪ್ರದೇಶವನ್ನು ಹೊರಗಿಟ್ಟು ಸರಕಾರ ಆದೇಶವನ್ನು ಹೊರಡಿಸಿತು. ಅಷ್ಟಕ್ಕೂ, ವಿದ್ಯಾರಿಗೆ ‘ಅತ್ಯಾಚಾರ'ದ ಬೆದರಿಕೆ ಹಾಕಿದವರಿಗೆ ಇದು ಗೊತ್ತಿದೆಯೋ ಇಲ್ಲವೋ ಆದರೆ ಕರಾವಳಿ ಪ್ರದೇಶದ ಮಂದಿಗೆ ಅದರಲ್ಲೂ ‘ವಿಶೇಷ ಆರ್ಥಿಕ ವಲಯ’ದೊಳಗೆ ಸೇರ್ಪಡೆಗೊಳ್ಳಬೇಕಿದ್ದ ಸಾವಿರಾರು ಎಕರೆ ಪ್ರದೇಶದ ಮಂದಿಗೆ ಇದು ಚೆನ್ನಾಗಿ ಗೊತ್ತು. ಈ ಪ್ರದೇಶ ಒಂದೊಮ್ಮೆ ‘ವಿಶೇಷ ಆರ್ಥಿಕ ವಲಯ’ದೊಳಗೆ ಸೇರ್ಪಡೆಗೊಂಡದ್ದೇ ಆಗಿದ್ದಿದ್ದರೆ ಹಲವಾರು ದೈವಸ್ಥಾನಗಳು, ಮಸೀದಿ, ಚರ್ಚ್, ದೇಗುಲಗಳು ಅಸ್ತಿತ್ವ ಕಳಕೊಳ್ಳುತ್ತಿದ್ದುವು. ಈ ಕಾರಣದಿಂದಲಾದರೂ ವಿದ್ಯಾರನ್ನು ‘ದಿಲ್‍ವಾಲೆ' ವಿರೋಧಿಗಳು ಸಹಿಸಿಕೊಳ್ಳಬಹುದಾಗಿತ್ತು ಅಥವಾ ತಮ್ಮ ಪ್ರತಿಭಟನೆಯನ್ನು ಸಭ್ಯ ರೀತಿಯಲ್ಲಿ ವ್ಯಕ್ತಪಡಿಸಬಹುದಾಗಿತ್ತು. ಆದರೆ ನಾಗರಿಕ ಸಮಾಜ ಬಯಸುವ ಸಭ್ಯತೆಯ ಸರ್ವ ಮೇರೆಯನ್ನೂ ಈ ಮಂದಿ ವಿೂರಿದ್ದಾರೆ. ವಿದ್ಯಾರ ವಿರುದ್ಧ ಅತ್ಯಂತ ಅನಾಗರಿಕ ಭಾಷೆಯನ್ನು ಬಳಸಿದ್ದಾರೆ. ಅಂದಹಾಗೆ, ವಿದ್ಯಾರ ಜಾಗದಲ್ಲಿ ಓರ್ವ ದಿನಕರ್ ಇರುತ್ತಿದ್ದರೆ ಈ ಮಟ್ಟದ ವಾಗ್ದಾಳಿ ನಡೆಯುತ್ತಿತ್ತೇ? ನಿಂದನೆ, ಮಾನಹಾನಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿತ್ತೇ? ಅತ್ಯಾಚಾರದ ಬೆದರಿಕೆಯನ್ನು ಒಡ್ಡಲಾಗುತ್ತಿತ್ತೆ ? ಆದ್ದರಿಂದಲೇ,      
       ಈ ರೇಪ್ ಕಲ್ಚರ್ ಮನಸ್ಥಿತಿಯನ್ನು ಖಂಡಿಸಬೇಕಾಗಿದೆ. ವಿದ್ಯಾರನ್ನು ಬೆಂಬಲಿಸಬೇಕಾಗಿದೆ.

Friday, December 25, 2015

ಸೈಕಿಯರ ಇಮೇಲ್ ಮತ್ತು ಸಂಪಾದಕರ ಮೌನ

       ‘ಇಂಡಿಯಾ ಟಿ.ವಿ. ಟುಡೆ’ಯ ಸಂಪಾದಕರಾದ ರಾಜ್‍ದೀಪ್ ಸರ್ದೇಸ್ಯಾ, ‘ಎನ್‍ಡಿಟಿವಿ’ಯ ಸೋನಿಯಾ ಸಿಂಗ್ ಮತ್ತು ಬರ್ಖಾದತ್, ‘ದಿ ಇಂಡಿಯನ್ ಎಕ್ಸ್ ಪ್ರೆಸ್’ನ ಉಣ್ಣಿ ರಾಜನ್ ಶಂಕರ್, ‘ಹಿಂದೂಸ್ತಾನ್ ಟೈಮ್ಸ್’ನ ಸಂಜಯ್ ನಾರಾಯಣ್ ಮತ್ತು ‘ಮಿಂಟ್’ ಪತ್ರಿಕೆಯ ಸುಕುಮಾರ್‍ರಿಗೆ ಪತ್ರಕರ್ತರಾದ ಅರ್ನಾಬ್ ಸೈಕಿಯ ಮತ್ತಿತರರು ಇತ್ತೀಚೆಗೆ ಇಮೇಲ್ ಒಂದನ್ನು ಕಳುಹಿಸಿದರು. ನಿರ್ದಿಷ್ಟ ಸುದ್ದಿ ಪ್ರಕಟಣೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೋರಿ ಕಳುಹಿಸಲಾದ ಇಮೇಲ್ ಅದು. ‘ಮಿಂಟ್’ನ ಸುಕುಮಾರ್‍ರನ್ನು ಬಿಟ್ಟರೆ ಉಳಿದಂತೆ ಯಾರೂ ಕನಿಷ್ಠ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಲಿಲ್ಲ. ಸುಕುಮಾರ್ ಅಂತೂ ‘ಹೌದು ಸುದ್ದಿ ಮಿಸ್ಸಾಗಿದೆ’ ಎಂದಷ್ಟೇ ಹೇಳಿಬಿಟ್ಟರು. ಅಷ್ಟಕ್ಕೂ, ಆ ಸುದ್ದಿಯ ಹಿಂದೆ ಒಂದು ಸ್ವಾರಸ್ಯವಿದೆ-
      1993 ಮಾರ್ಚ್. ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದುವಲ್ಲದೇ ಅಪಾರ ಸಾವು ನೋವುಗಳು ಸಂಭವಿಸಿದುವು. ಇಡೀ ಘಟನೆಯ ಹಿಂದೆ ದಾವೂದ್ ಇಬ್ರಾಹೀಮ್‍ನ ಕೈವಾಡವಿದೆಯೆಂದು ಹೇಳಲಾಯಿತು. ಪಾಕಿಸ್ತಾನದ ಕೈವಾಡವನ್ನು ಶಂಕಿಸಿ ಪತ್ರಿಕೆಗಳಲ್ಲಿ ದಿನೇ ದಿನೇ ಸುದ್ದಿಗಳು ಪ್ರಕಟವಾದುವು. ಅಲ್ಲದೇ, ಈ ಸ್ಫೋಟದಲ್ಲಿ ಭಾಗಿಯಾದವರು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದು, ಅವರಿಗೆ ಪಾಕ್ ಆಶ್ರಯ  ಒದಗಿಸಿದೆಯೆಂಬ ಮಾತುಗಳು ಬಲವಾಗಿಯೇ ಕೇಳಿಬಂದವು. ಪಾಕಿಸ್ತಾನ ಮತ್ತು ದಾವೂದ್‍ನ ವಿರುದ್ಧ ಒಂದು ಬಗೆಯ ಅಕ್ರೋಶ, ಅಸಹನೆಯು ದೇಶದೆಲ್ಲೆಡೆ ಗಟ್ಟಿಗೊಳ್ಳುತ್ತಿರುವ ಆ ಹೊತ್ತಿನಲ್ಲಿಯೇ- 1993 ಆಗಸ್ಟ್ 17ರಂದು - ಮುಂಬೈಯ ದಿ ಡೈಲಿ ಪತ್ರಿಕೆಯು ದಂಗುಬಡಿಸುವ ಸುದ್ದಿಯೊಂದನ್ನು ಪ್ರಕಟಿಸಿತು. ಸುದ್ದಿಯು ಭಾರತದ ಪ್ರಸಿದ್ಧ ಟೆಕ್ಸ್ ಟೈಲ್ಸ್ ಕಂಪೆನಿಯಾದ ಬಾಂಬೆ ಡೈಯಿಂಗ್‍ನ ಮಾಲಿಕ ನುಸ್ಲಿ ವಾಡಿಯರಿಗೆ ಸಂಬಂಧಿಸಿದ್ದು. ವಿಶೇಷ ಏನೆಂದರೆ, ಅವರು ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಮೊಮ್ಮಗರಾಗಿದ್ದರು. ಸುದ್ದಿ ಹೀಗಿದೆ:
     “ನುಸ್ಲಿ ವಾಡಿಯಾ ಪಾಕಿಸ್ತಾನದ ಗೂಢಚರರಾಗಿದ್ದು ದಾವೂದ್ ಇಬ್ರಾಹೀಮ್‍ನೊಂದಿಗೆ ಸಂಬಂಧ ಹೊಂದಿದ್ದಾರೆ. ಮಾದಕ ವಸ್ತು ಗಳ ಕಳ್ಳಸಾಗಾಣಿಕೆಯಲ್ಲಿ ಅವರು ಭಾಗಿಯಾಗಿದ್ದಾರೆ. ನೇಪಾಲದ ಬ್ಯಾಂಕೊಂದರ ಮೂಲಕ ಕಪ್ಪು ಹಣವನ್ನು ಬಿಳಿಗೊಳಿಸುವ ದೇಶದ್ರೋಹಿ ಕೃತ್ಯದಲ್ಲೂ ಅವರು ಭಾಗಿಯಾಗಿದ್ದಾರೆ. ಅಲ್ಲದೇ ಪಾಕ್ ತಾರೆ ಅನಿತಾ ಅಯ್ಯೂಬ್‍ರ ಜತೆಗೆ ಅವರಿಗೆ ನಂಟಿದೆ..”
     ‘ದಿ ಡೈಲಿ’ಯಲ್ಲಿ ಪ್ರಕಟವಾದ ಈ ಸುದ್ದಿಯು ಮರುದಿನ ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಬಾಂಬ್ ಸ್ಫೋಟದಷ್ಟೇ ಜೋರಾಗಿ ಸದ್ದು ಮಾಡಿತು. ಬಹುತೇಕ ಎಲ್ಲ ಪತ್ರಿಕೆಗಳ ಮುಖಪುಟದಿಂದ ಹಿಡಿದು ಕೊನೆಪುಟದ ವರೆಗೆ ವಿವಿಧ ಶಂಕಿತ ಮತ್ತು ಕಲ್ಪಿತ ಸುದ್ದಿಗಳು ಪ್ರಕಟವಾದುವು. ಬಾಂಬ್ ಸ್ಫೋಟದ 5 ತಿಂಗಳ ಬಳಿಕ ಸ್ಫೋಟಗೊಂಡ ಸುದ್ದಿ ಇದಾಗಿರುವುದರಿಂದ ಮಾಧ್ಯಮ ಕ್ಷೇತ್ರ ಮಾತ್ರವಲ್ಲ, ಜನರು ಕೂಡ ವಾಡಿಯಾರನ್ನು ದೇಶದ್ರೋಹಿಯಂತೆ ಕಾಣತೊಡಗಿದರು. ವೈರಿಗಳೊಂದಿಗೆ ಕಳ್ಳ ವ್ಯವಹಾರ ಇಟ್ಟುಕೊಂಡವ ಎಂಬ ಹಣೆಪಟ್ಟಿಯೊಂದು ಅವರನ್ನು ಹಿಂಬಾಲಿಸತೊಡಗಿತು. ಇದರಿಂದ ತೀವ್ರವಾಗಿ ನೊಂದುಕೊಂಡ ನುಸ್ಲಿ ವಾಡಿಯಾರು ದಿ ಡೈಲಿ ಪತ್ರಿಕೆಯ ಸಂಪಾದಕ ರಾಜೀವ್ ಕೆ. ಬಜಾಜ್, ನಿರ್ವಾಹಕ ಸಂಪಾದಕ ಫಿರೋಜ್ ದಸ್ತರ್, ಪ್ರಕಾಶಕ ಮೋಹನ್ ನಾಯಕ್‍ರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಆದರೆ, ಇದಾಗಿ 7 ವರ್ಷಗಳ ಬಳಿಕ 2000ದಲ್ಲಿ ಈ ಮೊಕದ್ದಮೆಯನ್ನು ಕೋರ್ಟು ವಜಾಗೊಳಿಸಿತು. ವಿಚಾರಣೆಯ ವೇಳೆ ನುಸ್ಲಿ ವಾಡಿಯಾ ಹಾಜರಾಗಲಿಲ್ಲವೆಂಬುದನ್ನು ಕೋರ್ಟು ಇದಕ್ಕೆ ಸಮರ್ಥನೆಯಾಗಿ ಕೊಟ್ಟಿತು. ನಿಜವಾಗಿ, ಇಡೀ ಪ್ರಕರಣ ಇಲ್ಲಿಗೇ ಮುಗಿದು ಬಿಡಬೇಕಿತ್ತು. ಆದರೆ ಮೊನ್ನೆ, 2015 ನವಂಬರ್‍ನಲ್ಲಿ ಮುಂಬೈ ಹೈಕೋರ್ಟ್ ಆ ತೀರ್ಪನ್ನೇ ರದ್ದುಗೊಳಿಸಿತಲ್ಲದೇ ಪ್ರಕರಣವನ್ನು ಮತ್ತೆ ಮರು ವಿಚಾರಣೆಗೆ ಎತ್ತಿಕೊಂಡಿತು. ಮಾತ್ರವಲ್ಲ, ಒಂದು ವರ್ಷದೊಳಗೆ ತೀರ್ಪು ಬರಬೇಕೆಂಬ ಗಡುವನ್ನೂ ವಿಧಿಸಿತು. ನಿಜವಾಗಿ, ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಗುವುದೇ ಈ ಬೆಳವಣಿಗೆಯ ನಂತರ. ಪ್ರಕರಣವನ್ನು ಮರು ವಿಚಾರಣೆಗೆ ಕೋರ್ಟ್ ಎತ್ತಿಕೊಂಡ ಬಳಿಕ ದಿ ಡೈಲಿಯ ಅಂದಿನ ಸಂಪಾದಕ ರಾಜೀವ್ ಕೆ. ಬಜಾಜ್ ರು  ಹೈಕೋರ್ಟ್‍ಗೆ ಅಫಿದವಿತನ್ನು ಸಲ್ಲಿಸಿದರು. ಆ ಅಫಿದವಿತ್‍ನಲ್ಲಿ ಆ ಸುದ್ದಿ ಪ್ರಕಟಣೆಯ ಹಿಂದಿನ ಕಾರಣಗಳು, ಒತ್ತಡಗಳು ಮತ್ತು ದೊಡ್ಡವರ ರಹಸ್ಯ ವ್ಯವಹಾರಗಳನ್ನು ಕೋರ್ಟ್‍ನ ಮುಂದಿಟ್ಟರು. ಆ ಕಾಲದಲ್ಲಿ ಧೀರೂಭಾಯಿ ಅಂಬಾನಿ ಮತ್ತು ನುಸ್ಲಿ ವಾಡಿಯಾರ ನಡುವೆ ತೀವ್ರ ಸ್ಪರ್ಧೆಯಿತ್ತು. ಭಾರತದ ಪ್ರಮುಖ ಕಾರ್ಪೋರೇಟ್ ದೊರೆಗಳಾಗಿದ್ದ ಇವರಿಬ್ಬರೂ ಪರಸ್ಪರರನ್ನು ಮಣಿಸುವುದಕ್ಕಾಗಿ ತಂತ್ರಗಳನ್ನು ಹೆಣೆಯುತ್ತಿದ್ದರು. ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಾಪಿಸುವುದು ಇವರಿಬ್ಬರ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂಬಾನಿಯವರ ರಿಲಯನ್ಸ್ ಕಂಪೆನಿಯು ದಿ ಡೈಲಿ ಪತ್ರಿಕೆಯ ಮಾಲಿಕ ಕಮಲ್ ಮೊರಾರ್ಕರನ್ನು ಸಂಪರ್ಕಿಸಿತು. ವ್ಯವಹಾರ ಕುದುರಿಸಿತು. ಅದರ ಭಾಗವಾಗಿಯೇ ನುಸ್ಲಿ ವಾಡಿಯರ ವಿರುದ್ಧದ ಈ ಸುದ್ದಿ (ಪಾವತಿ ಸುದ್ದಿ) ಪ್ರಕಟವಾಯಿತು. ಈ ಸುದ್ದಿ ಪ್ರಕಟಣೆಯಿಂದ ಅಂಬಾನಿ ಎಷ್ಟು ಖುಷಿಗೊಂಡರೆಂದರೆ ಸಂಪಾದಕರಾದ ರಾಜೀವ್ ಕೆ. ಬಜಾಜ್‍ರನ್ನು ತನ್ನಲ್ಲಿಗೆ ಕರೆಸಿ ಕೊಂಡು ಅಭಿನಂದಿಸಿದರು...’ ಮುಂತಾದ ದಂಗುಬಡಿಸುವ ಸುದ್ದಿಗಳು ಮೊನ್ನೆ ಬಜಾಜ್ ಸಲ್ಲಿಸಿದ ಅಫಿದವಿತ್‍ನಲ್ಲಿದೆ. ವಿಶೇಷ ಏನೆಂದರೆ, ಈ ಅಫಿದವಿತ್‍ನ ಬಗ್ಗೆ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯನ್ನು ಬಿಟ್ಟರೆ ಉಳಿದಂತೆ ಇನ್ನಾವ ಪ್ರಮುಖ ಪತ್ರಿಕೆಗಳೂ ಸುದ್ದಿಯನ್ನೇ ಪ್ರಕಟಿಸಲಿಲ್ಲ. ಆದರೂ, Rajiv K Bajaj, affidavit in Bombay HC reviws memories of famous corporate battles of Nusli Wadia (ನುಸ್ಲಿ ವಾಡಿಯಾರ ಪ್ರಸಿದ್ಧ ಕಾರ್ಪೋರೇಟ್ ಸಂಘರ್ಷವನ್ನು ನೆನಪಿಸಿದ ಬಜಾಜ್‍ರ ಅಫಿದವಿತ್) ಎಂಬ ಶೀರ್ಷಿಕೆಯಲ್ಲಿ ನವಂಬರ್ 23ರಂದು ಎಕನಾಮಿಕ್ಸ್ ಟೈಮ್ಸ್ ಪ್ರಕಟಿಸಿದ ಸುದ್ದಿಯಂತೂ ಮುಂಬೈ ಆವೃತ್ತಿಗೆ ಮಾತ್ರ ಸೀಮಿತವಾಗಿತ್ತು. ಅಲ್ಲದೇ ಆ ಬಳಿಕ ಈ ಸುದ್ದಿಯ ವಿಶ್ಲೇಷಣೆಯಾಗಲಿ, ಫಾಲೋವಪ್ ಸುದ್ದಿಯಾಗಲಿ ಏನೂ ಪ್ರಕಟವಾಗಲಿಲ್ಲ. ಉಳಿದ ಪತ್ರಿಕೆ ಮತ್ತು ಚಾನೆಲ್‍ಗಳ ಅವಸ್ಥೆಯಂತೂ ತೀರಾ ಗಂಭೀರ. ಅವೆಲ್ಲ ಇಂಥದ್ದೊಂದು ಅಫಿದವಿತ್ ಸಲ್ಲಿಕೆಯಾಗಲಿಲ್ಲವೇನೋ ಎಂಬಂತೆ ವರ್ತಿಸಿದುವು. ಪ್ರಮುಖ ಚಾನೆಲ್‍ಗಳು ಮತ್ತು ಪತ್ರಿಕೆಗಳ ವೆಬ್‍ಸೈಟ್‍ಗಳಲ್ಲಿ ಈ ಬಗ್ಗೆ ಯಾವ ವಿವರವೂ ಇಲ್ಲ. ನಿಜವಾಗಿ, ಭ್ರಷ್ಟಾಚಾರದ ವಿರುದ್ಧ ಜನಧ್ರುವೀಕರಣದಲ್ಲಿ ದೊಡ್ಡದೊಂದು ಪಾತ್ರವನ್ನು ನಿರ್ವಹಿಸಿದ್ದೇ ಮಾಧ್ಯಮಗಳು. ಅಣ್ಣಾ ಹಜಾರೆಯವರ ಲೋಕಪಾಲ್ ಚಳವಳಿ ‘ಜನರ ಚಳವಳಿಯಾದದ್ದು’ ಮಾಧ್ಯಮ ಕೃಪೆಯಿಂದಲೇ. ಅದಾಗ್ಯೂ 2010ರಲ್ಲಿ ಜೋರಾಗಿ ಕೇಳಿ ಬಂದ ಪಾವತಿ ಸುದ್ದಿ(Paid News)ಯು ಮಾಧ್ಯಮಗಳ ವಿಶ್ವಾಸಾರ್ಹತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್‍ರು ಮಾಧ್ಯಮಗಳಿಗೆ ಹಣ ನೀಡಿ ತಮ್ಮ ಪರವಾದ ಅಭಿವೃದ್ಧಿ ವರದಿಗಳು ಬರುವಂತೆ ನೋಡಿಕೊಂಡಿದ್ದರು ಎಂಬ ಆರೋಪವೂ  ಬಂದಿತ್ತು. 2009ರಿಂದ 13ರ ನಡುವೆ ರಾಜಕಾರಣಿಗಳಿಗೆ ಸಂಬಂಧಿಸಿ ಸುಮಾರು 1,400 ಪಾವತಿ ಸುದ್ದಿಗಳು ಪ್ರಕಟವಾಗಿವೆ ಎಂಬ ದೂರುಗಳು ಚುನಾವಣಾ ಆಯೋಗಕ್ಕೆ ಬಂದಿವೆ. ಜಿಂದಾಲ್ ಕಂಪೆನಿಯು ಈ ಹಿಂದೆ ಝೀ ನ್ಯೂಸ್‍ನ ವಿರುದ್ಧ ಬ್ಲ್ಯಾಕ್‍ಮೇಲ್ ಆರೋಪವನ್ನು ಹೊರಿಸಿತ್ತು. ಮಾತ್ರವಲ್ಲ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಪರಾಂಜಯ್ ಗುಹಾ ತಾಕುರ್ತಾ ಮತ್ತು ಶ್ರೀನಿವಾಸ್ ರೆಡ್ಡಿ ನೇತೃತ್ವದಲ್ಲಿ 2009 ಜೂನ್ 9ರಂದು ಪಾವತಿ ಸುದ್ದಿಯ ಕುರಿತಂತೆ ಉಪಸಮಿತಿಯನ್ನು ರಚಿಸಿತ್ತು. 2010 ಜುಲೈಯಲ್ಲಿ ಈ ಸಮಿತಿಯು ತನ್ನ ವರದಿಯನ್ನು ಪ್ರೆಸ್ ಕೌನ್ಸಿಲ್‍ಗೆ ಸಲ್ಲಿಸಿದ್ದು ಮತ್ತು ಆ ಬಗ್ಗೆ ಮಾಧ್ಯಮ ಪ್ರಮುಖರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಎಲ್ಲವೂ ನಡೆದಿತ್ತು. ಇಷ್ಟಿದ್ದೂ, ರಾಜೀವ್ ಬಜಾಜ್‍ರ ಅಫಿದವಿತ್‍ನ ಬಗ್ಗೆ ಮಾಧ್ಯಮಗಳೇಕೆ ಈ ಮಟ್ಟದಲ್ಲಿ ಮೌನವಹಿಸಿದುವು? ಭ್ರಷ್ಟಾಚಾರದ ಬಗ್ಗೆ ಅದರಲ್ಲೂ ಮಾಧ್ಯಮ ಭ್ರಷ್ಟಾಚಾರದ (ಪಾವತಿ ಸುದ್ದಿ) ಬಗ್ಗೆ ಏರು ದನಿಯಲ್ಲಿ ಮಾತಾಡಿದ ಮಾಧ್ಯಮಗಳೆಲ್ಲ ಈ ಅಫಿದವಿತ್‍ಗೆ ಒಂದು ಸುದ್ದಿಯಾಗುವ ಅರ್ಹತೆಯನ್ನು ನೀಡಲಿಲ್ಲವೇಕೆ? ಅಫಿದವಿತ್‍ನಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂಬುದನ್ನು ವಿಶ್ಲೇಷಿಸುವುದಕ್ಕಾದರೂ ಸುದ್ದಿ ಪ್ರಕಟಣೆ ಅಗತ್ಯವಾಗಿತ್ತಲ್ಲವೇ? ಎಕನಾಮಿಕ್ಸ್ ಟೈಮ್ಸ್ ಅನ್ನು (ಮುಂಬೈ ಆವೃತ್ತಿ) ಹೊರತು ಪಡಿಸಿದಂತೆ ಉಳಿದೆಲ್ಲಾ ಪತ್ರಿಕೆ-ಚಾನೆಲ್‍ಗಳು ಮೌನಕ್ಕೆ ಜಾರಿದ್ದು ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವೋ?
    ಅರ್ನಾಬ್ ಸೈಕಿಯಾ ಮತ್ತಿತರ ಪತ್ರಕರ್ತರ ಅನುಮಾನ ಇದುವೇ ಆಗಿತ್ತು. ಆದ್ದರಿಂದಲೇ ಸ್ಪಷ್ಟೀಕರಣ ಕೋರಿ ಮಾಧ್ಯಮ ಕ್ಷೇತ್ರದ ಪ್ರಮುಖರಿಗೆ ಅವರು ಇಮೇಲ್ ಮಾಡಿದ್ದರು. ಹಾಗಂತ,
      ಇವತ್ತಿರುವುದು 1993ರ ಅಂಬಾನಿಯಲ್ಲವಲ್ಲ. 1993ರಲ್ಲಿ ಪತ್ರಿಕೆಗಳ ಮುಖಪುಟದಿಂದ ಕೊನೆಪುಟದ ತನಕ ಆವರಿಸಿಕೊಳ್ಳುವಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದ ಸುದ್ದಿಯೊಂದು ಇವತ್ತು ಸುದ್ದಿಯಾಗುವ ಮಹತ್ವವನ್ನೇ ಪಡಕೊಳ್ಳುವುದಿಲ್ಲ ಎಂದರೆ ಅದಕ್ಕೆ ಕಾರಣ ಅಂಬಾನಿ ಸಾಮ್ರಾಜ್ಯ. ಧೀರೂಭಾಯಿ ಅಂಬಾನಿಯವರ ಸಾಮ್ರಾಜ್ಯ ಇವತ್ತು ಮಕ್ಕಳಾದ ಅನಿಲ್ ಮತ್ತು ಮುಖೇಶ್‍ರಲ್ಲಿ ವಿಭಜನೆಗೊಂಡಿದೆ. ಈ ವಿಭಜನೆಯಿಂದ ಅವರ ಉದ್ಯಮಕ್ಕೆ ಲಾಭವಾಗಿದೆಯೋ ಇಲ್ಲವೋ ಆದರೆ ಮಾಧ್ಯಮ ಕ್ಷೇತ್ರಕ್ಕಂತೂ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಇವತ್ತು ‘ಮೋದಿ ಇಲ್ಲವೇ ಸೋನಿಯಾರ ವಿರುದ್ಧ ಬರೆಯ ಬಹುದು, ಆದರೆ ಅಂಬಾನಿಗಳ ವಿರುದ್ಧ ಸಾಧ್ಯವಿಲ್ಲ’ ಎಂಬೊಂದು ವಾತಾವರಣ ಪ್ರಮುಖ ಮಾಧ್ಯಮಗಳ ಮಟ್ಟಿಗೆ ಸತ್ಯವಾಗುತ್ತಿದೆ. ಮುಖೇಶ್ ಮತ್ತು ಅನಿಲ್ ಅಂಬಾನಿಗಳು ಇವತ್ತು ಮಾಧ್ಯಮ ಕ್ಷೇತ್ರವನ್ನು ಬಹುತೇಕ ಆಳುತ್ತಿದ್ದಾರೆ. ಮುಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(RIL) ಸಂಸ್ಥೆಯು ‘ನೆಟ್‍ವರ್ಕ್ 18’ ಎಂಬ ಮಾಧ್ಯಮ ಸಮೂಹ ಸಂಸ್ಥೆಯನ್ನು ನಿಯಂತ್ರಿಸುತ್ತಿದೆ. ಈಟಿ.ವಿ.ಯ ನಿಯಂತ್ರಣವೂ ಅದರದೇ. ಎನ್‍ಡಿಟಿವಿಯೂ ಅದರ ಪಾಲಾಗಿದೆ. ಅನಿಲ್ ಒಡೆತನದ ಅನಿಲ್ ಧೀರೂಭಾಯಿ ಅಂಬಾನಿ ಸಂಸ್ಥೆಯು ಹಿಂದೂಸ್ತಾನ್ ಟೈಮ್ಸ್ ಮತ್ತು ಮಿಂಟ್ ಪತ್ರಿಕೆಗಳ ನಿಯಂತ್ರಣವನ್ನು ಹೊಂದಿದೆ.
ಜೊತೆಗೆ ಟಿ.ವಿ. ಟುಡೇ ಗುಂಪಿನ ಒಡೆತನವೂ ಅದರದ್ದೇ. ಹೀಗಿರುತ್ತಾ, ರಾಜೀವ್ ಬಜಾಜ್‍ರ ಅಫಿದವಿತ್ ಸುದ್ದಿಯಾಗುವುದಾದರೂ ಹೇಗೆ? ನಿಜವಾಗಿ, ನಾವಿಲ್ಲಿ ಆತಂಕ ಪಡಬೇಕಾದುದು ಒಂದು ಅಫಿದವಿತ್‍ನ ಬಗ್ಗೆ ಅಲ್ಲ. ಮಾಧ್ಯಮ ಕ್ಷೇತ್ರದ ಮೇಲೆ ಕಾರ್ಪೋರೇಟ್ ದೊರೆಗಳು ಪಡೆಯುವ ಪ್ರಾಬಲ್ಯ ಮತ್ತು ಅದರಿಂದಾಗಿ ಎದುರಾಗುವ ಅಪಾಯಗಳ ಬಗ್ಗೆ. ಅಂಬಾನಿ ಗುಂಪಿನ ಸುದ್ದಿಯನ್ನು ಅಡಗಿಸಿಟ್ಟ ಮಾಧ್ಯಮಗಳು ನಾಳೆ ಇನ್ನೊಬ್ಬ ಕಾರ್ಪೋರೇಟ್‍ನ ಸುದ್ದಿಯನ್ನೂ ಅಡಗಿಸಬಹುದು. ಇಂಥ ಸ್ಥಿತಿಯಲ್ಲಿ ಮಾಧ್ಯಮಗಳು ಎಷ್ಟು ಪರಿಣಾಮ ಕಾರಿ? ಕಾರ್ಪೋರೇಟ್ ಒಡೆತನಕ್ಕೆ ಮಾಧ್ಯಮ ಕ್ಷೇತ್ರ ಸಿಲುಕುವುದರಿಂದ ಆಗುವ ಪರಿಣಾಮಗಳು ಏನೇನು? ಹೀಗಿರುತ್ತಾ ಮಾಧ್ಯಮ ರಂಗವು ಪ್ರಜಾತಂತ್ರಕ್ಕೆ ಕಾವಲು ನಿಲ್ಲಬಹುದೇ ಅಥವಾ ತನಿಖಾ ಬರಹ, ಸುದ್ದಿ ವಿಶ್ಲೇಷಣೆ, ಸತ್ಯದ ಹುಡುಕಾಟಗಳೆಲ್ಲ ಮಾಧ್ಯಮ ಕ್ಷೇತ್ರಕ್ಕೆ ವಿದಾಯ ಹೇಳಬಹುದೇ ಅಥವಾ ಅಧಿಕ ಮನರಂಜನೆ ಮತ್ತು ಸ್ವಲ್ಪ ನ್ಯೂಸ್ ಎಂಬಲ್ಲಿಗೆ ಮಾಧ್ಯಮ ಕ್ಷೇತ್ರ ಬಂದು ಮುಟ್ಟಬಹುದೇ?
        ಕಾರ್ಪೋರೇಟ್ ಒಲವಿನ ನರೇಂದ್ರ ಮೋದಿಯವರು ಪ್ರಧಾನಿಯಾಗಿರುವ ಈ ಹೊತ್ತಿನಲ್ಲಿ ಇಂಥ ಅನುಮಾನಗಳು ಇನ್ನಷ್ಟು ಬಲ ಪಡೆಯುತ್ತವೆ.  

Tuesday, December 1, 2015

ಎಲ್‍ಕೆಜಿ ಬಸ್‍ನಿಂದ ಕಂಪೆನಿ ಬಸ್‍ನವರೆಗೆ..

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಇನ್ಫೋಸಿಸ್
ವಿಪ್ರೊ
ಹೆಚ್‍ಸಿಎಲ್ ಟೆಕ್ನಾಲಜೀಸ್
ಟೆಕ್ ಮಹೀಂದ್ರಾ
ಎಸ್ಸಾರ್ ಗ್ರೂಪ್
        ಮುಂತಾದ ಪ್ರಮುಖ ಕಂಪೆನಿಗಳಲ್ಲಿರುವ ಉದ್ಯೋಗಾವಕಾಶಗಳು, ವರ್ಷಂಪ್ರತಿ ಇವು ಪಡೆಯುತ್ತಿರುವ ನಿವ್ವಳ ಲಾಭ ಮತ್ತು ತಮ್ಮಲ್ಲಿನ ಉದ್ಯೋಗಿಗಳಿಗೆ ಈ ಕಂಪೆನಿಗಳು ಕೊಡುತ್ತಿರುವ ವೇತನ.. ಮುಂತಾದುವುಗಳನ್ನು ಲೆಕ್ಕ ಹಾಕಿಕೊಂಡು, ಆ ಉದ್ಯೋಗಿಗಳಲ್ಲಿ ಓರ್ವನಾ/ಳಾಗುವ ಕನಸಿನೊಂದಿಗೆ ಕಲಿಯುತ್ತಿರುವ ಮಗುವಿಗೂ ಈ ಸಮಾಜಕ್ಕೂ ಯಾವ ಬಗೆಯ ಸಂಬಂಧ ಇರಬಹುದು ಅಥವಾ ಬರೇ ಅದಾನಿ, ಬಜಾಜ್, ಆದಿತ್ಯ ಬಿರ್ಲಾ, ಅಂಬಾನಿ, ಎಬಿಸಿ ಗ್ರೂಪ್.. ಇತ್ಯಾದಿಗಳಲ್ಲಿ ಉದ್ಯೋಗಿ ಯಾಗುವುದನ್ನೇ ಗುರಿಯಾಗಿಟ್ಟುಕೊಂಡ ವಿದ್ಯಾರ್ಜನೆಯಿಂದ ಸಮಾಜ ಏನನ್ನು ನಿರೀಕ್ಷಿಸಬಹುದು? ಶಿಕ್ಷಣದ ಗುರಿ ಉದ್ಯೋಗವಷ್ಟೇ ಅಲ್ಲ, ಆಗಬಾರದು ಕೂಡ. ಸಮಾಜದ ಭಾವನೆಗಳಿಗೆ ಸ್ಪಂದಿಸುವ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ವಿಶಾಲ ಗುಣವನ್ನೂ ಅದು ಹೊಂದಿರಬೇಕು. ಒಂದೆಡೆ, ಅಸಹಿಷ್ಣುತೆಯ ವಾತಾವರಣ ಬಲ ಪಡೆಯುತ್ತಿದೆ. ಇಲ್ಲಿ ಇರಬೇಕಾದವರನ್ನು ಮತ್ತು ದೇಶ ಬಿಟ್ಟು ಹೋಗಬೇಕಾದವರನ್ನು ಪಟ್ಟಿ ಮಾಡಲಾಗುತ್ತಿದೆ. ಇನ್ನೊಂದೆಡೆ, ಈ ಬೆಳವಣಿಗೆಯ ಯಾವ ಹಂಗೂ ಇಲ್ಲದೇ ಭ್ರಷ್ಟಾಚಾರ, ಅತ್ಯಾಚಾರ, ದರೋಡೆಗಳು ಸರಾಗವಾಗಿ ನೆರವೇರುತ್ತಿವೆ. ಬಡತನ, ವೃದ್ಧಾಶ್ರಮ, ರೋಗ-ರುಜಿನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿವೆ. ಹಾಗಂತ, ಒಂದು ಶಾಲೆಗೆ ಅಥವಾ ಕಾಲೇಜಿಗೆ ನೇರವಾಗಿ ಇವುಗಳೊಂದಿಗೆ ಸಂಬಂಧ ಇಲ್ಲದೇ ಇರಬಹುದು. ಸರಕಾರ ನಿಗದಿಪಡಿಸಿದ ಪಠ್ಯಗಳನ್ನು ತಾವು ಕಲಿಸುತ್ತಿದ್ದೇವೆ ಎಂದು ಅವು ಸಮರ್ಥಿಸಿಕೊಳ್ಳಬಹುದು. ವಿದ್ಯಾರ್ಥಿಯೋರ್ವ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆಯಾಗುವುದನ್ನೇ ಹೆತ್ತವರು ಬಯಸುತ್ತಾರೆ ಎಂದೂ ಹೇಳಬಹುದು. ಇವೆಲ್ಲ ನಿಜವೇ. ಆದರೆ, ಇದು ಕಲಿಕೆಯ ಸರಿಯಾದ ವಿಧಾನವೇ? ಪಠ್ಯ ಮತ್ತು ರಾಂಕ್ ಗಳಾಚೆಗೆ ಒಂದು ಮಗುವನ್ನು ಎಳೆದು ತರಬೇಕಾದ ಅಗತ್ಯ ಇಲ್ಲವೇ? ಪಠ್ಯಗಳ ಹೊರಗೊಂದು ವಿಶಾಲ ಜಗತ್ತಿದೆ. ಆ ಜಗತ್ತಿನಲ್ಲಿ ಪಠ್ಯಗಳು ಹೇಳದ ಹಸಿವು ಇದೆ, ಕಣ್ಣೀರು ಇದೆ, ಮೋಜು ಇದೆ. ಸಹಿಷ್ಣುತೆಯೂ ಅಸಹಿಷ್ಣುತೆಯೂ ಇದೆ. ನೈತಿಕವೂ ಅನೈತಿಕವೂ ಆದ ಬೆರಗಿನ ಲೋಕವಿದೆ. ಸಾಹಿತ್ಯ ಕೃತಿಗಳಿವೆ. ಬದುಕನ್ನೇ ಅಲುಗಾಡಿಸುವ ಕತೆ-ಕಾದಂಬರಿಗಳಿವೆ.. ಇವುಗಳನ್ನೆಲ್ಲಾ ಗಮನಿಸುವ ಮತ್ತು ಸೂಕ್ಷ್ಮವಾಗಿ ಅವಲೋಕಿಸುವ ಸಂದರ್ಭವನ್ನು ನಮ್ಮ ಕ್ಲಾಸ್ ರೂಂಗಳು ಎಷ್ಟರ ಮಟ್ಟಿಗೆ ಒದಗಿಸುತ್ತಿವೆ? ಈ ಕುರಿತಂತೆ ಏನೆಲ್ಲ ಕಾರ್ಯಕ್ರಮಗಳನ್ನು ನಮ್ಮ ಶಾಲಾ-ಕಾಲೇಜುಗಳು ಇವತ್ತು ಹಮ್ಮಿಕೊಳ್ಳುತ್ತಿವೆ? ಸಮಾಜದ ಅಭಿವೃದ್ಧಿಯ ಬಗ್ಗೆ ಒಂದು ಮಗು ಮಾತಾಡಬೇಕಾದರೆ ಸಾಮಾಜಿಕ ಬದುಕನ್ನು ಅದು ಕಂಡಿರಬೇಕು ಅಥವಾ ಅನುಭವಿಸಿರಬೇಕು. ಹಾಗಂತ, ಹಸಿವನ್ನೇ ಕಾಣದ ವ್ಯಕ್ತಿ ಹಸಿವಿನ ಅಂತರಾತ್ಮದ ಬಗ್ಗೆ ಮಾತಾಡಲಾರ ಎಂದೇನಿಲ್ಲ. ಒಂದೊಮ್ಮೆ, ಹಸಿವನ್ನೇ ಉಂಡು ಬೆಳೆದವನಿಗಿಂತಲೂ ಚೆನ್ನಾಗಿ ಮತ್ತು ಆದ್ರ್ರವಾಗಿ ಮಾತಾಡಲೂ ಆ ವ್ಯಕ್ತಿಯಿಂದ ಸಾಧ್ಯವಾಗ ಬಹುದು. ಅದು ಹೇಗೆಂದರೆ, ಪಠ್ಯಗಳಾಚೆಗೆ ಬಂದು ಸಮಾಜವನ್ನು ನೋಡುವುದರಿಂದ ಮತ್ತು ಅನುಭವಿಸುವುದರಿಂದ. ಆದರೆ, ಇವತ್ತು ರಾಂಕ್ ಮತ್ತು ಉದ್ಯೋಗ ಆಧಾರಿತ ಶಿಕ್ಷಣ ಕ್ರಮಗಳಿಂದಾಗಿ ಬಹುತೇಕ ಎರಡು ಪ್ರಪಂಚಗಳೇ ನಿರ್ಮಾಣವಾದಂತೆ ಕಾಣುತ್ತಿದೆ. ಒಂದು ಗುಂಪು ಸಮಾಜದ ಆಗು-ಹೋಗುಗಳಿಂದ ಸಂಪೂರ್ಣ ದೂರವಿದ್ದುಕೊಂಡು ಬದುಕುತ್ತಿರುವಾಗ ಇನ್ನೊಂದು ಗುಂಪು ಸಮಾಜದ ನೆಮ್ಮದಿಯನ್ನು ಕೆಡಿಸುವಲ್ಲಿ ತೊಡಗಿಸಿಕೊಂಡಿದೆ. ಒಂದು ಗುಂಪಿನ ಎಲ್‍ಕೆಜಿ ಆರಂಭವಾಗುವುದೇ ಶಾಲಾ ಬಸ್‍ನ ಮೂಲಕ. ಕಲಿಕೆಯು ಕೊನೆಗೊಂಡ ಬಳಿಕ ಬದುಕು ಇನ್ನೊಂದು ಬಸ್‍ಗೆ ಬದಲಾಗುತ್ತದೆ. ಅದು ಕಂಪೆನಿಯ ಬಸ್. ದುಬಾರಿ ಫೀಸು, ಹೈಫೈ ಎನ್ನಬಹುದಾದ ಕ್ಯಾಂಪಸ್ಸು, ಕಾಲೇಜು, ಕಲಿಕಾ ಸೌಲಭ್ಯಗಳು.. ಇತ್ಯಾದಿಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಯೋರ್ವ ಹೊರಬರುವಾಗ ದುಡ್ಡಿನ ದೊಡ್ಡದೊಂದು ಮೂಟೆಯನ್ನೇ ಅಲ್ಲಿಗೆ ಕೊಟ್ಟಿರುತ್ತಾನೆ/ಳೆ. ಆತ ಅಲ್ಲಿಂದ ಹೊರ ಬರುವುದೇ ಆ ಮೂಟೆಯನ್ನು ಮರಳಿ ಸಮಾಜದಿಂದ ಪಡೆಯಲಿಕ್ಕಾಗಿ. ಆತ ಸಾಲ ಮಾಡಿರಬಹುದು. ಮನೆ ಅಡವು ಇಟ್ಟಿರಬಹುದು ಅಥವಾ ಕಾಲೇಜಿನ ಬೇಡಿಕೆಯನ್ನು ಪೂರೈಸಲು ಇನ್ನೇನೋ ಮಾಡಿರಬಹುದು. ಅದನ್ನು ಸರಿದೂಗಿಸಬೇಕಾದರೆ ಸಮಾಜದಿಂದ ಕಿತ್ತುಕೊಳ್ಳಲೇಬೇಕು. ತ್ಯಾಗ, ಸೇವೆ ಮುಂತಾದ ಮಾನವೀಯ ಪದಗಳು ಸಂಘರ್ಷಕ್ಕೆ ಒಳಗಾಗುವುದೇ ಇಲ್ಲಿ. ಶಿಕ್ಷಣವನ್ನು ಈ ಸಂಘರ್ಷದಿಂದ ಹೊರ ತಂದು ಸುಲಭಗೊಳಿಸಲು ಏನೇನು ಮಾಡಬಹುದು? ಹಾಗಂತ, ಇಲ್ಲಿನ ಸಮಸ್ಯೆಯನ್ನು ಇಷ್ಟಕ್ಕೇ ಸೀಮಿತಗೊಳಿಸಿ ಅಥವಾ ಈ ಮಟ್ಟಕ್ಕೆ ಸರಳಗೊಳಿಸಿ ವ್ಯಾಖ್ಯಾನಿಸುವುದೂ ತಪ್ಪು. ಸಾಮಾಜಿಕ ಕಳಕಳಿ ಎಂಬುದಕ್ಕೆ ಭಿನ್ನ ಮುಖ ಇದೆ. ವೈದ್ಯನಾದವನಲ್ಲಿ ತ್ಯಾಗ ಮತ್ತು ಜನಸೇವೆಯ ಗುಣ ಇರಬೇಕು ಎಂದು ಒಂದು ಕಡೆ ವಾದಿಸುವಾಗ ಇನ್ನೊಂದು ಕಡೆ, ಆ ತ್ಯಾಗ ಮತ್ತು ಸೇವಾ ಮನೋಭಾವವನ್ನು ಆತ/ಕೆಯಲ್ಲಿ ಬೆಳೆಸಲು ಕಲಿಕಾ ಹಂತದಲ್ಲಿ ಏನೇನು ಪ್ರಯತ್ನಗಳಾಗಿವೆ ಎಂಬುದನ್ನೂ ನೋಡಬೇಕಾಗುತ್ತದೆ. ಇವತ್ತಿನ ಕಲಿಕಾ ನೀತಿ ಎಷ್ಟು ಸ್ವರಕ್ಷಣಾ ರೀತಿಯಲ್ಲಿದೆಯೆಂದರೆ, ಪರೀಕ್ಷೆಯಲ್ಲಿ ಗೆಲ್ಲುವುದನ್ನೇ ಪ್ರಮುಖ ಗುರಿಯಾಗಿಸಲಾಗಿದೆ. ಪಠ್ಯೇತರ ಚಟುವಟಿಕೆಗಳೆಂಬುದು ತೀರಾ ತೀರಾ ನಗಣ್ಯವಾಗುತ್ತಾ ಬರುತ್ತಿದೆ. ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಯಬೇಕೆಂದರೆ NSSನಂತಹ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಪಾಲುಗೊಳಿಸಬೇಕು. ಸಮಾಜದ ಬದುಕನ್ನು ಹತ್ತಿರದಿಂದ ಕಂಡು, ಅನುಭವಿಸಿ ಸಮಾಜದೊಂದಿಗೆ ಸೇರಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು. ರೋಗಿಗಳೊಂದಿಗೆ ಸಂವಾದ ನಡೆಸುವಂತಹ ವಾತಾವರಣ ಬೆಳೆಯಬೇಕು. ವೃದ್ಧಾಶ್ರಮಕ್ಕೆ ಭೇಟಿ, ಆಸ್ಪತ್ರೆ ಭೇಟಿ, ಕೊಳೆಗೇರಿ ಪ್ರಯಾಣ.. ಸಹಿತ ಪಠ್ಯೇತರ ಜಗತ್ತನ್ನು ದರ್ಶಿಸುವ ಸಂದರ್ಭಗಳನ್ನು ಮಕ್ಕಳಿಗೆ ನಿರ್ಮಿಸಿಕೊಡಬೇಕು. ಸರಳ ಜೀವನ ಕ್ರಮವನ್ನು ಪರಿಚಯಿಸಬೇಕು. ದುರಂತ ಏನೆಂದರೆ, ಪಠ್ಯಕ್ಕಿಂತ ಹೊರತಾದ ವಿಷಯಗಳಲ್ಲಿ ಮಕ್ಕಳನ್ನು ತೊಡಗಿಸಲು ಸಮಯವೇ ಸಿಗದಷ್ಟು ಪಠ್ಯಗಳು ಭಾರವಾಗಿ ಬಿಟ್ಟಿವೆ. ವರ್ಷ ಮುಗಿಯುವಾಗ ಪಠ್ಯಗಳನ್ನೇ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಬರುತ್ತಿದೆ. ಅಲ್ಲದೇ ಒಮ್ಮೆ ಸಿಲೆಬಸ್ ಅನ್ನು ಪಾಠ ಮಾಡಿ ಮುಗಿಸಿದರೂ ಮರು ಅವಲೋಕನಕ್ಕೆ ಸಮಯ ವಿೂಸಲಿಡಲೇಬೇಕಾದ ಮತ್ತು ಹೆಚ್ಚು ಅಂಕ ಪಡೆಯುವುದಕ್ಕೆ ಶ್ರಮಿಸಲೇ ಬೇಕಾದ ಒತ್ತಡ ಆಡಳಿತ ಮಂಡಳಿ ಹಾಗೂ ಹೆತ್ತವರ ಕಡೆಯಿಂದ ಸದಾ ಬರುತ್ತದೆ. ಇದರ ಅಡ್ಡ ಪರಿಣಾಮಕ್ಕೆ ಗುರಿಯಾಗುವುದು ನೇರವಾಗಿ ಮಕ್ಕಳು. ಅವು ಪ್ರಾಯೋಗಿಕ ಅನುಭವ ರಹಿತ ಕಲಿಕೆಯೊಂದಿಗೆ ಸಮಾಜಕ್ಕೆ ಹಿಂತಿರುಗುತ್ತವೆ. ಹಾಗೆ ಹಿಂತಿರುಗಿದ ಮಗುವಿನಲ್ಲಿ ನಾವು ತ್ಯಾಗ, ಸೇವಾಗುಣ, ಸಾಮಾಜಿಕ ಕಳಕಳಿ.. ಮುಂತಾದ ಭಾರವನ್ನು ಹೊರಿಸಿದರೆ ಅದನ್ನು ಆ ಮಗು ತಾಳಿಕೊಳ್ಳುವುದು ಹೇಗೆ? ‘ನನ್ನ ಮಗುವಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ, ಆದ್ದರಿಂದ ನನ್ನ ಮಗುವನ್ನು ಸಮಾಜದ ಮಗುವಿಗೆ ಬೆಳೆಸಬೇಕು’ ಎಂದು ಶಾಲಾ ಶಿಕ್ಷಕರೊಂದಿಗೆ ಹೇಳುವ ಪ್ರಯತ್ನವನ್ನು ಎಷ್ಟು ಹೆತ್ತವರು ಇವತ್ತು ಮಾಡಬಲ್ಲರು? ಗ್ರಾವಿೂಣ ಸೇವೆ ಮಾಡಲು ವೈದ್ಯರು ಒಪ್ಪುತ್ತಿಲ್ಲ ಎಂದು ಸರಕಾರ ಒಂದು ಕಡೆ ಆರೋಪಿಸುತ್ತಿದೆ. ಸರಕಾರ ಹೇಳಿದ ದಂಡ ಪಾವತಿಸಿ ವೈದ್ಯರು ಸರಕಾರದ ಹಂಗಿನಿಂದ ಹೊರಬರಲು ಮುಂದಾಗುತ್ತಿದ್ದಾರೆ ಎಂಬ ಆರೋಪವೂ ಸರಕಾರದ್ದೇ. ನಿಜವಾಗಿ, ಇದರಲ್ಲಿ ವೈದ್ಯರಷ್ಟೇ ಆರೋಪಿಗಳಲ್ಲ. ನಮ್ಮ ಕಲಿಕೆಯೂ ಒಂದು ಆರೋಪಿ. ನಾವು ಕಲಿಸಿದ್ದೇ ವೇತನದ ಆಧಾರದಲ್ಲಿ. ಸಮಾಜದ ಅಭಿವೃದ್ಧಿ, ಸಾಮಾಜಿಕ ಕಳಕಳಿ, ಜನಸೇವೆ ಮುಂತಾದ ಪದಗಳನ್ನೇ ಕಲಿಕಾ ಹಂತದಲ್ಲಿ ಕಳಚಿಟ್ಟು, ಬರೇ ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತುಕೊಟ್ಟರೆ ಆ ವಿದ್ಯಾರ್ಥಿ ಯಾಕೆ ಗ್ರಾವಿೂಣ ಸೇವೆ ಮಾಡುತ್ತಾನೆ? ಸೇವೆ ಎಂಬ ಪದಕ್ಕೆ ಮಹತ್ವ ಬರುವುದು ಸೇವೆಯ ನಿಜ ರುಚಿಯನ್ನು ಅನುಭವಿಸಿದಾಗ ಅಥವಾ ಅಂಥವುಗಳಿಂದ ಪ್ರೇರಣೆ ಪಡೆದಾಗ. ಕಲಿಕಾ ಹಂತದಲ್ಲಿ ಇಂಥ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಲು ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾದಾಗ ಮಾತ್ರ ಇಂಥ ಆರೋಪಗಳು ಗಂಭೀರ ಅನ್ನಿಸಿಕೊಳ್ಳುತ್ತವೆ.
      ನಿಜವಾಗಿ, ಶಾಲಾ ಕೊಠಡಿಯೊಳಗೆ ಮಕ್ಕಳು ಕಲಿಯುತ್ತಿರುವಾಗ ಹೊರಗೆ ನೂರಾರು ಬಗೆಯ ಗೊಂದಲಗಳು ಸದ್ದು ಮಾಡುತ್ತಿರುತ್ತವೆ. ಅವು ಅಸಹಿಷ್ಣುತೆ ಇರಬಹುದು, ಹಸಿವು ಇರಬಹುದು, ಆಹಾರ ಕ್ರಮ ಇರಬಹುದು ಅಥವಾ ಇನ್ನಿತರ ಹತ್ತಾರು ಸಾಮಾಜಿಕ ವಿಷಯಗಳು ಇರಬಹುದು. ಪಠ್ಯಗಳ ಮಧ್ಯೆ ಇಂಥ ವಿಷಯಗಳನ್ನು ಎತ್ತಿಕೊಂಡು ಮಕ್ಕಳ ಮಧ್ಯೆ ಚರ್ಚೆಯನ್ನು ಹಮ್ಮಿಕೊಂಡರೆ ಮಕ್ಕಳಿಗೆ ಸಮಾಜದ ತುಡಿತಗಳು ಗೊತ್ತಾಗಬಹುದು. ಹೆಣ್ಣು ಶಿಶು ಹತ್ಯೆಯು ಸಾಮಾಜಿಕ ವಿಷಯ ಆಗಿರುವ ಹೊತ್ತಿನಲ್ಲಿ ಅದನ್ನು ಮಕ್ಕಳ ಇಶ್ಶೂ ಆಗಿಸುವ ಶಾಲಾ ಕೊಠಡಿಗಳು ತಯಾರಾಗಬೇಕು. ಅತ್ಯಾಚಾರ ಸಹಜವೆಂಬಂತಹ ವಾತಾವರಣ ಉಂಟಾಗುವಾಗ, ಧರ್ಮದ ಕಾರಣಕ್ಕಾಗಿ ಹಿಂಸೆ ಭುಗಿಲೇಳುವಾಗ, ವೃದ್ಧರನ್ನು ಅನಾಥಾಲಯಕ್ಕೆ ಅಟ್ಟುವಾಗ, ಹಸಿವಿನಿಂದಾಗಿ ಸಾವು ಸಂಭವಿಸುವಾಗ.. ಹೀಗೆ ಸಮಾಜದ ಸಮಸ್ಯೆ ಮತ್ತು ಸಂಕಷ್ಟಗಳು ಶಾಲಾ ಕೊಠಡಿಯೊಳಗಿನ ಸಮಸ್ಯೆಗಳೂ ಆದಾಗ ಮಕ್ಕಳೊಳಗೆ ಒಂದು ಬಗೆಯ ಪ್ರಜ್ಞಾವಂತಿಕೆ ಬೆಳೆಯಬಹುದು. ತನಗೂ ಅವುಗಳಿಗೂ ಸಂಬಂಧ ಇದೆ ಎಂಬ ಮನೋಭಾವ ಉಂಟಾಗಬಹುದು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಮಟ್ಟದಲ್ಲಿ ಯುವ ಸಮೂಹ ಬೀದಿಗಿಳಿದಿತ್ತು. ಹಲವಾರು ಕ್ರಾಂತಿಗಳ ಹಿಂದೆ ಯುವ ಸಮೂಹದ ಪಾತ್ರ ಅನನ್ಯವಾಗಿರುವುದೂ ಎಲ್ಲರಿಗೂ ಗೊತ್ತಿದೆ. ಶಾಲೆ ಎಂದರೆ ಕಲಿಕೆಯಷ್ಟೇ ಅಲ್ಲ, ಅದು ನಾಯಕತ್ವವನ್ನೂ ಬೆಳೆಸಬೇಕು. ಸಾಮಾಜಿಕ ಕಳಕಳಿಯನ್ನೂ ಉಂಟು ಮಾಡಬೇಕು. ತ್ಯಾಗ, ಸಹಿಷ್ಣುತೆಯನ್ನೂ ವಿದ್ಯಾರ್ಥಿಗಳಲ್ಲಿ ಹುಟ್ಟಿಸಬೇಕು. ಕ್ಯಾಂಪಸ್‍ನಿಂದ ಹೊರಬರುವ ವಿದ್ಯಾರ್ಥಿಯಿಂದ ಸರ್ಟಿಫಿಕೇಟನ್ನಷ್ಟೇ ಸಮಾಜ ನಿರೀಕ್ಷಿಸುವುದಲ್ಲ. ಓರ್ವ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯನ್ನೂ ನಿರೀಕ್ಷಿಸುತ್ತದೆ. ಇವತ್ತಿನ ದಿನಗಳಲ್ಲಂತೂ ಇಂಥ ನಿರೀಕ್ಷೆಗೆ ಸಾಕಷ್ಟು ಮಹತ್ವವಿದೆ. ಒಂದು ಕಡೆ ನೈತಿಕ ಪತನ ಮತ್ತು ಮತ್ತೊಂದು ಕಡೆ ಅಸಹಿಷ್ಣುತೆಯ ವಾತಾವರಣದ ಮಧ್ಯೆ ಸರ್ಟಿಫಿಕೇಟ್ ಹಿಡಿದ ಮಕ್ಕಳು ಕ್ಯಾಂಪಸ್‍ನಿಂದ ಸಮಾಜಕ್ಕೆ ಇಳಿದು ಬರುತ್ತಿದ್ದಾರೆ. ಅವರು ಈ ಎಲ್ಲವುಗಳ ವಿರುದ್ಧ ಹೋರಾಟಕ್ಕೆ ನಾಯಕತ್ವವನ್ನು ನೀಡಬೇಕೆಂದು ಸಮಾಜ ಖಂಡಿತ ಬಯಸುತ್ತದೆ. ಇದು ಸಾಧ್ಯವಾಗಬೇಕಾದರೆ ಕಲಿಕೆಯನ್ನು ಸಮಾಜಮುಖಿ ಗೊಳಿಸಬೇಕು. ಅಂಬಾನಿ, ಅದಾನಿ, ಇನ್ಫೋಸಿಸ್, ವಿಪ್ರೊ ಗಳಾಚೆಗೆ ಇರುವ ಸಾಮಾನ್ಯ ಜನರೊಂದಿಗೆ ಸಂಬಂಧ ಇಟ್ಟುಕೊಳ್ಳುವ ಮತ್ತು ಆ ಜನರಿಗೆ ಸ್ಪಂದಿಸುವ ಮನೋಭಾವವನ್ನು ಕಲಿಕೆಯೊಂದಿಗೆ ಜೋಡಿಸಬೇಕು. ಸರ್ಟಿಫಿಕೇಟ್ ಪಡೆದ ಮಗು ಎಸ್ಸಾರ್‍ಗೆ ಹೋದರೂ ಆ್ಯಪಲ್‍ಗೆ ಸೇರಿದರೂ ಸಮಾಜಮುಖಿಯಾಗುವಂತೆ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಪಾಲುದಾರನಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ,
      ಎಲ್‍ಕೆಜಿಯ ಬಸ್‍ನಿಂದ ಕಂಪೆನಿ ಬಸ್‍ಗೆ ಸ್ಥಾನಾಂತರವಾದನು/ಳು ಎಂಬಲ್ಲಿಗೆ ಒಂದು ಮಗುವಿನ ಬದುಕು ಕೊನೆಗೊಳ್ಳಬಹುದು.