Monday, March 25, 2013

ಪೊಲೀಸ್ ಠಾಣೆಯಲ್ಲಿರುವ ಎತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ..

   ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯು ತನ್ನ ಭದ್ರ ನೆಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿದ್ದೇಕೆ ಎಂಬ ಪ್ರಶ್ನೆಗೆ; ಕಲ್ಲಡ್ಕ ಪ್ರಭಾಕರ ಭಟ್ಟರ ಸರ್ವಾಧಿಕಾರಿ ನಿಲುವು, ಬಿಜೆಪಿಯ ಒಳಜಗಳ, ಭ್ರಷ್ಟಾಚಾರ, ಯಡಿಯೂರಪ್ಪ ಫ್ಯಾಕ್ಟರ್.. ಮುಂತಾದ ಕಾರಣಗಳನ್ನು ಕೊಡುತ್ತಾ ಹೋದರೆ ಈ ಜಿಲ್ಲೆಗಳ ಸಾಮಾನ್ಯ ಮಂದಿ ಸುಮ್ಮನೆ ನಗುತ್ತಾರೆ. ಯಾಕೆಂದರೆ, ಇವನ್ನೆಲ್ಲಾ ಕಾರಣ ಎಂದು ಅವರು ಒಪ್ಪುವುದೇ ಇಲ್ಲ. ಅವರು ಕೊಡುವ ಕಾರಣವೇ ಬೇರೆ,
   ಕೋಮುಗಲಭೆ ಆಗಿಲ್ಲ..
  ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯವನ್ನಾಳುತ್ತಿದ್ದ ಸಂದರ್ಭ. 2006 ಅಕ್ಟೋಬರ್ 5ರಂದು ಮಂಗಳೂರು ಬಂದ್‍ಗೆ ಸಂಘಪರಿವಾರ ಕರೆ ಕೊಡುತ್ತದೆ. ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಕ್ವಾಲಿಸ್ ವಾಹನವೊಂದನ್ನು ಮಂಗಳೂರಿನ ಸಂಘಪರಿವಾರದ ಕಾರ್ಯಕರ್ತರು ಬೆನ್ನಟ್ಟಿದಾಗ ಅದು ಮಹಿಳೆಗೆ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದೆ ಅನ್ನುವ ಕಾರಣಕ್ಕಾಗಿ ಬಂದ್‍ಗೆ ಕರೆ ಕೊಡಲಾಗಿತ್ತು. ಶಶಿಧರ್ ಭಟ್ ಅನ್ನುವ ವ್ಯಕ್ತಿ ಸಾವಿಗೀಡಾಗಿದ್ದಾರೆ ಅನ್ನುವ ಸುದ್ದಿಯನ್ನು ಪತ್ರಿಕೆಯೊಂದು ಇದೇ ಸಂದರ್ಭದಲ್ಲಿ ತೇಲಿ ಬಿಟ್ಟಿತ್ತು. ನಿಜವಾಗಿ, ಮಹಿಳೆಗೆ ಢಿಕ್ಕಿ ಹೊಡೆದದ್ದಾಗಲಿ, ಭಟ್ ಸಾವಿಗೀಡಾದದ್ದಾಗಲಿ ನಡೆದೇ ಇಲ್ಲ ಎಂದು ಅಕ್ಟೋಬರ್ 5ರಂದು ಜಿಲ್ಲಾ  ಎಸ್.ಪಿ.ಯವರು ಮಾಧ್ಯಮದೆದುರು ಘೋಷಿಸಿದರೂ ದೊಂಬಿ ಜಿಲ್ಲೆಯನ್ನಿಡೀ ಆವರಿಸಿಬಿಟ್ಟಿತ್ತು. ತೊಕ್ಕೊಟ್ಟು, ಸುರತ್ಕಲ್, ನಂತೂರು, ಫರಂಗಿಪೇಟೆ, ಕಣ್ಣೂರು, ಕೃಷ್ಣಾಪುರ, ಬಿ.ಸಿ. ರೋಡ್, ಸಿದ್ಧಕಟ್ಟೆ, ಮೆಲ್ಕಾರ್, ಕಲ್ಲಡ್ಕ.. ಮುಂತಾದ ಹತ್ತಾರು ಪ್ರದೇಶಗಳು ಹೊತ್ತಿ ಉರಿದುವು. ಅಬ್ದುಲ್ ಗಫೂರ್ ಮದನಿ ಮತ್ತು ಇಬ್ರಾಹೀಮ್ ಬೋಳಿಯಾರ್ ಎಂಬಿಬ್ಬರನ್ನು ಇರಿದು ಕೊಲ್ಲಲಾಯಿತು. ಮುಸ್ಲಿಮರ ಅಂಗಡಿ-ಮುಂಗಟ್ಟುಗಳು ಅತ್ಯಂತ ಯೋಜಿತ ರೀತಿಯಲ್ಲಿ ಆಕ್ರಮಣಕ್ಕೆ ತುತ್ತಾದುವು. ಮುಂದಿನ ಐದಾರು ವರ್ಷಗಳ ವರೆಗೆ ಮುಸ್ಲಿಮರು ಆರ್ಥಿಕವಾಗಿ ತಲೆ ಎತ್ತದಂಥ ‘ಪಾಠ ಕಲಿಸಿ' ಬಂದ್ ಕೊನೆಗೊಂಡಿತು. ಮುಂದಿನ ಒಂದು ವರ್ಷದ ಅವಧಿಯಲ್ಲಿ (2008) ವಿಧಾನ ಸಭೆಗೆ ಚುನಾವಣೆ ಘೋಷಣೆಯಾದಾಗ ಈ ಗಲಭೆಯ ಕಾವು ಇನ್ನೂ ಆರಿರಲಿಲ್ಲ. ಒಂದು ಹಂತದ ವರೆಗೆ ‘ಗಲಭೆಯ ವಾತಾವರಣವನ್ನು' ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಯಶಸ್ವಿಯಾಗಿತ್ತು. ಇಲ್ಲದಿದ್ದರೆ ಮಲ್ಲಿಕಾ ಪ್ರಸಾದ್ ಎಂಬ ‘ಅಡುಗೆಮ್ಮ’ ಪುತ್ತೂರಿನಿಂದ ಗೆದ್ದು ಬರಲು ಸಾಧ್ಯವಿತ್ತೇ? ವಿಧಾನಸಭೆಗೆ ಆಯ್ಕೆಯಾದ ಮಹಿಳಾ ಜನಪ್ರತಿನಿಧಿಗಳಲ್ಲೇ ಅತ್ಯಂತ ಹೆಚ್ಚು ಚಟುವಟಿಕೆಯಿಂದಿದ್ದ, ಕ್ಷೇತ್ರದ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸದಾ ಗಮನ ಸೆಳೆಯುತ್ತಿದ್ದ ಮಾತುಗಾರ್ತಿ, ಶಕುಂತಳಾ ಶೆಟ್ಟಿಯೆದುರು ಮಾತೇ ಬಾರದ ಮಲ್ಲಿಕಾ ಗೆಲ್ಲುವುದೆಂದರೇನು? ಹಾಲಿ ಶಾಸಕಿಯಾಗಿದ್ದ ಶಕುಂತಳಾರಿಗೆ ಬಿಜೆಪಿ ಟಿಕೇಟು ನಿರಾಕರಿಸಿದಾಗ ಅವರು ಬಂಡಾಯವೆದ್ದಿದ್ದರು. ನಿಜವಾಗಿ, ಇಲ್ಲಿನ ಸಮಸ್ಯೆ ಬಂಡಾಯವಲ್ಲ. ಈ ಜಿಲ್ಲೆಗಳಲ್ಲಿ ಒಂದು ‘ಎಲೆಕ್ಟ್ರಿಕ್ ಕಂಭ' ಅಭ್ಯರ್ಥಿಯಾಗಿ ನಿಂತರೂ ಗೆಲುವು ಶತಸಿದ್ಧ ಅನ್ನುವ ವಾತಾವರಣ ವೊಂದನ್ನು ಕಟ್ಟಿ ಬೆಳೆಸುವಲ್ಲಿ ಬಿಜೆಪಿ ಇಂದು ಯಶಸ್ವಿಯಾಗಿದೆ. ಅದಕ್ಕೆ ಪೂರಕವಾಗಿ ಕೋಮುಗಲಭೆಗಳನ್ನು ‘ಉತ್ಪಾದಿಸಲಾಗುತ್ತದೆ’.
   2013 ಮಾರ್ಚ್ 19
  ಉಡುಪಿ ಜಿಲ್ಲೆಯ ಅಡ್ಡಬೆಂಗ್ರೆಯಲ್ಲಿ ಜಾವೀದ್ ಎಂಬವರ ಮನೆಯಿದೆ. ಅವರೇನೂ ಗೋ ವ್ಯಾಪಾರಿಯಲ್ಲ. ರಿಯಲ್ ಎಸ್ಟೇಟ್ ಮತ್ತು ವಾಹನ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಅವರ ಮನೆಗೆ ಮೊನ್ನೆ ಮಾರ್ಚ್ 19ರಂದು ಸಂಜೆ ಸಂಘಪರಿವಾರದ ಸುಮಾರು 60-70ರಷ್ಟು ಮಂದಿ ಪೊಲೀಸರ ಜೊತೆ ಬಂದರಲ್ಲದೇ, ಮನೆಯಲ್ಲಿದ್ದ ಒಂದೂವರೆ ವರ್ಷದ ಎತ್ತನ್ನು ಠಾಣೆಗೆ ಎತ್ತಿಕೊಂಡು ಹೋದರು. ಅಕ್ರಮ ಗೋಸಾಗಾಟದಲ್ಲಿ ಜಾವೀದ್ ಭಾಗಿಯಾಗಿದ್ದಾರೆ ಅನ್ನುವ ವದಂತಿಯನ್ನು ಅದರ ಜೊತೆಗೇ ಹಬ್ಬಿಸಿದರು. ವದಂತಿಯಲ್ಲಿ ಎತ್ತು, ಗೋವಾಗಿ ಪರಿವರ್ತನೆಯಾಗಿತ್ತು. ನಿಜವಾಗಿ, ಜಾವೀದ್‍ರು ಕುರ್ಬಾನಿಗಾಗಿ ಎತ್ತು ಖರೀದಿಸಿ ತರುತ್ತಿದ್ದರು. ಸ್ವಯಂ ಕುರ್ಬಾನಿಯನ್ನೂ ಮಾಡುತ್ತಿದ್ದರು. ಅಲ್ಲದೇ ಕುರ್ಬಾನಿಯ ಸಂದರ್ಭದಲ್ಲಿ ಎತ್ತುಗಳನ್ನು ಮಾರುವುದೂ ಇತ್ತು. ಅಕ್ರಮ ಗೋಸಾಗಾಟಕ್ಕೂ ಕುರ್ಬಾನಿಗಾಗಿ ಎತ್ತು ಸಾಕುವುದಕ್ಕೂ ವ್ಯತ್ಯಾಸ ಇಲ್ಲವೇ? ಮುಸ್ಲಿಮರ ಮನೆಯಲ್ಲಿ ಎತ್ತು ಅಥವಾ ಗೋವು ಇದ್ದರೆ, ಅದನ್ನು ‘ಅಕ್ರಮ ಚಟುವಟಿಕೆ'ಯಂತೆ ಕಾಣುವ ಸಂಘ ಪರಿವಾರದ ಮನಸ್ಥಿತಿಗೆ ಏನೆನ್ನಬೇಕು? ಮುಸ್ಲಿಮರು ಎತ್ತು ಸಾಕುವುದನ್ನು ಸಾಂವಿಧಾನಿಕವಾಗಿ ನಿಷಿದ್ಧಗೊಳಿಸಲಾಗಿದೆಯೇ? ಆದರೆ ಇಂಥ ಪ್ರಶ್ನೆಗಳನ್ನೆಲ್ಲಾ ಸುಳ್ಳು ವ್ಯಾಖ್ಯಾನದ ಆರ್ಭಟದಲ್ಲಿ ಹತ್ತಿಕ್ಕುವುದನ್ನು ಸಂಘಪರಿವಾರ ಚೆನ್ನಾಗಿ ಕಲಿತುಕೊಂಡಿದೆ. 40-50ರಷ್ಟಿದ್ದ ಸಂಘ ಪರಿವಾರದ ಮಂದಿ ರಾತ್ರಿ ಪುನಃ ಬಂದರಲ್ಲದೇ ನಮಾಝ್‍ಗೆ ಬಂದವರ ಟೊಪ್ಪಿಯನ್ನು ಎಳೆದರು. ಪಾಕಿಸ್ತಾನ್ ಮುರ್ದಾಬಾದ್, ಅಲ್ಲಾಹ್ ಮುರ್ದಾಬಾದ್.. ಘೋಷಣೆ ಗಳನ್ನು ಕೂಗಿದರು. ಮರುದಿನ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಪೊಲೀಸರ ಸಮ್ಮುಖದಲ್ಲೇ ಜಾವೀದ್‍ರ ಮನೆಗೆ ಕಲ್ಲೆಸೆಯಲಾಯಿತು. ಬಾಗಿಲಿಗೆ ಹಾನಿ ಮಾಡಿ, ಮನೆಯ ಟಿ.ವಿ. ಮತ್ತಿತರ ವಸ್ತುಗಳನ್ನು ಧ್ವಂಸ ಮಾಡಲಾಯಿತು..
   ಇಷ್ಟಕ್ಕೂ ಪಡಿತರ ಚೀಟಿ, ಮತದಾನದ ಗುರುತು ಚೀಟಿ ಸಹಿತ ಈ ದೇಶದ ನಾಗರಿಕನೆಂದು ಗುರುತಿಸಿಕೊಳ್ಳುವುದಕ್ಕೆ ಎಲ್ಲವೂ ಇರುವ ಓರ್ವ ವ್ಯಕ್ತಿ ಎತ್ತು ಸಾಕುವುದನ್ನು ಈ ಮಟ್ಟದ ಅಪರಾಧವಾಗಿ ಪರಿಗಣಿಸಲು ಆತ ಮುಸ್ಲಿಮ್ ಆಗಿರುವುದರ ಹೊರತು ಇನ್ನಾವುದನ್ನಾದರೂ ಕಾರಣವಾಗಿ ಹೇಳಲು ಸಾಧ್ಯವಾ? ನಿಜವಾಗಿ ಈ ಎರಡು ಜಿಲ್ಲೆಗಳಲ್ಲಿ ಮುಸ್ಲಿಮರು ದನ ಸಾಕುವುದು, ದನದ ವ್ಯಾಪಾರ ಮಾಡುವುದನ್ನೆಲ್ಲಾ ಅಪರಾಧದ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂಥ ‘ಅಪರಾಧ' ಮಾಡುವವರನ್ನು ಥಳಿಸುವುದು ಸರಿ ಅನ್ನುವ ಭಾವನೆಯನ್ನು ಬಿತ್ತುವ ಪ್ರಯತ್ನಗಳು ನಡೆಯುತ್ತಲೇ ಇವೆ. ಬಿಜೆಪಿಯ ಇಮೇಜಿಗೆ ತುಸು ಮುಕ್ಕಾದರೆ ಈ ಜಿಲ್ಲೆ ಗಳಲ್ಲಿ ‘ಗೋವು' ಸುದ್ದಿ ಮಾಡುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 4 ದಶಕಗಳ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಶಾಸಕ ರಘುಪತಿ ಭಟ್ಟರ ಕ್ಷೇತ್ರವಾದ ಉಡುಪಿ ನಗರ ಸಭೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಸದ್ಯ ಒಂದು ಕೋಮುಗಲಭೆಯ ಹೊರತು ಈ ಎರಡು ಜಿಲ್ಲೆಗಳಲ್ಲಿ ಬಿಜೆಪಿಯನ್ನು ಹಳಿಗೆ ತರುವ ಸಾಧ್ಯತೆಯಂತೂ ಕಾಣುತ್ತಿಲ್ಲ. ಹೀಗಿರುವಾಗ ಜಾವೀದ್‍ರ ಮನೆಯ ಎತ್ತನ್ನು ಏ.ಕೆ. 47ನಂತೆ ಬಿಂಬಿಸುವುದು ಪರಿವಾರದ ತುರ್ತು ಅಗತ್ಯವಾಗಿತ್ತು.
   2005 ಮಾರ್ಚ್ 13
   ಆದಿ ಉಡುಪಿಯ 60 ವರ್ಷದ ಹಾಜಬ್ಬ ಮತ್ತು ಅವರ ಮಗ 28 ವರ್ಷದ ಹಸನಬ್ಬ ಎಂಬಿಬ್ಬರನ್ನು ಇಲ್ಲಿಯ ಮೈದಾನಕ್ಕೆ ಪರಿವಾರದ ಮಂದಿ ಸಂಜೆ 7ರ ಸುಮಾರಿಗೆ ಎಳೆದು ತಂದರು. ದನದ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಅನ್ನುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ದನದ ವ್ಯಾಪಾರ ಮಾಡುವ ಮುಸಲ್ಮಾನರನ್ನು ಬೆತ್ತಲೆ ಮಾಡಿದರೂ, ಥಳಿಸಿದರೂ ಅವಮಾನಿಸಿದರೂ ಅದು ಅಪರಾಧವಲ್ಲ ಅನ್ನುವ ವಾತಾವರಣವನ್ನು ಅದಾಗಲೇ ಜಿಲ್ಲೆಯಲ್ಲಿ ಒಂದು ಹಂತದ ವರೆಗೆ ಬಿತ್ತಲಾಗಿತ್ತು. ನಿಜವಾಗಿ ಅವರು ದನದ ವ್ಯಾಪಾರಿಗಳಾಗಿದ್ದರೂ ಗೋಮಾಂಸದ ವ್ಯಾಪಾರಿಗಳಾಗಿರಲಿಲ್ಲ. ದನ ಕರುಗಳನ್ನು ಖರೀದಿಸಿ ಮಾರಾಟ ಮಾಡುವ ದಲ್ಲಾಳಿ ಕೆಲಸವನ್ನು ಅವರಿಬ್ಬರೂ ನಿರ್ವಹಿಸುತ್ತಿದ್ದರು. ನಿಜವಾಗಿ ಕರಾವಳಿ ವಲಯದಲ್ಲಿ ಇದೊಂದು ಉಪವೃತ್ತಿ. ಈ ವ್ಯವಹಾರ ಮಾಡುವ ಹಿಂದೂಗಳೂ ಇದ್ದಾರೆ. ಆದರೆ ಅವರಿಬ್ಬರನ್ನು ಮೈದಾನಕ್ಕೆ ತಂದವರು ಬೆತ್ತಲೆಗೊಳಿಸಿದರು. ಅವರ ಹೊಡೆತ, ಬಡಿತವನ್ನು ತಾಳಲಾರದೇ ತಂದೆ-ಮಗ ಬೆತ್ತಲೆಯಾಗಿ ಮೈದಾನದಲ್ಲಿ ಓಡುವುದು, ತರುಣರು ಅವರನ್ನು ಅಟ್ಟಿಸಿಕೊಂಡು ಥಳಿಸುವುದು.. ಇದು ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಮೈದಾನದಲ್ಲಿ 500-600 ಜನ ಈ ವಿಕಟ ವಿನೋದವನ್ನು ನೋಡುತ್ತಾ ನಿಂತಿದ್ದರು. ಒಂದು ವೇಳೆ ಅವರಿಬ್ಬರು ಬೆತ್ತಲಾಗಿ ಕೂತಿರುವ ಮತ್ತು ಹಸನಬ್ಬರ ತಲೆಗೂದಲನ್ನು ಒಬ್ಬ ಎತ್ತಿ ಹಿಡಿದಿರುವ ಪೊಟೋವೊಂದನ್ನು ಮಾರ್ಚ್ 15ರ ಪತ್ರಿಕೆಯೊಂದು ಪ್ರಕಟಿಸದೇ ಇರುತ್ತಿದ್ದರೆ ಈ ಘಟನೆಯೂ ಹತ್ತರಲ್ಲಿ ಹನ್ನೊಂದಾಗಿ ಬಿಡುವ ಎಲ್ಲ ಸಾಧ್ಯತೆಯೂ ಇತ್ತು. ಆಘಾತದ ಸಂಗತಿಯೆಂದರೆ, ಅಲ್ಲಿ ನೆರೆದಿರುವವರ ಮೌನ ಮನಸ್ಥಿತಿ. ಅವರೆಲ್ಲ ಪರಿವಾರದ ಬೆಂಬಲಿಗರೆಂದಲ್ಲ. ಆದರೆ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಸಂಶಯದ ಭಾವನೆಗಳನ್ನು ಬಿಜೆಪಿಯೇತರ ಮಂದಿಯಲ್ಲಿ ಕೂಡ ಬಿತ್ತಿ ಬೆಳೆಸಲು ಅದಕ್ಕೆ ಸಾಧ್ಯವಾಗಿತ್ತು. ಹಾಗಂತ, ನೋಡುಗರಿಗೆಲ್ಲ ಮುಸ್ಲಿಮರ ಬಗ್ಗೆ ಅಸಾಧ್ಯ ದ್ವೇಷ ಇತ್ತು ಎಂದಲ್ಲ. ಆದರೆ ಅವರನ್ನು ಥಳಿಸುವುದು, ಅವಮಾನಿಸುವುದೆಲ್ಲ ‘ನಾವು ಪ್ರತಿಭಟಿಸುವಷ್ಟು' ಗಂಭೀರ ಪ್ರಕರಣ ಅಲ್ಲ ಎಂಬ ಭಾವನೆಯೊಂದನ್ನು ಪರಿವಾರ ಈ ಜಿಲ್ಲೆಗಳಲ್ಲಿ ಒಂದು ಹಂತದ ವರೆಗೆ ಬಿತ್ತಿ ಬಿಟ್ಟಿದೆ. ಜರ್ಮನಿಯಲ್ಲಿ ಯಹೂದಿಯರ ಮೇಲೆ ಸೇನೆಯು ನಡೆಸುತ್ತಿದ್ದ ನರಮೇಧವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದ ಜರ್ಮನಿಯ ಜನಸಾಮಾನ್ಯರ ಬಗ್ಗೆ ಬರೆಯುತ್ತಾ ಖ್ಯಾತ ಲೇಖಕ ಗುಂಥರ್‍ಗ್ರಾಸ್,             ‘ಅವರು ಯಾರೂ ಅಸಾಧ್ಯ ದುಷ್ಟರಾಗಿರಲಿಲ್ಲ. ಅವರೆಲ್ಲ ಭಾನುವಾರ ಸಂಜೆ ತಮ್ಮ ಮಕ್ಕಳನ್ನು ಪಾರ್ಕಿಗೆ ಕರಕೊಂಡು ಹೋಗಿ ಐಸ್‍ಕ್ರೀಮ್ ಕೊಡಿಸುವ ಸದ್ಗೃಹಸ್ಥರಾಗಿದ್ದರು..' ಎಂದಿದ್ದಾರೆ. ಪರಿವಾರ ಈ ಜಿಲ್ಲೆಗಳಲ್ಲಿ ಇಂಥದ್ದೊಂದು ಸದ್ಗೃಹಸ್ಥ ಸಮೂಹವನ್ನು ಕಟ್ಟಲು ಆರಂಭದಿಂದಲೂ ಯತ್ನಿಸಿದೆ. ಅನ್ಯ ಧರ್ಮೀಯ ಹೆಣ್ಣು-ಗಂಡು ಮಾತಾಡಿದ ನೆಪದಲ್ಲಿ ಥಳಿಸುವುದು; ಹೊಟೇಲು-ಪಬ್‍ಗಳಿಗೆ ದಿಢೀರ್ ದಾಳಿ, ಅಕ್ರಮ ಗೋಸಾಗಾಟ, ಲವ್ ಜಿಹಾದ್..ನ ಹೆಸರಲ್ಲಿ ಆಗುವ ಹಿಂಸೆಗಳನ್ನು ನಾಗರಿಕ ಸಮೂಹ ಬಹುತೇಕ ಮೌನದಿಂದ ನೋಡುತ್ತದೆಯೇ ಹೊರತು, ಅದನ್ನು ತಡೆಯುವಲ್ಲಿ ಮುತುವರ್ಜಿ ವಹಿಸಿದ್ದು ಇಲ್ಲವೇ ಇಲ್ಲ.  
      ಕರಾವಳಿಯಲ್ಲಿ ಸಂಘ ಪರಿವಾರ ನಡೆಸುತ್ತಿರುವ ದ್ವೇಷದ ಪ್ರಚಾರಕ್ಕೂ ಈ ಮೌನಕ್ಕೂ ಖಂಡಿತ ಆಳ ಸಂಬಂಧ ಇದೆ. ಆ ದ್ವೇಷದ ಪ್ರಚಾರವನ್ನು ಬಿಜೆಪಿಯೇತರ ಮಂದಿಯೂ ನಂಬುವಷ್ಟರ ಮಟ್ಟಿಗೆ ಅತ್ಯಂತ ಯೋಜಿತವಾಗಿ ಹರಡಿ ಬಿಡಲಾಗುತ್ತಿದೆ. ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ಚೆನ್ನಮ್ಮ ಮೈದಾನವೆಂದು ಕರೆದು, ‘ರಾಷ್ಟ್ರ ಧ್ವಜ ಗೌರವ ಸಂರಕ್ಷಣಾ ಸಮಿತಿ’ ಎಂಬ ತಂಡವನ್ನು ಕಟ್ಟಿಕೊಂಡು ಗಲಭೆಯೆಬ್ಬಿಸಿ ಕರ್ನಾಟಕದ ಉತ್ತರ ಭಾಗವನ್ನು ಬಿಜೆಪಿಯ ತೆಕ್ಕೆಗೆ ಸೆಳೆಯಲು ಪ್ರಹ್ಲಾದ್ ಜೋಷಿ 1992ರ ಬಳಿಕ ನಡೆಸಿದ ತಂತ್ರ ಮತ್ತು ಬುಡನ್‍ಗಿರಿಯನ್ನು ವಿವಾದಿತ ಕೇಂದ್ರವನ್ನಾಗಿಸಿ ಹಿಂದೂ-ಮುಸ್ಲಿಮರನ್ನು ವಿಭಜಿಸಿದ್ದು.. ಎಲ್ಲವೂ ಚುನಾವಣೆಯಲ್ಲಿ ಬಿಜೆಪಿಗೆ ಧಾರಾಳ ಫಲ ಕೊಟ್ಟಿದೆ. ಅದೇ ಪ್ರಹ್ಲಾದ್ ಜೋಷಿ ಈಗ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಮತ್ತೆ ಸಣ್ಣ-ಪುಟ್ಟ ಪ್ರಕರಣಗಳು ನಡೆಯತೊಡಗಿವೆ. ಅಡ್ಡ ಬೆಂಗ್ರೆಯ ಎತ್ತು ಪೊಲೀಸು ಠಾಣೆ ಹತ್ತಿರುವುದು ಅದರ ಒಂದು ಸೂಚನೆ ಅಷ್ಟೇ. ಕೋಮುಗಲಭೆಯಿಲ್ಲದೇ ಚುನಾವಣೆಗೆ ಹೋಗುವುದೆಂದರೆ ಬಿಜೆಪಿಯ ಮಟ್ಟಿಗೆ ಆಯುಧವಿಲ್ಲದೇ ರಣಾಂಗಣಕ್ಕೆ ಇಳಿದಂತೆ. ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಈಗಾಗಲೇ ಕೈ ಸುಟ್ಟುಕೊಂಡಿದೆ. ಆದ್ದರಿಂದ ಮುಂದೆ ಅಸೆಂಬ್ಲಿ ಚುನಾವಣೆಯಲ್ಲೂ ಇದನ್ನೇ ಮುಂದುವರಿಸಿಕೊಂಡು ಹೋಗುತ್ತದೆಂಬ ಬಗ್ಗೆ ಕರಾವಳಿಯಲ್ಲಿ ಯಾರಿಗೂ ನಂಬುಗೆಯಿಲ್ಲ. ಎತ್ತು, ಕರುಗಳೆಲ್ಲ ಮತ್ತೆ ಸುದ್ದಿ ಮಾಡಲು ಪ್ರಾರಂಭಿಸಿರುವುದು ಅವರ ಅನುಮಾನವನ್ನು ಬಲಗೊಳಿಸುತ್ತಿದೆ. ಆದ್ದರಿಂದಲೇ,
ಅಡ್ಡಬೆಂಗ್ರೆಯ ಎತ್ತು ಪೊಲೀಸು ಠಾಣೆಯಿಂದ ತಪ್ಪಿಸಿಕೊಂಡು ಊರಿಗೆ ಬರದಿರಲಿ ಎಂದೇ ಜನಸಾಮಾನ್ಯರು ಪ್ರಾರ್ಥಿಸುತ್ತಿದ್ದಾರೆ..

Tuesday, March 19, 2013

'ದೆವ್ವದ' ವಿರುದ್ಧ ಅಮೆರಿಕನ್ನರೇ ದಂಗೆ ಏಳುವ ದಿನಗಳೂ ಬರಬಹುದಲ್ಲವೇ?

ಖಾಲಿದ್ ಮಿಶ್‍ಅಲ್
    1997 ಸೆ. 25
  ಜೋರ್ಡಾನ್‍ನ ರಾಜಧಾನಿ ಅಮ್ಮಾನ್‍ನಲ್ಲಿರುವ ತಮ್ಮ ಕಚೇರಿಗೆ ಹಮಾಸ್‍ನ ನಾಯಕ ಖಾಲಿದ್ ಮಿಶ್‍ಅಲ್ ಬರುತ್ತಿ ದ್ದರು. ಆಗ ಇಸ್ರೇಲ್‍ನ ಪ್ರಧಾನ ಮಂತ್ರಿಯಾಗಿದ್ದುದು ಬೆಂಜಮಿನ್ ನೇತನ್ಯಾಹು. ಬಾಲ್ಯದಲ್ಲೇ ಫೆಲೆಸ್ತೀನಿನಿಂದ ಕುವೈಟ್‍ಗೆ ವಲಸೆ ಹೋಗಿ, ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದಿದ್ದ ಮಿಶ್‍ಅಲ್‍ರು 1984ರಿಂದ ಹಮಾಸ್‍ನ ಪೂರ್ಣಕಾಲಿಕ ಕಾರ್ಯಕರ್ತರಾಗಿ ನಿಯುಕ್ತರಾಗಿದ್ದರು. 1991ರ ಗಲ್ಫ್ ಯುದ್ಧದ ಸಂದರ್ಭದಲ್ಲಿ ಕುವೈಟ್‍ನಿಂದ ಜೋರ್ಡಾನ್‍ಗೆ ತೆರಳಿದ ಅವರು ಅಲ್ಲೂ ಹಮಾಸ್ ಪರ ಚಟುವಟಿಕೆಯ ನಡೆಸುತ್ತಿರುವುದು ನೇತನ್ಯಾಹುರನ್ನು ಸಿಟ್ಟುಗೆಬ್ಬಿಸಿತು. ಅವರು ಮೊಸಾದ್‍ನ (ಇಸ್ರೇಲ್ ನ ಗುಪ್ತ ಚರ ಸಂಸ್ಥೆ) ಜೊತೆ ಸೇರಿ ಮಿಶ್‍ಅಲ್‍ರ ಹತ್ಯೆಗೆ ಷಡ್ಯಂತ್ರ ರೂಪಿಸಿದರು. ಅದರಂತೆ ಮೊಸಾದ್‍ನ ಇಬ್ಬರು ಏಜಂಟರನ್ನು ಕೆನಡದ ನಕಲಿ ಪಾಸ್ ಪೋರ್ಟ್ ನೊಂದಿಗೆ ಜೋರ್ಡಾನ್‍ಗೆ ಕಳುಹಿಸಲಾಯಿತು. 1997 ಸೆ. 25ರಂದು ತನ್ನ ಕಚೇರಿಯ ಕಡೆಗೆ ಮಿಶ್‍ಅಲ್‍ರು ನಡೆದು ಬರುತ್ತಿರುವಂತೆಯೇ ಹಿಂದಿನಿಂದ ಬಂದ ಓರ್ವ ಮೊಸಾದ್ ಏಜೆಂಟ್, ಅವರ ಎಡಕಿವಿಯ ಕಡೆಗೆ ಒಂದು ವಸ್ತುವನ್ನು ಹಿಡಿದ. ಅಪಾಯಕಾರಿ ವಿಷವನ್ನು ದೇಹಕ್ಕೆ ವರ್ಗಾಯಿಸುವ ಉಪಕರಣವಾಗಿತ್ತು ಅದು. ಬಳಿಕ ಮುಹಮ್ಮದ್ ಅಬೂ ಸೈಫ್ ಎಂಬ ಅಂಗರಕ್ಷಕನ ನೆರವಿನೊಂದಿಗೆ ಆ ಇಬ್ಬರು ಏಜಂಟರನ್ನೂ ಬಂಧಿಸಲಾಯಿತು. ತಕ್ಷಣ ಜೋರ್ಡಾನಿನ ಅಧ್ಯಕ್ಷ ಕಿಂಗ್ ಹುಸೈನ್‍ರು ಆ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಕಿಂಗ್ ಹುಸೈನ್ ಮೆಡಿಕಲ್ ಸೆಂಟರ್‍ನಲ್ಲಿ ಕೋಮಾ ಸ್ಥಿತಿಯಲ್ಲಿ ಮಲಗಿರುವ ಮಿಶ್‍ಅಲ್‍ರಿಗೆ ಚಿಕಿತ್ಸೆ ನೀಡಲು ಪ್ರತ್ಯೌಷಧ (Antidote) ಕಳುಹಿಸಿಕೊಡುವಂತೆ  ನೇತನ್ಯಾಹುರನ್ನು ಆಗ್ರಹಿಸಿದರು. ಇಲ್ಲದಿದ್ದರೆ, ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವ ಮತ್ತು ಇಬ್ಬರು ಮೊಸಾದ್ ಏಜಂಟರನ್ನು ಕಠಿಣವಾಗಿ ಶಿಕ್ಷಿಸುವ ಬೆದರಿಕೆ ಹಾಕಿದರು. ಆರಂಭದಲ್ಲಿ ನೇತನ್ಯಾಹು ತನ್ನ ಕೈವಾಡವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಪ್ರಕರಣವು ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿರುವಂತೆಯೇ ಅಮೇರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಮಧ್ಯೆ ಪ್ರವೇಶಿಸಿದರಲ್ಲದೇ, ಪ್ರತ್ಯೌಷಧ ಕೊಡುವಂತೆ ನೇತನ್ಯಾಹುರನ್ನು ಬಲವಂತಪಡಿಸಿದರು. ಹೀಗೆ ನೇತನ್ಯಾಹುರ ಆದೇಶದಂತೆ ಮೊಸಾದ್‍ನ ಮುಖ್ಯಸ್ಥ ಡ್ಯಾನಿ ಯತೂಮ್(Danny yatom )ರು ಔಷಧಿಯೊಂದಿಗೆ ಜೋರ್ಡಾನಿಗೆ ಪ್ರಯಾಣಿಸಿದರು. ಆದರೆ ಅದಾಗಲೇ ಕಿಂಗ್ ಹುಸೈನ್ ಆಸ್ಪತ್ರೆಯ ವೈದ್ಯರು ವಿಷದ (Opioid) ಲಕ್ಷಣಗಳನ್ನು ಪತ್ತೆಹಚ್ಚಿ ಚಿಕಿತ್ಸೆ (Narcan) ಪ್ರಾರಂಭಿಸಿದ್ದರು. ಒಂದು ರೀತಿಯಲ್ಲಿ ಇಸ್ರೇಲ್‍ನ ವರ್ಚಸ್ಸು ಜಾಗತಿಕ ಮಟ್ಟದಲ್ಲೇ ಮಬ್ಬಾದ ಪ್ರಕರಣ ಅದು. ನೇತನ್ಯಾಹು ತೀವ್ರ ಮುಖಭಂಗಕ್ಕೆ ಒಳಗಾದರು. ಮಾತ್ರವಲ್ಲ, ಹಮಾಸ್‍ನ ಬೆಳವಣಿಗೆಗೆ ಈ ಘಟನೆಯು ಭಾರೀ ಸಹಕಾರಿಯಾಯಿತು. ಮೊಸಾದ್‍ನ ಆ ಇಬ್ಬರು ಏಜೆಂಟರನ್ನು ಜೋರ್ಡಾನ್ ಗಡೀಪಾರು ಮಾಡಿತಲ್ಲದೇ ಇಸ್ರೇಲ್‍ನ ವಶದಲ್ಲಿದ್ದ ಅನೇಕಾರು ಫೆಲೆಸ್ತೀನಿ ಕೈದಿಗಳನ್ನು  ಬಿಡಿಸಿಕೊಂಡಿತು..
  ಆದ್ದರಿಂದಲೇ,
ಅಮೆರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್‍ರನ್ನು ‘ದೆವ್ವ’ ಎಂದು ವಿಶ್ವಸಂಸ್ಥೆಯಲ್ಲಿ ಎಲ್ಲರೆದುರೇ ಕರೆದ, ಬುಶ್‍ರ ಎದುರು ಹಿಟ್ಲರನು ‘ಎದೆಹಾಲುಣ್ಣುವ ಸಣ್ಣ ಮಗು’ ಎಂದು ಕುಟುಕಿದ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್‍ರನ್ನು ‘ಓ ಪುಟ್ಟ ಬಾಲಕಿ’ ಎಂದು ಟೀಕಿಸಿದ ಮತ್ತು ಅಮೆರಿಕನ್ ಸಾಮ್ರಾಜ್ಯಶಾಹಿತ್ವಕ್ಕೆ ಸಡ್ಡು ಹೊಡೆಯುವಂತೆ ದಕ್ಷಿಣ ಅಮೆರಿಕನ್ ರಾಷ್ಟ್ರಗಳನ್ನು ಕಟ್ಟಲು ಶ್ರಮಿಸಿದ ವೆನೆಜುವೇಲದ ಅಧ್ಯಕ್ಷ ಹ್ಯೂಗೋ ಚಾವೇಝ್‍ರ ಸಾವಿನಲ್ಲೂ ಅನುಮಾನಗಳು ಮೂಡುವುದು. ಅಷ್ಟಕ್ಕೂ,
  1. ಫರ್ನಾಂಡೋ ಲುಗೊ
  2. ಲೂಯಿಸ್ ಇನಾಸಿಯೊ ಲುಲ ಡ ಸಿಲ್ವ
  3. ಹ್ಯೂಗೋ ಚಾವೇಝ್
  4. ಕ್ರಿಸ್ಟಿನಾ ಫೆರ್ನಾಂಡಿಸ್ ಡೆ ಕಿರ್ಚ್ ನರ್
ಎಂಬ ದಕ್ಷಿಣ ಅಮೆರಿಕದ ಈ ನಾಲ್ವರು ಸಮಾಜವಾದಿ (ಕಮ್ಯೂನಿಸ್ಟ್) ನಾಯಕರು ಬೆನ್ನು ಬೆನ್ನಿಗೆ ಕ್ಯಾನ್ಸರ್‍ಗೆ ತುತ್ತಾಗಿ ರುವುದೇಕೆ? ಕಳೆದ 20 ತಿಂಗಳ ಅವಧಿಯೊಳಗೆ ಈ ನಾಲ್ವರು ನಾಯಕರಲ್ಲಿ ಕ್ಯಾನ್ಸರ್  ಕಾಣಿಸಿಕೊಂಡಿರುವುದು ಬರೇ ಆಕಸ್ಮಿಕವೇ ಅಥವಾ The disease may be a new wepon of the empaire to eliminate unwanted leaders  (ತನಗಿಷ್ಟವಿಲ್ಲದ ನಾಯಕರನ್ನು ನಾಶಪಡಿಸಲು ಅಮೆರಿಕವು ಈ ರೋಗವನ್ನು ಅಭಿವೃದ್ಧಿಪಡಿಸಿರ ಬಹುದು) ಎಂಬ ಚಾವೇಝ್‍ರ ಮಾತೇ ನಿಜವಾಗಿರಬಹುದೇ? ಇಲ್ಲದಿದ್ದರೆ ಚಾವೇಝ್‍ರ ನಿಧನ ವಾರ್ತೆಯನ್ನು ಘೋಷಿಸುವುದಕ್ಕಿಂತ ಗಂಟೆಗಳ ಮೊದಲು ಇಬ್ಬರು ಅಮೇರಿಕನ್ ರಾಜತಾಂತ್ರಿಕರನ್ನು ವೆನೆಝವೇಲ ತನ್ನ ದೇಶದಿಂದ ಉಚ್ಛಾಟಿಸಿದ್ದೇಕೆ? ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಮಾಜಿ ಅಧ್ಯಕ್ಷ ಆಲ್ಟನ್ ಓಸ್ಚನರನ್ನು ಬಳಸಿಕೊಂಡು 1970ರಲ್ಲಿ ‘ಡರ್ಟ್ ಗನ್ನನ್ನು’ (ಇದು ಹೃದಯಾಘಾತಕ್ಕೆ ಸಂಬಂಧಿಸಿದ್ದು) ನಿರ್ಮಿಸಿ ವಿರೋಧಿಗಳ ಮೇಲೆ ಪ್ರಯೋಗಿಸಿದ್ದ CIA, (ಅಮೆರಿಕದ ಗುಪ್ತಚರ ಸಂಸ್ಥೆ) ಈ 20ನೇ ಶತಮಾನದಲ್ಲಿ ಸುಮ್ಮನಿರುವುದಕ್ಕೆ ಸಾಧ್ಯವೇ?
    2008ರಲ್ಲಿ ದಕ್ಷಿಣ ಅಮೆರಿಕದ ಸಮಾಜವಾದಿ ರಾಷ್ಟ್ರವಾದ ಪರಾಗ್ವೆಯಲ್ಲಿ ಚುನಾವಣೆಯ ತಯಾರಿ ನಡೆಯುತ್ತಿತ್ತು. ಎಲ್ಲ 4 ಮಂದಿ ಅಧ್ಯಕ್ಷೀಯ ಅಭ್ಯರ್ಥಿಗಳ ಬಯೋಡಾಟಾ, DNA ಮಾಹಿತಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡುವಂತೆ CIAಯು ಅಲ್ಲಿನ ಅಮೆರಿಕನ್ ರಾಯಭಾರಿಯಲ್ಲಿ ಕೇಳಿಕೊಂಡಿರುವುದನ್ನು ಇತ್ತೀಚೆಗೆ ವಿಕಿಲೀಕ್ಸ್ ಬಹಿರಂಗಪಡಿಸಿತ್ತು. ಆ ಬಳಿಕ ಫರ್ನಾಂಡೋ ಲುಗೋ ಅಧ್ಯಕ್ಷರಾಗಿ ಆಯ್ಕೆಯಾದರು. 60 ವರ್ಷದ ಲುಗೋ 2010ರಲ್ಲಿ ಕ್ಯಾನ್ಸರ್ ಗಡ್ಡೆಗಾಗಿ ಚಿಕಿತ್ಸೆಗೆ ಒಳಗಾದರು. ಬ್ರೆಝಿಲ್‍ನ ಮಾಜಿ ಅಧ್ಯಕ್ಷ 66 ವರ್ಷದ ಲುಲ ಡ ಸಿಲ್ವ 2011ರಲ್ಲಿ ಲಂಗ್ಸ್ ಕ್ಯಾನ್ಸರ್‍ಗೆ ತುತ್ತಾದರು. ಈ ಕಾರಣದಿಂದಲೇ ತನ್ನ ಹುದ್ದೆಯನ್ನು ಡೆಲ್ಮ ರಸ್ಸೆಫ್‍ಗೆ ವರ್ಗಾಯಿಸಿದರು. ನಿಜವಾಗಿ ಅಮೆರಿಕಕ್ಕೆ ತಲೆಬಾಗದೆಯೇ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂಬುದನ್ನು ಮೊದಲಾಗಿ ಸಾಧಿಸಿ ತೋರಿಸಿದ್ದೇ ಲುಲ ಡ ಸಿಲ್ವ. ಬ್ರೆಝಿಲನ್ನು ಜಾಗತಿಕವಾಗಿಯೇ ಪ್ರಬಲ ಆರ್ಥಿಕ ಶಕ್ತಿಯಾಗಿ ಮಾರ್ಪಡಿಸಿದ್ದು ಅವರ ಅಮೋಘ ಸಾಧನೆಯಾಗಿತ್ತು. ಇದೀಗ ಡೆಲ್ಮಾ ರಸ್ಸೆಫ್‍ರೂ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದಾರೆ. 2011ರಲ್ಲಿ ವೆನೆಝುವೇಲದ ಹ್ಯೂಗೋ ಚಾವೇಝ್ ಮೊದಲ ಬಾರಿ ಕ್ಯೂಬಾದ ಹವಾನದಲ್ಲಿ ಕ್ಯಾನ್ಸರ್‍ಗಾಗಿ ಚಿಕಿತ್ಸೆ ಪಡೆದರು. ಅರ್ಜಂಟೀನಾದ ಅಧ್ಯಕ್ಷೆ ಕ್ರಿಸ್ಟಿನಾ 2012ರ ಜನವರಿಯಲ್ಲಿ ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ ಗಾಗಿ ಸರ್ಜರಿಗೆ ಒಳಗಾಗಿದ್ದಾರೆ. ಈ ಮೊದಲು ಅರ್ಜಂಟೀನಾದ ಅಧ್ಯಕ್ಷರಾಗಿದ್ದ ಅವರ ಪತಿ ನೆಸ್ಟರ್ ಕಿರ್ಚನರ್ ರು 2010ರಲ್ಲಿ ಕ್ಯಾನ್ಸರ್ ಗೆ ತುತ್ತಾಗಿ ಆ ಬಳಿಕ ಸಾವಿಗೀಡಾಗಿದ್ದರು. ದಕ್ಷಿಣ ಅಮೇರಿಕದ ಇನ್ನೊಂದು ಸಮಾಜವಾದಿ ರಾಷ್ಟ್ರವಾದ ಪೆರುವಿನ ಅಧ್ಯಕ್ಷ ಒಲ್ಲಂಟ ಹುಮಾಲ 2011ರಲ್ಲಿ ಕ್ಯಾನ್ಸರ್ ಗಡ್ಡೆಯ ನಿವಾರಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ.
   ಅಮೆರಿಕದ ದಬ್ಬಾಳಿಕೆ, ಸಾಮ್ರಾಜ್ಯಶಾಹಿ ನೀತಿಗಳೇನೇ ಇರಲಿ, ಅದರ ದಕ್ಷಿಣಕ್ಕಿರುವ ಸುಮಾರು 20ರಷ್ಟು ರಾಷ್ಟ್ರಗಳು ಅಮೆರಿಕವನ್ನು ಅನುಮಾನಿಸಿದ್ದೇ ಹೆಚ್ಚು. ಅಮೆರಿಕ ತನ್ನ ದೊಡ್ಡತನವನ್ನು ಪ್ರದರ್ಶಿಸಿದಂತೆಲ್ಲಾ ಈ ರಾಷ್ಟ್ರಗಳು ಹೆಚ್ಚೆಚ್ಚು ಸಮಾಜವಾದಿ ವಿಚಾರಧಾರೆಗೆ ಆಕರ್ಷಿತವಾಗುತ್ತಾ ಹೋದುವು. ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೊ, ವೆನೆಝುವೇಲದ ಚಾವೇಝ್, ಬ್ರೆಝಿಲ್‍ನ ಲುಲ ಡ ಸಿಲ್ವ... ಸಹಿತ ಪ್ರಮುಖ ನಾಯಕರು ದಕ್ಷಿಣ ಅಮೆರಿಕವನ್ನು ಸಾಮ್ರಾಜ್ಯಶಾಹಿ ವಿರೋಧಿಯಾಗಿ ಕಟ್ಟ ತೊಡಗಿದರು. ನಿಜವಾಗಿ, ಈ ದೇಶಗಳು ಅಮೆರಿಕದ ವಿರುದ್ಧ ವಷ್ಟೇ ಒಂದುಗೂಡಿದ್ದಲ್ಲ, ಇಸ್ರೇಲ್‍ನ ವಿರುದ್ಧವೂ ಇವು ಬಹುತೇಕ ಒಂದೇ ದನಿಯಲ್ಲಿ ಮಾತಾಡಿವೆ. ಫೆಲೆಸ್ತೀನ್‍ನ ಸಾರ್ವ ಭೌಮತೆಯನ್ನು ಬಹಿರಂಗವಾಗಿ ಘೋಷಿಸಿದ್ದು ಈ ರಾಷ್ಟ್ರಗಳೇ. ಅಲ್ಲದೆ, ಚಾವೇಝ್‍ರಂತೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳ ಸಂಬಂಧವನ್ನು ಆಫ್ರಿಕ ಮತ್ತು ಅರಬ್  ಜಗತ್ತಿನೊಂದಿಗೆ ಬೆಳೆಸಲು ತೀವ್ರವಾಗಿ ಶ್ರಮಿಸಿದ್ದರು. ಆದ್ದರಿಂದಲೇ, Chavez take care. These people have developed technology. You are very careless. Take care what you eat. What they give you to eat. A little needle and they inject you with. I dont know what.  (ಚಾವೇಝ್ ಜಾಗ್ರತೆ, ಅವರು (ಅಮೆರಿಕ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ನೀನು ತುಂಬಾ ಅಜಾಗರೂಕತೆಯ ವ್ಯಕ್ತಿ. ನೀನು ತಿನ್ನುವಾಗಲೂ ತುಂಬಾ ಜಾಗರೂಕನಾಗಿರಬೇಕು. ತಿನ್ನುವ ಆಹಾರದ ಮೂಲಕವೂ ಅವರು ನಿನಗೆ ಸಣ್ಣ ಸೂಜಿಯನ್ನು ಚುಚ್ಚಬಹುದು) ಎಂದು ಕ್ಯಾಸ್ಟ್ರೊ ಆಗಾಗ ಚಾವೇಝ್‍ರನ್ನು ಎಚ್ಚರಿಸುತ್ತಿದ್ದರು. ಸ್ವತಃ ಫಿಡೆಲ್ ಕ್ಯಾಸ್ಟ್ರೋರ ಮೇಲೆ 900ರಷ್ಟು ಬಾರಿ ಹತ್ಯಾ ಯತ್ನಗಳು ನಡೆದಿವೆ ಎಂದು ಖ್ಯಾತ ಬರಹಗಾರ ಲೂಯಿಸ್ ಬ್ರಿಟ್ಟೊ ಗಾರ್ಸಿಯ ಇತ್ತೀಚೆಗೆ ಬರೆದಿದ್ದರು. ಅಂದ ಹಾಗೆ, ಮೆದುಳು ಆಘಾತದಿಂದ 2004ರಲ್ಲಿ ಮೃತಪಟ್ಟ ಫೆಲೆಸ್ತೀನಿನ ಅಧ್ಯಕ್ಷ ಯಾಸಿರ್ ಅರಫಾತ್‍ರ ಸಾವಿನ ಹಿಂದೆ ಇಸ್ರೇಲ್‍ನ ಕೈವಾಡ ಇದೆ ಎಂಬುದು ಇವತ್ತು ಗುಟ್ಟಾಗಿಲ್ಲವಲ್ಲ.
   ಒಂದು ರೀತಿಯಲ್ಲಿ ಅಮೆರಿಕದ ಅಪ್ಪಣೆಯನ್ನು ಶಿರಸಾ ಪಾಲಿಸುವ ರಾಷ್ಟ್ರಗಳು ಜಗತ್ತಿನಲ್ಲಿ ಅನೇಕಾರು ಇದ್ದರೂ ಅಮೆರಿಕದ ಸುತ್ತಮುತ್ತಲಿನ ಕೆಲವು ರಾಷ್ಟ್ರಗಳು ಅದರ ಹಂಗಿಲ್ಲದೇ ಬದುಕುವ ಪಣತೊಟ್ಟದ್ದು, ಅದಕ್ಕಾಗಿ ಶ್ರಮಿಸಿದ್ದು ಆ ರಾಷ್ಟ್ರಗಳ ನಾಯಕರಿಗೆ ಕ್ಯಾನ್ಸರ್ ಹರಡಲು ಕಾರಣ ಎಂದು ನಂಬುವಂತಹ ವಾತಾವರಣ ಇವತ್ತು ಸೃಷ್ಟಿಯಾಗಿದೆ. ಚಾವೇಝ್ ಅಂತೂ ಅಂಥ ಅನುಮಾನವನ್ನು ವ್ಯಕ್ತಪಡಿಸಿಯೇ ಸಾವಿಗೆ ತುತ್ತಾದರು. ಒಂದು ವೇಳೆ ಇನ್ನೊಂದು ಹತ್ತು ವರ್ಷ ಅವರು ಬದುಕಿರುತ್ತಿದ್ದರೆ ದಕ್ಷಿಣ ಅಮೆರಿಕದ ಒಟ್ಟು ಭೂಪಟವೇ ಬದಲಾಗಿ ಬಿಡುವ ಸಾಧ್ಯತೆಯಿತ್ತು. ಅವರು 2008ರಲ್ಲಿ 12 ರಾಷ್ಟ್ರಗಳ ದಕ್ಷಿಣ ಅಮೆರಿಕನ್ ಒಕ್ಕೂಟವನ್ನು ರಚಿಸಿದರು. ಮಾತ್ರವಲ್ಲ, ಈ ಒಕ್ಕೂಟವನ್ನು ಯುರೋಪಿಯನ್ ಯೂನಿಯನ್‍ಗೆ ಸಡ್ಡು ಹೊಡೆಯುವಂತೆ ಕಟ್ಟುವಲ್ಲಿ ನಿರತರಾದರು. ಈ ಒಕ್ಕೂಟದ ಸದಸ್ಯ ರಾಷ್ಟ್ರಗಳು ಪರಸ್ಪರ ಆರ್ಥಿಕ, ವೈಜ್ಞಾನಿಕ, ರಾಜಕೀಯ ಸಹಕಾರದೊಂದಿಗೆ ಸಮೃದ್ಧವಾಗಿ ಬೆಳೆಯುವುದಕ್ಕೆ ನೀಲನಕ್ಷೆ ರೂಪಿಸಿದರು. ಆದ್ದರಿಂದಲೇ ಈ ರಾಷ್ಟ್ರಗಳು ತಮ್ಮ ಅಗತ್ಯಗಳಿಗೆ ಅಮೆರಿಕವನ್ನು ಅಲಂಬಿಸುವುದರ ಬದಲು, ಪರಸ್ಪರ ಅವಲಂಬಿಸುವ ಹೊಸ ದಾರಿಯನ್ನು ಕಂಡುಕೊಂಡವು. ವಿಶ್ವ ಬ್ಯಾಂಕ್‍ಗೆ ಪರ್ಯಾಯವಾಗಿ ದಿ ಬ್ಯಾಂಕ್ ಆಫ್ ಸೌತ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಬಹುಶಃ ಅಮೆರಿಕವನ್ನು ಮತ್ತು ಅದರ ನೆರವನ್ನು ಅವಲಂಬಿಸದೇ ಬದುಕುವ ಹೊಸ ಸಾಧ್ಯತೆಯನ್ನು ನಿಜಗೊಳಿಸುವತ್ತ ಅವರು ಯಶಸ್ವಿಯಾಗುತ್ತಿರುವುದನ್ನು ಮನಗಂಡೇ 2009ರಲ್ಲಿ ಅವರನ್ನು ಮತ್ತು ಬೊಲಿವಿಯನ್‍ನ ಅಧ್ಯಕ್ಷ ಇವೊ ಮಾರೆಲ್ಸ್ ರನ್ನು ಕೊಲ್ಲಲು CIA  ಶ್ರಮಿಸಿರಬೇಕು. ವಿಮಾನದಲ್ಲಿ ಇವರಿಬ್ಬರು ಸಾಲ್ವಡೋರ್‍ಗೆ ಪ್ರಯಾಣಿಸುತ್ತಿದ್ದಾಗ ಪೊಸಾಡ ಕ್ಯಾರಿಲ್ಸ್ ಎಂಬ ಲಾಂಚರ್ ತಜ್ಞನ ಮುಖಾಂತರ ರಾಕೆಟ್ ಹಾರಿಸಿ ವಿಮಾನವನ್ನು ಉರುಳಿಸಲು CIA ಪ್ರಯತ್ನಿ ಸಿತ್ತು. ಅಲ್ಲದೇ 2002ರಲ್ಲಿ ವೆನೆಜುವೇಲದ ಕೆಲವು ಅತೃಪ್ತ ಮಿಲಿಟರಿ ಅಧಿಕಾರಿಗಳು ಚಾವೇಝ್‍ರನ್ನು 48 ಗಂಟೆಗಳ ಕಾಲ ದಿಗ್ಬಂಧನದಲ್ಲಿರಿಸಿ ಕ್ಷಿಪ್ರ ಕ್ರಾಂತಿಗೆ ಮುಂದಾದಾಗ, ಅಷ್ಟು ಸಣ್ಣ ಅವಧಿಯೊಳಗೆ ಅಮೆರಿಕ ಮತ್ತು IMF  ಆ ಹೊಸ ಸರಕಾರಕ್ಕೆ ಬೆಂಬಲ ಸಾರಿತ್ತು. ಆದರೆ ಆ ಬಳಿಕ ವೆನೆಝುವೇಲದ ಜನರೇ ದಂಗೆಯೆದ್ದು ಕ್ಷಿಪ್ರಕ್ರಾಂತಿಯನ್ನು ವಿಫಲಗೊಳಿಸಿದ್ದರು.
   ಹೀಗಿರುವಾಗ,
ಮುಂದೊಂದು ದಿನ ಅಮೆರಿಕದ ಜನರೇ ದಂಗೆಯೆದ್ದು ಚಾವೇಝ್‍ರ ‘ದೆವ್ವ’(ಅಮೆರಿಕನ್  ಸಾಮ್ರಾಜ್ಯಶಾಹಿ ನೀತಿ)ವನ್ನು ಪದಚ್ಯುತಗೊಳಿಸಲೂಬಹುದಲ್ಲವೇ? ಯಾರಿಗೆ ಗೊತ್ತು?

Tuesday, March 5, 2013

ಈ ಬ್ಲ್ಯಾಕ್ ನ ಎದುರು ಆ ಯೆಲ್ಲೋ ಏನೇನೂ ಅಲ್ಲ..

1. ಗಾಬರಿ ಹುಟ್ಟಿಸುವ, ತಪ್ಪು ದಾರಿಗೆಳೆಯುವ ಶೀರ್ಷಿಕೆಗಳು.
2. ಅನಗತ್ಯವಾಗಿ ಮತ್ತು ಧಾರಾಳವಾಗಿ ಚಿತ್ರಗಳನ್ನು ಬಳಸುವುದು.
3. ಸುಳ್ಳು ಸುದ್ದಿಗಳನ್ನು ಕಲ್ಪಿತ ವಿವರಣೆಗಳೊಂದಿಗೆ ಕೊಡುವುದು.
4. ಸುದ್ದಿಗಳು ಉತ್ಪ್ರೇಕ್ಷಿತವಾಗಿ ಅತಿ ಭಾವುಕತೆಯಿಂದ ಕೂಡಿರುವುದು.
   ಯೆಲ್ಲೋ ಜರ್ನಲಿಝಮ್ (Yellow journalism - ಪೀತ ಪತ್ರಿಕೋದ್ಯಮ) ಎಂಬ ಪದ ಪ್ರಯೋಗವಾದಾಗಲೆಲ್ಲಾ ಅಮೇರಿಕದ ಫ್ರಾಂಕ್ ಲುದರ್‍ಮೋಟ್ ನೆನಪಾಗುತ್ತಾನೆ. ಪುಲಿಟ್ಝರ್ ಪ್ರಶಸ್ತಿ ವಿಜೇತ ಪತ್ರಕರ್ತನಾಗಿರುವ ಈತ, ಪೀತ ಪತ್ರಿಕೋದ್ಯಮದ ಲಕ್ಷಣಗಳನ್ನು ಮೊತ್ತಮೊದಲು ಪಟ್ಟಿ ಮಾಡಿದಾತ. ಆವರೆಗೆ ಯೆಲ್ಲೋ ಜರ್ನಲಿಝಮ್ ಎಂಬ ಪದ ಅಷ್ಟಾಗಿ ಚಾಲ್ತಿಯಲ್ಲಿರಲಿಲ್ಲ. ಓದುಗರಲ್ಲೂ ಆ ಬಗ್ಗೆ ಖಚಿತ ಅಭಿಪ್ರಾಯವಿರಲಿಲ್ಲ. ನಿಜವಾದ ಪತ್ರಿಕೋದ್ಯಮವೆಂದರೆ ‘ಇದು’ ಮತ್ತು ‘ಇದಲ್ಲ’ ಎಂದು ದೃಢವಾಗಿ ಹೇಳುವಂಥ ಪ್ರಯತ್ನಗಳೂ ಆ ವರೆಗೆ ನಡೆದಿರಲಿಲ್ಲ. ಆದರೆ 1896ರ ಬಳಿಕ ಅಮೇರಿಕದಲ್ಲಿ ಕಾಣಿಸಿಕೊಂಡ ಈ ಯೆಲ್ಲೋ ಜರ್ನಲಿಝಮನ್ನು ಅತ್ಯಂತ ಆಸಕ್ತಿಯಿಂದ ಗಮನಿಸಿಕೊಂಡು ಬಂದ ಫ್ರಾಂಕ್, 1941ರಲ್ಲಿ ಮೇಲಿನಂತೆ ಅದರ ಲಕ್ಷಣಗಳನ್ನು ಪಟ್ಟಿ ಮಾಡಿದ. ಅದು ವ್ಯವಸ್ಥೆ ಮತ್ತು ಸಮಾಜದ ಮೇಲೆ ಬೀರುವ ಅಡ್ಡ ಪರಿಣಾಮಗಳ ಬಗ್ಗೆಯೂ ವಿವರಿಸಿದ. ಆತನ ಈ ಅಧ್ಯಯನಕ್ಕೆ ಕಾರಣವೂ ಇದೆ..
1 ಜೋಸೆಫ್ ಪುಲಿಟ್ಝರ್
2 ವಿಲಿಯಂ ರ್ಯಾಂಡಲ್ಪ್ ಹಸ್ರ್ಟ್
   ಯೆಲ್ಲೋ ಜರ್ನಲಿಝಮ್‍ಗೆ ಜನ್ಮ ಕೊಟ್ಟದ್ದೇ ಈ ಇಬ್ಬರು ಅಮೇರಿಕದ ಪತ್ರಿಕೋದ್ಯಮಿಗಳು. 1883ರಲ್ಲಿ ದಿ ನ್ಯೂಯಾರ್ಕ್ ವರ್ಲ್ದ್  ಎಂಬ ಪತ್ರಿಕೆಯನ್ನು ಜೋಸೆಫ್ ಪುಲಿಟ್ಝರ್ ಖರೀದಿಸಿದ. ಆಗ ಆ ಪತ್ರಿಕೆಯ ಪ್ರಸಾರ ಸಂಖ್ಯೆ ತೀರಾ ತಳಮಟ್ಟದಲ್ಲಿತ್ತು. ಆತ ಪತ್ರಿಕೆಯ ಇಡೀ ಸ್ವರೂಪವನ್ನೇ ಬದಲಿಸಲು ತೀರ್ಮಾನಿಸಿದ. ಪತ್ರಿಕೆಯ ದರವನ್ನು ಇಳಿಸಿದ. ಪುಟಗಳನ್ನು 12ಕ್ಕೆ ಏರಿಸಿದ. ಆವತ್ತು ಇತರ ಪತ್ರಿಕೆಗಳು ಅಷ್ಟೇ ದರದಲ್ಲಿ ಕೇವಲ 4 ಪುಟಗಳನ್ನಷ್ಟೇ ನೀಡುತ್ತಿದ್ದವು. ಅಲ್ಲದೇ ಪತ್ರಿಕೆಯಲ್ಲಿ ಕ್ರೈಮ್ ನ್ಯೂಸ್‍ಗಳಿಗೆ ಮುಖಪುಟದಲ್ಲೇ ಜಾಗ ಕೊಟ್ಟ. ರಸವತ್ತಾದ, ಮಸಾಲೆಭರಿತ ಸುದ್ದಿಗಳನ್ನು ಧಾರಾಳ ಕೊಡತೊಡಗಿದ. ಈ ಮೂಲಕ ಓದುಗರಲ್ಲಿ ಒಂದು ಬಗೆಯ ಥ್ರಿಲ್ ಅನ್ನು ಹುಟ್ಟಿಸಲು ಪುಲಿಟ್ಝರ್ ಯಶಸ್ವಿಯಾದ. ಹೀಗೆ ಕೇವಲ ಎರಡೇ ವರ್ಷಗಳಲ್ಲಿ ಇಡೀ ನ್ಯೂಯಾರ್ಕ್ ನಗರದಲ್ಲೇ ಅತ್ಯಂತ ಹೆಚ್ಚು ಖರ್ಚಾಗುವ ಪತ್ರಿಕೆಯಾಗಿ ನ್ಯೂಯಾರ್ಕ್ ವರ್ಲ್ದ್  ಅನ್ನು ತಂದು ನಿಲ್ಲಿಸಿದ. ನಿಜವಾಗಿ, ಸಮಸ್ಯೆ ಪ್ರಾರಂಭವಾದದ್ದೇ ಇಲ್ಲಿ. ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿದ್ದ ವಿಲಿಯಂ ರಾಂಡಲ್ಪ್ ಹರ್ಸ್ಟ್  ಎಂಬ ವಿದ್ಯಾರ್ಥಿ ಈ ಬೆಳವಣಿಗೆಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದ. ಸಣ್ಣ ಅವಧಿಯಲ್ಲಿ ಪುಲಿಟ್ಝರ್ ಏರಿದ ಎತ್ತರ ಆತನನ್ನು ಚಕಿತಗೊಳಿಸಿತ್ತು. ಅಲ್ಲದೇ ಹರ್ಸ್ಟ್ ನ ತಂದೆಯು ‘ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದುದರಿಂದ ಆತನ ಕುತೂಹಲ ಸಹಜವೂ ಆಗಿತ್ತು. ಅಪ್ಪನಿಂದ ‘ಎಕ್ಸಾಮಿನರ್’ ಪತ್ರಿಕೆಯನ್ನು ಪಡಕೊಂಡ ಆತ, ಶೇ. 25ರಷ್ಟು ಜಾಗವನ್ನು ಕ್ರೈಮ್ ನ್ಯೂಸ್‍ಗೇ ಮೀಸಲಿಟ್ಟ. ಇದರ ಮಧ್ಯೆಯೇ, ದಿ ನ್ಯೂಯಾರ್ಕ್ ಜರ್ನಲ್ ಎಂಬ ಪತ್ರಿಕೆಯನ್ನು 1895ರಲ್ಲಿ ಖರೀದಿಸಿದ. ಮಾತ್ರವಲ್ಲ, ನ್ಯೂಯಾರ್ಕ್ ವರ್ಲ್ದ್ ನೊಂದಿಗೆ ಸೆಣಸುವುದಕ್ಕಾಗಿ ದರ ಸಮರಕ್ಕಿಳಿದ. ಪತ್ರಿಕೆಯ ಬೆಲೆಯನ್ನು ಇಳಿಸಿದ. ಭಾವುಕ ಶೀರ್ಷಿಕೆ, ನೈತಿಕ-ಅನೈತಿಕತೆಯನ್ನು ಪರಿಗಣಿಸದ ಚಿತ್ರಗಳು ಮತ್ತು ಮಸಾಲೆ ಲೇಪಿತ ವಿವರಗಳನ್ನು ಪತ್ರಿಕೆಯಲ್ಲಿ ಕೊಡತೊಡಗಿದ. ಎರಡೇ ವರ್ಷಗಳಲ್ಲಿ ನ್ಯೂಯಾರ್ಕ್ ಜರ್ನಲ್‍ನ ಪ್ರಸಾರ ಸಂಖ್ಯೆಯು ನ್ಯೂಯಾರ್ಕ್ ವರ್ಲ್ದ್ ನ  ಪ್ರಸಾರ ಸಂಖ್ಯೆಗೆ ಸಮವಾಗುವಷ್ಟರ ಮಟ್ಟಿಗೆ ಏರಿಬಿಟ್ಟಿತು. ಒಂದು ರೀತಿಯಲ್ಲಿ ಯೆಲ್ಲೋ ಜರ್ನಲಿಝಮ್ ಹುಟ್ಟು ಪಡೆದದ್ದೇ ಇಲ್ಲಿ. ಆದರೆ ಅದು ಅಷ್ಟಕ್ಕೇ ನಿಲ್ಲಲಿಲ್ಲ.
   ಅಮೇರಿಕ - ಸ್ಪೈನ್ ನಡುವೆ ಯುದ್ಧ..
ಬಹುತೇಕ 1800ರಲ್ಲಿಯೇ ಕ್ಯೂಬಾವು ಸ್ಪೈನ್‍ನ ವಸಾಹತು ಆಗಿತ್ತು. ಈ ವಸಾಹತಿನ ವಿರುದ್ಧ ಕ್ಯೂಬಾದಲ್ಲಿ ಬಂಡಾಯವೂ ಕಾಣಿಸಿಕೊಂಡಿತ್ತು. ಆದರೆ ಸ್ಪೈನ್ ಸುಲಭದಲ್ಲಿ ಈ ಬಂಡಾಯಕ್ಕೆ ಮಣಿಯುವಂತೆ ಕಾಣುತ್ತಿರಲಿಲ್ಲ. ತನ್ನ ನೆರೆಯಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಯನ್ನು ಅಮೇರಿಕ ಆಸಕ್ತಿಯಿಂದ ಗಮನಿಸುತ್ತಿತ್ತು. ಕ್ಯೂಬಾದ ಮೇಲೆ ಸ್ಪೈನ್ ಹಕ್ಕು ಸಾಧಿಸುವುದು ಅಮೇರಿಕಕ್ಕೆ ಎಳ್ಳಷ್ಟೂ ಇಷ್ಟವಿರಲಿಲ್ಲ. 1823ರಲ್ಲೇ ಸ್ಪೈನ್‍ಗೆ ಅದು ಎಚ್ಚರಿಕೆಯನ್ನೂ ಕೊಟ್ಟಿತ್ತು. ಈ ಮಧ್ಯೆ 1898ರಲ್ಲಿ ಅಮೇರಿಕದ USS ಮೈನೆ ಎಂಬ ಹಡಗು ಕ್ಯೂಬಾದ ಹವಾನಾ ಬಂದರಿನಲ್ಲಿ ಅನುಮಾನಾಸ್ಪದವಾಗಿ ಮುಳುಗಿಬಿಟ್ಟಿತು. ಅದಾಗಲೇ ಬದ್ಧ ವೈರಿಗಳಂತೆ ಕಾದಾಟದಲ್ಲಿ ತೊಡಗಿದ್ದ ನ್ಯೂಯಾರ್ಕ್ ಜರ್ನಲ್ ಮತ್ತು ನ್ಯೂಯಾರ್ಕ್ ವರ್ಲ್ದ್ ಗಳು ಈ ಸುದ್ದಿಗೆ ತಮ್ಮಿಷ್ಟದ ವ್ಯಾಖ್ಯಾನಗಳನ್ನು ಕೊಡತೊಡಗಿದುವು. ಹಡಗನ್ನು ಯಾರು ಮುಳುಗಿಸಿರಬಹುದು ಎಂಬ ಚರ್ಚೆಯನ್ನು ಪ್ರಾರಂಭಿಸಿ ಕಪೋಲ ಕಲ್ಪಿತ ವಿವರಗಳನ್ನು ಸೃಷ್ಟಿ ಮಾಡಿದುವು. ಅಮೇರಿಕದ ಅಧ್ಯಕ್ಷ  ವಿಲಿಯಂ ಮೆಕಿನ್ಲೆಗೆ ಗೊತ್ತಿಲ್ಲದ ಗುಪ್ತ ಮಾಹಿತಿಗಳನ್ನು ಅವು ಪ್ರಕಟಿಸಿದುವು. ಇಷ್ಟಕ್ಕೂ, ಆ ವರದಿಗಳಿಗೆ  ಆಧಾರಗಳಿತ್ತು ಎಂದಲ್ಲ. ಆಧಾರಗಳಿರುವ ಸುದ್ದಿಗಳನ್ನು ಮಾತ್ರ ಪ್ರಕಟಿಸಬೇಕೆಂಬ ಮೂಲ ತತ್ವಗಳಿಂದ ಅವೆರಡೂ ಯಾವಾಗಲೋ ಹೊರಹೋಗಿತ್ತು. ಆದ್ದರಿಂದಲೇ ರಂಗುರಂಗಾದ, ಕುತೂಹಲಕರ ಸುದ್ದಿ, ವಿಶ್ಲೇಷಣೆ ಗಳು ದಿನಾ ಬರತೊಡಗಿದುವು. ಹಡಗನ್ನು ಮುಳುಗಿಸಿದ್ದು ಸ್ಪೈನ್ ಎಂದು ಅವು ಸ್ವತಃ ಕಂಡಂತೆ ಬರೆದುವು. ಸ್ಪೈನ್‍ನ ದಬ್ಬಾಳಿಕೆ, ಕ್ಯೂಬನ್ನರ ಅಸಹಾಯಕತೆಯ ಕತೆಗಳು ಧಾರಾಳ ಅಚ್ಚಾಗತೊಡಗಿದುವು. ಪತ್ರಿಕೆಗಳ ಸುದ್ದಿಗಳಿಂದ ಪ್ರಭಾವಿತರಾದ ಅಮೇರಿಕನ್ನರು ಸ್ಪೈನ್ ವಿರುದ್ಧ ಸಿಟ್ಟಾಗತೊಡಗಿದರು. ಕೊನೆಗೆ ಸಾರ್ವಜನಿಕ ಒತ್ತಡಕ್ಕೆ ಮಣಿದು ಅಧ್ಯಕ್ಷ  ಮೆಕಿನ್ಲೆ, ಸ್ಪೈನ್‍ನ ವಿರುದ್ಧ ಯುದ್ಧ ಸಾರಬೇಕಾಯಿತು. ಯುದ್ಧದ ಸಚಿತ್ರ ವರದಿ, ಪೋಟೋಗಳನ್ನು ಪಡಕೊಳ್ಳುವುದಕ್ಕಾಗಿ ಎರಡೂ ಪತ್ರಿಕೆಗಳು ತಮ್ಮ ವರದಿಗಾರರನ್ನು ಕಳುಹಿಸಿದುವು. ಅವರಲ್ಲಿ ನ್ಯೂಯಾರ್ಕ್ ಜರ್ನಲ್‍ನ ಫೆಡ್ರಿಕ್ ರೆಮಿಂಗ್ಟನ್ ಎಂಬ ಕಲಾವಿದನೂ (ಕುಂಚದಲ್ಲಿ ಯುದ್ಧದ ಚಿತ್ರ ಬಿಡಿಸುವವ) ಸೇರಿದ್ದ. ಆತ ಅಲ್ಲಿಗೆ ಹೋಗಿ ನೋಡುವಾಗ, ಪತ್ರಿಕೆಯಲ್ಲಿ ಪ್ರಕಟವಾದಂಥ ಸನ್ನಿವೇಶವೇನೂ ಕಾಣಿಸಲಿಲ್ಲ. ಪತ್ರಿಕೆಯಲ್ಲಿ ಏನೆಲ್ಲ ಪ್ರಕಟವಾಗುತ್ತಿತ್ತೋ ಅವೆಲ್ಲ ಕಲ್ಪಿತ ಎನ್ನುವುದು ಆತನಿಗೆ ಮನವರಿಕೆಯಾಗಿ ಬಿಟ್ಟಿತ್ತು. ವರದಿ ಮಾಡಲು ಕುತೂಹಲ ಕಾರಿಯಾದಂಥ ಏನೊಂದೂ ಇಲ್ಲವೆಂದ ಮೇಲೆ ಆತ ಅಲ್ಲಿರುವ ಅಗತ್ಯವಾದರೂ ಏನಿರುತ್ತದೆ? ಆದ್ದರಿಂದ ಆತ, 'ನನ್ನನ್ನು ಹಿಂದಕ್ಕೆ ಕರೆಸಿಕೊಳ್ಳಿ, ಇಲ್ಲಿ ಯುದ್ಧವೇ ನಡೀತಿಲ್ಲ..' ಎಂದು ಹರ್ಸ್ಟ್ ಗೆ ಟೆಲಿಗ್ರಾಮ್ ಕಳುಹಿಸಿದ. ಆದರೆ, 'ನೀನು ಅಲ್ಲೇ ಇದ್ದು ನನಗೆ ಚಿತ್ರವನ್ನು (ಯುದ್ಧದ ಕಲ್ಪಿತ ಚಿತ್ರ) ಒದಗಿಸು,  ನಾನು ಯುದ್ಧ ವನ್ನು ಒದಗಿಸುತ್ತೇನೆ' (you furnish the pictures and i will furnish the war) ಎಂದು ಹರ್ಸ್ಟ್ ಮರಳಿ ಉತ್ತರ ಕೊಟ್ಟ.
   ಹೀಗೆ ತನ್ನ ಸುಳ್ಳು, ಉತ್ಪ್ರೇಕ್ಷಿತ ಪತ್ರಿಕೋದ್ಯಮದ (ಯೆಲ್ಲೋ ಜರ್ನಲಿಝಂ) ಮೂಲಕ ಅಮೇರಿಕವನ್ನು ಯುದ್ಧಕ್ಕೆ ದೂಡುವಲ್ಲಿ ಮತ್ತು ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಹರ್ಸ್ಟ್  ಯಶಸ್ವಿಯಾದ. ಅಂದಹಾಗೆ,
   ಇಂಥ ಪತ್ರಿಕೋದ್ಯಮ 19ನೇ ಶತಮಾನದ ಪಿಡುಗಾಗಿಯಷ್ಟೇ ಇವತ್ತು ಉಳಿದಿದೆಯೇ? ಮೊನ್ನೆಯ ಹೈದಬಾರಾದ್ ಸ್ಫೋಟದ ಸಮಯದಲ್ಲಿ ಹೆಚ್ಚಿನ ಪತ್ರಿಕೆ ಮತ್ತು ಚಾನೆಲ್‍ಗಳು ಕಾಯ್ದುಕೊಂಡ ಸಂಯಮವನ್ನು ಈ ಹಿಂದಿನ ಎಷ್ಟು ಸಂದರ್ಭಗಳಲ್ಲಿ ಕಾಯ್ದುಕೊಂಡಿವೆ? ಈ ಹಿಂದೆ ಅವು ಪ್ರಕಟಿಸಿದ ಚಿತ್ರಗಳು, ವಿಶ್ಲೇಷಣೆಗಳು, ಮುಖಪುಟ ಶೀರ್ಷಿಕೆಗಳೆಲ್ಲ ಯಾವ ಯೆಲ್ಲೋ ಜರ್ನಲಿಝಮ್‍ಗಿಂತ ಕಡಿಮೆಯಿದ್ದುವು? 6 ತಿಂಗಳ ಹಿಂದೆ ಪತ್ರಕರ್ತ ಮುತೀಉರ್ರಹ್ಮಾನ್ ಸಹಿತ ಕೆಲವು ಯುವಕರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದರಲ್ಲ, ಆ ಸಂದರ್ಭದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿ ಹೇಗಿತ್ತು? 19ನೇ ಶತಮಾನದ ನ್ಯೂಯಾರ್ಕ್ ವರ್ಲ್ದ್  ಮತ್ತು ಜರ್ನಲ್‍ಗಳನ್ನು ನಾಚಿಸುವಷ್ಟು ಅವು ಯೆಲ್ಲೋ  ಪೀಡಿತವಾಗಿರಲಿಲ್ಲವೇ? ವಿಲಿಯಂ ಹರ್ಸ್ಟ್  ಮತ್ತು ಪುಲಿಟ್ಝರ್‍ನನ್ನೂ ಮೀರಿಸುವ ಸಾಹಸವನ್ನು ನಮ್ಮ ಕೆಲವು ಪತ್ರಕರ್ತರು ಮಾಡಿದ್ದನ್ನು ಮರೆಯಲಾದೀತೇ? 19ನೇ ಶತಮಾನದಲ್ಲಿ ಪ್ರಾರಂಭವಾದ ಈ ಯೆಲ್ಲೋ ಜರ್ನಲಿಝಮ್ ಈ 21ನೇ ಶತಮಾನದಲ್ಲೂ ಮುಂದುವರಿಯುತ್ತದೆಂದರೆ ಮತ್ತು ಅದನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳಲಾಗುತ್ತದೆಂದರೆ, ಅದಕ್ಕೆ ಏನೆನ್ನ ಬೇಕು? ಮಾಧ್ಯಮಗಳನ್ನು ನಿಯಂತ್ರಿಸುವುದಕ್ಕೂ ಒಂದು ಸಂಸ್ಥೆಯಿರಬೇಕು ಎಂಬ ಒತ್ತಾಯಕ್ಕೆ ಇಂಥ ಘಟನೆಗಳನ್ನು ಯಾಕೆ ಆಧಾರವಾಗಿ ಎತ್ತಿಕೊಳ್ಳಬಾರದು? ಇಷ್ಟಕ್ಕೂ, ಇವತ್ತು ಹೆಚ್ಚಿನ ಮಾಧ್ಯಮಗಳು ಉದ್ದಿಮೆದಾರರ ಕೈಯಲ್ಲೇ ಇವೆ. ಲಾಭವೇ ಇವರ ಮುಖ್ಯ ಗುರಿ. ಅದು ತಪ್ಪು ಎಂದಲ್ಲ. ಆದರೆ ಅದಕ್ಕಾಗಿ ಸಮಾಜವನ್ನು ಪೀಡಿಸಿ, ಬೆತ್ತಲೆಗೊಳಿಸಿ, ಅವಮಾನಿಸುವುದನ್ನು ಯಾಕೆ ಸಹಿಸಬೇಕು? ಮಾಧ್ಯಮ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಕ್ಷೇತ್ರಗಳನ್ನು ಒಮ್ಮೆ ಅವಲೋಕಿಸಿಕೊಳ್ಳಿ. ನ್ಯಾಯವಾದಿಗಳು ತಮ್ಮ ವೃತ್ತಿ ಬದುಕಿನಲ್ಲಿ ತಪ್ಪು ಮಾಡಿದರೆ ಅವರ ಲೈಸೆನ್ಸನ್ನು ರದ್ದುಪಡಿಸುವ ಅಥವಾ ಅಮಾನತ್ತಿನಲ್ಲಿಡುವ ಅಧಿಕಾರ ಬಾರ್ ಕೌನ್ಸಿಲ್‍ಗಿದೆ. ಸುಪ್ರೀಮ್ ಕೋರ್ಟ್‍ ನ  ನ್ಯಾಯಾಧೀಶರು ಅಥವಾ ಹೈಕೋರ್ಟಿನ ನ್ಯಾಯಾಧೀಶರು 'ಕ್ರಮ' ತಪ್ಪಿದರೆ ಪಾರ್ಲಿಮೆಂಟ್  ವಾಗ್ದಂಡನೆ (Impeachment) ವಿಧಿಸುತ್ತದೆ. ಇದೇ ರೀತಿ ವೈದ್ಯರು, ಚಾರ್ಟರ್ಡ್ ಅಕೌನ್ ಟೆನ್ಸ್ ಗಳೆಲ್ಲ ವೃತ್ತಿ ಬದುಕಿನ ಗೌರವವನ್ನು ಕಾಪಾಡದಿದ್ದರೆ ಸಂಬಂಧಿತ ಸಂಸ್ಥೆಗಳು ಕ್ರಮ ಜರುಗಿಸುತ್ತವೆ. ಹಾಗಂತ ಮಾಧ್ಯಮ ಕ್ಷೇತ್ರದಲ್ಲಿ ಇಂಥದ್ದೊಂದು ಸಂಸ್ಥೆ ಇರದಿರುವುದಕ್ಕೆ ಕಾರಣವೇನು? ಮಾಧ್ಯಮಗಳು ತಮ್ಮನ್ನು ಸ್ವಯಂ ನಿಯಂತ್ರಿಸಿಕೊಳ್ಳಲಾರವು ಎಂಬುದಕ್ಕೆ 'ಸ್ಫೋಟ' ಪ್ರಕರಣಗಳ ಸಂದರ್ಭಗಳಲ್ಲಿ ಪ್ರಕಟವಾಗುವ ಸುದ್ದಿಗಳೇ ಪುರಾವೆಯಲ್ಲವೇ? ಇಷ್ಟಿದ್ದೂ, ಮಾಧ್ಯಮ ಪ್ರಮುಖರೇಕೆ 'ಸ್ವನಿಯಂತ್ರಣ' ಹಕ್ಕಿನ ಬಗ್ಗೆ ವಾದಿಸುತ್ತಿದ್ದಾರೆ? ಇತರೆಲ್ಲ ಕ್ಷೇತ್ರಗಳಿಗೆ ಸಾಧ್ಯವಾಗದ ಸ್ವನಿಯಂತ್ರಣವು ಮಾಧ್ಯಮ ಕ್ಷೇತ್ರಕ್ಕೆ ಸಾಧ್ಯ ಎಂದು - ಅದೂ ಇಷ್ಟೆಲ್ಲಾ ವೈಫಲ್ಯಗಳ ಬಳಿಕವೂ - ವಾದಿಸುವುದು ಎಷ್ಟು ಸರಿ? ಈ ದೇಶದಲ್ಲಿ ಕಳ್ಳತನಕ್ಕೆ ಪ್ರತ್ಯೇಕವಾದ ದಂಡಸಂಹಿತೆ ಇದೆ. ಅತ್ಯಾಚಾರಕ್ಕೆ, ಮೋಸಕ್ಕೆ, ಕೊಲೆ.. ಹೀಗೆ ಎಲ್ಲದಕ್ಕೂ ಬೇರೆ ಬೇರೆ ಕಾನೂನುಗಳಿವೆ. ಹಾಗಂತ, ಈ ದಂಡಸಂಹಿತೆಗಳನ್ನೆಲ್ಲಾ ರದ್ದುಪಡಿಸಿಬಿಡಿ, ನಾವು ಸ್ವಯಂ ನಿಯಂತ್ರಣ ಮಾಡಿಕೊಳ್ಳುತ್ತೇವೆ ಎಂದು ಕಳ್ಳರು, ಅತ್ಯಾಚಾರಿಗಳು, ವಂಚಕರು ಹೇಳಿದರೆ ಅದನ್ನು ಒಪ್ಪಿಕೊಳ್ಳಲಾಗುತ್ತಾ?
   ವಿಲಿಯಂ ಹರ್ಸ್ಟ್  ಮತ್ತು ಪುಲಿಟ್ಝರ್ 19ನೇ ಶತಮಾನದಲ್ಲಿ ಪ್ರಾರಂಭಿಸಿದ ಯೆಲ್ಲೋ ಜರ್ನಲಿಝಮನ್ನು ಇವತ್ತು ಹೆಚ್ಚಿನೆಲ್ಲಾ ಮಾಧ್ಯಮ ಕೇಂದ್ರಗಳೂ ಗೌರವಪೂರ್ವಕ ನೆಚ್ಚಿಕೊಂಡಿವೆ. ಉತ್ಪ್ರೇಕ್ಷಿತ, ಕಪೋಲ ಕಲ್ಪಿತ, ಸುಳ್ಳು ಸುದ್ದಿಗಳು ಮತ್ತು ಶೀರ್ಷಿಕೆಗಳನ್ನೇ ಹೆಚ್ಚಿನ ಪತ್ರಿಕೆಗಳು ತಮ್ಮ ಮಾರಾಟ ತಂತ್ರವಾಗಿ ಅಳವಡಿಸಿಕೊಂಡಿವೆ. ಇಂಥ ಹೊತ್ತಲ್ಲಿ, 19ನೇ ಶತಮಾನದ ಹರ್ಸ್ಟ್ ನನ್ನೋ ಪುಲಿಟ್ಝರ್ ನನ್ನೋ ದೂರಿ ಪ್ರಯೋಜನವಿಲ್ಲ. ಬುದ್ಧಿವಂತಿಕೆ, ಸುದ್ದಿ ಸೃಷ್ಟಿಸುವಿಕೆ, ಮಾರಾಟ ತಂತ್ರದಲ್ಲಿ ಅವರಿಬ್ಬರನ್ನೂ ಮೀರಿಸುವ ನಿಪುಣರು ಇವತ್ತು ಮಾಧ್ಯಮ ಕೇಂದ್ರದಲ್ಲಿ ಕೂತಿದ್ದಾರೆ. ಬಹುಶಃ ಈಗಿನ ಪತ್ರಿಕೋದ್ಯಮಕ್ಕೆ ಯೆಲ್ಲೋದ ಬದಲು ಬ್ಲ್ಯಾಕ್ (ಕರಾಳ) ಜರ್ನಲಿಝಮ್ ಎಂಬ ಹೆಸರು ಸೂಕ್ತವಾದೀತೇನೋ?