Monday, June 25, 2012

ಮಣಿಶಂಕರ್ ರನ್ನು ಹೊರಕ್ಕಟ್ಟಿದವರು ಪ್ರಣವ್ ರನ್ನು ಬಿಡುತ್ತಾರಾ?

ವೊಡಾಪೋನ್
ಏರ್ಸೆಲ್-ಮ್ಯಾಕ್ಸಿಸ್
ವಾಲ್ಮಾರ್ಟ್
ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಬ್ರಿಟನ್, ನೆದರ್ಲ್ಯಾಂಡ್ , ಅಮೇರಿಕ, ಸ್ವಿಟ್ಝರ್ಲ್ಯಾ oಡ್ ನಂಥ  ಪ್ರಬಲ ರಾಷ್ಟ್ರಗಳ ಒತ್ತಡಗಳಿಂದಾಗಿ ಪ್ರಣವ್ ಮುಖರ್ಜಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆಯೇ? ಹಣಕಾಸು ಖಾತೆಯನ್ನು ಅವರಿಂದ ಕಿತ್ತುಕೊಳ್ಳುವುದಕ್ಕೆ ಭಾರೀ ಷಡ್ಯಂತ್ರಗಳು ನಡೆದಿವೆಯೇ?
           ಇವು ಬರೇ ಅನುಮಾನಗಳಷ್ಟೇ ಅಲ್ಲ..
2012 ಮೇ 7ರಂದು ಭಾರತಕ್ಕೆ ಭೇಟಿ ಕೊಟ್ಟ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಮೊದಲು ಪ್ರಧಾನಿ ಮನಮೋಹನ್ ಸಿಂಗ್  ರನ್ನು ಭೇಟಿಯಾಗುತ್ತಾರೆ. ಇರಾನ್ ನ  ಜೊತೆ ಭಾರತದ ಸಂಬಂಧ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲೇ ವಿದೇಶಿ ಹೂಡಿಕೆಗೆ (F D I - Foreign  Direct Investment ) ಅವಕಾಶ ಒದಗಿಸುವುದು, ಏರ್ಸೆಲ್-ಮ್ಯಾಕ್ಸಿಸ್ ನಡುವಿನ ಒಪ್ಪಂದದ ಕುರಿತಂತೆ ಇರುವ ತಕರಾರುಗಳು ಮತ್ತು ತೈಲ, ಗ್ಯಾಸ್ ಮತ್ತು ಪರಮಾಣು ಕ್ಷೇತ್ರದಲ್ಲಿ ಬಂಡವಾಳ  ಹೂಡಿಕೆಯ ಬಗ್ಗೆ ಅವರಿಬ್ಬರೂ ಸುದೀರ್ಘ ಮಾತುಕತೆ ನಡೆಸುತ್ತಾರೆ. ಆ ಬಳಿಕ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಾಲ್ಮಾರ್ಟ್ ನಂಥ ಬೃಹತ್ ಕಂಪೆನಿಗಳ ಪ್ರವೇಶವನ್ನು ಪ್ರಬಲವಾಗಿ ವಿರೋಧಿಸುವ ಮಮತಾ ಬ್ಯಾನರ್ಜಿಯನ್ನು ಪಶ್ಚಿಮ ಬಂಗಾಳಕ್ಕೆ ಹೋಗಿ ಕ್ಲಿಂಟನ್ ಭೇಟಿಯಾಗುತ್ತಾರೆ. ಅಷ್ಟಕ್ಕೂ ಹಿಲರಿ ಕ್ಲಿಂಟನ್ ರ  ಸ್ಥಾನಮಾನ, ಹುದ್ದೆಯ ಎದುರು ಮುಖ್ಯಮಂತ್ರಿ ಮಮತಾ ಯಾವ ಲೆಕ್ಕ? ಆದರೂ ಹಿಲರಿಯೇ ಮಮತಾರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದೇಕೆ? ಮಮತಾರ ತೃಣಮೂಲ ಕಾಂಗ್ರೆಸ್ ಯುಪಿಎಯ ಅಂಗಪಕ್ಷವಾಗಿದ್ದು, F D I ಗೆ ಅದು ವ್ಯಕ್ತಪಡಿಸುತ್ತಿರುವ ವಿರೋಧವನ್ನು ತಣ್ಣಗಾಗಿಸುವ ಉದ್ದೇಶವನ್ನು ಆ ಭೇಟಿ ಹೊಂದಿತ್ತು ಅನ್ನುವುದನ್ನು ಅಲ್ಲಗಳೆಯಬಹುದಾ?
        ಬಹುರಾಷ್ಟ್ರೀಯ ಕಂಪೆನಿಗಳ ಲಾಬಿಯ ಪರಿಚಯ ಇದ್ದವರು, ಹಿಲರಿ ಕ್ಲಿಂಟನ್ ರ  ಬಂಗಾಳ ಭೇಟಿಯನ್ನು ಕ್ಷುಲ್ಲಕ ಅನ್ನಲು ಸಾಧ್ಯವೇ ಇಲ್ಲ.
ಹಿಲರಿ - ಮಮತಾ
        ಕಲ್ಲಿದ್ದಲಿನ ಮೂಲಕ ವಿದ್ಯುತ್ ತಯಾರಿಸುವ ಬೃಹತ್ ಯೋಜನೆಯನ್ನು 1990ರಲ್ಲಿ ಎನ್ರಾನ್ ಭಾರತದ ಮುಂದಿಡುತ್ತದೆ. ಅದರ ಬೆನ್ನಿಗೇ ಇಂಧನ ಮತ್ತು ರಕ್ಷಣಾ ಇಲಾಖೆಯ ಕಾರ್ಯದರ್ಶಿಗಳ ಜೊತೆ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಭಾರತಕ್ಕೆ ಭೇಟಿ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ ಎನ್ರಾನನ್ನು ಸ್ಥಾಪಿಸುವ ಬಗ್ಗೆ ಒಪ್ಪಂದವಾಗುತ್ತದೆ. ಭಾರತದ ನೀತಿ ನಿರೂಪಕರಲ್ಲಿ (Policy Makers)  ಅರಿವು ಮೂಡಿಸುವುದಕ್ಕೆ 60 ಮಿಲಿಯನ್ ಡಾಲರ್ ಖರ್ಚು ಮಾಡಿರುವೆನೆಂದು ಆ ಬಳಿಕ ಎನ್ರಾನ್ ಒಪ್ಪಿಕೊಳ್ಳುತ್ತದೆ. ಅಂದಹಾಗೆ, ಅಂದು ಎನ್ರಾನ್ ನ  ಪರ ಕಿಸಿಂಜರ್ ಬಂದಿದ್ದರೆ ಇಂದು ಅಮೇರಿಕದ ವಾಲ್ಮಾರ್ಟ್ ನ  ಪರ ಹಿಲರಿ ಬಂದಿಲ್ಲ ಎಂದು ಹೇಗೆ ಹೇಳುವುದು? ಮೆಕ್ಸಿಕೋದ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಬಂಡವಾಳ ಹೂಡುವುದಕ್ಕಾಗಿ ತಾನು ಲಂಚ ಕೊಟ್ಟಿದ್ದೆ ಎಂದು ವಾಲ್ಮಾರ್ಟ್ ಇತ್ತೀಚೆಗಷ್ಟೆ ಹೇಳಿಕೊಂಡಿತ್ತು. ಅದು ಅಮೇರಿಕದಲ್ಲಿ ವಿವಾದವನ್ನೂ ಉಂಟು ಮಾಡಿತ್ತಲ್ಲದೆ ತನಿಖೆಗೂ ಆದೇಶಿಸಲಾಗಿತ್ತು. ನಿಜವಾಗಿ, ವಾಲ್ ಮಾರ್ಟ್ ನಂತಹ ಬೃಹತ್ ಕಂಪೆನಿಗಳು ಲಂಚ ಕೊಟ್ಟೋ, ಲಾಬಿ ನಡೆಸಿಯೋ ವಿವಿಧ ದೇಶಗಳಿಂದ ಕಾಂಟ್ರ್ಯಾಕ್ಟ್ ಗಳನ್ನು ಪಡಕೊಳ್ಳುತ್ತವೆ. 190 ರಾಷ್ಟ್ರಗಳಲ್ಲಿ ಸಂಸ್ಥೆಗಳನ್ನು ಹೊಂದಿರುವ, 3,60,000 ಉದ್ಯೋಗಿಗಳಿರುವ ಯುರೋಪಿನ ಬೃಹತ್ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕಂಪೆನಿ ಸಿಯೆಮೆನ್ಸ್ ಗೆ  (Siemens) 2011 ಡಿಸೆಂಬರ್ ನಲ್ಲಿ ಜರ್ಮನಿಯಲ್ಲಿ 1.6 ಮಿಲಿಯನ್ ಡಾಲರ್ ದಂಡ ವಿಧಿಸಲಾಯಿತು. 2001ರಿಂದ 2011ರ ನಡುವೆ ಅರ್ಜೆಂಟೀನಾ, ಬಾಂಗ್ಲಾ, ಚೀನಾ, ರಶ್ಯ, ವೆನೆಝುವೇಲಾ ಮತ್ತಿತರ ರಾಷ್ಟ್ರಗಳಲ್ಲಿ ಲಂಚದ ಮೂಲಕ ಅದು ಕಾಂಟ್ರ್ಯಾಕ್ಟ್ ಗಳನ್ನು ಪಡಕೊಂಡಿರುವುದು ತನಿಖೆಯಿಂದ ಬಹಿರಂಗವಾಗಿತ್ತು. ನಿಜವಾಗಿ ಸಿಯೆಮೆನ್ಸ್ ಅನ್ನು ಇಸ್ರೇಲ್ ಸಹಿತ ಯುರೋಪಿಯನ್ ರಾಷ್ಟ್ರಗಳೆಲ್ಲಾ ಬಹಿಷ್ಕರಿಸಬೇಕಾಗಿತ್ತು. ಜರ್ಮನಿಯ ಈ ಸಿಯೆಮೆನ್ಸ್, ಎರಡನೇ ವಿಶ್ವ ಯುದ್ಧದಲ್ಲಿ ಹಿಟ್ಲರ್ ನನ್ನು ಬಹಿರಂಗವಾಗಿ ಬೆಂಬಲಿಸಿತ್ತು. ನಾಝಿ ಪಕ್ಷಕ್ಕೆ ಚಂದಾ ಎತ್ತಿತ್ತು. ಯಹೂದಿಗಳನ್ನು ವಿದ್ಯುತ್ ಹಾಯಿಸಿ ಕೊಲ್ಲಲಾಗಿದೆಯೆಂದು (ಹಾಲೋಕಾಸ್ಟ್) ಹೇಳಲಾಗುವ ಕಾನ್ಸನ್ ಟ್ರೇಶನ್ ಕ್ಯಾಂಪ್ ಗೆ  (ಮನೆ) ವಿದ್ಯುತ್ ಹರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟದ್ದು ಇದೇ ಸಿಯೆಮೆನ್ಸ್. ಆದರೆ ಹಾಲೋಕಾಸ್ಟನ್ನು ಒಪ್ಪದ ಅಹ್ಮದಿ ನೆಜಾದ್ ರನ್ನು ಖಂಡಿಸುವ, ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಗುಂಥರ್ ಗ್ರಾಸ್ ಗೆ  ಬಹಿಷ್ಕಾರವನ್ನು ಹಾಕುವ ಇದೇ ಇಸ್ರೇಲ್, 2009ರಲ್ಲಿ ಸಿಯೆಮೆನ್ಸ್ ಜೊತೆ 418 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಇದನ್ನು ಏನೆಂದು ಕರೆಯಬೇಕು? ಅಂದಹಾಗೆ ಹಾಲೋಕಾಸ್ಟನ್ನು ನಿರಾಕರಿಸುವುದು ಯುರೋಪಿಯನ ರಾಷ್ಟ್ರಗಳಲ್ಲಿ ಶಿಕ್ಷಾರ್ಹ ಅಪರಾಧ. ಅವೇ ರಾಷ್ಟ್ರಗಳು ಹಾಲೋಕಾಸ್ಟ್ ಗೆ  ಸಹಕರಿಸಿದ ಸಿಯೆಮೆನ್ಸ್ ಗೆ  ಕಾಂಟ್ಯಾಕ್ಟ್ ಗಳನ್ನೂ ಕೊಡುತ್ತಿವೆ. ಇದಕ್ಕೇನು ಕಾರಣ?
            1950ರಿಂದಲೇ ಭಾರತ ಸರಕಾರದ ನೀತಿಗಳ ಮೇಲೆ ವಿದೇಶಿ ಪ್ರಭಾವಗಳು ಇದ್ದಿದ್ದರೂ 1980ರ ವರೆಗೆ ಅದಕ್ಕೊಂದು ಮಿತಿ, ನಿಯಂತ್ರಣ ಇತ್ತು.
          ಆದರೆ 1986 ಮಾರ್ಚ್ 26ರಂದು ಸ್ವೀಡನ್ನ ಬೋಫೋರ್ಸ್ ಕಂಪೆನಿಯೊಂದಿಗೆ 1500 ಕೋಟಿ ರೂಪಾಯಿಯ ವ್ಯವಹಾರಕ್ಕೆ ಭಾರತ ಯಾವಾಗ ಸಹಿ ಹಾಕಿತೋ ಅಂದಿನಿಂದಲೇ ಭಾರತದ ರಾಜಕಾರಣಿಗಳನ್ನು ಆಳುವ ಹಂತಕ್ಕೆ ವಿದೇಶಿ ಕಂಪೆನಿಗಳು ತಲುಪಿಬಿಟ್ಟವು. 1987 ಎಪ್ರಿಲ್ 16ರಂದು ಸ್ವೀಡನ್ನಿನ ರೇಡಿಯೋವೊಂದು ಮೊತ್ತಮೊದಲ ಬಾರಿಗೆ ಬೋಫೋರ್ಸ್ ವ್ಯವಹಾರದಲ್ಲಿ ಭಾರತದ ರಾಜಕಾರಣಿಗಳು ಮತ್ತು ರಕ್ಷಣಾ ಅಧಿಕಾರಿಗಳಿಗೆ ಲಂಚ ಪಾವತಿಯಾಗಿರುವುದಾಗಿ ಸುದ್ದಿ ಸ್ಫೋಟಿಸಿತು. ಬೋಫೋರ್ಸ್ ಕಂಪೆನಿಯ ನಿರ್ದೇಶಕ ಮಾರ್ಟಿನ್ ಲಿರ್ಬೊರ ಖಾಸಗಿ ಡೈರಿಯೊಂದರ ಆಧಾರದಲ್ಲಿ ಚಿತ್ರಾ ಸುಬ್ರಹ್ಮಣ್ಯಮ್ ಎಂಬ ಪತ್ರಕರ್ತೆ ದಿ ಹಿಂದೂ ಪತ್ರಿಕೆಯಲ್ಲಿ ಇಡೀ ಬೋಫೋರ್ಸ್ ವ್ಯವಹಾರವನ್ನೇ ಬಿಚ್ಚಿಡಲು ಪ್ರಾರಂಭಿಸಿದಾಗ ಜನ ದಂಗಾಗಿ ಬಿಟ್ಟರು. ರಾಜಕೀಯದಲ್ಲಿ ಬಿರುಗಾಳಿ ಎದ್ದಿತು. ಇಟಲಿಯ ಶಸ್ತ್ರಾಸ್ತ್ರ ದಲ್ಲಾಳಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ರಾಜೀವ್ ಗಾಂಧಿ ನಡುವೆ ಇದ್ದ ಸಂಬಂಧ, ಬೋಫೋರ್ಸ್ ನಿರ್ದೇಶಕ ಮಾರ್ಟಿನ್ ರ  ಡೈರಿಯಲ್ಲಿQ ಮತ್ತು R ಎಂಬ ಸಾಂಕೇತಿಕ ಅಕ್ಷರಗಳಲ್ಲಿ ನಮೂದಿಸಲಾಗಿದ್ದ ಲಂಚದ ವಿವರಗಳು, ಸ್ವಿಸ್ ಬ್ಯಾಂಕಲ್ಲಿ ಕ್ವಟ್ರೋಚಿ ಹೊಂದಿದ್ದ ಎರಡು ಬ್ಯಾಂಕ್ ಖಾತೆಗಳು ಮತ್ತು ಕೋಟ್ಯಂತರ ದುಡ್ಡುಗಳ ವಿವರಗಳೆಲ್ಲಾ ಬಹಿರಂಗವಾದುವು. ಬಳಿಕ ಸಿಬಿಐಗೆ ತನಿಖೆಯ ಹೊಣೆಯನ್ನು ವಹಿಸಲಾಯಿತಲ್ಲದೇ ಕ್ವಟ್ರೋಚಿಯ ವಿರುದ್ಧ ಇಂಟರ್ ಪೋಲ್ ವಾರೆಂಟನ್ನು ಹೊರಡಿಸಲಾಯಿತು. ಇದೇ ವೇಳೆ, ಯೂನಿಯನ್ ಕಾರ್ಬೈಡ್ ದುರಂತದ ಪ್ರಮುಖ ಆರೋಪಿ ವಾರನ್ ಆಂಡರ್ಸನ್ ನನ್ನು ಭಾರತದಿಂದ ಸುರಕ್ಷಿತವಾಗಿ ಅಂದಿನ ಕಾಂಗ್ರೆಸ್ ಸರಕಾರವು ವಿದೇಶಕ್ಕೆ ರಾತೋರಾತ್ರಿ ವಿಮಾನದಲ್ಲಿ ಕಳುಹಿಸಿ ಕೊಟ್ಟಂತೆ ಕ್ವಟ್ರೋಚಿಯನ್ನೂ ರಹಸ್ಯವಾಗಿ ವಿದೇಶಕ್ಕೆ ರವಾನಿಸಿತು. ಇಂಟರ್ ಪೋಲ್  ವಾರೆಂಟ್ ಇದ್ದರೂ ಕ್ವಟ್ರೋಚಿ ವಿದೇಶಗಳಲ್ಲಿ ಪತ್ರಿಕೆಗಳಿಗೆ ಸಂದರ್ಶನ ಕೊಡುತ್ತಿದ್ದ. 2007 ಫೆಬ್ರವರಿ 6ರಂದು ಇಂಟರ್ ಪೋಲ್ ವಾರೆಂಟ್ ಪ್ರಕಾರ ಅರ್ಜೆಂಟೀನಾದಲ್ಲಿ ಕ್ವಟ್ರೋಚಿಯನ್ನು ಬಂಧಿಸಲಾಯಿತಾದರೂ ಸಿಬಿಐಯು ಗೊತ್ತೇ ಇಲ್ಲದಂತೆ ನಟಿಸಿತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಅದು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದೇ ಬಂಧನದ 4 ತಿಂಗಳ ಬಳಿಕ ಜೂನ್ ನಲ್ಲಿ. ಸಿಬಿಐಯ ಬದ್ಧತೆಯನ್ನೇ ಅರ್ಜೆಟೀನಾ ಕೋರ್ಟು ಪ್ರಶ್ನಿಸಿತು. ಸರಿಯಾದ ದಾಖಲೆಗಳನ್ನೇ ಒದಗಿಸದ ನಿಮಗೆ ಕ್ವಟ್ರೋಚಿಯನ್ನು ಕೊಡಲಾರೆ ಅಂದಿತು. ನಿಜವಾಗಿ, ಕ್ವಟ್ರೋಚಿ ವಿಷಯದಲ್ಲಿ ಮುಂದುವರಿಯದಂತೆ ಭಾರತ ಸರಕಾರಕ್ಕೆ ತಾಕೀತು ಮಾಡಲು ವಿದೇಶಿ ರಾಷ್ಟ್ರಗಳ ಮುಖಾಂತರ ಬೋಫೋರ್ಸ್ ಯಶಸ್ವಿಯಾಗಿತ್ತು. ಹೀಗಿರುವಾಗ ಸಿಬಿಐ ಮಾಡುವುದಾದರೂ ಏನು? ಜವಾಹರ್ಲಾಲ್ ನೆಹರು ಯುನಿವರ್ಸಿಟಿಯಲ್ಲಿ ನಿರ್ದೇಶಕರಾಗಿರುವ ಅರುಣ್ ಕುಮಾರ್ ಇತ್ತೀಚೆಗೆ ದಿ ಹಿಂದೂ ಪತ್ರಿಕೆಯಲ್ಲಿ ಈ ಬಗ್ಗೆ ಹೀಗೆ ಬರೆದಿದ್ದರು,
ನಾನು ಇತ್ತೀಚೆಗೆ ಮಾಜಿ ಸಚಿವರೊಬ್ಬರನ್ನು ಭೇಟಿಯಾಗಿದ್ದೆ. ಕಪ್ಪು ಹಣದ ಬಗ್ಗೆ ಅವರಲ್ಲಿ ಮಾತಾಡಿದೆ. ಅವರು ಬೋಫೋರ್ಸ್  ಫೈಲನ್ನು ಹಿಡಿದುಕೊಂಡು ಒಮ್ಮೆ ಪ್ರಧಾನ ಮಂತ್ರಿಯ ಬಳಿಗೆ ಹೋಗಿದ್ದರಂತೆ. ಆಗ ಪ್ರಧಾನಿಯವರು, `ಆ ಫೈಲನ್ನು ಮುಚ್ಚಿಬಿಡು. ಅದನ್ನು ತೆರೆದರೆ ನನ್ನ ಜೀವಕ್ಕೆ ಅಪಾಯ ಇದೆ’ ಎಂದಿದ್ದರಂತೆ.
           ಆದ್ದರಿಂದಲೇ, `ರಾಷ್ಟ್ರಪತಿ' ಪ್ರಣವ್ ಮುಖರ್ಜಿಯ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುವುದು..
ಚಿದಂಬರಮ್ ರಿಂದ  ಹಣಕಾಸು ಖಾತೆಯನ್ನು ಪಡಕೊಂಡ ಪ್ರಣವ್ ಮುಖರ್ಜಿಯವರು, 2ಜಿ ಸ್ಪೆಕ್ಟ್ರಂನ ಬಗ್ಗೆ ಕಠಿಣ ನಿಲುವನ್ನು ತಾಳಿದರು. ಒಂದು ಹಂತದಲ್ಲಿ ಚಿದಂಬರಮ್ ರ  ವಿರುದ್ಧವೇ ಧ್ವನಿ ಎತ್ತಿದರು. ಕಪ್ಪು  ಹಣವನ್ನು ಭಾರತಕ್ಕೆ ತರುವ ಬಗ್ಗೆಯೂ ಅವರಲ್ಲಿ ಸ್ಪಷ್ಟ ನಿಲುವು ಇತ್ತು. ವೊಡಾಪೋನ್ ವಿವಾದದಲ್ಲಿ ಅವರ ಕಠಿಣ ನಿಲುವು, ಬ್ರಿಟನ್ ಮತ್ತು ನೆದರ್ ಲ್ಯಾಂಡ್ ಗಳನ್ನು ತಳಮಳಗೊಳಿಸಿತ್ತು. ಮುಖ್ಯವಾಗಿ, ಭಾರತದಿಂದ ತೆರಿಗೆಯನ್ನು ತಪ್ಪಿಸಿಕೊಳ್ಳುವ ತಂತ್ರವೊಂದಕ್ಕೆ ವೊಡಾಪೋನ್ ಕೈ ಹಾಕಿತ್ತು. ಅದಕ್ಕಾಗಿ ಅದು ಕಂಪೆನಿಯ ನಿಜವಾದ ಮಾಲಿಕರ ಗುರುತನ್ನು ಅಡಗಿಸುವ ಪ್ರಯತ್ನ ಮಾಡಿತು. ಮಾರಿಷಸ್ ಮೂಲಕ ಬಂಡವಾಳ ಬಂದರೆ ಅದಕ್ಕೆ ತೆರಿಗೆ ವಿನಾಯಿತಿಯಿದೆ ಅನ್ನುವ 2003ರ ಸುಪ್ರೀಮ್ ಕೋರ್ಟ್ ನ  ತೀರ್ಪನ್ನು ದುರುಪಯೋಗಿಸಲು ವೊಡಾಪೋನ್ ಯೋಜನೆ ರೂಪಿಸಿತು. ಆಝಾದಿ ಬಚಾವೋ ಆಂದೋಲನ್ ಮತ್ತು ಭಾರತ ಸರಕಾರದ ನಡುವಿನ ವಿವಾದವನ್ನು ಬಗೆಹರಿಸುವ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ಈ ತೀರ್ಪನ್ನು ಬಹುರಾಷ್ಟ್ರೀಯ ಕಂಪೆನಿಯಾದ ವೊಡಾಫೋನ್ ಬಳಸಿಕೊಳ್ಳುವುದನ್ನು ಮುಖರ್ಜಿ ಬಲವಾಗಿ ವಿರೋಧಿಸಿದರು. ವೊಡಾಫೋನ್ ಗೆ  ತೆರಿಗೆ ವಿನಾಯಿತಿ ಸಾಧ್ಯವಿಲ್ಲ ಎಂದು ಅವರು ಪಟ್ಟು ಹಿಡಿದರು. ನಿಜವಾಗಿ ಚಿದಂಬರಮ್ ವಿತ್ತ ಮಂತ್ರಿಯಾಗಿದ್ದಾಗ ನಡೆದ 2ಜಿ ಸ್ಪೆಕ್ಟ್ರಮ್ ನ  ಬಗ್ಗೆ, ವೊಡಾಫೋನ್, ಏರ್ಸೆಲ್-ಮ್ಯಾಕ್ಸಿಸ್ ನಂತಹ ಬೃಹತ್ ಕಂಪೆನಿಗಳ ವ್ಯವಹಾರದ ಕುರಿತಂತೆ ಮುಖರ್ಜಿಯ ನಿಲುವು ಕಾರ್ಪೋರೇಟ್ ವಲಯದಲ್ಲಿ ತೀವ್ರ ಅಸಮಾಧಾನವನ್ನು ಸೃಷ್ಟಿಸಿವೆ. ಒಂದು ರೀತಿಯಲ್ಲಿ, ವಿತ್ತ ಮಂತ್ರಿಯಾಗಿ ಅವರನ್ನು ಸಹಿಸಿಕೊಳ್ಳುವುದು ಕಾರ್ಪೋರೇಟ್ ಸಂಸ್ಥೆಗಳಿಗೆ ಇವತ್ತು ಸಾಧ್ಯವಾಗುತ್ತಿಲ್ಲ.
            ಯಾರೇನೇ ಹೇಳಲಿ, ಭಾರತ ಸಹಿತ ಜಗತ್ತಿನ ಹೆಚ್ಚಿನೆಲ್ಲಾ ರಾಷ್ಟ್ರಗಳ ನೀತಿಗಳನ್ನು ರೂಪಿಸುವುದು ಬೃಹತ್ ಕಂಪೆನಿಗಳೇ. ಯಾರಿಗೆ ಯಾವ ಖಾತೆ ಕೊಡಬೇಕು, ಯಾರು ಪ್ರಧಾನಿ ಆಗಬೇಕು, ವಿದೇಶಾಂಗ, ಹಣಕಾಸು, ಆರೋಗ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುವುದೂ ಅವುಗಳೇ. ಅವು ತಮ್ಮ ಬಯಕೆಯನ್ನು ಅಮೇರಿಕದಂಥ ರಾಷ್ಟ್ರಗಳ ಮುಖಾಂತರ ಜಾರಿಗೆ  ತರುತ್ತವೆ. ಅಗತ್ಯ ಬಂದಾಗಲೆಲ್ಲಾ ಹಿಲರಿ, ಒಬಾಮಾ, ಕ್ಯಾಮರೂನ್ ಗಳು ಬೃಹತ್ ಕಂಪೆನಿಗಳ ಸಿಇಓಗಳೊಂದಿಗೆ ಆಯಾ ರಾಷ್ಟ್ರಗಳಿಗೆ ಭೇಟಿ ಕೊಡುತ್ತಾರೆ. ಒಪ್ಪಂದ ಕುದುರಿಸುತ್ತಾರೆ. ಲಂಚ ಪಾವತಿಯಾಗುತ್ತದೆ. ಇದಕ್ಕೆ ಒಗ್ಗದವರಿಗೆ ರಾಷ್ಟ್ರಪತಿ ಹುದ್ದೆಯನ್ನೋ ದುರ್ಬಲ ಇಲಾಖೆಯನ್ನೋ ಕೊಟ್ಟು ಅಟ್ಟಲಾಗುತ್ತದೆ.
         ಭಾರತ-ಇರಾನ್ ಗ್ಯಾಸ್ ಪೈಪ್ ಲೈನ್ ನ  ಪರ ಬಲವಾಗಿ ವಾದಿಸುತ್ತಿದ್ದ ಮಣಿಶಂಕರ್ ಅಯ್ಯರ್ ರಿಂದ  2006ರಲ್ಲಿ ಪೆಟ್ರೋಲಿಯಂ ಖಾತೆಯನ್ನು ಕಸಿದು ಅವರಿಗೆ ಮನಮೋಹನ್ ಸಿಂಗ್ ರು  ಕ್ರೀಡಾ ಖಾತೆಯನ್ನು ಕೊಟ್ಟಿದ್ದರು. ಇದಕ್ಕೆ ಅಯ್ಯರ್ ರ ಇರಾನ್ ಪರ ನಿಲುವು ಕಾರಣ ಎಂದು ಅಗ ಭಾರತದಲ್ಲಿ ಅಮೇರಿಕದ  ರಾಯಭಾರಿ ಆಗಿದ್ದ ಡೇವಿಡ್ ಮುಲ್ ಫೊರ್ಡ್  ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಪ್ರಣವ್ ಮುಖರ್ಜಿ..
ಅಷ್ಟೇ ವ್ಯತ್ಯಾಸ

Tuesday, June 19, 2012

ಯುದ್ಧ ನಿಲ್ಲಿಸಿದ ಆ ಪತ್ರಕರ್ತನೆಲ್ಲಿ,ಯುದ್ಧ ಪ್ರಚೋದಿಸುವ BBC ಎಲ್ಲಿ?


1972 ಜೂನ್ 8
ದಕ್ಷಿಣ ಮತ್ತು ಉತ್ತರ ವಿಯೆಟ್ನಾಮ್ ಗಳ ನಡುವೆ ಭೀಕರ ಯುದ್ಧ ನಡೆಯುತ್ತಿತ್ತು. ದಕ್ಷಿಣ ವಿಯೆಟ್ನಾಮನ್ನು ವಶಪಡಿಸಿಕೊಳ್ಳಲು ಉತ್ತರ ವಿಯೆಟ್ನಾಮ್ ಗರಿಷ್ಠ ಪ್ರಯತ್ನದಲ್ಲಿತ್ತು. ಆದ್ದರಿಂದಲೇ 1972 ಜೂನ್ 8ರಂದು ಅದು ದಕ್ಷಿಣ ವಿಯೆಟ್ನಾಮ್ ನ  ಟ್ರಾಂಗ್ ಬಾಂಗ್ ಗ್ರಾಮದ ಮೇಲೆ ಅಪಾಯಕಾರಿ ವಿಕಿರಣಗಳನ್ನು ಸೂಸುವ (ನಪಾಮ್) ಬಾಂಬನ್ನು ಸುರಿಸುತ್ತದೆ. ತಾತ್ಕಾಲಿಕ ಶಿಬಿರದಲ್ಲಿ ವಾಸಿಸುತ್ತಿದ್ದ 9 ವರ್ಷದ ಬಾಲೆ ಕಿಮ್ ಪುಕ್ ಮತ್ತು ಆಕೆಯ ಅಣ್ಣ, ಮತ್ತಿತರರು ಚೀರುತ್ತಾ ರಸ್ತೆಯಲ್ಲಿ ಓಡತೊಡಗುತ್ತಾರೆ. ಅದಾಗಲೇ ಕಿಮ್ ಳ  ದೇಹದ ಮೇಲೆ ವಿಕಿರಣಗಳು ಪರಿಣಾಮ ಬೀರಿರುತ್ತವೆ. ಬಟ್ಟೆ ಮಾತ್ರವಲ್ಲ, ಬೆನ್ನು, ಕೈ ಸಹಿತ ದೇಹದ ಬಹುತೇಕ ಭಾಗಗಳು ಸುಟ್ಟು ಹೋಗಿರುವ ಸ್ಥಿತಿಯಲ್ಲಿ ನಗ್ನವಾಗಿ ಅಣ್ಣನ ಹಿಂದೆ ಆಕೆ ಓಡುತ್ತಿರುತ್ತಾಳೆ. AP (ಅಸೋಸಿಯೇಟೆಡ್ ಪ್ರೆಸ್)ಗಾಗಿ ಯುದ್ಧದ ವರದಿಯನ್ನು ಮಾಡುತ್ತಿದ್ದ 21 ವರ್ಷದ ಛಾಯಾಗ್ರಾಹಕ ನಿಕ್ ಉಟ್ ಕ್ಯಾಮರಾ ಕ್ಲಿಕ್ಕಿಸುತ್ತಾನೆ. ಬಳಿಕ ಆ ಹುಡುಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಾನೆ. ನಂತರ ಆತ ತನ್ನ ಪೋಟೋವನ್ನು ಅಭಿವೃದ್ಧಿ (develop ) ಗೊಳಿಸಿ ಅಮೆರಿಕದಲ್ಲಿರುವ ಮುಖ್ಯ ಕಾರ್ಯಾಲಯಕ್ಕೆ ಕಳುಹಿಸಿಕೊಡುತ್ತಾನೆ. ಆದರೆ, ಕಾರ್ಯಾಲಯದಲ್ಲಿ ಸಂಪಾದಕರು ಮತ್ತು ಉಪಸಂಪಾದಕರ ಮಧ್ಯೆ ದೊಡ್ಡ ಚರ್ಚೆಯೇ ನಡೆಯುತ್ತದೆ. ನಗ್ನ ಪೋಟೋವನ್ನು ಮುದ್ರಿಸುವುದು ಜರ್ನಲಿಝಮ್ ನ  ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಸಂಪಾದಕರು ಪೋಟೋವನ್ನು ತಿರಸ್ಕರಿಸುತ್ತಾರೆ. ಆದರೆ ಚರ್ಚೆ ಅಲ್ಲಿಗೇ ನಿಲ್ಲುವುದಿಲ್ಲ. ಕೆಲವು ದಿನಗಳ ಚರ್ಚೆಯ ಬಳಿಕ ಆ ಪೋಟೋವನ್ನು ಪ್ರಕಟಿಸಲಾಗುತ್ತದೆ. ಮಾತ್ರವಲ್ಲ, ಆ ಪೋಟೋ ಜಗತ್ತಿನ ಮೇಲೆ ಎಷ್ಟು ದೊಡ್ಡ ಪ್ರಭಾವ ಬೀರುತ್ತದೆಂದರೆ, ವಿಯೆಟ್ನಾಮ್ ಯುದ್ಧವನ್ನೇ ಕೊನೆಗೊಳಿಸುವುದಕ್ಕೆ ಅದು ಕಾರಣವಾಗುತ್ತದೆ. ಯುದ್ಧ, ಅದರ ಕ್ರೌರ್ಯ, ದಿಕ್ಕಾಪಾಲಾಗುವ ಜನ ಸಮೂಹದ ಕುರಿತಂತೆ ಒಂದು ಗಂಭೀರ ಚರ್ಚೆಗೆ ವೇದಿಕೆ ಒದಗಿಸಿದ ಆ ಪೋಟೋ, ಬಳಿಕ ಪುಲಿಟ್ಝರ್ ಪ್ರಶಸ್ತಿಯನ್ನೂ ಪಡಕೊಳ್ಳುತ್ತದೆ.
          ಇದನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೆ ಕಾರಣ ಇದೆ..
2012 ಮೇ 25ರಂದು ಸಿರಿಯದ ಹೌಲಾದಲ್ಲಿ ಸರಕಾರಿ ಪಡೆಗಳು ಭೀಕರ ಹತ್ಯಾಕಾಂಡ ನಡೆಸಿವೆಯೆಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತದೆ. ಸುಮಾರು 50ರಷ್ಟು ಮಕ್ಕಳೂ ಸಹಿತ 100ರಷ್ಟು ಮಂದಿಯನ್ನು ನಿರ್ದಯವಾಗಿ ಕೊಲ್ಲಲಾಗಿದೆ ಎಂದು ವರದಿಗಳು ಹೇಳುತ್ತವೆ. ಸಿರಿಯನ್ ಸರಕಾರ ಆ ಘಟನೆಯನ್ನು ಅಡಗಿಸಿಟ್ಟಿದ್ದು, ಮಾಧ್ಯಮಗಳು ಮತ್ತು ಇತರರಿಂದಾಗಿ ಅದು ಪತ್ತೆಯಾಗಿದೆ ಎಂದೂ ಮಾಧ್ಯಮಗಳು ಹೇಳಿಕೊಳ್ಳುತ್ತವೆ. ಇಷ್ಟೇ ಆಗಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು. ಆದರೆ BBC (ಬಿ.ಬಿ.ಸಿ.) ತನ್ನ ಮುಖಪುಟದಲ್ಲಿ ಒಂದು ಪೋಟೋವನ್ನು ಪ್ರಕಟಿಸಿ, ಇದು ಹೌಲಾ ಹತ್ಯಾಕಾಂಡದ ಮೃತದೇಹಗಳು ಎಂದು ಬರೆಯುತ್ತದೆ. 5 ಸಾಲುಗಳಷ್ಟು ಇದ್ದ ಮೃತ ದೇಹಗಳನ್ನು ಬಿಳಿ ಬಟ್ಟೆಯಿಂದ ಹೊದೆಯಲಾಗಿದ್ದು, ಓರ್ವರು ಅದರ ನಡುವಿನಿಂದ ದಾಟುತ್ತಿರುವ ದೃಶ್ಯ. ಆದರೆ ಮೇ 29ರಂದು ಇರಾನಿನ ಪ್ರೆಸ್ ಟಿ.ವಿ. ಆ ಪೋಟೋದ ನಕಲಿತನವನ್ನು ಬಯಲು ಮಾಡುತ್ತದೆ. ಮಾರ್ಕ್ ಡಿ ಲೂರೋ ಅನ್ನುವ ಛಾಯಾಗ್ರಾಹಕ 2003 ಮೇ 27ರಂದು ಇರಾಕ್ ನ  ಅಲ್ ಮುಸಯ್ಯಿಬ್ ನಲ್ಲಿ ಆ ಪೋಟೋ ತೆಗೆದಿದ್ದು, ಬಿಬಿಸಿ ಅದನ್ನೇ ಹೌಲಾದ ದೃಶ್ಯವೆಂದು ಸುಳ್ಳಾಗಿ ಮುದ್ರಿಸಿದೆ ಎಂದು ಆಕ್ಷೇಪಿಸುತ್ತದೆ. ಪುರಾವೆಗಾಗಿ, ಮಾರ್ಕ್ ಡಿ ಲೂರೋನ 2003ರ ಪೋಟೋವನ್ನು BBC ಯ ಪೋಟೋದ ಜೊತೆಗಿಟ್ಟು ಓದುಗರ ಮುಂದಿಡುತ್ತದೆ.BBCಯ ಪೋಟೋವನ್ನು ಆ ವರೆಗೆ ನಿಜವೆಂದೇ ನಂಬಿದ್ದ ಓದುಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. BBCಯು ಇಸ್ರೇಲ್ ಪಕ್ಷಪಾತಿ, ಅದು ಝಿಂಬಾಬ್ವೆಯ ಬಗ್ಗೆ, ನೆಲ್ಸನ್ ಮಂಡೇಲಾರ ಬಿಡುಗಡೆಯ ಬಗ್ಗೆ, ಇರಾಕ್ ಯುದ್ಧದ ಬಗ್ಗೆಯೆಲ್ಲಾ ಹೇಳಿದ್ದೂ ಸುಳ್ಳನ್ನೇ. ಇನ್ನು ಮುಂದೆ ನಾವು BBCಯ ಚಂದಾದಾರಿಕೆ ಮಾಡುವುದಿಲ್ಲ ಎಂದು ಬ್ರಿಟನ್ನಿಗರೇ ಸಿಟ್ಟಾಗುತ್ತಾರೆ. ಇದರಿಂದ ಮುಜಗರಕ್ಕೊಳಗಾದ BBCಯು ತನ್ನ ಸೈಟಿನಿಂದ ಪೋಟೋವನ್ನು ಹಿಂತೆಗೆದುಕೊಂಡು ಪರೋಕ್ಷವಾಗಿ ತಪ್ಪೊಪ್ಪಿ ಕೊಳ್ಳುತ್ತದೆ..
        ಒಂದು ಕಡೆ, ಯುದ್ಧವನ್ನೇ ನಿಲ್ಲಿಸುವುದಕ್ಕೆ ಪೋಟೋವೊಂದು ಪ್ರೇರಣೆ ನೀಡಿದ್ದರೆ, ಇನ್ನೊಂದು ಕಡೆ, ಸುಳ್ಳು ಸುಳ್ಳೇ ಪೋಟೊವೊಂದನ್ನು ಪ್ರಕಟಿಸಿ ಯುದ್ಧಕ್ಕೆ ಪ್ರಚೋದನೆ ಕೊಡುವುದು! ಆಧುನಿಕ ಮಾಧ್ಯಮವೇಕೆ ಹೀಗಾಗಿ ಬಿಟ್ಟಿದೆ? ಲಿಬಿಯದ ಮೇಲೆ ನ್ಯಾಟೋ ದಾಳಿ ಮಾಡಿದಾಗಲೂ BBCಯ ಮೇಲೆ ಇಂಥದ್ದೇ ಆರೋಪವನ್ನು ಮಾಡಲಾಗಿತ್ತು. ಬಂಡುಕೋರ ಪಡೆಯ ಅನಾಹುತವನ್ನು ಗದ್ಧಾಪಿಯ ಕ್ರೌರ್ಯ ಎಂದು ಅದು ಪ್ರಕಟಿಸಿತ್ತು. ಲಿಬಿಯದ ಮೇಲೆ ನ್ಯಾಟೋ ಪಡೆ ಮಾಡಿದ ಬಾಂಬ್ ದಾಳಿ ಮತ್ತು ಸಾವು ನೋವುಗಳನ್ನು ಅಡಗಿಸಿ ಗದ್ಧಾಪಿಯನ್ನು ಖಳನಾಯಕನಂತೆ ಬಿಂಬಿಸಿದ್ದಕ್ಕೂ ಟೀಕೆ ವ್ಯಕ್ತವಾಗಿತ್ತು.
         ಇದೊಂದೇ ಅಲ್ಲ..
                      BBC ಪೋಟೋ             2003 ರ ಪೋಟೋ                         
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ 2012 ಎಪ್ರಿಲ್ 30ರಂದು ವಿದೇಶಾಂಗ ಇಲಾಖೆಯ ಮುಖ್ಯಸ್ಥರಿಂದ ಪತ್ರಿಕಾಗೋಷ್ಠಿಯೊಂದು ನಡೆಯುತ್ತದೆ. ನೈಜೀರಿಯಾದಲ್ಲಿ ಪಾಶ್ಚಾತ್ಯ ಹಿತಾಸಕ್ತಿಗಳ ಮೇಲೆ ಆಗುತ್ತಿರುವ ಆಕ್ರಮಣಗಳು, ಅಲ್ ಕಾಯ್ದದಿಂದ ಮುಗ್ಧರ ಹತ್ಯೆಗಳು, ಭಯೋತ್ಪಾದನೆಯಿಂದಾಗಿ ಆಗುತ್ತಿರುವ ಸಾವುಗಳ ಬಗ್ಗೆ ಅಧಿಕಾರಿ ವಿವರಣೆ ನೀಡುತ್ತಿರುತ್ತಾರೆ. ಆಗ ಯುವತಿಯೊಬ್ಬಳು ಎದ್ದು ನಿಂತು ಅಮೆರಿಕದ ಬದ್ಧತೆಯ ಬಗ್ಗೆ ಪ್ರಶ್ನಿಸುತ್ತಾಳೆ. ಯಮನ್, ಸೊಮಾಲಿಯ, ಪಾಕಿಸ್ತಾನಗಳಲ್ಲಿ ಅಮೆರಿಕದ ಡ್ರೋನ್ ಕ್ಷಿಪಣಿಗಳಿಂದ ಸಾವಿಗೀಡಾದ ಮುಗ್ಧರ ಬಗ್ಗೆಯೇಕೆ ನೀವು ಹೇಳುತ್ತಿಲ್ಲ? ಅಮೆರಿಕನ್ ಯೋಧರ ತ್ಯಾಗದ ಬಗ್ಗೆ ಮಾತಾಡ್ತೀರಲ್ಲ, ಯಾಕೆ ಇವರ ಕೈಯಿಂದಲೇ ಆಗಿರುವ ಮುಗ್ಧರ ಪ್ರಾಣ ಹರಣದ ವಿವರಗಳನ್ನು ಅಡಗಿಸ್ತೀರಿ.. ಎಂದೆಲ್ಲಾ ಪ್ರಶ್ನಿಸ ತೊಡಗುತ್ತಾಳೆ. ಸಭೆಯ ಗಮನವೆಲ್ಲಾ ಆ ಕಡೆಗೆ ತಿರುಗುತ್ತದೆ. ಕೊನೆಗೆ ಆ ಯುವತಿಯನ್ನು ಎತ್ತಿಕೊಂಡು ಹೊರಗೆ ಕಳುಹಿಸಲಾಗುತ್ತದೆ. ಈ ಇಡೀ ದೃಶ್ಯವನ್ನು C - SPAN  ಚಾನೆಲ್ ನೇರ ಪ್ರಸಾರ ಮಾಡುತ್ತದೆ. What about the hundreds of innocent people we are killing with our drone Strikes in Pakistan  - ಎಂಬ ಹೆಸರಿನಲ್ಲಿ ಯೂಟ್ಯೂಬ್ ನಲ್ಲಿ ಈಗಲೂ ಅದರ ವೀಡಿಯೋ ಇದೆ. ಇದನ್ನು ವಿಶ್ವಾದ್ಯಂತದ ಅಸಂಖ್ಯಾತ ಮಂದಿ ವೀಕ್ಷಿಸುತ್ತಾರೆ. ಕಾಮೆಂಟ್ ಬರೆಯುತ್ತಾರೆ.
     ಓ ಅಮೆರಿಕನ್ನರೇ,
‘.. ಭಯೋತ್ಪಾದಕರು, ಭಯೋತ್ಪಾದಕರು.. ಅಂತ ನಮ್ಮನ್ನು ನೀವು ಹೇಳುವುದನ್ನು ಕೇಳಿ ಕೇಳಿ ಸಾಕಾಗಿಬಿಟ್ಟಿದೆ. ಆನ್ ಲೈನ್ ನಲ್ಲಿ ವೀಡಿಯೋ ಗೇಮ್ ಆಡುವ 9 ವರ್ಷದ ನನ್ನ ತಮ್ಮ ಮೊನ್ನೆ ಕೇಳಿದ, ಟೆರರಿಸ್ಟ್ ಅಂದರೆ ಏನು ಎಂದು. ಅವನನ್ನು ಯಾರೋ ಟೆರರಿಸ್ಟ್ ಅಂದರಂತೆ. ನಾನು ಗೊತ್ತಿಲ್ಲ ಅಂದೆ. ಅದೇನೋ ಭಾರೀ ಗೌರವಾರ್ಹ ಪದ ಎಂದು ನನ್ನ ತಮ್ಮ ಭಾವಿಸಿದ್ದಾನೆ. ಯಾಕೆಂದರೆ ಆತನಿಗೆ ‘ಇಂಗ್ಲಿಷ್ ಗೊತ್ತಿಲ್ಲ..’ ಹಾಗಂತ ಜೂನ್ ಆರಂಭದಲ್ಲಿ ಸೌದಿಯ ಓರ್ವ ಹೆಣ್ಣು ಮಗಳು ಕಾಮೆಂಟ್ ಬರೆಯುತ್ತಾಳೆ.
    ನಿಜವಾಗಿ, ಅಮೆರಿಕದ ಭಯೋತ್ಪಾದನೆಯ ವಿರುದ್ಧದ ಹೋರಾಟವು ಇವತ್ತು ಸೈನಿಕರ ಮುಖಾಂತರ ನಡೆಯುತ್ತಿಲ್ಲ. ಎಲ್ಲವನ್ನೂ ಡ್ರೋನ್ ಕ್ಷಿಪಣಿಗಳೇ ನಿರ್ವಹಿಸುತ್ತಿವೆ. 2004ರಿಂದ ಈ ವರೆಗೆ 330 ಡ್ರೋನ್ ದಾಳಿಗಳು ಕೇವಲ ಪಾಕಿಸ್ತಾನವೊಂದರಲ್ಲೇ ನಡೆದಿವೆ. 2,500ರಿಂದ 3,500ರ ವರೆಗೆ ಸಾವುಗಳೂ ಸಂಭವಿಸಿವೆ. ಭಯೋತ್ಪಾದಕರ ಅಡಗು ತಾಣಕ್ಕೆಂದು ಹೊರಡುವ ಈ ಕ್ಷಿಪಣಿಗಳು ಅಂತಿಮವಾಗಿ ಮುಗ್ಧರ ಮೇಲೆ ಬಿದ್ದು ಸಾವು ನೋವುಗಳಾದದ್ದೇ ಹೆಚ್ಚು. ಬುಶ್ ಅಧಿಕಾರಾವಧಿಯಲ್ಲಿ 52 ಡ್ರೋನ್ ದಾಳಿಗಳು ನಡೆದಿದ್ದರೆ, ಒಬಾಮರ ಅಧಿಕಾರಾವಧಿಯಲ್ಲಿ ಈಗಾಗಲೇ 278 ದಾಳಿಗಳು ನಡೆದಿವೆ. ಒಂದು ರೀತಿಯಲ್ಲಿ ಡ್ರೋನ್ ದಾಳಿಯೆಂಬುದು ಸೈನಿಕರ ಮಟ್ಟಿಗೆ ನೂರು ಶೇಕಡಾ ಸುರಕ್ಷಿತ. ಮಾನವರಹಿತವಾಗಿರುವ ಈ ಕ್ಷಿಪಣಿಯನ್ನು ಸೈನಿಕ ಬಿಡಾರಗಳಿಂದಲೇ ಹಾರಿಸಲು ಸಾಧ್ಯವಾಗಿರುವುದರಿಂದ ಸೇನಾ ಕಾರ್ಯಾಚರಣೆಯ ಅಗತ್ಯವೇ ಇರುವುದಿಲ್ಲ.
      ಎಲ್ಲೋ ಕೂತು ಇನ್ನೆಲ್ಲಿಗೋ ಹಾರಿಸುವ ಡ್ರೋನ್ ಕ್ಷಿಪಣಿ ಮನುಷ್ಯರ ಪಾಲಿಗೆ ಅಪಾಯಕಾರಿ ಅನ್ನುವುದಕ್ಕೆ ಗಾಯಗೊಂಡಿರುವ 2 ಸಾವಿರದಷ್ಟು ಮಂದಿಯೇ ಸಾಕ್ಷಿ. ಆದರೆ ಈ ಡ್ರೋನನ್ನು ಪ್ರಶ್ನಿಸಿದರೆ ಎತ್ತಿ ಹೊರ ಹಾಕಲಾಗುತ್ತದೆ. ಇನ್ನೊಂದೆಡೆ, ಯುದ್ಧಕ್ಕೆ ಪ್ರಚೋದನೆ ಕೊಡಬಲ್ಲ ನಕಲಿ ದೃಶ್ಯವನ್ನು BBCಯಂಥ ಖ್ಯಾತ ಸಂಸ್ಥೆಯೇ ಮುದ್ರಿಸಿ ಬಿಡುತ್ತದೆ. ಇವೆಲ್ಲ ಏಕೆ? ಲಿಬಿಯದ ಮೇಲೆ ನ್ಯಾಟೋದ ದಾಳಿಗೆ ವೇದಿಕೆ ಸಜ್ಜುಗೊಳಿಸಿದಂತೆ ಸಿರಿಯಾದ ಮೇಲೂ ದಾಳಿಗೆ ವೇದಿಕೆ ಸಜ್ಜುಗೊಳಿಸುವುದೇ? ಲಿಬಿಯನ್ ದಾಳಿಯಲ್ಲಿ ನ್ಯಾಟೊವು ನ್ಯೂಟ್ರನ್ ಬಾಂಬ್ ಮತ್ತು ಯುರೇನಿಯಂ ಶಸ್ತ್ರಾಸ್ತ್ರಗಳನ್ನು ಬಳಸಿತ್ತು. 2006ರಲ್ಲಿ ಲೆಬನಾನ್ ನ  ಮೇಲೆ ಮತ್ತು 2008/9ರಲ್ಲಿ ಗಾಝಾದ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಬಳಸಿದ್ದೂ ಇವೇ ಅಸ್ತ್ರಗಳನ್ನು.
ನಿಕ್ ಉಟ್    ಕಿಮ್ ಪುಕ್      
      ಇಷ್ಟಕ್ಕೂ ತನ್ನ ಪೋಟೋವನ್ನು ಪತ್ರಿಕೆಗೆ ಕಳುಹಿಸುವುದಕ್ಕಿಂತಲೂ ಮೊದಲು ಗಾಯಗೊಂಡ ಬಾಲೆಯನ್ನು ಆಸ್ಪತ್ರೆಗೆ ಸಾಗಿಸುವ ನಿಕ್ ಉಟ್ ಅನ್ನುವ ಪತ್ರಕರ್ತ ಮತ್ತು ಆ ಪೋಟೋವನ್ನು ಎದುರಿಟ್ಟು ಕೊಂಡು ನೈತಿಕತೆಯ ಬಗ್ಗೆ ಚರ್ಚಿಸಿದ ಸಂಪಾದಕರೆಲ್ಲಿ? ತಪ್ಪಾದ ಪೋಟೋವನ್ನು ಪ್ರಕಟಿಸಿ ಯುದ್ಧಕ್ಕೆ ಪ್ರಚೋದನೆ ಕೊಡುವ BBC ಎಲ್ಲಿ?
      1972 ಜೂನ್ 8ರ ಆ ಘಟನೆಗೆ ಕಳೆದ 2012 ಜೂನ್ 8ಕ್ಕೆ 40 ವರ್ಷಗಳು ಸಂದುವು. ಕೆನಡದಲ್ಲಿರುವ ಕಿಮ್ ಪುಕ್ ಈಗ ಎರಡು ಮಕ್ಕಳ ತಾಯಿ. ಈ ಹಿನ್ನಲೆಯಲ್ಲಿ ಕಿಮ್ ಪುಕ್ ಮತ್ತು ನಿಕ್ ಉಟ್ ರಿಗೆ  ಏರ್ಪಡಿಸಲಾದ ಸನ್ಮಾನದ ಪೋಟೋವನ್ನು ಮಾಧ್ಯಮಗಳಲ್ಲಿ ನೋಡಿದಾಗ ಇವೆಲ್ಲಾ ನೆನಪಾಯಿತು.

Monday, June 11, 2012

ಏನು,ಮಾಧ್ಯಮಗಳಲ್ಲಿ ಕವರೇಜ್ ಸಿಗಬೇಕಾದರೆ ಬಾಂಬೇ ಹಿಡಿಯಬೇಕೆ?




          Bhatkal sits on an RDX dump - ಆರ್.ಡಿ.ಎಕ್ಸ್ ಗೋದಾಮಿನ ಮೇಲೆ ಕುಳಿತಿರುವ ಭಟ್ಕಳ - ಎಂಬ ಶೀರ್ಷಿಕೆಯಲ್ಲಿ 2012 ಮಾರ್ಚ್ 23ರಂದು ಟೈಮ್ಸ್ ಆಫ್ ಇಂಡಿಯಾದ ಮುಖಪುಟದಲ್ಲೊಂದು ವರದಿ ಬಂದಿತ್ತು.
            `..ಉತ್ತರ ಕನ್ನಡ ಜಿಲ್ಲೆಯ ಕರಾವಳಿ ನಗರವಾದ ಭಟ್ಕಳವು ಸ್ಫೋಟಕಗಳು ತುಂಬಿರುವ ಗೋದಾಮಿನಂತೆ ಕಾಣಿಸುತ್ತಿದೆ. ದಕ್ಷಿಣ ಭಾರತದ ಬೃಹತ್ ನಗರಗಳನ್ನು ನಾಶ ಮಾಡಬಹುದಾದಷ್ಟು ಪ್ರಮಾಣದ RDX ಸಹಿತ, ಸ್ಫೋಟಕ ವಸ್ತುಗಳ ಗೋದಾವೊಂದು ನಗರದಲ್ಲಿದೆ. ಇನ್ನೂ ಗುರುತಿಸಲಾಗದ ಮನೆಯೊಂದರಲ್ಲಿ ಅದನ್ನು ದಾಸ್ತಾನಿರಿಸಲಾಗಿದೆಯೆಂದು ನಂಬಲಾಗಿದ್ದು, ಶಂಕಿತ ಭಯೋತ್ಪಾದಕರನ್ನು ಕರೆತಂದು ವಿಚಾರಿಸಲಾಗಿದೆ. ಬೆಂಗಳೂರು ATS  ಮತ್ತು ದೆಹಲಿ ಪೊಲೀಸರನ್ನೊಳಗೊಂಡ ವಿಶೇಷ ತಂಡವು ನಾಲ್ವರು ಶಂಕಿತ ಭಯೋತ್ಪಾದಕರ ನೆರವಿನಿಂದ ದಾಸ್ತಾನು ಕೇಂದ್ರವನ್ನು ಪತ್ತೆ ಹಚ್ಚಲು ಶ್ರಮ ಪಟ್ಟಿದೆಯಾದರೂ ಸಂಜೆವರೆಗೂ ಅವರು ಅದರಲ್ಲಿ ಯಶಸ್ವಿಯಾಗಿಲ್ಲ. ಸ್ಫೋಟಕಗಳನ್ನು ಭಟ್ಕಳಕ್ಕೆ ತಂದು ಸುರಿದಿರುವನೆಂದು ನಂಬಲಾದ ತಡಿಯಂಡವಿಡೆ ನಾಸಿರ್ ಸದ್ಯ ಪೊಲೀಸರ ಜೊತೆ ಭಟ್ಕಳದಲ್ಲೇ ಇದ್ದಾನೆ. ಆದರೆ ದಾಸ್ತಾನು ಕೇಂದ್ರವನ್ನು ತೋರಿಸಲು ಆತ ವಿಫಲನಾಗಿದ್ದಾನೆ. ಆತ ಈ ಹಿಂದೆ ಅಲ್ಲಿಗೆ ಭೇಟಿ ಕೊಡುವಾಗ ಕತ್ತಲಾಗಿತ್ತಾದ್ದರಿಂದ ಅದು ಈಗ ಎಲ್ಲಿದೆ ಮತ್ತು ನೋಡಲು ಆ ದಾಸ್ತಾನು ಕೇಂದ್ರ ಹೇಗಿದೆ ಎಂಬುದನ್ನು ಅಂದಾಜಿಸಲಾಗುತ್ತಿಲ್ಲ ಎಂದಿದ್ದಾನೆ. ಭಯೋತ್ಪಾದನೆಯ ಮಾಸ್ಟರ್  ಮೈಂಡ್ ಗಳಾದ ಯಾಸೀನ್ ಭಟ್ಕಳ್ ಮತ್ತು ರಿಯಾಝ್ ಭಟ್ಕಳ್ ರು  ಸ್ಫೋಟಕಗಳನ್ನು ಭಟ್ಕಳದಲ್ಲಿ ಅಡಗಿಸಿಟ್ಟಿರಬಹುದೆಂದು ಮೂಲಗಳು ಹೇಳಿವೆ. ಅಲ್ಲದೆ 2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸ್ಫೋಟ ಮತ್ತು ಕಳೆದ ವರ್ಷ ದೆಹಲಿ ಹೈಕೋರ್ಟ್ ಬಳಿಯಲ್ಲಿ ನಡೆದ ಸ್ಫೋಟ ಸೇರಿದಂತೆ ದೇಶದಲ್ಲಾದ ಅನೇಕಾರು ಭಯೋತ್ಪಾದನಾ ದಾಳಿಗಳಿಗೆ ಭಟ್ಕಳದಿಂದಲೇ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ನಂಬಲಾಗಿದೆ..'
           ರಾಜೀವ್ ಕಲ್ಕೊಡ್ ಎಂಬ ಪತ್ರಕರ್ತ ತಯಾರಿಸಿದ ಈ ವರದಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಭಟ್ಕಳಕ್ಕೆ ಸ್ಫೋಟಕಗಳ ಕಾರ್ಖಾನೆಯೆಂದು ಮುದ್ರೆಯೊತ್ತುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಯಿತು. ಮೂಲಗಳನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಲಾಯಿತು. ಉತ್ತರ ಕನ್ನಡದ ಜಿಲ್ಲಾ ವರಿಷ್ಠಾಧಿಕಾರಿ ಕೆ.ಬಿ. ಬಾಲಕೃಷ್ಣರು ಇಡೀ ಸುದ್ದಿಯನ್ನೇ ಹುಸಿ ಅಂದುಬಿಟ್ಟರು.  RDX ಎಂದರೆ ಗೊಬ್ಬರದ ದಾಸ್ತಾನಲ್ಲ, ಕೇಂದ್ರ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಮತ್ತು ಇನ್ನಿತರ ಏಜೆನ್ಸಿಗಳಿಗೆ ತಿಳಿಯದ ವಿಚಾರ ಪತ್ರಿಕೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದರು. ಇವೆಲ್ಲ ಮಾಧ್ಯಮದ ವದಂತಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟರು. ಭಟ್ಕಳದ ಡಿಎಸ್ಪಿಯಾದ ಎಂ. ನಾರಾಯಣ ಅವರು, ಇಲ್ಲಿ ಅಂಥದ್ದೊಂದು ಶೋಧ ಕಾರ್ಯಾಚರಣೆಯೇ ನಡೆದಿಲ್ಲ ಅಂದರು. ಒಂದು ರೀತಿಯಲ್ಲಿ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಮಾರ್ಚ್ 26ರಂದು, 'Bhatkal is not a town of culprits - ಭಟ್ಕಳವು ಪಾತಕಿಗಳ ನಗರವಲ್ಲ - ಎಂಬ ಶೀರ್ಷಿಕೆಯಲ್ಲಿ ಟೈಮ್ಸ್ ಪತ್ರಿಕೆ ಸ್ಪಷ್ಟೀಕರಣವನ್ನು ಕೊಟ್ಟಿತು. ತಮ್ಮ ಉದ್ದೇಶ ಪ್ರಾಮಾ ಣಿಕವಾಗಿತ್ತು ಅಂತ ಹೇಳಿಕೊಂಡಿತು..
             ಇವೆಲ್ಲವನ್ನೂ ಈಗ ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ..
    2012 ಜೂನ್ 5
ಮಹಾರಾಷ್ಟ್ರದಿಂದ ಬರುತ್ತಿದ್ದ ಓಕ್ಲಾ ಎಕ್ಸ್ ಪ್ರೆಸ್  ರೈಲು ಮಂಗಳೂರಿಗೆ ತಲುಪಲು ಇನ್ನೇನು ಎರಡು ಗಂಟೆ ಇದೆ ಅನ್ನುವಾಗ ಸಾಮಾನ್ಯ ದರ್ಜೆಯ ಬೋಗಿಯೊಂದರಲ್ಲಿ ಗದ್ದಲ ಕಾಣಿಸಿಕೊಳ್ಳುತ್ತದೆ. ಶೌಚಾಲಯದ ಬಳಿ ಮೂರ್ನಾಲ್ಕು ಮಂದಿ ತೀರಾ ಕಸಿವಿಸಿಗೊಂಡಂತೆ ಮಾತಾಡುತ್ತಿರುತ್ತಾರೆ. ಒಂದು ಬಗೆಯ ಭೀತಿ ಅವರ ಮುಖದಲ್ಲಿರುತ್ತದೆ. ಭಟ್ಕಳದ ಗಡ್ಡದಾರಿ ತರುಣ ರಈಸ್ ಅಹ್ಮದ್ ಅವೆಲ್ಲವನ್ನೂ ನೋಡುತ್ತಿರುತ್ತಾರೆ. ಪತ್ನಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲೆಂದು ಹೊರಟಿದ್ದ ಅವರು ಆ ಮಂದಿಯಲ್ಲಿ ವಿಚಾರಿಸುತ್ತಾರೆ. ನಿಜವಾಗಿ ಅದೊಂದು ಆದಿವಾಸಿ ಕುಟುಂಬ. ಮಹಾರಾಷ್ಟ್ರದ ಶಿಲ್ಲಾರ ಗ್ರಾಮದಿಂದ ಅವರೆಲ್ಲಾ ಕೂಲಿ ಕೆಲಸ ಹುಡುಕುತ್ತಾ ಪ್ರಯಾಣಿಸುತ್ತಿದ್ದರು. ಕೇರಳದ ಒಂದು ಕಡೆ ಕೂಲಿ ಇದೆಯೆಂದು ಹೇಳಿ ಗುಜರಾತ್ ನ  ದಲ್ಲಾಳಿಯೊಬ್ಬ ಅವರನ್ನು ಕರಕೊಂಡು ಬಂದಿದ್ದ. ದಾರಾಸಿಂಗ್, ತುಂಬು ಗರ್ಭಿಣಿಯಾದ ಆತನ ಪತ್ನಿ ಲಲಿತಾ, 4 ಮತ್ತು 2 ವರ್ಷಗಳ ಇಬ್ಬರು ಮಕ್ಕಳ ಕುಟುಂಬವೇ ಕೆಲಸಕ್ಕಾಗಿ ಹೊರಟು ಬಂದಿತ್ತು. ಹೆರಿಗೆ ನೋವನ್ನನು ಭವಿಸುತ್ತಿದ್ದ ಪತ್ನಿಯನ್ನು ದಾರಾಸಿಂಗ್ ಶೌಚಾಲಯಕ್ಕೆ ತಳ್ಳಿ ದಿಕ್ಕು ಕಾಣದೇ ಚಡಪಡಿಸುತ್ತಿದ್ದುದನ್ನು ಅರಿತ ರಈಸ್ ಅಹ್ಮದ್, ಗದರಿಸಿ ಶೌಚಾಲಯದ ಬಾಗಿಲು ತೆರೆಸುತ್ತಾರೆ. ಬೋಗಿಯಲ್ಲಿದ್ದವರನ್ನು ಸಹಾಯಕ್ಕಾಗಿ ವಿನಂತಿಸುತ್ತಾರೆ. ಆದಿವಾಸಿ, ಕೂಲಿಕಾರ್ಮಿಕೆಯನ್ನು ಮುಟ್ಟಲು ಎಲ್ಲರೂ ಹಿಂದೇಟು ಹಾಕಿದಾಗ ಅನಾರೋಗ್ಯ ಪೀಡಿತ ಪತ್ನಿ ಮತ್ತು ಇನ್ನೋರ್ವ ಮಹಿಳೆಯ ಸಹಾಯದಿಂದ ಗರ್ಭಿಣಿಯನ್ನು ಶೌಚಾಲಯದಿಂದ ಕರೆತಂದು, ಪ್ರಯಾಣಿಕರ ಸೀಟಿನಲ್ಲಿ ಕೂರಿಸಿ ಶುಶ್ರೂಷೆ ನಡೆಸುತ್ತಾರೆ. ಕೊನೆಗೆ ರಈಸ್ ರೇ  ಹೆರಿಗೆ ಮಾಡಿಸುತ್ತಾರೆ. ಬ್ಲೇಡಿ ನಿಂದ ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಗಂಡು ಮಗುವನ್ನು ಮತ್ತು ತಾಯಿಯನ್ನು ಶುಚಿಗೊಳಿಸುತ್ತಾರೆ. ರೈಲು ಪ್ರಯಾಣಿಕರಲ್ಲಿ ವಿನಂತಿಸಿ 4 ಸಾವಿರ ರೂಪಾಯಿ ಸಂಗ್ರಹಿಸಿ ದಾರಾಸಿಂಗ್ ಗೆ  ನೀಡುತ್ತಾರೆ. ಬಳಿಕ ಬಾಣಂತಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಾರೆ..
          ಜೂನ್ 6 ಇಲ್ಲವೇ 7ರಂದು ಎಲ್ಲ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದ್ದರೂ ಟೈಮ್ಸ್ ಆಫ್ ಇಂಡಿಯಾದಲ್ಲಿ ಈ ಸುದ್ದಿಗೆ ಜಾಗವೇ ಸಿಕ್ಕಿಲ್ಲ..
        ಅಂದಹಾಗೆ, ಮೂಲಗಳನ್ನಾಧರಿಸಿದ ವದಂತಿಯ ಸುದ್ದಿಗೆ ಮುಖ ಪುಟವನ್ನು ಮೀಸಲಿಡುವ ಪತ್ರಿಕೆಗಳಿಗೆ, ಮಾನವೀಯತೆಯನ್ನು ಸಾರುವ ಸುದ್ದಿಗಳೇಕೆ ಅಸ್ಪøಶ್ಯ ಅನ್ನಿಸಿಕೊಳ್ಳುತ್ತವೆ? ಯಾಸೀನ್ ಭಟ್ಕಳ್  ನನ್ನೋ, ರಿಯಾಜ್ ನನ್ನೋ ಮುಖಪುಟದಲ್ಲಿಟ್ಟು ತಿಂಗಳುಗಟ್ಟಲೆ ಸುತ್ತಾಡಿದ ಪತ್ರಿಕೆಗಳಿಗೆ ಆ ಊರಲ್ಲಿ ಮನುಷ್ಯ ಪ್ರೇಮಿಗಳೂ ಇದ್ದಾರೆ ಅನ್ನುವ ಸಂದೇಶವನ್ನು ಸಾರುವ ಸಂದರ್ಭ ಸಿಕ್ಕಾಗಲೆಲ್ಲಾ ನುಣುಚಿಕೊಳ್ಳುವುದೇಕೆ? ಭಯೋತ್ಪಾದಕನಿಗೆ ಗಡ್ಡ ಕಡ್ಡಾಯ ಅಂತ ಹೇಳಿಕೊಟ್ಟದ್ದೂ ಮಾಧ್ಯಮವೇ. ಆದರೆ ಇಲ್ಲಿ ಓರ್ವ ಹೆಣ್ಣು ಮಗಳ ಜೀವವನ್ನು ಉಳಿಸಿದ್ದು, ಮಾನವೀಯತೆಯ ಉತ್ಕೃಷ್ಟ  ಮಾದರಿಯನ್ನು ತೋರಿಸಿದ್ದೂ ಓರ್ವ ಗಡ್ಡಧಾರಿಯೇ. ಯಾಕೆ ಇದು ಮಾಧ್ಯಮ ಮಿತ್ರರ ಗಮನ ಸೆಳೆದಿಲ್ಲ? ಒಂದೋ ಎರಡೋ ಪತ್ರಿಕೆಗಳನ್ನು ಬಿಟ್ಟರೆ ಉಳಿದವು ಯಾಕೆ ರಈಸ್ ನ  ಪೋಟೋ ಪ್ರಕಟಿಸಿಲ್ಲ? ಸಿಕ್ಕ ಸಿಕ್ಕವರಿಗೆ ಗಡ್ಡ ಅಂಟಿಸಿ, ಅವರಿಗೂ, ಭಟ್ಕಳಕ್ಕೂ, ಭಯೋತ್ಪಾದನೆಗೂ ಸಂಬಂಧವನ್ನು ಕಲ್ಪಿಸಿ, ದೇಶಾದ್ಯಂತ ಭಟ್ಕಳದ ಹೆಸರನ್ನು ಹೊತ್ತು ತಿರುಗಿದ ಮತ್ತು ಅದರ ವರ್ಚಸ್ಸಿಗೆ ಧಕ್ಕೆ ತಂದ ಮಾಧ್ಯಮಗಳಿಗೇಕೆ, ಅದೇ ಭಟ್ಕಳದ ತರುಣನೊಬ್ಬನ ಮಾನವೀಯತೆ ಮಹತ್ವಪೂರ್ಣ ಅನ್ನಿಸಲಿಲ್ಲ?
ಅಂದ ಹಾಗೆ, ಭಟ್ಕಳ್ ಅಂದರೆ ಒಂದು ನಗರದ ಹೆಸರು. ಅದನ್ನೇಕೆ ಭಯೋತ್ಪಾದನೆಯ ಆರೋಪ ಹೊತ್ತುಕೊಂಡವರ ಹೆಸರಿನ ಮುಂದೆ ಜೋಡಿಸಲಾಗುತ್ತದೆ? ಮಕ್ಕಾ ಮಸೀದಿ, ಸಂಜೋತಾ ಎಕ್ಸ್ ಪ್ರೆಸ್ ಸಹಿತ ಹತ್ತಾರು ಭಯೋತ್ಪಾದನಾ ಕೃತ್ಯಗಳ ಆರೋಪಿಗಳಾದ ಇಂದ್ರೇಶ್ ಕುಮಾರ್, ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಕಾಲ್ ಸಂಗ್ರಾರನ್ನೆಲ್ಲಾ ಅವರ ಊರಿನ ಹೆಸರಿನೊಂದಿಗೆ ಮಾಧ್ಯಮಗಳು ಗುರುತಿಸುತ್ತವಾ? ಮತ್ತೇಕೆ ಯಾಸೀನ್ ಭಟ್ಕಳ್, ರಿಯಾಝ್ ಭಟ್ಕಳ್, ಇಕ್ಬಾಲ್ ಭಟ್ಕಳ್? ಇವೇನು ಶ್ರೀ, ಜನಾಬ್, ಮಿಸ್ಟರ್ ನಂತೆ ಗೌರವ ಸೂಚಕ ಪದವಾ? ಪದೇಪದೇ ಭಟ್ಕಳ ಅನ್ನುವ ಪದವನ್ನು ಓದುವ, ಆಲಿಸುವ ವ್ಯಕ್ತಿಯೊಬ್ಬ ಭಟ್ಕಳ ಅಂದರೆ ಭಯೋತ್ಪಾದಕರನ್ನು ತಯಾರಿಸುವ ಕಾರ್ಖಾನೆ ಎಂದು ಅಂದುಕೊಳ್ಳುವ ಸಾಧ್ಯತೆ ಇಲ್ಲವೇ?     
           ಇಷ್ಟಕ್ಕೂ, ಇದು ಯಾವುದಾದರೊಂದು ನಿರ್ದಿಷ್ಟ ಪತ್ರಿಕೆಯ ಅಥವಾ ನಿರ್ದಿಷ್ಟ ಸಂದರ್ಭದ ಕುರಿತಂತೆ ಇರುವ ಆಕ್ಷೇಪವೇನೂ ಅಲ್ಲ..
       `ಭಯೋತ್ಪಾದನಾ ಸಂಬಂಧದಿಂದ ಕಳಂಕಿತಗೊಂಡಿರುವ ಭಟ್ಕಳ - Bhatkal town tainted by terror links' - ಎಂಬ ಹೆಡ್ ಲೈನಿನೊಂದಿಗೆ 2010 ಜುಲೈ 23ರಂದು CNN-IBN ಟಿವಿ ಚಾನೆಲ್ ವರದಿಯೊಂದನ್ನು ಪ್ರಸಾರ ಮಾಡಿತ್ತು. ಅದರ ವರದಿಗಾರ ಶುಹೈಬ್ ಅಹ್ಮದ್ ಭಟ್ಕಳಕ್ಕೆ ತೆರಳಿ, ಸಾರ್ವಜನಿಕರ ಬಾಯಿಗೆ ಮೈಕ್ರೋ ಪೋನ್ ಇಟ್ಟಿದ್ದ. ವಿಕಿಪೀಡಿಯಾದಲ್ಲಿ, `ರಿಯಾಝ್ ಭಟ್ಕಳ್ ಅಲಿಯಾಸ್ ಶಾ ರಿಯಾಝ್ ಅಹ್ಮದ್ ಮುಹಮ್ಮದ್' ಎಂಬ ಮೈಲು ಉದ್ದದ ಹೆಸರು ಮತ್ತು ವಿವರವಿದೆ. `ಮುಂಬೈ ಸ್ಫೋಟದ ಹಿಂದೆ ಭಟ್ಕಳದ ಇಂಡಿಯನ್ ಮುಜಾಹಿದೀನ್ ನ  ಪಾತ್ರ' - Bhatkal's IM module behind 13/7 blasts' - ಎಂಬ ದಾಟಿಯ ಶೀರ್ಷಿಕೆಗಳು ಮತ್ತು ವರದಿಗಳು ಈ ದೇಶದ ಪತ್ರಿಕೆಗಳ ಮುಖಪುಟದಲ್ಲಿ ಧಾರಾಳ ಪ್ರಕಟವಾಗಿವೆ. ಹೀಗಿರುವಾಗ ಅದಕ್ಕೆ ಭಿನ್ನವಾದ ಘಟನೆಯೊಂದು ಭಟ್ಕಳದಿಂದ ದೊರೆತರೆ ಅದೇಕೆ ಒಳಪುಟದ್ದೋ, ಒಂದು ಕಾಲಮ್  ನದ್ದೋ ಸುದ್ದಿಯಾಗಿ ಪ್ರಕಟವಾಗಬೇಕು? ನಿಜವಾಗಿ ಮಾಸಲು ಬಟ್ಟೆ ಧರಿಸಿದ, ಬಟ್ಟೆಯ ಗಂಟನ್ನು ಹೇರಿಕೊಂಡು ವಲಸೆ ಬರುವ ಬಡ ಕೂಲಿ ಕಾರ್ಮಿಕೆಗೂ ಇತರರಿಗೂ ವ್ಯತ್ಯಾಸ ಇದೆ. ಬಡವರ ಬಗ್ಗೆ ಕಣ್ಣೀರು ಸುರಿಸಿ ಪುಟಗಟ್ಟಲೆ ಬರೆಯುವವರು ಕೂಡ ಅಂಥವರ ಬಳಿ ಕೂರುವುದಕ್ಕೆ ಕೆಲವೊಮ್ಮೆ ಹಿಂಜರಿಯುವುದಿದೆ. ಹೀಗಿರುವಾಗ, ದಾರಾಸಿಂಗ್ ಕುಟುಂಬದ ಬಡತನ, ತುಂಬು ಗರ್ಭಿಣಿಯನ್ನು ಕೆಲಸಕ್ಕೆ ಕರಕೊಂಡು ಬರುವಷ್ಟು ದಯನೀಯ ಸ್ಥಿತಿ ಮತ್ತು ರೈಲು ಬೋಗಿಯಲ್ಲಿರಬಹುದಾದ ಭಯೋತ್ಪಾದನಾ ವಿರೋಧಿ ಮನುಷ್ಯರೆಲ್ಲರ ಹಿಂಜರಿಕೆಯ ಮಧ್ಯೆಯೂ ಓರ್ವ ಗಡ್ಡಧಾರಿ ಮನುಷ್ಯ ಮಾನವೀಯತೆ ತೋರುವುದು ಯಾಕೆ ಮಾಧ್ಯಮಗಳ ಪಾಲಿಗೆ ಚರ್ಚಾ ವಸ್ತುವಾಗುತ್ತಿಲ್ಲ? ಕನ್ನಡದ ಅಥವಾ ಇಂಗ್ಲಿಷ್ ನ  ಯಾವೊಬ್ಬ ಅಂಕಣಗಾರರೂ ಯಾಕೆ ಈ ವಿಚಾರವಾಗಿ ಅಂಕಣ ಬರೆದಿಲ್ಲ?  ಅವರೆಲ್ಲ ಬಾಂಬ್ ಸ್ಫೋಟಕ್ಕೆ ಕಾಯುತ್ತಿದ್ದಾರಾ?
           ನಿಜವಾಗಿ, ಬಡವರನ್ನು ದ್ವೇಷಿಸುವುದು, ಅವರ ಬಗ್ಗೆ ಅಸಹ್ಯ ಪಟ್ಟುಕೊಳ್ಳುವುದು ಬಾಂಬ್ ಸ್ಫೋಟಕ್ಕಿಂತಲೂ ಹೆಚ್ಚು ಅಪಾಯಕಾರಿ. ಬಾಂಬ್ ಸ್ಫೋಟಗಳು ನಡೆಯುವುದು ಯಾವಾಗಲೋ ಒಮ್ಮೆ. ಆದರೆ ಹೊಟ್ಟೆಪಾಡಿಗಾಗಿ ಬದುಕನ್ನೇ ಪಣವಾಗಿಟ್ಟು ಬರುವ ದಾರಾಸಿಂಗ್ ರಂಥವರು ರೈಲಿನ ಸಾಮಾನ್ಯ ಬೋಗಿಯಲ್ಲಿ, ರೈಲು ನಿಲ್ದಾಣಗಳಲ್ಲಿ, ಬಸ್ಸಿನಲ್ಲಿ, ರಸ್ತೆ ಬದಿಯಲ್ಲಿ ನಿತ್ಯ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಭಯೋತ್ಪಾದನೆಯ ಬಗ್ಗೆ, ದೇಶಪ್ರೇಮದ ಕುರಿತಂತೆ ಮಾತಾಡುವ ಎಷ್ಟೋ ಮಂದಿಗೆ ಇಂಥವರ ಸೇವೆ ಮಾಡುವುದು ಬಿಡಿ, ಇವರನ್ನು ಮುಟ್ಟಿಸಿಕೊಳ್ಳುವುದಕ್ಕೂ ಇಷ್ಟವಿರುವುದಿಲ್ಲ. ಇಂಥವರು ಮಾಧ್ಯಮಗಳಲ್ಲೂ ಧಾರಾಳ ಇದ್ದಾರೆ. ಹೀಗಿರುವಾಗ ರಈಸ್ ಅಹ್ಮದ್ ಸುದ್ದಿಯಾಗುವುದಾದರೂ ಹೇಗೆ? ಒಂದು ವೇಳೆ ರಈಸ್ ಅಹ್ಮದ್ ಬ್ಲೇಡ್ ನ  ಬದಲು ಬಾಂಬು ಹಿಡಿದುಕೊಂಡಿದ್ದರೆ ಏನಾಗುತ್ತಿತ್ತು? ಪತ್ರಿಕೆಗಳ ಮುಖಪುಟ ಹೇಗಿರುತ್ತಿತ್ತು? `ಬಾಂಬಿನೊಂದಿಗೆ ರಈಸ್ ಭಟ್ಕಳ್ ಬಂಧನ..' ಎಂಬ ಶೀರ್ಷಿಕೆಯ ಅಡಿಯಲ್ಲಿ ಯಾವೆಲ್ಲ ಬಗೆಯ ವರದಿ, ವಿಶ್ಲೇಷಣೆಗಳಿರುತ್ತಿತ್ತು? ಯೋಚಿಸಿ!

Tuesday, June 5, 2012

ಹೇಳಲೇಬೇಕಾಗಿತ್ತು, ಕೊನೆಗೂ ಅವರು ಹೇಳಿಬಿಟ್ಟರು..

Why have i been silent, silent for so long?
Our generals have gamed it out
Confident the west will servive
We people have not even been considered
What is dis right to preventive war?
A war that could erase the Iranian people
Dominated by its neigh bour pulsing with
righteousness smug in the fact that it is they not Iran
Who have the bomb
Why have i so far avoided to identify Isreal by its name?
Isreal and its ever increasing nuclear arsenal
Beyond reproach, Uncontrolled,Uninspected
We all know these things
Yet we all remain silent, fearful ofbeing labelled
Anti semitic
Hateful
Worse
........
ನಾನೇಕೆ ಮೌನವಾಗಿದ್ದೆ, ದೀರ್ಘ ಮೌನ?
ನಮ್ಮ ಸೇನಾ ನಾಯಕರು ಆಟವಾಡಿದ್ದರು
ಪಶ್ಚಿಮವು ಬದುಕುಳಿಯಲಿದೆಯೆಂಬ ವಿಶ್ವಾಸವಿದೆ
ನಾವು ಪರಿಗಣಿಸಲ್ಪಟ್ಟಿರಲೇ ಇಲ್ಲ
ಏನಿದು, ಪ್ರತಿರೋಧ ಯುದ್ಧ ಎಂಬ ಹಕ್ಕು?
ಇರಾನಿಯರನ್ನು ಅಳಿಸುವ ಯುದ್ಧ
....

ಹೀಗೆ ಸಾಗುವ 69 ಗೆರೆಗಳುಳ್ಳ ದೀರ್ಘ ಕವನವೊಂದು 2012 ಎಪ್ರಿಲ್ 4ರಂದು ಜರ್ಮನಿಯ ಸುಡಸ್ಚೆ ಝೈತುಂಗ್                    (suddeutsche zeitung), ಇಟಲಿಯ ಲಾ ರಿಪಬ್ಲಿಕಾ ಮತ್ತು ಎಲ್ ಪೈಸ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. what must be said - `ಹೇಳಲೇಬೇಕಾದದ್ದು ಏನು?' ಎಂಬ ಶೀರ್ಷಿಕೆಯ ಈ ಕವನವನ್ನು ಬರೆದದ್ದು ಖ್ಯಾತ ಜರ್ಮನ್ ಸಾಹಿತಿ, 1999ರ ಸಾಹಿತ್ಯಿಕ ನೋಬೆಲ್ ಪ್ರಶಸ್ತಿ ವಿಜೇತ ಗುಂಥರ್ ಗ್ರಾಸ್. ಇದರ ಮರುದಿನವೇ ಕವನದ ವಿರುದ್ಧ ಇಸ್ರೇಲ್ ತನ್ನ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ. ಗ್ರಾಸ್ ರನ್ನು  ಖಂಡಿಸುವ, ಅವರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವ ಲೇಖನಗಳು ಇಸ್ರೇಲಿ ದೈನಿಕ `ಹಾರೆಟ್ಸ್'ನಲ್ಲಿ ಪ್ರಕಟವಾಗುತ್ತವೆ. ಇಸ್ರೇಲಿನ ಆಂತರಿಕ ಸಚಿವ ಎಲಿ ಇಶಾಈ, ವಿದೇಶಾಂಗ ಸಚಿವ ಅವಿಗ್ರೋರ್ ಲೈಬ್ಮಾನ್, ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್ ಗೆ  ಇಸ್ರೇಲಿನ ರಾಯಭಾರಿಯಾಗಿದ್ದ ಲಿವಿ ಪ್ರೇಮರ್, ಇಸ್ರೇಲ್ ಪ್ರಧಾನ ಮಂತ್ರಿ ನೇತನ್ಯಾಹು .. ಎಲ್ಲರೂ ಗ್ರಾಸ್ ರನ್ನು  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವರದು ನಾಝಿ ಮನಸ್ಥಿತಿ ಅನ್ನುತ್ತಾರೆ. ಅವರ ನೋಬೆಲ್ ಪ್ರಶಸ್ತಿಯನ್ನು ಹಿಂಪಡೆಯುವಂತೆ ಸ್ವೀಡನ್ನಿನ ನೋಬೆಲ್ ಸಮಿತಿಗೆ ಮನವಿ ಮಾಡುತ್ತಾರೆ. ಗ್ರಾಸ್ ರ  ಇಸ್ರೇಲ್ ಪ್ರವೇಶಕ್ಕೆ ನಿಷೇಧವನ್ನು ಹೇರಿ ಎಪ್ರಿಲ್ 8ರಂದು ಎಲಿ ಇಶಾಈ ಆದೇಶ ಹೊರಡಿಸುತ್ತಾರೆ..
            ಅಷ್ಟಕ್ಕೂ ಗುಂಥರ್ ಗ್ರಾಸ್ ಮಾಡಿದ ಅಪರಾಧವಾದರೂ ಏನು? ಶಾಲೋ ಇಸ್ರಾಯೇಲ್ (ಇಸ್ರೇಲ್ ಗೆ  ಶಾಂತಿಯಿರಲಿ) ಎಂಬ ಘೋಷಣೆಯೊಂದಿಗೇ ಯಾವತ್ತೂ ತನ್ನ ಭಾಷಣವನ್ನು ಕೊನೆಗೊಳಿಸುವ, ಇಸ್ರೇಲ್ ನ  ಅಸ್ತಿತ್ವವನ್ನು ಸದಾ ಬೆಂಬಲಿಸುವ 84 ವರ್ಷದ ಈ ಸಾಹಿತಿಯ ಮೇಲೆ ಇಸ್ರೇಲ್ ಈ ಪರಿ ಮುಗಿ ಬಿದ್ದದ್ದಾದರೂ ಯಾಕೆ?
            17ನೇ ವಯಸ್ಸಿನಲ್ಲಿ ಹಿಟ್ಲರ್ ನ  ವಫನ್ ಎಸ್.ಎಸ್. ಎಂಬ ಸೇನಾ ವಿಭಾಗದಲ್ಲಿ ಬಲವಂತದಿಂದ ಸೇರ್ಪಡೆಗೊಂಡಂದಿನಿಂದಲೂ ಗುಂಥರ್ ಗ್ರಾಸ್ ಯಹೂದಿಗಳ ಪರವಾಗಿಯೇ ಧ್ವನಿಯೆತ್ತಿದವರು. ಇಸ್ರೇಲ್ ನ  ಅಸ್ತಿತ್ವಕ್ಕಾಗಿ ವಾದಿಸಿದವರು. 1967 ಮತ್ತು 71ರಲ್ಲಿ ಅವರು ಇಸ್ರೇಲ್ ಗೆ  ಭೇಟಿ ಕೊಟ್ಟಿದ್ದರು. ಇಸ್ರೇಲ್ ನ  ಅಂದಿನ ಅಧ್ಯಕ್ಷರಾಗಿದ್ದ ಲೆವಿ ಎಶ್ಕೋ ಮತ್ತು ಪ್ರಧಾನಿ ಗೋಲ್ಡ್ ಮೀರ್ ರು   ಇವರನ್ನು ಸ್ವಯಂ ಸ್ವಾಗತಿಸಿದ್ದರಲ್ಲದೇ, ಗೋಲ್ಡ್ ಮೀರ್ ರ  ವಿನಂತಿಯಂತೆ ಅವರ ಪೋಟೋವನ್ನು ಬಿಡಿಸಿ ಗ್ರಾಸ್ ಅರ್ಪಿಸಿದ್ದರು. ಅರಬ್ ರಾಷ್ಟ್ರಗಳಿಗೆ ನೀಡುತ್ತಿರುವ ಎಲ್ಲಾ ಬಗೆಯ ನೆರವುಗಳನ್ನೂ ರದ್ದುಪಡಿಸಬೇಕೆಂದು 1967ರ ಅರಬ್-ಇಸ್ರೇಲ್ ಯುದ್ಧದ ಬಳಿಕ ದಕ್ಷಿಣ ಜರ್ಮನಿಯೊಂದಿಗೆ ಗ್ರಾಸ್ ಆಗ್ರಹಿಸಿದ್ದರು. ಇಸ್ರೇಲನ್ನು ನೆರೆ ರಾಷ್ಟ್ರವಾಗಿ ಕಾಣಬೇಕೆಂದೂ ಇಸ್ರೇಲ್ ಮೇಲಿನ ಯಾವುದೇ ಬಗೆಯ ಆಕ್ರಮಣವನ್ನೂ ಜರ್ಮನಿಯ ಮೇಲಿನ ಆಕ್ರಮಣವಾಗಿ ಪರಿಗಣಿಸಬೇಕೆಂದೂ ಅವರು ಕರೆ ಕೊಡುತ್ತಿದ್ದರು. 3 ಸಂಪುಟಗಳಲ್ಲಿ ಬಂದಿರುವ ಅವರ ಭಾಷಣ ಸಂಗ್ರಹದಲ್ಲಿ ಎಲ್ಲೇ ಆಗಲಿ ಅರಬ್ ರಾಷ್ಟ್ರಗಳ ಉಲ್ಲೇಖವೇ ಇಲ್ಲ. ಒಂದು ರೀತಿಯಲ್ಲಿ ಹಿಟ್ಲರ್ ನ  ಕ್ರೌರ್ಯಕ್ಕೆ, 6 ಮಿಲಿಯನ್ ಯಹೂದಿಗಳ ನರಹತ್ಯೆಯನ್ನು ಸಂಕೇತಿಸುವ ಹಾಲೋಕಾಸ್ಟ್ ಗೆ  ತಾನು ಮತ್ತು ತನ್ನ ಜರ್ಮನಿ ಕಾರಣವೆಂಬ ಅಪರಾಧಿ ಮನೋಭಾವ ಅವರ ಮಾತಿನಲ್ಲಿ ಯಾವಾಗಲೂ ಇಣುಕುತ್ತಿರುತ್ತದೆ. ಇಷ್ಟಿದ್ದೂ ಇಸ್ರೇಲ್ ಅವರ ವಿರುದ್ಧ ಸಿಟ್ಟಾಗಿದ್ದರೆ ಅದಕ್ಕೆ ಕಾರಣ,
             ವಾಟ್ ಮಸ್ಟ್ ಬಿ ಸೆಡ್
ಇಸ್ರೇಲನ್ನು, ಅದರ ದುರಹಂಕಾರಿ ನೀತಿಯನ್ನು, ಇಸ್ರೇಲನ್ನು ಕುರುಡಾಗಿ ಪ್ರೀತಿಸುವ ಜರ್ಮನಿಯನ್ನು ಗ್ರಾಸ್ ಕವನದುದ್ದಕ್ಕೂ ಪ್ರಶ್ನಿಸುತ್ತಾರೆ. 'ನಾನು ಈ ವರೆಗೂ ಯಾಕೆ ಮೌನವಾಗಿದ್ದೆನೆಂದರೆ, ನಾಝಿ ಕ್ರೌರ್ಯ ನಡೆಸಿದ್ದು ನನ್ನ ದೇಶ ಅನ್ನುವ ಅಪರಾಧಿ ಪ್ರಜ್ಞೆ ಯಿಂದ' ಅನ್ನುತ್ತಾರೆ. ಅಣ್ವಸ್ತ್ರ ಹೊಂದಿರುವ ಇಸ್ರೇಲ್, ಇರಾನನ್ನು ಅಪಾಯಕಾರಿ ಅನ್ನುತ್ತಿರುವ ಬಗ್ಗೆ, ಅದನ್ನು ಬೆಂಬಲಿಸುವ ಪಶ್ಚಿಮದ ಕಾಪಟ್ಯದ ಬಗ್ಗೆ, ಇಸ್ರೇಲಿನ ಅನ್ಯಾಯವನ್ನು ಎತ್ತಿ ಹೇಳಿದಾಗಲೆಲ್ಲಾ ಅದನ್ನು ಆಂಟಿ ಸೆಮಿಟಿಕ್ ಎಂದು ಮುದ್ರೆಯೊತ್ತಿ ಬೆದರಿಸುವ ಬಗ್ಗೆ ಕವನದಲ್ಲಿ ಉಲ್ಲೇಖಿಸುತ್ತಾರೆ. ಜಾಗತಿಕ ಶಾಂತಿಗೆ ಇರಾನಲ್ಲ, ಇಸ್ರೇಲ್ ಅಪಾಯಕಾರಿ ಅನ್ನುತ್ತಾರೆ. ಅಣ್ವಸ್ತ್ರವನ್ನು ಕೊಂಡೊಯ್ಯಬಲ್ಲ ಮೂರು ಡಾಲ್ಪಿನ್ ಸಬ್ ಮೆರಿನ್ ಗಳನ್ನು ಇಸ್ರೇಲ್ ಗೆ  ಜರ್ಮನಿ ಮಾರಿರುವುದನ್ನೂ ಇನ್ನೂ ಆರು ಸಬ್ ಮೆರಿನ್ ಗಳ ಮಾರಾಟಕ್ಕೆ ಒಪ್ಪಂದ ಮಾಡಿ ಕೊಂಡಿರುವುದನ್ನೂ ಟೀಕಿಸುತ್ತಾರೆ. ಇಸ್ರೇಲ್ ಮತ್ತು ಇರಾನ್ ಎರಡೂ ಅಂತಾರಾಷ್ಟ್ರೀಯ ಅಣು ತಪಾಸಣೆಗೆ ಒಳಗಾದರೆ ಮಾತ್ರ ಜಾಗತಿಕ ಶಾಂತಿ ಸಾಧ್ಯ ಅನ್ನುತ್ತಾರೆ...
          ನಿಜವಾಗಿ ಇಸ್ರೇಲ್ ಭಯಪಟ್ಟದ್ದು ಗುಂಥರ್ ಗ್ರಾಸ್ ರ  ಬರೇ ಈ 69 ಗೆರೆಗಳಿಗಲ್ಲ. ಇಸ್ರೇಲ್ ನ  ಕ್ರೌರ್ಯವನ್ನು, ಫೆಲೆಸ್ತೀನಿಯರ ವಿರುದ್ಧ ಅದು ನಡೆಸುತ್ತಿರುವ ದಬ್ಬಾಳಿಕೆಯನ್ನು, ಫೆಲೆಸ್ತೀನಿಯರ ಭೂಮಿಯಲ್ಲಿ ಅಕ್ರಮವಾಗಿ ಯಹೂದಿಯರಿಗೆ ಮನೆ ನಿರ್ಮಿಸಿ ಕೊಡುತ್ತಿರುವುದನ್ನು ಗುಂಥರ್ ಗ್ರಾಸ್ ಗಿಂತ ತೀಕ್ಷ್ಣವಾಗಿ, ಕಟು ಶಬ್ದಗಳಲ್ಲಿ ಖಂಡಿಸಿ ಸಾಕಷ್ಟು ಮಂದಿ ಲೇಖನ ಬರೆದಿದ್ದಾರೆ. ಭಾಷಣ ಮಾಡಿದ್ದಾರೆ. ಆದರೆ ಇಸ್ರೇಲ್ ಅವೆಲ್ಲಕ್ಕೂ ಈ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸಿಯೇ ಇಲ್ಲ. ಯಾಕೆಂದರೆ, ಅವೆಲ್ಲ ಪ್ರಕಟವಾದದ್ದು ಜರ್ಮನಿಯ ಹೊರಗೆ. ಇಸ್ರೇಲ್ ಗೆ  ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಬೆಂಬಲಿಗರಿರುವುದು ಜರ್ಮನಿಯಲ್ಲಿ. ಇಸ್ರೇಲನ್ನು ಟೀಕಿಸಿ, ಅದರ ಅಸ್ತಿತ್ವವನ್ನು ಪ್ರಶ್ನಿಸಿ ಲೇಖನ ಬರೆಯುವುದಕ್ಕೆ ಜರ್ಮನಿಯಲ್ಲಿ ಒಂದು ಹಂತದ ವರೆಗೆ ಅಲಿಖಿತ ನಿಷೇಧವಿದೆ. ಇಸ್ರೇಲ್ ನ  ಅಸ್ತಿತ್ವವನ್ನು ಪ್ರಶ್ನಿಸುವ ಲೇಖನವನ್ನು ಬರೆಯಬಾರದು ಎಂಬ ಮುಚ್ಚಳಿಕೆಯನ್ನು ಪಡೆದು ಕೊಂಡೇ ಜರ್ಮನಿಯ ಪತ್ರಿಕೆಗಳು ಪತ್ರಕರ್ತರನ್ನು ನೇಮಿಸಿಕೊಳ್ಳುತ್ತವೆ ಎಂದು ಖ್ಯಾತ ಪತ್ರಕರ್ತ ಗಿಡೆನ್ ಲೆವಿ ಹೇಳುತ್ತಾರೆ. ಇಸ್ರೇಲನ್ನು ಕೊಂಚ ಟೀಕಿಸಿ ಬರೆದ ಲೇಖನವನ್ನು ಅವರು ಜರ್ಮನಿಯ die welt  ಎಂಬ ಪತ್ರಿಕೆಗೆ ಕಳುಹಿಸಿಕೊಟ್ಟ ಬಳಿಕ ಅವರನ್ನು ಆ ಪತ್ರಿಕೆಯು ಕಪ್ಪು ಪಟ್ಟಿಯಲ್ಲಿ ಸೇರಿಸಿರುವುದನ್ನೂ ಅವರು ಉಲ್ಲೇಖಿಸುತ್ತಾರೆ. ಇಂಥ ರಾಷ್ಟ್ರವೊಂದರಲ್ಲಿ ಗುಂಥರ್ ಗ್ರಾಸ್ ರ  ಕವನ ಪ್ರಕಟವಾಗುವುದನ್ನು ಇಸ್ರೇಲ್ ಸಹಿಸಿಕೊಳ್ಳುವುದಾದರೂ ಹೇಗೆ?
          ಆದರೆ ಯಾವುದು ನಡೆಯಬಾರದು ಅಂತ ಇಸ್ರೇಲ್ ಬಯಸಿತ್ತೋ ಅದುವೇ ನಡೆದು ಹೋಯಿತು. ಗುಂಥರ್ ಗ್ರಾಸ್ ರ  69 ಗೆರೆಗಳ ಸುತ್ತ ಜರ್ಮನಿ ಮತ್ತು ಜರ್ಮನಿಯ ಹೊರಗೆ ಧಾರಾಳ ಚರ್ಚೆಗಳು ನಡೆದುವು. ಜಾಕೊಬ್ ಅಗಸ್ಟಿನ್, ಗಿಡೆನ್ ಲೆವಿ ಮುಂತಾದ ಖ್ಯಾತ ಲೇಖಕರು, why we need an open debate on isreal - ಇಸ್ರೇಲ್ ನ  ಕುರಿತಂತೆ ಯಾಕೆ ಮುಕ್ತ ಚರ್ಚೆಯ ಅಗತ್ಯವಿದೆ - ಎಂಬ ಬಗ್ಗೆ ಮಾಧ್ಯಮಗಳಲ್ಲಿ ಲೇಖನ ಬರೆದರು. ಸಾರ್ವಜನಿಕ ಚರ್ಚೆಯೊಂದನ್ನು ಹುಟ್ಟು ಹಾಕಿ, ಜರ್ಮನಿಯರ ಮನಸಾಕ್ಷಿಯನ್ನು ಚುಚ್ಚಿದರು. ಆ ಕುರಿತಂತೆ ನೂರಾರು ಪ್ರತಿಕ್ರಿಯೆಗಳು ಹರಿದು ಬಂದುವು. ಜೋಸ್ ಡೆ ಸರಮಾಗೋ ಅನ್ನುವ ಖ್ಯಾತ ಲೇಖಕರೊಬ್ಬರು ಈ ಹಿಂದೆ ಇಸ್ರೇಲ್ ಆಕ್ರಮಿತ ಫೆಲೆಸ್ತೀನಿಗೆ ಭೇಟಿ ಕೊಟ್ಟದ್ದು ಮತ್ತು ಆ ಪ್ರದೇಶವನ್ನು ಹಿಟ್ಲರ್ ನ  ಮೈನ್ ಕೆಂಫ್ ಗೆ  ಹೋಲಿಸಿದ್ದು, ಯಹೂದಿಯರು ತಮ್ಮ ಅಪ್ಪಂದಿರು, ತಾತ, ಮುತ್ತಾತಂದಿರ ಸಂಕಟದಿಂದ ಪಾಠ ಕಲಿತಿಲ್ಲ ಅಂದದ್ದನ್ನೆಲ್ಲಾ ಜನರು ನೆನಪಿಸಿಕೊಂಡರು. ಓಸ್ಲೋ ಒಪ್ಪಂದಕ್ಕೆ ಇಸ್ರೇಲ್ ಬದ್ಧ ಆಗಲಿ, ಆಕ್ರಮಿತ ಪ್ರದೇಶದಲ್ಲಿ ಮನೆ ನಿರ್ಮಾಣ ನಿಲ್ಲಿಸಲಿ ಅಂದರು.
       ಇಸ್ರೇಲ್ ನ  ಬೆದರಿಕೆಗೆ ಗುಂಥರ್ ಗ್ರಾಸ್ ಕೂಡಾ ಸುಮ್ಮನಾಗಲಿಲ್ಲ. ಎಪ್ರಿಲ್ 6ರಂದು ಡೇಲ್ ಸ್ಪೀಗಲ್ ಪತ್ರಿಕೆಯ ಆನ್ ಲೈನ್ ಸಂಚಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಇನ್ನಷ್ಟು ಖಾರವಾಗಿಯೇ ಮಾತಾಡಿದರು..
        `ನಾನು ವಿಮರ್ಶಿಸುತ್ತಿರುವುದು ಇಸ್ರೇಲನ್ನಲ್ಲ, ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರನ್ನು. ಹಾಗೆಯೇ ಹಾಲೋಕಾಸ್ಟನ್ನು ನಿಷೇಧಿಸುವ ಅಹ್ಮದಿ ನೆಜಾದರನ್ನು ನಾನು ಬೆಂಬಲಿಸಲಾರೆ. ಆದರೆ, ಫೆಲೆಸ್ತೀನಿಯರಿಂದ ಭೂಮಿಯನ್ನು ವಶಪಡಿಸಿ ಯಹೂದಿಗಳಿಗೆ ಮನೆ ನಿರ್ಮಿಸಿ ಕೊಡುವುದು ಯಾವ ನ್ಯಾಯ? ವಿಶ್ವಸಂಸ್ಥೆಯ ಅಷ್ಟೂ ನಿಯಮಗಳನ್ನು ಇಸ್ರೇಲ್ ತುಚ್ಛೀಕರಿಸುತ್ತಿರುವುದೇಕೆ? ಇರಾನಿನಲ್ಲಿ ಅಣ್ವಸ್ತ್ರಗಳೇ ಇಲ್ಲ, ಆದರೂ ಅದರ ವಿರುದ್ಧ ನಿರ್ಬಂಧ ಹೇರುವ ಮತ್ತು ಅಣ್ವಸ್ತ್ರಗಳಿರುವ ಇಸ್ರೇಲ್ ನ  ಬಗ್ಗೆ ಮೌನವಾಗುವ ಪಾಶ್ಚಾತ್ಯರು ಯಾರನ್ನು ಮೂರ್ಖರಾಗಿಸುತ್ತಿದ್ದಾರೆ? ಇಂಥ ಹಿಪಾಕ್ರಸಿಯೇಕೆ..' 69 ಗೆರೆಗಳಿಗಿಂತ ಜೋರಾಗಿತ್ತು ಗುಂಥರ್ ಗ್ರಾಸ್ ರ  ಮಾತು..
            ಸದ್ಯ ಗುಂಥರ್ ಗ್ರಾಸ್ ರ , `ವಾಟ್ ಮಸ್ಟ್ ಬಿ ಸೆಡ್' ಎಂಬ ಕವನ ಮತ್ತು ಅದರ ಸುತ್ತ ಎದ್ದ ವಿವಾದ ತಣ್ಣಗಾಗಿದ್ದರೂ ಆ ಬಗ್ಗೆ ವ್ಯಕ್ತವಾದ ವಿಚಾರಗಳು ಹಳತಾಗಿಲ್ಲ. ವಿಕಿಪೀಡಿಯಾದಲ್ಲಿ, ಇನ್ನಿತರ ಸೈಟ್  ಗಳಲ್ಲೂ  ಆ ಬಗ್ಗೆ ಧಾರಾಳ ವಿವರಗಳಿವೆ. ಏನೇ ಆಗಲಿ, ಒಂದೊಳ್ಳೆಯ ಚರ್ಚೆಗೆ ಚಾಲನೆ ಕೊಟ್ಟರಲ್ಲ, ಅದಕ್ಕಾಗಿ ಗ್ರಾಸ್ ಗೆ  ಅಭಿನಂದನೆ ಸಲ್ಲಿಸಲೇಬೇಕು.