Tuesday, December 24, 2013

ಕಣ್ಣೀರಾಗುವ ತಾಯಿಯ ಎದುರು ಯಾವ ಮಕ್ಕಳು ತಾನೇ ಕರಗುವುದಿಲ್ಲ?

   ಮೊನ್ನೆ ಆತ್ಮೀಯ ಗೆಳೆಯ ಎದುರು ಬಂದು ಕೂತಿದ್ದ..
ಹಾಗಂತ ಆತ ಹಾಗೆ ಬಂದು ಕೂರುವುದು ಅದು ಮೊದಲ ಸಲವೇನೂ ಅಲ್ಲ. ಪ್ರತಿದಿನವೂ ನಾವಿಬ್ಬರೂ ಹಾಗೆ ಎದುರು ಬದುರು ಕೂರುತ್ತೇವೆ. ಚರ್ಚಿಸುತ್ತೇವೆ. ಪತ್ರಿಕೆಯ ಬಗ್ಗೆ, ಅದರಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ, ಪುಟ ವಿನ್ಯಾಸ, ಪ್ರಸಾರದ ಬಗ್ಗೆ, ಲೇಖನಗಳ ವೈವಿಧ್ಯತೆಯ ಬಗ್ಗೆ... ಹೀಗೆ ಪ್ರತಿ ದಿನದ ಚರ್ಚೆಗೂ ಧಾರಾಳ ವಿಷಯಗಳಿರುತ್ತವೆ. ಪತ್ರಿಕೆಯನ್ನು ಹೇಗೆ ಭಿನ್ನವಾಗಿ ಕಟ್ಟಿಕೊಡಬಹುದು ಎಂಬ ಬಗ್ಗೆ ಚರ್ಚೆಗಳು ಸಾಗುತ್ತಿರುತ್ತದೆ. ಅಷ್ಟಕ್ಕೂ, ಪತ್ರಿಕೆಯ 16 ಪುಟಗಳನ್ನು ವಾರವೊಂದರಲ್ಲಿ ಹೇಗಾದರೂ ಮಾಡಿ ತುಂಬಿಸಿ ಬಿಡಬೇಕೆಂಬ ಗುರಿಯಷ್ಟೇ ಇರುವುದಾದರೆ, ಸಂಪಾದಕರಿಗೂ ಸಂಪಾದಕೀಯ ಬಳಗಕ್ಕೂ ಅಂಥ ಕಷ್ಟವೇನಿಲ್ಲ. ಆದರೆ ಪ್ರತಿ ಪುಟದಲ್ಲೂ ಪ್ರಬುದ್ಧ ಮತ್ತು ವಿಚಾರ ಪ್ರಚೋದಕ ಬರಹಗಳಿರಬೇಕು ಎಂಬ ಗುರಿ ಇದ್ದರೆ ಖಂಡಿತ ಇದು ಕಷ್ಟದ್ದು ಮತ್ತು ಸವಾಲಿನದ್ದೇ. ಆಗ ಪತ್ರಿಕೆಯ ಪ್ರತಿಯೊಂದು ಪುಟವೂ ಸಂಪಾದಕೀಯ ಬಳಗದ ಪಾಲಿಗೆ ಅಸಾಮಾನ್ಯದ್ದಾಗಿ ಬಿಡುತ್ತದೆ. ಒಂದು ವಾರದವರೆಗೆ ಓದುಗರನ್ನು ಹಿಡಿದಿಡಬಹುದಾದಷ್ಟು ತೂಕದ ಬರಹಗಳಿಗಾಗಿ ಪ್ರಯತ್ನ ನಡೆಯುತ್ತದೆ. ನಿಜವಾಗಿ, ವಾರಪತ್ರಿಕೆಯೆಂಬುದು ದೈನಿಕದಂತೆ ಅಲ್ಲ. ದೈನಿಕದ ಬಹುತೇಕ ಸುದ್ದಿಗಳು ಸಂಜೆಯಾಗುವಾಗ ಸತ್ತು ಹೋಗಿರುತ್ತದೆ. ಮರುದಿನ ಹೊಸ ಸುದ್ದಿ, ಹೊಸ ಸಾವು. ಮೊದಲ ದಿನದ ಸುದ್ದಿಗೆ ತದ್ವಿರುದ್ಧವಾದ ಸುದ್ದಿಗಳು ಮರುದಿನ ಪ್ರಕಟವಾಗಲೂಬಹುದು. ರಾಜಕಾರಣಿಗಳು, ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ಆತ್ಮಹತ್ಯೆ, ಹಲ್ಲೆ, ವಂಚನೆ, ಅತ್ಯಾಚಾರ... ಇತ್ಯಾದಿ ಸುದ್ದಿಗಳ ಜೊತೆ ನಿತ್ಯ ಪ್ರಕಟವಾಗುವ ದೈನಿಕಗಳಿಗಿಂತ ಭಿನ್ನ ಸುದ್ದಿ-ವಿಶ್ಲೇಷಣೆಗಳಿಗಾಗಿ ಓದುಗರು ವಾರಪತ್ರಿಕೆಯನ್ನು ಕಾಯುತ್ತಾರೆ. ಆದ್ದರಿಂದ, ಸಂಜೆಯಾಗುವಾಗ ಸಾಯುವ ದೈನಿಕಗಳ ಸುದ್ದಿಗಳಿಗೆ ವಿಶ್ಲೇಷಣೆಯ ಮೂಲಕ ಜೀವ ಕೊಡುವುದು, ಅದರ ವಿವಿಧ ಮಗ್ಗುಲುಗಳನ್ನು ಚರ್ಚೆಗೆತ್ತಿಕೊಂಡು ಓದುಗರ ಮನ ತಟ್ಟುವುದನ್ನು ವಾರಪತ್ರಿಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ವಾರಪತ್ರಿಕೆಯ ಸಂಪಾದಕೀಯ ಬಳಗವು ದೈನಿಕದ ಸಂಪಾದಕೀಯ ಬಳಗಕ್ಕಿಂತ ಭಿನ್ನವಾಗಿ ಚಟುವಟಿಕೆಯಲ್ಲಿ ತೊಡಗಬೇಕಾಗುತ್ತದೆ. ಯಾವುದೇ ಒಂದು ಸುದ್ದಿಯನ್ನು ವಿಶ್ಲೇಷಿಸುವುದಕ್ಕೂ ಬರೇ ಆ ಸುದ್ದಿಯನ್ನು ಯಥಾ ಪ್ರಕಾರ ಪ್ರಕಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಸುದ್ದಿಯಲ್ಲಿ ಬರಹಗಾರನ ಅಭಿಪ್ರಾಯ ಇರುವುದಿಲ್ಲ. ಅದು ಬರೇ ಸುದ್ದಿ. ಒಂದೋ ಆ ಸುದ್ದಿ ಆ ದಿನ ಹೊತ್ತೇರುವಾಗಲೇ ಸಾಯ     ಬಹುದು ಅಥವಾ ಸಂಜೆಯವರೆಗೆ ಓದುಗರ ನಡುವೆ ಚರ್ಚೆಯಲ್ಲಿರಬಹುದು. ಕೆಲವೊಮ್ಮೆ ಈ ಚರ್ಚೆ ದಿನಗಳವರೆಗೂ ಮುಂದುವರಿಯಬಹುದು. ಆದರೆ ಸುದ್ದಿ ವಿಶ್ಲೇಷಣೆ ಮಾಡುವ ವಾರಪತ್ರಿಕೆಯೊಂದು ಅಂಥ ಸುದ್ದಿಯನ್ನು ವಿಶ್ಲೇಷಣೆಗೆ ಒಳಪಡಿಸಲು ಎತ್ತಿಕೊಳ್ಳುವಾಗ ಕೆಲವು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುದ್ದಿಯನ್ನು ಜನ ಈಗಾಗಲೇ ಓದಿರುವುದರಿಂದ ಅದೇ ಸುದ್ದಿಯನ್ನು ಮತ್ತೆ ಕೊಡುವಂತಿಲ್ಲ. ಅದರ ಇನ್ನಿತರ ಮಗ್ಗುಲುಗಳನ್ನು ವಿಶ್ಲೇಷಿಸಬೇಕೆಂದರೆ ಮಾಹಿತಿಯ ಅಗತ್ಯ ಇರುತ್ತದೆ. ವಿಶ್ಲೇಷಣೆಯ ಹೆಚ್ಚು ತರ್ಕಬದ್ಧ ಮತ್ತು ತೂಕಬದ್ಧವಾಗ ಬೇಕಾದರೆ ಬೇರೆ ಸಾಹಿತ್ಯ ಕೃತಿಗಳ ಅಧ್ಯಯನ ನಡೆಸಿರಬೇಕಾಗುತ್ತದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವ ಜಾಣ್ಮೆಯನ್ನೂ ಪ್ರದರ್ಶಿಸಬೇಕಾಗುತ್ತದೆ. ಇವೆಲ್ಲದರ ಮಧ್ಯೆ ಓದುಗರನ್ನು ಗಮನದಲ್ಲಿಟ್ಟುಕೊಳ್ಳಬೇಕು. ತನ್ನ ಬರಹ ಯಾವ ಬಗೆಯ, ಎಂಥ ವೈಚಾರಿಕ ಮಟ್ಟವನ್ನು ಬೆಳೆಸಿಕೊಂಡ ಓದುಗರನ್ನು ತಲುಪುತ್ತಿದೆ ಎಂಬ ಅರಿವು ಬರಹಗಾರನಲ್ಲಿ ಇರಬೇಕು. ಓದುಗರ ಭಾವನೆಗಳನ್ನು ಪರಿಗಣಿಸದೇ ಬರೆಯ ತೊಡಗಿದರೆ, ಬರಹ ಹೇಗೆಯೇ ಇದ್ದರೂ ಅದು ನಿರೀಕ್ಷಿತ ಪರಿಣಾಮ ಬೀರುವ ಸಾಧ್ಯತೆಗಳು ತೀರಾ ಕಡಿಮೆ...
ಸಾಮಾನ್ಯವಾಗಿ ಗೆಳೆಯ ಇಂಥ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದ. ಆದರೆ ಇವತ್ತು ಆ ಬಗ್ಗೆ ಮಾತಾಡಲೇ ಇಲ್ಲ..
ಕಣ್ಣು ತುಂಬಿಕೊಂಡಿತ್ತು. ಗೆಳೆಯನ ತುಂಬಿದ ಕಣ್ಣನ್ನು ನಾನು ನೋಡಿದ್ದು ಇದೇ ಮೊದಲು. ನಾಲ್ಕು ಮಾತುಗಳನ್ನು ಆಡುತ್ತಿದ್ದಂತೆಯೇ ಕಣ್ಣೀರು ದರದರನೆ ಹರಿಯ ತೊಡಗಿತು. ಸಾಮಾನ್ಯವಾಗಿ ಪುರುಷರು ಇತರರೆದುರು ಕಣ್ಣೀರು ಹಾಕುವುದು ಕಡಿಮೆ. ಅಷ್ಟೊಂದು ಆಘಾತಕಾರಿ ಸಂಗತಿಗಳು ಎದುರಾದರೆ ಯಾರೂ ಕಾಣದ ಸ್ಥಳದಲ್ಲಿ ಪುರುಷರು ಕಣ್ಣೀರು ಹರಿಸಿಕೊಂಡು ಸುಮ್ಮನಾಗಿ ಬಿಡುತ್ತಾರೆ. ಒಂದು ವೇಳೆ, ಪ್ರತಿ ಮನೆಯ ಸ್ನಾನಗೃಹದ ಗೋಡೆಗಳಿಗೆ ಬಾಯಿ ಬರುತ್ತಿದ್ದರೆ, ಅಸಂಖ್ಯಾತ ಪುರುಷರ ಕಣ್ಣೀರ ಕತೆಗಳನ್ನು ಅವು ಹೇಳುತ್ತಿದ್ದುವು. ಯಾಕೆಂದರೆ, ಪುರುಷರು ಸ್ನಾನ ಗೃಹದಲ್ಲಿ ಕಣ್ಣೀರು ಹರಿಸಿ, ಮುಖ ತೊಳೆದುಕೊಂಡು ತಮ್ಮ ಕಣ್ಣೀರನ್ನು ಅಡಗಿಸುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ಎಲ್ಲರೆದುರೇ ಕಣ್ಣೀರು ಹರಿಸಿದರೆ ಎಲ್ಲಿ ಹೆಂಗರುಳಿನವನು ಎಂಬ ಅಡ್ಡ ಹೆಸರು ಬರುತ್ತೋ ಅನ್ನುವ ಅನುಮಾನ, ಆತಂಕ ಅವರನ್ನು ಸದಾ ಕಾಡುತ್ತಿರುತ್ತದೆ..
ಪತ್ನಿ, ಇಬ್ಬರು ಮಕ್ಕಳೊಂದಿಗೆ ಪರಂಪರೆಯ ಮನೆಯಲ್ಲಿ ವಾಸವಿರುವ ನನ್ನ ಗೆಳೆಯನಿಗೆ ಬೇರೊಂದು ಮನೆ ಮಾಡಿಕೊಳ್ಳ ಬೇಕೆಂಬ ಇರಾದೆ ವರ್ಷಗಳ ಮೊದಲೇ ಇತ್ತು. ಅದನ್ನು ಆತ ಆಗೊಮ್ಮೆ-ಈಗೊಮ್ಮೆ ಹೇಳಿಕೊಂಡದ್ದೂ ಇದೆ. ಮೂರ್ನಾಲ್ಕು ಮಂದಿ ತಮ್ಮಂದಿರಿರುವ ಒಂದು ದೊಡ್ಡ ಕುಟುಂಬದ ಮನೆಯಿಂದ ತಾನೊಬ್ಬ ಹೊರ ಹೋದರೆ ಅಂಥ ಸಮಸ್ಯೆ ಏನೂ ಉಂಟಾಗದು ಎಂಬ ದೃಢ ನಿಲುವು ಗೆಳೆಯನದ್ದಾಗಿತ್ತು. ವಿಧವೆ ತಾಯಿಯೊಂದಿಗೆ ಆಗಾಗ ತನ್ನ ಇರಾದೆಯನ್ನು ಪರೋಕ್ಷವಾಗಿ ವ್ಯಕ್ತ ಪಡಿಸುತ್ತಲೂ ಇದ್ದ. ತಮ್ಮಂದಿರಿಗೆ ಈಗಾಗಲೇ ವಿವಾಹವಾಗಿರುವುದರಿಂದ ತಾಯಿಯನ್ನು ನೋಡಿಕೊಳ್ಳುವ ವಿಷಯದಲ್ಲಿ ಏನೂ ವ್ಯತ್ಯಾಸ ಆಗದು ಎಂದೂ ನಂಬಿದ್ದ. ನಿಜವಾಗಿ, ಮನೆಯ ಹಿರಿಯ ಸದಸ್ಯನಾಗಿ ಮನೆ ಬಿಡುವುದೆಂದರೆ ಅದೊಂದು ದೊಡ್ಡ ಸವಾಲು. ಮನೆಯವರೆಲ್ಲರೂ ಹಿರಿಯವನನ್ನೇ ಅವಲಂಬಿಸಿರುತ್ತಾರೆ. ಅಣ್ಣ ಜವಾಬ್ದಾರಿ ನೋಡಿಕೊಳ್ಳುತ್ತಾನೆ ಎಂಬ ಧೈರ್ಯದಿಂದ ತಮ್ಮಂದಿರು ಬದುಕುತ್ತಿರುತ್ತಾರೆ. ತಾಯಿಯೂ ಹಿರಿಯ ಮಗನ ಮೇಲೆ ಇಟ್ಟಷ್ಟು ಭರವಸೆ ಇನ್ನಾರ ಮೇಲೂ ಇಟ್ಟಿರುವುದಿಲ್ಲ. ಮಾತ್ರವಲ್ಲ, ಕೆಲವೊಮ್ಮೆ ಮಗನಿಗಿಂತಲೂ ಮಗನ ಮಕ್ಕಳ ಜೊತೆಯೇ ತಾಯಿಯ ಸಂಬಂಧ ಹೆಚ್ಚಿರುವುದೂ ಇದೆ. ಯಾಕೆಂದರೆ, ಮಗ ಉದ್ಯೋಗ ನಿಮಿತ್ತ ಕಚೇರಿಗೆ ಹೋದರೆ ಬರುವಾಗ ಸಂಜೆಯಾಗಿರುತ್ತದೆ. ಬಳಿಕ ಸ್ನಾನ, ಅದೂ-ಇದೂ ಎಂದು ಸಮಯ ಬೇಗ ಬೇಗನೆ ಕಳೆದು ಹೋಗುತ್ತದೆ. ಈ ಮಧ್ಯೆ ತಾಯಿಯೊಂದಿಗೆ ಬೆರೆಯುವುದಕ್ಕೆಂದು ಎಷ್ಟೇ ಪ್ರಯತ್ನಿಸಿದರೂ ಅದಕ್ಕೊಂದು ಮಿತಿ ಇದೆ. ಆದರೆ ಮಗನ ಸಣ್ಣ ಮಕ್ಕಳು ಬೆಳಗಿನಿಂದ ಸಂಜೆಯವರೆಗೆ ಅಜ್ಜಿಯ ಜೊತೆಗಿರುತ್ತದೆ. ತಮ್ಮ ಮುದ್ದು ಮುದ್ದು ಮಾತುಗಳ ಮೂಲಕ ಅಪ್ಪ ಬಿಟ್ಟು ಹೋದ ಜಾಗವನ್ನು ಅವು ತುಂಬಿ ಬಿಡುತ್ತವೆ. ಆದ್ದರಿಂದಲೇ, ವಯಸ್ಸಾದ ತಾಯಿ ತನ್ನ ಸಂತಸವನ್ನು ಈ ಮಕ್ಕಳೊಂದಿಗೆ ಕಂಡುಕೊಳ್ಳುತ್ತಾಳೆ. ಆ ಮಕ್ಕಳ (ಮೊಮ್ಮಕ್ಕಳ) ಆಟದಲ್ಲಿ, ಖುಷಿಯಲ್ಲಿ, ತಂಟೆಯಲ್ಲಿ.. ತನ್ನ ಮಗನನ್ನು ಅನುಭವಿಸುತ್ತಾಳೆ. ಹೀಗಿರುವಾಗ ಮಗ ಬೇರೆ ಮನೆ ಮಾಡುವುದೆಂದರೆ, ಮಗನ ಜೊತೆ ಮೊಮ್ಮಕ್ಕಳನ್ನೂ ಕಳಕೊಂಡಂತೆ. ಬಹುಶಃ, ಕಚೇರಿಯಲ್ಲಿ ಬಿಝಿಯಾಗಿರುವ ಗಮನಕ್ಕೆ ಇವು ಬರಬೇಕೆಂದೇನೂ ಇಲ್ಲ. ಆದ್ದರಿಂದಲೇ, ಗೆಳೆಯ ಬೇರೊಂದು ಮನೆ ಮಾಡಿ ತಾಯಿಯನ್ನು ಹೊಸ ಮನೆಗೆ ಕರೆದಾಗ ಅವರು ಕಣ್ಣೀರಾದರು. ಹೊಸ ಮನೆಗೆ ಬಂದರೂ ನಿಲ್ಲಲೊಪ್ಪಲಿಲ್ಲ. ತಿರುಗಿ ಬಂದು ಮಗನನ್ನು ಮತ್ತು ಮೊಮ್ಮಗುವನ್ನು ಸ್ಮರಿಸಿ ಕಣ್ಣೀರು ಹರಿಸತೊಡಗಿದರು. ತಾನು ಬೇರೆ ಮನೆ ಮಾಡಿದ್ದು ತಾಯಿಗೆ ಇಷ್ಟವಿಲ್ಲ ಎಂದರಿತ ಗೆಳೆಯನಿಗೆ ಏನು ಮಾಡಬೇಕೆಂಬ ಗೊಂದಲ. ಅತ್ತ ತಾಯಿಯನ್ನು ಬಿಡುವಂತಿಲ್ಲ, ಇತ್ತ ಬಾಡಿಗೆ ಮನೆ ಮತ್ತು ಅದಕ್ಕಾಗಿ ಖರೀದಿಸಲಾದ ಹೊಸ ಹೊಸ ಗೃಹಪಯೋಗಿ ವಸ್ತುಗಳು ತಾಯಿಯ ಕಣ್ಣೀರಿಗೆ ಕಾರಣ ವಾದ, ಅಭಿಶಪ್ತ ಮಗ ನಾನಾಗಿ ಬಿಡುವೆನೋ ಎಂಬ ಭಯ. ತಾಯಿಗೆ ತಾನು ಅರ್ಥವಾಗಿಲ್ಲವೋ ಅಥವಾ ಅರ್ಥ ಮಾಡಿಸುವಲ್ಲಿ ತಾನು ವಿಫಲನಾಗಿರುವೆನೋ ಎಂಬ ಅನುಮಾನ. ಇನ್ನೊಂದು ಕಡೆ, ಪತ್ನಿಯಲ್ಲಿ ಸಹಜವಾಗಿರುವ ಹೊಸ ಮನೆಯ ಆಸೆ. ಒಂದು ಬಗೆಯ ಗೊಂದಲದೊಂದಿಗೆ ಗೆಳೆಯ ನನ್ನ ಮುಂದಿದ್ದ. ಹೊಸ ಮನೆ ಮತ್ತು ತಾಯಿ ಎಂಬ ಈ ಎರಡು ಆಯ್ಕೆಯ ನಡುವೆ ಆತ ಸಂಕಟಪಡುತ್ತಿದ್ದ..
   ‘If u can Survive, you must remember that I love you very much- ಒಂದು ವೇಳೆ ನೀನು ಬದುಕಿ ಉಳಿದರೆ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು..’
   ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಸಂದೇಶ ಫೇಸ್ ಬುಕ್‍ನಲ್ಲಿ ಹರಿದಾಡುತ್ತಿದ್ದುದು ಸಾಮಾನ್ಯವಾಗಿತ್ತು. ಅಸಂಖ್ಯ ಮಂದಿ ಈ ಸಂದೇಶವನ್ನು ಶೇರ್ ಮಾಡಿದ್ದರು. ಇದಕ್ಕೆ ಕಾರಣವೂ ಇದೆ.
ವರ್ಷಗಳ ಹಿಂದೆ ಜಪಾನಿನಲ್ಲಿ ನಡೆದ ಭೂಕಂಪವು ದೊಡ್ಡದೊಂದು ಅವಶೇಷಗಳ ರಾಶಿಯನ್ನೇ ಸೃಷ್ಟಿಸಿತ್ತು. ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರು ಮನೆಯೊಂದರ ಅವಶೇಷ ಗಳಡಿಯಲ್ಲಿ ಕವುಚಿ ಮಲಗಿರುವ ಓರ್ವ ಯುವತಿಯನ್ನು ಕಂಡರು. ಮುಂದಕ್ಕೆ ಬಾಗಿ, ಹಣೆಯನ್ನು ನೆಲಕ್ಕೆ ಒತ್ತಿ, ಎರಡೂ ಕೈಗಳನ್ನು ನೆಲಕ್ಕೆ ಹರಡಿ ಏನನ್ನೋ ಅಡಗಿಸಿಟ್ಟ ರೀತಿಯಲ್ಲಿ ಆ ಯುವತಿ ಬಿದ್ದಿದ್ದಳು. ಓರ್ವ ಸೈನಿಕ ಆಕೆಯನ್ನು ಮುಟ್ಟಿ ನೋಡಿದ. ದೇಹ ತಣ್ಣಗಾಗಿತ್ತು. ಆಕೆಯ ತಲೆ ಮತ್ತು ಬೆನ್ನಿನ ಮೇಲೆ ಮನೆಯ ಅವಶೇಷ ಬಿದ್ದಿದ್ದುವು. ಸೈನಿಕ ಅಲ್ಲಿಂದ ತುಸು ಮುಂದಕ್ಕೆ ಹೋದನಾದರೂ ಯುವತಿ ಏನನ್ನೋ ಅಪ್ಪಿ ಹಿಡಿದಿದ್ದಾಳೆ ಎಂದು ಅನುಮಾನವಾಗಿ ಮರಳಿ ಬಂದು ಯುವತಿಯನ್ನು ಪರೀಕ್ಷಿಸಿದ. ಬಳಿಕ ಜೋರಾಗಿ ಕೂಗಿ ಹೇಳಿದ,
   ‘ಗೆಳೆಯರೇ, ಇಲ್ಲಿ ಬನ್ನಿ, ಇಲ್ಲೊಂದು ಮಗುವಿದೆ. ಪವಾಡ, ಪವಾಡ..’
ಅವಶೇಷಗಳನ್ನು ಸರಿಸಿ ಯುವತಿಯನ್ನು ಮೇಲೆತ್ತಿದಾಗ, ಕಂಬಳಿಯಲ್ಲಿ ಸುತ್ತಿ ಮಲಗಿಸಿದ್ದ 3 ತಿಂಗಳ ಶಿಶು ಬೆಚ್ಚಗೆ ನಿದ್ರಿಸುತ್ತಿತ್ತು. ಆ ಯುವತಿ ತನ್ನ ಜೀವವನ್ನು ಬಲಿ ನೀಡಿ ಆ ಮಗುವನ್ನು ರಕ್ಷಿಸಿದ್ದಳು. ಬೀಳುತ್ತಿದ್ದ ಮನೆಯ ಅವಶೇಷಗಳಿಗೆ ತನ್ನ ದೇಹವನ್ನು ಒಡ್ಡಿ, ಮಗುವನ್ನು ರಕ್ಷಿಸಿರುವುದು ಸೈನಿಕರನ್ನು ದಂಗು ಬಡಿಸಿತ್ತು. ಮಗುವನ್ನುಸುತ್ತಿದ್ದ ಕಂಬಳಿಯನ್ನು ವೈದ್ಯರು ಕಿತ್ತಾಗ ಅದರೊಳಗೆ ಮೊಬೈಲ್ ಪೋನ್ ಒಂದು ಪತ್ತೆಯಾಗಿತ್ತು. ಮಾತ್ರವಲ್ಲ, ಆ ಪೋನ್‍ನ ಸ್ಕ್ರೀನ್‍ನಲ್ಲಿ ಒಂದು ಸಂದೇಶವೂ ಇತ್ತು. ಬಹುಶಃ, ಮರಣಕ್ಕೆ ಮುಖಾಮುಖಿಯಾದಾಗ, ಒಂದು ವೇಳೆ ತನ್ನ ಮಗು ಬದುಕಿ ಉಳಿದರೆ.. ಎಂಬ ನಿರೀಕ್ಷೆಯೊಂದಿಗೆ ತನ್ನ ಮುದ್ದು ಕಂದನಿಗೆ ತಾಯಿ ಕೊನೆಯದಾಗಿ ನೀಡಿದ ಸಂದೇಶವಾಗಿತ್ತದು- ‘ಒಂದು ವೇಳೆ ನೀನು ಬದುಕಿ ಉಳಿದರೆ ನಾನು ನಿನ್ನನ್ನು ತುಂಬ ಪ್ರೀತಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು.’ ಅಂದಹಾಗೆ, ತಾಯಿ ಪ್ರೀತಿಯನ್ನು ಅರಿತುಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಂದೇಶ ಇನ್ನಾವುದಿದೆ ಹೇಳಿ?
   ಮೊನ್ನೆ ಕಣ್ತುಂಬಿಕೊಂಡು ಎದುರು ಕೂತ ಗೆಳೆಯನನ್ನು ನೋಡುವಾಗ ಜಪಾನಿನ ಆ ತಾಯಿಯ ನೆನಪಾಯಿತು.

Monday, December 16, 2013

ಹತ್ಯಾಕಾಂಡದ ಭಾಷೆಗೆ ಏಟು ಕೊಟ್ಟವರನ್ನು 'ಉಚಿತಕ್ಕೆ' ಸೀಮಿತಗೊಳಿಸುವುದೇಕೆ?

ಪಾಟ್ನ ಸ್ಪೋಟ ಸಂತ್ರಸ್ತರೊಂದಿಗೆ ಮೋದಿ 
   No, never.We don't need to get into the system to fight. We want to pressure the government and assert our rights as citizens. Everyone who has a dream need not get into politics - ಇಲ್ಲ, ಎಂದಿಗೂ ಇಲ್ಲ. ವ್ಯವಸ್ಥೆಯನ್ನು ಬದಲಿಸುವ ಧ್ಯೇಯದೊಂದಿಗೆ ನಾವು ನಡೆಸುತ್ತಿರುವ ಹೋರಾಟಕ್ಕೆ ಅದರ ಅಗತ್ಯ ಇಲ್ಲ. ನಾವು ಸರಕಾರದ ಮೇಲೆ ಒತ್ತಡ ಹಾಕಲು ಬಯಸುತ್ತೇವೆ ಮತ್ತು ಪ್ರಜೆಗಳೆಂಬ ನೆಲೆಯಲ್ಲಿ ನಮ್ಮ ಹಕ್ಕುಗಳನ್ನು ಪ್ರತಿಪಾದಿಸಬಯಸುತ್ತೇವೆ. ವ್ಯವಸ್ಥೆಯನ್ನು ಬದಲಿಸಬೇಕೆಂಬ ಕನಸು ಹೊತ್ತ ಪ್ರತಿಯೋರ್ವರೂ ರಾಜಕೀಯ ಸೇರಬೇಕಾದ ಅಗತ್ಯ ಇಲ್ಲ..’
   ‘ರಾಜಕೀಯ ಸೇರುತ್ತೀರಾ..’ ಎಂಬ ದಿ ಹಿಂದೂ ಪತ್ರಿಕೆಯ ಪ್ರಶ್ನೆಗೆ 2011 ಆಗಸ್ಟ್ 31ರಂದು ಅರವಿಂದ್ ಕೇಜ್ರಿವಾಲ್ (ಇಟ್ ಈಸ್ ಎ ಲಾಂಗ್ ಜರ್ನಿ ಅಹೆಡ್) ಮೇಲಿನಂತೆ ಉತ್ತರಿಸಿದ್ದರು. ಆದರೆ 2012 ನವೆಂಬರ್ 26ರಂದು ಅವರು ಆಮ್ ಆದ್ಮಿಯನ್ನು ಹುಟ್ಟು ಹಾಕಿದರು. ಡಿಸೆಂಬರ್ 16ರಂದು ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆಯಿತು. ಹೊಸ ಕನಸು, ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಜನಸಾಮಾನ್ಯರಿಗೆ ತಟ್ಟುವ ಶೈಲಿಯಲ್ಲಿ ಮಂಡಿಸುತ್ತಿದ್ದ ಪಕ್ಷವೊಂದಕ್ಕೆ ಜನರನ್ನು ತಲುಪಲು ಇದಕ್ಕಿಂತ ಉತ್ತಮವಾದ ಇಶ್ಯೂ ಬೇರೊಂದಿರಲಿಲ್ಲ. ಹೀಗಿದ್ದೂ..
1. ಪ್ರತಿ ಕುಟುಂಬಕ್ಕೆ ಪ್ರತಿ ದಿನ 700 ಲೀಟರ್ ಉಚಿತ ನೀರು.
2. ಅಕ್ರಮ ಗುಡಿಸಲುಗಳ ಸಕ್ರಮ
3. ವಿದ್ಯುತ್ ದರದಲ್ಲಿ 50% ಕಡಿತ
4. ಅಗ್ಗದ ಜೆನೆರಿಕ್ ಔಷಧಗಳನ್ನು ಪ್ರತಿ ನಾಗರಿಕರಿಗೂ ಲಭ್ಯಗೊಳಿಸುವುದು.
5. ಶಾಲಾ-ಕಾಲೇಜುಗಳ ಶುಲ್ಕದಲ್ಲಿ ಇಳಿಕೆ
6. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಿ ಇಳಿಕೆ..
ಮುಂತಾದ ಅಗ್ಗದ ಘೋಷಣೆಗಳಿಂದಾಗಿಯೇ ಆಮ್ ಆದ್ಮಿ ದೆಹಲಿ ಚುನಾವಣೆಯಲ್ಲಿ 28 ಸ್ಥಾನ ಗಳಿಸಿದೆಯೆಂದು ವಾದಿಸುತ್ತಿರುವ ಬಿಜೆಪಿ ಬೆಂಬಲಿಗರ ವಿಶ್ಲೇಷಣೆ ಎಷ್ಟು ನಿಜ? ಅಗ್ಗದ ಘೋಷಣೆ ಗಳೇನು ಈ ದೇಶದ ನಾಗರಿಕರಿಗೆ ಹೊಸದೇ? ಕಾಂಗ್ರೆಸ್ ಮತ್ತು ಬಿಜೆಪಿ ಇಂಥ ಘೋಷಣೆಗಳನ್ನು ಎಷ್ಟು ಬಾರಿ ಬಳಸಿಲ್ಲ? ಅಲ್ಲದೇ ಇಂಥ ಘೋಷಣೆಗಳನ್ನು ಜನ ಇಷ್ಟ ಪಡುತ್ತಾರೆ ಎಂಬ ಬಗ್ಗೆ ಈ ಪಕ್ಷಗಳಿಗೆ ಭರವಸೆ ಇರುತ್ತಿದ್ದರೆ, ಅವೇನು ಬಿಡುತ್ತಿದ್ದುವೇ? 70 ಅಂಶಗಳನ್ನೊಳಗೊಂಡ ಕೇಜ್ರಿವಾಲರ ಚುನಾವಣಾ ಪ್ರಣಾಳಿಕೆಗೆ (ಮೆನಿಫೆಸ್ಟೋ) ವಿರುದ್ಧವಾಗಿ ಅವು 140 ಅಂಶಗಳ ಪ್ರಣಾಳಿಕೆಯನ್ನು ಹೊರ ತರುತ್ತಿರಲಿಲ್ಲವೇ? ದೇಶದ ರಾಜಕೀಯದಲ್ಲಿ ಅಗಾಧ ಅನುಭವವುಳ್ಳ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಉಚಿತ ವಿದ್ಯುತ್, ಉಚಿತ ಅಕ್ಕಿ, ನೀರು.. ಮುಂತಾದುವುಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ತಯಾರು ಗೊಳಿಸುವುದೇನು ಕಷ್ಟದ್ದಲ್ಲವಲ್ಲ? ಅಷ್ಟಕ್ಕೂ, ಆಮ್ ಆದ್ಮಿ ಎಂಬುದು ಆಗಷ್ಟೇ ಹುಟ್ಟಿದ ಕೂಸು. ಅದರ ಆಲೋಚನೆ, ಪ್ರಣಾಳಿಕೆಯೂ ಹೊಸದು. ಆದ್ದರಿಂದ, ಆ ಪಕ್ಷವನ್ನು ಒಪ್ಪಿ ಕೊಳ್ಳುವುದಕ್ಕಿಂತ ತಿರಸ್ಕರಿಸುವುದಕ್ಕೇ ಜನರಿಗೆ ಹೆಚ್ಚು ಕಾರಣಗಳಿದ್ದುವು. ಯಾಕೆಂದರೆ, ಯಾವುದೇ ಹೊಸ ಪಕ್ಷವು ಇತರ ಪ್ರಬಲ ಪಕ್ಷಗಳಿಗಿಂತ ಭಿನ್ನ ಮತ್ತು ಉಚಿತ ಅಂಶಗಳುಳ್ಳ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು ಈ ದೇಶದಲ್ಲಿ ಹೊಸತೇನೂ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಇಲ್ಲದ ಕೆಲವು ಅನುಕೂಲತೆಗಳು ಪ್ರಾದೇಶಿಕ ಪಕ್ಷಗಳಿಗೆ ಇರುತ್ತವೆ. ಅದರ ವ್ಯಾಪ್ತಿ ಸೀಮಿತವಾದದ್ದು. ಗುರಿಯೂ ಸೀಮಿತವೇ. ರಾಜಕೀಯವಾಗಿ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಅವು ಜನಪ್ರಿಯ ಘೋಷಣೆಗಳ ಮೊರೆ ಹೋಗಬೇಕಾಗುತ್ತದೆ ಎಂಬ ಅರಿವು ಜನರಲ್ಲೂ ಇರುತ್ತದೆ. ಆದ್ದರಿಂದಲೇ, ಜನರು ಅಂಥ ಘೋಷಣೆಗಳನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅಲ್ಲದೇ, ಅಂಥ ಪಕ್ಷಗಳಿಗೆ ಓಟು ಹಾಕುವುದರಿಂದ ಮತ ಹಂಚಿ ಹೋಗಿ ಅಯೋಗ್ಯರು ಆರಿಸಿ ಬರುತ್ತಾರೆ ಎಂಬ ಭೀತಿ ಮತದಾರರಲ್ಲಿ ಯಾವಾಗಲೂ ಇರುತ್ತದೆ. ಹೀಗಿರುವಾಗ, ಆಮ್ ಆದ್ಮಿಯ ಗೆಲುವನ್ನು ಕೇವಲ ಜನಪ್ರಿಯ ಘೋಷಣೆಗಳ ಗೂಟಕ್ಕೆ ಕಟ್ಟಿ ಹಾಕಿ ವಿಶ್ಲೇಷಣೆ ನಡೆಸುವುದು ಆತ್ಮವಂಚನೆ ಆಗಲಾರದೇ? ದೆಹಲಿಯಂಥ ಶಿಕ್ಷಿತ, ವಿದ್ಯಾವಂತ ಮತ್ತು ‘ಉಚಿತ' ಕೊಡುಗೆಗಳನ್ನು ಸದಾ ದ್ವೇಷಿಸುವ ಕಾರ್ಪೋ ರೇಟ್ ವಲಯದ ಮಾಧ್ಯಮಗಳು ಗಿಜಿಗುಡುತ್ತಿರುವ ರಾಜ್ಯವೊಂದರ ಮಂದಿ ಉಚಿತವನ್ನೇ ಬಯಸುವಷ್ಟು ಸಿನಿಕರೇ, ಅಂಥ ಭರವಸೆಗಳನ್ನು ನಂಬುವಷ್ಟು ದಡ್ಡರೇ..
ಇಂಡಿಯನ್ ಮುಜಾಹಿದೀನ್
ಪಾಕಿಸ್ತಾನ
ಭ್ರಷ್ಟಾಚಾರ
ಹತ್ಯಾಕಾಂಡ
ಕೋಮುವಾದ
   ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ದೇಶದಲ್ಲಿ ಚುನಾವಣೆಯನ್ನು ಎದುರಿಸುತ್ತಿರುವುದು ಬಹುತೇಕ ಇಂಥ ವಿಷಯಗಳಿಂದಲೇ. ಬಿಜೆಪಿಯ ಚುನಾವಣಾ ಭಾಷಣಗಳಲ್ಲಿ ಯಾವಾಗಲೂ ಪಾಕಿಸ್ತಾನದ ಪ್ರಸ್ತಾಪವಾಗುತ್ತದೆ. ಲಷ್ಕರೆ ತಯ್ಯಿಬ, ಇಂಡಿಯನ್ ಮುಜಾಹಿದೀನ್‍ಗಳ ಜಪ ನಡೆಯುತ್ತದೆ. ಹಾಗಂತ, ಕಳೆದ 60 ವರ್ಷಗಳಲ್ಲಿ ಈ ದೇಶದಲ್ಲಿ ಎಷ್ಟು ಮಂದಿ ಬಾಂಬು ಸ್ಫೋಟಗಳಿಂದ ಸಾವಿಗೀಡಾಗಿದ್ದಾರೆ ಮತ್ತು ಕೋಮು ಗಲಭೆಗಳಿಂದಾಗಿ ಸಾವಿಗೀಡಾದವರ ಸಂಖ್ಯೆಯ ಮುಂದೆ ಇವರು ಎಷ್ಟು ಶೇಕಡಾ ಎಂದು ಅದು ಹೇಳುವುದೇ ಇಲ್ಲ. ಬಾಂಬು ಸ್ಫೋಟಗಳಿಗೆ ಬಲಿಯಾದ ಕುಟುಂಬಗಳ ಕಣ್ಣೀರ ಕತೆಯನ್ನು ಬಿಜೆಪಿ ಅಸಂಖ್ಯ ವೇದಿಕೆಗಳಲ್ಲಿ ಹೇಳಿದೆ. ಅಂಥ ಕುಟುಂಬಗಳ ಮನೆಗೆ ತೆರಳಿ ಅದರ ನಾಯಕರು ಸಹಾಯ ಧನ ವಿತರಿಸಿದ್ದಾರೆ. ಇತ್ತೀಚೆಗೆ ನಡೆದ ಪಾಟ್ನಾ ಸ್ಫೋಟದಲ್ಲಿ ಸಂತ್ರಸ್ತರಾದ ಮಹಿಳೆಯೊಂದಿಗೆ ನರೇಂದ್ರ ಮೋದಿ ಮೊಬೈಲ್‍ನಲ್ಲಿ ಸಂಪರ್ಕಿಸಿ ಸಾಂತ್ವನ ಹೇಳಿದ್ದನ್ನು ಟಿ.ವಿ. ಚಾನೆಲ್‍ಗಳು ನೇರ ಪ್ರಸಾರ ಮಾಡಿದ್ದುವು. ಆದರೆ, ಕೋಮುಗಲಭೆಗಳ ಸಂತ್ರಸ್ತರ ಬಗ್ಗೆ ಬಿಜೆಪಿ ಮಾತಾಡುವುದೇ ಇಲ್ಲ. ಅವರ ಕಣ್ಣೀರ ಕತೆಗಳನ್ನು ಅದು ವೇದಿಕೆಗಳಲ್ಲಿ ಹಂಚಿಕೊಳ್ಳುವುದೂ ಇಲ್ಲ. ಪಾಟ್ನಾ ಸ್ಫೋಟದ ಬೆನ್ನಿಗೇ ಮುಝಫರ್ ನಗರದಲ್ಲಿ ಕೋಮು ಹತ್ಯಾಕಾಂಡ ನಡೆಯಿತು. ಮುಸ್ಲಿಮರನ್ನೇ ಗುರಿಯಾಗಿಸಿ ನಡೆದ ಈ ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಸಂತ್ರಸ್ತರಾದರು. ಪಾಟ್ನಾ ಪ್ರಕರಣದಂತೆ ಮೋದಿಯಾಗಲಿ, ಅವರ ಆಪ್ತ ಅಮಿತ್ ಷಾ ಆಗಲಿ ಈ ಸಂತ್ರಸ್ತರನ್ನು ಭೇಟಿಯಾದದ್ದಾಗಲಿ, ಮೊಬೈಲ್‍ನಲ್ಲಿ ಸಂಪರ್ಕಿಸಿದ್ದಾಗಲಿ ಯಾವುದೂ ನಡೆಯಲಿಲ್ಲ. ಕೋಮು ಗಲಭೆಯಲ್ಲಿ ಈ ದೇಶದಲ್ಲಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ, ಅವರಲ್ಲಿ ಹಿಂದೂಗಳೆಷ್ಟು, ಮುಸ್ಲಿಮರೆಷ್ಟು ಎಂಬ ಮಾಹಿತಿಯನ್ನು ಅದು ಈ ವರೆಗೂ ಈ ದೇಶದ ನಾಗರಿಕರೊಂದಿಗೆ ಹಂಚಿಕೊಂಡಿಲ್ಲ. ಆದರೆ ಭಯೋತ್ಪಾದನಾ ಪ್ರಕರಣಗಳ ಬಗ್ಗೆ, ಅದು ನಡೆದ ದಿನಾಂಕ, ಪ್ರದೇಶ, ಸ್ಫೋಟಗಳಿಗೆ ಬಳಸಲಾದ ಉಪಕರಣಗಳು, ಆರೋಪಿಗಳ ಹೆಸರುಗಳನ್ನು ಅಸಂಖ್ಯ ಬಾರಿ ವಿವಿಧ ವೇದಿಕೆ, ಪತ್ರಿಕೆಗಳ ಮೂಲಕ ಅದು ಹೇಳುತ್ತಲೇ ಬಂದಿದೆ. ಬಾಬರಿ ಮಸೀದಿಯನ್ನು ಅದು ಚುನಾವಣೆಗಾಗಿ ಬಳಸಿಕೊಂಡಿತು. ಗುಜರಾತನ್ನು ಅಧಿಕಾರಕ್ಕಾಗಿ ಉಪಯೋಗಿಸಿಕೊಂಡಿತು. ಅದರ ಪ್ರಧಾನಿ ಅಭ್ಯರ್ಥಿ ಅಥವಾ ಪಕ್ಷದ ನೇತೃತ್ವ ಸ್ಥಾನದಲ್ಲಿ ಗುರುತಿಸುವವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಹತ್ಯಾಕಾಂಡದ ಆರೋಪಿಗಳೇ. ಚುನಾವಣೆ ಹತ್ತಿರ ಬರುವಾಗಲೆಲ್ಲ ಅದರ ಪೋಷಕ ಸಂಘಟನೆಗಳು ರಾಮನಿಗೆ ಸಂಬಂಧಿಸಿ ಅಥವಾ ಹಿಂದೂ ಧರ್ಮಕ್ಕೆ ಸಂಬಂಧಿಸಿ ರಾಲಿಗಳನ್ನು ಹಮ್ಮಿಕೊಳ್ಳುತ್ತವೆ. ಸಭೆಗಳನ್ನು ಏರ್ಪಡಿಸುತ್ತವೆ. ಒಂದು ರೀತಿಯಲ್ಲಿ ಬಿಜೆಪಿ ಈ ದೇಶದಲ್ಲಿ ಉದ್ದಕ್ಕೂ ಚುನಾವಣೆಯನ್ನು ಎದುರಿಸಿದ್ದು, ಎದುರಿಸುತ್ತಿರುವುದು ಧರ್ಮ ಮತ್ತು ಕೋಮುವಾದದ ಆಧಾರದಲ್ಲೇ. ಹತ್ಯಾಕಾಂಡಗಳು ಮತ್ತು ಬಾಂಬ್ ಸ್ಫೋಟಗಳ ನೆರವನ್ನು ಪಡೆದುಕೊಂಡೇ ಅದು ಚುನಾವಣೆಯಲ್ಲಿ ಸೆಣಸಿದೆ, ಸೆಣಸುತ್ತಿದೆ. ಇನ್ನೊಂದು ಕಡೆ, ಕಾಂಗ್ರೆಸ್‍ನ ಚರಿತ್ರೆಯೂ ಭಿನ್ನವಾಗಿಲ್ಲ. ಭ್ರಷ್ಟಾಚಾರದ ಆರೋಪ ಪಟ್ಟಿಯನ್ನು ಕುತ್ತಿಗೆಗೆ ಕಟ್ಟಿಕೊಂಡೇ ಅದರ ಅಭ್ಯರ್ಥಿಗಳು ಚುನಾವಣೆಗಿಳಿಯುತ್ತಾರೆ. ಜನಸಾಮಾನ್ಯರ ಭಾಷೆಯಲ್ಲಿ ಮಾತಾಡುತ್ತಾ ರಾಜ ದರ್ಬಾರು ನಡೆಸುತ್ತಾರೆ. ಹತ್ಯಾಕಾಂಡಗಳ ಕಳಂಕವೂ ಅದರ ಬೆನ್ನಿಗಿದೆ. ಕಲ್ಯಾಣ ರಾಷ್ಟ್ರದ ಬಗ್ಗೆ ಅದು ಪ್ರತಿ ಚುನಾವಣೆಯಲ್ಲೂ ಮಾತಾಡುತ್ತದೆ. ಜನಸಾಮಾನ್ಯರ ಸಂಕಟಗಳನ್ನೊಳಗೊಂಡ ಪ್ರಣಾಳಿಕೆಯನ್ನೂ ಬಿಡುಗಡೆಗೊಳಿಸುತ್ತದೆ. ಜೊತೆಗೇ ನ್ಯಾಯ ವಿತರಣೆಯಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶವನ್ನೀಯುವ ಕಾನೂನನ್ನೂ ರಚಿಸುತ್ತದೆ. ಇಂಥ ಸ್ಥಿತಿಯಲ್ಲಿ, ಇವ್ಯಾವುವೂ ಗೋಚರಿಸದ ಮತ್ತು ಅಚ್ಚ ಮನುಷ್ಯರ ಭಾಷೆಯಲ್ಲಿ ಅವರ ಸಮಸ್ಯೆಗಳ ಬಗ್ಗೆ ಮಾತಾಡಿದ ಆಮ್ ಆದ್ಮಿಯನ್ನು ಜನರು ಪರ್ಯಾಯವಾಗಿ ಆಯ್ಕೆ ಮಾಡಿಕೊಂಡರು ಎಂದು ನಾವೇಕೆ ಪರಿಗಣಿಸಬಾರದು? ಆಮ್ ಆದ್ಮಿಯ ಆಲೋಚನೆಗಳು ಹೊಸತು. ಸಾಮಾನ್ಯವಾಗಿ ವೇದಿಕೆಗಳಲ್ಲಿ ಮಂಡಿಸುವ, ಪತ್ರಿಕೆಗಳ ಕಾಲಂಗಳಲ್ಲಿ ಪ್ರತಿಪಾದಿಸುವ ಚಿಂತನೆಗಳನ್ನು ಕೇಜ್ರಿವಾಲ್ ಪ್ರಾಯೋಗಿಕಗೊಳಿಸುವ ಬಗ್ಗೆ ಮಾತಾಡಿದ್ದರು. ಅಂಥ ಚಿಂತನೆಗಳನ್ನು ಬುದ್ಧಿಜೀವಿಗಳ ಬಡಬಡಿಕೆ ಎಂದೇ ರಾಜಕೀಯ ಪಕ್ಷಗಳು ತಿರಸ್ಕರಿಸಿದ್ದುವು. ವೈದ್ಯರು, ಕವಿಗಳು, ಪತ್ರಕರ್ತರು, ವಕೀಲರು, ವಿದ್ಯಾರ್ಥಿಗಳು, ನೌಕರರು.. ಹೀಗೆ ಒಂದು ಹೊಸ ಬಗೆಯ ತಂಡವನ್ನು ಕೇಜ್ರಿವಾಲ್ ಕಟ್ಟಿದರು. ಬಾಂಬ್ ಸ್ಫೋಟದ, ಹತ್ಯಾಕಾಂಡದ ಭಾಷೆಯಲ್ಲಿ ಅವರು ಮಾತಾಡಲಿಲ್ಲ. ಧರ್ಮವನ್ನು ದುರುಪಯೋಗಿಸದೆಯೇ ಚುನಾವಣೆಯಲ್ಲಿ ಸೆಣಸಬಹುದು ಎಂಬ ವಾತಾವರಣವನ್ನು ಅವರು ಹುಟ್ಟು ಹಾಕಿದರು. ಬಹುಶಃ, ರಾಷ್ಟ್ರಮಟ್ಟದ ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳ ಕೇಂದ್ರ ಕಚೇರಿಗಳಿರುವ ದೆಹಲಿಯಲ್ಲಿ ರಾಜಕಾರಣಿಯೇ ಅಲ್ಲದ ಓರ್ವ ವ್ಯಕ್ತಿ ಮತ್ತು ಆತನ ತಂಡವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಗುರುತಿಗೀಡಾಗುವುದು ಸುಲಭದ ಮಾತಲ್ಲ. ಮಾಧ್ಯಮಗಳನ್ನು ಮೆಚ್ಚಿಸಬೇಕಾದ ಅನಿವಾರ್ಯತೆ ಇರುವಂತೆಯೇ ಪ್ರಬಲ ರಾಜಕಾರಣಿಗಳನ್ನು ಎದುರಿಸುವುದಕ್ಕೆ ಬುದ್ಧಿವಂತಿಕೆಯ ಕಾರ್ಯತಂತ್ರ ರೂಪಿಸುವ ಅಗತ್ಯವೂ ಇರುತ್ತದೆ. ಆಮ್ ಆದ್ಮಿ ಇದನ್ನು ಮೆಟ್ಟಿ ನಿಂತಿದೆಯೆಂದರೆ ಇದು ಯಾವುದರ ಸೂಚನೆ?
   ನಿಜವಾಗಿ, ಧರ್ಮವನ್ನು ಮತ್ತು ಭಾವನಾತ್ಮಕ ವಿಚಾರಗಳನ್ನು ದುರುಪಯೋಗಪಡಿಸದೆಯೇ ಚುನಾವಣೆಯನ್ನು ಗೆಲ್ಲಬಹುದು ಎಂಬ ಒಳ್ಳೆಯ ಸಂದೇಶವನ್ನು ಆಮ್ ಆದ್ಮಿ ರವಾನಿಸಿದೆ. ಭವಿಷ್ಯದ ದೃಷ್ಟಿಯಿಂದ ಇದು ಶುಭ ಸೂಚನೆ. ಬಿಜೆಪಿಯ ಪ್ರಬಲ ಕೋಮುವಾದ ಮತ್ತು ಕಾಂಗ್ರೆಸ್‍ನ ಮೃದು ಕೋಮುವಾದದ ನಡುವೆ ಇವತ್ತು ನಡೆಯುತ್ತಿರುವ ಚುನಾವಣಾ ಹೋರಾಟವನ್ನು ಕೇಜ್ರಿವಾಲ್ ಆಮ್ ಆದ್ಮೀಕರಣಗೊಳಿಸಿದ್ದಾರೆ. ಅವರಿಗೆ ಎಷ್ಟು ಸ್ಥಾನ ಸಿಕ್ಕಿತು ಎಂಬುದು ಮುಖ್ಯ ಅಲ್ಲ. ವಿದ್ಯಾವಂತರು, ಶಿಕ್ಷಿತರಿರುವ ರಾಜ್ಯವೊಂದರಲ್ಲಿ ಕೇವಲ ಜನಪರ ವಿಷಯಗಳನ್ನೆತ್ತಿಕೊಂಡು ಚುನಾವಣೆಗಿಳಿದ ಆಮ್ ಆದ್ಮಿಯ ಯಶಸ್ಸನ್ನು ಕೋಮುವಾದಿ ರಾಜಕಾರಣದ ವಿರುದ್ಧದ ಯಶಸ್ಸೆಂದೇ ಪರಿಗಣಿಸಬೇಕು. ಭವಿಷ್ಯದಲ್ಲಿ, ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ, ಭಾಷಣಗಳು ಕೋಮುವಾದಿ ರಹಿತವಾಗುವುದಕ್ಕೆ ಈ ಯಶಸ್ಸು ಪ್ರಚೋದಕವಾಗುವುದಕ್ಕೆ ಅವಕಾಶ ಇದೆ. ಮುಖ್ಯವಾಗಿ ಜನಪರ ಅಜೆಂಡಾದೊಂದಿಗೆ ತಳಮಟ್ಟದ ಜನರನ್ನು ತಲುಪಲು ಪ್ರಯತ್ನಿಸಿದರೆ ಅಂಥ ಪಕ್ಷ
ಗಳನ್ನು ಜನರು ಗೆಲ್ಲಿಸುತ್ತಾರೆ ಎಂಬುದಕ್ಕೆ ಆದ್ಮಿ ಒಂದು ಒಳ್ಳೆಯ ಉದಾಹರಣೆ.

Tuesday, December 10, 2013

ಲಜ್ಜೆಯನ್ನು ಕಸಿದುಕೊಂಡವರೇ, ಈ ದೌರ್ಜನ್ಯದ ಪಾಪವನ್ನೇಕೆ ಹೊತ್ತುಕೊಳ್ಳುತ್ತಿಲ್ಲ?

ರಾಧಿಕಾ ಆಪ್ಟೆ, ಅರಣ್ಯ ಕೌರ್, ಗೀತಾಂಜಲಿ ಥಾಪಾ ಮತ್ತು ಸಂಧ್ಯಾ ಮೃದುಲ್ ಅಭಿನಯಿಸಿರುವ 22 ನಿಮಿಷಗಳ ಕಿರು ಚಿತ್ರವೊಂದು ಯೂಟ್ಯೂಬ್‍ನಲ್ಲಿ ಹರಿದಾಡುತ್ತಿದೆ. ಅಸಂಖ್ಯ ಮಂದಿ ಈಗಾಗಲೇ ಇದನ್ನು ವೀಕ್ಷಿಸಿದ್ದಾರೆ. ಲೈಂಗಿಕ ದೌರ್ಜನ್ಯವು ಎಗ್ಗಿಲ್ಲದೇ ನಡೆಯುತ್ತಿರುವ ದೇಶವೊಂದರಲ್ಲಿ ಹೆಣ್ಣು ಏನು ಮಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು, ಯಾವೆಲ್ಲ ತಯಾರಿಗಳನ್ನು ಮಾಡಿಕೊಳ್ಳಬೇಕು.. ಎಂಬುದರ ಸುತ್ತ ಈ ಚಿತ್ರವನ್ನು ಹೆಣೆಯಲಾಗಿದೆ. ಸಾಕಷ್ಟು ಮಂದಿ ಈ ಚಿತ್ರದ ಸರಿ-ತಪ್ಪುಗಳ ಬಗ್ಗೆ ಚರ್ಚಿಸಿದ್ದಾರೆ. ವೀಕ್ಷಕರ ಪ್ರತಿಕ್ರಿಯೆಗಳು ಎಷ್ಟು ಜೋರಾಗಿತ್ತೆಂದರೆ, ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್‍ರೇ ಸ್ವತಃ ಸ್ಪಷ್ಟನೆ ಕೊಡುವಷ್ಟು. ಈ ದೇಶ ಸದ್ಯ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೊಂದಕ್ಕೆ 22 ನಿಮಿಷಗಳಲ್ಲಿ ಪರಿಹಾರವೊಂದನ್ನು ಕಟ್ಟಿ ಕೊಟ್ಟ ಅನುರಾಗ್ ಕಶ್ಯಪ್‍ರನ್ನು ಮೃದುವಾಗಿ ಚುಚ್ಚಿದ, ತರಾಟೆಗೆತ್ತಿಕೊಂಡವರು ಒಂದು ಕಡೆಯಾದರೆ, ಅವರನ್ನು ಬೆಂಬಲಿಸಿ, ಆ ಪರಿಹಾರವನ್ನು ಮೆಚ್ಚಿ ಕೊಂಡವರು ಇನ್ನೊಂದು ಕಡೆ. ಈ ಪರಿಹಾರದಂತೆ ನಮ್ಮನ್ನು ನಾವು ತಯಾರುಗೊಳಿಸುತ್ತೇವೆ ಅಂತ ಹೇಳಿಕೊಂಡ ಯುವತಿಯರು ಅನೇಕ. ಹಾಗಂತ,
   ‘ದಾಟ್  ಡೇ ಆಫ್ಟರ್ ಎವರಿ ಡೇ..' ಎಂಬ ಈ ಕಿರುಚಿತ್ರದಲ್ಲಿ ಸೂಚಿಸಲಾಗಿರುವ ಪರಿಹಾರವನ್ನು ಒಂದೊಮ್ಮೆ ನೀವೂ ಆಲೋಚಿಸಿರಬಹುದು.
ಮೂವರು ಮಹಿಳಾ ಉದ್ಯೋಗಿಗಳು. ಮನೆಯ ಒಳಗಿನ ಅಡುಗೆ ಮತ್ತಿತರ ಕೆಲಸಗಳನ್ನು ಮಾಡುತ್ತಲೇ ಮನೆಯ ಹೊರಗೂ ದುಡಿಯಬೇಕಾದ ಒತ್ತಡದಲ್ಲಿ ಇವರ ಬದುಕು ಸಾಗುತ್ತಿರುತ್ತದೆ. ಓರ್ವಳು ಅಡುಗೆ ಮನೆಯಲ್ಲಿ ಚಹಾ ತಯಾರಿಸುತ್ತಿರುತ್ತಾಳೆ. ಹೊರಗೆ ಮನೆಯ ಯಜಮಾನ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೈಂಗಿಕ ದೌರ್ಜನ್ಯಗಳ ಸಾಲು ಸಾಲು ಸುದ್ದಿಗಳನ್ನು ಇವಳಿಗೆ ಕೇಳಿಸುವಂತೆ ಓದುತ್ತಿರುತ್ತಾನೆ. ಮನೆಯ ಹೊರಗಿನ ವಾತಾವರಣ ಹೆಣ್ಣಿಗೆ ಎಷ್ಟು ಅಪಾಯಕಾರಿಯಾಗಿದೆ ಎಂಬ ಸೂಚನೆಯನ್ನು ಆಕೆಗೆ ರವಾನಿಸುವ ವಿಧಾನ ಇದು. ಇನ್ನೊಂದು ಮನೆಯಲ್ಲೂ ಇದೇ ಪರಿಸ್ಥಿತಿ. ಆ ಮನೆಯ ಮಹಿಳೆ ಕೆಲಸಕ್ಕೆ ಹೊರಡುವಾಗ 5 ವರ್ಷದ ಬಾಲೆಯ ಮೇಲೆ ಅತ್ಯಾಚಾರವಾದ ಸುದ್ದಿ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುತ್ತದೆ. ವೀಕ್ಷಿಸುತ್ತಿರುವ ಅತ್ತೆಗೆ ಸೊಸೆಯ ಸುರಕ್ಷಿತತೆಯ ಬಗ್ಗೆ ದಿಗಿಲಾಗುತ್ತದೆ. ಹೀಗೆ ಬೇರೆ ಬೇರೆ ಮನೆಗಳಲ್ಲಿ ವಾಸಿಸುವ ಮೂವರು ಮಹಿಳೆಯರೂ ನಿಗದಿತ ಸಮಯದಲ್ಲಿ ಒಂದೇ ಕಡೆ ಸೇರಿ ಒಟ್ಟಾಗಿ ಕೆಲಸಕ್ಕೆ ಹೋಗುತ್ತಾರೆ. ಕಟ್ಟಡದ ಮೇಲಿನಿಂದ ಪೋಲಿಗಳು ಅವರ ವೀಡಿಯೋ ತೆಗೆಯುತ್ತಾರೆ. ತುಸು ದೂರ ಹೋದಾಗ ಕಟ್ಟುಮಸ್ತಾದ ಯುವಕರು ಚುಡಾವಣೆಗಿಳಿಯುತ್ತಾರೆ. ಕೊನೆಗೆ ಓರ್ವಳನ್ನು ಅಟ್ಟಿಸಿಕೊಂಡು ಹೋಗುತ್ತಾರೆ. ಒಂದು ಕಡೆ ಅಸಹಾಯಕತೆ, ಇನ್ನೊಂದು ಕಡೆ ಕೆಲಸದ ಅನಿವಾರ್ಯತೆ.. ಓರ್ವಳಲ್ಲಿ ಕಣ್ಣೀರು ಹರಿಯುತ್ತದೆ. ಹೀಗಿರುವಾಗ, ಈ ದೌರ್ಜನ್ಯವನ್ನು ಎದುರಿಸುವ ಬಗ್ಗೆ ಉಳಿದಿಬ್ಬರು ಆಕೆಯಲ್ಲಿ ಧೈರ್ಯ ತುಂಬುತ್ತಾರೆ. ಸ್ವರಕ್ಷಣೆಯ ಪಾಠ ಹೇಳಿಕೊಡುತ್ತಾರೆ. ಅದರಂತೆ ಈಕೆ ಅವರ ಜೊತೆ ಸ್ವರಕ್ಷಣೆಯ ಕಲೆಗಳನ್ನು ಕರಗತ ಮಾಡಿಕೊಳ್ಳುತ್ತಾಳೆ. ವ್ಯಾಯಾಮ, ತರಬೇತಿಗಳು ನಡೆಯುತ್ತವೆ. ಅಂತಿಮವಾಗಿ, ಒಂದು ದಿನ ಯುವಕರು ಲೈಂಗಿಕ ದೌರ್ಜನ್ಯಕ್ಕೆ ಮುಂದಾದಾಗ, ಮೂವರೂ ತಮ್ಮ ಮುಷ್ಠಿ ಹೊಡೆತಗಳ ಮೂಲಕ ಎದುರಿಸುತ್ತಾರೆ. ಹೆಣ್ಣನ್ನು ಅಬಲೆ ಅಂದುಕೊಂಡಿದ್ದ ಪುಂಡರು ಈ ಮಹಿಳೆಯರ ಪ್ರತಿರೋಧವನ್ನು ಎದುರಿಸಲಾಗದೇ ನೆಲಕ್ಕುರುಳುತ್ತಾರೆ..’
   ಮಹಿಳಾ ಬ್ಯಾಂಕು
   ಮಹಿಳಾ ಟ್ಯಾಕ್ಸಿಗಳು
ಮಹಿಳೆಯರನ್ನು ಸುರಕ್ಷಿತಗೊಳಿಸುವುದಕ್ಕಾಗಿ ಜಾರಿಗೊಳ್ಳುತ್ತಿರುವ ಹಲವು ಯೋಜನೆಗಳಲ್ಲಿ ಇವು ಕೇವಲ ಎರಡು ಮಾತ್ರ. ದೆಹಲಿಯಲ್ಲಿ ಈಗಾಗಲೇ ಮಹಿಳಾ ಬ್ಯಾಂಕು ಆರಂಭಗೊಂಡಿದೆ. ಮಹಿಳೆಯರೇ ಚಲಾಯಿಸುವ ಟ್ಯಾಕ್ಸಿಗಳು ಕೇರಳದಲ್ಲಿ ರಸ್ತೆಗಿಳಿದಿವೆ. ಇದರ ಜೊತೆಗೇ, ಹೆಣ್ಣನ್ನು ಪುರುಷರಿಂದ ಪ್ರತ್ಯೇಕಗೊಳಿಸುವ ವಿಧಾನವನ್ನು ಅನಾಗರಿಕವೆಂದು ಖಂಡಿಸಲಾಗುತ್ತಿದೆ! ಹೆಣ್ಣಿನ ಉಡುಪು, ಸ್ವಚ್ಛಂದ ಸಂಸ್ಕøತಿ, ಮದ್ಯ.. ಮುಂತಾದುವುಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಕಾರಣ ಎಂದು ಹೇಳುವವರು ಮತ್ತು ಅದನ್ನು ಅಲ್ಲಗಳೆಯುವವರು ಸಮಾಜದಲ್ಲಿ ಧಾರಾಳ ಇದ್ದಾರೆ. ನಿಜವಾಗಿ, ಹೆಣ್ಣು ಈ 21ನೇ ಶತಮಾನದ ಅಂತ್ಯದಲ್ಲಿ ಭೂಮಿಗೆ ದಿಢೀರ್ ಆಗಿ ಇಳಿದು ಬಂದ ಹೊಸ ಜೀವಿಯೇನೂ ಅಲ್ಲ. ಗಂಡಿನ ಜೊತೆಜೊತೆಗೇ ಹೆಣ್ಣೂ ಇದ್ದಾಳೆ.  ಆದರೂ ಈ ಹಿಂದೆಂದೂ ಆಗದಷ್ಟು ಅಥವಾ ಸುದ್ದಿಗೆ ಬರದಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಇವತ್ತು ಕೇಳಿ ಬರುತ್ತಿರುವುದೇಕೆ? ಇಂಗ್ಲೆಂಡಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ವರದಿಯನ್ನು ಸಲ್ಲಿಸಲಾಯಿತು. ಮಾತ್ರವಲ್ಲ, ಆ ವರದಿಯನ್ನು ಓದಿ ಆ ದೇಶ ತೀವ್ರ ಆಘಾತವನ್ನು ವ್ಯಕ್ತಪಡಿಸಿತು. (ದಿ ಹಿಂದೂ ನ. 28, 2013) ಫ್ರಾನ್ಸ್ ನಲ್ಲೂ ಇದೇ ಸ್ಥಿತಿಯಿದೆ. ಈ ನೆಲ ಹೆಣ್ಣಿಗೆ ಸುರಕ್ಷಿತವಾಗಿಲ್ಲ ಎಂದು ಘೋಷಿಸಿ ಬಿಡುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಏನು ಕಾರಣ, ಯಾರು ಕಾರಣ? ಕರಾಟೆಯ ಪಟ್ಟುಗಳನ್ನು ಕಲಿತುಕೊಳ್ಳುವುದರಿಂದ ಹೆಣ್ಣು ಸುರಕ್ಷಿತಳಾಗಬಲ್ಲಳೇ? ಅವಳಿಂದ ಪೆಟ್ಟು ತಿಂದ ದೌರ್ಜನ್ಯಕೋರರು ಹಗೆ ತೀರಿಸುವುದಕ್ಕೆ ಮುಂದಾಗಲಾರರೆಂದು ಹೇಗೆ ಹೇಳುವುದು? ಸ್ವರಕ್ಷಣೆಯ ಪಟ್ಟುಗಳನ್ನು ಕಲಿತುಕೊಂಡ ಒಂಟಿ ಹೆಣ್ಣಿಗೆ ಪುಂಡರ ಗುಂಪು ಎದುರಾದರೆ ಏನಾಗಬಹುದು? ಏಟಿಗೆ-ಪ್ರತಿಯೇಟು ಎಂಬುದು ಎಷ್ಟರ ಮಟ್ಟಿಗೆ ಪ್ರಾಯೋಗಿಕ ಅನ್ನಿಸಬಹುದು? ‘ನಿನ್ನನ್ನು ನೀನೇ ರಕ್ಷಿಸಿಕೊ, ನೀನೇ ಸಜ್ಜುಗೊಳ್ಳು, ತೋಳು ಗಟ್ಟಿಗೊಳಿಸು.. ಎಂದೆಲ್ಲ ಹೆಣ್ಣಿಗೆ ಬೋಧಿಸುವುದು ಎಷ್ಟು ಸರಿ? ಆಕೆಯಲ್ಲಿ ಸುರಕ್ಷಿತತೆಯನ್ನು ಖಾತರಿಗೊಳಿಸುವ ಹೊಣೆಯಾರದು.. ಇಂಥ ಹತ್ತಾರು ಪ್ರಶ್ನೆಗಳನ್ನು That  Day After Every Day  ಕಿರುಚಿತ್ರ ಹುಟ್ಟು ಹಾಕುತ್ತದಾದರೂ ತೀರಾ ಅಸಹಾಯಕ ಸ್ಥಿತಿಯಲ್ಲಿ ಕರಾಟೆಯ ಪಟ್ಟುಗಳು ಹೆಣ್ಣಿಗೆ ಮಾನಸಿಕ ಬಲವನ್ನು ತಂದುಕೊಡಬಲ್ಲುದು ಅನ್ನುವುದನ್ನೂ ಒಪ್ಪಬೇಕಾಗುತ್ತದೆ. ಇದೇ ವೇಳೆ, ಪ್ರತಿ ಮೂವರಲ್ಲಿ ಇಬ್ಬರು ಪತ್ರಕರ್ತೆಯರು ಲೈಂಗಿಕ ದೌರ್ಜನ್ಯದ ಅನುಭವ ಪಡೆದಿರುತ್ತಾರೆ ಎಂದು ಕಳೆದವಾರ ಪ್ರಕಟವಾದ ಸಮೀಕ್ಷೆಯೊಂದು (ದಿ ಹಿಂದೂ ಡಿ. 4, 2013) ಬಹಿರಂಗಪಡಿಸಿದೆ. ಸಮೀಕ್ಷೆಗೆ ಒಳಪಡಿಸಿದ 822 ಪತ್ರಕರ್ತೆಯರಲ್ಲಿ 530 ಪತ್ರಕರ್ತೆಯರು ಸಂದರ್ಶಕರಿಂದ, ಬಾಸ್‍ನಿಂದ ಮತ್ತು ಕೆಲಸದ ಸಮಯದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅತ್ಯಂತ ತಿಳುವಳಿಕೆಯಿರುವ, ಹೆಣ್ಣನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರಿರುವ ಕ್ಷೇತ್ರದಲ್ಲೇ ಇಷ್ಟು ವ್ಯಾಪಕ ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದೆಯೆಂದಾದರೆ, ಅದಕ್ಕೆ ಕರಾಟೆ ಕಲಿಕೆಯು ಪರಿಹಾರವಾಗುವುದಕ್ಕೆ ಸಾಧ್ಯವೇ?
   ನಿಜವಾಗಿ, ಹೆಣ್ಣು ಮತ್ತು ಗಂಡಿನ ನಡುವೆ 50 ವರ್ಷಗಳ ಹಿಂದೆ ಯಾವ ಬಗೆಯ ಸಂಬಂಧ, ಸಲುಗೆ ಇತ್ತೋ ಇವತ್ತು ಹಾಗಿಲ್ಲ. ಇಂದಿನ ಮತ್ತು ಹಿಂದಿನ ಸಿನಿಮಾಗಳೇ ಇದಕ್ಕೆ ಅತ್ಯುತ್ತಮ ಪುರಾವೆ. ಆದರೆ ಬರಬರುತ್ತಾ ಅಂತರ ಕಡಿಮೆಯಾಯಿತು. ಹೆಣ್ಣನ್ನು ವ್ಯಾಖ್ಯಾನಿಸುವ ರೀತಿಗಳು ಬದಲಾದುವು. ಈ ಹಿಂದೆ ಹೆಣ್ಣಿನ ಪಾತ್ರವನ್ನು ಪುರುಷನೇ ಮಾಡುತ್ತಿದ್ದ. ಶಾಲಾ ದಿನಗಳಲ್ಲಿ ಆಕಸ್ಮಿಕವಾಗಿ ಹೆಣ್ಣಿನ ಸ್ಪರ್ಶವಾದರೂ ಅದು ಆ ದಿನದ ಬ್ರೇಕಿಂಗ್ ನ್ಯೂಸ್. ಬಳಿಕ ಹೆಣ್ಣಿನ ಪಾತ್ರವನ್ನು ಹೆಣ್ಣೇ ಮಾಡತೊಡಗಿದಳು. ಹೆಣ್ಣಿನ ಕುರಿತಂತೆ ಹೊಸ ಹೊಸ ಪರಿಕಲ್ಪನೆಗಳು, ವ್ಯಾಖ್ಯಾನಗಳು ಬರತೊಡಗಿದುವು. ಮಾರುಕಟ್ಟೆ ಆಧಾರಿತ ಜೀವನ ಶೈಲಿ ಜನಪ್ರಿಯವಾಗತೊಡಗಿದಂತೆಯೇ ಹೆಣ್ಣು ಆಕರ್ಷಕ ಜೀವಿಯಾಗತೊಡಗಿದಳು. ಮಹಿಳಾ ಸ್ವಾತಂತ್ರ್ಯದ  ಹೆಸರಲ್ಲಿ ಹೆಣ್ಣಿನ ಪ್ರಾಕೃತಿಕ ಮಿತಿಗಳನ್ನು ಮೀರುವ ಪ್ರಯತ್ನಗಳು ನಡೆದುವು. ಪುರುಷರ ಜೊತೆಗೆ ಮುಕ್ತವಾಗಿ ಬೆರೆಯುವ ವಾತಾವರಣವನ್ನು ಸಮಾನತೆ, ಸ್ವಾತಂತ್ರ್ಯ ಎಂದೆಲ್ಲಾ ಹೇಳಲಾಯಿತು. ನಿಜವಾಗಿ, ಹೆಣ್ಣು ಅನಾದಿಕಾಲದ ನಾಲ್ಕು ಗೋಡೆಗಳೊಳಗಿನ ಜೀವಿಯಾಗಿಯೇ ಈ 21ನೇ ಶತಮಾನದಲ್ಲೂ ಇರಬೇಕು ಎಂಬುದು ಖಂಡಿತ ಇಲ್ಲಿನ ಉದ್ದೇಶವಲ್ಲ. ಹೆಣ್ಣಿನ ಪಾತ್ರವನ್ನು ಪುರುಷ ಮಾಡುತ್ತಿದ್ದ ಕಾಲವೇ ಹೆಣ್ಣಿಗೆ ಉತ್ತಮ ಎಂದೂ ಹೇಳುತ್ತಿಲ್ಲ. ಆದರೆ, ಹೆಣ್ಣನ್ನು ಈ ಪುರುಷ ಜಗತ್ತಿನಲ್ಲಿ ಮುಕ್ತವಾಗಿ ಬೆರೆಯಲು ಬಿಡುವಾಗ ಅವರನ್ನು ಅಷ್ಟೇ ಗೌರವಯುತವಾಗಿ ಸ್ವೀಕರಿಸಿಕೊಳ್ಳುವುದಕ್ಕೆ ಪುರುಷರನ್ನೂ ತರಬೇತುಗೊಳಿಸಬೇಕಿತ್ತಲ್ಲವೇ? ಸಂಪೂರ್ಣ ಉಡುಪು ಧರಿಸಿದ ಮತ್ತು ಧರಿಸದ, ಫ್ಯಾಷನೇಬಲ್ ಆಗಿರುವ ಮತ್ತು ಆಗಿರದ, ಸ್ಪರ್ಶಿಸುವ ಮತ್ತು ಸ್ಪರ್ಶಿಸದ.. ಹೀಗೆ ಜಗತ್ತಿನಲ್ಲಿ ಭಿನ್ನ ರೀತಿಯಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ಪುರುಷರೆಲ್ಲ ಒಂದೇ ರೀತಿಯ ಭಾವನೆ ಇಟ್ಟುಕೊಂಡಿರುತ್ತಾರೆಂದು  ಹೇಳುವಂತಿಲ್ಲ. ಅವರ ನಗು, ಮಾತು, ಆಂಗಿಕ ಹಾವಭಾವ, ನೋಟ.. ಎಲ್ಲದರ ಬಗ್ಗೆಯೂ ಎಲ್ಲ ಪುರುಷರೂ ಒಂದೇ ಅರ್ಥವನ್ನು ಕಂಡುಕೊಳ್ಳಬೇಕಿಲ್ಲ. ಒಬ್ಬಳ ನಗು ಓರ್ವ ಪುರುಷನಿಗೆ ಸಾಮಾನ್ಯವಾಗಿ ಕಂಡರೆ ಅದೇ ನಗು ಇನ್ನೊಬ್ಬನಿಗೆ ಇನ್ನೇನೋ ಆಗಿ ಕಾಣಿಸಬಹುದು. ಅದು ವ್ಯಕ್ತಿಯ ಮನಸ್ಥಿತಿ, ಅರ್ಥೈಸುವಿಕೆಯನ್ನು ಹೊಂದಿಕೊಂಡಿರುತ್ತದೆ. ಬಹುಶಃ; ಹೆಣ್ಣನ್ನು ಆಧುನಿಕಗೊಳಿಸುವ ಧಾವಂತದಲ್ಲಿ ಎಲ್ಲರೂ ಈ ಮೂಲಪಾಠಗಳನ್ನು ಮರೆತರೆಂದೇ ಹೇಳಬೇಕು. ಹೆಣ್ಣು ಮತ್ತು ಗಂಡು ಭಾವನಾತ್ಮಕವಾಗಿ ಬೇರೆ ಬೇರೆ. ಹೆಣ್ಣಿನಲ್ಲಿ ಕಣ್ಣೀರು ತರಿಸುವ ಸಂಗತಿಗಳು ಗಂಡಿನಲ್ಲಿ ಕಣ್ಣೀರು ತರಿಸಬೇಕೆಂದಿಲ್ಲ. ಗಂಡು ಕೋಪದಿಂದ ಸಿಡಿಮಿಡಿಗೊಳ್ಳುವಾಗ ಹೆಣ್ಣು ಕೂಲಾಗಿ ಇರಬಲ್ಲಳು. ಒಂದು ವಿಷಯದ ಕುರಿತಂತೆ ಗಂಡು ಮತ್ತು ಹೆಣ್ಣಿನ ತೀರ್ಮಾನಗಳು ಬೇರೆ ಬೇರೆಯಾಗಿರುತ್ತದೆ. ಆ ವಿಷಯವನ್ನು ವಿವರಿಸುವಾಗ ಅವರಿಬ್ಬರು ವ್ಯಕ್ತಪಡಿಸುವ ಹಾವ-ಭಾವಗಳೂ ಬೇರೆ ಬೇರೆಯಾಗಿರುತ್ತದೆ. ಹೀಗಿರುವಾಗ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಏಕಮುಖವಾಗಿ ವ್ಯಾಖ್ಯಾನಿಸುವುದೇಕೆ? ಆಕೆಯ ಹಾವ-ಭಾವಗಳನ್ನು ತಪ್ಪಾಗಿ ಅರ್ಥೈಸದಂಥ ವಾತಾವರಣವನ್ನೂ ನಿರ್ಮಿಸಬೇಕಾದ ಅಗತ್ಯದ ಬಗ್ಗೆಯೇಕೆ ಯಾರೂ ಮಾತಾಡುತ್ತಿಲ್ಲ? ಕುಡಿತದ ಅಮಲಿನಲ್ಲಿರುವ ಸಮಾಜವು ಈ ಹೆಣ್ಣನ್ನು ಸಕಲ ಗೌರವಾದರಗಳಿಂದ ಸ್ವೀಕರಿಸುತ್ತದೆಂಬ ಭ್ರಮೆಯಲ್ಲಿ ನಾವು ಇನ್ನೂ ನಂಬಿಕೆ ಇಟ್ಟಿರುವುದೇಕೆ? ಹೆಣ್ಣನ್ನು ‘ಲಜ್ಜೆ'ಯ ಪ್ರತೀಕವಾಗಿ ಕಂಡುಕೊಂಡಿದ್ದ ಪುರುಷ ಜಗತ್ತಿಗೆ ‘ಲಜ್ಜೆ' ರಹಿತ ಹೆಣ್ಣಿನ ಪರಿಕಲ್ಪನೆಯನ್ನು ಪರಿಚಯಗೊಳಿಸಿದ್ದೇ ಆಧುನಿಕ ಮಾರುಕಟ್ಟೆ ದೊರೆಗಳು. ಅದಕ್ಕೆ ಸಮಾನತೆ, ಸ್ವಾತಂತ್ರ್ಯ, ಸಬಲೀಕರಣ.. ಎಂಬೆಲ್ಲ ಹೆಸರನ್ನು ಕೊಟ್ಟದ್ದೂ ಅವರೇ. ಸಿನಿಮಾಗಳ ಮೂಲಕ ಇದನ್ನು ಪ್ರಚಾರಗೊಳಿಸಿದರು. ಹೆಣ್ಣನ್ನು ಆಕರ್ಷಣೆಯ ಪರ್ಯಾಯ ಪದವಾಗಿ ಬಳಸತೊಡಗಿದರು. ಆಕೆಯ ನಗು, ಕಣ್ಣು, ಮೂಗು, ದೇಹ ರಚನೆ, ಸೌಂದರ್ಯ, ತೂಕ.. ಎಲ್ಲವನ್ನೂ ಪುರುಷರ ಆರಾಧ್ಯ ಭಾಗವಾಗಿ ಪರಿಚಯಿಸಿದರು. ಅವುಗಳಿಗಾಗಿ ಪುರುಷರು ಆಸೆ ಪಡುವಂತಹ ವಾತಾವರಣವನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ತಂದರು. ಒಂದು ವೇಳೆ, ಮಹಿಳಾ ಸಮಾನತೆ, ಸ್ವಾತಂತ್ರ್ಯದ ವ್ಯಾಖ್ಯಾನsವನ್ನು ‘ಲಜ್ಜೆ' ಸಹಿತವಾಗಿ ಮಾಡಿರುತ್ತಿದ್ದರೆ ಮತ್ತು ಆ ‘ಲಜ್ಜೆ'ಯ ವ್ಯಾಪ್ತಿಯಲ್ಲಿ ಇದ್ದುಕೊಂಡೇ ಪುರುಷನಿಗೆ ಸಮಾನವಾಗಿ ಎಲ್ಲ ಕ್ಷೇತ್ರ ಗಳಲ್ಲೂ ಆಕೆ ತೊಡಗಿಸಿಕೊಳ್ಳುವಂತಹ ವಾತಾವರಣವನ್ನು ಬೆಳೆಸಿರುತ್ತಿದ್ದರೆ ಇವತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಖಂಡಿತ ಈ ಮಟ್ಟದಲ್ಲಿ ಸುದ್ದಿ ಮಾಡುತ್ತಿರಲಿಲ್ಲ. ಆದ್ದರಿಂದಲೇ,
   ‘ನಿನ್ನನ್ನು ನೀನೇ ರಕ್ಷಿಸಿಕೋ..' ಎಂದು ಸಾರುವ ದಾಟ್  ಡೇ ಆಫ್ಟರ್ ಎವರಿ ಡೇ ಕಿರುಚಿತ್ರದ ಸಂದೇಶವು ಸಮಾಜವನ್ನು ವ್ಯಂಗ್ಯವಾಗಿ ಇರಿಯುವಂತೆ ಕಾಣುತ್ತದೆ. ಹೆಣ್ಣನ್ನು ಲಜ್ಜೆರಹಿತಳನ್ನಾಗಿ ಮಾಡಿ ಆಕೆಯನ್ನು ಸರ್ವ ಆಕ್ರಮಣಕ್ಕೂ ತೆರೆದಿಟ್ಟವರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವಂತೆ ತೋರುತ್ತದೆ.

Monday, December 2, 2013

ಕಳೆದು ಹೋದ ನೆಮ್ಮದಿಯನ್ನು ಮರಳಿಸಿ ಅಂದರೆ ಏನು ಮಾಡಬಲ್ಲೆವು?

   “..ಆರುಷಿ ತಲ್ವಾರ್ ಮತ್ತು ಶಂಕರರಾಮನ್ ಹತ್ಯಾ ಪ್ರಕರಣಗಳ ಕುರಿತಂತೆ ಈ ವಾರ ಎರಡು ತೀರ್ಪುಗಳು ಹೊರಬಿದ್ದುವು. ಆರುಷಿ ತಲ್ವಾರ್ ಪ್ರಕರಣದಲ್ಲಿ, ನ್ಯಾಯಾಲಯವು ಸಾಂದರ್ಭಿಕ ಸಾಕ್ಷ್ಯ ಗಳನ್ನು ಪರಿಗಣಿಸಿ ಆರುಷಿಯ ಹೆತ್ತವರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿತು. ಶಂಕರರಾಮನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ  ನೀಡಿದುದರಿಂದ ಆರೋಪಿ ಗಳನ್ನು ಖುಲಾಸೆಗೊಳಿಸಲಾಯಿತು. ಆರುಷಿಯ ಕೊಲೆಯು ಮನೆಯೊಳಗೆ ನಡೆದಿದ್ದರೆ ಶಂಕರರಾಮನ್‍ರ ಹತ್ಯೆಯು ಪ್ರಸಿದ್ಧ ಕಾಂಚಿ ಪುರಮ್ ದೇವಾಲಯದ ಆವರಣದಲ್ಲಿ ನಡೆದಿತ್ತು. ಬಹುಶಃ, ಕೋರ್ಟು ಕಲಾಪದಲ್ಲಿ ಹಣ ಬಲ ಮತ್ತು ವ್ಯಕ್ತಿ ಪ್ರಭಾವವು ಪರಿಣಾಮ ಬೀರಬಲ್ಲುದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ..”
   ಚೆನ್ನೈನ ಪಾರ್ಥಸಾರಥಿ ಎಂಬವರು ದಿ ಹಿಂದೂ ಪತ್ರಿಕೆಯಲ್ಲಿ ನ. 30ರಂದು ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದಿರುವವರು ಖಂಡಿತ ಇದ್ದಾರೆ. ‘ಸತ್ಯ ಗೆದ್ದಿದೆ, ಧರ್ಮ ಜಯಶಾಲಿಯಾಗಿದೆ..' ಎಂದು ನ. 28ರ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಪುಟದ ಜಾಹೀರಾತಿನಲ್ಲಿ ಜಯೇಂದ್ರ ಸರಸ್ವತಿಯವರು ಹೇಳಿಕೊಂಡಾಗ, ‘ಸತ್ಯಕ್ಕೆ ಸೋಲಾಗಿದೆ' ಎಂದು ತಲ್ವಾರ್ ದಂಪತಿಗಳು ಘೋಷಿಸಿದರು. ಒಂದು ಕಡೆ ಸಿಹಿ ಹಂಚಿಕೆ ನಡೆಯಿತು. ಇನ್ನೊಂದು ಕಡೆ ಕಣ್ಣೀರು ಹರಿಯಿತು. ‘ಮಧ್ಯ ವಯಸ್ಸನ್ನು ದಾಟಿದ ಮತ್ತು ಬಿಳಿಗಡ್ಡದ ರಾಜೇಶ್ ತಲ್ವಾರ್‍ರಲ್ಲಿ ಇಬ್ಬರನ್ನು ಒಂದೇ ಏಟಿಗೆ ಕೊಲ್ಲುವ ಸಾಮಥ್ರ್ಯ ಇದೆಯೇ? ಹೇಮರಾಜ್‍ನನ್ನು ಕೊಲ್ಲುವಾಗ ಅಥವಾ ಆರುಷಿಯನ್ನು ಕೊಲ್ಲುವಾಗ ಅವರಿಬ್ಬರಿಂದ ಯಾವ ಪ್ರತಿರೋಧಗಳೂ ಎದುರಾಗಿಲ್ಲವೇ? ಒಬ್ಬರನ್ನು ಕೊಲ್ಲುವಾಗ ಇನ್ನೊಬ್ಬರು ತಮ್ಮ ಸರದಿಗಾಗಿ ಕಾಯುತ್ತಾ ನಿಂತರೇ..’ ಎಂಬ ಪ್ರಶ್ನೆಗಳಿಂದ ಹಿಡಿದು ಹತ್ತು-ಹಲವು ಬಗೆಯ ಅನುಮಾನಗಳು ಮಾಧ್ಯಮಗಳಲ್ಲೂ ಸಾರ್ವಜನಿಕರಲ್ಲೂ ಕಾಣಿಸಿಕೊಂಡವು. ಕೇವಲ ಊಹೆಗಳ ಆಧಾರದಲ್ಲಿ ಅಥವಾ ಸಾಂದರ್ಭಿಕ ಪುರಾವೆಗಳನ್ನು ಮುಂದಿಟ್ಟುಕೊಂಡು ಶಿಕ್ಷೆ ಕೊಡುವ ಕ್ರಮ ತಪ್ಪು ಅನ್ನಲಾಯಿತು. ಅದೇ ವೇಳೆ, ‘ಜಯೇಂದ್ರ ಸರಸ್ವತಿ ಸಹಿತ ಎಲ್ಲ 23 ಆರೋಪಿಗಳೂ ನಿರಪರಾಧಿಗಳು ಎಂದಾದರೆ, ಶಂಕರರಾಮನ್‍ರನ್ನು ಕೊಂದವರು ಯಾರು..’ ಎಂಬ ಪ್ರಶ್ನೆಯನ್ನು ಮಾಧ್ಯಮಗಳಲ್ಲಿ ಅನೇಕರು ಎತ್ತಿದರು. ದೃಕ್‍ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ತಪ್ಪು-ಒಪ್ಪುಗಳು ಚರ್ಚೆಗೀಡಾದುವು. ಪ್ರಕರಣವೊಂದನ್ನು ಬೇರೆ ಬೇರೆ ನ್ಯಾಯಾಧೀಶರುಗಳು ನೋಡುವ ವಿಧಾನ, ದೃಕ್‍ಸಾಕ್ಷ್ಯಗಳನ್ನು ಬಲವಾಗಿ ನೆಚ್ಚಿಕೊಳ್ಳುವವರು ಮತ್ತು ಸನ್ನಿವೇಶವನ್ನು ನೋಡಿಕೊಂಡು ತೀರ್ಮಾನಿಸುವವರು, ಅದರ ಸಾಧಕ-ಬಾಧಕಗಳು.. ಎಲ್ಲವೂ ಚರ್ಚೆಗೆ ಬಂದುವು.
ಶಂಕರರಾಮನ್
ಆರುಷಿ
   ಈ ಎರಡೂ ಹೆಸರುಗಳು ಮಾಧ್ಯಮಗಳಲ್ಲಿ ಧಾರಾಳ ಚರ್ಚೆಗೆ ಒಳಗಾಗಿದೆ. ತಮಿಳುನಾಡಿನ ಕಾಂಚಿಪುರದ ಶ್ರೀ ವರದ ರಾಜ ದೇವಸ್ಥಾನದ ವ್ಯವಸ್ಥಾಪಕ ಶಂಕರರಾಮನ್‍ರು 2004 ಸೆ. 3ರಂದು ದೇವಾಲಯದ ಆವರಣದಲ್ಲಿ ಕೊಲೆಯಾಗಿ ಪತ್ತೆಯಾಗುವುದಕ್ಕಿಂತ ಮೊದಲೇ ಅವರು ಕಾಂಚಿ ಶ್ರೀಗಳ ವಿರುದ್ಧ ಹಣಕಾಸು ಅವ್ಯವಹಾರದ ಆರೋಪ ಹೊರಿಸಿದ್ದರು. ರಾಮನ್‍ರ ಪತ್ನಿ ಪದ್ಮ ಮತ್ತು ಮಗ ಆನಂದ ಶರ್ಮಾ ಸೇರಿದಂತೆ ಕುಟುಂಬ ಸದಸ್ಯರು ಕೊಲೆ ಆರೋಪವನ್ನು  ಕಂಚಿಶ್ರೀಗಳ ಮೇಲೆ  ಹೊರಿಸಿದರು. 2004 ನ. 11ರಂದು ಹಿರಿಯ ಶ್ರೀಗಳಾದ ಜಯೇಂದ್ರ ಸರಸ್ವತಿ ಮತ್ತು 2005 ಜನವರಿ 10ರಂದು ಕಿರಿಯ ಶ್ರೀಗಳನ್ನು ಬಂಧಿಸಲಾಯಿತು. ಜಯಲಲಿತಾರ ಅಧಿಕಾರಾವಧಿಯಲ್ಲಿ ನಡೆದ ಈ ಬಂಧನ ಕ್ರಮವು ದೇಶದಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. 8 ವರ್ಷಗಳಲ್ಲಿ ಮೂವರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದರು. ಶಂಕರರಾಮನ್‍ರ ಪತ್ನಿ, ಮಗ ಸಹಿತ 189 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಆದರೆ ವಿಚಾರಣೆಯ ವೇಳೆ ಪ್ರಮುಖ 20 ಸಾಕ್ಷಿಗಳು ತಿರುಗಿ ಬಿದ್ದರು. ಈ ಮೊದಲು ಪೆರೇಡ್‍ನಲ್ಲಿ ಆರೋಪಿಗಳನ್ನು ಗುರುತಿಸಿದ್ದ ಸಾಕ್ಷಿಗಳೇ ಕೋರ್ಟ್‍ನಲ್ಲಿ ನ್ಯಾಯಾಧೀಶರ ಎದುರು ಅವರನ್ನು ಗುರುತಿಸಲು ವಿಫಲರಾದರು. ಇದನ್ನೇ ನೆಪವಾಗಿಸಿ ಕೋರ್ಟು ಎಲ್ಲ ಆರೋಪಿಗಳನ್ನೂ ಬಿಡುಗಡೆಗೊಳಿಸಿದೆ. ಆದರೆ ಆರುಷಿ ಪ್ರಕರಣ ಹಾಗಲ್ಲ. 2008 ಮೇ 16ರಂದು ಹತ್ಯೆಗೀಡಾದ ದಿನದಿಂದಲೂ ಈ ಹುಡುಗಿ ಮಾಧ್ಯಮಗಳಲ್ಲಿ ಧಾರಾಳ ಚರ್ಚೆಗೊಳಗಾಗಿದ್ದಾಳೆ. ಮಾಧ್ಯಮಗಳು ಹತ್ತು-ಹಲವು ಕತೆಗಳನ್ನು ಈ ಹುಡುಗಿಯ ಸುತ್ತ ಹೆಣೆದಿವೆ. ನ್ಯಾಯ ಮೂರ್ತಿ ಅಲ್ತಮಶ್ ಕಬೀರ್ ಮತ್ತು ಮಾರ್ಕಾಂಡೇಯ ಕಾಟ್ಜು ಅವರನ್ನೊಳಗೊಂಡ ನ್ಯಾಯಾಂಗ ಪೀಠವು 2008 ಜುಲೈ 22ರಂದು ಈ ಬಗ್ಗೆ ಮಾಧ್ಯಮಗಳನ್ನು ತರಾಟೆಗೂ ತೆಗೆದುಕೊಂಡಿದ್ದರು. ತಲ್ವಾರ್ ಕುಟುಂಬದ ವಿರುದ್ಧ ನಿರಾಧಾರ ಕತೆಗಳನ್ನು ಹೆಣೆಯಬೇಡಿ ಎಂದಿದ್ದರು. ಬಾಲಾಜಿ ಟೆಲಿಫಿಲ್ಮ್ ಸಂಸ್ಥೆಯು 2008ರಲ್ಲಿ ಆರುಷಿಯ ಸುತ್ತ ಚಿತ್ರ ನಿರ್ಮಾಣ ಮಾಡಲು ಮುಂದಾದಾಗ, ಮಕ್ಕಳ ರಕ್ಷಣೆಗಿರುವ ರಾಷ್ಟ್ರೀಯ ಆಯೋಗಕ್ಕೆ  ನೂಪುರ್ ತಲ್ವಾರ್ ದೂರು ಕೊಟ್ಟಿದ್ದರು. ಟೆಲಿಫಿಲ್ಮ್ ಮಾಡದಂತೆ ತಡೆಯಬೇಕೆಂದು ಕೋರಿದ್ದರು. 2012ರಲ್ಲಿ ಜೈಲಿ ನಲ್ಲಿದ್ದಾಗ, ‘ಅರುಷಿ ಹತ್ಯೆಯ ಹಿಂದಿನ ರಹಸ್ಯ: ದುರದೃಷ್ಟವಂತ ತಾಯಿಯೋರ್ವಳ ಕತೆ..' ಎಂಬ ಹೆಸರಲ್ಲಿ ನೂಪುರ್ ತಲ್ವಾರ್ ಪುಸ್ತಕ ಬರೆಯಲು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದರು. ಅವರ ಜೈಲು ಕೊಠಡಿಯಿಂದ 17 ಪುಟಗಳ ಬರಹವನ್ನು ವಶಪಡಿಸಿಕೊಂಡಿದ್ದರು. ವಿಚಾರಣೆಯ ಹಂತದಲ್ಲಿರುವ ಪ್ರಕರಣದ ಬಗ್ಗೆ ಬರೆಯುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂಬುದು ಪೊಲೀಸರ ವಾದವಾಗಿತ್ತು. ಇದಲ್ಲದೇ, ರಾಜೇಶ್ ತಲ್ವಾರ್‍ರ ಸಹೋದರಿ ವಂದನಾ ತಲ್ವಾರ್ ಮತ್ತು ಗೆಳೆಯರು, ತಲ್ವಾರ್ ದಂಪತಿಗಳ ಪರ ಆನ್‍ಲೈನ್ ಅಭಿಯಾನವನ್ನೇ ಆರಂಭಿಸಿದ್ದರು. ವೆಬ್‍ಸೈಟ್, ಫೇಸ್‍ಬುಕ್ ಮತ್ತು ಟ್ವಿಟರ್ ಅಕೌಂಟ್‍ಗಳನ್ನು ಆರಂಭಿಸಿ, ತಲ್ವಾರ್ ದಂಪತಿಗಳ ಮುಗ್ಧತನವನ್ನು ಪ್ರಚಾರ ಮಾಡುತ್ತಿದ್ದರು.
   ಆದ್ದರಿಂದಲೇ, ಒಂದು ಪ್ರಕರಣದ ಬಗ್ಗೆ ತೀರ್ಪು ಕೊಡುವುದ ಕ್ಕಿಂತ ಮೊದಲು ನ್ಯಾಯಾಧೀಶರು ಯಾವೆಲ್ಲ ಎಚ್ಚರಿಕೆಗಳನ್ನು ಕೈಗೊಳ್ಳಬೇಕು, ಸಾಂದರ್ಭಿಕ ಸಾಕ್ಷ್ಯ ಮತ್ತು ದೃಕ್‍ಸಾಕ್ಷ್ಯಗಳಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು, ಒಂದು ವೇಳೆ ದೃಕ್‍ಸಾಕ್ಷ್ಯಗಳಗಳ ಅನುಪಸ್ಥಿತಿಯಲ್ಲಿ ಸಾಂದರ್ಭಿಕ ಸಾಕ್ಷ್ಯಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಬಹುದು.. ಎಂಬೆಲ್ಲ ಚರ್ಚೆಗಳಿಗೆ ಶಂಕರರಾಮನ್ ಮತ್ತು ಆರುಷಿ ಪ್ರಕರಣಗಳು ಇವತ್ತು ಕಾರಣವಾಗಿವೆ.
   ಅಂದಹಾಗೆ, ಬಲವಾದ ಪುರಾವೆಗಳಿಲ್ಲದೇ ತಲ್ವಾರ್ ದಂಪತಿ ಗಳನ್ನು ಶಿಕ್ಷಿಸಲು ಸಾಧ್ಯವೆಂದಾದರೆ, ಶಂಕರರಾಮನ್ ಪ್ರಕರಣದಲ್ಲಿ ಪ್ರಮುಖ 20 ಸಾಕ್ಷಿಗಳು ತಿರುಗಿ ಬಿದ್ದದ್ದನ್ನೂ ಗಂಭೀರವಾಗಿ ಪರಿಗಣಿಸಬಹುದಲ್ಲವೇ? ಪ್ರಕರಣದ ಆರಂಭದಲ್ಲಿ ಈ ಎಲ್ಲ ಸಾಕ್ಷಿಗಳು ಶ್ರೀಗಳ ವಿರುದ್ಧ ಸಾಕ್ಷಿ ನುಡಿದಿದ್ದರು. ಪೊಲೀಸರ ಸಮ್ಮುಖದಲ್ಲಿ ಆರೋಪಿಗಳ ಗುರುತು ಹಿಡಿದಿದ್ದರು. ಆ ಬಳಿಕ 8 ವರ್ಷಗಳ ದೀರ್ಘ ಅವಧಿ ವರೆಗೆ ವಿಚಾರಣೆ ಮುಂದುವರಿಯಿತು. ಬಳಿಕ ಸಾಕ್ಷಿಗಳು ತಮ್ಮ ಈ ಹಿಂದಿನ ಸಾಕ್ಷ್ಯವನ್ನೇ ಅಲ್ಲಗಳೆದರು. ಆರೋಪಿಗಳ ಪರಿಚಯವಿಲ್ಲ ಅಂದರು. ನಿಜವಾಗಿ, ಈ ಸಾಕ್ಷಿಗಳು ಈ ಮೊದಲು ಏನು ಹೇಳಿದ್ದರು ಎಂಬುದು ನ್ಯಾಯಾಧೀಶರಿಗೆ ಗೊತ್ತಿಲ್ಲ ಎಂದಲ್ಲ. ಆದರೂ ಅವರು ಈ ನಿಲುವನ್ನು ಪುರಾವೆಯಾಗಿ ಪರಿಗಣಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಿದರು. ಆದರೆ, ಇದೇ ಉದಾರ ನಿಲುವು ಅರುಷಿ ಪ್ರಕರಣದಲ್ಲಿ ಕಾಣಿಸಿಯೇ ಇಲ್ಲ. ಅಲ್ಲಿನ ತೀರ್ಪಿಗೆ ಆಧಾರವಾಗಿರುವುದು ಸಾಂದರ್ಭಿಕ ಸಾಕ್ಷ್ಯಗಳು. ‘ಈ ದಂಪತಿಗಳಲ್ಲದೇ ಇನ್ನಾರೂ ಕೊಲೆ ಮಾಡಲು ಸಾಧ್ಯವಿಲ್ಲ..' ಎಂಬ ಊಹೆ ಆಧಾರಿತ ನಿಲುವುಗಳು. ತಿರುಗಿಬಿದ್ದ ಸಾಕ್ಷ್ಯಗಳನ್ನು ಪುರಸ್ಕರಿಸುವ ನ್ಯಾಯಾಲಯ ಒಂದು ಕಡೆಯಾದರೆ, ಸಾಂದರ್ಭಿಕ ಸಾಕ್ಷ್ಯವನ್ನೇ ನೆಚ್ಚಿಕೊಂಡು ಜೀವಾವಧಿ ಶಿಕ್ಷೆ ವಿಧಿಸುವ ನ್ಯಾಯಾಲಯ ಇನ್ನೊಂದು ಕಡೆ. ವಿಕಿಪೀಡಿಯಾದಲ್ಲಿ ಆರುಷಿ ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಮನೆಯ ನಕ್ಷೆಯನ್ನು ತೋರಿಸಿ ಒಟ್ಟು ಪ್ರಕರಣ ಹೇಗೆ ನಡೆದಿರಬಹುದು ಎಂದೆಲ್ಲಾ ವಿವರಿಸುವ ಪ್ರಯತ್ನಗಳು ಅಲ್ಲಿ ನಡೆದಿವೆ. ರಾಜೇಶ್ ತಲ್ವಾರ್‍ರು ಗಾಲ್ಫ್ ಸ್ಟಿಕ್‍ನಿಂದ ಹೇಮರಾಜ್‍ಗೆ ಮೊದಲು ಏಟು ಕೊಟ್ಟು ಎರಡನೇ ಬಾರಿಯ ಏಟನ್ನು ಆತ ತಪ್ಪಿಸುವಾಗ ಆ ಏಟು ಆರುಷಿಗೆ ಬಿದ್ದಿರಬಹುದು ಎಂದೆಲ್ಲಾ ಊಹಿಸಲಾಗಿದೆ. ಹೇಮ್‍ರಾಜ್‍ರ ಮೊಬೈಲ್ ಫೋನ್ ಈ ವರೆಗೂ ಪತ್ತೆಯಾಗಿಲ್ಲ. ಆರುಷಿಯ ಮೊಬೈಲ್ ಪತ್ತೆಯಾಗಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಅಷ್ಟಕ್ಕೂ, ಅತ್ಯಂತ ಬುದ್ಧಿವಂತಿಕೆಯಿಂದ ಈ ಕೊಲೆಯನ್ನು ಮಾಡಲಾಗಿದೆ ಎಂಬ ಕಾರಣಕ್ಕಾಗಿ ಆ ಕೊಲೆಯ ಹೊಣೆಯನ್ನು ಹೆತ್ತವರ ಮೇಲೆಯೇ ಹೊರಿಸಬೇಕೆಂದಿಲ್ಲವಲ್ಲ. ಅಪರಾಧವು ಸಂಶಯಾತೀತವಾಗಿ ಸಾಬೀತಾಗದೇ ಶಿಕ್ಷಿಸುವ ಕ್ರಮ ರೂಢಿಗೆ ಬಂದರೆ ಏನಾದೀತು? ನಿರಪರಾಧಿಗಳು ಶಿಕ್ಷೆಗೆ ಒಳಗಾಗದಂತೆ ಗರಿಷ್ಠ ಪ್ರಯತ್ನಿಸಬೇಕಾದುದು ನ್ಯಾಯಾಲಯಗಳ ಹೊಣೆಗಾರಿಕೆಯಲ್ಲವೇ? ಕಂಚಿಶ್ರೀಗಳ ಪ್ರಕರಣದಲ್ಲಿ ನ್ಯಾಯಾಲಯ ತೋರಿದ ವಿಶಾಲತೆಯನ್ನು ಆರುಷಿ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೋರದಿರುವುದನ್ನು ಹೇಗೆ ವಿಶ್ಲೇಷಿಸಬಹುದು?
   ಕೊಲೆ ಆರೋಪವನ್ನು ಹೊತ್ತು ಕೊಳ್ಳುವುದು ಸಣ್ಣ ಸಂಗತಿಯಲ್ಲ. ಅದರಲ್ಲೂ ತನ್ನ ಮಗಳನ್ನೇ ಕೊಂದ ಆರೋಪವನ್ನು ಹೊತ್ತು ಕೊಂಡು ಜೈಲು ಸೇರುವ ಸಂದರ್ಭ ಅತ್ಯಂತ ದಯನೀಯವಾದದ್ದು. ಒಂದು ಕಡೆ, ತಲ್ವಾರ್ ದಂಪತಿಗಳಿಗೆ ಇರುವ ಏಕೈಕ ಮಗಳೇ ಕಳೆದು ಹೋಗಿದ್ದಾಳೆ. ಇನ್ನೊಂದು ಕಡೆ, ಕೊಲೆಗಾರರು ಎಂಬ ಹಣೆಪಟ್ಟಿ ಸಿಕ್ಕಿದೆ. ಆ ಮೂಲಕ ಇರುವ ಘನತೆ, ಗೌರವಗಳೂ ಮಣ್ಣು ಪಾಲಾಗಿವೆ. ಇದು ಕೇವಲ ತಲ್ವಾರ್ ದಂಪತಿಯೋರ್ವರ ಸಮಸ್ಯೆಯಲ್ಲ. ಆರೇಳು ತಿಂಗಳುಗಳ ವರೆಗೆ ಜೈಲಲ್ಲಿ ಕಳೆದ ಕಂಚಿಶ್ರೀಗಳಿಗೂ ಇದು ಅನ್ವಯವಾಗುತ್ತದೆ. ಅವರು ತಪ್ಪೇ ಮಾಡಿಲ್ಲವೆಂದ ಮೇಲೆ ಅವರು ಬಂಧನದ ಸಂದರ್ಭದಲ್ಲಿ ಅನುಭವಿಸಿದ ಮಾನಸಿಕ ನೋವು, ಅವಮಾನಗಳಿಗೆ ಯಾರು ಹೊಣೆ? ಈಗಿನ ತೀರ್ಪಿನಿಂದ ಅದನ್ನು ಅವರಿಗೆ ಮರಳಿಸಲು ಸಾಧ್ಯವೇ?
   ‘ಸತ್ಯಕ್ಕೆ ಸೋಲಾಗಿದೆ..’ ಎನ್ನುತ್ತಾ ಜೈಲಿನೊಳಗೆ ಹೋದ ತಲ್ವಾರ್ ದಂಪತಿಗಳು ಮತ್ತು ‘ಸತ್ಯ ಗೆದ್ದಿದೆ’ ಅನ್ನುವ ಜಾಹೀ ರಾತು ಕೊಟ್ಟ ಕಂಚಿಶ್ರೀಗಳನ್ನು ನೋಡುವಾಗ ಮನಸು ಗೊಂದಲಕ್ಕೆ ಒಳಗಾಗುತ್ತದೆ. ಸತ್ಯಕ್ಕೆ ಸೋಲಾಗದಿರಲಿ ಅನ್ನಿಸುತ್ತದೆ.