Monday, April 20, 2015

ದರ ನಿಗದಿಪಡಿಸಿ ತಿರುಗಾಡುವ ಯುವಕರೂ 'ರುಬೀನ'ರ 'ಸುಲ್ತಾನ'ರೂ


ಮಾಧ್ಯಮದ ಜೊತೆ ಮಾತಾಡುತ್ತಿರುವ ರುಬೀನ
     “ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳು 18 ತುಂಬುವಾಗಲೇ ಮದುವೆಯಾಗಿ ಹೊರಟು ಹೋಗುತ್ತಿದ್ದ ವಾತಾವರಣದ ಮಧ್ಯೆ ನನಗೆ 24 ತುಂಬಿತು. ತಂದೆ ಕೂಲಿ ಮಾಡುತ್ತಿದ್ದರು. ತಾಯಿ ಮೀನು ಮಾರುವವಳು. ಇವತ್ತಿನ ಮದುವೆ ಮಾರುಕಟ್ಟೆಯಲ್ಲಿ ಹೆಣ್ಣಿಗೆ ಮತ್ತು ಹೆಣ್ಣಿನ ಅಪ್ಪ-ಅಮ್ಮನಿಗೆ ಕೆಲವು ಅರ್ಹತೆಗಳು ಇರಲೇಬೇಕಾಗುತ್ತದಲ್ಲವೇ? ಹೆಣ್ಣು ಎಂಬ ಐಡೆಂಟಿಟಿಯೊಂದೇ ಓರ್ವಳು ಮದುಮಗಳಾಗುವುದಕ್ಕೆ ಸಾಕಾಗುವುದಿಲ್ಲವಲ್ಲ. ಹೆಣ್ಣಿನ ಬಗ್ಗೆ ಗಂಡಿನಲ್ಲಿ ಒಂದು ರೇಖಾಚಿತ್ರವಿರುತ್ತದೆ. ಆ ಚಿತ್ರಕ್ಕೆ ಹೆಣ್ಣು ತಾಳೆಯಾದರೆ ಮಾತ್ರವೇ ಆಕೆ ಮದುಮಗಳಾಗಲು ಸಾಧ್ಯ. ಹೀಗಿರುವಾಗ 9ನೇ ತರಗತಿಯಲ್ಲಿ ಕಲಿಕೆ ನಿಲ್ಲಿಸಿದ, ಬಣ್ಣದಲ್ಲೂ ಸೌಂದರ್ಯದಲ್ಲೂ ಸಿನಿಮಾ ತಾರೆಯರಿಗೆ ಹೋಲಿಕೆಯಾಗದ ಮತ್ತು ಮೀನು ಮಾರುವ ಬಡ ಕುಟುಂಬದ ಹೆಣ್ಣಾಗಿರುವ ನನಗೆ ಮದುವೆ ಪ್ರಸ್ತಾಪಗಳು ಬರುತ್ತವೆ ಎಂದು ನಿರೀಕ್ಷಿಸುವುದಕ್ಕೆ ಏನರ್ಥವಿರುತ್ತದೆ? ಹೀಗಿದ್ದೂ, ನನಗೆ 4 ಪ್ರಸ್ತಾಪಗಳು ಬಂದುವು. ಆದರೆ ಆ ನಾಲ್ವರೂ ನನ್ನನ್ನು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ, ಅವರು ಕೇಳುವಷ್ಟು ವರದಕ್ಷಿಣೆ ಕೊಡಲು ನನ್ನ ಅಮ್ಮ-ಅಪ್ಪನಲ್ಲಿ ದುಡ್ಡಿರಲಿಲ್ಲ. ಅದರಲ್ಲೂ ನನ್ನ ಅಪ್ಪನಾದರೋ ಜವಾಬ್ದಾರಿ ರಹಿತ ವ್ಯಕ್ತಿ. ಹರೆಯದ ಮಗಳಿದ್ದಾಳೆ ಎಂಬುದನ್ನು ಮರೆತವರಂತೆ ಅವರು ವರ್ತಿಸುವರು. ಅಪ್ಪನ ಬಗ್ಗೆ ತಾಯಿಗೂ ತಕರಾರುಗಳಿದ್ದುವು. ನಾನು ತಂದೆಯವರೊಂದಿಗೆ ಈ ಬಗ್ಗೆ ಜಗಳಾಡಿದ್ದೆ. ‘ನನ್ನ ವಿವಾಹಕ್ಕೆ (ವರದಕ್ಷಿಣೆ) ಏನು ತಯಾರಿ ನಡೆಸಿದ್ದೀರಿ’ ಎಂದು ಧೈರ್ಯ ತಂದುಕೊಂಡು ಪ್ರಶ್ನಿಸಿದ್ದೆ. ತಂದೆಗೆ ಸಿಟ್ಟು ಬಂದಿತ್ತು. ನಿನ್ನ ಮದುವೆಗೆ ಚಿಕ್ಕಾಸನ್ನೂ ಖರ್ಚು ಮಾಡುವುದಿಲ್ಲವೆಂದು ಅವರು ಘರ್ಜಿಸಿದ್ದರು. ನಮ್ಮಲ್ಲಿ ಪುರುಷರು ಮಹಿಳೆಯರ ಅರ್ಧದಷ್ಟೂ ದುಡಿಯುವುದಿಲ್ಲ. ಅಲ್ಲದೆ, ಮಹಿಳೆಯಿಂದಲೇ ಅವರು ಖರ್ಚಿಗೆ ಕೇಳುವುದಿದೆ. ಇಂಥ ಸ್ಥಿತಿಯಲ್ಲಿ ತಂದೆಯೊಂದಿಗೆ ಜಗಳಾಡಿ ಪ್ರಯೋಜನವಾದರೂ ಏನಿರುತ್ತದೆ? ಮೀನು ಮಾರುವ ತಾಯಿಯಿದ್ದೂ ಉತ್ತಮ ಮೀನಿನ ರುಚಿ ಸವಿಯವ ಸಾಮರ್ಥ್ಯವಿಲ್ಲದ ನನಗೆ ಇನ್ನು ಇತರ ಹುಡುಗಿಯರಂತೆ ಅಂದವಾಗಿ ಡ್ರೆಸ್ಸು ಧರಿಸಿ ನಡೆದಾಡುವ ಅವಕಾಶ ಎಲ್ಲಿರುತ್ತದೆ..”
   ರುಬೀನಾ ಹೇಳುತ್ತಾ ಹೋಗುತಾರೆ,
     “ನಿನ್ನನ್ನು ಮದುವೆಯಾಗಲು ದೂರದಿಂದ ಸುಲ್ತಾನ್ ಬರುತ್ತಾನೆಂದು ಚಿಕ್ಕಂದಿನಲ್ಲಿ ತಾಯಿ ಹೇಳುತ್ತಿದ್ದರು. ಆದರೆ ಬೆಳೆದು ದೊಡ್ಡವಳಾದಾಗ ಆ ಮಾತು ಎಷ್ಟು ಅಸಂಭವ ಎಂಬುದು ನನಗೆ ಅರಿವಾಗತೊಡಗಿತು. ಸುಲ್ತಾನ್ ಬಿಡಿ ಓರ್ವ ಮೀನು ಮಾರುವವನಾದರೂ ಬರುತ್ತಿಲ್ಲವಲ್ಲ ಎಂದು ಅಮ್ಮ ಸಂಕಟ ಪಡುತ್ತಿದ್ದಳು. ಒಂದು ದಿನ ಅಪ್ಪನೊಂದಿಗೆ- ‘ರುಬೀನಾಳಿಗೆ ಸಂಬಂಧ ಹುಡುಕಿ’ ಅಂತ ಅಮ್ಮ ಹೇಳಿದ್ರು. ನಿನ್ನ ಕೈಯಲ್ಲಿ ವರದಕ್ಷಿಣೆಯ ದುಡ್ಡಿದ್ದರೆ ಹುಡುಕು ಅಂದರು ಅಪ್ಪ. ಹಾಗೆ ಹೋದ ಅಪ್ಪ ಮಧ್ಯಾಹ್ನದ ಹೊತ್ತಲ್ಲಿ ಮನೆಗೆ ಬಂದು ನೀರು ಕೇಳಿದ್ರು. ಅಡುಗೆ ತಯಾರಿಯಲ್ಲಿದ್ದ ನನಗದು ಕೇಳಿಸಲಿಲ್ಲ. ಸಿಟ್ಟಿನಿಂದ ಚೆನ್ನಾಗಿ ಬಾರಿಸಿದ್ರು. ನಾನು ಮೊದಲೇ ಕೃಶಕಾಯಿ. ಬವಳಿ ಬಂದು ಬಿದ್ದುಬಿಟ್ಟೆ. ಅಮ್ಮ ಮೀನು ಮಾರಿ ಬರುವಾಗ ನಾನಿನ್ನೂ ಮಲಗಿಯೇ ಇದ್ದೆ. ನನ್ನ ಮೈಯಲ್ಲಿರುವ ಬಾಸುಂಡೆಗಳನ್ನು ನೋಡಿ ಅವಳು ಕಣ್ಣೀರಿಳಿಸಿದಳು. ವಿಶೇಷ ಏನೆಂದರೆ, ಅದೇ ದಿನ ನಮ್ಮ ಮನೆಗೆ ನಸೀಮಾದ ಎಂಬ ಅತಿಥಿ ಬಂದರು. ತಾಯಿ ಅವರೊಂದಿಗೆ ಎಲ್ಲವನ್ನೂ ಹೇಳಿ ಕಣ್ಣೀರಿಳಿಸಿದಳು. ಒಂದು ವಿವಾಹ ಸಂಬಂಧ ತರುವಂತೆ ವಿನಂತಿಸಿದಳು. ವರದಕ್ಷಿಣೆಯಾಗಿ ಏನು ಕೊಡಬಲ್ಲೆ ಎಂಬುದು ಆಕೆಯ ಪ್ರಶ್ನೆ. ಅಮ್ಮ ತುಸು ಅಲುಗಾಡಿದಳು. ಕೊಡಲು ಅಮ್ಮನ ಬಳಿಯಿರುವುದು ಸುಸ್ಥಿತಿಯಲ್ಲಿರದ ಮೀನು ಬುಟ್ಟಿ ಮಾತ್ರ. ನಾನು ಅಮ್ಮನನ್ನೇ ನೋಡಿದೆ. ನನ್ನನ್ನು ಹೆತ್ತ ತಪ್ಪಿಗೆ ಆಕೆಯ ಕಣ್ಣು, ಕೆನ್ನೆ, ತುಟಿಗಳು ಅದುರುತ್ತಿವೆಯೇನೋ ಎಂದು ಸಂಕಟವಾಯಿತು. ಅಮ್ಮ ಹೇಳಿದಳು,
‘ಈಗ ಏನಿಲ್ಲ, ಆದರೆ 50 ಸಾವಿರ ರೂಪಾಯಿ ಮತ್ತು 3 ಪವನ್ ಚಿನ್ನ ವರದಕ್ಷಿಣೆಯಾಗಿ ಕೊಡಬಲ್ಲೆ. ಇದಕ್ಕೂ ಸಾಲ ಮಾಡಬೇಕಷ್ಟೇ. ಆದರೆ ನಾನು ಮೀನು ಮಾರಿ ಸಾಲವನ್ನು ಸಂದಾಯ ಮಾಡುವೆ.’
    ಹೀಗಿರುತ್ತಾ 2008 ಜೂನ್ 23ರಂದು ಪಕ್ಕದ ಮನೆಗೆ ನಸೀಮಾದರ ಫೋನ್ ಕರೆಬಂತು. ಹುಡುಗನನ್ನು ನೋಡಲು ಇಂತಿಂಥ ಜಾಗಕ್ಕೆ ಬನ್ನಿ ಎಂದು ಆಕೆ ಹೇಳಿದರು. ಅಮ್ಮ ಕರಕೊಂಡು ಹೋದರು. ವರದಕ್ಷಿಣೆಯ ಭಾರವನ್ನು ದೇಹವಿಡೀ ಹೊತ್ತು ಬಸವಳಿದ ತಾಯಿಯೊಂದಿಗೆ ಸುಲ್ತಾನ್‍ನ ಕನಸು ಕಾಣುತ್ತಾ ಹೋಗುವ ಹರೆಯದ ಮಗಳು! ನಾವೊಂದು ಮನೆಗೆ ಹೋದೆವು. ಅಲ್ಲಿ 48 ವರ್ಷದ ಹಸನ್ ಜಾಬಿರ್ ಎಂಬವನಿದ್ದ. ಅವನೇ ನನ್ನ ಸುಲ್ತಾನ್. ಮಾಲ್ದೀವ್ಸ್ ನವ. ಅವನನ್ನು ನೋಡಿದ ಕೂಡಲೇ ನನಗೆ ಭಯವಾಯಿತು. ನಸೀಮಾದ ಆತನ ಬಗ್ಗೆ ನನ್ನಲ್ಲಿ ಹೇಳತೊಡಗಿದರು- ವಯಸ್ಸೇನೂ ನಿಲ್ಲುವುದಿಲ್ವಲ್ಲ ರುಬೀನಾ. ಮುಂದಿನ ವರ್ಷ ನಿನಗೆ 25 ಆಗುತ್ತದೆ. ಹೆಣ್ಣಿನ ಪ್ರಾಯ ಎಂಬುದು ಗಂಡಿನ ಪ್ರಾಯದಂತೆ ಅಲ್ವಲ್ಲ? ನೋಡು, ನಮ್ಮ ಭಾಗ್ಯವು ನಮ್ಮನ್ನು ಹುಡುಕಿಕೊಂಡು ಬರುವುದು ಬದುಕಿನಲ್ಲಿ ಒಂದು ಬಾರಿ ಮಾತ್ರ. ಆ ಸಂದರ್ಭದಲ್ಲಿ ಆ ಭಾಗ್ಯವನ್ನು ನಾವು ಗಟ್ಟಿಯಾಗಿ ಹಿಡ್ಕೊಬೇಕು. ನಾವೆಲ್ಲ ಭಾಗ್ಯವನ್ನು ಹುಡುಕಿಕೊಂಡು ತಿರುಗಾಡಿದವರು ಮಗಳೇ. ಆದರೆ ಸಿಗಲಿಲ್ಲ. ನೀನು ಭಾಗ್ಯವಂತೆ. ವರನ ಬಗ್ಗೆ ನೀನೇನೂ ಚಿಂತಿಸಬೇಡ. ಈತ ದೊಡ್ಡ ವ್ಯಾಪಾರಿ. ನಾಲ್ಕೈದು ಮನೆಗಳಿವೆ. 3 ಅಂಗಡಿಗಳಿವೆ. ದುಡ್ಡು ಮಾಡುವ ಬ್ಯುಸಿಯಲ್ಲಿ ಮದುವೆಯನ್ನು ಮುಂದೂಡುತ್ತಾ ಹೋಗಿ ಹೋಗಿ ಈಗ ಒಪ್ಪಿಕೊಂಡಿದ್ದಾನೆ. ಈತನಿಗೆ ಪ್ರೀತಿಸಲಷ್ಟೇ ಗೊತ್ತು. ಪ್ರೀತಿಸುವವರಿಗಾಗಿ ಈತ ಹೃದಯನ್ನೇ ಸಿಗಿದು ಕೊಡುವಷ್ಟು ಉದಾರಿ. ಮಗಳೇ, ನಿನ್ನ ಮನೆಯವರ ಸಾಲವನ್ನು ಆತ ಸಂದಾಯ ಮಾಡಬಲ್ಲ. ವೃದ್ಧಾಪ್ಯದಲ್ಲಿ ನಿನ್ನ ಅಪ್ಪ-ಅಮ್ಮ ದುಡಿಯದಂತೆ ಸಾಕಬಲ್ಲ..’ ಹೀಗೆ ನಸೀಮಾದ ಹೇಳುತ್ತಾ ಹೋದಂತೆ ಆತ ನನ್ನ ಪಾಲಿನ ಸುಲ್ತಾನ್ ಆಗುತ್ತಲೇ ಹೋದ. ನಾನು ಒಪ್ಪಿಕೊಂಡೆ. ಆತ ತಾಯಿಗೆ 15 ಸಾವಿರ ರೂಪಾಯಿಯನ್ನು ಕೊಟ್ಟ. ಒಂದು ಬಗೆಯ ಖುಷಿ, ಆತಂಕಗಳೊಂದಿಗೆ ನಾನು ಗುಬ್ಬಚ್ಚಿಯಂತಾದೆ. ವರದಕ್ಷಿಣೆ ಕೊಡುವ ಸಾಮರ್ಥ್ಯವಿಲ್ಲದ ಹೆಣ್ಣು ಮಗಳೊಬ್ಬಳ ಮುಂದೆ ಇವುಗಳಲ್ಲದೆ ಬೇರೆ ಆಯ್ಕೆಗಳು ಏನಿರುತ್ತವೆ ಹೇಳಿ? ಈ ಪ್ರಸ್ತಾಪವನ್ನು ತಿರಸ್ಕರಿಸಬಹುದು. ಆದರೆ ಆ ತಿರಸ್ಕಾರವು ನನ್ನ ಅಮ್ಮ-ಅಪ್ಪನನ್ನು ಹೇಗೆಲ್ಲ ಕಾಡಬಹುದು? ಅವರ ಕಣ್ಣೀರಿಗೆ ಕಾರಣವಾಗುವ ತಿರಸ್ಕಾರಕ್ಕಿಂತ ಅವರನ್ನು ಸುಖವಾಗಿಡಬಲ್ಲ ಅಥವಾ ಕನಿಷ್ಠ ಭಾರವನ್ನು ಇಳಿಸಬಲ್ಲ ಒಪ್ಪಿಗೆಯೇ ಉತ್ತಮ ಅಲ್ಲವೇ? ನನ್ನ ಹರೆಯದ ಕನಸುಗಳಿಗೆ ಆತ ರೆಕ್ಕೆ ಜೋಡಿಸಬಲ್ಲ ಎಂಬ ನಿರೀಕ್ಷೆಯೊಂದಿಗೆ 2008 ಜೂನ್ 28ರಂದು ಒಂದು ಹೊಟೇಲಿನಲ್ಲಿ ಹಸನ್ ಜಾಬಿರ್‍ನೊಂದಿಗೆ ವಿವಾಹವಾದೆ. ಒಂದು ಉಂಗುರ ಮತ್ತು ಒಂದು ಪವನಿನ ಸರವನ್ನು ಆತ ಮಹರ್ ಆಗಿ ನೀಡಿದ. ಮದುವೆ ದಿನದಂದು ಆತ ನನ್ನ ತಾಯಿಗೆ ಮತ್ತೆ 15 ಸಾವಿರ ರೂಪಾಯಿಯನ್ನು ಕೊಟ್ಟ. ಅದರಿಂದ ನಸೀಮಾದ ಮತ್ತಿತರರು ತಮ್ಮ ಪಾಲನ್ನು ಪಡಕೊಂಡರು. ನನ್ನ ಮನಸ್ಸಿಗೆ ಆತನನ್ನು ಪದೇ ಪದೇ ಸುಲ್ತಾನ್ ಎಂದು ಹೇಳಿಕೊಟ್ಟೆ. ಆತನನ್ನು ಪತಿಯಾಗಿ ಒಪ್ಪಿಕೊಳ್ಳುವಂತೆ ಮನಸ್ಸನ್ನು ಸಿದ್ಧಪಡಿಸಿದೆ. ಆಯ್ಕೆಗಳೇ ಇಲ್ಲದ ಹೆಣ್ಣು ಮಗಳ ಮುಂದೆ ಮಾಲ್ದೀವ್ಸ್ ಆದರೂ, 48 ವರ್ಷವಾದರೂ, ಕೂದಲು ತುಸು ನೆರೆದಿದ್ದರೂ ಉತ್ತಮ ಆಯ್ಕೆಯೇ ತಾನೆ? ನಾನು ಮಾಲ್ದೀವ್ಸ್ ಗೆ ತೆರಳಬೇಕಾದರೆ ಪಾಸ್‍ಪೋರ್ಟ್‍ನ ವ್ಯವಸ್ಥೆ ಆಗಬೇಕಿತ್ತು. ಹಾಗೆ ಆಗಸ್ಟ್ 24ಕ್ಕೆ ಮಾಲ್ದೀವ್ಸ್ ಗೆ ತೆರಳಿದೆವು. ಮೊದಲು ಹೋದದ್ದು ಅವರ ಅಕ್ಕನ ಮನೆಗೆ. ಭಾಷೆ ಬೇರೆ. ಏನೇನೋ ಹೇಳಿ ನಕ್ಕರು. ನಾನು ಮೌನವಾಗಿದ್ದೆ. ಓರ್ವ ಹಿರಿಯರು ಬಂದು ನನ್ನನ್ನು ಆಲಿಂಗಿಸಿಕೊಂಡರು. ನನಗೆ ನೆಮ್ಮದಿಯೆನಿಸಿತು. ಬಳಿಕ ಪತಿಯವರು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಐವರು ಮಕ್ಕಳಿದ್ದರು. ನನ್ನ ಮನಸ್ಸಿಗೆ ಮೊದಲ ಆಘಾತ ಆದದ್ದು ಆಗಲೇ. ಅವು ನನ್ನ `ಸುಲ್ತಾನ'ನ ಮಕ್ಕಳು. ಅವರಿಗೆ ಅದಾಗಲೇ ಒಂದು ಮದುವೆಯಾಗಿತ್ತು. ಆಕೆ ಅವರನ್ನೂ ಮಕ್ಕಳನ್ನೂ ಬಿಟ್ಟು ಹೋಗಿದ್ದಳು. ನನಗೇಕೆ ಮೋಸ ಮಾಡಿದಿರಿ ಎಂದು ನಾನವರಲ್ಲಿ ಪ್ರಶ್ನಿಸಿದೆ. ಅವರು ಗದರಿಸಿದರು. ಆ ಗದರಿಕೆ ಎಷ್ಟು ಜೋರಾಗಿತ್ತೆಂದರೆ ನನಗೆ ಧ್ವನಿಯೇ ಇರಲಿಲ್ಲ.
ನಸೀಮಾದ ಹೇಳಿದ್ದು ಸರಿ. ಅವರಿಗೆ 5 ಮನೆಗಳಿದ್ದುವು. 3 ಅಂಗಡಿಗಳಿದ್ದುವು. ಆದರೆ ತುಂಬಾ ಜಿಪುಣರಾಗಿದ್ದರು. ಈ ನಡುವೆ ನಾನು ಗರ್ಭಧರಿಸಿದೆ. ಗರ್ಭಿಣಿಯಾದವಳು ತಾಯಿಯ ಆಸರೆಯನ್ನು ಬಯಸುವುದು ಸಹಜ. ಊರಿಗೆ ಕಳುಹಿಸಿಕೊಡಿ ಎಂದು ವಿನಂತಿಸಿದೆ. ಆದರೆ ಅವರು ಮನಸ್ಸು ಮಾಡಲಿಲ್ಲ. ಒಂದು ಬಗೆಯ ಸಂಕಟ, ಮನೋವ್ಯಥೆಗಳೊಂದಿಗೆ ಗರ್ಭವನ್ನು ಅನುಭವಿಸಿ 2009 ಸೆ. 4ರಂದು ಗಂಡು ಮಗುವಿಗೆ ಜನ್ಮವಿತ್ತೆ. ಮಗುವಿಗೆ ಶುಹೈಬ್ ಅಂತ ಹೆಸರಿಟ್ಟೆ. ನಾನು ಮತ್ತೆ ಮತ್ತೆ ಊರಿಗೆ ಹೋಗುವ ಬೇಡಿಕೆಯನ್ನು ಇಡುತ್ತಲೇ ಇದ್ದೆ. ಕೊನೆಗೆ ಮಗುವಿಗೆ 8 ತಿಂಗಳಾದ ಬಳಿಕ 2010 ಫೆ. 1ರಂದು ಊರಿಗೆ ಮರಳಿದೆ. 15 ದಿನ ಇದ್ದು ಪುನಃ ಮಾಲ್ದೀವ್ಸ್ ಗೆ ಹೋದೆ. ಅವರಿಗೆ ಮಕ್ಕಳ ಮೇಲೆ ಪ್ರೀತಿ ಬಹಳವೇ ಕಡಿಮೆ. ಎಷ್ಟು ಕಡಿಮೆಯೆಂದರೆ, ಶುಹೈಬ್‍ನಿಗೆ ಬಿಸ್ಕಿಟ್, ಬೇಬಿ ಪೌಡರ್ ಮುಂತಾದುವುಗಳನ್ನೂ ತಂದುಕೊಡುತ್ತಿರಲಿಲ್ಲ. ಹೀಗಿರುತ್ತಾ ಒಂದು ದಿನ ಆ ಅನಾಹುತ ಸಂಭವಿಸಿ ಬಿಟ್ಟಿತು.
    ಬೆಳಿಗ್ಗೆ ಅವರು ಅಂಗಡಿಗೆಂದು ತೆರಳಿದ ಬಳಿಕ ಮೇಜಿನ ಮೇಲಿದ್ದ ಕೆಲವು ಮಾತ್ರೆಗಳನ್ನು ನಾನು ನುಂಗಿಬಿಟ್ಟೆ. ಮಾನಸಿಕ ಒತ್ತಡ ಅದರ ಹಿಂದಿತ್ತೋ ಏನೋ ನಾನರಿಯೆ. ಹಾಸಿಗೆಯಲ್ಲಿ ಬಿದ್ದುಕೊಂಡೆ. ಕೆಲವು ಗಂಟೆಗಳ ಬಳಿಕ ಎಚ್ಚರವಾದಾಗ ಮಗ ಹತ್ತಿರದಲ್ಲೇ ನಿಶ್ಶಬ್ದವಾಗಿ ಮಲಗಿದ್ದ. ಆತನನ್ನು ತಟ್ಟಿ ಎಬ್ಬಿಸಿದೆ. ಅಲುಗಾಡಲಿಲ್ಲ. ನಾನು ಹುಚ್ಚಿಯಂತೆ ಮನೆಯ ಪಕ್ಕದ ನರ್ಸ್‍ಗಳ ಬಳಿಗೆ ಓಡಿ ವಿಷಯ ತಿಳಿಸಿ ಮರಳಿ ಬಂದೆ. ಮಗು ಸಾವಿಗೀಡಾಗಿದೆ ಎಂಬುದು ನನಗೆ ಖಚಿತವಾಯಿತು. ನಾನು ಫ್ಯಾನಿಗೆ ನೇಣು ಬಿಗಿದು ಸಾಯಲು ಯತ್ನಿಸಿದಾಗ ನರ್ಸ್‍ಗಳು ಹಗ್ಗ ಬಿಚ್ಚಿ ಉಳಿಸಿದರು. ಸುತ್ತ ಸೇರಿದವರೆಲ್ಲ ಮಗುವನ್ನು ಕೊಂದ ಪಾಪಿಯಂತೆ ನನ್ನನ್ನು ದುರುಗುಟ್ಟಿ ನೋಡಿದರು. ಪತ್ರಿಕೆಗಳಲ್ಲೂ ಹಾಗೆಯೇ ಬಂತು. ನಾನು ಕೊಂದಿರಲಿಲ್ಲ. ಮಗು ಹೇಗೆ ಸಾವಿಗೀಡಾಗಿದೆ ಎಂಬುದೂ ಗೊತ್ತಿರಲಿಲ್ಲ. ನನ್ನನ್ನು ಜೈಲಿಗೆ ಅಟ್ಟಲಾಯಿತು. ಇದಾಗಿ ಹಲವು ತಿಂಗಳುಗಳ ಬಳಿಕ ಗಂಡ ನನ್ನನ್ನು ಭೇಟಿಯಾಗಲು ಬಂದರು. ನನಗೆ ಖುಷಿಯಾಯಿತು. ನನ್ನನ್ನು ಬಿಡುಗಡೆಗೊಳಿಸಿ ಜೊತೆಗೊಯ್ಯುವರೆಂದು ಅಂದುಕೊಂಡೆ. ಆದರೆ ಅವರು ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸುವುದಕ್ಕಾಗಿ ಬಂದಿದ್ದರು. ನಾನು ಸಹಿ ಹಾಕಲಿಲ್ಲ. ಹೀಗೆ ಮೂರು ಬಾರಿ ಬಂದರು. ನಾನು ಒಪ್ಪಿಕೊಳ್ಳದೇ ಹೋದಾಗ ಒಂದು ದಿನ ನ್ಯಾಯಾಧೀಶರೇ ನನ್ನನ್ನು ಕರೆದು ಕಾಗದಕ್ಕೆ ಸಹಿ ಹಾಕಿಸಿದರು. ಅದು ವಿವಾಹ ವಿಚ್ಛೇದನ ಪತ್ರ. ಮರು ಮದುವೆಗೆ ಮಾಲ್ದೀವ್ಸ್ ನಲ್ಲಿ ಪತ್ನಿಯ ಸಹಿಯುಳ್ಳ ವಿಚ್ಛೇದನ ಪತ್ರ ಅಗತ್ಯವಂತೆ.
    ವಿಚಾರಣೆಯಿಲ್ಲದೇ ಜೈಲಲ್ಲಿದ್ದ ನನಗೆ ನಿಧಾನಕ್ಕೆ ಬಿಡುಗಡೆಯ ಬಾಗಿಲುಗಳು ತೆರೆಯತೊಡಗಿದುವು. ಜಯಚಂದ್ರನ್ ಎಂಬವರು ಜೈಲಿನಿಂದ ಬಿಡುಗಡೆಗೊಂಡದ್ದು ನನ್ನ ಪಾಲಿಗೆ ವರವಾಯಿತು. ಅವರು ಪತ್ರಕರ್ತರು, ಮಾನವಹಕ್ಕು ಹೋರಾಟಗಾರರಲ್ಲಿ ನನ್ನ ಬಗ್ಗೆ ಹೇಳಿ ಸಭೆ ಏರ್ಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮಾಡಿದರು. ಹೀಗೆ ಮೂರುವರೆ ವರ್ಷಗಳ ಬಳಿಕ ನನ್ನ ವಿಚಾರಣೆ ನಡೆಯಿತು. ವಿಚಾರಣೆ ನಡೆದದ್ದು ಮಾಲ್ದೀವ್ಸ್ ನ ದಿವೇಹಿ ಭಾಷೆಯಲ್ಲಿ. ದಿವೇಹಿ ಭಾಷೆಯಲ್ಲಿದ್ದ ದಾಖಲೆಗಳಿಗೆ ನನ್ನಿಂದ ಸಹಿ ಪಡೆದುಕೊಂಡರು. ನನಗೆ ಏನಿಲ್ಲವೆಂದರೂ 25 ವರ್ಷಗಳ ವರೆಗೆ ಶಿಕ್ಷೆಯಾದೀತೆಂದು ಎಲ್ಲರೂ ಹೇಳಿಕೊಂಡರು. ಇಂಥ ಸಂದರ್ಭದಲ್ಲೇ ಫಾರಿಶ್ ಅಬ್ದುಲ್ಲ ಎಂಬ ವಕೀಲರು ನನ್ನ ನೆರವಿಗೆ ಬಂದದ್ದು. ಅವರು ಇಡೀ ಪ್ರಕರಣ ಎಷ್ಟು ದುರ್ಬಲವಾಗಿದೆ ಎಂಬುದನ್ನು ನ್ಯಾಯಾಲಯದ ಮುಂದಿಟ್ಟರು. ಮಗುವಿನ ಪೋಸ್ಟ್ ಮಾರ್ಟಂ ನಡೆಸಿಲ್ಲ, ಮಗುವಿಗೇನಾಗಿದೆ ಎಂಬ ಬಗ್ಗೆ ವೈದ್ಯಕೀಯ ವರದಿಯಿಲ್ಲ, ಪ್ರಕರಣಕ್ಕೆ ಸಾಕ್ಷಿಗಳಾದ ನರ್ಸ್‍ಗಳು ಮಾಲ್ದೀವ್ಸ್ ಬಿಟ್ಟು ಹೋಗಿದ್ದಾರೆ, ಪತಿಯ ಹೇಳಿಕೆಯನ್ನೇ ದಾಖಲಿಸಿಲ್ಲ.. ಹೀಗೆ ಅವರು ಎಲ್ಲವನ್ನೂ ನ್ಯಾಯಾಲಯದಲ್ಲಿ ತೆರೆದಿಟ್ಟರು. ಕೊನೆಗೆ 5 ವರ್ಷಗಳ ಬಂಧನದ ಬಳಿಕ 2015 ಮಾರ್ಚ್ 16ರಂದು ನಾನು ಜೈಲಿನಿಂದ ಹೊರಬಂದೆ. ಊರಿಗೆ ಮರಳಿದ ಬಳಿಕ ಜಾಬಿರ್ ಮತ್ತೆ ಕರೆ ಮಾಡಿದರು. ಕ್ಷಮೆ ಯಾಚಿಸಿದರು. ತಾನು ಮರು ಮದುವೆಯಾಗಿಲ್ಲ ಅಂದರು. ನಿನ್ನನ್ನು ಕಣ್ಣಾರೆ ಕಾಣಬೇಕು ಅಂದರು. ನಾನು ಫೋನ್ ಇಟ್ಟೆ. ಹಾಗಾಗದಿರಲಿ ಎಂದು ಪ್ರಾರ್ಥಿಸಿದೆ...”
     ಹೀಗೆ ಕೇರಳದ ತಿರುವನಂತಪುರ ಜಿಲ್ಲೆಯ ಕಡಪ್ಪುರದ ರುಬೀನಾಳು ಪತ್ರಕರ್ತ ಶಮೀರ್‍ರ ಮುಂದೆ ಹೇಳುತ್ತಾ ಹೋಗುವಾಗ ವರದಕ್ಷಿಣೆಯ ಕರಾಳ ಮುಖವೊಂದು ನಮ್ಮೆದುರು ತೆರೆಯುತ್ತಾ ಹೋಗುತ್ತದೆ. ಒಂದು ಕಡೆ ವರದಕ್ಷಿಣೆಯನ್ನು ನಿರೀಕ್ಷಿಸುತ್ತಾ ತಿರುಗಾಡುವ ಯುವಕರು ಮತ್ತು ಇನ್ನೊಂದು ಕಡೆ ಈ ಸಂದರ್ಭವನ್ನೇ ದುರುಪಯೋಗಿಸಲು ಕಾದು ಕೂತಿರುವ ಜಾಬಿರ್ ಗಳು... ಇವರ ಮಧ್ಯೆ ರುಬೀನರು ನಲುಗುತ್ತಲೇ ಇದ್ದಾರೆ. ಇಷ್ಟಿದ್ದೂ, ನಮ್ಮ ಸಮುದಾಯ ಈ ವಾಸ್ತವಕ್ಕೆ ಮುಖಾಮುಖಿಗೊಳ್ಳುವುದು ಯಾವಾಗ? ನಿರ್ದಯಿ ಫತ್ವಾಗಳು ಜಾರಿಯಾಗುವುದು ಎಂದು? ವರ್ಷಗಳ ಹಿಂದೆ ನನ್ನೂರಿನ ಹೆಣ್ಣು ಮಗಳು ಗುಜರಾತ್‍ಗೆ ಮದುವೆಯಾಗಿ ಹೋದ ಘಟನೆ ಇನ್ನೂ ಹಸಿರಾಗಿರುವುದರಿಂದಲೋ ಏನೋ ಈ ರುಬೀನಾ ನನ್ನ ಮನಸ್ಸನ್ನಿಡೀ ಕಾಡಿದಳು. ಆದ್ದರಿಂದಲೇ ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.


No comments:

Post a Comment