Friday, May 1, 2015

ಶ್ರಮ ಸಂಸ್ಕೃತಿ ಮತ್ತು ಯಂತ್ರ ಸಂಸ್ಕೃತಿಯನ್ನು ಮುಖಾಮುಖಿಗೊಳಿಸಿದ ಪ್ರಸನ್ನ

     ಯಂತ್ರಗಳ ಈ ಯುಗದಲ್ಲಿ ಶ್ರಮ ಸಂಸ್ಕ್ರಿತಿಗೆ ಏನು ಮಹತ್ವವಿದೆ? ಮಡಿಕೆ ತಯಾರಿ, ಕೈಮಗ್ಗ, ಚಾಪೆನೇಯ್ಗೆ, ಸಾಂಪ್ರದಾಯಿಕ ಕೃಷಿ.. ಮುಂತಾದ ಶ್ರಮ ಸಹಿತ ಜೀವನ ಕ್ರಮಕ್ಕೆ ಇವತ್ತಿನ ಸಮಾಜ ಮರಳಬೇಕೆಂದು ಬಯಸುವುದು ಎಷ್ಟು ಪ್ರಾಯೋಗಿಕ? ತುಂಬಿ ತುಳುಕುತ್ತಿರುವ ಜನಸಂಖ್ಯೆಗೆ ಇಂಥ ಗುಡಿ ಕೈಗಾರಿಕೆಗಳು ಉದ್ಯೋಗ ನೀಡಬಲ್ಲುದೇ? ಅನ್ನ ನೀಡೀತೇ? ಯಂತ್ರಗಳು ಶ್ರಮ ಸಹಿತ ಸರಳ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರಿರಬಹುದು. ಇವತ್ತು ಯಂತ್ರಗಳು ಮಾಡುವ ಕೆಲಸವನ್ನು ಐದಾರು ದಶಕಗಳ ಹಿಂದೆ ಮನುಷ್ಯನೇ ಮಾಡುತ್ತಿದ್ದ. ಕೃಷಿಯಿಂದ ಹಿಡಿದು ಹೈನುಗಾರಿಕೆಯ ವರೆಗೆ, ಮರ ಕಡಿಯುವಲ್ಲಿಂದ ತೊಡಗಿ ಅಡಿಕೆ ಸುಲಿಯುವವರೆಗೆ ಎಲ್ಲವೂ ಯಂತ್ರ ಮುಕ್ತವಾಗಿದ್ದುವು. ಆದರೆ ಇವತ್ತು ಗದ್ದೆಯನ್ನು ಉತ್ತುವುದು, ಬಿತ್ತುವುದು, ಕೊಯ್ಯುವುದು, ಕಾಳು-ಜೊಳ್ಳನ್ನು ಬೇರ್ಪಡಿಸುವುದು, ಪ್ಯಾಕಿಂಗ್, ಮಾರ್ಕೆಟಿಂಗ್.. ಎಲ್ಲವನ್ನೂ ಯಂತ್ರವೇ ಮಾಡುತ್ತಿದೆ. ಹಸುವಿನ ಹಾಲು ಕರೆಯುವುದಕ್ಕೂ ಮೆಷೀನು ಬಂದಿದೆ. ಮರಗಳನ್ನು ಕಡಿಯುವುದಕ್ಕೆ ಯಂತ್ರ, ಲೋಡ್-ಅನ್‍ಲೋಡ್‍ಗೆ ಯಂತ್ರ; ಅಡಿಕೆಯನ್ನು ಕೀಳುವಲ್ಲಿಂದ ಸುಲಿಯುವವರೆಗೂ ಎಲ್ಲಕ್ಕೂ ಯಂತ್ರವೇ. ಹಾಗಂತ, ಹೀಗಲ್ಲದೇ ಬರೇ ಮನುಷ್ಯರನ್ನೇ ಆಶ್ರಯಿಸಿಕೊಳ್ಳುವ ವಿಧಾನ ಸಮಾಜವನ್ನು ಇವತ್ತು ಎತ್ತ ಕೊಂಡೊಯ್ಯಬಲ್ಲವು? ಏರುತ್ತಿರುವ ಜನಸಂಖ್ಯೆಗೆ ಸಾವಯವ ಕೃಷಿ ಪದ್ಧತಿ ಅನ್ನ ನೀಡುವಷ್ಟು ಸಮರ್ಥವೇ? ಯಂತ್ರಗಳ ಅವಲಂಬನೆಯಿಲ್ಲದೆ ಬದುಕುವುದು ಇಂದಿನ ಆಧುನಿಕ ಜಗತ್ತಿನಲ್ಲಿ ಎಷ್ಟು ವಾಸ್ತವ..
    ಇಂಥದ್ದೊಂದು ಚರ್ಚೆಗೆ ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಮತ್ತೊಮ್ಮೆ ಚಾಲನೆಯನ್ನು ಕೊಟ್ಟಿದ್ದಾರೆ. ‘ಶ್ರಮಸಹಿತ ಸರಳ ಬದುಕನ್ನು ಬದುಕೋಣ ಬನ್ನಿ' ಎಂದು ಆಗ್ರಹಿಸಿ ಮಾರ್ಚ್ 20ರಿಂದ ಎಪ್ರಿಲ್ 20ರ ವರೆಗೆ ಅವರು ಬದನವಾಳುವಿ ನಲ್ಲಿ ಸತ್ಯಾಗ್ರಹ ನಡೆಸಿದರು. ಯಂತ್ರಗಳಿಂದ ಕಳಚಿಕೊಳ್ಳುವುದು ಈ ಸತ್ಯಾಗ್ರಹದ ಪರಮ ಧ್ಯೇಯ. ಈ ಸತ್ಯಾಗ್ರಹಕ್ಕೆ ಬೆಂಬಲವನ್ನು ಸೂಚಿಸಿ ಮೇಧಾ ಪಾಟ್ಕರ್ ಬದನವಾಳುವಿಗೆ ಆಗಮಿಸಿದರು. ರಹ್ಮತ್ ತರೀಕೆರೆ, ಜಿ.ಕೆ. ಗೋವಿಂದರಾವ್, ಎ.ಎನ್. ಯಲ್ಲಪ್ಪ ರೆಡ್ಡಿ, ದೇವನೂರು ಮಹಾದೇವ.. ಮುಂತಾದವರು ಪ್ರಸನ್ನರೊಂದಿಗೆ ಸೇರಿಕೊಂಡಿರು. ‘ಶ್ರಮಸಹಿತ ಸರಳ ಬದುಕನ್ನು ಶ್ರದ್ಧೆಯಿಂದ ಬಾಳುತ್ತೇವೆ. ಅದ್ದೂರಿ ಸಭೆ-ಸಮಾರಂಭಗಳನ್ನು ಏರ್ಪಡಿಸುವುದಿಲ್ಲ. ಸರಳ ಮದುವೆ ಮಾಡುತ್ತೇವೆ..' ಎಂಬಿತ್ಯಾದಿಯಾಗಿ ಪ್ರತಿಜ್ಞೆಯನ್ನೂ ಅಲ್ಲಿ ಕೈಗೊಳ್ಳಲಾಯಿತು. ಒಂದು ರೀತಿಯಲ್ಲಿ, ಆಧುನಿಕ ಜಗತ್ತಿನ ಯಂತ್ರ ಸಹಿತ ಬದುಕಿಗೆ ಪರ್ಯಾಯವೆಂಬಂತೆ ಮೈಸೂರು ಸವಿೂಪದ ಬದನವಾಳು ಸತ್ಯಾಗ್ರಹ ತನ್ನನ್ನು ಬಿಂಬಿಸಿ ಕೊಂಡಿತು. ಅಷ್ಟಕ್ಕೂ, ಕಂಪ್ಯೂಟರ್, ಮೊಬೈಲ್ ಜಮಾನದ ಇಂದಿನ ಪೀಳಿಗೆಯ ಪ್ರಶ್ನೆಗಳಿಗೆ ಬದನವಾಳು ತೃಪ್ತಿಕರ ಉತ್ತರ ನೀಡಬಲ್ಲುದೇ ಎಂಬ ಪ್ರಶ್ನೆ ಸಹಜವಾದುದು. ಕಂಪ್ಯೂಟರನ್ನು ಕೈಬಿಟ್ಟು ಹಾರೆ-ಗುದ್ದಲಿಯನ್ನು ಎತ್ತಿಕೊಳ್ಳಿ ಅನ್ನುವುದು ಅಥವಾ ಕೈಗಾರಿಕೆಗಳನ್ನು ಸ್ಥಗಿತಗೊಳಿಸಿ ಶ್ರಮಸಹಿತ ಜಗತ್ತಿಗೆ ಮರಳಿ ಅನ್ನುವುದು ಆಶ್ಚರ್ಯಕರವಷ್ಟೇ ಅಲ್ಲ ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ ಕಾಣಬಹುದು. ಆದರೆ ಈ ಯಂತ್ರಗಳು ಎಲ್ಲಿಯ ವರೆಗೆ? ಪ್ರಾಕೃತಿಕ ಸಂಪನ್ಮೂಲಕ್ಕೂ ಒಂದು ಮಿತಿಯಿದೆಯಲ್ಲವೇ? ಆ ಬಳಿಕ ಏನು? 2050ಕ್ಕಾಗುವಾಗ ತೈಲ ಸಂಪನ್ಮೂಲ ಬಿಡಿ, ನದಿ ಮೂಲಗಳೂ ಬತ್ತಿ ಹೋಗಬಹುದೆಂಬ ಭೀತಿಯನ್ನು ಮೇಧಾ ಪಾಟ್ಕರ್‍ರಂತಹವರೇ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಸಂದರ್ಭಗಳಲ್ಲಿ ಯಂತ್ರಗಳೇನು ಮಾಡಬಲ್ಲವು? ಅಂದಹಾಗೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಯಂತ್ರಗಳ ಬಳಕೆ ಎಂದರೆ ಲಾಭ ಹೆಚ್ಚಿಸುವುದು ಹಾಗೂ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುವುದು ಎಂದರ್ಥ. ಈ ವ್ಯವಸ್ಥೆ ಎಷ್ಟು ಸ್ವಾರ್ಥ ಮತ್ತು ಮೋಹದ ಚೌಕಟ್ಟಿನೊಳಗೆ ಹೆಣೆಯಲ್ಪಟ್ಟಿದೆಯೆಂದರೆ, ಭೌತಿಕ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಹೆಚ್ಚೆಚ್ಚು ದುಡಿಯಬೇಕೆಂದು ಅದು ಹೇಳಿಕೊಡುತ್ತದೆ. ಇಲ್ಲಿ ವಿಶ್ರಾಂತಿಗೆ ಸಮಯ ಬಹಳ ಕಡಿಮೆ. ಆದ್ದರಿಂದಲೇ ಬೌದ್ಧಿಕ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ವಿೂಸಲಿಡಲು ಇಲ್ಲಿ ಸಮಯವೇ ಇರುವುದಿಲ್ಲ. ದುಡಿಮೆ, ದುಡಿಮೆ ಮತ್ತೂ ದುಡಿಮೆ. ವಿಜ್ಞಾನದ ಸಂಶೋಧನೆಗಳು ಲಾಭಕೋರರ ಕೈಗೆ ಸಿಕ್ಕರೆ ಏನಾಗಬಹುದೋ ಅದರ ಪ್ರತ್ಯಕ್ಷ ಉದಾಹರಣೆಗಳು ಪ್ರತಿ ದಿನ ಸಿಗುತ್ತಲೇ ಇವೆ. ಈ ಲಾಭಕೋರ ಜಗತ್ತಿನ ಮುಷ್ಠಿಯಿಂದ ಹೊರಬಂದು ಸಹಜವಾಗಿ ಮತ್ತು ಸರಳವಾಗಿ ಬದುಕುವುದು ಸಾಧ್ಯವಿಲ್ಲವೇ ಎಂಬ ಪ್ರಸನ್ನ ಅವರ ಪ್ರಶ್ನೆ ಈ ನೆಲೆಯಲ್ಲಿ ತೀರಾ ಅಸಹಜವಾದುದಲ್ಲ ಮತ್ತು ಒಂದೇ ಏಟಿಗೆ ತಿರಸ್ಕಾರಕ್ಕೆ ಅರ್ಹವಾದವೂ ಅಲ್ಲ.
    ಇವತ್ತಿನ ಜಗತ್ತು ಎರಡು ಭಾಗಗಳಾಗಿ ವಿಭಜಿತಗೊಂಡಿದೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದದ, ಸವಲತ್ತು ಇರುವ ಮತ್ತು ಇರದ ಅಥವಾ ಶ್ರೀಮಂತ ಮತ್ತು ಬಡ ಎಂಬ ಎರಡು ಜಗತ್ತುಗಳು. ಈ ಜಗತ್ತಿನಲ್ಲಿ ಒಂದಕ್ಕೊಂದು ಅವಲಂಬನೆ ಎಷ್ಟು ಆಳವಾಗಿದೆ ಎಂದರೆ, ಅಮೇರಿಕಕ್ಕೆ ಶೀತವಾದರೆ ಚೀನಾ ಸೀನುವಷ್ಟು. ಎಲ್ಲವೂ ಯಂತ್ರಾಧಾರಿತ. ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ವಿಪರೀತ ಅವಲಂಬನೆಯು ಎಲ್ಲ ಬಗೆಯ ಪೈಪೋಟಿ, ಹಿಂಸೆ, ಆತ್ಮಹತ್ಯೆಗಳ ಭೀಕರ ಸಂಸ್ಕ್ರಿತಿಯನ್ನೇ ಹುಟ್ಟುಹಾಕಿದೆ. ಯಂತ್ರವೆಂಬುದು ಬೇಡಿಕೆಗೆ ತಕ್ಕಂತೆ ಆಹಾರವನ್ನು ಪೂರೈಸುವುದಲ್ಲ. ಅದು ಭ್ರಮೆಯ ಜಗತ್ತನ್ನು ರೈತನ ಮುಂದೆ ತೆರೆದಿಡುತ್ತದೆ. ಹೆಚ್ಚು ಬೆಳೆ, ಹೆಚ್ಚು ದುಡ್ಡು, ಐಶಾರಾಮಿ ಜೀವನ.. ಇಂಥದ್ದೊಂದು ಕಲ್ಪನೆ ಯಂತ್ರ ಸಂಸ್ಕ್ರಿತಿಯದ್ದೇ ಹೊರತು ಶ್ರಮ ಸಂಸ್ಕ್ರಿತಿಯದ್ದಲ್ಲ. ಶ್ರಮ ಸಂಸ್ಕ್ರಿತಿಯಲ್ಲಿ ಮೋಹ ಇಲ್ಲ. ದುಡ್ಡು ಕೂಡಿಡುವ ಧಾವಂತ ಇಲ್ಲ. ಬೆಳಗ್ಗಿನಿಂದ ಸಂಜೆವರೆಗೆ ದುಡಿದು ರಾತ್ರಿಯನ್ನು ನೆಮ್ಮದಿಯಾಗಿ ಕಳೆಯುವ ಮತ್ತು ವಿಪರೀತ ಆಸೆಗಳಿಲ್ಲದೆ ಬದುಕುವ ವಿಧಾನ. ಯಂತ್ರ ಸಂಸ್ಕ್ರಿತಿ ಇದಕ್ಕೆ ವಿರುದ್ಧವಾದುದು. ಅದು ಹಣ ಕೇಂದ್ರಿತ. ಅದಕ್ಕಾಗಿ ಎಷ್ಟು ದುಡಿದರೂ ಉತ್ತಮವೇ. ಹಾಗೆ, ಆಧ್ಯಾತ್ಮಿಕಕ್ಕೂ ಬೌದ್ಧಿಕ ಬೆಳವಣಿಗೆಗೂ ವಿೂಸಲಿಡಲು ಸಮಯವೇ ಇಲ್ಲದಷ್ಟು ಮನುಷ್ಯನನ್ನು ಯಂತ್ರ ಮಾನವನಾಗಿಸುವುದು ಅದರ ಶೈಲಿ. ಎಲ್ಲಿ ಈ ಬಗೆಯ ಧಾವಂತ ಇರುತ್ತದೋ ಅಲ್ಲಿ ಹಿಂಸೆ ಮತ್ತು ಸಾವು ಅನಿವಾರ್ಯವಾಗಿರುತ್ತದೆ. ಯಂತ್ರಾಧಾರಿತ ಜೀವನ ಕ್ರಮದ ಮುಖ್ಯ ಕೊಡುಗೆ ಏನೆಂದರೆ ಪೈಪೋಟಿ. ಶ್ರಮ ಸಹಿತ ಬದುಕಿನಲ್ಲಿ ಈ ಪೈಪೋಟಿ ಕಡಿಮೆ. ಅಂದಹಾಗೆ, ಕೈಗಾರಿಕಾ ಕ್ರಾಂತಿಯಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಿದುವು, ಜನರ ಜೀವನ ಮಟ್ಟದಲ್ಲಿ ಮತ್ತು ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆ ಉಂಟಾಯಿತು ಎಂದೆಲ್ಲ ಹೇಳುವಾಗಲೂ ಅದರ ಅಡ್ಡ ಪರಿಣಾಮವಾದ ಹಿಂಸೆ, ಕೊಲೆ, ಕ್ರೌರ್ಯಗಳನ್ನು ನಾವು ಅಡಗಿಸುವುದೇ ಹೆಚ್ಚು. ಐಸಿಸ್‍ನಂಥ ಗುಂಪುಗಳು, ಅಮೇರಿಕದಂಥ ಬಲಾಢ್ಯ ರಾಷ್ಟ್ರಗಳು ಮತ್ತು ಅವುಗಳ ಕ್ರೌರ್ಯಗಳು ಅಸ್ತಿತ್ವ ದಲ್ಲಿರುವುದಕ್ಕೆ ಯಂತ್ರ ಸಂಸ್ಕ್ರಿತಿಗೆ ದೊಡ್ಡ ಪಾತ್ರವಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದು ಅಮೇರಿಕದ ಅತಿಕ್ರಮಣದ ಹಿಂದಿನ ಉದ್ದೇಶವಾದರೆ, ಗೋ ಸಾಗಾಟವನ್ನು ತಡೆಯುವ ನೆಪದಲ್ಲಿ ದುಡ್ಡು ಮತ್ತಿತರ ವಸ್ತುಗಳನ್ನು ಕಸಿಯುವುದು ಸ್ಥಳೀಯ ಮಟ್ಟದ ಕ್ರೌರ್ಯಗಳ ಹಿಂದಿನ ಉದ್ದೇಶ. ದುಡ್ಡಿನ ರುಚಿ ಹತ್ತಿಬಿಟ್ಟರೆ ಅದು ಹಿಂಸೆಗೂ ಹೇಸುವುದಿಲ್ಲ. ಕೊಲೆಗೂ ಹಿಂಜರಿಯುವುದಿಲ್ಲ. ಆಧುನಿಕ ಜಗತ್ತಿನ ಕಟು ವಾಸ್ತವ ಇದು. ಶ್ರಮಸಹಿತ ಸರಳ ಬದುಕು ದುಡ್ಡು ಕೇಂದ್ರಿತ ಅಲ್ಲದೇ ಇರುವುದರಿಂದ ಹಿಂಸೆ ಕಡಿಮೆ. ಆದ್ದರಿಂದ ವೀಕೆಂಡ್ ಪಾರ್ಟಿಗಳು ಮತ್ತು ಮೋಜುಗಳೂ ಕಡಿಮೆ. ಯಂತ್ರಗಳು ಒಂದು ಕಡೆ ಉತ್ಪಾದನೆಯನ್ನು ಹೆಚ್ಚಿಸಿರುವಂತೆಯೇ ಇನ್ನೊಂದು ಕಡೆ ಹಸಿವೆಯಿಂದಿರುವವರಿಗೆ ಆ ಉತ್ಪಾದನೆಯನ್ನು ನೀಡದಿರುವ ಕ್ರೌರ್ಯವನ್ನೂ ಪ್ರದರ್ಶಿಸುತ್ತದೆ. ಮಿಗತೆಯಾದ ತನ್ನ ಉತ್ಪನ್ನವನ್ನು ಹಸಿವೆಯ ಮಂದಿಗೆ ನೀಡುವುದರಿಂದ ಲಾಭವೋ ಅಥವಾ ಸಮುದ್ರಕ್ಕೆ ಎಸೆಯುವುದರಿಂದ ಲಾಭವೋ ಎಂಬ ನಿಷ್ಕರ್ಷೆ ಮಾಡುವಷ್ಟು ಕೆಲವೊಮ್ಮೆ ಅದು ಹೃದಯಹೀನವಾಗುತ್ತದೆ.
    ನಿಜವಾಗಿ, ಸ್ಥಳೀಯತೆ ಎಂಬುದು ಒಂದು ಅನನ್ಯ ಐಡೆಂಟಿಟಿ. ಪ್ರತಿಯೊಂದು ಗ್ರಾಮ ಅಥವಾ ಪ್ರದೇಶಕ್ಕೂ ಅದರದ್ದೇ ಆದ ಸ್ಥಳೀಯತೆಯಿದೆ. ಅಕ್ಕಿ, ಗೋಧಿ, ಬಟಾಟೆ, ಟೊಮೆಟೊ, ಮೆಣಸು, ನೀರುಳ್ಳಿ, ಆ್ಯಪಲ್, ಬಾಳೆಹಣ್ಣು.. ಹೀಗೆ ಬೇರೆ ಬೇರೆ ವಸ್ತುಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಯುತ್ತವೆ. ಭತ್ತ ಬೆಳೆಯುವ ಮಣ್ಣಿನಲ್ಲಿ ಗೋಧಿಗೆ ಇಳುವರಿ ಸಿಗಲಾರದು. ಟೊಮೆಟೊ ಬೆಳೆಯುವ ಪ್ರದೇಶದಲ್ಲಿ ಮೆಣಸು ಇಳುವರಿಯನ್ನು ಕೊಡಲಾರದು. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಳೀಯ ಗುಣ ಇದೆ. ಶ್ರಮ ಸಂಸ್ಕ್ರಿತಿಯು ಈ ಸ್ಥಳೀಯತೆಯನ್ನು ಆಧರಿಸಿ ಬದುಕುತ್ತವೆ. ಶ್ರಮ ಸಂಸ್ಕ್ರಿತಿಯಲ್ಲಿ ವಲಸೆ ಕಡಿಮೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೆಚ್ಚಿನ ಇಳುವರಿಯನ್ನು ಮತ್ತು ಹೆಚ್ಚಿನ ಸಂಪಾದನೆಯನ್ನು ನಿರೀಕ್ಷಿಸಿ ವಲಸೆ ಹೋಗುವುದಿಲ್ಲ. ಆದರೆ ಆಧುನಿಕ ಕೈಗಾರಿಕಾ ಜಗತ್ತು ವಲಸೆಯನ್ನು ನೆಚ್ಚಿಕೊಂಡಂತಿರುತ್ತದೆ. ಅದು ವಿಕೇಂದ್ರಿತವಲ್ಲ, ಕೇಂದ್ರೀಕೃತ. ಆದ್ದರಿಂದಲೇ ಇವತ್ತು ಗ್ರಾಮಗಳಿಂದ ನಗರಗಳಿಗೆ ಜನರು ವಿಪರೀತ ಪ್ರಮಾಣದಲ್ಲಿ ವಲಸೆ ಹೋಗುತ್ತಿದ್ದಾರೆ. ಈ ಕಾರಣದಿಂದಾಗಿ ಗ್ರಾಮಗಳು ಖಾಲಿಯಾಗುತ್ತಿವೆ. ನಗರಗಳು ಗಿಜಿಗುಡುತ್ತಿವೆ. ಮಾಲಿನ್ಯಗಳು ಹೆಚ್ಚಾಗುತ್ತಿವೆ.
ಅಷ್ಟಕ್ಕೂ ಶ್ರಮ ಸಂಸ್ಕ್ರಿತಿಯಿಂದ ಯಂತ್ರ ಸಂಸ್ಕ್ರಿತಿಗೆ ಜಗತ್ತು ಸಂಪೂರ್ಣ ವಾಲಿರುವ ಈ ದಿನಗಳಲ್ಲಿ ಶ್ರಮದ ಬದುಕಿನ ಬಗ್ಗೆ ಮಾತಾಡುವುದು ಹಿಮ್ಮುಖ ನಡೆ ಅನಿಸುತ್ತದೋ ಇಲ್ಲವೋ ಆದರೆ ಸದ್ಯದ ದಿನಗಳಲ್ಲಿ ಅಂಥದ್ದೊಂದು ಚಿಂತನೆ ಅಸಾಧುವೇನೂ ಅಲ್ಲ. ಶ್ರಮ ಸಂಸ್ಕ್ರಿತಿ ಮತ್ತು ಯಂತ್ರ ಸಂಸ್ಕ್ರಿತಿ ಇಂದಿನ ದಿನಗಳಲ್ಲಿ ಮುಖಾಮುಖಿಗೊಳ್ಳಲೇಬೇಕಾದ ತುರ್ತು ಅಗತ್ಯವಂತೂ ಇದೆ. ಆಯ್ಕೆ ಯಾವುದೇ ಇದ್ದರೂ ಮುಖಾಮುಖಿಯಂತೂ ಸ್ವಾಗತಾರ್ಹವೇ. ಮೈಸೂರಿನ ಬದನವಾಳು ಅಂಥದ್ದೊಂದು ಮುಖಾಮುಖಿಗೆ ವೇದಿಕೆಯನ್ನು ಒದಗಿಸಿದೆ. ಇದು ಹೇಗೆಂದರೆ, ಕಂಪ್ಯೂಟರ್ ಮತ್ತು ಮಡಿಕೆಯನ್ನು ಮುಖಾಮುಖಿಗೊಳಿಸಿದಂತೆ. ಈ ಮುಖಾಮುಖಿಯಲ್ಲಿ ಗೆಲ್ಲುವುದು ಕಂಪ್ಯೂಟರೇ ಆಗಿರಬಹುದು. ಯಂತ್ರಗಳೇ ಇಲ್ಲದ ಜಗತ್ತನ್ನು ಊಹಿಸುವುದು ಸಾಧ್ಯವೇ ಇಲ್ಲ ಎಂದೂ ಹೇಳಬಹುದು. ಆದರೂ ಯಂತ್ರಗಳನ್ನು ವಿಪರೀತವಾಗಿ ಹಚ್ಚಿಕೊಂಡಿರುವ ಇಂದಿನ ಜಗತ್ತಿನಲ್ಲಿ ಮಡಿಕೆ ಮತ್ತು ಕಂಪ್ಯೂಟರ್ ಮುಖಾಮುಖಿಗೊಳ್ಳುವುದನ್ನು ಸ್ವಾಗತಿಸಲೇಬೇಕು. ಅದರ ಸಾಧಕ-ಬಾಧಕಗಳು ಚರ್ಚಿತಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರಸನ್ನ ಅವರ ಸತ್ಯಾಗ್ರಹ ಅಭಿನಂದನಾರ್ಹ.

No comments:

Post a Comment