Tuesday, November 26, 2013

ಆರೋಪಿಗಳನ್ನು ಸನ್ಮಾನಿಸುವ ಮೊದಲು 'ಲೀಲಾ'ರನ್ನು ನೆನಪಿಸಿಕೊಳ್ಳಿ ಮೋದಿಯವರೇ

    "..ನರೇಂದ್ರ ಮೋದಿಯವರ ಮೇಲೆ ಭರವಸೆ ಇಟ್ಟಿರುವ ಅನೇಕರಲ್ಲಿ ನಾನೂ ಒಬ್ಬ. ಅವರ ನೇತೃತ್ವದಲ್ಲಿ ಈ ದೇಶ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಕಾಣಲಿ ಎಂದು ಪ್ರಾಮಾಣಿಕವಾಗಿ ಆಶಿಸಿದವನು ನಾನು. ಆದರೆ ಅವರ ‘ನಮೋ ಬೆಂಬಲಿಗರು’ ತಾಲಿ ಬಾನಿಗಳಂತೆ ವರ್ತಿಸುತ್ತಿದ್ದಾರೆ. ಕ್ರಿಮಿನಲ್‍ಗಳನ್ನು ಬೆಂಬಲಿಸುತ್ತಿದ್ದಾರೆ. ಇದು ನನ್ನನ್ನು ತೀವ್ರ ಆಘಾತಕ್ಕೆ ಒಳಪಡಿಸಿದೆ. ಮಾತ್ರವಲ್ಲ, ನನ್ನ ನಿಲುವನ್ನು ಮತ್ತೊಮ್ಮೆ ಪರಾಮರ್ಶಿಸುವಂತೆ ಮಾಡಿದೆ. ಅನ್ಯಾಯವನ್ನು ಬೆಂಬಲಿಸುವ ಮತ್ತು ವೈಭವೀಕರಿಸುವ ಧೋರಣೆಯನ್ನು ನಾನೆಂದೂ ಸಹಿಸಲಾರೆ..
ಲೀಲಾ
        ರೋಮೋ ಪಿಂಟೋ  ಮಂಗಳೂರು
 ಹೋಮ್‍ಸ್ಟೇ ಮೇಲಿನ ದಾಳಿಯ ಆರೋಪದಲ್ಲಿ ಬಂಧಿತರಾದವರನ್ನು ಸನ್ಮಾನಿಸುವುದೇ? ಇದು ಹೇಗೆಂದರೆ, ಕಸಬ್ ಮತ್ತು ಉಸಾಮಾಗೆ ನೋಬೆಲ್ ಕೊಟ್ಟಂತೆ. ಆರೋಪಿಗಳನ್ನು ಸನ್ಮಾನಿಸುವ ಇಂಥ ನಾಯಕರು ನಮ್ಮಲ್ಲಿರುವಾಗ, ಪಾಕಿಸ್ತಾನದ ಭಯೋತ್ಪಾದಕರಿಗೆ ಕೆಲಸವಾದರೂ ಏನಿದೆ? ಅವರು ತಮ್ಮ ತಮ್ಮ ಹೊಣೆಗಾರಿಕೆಗಳಿಗೆ ರಾಜೀನಾಮೆ ನೀಡಬಹುದು. ಯಾಕೆಂದರೆ, ಇವರಿರುವಾಗ ಭಾರತವನ್ನು ಧ್ವಂಸ ಮಾಡುವುದಕ್ಕೆ ಅವರ ಅಗತ್ಯವೇ ಇಲ್ಲ. ಭಾರತದ ರಾಜಕೀಯ ನಾಯಕರು; ಭ್ರಷ್ಟಾ ಚಾರ, ಹತ್ಯಾಕಾಂಡ ಮತ್ತು ಇಂಥ ಕೃತ್ಯಗಳ ಮೂಲಕ ದೇಶವನ್ನು ಈಗಾಗಲೇ ಧ್ವಂಸ ಮಾಡುತ್ತಿದ್ದಾರೆ..
        ದೀಪಕ್ ಕುಮಾರ್       
 ನಮೋ ಭಾರತ್- ಸಮಾಜದ ಪಾಲಿಗೆ ಎಷ್ಟೊಂದು ಅಪಾಯಕಾರಿ ಎಂಬುದು ಈ ಸನ್ಮಾನ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಹೀಗಿರುವಾಗ, ಇವರ ನಾಯಕ ಮೋದಿ ಪ್ರಧಾನಿಯಾದರೆ ಏನಾದೀತು? ಅವರು ಯಾವ ರೀತಿಯ ಆಡಳಿತವನ್ನು ನೀಡಬಲ್ಲರು? ನಮೋ ಭಾರತ್‍ಗೆ ಕೃತಜ್ಞತೆಗಳು. ಯಾಕೆಂದರೆ, ನೀವೇ ನಿಮ್ಮ ಮುಖವನ್ನು ಅನಾವರಣಗೊಳಿಸಿದ್ದೀರಿ.
        ವಿನ್ಸೆಂಟ್ ರಾಡ್ರಿಗಸ್ ಬೆಂಗಳೂರು
 2013 ಅಕ್ಟೋಬರ್ 22ರಂದು ದಾಯ್ಜಿ ವರ್ಲ್ಡ್  ಡಾಟ್ ಕಾಮ್‍ನಲ್ಲಿ ಪ್ರಕಟವಾದ ಸುದ್ದಿಯೊಂದಕ್ಕೆ ಹರಿದು ಬಂದ ನೂರಾರು ಪ್ರತಿಕ್ರಿಯೆಗಳಲ್ಲಿ ಮೂರಷ್ಟೇ ಇಲ್ಲಿವೆ. ಆ ಸುದ್ದಿ ಹೀಗಿತ್ತು:
    ‘.. ಹೋಮ್‍ಸ್ಟೇ ದಾಳಿ ಪ್ರಕರಣದ ಆರೋಪಿಗಳನ್ನು 2013ರ ನವೆಂಬರ್ ಮೊದಲ ವಾರದಲ್ಲಿ ಸನ್ಮಾನಿಸಲಾಗುವುದೆಂದು ನಮೋ ಭಾರತ್‍ನ ಮುಖ್ಯಸ್ಥ ಡಾ| ಪ್ರಸಾದ್ ಭಂಡಾರಿ ಹೇಳಿದ್ದಾರೆ..
   ಏನು ಹೇಳುತ್ತೀರಿ ಈ ಮನಸ್ಥಿತಿಗೆ? ಸನ್ಮಾನ ಎಂಬ ಪದಕ್ಕೆ ಡಿಕ್ಷ್ ನರಿಯಲ್ಲಿ ‘ವಿಶೇಷವಾದ ಗೌರವ', ಪುರಸ್ಕಾರ.. ಎಂಬಿತ್ಯಾದಿ ಅರ್ಥಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಹೋಮ್ ಸ್ಟೇಯ ಮೇಲೆ 2012ರ ಜುಲೈಯಲ್ಲಿ ನಡೆದ ದಾಳಿಯನ್ನು ‘ಗೌರವಾರ್ಹ' ಎಂದು ನಮೋ ಭಾರತ್ ಪರಿಗಣಿಸಿರುವುದು ಯಾವುದರ ಆಧಾರದಲ್ಲಿ? ಯಾವುದೇ ಒಂದು ಪ್ರಕರಣವನ್ನು ಗೌರವಾರ್ಹ ಅಥವಾ ಖಂಡನಾರ್ಹ ಎಂದು ವಿಭಜಿಸುವುದಕ್ಕೆ ಮಾನದಂಡಗಳು ಇರಬೇಕಲ್ಲ, ಅವು ಯಾವುವು? ಹೆಣ್ಣು ಮಕ್ಕಳ ಮೇಲೆ ಕೈ ಮಾಡುವುದೇ? ಅವರನ್ನು ನಗ್ನಗೊಳಿಸುವುದೇ? ಇಡೀ ದೇಶವೇ ಖಂಡಿಸಿದ, ಛೀ, ಥೂ.. ಅಂದ ದಾಳಿಕೋರರನ್ನು ನಮೋ ಭಾರತ್ ಗೌರವಾರ್ಹರು ಎನ್ನುವುದಾದರೆ, ಈ ಭಾರತದಲ್ಲಿ ಹೆಣ್ಣು ಮಕ್ಕಳ ಗತಿಯೇನು? ಸಂಸ್ಕøತಿಯ ವ್ಯಾಖ್ಯಾನವೇನು? ಒಂದು ವರ್ಷಕ್ಕಿಂತ ಅಧಿಕ ಸಮಯ ಜೈಲಲ್ಲಿದ್ದ ಆರೋಪಿಗಳನ್ನು ಸನ್ಮಾನಿಸ ಬೇಕೆಂದು ಬಯಸುತ್ತಾರಲ್ಲ, ಅವರು ಎಂಥ ದೇಶವನ್ನು ಕಟ್ಟಬಲ್ಲರು?
    ಇಷ್ಟಕ್ಕೂ, ಇವೆಲ್ಲವನ್ನೂ ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ.
ಸಂಗೀತ್ ಸೋಮ್
ಸುರೇಶ್ ರಾಣಾ
   ಉತ್ತರ ಪ್ರದೇಶದ ಆಗ್ರಾದಲ್ಲಿ ಕಳೆದ ವಾರ ನ. 21ರಂದು ನಡೆದ ಮೋದಿ ರಾಲಿಯಲ್ಲಿ ಈ ಇಬ್ಬರು ಶಾಸಕರನ್ನು ಬಿಜೆಪಿ ಸನ್ಮಾನಿಸಿದೆ. ಸನ್ಮಾನದ ಸಂದರ್ಭದಲ್ಲಿ ಇವರಿಬ್ಬರ ಪಕ್ಕದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಕಲ್‍ರಾಜ್ ಮಿಶ್ರಾ ಕೂತಿದ್ದರು. ‘ಕಭೀ ಕಭೀ ಕ್ರಿಯಾ 1 ಕಿಲೋ ಗ್ರಾಂ ಹೋತೋ ಪ್ರತಿಕ್ರಿಯಾ 1 ಕ್ವಿಂಟಾಲ್ ತಕ್ ಹೋಜಾತೀಹೆ - ಎಂದು ಮುಝಫರ್ ನಗರ ಗಲಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಕಲ್ಯಾಣ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಏನಿವೆಲ್ಲ? 60ರಷ್ಟು ಮಂದಿಯ ಸಾವಿಗೆ ಮತ್ತು ಸಾವಿರಾರು ಮಂದಿಯ ನಿರಾಶ್ರಿತ ಬದುಕಿಗೆ ಕಾರಣವಾದ ಮುಜಫ್ಫರ್ ನಗರ್ ಗಲಭೆಯ ಆರೋಪಿಗಳಿಬ್ಬರನ್ನು ಬಿಜೆಪಿ ಯಾವ ಕಾರಣಕ್ಕಾಗಿ ಸನ್ಮಾನಿಸಿದೆ? ಕೋಮುಗಲಭೆಯ ಆರೋಪ ಹೊತ್ತು ಜೈಲಿಗೆ ಹೋಗುವುದು ಸನ್ಮಾನಕ್ಕೆ ಅರ್ಹವಾಗುವಂಥ ಸಂಗತಿಯೇ? ಸಂಗೀತ್ ಸೋಮ್‍ರಂತೂ ಇಡೀ ಗಲಭೆಯ ರೂವಾರಿ ಎಂಬ ಆರೋಪ ಹೊತ್ತು ಕೊಂಡಿದ್ದಾರೆ. ಪಾಕಿಸ್ತಾನದ ಸಿಯಾಲ್ ಕೋಟ್‍ನಲ್ಲಿ ಕಳ್ಳರಿಬ್ಬರನ್ನು ಸಾರ್ವಜನಿಕರು ಥಳಿಸಿ ಕೊಂದ ವೀಡಿಯೋವನ್ನು ತನ್ನ ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ, ‘ಇದು ಮುಝಫರ್ ನಗರದಲ್ಲಿ ಮುಸ್ಲಿಮರು ಹಿಂದೂ ಯುವಕರನ್ನು ಕೊಂದ ವೀಡಿಯೋ..' ಎಂಬಂತೆ ಬಿಂಬಿಸಿದ್ದಾರೆ. ಓರ್ವ ಜನಪ್ರತಿನಿಧಿ ಈ ಮಟ್ಟಕ್ಕೆ ಇಳಿಯುತ್ತಾರೆಂದರೆ ಅದು ಅರ್ಹವಾಗಬೇಕಾದದ್ದು ಸನ್ಮಾನಕ್ಕೋ ಖಂಡನೆಗೋ? ಯಾಕೆ ಮೋದಿ ಈ ಬಗ್ಗೆ ಮಾತಾಡಿಲ್ಲ? ಮನ ಮೋಹನ್ ಸಿಂಗ್‍ರನ್ನು ‘ಮೌನ' ಮೋಹನ ಎಂದು ಟೀಕಿಸುವ ಮೋದಿ, ತನ್ನದೇ ವೇದಿಕೆಯಲ್ಲಿ ನಡೆದ ಈ ಸನ್ಮಾನದ ಬಗ್ಗೆ ಯಾಕೆ ಮೌನ ವಹಿಸಿದರು? ಈ ಸನ್ಮಾನದ ಬಗ್ಗೆ ಅವರ ನಿಲುವೇನು? ಹಾಗಂತ, ಈ ಸನ್ಮಾನ ಕಾರ್ಯಕ್ರಮ ದಿಢೀರ್ ಬೆಳವಣಿಗೆ ಎಂದೂ ಹೇಳುವಂತಿಲ್ಲ. ಮೋದಿ ರಾಲಿಗಿಂತ ಒಂದೆರಡು ದಿನಗಳ ಮೊದಲೇ ಈ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಲಾಗಿತ್ತು. ಕಾರ್ಯಕ್ರಮ ಪಟ್ಟಿಯಲ್ಲಿಯೂ ಈ ಸನ್ಮಾನವು ನಮೂದಾಗಿತ್ತು. ಪ್ರಾಮಾಣಿಕತೆ, ಪಾರದರ್ಶಕತೆಯ ಬಗ್ಗೆ ಹೋದಲ್ಲೆಲ್ಲಾ ಮಾತಾಡುವ ಮೋದಿ, ತನ್ನದೇ ಪಕ್ಷದ ಸನ್ಮಾನದ ಬಗ್ಗೆ ಏನೊಂದೂ ಮಾತಾಡದಿರುವುದು ಏನನ್ನು ಸೂಚಿಸುತ್ತದೆ? ಈ ಸನ್ಮಾನ ಕಾರ್ಯಕ್ರಮ ಅವರ ಸಮ್ಮತಿಯಿಂದಲೇ ಜರುಗಿದ್ದೇ? ಅವರನ್ನು ಸನ್ಮಾನಿಸಲೇ ಬೇಕೆಂಬ ಹಠ ಬಿಜೆಪಿಗೆ ಇದ್ದದ್ದೇ  ಆಗಿದ್ದರೆ, ತನಿಖೆ ಮುಗಿಯುವ ವರೆಗೆ ಸನ್ಮಾನವನ್ನು ಮುಂದೂಡಬಹುದಿತ್ತಲ್ಲವೇ? ದೇಶದ ಪ್ರಧಾನಮಂತ್ರಿ ಅಭ್ಯರ್ಥಿಗೆ ಇಂಥದ್ದೊಂದು ಎಚ್ಚರವನ್ನು ಪಾಲಿಸಲು ಸಾಧ್ಯ ವಾಗುತ್ತಿಲ್ಲವೆಂದ ಮೇಲೆ ಮೋದಿಗೂ ನಮೋ ಭಾರತ್‍ನ ಪ್ರಸಾದ್ ಭಂಡಾರಿಗೂ ಏನು ವ್ಯತ್ಯಾಸವಿದೆ?
ಅನಂತಮೂರ್ತಿ
ಚೇತನ ಭಗತ್
ಗಿರೀಶ್ ಕಾರ್ನಾಡ್
ಅರುಂಧತಿ ರಾಯ್
   ಮುಂತಾದವರನ್ನು ಬಿಜೆಪಿ ಉಲ್ಲೇಖಿಸುವುದೇ ಸ್ಯೂಡೋ ಸೆಕ್ಯುಲರಿಸ್ಟಗಳೆಂದು (ನಕಲಿ ಜಾತ್ಯತೀತರು). ಜಾತ್ಯತೀತತೆಗೆ ಅನಂತ ಮೂರ್ತಿಯವರು ಕೊಡುವ ವ್ಯಾಖ್ಯಾನವನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಅಪಹಾಸ್ಯಕ್ಕೆ ಒಳಗಾಗಿಸುತ್ತಲೇ ಬಂದಿದ್ದಾರೆ. ಅವರನ್ನು ಬಿಟ್ಟು ಬಿಡೋಣ. ಬಿಜೆಪಿ ಪ್ರತಿಪಾದಿಸುವ ಸೆಕ್ಯುಲರಿಸಮ್ ಯಾವ ಬಗೆಯದು? ಒಂದು ಕಡೆ, ‘ತನ್ನ ಕಾರಿನಡಿಗೆ ನಾಯಿ ಮರಿ ಬಿದ್ದರೂ ನೋವಾಗುತ್ತದೆ’ ಅನ್ನುವ ಮೋದಿ; ಇನ್ನೊಂದು ಕಡೆ, ಮನುಷ್ಯರನ್ನೇ ಕೊಂದ ಆರೋಪಿಗಳನ್ನು ಸನ್ಮಾನಿಸುವ ಅವರ ಪಕ್ಷ - ಇದು ಬಿಜೆಪಿಯ ಸೆಕ್ಯುಲರಿಸಮ್ಮೇ? ಅನಂತಮೂರ್ತಿಯವರ ಸೆಕ್ಯುಲರಿಸಮ್‍ಗಿಂತ ಈ ಸೆಕ್ಯುಲರಿಸಮ್ ಹೆಚ್ಚು ಉನ್ನತವಾದದ್ದು ಎಂದು ಅದು ಪ್ರತಿಪಾದಿಸುತ್ತದೆಯೇ? ಓರ್ವ ವ್ಯಕ್ತಿ ಪ್ರಧಾನಿ ಸ್ಥಾನಕ್ಕೆ ಅರ್ಹರೋ ಅಲ್ಲವೋ ಎಂದು ತೀಮಾನಿಸ ಬೇಕಾದದ್ದು ಅವರ ಗಡ್ಡ, ಭಾಷಣ ಕಲೆ, ಹಾವ-ಭಾವಗಳನ್ನು ನೋಡಿಯಲ್ಲ. ಗಡ್ಡ ಇರುವ ಮತ್ತು ಇಲ್ಲದ, ಭಾಷಣ ಕಲೆ ಗೊತ್ತಿರುವ ಮತ್ತು ಗೊತ್ತಿಲ್ಲದ, ತನ್ನ ಅಭಿಪ್ರಾಯವನ್ನು ಮೆಚ್ಚುವ ಮತ್ತು ವಿರೋಧಿಸುವ, ತನ್ನ ಧರ್ಮವನ್ನು ಅನುಸರಿಸುವ ಮತ್ತು ಅನುಸರಿ ಸದ.. ಮಂದಿಯ ಬಗ್ಗೆ ಆ ವ್ಯಕ್ತಿಯ ನಿಲುವು ಏನು ಎಂಬುದೇ ಅರ್ಹತೆಯ ಮಾನದಂಡ. ಇಂಥದ್ದೊಂದು ಮಾನದಂಡವನ್ನಿಟ್ಟು ಕೊಂಡು ಮೋದಿಯನ್ನು ಅಳೆಯಲು ಹೋದರೆ, ಉದ್ದಕ್ಕೂ ಅನರ್ಹತೆಯೇ ಎದುರಾಗುತ್ತದೆ. ಕಾಂಗ್ರೆಸ್‍ನ ಭ್ರಷ್ಟಾಚಾರದ ವಿರುದ್ಧ ಮೋದಿ ಈಗಾಗಲೇ ಗಂಟೆಗಟ್ಟಲೆ ಮಾತಾಡಿದ್ದಾರೆ. ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಅನ್ನು ಗೇಲಿ ಮಾಡಿದ್ದಾರೆ. ಆದರೆ ಇದೇ ಮೋದಿ ಮೊನ್ನೆ ಬೆಂಗಳೂರಿಗೆ ಬಂದಾಗ, ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಾದ ಭ್ರಷ್ಟಾಚಾರದ ಬಗ್ಗೆ ಒಂದು ಗೆರೆಯ ಉಲ್ಲೇಖವನ್ನೂ ಮಾಡಲಿಲ್ಲ. ಪಾರದರ್ಶಕತೆ ಅಂದರೆ ಇದೇ ಏನು? ಮೋದಿಯವರ ಸೆಕ್ಯುಲರಿಸಮ್‍ನಲ್ಲಿ ಭ್ರಷ್ಟಾಚಾರವನ್ನೂ ವಿಭಜಿಸಲಾಗಿದೆಯೇ? ಬಿಜೆಪಿಯ ಭ್ರಷ್ಟಾಚಾರ ಸಹ್ಯ, ಕಾಂಗ್ರೆಸ್‍ನದ್ದು ಮಾತ್ರ ಅಸಹ್ಯ ಎಂಬುದು ಮೋದಿ ಸೆಕ್ಯುಲರಿಸಮ್‍ನ ವಿಶೇಷತೆಯೇ?
   “.. ಓರ್ವ ಮಹಿಳೆಯ ಬದುಕಿನಲ್ಲಿ ಅತ್ಯಂತ ಹೆಚ್ಚು ಸಂತಸ ಪಡುವ ಸಂದರ್ಭ ಯಾವುದು ಗೊತ್ತೇ? ತಾಯಿಯಾಗುವ ಕ್ಷಣ. ತಾಯಿಯ ಬದುಕಿನಲ್ಲಿ ಮಕ್ಕಳು ಬಲು ದೊಡ್ಡ ಕನಸು. ಮನೆಯಲ್ಲಿ ಏನಿಲ್ಲದಿದ್ದರೂ ಮಕ್ಕಳನ್ನು ನೆನೆಸಿಕೊಂಡು ತಾಯಿ ಬದುಕಬಲ್ಲಳು. ಅಂಥದ್ದೊಂದು ಕನಸಾಗಿದ್ದ ನನ್ನ ಮಗ. ನನ್ನ ಕನಸಿನ ರಾಜಕುಮಾರನಾಗಿ ಅವನು ಬೆಳೆದ. ಆದರೆ ನಾನವನನ್ನು ಕಳಕೊಂಡೆ. ನನ್ನ ಬದುಕಿನ ಅತ್ಯಂತ ದುಃಖದ ಸಂದರ್ಭ ಕೂಡ ಇದುವೇ. ಮಗ ಇಲ್ಲವಾಗುವ ಮೂಲಕ ನಾನೆಲ್ಲವನ್ನೂ ಕಳಕೊಂಡೆ. ನನಗೆ ನನ್ನ ಜಗತ್ತು ಇಲ್ಲದಾಯಿತು. ಅವನನ್ನು ಸ್ಮರಿಸಿ ಕಣ್ಣೀರಾಗದ ಒಂದೇ ಒಂದು ದಿನವನ್ನೂ ನಾನು ಕಳೆದಿಲ್ಲ. ಅವನು ನನ್ನ ಹೃದಯದಲ್ಲಿದ್ದಾನೆ. ಆದರೇನು ಮಾಡಲಿ, ಕಣ್ಣೀರಾಗದೆ ನನಗೆ ಬೇರೆ ಯಾವ ದಾರಿಯಿದೆ? ಅವರು ಅವನನ್ನು ಕೊಂದರು. ಅವನನ್ನು ಯಾರು ಕೊಂದಿರುವರೋ ಅವರ ಮೇಲೆ ನನ್ನ ಕಣ್ಣೀರು ತೊಟ್ಟಿಕ್ಕುತ್ತಿದೆ. ರೋಗಿಯಾಗಿರುವ ನಾನು ಶೀಘ್ರದಲ್ಲೇ ಸಾಯಬಹುದು. ಆದರೆ ಈ ಕಣ್ಣೀರು ಅವರನ್ನು ಖಂಡಿತ ತಟ್ಟಲಿದೆ. ಬದುಕಿನಲ್ಲಿ ಯಾವ ನ್ಯಾಯವೂ ಲಭಿಸದ, ಅಸಹಾಯಕ ತಾಯಿಯೋರ್ವಳ ಕಣ್ಣೀರಿದು. ಕಣ್ಣೀರಿನೊಂದಿಗೆ ನಾನಿದನ್ನು ಬರೆಯುತ್ತಿದ್ದೇನೆ. ನೀವು ನ್ಯಾಯಾಲಯವನ್ನೂ ಪೊಲೀಸರನ್ನೂ ಖರೀದಿಸಬಹುದು. ಆದರೆ ಆಕಾಶದಿಂದ ಇವೆಲ್ಲವನ್ನೂ ನೋಡುತ್ತಿರುವ ಒಂದು ಪ್ರಬಲ ಶಕ್ತಿಯಿದೆ. ಆ ಶಕ್ತಿಯ ಪ್ರಹಾರವು ನಿಮ್ಮನ್ನು ಕಾಡಿಯೇ ಕಾಡುತ್ತದೆ- ನೀವು ಕಣ್ಣೀರಾಗಲಿದ್ದೀರಿ..”
   2006 ಮಾರ್ಚ್ ನಲ್ಲಿ ಸಾವಿಗೀಡಾದ ಲೀಲಾ ಎಂಬ ಕೇರಳದ ತಾಯಿಯೋರ್ವರು ಬರೆದ ಆತ್ಮಕಥೆಯಿಂದ ಹೆಕ್ಕಿದ ತುಣುಕಿದು. ಆರ್‍ಟಿಓ ಅಧಿಕಾರಿಯಾಗಿದ್ದ ಅವರ ಏಕೈಕ ಮಗನನ್ನು ಮಾಫಿಯಾ ಬಲಿ ಪಡೆದಿತ್ತು. ನಿಜವಾಗಿ, ಲೀಲಾ ಎಂಬ ಪದವನ್ನು ನಾವು ಒಂದು ನಿರ್ದಿಷ್ಟ ಧರ್ಮದ ಹೆಸರಾಗಿ ಪರಿಗಣಿಸಬೇಕಿಲ್ಲ. ಇಂಥ ತಾಯಂದಿರು ಇವತ್ತು ಗುಜರಾತ್‍ನಲ್ಲಿ, ಮುಝಫರ್ ನಗರದಲ್ಲಿ, ಹೋಮ್ ಸ್ಟೇಯ ಮಂಗಳೂರಿನಲ್ಲಿ ಅಸಂಖ್ಯ ಇದ್ದಾರೆ. ಅವರ ಹೆಸರು ಆಯಿಷಾ, ಸೆಲೆನಾ, ದಮಯಂತಿ.. ಏನೇ ಆಗಿರಬಹುದು. ಅವರೆಲ್ಲರ ಕಣ್ಣೀರು ಒಂದೇ. ಆ ಕಣ್ಣೀರೇ ನಿಜವಾದ ಸೆಕ್ಯುಲರಿಸಮ್. ಸಂಗೀತ್ ಸೋಮ್ ಮತ್ತು ಸುರೇಶ್ ರಾಣಾರನ್ನು ವೇದಿಕೆಯಲ್ಲಿ ಕೂರಿಸಿ ಸನ್ಮಾನಿಸಿದ ಬಿಜೆಪಿ ಮತ್ತು ಹೋಮ್‍ಸ್ಟೇ ಆರೋಪಿಗಳನ್ನು ಸನ್ಮಾನಿಸುವ ಹೇಳಿಕೆ ನೀಡಿದ ನಮೋ ಭಾರತ್‍ಗೆ ಇದು ಅರ್ಥವಾಗಲಿ ಬಿಡಲಿ. ಅಂದಹಾಗೆ,
   2010ರಲ್ಲಿ ಉತ್ತರ ಪ್ರದೇಶದ ಬರೇಲ್ವಿಯಲ್ಲಿ ನಡೆದ ಕೋಮು ಗಲಭೆಯ ಆರೋಪಿ ತೌಕೀರ್ ರಝಾ ಖಾನ್‍ರನ್ನು ಮೊನ್ನೆ ವೇದಿಕೆಯಲ್ಲಿ ಕೂರಿಸಿದ ಸಮಾಜವಾದಿ ಪಕ್ಷದ ನಿಲುವನ್ನು ಖಂಡಿಸು ತ್ತಲೇ ನಾವು ಮೋದಿ ಸೆಕ್ಯುಲರಿಸಮನ್ನು ಪ್ರಶ್ನಿಸಬೇಕಾಗಿದೆ.

Wednesday, November 20, 2013

ಪೇಟೆಯ ಪುಣ್ಯ ಕೋಟಿಗೆ ಮತ್ತೆ ಮತ್ತೆ ತಲೆ ಕೊಡುವ ಕಾಡಿನ ಹುಲಿ

ಗರೋಡಿ
ರಾಜೇಶ್
   '‘1932. ಹಿಟ್ಲರ್ ಅಧಿಕಾರಕ್ಕೆ ಬಂದ ಕಾಲವಾಗಿತ್ತದು. ನನ್ನ ಪ್ರಾಯವಾದರೋ 20. ಅಲ್ಲದೇ ಹಿಟ್ಲರ್ ಜರ್ಮನಿಯಲ್ಲಿದ್ದರೆ ನಾನು ಫ್ರಾನ್ಸ್ ನಲ್ಲಿದೆ. ಯೌವನವಲ್ಲವೇ, ಫ್ರಾನ್ಸ್ ನಲ್ಲಿದ್ದರೂ ನನ್ನ ಮನಸ್ಸು ಜಗತ್ತಿನ ಎಲ್ಲ ಸುದ್ದಿಗಳ ಬಗ್ಗೆಯೂ, ಆ ಸುದ್ದಿಗಳು ಕಟ್ಟಿಕೊಡುವ ನೋವುಗಳ ಸುತ್ತಲೂ ಹೆಜ್ಜೆ ಹಾಕುತ್ತಿತ್ತು. ಫ್ಯಾಸಿಸಮ್‍ನ ವಿವಿಧ ಕ್ರೌರ್ಯಗಳನ್ನು ಓದುವಾಗ ಮನಸ್ಸು ಏನೇನೋ ಆಲೋಚಿಸುತ್ತಿತ್ತು. ಆ ದಿನಗಳಲ್ಲಿ ಅಮೇರಿಕಾವನ್ನು ಆರ್ಥಿಕ ಸಂಕಷ್ಟವು ವಿಪರೀತ ಮಟ್ಟದಲ್ಲಿ ಬಾಧಿಸಿತ್ತು. 70 ಲಕ್ಷ ಮಂದಿ ಉದ್ಯೋಗ ಕಳಕೊಂಡು ಬೀದಿಗೆ ಬಿದ್ದಿದ್ದರು. ಎದೆಹಾಲು ಬತ್ತಿ ಹೋದ ತಾಯಂದಿರು. ಒಂದು ತುಂಡು ರೊಟ್ಟಿಗಾಗಿ ಪರಸ್ಪರ ಜಗಳ ಕಾಯುವ ಮಂದಿ ಅಮೆರಿಕದ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಮಧ್ಯೆ, ಮುಸೋಲಿನಿ ಇಥಿಯೋಪಿಯಾ ವನ್ನು ಆಕ್ರಮಿಸಿದ. ಹಿಟ್ಲರ್ ಮತ್ತು ಮುಸೋಲಿನಿಯ ಸಹಕಾರದಿಂದ ಫ್ರಾಂಕೋ ಸ್ಪೈನನ್ನು ವಶಪಡಿಸಿಕೊಂಡ. ಆ ಕಾಲದಲ್ಲಿ ನಾನು ಮತ್ತು ನನ್ನಂಥ ಯುವಕರು ಕೆಲವೊಮ್ಮೆ ಎಷ್ಟು ನಿರಾಶೆಯಿಂದ ಮಾತಾಡುತ್ತಿದ್ದೆವೆಂದರೆ,
ಜಗತ್ತು ಕೊನೆಗೊಳ್ಳುವ ಸಮಯ ಸಮೀಪಿಸಿದೆ. ಬಹುಶಃ ನಾವು ಅದರ ಕೊನೆಯ ಪೀಳಿಗೆ ಆಗಿರಬಹುದು..' ಎಂದೆಲ್ಲಾ ಹೇಳುತ್ತಿದ್ದೆವು. ಇಷ್ಟಿದ್ದೂ,
  ನಾನು ತುಂಬಾ ಆಶಾವಾದಿಯಾಗಿದ್ದೆ. ಸದ್ಯದ ಸವಾಲುಗಳನ್ನು ಎದುರಿಸುವುದಕ್ಕೆ ನಾನು ಎರಡು ವಿಷಯಗಳಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ನಿಜವಾಗಿ, ನನ್ನ ಹೆತ್ತವರು ಯಾವ ಧರ್ಮದ ವಿಶ್ವಾಸಿಯೂ ಆಗಿರಲಿಲ್ಲ. ಅಲ್ಲದೆ, ಯಾವ ಚಳವಳಿ, ಇಸಂಗಳ ಜೊತೆಯೂ ಗುರುತಿಸಿಕೊಂಡಿರಲಿಲ್ಲ. ಆದರೆ, ನನಗೆ ಅವೆರಡರ ಅಗತ್ಯ ಬಹಳ ಇದೆ ಎಂದು ಅನ್ನಿಸಿತು. ಅದ್ದರಿಂದ, ನಾನು ಕ್ರೈಸ್ತ ಧರ್ಮವನ್ನು ಆಯ್ಕೆ ಮಾಡಿಕೊಂಡೆ. ಇದಾದ ಬಳಿಕ ಕಮ್ಯೂನಿಸಮ್ ಅನ್ನು ಸೇರಿ ಕೊಂಡೆ. ಹೀಗೆ 25 ವರ್ಷಗಳ ಕಾಲ ಕ್ರೈಸ್ತ ಧರ್ಮ ಮತ್ತು ಕಮ್ಯೂನಿಸ್ಟ್ ಸಿದ್ಧಾಂತಗಳ ನಡುವೆ ಸಂವಾದ ನಡೆಸುತ್ತಾ ಬೆಳೆದೆ. ಪ್ರತಿಯೊಂದನ್ನೂ ಪ್ರಶ್ನಿಸಿದೆ. ಫ್ರಾನ್ಸನ್ನು  ಹಿಟ್ಲರ್ ಅಕ್ರಮಿಸಿದಾಗ ಬಂಡಾಯ ಸೇನೆ ಕಟ್ಟಿ ಪ್ರತಿಭಟಿಸಿದೆ. ನಾಝಿ ಸೇನೆಯು ನನ್ನನ್ನು ಬಂಧಿಸಿ 2 ವರ್ಷಗಳ ಕಾಲ ಬಂಧನದಲ್ಲಿರಿಸಿತು. ಬಿಡುಗಡೆ ಗೊಂಡ ಬಳಿಕ ಮತ್ತೆ ಚಳವಳಿಗಳಲ್ಲಿ ಸಕ್ರಿಯನಾದೆ. ಬಂಡವಾಳಶಾಹಿತ್ವದ ವಿರುದ್ಧ ಕಮ್ಯುನಿಸ್ಟ್ ಗೆಳೆಯ ರನ್ನು ಸೇರಿಸಿ ಪ್ರತಿಭಟಿಸಿದೆ. ಫ್ಯಾಸಿಸಮ್‍ಗೆ ವಿರುದ್ಧವಾಗಿ ಜನಜಾಗೃತಿ ಮೂಡಿಸಲು ಯತ್ನಿಸಿದೆ. ನನ್ನ ಪಾಲಿಗೆ ಕ್ರೈಸ್ತ ಧರ್ಮ ಮತ್ತು ಕಮ್ಯುನಿಸಮ್ ಎರಡೂ ಕಾಲದ ವೈರುಧ್ಯಗಳನ್ನು ವ್ಯಾಖ್ಯಾನಿಸುವುದ ಕ್ಕಿರುವ ಎರಡು ಮೆಟ್ಟಲುಗಳಾಗಿತ್ತು. ಬರಬರುತ್ತಾ ಆ ಮೆಟ್ಟಿಲುಗಳಲ್ಲೇ ನಾನಾ ವೈರುಧ್ಯಗಳನ್ನು ಕಾಣತೊಡಗಿದೆ. ವಿಯೆಟ್ನಾಂನ ವಿರುದ್ಧ ಅಮೇರಿಕನ್ ಸಾಮ್ರಾಜ್ಯತ್ವವು ನಡೆಸಿದ ಅತಿಕ್ರಮಣದ ವಿರುದ್ಧ ನಾನು ಪ್ರತಿಭಟಿಸಿದಾಗ ಕಮ್ಯೂನಿಸಮ್ ನನ್ನ ಬೆನ್ನಿಗಿತ್ತು. ಆದರೆ, ದಮನಿತರ ಹಕ್ಕುಗಳ ಬಗ್ಗೆ, ಅವರ ಮೇಲಿನ ಕೌರ್ಯಗಳ ಬಗ್ಗೆ ಪ್ರಬಲ ಧ್ವನಿಯಲ್ಲಿ ಮಾತನಾಡುತ್ತಿದ್ದ ಕಮ್ಯುನಿಸಮ್, ಕೊನೆಗೆ ಅದೇ ತಪ್ಪುಗಳನ್ನೆಸಗಲು ಪ್ರಾರಂಭಿಸಿದಾಗ ಮತ್ತು ನಾನು ಪ್ರತಿಭಟನೆ ಸಲ್ಲಿಸಿದಾಗ, ನನ್ನನ್ನೇ ತಪ್ಪಿತಸ್ಥನಂತೆ ನೋಡಲಾಯಿತು. ಕಮ್ಯೂನಿಸ್ಟ್ ಪಾರ್ಟಿಯ 20ನೇ ಅಧಿವೇಶನದಲ್ಲಿ ರಷ್ಯಾದ ಸ್ಟಾಲಿನ್‍ರ ಜನವಿರೋಧಿ ನಿಲುವುಗಳು, ಸರ್ವಾಧಿಕಾರಗಳ ವಿರುದ್ಧ ಮಾತಾಡಿದಾಗ ನನ್ನನ್ನೇ ಪಕ್ಷದಿಂದ ಹೊರ ಹಾಕಲಾಯಿತು. ಅಮೇರಿಕವು ವಿಯೆಟ್ನಾ ಮೇಲೆ ಅತಿಕ್ರಮಣ ನಡೆಸಿದಾಗ ಪ್ರತಿಭಟಿಸಿದ ನಾನು ಸ್ಟಾಲಿನ್‍ರ ರಷ್ಯಾವು ಜೆಕೊಸ್ಲ್ಲೊವಾಕಿಯನ್ನು ವಶಪಡಿಸಿಕೊಂಡಾಗ ಸುಮ್ಮನಿರುವುದಕ್ಕೆ ಸಾಧ್ಯವಿರಲಿಲ್ಲವಲ್ಲ. ಪ್ರತಿಭಟಿಸಿದೆ. ಆದರೆ ವಿಯೆಟ್ನಾಮ್ ಅತಿಕ್ರಮಣವನ್ನು ಖಂಡಿಸಿದ ನನ್ನ ಗೆಳೆಯರೇ ಸ್ಟಾಲಿನ್‍ರನ್ನು ಬೆಂಬಲಿಸಿದರು. ನನ್ನಲ್ಲಿ ಭ್ರಮನಿರಸನವಾಗತೊಡಗಿತು...'
   1. ದಿ ಫೌಂಡಿಂಗ್ ಮಿಥ್ಸ್ ಆಫ್ ಮಾಡರ್ನ್ ಇಸ್ರೇಲ್
   2. ಕೇಸ್ ಆಫ್ ಇಸ್ರೇಲ್: ಎ ಸ್ಟಡಿ ಆಫ್ ಪೊಲಿಟಿಕಲ್ ಝಿಯೋನಿಸಮ್
   3. ದಿ ಕ್ರೈಸಿಸ್ ಇನ್ ಕಮ್ಯೂನಿಸಮ್
   4. ದಿ ಟರ್ನಿಂಗ್ ಪಾಯಿಂಟ್ ಆಫ್ ಸೋಷಿಯಲಿಸಮ್
   5. ಕಾರ್ಲ್‍ಮಾಕ್ಸ್: ದಿ ಇವೊಲ್ಯೂಶನ್ ಆಫ್ ಹಿಸ್ ಥಾಟ್...
ಹೀಗೆ 50ಕ್ಕಿಂತಲೂ ಅಧಿಕ ಕೃತಿಗಳನ್ನು ಬರೆದ ಪ್ರಸಿದ್ಧ ಸಾಹಿತಿ ರಝಾ ಗರೋಡಿಯವರು, ಯುರೋಪಿನಾದ್ಯಂತ ಅತ್ಯಂತ ಚಲನಶೀಲ ಸಾಹಿತಿಯಾಗಿ ಗುರುತಿಸಿಕೊಂಡವರು. ಕ್ರೈಸ್ತ ಧರ್ಮವನ್ನು ಬಿಟ್ಟು 1982ರಲ್ಲಿ ಇಸ್ಲಾಮನ್ನು ಸ್ವೀಕರಿಸಿದರು. ‘ಹಾಲೋಕಾಸ್ಟ್ ಎಂಬುದು ಬಲುದೊಡ್ಡ ಸುಳ್ಳು..’ ಎಂಬ ವಿವರ ಇರುವ The Founding Myths of Modern Isrel  ಎಂಬ ಕೃತಿಯನ್ನು 1996ರಲ್ಲಿ ಅವರು ಬರೆದಾಗ, ಇಸ್ರೇಲ್ ಮಾತ್ರವಲ್ಲ, ಫ್ರಾನ್ಸೂ ಸಿಟ್ಟಿಗೆದ್ದಿತು. ಫ್ರಾನ್ಸ್ ಆ ಪುಸ್ತಕವನ್ನು ನಿಷೇಧಿಸಿತು. 240,000 ಪೌಂಡ್ ದಂಡ ವಿಧಿಸಿತಲ್ಲದೇ, ತಪ್ಪಿದಲ್ಲಿ ಜೈಲು ಶಿಕ್ಷೆಯನ್ನೂ ಘೋಷಿಸಿತು. ಆದರೆ ಗರೋಡಿ ಜಗ್ಗಲಿಲ್ಲ. ಹಾಲೋಕಾಸ್ಟ್ ಅನ್ನು ಮುಂದಿಟ್ಟುಕೊಂಡು ಇಸ್ರೇಲ್ ತನ್ನ ಕ್ರೌರ್ಯವನ್ನು ಅಡಗಿಸುತ್ತಿದೆ ಎಂದು ಅವರು ಮತ್ತೆ ಮತ್ತೆ ಸಾರಿದರು. ಚರ್ಚಿಲ್, ಎಸ್‍ನೋವರ್ ಮತ್ತು ಡಿ ಗುಲ್ಲೆಯೆಂಬ ನಾಯಕರೇ ಹಾಲೋ ಕಾಸ್ಟ್ ನ ಸೂತ್ರದಾರರು ಎಂದು ದಿಟ್ಟವಾಗಿ ಘೋಷಿಸಿದರು. 2001ರಲ್ಲಿ ಅಮೇರಿಕಾದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯು ಅಮೆರಿಕನ್ ಪ್ರಾಯೋಜಿತವೆಂದು ಧೈರ್ಯದಿಂದ ಹೇಳಿದರು. ಒಂದು ರೀತಿಯಲ್ಲಿ ಸಾಹಿತಿ ಹೇಗಿರಬೇಕೆಂದು ತೋರಿಸಿಕೊಟ್ಟದ್ದೇ ರಝಾ ಗರೋಡಿ. ಪ್ರಚಲಿತ ಸಮಾಜದ ತಲ್ಲ್ಲಣಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತಿದ್ದ ಸಾಹಿತ್ಯ ಜಗತ್ತನ್ನೇ ಅವರು ಹಿಡಿದು ಅಲುಗಾಡಿಸಿದರು. ಸರಿ ಕಾಣದ್ದನ್ನು ಪ್ರಶ್ನಿಸಿದರು. ಹಾಗೇ ಪ್ರಶ್ನಿಸುವಾಗ, ಅದು ತನ್ನ ದೇಶ, ತನ್ನ ಭಾಷೆ, ತನ್ನ ಜನ.. ಎಂಬ ಮುಲಾಜನ್ನೂ ಅವರು ಇಟ್ಟುಕೊಳ್ಳಲಿಲ್ಲ. ಆದ್ದರಿಂದಲೇ, ಗಡಿ, ಭಾಷೆ, ಧರ್ಮವನ್ನು ಮೀರಿ ಜನರು ಗರೋಡಿಯವರನ್ನು ಪ್ರೀತಿಸಲು ಕಾರಣವಾದದ್ದು. ಮಾತ್ರವಲ್ಲ, ಪ್ರಚಲಿತ ಸಾಹಿತ್ಯ ಜಗತ್ತು ಗರೋಡಿಯವರನ್ನು ಮುಂದಿಟ್ಟುಕೊಂಡು ಚರ್ಚಿಸಬೇಕು ಎಂದು ಅನ್ನಿಸುವುದು.
   ಹಾಗಂತ, ಸಮಕಾಲೀನ ಸಾಹಿತಿಗಳು ಸಮಾಜದ ತಲ್ಲಣಗಳಿಗೆ ಸ್ಪಂದಿಸಿಲ್ಲ ಅಂತ ಹೇಳುತ್ತಿಲ್ಲ..
ಆದರೆ ಸ್ಪಂದನೆಯ ಪ್ರಮಾಣ ಎಷ್ಟರ ಮಟ್ಟಿಗಿದೆ? ಎಷ್ಟಂಶ ಅವು ಪ್ರಭಾವಶಾಲಿಯಾಗಿವೆ? ನಿಜವಾಗಿ, ಸಾಹಿತಿಗಳು ಬರಹಗಳ ಮೂಲಕ ಸ್ಪಂದಿಸಲೇಬೇಕಾದ ಹತ್ತಾರು ಸಮಸ್ಯೆಗಳು ಸಮಾಜದಲ್ಲಿವೆ. ಆದರೆ, ಗರೋಡಿಯವರಂತೆ ಅಂಥ ಸಮಸ್ಯೆಗಳನ್ನು ಎತ್ತಿಕೊಳ್ಳುವ ಮತ್ತು ಸಮಾಜದ ಆತ್ಮಕ್ಕೆ ಚುಚ್ಚುವ ಪ್ರಯತ್ನಗಳು ಆಗುತ್ತಲೇ ಇಲ್ಲ. ಇಲ್ಲಿ ಪ್ರತಿದಿನ ‘ಧರಣಿ ಮಂಡಲ ಮಧ್ಯದೊಳಗೆ..’ ಹಾಡಿನ ಘಟನೆಗಳು ನಡೆಯುತ್ತಲೇ ಇವೆ. ಕಾಡೆಂಬುದು ಹುಲಿಯ ಮನೆ. ಅದರ ಆಹಾರ, ವಿಶ್ರಾಂತಿ, ನಿದ್ದೆ ಎಲ್ಲವೂ ಅಲ್ಲೇ. ತನ್ನ ಪ್ರದೇಶದಲ್ಲಿ ಸುತ್ತಾಡಿ ಅದು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಹೀಗಿರುವಾಗ, ಪುಣ್ಯಕೋಟಿಯು ಹುಲಿಯ ಈ ಮನೆಗೆ ಅಕ್ರಮ ಪ್ರವೇಶಗೈಯುತ್ತದೆ. ಮಾತ್ರವಲ್ಲ, ತನ್ನ ಅಕ್ರಮ ಪ್ರವೇಶವೇ ಸಕ್ರಮ ಎಂಬ ರೀತಿಯಲ್ಲಿ ಭಾವನಾತ್ಮಕ ಬ್ಲ್ಯಾಕ್‍ಮೇಲ್ ನಡೆಸುತ್ತದೆ. ಅದು ಹುಲಿಯೊಂದಿಗೆ ನಡೆಸುವ ಸಂವಾದವನ್ನು ಹೇಗೆ ಕಟ್ಟಿ ಕೊಡಲಾಗಿದೆಯೆಂದರೆ, ಹುಲಿಯನ್ನು ಖಳನಾಯಕನಾಗಿ ಮತ್ತು ಪುಣ್ಯ ಕೋಟಿಯನ್ನು ಅಪಾರ ಸತ್ಯವಂತವಾಗಿ ಬಿಂಬಿಸಲಾಗಿದೆ. ಒಂದು ರೀತಿಯಲ್ಲಿ, ಪುಣ್ಯ ಕೋಟಿಯು ಹುಲಿಯ ಸಹಜ ಆಹಾರ. ತಪ್ಪು ಪುಣ್ಯಕೋಟಿಯದ್ದೇ ಹೊರತು ಹುಲಿಯದ್ದಲ್ಲ. ಆದರೆ, ಕೊನೆಗೆ ತನ್ನದಲ್ಲದ ತಪ್ಪಿಗೆ ಹುಲಿ ಪ್ರಾಣತ್ಯಾಗ ಮಾಡುವ ಮತ್ತು ಹಾಗೆ ತ್ಯಾಗ ಮಾಡಿದ ಬಳಿಕವೂ ಪುಣ್ಯ ಕೋಟಿಯೇ ಮಹಾ ತ್ಯಾಗಿಯಾಗಿ ಮನದಲ್ಲುಳಿಯುವ ರೀತಿಯಲ್ಲಿ ದರಣಿ ಮಂಡಲ ಹಾಡನ್ನು ಕಟ್ಟಿಕೊಡಲಾಗಿದೆ. ಇಷ್ಟಕ್ಕೂ, ಹುಲಿ ಮತ್ತು ಪುಣ್ಯ ಕೋಟಿಯ ನಡುವೆ ನಡೆಯುವ ಈ ಮಾತುಕತೆಯು ಕಾಲ್ಪನಿಕವಾದದ್ದೇ ಹೊರತು ವಾಸ್ತವವಲ್ಲ ಎಂಬುದು ಎಲ್ಲರಿಗೂ ಗೊತ್ತು. ನಿಜವಾಗಿ, ಇಲ್ಲಿ ಹುಲಿಯು- ಕಾಡನ್ನು ಮನೆ ಮಾಡಿಕೊಂಡಿರುವ ಗೊಲ್ಲರು, ಕೊರಗರು, ಗಿರಿಜನರು, ದಲಿತರ ಸಂಕೇತ. ಪುಣ್ಯ ಕೋಟಿಯು ಮೇಲ್ವರ್ಗದವರ ಸಂಕೇತ. ಮೇಲ್ವರ್ಗದವರಲ್ಲಿ ನ್ಯಾಯದ ಮಾತಾಡುವುದು ಸಾವಿಗೆ ಕಾರಣವಾಗುತ್ತದೆ ಅನ್ನುವ ಸೂಕ್ಷ್ಮ ಸಂದೇಶವನ್ನು ಈ ಹಾಡು ಗುಪ್ತವಾಗಿ ರವಾನೆ ಮಾಡುತ್ತದೆ. ಈ ಹಾಡಿನ ಆಧುನಿಕ ರೂಪವೇ ನಟ ರಾಜೇಶ್. ‘ಹಳ್ಳಿ ಹೈದ ಪೇಟೆಗ್ ಬಂದ’ ಎಂಬ ರಿಯಾಲಿಟಿ ಶೋಗಾಗಿ ಈ ಗಿರಿಜನ ಯುವಕನನ್ನು ಪೇಟೆಗೆ ಕರೆ ತರಲಾಗುತ್ತದೆ. ಆತನ ಮುಗ್ಧತೆಗೆ ಮಾರುಕಟ್ಟೆ ಇದೆ ಎಂದು ಅರಿವಾದದ್ದೇ ತಡ, ಪೇಟೆಯ ಮಂದಿ ಆತನನ್ನು ಎರ್ರಾಬಿರ್ರಿಯಾಗಿ ಬಳಸಿಕೊಳ್ಳುತ್ತಾರೆ. ಇದರ ಜೊತೆಗೆ ಆತನ ಹಠ ಸ್ವಭಾವ, ಒರಟುತನ, ಖಿನ್ನತೆಯ.. ಸುದ್ದಿಗಳೂ ಆಗಾಗ ಮಾಧ್ಯಮಗಳ ಮೂಲಕ ಪ್ರಕಟವಾಗುವಂತೆ ನೋಡಿಕೊಳ್ಳುತ್ತಾರೆ. ಕೊನೆಗೊಂದು ದಿನ ಆತ ಪ್ರಾಣತ್ಯಾಗ ಮಾಡಿದಾಗ, ಆತನನ್ನು ಕಾಡಿನ ಹುಲಿಯಾಗಿಯೂ ಕೊಂದವರು ಪುಣ್ಯ ಕೋಟಿಯಾಗಿಯೂ ಪೋಸು ಕೊಡುತ್ತಾರೆ.
   ಇವತ್ತಿನ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸುತ್ತಿರುವ ದೊಡ್ಡ ಕೊರತೆಯೂ ಇದುವೇ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಹೊಸ ಕಾದಂಬರಿ, ಕವಿತೆಗಳು ಪ್ರವೇಶಗೈಯ್ಯುತ್ತಿದ್ದರೂ ಅವುಗಳಲ್ಲಿ ಸಾಹಿತ್ಯಿಕ ಒಳನೋಟ ಉಳ್ಳವು ಎಷ್ಟಿವೆ  ಎಂದು ಹುಡುಕಾಡುವಾಗ ನಿರಾಶೆಯಾಗುತ್ತದೆ. ಸಮಾಜದ ಪ್ರಚಲಿತ ಸಮಸ್ಯೆಗಳನ್ನು ಎತ್ತಿಕೊಂಡು ಓದುಗರ ಹೃದಯ ತಟ್ಟುವ ಬರಹಗಳು ಅಪರೂಪವಾಗುತ್ತಿವೆ. ಇವತ್ತಿನ ಬರಹ ಶೈಲಿಗಳಲ್ಲಿ `ಹೇಗೆ' ಎಂಬುದು ಮುಖ್ಯವಾಗುತ್ತಿದೆಯೇ ಹೊರತು `ಯಾಕೆ' ಎಂಬುದಲ್ಲ. ಹೇಗೆ ಬಾಂಬ್ ಸ್ಫೋಟಿಸಬಹುದು, ಹೇಗೆ ಕೋಮುಗಲಭೆ ಎಬ್ಬಿಸಬಹುದು, ಹೇಗೆ ಮೋದಿಯನ್ನು ಗೆಲ್ಲಿಸಬಹುದು, ಹೇಗೆ ಸರಕಾರಿ ಶಾಲೆಗಳನ್ನು ಮುಚ್ಚಬಹುದು.. ಹೀಗೆ. ಇದಕ್ಕೆ ಬದಲು, ಯಾಕೆ ಸ್ಫೋಟಿಸಬೇಕು, ಯಾಕೆ ಮೋದಿಯನ್ನು ಗೆಲ್ಲಿಸಬೇಕು, ಯಾಕೆ ಕೋಮುಗಲಭೆ ಎಬ್ಬಿಸಬೇಕು.. ಎಂಬಿತ್ಯಾದಿಯಾಗಿ ಪ್ರಶ್ನಿಸುವ ಬರಹಗಳು ಅಪರೂಪವಾಗುತ್ತಿವೆ. ಬಹುಶಃ, ಪ್ರಚಲಿತ ವಾತಾವರಣವು ಈ ಮಟ್ಟದಲ್ಲಿ ಕೆಟ್ಟಿರುವುದಕ್ಕೆ ಇಂಥ ಬರಹಗಳ ಕೊರತೆಯ ಪಾತ್ರ ಖಂಡಿತ ಇದೆ ಎಂದು ಅನಿಸುತ್ತದೆ. ಒಂದು ವೇಳೆ,
    2012ರಲ್ಲಿ ತನ್ನ 98ನೇ ಪ್ರಾಯದಲ್ಲಿ ಸಾವಿಗೀಡಾದ ರಝಾ ಗರೋಡಿಯವರು ಈ ನೆಲದಲ್ಲಿ ಇದ್ದಿದ್ದರೆ, ಸಾಹಿತ್ಯ ಕ್ಷೇತ್ರಕ್ಕೆ ತಟ್ಟಿರುವ ಈ ಕಾಯಿಲೆಯ ವಿರುದ್ಧ ಬರೆಯುತ್ತಿದ್ದರೇನೋ...

Monday, November 18, 2013

ಆಯಿಶಾಳ ಮೂಲಕ ಮತ್ತೊಮ್ಮೆ ಪ್ರಶ್ನಾರ್ಹಗೊಂಡ ಮಾಧ್ಯಮ ನಿಲುವು

    ಗೋಪಾಲ
    ವಿಕಾಸ್
 ಪವನ್
 ಗಣೇಶ್
  ಮಂಗಳೂರಿನಲ್ಲಿ ಆಯಿಷಾ ಮತ್ತು ಝುಬೇರ್ ದಂಪತಿಗಳನ್ನು ಬಂಧಿಸುವುದಕ್ಕಿಂತ ಮೊದಲು ಈ ಮೇಲಿನ ನಾಲ್ವರನ್ನೂ ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದರು. ಅವರಿಗೆ ಪಾಕಿಸ್ತಾನದ ಐ.ಎಸ್.ಐ.ಯೊಂದಿಗೆ ನಂಟು ಕಲ್ಪಿಸಿದ್ದರು. ಅಲ್ಲದೇ, ಆಯಿಷಾಳ ಹೆಸರನ್ನು ಹೇಳಿದ್ದು ಈ ಆರೋಪಿಗಳೇ ಎಂದೂ ವರದಿಯಾಗಿತ್ತು. ಇಷ್ಟಿದ್ದೂ, ಇವರಾರೂ ದಿನ ಪತ್ರಿಕೆಗಳ ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ ಕಾಣಿಸಿಕೊಂಡಿಲ್ಲವಲ್ಲ, ಯಾಕೆ? ಆಯಿಷಾ ಮತ್ತು ಝುಬೇರ್‍ನನ್ನು ಹೆಚ್ಚಿನೆಲ್ಲಾ ಪತ್ರಿಕೆಗಳು ಮುಖಪುಟದಲ್ಲಿಟ್ಟು ‘ಗೌರವಿಸಿವೆ’. ಅವರ ಪೋಟೋ, ಮನೆ, ಉದ್ಯೋಗ, ವ್ಯವಹಾರ... ಎಲ್ಲವುಗಳನ್ನೂ ವಿವರವಾಗಿ ಅವು ಪ್ರಕಟಿಸಿವೆ. ಆಶಾ- ಆಯಿಷಾ ಆಗಿದ್ದೂ, ಝುಬೇರ್ ಇಬ್ಬರು ಪತ್ನಿಯರ ಪತಿ ಆಗಿದ್ದೂ, ಅವರ ಕೋಟ್ಯಂತರ ರೂಪಾಯಿಗಳ ವ್ಯವಹಾರ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್‍ಗಳು... ಎಲ್ಲವನ್ನೂ ಪತ್ರಿಕೆಗಳು ಅತೀವ ಆಸಕ್ತಿಯಿಂದ ವರದಿ ಮಾಡಿವೆ. ಇದು ತಪ್ಪು ಅನ್ನುತ್ತಿಲ್ಲ. ಒಂದು ಪ್ರಕರಣವನ್ನು ಕೂಲಂಕಷವಾಗಿ ಅಧ್ಯಯನ ನಡೆಸುವುದು ಒಂದು ಪತ್ರಿಕೆಯ ಜವಾಬ್ದಾರಿ. ಭಯೋತ್ಪಾದನೆಯಂಥ ದೇಶ ವಿರೋಧಿ ಚಟುವಟಿಕೆಗಳಲ್ಲಿ ಯಾರೇ ತೊಡಗಿಸಿಕೊಂಡಿದ್ದರೂ ಮತ್ತು ಅವರ ಧರ್ಮ, ಭಾಷೆ, ಹೆಸರು ಏನೇ ಆಗಿದ್ದರೂ ಅವರನ್ನು ಸಮಾಜದ ಮುಂದಿಡಬೇಕಾದದ್ದು ಒಂದು ಪತ್ರಿಕೆಯ ಜವಾಬ್ದಾರಿ ಮಾತ್ರವೇ ಅಲ್ಲ, ಸರ್ವ ನಾಗರಿಕರ ಹೊಣೆಗಾರಿಕೆ ಕೂಡ. ಆದರೆ, ಆರೋಪಿಗಳನ್ನು ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜಿಸಿ, ಪ್ರಕರಣವನ್ನು ಭೀಕರ ಅಥವಾ ಸಾಮಾನ್ಯ ಎಂದು ವಿಂಗಡಿಸುವುದು ನ್ಯಾಯವೇ? ಆಯಿಷಾಳಿಗಿಂತ ವಾರ ಮೊದಲೇ ಗೋಪಾಲ್, ವಿಕಾಸ್, ಪವನ್, ಗಣೇಶ್‍ರನ್ನು ಬಿಹಾರದಲ್ಲಿ ಬಂಧಿಸಲಾಗಿತ್ತಲ್ಲ, ಅದೇಕೆ ಪತ್ರಿಕೆಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಲಿಲ್ಲ? ಯಾಕೆ, ಅದನ್ನೂ ಮುಖಪುಟದ ಪ್ರಕರಣವಾಗಿ ಪರಿಗಣಿಸಲಿಲ್ಲ? ನಿಜವಾಗಿ, ಆಯಿಷಾಳ ಮೇಲೆ ಸದ್ಯ ಇರುವ ಆರೋಪಕ್ಕಿಂತ ಹೆಚ್ಚು ಪ್ರಬಲವಾದ ಆರೋಪ ಈ ನಾಲ್ವರ ಮೇಲಿದೆ. ಆದರೂ, ಅವರಾರನ್ನೂ ಆಯಿಷಾಳಂತೆ ಮುಖಪುಟದ ವಸ್ತುವಾಗಿಸದೇ ಇದ್ದದ್ದು ಯಾವ ಕಾರಣದಿಂದ? ಅವರ ಹೆಸರೇ, ಧರ್ಮವೇ...?
 ನಿಜವಾಗಿ, ಗೋಪಾಲ್, ವಿಕಾಸ್, ಪವನ್, ಗಣೇಶ್ ಎಂಬ ಈ ನಾಲ್ವರನ್ನು ಬಂಧಿಸಲಾಗಿದೆ ಎಂಬುದು ಹೆಚ್ಚಿನ ಓದುಗರಿಗೆ ಗೊತ್ತಾದದ್ದೇ ಆಯಿಷಾಳ ಬಂಧನದ ಬಳಿಕ. ಅಯಿಷಾ ಪ್ರಕರಣವನ್ನು ವಿವರಿಸುವಾಗ ಅನಿವಾರ್ಯವಾಗಿ ಪತ್ರಿಕೆಗಳು ಇವರ ಹೆಸರನ್ನು ಉಲ್ಲೇಖಿಸಿದ್ದುವು. ಆದರೆ, ಅವರ ಹೆಸರನ್ನು ಬಿಟ್ಟರೆ ಉಳಿದಂತೆ ಯಾವ ವಿವರವನ್ನೂ ಅವು ಓದುಗರ ಮುಂದಿಟ್ಟಿಲ್ಲ. ಆದ್ದರಿಂದಲೇ, ಮಾಧ್ಯಮ ಧೋರಣೆಗಳ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವುದು. ಕೆಲವು ತಿಂಗಳ ಹಿಂದೆ ಭಯೋತ್ಪಾದನೆಯ ಹೆಸರಲ್ಲಿ ಬೆಂಗಳೂರಿನಲ್ಲಿ ಕೆಲವು ಯುವಕರನ್ನು ಬಂಧಿಸಲಾಗಿತ್ತು. ಅವರಲ್ಲಿ ಮುತೀಉರ್ರಹ್ಮಾನ್ ಎಂಬ ಪತ್ರಕರ್ತನೂ ಇದ್ದ. ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಕಲ್ಪಿತ ವರದಿಗಳು ಪ್ರಕಟವಾದದ್ದು ಈತನ ಬಗ್ಗೆಯೇ. ಈತನನ್ನು ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಮಾಧ್ಯಮಗಳು ಬಣ್ಣಿಸಿದ್ದವು. ಜಿಹಾದಿ ಪತ್ರಕರ್ತ ಅಂದುವು. ಆತನನ್ನು ಬಂಧಿಸದೇ ಇರುತ್ತಿದ್ದರೆ ಬೆಂಗಳೂರಿನಲ್ಲಿ ಏನೆಲ್ಲ ಅನಾಹುತಗಳಾಗುತ್ತಿದ್ದುವು ಎಂಬುದನ್ನೆಲ್ಲಾ ಪಟ್ಟಿ ಮಾಡಿದುವು. ಆದ್ದರಿಂದಲೇ, ಬಂಧನದ 6 ತಿಂಗಳ ಬಳಿಕ ತನಿಖಾ ಸಂಸ್ಥೆಗಳು ಆತನನ್ನು ನಿರಪರಾಧಿ ಎಂದು ಬಿಟ್ಟು ಬಿಟ್ಟಾಗ ಮಾಧ್ಯಮಗಳು ತೀವ್ರ ಟೀಕೆಗೆ ಗುರಿಯಾದುವು. ಮಾಧ್ಯಮ ನಿಲುವನ್ನು ಪ್ರಶ್ನಿಸುವ ಸಂಕೇತವಾಗಿ ಆತ ಸಮಾಜದ ಮುಂದಿದ್ದ. ಹಾಗೆಯೇ, 2012ರ ಅಕ್ಟೋಬರ್ 11ರಂದು ಭಟ್ಕಳದಲ್ಲಿ ಬಂದ್ ಆಚರಿಸಲಾಗಿತ್ತು. ಭಟ್ಕಳದ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಸುಳ್ಳು ಸುದ್ದಿಗಳನ್ನು ಖಂಡಿಸಿ ಈ ಬಂದ್‍ಗೆ ಕರೆ ಕೊಡಲಾಗಿತ್ತು. ಆ ಬಂದ್‍ಗೆ ಸಾರ್ವಜನಿಕರು ಎಷ್ಟರ ಮಟ್ಟಿಗೆ ಸ್ಪಂದಿಸಿದರೆಂದರೆ, ಅಕ್ಟೋಬರ್ 11ರಂದು ಇಡೀ ದಿನ ಭಟ್ಕಳದಲ್ಲಿ ಅಂಗಡಿ-ಮುಂಗಟ್ಟುಗಳು ತೆರಯಲಿಲ್ಲ. ವಾಹನಗಳು ಓಡಾಡಲಿಲ್ಲ.
 ಹಾಗಂತ, ಮಾಧ್ಯಮಗಳಲ್ಲಿ ಇರುವವರೇನೂ ಅನ್ಯಗ್ರಹ ಜೀವಿಗಳು ಎಂದು ನಾನು ಹೇಳುತ್ತಿಲ್ಲ. ಸುಳ್ಳು, ಮೋಸ, ವಂಚನೆ, ಪಕ್ಷಪಾತ, ದರೋಡೆ.. ಮುಂತಾದ ಪದಗಳಿಗೆಲ್ಲ ಪತ್ರಕರ್ತರ ಡಿಕ್ಷನರಿಯಲ್ಲಿ `ಗೌರವಾರ್ಹ' ಪದಗಳು ಎಂಬ ಅರ್ಥವೂ ಇಲ್ಲ.  ಪತ್ರಕರ್ತರೂ ಸಮಾಜ ಜೀವಿಗಳೇ. ಸಂಪಾದಕರಾಗಲಿ, ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಮಿಕರಾಗಲಿ, ಓದುಗರಾಗಲಿ.. ಎಲ್ಲರೂ ಸಮಾಜದ ಒಂದು ಭಾಗವೇ. ಸಮಾಜದ ಪ್ರತಿ ಆಗು-ಹೋಗುಗಳೊಂದಿಗೂ ಅವರಿಗೆ ಸಂಬಂಧ ಇರುತ್ತದೆ. ಒಂದು ರೀತಿಯಲ್ಲಿ, ಓದುಗರಿಗಿಂತ ಹೆಚ್ಚಿನ ಹೊಣೆಗಾರಿಕೆ ಇರುವುದು ಮಾಧ್ಯಮದವರ ಮೇಲೆಯೇ. ಪತ್ರಿಕೆಯ ಮುಖಪುಟ ಬಿಡಿ, ಒಳಪುಟದಲ್ಲಿ ಪ್ರಕಟವಾಗುವ ಸಣ್ಣದೊಂದು ಸುದ್ದಿಗೂ ಊರನ್ನೇ ಹೊತ್ತಿಸಿಬಿಡುವ ಸಾಮಥ್ರ್ಯ ಇರುತ್ತದೆ. ಹೀಗಿರುವಾಗ ಮಾಧ್ಯಮಗಳ ವಹಿಸಬೇಕಾದ ಎಚ್ಚರ ಕಡಿಮೆಯದಲ್ಲ. ಅಂದಹಾಗೆ, ಓದುಗರಂತೆ ಪತ್ರಿಕೆಗಳಿಗಿಂತಲೂ ಕೆಲವು ಜವಾಬ್ದಾರಿಗಳಿವೆ. ಪ್ರತಿದಿನ ಹದಿನಾಲ್ಕೊ ಇಪ್ಪತ್ತೋ ಪುಟಗಳನ್ನು ತಯಾರಿಸುವ ಸಂಪಾದಕೀಯ ಬಳಗಕ್ಕೂ ಕೆಲವು ಹೊಣೆಗಾರಿಕೆಗಳಿವೆ. ಪುಟಗಳನ್ನು ಅಕ್ಷರಗಳಿಂದ ತುಂಬಿಸುವುದಷ್ಟೇ ಪತ್ರಿಕೋದ್ಯಮ ಅಲ್ಲ. ಆ ಪ್ರತಿ ಅಕ್ಷರಗಳೂ ಸಮಾಜದ ಆರೋಗ್ಯವನ್ನು ಕಾಪಾಡುವುಷ್ಟು ಸತ್ಯ, ನ್ಯಾಯನಿಷ್ಠವೂ ಆಗಿರಬೇಕಾಗುತ್ತದೆ. ಎಲ್ಲೋ ಕಂಪ್ಯೂಟರ್‍ನ ಮುಂದೆ ಕೂತು ಎಲೆಕ್ಟ್ರಿಕ್ ವಯರುಗಳನ್ನು ಜಿಲೆಟಿನ್ ಕಡ್ಡಿಗಳೆಂದೂ ಪಟಾಕಿಯನ್ನು ಬಾಂಬ್ ಎಂದೂ ಬರೆಯುವುದು ಸುಲಭ. ‘ಮೂಲಗಳು ತಿಳಿಸಿವೆ...’ ಎಂಬ 8 ಅಕ್ಷರಗಳನ್ನು ಬಳಸಿ ಭಯೋತ್ಪಾದನೆಯ ಸ್ಕ್ರಿಪ್ಟ್ ರಚಿಸುವುದೇನೂ ಕಷ್ಟವಲ್ಲ. ಅದಕ್ಕೆ ಪೆನ್ನು ಮತ್ತು ಕಾಗದ ಇದ್ದರಷ್ಟೇ ಸಾಕು. ಆದರೆ, ಆ ಸುದ್ದಿ ಮಾಡುವ ಪರಿಣಾಮ ಸಣ್ಣದಲ್ಲವಲ್ಲ. ಆದ್ದರಿಂದ, ಮಾಧ್ಯಮಗಳು ಜಾಗರೂಕತೆ ಪಾಲಿಸಬೇಕಾಗಿದೆ. ಅದರಲ್ಲೂ ಭಯೋತ್ಪಾದನೆಯಂಥ ಪ್ರಕರಣಗಳನ್ನು ವರದಿ ಮಾಡುವಾಗ, ‘ಕಣ್ಣಲ್ಲಿ ಕಂಡರೂ ಪರಾಂಬರಿಸಿ ನೋಡು..’ ಎಂಬ ತತ್ವಕ್ಕೆ ಭದ್ರವಾಗಿ ಅಂಟಿಕೊಳ್ಳಬೇಕಾಗಿದೆ. ಪ್ರಕರಣದಲ್ಲಿ ಆಯಿಷಾ ಇರಲಿ, ಗಣೇಶನೇ ಇರಲಿ ಇಬ್ಬರನ್ನೂ ವ್ಯಕ್ತಿಗಳಾಗಿ ನೋಡಬೇಕೇ ಹೊರತು ಎರಡು ಧರ್ಮಗಳ ಪ್ರತಿನಿಧಿಗಳಾಗಿ ಅಲ್ಲ. ಹೆಸರು ಗಣೇಶ್ ಎಂದು ಇದ್ದ ಮಾತ್ರಕ್ಕೇ ಆತ ಅಪ್ಪಟ ಹಿಂದೂ ಆಗುವುದು ಮತ್ತು ಆಯಿಷಾ ಎಂದು ಇದ್ದ ಮಾತ್ರಕ್ಕೇ ಆಕೆ ಅಪ್ಪಟ್ಟ ಮುಸ್ಲಿಮ್ ಆಗುವುದೆಲ್ಲ ನಮ್ಮ ನಮ್ಮ ಭ್ರಮೆ. ನಾವು ಇಂತಹ ಭ್ರಮೆಗಳಿಂದ ಹೊರ ಬರಬೇಕಾಗಿದೆ. ತಪ್ಪಿತಸ್ಥರನ್ನು ಅವರ ಧರ್ಮ, ಜಾತಿ, ಸಂಘಟನೆಗಳ ಹಂಗಿಲ್ಲದೆ ಖಂಡಿಸಬೇಕಾದ ಮತ್ತು ಅವರನ್ನು ಸಮಾಜದಿಂದ ಬೇರ್ಪಡಿಸಿ ನೋಡಬೇಕಾದ ಹೊಣೆಗಾರಿಕೆ ಸಮಾಜದಂತೆಯೇ ಪತ್ರಿಕೆಗಳ ಮೇಲೂ ಇದೆ.
 ಏನೇ ಆಗಲಿ, ತಾನು ಬಂಧನಕ್ಕೆ ಒಳಗಾಗುವ ಮೂಲಕ ಮಾಧ್ಯಮಗಳ ಧೋರಣೆಯನ್ನು ಆಯಿಷಾ ಮತ್ತೊಮ್ಮೆ ಪ್ರಶ್ನೆಗೆ ಒಳಪಡಿಸಿದ್ದಾಳೆ. ಗೋಪಾಲ್, ವಿಕಾಸ್, ಪವನ್, ಗಣೇಶ್‍ರಿಗಿಲ್ಲದ ಮಹತ್ವ ತನ್ನ ಪ್ರಕರಣಕ್ಕೇಕೆ ಎಂಬುದೇ ಆ ಪ್ರಶ್ನೆ. ಅವರು ಮುಖಪುಟಕ್ಕೆ ಅನರ್ಹರೆಂದಾದರೆ ತಾನೇಕೆ ಅರ್ಹವಾದೆ ಎಂದೇ ಅವಳ ಪ್ರಶ್ನೆ. ಈ ಪ್ರಶ್ನೆಗಳನ್ನು ಮಾಧ್ಯಮಗಳು ಗಂಭೀರವಾಗಿ ಸ್ವೀಕರಿಸಿ, ಆತ್ಮಾವಲೋಕನ ನಡೆಸಬೇಕಾಗಿದೆ. ತಪ್ಪನ್ನು ತಿದ್ದಿಕೊಳ್ಳುತ್ತಾ, ‘ನ್ಯಾಯ ಎಲ್ಲರಿಗೂ ಒಂದೇ..’ ಎಂಬ ಧೋರಣೆಯೆಡೆಗೆ ಮರಳಬೇಕಾಗಿದೆ.

Wednesday, November 6, 2013

ವಿದ್ವಾಂಸರೇ, ನಿಮಗೆ ಸಮುದಾಯದ ಮಾನ, ಕಣ್ಣೀರಿಗಿಂತ ಭಿನ್ನಾಭಿಪ್ರಾಯಗಳೇ ದೊಡ್ಡದಾಯಿತೇ?


  ವರದಕ್ಷಿಣೆ
  ಬಡತನ
  ನಿರುದ್ಯೋಗ
  ಶೈಕ್ಷಣಿಕ ಹಿಂದುಳಿಯುವಿಕೆ
  ಅಪರಾಧ ಪ್ರವೃತ್ತಿಗಳು..
  ಇವು ಮತ್ತು ಇಂಥ ಇನ್ನೂ ಅನೇಕ ಸಮಸ್ಯೆಗಳನ್ನು ಹೊತ್ತು ತಿರುಗುತ್ತಿರುವ ಮುಸ್ಲಿಮ್ ಸಮುದಾಯ ಯಾವ ಕಾರಣಕ್ಕಾಗಿ ಸುದ್ದಿಯಲ್ಲಿರಬೇಕು? ಅದರ ಆದ್ಯತೆಗಳು ಏನಾಗಿರಬೇಕು? ಒಂದು ಕಡೆ ಅನಕ್ಷರಸ್ಥರಾಗಿರುವ ಹಾಜಬ್ಬ ಎಂಬ ಬ್ಯಾರಿ ರಾಜ್ಯೋತ್ಸವ ಪ್ರಶಸ್ತಿ ಪಡಕೊಳ್ಳುವಾಗ ಇನ್ನೊಂದು ಕಡೆ ಈ ಸಂಭ್ರಮದ ಕ್ಷಣವನ್ನು ಅನುಭವಿಸದಂಥ ವಾತಾವರಣವನ್ನು ಅಕ್ಷರಸ್ಥರು, ಜ್ಞಾನಿಗಳು, ವಿದ್ವಾಂಸರೆನಿಸಿಕೊಂಡವರು ನಿರ್ಮಿಸಿರುವರೇಕೆ? ಹಾಜಬ್ಬರ ಹರೇಕಳಕ್ಕೂ ಶುಕ್ರವಾರದ ಜುಮಾ ನಮಾಝನ್ನು ಬೀದಿ ಜಗಳವಾಗಿಸಿದ ಉಳ್ಳಾಲಕ್ಕೂ ಕೂಗಳತೆಯ ಅಂತರ. ಒಂದು ಕಡೆ ಅನಕ್ಷರಸ್ಥ. ಇನ್ನೊಂದು ಕಡೆ ಅಕ್ಷರಸ್ಥರು. ಒಂದು ಕಡೆ ಕಿತ್ತಳೆ ಹಣ್ಣನ್ನು ಮಾರುವ ಸಾಮಾನ್ಯ ಶ್ರಮಿಕ. ಇನ್ನೊಂದು ಕಡೆ ಸಮುದಾಯದ ಆದರ, ಗೌರವಕ್ಕೆ ಪಾತ್ರರಾದ ಮಂದಿ. 51 ನಂಬರ್‍ನ ಬಸ್ಸಲ್ಲಿ ಹರೇಕಳದಿಂದ ಮಂಗಳೂರಿನವರೆಗೆ ಬಂದು, ಬುಟ್ಟಿಯಲ್ಲಿ ಕಿತ್ತಳೆ ಹಣ್ಣನು ತುಂಬಿಸಿ ಗಿರಾಕಿಗಳನ್ನು ಹುಡುಕುತ್ತಾ ತಿರುಗುವ ಹಾಜಬ್ಬರಿಂದ ಒಂದು ಸರಕಾರವೇ ಗೌರವಿಸುವಂಥ ಕ್ರಾಂತಿಯನ್ನು ಮಾಡಲು ಸಾಧ್ಯವೆಂದಾದರೆ, ಸಮುದಾಯದ ನೇತೃತ್ವ ಸ್ಥಾನದಲ್ಲಿರುವ ವಿದ್ವಾಂಸರಿಗೆ ಸಾಮುದಾಯಿಕ ಕ್ರಾಂತಿಯೊಂದಕ್ಕೆ ಮುನ್ನಡಿ ಬರೆಯುವುದು ಖಂಡಿತ ಅಸಾಧ್ಯ ಅಲ್ಲ. ಸಮುದಾಯದಲ್ಲಿ ಬವಣೆಯ ಕತೆಗಳು ನೂರಾರು ಇವೆ. ಇವುಗಳಲ್ಲಿ ಹೆಚ್ಚಿನವು ಕಣ್ಣೀರಿನೊಂದಿಗೆ ಆರಂಭವಾಗಿ ಕಣ್ಣೀರಿನೊಂದಿಗೆ ಕೊನೆಗೊಳ್ಳುವಂಥವು. ಹಾಗಂತ, ಈ ಎಲ್ಲ ಕಣ್ಣೀರ ಕತೆಗಳಿಗೂ ವಿದ್ವಾಂಸರೇ ಕಾರಣವೆಂದು ಹೇಳುತ್ತಿಲ್ಲ. ಎಲ್ಲ ಸಮಸ್ಯೆಗಳನ್ನೂ ಕ್ಷಣ ಮಾತ್ರದಲ್ಲಿ ಇಲ್ಲವಾಗಿಸುವ ಮಂತ್ರ ದಂಡವೂ ಅವರಲ್ಲ. ಆದರೂ, ಅವರು ಮನಸ್ಸು ಮಾಡಿದರೆ, ಈ ಕಣ್ಣೀರ ಕತೆಗಳಲ್ಲಿ ದೊಡ್ಡದೊಂದು ಭಾಗವನ್ನು ಪನ್ನೀರ ಕತೆಗಳಿಗಾಗಿ ಮಾರ್ಪಡಿಸುವುದಕ್ಕೆ ನಿಜಕ್ಕೂ ಸಾಧ್ಯವಿದೆ. ಯಾಕೆಂದರೆ, ವಿದ್ವಾಂಸರೆಂದರೆ ಹಾಜಬ್ಬರಂತೆ ಅಲ್ಲ. ಅವರ ಮಾತು, ಆದೇಶಗಳನ್ನು ಸಮುದಾಯ ಅಪಾರ ಗೌರವದಿಂದ ಕಾಣುತ್ತದೆ. ಜನಪ್ರತಿನಿಧಿಗಳ ಹೇಳಿಕೆಗಳಂತೆ ವಿದ್ವಾಂಸರ ಅಭಿಪ್ರಾಯಗಳನ್ನು ಸಮುದಾಯ ಎಂದೂ ಪರಿಗಣಿಸುವುದಿಲ್ಲ. ಅವರೊಂದು ಪರೋಕ್ಷ ನ್ಯಾಯಾಲಯ. ಆ ನ್ಯಾಯಾಲಯದ ತೀರ್ಪನ್ನು ಸಮುದಾಯ ಅತೀ ಗೌರವದಿಂದ ಸ್ವೀಕರಿಸಿ ಪಾಲಿಸುವಷ್ಟು ಅವರ ಪ್ರಭಾವ ಹರಡಿಕೊಂಡಿದೆ. ಇಂಥ ಸ್ಥಿತಿಯಲ್ಲಿ, ವಿದ್ವಾಂಸ ವಲಯವು ಸಮುದಾಯದಲ್ಲಿ ನಿರ್ವಹಿಸಬೇಕಾದ ಪಾತ್ರ ಏನಾಗಿತ್ತು? ಅದರ ಸ್ವರೂಪ ಹೇಗಿರಬೇಕಿತ್ತು? ಸದ್ಯ ಅದು ಯಾವ ಪಾತ್ರವನ್ನು ನಿರ್ವಹಿಸುತ್ತಿದೆ? ಇಷ್ಟಕ್ಕೂ, ಯಾವುದಾದರೊಂದು ಒಂಟಿ ಪ್ರಕರಣವನ್ನು ಎತ್ತಿಕೊಂಡು ಹೀಗೆ ಪ್ರಶ್ನಿಸುತ್ತಿಲ್ಲ. ಇಂಥ ಪ್ರಶ್ನೆಗಳಿಗೆ ಪ್ರಚೋದಕವಾಗುವ ಅನೇಕಾರು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ, ನಡೆಯುತ್ತಿವೆ. ಇಂಥ ನಕಾರಾತ್ಮಕ ಪ್ರಕರಣಗಳಿಂದಾಗಿ ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಗೀಡಾಗುವುದಕ್ಕಿಂತ ಸಕಾರಾತ್ಮಕ ಪ್ರಕರಣಗಳಿಗಾಗಿ ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸುವಂಥ ಸುದ್ದಿಗಳನ್ನು ಸೃಷ್ಟಿಸುವುದಕ್ಕೆ ವಿದ್ವಾಂಸರಿಗೆ ಸಾಧ್ಯವಿಲ್ಲವೇ?
  ಭಿನ್ನಾಭಿಪ್ರಾಯವೆಂಬುದು ಮೊನ್ನೆ ಉಳ್ಳಾಲದ ಜುಮಾ ಪ್ರಕರಣದಿಂದ ದಿಢೀರಾಗಿ ಉದ್ಭವಿಸಿದ ಹೊಸ ಜೀವಿಯೇನೂ ಅಲ್ಲ. ಭಿನ್ನಾಭಿಪ್ರಾಯಕ್ಕೆ ಮನುಷ್ಯನ ಉಸಿರಿನಷ್ಟೇ ಆಪ್ತವಾದ ಮತ್ತು ಸಹಜವಾದ ಸಂಬಂಧ ಇದೆ. ಆದ್ದರಿಂದ ಭಿನ್ನಾಭಿಪ್ರಾಯವನ್ನೇ ಮಟ್ಟ ಹಾಕುವುದು ಅಥವಾ ಭಿನ್ನಾಭಿಪ್ರಾಯವಿಲ್ಲದ ಒಂದು ಸಮೂಹವನ್ನು ಕಟ್ಟುವುದು ಯಾರಿಂದಲೂ ಸಾಧ್ಯವಿಲ್ಲ. ಸಮುದಾಯದಲ್ಲಿ ಅನೇಕಾರು ಸಂಘಟನೆಗಳಿವೆ. ಈ ಸಂಘಟನೆಗಳಿಗೆ ಅವುಗಳದ್ದೇ ಆದ ಭಿನ್ನಧೋರಣೆ ಗುರಿ, ಹಿತಾಸಕ್ತಿಗಳಿವೆ. ಇವು ಏನೇ ಇದ್ದರೂ ಈ ಸಂಘಟನೆಗಳಲ್ಲಿ ಇರುವವರೆಲ್ಲ ಒಂದೇ ದೇವ, ಒಂದೇ ಗ್ರಂಥ, ಒಂದೇ ಪ್ರವಾದಿ, ಒಂದೇ ಕಿಬ್ಲಾ(ನಮಾಝಿಗೆ ಮುಖ ಮಾಡುವ ಸ್ಥಳ)ವನ್ನು ಒಪ್ಪಿಕೊಂಡವರು. ‘ಉಮ್ಮತ್’ (ಸಮುದಾಯ) ಎಂಬ ಪರಿಕಲ್ಪನೆಯಲ್ಲಿ ಗುರುತಿಸಿಕೊಂಡವರು. ಹೀಗಿರುವಾಗ, ಸಂಘಟನೆಗಳ ಮಧ್ಯೆ ಒಂದು ನವಿರಾದ ಸಂಬಂಧವನ್ನು ಬೆಳೆಸಿಕೊಳ್ಳಲು ಸಮುದಾಯಕ್ಕೆ ಸಾಧ್ಯವಿಲ್ಲವೇ? ಒಂದು ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಸಂಘಟನೆಗಳಿರುವುದು ವರವಾಗಬೇಕೆ ಹೊರತು ಶಾಪ ಅಲ್ಲವಲ್ಲ. ಒಂದು ಸಂಘಟನೆಯು ಸಮುದಾಯ ಎದುರಿಸುತ್ತಿರುವ ಸಕಲ ಸಮಸ್ಯೆಗಳನ್ನೂ ಪ್ರತಿನಿಧಿಸುವಷ್ಟು, ಅವುಗಳ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗುವಷ್ಟು ಸಮರ್ಥ ಆಗಿರಬೇಕಿಲ್ಲ. ಅಷ್ಟೊಂದು ಬಂಡವಾಳ, ಯೋಗ್ಯ ಕಾರ್ಯಕರ್ತರು, ವಿಶಾಲ ನೆಟ್‍ವರ್ಕ್ ಇರುವ ಅವಕಾಶಗಳೂ ಕಡಿಮೆ. ಆದ್ದರಿಂದ ಸಂಘಟನೆಗಳು ಒಂದಕ್ಕಿಂತ ಹೆಚ್ಚಿರುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವು ತಮ್ಮನ್ನು ತೊಡಗಿಸಿಕೊಳ್ಳುವುದು ಸ್ವಾಗತಾರ್ಹವೇ. ಒಂದು ಸಂಘಟನೆ ಶಿಕ್ಷಣವನ್ನು ಕೇಂದ್ರೀಕರಿಸಿದರೆ ಇನ್ನೊಂದು ವರದಕ್ಷಿಣೆಯನ್ನು ಎತ್ತಿಕೊಳ್ಳಬಹುದು. ಇನ್ನೊಂದು, ಹಸಿವು ಮುಕ್ತ ಸಮಾಜದ ಬಗ್ಗೆ, ಮತ್ತೊಂದು ಮಹಿಳಾ ಸಬಲೀಕರಣದ ಬಗ್ಗೆ.. ಹೀಗೆ ವಿವಿಧ ಕ್ಷೇತ್ರಗಳನ್ನು ಹಂಚಿಕೊಳ್ಳುವುದರಿಂದ ಸಮುದಾಯದ ಸಬಲೀಕರಣಕ್ಕೆ ಹೆಚ್ಚು ಸುಲಭ ಮತ್ತು ವೇಗ ಒದಗುತ್ತದೆ. ಹಾಗಂತ, ಇವೆಲ್ಲವನ್ನೂ ಇಲ್ಲಿ ವಿಸ್ತøತವಾಗಿ ಹೇಳಿಕೊಳ್ಳಬೇಕೆಂದೇನೂ ಇಲ್ಲ. ವಿದ್ವಾಂಸ ವಲಯಕ್ಕೆ ಇವು ಚೆನ್ನಾಗಿಯೇ ಗೊತ್ತಿದೆ. ಇಷ್ಟಿದ್ದೂ, ಭಿನ್ನಾಭಿಪ್ರಾಯಗಳೇಕೆ ಬೀದಿ ಜಗಳವಾಗಿ ಗುರುತಿಸಿಕೊಳ್ಳುತ್ತಿದೆ? ತೀರಾ ನಾಲ್ಕು ಗೋಡೆಗಳೊಳಗೆ ಬಗೆಹರಿಸಿಕೊಳ್ಳಬಹುದಾದಂಥ ಸಮಸ್ಯೆಗಳೆಲ್ಲ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳಿಗೆ ಆಹಾರವಾಗುವಷ್ಟು ಬೃಹದಾಕಾರ ಪಡೆಯುತ್ತಿರುವುದೇಕೆ? ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ಸಮುದಾಯದ ಮಾನ, ಗೌರವ, ಅಭಿವೃದ್ಧಿಗಿಂತಲೂ ದೊಡ್ಡದೇ? ಸಮುದಾಯವು ಇಂದು ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಸದ್ಯ ಸಂಘಟನೆಗಳು ಬೀದಿ ಜಗಳವಾಗಿಸುತ್ತಿರುವ ವಿಷಯ ಅತಿ ಪ್ರಾಮುಖ್ಯದ್ದೇ? ದಯವಿಟ್ಟು; ಬೀಡಿ ಸುರುಟುವ, ಬಾರದ ಗಂಡನನ್ನು ನಿರೀಕ್ಷಿಸುತ್ತಾ ನಿಟ್ಟುಸಿರು ಬಿಡುವ, ಸೂಕ್ತ ವರರನ್ನು ಖರೀದಿಸುವ ಸಾಮಥ್ರ್ಯವಿಲ್ಲದೇ ಅಂಡಲೆಯುವ, ವರದಕ್ಷಿಣೆಯ ಕಾರಣದಿಂದ ದೂರದ ಘಟ್ಟಪ್ರದೇಶಕ್ಕೆ ಮಗಳನ್ನು ಮದುವೆ ಮಾಡಿಕೊಟ್ಟು ಆತಂಕದಿಂದಲೇ ಬದುಕುತ್ತಿರುವ, ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡುವವರನ್ನು ಕಂಡು ಉಗುಳು ನುಂಗಿಕೊಳ್ಳುವ.. ಒಂದು ಸಮುದಾಯವನ್ನು ಎದುರಿಟ್ಟುಕೊಂಡು ಹೃದಯಕ್ಕೆ ಕೈಯಿಟ್ಟು ಪ್ರಶ್ನಿಸಿಕೊಳ್ಳಿ. ನಮ್ಮ ಆದ್ಯತೆ ಏನಾಗಿರಬೇಕು? ಯಾವುದರತ್ತ ನಾವು ಗಮನ ಹರಿಸಬೇಕು? ಕಿತ್ತಳೆ ಹಣ್ಣನ್ನು ಮಾರಿ ಓರ್ವ ಸಾಮಾನ್ಯ ಹಾಜಬ್ಬರಿಗೆ ಒಂದು ಊರನ್ನೇ ಬೆಳಗಿಸುವ ಸಾಮಥ್ರ್ಯ ಇದೆಯೆಂದಾದರೆ, ಸಮುದಾಯದ ನೇತೃತ್ವ ಸ್ಥಾನದಲ್ಲಿರುವವರಿಗೆ ಎಷ್ಟು ಸಾಮಥ್ರ್ಯ ಇರಬೇಡ? ಆ ಸಾಮಥ್ರ್ಯವು ಸರಿಯಾದ ರೂಪದಲ್ಲಿ ವಿನಿಯೋಗವಾಗಿಬಿಟ್ಟರೆ ಎಂಥ ಬದಲಾವಣೆಗಳಾಗಬಹುದು?
  ನಿಜವಾಗಿ, ಇಡೀ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸಂಘಟಿತವಾಗಿರುವುದು ಮುಸ್ಲಿಮ್ ಸಮುದಾಯವೇ. ಮುಸ್ಲಿಮರು ವಾರಕ್ಕೊಮ್ಮೆಯಾದರೂ ಕಡ್ಡಾಯವಾಗಿ ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ಅಲ್ಲಿ ವಿದ್ವಾಂಸರಿಂದ ಧಾರ್ಮಿಕ ಹಿತವಚನಗಳನ್ನು ಆಲಿಸುತ್ತಾರೆ. ಮಸೀದಿಗೆ ತಿಂಗಳು ತಿಂಗಳು ವಂತಿಗೆ ಕೊಡುತ್ತಾರೆ. ಅಲ್ಲದೇ, ಒಂದು ಮಸೀದಿಯ ವ್ಯಾಪ್ತಿಯೊಳಗೆ ಬರುವವರ ಹೆಸರು, ಮನೆಯ ಸದಸ್ಯರ ಸಂಖ್ಯೆ, ಗಂಡು-ಹೆಣ್ಣಿನ ವಿವರ.. ಎಲ್ಲವೂ ಆಯಾ ಮಸೀದಿಯಲ್ಲಿ ಬಹುತೇಕ ನಮೂದಾಗಿರುತ್ತದೆ. ಯಾವ ಮನೆಯಲ್ಲಿ ಮದುವೆ ಪ್ರಾಯದ ಎಷ್ಟು ಯುವತಿಯರಿದ್ದಾರೆ, ಎಷ್ಟು ವಿಧವೆಯರಿದ್ದಾರೆ, ರೋಗಿಗಳೆಷ್ಟು, ದುಡಿಯುವವರೆಷ್ಟು, ಮಕ್ಕಳೆಷ್ಟು.. ಎಂಬುದೆಲ್ಲ ಒಂದು ಮಸೀದಿಗೆ ಒಳಪಟ್ಟವರಲ್ಲಿ ಹೆಚ್ಚಿನವರಿಗೆ ಗೊತ್ತಿರುತ್ತದೆ. ಆ ಮಸೀದಿಯ ಆಡಳಿತ ಮಂಡಳಿ ಮತ್ತು ಧಾರ್ಮಿಕ ಗುರುಗಳು ತುಸು ಜಾಗೃತವಾದರೂ ಸಾಕು, ಅವಕಾಶಗಳ ದೊಡ್ಡದೊಂದು ಬಾಗಿಲೇ ತೆರೆದು ಬಿಡಬಹುದು. ಇವತ್ತು ಸಮುದಾಯದಲ್ಲಿ ದಾನಿಗಳಿಗೆ ಕೊರತೆಯೇನೂ ಇಲ್ಲ. ಕೊರತೆ ಇರುವುದು ಇಚ್ಛಾಶಕ್ತಿಯದ್ದು ಮಾತ್ರ. ನಿಜವಾಗಿ, ಪ್ರತಿ ಮಸೀದಿಯ ಜಮಾಅತ್‍ನಲ್ಲೂ ಶ್ರೀಮಂತರು ಮತ್ತು ವಿದೇಶಗಳಲ್ಲಿ ಉದ್ಯೋಗದಲ್ಲಿ ಇರುವವರು ಖಂಡಿತ ಇರುತ್ತಾರೆ. ಹಾಗಂತ, ತಮ್ಮ ಮಸೀದಿಯಲ್ಲಿರುವ ಬಡವರ ಕುರಿತಂತೆ ಅವರಿಗೆ ಅಷ್ಟಾಗಿ ಮಾಹಿತಿ ಇರಬೇಕೆಂದೇನೂ ಇಲ್ಲ. ಒಂದು ವೇಳೆ ಇದ್ದರೂ, ನೆರವು ನೀಡಬೇಕಾದುದು ತನ್ನ ಧಾರ್ಮಿಕ ಕರ್ತವ್ಯ ಎಂಬ ಪ್ರಜ್ಞೆ ಅವರನ್ನು ಇಲ್ಲದೇ ಇರಲೂಬಹುದು. ಆದ್ದರಿಂದ, ಆಯಾ ಪ್ರದೇಶದ ಮಸೀದಿ ವಿದ್ವಾಂಸರು ತಮ್ಮ ವ್ಯಾಪ್ತಿಯ ಬಡವರ ಪಟ್ಟಿಯನ್ನು ಹಿಡಿದು ಈ ಶ್ರೀಮಂತರನ್ನು ಮುಖತಃ ಭೇಟಿಯಾದರೆ ಎಷ್ಟೇ ಜಿಪುಣನಾದರೂ ಖಂಡಿತ ನೆರವು ನೀಡುವ ಸಾಧ್ಯತೆಯಿದೆ. ಅಲ್ಲದೆ, ಸಮುದಾಯದಲ್ಲಿ ದೊಡ್ಡದೊಂದು ಯುವ ಪಡೆಯಿದೆ. ಇವತ್ತು ಈ ಯುವ ಪಡೆಯ ಮೇಲಿರುವ ದೊಡ್ಡ ಆರೋಪ ಏನೆಂದರೆ, ಸಮಾಜ ಬಾಹಿರ ಕೃತ್ಯಗಳಲ್ಲಿ ಇವರ ಹೆಸರೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬುದು. ಹೀಗಿರುವಾಗ ಮಸೀದಿ ಉಸ್ತಾದರೂ ಸಕ್ರಿಯರಾದರೆ ಸಮುದಾಯದ ಯುವಕರನ್ನು ಸಂಪನ್ಮೂಲವಾಗಿ ಬದಲಿಸಲು ಖಂಡಿತ ಸಾಧ್ಯವಿದೆ. ಯುವಕರು ಎಷ್ಟೇ ಕೆಟ್ಟವರಾಗಿದ್ದರೂ ವಿದ್ವಾಂಸರನ್ನು (ಉಸ್ತಾದರನ್ನು) ಗೌರವಿಸುತ್ತಾರೆ. ಆದ್ದರಿಂದ ಯುವಕರೊಂದಿಗೆ ಸಲುಗೆ ಬೆಳೆಸಿ ಅವರನ್ನು ಮಸೀದಿಯಲ್ಲಿ ಒಟ್ಟುಗೂಡಿಸಿ, ಮಸೀದಿಯ ವ್ಯಾಪ್ತಿಗೊಳಪಟ್ಟ ಪ್ರತಿ ಮನೆಗಳ ಸರ್ವೇ ನಡೆಸುವುದಕ್ಕೆ ಒಂದು ತಂಡ; ರೋಗಿಗಳು, ವಿಧವೆಯರು, ಯುವತಿಯರ ಪಟ್ಟಿ ತಯಾರಿಸುವುದಕ್ಕೆ ಒಂದು ತಂಡ; ಪಟ್ಟಣಗಳಲ್ಲಿರುವ ದಾನಿಗಳು ಮತ್ತು ಸಮಾಜಸೇವಾ ಸಂಘಟನೆಗಳನ್ನು ಸಂಪರ್ಕಿಸುವುದಕ್ಕೆ ಒಂದು ತಂಡ.. ಹೀಗೆ ಮೂರ್ನಾಲ್ಕು ಯುವಕರ ಬೇರೆ ಬೇರೆ ತಂಡಗಳನ್ನು ರಚಿಸಿ ಆಯಾ ತಂಡಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟರೆ ಮತ್ತು ಉಸ್ತಾದರು ಸಕ್ರಿಯವಾಗಿ ಈ ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ದೊಡ್ಡದೊಂದು ಬದಲಾವಣೆ ಸಾಧ್ಯವಾದೀತು.
  ಏನೇ ಆಗಲಿ, ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ಸಮುದಾಯವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗಿಂತ ದೊಡ್ಡದೋ ಪ್ರಾಮುಖ್ಯದೋ ಆಗಬಾರದು. ಭಿನ್ನಾಭಿಪ್ರಾಯಗಳ ಮಧ್ಯೆಯೂ ಪರಸ್ಪರ ಜೋಕ್ ವಿನಿಮಯ ಮಾಡಿಕೊಳ್ಳುವಷ್ಟು, ಒಟ್ಟಿಗೆ ಕೂತು ಉಣ್ಣುವಷ್ಟು, ಸಲಾಮ್ ಹೇಳುವಷ್ಟು, ಪರಸ್ಪರರ ಮನೆ, ಮದುವೆ, ಔತಣಗಳಲ್ಲಿ ಭಾಗವಹಿಸುವಷ್ಟು ಹೃದ್ಯ ಸಂಬಂಧವು ವಿದ್ವಾಂಸ ವಲಯದಲ್ಲಿ ಇರಬೇಕು. ಯಾಕೆಂದರೆ, ವಿದ್ವಾಂಸ ವಲಯವು ಒಡೆದರೆ ಸಮುದಾಯವೂ ಒಡೆಯುತ್ತದೆ. ಅವು ಮುಖ ಗಂಟಿಕ್ಕಿಕೊಂಡು ನಡೆದಾಡಿದರೆ, ಸಮುದಾಯದಲ್ಲಿ ಸಲಾಮ್‍ಗಳೇ ನಿಂತು ಹೋಗುತ್ತದೆ. ಈ ಹಿನ್ನೆಲೆಯಲ್ಲಿ, ಭಿನ್ನಾಭಿಪ್ರಾಯಗಳು ಹೇಗಿರಬೇಕು ಮತ್ತು ಅದನ್ನು ಎಷ್ಟರ ಮಟ್ಟಿಗೆ ಬೆಳೆಸಿಕೊಂಡು ಹೋಗಬೇಕು ಎಂಬ ಬಗ್ಗೆ ವಿದ್ವಾಂಸರು ಗಂಭೀರವಾಗಿ ಆಲೋಚಿಸಬೇಕು. ಅನಕ್ಷರಸ್ಥ ಹಾಜಬ್ಬರು ಅಕ್ಷರಸ್ಥರೇ ತಲೆಬಾಗುವಂಥ ಸಾಧನೆಯೊಂದನ್ನು ಮಾಡಿ ಸರ್ವತ್ರ ಶ್ಲಾಘನೆಗೆ ಒಳಗಾಗಿರುವಾಗ, ವಿದ್ವಾಂಸ ವಲಯವು ಸರ್ವತ್ರ ಟೀಕೆಗೆ ಗುರಿಯಾಗಬಹುದಾದ ರೀತಿಯಲ್ಲಿ ನಡಕೊಳ್ಳಬಾರದು. ಹಾಜಬ್ಬರನ್ನು  ಅಭಿನಂದಿಸೋಣ. ಅವರ ಕಿತ್ತಲೆ ಹಣ್ಣಿನ ಬುಟ್ಟಿಯಲ್ಲಿ ಇನ್ನಷ್ಟು ಕ್ರಾಂತಿಕಾರಿ ಆಲೋಚನೆಗಳು ಹುಟ್ಟು ಪಡೆಯಲಿ. ಹಾಗೆಯೇ, ವಿದ್ವಾಂಸ ವಲಯವು ಸರ್ವತ್ರ ಶ್ಲಾಘನೆಗೆ ಪಾತ್ರವಾಗುವ ಕ್ರಾಂತಿಕಾರಿ ನಿಲುವಿಗೆ ಮುನ್ನುಡಿ ಬರೆಯಲಿ. ಹಾಜಬ್ಬರ ಬುಟ್ಟಿ ಮತ್ತು ವಿದ್ವಾಂಸ ವಲಯದ ಜ್ಞಾನವು ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಕಿತ್ತಳೆ ಹಣ್ಣಿನಷ್ಟೇ ರುಚಿಕರ ಮತ್ತು ಸ್ವಾದಭರಿತ ಸುದ್ದಿಗಳನ್ನು ರವಾನಿಸಲಿ.