Wednesday, November 6, 2013

ವಿದ್ವಾಂಸರೇ, ನಿಮಗೆ ಸಮುದಾಯದ ಮಾನ, ಕಣ್ಣೀರಿಗಿಂತ ಭಿನ್ನಾಭಿಪ್ರಾಯಗಳೇ ದೊಡ್ಡದಾಯಿತೇ?


 ವರದಕ್ಷಿಣೆ
 ಬಡತನ
 ನಿರುದ್ಯೋಗ
 ಶೈಕ್ಷಣಿಕ ಹಿಂದುಳಿಯುವಿಕೆ
 ಅಪರಾಧ ಪ್ರವೃತ್ತಿಗಳು..
 ಇವು ಮತ್ತು ಇಂಥ ಇನ್ನೂ ಅನೇಕ ಸಮಸ್ಯೆಗಳನ್ನು ಹೊತ್ತು ತಿರುಗುತ್ತಿರುವ ಮುಸ್ಲಿಮ್ ಸಮುದಾಯ ಯಾವ ಕಾರಣಕ್ಕಾಗಿ ಸುದ್ದಿಯಲ್ಲಿರಬೇಕು? ಅದರ ಆದ್ಯತೆಗಳು ಏನಾಗಿರಬೇಕು? ಒಂದು ಕಡೆ ಅನಕ್ಷರಸ್ಥರಾಗಿರುವ ಹಾಜಬ್ಬ ಎಂಬ ಬ್ಯಾರಿ ರಾಜ್ಯೋತ್ಸವ ಪ್ರಶಸ್ತಿ ಪಡಕೊಳ್ಳುವಾಗ ಇನ್ನೊಂದು ಕಡೆ ಈ ಸಂಭ್ರಮದ ಕ್ಷಣವನ್ನು ಅನುಭವಿಸದಂಥ ವಾತಾವರಣವನ್ನು ಅಕ್ಷರಸ್ಥರು, ಜ್ಞಾನಿಗಳು, ವಿದ್ವಾಂಸರೆನಿಸಿಕೊಂಡವರು ನಿರ್ಮಿಸಿರುವರೇಕೆ? ಹಾಜಬ್ಬರ ಹರೇಕಳಕ್ಕೂ ಶುಕ್ರವಾರದ ಜುಮಾ ನಮಾಝನ್ನು ಬೀದಿ ಜಗಳವಾಗಿಸಿದ ಉಳ್ಳಾಲಕ್ಕೂ ಕೂಗಳತೆಯ ಅಂತರ. ಒಂದು ಕಡೆ ಅನಕ್ಷರಸ್ಥ. ಇನ್ನೊಂದು ಕಡೆ ಅಕ್ಷರಸ್ಥರು. ಒಂದು ಕಡೆ ಕಿತ್ತಳೆ ಹಣ್ಣನ್ನು ಮಾರುವ ಸಾಮಾನ್ಯ ಶ್ರಮಿಕ. ಇನ್ನೊಂದು ಕಡೆ ಸಮುದಾಯದ ಆದರ, ಗೌರವಕ್ಕೆ ಪಾತ್ರರಾದ ಮಂದಿ. 51 ನಂಬರ್‍ನ ಬಸ್ಸಲ್ಲಿ ಹರೇಕಳದಿಂದ ಮಂಗಳೂರಿನವರೆಗೆ ಬಂದು, ಬುಟ್ಟಿಯಲ್ಲಿ ಕಿತ್ತಳೆ ಹಣ್ಣನು ತುಂಬಿಸಿ ಗಿರಾಕಿಗಳನ್ನು ಹುಡುಕುತ್ತಾ ತಿರುಗುವ ಹಾಜಬ್ಬರಿಂದ ಒಂದು ಸರಕಾರವೇ ಗೌರವಿಸುವಂಥ ಕ್ರಾಂತಿಯನ್ನು ಮಾಡಲು ಸಾಧ್ಯವೆಂದಾದರೆ, ಸಮುದಾಯದ ನೇತೃತ್ವ ಸ್ಥಾನದಲ್ಲಿರುವ ವಿದ್ವಾಂಸರಿಗೆ ಸಾಮುದಾಯಿಕ ಕ್ರಾಂತಿಯೊಂದಕ್ಕೆ ಮುನ್ನಡಿ ಬರೆಯುವುದು ಖಂಡಿತ ಅಸಾಧ್ಯ ಅಲ್ಲ. ಸಮುದಾಯದಲ್ಲಿ ಬವಣೆಯ ಕತೆಗಳು ನೂರಾರು ಇವೆ. ಇವುಗಳಲ್ಲಿ ಹೆಚ್ಚಿನವು ಕಣ್ಣೀರಿನೊಂದಿಗೆ ಆರಂಭವಾಗಿ ಕಣ್ಣೀರಿನೊಂದಿಗೆ ಕೊನೆಗೊಳ್ಳುವಂಥವು. ಹಾಗಂತ, ಈ ಎಲ್ಲ ಕಣ್ಣೀರ ಕತೆಗಳಿಗೂ ವಿದ್ವಾಂಸರೇ ಕಾರಣವೆಂದು ಹೇಳುತ್ತಿಲ್ಲ. ಎಲ್ಲ ಸಮಸ್ಯೆಗಳನ್ನೂ ಕ್ಷಣ ಮಾತ್ರದಲ್ಲಿ ಇಲ್ಲವಾಗಿಸುವ ಮಂತ್ರ ದಂಡವೂ ಅವರಲ್ಲ. ಆದರೂ, ಅವರು ಮನಸ್ಸು ಮಾಡಿದರೆ, ಈ ಕಣ್ಣೀರ ಕತೆಗಳಲ್ಲಿ ದೊಡ್ಡದೊಂದು ಭಾಗವನ್ನು ಪನ್ನೀರ ಕತೆಗಳಿಗಾಗಿ ಮಾರ್ಪಡಿಸುವುದಕ್ಕೆ ನಿಜಕ್ಕೂ ಸಾಧ್ಯವಿದೆ. ಯಾಕೆಂದರೆ, ವಿದ್ವಾಂಸರೆಂದರೆ ಹಾಜಬ್ಬರಂತೆ ಅಲ್ಲ. ಅವರ ಮಾತು, ಆದೇಶಗಳನ್ನು ಸಮುದಾಯ ಅಪಾರ ಗೌರವದಿಂದ ಕಾಣುತ್ತದೆ. ಜನಪ್ರತಿನಿಧಿಗಳ ಹೇಳಿಕೆಗಳಂತೆ ವಿದ್ವಾಂಸರ ಅಭಿಪ್ರಾಯಗಳನ್ನು ಸಮುದಾಯ ಎಂದೂ ಪರಿಗಣಿಸುವುದಿಲ್ಲ. ಅವರೊಂದು ಪರೋಕ್ಷ ನ್ಯಾಯಾಲಯ. ಆ ನ್ಯಾಯಾಲಯದ ತೀರ್ಪನ್ನು ಸಮುದಾಯ ಅತೀ ಗೌರವದಿಂದ ಸ್ವೀಕರಿಸಿ ಪಾಲಿಸುವಷ್ಟು ಅವರ ಪ್ರಭಾವ ಹರಡಿಕೊಂಡಿದೆ. ಇಂಥ ಸ್ಥಿತಿಯಲ್ಲಿ, ವಿದ್ವಾಂಸ ವಲಯವು ಸಮುದಾಯದಲ್ಲಿ ನಿರ್ವಹಿಸಬೇಕಾದ ಪಾತ್ರ ಏನಾಗಿತ್ತು? ಅದರ ಸ್ವರೂಪ ಹೇಗಿರಬೇಕಿತ್ತು? ಸದ್ಯ ಅದು ಯಾವ ಪಾತ್ರವನ್ನು ನಿರ್ವಹಿಸುತ್ತಿದೆ? ಇಷ್ಟಕ್ಕೂ, ಯಾವುದಾದರೊಂದು ಒಂಟಿ ಪ್ರಕರಣವನ್ನು ಎತ್ತಿಕೊಂಡು ಹೀಗೆ ಪ್ರಶ್ನಿಸುತ್ತಿಲ್ಲ. ಇಂಥ ಪ್ರಶ್ನೆಗಳಿಗೆ ಪ್ರಚೋದಕವಾಗುವ ಅನೇಕಾರು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ, ನಡೆಯುತ್ತಿವೆ. ಇಂಥ ನಕಾರಾತ್ಮಕ ಪ್ರಕರಣಗಳಿಂದಾಗಿ ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಗೀಡಾಗುವುದಕ್ಕಿಂತ ಸಕಾರಾತ್ಮಕ ಪ್ರಕರಣಗಳಿಗಾಗಿ ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸುವಂಥ ಸುದ್ದಿಗಳನ್ನು ಸೃಷ್ಟಿಸುವುದಕ್ಕೆ ವಿದ್ವಾಂಸರಿಗೆ ಸಾಧ್ಯವಿಲ್ಲವೇ?
 ಭಿನ್ನಾಭಿಪ್ರಾಯವೆಂಬುದು ಮೊನ್ನೆ ಉಳ್ಳಾಲದ ಜುಮಾ ಪ್ರಕರಣದಿಂದ ದಿಢೀರಾಗಿ ಉದ್ಭವಿಸಿದ ಹೊಸ ಜೀವಿಯೇನೂ ಅಲ್ಲ. ಭಿನ್ನಾಭಿಪ್ರಾಯಕ್ಕೆ ಮನುಷ್ಯನ ಉಸಿರಿನಷ್ಟೇ ಆಪ್ತವಾದ ಮತ್ತು ಸಹಜವಾದ ಸಂಬಂಧ ಇದೆ. ಆದ್ದರಿಂದ ಭಿನ್ನಾಭಿಪ್ರಾಯವನ್ನೇ ಮಟ್ಟ ಹಾಕುವುದು ಅಥವಾ ಭಿನ್ನಾಭಿಪ್ರಾಯವಿಲ್ಲದ ಒಂದು ಸಮೂಹವನ್ನು ಕಟ್ಟುವುದು ಯಾರಿಂದಲೂ ಸಾಧ್ಯವಿಲ್ಲ. ಸಮುದಾಯದಲ್ಲಿ ಅನೇಕಾರು ಸಂಘಟನೆಗಳಿವೆ. ಈ ಸಂಘಟನೆಗಳಿಗೆ ಅವುಗಳದ್ದೇ ಆದ ಭಿನ್ನಧೋರಣೆ ಗುರಿ, ಹಿತಾಸಕ್ತಿಗಳಿವೆ. ಇವು ಏನೇ ಇದ್ದರೂ ಈ ಸಂಘಟನೆಗಳಲ್ಲಿ ಇರುವವರೆಲ್ಲ ಒಂದೇ ದೇವ, ಒಂದೇ ಗ್ರಂಥ, ಒಂದೇ ಪ್ರವಾದಿ, ಒಂದೇ ಕಿಬ್ಲಾ(ನಮಾಝಿಗೆ ಮುಖ ಮಾಡುವ ಸ್ಥಳ)ವನ್ನು ಒಪ್ಪಿಕೊಂಡವರು. ‘ಉಮ್ಮತ್’ (ಸಮುದಾಯ) ಎಂಬ ಪರಿಕಲ್ಪನೆಯಲ್ಲಿ ಗುರುತಿಸಿಕೊಂಡವರು. ಹೀಗಿರುವಾಗ, ಸಂಘಟನೆಗಳ ಮಧ್ಯೆ ಒಂದು ನವಿರಾದ ಸಂಬಂಧವನ್ನು ಬೆಳೆಸಿಕೊಳ್ಳಲು ಸಮುದಾಯಕ್ಕೆ ಸಾಧ್ಯವಿಲ್ಲವೇ? ಒಂದು ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಸಂಘಟನೆಗಳಿರುವುದು ವರವಾಗಬೇಕೆ ಹೊರತು ಶಾಪ ಅಲ್ಲವಲ್ಲ. ಒಂದು ಸಂಘಟನೆಯು ಸಮುದಾಯ ಎದುರಿಸುತ್ತಿರುವ ಸಕಲ ಸಮಸ್ಯೆಗಳನ್ನೂ ಪ್ರತಿನಿಧಿಸುವಷ್ಟು, ಅವುಗಳ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗುವಷ್ಟು ಸಮರ್ಥ ಆಗಿರಬೇಕಿಲ್ಲ. ಅಷ್ಟೊಂದು ಬಂಡವಾಳ, ಯೋಗ್ಯ ಕಾರ್ಯಕರ್ತರು, ವಿಶಾಲ ನೆಟ್‍ವರ್ಕ್ ಇರುವ ಅವಕಾಶಗಳೂ ಕಡಿಮೆ. ಆದ್ದರಿಂದ ಸಂಘಟನೆಗಳು ಒಂದಕ್ಕಿಂತ ಹೆಚ್ಚಿರುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವು ತಮ್ಮನ್ನು ತೊಡಗಿಸಿಕೊಳ್ಳುವುದು ಸ್ವಾಗತಾರ್ಹವೇ. ಒಂದು ಸಂಘಟನೆ ಶಿಕ್ಷಣವನ್ನು ಕೇಂದ್ರೀಕರಿಸಿದರೆ ಇನ್ನೊಂದು ವರದಕ್ಷಿಣೆಯನ್ನು ಎತ್ತಿಕೊಳ್ಳಬಹುದು. ಇನ್ನೊಂದು, ಹಸಿವು ಮುಕ್ತ ಸಮಾಜದ ಬಗ್ಗೆ, ಮತ್ತೊಂದು ಮಹಿಳಾ ಸಬಲೀಕರಣದ ಬಗ್ಗೆ.. ಹೀಗೆ ವಿವಿಧ ಕ್ಷೇತ್ರಗಳನ್ನು ಹಂಚಿಕೊಳ್ಳುವುದರಿಂದ ಸಮುದಾಯದ ಸಬಲೀಕರಣಕ್ಕೆ ಹೆಚ್ಚು ಸುಲಭ ಮತ್ತು ವೇಗ ಒದಗುತ್ತದೆ. ಹಾಗಂತ, ಇವೆಲ್ಲವನ್ನೂ ಇಲ್ಲಿ ವಿಸ್ತøತವಾಗಿ ಹೇಳಿಕೊಳ್ಳಬೇಕೆಂದೇನೂ ಇಲ್ಲ. ವಿದ್ವಾಂಸ ವಲಯಕ್ಕೆ ಇವು ಚೆನ್ನಾಗಿಯೇ ಗೊತ್ತಿದೆ. ಇಷ್ಟಿದ್ದೂ, ಭಿನ್ನಾಭಿಪ್ರಾಯಗಳೇಕೆ ಬೀದಿ ಜಗಳವಾಗಿ ಗುರುತಿಸಿಕೊಳ್ಳುತ್ತಿದೆ? ತೀರಾ ನಾಲ್ಕು ಗೋಡೆಗಳೊಳಗೆ ಬಗೆಹರಿಸಿಕೊಳ್ಳಬಹುದಾದಂಥ ಸಮಸ್ಯೆಗಳೆಲ್ಲ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳಿಗೆ ಆಹಾರವಾಗುವಷ್ಟು ಬೃಹದಾಕಾರ ಪಡೆಯುತ್ತಿರುವುದೇಕೆ? ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ಸಮುದಾಯದ ಮಾನ, ಗೌರವ, ಅಭಿವೃದ್ಧಿಗಿಂತಲೂ ದೊಡ್ಡದೇ? ಸಮುದಾಯವು ಇಂದು ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಸದ್ಯ ಸಂಘಟನೆಗಳು ಬೀದಿ ಜಗಳವಾಗಿಸುತ್ತಿರುವ ವಿಷಯ ಅತಿ ಪ್ರಾಮುಖ್ಯದ್ದೇ? ದಯವಿಟ್ಟು; ಬೀಡಿ ಸುರುಟುವ, ಬಾರದ ಗಂಡನನ್ನು ನಿರೀಕ್ಷಿಸುತ್ತಾ ನಿಟ್ಟುಸಿರು ಬಿಡುವ, ಸೂಕ್ತ ವರರನ್ನು ಖರೀದಿಸುವ ಸಾಮಥ್ರ್ಯವಿಲ್ಲದೇ ಅಂಡಲೆಯುವ, ವರದಕ್ಷಿಣೆಯ ಕಾರಣದಿಂದ ದೂರದ ಘಟ್ಟಪ್ರದೇಶಕ್ಕೆ ಮಗಳನ್ನು ಮದುವೆ ಮಾಡಿಕೊಟ್ಟು ಆತಂಕದಿಂದಲೇ ಬದುಕುತ್ತಿರುವ, ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡುವವರನ್ನು ಕಂಡು ಉಗುಳು ನುಂಗಿಕೊಳ್ಳುವ.. ಒಂದು ಸಮುದಾಯವನ್ನು ಎದುರಿಟ್ಟುಕೊಂಡು ಹೃದಯಕ್ಕೆ ಕೈಯಿಟ್ಟು ಪ್ರಶ್ನಿಸಿಕೊಳ್ಳಿ. ನಮ್ಮ ಆದ್ಯತೆ ಏನಾಗಿರಬೇಕು? ಯಾವುದರತ್ತ ನಾವು ಗಮನ ಹರಿಸಬೇಕು? ಕಿತ್ತಳೆ ಹಣ್ಣನ್ನು ಮಾರಿ ಓರ್ವ ಸಾಮಾನ್ಯ ಹಾಜಬ್ಬರಿಗೆ ಒಂದು ಊರನ್ನೇ ಬೆಳಗಿಸುವ ಸಾಮಥ್ರ್ಯ ಇದೆಯೆಂದಾದರೆ, ಸಮುದಾಯದ ನೇತೃತ್ವ ಸ್ಥಾನದಲ್ಲಿರುವವರಿಗೆ ಎಷ್ಟು ಸಾಮಥ್ರ್ಯ ಇರಬೇಡ? ಆ ಸಾಮಥ್ರ್ಯವು ಸರಿಯಾದ ರೂಪದಲ್ಲಿ ವಿನಿಯೋಗವಾಗಿಬಿಟ್ಟರೆ ಎಂಥ ಬದಲಾವಣೆಗಳಾಗಬಹುದು?
 ನಿಜವಾಗಿ, ಇಡೀ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸಂಘಟಿತವಾಗಿರುವುದು ಮುಸ್ಲಿಮ್ ಸಮುದಾಯವೇ. ಮುಸ್ಲಿಮರು ವಾರಕ್ಕೊಮ್ಮೆಯಾದರೂ ಕಡ್ಡಾಯವಾಗಿ ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ಅಲ್ಲಿ ವಿದ್ವಾಂಸರಿಂದ ಧಾರ್ಮಿಕ ಹಿತವಚನಗಳನ್ನು ಆಲಿಸುತ್ತಾರೆ. ಮಸೀದಿಗೆ ತಿಂಗಳು ತಿಂಗಳು ವಂತಿಗೆ ಕೊಡುತ್ತಾರೆ. ಅಲ್ಲದೇ, ಒಂದು ಮಸೀದಿಯ ವ್ಯಾಪ್ತಿಯೊಳಗೆ ಬರುವವರ ಹೆಸರು, ಮನೆಯ ಸದಸ್ಯರ ಸಂಖ್ಯೆ, ಗಂಡು-ಹೆಣ್ಣಿನ ವಿವರ.. ಎಲ್ಲವೂ ಆಯಾ ಮಸೀದಿಯಲ್ಲಿ ಬಹುತೇಕ ನಮೂದಾಗಿರುತ್ತದೆ. ಯಾವ ಮನೆಯಲ್ಲಿ ಮದುವೆ ಪ್ರಾಯದ ಎಷ್ಟು ಯುವತಿಯರಿದ್ದಾರೆ, ಎಷ್ಟು ವಿಧವೆಯರಿದ್ದಾರೆ, ರೋಗಿಗಳೆಷ್ಟು, ದುಡಿಯುವವರೆಷ್ಟು, ಮಕ್ಕಳೆಷ್ಟು.. ಎಂಬುದೆಲ್ಲ ಒಂದು ಮಸೀದಿಗೆ ಒಳಪಟ್ಟವರಲ್ಲಿ ಹೆಚ್ಚಿನವರಿಗೆ ಗೊತ್ತಿರುತ್ತದೆ. ಆ ಮಸೀದಿಯ ಆಡಳಿತ ಮಂಡಳಿ ಮತ್ತು ಧಾರ್ಮಿಕ ಗುರುಗಳು ತುಸು ಜಾಗೃತವಾದರೂ ಸಾಕು, ಅವಕಾಶಗಳ ದೊಡ್ಡದೊಂದು ಬಾಗಿಲೇ ತೆರೆದು ಬಿಡಬಹುದು. ಇವತ್ತು ಸಮುದಾಯದಲ್ಲಿ ದಾನಿಗಳಿಗೆ ಕೊರತೆಯೇನೂ ಇಲ್ಲ. ಕೊರತೆ ಇರುವುದು ಇಚ್ಛಾಶಕ್ತಿಯದ್ದು ಮಾತ್ರ. ನಿಜವಾಗಿ, ಪ್ರತಿ ಮಸೀದಿಯ ಜಮಾಅತ್‍ನಲ್ಲೂ ಶ್ರೀಮಂತರು ಮತ್ತು ವಿದೇಶಗಳಲ್ಲಿ ಉದ್ಯೋಗದಲ್ಲಿ ಇರುವವರು ಖಂಡಿತ ಇರುತ್ತಾರೆ. ಹಾಗಂತ, ತಮ್ಮ ಮಸೀದಿಯಲ್ಲಿರುವ ಬಡವರ ಕುರಿತಂತೆ ಅವರಿಗೆ ಅಷ್ಟಾಗಿ ಮಾಹಿತಿ ಇರಬೇಕೆಂದೇನೂ ಇಲ್ಲ. ಒಂದು ವೇಳೆ ಇದ್ದರೂ, ನೆರವು ನೀಡಬೇಕಾದುದು ತನ್ನ ಧಾರ್ಮಿಕ ಕರ್ತವ್ಯ ಎಂಬ ಪ್ರಜ್ಞೆ ಅವರನ್ನು ಇಲ್ಲದೇ ಇರಲೂಬಹುದು. ಆದ್ದರಿಂದ, ಆಯಾ ಪ್ರದೇಶದ ಮಸೀದಿ ವಿದ್ವಾಂಸರು ತಮ್ಮ ವ್ಯಾಪ್ತಿಯ ಬಡವರ ಪಟ್ಟಿಯನ್ನು ಹಿಡಿದು ಈ ಶ್ರೀಮಂತರನ್ನು ಮುಖತಃ ಭೇಟಿಯಾದರೆ ಎಷ್ಟೇ ಜಿಪುಣನಾದರೂ ಖಂಡಿತ ನೆರವು ನೀಡುವ ಸಾಧ್ಯತೆಯಿದೆ. ಅಲ್ಲದೆ, ಸಮುದಾಯದಲ್ಲಿ ದೊಡ್ಡದೊಂದು ಯುವ ಪಡೆಯಿದೆ. ಇವತ್ತು ಈ ಯುವ ಪಡೆಯ ಮೇಲಿರುವ ದೊಡ್ಡ ಆರೋಪ ಏನೆಂದರೆ, ಸಮಾಜ ಬಾಹಿರ ಕೃತ್ಯಗಳಲ್ಲಿ ಇವರ ಹೆಸರೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬುದು. ಹೀಗಿರುವಾಗ ಮಸೀದಿ ಉಸ್ತಾದರೂ ಸಕ್ರಿಯರಾದರೆ ಸಮುದಾಯದ ಯುವಕರನ್ನು ಸಂಪನ್ಮೂಲವಾಗಿ ಬದಲಿಸಲು ಖಂಡಿತ ಸಾಧ್ಯವಿದೆ. ಯುವಕರು ಎಷ್ಟೇ ಕೆಟ್ಟವರಾಗಿದ್ದರೂ ವಿದ್ವಾಂಸರನ್ನು (ಉಸ್ತಾದರನ್ನು) ಗೌರವಿಸುತ್ತಾರೆ. ಆದ್ದರಿಂದ ಯುವಕರೊಂದಿಗೆ ಸಲುಗೆ ಬೆಳೆಸಿ ಅವರನ್ನು ಮಸೀದಿಯಲ್ಲಿ ಒಟ್ಟುಗೂಡಿಸಿ, ಮಸೀದಿಯ ವ್ಯಾಪ್ತಿಗೊಳಪಟ್ಟ ಪ್ರತಿ ಮನೆಗಳ ಸರ್ವೇ ನಡೆಸುವುದಕ್ಕೆ ಒಂದು ತಂಡ; ರೋಗಿಗಳು, ವಿಧವೆಯರು, ಯುವತಿಯರ ಪಟ್ಟಿ ತಯಾರಿಸುವುದಕ್ಕೆ ಒಂದು ತಂಡ; ಪಟ್ಟಣಗಳಲ್ಲಿರುವ ದಾನಿಗಳು ಮತ್ತು ಸಮಾಜಸೇವಾ ಸಂಘಟನೆಗಳನ್ನು ಸಂಪರ್ಕಿಸುವುದಕ್ಕೆ ಒಂದು ತಂಡ.. ಹೀಗೆ ಮೂರ್ನಾಲ್ಕು ಯುವಕರ ಬೇರೆ ಬೇರೆ ತಂಡಗಳನ್ನು ರಚಿಸಿ ಆಯಾ ತಂಡಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟರೆ ಮತ್ತು ಉಸ್ತಾದರು ಸಕ್ರಿಯವಾಗಿ ಈ ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ದೊಡ್ಡದೊಂದು ಬದಲಾವಣೆ ಸಾಧ್ಯವಾದೀತು.
 ಏನೇ ಆಗಲಿ, ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ಸಮುದಾಯವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗಿಂತ ದೊಡ್ಡದೋ ಪ್ರಾಮುಖ್ಯದೋ ಆಗಬಾರದು. ಭಿನ್ನಾಭಿಪ್ರಾಯಗಳ ಮಧ್ಯೆಯೂ ಪರಸ್ಪರ ಜೋಕ್ ವಿನಿಮಯ ಮಾಡಿಕೊಳ್ಳುವಷ್ಟು, ಒಟ್ಟಿಗೆ ಕೂತು ಉಣ್ಣುವಷ್ಟು, ಸಲಾಮ್ ಹೇಳುವಷ್ಟು, ಪರಸ್ಪರರ ಮನೆ, ಮದುವೆ, ಔತಣಗಳಲ್ಲಿ ಭಾಗವಹಿಸುವಷ್ಟು ಹೃದ್ಯ ಸಂಬಂಧವು ವಿದ್ವಾಂಸ ವಲಯದಲ್ಲಿ ಇರಬೇಕು. ಯಾಕೆಂದರೆ, ವಿದ್ವಾಂಸ ವಲಯವು ಒಡೆದರೆ ಸಮುದಾಯವೂ ಒಡೆಯುತ್ತದೆ. ಅವು ಮುಖ ಗಂಟಿಕ್ಕಿಕೊಂಡು ನಡೆದಾಡಿದರೆ, ಸಮುದಾಯದಲ್ಲಿ ಸಲಾಮ್‍ಗಳೇ ನಿಂತು ಹೋಗುತ್ತದೆ. ಈ ಹಿನ್ನೆಲೆಯಲ್ಲಿ, ಭಿನ್ನಾಭಿಪ್ರಾಯಗಳು ಹೇಗಿರಬೇಕು ಮತ್ತು ಅದನ್ನು ಎಷ್ಟರ ಮಟ್ಟಿಗೆ ಬೆಳೆಸಿಕೊಂಡು ಹೋಗಬೇಕು ಎಂಬ ಬಗ್ಗೆ ವಿದ್ವಾಂಸರು ಗಂಭೀರವಾಗಿ ಆಲೋಚಿಸಬೇಕು. ಅನಕ್ಷರಸ್ಥ ಹಾಜಬ್ಬರು ಅಕ್ಷರಸ್ಥರೇ ತಲೆಬಾಗುವಂಥ ಸಾಧನೆಯೊಂದನ್ನು ಮಾಡಿ ಸರ್ವತ್ರ ಶ್ಲಾಘನೆಗೆ ಒಳಗಾಗಿರುವಾಗ, ವಿದ್ವಾಂಸ ವಲಯವು ಸರ್ವತ್ರ ಟೀಕೆಗೆ ಗುರಿಯಾಗಬಹುದಾದ ರೀತಿಯಲ್ಲಿ ನಡಕೊಳ್ಳಬಾರದು. ಹಾಜಬ್ಬರನ್ನು  ಅಭಿನಂದಿಸೋಣ. ಅವರ ಕಿತ್ತಲೆ ಹಣ್ಣಿನ ಬುಟ್ಟಿಯಲ್ಲಿ ಇನ್ನಷ್ಟು ಕ್ರಾಂತಿಕಾರಿ ಆಲೋಚನೆಗಳು ಹುಟ್ಟು ಪಡೆಯಲಿ. ಹಾಗೆಯೇ, ವಿದ್ವಾಂಸ ವಲಯವು ಸರ್ವತ್ರ ಶ್ಲಾಘನೆಗೆ ಪಾತ್ರವಾಗುವ ಕ್ರಾಂತಿಕಾರಿ ನಿಲುವಿಗೆ ಮುನ್ನುಡಿ ಬರೆಯಲಿ. ಹಾಜಬ್ಬರ ಬುಟ್ಟಿ ಮತ್ತು ವಿದ್ವಾಂಸ ವಲಯದ ಜ್ಞಾನವು ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಕಿತ್ತಳೆ ಹಣ್ಣಿನಷ್ಟೇ ರುಚಿಕರ ಮತ್ತು ಸ್ವಾದಭರಿತ ಸುದ್ದಿಗಳನ್ನು ರವಾನಿಸಲಿ.

2 comments:

 1. ಅಗತ್ಯವಾಗಿ ಮುಸ್ಲಿಂ ಸಮುದಾಯ ಚಿಂತಿಸಬೇಕಾದ ವಿಷಯವನ್ನು ಮರೆತು ರಸ್ತೆಯಲ್ಲಿರುವ ಕಲ್ಲನ್ನು ತಲೆಯ ಮೇಲೆ ಹೊತ್ತುಕೊಳ್ಳುವಂತಹಾ ಪರಿಸ್ಥಿಯಲ್ಲಿರುವುದು ನಿಜಕ್ಕೂ ಬೇಸರದ ಸಂಗತಿ. ಲೇಖನದಲ್ಲಿ ತಾವು ಸೂಚಿಸಿರುವ ಮಾರ್ಗದರ್ಶನಗಳು ನಿಜವಾಗಿ ಪ್ರತೀ ಊರಿನಲ್ಲಿ ಸಮರ್ಪಕವಾಗಿ ಜಾರಿಗೊಂಡರೆ ಮುಸ್ಲಿಮ್ ಸಮೂದಾಯ ಉನ್ನತಿ ಗೊಳ್ಳವುದರಲ್ಲಿ ಸಂಶಯಬೇಡ. ಅಕ್ಷರ ಸಂತ ಹಾಜಬ್ಬರ ಶ್ರಮಕ್ಕೆ ಸೃಷ್ಟಿಕರ್ತ ಬರ್ಕತ್ ನೀಡಿ, ಅನುಗ್ರಹಿಸಲೆಂದು ಪ್ರಾಥರ್ಿಸುವ ಹಾಗೂ ಹಾಜಬ್ಬರ ಸರಳ ಸಜ್ಜನಿಕೆಯ ಜೀವನ ಎಲ್ಲರಿಗೂ ಮಾದರಿಯಾಗಲಿ...... ಮುಹಮ್ಮದ್ ಇಷರ್ಾದ್ ವೇಣೂರು..

  ReplyDelete