Tuesday, September 16, 2014

ಹೆಣ್ಣನ್ನು ವೇಶ್ಯೆಗೊಳಿಸುವ ಪುರುಷನೇಕೆ ಮಹಿಳಾ ವಿರೋಧಿ ಎನಿಸಿಕೊಳ್ಳುತ್ತಿಲ್ಲ?

   ಹೆಣ್ಣು ಸ್ವಯಂ ವೇಶ್ಯೆ ಅಲ್ಲ. ಗಂಡು ಆಕೆಯನ್ನು ವೇಶ್ಯೆಗೊಳಿಸುತ್ತಾನೆ. ಆತನ ಸಂಪರ್ಕದಿಂದಾಗಿ ಆಕೆ ವೇಶ್ಯೆಯಾಗುತ್ತಾಳೆ. ಆದರೂ ಮಾಂಸದಂಧೆ, ವೇಶ್ಯಾವಾಟಿಕೆ, ಮೈ ಮಾರುವಿಕೆ.. ಮುಂತಾದ ಪದಗಳೆಲ್ಲ ಹೆಣ್ಣಿನ ಸುತ್ತವೇ ಗಿರಕಿ ಹೊಡೆಯುತ್ತಿರುವುದೇಕೆ? ಇವು ಮತ್ತು ಇಂಥ ಅನೇಕ ಪದಗಳಲ್ಲಿ ಒಂದು ಪದವನ್ನಾದರೂ ಆಕೆಯನ್ನು ವೇಶ್ಯೆಗೊಳಿಸಿದ ಪುರುಷನಿಗೆ ಈ ಸಮಾಜ ಇನ್ನೂ ಕೊಡದಿರುವುದು ಯಾವ ಕಾರಣದಿಂದ? ಹೆಣ್ಣು ವೇಶ್ಯೆಯಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರ ನಿಂತೋ ಘನತೆರಹಿತವಾಗಿಯೋ ಬದುಕುತ್ತಿರುವಾಗ ಅದಕ್ಕೆ ಕಾರಣನಾದವ ಸಕಲ ಮರ್ಯಾದೆ ಮತ್ತು ಪೂರ್ಣ ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾನಲ್ಲ, ಯಾಕೆ ಇದು ಚರ್ಚಾರ್ಹಗೊಳ್ಳುತ್ತಿಲ್ಲ? ಹಾಗಂತ, ಹೆಣ್ಣನ್ನು ಹೀಗೆ ವೇಶ್ಯೆಗೊಳಿಸಿದವ ರಾಜಕಾರಣಿ ಆಗಿರಬಹುದು, ಧಾರ್ಮಿಕ ಮುಖಂಡ, ಹೋರಾಟಗಾರ, ಸಮಾಜಸೇವಕ, ಬುದ್ಧಿಜೀವಿ, ಸಾಹಿತಿ, ಪತ್ರಕರ್ತ, ವೈದ್ಯ, ಇಂಜಿನಿಯರ್, ನ್ಯಾಯವಾದಿ, ಸಾಮಾನ್ಯ.. ಯಾರೂ ಆಗಿರಬಹುದು. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಎಂದೋ ನಿಷೇಧ ವಿಧಿಸಿ ಎಂದೋ ಆತ ಆಗ್ರಹಿಸಿರಬಹುದು. ಆ ಕುರಿತಾದ ಪ್ರತಿಭಟನೆಗಳಲ್ಲಿ ಮುಂದಾಳುತ್ವ ವಹಿಸಿರಬಹುದು. ಹೆಣ್ಣಿನ ಹಕ್ಕು-ಸಮಾನತೆಯ ಕುರಿತಂತೆ ಚರ್ಚಿಸಿರಬಹುದು.. ಇವೆಲ್ಲ ಏನು? ಪುರುಷ ಯಜಮಾನಿಕೆ ಅಲ್ಲವೇ? ಪುರುಷನಿಗೆ ಸಮಾಜದಲ್ಲಿ ಸಿಗುವಷ್ಟೇ ಗೌರವ ಆತನಿಂದ ‘ವೇಶ್ಯೆ' ಆದವಳಿಗೂ ಸಿಗಬೇಕೆಂದು ಒತ್ತಾಯಿಸಿ ಯಾಕೆ ಯಾರೂ ಹೋರಾಟ ಮಾಡುತ್ತಿಲ್ಲ? ಆಕೆಯನ್ನು ‘ವೇಶ್ಯೆ' ಮಾಡಿದವರ ಭಾವಚಿತ್ರ ಮತ್ತು ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಒತ್ತಾಯಿಸುತ್ತಿಲ್ಲ? ಹೆಣ್ಣಿನಿಂದ ಸುಖವನ್ನು ಪಡೆದ ಪುರುಷ ಆಕೆಗೆ ವೇಶ್ಯೆ ಎಂಬ ಬಿರುದನ್ನು ದಯಪಾಲಿಸಿ ಹಿಂತಿರುಗುತ್ತಾನೆ. ಆದರೆ ಆಕೆಯಿಂದ ಆತ ಯಾವ ಬಿರುದನ್ನೂ ಪಡಕೊಳ್ಳುವುದಿಲ್ಲ. ಈ ತಾರತಮ್ಯದ ಬಗ್ಗೆ ಸಮಾಜದ ನಿಲುವು ಏನು? ಅಷ್ಟಕ್ಕೂ, ಆತ ಸುಖಕ್ಕೆ ಬದಲಾಗಿ ದುಡ್ಡು ಪಾವತಿಸುತ್ತಾನೆ ಎಂದು ವಾದಿಸಬಹುದು. ಓರ್ವ ಹೆಣ್ಣಿಗೆ ತನ್ನ ಮಾನ, ಮರ್ಯಾದೆ, ಗೌರವ ಮುಂತಾದುವುಗಳನ್ನೆಲ್ಲ ವಿೂರಿ ಬದುಕಬೇಕಾದಂಥ ಬಡತನದ ಪರಿಸ್ಥಿತಿ ಎದುರಾಗಿದೆಯೆಂದರೆ ಅದಕ್ಕೆ ಈ ಪುರುಷ ಸಮಾಜದ ಪ್ರತಿಕ್ರಿಯಿಸಬೇಕಾದ ರೀತಿ ಯಾವುದು? ಲೈಂಗಿಕವಾಗಿ ಬಳಸಿಕೊಳ್ಳುವುದೇ? ಓರ್ವರ ಅಸಹಾಯಕತೆಗೆ ಪ್ರತಿಕ್ರಿಯಿಸುವ ಮಾನವೀಯ ವಿಧಾನವೇ ಇದು? ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಪ್ರಕಾರ, ಹೆಚ್ಚಿನೆಲ್ಲ ವೇಶ್ಯೆಯರ ಹಿಂದೆ ಬಡತನದ ಕತೆಯಿದೆ. ಮಾನವ ಕಳ್ಳ ಸಾಗಾಣಿಕೆಯಿಂದಲೋ ಮೋಸಕ್ಕೊಳಗಾಗಿಯೋ ವೇಶ್ಯೆಯರಾಗುವವರ ಸಂಖ್ಯೆ ತೀರಾ ಕಡಿಮೆ. ಮಾನವ ಕಳ್ಳ ಸಾಗಾಣಿಕೆಗೆ ಗುರಿಯಾಗುವವರ ಹಿನ್ನೆಲೆಯೂ ಬಡತನದ್ದೇ. ಒಂದು ಕಡೆ ಅಸಹಾಯಕತೆ. ಇನ್ನೊಂದು ಕಡೆ ಆ ಅಸಹಾಯಕತೆಗೆ ನೆರವಾಗುವ ನೆಪದಲ್ಲಿ ಆಕೆಯ ದೇಹದ ದುರ್ಬಳಕೆ. ಯಾಕೆ ಇದು ಮಹಿಳಾ ದೌರ್ಜನ್ಯ ಅನ್ನಿಸಿಕೊಳ್ಳುತ್ತಿಲ್ಲ?
ಪುರಾತನ ಮೆಸಪಟೋಮಿಯ ಅಥವಾ ಹಮ್ಮುರಾಬಿ ನಾಗರಿಕತೆಯಲ್ಲಿ ವೇಶ್ಯಾವಾಟಿಕೆ ಇತ್ತು ಎಂದೋ ಅಥವಾ ಗ್ರೀಕ್‍ನ ಪೋರ್ನೊ ಎಂಬ ಪದದಿಂದ ಪೋರ್ನೋಗ್ರಫಿ ಎಂಬ ಪದ ಹುಟ್ಟಿಕೊಂಡಿದೆಯೆಂದೋ ವಾದಿಸುವುದು ಸುಲಭ. ಪುರಾತನ ಗ್ರೀಕ್‍ನ ಇತಿಹಾಸದಲ್ಲಿ ಲೈಸ್ ಎಂಬ ಮಹಿಳೆಯ ಚೆಲುವು ಮತ್ತು ಮಾದಕತೆಯ ಕತೆಯಿದೆ. ಆಕೆ ವೇಶ್ಯೆ ಆಗಿದ್ದಳೆಂದೂ ಆಕೆಯ ಚೆಲುವಿಗಾಗಿ ಹೆಚ್ಚಿನ ಮೊತ್ತ ಪಾವತಿಸಲಾಗುತ್ತಿತ್ತೆಂದೂ ಹೇಳಲಾಗುತ್ತದೆ. ಅಂದಹಾಗೆ, ಪುರಾತನ ಕಾಲದ ದೊಡ್ಡದೊಂದು ಇತಿಹಾಸವು ಅಮಾನವೀಯವಾಗಿತ್ತು. ದುರ್ಬಲರಾದ ಮಹಿಳೆ ಮತ್ತು ಪುರುಷರ ರಕ್ತದ ಕಲೆಗಳಿಂದ ಅವು ಬರೆಯಲ್ಪಟ್ಟಿತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನಿನ ಮಿಲಿಟರಿ ವೇಶ್ಯಾಗೃಹದಲ್ಲಿ ಚೀನಾ, ಕೊರಿಯ ಮತ್ತಿತರೆಡೆಯ 2 ಲಕ್ಷದಷ್ಟು ಮಹಿಳೆಯರು ಲೈಂಗಿಕ ತೃಷೆಗೆ ಒಳಗಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಗುಲಾಮರು ಮತ್ತು ದೇವದಾಸಿಯರಾಗಿ ಪುರುಷ-ಮಹಿಳೆಯರಿಬ್ಬರೂ ಈ ಜಗತ್ತಿನಾದ್ಯಂತ ಸರಣಿ ಅತ್ಯಾಚಾರಗಳನ್ನು ಅನುಭವಿಸಿದರು. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು(ಸ) ಗುಲಾಮತನ, ವೇಶ್ಯಾವಾಟಿಕೆಯನ್ನು ಕಾನೂನುಬಾಹಿರವೆಂದು ಸಾರಿದರು. ಕಮ್ಯುನಿಸ್ಟ್ ಚಿಂತಕರೂ ವೇಶ್ಯಾವಾಟಿಕೆಗೆ ವಿರುದ್ಧ ವಾಗಿದ್ದರು. 'Only a specific expression of the general prostitution of the laborer' ಎಂದು ಹೇಳಿದ್ದ ಕಾರ್ಲ್ ಮಾರ್ಕ್ಸ್, ‘ಕ್ಯಾಪಿಟಾಲಿಸಂನಿಂದ ಹೊರಬರುವುದಕ್ಕಾಗಿ ವೇಶ್ಯಾವಾಟಿಕೆಯನ್ನು ನಿಷೇಧಿಸಬೇಕಾಗಿದೆ’ ಎಂದು ವಾದಿಸಿದ್ದರು. ಫ್ರೆಡ್ರಿಕ್ ಏಂಗಲ್ಸ್ ರು, ಮದುವೆಯನ್ನೇ ‘ವೇಶ್ಯಾವಾಟಿಕೆಯ ವಿಧಾನ’ ಎಂದಿದ್ದರು. ವ್ಲಾದಿವಿೂರ್ ಲೆನಿನ್‍ರ ಪ್ರಕಾರ, ‘ವೇಶ್ಯಾವಾಟಿಕೆಯು ಅಸಹ್ಯ ಕೃತ್ಯ'. ಜಗತ್ತು ಕಮ್ಯುನಿಸಂನಿಂದ ಬಂಡವಾಳಶಾಹಿತ್ವಕ್ಕೆ ಹೊರಳಿದ ಬಳಿಕ ವೇಶ್ಯಾವಾಟಿಕೆಯ ಕುರಿತಂತೆ ಭಿನ್ನ ಭಿನ್ನ ವ್ಯಾಖ್ಯಾನಗಳು ವ್ಯಕ್ತವಾದುವು. ಆದರೆ ಇವತ್ತೂ 109 ರಾಷ್ಟ್ರಗಳು ವೇಶ್ಯಾವಾಟಿಕೆಯನ್ನು ಕಾನೂನುಬಾಹಿರ ಎಂದೇ ಪರಿಗಣಿಸಿವೆ. ಉತ್ತರ ಕೊರಿಯಾ, ಸುಡಾನ್, ಸೌದಿ ಅರೇಬಿಯಾ, ಇರಾನ್‍ಗಳಲ್ಲಿ ವೇಶ್ಯಾವಾಟಿಕೆಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ನಿಜವಾಗಿ, ಗ್ರೀಕ್, ರೋಮನ್, ಮೆಸಪೊಟೇಮಿಯ ನಾಗರಿಕತೆಗಳಲ್ಲಿ ಮತ್ತು ಬಳಿಕದ ಶತಮಾನಗಳಲ್ಲಿ ದುರ್ಬಲರಾದ ಹೆಣ್ಣು ಮತ್ತು ಗಂಡಿನ ಮೇಲೆ ದೈಹಿಕ ದೌರ್ಜನ್ಯಗಳು ನಡೆಯುತ್ತಿದ್ದುವು. ಹೆಣ್ಣು ಅತ್ಯಾಚಾರಕ್ಕೆ ಒಳಗಾಗುವಾಗ ಗಂಡು ಇತರ ಕಠಿಣ ದುಡಿಮೆಗಳಿಗೆ ಬಲಿಯಾಗುತ್ತಿದ್ದ. ಆದರೆ ಈ ಆಧುನಿಕ ಜಗತ್ತು ದುರ್ಬಲ ಪುರುಷರನ್ನು ಬಹುತೇಕ ಆ ದೌರ್ಜನ್ಯಗಳಿಂದ ಹೊರತಂದು ರಕ್ಷಿಸಿದೆ. ಗಣಿಗಳಲ್ಲಿ, ತೋಟ, ಕಾರ್ಖಾನೆಗಳಲ್ಲಿ ಜೀತಕ್ಕೆ ಒಳಗಾದವರಿಗೆ ಮುಕ್ತಿ ನೀಡುತ್ತಿದೆ. ಆದರೆ ದುರ್ಬಲ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಈ ಜಗತ್ತು ಅದೇ ಮಾನದಂಡದಲ್ಲಿ ವ್ಯಾಖ್ಯಾನಿಸುತ್ತಿಲ್ಲ. ಅದಕ್ಕೆ ವೇಶ್ಯಾವಾಟಿಕೆ ಎಂಬ ಬಿರುದನ್ನು ಕೊಟ್ಟು ಆ ದೌರ್ಜನ್ಯವನ್ನು ನ್ಯಾಯಬದ್ಧಗೊಳಿಸುವ ಜಾಣತನ ತೋರುತ್ತಿದೆ. ಆಕೆಯ ದೇಹವನ್ನು ಕಮರ್ಷಿಯಲ್ ಎಂದು ವ್ಯಾಖ್ಯಾನಿಸಿ ದುಡ್ಡು ಕೊಟ್ಟು ಆ ದೇಹವನ್ನು ಯಾರಿಗೆ ಬೇಕಾದರೂ ಪಡೆಯುವ ಅರ್ಹತೆಯಿದೆ ಎಂದು ಹೇಳುತ್ತಿದೆ.
   ನಿಜವಾಗಿ, ಇಲ್ಲಿ ಚರ್ಚೆಗೊಳಗಾಗಬೇಕಾದದ್ದು ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂದಲ್ಲ, ವೇಶ್ಯೆಯರ ಅಗತ್ಯ ಯಾರಿಗಿದೆ ಮತ್ತು ಯಾಕಿದೆ ಎಂದು. ಯಾಕೆ ಪುರುಷರು ಇಂಥದ್ದೊಂದು ವ್ಯವಸ್ಥೆಯನ್ನು ಬಯಸುತ್ತಾರೆ? ವೇಶ್ಯೆಯ ಬಳಿಗೆ ಹೋಗುವ ಪುರುಷ ಯಾರದೋ ಮಗ, ಪತಿ, ಸಹೋದರ, ತಂದೆ.. ಆಗಿರುತ್ತಾರೆ. ಅವರಿಗೆ ತನ್ನ ಮನೆಯಲ್ಲಿ ಪತಿಯಾಗಿ, ತಂದೆಯಾಗಿ, ಮಗನಾಗಿ ಮತ್ತು ಇನ್ನಿತರ ಪಾತ್ರವಾಗಿ ಜವಾಬ್ದಾರಿಗಳಿವೆ. ಸಾಮಾಜಿಕವಾಗಿ ಐಡೆಂಟಿಟಿ ಇದೆ. ಈ ಪಾತ್ರಗಳಿಗೆಲ್ಲ ಅವರ ವೇಶ್ಯಾಸಂಗ ನ್ಯಾಯವನ್ನೂ ಗೌರವವನ್ನೂ ಒದಗಿಸಿಕೊಡಬಲ್ಲುದೇ? ಪತಿಯಾಗಿ ಓರ್ವ ವ್ಯಕ್ತಿ ತನ್ನ ವೇಶ್ಯಾಸಂಗವನ್ನು ಹೇಗೆ ಸಮರ್ಥಿಸಬಲ್ಲ? ಪತ್ನಿಯೊಂದಿಗೆ ಆತ ಈ ಸಂಗತಿಯನ್ನು ಹೇಳಬಲ್ಲನೇ? ಹಾಗೆ ಹೇಳಿದರೆ ಆಕೆಯ ಪ್ರತಿಕ್ರಿಯೆ ಏನಿದ್ದೀತು? ಆಕೆಯೂ ಅಂಥದ್ದೇ ಸ್ವಾತಂತ್ರ್ಯವನ್ನು ಬಯಸಿದರೆ ಆತನ ಪ್ರತಿಕ್ರಿಯೆ ಏನಿದ್ದೀತು? ಅವರ ಸಂಬಂಧ ಎಲ್ಲಿಯವರೆಗೆ ಮುಂದುವರಿದೀತು? ಓರ್ವ ತಂದೆ ತನ್ನ ವೇಶ್ಯಾಸಂಗವನ್ನು ತನ್ನ ಮಕ್ಕಳ ಜೊತೆ ಹಂಚಿಕೊಳ್ಳಬಲ್ಲರೇ? ಮಗ ತನ್ನ ತಾಯಿಯೊಂದಿಗೋ ತಂದೆಯೊಂದಿಗೋ ‘ತಾನು ಹೀಗೆ’ ಎಂದು ಹೇಳಿ ಕೊಳ್ಳಬಲ್ಲನೇ? ವೇಶ್ಯೆಯನ್ನು ಅನುಭವಿಸುವ ಓರ್ವ ಶಿಕ್ಷಕನನ್ನು ಸಮಾಜ ಹೇಗೆ ಸ್ವೀಕರಿಸಬಹುದು? ಅಂದ ಹಾಗೆ, ವೇಶ್ಯಾವಾಟಿಕೆಯ ಸುತ್ತ ಚರ್ಚಿಸುವಾಗ ನಾವೆಲ್ಲ ಯಾಕೆ ಈ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಿಲ್ಲ? ಸಾಮಾಜಿಕ ಸಂಬಂಧಗಳು ಗಟ್ಟಿಯಾಗಿರುವುದೇ ನಂಬಿಕೆಗಳ ಮೇಲೆ. ಪತ್ನಿಗೆ ಪತಿಯ ಮೇಲೆ, ಮಗಳಿಗೆ ತಂದೆಯ ಮೇಲೆ, ಹೆತ್ತವರಿಗೆ ಮಕ್ಕಳ ಮೇಲೆ, ಮಕ್ಕಳಿಗೆ ಶಿಕ್ಷಕರ ಮೇಲೆ.. ಇಂಥ ನಂಬಿಕೆಗಳ ಮೇಲೆ ವೇಶ್ಯಾಸಂಗ ಬೀರುವ ಪರಿಣಾಮಗಳು ಯಾವ ಬಗೆಯವು? ಹೀಗಿರುತ್ತಾ, ಮಹಿಳಾ ಹಕ್ಕು, ಸಮಾನತೆಯ ಬಗ್ಗೆ ಮಾತಾಡುವ ಜಗತ್ತಿಗೆ ಯಾಕೆ ವೇಶ್ಯಾವಾಟಿಕೆಯು ಪುರುಷ ಜಗತ್ತಿನ ಸೃಷ್ಟಿ ಎಂದು ಅನಿಸುತ್ತಿಲ್ಲ? ಪುರುಷನ ಬಯಕೆಯನ್ನು ತೀರಿಸುವುದಕ್ಕೆ ಮದುವೆಯ ಹೊರತಾದ ವ್ಯವಸ್ಥೆಯೊಂದು ಇರಬೇಕು ಎಂದಾದರೆ ಮಹಿಳೆಯ ಬಯಕೆಯನ್ನು ತೀರಿಸುವುದಕ್ಕೂ ಒಂದು ವ್ಯವಸ್ಥೆ ಇರಬೇಕೆಂದು ಮಹಿಳಾ ಜಗತ್ತು ವಾದಿಸುತ್ತಿಲ್ಲವೇಕೆ? ಆ ವ್ಯವಸ್ಥೆ ಯಾಕೆ ಈ ವರೆಗೆ ಅಸ್ತಿತ್ವಕ್ಕೆ ಬಂದಿಲ್ಲ? ಅಷ್ಟಕ್ಕೂ, ಪುರುಷನಿಗೇಕೆ ಅಂಥದ್ದೊಂದು ವ್ಯವಸ್ಥೆಯ ಅಗತ್ಯವಿದೆ? ಆತನೇನು ಮಹಿಳೆಗಿಂತ ಮಿಗಿಲೇ? ಮಹಿಳೆಗಿಲ್ಲದ ಕೆಲವು ವಿಶೇಷ ರಿಯಾಯಿತಿ, ಸೌಲಭ್ಯಗಳು ಪುರುಷನಿಗೆ ಅಗತ್ಯವಿದೆ ಮತ್ತು ಅದರಲ್ಲಿ ಮಹಿಳೆಯ ದೇಹವೂ ಒಂದು ಎಂದು ಕಲಿಸಿದವರು ಯಾರು? ಈ ಅಸಮಾನತೆಯ ಪಾಠವನ್ನು ಖಂಡಿಸುವ ಮತ್ತು ಪ್ರತಿಭಟಿಸುವ ಬದಲು ಅದನ್ನೇ ಕಾನೂನುಬದ್ಧಗೊಳಿಸಿ ಎಂದು ಒತ್ತಾಯಿಸುವುದು ಯಾವ ಬಗೆಯ ಸಮಾನತೆ?
   ಅತ್ಯಾಚಾರಕ್ಕೂ ವೇಶ್ಯಾವಾಟಿಕೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಂದು ಕಡೆ ಪುರುಷ ಹೆಣ್ಣಿನ ಅನುಮತಿಯನ್ನು ಪಡೆಯದೇ ದೈಹಿಕ ಸುಖವನ್ನು ಪಡೆಯುವಾಗ ಇನ್ನೊಂದು ಕಡೆ ಅವಳ ಅಸಹಾಯಕೆಯನ್ನೇ ಅನುಮತಿಯನ್ನಾಗಿ ಪರಿವರ್ತಿಸಿಕೊಂಡು ಸುಖ ಪಡೆಯುತ್ತಾನೆ. ಎರಡರಲ್ಲೂ ಗಂಡಿನ ದಬ್ಬಾಳಿಕೆ ಮತ್ತು ಹೆಣ್ಣಿನ ಅಸಹಾಯಕತೆಗಳಿವೆ. ಆದರೆ, ಒಂದು ದಬ್ಬಾಳಿಕೆಯಾಗಿಯೂ ಇನ್ನೊಂದು ಪುರುಷ ಸಮಾಜದ ಸಹಜ ಬೇಡಿಕೆಯಾಗಿಯೂ ಗುರುತಿಗೀಡಾಗಿದೆ. ಮುಸ್ಲಿಮ್ ಮಹಿಳೆಯರು ತೊಡುವ ಬುರ್ಖಾವನ್ನು ಪುರುಷ ಯಜಮಾನಿಕೆಯಾಗಿ ಮತ್ತು ಅಸಮಾನತೆಯ ಸಂಕೇತವಾಗಿ ವ್ಯಾಖ್ಯಾನಿಸುವವರೇ ವೇಶ್ಯಾವಾಟಿಕೆಯು ಕಾನೂನು ಬದ್ಧಗೊಳ್ಳಬೇಕೆಂದು ವಾದಿಸುತ್ತಾರೆ. ಅದಕ್ಕಿರುವ ಪುರಾತನ ಹಿನ್ನೆಲೆಯನ್ನು ಮುಂದಿಡುತ್ತಾರೆ. ಆದರೆ ಸಮಾಜದಲ್ಲಿ ಎಲ್ಲರಂತೆ ಸಹಜವಾಗಿ ಬಾಳಿ ಬದುಕಬೇಕಾದ ಓರ್ವ ಹೆಣ್ಣನ್ನು ವೇಶ್ಯೆ ಮಾಡುವುದು ಪುರುಷ ದಬ್ಬಾಳಿಕೆ, ಯಜಮಾನಿಕೆಯಾಗಿ ಗುರುತಿಸಿಕೊಳ್ಳದೇ ಆಯ್ಕೆ ಸ್ವಾತಂತ್ರ್ಯವಾಗಿ ವ್ಯಾಖ್ಯಾನಗೊಳ್ಳುತ್ತದೆ. ಅಂದ ಹಾಗೆ, ವೇಶ್ಯವಾಟಿಕೆಯು ಓರ್ವ ಹೆಣ್ಣು ಮಗಳ ಪಾಲಿಗೆ ಆಯ್ಕೆಯೋ ಅನಿವಾರ್ಯವೋ ಆಗಬಹುದಾದ ಸಂದರ್ಭ ಯಾವುದು? ಯಾವ ಹೆಣ್ಣೂ ತನ್ನ ಬದುಕಿನ ಪ್ರಥಮ ಆಯ್ಕೆಯಾಗಿ ವೇಶ್ಯಾವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಲ್ಲಳೇ? ಹಾಗೆ ವಾದಿಸುವುದು ಎತ್ತು-ಕುರಿಗಳು ಸ್ವಯಂ ಕಸಾಯಿಖಾನೆಯನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂದು ವಾದಿಸಿದಂತಾಗದೆ? ಹೆಣ್ಣಿನ ಪಾಲಿಗೆ ವೇಶ್ಯಾವಾಟಿಕೆ ಕಟ್ಟಕಡೆಯ ಆಯ್ಕೆ. ತನ್ನ ಅನಿವಾರ್ಯತೆಯನ್ನು ಪೂರೈಸಲು ಬೇರೆ ಯಾವುದೇ ಮಾರ್ಗ ಇಲ್ಲದೇ ಇರುವಾಗ ತನ್ನ ಸಹಜ ಲಜ್ಜೆಯನ್ನು ಬಲವಂತದಿಂದ ಬದಿಗಿರಿಸಿ ಆಕೆ ದೇಹವನ್ನು ಪಣಕ್ಕಿಡಬಯಸುತ್ತಾಳೆ. ಅದವಳ ಆಯ್ಕೆಯಲ್ಲ, ಅನಿವಾರ್ಯತೆ. ನಿಜವಾಗಿ, ಅಂಥ ಅನಿವಾರ್ಯತೆಗಳು ಪುರುಷನಿಗೂ ಎದುರಾಗುತ್ತವೆ. ಆದರೆ ಆತ ಅದನ್ನು ಎದುರಿಸುವುದಕ್ಕೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಆದರೆ ಹೆಣ್ಣಿಗೆ ಅಂಥ ಅನಿವಾರ್ಯತೆ ಎದುರಾದಾಗ ಪುರುಷ ಆಕೆಯ ದೇಹವನ್ನು ಬಯಸುತ್ತಾನೆ. ಹೆಣ್ಣಿನ ಅನಿವಾರ್ಯತೆಗೆ ದೇಹವನ್ನು ಬಳಸದೆಯೇ ನೆರವಾಗುವ ಅವಕಾಶ ಇದ್ದರೂ, ಆಕೆಯನ್ನು ಆತ ವೇಶ್ಯಗೊಳಿಸುತ್ತಾನೆ. ಮಾತ್ರವಲ್ಲ, ತನ್ನ ವೇಶ್ಯಾಸಂಗವನ್ನು ಮರೆಮಾಚಿ ಸಮಾಜದಲ್ಲಿ ಬದುಕುತ್ತಿರುತ್ತಾನೆ. ಇಷ್ಟಿದ್ದೂ, ಇದು ಪುರುಷ ಯಜಮಾನಿಕೆ ಮತ್ತು ಮಹಿಳಾ ದೌರ್ಜನ್ಯ ಅಲ್ಲ ಎಂದಾದರೆ ಜುಜುಬಿ ಬುರ್ಖಾ ಯಾವ ಲೆಕ್ಕ? ಅದರ ವಿರುದ್ಧವೇಕೆ ಈ ಪರಿ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ?

Wednesday, September 10, 2014

ಬಶೀರ್ ಎತ್ತಿಕೊಳ್ಳಬೇಕಾದ ಪಂಜು ಮತ್ತು ಸಾರಾ ಅಬೂಬಕರ್‍ರ ಪಂಜು

ಸಾರಾ ಅಬೂಬಕರ್ 
    ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್ ಅವರ ‘ಬಾಡೂಟದ ಜೊತೆ ಗಾಂಧಿ ಜಯಂತಿ’ ಎಂಬ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟು ಸರ್ ಅವರು ಮಾಡಿದ ಭಾಷಣ ಮತ್ತು ಅದನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡ (ಶೇರ್) ಪತ್ರಕರ್ತ ನವೀನ್ ಸೂರಿಂಜೆಯವರ ಬಗ್ಗೆ ವ್ಯಕ್ತವಾದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಓದಿ ತೀವ್ರ ನೋವು ಮತ್ತು ವಿಷಾದ ಉಂಟಾಯಿತು. ಒಂದೊಳ್ಳೆಯ ಚರ್ಚೆ ನಡೆಸಬಹುದಾಗಿದ್ದ ಮತ್ತು ನಡೆಸಬೇಕಾಗಿದ್ದ ಅಭಿಪ್ರಾಯವನ್ನೇ ಅನಾಗರಿಕಗೊಳಿಸಿ, ಬಳಿಕ ನಿಂದನೀಯ ಮಟ್ಟಕ್ಕೆ ಕೊಂಡೊಯ್ದು ಕೊನೆಗೆ ಧರ್ಮವಿರೋಧಿ ಎಂಬ ಷರಾದೊಂದಿಗೆ ಮುಕ್ತಾಯಗೊಳಿಸುವ ಅವಿವೇಕವು ಹಲವಾರು ಪ್ರತಿಕ್ರಿಯೆಗಳಲ್ಲಿ ಕಂಡುಬಂತು. ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದಕ್ಕಿಂತ ಮೊದಲು ಭಾಷೆ ಮತ್ತು ಭಾವನೆಗಳ ಮೇಲೆ ಹಿಡಿತ ಅತ್ಯಗತ್ಯ. ಕಂಪ್ಯೂಟರ್‍ನ ಕೀ ಬೋರ್ಡ್‍ಗೆ ಸ್ವಂತ ಬುದ್ಧಿಯಿಲ್ಲ. ಸರಿ-ತಪ್ಪುಗಳ ಪ್ರಜ್ಞೆಯಿಲ್ಲ. ಇವುಗಳನ್ನು ಕೀ ಬೋರ್ಡ್‍ನಲ್ಲಿ ತುಂಬಬೇಕಾದವನು ಅದರ ಬಳಕೆದಾರ. ಈ ಎಚ್ಚರಿಕೆ ಬಳಕೆದಾರನಲ್ಲಿ ಸದಾ ಇರಬೇಕು. ಪತ್ರಿಕೆಗಳಿಗೆ ಸಂಪಾದಕ ಇರುವಂತೆ ಫೇಸ್‍ಬುಕ್‍ಗೆ ಇಲ್ಲ ಮತ್ತು ಆ ಕಾರಣದಿಂದಾಗಿ ಎಡಿಟಿಂಗ್‍ನ ಭೀತಿ ಇಲ್ಲ ಎಂಬ ಭರವಸೆಯಲ್ಲಿ ಯದ್ವಾತದ್ವಾ ಬರೆಯುವುದರಿಂದ ಬರೆದವರ ಮೇಲಷ್ಟೇ ಅಲ್ಲ, ಅವರು ಪ್ರತಿನಿಧಿಸುವ ಸಮುದಾಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ತಪ್ಪು ತಿಳುವಳಿಕೆಗಳಿಗೆ ಅದು ಅವಕಾಶ ಮಾಡಿಕೊಡಬಹುದು ಎಂಬ ಎಚ್ಚರಿಕೆ ಪ್ರತಿಕ್ರಿಯಿಸುವವರಲ್ಲಿ ಇರಬೇಕು.
 ದಿನೇಶ್ ಅವಿೂನ್ ಮಟ್ಟು ಅಥವಾ ನವೀನ್ ಸೂರಿಂಜೆಯವರ ಅಭಿಪ್ರಾಯಗಳನ್ನು ಪ್ರಭಾಕರ ಭಟ್ಟರದ್ದೋ ತೊಗಾಡಿಯಾ, ಯೋಗಿ ಆದಿತ್ಯನಾಥರದ್ದೋ ಅಭಿಪ್ರಾಯಗಳಂತೆ ಕಾಣುವುದು ಆಕ್ಷೇಪಾರ್ಹ, ಹಾಸ್ಯಾಸ್ಪದ ಮತ್ತು ಖಂಡನೀಯವಾದದ್ದು. ಅವಿೂನ್ ಮಟ್ಟು ಅವರು ನಮ್ಮ ನಡುವಿನ ಅತ್ಯಂತ ಸಂವೇದನಾಶೀಲ ಚಿಂತಕ, ಬರಹಗಾರ. ಅವರು ಈ ನಾಡಿನ ಜಾತ್ಯತೀತ ಮತ್ತು ಕೋಮುವಾದಿ ವಿರೋಧಿ ನಿರ್ಭೀತ ವ್ಯಕ್ತಿತ್ವವೂ ಹೌದು. ನವೀನ್ ಸೂರಿಂಜೆ ಯುವ ಪತ್ರಕರ್ತ. ಅವರಲ್ಲಿ ಅಪಾರ ಉತ್ಸಾಹ ಇದೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ. ಕೋಮುವಾದವನ್ನು ಮತ್ತು ಧಾರ್ಮಿಕ ಕಂದಾಚಾರಗಳನ್ನು ರಿಸ್ಕ್ ತೆಗೆದುಕೊಂಡು ಖಂಡಿಸುವ ಛಾತಿ ತೋರಿಸುತ್ತಾರೆ. ಇವರನ್ನು ವಿಮರ್ಶಿಸುವ ಮೊದಲು ಈ ಅರಿವು ಇರಬೇಕು. ಹಾಗಂತ, ಇವರ ಅಭಿಪ್ರಾಯಗಳನ್ನು ಸಾರಾಸಗಟು ಒಪ್ಪಿಕೊಳ್ಳಬೇಕು ಎಂದಲ್ಲ. ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಮಟ್ಟು ಮತ್ತು ಸೂರಿಂಜೆಗೆ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಆ ಅಭಿಪ್ರಾಯಗಳನ್ನು ವಿಮರ್ಶಿಸುವುದಕ್ಕೂ ಇದೆ. ಆದರೆ, ಆ ವಿಮರ್ಶೆಯು ಸೌಜನ್ಯದ ಗೆರೆಯನ್ನು ದಾಟಬಾರದು. ಇವರನ್ನು ಸಂಘಪರಿವಾರದ ವ್ಯಕ್ತಿಗಳೆಂದು ನಿಂದಿಸುವುದು ಖಂಡನೀಯವಷ್ಟೇ ಅಲ್ಲ, ಅದರಲ್ಲಿ ಅಜ್ಞಾನ ಇದೆ. ಅವರ ವ್ಯಕ್ತಿತ್ವ, ನಿಲುವು, ಹೋರಾಟಗಳ ಬಗ್ಗೆ ಅಪರಿಚಿತತೆಯಿದೆ ಮತ್ತು ಧರ್ಮವಿರೋಧಿ ಅಸಹಿಷ್ಣುತೆಯಿದೆ. ಇಂಥ ಏಕಮುಖ ನಿಲುವುಗಳು ಅಂತಿಮವಾಗಿ ಅಭಿಪ್ರಾಯ ಸ್ವಾತಂತ್ರ್ಯವನ್ನೇ ಸಹಿಸದ ಮತ್ತು ಅಂಥವರ ಮೇಲೆ ದಾಳಿ ಮಾಡಬಹುದಾದ ಮಟ್ಟಕ್ಕೆ ಕೊಂಡೊಯ್ಯಬಹುದು. ಇದು ಅಪಾಯಕಾರಿ.
 ದಿನೇಶ್ ಅವಿೂನ್ ಮಟ್ಟು ಅವರು ಬುರ್ಖಾದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಈವರೆಗೆ ಈ ಸಮಾಜ ಆಲಿಸದ ಅಭಿಪ್ರಾಯಗಳೇನೂ ಅಲ್ಲ. ಅವರ ಅಭಿಪ್ರಾಯದಲ್ಲಿ ಒಂದಷ್ಟು ಅರಿವಿನ ಕೊರತೆ, ಯಾವುದೋ ಒತ್ತಡ, ಮುಸ್ಲಿಮ್ ಸಮುದಾಯದೊಳಗಿನ ಇತ್ತೀಚಿನ ಸಂವೇದನಾಶೀಲ ಬೆಳವಣಿಗೆಗಳ ಕುರಿತಂತೆ ಅಧ್ಯಯನ ನಡೆಸದೇ ಇರುವುದು.. ಮುಂತಾದುವುಗಳು ಗೋಚರಿಸುತ್ತವೆ. ಮಟ್ಟು ಸರ್ ಅವರ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡೇ ಈ ಮಾತುಗಳನ್ನು ಹೇಳಬೇಕಾಗಿದೆ. ನಿಜವಾಗಿ, ಬುರ್ಖಾವನ್ನು ಕಳಚಲೇಬೇಕು ಅನ್ನುವುದು ಬುರ್ಖಾ ಧರಿಸಲೇಬೇಕು ಅನ್ನುವಷ್ಟೇ ಅಪಾಯಕಾರಿ ಮತ್ತು ಸ್ವಾತಂತ್ರ್ಯ ವಿರೋಧಿಯಾದುದು. ಬುರ್ಖಾವನ್ನು ಕಿತ್ತು ಹಾಕಬೇಕೆಂಬ ದನಿ ಜೋರಾದಂತೆಲ್ಲ ಅದನ್ನು ಧರಿಸಲೇಬೇಕು ಎಂದು ವಾದಿಸುವವರ ಚಟುವಟಿಕೆಗಳೂ ಜೋರಾಗುತ್ತವೆ. ಇದಕ್ಕೆ ಕಾರಣ, ಬುರ್ಖಾವು ಧರ್ಮದ ಮೂಲಭೂತ ಹಕ್ಕು ಎಂದೋ ಅದಿಲ್ಲದೇ ಧರ್ಮ ಸಂಪೂರ್ಣವಾಗದು ಎಂದೋ ಅಲ್ಲ. ಅದೊಂದು ಬಗೆಯ ಭೀತಿ. ಮುಸ್ಲಿಮರ ಕುರಿತಂತೆ ಈ ದೇಶದಲ್ಲಿ ಇವತ್ತು ಸಾಕಷ್ಟು ಪ್ರಮಾಣದಲ್ಲಿ ಅಪಪ್ರಚಾರಗಳು ಮತ್ತು ಆಕ್ರಮಣಗಳು ನಡೆಯುತ್ತಿವೆ. ಅವರ ಅಸ್ತಿತ್ವ, ಐಡೆಂಟಿಟಿಯನ್ನೇ ಪ್ರಶ್ನಾರ್ಹಗೊಳಿಸುವ ಚಟುವಟಿಕೆಗಳು ನಡೆಯುತ್ತಿವೆ. ಬುರ್ಖಾ, ಸ್ಕಾರ್ಫ್‍ನ ನೆಪದಲ್ಲಿ ಶಾಲಾ
ಪ್ರವೇಶಾತಿಯನ್ನೇ ನಿರಾಕರಿಸುವ ಘಟನೆಗಳೂ ನಡೆಯುತ್ತಿವೆ. ಇಂಥ ನಕಾರಾತ್ಮಕ ಬೆಳವಣಿಗೆಗಳು ಅಂತಿಮವಾಗಿ ಧರ್ಮದ ಮೂಲಭೂತ ಬೇಡಿಕೆಗಳಲ್ಲದವುಗಳನ್ನು ಕೂಡ ಧರ್ಮದ ಬೇಡಿಕೆಯಾಗಿ ಮತ್ತು ಅದನ್ನು ಪ್ರಶ್ನಿಸುವವರನ್ನು ಸಂಚುಕೋರರನ್ನಾಗಿ ಪರಿಗಣಿಸುವಂತೆ ಮಾಡುವುದಕ್ಕೆ ಅವಕಾಶ ಇದೆ. ತಮ್ಮ ಧರ್ಮದ ಒಂದೊಂದು ಕುರುಗಳನ್ನು ಅಳಿಸುವ ಸಂಚುಗಳು ನಡೆಯುತ್ತಿವೆ ಎಂದು ಕೆಲವರು ಭಾವಿಸುವುದಕ್ಕೂ ಸಾಧ್ಯವಿದೆ. ಅಂಥ ಸಂದರ್ಭಗಳಲ್ಲಿ, ತಾವು ‘ಕುರುಹು’ ಎಂದು ಭಾವಿಸುವ ವಿಷಯಗಳು ನಿಜವಾದ ಧಾರ್ಮಿಕ ಕುರುಹುಗಳೋ ಎಂದು ಆಲೋಚಿಸುವಷ್ಟೂ ಅವರಲ್ಲಿ ಸಹನೆ ಇರುವುದಿಲ್ಲ. ಮಟ್ಟು ಮತ್ತು ಸೂರಿಂಜೆಯವರನ್ನು ನಿಂದಿಸಿದವರಲ್ಲಿ ಈ ಅವಿವೇಕ ಗೋಚರಿಸುತ್ತದೆ. ಅವರ ಪ್ರತಿಕ್ರಿಯೆಗಳಲ್ಲಿ, ಬುರ್ಖಾ ಧರಿಸಲೇಬೇಕು ಎಂಬ ಆಗ್ರಹಕ್ಕಿಂತ ತಮ್ಮ ಧರ್ಮದ ವಿರುದ್ಧ ಸಂಚು ನಡೆದಿದೆ ಎಂಬ ಭೀತಿಯೇ ಎದ್ದು ಕಾಣುತ್ತದೆ.
ಬಿ. ಎಂ. ಬಶೀರ್
ಅಮೀನ್ ಮಟ್ಟು
    ಕುಕ್ಕಿಲದಲ್ಲಿರುವ ನನ್ನ ತಾಯಿ ಆಸ್ಯಮ್ಮರು ಈಗಲೂ ಪ್ರತಿದಿನ ಬೆಳಿಗ್ಗೆ ಅರ್ಧ ಕಿಲೋ ವಿೂಟರ್‍ನಷ್ಟು ದೂರ ಇರುವ ಚಂದ್ರ ಭಟ್ಟ ಮತ್ತು ವಿನಯ ಭಟ್ಟರ ಮನೆಗೆ ಹಾಲು ತರಲು ಹೋಗುತ್ತಾರೆ. ಅಷ್ಟೇ ದೂರ ಇರುವ ಮಗನ (ನನ್ನ ಅಣ್ಣ) ಬೀಡಿ ಬ್ರಾಂಚ್‍ಗೂ ಹೋಗುತ್ತಾರೆ. ಪರಿಸರದಲ್ಲಿರುವ ಹಿಂದೂ-ಮುಸ್ಲಿಮ್-ಕ್ರೈಸ್ತರ ಮನೆಗಳಿಗೂ ಭೇಟಿ ಕೊಡುತ್ತಿರುತ್ತಾರೆ. ಆದರೆ, ಈ ಯಾವ ಸಂದರ್ಭಗಳಲ್ಲೂ ಅವರು ಬುರ್ಖಾ ಧರಿಸುವುದೇ ಇಲ್ಲ. ಸೀರೆ, ಕುಪ್ಪಸ ಮತ್ತು ತಲೆಗೊಂದು ಲೇಸ್ (ಶಿರವಸ್ತ್ರ).. ಇದುವೇ ನನ್ನಮ್ಮನ ಬುರ್ಖಾ. ಹಾಗಂತ, ಅವರು ಬುರ್ಖಾ ಧರಿಸದೇ ಇರುವುದಕ್ಕೆ ಸಾರಾ ಅಬೂಬಕರ್ ಅವರ ಕೃತಿಗಳು ಮತ್ತು ಚಿಂತನೆಗಳು ಕಾರಣ ಅಲ್ಲ. ಅಕ್ಷರ ಜ್ಞಾನವೇ ಇಲ್ಲದ ಅವರು ಸಾರಾ ಅಬೂಬಕರ್‍ರನ್ನು ನೋಡಿಯೂ ಇಲ್ಲ. ಅದವರ ಬದುಕು. ಅದರಂತೆ ಅವರು ಬದುಕುತ್ತಿದ್ದಾರೆ. ‘ಹೀಗೆ ಬದುಕುವುದು ಧರ್ಮ ವಿರೋಧಿ' ಎಂದು ಯಾವ ‘ಮೂಲಭೂತ’ವಾದಿಯೂ ಅವರೊಂದಿಗೆ ಹೇಳಿಲ್ಲ. ಯಾಕೆಂದರೆ, ಬುರ್ಖಾ ಇಸ್ಲಾಮಿನ ಮೂಲಭೂತ ಬೇಡಿಕೆಯಲ್ಲ. ಎರಡ್ಮೂರು ದಶಕಗಳ ಹಿಂದೆ ವಿದೇಶಗಳಿಂದ ಕಡ ತಂದ ವಸ್ತು ಇದು. ಈ ‘ವಸ್ತು'ವನ್ನು ಮುಸ್ಲಿಮ್ ಸಮುದಾಯ ತನ್ನದಾಗಿಸಿಕೊಂಡುದುದಕ್ಕೆ ಒಂದು ಪ್ರಮುಖ ಕಾರಣ ಇದೆ. ಅದುವೇ ಬಡತನ. ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಪೆರ್ನಾಲ್‍ನಂದು (ಹಬ್ಬ) ಕಷ್ಟದಲ್ಲಿ ಹೊಸ ಬಟ್ಟೆ ಹೊಲಿಸುವ ಸಮುದಾಯಕ್ಕೆ ಬುರ್ಖಾದ ಅಗತ್ಯ ಬಹಳವೇ ಇತ್ತು. ಅದು ಒಳಗಿರುವ ಬಟ್ಟೆಯನ್ನು ಮರೆಸುತ್ತದೆ. ತಾನು ಧರಿಸಿದ ಚೂಡಿದಾರ, ಸೀರೆ ಅಥವಾ ಲಂಗದಾವಣಿಯ ವಯಸ್ಸನ್ನು ಮರೆಮಾಚುತ್ತದೆ. ಅವುಗಳ ಬಣ್ಣ ಮಾಸಿರುವುದನ್ನು ಅದು ನೋಡುಗರಿಂದ ಅಡಗಿಸುತ್ತದೆ. ಸೀರೆಗೆ ಅಥವಾ ಕುಪ್ಪಸಕ್ಕೆ ಹಾಕಿರುವ ತೇಪೆಯನ್ನು ಅದು ಮುಚ್ಚಿ ಬಿಡುತ್ತದೆ. ಇವತ್ತು, ಶಾಲಾ-ಕಾಲೇಜಿಗೆ ಹೋಗುವ ಎಷ್ಟೋ ಹೆಣ್ಣು ಮಕ್ಕಳು ಬುರ್ಖಾವನ್ನು ಇಷ್ಟಪಟ್ಟು ಧರಿಸುತ್ತಾರೆ. ಅದವರ ಬಡತನವನ್ನು ಮರೆಮಾಚುತ್ತದೆ. ಬಸ್ಸಿನಲ್ಲೋ ರಸ್ತೆಯಲ್ಲೋ ಅಥವಾ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲೋ ಅವರನ್ನು ಇನ್ಫೀರಿಯಾರಿಟಿ ಕಾಂಪ್ಲೆಕ್ಸ್‍ನಿಂದ ರಕ್ಷಿಸುತ್ತದೆ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಹೀಗಿರುವಾಗ ಒಂದು ವೇಳೆ, ಯಾರಾದರೂ ಬುರ್ಖಾವನ್ನು ಅವರಿಂದ ಕಿತ್ತು ಹಾಕಲು ಮುಂದಾಗುತ್ತಾರೆಂದರೆ ಅದವರ ಗೌರವವನ್ನೇ ಕಿತ್ತುಹಾಕಲು ಮುಂದಾದಂತೆ ಮತ್ತು ಅವರ ಬಡತನವನ್ನು ಸಮಾಜದ ಮುಂದೆ ಬಿಚ್ಚಿಟ್ಟಂತೆ ಆಗಬಹುದು. ಇಂಥ ಪ್ರಯತ್ನವನ್ನು ಕೆಲವರು ಪ್ರಗತಿಪರ ದೃಷ್ಟಿಕೋನ ಎಂದು ವಾದಿಸಿದರೂ ಅದನ್ನು ಅನಿವಾರ್ಯವಾಗಿ ಧರಿಸಿದವರ ಮಟ್ಟಿಗೆ (ಹೆಚ್ಚಿನವರು ಹಾಗೆಯೇ) ಅವಮಾನ. ಮಾತ್ರವಲ್ಲ, ಅವರ ವಿರುದ್ಧದ ಸಂಚು. ಅಷ್ಟಕ್ಕೂ, ನನ್ನ ಈ ವಾದವನ್ನು ಸಮರ್ಥಿಸುವುದಕ್ಕೆ ಮುಸ್ಲಿಮ್ ಸಮುದಾಯದ ಮನೆಗಳಲ್ಲಿರುವ ಬುರ್ಖಾಗಳ ಸಂಖ್ಯೆಗಳೇ ಧಾರಾಳ ಸಾಕು. ಸಾಮಾನ್ಯವಾಗಿ, ಓರ್ವರಿಗೆ ಒಂದಕ್ಕಿಂತ ಹೆಚ್ಚು ಉಡುಪುಗಳಿರುವಂತೆ ಬುರ್ಖಾಗಳಿಲ್ಲ. ಒಂದು ಮನೆಯಲ್ಲಿ ಐದು ಮಂದಿ ಮಹಿಳೆಯರಿದ್ದರೆ, ಎರಡೋ ಮೂರೋ ಬುರ್ಖಾಗಳಿರುವುದೇ ಹೆಚ್ಚು. (ಇದಕ್ಕೆ ಅಪವಾದಗಳೂ ಇವೆ.) ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಲ್ಲಿ ಪ್ರತಿದಿನ ಸಂಜೆ ಬುರ್ಖಾವನ್ನು ಒಗೆದು ಬೆಳಿಗ್ಗೆ ಧರಿಸಿಕೊಂಡು ಹೋಗುವವರೇ ಅಧಿಕವಿದ್ದಾರೆ. ಆದ್ದರಿಂದ, ಬುರ್ಖಾದಿಂದ ಮುಸ್ಲಿಮ್ ಮಹಿಳೆಯರನ್ನು ಹೊರತರಬೇಕು ಎಂದು ಕರೆಕೊಡುವಾಗ ಅಥವಾ ‘ಅದು ಮೂಲಭೂತವಾದದ ಸಂಕೇತ' ಎಂದು ವಾದಿಸುವಾಗ ಈ ವಸ್ತುಸ್ಥಿತಿಯನ್ನು ಅರಿತುಕೊಳ್ಳುವುದೂ ಅಗತ್ಯವೆನಿಸುತ್ತದೆ. ಅದು ಯಾರದೋ ಹೇರಿಕೆಯೋ ಅಥವಾ ಅನಿವಾರ್ಯತೆಯೋ ಎಂಬ ಚರ್ಚೆಗೆ ತೊಡಗುವ ಸಂದರ್ಭದಲ್ಲಿ ಈ ವಸ್ತುಸ್ಥಿತಿಯನ್ನೂ ಎದುರಿಟ್ಟುಕೊಳ್ಳಬೇಕಿದೆ. ಮುಸ್ಲಿಮ್ ಸಮುದಾಯದ ಒಳಗಿನ ತಲ್ಲಣಗಳನ್ನು ಅಧ್ಯಯನ ನಡೆಸದೇ ಬರಿದೇ ಆಗ್ರಹಗಳನ್ನು ವ್ಯಕ್ತಪಡಿಸಿದರೆ ಅದು ಅಂತಿಮವಾಗಿ ‘ಬಂಡಾಯ’ ಎಂಬ ಹಣೆಪಟ್ಟಿಯೊಂದಿಗೆ ನಿರ್ಲಕ್ಷ್ಯಕ್ಕೆ ಒಳಗಾಗಬಹುದೇ ಹೊರತು ರಚನಾತ್ಮಕ ಬದಲಾವಣೆಗಲ್ಲ.
 ಬುರ್ಖಾವು ಮುಸ್ಲಿಮ್ ಸಮುದಾಯದಲ್ಲಿ ಎಷ್ಟು ಬೇಗ ಜನಪ್ರಿಯಗೊಂಡಿತೋ ಅಷ್ಟೇ ವೇಗವಾಗಿ ಇವತ್ತು  ಅದರ ‘ಧಾರ್ಮಿಕ ಅನ್ಯತ್ವ'ದ ಕುರಿತೂ ಚರ್ಚೆಗಳಾಗುತ್ತಿವೆ. ಬುರ್ಖಾ ಅಂದರೆ ಕುರ್‍ಆನ್ ಹೇಳಿರುವ ಪರ್ದಾ ಅಲ್ಲ ಎಂಬ ಅರಿವು ಸಮಾಜದಲ್ಲಿ ಮೂಡತೊಡಗಿದೆ. ಈ ಅರಿವನ್ನು ಮೂಡಿಸುತ್ತಿರುವುದು ಮೂಲಭೂತವಾದಿಗಳೆಂದು ಪ್ರಗತಿಪರರು ದೂಷಿಸುವ ಧಾರ್ಮಿಕ ಸಂಘಟನೆಗಳೇ ಎಂಬುದು ಗಮನಾರ್ಹ. ಆದರೂ, ನಿಂತ ಸ್ಥಿತಿಯಲ್ಲಿಯೇ ಬುರ್ಖಾವನ್ನು ಕಳಚಿ ಹಾಕುವಂತಹ ವೈರಾಗ್ಯವಾಗಲಿ, ಅನಿವಾರ್ಯತೆಯಾಗಲಿ ಅಥವಾ ಆರ್ಥಿಕ ಸಬಲೀಕರಣವಾಗಲಿ ಮುಸ್ಲಿಮ್ ಸಮುದಾಯದಲ್ಲಿ ಇವತ್ತಿಲ್ಲ. ಇವತ್ತಿನ ತಲೆಮಾರು ಇದಕ್ಕೆ ಎಷ್ಟರ ಮಟ್ಟಿಗೆ ಒಗ್ಗಿ ಹೋಗಿದೆ ಎಂದರೆ, ಅದಿಲ್ಲದೆ ಕಂಫರ್ಟಬಲ್ ಆಗುತ್ತಿಲ್ಲ ಎಂದು ಹೇಳುವಷ್ಟು. ಮಾತ್ರವಲ್ಲ, ‘ಬುರ್ಖಾ ಕಡ್ಡಾಯ' ಎಂದು ಮನೆಯ ಪುರುಷರು ಭಾವಿಸುವಷ್ಟು. ಇವತ್ತು ಅಸಂಖ್ಯ ಯುವತಿಯರು ಯಾರ ಒತ್ತಡವೂ ಇಲ್ಲದೇ ಇಷ್ಟಪಟ್ಟು ಬುರ್ಖಾ ಧರಿಸುತ್ತಿದ್ದಾರೆ. ಅದು ಕಡ್ಡಾಯವಲ್ಲ ಎಂದು ಹೇಳಿದರೂ ಕಂಫರ್ಟಬಲ್‍ನ ಕಾರಣ ಮುಂದಿಡುತ್ತಾರೆ. ಅವಿೂನ್ ಮಟ್ಟು ಅವರು ಹೇಳಿದಂತೆ, ಒಂದು ವೇಳೆ ಮುಸ್ಲಿಮ್ ಮಹಿಳೆಯರ ಮಧ್ಯೆ ಬುರ್ಖಾ ಬೇಕೇ ಬೇಡವೇ ಎಂಬ ವಿಷಯದಲ್ಲಿ ಇವತ್ತು ಗುಪ್ತ ಮತದಾನ ನಡೆಸಿದರೆ ಬುರ್ಖಾವೇ ಜಯಶಾಲಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ಅದರ ಹಿಂದೆ ಇರುವುದು ಮೂಲಭೂತವಾದವಲ್ಲ; ಮರ್ಯಾದೆ ವಾದ, ಬಡತನ ವಾದ ಮತ್ತು ಕೆಲವೊಮ್ಮೆ ಮೈಮುಚ್ಚುವ ವಾದ.
 ಹಾಗಂತ, ಮುಸ್ಲಿಮ್ ಸಮಾಜದಲ್ಲಿ ಅಪದ್ಧಗಳು ಇಲ್ಲ ಎಂದಲ್ಲ. ಬುರ್ಖಾ ಕಡ್ಡಾಯವಲ್ಲ ಎಂದು ವಾದಿಸುವ ಮಂದಿಯೇ ತಂತಮ್ಮ ಮನೆಗಳಲ್ಲಿ ಕಡ್ಡಾಯದಂತೆ ಅದನ್ನು ಹೇರುವುದಿದೆ. ಬುರ್ಖಾ ಧರಿಸದೆ ಇರುವ ಸಹಜ ಸ್ವಾತಂತ್ರ್ಯವನ್ನು ಮಹಿಳೆಯರಿಂದ ಕಿತ್ತುಕೊಳ್ಳುವುದಿದೆ. ಬುರ್ಖಾ ಧರಿಸದೇ ಇರುವುದು ಧರ್ಮವಿರೋಧಿ ಕ್ರಮದಂತೆ ವಾದಿಸುವುದೂ ಇದೆ. ಸಾಕಷ್ಟು ಮಹಿಳೆಯರು ತಮ್ಮ ಗಂಡಂದಿರದ್ದೋ ಪುರುಷ ಸಮಾಜದ್ದೋ ಒತ್ತಡಕ್ಕೆ ಮಣಿದು ಬುರ್ಖಾ ಧರಿಸುತ್ತಿರುವರೆಂಬ ವಾದವನ್ನು ನಾನು ಸಾರಾಸಗಟು ತಿರಸ್ಕರಿಸುತ್ತಲೂ ಇಲ್ಲ. ಆದರೆ, ಇವಕ್ಕೆಲ್ಲ ಬುರ್ಖಾ ವಿರೋಧಿ ಅಭಿಯಾನ ನಡೆಸುವುದೋ ನಿಂತ ಸ್ಥಿತಿಯಲ್ಲೇ ಅದನ್ನು ಕಳಚಿ ಹಾಕಬೇಕೆಂದು ಆಗ್ರಹಿಸುವುದೋ ಪರಿಹಾರ ಅಲ್ಲ. ಸಾರಾ ಅಬೂಬಕರ್ ಮಾಡಿದ್ದೂ ಇದೇ ತಪ್ಪನ್ನು. ಅವರು ಮುಸ್ಲಿಮ್ ಸಮಾಜದಲ್ಲಿದ್ದ ಅಜ್ಞಾನಜನ್ಯ ಮತ್ತು ಧರ್ಮ ವಿರೋಧಿ ಆಚರಣೆಗಳನ್ನು ಕಟುವಾಗಿ ಖಂಡಿಸಿದರು. ಅದಕ್ಕೆ ಧರ್ಮವೇ ಕಾರಣ ಎಂಬ ಅತಿರೇಕದ ವ್ಯಾಖ್ಯಾನವನ್ನು ಕೊಟ್ಟರು. ಪದಗಳಿಂದ ಚುಚ್ಚಿದರು. ಅವಮಾನಿಸಿದರು. ಸಾರಾರ ಈ ವಾದದಲ್ಲಿ ಸಮಾಜವನ್ನು ಚಿಂತನೆಗೆ ಹಚ್ಚುವುದಕ್ಕಿಂತ ಆಕ್ರೋಶಕ್ಕೆ ದೂಡುವ ಅಂಶಗಳೇ ಹೆಚ್ಚಿದ್ದುವು. ಮೂರು ದಶಕಗಳ ಹಿಂದಿನ ಸಮಾಜವು ಅವರ ನಕಾರಾತ್ಮಕ ಧೋರಣೆಯನ್ನು ನಕಾರಾತ್ಮಕವಾಗಿಯೇ ಸ್ವೀಕರಿಸಿತು. ಅದು ಸರಿ ಎಂದಲ್ಲ. ಆದರೆ, ಸಾರಾರನ್ನು ನಕಾರಾತ್ಮಕವಾಗಿ ಸ್ವೀಕರಿಸಿದ ಅದೇ ಸಮಾಜ,  ‘ಮೂಲಭೂತವಾದಿ'ಗಳ ಸುಧಾರಣಾವಾದಿ ಸಭ್ಯ ವಾದವನ್ನು ಅಷ್ಟೇ ಸಕಾರಾತ್ಮಕವಾಗಿ ಆಲಿಸಿತು. ತನ್ನನ್ನು ತಿದ್ದಿಕೊಳ್ಳಲು ಮುಂದಾಯಿತು. ತಲಾಕ್, ಬಹುಪತ್ನಿತ್ವ, ಬುರ್ಖಾ, ಹೆಣ್ಣು ಮಕ್ಕಳ ಶಿಕ್ಷಣ.. ಮುಂತಾದುವುಗಳ ಕುರಿತಂತೆ ಸಮಾಜದಲ್ಲಿದ್ದ ದೊಡ್ಡದೊಂದು ಅಜ್ಞಾನದ ಪರದೆಯನ್ನು ಕಿತ್ತುಹಾಕುವಲ್ಲಿ ಅದು ಬಹುದೊಡ್ಡ ಯಶಸ್ಸು ಪಡೆಯಿತು. ಇವತ್ತು ಮುಸ್ಲಿಮ್ ಸಮಾಜದಲ್ಲಿ ‘ತಲಾಕ್, ತಲಾಕ್, ತಲಾಕ್’ ನಗಣ್ಯವಾಗುತ್ತಾ ಬಂದಿದೆ. ‘ಬಹುಪತ್ನಿತ್ವ'ದ ಇತಿ-ಮಿತಿಗಳು ಅರ್ಥವಾಗಿವೆ ಮತ್ತು ಹೆಣ್ಣು ಮಕ್ಕಳು ಧಾರಾಳ ಸಂಖ್ಯೆಯಲ್ಲಿ ಶಿಕ್ಷಿತರಾಗುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ಮುಸ್ಲಿಮ್ ಸಮುದಾಯದೊಳಗೆ ಸದ್ದು-ಗದ್ದಲವಿಲ್ಲದೇ ನಡೆದಿರುವ ಈ ಕ್ರಾಂತಿಯನ್ನು ಪರಿಗಣಿಸುವಾಗ ಸಾರಾ-ಬೊಳುವಾರು ಅವರ ಪರಂಪರೆಯ ಪಂಜನ್ನು (ರಿಲೇ ಬ್ಯಾಟನ್) ಬಿ.ಎಂ. ಬಶೀರ್ ಅಷ್ಟೇ ಆಸಕ್ತಿಯಿಂದ ಯಾಕೆ ಮುಂದುವರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಾರಾರ ಸಮಾಜವಲ್ಲ ಇವತ್ತಿನದು. ಬೊಳುವಾರು ಎದುರಿಸಿದ ಸಮಸ್ಯೆಗಳಲ್ಲ ಇವತ್ತಿನ ಮುಸ್ಲಿಮ್ ಸಮಾಜದ್ದು. ಬಲಪಂಥೀಯ ಕೋಮುವಾದಿ ವಿಚಾರಧಾರೆಯ ಭೀತಿಯೇ ಇವತ್ತಿನ ಮುಸ್ಲಿಮ್ ಸಮುದಾಯದ ಒಳಗಿನ ಮತ್ತು ಹೊರಗಿನ ತಲ್ಲಣಗಳಾಗಿವೆ. ಭಾರತೀಕರಣದ ನೆಪದಲ್ಲಿ ಬುರ್ಖಾವನ್ನು ಅವು ಇಶ್ಯೂ ಮಾಡುತ್ತಿವೆ. ತಲಾಕ್, ಬಹುಪತ್ನಿತ್ವ, ಜಿಹಾದ್.. ಎಂಬೆಲ್ಲಾ ಪದಗಳನ್ನು ಅವು ವಿರೂಪಗೊಳಿಸಿ ಮಾರುತ್ತಿವೆ. ಹೆಣ್ಣು-ಗಂಡಿನ ಪ್ರೀತಿಯನ್ನು ಲವ್ ಜಿಹಾದ್ ಅನ್ನುತ್ತಿವೆ. ಪ್ರತಿ ಸ್ಥಳೀಯ ಘಟನೆಯನ್ನೂ ರಾಷ್ಟ್ರಮಟ್ಟದ ಇಶ್ಯೂ ಆಗಿಸುವ ಮತ್ತು ಕೋಮುಗಲಭೆಗೆ ಪ್ರಚೋದನೆ ಕೊಡುವ ಜಾಣತನವನ್ನು ಅವು ಪ್ರದರ್ಶಿಸುತ್ತಿವೆ. ಇಂಥ ಹೊತ್ತಲ್ಲಿ ಬಿ.ಎಂ. ಬಶೀರ್‍ರಂಥವರು ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಇವತ್ತು ಮುಸ್ಲಿಮ್ ಸಮಾಜದೊಳಗಿನ ಸುಧಾರಣಾ ಪ್ರಕ್ರಿಯೆಗೆ ಅಡ್ಡವಾಗಿ ನಿಂತಿರುವುದು (ಮಟ್ಟು ಸರ್ ಪ್ರಕಾರ) ‘ಮೂಲಭೂತವಾದಿ' ಸಂಘಟನೆಗಳಲ್ಲ. ನಿಜವಾಗಿ ಅವೇ ಸುಧಾರಣಾ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟಿವೆ ಮತ್ತು ಆ ದಾರಿಯಲ್ಲಿ ಶ್ರಮಿಸುತ್ತಿವೆ. ಈ ಸುಧಾರಣಾ ಪ್ರಕ್ರಿಯೆಗಳು ನಿಧಾನಗೊಳ್ಳುವಂತೆ ಮತ್ತು ಸಮಾಜವು ಕೋಮುವಾದೀಕರಣಗೊಳ್ಳುವಂತೆ ಪ್ರಚೋದನೆ ಸಿಗುತ್ತಿರುವುದು ಬಲಪಂಥೀಯ ಕೋಮುವಾದದಿಂದ. ಆದ್ದರಿಂದ ಸಾರಾರ ಪಂಜನ್ನು ಪಕ್ಕಕ್ಕಿಟ್ಟ ಬಶೀರ್‍ರ ನಡೆಯನ್ನು ಸೂಕ್ತ ಮತ್ತು ಸಮಂಜಸ ಎಂದೇ ವ್ಯಾಖ್ಯಾನಿಸಬೇಕಾಗಿದೆ. ಇವತ್ತಿನ ದಿನಗಳಲ್ಲಿ ಮುಸ್ಲಿಮ್ ಸಮಾಜಕ್ಕೆ ಸಾರಾರ (ಬಂಡಾಯ) ಅಗತ್ಯವಿಲ್ಲ. ಬಶೀರ್‍ರಂಥವರ ಅಗತ್ಯವಿದೆ. ಮುಸ್ಲಿಮ್ ಸಮಾಜದ ಒಳಗೆ ಗುರುತಿಸಿಕೊಂಡು ಅಲ್ಲಿನ ಧ್ವನಿಯಾಗುತ್ತಲೇ ಮತ್ತು ಸಂದರ್ಭೋಚಿತವಾಗಿ ಸುಧಾರಣಾ ಪರ ನಿಲುವು ವ್ಯಕ್ತಪಡಿಸುತ್ತಲೇ ಬಲಪಂಥೀಯ ಕೋಮುವಾದದ ವಿರುದ್ಧ ಅವರು ಪ್ರಬಲ ಪಂಜನ್ನು ಉರಿಸಬೇಕಾಗಿದೆ. ಈ ಪಂಜು ಎಲ್ಲ ರೀತಿಯ ಕೋಮುವಾದವನ್ನು ದಹಿಸುವ ಮತ್ತು ಅಜ್ಞಾನದ ಕತ್ತಲೆಗೆ ಬೆಳಕು ನೀಡುವ ಕೆಲಸವನ್ನು ಮಾಡಬೇಕಾಗಿದೆ.

Tuesday, September 9, 2014

‘ಮೌಲಾನಾ’ ಪ್ರತಿಪಾದಿಸಿದ ಭಾವೈಕ್ಯತೆಯ ಸುತ್ತ..

ಅಕ್ಬರ್
ದಾರಾಶುಕೊ
ರಾಜಾರಾಂ ಮೋಹನ್ ರಾಯ್
ರಾಮಕೃಷ್ಣ ಪರಮಹಂಸ
    ಸಹಿತ ಅನೇಕಾರು ಮಂದಿ ಈ ದೇಶದಲ್ಲಿ ‘ಸರ್ವಧರ್ಮ ಸಮಭಾವ' ಅಥವಾ ಧಾರ್ಮಿಕ ಸೌಹಾರ್ದತೆಯ ಕುರಿತಂತೆ ತಮ್ಮದೇ ಆದ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಅವುಗಳ ಪರ ಮತ್ತು ವಿರುದ್ಧ ಧಾರಾಳ ಚರ್ಚೆಗಳೂ ಆಗಿವೆ. ವಿಭಿನ್ನ ಧರ್ಮ, ಜಾತಿ, ಜನಾಂಗಗಳಿರುವ ದೇಶವೊಂದರಲ್ಲಿ ಧಾರ್ಮಿಕ ಆಚರಣೆಗಳು ಹೇಗಿರಬೇಕು? ಅವುಗಳ ನಡುವೆ ಸೌಹಾರ್ದತೆ ಸಾಧ್ಯವೇ? ಹೇಗೆಲ್ಲ ಸಾಧ್ಯ? ಯಾವುದು ಸೌಹಾರ್ದ ಮತ್ತು ಯಾವುದಲ್ಲ? ಗಾಡ್, ಖುದಾ, ಭಗವಾನ್, ಅಲ್ಲಾಹ್.. ಮುಂತಾದುವುಗಳೆಲ್ಲ ಓರ್ವ ದೇವನ ಹಲವು ನಾಮಗಳಾಗಬಹುದಾದರೆ, ಇಸ್ಲಾಮ್, ಕ್ರೈಸ್ತ, ಹಿಂದೂ, ಬೌದ್ಧ, ಜೈನ.. ಮುಂತಾದುವುಗಳೆಲ್ಲ ಆ ಓರ್ವ ದೇವನ ಹಲವು ಹೆಸರುಗಳಲ್ಲಿರುವ ಒಂದೇ ಧರ್ಮವಾಗಬಾರದೇಕೆ? ‘ಸರ್ವೆ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾ - ಎಲ್ಲರೂ ಸುಖವಾಗಿರಲಿ, ಯಾರಿಗೂ ದುಃಖ ಬಾರದಿರಲಿ’ - ಎಂಬ ಶ್ಲೋಕಕ್ಕಿಂತ ‘ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಸರ್ವ ಸಮಾನರು' ಎಂಬ ಕುರ್‍ಆನಿನ (49:13) ವಚನದಲ್ಲಿ ಏನು ಭಿನ್ನತೆಯಿದೆ? ಧರ್ಮಗಳೆಲ್ಲ ಪರಸ್ಪರ ಪ್ರತ್ಯೇಕವಾಗಿ ಮತ್ತು ಆಚರಣೆಗಳಲ್ಲೋ ಆರಾಧನೆಗಳಲ್ಲೋ ಒಂದಕ್ಕೊಂದು ಸಂಧಿಸದಷ್ಟು ಅನ್ಯವಾಗಿ ಗುರುತಿಸಿಕೊಳ್ಳುತ್ತಿರುವುದರಿಂದಲೇ ಅಲ್ಲವೇ ವಿಚಾರವಾದ, ನಾಸ್ತಿಕವಾದ, ಮೂಲಭೂತವಾದಗಳು ಬೆಳೆದಿರುವುದು? ಟಿ.ಎನ್. ಸೀತಾರಾಮ್‍ರ ಧಾರಾವಾಹಿಯೊಂದರಲ್ಲಿ ಮಗುವೊಂದು ಬೆತ್ತಲೆಯಾಗಿ ಮನೆಯಿಂದ ಹೊರಗೆ ಹೋಗುವ ದೃಶ್ಯವಿದೆ. ಧರ್ಮದ ಬೇಲಿಯೊಳಗೆ ಬೆಳೆಸದೆ ಸ್ವತಂತ್ರವಾಗಿ ಮನುಷ್ಯರನ್ನು ಬೆಳೆಸಬೇಕೆಂಬ ಆಗ್ರಹ ಆ ದೃಶ್ಯದಲ್ಲಿದೆ. ಇಂಥ ಆಲೋಚನೆ, ವಿಚಾರಗಳಿಗೆ ಮೂಲ ಕಾರಣ ಯಾರು? ಧರ್ಮಗಳೋ ಅಥವಾ ಅದನ್ನು ಪ್ರತ್ಯೇಕತೆಯೊಳಗೆ ತೂರಿಸಿದ ಧರ್ಮಭಕ್ತರೋ?
   ಬಹುಶಃ ಪ್ರಶ್ನೆಗಳು ಧಾರಾಳ ಇವೆ. ಮಾತ್ರವಲ್ಲ, ಇಂಥ ಪ್ರಶ್ನೆಗಳು ಎಷ್ಟು ಪ್ರಭಾವಶಾಲಿ ಆಗಿರುತ್ತವೆ ಎಂದರೆ, ದಾರಾಶುಕೊರಂಥ ಅನೇಕಾರು ಮಂದಿಯನ್ನೂ ಅವು ಸೃಷ್ಟಿಸುತ್ತವೆ. ನಿಜವಾಗಿ, ‘ಕಾರ್ಮಿಕ ವರ್ಗದ ಹೊಟ್ಟೆಯನ್ನು ಧಾರ್ಮಿಕ ಚಿಂತನೆಗಳು ತಣಿಸುವುದಿಲ್ಲ' ಎಂಬ ಅಸಹನೆಯಿಂದಲೇ ಕಾರ್ಲ್ ಮಾರ್ಕ್ಸ್ ರ ಕಮ್ಯುನಿಸ್ಟ್ ಮೆನಿಫೆಸ್ಟೋ ಹುಟ್ಟಿಕೊಂಡದ್ದು. ಹಾಗಂತ, ಆ ಮೆನಿಫೆಸ್ಟೋ ಕಾರ್ಮಿಕರ ಹೊಟ್ಟೆಯನ್ನು ತಣಿಸಿತೋ ಎಂದು ಪ್ರಶ್ನಿಸಿದರೆ, ವಿಷಾದವೇ ಉತ್ತರವಾಗುತ್ತದೆ. ಜಗತ್ತಿನ ಇತಿಹಾಸವು ವರ್ಗ ಸಂಘರ್ಷದ ಇತಿಹಾಸವಾಗಿದೆ ಎಂದು ಹೇಳಿದ್ದು ಕಾರ್ಲ್ ಮಾರ್ಕ್ಸ್. ಅವರು ಕಾರ್ಮಿಕ ವರ್ಗದ ಕ್ರಾಂತಿಯನ್ನು ಬಯಸಿದರು. ಕಮ್ಯುನಿಸಂ ಎಂಬ ‘ಕಾರ್ಮಿಕ ಕ್ರಾಂತಿ'ಯು ಯುರೋಪನ್ನು ಸಂಪೂರ್ಣವಾಗಿ ಆವರಿಸದಿದ್ದರೂ ಅಲ್ಲೆಲ್ಲಾ ಶ್ರೀಮಂತ ವರ್ಗವನ್ನು ಅದು ಅಪ್ರತ್ಯಕ್ಷಗೊಳಿಸಲಿದೆ ಎಂದು ಅವರು ಭಾವಿಸಿದ್ದರು. ಅಷ್ಟಕ್ಕೂ, ಅದು ಅವರೊಬ್ಬರ ನಿರೀಕ್ಷೆಯಷ್ಟೇ ಆಗಿರಲಿಲ್ಲ. ಏಂಗಲ್ಸ್ ರಿಗೂ ಮತ್ತು ಅವರಂಥ ಅನೇಕ ಚಿಂತಕರಿಗೂ ಅದರಲ್ಲಿ ಪಾತ್ರವಿದೆ. ಜಗತ್ತಿನಲ್ಲಿರುವ ಧರ್ಮಗಳಿಗೆಲ್ಲ ಪರ್ಯಾಯ ಧರ್ಮವಾಗಿ ‘ಕಾರ್ಮಿಕ ಧರ್ಮ' ಉದಯವಾಯಿತೆಂಬ ಮತ್ತು ಅದುವೇ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೆಂಬ ಪ್ರಚಾರವೂ ನಡೆಯಿತು. ಆದರೆ ಆ ಭರವಸೆ ತೀರಾ ಸಣ್ಣ ಅವಧಿಯಲ್ಲೇ ಧರಾಶಾಹಿಯಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋವನ್ನು ರಷ್ಯಾದಲ್ಲಿ ಜಾರಿಗೆ ತಂದ ಸ್ಟಾಲಿನ್‍ರೇ ಆ ಮೆನಿಫೆಸ್ಟೋದ ಅಪ್ರಸ್ತುತತೆಯನ್ನು ಸಾರಿಬಿಟ್ಟರು. ಅವರಿಗೆ ಒಂದಕ್ಕಿಂತ ಹೆಚ್ಚು ಅದ್ದೂರಿ ಬಂಗಲೆಗಳಿದ್ದುದು, ಅತ್ಯಾಧುನಿಕ ವಾಹನಗಳಲ್ಲಿ ಸಂಚರಿಸುತ್ತಿದ್ದುದು ಮತ್ತು ಸ್ವದೇಶಿತನವನ್ನು ಪ್ರಚುರಪಡಿಸುತ್ತಾ ವಿದೇಶಿ ಮದ್ಯವಾದ ಸ್ಕೋಡಾವನ್ನು ಸೇವಿಸುತ್ತಿದ್ದುದೆಲ್ಲಾ ಕ್ರಮೇಣ ಬಹಿರಂಗವಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋ ಮಾತಾಡಿದ್ದು ಕಾರ್ಮಿಕರ ಪರ. ಆದರೆ ಸ್ಟಾಲಿನ್ ಬದುಕಿದ್ದು ಅಪ್ಪಟ ಶ್ರೀಮಂತರಂತೆ. ಅವರ ದಾಂಪತ್ಯ ಬದುಕಂತೂ ಅತ್ಯಂತ ಮಾದರಿರಹಿತವಾಗಿತ್ತು ಎಂದು ಎರಡು ವರ್ಷಗಳ ಹಿಂದೆ ಮೃತಪಟ್ಟ ಅವರ ಮಗಳು ಸ್ವೆಟ್ಲಾನಾ ಸ್ಟಾಲಿನಾ ತಮ್ಮ ‘ಟ್ವೆಂಟಿ ಲೆಟರ್ಸ್ ಟು ಏ  ಫ್ರೆಂಡ್  ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಅವರು ನನ್ನ ತಾಯಿಯನ್ನು ಗುಂಡಿಟ್ಟು ಕೊಂದಿದ್ದಾರೆ ಎಂದವರು ಹೇಳಿದ್ದಾರೆ. ಧರ್ಮದ ವೈಫಲ್ಯವನ್ನು ಎತ್ತಿಕೊಂಡು ಕಾರ್ಮಿಕವಾದವನ್ನು ನೆಚ್ಚಿಕೊಂಡ ವ್ಯಕ್ತಿಯೋರ್ವರ ವಿಫಲ ಬದುಕಿನ ಚಿತ್ರಣವನ್ನು ಸ್ವೆಟ್ಲಾನಾರ ಆತ್ಮಕತೆ ವಿವರಿಸುತ್ತದೆ. ಧಾರಾಶುಕೊ ಅಂತೂ ಧರ್ಮಗಳ ನಡುವೆ ಪಾರಿಭಾಷಿಕಗಳ ಹೊರತು ಇನ್ನೇನೂ ವ್ಯತ್ಯಾಸ ಇಲ್ಲವೆಂದು ಹೇಳಿದ್ದ. ಧಾರ್ಮಿಕ ಸೌಹಾರ್ದತೆಯನ್ನು ಗುರಿಯಾಗಿಟ್ಟುಕೊಂಡು ‘ದೀನೇ ಇಲಾಹಿ'ಯನ್ನು ಅಕ್ಬರ್ ಸ್ಥಾಪಿಸಿದಂತೆಯೇ ಅದರ ಮುಂದುವರಿದ ಭಾಗವನ್ನು ದಾರಾಶುಕೊ ಕೈಗೆತ್ತಿಕೊಂಡಿದ್ದ. ಆತ ಉಪನಿಷತ್ತು, ಭಗವದ್ಗೀತೆ, ಚಂದ್ರವಧೆ, ಯೋಗವಿಶಿಷ್ಟ ಇತ್ಯಾದಿ ಸಂಸ್ಕøತ ಗ್ರಂಥಗಳನ್ನು ಫಾರ್ಸಿ ಭಾಷೆಗೆ ಅನುವಾದಿಸಿದ್ದ. ಹಿಂದೂ ಮತ್ತು ಇಸ್ಲಾಮ್ ಧರ್ಮಗಳ ತುಲನಾತ್ಮಕ ಅಧ್ಯಯನವುಳ್ಳ ‘ಮಜ್‍ಮಉಲ್ ಬಹ್ರೈನ್' ಎಂಬ ಫಾರ್ಸಿ ಗ್ರಂಥವನ್ನು ಬರೆದದ್ದಲ್ಲದೇ ‘ಸಮುದ್ರ ಸಂಗಮ’ ಎಂಬ ಹೆಸರಲ್ಲಿ ಅದನ್ನು ಸಂಸ್ಕøತಕ್ಕೂ ಅನುವಾದಿಸಿದ್ದ. 1866ರಲ್ಲಿ ಸ್ಥಾಪಿತವಾದ ‘ಭಾರತೀಯ ಬ್ರಹ್ಮ ಸಮಾಜವು' ಹಿಂದೂ, ಬೌದ್ಧ ಮತ್ತು ಇಸ್ಲಾಮ್‍ನಿಂದ ಪಡೆಯಲಾದ ಉದ್ಧರಣೆಗಳಿಂದ ಕೂಡಿದ ಚಿಂತನೆಗಳಾಗಿವೆ ಎಂದು ಹೇಳಲಾಗುತ್ತದೆ. ಸರ್ವಧರ್ಮ ಸಮಭಾವ ಎಂಬ ಕಲ್ಪನೆಯಲ್ಲಿ ರಾಮಕೃಷ್ಣ ಪರಮ ಹಂಸರಿಗೂ ವಿರೋಧ ಇರಲಿಲ್ಲ. ಹೀಗೆ ಒಂದು ಬಗೆಯ ಧಾರ್ಮಿಕ ಸೌಹಾರ್ದತೆ, ಸಮಭಾವದ ಕಲ್ಪನೆಗಳು ಈ ದೇಶದಲ್ಲಿ ಆಗಾಗ ಮೂಡಿ ಬರುತ್ತಲೇ ಇದ್ದುವು. ವಿವಿಧ ನದಿಗಳು ಸಾಗರಕ್ಕೆ ಸೇರುವಂತೆ ವಿವಿಧ ಧರ್ಮಗಳೆಲ್ಲ ಒಂದೇ ದೇವನಲ್ಲಿಗೆ ಸೇರುತ್ತವೆ ಎಂಬ ಮಾತುಗಳೂ ಹುಟ್ಟಿಕೊಂಡವು. ಅಷ್ಟಕ್ಕೂ,
   ಬಹುದೇವಾರಾಧನೆ ಮತ್ತು ಮೂರ್ತಿ ಪೂಜೆಯನ್ನು ಪ್ರತಿಪಾದಿಸುವ ಹಿಂದೂ ಧರ್ಮ ಮತ್ತು ಏಕದೇವಾರಾಧನೆಯನ್ನು ಮಾತ್ರ ಪ್ರತಿಪಾದಿಸುವ ಹಾಗೂ ಮೂರ್ತಿ ಪೂಜೆ ಮತ್ತು ಬಹುದೇವಾರಾಧನೆಯನ್ನು ಪ್ರಬಲವಾಗಿ ನಿರಾಕರಿಸುವ ಇಸ್ಲಾಮ್ ಧರ್ಮದ ನಡುವೆ ಭಾವೈಕ್ಯತೆ ಹೇಗೆಲ್ಲ ಸಾಧ್ಯ? ಯಾವೆಲ್ಲ ವಿಷಯಗಳಲ್ಲಿ ಸಾಧ್ಯ? 33ರಿಂದ 33 ಕೋಟಿಯ ವರೆಗೆ ದೇವತೆಗಳಲ್ಲಿ ನಂಬಿಕೆಯಿಡುವ ಹಿಂದೂ ಧರ್ಮಕ್ಕೂ ಪ್ರವಾದಿ ಮುಹಮ್ಮದ್‍ರನ್ನು(ಸ) ಅಂತಿಮ ಪ್ರವಾದಿ ಮತ್ತು ಪವಿತ್ರ ಕುರ್‍ಆನನ್ನು ಅಂತಿಮ ದೇವಗ್ರಂಥ ಎನ್ನುವ ಇಸ್ಲಾಮ್‍ಗೂ ನಡುವೆ ಖಂಡಿತ ಅನೇಕಾರು ವಿಷಯಗಳಲ್ಲಿ ಮೂಲಭೂತ ವ್ಯತ್ಯಾಸಗಳಿವೆ. ಹೀಗಿರುವಾಗ, ಮೂರ್ತಿ ಪೂಜೆಯನ್ನು ಪ್ರಬಲವಾಗಿ ನಿರಾಕರಿಸುವ ಧರ್ಮದ ವ್ಯಕ್ತಿಯೊಬ್ಬ ಗಣಪತಿಯನ್ನು ಪೂಜಿಸುವುದು ಮತ್ತು ಅದನ್ನು ಭಾವೈಕ್ಯತೆ ಎಂದು ಮಾಧ್ಯಮಗಳು ವ್ಯಾಖ್ಯಾನಿಸುವುದನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬಹುದು? ಧರ್ಮದ ಮೂಲಭೂತ ವಿಶ್ವಾಸಕ್ಕೇ ವಿರುದ್ಧವಾದ ಕೃತ್ಯವೊಂದು ಭಾವೈಕ್ಯತೆಯ ಹೆಸರಲ್ಲಿ ಶ್ಲಾಘನೆಗೆ ಒಳಗಾಗುವುದು ಎಷ್ಟು ಸರಿ? ಇಸ್ಲಾಮ್‍ನಲ್ಲಿ ಮದ್ಯಪಾನವನ್ನು ಬಲವಾಗಿ ನಿಷೇಧಿಸಲಾಗಿದೆ. ಸಾಷ್ಟಾಂಗವು ನಿರಾಕಾರನಾದ ದೇವನಿಗೆ ಹೊರತು ಇನ್ನಾವ ಮನುಷ್ಯರಿಗೋ ವಿಗ್ರಹಗಳಿಗೋ ಆಗಬಾರದೆಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಅಸಂಖ್ಯ ದೇವ-ದೇವತೆಗಳ ಜೊತೆಗೇ ಜಡ ಮತ್ತು ಚೇತನ ವಸ್ತುಗಳೂ ಶ್ರದ್ಧಾಕೇಂದ್ರಗಳಾಗಿವೆ. ಸೂರ್ಯ, ಚಂದ್ರ, ನಕ್ಷತ್ರ, ಸಮುದ್ರ, ನದಿ, ಪರ್ವತ, ಮರ, ಗೋವು ಎಲ್ಲವೂ ಪೂಜನೀಯ. ಹಾಗಂತ, ಇವುಗಳನ್ನು ಪೂಜಿಸುವವರನ್ನು ನಿರಾಕಾರ ದೇವನನ್ನು (ಅಲ್ಲಾಹ್) ಪೂಜಿಸುವಂತೆ ಇಸ್ಲಾಮ್ ಬಲವಂತ ಪಡಿಸುವುದಿಲ್ಲ (ಪವಿತ್ರ ಕುರ್‍ಆನ್: 2: 256). ಅಲ್ಲದೇ, ಅದು ವಿಗ್ರಹಗಳ ನಿಂದನೆಯನ್ನು ಧರ್ಮನಿಷಿದ್ಧ ಎನ್ನುತ್ತದೆ (ಪವಿತ್ರ ಕುರ್‍ಆನ್: 6: 108). ಹಾಗೆಯೇ, ಶವವನ್ನು ದಫನ ಮಾಡಬೇಕೆಂದೇ ಇಸ್ಲಾಮ್ ಆದೇಶಿಸುತ್ತದೆ. ಹಿಂದೂಗಳಲ್ಲಿರುವ ಸಪ್ತಪದಿಗಿಂತ ಭಿನ್ನವಾಗಿ ಇಸ್ಲಾಮ್‍ನಲ್ಲಿ ನಿಕಾಹ್ ಕ್ರಮ ಇದೆ. ಜೈನರ ದಿಗಂಬರ ಪದ್ಧತಿ ಇಸ್ಲಾಮ್‍ನಲ್ಲಿಲ್ಲ. ಸನ್ಯಾಸತ್ವವೂ ಇಲ್ಲ. ಹಾಗಂತ, ಭಾವೈಕ್ಯತೆಗಾಗಿ ಓರ್ವ ಮುಸ್ಲಿಮ್ ಈ ನಿಯಮಗಳನ್ನೆಲ್ಲಾ ಮುರಿಯಬಹುದೇ? ಹಾಗೆ ಮುರಿಯುವುದು ಭಾವೈಕ್ಯತೆಯೆಂದಾದರೆ, ಭಾವೈಕ್ಯತೆಯ ಅರ್ಥವೇನು, ಧರ್ಮಗಳ ಮೂಲಭೂತ ಬೇಡಿಕೆಗಳನ್ನು ಮುರಿಯುವುದೇ? ಹೀಗೆ ಮುರಿಯುವುದರಿಂದ ಒಂದು ಧರ್ಮದ ಅನುಯಾಯಿಗಳಿಗೆ ಆಗಬಹುದಾದ ನೋವುಗಳು ಎಷ್ಟರ ಮಟ್ಟಿಗೆ ಪರಿಗಣನೆಗೆ ಒಳಗಾಗಿವೆ? ಭಾವೈಕ್ಯತೆ ಎಂಬುದು ವಿವಿಧ ಧರ್ಮಗಳ ಅನುಯಾಯಿಗಳು ತಂತಮ್ಮ ಧರ್ಮದ ಮೂಲಭೂತ ವಿಶ್ವಾಸ ಮತ್ತು ಬೇಡಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದರ ಹೆಸರೇ ಆಗಿದ್ದರೆ ಮತ್ತು ಅದು ಶ್ಲಾಘನಾರ್ಹ ಕ್ರಮ ಎಂದಾದರೆ ಫಲಿತಾಂಶ ಏನಾದೀತು? ಸಾಮಾಜಿಕವಾಗಿ ಇಂಥ ಭಾವೈಕ್ಯತೆಗಳು ಭಾರೀ ಪ್ರಮಾಣದಲ್ಲಿ ನಡೆದರೆ ಮಸೀದಿ, ಮಂದಿರ, ಚರ್ಚ್, ಬಸದಿ, ಗುರುದ್ವಾರಗಳು ಹೇಗೆ ಕಾಣಿಸಿಕೊಂಡಾವು? ಅವು ಸೃಷ್ಟಿಸಬಹುದಾದ ಸಮಸ್ಯೆಗಳು ಮತ್ತು ಪರಿಣಾಮಗಳೇನು? ಧರ್ಮದ ನಿಯಮಗಳನ್ನು ಮುರಿಯುವುದೇ ಭಾವೈಕ್ಯತೆ ಎಂಬುದು ಕೊನೆಗೆ ಏನನ್ನು ಮತ್ತು ಯಾವುದನ್ನೆಲ್ಲಾ ಮುರಿಯುವುದಕ್ಕೆ ಪ್ರೇರೇಪಿಸಬಹುದು?
 
     ನಿಜವಾಗಿ, ಭಾವೈಕ್ಯತೆಯು ಒಂದು ಧರ್ಮದ ನಿಯಮಗಳನ್ನು ಮುರಿದುಕೊಂಡು ನಡೆಸುವ ಆಚರಣೆಯ ಹೆಸರಲ್ಲ. ಅದು ಧರ್ಮಗಳನ್ನು ಮತ್ತು ಅದರ ಅನುಯಾಯಿಗಳನ್ನು ಪರಸ್ಪರ ಜೋಡಿಸುವುದರ ಹೆಸರು. ಆದ್ದರಿಂದ, ಒಂದು ಧರ್ಮದ ಆಚರಣೆಗಳನ್ನು ಗೌರವಿಸುವುದಕ್ಕೆ ಇನ್ನೊಂದು ಧರ್ಮದ ನಿಯಮಗಳನ್ನು ಮುರಿಯಬೇಕೆಂದಿಲ್ಲ. ಗಣೇಶ ಚತುರ್ಥಿಯ ದಿನದಂದು ಹಿಂದೂ ಬಾಂಧವರಿಗೆ ಶುಭಾಶಯ ಕೋರುವುದು, ಅವರ ಆಹ್ವಾನವನ್ನು ಸ್ವೀಕರಿಸಿ ಮನೆಗೆ ಭೇಟಿ ಕೊಡುವುದು, ಅವರ ಧಾರ್ಮಿಕ ಮೆರವಣಿಗೆ ಮತ್ತಿತರ ಸಂದರ್ಭಗಳು ಸುಗಮವಾಗಿ ನಡೆಯುವಂಥ ವಾತಾವರಣ ನಿರ್ಮಿಸುವುದು, ಅವರಿಗೆ ನೆರವಾಗುವುದು.. ಇತ್ಯಾದಿಗಳು ನಿಜ ಭಾವೈಕ್ಯತೆಯ ರೂಪಗಳಾಗಿವೆ. ವಿವಿಧ ಧರ್ಮದವರು ತಂತಮ್ಮ ಹಬ್ಬಗಳ ಸಂದರ್ಭದಲ್ಲಿ ಪರಸ್ಪರರ ಮನೆಗಳಿಗೆ ಭೇಟಿ ಕೊಡುವುದು ಮತ್ತು ಸಿಹಿ ತಿಂಡಿ, ಹಬ್ಬದೂಟಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಬದಲಾವಣೆಗೆ ಕಾರಣವಾಗಬಹುದು. ಇವು ಮನಸ್ಸುಗಳನ್ನು ಪರಸ್ಪರ ಹತ್ತಿರಗೊಳಿಸುತ್ತದೆ. ಅಲ್ಲಿ ಭಾವನಾತ್ಮಕ ಭದ್ರತೆಯೊಂದು ಏರ್ಪಡುತ್ತದೆ. ಮುರಿಯುವಿಕೆಯಲ್ಲಿ ಇಲ್ಲದ ತೃಪ್ತ ಮತ್ತು ನಿರಾಳ ಭಾವವೊಂದು ನಿರ್ಮಾಣವಾಗುತ್ತದೆ. ಅಂದಹಾಗೆ, ಗಣೇಶ ಚತುರ್ಥಿ ಎಂದಲ್ಲ, ವಿವಿಧ ಧರ್ಮಗಳಿರುವ ಈ ದೇಶದಲ್ಲಿ ಹಬ್ಬಗಳು ಮತ್ತು ವಿಶೇಷ ದಿನಗಳು ವಾರಕ್ಕೊಂದರಂತೆ ಬರುತ್ತಿರುತ್ತವೆ. ಇಂಥ ಸಂದರ್ಭಗಳಲ್ಲಿ ಆಯಾ ಧರ್ಮೀಯರು ತಮ್ಮೊಳಗೇ ಖುಷಿಯನ್ನು ಹಂಚಿಕೊಳ್ಳುವುದಕ್ಕಿಂತ ಎಲ್ಲ ಧರ್ಮೀಯರೂ ತಂತಮ್ಮ ಮಿತಿಯೊಳಗೆ ಒಟ್ಟಾಗಿ ಖುಷಿಯನ್ನು ಹಂಚಿಕೊಂಡು ಅನುಭವಿಸುವುದರಿಂದ ಸಹಜ ಭಾವೈಕ್ಯತೆ ನಿರ್ಮಾಣವಾಗಬಹುದು. ಹಾಗಾದಾಗ, ಮೂರ್ತಿಯನ್ನು ಆರಾಧಿಸುವವ ಮತ್ತು ಆರಾಧಿಸದವ, ಯೇಸುವನ್ನು ದೇವಪುತ್ರ ಅನ್ನುವವಳು ಮತ್ತು ಪ್ರವಾದಿ ಅನ್ನುವವಳ ನಡುವೆ ಸಂಬಂಧ ಬೆಳೆಯುತ್ತದೆ. ಅಂಥ ಸಂಬಂಧಗಳು ಉಂಟು ಮಾಡುವ ಭಾವೈಕ್ಯತೆಯು ಧಾರ್ಮಿಕ ನಿಯಮಗಳನ್ನು ಮುರಿದು ಮಾಡುವ ಭಾವ ಐಕ್ಯತೆಗಳಂಥಲ್ಲ. ಮುರಿಯುವುದು ಮತ್ತು ಜೋಡಿಸುವುದು ಒಂದೇ ಅಲ್ಲ. ಆದರೂ, ಮುರಿಯುವುದೇ ಭಾವೈಕ್ಯತೆ ಮತ್ತು ಜೋಡಿಸುವುದೇ ‘ಮತಾಂತರ' ಎಂಬ ರೀತಿಯಲ್ಲಿ ಸುದ್ದಿಗಳು ಪ್ರಸಾರವಾಗುತ್ತಿರುವುದಕ್ಕೆ ಏನೆನ್ನಬೇಕು? ತಂತಮ್ಮ ಧರ್ಮದಲ್ಲಿದ್ದುಕೊಂಡೇ ಇನ್ನೊಂದು ಧರ್ಮವನ್ನು ಗೌರವಿಸುವ ಮತ್ತು ಅದರ ಆಚರಣೆಗಳಿಗೆ ಸಹಕರಿಸುವ ಕ್ರಮಗಳು ಯಾಕೆ ಸಾಮಾಜಿಕ ಅಗತ್ಯಗಳಾಗಿ ಪ್ರಚಾರಗೊಳ್ಳುತ್ತಿಲ್ಲ? ಭಾವೈಕ್ಯತೆಯ ನಿಜವಾದ ರೂಪಕ್ಕಿಂತ ಕುರೂಪವೇ ಯಾಕೆ ಮಾದರಿ ಅನ್ನಿಸಿಕೊಳ್ಳುತ್ತಿವೆ? ಈ ಮಾದರಿ ಎಷ್ಟು ಸ್ವಾಗತಾರ್ಹ? ಎಷ್ಟು ಸಮಾಜಮುಖಿ?  
   ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಕರುಂದವಾಡದ ಐದು ಮಸೀದಿಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಮತ್ತು ಮಂಗಳೂರಿನ ಕೈಕಂಬದಲ್ಲಿ ಮೌಲಾನ ಎಂಬ ಬಿ.ಕಾಂ. ವಿದ್ಯಾರ್ಥಿ ಗಣೇಶ ವಿಗ್ರಹವನ್ನು ರಚಿಸಿ ಪೂಜಿಸಿದ ಚಿತ್ರಸಹಿತ ಸುದ್ದಿಗಳನ್ನು ‘ಭಾವೈಕ್ಯತೆ' ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಮಾಧ್ಯಮಗಳು ಪ್ರಕಟಿಸಿದುದನ್ನು ಓದುತ್ತಾ ಹೀಗೆಲ್ಲಾ ಆಲೋಚಿಸಬೇಕಾಯಿತು.

Monday, September 1, 2014

ವೃದ್ಧಾಶ್ರಮದಿಂದ ಗ್ರೇಸಿ ಮಾರ್ಟಿಸ್ ಬರೆದ ಪತ್ರ






 
   Every morning
   He helps her get up
   Get ready for a day
   That she may not remember tomorrow
   ........ 
ಗ್ರೇಸಿ ಮಾರ್ಟಿಸ್ ಬರೆದ ಪತ್ರದ ಒಂದು ಭಾಗ
   ಹೀಗೆ ಆರಂಭವಾಗಿ ನಾಲ್ಕೈದು ಚರಣಗಳಲ್ಲಿ ಕೊನೆಗೊಳ್ಳುವ ಕವನವು 2006 ಫೆಬ್ರವರಿಯಲ್ಲಿ ಪ್ರಕಟವಾದಾಗ ಕೇಟ್ ಕಾರ್ಟ್ ರೈಟ್‍ರನ್ನು ಸಾಕಷ್ಟು ಮಂದಿ ಅಭಿನಂದಿಸಿದ್ದರು. ನೆನಪು ಶಕ್ತಿಯನ್ನು ಕಳಕೊಂಡ ತಾಯಿಯನ್ನು ಎದುರಿಟ್ಟುಕೊಂಡು ಕೇಟ್ ಕಾರ್ಟ್‍ರೈಟ್‍ರು ರಚಿಸಿದ್ದ ಈ ಕವನಕ್ಕೆ ಧಾರಾಳ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದುವು. "ಪ್ರತಿ ಬೆಳಗುಗಳಲಿ| ಅವ ಮಾಡುವವನು ಸಹಾಯ ಅವಳಿಗೆ| ಎದ್ದೇಳಲು| ದಿನದಾರಂಭಕ್ಕೆ ಸಿದ್ಧಗೊಳ್ಳಲು| ಆದರವಳು ಅದನ್ನು ನಾಳೆ ನೆನಪಿಸಲಾರಳು| ಅದುವೇ ಅವನ ಅಳಲು.." ಎಂಬ ಸಾಲುಗಳಲ್ಲಿರುವ ಭಾವುಕತೆಯನ್ನು ಕೊಂಡಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಈ ಹಾಡನ್ನು ಹಂಚಿಕೊಂಡರು. ಅದು ಒಳಗೊಂಡಿರುವ ಭಾವುಕತೆಗಾಗಿ ಇಷ್ಟಪಟ್ಟರು. ತಮ್ಮ ಮನೆ ಮತ್ತು ಪರಿಸರಗಳಲ್ಲಿ ಹಿರಿಯರ ಸ್ಥಿತಿ-ಗತಿಗಳ ಕುರಿತಂತೆ ಈ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದುವು. ಹಿರಿಯರನ್ನು ವೃದ್ಧಾ ಶ್ರಮಗಳಿಗೆ ಅಟ್ಟುವ ಬಗ್ಗೆ, ಅದರ ಅಗತ್ಯ-ಅನಗತ್ಯಗಳ ಕುರಿತಂತೆ ವಾಗ್ವಾದಗಳೂ ನಡೆದುವು. ಆಧುನಿಕ ಜೀವನ ಕ್ರಮಗಳ ಪ್ರಭಾವವನ್ನು ಕೆಲವರು ಅದಕ್ಕೆ ಕಾರಣವಾಗಿ ಮುಂದಿಟ್ಟರು. ಕೆಲವರು ತಿರಸ್ಕರಿಸಿದರು. ಧರ್ಮವನ್ನು ಪರಿಹಾರವಾಗಿ ಮುಂದಿಟ್ಟವರು ಕೆಲವರಾದರೆ, ವೃದ್ಧಾಶ್ರಮಗಳನ್ನೇ ಅನಿವಾರ್ಯವಾಗಿ ಕಂಡವರು ಕೆಲವರು. ಹೀಗೆ ಕೇಟ್‍ರ ಕೆಲವು ಸಾಲುಗಳು ಒಂದು ಗಂಭೀರ ಚರ್ಚೆಯನ್ನೇ ಹುಟ್ಟು ಹಾಕುವಲ್ಲಿ ಸಫಲವಾಗಿದ್ದುವು.
   ವಯಸ್ಸಾಗುವುದು ಪ್ರಕೃತಿ ಸಹಜ ಬೆಳವಣಿಗೆ. ಹುಟ್ಟುವ ಮಗುವಿನಿಂದಲೇ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಇದು ಅರಿವಿಗೆ ಬರುವುದು ವಯಸ್ಸಾದಾಗಲೇ. ಹೆಚ್ಚಿನ ವೇಳೆ ಹಿರಿಯರು ಹಿರಿತನಕ್ಕೆ ಸಜ್ಜುಗೊಂಡಿರುವುದೇ ಇಲ್ಲ. ಮುಪ್ಪನ್ನು ಎದುರಿಸುವ ಕುರಿತು, ಆ ಸಂದರ್ಭದಲ್ಲಿ ತನ್ನ ವರ್ತನೆ, ನಿರೀಕ್ಷೆ, ಸಹನೆ.. ಮುಂತಾದುವುಗಳ ಕುರಿತು ಮಾನಸಿಕ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ತನ್ನ ಬಿಸಿನೆಸ್‍ನಲ್ಲಿ ವೈಫಲ್ಯ ಉಂಟಾದರೆ ಏನು ಮಾಡಬೇಕು ಎಂದು ಆಲೋಚಿಸುವ ಮತ್ತು ವ್ಯಾಪಾರದ ಹಿತ ಕಾಪಾಡುವಲ್ಲಿ ವಿವಿಧ ತಂತ್ರಗಳನ್ನು ಹೆಣೆಯುವ ಮಂದಿ ಧಾರಾಳ ಇದ್ದಾರೆ. ಕಚೇರಿಗೆ ಎರಡು ದಿನ ರಜೆ ಹಾಕಬೇಕೆಂದು ಬಯಸುವ ನೌಕರ, ಅದಕ್ಕಾಗಿ ತಯಾರಿ ನಡೆಸುತ್ತಾನೆ. ಹಾಗಂತ ಇಂಥ ಮುನ್ನೆಚ್ಚರಿಕೆಗಳು ಕೇವಲ ಬ್ಯುಸಿನೆಸ್‍ಗೋ ಕಚೇರಿ ನೌಕರಿಗೋ ಸೀಮಿತವೂ ಅಲ್ಲ. ಎಲ್ಲ ಕ್ಷೇತ್ರಗಳಲ್ಲೂ ಇಂಥದ್ದೊಂದು ತಯಾರಿಯನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಹಾಗಂತ,  ವೃದ್ಧಾಪ್ಯವು ಇವುಗಳಂತೆ ಅಲ್ಲ ಎಂದು ವಾದಿಸಬಹುದಾದರೂ ಅದೂ ಒಂದು ತಯಾರಿಗರ್ಹವಾದ ಸ್ಥಿತಿಯೇ. ವೃದ್ಧಾಪ್ಯವನ್ನು ನಿರ್ಲಕ್ಷಿಸಿ ಬದುಕುವುದರಿಂದ ಅದೇನೂ ನಮ್ಮಿಂದ ದೂರ ಹೋಗುವುದಿಲ್ಲ. ನಿಜವಾಗಿ, ನಮ್ಮ ದೈಹಿಕ-ಮಾನಸಿಕ ಆರೋಗ್ಯವು ನಾವು ವೃದ್ಧಾಪ್ಯವನ್ನು ಹೇಗೆ ನೋಡುತ್ತಿದ್ದೇವೆ ಎಂಬುದನ್ನು ಆಧರಿಸಿಕೊಂಡಿರುತ್ತದೆ. ಅನಾರೋಗ್ಯಕ್ಕೂ ನಮ್ಮ ಮನಸ್ಥಿತಿಗೂ ಹತ್ತಿರದ ನಂಟಿದೆ. ವೃದ್ಧಾಪ್ಯದ ಕುರುಹುಗಳಿಗೂ ನಮ್ಮ ಆಲೋಚನೆಗಳಿಗೂ ನಿಕಟ ಸಂಬಂಧವಿದೆ. ಅನೇಕರನ್ನು ವೃದ್ಧಾಪ್ಯ ಕಾಡುವುದು  ವಯಸ್ಸಿನಿಂದಲ್ಲ, ಮನಸ್ಥಿತಿಯಿಂದ.
   ಯುರೋಪಿಯನ್ ರಾಷ್ಟ್ರಗಳಲ್ಲಿ ವೃದ್ಧಾಪ್ಯದ ಸುತ್ತ ಹತ್ತು-ಹಲವು ಪ್ರಬಂಧಗಳು, ಸರ್ವೇಗಳು ನಡೆದಿವೆ. ವೃದ್ಧಾಪ್ಯವನ್ನೇ ಮುಂದೂಡಬಹುದಾದ ಸಂಶೋಧನೆಗಳಲ್ಲಿ ವಿಜ್ಞಾನಿಗಳು ತೊಡಗಿಸಿಕೊಂಡಿರುವ ಸುದ್ದಿಗಳೂ ಬರುತ್ತಿವೆ. ಯುರೋಪ್‍ನಲ್ಲಿರುವ ವೃದ್ಧಾಶ್ರಮಗಳಿಗೆ ಹೋಲಿಸಿದರೆ, ಭಾರತದಲ್ಲಿರುವ ವೃದ್ಧಾಶ್ರಮಗಳ ಸಂಖ್ಯೆ ಏನೇನೂ ಅಲ್ಲ. ಆದರೂ ವೃದ್ಧಾಶ್ರಮಗಳ ಕುರಿತಂತೆ ಗಂಭೀರ ಚರ್ಚೆ ನಡೆಯಲೇಬೇಕಾಗಿದೆ. ‘ಏಜಿಂಗ್, ಇಂಟರ್ ಜನರೇಶನಲ್ ರಿಲೇಶನ್ಸ್, ಕೇರ್ ಸಿಸ್ಟಮ್ಸ್ ಆ್ಯಂಡ್ ಕ್ವಾಲಿಟಿ ಆಫ್ ಲೈಫ್' ಎಂಬ ಹೆಸರಲ್ಲಿ 2003ರಲ್ಲಿ ನಾರ್ವೆಯಲ್ಲಿ ಪ್ರಬಂಧವೊಂದು ಮಂಡನೆಯಾಗಿತ್ತು. ಜರ್ಮನಿ, ಇಸ್ರೇಲ್, ಸ್ಪೈನ್, ನಾರ್ವೆ ಮತ್ತು ಬ್ರಿಟನ್‍ಗಳು ಧನಸಹಾಯ ನೀಡಿ ರಚಿಸಲಾದ ಸರ್ವೇ ಆಧಾರಿತ ಈ ಪ್ರಬಂಧವು ವೃದ್ಧರ ಹತ್ತು-ಹಲವು ಸಮಸ್ಯೆಗಳನ್ನು ಸಮಾಜದ ಮುಂದಿಟ್ಟಿತು. ಮುಖ್ಯವಾಗಿ ಯುರೋಪಿನಲ್ಲಿ ವೃದ್ಧರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಆಳ ಅಧ್ಯಯನ ನಡೆಸಿದ ಪ್ರಬಂಧವಾಗಿತ್ತದು. ಅದೇ ರೀತಿಯಲ್ಲಿ, ಜಾಸ್ಮೀನ್ ರಾಕ್‍ವೆಲ್ ಎಂಬವರು ಬ್ರಿಟಿಷ್ ಕೊಲಂಬಿಯಾ ಯುನಿವರ್ಸಿಟಿಗಾಗಿ, "ರಿಲೇಶನ್‍ಶಿಪ್ ಆ್ಯಸ್ ರೆಮೆಡಿ: ವಿೂಟಿಂಗ್ ದಿ ಸೋಶಿಯಲ್ ಆ್ಯಂಡ್ ಇಮೋಶನಲ್ ನೀಡ್ಸ್ ಆಫ್ ಎಲ್ಡರ್ಸ್ ಲಿವಿಂಗ್ ಇನ್ ರೆಸಿಡೆನ್ಸಿಯಲ್ ಕೇರ್" ಎಂಬ ಅಧ್ಯಯನಾತ್ಮಕ ಪ್ರಬಂಧವನ್ನು ರಚಿಸಿದ್ದರು. ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ‘ವೃದ್ಧಾಪ್ಯ' ಹಲವು ರೀತಿಯಲ್ಲಿ ಸದಾ ಚರ್ಚೆಯಲ್ಲಿರುವ ಸಂಗತಿ. ಹಾಂಕಾಂಗ್, ಚೀನಾ ಅಥವಾ ದಕ್ಷಿಣೇಶ್ಯದ ರಾಷ್ಟ್ರಗಳಲ್ಲಿ ವೃದ್ಧರ ಸ್ಥಿತಿ-ಗತಿಯನ್ನು ಯುರೋಪಿಯನ್ ರಾಷ್ಟ್ರಗಳ ವೃದ್ಧರ ಸ್ಥಿತಿ-ಗತಿಗಳೊಂದಿಗೆ ಹೋಲಿಸಿಕೊಂಡು ನಡೆಸಲಾದ ಸರ್ವೇಗಳೂ ಧಾರಾಳ ಇವೆ. ಏಶ್ಯನ್ ರಾಷ್ಟ್ರಗಳಲ್ಲಿ ಹೊಸ ತಲೆಮಾರು ಹಿರಿಯರಿಂದ ಭಾವನಾತ್ಮಕವಾಗಿ ದೂರ ಸರಿಯುತ್ತಿರುವ ಬಗ್ಗೆ ಮತ್ತು ಆರ್ಥಿಕ ನೆರವು ಮಾತ್ರವೇ ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತಿರುವ ಬಗ್ಗೆ ಸಾಕಷ್ಟು ವಿವರಗಳೂ ವ್ಯಕ್ತಗೊಂಡಿವೆ. ಅಷ್ಟಕ್ಕೂ, ಇಂಥದ್ದೊಂದು ವಾತಾವರಣ ನಿರ್ಮಾಣಗೊಂಡಿರುವುದಕ್ಕೆ ಮತ್ತು ಅದರ ವ್ಯಾಪ್ತಿ ದಿನೇ ದಿನೇ ವಿಸ್ತಾರಗೊಳ್ಳುತ್ತಿರುವುದಕ್ಕೆ ಕಾರಣಗಳೇನು? ಆಧುನಿಕ ಜೀವನ ಕ್ರಮಗಳೇ? ಶೈಕ್ಷಣಿಕ ಬೆಳವಣಿಗೆಯೇ? ಜೀವನಾನುಕೂಲತೆಗಳೇ? ತಥಾಕಥಿತ ಅಭಿವೃದ್ಧಿಗಳೇ? ಟಿ.ವಿ., ಕಂಪ್ಯೂಟರ್, ಮೊಬೈಲ್‍ಗಳೇ? ಇಂದಿನ ತಲೆಮಾರು ಪ್ರತಿದಿನವೂ ಹೊಸ ಹೊಸ ತಂತ್ರಜ್ಞಾನಗಳನ್ನುಪರಿಚಯಿಸಿಕೊಳ್ಳುತ್ತಿವೆ. ಅತ್ಯಂತ ವೇಗವಾಗಿ Update  ಆಗುತ್ತಿವೆ. ಹಾಗೆಯೇ ಅವು ಮನೆಯ ಹಿರಿಯರು Updateಗೊಂಡಿರಬೇಕೆಂದೂ ಬಯಸುತ್ತಿವೆ. ಮೊಬೈಲನ್ನು ಕೇವಲ ಕರೆ ಮಾಡುವುದಕ್ಕಷ್ಟೇ ಬಳಸುವ ಹಿರಿಯರಿಗೂ ವಿವಿಧ ಆ್ಯಪ್‍ಗಳಿಗಾಗಿ ಬಳಸುವ ಹೊಸ ತಲೆಮಾರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ತಮ್ಮ ಭಾಷೆ, ಹವ್ಯಾಸ, ವೇಗಗಳಿಗೆ ಹಿರಿಯರು ಹೊಂದಿಕೊಳ್ಳಲಾರರು ಎಂಬುದು ಗೊತ್ತಾಗುತ್ತಲೇ ಮಕ್ಕಳು ಹಿರಿಯರಿಂದ ದೂರ ಸರಿದು ಉಪಕರಣಗಳಿಗೆ ಹತ್ತಿರ ವಾಗುತ್ತಿರಬಹುದೇ? ಟಿ.ವಿ. ಕಾರ್ಟೂನ್‍ಗಳಲ್ಲಿ ಅಥವಾ ವಿವಿಧ ಕಾರ್ಯಕ್ರಮಗಳಲ್ಲಿ ಸಿಗುವ ಆನಂದವನ್ನೇ ಹಿರಿಯರ ಒಡನಾಟದಲ್ಲೂ ಯುವ ತಲೆಮಾರು ನಿರೀಕ್ಷಿಸುತ್ತಿರಬಹುದೇ? ನಿಜವಾಗಿ, ಹಿರಿಯರೆಂಬುದು ಒಂದು ಅದ್ಭುತ ಮಾಹಿತಿಕೋಶ. ಅವರಲ್ಲಿ ಕತೆ, ಕವನ, ಹಾಸ್ಯ, ತಮಾಷೆ, ಒಗಟು.. ಎಲ್ಲವೂ ಇರುತ್ತವೆ. ಆದರೆ ಇವನ್ನು ಆಸ್ವಾದಿಸುವುದಕ್ಕೂ ಬರಬೇಕಲ್ಲವೇ? ಟಿ.ವಿ., ಮೊಬೈಲ್‍ಗಳಲ್ಲಿ ಅಥವಾ ಗೆಳೆಯರ ಜೊತೆಗಿನ ಒಡನಾಟದಲ್ಲಿ ಸಿಗುವ ಖುಷಿಯನ್ನು ಹಿರಿಯರಲ್ಲಿ ಹುಡುಕುತ್ತಾ ಅದು ಸಿಗದಾಗ ದೂರ ಸರಿಯುವ ಆಧುನಿಕ ಪೀಳಿಗೆಯಿಂದಾಗಿ ಹಿರಿಯರು ಒಂಟಿತನ ಅನುಭವಿಸುತ್ತಾರೆ. ಅಷ್ಟಕ್ಕೂ, ಹಿರಿಯರೊಂದಿಗೆ ಬೆರೆಯುವ ಕಲೆಯನ್ನು ಮಕ್ಕಳಿಗೆ ನಾವೆಷ್ಟು ಹೇಳಿಕೊಡುತ್ತಿದ್ದೇವೆ? ಅದರ ಸುಖವನ್ನು ಎಷ್ಟು ಮನವರಿಕೆ ಮಾಡಿಕೊಡುತ್ತಿದ್ದೇವೆ? ಮಗನೂ ಸೊಸೆಯೂ ನೌಕರಿ ಮಾಡುತ್ತಿರುವ ಮನೆಯಲ್ಲಿ ಹಿರಿಯರು ಹೆಚ್ಚು ಆಶ್ರಯಿಸುವುದು ಮೊಮ್ಮಕ್ಕಳನ್ನು. ಮೊಮ್ಮಕ್ಕಳೂ ತುಟ್ಟಿಯಾದರೆ ಆ ಬಳಿಕ ಹಿರಿಯರು ಹತಾಶರಾಗುತ್ತಾರೆ. ಆರೋಗ್ಯ ಹದಗೆಡತೊಡಗುತ್ತದೆ. ಅತ್ತ ನೌಕರಿಯನ್ನೂ ಬಿಡಲಾಗದ ಇತ್ತ ಹೆತ್ತವರನ್ನೂ ಸರಿಯಾಗಿ ನೋಡಲಾಗದ ಅನೇಕ ಮಕ್ಕಳು ಅಂತಿಮವಾಗಿ ವೃದ್ಧಾಶ್ರಮಗಳನ್ನು ಸಂಪರ್ಕಿಸುತ್ತಾರೆ. ಹೀಗೆ  ಬದುಕಿನ ವಾಸ್ತವಗಳಿಗೆ ಬೆನ್ನು ಹಾಕಿ ಬದುಕತೊಡಗುತ್ತಾರೆ. ನಿಜವಾಗಿ, ಹಿರಿಯರಿಗೆ ಭಾವನಾತ್ಮಕ ಆರೈಕೆಯ ಅಗತ್ಯವಿರುತ್ತದೆ. ಅದನ್ನು ವೃದ್ಧಾಶ್ರಮಗಳು ಕೊಡಲಾರವು. ವೃದ್ಧಾಶ್ರಮಗಳಲ್ಲಿರುವವರೆಲ್ಲ ವೃದ್ಧರೇ. ಅದರಲ್ಲೂ ವಿವಿಧ ಕಾಯಿಲೆಗಳನ್ನು ಅಂಟಿಸಿಕೊಂಡು ಸಂಕಟಪಡುವವರೇ ಹೆಚ್ಚು. ಆದ್ದರಿಂದಲೇ, ಅಲ್ಲಿ ನಡೆಯಬಹುದಾದ ಮಾತುಕತೆಗಳು ಕೂಡ ಬಹುತೇಕ ಕಣ್ಣೀರಿನದ್ದೇ ಆಗಿರುತ್ತವೆ. ಮಗ, ಮಗಳು, ಸೊಸೆ, ಕುಟುಂಬಿಕರು ನಡೆಸಿದ ದೌರ್ಜನ್ಯಗಳು ಮತ್ತೆ ಮತ್ತೆ ಅವರ ಮಾತುಕತೆಗಳಲ್ಲಿ ಪ್ರಸ್ತಾಪಗೊಳ್ಳುತ್ತಿರುವುದಕ್ಕೆ ಅವಕಾಶವಿದೆ. ಅಂತಿಮವಾಗಿ ಹೃದಯ ಭಾರಗೊಳ್ಳುವುದಕ್ಕೂ ಕಣ್ಣೀರಿಗೂ ಅದು ಕಾರಣವಾಗಬಹುದು. ಆದರೆ ಮನೆಯ ವಾತಾವರಣ ಹಾಗಲ್ಲ. ಅಲ್ಲಿ ಹಿರಿಯರ ಮುಂದೆ ಮಗ, ಸೊಸೆ, ಮೊಮ್ಮಕ್ಕಳು, ಮಗಳ ಮಕ್ಕಳು, ಕುಟುಂಬಿಕರಿರುತ್ತಾರೆ. ಅಲ್ಲೊಂದು ಜೀವಕಳೆಯಿರುತ್ತದೆ. ಅಲ್ಲಿ ನಡೆಯಬಹುದಾದ ಮಾತು ಕತೆಗಳು ವೃದ್ಧರ ನಡುವೆ ನಡೆಯುವ ಮಾತುಕತೆಗಳಂತಿರುವುದಿಲ್ಲ. ಮೊಮ್ಮಕ್ಕಳ ನಗು ವೃದ್ಧರ ಮನಸ್ಸನ್ನು ಅರಳಿಸುತ್ತದೆ. ತನ್ನ ಮಗನೋ ಮಗಳೋ ಬಾಲ್ಯದಲ್ಲಿ ನಡೆಸುತ್ತಿದ್ದ ತುಂಟಾಟಗಳು ಮೊಮ್ಮಕ್ಕಳ ಮೂಲಕ ಅವರ ನೆನಪಿಗೆ ಬರುತ್ತವೆ. ತನ್ನ ಊರುಗೋಲನ್ನು ಮೊಮ್ಮಗು ಊರಿಕೊಂಡು ತಮಾಷೆ ಮಾಡುವಾಗ ಹಿರಿಯರೂ ಆನಂದಪಡುತ್ತಾರೆ. ವೃದ್ಧಾಶ್ರಮಗಳಲ್ಲಿ ಇಂಥದ್ದೊಂದು ವಾತಾವರಣಕ್ಕೆ ಅವಕಾಶವೇ ಇಲ್ಲ.
   ಅಂದಹಾಗೆ, ಶೈಕ್ಷಣಿಕ ಪ್ರಗತಿಯು ಕೌಟುಂಬಿಕ ನೆಮ್ಮದಿಗೆ ಕನ್ನ ಕೊರೆಯುತ್ತಿದೆಯೇ ಎಂಬುದರ ಸುತ್ತ ಗಂಭೀರ ಅವಲೋಕನವೊಂದು ನಡೆಯಬೇಕಾಗಿದೆ. ಇಂದಿನ ಜೀವನ ಕ್ರಮಗಳು ದಶಕಗಳ ಹಿಂದಿನಂತಿಲ್ಲ. ಮನೆಯ ಪ್ರತಿ ಸದಸ್ಯರಲ್ಲೂ ಅವರದೇ ಆದ ಉದ್ದೇಶಗಳಿವೆ. ಕಲಿಕೆ ಮತ್ತು ಉದ್ಯೋಗ ಪಡೆಯುವಲ್ಲಿ ಹೆಣ್ಣು-ಗಂಡು ಇಬ್ಬರಲ್ಲೂ ಪೈಪೋಟಿಯಿದೆ. ಇವತ್ತು ಗಂಡಿನಂತೆ ಹೆಣ್ಣೂ ಉದ್ಯೋಗಸ್ಥೆಯೇ.  ಬಹುಶಃ ಇಂಥ  ವಾತಾವರಣವು ಅಂತಿಮವಾಗಿ ಹಿರಿಯರನ್ನು ಒಂಟಿಯಾಗಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಒಂದು ಕಡೆ, ‘ಬಳಸಿ ಬಿಸಾಕು' ಎಂಬ ಸಂಸ್ಕøತಿ ಮನೆಯ ಜಗಲಿಗಷ್ಟೇ ಅಲ್ಲ, ಅಡುಗೆ ಕೋಣೆಯನ್ನೂ ಆವರಿಸಿಬಿಟ್ಟಿದೆ. ಬಂಡವಾಳಶಾಹಿತ್ವವು ಸ್ವಕೇಂದ್ರಿತ ಜೀವನ ಮೌಲ್ಯಗಳನ್ನು ಅತ್ಯಂತ ಯಶಸ್ವಿಯಾಗಿ ಪ್ರತಿ ಮನೆ-ಮನಗಳಲ್ಲೂ ಬಿತ್ತುತ್ತಿದೆ. ಇವತ್ತಿನ ಜಗತ್ತಿನಲ್ಲಿ ‘ಹಳತಿಗೆ' ಭಾರೀ ಬೆಲೆಯೇನೂ ಇಲ್ಲ. ಮೊಬೈಲ್, ಶೂಸ್, ವಾಹನ, ಟಿ.ವಿ., ಆಭರಣಗಳು.. ಎಲ್ಲವೂ ವರ್ಷ ಕಳೆಯುವ ಮೊದಲೇ ಹಳತಾಗುತ್ತವೆ. ಹಳತಾದುದನ್ನು ತ್ಯಜಿಸಿ ಹೊಸದನ್ನು ಖರೀದಿಸುವಂತೆ ಮಾರುಕಟ್ಟೆಗಳು ಮತ್ತು ಅಲ್ಲಿನ ಉತ್ಪನ್ನಗಳು ಪ್ರಚೋದಿಸುತ್ತವೆ. ಹೀಗೆ ವರ್ಷವಾಗುತ್ತಲೇ ಹೊಸ ಮೊಬೈಲು, ವಾಹನ, ಆಭರಣಗಳು ಯುವ ತಲೆಮಾರಿನ ಕೈಯಲ್ಲಿ ಪ್ರತ್ಯಕ್ಷಗೊಳ್ಳುತ್ತಲೇ ಇರುತ್ತವೆ. ಆ ಪಟ್ಟಿಗೆ ಇವತ್ತು ಹಿರಿಯರೂ ಸೇರಿಕೊಳ್ಳುತ್ತಿದ್ದಾರೆಯೇ? ಹಳತಾದವರನ್ನು ಆಶ್ರಮಕ್ಕೆ ಅಟ್ಟಿ ಹೊಸತಿನೊಂದಿಗೆ ಬದುಕುವುದು ಸಹಜ ಅನ್ನಿಸಿಕೊಳ್ಳುತ್ತಿದೆಯೇ? ಹಳತು ಮತ್ತು ಹೊಸತು ಎಂಬ ಎರಡು ಧ್ರುವಗಳಿಗೆ ಹಿರಿಯರು ಮತ್ತು ಕಿರಿಯರನ್ನು ಸೇರಿಸಿಬಿಟ್ಟಿರುವುದು ಯಾವುದು? ನಮ್ಮ ಶೈಕ್ಷಣಿಕ ಪ್ರಗತಿಯೇ? ಜೀವನ ವಿಧಾನಗಳೇ? ಮೌಲ್ಯಗಳ ನಿರ್ಲಕ್ಷ್ಯವೇ? ಬಂಡವಾಳಶಾಹಿತ್ವವೇ?
   ಉಡುಪಿ ಜಿಲ್ಲೆಯ ವೃದ್ಧಾಶ್ರಮದಲ್ಲಿರುವ ಗ್ರೇಸಿ ಮಾರ್ಟಿಸ್ ಅನ್ನುವ ತಾಯಿ ಕಳೆದವಾರ ನನಗೆ  ಬರೆದ ಪತ್ರವನ್ನು ಓದುತ್ತಾ ಇವೆಲ್ಲ ನೆನಪಾದುವು.