Wednesday, September 27, 2017

ಗೌರಿಯನ್ನು ಕೊಂದ ವಾದ ಯಾವುದು?

      ಗೌರಿ ಲಂಕೇಶ್ - ಸರ್ವ ದೌರ್ಬಲ್ಯಗಳಿಂದಲೂ ಮುಕ್ತವಾದ, ಯಾವ ವಿವಾದಗಳಿಗೂ ಒಳಗಾಗದ ಸಾಧು ಹೆಣ್ಣು ಮಗಳೇನಲ್ಲ. ಇಂಥದ್ದೊಂದು ವರ್ಚಸ್ಸನ್ನು ಅವರು ಬಯಸಿರುವ ಸಾಧ್ಯತೆಯೂ ಇಲ್ಲ. ಗಾಂಧೀಜಿಯವರ ಜೊತೆ ಅವರ ಸಮಕಾಲೀನರಾದ ಹಲವು ನಾಯಕರಿಗೆ ವೈಚಾರಿಕ ಭಿನ್ನಾಭಿಪ್ರಾಯವಿತ್ತು. ದಲಿತರಿಗೆ ಅವರು ಬಳಸಿದ ‘ಹರಿಜನ’ ಎಂಬ ಪದ ಕಾನೂನುಬಾಹಿರ ಆಗುವಷ್ಟು ಅವರು ಈ ನೆಲದಲ್ಲಿ ಪ್ರಶ್ನೆಗೆ ಒಳಗಾಗಿದ್ದಾರೆ. ಅಂಬೇಡ್ಕರ್‍ವಾದಿಗಳಿಗೆ ಅವರ ಜೊತೆ ಇವತ್ತಿಗೂ ಕೂಡ ತೀರದ ಮುನಿಸಿದೆ. ಬಲಪಂಥೀಯರಿಗೂ ಅವರ ವಿಚಾರಧಾರೆಯ ಮೇಲೆ ತಕರಾರಿದೆ. ಇವರಷ್ಟೇ ಅಲ್ಲ ಬುದ್ಧ, ಬಸವ, ನಾರಾಯಣ ಗುರು  ಎಲ್ಲರೂ ಪ್ರಶ್ನೆಗೆ ಒಳಗಾಗುತ್ತಲೇ ಈ ಮಣ್ಣಿನಲ್ಲಿ ಸ್ವೀಕೃತರಾದವರು. ಹೀಗಿರುವಾಗ, ಗೌರಿಯ ನಿಲುವು ಸರ್ವ ಮಾನ್ಯವಾಗುವುದು, ಪ್ರಶ್ನೆಗಳಿಗೆ ಆಸ್ಪದವನ್ನೇ ಒದಗಿಸದಷ್ಟು ಸಾರ್ವಕಾಲಿಕವಾಗುವುದು ಸಾಧ್ಯವೇ ಇಲ್ಲ. ಅವರು ಆಡಿರಬಹುದಾದ ಮಾತು, ಬರೆದ ಬರಹ, ತೊಡಗಿಸಿಕೊಂಡ ಚಳವಳಿ.. ಇತ್ಯಾದಿಗಳ ಕುರಿತಂತೆಅವರನ್ನು ಮೆಚ್ಚಿಕೊಳ್ಳುವವರಲ್ಲೂ ತಕರಾರು ಇರಬಹುದು. ಇರುವುದೇ ಒಳ್ಳೆಯದು. ತಕರಾರು ರಹಿತ ಬೆಂಬಲ ಎಂಬುದು ಅನೇಕ ಬಾರಿ ಅಂಧ ಅಭಿಮಾನಿಗಳಾಗಿಸಿ ಬಿಡುತ್ತದೆ. ಸದ್ಯ ನರೇಂದ್ರ ಮೋದಿಯವರು ಇಂಥದ್ದೊಂದು ಹಂತಕ್ಕೆ ತಲುಪಿ ಬಿಟ್ಟಿದ್ದಾರೆ. ಗೌರಿಯವರು ಈ ಅಪಾಯದಿಂದ ಸ್ವತಃ ತನ್ನನ್ನು ಪಾರಾಗಿಸಿಕೊಂಡಿದ್ದರು. ತನ್ನನ್ನು ಮೆಚ್ಚಿಕೊಳ್ಳುವ ಗುಂಪಿನಲ್ಲೂ ಸಾತ್ವಿಕ ತಕರಾರಿಗೆ ಜಾಗ ಮೀಸಲಿಟ್ಟಿದ್ದರು. ಇವತ್ತು ಗೌರಿಯವರ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ, ಚರ್ಚೆ, ಸಮಾಲೋಚನೆಗಳಲ್ಲಿ ಭಾಗವಹಿಸುತ್ತಿರುವವರೆಲ್ಲ ‘ನೂರು ಶೇಕಡ’ ಗೌರಿಯನ್ನು ಒಪ್ಪಿಕೊಂಡವರೇನಲ್ಲ. ಅವರು ತಮ್ಮ ಭಾಷಣ, ಬರಹದಲ್ಲಿ ಬಳಸಿದ ಕೆಲವೊಂದು ಪದಪ್ರಯೋಗಗಳನ್ನು ಮೆಚ್ಚಿ ಕೊಳ್ಳದವರೂ ಇವರಲ್ಲಿದ್ದಾರೆ. ಆದರೆ, ಗೌರಿ ಹತ್ಯೆಯ ನಂತರ ದೇಶದಾದ್ಯಂತ ಎದ್ದಿರುವ ಪ್ರತಿಭಟನೆಯ ಅಲೆ ಒಂದು ಮುಖ್ಯ ಸಂದೇಶವನ್ನು ಸಾರುತ್ತದೆ. ಅವರು ಈ ದೇಶದ ಅಗತ್ಯವಾಗಿದ್ದರು. ಅವರ ವಿಚಾರದಲ್ಲಿ ಸುಖವನ್ನು ಕಾಣುವ ಜನಸಮೂಹ ಈ ದೇಶದಲ್ಲಿತ್ತು. ಆದ್ದರಿಂದಲೇ ಅವರ ಹತ್ಯೆ ಯನ್ನು ಸೌಖ್ಯಭಾವದ ಹತ್ಯೆ ಎಂದೂ ಪರಿಗಣಿಸಬಹುದು. ಗೌರಿ ಅಸಂಖ್ಯ ಮಂದಿಗೆ ನೆಮ್ಮದಿ, ನಿರೀಕ್ಷೆ ಮತ್ತು ಧೈರ್ಯ ಆಗಿದ್ದರು. ಅಂದಹಾಗೆ, ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಮತ್ತು 2005ರಲ್ಲಿ ಪೊಲೀಸ್ ಎನ್‍ಕೌಂಟರ್‍ಗೆ ಬಲಿಯಾದ ಸಾಕೇತ್ ರಾಜನ್ ಜೊತೆಗೆ ಅವರಿಗಿದ್ದ ಗೆಳೆತನವನ್ನು ನಾವು ಏಕಮುಖವಾಗಿ ಚರ್ಚಿಸಬೇಕಿಲ್ಲ. ವೈಚಾರಿಕವಾಗಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು ಅನ್ನುವುದಕ್ಕೆ ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಗೌರಿ ತೋರಿದ ಮುತುವರ್ಜಿಯೇ ಪಕ್ಕಾ ಉದಾಹರಣೆ. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಸೇರಿದಂತೆ ಒಂದು ಡಝನ್‍ನಷ್ಟು ಮಂದಿಯನ್ನು ಅವರು ಕಾಡಿನಿಂದ ನಾಡಿಗೆ ತಂದರು. ಅದೇವೇಳೆ, ಸಾಕೇತ್ ರಾಜನ್ ಈ ಬೆಳವಣಿಗೆಯ ಪರ ಇರದಿದ್ದರೂ ಅವನ ಜೊತೆ ಗೆಳೆತನ ವನ್ನು ಇಟ್ಟುಕೊಂಡರು. ಎಲ್ಲಿಯವರೆಗೆಂದರೆ, ಆತನ ಎನ್ ಕೌಂಟರ್ ಅನ್ನು ಪ್ರತಿಭಟಿಸಿ, ಆತನ ಅಸ್ಥಿಯನ್ನು ಹಿಡಿದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ವೈಚಾರಿಕವಾಗಿ ಒಂದೇ ಬಿಂದುವಿನಲ್ಲಿ ನಿಲ್ಲದ ವ್ಯಕ್ತಿಗಳಿಬ್ಬರು ಮನುಷ್ಯರಾಗಿ ಒಂದಾಗಬಹು ದಾದ ಸಾಧ್ಯತೆಗಳೆಡೆಗೆ ಗೌರಿ ಹೀಗೆ ಸೂಚನೆ ಕೊಟ್ಟರೇನೋ ಎಂದು ಅನಿಸುತ್ತದೆ. ಇದರರ್ಥ ಬಸ್ಸು, ರೈಲು, ಮಸೀದಿ ಮಂದಿರಗಳಲ್ಲಿ ಬಾಂಬಿಟ್ಟು ಸ್ಫೋಟಿಸುವವರ ಜೊತೆ ವೈಚಾರಿಕ ಅಸಮ್ಮತಿಯೊಂದಿಗೆ ಮನುಷ್ಯರೆಂಬ ನೆಲೆಯಲ್ಲಿ ಒಂದಾಗಬಹುದು ಎಂದು ಅಲ್ಲ. ಗೌರಿ ಎಲ್ಲೂ ಬಾಂಬ್ ಸ್ಫೋಟ ಮತ್ತು ಹತ್ಯಾ ಕಾಂಡದ ಭಯೋತ್ಪಾದನೆಯೊಂದಿಗೆ ಈ ಮಟ್ಟದ ಸಹೃದಯತೆ ಯನ್ನು ತೋರಿಲ್ಲ. ಪಶ್ಚಿಮ ಘಟ್ಟದ ನಕ್ಸಲ್ ಚಟುವಟಿಕೆಯ ಬಗ್ಗೆ ಅವರಲ್ಲಿ ಆಳ ತಿಳುವಳಿಕೆಯಿತ್ತು. ಇವತ್ತು ಗೌರಿ ಹತ್ಯೆ ಯನ್ನು ನಕ್ಸಲ್‍ರ ತಲೆಗೆ ಕಟ್ಟುವಲ್ಲಿ ಅತ್ಯುತ್ಸಾಹ ತೋರುತ್ತಿರುವವರು ನಿಜವಾಗಿ ಗೌರಿಯನ್ನು ಓದಿಲ್ಲ ಎಂದೇ ಹೇಳಬೇಕು. ಗೌರಿಯೊಳಗೆ ನಕ್ಸಲಿಸಂ ಇತ್ತು. ಆದರೆ ಅದು ಕಾಡಿನಲ್ಲಿ ಅವಿತು ಕುಳಿತು, ಶಸ್ತ್ರ ಎತ್ತಿ ಮಾಡುವ ನಕ್ಸಲಿಸಂ ಆಗಿರಲಿಲ್ಲ. ಅವರು ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆ ಇರಿಸಿದ್ದರು. ಸಾಕೇತ್ ರಾಜನ್ ಮತ್ತು ಆತನ ತಂಡ ಪಶ್ಚಿಮ ಘಟ್ಟದ ಕಾಡಿನಲ್ಲಿ ಬಂದೂಕು ಎತ್ತಿಕೊಂಡು ಮಾಡುತ್ತಿರುವ ಅದೇ ಉದ್ದೇಶದ ಹೋರಾಟವನ್ನು ಬಂದೂಕಿಲ್ಲದೇ ಮತ್ತು ನಾಗರಿಕರ ನಡುವೆಯೇ ಇದ್ದುಕೊಂಡು ನಾಡಿನಲ್ಲಿಯೇ ಮಾಡಬಹುದು ಎಂಬುದು ಅವರ ನಿಲುವಾಗಿತ್ತು. ಆದ್ದರಿಂದಲೇ, ‘ಶಾಂತಿಗಾಗಿ ನಾಗರಿಕ ವೇದಿಕೆ ಹುಟ್ಟಿಕೊಂಡಿತು’ ಎಂಬುದು ನನ್ನ ನಂಬಿಕೆ. ವ್ಯಂಗ್ಯ ಏನೆಂದರೆ, ನಕ್ಸಲರನ್ನು ಕಾಡಿನಿಂದ ನಾಡಿಗೆ ತರುವ ಗೌರಿಯವರ ಪ್ರಯತ್ನವನ್ನು ಅಣಕದ ಭಾಷೆಯಲ್ಲಿ ವ್ಯಾಖ್ಯಾನಿಸಿದವರೇ ಅಥವಾ ಅವರೊಂದಿಗೆ ಸಹಮತ ಹೊಂದಿರುವವರೇ ಇವತ್ತು ಗೌರಿ ಹತ್ಯೆಗೆ ಸಂಭ್ರಮಿಸುತ್ತಿದ್ದಾರೆ ಮತ್ತು ಅಡ್ಡಗೋಡೆಯಲ್ಲಿ ದೀಪ ಇಟ್ಟ ಹಾಗೆ ಪ್ರತಿಕ್ರಿಯಿಸುತ್ತಿದ್ದಾರೆ. ಗೌರಿ ಹತ್ಯೆಗೆ ಬಲಪಂಥೀಯ ವಿಚಾರಧಾರೆ ಕಾರಣ ಎಂದು ಹೇಳುವುದನ್ನು ತನಿಖೆಗೆ ಮೊದಲೇ ತೀರ್ಪು ಎಂದು ಈ ಗುಂಪು ಖಂಡಿಸುತ್ತಲೇ ನಕ್ಸಲೀಯರು ಈ ಹತ್ಯೆ ನಡೆಸಿರಬಹುದು ಎಂದೂ ಹೇಳುತ್ತಿದೆ. ಒಂದನ್ನು ತಪ್ಪು ಅನ್ನುತ್ತಾ ಇನ್ನೊಂದು ತಪ್ಪನ್ನು ಮಾಡುವ ಈ ದ್ವಂದ್ವವನ್ನು ಏನೆಂದು ಪರಿಗಣಿಸಬೇಕು? ನಕ್ಸಲ್ ಚಟುವಟಿಕೆಯನ್ನು ದಮನಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿವೆ. ಯೋಧರು, ಪೊಲೀಸರ ಬಲಿದಾನ ಆಗುತ್ತಿದೆ. ನಕ್ಸಲ್ ಪ್ರದೇಶಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವುದಕ್ಕೂ ಅಡಚಣೆಗಳು ಉಂಟಾಗುತ್ತಿವೆ. ಗೌರಿ ಮುಖ್ಯವಾಗುವುದು ಇಲ್ಲೇ.  ಪಶ್ಚಿಮ ಘಟ್ಟದಲ್ಲಿ ಇವತ್ತು ನಕ್ಸಲ್ ಚಟುವಟಿಕೆ ತೀರಾ ತೀರಾ ಕುಗ್ಗಿರು ವುದರಲ್ಲಿ ಗೌರಿಯ ಪಾತ್ರ ಬಹಳ ದೊಡ್ಡದು. ಶ್ರೀ ಶ್ರೀ ರವಿಶಂಕರ್ ಅವರು ಕೊಲಂಬಿಯದ ಭಯೋತ್ಪಾದಕ ಗುಂಪಿನ ಜೊತೆ (FARC) ಮಾತುಕತೆ ನಡೆಸುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವವರೇ ಗೌರಿಯ ಮಾತುಕತೆಯನ್ನು ಅಣಕಿಸುವುದರಲ್ಲಿ ಏನು ತರ್ಕ ಇದೆ?
      ಬಲಪಂಥೀಯ, ನಡುಪಂಥೀಯ ಮತ್ತು ಎಡಪಂಥೀಯ ಎಂದು ನಮ್ಮ ನಡುವೆ ಇರುವ ವಿಚಾರಧಾರೆಯನ್ನು ಬೇರ್ಪಡಿಸಿ ನೋಡಿದರೆ ಗೌರಿ ಎಡಪಂಥೀಯ ಬಿಂದುವಿನಲ್ಲಿ ನಿಲ್ಲುತ್ತಾರೆ ಅನ್ನುವುದು ನಿಜ. ಹಾಗಂತ, ಎಡಪಂಥವನ್ನೇ ಅವರು ಶಾಶ್ವತ ಠಿಕಾಣಿಯನ್ನಾಗಿ ಮಾಡಿಕೊಂಡೂ ಇರಲಿಲ್ಲ. ಸಂದರ್ಭ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ ಅವರು ಈ ಬೇಲಿಯನ್ನು ಜಿಗಿದದ್ದೂ ಇದೆ. ಅಪ್ಪ ಲಂಕೇಶ್‍ರ ‘ಸದಾ ವಿರೋಧ ಪಕ್ಷ’ ಎಂಬ ನೀತಿಯನ್ನು ಅವರು ಅಪ್ಪಿಕೊಂಡೂ ಇರಲಿಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಲಂಕೇಶ್‍ರ ಕಾಲಘಟ್ಟ ಮತ್ತು ಗೌರಿಯವರ ಕಾಲಘಟ್ಟವೂ ಇದಕ್ಕೆ ಒಂದು ಕಾರಣ ಆಗಿರಬಹುದು. ಬಲಪಂಥೀಯ ವಿಚಾರಧಾರೆಯು ಪ್ರಾಬಲ್ಯ ಪಡೆದಿರುವುದೂ ಇದಕ್ಕೆ ಕಾರಣವಾಗಿರಬಹುದು. ಅಷ್ಟಕ್ಕೂ, ಯಾರೇ ಆಗಲಿ ನಿರ್ದಿಷ್ಟ ವಿಚಾರಧಾರೆಯನ್ನು ಹೊಂದುವುದು ತಪ್ಪೇ? ಎಡಪಂಥ ಅಥವಾ ಬಲಪಂಥ ಅಥವಾ ನಡುಪಂಥ ಇವುಗಳಲ್ಲಿ ಯಾವುದಾದರೂ ಒಂದು ಮಾತ್ರವೇ ಇರಬೇಕು ಎಂಬ ವಾದ ಈ ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು? ಜರ್ಮನಿ, ರಷ್ಯಾ, ಇಟಲಿಗಳೆಲ್ಲ ಏನಾದುವು? ಏಕಪಂಥವನ್ನು ಒಪ್ಪಿಕೊಂಡ ಮತ್ತು ಅನೇಕ ಪಂಥಗಳನ್ನು ಸಹಿಸದ ಆಡಳಿತ ವ್ಯವಸ್ಥೆಗಳೆಲ್ಲ ಹೇಗೆ ನಾಮಾವಶೇಷವಾದುವು ಅನ್ನುವುದನ್ನು ಇತಿಹಾಸ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿರುವುದರ ಹೊರತಾಗಿಯೂ ಗೌರಿಯನ್ನು ಅದೇ ತೀವ್ರವಾದ ಬಲಿ ಪಡೆಯಿತೇ? ಎಡಪಂಥ ಮತ್ತು ಬಲಪಂಥ ಪರಸ್ಪರ ಸಂವಾದಿಸಲಾರದಂಥ ಸ್ಥಿತಿಗೆ ತಲುಪಿರುವುದೇಕೆ? ಎಡಪಂಥವನ್ನು ಒಂದು ವಿಚಾರಧಾರೆಯಾಗಿ ಒಪ್ಪಿಕೊಳ್ಳುವಾಗ ಬಲಪಂಥವನ್ನೂ ಹಾಗೆ ಒಪ್ಪಿಕೊಳ್ಳಬೇಕು. ಯಾವಾಗ ಒಂದು ಪಂಥವು ಇನ್ನೊಂದು ಪಂಥವನ್ನು ಮುಖಾ ಮುಖಿಯಾಗುವುದಕ್ಕೆ ನಿರಾಕರಿಸುತ್ತದೋ ಆಗ ಪಂಥವು ವರ್ಗವಾಗಿ ಮತ್ತು ಭಿನ್ನಾಭಿಪ್ರಾಯವು ಧರ್ಮವಾಗಿ ಮಾರ್ಪಡುವುದಕ್ಕೆ ದಾರಿ ತೆರೆದುಕೊಳ್ಳುತ್ತದೆ. ಬಲಪಂಥದಲ್ಲೂ ಎಡಪಂಥದಲ್ಲೂ ಮತ್ತು ನಡುಪಂಥದಲ್ಲೂ ಇರುವವರೆಲ್ಲ ಮನುಷ್ಯರೇ. ಪಂಥಗಳು ಹುಟ್ಟಿಕೊಂಡಿರುವುದು ವಿಚಾರಗಳ ಕಾರಣಗಳಿಂದಲೇ ಹೊರತು ಮನುಷ್ಯರಾಗಿರುವ ಕಾರಣದಿಂದಲ್ಲ. ಎಡಪಂಥದಲ್ಲಿ ಹಿಂದೂಗಳಿರುವಂತೆಯೇ ಬಲಪಂಥದಲ್ಲೂ ಹಿಂದೂಗಳೇ ಇದ್ದಾರೆ. ಕ್ರೈಸ್ತರು, ಮುಸ್ಲಿಮರೂ ಇವುಗಳಲ್ಲಿ ಹಂಚಿ ಹೋಗಿದ್ದಾರೆ. ನಡುಪಂಥದಲ್ಲೂ ಹಿಂದೂ-ಮುಸ್ಲಿಮ್ ಮತ್ತು ಧರ್ಮದೊಂದಿಗೆ ಗುರುತಿಸಿಕೊಳ್ಳದವರಿದ್ದಾರೆ. ಬಲಪಂಥ ಎಂಬುದು ಹಿಂದೂಗಳಿಗೆ ಮೀಸಲಾಗಿಲ್ಲ. ಎಡಪಂಥ ಅನ್ನುವುದೂ ನಾಸ್ತಿಕರಿಗೆ ಮೀಸಲಾಗಿಯೂ ಇಲ್ಲ. ಒಂದು ಪಂಥಕ್ಕೆ ಓರ್ವರು ಆಕರ್ಷಿತರಾಗುವುದಕ್ಕೆ ಓದು, ಹಿನ್ನೆಲೆ, ಸನ್ನಿವೇಶ, ಸಂದರ್ಭಗಳು ಕಾರಣವೇ ಹೊರತು ಇನ್ನಾವುದೂ ಅಲ್ಲ. ಹೀಗಿರುತ್ತಾ, ಪಂಥಗಳ ನಡುವಿನ ಭಿನ್ನಾಭಿಪ್ರಾಯವು ಹತ್ಯೆಯ ವರೆಗೆ ತಲುಪುವುದೇಕೆ? ಗೌರಿಯವರನ್ನು ಅಂತ್ಯಸಂಸ್ಕಾರಗೊಳಿಸಿರುವುದು ವೀರಶೈವ ಸಂಪ್ರದಾಯದಂತೆ. ಗೌರಿಗೂ ಒಂದು ಧರ್ಮ ಇತ್ತು. ಆ ಧರ್ಮವನ್ನು ಅವರು ಹೇಗೆ ಪರಿಭಾವಿಸಿದ್ದರೋ ಹಾಗೇ ಅದನ್ನು ಪಾಲಿಸಿದರು. ಕೊಂದವನ ಧರ್ಮ ಯಾವುದು ಎಂಬುದು ಈವರೆಗೆ ಗೊತ್ತಿಲ್ಲ. ಆತನಿಗೂ ಒಂದು ಧರ್ಮ ಇದ್ದೀತು. ಅದು ಗೌರಿಯದ್ದೇ  ಧರ್ಮ ಆಗಿರಲೂ ಬಹುದು. ವೈಚಾರಿಕ ಭಿನ್ನಾಭಿಪ್ರಾಯದ ಹೊರಗೆ ಮನುಷ್ಯರಾಗಿ ನಾವು ಒಂದುಗೂಡುವ ಬಿಂದು ಇದು. ಎಡಪಂಥದ ಬಂದೂಕಿಗೆ ಬಲಿಯಾಗುವುದೂ ಮನುಷ್ಯರೇ. ಬಲಪಂಥದ ಬಂದೂಕಿಗೆ ಬಲಿಯಾಗುವುದೂ ಮನುಷ್ಯರೇ. ಮನುಷ್ಯರನ್ನು ಸಾಯಿಸಿ ಒಂದು ಪಂಥವನ್ನು ಬೆಳೆಸಬಹುದು ಎಂದು ಆ ಹಂತಕನಿಗೆ ಯಾರು ಹೇಳಿಕೊಟ್ಟರೋ?
       ಯಾವುದೇ ಪಂಥವು ಸಮಾಜ ಮತ್ತು ದೇಶದ ಹಿತಕ್ಕೆ ಪೂರಕವೋ ಮಾರಕವೋ ಎಂಬುದು ಗೊತ್ತಾಗುವುದು ಪಂಥಗಳ ನಡುವೆ ಸಂವಾದ ಏರ್ಪಡಬಹುದಾದ ವಾತಾವರಣ ನಿರ್ಮಾಣವಾದಾಗ. ಒಂದು ಪಂಥ ಅಂಥ ಸಂವಾದವನ್ನೇ ಇಷ್ಟಪಡುವುದಿಲ್ಲ ಎಂದಾದರೆ, ಆ ಪಂಥ ದುರ್ಬಲವಾಗಿದೆ ಎಂದರ್ಥ. ಸಂವಾದಕ್ಕೆ ತೆರೆದುಕೊಳ್ಳುವುದೆಂದರೆ, ಪ್ರಶ್ನೆಗಳಿಗೆ ತೆರೆದುಕೊಳ್ಳುವುದು. ಸವಾಲುಗಳನ್ನು ಸ್ವೀಕರಿಸುವುದು. ಈ ಸ್ಥಿತಿಗೆ ಪಂಥಗಳು ತೆರೆದುಕೊಂಡಾಗ ಭಯ ಹೊರಟು ಹೋಗು ತ್ತದೆ. ನಾಗರಿಕ ಸಮಾಜವು ಇನ್ನಷ್ಟು ಪ್ರಬುದ್ಧವಾಗಿ ಬೆಳೆಯುವುದಕ್ಕೆ ಅವಕಾಶ ನಿರ್ಮಾಣವಾಗುತ್ತದೆ. ಸದ್ಯದ ಬೆಳವಣಿಗೆಗಳನ್ನು ನೋಡುವಾಗ, ಇಂಥದ್ದೊಂದು  ವಾತಾವರಣಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿವೆಯೇನೋ ಎಂದನಿಸುತ್ತಿದೆ. ಓರ್ವರ ವಿಚಾರಧಾರೆಯನ್ನು ಪ್ರತಿ ವಿಚಾರಧಾರೆಯೊಂದಿಗೆ ಎದುರಿಸುವ ಮತ್ತು ಗಟ್ಟಿ ಆಧಾರಗಳೊಂದಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ದಾರಿಯು ಮುಚ್ಚಿ ಹೋಗುತ್ತಿರುವಂತೆ ಕಾಣಿಸುತ್ತಿದೆ. ‘ತನ್ನ ವಿಚಾರಧಾರೆಗೆ ಅನ್ಯವಾದುದೆಲ್ಲವೂ ಹತ್ಯೆಗೆ ಅರ್ಹವಾದುದು’ ಎಂಬ ತೀವ್ರವಾದವನ್ನು ಪಂಥಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಬೆಳೆಸುತ್ತಿವೆಯೇನೋ ಎಂದು ಭಯವಾಗುತ್ತಿದೆ. ಸದ್ಯ ನಮ್ಮ ನಡುವಿನ ತುರ್ತು ಅಗತ್ಯ ಏನೆಂದರೆ, ಪಂಥಗಳು ಹತ್ಯೆಗೆ ಸ್ಕೆಚ್ ಹಾಕುವ ಸುಪಾರಿ ಗುಂಪುಗಳಾಗಿ ಬದಲಾಗುವುದನ್ನು ತಡೆಯುವುದು. ವೈಚಾರಿಕ ಭಿನ್ನಾಭಿಪ್ರಾಯವನ್ನು ವೈಚಾರಿಕ ಭಿನ್ನಾಭಿಪ್ರಾಯವಾಗಿಯೇ ಪರಿಗಣಿಸುವಂತಹ ವಾತಾವರಣವನ್ನು ನಿರ್ಮಿಸುವುದು. ಎಡಪಂಥ, ಬಲಪಂಥ ಮತ್ತು ನಡುಪಂಥಗಳು ಪರಸ್ಪರ ಮುಖಾಮುಖಿಯಾಗಬಹುದಾದ ಮತ್ತು ಮಾತಿನ ಅಬ್ಬರವಿಲ್ಲದೇ ಮಾತುಕತೆ ನಡೆಸಬಹುದಾದ ಸನ್ನಿವೇಶವನ್ನು ಉಂಟು ಮಾಡುವುದು. ಮಾತ್ರವಲ್ಲ, ಹತ್ಯೆಗೆ ಪ್ರೇರೇಪಿಸುವ ವಾದವನ್ನು ನಿಷ್ಕ್ರಿಯಗೊಳಿಸುವುದು.
     ಗೌರಿಯನ್ನು ಕೊಂದವರು ಯಾರು ಮತ್ತು ಅವರ ವಾದವೇನು ಎಂಬುದು ಸ್ಪಷ್ಟವಾಗಿಲ್ಲದ ಈ ಹೊತ್ತಿನಲ್ಲಿ ಇನ್ನೇನೂ ಹೊಳೆಯುತ್ತಿಲ್ಲ.

Wednesday, September 6, 2017

ತ್ರಿವಳಿ ತಲಾಕ್: ಸಮಾನ ನಾಗರಿಕ ಸಂಹಿತೆಯ ಸೋಲು

    
ತ್ರಿವಳಿ ತಲಾಕ್‍ನ ಬಗ್ಗೆ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪನ್ನು ಎತ್ತಿಕೊಂಡು ಸದ್ಯ ಎರಡು ಸುಳ್ಳುಗಳನ್ನು ತೇಲಿಸಿ ಬಿಡಲಾಗಿದೆ.
1. ಈ ತೀರ್ಪಿಗೆ ಮುಸ್ಲಿಮ್ ಸಮುದಾಯದ ಒಳಗಿನ ಸಂತ್ರಸ್ತ ಮಹಿಳೆಯರ ಹೋರಾಟವೇ ಮುಖ್ಯ ಕಾರಣ. ಶಾಯರಾ ಬಾನು ಇದಕ್ಕೆ ನೇತೃತ್ವ ನೀಡಿದ್ದಾಳೆ.
2. ಶರೀಅತ್‍ನ ಮೇಲೆ ಸುಪ್ರೀಮ್ ಕೋರ್ಟ್ ಹಸ್ತಕ್ಷೇಪ ನಡೆಸಿದೆ.
      ನಿಜವಾಗಿ ಇವೆರಡೂ ಸುಳ್ಳೇ. ತ್ರಿವಳಿ ತಲಾಕ್‍ನ ಬಗ್ಗೆ ಸುಪ್ರೀಮ್ ಕೋರ್ಟ್ ಈ ಹಿಂದೆ ಒಂದಕ್ಕಿಂತ ಹೆಚ್ಚು ಬಾರಿ ಮಾತಾಡಿದೆ. ದಗ್ಡು ಪಠಾಣ್ ಮತ್ತು ರಹೀಂಬಿ ಪ್ರಕರಣದಲ್ಲಿ ಬಾಂಬೇ ಹೈಕೋರ್ಟ್‍ನ ಔರಂಗಾಬಾದ್ ಪೀಠದ ನ್ಯಾಯಮೂರ್ತಿ ಮರ್ಲಪಲ್ಲೆಯವರು ತ್ರಿವಳಿ ತಲಾಕ್‍ನ ಬಗ್ಗೆ ಚರ್ಚಿಸಿದ್ದರು. ಅದಕ್ಕೆ ತಮ್ಮ ವಿರೋಧವನ್ನೂ ವ್ಯಕ್ತಪಡಿಸಿದ್ದರು. 2002ರ ಶಮೀಮ್ ಅರಾ ಪ್ರಕರಣದಲ್ಲೂ ಇದು ಪುನರಾವರ್ತನೆಯಾಯಿತು. ನ್ಯಾಯಮೂರ್ತಿ ಆರ್.ಸಿ. ಲಹೋಟಿಯವರು ತ್ರಿವಳಿ ತಲಾಕ್‍ಗೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನೊಂದು, 1995ರಲ್ಲಿ ನಡೆದ ಸರಳಾ ಮುದ್ಗಳ್ ಪ್ರಕರಣ. ಈ ಸಂದರ್ಭದಲ್ಲಂತೂ ನ್ಯಾಯಾಧೀಶರು ಒಂದು ಹೆಜ್ಜೆ ಮುಂದೆ ಹೋಗಿ, ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವನ್ನು ಒತ್ತಿ ಹೇಳಿದ್ದರು. ಆದರೆ 2015 ಅಕ್ಟೋಬರ್ 16ರಂದು ಸುಪ್ರೀಮ್ ಕೋರ್ಟಿನ ದ್ವಿಸದಸ್ಯ ಪೀಠ ತಳೆದ ನಿಲುವು ಇವೆಲ್ಲಕ್ಕಿಂತಲೂ ಹೆಚ್ಚು ಪ್ರಭಾವಶಾಲಿಯಾಗಿತ್ತು. ಪ್ರಕಾಶ್ ಮತ್ತು ಪುಲ್ವತಿ ಎಂಬವರ ನಡುವಿನ ಆಸ್ತಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರಾದ ಆದರ್ಶ್ ಕುಮಾರ್ ಗೋಯಲ್ ಮತ್ತು ಅನಿಲ್ ಆರ್. ದವೆಯವರು ತೀರ್ಪು ನೀಡುವ ಸಂದರ್ಭದಲ್ಲಿ ತಲಾಕ್‍ನ ಬಗ್ಗೆಯೂ ಪ್ರಸ್ತಾಪಿಸಿದರು. ಸಂವಿಧಾನದ 14, 15 ಮತ್ತು 21ನೇ ನಿರ್ದೇಶನಗಳನ್ನು ತ್ರಿವಳಿ ತಲಾಕ್ ಉಲ್ಲಂಘಿಸುತ್ತದೆ ಎಂದವರು ಹೇಳಿದ್ದು ಮಾತ್ರವಲ್ಲ, ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಬಹುದು ಹಾಗೂ ಈ ಶೋಷಣೆಯ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಮ್ ಕೋರ್ಟಿನಿಂದ ಪ್ರತ್ಯೇಕ ವಿಭಾಗವನ್ನು ರಚಿಸಬಹುದು ಎಂಬ ಸಲಹೆಯನ್ನೂ ನೀಡಿದರು. ಈ ಬೆಳವಣಿಗೆಯ 6 ತಿಂಗಳ ಬಳಿಕ 2016 ಎಪ್ರಿಲ್‍ನಲ್ಲಿ ಶಾಯರಾ ಬಾನು ಸುಪ್ರೀಮ್ ಕೋರ್ಟ್‍ನಲ್ಲಿ ಮೊಕದ್ದಮೆ ದಾಖಲಿಸಿದಳು. ಇದಕ್ಕೆ ಬೆಂಗಾವಲಾಗಿ ನಿಂತದ್ದು ಬಿಜೆಪಿಯ ಅಂಗಸಂಸ್ಥೆಯಾದ ರಾಷ್ಟ್ರೀಯ ಮುಸ್ಲಿಮ್ ಮಹಿಳಾ ಮಂಚ್. ಶಾಯರಾ ಬಾನು ಪ್ರಕರಣ ದಾಖಲಿಸಿದ ಬಳಿಕ ಇನ್ನೂ ನಾಲ್ವರು ಸಂತ್ರಸ್ತ ಮುಸ್ಲಿಮ್ ಮಹಿಳೆಯರು ಕೇಸು ದಾಖಲಿಸುವಂತೆ ಮಾಡಲು ಮುಸ್ಲಿಮ್ ರಾಷ್ಟ್ರೀಯ ಮಂಚ್ ಯಶಸ್ವಿಯಾಯಿತು. ಇಲ್ಲಿ ಬಾಹ್ಯನೋಟಕ್ಕೆ ಶಾಯರಾ ಬಾನು ಇದ್ದರೂ ಹಿನ್ನೆಲೆಯಲ್ಲಿದ್ದುದು ಬಿಜೆಪಿ ಮತ್ತು ಸಂಘಪರಿವಾರ. 2015 ಅಕ್ಟೋಬರ್‍ನಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನ ಅಧ್ಯಯನ ನಡೆಸಿದ ಬಿಜೆಪಿ ಮತ್ತು ಸಂಘಪರಿವಾರವು ಸಂತ್ರಸ್ತ ಮುಸ್ಲಿಮ್ ಮಹಿಳೆಯರನ್ನು ಹುಡುಕತೊಡಗಿತು. ರಾಷ್ಟ್ರೀಯ ಮುಸ್ಲಿಮ್ ಮಂಚ್‍ನ ಮೂಲಕ ನಡೆದ ಈ ಹುಡುಕಾಟದಲ್ಲಿ ಸಿಕ್ಕಿದ್ದೇ  ಶಾಯರಾ ಬಾನು. ನಿಜವಾಗಿ, ಬಿಜೆಪಿಯ ಒಳ ಉದ್ದೇಶ ಬೇರೆಯೇ ಇತ್ತು. ತ್ರಿವಳಿ ತಲಾಕ್‍ನ ವಿಚಾರಣೆಯ ವೇಳೆ 1931ರ ಶರಿಯಾ ಆ್ಯಕ್ಟ್ ನ ಮೇಲೆ ಸುಪ್ರೀಮ್ ಕೋರ್ಟು ಹಸ್ತಕ್ಷೇಪ ನಡೆಸಬಹುದು ಎಂದು ಅದು ಭಾವಿಸಿತ್ತು. ಸೆಕ್ಯುಲರ್ ಸಂವಿಧಾನವಿರುವ ಭಾರತಕ್ಕೆ ಸಮಾನ ನಾಗರಿಕ ಸಂಹಿತೆಯೇ ಸೂಕ್ತ ಎಂಬ ನಿಲುವನ್ನು ಮತ್ತು ವೈಯಕ್ತಿಕ ನಿಯಮಗಳನ್ನು ಅನೂರ್ಜಿತಗೊಳಿಸುವ ಇಚ್ಛೆಯನ್ನು ಅದು ಸುಪ್ರೀಮ್ ಕೋರ್ಟ್‍ನಿಂದ ನಿರೀಕ್ಷಿಸಿತ್ತು. 1995ರ ಸರಳಾ ಮುದ್ಗಳ್ ಪ್ರಕರಣದಲ್ಲಿ ನ್ಯಾಯಾಲಯದ ಪರಾಮರ್ಶೆಯೂ ಇಂಥದ್ದೊಂದು ನಿರೀಕ್ಷೆಗೆ ಇನ್ನೊಂದು ಕಾರಣವಾಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾಯಾಧೀಶರಾದ ಅಬ್ದುಲ್ ನಝೀರ್, ಆರ್.ಎಫ್. ನಾರಿಮನ್, ಕುರಿಯನ್ ಜೋಸೆಫ್ ಮತ್ತು ಯು.ಯು. ಲಲಿತ್‍ರು ಈ ವಿಷಯವನ್ನು ಇದೀಗ ಹೊಸತೊಂದು ಮಜಲಿಗೆ ತಂದು ಮುಟ್ಟಿಸಿದ್ದಾರೆ. ಸಂವಿಧಾನದ 25ನೇ ಪರಿಚ್ಛೇದವು ಕೊಡಮಾಡಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ನಿಯಮಗಳ ಪಾಲನಾ ಸ್ವಾತಂತ್ರ್ಯದ ಬಗ್ಗೆ ಇವರು ವ್ಯಕ್ತಪಡಿಸಿರುವ ಅಭಿಪ್ರಾಯ ಐತಿಹಾಸಿಕವಾದುದು. ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಮತ್ತು 1937ರ ಶರೀಅತ್ ಕಾಯಿದೆಯನ್ನು ಅನೂರ್ಜಿತಗೊಳಿಸುವಂತೆ ಐದು ಧರ್ಮಗಳನ್ನು ಪ್ರತಿನಿಧಿಸುವ ಈ ಐವರು ನ್ಯಾಯಾಧೀಶರ ಪೀಠ ಆದೇಶಿಸುತ್ತದೆ ಎಂದು ಕಾದವರ ಪಾಲಿಗೆ ಈ ಪೀಠದ ತೀರ್ಪು ಬಲುದೊಡ್ಡ ಹಿನ್ನಡೆ. ನಿಜವಾಗಿ, ಈ ವರ್ತಮಾನ ಕಾಲದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯು ಅಲ್ಪಸಂಖ್ಯಾತ ಸಮುದಾಯದಲ್ಲಿ ಒಂದು ಬಗೆಯ ಅಸ್ತಿತ್ವ ನಾಶದ ಭೀತಿಯನ್ನು ಹುಟ್ಟು ಹಾಕಿತ್ತು. ಬಹುತ್ವವನ್ನು ವಿರೋಧಿಸುವ ಮಂದಿಯ ಕೈಗೆ ಅಧಿಕಾರ ಸಿಕ್ಕಿರುವುದರಿಂದ ಅಸ್ಮಿತೆ ಕಳಕೊಳ್ಳುವ ಭಯವು ಅಲ್ಪಸಂಖ್ಯಾತರು ಮತ್ತು ದಲಿತ-ದಮನಿತ ಸಮುದಾಯದಲ್ಲಿ ಸಹಜವಾಗಿ ಹರಳು ಗಟ್ಟಕೊಡಗಿತ್ತು. ಒಂದು ರೀತಿಯಲ್ಲಿ, ಶಾಯರಾ ಬಾನು ಈ ಭಯವನ್ನು ಹೋಗಲಾಡಿಸುವಲ್ಲಿ ಇದೀಗ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾಳೆ. ಮುಖ್ಯ ನ್ಯಾಯಮೂರ್ತಿ ಖೇಹರ್ ಅವರು ಇಡೀ ಪ್ರಕರಣಕ್ಕೆ ಕೊಟ್ಟಿರುವ ವ್ಯಾಖ್ಯಾನ ಅತಿ ಮಹತ್ವಪೂರ್ಣವಾದುದು. ‘ತ್ರಿವಳಿ ತಲಾಕ್ ಧಾರ್ಮಿಕ ಆಚರಣೆಯಾಗಿದೆ ಮತ್ತು ಅದು ಸಂವಿಧಾನದ 25ನೇ ಪರಿಚ್ಛೇದವು ನೀಡುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಯೊಳಗೆ ಬರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು. ಬಹುಮತದ ತೀರ್ಪಿನಲ್ಲಿ ತ್ರಿವಳಿ ತಲಾಕನ್ನು ಅಮಾನ್ಯ ಮಾಡಲಾಗಿದೆಯೇ ಹೊರತು ಶರೀಅತ್ ಕಾಯ್ದೆಯನ್ನಲ್ಲ. ವಿಶೇಷ ಏನೆಂದರೆ, 375 ಪುಟಗಳಷ್ಟು ದೀರ್ಘವಿರುವ ತೀರ್ಪಿನಲ್ಲಿ ಹನಫಿ ವಿದ್ವಾಂಸ ಅಶ್ರಫಲಿ ಥಾನವಿಯವರನ್ನು ಸ್ಮರಿಸಲಾಗಿದೆ. 1939ರಲ್ಲಿ ವಿವಾಹ ಕಾಯ್ದೆಯ ರಚನೆಯಲ್ಲಿ ಅವರ ಪಾತ್ರವನ್ನು ಗೌರವದಿಂದ ಕಾಣಲಾಗಿದೆ. ತ್ರಿವಳಿ ತಲಾಕ್ ಯಾಕೆ ಶರೀಅತ್‍ನ ಭಾಗವಲ್ಲ ಎಂಬುದಕ್ಕೆ ಸಾಕಷ್ಟು ಆಧಾರಗಳನ್ನು ಕೊಡಲಾಗಿದೆ. ಪವಿತ್ರ ಕುರ್‍ಆನಿನ ಸೂಕ್ತಗಳು, ಹದೀಸ್ ಮತ್ತು ಫಿಕ್ಹ್ ಗ್ರಂಥಗಳಿಂದ ಪುರಾವೆಗಳನ್ನು ನೀಡಲಾಗಿದೆ. ಈ ತೀರ್ಪಿನಲ್ಲಿ ಎಲ್ಲೂ ಸಂವಿಧಾನದ 25ನೇ ಪರಿಚ್ಛೇದ ಕೊಡಮಾಡುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅದರ ವ್ಯಾಪ್ತಿಯೊಳಗೆ ಬರುವ ವೈಯಕ್ತಿಕ ನಿಯಮಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ. ಇವುಗಳ ಮೇಲೆ ಹಸ್ತಕ್ಷೇಪವನ್ನೂ ನಡೆಸಲಾಗಿಲ್ಲ. ಶರೀಅತ್‍ನಲ್ಲಿ ಇಲ್ಲದ ಮತ್ತು ಅದರ ಉದ್ದೇಶವನ್ನು ಈಡೇರಿಸದ ತ್ರಿವಳಿ ತಲಾಕ್‍ನ ಬಗ್ಗೆ ಮಾತ್ರ ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಒಂದು ರೀತಿ ಯಲ್ಲಿ ಮುಸ್ಲಿಮ್ ಸಮುದಾಯವನ್ನು ನಿಜ ಶರೀಅತ್‍ನಡೆಗೆ ಸಾಗುವಂತೆ ಕರೆಕೊಟ್ಟಿರುವ ತೀರ್ಪು ಇದು. ಸಮಾನ ನಾಗರಿಕ ಸಂಹಿತೆಯ ಕಡೆಗೆ ಗಮನ ಹರಿಸುವಂತೆ ಕೋರ್ಟ್ ಸೂಚಿಸಬಹುದು ಎಂದು ನಿರೀಕ್ಷಿಸಿದವರ ಮಟ್ಟಿಗೆ ಇದು ಬಲು ದೊಡ್ಡ ಸೋಲು.
     ವಿಶೇಷ ಏನೆಂದರೆ, ತ್ರಿವಳಿ ತಲಾಕ್ ವಿಷಯದಲ್ಲಿ ಬಿಜೆಪಿ ಮುಂಚೂಣಿಯಲ್ಲಿ ನಿಂತು ಮಾತಾಡಿತು. ಕೇಂದ್ರ ಕಾನೂನು ಆಯೋಗದ ಮೂಲಕ ಅದು 16 ಪ್ರಶ್ನಾವಳಿಯನ್ನು ಬಿಡುಗಡೆ ಗೊಳಿಸಿತು. ಈ 16 ಪ್ರಶ್ನೆಗಳಲ್ಲಿ 80% ಪ್ರಶ್ನೆಗಳೂ ಮುಸ್ಲಿಮರಿಗೆ ಸಂಬಂಧಿಸಿದ್ದಾಗಿದ್ದುವು. 80% ಜನಸಂಖ್ಯೆಯಿರುವ ಹಿಂದೂ ಸಮುದಾಯದಲ್ಲಿ ಧಾರ್ಮಿಕವಾಗಿ 20% ಸಮಸ್ಯೆಗಳಿರುವಾಗ 16% ಇರುವ ಮುಸ್ಲಿಮ್ ಸಮುದಾಯದಲ್ಲಿ 80% ಧಾರ್ಮಿಕ ಅನಿಷ್ಠ ಸಂಪ್ರದಾಯಗಳಿವೆ ಎಂದು ಬಿಂಬಿಸುವುದಕ್ಕೂ ಅದು ಶ್ರಮಿಸಿತು. ಮುಸ್ಲಿಮ್ ಸಮುದಾಯದ ವಿಮೋಚಕನ ಪಾತ್ರದಲ್ಲಿ ತನ್ನನ್ನು ಪ್ರಸ್ತುತಪಡಿಸುವುದಕ್ಕೆ ಅದು ಮುಂದಾಯಿತು. ತ್ರಿವಳಿ ತಲಾಕ್ ಪ್ರಕರಣದಲ್ಲಿ ಉದ್ದಕ್ಕೂ ಅದು ಮಾತಾಡಿದ್ದು ಇದೇ ಭಾಷೆಯಲ್ಲಿ. ಭಾರತಕ್ಕೆ ಬಂದ ಬ್ರಿಟಿಷರು ಈ ಹಿಂದೆ ಇದೇ ತಂತ್ರವನ್ನು ಅನುಸರಿಸಿದ್ದರು. ಅವರು ಸತಿ ಸಹಗಮನ ಪದ್ಧತಿಯ ವಿರುದ್ಧ ಕಾನೂನು ಜಾರಿಗೊಳಿಸಿದರು. ಅದು ಮಹಿಳಾ ಶೋಷಣೆಯ ವಿರುದ್ಧದ ನಡೆಯಾಗಿ ಅಂದು ವ್ಯಾಪಕ ಪ್ರಚಾರ ಪಡೆಯಿತು. ಇಲ್ಲೊಂದು ಕುತೂಹಲಕಾರಿ ವಿಷಯವಿದೆ. ಮಹಿಳೆಯರನ್ನು ಶೋಷಿಸುತ್ತಿದ್ದವರು ಯಾರೆಂದರೆ, ಹಿಂದೂ ಪುರುಷರು. ಶೋಷಣೆಗೆ ಒಳಗಾಗುತ್ತಿರುವವರಾದರೋ ಹಿಂದೂ ಮಹಿಳೆಯರು. ಹಿಂದೂ ಪುರುಷರ ಶೋಷಣೆಯಿಂದ ಹಿಂದೂ ಮಹಿಳೆಯರನ್ನು ಬ್ರಿಟಿಷರು ಪಾರು ಮಾಡಿದರು ಎಂಬ ಸಂದೇಶ ವನ್ನು ಸಮಾಜಕ್ಕೆ ತಲುಪಿಸುವಲ್ಲಿ ‘ಸತಿ ನಿಷೇಧ ಕಾನೂನು’ ಯಶಸ್ವಿಯಾಯಿತು. ಇದನ್ನೇ ಖ್ಯಾತ ಮಹಿಳಾವಾದಿ ಲೇಖಕಿ ಕಲ್ಕತ್ತಾದ ಗಾಯತ್ರಿ ಚಕ್ರವರ್ತಿ ಪ್ರಶ್ನಿಸಿದ್ದರು. ‘ಕಂದು ಬಣ್ಣದ ಪುರುಷರಿಂದ ಕಂದು ಬಣ್ಣದ ಮಹಿಳೆಯರನ್ನು ಬಿಳಿಯ ಪುರುಷರು ರಕ್ಷಿಸುತ್ತಿದ್ದಾರೆ’ ಎಂದು ತನ್ನ Can the subaltern speak ಎಂಬ ಕೃತಿಯಲ್ಲಿ ವಿಶ್ಲೇಷಿಸಿದ್ದರು. ಅದರರ್ಥ ಕಾನೂನು ತಪ್ಪು ಎಂದಲ್ಲ. ಅದನ್ನು ರಚಿಸಿದವರು ಆಳದಲ್ಲಿ ಯಾವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ ಎಂಬುದನ್ನು ಚರ್ಚೆಗೊಡ್ಡುವುದಾಗಿತ್ತು. ಬ್ರಿಟಿಷರ ಬಗ್ಗೆ ಹಿಂದೂ ಸಮುದಾಯದ ಮಹಿಳೆಯರಲ್ಲಿ ಒಲವು ಮೂಡಿಸುವ ಮತ್ತು ವಿಮೋಚಕರಂತೆ ಭಾವಿಸುವುದಕ್ಕೆ ಪ್ರೇರೇಪಿಸುವ ನಡೆ ಅದಾಗಿತ್ತು ಎಂಬುದು ಗಾಯತ್ರಿ ಚಕ್ರವರ್ತಿಯವರ ನಿಲುವಾಗಿತ್ತು. ಸದ್ಯ ತ್ರಿವಳಿ ತಲಾಕ್‍ನ ವಿಷಯದಲ್ಲಿ ಬಿಜೆಪಿಯ ಹಾವ-ಭಾವ, ದೇಹ ಭಾಷೆ, ಹೇಳಿಕೆಗಳಲ್ಲಿ ಇವೇ ಅಂಶಗಳು ಗೋಚರಿಸುತ್ತಿವೆ. ‘ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕಲ್ಲ’ ಎಂಬ ಬಿಜೆಪಿಯ ವಾದವನ್ನು ತಿರಸ್ಕರಿಸಿದ ಸುಪ್ರೀಮ್ ಕೋರ್ಟ್‍ನ ಮಹತ್ವಪೂರ್ಣ ತೀರ್ಪು ಬಂದು 3 ದಿನಗಳಾದರೂ ಈವರೆಗೂ (ಈ ಲೇಖನ ಬರೆದ ದಿನದ ವರೆಗೆ) ಪ್ರತಿಕ್ರಿಯಿಸದ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್ ತೀರ್ಪಿಗೆ ಅದೇ ದಿನ ‘Judgement of the Hon ble SC on Triple Talaq is historic. It grants equality to Muslim women and is a powerful measure for women empowerment ’ ಎಂದು ಟ್ವೀಟ್ ಮಾಡಿದುದರ ಅರ್ಥ ಏನು? ನಿಜಕ್ಕೂ ಮುಸ್ಲಿಮ್ ಮಹಿಳೆಯರು ಶೋಷಣೆಯಿಂದ ಮುಕ್ತವಾಗುವುದು ಮತ್ತು ಸಬಲಗೊಳ್ಳುವುದು ಮೋದಿಯವರ ಇಚ್ಛೆಯೇ ಅಥವಾ ಕಂದುಬಣ್ಣದ ಮುಸ್ಲಿಮ್ ಪುರುಷರಿಂದ ಕಂದು ಬಣ್ಣದ ಮುಸ್ಲಿಮ್ ಮಹಿಳೆಯರನ್ನು ರಕ್ಷಿಸಿದ ವಿಮೋಚಕನ ಪಾತ್ರಧಾರಿಯಾಗುವುದು ಅವರ ಉದ್ದೇಶವೇ? ಒಂದು ವೇಳೆ ಈ ಟ್ವೀಟ್ ಪ್ರಾಮಾಣಿಕವೇ ಆಗಿರುತ್ತಿದ್ದರೆ, ಅವರು ಮಾತಾಡಬೇಕೆಂದು ಮುಸ್ಲಿಮ್ ಸಮುದಾಯದ ಮಹಿಳೆಯರು ಬಯಸಿರುವ ಅದೆಷ್ಟೋ ಸಂದರ್ಭಗಳಲ್ಲಿ ಅವರೇಕೆ ಮೌನವಾಗಿದ್ದರು? ಶೋಷಣೆ ಎಂಬುದು ತ್ರಿವಳಿ ತಲಾಕ್‍ಗೆ ಸಂಬಂಧಿಸಿದ್ದು ಮಾತ್ರ ಅಲ್ಲವಲ್ಲ. ಇದೇ ಮುಸ್ಲಿಮ್ ಸಮುದಾಯದ ಸಾವಿರಾರು ಮಹಿಳೆಯರು ಅತ್ಯಾಚಾರ, ಹತ್ಯೆ, ಹಲ್ಲೆ, ಕ್ರೌರ್ಯಕ್ಕೆ ತುತ್ತಾದಾಗ ಮಾತಾಡಲೇಬೇಕಿದ್ದ ನರೇಂದ್ರ ಮೋದಿಯವರು ಮೌನವಾಗಿದ್ದರಲ್ಲ, ಯಾಕೆ? ಬಿಲ್ಕೀಸ್ ಬಾನು, ಝಕಿಯಾ ಜಾಫ್ರಿ ಮತ್ತು 2002ರ ಗುಜರಾತ್ ಹತ್ಯಾಕಾಂಡದ ನೂರಾರು ಸಂತ್ರಸ್ತೆಯರ ಬಗ್ಗೆ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರ ನಿಲುವು ಏನು? ಶಾಯರಾ ಬಾನುಗೆ ಬೆಂಗಾವಲಾಗಿ ನಿಂತಂತೆ ಬಿಲ್ಕೀಸ್ ಬಾನುಗೆ ಮತ್ತು ಝಕಿಯಾ ಜಾಫ್ರಿಗೆ ರಾಷ್ಟ್ರೀಯ ಮುಸ್ಲಿಮ್ ಮಹಿಳಾ ಮಂಚ್ ಬೆಂಗಾವಲಾಗಿ ನಿಲ್ಲಬಹುದಿತ್ತಲ್ಲವೇ? ಬಿಲ್ಕೀಸ್ ಬಾನು ಜೀವಭಯದಿಂದ ಪದೇ ಪದೇ ವಾಸ ಬದಲಿಸದಂತೆ ಕಾವಲು ನಿಲ್ಲಬಹುದಿತ್ತಲ್ಲವೇ? ಗುಜರಾತ್ ಹತ್ಯಾಕಾಂಡದ ಸಂತ್ರಸ್ತರು ವಾಸ ಮಾಡುತ್ತಿರುವ ನಿರಾಶ್ರಿತ ಶಿಬಿರಗಳನ್ನು ‘ಮಕ್ಕಳನ್ನು ಹುಟ್ಟಿಸುವ ಕಾರ್ಖಾನೆಗಳು’ ಎಂದವರು ಮತ್ತು ‘ಹಮ್ ಪಾಂಚ್  ಹಮಾರೆ ಪಚ್ಚೀಸ್’ ಎಂದು ತಮಾಷೆ ಮಾಡಿದವರು ಇವತ್ತು ತ್ರಿವಳಿ ತಲಾಕ್ ಕುರಿತಾದ ತೀರ್ಪನ್ನು ಐತಿಹಾಸಿಕವೆಂದು ಬಣ್ಣಿಸುವುದು ಮತ್ತು ಮುಸ್ಲಿಮ್ ಮಹಿಳಾ ಸಬಲೀಕರಣದ ಭಾಗವಾಗಿ ಕಾಣುವುದು ಯಾವ ಬಗೆಯ ಕಾಳಜಿ? ಗುಜರಾತ್, ಭಾಗಲ್ಪುರ, ಮುಝಫ್ಫರ್ ನಗರ್ ಮತ್ತಿತರ ಕಡೆ ಅತ್ಯಂತ ಯೋಜಿತವಾಗಿ ಮುಸ್ಲಿಮ್ ಮಹಿಳೆಯರ ಮಾನಭಂಗ, ಹತ್ಯೆ, ಶೋಷಣೆ ನಡೆಸಿದವರಿಗೂ ಬಿಜೆಪಿಗೂ ನಡುವೆ ಇರುವ ನಂಟಿನ ಬಗ್ಗೆ ಟ್ವೀಟ್ ಬಿಡಿ ಕನಿಷ್ಠ ಪಶ್ಚಾತ್ತಾಪ ಭಾವವನ್ನಾದರೂ ಪ್ರಧಾನಿಯವರು ಪ್ರಕಟಿಸಿರುವರೇ?
ಈಗಿನ ಬಿಜೆಪಿಯ ವಿಚಾರಧಾರೆಯನ್ನು ಪ್ರತಿನಿಧಿಸುವ ವರ್ಗವು 1940-50ರಲ್ಲಿ ಹಿಂದೂ ಕೋಡ್ ಬಿಲ್ (HCB) ಅನ್ನು ಪ್ರಬಲವಾಗಿ ವಿರೋಧಿಸಿತ್ತು. ಹಿಂದೂ ಸಮುದಾಯಕ್ಕೆ ಸಂಬಂಧಿಸಿ ಕಾನೂನು ಸುಧಾರಣೆ ಮಾಡುವುದನ್ನು ಗೋಲ್ವಾಲ್ಕರ್, ಹಿಂದೂ ಮಹಾಸಭಾ, ಭಾರತೀಯ ಜನಸಂಘ, ರಾಮರಾಜ್ಯ ಪರಿಷತ್ ಮತ್ತು ಈ ವಿಚಾರಧಾರೆಯನ್ನು ಪ್ರತಿನಿಧಿಸುವ ಮಂದಿ ಪಾರ್ಲಿಮೆಂಟ್‍ನಲ್ಲಿ ವಿರೋಧಿಸಿದ್ದರು. ಹಿಂದೂ ಲಾ ಸಮಿತಿಯ ಸಲಹೆಗಳ ಬಗ್ಗೆ ಅಖಿಲ ಭಾರತ ಹಿಂದೂ ಮಹಾಸಭಾದ ನಾಯಕರಾದ ಎಸ್.ಸಿ. ಚಟರ್ಜಿ ಮತ್ತು ಅಖಿಲ ಭಾರತ ಹಿಂದೂ ಮಹಿಳಾ ಸಭಾದ ಪ್ರಧಾನ ಕಾರ್ಯದರ್ಶಿ ಜಾನಕಿ ಭಾೈ ಜೋಶಿಯವರು ಗವರ್ನರ್ ಜನರಲ್ ಆಗಿದ್ದ ಲಿನ್‍ಲಿತ್‍ಗೋ ಮತ್ತು ವೈಸ್‍ರಾಯ್ ಆಗಿದ್ದ ವಾವೆಲ್‍ಗೆ ಪತ್ರ ಬರೆದಿದ್ದರು. 1949-50ರಲ್ಲಿ ಅಖಿಲ ಭಾರತ ಹಿಂದೂ ಮಹಿಳಾ ಸಭಾದ ಸದಸ್ಯೆಯರು ಪ್ರಸ್ತಾವಿತ ಹಿಂದೂ ಕೋಡ್ ಬಿಲ್ ವಿರುದ್ಧ ಚಟರ್ಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಅಂದಹಾಗೆ,
ಮುಸ್ಲಿಮ್ ಪುರುಷರ ಶೋಷಣೆಯಿಂದ ಮುಸ್ಲಿಮ್ ಮಹಿಳೆಯರನ್ನು ರಕ್ಷಿಸಿದ ಭಾವದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರಿಗೆ ಇವೆಲ್ಲ ಗೊತ್ತಿರಬಹುದೆಂದು ನಂಬುತ್ತೇನೆ.