Friday, August 30, 2013

ಬಾಂಬ್ ಹಾಕುವ ಅವರು 'ಸೆಮಂತರ' ಹೊಣೆಗಾರಿಕೆಯನ್ನೇಕೆ ವಹಿಸಿಕೊಳ್ಳುತ್ತಿಲ್ಲ?

    1933-45ರ ಮಧ್ಯೆ ಜರ್ಮನಿಯಲ್ಲಿ ಹಿಟ್ಲರ್ ಸ್ಥಾಪಿಸಿದ್ದ ಯಾತನಾ ಶಿಬಿರಗಳನ್ನು (ಕಾನ್ಸನ್‍ಟ್ರೇಶನ್ ಕ್ಯಾಂಪ್) ಜಗತ್ತು ಈಗಲೂ ಭೀತಿಯಿಂದ ಸ್ಮರಿಸಿಕೊಳ್ಳುತ್ತದೆ. ಕಮ್ಯುನಿಸ್ಟರು, ಸಮಾಜವಾದಿಗಳು, ಸಲಿಂಗರತಿಯ ಪ್ರತಿಪಾದಕರು, ಯಹೂದಿ ಗಳು.. ಸೇರಿದಂತೆ ತನ್ನ ವಿರೋಧಿಗಳನ್ನೆಲ್ಲ ಆತ ಇಂಥ ಶಿಬಿರಗಳಲ್ಲಿ ಕೂಡಿ ಹಾಕಿದ್ದ. ಬಲವಂತದಿಂದ ದುಡಿಸಿದ್ದ. ಸುಮಾರು 20 ಸಾವಿರದಷ್ಟಿದ್ದ ಶಿಬಿರಗಳಲ್ಲಿ ಲಕ್ಷಾಂತರ ಮಂದಿ ಯಾತನೆಗೆ ಒಳಪಟ್ಟರು. ವೈದ್ಯರು ಅವರನ್ನು ಪ್ರಯೋಗ ಪಶುಗಳನ್ನಾಗಿ ಬಳಸಿಕೊಂಡರು. ಹಸಿವು, ಹಿಂಸೆಯಿಂದಾಗಿ ಸಾವಿರಾರು ಮಂದಿ ಸಾವಿಗೀಡಾದರು. ಇತ್ತೀಚೆಗೆ ಜರ್ಮನಿಯ ಅಧ್ಯಕ್ಷೆ ಏಂಜೆಲೋ ಮಾರ್ಕೆಲ್‍ರು ಡಚು ಎಂಬ ಯಹೂದಿ ಯಾತನಾ ಶಿಬಿರಕ್ಕೆ ಭೇಟಿ ಕೊಟ್ಟು ಆ ದಿನಗಳನ್ನು ಭಾವುಕರಾಗಿ ಸ್ಮರಿಸಿಕೊಂಡರು. ಅಂದಹಾಗೆ, ಹಿಟ್ಲರ್ ಎಂಬ ಮೂರಕ್ಷರವನ್ನು ಜಗತ್ತು ಇಂದು ಕಟುಕ ಎಂಬರ್ಥದಲ್ಲಿ ವ್ಯಾಖ್ಯಾನಿಸುತ್ತಿದೆ. ಗ್ವಾಂಟನಾಮೋ ಬೇಯಂಥ ಆಧುನಿಕ ಯಾತನಾ ಶಿಬಿರಗಳನ್ನು ಸ್ಥಾಪಿಸಿಟ್ಟ ಅಮೇರಿಕ ಹಿಟ್ಲರ್‍ನನ್ನು ಮನುಷ್ಯ ವಿರೋಧಿ ಅನ್ನುತ್ತಿದೆ! ನಿಜವಾಗಿ, ಭಯೋತ್ಪಾದನೆಯ ಹೆಸರಲ್ಲಿ ಆಧುನಿಕ ಜಗತ್ತು ತಯಾರಿಸಿಟ್ಟಿರುವ ಕಾನೂನುಗಳು ಮತ್ತು ಅದರ ಆಧಾರದಲ್ಲಿ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳಿಗೆ ಹೋಲಿಸಿದರೆ ಹಿಟ್ಲರ್ ಅಚ್ಚರಿಯ ವ್ಯಕ್ತಿತ್ವವೇನೂ ಅಲ್ಲ. ಆದರೆ ಹಿಟ್ಲರ್ ಮತ್ತು ಇವರ ನಡುವಿನ ವ್ಯತ್ಯಾಸ ಏನೆಂದರೆ- ಜಾಣತನ.. ಇವನ್ನೆಲ್ಲ ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
   2012 ಜೂನ್ 21ರಂದು ಆಸ್ಟ್ರೇಲಿಯದ ಸಮುದ್ರ ಮಧ್ಯದಲ್ಲಿ ಸೀವ್ 358 ಎಂಬ ದೋಣಿ ಮುಳುಗುತ್ತದೆ. ದೋಣಿಯಲ್ಲಿದ್ದ 212 ಮಂದಿಯಲ್ಲಿ ಸೆಮಂತ ರಾಣಿ, ಆಕೆಯ ಪತಿ ವಿಶ್ವನಾಥನ್ ಮತ್ತು ಅವರ 10, 6, 3 ವರ್ಷಗಳ ಮಕ್ಕಳೂ ಸೇರಿದ್ದರು. ಈ ಕುಟುಂಬದಂತೆ ಆ ದೋಣಿಯಲ್ಲಿದ್ದ ಎಲ್ಲರೂ ನಿರಾಶ್ರಿತರು. ಇರಾಕ್, ಅಫಘಾನ್, ಲಂಕಾ ಮುಂತಾದ ರಾಷ್ಟ್ರಗಳಿಂದ ಗೊತ್ತು-ಗುರಿಯಿಲ್ಲದೆ ಹೊರಟವರು. ಸೆಮಂತ ರಾಣಿ ಲಂಕಾದ ವಾವುನಿಯಾದವಳು. ಎಲ್.ಟಿ.ಟಿ.ಇ.ಯ ವಿರುದ್ಧ ಲಂಕಾ ಸರಕಾರ ಕೈಗೊಂಡ ಕಾರ್ಯಾಚರಣೆಯಲ್ಲಿ ಎಲ್ಲವನ್ನೂ ಕಳಕೊಂಡ ಸಾವಿರಾರು ಕುಟುಂಬಗಳಲ್ಲಿ ಇವಳದ್ದೂ ಒಂದು. ಬದುಕುವುದಕ್ಕೆ ಒಂದು ಉದ್ಯೋಗ ಬೇಕಲ್ಲ, 5 ಮಂದಿಯ ಕುಟುಂಬವನ್ನು ಸಾಕಬೇಕಲ್ಲ.. ಸೆಮಂತ ಮತ್ತು ವಿಶ್ವನಾಥರು ತಮ್ಮಲ್ಲಿರುವ ಅಷ್ಟಿಷ್ಟು ದುಡ್ಡನ್ನು ಒಟ್ಟು ಸೇರಿಸಿ ಊರು ಬಿಟ್ಟು ಆಸ್ಟ್ರೇಲಿಯಾದತ್ತ ಪಯಣಿಸಲು ತೀರ್ಮಾನಿಸಿದರು. ಸೀವ್ 358 ಎಂಬ ವಿೂನುಗಾರಿಕಾ ದೋಣಿಯನ್ನು ಹತ್ತಿದರು. ಅದು ಸೀಮೆಎಣ್ಣೆಯಿಂದ ಓಡುವ ದೋಣಿ. ದೋಣಿಯನ್ನು ಚಲಾಯಿಸುವವರಾದರೋ ತೀರಾ ಅನನುಭವಿಗಳು. ದೂರ ಪ್ರಯಾಣ ನಡೆಸಿ ಗೊತ್ತಿಲ್ಲದ, ಸಮುದ್ರದ ಯಾವ ಭಾಗದಿಂದ ಹೋದರೆ ಸುರಕ್ಷಿತ ಎಂಬ ಸ್ಪಷ್ಟ ಪರಿಜ್ಞಾನವಿಲ್ಲದ ಮೂವರು ಚಾಲಕರು. ಆಸ್ಟ್ರೇಲಿಯಾದಲ್ಲಿ ನಿರಾಶ್ರಿತರ ಬಗ್ಗೆ ಯಾವ ಕಾನೂನು ಇದೆ ಎಂಬುದು ಚಾಲಕರಿಗೂ ಗೊತ್ತಿಲ್ಲ, ದೋಣಿ ಯಲ್ಲಿರುವವರಿಗೂ ಗೊತ್ತಿಲ್ಲ. ಆ ಕಡೆಯ ತೀರವನ್ನು ಸೇರಿಕೊಂಡು ಏನಾದರೂ ಉದ್ಯೋಗ ನಡೆಸಿ ಬದುಕಬೇಕೆಂಬ ಏಕೈಕ ಉದ್ದೇಶದ ಹೊರತು ಆ ಬಡಪಾಯಿಗಳಲ್ಲಿ ಬೇರೇನೂ ಇದ್ದಿರಲೂ ಇಲ್ಲ. ಇಷ್ಟಕ್ಕೂ,
   ನಿರಾಶ್ರಿತರೆಂದರೆ, ಬದುಕಿ ಉಳಿಯುವ ಆಸೆಯನ್ನು ಬಹುತೇಕ ಕಳಕೊಂಡವರೇ ಅಲ್ಲವೇ? 1990-91 ಗಲ್ಫ್ ಯುದ್ಧದ ವೇಳೆ ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ಇರಾಕ್‍ನಿಂದ ಇರಾನ್‍ಗೆ ವಲಸೆ ಹೋದರು. 2003ರ ಅಮೇರಿಕನ್ ಅತಿಕ್ರಮಣದ ಬಳಿಕ ಇರಾಕ್‍ನಿಂದ 2.2 ಮಿಲಿಯನ್ ಮಂದಿ ಸಿರಿಯಾ, ಜೋರ್ಡಾನ್‍ಗೆ ಪಲಾಯನ ಮಾಡಿದರು. ಯಾರೇ ಆಗಲಿ, ಒಂದು ಪ್ರದೇಶದಿಂದ ಅಥವಾ ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ವಲಸೆ ಹೋಗಲು ತೀರ್ಮಾನಿಸುವುದು ಕೊನೇ ಹಂತದಲ್ಲಿ. ಇನ್ನು ಇಲ್ಲಿದ್ದು ಬದುಕಲು ಸಾಧ್ಯವೇ ಇಲ್ಲ ಎಂಬ ಹಂತದಲ್ಲಿ ಮನೆ, ಜವಿೂನು, ಅಂಗಡಿ.. ಎಲ್ಲವನ್ನೂ ಬಿಟ್ಟು ಬರೀ ಕೈಯಲ್ಲಿ ಹೊರಟು ನಿಲ್ಲುವ ಪೀಡಿತರ ಮನಃಸ್ಥಿತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ. ಯಾವ ಸಂದರ್ಭದಲ್ಲೂ ಅಕ್ರಮಕ್ಕೀಡಾಗಬಹುದಾದ ವಾತಾವರಣದಲ್ಲಿ ಅವರ ನಿರೀಕ್ಷೆಗಳಾದರೂ ಏನಿದ್ದೀತು? ಲೆಬನಾನ್‍ನ ಬೈರೂತ್‍ನಲ್ಲಿ ಒಂದು ಮಿಲಿಯನ್ ಸಿರಿಯನ್ ನಿರಾಶ್ರಿತರು ಸೇರಿಕೊಂಡಿದ್ದಾರೆ. ಸಿರಿಯದಲ್ಲಾಗುವ ಬಾಂಬ್ ಸ್ಫೋಟ, ಆಂತರಿಕ ಘರ್ಷಣೆಯಿಂದ ತಪ್ಪಿಸಿಕೊಂಡು ಬೈರೂತ್‍ಗೆ ಬಂದರೆ ಅಲ್ಲೂ ಕಾರ್ ಬಾಂಬ್ ಸ್ಫೋಟಿಸುತ್ತದೆ. ಇದು ಕೇವಲ ಲೆಬನಾನ್ ಒಂದಕ್ಕೇ ಸಂಬಂಧಿಸಿದ್ದಲ್ಲ. ಇರಾಕ್‍ನಲ್ಲೂ ನಿರಾಶ್ರಿತರನ್ನು ಎದುರುಗೊಳ್ಳುತ್ತಿರುವುದು ಸ್ಫೋಟಗಳೇ. ಅಂದಹಾಗೆ,
   ಸೆಮಂತ ಮತ್ತು ಆಕೆಯ ಮೂವರು ಪುಟ್ಟ ಮಕ್ಕಳೂ ಸೇರಿದಂತೆ 200ರಷ್ಟು ನಿರಾಶ್ರಿತರನ್ನು ಹೊತ್ತುಕೊಂಡು ಹೊರಟ ದೋಣಿ, ಸಮುದ್ರದಲ್ಲಿ 29 ದಿನಗಳ ಕಾಲ ಪಯಣಿಸಿದ ಬಳಿಕ ಹಾನಿಗೀಡಾಯಿತು. 80 ಮಂದಿ ಪಯಣಿಸಬಹುದಾಗಿದ್ದ ದೋಣಿಯಲ್ಲಿ 212 ಮಂದಿಯನ್ನು ತುಂಬಿಕೊಂಡು ಬಂದಿದ್ದ ದೋಣಿಯ ಚಾಲಕರಿಗೆ ತುರ್ತು ಸಂದರ್ಭದಲ್ಲಿ ಮಾಡಬೇಕಾದ ತಯಾರಿಯ ಬಗ್ಗೆ ಅರಿವೂ ಇರಲಿಲ್ಲ. ದೋಣಿ ನಿಧಾನವಾಗಿ ಮುಳುಗತೊಡಗಿತು. ತಮ್ಮದೆಲ್ಲವನ್ನೂ ಕಳಕೊಂಡು ಅಷ್ಟಿಷ್ಟು ನಿರೀಕ್ಷೆಯೊಂದಿಗೆ ಹೊರಟಿದ್ದ ಮಂದಿ ನಿಧಾನವಾಗಿ ಮುಳುಗ ತೊಡಗಿದರು. ದೋಣಿಯ ಚಾಲಕರು ಆಸ್ಟ್ರೇಲಿಯಾದ ರಕ್ಷಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಸಹಾಯ ಕೋರಿ ತುರ್ತು ಸಂದೇಶ ಕಳುಹಿಸಿದರು. ಆದರೆ ಆಸ್ಟ್ರೇಲಿಯಾ ನೆರವಿಗೆ ಧಾವಿಸಲಿಲ್ಲ. ಈ ಮಧ್ಯೆ, ಆ ದಾರಿಯಾಗಿ ಬಂದ ವ್ಯಾಪಾರಿ ಹಡಗೊಂದು 113 ಮಂದಿಯನ್ನು ರಕ್ಷಿಸಿತು. ಬದುಕುಳಿದವರಲ್ಲಿ ಸೆಮಂತ, ಆಕೆಯ 10ರ ಹರೆಯದ ಮಲರ್ ಹಾಗೂ 6ರ ಕೋಕಿಲ ಎಂಬ ಮಕ್ಕಳೂ ಸೇರಿದ್ದರು. ಆಕೆಯ ಪತಿ ಮತ್ತು 3ರ ಮಗು ಕಡಲಿನಲ್ಲಿ ಕಣ್ಮರೆಯಾದುವು. ಆಸ್ಟ್ರೇಲಿಯವಂತೂ ಬದುಕಿ ಉಳಿದವರನ್ನೆಲ್ಲಾ ಪಪುವ ನ್ಯೂಗಿನಿ ಮತ್ತು ಮಾನುಸ್ ದ್ವೀಪದ ಯಾತನಾ ಶಿಬಿರಗಳಿಗೆ ಅಟ್ಟಿಬಿಟ್ಟಿದೆ. ನಿಜವಾಗಿ, ಇವೆಲ್ಲ ಬಯಲಿಗೆ ಬಂದದ್ದೇ ಆಲಿಸ್ಟರ್ ಹೋಪ್ ಎಂಬ ಆಸ್ಟ್ರೇಲಿಯದ ಅಧಿಕಾರಿ ತಯಾರಿಸಿದ ವರದಿಯಿಂದ. ಅವರ ಈ ಪ್ರಯತ್ನವು ಆಸ್ಟ್ರೇಲಿಯಾದ ನಿರಾಶ್ರಿತ ಕಾನೂನುಗಳ ಬಗ್ಗೆ ದೊಡ್ಡದೊಂದು ಚರ್ಚೆಗೆ ಕಾರಣವಾಯಿತು. ಮಾತ್ರವಲ್ಲ, ಪಾಪುವ ನ್ಯೂಗಿನಿ ಮತ್ತು ಮಾನುಸ್ ದ್ವೀಪಗಳಲ್ಲಿರುವ ಹಿಟ್ಲರ್‍ನನ್ನು ನೆನಪಿಸುವ ಆಧುನಿಕ ಯಾತನಾ ಶಿಬಿರಗಳ ಬಗ್ಗೆಯೂ ಮಾಧ್ಯಮಗಳು ಚರ್ಚಿಸಿದುವು.
   ಒಂದು ರೀತಿಯಲ್ಲಿ, ಈ ಜಗತ್ತಿನಲ್ಲಿರುವ ನಿರಾಶ್ರಿತರಿಗೂ ಅಮೇರಿಕ, ಆಸ್ಟ್ರೇಲಿಯಾಕ್ಕೂ ದೊಡ್ಡದೊಂದು ಸಂಬಂಧ ಇದೆ. ಪಾಶ್ಚಾತ್ಯ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಆಲೋಚನೆಗಳೇ ನಿರಾಶ್ರಿತರ ಉಗಮಕ್ಕೆ ಕಾರಣ. ಇವತ್ತು ಜೋರ್ಡಾನ್, ಸಿರಿಯಾ, ಈಜಿಪ್ಟ್, ಲೆಬನಾನ್, ಇರಾನ್‍ಗಳಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಫೆಲೆಸ್ತೀನಿಯರ ದುರಂತ ಸ್ಥಿತಿಗೆ ಕಾರಣವಾದರೂ ಯಾರು? ಇರಾಕ್‍ನಲ್ಲಿ ಸಿರಿಯಾ, ಅಫಘನ್‍ಗಳಲ್ಲಿ ಲಕ್ಷಾಂತರ ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿದವರು ಯಾರು? ಅವರಿಗೆ ಸೂಕ್ತ ವಸತಿ, ಉದ್ಯೋಗ, ಬದುಕನ್ನು ಕೊಡಬೇಕಾದ ಜವಾಬ್ದಾರಿ ಯಾರ ಮೇಲಿದೆ? ಅಫಘಾನ್‍ನ ಮೇಲೆ ಅತಿಕ್ರಮಣ ನಡೆಸಿದ ಅಮೇರಿಕವು ಮುಂದಿನ ವರ್ಷ ಅಲ್ಲಿಂದ ಹೊರಟು ಹೋಗುತ್ತದಲ್ಲ, ಅಲ್ಲಿಯ ಸ್ಥಿತಿಯಾದರೂ ಹೇಗಿದೆ? ತಾಲಿಬಾನ್‍ಗಿಂತ ಉತ್ತಮ ಜೀವನ ಮಟ್ಟವನ್ನು ಅದು ಅಫಘನ್ನಿಗರಿಗೆ ಒದಗಿಸಿದೆಯೇ? ತಮ್ಮ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ನೆರೆಯ ರಾಷ್ಟ್ರಗಳಿಗೆ ವಲಸೆ ಹೋದವರ ಬದುಕಿನ ಬಗ್ಗೆ ಅಮೇರಿಕ ಹೊತ್ತುಕೊಂಡ ಹೊಣೆಗಾರಿಕೆಯೇನು? ಅಮೇರಿಕ ಅತಿಕ್ರಮಣ ನಡೆಸಿದ್ದು ತಾಲಿಬಾನ್ ಮತ್ತು ಸದ್ದಾಮ್ ಹುಸೈನ್‍ರ ವಿರುದ್ಧ ಎಂದಾದರೆ ಅಫಘಾನ್ ಹಾಗೂ ಇರಾಕಿ ಪ್ರಜೆಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾದದ್ದು ಕರ್ಝಾಯಿಯೋ, ನೂರ್ ಮಾಲಿಕಿಯೋ ಅಲ್ಲವಲ್ಲ. ತಮ್ಮ ಹಿತಾಸಕ್ತಿಗಾಗಿ ಅತಿಕ್ರಮಣ ನಡೆಸುವ ಪಾಶ್ಚಾತ್ಯ ರಾಷ್ಟ್ರಗಳು, ಅದರಿಂದ ಉದ್ಭವವಾಗುವ ಸಮಸ್ಯೆಗಳನ್ನೇಕೆ ಪರಿಹರಿಸುತ್ತಿಲ್ಲ? ಅಫಘಾನ್, ಇರಾಕ್, ಸಿರಿಯಾ.. ಮುಂತಾದ ರಾಷ್ಟ್ರಗಳಲ್ಲಿ ಲಕ್ಷಾಂತರ ಮಂದಿ ನಿರಾಶ್ರಿತರು ಸೃಷ್ಟಿಯಾದರಲ್ಲ, ಅವರನ್ನೇಕೆ ಅಮೇರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸ್ವೀಕರಿಸುತ್ತಿಲ್ಲ? ಪಾಶ್ಚಾತ್ಯ ರಾಷ್ಟ್ರಗಳು ಅತಿಕ್ರಮಣ ನಡೆಸುವುದಕ್ಕೆ ಮತ್ತು ಅರಬ್ ರಾಷ್ಟ್ರಗಳು ನಿರಾಶ್ರಿತರನ್ನು ಸ್ವೀಕರಿಸುವುದಕ್ಕೆ ಎಂಬ ಸ್ಥಿತಿ ನಿರ್ಮಾಣವಾಗಿರುವುದೇಕೆ? ಹಾಗಂತ, ಲಕ್ಷಾಂತರ ನಿರಾಶ್ರಿತರನ್ನು ನಿಭಾಯಿಸುವುದು ಸಣ್ಣ ಸಂಗತಿಯಲ್ಲ. ನಿರಾಶ್ರಿತರಿಂದಾಗಿ ಆಹಾರ, ವಸತಿ, ಉದ್ಯೋಗ.. ಮುಂತಾದ ಅನೇಕಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇವಾವುದರ ಹೊಣೆಯನ್ನೂ ವಹಿಸಿಕೊಳ್ಳದೇ, ನಿರಾಶ್ರಿತರನ್ನೂ ಸೇರಿಸಿಕೊಳ್ಳದೇ ಇರಾಕ್‍ಗೋ ಅಫಘನ್‍ಗೋ ಬಾಂಬುಗಳನ್ನು ಸುರಿಸಿ ಸದ್ದಾಮ್ ಹುಸೇನ್, ಮುಲ್ಲಾ ಉಮರ್‍ರನ್ನು ಪದಚ್ಯುತಗೊಳಿಸುವುದು ಯಾರ ಉದ್ಧಾರಕ್ಕೆ? ಇದರ ಉದ್ದೇಶವೇನು? ಮುಸ್ಲಿಮ್ ರಾಷ್ಟ್ರಗಳನ್ನು ಆರ್ಥಿಕವಾಗಿ ನಾಶಪಡಿಸುವುದೇ? ಆಂತರಿಕ ಸಂಘರ್ಷವನ್ನು ಹುಟ್ಟು ಹಾಕುವುದೇ?
  
ಮಾನುಸ್ ದ್ವೀಪದ ಯಾತನಾ ಶಿಬಿರಗಳು
    ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದೇ ತಮ್ಮದಲ್ಲದ ದೇಶಗಳಲ್ಲಿ ಕಣ್ಣೀರಿನೊಂದಿಗೆ ಬದುಕುತ್ತಿರುವ ಕೋಟ್ಯಂತರ ನಿರಾಶ್ರಿತರ ಸಂಕೇತವಾಗಿದ್ದಾರೆ ಸಮಂತ ಮತ್ತು ಆಕೆಯ ಮಕ್ಕಳು. ಅಮೇರಿಕವಾಗಲಿ, ಅದನ್ನು ಬೆಂಬಲಿಸುತ್ತಿರುವ ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಾಗಲಿ ಇವರನ್ನು ಎಂದೂ ಸ್ವೀಕರಿಸುವುದಿಲ್ಲ. ಜೂಲಿಯನ್ ಅಸಾಂಜೆ, ಸ್ನೋಡನ್‍ರಂತೆ ಸುದ್ದಿ ಮಾಡಲು ಇವರಿಗೆ ಬರುವುದಿಲ್ಲವಾದ್ದರಿಂದ ಮಾಧ್ಯಮಗಳೂ ಇವರ ಬಗ್ಗೆ ಮಾತಾಡುವುದಿಲ್ಲ. ನಿರಾಶ್ರಿತರನ್ನು ಕೂಡಿಡಲೆಂದೇ ಆಸ್ಟ್ರೇಲಿಯಾ ತಯಾರಿಸಿಟ್ಟಿರುವ ಮಾನುಸ್ ದ್ವೀಪದ ಬಂಧೀಖಾನೆಗಳೂ ಚರ್ಚೆಗೊಳಗಾಗುವುದಿಲ್ಲ. ಆದ್ದರಿಂದಲೇ ಕಡಲಲ್ಲಿ ಮುಳುಗಿ ಹೋಗುವ ವಿಶ್ವನಾಥನಂತೆ ಮತ್ತು ಅಮ್ಮನ ಕಣ್ಣೀರನ್ನು ಕಂಡು ಏನೂ ತೋಚದೇ ತಾವೂ ಕಣ್ಣೀರಿಡುವ ಮಲರ್ ಮತ್ತು ಕೋಕಿಲರಂತೆ ಅವರೆಲ್ಲ ಕರಗಿ ಹೋಗುತ್ತಿದ್ದಾರೆ.

Monday, August 19, 2013

ಬಂಡವಾಳಶಾಹಿತ್ವಕ್ಕೆ ಆಯ್ಕೆಗಳು ಇವೆಯೆಂದಾದರೆ ಇಸ್ಲಾಮಿ ರಾಜಕೀಯಕ್ಕೇಕೆ ಇರಬಾರದು?

   1. ಹಿಶಾಮ್ ಕಂದಿಲ್
   2. ಮುಹಮ್ಮದ್ ಇಬ್ರಾಹೀಮ್
   3. ಮುಹಮ್ಮದ್ ಕಾಮಿಲ್ ಅಮ್ರ್
   4. ಮುಮ್ತಾಝ್ ಅಲ್  ಸಈದ್
   5. ನಗ್ವಾ ಖಲೀಲ್
   6. ಹಿಶಾಮ್ ಝಾಝು
   ಸೇರಿದಂತೆ ಈಜಿಪ್ಟ್ ನ ಮುಹಮ್ಮದ್ ಮುರ್ಸಿಯವರ ಸಚಿವ ಸಂಪುಟದಲ್ಲಿದ್ದ 36 ಮಂದಿಯಲ್ಲಿ ಯಾರ ಮೇಲೆ ದೇಶದ್ರೋಹದ ಆರೋಪವಿತ್ತು? ಎಷ್ಟು ಮಂದಿ ಭಯೋತ್ಪಾದಕರಿದ್ದರು? ಇವರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯನ್ನು ಸಮರ್ಥಿಸಿದವರು, ಅಲ್ ಕಾಯಿದಾವನ್ನು ಬೆಂಬಲಿಸಿದವರು, ಬಹುಸಂಸ್ಕೃತಿಯ ಸಮಾಜವನ್ನು ಒಪ್ಪದವರು ಇದ್ದರೆ? ಮಹಿಳಾ ಶಿಕ್ಷಣವನ್ನು ತಡೆದವರಿದ್ದರೆ?  ಈಜಿಪ್ಟ್ ನ ಮಮ್ಮಿಯನ್ನು, ಚರ್ಚ್‍ಗಳನ್ನು ಅಥವಾ ವಿಗ್ರಹಗಳನ್ನು ಒಡೆಯುವುದು ಧರ್ಮಸಮ್ಮತ ಎಂದು ಹೇಳಿದ ಆರೋಪ ಯಾರ ಮೇಲಾದರೂ ಇತ್ತೇ? ಇಲ್ಲವಲ್ಲ. ಅದು ಬಿಡಿ- ರಕ್ಷಣೆ, ವಿದೇಶಾಂಗ, ಹಣಕಾಸು, ವಿಜ್ಞಾನ ಮತ್ತು ಸಂಶೋಧನೆ, ಸಂಸ್ಕ್ರಿತಿ, ಧಾರ್ಮಿಕ ವ್ಯವಹಾರ, ಕಾನೂನು.. ಮುಂತಾದ ಪ್ರಮುಖ ಖಾತೆಗಳನ್ನು ಮುರ್ಸಿ ಯಾರಿಗೆ ವಹಿಸಿಕೊಟ್ಟಿದ್ದರು? ಮುಸ್ಲಿಮ್ ಬ್ರದರ್ ಹುಡ್‍ನ ಕಾರ್ಯಕರ್ತರಿಗೋ? ತನ್ನ 36 ಮಂದಿಯ ಸಚಿವ ಸಂಪುಟಕ್ಕೆ ಫ್ರೀಡಮ್ ಆಂಡ್ ಜಸ್ಟೀಸ್ ಪಾರ್ಟಿಯಿಂದ ಕೇವಲ 6 ಮಂದಿಯನ್ನು ಮಾತ್ರ ಸೇರಿಸಿ, ಉಳಿದಂತೆ ಸ್ವತಂತ್ರ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ಅವರು ಸಚಿವರನ್ನಾಗಿ ಆರಿಸಿಕೊಂಡರಲ್ಲ, ಯಾಕೆ ಯಾರೂ ಈ ಬಗ್ಗೆ ಮಾತಾಡುತ್ತಿಲ್ಲ? ಈಜಿಪ್ಟನ್ನು ಬ್ರದರ್ ಹುಡ್ಡೀಕರಣಗೊಳಿಸುವ ರೀತಿಯೇ ಇದು? ಜಗತ್ತಿನ ಎಷ್ಟು ಮಂದಿ ಅಧ್ಯಕ್ಷರು ಇಂಥ ಸಚಿವ ಸಂಪುಟವನ್ನು ರಚಿಸಿದ್ದಾರೆ? ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಡೆನ್ಮಾರ್ಕ್, ಆಸ್ಟ್ರೇಲಿಯಾಗಳಲ್ಲೆಲ್ಲಾ ಇರುವುದು ಬಹುತೇಕ ಈಜಿಪ್ಟ್ ಮಾದರಿಯ ಅಧ್ಯಕ್ಷೀಯ ಪದ್ಧತಿಯೇ. ಹಾಗಂತ, ಎಷ್ಟು ಮಂದಿ ಅಧ್ಯಕ್ಷರಿಗೆ ಮುರ್ಸಿಯವರು ರಚಿಸಿದಂಥ ಸಚಿವ ಸಂಪುಟವನ್ನು ರಚಿಸಲು ಸಾಧ್ಯವಾಗಿದೆ? ಮೂರರಲ್ಲಿ ಒಂದು ಭಾಗವನ್ನಷ್ಟೇ ಆಡಳಿತ ಪಕ್ಷಕ್ಕೆ ನೀಡಿ ಉಳಿದೆಲ್ಲ ಖಾತೆಗಳನ್ನು ಇತರರಿಗೆ ನೀಡುವ ಸಾಹಸವನ್ನು ಮುರ್ಸಿಯವರಲ್ಲದೇ ಇನ್ನಾರು ಮಾಡಿದ್ದಾರೆ! ಅದರಲ್ಲೂ ವಲಸೆ, ನಗರಾಭಿವೃದ್ಧಿ, ಮಾಧ್ಯಮ, ಯುವಜನ ಖಾತೆ, ಸಾರಿಗೆ, ವ್ಯಾಪಾರದಂಥ ತೀರಾ ಸಾಮಾನ್ಯ ಖಾತೆಗಳನ್ನು ತನ್ನ ಫ್ರೀಡಮ್ ಆಂಡ್ ಜಸ್ಟೀಸ್ ಪಕ್ಷದ ಸದಸ್ಯರಿಗೆ ಕೊಟ್ಟ ಮುರ್ಸಿಯವರನ್ನು ಮಾದರಿ ರಾಜಕಾರಣಕ್ಕಾಗಿ ಮೆಚ್ಚಿಕೊಳ್ಳುವುದನ್ನು ಬಿಟ್ಟು, ‘ಮೂಲಭೂತವಾದಿಗಳ ಪ್ರತಿನಿಧಿ’ ಎಂಬ ಹುಯಿಲನ್ನು ಪಾಶ್ಚಾತ್ಯ ರಾಷ್ಟ್ರ ಗಳು ಹಬ್ಬಿಸಿದ್ದೇಕೆ? ಅವರು ಭಯಪಡುವ ಮೂಲಭೂತವಾದರೂ ಯಾವುದು? ಈಜಿಪ್ಟ್ ನಾದ್ಯಂತ ಮುಸ್ಲಿಮ್ ಬ್ರದರ್ ಹುಡ್‍ ಕಟ್ಟಿ ಬೆಳೆಸಿರುವ ಅನೇಕಾರು ಆಸ್ಪತ್ರೆಗಳೇ? ರಿಯಾಯಿತಿ ದರದಲ್ಲಿ ನೀಡಲಾಗುವ ವೈದ್ಯಕೀಯ ಸೇವೆಗಳೇ? ಎಲ್ಲ ತಾಲೂಕುಗಳಲ್ಲೂ ಅದು ಸ್ಥಾಪಿಸಿರುವ ಮಹಿಳಾ ಶಾಲೆ-ಕಾಲೇಜುಗಳೇ? ವಿಧವೆಯರು ಮತ್ತು ಅನಾಥರಿಗಾಗಿ ಹಮ್ಮಿಕೊಂಡಿರುವ ಜನಪ್ರಿಯ ಯೋಜನೆಗಳೇ? ಉದ್ಯೋಗ ತರಬೇತಿ ಕಾರ್ಯಕ್ರಮಗಳೇ? 1992ರಲ್ಲಿ ಈಜಿಪ್ಟ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ 50 ಸಾವಿರ ಮಂದಿ ನಿರ್ವಸಿತರಾದರು. ಆಗ ಪೀಡಿತರ ನೆರವಿಗಾಗಿ ಧಾವಿಸಿದ್ದು; ಅವರಿಗೆ ವಸತಿ, ಉಡುಪು, ವೈದಕೀಯ ಸೇವೆಯನ್ನು ನೀಡಿದ್ದು ಬ್ರದರ್ ಹುಡ್ಡೇ. ಸರಕಾರ ನಿರ್ವಹಿಸಿದುದಕ್ಕಿಂತ ಹೆಚ್ಚಿನ ಕೆಲಸವನ್ನು ಬ್ರದರ್ ಹುಡ್‍ ನಿರ್ವಹಿಸಿದೆ ಎಂದು ಮುಬಾರಕ್‍ರ ಸೇನಾಡಳಿವೇ ಪ್ರಶಂಸಿಸಿತ್ತು. ಮುರ್ಸಿಯವರು ಈಜಿಪ್ಟನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳುವವರೆಲ್ಲ ನಿಜವಾಗಿಯೂ ಭಯಪಡುತ್ತಿರುವುದು ಯಾವುದಕ್ಕೆ? ಯಾರಿಗೆ? ಒಂದು ವೇಳೆ ಮುರ್ಸಿಯವರ ಫ್ರೀಡಮ್ ಆ್ಯಂಡ್ ಜಸ್ಟೀಸ್ ಪಕ್ಷವು ಪೂರ್ಣಾವಧಿವರೆಗೆ ಈಜಿಪ್ಟನ್ನು ಆಳಿದರೆ, ಬ್ರದರ್ ಹುಡ್‍ನ ಬಗ್ಗೆ ತಾವು ಹರಡಿ ಬಿಟ್ಟಿರುವ ಅಪಪ್ರಚಾರಗಳ ಬಣ್ಣ ಬಯಲಾದೀತು ಎಂಬ ಭಯವೇ ಅವರಿಗೆ? ಈ ಕಾರಣದಿಂದಲೇ ಮುರ್ಸಿಯವರನ್ನು ಒಂದು ವರ್ಷದೊಳಗೇ ಕಿತ್ತು ಹಾಕಲಾಯಿತೇ?
   ಸೈಯದ್ ಹಸನುಲ್ ಬನ್ನಾ, ಹಸನುಲ್ ಹುದೈಬಿ, ಉಮರುಲ್ ತಿಲ್ಮಿಸಾನಿ, ಮುಹಮ್ಮದ್ ಹಾಮಿದ್ ಅಬುಲ್ ನಸ್ರ್, ಮುಸ್ತಫಾ ಮಶ್‍ಹೂರ್, ಮಅïಮೂನ್ ಅಲ್ ಹುದೈಬಿ, ಮಹ್ಮೂದ್ ಮೆಹ್ದಿ ಆಕಿಫ್, ಮುಹಮ್ಮದ್ ಬದೀ... ಮುಂತಾದ ನಾಯಕರು ಮುನ್ನಡೆಸಿಕೊಂಡ ಬಂದ, ಬರುತ್ತಿರುವ  ಈಜಿಪ್ಟ್ ನ ಅತಿದೊಡ್ಡ ಚಳವಳಿಯೇ ಮುಸ್ಲಿಮ್ ಬ್ರದರ್ ಹುಡ್‍. ಈ ಮೇಲಿನ ನಾಯಕರಲ್ಲಿ ಯಾರೊಬ್ಬರ ಮೇಲೂ ಅಮೇರಿಕ, ಬ್ರಿಟನ್, ಫ್ರಾನ್ಸ್ ಅಥವಾ ಜಗತ್ತಿನ ಇನ್ನಾವುದೇ ರಾಷ್ಟ್ರದಲ್ಲಿ ಭಯೋತ್ಪಾದನಾ ಸಂಬಂಧಿ ಪ್ರಕರಣಗಳಿಲ್ಲ. ಇವರನ್ನು ಕಪ್ಪು ಪಟ್ಟಿಯಲ್ಲೋ, ಮೋಸ್ಟ್ ವಾಂಟೆಡ್ ಯಾದಿಯಲ್ಲೋ ಸೇರಿಸಲಾಗಿಲ್ಲ. ಈಜಿಪ್ಟನ್ನು ಆಳುತ್ತಿದ್ದ ಬ್ರಿಟಿಷರ ವಿರುದ್ಧ 1930ರಲ್ಲಿ ಸಶಸ್ತ್ರ ಹೋರಾಟಕ್ಕೆ ಒಂದು ಗುಂಪು ಮುಂದಾದಾಗ ಅದನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಗೆ ಕರೆಕೊಟ್ಟದ್ದೇ ಹಸನುಲ್ ಬನ್ನಾ (ವಿಕಿಪೀಡಿಯಾ). ಈಜಿಪ್ಟ್ ಆ ಬಳಿಕ ಸರ್ವಾಧಿಕಾರಿಗಳು ಪಾಲಾಯಿತು. ಜಮಾಲ್ ಅಬ್ದುನ್ನಾಸರ್ ರಿಂದ  ಹಿಡಿದು ಮುಬಾರಕ್‍ ರ ವರೆಗೆ ಒಂದು ದೀರ್ಘ ಅವಧಿ ಕಳೆದುಹೋಯಿತು. ಈ ಸಂದರ್ಭದಲ್ಲಿ ಸರ್ವಾಧಿಕಾರವನ್ನು ಪ್ರಬಲ ಧನಿಯಲ್ಲಿ ಪ್ರಶ್ನಿಸಿದ ಬ್ರದರ್ ಹುಡ್‍, ಪರ್ಯಾಯ ರಾಜಕೀಯ ಆಲೋಚನೆಯೊಂದನ್ನು ಸಮಾಜದ ಮುಂದಿಟ್ಟಿತು. ಸಾಮಾಜಿಕ, ರಾಜಕೀಯ, ಆರ್ಥಿಕ ಮುಂತಾದ ಸರ್ವಕ್ಷೇತ್ರಗಳ ಸಮಸ್ಯೆಗಳಿಗೂ ಇಸ್ಲಾಮಿನಲ್ಲಿ ಪರಿಹಾರವಿದೆ ಎಂದು ಅದು ವಾದಿಸಿತು. ಮಾತ್ರವಲ್ಲ, ಬಡ್ಡಿರಹಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹುಟ್ಟುಹಾಕಿ, ಶುದ್ಧ-ಪ್ರಾಮಾಣಿಕ ಕಾರ್ಯಕರ್ತರ ತಂಡವೊಂದನ್ನು ಕಟ್ಟಿ, ಸಾಮಾಜಿಕ ಕೆಡುಕುಗಳ ವಿರುದ್ಧ ಜನ ಜಾಗೃತಿಯನ್ನು ಆಯೋಜಿಸಿ ಪ್ರಾಯೋಗಿಕವಾಗಿಯೂ ತೋರಿಸಿ ಕೊಟ್ಟಿತು. ಆವರೆಗೆ ಇಸ್ಲಾಮನ್ನು ಪಾಶ್ಚಾತ್ಯ ಜಗತ್ತು ಹೇಗೆ ವ್ಯಾಖ್ಯಾನಿಸುತ್ತಿತ್ತೋ ಅದಕ್ಕೆ ಭಿನ್ನವಾಗಿ ಬ್ರದರ್ ಹುಡ್‍ ಇಸ್ಲಾಮನ್ನು ಪ್ರಸ್ತುತಪಡಿಸುವುದನ್ನು  ಈಜಿಪ್ಟ್ ನ ಸರ್ವಾಧಿಕಾರಿ ಮನಸ್ಥಿತಿಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಬ್ರದರ್ ಹುಡ್‍ ಪ್ರಸ್ತುತಪಡಿಸುವ ಆಲೋಚನೆಯನ್ನು ಈಜಿಪ್ಟ್ ನಲ್ಲಿ ಬೆಳೆಯಲು ಬಿಟ್ಟರೆ ತಮ್ಮ ಆಧಿಪತ್ಯ ಖಂಡಿತ ಕೊನೆಗೊಳ್ಳುವುದೆಂದು ಅವರು ಭಯಪಟ್ಟರು. ಆದ್ದರಿಂದಲೇ, ಬ್ರದರ್ ಹುಡ್‍ ನ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ತಳ್ಳಿದರು. ಅವರ ಕಾರ್ಯಕ್ರಮಗಳಿಗೆ ತಡೆ ಒಡ್ಡಿದರು. ಆದರೆ ಸರ್ವಾಧಿಕಾರಿಗಳ ಈ ಕ್ರಮವು ಬ್ರದರ್ ಹುಡ್‍ ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿತು. ನಿಜವಾಗಿ, ಸಮಾಜಸೇವೆಗೆ ಮಾತ್ರ ತನ್ನ ಚಟುವಟಿಕೆಯನ್ನು ಬ್ರದರ್ ಹುಡ್‍ ಸೀಮಿತಗೊಳಿಸುತ್ತಿದ್ದರೆ ಅದರ ಕಾರ್ಯಕರ್ತರು ಜೈಲು ಸೇರಬೇಕಾದ ಅಗತ್ಯವೇ ಇರಲಿಲ್ಲ. ಬಡವರಿಗೆ ಮನೆ ಕಟ್ಟಿಸಿ ಕೊಡುತ್ತಾ, ದುರ್ಬಲರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ನೆರವು ನೀಡುತ್ತಾ ಬರುವ ಬ್ರದರ್ ಹುಡ್ಡನ್ನು ಮುಬಾರಕ್ ಆಗಲಿ, ಸಾದಾತ್ ಆಗಲಿ ದ್ವೇಷಿಸುವುದಕ್ಕೆ ಸಾಧ್ಯವೂ ಇರಲಿಲ್ಲ. ಆದರೆ, ಯಾವಾಗ ಅದು, ‘ಇಸ್ಲಾಮ್ ಈಸ್ ಸೊಲ್ಯೂಶನ್’ ಅಂತ ಹೇಳುತ್ತಾ ರಾಜಕೀಯವನ್ನು ತನ್ನ ಚಟುವಟಿಕೆಯ ಭಾಗವಾಗಿಸಿತೋ, ತಕ್ಷಣ ಅದನ್ನು ಮೂಲಭೂತವಾದಿ, ಉಗ್ರವಾದಿ ಎಂದು ಕರೆಯಲಾಯಿತು. ಅಷ್ಟಕ್ಕೂ, ಲೆನಿನ್‍ರ ಕಮ್ಯುನಿಸಮ್ ಸಿದ್ಧಾಂತದ ಬಗ್ಗೆ ಈ ಜಗತ್ತು ಚರ್ಚಿಸಬಹುದಾದರೆ ಇಸ್ಲಾವಿೂ ರಾಜಕೀಯದ ಬಗ್ಗೆ ಚರ್ಚಿಸುವುದೇಕೆ ಭಯೋತ್ಪಾದಕ ಅನ್ನಿಸಿಕೊಳ್ಳಬೇಕು? ಕಮ್ಯೂನಿಸಮ್ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಹೋರಾಡುತ್ತಿರುವ ರಾಜಕೀಯ ಪಕ್ಷಗಳು ಜಾಗತಿಕವಾಗಿ ಧಾರಾಳ ಇವೆ. ಬಂಡವಾಳಶಾಹಿತ್ವವನ್ನು ಒಂದು ಪರಿಹಾರವಾಗಿ ಪ್ರತಿಪಾದಿಸುವ ಪಕ್ಷಗಳು ಮತ್ತು ಅದರ ಜಾರಿಗಾಗಿ ಪ್ರಯತ್ನಿಸುವವರು ಅಸಂಖ್ಯ ಇದ್ದಾರೆ. ಅವರಾರಿಗೂ ಇಲ್ಲದ ಅಡೆತಡೆಗಳು ಇಸ್ಲಾಮನ್ನು ಒಂದು ಪರಿಹಾರವಾಗಿ ಮಂಡಿಸುವವರಿಗೇಕೆ ಎದುರಾಗುತ್ತಿದೆ? ಇಸ್ಲಾಮ್ ಅಂದ ಕೂಡಲೇ ತಾಲಿಬಾನ್, ಅಲ್ ಕಾಯ್ದಾಗಳೇ ಯಾಕೆ ಕಣ್ಣಮುಂದೆ ಬರಬೇಕು? ಕಮ್ಯೂನಿಸಮ್‍ನ ತಪ್ಪಾದ ಮಾದರಿಯಾಗಿ ನಕ್ಸಲಿಸಮ್ ಇರುವಂತೆ ಇಸ್ಲಾಮ್‍ನ ತಪ್ಪಾದ ಮಾದರಿಯಾಗಿ ತಾಲಿಬಾನನ್ನು ಪರಿಗಣಿಸಬಹುದಲ್ಲವೇ? ಇಸ್ಲಾವಿೂ ರಾಜಕೀಯವನ್ನು ‘ತಾಲಿಬಾನೀ ಕರಣ’ ಎಂದು ವ್ಯಾಖ್ಯಾನಿಸುವುದು ಎಷ್ಟು ಸರಿ? ತಾಲಿಬಾನನ್ನು ಇಸ್ಲಾಮ್‍ನ ನೈಜ ಮಾದರಿ ಎಂದು ಬಿಂಬಿಸಲು ಪಾಶ್ಚಾತ್ಯರು ಆತುರ ಪಡುತ್ತಿದ್ದಾರಲ್ಲ, ಯಾಕಾಗಿ? ಹಾಗೆ ಭೀತಿ ಮೂಡಿಸದಿದ್ದರೆ ಬ್ರದರ್ ಹುಡ್‍ ಪರಿಚಯಿಸುವ ಇಸ್ಲಾವಿೂ ರಾಜಕೀಯದ ಬಗ್ಗೆ ಜನರು ಆಸಕ್ತಿ ತೋರಿಯಾರು ಎಂಬ ಭಯವೇ? ಇಸ್ಲಾಮ್‍ನ ಆಧಾರದಲ್ಲಿ ಕಳೆದ 80 ವರ್ಷಗಳಿಂದ ಈಜಿಪ್ಟ್ ನಲ್ಲಿ ಅದು ನಡೆಸಿದ ಕ್ರಾಂತಿಕಾರಿ ಚಟುವಟಿಕೆಗಳು ಜಗತ್ತಿನ ಗಮನ ಸೆಳೆದೀತು ಎಂಬ ಅಳುಕೇ? ಅಂದ ಹಾಗೆ, ಇಸ್ಲಾವಿೂ ರಾಜಕೀಯದ ವಿಫಲ ಮಾದರಿಯಾಗಿ ಜಗತ್ತು ತಾಲಿಬಾನನ್ನು ತೋರಿಸುವುದಾದರೆ ಅಮೇರಿಕನ್ ಬಂಡವಾಳಶಾಹಿತ್ವದ ವೈಫಲ್ಯಕ್ಕೆ ಸಾಕ್ಷಿಯಾಗಿ ಇರಾಕನ್ನೂ ತೋರಿಸಬಹುದಲ್ಲವೇ? ಇರಾಕ್‍ನಲ್ಲಿ ಅಮೆರಿಕ ನಡೆಸಿದ ಕ್ರೌರ್ಯಕ್ಕೆ ಹೋಲಿಸಿದರೆ ತಾಲಿಬಾನ್ ಎಲ್ಲಿದೆ? ಹಾಗಿದ್ದೂ, ಇಸ್ಲಾವಿೂ ರಾಜಕೀಯ ಎಂದ ಕೂಡಲೇ ಏಕೈಕ ಮಾದರಿಯಾಗಿ ತಾಲಿಬಾನ್ ಮುಂದೆ ಬರುವುದೂ, ಬಂಡವಾಳಶಾಹಿತ್ವ ಎಂದ ಕೂಡಲೇ ‘ಇರಾಕ್’ ಎದುರು ಬರದೇ ಇರುವುದೂ ಯಾಕಾಗಿ? ಬಂಡವಾಳಶಾಹಿತ್ವವೆಂದರೆ, ಅಮೆರಿಕನ್ ದಬ್ಬಾಳಿಕೆಯ ಹೊರತಾದ ಇತರ ಆಯ್ಕೆಗಳೂ ಇರಬಹುದಾದರೆ ತಾಲಿಬಾನ್ ಹೊರತಾದ ಇತರ ಆಯ್ಕೆಗಳೂ ಇಸ್ಲಾವಿೂ ರಾಜಕೀಯಕ್ಕೆ ಇರಬಾರದೆಂದಿದೆಯೆ? ಕನಿಷ್ಠ ಟರ್ಕಿ ಮಾದರಿಯನ್ನು ಮುಂದಿಟ್ಟು ಜಗತ್ತು ಚರ್ಚಿಸಿದರೇನು?
   ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸಾವಿರಾರು ವಿದ್ಯಾರ್ಥಿಗಳು 1989ರಲ್ಲಿ ತಿಯೆನ್ಮಾನ್ ಚೌಕದಲ್ಲಿ ಪ್ರತಿಭಟನೆಗಿಳಿದಾಗ ಚೀನಾ ಸರಕಾರವು ಅವರ ಮೇಲೆ ಬುಲ್ಡೋಜರ್ ಹರಿಸಿ ಕೊಂದು ಹಾಕಿತ್ತು. ಆಗ ಅಮೆರಿಕವು ಈ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿತ್ತು. ಚೀನಾದೊಂದಿಗಿನ ಎಲ್ಲ ವ್ಯಾಪಾರ ಸಂಬಂಧವನ್ನೂ ಅಧ್ಯಕ್ಷ ಸೀನಿಯರ್ ಬುಶ್ ರದ್ದುಗೊಳಿಸಿದ್ದರು. ಆದರೆ, ಈಜಿಪ್ಟ್ ಸೇನಾಡಳಿತದ ಬುಲ್ಡೋಜರನ್ನು ನೋಡಿಯೂ ಇವತ್ತು ಒಬಾಮ ಅಸಹಾಯಕರಂತೆ ವರ್ತಿಸುತ್ತಿದ್ದಾರೆ. ಈಜಿಪ್ಟ್ ಮತ್ತು ಅಮೆರಿಕದ ಮಧ್ಯೆ ಎರಡು ವರ್ಷಕ್ಕೊಮ್ಮೆ ನಡೆಯುವ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ರದ್ದುಪಡಿಸಿರುವುದಾಗಿ ಹೇಳಿ ಅವರು ಸುಮ್ಮನಾಗಿದ್ದಾರೆ. ನಿಜವಾಗಿ, ಈಜಿಪ್ಟ್ ಗೆ ಜಂಟಿ ಸಮರಾಭ್ಯಾಸದ ಅಗತ್ಯವೇ ಇಲ್ಲ. ಪ್ರತಿವರ್ಷ ಅದು 500 ಮಂದಿ ಮಿಲಿಟರಿ ಸಿಬಂದಿಯನ್ನು ತರಬೇತಿಗಾಗಿ ಅಮೆರಿಕಕ್ಕೆ ರವಾನಿಸುತ್ತಿದೆ. ಬ್ರದರ್ ಹುಡ್‍ ಕಾರ್ಯಕರ್ತರ ಮೇಲೆ ಬುಲ್ಡೋಜರ್ ಹರಿಸಿದ ಸೇನಾ ಕಮಾಂಡರ್ ಅಲ್ ಸಿಸಿಯವರೂ ಅಮೇರಿಕದ ಪೆನ್ಸಿಲ್ವೇನಿಯದಲ್ಲಿ ಈ ಹಿಂದೆ ತರಬೇತಿ ಪಡೆದವರೇ. ಒಂದು ವೇಳೆ, ಈಜಿಪ್ಟ್ ಗೆ ಪ್ರತಿವರ್ಷ ನೀಡುತ್ತಿರುವ 1.3 ಬಿಲಿಯನ್ ಡಾಲರ್ ಮಿಲಿಟರಿ ನೆರವನ್ನು ರದ್ದುಪಡಿಸುವುದಾಗಿ ಒಬಾಮ ಘೋಷಿಸುತ್ತಿದ್ದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದು ಈಜಿಪ್ಟ್ ಬೆಳವಣಿಗೆಯನ್ನು ಚರ್ಚಿಸುವಂತೆ ಒತ್ತಾಯಿಸುತ್ತಿದ್ದರೆ ಮತ್ತು ಮುರ್ಸಿ ಸರಕಾರವನ್ನು ಮರು ನೇಮಕ ಗೊಳಿಸುವವರೆಗೆ ಈಜಿಪ್ಟ್ ಗೆ ದಿಗ್ಬಂಧನ ವಿಧಿಸುವುದಾಗಿ ಘೋಷಿಸುತ್ತಿದ್ದರೆ.. ಒಬಾಮರನ್ನು ಪ್ರಾಮಾಣಿಕ ಎಂದು ಒಪ್ಪಬಹುದಿತ್ತು. ಆದರೆ, ಈಜಿಪ್ಟ್ ಗೆ ತನ್ನ ನೆರವನ್ನು ರದ್ದುಗೊಳಿಸಿದ ಡೆನ್ಮಾರ್ಕ್‍ನಷ್ಟು ಪ್ರಾಮಾಣಿಕತೆಯನ್ನೂ ಒಬಾಮ ಪ್ರದರ್ಶಿಸಿಲ್ಲ. ಹೀಗಿರುವಾಗ,
   ಒಬಾಮಾರ ಹೇಳಿಕೆಯಿಂದ ಅಲ್ ಕಾಯಿದಾದ ಐಮನ್ ಜವಾಹಿರಿಗೆ ಮಾತ್ರ ಖುಷಿಯಾದೀತು ಎಂದು ರಾಯಿಟರ್ಸ್‍ನ ಅಂಕಣಕಾರ ಡೇವಿಡ್ ರೋಹ್‍ ಡೆ ಹೇಳಿರುವುದರಲ್ಲಿ ಏನು ತಪ್ಪಿದೆ?



Thursday, August 15, 2013

ನಮ್ಮೊಳಗಿನ ಇಬ್ಬಂದಿತನಕ್ಕೆ ಕನ್ನಡಿ ಹಿಡಿದ ರುಬಾಇಶ್

   ಒಂದು ಕವಿತೆಯನ್ನೋ ಲೇಖನವನ್ನೋ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕಾದರೆ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳೇನು? ವಿದ್ಯಾರ್ಥಿಗಳು ಇದನ್ನು ಓದಬಹುದು ಅಥವಾ ಓದಬಾರದು ಎಂದು ತೀರ್ಮಾನಿಸುವುದು ಯಾವುದರ ಆಧಾರದಲ್ಲಿ? ಒಂದು ಕವಿತೆಯ ಯೋಗ್ಯತೆಯನ್ನು ಅಳೆಯುವುದರ ಮಾನದಂಡ ಯಾವುದು?
    ಓ ಸಮುದ್ರವೇ ನಮ್ಮ ಸರಪಳಿಗಳು ನಿನ್ನನ್ನು ನೀರಸಗೊಳಿಸುತ್ತಿವೆಯೇ?
    ಒತ್ತಾಯಕ್ಕೆ ಮಣಿದು ನಾವು ಬಂದು ಹೋಗುತ್ತಿದ್ದೇವೆ
    ತಿಳಿದಿದೆಯೇ ನಿನಗೆ ನಮ್ಮ ಪಾಪಗಳ ಕುರಿತು
    ವಿಷಾದದ ನೆರಳಿನಲ್ಲಿ ನಮ್ಮನ್ನು ಎಳೆದೊಯ್ಯಲಾಯಿತೆಂಬುದು ನಿನಗೆ    ಗೊತ್ತಿದೆಯೇ?
    ಓ ಸಮುದ್ರವೇ, ನಮ್ಮ ಸಂಬಂಧದ ಬಗ್ಗೆ ನಮ್ಮನ್ನು ಗೇಲಿ ಮಾಡುತ್ತಿರುವೆಯಾ?
    ನಮ್ಮ ವೈರಿಗಳೊಂದಿಗೆ ಸೇರಿ ನೀನು ನಮಗೆ ಕಾವಲು ಕಾಯುತ್ತಿರುವೆ
    ನಡೆದ ಕ್ರೌರ್ಯಗಳ ಬಗ್ಗೆ ಬಂಡೆಗಳು ನಿನ್ನೊಂದಿಗೆ ಹೇಳುತ್ತಿಲ್ಲವೇ?
    ಗ್ವಾಂಟನಾಮೊ ಶಿಬಿರವು ತನ್ನ ಕತೆಯನ್ನು ನಿನ್ನೊಂದಿಗೆ ವಿವರಿಸಿಲ್ಲವೇ?...
ಕೋಯಿಕ್ಕೋಡ್ ವಿಶ್ವವಿದ್ಯಾಲಯದ, 'ಸಾಹಿತ್ಯ ಮತ್ತು ಸಮಕಾಲೀನ ಪ್ರಶ್ನೆಗಳು' (Literature and contemporary  issues) ಎಂಬ ಪಠ್ಯಪುಸ್ತಕದಿಂದ ಇತ್ತೀಚೆಗೆ ಈ ಕವಿತೆಯನ್ನು ಕಿತ್ತು ಹಾಕಲಾಗಿದೆ. ಮೂರನೇ ಸೆಮಿಸ್ಟರ್‍ನ BA- BSC ವಿದ್ಯಾರ್ಥಿಗಳಿಗೆ ಕಳೆದ ಒಂದು ವರ್ಷದಿಂದಲೂ ಬೋಧಿಸಲಾಗುತ್ತಿದ್ದ Ode to the Sea- ‘ಸಮುದ್ರಕ್ಕೊಂದು ಗೀತೆ’ - ಎಂಬ ಹೆಸರಿನ ಈ ಕವಿತೆಯ ವಿರುದ್ಧ ಕೇರಳದಲ್ಲಿ ಇತ್ತೀಚೆಗೆ ಒಂದು ವರ್ಗ ತೀವ್ರ ಪ್ರತಿಭಟನೆ ನಡೆಸಿತ್ತು. ‘ಗ್ವಾಂಟನಾಮೋದ ಕವನಗಳು: ಬಂಧಿತರು ಮಾತಾಡುತ್ತಿದ್ದಾರೆ’ (Poems from Guantanamo: The detainees speak).. ಎಂಬ ಕವನ ಸಂಕಲನದಿಂದ ಆಯ್ಕೆ ಮಾಡಲಾದ ಈ ಕವನವನ್ನು ಪಠ್ಯದಿಂದ ಕಿತ್ತು ಹಾಕಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಈ ಕವಿತೆಯನ್ನು ಬರೆದಿರುವ ಇಬ್ರಾಹೀಮ್ ಅಲ್ ರುಬಾಇಶ್ ಓರ್ವ ಭಯೋತ್ಪಾದಕನಾಗಿದ್ದಾನೆ ಅಂದರು. ಕವಿತೆಯನ್ನು ಪಠ್ಯವಾಗಿ ಆಯ್ಕೆ ಮಾಡಿರುವ ಮುರುಗನ್ ಮತ್ತು ಅರವಿಂದಾಕ್ಷನ್ ಎಂಬವರ ದೇಶಬದ್ಧತೆಯನ್ನೇ ಪ್ರಶ್ನಿಸಿದರು. ಈ ಎಲ್ಲ ಬೆಳವಣಿಗೆಗಳಿಂದ ತತ್ತರಿಸಿದ ವಿಶ್ವವಿದ್ಯಾಲಯವು ಕವಿತೆಯ ಪರಿಶೀಲನೆಗೆ ತಂಡವೊಂದನ್ನು ರಚಿಸಿತಲ್ಲದೆ, ಅದು ಕೊಟ್ಟ ವರದಿಯ ಆಧಾರದಲ್ಲಿ ಕವಿತೆಯನ್ನು ಪಠ್ಯಪುಸ್ತಕದಿಂದ ಕಿತ್ತು ಹಾಕಿತು. ವರದಿ ಹೇಳಿದ್ದು ಇಷ್ಟೇ-
    ‘..ಕವಿತೆ ಉತ್ತಮವಾಗಿದೆ. ಆದರೆ ಕವಿಯ ಬದುಕು ಸರಿ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ಈ ಕವಿತೆಯನ್ನು ಅಭ್ಯಸಿಸಬೇಕಿಲ್ಲ..’
   ಅಷ್ಟಕ್ಕೂ, ಓರ್ವ ಬರಹಗಾರನ ಬದುಕನ್ನು ನೋಡಿಕೊಂಡು ಆತನ ಬರಹವನ್ನು ಅರ್ಹ ಅಥವಾ ಅನರ್ಹವೆಂದು ಸಾರುವುದು ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಬಹುದು? ಒಂದು ವೇಳೆ, ಇದೇ ಮಾನದಂಡವನ್ನು ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಲ್ಲಿರುವ ಇತರ ಕವಿತೆಗಳಿಗೂ ಅಳವಡಿಸಿದರೆ ಏನಾದೀತು? ಎಷ್ಟು ಕವಿತೆಗಳು ಪಠ್ಯ ಪುಸ್ತಕಗಳಲ್ಲಿ ಉಳಿದೀತು? ದಸ್ತಾಯೋವಸ್ಕಿ, ರಿಂಬೊ, ಶೆನೆ, ಯೇಟ್ಸ್, ಬೀಟ್ಸ್.. ಮುಂತಾದ ವಿಶ್ವವಿಖ್ಯಾತ ಸಾಹಿತಿಗಳ ಬರಹಗಳನ್ನು ಹೆಚ್ಚಿನೆಲ್ಲ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗುತ್ತಿದೆ. ಹಾಗಂತ, ಅವರ ಜೀವನ ಕ್ರಮಗಳನ್ನು ಅಭ್ಯಸಿಸಿದ ಬಳಿಕವೇ ಅವನ್ನೆಲ್ಲ ಪಠ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆಯೇ? ದಸ್ತಾಯೋವಸ್ಕಿ ಜೂಜುಕೋರನಾಗಿದ್ದ ಎಂದು ಅವರ ಜೀವನ ಚರಿತ್ರೆಯೇ ಹೇಳುತ್ತದೆ. ಗುಲಾಮರನ್ನು ಮಾರಾಟ ಮಾಡುತ್ತಿದ್ದ ರಿಂಬೊ, ಅನೈತಿಕ ಸಂಬಂಧ ಹೊಂದಿದ್ದ ಶೆನೆ, ಮದ್ಯಪಾನಿಯಾಗಿದ್ದ ಬೀಟ್ಸ್.. ಹೀಗೆ ಎಲ್ಲರಲ್ಲೂ ದೌರ್ಬಲ್ಯಗಳು ಇದ್ದೇ ಇತ್ತು. ಖ್ಯಾತ ಕವಿ, ಕತೆಗಾರ ಸಾದಾತ್ ಹಸನ್ ಮಾಂಟೊನಂತೂ ಕಳ್ಳತನ, ಮದ್ಯಪಾನದಲ್ಲೂ ಗುರುತಿಸಿಕೊಂಡಿದ್ದ. ಉಗ್ರ ಫ್ಯಾಸಿಸಂನ ಪ್ರತಿಪಾದಕನೆಂದು ಗುರುತಿಸಿಕೊಂಡಿರುವ ಎಸ್ರಾ ಪೌಂಡ್‍ನ ಸಾಹಿತ್ಯವು ಯಾವ ವಿಶ್ವವಿದ್ಯಾಲಯಗಳಲ್ಲೂ ನಿಷೇಧಕ್ಕೆ ಒಳಗಾಗಿಲ್ಲ. ಸಾಮ್ರಾಜ್ಯ ಶಾಹಿತ್ವದ ಪ್ರಬಲ ಪ್ರತಿಪಾದಕರಾದ ರುಡ್‍ಯಾರ್ಡ್ ಕ್ಲಿಪ್ಪಿಂಗ್ಸ್ ರು ಈಗಲೂ ಎಲ್ಲರ ಇಷ್ಟದ ಸಾಹಿತಿ. ಅವರ ಜಂಗಲ್ ಬುಕ್ ಎಂಬ ಪುಸ್ತಕ ಮಕ್ಕಳ ಪಾಲಿಗೆ ಅಚ್ಚುಮೆಚ್ಚು. ಕರಿಯರ ವಿಮೋಚನೆಗಾಗಿ ಉಗ್ರವಾದಿ ಧೋರಣೆಯನ್ನು ಪ್ರತಿಪಾದಿಸಿದ ಕವಿ ಲ್ಯಾಂಗ್‍ಸ್ಟನ್ ಹ್ಯೂಗ್ಸ್ ನನ್ನು ಉಲ್ಲೇಖಿಸದ, ಮೆಚ್ಚಿಕೊಳ್ಳದ ವಿಶ್ವವಿದ್ಯಾಲಯಗಳು ಇವತ್ತು ಇವೆಯೇ? ಓರ್ವ ಬಿಳಿ ಪೊಲೀಸನನ್ನು ಕೊಂದ ಅಪರಾಧಕ್ಕಾಗಿ 1985ರಲ್ಲಿ ದಕ್ಷಿಣ ಆಫ್ರಿಕಾ ಸರಕಾರವು ಗಲ್ಲಿಗೇರಿಸಿದ ಬೆಂಜಮಿನ್ ಮೊಲೊರಿಲಸ್‍ನನ್ನು ಗೌರವಿಸದ ಸಾಹಿತಿಗಳೇ ಇವತ್ತಿಲ್ಲ.. ಇವೆಲ್ಲ ಏನು, ಸಾಹಿತ್ಯದ ತೂಕವನ್ನು ಸಾಹಿತಿಯ ಜೀವನ ಕ್ರಮದ ಆಧಾರದಲ್ಲಿ ಅಳೆಯಲಾಗುವುದಿಲ್ಲ ಎಂಬುದಕ್ಕಿರುವ ಪುರಾವೆಗಳೇ ಅಲ್ಲವೇ? ಇಲ್ಲೆಲ್ಲಾ ಪರಿಗಣನೆಗೆ ಬಾರದ ನಿಯಮವು ಕೇವಲ ರುಬಾಯಿಶ್‍ನ ವಿಷಯದಲ್ಲಿ ಮಾತ್ರ ಜಾರಿಗೆ ಬಂದುದೇಕೆ? ಹಾಗಂತ ರುಬಾಇಶ್‍ನನ್ನೋ ಆತನ ಕವಿತೆಯನ್ನೋ ಸಮರ್ಥಿಸುವುದು ಇಲ್ಲಿನ ಉದ್ದೇಶ ಅಲ್ಲ. ಅಂಥದ್ದೊಂದು ತೂಕದ ಕವಿತೆಯೂ ಅದಲ್ಲ, ಆದರೂ
    1979ರಲ್ಲಿ ಸೌದಿಯಲ್ಲಿ ಹುಟ್ಟಿದ ರುಬಾಇಶ್‍ನು ಬಳಿಕ ಪಾಕ್-ಅಫಘಾನ್ ಗಡಿಯಲ್ಲಿ ಶಿಕ್ಷಕನಾಗಿ ಸೇರಿಕೊಳ್ಳುತ್ತಾನೆ. ಈ ಮಧ್ಯೆ ಅಲ್ ಖಾಯಿದಾದೊಂದಿಗೆ ಸಂಬಂಧ ಇದೆಯೆಂಬ ಆರೋಪದಲ್ಲಿ ಆತ ಬಂಧನಕ್ಕೆ ಒಳಗಾಗುತ್ತಾನಲ್ಲದೇ, ಗ್ವಾಂಟನಾಮೋ ಜೈಲು ಸೇರುತ್ತಾನೆ. ನಿಜವಾಗಿ, ಗ್ವಾಂಟನಾಮೋ ಎಂಬುದು ಕ್ಯೂಬಾದ ಕೆರಿಬಿಯನ್ ಸಮುದ್ರ ತೀರದಲ್ಲಿ ಅಮೇರಿಕದ ಅಧ್ಯಕ್ಷ  ಜಾರ್ಜ್ ಬುಶ್‍ರು 9/11ರ ಬಳಿಕ ತಯಾರಿಸಿಟ್ಟ ಬಂಧೀಖಾನೆ. 1903ರಲ್ಲಿಯೇ ಅಮೇರಿಕವು ಈ 45 ಚದರ ಮೈಲು ಪ್ರದೇಶವನ್ನು ಕರಾರಿನಂತೆ ಪಡಕೊಂಡಿತ್ತು. ಅಲ್ಲಿ ಅಮೇರಿಕದ ನೌಕಾನೆಲೆಯೊಂದಿದೆ. ಅಮೇರಿಕದ ಹೊರಗೆ ಈ ಬಂದೀಖಾನೆ ಇರುವುದರಿಂದಾಗಿ ಅಮೇರಿಕದಲ್ಲಿ ಕೈದಿಗಳಿಗೆ ಏನೆಲ್ಲ ಹಕ್ಕು, ಸ್ವಾತಂತ್ರ್ಯ, ಸೌಲಭ್ಯಗಳಿವೆಯೋ ಅವೊಂದೂ ಇಲ್ಲಿರುವವರಿಗೆ ದಕ್ಕಬೇಕಿಲ್ಲ. ಅಮೇರಿಕದ ಕಾನೂನು ಇವರಿಗೆ ಲಾಗೂ ಆಗಬಾರದು ಎಂಬ ಉದ್ದೇಶದಿಂದಲೇ ಬುಶ್ ಇದನ್ನು ನಿರ್ಮಿಸಿದ್ದರು. ಬಂಧನದ 3 ವರ್ಷಗಳ ಬಳಿಕ 2006ರಲ್ಲಿ ಅಮೇರಿಕವು ರುಬಾಇಶ್‍ನನ್ನು ಸೌದಿ ಅರೇಬಿಯಾಕ್ಕೆ ಹಸ್ತಾಂತರಿಸಿತ್ತು. ಮಾತ್ರವಲ್ಲ, ಆತನ ಮೇಲಿರುವ ಆರೋಪ, ಬಿಡುಗಡೆಗಿರುವ ಕಾರಣ ಯಾವುದನ್ನೂ ಅಮೇರಿಕ ಈವರೆಗೂ ಬಹಿರಂಗಪಡಿಸಿಲ್ಲ. ಒಂದು ರೀತಿಯಲ್ಲಿ, ಶಂಕಿತ ಆರೋಪಿಯಾಗಿ ಗ್ವಾಂಟಾನಾಮೋ ಸೇರಿಕೊಂಡು ಆತ ನಿರಪರಾಧಿಯಾಗಿ ಹೊರಬಂದಿದ್ದಾನೆ. ಆತನಿಗೆ ಯಾವ ಕೋರ್ಟೂ ಶಿಕ್ಷೆ ವಿಧಿಸಿಲ್ಲ. ಅಲ್ಲದೇ ಬಿಡುಗಡೆಯ ಮೂರು ವರ್ಷಗಳ ಬಳಿಕ ಆತ ಸೌದಿಯಿಂದಲೂ ನಾಪತ್ತೆಯಾಗಿದ್ದಾನೆ. ಆತ ಜೀವಂತ ಇದ್ದಾನೋ ಇಲ್ಲವೋ ಅನ್ನುವುದೂ ಸ್ಪಷ್ಟವಿಲ್ಲ. ಹೀಗೆ ಶಿಕ್ಷಕನಾಗಿ, ಶಂಕಿತ ಭಯೋತ್ಪಾದಕನಾಗಿ ಮತ್ತು ನಿರಪರಾಧಿಯಾಗಿ ಬಿಡುಗಡೆ ಗೊಳ್ಳುವುದಕ್ಕಿಂತ ಮೊದಲು ಆತ ಜೈಲಿನಲ್ಲಿ ಬರೆದ ಕವನವೇ ‘ಸಮುದ್ರಕ್ಕೊಂದು ಗೀತೆ’. ಆತನಂತೆಯೇ ಅನೇಕ ಕೈದಿಗಳು ಗ್ವಾಂಟನಾಮೋದಲ್ಲಿ ಕವನ ಬರೆದಿದ್ದರು. ಅಮೇರಿಕದ ಮಾನವ ಹಕ್ಕು ಹೋರಾಟಗಾರರಾದ ಮಾರ್ಕ್ಸ್  ಫಾಲ್‍ಕಾಪ್‍ರು ಅವನ್ನೆಲ್ಲ 'ಗ್ವಾಂಟನಾಮೋದ ಕವನಗಳು..' ಎಂಬ ಹೆಸರಿನಲ್ಲಿ ಸಂಗ್ರಹಿಸಿದರು. ಮಾತ್ರವಲ್ಲ, ಆಮ್ನೆಸ್ಟಿ ಇಂಟರ್‍ನ್ಯಾಶನಲ್ ಈ ಕವನ ಸಂಕಲನವನ್ನು ಪ್ರಕಟಿಸಿತು. ನಿಜವಾಗಿ, ಈ ಕವನಗಳು ಪ್ರಕಟವಾಗುವುದಕ್ಕಿಂತ ಮೊದಲು ಅಮೇರಿಕದ ಉನ್ನತ ಅಧಿಕಾರಿಗಳು ಒಂದಕ್ಕಿಂತ ಹೆಚ್ಚು ಬಾರಿ ಆಮೂಲಾಗ್ರವಾಗಿ ಅವನ್ನು ಪರಿಶೀಲಿಸಿದ್ದಾರೆ. ಒಂದು ವೇಳೆ ಭಯೋತ್ಪಾದನೆಗೆ ಬೆಂಬಲ ನೀಡಬಲ್ಲ ಏನಾದರೂ ಇರುತ್ತಿದ್ದರೆ ಅಮೇರಿಕ ಈ ಕವನ ಸಂಕಲನವನ್ನು ಪ್ರಕಟಿಸಲು ಅನುಮತಿ ನೀಡುತ್ತಿತ್ತೇ? ಸಮುದ್ರವನ್ನು ಕೇಂದ್ರೀಕರಿಸಿ ಜೈಲಿನ ಕಷ್ಟ, ಒಂಟಿತನ, ತನ್ನ ಅಮಾಯಕತನವನ್ನಲ್ಲದೇ ಇನ್ನೇನನ್ನಾದರೂ ರುಬಾಇಶ್ ಬರೆಯುತ್ತಿದ್ದರೆ, Ode to the Sea ಪ್ರಕಟಗೊಳ್ಳುತ್ತಿತ್ತೇ?
   1. ಗಾಯದ ನೆನಪುಗಳು...
   2 ಈಳಂ ಕವಿತೆಗಳು
ರುಬಾಇಶ್
   3 ಹಾಲೋಕಾಸ್ಟ್ ಕವಿತೆಗಳು
ಮುಂತಾದ ಅನೇಕ ಕೃತಿಗಳು ಈ ಜಗತ್ತಿನಲ್ಲಿ ಪ್ರಕಟವಾಗಿವೆ. ಇವೆಲ್ಲ ಕಾದಂಬರಿಗಳಂಥಲ್ಲ. ಈ ದೇಶದಲ್ಲಿ ನಡೆದ ಕೋಮುಗಲಭೆಗಳ ದಾರುಣ ಚಿತ್ರಣವನ್ನು ‘ಗಾಯದ ನೆನಪುಗಳು’ ಹೇಳುತ್ತಿದ್ದರೆ, ಲಂಕಾದ ತಮಿಳರ ತಲ್ಲಣಗಳನ್ನು ‘ಈಳಂ ಕವಿತೆಗಳು’ ವಿವರಿಸುತ್ತವೆ. ಹಿಂದಿ ಸಿನಿಮಾ ಗೀತೆಗಳನ್ನು ಹಾಡಿದಂತೆ ಈಳಂ ಕವಿತೆಗಳನ್ನು ಓದಲು ಸಾಧ್ಯವಿಲ್ಲ. ಯಾಕೆಂದರೆ, ಅವುಗಳಲ್ಲಿ ಒಂದು ಜನಾಂಗದ ತಲ್ಲಣ, ನೋವು, ಕಣ್ಣೀರು, ಅಸಹಾಯಕತೆಗಳೇ ತುಂಬಿವೆ. ರುಬಾಇಶ್‍ನ ಕವಿತೆ ಮುಖ್ಯವಾಗಬೇಕಾದದ್ದು ಈ ಹಿನ್ನೆಲೆಯಲ್ಲಿ. ಅದನ್ನು ಓದುವಾಗ, ಗ್ವಾಂಟನಾಮೋ ಕಾಣುತ್ತದೆ. ಅಮೇರಿಕದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಒಂದು ವೇಳೆ, ವಿಶ್ವವಿದ್ಯಾಲಯದ ಪಠ್ಯದಲ್ಲಿ ಈಳಂ ಕೃತಿಯಿಂದ ಒಂದು ಕವಿತೆ ಸೇರ್ಪಡೆಗೊಂಡರೂ ವಿದ್ಯಾರ್ಥಿಗಳ ಅಧ್ಯಯನ ಆ ಒಂದು ಕವಿತೆಗಷ್ಟೇ ಸೀಮಿತಗೊಳ್ಳುವುದಿಲ್ಲ. ಅದನ್ನು ಅಧ್ಯಯನ ನಡೆಸುವ ಸಂದರ್ಭದಲ್ಲಿ ಇಡೀ ಲಂಕಾ ಕಲಹದ ಚಿತ್ರಣವೇ ಅವರೆದುರು ತೆರೆದುಕೊಳ್ಳುತ್ತದೆ. ಹಾಲೋಕಾಸ್ಟ್ ಆಗಲಿ, ಸಮುದ್ರಕ್ಕೊಂದು ಗೀತೆಯಾಗಲಿ ವಿದ್ಯಾರ್ಥಿಗಳನ್ನು ತಟ್ಟುವುದು, ತಟ್ಟಬೇಕಾದದ್ದು ಈ ರೀತಿಯಲ್ಲೇ.
   ನಿಜವಾಗಿ, ಬರಹಗಾರನಿಗೂ ಆತನ ಬರಹಕ್ಕೂ ಖಂಡಿತ ಸಂಬಂಧ ಇರಬೇಕು. ಭಯೋತ್ಪಾದಕನೊಬ್ಬ ದಯೆಯ ಬಗ್ಗೆ ಮಾತಾಡುವುದಕ್ಕೆ ಯಾವ ಅರ್ಥವೂ ಇಲ್ಲ. ಹತ್ಯಾಕಾಂಡದ ರೂವಾರಿಯೋರ್ವ ಮಾನವೀಯತೆಯ ಬಗ್ಗೆ ಭಾಷಣ ಮಾಡುವುದನ್ನು ಯಾವ ಸಮಾಜವೂ ಒಪ್ಪುವುದಿಲ್ಲ. ಕೋಮುವಾದಿ ಸಾಹಿತಿಯೊಬ್ಬ ತನ್ನ ಬರಹದಲ್ಲಿ ಮನುಷ್ಯ ಪ್ರೇಮದ ಬಗ್ಗೆ ಬರೆಯುವುದು ಹಾಸ್ಯಾಸ್ಪದವಾಗುತ್ತದೆ. ಆದರೆ, ನಮ್ಮ ಪಠ್ಯಪುಸ್ತಕಗಳೆಲ್ಲ ಇಂಥ ವೈರುಧ್ಯಗಳಿಂದ ಮುಕ್ತವಾಗಿವೆ  ಎಂದು ಸಾಬೀತುಪಡಿಸಲು ರುಬಾಇಶ್‍ನನ್ನು ಭಯೋತ್ಪಾದಕ ಕವಿ ಎಂದು ಸಾರುತ್ತಿರುವವರಿಗೆ ಸಾಧ್ಯವೇ? ಅಷ್ಟಿದ್ದೂ, ಇತರ ಯಾರಿಗೂ ಅನ್ವಯವಾಗದ ನಿಯಮವೊಂದು ರುಬಾಇಶ್‍ನಿಗೆ ಅನ್ವಯವಾಗಲು ಏನು ಕಾರಣ? ಈ ದೇಶದಲ್ಲಿ ಸಾಹಿತ್ಯವನ್ನು ಸಾಹಿತಿಗಳ ಬದುಕಿನಿಂದ ಹೊರಗಿಟ್ಟೇ ಈವರೆಗೆ ಪರಿಶೀಲಿಸಲಾಗಿದೆ. ಸಾಹಿತಿ ಪ್ರಬಲ ಕೋಮುವಾದಿಯಾಗಿದ್ದರೂ ಆತನ ಸಾಹಿತ್ಯ ಮನುಷ್ಯ ಪ್ರೇಮಿಯಾಗಿದ್ದರೆ, ಅದನ್ನು ಪರಿಗಣಿಸಿರುವ ಉದಾಹರಣೆಗಳು ಧಾರಾಳ ಇವೆ. ಹೀಗಿರುವಾಗ Ode to the Sea ಮಾತ್ರ ಈ ನಿಯಮದಿಂದ ಹೊರಗುಳಿಯಲು ರುಬಾಇಶ್‍ನ 'ಶಂಕಿತ ವ್ಯಕ್ತಿತ್ವ' ಮಾತ್ರ ಕಾರಣವೋ ಅಥವಾ ಅದರ ಹಿಂದೆ ಇಸ್ಲಾಮೋಫೋಬಿಯಾವೂ ಕೆಲಸ ಮಾಡಿವೆಯೇ? ಭಯೋತ್ಪಾದನೆಯ ಆರೋಪದಲ್ಲಿ ಜೈಲು ಸೇರಿ ಬಳಿಕ ಅಮಾಯಕರೆಂದು ಬಿಡುಗಡೆಗೊಂಡವರು ಈ ದೇಶದಲ್ಲಿ ಧಾರಾಳ ಇದ್ದಾರೆ. ಅವರು ಭವಿಷ್ಯದಲ್ಲಿ ರಚಿಸಬಹುದಾದ ಸಾಹಿತ್ಯಕ್ಕೂ ಇದೇ ಮಾನದಂಡವೇ ಅಥವಾ ಅಮೇರಿಕ ಯಾರನ್ನು ಭಯೋತ್ಪಾದಕರೆನ್ನುತ್ತದೋ, ಯಾರನ್ನು ಕಪ್ಪು ಪಟ್ಟಿಯಲ್ಲಿಡುತ್ತದೋ ಅವರನ್ನು ಮಾತ್ರ ವಿರೋಧಿಸುತ್ತೇವೆ ಎಂಬ ನಿಲುವೇ? ಹಾಗಾದರೆ ನರೇಂದ್ರ ಮೋದಿಯವರ ಸ್ಥಿತಿಯೇನು? ಅವರನ್ನು ಇನ್ನೂ ಅಮೇರಿಕ ಸೇರಿಸಿಕೊಳ್ಳುತ್ತಿಲ್ಲವಲ್ಲ? ಅಂದಹಾಗೆ,
    ರುಬಾಇಶ್‍ನ ನೆಪದಲ್ಲಾದರೂ ನಮ್ಮೊಳಗಿನ ಇಬ್ಬಂದಿತನ, ಅಸಹಿಷ್ಣುತೆ, ಶಂಕಿತ ಮನಸ್ಥಿತಿಯು ಚರ್ಚೆಗೆ ಒಳಗಾದರೆ ಖಂಡಿತ 'ಸಮುದ್ರಕ್ಕೊಂದು ಗೀತೆ'ಯ ಉದ್ದೇಶ ಈಡೇರಿತೆಂದೇ ಹೇಳಬಹುದು.

Tuesday, August 6, 2013

ಅವರು ಅಮಾಯಕರೆಂದಾದರೆ ಆರೋಪ ಹೊರಿಸಿದವರನ್ನು ಏನೆನ್ನಬೇಕು?

'ಮೀಡಿಯಾ ಆಂಡ್ ಟೆರರ್: ಫ್ಯಾಕ್ಟ್ಸ್ ಆಂಡ್ ಫಿಕ್ಷನ್' ಕೃತಿಯ ಬಿಡುಗಡೆಯ ಕ್ಷಣ 
Accuracy
Brevity
Clarity
   ಪತ್ರಕರ್ತರ, ವರದಿಗಾರರ, ಸಂಪಾದಕರ.. ಎದುರು ಸದಾ ತೂಗಾಡುತ್ತಲೇ ಇರಬೇಕಾದ ಈ ಮೂರು ಮೌಲ್ಯಗಳಿಗೆ ಇವತ್ತು ಯಾವ ಸ್ಥಿತಿ ಬಂದೊದಗಿದೆ? ಮಾಧ್ಯಮ ಮಿತ್ರರಲ್ಲಿ ಎಷ್ಟು ಮಂದಿ ಇವತ್ತು ಖಚಿತತೆ, ಧೈರ್ಯಶೀಲತೆ ಮತ್ತು ಸ್ಪಷ್ಟತೆ (ABC) ಎಂಬ ಈ ಮಾಧ್ಯಮ ಸಂಹಿತೆಗೆ ಬದ್ಧವಾಗಿದ್ದಾರೆ? ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡ ಬಳಿಕ ವರದಿ ಮಾಡುವ ಸಹನೆ ಇವತ್ತು ಎಷ್ಟು ಮಂದಿ ಪತ್ರಕರ್ತರಿಗಿದೆ?
   Sucess  is 90% about your Attitude, 10% about your talent - ‘ಯಶಸ್ಸಿನಲ್ಲಿ ಬದ್ಧತೆಯ ಪಾಲು ಶೇ. 90 ಆದರೆ ಪ್ರತಿಭೆಯ ಪಾಲು ಶೇ. 10’ - ಎಂದು ಭಯೋತ್ಪಾದನೆಯ ಆರೋಪದಲ್ಲಿ 2012 ಆಗಸ್ಟ್ ನಲ್ಲಿ ಬಂಧನಕ್ಕೀಡಾಗುವ ಒಂದು ದಿನ ಮೊದಲು ಪತ್ರಕರ್ತ ಮುತೀಉರ್ರಹ್ಮಾನ್ ತನ್ನ ಫೇಸ್‍ಬುಕ್‍ನಲ್ಲಿ ಬರೆದಿದ್ದ. ಮರುದಿನ ಟಿ.ವಿ. ಚಾನೆಲ್ ಒಂದು ಅದನ್ನು ಹೀಗೆ ವ್ಯಾಖ್ಯಾನಿಸಿತು- ‘ತನ್ನ ಭಯೋತ್ಪಾದಕ ಯೋಜನೆಯ ಬಗ್ಗೆ ಆತನಿಗೆ ಎಷ್ಟು ಭರವಸೆ ಇದೆ!' ಇನ್ನೊಂದು ಚಾನೆಲ್ - 'ಮುತೀಉರ್ರಹ್ಮಾನನ ತಂದೆ ಪಾಕಿಸ್ತಾನದಲ್ಲಿದ್ದು, ಆತನ ಭಯೋತ್ಪಾದಕ ಚಟುವಟಿಕೆಗಳಿಗೆ ಧಾರಾಳ ಹಣವನ್ನು ರವಾನಿಸುತ್ತಿದ್ದಾರೆ..' ಎಂದಿತ್ತು. ಆತನಲ್ಲಿ 50 ಕೋಟಿಯಷ್ಟು ಹಣವಿದೆ, ಹುಬ್ಬಳ್ಳಿಯ ಶಿರೂರ್ ಪಾರ್ಕ್ ನಲ್ಲಿ ಆತನಿಗೆ ದೊಡ್ಡ ಬಂಗಲೆಯಿದೆ.. ಎಂದೆಲ್ಲ ಚಾನೆಲ್‍ಗಳು ಸುದ್ದಿ ಸ್ಫೋಟಿಸಿದ್ದುವು. ನಿಜವಾಗಿ, ಮುತೀಉರ್ರಹ್ಮಾನ್‍ರ ತಂದೆ 2006 ಜೂನ್ 16ರಂದು ನಿಧನರಾಗಿದ್ದರು. ಮುತೀಉರ್ರಹ್ಮಾನ್ ಪ್ರಯಾಣಿಸುತ್ತಿದ್ದು ಬೆಂಗಳೂರಿನ ಸರಕಾರಿ ಬಸ್ಸಿನಲ್ಲಿ. ಹುಬ್ಬಳ್ಳಿಯಲ್ಲಿ ಸಣ್ಣದೊಂದು ಮನೆ ಬಿಟ್ಟರೆ ಬಂಗಲೆ -ದುಡ್ಡು ಯಾವುದೂ ಅವರಲ್ಲಿರಲಿಲ್ಲ. ಅಷ್ಟೇ ಅಲ್ಲ,
   Calls to Saudi, unravelled plot - ಎಂಬ ಶೀರ್ಷಿಕೆಯಲ್ಲಿ 2012 ಸೆಪ್ಟೆಂಬರ್ 2ರಂದು ಡೆಕ್ಕನ್ ಕ್ರಾನಿಕಲ್ ಪತ್ರಿಕೆಯು ಸುದ್ದಿಯೊಂದನ್ನು ಪ್ರಕಟಿಸಿತ್ತಲ್ಲದೇ ಮುತೀಉರ್ರಹ್ಮಾನನು  ಇಡೀ ಯೋಜನೆಯ ಮಾಸ್ಟರ್ ಮೈಂಡ್ ಎಂದು ಬರೆಯಿತು. ಕನ್ನಡದ ಪ್ರಮುಖ ಪತ್ರಿಕೆಗಳಂತೂ ಮಾಸ್ಟರ್ ಮೈಂಡ್‍ನಿಂದ ಹಿಡಿದು ಮುಂಬೈ ದಾಳಿಯ ಆರೋಪಿ ಅಬೂಜಂದಲ್‍ನ ವರೆಗೆ ಸಂಬಂಧ ಕಲ್ಪಿಸಿದುವು. 2012 ಸೆಪ್ಟೆಂಬರ್‍ನಲ್ಲಿ ಪ್ರಕಟವಾದ ಪತ್ರಿಕೆಗಳನ್ನು ಇವತ್ತು ತಿರುವಿ ಹಾಕುವಾಗ ಇಡೀ ಮಾಧ್ಯಮ ಕ್ಷೇತ್ರದ ಬಗ್ಗೆಯೇ ಅಸಹ್ಯ ಹುಟ್ಟುತ್ತದೆ. ಪತ್ರಕರ್ತರು ಮತ್ತು ಸಂಪಾದಕರುಗಳ ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನ ಮೂಡುತ್ತದೆ. ಕಳಪೆ, ಪಕ್ಷಪಾತ, ಪೂರ್ವಗ್ರಹ ಪೀಡಿತ, ನಿರ್ಲಕ್ಷ್ಯ, ಉದ್ದೇಶಪೂರ್ವಕ.. ಮುಂತಾದ ಯಾವ ಪದ ಬಳಸಿ ಅಂದಿನ ವರದಿ ಮತ್ತು ಸುದ್ದಿಯನ್ನು ಖಂಡಿಸಿದರೂ ಸಾಕಾಗಲ್ಲ ಅನ್ನಿಸುತ್ತದೆ. ಅಷ್ಟಕ್ಕೂ,
  Al Queda corrie threat - ಎಂಬ ಶೀರ್ಷಿಕೆಯಲ್ಲಿ 2010 ಡಿ. 9ರಂದು ಬ್ರಿಟನ್ನಿನ ದಿ ಸನ್ ಪತ್ರಿಕೆಯು ಸುದ್ದಿಯೊಂದನ್ನು ಪ್ರಕಟಿಸಿತ್ತು. ಅಲ್ ಕೈದಾ ದಾಳಿಯ ಭೀತಿಯಿಂದಾಗಿ ಕೊರೋನೇಶನ್ ರಸ್ತೆಯಲ್ಲಿ ಪೊಲೀಸರು ನಿನ್ನೆ ಇಡೀ ದಿನ ಕಾರ್ಯಾಚರಣೆ ನಡೆಸಿದ್ದಾರೆ.. ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ 19 ದಿನಗಳ ಬಳಿಕ, there was no specific threat from Al Queda as we reported, we apologise for this misunderstanding. - ‘ನಮ್ಮ ಸುದ್ದಿ ತಪ್ಪಾಗಿದೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇವೆ..’ ಎಂದು ಬರೆಯಿತು. ಆಸ್ಟ್ರೇಲಿಯಾ ಸರಕಾರವಂತೂ ಡಾ| ಹನೀಫ್‍ರೊಂದಿಗೆ ಕ್ಷಮೆ ಯಾಚಿಸಿ ಒಂದು ಕೋಟಿ ರೂಪಾಯಿಯನ್ನು ಪರಿಹಾರವಾಗಿ ನೀಡಿದ್ದಷ್ಟೇ ಅಲ್ಲ, ಪೌರತ್ವದ ಕೊಡುಗೆಯನ್ನೂ ನೀಡಿತು. ಇಷ್ಟಿದ್ದೂ, ಮುತೀಉರ್ರಹ್ಮಾನರ ವಿಷಯದಲ್ಲಿ ಮಾಧ್ಯಮಗಳು ಮುಖ್ಯವಾಗಿ ಕನ್ನಡ ಪತ್ರಿಕೆಗಳು ಹೇಗೆ ನಡಕೊಂಡವು? ಬಂಧನದ 7 ತಿಂಗಳ ಬಳಿಕ ಮುತೀಉರ್ರಹ್ಮಾನ್ ಮತ್ತು ಇತರರು ಅಮಾಯಕರೆಂದು ಬಿಡುಗಡೆಗೊಂಡರಲ್ಲ, ಮಾಧ್ಯಮಗಳು ಅದನ್ನು ಸ್ವೀಕರಿಸಿದ್ದಾದರೂ ಹೇಗೆ? ಬಿಡುಗಡೆ ಗೊಂಡವರು ಅಮಾಯಕರೆಂದಾದರೆ, ನಾವೇ ಅಪರಾಧಿಗಳು ಎಂದು ಅವು ಘೋಷಿಸಿದುವೇ? ಅದಕ್ಕಾಗಿ ಕ್ಷಮೆ ಯಾಚಿಸಿದುವೇ? ತಪ್ಪನ್ನು ಒಪ್ಪಿಕೊಂಡು ಆತ್ಮಾವಲೋಕನಕ್ಕೆ ಇಳಿದುವೇ? 'ಸುದ್ದಿಯನ್ನು ಖಚಿತಪಡಿಸಿಕೊಳ್ಳದೇ ಊಹೆಗಳ ಆಧಾರದಲ್ಲಿ ಸುದ್ದಿ ತಯಾರಿಸಬೇಡಿ’ ಎಂಬ ಕಟ್ಟಾಜ್ಞೆಯನ್ನು ಎಲ್ಲ ಪತ್ರಕರ್ತರಿಗೂ ರವಾನಿಸಿ ತಮ್ಮನ್ನು ತಿದ್ದಿಕೊಂಡ ಬಗ್ಗೆ ಹೇಳಿದುವೇ? ಯಾವುದೂ ಇಲ್ಲ. 2012 ಸೆಪ್ಟೆಂಬರ್‍ನಲ್ಲಿ,
   The Delhi car bombing: How the police built a false case- ‘ದೆಹಲಿ ಕಾರ್ ಬಾಂಬ್ ಪ್ರಕರಣ: ಪೊಲೀಸರು ಹೇಗೆ ಸುಳ್ಳು ಕೇಸನ್ನು ಹೆಣೆದರು’ - ಎಂಬ ಶೀರ್ಷಿಕೆಯಲ್ಲಿ ಇಂಟರ್‍ಪ್ರೆಸ್ ಸರ್ವಿಸ್‍ನಲ್ಲಿ ಲೇಖನವೊಂದು ಮೂರು ಕಂತುಗಳಲ್ಲಿ ಪ್ರಕಟವಾಯಿತು. ದೆಹಲಿಯಲ್ಲಿರುವ ಇಸ್ರೇಲಿ ರಾಯಭಾರಿಯ ಕಾರಿನ ಮೇಲೆ 2012 ಫೆಬ್ರವರಿಯಲ್ಲಿ ನಡೆದ ದಾಳಿ ಮತ್ತು ಅದನ್ನು ವ್ಯವಸ್ಥೆಯು ನಿಭಾಯಿಸಿದ ರೀತಿಯನ್ನು ಖ್ಯಾತ ಪತ್ರಕರ್ತ ಗೆರೆತ್ ಪೋರ್ಟರ್ ಅದರಲ್ಲಿ ವಿವರಿಸಿದರು.
ದಾಳಿ ನಡೆದ ಬೆನ್ನಿಗೇ  ಇಸ್ರೇಲ್‍ನಿಂದ ತನಿಖಾ ತಂಡ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಮೊಸಾದ್ ಘಟನಾ ಸ್ಥಳಕ್ಕೆ ಬರುತ್ತದೆ. ಇದಾಗಿ ಕೆಲವೇ ದಿನಗಳಲ್ಲಿ ಪತ್ರಕರ್ತ ಮುಹಮ್ಮದ್ ಅಹ್ಮದ್ ಕಾಸ್ಮಿಯನ್ನು ಬಂಧಿಸಲಾಗುತ್ತದೆ. ಇರಾನ್‍ನ ಪರ ಧೋರಣೆಯುಳ್ಳ, ದೂರದರ್ಶನದಲ್ಲಿ ಉರ್ದು ಕಾರ್ಯಕ್ರಮದ ನಿರೂಪಕರಾಗಿದ್ದ ಮತ್ತು ಟಿ.ವಿ. ಸಂವಾದ ಕಾರ್ಯಕ್ರಮಗಳಲ್ಲಿ ಇರಾನನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಕಾಸ್ಮಿಯವರ ಬಂಧನ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತದೆ. ಮಾರ್ಚ್ ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರುವ ಒಂದೆರಡು ದಿನಗಳ ಮೊದಲು, ಮಾಧ್ಯಮಗಳು ಕಾಸ್ಮಿಯ ಸುತ್ತ ಮತ್ತೆ ಚರ್ಚಿಸುತ್ತವೆ. ಅವರು ತಪ್ಪೊಪ್ಪಿಕೊಂಡಿರುವುದಾಗಿ ಬರೆಯುತ್ತವೆ. ಜಾಮೀನು ತಿರಸ್ಕ್ರತಗೊಳ್ಳುತ್ತದೆ. ಆದರೆ, ಇಂಥ ನಿರ್ಣಾಯಕ ಸಮಯದಲ್ಲಿ ಅಂಥದ್ದೊಂದು ಸುಳ್ಳು ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಕಾರಣವೇನು, ಅದರ ಹಿಂದೆ ಇರುವ ಪೊಲೀಸರ ಷಡ್ಯಂತ್ರ.. ಎಲ್ಲವನ್ನೂ ಗೆರೆತ್ ಪೋರ್ಟರ್‍ರು ತಮ್ಮ ಲೇಖನದಲ್ಲಿ ಬಹಿರಂಗ ಪಡಿಸಿದರು. ಕೆಲವರನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲು, ಹದ್ದು ಬಸ್ತಿನಲ್ಲಿಡಲು ಹೇಗೆ ಷಡ್ಯಂತ್ರಗಳನ್ನು ಹೆಣೆಯಲಾಗುತ್ತದೆ ಮತ್ತು ಅದಕ್ಕಾಗಿ ಮಾಧ್ಯಮಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ ಎಂಬುದನ್ನೆಲ್ಲಾ ಅವರು ಇಂಚಿಂಚಾಗಿ ವಿವರಿಸಿದರು.
ಇದೊಂದೇ ಅಲ್ಲ,
   2013 ಜುಲೈ 13ರಂದು ಹೆಡ್‍ಲೈನ್ಸ್ ಟುಡೇ ಟಿ.ವಿ. ಚಾನೆಲ್‍ನಲ್ಲಿ ಒಂದು ಟೇಪ್ ಪ್ರಸಾರವಾಯಿತು. 2004ರಲ್ಲಿ ಗುಜರಾತ್‍ನಲ್ಲಿ ಎನ್‍ಕೌಂಟರ್‍ಗೆ ಒಳಗಾದ ಅಮ್ಜದ್ ಅಲಿ ರಾಣಾ ಮತ್ತು ಪಾಕ್‍ನಲ್ಲಿರುವ ಲಷ್ಕರೆ ತ್ವಯ್ಯಿಬದ ಕಮಾಂಡರ್ ನಡುವೆ ನಡೆದ ಮಾತುಕತೆ ಇದೆಂದು ಪ್ರಸಾರದ ಆರಂಭದಲ್ಲಿ ಚಾನೆಲ್ ಸ್ಪಷ್ಟಪಡಿಸಿತು. ಇಲ್ಲಿನ ತಗಾದೆ ಏನೆಂದರೆ, ಟೇಪ್ ಅನ್ನು ಪ್ರಸಾರ ಮಾಡಿದ ಸಮಯ. ಈ ಟೇಪ್ ಪ್ರಸಾರದ 24 ಗಂಟೆಗಳ ಬಳಿಕ ಸಿಬಿಐಯು ಈ ಪ್ರಕರಣದ ಕುರಿತಂತೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕಿತ್ತು. ಇಶ್ರತ್ ಜಹಾನ್ ಪ್ರಕರಣವೆಂದು ಗುರುತಿಸಿಕೊಂಡ ಈ ಎನ್‍ಕೌಂಟರ್‍ನಲ್ಲಿ ಐಬಿಯ ಮುಖ್ಯಸ್ಥರಾದ ರಾಜೇಂದ್ರ ಕುಮಾರ್ ಪ್ರಮುಖ ಆರೋಪಿ. ಆದ್ದರಿಂದಲೇ ಟೇಪ್ ಅನ್ನು ಪ್ರಸಾರ ಮಾಡಿದ ಸಂದರ್ಭದ ಬಗ್ಗೆ ಕೆಲವರು ಆಕ್ಷೇಪವೆತ್ತಿದರು. ಟೇಪ್‍ನ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಂಡಿದ್ದೀರಾ ಎಂದು ಚಾನೆಲ್‍ನ ಮುಖ್ಯಸ್ಥರನ್ನು ಪ್ರಶ್ನಿಸಿದಾಗ ಅವರು ನೋ ಕಮೆಂಟ್ ಅಂದರು. ನಿಜವಾಗಿ, ಐಬಿಯು ಅತ್ಯಂತ ವ್ಯವಸ್ಥಿತವಾಗಿ ಹೆಡ್‍ಲೈನ್ಸ್ ಟುಡೇಗೆ ಆ ಟೇಪ್ ಅನ್ನು ಸೋರಿಕೆ ಮಾಡಿತ್ತು. ರಾಜೇಂದ್ರ ಕುಮಾರ್‍ರ ಬಗ್ಗೆ ಸಾರ್ವಜನಿಕವಾಗಿ ಒಳ್ಳೆಯ ಅಭಿಪ್ರಾಯ ರೂಪಿಸಲು, ಆ ಎನ್‍ಕೌಂಟರನ್ನು ಸಾರ್ವಜನಿಕರು ಸಮರ್ಥಿಸಿಕೊಳ್ಳುವಂತಾಗಲು ಮತ್ತು ಚಾರ್ಜ್ ಶೀಟ್ ನಲ್ಲಿ ರಾಜೇಂದ್ರ ಕುಮಾರ್‍ರ ಹೆಸರು ಉಲ್ಲೇಖಗೊಳ್ಳದಿರಲು ಹೆಣೆದ ತಂತ್ರ ಅದಾಗಿತ್ತು. ಅಷ್ಟಕ್ಕೂ ಆರೋಪಿ ಸ್ಥಾನದಲ್ಲಿರುವ ಒಂದು ಸಂಸ್ಥೆಯು (I B) ಸೋರಿಕೆ ಮಾಡಿದ ಟೇಪ್ ಅನ್ನು ಪ್ರಸಾರ ಮಾಡುವಾಗ ಒಂದು ಮಾಧ್ಯಮ ಸಂಸ್ಥೆ ಯಾವ ಎಚ್ಚರಿಕೆ ವಹಿಸಬೇಕಿತ್ತು? ಆ ಟೇಪ್‍ನ ವಿಶ್ವಾಸಾರ್ಹತೆಯನ್ನು ಖಚಿತಪಡಿಸಬೇಕಿತ್ತಲ್ಲವೇ? ಸೋರಿಕೆಯಾದ ಸಂದರ್ಭ ಮತ್ತು ಅದನ್ನು ಪ್ರಸಾರ ಮಾಡು ವುದರಿಂದ ಆಗುವ ಪರಿಣಾಮಗಳ ಬಗ್ಗೆ ಆಲೋಚಿಸಬೇಕಿತ್ತಲ್ಲವೇ?
   ಆ ಟೇಪ್ ನಕಲಿ ಮತ್ತು ಕೃತಕವಾಗಿ ತಯಾರಿಸಲಾದದ್ದು ಎಂಬುದಾಗಿ ಕೆಲವು ದಿನಗಳ ಬಳಿಕ ಸುದ್ದಿ ಹೊರಬಿತ್ತು.
   ನಿಜವಾಗಿ, ಭಯೋತ್ಪಾದನೆ ಎಂಬುದು ಈ ದೇಶದ ಮಾಧ್ಯಮಗಳ ಪಾಲಿಗೆ ಅತ್ಯಂತ ಜನಪ್ರಿಯ ಇಶ್ಯೂ. ಬಡತನ, ಹಸಿವು, ನೆರೆ, ಅಪೌಷ್ಠಿಕತೆ.. ಮುಂತಾದ ವಿಷಯಗಳನ್ನು ಚರ್ಚಿಸುವಾಗ ಪಾಲಿಸಬೇಕಾದ ಜಾಗರೂಕತೆಯನ್ನು ಇಲ್ಲಿ ಪಾಲಿಸಬೇಕಿಲ್ಲ. ಮೂಲಗಳನ್ನು ಉದ್ಧರಿಸಿ ಯಾವ ಕಟ್ಟುಕತೆಯನ್ನೂ ಪ್ರಕಟಿಸಿದರೂ ಸಲ್ಲುವ ಒಂದು ಕ್ಷೇತ್ರ ಇದು. ಮೂಲಗಳನ್ನು ಪತ್ರಕರ್ತ ಓದುಗರೊಂದಿಗೆ ಹಂಚಿಕೊಳ್ಳಬೇಕಿಲ್ಲ. ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ಪತ್ರಿಕೆಯ ಇಲ್ಲವೇ ಪತ್ರಕರ್ತರ ಪರವಾನಿಗೆ ರದ್ದಾಗುವ ಭೀತಿಯೂ ಇಲ್ಲ. ಯಾಕೆಂದರೆ ಅಂಥದ್ದೊಂದು ವ್ಯವಸ್ಥೆ ಮಾಧ್ಯಮ ಕ್ಷೇತ್ರದಲ್ಲೇ ಇಲ್ಲ. ಮಾಧ್ಯಮ ಕ್ಷೇತ್ರಕ್ಕಿರುವ ಈ ಅಗಣಿತ ಸ್ವಾತಂತ್ರ್ಯವೇ ಇವತ್ತು ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದಕ್ಕೆ ಕಾರಣವಾಗುತ್ತಿದೆ. ಅನಾಮಿಕ ಮುಲಗಳನ್ನು ಉದ್ಧರಿಸಿ ಸುದ್ದಿ ಹೆಣೆಯುವುದಕ್ಕೆ ಅಮೇರಿಕದ ದಿ ನ್ಯಾಶನಲ್ ಪಬ್ಲಿಕ್ ರೇಡಿಯೋವು ಒಂದು ನಿಯಮವನ್ನು ರೂಪಿಸಿದೆ. 'ಮೂಲಗಳು ತಿಳಿಸಿವೆ' ಎಂಬ ಉಲ್ಲೇಖದೊಂದಿಗೆ ಸುದ್ದಿ ಪ್ರಕಟಗೊಳ್ಳಬೇಕಾದರೆ ಆ ಮೂಲಗಳ ವಿಶ್ವಾಸಾರ್ಹತೆಯನ್ನು ಸಂಪಾದಕರು ಖಚಿತಪಡಿಸಿರಬೇಕು. ಒಂದು ವೇಳೆ ಪ್ರಕಟವಾಗುವ ಸುದ್ದಿಯು ಗಂಭೀರ ಆರೋಪ ಹೊರಿಸುವಂಥದ್ದಾದರೆ, ಆ ಮೂಲಗಳನ್ನು ಅಡಗಿಸದೇ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು ಎಂದು ಆ ನಿಯಮ ಹೇಳುತ್ತದೆ. ಅಷ್ಟಕ್ಕೂ, ಈ ನಿಯಮವನ್ನು ನಮ್ಮ ಪತ್ರಿಕೆಗಳು ಅಳವಡಿಸಿಕೊಂಡದ್ದೇ ಆಗಿದ್ದರೆ ಪರಿಸ್ಥಿತಿಯಾದರೂ ಹೇಗಿರುತ್ತಿತ್ತು? ಭಯೋತ್ಪಾದನೆಯ ಹೆಸರಿನಲ್ಲಿ ಪ್ರಕಟವಾಗುವ ಶೇ. 99ರಷ್ಟು ಸುದ್ದಿಗಳೂ ಅನಾಮಿಕ ಮೂಲಗಳ ಆಧಾರದಲ್ಲೇ ರಚಿತವಾದವುಗಳಲ್ಲವೇ? ಒಂದು ವೇಳೆ, ಸುದ್ದಿಯನ್ನು ಖಚಿತಪಡಿಸಿ ಎಂದು ಓದುಗರು ಪತ್ರಿಕಾ ಕಚೇರಿಗಳ ಎದುರು ನಿಂತು ಒತ್ತಾಯಿಸಿದರೆ ಏನಾದೀತು? ಮೂಲಗಳ ವಿವರಗಳನ್ನು ಬಹಿರಂಗ ಪಡಿಸಿ ಎಂದು ಚಾನೆಲ್‍ಗಳ ಮುಂದೆ ಪ್ರತಿಭಟನೆ ನಡೆಸಿದರೆ ಅವು ಏನುತ್ತರ ಕೊಟ್ಟಾವು? ಸುದ್ಧಿಯನ್ನು ಖಚಿತಪಡಿಸಿಕೊಳ್ಳದೆ ಬಹಿರಂಗಪಡಿಸಬಾರದು  [ತೀರ್ಮಾನ ಕೈಗೊಳ್ಳಬಾರದು]  (ಪವಿತ್ರ ಕುರ್ಆನ್ : 49 - 6) ಎಂಬ ನೀತಿಸಂಹಿತೆಗೇಕೆ ಮಾಧ್ಯಮಗಳು ಬದ್ಧವಾಗುತ್ತಿಲ್ಲ? ಅಂದಹಾಗೆ,
    ಗುಜರಾತ್‍ನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 10. ಆದರೆ ಶೇ. 22 ಮಂದಿ ಅಲ್ಲಿನ ಜೈಲಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ
ಮುಸ್ಲಿಮರ ಜನಸಂಖ್ಯೆ ಶೇ. 25. ಆದರೆ ಜೈಲಲ್ಲಿರುವವರು ಶೇ. 46. ಉತ್ತರ ಪ್ರದೇಶದಲ್ಲಿ ಇವರ ಸಂಖ್ಯೆ ಶೇ. 21.. ರಾಷ್ಟ್ರೀಯ ಕ್ರೈಮ್ ಬ್ಯೂರೋವು 2011ರಲ್ಲಿ ಬಿಡುಗಡೆಗೊಳಿಸಿದ ಬಂಧಿತರ ಈ ಅಂಕಿ-ಅಂಶಗಳೆಲ್ಲ ಹೇಳುವುದಾದರೂ ಏನನ್ನು?
ನಿಜವಾಗಿ, ಮುಸ್ಲಿಮರು ವ್ಯವಸ್ಥೆಯ ಪಾಲಿಗೆ ಅತ್ಯಂತ ಸುಲಭದ ತುತ್ತು. ಭಯೋತ್ಪಾದನೆ ಅಥವಾ ಇನ್ನಿತರ ಪ್ರಕರಣಗಳಲ್ಲಿ ಮುಸ್ಲಿಮರನ್ನು ಬಂಧಿಸುವುದಕ್ಕೂ ಇತರರನ್ನು ಬಂಧಿಸುವುದಕ್ಕೂ ವ್ಯತ್ಯಾಸಗಳಿವೆ. ಮುಸ್ಲಿಮರು ಬಂಧನಕ್ಕೆ ಅರ್ಹರು ಎಂಬೊಂದು ವಾತಾವರಣವನ್ನು ದೇಶದಲ್ಲಿ ಈಗಾಗಲೇ ಸೃಷ್ಟಿಸಲಾಗಿದೆ. ಅನುಮಾನಾಸ್ಪದ ಪ್ರಕರಣಗಳಲ್ಲಿ ಜೈಲಿಗೆ ಹೋಗುವವರಲ್ಲಿ ಅತ್ಯಂತ ಹೆಚ್ಚು ಮಂದಿ ಮುಸ್ಲಿಮರೇ. ಕಾನೂನಿನ ಬಗ್ಗೆ ಮುಸ್ಲಿಮರಲ್ಲಿರುವ ತಿಳುವಳಿಕೆಯ ಕೊರತೆ, ಬಡತನ, ಪೊಲೀಸು ಠಾಣೆ- ನ್ಯಾಯಾಂಗಗಳ ಬಗೆಗಿರುವ ಭಯ, ಮಾಧ್ಯಮಗಳ ಅಪಪ್ರಚಾರಗಳು.. ಒಂದು ಹಂತದವರೆಗೆ ಮುಸ್ಲಿಮರ ಮೇಲೆ ತೀವ್ರ ಪರಿಣಾಮ ಬೀರಿವೆ. ಸಣ್ಣ-ಪುಟ್ಟ ಪ್ರಕರಣಗಳಿಗಾಗಿ ಮುಸ್ಲಿಮರನ್ನು ಬಂಧಿಸುವಂತೆ ಈ ದೇಶದಲ್ಲಿ ಇನ್ನಾರನ್ನೂ ಬಂಧಿಸುತ್ತಿಲ್ಲ. ಈ ದೇಶದಲ್ಲಿ ನಡೆದ ನಕಲಿ ಎನ್‍ಕೌಂಟರ್‍ಗಳಿಗೆ ಬಲಿಯಾಗಿರುವವರಲ್ಲಿ ಶೇ. 95ಕ್ಕಿಂತಲೂ ಹೆಚ್ಚು ಮಂದಿ ಮುಸ್ಲಿಮರೇ. ಆದರೆ ಮಾಧ್ಯಮಗಳು ಇಂಥ ಕಟು ಸತ್ಯಗಳಿಗೆ  ತನ್ನ ಕ್ಯಾಮರಾ ತಿರುಗಿಸುವುದು ತೀರಾ ಕಡಿಮೆ. ಹಾಗಂತ ಮುಸ್ಲಿಮರು ನೂರು ಶೇಕಡ ಸುಭಗರು ಎಂದು ಹೇಳುತ್ತಿಲ್ಲ. ಅಪರಾಧಿಗಳು ಅವರಲ್ಲೂ ಇದ್ದಾರೆ. ಆದರೆ ಅದನ್ನು ಉಬ್ಬಿಸಿಯೋ ತಿರುಚಿಯೋ ಅಥವಾ ವಿಕೃತಗೊಳಿಸಿಯೋ ಜನರ ಮುಂದೆ ಮಂಡಿಸುವುದೇಕೆ? ಮಾಲೆಗಾಂವ್ ಮಸೀದಿಯ ದಫನ ಭೂಮಿಯಲ್ಲಿ 2006 ಸೆ. 8ರಂದು ಬಾಂಬ್ ಸ್ಫೋಟಗೊಂಡಾಗ, ‘ಪಾಕ್ ಯುವತಿಯ ಸಹಿತ 30 ಮಂದಿ ಸಾವು..’ ಎಂದು ಆಂಗ್ಲ ಪತ್ರಿಕೆಯೊಂದು ವರದಿ  ಮಾಡಿತ್ತು. ನಿಜವಾಗಿ ಸಾವಿಗೀಡಾದವರಲ್ಲಿ ಪಾಕಿಸ್ತಾನದವರು ಯಾರೂ ಇರಲಿಲ್ಲ. ಹಾಗಿದ್ದೂ ಇಂಥ ಸುದ್ದಿಗಳು ಪ್ರಕಟವಾಗುವುದಕ್ಕೆ ಕಾರಣಗಳೇನು? ಪಾಕನ್ನು ಹೆಸರಿಸುವ ಮುಖಾಂತರ ಇಲ್ಲಿನ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಅಥವಾ ತನಿಖೆಯ ಹಾದಿಯನ್ನು ತಪ್ಪಿಸುವುದರ ಹೊರತು ಇದಕ್ಕೆ ಬೇರೆ ಯಾವ ಉದ್ದೇಶಗಳಿವೆ? 2011 ಸೆಪ್ಟೆಂಬರ್ ನಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಪ್ರಮುಖ ಆಂಗ್ಲ ಪತ್ರಿಕೆಯಲ್ಲಿ ಖ್ಯಾತ ನ್ಯಾಯವಾದಿ ಸುಬ್ರಹ್ಮಣ್ಯ ಸ್ವಾಮಿಯವರು How to wipe out Islamic terror - ‘ಇಸ್ಲಾಮೀ ಭಯೋತ್ಪಾದಕತೆಯನ್ನು ನಿರ್ಮೂಲನಗೊಳಿಸುವುದು ಹೇಗೆ’- ಎಂಬ ಲೇಖನ ಬರೆದರು. ಮುಸ್ಲಿಮರ ಮತದಾನದ ಹಕ್ಕನ್ನು ಮೊಟಕುಗೊಳಿಸುವ ಬಗ್ಗೆ ಬಲವಾಗಿ ವಾದಿಸಿದರು. ಇವೆಲ್ಲ ಏನು? ಪದೇ ಪದೇ ಯಾಕೆ ಹೀಗಾಗುತ್ತದೆ?
   ಇತ್ತೀಚೆಗೆ ಎಸ್.ಐ.ಓ. ರಾಜ್ಯ ಘಟಕವು ಬಿಡುಗಡೆಗೊಳಿಸಿದ ಮೀಡಿಯಾ ಆಂಡ್ ಟೆರರ್: ಫ್ಯಾಕ್ಟ್ಸ್ ಆಂಡ್ ಫಿಕ್ಷನ್ ಎಂಬ ಕೃತಿಯನ್ನು ಓದುತ್ತಾ ಇವೆಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.