Wednesday, June 29, 2016

‘ಈದ್’ಗಳ ನಡುವೆ ಈದ್..

        ‘ನಾವೇಕೆ ಹಬ್ಬ ಆಚರಿಸಬೇಕು..’ ಎಂಬ ಪ್ರಶ್ನೆಯನ್ನು ಈ ಹಿಂದೆ ‘ಯಾಹೂ’ವಿನಲ್ಲಿ ಕೇಳಲಾಗಿತ್ತು. ಸುಮಾರು 420 ಮಂದಿ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ವಿಶೇಷ ಏನೆಂದರೆ,  ಹೆಚ್ಚಿನೆಲ್ಲ ಅಭಿಪ್ರಾಯಗಳ ಆಶಯದಲ್ಲಿ ವಿಪರೀತ ಅನ್ನಬಹುದಾದ ವ್ಯತ್ಯಾಸ ಇರಲಿಲ್ಲ.
  1. ನಮ್ಮಿಂದ ದೂರ ಇರುವ ಸಂಬಂಧಿಕರನ್ನು ಭೇಟಿಯಾಗುವುದಕ್ಕೆ ಹಬ್ಬಗಳು ಅವಕಾಶ ಮಾಡಿಕೊಡುತ್ತವೆ.
  2. ವೈರಿಗಳಿಗೂ ಕೂಡ ವಿಶ್ ಮಾಡುವ ಸಂದರ್ಭವನ್ನು ಹಬ್ಬಗಳು ಒದಗಿಸಿಕೊಡುತ್ತವೆ.
  3. ಸಾಕಷ್ಟು ಪ್ರೇಮ (Love) ಪ್ರಕರಣಗಳು  ಚಿಗುರೊಡೆಯುವುದೇ ಹಬ್ಬಗಳಿಂದ.
  4. ನಾವು ಹಬ್ಬಗಳಿಗಾಗಿ ಎಷ್ಟು ಹಣ ವ್ಯಯ ಮಾಡುತ್ತೇವೋ ಅದಕ್ಕಿಂತಲೂ ಅಧಿಕ ಸಂತಸವನ್ನು ಹಬ್ಬಗಳಿಂದ ಪಡೆಯುತ್ತೇವೆ..
  ಎಂಬುದೇ ಒಟ್ಟು ಉತ್ತರಗಳ ಸಾರಾಂಶವಾಗಿತ್ತು. ಆದರೆ, ಇದೇ ವೇಳೆ ‘ನಾವೇಕೆ ಹಬ್ಬ ಆಚರಿಸಬಾರದು..’ ಎಂಬುದಕ್ಕೂ ಅನೇಕರು ಕಾರಣಗಳನ್ನು ಕೊಟ್ಟಿದ್ದರು. ಸಂಗೀತಗಳ ಅಬ್ಬರದಿಂದ ಕಿವಿ ತೂತಾಗುತ್ತೆ, ಯಥೇಚ್ಛ ಮದ್ಯಪಾನದಿಂದಾಗಿ ಘರ್ಷಣೆಗಳಾಗುತ್ತೆ, ನೀರು ಮಲಿನವಾಗುತ್ತೆ; ತಿಂಡಿ-ತಿನಿಸುಗಳ ಪೊಟ್ಟಣಗಳಿಂದ ರಸ್ತೆ, ಪರಿಸರ ಗಲೀಜಾಗುತ್ತೆ, ಮೆರವಣಿಗೆ ಮುಂತಾದುವುಗಳಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತೆ..’ ಎಂದೆಲ್ಲ ಅವರು ದೂರಿಕೊಂಡಿದ್ದರು.
  ನಿಜವಾಗಿ, ಈ ಮೇಲಿನ ಎರಡೂ ಅಭಿಪ್ರಾಯಗಳು ವಾಸ್ತವಕ್ಕೆ ಅತೀ ಹತ್ತಿರವಾದವು. ಕ್ರೈಸ್ತ, ಇಸ್ಲಾಮ್, ಹಿಂದೂ, ಬೌದ್ಧ, ಸಿಕ್ಖ್, ಜೈನ್, ಯಹೂದಿ.. ಮುಂತಾದ ಎಲ್ಲ ಧರ್ಮ ಗಳಲ್ಲೂ ಹಬ್ಬಗಳಿಗೆಂದೇ ನಿಗದಿತ ದಿನಗಳಿವೆ. ಒಂದಕ್ಕಿಂತ ಹೆಚ್ಚು ದಿನಗಳ ವರೆಗೆ ಚಾಚಿಕೊಂಡ ಹಬ್ಬಗಳೂ ಇವೆ. ಹೋಲಿಕಾ ಎಂಬ ಪಿಶಾಚಿಯಿಂದ ಪ್ರಹ್ಲಾದನು ಪವಾಡ ಸದೃಶವಾಗಿ ಪಾರಾದ ಘಟನೆಯನ್ನು ಸ್ಮರಿಸುವ ‘ಹೋಲಿ’ ಹಬ್ಬವನ್ನು 16 ದಿನಗಳ ವರೆಗೆ ಆಚರಿಸಲಾಗುತ್ತದೆ. ಈ ಘಟನೆಯಲ್ಲಿ ಪ್ರಹ್ಲಾದನ ಬದಲು ಪಿಶಾಚಿಯೇ ಸುಟ್ಟು ಹೋಗುತ್ತದೆ. ಭಗವಾನ್ ವಿಷ್ಣುವಿನ ಭಕ್ತನಾದ ಪ್ರಹ್ಲಾದನನ್ನು ಬೆಂಕಿಯಲ್ಲಿ ಹಾಕಿ ಸುಟ್ಟು ಹಾಕಬೇಕೆಂಬ ಉದ್ದೇಶದಿಂದ ಕರೆತಂದ ಹೋಲಿಕಾ ಕೊನೆಗೆ ತಾನೇ ಸುಟ್ಟು ಹೋಗುತ್ತದೆ. ಇನ್ನು, ಶ್ರೀಲಂಕಾದಲ್ಲಿ ಎಸ್ನಾಲ ಪೆರಹೆಲಾ ಎಂಬ ಕಲರ್‍ಫುಲ್ ಹಬ್ಬ ಇದೆ. ಲಂಕಾದ ಅತಿದೊಡ್ಡ ಹಬ್ಬವಾಗಿ ಇದು ಗುರುತಿಸಿಕೊಂಡಿದೆ. 10 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಗೌತಮ ಬುದ್ಧನ ಪವಿತ್ರ ಹಲ್ಲನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ‘ದಲದ ಮಲಗವ’ ಎಂಬ ದೇವಾಲಯದಲ್ಲಿ ಈ ಹಲ್ಲನ್ನು ಸಂರಕ್ಷಿಸಿಡಲಾಗಿದ್ದು, ಹಬ್ಬದ ಸಂದರ್ಭದಲ್ಲಿ ಈ ಹಲ್ಲನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂಪ್ರದಾಯ ಇದೆ. ಬೌದ್ಧರೇ ಹೆಚ್ಚಿರುವ ಬರ್ಮಾದಲ್ಲಿ ಪಾವುಂಗ್ ಡಾಡೊ ಪಗೋಡ ಎಂಬ ಪ್ರಸಿದ್ಧ ಹಬ್ಬ ಇದೆ. ಬರ್ಮಾದ ಮಟ್ಟಿಗೆ ಇದು ಅತಿ ದೊಡ್ಡ ಹಬ್ಬ. ಈ ಹಬ್ಬದ ಆಯುಷ್ಯ 20 ದಿನಗಳು. ಇದರ ವಿಶೇಷತೆ ಏನೆಂದರೆ, ಚಂದ್ರನನ್ನು ಆಧರಿಸಿದ ಹಬ್ಬ ಇದು. ಚಂದ್ರನ ಉದಯದೊಂದಿಗೆ ಈ ಹಬ್ಬ ಆರಂಭಗೊಳ್ಳುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್‍ನಲ್ಲಿ ನಡೆಯುವ ಈ ಹಬ್ಬದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಖುಷಿಪಡಲಾಗುತ್ತದೆ. ಥಾಯ್ಲೆಂಡ್‍ನಲ್ಲಿ ಸೊಂಕ್ರಣ್ ಎಂಬ ಹೆಸರಿನ ಹಬ್ಬ ಇದೆ. ಇದನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಮೂರೂ ದಿನ ಸರಕಾರ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಈ ಹಬ್ಬ ಥಾಯ್ಲೆಂಡ್‍ನ ಹೊಸ ವರ್ಷದ ಆರಂಭವಾಗಿಯೂ ಗುರುತಿಸಿಕೊಂಡಿದೆ. ಅತಿ ಬಿಸಿಲಿನ ಸಮಯದಲ್ಲಿ ಆಚರಿಸಲ್ಪಡುವ ಈ ಹಬ್ಬದಲ್ಲಿ ಪರಸ್ಪರ ನೀರನ್ನು ಚೆಲ್ಲುವ ಸಂಪ್ರದಾಯವಿದೆ. ರಸ್ತೆ ಮತ್ತಿತರ ಕಡೆ ನಡೆದಾಡುವವರ ಮೇಲೆ ನೀರು ಚೆಲ್ಲಿ ಖುಷಿ ಪಡಲಾಗುತ್ತದೆ. ಕಾಂಬೋಡಿಯಾ, ಲಾವೋಸ್ ಮತ್ತು ಬರ್ಮಾಗಳಲ್ಲೂ ಬೇರೆ ಬೇರೆ ಹೆಸರುಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
  ಅಷ್ಟಕ್ಕೂ, ಹಬ್ಬಗಳ ಮುಖ್ಯ ಉದ್ದೇಶ ಏನು, ಸಂತಸ ಪಡುವುದೇ? ಇವತ್ತಿನ ದಿನಗಳಲ್ಲಿ ಸಂತಸಪಡುವುದಕ್ಕೆ ಪ್ರತ್ಯೇಕ ದಿನಗಳ ಅಗತ್ಯವಿದೆಯೇ? ಟಿ.ವಿ. ರೇಡಿಯೋ, ಮೊಬೈಲ್, ಕಂಪ್ಯೂಟರ್, ಸಿನಿಮಾ.. ಮುಂತಾದುವುಗಳಿಲ್ಲದ ಒಂದಾನೊಂದು ಕಾಲ ಇವತ್ತಿನದ್ದಲ್ಲ. ಇವತ್ತು ಎಲ್ಲವನ್ನೂ ತಂತ್ರಜ್ಙಾನ ಅಗ್ಗವಾಗಿಸಿದೆ. ಸಂತಸ ಬೆರಳ ತುದಿಯಲ್ಲಿದೆ. ನಿಮಗೆ ಇಷ್ಟವಾದ ಹಾಡನ್ನು ಯಾವಾಗ ಬೇಕಾದರೂ ಆಲಿಸಬಹುದು. ಎಷ್ಟು ಬೇಕಾದರೂ ಆಲಿಸಬಹುದು. ಅದಕ್ಕಾಗಿಯೇ ಪ್ರತ್ಯೇಕ ಸಭೆಗಳನ್ನೋ ದಿನಗಳನ್ನೋ ಸಂದರ್ಭಗಳನ್ನೋ ಹುಟ್ಟು ಹಾಕಬೇಕಿಲ್ಲ. ಮಾತಾಡಬೇಕೆಂದು ಅನಿಸಿದಾಗಲೆಲ್ಲ ಮಾತಾಡಬಹುದಾದ ವ್ಯವಸ್ಥೆ ಈಗಿನದು. ವಾಟ್ಸ್ಯಾಪ್, ಫೇಸ್‍ಬುಕ್, ಟ್ವೀಟರ್‍ಗಳು ಮಾತನ್ನು ಅಗ್ಗಗೊಳಿಸಿವೆ. ಹಿಂದಿನ ಕಾಲದಂತೆ ಸಂಬಂಧಿಕರನ್ನು ಭೇಟಿಯಾಗುವುದಕ್ಕೆ ಮತ್ತು ಕುಶಲ ವಿಚಾರಿಸುವುದಕ್ಕೆ ಹಬ್ಬಗಳನ್ನು ಕಾಯಬೇಕಿಲ್ಲ. ಮೊಬೈಲ್ ಇದೆ. ವೀಡಿಯೋ ಮಾತುಕತೆಗೂ ಅದರಲ್ಲಿ ಅವಕಾಶ ಇದೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯರನ್ನು ಪರಸ್ಪರ ಅಡುಗೆ ಕೋಣೆ ಮತ್ತು ಬೆಡ್‍ರೂಮಿನಷ್ಟೇ ಹತ್ತಿರಗೊಳಿಸಿರುವ ಈ ದಿನಗಳಲ್ಲಿ ಶಬ್ದಮಾಲಿನ್ಯ, ನೀರು ಮಾಲಿನ್ಯ ಸಹಿತ ಕೆಲವಾರು ಮಾಲಿನ್ಯ ಮತ್ತು ಅಪಾಯಗಳಿಗೆ ಅವಕಾಶ ಕೊಡಬಹುದಾದ ಹಬ್ಬಗಳ ಆಚರಣೆ ಪ್ರಸ್ತುತವೇ ಎಂಬ ಪ್ರಶ್ನೆ ತೀರಾ ಬಾಲಿಶವಲ್ಲ.
  ಮೆಕ್ಸಿಕೋದಲ್ಲಿ ಸಾವಿನ ದಿನ ಎಂಬೊಂದು ಸಂಪ್ರದಾಯವಿದೆ. ಇದನ್ನು ಅಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ. ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಕೋರಲು ಮೀಸಲಾಗಿರುವ ಈ ಹಬ್ಬಕ್ಕೆ ತಿಂಗಳ ಮೊದಲೇ ಸಿದ್ಧತೆಗಳು ನಡೆಯುತ್ತವೆ. ರೊಟ್ಟಿಗಳು ಮತ್ತು ಕ್ಯಾಂಡಲ್ ಗಳನ್ನು ಈ ಹಬ್ಬದಲ್ಲಿ ಧಾರಾಳ ಬಳಸುತ್ತಾರೆ. ಮನುಷ್ಯನ ಅಸ್ಥಿಪಂಜರದ ಆಕಾರದಲ್ಲಿ ಕೇಕ್‍ಗಳನ್ನು ತಯಾರಿಸುತ್ತಾರೆ. ದೇಹದ ಆಂತರಿಕ ಭಾಗಗಳ ಆಕಾರದಲ್ಲೂ ಕೇಕ್‍ಗಳನ್ನು ತಯಾರಿಸಿ, ಮೃತರಾದ ತಮ್ಮವರ ಗೋರಿಗಳ ಬಳಿ ನಿಗದಿತ ದಿನ ಎಲ್ಲರೂ ಒಟ್ಟು ಸೇರುತ್ತಾರೆ. ಅಲ್ಲಿ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತದೆ. ಅಲ್ಲಿ ಕ್ಯಾಂಡಲ್ ಹೊತ್ತಿಸುತ್ತಾರೆ. ಹೂ ಇಡುತ್ತಾರೆ. ಮೃತಪಟ್ಟವರ ಗುಣಗಾನ ಮಾಡುತ್ತಾರೆ. ಮೃತಪಟ್ಟವರ ಇಷ್ಟದ ಆಹಾರ ಮತ್ತು ಮದ್ಯದೊಂದಿಗೆ ರಾತ್ರಿಪೂರ್ತಿ ಸ್ಮಶಾನದಲ್ಲಿ ಪಾರ್ಟಿ ಮಾಡುತ್ತಾರೆ. ಬ್ರೆಝಿಲ್‍ನಲ್ಲೂ ತುಸು ಬದಲಾವಣೆಯೊಂದಿಗೆ ಇದನ್ನೇ ಹೋಲುವ ಆಚರಣೆಯಿದೆ. ಜಪಾನ್‍ನಲ್ಲಂತೂ ಬಹಳ ಪುರಾತನ ಕಾಲದಿಂದಲೇ ಪ್ರತಿ ವರ್ಷ ಆಚರಿಸುತ್ತಾ ಬಂದಿರುವ ಹಡಕ ಮತ್ಸುರಿ ಎಂಬ ಆಚರಣೆಯೊಂದಿದೆ. ಅದಕ್ಕೆ ‘ಶಿಂಟೋ ನಗ್ನ ಹಬ್ಬ’ ಎಂಬ ಹೆಸರೂ ಇದೆ. ಇದರ ವಿಶೇಷತೆ ಏನೆಂದರೆ, ಈ ಹಬ್ಬದಲ್ಲಿ ಭಾಗವಹಿಸುವುದು ಪುರುಷರು ಮಾತ್ರ. ಈ ಹಬ್ಬ ಅರೆನಗ್ನವಾಗಿ ನಡೆಯುತ್ತದೆ. ಈ ಹಬ್ಬದ ಆಚರಣೆ ಹೇಗೆಂದರೆ, ಓರ್ವ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಆತ ಆ ಹಬ್ಬದ ನಗ್ನ ಪಾತ್ರಧಾರಿ ಅಥವಾ ಶಿನ್ ಓಟೊಕ್. ಆತ ರಸ್ತೆಯುದ್ದಕ್ಕೂ ನಗ್ನವಾಗಿಯೇ ಓಡಬೇಕು. ಆ ಸಮಯದಲ್ಲಿ ರಸ್ತೆಯುದ್ದಕ್ಕೂ ನಿಂತಿರುವ ಪುರುಷರು ಆತನನ್ನು ಸ್ಪರ್ಶಿಸಲು ಯತ್ನಿಸುತ್ತಾರೆ. ಆತನನ್ನು ಸ್ಪರ್ಶಿಸಿದರೆ ಅದೃಷ್ಟ ಖುಲಾಯಿಸುತ್ತದೆ ಎಂಬುದು ಅವರ ನಂಬಿಕೆ. ಬೊವಿಲಿಯದಲ್ಲೊಂದು ವಿಶಿಷ್ಟ ಹಬ್ಬವಿದೆ. ಪ್ರತಿ ವಾರ ಕಾರು, ಟ್ಯಾಕ್ಸಿ, ಬಸ್ ಮುಂತಾದ ವಾಹನಗಳ ಮಾಲಕರು ತಮ್ಮ ವಾಹನಗಳನ್ನು ಶೃಂಗರಿಸುತ್ತಾರೆ. ಭಾರತದಲ್ಲಿ ವರ್ಷಕ್ಕೊಮ್ಮೆ ನಡೆಯುವ ಆಯುಧ ಪೂಜೆಯನ್ನೇ ಹೋಲುವ ಈ ಆಚರಣೆಗೆ ಲಾ ಬೆಂಡಿಶನ್ ಡೆ ಮೊವಿಲಿಡೇಡ್ಸ್ (ವಾಹನ ಹರಸುವ ದಿನ) ಎಂದು ಹೆಸರು. ಧರ್ಮಗುರುಗಳು ವಾಹನಗಳನ್ನು ಹರಸಿದ ಬಳಿಕ ಪಟಾಕಿ ಸಿಡಿಸಲಾಗುತ್ತದೆ. ಶಾಂಪೇನ್ ಅನ್ನು ಬಳಸಲಾಗುತ್ತದೆ. ಅಂದಹಾಗೆ, ಭಾರತದಲ್ಲಂತೂ ಹಬ್ಬಗಳ ರಾಶಿಯೇ ಇದೆ. ಮಹಾ ಶಿವರಾತ್ರಿ, ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ಓಣಂ, ದೀಪಾವಳಿ, ನವರಾತ್ರಿ ಉತ್ಸವ, ರಾಮನವಮಿ.. ಮುಂತಾದ ಅನೇಕಾರು ಹಬ್ಬಗಳಿವೆ. ಮಾತ್ರವಲ್ಲ, ಈ ಹಬ್ಬಗಳ ಆಚರಣಾ ವಿಧಾನದ ಕುರಿತಂತೆ ಸಾರ್ವಜನಿಕರಲ್ಲಿ ದೂರುಗಳೂ ಇವೆ. ಮಾಧ್ಯಮಗಳು ವಿಶೇಷವಾಗಿ ಪ್ರತಿ ವರ್ಷ ದೀಪಾವಳಿ, ಗಣೇಶ ಚತುರ್ಥಿ, ಜನ್ಮಾಷ್ಟಮಿಯ ಸಂದರ್ಭದಲ್ಲಿ ಜನಜಾಗೃತಿ ಅಭಿಯಾನವನ್ನೇ ಹಮ್ಮಿಕೊಳ್ಳುವುದಿದೆ. ಕಣ್ಣಿನ ಬಗ್ಗೆ, ನೀರು ಮತ್ತು ಶಬ್ದ ಮಾಲಿನ್ಯಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸರಕಾರಗಳೇ ಜಾಹೀರಾತನ್ನು ಹೊರಡಿಸುತ್ತವೆ. ಒಂದು ರೀತಿಯಲ್ಲಿ, ಹಬ್ಬಗಳು ಅನುಭವಿಸುವುದಕ್ಕಿಂತ ಸಹಿಸಿಕೊಳ್ಳಬೇಕಾದ ಹೊರೆಗಳಾಗಿ ಬದಲಾಗುತ್ತಿವೆಯೇನೋ ಎಂದು ಅಂದುಕೊಳ್ಳುವ ಹಂತಕ್ಕೆ ತಲುಪಿಬಿಟ್ಟಿದೆ. ದೀಪಾವಳಿ ಬಂತೆಂದರೆ ತಮ್ಮ ಮಕ್ಕಳ ಕಣ್ಣಿನ ಬಗ್ಗೆ ಹೆತ್ತವರು ವಿಶೇಷ ನಿಗಾ ಇಡಬೇಕಾಗುತ್ತದೆ. ಸಾರ್ವಜನಿಕರು ರಸ್ತೆಯಲ್ಲಿ ಗಂಟೆಗಟ್ಟಲೆ ಸಿಲುಕಿಕೊಳ್ಳುತ್ತಾರೆ. ಸಂಗೀತಗಳ ಅಬ್ಬರವೂ ಕಡಿಮೆಯೇನಿಲ್ಲ. ಹಬ್ಬಗಳೆಂದರೆ ‘ಭಯ’ ಉಂಟು ಮಾಡುವುದರ ಹೆಸರೇ? ಪ್ರೀತಿ-ಪ್ರೇಮವನ್ನು ಚಿಗುರೊಡೆಯಿಸುವ ಸಂದರ್ಭವೇ? ಹಬ್ಬಗಳ ನಿಜ ಉದ್ದೇಶ ಏನು? ಹೊಸ ಬಟ್ಟೆ, ಮೋಜು-ಮಸ್ತಿ ಇವುಗಳಾಚೆಗೆ ಹಬ್ಬ ಏನು? ಹಬ್ಬವನ್ನು ಆಚರಿಸಿದ ವ್ಯಕ್ತಿ ಪ್ರಾಯೋಗಿಕವಾಗಿ ಏನನ್ನು ಗಿಟ್ಟಿಸಿಕೊಳ್ಳುತ್ತಾನೆ? ಬರೇ ಮೋಜು-ಮಸ್ತಿಯೇ ಹಬ್ಬದ ಪರಮ ಗುರಿ ಮತ್ತು ಹಬ್ಬದಿಂದ ಕಲಿಯುವ ಪಾಠಗಳು ಏನೇನೂ ಇಲ್ಲ ಅನ್ನುವ ರೀತಿಯಲ್ಲಿ ಹಬ್ಬಗಳು ಬದಲಾಗಿವೆಯೇ ಅಥವಾ ಹಬ್ಬಗಳೇ ಹಾಗೆಯೇ?
  
        ನಿಜವಾಗಿ, ಮುಸ್ಲಿಮರ ಈದ್ (ಹಬ್ಬ) ವಿಶ್ಲೇಷಣೆಗೆ ಒಳಗಾಗಬೇಕಾದದ್ದು ಈ ಎಲ್ಲ ಕಾರಣಗಳಿಗಾಗಿ. ಅದು ಸಂತಸಕ್ಕಾಗಿ ಮಾತ್ರ ಇರುವ ಹಬ್ಬ ಅಲ್ಲ. 30 ದಿನಗಳ ಉಪವಾಸ ಮತ್ತು ಆ ಬಳಿಕ ಒಂದು ಹಬ್ಬ. ಈ ಹಬ್ಬದಲ್ಲಿ ಅತ್ಯಂತ ಕಡ್ಡಾಯ ವಾಗಿರುವುದು ಏನು ಅಂದರೆ, ಅತ್ಯಂತ ಬಡವರ ಮನೆಯ ಬಾಗಿಲನ್ನು ತಟ್ಟುವುದು. ಅವರಿಗೆ ನೈತಿಕ ಬೆಂಬಲ ಸಾರುವುದು. ಅವರ ಆ ದಿನದ ಅಗತ್ಯಗಳಿಗೆ ಕಡ್ಡಾಯವಾಗಿ ತನ್ನ ಪಾಲನ್ನು ನೀಡುವುದು. 30 ದಿನಗಳ ಉಪವಾಸವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿದ ವ್ಯಕ್ತಿ, ಬಡವರಿಗೆ ಸಂಬಂಧಿಸಿ ಈ ಹೊಣೆಯಿಂದ ಜಾರಿಕೊಂಡರೆ ಆತ/ಕೆ ಅಪರಾಧಿಯಾಗುತ್ತಾನೆ. ಇಲ್ಲಿ ಹಬ್ಬದ ಉದ್ದೇಶ ಅತ್ಯಂತ ಸ್ಪಷ್ಟವಿದೆ. ಬರೇ ಸಂತಸ ಅದರ ಪ್ರಥಮ ಆದ್ಯತೆ ಆಗಿರುತ್ತಿದ್ದರೆ ಹಬ್ಬದ ದಿನದಂದು ಹೊಸಬಟ್ಟೆ ಧರಿಸಿ, ಪರ್ಫ್ಯೂಮ್ ಪೂಸಿ, ಮಸೀದಿಗೆ ಹೋಗುವುದು, ನಮಾಝು ಮತ್ತು ಪರಸ್ಪರ ಆಲಿಂಗನದೊಂದಿಗೆ ಮನಸೋ ಇಚ್ಛೆ ಖುಷಿ ಪಡುವುದು ಕಡ್ಡಾಯವಾಗಬೇಕಿತ್ತು. ಅಥವಾ ಇವಿಲ್ಲದಿದ್ದರೆ ಹಬ್ಬ ಸಂಪೂರ್ಣ ಆಗುವುದಿಲ್ಲ ಎಂಬ ಖಡಾಖಂಡಿತ ಶರತ್ತು ಇರ ಬೇಕಿತ್ತು. ಆದರೆ ಹೊಸಬಟ್ಟೆ, ನಮಾಜು, ಮಸೀದಿ.. ಮುಂತಾದುವುಗಳು ಈದ್‍ಗೆ ಕಡ್ಡಾಯ ಶರ್ತಗಳೇ ಅಲ್ಲ. ಅವಿಲ್ಲದೆಯೇ ಈದ್ ಇದೆ. ಆದರೆ ಬಡವರ ಬಾಗಿಲು ತಟ್ಟಲು ಅಸಹ್ಯಪಡುವವನಿಗೆ ಈದ್ ಇಲ್ಲ. ಆದ್ದರಿಂದಲೇ ಈದ್ ಎಂಬುದು ಜವಾಬ್ದಾರಿಯುತ ಸಂತಸವನ್ನು ಪರಿಚಯಿಸುತ್ತದೆ. ಇಲ್ಲಿ ಮದ್ಯದ ವಾಸನೆಯಿಲ್ಲ. ಡಿಜೆಗಳ ಅಬ್ಬರವಿಲ್ಲ. ಮೆರವಣಿಗೆ ಇಲ್ಲ. ಪಟಾಕಿಗಳಿಲ್ಲ. ಮಾಲಿನ್ಯ ಕಾರಕವಾದ ಯಾವುದೂ ಆಚರಣೆಯ ಭಾಗವಾಗಿಲ್ಲ. ನಗ್ನವಾಗಿ ಓಡುವವರೂ ಇಲ್ಲ, ಅಸ್ಥಿಪಂಜರದ ಕೇಕ್ ತಯಾರಿಸುವವರೂ ಇಲ್ಲ. ಈದ್ ಎಂಬುದು ಉಳ್ಳವರು ಮತ್ತು ಇಲ್ಲದವರ ನಡುವೆ ಸೇತುವೆಯೊಂದನ್ನು ನಿರ್ಮಿಸುವ ಘಳಿಗೆ. ಅದು ಸಮಾಜದ ಸಬಲೀಕರಣದ ಕಡೆಗೆ ಉಳ್ಳವರನ್ನು ಕರೆದೊಯ್ಯುತ್ತವೆ. ಇಷ್ಟಿಷ್ಟು ಬಾಗಿಲುಗಳು ನಿಮ್ಮ ನಿರೀಕ್ಷೆಯಲ್ಲಿವೆ ಎಂದು ಉಳ್ಳವರನ್ನು ಎಚ್ಚರಿಸುತ್ತದೆ. ಈ ಜವಾಬ್ದಾರಿಯನ್ನು ಕಡ್ಡಾಯ ಕರ್ಮವಾಗಿ ಸ್ವೀಕರಿಸಿದವರಿಗೆ ಮಾತ್ರ ನಿಜವಾದ ಈದ್ ಇದೆ. ಸಮಾಜಕ್ಕೂ ತನಗೂ ಸಂಬಂಧವೇ ಇಲ್ಲ ಅನ್ನುವವರಿಗೂ ಈದ್‍ಗೂ ಸಂಬಂಧವೇ ಇರುವುದಿಲ್ಲ. ಅವರ ಹೊಸಬಟ್ಟೆ, ಆಲಿಂಗನ, ನಮಾಝïಗೆ ಆ ಕ್ಷಣದ ಪುಳಕಕ್ಕಿಂತ ಹೆಚ್ಚಿನ ಮಾನ್ಯತೆಯೂ ಲಭ್ಯವಾಗುವುದಿಲ್ಲ. ಆದ್ದರಿಂದಲೇ,
     ಈದ್, ಅನೇಕಾರು ಹಬ್ಬಗಳಲ್ಲಿ ಒಂದು ಆಗುವುದಿಲ್ಲ, ಆಗಬಾರದು ಕೂಡ.

Wednesday, June 22, 2016

ಮಾಧ್ಯಮ ನಿಷ್ಠೆಯನ್ನು ಪ್ರಶ್ನಿಸಿದ ‘ಗುಜರಾತ್ ಫೈಲ್ಸ್’...

       ಖ್ಯಾತ ಸಾಹಿತಿ ಅರುಂಧತಿ ರಾಯ್, ರಘು ಕಾರ್ನಾಡ್, ಶುಧಬ್ರತ್ ಸೇನ್ ಗುಪ್ತಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಕಾಂಗ್ರೆಸ್‍ನ ಅಹ್ಮದ್ ಪಟೇಲ್, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್, ಸಂದೀಪ್ ದೀಕ್ಷಿತ್, ಜ್ಯೋತಿ ಮಲ್ಹೋತ್ರ ಮತ್ತು
        ಎನ್.ಡಿ.ಟಿ.ವಿ.ಯ ಬರ್ಖಾದತ್ತ್, ಲಂಡನ್ನಿನ ಟೆಲಿಗ್ರಾಫ್ ಪತ್ರಿಕೆಯ ಶಂಕರ್ ಶಾನ್ ಥಾಕೂರ್, ಇಂಡಿಯನ್ ಎಕ್ಸ್‍ಪ್ರೆಸ್‍ನ ಸೀಮಾ ಚಿಸ್ತಿ, ರಾಜ್ಯಸಭಾ ಟಿ.ವಿ.ಯ ಗಿರೀಶ್ ನಿಕಂ, ನ್ಯೂಸ್ ಲಾಂಡ್ರಿ ಆನ್‍ಲೈನ್ ಪತ್ರಿಕೆಯ ಅಭಿನಂದನ್ ಸೆಖ್ರಿ, ಟಿ.ವಿ. ಪತ್ರಕರ್ತ ಶೇಖರ್ ಗುಪ್ತಾ, ಸಭಾ ನಕ್ವಿ, ಅರ್ನಾಬ್ ಗೋಸ್ವಾಮಿಯ ಟೈಮ್ಸ್ ನೌ ಚಾನೆಲ್‍ನ ‘ನ್ಯೂಸ್ ಅವರ್’ ಕಾರ್ಯಕ್ರಮದಲ್ಲಿ ಸದಾ ಕಾಣಿಸಿಕೊಳ್ಳುವ ಜಾವೇದ್ ನಕ್ವಿ...
      ಮುಂತಾದ ಪ್ರಮುಖರೆಲ್ಲ ಒಂದೇ ಕಾರ್ಯಕ್ರಮದಲ್ಲಿ ಸೇರಿದರೆ, ಆ ಸಂದರ್ಭ ಹೇಗಿದ್ದೀತು? ಮಾಧ್ಯಮಗಳು ಈ ಕಾರ್ಯ ಕ್ರಮಕ್ಕೆ ಕೊಡುವ ಮಹತ್ವ ಎಷ್ಟಿರಬಹುದು? ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳು ಅವರನ್ನು ಮುತ್ತಿಕೊಂಡಾವು. ಚಾನೆಲ್‍ಗಳು ಅವರಿಂದ ಬೈಟ್ ಪಡಕೊಳ್ಳಬಹುದು. ಪತ್ರಿಕೆಗಳು ಸಂದರ್ಶನ ನಡೆಸಬಹುದು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮುಂತಾದ ವಿಷಯಗಳ ಮೇಲೆ ಅವರನ್ನು ಮಾತಿಗೆಳೆದು ಸುದ್ದಿ ಸ್ಫೋಟಕ್ಕೆ ಯತ್ನಿಸಬಹುದು. ಏನಾದರೂ ವಿವಾದಾಸ್ಪದವಾದುದು ಸಿಗುವುದೋ ಎಂದು ಕುಟುಕಿ ನೋಡಬಹುದು. ಒಟ್ಟಿನಲ್ಲಿ ಈ ಇಡೀ ಕಾರ್ಯಕ್ರಮವನ್ನು ಟಿ.ವಿ. ಮತ್ತು ಪತ್ರಿಕೆಗಳು ಮಹತ್ವ ಪೂರ್ಣವಾಗಿ ಪರಿಗಣಿಸಿ ಮುಖ್ಯ ಸುದ್ದಿಯಾಗಿಸಬಹುದು.. ಎಂದೆಲ್ಲಾ ಊಹಿಸುವುದು ಸಹಜ. ಆದರೆ, ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯನ್ನು ಹೊರತುಪಡಿಸಿ ಮುಖ್ಯವಾಹಿನಿಯ ಇನ್ನಾವ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳೂ ಈ ಕಾರ್ಯಕ್ರಮದ ಕುರಿತು ಒಂದಕ್ಷರವನ್ನೂ ಬರೆಯಲಿಲ್ಲ. ಒಂದಕ್ಷರವನ್ನೂ ಹೇಳಲಿಲ್ಲ!
      ಕಳೆದ ಮೇ 27ರಂದು ಶುಕ್ರವಾರ ಸಂಜೆ 6:30ಕ್ಕೆ ದೆಹಲಿಯ ಇಂಡಿಯಾ ಹ್ಯಾಬಿಟೆಂಟ್ ಸೆಂಟರ್‍ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೇಲಿನ ಗಣ್ಯರೆಲ್ಲ ಭಾಗವಹಿಸಿದ್ದರು. ಪುಸ್ತಕದ ಹೆಸರು ‘ಗುಜರಾತ್ ಫೈಲ್ಸ್: ಅನಾಟೊಮಿ ಆಫ್ ಎ ಕವರ್ ಅಪ್’ (Gujarat Fails: Anatomy of a Coverup). ಬರೆದವರು ತೆಹಲ್ಕಾ ಪತ್ರಿಕೆಯ ಮಾಜಿ ಪತ್ರಕರ್ತೆ ರಾಣಾ ಅಯ್ಯೂಬ್. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಮರುದಿನ ಕಾರವಾನ್ ಪತ್ರಿಕೆಯು ಈ ಕುರಿತಂತೆ ಸಂವಾದವೊಂದನ್ನು ಏರ್ಪಡಿಸಿತ್ತು. ಇಂಡಿಯಾ ಟುಡೇ ಟಿ.ವಿ.ಯ ರಾಜ್‍ದೀಪ್ ಸರ್ದೇಸಾಯಿ ಮತ್ತು ಖ್ಯಾತ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ರಾಣಾ ಅಯ್ಯೂಬ್‍ರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಯಾವ ಮಾಧ್ಯಮವೂ ಸುದ್ದಿಯಾಗಿಸದೇ ಇದ್ದುದೇಕೆ ಎಂದು ಸರ್ದೇಸಾಯಿ ಅವರಲ್ಲಿ ಪ್ರಶ್ನಿಸಲಾಯಿತು. ‘ಅಧಿಕಾರ ದಲ್ಲಿರುವವರ ಜೊತೆಗೆ ಮನಸ್ತಾಪದ ವಾತಾವರಣವನ್ನು ಮಾಧ್ಯಮಗಳು ಬಯಸುತ್ತಿಲ್ಲ’ ಎಂದವರು ಉತ್ತರಿಸಿದ್ದರು. ಅಷ್ಟಕ್ಕೂ,
ಇಂಡಿಯಾ ಹ್ಯಾಬಿಟೆಂಟ್ ಸೆಂಟರ್‍ನಲ್ಲಿ ಕಥಾ ಸಂಕಲನವೋ ಕಾದಂಬರಿಯೋ ಬಿಡುಗಡೆಗೊಳ್ಳುತ್ತಿದ್ದರೆ ಮಾಧ್ಯಮಗಳು ಖಂಡಿತ ಅದನ್ನು ಸುದ್ದಿಯಾಗಿ ಪರಿಗಣಿಸುತ್ತಿದ್ದುವು. ಅಷ್ಟರ ಮಟ್ಟಿಗೆ ರಾಣಾ ಅಯ್ಯೂಬ್ ಪರಿಚಿತ ಪತ್ರಕರ್ತೆ. ಆದರೆ ರಾಣಾ ಅಯ್ಯೂಬ್ ಬರೆದಿರುವುದು ಗುಜರಾತ್ ಹತ್ಯಾಕಾಂಡದ ಸುತ್ತ. ಅದರಲ್ಲೂ ‘ಗುಜರಾತ್ ಫೈಲ್ಸ್: ಅನಾಟೊಮಿ ಆಫ್ ಎ ಕವರ್ ಅಪ್’ ಎಂಬ ಶೀರ್ಷಿಕೆಯೇ ಅದೊಂದು ತನಿಖಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಪುಸ್ತಕ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಕಲ್ಪಿತ ಕಾದಂಬರಿ ಬರೆಯುವುದಕ್ಕೂ ಆರೋಪಿತರನ್ನೇ ಸಂಪರ್ಕಿಸಿ ಅವರ ಅಭಿಪ್ರಾಯವನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸುವುದಕ್ಕೂ ಇರುವ ವ್ಯತ್ಯಾಸ ಮತ್ತು ಅದು ಬೀರುವ ಪರಿಣಾಮಗಳು ಏನೇನು ಎಂಬುದು ಮಾಧ್ಯಮದ ಮಂದಿಗೆ ಚೆನ್ನಾಗಿ ಗೊತ್ತು. ಆಳುವ ದೊರೆಗಳನ್ನು ಅದು ಕುಪಿತಗೊಳಿಸಬಹುದು. ಮಾಧ್ಯಮ ಕಚೇರಿಗಳಿಗೂ ಆಳುವವರಿಗೂ ನಡುವೆ ಇರುವ ಸಂಬಂಧ ಹದಗೆಡಬಹುದು. ಆದ್ದರಿಂದಲೇ, ಈ ತನಿಖಾ ಬರಹವನ್ನು ಪ್ರಕಟಿಸುವಂತೆ ತೆಹಲ್ಕಾದ ಸಂಪಾದಕ ತರುಣ್ ತೇಜ್‍ಪಾಲ್‍ರಲ್ಲಿ ರಾಣಾ ಅಯ್ಯೂಬ್ ಕೋರಿಕೊಂಡಾಗ ಅವರು ನಿರಾಕರಿಸಿದ್ದರು. ‘ಬಂಗಾರು ಲಕ್ಷ್ಮಣ್‍ರ ಕುರಿತು ಸ್ಟಿಂಗ್ ಆಪರೇಶನ್ ನಡೆಸಿದುದಕ್ಕಾಗಿ ಮೋದಿಯವರ ಪಕ್ಷ ನಮ್ಮ ಪತ್ರಿಕಾ ಕಚೇರಿಯನ್ನು ಧ್ವಂಸಗೊಳಿಸಿದೆ. ನಮ್ಮನ್ನು ಬೆನ್ನಟ್ಟಿದೆ. ಇನ್ನೊಮ್ಮೆ ಆ ಸಾಹಸ ಬೇಡ..’ ಎಂದಿದ್ದರು. ಈ ಕಾರಣದಿಂದಲೇ, ರಾಣಾ ಅಯ್ಯೂಬ್ ಅವರು ಈ ಕೃತಿಯನ್ನು ಸ್ವಯಂ ಪ್ರಕಟಿಸಿದರು. ನ್ಯೂಸ್ ಲಾಂಡ್ರಿಯಂಥ ಆನ್ ಲೈನ್ ಪತ್ರಿಕೆಗಳು ಕೃತಿಯ ಬಗ್ಗೆ ವಿಸ್ತೃತ ವಿಶ್ಲೇಷಣೆ ನಡೆಸಿದುವು. ರಾಣಾರ ಸಂದರ್ಶನ ನಡೆಸಿದುವು. ನಿಜವಾಗಿ,
       ‘ಗುಜರಾತ್ ಫೈಲ್ಸ್’ ಹುಟ್ಟಿಕೊಂಡದ್ದರಲ್ಲೇ ಒಂದು ರೋಚಕತೆಯಿದೆ. ಗುಜರಾತ್ ಹತ್ಯಾಕಾಂಡದ ಕುರಿತಂತೆ ತನಿಖೆ ನಡೆಸಬೇಕೆಂದು ತೀರ್ಮಾನಿಸಿದ ರಾಣಾ ಅಯ್ಯೂಬ್ ಅದಕ್ಕಾಗಿ ಕೆಲವು ಸಿದ್ಧತೆಗಳನ್ನು ನಡೆಸಿದರು. ತನ್ನ ಹೆಸರನ್ನು ಮೈಥಿಲಿ ತ್ಯಾಗಿ ಎಂದು ಬದಲಾಯಿಸಿದರು. ‘ವೈಬ್ರಾಂಟ್ ಗುಜರಾತ್’ನ ಕುರಿತಂತೆ ಸಿನಿಮಾ ನಿರ್ಮಿಸುವ ಉದ್ದೇಶದಿಂದ ಅಮೇರಿಕದಿಂದ ಬಂದಿರುವ ಅನಿವಾಸಿಯಾಗಿ ತನ್ನನ್ನು ಗುರುತಿಸಿಕೊಂಡರು. ಇವೆಲ್ಲ ನಡೆದುದು 2010ರಲ್ಲಿ. ಆಗ ರಾಣಾಗೆ 26 ವರ್ಷ. ತೆಹಲ್ಕಾದಲ್ಲಿ ಪತ್ರಕರ್ತೆಯಾಗಿದ್ದ ಆಕೆ ಸುದೀರ್ಘ 8 ತಿಂಗಳ ಕಾಲ ಗುಜರಾತ್‍ನಲ್ಲಿ ಸುತ್ತಾಡಿದರು. ತಾನು ಧರಿಸಿರುವ ರಿಸ್ಟ್ ವಾಚ್‍ನಲ್ಲಿ ಗುಪ್ತ ಕ್ಯಾಮರಾವನ್ನು ಅಳವಡಿಸಿಕೊಂಡು ಹಲವರನ್ನು ಸಂದರ್ಶಿಸಿದರು. ಅದರಲ್ಲಿ ನರೇಂದ್ರ ಮೋದಿಯವರೂ ಒಬ್ಬರು. ಮೋದಿಯವರ ಗಾಂಧಿ ನಗರದ ಅಧಿಕೃತ ನಿವಾಸದ ಎದುರು ಈ ಸಂದರ್ಶನಕ್ಕಾಗಿ ಒಂದು ಗಂಟೆ ಮೊದಲೇ ಅವರು ಕಾದು ಕುಳಿತರು. ತಾನು ವಾಚ್‍ನಲ್ಲಿ ಬಚ್ಚಿಟ್ಟಿರುವ ಗುಪ್ತ ಕ್ಯಾಮರಾವು ಸೆಕ್ಯುರಿಟಿ ಚೆಕ್‍ನ ಸಂದರ್ಭದಲ್ಲಿ ಎಲ್ಲಿ ಬಹಿರಂಗವಾಗಿ ಬಿಡುತ್ತೋ ಎಂಬ ಭಯ ಆಕೆಯನ್ನು ಆ ಒಂದು ಗಂಟೆಯ ಉದ್ದಕ್ಕೂ ಕಾಡಿತ್ತು. ಒಂದು ರೀತಿಯಲ್ಲಿ, ತನಿಖಾ ಪತ್ರಿಕೋದ್ಯಮವೆಂಬುದೇ ಒಂದು ಚಕ್ರವ್ಯೂಹ. ಅದಕ್ಕೆ ಅಪಾರ ಧೈರ್ಯ ಬೇಕು. ಆಯಾ ಸಂದರ್ಭಗಳನ್ನು ನಾಜೂಕಿನಿಂದ ದಾಟುವ ಕಲೆ ಗೊತ್ತಿರಬೇಕು. ಸನ್ನಿವೇಶವನ್ನು ಗ್ರಹಿಸುವ ಸೂಕ್ಷ್ಮತೆ ಇರಬೇಕು. ಕನ್ನಡದ ಚಿತ್ರನಟಿ ಮರಿಯಾ ಸುಸೈರಾಜ್ ಮತ್ತು ಗೆಳೆಯ ಸೇರಿಕೊಂಡು ನೀರಜ್ ಗ್ರೋವರ್ ಎಂಬವರನ್ನು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ‘ಮುಂಬೈ ಮಿರರ್’ನ ಸಂಪಾದಕಿ ಮೀನಲ್ ಬೆಹಗಲ್ ಈ ರೀತಿಯದ್ದೇ ಸಾಹಸ ಕೈಗೊಂಡಿದ್ದರು. ಆ ಬಳಿಕ ‘ಡೆತ್ ಇನ್ ಮುಂಬೈ’ ಎಂಬ ಹೆಸರಲ್ಲಿ ಕೃತಿಯನ್ನೂ ಬರೆದಿದ್ದರು. ‘ಡೋಂಗ್ರಿ ಟು ದುಬೈ’, ‘ಬ್ಲ್ಯಾಕ್ ಫ್ರೈಡೇ’, ‘ಸಿಕ್ಸ್ ಡಿಕೇಡ್ಸ್ ಆಫ್ ದಿ ಮುಂಬೈ ಮಾಫಿಯ’, ‘ಮಾಫಿಯ ಕ್ವೀನ್ಸ್ ಆಫ್ ಮುಂಬೈ’, ‘ಮೈ ನೇಮ್ ಈಸ್ ಅಬೂಸಲೇಮ್’.. ಮುಂತಾದ ಕೃತಿಗಳನ್ನು ಬರೆದಿರುವ ಹುಸೇನ್ ಝಾಯಿದಿ ಕೂಡ ಇಂಥದ್ದೇ ಪತ್ರಿಕಾ ಸಾಹಸಕ್ಕೆ ಹೆಸರಾದವರು. ಯಾವ ಬಾಗಿಲನ್ನು ತಟ್ಟಿದರೆ ಅಪಾಯ ಖಚಿತ ಎಂದು ಭಾವಿಸಲಾಗಿರುತ್ತದೋ ಅದೇ ಬಾಗಿಲನ್ನು ತಟ್ಟುವ ಧೈರ್ಯ ತೋರುವವರು. ಝಾಯಿದಿ ಅಂತೂ ಸದ್ದಾಮ್ ಹುಸೇನ್‍ರ ಪತನದ ಬಳಿಕ ಇರಾಕ್ ತೆರಳಿದ ಸಾಹಸಿ. ಆ ಬಳಿಕ ಅಲ್ಲಿ ಅಪಹರಣಕ್ಕೊಳಗಾಗಿ ಬಿಡುಗಡೆಗೊಂಡು ಬಂದವರು. ರಾಣಾ ಅಯ್ಯೂಬ್‍ಳ ತನಿಖಾ ಪತ್ರಿಕೋದ್ಯಮವನ್ನು ಕೂಡ ನಾವು ಇವರಿಬ್ಬರ ಸಾಹಸಕ್ಕೆ ಹೋಲಿಸಬಹುದು. ಆಕೆ ನರೇಂದ್ರ ಮೋದಿಯವರನ್ನು ಭೇಟಿಯಾದರು. ಗುಜರಾತ್‍ನ ಮಾಜಿ ಗೃಹ ಸಚಿವ ಅಶೋಕ್ ನಾರಾಯಣ್, 2002ರಲ್ಲಿ ಗುಜರಾತ್ ಎಟಿಎಸ್‍ನ ಮುಖ್ಯಸ್ಥರಾಗಿದ್ದ ಜಿ.ಎಲ್. ಸಿಂಘಾಲ್, ಅಹ್ಮದಾಬಾದ್‍ನ ಪೊಲೀಸ್ ಕಮೀಷನರ್ ಆಗಿದ್ದ ಪಿ.ಸಿ. ಪಾಂಡೆ, ಗುಜರಾತ್‍ನ ಗುಪ್ತದಳದ ಮುಖ್ಯಸ್ಥರಾಗಿದ್ದ ಸಿ.ಸಿ. ರೈಗಾರ್, ರಾಜನ್ ಪ್ರಿಯದರ್ಶಿ, ವೈ.ಎ. ಶೇಖ್.. ಮುಂತಾದ ಹಲವರನ್ನು ಆಕೆ ಈ ಮಾರುವೇಷದಲ್ಲಿ ಭೇಟಿಯಾದರು. ಇಶ್ರತ್ ಜಹಾನ್, ಸೊಹ್ರಾಬು ದ್ದೀನ್ ಶೇಖ್, ಕೌಸರ್‍ಬೀ ಸಹಿತ ಹಲವು ಎನ್‍ಕೌಂಟರ್‍ಗಳ ಒಳಹೊರಗನ್ನು ತಿಳಿಯಲು 8 ತಿಂಗಳುಗಳ ಕಾಲ ಶ್ರಮಿಸಿದರು. ಗುಜರಾತ್‍ನಲ್ಲಿ ಹೇಗೆ ನಕಲಿ ಎನ್‍ಕೌಂಟರ್‍ಗಳನ್ನು ನಡೆಸಲಾಗಿದೆ ಮತ್ತು ಬಿಜೆಪಿ ನಾಯಕರಿಗಾಗಿ ಹೇಗೆ ಅದನ್ನು ಅಡಗಿಸಲಾಗಿದೆ ಎಂಬುದನ್ನು ಈ ಎಲ್ಲ ತನಿಖೆಯ ಬಳಿಕ ಆಕೆ ಅರಿತುಕೊಂಡರು. ಕೃತಿಯಲ್ಲಿ ದಾಖಲಿಸಿದರು. ನಕಲಿ ಎನ್‍ಕೌಂಟರ್‍ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕೈವಾಡ ಇರುವುದಕ್ಕೆ ತನ್ನ ಕೃತಿ ಯಲ್ಲಿ ಪುರಾವೆಗಳಿವೆ ಎಂದೂ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು. ವಿಶೇಷ ಏನೆಂದರೆ,
       ರಾಣಾ ಅಯ್ಯೂಬ್ ತನ್ನ ‘ಗುಜರಾತ್ ಫೈಲ್ಸ್..’ ಕೃತಿಯನ್ನು ಬಿಡುಗಡೆಗೊಳಿಸುವುದಕ್ಕಿಂತ ಒಂದು ದಿನ ಮೊದಲು (ಮೇ 26) ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆಯು ಓದುಗರೊಂದಿಗೆ ನಿಶ್ಶರ್ಥ ಕ್ಷಮೆ ಯಾಚಿಸುವ ಪ್ರಕಟಣೆಯನ್ನು ಹೊರಡಿಸಿತು. ಅಷ್ಟಕ್ಕೂ, ಭಾರತೀಯ ಮಾಧ್ಯಮಗಳಿಗೆ ಸಂಬಂಧಿಸಿ ಹೇಳುವುದಾದರೆ, ಅದು ಕ್ಷಮೆ ಯಾಚಿಸುವ ಪ್ರಕರಣವೇ ಆಗಿರಲಿಲ್ಲ. ಜೋಸೆಫ್ ಮೆಯ್‍ಟನ್ ಎಂಬ ಪತ್ರಕರ್ತ 2009ರಿಂದ ಗಾರ್ಡಿಯನ್ ಪತ್ರಿಕೆಗೆ ಬರೆಯುತ್ತಿದ್ದ. ಪತ್ರಿಕೆಯ ನ್ಯೂಯಾರ್ಕ್ ಪಟ್ಟಣದ ಪ್ರತಿನಿಧಿಯಾಗಿ ಸಂದರ್ಶನ, ವರದಿ, ಸುದ್ದಿಗಳನ್ನು ಪತ್ರಿಕೆಗೆ ಆಗಾಗ ರವಾನಿಸುತ್ತಿದ್ದ. ಆದರೆ, ಕಳೆದ ಫೆಬ್ರವರಿಯಲ್ಲಿ ಆತ ಕೃಷಿಯ ಕುರಿತಂತೆ ಮಾಡಿದ ವರದಿಯೊಂದು ಅನುಮಾನಕ್ಕೆ ಕಾರಣವಾಯಿತು. ಆತ ತನ್ನ ವರದಿಯಲ್ಲಿ, ಸಂದರ್ಶಿಸಿರುವುದಾಗಿ ಹೇಳಿದ ವ್ಯಕ್ತಿಗಳು ಪತ್ರಿಕಾ ಕಚೇರಿಗೆ ಕರೆ ಮಾಡಿ, ತಮ್ಮನ್ನು ಆತ ಭೇಟಿಯಾಗಿಯೇ ಇಲ್ಲ ಎಂದು ಹೇಳಿದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಗಾರ್ಡಿಯನ್ ಪತ್ರಿಕೆಯು, ತನಿಖಾ ತಂಡವನ್ನು ರಚಿಸಿತು. ಬಹುಶಃ ತನ್ನ ವರದಿಗಾರನ ವಿರುದ್ಧವೇ ತನಿಖೆ ನಡೆಸಿದ ಅಪರೂಪದ ಪ್ರಕರಣ ಇದು. 50 ಮಂದಿಯನ್ನು ಭೇಟಿಯಾದ ತನಿಖಾ ತಂಡಕ್ಕೆ ಆತ ತಪ್ಪೆಸಗಿರುವುದು ದೃಢಪಟ್ಟಿತು. ಎರಡು ಸಭೆಗಳಿಗೆ ಹಾಜರಾಗದೆಯೇ ಅದರ ವರದಿಯನ್ನು ಆತ ನಿರ್ವಹಿಸಿದ್ದ. ಅನೇಕ ವರದಿಗಳಲ್ಲಿ ಕೃತ್ರಿಮತೆ ಇತ್ತು. ವ್ಯಕ್ತಿಗಳನ್ನು ಭೇಟಿಯಾಗದೆಯೇ ಅವರ ಹೇಳಿಕೆಯನ್ನು ಕಲ್ಪಿಸಿಕೊಂಡು ಬರೆದಿದ್ದ. ತಾನು ನಡೆಸಿದ ಸಂದರ್ಶನದ ನಕಲು ಪ್ರತಿ, ಸಂದರ್ಶಕರ ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಮತ್ತಿತರ ದಾಖಲೆಗಳನ್ನು ನೀಡಲು ವಿಫಲನಾದ ಆತನನ್ನು ಠಕ್ಕ ವರದಿಗಾರ ಎಂದು ಪತ್ರಿಕೆ ಪರಿಗಣಿಸಿತಲ್ಲದೇ ಆತನ 13  ನ್ಯೂಸ್ ಸ್ಟೋರಿಗಳನ್ನು ವೆಬ್‍ಸೈಟ್‍ನಿಂದ ಕಿತ್ತು ಹಾಕಿತು. ಗಾರ್ಡಿಯನ್ ಪತ್ರಿಕೆಯ ಅಮೇರಿಕನ್ ಆವೃತ್ತಿಯ ಸಂಪಾದಕಿ ಲೀ ಗ್ಲಾಡಿನ್ನಿಂಗ್ ಅವರು ಇದಕ್ಕಾಗಿ ಓದುಗರ ಕ್ಷಮೆ ಯಾಚಿಸಿದರಲ್ಲದೇ ಓದುಗರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ ಎಂದು ಹೇಳಿಕೊಂಡರು. ನಿಜವಾಗಿ, ಜೋಸೆಫ್ ಮೆಯ್‍ಟನ್‍ನ ವರದಿಯಲ್ಲಿ ಕೃತ್ರಿಮತೆ ಇದ್ದುವಾದರೂ ಅವು ಸಂಪೂರ್ಣ ಸುಳ್ಳುಗಳೇ ಆಗಿರಲಿಲ್ಲ. ಆತ ಅವರಿವರಿಂದ ಕೇಳಿ ಸುದ್ದಿ ತಯಾರಿಸುತ್ತಿದ್ದ. ಕೆಲವರನ್ನು ಭೇಟಿಯಾಗದೆಯೇ ಅವರ ಸಂಗ್ರಹಿತ ಅಭಿಪ್ರಾಯಗಳನ್ನು ವರದಿಯಲ್ಲಿ ಬಳಸಿಕೊಳ್ಳುತ್ತಿದ್ದ. ಆದರೆ, ಗಾರ್ಡಿಯನ್ ಪತ್ರಿಕೆಯು ಇಡೀ ಬರಹವನ್ನೇ ಕಿತ್ತು ಹಾಕುವ ಮೂಲಕ ಪಾರದರ್ಶಕತೆ ಮೆರೆಯಿತು. ಒಂದು ಕಡೆ, ಓದುಗರಿಗೆ ಮತ್ತು ಸತ್ಯಕ್ಕೆ ಅಪಾರ ನಿಷ್ಠೆಯನ್ನು ಪ್ರದರ್ಶಿಸುವ ಪತ್ರಿಕೆಯಾದರೆ ಇನ್ನೊಂದು ಕಡೆ, ರಾಜಕಾರಣಿಗಳಿಗೆ ಮತ್ತು ಸುಳ್ಳಿಗೆ ಪರಮ ನಿಷ್ಠೆಯನ್ನು ತೋರುವ ಮಾಧ್ಯಮಗಳು.. ಏನೆನ್ನಬೇಕು ಇದಕ್ಕೆ? ಇಷ್ಟಿದ್ದೂ,
       ಬಿಡುಗಡೆಗೊಂಡ ಒಂದೇ ವಾರದಲ್ಲಿ ‘ಗುಜರಾತ್ ಫೈಲ್ಸ್’ ಕೃತಿಯನ್ನು ದೇಶದಲ್ಲಿಯೇ ಅತ್ಯಂತ ಹೆಚ್ಚು ಮಾರಾಟಗೊಂಡ ಎರಡನೇ ಕೃತಿಯಾಗಿಸಿದ ಓದುಗರಿಗೆ ಮತ್ತು ಪ್ರಾಣವನ್ನೇ ಪಣಕ್ಕಿಟ್ಟು ಸತ್ಯವನ್ನು ಹುಡುಕಾಡಿದ ರಾಣಾ ಅಯ್ಯೂಬ್‍ರಿಗೆ ಧನ್ಯವಾದಗಳು.

Wednesday, June 15, 2016

ಅಮೆರಿಕದ ಒಂದು ಗೊರಿಲ್ಲಾಕ್ಕೆ ಅಮೆರಿಕೇತರ ಎಷ್ಟು ಮನುಷ್ಯರು ಸಮ ಅಧ್ಯಕ್ಷರೇ?

        1. ಬರಾಕ್ ಒಬಾಮ
  2. ಜಸ್ಟಿನ್ ಟ್ರುಡೇವ್
  3. ಹರಾಂಬೆ
  ಇವುಗಳಲ್ಲಿ ಮೊದಲಿನ ಎರಡು ಹೆಸರುಗಳು ಮನುಷ್ಯರದ್ದಾದರೆ ಮೂರನೆಯದ್ದು ಗೊರಿಲ್ಲಾದ ಹೆಸರು. ಕಳೆದ ಮೇ 27ರಿಂದ ಸುಮಾರು ಎರಡು ವಾರಗಳ ತನಕ ಈ ಮೂರೂ ಹೆಸರುಗಳು ಜಾಗತಿಕವಾಗಿ ಸಾಕಷ್ಟು ಚರ್ಚೆಗೆ ಒಳಗಾದುವು. ಅಮೇರಿಕದ ಹಿಪಾಕ್ರಸಿಗೆ ಅತ್ಯುತ್ತಮ ಉದಾಹರಣೆಯಾಗಿ ಒಬಾಮ ಮತ್ತು ಹರಾಂಬೆಯನ್ನು ಅನೇಕರು ಎತ್ತಿ ತೋರಿಸಿದರು. ಜಪಾನ್‍ನ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಕನಿಷ್ಠ ಎರಡೂವರೆ ಲಕ್ಷ ಮಂದಿಯನ್ನು ಅಣು ಬಾಂಬ್ ಸುರಿಸಿ ಕೊಂದು ಹಾಕಿದುದಕ್ಕಾಗಿ ಕ್ಷಮೆ ಯಾಚಿಸದ ಒಬಾಮರ ನಾಡು ಯಕಶ್ಚಿತ್ ಗೊರಿಲ್ಲಾವೊಂದರ ಹತ್ಯೆಗಾಗಿ ಆಕ್ರೋಶಿತಗೊಂಡಿದೆ ಎಂದು ಹಲವರು ಕಟಕಿಯಾಡಿದರು. ಅಷ್ಟಕ್ಕೂ,
  ಮೇ 29ರಂದು ಅಮೇರಿಕದ ಸಿನ್‍ಸಿನಾಟಿ ಮೃಗಾಲಯದಲ್ಲಿ 4 ವರ್ಷದ ಮಗುವೊಂದು ಹರಾಂಬೆ ಹೆಸರಿನ ಗೊರಿಲ್ಲಾ ಇರುವ ಕಂದಕಕ್ಕೆ ಉರುಳಿ ಬಿತ್ತು. ಕಂದಕದಲ್ಲಿ ಮಗುವಿನ ಸೊಂಟದೆತ್ತರಕ್ಕೆ ಬರುವಷ್ಟು ನೀರಿದ್ದುದರಿಂದ ಮಗುವಿಗೆ ಗಾಯವೇನೂ ಆಗಲಿಲ್ಲ. ಆದರೆ 17 ವರ್ಷ ಪ್ರಾಯದ ಮತ್ತು 400 ಪೌಂಡ್ ಭಾರ ಇರುವ ಹರಾಂಬೆ ಮಗುವಿನ ಹತ್ತಿರ ಬಂತು. ಮಗುವನ್ನು ಎತ್ತಿಕೊಂಡಿತು. ನೀರಿನಲ್ಲಿ ಅತ್ತಿಂದಿತ್ತ ಎಳೆದುಕೊಂಡು ಹೋಯಿತು. ಸುಮಾರು 10ರಿಂದ 15 ನಿಮಿಷಗಳ ಕಾಲ ಮಗು ಗೊರಿಲ್ಲಾದ ಜೊತೆಗಿತ್ತು. ವರ್ಷದಲ್ಲಿ ಸುಮಾರು 15 ಲಕ್ಷ ಮಂದಿ ಭೇಟಿ ಕೊಡುವ ಪ್ರಸಿದ್ಧ ಮೃಗಾಲಯದಲ್ಲಿ ಭಯಭೀತ ವಾತಾವರಣ. ಜನರು ಬೊಬ್ಬೆ ಹಾಕುತ್ತಿದ್ದರು. ತೆಂಗಿನ ಕಾಯಿಯನ್ನು ಹಲ್ಲಿನಿಂದ ಕಚ್ಚಿ ಪುಡಿ ಮಾಡುವಷ್ಟು ಬಲಶಾಲಿಯಾಗಿರುವ ಹರಾಂಬೆಯ ಕೈಯಿಂದ ಮಗುವನ್ನು ರಕ್ಷಿಸಿ ಎಂದು ಕೂಗಾಡಿದರು. ಕೊನೆಗೆ ಮೃಗಾಲಯದ ಅಧಿಕಾರಿಗಳು ಹರಾಂಬೆಯನ್ನು ಗುಂಡಿಟ್ಟು ಕೊಂದು ಮಗುವನ್ನು ರಕ್ಷಿಸಿದರು. 15 ನಿಮಿಷಗಳಲ್ಲಿ ನಡೆದು ಹೋದ ಈ ಘಟನೆ ಅಮೇರಿಕದಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟು ಹಾಕಿತು. ಘಟನೆಯ ವೀಡಿಯೋ ವೈರಲ್ ಆಯಿತು. ಅಮೇರಿಕದಲ್ಲಿ ಪರ ಮತ್ತು ವಿರುದ್ಧ ವಾದಗಳು ನಡೆದುವು. ಮಗುವಿನ ತಾಯಿಯ ನಿರ್ಲಕ್ಷ್ಯ ತನಕ್ಕೆ ಹರಾಂಬೆಗೆ ಶಿಕ್ಷೆ ಕೊಟ್ಟದ್ದೇಕೆ ಎಂದು ಅನೇಕರು ಪ್ರಶ್ನಿಸಿದರು. ತಾಯಿಯ ಮೇಲೆ ಮೊಕದ್ದಮೆ ಹೂಡಿ ಎಂದೂ ಆಗ್ರಹಿಸಿದರು. ಹರಾಂಬೆಯ ಪುತ್ಥಳಿಗೆ ಹೂಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಜಸ್ಟಿಸ್ ಫಾರ್ ಹರಾಂಬೆ (ಹರಾಂಬೆಗೆ ನ್ಯಾಯ ಸಿಗಲಿ) ಎಂಬ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ಒಂದು ಪುಟವೇ ತೆರೆಯಿತು. ಒಂದೇ ದಿನದೊಳಗೆ 11 ಸಾವಿರ ಲೈಕ್‍ಗಳನ್ನು ಅದು ಗಿಟ್ಟಿಸಿಕೊಂಡಿತು. ಹರಾಂಬೆಯಂಥ ಪ್ರಾಣಿಗಳ ರಕ್ಷಣೆಗಾಗಿ ಕಾನೂನು ಜಾರಿ ಮಾಡಬೇಕೆಂದು ಆಗ್ರ ಹಿಸಿ Petitiononcharge.org  ಎಂಬ ನೆಟ್ ತಾಣವನ್ನು ಆರಂಭಿಸಲಾಯಿತು. ಇದಕ್ಕೆ ಮೂರು ದಿನಗಳಲ್ಲಿ 4 ಲಕ್ಷ ಸಹಿ ಸಂಗ್ರಹವಾಯಿತು. ಪ್ರಾಣಿ ದಯಾ ಸಂಘವಾದ PETA (People for ethical treatment of animals)ವು ಸಿನ್‍ಸಿನಾಟಿ ಮೃಗಾಲಯಕ್ಕೆ ಇನ್ನೊಂದು ಸುತ್ತು ಬೇಲಿ ಹಾಕುವಂತೆ ಒತ್ತಾಯಿಸಿತು. ಈ ನಡುವೆ ಅಮೇರಿಕದ ಲಾಸ್ ಏಂಜಲೀಸ್‍ನಿಂದ ಪ್ರಸಾರವಾಗುವ ರೇಡಿಯೋ ಕಾರ್ಯಕ್ರಮದಲ್ಲಿ ಪ್ರತಿದಿನ ಲೈವ್ ಕಾರ್ಯಕ್ರಮವನ್ನು ಏರ್ಪಡಿಸುವ ಪ್ರಸಿದ್ಧ ರೇಡಿಯೋ ನಿರೂಪಕ ಡೆನ್ನಿಸ್ ಪ್ರಾಗರ್ ಅವರು ಈ ಘಟನೆಗೆ ತಾಳೆಯಾಗುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ರೇಡಿಯೋ ಕೇಳುಗರಲ್ಲಿ ಅವರ ಪ್ರಶ್ನೆ ಹೀಗಿತ್ತು:
  “ಅಪರಿಚಿತ ಮನುಷ್ಯ ಮತ್ತು ನಿಮ್ಮ ಪ್ರೀತಿಪಾತ್ರ ಪ್ರಾಣಿ ನೀರಿಗೆ ಬಿದ್ದು ಮುಳುಗುತ್ತಿದ್ದರೆ ಮತ್ತು ನೀವು ಅವೆರಡರಲ್ಲಿ ಒಂದನ್ನು ಮಾತ್ರ ರಕ್ಷಿಸುವ ಅವಕಾಶವನ್ನು ಹೊಂದಿದ್ದರೆ ನೀವು ಯಾರನ್ನು ರಕ್ಷಿಸುವಿರಿ?”
  ಅಚ್ಚರಿಯ ವಿಷಯ ಏನೆಂದರೆ, ಕೇಳುಗರಲ್ಲಿ ಒಂದು ದೊಡ್ಡ ಗುಂಪು ಪ್ರಾಣಿಯನ್ನು ಎಂದು ಉತ್ತರಿಸಿತು. 1999ರಿಂದ ರೇಡಿಯೋದಲ್ಲಿ ಪ್ರತಿದಿನ ಲೈವ್ ಕಾರ್ಯಕ್ರಮವನ್ನು ಕೊಡುತ್ತಿರುವ, ‘ಹ್ಯಾಪಿನೆಸ್ ಈಸ್ ಸೀರಿಯಸ್ ಪ್ರಾಬ್ಲಮ್’, ‘ಥಿಂಕ್ ಎ ಸೆಕೆಂಡ್ ಟೈಮ್’ನಂಥ ಪ್ರಸಿದ್ಧ ಕೃತಿಗಳನ್ನು ಬರೆದಿರುವ ಮತ್ತು ವಿಶ್ವದ 7 ರಾಷ್ಟ್ರಗಳಲ್ಲಿ ಉಪನ್ಯಾಸ ನೀಡಿರುವ, ಟಿ.ವಿ. ಶೋಗಳನ್ನು ನಡೆಸಿ ಕೊಟ್ಟಿರುವ ಡೆನ್ನಿಸ್ ಪ್ರಾಗರ್ ಅವರು ಈ ಉತ್ತರವನ್ನು ಕೇಳಿ ಒಮ್ಮೆ ಅವಾಕ್ಕಾದರು. ನಿಜವಾಗಿ, ಅಮೇರಿಕನ್ನರ ಮನಸ್ಥಿತಿಯಿಂದ ಆಘಾತಗೊಂಡಿದ್ದು ಡೆನ್ನಿಸ್ ಪ್ರಾಗರ್ ಮಾತ್ರ ಅಲ್ಲ, ಜಗತ್ತಿನ ಅಸಂಖ್ಯಾತ ಮಂದಿ ಸೋಶಿಯಲ್ ಮೀಡಿಯಾಗಳು ಮತ್ತು ಮಾಧ್ಯಮಗಳ ಮೂಲಕ ಅಮೇರಿಕನ್ ಮನಸ್ಥಿತಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಜಪಾನ್‍ನ ಜನರಂತೂ ಅತ್ಯಂತ ಕಟು ಭಾಷೆಯಲ್ಲಿ ಅಮೇರಿಕನ್ ಮನಸ್ಥಿತಿಯನ್ನು ಖಂಡಿಸಿದರು. ಇದಕ್ಕೆ ಕಾರಣವೂ ಇದೆ.
  ಗೊರಿಲ್ಲಾ ಘಟನೆಗಿಂತ ಎರಡು ದಿನಗಳ ಮೊದಲು (ಮೇ 27) ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಜಪಾನ್‍ಗೆ ಐತಿಹಾಸಿಕ ಭೇಟಿ ಕೊಟ್ಟಿದ್ದರು. 1945 ಆಗಸ್ಟ್ 6 ಮತ್ತು 9ರಂದು ಜಪಾನ್‍ನ ಹಿರೋಶಿಮಾ ಮತ್ತು ನಾಗಸಾಕಿಗೆ ಅಮೇರಿಕದ ಯುದ್ಧ ವಿಮಾನಗಳು ಅಣುಬಾಂಬ್ ಸುರಿಸುವಾಗ ಅಮೆರಿಕದ ಅಧ್ಯಕ್ಷರಾಗಿದ್ದುದು ಹ್ಯಾರಿ ಟ್ರೂಮನ್. ಆ ಬಳಿಕ ಅಮೇರಿಕವು 11 ಮಂದಿ ಅಧ್ಯಕ್ಷರುಗಳನ್ನು ಕಂಡಿದೆ. ಆದರೆ ಒಬ್ಬನೇ ಒಬ್ಬ ಅಧ್ಯಕ್ಷ ಜಪಾನ್‍ಗೆ ಈ ವರೆಗೂ ಭೇಟಿ ಕೊಟ್ಟಿಲ್ಲ. ಅತ್ಯಂತ ಪ್ರಭಾವಶಾಲಿ ಮತ್ತು ಧೈರ್ಯಶಾಲಿಗಳಾಗಿ ಗುರುತಿಸಿಕೊಂಡಿದ್ದ ಕೆನಡಿ, ಬುಶ್, ಕ್ಲಿಂಟನ್ ಸಹಿತ ಯಾವ ಅಧ್ಯಕ್ಷರೂ ಜಪಾನ್‍ನ ಮಣ್ಣನ್ನು ತುಳಿಯುವ ಧೈರ್ಯ ತೋರಿಸಿರಲಿಲ್ಲ. ಜಪಾನ್‍ಗೆ ಕಾಲಿಟ್ಟರೆ ಎಲ್ಲಿ ಅಣುಬಾಂಬ್ ಹತ್ಯೆಗಾಗಿ ಕ್ಷಮೆ ಯಾಚಿಸಬೇಕಾದೀತೋ ಎಂಬೊಂದು ಅಳುಕು ಅವರನ್ನು ಕಾಡಿತ್ತು. ಆದ್ದರಿಂದಲೇ, ಆ ಅಣುಬಾಂಬ್ ಕ್ರೌರ್ಯಕ್ಕೆ 71 ವರ್ಷಗಳು ಸಂದ ಈ ಸಂದರ್ಭದಲ್ಲಿ ಒಬಾಮ ಜಪಾನ್‍ಗೆ ಭೇಟಿ ಕೊಡುತ್ತಿರುವುದು ಸಹಜವಾಗಿಯೇ ಜಗತ್ತಿನ ಕುತೂಹಲವನ್ನು ಕೆರಳಿಸಿತ್ತು. ಜಪಾನಿಗರಂತೂ ಅತ್ಯಂತ ಆಸಕ್ತಿಯಿಂದ ಒಬಾಮರ ಭೇಟಿಯನ್ನು ನಿರೀಕ್ಷಿಸುತ್ತಿದ್ದರು. ದ್ವಿತೀಯ ವಿಶ್ವ ಯುದ್ಧದ ಸಮಯದಲ್ಲಿ ಕೊರಿಯನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿ ಬಳಸಿಕೊಂಡಿರುವುದಕ್ಕಾಗಿ ಜಪಾನಿನ ಹಾಲಿ ಪ್ರಧಾನಿ ಶಿನ್ಝೊ ಅಬೆಯವರು ಕಳೆದ ಡಿಸೆಂಬರ್ (2015)ನಲ್ಲಿ ಕ್ಷಮೆ ಯಾಚಿಸಿದುದು ಒಬಾಮರ ಮೇಲಿನ ನಿರೀಕ್ಷೆಗೆ ಇನ್ನೊಂದು ಕಾರಣವೂ ಆಗಿತ್ತು. ಒಬಾಮ ಭೇಟಿಗಿಂತ ದಿನಗಳ ಮೊದಲು ಜಪಾನ್‍ನಲ್ಲಿ ಬಿರುಸಿನ ಚಟುವಟಿಕೆಗಳು ನಡೆದುವು. ಹಿರೋಶಿಮಾ ಶಾಂತಿ ಕಾರ್ಯಕರ್ತರು ಒಬಾಮ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ರಾಲಿ ನಡೆಸಿದರು. ಅಣುಬಾಂಬ್‍ನಿಂದ ಸಂತ್ರಸ್ತರಾದ ಕೈಕೋ ಒಗುರಾ, ಪಾರ್ಕ್ ನಮ್ಜೂ, ಸುನಾವೊ ತ್ಸುಬಿ, ಶಿಗೇಕೆ ಮಿರಿ, ಮಿಸ್ಕಾವೊ ಕಟನಿ.. ಮುಂತಾದ ವಯೋವೃದ್ಧರ ಅಭಿಪ್ರಾಯಗಳನ್ನು ಮಾಧ್ಯಮಗಳು ದಿನಂಪ್ರತಿಯೆಂಬಂತೆ ಪೋಟೋ ಸಹಿತ ಪ್ರಕಟಿಸಿದುವು. ಒಬಾಮ ಕ್ಷಮೆ ಯಾಚಿಸಬೇಕೆಂಬುದು ಅವರೆಲ್ಲರ ಆಗ್ರಹವಾಗಿತ್ತು. ತೆರುಮಿ ಕನಕ ಎಂಬವರ ಜೀವನಗಾಥೆಯಂತೂ ಅತ್ಯಂತ ಕರುಣಾಜನಕ. ಆಗಸ್ಟ್ 9, 1945ರಂದು ಅಮೇರಿಕವು ನಾಗಸಾಕಿಯ ಮೇಲೆ ಬಾಂಬ್ ಸುರಿಸಿದಾಗ ತೆರುಮಿ ಕನಕ ಅವರು ನಾಗಸಾಕಿಗಿಂತ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದರು. ಆ ಕ್ಷಣದಲ್ಲಿ ಅವರು ಪ್ರಜ್ಞಾಶೂನ್ಯರಾದರು. ಆದರೆ ಜೀವಕ್ಕೇನೂ ಹಾನಿ ತಟ್ಟಲಿಲ್ಲ. ಅವರು ಮತ್ತು ನಾಗಾಸಾಕಿಯ ಮಧ್ಯೆ ಹಲವಾರು ಬೆಟ್ಟ-ಗುಡ್ಡಗಳಿದ್ದುದು ಇದಕ್ಕೆ ಕಾರಣವಾಗಿತ್ತು. ಆದರೆ ಅವರ ಕುಟುಂಬದ 5 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿ ಹೋದರು. ತನ್ನ ಮನೆಯ ಹೊರಾಂಗಣದಲ್ಲಿ ಅತ್ತೆ ಮತ್ತು ಮಕ್ಕಳು ಸುಟ್ಟು ಇದ್ದಲಿನಂತೆ ಕರ್ರಗಾಗಿ ಬಿಟ್ಟಿದ್ದರು. ಇನ್ನೋರ್ವ ಅತ್ತೆ ತೀವ್ರ ಸುಟ್ಟ ಗಾಯಗಳಿಂದ ಕೂಗಾಡುತ್ತಿದ್ದರು. ಕೆಲವು ದಿನಗಳಲ್ಲಿ ಆಕೆಯೂ ಸತ್ತು ಹೋದರು. ದಫನ ಮಾಡುವುದಕ್ಕೂ ಜನರಿರಲಿಲ್ಲ. ಸ್ವತಃ ಕನಕ ಅವರೇ ಅವರನ್ನು ದಫನ ಮಾಡಿದ್ದರು. ಇಂಥ ಕಣ್ಣೀರ ಕತೆಗಳು ದಿನಂಪ್ರತಿ ಪ್ರಕಟವಾಗುತ್ತಿರುವುದರ ಮಧ್ಯೆಯೇ ಮೇ 27ರಂದು ಒಬಾಮ ಜಪಾನ್‍ಗೆ ಭೇಟಿ ಕೊಟ್ಟರು. ಹಿರೋಶಿಮಾ ಸಂದರ್ಶಿಸಿದರು. ಆದರೆ ಒಬಾಮ ಎಲ್ಲೂ ಕ್ಷಮೆ ಯಾಚಿಸಲೇ ಇಲ್ಲ. ಅತ್ಯಂತ ಕಾವ್ಯಾತ್ಮಕ ಶೈಲಿಯಲ್ಲಿ 71 ವರ್ಷಗಳ ಹಿಂದಿನ ಕ್ರೌರ್ಯವನ್ನು ವಿವರಿಸಿದುದನ್ನು ಬಿಟ್ಟರೆ ಇನ್ನಾವ ಹೇಳಿಕೆಯೂ ಅವರಿಂದ ಹೊರಬೀಳಲಿಲ್ಲ. ಒಂದು ಗೊರಿಲ್ಲಾದ ಹತ್ಯೆಗೆ ಮರುಗುವ ಮತ್ತು ಅಸಂಖ್ಯ ಸಂಖ್ಯೆಯಲ್ಲಿ ಸಹಿ ಸಂಗ್ರಹವಾಗುವ ದೇಶವೊಂದರ ಅಧ್ಯಕ್ಷ ಲಕ್ಷಾಂತರ ಮಂದಿಯನ್ನು ಬಾಂಬಿಟ್ಟು ಸಾಯಿಸಿದುದಕ್ಕಾಗಿ ಕ್ಷಮೆ ಯಾಚಿಸುತ್ತಿಲ್ಲ ಅನ್ನುವುದಕ್ಕೆ ಜಾಗತಿಕ ವಾಗಿಯೇ ಅಚ್ಚರಿ ವ್ಯಕ್ತವಾಯಿತು. ಲಕ್ಷಾಂತರ ಜಪಾನಿಗರ ಜೀವ ಅಮೇರಿಕದ ಒಂದು ಗೊರಿಲ್ಲಾಕ್ಕೂ ಸಮಾನವಲ್ಲವೇ ಎಂಬೊಂದು ಪ್ರಶ್ನೆಯೂ ಹುಟ್ಟಿಕೊಂಡಿತು. ಆದರೆ ಅಮೇರಿಕದ ಕೆಲವರು ಒಬಾಮರನ್ನು ಎಷ್ಟು ಹಾಸ್ಯಾಸ್ಪವಾಗಿ ಸಮರ್ಥಿಸಿ ಕೊಂಡರೆಂದರೆ, ಅಣುಬಾಂಬ್‍ನ ಬದಲು ಅಮೇರಿಕವು ಜಪಾನ್‍ನಲ್ಲಿ ಸೇನಾ ಕಾರ್ಯಾಚರಣೆಗೆ ಇಳಿದಿರುತ್ತಿದ್ದರೆ ಮಿಲಿಯನ್‍ಗಿಂತಲೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದರು ಎಂದರು. ಅದಕ್ಕೆ ಹೋಲಿಸಿದರೆ ಅಣುಬಾಂಬ್‍ನಿಂದಾದ ಅನಾಹುತ ಚಿಕ್ಕದು ಎಂದೂ ವಾದಿಸಿದರು. ಅಮೇರಿಕ ಬಾಬ್ ಹಾಕುವುದಕ್ಕಿಂತ ಮೊದಲೇ ದಕ್ಷಿಣ ಏಷ್ಯಾ ಮತ್ತು ಚೀನಾದಲ್ಲಿ 20 ಮಿಲಿಯನ್ ಮಂದಿಯನ್ನು ಜಪಾನ್ ಪ್ರಭುತ್ವವು ಕೊಂದು ಹಾಕಿದೆ ಎಂದೂ ಹೇಳಿದರು. ಅಮೇರಿಕವು ತನ್ನಲ್ಲಿ ಅತೀ ಹೆಚ್ಚು ಅಣ್ವಸ್ತ್ರ
ದಾಸ್ತಾನಿರಿಸಿಕೊಂಡಿದ್ದರೂ ಜಪಾನ್‍ನ ನಂತರ ಇನ್ನಾವ ರಾಷ್ಟ್ರದ ಮೇಲೂ ಅದು ಅಣ್ವಸ್ತ್ರವನ್ನು ಬಳಸಿಲ್ಲ ಎಂದೂ ಅಮೇರಿಕವನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಂಡರು. 20ನೇ ಶತಮಾನದ ಕೊನೆ ಮತ್ತು 21ನೇ ಶತಮಾನದ ಆರಂಭದಲ್ಲಿ ಅಣುಬಾಂಬ್ ಉಪಯೋಗಿಸಬೇಕಾದ ಅಗತ್ಯ ಕಂಡುಬಂದರೂ ಅಮೇರಿಕ ಅದನ್ನು ಉಪಯೋಗಿಸದಿರುವುದು ಏನನ್ನು ಸೂಚಿಸುತ್ತದೆ ಎಂದೂ ಪ್ರಶ್ನಿಸಿದರು. ನ್ಯೂಕ್ಲಿಯರ್ ನಾನ್ ಪ್ರೊಲಿಫಿಕೇಶನ್‍ಗೆ ಮೊಟ್ಟಮೊದಲು ಒತ್ತಾಯಿಸಿದವರೇ ಅಮೇರಿಕದ ಅಧ್ಯಕ್ಷ ಕೆನಡಿ ಎಂದೂ ಹೇಳಿಕೊಂಡರು. ಈ ಪರ-ವಿರೋಧಿ ಚರ್ಚೆಗಳ ನಡುವೆಯೇ ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೇವ್ ಅವರು ಕೆನಡದ ಸಿಕ್ಖ್ ಸಮುದಾಯದ ಕ್ಷಮೆ ಯಾಚಿಸಿದುದನ್ನು ಯಾರೋ ಉಲ್ಲೇಖಿಸಿದರು. ಸಣ್ಣ ಸಂಗತಿಯಂತೆ ಕಳೆದು ಹೋಗಿದ್ದ ಕ್ಷಮೆಯೊಂದು ಹೀಗೆ ಹರಾಂಬೆ ಮತ್ತು ಒಬಾಮರಿಂದಾಗಿ ಮುನ್ನೆಲೆಗೆ ಬಂದಿತು. ಒಬಾಮರಿಗಿಂತ 6 ದಿನಗಳ ಮೊದಲೇ ಮೇ 18 ರಂದು ಕೆನಡದ ಪ್ರಧಾನಿ ಪಾರ್ಲಿಮೆಂಟ್‍ನಲ್ಲಿ 17 ಸಿಕ್ಖ್ ಸಂಸದರ ಸಹಿತ ಎಲ್ಲರೆದುರು ನಿಶ್ಶರ್ಥ ಕ್ಷಮೆ ಯಾಚಿಸಿದ್ದರು.  
          ಅಂದಹಾಗೆ, ಹಿರೋಶಿಮಾ-ನಾಗಸಾಕಿಗೆ ಹೋಲಿಸಿದರೆ ಏನೇನೂ ಅಲ್ಲದ 1914 ಮೇ 18ರ ಘಟನೆ ಅದು. ಅಂದು ಕೆನಡದಲ್ಲಿ ಭಾರತೀಯ ಮೂಲದ ಸಿಕ್ಖರು ಧಾರಾಳ ಸಂಖ್ಯೆಯಲ್ಲಿ ದ್ದರು. ಭಾರತೀಯ ವಲಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರು ವಂತೆಯೇ ಕೆನಡದಲ್ಲಿ ಅಸಮಾಧಾನಗಳೂ ಭುಗಿಲೆದ್ದುವು. ಈ ಕಾರಣದಿಂದಾಗಿ 1907ರಲ್ಲಿ ಕೆನಡಿಯನ್ ಸರಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿತು. ಭಾರತೀಯರಿಗೆ ಮತದಾನ ಮಾಡುವ ಹಕ್ಕನ್ನು ರದ್ದುಪಡಿಸಿತು. ಭಾರತೀಯರು ಸರಕಾರಿ ಅಧಿಕಾರಿಗಳಾಗುವುದನ್ನು, ನ್ಯಾಯಾಧೀಶರು, ವಕೀಲರು, ಲೆಕ್ಕ ಪರಿಶೋಧಕರು ಮತ್ತು ವೈದ್ಯರಾಗುವುದನ್ನು ತಡೆಯಿತು. ಇಂಥ ಸಮಯದಲ್ಲೇ ಉದ್ಯಮಿ ಗುರುದಿತ್ ಸಿಂಗ್ ಎಂಬವರು ಕಮಗತ ಮರು ಎಂಬ ಜಪಾನಿ ಹಡಗನ್ನು ಬಾಡಿಗೆಗೆ ಪಡೆದು 376 ಮಂದಿ ಭಾರತೀಯ ವಲಸಿಗರನ್ನು ಕೆನಡಕ್ಕೆ ತಲುಪಿಸುವ ಸಾಹಸಕ್ಕೆ ಕೈ ಹಾಕಿದರು. ಈ ವಲಸಿಗರಲ್ಲಿ 340 ಮಂದಿ ಸಿಖ್ಖರು, 24 ಮಂದಿ ಮುಸ್ಲಿಮರು ಮತ್ತು 12 ಮಂದಿ ಹಿಂದುಗಳಿದ್ದರು. ಒಂದು ರೀತಿಯಲ್ಲಿ, ಈ ಸಾಹಸ ಕೆನಡಿಯನ್ ಸರಕಾರಕ್ಕೆ ಎಸಗಿದ ಬಹಿರಂಗ ಸವಾಲು ಆಗಿತ್ತು. ಈ ಹಡಗು ಹಾಂಗ್‍ಕಾಂಗ್‍ನಿಂದ ಹೊರಟು ಜಪಾನ್‍ನಲ್ಲಿ ತಂಗಿ ಬಳಿಕ ಕೆನಡಕ್ಕೆ ಹೊರಟಿತು. ಆದರೆ ಈ ಸುದ್ದಿಯನ್ನು ಜರ್ಮನ್ ಕೇಬಲ್ ಕಂಪೆನಿಯು ಜರ್ಮನ್ ಪ್ರೆಸ್‍ಗೆ ತಿಳಿಸಿತು. ಅಲ್ಲಿಂದ ಬ್ರಿಟಿಷ್ ಪ್ರೆಸ್ ಅದನ್ನು ಎತ್ತಿಕೊಂಡು ಅಲ್ಲಿಂದ ಕೆನಡದ ದಿ ವ್ಯಾಂಕೋವರ್ ಡೈಲಿಯುBoats loads of Hindus on way to Vancover (ಹಿಂದೂಗಳನ್ನು ತುಂಬಿಕೊಂಡ ಹಡಗು ವ್ಯಾಂಕೋವರ್‍ಗೆ) ಎಂಬ ಉದ್ರೇಕಕಾರಿ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತು. ಇನ್ನೊಂದು ಕಡೆ ‘ಹಿಂದೂ ಇನ್ವೇಷನ್ ಆಫ್ ಕೆನಡ’ ಎಂಬ ಶೀರ್ಷಿಕೆಯಲ್ಲೂ ಸುದ್ದಿ ಪ್ರಕಟವಾಯಿತು. ಕೆನಡದಲ್ಲಿರುವ ಸಿಖ್ಖರಂತೂ ಈ ಹಡಗನ್ನು ಸ್ವಾಗತಿಸಲು ಗುರುದ್ವಾರಗಳಲ್ಲಿ ಸಭೆ ನಡೆಸಿದರು. ಚಂದಾ ಸಂಗ್ರಹಿಸಿದರು. ಈ ಮಧ್ಯೆ, 1914 ಮೇ 23ರಂದು ಕಮಗತ ಮರು ಹಡಗು ಕೆನಡದ ವ್ಯಾಂಕೋವರ್ ಬಂದರ್‍ಗೆ ತಲುಪಿತು. ಆದರೆ ಹಡಗಿನಿಂದ ಯಾರನ್ನೂ ಇಳಿಯಲು ಅಧಿಕಾರಿಗಳು ಬಿಡಲಿಲ್ಲ. 2 ತಿಂಗಳ ವರೆಗೆ ಭಾರತೀಯ ಸಮುದಾಯ ಮತ್ತು ಕೆನಡಿಯನ್ ಅಧಿಕಾರಿಗಳ ಮಧ್ಯೆ ನ್ಯಾಯಾಂಗ ಸಮರ ನಡೆಯಿತು. ಕೊನೆಗೆ ಈ 376 ಮಂದಿಯಲ್ಲಿ ಕೇವಲ 24 ಮಂದಿಗಷ್ಟೇ ಕೆನಡ ಪ್ರವೇಶಿಸಲು ಅವಕಾಶ ನೀಡಲಾಯಿತು. 1914 ಜುಲೈ 23ರಂದು ವ್ಯಾಂಕೋವರ್ ಬಂದರ್‍ನಿಂದ ಸಮಗತ ಮರುವನ್ನು ಹೊರಗಟ್ಟಲಾಯಿತು. 1914 ಸೆ. 26ರಂದು ಇದು ಕೊಲ್ಕತ್ತಾಕ್ಕೆ ತಲುಪುವ ಮೊದಲೇ ಭಾರತದ ಬ್ರಿಟಿಷ್ ಆಡಳಿತ ಈ ಹಡಗನ್ನು ಸಮುದ್ರ ಮಧ್ಯದಲ್ಲೇ ತಡೆದಿರಿಸಿತು. ವಲಸಿಗರಿಗೂ ಅಧಿಕಾರಿಗಳಿಗೂ ನಡುವೆ ಜಟಾಪಟಿಯಾಗಿ 29 ಮಂದಿ ಸಾವಿಗೀಡಾಡದರು. ಹೀಗೆ ವಲಸಿಗರನ್ನು ಸಮುದ್ರ ಮಧ್ಯದಲ್ಲಿ 2 ತಿಂಗಳ ಕಾಲ ಕಟ್ಟಿ ಹಾಕಿದ ಮತ್ತು ಹಿಂತಿರುಗಿಸಿದ ತಪ್ಪಿಗಾಗಿ ಮೊನ್ನೆ ಜಸ್ಟಿನ್ ಟ್ರುಡೇವ್ ಸಿಖ್ಖರ ಕ್ಷಮೆ ಯಾಚಿಸಿದರು. ಆದ್ದರಿಂದಲೇ ಲಕ್ಷಾಂತರ ಮಂದಿಯ ಹತ್ಯೆಗೆ ಕಾರಣವಾಗಿಯೂ ಕ್ಷಮೆಯಾಚಿಸಿದ ಒಬಾಮರ ಎದುರು ಅನೇಕರು ಜಸ್ಟಿನ್ ಟ್ರುಡೇವ್‍ರನ್ನು ಇಟ್ಟು ಪರಸ್ಪರ ಹೋಲಿಸಿದರು. ಕ್ಷಮೆಯಾಚನೆಯಿಂದ ಯಾರೂ ಸಣ್ಣವರಾಗಲ್ಲ ಎಂದು ಕುಟುಕಿದರು. ವಲಸಿಗರ ಹಡಗನ್ನು ಸ್ವಾಗತಿಸದೇ ಇದ್ದುದಕ್ಕೆ ಕ್ಷಮೆಯಾಚಿಸುವ ಜಸ್ಟಿನ್‍ರ ಎದುರು ಒಬಾಮ ತೀರಾ ಸಣ್ಣವರು ಎಂದು ಗೇಲಿ ಮಾಡಿದರು. ಅಷ್ಟಕ್ಕೂ           
           ‘ಮನುಷ್ಯನ ಬದಲು ಸಾಕು ಪ್ರಾಣಿಯನ್ನು ರಕ್ಷಿಸುವೆ’ ಅನ್ನುವ ದೇಶದಲ್ಲಿ ಗೊರಿಲ್ಲಾವಲ್ಲದೇ ಮನುಷ್ಯ ಮುಖ್ಯವಾಗುವುದಾದರೂ ಹೇಗೆ?